ಬುಧವಾರ, ಜನವರಿ 1, 2014

ಬಿಸಿಲ ನಾಡಿನ ಸಹನೆ, ಸಹನ


-ಯೋಗೇಶ್ ಮಾರೇನಹಳ್ಳಿ
ಕೃಪೆ:ಪ್ರಜಾವಾಣಿ, ಕಾಮನಬಿಲ್ಲು

 ಸಹನಾ ಪಿಂಜಾರ್ ‘ಬಿಸಿಲು ನಾಡಿಗೆ ಕುಡಿಯುವ ನೀರು ಕೊಡಿ’ ಎಂಬ ಘೋಷಣೆಯೊಂದಿಗೆ ಸರ್ಕಾರಿ ಕಚೇರಿಗಳ ಎದುರು ನಿಂತಾಗ, ಬಳ್ಳಾರಿಯ ಕೊಳೆಗೇರಿಗಳಲ್ಲಿ ‘ಹೆಣ್ಣು ಓದಲೇಬೇಕು’ ಎಂದು ಒತ್ತಾಯಿಸುತ್ತಿದ್ದಾಗ ಆಕೆಯ ವಯಸ್ಸು ಕೇವಲ ಐದು. ಆ ದಿನಗಳಲ್ಲಿ ಬೀದಿ ನಾಟಕಗಳ ಮೂಲಕ ರಂಗಪ್ರವೇಶ ಮಾಡಿದ ಸಹನಾ ಈಗ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದಲ್ಲಿ ತರಗತಿ ಸಂಚಾಲಕಿ. ಜೊತೆಗೆ ಬಾಲ್ಯದ ದಿನಗಳಂತೆಯೇ ಬಳ್ಳಾರಿ ಜಿಲ್ಲೆಯಲ್ಲಿ ಜನಜಾಗೃತಿಯಲ್ಲಿಯೂ ತೊಡಗಿಸಿಕೊಂಡಿರುವ ರಂಗ ಪ್ರತಿಭೆ.
ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆಯುವುದೆಂದರೆ ಒಂದರ್ಥದಲ್ಲಿ ಒಳ್ಳೆಯ ಸಂಪಾದನೆಯಿರುವ ಬಣ್ಣದ ಲೋಕಕ್ಕೆ ಕಾಲಿಡುವುದು ಎಂದೇ ಅರ್ಥ. ಆದರೆ ಸಹನಾ ಎಲ್ಲರೂ ತುಳಿವ ಸುಲಭದ ಹಾದಿಯಲ್ಲಿ ಆಸಕ್ತರಲ್ಲ. ಆದ್ದರಿಂದಲೇ ದಿಲ್ಲಿಯಿಂದ ತಮ್ಮೂರಿಗೇ ಮರಳಿ ಬಾಲ್ಯದ ದಿನಗಳಲ್ಲಿ ತನ್ನ ಪ್ರತಿಭೆಗೆ ಅವಕಾಶ ಕಲ್ಪಿಸಿದ್ದ ‘ಭಾವೈಕ್ಯತಾ ವೇದಿಕೆ’ಯಲ್ಲಿ ಮತ್ತೆ ಸಕ್ರಿಯರು.
ವೀರಾಪುರದಿಂದ...
ಬಳ್ಳಾರಿ ಜಿಲ್ಲೆಯ ಬೀದಿ ನಾಟಕಗಳಿಂದ ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯ ತನಕದ ಸಹನಾರ ಪ್ರಯಣ ಒಂದರ್ಥದಲ್ಲಿ ಸಹನೆ ಮತ್ತು ಸಾಧನೆಯ ಪ್ರಯಾಣವೂ ಹೌದು. ಬಳ್ಳಾರಿ ಜಿಲ್ಲೆ, ಕುರುಗೋಡು ತಾಲ್ಲೂಕಿನ ಎಚ್‌. ವೀರಾಪುರ ಎಂಬ ಕುಗ್ರಾಮ ಸಹನಾರ ಹುಟ್ಟೂರು. ಪಿ. ಬಾಲೇಸಾಬ್‌ ತಂದೆ, ಗೌರಿಬೀ ತಾಯಿ. ಇವರ ಧೈರ್ಯ ಮತ್ತು ಮಾತುಗಾರಿಕೆ ಕಂಡ ಮಾವ ಹಾಗೂ ಹೊಸಪೇಟೆಯ ರಂಗಕರ್ಮಿ ಪಿ. ಅಬ್ದುಲ್‌, ಸಹನಾಗೆ ರಂಗಭೂಮಿಯ ದೀಕ್ಷೆ ಕೊಟ್ಟರು.
ಸಾಮಾಜಿಕ ಹೋರಾಟಗಾರರೂ ಆಗಿರುವ ಅಬ್ದುಲ್‌ ತಮ್ಮ ಹೋರಾಟಗಳಿಗೆ ಬೀದಿನಾಟಕವನ್ನು ಬಳಸುತ್ತಿದ್ದರು. ಅವರ ಹೋರಾಟಕ್ಕೆ ಸಹನಾ ಒಂದು ಹೊಸ ಅಸ್ತ್ರವಾಗಿ ಸೇರ್ಪಡೆಯಾದರು. ಹೊಸಪೇಟೆಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಾಲೆಗೆ ಸೇರಿದ ಸಹನಾ ನಾಟಕಗಳಿಗಾಗಿ ಬೀದಿಗಿಳಿದರು.
ಅಬ್ದುಲ್‌ ‘ಭಾವೈಕ್ಯತಾ ವೇದಿಕೆ’ ಎಂಬ ರಂಗತಂಡ ಕಟ್ಟಿಕೊಂಡು ಇಡೀ ಜಿಲ್ಲೆಯಾದ್ಯಂತ ಬೀದಿನಾಟಕ ಆಡಿಸಿದರು. ಅವರ ಎಲ್ಲ ನಾಟಕಗಳಲ್ಲಿ ಬಾಲಕಿ ಸಹನಾಳದ್ದೇ ಮುಖ್ಯಪಾತ್ರ. ಹೆಣ್ಣಿನ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಈ ನಾಟಕಗಳಿಗಾಗಿ ಸಣ್ಣ ವಾಹನದಲ್ಲಿ ಊರಿಂದ ಊರಿಗೆ ಅಲೆಯುತ್ತಿದ್ದ ತಂಡ ದಿನಕ್ಕೆ ಹತ್ತಾರು ಪ್ರದರ್ಶನ ನೀಡುತ್ತಿತ್ತು. ಸಾಮಾಜಿಕ ಬದಲಾವಣೆಯ ದೃಷ್ಟಿಯಿಂದ ರೂಪುಗೊಳ್ಳುತ್ತಿದ್ದ ಬೀದಿ ನಾಟಕಗಳಲ್ಲಿ ಅಭಿನಯಿಸುತ್ತಲೇ ಸಹನಾ ರಂಗಭೂಮಿಯ ಪ್ರಾಥಮಿಕ ಪಾಠಗಳನ್ನು ಕಲಿತರು.
‘ಭಾವೈಕ್ಯತಾ ವೇದಿಕೆ’ಯ ನಾಟಕಗಳು ಕೇವಲ ಬಳ್ಳಾರಿಗೆ ಸೀಮಿತವಾಗಿರಲಿಲ್ಲ. ಬೆಂಗಳೂರಿನಲ್ಲೂ ಅವರ ನಾಟಕಗಳು ಪ್ರದರ್ಶನಗೊಂಡವು. ಮಹಾತ್ಮಾಗಾಂಧಿ ರಸ್ತೆಯಲ್ಲಿ ಪ್ರದರ್ಶಿಸಿದ ‘ಓ ಮತದಾರ ಪ್ರಭುವೇ’ ನಾಟಕ ಬೆಂಗಳೂರಿನ ಥಳುಕಿನ ಮಂದಿಯನ್ನೂ ಆಲೋಚನೆಗೆ ಹಚ್ಚುವಷ್ಟು ತೀಕ್ಷ್ಣವಾಗಿತ್ತು. ಸಹನಾ ಪುಟ್ಟ ಹುಡುಗಿಯ ಮಾತುಗಳು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಸುವಷ್ಟು ಪ್ರಬಲವಾಗಿದ್ದವು. ಮುಂದೆ ದೆಹಲಿ, ಮುಂಬೈ, ಹೈದರಾಬಾದ್‌ ಮುಂತಾದೆಡೆ ಅವರ ಬೀದಿ ನಾಟಕಗಳು ಪ್ರದರ್ಶನಗೊಂಡಿವೆ.
ಮುಂದೆ ಸಂಡೂರಿನ ದೇವಗಿರಿ ಕಾಡಿನಲ್ಲಿ ರಂಗಕರ್ಮಿ ಸಿ. ಬಸವಲಿಂಗಯ್ಯ ನಡೆಸಿದ ರಂಗ ಶಿಬಿರದಲ್ಲಿ ಸಹನಾ ಅಭಿನಯದ ಹಲವು ಮುಖಗಳನ್ನು ಅರಿತರು. ಮೈಮ್‌ ರಮೇಶ್‌ ಗರಡಿಯಲ್ಲಿ ದೈಹಿಕ ರಂಗಭೂಮಿಯ ಮಹತ್ವ ತಿಳಿದುಕೊಂಡರು. ನಿರ್ದೇಶಕರಾದ ಸುರೇಶ್‌ ಆನಗಳ್ಳಿ, ಸಿ.ಜಿ.ಕೆ., ನಟರಾಜ ಹೊನ್ನವಳ್ಳಿ, ಯೋಗಾನಂದ ಮುಂತಾದ ರಂಗ ದಿಗ್ಗಜರ ಒಡನಾಟದಿಂದ ಮತ್ತಷ್ಟು ಪಕ್ವವಾದರು. ‘ಅಕ್ಕ’, ‘ಮಗಳು ಮಾತಾಡಿದಳು’, ‘ನಾವು ಮನುಜರು’, ‘ಚೋರ್‌ ಚೋರ್‌ ಪಕ್ಡೋ ಪಕ್ಡೋ’, ‘ಕೆಂಪು ಹೂ’, ‘ರಸ್ತೆಗೆ ಡಾಂಬರು ಬಂದಿದೆ’, ‘ಅರಿವು’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು.
ನೀನಾಸಂ ಯಾತ್ರೆ
ಸಹನಾ ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದಾಗ ನೀನಾಸಂನ ಕೆ.ವಿ. ಸುಬ್ಬಣ್ಣ ಹಂಪಿಗೆ ಬಂದಿದ್ದರು. ‘ಭಾವೈಕ್ಯತಾ ವೇದಿಕೆ’ಯ ರಂಗಚಟುವಟಿಕೆಯನ್ನು ಮೆಚ್ಚಿದ ಸುಬ್ಬಣ್ಣ ಸಹನಾಗೆ ‘ನೀಸಾಸಂ’ಗೆ ಬರುವಂತೆ ಸೂಚಿಸಿದರು. ಬೆಳಗಾಗುವುದರೊಳಗಾಗಿ ಸಹನಾ ‘ನೀನಾಸಂ’ ಅಂಗಳದಲ್ಲಿದ್ದರು. ಯಾವುದೇ ಸಂದರ್ಶನ ಇಲ್ಲದೇ 1999– 2000ನೇ ಸಾಲಿನಲ್ಲಿ ಅವರು ‘ನೀನಾಸಂ’ ಪ್ರವೇಶ ಪಡೆದರು. ಬಿ.ವಿ. ಕಾರಂತರು ‘ನೀನಾಸಂ’ಗೆ ಕೊನೆಯದಾಗಿ ನಿರ್ದೇಶಿಸಿದ ‘ಅಂದೇರ್ ನಗರಿ ಚೌಪಟ್‌ ರಾಜ’ ನಾಟಕದಲ್ಲಿ ಅಭಿನಯಿಸುವ ಅವಕಾಶ ಸಹನಾಗೆ ದೊರೆಯಿತು.
ಕಾರಂತರ ಕಠಿಣ ರಂಗ ಶಿಬಿರದಲ್ಲಿ ಪಳಗಿದ ಅವರಿಗೆ ರಂಗಕಲೆ ಉಸಿರಾಯಿತು. ತರಬೇತಿ ನಂತರ ಅವರು ಒಂದು ವರ್ಷ ‘ನೀನಾಸಂ’ ತಿರುಗಾಟದಲ್ಲಿ ಪಾಲ್ಗೊಂಡರು. ಚೆಕಾಫ್‌ನ ‘ಥ್ರಿ ಸಿಸ್ಟರ್ಸ್’,  ಕೆ.ವಿ. ಸುಬ್ಬಣ್ಣ ಅವರ ‘ಭಗವದಜ್ಜುಕೀಯಂ’, ಕುವೆಂಪು ಅವರ ‘ಸ್ಮಶಾನ ಕುರುಕ್ಷೇತ್ರ’, ನಟರಾಜ ಹೊನ್ನವಳ್ಳಿ ನಿರ್ದೇಶನದ ‘ಬಿರುಕು’, ವೆಂಕಟರಮಣ ಐತಾಳ್ ನಿರ್ದೇಶನದ ‘ಹಂಸ ದಮಯಂತಿ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು. ಅಮೆರಿಕ ಪಪೆಟ್ ರಂಗಭೂಮಿಯ ಪೀಟರ್‌ ಶುಮನ್‌ ನಡೆಸಿದ ತರಬೇತಿಯಲ್ಲಿ ಪಾಲ್ಗೊಂಡು ಅವರು ಬೊಂಬೆ ಮತ್ತು ಮುಖವಾಡ ತಯಾರಿಸುವ ಕಲೆ ಕಲಿತಿದ್ದಾರೆ. ಸ್ವೀಡನ್‌ನಿಂದ ಬಂದಿದ್ದ ಟಾಮ್‌ ಐರಿಕ್‌ ಅವರ ಬಳಿ ಮಕ್ಕಳ ರಂಗಭೂಮಿ ತರಬೇತಿಯಾಗಿದೆ.
‘ನೀನಾಸಂ’ ತಿರುಗಾಟ ಮುಗಿಸಿ ಹೊಸಪೇಟೆಗೆ ಬಂದ ಸಹನಾ ದ್ವಿತೀಯ ಪಿಯುಸಿ ಮುಂದುವರಿಸಿದರು. ಕಾಲೇಜಿಗೆ ಹೋಗುತ್ತಲೇ ಅವರು ಸ್ಮೈರ್‌ ಬಾಲಕಿಯರ ವಸತಿ ಶಾಲೆಯಲ್ಲಿ ನಾಟಕ ಶಿಕ್ಷಕಿಯಾಗಿ ಸೇರಿದರು. ಐದು ವರ್ಷಗಳ ಕಾಲ ಆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅವರು ಪಿಯುಸಿ ಮುಗಿಸಿ ಹಂಪಿ ಕನ್ನಡ ವಿವಿಯಲ್ಲಿ ಕನ್ನಡ  ಪದವಿ ಪಡೆದರು.
ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಿದ ಕೀರ್ತಿ ಭಾವೈಕ್ಯತಾ ವೇದಿಕೆಗೆ ಸಲ್ಲುತ್ತದೆ. ಪಿ. ಅಬ್ದುಲ್‌ ಅವರ ಮಾರ್ಗದರ್ಶನದಲ್ಲಿ ಸಹನಾ, ತಮ್ಮ ಸೋದರ ಸಂಬಂಧಿಗಳಾದ ಶಾಹಿರಾ, ಸಹರಾ (ಇಬ್ಬರೂ ‘ನೀನಾಸಂ’ನಲ್ಲಿ ತರಬೇತಿ ಪಡೆದವರು) ಜೊತೆಗೂಡಿ ಮೊದಲ ಬಾರಿಗೆ ಹೊಸಪೇಟೆಯಲ್ಲಿ ಮಕ್ಕಳ ಮೇಳ ಆಯೋಜಿಸಿದರು. ಈ ಶಿಬಿರಕ್ಕೆ ಅಶೋಕ್‌ ಬಾದರದಿನ್ನಿ ನಿರ್ದೇಶಕರಾಗಿದ್ದರು. ಮೈಸೂರು ರಂಗಾಯಣದ ಚಿಣ್ಣರ ಮೇಳದಲ್ಲಿ ಭಾಗವಹಿಸಿ ಸ್ಫೂರ್ತಿ ಪಡೆದಿದ್ದ ಸಹನಾ ಹೊಸಪೇಟೆಯಲ್ಲೂ ಪ್ರಯೋಗಿಸಿದರು. ಇದು ಜಿಲ್ಲೆಯಲ್ಲಿ ಸಂಚಲನ ಮೂಡಿಸಿತು.
ಎನ್‌ಎಸ್‌ಡಿ ಅನುಭವ
ಸದಾ ಹೊಸ ವಿಷಯಗಳ ಕಲಿಕೆಗೆ ಹಾತೊರೆಯುತ್ತಿದ್ದ ಸಹನಾ ಅವರಿಗೆ ರಾಷ್ಟ್ರೀಯ ನಾಟಕ ಶಾಲೆ ಸೇರುವ ಕನಸು ಮೊದಲಿನಿಂದಲೂ ಇತ್ತು. 2002ರಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಸ್ಕಾಲರ್‌ಶಿಪ್‌ ಪಡೆದು ಅಧ್ಯಯನಕ್ಕೆಂದು ದೆಹಲಿಗೆ ಭೇಟಿ ನೀಡಿದ್ದಾಗ ಎನ್‌ಎಸ್‌ಡಿಯ ‘ಜಾನೇ ಮನ್‌’ ನಾಟಕ ನೋಡಿದರು. ಹಿಜಡಾಗಳ ಬದುಕಿನ ಮೇಲೆ ಚಿತ್ರಿತವಾಗಿದ್ದ ನಾಟಕ, ಸಹನಾರ ಎನ್‌ಎಸ್‌ಡಿ ಸೇರುವ ಕನಸನ್ನು ಮತ್ತಷ್ಟು ಗಟ್ಟಿಗೊಳಿಸಿತು.
ಬಿಎ ಅಂತಿಮ ವರ್ಷವಿದ್ದಾಗ ಎನ್‌ಎಸ್‌ಡಿಗೆ ಅರ್ಜಿ ಹಾಕಿದರು. ಬೆಂಗಳೂರಿನ ಎನ್‌ಎಸ್‌ಡಿ ವಲಯ ಕೇಂದ್ರದಲ್ಲಿ ನಡೆದ ಮೊದಲ ಸಂದರ್ಶನದಲ್ಲಿ ತೇರ್ಗಡೆ ಹೊಂದಿ ದೆಹಲಿಯಲ್ಲಿ ನಡೆಯುವ ಎರಡನೇ ಸುತ್ತಿಗೆ ಆಯ್ಕೆಯಾದರು. ಆದರೆ ಎರಡನೇ ಸುತ್ತಿನಲ್ಲಿ ಸಹನಾ ಅನುತ್ತೀರ್ಣರಾದರು. ಆದರೂ ದೆಹಲಿ ಬಿಡದ ಅವರು ಬೀದಿ ನಾಟಕಗಳ ದಿಗ್ಗಜ ‘ಸಫ್ದರ್ ಹಶ್ಮಿ’ (ಬೀದಿನಾಟಕ ಮಾಡುತ್ತಲೇ ಕೊಲೆಯಾದವರು) ಅವರ ‘ಜನ್‌ ನಾಟ್ಯ ಮಂಚ್‌’ನ ಬೀದಿ ನಾಟಕಗಳಲ್ಲಿ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡರು. ಅಲ್ಲಿ ಕೆಲಕಾಲ ಕೆಲಸ ಮಾಡಿ ಹೊಸಪೇಟೆಗೆ ಹಿಂತಿರುಗಿದರು.
ಮತ್ತೆ ಮುಂದಿನ ವರ್ಷ ಎನ್‌ಎಸ್‌ಡಿಗೆ ಅರ್ಜಿ ಹಾಕಿದ ಅವರು ತಮ್ಮ ಕನಸನ್ನು ನನಸಾಗಿಸಿಕೊಂಡರು. ಎನ್‌ಎಸ್‌ಡಿ ಅವರಿಗೆ ಆರಂಭದಲ್ಲಿ ಮಾಯಾಲೋಕದಂತೆ ಕಂಡಿತು. ಬಾಲಿವುಡ್‌ ಕನಸಿನೊಂದಿಗೆ ಎನ್‌ಎಸ್‌ಡಿಗೆ ಬಂದಿದ್ದ ಕೆಲವರು ಅವರಿಗೆ ಗೊಂಬೆಗಳಂತೆ ಕಂಡರು. ದೇಹ ಸೌಂದರ್ಯಕ್ಕೆ ಅವರು ಕೊಡುತ್ತಿದ್ದ ಮಹತ್ವ ಕಂಡು ಸಹನಾಗೆ ಭಯವೂ ಆಯಿತು. ಆದರೆ ಎನ್‌ಎಸ್‌ಡಿ ನಿರ್ದೇಶಕರಾಗಿದ್ದ ಅನುರಾಧಾ ಕಪೂರ್‌ ಪ್ರೋತ್ಸಾಹದಿಂದ ಸಹನಾ ಭಯ ಬಿಟ್ಟು ಕಲಿಕೆಯಲ್ಲಿ ತೊಡಗಿಸಿಕೊಂಡರು.
ಸಹನಾ ಮುಖ್ಯವಾಗಿ ವಿನ್ಯಾಸ ಮತ್ತು ನಿರ್ದೇಶನ ಕಲಿಕೆಗೆ ಹೆಚ್ಚು ಒತ್ತು ಕೊಟ್ಟರು. ಆದರೆ ಎರಡನೇ ವರ್ಷದಲ್ಲಿ ಅವರಿಗೆ ಅಭಿನಯ ವಿಭಾಗ ನೀಡಲಾಗಿತ್ತು. ಕರ್ನಾಟಕದಲ್ಲಿ ಕಾರಂತ, ಬಸವಲಿಂಗಯ್ಯ, ಸಿಜಿಕೆ ಗರಡಿಯಲ್ಲಿ ಪಳಗಿದ್ದ ಸಹನಾಗೆ ಅಲ್ಲಿ ಅಭಿನಯ ಕಲಿಯುವ ಇರಾದೆ ಇರಲಿಲ್ಲ. ವಿನ್ಯಾಸ ಮತ್ತು ನಿರ್ದೇಶನ ವಿಭಾಗ ನೀಡದಿದ್ದರೆ ಇಲ್ಲಿರಲಾರೆ ಎಂದು ಗಂಟು ಮೂಟೆ ಕಟ್ಟಿ ನಿಂತಿದ್ದರು. ನಂತರ ಅನುರಾಧಾ ಕಪೂರ್‌ ಸಹನಾ ಇಷ್ಟದ ವಿಭಾಗವನ್ನೇ ನೀಡಿದರು.
ಖ್ಯಾತ ಕನ್ನಡ ಕಥೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ‘ಜುಲೇಕಾ’ ಕಥೆಯ ರಂಗರೂಪ ‘ಜನ್ನತ್‌ ಮಹಲ್‌’ಗಾಗಿ ಆಗಿನ್ನೂ ಎನ್‌ಎಸ್‌ಡಿ ವಿದ್ಯಾರ್ಥಿಯಾಗಿದ್ದ ಸಹನಾ ರಂಗಮಂಚದ ಚಿತ್ರಣವನ್ನೇ ಬದಲಿಸಿದ್ದರು. ಮುಸ್ಲಿಂ ಹೆಣ್ಣು ಮಗಳೊಬ್ಬಳ ಮನದ ತೊಳಲಾಟವನ್ನು ರಂಗ ವಿನ್ಯಾಸದಲ್ಲಿಯೂ ಧ್ವನಿಸಲು ಪ್ರಯತ್ನಿಸಿದ್ದರು. ಬುರ್ಖಾದ ಪ್ರತೀಕವೆಂಬಂತೆ ಇಡೀ ರಂಗ ಮಂಚಕ್ಕೆ ಬುರ್ಖಾ ಹೊದಿಸಿದ್ದರು. ಪ್ರೇಕ್ಷಕರು ಮತ್ತು ರಂಗಮಂಚದ ನಡುವೆ ತೆಳುವಾದ ಪರದೆ ಅಳವಡಿಸಿ ಅದರೊಳಗಿನಿಂದಲೇ ಜನ ನಾಟಕ ನೋಡುವಂತೆ ಮಾಡಿದ್ದರು.
ಚೀನಾ ಭೇಟಿ
ಕೀರ್ತಿ ಜೈನ್‌ ನಿರ್ದೇಶನದ ‘ಏಕ್‌ ರುಖಾ ಹುವಾ ಫೈಸ್ಲಾ’ ನಾಟಕದಲ್ಲಿ ರಂಗವಿನ್ಯಾಸ ಮಾಡಿದ್ದ ಸಹನಾ ಈ ನಾಟಕದೊಂದಿಗೆ ಚೀನಾಕ್ಕೆ ಭೇಟಿ ನೀಡಿದ್ದರು. ಚೀನಾ ರಂಗಭೂಮಿ ಕುರಿತು ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಎನ್‌ಎಸ್‌ಡಿಯಲ್ಲಿ ವಸ್ತ್ರ ವಿನ್ಯಾಸಕಿಯಾಗಿಯೂ ಗಮನ ಸೆಳೆದ ಅವರು ‘ಡಾಲ್ಸ್ ಹೌಸ್‌’ ನಾಟಕದ ‘ನೋರಾ’ ಪಾತ್ರಕ್ಕೆ ಸೈಕಲ್‌ ಟೈರ್‌, ಟ್ಯೂಬ್‌, ಚೈನ್‌ಗಳನ್ನು ಬಳಸಿ ವಸ್ತ್ರ ವಿನ್ಯಾಸ ಮಾಡಿದ್ದರು. ಗ್ರೀಕ್‌ ಶೈಲಿಯಲ್ಲಿದ್ದ ‘ದೊರೆ ಈಡಿಪಸ್‌’ ನಾಟಕವನ್ನು ಲಂಕೇಶರು ಕನ್ನಡೀಕರಿಸಿದ ಕೃತಿಯನಿಟ್ಟುಕೊಂಡು ದೃಶ್ಯ ನಿರ್ದೇಶನ ಮಾಡಿ ಗಮನ ಸೆಳೆದರು. ಇದು ಅವರ ಇನ್ನೊಂದು ಪ್ರಯೋಗವಾಗಿತ್ತು.
ಕನ್ನಡ ರಂಗಪ್ರಯೋಗಗಳನ್ನಿಟ್ಟುಕೊಂಡೇ ಸಹನಾ ಯೋಚಿಸುತ್ತಿದ್ದರು. ಬೆಳಕು, ವಿನ್ಯಾಸದಲ್ಲೂ ಭರವಸೆ ಮೂಡಿಸಿದ ಅವರು, ಶಂತನು ಭೋಸ್‌ ನಿರ್ದೇಶನದ ‘ಹಜಾರ್ ಚೌರಾಶಿರ್ ಕಿ ಮಾ’ ನಾಟಕಕ್ಕೆ ಬೆಳಕಿನ ವಿನ್ಯಾಸ ಮಾಡಿದರು. ‘ಚೆರ್ರಿ ಆರ್ಚರ್ಡ್ಸ್’ ನಾಟಕಕ್ಕೆ ರಂಗ ನಿರ್ವಹಣೆ, ‘ದ ಡ್ರೈವ್‌’ಗೆ ಸಂಗೀತ ವಿನ್ಯಾಸ ಮಾಡಿ ಹೆಸರು ಗಳಿಸಿದರು. ಅಂತಿಮ ವರ್ಷದಲ್ಲಿ ‘ಜನ್ನತ್‌ ಮಹಲ್’ ನಿರ್ದೇಶಿಸಿ ಪ್ರಬುದ್ಧ ನಿರ್ದೇಶಕಿ ಎನಿಸಿಕೊಂಡರು.
ರಾಷ್ಟ್ರೀಯ ನಾಟಕ ಶಾಲೆ ಪದವಿ ಪಡೆದವರು ಬಾಲಿವುಡ್‌, ಉತ್ತಮ ಸಂಬಳದ ಕಾರ್ಪೊರೇಟ್‌ ನಾಟಕ ತಂಡ ಸೇರುವುದು ಸಾಮಾನ್ಯ. ಆದರೆ ಸಹನಾ ಎನ್‌ಎಸ್‌ಡಿಯಿಂದ ಸೀದಾ ಹೊಸಪೇಟೆಗೆ ಬಂದು ಅದೇ ‘ಭಾವೈಕ್ಯತಾ ವೇದಿಕೆ’ಯ ರಂಗಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಜೊತೆಗೆ ತಮಿಳು ಚಿತ್ರನಟ ಷಣ್ಮಖರಾಜ ಅವರ ‘ನಿಗಲ್‌ ಥಿಯೇಟರ್‌’(ಮಧುರೈ) ರಂಗ ತಂಡಕ್ಕೆ  ವಸ್ತ್ರ, ಪರಿಕರ, ಬೆಳಕು ವಿನ್ಯಾಸ ಮಾಡುತ್ತಿದ್ದಾರೆ. ಬೆಂಗಳೂರಿನ ಎನ್‌ಎಸ್‌ಡಿ ಶಾಖೆಯಲ್ಲಿ ತರಗತಿ ಸಂಚಾಲಕಿಯಾಗಿ ಕೆಲಸ ಮಾಡಿದ್ದಾರೆ. ಮಾವ ಪಿ. ಅಬ್ದಲ್‌ ಅವರ ಜೊತೆಗೂಡಿ ವೃತ್ತಿ ರಂಗಭೂಮಿಯ ರೆಪರ್ಟರಿ ತೆರೆಯುವ ಮತ್ತು ರಂಗ ತತ್ವದ ಮೇಲೆ ಪ್ರಾಥಮಿಕ ಶಾಲೆಯೊಂದನ್ನು ಆರಂಭಿಸುವ ಕನಸು ಸಹನಾ ಅವರದು. ಸಹನಾ ಜೊತೆ ಮಾತನಾಡಲು  9901944706 ಸಂಪರ್ಕಿಸಬಹುದು.

1 ಕಾಮೆಂಟ್‌:

Kiran Bhat ಹೇಳಿದರು...

ಖಂಡಿತ. ಸಹನಾ ಭರವಸೆಯಿಡಬಲ್ಲ ಹುಡುಗಿ. ಆಕೆಗೆ ಶುಭಾಶಯ.