ಸೋಮವಾರ, ಮಾರ್ಚ್ 26, 2012

ಜಾನಪದ ವಿವಿ ಉದ್ಘಾಟನೆಗೆ ಅಡ್ಡಿ ಏನು?

(ಶಿಗ್ಗಾಂವ ಹತ್ತಿರದ ಗೊಟಗೋಡಿಯಲ್ಲಿ ಸಿದ್ದವಾಗಿರುವ ಜಾನಪದ ವಿವಿ ಕ್ಯಾಂಪಸ್ ಚಿತ್ರ)

-ವಿಜಯ್ ಹೂಗಾರ

ಕೃಪೆ:ಪ್ರಜಾವಾಣಿ, March 26, 2012ದೇಶದ ಪ್ರಥಮ ಜಾನಪದ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯದ ಜಾನಪದ ವಿಶ್ವವಿದ್ಯಾಲಯ `ಅಧಿಕಾರ ರಾಜಕಾರಣ`ದ ಸುಳಿಗೆ ಸಿಲುಕಿದೆ. ವರ್ಷವಾದರೂ ಅದರ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿಲ್ಲ.

2010-11ನೇ ಸಾಲಿನ ಮುಂಗಡಪತ್ರದಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಗ್ರಾಮದ ಬಳಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸುವ ಘೋಷಣೆ ಮಾಡಿದರು. ಆದರೆ ರಾಜ್ಯ ಸರ್ಕಾರ ಘೋಷಣೆಗೆ ತೋರಿದ ಆಸಕ್ತಿಯನ್ನು ಅದರ ಉದ್ಘಾಟನೆಗೆ ತೋರುತ್ತಿಲ್ಲ. ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ನಡೆದಿರುವ ಕಿತ್ತಾಟ ವಿವಿ ಉದ್ಘಾಟನೆಗೆ ಅಡ್ಡಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿವಿ ಘೋಷಣೆ ಜತೆಗೆ ಅದರ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ 7.5 ಕೋಟಿ ರೂ. ಸೇರಿ 17.5 ಕೋಟಿ ರೂಪಾಯಿ ಅನುದಾನ ದೊರೆತಿದೆ. ಭೂಮಿ ಹಸ್ತಾಂತರ ಹಾಗೂ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಕುಲಪತಿ, ಕುಲಸಚಿವರು, ಅಗತ್ಯ ಸಿಬ್ಬಂದಿ ನೇಮಕವೂ ಆಗಿದೆ. ಗೊಟಗೋಡಿ ಬಳಿ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಿರುವ ಪ್ರವಾಸೋದ್ಯಮ ಇಲಾಖೆಯ ಯಾತ್ರಿ ನಿವಾಸ ಕಟ್ಟಡವನ್ನು ನವೀಕರಿಸಿ ತಾತ್ಕಾಲಿಕ ಆಡಳಿತ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ.

ಅಷ್ಟೇ ಅಲ್ಲದೇ ಕುಲಪತಿಗಳು ಅಧಿಕಾರ ವಹಿಸಿಕೊಂಡ ನಂತರ ವಿವಿ ಲಾಂಛನವನ್ನು ಬಿಡುಗಡೆಗೊಳಿಸಿದ್ದಾರೆ. ಜಾನಪದ ಸಂಪುಟಗಳ ಮುದ್ರಣ ಕಾರ್ಯ ಆರಂಭಿಸಿದ್ದಾರೆ. ಗ್ರಾಮ ಚರಿತ್ರೆ, ಕೋಶ ಅಧ್ಯಯನ ಹಾಗೂ ಜಾನಪದ ವಸ್ತುಗಳ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ವಿಶ್ವವಿದ್ಯಾಲಯ ಇಷ್ಟೊಂದು ಚಟುವಟಿಕೆಗಳು ನಡೆಸುತ್ತಿದ್ದರೂ ಅದರ ಉದ್ಘಾಟನೆ ಯಾವಾಗ ಎನ್ನುವ ಪ್ರಶ್ನೆ ಹಾಗೇ ಉಳಿದಿದೆ.

ಎರಡು ಬಾರಿ ಮುಂದೂಡಿಕೆ: ಈ ಹಿಂದೆ ಎರಡು ಬಾರಿ ಉದ್ಘಾಟನೆಗೆ ದಿನ ನಿಗದಿ ಮಾಡಿ ಯಾವುದಾವುದೋ ಕಾರಣ ನೀಡಿ ಮುಂದೂಡಿದೆ. ವಿಶ್ವವಿದ್ಯಾಲಯ ಉದ್ಘಾಟನೆ ಮುಂದೂಡಲು ಕಾರಣಗಳಿಲ್ಲ. ರಾಜ್ಯಪಾಲರು ದಿನ ನೀಡಬೇಕಾಗಿದೆ. ಅದೇ ಕಾರಣಕ್ಕೆ ಉದ್ಘಾಟನೆ ವಿಳಂಬವಾಗಿದೆ ಎಂದು ವಿವಿ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಹಾಗೂ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳುತ್ತಾರೆ.

ಗುರುವಾರ, ಮಾರ್ಚ್ 22, 2012

ಜಾನಪದ ವಿಶ್ವವಿದ್ಯಾಲಯದ ಉತ್ಸಾಹ ಹೆಚ್ಚಿಸಿದ ಬಜೆಟ್

-ಅರುಣ್ ಜೋಳದಕೂಡ್ಲಿಗಿ


ಹಲವು ಆಂತರಿಕ ಬಿಕ್ಕಟ್ಟುಗಳ ಮಧ್ಯೆಯೇ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಕೆಲವು ಮಿತಿಗಳ ನಡುವೆಯೂ ಜನಪ್ರಿಯ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ವಿಶೇಷವಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ೭.೫ ಕೋಟಿಯನ್ನು ಮೀಸಲಿಟ್ಟದ್ದು ವರದಿಯಾಗಿದೆ. ಜಾನಪದ ವಿವಿ ಈಗಷ್ಟೆ ಉದ್ಘಾಟನೆಯಾಗಬೇಕಿದೆ. ಆರಂಭಿಕ ಕೆಲಸಗಳಿಗೆ ಚಾಲನೆ ನೀಡಬೇಕಿದೆ. ಹಾಗಾಗಿ ಜಾನಪದ ವಿವಿಗೆ ಅಧಿಕ ಹಣದ ಅಗತ್ಯವಿತ್ತು. ಈಗ ತೋರಿದ ಬಜೆಟ್ ಒಲವು, ಜಾನಪದ ವಿವಿಯ ಆರಂಬಿಕ ಕೆಲಸಗಳಿಗೆ ಉತ್ಸಾಹವನ್ನು ಹೆಚ್ಚಿಸಿದೆ.


ಕನ್ನಡ ಜಾನಪದ ಬ್ಲಾಗ್ ಜಾನಪದ ವಿವಿಯ ಕುಲಪತಿಗಳಾದ ಪ್ರೊ. ಅಂಬಳಿಕೆ ಹಿರಿಯಣ್ಣ ಅವರನ್ನು ಮಾತನಾಡಿಸಿದಾಗ, ಬಜೆಟ್‌ನ ಬಗ್ಗೆ ಮತ್ತು ವಿಶ್ವವಿದ್ಯಾಲಯದ ಕೆಲಸಗಳ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ:

‘ಅತ್ಯವಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ಶಿಲಾನ್ಯಾಸ ನೆರವೇರಿಸಿ ಕೆಲಸ ಕಾರ್ಯವನ್ನು ಆರಂಭಿಸಲು ಸರಕಾರದ ಅನುದಾನದ ಅಗತ್ಯವಿತ್ತು. ಗೊಟಗೋಡಿಯಲ್ಲಿ ಈಗಿರುವ ಕಟ್ಟಡ ಬಾಡಿಗೆ ಪಡೆದದ್ದು. ನಾವದನ್ನು ಬಿಟ್ಟುಕೊಡಬೇಕಾಗುತ್ತೆ. ಯುಜಿಸಿ ಮನ್ನಣೆ ಪಡೆಯಲು ವಿಶ್ವವಿದ್ಯಾಲಯದ್ದೇ ಆದ ಜಾಗ, ಸ್ವಂತ ಕಟ್ಟಡ, ಅಧ್ಯಾಪಕ ವರ್ಗ, ಸಿಬ್ಬಂದಿ, ಯೋಜನೆಗಳು, ಸುಸಜ್ಜಿತ ಗ್ರಂಥಾಲಯ ಇರಲೇಬೇಕು. ಇವೆಲ್ಲವನ್ನು ಒದಗಿಸಿಕೊಳ್ಳಲು ನಮಗೆ ಹಣಕಾಸಿನ ನೆರವು ಬೇಕೇ ಬೇಕು. ಈಗ ಕೊಟ್ಟಿರುವ ಹಣದಲ್ಲಿ ಆರಂಭಿಕ ಕೆಲಸಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ. ಬಹುಶಃ ಕಟ್ಟಡಗಳಿಗೆ ಶಿಲಾನ್ಯಾಸ ನೆರವೇರಿಸಬಹುದು. ಇದಕ್ಕೆ ಪೂರಕವಾದ ಯೋಜನೆಯನ್ನು ರೂಪಿಸಿದಿವಿ. ಭೂಮಿ ನಮ್ಮ ಹೆಸರಿಗೆ ಬಂದ ಮೇಲೆ ಸ್ವಂತ ಕಟ್ಟಡದ ಕೆಲಸಗಳು ಆರಂಭವಾಗ್ತವೆ. ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕ ಮೇಲೆ ಭೂಮಿ ವಿವಿಯ ಸ್ವಂತಕ್ಕೆ ವರ್ಗವಾಗುತ್ತದೆ. ಈ ಪ್ರಕ್ರಿಯೆ ಕೊನೆ ಹಂತದಲ್ಲಿದೆ.

ನಾವು ವಿಶ್ವವಿದ್ಯಾಲಯದಿಂದ ಮೊದಲ ಕೆಲಸಗಳಿಗಾಗಿ ನಲವತ್ತು ಕೋಟಿಗೆ ಪ್ರಸ್ತಾವ ಸಲ್ಲಿಸಿದ್ದೆವು. ಈಗ ಏಳುವರಿ ಕೋಟಿ ಕೊಟ್ಟಿದಾರೆ, ಹಂತ ಹಂತವಾಗಿ ನಮ್ಮ ಯೋಜನೆಗಳ ಕೆಲಸಗಳನ್ನು ಮಾಡಬೇಕಾಗುತ್ತದೆ. ಸರಕಾರದ ಸಹಕಾರ ತುಂಬಾ ಚೆನ್ನಾಗಿದೆ. ಮುಂದಿನ ಯೋಜನೆಗಳಿಗೂ ಹಣ ಕೊಡುತ್ತಾರೆ, ಆದರೆ ಅದಕ್ಕೆ ನಾವು ಅಪ್ರೋಚ್ ಮಾಡಬೇಕು ಅಷ್ಟೆ. ಈಗ ಕೊಟ್ಟಿರುವ ಹಣ ಯೋಜನೆಯ ಭಾಬ್ತೋ, ಯೋಜನೇತರ ಬಾಬ್ತೋ ಇನ್ನು ಸರಿಯಾದ ಮಾಹಿತಿ ಸಿಕ್ಕಿಲ್ಲ. ಬಜೆಟ್‌ನಲ್ಲಿ ಹಣ ನೀಡಿದ ಕಾರಣ ಜಾನಪದ ವಿಶ್ವವಿದ್ಯಾಲಯ ಸರಕಾರವನ್ನು ಅಭಿನಂದಿಸುತ್ತದೆ" ಎನ್ನುತ್ತಾರೆ.


ಈ ವಿಷಯ ಕುರಿತಂತೆ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊ.ರು. ಚನ್ನಬಸಪ್ಪ ಅವರು ಪ್ರತಿಕ್ರಿಯಿಸುತ್ತಾ
" ಈಗ ಬಜೆಟ್‌ನಲ್ಲಿ ನೀಡಿದ ಹಣ ಜಾನಪದ ವಿವಿಯ ಆರಂಭಿಕ ಕೆಲಸಕ್ಕೆ ಒಳ್ಳೆಯದೇ ಆಗಿದೆ. ಇದು ಸರಕಾರದ ಆಶಾದಾಯಕ ಪ್ರತಿಕ್ರಿಯೆ. ಈ ಅನುದಾನದಲ್ಲಿ ಆಧ್ಯತೆಯ ಮೇರೆಗೆ ಕೆಲಸ ಮಾಡುತ್ತಾ ಹೋಗಬೇಕು. ಬೇರೆ ಬೇರೆ ಅಕಾಡೆಮಿಗಳ ಜತೆಯೂ ಸಹಕಾರ ಪಡೆದೂ ಕೆಲಸ ಮಾಡಬಹುದಾಗಿದೆ. ಮುಂದೆ ಪ್ರಾಜೆಕ್ಟ್‌ಗಳ ಪ್ರಸ್ತಾವ ಸಲ್ಲಿಸಿ ಹಣ ಪಡೆಯೋದಕ್ಕೂ ಅವಕಾಶವಿದೆ. ಯುವಕರ ಕುರಿತು ಏನಾದರೂ ಮಾಡುವುದಿದ್ದರೆ, ಯುವಜನಸೇವಾ ಇವರಿಂದ ಹಣ ಪಡೀಬಹುದು.

ಈಗ ಜಾನಪದ ವಿವಿ ಕೆಲಸ ಚೆನ್ನಾಗಿ ನಡೀತಿದೆ, ಕೋರ್ಸ ಆರಂಭಿಸೋಕೆ ಸಿಲಬಸ್ ಮಾಡ್ತಿದಾರೆ, ಮೊನ್ನೆ ನಲವತ್ತು ಜನ ಜಾನಪದ ವಿದ್ವಾಂಸರು ಬಂದು ಈ ಕುರಿತು ಚರ್ಚೆಯನ್ನು ಮಾಡಿದ್ರು. ಈಗ ಸೆನೆಟ್ಟೂ, ಸಿಂಡಿಕೇಟು, ಇಂಥವೆಲ್ಲಾ ಆಗಿಬಿಟ್ರೆ, ಡಿಪಾರ್ಟಮೆಂಟು ಆರಂಭಿಸೋದು, ಮುಂತಾದ ಕೆಲಸಗಳು ಬೇಗ ಆಗ್ತಾವೆ. ಅಧಿಕೃತವಾಗಿ ಒಂದು ಉದ್ಘಾಟನೆ ಅಂತ ಆದ್ರೆ, ಚಟುವಟಿಕೆಗಳು ಇನ್ನಷ್ಟು ಚುರುಕಾಗ್ತಾವೆ. ಗವರ್ನರ್ ಡೇಟು ಸಿಕ್ರೆ ಆದಷ್ಟು ಬೇಗ ಉದ್ಘಾಟನೆ ಆಗುತ್ತೆ ಅಂತ ಕುಲಪತಿಗಳು ಮಾತಾಡಿದ್ರು, ಇದು ಹೊಸ ಯುನಿವರ್ಸಿಟಿ ಆಗಿರೋದ್ರಿಂದ, ತೀವ್ರಗತಿಯಲ್ಲಿ ಕೆಲಸಗಳು ನಡೀಬೇಕಾದ್ರಿಂದ ಸರಕಾರ ಇನ್ನು ಹೆಚ್ಚಿನ ಅನುದಾನವನ್ನು ನೆರವನ್ನು ಕೊಡಬೇಕಾಗುತ್ತೆ" ಎಂದು ಹೇಳಿದರು.

ಬಜೆಟ್‌ನಿಂದ ಜಾನಪದ ವಿಶ್ವವಿದ್ಯಾಲಯಕ್ಕೆ ಆರಂಭಿಕ ಕೆಲಸಕ್ಕೆ ಪ್ರೋತ್ಸಾಹ ಸಿಕ್ಕಂತಾಗಿದೆ. ಈ ನೆಲೆಯಲ್ಲಿ ವಿವಿ ತನ್ನ ಕೆಲಸ ಕಾರ್ಯಗಳನ್ನು ಚುರುಕಿನಿಂದ ಆರಂಭಿಸುವ ಅಗತ್ಯವೂ ಇದೆ. ಜಾನಪದ ವಿವಿಯ ಕೆಲಸಗಳ ಬಗ್ಗೆ ನಾಡಿನ ನಾಡಿನಾಚೆಯ ಜನರ ಅತೀವ ಕತೂಹಲವಂತೂ ಇದ್ದೇ ಇದೆ. ಇದು ಕರ್ನಾಟಕದ ಎಲ್ಲಾ ವಿವಿಗಳಿಗಿಂತಲೂ ಭಿನ್ನವಾಗಿದ್ದರಿಂದ ಇಂತಹ ಕುತೂಹಲ ಸಹಜವೂ ಆಗಿದೆ. ಕನ್ನಡ ಜಾನಪದ ಬ್ಲಾಗ್ ಕೂಡ ಅಂತಹ ವಿಭಿನ್ನ ಕೆಲಸಗಳನ್ನು ಎದುರು ನೋಡುತ್ತದೆ. ಹಾಗೆಯೇ ಜಾನಪದ ವಿವಿಯ ಎಲ್ಲಾ ಒಳ್ಳೆಯ ಕೆಲಸಗಳನ್ನು ಅಂತರ್ಜಾಲದಲ್ಲಿ ವಿವರವಾಗಿ ಪ್ರಕಟಿಸಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಂಗಾತಿಯೂ ಆಗುತ್ತದೆ. ಇದು ಹೊಸ ವಿವಿಯಾಗಿದ್ದರಿಂದ ಸರಕಾರವು ಇದಕ್ಕೆ ಇನ್ನಷ್ಟು ಹೆಚ್ಚಿನ ನೆರವು ಪ್ರೋತ್ಸಾಹ ನೀಡಬೇಕಾಗಿದೆ.

ಮಂಗಳವಾರ, ಮಾರ್ಚ್ 20, 2012

ಜಾನಪದ ಎಂಬುದು ಪ್ರದರ್ಶನದ ವಸ್ತುವೇ?:

ಡಾ. ನಾ.ಡಿಸೋಜ


ಜನವರಿಯಲ್ಲಿ ನವ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡಿನಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಟ್ಯಾಬ್ಲೋಗೆ ಮೂರನೆ ಬಹುಮಾನ ದೊರೆತಿದೆ ಅನ್ನುವುದು ಸಂತಸದ ಸುದ್ದಿಯೇ. ದಕ್ಷಿಣ ಕನ್ನಡದ ಭೂತಗಳು ದೆಹಲಿಯ ರಾಜಪಥದಲ್ಲಿ ಮೆರೆದವು ಅನ್ನುವುದು, ಬಹುಮಾನವನ್ನೂ ಪಡೆದವು ಅನ್ನುವುದು ಹೆಮ್ಮೆಯ ವಿಷಯ. ಆದರೆ ಇದರ ಹಿಂದೆಯೇ ಮತ್ತೊಂದು ಸುದ್ದಿ ಕೂಡ ಕೇಳಿ ಬಂದಿದೆ. ಈ ಟ್ಯಾಬ್ಲೋದಲ್ಲಿ ಭಾಗವಹಿಸಲು ಮೂಲತಃ ಈ ಭೂತಗಳ ವೇಷಹಾಕುವವರು ಒಪ್ಪಲಿಲ್ಲವೆಂದೂ, ಈ ಕಾರಣಕ್ಕೆ ಬೇರೆ ಕಲಾವಿದರನ್ನ ಬಳಸಿಕೊಂಡು ಈ ಟ್ಯಾಬ್ಲೋಗಳನ್ನ ಸಿದ್ಧಪಡಿಸಲಾಯಿತು ಎಂದು ಹೇಳಲಾಗಿದೆ. ಈ ಭೂತಗಳನ್ನ ಆರಾಧಿಸುವವರು ತಮ್ಮ ಕಲೆಯನ್ನ ಒಂದು ಪ್ರದರ್ಶನದ ವಸ್ತುವನ್ನಾಗಿಸಲು ತಯಾರು ಇರಲಿಲ್ಲ ಅನ್ನುವುದು ಈ ಮಾತಿಗೆ ದೊರೆತ ಸಮಜಾಯಿಶಿ.

ಈ ಸಂದರ್ಭದಲ್ಲಿ ನನಗೆ ಬಹಳ ವರ್ಷಗಳ ಹಿಂದೆ ಆದ ಒಂದು ಅನುಭವ ನೆನಪಿಗೆ ಬರುತ್ತದೆ. ಆಗ ನಾನು ಹೊಸದಾಗಿ ಕ್ಯಾಮೆರಾ ಕೊಂಡಿದ್ದೆ. ಕಣ್ಣಿಗೆ ಬಿದ್ದುದನೆಲ್ಲ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಚಟ. ಒಂದು ದಿನ ನಮ್ಮ ಮನೆಯ ಮುಂದೆ ದುರಗ ಮುರುಗಿಯವನೊಬ್ಬ ತನ್ನ ಮಾರಮ್ಮನ ಪಡಲಿಗೆಯನ್ನ ಹೊತ್ತು ಬಂದವನು ಎದಿರು ಮನೆಯ ಮುಂದೆ ಮಾರಮ್ಮನನ್ನ ಇರಿಸಿಕೊಂಡು ತನ್ನ ಪೂಜೆ ಪ್ರಾರಂಭಿಸಿದ. ಒಂದು ಸಂದರ್ಭದಲ್ಲಿ ಆತ ಒಂದು ಮುಖವಾಡ ಧರಿಸಿ ವಿಶೇಷ ನೃತ್ಯ ಒಂದನ್ನ ಮಾಡ ತೊಡಗಿದ. ನಾನು ಈ ನೃತ್ಯದಿಂದ ಆಕರ್ಷಿತನಾಗಿ ಕ್ಯಾಮರಾ ಹಿಡಿದು ಹೊರ ಬಂದೆ. ಬಿಸಿಲು ಈ ನರ್ತಕನ ಹಿಂದೆ ಇದ್ದುದರಿಂದ ನಾನು ಅವನನ್ನ ಕೊಂಚ ಈ ದಿಕ್ಕಿಗೆ ತಿರುಗಿಕೊಂಡು ನೃತ್ಯ ಮಾಡಲು ವಿನಂತಿ ಮಾಡಿಕೊಂಡೆ. ಆದರೆ ಆತ ತಟ್ಟನೆ ನನ್ನ ಮೇಲೆ ರೇಗಿ ‘ಇದೆಲ್ಲ ನಿಮಗೆ ಬೇಕಾದಂತೆ ಮಾಡುವುದಲ್ಲ’ ಎಂದ. ಆ ಕ್ಷಣದಲ್ಲಿ ನನಗೆ ಬೇಸರವಾದರೂ ಕೊಂಚ ಯೋಚಿಸಿದ ನಂತರ ಅವನ ಮಾತು ಸರಿ ಅನಿಸಿತು.

ಇದಕ್ಕೆ ಸಂಬಂಧಪಟ್ಟ ಮತ್ತೂ ಒಂದು ಸಂದರ್ಭ ಇದೆ. ಒಂದು ಕಾಲೇಜಿನವರು ‘ಪ್ರಾದೇಶಿಕ ಉಡುಗೆಯ ಹಬ್ಬ’ ಎಂದೊಂದು ಸ್ಪರ್ದೆ ಏರ್ಪಡಿಸಿದರು. ಇದಕ್ಕೆ ತೀರ್ಪುಗಾರನನ್ನಾಗಿ ನನ್ನನ್ನ ಕರೆಸಿಕೊಂಡಿದ್ದರು. ಅಂದಿನ ದಿನ ಕಾಲೇಜಿನ ಬಹುತೇಕ ತರುಣ ತರುಣಿಯರು ಪ್ರಾದೇಶಿಕವಾದ ಉಡುಗೆ ತೊಡುಗೆ ಧರಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದೊಂದು ಸುಂದರ ನೋಟ. ಜರಿ, ರೇಶಿಮೆ ಸೀರೆಗಳು, ಜರಿ ಅಂಚಿನ ಪಂಚೆಗಳು, ಅಂಗಿ, ರುಮಾಲು, ಪೇಟ, ಶಾಲು, ಅಂಗವಸ್ತ್ರ, ಹಾಳೆ ಟೋಪಿ. ತುಂಡು ಪಂಚೆ ಇತ್ಯಾದಿ ಇತ್ಯಾದಿ ಸ್ಥಳೀಯ ಉಡುಪೆಲ್ಲ ಹೊರಬಂದಿತ್ತು. ದಿನ ನಿತ್ಯ ಜೀನ್ಸು ಸ್ಕರ್ಟು, ಪಂಚಾಬಿ ಎಂದು ನೋಡಿ ಬೇಸರವಾಗಿದ್ದ ಕಣ್ಣುಗಳಿಗೆ ಅಂದು ಹಬ್ಬ. ನಾನು ಗಮನಿಸಿದಹಾಗೆ ಆ ಪ್ರದೇಶದ ಹಿನ್ನೆಲೆಗೆ ಈ ಉಡುಗೆ ತುಂಬಾ ಚೆನ್ನಾಗಿ ಹೊಂದುಕೊಂಡದ್ದು. ಈ ಯುವಕ ಯುವತಿಯರು ಅದೇ ಮಣ್ಣಿನಿಂದ ಎದ್ದು ಬಂದವರೇನೋ ಅನ್ನುವ ಹಾಗೆ ನನಗೆ ಕಂಡರು. ಸ್ಪರ್ದೆ ಮುಗಿಯಿತು. ಎಲ್ಲ ಸ್ಪರ್ಧಿಗಳೂ ಒಂದೆರಡು ಕೊಠಡಿಗಳಲ್ಲಿ ಹಂಚಿ ಹೋಗಿ, ತಾವು ಮನೆಯಿಂದ ಬರುವಾಗ ಧರಿಸಿಕೊಂಡು ಬಂದ ಎಂದಿನ ಉಡುಗೆಯನ್ನ ಧರಿಸಿ ಹೊರ ಬಂದಾಗ ನನಗೆ ನಿರಾಶೆ ಆಯಿತು. ‘ಏಕೆ ನೀವೆಲ್ಲ ಅದೇ ಉಡುಪನ್ನ ಧರಿಸಬಹುದಿತ್ತು. ಅದನ್ನೇ ಧರಿಸಿ ಮನೆಯಿಂದ ಬರಬಹುದಿತ್ತು, ಮನೆಗೂ ಹೋಗಬಹುದಿತ್ತು’ ಎಂದೆ. ಅವರೆಲ್ಲ ಗಾಬರಿಯಾದರು. ನಾಚಿದರು. ಛೆ ಛೆ ಎಂದು ತಲೆಯಾಡಿಸಿದರು. ಅದೇನೋ ಅಪರಾಧ ಅನ್ನುವಹಾಗೆ ವರ್ತಿಸಿದರು.

ಇನ್ನು ನಾಲ್ಕನೆಯದಾಗಿ ಮತ್ತೊಂದು ಸಂದರ್ಭ. ಓರ್ವ ಜಾನಪದ ವಿದ್ವಾಂಸ ಎಂದೇ ಹೆಸರು ಮಾಡಿದವರು. ಜಾನಪದ ಗೀತೆಗಳನ್ನ ಹಾಡುವುದರಲ್ಲಿ, ಜಾನಪದ ಸಾಹಿತ್ಯವನ್ನ ಪ್ರಚಾರ ಮಾಡುವುದರಲ್ಲಿ ಮುಂದಿದ್ದವರು. ಇವರ ಮಗನ ಮದುವೆ. ಭಾರೀ ಚಪ್ಪರ. ಭಾರೀಜನ. ನಾಗಸ್ವರದವರಿಗಾಗಿ ವಿಷೇಷ ವೇದಿಕೆ. ಅಲ್ಲಿ ಕುಳಿತು ಆ ವಿದ್ವಾಂಸರು ನಾಗಸ್ಬರ ನುಡಿಸುತ್ತಿದ್ದಾರೆ. ಪುರೋಹಿತರು ಮಂತ್ರ ಘೋಷಗಳ ನಡುವೆ ಮದುವೆಯ ಎಲ್ಲ ಕಾರ್ಯಗಳನ್ನ ಮುಗಿಸುತ್ತಿರುವಾಗ ನಾಗಸ್ವರದವರೂ ಹಿಂದುಳಿಯಲಿಲ್ಲ. ಆದರೆ ಒಂದು ಸಂದರ್ಭದಲ್ಲಿ ಮದುವೆ ಚಪ್ಪರದ ಮೂಲೆಯಲ್ಲಿ ಮೈಮುದುಡಿ ಕೊಂಡು ಕುಳಿತ ಕೆಲ ಹಳ್ಳಿ ಹೆಣ್ಣು ಮಕ್ಕಳು ಒಮ್ಮೆ ಆಸ್ಫೋಟಗೊಂಡರು. ಅವರ ಬಾಯಿಂದ ಮದುವೆ ಹಾಡುಗಳು ಕೇಳಿ ಬಂದು ಜನ ತಿರುಗಿ ನೋಡಿದರು. ಆಗಾಗ್ಗೆ ಆಗಾಗ್ಗೆ ಇವರು ಹಾಡುತ್ತಲೇ ಇದ್ದರು. ಆದರೆ ನಾಗಸ್ವರದವರಿಗೆ ನೀಡಲಾದ ಧ್ವನಿವರ್ಧಕ ಇವರಿಗೆ ಇರಲಿಲ್ಲ.

ಈ ನಾಲ್ಕೂ ಅಂಶಗಳ ಹಿಂದೆ ಇರುವ ಮನೋಭಾವವನ್ನ ಗ್ರಹಿಸಿದರೆ ನಮ್ಮನ್ನ ಈ ಜಾನಪದ ಅನ್ನುವುದು ಎಲ್ಲೋ ಒಂದು ಕಡೆ ಕಾಡುತ್ತಿದೆಯೇನೋ ಎಂದು ನನಗೆ ಅನಿಸುತ್ತದೆ.

ಜಾನಪದದ ಮೇಲೆ ನಮಗಿರುವ ಭಕ್ತಿ ಭಯ ಒಂದು ಕಡೆಯಾದರೆ ಇದನ್ನ ಕಂಡಲ್ಲಿ ಪ್ರದರ್ಶಿಸಬಾರದು ಅನ್ನುವ ಮನೋಭಾವ ಮತ್ತೊಂದು ಕಡೆ. ಹಾಗೆಯೇ ಅದನ್ನ ನಾವು ಉಳಿಸುತ್ತೇವೆ. ಅಭಿವೃದ್ಧಿಪಡಿಸುತ್ತೇವೆ ಅನ್ನುವ ಅನಿಸಿಕೆ. ಇನ್ನು ಜನಪದವನ್ನ ಪ್ರದರ್ಶಿಸುವುದು ಒಂದು ಫ್ಯಾಷನ್. ಅದರ ಪ್ರದರ್ಶನದ ಮೂಲಕ ಹೆಸರು ಬಹುಮಾನ ಪಡೆಯಬೇಕು ಅನ್ನುವ ಹಂಬಲ. ಹಾಗೆಯೇ ಅದನ್ನ ಒಂದು ಅಧ್ಯಯನದ ವಸ್ತುವನ್ನಾಗಿಸಿಕೊಂಡು ಹೆಸರು ಪದವಿ ಪಡೆಯಬಹುದು ಆದರೆ ಅದು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಅರ್ಹವಾದುದಲ್ಲ ಅನ್ನುವ ನಂಬಿಕೆ.

ನಾವು ಜಾನಪದ ಕಲೆ ಎಂದು ಕರೆಯುವ ಕಲೆ ಏನಿದೆ, ಅದರಲ್ಲಿ ಹಲವಾರು ಬಗೆಗಳಿವೆ. ವಿಧಾನಗಳಿವೆ. ನೃತ್ಯ, ಕುಣಿತ, ವಾದ್ಯ, ವೇಷಭೂಷಣ, ಹಾಡುಗಾರಿಕೆ, ವರ್ಣಾಲಂಕಾರ, ಹಿಮ್ಮೇಳ ಇತ್ಯಾದಿ ಇತ್ಯಾದಿ; ಇದೆಲ್ಲ ನೋಡಲು ಚೆಂದ, ಸುಂದರ, ಅರ್ಥಪೂರ್ಣ, ಕಲಾಪೂರ್ಣ, ಎಲ್ಲವೂ ಸರಿ. ಈ ಕಲೆಗಳನ್ನ ಸೃಷ್ಟಿಸಿದವರು ನಮ್ಮ ಅನಕ್ಷರಸ್ಥರು. ಗ್ರಾಮೀಣ ಜನ, ಆಧುನಿಕತೆಯ ಗಂಧಗಾಳಿ ಇಲ್ಲದವರು. ಒಂದು ವೇಳೆ ಆಧುನಿಕತೆಯ ಪ್ರಭಾವಕ್ಕೆ ಇವರು ಒಳಗಾದವರಾಗಿದ್ದರೆ ಇಂತಹಾ ಅಪೂರ್ವ ಕಲೆಯನ್ನ ಇವರು ಖಂಡಿತ ಸೃಷ್ಟಿ ಮಾಡುತ್ತಿರಲಿಲ್ಲ. ಆದರೂ ತಮ್ಮ ಹಂತದಲ್ಲಿಯೇ ತಮ್ಮ ಅನಿಸಿಕೆ, ಕಲ್ಪನೆ, ಅನುಭವ, ಸುತ್ತಲಿನ ಪರಿಕರ, ದೇವರ ಮೇಲಿನ ನಂಬಿಕೆ, ದೈವ ಭೀತಿ ಮೊದಲಾದವನ್ನ ಇರಿಸಿಕೊಂಡು ಇದನ್ನ ಅವರು ಸೃಷ್ಟಿ ಮಾಡಿದರು. ಕೆಲ ಜಾನಪದ ಕಲೆಗಳ ಸೃಷ್ಟಿಗೆ ಮಾನಸಿಕ ನೋವು, ದೇವರಲ್ಲಿ ತಮ್ಮ ಕಷ್ಟವನ್ನ ಅರಿಕೆ ಮಾಡಿಕೊಳ್ಳಬೇಕೆಂಬ ಹಂಬಲ ಇತ್ಯಾದಿ ಕಾರಣಗಳೂ ಇರಬಹುದು. ಇವೆ.

ಅಂದರೆ ಈ ಕಲೆಗಳ ಪ್ರದರ್ಶನದ ಹಿಂದೆ, ಒಂದು ಉದ್ದೇಶ ಇರುತ್ತದೆ. ಒಂದು ಗುರಿ ಇರುತ್ತದೆ. ಒಂದು ಹರಕೆಯೋ ಮತ್ತೊಂದೋ ಇರುತ್ತದೆ. ಬಹುತೇಕ ಕಲೆಗಳು ದೇವಾರಾಧನೆಯನ್ನೇ ಗುರಿಯಾಗಿ ಇರಿಸಿಕೊಂಡವುಗಳು. ಗುಡಿಗಳಲ್ಲಿ, ಭೂತಾರಾಧನೆಯ ಸ್ಥಳಗಳಲ್ಲಿ ಮಾಡುವಂತಹವು. ಇವುಗಳು ಇದೀಗ ತಮ್ಮ ಆವರಣದಿಂದ ಹೊರಬಿದ್ದು ಮತ್ತೆಲ್ಲೋ ಪ್ರದರ್ಶನ ಗೊಳ್ಳುತ್ತಿವೆ. ನಾವು ಈ ಕಲೆಗಳನ್ನ ರಾಜ ಬೀದಿಗೆ, ರಸ್ತೆಗಳಿಗೆ, ಮಂತ್ರಿಗಳ ಮೆರವಣಿಗೆಗೆ ಕರೆತಂದಿದ್ದೇವೆ. ಈ ನಮ್ಮ ಕೆಲಸ ಎಷ್ಟು ಸರಿ ನಾವು ವಿಚಾರ ಮಾಡಬೇಕು.
ಈ ಕಲೆಗಳ ಪ್ರದರ್ಶನದ ಉದ್ದೇಶ ಬೇರೆಯಾಗಿ ಈ ಕಲೆಗಳು ಕೇವಲ ಮನರಂಜನೆಯ ಸಾಧನಗಳಾಗಿ ಪರಿವರ್ತನೆ ಹೊಂದಿರುವುದು, ವೀರಗಾಸೆ, ಭೂತಕೋಲ, ಪಟಕುಣಿತ, ಕರಗ ಕುಣಿತ, ಸೋಮನ ಕುಣಿತ ಮೊದಲಾದವು ಮತ್ತೆಲ್ಲೋ ಫಿಟ್ ಆಗಲು ಪರದಾಡುತ್ತಿರುವುದು ನಮ್ಮ ಜಾನಪದ ತಜ್ಞರ ಗಮನಕ್ಕೆ ಬಂದಿಲ್ಲವೆ, ಇಲ್ಲ ಇದರಲ್ಲಿ ಇವರ ಪಿತೂರಿಯೂ ಇದೆಯೆ?
ಜಾನಪದ ಅನ್ನುವುದು ನಮ್ಮ ಗ್ರಾಮೀಣ ಜನರ ಬದುಕಿನ ಒಂದು ಅಂಗವಾಗಿ ಉಳಿದುದಲ್ಲ. ಅದು ಅವರ ಸಮಗ್ರ ಜೀವನದಲ್ಲಿ ಸೇರಿಕೊಂಡದ್ದು. ಅವರ ಸಮಗ್ರ ಬದುಕೇ ಇವತ್ತಿನ ದಿನ ಬದಲಾಗಿ ಹೋಗಿರುವಾಗ ಅವರ ಜೀವನದ ಒಂದು ಅಂಶ ಉಳಿಯಬೇಕು ಅನ್ನುವುದಾಗಲಿ, ಅದು ಹೊರಟು ಹೋಗಿದೆ ಎಂದು ಅಳುವುದೇ ಆಗಲಿ ಎಷ್ಟು ಸರಿ? ನಮ್ಮ ಹಳ್ಳಿಗಳೆಲ್ಲ ಅತ್ಯಾಧುನಿಕವಾದ ವೇಷ ತೊಟ್ಟು ಮೆರೆಯುವಾಗ, ಆಧುನಿಕ ಸೌಲಭ್ಯಗಳು ನಮ್ಮ ಹಳ್ಳಿಗಳನ್ನ ಆಕ್ರಮಿಸಿಕೊಂಡಿರುವಾಗ ಜನಪದವನ್ನ ಉಳಿಸಬೇಕು ಎಂದು ನಮ್ಮ ಹಳ್ಳಿ ಹೆಂಗಸರು ರಾಗಿ ಬೀಸಬೇಕು, ರಾಗಿ ಬೀಸೋ ಪದ ಹೇಳಬೇಕು ಎಂದು ನಾವು ಬಯಸುವುದು ಎಷ್ಟು ಸರಿ? ತಮ್ಮ ಮಕ್ಕಳನ್ನ ಇಂಗ್ಲೀಷ್ ಕಾನ್ವಂಟಿಗೆ ಕಳುಹಿಸಿ ಉಳಿದವರಿಗೆ ಕನ್ನಡ ಅಭಿಮಾನವನ್ನ ಬೋಧಿಸುವ ನಮ್ಮ ಸಾಹಿತಿಗಳ ಹಾಗೆ ಜಾನಪದವನ್ನ ಉಳಿಸಿ ಬೆಳೆಸಿ ಎಂದು ಹೇಳುತ್ತ ತಾವು ಮಾತ್ರ ಅತ್ಯಾಧುನಿಕರಾಗಲು ಹಾತೊರೆಯುವ ಜಾನಪದ ತಜ್ಞರ ಬಗ್ಗೆ ಸಾಮಾನ್ಯ ಜನರಲ್ಲಿ ಒಂದು ಬಗೆಯ ಹೇವರಿಕೆ ಬಂದಿದೆ ಅನ್ನುವುದರಲ್ಲಿ ಅನುಮಾನವಿಲ್ಲ. ಜಾನಪದವನ್ನ ಕೇವಲ ಸ್ಪರ್ದೆಗಳಲ್ಲಿ ಬಹುಮಾನ ಪಡೆಯಲು, ಪ್ರದರ್ಶಿಸಲು ಮಾತ್ರ ಮೀಸಲಿರಿಸಿ ನಾವು ಅತ್ಯಾಧುನಿಕತೆಯ ಆರಾಧಕರಾಗುವುದರಲ್ಲಿ ಜಾನಪದದ ಉದ್ಧಾರ ಇದೆಯೇ? ಜಾನಪದವನ್ನ ಹೀಗೆ ಉಳಿಸಲು ಆಗುತ್ತದೆಯೇ?

ಮೊನ್ನೆ ಉಡುಪಿ ಹತ್ತಿರದ ಮೇರಿ ಐಲ್ಯಾಂಡ್ ದ್ವೀಪದ ರೇವು ಪಾರ್ಟಿಯಲ್ಲಿ ಕೆಲ ಜಾನಪದ ಕಲೆಗಳ ಪ್ರದರ್ಶನ ನಡೆಯಿತು ಎಂದು ಹೇಳಲಾಗಿದೆ. ಅದನ್ನು ಅದೆಷ್ಟು ಜನ ವಿದೇಶೀಯರು ನೋಡಿದರೋ ನನಗೆ ಮಾಹಿತಿ ಇಲ್ಲ, ಆದರೆ ಇದರಿಂದ ನಿಜವಾಗಿಯೂ ಈ ಕಲೆಗೆ ಏನಾದರೂ ಪ್ರಯೋಜನ ದೊರಕೀತೆ ನಾವು ಯೋಚಿಸಬೇಕು. ನಾವು ಜನಪದ ಕಲೆ ಎಂದು ಕರೆಯುವುದರಲ್ಲಿ ಎಷ್ಟೋ ಕಲೆಗಳಲ್ಲಿ ಸತ್ವವಿದೆ ಅನ್ನುವುದರಲ್ಲಿ ಅನುಮಾನ ಇಲ್ಲ. ಜೊತೆಗೆ ಇಂದಿನ ದಿನಕ್ಕೆ ಹೇಳದಂತಹಾ ಮೌಢ್ಯ, ಅಂಧಾನುಕರಣೆ, ಹಿಂಸೆ, ಅಮಾನವೀಯತೆ, ಅವೈಜ್ಙಾನಿಕತೆ, ಇವುಗಳಲ್ಲಿ ಸೇರಿಕೊಂಡಿದೆ. ಇಂತಹ ಅಂಶಗಳನ್ನ ಇದರಿಂದ ತೊಡೆದು ಹಾಕಿ, ಅದರಲ್ಲಿಯ ಶುದ್ಧ ಕಲೆಯನ್ನ ಮಾತ್ರ ಉಳಿಸುವ, ಬೆಳೆಸುವ ಕೆಲಸ ಆಗಬೇಕಾಗಿದೆ. ಇದನ್ನ ಮಾಡಲು ಮುಂದೆ ಬರುವ ಜಾನಪದ ವಿದ್ವಾಂಸರು ನಮ್ಮ ಕಣ್ಣಿಗೆ ಬೀಳುತ್ತಿಲ್ಲ ಅಂದರೆ ನನ್ನ ಮಾತನ್ನ ಎಲ್ಲರೂ ಒಪ್ಪುತ್ತಾರೆ ಅಂದು ಕೊಳ್ಳುತ್ತೇನೆ.

ಉದಾಹರಣೆಗೆ ಮಲೆನಾಡಿನಲ್ಲಿ ಚಿತ್ತಾರ ಎಂದು ಒಂದು ಗೋಡೆ ಕಲೆ ಇದೆ. ಮಲೆನಾಡಿನ ದೀವರು, ಮಡಿವಾಳರು, ಹಿಂದುಳಿದವರು ರೂಢಿಗತ ಮಾಡಿಕೊಂಡಿರುವ, ಮದುವೆ, ಭೂ ಹುಣ್ಣಿಮೆ ಮೊದಲಾದ ಸಂದರ್ಭಗಳಲ್ಲಿ ಬರೆಯುವಂತಹ ಅಪೂರ್ವ ಕಲೆ. ಇದನ್ನ ಹೋಲುವಂತಹ ಮತ್ತೊಂದು ಕಲೆಯೇ ವರ್ಲಿವ ಕಲೆ. ಮುಂಬಯಿಯ ವರ್ಲಿಗ ಜನಾಂಗದವರು ಅಭಿವೃದ್ಧಿಪಡಿಸಿರುವ ಕಲೆ. ಈ ಕಲೆಯ ಏಳಿಗೆಗಾಗಿ ಸರಕಾರ ಒಂದು ಸಂಸ್ಥೆಯನ್ನ ಸ್ಥಾಪಿಸಿದರೆ, ಖಾಸಗಿಯಾಗಿ ಕೆಲ ಸಂಸ್ಥೆಗಳಿವೆ. ಮಹಾರಾಷ್ಟ್ರದ ಕೆಲ ಕಲಾವಿದರು ಇದನ್ನ ತಮ್ಮ ಕಲಾ ಮಾಧ್ಯಮವನ್ನಾಗಿ ಇರಿಸಿಕೊಂಡು ಇದನ್ನ ಬೇರೆ ಬೇರೆ ಮಾಧ್ಯಮಗಳ ಮೂಲಕ ಅಭಿವ್ಯಕ್ತಿಸುತ್ತ ಇದು ಇಡೀ ದೇಶದಲ್ಲಿ, ಹೊರದೇಶಗಳಲ್ಲಿ ಕೂಡ ಜನಪ್ರಿಯಗೊಳ್ಳುವ ಹಾಗೆ ಮಾಡಿದ್ದಾರೆ. ಆದರೆ ಯಾವ ದೃಷ್ಟಿಯಲ್ಲೂ ವರ್ಲಿುಗಿಂತಲೂ ಕಡಿಮೆ ಇಲ್ಲದ ಚಿತ್ತಾರಕ್ಕೆ ಯಾವುದೇ ಸ್ಥಾನಮಾನಗಳು ಈವರೆಗೆ ದೊರೆತಿಲ್ಲ. ಚರಕದ ಪ್ರಸನ್ನ ಈ ಹೆಸೆ ಚಿತ್ತಾರವನ್ನ ಬೇರೆ ಮಾಧ್ಯಮಗಳ ಮೂಲಕ ಜನಪ್ರಿಯಗೊಳಿಸಲು ಯತ್ನಿಸಿದರೂ ಅದಕ್ಕೆ ಸಿಗ ಬೇಕಾದ ಸ್ಥಾನಮಾನ ಈವರೆಗೂ ದೊರೆತಿಲ್ಲ. ಜಾನಪದ ಅನ್ನುವುದು ಉಳಿಯಲು ಬೆಳೆಯಲು ಒಂದು ವಾತಾವರಣ, ಅದರದ್ದೇ ಆದ ಕೆಲ ಕಾರಣಗಳು ಹಿಂದೆ ಇದ್ದವು. ಜನರ ಬದುಕೇ ಜನಪದಕ್ಕೆ ಪೂರಕವಾಗಿತ್ತು. ಆದರೆ ಇಂದು ಅಂತಹ ಪರಿಸರ, ವಾತಾವರಣ ಇಲ್ಲದಿರುವಾಗ ಜಾನಪದವನ್ನ ಉಳಿಸುವುದು ಬೆಳೆಸುವುದು ಕಷ್ಟದ ಕೆಲಸ. ಆದರೂ ಜಾನಪದವನ್ನ ಉಳಿಸಲು ಕೆಲ ಪ್ರಯತ್ನಗಳು ನಡೆದಿರುವುದು ಸುಳ್ಳಲ್ಲ.


ಆದರೆ ಈ ಕೆಲಸದಲ್ಲಿ ಒಂದು ಗೊಂದಲ, ಒಂದು ಅನುಮಾನ, ಸ್ವಾರ್ಥಕ್ಕಾಗಿ ಅದನ್ನು ಆರಾಧಿಸುವುದು, ತಮ್ಮ ಬದುಕಿನಲ್ಲಿ ಅದನ್ನ ಹೊಂದಿಸಿಕೊಳ್ಳಲಾಗದ ಮನೋಭಾವ. ಅದರ ಬಗ್ಗೆ ಇರುವಂತಹ ಅನಾದರ, ಅದರ ಹುಟ್ಟಿಗೆ ದೊರಕದ ಪರಿಸರ, ಈ ಎಲ್ಲ ಈ ಗೊಂದಲಗಳಿಂದ ನಾವು ಹೊರ ಬಂದರೆ ಜಾನಪದ ಅನ್ನುವುದು ಉಳಿದೀತು.

ಇದೀಗ ಹುಟ್ಟಿ ಕೊಂಡಿರುವ ಜಾನಪದ ವಿಶ್ವವಿದ್ಯಾಲಯ ಇಂತಹ ಕೆಲ ಅಂಶಗಳನ್ನ ಗಮನಿಸಬಹುದು ಎಂದು ನನಗೆ ಅನಿಸುತ್ತದೆ.
ಕೃಪೆ: ಕೆಂಡಸಂಪಿಗೆ

ಗೊಲ್ಲರ ಹಟ್ಟಿಗಳಲ್ಲಿ ಕಾಣದ ವಿಕಾಸದ ಬೆಳಕು

-ಸಚ್ಚಿದಾನಂದ ಕುರಗುಂದ


ಗೊಲ್ಲರ ಹಟ್ಟಿಗಳ ಅಭಿವೃದ್ಧಿ ಎಂದು? ಸರ್ಕಾರ ರೂಪಿಸಿದ್ದ ಪ್ಯಾಕೇಜ್ ಏನಾಯಿತು?
ಪ್ರತಿಯೊಂದು ಗೊಲ್ಲರಹಟ್ಟಿ ಅಭಿವೃದ್ಧಿಗೆ ರೂ. 40 ಲಕ್ಷ ಪ್ಯಾಕೇಜ್ ರೂಪಿಸಿ ಯೋಜನೆಯೊಂದನ್ನು 2009ರಲ್ಲಿ ಪ್ರಕಟಿಸಲಾಗಿತ್ತು.

ಈ ಯೋಜನೆ ಅಡಿಯಲ್ಲಿ ಪ್ರತಿ ಗೊಲ್ಲರಹಟ್ಟಿಯಲ್ಲಿ 25ರಿಂದ 40 ಮನೆಗಳು ಅಥವಾ ಅಗತ್ಯಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಿಸಲು ರೂ. 10 ಲಕ್ಷ, ವಿದ್ಯುದೀಕರಣಕ್ಕೆ 1 ಲಕ್ಷ, ಮಹಿಳಾ ಭವನಕ್ಕೆ ರೂ. 5ಲಕ್ಷ, ಸಮುದಾಯ ಭವನಕ್ಕೆ ರೂ. 8 ಲಕ್ಷ, ರಸ್ತೆ ನಿರ್ಮಾಣಕ್ಕೆ ರೂ.10 ಲಕ್ಷ, ಕುಡಿಯುವ ನೀರಿಗೆ ರೂ. 5ಲಕ್ಷ, ಸಮುದಾಯ ಶೌಚಾಲಯಕ್ಕೆ ರೂ.1ಲಕ್ಷ ನಿಗದಿಪಡಿಸಲಾಗಿತ್ತು.

ಆರಂಭದಲ್ಲಿ ಮಹಿಳಾ ಭವನಕ್ಕೆ ಕೃಷ್ಣ ಕುಟೀರ ಎಂದು ನಾಮಕರಣ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಸರ್ಕಾರ ಈ ಹೆಸರನ್ನು ಬದಲಾಯಿಸಿತು.

`ಗೊಲ್ಲರಹಟ್ಟಿಗಳಲ್ಲಿನ ಹೆಣ್ಣು ಮಕ್ಕಳು ಋತಿಮತಿಯಾದಾಗ, ಹೆರಿಗೆಯಾದಾಗ ಮತ್ತು ಮಾಸಿಕ ಋತುಚಕ್ರದ ಸಂದರ್ಭದಲ್ಲಿ ತಾವು ವಾಸಿಸುವ ಹಟ್ಟಿಗಳ ಹೊರಗೆ ಒಂದು ಚಿಕ್ಕ ಗುಡಿಸಲನ್ನು ಕಟ್ಟಿಕೊಂಡು ಅಲ್ಲಿ ವಾಸಿಸುತ್ತಾರೆ.

ಈ ರೀತಿ ನಿರ್ಮಿಸುವ ಗುಡಿಸಲುಗಳಲ್ಲಿ ಕನಿಷ್ಠ ಸ್ಥಳಾವಕಾಶ ಹಾಗೂ ಕನಿಷ್ಠ ಆರೋಗ್ಯ ಸೌಲಭ್ಯಗಳು ಇರುವುದಿಲ್ಲ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಹಿಂದುಳಿದ ಸಮುದಾಯದ ಸ್ತ್ರೀಯರಿಗೆ ಸಾಕಷ್ಟು ಸ್ಥಳಾವಕಾಶವಿರುವ ಹಾಗೂ ಆರೋಗ್ಯ ಸೌಲಭ್ಯಗಳನ್ನೊಳಗೊಂಡ ಮಹಿಳಾ ಭವನಗಳನ್ನು ನಿರ್ಮಿಸುವುದು ಸೂಕ್ತವಾಗಿದೆ. ಇದರಿಂದ ಈ ಜನಾಂಗದ `ವಿಶಿಷ್ಟ ಸಾಮಾಜಿಕ ಪದ್ಧತಿ`ಯನ್ನು ಉಳಿಸುವ ಜತೆಗೆ ಅವರ ಆರೋಗ್ಯವನ್ನು ಕಾಪಾಡಬಹುದಾಗಿದೆ.

ಈ ದೃಷ್ಟಿಯಿಂದ ರಾಜ್ಯದಲ್ಲಿರುವ ಗೊಲ್ಲರಹಟ್ಟಿಗಳಲ್ಲಿ ಮಹಿಳಾ ಭವನಗಳನ್ನು ನಿರ್ಮಿಸುವುದು ಅತ್ಯಂತ ಸೂಕ್ತವಾಗಿದೆ` ಎಂದು ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿತ್ತು.

ಚಿತ್ರದುರ್ಗ ಜಿಲ್ಲೆಯೊಂದರಲ್ಲಿ ತಲಾ ರೂ. 5 ಲಕ್ಷ ವೆಚ್ಚದಲ್ಲಿ 16 ಮಹಿಳಾ ಭವನ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ 13 ಭವನಗಳು ಮುಕ್ತಾಯವಾಗಿವೆ. ಆದರೆ, ಈ ಮಹಿಳಾ ಭವನಗಳನ್ನು ನಿರ್ಮಿಸುವ ಬದಲಾಗಿ ಗೊಲ್ಲರಹಟ್ಟಿಗಳಲ್ಲಿ ಅರಿವು ಮೂಡಿಸಿ ಪರಿವರ್ತನೆ ತರಬೇಕಾಗಿತ್ತು ಎಂದು ಗೊಲ್ಲ ಸಮಾಜದ ಮುಖಂಡ ಸಿ. ಮಹಾಲಿಂಗಪ್ಪ ಹೇಳುತ್ತಾರೆ.

ಕೃಪೆ: ಪ್ರಜಾವಾಣಿ,March 20, 2012

ಮಂಗಳವಾರ, ಮಾರ್ಚ್ 6, 2012

ಜನರ ಆಲೋಚನಾ ವಿನ್ಯಾಸ ಮತ್ತು ಸಾಂಸ್ಕೃತಿಕ ಅನನ್ಯತೆಯ ಶೋಧ ಮುಖ್ಯ- ಡಾ. ಕೆ. ಚಿನ್ನಪ್ಪ ಗೌಡ


ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾದ ಎನ್. ಕೆ. ಸುಪ್ರಭ ಅವರು ಡಾ. ಕೆ.ಚಿನ್ನಪ್ಪಗೌಡ ಅವರೊಂದಿಗೆ ನಡೆಸಿದ ಮಾತುಕತೆಯನ್ನು ಇಲ್ಲಿ ಪ್ರಕಟಿಸಲಾಗಿದೆ. ಸಂಡೆ ಇಂಡಿಯನ್ ನಲ್ಲಿ ಪ್ರಕಟವಾದ ಈ ಮಾತುಕತೆಯನ್ನು ಕನ್ನಡ ಜಾನಪದ ಬ್ಲಾಗ್ ಗೆ ಕಳಿಸಿಕೊಟ್ಟ ಎನ್. ಕೆ. ಸುಪ್ರಭ ಅವರಿಗೆ ಕೃತಜ್ಞತೆಗಳು. ಚಿನ್ನಪ್ಪ ಗೌಡರು ಕನ್ನಡದ ಸೂಕ್ಷ್ಮ ಜಾನಪದ ಅಧ್ಯಯನ ಕಾರರಲ್ಲಿ ಒಬ್ಬರು. ಅವರ ಭೂತಾರಾಧನೆ ಕುರಿತ ಸಂಶೋಧನೆ ಕನ್ನಡ ಜಾನಪದ ಕ್ಷೇತ್ರದ ಬಹುಮುಮುಖ್ಯ ಸಂಶೋಧನೆಗಳಲ್ಲಿ ಒಂದು. ಚಿನ್ನಪ್ಪ ಗೌಡದ ಸಂಸ್ಕೃತಿ ಸಿರಿ ಪುಸ್ತಕ ಅವರ ಜಾನಪದದ ಬಗೆಗಿನ ಆಲೋಚನ ವಿನ್ಯಾಸಗಳನ್ನು ಸ್ಪಷ್ಟವಾಗಿ ಕಾಣಿಸುತ್ತದೆ. ಇಲ್ಲಿನ ಮಾತುಕತೆ ಕೂಡ ಜಾನಪದ ಅಧ್ಯಯನ ತುಳು ಪ್ರಾದೇಶಿಕ ಅಧ್ಯಯನದ ಬಗ್ಗೆ ಸೂಕ್ಷ್ಮತೆಗಳಿವೆ-ಅರುಣ್

ಸಂದರ್ಶನ: ಎನ್.ಕೆ.ಸುಪ್ರಭ

ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿರುವ ಜಾನಪದ ವಿದ್ವಾಂಸರಾದ ಡಾ. ಕೆ. ಚಿನ್ನಪ್ಪ ಗೌಡ ಅವರು ತುಳುನಾಡಿನ ಜಾನಪದ ಸಂಸ್ಕೃತಿ ಮತ್ತು ನಗರೀಕರಣದಿಂದ ಬದಲಾದ ಜಾನಪದದ ಸ್ವರೂಪ ಕುರಿತು ಎನ್.ಕೆ. ಸುಪ್ರಭಾ ಜೊತೆ ನಡೆಸಿದ ವಿಸ್ತೃತ ಚರ್ಚೆ...

ಜಾನಪದ ಸಂಸ್ಕೃತಿ ಮತ್ತು ಸಾಹಿತ್ಯದ ಪ್ರಾಮುಖ್ಯತೆ ಏನು?

ಜಾನಪದ ಎಂಬುದು ಜಾಗತಿಕ ನೆಲೆಯ ಅಂತರಾಷ್ಟ್ರೀಯ ಶಿಸ್ತು. ಜನಪದ ಸಾಹಿತ್ಯ, ಭೌತಿಕ ಸಂಸ್ಕೃತಿ, ಸಾಮಾಜಿಕ ಆಚರಣೆಗಳು ಮತ್ತು ರಂಗಪ್ರದರ್ಶನಗಳು... - ಈ ನಾಲ್ಕು ಘಟಕಗಳು ಒಟ್ಟು ಸೇರಿ ಜಾನಪದ ಎನ್ನುವ ಶಿಸ್ತು ರೂಪುಗೊಂಡಿದೆ. ಸರಳವಾಗಿ ಹೇಳುವುದಾದರೆ ಬೇರೆ ಬೇರೆ ಜನಸಮುದಾಯಗಳ ಸಂಸ್ಕೃತಿಯನ್ನು ಜಾನಪದದಲ್ಲಿ ಅಧ್ಯಯನ ಮಾಡಲಾಗುತ್ತದೆ. ಭಾಷೆ ಮೂಲಕ, ಭೌತಿಕ ವಿವರಗಳ ಮೂಲಕ, ರಂಗ ಸಂಪ್ರದಾಯಗಳು ಮತ್ತು ಪ್ರದರ್ಶನಗಳ ಮೂಲಕ ಜನ ಸಂಸ್ಕೃತಿ ಪ್ರಕಟವಾಗಬಹುದು. ಹೀಗೆ ಪ್ರಕಟವಾಗುವ ವಿವರಗಳ ಮೂಲಕ ಒಂದು ಜನಾಂಗದ ಆಲೋಚನಾ ವಿನ್ಯಾಸ ಮತ್ತು ಅವರ ಲೋಕದೃಷ್ಟಿಯ ಸ್ವರೂಪವನ್ನು ನಾವು ಜಾನಪದದಲ್ಲಿ ಕಾಣಬಹುದು. ಬೇರೆ ಬೇರೆ ದೇಶಗಳ ಬೇರೆ ಬೇರೆ ಕಾಲಘಟ್ಟದ ಜೀವನ ವಿವರಗಳನ್ನು ಸಂಗ್ರಹ ಮಾಡಿ ಆ ವಿವರಗಳ ಮೂಲಕ ಪ್ರಕಟವಾಗುವ ಜನರ ಆಲೋಚನಾ ವಿನ್ಯಾಸ ಏನು ಮತ್ತು ಅವರ ಸಾಂಸ್ಕೃತಿಕ ಅನನ್ಯತೆ ಏನು ಎನ್ನುವ ಶೋಧನೆ ಬಹಳ ಮುಖ್ಯವಾಗುತ್ತದೆ. ಜಾನಪದಕ್ಕೆ ಚಾರಿತ್ರಿಕ ನೆಲೆಗಟ್ಟು ಇದೆ. ವರ್ತಮಾನದ ಸಂಸ್ಕೃತಿಯ ಅಧ್ಯಯನವೂ ಅದರಲ್ಲಿ ಸೇರಿದೆ.

ಜಾನಪದದ ಅಧ್ಯಯನ ಮತ್ತು ದಾಖಲೀಕರಣ ಹೇಗೆ ನಡೆಯುತ್ತದೆ?

ಅಧ್ಯಯನಕ್ಕೆ ಅವಶ್ಯಕವಾಗಿರುವುದು ಕ್ಷೇತ್ರಕಾರ್ಯ. ಕ್ಷೇತ್ರಕಾರ್ಯಗಳ ಮೂಲಕ ಮಾಹಿತಿಗಳನ್ನು ಸಂಗ್ರಹಿಸಬೇಕು. ಟಿಪ್ಪಣಿಗಳನ್ನು ಮಾಡಿಕೊಳ್ಳುವ ಮೂಲಕ ಮಾಹಿತಿ ಸಂಗ್ರಹಿಸಬಹುದು ಅಥವಾ ಆಧುನಿಕ ಯಂತ್ರಗಳನ್ನು ಬಳಸಿಕೊಳ್ಳಬಹುದು. ಆಡಿಯೋ ಮತ್ತು ವಿಡಿಯೋ ದಾಖಲಾತಿ ನಡೆಸಬಹುದು. ಹಾಗೆ ಸಂಗ್ರಹಿಸಿದ ಮಾಹಿತಿಗಳನ್ನು ವಿಶ್ಲೇಷಣೆ ಮಾಡಲಾಗುತ್ತದೆ. ಜಾನಪದ ಅಧ್ಯಯನದಲ್ಲಿ ಪ್ರಕಟಿತ ಪಠ್ಯಕೇಂದ್ರಿತ ವಿಶ್ಲೇಷಣೆ ಮಾಡುವುದಾದರೆ ಕ್ಷೇತ್ರಕಾರ್ಯದ ಅವಶ್ಯಕತೆ ಇಲ್ಲ. ಈ ನಿಟ್ಟಿನಲ್ಲಿ ಕಳೆದ ೨೦ ವರ್ಷಗಳಿಂದ ಸಾಕಷ್ಟು ಕ್ಷೇತ್ರಕಾರ್ಯಧಾರಿತ ಅಧ್ಯಯನಗಳು ನಡೆದಿವೆ ಮತ್ತು ಈಗಲೂ ನಡೆಯುತ್ತಿವೆ. ಒಂದು ಕಾಲದಲ್ಲಿ ಮಾಹಿತಿ ಸಂಗ್ರಹಕ್ಕೆ ವಿಶೇಷ ಗಮನ ನೀಡಲಾಗುತ್ತಿತ್ತು. ಆದರೆ ಈಗ ಮಾಹಿತಿ ಕಲೆ ಹಾಕಿ, ವಿಶ್ಲೇಷಣೆ ಮಾಡುವ ಮೂಲಕ ಜಾನಪದದ ಅರ್ಥ, ಉದ್ದೇಶ ಮತ್ತು ಕಾರ್ಯದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಜಾನಪದ ಅಧ್ಯಯನದಲ್ಲಿ ವಿದ್ವಾಂಸರ ಅಭಿಪ್ರಾಯದಷ್ಟೇ ಕಲಾವಿದರ ಅಭಿಪ್ರಾಯವೂ ಮುಖ್ಯ. ಏಕೆಂದರೆ ಜನಪದರೇ ಜಾನಪದದ ಅಧಿಕೃತ ಒಡೆಯರು.

ಇಂದಿನ ಕಾಲ ಘಟ್ಟದಲ್ಲಿ ಜನಪದದ ಪ್ರಸ್ತುತತೆ ಏನು?

ಬೇರೆ ಬೇರೆ ಜನಸಮುದಾಯಗಳ ಜಾನಪದ ಇಂದಿಗೂ ಜೀವಂತವಾಗಿದೆ; ಕ್ರಿಯಾತ್ಮಕವಾಗಿದೆ. ಎಲ್ಲಾ ಸಮುದಾಯಗಳಲ್ಲೂ ಹಾಡುಗಳು, ಕುಣಿತಗಳು, ಕತೆಗಳು ಹೀಗೆ ಜನಪದ ಸಾಹಿತ್ಯದ ಎಲ್ಲಾ ಪ್ರಕಾರಗಳಿವೆ. ಬಹಳ ಮುಖ್ಯವಾದುದೆಂದರೆ ಇಂದು ಶಿಕ್ಷಣ ಹೆಚ್ಚು ಸಾರ್ವತ್ರಿಕಗೊಂಡಿದೆ. ನಗರಗಳು, ಉದ್ಯೋಗಗಳು ಹೆಚ್ಚಾಗಿವೆ. ಒಟ್ಟಾರೆ ನಮ್ಮ ಬದುಕಿನ ಸ್ಥಿತಿಗತಿ ಬದಲಾಗಿದೆ. ಇಂಥ ಬದಲಾದ ಕಾಲಘಟ್ಟದಲ್ಲಿ ಆಧುನಿಕ ಒತ್ತಡಗಳಿಗೆ ಒಳಗಾಗುವ ಜನರು ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ತಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳುತ್ತಾರೆ, ತಮ್ಮ ಬದುಕನ್ನು ಹೇಗೆ ಪರಿಷ್ಕರಿಸಿಕೊಳ್ಳುತ್ತಾರೆ ಎನ್ನುವುದು ಈ ಜಾನಪದದ ಅಧ್ಯಯನದಿಂದ ನಮಗೆ ಗೊತ್ತಾಗುತ್ತದೆ. ಉದಾಹರಣೆಗೆ ಮದುವೆಯ ಸ್ವರೂಪದಲ್ಲಿ ಆಧುನಿಕ ಕಾಲದಲ್ಲಿ ಆಗಿರುವ ಬದಲಾವಣೆ.


ಜಾನಪದ ವಿಶ್ವವಿದ್ಯಾನಿಲಯ ರಚನೆಯಾದ ಮೇಲೆ ಜಾನಪದ ಅಧ್ಯಯನ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಮುಂದಿರುವ ಸವಾಲು ಹಾಗೂ ಸಾಧ್ಯತೆಗಳೇನು?

ಈಗ ಜಾನಪದ ಅಧ್ಯಯನಕ್ಕೆಂದೇ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದೆ ನಿಜ. ಇದರರ್ಥ ಈವರೆಗೆ ಜಾನಪದ ಅಧ್ಯಯನ ನಡೆದಿಲ್ಲ ಎಂದಲ್ಲ. ಮಂಗಳೂರು, ಮೈಸೂರು, ಧಾರವಾಡ, ಹಂಪಿ, ಗುಲ್ಬರ್ಗ ಹೀಗೆ - ಹಲವು ವಿಶ್ವವಿದ್ಯಾನಿಲಯಗಳಲ್ಲಿ ಹಾಗೂ ಕೆಲವು ಜಾನಪದ ಕೇಂದ್ರಗಳಲ್ಲಿ ಅಧ್ಯಯನ ನಡೆಯುತ್ತಾ ಬಂದಿದೆ. ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ ಅಥವಾ ಮಂಗಳೂರು ವಿಶ್ವವಿದ್ಯಾನಿಲಯದ ತುಳು ಅಧ್ಯಯನ ಪೀಠ ಇಲ್ಲೆಲ್ಲಾ ಅಧ್ಯಯನ ನಡೆಯುತ್ತಿದೆ. ಇಡೀ ಕರ್ನಾಟಕದ ಬಹುಮುಖೀ ಜಾನಪದವನ್ನು ಅಧ್ಯಯನ ಮಾಡುವ ಬೃಹತ್ ಉದ್ದೇಶದಿಂದ ಜಾನಪದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕರಾವಳಿ-ಕರ್ನಾಟಕ ವ್ಯಾಪ್ತಿಯೊಳಗಿನ ಜಾನಪದ ಅಧ್ಯಯನಕ್ಕೆ ವಿಶೇಷ ಒತ್ತು. ಆದರೆ ಜಾನಪದ ವಿಶ್ವವಿದ್ಯಾನಿಲಯದ ಉದ್ದೇಶ ಮತ್ತು ವ್ಯಾಪ್ತಿ ಬಹಳ ದೊಡ್ಡದು. ಅಖಿಲ ಕರ್ನಾಟಕ ಜಾನಪದದ ಅಧ್ಯಯನ ಅದರ ಉದ್ದೇಶ ಮತ್ತು ಗುರಿ. ಇದೀಗ ಜಾನಪದ ವಿಶ್ವವಿದ್ಯಾನಿಲಯ ಕರ್ನಾಟಕದ ಎಲ್ಲಾ ಗ್ರಾಮಗಳ ಮಾಹಿತಿಗಳನ್ನು ಸಂಗ್ರಹ ಮಾಡಿ ಗ್ರಾಮ ಕೋಶ ಅಥವಾ ಗ್ರಾಮ ಇತಿಹಾಸವನ್ನು ಕಟ್ಟುವ ಕಾಯಕಕ್ಕೆ ಕೈ ಹಾಕಿದೆ. ಈ ಯೋಜನೆಯನ್ನು ಪ್ರಾದೇಶಿಕ ಕೇಂದ್ರದ ಮಟ್ಟದಲ್ಲಿ ಮಾಡುವುದು ಸ್ವಲ್ಪ ಕಷ್ಟವೇ. ಅಧ್ಯಯನ, ಬೋಧನೆ, ಸಂಶೋಧನೆ, ಪ್ರಕಟಣೆ ಮತ್ತು ಪ್ರಸಾರ ಈ ಎಲ್ಲವನ್ನೂ ಜಾನಪದ ವಿಶ್ವವಿದ್ಯಾನಿಲಯ ಮಾಡಬೇಕಾಗಿದೆ. ಇದೇ ಉದ್ದೇಶದಿಂದ ಈ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದೆ. ಅಲ್ಲದೆ ಇತರ ರಾಜ್ಯಗಳ ಜಾನಪದದ ತೌಲನಿಕ ಅಧ್ಯಯನಕ್ಕೂ ಅವಕಾಶವಿದೆ. ಅಂತರಾಷ್ಟ್ರೀಯ ಮಟ್ಟದಲ್ಲೂ ಅಧ್ಯಯನ ನಡೆಯಬೇಕು.

ಗ್ರಾಮಕೋಶದ ಕಲ್ಪನೆಯನ್ನು ವಿವರಿಸಬಹುದೆ?

ಜಾನಪದ ವಿಶ್ವವಿದ್ಯಾನಿಲಯವು ಗ್ರಾಮ ಇತಿಹಾಸವನ್ನು ಹೊಸ ಬಗೆಯಲ್ಲಿ ಕಟ್ಟುವುದಕ್ಕೆ ಸಿದ್ಧತೆ ನಡೆಸುತ್ತಿದೆ. ಇತ್ತೀಚೆಗಿನವರೆಗೂ ರಾಜರು, ಉಳ್ಳವರ ಮತ್ತು ಮೇಲ್ವರ್ಗದವರ ಇತಿಹಾಸವನ್ನು ಮಾತ್ರ ಅಧ್ಯಯನ ಮಾಡುತ್ತಿದ್ದೆವು. ಆದರೆ ಈಗ ಬಡವರು, ದಲಿತರು ಮತ್ತು ಮಹಿಳೆಯರು ಸೇರಿ ಜನಸಾಮಾನ್ಯರ ಇತಿಹಾಸವನ್ನು ದಾಖಲೀಕರಿಸುವುದು ಗ್ರಾಮಕೋಶದ ಉದ್ದೇಶ ಎಂದು ನಾನು ಭಾವಿಸಿದ್ದೇನೆ. ಒಂದು ಇತಿಹಾಸ ಸಮಗ್ರವಾಗಬೇಕೆಂದರೆ ರಾಜರ ಇತಿಹಾಸದ ಜೊತೆಗೆ ಜನರ ಅಂದರೆ ರೈತರ, ಗ್ರಾಮೀಣರ, ಮಹಿಳೆಯರ ಮತ್ತು ಹಳ್ಳಿಗರ ಇತಿಹಾಸವೂ ರಚನೆಯಾಗಬೇಕು. ಗ್ರಾಮ ಇತಿಹಾಸ ಶೋಧಿಸಬೇಕೆಂದರೆ ಹಳ್ಳಿಗಳ ಅಧ್ಯಯನ ನಡೆಯಬೇಕು. ಇದು ನಮ್ಮ ಗ್ರಾಮದ ಚರಿತ್ರೆ ಮಾತ್ರವಲ್ಲ, ಇಡೀ ನಾಡಿನ ಮತ್ತು ದೇಶದ ಚರಿತ್ರೆ ಕಟ್ಟುವುದಕ್ಕೆ ಅಗತ್ಯವಿರುವ ತಳಹದಿ ನಿರ್ಮಿಸುವ ಕೆಲಸ. ಈ ಉದ್ದೇಶದಿಂದಲೇ ಜಾನಪದ ವಿಶ್ವವಿದ್ಯಾನಿಲಯ ಈ ವಿಷಯವನ್ನು ಕೈಗೆತ್ತಿಕೊಂಡಿದೆ. ಇದು ಮಹತ್ವಾಕಾಂಕ್ಷೆಯ ಯೋಜನೆ.

ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಉನ್ನತ ಶಿಕ್ಷಣದ ಕಲಿಕಾ ಗುಣಮಟ್ಟ ಎಲ್ಲಿದೆ? ಸ್ನಾತಕೋತ್ತರ ಪದವಿಗಳು ಉದ್ಯೋಗ ಪಡೆದುಕೊಳ್ಳುವ ಮಟ್ಟಿಗೆ ಗುಣಮಟ್ಟದ ಕಲಿಕೆ ನೀಡುತ್ತಿಲ್ಲವೆ?

ಈ ಪ್ರಶ್ನೆಗೆ ನೇರವಾದ ಸರಳ ಉತ್ತರ ಕೊಡುವುದು ಕಷ್ಟ. ವಿಶ್ವವಿದ್ಯಾನಿಲಯದ ಸಂಶೋಧನೆ ಅಥವಾ ಶಿಕ್ಷಣದ ಗುಣಮಟ್ಟ ಕುಸಿದಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಇಂದು ಉನ್ನತ ಶಿಕ್ಷಣದ ವ್ಯಾಪ್ತಿ ವಿಸ್ತಾರಗೊಂಡಿದೆ. ಆದರೂ ಉನ್ನತ ಶಿಕ್ಷಣಕ್ಕೆ ಬರುವವರ ಸಂಖ್ಯೆ ಕೇವಲ ಶೇ. ೧೨.೪. ಬೇರೆ ದೇಶಗಳಲ್ಲಿ ಇದರ ಮೂರು ಪಟ್ಟು ಇದೆ. ಕೆಲವೆಡೆ ಶೇ. ೩೦ ರಿಂದ ಶೇ. ೪೦ ರವರೆಗೆ ಇದೆ. ನಾವು ನಮ್ಮ ಉನ್ನತ ಶಿಕ್ಷಣದ ಪ್ರಮಾಣವನ್ನು ಶೇ. ೧೨ರಿಂದ ಶೇ. ೨೦ ಅಥವಾ ಶೇ. ೨೫ಕ್ಕೆ ಹೆಚ್ಚಿಸಬೇಕಾದರೆ ಈಗ ಇರುವ ವಿಶ್ವವಿದ್ಯಾನಿಲಯಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕಾಗುತ್ತದೆ. ಕಾಲೇಜುಗಳ ಸಂಖ್ಯೆಯನ್ನು ಸುಮಾರು ೨೯,೦೦೦ ದಿಂದ ೫೮,೦೦೦ಕ್ಕೆ ಏರಿಸಬೇಕಾಗುತ್ತದೆ. ಅದೇ ಕಾರಣದಿಂದ ಉನ್ನತ ಶಿಕ್ಷಣಕ್ಕೆ ೧೨ನೇ ಪಂಚವಾರ್ಷಿಕ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಮೊತ್ತವನ್ನು ಸರ್ಕಾರ ಕಾಯ್ದಿರಿಸಿದೆ. ಆದರೆ ವಿಸ್ತರಣೆಯ ಜೊತೆ ಸೇರ್ಪಡೆಯೂ ಆಗಬೇಕು. ಅಂದರೆ ಉನ್ನತ ಶಿಕ್ಷಣದಲ್ಲಿ ಆಸಕ್ತಿ ಮತ್ತು ಅರ್ಹತೆ ಇರುವ ಎಲ್ಲರಿಗೂ ಅವಕಾಶವನ್ನು ಕಲ್ಪಿಸಿಕೊಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಗುಣಾತ್ಮಕ ಶಿಕ್ಷಣ ಕೊಡಬೇಕು. ಅದಕ್ಕೆ ಮೂಲಭೂತ ಸೌಕರ್ಯ ಇರಬೇಕು. ಅತ್ಯುತ್ತಮ ವ್ಯವಸ್ಥೆ, ಅಧ್ಯಾಪಕರು ಹಾಗೂ ಗ್ರಂಥಾಲಯ, ಗಣಕ ತಂತ್ರಜ್ಞಾನ ಮೊದಲಾದ ಸವಲತ್ತುಗಳು ಇರಬೇಕು. ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಈ ಗುಣಮಟ್ಟ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಸ್ಥಾಪಿಸಿದ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳಿವೆ. ರಾಜ್ಯಗಳ ವಿಶ್ವವಿದ್ಯಾನಿಲಯಗಳಿಗೆ ಇರುವಂತೆ ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ಹಣದ ಕೊರತೆ ಇಲ್ಲ. ಇನ್ನು ಗ್ಯಾಟ್ ಒಪ್ಪಂದದ ಪ್ರಕಾರ ವಿದೇಶಿ ವಿಶ್ವವಿದ್ಯಾನಿಲಯಗಳು ಭಾರತಕ್ಕೆ ಬರುವಾಗ ನಾವು ನಮ್ಮ ವಿಶ್ವವಿದ್ಯಾಲನಿಯಗಳನ್ನು ಬಲಪಡಿಸದೆ ಇದ್ದಲ್ಲಿ ನಮ್ಮದು ದ್ವಿತೀಯ ಅಥವಾ ತೃತೀಯ ದರ್ಜೆಯ ವಿಶ್ವವಿದ್ಯಾನಿಲಯಗಳಾಗಿ ಬಿಡುತ್ತವೆ. ಆದರೆ ಪ್ರಮಾಣ ಹೆಚ್ಚಾದಾಗ ಜೊಳ್ಳುಗಳೂ ಕಂಡು ಬರಬಹುದು. ಗುಣಮಟ್ಟ ಕುಸಿಯದ ಹಾಗೆ ಕಾಪಾಡಿಕೊಳ್ಳುವುದು ಶಿಕ್ಷಣ ರಂಗದ ಬಹಳ ದೊಡ್ಡ ಜವಾಬ್ದಾರಿ.


ನಾಟಕಗಳು ಪೌರಾಣಿಕ ಕಥೆಗಳಿಂದ ಆಧುನಿಕ ಶೈಲಿಗೆ ಮರುಹುಟ್ಟು ಪಡೆದಿವೆ. ಆದರೆ ಯಕ್ಷಗಾನ ಈ ರೂಪ ಯಾಕೆ ಪಡೆದುಕೊಂಡಿಲ್ಲ?

ನಾಟಕ ಮತ್ತು ಯಕ್ಷಗಾನದ ಬಗ್ಗೆ ಮಾತನಾಡುವಾಗ ನಾಟಕ ಬೇರೆ, ಯಕ್ಷಗಾನ ಬೇರೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಾಟಕದಲ್ಲಿ ಸಾಹಿತ್ಯ ಕೃತಿ ಮತ್ತು ರಂಗಕೃತಿ ಎಂಬ ಎರಡು ಆಯಾಮಗಳಿವೆ. ಸಾಹಿತ್ಯ ಮತ್ತು ರಂಗ ಕೃತಿಯಾಗಿ ಬಹಳಷ್ಟು ಬದಲಾವಣೆಗಳನ್ನು ನಾಟಕ ಪಡೆದುಕೊಂಡಿದೆ. ಈಗ ಐತಿಹಾಸಿಕ ನಾಟಕಗಳಿಗಿಂತ ಸಾಮಾಜಿಕ ನಾಟಕಗಳೇ ಹೆಚ್ಚು ಜನಪ್ರಿಯ. ಆದರೆ ಯಕ್ಷಗಾನ ಎನ್ನುವುದು ಒಂದು ಧಾರ್ಮಿಕ ರಂಗಪ್ರದರ್ಶನ. ಅಲ್ಲಿ ಪೌರಾಣಿಕ ಕಥಾನಕಗಳೇ ಇರುತ್ತವೆ. ನಾಟಕಕ್ಕೆ ಸಾಹಿತ್ಯ ಕೃತಿ ಇರುವ ಹಾಗೆ ಯಕ್ಷಗಾನಕ್ಕೆ ಸಾಹಿತ್ಯ ಪ್ರಸಂಗ ಇರುತ್ತದೆ. ಆ ಪ್ರಸಂಗ ಕೃತಿಯ ಹಾಡನ್ನು ಆಧರಿಸಿ ಯಕ್ಷಗಾನ ರಂಗದ ಮೇಲೆ ಅರಳುತ್ತದೆ. ಈ ಪ್ರಸಂಗಗಳು ಪೌರಾಣಿಕ ಕಥೆಗಳನ್ನು ಆಧರಿಸಿವೆ. ಹಾಗೆಯೇ ಪರಿಸರದ ಕುರಿತ, ಏಡ್ಸ್ ಮಾರಕ ಎನ್ನುವ ಆಶಯಗಳಿರುವ ಸಾಮಾಜಿಕ ಯಕ್ಷಗಾನಗಳಿವೆ. ಆದರೆ ಪುರಾಣಗಳನ್ನು ಆಧರಿಸಿ ನಡೆಯುವ ಯಕ್ಷಗಾನ ಪ್ರದರ್ಶನಗಳ ಪ್ರಮಾಣದಲ್ಲಿ ಇವು ಬೆಳೆದಿಲ್ಲ. ಸಾಮಾಜಿಕ ಆಶಯಗಳುಳ್ಳ ಪ್ರದರ್ಶನಗಳು ಕಡಿಮೆ. ಪ್ರಯತ್ನಗಳು ಮತ್ತು ಪ್ರಯೋಗಗಳು ಆಗಿವೆ. ಅಮೃತ ಸೋಮೇಶ್ವರ ಅವರ ಅನೇಕ ಪ್ರಸಂಗಗಳನ್ನು ನಾವು ಇಲ್ಲಿ ಉಲ್ಲೇಖಿಸಬಹುದು. ಹಾಗಿದ್ದರೂ ಪುರಾಣದ ಕಥೆಗಳ ಜೊತೆಗೆ ಆಧುನಿಕ ಕಾಲಘಟ್ಟಕ್ಕೆ ಸಂಬಂಧಿಸಿದ ವಿಷಯಗಳನ್ನು ಜೋಡಿಸುವ ಮೂಲಕ ಯಕ್ಷಗಾನಕ್ಕೆ ಪ್ರಸ್ತುತತೆ ತರುವ ಪ್ರಯತ್ನಗಳೂ ನಡೆದಿವೆ. ಕಥೆ, ಪ್ರಸಂಗ ಪುರಾಣದ್ದೇ ಆದರೂ ಸಮಕಾಲೀನ ವಿಷಯವನ್ನು ಚರ್ಚಿಸುವ ಮೂಲಕ ಪ್ರಸ್ತುತತೆ ಬರುತ್ತದೆ.

ಯಕ್ಷಗಾನಕ್ಕೆ ಆಧುನಿಕತೆ ತಂದುಕೊಡುವ ಮಟ್ಟಿನ ಪ್ರತಿಭೆ ಈ ಕ್ಷೇತ್ರದಲ್ಲಿ ಬೆಳೆದಿಲ್ಲ ಎಂದು ನಿಮಗೆ ಅನಿಸುತ್ತಿದೆಯೆ?

ಈಗಲೂ ಹೊಸ ಪ್ರಸಂಗಗಳ ರಚನೆಯಾಗುತ್ತಿದೆ. ಅಮೃತರೇ ಸುಮಾರು ಹದಿನೈದರಷ್ಟು ನವೀನ ಆಶಯಗಳುಳ್ಳ ಪ್ರಸಂಗಗಳನ್ನು ಬರೆದಿದ್ದಾರೆ. ಪ್ರಾಚೀನ ಯಕ್ಷಗಾನ ಕವಿಗಳ ದೊಡ್ಡ ಯಾದಿ ಇದೆ. ಪ್ರದರ್ಶನದಲ್ಲಿ ಹೊಸತನ ತರುವುದು ಇಲ್ಲಿ ಮುಖ್ಯ. ಪುರಾಣ ಕಥೆ ಬಳಸುವಾಗಲೂ ಆಧುನಿಕ ಸಂವೇದನೆ ತುಂಬುವುದು ಅಗತ್ಯ. ಒಂದು ಕಾಲದಲ್ಲಿ ಇಡೀ ರಾತ್ರಿ ನಡೆಯುತ್ತಿದ್ದ ಯಕ್ಷಗಾನ ಈಗ ಮೂರು ಗಂಟೆಯಲ್ಲೂ ಮುಗಿಯುತ್ತದೆ ಮತ್ತು ಒಂದೂವರೆ ಗಂಟೆಯಲ್ಲೂ ಮುಗಿಯುವುದಿದೆ. ವೇಷಭೂಷಣಗಳಲ್ಲೂ ಬದಲಾವಣೆಯಾಗಿದೆ. ಮಾತಿನಲ್ಲಿ, ಕುಣಿತದಲ್ಲಿ ಅನೇಕ ಪ್ರಯೋಗಗಳನ್ನು ಕಾಣಬಹುದು. ಇವೆಲ್ಲಾ ಪ್ರಯೋಗಗಳು. ಯಕ್ಷಗಾನಕ್ಕೆ ಒಂದು ಸ್ಥಿರವಾದ ಪರಂಪರೆಯಿದೆ. ಈ ಪರಂಪರೆಯ ವರ್ತುಲದಲ್ಲಿ ಪ್ರದರ್ಶನವಾಗಬೇಕು. ಈ ಪರಂಪರೆಯೂ ಚಲನಶೀಲವೇ. ಹೊಸ ಪ್ರಯೋಗ ಎಂದರೆ ಪರಂಪರೆಯನ್ನು ಇಟ್ಟುಕೊಂಡು ನಡೆವ ಪ್ರಯೋಗವಾಗಿರುತ್ತದೆ. ಹೀಗಾಗಿ ಪ್ರತೀ ಪ್ರದರ್ಶನವೂ ಭಿನ್ನವಾಗಿರುತ್ತದೆ. ರಾಷ್ಟ್ರೀಯ ಕಲಾವಿದರೆಂಬ ಮನ್ನಣೆಯ ಯಕ್ಷಗಾನ ಪ್ರತಿಭೆಗಳು ಸಾಕಷ್ಟಿವೆ.

ತುಳು ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ?

ತುಳು ಭಾಷೆ ಮತ್ತು ಸಾಹಿತ್ಯ ರಚನೆಗೆ ಈಗ ಚಾಲನೆ ಸಿಕ್ಕಿದೆ. ತುಳು ಮಾತನಾಡುವುದು ಅವಮಾನಕರ ಎಂಬ ಕಾಲ ಹೋಗಿದೆ. ತುಳು ಮಾತನಾಡುವುದು ಹೆಮ್ಮೆಯ ವಿಷಯವಾಗಿದೆ. ತುಳು ಒಂದು ಸಂಪನ್ನವಾದ ಭಾಷೆ ಎನ್ನುವುದು ಸಾಬೀತಾಗಿದೆ. ಹೀಗಾಗಿ ತುಳುವಿಗೆ ಸಂಬಂಧಪಟ್ಟಂತೆ ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ. ತುಳು ಈಗ ಹಿಂದೆಂದಿಗಿಂತಲೂ ಹೆಚ್ಚು ಮನ್ನಣೆ ಪಡೆದುಕೊಳ್ಳುತ್ತಿದೆ. ತುಳುವನ್ನು ಈಗ ಕಲಿಕೆಯ ಭಾಷೆಯನ್ನಾಗಿಯೂ, ಶಿಕ್ಷಣದ ವಿಷಯವಾಗಿ, ಭಾಷಾ ಪತ್ರಿಕೆಯಾಗಿ ಕಲಿಸುವಂತಹ ಪ್ರಯತ್ನಗಳು ನಡೆಯುತ್ತಿವೆ.

ತುಳುನಾಡು ಸಾಂಸ್ಕೃತಿಕವಾಗಿ ಶ್ರೀಮಂತ ನಾಡು. ಆದರೆ ಈಗ ಮೂಲದಲ್ಲೇ ಭಿನ್ನಾಭಿಪ್ರಾಯ ಕಾಣಿಸುತ್ತಿದೆ.. ಸಾಂಸ್ಕೃತಿಕವಾಗಿ ಶ್ರೀಮಂತವಾದ ದಕ್ಷಿಣ ಕನ್ನಡ ಇಂದು ಕೋಮುದ್ವೇಷಕ್ಕೆ ನೆಲೆಯಾಗಿರಲು ಕಾರಣವೇನು?

ನಾವು ದಕ್ಷಿಣ ಕನ್ನಡದ ಹಿನ್ನೆಲೆ ನೋಡಬೇಕು. ಅನೇಕ ಆಚರಣೆಗಳು, ಆರಾಧನೆಗಳು - ಒಟ್ಟು ತುಳು ಜಾನಪದ ಕೃಷಿಯನ್ನಾಧರಿಸಿದ್ದಾಗಿವೆ. ವ್ಯವಸಾಯ ಹಿಂದೆ ಸರಿದಾಗ ಅದನ್ನು ಆಧರಿಸಿದ ಅನೇಕ ಆಚರಣೆಗಳೂ ಹಿಂದೆ ಸರಿದವು. ಉದಾಹರಣೆಗೆ ಕಬಿತೆಗಳನ್ನು ಹಾಡಬೇಕೆಂದರೆ ವ್ಯವಸಾಯ ಸಂಸ್ಕೃತಿ ಅಗತ್ಯ. ಭತ್ತದ ಬೆಳೆಯೇ ಇಲ್ಲವೆಂದಾಗ ಕಬಿತೆಗಳನ್ನು ವೇದಿಕೆ ಮೇಲೆ ಹಾಡಬೇಕಷ್ಟೆ. ಹೀಗಾಗಿ ನಗರೀಕರಣದಿಂದಾಗಿ ಆಚರಣೆಗಳು ಸಂದರ್ಭಗಳನ್ನು ಕಳೆದುಕೊಂಡಿವೆ. ಆಟಿಕಳೆಂಜ, ಕರಂಗೋಲು, ಮಾದಿರ, ಪುರುಷವೇಷ, ಚೆನ್ನುಕುಣಿತ, ಮಾಯಂದಾಳ್ ಹೀಗೆ ೫೦-೬೦ ಜನಪದ ಕುಣಿತಗಳಿದ್ದವು. ಜಾತ್ಯಾಧಾರಿತ ವ್ಯವಸ್ಥೆಯ ಭಾಗವಾಗಿದ್ದ ಕುಣಿತಗಳಿವು. ಆದರೆ ಈಗ ಜಾತ್ಯಾಧಾರಿತ ವ್ಯವಸ್ಥೆ ಶಿಥಿಲಗೊಂಡಿರುವ ಸಂದರ್ಭದಲ್ಲಿ ನಾವು ಅವರನ್ನು ಅದೇ ಕುಣಿತವನ್ನು ಮುಂದುವರಿಸಿಕೊಂಡು ಹೋಗುವಂತೆ ಒತ್ತಡ ಹೇರುವುದು ಸರಿಯಲ್ಲ. ಹಾಗಾಗಿ ಇಂದು ಆಟಿ ಕಳೆಂಜವನ್ನು ಯುವಕ ಮಂಡಲಗಳು ಆಯೋಜಿಸುವಾಗ ನಾವು ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅಂದರೆ ಬದಲಾದ ವ್ಯವಸ್ಥೆಯಲ್ಲಿ ಬದಲಾದ ಸ್ವರೂಪವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ ಹಲವು ಕುಣಿತಗಳು ಮರೆಯಾಗಿವೆ ಎಂದರೆ ಅವುಗಳಿಗೆ ಸಂದರ್ಭಗಳಿಲ್ಲ ಎಂದರ್ಥ. ಕೃಷಿ ಸಂಸ್ಕೃತಿಯ ಬಹಳ ಮುಖ್ಯವಾದ ಸಾರವೆಂದರೆ ಸಹಬಾಳ್ವೆ, ಸಮಬಾಳ್ವೆ ಮತ್ತು ಹಂಚಿ ಬದುಕಬೇಕು ಎನ್ನುವುದು. ಪ್ರಾಣಿ- ಪಕ್ಷಿ- ಮನುಷ್ಯ ಎಲ್ಲರಿಗೂ ಬದುಕುವ ಅವಕಾಶ. ಇಂತಹ ತುಳುನಾಡು ಕೋಮು ದ್ವೇಷ, ಗಲಭೆಗಳಿಗೆ ತುತ್ತಾಗಿರುವುದು ದುರಂತ. ಜಾತಿ ರಾಜಕಾರಣ, ಧರ್ಮ ರಾಜಕಾರಣ ಇದಕ್ಕೆ ಕಾರಣ.ಮಂಗಳೂರು ಇಂದು ಸಾಂಸ್ಕೃತಿಕವಾಗಿ ಛಿದ್ರ ಛಿದ್ರವಾದ ನಾಡು ಎಂದು ನಿಮಗೆ ಅನಿಸುತ್ತಿದೆಯೆ? ನಿಮ್ಮ ಪ್ರಕಾರ ತುಳುನಾಡಿನ ಜನರು ಮತ್ತೆ ಒಂದಾಗಬೇಕಾದರೆ ಏನು ಮಾಡಬೇಕು?

ನಮ್ಮ ಅನೇಕ ಆಚರಣೆಗಳು ಸರ್ವಧರ್ಮೀಯ ಸಮನ್ವಯಕ್ಕೆ ಹೆಸರಾಗಿವೆ. ಆಲಿಭೂತ ಆಚರಣೆಯಲ್ಲಿ ಮುಸ್ಲಿಂ ಮತ್ತು ಹಿಂದೂ ಸಂಸ್ಕೃತಿಯ sಸಮನ್ವಯವಿದೆ. ತುಳು ಜಾನಪದದಲ್ಲಿ ಸಂಘರ್ಷಗಳಿಲ್ಲ, ಪ್ರತಿಭಟನೆಗಳಿಲ್ಲ ಎಂದೇನಲ್ಲ. ಉದಾಹರಣೆಗೆ ಕೊರಗ-ತನಿಯ ಹಾಗೂ ಕೋರ್ದಷಬ್ಬು, ತನ್ನಿಮಾನಿಗ ಪಾಡ್ದನಗಳಲ್ಲಿ ಪ್ರತಿಭಟನೆಯ ಅಂಶಗಳಿವೆ. ಪಾಡ್ದನ ಮತ್ತು ಭೂತಾರಾಧನೆಯಲ್ಲಿ ಸಾಕಷ್ಟು ಪ್ರತಿಭಟನೆಗಳಿವೆ. ಆದರೆ ಇವುಗಳ ಅಂತಿಮ ಧ್ಯೇಯ ನ್ಯಾಯ ಮತ್ತು ಸಾಮರಸ್ಯದ ಪ್ರತಿಪಾದನೆ. ದೈವಗಳು ಸಾಂಸ್ಕೃತಿಕ ನಾಯಕರು. ಅನ್ಯಾಯದ ವಿರುದ್ಧ, ಶೋಷಣೆಯ ವಿರುದ್ಧ ಹೋರಾಡಿದವರು. ಯಾವುದೋ ಜಾತಿಯಲ್ಲಿ ಹುಟ್ಟಿದ್ದರೂ ಜಾತಿ ಮತ್ತು ಅದರಾಚೆ ನಡೆಯುವ ದೌರ್ಜನ್ಯ-ಅನ್ಯಾಯಗಳನ್ನು ಪ್ರತಿಭಟಿಸಿದವರು. ಇದು ಅಂತಿಮವಾಗಿ ನ್ಯಾಯ ಧರ್ಮದ ಪರವಾಗಿ ನಡೆದ ಹೋರಾಟ. ಹೀಗಾಗಿ ಅವರು ಇಡೀ ವಲಯದ ಆರಾಧ್ಯ ದೈವಗಳಾಗಿ, ಸಾಂಸ್ಕೃತಿಕ ವೀರರಾಗಿ ಮೆರೆದಿದ್ದಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಜಾತಿ ಸಂಘಟನೆಗಳು ರೂಪುಗೊಳ್ಳುತ್ತಿವೆ. ಜಾತಿ ಸಂಘಟಕರು ನಿರ್ದಿಷ್ಟ ವೀರರನ್ನು ತಮ್ಮ ಜನಾಂಗದ ಸಾಂಸ್ಕೃತಿಕ ನಾಯಕ ಎಂದು ಪ್ರತ್ಯೇಕಿಸಿಕೊಳ್ಳುತ್ತಿದ್ದಾರೆ. ಇದು ಸಾಂಸ್ಕೃತಿಕ ಅನನ್ಯತೆಯ ಪ್ರಶ್ನೆ. ಆದರೆ ಸಾಂಸ್ಕೃತಿಕ ಅನನ್ಯತೆ ಎನ್ನುವುದು ಪ್ರತ್ಯೇಕತೆ ಮೂಡಿಸಬಾರದು. ಅದೊಂದು ಭಿನ್ನತೆ ಅಷ್ಟೇ. ಪ್ರತೀ ಜನಾಂಗವೂ ಇತರ ಜನಾಂಗಗಳ ಭಿನ್ನತೆಗಳನ್ನು ಅರ್ಥಮಾಡಿಕೊಂಡು, ಗೌರವಿಸಬೇಕು. ಅವುಗಳನ್ನು ಒಪ್ಪಿಕೊಂಡೇ ನಾವು ನಮ್ಮ ಸಾಂಸ್ಕೃತಿಕ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಸಾಂಸ್ಕೃತಿಕ ಅನನ್ಯತೆ ಪ್ರತ್ಯೇಕತೆಗೆ ಕಾರಣವಾದಾಗ ಒಡಕು ಮೂಡುತ್ತದೆ. ಹೀಗೆ ಜಾನಪದ ಅಧ್ಯಯನ ಸಂಸ್ಕೃತಿಗಳಲ್ಲಿ ಒಡಕು ತರುವ ಬದಲು, ವಿಶಿಷ್ಟತೆಗಳನ್ನು ಪರಿಚಯಿಸುತ್ತಾ ಪ್ರಜಾಪ್ರಭುತ್ವದ ವ್ಯವಸ್ಥೆಯ ತಳಹದಿಯಾಗಬೇಕು. ಪ್ರಜಾಪ್ರಭುತ್ವದ ತಳಹದಿ ಇರುವುದೇ ಭಿನ್ನತೆಗಳಲ್ಲಿ. ಹೀಗಾಗಿ ಕರಾವಳಿಯಲ್ಲಿ ಇಂದು ಇರುವ ಬಹುಸಂಸ್ಕೃತಿ, ಬಹು ಭಾಷೆ, ಬಹು ಜೀವನ ಕ್ರಮಗಳನ್ನು ಗೌರವಿಸುವ ವಾತಾವರಣ ಮುಂದುವರಿಯಬೇಕು.

ತುಳುನಾಡಿನ ಜನಪದ ಕಲೆಗಳ ನೆರವಿಗೆ ಸಾಮಾನ್ಯವಾಗಿ ದೈವ- ದೇವಸ್ಥಾನಗಳೇ ವೇದಿಕೆಯಾಗಿವೆ. ಅದರಿಂದ ಹೊರತಾಗಿ ಇವುಗಳ ಪೋಷಣೆ ಸಾಧ್ಯವಿಲ್ಲವೇ? ಆ ನಿಟ್ಟಿನಲ್ಲಿ ಏನಾದರೂ ಕ್ರಮಗಳು ಜರುಗಿವೆಯೇ?

ಕುಣಿತಗಳು ಭೂತಾರಾಧನೆಯಷ್ಟು ಧಾರ್ಮಿಕವಲ್ಲ. ಆಟಿ ಕಳೆಂಜದಂತಹ ಕುಣಿತವು ಊರಿಗೆ ಬಂದ ಮಾರಿಯನ್ನು ಓಡಿಸಲು ಇರುವ ಸಾಂಕೇತಿಕ ರೂಪ. ಒಂದು ಮಾಂತ್ರಿಕ ಶಕ್ತಿಯ ಕುಣಿತವಾಗಿ ನಾವು ಅದನ್ನು ನೋಡುತ್ತೇವೆ. ಭೂತಾರಾಧನೆಯು ಗುಡಿಕೇಂದ್ರಿತ, ಗ್ರಾಮ ಕೇಂದ್ರಿತ. ಜನಪದ ಕುಣಿತಗಳು ಮತ್ತು ಇತರ ಪ್ರದರ್ಶನ ಕಲೆಗಳ ಸಂರಕ್ಷಣೆಯ ದಾರಿ ಹಲವು. ಉಜಿರೆಯಲ್ಲಿ ತುಳು ಸಮ್ಮೇಳನ ನಡೆದಾಗ ವಲಯ ಮಟ್ಟದಲ್ಲಿ ಹಳ್ಳಿಯ ಆಟಗಳನ್ನು, ಸ್ಪರ್ಧೆಗಳನ್ನು ನಡೆಸಲಾಗಿತ್ತು. ಹೀಗೆ ಅನೇಕ ಜನಪದ ಸ್ಪರ್ಧೆಗಳನ್ನು ಏರ್ಪಡಿಸಿ ಚದುರಿರುವ ಜನಪದ ಆಟ, ಕುಣಿತಗಳನ್ನು ಹೊಸ ಬಗೆಯಲ್ಲಿ ಸಂರಕ್ಷಿಸಬೇಕಾಗುತ್ತದೆ. ಹೀಗಾಗಿ ಕೆಲವೊಮ್ಮೆ ಶಾಲೆಗಳು, ದೈವಸ್ಥಾನಗಳ ಆವರಣದಲ್ಲಿ ಪ್ರದರ್ಶನಕ್ಕೆ ಅವಕಾಶನ್ನು ಕಲ್ಪಿಸಲಾಗುತ್ತಿದೆ.

ಮಂಗಳೂರು ಈಗ ರಾಜ್ಯದ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದೆ. ಕೈಗಾರಿಕೆ, ಬಹು ಸಂಸ್ಕೃತಿಯ ನೆಲೆವೀಡಾಗುತ್ತಿದ್ದು ಮೆಟ್ರೋ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುತ್ತಿದೆ. ಇದು ಜನಜೀವನದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯೇ ಅಥವಾ ಅಲ್ಲವೇ?
ಇದು ನಗರೀಕರಣದ ಪ್ರಶ್ನೆ. ಆಧುನಿಕದ ಬೆಳವಣಿಗೆಗಳಿಂದ ಒಟ್ಟಾರೆ ಮನುಷ್ಯ ಸಂಬಂಧಗಳು ನಾಶವಾಗುತ್ತವೆ ಮತ್ತು ಮನುಷ್ಯ ಯಂತ್ರವಾಗುತ್ತಿದ್ದಾನೆ. ಎಲ್ಲವೂ ವ್ಯಾವಹಾರಿಕವಾಗಿ, ಮನುಷ್ಯ ಸಂಬಂಧ ಎನ್ನುವುದು ಲೆಕ್ಕಾಚಾರ ಮತ್ತು ವ್ಯಾಪಾರೀಕರಣಕ್ಕೆ ಒಳಗಾಗುತ್ತಿದೆ. ನಗರಗಳಲ್ಲಿ ಸೌಕರ್ಯಗಳು, ಸೌಲಭ್ಯಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೇವೆ - ಹೀಗೆ ಸಕತ್ ಚೆನ್ನಾಗಿರಬಹುದು. ಆದರೆ ಆಡಳಿತದ ಶಕ್ತಿ ಈ ನಗರವನ್ನು ಕಾಪಾಡಿಕೊಳ್ಳಲು ದಿನದ ೨೪ ಗಂಟೆಯೂ ಎಚ್ಚರವಾಗಿರಬೇಕು. ಇದನ್ನು ಮರೆಯಬಾರದು. ನಗರ ಸ್ವರ್ಗ ಮತ್ತು ಹಳ್ಳಿ ನರಕ ಎಂದು ಭಾವಿಸುವ ಜನರಿದ್ದಾರೆ. ಕ್ಷಣಮಾತ್ರದಲ್ಲಿ ನಗರಗಳು ನರಕವಾಗಬಹುದೆಂಬ ಆತಂಕದ ಅರಿವಿರಬೇಕು ಮತ್ತು ಹಳ್ಳಿಗಳನ್ನು ಸ್ವರ್ಗವಾಗಿ ಪರಿವರ್ತಿಸಬೇಕೆಂಬ ಆಶಾದಾಯಕ ಯೋಚನೆ ಹೊಂದಿರಬೇಕು.
___________

ಭಾನುವಾರ, ಮಾರ್ಚ್ 4, 2012

ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಧಾನ ೨೦೧೧


ಚಿತ್ರದುರ್ಗದ ತರಾಸು ರಂಗಮಂದಿರ ಮಾರ್ಚ ೩ರಂದು ಅಕ್ಷರಶಃ ಜಾನಪದ ಕಲಾವಿದರಿಂದ ಗಿಜುಗುಡುತ್ತಿತ್ತು. ರಂಗಮಂದಿರದ ಹೊರ ಆವರಣದಲ್ಲಿ ಮಹಿಳಾ ಡೊಳ್ಳು ಕಲಾವಿದರು ಪ್ರದರ್ಶನ ನೀಡಲು ತಯಾರಿ ಮಾಡಿಕೊಳ್ಳುತ್ತಿದ್ದರು. ಇನ್ನು ಹಲಗೆ ಮೇಳದ ಮಹಿಳೆಯರು ಹಲಗೆ ಬಾರಿಸಲು ಉತ್ಸುಕರಾಗಿದ್ದರು. ಈ ಬಗೆಯ ಮಹಿಳಾ ತಂಡಗಳು, ಮಹಿಳಾ ದಿನದ ತಿಂಗಳಿಗೆ ರೂಪಕದಂತೆ ಇದ್ದವು. ಬೆಳಗ್ಗೆ ಹನ್ನೊಂದರಿಂದ ಜಾನಪದ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಮೀರಸಾಬಿಹಳ್ಳಿ ಶಿವಣ್ಣ, ಮತ್ತು ಪ್ರೊ.ಸೂಗಯ್ಯ ಹಿರೇಮಠ ಅವರ ಪುಸ್ತಕಗಳ ಕುರಿತ ವಿಚಾರ ಸಂಕಿರಣವಿತ್ತು. ನಂತರ ಅಕಾಡೆಮಿ ರೂಪಿಸಿದ ಜನಪದ ಕಲಾವಿದರ, ಜಾನಪದ ತಜ್ಞರ ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಇದು ಜಾನಪದ ಅಕಾಡೆಮಿಯ ಒಂದು ಒಳ್ಳೆಯ ಕೆಲಸ.
ನಂತರ ಸಂಜೆ ಐದು ಗಂಟೆಗೆ ಸರಿಯಾಗಿ ಜಾನಪದ ಕಲಾವಿದರ ಪ್ರಶಸ್ತಿ ಪ್ರಾಧಾನ ಶುರುವಾಯಿತು. ಮೊದಲಿಗೆ ಪ್ರಶಸ್ತಿ ಪಡೆದ ಆದರೆ ಸ್ವೀಕರಿಸುವ ಮುಂಚೆಯೇ ನಮ್ಮನ್ನಗಲಿದ ಹಗಲು ವೇಷದ ಕೆ. ವೀರಣ್ಣ ಅವರಿಗಾಗಿ ಮೌನಾಚರಣೆ ಮಾಡಲಾಯಿತು. ನಂತರ ನಾಡಿದ ೩೦ ಜಾನಪದ ಕಲಾವಿದರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಜನಪದ ತಜ್ಞರಿಗೆ ಮತ್ತು ಕಲಾವಿದರಿಗೆ ನೀಡುವ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಎಂ. ಕಾರಜೋಳ ಭರವಸೆ ನೀಡಿದರು.ಜಾನಪದ ತಜ್ಞರಿಗೆ ನೀಡುವ ಪ್ರಶಸ್ತಿ ಮೊತ್ತವನ್ನು ರೂ.10ರಿಂದ 20 ಸಾವಿರಕ್ಕೆ ಹೆಚ್ಚಿಸಲಾಗುವುದು. ಅದೇ ರೀತಿಯಲ್ಲಿ ಕಲಾವಿದರಿಗೆ ಪ್ರಸ್ತುತ ನೀಡುತ್ತಿರುವ ರೂ. 5 ಸಾವಿರ ಮೊತ್ತವನ್ನು 10 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.


ಅಕಾಡೆಮಿ ಅಧ್ಯಕ್ಷರಿಗೆ ಪ್ರವಾಸ ಭತ್ಯೆಯನ್ನು 10 ಸಾವಿರ ರೂಪಾಯಿ ನೀಡಲಾಗುವುದು. ಜತೆಗೆ, ಇನ್ನೂ 2,500 ಕಲಾವಿದರಿಗೆ ಮಾಸಾಶನ ನೀಡಲಾಗುವುದು. ಕಲಾವಿದರಿಗಾಗಿ ರೂಪಿಸಿರುವ ಕ್ಷೇಮನಿಧಿಗೆ ಸರ್ಕಾರ ರೂ 25 ಲಕ್ಷ ನೀಡಲಿದೆ. ಜತೆಗೆ, ಅಕಾಡೆಮಿಗೆ 1 ಕೋಟಿ ನೀಡಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಮಾತನಾಡಿದರು.ಸಂಸದ ಜನಾರ್ದನಸ್ವಾಮಿ, ಶಾಸಕ ಎಸ್.ಕೆ. ಬಸವರಾಜನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಿ. ಬಸವರಾಜು ಮತ್ತಿತರರು ಹಾಜರಿದ್ದರು.

ಗುರುವಾರ, ಮಾರ್ಚ್ 1, 2012

ಒಂದು ಜನಪದ ಕಥೆ: ಕುರಿ ಕಾಯುವ ಯುವಕನ ಜಾಣ್ಮೆ

ಕುರಿ ಕಾಯುವ ಯುವಕನ ಜಾಣ್ಮೆ

ಒಮ್ಮೆ ಮಗಧ ರಾಜ್ಯಕ್ಕೆ ಒಬ್ಬ ಘನ ಪಂಡಿತ ಬರುತ್ತಾನೆ. ಆತನು ತನ್ನ ವಿದ್ವತ್ತಿನಿಂದ ಹಲವು ಪಂಡಿತರನ್ನು ಸೋಲಿಸಿ ಕೀರ್ತಿ ಪಡೆದವನು. ಆತ ರಾಜ ಪಂಡಿತರಿಗೆ ಮೂರು ಪ್ರಶ್ನೆಗಳನ್ನು ಕೇಳುತ್ತಾನೆ. ೧. ಈ ಭೂಮಿಯ ಮಧ್ಯ ಬಿಂದು ಎಲ್ಲಿದೆ? ೨. ಈ ಭೂಮಿಯ ಮೇಲೆ ಈ ತನಕ ಹುಟ್ಟಿದವರೆಷ್ಟು? ಸತ್ತವರೆಷ್ಟು? ೩. ಈ ಭೂಮಿಯ ಮೇಲೆ ಈಗ ನಲೆಸಿರುವ ಜನರೆಷ್ಟು?
ಈ ಮೂರು ಪ್ರಶ್ನೆಗಳಿಗೆ ಮಗಧ ರಾಜ್ಯದ ಮಂತ್ರಿಗಳು ಉತ್ತರಿಸಲು ಸೋಲುತ್ತಾರೆ. ಆಗ ಪಂಡಿತ ಒಂದು ತಿಂಗಳ ಅವಧಿ ಕೊಡುವುದಾಗಿಯೂ ಆ ಅವಧಿಯಲ್ಲಿ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿದರೆ ನನ್ನ ಬಿರುದು ಬಾವಲಿಗಳನ್ನೆಲ್ಲಾ ಅರ್ಪಿಸಿ ಶರಣಾಗುತ್ತೇನೆ. ಹೇಳದಿದ್ದರೆ ಅರ್ಧ ರಾಜ್ಯ ಕೊಡಬೇಕೆಂದು ಸವಾಲು ಹಾಕಿ ಹೋಗುತ್ತಾನೆ.

ಇದರಿಂದ ಮಗಧ ರಾಜನಿಗೆ ಚಿಂತೆಯಾಗುತ್ತದೆ. ಒಬ್ಬ ಪಂಡಿತ ನನ್ನ ರಾಜ್ಯಕ್ಕೆ ಸವಾಲು ಹಾಕಿದ್ದು ಅವಮಾನವಾಗುತ್ತದೆ. ಅಲ್ಲದೆ ಒಂದು ತಿಂಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಹೇಳದಿದ್ದರೆ ಅರ್ಧ ರಾಜ್ಯವನ್ನು ಪಂಡಿತನಿಗೆ ಕೊಡಬೇಕಾದುದು ಮತ್ತಷ್ಟು ರಾಜನಲ್ಲಿ ಭಯ ಹುಟ್ಟಿಸುತ್ತದೆ. ಹೀಗಾಗಿ ರಾಜನು ಈ ಪ್ರಶ್ನೆಗಳನ್ನು ಇಡೀ ರಾಜ್ಯದ ಜನತೆಗೆ ತಿಳಿಸಿ ಯಾರಾದರೂ ಉತ್ತರ ನೀಡಿದವರಿಗೆ ಅರ್ಧ ರಾಜ್ಯ ಕೊಡುವುದಾಗಿ ಡಂಗೂರ ಸಾರಿಸುತ್ತಾನೆ.

ಈ ಪ್ರಶ್ನೆಗಳನ್ನು ಕೇಳಿದ ಕುರಿ ಕಾಯುವ ಯುವಕನೊಬ್ಬ ಬಿದ್ದು ಬಿದ್ದು ನಗುತ್ತಾನೆ. ಇಷ್ಟು ಸರಳವಾದ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಾಗಲಿಲ್ಲವೇ, ನಾನು ಹೇಳಬಲ್ಲೆ ಎಂದು ಉತ್ಸುಕನಾಗುತ್ತಾನೆ. ಆದರೂ ಅದನ್ನು ಯಾರಲ್ಲಿಯೂ ಹೇಳುವುದಿಲ್ಲ. ಬದಲಾಗಿ ಯಾರೂ ಹೇಳದಿದ್ದರೆ ಕೊನೆಯ ದಿನ ಪಂಡಿತನ ಎದುರೇ ಹೇಳಿದರಾಯಿತು ಎಂದು ನಿರ್ಧರಿಸುತ್ತಾನೆ.

ತಿಂಗಳ ಗಡುವಿನ ಕೊನೆಯ ದಿನ. ಯಾರೂ ಉತ್ತರ ಹೇಳಲು ಸಿದ್ದರಿಲ್ಲ. ರಾಜನ ಮುಖ ಕಳೆಗುಂದಿದೆ. ಅರಮನೆ ಮೈದಾನದಲ್ಲಿ ರಾಜ್ಯದ ಜನತೆ ಸುತ್ತುವರಿದಿದ್ದಾರೆ. ಪಂಡಿತ ಠೀವಿಯಿಂದ ಸಿಂಹಾಸನದ ಮೇಲೆ ಕೂತು ನೆರೆದ ಜನರನ್ನೆಲ್ಲಾ ನೋಡುತ್ತಿದ್ದಾನೆ. ಆತನ ಮುಖದಲ್ಲಿ ತುಂಟ ನಗೆ ಇಣುಕುತ್ತಿದೆ. ಇಂತಹ ಪ್ರಶ್ನೆಗಳಿಗೆ ಉತ್ತರ ಹೇಳುವ ಜಾಣ್ಮೆ ಇಲ್ಲಿ ಯಾರಿಗೂ ಇಲ್ಲ. ಅರ್ಧ ರಾಜ್ಯ ನನ್ನದೇ ಎಂದು ಬೀಗುತ್ತಾನೆ. ರಾಜನು ಜನರನ್ನು ಉದ್ದೇಶಿಸಿ ಮಾತನಾಡಿ ಯಾರಾದರೂ ಸರಿ ಈ ಪ್ರಶ್ನೆಗಳಿಗೆ ಉತ್ತರ ಹೇಳಲು ತಯಾರಿದ್ದರೆ, ಹೇಳಿ ರಾಜ್ಯದ ಘನತೆಯನ್ನು ಕಾಪಾಡಿ ಉತ್ತರ ಹೇಳಿದವರಿಗೆ ರಾಜ್ಯದ ಅರ್ಧ ಭಾಗವನ್ನು ಕೊಡುವುದಾಗಿ ಹೇಳುತ್ತಾನೆ. ಹೀಗೆ ಹೇಳಿದ ಅರ್ಧ ಗಂಟೆ ಸಭೆ ಮೌನವಾಗುತ್ತದೆ.

ಇದನ್ನು ನೋಡಿದ ಕುರಿ ಕಾಯುವ ಯುವಕ ಹೆಗಲ ಮೇಲೆ ಕುರಿಯೊಂದನ್ನು ಹೊತ್ತು ಜನ ಸುತ್ತುವರಿದ ಮೈದಾನದ ಮಧ್ಯೆ ಬಂದು ನಿಲ್ಲುತ್ತಾನೆ. ಜನರೆಲ್ಲಾ ಗೊಳ್ ಎಂದು ನಗುತ್ತಾರೆ. ಪಂಡಿತ ಬಿದ್ದು ಬಿದ್ದು ನಕ್ಕು ಈ ಕುರುಬ ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತಾನೆಯೇ? ಎಂದು ಠೇಂಕಾರ ತೋರುತ್ತಾನೆ. ಇದನ್ನು ನೋಡಿದ ರಾಜನ ಕಣ್ಣಲ್ಲಿ ಹೊಸ ಭರವಸೆ ಮೂಡುತ್ತದೆ. ಆಗ ರಾಜನು ಈತನು ಏನು ಹೇಳುತ್ತಾನೆ ಕೇಳೋಣ, ಎಂದು ಯುವಕನನ್ನು ಮಾತನಾಡಲು ಹೇಳುತ್ತಾರೆ.

ಯುವಕ ಪಂಡಿತರನ್ನು ತಾನು ನಿಂತಲ್ಲಿಗೆ ಕರೆಯುತ್ತಾನೆ. ಪಂಡಿತರೆ ನಿಮ್ಮ ಮೊದಲ ಪ್ರಶ್ನೆ ಯಾವುದು ಎನ್ನುತ್ತಾನೆ. ಪಂಡಿತ ತಿರಸ್ಕಾರದಿಂದಲೇ, ಈತನೇನು ಉತ್ತರಿಸಬಲ್ಲ ಎನ್ನುವಂತೆ, ಈ ಭೂಮಿಯ ಮಧ್ಯ ಬಿಂದು ಯಾವುದು? ಹೇಳಬಲ್ಲೆಯಾ ಎನ್ನುತ್ತಾನೆ. ಆಗ ಕುರಿಯನ್ನು ಹೆಗಲ ಮೇಲಿಂದ ಕೆಳಗೆ ಇಳಿಸಿ, ಪಂಡಿತರೇ ಈ ಕುರಿ ನಿಂತ ಸ್ಥಳವೇ ಈ ಭೂಮಿಯ ಮಧ್ಯ ಬಿಂದು ಎಂದು ಹೇಳುತ್ತಾನೆ. ಪಂಡಿತ ‘ಏನು ಉದ್ಧಟದ ಉತ್ತರವನ್ನು ಹೇಳುತ್ತಿರುವೆ’ ಎನ್ನುತ್ತಾನೆ. ಯುವಕ ‘ಪಂಡಿತರೆ ನಿಮಗೆ ಅನುಮಾನ ಬಂದರೆ ಭೂಮಿಯನ್ನೊಮ್ಮೆ ಅಳತೆ ಮಾಡಿಕೊಂಡು ಬನ್ನಿ. ಅಲ್ಲಿಯವರೆಗೂ ನಾನು ಇಲ್ಲಿಯೇ ನಿಂತಿರುವೆ. ಸುಳ್ಳಾದರೆ ಅಳೆದು ತೋರಿಸಿ’ ಎನ್ನುತ್ತಾನೆ. ಈ ಮಾತಿನಿಂದ ಪೆಚ್ಚಾದ ಪಂಡಿತರ ಮುಖ ಬಿಳಿಚಿಕೊಳ್ಳುತ್ತದೆ. ಭೂಮಿಯನ್ನು ಅಳತೆ ಮಾಡಲು ಸಾದ್ಯವೇ ಎಂದು ಮನದಲ್ಲಿಯೇ ಅಂದುಕೊಂಡು. ವಿಧಿಯಿಲ್ಲದೆ, ಸರಿ ನಿನ್ನ ಮೊದಲ ಉತ್ತರ ಸರಿಯಾಗಿದೆ ಎನ್ನುತ್ತಾನೆ. ಇದನ್ನು ಕೇಳಿ ಜನರೆಲ್ಲಾ ಜೈಕಾರ ಹಾಕುತ್ತಾರೆ.

ಯುವಕ ‘ಹೇಳಿ ಪಂಡಿತರೆ ನಿಮ್ಮ ಎರಡನೆ ಪ್ರಶ್ನೆ ಯಾವುದು’ ಎನ್ನುತ್ತಾನೆ. ಪಂಡಿತ ‘ಈ ಭೂಮಿಯ ಮೇಲೆ ಈ ತನಕ ಹುಟ್ಟಿದವರೆಷ್ಟು? ಸತ್ತವರೆಷ್ಟು? ಹೇಳುವೆಯಾ’ ಎನ್ನುತ್ತಾನೆ. ಯುವಕ ಕುರಿಗೆ ಹೊಟ್ಟೆಯ ಮಧ್ಯ ಭಾಗಕ್ಕೆ ಹಗ್ಗವೊಂದನ್ನು ಕಟ್ಟಿ ‘ಈ ಕುರಿಯ ಅರ್ಧ ಭಾಗದ ಕೂದಲು ಎಷ್ಟಿವೆಯೋ ಅಷ್ಟು ಜನ ಭೂಮಿಯ ಮೇಲೆ ಹುಟ್ಟಿದ್ದಾರೆ. ಇನ್ನರ್ಧ ಭಾಗ ಭೂಮಿಯ ಮೇಲೆ ಸತ್ತವರ ಸಂಖ್ಯೆ, ಅನುಮಾನ ಬಂದರೆ ಈ ಕುರಿ ಕೂದಲನ್ನು ಎಣಿಸಿ ಪರಿಹರಿಸಿಕೊಳ್ಳಿ’ ಎನ್ನುತ್ತಾನೆ. ಆಗ ಪಂಡಿತ ಕಕ್ಕಾಬಿಕ್ಕಿಯಾಗಿ, ‘ಇಲ್ಲ ಇದು ಸರಿಯಾದ ಉತ್ತರವಲ್ಲ’ ಎನ್ನುತ್ತಾನೆ. ಯುವಕ ‘ಪಂಡಿತರೇ ಅನುಮಾನವಿದ್ದರೆ ಒಂದು ಸಲ ಸತ್ತವರನ್ನೂ ಹುಟ್ಟಿದವರನ್ನೂ ಲೆಕ್ಕ ಹಾಕಿಕೊಂಡು ಬನ್ನಿ, ಆಮೇಲೆ ಬೇಕಾದರೆ ಈ ಕುರಿ ಕೂದಲನ್ನು ಎಣಿಸಿ ಲೆಕ್ಕ ತಪ್ಪಾದರೆ ಆಗ ನೋಡೋಣ’ ಎಂದು ನಿಧಾನವಾಗಿಯೇ ಹೇಳುತ್ತಾನೆ. ಪಂಡಿತ ಇದು ಸಹ ಅಸಾದ್ಯ ಎಂದರಿತು ಈ ಉತ್ತರವೂ ಸರಿ ಎಂದು ಒಪ್ಪಿಕೊಳ್ಳುತ್ತಾನೆ.

ಇನ್ನು ಮೂರನೆ ಪ್ರಶ್ನೆಗೆ ಉತ್ತರ ಸುಲಭ ಎಂದು ಕುರಿಗೆ ಕಟ್ಟಿದ ಹಗ್ಗ ಕಿತ್ತು ಕುರಿಯಲ್ಲಿ ಎಷ್ಟು ಕೂದಲಿವೆಯೋ ಅಷ್ಟು ಜನ ಈಗ ಈ ಭೂಮಿಯ ಮೇಲೆ ನೆಲೆಸಿದ್ದಾರೆ. ಈ ಉತ್ತರವೂ ಸರಿಯಲ್ಲವೆಂದರೆ ಜಗದ ಜನರನ್ನು ಎಣಿಸಿಕೊಂಡು ಬನ್ನಿ ಎನ್ನುತ್ತಾನೆ. ಇದನ್ನು ಪಂಡಿತ ಒಪ್ಪಿಕೊಂಡು ಯುವಕನೆದುರು ಸೋಲನ್ನು ಒಪ್ಪಿಕೊಳ್ಳುತ್ತಾನೆ. ಈತನಕ ತಾನು ಪಡೆದ ಬಿರುದು ಬಾವಲಿಗಳನ್ನು ಯುವಕನಿಗೆ ನೀಡಿ ತಾನು ಸೋತೆ ಎಂದು ಹೇಳುತ್ತಾನೆ. ಇದನ್ನು ನೋಡಿದ ರಾಜನು ಆನಂದ ತುಂದಿಲನಾಗುತ್ತಾನೆ. ಆಗ ಯುವಕನನ್ನು ಇಡೀ ರಾಜ್ಯದ ಜನತೆ ಹಾಡಿ ಕೊಂಡಾಡುತ್ತದೆ.

ಯುವಕ ರಾಜ್ಯದ ಅರ್ಧ ಭಾಗವನ್ನು ನಿರಾಕರಿಸುತ್ತಾನೆ. ಯುವಕನ ಸಮಯಪ್ರಜ್ಞೆ, ಬುದ್ಧಿವಂತಿಕೆ, ಪ್ರಾಮಾಣಿಕತೆಯನ್ನು ನೋಡಿದ ಯುವರಾಣಿಗೆ ಯುವಕನಲ್ಲಿ ಪ್ರೇಮಾಂಕುವವಾಗುತ್ತದೆ. ಇದನ್ನು ತಿಳಿದು ರಾಜ ಯುವಕನಿಗೆ ತನ್ನ ಮಗಳ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡುತ್ತಾನೆ. ತನ್ನ ಬುದ್ಧಿವಂತಿಕೆಯಿಂದ ಕುರಿ ಕಾಯುವ ಯುವಕ ಮಗಧ ರಾಜ್ಯದ ಯುವ ರಾಜನಾಗುತ್ತಾನೆ.