ಶುಕ್ರವಾರ, ಏಪ್ರಿಲ್ 27, 2012

ಕರ್ನಾಟಕದ ಕಲೆಗಳಿಗಿಲ್ಲವೆ ಯುನೆಸ್ಕೋ ಮನ್ನಣೆ !

o    ಡಾ. ಪುರುಷೋತ್ತಮ ಬಿಳಿಮಲೆ

(Apr 15, 2012 ರಂದು ಉದಯವಾಣಿಯಲ್ಲಿ ಪ್ರಕಟವಾದ ಲೇಖನವಿದು. ಪುರುಷೋತ್ತಮ ಬಿಳಿಮಲೆ ಅವರು ಕರ್ನಾಟಕದ ಜನಪದ ಕಲೆಗಳ ಬಗ್ಗೆ ಹೆಚ್ಚು ತಿಳಿದವರು, ಹಾಗೆಯೇ ಸೂಕ್ಷ್ಮವಾಗಿ ವಿವರಿಸಬಲ್ಲವರು. ಬಿಳಿಮಲೆ ಅವರ ಕರ್ನಾಟಕದ ಕಲೆಗಳಿಗಿಲ್ಲವೆ ಯುನೆಸ್ಕೋ ಮನ್ನಣೆ ! ಬರಹ ಕನ್ನಡದ ಜಾನಪದ ವಿದ್ವಾಂಸರು, ಸಂಸ್ಕೃತಿ ಚಿಂತಕರು ಕನ್ನಡ ಜನಪದ ಕಲೆಗಳ ಬಗ್ಗೆ ಪುನರ್ ಆಲೋಚನೆಗೆ ಹಚ್ಚುವಂತಿದೆ. ಹಾಗಾಗಿ ಈ ಬರಹವನ್ನು ಕನ್ನಡ ಜಾನಪದ ಬ್ಲಾಗಿನಲ್ಲಿ ಪ್ರಕಟಿಸಲಾಗುತ್ತಿದೆ)
ಕೃಪೆ: ಉದಯವಾಣಿ 
ಕರ್ನಾಟಕದ ಕೆಲವಾದರೂ ಕಲೆಗಳಿಗೆ ಯುನೆಸ್ಕೋ ಮನ್ನಣೆ ದೊರೆಯುವಂತೆ ಮಾಡಬೇಕಾದ್ದು ಇಂದಿನ ಅಗತ್ಯಗಳಲ್ಲೊಂದಾಗಿದೆ. ವಿಶ್ವಸಂಸ್ಥೆಯ ಭಾಗವಾದ ಯುನೆಸ್ಕೋ ಇದೀಗ ಅಳಿದು ಹೋಗುತ್ತಿರುವ ಕಲೆಗಳ ಪುನರುಜ್ಜೀವನಕ್ಕೆ ವಿಶೇಷ ಅನುದಾನ ನೀಡುತ್ತಿದೆ. ಈ ಅನುದಾನವು ಜಗತ್ತಿನ ಅನೇಕ ನತದೃಷ್ಟ ಕಲೆಗಳಿಗೆ ಜೀವದಾನ ಮಾಡಿದೆ.


ಕ‌ರ್ನಾಟಕವು ಅನೇಕ ಬಗೆಯ ಜನಪದ ಕಲೆಗಳಿಗೆ ಹೆಸರಾಗಿದೆ. ಹಿರಿಯರಾದ ಶ್ರೀ ಗೋ. ರು. ಚೆನ್ನಬಸಪ್ಪ ಮತ್ತು ಡಾ. ಹಿ. ಚಿ. ಬೋರಲಿಂಗಯ್ಯನವರು ಬೇರೆ ಬೇರೆ ಕಾಲ ಘಟ್ಟಗಳಲ್ಲಿ ಸಂಪಾದಿಸಿಕೊಟ್ಟ ಕರ್ನಾಟಕ ಜನಪದ ಕಲೆಗಳ ಕೋಶ ಗಳನ್ನೂ ಜೊತೆಗೆ ಈ ಕ್ಷೇತ್ರದಲ್ಲಿ ಪ್ರಕಟವಾದ ಇತರ ಪುಸ್ತಕಗಳು ಮತ್ತು ಲೇಖನಗಳತ್ತ ಒಮ್ಮೆ ಕಣ್ಣು ಹಾಯಿಸಿದರೂ ಸಾಕು, ನೂರಾರು ಕಲೆಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಅವುಗಳಲ್ಲಿ ಕೆಲವು ಇತಿಹಾಸ ಪ್ರಸಿದ್ಧವಾಗಿದ್ದರೆ, ಇನ್ನು ಕೆಲವು ಕಾಲನ ತೀವ್ರ ಹೊಡೆತಕ್ಕೆ ಸಿಕ್ಕಿಯೂ ಬದುಕುಳಿದಿರುವಂತಹವು. ತಮ್ಮ ಅಪೂರ್ವ ಸಂಗೀತಗುಣ, ವರ್ಣ, ಹೆಜ್ಜೆಗಾರಿಕೆ, ವೇಷಭೂಷಣಗಳಿಂದ ಅಪೂರ್ವವಾಗಿರುವ ಹಲವು ಕಲೆಗಳನ್ನು ಕನ್ನಡದ ಕಲಾವಿದರು ಇವತ್ತಿನವರೆಗೆ ಉಳಿಸಿಕೊಂಡು ಬಂದಿರುವುದೊಂದು ವಿಶೇಷ. ಒಂದು ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ಸುಮಾರು 400ಕ್ಕೂ ಮಿಕ್ಕು ಕಲೆಗಳಿವೆ. ಬಹಳ ಸ್ಥೂಲವಾಗಿ ಇವುಗಳನ್ನು ಉತ್ತರ ಕರ್ನಾಟಕದ ಕಲೆಗಳು,ದಕ್ಷಿಣ ಕರ್ನಾಟಕದ ಕಲೆಗಳು ಮತ್ತು ಕರಾವಳಿ ಕರ್ನಾಟಕದ ಕಲೆಗಳೆಂದು ಪ್ರಾದೇಶಿಕವಾಗಿ ಗುರುತಿಸಿ ವಿವರಿಸಲು ಸಾಧ್ಯವಿದೆ.  


ತುಂಗಭದ್ರಾ ನದಿಯ ಉತ್ತರಭಾಗದಲ್ಲಿನ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಅಲಾವಿ ಕುಣಿತ, ಕರಡಿ ಮಜಲು, ಗೊಂದಲಿಗರ ಮೇಳ, ಜಗ್ಗಲಿಗೆ, ಜೋಗತಿ ಕುಣಿತ, ಪುರವಂತಿಕೆ ಮೊದಲಾದ ಕಲೆಗಳು ಸುದೀರ್ಘ‌ ಇತಿಹಾಸ‌ವಿರುವ ಅದ್ಭುತ ಕಲಾಪ್ರಕಾರಗಳು. ದಕ್ಷಿಣ ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಪೂಜಾ ಕುಣಿತ, ಕರಗ, ಡೊಳ್ಳು , ವೀರಗಾಸೆ, ನೀಲಗಾರರ ಮೇಳ, ಬೀಸು ಕಂಸಾಳೆ, ಸೋಮನ ಕುಣಿತ ಮೊದಲಾದ ಕಲೆಗಳು ತಮ್ಮ ಕಲಾ ವಿನ್ಯಾಸ, ಬಣ್ಣ, ಹೆಜ್ಜೆಗಾರಿಕೆ ಮತ್ತು ಜೊತೆಗೆ ಕರೆದೊಯ್ಯುವ ಸುದೀರ್ಘ‌ ಕಾವ್ಯ ಪರಂಪರೆಗಳಿಂದಾಗಿ ಮನಮೋಹಕವೂ ಸುಪ್ರಸಿದ್ಧವೂ ಆಗಿವೆ.


ಕಡಲ ತಡಿಯ ಕರಾವಳಿ ಕರ್ನಾಟಕದಲ್ಲಿರುವ ಆಟಿ ಕಳೆಂಜ, ಕರಂಗೋಲು, ಸಿದ್ಧವೇಷ, ಸುಗ್ಗಿ ಕುಣಿತ, ಜಾಲಾಟ, ಭೂತಾರಾಧನೆ, ತಾರ್ಲೆ ಕುಣಿತ, ಪಾಣರಾಟ, ಕಾಡ್ಯನಾಟ ಮೊದಲಾದುವು ತಮ್ಮ ಸಾಂಸ್ಕೃತಿಕ ಅನನ್ಯತೆಗಳಿಂದ ಹೆಸರಾಗಿವೆ. ಇಂಥ ಕಲೆಗಳ ಜೊತೆಗೆ ಕರ್ನಾಟಕಕ್ಕೆ ಜನಪದ ರಂಗಭೂಮಿಯ ಅತ್ಯಂತ ಸಮೃದ್ಧವಾದ ಪರಂಪರೆಯೊಂದಿದೆ. ಈಗ ಅಪೂರ್ವವಾಗಿರುವ, ದಾಸರಾಟ, ಚರಿತ್ರೆಯ ಪುಟಗಳಿಗೆ ಸೇರುತ್ತಿರುವ ಪಗರಣ, ಅಪೂರ್ವ ಸಂಗೀತವಿರುವ ಸಂಗ್ಯಾಬಾಳ್ಯ, ಕೇಳುಗರ ಮನಮುಟ್ಟುವಂಥ ಹಾಡುಗಳಿರುವ ಶ್ರೀಕೃಷ್ಣ ಪಾರಿಜಾತ, ಅಪಾರ ಜನಮನ್ನಣೆಯ ತೆಂಕು ಮತ್ತು ಬಡಗುತಿಟ್ಟು ಯಕ್ಷಗಾನಗಳು, ಏಳು ಭಾಗವತರೊಡಗೂಡಿಕೊಂಡಿರುವ ದೊಡ್ಡಾಟ ಮೊದಲಾದ ರಂಗಕಲೆಗಳು ತಮ್ಮ ಸಂಗೀತ, ನೃತ್ಯ, ವೇಷಭೂಷಣ ಮತ್ತು ಮಾತುಗಾರಿಕೆಗಳಿಂದಾಗಿ ಲಕ್ಷಾಂತರ ಪ್ರೇಕ್ಷಕರಿಗೆ ಇಷ್ಟವಾಗಿವೆ. ಇವಲ್ಲದೆ ಇನ್ನೂ ಅನೇಕ ಕಲೆಗಳನ್ನು ನಾವು ನೋಡಿದ್ದೇವೆ, ಅವುಗಳಿಗೆ ಮನಸೋತಿದ್ದೇವೆ.
ಆದರೆ, ಜಾಗತೀಕರಣದ ಇಂದಿನ ಸಂದರ್ಭದಲ್ಲಿ ನಾವೆಲ್ಲ ನೋಡು ನೋಡುತ್ತಿರುವಂತೆ ಈ ಕಲೆಗಳು ನಿಧಾನವಾಗಿ ಮರೆಯಾಗುತ್ತಿವೆ. ಹಿರಿಯ ತಲೆಮಾರಿಗೆ ಸೇರಿದ ಕಲಾವಿದರು ತಮ್ಮ ಮಕ್ಕಳು ಈ ಕಲೆಗಳನ್ನು ಮುಂದುವರಿಸುವುದು ಬೇಡವೆಂದು ಪ್ರಾಮಾಣಿಕವಾಗಿ ಹೇಳುತ್ತಿದ್ದಾರೆ. ಹೊಸ ತಲೆಮಾರಿನ ಹುಡುಗರು ಈ ಕಲೆಗಳತ್ತ ಬರುತ್ತಿಲ್ಲ. ಹೊಸ ಪ್ರೇಕ್ಷಕರನ್ನು ಸೃಷ್ಟಿಸಿಕೊಳ್ಳುವಲ್ಲಿ ಈ ಕಲೆಗಳು ಈಚೆಗೆ ಯಶಸ್ವಿಯಾಗಿಲ್ಲ. ಇನ್ನು ಕೆಲವು ವರ್ಷಗಳಲ್ಲಿ ಬಳ್ಳಾರಿಯ ಸುಪ್ರಸಿದ್ಧ ತೊಗಲು ಗೊಂಬೆಯಾಟ, ಬೆಳಗಾವಿಯ ಕೃಷ್ಣ ಪಾರಿಜಾತ, ಕರಾವಳಿಯ ಯಕ್ಷಗಾನಗಳೆಲ್ಲ ಇತಿಹಾಸದ ಪುಟ ಸೇರಲಿವೆ.
ಇದರೊಂದಿಗೆ ಮನುಕುಲ ಸೃಷ್ಟಿಸಿಕೊಂಡ ಅಭೂತಪೂರ್ವ ಕಲಾಯುಗವೊಂದು ಮುಗಿದು ಹೋಗಲಿದೆ. ಇಂದಲ್ಲ ನಾಳೆ ಅಂಥದ್ದೊಂದು ಘಟನೆ ನಡೆಯುವುದಂತೂ ನಿಜ.

·          
o    ಇಂಥ ಪರಿಸ್ಥಿತಿಯಲ್ಲಿ ನಮ್ಮ ನಿಜವಾದ ಜವಾಬ್ದಾರಿಗಳೇನು? ಎಂಬ ಕುರಿತು ನಾವೆಲ್ಲ ಗಂಭೀರವಾಗಿ ಯೋಚಿಸಬೇಕಾದ ಕಾಲ ಇದೀಗ ಸನ್ನಿಹಿತವಾಗಿದೆ. "ಈ ಕಲೆಗಳನ್ನು ಉಳಿಸಿರಿ' ಅಂತ ಕರೆ ಕೊಡುವುದರಿಂದ ಯಾವ ಕಲೆಯೂ ಉಳಿಯದು. ಜೊತೆಗೆ, ಕಲೆಗಳನ್ನು ಹೇಗೆ ಉಳಿಸಿಕೊಳ್ಳಬೇಕೆಂಬ ಬಗೆಗೆ ನಮ್ಮ ನಮ್ಮಲ್ಲಿಯೇ ಭಿನ್ನಾಭಿಪ್ರಾಯಗಳಿವೆ. ನಮ್ಮ ಸರಕಾರಗಳಿಗೆ ಇಂಥ ವಿಚಾರಗಳ ಕಡೆಗೆ ಗಂಭೀರವಾಗಿ ಗಮನ ಕೊಡುವಷ್ಟು ವ್ಯವಧಾನ ಇರಲಾರದು. ಕಲೆಗಳ ಅಭಿವೃದ್ಧಿಗಾಗಿಯೇ ಇರುವ ವಿವಿಧ ಅಕಾಡೆಮಿಗಳ ಸೀಮಿತ ಅನುದಾನಗಳು ದೊಡ್ಡ ಪ್ರಮಾಣದ ಕೆಲಸಗಳಿಗೆ ಅಡ್ಡಿಯಾಗಿವೆ.
ವಿಶ್ವವಿದ್ಯಾಲಯಗಳಲ್ಲಿ ದುಡಿಯುತ್ತಿರುವ ತಜ್ಞರಿಗೆ ಅನೇಕ ಮಿತಿಗಳಿವೆ.

ಹಿನ್ನೆಲೆಯಲ್ಲಿ ಕರ್ನಾಟಕದ ಕೆಲವಾದರೂ ಕಲೆಗಳಿಗೆ ಯುನೆಸ್ಕೋ (United Nations Educational, Scientific and Cultural Organization) ಮನ್ನಣೆ ದೊರೆಯುವಂತೆ ಮಾಡಬೇಕಾದ್ದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ವಿಶ್ವಸಂಸ್ಥೆಯ ಭಾಗವಾದ ಯುನೆಸ್ಕೋ ಇದೀಗ ಅಳಿದು ಹೋಗುತ್ತಿರುವ ಕಲೆಗಳ ಪುನರುಜ್ಜೀವನಕ್ಕೆ ವಿಶೇಷ ಅನುದಾನ ನೀಡುತ್ತಿದೆ. ಈ ಅನುದಾನವು ಜಗತ್ತಿನ ಅನೇಕ ನತದೃಷ್ಟ ಕಲೆಗಳಿಗೆ ಜೀವದಾನ ಮಾಡಿದೆ. ಭಾರತದ ಪೂರ್ವ ಭಾಗದಲ್ಲಿ ವಿಶೇಷವಾಗಿ ಪಶ್ಚಿಮ ಬಂಗಾಳ-ಓಡಿಶಾ ಗಡಿಪ್ರಾಂತದಲ್ಲಿ ಪ್ರಚಲಿತದಲ್ಲಿರುವ ಆಕರ್ಷಕ ಚಾವು ಕುಣಿತ, ಕೇರಳದ ಚಿತ್ತಾಕರ್ಷಕ ಮುಡಿಯೇಟ್ಟು, ಮತ್ತು ರಾಜಸ್ಥಾನದ ಕಲಬೇಲಾ ಜನಪದ ಕಲೆಗಳನ್ನು ಯುನೆಸ್ಕೋ ಈಚೆಗೆ "ಮನುಕುಲ ಸೃಜಿಸಿದ ಅಪೂರ್ವ ಕಲಾಪ್ರಕಾರಗಳು' ಎಂದು ಗುರುತಿಸಿ, ಅವುಗಳ ಪುನರುತ್ಥಾನಕ್ಕೆ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ. ನನಗೆ ತಿಳಿದಂತೆ, ಕರ್ನಾಟಕದ ಯಾವುದೇ ಕಲೆಗೆ ಇಂಥ ಮನ್ನಣೆ ದೊರೆತಿಲ್ಲ. ಹಾಗೆ ದೊರೆಯುವಂತೆ ಮಾಡುವ ಗಂಭೀರ ಪ್ರಯತ್ನಗಳೂ ನನ್ನ ಗಮನಕ್ಕೆ ಬಂದಿಲ್ಲ.ಈ ವಿಷಯದಲ್ಲಿ ನಾವು ಪಕ್ಕದ ಕೇರಳ ರಾಜ್ಯದಿಂದ ಸಾಕಷ್ಟು ಪ್ರೇರಣೆ ಪಡೆಯಬಹುದಾಗಿದೆ.
ಮಲೆಯಾಳಿಗಳು ತಮ್ಮ ಕಲೆಯಾದ "ಕಥಕಳಿ'ಯನ್ನು ಹೇಗೆ ಪ್ರಚುರಪಡಿಸಿದರು? ಇಂದು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಯಾರಿಗಾದರೂ ಕಥಕಳಿಯ ಬೃಹತ್‌ ಭಿತ್ತಿ ಚಿತ್ರ ನೋಡಲು ದೊರೆಯುತ್ತದೆ. ಇದರಿಂದ ಈ ಕಲೆಯತ್ತ ಅಂತಾರಾಷ್ಟ್ರೀಯ ಪ್ರವಾಸಿಗರ ಗಮನ ತಾನೇ ತಾನಾಗಿ ಬೀಳುವಂತಾಗಿದೆ. ದೆಹಲಿಯ ಕುತುಬ್‌ ಮಿನಾರ್‌ನ ಪಕ್ಕದಲ್ಲಿ ಕಥಕಳಿಗೆಂದೇ ಒಂದು ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರವಿದೆ. ದೆಹಲಿಗೆ ಆಗಮಿಸುವ ಅಂತಾರಾಷ್ಟ್ರೀಯ ಕಲಾತಂಡಗಳು ಇಲ್ಲಿಗೆ ಆಗಮಿಸಿ, ಕಥಕಳಿ ಪ್ರದರ್ಶನ ವೀಕ್ಷಿಸುತ್ತವೆ. ತಮ್ಮ ದೇಶಕ್ಕೆ ಆ ಕಲೆಯನ್ನು ಕೊಂಡೊಯ್ಯುತ್ತವೆ.

ಕರ್ನಾಟಕದ ಯಾವ ಕಲೆಗಳಿಗೆ ಈ ಭಾಗ್ಯವಿದೆ
?

ಕೇರಳದ "ಕುಟಿಯಾಟ್ಟಂ' ಎಂಬ ಪ್ರಾಚೀನ ಕಲೆಗೆ 2000ನೇ ಇಸವಿಯಲ್ಲಿ ಯುನೆಸ್ಕೋ ಮನ್ನಣೆ ನೀಡಿ, "ಮನುಕುಲದ ಅತ್ಯಂತ ಪ್ರಶಸ್ತ ಕಲೆ' ಎಂದು ಘೋಷಿಸಿತು. ಈ ಘೋಷಣೆಯ ಬೆನ್ನಲ್ಲಿಯೇ ಕುಟಿಯಾಟ್ಟಂನ ಸಂರಕ್ಷಣೆ, ಪರಿಷ್ಕರಣೆ, ಪ್ರದರ್ಶನ ಮತ್ತು ದಾಖಲಾತಿ'ಗೆ ವಿಶೇಷ ಅನುದಾನ ಬಿಡುಗಡೆಯಾಯಿತು. 2010ರಲ್ಲಿ ಈ ಕುರಿತು ಯುನೆಸ್ಕೋ ಒಂದು ವಿವರವಾದ ವರದಿಯನ್ನು ಬಿಡುಗಡೆ ಮಾಡಿತು. ಆ ವರದಿಯ ಪ್ರಕಾರ ಕಳೆದ 10 ವರ್ಷಗಳಲ್ಲಿ ಕುಟಿಯಾಟ್ಟಂನ ಸಂರಕ್ಷಣೆಗೆ ಸುಮಾರು 90 ಕೋಟಿ ರೂಪಾಯಿಗಳಷ್ಟು ಬಿಡುಗಡೆ ಆಗಿದೆ. ಅದರ ಪರಿಣಾಮವಾಗಿ ಇಂದು-


1.
ಮರೆಯಾಗಿ ಹೋಗುತ್ತಿದ್ದ ಕುಟಿಯಾಟ್ಟಂ ಕಲೆ ಮರು ಜೀವ ಪಡೆದಿದೆ.


2.
ಕುಟಿಯಾಟ್ಟಂನ್ನು ಆಧುನಿಕ ಪ್ರೇಕ್ಷಕರಿಗೆ, ಅದರಲ್ಲೂ ಮುಖ್ಯವಾಗಿ ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ಸಂವಹಿಸುವಂತೆ ಮಾಡುವ ಹೊಸ ತಂಡಗಳು ಹೊಸಬಗೆಯ ಪ್ರಯತ್ನಗಳೊಂದಿಗೆ ಸಿದ್ಧವಾಗಿವೆ.


3.
ಅಂತಾರಾಷ್ಟ್ರೀಯ ಸಾಂಸ್ಕೃತಿಕ ವೇದಿಕೆಗಳಲ್ಲಿ ಕುಟಿಯಾಟ್ಟಂ ಪ್ರದರ್ಶನಗಳು ಏರ್ಪಡುತ್ತಿವೆ.


4.
ಕುಟಿಯಾಟ್ಟಂ ಕುರಿತ ಮಹತ್ವದ ಸಂಶೋಧನೆಗಳು ನಡೆದಿವೆ.


5.
ಆ ಕಲೆಯ ಕುರಿತು ದೊಡ್ಡ ಸಂಖ್ಯೆಯಲ್ಲಿ ಪುಸ್ತಕ ಮತ್ತು ಲೇಖನಗಳು ಬಂದಿವೆ.


6.
ಅದರ ಕುರಿತು ಸಂಶೋಧನೆ ಮಾಡುವ ವಿದ್ವಾಂಸರಿಗೆ ಶಿಷ್ಯವೇತನ ನೀಡಿ ಪ್ರೋತ್ಸಾಹಿಸಲಾಗಿದೆ.


7.
ಕುಟಿಯಾಟ್ಟಂನ್ನು ಕೇಂದ್ರವಾಗಿರಿಸಿಕೊಂಡ ವಸ್ತು ಸಂಗ್ರಹಾಲಯವೊಂದರ ಸ್ಥಾಪನೆ.

8.
ಕುಟಿಯಾಟ್ಟಂ ಕಲಿಯುವ ವಿದ್ಯಾರ್ಥಿಗಳಿಗೆ "ಅಂತಾರಾಷ್ಟ್ರೀಯ ಕಲಾ ಶಾಲೆ'ಗಳ ನಿರ್ಮಾಣ ಮತ್ತು ಅಲ್ಲಿ ಕಲಿಯುವವರಿಗೆ ಶಿಷ್ಯವೇತನ ನೀಡಿಕೆ ಇತ್ಯಾದಿ.ಯುನೆಸ್ಕೋ ಮನ್ನಣೆಯಿಂದಾಗಿ ತೆರೆಮರೆಗೆ ಸರಿಯುತ್ತಿದ್ದ ಕಲೆಯೊಂದು ಇಂದು ಮುನ್ನೆಲೆಗೆ ಬಂದು ವಿಜೃಂಭಿಸುತ್ತಿರುವ ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ.

ಹೀಗಿರುವಾಗ ನಾವು ಯಾಕೆ ಅಂಥ ಪ್ರಯತ್ನಗಳನ್ನು ಮಾಡಬಾರದು
?

ಯಾವುದೇ ಕಲೆಗೆ ಯುನೆಸ್ಕೋ ಮನ್ನಣೆ ದೊರೆಯುವಂತೆ ಮಾಡಲು ನಾವು ಮಾಡಬೇಕಾದ್ದು ಇಷ್ಟು -


1)
ಯುನೆಸ್ಕೋ ಬಿಡುಗಡೆ ಮಾಡಿದ ನಿಗದಿತ ಅರ್ಜಿ ಫಾರಂ ಒಂದನ್ನು ಬಹಳ ಎಚ್ಚರಿಕೆಯಿಂದ ತುಂಬುವುದು. ಮತ್ತು


2)
ಯಾವ ಕಲೆಯ ಬಗ್ಗೆ ಬೇಡಿಕೆ ಸಲ್ಲಿಸಲಾಗುವುದೋ ಆ ಕಲೆಯ ಬಗ್ಗೆ ಐದರಿಂದ ಆರು ನಿಮಿಷಗಳ ಅವಧಿಯ ಒಳ್ಳೆಯ ಸಾಕ್ಷಚಿತ್ರವೊಂದನ್ನು ಅರ್ಜಿ ಜೊತೆ ಲಗತ್ತೀಕರಿಸುವುದು.ಈ ಎರಡು ಕೆಲಸಗಳನ್ನು ಮಾಡಬೇಕಾದ್ದು ಅಗತ್ಯ. ಆದರೆ ಇದನ್ನು ಸುಲಭದ ಕೆಲಸವೆಂದು ಯಾರಾದರೂ ಭಾವಿಸಬಾರದು. ಏಕೆಂದರೆ ನಮ್ಮ ಅನೇಕ ಜನಪದ ಕಲೆಗಳನ್ನು ವೈಜ್ಞಾನಿಕವಾಗಿ ವಿವರಿಸುವ ಕಲೆ ನಮಗಿನ್ನೂ ಸಿದ್ಧಿಸಿಲ್ಲ. ಉದಾಹರಣೆಗೆ ಬಹಳ ಜನಪ್ರಿಯವಾಗಿರುವ ಯಕ್ಷಗಾನವನ್ನೇ ಗಮನಿಸೋಣ.
ಅದರ ಬಗ್ಗೆ ತುಂಬಾ ಮಾತುಗಳನ್ನು ನಾವು ಆಡಿದ್ದೇವೆ. ಆದರೆ, ಒಂದು ವಾಕ್ಯದಲ್ಲಿ ಅದನ್ನು ನಿರ್ವಚಿಸುವುದು ಹೇಗೆ? ಕೃಷ್ಣಪಾರಿಜಾತದ ಅನನ್ಯತೆಯನ್ನು ಬೇರೆಯವರಿಗೆ ತಿಳಿಸುವ ಪರಿ ಯಾವುದು
?
ಅಂದರೆ ಅನೇಕ ವರ್ಷಗಳ ನಿರಂತರ ಕೆಲಸಗಳ ಆನಂತರವೂ ಕೆಲವು ಮುಖ್ಯ ವಿಷಯಗಳಲ್ಲಿ ನಾವು ನಿಜವಾದ ಪ್ರಗತಿಯನ್ನು ಸಾಧಿಸಲೇ ಇಲ್ಲ. ಕರ್ನಾಟಕದ ಯಾವುದೇ ಒಂದು ಕಲೆಯನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತೋರಿಸಬಲ್ಲಂಥ ಕಲಾತ್ಮಕ ಸಾಕ್ಷಚಿತ್ರವೊಂದನ್ನು ನಮಗೆ ಇದುವರೆಗೆ ಸಿದ್ಧಪಡಿಸಲು ಸಾಧ್ಯವಾಗಿಲ್ಲ. ಹವಾಯಿಯ ಹೊನುಲುಲುವಿನಲ್ಲ ನಡೆದ ಏಷಿಯಾ ಸಂಶೋಧಕರ ಸಮ್ಮೇಳನದಲ್ಲಿ ಕಥಕಳಿಯ ಭಾಗವೊಂದರ ಸಾಕ್ಷ್ಯಾಚಿತ್ರವೊಂದನ್ನು ನೋಡುವ ಅವಕಾಶ ಸಿಕ್ಕಿತ್ತು.


ಗದಾಯುದ್ಧದಲ್ಲಿ ತೊಡೆಮುರಿದು ಬಿದ್ದ ದುರ್ಯೋಧನನ ಅಂತಿಮ ಕ್ಷಣಗಳನ್ನು ತೋರಿಸುವ ಆ ಭಾಗ ಸಾವಿನ ದುರಂತವನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಿತು. ಬಿ.ಬಿ.ಸಿ ಯ ಏಳನೇ ಚ್ಯಾನೆಲ್‌ ಎರಡು ನಿಮಿಷಗಳ ಯಕ್ಷಗಾನವನ್ನೊಮ್ಮೆ ಪ್ರಸಾರ ಮಾಡಿತ್ತು. ಆ ಎರಡು ನಿಮಿಷಗಳಿಗಾಗಿ ಏಳು ಕೆಮರಾಗಳನ್ನು ಮೂರು ಗಂಟೆಗಳ ಕಾಲ ಅದರ ನಿರ್ದೇಶಕರು ಬಳಸಿದ್ದರು. ಈ ಬಗೆಯ ಗಂಭೀರ ಪ್ರಯತ್ನಗಳಿಗೆ ಮಾತ್ರ ಅಂತಾರಾಷ್ಟ್ರೀಯ ಮನ್ನಣೆಗಳು ಲಭಿಸುತ್ತವೆ. ಈ ಬಗೆಯ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬಲ್ಲ ಸಂಘ ಸಂಸ್ಥೆಗಳನ್ನು ನಾವೀಗ ಕರ್ನಾಟಕದಲ್ಲಿ ಹುಡುಕಬೇಕಾಗಿದೆ.
ಕರ್ನಾಟಕದ ಕೆಲವಾದರೂ ಕಲೆಗಳಿಗೆ ಯುನೆಸ್ಕೋ ಮನ್ನಣೆ ದೊರೆಯುವಂತೆ ಮಾಡಲು ನಾವೆಲ್ಲ ಜೊತೆಯಾಗಿ ಕೆಲಸ ಮಾಡಬೇಕಾಗಿದೆ.