ಶುಕ್ರವಾರ, ಜುಲೈ 26, 2013

ಕೆ.ಕೆ.ಮಕಾಳಿ ಕಲೆಯ ದೇಸೀಯತೆ
ಡಾ.ಅರುಣ್ ಜೋಳದಕೂಡ್ಲಿಗಿ


ಜನಪದವನ್ನು ಒಂದು ಸಂವೇದನೆಯನ್ನಾಗಿ ಸಾಹಿತಿಗಳು, ಸಂಗೀತಗಾರರು, ಕಲಾವಿದರು ತಮ್ಮ ತಮ್ಮ ಮಾದ್ಯಮಗಳಲ್ಲಿ ದಾಟಿಸುತ್ತಿದ್ದಾರೆ. ಹೀಗೆ ಜನಪದ ಸಂವೇದನೆ ಬಹುಮುಖಿಯಾಗಿ ಅಭಿವ್ಯಕ್ತಗೊಳ್ಳುತ್ತಲೇ ಬಂದಿದೆ. ಇಂತಹ ಅಭಿವ್ಯಕ್ತಿಗಳಲ್ಲಿ ಜನಪದದ ಸೃಜನಶೀಲ ಜಗತ್ತು ವಿಸ್ತರಿಸುತ್ತದೆ. ಬೇಂದ್ರೆ ಕಂಬಾರರು ಜನಪದ ಕಾವ್ಯವನ್ನು ದುಡಿಸಿಕೊಂಡರೆ, ಕರ್ನಾಡರು ಜನಪದ ಪುರಾಣಗಳ ಪ್ರೆರಣೆ ಪಡೆಯುತ್ತಾರೆ. ಇನ್ನು ಜನಪದ ಕಲೆಯ ಪ್ರೇರಣೆಯನ್ನು ಪಡೆದ ಚಿತ್ರಕಲಾವಿದರು, ಶಿಲ್ಪಿಗಳು ಹಲವರಿದ್ದಾರೆ.

Photo
ಜನಪದವನ್ನು ಒಂದು ಸಂವೇದನೆಯನ್ನಾಗಿ ತಮ್ಮ ರೇಖೆ ಚಿತ್ರಗಳಲ್ಲಿ ದಾಟಿಸುವ ಕಾರಣಕ್ಕೆ ಕೆ.ಕೆ.ಮಕಾಳಿಯವರು ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಮಕಾಳಿಯವರು ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಮಾಡಿದಾಗಲೆಲ್ಲಾ ನೋಡುಗರಲ್ಲಿ ದೇಸಿ ಅಭಿವ್ಯಕ್ತಿಯ ಹೊಸ ಬಗೆಯ ಅನುಭವ ನೀಡುತ್ತವೆ. ಕ್ಯಾನ್ವಾಸಿನ ನೋಡುವಿಕೆಯ ಕ್ರಮದಲ್ಲಿ ಉಂಟಾದ ಸಿದ್ದ ಗ್ರಹಿಕೆಯನ್ನು ಒಡೆಯುತ್ತವೆ.
Photo

ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಕಲಾವಿದರಾಗಿ ಕೆಲಸ ಮಾಡುವ ಮಕಾಳಿಯವರು ಬಾಗಲಕೋಟೆ ಜಿಲ್ಲೆಯ ಕೊರ್ತಿಯವರು. ಹಲವು ಏಕವ್ಯಕ್ತಿ, ಗುಂಪು ಕಲಾಪ್ರದರ್ಶನ ಮಾಡಿದ್ದಾರೆ. ಕಲೆಗಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿ, ರೇನ್ ಬೋ ಬೆಸ್ಟ್ ಆರ್ಟಿಸ್ಟ್ ಮುಂತಾದ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಲಾಶಿಭಿರಗಳಲ್ಲಿ ಶಿಭಿರಾರ್ತಿಯಾಗಿಯೂ, ಉಪನ್ಯಾಸಕರಾಗಿಯೂ, ನಿರ್ದೇಶಕರಾಗಿಯೂ, ಕಲಾಸ್ಪರ್ಧೆಗಳ ಜೂರಿಯಾಗಿಯೂ ಕಲಾ ಚಟುವಟಿಕೆಗಳಲ್ಲಿ ಕ್ರಯಾಶೀಲರಾಗಿದ್ದಾರೆ.
Photo

ಮಕಾಳಿಯವರು ಕಲೆಯನ್ನು ಶಾಸ್ತ್ರಬದ್ದವಾಗಿ ಕಲಿತದ್ದಕ್ಕಿಂತ, ಬದುಕಿನ ಪಾಕಶಾಲೆಯಲ್ಲಿ ಅನೌಪಚಾರಿಕವಾಗಿ ಕಲಿತದ್ದೆ ಹೆಚ್ಚು. ಹಾಗಾಗಿ ಅವರ ಕಲಾ ಅಭಿವ್ಯಕ್ತಿಯಲ್ಲಿ ಅಕಾಡೆಮಿಕ್ ಘಾಟು ಕಾಣದೆ, ಗ್ರಾಮೀಣ ಸಂವೇದನೆಯ ಸಹಜತೆ ಉಸಿರಾಡುತ್ತದೆ. ರೇಖಾಚಿತ್ರಗಳಲ್ಲಿ ಮಕಾಳಿಯವರ ಓಘ, ರೇಖೆಗಳ ಬೀಸು, ಚಲನೆ ಎಂತವರನ್ನು ಚಕಿತಗೊಳಿಸುತ್ತದೆ. ಅವರು ಜನಪದ ಕಲೆ, ಕಲಾವಿದರ ಬಗೆಗೆ ಮಾಡಿದ ರೇಖಾಚಿತ್ರಗಳು ಕರ್ನಾಟಕ ಜಾನಪದವನ್ನು ಅರ್ಥಮಾಡಿಕೊಳ್ಳಲು ತುಂಬಾ ಸಹಕಾರಿಯಾಗಿವೆ.

Photo
ವಿಶೇಷವೆಂದರೆ ಮಕಾಳಿಯವರ ಪೇಂಟಿಂಗ್ ನಲ್ಲಿಯೂ ಎದ್ದುಕಾಣುವುದು ಅವರ ರೇಖೆಗಳೆ. ತಪ್ಪುಗಳನ್ನು ಮಚ್ಚಿಹಾಕಬಹುದಾದ ಸಾದ್ಯತೆಗಳು ಪೇಂಟಿಂಗ್ನಲ್ಲಿರುವಂತೆ ರೇಖೆಗಳಲ್ಲಿ ಇರುವುದಿಲ್ಲ. ಕಾರಣ ರೇಖೆ ಕನ್ನಡಿಯಂತೆ ತಪ್ಪುಗಳನ್ನೂ ಸಹ ಬಿಂಬಿಸುತ್ತದೆ. ಹಾಗಾಗಿ ರೇಖಾಚಿತ್ರವನ್ನೇ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಗುರುತಿಸಿಕೊಳ್ಳುವುದು ಕೂಡ ಸವಾಲಿನ ಕೆಲಸ. ಇಂತಹ ಸವಾಲನ್ನು ಮಕಾಳಿಯವರು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ.
Photo

ಇಂದು ಮಕಾಳಿಯವರನ್ನು ಮುಖ್ಯವಾಗಿ ಗುರುತಿಸುವುದು ಕೂಡ ರೇಖೆಗಳ ಮೂಲಕವೆ. ಅವರ ಪೇಂಟಿಗ್ಗಳಲ್ಲಿ ಕೂಡ ದೇಸಿತನದ ಛಾಯೆಗಳು ಒಡಮೂಡುತ್ತವೆ. ಹಾಗಾಗಿ ಮಕಾಳಿಯವರ ಜಲವರ್ಣ, ತೈಲವರ್ಣದ ಬಣ್ಣದ ಬಳಕೆಯಲ್ಲಿಯೂ ಅವರದೇ ಆದ ದೇಸಿತನದ ಲಯ ಕಾಣುತ್ತದೆ. ಮಕಾಳಿಯವರು ಪುಸ್ತಕಗಳ ಮುಖಪುಟ ವಿನ್ಯಾಸಕ್ಕೂ, ಸಮಾರಂಭಗಳ ವೇದಿಕೆಯ ಹಿನ್ನೆಲೆಗಳಿಗೂ ದೇಸೀತನದ ಟಚ್ ಕೊಟ್ಟವರು.

ಕನ್ನಡ ವಿಶ್ವವಿದ್ಯಾಲಯ ರೂಪಿಸಿದ ದೇಸಿಚಿಂತನೆಯನ್ನು ಚಿತ್ರರೂಪದಲ್ಲಿ ಕಲ್ಪಿಸಿಕೊಳ್ಳುವಾಗ ಮಕಾಳಿಯವರ ಚಿತ್ರಗಳೇ ಕಾಣುತ್ತವೆ. ಅವರ ದೇಸಿ ಸಂವೇದನೆ ಇನ್ನಷ್ಟು ಪಕ್ವವಾಗಲು ಕನ್ನಡ ವಿಶ್ವವಿದ್ಯಾಲಯದ ವಾತಾವರಣವೂ ಕಾರಣವಾಗಿದೆ. ಕನ್ನಡ ವಿವಿ ಪ್ರಸಾರಾಂಗ ಪ್ರಕಟಿಸಿದ ಪುಸ್ತಕಗಳಿಗೆ ಒಂದು ಭಿನ್ನ ಚಹರೆ ಬಂದಿರುವುದೂ ಕೂಡ ಮಕಾಳಿಯವರ ಕಲೆಯ ಕಾರಣಕ್ಕೆ ಎನ್ನುವುದನ್ನು ನೆನೆಯಬೇಕು.

ಮಕಾಳಿಯವರ ವೈಶಿಷ್ಟವೇ ಅವರ ಮಿತಿಯೂ ಆಗಿದೆ. ಆಧುನಿಕ ತಂತ್ರಜ್ಞಾನವನ್ನು ಅದರೆಲ್ಲಾ ಸಾದ್ಯತೆಗಳಲ್ಲಿ ಬಳಸಿಕೊಂಡು ಭಿನ್ನ ಪ್ರಯೋಗ ಮಾಡಲು ಪೂರ್ಣ ಪ್ರಮಾಣದಲ್ಲಿ ಅವರಿಂದ ಸಾದ್ಯವಾಗುತ್ತಿಲ್ಲ. ಈ ಕಾರಣಕ್ಕೆ ಏಕತಾನತೆಯ ಗುಂಗಿನಿಂಗ ಮಕಾಳಿ ಬಹುಕಾಲ ಹೊರಬಂದಂತಿರಲಿಲ್ಲ. ಈಗೀಗ ತಮ್ಮದೇ ಮಿತಿಯನ್ನು ಮೀರುವ ಪ್ರಯತ್ನಗಳು ಮಕಾಳಿಯವರ ಈಚಿನ ಕಲಾಕೃತಿಗಳಲ್ಲಿ ಕಾಣುತ್ತಿದೆ. ಆಧುನಿಕ ತಂತ್ರಜ್ಞಾನವನ್ನೂ ಬಳಸಿಕೊಳ್ಳುತ್ತ ಮಕಾಳಿವರು ತಮ್ಮ ದೇಸಿತನದ ಕಲೆಗೆ ಮತ್ತಷ್ಟು ಹೊಳಪು ಕೊಡಲು ಸಜ್ಜಾದಂತಿದೆ. ಇನ್ನಷ್ಟು ಹೊಸ ಪ್ರಯೋಗಗಳಿಗೆ ಅವರು ತೆರೆದುಕೊಳ್ಳಲಿ. ದೇಸಿತನದ ತಿಳಿವು ಇನ್ನಷ್ಟು ಗಟ್ಟಿಗೊಳ್ಳಲಿ ಎಂದು ಆಶಿಸೋಣ.

ಗುರುವಾರ, ಜುಲೈ 25, 2013

ಪರಕೀಯತೆಗೆ ದೂಡಿದ ಅಭಿವೃದ್ಧಿ ಮಾದರಿ
 -ಎಂ.ಚಂದ್ರ ಪೂಜಾರಿ.

ಸೌಜನ್ಯ: ವಿಜಯ ಕರ್ನಾಟಕ

`ನಮಗೆ ಬೇಕಿರುವುದು, ಕಡಿಮೆ ಸಂಪನ್ಮೂಲ ಬಳಸಿಯೂ ಹೆಚ್ಚು ಮಂದಿಯ ಜೀವನ ಪೊರೆಯುವಂಥ ಉದ್ದಿಮೆಗಳು'
 
ಕೃಷಿ, ಕೈಗಾರಿಕೆಗಳ ಉತ್ಪನ್ನಗಳನ್ನು ಬೀದಿ ಬದಿಯಲ್ಲಿ, ತಲೆ ಮೇಲೆ ಹೊತ್ತುಕೊಂಡು ಮಾರುವ ವ್ಯಾಪಾರಿಗಳು ನೂರು-ಸಾವಿರವಲ್ಲ, ಲಕ್ಷಗಟ್ಟಲೆ ಇದ್ದಾರೆ. ಇವರೆಲ್ಲ ಅತ್ಯಲ್ಪ ಬಂಡವಾಳ ಮತ್ತು ಹೆಚ್ಚು ಮಾನವ ಸಂಪನ್ಮೂಲ ಬಳಸಿಕೊಂಡು ವ್ಯವಹರಿಸುತ್ತಿದ್ದಾರೆ. ಇದೇ ಬಗೆಯಲ್ಲಿ ವಿವಿಧ ಸರಕುಗಳನ್ನು ಉತ್ಪಾದಿಸಿ ಮಾರುವ ಸಣ್ಣ ಉದ್ದಿಮೆದಾರರು ಕೂಡ ದೊಡ್ಡ ಪ್ರಮಾಣದಲ್ಲಿದ್ದಾರೆ. ಮುಂಬಯಿ, ಚೆನ್ನೈ, ಬೆಂಗಳೂರು ಮುಂತಾದ ಮಹಾನಗರಗಳಲ್ಲಿ ಕೈಕೆಸರು ಮಾಡುವ, ಪರಿಸರ ನಾಶ ಮಾಡುವ ಬಹುತೇಕ ಉತ್ಪಾದನೆಗಳು ಅಲ್ಲಿನ ಕೊಳೆಗೇರಿಗಳಲ್ಲಿವೆ. ಸುಂದರವಾದ ಮಾಲ್‌ಗಳಲ್ಲಿ ಮಾರಾಟವಾಗುವ ಹಲವು ಸರಕುಗಳು ಇವೇ ಕೊಳೆಗೇರಿಗಳಲ್ಲಿ ತಯಾರಾಗುತ್ತವೆ. ನಮ್ಮ ಅರ್ಥ ವ್ಯವಸ್ಥೆಯ ಮೂರೂ ವಲಯಗಳನ್ನು (ಕಷಿ, ಕೈಗಾರಿಕೆ, ಸೇವೆ) ಸೇರಿಸಿಕೊಂಡು ನೋಡಿದರೆ ಇಂತಹ ಸಣ್ಣ ವ್ಯಾಪಾರಿಗಳು, ಉದ್ದಿಮೆದಾರರು ಕೋಟಿಗಟ್ಟಲೆ ಇದ್ದಾರೆ. ಮೂರೂ ವಲಯಗಳಲ್ಲಿರುವ ಇಂತಹ ಸಣ್ಣಪುಟ್ಟ ವ್ಯಾಪಾರ, ಉದ್ದಿಮೆಗಳ ಮಾಲೀಕರೊಂದಿಗೆ ಇವು ಗಳಲ್ಲಿ ದುಡಿಯುವವರನ್ನು ಸೇರಿಸಿ ಲೆಕ್ಕ ಹಾಕಿದರೆ ಶೇಕಡ ತೊಂಬತ್ತು ಮಂದಿ ಇದೇ ವರ್ಗಕ್ಕೆ ಸೇರಿದವರು.

ಇವೆಲ್ಲವನ್ನು ನಾವು ಅಸಂಘಟಿತ, ಅನಧಿಕತವೆಂದು ಪಟ್ಟಿ ಮಾಡಿ, ಮೂಟೆ ಕಟ್ಟಿ ಒಂದು ಮೂಲೆಯಲ್ಲಿ ಇರಿಸಿದ್ದೇವೆ. ಅಸಂಘಟಿತ, ಅನಧಿಕತ ಎನ್ನುವ ಪದಗಳಿಗೆ ಬೇರೆ ಬೇರೆ ಅರ್ಥ ಇದ್ದರೂ, ಈ ಎರಡೂ ಪದಗಳು ಒಂದೇ ಪರಿಣಾಮವನ್ನು ವ್ಯಕ್ತಪಡಿಸುತ್ತಿವೆ. ಈ ವರ್ಗಕ್ಕೆ ಸೇರಿದವರು ಸರಕಾರದ ನೀತಿ- ನಿಯಮಗಳ ಪ್ರಕಾರ ತಮ್ಮ ವ್ಯವಹಾರಗಳನ್ನು ನಡೆಸುತ್ತಿಲ್ಲ. ಆದುದರಿಂದ ಇವರು ಸರಕಾರದ ಸವಲತ್ತುಗಳಿಗೂ ಅರ್ಹರಲ್ಲ ಎನ್ನುವ ತಾತ್ಪರ್ಯ ಇದೆ. ಅಸಂಘಟಿತ ವಲಯಗಳ ವ್ಯಾಪಾರ ಸ್ಥರು, ಉದ್ಯಮಿಗಳು ಬ್ಯಾಂಕ್‌ಗಳಿಂದ ಹಣಕಾಸು ನೆರವು ಪಡೆ ಯು ವುದಿಲ್ಲ. ಬ್ಯಾಂಕ್ ನೆರವು ಸಿಗಬೇಕಾದರೆ ಅವರಿಗೊಂದು ವಿಳಾಸ ಬೇಕು, ವ್ಯಾಪಾರ-ಉದ್ದಿಮೆ ನಡೆಸುವ ಕಟ್ಟಡ ಬೇಕು, ಅದಕ್ಕೆ ಸಂಬಂಧಿಸಿದ ದಾಖಲೆಗಳು ಬೇಕು. ಇವು ಯಾವುವೂ ಇಲ್ಲದೆ, ಇವರೆಲ್ಲ ವ್ಯಾಪಾರ-ಉದ್ದಿಮೆಗಳನ್ನು ಮಾಡುತ್ತಿದ್ದಾರೆ. ಇವರಲ್ಲಿ ಕೆಲವರ ಹಣಕಾಸಿನ ಮೂಲ, ಪ್ರತಿ ನೂರು ರೂಪಾಯಿಗೆ ದಿನವೊಂದಕ್ಕೆ ಐದರಿಂದ ಹತ್ತು ರೂಪಾಯಿ ಮುರಿದುಕೊಂಡು ಸಾಲ ಕೊಡುವ ಸ್ಥಳೀಯ ಬಡ್ಡಿ ವ್ಯಾಪಾರಿಗಳು. ಬೆಳಗ್ಗೆ ಸಾಲ ಪಡೆದರೆ ಸಂಜೆ ಸಾಲ ತೀರಿಸಬೇಕು. ಒಂದು ವೇಳೆ ತೀರಿಸದಿದ್ದರೆ, ಮರುದಿನ ಹಿಂದಿನ ದಿನದ ಬಡ್ಡಿ ಸೇರಿಸಿ ಕೊಡಬೇಕಾಗುತ್ತದೆ.

ದಿನವೊಂದಕ್ಕೆ ಶೇಕಡ ಐದರಿಂದ ಹತ್ತು ಬಡ್ಡಿಗೆ ಹಣಕಾಸು ಪಡೆದು, ಯಾರದೋ ಅಂಗಡಿ ಎದುರು ಅಥವಾ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಾರೆ. ಈ ಜಾಗಕ್ಕೂ ಬಾಡಿಗೆ ಇದೆ. ದೊಡ್ಡ ಪೇಟೆ, ಪಟ್ಟಣಗಳಲ್ಲಿ ದಿನವೊಂದರ ಬಾಡಿಗೆ ಐವತ್ತು- ನೂರು ಇದ್ದರೆ, ಸಣ್ಣಪುಟ್ಟ ಪೇಟೆಗಳಲ್ಲಿ ಹತ್ತಿಪ್ಪತ್ತು ರೂಪಾಯಿ ಗಳಿರುತ್ತವೆ. ಈ ಬಾಡಿಗೆ ಜತೆಗೆ ತಮ್ಮ ರಕ್ಷಣೆಗಾಗಿ ಪೋಲಿಸರಿಗೆ ಅಥವಾ ಸ್ಥಳೀಯ ಗೂಂಡಾಗಳಿಗೆ ಇಪ್ಪತ್ತರಿಂದ ಐವತ್ತರಷ್ಟು ರೂಗಳ ಹಫ್ತಾ ನೀಡಬೇಕು. ಸಣ್ಣ ಉತ್ಪಾದಕರು ಕೂಡ ಇದೇ ರೀತಿ ಯಲ್ಲಿ ತಮ್ಮ ಮನೆಯಲ್ಲಿ ಅಥವಾ ಸಿಕ್ಕಿದ ಜಾಗದಲ್ಲಿ ಉತ್ಪಾ ದನೆ ನಡೆಸುತ್ತಾರೆ. ಇಷ್ಟೊಂದು ಇತಿಮಿತಿಗಳ ನಡುವೆಯೂ ಅವರು ಕೆಲವು ನೂರು ಲಾಭ ಗಳಿಸುತ್ತಾರೆ. ಇಂತಹ ವ್ಯಾಪಾರ ಉದ್ದಿಮೆ ಗಳು ನಮ್ಮ ದೇಶ/ರಾಜ್ಯದ ಶೇಕಡ ತೊಂಬತ್ತರಷ್ಟು ದುಡಿಯುವ ಜನರಿಗೆ ಉದ್ಯೋಗ ಕೊಟ್ಟಿವೆ. ನಮ್ಮ ದೇಶ/ರಾಜ್ಯದ ಸಂಪತ್ತಿನ ಶೇಕಡ ನಲ್ವತ್ತರಷ್ಟು ಈ ವಲಯದಿಂದ ಬರುತ್ತಿದೆ.

ಇಂತಹ ವ್ಯಾಪಾರ-ಉದ್ದಿಮೆಗಳು ಯಾವುವೂ ನಮ್ಮ ವಿದ್ಯಾರ್ಥಿಗಳ ಪಠ್ಯಗಳಲ್ಲಿ ಉದಾಹರಣೆಗಳಾಗಿಲ್ಲ. ಇವರು ಕೂಡ ಹಣಕಾಸು, ಮಾರುಕಟ್ಟೆ, ಕೆಲಸಗಾರರು ಮತ್ತು ಇತರ ಉತ್ಪಾದನಾ ಪರಿಕರಗಳನ್ನು ತಮ್ಮದೇ ರೀತಿಯಲ್ಲಿ ನಿರ್ವಹಿಸು ತ್ತಿದ್ದಾರೆ. ಇವರು ಎಷ್ಟೊಂದು ಕನಿಷ್ಠ ಸಂಪನ್ಮೂಲಗಳಲ್ಲಿ ತಮ್ಮ ವ್ಯವಹಾರಗಳನ್ನು ನಿರ್ವಹಿಸುತ್ತಾರೆಂದರೆ, ಅಲ್ಲಿ ಸಣ್ಣ ತಪ್ಪಿಗೂ ಅವಕಾಶ ಇರುವುದಿಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರೂ ತಮ್ಮ ಜೀವನಾಧಾರವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ತಮ್ಮ
ಸ್ವಾಧೀನ ಇರುವ ಅತ್ಯಲ್ಪ ಸಂಪನ್ಮೂಲಗಳನ್ನು ಜಾಣ್ಮೆಯಿಂದ ವಿನಿಯೋಗಿಸಿ ಲಾಭ ಗಳಿಸುವ ಕಲೆ ಇವರಿಗೆ ಕರಗತವಾಗಿದೆ.

ಎಲ್ಲ ಸಂಪನ್ಮೂಲಗಳ(ಹಣಕಾಸು, ಭೂಮಿ, ನೀರು, ಕಚ್ಚಾ ಸಾಮಾಗ್ರಿ) ಕೊರತೆ ಅನುಭವಿಸುವ ನಮ್ಮಂತಹ ಸಮಾಜದಲ್ಲಿ ಇಂತಹ ವ್ಯಾಪಾರ-ಉದ್ದಿಮೆಗಳು ಮಾದರಿಯಾಗಬೇಕಿತ್ತು. ಆದರೆ, ಇವರು ಮಾದರಿಯಾಗುವುದು ಬಿಡಿ, ತುಂಬಾ ಸಾಮಾನ್ಯರಿಗೆ ದಕ್ಕುವ ಗೌರವಗಳೂ ಇವರಿಗೆ ದಕ್ಕುತ್ತಿಲ್ಲ. ಸರಕಾರ ಮತ್ತು ಸಮಾಜ ಇವರನ್ನು ತುಂಬಾ ನಿಕಷ್ಟವಾಗಿ ನಡೆಸಿಕೊಳ್ಳು ತ್ತಿವೆ. ಮನಬಂದಂತೆ ಇವರ ವ್ಯಾಪಾರ, ಉದ್ದಿಮೆಗಳನ್ನು ಎತ್ತಂಗಡಿ ಮಾಡುವುದು, ಇವರ ಮನೆಗಳನ್ನು ಎತ್ತಂಗಡಿ ಮಾಡು ವುದು, ನೀರು, ವಿದ್ಯುತ್, ಹಣಕಾಸು, ಭೂಮಿ ಇತ್ಯಾದಿ ಮೂಲ ಸೌಕರ್ಯಗಳನ್ನು ನಿರಾಕರಿಸುವುದು ಇತ್ಯಾದಿ ಕ್ರಮಗಳ ಮೂಲಕ ಸರಕಾರ, ನೀವು ನಮ್ಮ ಸಮಾಜದಲ್ಲಿ ಬದುಕಲು ಯೋಗ್ಯರಲ್ಲ ಎನ್ನುವ ಸಂದೇಶವನ್ನು ಇವರಿಗೆ ರವಾನೆ ಮಾಡುತ್ತಲೇ ಇರುತ್ತದೆ. ನಮ್ಮ ಸಂಸ್ಕೃತಿಯಂತೂ ಹಿಂದಿನಿಂದಲೂ ಬೆವರು ಸುರಿಸಿ ದುಡಿ ಯುವ ಶ್ರಮಿಕರಿಗೆ ವಿಶೇಷ ಮನ್ನಣೆ ನೀಡಿಲ್ಲ. ಈಗಂತೂ ದೇವರು, ದೇಶ ತೋರಿಸಿ ಜನರನ್ನು ಮಂಗ ಮಾಡುವುದನ್ನೇ ನಮ್ಮ ಸಂಸ್ಕೃತಿಯೆಂದು ವ್ಯಾಖ್ಯಾನಿಸಲಾಗುತ್ತಿದೆ.

ಶೇಕಡ ಹತ್ತರಷ್ಟು ಸಂಪನ್ಮೂಲ ಬಳಸಿಕೊಂಡು ಶೇಕಡ ತೊಂಬತ್ತರಷ್ಟು ಜನರು ಬದುಕುವ ಇಂತಹ ವ್ಯಾಪಾರ ಉದ್ದಿಮೆಗಳ ಬದಲು, ಶೇಕಡ ತೊಂಬತ್ತರಷ್ಟು ಸಂಪನ್ಮೂಲ ಬಳಸಿಕೊಂಡು ಶೇಕಡ ಹತ್ತರಷ್ಟು ಜನರಿಗೆ ಉತ್ತಮ ಜೀವನ ನೀಡುವ ವ್ಯಾಪಾರ- ಉದ್ದಿಮೆಗಳನ್ನು ಮಾದರಿಗಳೆಂದು ಸರಕಾರವೇ ಮುಂಚೂಣಿಗೆ ತರುತ್ತಿದೆ. ಇಂತಹ ದೊಡ್ಡ ಉದ್ದಿಮೆಗಳು ಉದ್ಧಾರವಾದರೆ ನಮ್ಮ ಸಮಾಜವೇ ಉದ್ಧಾರವಾಗುತ್ತದೆಯೆಂದು ಸರಕಾರ ಇವರಿಗೆ ನೀರು, ಭೂಮಿ, ಹಣಕಾಸು, ಕಚ್ಚಾ ಸಾಮಗ್ರಿ, ಮಾನವ ಸಂ ನ್ಮೂಲ ಎಲ್ಲವನ್ನು ಹಿಂದೆ ಉಚಿತವಾಗಿ ಮತ್ತು ಇವತ್ತು ಕಡಿಮೆ ದರದಲ್ಲಿ ನೀಡುತ್ತಿದೆ. ದೊಡ್ಡ ವ್ಯಾಪಾರ, ಉದ್ದಿಮೆಗಳಿಗೆ ಮಹತ್ವ ನೀಡುವ ಈ ಮಾದರಿ, ನಮ್ಮ ಸಮಾಜ ಮಾತ್ರವಲ್ಲ, ಸಂಪನ್ಮೂಲ ಗಳ ಕೊರತೆ ಅನುಭವಿಸುವ ಯಾವುದೇ ಸಮಾಜಕ್ಕೂ ಯೋಗ್ಯ ವಲ್ಲ. ಯಾಕೆಂದರೆ, ಈ ಮಾದರಿ ಬಂದಿರುವುದೇ ಶೇಕಡ ಐದ ರಷ್ಟು ಜನರು ಪ್ರಪಂಚದ ಶೇಕಡ ನಲ್ವತ್ತರಷ್ಟು ಸಂಪನ್ಮೂಲಗಳನ್ನು ಅನುಭೋಗಿಸುವ ಸಮಾಜದಿಂದ. ಈ ಸಮಾಜದ ಉತ್ಪಾದನೆ ಯಲ್ಲಿ ಮನುಷ್ಯ ಶ್ರಮಕ್ಕಿಂತ ಮೆಶಿನರಿಗಳ ಬಳಕೆ ಹೆಚ್ಚಿದೆ. ಅದೇ ರೀತಿ ಅಲ್ಲಿನ ಸಂಪತ್ತಿನಲ್ಲೂ ಕಡಿಮೆ ಸಂಖ್ಯೆಯ ಜನ ಹೆಚ್ಚು ಪಾಲು ಪಡೆದು, ಬಹುತೇಕರು ಅತ್ಯಲ್ಪ ಪಾಲು ಪಡೆಯುತ್ತಿದ್ದಾರೆ.

ಹಲವರನ್ನು ನಿರ್ಗತಿಕರನ್ನಾಗಿಸಿ ಕೆಲವರಿಗೆ ಮಾತ್ರ ಉತ್ತಮ ಬದುಕು ನೀಡುವ ಇದೇ ಮಾದರಿಯನ್ನು ನಮ್ಮ ಯುವಕರಿಗೆ ಅರ್ಥ, ವಾಣಿಜ್ಯ, ನಿರ್ವಹಣಾ ಶಾಸ್ತ್ರಗಳ ಹೆಸರಲ್ಲಿ ಉಣಬಡಿಸು ತ್ತಿದ್ದೇವೆ. ಇಂತಹ ಶಿಕ್ಷಣ ಪಡೆದವರ ಕಲಿಕೆ ಮತ್ತು ಅನುಕರಣೆಯ ಮಾದರಿಗಳು ಬಹುರಾಷ್ಟ್ರೀಯ ಕಂಪನಿಗಳು, ದೊಡ್ಡ ದೊಡ್ಡ ಬ್ಯಾಂಕ್‌ಗಳು, ಸ್ಟಾರ್ ಹೋಟೆಲ್‌ಗಳು, ಮಾಲ್‌ಗಳು, ಚೈನ್ ಸ್ಟೋರ್‌ಗಳು, ಮೆಶಿನರಿ ಬಳಸುವ ಕಷಿಗಳು. ಈ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಮುತ್ತ ನಡೆಯುವ ಸಣ್ಣಪುಟ್ಟ ವ್ಯಾಪಾರ, ಉದ್ದಿಮೆ ಗಳು ತಾವು ಕಲಿಯಬೇಕಾದ ಅಥವಾ ಅನುಕರಿಸಬೇಕಾದ ಮಾದ ರಿಗಳಾಗುವುದಿಲ್ಲ. ಆಮದು ಮಾಡಿಕೊಂಡ ಇಂತಹ ಜ್ಞಾನ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಗುಲಾಮರಂತೆ ದುಡಿ ಯುವ ಮಾನವ ಸಂಪನ್ಮೂಲಗಳನ್ನು ಸಷ್ಟಿಸುತ್ತಿದೆ. ಈ ಜ್ಞಾನ ಇವರನ್ನು ತಮ್ಮದೇ ಪರಿಸರಕ್ಕೆ ಪರಕೀಯವಾಗಿಸಿದೆ. ಬೇಸಿಗೆಯ ಸುಡು ಬಿಸಿಲಲ್ಲೂ ಹಾಕಿಕೊಳ್ಳಬೇಕಾದ ಕೋಟು, ಕಷ್ಟಪಟ್ಟು ಮಾತಾಡಬೇಕಾದ ಇಂಗ್ಲಿಷ್, ರೂಢಿಸಿಕೊಳ್ಳಬೇಕಾದ ಕತಕ ಹಾವಭಾವ ಇತ್ಯಾದಿ ಅನಿವಾರ್ಯತೆಗಳನ್ನು ಈ ವಿದ್ಯಾರ್ಥಿಗಳು ಸಹಿಸಲೇಬೇಕಾಗಿದೆ. ಕೆಲವರು ಇವನ್ನು ಇಷ್ಟಪಟ್ಟು ಕಲಿತರೆ, ಮತ್ತೆ ಕೆಲವರು ಕಷ್ಟಪಟ್ಟು ಕಲಿಯುತ್ತಾರೆ. ಆದರೆ, ಎಲ್ಲರ ಉದ್ದೇಶ ಒಂದೇ-ದೊಡ್ಡ ಉದ್ದಿಮೆಗಳಲ್ಲಿ ನೌಕರಿ ಗಿಟ್ಟಿಸುವುದು. ಯಾರಲ್ಲಿ ಕೂಡ ಸಣ್ಣಪುಟ್ಟ ವ್ಯಾಪಾರ-ಉದ್ದಿಮೆಗಳನ್ನು ಆರಂಭಿಸಿ, ತಾವು ಕೂಡ ಸ್ವತಂತ್ರ ಉದ್ದಿಮೆದಾರರಾಗಬೇಕೆನ್ನುವ ಕನಸನ್ನು ಈ ಶಿಕ್ಷಣ ಬಿತ್ತುತ್ತಿಲ್ಲ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ನಿಜವಾಗಿಯೂ ಪ್ರಭುಗಳಾಗಬೇಕಾದರೆ ನಮ್ಮ ಆರ್ಥಿಕ ನೀತಿ ಆಮೂಲಾಗ್ರವಾಗಿ ಬದಲಾಗಬೇಕಾಗಿದೆ. ಶೇಕಡ ತೊಂಬತ್ತರಷ್ಟು ಸಂಪನ್ಮೂಲ ಬಳಸಿ, ಶೇಕಡ ಹತ್ತರಷ್ಟು ಜನರಿಗೆ ಉತ್ತಮ ಬದುಕು ನೀಡುವ ಮಾದರಿಯನ್ನು ಅಧಿಕತಗೊಳಿಸಿ, ಶೇಕಡ ಹತ್ತರಷ್ಟು ಸಂಪನ್ಮೂಲದಿಂದ ಶೇಕಡ ತೊಂಬತ್ತರಷ್ಟು ಜನರು ಬದುಕುವ ವ್ಯವಸ್ಥೆಯನ್ನು ಅನಧಿಕತಗೊಳಿಸುವ ಮಾದರಿಯನ್ನು ಅಭಿವದ್ಧಿ ಎನ್ನಲಾಗುವುದಿಲ್ಲ. ಒಂದು ಕಾಲದಲ್ಲಿ ಇಂತಹ ಸಣ್ಣಪುಟ್ಟ ವ್ಯಾಪಾರಗಳು ಬೆಳೆದು ದೊಡ್ಡ ವ್ಯಾಪಾರ, ಉದ್ದಿಮೆಗಳಾಗುತ್ತವೆ ಎನ್ನುವ ನಂಬಿಕೆಗಳಿದ್ದವು. ಇದೊಂದು ರೀತಿಯಲ್ಲಿ ಇಂದಿನ ಬಡವರು ಮುಂದಿನ ಮಧ್ಯಮ ವರ್ಗ ಮತ್ತು ಇಂದಿನ ಮಧ್ಯಮ ವರ್ಗ ಮುಂದಿನ ಶ್ರೀಮಂತ ವರ್ಗವಾಗುತ್ತದೆ ಎನ್ನುವ ಅಭಿವದ್ಧಿಯ ನಂಬಿಕೆಯಂತೆ. ಇವೆಲ್ಲ ಅವಾಸ್ತವ ಎನ್ನುವುದು ಈಗಾಗಲೇ ಸಾಬೀತಾಗಿದೆ. ಎಲ್ಲ ಬಗೆಯ ಸಂಪನ್ಮೂಲಗಳ ಕೊರತೆ ಅನುಭವಿಸುವ ನಾವಿರುವಂಥ ಸಮಾಜ ಗಳು, ಕನಿಷ್ಠ ಸಂಪನ್ಮೂಲಗಳಲ್ಲಿ ಬಹುತೇಕರಿಗೆ ಬದುಕು ಕೊಡುವ ಆರ್ಥಿಕ ಚಟುವಟಿಕೆಗಳ ಮಾದರಿಗಳಾಗಬೇಕು. ಇದೇ ರೀತಿ ಯಲ್ಲಿ ನಮ್ಮ ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಕಲಿಸುವ ಅರ್ಥ, ವಾಣಿಜ್ಯ, ನಿರ್ವಹಣಾ ಶಾಸ್ತ್ರಗಳು ಕೂಡ ಆಮೂಲಾಗ್ರ ವಾಗಿ ಬದಲಾಗಬೇಕು. ಅಗಾಧ ಪ್ರಮಾಣದ ಸಂಪನ್ಮೂಲಗಳನ್ನು ಬಳಸಿಕೊಂಡು ಸೀಮಿತ ವರ್ಗದ ಆಸಕ್ತಿಗಳನ್ನು ಪೂರೈಸುವ ವ್ಯಾಪಾರ-ಉದ್ದಿಮೆಗಳ ಬದಲು, ಅತ್ಯಲ್ಪ ಬಂಡವಾಳ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮಾನವ ಸಂಪನ್ಮೂಲ ಬಳಸುವ ವ್ಯಾಪಾರ-ಉದ್ದಿಮೆಗಳು ಕಲಿಕೆಯ ಮಾದರಿಗಳಾಗಬೇಕಾಗಿದೆ.

ಬುಧವಾರ, ಜುಲೈ 24, 2013

ಕಾರ್ಪೊರೇಟ್ ಕಣ್ಣಿನ ಕಲ್ಪನಾ ವಿಲಾಸ - ಬರಗೂರು ರಾಮಚಂದ್ರಪ್ಪ-ಬರಗೂರು ರಾಮಚಂದ್ರಪ್ಪ

ಸೌಜನ್ಯ: ಪ್ರಜಾವಾಣಿ

ಮುಕ್ತ ಆರ್ಥಿಕ ನೀತಿಯನ್ನು ಪ್ರತಿಪಾದಿಸುವ ಜಾಗತೀಕರಣದ ಫಲವಾಗಿ ನಮ್ಮ ದೇಶದಲ್ಲಿ ಪ್ರಬಲ ಕಾರ್ಪೊರೇಟ್ ವಲಯ ರೂಪುಗೊಂಡಿದೆ. ಬಹುರಾಷ್ಟ್ರೀಯ ಕಂಪೆನಿಗಳ ಈ ಕೇಂದ್ರ ಶಕ್ತಿಯು ತನ್ನ ಅಭಿಮತಗಳನ್ನು ಸಮಾಜದ ಪ್ರಧಾನ ಮನೋಧರ್ಮವಾಗಿಸುತ್ತಿದೆ. ಮಿಶ್ರ ಆರ್ಥಿಕ ಪದ್ಧತಿ ಜಾರಿಯಲ್ಲಿದ್ದ ಸಂದರ್ಭದಲ್ಲಿ ಖಾಸಗಿ ಬಂಡವಾಳಕ್ಕಿಂತ ಸಾರ್ವಜನಿಕ ಅಥವಾ ಸರ್ಕಾರಿ ಬಂಡವಾಳದ ಶಕ್ತಿಯು ಕಡೇಪಕ್ಷ ಶೇಕಡ ಒಂದರಷ್ಟಾದರೂ ಹೆಚ್ಚಾಗಿರುತ್ತಿತ್ತು. ಇದರ ಫಲವಾಗಿ ಸರ್ಕಾರದ ನೀತಿ ನಿಲವುಗಳು ಮೇಲುಗೈ ಪಡೆಯುತ್ತಿದ್ದವು. ಅದು ಕೈಗಾರಿಕೀಕರಣದ ಕಾಲ.

ಆದರೀಗ ಚಾಲ್ತಿಯಲ್ಲಿರುವುದು ಜಾಗತೀಕರಣದ ಕಾಲ; ಸರ್ಕಾರದ ನಿಯಂತ್ರಣವಿಲ್ಲದೆ ಮುಕ್ತವಾಗಿ ಬಂಡವಾಳವನ್ನು ತೊಡಗಿಸುವ ಕಾಲ. ಸರ್ಕಾರದ ನಿಯಂತ್ರಣ ಇಲ್ಲ ಎಂದಮೇಲೆ ಸರ್ಕಾರದ ನೀತಿ -ನಿಲವುಗಳ ನಿಯಂತ್ರಣವೂ ಇಲ್ಲ ಅಥವಾ ಖಾಸಗಿ ಬಂಡವಾಳಗಾರರ ನೀತಿ ನಿಲವುಗಳೇ ಸರ್ಕಾರದ್ದೂ ಆಗಿವೆ ಎಂದರ್ಥ. ಸರ್ಕಾರ, ಸಂವಿಧಾನಕ್ಕೆ ಬದ್ಧವಾಗಿ ಕೆಲಸ ಮಾಡಬೇಕು. ಇದರ ಬದಲು ಖಾಸಗೀ ಬಂಡವಾಳಗಾರರ ಆಶಯಕ್ಕೆ ಬದ್ಧವಾಗಿ ಕೆಲಸ ಮಾಡಬೇಕಾದ ಅನಿವಾರ್ಯ ನಿರ್ಮಾಣಗೊಂಡಿದೆ; ಖಾಸಗಿ ಬಂಡವಾಳವು ಸಂವಿಧಾನವನ್ನು ಮೀರಿದ ಶಕ್ತಿಕೇಂದ್ರವಾಗಿದೆ.

ಈ ಶಕ್ತಿಕೇಂದ್ರದ ಮುಖವಾಗಿರುವ ಕಾರ್ಪೊರೇಟ್ ವಲಯವು ಸರ್ಕಾರದ್ದಷ್ಟೇ ಅಲ್ಲ, ಸಮಾಜದ ನೀತಿ ನಿಲವುಗಳನ್ನು ನಿರ್ಧರಿಸುವಷ್ಟು ಶಕ್ತಿಶಾಲಿಯಾಗಿ ಬೆಳೆಯುತ್ತಿದೆ. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ-ಹೀಗೆ ವಿವಿಧ ವಲಯಗಳನ್ನು ಕಾರ್ಪೊರೇಟೀಕರಣಗೊಳಿಸುತ್ತ ಅಂತಿಮ ಸತ್ಯದ ಹರಿಕಾರನಂತೆ ವರ್ತಿಸುವ ಬೃಹತ್ ಬಂಡವಾಳಶಾಹಿಯು ಜನರ ಜೀವನ ದೃಷ್ಟಿಕೋನಕ್ಕೂ ಅನಾರೋಗ್ಯಕರ ತಿರುವು ಕೊಡುತ್ತಿದೆ.

ಉದಾಹರಣೆಗೆ ನೋಡಿ: ಕೈಗಾರಿಕೀಕರಣ ಕಾಲದಲ್ಲಿದ್ದ ಜನರ ಕನಸುಗಳೇ ಬೇರೆ. ಜಾಗತೀಕರಣ ಕಾಲದ ಕನಸುಗಳೇ ಬೇರೆ. ಈಗಲೂ ಹಿಂದಿನ ಕನಸುಗಳೇ ಇರಬೇಕೆಂದು ನಾನು ಹೇಳುತ್ತಿಲ್ಲ. ನಮಗೆ ಆರೋಗ್ಯಕರ ಮನೋಧರ್ಮವನ್ನು ಬೆಳೆಸುವ ಕನಸುಗಳು ಬೇಕು; ಆ ಕನಸುಗಳು ಸಾಕಾರಗೊಳ್ಳಬೇಕು. ಉತ್ತಮ ಶಿಕ್ಷಣ ಪಡೆಯುವುದು, ತಕ್ಕಮಟ್ಟಿನ ಉದ್ಯೋಗ ಪಡೆಯುವುದು, ಬದುಕಲಿಕ್ಕೆ ಬೇಕಿರುವಷ್ಟು ಸಂಬಳ ಪಡೆಯುವುದು, ಮನೆ ಕಟ್ಟಿಸುವುದು, ಕುಟುಂಬದಲ್ಲಿ ನೆಮ್ಮದಿ ಕಾಯ್ದುಕೊಳ್ಳುವುದು- ಈ ಕೆಲವು, ಕೈಗಾರಿಕೀಕರಣ ಕಾಲದ ಕನಸುಗಳು. ಇವು `ಸುಖಮುಖಿಯಾದ' ಕನಸುಗಳು.
ಆದರೆ ಜಾಗತೀಕರಣ ಹುಟ್ಟುಹಾಕುತ್ತಿರುವುದು `ಭೋಗಮುಖಿಯಾದ' ಕನಸುಗಳು. ಬದುಕಲಿಕ್ಕೆ ಮಾತ್ರ ಸಂಬಳ ಸಾಲದು, ತಿಂಗಳಿಗೆ ಲಕ್ಷ ಲಕ್ಷ ಸಂಬಳ ಬೇಕು. ವೈಭೋಗದ ಜೀವನಕ್ಕೆ ವಿಲಾಸದ ವಸ್ತುಗಳು ಬೇಕು. ಇದೇ ಜೀವನ ವಿಧಾನವಾಗಬೇಕು- ಹೀಗೆ ಭೋಗ ಬದುಕನ್ನು ಬಯಸುವ ಜಾಗತೀಕರಣ ಅರ್ಥಾತ್ ಖಾಸಗೀಕರಣ, ಜೀವನದ ಆದ್ಯತೆ ಮತ್ತು ಆದರ್ಶಗಳನ್ನೂ ಬದಲಿಸುತ್ತಿದೆ. ಖಾಸಗಿ ಬಂಡವಾಳಗಾರರ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಾಣ ಮಾಡುವ ದೃಷ್ಟಿಯಿಂದಲೇ ಮನೋಧರ್ಮವನ್ನು ಬದಲಾಯಿಸಲಾಗುತ್ತಿದೆ.

ಬದುಕಿನ ಬದಲಾವಣೆಯೆಂದರೆ ಮೇಲ್ಪದರದ ಬದಲಾವಣೆ ಎಂದಾಗುತ್ತಿದೆ. `ಮೇಲ್ಪದರ' ಎನ್ನುವುದು ಸಾಮಾಜಿಕ, ಆರ್ಥಿಕ ಮೇಲ್ಪದರವೂ ಹೌದು; ತೆಳು ಬದಲಾವಣೆಯ ಸ್ವರೂಪವೂ ಹೌದು. ಹೀಗಾಗಿ ಕೈಗಾರಿಕೀಕರಣ ಕಾಲದ `ವಿಕಾಸ ಜೀವನ'ವು ಖಾಸಗೀಕರಣ ಕಾಲದಲ್ಲಿ `ವಿಲಾಸ ಜೀವನ'ವಾಗುತ್ತಿದೆ. ಖಾಸಗೀಕರಣದ `ಕೆನೆಪದರ'ವಾದ ಕಾರ್ಪೊರೇಟ್ ವಲಯವು ಭೋಗವನ್ನೇ ಸುಖವೆಂದು ಬಿಂಬಿಸುತ್ತಿದೆ. ವಾಸ್ತವವಾಗಿ ಭೋಗವೇ ಬೇರೆ, ಸುಖವೇ ಬೇರೆ. ಆದರೆ ಭೋಗದ ಬೆನ್ನು ಹತ್ತಿದವರು ಸುಖಕ್ಕೆ ಬೆನ್ನು ತೋರಿಸುತ್ತಾರೆಂಬ ಸತ್ಯವನ್ನು ಕಾರ್ಪೊರೇಟ್ ವಲಯ ಹೂತುಹಾಕುತ್ತಿದೆ.

ಕಾರ್ಪೊರೇಟ್ ವಲಯದಲ್ಲೂ ಸಾಂಸ್ಕೃತಿಕ ಸೃಜನಶೀಲರಿದ್ದಾರೆ. ಆದರೆ ಅವರು ಎಷ್ಟರಮಟ್ಟಿಗೆ ಕಾರ್ಪೊರೇಟ್ ಮನೋಧರ್ಮವನ್ನು ಮೀರಿ ಸೃಷ್ಟಿಶೀಲರಾಗುತ್ತಾರೆ ಎನ್ನುವುದು ಮುಖ್ಯ. ಕಾಲದೊಳಗಿದ್ದೂ ಕಾಲವನ್ನು ಮೀರುವ ಕಲೆಗಾರರು ಏಕಕಾಲಕ್ಕೆ ಸೃಜನಶೀಲರೂ ಚಲನಶೀಲರೂ ಆಗುತ್ತಾರೆ. ಹೀಗಾದಾಗ ಮಾತ್ರವೇ ಒಳಗನ್ನು ಹೊಕ್ಕು ಹೂರಣವಾಗಿ ಹೊರಬರಲು ಸಾಧ್ಯ. ಇದು ಸಾಂಸ್ಕೃತಿಕ ಕ್ಷೇತ್ರದ ನಿರಂತರ ಸವಾಲು. ಈ ಸವಾಲನ್ನು ಸಹಜವಾಗಿ ಒಳಗೊಳ್ಳದೇ ಹೋದರೆ ಮೇಲುಗೈ ಸಾಧಿಸಿದ ಮೇಲ್ಪದರಗಳ ಕೆನೆಪದರವಾಗುವ ಕಲೆಗಾರರೊ ತಲೆಗಾರರೊ ಆಗುವ ಅಪಾಯವೇ ಹೆಚ್ಚು. ಇಂಥ ಕಲೆಗಾರರು ಆಳಕ್ಕಿಳಿಯದೆ ಅಗಲವನ್ನೇ ಅಲಂಕರಿಸಿ ಅಭಿವ್ಯಕ್ತಿಸುತ್ತಾರೆ; `ತಲೆಗಾರರು' ಈ ವಲಯದ ದೃಷ್ಟಿಕೋನವನ್ನೇ ಅಂತಿಮ ಸತ್ಯವೆಂದು ಸಾರುತ್ತಾರೆ; ಬೌದ್ಧಿಕ ಭೋಗದಲ್ಲಿ ಸಂಭ್ರಮಿಸುತ್ತಾರೆ. ಆಗ ಸತ್ಯದೂರವಾದ ಪರಿಕಲ್ಪನೆಗಳು ಚಾಲ್ತಿಗೆ ಬರುತ್ತವೆ. ಹೀಗೆ ಚಾಲ್ತಿಗೆ ಬಂದ ಪರಿಕಲ್ಪನೆಗಳಲ್ಲಿ `ಜಾಗತಿಕ ಹಳ್ಳಿ' ಎಂಬುದೂ ಒಂದು.

ಬಹುರಾಷ್ಟ್ರೀಯ ಕಂಪೆನಿಗಳು ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ಹೊಂದದ ರಾಷ್ಟ್ರಗಳಿಗೆ ದಾಳಿಯಿಟ್ಟು ಆಳತೊಡಗಿದ್ದರ ಫಲವಾಗಿ ಅನೇಕ ಬದಲಾವಣೆಗಳಾಗಿವೆ; ಮಾಹಿತಿ ತಂತ್ರಜ್ಞಾನವು ಮೊದಲೇ ಇದ್ದರೂ ಈಗ ನಾಗಾಲೋಟದಲ್ಲಿ ಅಭಿವೃದ್ಧಿ ಹೊಂದಿದೆ; ಈ ದೇಶದಿಂದಲೇ ವಿದೇಶದ ಉದ್ಯೋಗವನ್ನೂ ಮಾಡುವ ಮಾದರಿಯೂ ನೆಲೆಯೂರಿದೆ. ಬಹುಮುಖ್ಯವಾಗಿ ಈಗ ಪ್ರಪಂಚದ ಯಾವ ಭಾಗವನ್ನಾದರೂ ಅತಿಶೀಘ್ರವಾಗಿ ಸಂಪರ್ಕಿಸುವಷ್ಟು ತಂತ್ರಜ್ಞಾನ ಬೆಳೆದಿದೆ. ಹೀಗಾಗಿ ಸಂವಹನ ಸಮೀಪವಾಗಿದೆ. ಈ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು `ಜಾಗತಿಕ ಹಳ್ಳಿ'ಯ ಕಲ್ಪನೆ ಹೊರಹೊಮ್ಮಿದೆ. ಅಂದರೆ ಜಗತ್ತೇ ಒಂದು ಹಳ್ಳಿಯಂತಾಗಿದೆ ಎಂಬುದು ಇದರ ಅರ್ಥ.

ಆದರೆ ಜಗತ್ತು, ನಿಜಕ್ಕೂ ಒಂದು ಹಳ್ಳಿಯಾಗಿದೆಯೆ? ಸಂಪರ್ಕದ ಅಗಾಧ ಸಾಧ್ಯತೆಗಳು ವಿವಿಧ ದೇಶಗಳನ್ನು ಹತ್ತಿರ ತಂದಿರಬಹುದು. ಬಹುಬೇಗ ಪರಸ್ಪರ ಸಂವಾದಿಸಲು ಸಾಧ್ಯವಾಗಿರಬಹುದು. ಇದಿಷ್ಟೇ ಜಗತ್ತನ್ನು ಹಳ್ಳಿಯಾಗಿಸುವುದಿಲ್ಲ. `ಹಳ್ಳಿಯೇ ಒಂದು ಜಗತ್ತು' ಎಂಬ ಸಾಂಸ್ಕೃತಿಕ ಕಲ್ಪನೆಗೆ ವಿರುದ್ಧವಾಗಿ `ಜಗತ್ತೇ ಒಂದು ಹಳ್ಳಿ' ಎಂಬ ಆರ್ಥಿಕ ಕಲ್ಪನೆ ಹುಟ್ಟಿಕೊಂಡಂತೆ ಕಾಣುತ್ತದೆ. ಮುಕ್ತ ಆರ್ಥಿಕ ನೀತಿಯು ಖಾಸಗಿ ಬಂಡವಾಳಶಾಹಿಯ ಏಕರೂಪ ನೀತಿಯನ್ನು ಜಗತ್ತಿನಾದ್ಯಂತ ವಿಸ್ತರಿಸುವ ಅಪೇಕ್ಷೆಯಿಂದ ಜಗತ್ತೇ ಒಂದು ಹಳ್ಳಿಯೆಂದು ಭಾವಿಸಿರಬೇಕು.

ಆದರೆ ವಾಸ್ತವ ಏನೆಂದರೆ, ಒಂದು ದೇಶವೂ ಒಂದು ಹಳ್ಳಿಯಾಗುವುದಿಲ್ಲ; ಕಡೆಗೆ ಒಂದು ರಾಜ್ಯವೂ ಒಂದು ಜಿಲ್ಲೆಯೂ `ಒಂದು ಹಳ್ಳಿ'ಯಾಗುವುದಿಲ್ಲ. ಯಾಕೆಂದರೆ ಜಿಲ್ಲೆಯೊಂದರಲ್ಲೇ ನಾನಾ ಮಾದರಿಯ ಹಳ್ಳಿಗಳಿರುತ್ತವೆ. ಭೌಗೋಳಿಕ ವ್ಯತ್ಯಾಸದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ವೈವಿಧ್ಯತೆಯಿಂದ ವಿಭಿನ್ನ ಒಳ ವಿಭಾಗಗಳೇ ನಿರ್ಮಾಣಗೊಂಡಿರುತ್ತವೆ. ಕರ್ನಾಟಕವನ್ನೇ ತೆಗೆದುಕೊಳ್ಳುವುದಾದರೆ ಬಯಲುಸೀಮೆ, ಕರಾವಳಿ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಎಂದು ಸೌಲಭ್ಯಕ್ಕೆ ವಿಭಾಗಿಸಿಕೊಂಡರೂ ಈ ಒಂದೊಂದು ವಿಭಾಗಗಳಲ್ಲೂ ವಿಭಿನ್ನವಾದ ಹಳ್ಳಿ ಸಂಚಯಗಳಿವೆ. ಕರ್ನಾಟಕದ ಈ ವಿಭಾಗಗಳೂ ಭೌಗೋಳಿಕ ಸತ್ಯವಾಗಬಹುದೇ ಹೊರತು ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಏಕರೂಪದ ವಾಸ್ತವಗಳಲ್ಲ. ಅದೆಷ್ಟು ಕಲಾಪ್ರಕಾರಗಳು, ಅದೆಷ್ಟು ಆಚರಣೆಗಳು, ಅದೆಷ್ಟು ಕುಲಗಳು, ಅದೆಷ್ಟು ಕಸುಬುಗಳು! ವಸ್ತುಸ್ಥಿತಿ ಹೀಗಿರುವಾಗ `ಜಗತ್ತೇ ಒಂದು ಹಳ್ಳಿ' ಎಂಬ ಕಲ್ಪನೆಯನ್ನು ನೆಲೆಗೊಳಿಸುವ ಪ್ರಯತ್ನವು ಮೇಲ್ಪದರದ ಒಂದು `ವಿಚಾರ ವಿಲಾಸ'ವಾಗುತ್ತದೆ. ಬದುಕಿನ ವೈವಿಧ್ಯತೆಯನ್ನು ಕಂಡೂ ಕಾಣದಂತಿರುವ ಜಾಣ ಕುರುಡಾಗುತ್ತದೆ. ಸಾಮಾಜಿಕ, ಸಾಂಸ್ಕೃತಿಕ ವೈವಿಧ್ಯತೆಯನ್ನು ಮರೆಮಾಚುವ ಆರ್ಥಿಕ ಹುನ್ನಾರವಾಗುತ್ತದೆ. ಕಡೆಗೆ `ಜಾಗತಿಕ ಹಳ್ಳಿ' ಎನ್ನುವುದು ಒಂದು ಅಪವ್ಯಾಖ್ಯಾನ ಅಥವಾ ಹುಸಿವ್ಯಾಖ್ಯಾನವಾಗುತ್ತದೆ.

`ಜಾಗತಿಕ ಹಳ್ಳಿ' ಎಂಬ ಕಲ್ಪನೆಯ ಜೊತೆಗೆ, ಕೆಲವರು `ಹಳ್ಳಿಗಳೇ ಒಂದು ವೃದ್ಧಾಶ್ರಮ' ಎಂಬ ಕಲ್ಪನೆಯನ್ನೂ ಹರಿಬಿಟ್ಟಿದ್ದಾರೆ. ಕೆಲವು ಲೇಖನಗಳಲ್ಲಿ ವೇದಿಕೆಗಳಲ್ಲಿ ಖಾಸಗಿ ಚರ್ಚೆಗಳಲ್ಲಿ `ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ' ಎಂಬ ಪ್ರತಿಪಾದನೆಯು ಪ್ರಚುರಗೊಳ್ಳುತ್ತಿದೆ. ಈ ಪ್ರತಿಪಾದಕರು ತಾವು ನೋಡಿರಬಹುದಾದ ಬೆರಳೆಣಿಕೆಯ ಹಳ್ಳಿಗಳ ಆಧಾರದಲ್ಲಿ ಮಾತಾಡುತ್ತಿರಬಹುದು. ಆದರೆ ಇದೊಂದು ಸಾಮಾನ್ಯೀಕರಿಸಲಾಗದ ಪ್ರತಿಪಾದನೆ; ವಾಚ್ಯಾರ್ಥದಲ್ಲಿ ಒಂದು ಕಲ್ಪನೆ.
`ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ' ಎಂದು ಹೇಳುತ್ತಿರುವವರ ತಲೆಯಲ್ಲಿರುವುದು ತಮ್ಮ ಮಕ್ಕಳನ್ನು ಉದ್ಯೋಗ ನಿಮಿತ್ತ ನಗರಗಳಿಗೆ ಅಥವಾ ವಿದೇಶಗಳಿಗೆ ಕಳಿಸಿ ಒಂಟಿತನ ಅನುಭವಿಸುತ್ತಿರುವ ತಾಯಿ ತಂದೆಯರು. ಅಥವಾ ತಾಯಿ ತಂದೆಯರನ್ನು ಬಿಟ್ಟು ದೂರದಲ್ಲಿರುವ, ಅಥವಾ ದೂರವಾಗಿರುವ ಮಕ್ಕಳು. ಒಂಟಿತನ ಅನುಭವಿಸುವ ವೃದ್ಧರ ಬಗ್ಗೆ ಇರುವ ಕಾಳಜಿ ಖಂಡಿತ ಮಾನವೀಯವಾದದ್ದು, ಆದರೆ ಹಳ್ಳಿಗಳಲ್ಲಿ ಇಂಥವರ ಸಂಖ್ಯೆ ಎಷ್ಟಿದೆ? ಅನೇಕ ಹಳ್ಳಿಗಳಲ್ಲಿ ಇಂತಹ ಒಂದು ಕುಟುಂಬವೂ ಸಿಗುವುದಿಲ್ಲ. ಇಷ್ಟಕ್ಕೂ ನಮ್ಮ ಹಳ್ಳಿಗಳಲ್ಲಿ ಯುವಕರೇ ಇಲ್ಲವೆ? ಹಳ್ಳಿಗಳ ಕುಟುಂಬಗಳು ಸಂಪೂರ್ಣವಾಗಿ ಯುವರಹಿತವಾಗಿವೆಯೆ? ಖಂಡಿತ ಇಲ್ಲ. ಅರೆಬರೆ ವಿದ್ಯಾಭ್ಯಾಸ ಮಾಡಿದ ಯುವಕ-ಯುವತಿಯರು, ನಿರುದ್ಯೋಗಿಗಳು, ನಗರದಲ್ಲಿ ಉದ್ಯೋಗ ಸಿಗದೆ ವ್ಯವಸಾಯಕ್ಕಿಳಿದ ವಿದ್ಯಾವಂತ ಯುವಕರು, ಅನಕ್ಷರಸ್ಥ ಯುವ ಜೀವಿಗಳು- ಎಷ್ಟು ಜನ ಬೇಕು? ಪ್ರತಿ ಹಳ್ಳಿಯಲ್ಲೂ ಇಂಥ ಯುವ ತಂಡ ಸಿಕ್ಕುತ್ತದೆ.

ಜಾಗತೀಕರಣದ ಹೊಡೆತದಲ್ಲಿ ಕೃಷಿ ಪ್ರಧಾನ ಭಾರತವು ಉದ್ಯಮ ಪ್ರಧಾನ ಭಾರತವಾಗಿ ರೂಪಾಂತರಗೊಳ್ಳುತ್ತಿರುವ ಸ್ಥಿತ್ಯಂತರದ ಸಂಕಷ್ಟ ಹಾಗೂ ಸಂಕಟಗಳನ್ನು ಹಳ್ಳಿಗಳು ಪ್ರತಿನಿಧಿಸುತ್ತಿವೆ; ಕಷ್ಟ, ಸುಖ, ಭೋಗಗಳ ಗೊಂದಲದಲ್ಲಿ ತಲ್ಲಣಗೊಂಡಿವೆ. ಇಂದು ರಾಜಧಾನಿಯ ರಾಜಕೀಯ ಮೇಲಾಟಗಳೆಲ್ಲ ವಿಕೇಂದ್ರೀಕರಣಗೊಂಡು ಹಳ್ಳಿಯವರು ಅದರ ಭಾಗಸ್ಥರಾಗಿದ್ದಾರೆ.

ವಸ್ತುಸ್ಥಿತಿ ಹೀಗಿರುವಾಗ `ಹಳ್ಳಿಗಳೆಲ್ಲ ವೃದ್ಧಾಶ್ರಮಗಳಾಗುತ್ತಿವೆ' ಎಂಬ ಪ್ರತಿಪಾದನೆಯ ಹಿಂದೆ ವೃದ್ಧರ ಬಗೆಗಿನ ಕಾಳಜಿ ಮಾತ್ರ ಇದೆಯೊ ಅಥವಾ ಜಾಗತೀಕರಣದ ಫಲವಾಗಿ ಖಾಸಗಿ ವಲಯವು ಹಳ್ಳಿ ಯುವಕರಿಗೆಲ್ಲ ನಗರ ಮತ್ತು ವಿದೇಶಗಳಲ್ಲಿ ಉದ್ಯೋಗ ಕಲ್ಪಿಸಿದ್ದರಿಂದ ಹಳ್ಳಿಗಳು ವೃದ್ಧಾಶ್ರಮವಾಗಿವೆ ಎಂಬ ಚಿಂತನೆ ಇದೆಯೊ ಎಂಬ ಅನುಮಾನ ಮೂಡುತ್ತದೆ. ಒಂದಷ್ಟು ಜನಕ್ಕೆ ಉದ್ಯೋಗ ಸಿಕ್ಕಿರುವುದು ಸತ್ಯವಾದರೂ ಹಳ್ಳಿಗಳಲ್ಲಿ ಯುವಕರೆಲ್ಲ ಬರಿದಾಗುವಷ್ಟು ಉದ್ಯೋಗಾವಕಾಶಗಳನ್ನು ಖಂಡಿತ ಕಲ್ಪಿಸಿಲ್ಲ. ಆದ್ದರಿಂದ ಹಳ್ಳಿಗಳು ವೃದ್ಧಾಶ್ರಮಗಳಾಗಿಲ್ಲ.

ಕಾರ್ಪೊರೇಟ್ ವಲಯದಿಂದ ಬಹುದೊಡ್ಡ ಪ್ರಮಾಣದಲ್ಲಿ ಅಪವ್ಯಾಖ್ಯಾನಕ್ಕೆ ಈಡಾಗಿರುವುದು `ಅಭಿವೃದ್ಧಿಯ ಪರಿಕಲ್ಪನೆ'. ಇವತ್ತು ಎಲ್ಲ ಆಡಳಿತಗಾರರೂ ಅಭಿವೃದ್ಧಿ ಎಂಬ ಪದವನ್ನು ಮಂತ್ರದಂತೆ ಉದ್ಘೋಷಿಸುತ್ತಿದ್ದಾರೆ. ಆದರೆ ಅಭಿವೃದ್ಧಿಯ ಸಮಗ್ರ ಪರಿಕಲ್ಪನೆಯ ಬದಲು ಆಂಶಿಕ ನೆಲೆಯಲ್ಲಿ ನಿರೂಪಿಸುತ್ತಿದ್ದಾರೆ. ಕಾರ್ಪೊರೇಟ್ ವಲಯಕ್ಕೆ ಪೂರಕವಾದ ಅಭಿವೃದ್ಧಿ ಕಲ್ಪನೆಯೇ ನಿಜವಾದ ಅಭಿವೃದ್ಧಿ ಪಥವೆಂಬ ಭಾವನೆಯನ್ನು ಬುದ್ಧಿಪೂರ್ವಕವಾಗಿ ಮೂಡಿಸಲಾಗುತ್ತಿದೆ. ನಿಜ, ಅಭಿವೃದ್ಧಿಯ ಸಮಗ್ರ ಕಲ್ಪನೆಯಲ್ಲಿ ಕಾರ್ಪೊರೇಟ್ ವಲಯವೂ ಒಳಗೊಳ್ಳಬೇಕು. ಅದರ ಅಗತ್ಯಗಳನ್ನೂ ಪೂರೈಸಬೇಕು. ಆದರೆ ಅದೊಂದೇ ಅಭಿವೃದ್ಧಿಯ ಅಳತೆಗೋಲಾಗಬಾರದು ಮತ್ತು ಅದೊಂದೇ ಆದ್ಯತೆಯಾಗಬಾರದು. ಕಾರ್ಪೊರೇಟ್ ವಲಯದ ಆರ್ಥಿಕ ಅಭಿವೃದ್ಧಿ ಕಲ್ಪನೆಯ ಜೊತೆಗೆ ಮಾನವ ಅಭಿವೃದ್ಧಿಯ ಕಲ್ಪನೆಯೂ ಇದೆಯೆಂಬುದನ್ನು ಮರೆಯಬಾರದು; ಅಷ್ಟೇ ಅಲ್ಲ, ಭಾರತದಂತಹ ದೇಶಗಳಲ್ಲಿ ಮಾನವ ಅಭಿವೃದ್ಧಿಯ ಆಧಾರದಲ್ಲೇ ಆರ್ಥಿಕ ಅಭಿವೃದ್ಧಿಯ ಪರಿಕಲ್ಪನೆಯನ್ನು ರೂಪಿಸಿಕೊಳ್ಳಬೇಕಾದ ಅಗತ್ಯವಿದೆ. ಬಹುಭಾಷೆ, ಬಹುಸಂಸ್ಕೃತಿ, ಬಹುಜಾತಿ- ವರ್ಗಗಳ ಸಂಕೀರ್ಣ ಸಮಾಜದ ಅಭಿವೃದ್ಧಿಗೆ ಏಕಮುಖೀ ಆರ್ಥಿಕ ಪರಿಕಲ್ಪನೆಯು ಹೊಂದುವುದಿಲ್ಲ, ಜಾಗತೀಕರಣದ ಫಲವಾಗಿ ನೆಲೆಯೂರುತ್ತಿರುವುದು ಖಾಸಗಿ ವಲಯಕ್ಕೆ ಪೂರಕವಾದ ಅಭಿವೃದ್ಧಿ ಕಲ್ಪನೆ. ಇದು ಕಾರ್ಪೊರೇಟ್ ಕಣ್ಣಿನ ಕಲ್ಪನೆ.

ನನ್ನದೊಂದು ಸರಳ ಪ್ರಶ್ನೆ: ನಮ್ಮ ಕಾರ್ಪೊರೇಟ್ ವಲಯಕ್ಕೆ ವಿದೇಶಿ ಮಾರುಕಟ್ಟೆ ಲಭ್ಯವಾಗಿರುವಂತೆ ನಮ್ಮ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯವಾಗಿದೆಯೆ? ನಮ್ಮವರು ಉತ್ಪಾದಿಸುವ ಅನೇಕ ವಸ್ತುಗಳಿಗೆ ವಿದೇಶಗಳಲ್ಲಿ ಮಾರುಕಟ್ಟೆ ಕಲ್ಪಿಸಲಾಗಿದೆಯೆ? ಬಹುಪಾಲು ಇಲ್ಲ. ಆದರೆ ವಿದೇಶಿ ಉತ್ಪನ್ನಗಳಿಗೆ ನಮ್ಮ ದೇಶ ಉತ್ತಮ ಮಾರುಕಟ್ಟೆ. ಅಮೆರಿಕದ ಹಿಂದಿನ ಅಧ್ಯಕ್ಷ ಬುಷ್ ಅವರು ನಮ್ಮ ದೇಶಕ್ಕೆ ಬಂದಾಗ ಹೇಳಿದ ಮೊದಲ ಮಾತು:    `ಇಂಡಿಯಾದ ಮಧ್ಯಮ ವರ್ಗ ಅಮೆರಿಕಕ್ಕೆ ಉತ್ತಮ ಮಾರುಕಟ್ಟೆ'. ಹೀಗೆ ಭಾರತವನ್ನು ವಿದೇಶಿಯರಿಗೆ ಮಾರುಕಟ್ಟೆ ಮಾಡಿದ ಮುಕ್ತ ಆರ್ಥಿಕ ನೀತಿಯಲ್ಲಿ 1997 ರಿಂದ 2005ರ ವರೆಗೆ ಒಂದೂವರೆ ಲಕ್ಷ ರೈತರು ಆತ್ಯಹತ್ಯೆ ಮಾಡಿಕೊಂಡಿದ್ದನ್ನು ಮರೆಯಲಾದೀತೆ? ರೂ 5000 ಕೋಟಿಗೂ ಹೆಚ್ಚು ಸಂಪತ್ತುಳ್ಳ ನಮ್ಮ ದೇಶದ ಕೋಟ್ಯಧಿಪತಿಗಳ ಸಂಖ್ಯೆಯು 13 ರಿಂದ 55ಕ್ಕೆ ಏರಿದೆ ಎಂಬ ಅಂಶವೇ ಅಭಿವೃದ್ಧಿಯೆ? ಶೇ 35 ರಷ್ಟಿದ್ದ ಭಾರತದ ಬಡವರ ಪ್ರಮಾಣ ಶೇ 43ಕ್ಕೆ ಏರಿರುವುದೇ ಅಭಿವೃದ್ಧಿಯೆ? ಅಭಿವೃದ್ಧಿಯ ವಿಷಯ ಬಂದಾಗಲೆಲ್ಲ ಪ್ರಸ್ತಾಪವಾಗುವ ಹೆಸರು-ನರೇಂದ್ರ ಮೋದಿ. ಮೋದಿ ಮಾದರಿಯೇ ಈಗ ಅಭಿವೃದ್ಧಿಯ ಆದರ್ಶ ಮಾದರಿ! ಯಾಕೆಂದರೆ ಅವರೀಗ ಕಾರ್ಪೊರೇಟ್ ವಲಯದ ಕಣ್ಮಣಿ.

ನಿಜ; ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿಯಾಗಿ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡಿದ್ದಾರೆ. ನಾನೇ ಖುದ್ದು ಗುಜರಾತ್‌ನ ಕೆಲವು ಭಾಗಗಳಲ್ಲಿ ಪ್ರವಾಸ ಮಾಡಿ ಉತ್ತಮ ರಸ್ತೆಗಳನ್ನು ಕಂಡಿದ್ದೇನೆ. ಬಹುರಾಷ್ಟ್ರೀಯ ಕಂಪೆನಿಗಳು ನೆಲೆಯೂರಿ ಅನೇಕರಿಗೆ ಉದ್ಯೋಗಾವಕಾಶವಾಗಿರುವುದನ್ನು ನೋಡಿದ್ದೇನೆ. ಆದರೆ ಇದಿಷ್ಟೇ ಅಭಿವೃದ್ಧಿಯೆ? ಮೋದಿಯವರನ್ನು ಹಾಡಿ ಹೊಗಳುತ್ತಿರುವ ವಲಯ ಯಾವುದು? ರಾಷ್ಟ್ರೀಯವೆಂದು ಭ್ರಮಿಸಲಾದ ವಾಹಿನಿಗಳಲ್ಲಿ ಪ್ರಚಾರಕ್ಕೆ ಪೂರಕವಾದ ವಲಯ ಯಾವುದು? ಅದೇ ಕಾರ್ಪೊರೇಟ್ ವಲಯ. ಈ ವಲಯದ ಒಬ್ಬ ಪ್ರತಿನಿಧಿಯಾದ ಅನಿಲ್ ಅಂಬಾನಿ ಅವರು ಮೋದಿಯವರನ್ನು ಮಹಾತ್ಮ ಗಾಂಧಿಯವರಿಗೆ ಹೋಲಿಸುವ ವಿಪರ್ಯಾಸಕ್ಕೆ ಎಗ್ಗಿಲ್ಲದೆ ಮುಂದಾದರು. ಅಭಿವೃದ್ಧಿಯ ಈ `ಹರಿಕಾರರು' ಗುಜರಾತ್‌ನ ಇನ್ನೊಂದು ಮುಖವನ್ನು ನೋಡಿದ್ದಾರೆಯೆ? ನೋಡಿಲ್ಲ ಅಥವಾ ನೋಡಿಯೂ ನೋಡದಂತಿದ್ದಾರೆ.

ಗುಜರಾತ್‌ನಲ್ಲಿ 8000 ಸಣ್ಣ ಕೈಗಾರಿಕೆಗಳು ಮುಚ್ಚಿಹೋಗಿ ಈ ವಿಷಯದಲ್ಲಿ ಮಲ್ಲಿಕಾ ಸಾರಾಬಾಯ್ ಅವರು ಹೋರಾಟ ನಡೆಸಿದರು. ಭರತ್‌ಸಿಂಗ್ ಜಾಲಾ ಎನ್ನುವವರು ಮಾಹಿತಿ ಹಕ್ಕಿನ ಪ್ರಕಾರ ರೈತರ ಆತ್ಮಹತ್ಯೆ ವಿವರ ಕೇಳಿದಾಗ ಗುಜರಾತ್ ಸರ್ಕಾರ ಕೊಡಲಿಲ್ಲ. ಕಡೆಗೆ ಹೈಕೋರ್ಟ್‌ಗೆ ಹೋಗಿ ಮಾಹಿತಿ ಪಡೆದರು. ಇದರ ಪ್ರಕಾರ 2003ರಿಂದ 2007ರ ವರೆಗಿನ ನಾಲ್ಕು ವರ್ಷಗಳಲ್ಲಿ ಒಟ್ಟು 489 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯಾ ಸರಣಿ ಈಗಲೂ ಮುಂದುವರೆದಿದೆ. ಇದೇ ನಾಲ್ಕು ವರ್ಷಗಳಲ್ಲಿ 6,055 ರೈತರು ಅಪಘಾತಗಳಲ್ಲಿ ಸತ್ತರೆಂದು ಸರ್ಕಾರದ ಮಾಹಿತಿ ತಿಳಿಸುತ್ತದೆ. ಕಾರ್ಪೊರೇಟ್ ಕಂಪೆನಿಗಳಿಗೆ ಸಾವಿರಾರು ಕೋಟಿ ರಿಯಾಯಿತಿ ನೀಡಿರುವ ಗುಜರಾತ್ ಸರ್ಕಾರವು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಖರ್ಚು ಮಾಡಿದ 18 ದೊಡ್ಡ ರಾಜ್ಯಗಳ ಪೈಕಿ 17ನೇ ಸ್ಥಾನದಲ್ಲಿದೆಯೆಂದು ರಿಸರ್ವ್ ಬ್ಯಾಂಕ್ ವರದಿಯಲ್ಲಿದೆ.

ಶಿಕ್ಷಣ ಕ್ಷೇತ್ರದಲ್ಲಿ ಗುಜರಾತ್ 6ನೇ ಸ್ಥಾನವನ್ನೂ ಆರೋಗ್ಯದ ವಿಷಯದಲ್ಲಿ 9ನೇ ಸ್ಥಾನವನ್ನೂ ಪಡೆದಿದೆ. ಇತ್ತೀಚಿನ ಮಾಹಿತಿ ಪ್ರಕಾರ ಗುಜರಾತ್‌ನಲ್ಲಿ ಶೇ 44 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಈ ಎಲ್ಲ ಅಮಾನವೀಯ ಅಂಶಗಳ ಜೊತೆಗೆ ಗುಜರಾತ್ ಸರ್ಕಾರದ ಸಾಲವು 2007ರ ವೇಳೆಗೇ 94,000 ಕೋಟಿ ರೂಪಾಯಿಗಳಷ್ಟು ಇತ್ತು. ಮೋದಿಯವರು ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ಈ ಸಾಲ 45,300 ಕೋಟಿ ರೂಪಾಯಿಗಳಷ್ಟು ಇತ್ತು.

ಇನ್ನೂ ಮುಖ್ಯವಾದ ಅಂಶವೆಂದರೆ 2011ರ ಮಾನವ ಅಭಿವೃದ್ಧಿ ವರದಿಯ ಪ್ರಕಾರ 12 ರಾಜ್ಯಗಳನ್ನು ಗುರುತಿಸಲಾಗಿದ್ದು ಗುಜರಾತ್ ರಾಜ್ಯ 11ನೇ ಸ್ಥಾನದಲ್ಲಿದೆ. ಇದರರ್ಥ ಏನು? ಮಾನವ ಅಭಿವೃದ್ಧಿಗೆ ಹಿನ್ನಡೆ ತಂದು, ಕಾರ್ಪೊರೇಟ್ ವಲಯಕ್ಕೆ ಪೂರಕವಾದರೆ ಮಾತ್ರ ಅಭಿವೃದ್ಧಿ ಎನ್ನಲಾದೀತೆ? ಕಡೇಪಕ್ಷ ಒಂದು ಸಮತೋಲನ ಬೇಡವೆ?

ಗುಜರಾತ್ ಬಿಡಿ, ಕೇಂದ್ರ ಸರ್ಕಾರವೇ ನೇಮಿಸಿದ ಅರ್ಜುನ್ ಸೇನ್‌ಗುಪ್ತ ಆಯೋಗವು 2007 ರಲ್ಲಿ ಕೊಟ್ಟ ವರದಿಯ ಪ್ರಕಾರ ಈ ದೇಶದ ಶೇ 77.5 ರಷ್ಟು ಜನರ ದೈನಂದಿನ ತಲಾ ಆದಾಯ ಸರಾಸರಿ 20 ರೂಪಾಯಿ ಮತ್ತು 45 ಕೋಟಿ ಜನರು ಒಪ್ಪೊತ್ತಿನ ಊಟವನ್ನು ಮಾತ್ರ ಮಾಡುತ್ತಾರೆ. ಇದು ಮನಮೋಹನ್ ಸಿಂಗ್ ಸರ್ಕಾರವು ಕೊಟ್ಟ ಕಾರ್ಪೊರೇಟ್ ಕೊಡುಗೆ! ಆರ್ಥಿಕ ನೀತಿ ವಿಷಯದಲ್ಲಿ ಮನಮೋಹನ್ ಸಿಂಗ್ ಅವರ ಆಶಯಗಳನ್ನು ಕಾಂಗ್ರೆಸ್‌ನವರಿಗಿಂತ ಸಮರ್ಥವಾಗಿ ಅನುಷ್ಠಾನಗೊಳಿಸಿದವರು ಮೋದಿ! `ಮೋದಿ ಮನಮೋಹನ ಸಿಂಗ್' ಮಾದರಿಯ ಕಾರ್ಪೊರೇಟ್ ಕಲ್ಪನಾ ವಿಲಾಸದಲ್ಲಿ ಅಭಿವೃದ್ಧಿಯ ಅಪವ್ಯಾಖ್ಯಾನ ಮುಂದುವರೆದಿದೆ. ಅಪವ್ಯಾಖ್ಯಾನವೇ ಅಭಿವೃದ್ಧಿಯ ಆದರ್ಶವಾಗಿದೆ. ಸಮತೋಲನ ಸೊರಗಿ ಹೋಗಿದೆ.

ಮಂಗಳವಾರ, ಜುಲೈ 23, 2013

ಅಲೆಮಾರಿಯ ಅಂತರಂಗ

ನೆಲೆಯಿಲ್ಲದ ಅಲೆಮಾರಿಗಳು

 


ಜಿ.ಪಿ.ಬಸವರಾಜು


   ‘ಇಷ್ಟು ವಿಶಾಲವಾದ ಈ ಭೂಮಿಯ ಮೇಲೆ ನನ್ನ ಅಪ್ಪನಿಗೆ ಎಲ್ಲಿಯೂ ಒಂದು ಅಂಗೈ ಅಗಲ ಜಾಗ ಇರಲಿಲ್ಲ.’
ಇಡೀ ಭೂಮಂಡಲವನ್ನೇ ನುಂಗಲು ಹೊರಟಿರುವ ಭೂಗಳ್ಳರನ್ನು ನಿತ್ಯವೂ ನೋಡುತ್ತಿರುವ ನಮ್ಮಂಥವರಿಗೆ ಈ ಒಂದು ಮಾತು ಹೇಗೆ ಅರ್ಥವಾಗುತ್ತದೋ ಹೇಳುವುದು ಕಷ್ಟ. ನನಗಂತೂ ಈ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಕಾಣಿಸಲಿಲ್ಲ. ಯಾಕೆಂದರೆ ಈ ಮಾತು ಕಾಣಿಸಿಕೊಂಡಿರುವುದು, ಬರಹವನ್ನು ಕೇವಲ ಕಲೆಯ ಮಾಧ್ಯಮ ಎಂದು ಭಾವಿಸಿರುವ ಲೇಖಕನ ಕೃತಿಯಲ್ಲಿ ಅಲ್ಲ. ನೆಲೆಯೇ ಇಲ್ಲದ, ಹೇಳಿಕೊಳ್ಳಲು ಒಂದು ಊರೇ ಇಲ್ಲದ ಅಲೆಮಾರಿ ಸಮುದಾಯದಿಂದ ಅದು ಹೇಗೋ ಅಕ್ಷರ ಲೋಕಕ್ಕೆ ಬಂದು, ತಮ್ಮ ನೋವಿನ ಅಭಿವ್ಯಕ್ತಿಗಾಗಿ ಅಕ್ಷರವನ್ನು ಹಿಡಿದಿರುವ ಕುಪ್ಪೆ ನಾಗರಾಜ್ (ಮೈಸೂರು ಜಿಲ್ಲೆಯವರು) ಎಂಬ ನನ್ನ ಮಿತ್ರರು ಪ್ರಕಟಿಸಿರುವ ‘ಅಲೆಮಾರಿಯ ಅಂತರಂಗ’ ಕೃತಿಯಲ್ಲಿ. ಅವರ ಕೃತಿಯ ಮೊದಲ ವಾಕ್ಯವೇ ಇದು. ಈ ಮಾತು ನನ್ನನ್ನು ನಡುಗಿಸಿತು.

ಇವತ್ತಿಗೂ ಅಂಗೈಯಗಲ ಜಾಗವಿಲ್ಲದ ಕುಟುಂಬಗಳು ಕರ್ನಾಟಕದಲ್ಲಿ ಲೆಕ್ಕಕ್ಕೆ ಸಿಕ್ಕದಷ್ಟು ಇವೆ. ದಲಿತರು, ಹಿಂದುಳಿದವರು, ಅಲೆಮಾರಿಗಳು, ಅರೆ ಅಲೆಮಾರಿಗಳು, ಆದಿವಾಸಿಗಳು ಹೀಗೆ ಎಷ್ಟೋ ಸಮುದಾಯಗಳ ಸಾವಿರಾರು ಕುಟುಂಬಗಳಿಗೆ ಇವತ್ತಿಗೂ ನೆಲವಾಗಲಿ, ನೆಲೆಯಾಗಲೀ ಇನ್ನೂ ದಕ್ಕಿಯೇ ಇಲ್ಲ. ಈ ಕೃತಿಯನ್ನು ಓದುತ್ತ ಹೋದರೆ ಬೆಚ್ಚಿಬೀಳಿಸುವ ಇಂಥ ಹಲವಾರು ಸಂಗತಿಗಳಿವೆ.

‘ಸತ್ತ ಶವಗಳನ್ನು ಹೂಳಲು ನಮ್ಮಂತಹ ಅಲೆಮಾರಿ ಸಮುದಾಯಗಳಿಗೆ ನಿಜಕ್ಕೂ ಮೂರು ಅಡಿ ಆರು ಅಡಿ ಜಾಗ ಕೂಡಾ ಸಿಗೋದು ಕಷ್ಟಾನೆ. ಅವರಿವರನ್ನು ಬೇಡಿ ಶವಸಂಸ್ಕಾರ ಮಾಡಬೇಕಾದ ಪರಿಸ್ಥಿತಿ.’

ತಮ್ಮ ತಾಯಿ ತೀರಿಹೋದ ಸಂದರ್ಭದಲ್ಲಿ ಈ ಮೂರು ಅಡಿ ಆರು ಅಡಿ ಜಾಗಕ್ಕಾಗಿ ನಾಗರಾಜ್ ಅವರ ಕುಟುಂಬ ಪರದಾಡಿದ ಸನ್ನಿವೇಶವನ್ನು ವರ್ಣಿಸುವ ಅಧ್ಯಾಯ ಈ ಪರಿಸ್ಥಿತಿಯನ್ನು ತೆರೆದಿಡುತ್ತದೆ.

ಇವತ್ತು ಭಾರತದಲ್ಲಿ ಅಲೆಮಾರಿ ಬುಡಕಟ್ಟಿಗೆ ಸೇರಿದವರ ಸಂಖ್ಯೆ 14 ಕೋಟಿ ಇದೆ. ಇವರಲ್ಲಿ ಶೇ 31ರಷ್ಟು ಕುಟುಂಬಗಳಿಗೆ ನೆತ್ತಿಯ ಮೇಲೆ ಸೂರಿಲ್ಲ; ಶೇ 62ರಷ್ಟು ಜನರಿಗೆ ಮತ ಚಲಾಯಿಸುವ ಹಕ್ಕಿಲ್ಲ: ಶೇ 51ರಷ್ಟು ಜನರಿಗೆ ಶವಸಂಸ್ಕಾರಕ್ಕೆ ಜಾಗವಿಲ್ಲ. ಕರ್ನಾಟಕದಲ್ಲಿ ಅಲೆಮಾರಿ, ಅರೆ ಅಲೆಮಾರಿ ಎಂದು ಹೇಳಬಹುದಾದ ಸಮುದಾಯಗಳ ಸಂಖ್ಯೆ ಸುಮಾರು 56. ಇವುಗಳಲ್ಲಿ ಅರ್ಧದಷ್ಟು ಸಮುದಾಯಗಳನ್ನು ಮಾತ್ರ ಗುರುತಿಸಲಾಗಿದೆ. ಉಳಿದ ಸಮುದಾಯಗಳನ್ನು ಗುರುತಿಸುವ ಕೆಲಸವೂ ನಡೆದಿಲ್ಲ. ಇದು ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ತಮ್ಮ ಬದುಕನ್ನು ಹುಡುಕಿ ಅಲೆಯುತ್ತಿರುವ ಈ ಸಮುದಾಯಗಳ ಬಗ್ಗೆ ನಾವೆಷ್ಟು ಜನ ತಲೆಕೆಡಿಸಿಕೊಂಡಿದ್ದೇವೆ?

ಇವರಲ್ಲಿ ಎಷ್ಟು ಜನ ಎರಡು ಹೊತ್ತು ಊಟಮಾಡುತ್ತಾರೆ, ಎಷ್ಟು ಜನ ಭಿಕ್ಷುಕರಾಗಿ ಅರೆಹೊಟ್ಟೆಯಲ್ಲಿ ಅಲೆಯುತ್ತಿದ್ದಾರೆ, ಮಳೆಗಾಳಿಗಳನ್ನು ಲೆಕ್ಕಿಸದೆ ಎಷ್ಟು ಜನ ಬಯಲಲ್ಲಿ ಹಗಲು ರಾತ್ರಿಗಳನ್ನು ಕಳೆಯುತ್ತಾರೆ ಇತ್ಯಾದಿ ಅಂಕೆಸಂಖೆಗಳು ದಾಖಲೆಯ ಪುಸ್ತಕಗಳಲ್ಲಿ ಇರಬಹುದು. ಆದರೆ ಈ ಅಂಕೆಸಂಖೆಗಳಾದರೂ ಎಷ್ಟು ಅಧಿಕೃತ, ಎಷ್ಟು ವೈಜ್ಞಾನಿಕ? ಈ ಸಮುದಾಯಗಳ ಜನಗಣತಿಯನ್ನು ವೈಜ್ಞಾನಿಕವಾಗಿ ಮಾಡಿ, ಸರ್ಕಾರದ ಸವಲತ್ತುಗಳು ಇವರಿಗೆ ತಲುಪುವಂತೆ ಮಾಡಿ ಎಂಬ ನ್ಯಾಯಬದ್ಧ ಬೇಡಿಕೆಯನ್ನು ‘ಅಲೆಮಾರಿ ಬುಡಕಟ್ಟು ಮಹಾಸಭಾ’, ‘ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಒಕ್ಕೂಟ’ ಮೊದಲಾದ ಸಂಘಟನೆಗಳು ಕರ್ನಾಟಕ ಸರ್ಕಾರದ ಮುಂದಿರಿಸಿವೆ. ಡಾ.ಕೆ.ಎಂ.ಮೈತ್ರಿ, ಕೆ.ಭಾಸ್ಕರ್ದಾಸ್ ಎಕ್ಕಾರು, ಡಾ.ಬಾಲಗುರುಮೂರ್ತಿ, ಕುಪ್ಪೆ ನಾಗರಾಜ್ ಮೊದಲಾದವರು ಇದಕ್ಕಾಗಿಯೇ ಹೋರಾಟವನ್ನು ನಡೆಸುತ್ತ ಬಂದಿದ್ದಾರೆ. ಆದರೆ ಸರ್ಕಾರಗಳು ಎಷ್ಟು ಸ್ಫಂದಿಸಿವೆ?

ಹಾವನೂರು ಆಯೋಗವನ್ನು ರಚಿಸಿ, ಆ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದು ದೇವರಾಜ ಅರಸು ಅವರು ದೊಡ್ಡ ಕ್ರಾಂತಿಯನ್ನೇ ಮಾಡಿದರು ಎಂಬುದು ನಿಜ. ಆದರೆ ಹಾವನೂರು ಆಯೋಗ ಈ ಅಲೆಮಾರಿ ಸಮುದಾಯಗಳನ್ನು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಲಿಲ್ಲ. ಅವರಿಗೆ ಸಿಕ್ಕಬೇಕಾದ ಸಾಮಾಜಿಕ ನ್ಯಾಯ ದಕ್ಕುವಂತೆ ಮಾಡಲಿಲ್ಲ. ಅಲೆಮಾರಿಗಳು ಹಾವನೂರು ವರದಿಯನ್ನು ‘ಮರಣಶಾಸನ’ ಎಂದು ಕರೆಯುತ್ತಾರೆ. ಅದಕ್ಕೆ ಕಾರಣವೂ ಇದೆ. ಹಾವನೂರು ಆಯೋಗಕ್ಕಿಂತ ಮೊದಲು ಅಲೆಮಾರಿ ಸಮುದಾಯದ ಸಣ್ಣಪುಟ್ಟ ಜಾತಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುಂಪಿಗೆ ಸೇರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸವಲತ್ತುಗಳು ಈ ಅಲೆಮಾರಿ ಸಮುದಾಯಗಳಿಗೂ ಸಿಕ್ಕುವ ವ್ಯವಸ್ಥೆಯಿತ್ತು. ಹಾವನೂರು ಆಯೋಗ ಈ ಪಟ್ಟಿಯನ್ನು ರದ್ದುಪಡಿಸಿ, ಈ ಪಟ್ಟಿಯಲ್ಲಿದ್ದ ಅಲೆಮಾರಿ ಸಮುದಾಯದ ಎಲ್ಲ ಜಾತಿಗಳನ್ನು ಹಿಂದುಳಿದಳಿದ ಬುಡಕಟ್ಟುಗಳ ಗುಂಪಿಗೆ ಸೇರಿಸಿತು. ಇದರಿಂದಾಗಿ ಈ ಜಾತಿಗಳಿಗೆ ಎಸ್.ಸಿ./ ಎಸ್.ಟಿ.ಯ ಪಟ್ಟಿಯಲ್ಲಿ ಸಿಕ್ಕುತ್ತಿದ್ದ ಎಲ್ಲ ಸವಲತ್ತುಗಳು ತಪ್ಪಿಹೋದವು. ಆ ಅನ್ಯಾಯವನ್ನು ಸರಿಪಡಿಸುವ ದೃಷ್ಟಿಯಿಂದಲಾದರೂ ಕರ್ನಾಟಕ ಸರ್ಕಾರ ರಾಜ್ಯದಲ್ಲಿರುವ ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಬೇಕು.

ಊರಿಲ್ಲದ, ಬೇರಿಲ್ಲದ, ಹೆಸರಿಲ್ಲದ ಈ ಸಮುದಾಯಗಳ ಮನಃಸ್ಥಿತಿ ಈಗ ಹೇಗಿರಬೇಡ?
ದೊಂಬಿದಾಸರು, ಪಂಜಿನ ದಾಸಯ್ಯಗಳು, ಕಿಳ್ಳೇಕ್ಯಾತರು, ಹಕ್ಕಿಪಿಕ್ಕರು, ಚಂದದಾಸರು, ಜೋಷಿಗಳು, ಹಗಲುವೇಷದವರು, ರಾಜಗೊಂಡರು, ಹೆಳವರು, ಬುಡ್ಗಜಂಗಮರು, ಕುರುತೋಕಯ್ಯಗಳು, ಬುಡುಬುಡಿಕೆಯವರು, ಕೋಲೆಬಸವನ್ನಾಡಿಸುವವರು, ಸುಡುಗಾಡು ಸಿದ್ಧರು, ಗೊರವಯ್ಯಗಳು, ಮೊಂಡರು, ಮೋಡಿಮಲ್ಲರು, ಕಿನ್ನರಿ ಜೋಗಯ್ಯನವರು ಇನ್ನೂ ಅನೇಕ ಸಮುದಾಯಗಳು. ಈ ಹೆಸರುಗಳೇ ಅವುಗಳ ಕಸುಬನ್ನೂ ಸೂಚಿಸುವಂತಿವೆ.

ಒಂದು ಕಾಲಕ್ಕೆ ಈ ಸಮುದಾಯಗಳೆಲ್ಲ ತಮ್ಮ ಕುಲಕಸುಬುಗಳನ್ನೇ ನಂಬಿ ಬದುಕುತ್ತಿದ್ದವು. ಗ್ರಾಮೀಣ ಭಾರತದಲ್ಲಿ ಈ ಕಸುಬುಗಳಿಗೆ ಮಾನ್ಯತೆಯೂ ಇತ್ತು. ಈ ಮಾನ್ಯತೆಯೇ ಕಾರಣವಾಗಿ ಅಲೆಮಾರಿ ಸಮುದಾಯಗಳು ಸೂರಿಲ್ಲದಿದ್ದರೂ, ಊರಿಲ್ಲದಿದ್ದರೂ, ಹೊಟ್ಟೆತುಂಬಿಸಿಕೊಂಡು ಬದುಕುತ್ತಿದ್ದವು; ಊರಿಂದ ಊರಿಗೆ ಅಲೆಯುತ್ತಿದ್ದವು. ಹೆಳವರು, ತಾವು ಸುತ್ತುತ್ತಿದ್ದ ಊರುಗಳ ಪ್ರತಿಕುಟುಂಬದ ವಂಶವೃಕ್ಷವನ್ನು ಅತ್ಯಂತ ಶ್ರದ್ಧೆಯಿಂದ ತಮ್ಮಲ್ಲಿ ಇಟ್ಟುಕೊಂಡಿರುತ್ತಿದ್ದರು. ಗಿಡಮೂಲಿಕೆಗಳು, ಔಷಧಿಗಳು, ಬಗೆಬಗೆಯ ಚಿಕಿತ್ಸೆಗಳು ಹೀಗೆ ಸಕಲ ವೈದ್ಯವಿದ್ಯೆಯನ್ನು ಬಲ್ಲ ಅಲೆಮಾರಿ ಸಮುದಾಯಗಳಿದ್ದವು. ರಾಜ ಮಹಾರಾಜರಿಗೆ ವೈದ್ಯರಾಗಿದ್ದ ರಾಜಗೊಂಡರಿದ್ದರು. ಕವಡೆಯನ್ನು ಹಾಕಿ ಶಾಸ್ತ್ರ ಹೇಳುವವರಿದ್ದರು. ಅಂತ್ರ, ಮಂತ್ರ, ತಾಯಿತಗಳನ್ನು ಬಲ್ಲ ಸಮುದಾಯಗಳಿದ್ದವು.

ಜಾನಪದ ಸಾಹಿತ್ಯವನ್ನು ತಮ್ಮ ನೆನಪಿನ ಸಂಪುಟಗಳಲ್ಲಿ ಭದ್ರವಾಗಿರಿಸಿಕೊಂಡು ಹಾಡುವ, ಕತೆಹೇಳುವ, ನಾಟಕ ಪ್ರದರ್ಶಿಸುವ, ನಾಟಕ ಕಲಿಸುವ ಪ್ರತಿಭಾವಂತರಿದ್ದರು. ಹಲಬಗೆಯ ವಾದ್ಯಗಳನ್ನು ನುಡಿಸುವ ಕಲಾಕಾರರಿದ್ದರು. ಸಣ್ಣಪುಟ್ಟ ಪ್ರಾಣಿಗಳನ್ನು, ಪಕ್ಷಿಗಳನ್ನು, ಅಳಿಲು ಆಮೆಗಳನ್ನು, ಮೀನುಗಳನ್ನು ಅತ್ಯಂತ ಕುಶಲತೆಯಿಂದ ಬೇಟೆಯಾಡಬಲ್ಲ ಪರಿಣತರಿದ್ದರು. ಅವುಗಳ ಚಲನವಲನ, ಜೀವನಕ್ರಮ ಇತ್ಯಾದಿ ಸಂಗತಿಗಳನ್ನು ಅವರು ನಿಖರವಾಗಿ ತಿಳಿದಿದ್ದರು. ಹಲವಾರು ಕೌಶಲಗಳಲ್ಲಿ (ಬಲೆ ನಿರ್ಮಾಣ, ವಾದ್ಯಗಳ ರಿಪೇರಿ ಇತ್ಯಾದಿ) ಪ್ರತಿಭೆಯನ್ನು ತೋರಬಲ್ಲ ಅಲೆಮಾರಿಗಳಿದ್ದರು. ತಮ್ಮ ಈ ಕಸುಬುಗಳನ್ನು, ಕಲೆ, ಕೌಶಲಗಳನ್ನು ನಂಬಿಯೇ ಅವರು ಊರಿಂದ ಊರಿಗೆ ಪಯಣಿಸುತ್ತಿದ್ದರು. ಅದೊಂದು ನಿರಂತರ ಪಯಣ; ಎಂದೆಂದೂ ಮುಗಿಯದ ಪಯಣ. ಅದರ ಅರಿವಿದ್ದೂ ಅವರು ಅಖಂಡ ಆತ್ಮವಿಶ್ವಾಸವನ್ನು ಪಡೆದಿದ್ದರು. ಅನೇಕ ಊರುಗಳನ್ನು, ಪ್ರದೇಶಗಳನ್ನು, ಮಳೆಬೆಳೆಯ ಪರಿಸ್ಥಿತಿಯನ್ನು, ಪ್ರಾಣಿಪಕ್ಷಿಗಳನ್ನು ಅವರು ಬಲ್ಲವರಾಗಿದ್ದರು. ಜನರನ್ನು ರಂಜಿಸುವುದು ಮಾತ್ರವಲ್ಲ, ಸಮಾಜಕ್ಕೆ ತಮ್ಮ ಕಥನಗಳ ಮೂಲಕ ನೀತಿಪಾಠವನ್ನು ಅವರು ಬೋಧಿಸುತ್ತಿದ್ದರು. ಸಮಾಜದ ಮುನ್ನಡೆಗೆ ಮಹತ್ವದ ಕೊಡುಗೆಯನ್ನು ನೀಡುತ್ತಿದ್ದರು.

ಇವತ್ತು ಗ್ರಾಮಭಾರತ ಬದಲಾಗಿದೆ. ಆಧುನಿಕ ವಿದ್ಯೆ ಹಳೆಯ ವಿದ್ಯೆಗಳನ್ನು ಪಕ್ಕಕ್ಕೆ ತಳ್ಳಿದೆ. ಆಧುನಿಕ ಬದುಕಿನ ರುಚಿ, ಅಭಿರುಚಿ, ಆದ್ಯತೆಗಳೇ ಬೇರೆಯಾಗಿವೆ. ಜೆಟ್ ವಿಮಾನದ ವೇಗದಲ್ಲಿ ಓಡುತ್ತಿರುವ ಆಧುನಿಕ ಮನುಷ್ಯ ಎಲ್ಲಿಗೆ ಓಡುತ್ತಿದ್ದಾನೆ? ಅವನ ಗುರಿ ಯಾವುದು?-ಇಂಥ ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಈ ಬದಲಾದ ಪರಿಸ್ಥಿತಿಯಲ್ಲಿ ಅಲೆಮಾರಿಗಳು ದಿಕ್ಕೆಟ್ಟಿದ್ದಾರೆ. ಪಾರಂಪರಿಕ ಜ್ಞಾನ, ತಂತ್ರ, ತಂತ್ರಜ್ಞಾನಗಳು ಅವರಲ್ಲಿ ಈಗಲೂ ಇವೆ. ಆದರೆ ಅವುಗಳನ್ನು ಮಾನ್ಯ ಮಾಡುವವರಿಲ್ಲ. ಇಂಥ ಹೊತ್ತಿನಲ್ಲಿ ದೇಶವನ್ನು ಸುತ್ತಿಯೇ ಅನ್ನವನ್ನು ಸಂಪಾದಿಸುವುದು ದುಸ್ತರವಾಗಿದೆ. ಹಾಗಾದರೆ ಅವರು ಆತ್ಮವಿಶ್ವಾಸದಿಂದ ಬದುಕುವುದು ಹೇಗೆ? ನಾವು ಒಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಈ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಬೇಕಾಗಿದೆ; ಅವರಲ್ಲಿರುವ ಜ್ಞಾನ ಮತ್ತು ಕುಶಲತೆಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕಾಗಿದೆ; ಅವರಿಗೂ ಒಂದು ನೆಲೆಯನ್ನು ಕಲ್ಪಿಸಬೇಕಾಗಿದೆ. ಅವರ ಘನತೆಯನ್ನು ಕಾಯಬೇಕಾಗಿದೆ. ಇದು ನಮ್ಮ ಪ್ರಜಾಸತ್ತೆಯ ಮೇಲಿರುವ ಹೊಣೆಗಾರಿಕೆ.
(ಸೌಜನ್ಯ: ಅವಧಿ)

ಭಾನುವಾರ, ಜುಲೈ 21, 2013

ಮೌಢ್ಯದ ಬಿತ್ತನೆ ನಿಲ್ಲಲಿ

   
 ವಿಜಯ ಕರ್ನಾಟಕ ಸಂಪಾದಕೀಯ: 
 ಸೌಜನ್ಯ: ವಿಜಯ ಕರ್ನಾಟಕ
ಸಂಪಾದಕೀಯ: ಮೌಢ್ಯದ ಬಿತ್ತನೆ ನಿಲ್ಲಲಿ


 
  

  ಕಾಗೆ ತಲೆಗೆ ಸ್ಪರ್ಶಿಸಿತು ಎಂಬ ಕ್ಲುಲ್ಲಕ ಕಾರಣದಿಂದ ಎಂಜಿನಿಯರ್ ಪದವೀಧರರೊಬ್ಬರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ, ಮೌಢ್ಯದ ಪರಮಾವಧಿಯನ್ನು ಎತ್ತಿ ತೋರಿಸುತ್ತದೆ. ದೇಶದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂಬ ಹೆಗ್ಗಳಿಕೆಯ ಬೆಂಗಳೂರಿನಲ್ಲೇ ಈ ಘಟನೆ ನಡೆದಿರುವುದು ವಿಪರ್ಯಾಸದ ಸಂಗತಿ. ವೈಫೈ, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ನ್ಯಾನೊ ತಂತ್ರಜ್ಞಾನಗಳು ಜನಸಾಮಾನ್ಯರ ಅವಿಭಾಜ್ಯ ಅಂಗವಾಗುತ್ತಿರುವ ಈ ದಿನಮಾನದಲ್ಲೂ ಮೂಢನಂಬಿಕೆಗಳ ಪೊರೆ ಕಳಚದಿರುವುದು ಆತಂಕಕಾರಿ ವಿದ್ಯಮಾನ. ಈ ಘಟನೆಯ ಹಿನ್ನೆಲೆಯಲ್ಲಿ, ಕಾಗೆ ಸ್ಪರ್ಶಿಸಿದರೆ ಮುಂದೆ ಜೀವನದಲ್ಲಿ ಕೆಡುಕಾಗಲಿದೆ ಎಂದು ಹೆದರಿ ಆತ್ಮಹತ್ಯೆಗೆ ಶರಣಾದ ಅಮಾಯಕ ಎಂಜಿನಿಯರ್ ಕುಟುಂಬಕ್ಕೆ ಸಹಾನುಭೂತಿ ವ್ಯಕ್ತಪಡಿಸುವುದರ ಜತೆಗೆ, ಇಂದಿನ ಸಾಮಾಜಿಕ ಸ್ಥಿತಿಗತಿ ಮತ್ತು ಉದ್ಯೋಗ ಕೇಂದ್ರೀತ ಶಿಕ್ಷಣ ವ್ಯವಸ್ಥೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ.

   ಮೂಢನಂಬಿಕೆಯ ಅವಾಂತರಗಳು, ದುರಂತಗಳು ಆಗಾಗ ನಮ್ಮ ನಡುವೆ ನಡೆಯುತ್ತಲೇ ಇರುತ್ತವೆ. ನಿಧಿಯ ಆಸೆಗಾಗಿ ಕರುಳ ಕುಡಿಯ ರುಂಡವನ್ನೇ ಚೆಂಡಾಡುವ ಪೋಷಕರೂ ಇದ್ದಾರೆ. ತಮ್ಮ ಎಲ್ಲ ಸಮಸ್ಯೆಗಳಿಗೆ ಇದೊಂದೇ ಪರಿಹಾರ ಎಂಬ ಭ್ರಮೆಯಲ್ಲಿ, ಮುಗ್ಧ ಮಕ್ಕಳನ್ನು ಅಪಹರಿಸಿ ಬಲಿ ಕೊಡುವ ಕ್ರೌರ್ಯವೂ ನಡೆಯುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ಮೌಢ್ಯದ ಪೋಷಣೆ. ಇದರ ದುಷ್ಪರಿಣಾಮ ಏನೆಂದರೆ ಅಮಾಯಕರ ಶೋಷಣೆ. ಟಿ.ವಿ ಮಾಧ್ಯಮಗಳು ಟಿಆರ್‌ಪಿ ಏರಿಸಿಕೊಳ್ಳುವ ಧಾವಂತದಲ್ಲಿ ಮೂಢನಂಬಿಕೆಗಳನ್ನು ಬಿತ್ತುತ್ತಿವೆ ಎಂಬ ಆರೋಪ ಹೊಸತೇನಲ್ಲ. ಸಾವಿರಾರು ವರ್ಷಗಳ ಇತಿಹಾಸದ ಜ್ಯೋತಿಷ್ಯಶಾಸ್ತ್ರಕ್ಕೆ ವೈಜ್ಞಾನಿಕ ತಳಹದಿ ಇದೆ ಎಂದು ಕೆಲವರು ಪ್ರಬಲವಾಗಿ ವಾದಿಸುತ್ತಾರಾದರೂ, ಅಪ್ರಬುದ್ಧ ಮತ್ತು ಸ್ವಯಂಘೋಷಿತ ಜ್ಯೋತಿಷಿಗಳು ಮುಗ್ಧ ನಾಗರಿಕರ ದಾರಿ ತಪ್ಪಿಸುತ್ತಿರುವುದು ಸ್ಪಷ್ಟ.
 

   ಅತ್ತೆಯನ್ನು ಉಪವಾಸ ಕೆಡವಿ ಮೆತ್ತಗಾಗಿಸಿ, ಮಾವನ ಗ್ರಹಗತಿ ಕೆಟ್ಟಿರುವುದರಿಂದ ಗಂಡನ ಮನವೊಲಿಸಿ ಬೇರೆ ಮನೆ ಮಾಡಿಸಿ, ಶೌಚಾಲಯದ ಜಾಗದಲ್ಲಿ ದೇವರ ಕೋಣೆ ಇರಲಿ; ಪೂಜಾ ಕೋಣೆ ಒಡೆದು ಹಾಕಿ ಅಲ್ಲಿ ಶೌಚಾಲಯ ನಿರ್ಮಿಸಿ, ಆನೆಯ ಲದ್ದಿ ತಂದು ಚಟ್ನಿಯಲ್ಲಿ ಬೆರೆಸಿ ಗಂಡನಿಗೆ ತಿನ್ನಿಸಿದರೆ ಶುಭವಾಗುತ್ತದೆ ಎಂಬಿತ್ಯಾದಿ ತರ್ಕ ರಹಿತ ಬಿಟ್ಟಿ ಸಲಹೆ ಕೊಡುವ ಸ್ಟುಡಿಯೊ ಜ್ಯೋತಿಷಿಗಳಿಗೇನೂ ಕೊರತೆ ಇಲ್ಲ. ಮಂತ್ರದಿಂದ ಮೆಟ್ರೊ ರೈಲು ಓಡಿಸಲು ಸಾಧ್ಯ ಎಂಬ ಧಾಟಿಯ ಇವರ ಮಾತಿನ ಮೋಡಿಗೆ ಒಳಗಾಗಿ ಜನ ಮೌಢ್ಯದ ದಾಸರಾಗುತ್ತಿದ್ದಾರೆ ಎಂಬ ಕಳವಳವನ್ನು ಈ ಆತ್ಮಹತ್ಯೆ ಘಟನೆ ಮತ್ತೊಮ್ಮೆ ಪುಷ್ಟೀಕರಿಸಿದೆ.

   ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಮಕ್ಕಳಲ್ಲಿ ಮೂಢನಂಬಿಕೆಗಳ ಬಗ್ಗೆ ಜಾಗತಿ ಮೂಡಿಸಬೇಕು. ಪಠ್ಯಕ್ರಮದಲ್ಲೂ ಈ ಕುರಿತ ಪರಿಣಾಮಕಾರಿ ಪಾಠ ಇರಬೇಕು. ಪೋಷಕರು ತಾವು ಮೌಢ್ಯದ ಪರಿಧಿಯಿಂದ ಹೊರಬರುವುದರ ಜತೆಗೆ, ಮಕ್ಕಳಿಗೂ ಈ ಬಗ್ಗೆ ಸೂಕ್ತ ತಿಳಿವಳಿಕೆ ನೀಡುವಂತಾಗಬೇಕು. ಸಮಾಜವನ್ನು ಮತ್ತು ಜನಸಾಮಾನ್ಯರ ಮನಸ್ಸನ್ನು ಕಲುತಗೊಳಿಸುವ ಢೋಂಗಿ ಜ್ಯೋತಿಷಿಗಳ ಮೇಲೆ ಮತ್ತು ಮಾಟ-ಮಂತ್ರದ ಹೆಸರಿನಲ್ಲಿ ಅಮಾನುಷ ದೌರ್ಜನ್ಯ ನಡೆಸುವವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಮಾಧ್ಯಮಗಳೂ ಈ ನಿಟ್ಟಿನಲ್ಲಿ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸಬೇಕು. ನಮ್ಮ ಸಮಾಜದಲ್ಲಿ ಮೌಢ್ಯದ ಬಿತ್ತನೆ ನಿಲ್ಲಲಿ. ಪ್ರಜ್ಞಾವಂತಿಕೆಯ ಬೆಳೆ ಎಲ್ಲೆಡೆ ವ್ಯಾಪಿಸಲಿ.

ಶನಿವಾರ, ಜುಲೈ 20, 2013

ಆಂಜನೇಯನ ಬಾಲದಂತೆ ಆತನ ಕತೆಗೂ ಕೊನೆ ಇಲ್ಲ


 ಸೌಜನ್ಯ:ವಿಜಯ ಕರ್ನಾಟಕ
 
ಬಹುರೂಪ: ಆಂಜನೇಯನ ಬಾಲದಂತೆ ಆತನ ಕತೆಗೂ ಕೊನೆ ಇಲ್ಲ
ಏಷ್ಯಾದ ಜನಪ್ರಿಯ ದೈವಗಳಲ್ಲಿ ಹನುಮಂತನೂ ಒಬ್ಬ. ರಾಮಾಯಣದ ಕಿಷ್ಕಿಂದಾಖಾಂಡದಲ್ಲಿ ಮೊದಲು ಕಾಣಸಿಗುವ ಆತ, ಮುಂದೆ ರಾಮನ ಬಂಟನಾಗಿ ಉದ್ದಕ್ಕೂ ಕಾಣಿಸಿಕೊಳ್ಳುತ್ತಾನೆ. ಸೀತೆಯ ಪ್ರೀತಿಗೆ ಪಾತ್ರನಾದ ಆತ, ಆಕೆಗೆ ಮೊದಲು ಕಾಣಸಿಕ್ಕಿದ್ದು ಅಶೋಕವನದಲ್ಲಿ. ಮಹಾಭಾರತ, ಹಲವು ಪುರಾಣಗಳು ಮಾತ್ರವಲ್ಲ ಕೆಲವು ಜೈನ ಪಠ್ಯಗಳ ಪ್ರಕಾರ ಹನುಮಂತನ ತಂದೆ ವಾಯು. ಮಹಾಭಾಗವತ ಪುರಾಣ ಮತ್ತು ಸ್ಕಂದ ಪುರಾಣಗಳ ಪ್ರಕಾರ ಆತ ಶಿವಪುತ್ರ. 

 16ನೇ ಶತಮಾನದಲ್ಲಿದ್ದ ಮರಾಠಿ ಬರಹಗಾರ ಏಕನಾಥನ ಪ್ರಕಾರ, ದಶರಥ ಮಾಡಿದ ಪುತ್ರಕಾಮೇಷ್ಠಿ ಯಜ್ಞದಲ್ಲಿ ದೊರಕಿದ ಪಾಯಸದ ಪರಿಮಳವು ಶಿವನ ಪೂಜೆ ಮಾಡುತ್ತಿದ್ದ ಅಂಜನಾದೇವಿಯ ಕೈ ತಲುಪಿ ಅದರಿಂದ ಹನುಮಂತ ಜನಿಸಿದ. 17ನೇ ಶತಮಾನದ ಒರಿಯಾ ಕವಿ ದಿವಾಕಷ್ಣ ದಾಸನ ಪ್ರಕಾರ, ತ್ರಿಮೂರ್ತಿಗಳು ಒಟ್ಟು ಸೇರಿ ಹನುಮಂತನಾಗಿ ಜನಿಸಿದರು. ಕರ್ನಾಟಕದ ಹಂಪಿಯಲ್ಲಿರುವ ಅಂಜನಾದ್ರಿ ಪರ್ವತದಲ್ಲಿ, ಹರಿಯಾಣದ ಕೈತಾಲ ಎಂಬಲ್ಲಿ, ಹಾಗೆಯೇ ಅಂಜಾನ್, ಅಂಜನೇರಿ, ಲಕ್ಷ್ಕಾ, ಗೋಕರ್ಣ ಮೊದಲಾದೆಡೆಗಳಲ್ಲಿ ಆತ ಜನಿಸಿದನೆಂದು ಆಯಾ ಭಾಗದ ಜನರು ನಂಬಿದ್ದಾರೆ.

ಹನುಮಂತನಿಗೆ ಆ ಹೆಸರು ಹೇಗೆ ಬಂತೆಂಬುದರ ಬಗೆಗೆ ಬಹಳ ಚರ್ಚೆಗಳು ನಡೆದಿವೆ. ಜನಪ್ರಿಯವಾದ ನಂಬಿಕೆಯ ಪ್ರಕಾರ, ಬಾಲಕ ಆಂಜನೇಯನು ಎಳೆಯ ಸೂರ್ಯನನ್ನು ಹಣ್ಣೆಂದು ಗ್ರಹಿಸಿ ತಿನ್ನಲು ಹೋದಾಗ ಇಂದ್ರನು ಆತನ ದವಡೆಗೆ ವಜ್ರಾಯುಧದಿಂದ ಹೊಡೆಯುತ್ತಾನೆ. ಆಗ ಆತನ ದವಡೆ ವಿರೂಪಗೊಳ್ಳುತ್ತದೆ, ಕಾರಣ ಆತ ಹನುಮಂತ. ಇದೇ ರೀತಿ ಅಂಜನಾದೇವಿಯ ಮಗನಾದ್ದರಿಂದ ಆಂಜನೇಯ, ಮರುತನ ಮಗನಾದ್ದ ರಿಂದ ಮಾರುತಿ ಇತ್ಯಾದಿ. 


ಆತನಿಗೆ ಇರುವ ಮಂಗನ ಮುಖ ಪ್ರಸಿದ್ಧವೇ ಆದರೂ, ಪಂಚಮುಖಿ ಆಂಜನೇಯನ ಪರಿಕಲ್ಪನೆಯಲ್ಲಿ ಅವನಿಗೆ ವರಾಹ (ಉತ್ತರಮುಖಿ,) ಗರುಡ(ಪಶ್ಚಿಮಮುಖಿ, ) ನರಸಿಂಹ(ದಕ್ಷಿಣ ಮುಖಿ) ಮತ್ತು ಹಯಗ್ರೀವ(ಆಕಾಶಮುಖಿ) ಎಂಬ ಐದು ಮುಖಗಳನ್ನು ಪರಿಕಲ್ಪಿಸಲಾಗಿದೆ. ಜನಪ್ರಿಯವಾದ ಒಂದು ವಾದದ ಪ್ರಕಾರ, ಪ್ರಾಗ್ದ್ರಾವಿಡ ಪದ 'ಆಣ್'(ಇಂದಿಗೂ ತುಳುವಿನಲ್ಲಿ 'ಆಣ್' ಎಂದರೆ ಗಂಡು ಎಂದರ್ಥ) ಮತ್ತು 'ಮಂದಿ'(ಮಂಗ) ಸೇರಿ 'ಆಣ್ಮಂದಿ'ಯಾಗಿ, ಮುಂದೆ ಅದುವೇ ಸಂಸ್ಕೃತೀಕರಣ ಗೊಂಡು ಹನುಮಂತನಾಯಿತು. ಈ ವಾದಕ್ಕೆ ಪೂರಕವಾಗಿ ವಿದ್ವಾಂಸರು, ಪ್ರಾಕತದಲ್ಲಿ ಇಂದಿಗೂ 'ಅನುಮಂತ', ತಮಿಳಿನಲ್ಲಿ 'ಆಣ್ಮಂತ' ಮೊದಲಾದ ಪ್ರಯೋಗಗಳಿರುವುದನ್ನು ಉಲ್ಲೇಖಿಸುತ್ತಾರೆ.ಆದರೆ, ತಮಿಳಿನ ಸಂಗಂ ಸಾಹಿತ್ಯದಲ್ಲಿ ಕಾಣಸಿಗುವ 'ಮಂದಿ' ಪದವು ಹೆಣ್ಣು ಮಂಗವನ್ನು ಸಂಕೇತಿಸುವುದರಿಂದ, ಈ ವಾದವನ್ನು ಒಪ್ಪಲಾಗದು ಎನ್ನುತ್ತಾರೆ ಮತ್ತೆ ಕೆಲವು ವಿದ್ವಾಂಸರು.

ಆರ‌್ಯರಿಗೆ ದ್ರಾವಿಡರು ಅಡಿಯಾಳಾದುದನ್ನು ರಾಮನಿಗೆ ಹನುಮಂತ ಸೇವಕನಾದ ಘಟನೆ ಸಂಕೇತಿಸುತ್ತದೆ ಎಂದು ವಾದಿಸುವ ದ್ರಾವಿಡವಾದಿಗಳೂ ನಮ್ಮ ನಡುವೆ ಇದ್ದಾರೆ. ಏನೇ ಇರಲಿ, ನಮಗೀಗ ತಿಳಿದಿರುವ ಹನುಮಂತನ ಕಲ್ಪನೆ ಬಹುತೇಕವಾಗಿ ವಾಲ್ಮೀಕಿ ರಾಮಾಯಣದಿಂದಲೇ ನಿಷ್ಪನ್ನಗೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾದರೆ, ಹನುಮಂತನ ಪಾತ್ರಕಲ್ಪನೆ ಪೂರ್ತಿಯಾಗಿ ವಾಲ್ಮೀಕಿಯದೇ ಎಂದು ಕೇಳಿದರೆ ಉತ್ತರಿಸುವುದು ಸುಲಭವಲ್ಲ. ಕೆಲವರ ಪ್ರಕಾರ, ವಾಲ್ಮೀಕಿ ಪೂರ್ವದಲ್ಲಿ ಮಂಗನನ್ನು ಕುಲಲಾಂಛನವನ್ನಾಗಿಸಿಕೊಂಡ ಬುಡಕಟ್ಟೊಂದರಲ್ಲಿ ಜನಪ್ರಿಯವಾಗಿದ್ದ ಕಥನಕಾವ್ಯದಿಂದ ಪ್ರೇರಣೆ ಪಡೆದ. ಋಗ್ವೇದಲ್ಲಿ ಉಲ್ಲೇಖಿತವಾಗಿರುವ ವಷಕಪಿಗೂ ಹನುಮಂತನಿಗೂ ಯಾವುದೇ ಸಂಬಂಧ ಇಲ್ಲವೆಂಬುದು ಹೆಚ್ಚಿನ ವಿದ್ವಾಂಸರ ವಾದ. ಅಲ್ಲಿ ಕಾಣಸಿಗುವ ಕಾಮೋತ್ತೇಜಕ ವಷಕಪಿಯು ಇಂದ್ರನಿಗೆ ಸಲ್ಲತಕ್ಕ ಹವಿಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಮುಂದೆ ಇಂದ್ರನು ಹನುಮಂತನ

ಮುಸುಡಿಗೆ ಹೊಡೆಯುವುದನ್ನು ಕಂಡಾಗ, ಆರಂಭಿಕ ಹಂತದಲ್ಲಿದ್ದ ಈ ವೈದಿಕ ವಿರೋಧಿ ಕಪಿಯ ಪರಿಕಲ್ಪನೆಗೂ, ಮುಂದೆ ರಾಮನ ಬಂಟನಾಗಿ ಕೆಲಸ ಮಾಡಿದ ಕಪಿಗೂ ಅಜಗಜಾಂತರ ವ್ಯತ್ಯಾಸವಿರುವುದು ಸ್ಪಷ್ಟ ವಾಗು ತ್ತದೆ. ಪರ್ಗಿಟರ್ ಎಂಬ ವಿದ್ವಾಂಸನು ಈ ವ್ಯತ್ಯಾಸ ವನ್ನು ಆರ್ಯ-ದ್ರಾವಿಡ ಸಂಘರ್ಷದಲ್ಲಿ ಗುರುತಿಸುತ್ತಾನೆ. ಮಧ್ಯ ಕಾಲೀನ ಭಾರತದ ಭಕ್ತಿಪಂಥದ ಮಧ್ವಾ ಚಾರ್ಯ, ತುಲಸಿದಾಸ, ಸಮರ್ಥರಾಮ ದಾಸ, ರಾಘವೇಂದ್ರ ಸ್ವಾಮಿ ಮತ್ತಿತರರು ಹನುಂತನೊಡನೆ ಗಾಢ ಸಂಬಂಧ ಹೊಂದಿದ್ದಾರೆ. ಯಕ್ಷಗಾನ ಪ್ರಸಂಗ ಮಕರಧ್ವಜ ಕಾಳಗದ ಪ್ರಕಾರ, ಆತ ಹನುಮಂತನ ಮಗ. ಈ ಜನಪ್ರಿಯ ಪರಂಪರೆಯ ಪ್ರಕಾರ ಹನುಮಂತ ಬ್ರಹ್ಮಚಾರಿಯಲ್ಲ. 


ಥಾಯ್ ರಾಮಾಯಣದಲ್ಲಿ ಆತ ಸುವನ್ನಮಚ್ಚ ಎಂಬ ಸುಂದರಿಯನ್ನು ಪ್ರೇಮಿಸುತ್ತಾನೆ. ಸ್ವಯಂಪ್ರಭೆ ಮತ್ತು ವಿಭೀಷಣನ ಮಗಳಾದ ಬೆಂಜಕಾಯ ಕೂಡ ಆತನ ಹೆಂಡತಿ. ರಾವಣನ ಹೆಂಡತಿ ಎಂದು ನಾವು ನಂಬಿರುವ ಮಂಡೋದರಿಯು ಹನುಮಂತನ ಹೆಂಡತಿ ಎಂದು ಪೂರ್ವ ಏಷ್ಯಾದ ಕೆಲವು ನಿರೂಪಣೆಗಳು ಹೇಳುತ್ತವೆ. ಜೈನ ರಾಮಾಯಣಗಳ ಪ್ರಕಾರ, ಹನುಮಂತನು ರಾವಣನ ತಂಗಿ ಶೂರ್ಪನಖಿಯ ಮಗಳಾದ ಅನಂಗಕುಸುಮಳನ್ನು ಮದುವೆಯಾಗಿದ್ದಾನೆ ಮತ್ತು ರಾಮನು ಕಿಷ್ಕಿಂದೆ ತಲುಪಿದಾಗ ಹನುಮಂತನಿಗೆ ಅಲ್ಲಿ ನೂರಾರು ಹೆಂಡತಿಯರಿದ್ದರು.

ಗಂಗಾ-ಯಮುನಾ ಬಯಲು ಪ್ರದೇಶದಲ್ಲಿ ಹನುಮಂತನ ಬಗೆಗೆ ಅನೇಕ ಬಗೆಯ ರೋಚಕ ಕತೆಗಳು ಜನಪ್ರಿಯವಾಗಿದ್ದು, ಅವುಗಳಲ್ಲಿ 40 ಕತೆಗಳನ್ನು ಆಯ್ದು ಅಯೋವಾ ವಿಶ್ವವಿದ್ಯಾಲಯದಲ್ಲಿ ಹಿಂದಿ ಪ್ರಾಧ್ಯಾಪಕರಾಗಿರುವ ಡಾ.ಫಿಲಿಪ್ ಲಟ್ಗೆಂಡಾರ್ಫ್ ಅವರು ಪ್ರಕಟಿಸಿದ್ದಾರೆ(ಆಕ್ಸ್‌ಫರ್ಡ್ 2007). ಅವುಗಳಲ್ಲಿ ಒಂದು ಕತೆ ಇಂತಿದೆ: ಹನುಮಂತನ ತಾಯಿ ಅಂಜನಾದೇವಿಯು ಹನುಮಂತನಿಗೆ ರಾತ್ರಿ ನಿದ್ದೆ ಮಾಡುವ ಹೊತ್ತು ದೇವಾನುದೇವತೆಗಳ ಕತೆಗಳನ್ನು ನಿರೂಪಿಸುತ್ತಿದ್ದಳು. 


ಒಂದು ದಿನ ಆಕೆ ರಾಮನ ಕತೆಯನ್ನೂ ಹೇಳಿದಳು. ಮಂತ್ರಮುಗ್ಧನಾಗಿ ಕತೆ ಕೇಳುತ್ತಿದ್ದ ಹನುಮಂತನು, ರಾಮ ಹನುಮಂತನ್ನು ಭೇಟಿಯಾದ ಪ್ರಸಂಗ ವಿವರಿಸುತ್ತಿದ್ದಾಗ, ಅಚ್ಚರಿಗೊಂಡು ಆ ಹನುಮಂತ ಯಾರೆಂದು ಕೇಳುತ್ತಾನೆ. ಆಗ ಅಂಜನಾದೇವಿಯು, 'ಇದು ತ್ರೇತಾಯುಗದಲ್ಲಿ ನಡೆದ ಕತೆ' ಎಂದು ಮುಂದಕ್ಕೆ ಸಾಗುತ್ತಾಳೆ. ಹನುಮಂತ ಕತೆಯಲ್ಲಿ ಇನ್ನಷ್ಟು ತಲ್ಲೀನನಾಗುತ್ತಾನೆ. ರಾವಣನು ಸೀತೆಯನ್ನು ಅಪಹರಿಸುವಾಗ ಆತ ಕಣ್ಣೀರಿಡುತ್ತಾನೆ. ಹನುಮಂತನು ರಾವಣನನ್ನು ಲಂಕೆಯಲ್ಲಿ ಭೇಟಿಯಾಗುವ ಪ್ರಸಂಗ ಬಂದಾಗ, 'ಆ ಹನುಮಂತನು ರಾವಣನನ್ನು ಯಾಕೆ ಕೊಲ್ಲಲಿಲ್ಲ?' ಎಂದು ಆಕ್ರೋಶ ಪ್ರಕಟಿಸುತ್ತಾನೆ. ಹನುಮಂತನು ರಾಮನನ್ನು ಭೇಟಿಯಾಗಿ, ಸೀತೆಯನ್ನು ಅಶೋಕವನದಲ್ಲಿ ಕಂಡ ಸುದ್ದಿ ಹೇಳಿದಾಗ ರಾಮನು ಹನುಮಂತನ್ನು ಆಲಂಗಿಸಿಕೊಳ್ಳುತ್ತಾನೆ. ಆಗ 'ಆ ಹನುಮಂತ ನಾನೇ ಆಗಿರಬಾರದಿತ್ತೇ' ಎಂದು ಈತ ಪರಿತಪಿಸುತ್ತಾನೆ. 

ರಾಮಾಯಣ ಕೇಳಿದ ಮರುದಿನ ಹನುಮಂತನು ರಾಮನ ಧ್ಯಾನದಲ್ಲಿಯೇ ಇದ್ದು ಊಟ
ತಿಂಡಿ ಮರೆತುಬಿಟ್ಟು , 'ರಾಮನನ್ನು ತೋರಿಸು' ಎಂದು ಹಠ ಮಾಡುತ್ತಾನೆ. ಆಗ ಅಂಜನಾದೇವಿಯು 'ರಾಮನು ಈಗಷ್ಟೇ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆ, ಈ ರಾಮನದ್ದು ಇನ್ನೊಂದೇ ರಾಮಾಯಣ' ಎಂದಾಗ ಹನುಮಂತನು ಅಯೋಧ್ಯೆಗೆ ಹೋಗಬಯಸುತ್ತಾನೆ. ಆಗ ಆತನನ್ನು ತಡೆದ ಅಂಜನಾದೇವಿಯು, ''ಅಯೋಧ್ಯೆಯಲ್ಲಿ ಮನುಷ್ಯರು ವಾಸಿಸುತ್ತಾರೆ, ಅಲ್ಲಿ ಕಪಿಗಳಿಗೆ ಜಾಗ ಎಲ್ಲಿ? ಕಾಲ ಕೂಡಿ ಬಂದಾಗ ರಾಮನನ್ನು ಭೇಟಿಯಾಗುವಿಯಂತೆ' ಎಂದು ಸಮಾಧಾನ ಮಾಡುತ್ತಾಳೆ.

ಈ ಕತೆಯನ್ನು ನಿರೂಪಿಸಿದವರು, ಅಂಜನಾದೇವಿ ಹೇಳಿದ ಕತೆಯೆಂದು ಇನ್ನೊಬ್ಬ ನಿರೂಪಕಿಯನ್ನು ಸಷ್ಟಿಸಿದ್ದಾರೆ. ಈ ಎರಡನೆಯ ನಿರೂಪಕಿಯ ಮಗ ಪ್ರೇಕ್ಷಕನಾಗುತ್ತಲೇ ನಿರೂಪಿತ ಕತೆಯ ಪಾತ್ರವೊಂದಕ್ಕೆ ಮುಖಾಮುಖಿಯಾಗಿ ಆಗಾಗ ಕತೆಯ ಪಾತ್ರವಾಗುತ್ತಾನೆ. ಭಾರತೀಯ ಕಥನ ಸಾಹಿತ್ಯದಲ್ಲಿನ ಈ ಬಗೆಯ ತಂತ್ರಗಾರಿಕೆಯು ಕುತೂಹಲಕರವಾಗಿದ್ದು ಗಂಭೀರ ಅಧ್ಯಯನಕ್ಕೆ ಅರ್ಹವಾಗಿದೆ. ಹನುಮಂತನ ಬಾಲದ ಹಾಗೆ ಅವನ ಕತೆಗೂ ಕೊನೆಯಿಲ್ಲ.

ಶುಕ್ರವಾರ, ಜುಲೈ 19, 2013

ವೀರಮದಕರಿ ಸಿನೆಮಾ ಮತ್ತು ಪ್ರಾಣಿ ಬಲಿ
   -ಅರುಣ್ ಜೋಳದಕೂಡ್ಲಿಗಿ
     ಕನ್ನಡದಲ್ಲಿ ೨೦೦೮ ರಲ್ಲಿ ಶತಮಾನದ ವೀರಮದಕರಿ ಎನ್ನುವ ಸಿನಿಮಾ ಬಂತು. ಅದು ಹಣ ಗಳಿಕೆಯಲ್ಲೂ ಮತ್ತು ಪ್ರಸಿದ್ಧಿಯಲ್ಲೂ ಹೆಸರು ಮಾಡಿತು. ಇದು ತೆಲುಗು ಸಿನಿಮಾದ ರಿಮೇಕ್. ಕನ್ನಡದಲ್ಲಿ ಚಿತ್ರನಟ ಸುದೀಪ್ ಅಭಿನಯಿಸಿ ನಿರ್ದೇಶನವನ್ನೂ ಮಾಡಿದ್ದಾರೆ. ಸಿನಿಮಾ ತೆಲುಗಿನಲ್ಲೂ ಹೆಚ್ಚು ಜನಪ್ರಿಯವಾಯಿತು. ಕಾರಣ ತೆಲುಗು ಚಿತ್ರನಟ ರವಿತೇಜ ಅವರ ವಿಚಿತ್ರ ಮ್ಯಾನರಿಸಮ್ ಮತ್ತು ತುಂಬಾ ಭಿನ್ನವಾದ ಚಂಬಲ್ ಡಕಾಯಿತರನ್ನು ಖಳನಾಯಕರನ್ನಾಗಿ ಚಿತ್ರಿಸಿ ತೀರಾ ಹೊಸತನದಿಂದ ನಿರೂಪಿಸಿದ್ದು .  ಶತಮಾನದ  ವೀರ ಮದಕರಿ ಎನ್ನುವ ಸಿನಿಮಾಕ್ಕೂ ಚಿತ್ರದುರ್ಗದ ಚಾರಿತ್ರಿಕ ವ್ಯಕ್ತಿ ಮದಕರಿ ನಾಯಕನಿಗೂ ಅಂತಹ ಯಾವುದೇ ಸಂಬಂಧವಿಲ್ಲ. ಹಾಗಾಗಿ ಸಿನೆಮಾಕ್ಕೆ ವೀರ ಮದಕರಿ ಎಂಬ ನಾಮಕರಣ ಸಲ್ಲದು ಎನ್ನುವ ವಿವಾದವೂ ಆಯಿತು. ಸಾಹಿತಿ ಬಿ.ಎಲ್. ವೇಣು ಅವರು ಬಗೆಯ ಹೆಸರು ಇಡುವುದನ್ನು ವಿರೋದಿಸಿದರು. ನಾಯಕ ನಟ ಸುದೀಪ್ ತೀರಾ ಉಡಾಫೆಯಿಂದ ಅವರ ವಾದವನ್ನು ತಳ್ಳಿಹಾಕಿದರು. ಹಾಗೆ ನೋಡಿದರೆ ಇದೊಂದು ಸಿನಿ ಮಸಾಲೆಯ ಸಾದಾ ಸೀದಾ ಜನಪ್ರಿಯ ಚಿತ್ರ. ವೀರ ಮದಕರಿಗೆ ಸಂಬಂದಿಸಿದಂತೆ ಇರುವುದು ಒಂದೇ  ಸಾಮ್ಯ ಎಂದರೆ ಮದಕರಿ ನಾಯಕನ ಶೌರ್ಯ ಸಾಹಸವನ್ನು ಸಿನಿಮಾ ನಾಯಕನ ಶೌರ್ಯ ಸಾಹಸದ ಜೊತೆ ಸಮೀಕರಿಸಲಾಗಿದೆ.  ಬಗೆಯ ಸಮೀಕರಣವೇ ಚಿತ್ರದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದೆ.
           
         ಮುಖ್ಯವಾಗಿ ಸಿನಿಮಾದ ಹೆಸರು ಮಾತ್ರ ಬೇಡ ನಾಯಕ ಬುಡಕಟ್ಟಿನ ವೀರನನ್ನು ಪ್ರತಿನಿಧಿಸುತ್ತದೆ. ಅಂತೆಯೇ ಈ ಸಿನಿಮಾದ ನಾಯಕ ನಟ ಸುದೀಪ್ ನಾಯಕ ಸಮುದಾಯಕ್ಕೆ ಸೇರಿದವ ಎನ್ನುವುದು. ನಾಯಕ ಸಮುದಾಯದ ಗುರುತಿಗೆ ಗಾದ್ರಿ ಪಾಲನಾಯಕ, ಜಗಲೂರು ಪಾಪಯ್ಯ, ಮುಂತಾದ ಬುಡಕಟ್ಟಿನ ಸಾಂಸ್ಕೃತಿಕ ನಾಯಕರು ಇರುವಂತೆ, ವೀರ ಮದಕರಿನಾಯಕ, ವೀರ ಸಿಂಧೂರ ಲಕ್ಷ್ಮಣ ಮುಂತಾದ ಚಾರಿತ್ರಿಕ ವ್ಯಕ್ತಿಗಳು ಇದ್ದಾರೆ. ಹಾಗೆಯೇ ಇಂದು ಆಧುನಿಕ ಕಾಲದಲ್ಲಿ ಕೆಲವು ನಾಯಕರು ಅಥವಾ ನಾಯಕ ಸಮುದಾಯವನ್ನು ಪ್ರತಿನಿದಿಸುತ್ತಿದ್ದಾರೆ ಅಥವಾ ಸಮುದಾಯದ ಜನರು ಹಾಗೆ ಭಾವಿಸಿಕೊಂಡ ನಾಯಕರು ಇದ್ದಾರೆ. ಅವರಲ್ಲಿ ಸಚಿವ ಶ್ರೀರಾಮುಲು, ರಾಜನಳ್ಳಿ ವಾಲ್ಮೀಕಿ ಸ್ವಾಮೀಜಿ ಮತ್ತು ಕನ್ನಡ ಚಲನಚಿತ್ರ ನಟ ಸುದೀಪ್ ಕೂಡ ಸೇರಿಸಿದ್ದಾರೆ. ಹಾಗಾಗಿ ಸುದೀಪ್ ಅಭಿನಯದ ಸಿನಿಮಾಗಳನ್ನು ನಾಯಕ ಸಮುದಾಯದವರಲ್ಲಿ ಕೆಲವರು ಹೆಚ್ಚು ಅಭಿಮಾನದಿಂದ ನೋಡುತ್ತಾರೆ.

          ಲೇಖನದ ವಿಷಯಕ್ಕೆ ಬರುವುದಾದರೆ, ಕನ್ನಡದಲ್ಲಿ ಚಲನಚಿತ್ರಗಳಿಗೆ ಪ್ರಾಣಿ ಬಲಿ ಕೊಡುವ ಪರಂಪರೆ ಅಷ್ಟಾಗಿಲ್ಲ. ಇದು ತೆಲುಗು ಮತ್ತು ತಮಿಳು ಸಿನಿಮಾ ಪರಂಪರೆಯಲ್ಲಿ ಹೆಚ್ಚಿದೆ. ಚಿರಂಜೀವಿ ಸಿನಿಮಾ ಬಿಡುಗಡೆಯ ದಿನ ನೂರಾರು ಪ್ರಾಣಿ ಬಲಿಯಾಗುವುದು ಸಾಮಾನ್ಯ ಸಂಗತಿಯಾಗಿತ್ತು. ಈಚೆಗೆ ಜೂನಿಯರ್ ಎನ್.ಟಿ.ಆರ್ ಸಿನೆಮಾಗಳಿಗೆ ಬಲಿ ಕೊಡುವ ಆಚರಣೆ ಹೆಚ್ಚಿದೆ. ಅದೀಗ ಹಿಂಸೆಯನ್ನು ಪ್ರತಿನಿಧಿಸುವ ಎಲ್ಲಾ ಸಿನೆಮಾಕ್ಕೂ ವಿಸ್ತರಿಸುತ್ತಿದೆ. ಕನ್ನಡದಲ್ಲಿ ಪ್ರಭಾವವೇ ಪ್ರಾಣಿ ಬಲಿಯ ಪರಂಪರೆಗೆ ಕಾರಣವಾಗಿದೆ. ಸುದೀಪ್ ಅಭಿನಯದ ಸಿನಿಮಾಕ್ಕೂ ಮುಂಚೆ ಕನ್ನಡದ ಸಿನಿಮಾಗಳಿಗೂ ಬಲಿ ನೀಡಿದ ಉದಾಹರಣೆಗಳಿವೆ. ಅವು ಮುಖ್ಯವಾಗಿ ರಕ್ತ ಹಿಂಸೆಯನ್ನು ಪ್ರಧಾನವಾಗಿಸಿಕೊಂಡ ಸಿನಿಮಾಕ್ಕೆ ಮಾತ್ರ ಇದ್ದಂತಿತ್ತು. ಅಥವಾ ಕೆಲವು ನಾಯಕರುಗಳಿಗೆ ಸೀಮಿತವಾಗಿತ್ತು. ಇದು ಪ್ರೇಕ್ಷಕರು ತಮ್ಮ ನೆಚ್ಚಿನ ನಟನಿಗೆ ತೋರುವ ಗೌರವ ಅಥವಾ ಅಭಿಮಾನದ ಸಂಕೇತವೆಂದು ತಿಳಿಯಲಾಗುತ್ತದೆ. ಅಭಿಮಾನವು ಹಿಂಸೆಯ ರೂಪದಲ್ಲಿ ಎನ್ನುವುದು ವಿಶೇಷ.
       ಬಲಿ ಕೊಡುವ ಆಚರಣೆ ಹೊಸದೇನಲ್ಲ. ಈಗಲೂ ಗ್ರಾಮ ದೇವತೆಗಳ ಎದುರು  ಈ ಆಚರಣೆ ಜೀವಂತವಾಗಿದೆ. ಉಚ್ಚಂಗಿ ದುರ್ಗ, ಗೌರಸಂದ್ರದ ಜಾತ್ರೆ, ನಾಯಕನ ಹಟ್ಟಿ, ದಾವಣಗೆರೆ ದುಗ್ಗಮ್ಮ ಮುಂತಾದ ನೂರಾರು ಗ್ರಾಮ ನಗರಗಳಲ್ಲಿ ಬಲಿ ಈಗಲೂ ನಡೆಯುತ್ತಿದೆ.  ಚಲನಚಿತ್ರಕ್ಕೆ  ಬಲಿ ಕೊಟ್ಟ ಆಚರಣೆಯೂ ಸಹ ಇಂತಹದೇ ಆಚರಣೆಯ ಅನುಕರಣೆ. ಬಳ್ಳಾರಿ ಜಿಲ್ಲೆಯ ಕೊಟ್ಟೂರು, ಕೂಡ್ಲಿಗಿ, ಹೊಸಪೇಟೆ ಮುಂತಾದ ಹೈದರಾಬಾದ್ ಕರ್ನಾಟಕದ ಬಹುಪಾಲು ಹಳ್ಳಿ ಮತ್ತು ನಗರಗಳಲ್ಲಿ ವೀರ ಮದಕರಿ  ಸಿನಿಮಾಕ್ಕೆ ಪ್ರಾಣಿ ಬಲಿ ಕೊಡುವ ಆಚರಣೆ ನಡೆಯಿತು. ಮುಖ್ಯವಾಗಿ ಬಲಿಕೊಟ್ಟ ಸಮುದಾಯ ಬೇಡನಾಯಕ. ಪ್ರಾಣಿ ಬಲಿಯ ಸ್ವರೂಪ ಗ್ರಾಮದೇವತೆಗೆ ಕೊಡುವ ಪ್ರಾಣಿ ಬಲಿಯನ್ನೇ ಹೋಲುತ್ತಿತ್ತು.

      ಕೊಟ್ಟೂರಿನಲ್ಲಿ ಟ್ರಾಕ್ಟರ್ ನಲ್ಲಿ ವೀರಮದಕರಿ ಸಿನೆಮಾ ಪೋಷ್ಟರ್ ಇಟ್ಟುಕೊಂಡು, ಮುಂದೆ ಮೂರ್ನಾಲ್ಕು ಕುರಿಗಳಿಗೆ ಬೇವಿನ ಸೊಪ್ಪು ತೊಡಿಸಿ ಹಿಡಿದಿದ್ದರು. ಹತ್ತಾರು ಯುವಕರು ರೋಷಾವೇಷದಿಂದ ಕುಣಿಯುತ್ತಿದ್ದರೆ, ಉರಿಮೆ, ಹಲಗೆ ಬಾರಿಸುವವರು ಹುರುಪಿನಲ್ಲಿದ್ದರು. ಸುತ್ತುವರಿದು ಜನವೋ ಜನ. ಕೊಟ್ಟೂರಿಗೆ ಬಂದ ಸುತ್ತಮುತ್ತಲ ಹಳ್ಳಿಗರು ಇದನ್ನು ಕುತೂಹಲದಿಂದ ನೋಡುತ್ತಿದ್ದರು. ಕೆಲವರು ನೋಡು ನೋಡುತ್ತಲೇ ಮೈದುಂಬಿಕೊಂಡು ಮೆರವಣಿಗೆಯಲ್ಲಿ ತಾವೂ ಸೇರಿಕೊಂಡರು. ಕುಣಿವವರು ಹಣೆಗೆ ದೊಡ್ಡದಾಗಿ ಕುಂಕುಮ ಹಾಕಿದ್ದರು. ಕುಣಿದು ಸುಸ್ತಾಗಿ ದಣಿವಾರಿಸಿಕೊಳ್ಳುತ್ತಿದ್ದ ರಾಮಪ್ಪ ಎನ್ನುವವರನ್ನು ಮಾತನಾಡಿಸಿದಾಗ ದಿನ ಬಲಿಕೊಡುತ್ತಿರುವವರು ಕೊಟ್ಟೂರಿನ ಸಮೀಪದ ಸೀರನಹಳ್ಳಿ ನಾಯಕರು ಎಂಬ ಉತ್ತರ ಬಂತು. ಅಂದರೆ ಒಂದೊಂದು ಊರಿನವರು ಒಂದೊಂದು ದಿನ ಬಲಿ ಕೊಡುತ್ತಿದ್ದರು ಎಂದಂತಾಯಿತು.


   ಸಂಗತಿಯನ್ನು ಇನ್ನಷ್ಟು ಜನರಲ್ಲಿ ವಿಚಾರಿಸಿದಾಗ ಬಲಿಯ ಇನ್ನೊಂದು ಮುಖ ತಿಳಿಯಿತು. ಹೀಗೆ ಬಲಿ ಕೊಟ್ಟದ್ದು ಬೇಡ ಸಮುದಾಯದವರು. ಕೊಟ್ಟೂರಿನಲ್ಲಿ ಬೇಡ ಸಮುದಾಯದ ಸಂಖ್ಯೆ ಹೆಚ್ಚಿದೆ. ಅಂತೆಯೇ ಸುತ್ತಮುತ್ತಲ ಹಳ್ಳಿಗಳ ಬೇಡರಿಗೆ ಮೇಲು ಜಾತಿಗಳಿಂದ ಯಾವುದೇ ತೊಂದರೆಗಳು ಸಂಭವಿಸಿದಲ್ಲಿ, ಕೊಟ್ಟೂರಿನ ಬೇಡರು ಅವರ ಸಹಾಯಕ್ಕೆ ನಿಂತು ಆಯಾ ಊರಿನ ಮೇಲು ಜಾತಿಯವರ ಕಿರುಕುಳ ತಪ್ಪಿಸುತ್ತಾರೆ. ಇದರಿಂದಾಗಿ ಆಯಾ ಊರಿನ ಬೇಡರಿಗೆ ಕೊಟ್ಟೂರಿನ ಬೇಡರು ಆಪದ್ಭಾಂದವರಂತೆ ಕಾಣುತ್ತಾರೆ.

  ಇಲ್ಲಿ ಆಯಾ ಊರುಗಳ ಸ್ಥಳೀಯ ಸಂಘರ್ಷವನ್ನು ವೀರ ಮದಕರಿ ಸಿನೆಮಾ ಒಂದು ನೆಲೆಯಲ್ಲಿ ಪ್ರತಿನಿಧಿಸುತ್ತದೆ. ಸಿನೆಮಾದಲ್ಲಿ ಊರನ್ನು ಆಳುವ ಕ್ರೂರ ಮನೆತನವನ್ನು ವೀರ ಮದಕರಿ ನಾಶ ಮಾಡುತ್ತಾನೆ. ಹಾಗಾಗಿ ಬೇಡರು ವೀರಮದಕರಿ ಸಿನೆಮಾಕ್ಕೆ ಬಲಿಕೊಡುವ ಮೂಲಕ ನಾವೂ ಸಿನೆಮಾದಲ್ಲಿ ಸುದೀಪ್ ಮಟ್ಟ ಹಾಕಿದಂತೆ, ನಮ್ಮನ್ನು ಯಾರಾದರೂ ಕೆಣಕಿದರೆ ನಾವೂ ವೀರ ಮದಕರಿಗಳಾಗುತ್ತೇವೆ ಎನ್ನುವ ಸಂದೇಶ ರವಾನೆ ಮಾಡಲು ಬಲಿ ಕೊಡುತ್ತಿದ್ದರು ಎನ್ನುವಂತಿತ್ತು. ಅದರಲ್ಲೂ ಸಿನೆಮಾದಲ್ಲಿ ಕ್ರೂರಿಗಳನ್ನು ಮಟ್ಟಹಾಕುವ ನಾಯಕ ಸುದೀಪ್ ಕೂಡ ನಾಯಕ ಸಮುದಾಯಕ್ಕೆ ಸೇರಿದವನು ಎನ್ನುವ ಕಾಕತಾಳೀಯ ಸಂಗತಿಯೂ ಇವರನ್ನು ಪ್ರೇರೇಪಿಸಿದಂತಿದೆ.

  ಅಂತೆಯೇ ಕೊಟ್ಟೂರಿನಲ್ಲಿ ಬಲಿಕೊಟ್ಟು ಇಲ್ಲಿಯೇ ಅಡುಗೆ ಮಾಡಿ ಕುಡಿದು ಕುಣಿದು ಕುಪ್ಪಳಿಸಿ ತಮ್ಮ ತಮ್ಮ ಊರಿಗೆ ಮರಳುತ್ತಿದ್ದರು. ಇದರ ಹಿಂದೆ ಕೊಟ್ಟೂರಿನ ಬೇಡರ ಮನವೊಲಿಸುವ ಮತ್ತು ಸಂತೈಸುವ ಆಯಾಮವೂ ಇತ್ತು. ಹೀಗೆ ಬಲಿ ಕೊಟ್ಟ ಹಳ್ಳಿಗರು ತಮ್ಮ ತಮ್ಮ ಊರುಗಳಿಗೆ ತೆರಳಿ ಎಂದಿನಂತೆಯೇ ತಮ್ಮ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಿಕೊಳ್ಳುತ್ತಿದ್ದರು. ನಮಗೆ ಬೆಂಬಲವಾಗಿ ಕೊಟ್ಟೂರಿನ ಬೇಡರು ಇದ್ದಾರೆ ಎಂಬ ಸಂದೇಶವನ್ನು ಊರಿನ ಮೇಲು ಜಾತಿಗಳಿಗೆ ತಲುಪಿಸಿ ಒಳಗೊಳಗೆ ಖುಷಿಗೊಳ್ಳುತ್ತಿದ್ದರು. ಒಂದು ಬಗೆಯ ಚೈತನ್ಯವನ್ನು ಪಡೆಯುತ್ತಿದ್ದರು.
  ವೀರ ಮದಕರಿ ಸಿನೆಮಾ ಇದ್ದದ್ದು ಕೊಟ್ಟೂರಿನ ರೇಣುಕಾ ಟಾಕೀಸಿನಲ್ಲಿ. ಈ ಟಾಕೀಸು ಜಂಗಮರ ಒಡೆತನಕ್ಕೆ ಸೇರಿದ್ದು. ಜನರು ಹೀಗೆ ಬಲಿ  ಕೊಡುವುದು, ಟಾಕೀಸಿನ ಆವರಣದಲ್ಲಿ ರಕ್ತ ಚೆಲ್ಲಾಡುವುದು ಅವರಿಗೆ ಸಹಿಸದ ಸಂಗತಿಯಾಗಿತ್ತು. ಇಲ್ಲಿ ಬಲಿ ಕೊಡಬೇಡಿ ಎಂದರೆ ಈ ಹುರುಪಿನ ಜನರು ದಾಂದಲೆ ಮಾಡುವ ಅಪಾಯವೂ ಇದ್ದದ್ದನ್ನು ಗಮನಿಸಿ ಪೋಲೀಸರ ಗಮನಕ್ಕೆ ತಂದು ಮೌನವಾಗಿದ್ದರು.

  ಹೀಗೆ ವೀರಮದಕರಿ ಸಿನೆಮಾಕ್ಕೆ ಬಲಿಕೊಡುವ ಆಚರಣೆಯ ಹಿಂದೆ, ಜಾತಿಕಲಹದ ಹಿನ್ನೆಲೆ ಇದೆ. ಅಂತೆಯೇ ಹಳ್ಳಿಗಳು ಹೊಸ ಮಾದ್ಯಮದಿಂದಲೂ ಹೇಗೆ ಬದುಕಿಗೆ ನೆರವನ್ನು ಪಡೆಯುತ್ತವೆ ಎನ್ನುವುದನ್ನೂ ಇದು ತೋರುತ್ತಿದೆ. ತಮ್ಮ ತಮ್ಮ ದೈನಂದಿನ ಚಟುವಟಿಕೆಗಳೊಂದಿಗೆ ಸಿನೆಮಾವೊಂದನ್ನು ಬೆಸೆದುಕೊಳ್ಳುತ್ತಿರುವ ಮಾದರಿ ಮೂಲತಃ ಆದ್ರ ಮತ್ತು ತಮಿಳುನಾಡಿನ ಪ್ರಭಾವದಿಂದ ಬಂದದ್ದು. ಕನ್ನಡದ ಸಂದರ್ಭದಲ್ಲೂ ಇಂತಹ ಘಟನೆಗಳ ಮೂಲಕ ಆಗಾಗ ಸಿನೆಮಾ ಜತೆಗಿನ ಜನರ ಹೊಸ ಬಗೆಯ ಸಂಬಂಧಗಳು ಏರ್ಪಡುತ್ತಿರುತ್ತವೆ.

  ಜಾನಪದವೆಂದರೆ ಹಳೆಯದು ಎನ್ನುವ ಗ್ರಹಿಕೆಯಿಂದ ಹೊರ ಬಂದಾಗ ಮಾತ್ರ ಇಂತಹ ಘಟನೆಗಳೂ ಜಾನಪದ ಪರಂಪರೆಯ ಪ್ರಭಾವದ ಕೂಸುಗಳಂತೆ ಕಾಣುತ್ತವೆ. ಇದನ್ನು ತಪ್ಪು ಸರಿ ಎನ್ನುವ ಕಪ್ಪು ಬಿಳುಪಿನ ವಿವರಣೆಯ ಆಚೆ ನಿಂತು ಆಯಾ ಸಮುದಾಯಗಳ ಅಗತ್ಯ ಮತ್ತು ಒಳ ತುಡಿತಗಳನ್ನು ಅರ್ಥಮಾಡಿಕೊಳ್ಳುವ ನೆಲೆಯಲ್ಲಿ ನೋಡಬೇಕಿದೆ. ಇಂತಹ ಹತ್ತಾರು ಸಂಗತಿಗಳ ಒಳಗಿಂದ ಹೊಸ ಜಾನಪದದ ರೂಪಗಳು ಮೈ ಪಡೆಯುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.