ಮಂಗಳವಾರ, ಮೇ 31, 2016

ಕನ್ನಡತ್ವದ ಸಾಮಾಜಿಕ ವಾಸ್ತವ

-ಮೊಗಳ್ಳಿ ಗಣೇಶ್

ಒಂದು ಭಾಷೆ ಎಂದರೆ ಹಲವು ಸಮುದಾಯಗಳ ಸಂಯುಕ್ತ ಅಭಿವ್ಯಕ್ತಿ. ಒಂದು ನಾಡಿನ ಅಖಂಡತೆಯನ್ನು ಭಾಷೆಯು ಪ್ರತಿನಿಧಿಸುತ್ತದೆ. ಯಾವುದೇ ನಾಗರೀಕತೆ ನಾಡು ನುಡಿ ನಿರ್ಧಾರವಾಗುವುದು ಭಾಷೆಯ ಬೇರುಗಳಿಂದಲೇ. ಸಮಾಜ ಮತ್ತು ಸಂಸ್ಕೃತಿಗಳು ಕೂಡ ಭಾಷೆಯ ಅವಿನಾಭಾವ ಸಂಬಂಧಗಳಿಂದ ಬೆಳೆದು ಬಂದಿರುತ್ತವೆ. ಸಮುದಾಯದ ವಿಕಾಸದಲ್ಲಿ ಭವಿಷ್ಯದಲ್ಲಿ ಭಾಷೆಗಿರುವ ಸ್ಥಾನ ಅನನ್ಯವಾದುದು. ಸಮಾಜದ ವರ್ತಮಾನ ಹಾಗೂ ಗತಕಾಲಗಳು ಭಾಷೆಯಲ್ಲಿಯೇ ಇರುತ್ತವೆ. ಸಮಕಾಲೀನ ಪಲ್ಲಟಗಳೆಲ್ಲವಕ್ಕೂ ಆ ನಾಡು ನುಡಿಯ ಇತಿಹಾಸದ ಸಂಬಂಧ ಇರುವಂತೆಯೆ ಸಮಕಾಲೀನ ಸಮಾಜದ ಒತ್ತಡಗಳೂ ಅಪೇಕ್ಷೆಗಳು ಬೆರೆತಿರುತ್ತವೆ. ಭಾಷೆಯ ಅಳಿವು ಉಳಿವು ಇದರಿಂದಲೇ ನಿರ್ಣಾಯಕವಾಗುವುದು. ಭಾಷೆಯು ಬೆಳೆದಂತೆಲ್ಲ ಆ ನಾಡಿನ ಅಭಿವೃದ್ಧಿಯೂ ಸಾಗತೊಡಗುತ್ತದೆ. ಭಾಷೆಯು ಸಮುದಾಯದ ಅಸ್ತಿತ್ವ. ಅದರ ಗತಿಶೀಲತೆಯು ಕುಂಠಿತವಾದಂತೆಲ್ಲ ನಾಡಿನ ಸಾಮಾಜಿಕ ರಚನೆಯೂ ತನ್ನ ಸಹಜ ಭಾಷಿಕ ಗುಣವನ್ನು ಕಳೆದುಕೊಂಡು ಪರಾವಲಂಬಿ ಭಾಷಿಕ ಸಮಾಜವಾಗಿ ಹಿಂದುಳಿಯಬೇಕಾಗುತ್ತದೆ. ಒಂದು ನಾಡಿನ ಆಲೋಚನೆಗೂ ಅದರ ಭಾಷೆಯ ವಿಕಾಸಕ್ಕೂ ಅಲ್ಲಿನ ಸಾಮಾಜಿಕ ರಚನೆಗೂ ವಾಸ್ತವ ಸ್ಥಿತಿಗೂ ಸಾವಯವ ಸಂಬಂಧಗಳಿರುತ್ತವೆ. ಭಾಷೆಯು ಸ್ವತಃ ಸಮಾಜಕ್ಕೆ ವ್ಯಕ್ತಿತ್ವವನ್ನು ರೂಪಿಸಿರುತ್ತದೆ. ಭಾಷೆಗೆ ತಕ್ಕಂತೆ ಸಮಾಜ ಇರುವ ಕಾರಣದಿಂದಲೇ ಕನ್ನಡಿಗರಿಗೂ ಅದರಂತದೇ ವ್ಯಕ್ತಿತ್ವ ಕಾಣುವುದು. ಹೀಗಿರುವಲ್ಲಿ ಆ ಭಾಷೆಯ ನಾಡಿಗೂ ಅಂತದೇ ವ್ಯಕ್ತಿತ್ವ ಬಂದಿರುತ್ತದೆ.

ಇದು ಕನ್ನಡ, ಕನ್ನಡಿಗ, ಕರ್ನಾಟಕ ಅಖಂಡತೆಯನ್ನು ವ್ಯಕ್ತಪಡಿಸುವ ಭಾಷೆಯ ಸಾವಯವ ಸಂಬಂಧ. ಭಾಷೆಯ ಮೂಲಕವೇ ನಮ್ಮ ನಮ್ಮ ನಡತೆಗಳನ್ನು ಅಳೆಯುವುದಿದೆ. ಮನುಷ್ಯ ವಿಕಾಸ ಪಥದಲ್ಲಿ ಯಾವ ಬಗೆಯ ಆಹಾರವನ್ನು ರೂಢಿಸಿಕೊಂಡನೊ ಅದರಂತೆಯೇ ಅವನ ವಿಕಾಸ ಸಾಧ್ಯವಾಯಿತು. ಹಾಗೆಯೇ ಆತ ರೂಪಿಸಿಕೊಂಡ ಭಾಷಿಕ ನಡತೆಯಿಂದಲೇ ಆಯಾ ಭಾಷಿಕರ ಆಲೋಚನೆಯು ವ್ಯಕ್ತಿತ್ವವೂ ಅಸ್ತಿತ್ವವೂ ವಿಕಾಸವಾದದ್ದು. ಇದು ಭಾಷೆಯ ಜೈವಿಕತೆ ಹೇಗೋ ಹಾಗೆಯೇ ಮನುಷ್ಯನ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ ಕಾಣ್ಕೆಯೂ ಆಗಿದ್ದು, ವರ್ತಮಾನದ ಸಮಾಜವು ಕೂಡ ಆ ಬಗೆಯ ಚಾರಿತ್ರಿಕ ನೆಲೆಗಳಿಂದ ನಿರ್ಧಾರಿತವಾಗುತ್ತಿರುತ್ತದೆ. ಈ ಬಗೆಯ ಸಂಬಂಧದಿಂದಲೇ ನಾಡಿನ ಉದಯವಾಗುವುದು. ತನಗೇ ವಿಶಿಷ್ಟವಾಗುವ ನಾಡನ್ನು ಕಟ್ಟಿಕೊಳ್ಳುವ ಸ್ವಭಾವವು ಮೂಲತಃ ಕುಟುಂಬ ಸ್ವಭಾವದ್ದು. ಆಮೇಲೆ ಈ ಕುಟುಂಬ ವ್ಯಾಪ್ತಿಯು ಸಮುದಾಯದ ಗಾತ್ರಕ್ಕೆ ವಿಸ್ತರಿಸಿ ಅಂತಿಮವಾಗಿ ನಾಡಾಗಿ ಪರಿವರ್ತನೆಗೊಳ್ಳುವುದು. ಈ ಪ್ರಕ್ರಿಯೆಯು ಅವರವರ ಭಾಷೆಯ ಮೂಲಕವೇ ಸಾಮಾಜಿಕವಾಗಿ ವ್ಯಾಪಿಸುತ್ತದೆ ಎಂಬುದು ಗಮನಾರ್ಹ. ಇಂತಹ ಸಂಗತಿಗಳನ್ನು ತಾತ್ವಿಕವಾಗಿ ಸಂರಚಿಸಿಕೊಳ್ಳುವುದು ಕೂಡ ಮುಖ್ಯ. ಭಾಷೆಯ ಉಗಮ ವಿಕಾಸ ಎಂದರೆ ಮನುಷ್ಯ ಉಗಮ ವಿಕಾಸವೇ ಆಗಿರುತ್ತದೆ. ಆದರೆ ಇಂತಹ ಮನುಷ್ಯರ ವಿಕಾಸ ಪ್ರಕ್ರಿಯೆಯು ಅನಿವಾರ್ಯವಾಗಿ ವಿಭಿನ್ನ ಪ್ರಾದೇಶಿಕ ಪ್ರಭೇದಗಳ ಹಾಗೆ ಅನನ್ಯತೆಯನ್ನು ಸಾಧಿಸಿಕೊಂಡೇ ಸಾಗುವುದು ನಿಸರ್ಗ ನಿರ್ಮಿತ ಸಾಮಾಜಿಕ ಪರಿಸರದ ವಿಶಿಷ್ಠ ಒತ್ತಡವಾಗಿದೆ.

ಈ ಕಾರಣದಿಂದಲೇ ಮಾತೃ ಭಾಷೆಯ ಪ್ರಜ್ಞೆ ಬೆಳೆದುಬಂದು ಸ್ಥಳೀಯ ಸ್ವಭಾವಗಳು ಆ ಭಾಷೆಯಲ್ಲಿ ಆಕಾರಗೊಂಡಿರುವುದು. ಮಾನವ ನಿರ್ಮಿತ ಪರಿಸರವು ಕೂಡ ಭಾಷೆಯ ಪ್ರತಿಬಿಂಬ. ಹೀಗೆ ಒಂದು ನಾಡಿನ ನಿರ್ಮಾಣದಲ್ಲಿ ಭಾಷೆಯ ಪಾತ್ರ ನಿರಂತರವಾಗಿರುತ್ತದೆ. ಅದು ಯಾವ ಸ್ವರೂಪದಲ್ಲಿ ಬೆಳೆಯುತ್ತಾ ಹೋಗುವುದೊ ಅದರಂತೆಯೇ ನಾಡಿನ ನಡಿಗೆಯೂ ಇರುತ್ತದೆ. ಕನ್ನಡ ನಾಡಿನ ಬುನಾದಿಯಲ್ಲಿ ಭಾಷೆಯು ಬೇರುಬಿಟ್ಟಿದೆ. ಈ ಭಾಷೆಯ ವಿಶಾಲ ಬಯಲಿನಲ್ಲಿ ಅನೇಕ ಸಮುದಾಯಗಳು ತಮ್ಮ ಚಹರೆಗಳನ್ನು ರೂಪಿಸಿಕೊಂಡಿವೆ. ಒಂದೊಂದು ಭಾಷಿಕ ಸಮುದಾಯವೂ ತನ್ನೊಳಗೇ ಹಲವಾರು ರೆಂಬೆಕೊಂಬೆಗಳನ್ನು ಸಾಧಿಸಿಕೊಳ್ಳುವ ಮುಲಕ ಅಖಂಡವಾದ ಭಾಷಿಕ ಸಂವಹನ ಮತ್ತು ಸಂಬಂಧಗಳನ್ನು ರೂಢಿಸಿಕೊಂಡಿರುತ್ತವೆ. ಕನ್ನಡ ನಾಡಿನ ಚರಿತ್ರೆಯು ಇಂತಹ ನೆಲೆಗಳಿಂದಲೂ ಬೆಳೆದಿದೆ. ಏಕೀಕರಣ ಚಳುವಳಿಯಲ್ಲಿ ಪ್ರತಿಧ್ವನಿಸಲ್ಪಟ್ಟ ಎಲ್ಲ ಅಭಿವ್ಯಕ್ತಿಗಳಲ್ಲೂ ಈ ಬಗೆಯ ಸಂಬಂಧಗಳಿವೆ. ಕರ್ನಾಟಕವು ಏಕೀಕರಣಗೊಂಡು ಅರ್ಧಶತಮಾನ ತುಂಬುತ್ತಿರುವ ಸಂದರ್ಭದಲ್ಲಿ ಭಾಷೆಯ ವಿಷಯವು ಬೇರೆ ಬೇರೆ ಸ್ವರೂಪ ಧರಿಸಿ ರಾಜಕೀಯವಾದ ಆಯಾಮ ಪಡೆದುಕೊಂಡಿದೆ.

ಭಾಷೆ ಎಂದರೆ ಮನುಷ್ಯ ಎಂತಲೂ ಭಾವಿಸಬಹುದು. ಆದರೆ ಈ ಅರ್ಥವೀಗ ಭಾಷೆ ಎಂದರೆ ರಾಜಕೀಯ ಎಂಬಂತೆಯೂ ಆಗುತ್ತಿದ್ದು ಮನುಷ್ಯನು ರಾಜಕೀಯ ಜೀವಿಯಾಗಿ ಪರಿಗಣಿಸಲ್ಪಡುತ್ತಿದ್ದಾನೆ. ಪ್ರಭುತ್ವದ ನಿರ್ಣಾಯಕ ತೀರ್ಮಾನಗಳಲ್ಲೆಲ್ಲ ಭಾಷೆಯ ಪ್ರಶ್ನೆಯು ಜಟಿಲವಾಗುತ್ತಲೇ ಬರುತ್ತಿದೆ. ಇಪ್ಪತ್ತೊಂದನೇ ಶತಮಾನದಲ್ಲಿ ಭಾಷೆಗಳಿರುವ ಅಪಾಯಗಳಲ್ಲಿ ಭಾಷೆಯ ಮೇಲಿನ ರಾಜಕೀಯ ಒಂದು. ಏಕೀಕರಣೋತ್ತರ ಕನ್ನಡ ನಾಡಿನಲ್ಲಿ ಭಾಷೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ನಡೆದುಕೊಳ್ಳುತ್ತಿರುವ ರೀತಿಯು ಅಧಿಕಾರದಾಹದ ರಾಜಕೀಯ ನೆಲೆಯದೇ ಹೊರತು ಭಾಷೆ ಎಂದರೆ ಒಂದು ಸಮುದಾಯ ಒಂದು ನಾಡು ಒಂದು ಅಖಂಡ ಮಾನವ ಸಂಬಂಧ ಎಂಬ ಬಗೆಯದಾಗಿಲ್ಲ. ಯಾವ ರಾಜಕೀಯ ಪ್ರಭುತ್ವ ತನ್ನ ನಾಡಿನ ಭಾಷೆಯನ್ನು ಕಾಯಲಾರದೊ ಅದು ಸ್ವತಃ ತನ್ನನ್ನು ತಾನು ರಕ್ಷಿಸಿಕೊಳ್ಳಲಾರದು. ಏಕೀಕರಣೋತ್ತರ ಕನ್ನಡ ಕನ್ನಡಿಗ ಕರ್ನಾಟಕದ ಸ್ಥಿತಿಯನ್ನು ಚಾರಿತ್ರಿಕವಾಗಿ ಈಗಿಲ್ಲಿ ವಿಶ್ಲೇಷಿಸೋಣ.

ಯಾವುದೇ ನಾಡಿನ ಅರ್ಧ ಶತಮಾನವು ಚರಿತ್ರೆಯ ದೃಷ್ಟಿಯಲ್ಲಿ ಸಾಕಷ್ಟು ದೀರ್ಘವಾದದ್ದೇ ಆಗಿದೆ. ಕರ್ನಾಟಕವನ್ನು ಮುನ್ನಡೆಸಿದ ಸಾಮ್ರಾಜ್ಯಗಳು ತಮ್ಮ ಅವಧಿಗಳಲ್ಲಿ ನಾಡು ನುಡಿಯ ಕಾಯಕವನ್ನು ಆ ಕಾಲದಲ್ಲಿದ್ದ ಮೌಲ್ಯಗಳಿಗೆ ಪೂರಕವಾಗಿ ನಿರ್ವಹಿಸಿವೆ. ರಾಜಶಾಹಿಯಿಂದ ದಾಟಿದ ಕನ್ನಡ ಸಮಾಜವು ವಸಾಹತುಶಾಹಿಯಿಂದ ಮುಕ್ತಿ ಪಡೆದು ಮತ್ತೆ ಏಕೀಕರಣಗೊಂಡು ಐವತ್ತು ವರ್ಷಗಳನ್ನು ಕಳೆದಿದೆ ಎಂದರೆ ಸಾಮಾನ್ಯ ಸಂಗತಿ ಅಲ್ಲ. ಈ ಅವಧಿಯ ಒಳಗೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಮಾಜ ಹಾಗೂ ರಾಜಕಾರಣದ ಬೆಳವಣಿಗೆಗಳು ಮುಂದಿನ ಐವತ್ತು ವರ್ಷಗಳನ್ನು ನಿರ್ಧರಿಸುವಲ್ಲಿ ಪ್ರಮಖ ಪಾತ್ರವನ್ನು ವಹಿಸಿರುತ್ತವೆ. ಹಾಗೆಯೇ ವರ್ತಮಾನ ಮತ್ತು ಭವಿಷ್ಯದ ಮೇಲೆ ಗತಿಸಿರುವ ಸಮೀಪದ ಈ ಕಾಲವು ತನ್ನ ಪ್ರಭಾವವನ್ನು ಉಳಿಸಿಕೊಂಡೇ ಇರುತ್ತದೆ. ಏಕೀಕರಣೋತ್ತರ ಕನ್ನಡ ಪ್ರಭುತ್ವವು ಇದರಿಂದಾಗಿಯೆ ಪೂರ್ಣ ಇತಿಹಾಸವೂ ಅಲ್ಲ ಹಾಗೆಯೇ ಪರಿಪೂರ್ಣ ವರ್ತಮಾನವೂ ಅಲ್ಲ. ಹಾಗೆ ನೋಡಿದರೆ ಚರಿತ್ರೆಯು ಯಾವ ಕಾಲದಲ್ಲೂ ಕೇವಲ ಗತವೇ ಆಗಿರುವುದಿಲ್ಲ. ವರ್ತಮಾನ ಮತ್ತು ಗತಕಾಲ ಎರಡೂ ಚರಿತ್ರೆಯಲ್ಲಿ ಲೀನವಾಗಿದ್ದು ಪ್ರಸ್ತುತದಲ್ಲಿ ಅಗತ್ಯಕ್ಕೆ ತಕ್ಕಂತೆ ಸಮಾಜವು ಬೆಳೆಯುತ್ತಿರುತ್ತದೆ. ಕನ್ನಡ ಪ್ರಭುತ್ವವನ್ನು ಈ ಅರ್ಥದಲ್ಲಿಯೇ ಪರಿಭಾವಿಸಬೇಕಾಗುತ್ತದೆ.

ಕನ್ನಡ ಪ್ರಭುತ್ವ ಅಖಂಡವಾದ ಭಾಷಿಕ ಪ್ರಜ್ಞೆ. ಈ ಪ್ರಜ್ಞೆಯು ಪ್ರಾರಂಭದಲ್ಲೆ ತಿಳಿಸಿದಂತೆ ಸಮುದಾಯದ ಮತ್ತು ನಾಡಿನ ಸಂವೇದನೆ. ಕನ್ನಡ ಎಂದರೆ ಕೇವಲ ಭಾಷೆಗಷ್ಟೆ ಸೀಮಿತವಾದ ಅರ್ಥವಲ್ಲ. ಕನ್ನಡ ನಾಡಿನ ಕವಿಗಳು ಕನ್ನಡ ಎಂದರೆ ಏನೆಂದು ರೂಪಕಗಳಲ್ಲಿ ಗಾಢವಾಗಿ ಭಾವನಾತ್ಮಕವಾಗಿ ತಿಳಿಸಿಕೊಟ್ಟಿದ್ದಾರೆ. ಹೋರಾಟಗಾರರಂತು ಕನ್ನಡವನ್ನು ಜೀವ ಉಸಿರು ಎಂದು ಸಾರಿದ್ದಾರೆ. ಕನ್ನಡ ಎನ್ನುವುದ ಲೌಕಿಕವನ್ನು ಮೀರಿದ್ದೆಂದು ಅನೇಕರು ಹೇಳಿದ್ದಾರೆ. ಕನ್ನಡ ಎಂದರೆ ಅದು ದೈವ ಎಂದು ಕೊಂಡಾಡುವ ಭಕ್ತರೂ ಇದ್ದಾರೆ. ಭಾಷೆಯನ್ನು ಅದರಲ್ಲೂ ಮಾತೃ ಭಾಷೆಯನ್ನು ಹುಟ್ಟಿ ಕಾರಣವೆಂತಲೂ ತಿಳಿಯುವವರಿದ್ದಾರೆ. ತನ್ನ ಅಸ್ತಿತ್ವು ಭಾಷೆಯಿಂದಲೇ ಎಂದು ನಂಬುವ ಭಾವವು ಜೈವಿಕವಾದುದು. ಈ ಬಗೆಯ ಕನ್ನಡವು ತನಗೇ ವಿಶಿಷ್ಠವಾಗುವ ಭೌಗೋಳಿಕ ನೆಲೆಯನ್ನು ಕಂಡುಕೊಂಡಿರುತ್ತದೆ. ಭಾಷೆ ಮತ್ತು ಪ್ರದೇಶಗಳನ್ನು ಪ್ರತ್ಯೇಕಿಸಲು ಬರುವುದೇ ಇಲ್ಲ. ಆದ್ದರಿಂದಲೇ ಪ್ರತಿಯೊಂದು ಭಾಷೆಯು ತನ್ನದೇ ನಾಡನ್ನು ಪಡೆದು ಅದರ ಪ್ರತೀಕವಾದ ಪ್ರಭುತ್ವವನ್ನು ಸ್ಥಾಪಿಸಿಕೊಳ್ಳುವುದು. ಗಣರಾಜ್ಯಗಳ ಹುಟ್ಟಿನ ಹಿಂದೆ ಈ ಅಂಶವು ಪ್ರಧಾನವಾಗಿತ್ತೆಂಬುದನ್ನು ಚರಿತ್ರೆಯ ಮೂಲಕ ಪರಿಭಾವಿಸಬಹುದಾಗಿದೆ.

ಭಾಷೆ ಮತ್ತು ಪ್ರಭುತ್ವಗಳೆರಡೂ ಸದಾ ಒಂದನ್ನೊಂದು ಆಕರ್ಷಿಸುವ ಸಂಘರ್ಷಿಸುವ ಮತ್ತೆ ಒಂದನ್ನೊಂದು ಆಶ್ರಯಿಸುವ ಸಂಗತಿಗಳು. ಕನ್ನಡ ಸಾಮ್ರಾಜ್ಯಗಳು ತಲೆ ಎತ್ತಿದ್ದಕ್ಕೆ ಚರಿತ್ರೆಯ ಬೇರೆ ಕಾರಣಗಳು ಎಷ್ಟು ಮುಖ್ಯವಿದ್ದವೊ ಅಷ್ಟೇ ಪ್ರಮುಖವಾಗಿ ಭಾಷೆಯೂ ಪ್ರಧಾನವಾಗಿತ್ತು. ಏಕೀಕರಣ ಹೋರಾಟವು ಕನ್ನಡ ಪ್ರಭುತ್ವವನ್ನು ಸ್ಥಾಪಿಸಿತು. ಗತಕಾಲದ ಕನ್ನಡ ವೈಭವವನ್ನು ವರ್ತಮಾನಕ್ಕೆ ತಂದುಕೊಳ್ಳುವ ಮೂಲಕ ಭಾಷೆಯನ್ನು ಪ್ರಭುತ್ವದ ರೀತಿಗೆ ಅಳವಡಿಸಲಾಯಿತು. ಚರಿತ್ರೆಯು ಹೀಗೆಯೇ ಗತದಿಂದ ವರ್ತಮಾನಕ್ಕೆ ಹಾಗೂ ವರ್ತಮಾನದಿಂದ ಗತಕ್ಕೆ ಸಲೀಸಾಗಿ ಚಲಿಸಲು ಸಾಧ್ಯವಾಗುವುದು. ಇದರಲ್ಲಿ ಗಮನಿಸಬೇಕಾದುದೇನೆಂದರೆ; ಕನ್ನಡ ಪ್ರಭುತ್ವವು ರಾಜಕೀಯ ಪ್ರಭುತ್ವವಾಗಿ ಮಾರ್ಪಟ್ಟ ರೀತಿಯು ಕುತೂಹಲಕಾರಿಯಾಗಿದೆ. ಭಾಷಾವಾರು ಪ್ರಾಂತಗಳ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸುವಾಗ ಕಾಂಗ್ರೆಸ್ ಪಕ್ಷವು ಪರೋಕ್ಷವಾಗಿ ಭಾಷೆಯನ್ನು ಪ್ರಭುತ್ವದ ರೀತಿಗೆ ತಕ್ಕಂತೆ ಅಳವಡಿಸಿದೆ. ಇದರಿಂದ ಒಳ್ಳೆಯ ಹಾಗು ಕೆಟ್ಟ ಪರಿಣಾಮಗಳೆಲ್ಲ ಒಟ್ಟಿಗೇ ಘಟಿಸುತ್ತಿವೆ. ಏಕೀಕರಣ ವಿರೋಧಿ ದನಿಯು ಸೌಮ್ಯವಾಗಿ ರಾಜಕೀಯ ಪಾತ್ರವನ್ನು ನಿರ್ವಹಿಸಿದ್ದನ್ನು ಹಳೆ ಮೈಸೂರಿನ ಪ್ರಮುಖ ಕೋಮಿನ ನಡತೆಯಲ್ಲಿ ಕಂಡುಕೊಳ್ಳಬಹುದಾಗಿದೆ. ಏಕೀಕರಣದ ಭಿನ್ನಾಭಿಪ್ರಾಯವು ಜಾತಿ ನೆಲೆಯಿಂದ ಬಂದುದನ್ನು ಅಲ್ಲಗಳೆಯಲಾಗದು. ಕನ್ನಡ ಪ್ರಭುತ್ವವು ಒಂದು ರಾಜಕೀಯ ಪ್ರಭುತ್ವವಾಗಿ ರೂಪಾಂತರಗೊಳ್ಳುತ್ತಿದ್ದ ಹೊತ್ತಿನಲ್ಲೂ ಅದರಲ್ಲಿ ಜಾತಿಯ ಅಂಶವೂ ಸೇರಿಕೊಂಡಿದ್ದನ್ನು ಗುರುತಿಟ್ಟುಕೊಳ್ಳಲೇ ಬೇಕಾಗುತ್ತದೆ. ಅಂದರೆ ರಾಜ್ಯ ಮತ್ತು ಭಾಷೆಯ ಸ್ವರೂಪಗಳಲ್ಲೂ ಜಾತಿ ವ್ಯವಸ್ಥೆ ಕೂಡ ಒಂದು ಪ್ರಮುಖ ಮಾನದಂಡ ಎಂಬುದನ್ನು ಸೂಕ್ಷ್ಮವಾಗಿ ಪರಿಗಣಿಸಬೇಕಾಗುತ್ತದೆ.

ಹೀಗಾಗಿ ಕನ್ನಡ ಕನ್ನಡಿಗ ಕರ್ನಾಟಕ ಎಂಬ ಅಖಂಡ ರೂಪಕವು ತನ್ನೊಳಗೇ ಭಿನ್ನತೆಗಳನ್ನೂ ಅಧಿಕಾರದ ಕಾರಣಕ್ಕೆ ಉಳಿಸಿಕೊಂಡಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಇದರಿಂದಲೇ ಏಕೀಕರಣೋತ್ತರ ಕರ್ನಾಟಕದ ಚರಿತ್ರೆಯನ್ನು ಸಂಕೀರ್ಣ ನೆಲೆಗಳಿಂದಲೇ ನಿರ್ವಚಿಸಬೇಕಾದ ಇಕ್ಕಟ್ಟು ಉಂಟಾಗಿರುವುದು. ಚರಿತ್ರೆಯು ಕೇವಲ ವರದಿ ಅಲ್ಲ. ಆ ಕಾಲದ ಸಾಕ್ಷಿ ಪ್ರಜ್ಞೆಯನ್ನು ನಾಡು ಮತ್ತು ಸಮಾಜದ ಜೊತೆಯಲ್ಲೆ ಪರಿಶೀಲಿಸಬೇಕಾಗುತ್ತದೆ. ಚರಿತ್ರೆಯ ವಿವರಗಳಿಗಿಂತ ಆ ವಿವರಗಳ ಘಟನೆಗಳು ಮಾಡಿದ ಪರಿಣಾಮ ಮುಖ್ಯ. ಈ ಬಗೆಯ ಪರಿಣಾಮಗಳನ್ನು ಅರಿತು ವರ್ತಮಾನಕ್ಕೆ ಬೇಕಾದ ಪರಿಹಾರಗಳನ್ನು ಸೂಚಿಸಿ ಅನ್ವಯಿಸಬೇಕಾದದ್ದು ನಾಡಿನ ಭವಿಷ್ಯದಿಂದ ಬಹಳ ಮುಖ್ಯ. ಇದು ಅನ್ವಯಿಕ ಚರಿತ್ರೆ. ಗತಕಾಲದ ಅನುಭವಗಳನ್ನು ವರ್ತಮಾನದಲ್ಲಿ ಅನ್ವಯ ಮಾಡಿದರಷ್ಟೇ ಚರಿತ್ರೆಕಾರನ ಜವಾಬ್ದಾರಿ ಮುಗಿಯುವುದಿಲ್ಲ. ತರ್ಕ ವಿಶ್ಲೇಷಣೆಯ ಮೂಲಕ ಚರಿತ್ರೆಯ ವಿಮರ್ಶೆಯನ್ನು ಮಾಡಿ ಸೂಕ್ತ ಸಾಧ್ಯತೆಗಳನ್ನು ಧ್ವನಿಸುವುದು ಅನ್ವಯಿಕ ಚರಿತ್ರೆ. ಈ ಹಿಂದೆ ಪ್ರಸ್ತಾಪಿಸಿದ ಗತಕಾಲವು ವರ್ತಮಾನಕ್ಕೆ ಸದಾ ಪ್ರವಹಿಸುತ್ತಲೇ ಇರುತ್ತದೆ ಎಂಬ ವಿಚಾರವು ಕೇವಲ ತಾತ್ವಿಕ ನಂಬಿಕೆ ಅಲ್ಲ; ಅದು ವರ್ತಮಾನದ ಅನಿವಾರ್ಯ ಆನ್ವಯಿಕ ಒಪ್ಪಂದ. ಪರಂಪರೆಯು ಇದರಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಚರಿತ್ರೆಯಲ್ಲಿ ಕನ್ನಡ ಪರಂಪರೆಗಳು ಇದರಿಂದಲೇ ನಿರ್ಣಾಯಕವಾದ ಕೊಂಡಿಗಳಾಗಿ ವರ್ತಮಾನಕ್ಕೆ ಬೇಕಾದ ಸೂಚನೆಗಳನ್ನು ನೀಡುವುದು. ಈ ಬಗೆಯ ಕಾಲಸಂಬಂಧದಲ್ಲಿ ಪರಿಣಾಮ ಮುಖ್ಯವೇ ವಿನಃ ವಿವರಗಳ ವರದಿಯ ಪ್ರಮಾಣ ಪ್ರಮುಖವಲ್ಲ. ಕನ್ನಡ ಪ್ರಭುತ್ವದ ಕನ್ನಡ ಸಮಾಜವು ರೂಪಿಸಿಕೊಳ್ಳುತ್ತ ಸವೆಸಿದ ಅರ್ಧಶತಮಾನದ ಕಾಲವು ಆತ್ಯಂತಿಕವಾದ ಕನ್ನಡತನವನ್ನೇನು ರೂಪಿಸಿಲ್ಲ. ಹಾಗಿದ್ದಾಗ್ಯೂ ಸಹ ಕನ್ನಡ ಪ್ರಭುತ್ವವು ರಾಜಕೀಯ ಪ್ರಭುತ್ವವಾಗಿ ರೂಪಾಂತರಗೊಂಡದ್ದು ಮುಖ್ಯ. ಕನ್ನಡ ಭಾಷೆಯು ಅರ್ಥಾತ್ ಕನ್ನಡ ನಾಡು ರಾಜಕೀಯ ಶಕ್ತಿಯಾಗಿ ಬೆಳೆದದ್ದು ರಾಷ್ಟ್ರೀಯತೆಗೆ ಹೆಚ್ಚಿನ ಲಾಭ ತಂದಿತೇ ಹೊರತು ಸ್ಥಳೀಯ ಸಮುದಾಯಗಳ ಹಲವು ಭಾಷಿಕ ರಚನೆಗಳಿಗೆ ದೊಡ್ಡ ಶಕ್ತಿಯನ್ನೇನು ತಂದುಕೊಡಲಿಲ್ಲ. ಅಂದರೆ ಭಾಷೆಯ ಮೂಲಕ ಕೆಲವು ಪ್ರಧಾನ ವರ್ಗ, ಜಾತಿ, ಪ್ರದೇಶಗಳು ಮೂಂದೆ ಬಂದವೆ ಹೊರತು ಕನ್ನಡ ನಾಡು ಪ್ರವರ್ಧಮಾನಕ್ಕೆ ಬರಲಿಲ್ಲ. 

  ಕನ್ನಡ ನಾಡಿನ ಒಳಗಿನ ಅಲಕ್ಷಿತ ಸಮುದಾಯಗಳ ಭಾಷೆಗಳು ಕೂಡ ಮುಖ್ಯ. ಆದಿವಾಸಿ, ಅಲೆಮಾರಿಗಳ ನೂರಾರು ಅಲಕ್ಷಿತ ಭಾಷೆಗಳು ಮಾನ್ಯವಾಗದಿದ್ದರೆ ಅಂತಹ ಸಮುದಾಯಗಳು ಕೂಡ ಲೆಕ್ಕಕ್ಕೆ ಇಲ್ಲದಂತಾಗುತ್ತವೆ. ಇನ್ನು ಅಲ್ಪ ಸಂಖ್ಯಾತ ಸಮಾಜಗಳ ಭಾಷೆಗಳು ಕೂಡ ಕನ್ನಡ ನಾಡಿನ ಅಸ್ತಿತ್ವಕ್ಕೆ ಅನಿವಾರ್ಯ. ಕನ್ನಡ ಯಜಮಾನಿಕೆಯಲ್ಲಿ ಅಂಚಿನ ಭಾಷೆಗಳು ನಾಶವಾಗಬಾರದು. ಭಾಷೆಯ ತಾರತಮ್ಯವು ಬೆಳೆಯಲು ಕನ್ನಡ ಪ್ರಭುತ್ವವು ಯಾಜಮಾನ್ಯ ಜಾತಿಗಳ ಹಿತಾಸಕ್ತಿಗಳನ್ನು ಕಾಯಲು ತೊಡಗಿದ್ದುದೇ ಕಾರಣವಾಯಿತು. ಈ ಅಭಿಪ್ರಾಯಕ್ಕೆ ತಕ್ಕ ಭೌತಿಕ ಸಾಕ್ಷಿಗಳು ದೊರೆಯದಿದ್ದರೂ ಮನಸಾಕ್ಷಿಗಳು ದೊರೆಯುತ್ತವೆ. ಏಕೀಕರಣೋತ್ತರ ಕರ್ನಾಟಕದ ರಾಜಕೀಯ ಪ್ರಭುತ್ವ ಪ್ರಜಾಪ್ರಭುತ್ವದ ಮುಖವಾಡದಲ್ಲೆ ಕನ್ನಡ ಪ್ರಧಾನ ಜಾತಿಗಳ ಹಿತಾಸಕ್ತಿಗೆ ತಕ್ಕಂತೆ ರಾಜಕಾರಣವನ್ನು ಮಾಡಿರುವುದರಿಂದ ಬಹು ಭಾಷಿಕ ಸಮಾಜಗಳ ಅಖಂಡ ಮಾನವ ಸಂಬಂಧಗಳು ಸಾಧ್ಯವಾಗಿಲ್ಲ. ಕನ್ನಡನಾಡು ಎಂದರೆ ಎಂದೇ ಭಾಷೆಯ ಸಮುದಾಯಗಳ ನೆಲೆ ಅಲ್ಲ. ಭಾಷೆಯ ಜೊತೆಯಲ್ಲೆ ಉಳಿದ ಬಹುರೂಪಿ ಸಮಾಜಗಳ ಒಪ್ಪಂದಗಳೂ ಕೂಡ ಭವಿಷ್ಯದ ಕಾರಣಕ್ಕಾಗಿ ಅನಿವಾರ್ಯ. ಈ ನೆಲೆಯಲ್ಲಿ ಸುವರ್ಣ ಕನ್ನಡ ನಾಡನ್ನು ಕಾಣಬೇಕು.

ರಾಜಕೀಯಗೊಂಡ ಇಪ್ಪತ್ತನೆ ಶತಮಾನವು ಚರಿತ್ರೆಯಲ್ಲಿ ಸಾಕ್ಷ್ಯವನ್ನು ರೂಪಿಸಿಕೊಳ್ಳುವ ಬಗೆಯು ಅಪರಾಧಗಳನ್ನು ಮುಚ್ಚಿಟ್ಟುಕೊಂಡು ತನ್ನ ಘನತೆಯನ್ನು ಸ್ಥಾಪಿಸಿಕೊಳ್ಳುವಂತದಾಗಿದೆ. ಆದ್ದರಿಂದಲೇ ಸಾಕ್ಷ್ಯದ ಪ್ರಜಾಪ್ರಭುತ್ವವಾದಿ ಗರ್ವವು ಯಾವ ಶಾಸನಗಳಿಗಿಂತಲೂ ಮಿಗಿಲಾದುದಾಗಿದೆ. ಗತಕಾಲದ ಶಾಸನಗಳನ್ನು ಧಿಕ್ಕರಿಸುವುದು ಸುಲಭವಾದರೂ ಸಂವಿಧಾನ ಬದ್ಧವೆಂದು ಮಾಡುವ ರಾಜಕೀಯ ಅನುಶಾಸನಗಳು ನಾಡನ್ನೂ ಅದರ ಭಾಷೆಯನ್ನೂ ಸಮಾಜವನ್ನೂ ಖಾಸಗಿಯಾಗಿ ತನ್ನದಾಗಿಸಿಕೊಳ್ಳುವಂತದ್ದು. ಪ್ರಭುತ್ವವು ತನಗೆ ಸಮ್ಮತವಲ್ಲದ ಯಾವುದೇ ವಿಮರ್ಶಾತ್ಮಕ ಸಾಕ್ಷ್ಯವನ್ನು ಮಾನ್ಯ ಮಾಡುವುದಿಲ್ಲ. ಬೌದ್ಧಿಕ ವಲಯ ಕೂಡ ಅನೇಕ ಸಂದರ್ಭಗಳಲ್ಲಿ ವ್ಯವಸ್ಥೆಯ ಭಾಗವಾಗುವ ಅವಕಾಶಗಳಿದ್ದಾಗ ಪ್ರತಿರೋಧ ಸಾಕ್ಷ್ಯಗಳನ್ನು ಕೈಬಿಡುತ್ತದೆ. ಏಕೀಕರಣೋತ್ತರ ಕನ್ನಡ ನಾಡಿನ ಸಮಾಜವು ಬಹುಪಾಲು ಪ್ರತಿರೋಧ ಸಾಕ್ಷ್ಯಗಳನ್ನೇ ಧ್ವನಿಸಿರುವುದರಿಂದ ಸಮುದಾಯಗಳ ಅಂತಹ ಧ್ವನಿ ಪ್ರಜ್ಞೆಯ ಪ್ರತಿರೋಧವನ್ನೆ ಚರಿತ್ರೆಯ ರಚನೆಗೆ ಅಡಿಪಾಯವಾಗಿ ತೆಗೆದುಕೊಳ್ಳಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಕನ್ನಡ ಪ್ರಭುತ್ವದ ಜನವಾದಿ ಅರ್ಥವೇ ಬೇರೆ ರಾಜಕೀಯ ಪ್ರಭುತ್ವದ ಅಧಿಕಾರವೇ ಬೇರೆ. ಕವಿರಾಜ ಮಾರ್ಗಕಾರ ಕನ್ನಡಿಗರ ಘನತೆ ಔದಾರ್ಯ ಶಕ್ತಿ ಸಾಮರ್ಥ್ಯಗಳನ್ನು ಕೊಂಡಾಡುವ ನೆನ್ನೆಯ ಚರಿತ್ರೆಯ ಸಂಭ್ರಮವೇ ಬೇರೆ; ಈ ಕಾಲದಲ್ಲಿ ಭಾಷೆಯ ಮೂಲಕ ಪ್ರಭುತ್ವವು ಮಲಿನ ರಾಜಕಾರಣವನ್ನು ಪ್ರಚುರಪಡಿಸುವುದೇ ಬೇರೆ. ಈ ವ್ಯತ್ಯಾಸಗಳು ಕೇವಲ ಸಾಹಿತ್ಯಿಕವಾದವಲ್ಲ. ನಾಡಿನ ನಡತೆಯ ವಿಪರ್ಯಾಸಕರ ಪರಿಸ್ಥಿತಿಯನ್ನು ಬಿಂಬಿಸುವ ವಾಸ್ತವವೇ ಆಗಿವೆ. ‘ನಾಡೇ ನುಡಿಯು; ನುಡಿಯೆ ನಾಡು’ ಎಂಬ ನುಡಿಯಾಗಲೀ; ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಅನ್ಯವಲ್ಲದೆ ಮಿಥ್ಯಾ’ ಎಂಬ ವಾಣಿಯಾಗಲಿ; ‘ಹೆಸರಾಯಿತು ಕನ್ನಡ; ಉಸಿರಾಗಲಿ ಕನ್ನಡ’ ಎಂಬ ಕರೆಯಾಗಲಿ; ‘ಹಚ್ಚೇವು ಕನ್ನಡದ ದೀಪ: ಎಂಬ ಹಾಡಾಗಲಿ; ‘ನಮ್ಮ ಉಸುರು, ತಮ್ಮ ಕಸುವು ಕನ್ನಡ; ನಮ್ಮ ಹಎಸರು ನಮ್ಮ ಕಸುಬು ಕನ್ನಡ’ ಎಂಬ ಧ್ಯೇಯವಾಗಲಿ ‘ಜೋಗದ ಸಿರಿ ಬೆಳಗಿನಲ್ಲಿ ನಿತ್ಯೋತ್ಸವ ತಾಯೆ ನಿನಗೆ ನಿತ್ಯೋತ್ಸವ’ ಎಂದು ಮೈದುಂಬಿದ ಭಾವ ದೀಪ್ತಿಯಲ್ಲಿ ಚರಿತ್ರೆಯು ಭಾವನಾತ್ಮಕವಾಗಿ ಪ್ರತಿಫಲಿಸುತ್ತಿದೆ. ಇದು ಕವಿ ಧರ್ಮ. ಇದರಲ್ಲಿ ಅಖಂಡವಾದ ನಾಡಿನ ‘ರಾಷ್ಟ್ರೀಯತೆ’ ಇದೆ. ಕವಿಗಳು ಕಂಡ ಕನ್ನಡ ಪ್ರಭುತ್ವದಲ್ಲಿ ಪಂಪನ ಪ್ರಜ್ಞೆಯು ವಿಕಾಸವಾಗುತ್ತಲೇ ಇದೆ. ಆದ್ದರಿಂದಲೇ ಕುವೆಂಪು ಭಾವಿಸುವ ಕನ್ನಡ ಪ್ರಭುತ್ವವು ರಾಜಕೀಯ ಪ್ರಭುತ್ವದ ಚೌಕಟ್ಟನ್ನು ಮೀರುವಂತದ್ದು ‘ಪಂಪನಿಲ್ಲಿ ಮುಖ್ಯಮಂತ್ರಿ’ ಎಂದು ಭಾವಿಸುವುದಕ್ಕೂ ರಾಜ್ಯಾಧಿಕಾರವನ್ನು ಜಾತಿಸೂತ್ರದಲ್ಲಿ ವಿಂಗಡಿಸಿ ಹಂಚಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಏಕೀಕರಣೋತ್ತರ ಕರ್ನಾಟಕದಲ್ಲಿ ಈ ಜಾತಿ ಪ್ರಣೀತ ರಾಜಕೀಯವೇ ನಿರ್ಣಾಯಕವಾಗಿದ್ದು ಇಲ್ಲೆಲ್ಲ ಪ್ರಭುತ್ವವೇ ಆವರಿಸಿಕೊಂಡಿದೆಯೇ ಹೊರತು ಕನ್ನಡ ನಾಡಿನ ಒಳಗಿನ ಬಹುಭಾಷಿಕ ಸಮಾಜವು ಮುಖ್ಯವಾಗಿಲ್ಲ.

ಕನ್ನಡ ಪ್ರಭುತ್ವದಲ್ಲೆ ಆಡಳಿತ ಭಾಷೆಯಾಗಿ ಕನ್ನಡವು ಪೂರ್ಣವಾಗಿ ಜಾರಿಯಾಗಿಲ್ಲ ಎಂಬ ವಾಸ್ತವವು ಏಕೀಕರಣದ ವೈರುಧ್ಯದಂತಿದೆ. ಕನ್ನಡಿಗರ ಹಿತಕಾಯುವುದಕ್ಕೆಂದೇ ಅಸ್ತಿತ್ವಕ್ಕೆ ಬಂದ ಕನ್ನಡ ಪ್ರಭುತ್ವ ಕಣ್ಮರೆಯಾಗಿದ್ದು ಅದು ಸ್ವಾರ್ಥಪರ ರಾಜಕಾರಣಿಗಳ ಅಧಿಕಾರದ ಭಾಗವಾಗಿ ಬಳಕೆಯಾಗುತ್ತಿದೆ. ಹೀಗಾಗಿಯೇ ‘ಬಾರಿಸು ಕನ್ನಡ ಡಿಂಡಿಂವ’ ಎಂಬ ಕವಿ ನುಡಿಯು ಈ ಕಾಲದಲ್ಲಿ ವ್ಯಂಗ್ಯವಾಗಿ ಭಾಸವಾಗುತ್ತಿರುವುದು. ರಾಜ ಮಹಾರಾಜರು ಕನ್ನಡವನ್ನು ಕನ್ನಡಿಗರನ್ನು ನಾಡನ್ನು ಬಳಸಿಕೊಂಡಂತೆಯೇ ಪ್ರಜಾ ‘ಪ್ರಭುಗಳು’ ಕೂಡ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಹೀಗಾಗಿ ಕನ್ನಡ ಪ್ರಭುತ್ವ ಮತ್ತು ಕನ್ನಡ ಸಮಾಜ ಎಂಬ ಈ ಪರಿಕಲ್ಪನೆಗಳು ಆದರ್ಶವಾಗಿ ಕಂಡರೂ ವಾಸ್ತವದಲ್ಲಿ ಅವು ಕಲ್ಪಿತ ನಂಬಿಕೆಗಳಾಗಿ ಅಂತೆಯೇ ಕೆಟ್ಟ ನಂಬಿಕೆಗಳಾಗಿ ಮಾರ್ಪಟ್ಟಿರುವುದು. ಅಪ್ಪಟ ಕನ್ನಡಿಗನೇ ತನ್ನ ಕನ್ನಡವನ್ನು ಕಳೆದುಕೊಳ್ಳಬೇಕೆಂದು ಬಯಸುವ ಮಟ್ಟಿಗೆ ಭಾಷೆಯ ಪರಿಸರವು ಬದಲಾಗುತ್ತಿದೆ. ಏಕೀಕರಣೋತ್ತರ ಕನ್ನಡ ಸಮಾಜದಲ್ಲಿ ಕನ್ನಡಿಗನಿಗೆ ನಿಜವಾದ ಆಯ್ಕೆಗಳೇ ಇಲ್ಲವಾಗುತ್ತಿವೆ. ಸಮಾಜಕ್ಕೆ ತಕ್ಕ ಆಯ್ಕೆಗಳಿರುವುದಿಲ್ಲ ಎಂದರೆ ಅಂತಹ ಸಮಾಜಕ್ಕೆ ಭವಿಷ್ಯವೇ ಇರುವುದಿಲ್ಲ. ಭಾಷೆಯು ರಾಜಕೀಯವಾಗಿ ಬಲಗೊಂಡು ಎಲ್ಲ ನೆಲೆಗಳಲ್ಲೂ ಅಸ್ತಿತ್ವವನ್ನು ರೂಪಿಸಿಕೊಳ್ಳುವುದು ಸರಿ. ಆದರೆ ಸ್ವತಃ ಭಾಷೆ ಮತ್ತು ಅದರ ಸಮಾಜವನ್ನೆ ದುಷ್ಠ ರಾಜಕಾರಣವು ಆಕ್ರಮಿಸಿಕೊಂಡಾಗ ಭಾಷೆ ಮತ್ತು ಸಮಾಜ ಎರಡೂ ತಮ್ಮ ಮೂಲ ಗುಣಗಳನ್ನು ಕಳೆದುಕೊಳ್ಳುತ್ತವೆ. ವಸಾಹತುಶಾಹಿ ಸಾಮ್ರಾಜ್ಯವು ತನ್ನ ಇಂಗ್ಲೀಷ್ ಭಾಷೆಯ ಯಜಮಾನಿಕೆಯನ್ನು ಹೇರಿದ್ದು ಇನ್ನೊಂದು ಬಗೆ. ಸ್ಥಳೀಯ ಭಾಷೆಗಳ ಮೇಲಿನ ಹಿಡಿತಕ್ಕಿಂತ ಆ ಭಾಷೆಯನ್ನಾಡುವ ಸಮಾಜದ ಆಲೋಚನೆಯ ಮೇಲೆಯೇ ಪ್ರಭಾವ ಬೀರಿದರೆ ಆಗ ಅಲ್ಲಿನ ಪ್ರಭುತ್ವವನ್ನೆ ನಿರ್ವಹಿಸುವುದು ಸುಲಭ. ಜಾಗತೀಕರಣದ ಈ ಕಾಲಘಟ್ಟದಲ್ಲಿ ಭಾಷೆಯ ಅಂತಹ ಪ್ರಭುತ್ವವು ಕನ್ನಡದ ಮೇಲೆಯೂ ಪರಿಣಾಮ ಉಂಟು ಮಾಡುತ್ತಿರುವುದನ್ನು ಗಮನಿಸಬಹುದು. ಹೀಗಾಗಿ ಏಕ ಕಾಲಕ್ಕೆ ಕನ್ನಡ ಸಮಾಜವು ಆರ್ಥಿಕವಾದ ಸವಾಲುಗಳನ್ನು ಕೂಡ ನಿಭಾಯಿಸಬೇಕಾಗಿದ್ದು ಜಾಗತಿಕವಾದ ವಿದ್ಯಮಾನಗಳು ಕನ್ನಡ ಕನ್ನಡಿಗ ಕರ್ನಾಟಕದ ಅಂತರಂಗದಲ್ಲಿ ಬಂದು ಸೇರಿಕೊಳ್ಳುತ್ತವೆ. ಇವುಗಳ ನಡುವೆಯೇ ಈಗ ತಾನೆ ಬಾಯಿ ತೆರೆಯುತ್ತಿರುವ ಹಲವಾರು ತಳಸಮುದಾಯಗಳು ತಮ್ಮ ಅಂತರಂಗದ ಭಾಷೆಯ ಒಳ ನುಡಿಗಳನ್ನು ಆಡಲು ಆರಂಭಿಸಿದ್ದು ಕನ್ನಡ ಭಾಷೆಯ ನಡುವೆಯೇ ತಮ್ಮ ಭಾಷಿಕ ನೆಲೆಗಳನ್ನು ಒತ್ತಾಯಿಸುತ್ತಿವೆ. ಇವೆಲ್ಲವೂ ಒಟ್ಟಾಗಿ ಸಾಗುವಾಗ ಅನೇಕ ಅಪಾಯಗಳು ಹಿಡಿಯಾಗಿಯೆ ಎಲ್ಲ ಭಾಷೆ ಮತ್ತು ಸಂಸ್ಕೃತಿಗಳ ಮೇಲೂ ಆಗುತ್ತವೆ.

ಯಾವುದೇ ಒಂದು ಭಾಷೆಯ ಸಮಾಜವು ಕೇವಲ ಪ್ರಭುತ್ವ ಒಂದರಿಂದಲೇ ಅಳಿವು ಉಳಿವು ಸ್ಥಿತಿಯನ್ನು ತಲುಪಲಾರದು. ಬೇರೆಯಾದ ಅನೇಕ ಸಂಗತಿಗಳು ಒಂದು ನಾಡಿನ ಅಸ್ತಿತ್ವವನ್ನು ನಿರ್ಧರಿಸುತ್ತವೆ ಎಂಬುದು ವರ್ತಮಾನದಲ್ಲಿ ನಿಚ್ಚಳವಾಗಿ ತಿಳಿಯುತ್ತಿದೆ. ಭಾಷೆಯು ಕೇವಲ ಮೂಲ ಸಂಗತಿ ಮಾತ್ರ. ಅದರ ಮೇಲೆ ವರ್ತಮಾನದ ಮಾನವ ಸಂಬಂಧಗಳು ಹೇಗೆ ಜಾಗತಿಕವಾದ ಸಂವಹನ ಮತ್ತು ಅರ್ಥಸಂಬಂಧಗಳನ್ನು ಬೆಳೆಸುತ್ತವೆ ಎಂಬ ಅಂಶಗಳು ಈ ಕಾಲದಲ್ಲಿ ಪ್ರಧಾನವಾಗುತ್ತಿವೆ. ತಾತ್ವಿಕವಾಗಿ ಭಾಷೆ ಒಂದು ಮೂಲ ಅಸ್ತಿತ್ವವಾದರೂ ವಾಸ್ತವದಲ್ಲಿ ಮಾಹಿತಿ ತಂತ್ರಜ್ಞಾನ, ಸಂಪರ್ಕ ಜಾಲ, ಮಾರುಕಟ್ಟೆ, ಸಮೂಹ ಮಾಧ್ಯಮ, ಅನುಭೋಗಿ ಸಂಬಂಧ, ಉತ್ಪಾದನಾ ವ್ಯವಸ್ಥೆ, ಖಾಸಗೀಕರಣ, ಜಾಗತೀಕರಣದಂತಹ ಕ್ಷೇತ್ರಗಳಲ್ಲಿ ಮಾತ್ರ ಭಾಷೆಯು ವಿಶೇಷವಾಗಿ ಬಳಸಲ್ಪಡುತ್ತಿದೆ. ಹೀಗೆ ಬಳಸಲ್ಪಡುತ್ತಿರುವ ಭಾಷೆಯ ಸಂದರ್ಭವು ಕೃತಕವಾದದ್ದು ಎಂಬುದನ್ನು ಗಮನಿಸಬೇಕು. ಇಪ್ಪತ್ತೊಂದನೆ ಶತಮಾನದ ಕನ್ನಡ ಭಾಷೆಯು ಸ್ಥಿತಿಯೆ ಈ ನೆಲೆಗಳಿಂದ ನಿರ್ಧರಿಸಲ್ಪಡುತ್ತಿದೆ. ಭಾಷೆಯೆ ಇಲ್ಲಿ ಮಾರುಕಟ್ಟೆಯ ಸಂವಹನ ಜಾಲವಾಗುತ್ತಿದೆ. ಸೃಷ್ಟಿಶೀಲ ಗುಣವಿಲ್ಲದೆ ಬಳಸಲ್ಪಡುವ ಭಾಷೆಯು ವಿಕಾಸವಾಗದು ಏಕೀಕರಣೋತ್ತರ ಕರ್ನಾಟಕದಲ್ಲಿ ಕನ್ನಡ ಭಾಷೆಯು ರಾಜಕೀಯ ಪ್ರಭುತ್ವದ ಭಾಗವಾಗಿದ್ದರೂ ಈಗದು ಮೇಲೆ ಉಲ್ಲೇಖಿಸಿದ ನೆಲೆಗಳ ಹಿಡಿತದಲ್ಲಿ ಸಿಲುಕಿದೆ. ಈ ಅಂಶಗಳಲ್ಲಿ ಯಾವ ಕನ್ನಡಿಗ ನಡೆಯುವುದನ್ನು ಕಲಿಯಬಲ್ಲರೊ ಅಂತವರು ಮಾತ್ರವೇ ಅಭಿವೃದ್ಧಿ ಹೊಂದುವರು ಎಂಬ ಭಾವನೆ ಬಲವಾಗುತ್ತಿದೆ. ಇದು ನಿಜವಾದ ಏಕೀಕರಣದ ಕನಸಾಗಿರಲಿಲ್ಲ. ಕನ್ನಡದ್ದೇ ರಾಜಕೀಯ ಪ್ರಭುತ್ವ ಇದೆ ಎಂದು ಭಾವಿಸಿದ್ದರೂ ಆ ಭಾಷೆಯ ಸ್ಥಿತಿಯು ಏಕೀಕರಣ ಪೂರ್ವದಲ್ಲಿದ್ದ ಸ್ಥಿತಿಗಿಂತಲೂ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದೆ.

ಈ ಹಿನ್ನೆಲೆಯಿಂದ ಗಮನಿಸಿದರೆ ಕನ್ನಡ ಭಾಷೆ ಮತ್ತು ಸಮಾಜವು ಆತ್ಯಂತಿಕವಾದ ಸೃಜನಶೀಲ ಶೋಧದಲ್ಲಿ ಪರಿಣಾಮಕಾರಿಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಸಂಸ್ಕೃತಿಗೆ ಸಂಬಂಧಿಸಿದಂತೆ ಕನ್ನಡ ಭಾಷೆಯು ಬೆಳೆಯುತ್ತಿದೆಯೇ ಎಂದರೆ ಅಲ್ಲೂ ನಿರಾಶೆಯೆ ಎದುರಾಗುತ್ತದೆ. ಕನ್ನಡ ಸಂಸ್ಕೃತಿಯು ಕಾಲ ಸಾಗಿದಂತೆಲ್ಲ ತುಂಬ ತೆಳುವಾಗುತ್ತಿದೆ. ಸಾಂಸ್ಕೃತಿಕ ಸ್ಮೃತಿಗಳನ್ನು ಕನ್ನಡ ಸಮಾಜವೇ ಕೈಬಿಡುತ್ತಿದೆ. ಹೊರಗಿನ ನಾಗರೀಕತೆಯ ಭೌತಿಕ ಲೋಕವನ್ನೆ  ಮತ್ತು ಅದರ ಉಪಯೋಗವನ್ನೆ ತಮ್ಮ ಸಂಸ್ಕೃತ ಎಂದು ಸ್ವೀಕರಿಸುವುದು ನಡೆದಿದೆ. ಸ್ವೀಕರಣೆ ಅನುಕರಣೆ ತಪ್ಪಲ್ಲ. ಆದರೆ ತನ್ನ ಸೃಜನಶೀಲ ಸಾಂಸ್ಕೃತಿಕ ಸ್ವಭಾವವನ್ನೆ ಕಳೆದುಕೊಳ್ಳುವುದು ಭಾಷೆಯ ವಿಕಾಸದಲ್ಲಿ ತುಂಬಾ ಅಪಾಯಕಾರಿಯಾದುದು. ಹೀಗಾಗಿಯೇ ಇಂದಿನ ಕನ್ನಡ ಭಾಷೆಯು ವರ್ತಮಾನದ ಒತ್ತಡದಲ್ಲಿ ಕೃತಕವಾದ ಭಾಷೆಯನ್ನು ಬಳಸುತ್ತಿರುವುದು. ಈ ಮೇಲೆ ಉಲ್ಲೇಖಿಸಿದ ಅಂಶ ಅಂದರೆ; ಯಾವ ಯಾವ ನೆಲೆಗಳಲ್ಲಿ ಮಾತ್ರ ಕನ್ನಡವು ಬಳಕೆಯಾಗುತ್ತಿದೆ ಎಂಬ ಮಾತನ್ನು ನೆನಪಿಸಿಕೊಳ್ಳಿ. ಸಮೂಹ ಮಾಧ್ಯಮಗಳು ಬಳಸುವ ಕನ್ನಡ ಸೃಷ್ಟಿಶೀಲವಾದದ್ದಲ್ಲ. ಯಾವ ವರ್ತಮಾನವು ಹೆಚ್ಚು ಸುಳ್ಳನ್ನು ಹೇಳುತ್ತದೊ ಅದರಿಂದ ಭಾಷೆಯು ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಮಾಹಿತಿ ಸಂಪರ್ಕ ಜಾಲದಿಂದ ಸಂವಹನಕ್ಕೆ ವೇಗ ಬಂದಿರಬಹುದೇ ಹೊರತು ಆ ಮಾತಿಗೆ ಗಾಢವಾದ ನೀತಿ ಇಲ್ಲವಾಗಿದೆ.

ಒಂದು ಭಾಷೆಯನ್ನು ಕೊಲ್ಲಲು ಕೇವಲ ಸುಳ್ಳುಗಳು ಸಾಕು. ಭಾಷೆಯಲ್ಲಿ ಸುಳ್ಳು ಹೆಚ್ಚಾದಂತೆಲ್ಲ ಅದರ ಸಂವಹನವು ಆ ಭಾಷೆಯನ್ನು ಆಡುವ ಸಮಾಜವನ್ನು ಕೊಲ್ಲಬಲ್ಲದು. ಸಮೂಹ ಮಾಧ್ಯಮಗಳ ಸುಳ್ಳು ಭಾಷೆಯನ್ನು ಸುಳ್ಳಿನ ನೇಯ್ಗೆಗೆ ಮಾತ್ರ ಜಾಣರಾಗುವಂತೆ ಮಾಡುತ್ತದೆ. ಇದು ಇಪ್ಪತ್ತೊಂದನೆ ಶತಮಾನದ ಗುಣವಾಗಿದ್ದು ಹದಿನೆಂಟನೆ ಶತಮಾನದ ಕೈಗಾರಿಕಾ ಕ್ರಾಂತಿಯ ಕಾಲದಲ್ಲೆ ಪಶ್ಚಿಮವು ಭಾಷೆಗಳಿಗೆ ಸುಳ್ಳು ಹೇಳುವುದನ್ನು ಚೆನ್ನಾಗಿ ಕಲಿಸುತ್ತ ಬಂದಿದೆ. ಈಗಲೂ ಮಾಹಿತಿ ತಂತ್ರಜ್ಞಾನದಲ್ಲಾಗಲಿ, ಐ.ಟಿ.ಬಿ.ಟಿ.ಗಳಲ್ಲಿ ತಾಂತ್ರಿಕ ಕೂಲಿ ಮಾಡುವ ಯುವ ಪೀಳಿಗೆಗಾಗಲಿ ಸುಳ್ಳನ್ನೆ ಹೇಳಿ ಕೊಡಲಾಗುತ್ತಿದೆ. ಭಾಷೆಗಳು ಬೆಳೆದಿರುವುದೇ ಸಂಸ್ಕೃತಿಯ ಸ್ವಭಾವದಿಂದ. ನಾಗರೀಕತೆಗಳು ಜಾಣತವನ್ನು ಮೆರೆದು ಆಳುವ ಶಕ್ತಿಯನ್ನು ಪಡೆದು ಭಾಷೆ ಮತ್ತು ಸಂಸ್ಕೃತಿಗಳ ಮೇಲೆ ದಿಗ್ವಿಜಯ ಸಾಧಿಸುತ್ತಿರುತ್ತವೆ. ಹೀಗಾಗಿಯೆ ಭಾಷೆಯ ಆರ್ಥಿಕ ಸುಳ್ಳು, ರಾಜಕೀಯ ಸುಳ್ಳು, ಸಾಮಾಜಿಕ ಸುಳ್ಳು ಒಂದು ನಾಡಿನ, ಪ್ರಗತಿಯನ್ನು ಕುರೂಪಗೊಳಿಸಿ ತನಗೆ ಹೊಂದುವ ಸಾಮ್ರಾಜ್ಯಶಾಹಿ ನೀತಿಯನ್ನು ಭಾಷೆಯಲ್ಲಿ ಉಳಿಸಿಕೊಳ್ಳುತ್ತದೆ. ಕನ್ನಡ ಪ್ರಭುತ್ವವು ಇದರಿಂದಾಗಿಯೇ ಕನ್ನಡಿಗರ ಆಶೋತ್ತರಗಳಿಗೆ ಪೂರಕವಾಗಿರದೆ ಸುಳ್ಳುಗಳ ಮೂಲಕ ಆಡಳಿತ ನಡೆಸುವಂತಾಗಿರುವುದು. ಈ ಸ್ಥಿತಿಯಲ್ಲಿ ಸಮಾಜಗಳು ಸುಳ್ಳನ್ನೆ ಸತ್ಯ ಎಂದು ಭ್ರಮಿಸುತ್ತವೆ ಜೊತೆಗೆ ಆ ಬಗೆಯ ಭ್ರಮೆಯಲ್ಲಿ ತನಗೆ ಬೇಕಾದಂತೆ ಸುಳ್ಳನ್ನು ವಿಸ್ತರಿಸಿಕೊಳ್ಳುತ್ತವೆ. ಇಂತಲ್ಲಿ ಭಾಷೆಯು “ಕೊಟ್ಟಮಾತಿಗೆ ತಪ್ಪಲಾರೆನು ಕೆಟ್ಟಯೋಚನೆ ಮಾಡಲಾರೆನು” ಎಂಬ ನೀತಿಯನ್ನು ಹಾಡಲಾರದು. ನ್ಯಾಯನಿಷ್ಠೆಯ ಹೊಣೆಗಾರಿಕೆಯನ್ನು ನಿರ್ವಹಿಸದ ಕನ್ನಡ ಪ್ರಭುತ್ವವು ಅಖಂಡತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದು.

ಏಕೀಕರಣೋತ್ತರ ಕರ್ನಾಟಕದ ರಾಜಕೀಯವು ಜನತೆಯನ್ನೆ ತನ್ನ ಬಂಡವಳವನ್ನಾಗಿಸಿ ಕೊಂಡಿದೆ. ಸೂಕ್ಷ್ಮವಾಗಿ ಪ್ರಧಾನ ಜಾತಿಗಳು ರಾಜಕೀಯ ಬಣಗಳಾಗಿ ಬೆಳೆಯುತ್ತಿವೆ. ಜಾತಿ ವ್ಯವಸ್ಥೆಯು ರೂಪಾಂತರಗೊಂಡು ರಾಜಕೀಯ ಜಾಲದಲ್ಲಿ ಕ್ರೂರವಾಗುತ್ತಿದೆ. ಮತೀಯ ಮೌಡ್ಯಗಳು ಹೆಚ್ಚುತ್ತಿವೆ. ಮತಧರ್ಮಗಳ ಹೆಸರಲ್ಲಿ ಕನ್ನಡ ಪ್ರಜ್ಞೆಯು ಸಂಕುಚಿತವಾಗುತ್ತಿದೆ. ತಾರತಮ್ಯಗಳು ಬಡವ ಶ್ರೀಮಂತರ ನಡುವೆ ವಿಸ್ತರಿಸುತ್ತಿದ್ದು ಬಡವರು ಮತ್ತಷ್ಟು ಕೆಳಗಿಳಿಯುತ್ತಿದ್ದಾರೆ. ಪ್ರಾದೇಶಿಕ ಅಸಮಾನತೆಗಳು ಮುಂದುವರೆದಿವೆ. ಬಡ ಕನ್ನಡದ ಮಕ್ಕಳಿಗೆ ಉದ್ಯೋಗ ಗಗನ ಕುಸುಮವಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಕನ್ನಡ ನಾಡೇ ಖಾಸಗೀಕರಣಗೊಳ್ಳುತ್ತಿದ್ದು ಸಾರ್ವಜನಿಕ ವಲಯವು ಮರೆಯಾಗುತ್ತಿದೆ. ಹಿಡಿಯಾಗಿ ನೋಡಿದರೆ ಜನತೆಯ ಪರವಾಗಿದ್ದ ಸಾರ್ವಜನಿಕ ಕ್ಷೇತ್ರಗಳು ಸರ್ಕಾರದ ಮೂಲಕವೇ ಪರಭಾರೆಯಾಗುತ್ತಿವೆ. ಇದರಿಂದ ಕನ್ನಡ ಪ್ರಭುತ್ವದ ಅಸ್ತಿತ್ವವೇ ಖಾಸಗೀಕರಣಗೊಂಡಿದೆ. ಬಲಿಷ್ಠ ಜಾತಿಗಳ ಬಲಿಷ್ಠ ರಾಜಕಾರಣಿಗಳ ಪಾಲಾಗಿ ಪ್ರಭುತ್ವ ಜನರಿಂದ ದೂರವಾಗಿದೆ. ಕನ್ನಡಿಗ ತನ್ನ ನಾಡಿನ ಭಾವನಾತ್ಮಕ ಸಂಬಂಧವನ್ನು ಕಳೆದುಕೊಳ್ಳಬೇಕಾದ ವಿಪರ್ಯಾಸ ಎದುರಾಗಿದೆ. ನಾಡು ನುಡಿಯ ಘನತೆಯು ಕೇವಲ ರಾಜಕೀಯ ಉತ್ಸವವಾಗಿ ಸೀಮಿತಗೊಂಡಿದೆ. ಇದರಿಂದಲೇ ಭಾಷೆಗೆ ಇದ್ದ ಸಂಸ್ಕೃತಿಯ ಗುಣಗಳು ಕಳೆದು ಹೋಗಿರುವುದು. ಭಾಷೆ ಮತ್ತು ಸಮಾಜಗಳು ಬೆಳೆಯುವುದು ಅಲ್ಲಿನ ಸೃಷ್ಟಿಶೀಲ ಕಾರ್ಯಗಳಿಂದ. ಏಕೀಕರಣೋತ್ತರ ಕನ್ನಡ ಸಾಹಿತ್ಯ ಪಂಥಗಳು ತಮ್ಮ ವ್ಯಾಪ್ತಿಯಲ್ಲಿ ಮಾಡಿದ ಸಾಧನೆಗಳನ್ನು ಘನತೆಯಿಂದ ತೋರಿಸಿಕೊಳ್ಳಬಹುದಾದರೂ ವರ್ತಮಾನದ ಬೆಳವಣಿಗೆಗಳನ್ನು ನೋಡಿದರೆ ನಮ್ಮ ನಾಡಿನಲ್ಲಿ ಎದುರಾಗಿರುವ ಸೃಷ್ಟಿಶೀಲತೆಯ ಬಡತನವು ಹಿಂದೆಂದೂ ಈ ಪ್ರಮಾಣದಲ್ಲಿ ಇರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಜನತೆಯ ಆಯ್ಕೆ ಮಾಡಿದ ಕನ್ನಡ ಪ್ರಭುತ್ವವು ಹೀಗೆ ಜನರನ್ನೆ ರಾಜಕೀಯವಾಗಿ ವಂಚಿಸಿದರೆ ಸುವರ್ಣ ಕರ್ನಾಟಕದ ಆಚರಣೆಯು ಅರ್ಥಹೀನ ಎನಿಸುತ್ತದೆ.

ಹೀಗಾಗಿ ಕನ್ನಡ ಭಾಷೆಯ ಭವಿಷ್ಯವು ಕನ್ನಡಿಗರ ಭವಿಷ್ಯವೂ ಆಗುತ್ತದೆ. ಅಳಿವಿನ ಅಂಚಿನಲ್ಲಿರುವ ಭಾಷೆಗಳ ಪೈಕಿ ಕನ್ನಡವೂ ಒಂದೆಂಬ ಅಭಿಪ್ರಾಯವಿದೆ. ಸದ್ಯದಲ್ಲಿ ಕನ್ನಡ ಭಾಷೆಯು ಸೃಷ್ಟಿಶೀಲತೆಯಲ್ಲಿ ಹಿಂದೆ ಬಿದ್ದಿದೆ. ಭೌತಿಕ ಲೋಕದ ಕುರಿತಂತೆ ಭಾಷೆ ಬೆಳೆದಿದೆಯಾದರೂ ಭಾವನಾತ್ಮಕವಾದ ಜ್ಞಾನ ಪರಂಪರೆಗಳ ವಿಚಾರದಲ್ಲಿ ಕನ್ನಡವು ತನ್ನ ಸಾಮರ್ಥ್ಯವನ್ನು ಕುಗ್ಗಿಸಿಕೊಳ್ಳಬೇಕಾದ ಇಕ್ಕಟ್ಟಿನಲ್ಲಿದೆ. ಭಾಷೆಯು ಸೃಜನಶೀಲ ಮನಸ್ಸಿನಿಂದಲೇ ಗಾಢವಾಗಿ ವಿಸ್ತರಿಸಿಕೊಳ್ಳುವುದು. ವಸ್ತುವಿನ ಹೊರಮೈಯನ್ನು ವಿವರಿಸುವ ಭಾಷೆಯು ವ್ಯವಹಾರಿಕವಾದುದು. ವ್ಯವಹಾರದ ತುರ್ತನ್ನು ದಾಟಿದ್ದು ವಸ್ತು ವಿಷಯದ ಅಂತರಂಗವನ್ನು ಕುರಿತದ್ದಾಗಿರುತ್ತದೆ. ಈ ಕಾಲದಲ್ಲಿ ಕನ್ನಡ ಸಮಾಜ ವಿಶೇಷವಾಗಿ ತಲೆ ಕೆಡಿಸಿಕೊಂಡಿರುವುದು ಹೊರ ರೂಪದ ಬಗೆಗೆ ಮಾತ್ರ. ನಾಡಿನ ಅಂತರಂಗದ ಕಾಳಜಿ ತುಂಬ ಕಡಿಮೆಯಾಗಿದೆ. ಬೃಹತ್ ಉದ್ದಿಮೆ, ಬೃಹತ್ ನಗರ ನಿರ್ಮಾಣ, ಬೃಹತ್ ಆರ್ಥಿಕ ವಲಯ, ಬೃಹತ್ ನೀರಾವರಿ ಯೋಜನೆಗಳು, ಬೃಹತ್ ಮಾರಾಟ ಜಾಲ, ಬೃಹತ್ ಸಾರಿಗೆ ಸಂಚಾರ ಇವು ಮಾತ್ರವೇ ಅಂತಿಮ ಎಂಬಂತೆ ಅಭಿವೃದ್ಧಿಯ ಹೆಸರಲ್ಲಿ ನಾಡಿನ ನಿರ್ಮಾಣವಾದರೆ ಅದು ವಿಕಾಸವಾಗದು. ಭಾಷೆ ಮತ್ತು ಮನುಷ್ಯ ಅವನ ಸಂಸ್ಕೃತಿ ಸಮಾಜಗಳು ವಿಕಾಸದ ಭಾಗವಾಗಿ ಬಂದಿವೆಯೇ ಹೊರತು ಆಳಿದವರ ಹುಸಿಯಾದ ಸುವರ್ಣ ಯುಗಗಳಿಂದಲ್ಲ.

ಕನ್ನಡಕ್ಕೇ ಹೊಂದುವಂತಹ ಸ್ಥಳೀಯ ಆಡಳಿತ, ಅಭಿವೃದ್ಧಿಯ ಯೋಜನೆಗಳು, ರಾಜಕೀಯ ಕ್ರಮಗಳು, ತಂತ್ರಜ್ಞಾನದ ಆವಿಷ್ಕಾರಗಳು, ಸಾಮಾಜಿಕ ಮೌಲ್ಯಗಳು, ಸಾಂಸ್ಕೃತಿಕವಾದ ನೀತಿ ಸಂಹಿತೆಗಳು, ಆಧುನಿಕತೆಯ ಮಾದರಿಗಳು, ಪನರುಜ್ಜೀವನದ ಒತ್ತಡಗಳು ಇಲ್ಲದಿರುವುದರಿಂದ ಕನ್ನಡ ಭಾಷೆ ಮತ್ತು ಸಮಾಜಕ್ಕೆ ಭವಿಷ್ಯವು ತೀವ್ರವಾದ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಏಕೀಕರಣದ ಅಂತರಂಗದಲ್ಲಿ ಇಂತಹ ಭಾವನೆಗಳಿಗೆ ಅವಕಾಶವಿತ್ತು. ಇಂದಿನ ಕರ್ನಾಟಕದಲ್ಲಿ ಈ ಬಗೆಯ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತಿವೆ. ಎಲ್ಲವೂ ಪಶ್ಚಿಮದ ಬೆಳಗಿನಿಂದಲೇ ಆರಂಭವಾಗುವಂತಹ ವಾತಾವರಣವಿದೆ. ಈ ಸ್ಥಿತಿಯಲ್ಲಿ ಕನ್ನಡನಾಡಿನ ಸ್ವಂತದ ಮೌಲ್ಯಗಳ ಹುಡುಕಾಟವು ಕೇವಲ ಆದರ್ಶದ ಮಾತಿನಂತಿವೆ.

ನಾವೇ ಕಂಡುಕೊಂಡ ಮೌಲ್ಯಗಳು ಸಮಾಜವನ್ನು ತಿದ್ದುತ್ತವೆ. ಸಮಾಜದ ನೀತಿಯೇ ಮೌಲ್ಯಗಳು. ಭಾಷೆ ಇದರಿಂದಲೇ ಅರ್ಥ ಪಡೆಯುವುದು. ಸಮಾಜ ಮತ್ತು ನೀರಿ ಬೇರೆ ಸಂಗತಿಗಳಲ್ಲ. ಅವು ಒಂದನ್ನೊಂದು ಅನುಸರಿಸಿದ ಸಂಬಂಧಗಳು. ಕನ್ನಡ ಪ್ರಭುತ್ವದಲ್ಲಿ ಕನ್ನಡಿಗನೆ ಅನಾಥನಾಗಿದ್ದಾನೆ. ಕನ್ನಡನಾಡೇ ಖಾಸಗೀ ಕ್ಷೇತ್ರಗಳ ನಿಯಂತ್ರಣಕ್ಕೆ ಒಳಪಟ್ಟಿದೆ. ಇದು ಏಕೀಕರಣೋತ್ತರ ಕನಸಿನ ಪ್ರತಿಬಿಂಬವಲ್ಲ. ಇಪ್ಪತ್ತೊಂದನೆ ಶತಮಾನದ ಬಹುಪಾಲು ಎಲ್ಲ ಪ್ರಭುತ್ವಶಕ್ತಿಗಳು ಖಾಸಗೀಕರಣಗೊಳ್ಳುತ್ತಿವೆ. ಕನ್ನಡ ರಾಷ್ಟ್ರೀಯತೆಯು ಇಲ್ಲಿ ಕೇವಲ ಕಲ್ಪಿತ ಸಂಗತಿಯಾಗಿ ಬಳಕೆಯಾಗುತ್ತಿದೆ. ಕನ್ನಡದ ಸಾರ್ವಭೌಮ ಸಾಮ್ರಾಜ್ಯಗಳು ಕನ್ನಡವನ್ನು ನಂಬಿದ್ದವು. ಅದರಿಂದಲೇ ಸಂಸ್ಕೃತಿಯ ಭಾವನಾತ್ಮಕ ಸಂಗತಿಗಳು ಅರಳಿದವು. ಆದರೆ ಇಪ್ಪತ್ತೊಂದನೆಯ ಶತಮಾನದ ಕನ್ನಡ ಪ್ರಭುತ್ವವು ಕನ್ನಡಿಗರ ನೆಲೆಯಿಂದ ಆಳ್ವಿಕೆಯನ್ನು ನಿರ್ವಹಿಸುತ್ತಿಲ್ಲ.

ವರ್ತಮಾನದ ಸಾಮಾಜಿಕ ವಾಸ್ತವಕ್ಕೂ ರಾಜಕೀಯ ಪ್ರಭುತ್ವಕ್ಕೂ ಗತವಾಗುವ ಕಾಲದ ಬಗ್ಗೆ ಸಾಕಷ್ಟು ನೆನಪಾಗಲಿ ಸಿದ್ಧತೆಗಳಾಗಲಿ ಇಲ್ಲ. ಸಾಮ್ರಾಜ್ಯಶಾಹಿ ದೊರೆಗಳಿಗೆ ಆ ನೆನಪು ಗಾಢವಾಗಿತ್ತು. ಚರಿತ್ರೆಯನ್ನು ಉಳಿಸಲೆಂದೇ ಅವರು ವ್ಯಕ್ತಿ ಪ್ರತಿಷ್ಟೆಯ ಮೂಲಕ ಸ್ವಹಿತ ಕಥನವನ್ನು ದಾಖಲಿಸುತ್ತಿದ್ದರು. ಆಧುನಿಕ ಪ್ರಭುತ್ವ ಲಾಭದ ನಿರೀಕ್ಷೆಯಲ್ಲಿ ವ್ಯಕ್ತಿ ಕೇಂದ್ರಿತ ದಿಗ್ವಿಜಯಗಳ ಆಡಳಿತದ ಮೂಲಕವೇ ತಮ್ಮನ್ನು ಪ್ರತಿಷ್ಠಾಪಿಸಿಕೊಳ್ಳಲು ಆಕರಗಳನ್ನು ರೂಪಿಸುತ್ತಿರುತ್ತದೆ. ಏಕೀಕರಣೋತ್ತರ ಕನ್ನಡದ ರಾಜಕೀಯ ಪ್ರಭುತ್ವವು ಅಪ್ಪಟ ಕನ್ನಡದ ಆದರ್ಶವನ್ನು ಪಾಲಿಸಲಿಲ್ಲ. ಏಕೀಕರಣದ ಚಳುವಳಿಯಿಂದ ಸಾಧ್ಯವಾದ ರಾಜ್ಯಾಧಿಕಾರವು ಕನ್ನಡದ ಅಸ್ಮಿತೆಯಿಂದ ಸಮಾಜಗಳನ್ನು ಪರಿಭಾವಿಸಲಿಲ್ಲ. ಭಾಷೆಯಿಂದಲೇ ಕರ್ನಾಟಕವನ್ನು ನಿರ್ಧರಿಸಬೇಕಿತ್ತು ಎಂದು ಇದರರ್ಥವಲ್ಲ. ಭಾಷೆಯ ಆಚೆಗಿನ ಸಾಮಾಜಿಕ ಆದರ್ಶಗಳು ವ್ಯಕ್ತಗೊಂಡರೂ ಅವುಗಳ ಆಳದಲ್ಲಿ ಜಾತ್ಯಾತೀತವಾದ ಮಾನಸಿಕ ಒಪ್ಪಂದಗಳು ಇರಲಿಲ್ಲ. ಆದರ್ಶ ಯಾವತ್ತೂ ಪ್ರಭುತ್ವಕ್ಕೆ ಹೊಂದಿಕೊಳ್ಳುವ ಸ್ವಭಾವದ್ದಲ್ಲ. ಆದರ್ಶದಿಂದಲೇ ರಾಜ್ಯದ ಕುರುಹು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಕಾರಗೊಳ್ಳಬೇಕಾದುದು. 

ಸಾಮಾಜಿಕ ನ್ಯಾಯದ ಆದರ್ಶವು ರಾಜಕೀಯ ಪ್ರಭುತ್ವದ ಕನಸೇ ಆಗಿತ್ತೆಂದರೆ ಸಮಾಜದ ಅಸಮಾನತೆಗಳು ಪರಿಹಾರವಾಗಲು ಅರ್ಧ ಶತಮಾನದ ಅವಧಿಯ ಅಗತ್ಯವಿರಲಿಲ್ಲ; ಬಹಳ ಬೇಗನೆ ಕನ್ನಡದ ಅನೇಕ ಸಮಸ್ಯೆಗಳು ಬಗೆಹರಿಯಬಹುದಾಗಿತ್ತು. ಗಾಂಧಿಯ ಆದರ್ಶವೂ ಇಲ್ಲಿ ಸಾಧ್ಯವಾಗಲಿಲ್ಲ. ಅಂಬೇಡ್ಕರ್ ನ್ಯಾಯವೂ ಇಲ್ಲಿ ಜಾರಿಯಾಗಲಿಲ್ಲ. ಸಮಾಜವಾದಿ ಅಥವಾ ಮಾರ್ಕ್ಸ್‌ವಾದಿ ತತ್ವಗಳೂ ಇಲ್ಲಿ ಸಾಧಿತವಾಗಲಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಏಕೀಕರಣೋತ್ತರ ಕನ್ನಡ ಸಮಾಜದ ನಾಡಿನಲ್ಲಿ ಸಾಧ್ಯವಾದದ್ದು ಆಳುವ ಜಾತಿ ರಾಜಕಾರಣ ಮತ್ತು ಕನ್ನಡ ಸಂಪತ್ತನ್ನು ಖಾಸಗೀಕರಿಸಿಕೊಳ್ಳುವ ಮತೀಯ ಜಾಣ್ಮೆ. ಇದರಿಂದಲೇ ಭಾಷೆಗಿಂತಲೂ, ಕನ್ನಡ ಸಮೂಹದ ಭಾವನಾತ್ಮಕತೆಗಿಂತಲೂ ಮುಖ್ಯವಾದದ್ದು ನಾಡನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುವ ತಂತ್ರವು ಚಾಲ್ತಿಗೆ ಬಂದದ್ದು. ಇದು ಒಂದು ನಾಡು ಹೇಗೆ ವ್ಯಕ್ತಿ ಕೇಂದ್ರಿತ ಲಾಭಗಳಿಗೆ ತುತ್ತಾಗುತ್ತದೆ ಎಂಬುದಕ್ಕೆ ಸಂಕೇತವಾಗುವ ಸಂಗತಿ.

ಆದರ್ಶ ರಾಜ್ಯದಿಂದ ಕವಿಗಳನ್ನು ಹೊರ ಹಾಕಿ ಎಂದದ್ದು ರಾಜ್ಯಾದರ್ಶದ ಜನತೆಯ ಕಾರಣದಿಂದಲೇ. ಇಪ್ಪತ್ತೊಂದನೆ ಶತಮಾನದಲ್ಲಿ ಹೊರಹಾಕಬೇಕಾದದ್ದು ಕವಿಗಳಿಗಿಂತಲೂ ಮಿಗಿಲಾಗಿ ರಾಜಕಾರಣಿಗಳನ್ನು ಹಾಗೂ ಜಾತಿ ವ್ಯವಸ್ಥೆಯನ್ನು. ರಾಜಕೀಯ ಗುಂಪುಗಳು ಎಸಗುವ ರಾಜ್ಯದ್ರೋಹದ ಕೃತ್ಯಗಳು ಕನ್ನಡ ಸಮಾಜವನ್ನೆ ಮಾರಾಟಕ್ಕೆ ಒಳಪಡಿಸುವಂತಿರುತ್ತವೆ. ಬಡ ಕನ್ನಡಿಗರ  ದಲಿತರ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಿರಂತರವಾಗಿ ಘಟಿಸುತ್ತಲೇ ಇದ್ದರೂ ಅಧಿಕಾರ ದಾಹದ ರಾಜಕಾರಣಕ್ಕೆ ಆ ಬಗೆಯ ಹಿಂಸೆಯು ತಟ್ಟುವುದೇ ಇಲ್ಲ. ಮಣ್ಣಿಗೆ ಜೀವ ತೆತ್ತು ದುಡಿವ ರೈತರ ಆತ್ಮ ಹತ್ಯೆಗಳು ಭಾದಿಸುವುದೇ ಇಲ್ಲ. ಈ ಬಗೆಯ ದುರಂತಗಳು ಕೂಡ ಚುನಾವಣೆಯ ಮಾರಾಟದ ಸರಕಾಗಿರುತ್ತವೆ. ರಾಜಕೀಯ ಪ್ರಣಾಳಿಕೆಗಳು ವ್ಯಾಪಾರದ ಜಾಹಿರಾತಿನಂತೆ ಇರುತ್ತವೆ. ಅನೇಕ ರಾಜಕಾರಣಿಗಳು ಆಶ್ವಾಸನೆಯ ಭಾಷಣಗಳಿಂದ ಮತ ವ್ಯಾಪಾರದ ಗುಪ್ತ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಆದರ್ಶವು ಶೂನ್ಯ ಬಂಡವಾಳದಂತಿದೆ. ಆದರ್ಶದ ಮಾತನಾಡುವುದಕ್ಕೆ ಕಷ್ಟಪಡಬೇಕಾದ್ದಿಲ್ಲ. ಇದೊಂದು ಹುಸಿ ಭಾಷಣದ ಭಾಷಿಕ ಉದ್ಧಿಮೆ ಅಷ್ಟೆ. ಜತೆಗೆ ಇಂತಿಂತಹ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ ಎಂದು ಸಾರ್ವಜನಿಕವಾಗಿ ಘೋಷಿಸಿ ಜನರ ಮತದಾನದಿಂದ ಅಧಿಕಾರ ಹಿಡಿಯುವುದು ಭಾಷಿಕ ಉದ್ಧಿಮೆಗೆ ತಕ್ಕ ಜಾಹಿರಾತು ಪ್ರಸಂಗವಾಗಿದೆ. ಪ್ರಣಾಳಿಕೆಗೂ ಮತಯಾಚನೆಗೂ ‘ಭಾಷೆ’ ಪ್ರಮಾಣವಾಗುವ ರೀತಿಯು ವಿಚಿತ್ರವಾಗಿದೆ.

ಮತ ವ್ಯಾಪಾರ ಘಟಿಸಿ ಗೆಲುವು ಪಡೆದ ಮೇಲೆ ಆದರ್ಶವು ಅರ್ಥ ಕಳೆದುಕೊಳ್ಳುತ್ತದೆ. ಅನಂತರದ್ದು ಬಂಡವಾಳಶಾಹಿ ವರ್ತನೆಯೆ ಮುಂದುವರಿಯುವುದು. ಹೀಗಾಗಿಯೇ ಭಾಷೆಯು ರಾಜಕಾರಣಿಗಳಿಗೆ ಉದ್ದಿಮೆಯಾಗಿ ಪರಿವರ್ತನೆಯಾಗಿರುವುದು. ಸಮೂಹ ಮಾಧ್ಯಮಗಳಲ್ಲಿ ಪ್ರತಿಧ್ವನಿಸುವ ರಾಜಕೀಯವಾದ ಮಾತುಗಳೆಲ್ಲವೂ ಖಾಸಗೀ ವ್ಯಾಪಾರದ ಭಾಷಿಕ ಉದ್ದಿಮೆಯೆ ಆಗಿರುತ್ತವೆ. ಭಾರತದಲ್ಲಿ ಸ್ವಾತಂತ್ರ್ಯಾ ನಂತರ ರಾಜಕೀಯ ಪರಿಭಾಷೆಗಳೆಲ್ಲವೂ ಭಾಷಿಕ ಉಧ್ಯಮವಾಗಿ ನಿತ್ಯವೂ ಮಾಧ್ಯಗಳಲ್ಲಿ ಪ್ರತಿಫಲಿಸುತ್ತಿರುತ್ತವೆ. ರಾಜಕಾರಣಿಗಳು ಬಳಸುವ ಮಾತುಗಳೆಲ್ಲವೂ ಸಮಾಜದ ವ್ಯಾಪಾರವೇ ಆಗಿದ್ದು ಅಧಿಕಾರ ಗುರಿಯೆ ಮುಖ್ಯವಾಗಿರುತ್ತದೆ. ಆದ್ದರಿಂದಲೇ ರಾಜಕಾರಣಿಗಳು ಭೂವ್ಯಾಪಾರದಲ್ಲಿ ಉದ್ಧಿಮೆಗಳ ಒಡೆತನದಲ್ಲಿ ಹಣಕಾಸಿನ ವ್ಯವಹಾರಗಳಲ್ಲಿ ತೀವ್ರವಾಗಿ ಮುಳುಗುವುದು. ಇದರಿಂದ ಸಾರ್ವಜನಿಕ ವಲಯವನ್ನು ಹೇಗೆ ಬೇಕಾದರೂ ಖಾಸಗೀಕರಿಸಿಕೊಳ್ಳುವ ಅಧಿಕಾರ ದಕ್ಕಿರುತ್ತದೆ. ರಾಜ್ಯಾಧಿಕಾರವನ್ನೆ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಏಕೀಕರಣೋತ್ತರ ಕರ್ನಾಟಕದ ಕಾಲದಿಂದಲೂ ಸಾಂಗವಾಗಿ ಸಾಗುತ್ತಿದ್ದು ಇದರಲ್ಲಿ ಊಳಿಗಮಾನ್ಯ ಜಾತಿ ಸ್ವಭಾವವು ಪೂರಕವಾಗಿ ಕೆಲಸ ಮಾಡುತ್ತಿದೆ.

ಹೀಗಾಗಿ ರಾಜಕಾರಣವು ಏಕೀಕರಣವನ್ನು ಯಾವ ನೆಲೆಯಲ್ಲಿ ಬಳಸಿಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆ ಅಂಶಗಳನ್ನಿಲ್ಲಿ ಪಟ್ಟಿ ಮಾಡುವ.
1.ರಾಜ್ಯಾಧಿಕಾರವು ದಶಕದಿಂದ ದಶಕಕ್ಕೆ ತೀವ್ರವಾಗಿ ಖಾಸಗೀಕರಣಗೊಳ್ಳುತ್ತಿದ್ದು ಸಾರ್ವಜನಿಕ ವಲಯಗಳು ಕರಗಿ ಹೋಗುತ್ತಿವೆ.

2.ಭ್ರಷ್ಟಾಚಾರಕ್ಕೆ ಪೂರಕವಾಗುವಂತೆ ರಾಜಕೀಯ ನಡತೆಯು ಸಂವಿಧಾನದ ನಿಯಂತ್ರಣವನ್ನು ಮೀರಿ ವರ್ತಿಸುತ್ತಿದೆ. ರಾಜಕೀಯ ಅಕ್ರಮಗಳು ರಾಜ್ಯವನ್ನೆ ಲೂಟಿ ಮಾಡುತ್ತಿವೆ. ರಾಜಕಾರಣಿಗಳ ಆಸ್ತಿ ಪಾಸ್ತಿಗಳಿಗೆ ಯಾವ ಮಿತಿಯೂ ಇಲ್ಲವಾಗಿದೆ.
ಅಧಿಕಾರಶಾಹಿಯು ಜನತೆಯ ಮೇಲೆ ಭ್ರಷ್ಟಾಚಾರದ ಯುದ್ಧ ಸಾರಿದ್ದು ಆಡಳಿತದ ಪ್ರತಿಹಂತದಲ್ಲೂ ಬಡ ಜನತೆಯು ವಂಚನೆಗೆ ಈಡಾಗುತ್ತಿದೆ. ಲೂಟಿ ಸ್ವಭಾವವೂ ಸುಶಿಕ್ಷಿತವಾಗಿ ನಿರಂತರವಾಗಿ ಸಾಗುತ್ತಿದ್ದು ಇದಕ್ಕೆ ತಡೆಯೇ ಇಲ್ಲವಾಗಿದೆ.

3.ಇಡೀ ವ್ಯವಸ್ಥೆಯೆ ಖಾಸಗೀ ವಲಯದಂತೆ ರೂಪಾಂತರಗೊಂಡು ಸರ್ಕಾರವು ರಾಜಕಾರಣಿಗಳ ಅವರವರ ಪಕ್ಷಗಳ ಹಾಗು ಅವರ ನಾಯಕರ ಸ್ವತ್ತಾಗಿ ಬಳಕೆಯಾಗುತ್ತಿದೆ.

4.ಜನತೆಯ ಮತಾಧಿಕಾರವನ್ನೆ ಖರೀದಿಸುವ ಪ್ರಕ್ರಿಯೆಯು ಏಕೀಕರಣೋತ್ತರ ಸಮಾಜದಲ್ಲಿ ಆಕ್ರಮಿಸಿಕೊಂಡಿದ್ದು ಪ್ರತಿನಿಧಿಗಳಾಗಬೇಕಿದ್ದ ರಾಜಕಾರಣಿಗಳೇ ಮತದಾರರ ಅಧಿಪತಿಗಳಾಗಿದ್ದಾರೆ.

5.ಪ್ರಭುತ್ವ ಎಂಬ ನಿರ್ಣಾಯಕ ಶಕ್ತಿಯು ಜನರ ರಕ್ಷಣೆಗೆ ಬರುವ ಬದಲು ಅದು ಜಾತಿ, ಧರ್ಮ, ಲಿಂಗತಾರತಮ್ಯಗಳನ್ನು ಹಾಗೂ ಬಂಡವಾಳಶಾಹಿ ರಾಜಕಾರಣಿಗಳನ್ನು ಕಾಯುವ ಅಸ್ತ್ರವಾಗಿದೆ.

6.ಖಾಸಗೀ ವಲಯವು ತೀವ್ರವಾಗಿ ಬಲಿಯುತ್ತಿದ್ದು ಅದು ಸರ್ಕಾರವನ್ನೆ ನಿಯಂತ್ರಿಸಿ ತನಗೆ ಬೇಕಾದಂತೆ ರಾಜ್ಯಾಧಿಕಾರವನ್ನೆ ಬಳಸಿಕೊಳ್ಳಬಲ್ಲಷ್ಟು ಬಲಿಷ್ಠವಾಗುತ್ತಿದೆ. ಖಾಸಗೀಕರಣ, ಉದಾರೀಕರಣ, ಜಾಗತೀಕರಣಗಳು ಜನತೆಯ ನಡುವಿನ ಪೂರ್ವಾಗ್ರಹ, ಬಿರುಕು, ಅಂತರ, ತಾರತಮ್ಯಗಳನ್ನು ಹೆಚ್ಚಿಸುತ್ತಿವೆ. ಸರ್ಕಾರಗಳು ಈ ಪ್ರಕ್ರಿಯೆಗಳಲ್ಲಿ ಪಾಲು ಪಡೆಯುತ್ತಿವೆ.

7.ಆರ್ಥಿಕ ಪ್ರಗತಿಯ ಹೆಸರಿನಲ್ಲಿ ರಾಜಕಾರಣವು ಕೋಟಿಗಟ್ಟಲೇ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದ್ದು ಸ್ವತಃ ರಾಜಕಾರಣಿಗಳೇ ಈ ಪೈಪೋಟಿಯಲ್ಲಿ ಮುಂದಾಗಿ ಒಬ್ಬರ ಮೇಲೊಬ್ಬರು ಲೂಟಿ ಆರೋಪವನ್ನು ಮಾಡುತ್ತಿದ್ದ ಕನ್ನಡ ನಾಡು ಯಾರು ಯಾರದೊ ಪಾಲಾಗುತ್ತಿದೆ.

8.ಸಮಾಜದ ಬಹುಜನ ಜಾತಿಗಳನ್ನು ಒಡೆದು ಆಳುವ ನೀತಿಯಲ್ಲಿ ಸದ್ಯದ ರಾಜಕಾರಣವು ತಂತ್ರಗಳನ್ನು ಯಶಸ್ವಿಯಾಗಿ ಚಲಾಯಿಸುತ್ತಿದೆ. ಜಾತಿಗಳಿಗಿರುವ ವೈರುಧ್ಯಗಳನ್ನೆ ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಬಳಸಿಕೊಳ್ಳುತ್ತಿವೆ. ಜಾತಿಗಳ ಒಳಮೀಸಲಾತಿಯ ವರ್ಗೀಕರಣದಿಂದ ಸಾಮಾಜಿಕ ಸಂಬಂಧ ಮತ್ತು ಸಂಘಟಿತ ಭಾವನೆಗಳನ್ನು ಛಿದ್ರಗೊಳಿಸಲಾಗುತ್ತಿದೆ.

9.ಮತೀಯ ಮೂಲಭೂತವಾದಿ ಚಿಂತನೆಗಳಿಗೆ ರಾಜ್ಯಾಧಿಕಾರವನ್ನು ಒಳಪಡಿಸಲಾಗುತ್ತಿದ್ದು ಹಿಂದೂ ಧರ್ಮದ ಮತೀಯ ವಾದ, ಮೂಲಭೂತ ವಾದಗಳ ಜೊತೆಗೆ ಹಿಂಸೆಯನ್ನು ನವೀಕರಿಸುವಲ್ಲಿ ರಾಜಕೀಯ ಪಕ್ಷಗಳೂ ಸರ್ಕಾರಗಳೂ ಮಠಮಾನ್ಯಗಳೂ ಒಂದಾಗಿ ಕಾರ್ಯ ನಿರ್ವಹಿಸುತ್ತಿವೆ.

10.ವಸ್ತುಸ್ಥಿತಿ ಹೀಗಿರುವಾಗ ಏಕೀಕರಣೋತ್ತರ ಕರ್ನಾಟಕದ ರಾಜಕೀಯ ಪ್ರಭುತ್ವದಿಂದ ಭವಿಷ್ಯವನ್ನು ನಿರೀಕ್ಷಿಸುವುದು ‘ಹೆಳವನ ಹೆಗಲ ಮೇಲೆ ಕುರುಡ ಕುಳಿತಿದ್ದಾನೆ’ ಎಂಬಂತೆ ತೋರುತ್ತದೆ. ಈ ಐವತ್ತು ವರ್ಷಗಳ ಕನ್ನಡ ಸಮಾಜದ ಒಳಗೆ ಒಳಿತು ಕೆಡುಕು ಜೊತೆಯಲ್ಲೆ ಘಟಿಸುತ್ತಿದ್ದು ಎಂಭತ್ತರ ದಶಕದಿಂದ ಕರ್ನಾಟಕದ ರಾಜಕೀಯ ನೆಲೆಯಲ್ಲಿ ವಿಪರೀತಗಳು ಆಕ್ರಮಿಸಿ ಕನ್ನಡ ಪ್ರಭುತ್ವವು ತನ್ನ ಮೂಲ ಭಾಷಿಕ ಗುಣವನ್ನೂ ಕನ್ನಡ ಸಮಾಜದ ಚಹರೆಯನ್ನೂ ಕಳೆದುಕೊಂಡಿದೆ. ಇಂತಹ ಸ್ಥಿತಿಯಲ್ಲಿ ಚರಿತ್ರೆಯ ಆದರ್ಶವೇ ಕಣ್ಮರೆಯಾಗಿರುವುದನ್ನು ಭವಿಷ್ಯದ ಹಿನ್ನೆಲೆಯಲ್ಲಿ ವಿಶೇಷವಾಗಿ ಪರಿಭಾವಿಸಬೇಕಾಗುತ್ತದೆ. ಕನ್ನಡ ಸಾಹಿತ್ಯದ ಮುಖೇನ ಕಾಣುವ ಏಕೀಕರಣೋತ್ತರ ಕರ್ನಾಟಕದ ನಿರೂಪಣೆಗಳು ಸಮಾಜ ಕೇಂದ್ರಿತವಾಗಿಯೆ ತಮ್ಮ ಸಮುದಾಯ ಪ್ರಜ್ಞೆಗಳಲ್ಲಿಯೇ ವಿಶಿಷ್ಟವಾಗಿ ಧ್ವನಿತವಾಗಿವೆ. ಕನ್ನಡ ಸಂಸ್ಕೃತಿಯ ಶೋಧಗಳಲ್ಲಿ ಅಖಂಡವಾದ ಕನ್ನಡ ಚರಿತ್ರೆಯ ಆದರ್ಶವನ್ನು ತುಂಬಿಕೊಳ್ಳುವಂತಹ ಬರಹಗಳು ಉಂಟಾಗಿವೆ. ತಕ್ಕುದಾದ ಭಾಷಿಕ ಚಳುವಳಿಗಳು ನಡೆದಿವೆ. ಚರಿತ್ರೆಯ ಆದರ್ಶವನ್ನು ಪುನರ್ರಚಿಸಿಕೊಳ್ಳುವುದೇ ಏಕೀಕರಣದ ಆಶಯವಾಗಿತ್ತು. ಆನಂತರದ ಕಾಲದಲ್ಲೂ ಅಖಂಡ ಮಾನವ ಸಮಾಜದ ಆಶಯದಲ್ಲಿ ಕನ್ನಡ ಸಮಾಜವನ್ನು ಕಟ್ಟಿಕೊಳ್ಳುವ ಯತ್ನಗಳು ತೀವ್ರವಾಗಿ ಆಗಿವೆ. ಸ್ವಾತಂತ್ರ್ಯಾ ನಂತರದ ಭಾರತದ ಏನೆಲ್ಲ ನಿರಾಶೆಗಳು ಎದುರಾಗುತ್ತಿವೆಯೊ ಅಂತವೇ ಹತಾಶೆಗಳು ಏಕೀಕರಣೋತ್ತರ ಕರ್ನಾಟಕದ ಸಮಾಜಕ್ಕೂ ಬಂದೊದಗಿವೆ. ಯಾವುದೇ ಒಂದು ನಾಡು ಉನ್ನತ ಹಂತ ತಲುಪಿದಾಗಲೂ ಅದು ಪತನವಾಗಬಲ್ಲದು. ಹೆಚ್ಚು ಕಡಿಮೆ ಸಾಮ್ರಾಜ್ಯಗಳು ಹೀಗೆಯೇ ಅವನತಿ ಕಂಡಿರುವುದು. ಹಾಗೆಯೇ ಯಾವುದೇ ಒಂದು ನಾಡು ತನ್ನೊಳಗನ ಪ್ರಭುತ್ವದ ದುಷ್ಟತೆಯಿಂದಲೇ ತನ್ನ ಕಾಲದ ಸಮಾಜದ ವಿಪರ್ಯಾಸಗಳಿಂದಲೇ ಅಧೋಗತಿಯಿಂದ ಮೇಲೆದ್ದು ವೈಭವವನ್ನು ಕಾಣುವುದು ಕೂಡ ಸಾಧ್ಯ. ಸಾಮಾಜಿಕ ಕ್ರಾಂತಿ, ಚಳುವಳಿ, ಆಂದೋಲನ ಹಾಗೂ ಪುನರುತ್ಥಾನಗಳು ಹೀಗೆಯೇ ತಮಗೆ ಬೇಕಾದ ಆದರ್ಶಗಳನ್ನು ಮರು ಸೃಷ್ಟಿಸಿಕೊಳ್ಳುವುದು.

ಏಕೀಕರಣೋತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಎಪ್ಪತ್ತರ ದಶಕವು ಗಾಢವಾದ ಸಮುದಾಯ ಆದರ್ಶಗಳಿಂದ ನಾಡನ್ನು ಪುನರ್ರಚಿಸಲು ತೊಡಗಿದ್ದುದು ಚರಿತ್ರಾರ್ಹವಾದುದು. ಇದನ್ನೆ ಚರಿತ್ರೆಯಿಂದ ಕಲಿವ ಪಾಠ ಎನ್ನುವುದು ಹಾಗು ಸರ್ವೋದಯದ ಸಮಷ್ಠಿ ಆದರ್ಶವೆನ್ನುವುದು. ಅಖಂಡ ಬೃಹತ್ ಭಾರತದಲ್ಲಿ ಕರ್ನಾಟಕವೆನ್ನುವುದು ಒಂದು ಪುಟ್ಟ ನೆಲೆ. ಇದರೊಳಗಿನ ಸಾಮಾಜಿಕತೆಯು ಜಾಗತಿಕವಾದದ್ದೂ ಹೌದು. ಕನ್ನಡನಾಡು ಇದರಿಂದಲೇ ಜಗತ್ತಿನ ಎಲ್ಲ ದಿಕ್ಕುಗಳಿಗೂ ತೆರೆದು ನೋಡಿದ್ದುದು. ಪೂರ್ವ ಪಶ್ಚಿಮಗಳನ್ನು ಸಂಗಮಿಸಿಕೊಂಡ ಕರ್ನಾಟಕವು ಏಕೀಕರಣಾನಂತರದಲ್ಲಿ ಸಂಪೂರ್ಣ ಮಲಗಿಯೂ ಇಲ್ಲ ಹಾಗೆಯೇ ತಕ್ಕಮಟ್ಟಿನ ಎಚ್ಚರವನ್ನೂ ಪಡೆದಿಲ್ಲ. ನಾಡಿನ ಭವಿಷ್ಯದ ನಡೆಯು ಇನ್ನೂ ಬಹಳ ದೂರ ಇರುವಾಗಲೇ ಅದರ ನಡಿಗೆಯು ವಕ್ರವಾಗಿರುವುದೇ ಆತಂಕಕ್ಕೆ ಕಾರಣ. ಪ್ರಭುತ್ವವು ತಮ್ಮದೇ ಆಗಿರುವುದು ಖಾಸಗೀಕರಣಗೊಳ್ಳುತ್ತಿರುವುದು ಇಲ್ಲಿನ ಮತ್ತೊಂದು ವಿಪರ್ಯಾಸ. ನಾವೇ ಕಟ್ಟಿದ ನಾಡು, ನಾವೇ ಒಪ್ಪಿದ ಪ್ರಭುತ್ವ, ನಾವೇ ನಡೆಸುವ ಸಮಾಜ, ನಾವೇ ತೀರ್ಮಾನಿಸುವ ವ್ಯವಸ್ಥೆಗಳಲ್ಲಿ ತಮ್ಮ ಕುರುಹುಗಳೇ ಕಳೆದು ಹೋಗುತ್ತಿರುವುದರಲ್ಲಿ ಸಮುದಾಯಗಳ ಪಾತ್ರವೂ ಇದೆ. ಕೇವಲ ಹೋರಾಟಗಾರರು, ಸಾಹಿತಿಗಳು, ಚಿಂತಕರು, ಸಜ್ಜನ ರಾಜಕಾರಣಿಗಳು ಮಾತ್ರವೇ ಒಂದು ನಾಡುನುಡಿಯ ಅಸ್ತಿತ್ವಕ್ಕೆ ಸಾಕಾಗುವುದಿಲ್ಲ. ಅಖಂಡವಾಗಿ ಭಾಗವಹಿಸುವ ಸಂದರ್ಭ ಮಾತ್ರವೇ ನಾಡಿನ ನಿರ್ಣಾಯಕ ಅವಸ್ಥೆಯಾಗಬಲ್ಲದು. ಅಂತಹ ಯತ್ನಗಳು ಸಾಹಿತ್ಯ ಮತ್ತು ಸಮಾಜದ ಚೌಕಟ್ಟಿನಲ್ಲಿ ಈ ಐವತ್ತು ವರ್ಷಗಳ ವ್ಯಾಪ್ತಿಯಲ್ಲಿ ಹೇಗೆ ಆಗಿದೆ ಎಂಬ ಯತ್ನಗಳನ್ನು ಈ ಮುಂದೆ ಪರಿಶೀಲಿಸುವ.

ಕಾಮೆಂಟ್‌ಗಳಿಲ್ಲ: