ಶುಕ್ರವಾರ, ಜನವರಿ 31, 2014

ಕಲ್ಪಿತ ಅನನ್ಯತೆಯೆಂಬ ಮೂಢನಂಬಿಕೆ


-ಅರುಣ್ ಜೋಳದಕೂಡ್ಲಿಗಿ
   ಅನನ್ಯತೆ ಎನ್ನುವ ಅಕಾಡೆಮಿಕ್ ಪರಿಭಾಷೆಯ ಬಗ್ಗೆ ಸ್ಪಷ್ಟಗೊಳಿಸಿದರೆ, ಅಥವಾ ಸರಳಗೊಳಿಸಿದರೆ ಮುಂದಿನ ಚರ್ಚೆ ಸಲೀಸಾಗಿ ಅರ್ಥವಾಗಬಹುದು ಅನ್ನಿಸುತ್ತದೆ. ಅನನ್ಯತೆಯನ್ನು ಗುರುತು, ಚಹರೆ, ತನ್ನದೇ ತಮ್ಮದೇ ಆದ ವಿಶಿಷ್ಟತೆ, ಬೇರೆಯವರು ಸುಲಭವಾಗಿ ಗುರುತಿಸುವಿಕೆಯ ಒಂದು ವಿಶಿಷ್ಟ ಅಂಶ ಎಂದು ಕರೆಯುತ್ತೇವೆ. ಉದಾಹರಣೆಗೆ ಕನ್ನಡ ಕಥನ ಸಾಹಿತ್ಯದಲ್ಲಿ ಕೆಲವು ಅನನ್ಯವಾದ ಲಕ್ಷಣಗಳಿವೆ. ತೇಜಸ್ವಿಯವರ ಬರಹದ ಮಾದರಿ ಮತ್ತಾರ ಬರಹದಲ್ಲೂ ಕಾಣುವುದಿಲ್ಲ. ಕುಂ.ವಿ ಅವರ ಕಥನ ಶೈಲಿ ಅವರಿಗೆ ಮಾತ್ರ ವಿಶಿಷ್ಟವಾದುದು ಇದು ಬೇರೆಯ ಲೇಖಕರಲ್ಲಿ ಕಾಣಸಿಗುವುದಿಲ್ಲ. ಹೀಗೆ ಸಂಸ್ಕೃತಿಯಲ್ಲೂ ಸಮುದಾಯಗಳಲ್ಲೂ ಕೆಲವು ವಿಶಿಷ್ಟ ಅಂಶಗಳಿರುತ್ತವೆ.
ಉದಾ: ಲಂಬಾಣಿ ಸಮುದಾಯದ ಮಹಿಳೆಯರು ಹಾಕುವ ಉಡುಪು ಅವರಿಗೇ ವಿಶಿಷ್ಟವಾದದ್ದು. ಒಬ್ಬ ಲಂಬಾಣಿ ಮಹಿಳೆ ಎಲ್ಲಿಯೇ ಇದ್ದರು ಉಡುಪಿನ ಆಧಾರದ ಮೇಲೆಯೆ ಲಂಬಾಣಿ ಸಮುದಾಯದ ಮಹಿಳೆ ಎಂದು ಗುರುತು ಹಚ್ಚಬಹುದು. ಅದೇ ಲಂಬಾಣಿ ಸಮುದಾಯದ ಮಹಿಳೆ ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಹಾಕುವ ಚೂಡಿದಾರವನ್ನಾಗಲಿ ಸೀರೆಯನ್ನಾಗಲಿ ಹಾಕಿದರೆ ಈ ಮಹಿಳೆ ಲಂಬಾಣಿ ಸಮುದಾಯಕ್ಕೆ ಸೇರಿದವಳು ಎಂದು ಗುರುತಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗೆ ಗುರುತು ಕಳೆದುಕೊಳ್ಳುವುದು ಕೂಡ ಜಾನಪದ ಅಧ್ಯಯನಕಾರರ ದೊಡ್ಡ ಆತಂಕಕಗಳಲ್ಲಿ ಒಂದಾಗಿದೆ.
ಹೀಗೆ ಆಯಾ ಸಮುದಾಯಗಳ ಗುರುತುಗಳು ಯಾವುವು ಎಂದು ಪತ್ಯೆಹಚ್ಚುವುದು, ಆ ಗುರುತುಗಳು ಈಗ ಇವೆಯೇ ಇಲ್ಲವೇ ಎಂದು ಹುಡುಕುವುದು. ಇಲ್ಲದೆ ಇದ್ದರೆ ಹೀಗಿತ್ತು ಎಂದು ಅದನ್ನು ಸಂಗ್ರಹಿಸಿ ಮ್ಯೂಜಿಯಂನಲ್ಲಿಡುವುದು. ಅಯ್ಯೋ ಆ ಸಮುದಾಯ ತನ್ನ ಗುರುತನ್ನು ಕಳೆದುಕೊಂಡಿತಲ್ಲಾ ಎಂದು ಬಹುಪಾಲು ಜಾನಪದ ಅಧ್ಯಯನಕಾರರು ದುಃಖ ವ್ಯಕ್ತಪಡಿಸುವುದು ಕಾಣುತ್ತದೆ.
ಇಂತಹ ಗುರುತುಗಳೆ ಕೆಲವು ಸಮುದಾಯಗಳಿಗೆ ಶಾಪ ಮತ್ತು ಅವಮಾನವಾಗಿದೆ. ಅಂತೆಯೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿವೆ. ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಎಂಜಲೆಲೆ ಮೇಲೆ ಉರುಳಾಡುವುದು ಅಲ್ಲಿನ ಬುಡಕಟ್ಟು ಸಮುದಾಯಗಳ ಅನನ್ಯತೆ ಎಂದು ಹೇಳುವುದು, ಕೊರಗ ಸಮುದಾಯವು ಅಜಲು (ಮೇಲು ಜಾತಿಗಳ ಕೂದಲು ಉಗುರನ್ನು ಕೊರಗರು ಅವರ ಊಟದ ಎಂಜಲಲ್ಲಿ ಬೆರೆಸಿ ತಿಂದರೆ ಮೇಲು ಜಾತಿಗಳ ರೋಗ ಗುಣವಾಗುತ್ತದೆ ಎಂಬ ನಂಬಿಕೆ) ಪದ್ದತಿ ಅವರ ಗುರುತು ಅದನ್ನವರು ಉಳಿಸಿಕೊಳ್ಳಬೇಕು ಎಂಬಂತಹ ಜಾನಪದ ಅಧ್ಯಯನ ಅಮಾನವೀಯ ಅಧ್ಯಯನವೇ ಸರಿ.
ಹೀಗೆ ಒಂದು ಸಮುದಾಯವನ್ನು ಹಿಡಿತದಲ್ಲಿಟ್ಟುಕೊಳ್ಳಲು, ಅಂಧಕಾರದಲ್ಲಿರಲು, ಅಜ್ಞಾನದ ಕೂಪದಲ್ಲಿರಿಸಲು ಮೇಲು ಜಾತಿಗಳು ಕೆಳ ಸಮುದಾಯಗಳಿಗೆ ಇಂತಹ ಎಷ್ಟೋ ಗುರುತುಗಳನ್ನು ಆರೋಪಿಸಿವೆ. ಇಂತಹ ಗುರುತುಗಳೇ ನಮ್ಮ ಸಮುದಾಯದ ಅನನ್ಯತೆ ಎಂದು ನಂಬಿ ಎಷ್ಟೋ ಸಮುದಾಯಗಳು ಅವುಗಳನ್ನು ಈಗಲೂ ಆರಾಧಿಸುತ್ತಿವೆ. ಇಂತಹ ಆರಾಧನೆಯನ್ನೆ ಜಾನಪದ ಸಂಸ್ಕೃತಿ ಎಂದು ಅಧ್ಯಯನ ಮಾಡಿದ್ದೂ ಆಗಿದೆ. ಆದರೆ ನಿಜವಾದ ಜಾನಪದ ಅಧ್ಯಯನಕಾರರು ಮಾಡಬೇಕಾದುದು ಒಂದು ಸಮುದಾಯದ ಗುರುತು ಸ್ವತಃ ಆಯಾ ಸಮುದಾಯ ಕಟ್ಟಿಕೊಂಡದ್ದೇ? ಅಥವಾ ಆ ಗುರುತನ್ನು ಯಾರು ಯಾಕಾಗಿ ಹೇರಿದರು? ಇಂತಹ ಗುರುತಿನ ಆಚರಣೆಯಿಂದ ಆ ಸಮುದಾಯದ ಹೊಸ ತಲೆಮಾರಿನ ಮೇಲೆ ಆಗುತ್ತಿರುವ ಪರಿಣಾಮವಾದರೂ ಏನು? ಇದು ನಿಮ್ಮ ಗುರುತಲ್ಲ ಬೇರೆಯವರು ಕಟ್ಟಿದ್ದು ಇದನ್ನು ಬಿಟ್ಟುಬಿಡಿ ಎಂದು ಸಮುದಾಯವನ್ನು ಜಾಗ್ರತೆಗೊಳಿಸುವ ವಿಧಾನ ಯಾವುದು ಎನ್ನುವುದನ್ನು ಇಂದು ಅಧ್ಯಯನಕಾರರು ಕಂಡುಕೊಳ್ಳುವ ಅಗತ್ಯವಿದೆ.
ಇಂದು ಮೂಢನಂಬಿಕೆ ವಿಧೇಯಕದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ಸಮುದಾಯಗಳ ಅನನ್ಯತೆಯನ್ನು ಹುಟ್ಟುಹಾಕಿದವರು ಈ ವಿಧೇಯಕ ಬರದಂತೆ ತಡೆಯುವ ಹುನ್ನಾರಗಳನ್ನು ಮಾಡುತ್ತಿದ್ದಾರೆ. ಇದು ಕೂಡ ಅನನ್ಯತೆ ಮತ್ತು ಕಲ್ಪಿತ ಅನನ್ಯತೆಯ ಚರ್ಚೆಯೇ ಆಗಿದೆ. ಕೆಲವು ಮೂಢ ನಂಬಿಕೆಗಳನ್ನು ಜಾನಪದ ಅಧ್ಯಯನಕಾರರು ಅಸೂಕ್ಷ್ಮವಾಗಿ ಜನಪದ ಸಂಸ್ಕೃತಿ ಎಂದು ಅಧ್ಯಯನ ಮಾಡಿದ್ದಾರೆ. ಈ ಅಧ್ಯಯನಗಳು ಮೂಢನಂಬಿಕೆ ವಿಧೇಯಕವನ್ನು ವಿರೋಧಿಸುವವರಿಗೆ ಬೆಂಬಲವಾಗಿ ನಿಲ್ಲುವ ಸಾಧ್ಯತೆಗಳಿವೆ. ಇಂದು ಯಾವುವು ಸಮುದಾಯಗಳ ವಿಶಿಷ್ಟತೆಗಳೆಂದು ಗುರುತಿಸುತ್ತೇವೆಯೋ ಆ ವಿಶಿಷ್ಟತೆಗಳು ಸಮುದಾಯದ ಮೇಲ್ಚಲನೆಗೆ ಪ್ರೇರಕವಾಗಿದ್ದರೆ, ಸಮುದಾಯದ ಅಂತಸತ್ವವನ್ನು, ಚೈತನ್ಯವನ್ನು ಹೆಚ್ಚಿಸುವಂತಿದ್ದರೆ ಅವುಗಳನ್ನು ಉಳಿಸಿಕೊಳ್ಳಬೇಕಿದೆ.
ಇಂತಹ ಅನನ್ಯತೆಗಳು ಬಹುಪಾಲು ಹೊಸಕಾಲದ ಸಂದರ್ಭದಲ್ಲಿ ಸಮುದಾಯಗಳೆ ಕಟ್ಟಿಕೊಂಡಿರುವಂತವು. ಉದಾ: ಕೊರಗ ಸಮುದಾಯವು ಪ್ರತಿ ವರ್ಷ ಆಗಷ್ಟ್ ೧೮ ನೇ ತಾರೀಕಿನ ದಿನ ‘ಭೂಮಿಹಬ್ಬ ಎಂಬ ಹೊಸ ಆಚರಣೆಯೊಂದನ್ನು ಮಾಡುತ್ತಿದೆ. ಈ ಆಚರಣೆ ಕನಿಷ್ಟ ಏಳೆಂಟು ವರ್ಷದಿಂದಲೂ ನಡೆಯುತ್ತಿದೆ. ಈ ಹಬ್ಬ ಹುಟ್ಟಿಕೊಂಡದ್ದು ಕೊರಗರು ಭೂಮಿಗಾಗಿ ಹೋರಾಟ ಮಾಡಿ, ಆಗಷ್ಟ್ ೧೮ರ ದಿನ ಸರಕಾರದಿಂದ ಭೂಮಿಯ ಹಕ್ಕು ಪತ್ರಗಳನ್ನು ಪಡೆದಿದ್ದಾರೆ. ಅಂದರೆ ತಮ್ಮ ಹಕ್ಕಿಗಾಗಿ ಹೋರಾಟ ಮಾಡಿ ಗೆದ್ದ ದಿನವನ್ನು ಭೂಮಿಹಬ್ಬ ಎಂದು ಆಚರಿಸುತ್ತಾರೆ. ಈ ಹಬ್ಬದ ಆಚರಣೆ ಈ ಸಮುದಾಯದಲ್ಲಿ ಒಂದು ಬಗೆಯ ಹೋರಾಟದ ನೆನಪನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಿದೆ. ಅಂತೆಯೇ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾದ ಪ್ರಜ್ಞೆಯನ್ನು ಸದಾ ಕಾಪಿಡುತ್ತದೆ. ಇಂದು ದಲಿತ ಸಮುದಾಯಗಳಲ್ಲಿರುವ ಅಂಬೇಡ್ಕರ್ ಪ್ರಜ್ಞೆಯಾಗಲಿ, ಬುದ್ಧ ಪ್ರಜ್ಞೆಯಾಗಲಿ ಇರುವುದು ದಲಿತ ಸಮುದಾಯ ಕಟ್ಟಿಕೊಂಡ ಎಚ್ಚರದ ಸಂಖೇತದ ಹೊಸ ಅನನ್ಯತೆಯೇ ಆಗಿದೆ. ಈ ನೆಲೆಯಲ್ಲಿ ನಾವಿಂದು ಕುರುಡು ಅನನ್ಯತೆಗಳ ಮೂಢ ನಂಬಿಕೆಗಳನ್ನು ಗುರುತಿಸಬೇಕಿದೆ, ಅಂತೆಯೇ ಸಮುದಾಯಗಳು ಕಟ್ಟಿಕೊಂಡ ಹೊಸ ಅನನ್ಯತೆಗಳನ್ನು ಶೋಧಿಸಬೇಕಿದೆ.
ಕನ್ನಡದಲ್ಲಿ ಕಲ್ಪಿತ ಅನನ್ಯತೆಯ ಕುರಿತು ಅಲ್ಲಲ್ಲಿ ಸಂಶಯಗಳು ವ್ಯಕ್ತವಾಗಿವೆ, ಆದರೆ ಅದುವೇ ಅನನ್ಯತೆಯನ್ನು ಗುರುತಿಸುವ ಆಲೋಚನೆಯನ್ನು ಪ್ರಭಾವಿಸಲು ಸಾಧ್ಯವಾಗಿಲ್ಲ. ಮೊಗಳ್ಳಿ ಗಣೇಶ್ ಅವರು ಈ ಬಗೆಯ ಕಲ್ಪಿತ ಅನನ್ಯತೆ ಕುರಿತು ಗಂಬಿsರವಾಗಿ ಪ್ರತಿಕ್ರಿಯಿಸುತ್ತಾರೆ: ಸಾಂಸ್ಕೃತಿಕ ಅನನ್ಯತೆ ಬಗ್ಗೆ ಅನೇಕರು ಸಾಂಪ್ರದಾಯಿಕವಾಗಿ ಧಾರ್ಮಿಕ ಪರಿಭಾಷೆಯಲ್ಲಿ ಚರ್ಚಿಸುತ್ತಿರುತ್ತಾರೆ. ಸಾಂಸ್ಕೃತಿಕ ಚಹರೆಯಿಂದ ಅನನ್ಯತೆಯಿಂದ ಆಯಾ ಸಮುದಾಯಗಳ ವಿಶಿಷ್ಟತೆಯನ್ನು ಗುರುತಿಸುವುದನ್ನು ಪ್ರeವಂತರೂ ಕೂಡ ಮಾಡುತ್ತಿರುತ್ತಾರೆ. ಸಾಂಸ್ಕೃತಿಕ ಅನನ್ಯತೆಯಿಂದಲೇ ಅವರವರ ಪರಂಪರೆ ಕವಲೊಡೆಯುತ್ತದೆ ಎಂತಲೂ ವಾದಿಸುತ್ತಿರುತ್ತಾರೆ. ಇಂತಹ ವಾದಗಳೆಲ್ಲ ಕನಿಷ್ಠ ಸಾಮಾನ್ಯ ತಿಳುವಳಿಕೆ ಇದ್ದರೆ ಸಾಕು ಬಹಳ ಅಪದ್ಧ ಎಂದು ತಿಳಿಯುತ್ತದೆ. ಸಾಂಸ್ಕೃತಿಕ ಅನನ್ಯತೆಯನ್ನು ಇಪ್ಪತ್ತನೆಯ ಶತಮಾನವು ಗಾಢವಾಗಿ ಬದಲಿಸಿದೆ. ಪರಂಪರೆಗಳನ್ನು ಆಧುನೀಕರಣಕ್ಕೆ ಅಳವಡಿಸಿದೆ. ಒಂದೊಂದು ಜಾತಿಗೂ ಒಂದೊಂದು ಅನನ್ಯತೆ ಜಾತಿಪ್ರಣೀತ ಸಮಾಜದಲ್ಲಿದೆ ಎಂಬುದು ಮೇಲುನೋಟಕ್ಕೆ ತಿಳಿಯುತ್ತದೆ.
ಇಲ್ಲಿ ಸಾಂಸ್ಕೃತಿಕ ಚಹರೆ, ಗುರುತು, ವಿಶಿಷ್ಟತೆ ಅನನ್ಯತೆ ಎಂಬ ಪದ ಪ್ರಯೋಗಗಳ ಹಿಂದಿನ ಮನೋಧರ್ಮವನ್ನು ಇರುವ ಅರ್ಥಗಳನ್ನು ಪ್ರಶ್ನಿಸಬೇಕಾಗುತ್ತದೆ. ವೈದಿಕ ಸಮುದಾಯಗಳಿಗೆ ಅನ್ವಯಿಸಿ ಈ ಚಹರೆ, ಗುರುತು, ಅನನ್ಯತೆ, ವಿಶಿಷ್ಟತೆಗಳನ್ನು ಬಹಳ ಸಂತೋಷದಿಂದ ಹೇಳಬಹುದಾದರೂ ಅದೇ ಶಬ್ದಗಳನ್ನು ಅವುಗಳ ಅರ್ಥ ವಿಸ್ತಾರಗಳನ್ನು ಕೆಳಜಾತಿಗಳಿಗೆ ಹೇಳಲು ಮುಜುಗರವೂ, ಬೇಸರವೂ ಎದುರಾಗುತ್ತದೆ ಎಂಬುದನ್ನು ಅನೇಕರು eಪಿಸಿಕೊಳ್ಳಬೇಕು. ೨೦ನೇ ಶತಮಾನದ ಸಾಂಸ್ಕೃತಿಕ ಚಹರೆಯೇ ದಲಿತ ಸಮುದಾಯಗಳಿಗೆ ಬೇರೆಯಾಗಿರುತ್ತದೆ. ಮೆಟ್ಟು ಹೊಲೆಯುವುದು ಅಜಲು ಜೀತಪದ್ಧತಿಗೆ ಒಳಗಾಗುವುದು, ದೇವದಾಸಿಯಾಗು ವುದು, ಮುಂತಾದ ವಿಶಿಷ್ಟ ಅನನ್ಯ ಪದ್ಧತಿಗಳನ್ನು ಆ ಸಮುದಾಯದ ಚಹರೆ ಎಂದು ಹೇಳಿದರೆ ಅದು ಯಾವ ನ್ಯಾಯವಾಗುತ್ತದೆ? ವೈದಿಕ ಪರಂಪರೆ ಹೇರಿದ ಅನಿಷ್ಟ ಪದ್ಧತಿಗಳನ್ನು ಇವತ್ತು ಎಷ್ಟು ಮುಗ್ಧ ದಲಿತ ಸಮುದಾಯಗಳು ಒಪ್ಪಿಕೊಂಡಿವೆ. ಇಂತಹ ಸಂದರ್ಭದಲ್ಲಿ ಸಾಂಸ್ಕೃತಿಕ ಅನನ್ಯತೆ, ಚಹರೆ, ಎಂಬ ಪರಿಕಲ್ಪನೆಗಳೇ ಬಲಪಂಥೀಯ ಧೋರಣೆಗೆ ಪೂರಕವಾಗಿವೆ. ಪ್ರತಿಷ್ಠಿತ ಪ್ರಭುತ್ವ ವ್ಯವಸ್ಥೆಯನ್ನು, ಧಾರ್ಮಿಕ ಅಂಧತ್ವವನ್ನು, ನಾಗರಿಕ ವಿಕೃತಿಯನ್ನು, ಮೂಲಭೂತ ವಾಗಿ ಬದಲಾಯಿಸುವ ಆಶಯದಲ್ಲಿ ತೊಡಗುವ ವೈಚಾರಿಕ ಆದರ್ಶವೇ ಇವತ್ತಿನ ಅನೇಕ ಕೆಳಜಾತಿಗಳ ಸಾಂಸ್ಕೃತಿಕ ಅನನ್ಯತೆಯಾಗಿದೆ. (ಮೊಗಳ್ಳಿ ಗಣೇಶ್, ಮೌಖಿಕ ಕಥನ,ಪುಟ:೪೫) ಈ ನೆಲೆಯಲ್ಲಿ ಈ ಹೊತ್ತು ಅನನ್ಯತೆ ಕುರಿತು ಚಿಂತಿಸುವವರು ಸಮುದಾಯಗಳ ಚಹರೆಯನ್ನು ಪುನರ್ ವ್ಯಾಖ್ಯಾನಕ್ಕೆ ಒಳಗು ಮಾಡಬೇಕಾಗಿದೆ. ಸಮುದಾಯಗಳು ಕಟ್ಟಿಕೊಳ್ಳಬೇಕಾದ ಹೊಸ ಅನನ್ಯತೆಗಳ ಪರ್ಯಾಯವನ್ನು ಸೂಚಿಸಬೇಕಾಗಿದೆ.
ಹೊಸ ಬಗೆಯ ವೈಚಾರಿಕ ಎಚ್ಚರಗಳು ಇಂದು ಸಮುದಾಯಗಳು ಕಟ್ಟಿಕೊಳ್ಳ ಬಹುದಾದ ನವ ಅನನ್ಯತೆಯಾಗಿದೆ ಎನ್ನುವುದು ಸಹ ಜನರ ಪ್ರeಯ ಭಾಗವಾಗುವಂತೆ ಇಂದು ಜಾನಪದ ಅಧ್ಯಯನಗಳು ರೂಪುಗೊಳ್ಳಬೇಕಿದೆ. ಇನ್ನು ಸಮುದಾಯಗಳೇ ತಾವಾಗಿ ಕಟ್ಟಿಕೊಳ್ಳುತ್ತಿರುವ ಹೊಸ ಬಗೆಯ ಅನನ್ಯತೆಯನ್ನು ಗುರುತಿಸುವಿಕೆಯೂ ಸಹ ಈ ಹೊತ್ತಿನ ಎಚ್ಚರದ ಭಾಗವಾಗಬೇಕು. ಹೀಗೆ ಕಲ್ಪಿತ ಅನನ್ಯತೆಯನ್ನು ಕುರಿತು ಬಿsನ್ನವಾಗಿ ಚರ್ಚಿಸಲು ಸಾಧ್ಯವಿದೆ. ಅಂತೆಯೇ ಕನ್ನಡದ ಬಹುಪಾಲು ಜಾನಪದ ಅಧ್ಯಯನಗಳಲ್ಲಿ ಈ ಬಗೆಯ ಕಲ್ಪಿತ ಅನನ್ಯತೆಗಳನ್ನೇ ನಿಜದ ಅನನ್ಯತೆ, ಅದು ಉಳಿಯಬೇಕು ಎನ್ನುವ ನಿರ್ವಚನಗಳಿವೆ. ಅಂತಹ ಅಪಾಯಕಾರಿ ವಿಶ್ಲೇಷಣೆಗಳನ್ನು ಗುರುತಿಸಲು ಇಂದು ಸಾಧ್ಯವಾಗಬೇಕು. ಇಂತಹ ಕೆಲವು ಸೂಕ್ಷ್ಮ ಚರ್ಚೆಗಳನ್ನು ಹೆಚ್ಚು ಬೆಳೆಸಬೇಕಾಗಿದೆ.
ಕೆಲವೊಮ್ಮೆ ಕಲ್ಪಿತ ಅನನ್ಯತೆಗಳ ಹಿಂದೆಯೂ ಭಾವನಾತ್ಮಕವಾಗಿ ಒಂದಾಗುವುದಕ್ಕಿಂತ ರಾಜಕೀಯ ಅಧಿಕಾರದ ಪ್ರಶ್ನೆಯೂ ಇರುತ್ತದೆ. ರಾಜಕೀಯ ಅಧಿಕಾರ, ಸಾಮಾಜಿಕ ನ್ಯಾಯದ ಹಕ್ಕಿನ ಪ್ರತಿಪಾದನೆಯಾಗಿಯೂ ಸಾಂಸ್ಕೃತಿಕ ಅನನ್ಯತೆಯ ಅಧ್ಯಯನಗಳು ಇಂದು ಹೆಚ್ಚಾಗಿ ನಡೆಯುತ್ತಿರುವುದಕ್ಕೆ ಕಾರಣವಿರಬೇಕು. ದಮನಿತ ಸಮುದಾಯಗಳ ಸಾಂಸ್ಕೃತಿಕ ವಿಶಿಷ್ಟತೆಯ ಅಧ್ಯಯನಗಳಿಗೆ ಯಾವಾಗಲೂ ಸಾಮಾಜಿಕ ರಾಜಕೀಯ ಹಕ್ಕುಸಾಧನೆಯ ಆಯಾಮವಿರುತ್ತದೆ. ಅವಕ್ಕೆ ಅಲ್ಪಸಂಖ್ಯಾತರಾಗಿರುವ ಕಾರಣಕ್ಕೆ ಹುಟ್ಟುವ ಅಭದ್ರತೆಯ ಭಯಕ್ಕಿಂತ, ಸವರ್ಣೀಯ ಸಮಾಜದಲ್ಲಿ ಆತ್ಮಾಭಿಮಾನ ಕಳೆದುಹೋಗದಂತೆ ಉಳಿಸಿಕೊಳ್ಳುವ ಒತ್ತಡವಿರುತ್ತದೆ (ರಹಮತ್ ತರೀಕೆರೆ:ಪ್ರತಿಸಂಸ್ಕೃತಿ:ಪುಟ:೨೦೯) ಎಂದು ತರೀಕೆರೆ ಅವರು ವಿಶ್ಲೇಷಿಸುತ್ತಾರೆ.
ಸಾಂಸ್ಕೃತಿಕ ಅನನ್ಯತೆಯ ಪ್ರಶ್ನೆಯನ್ನು ತಾತ್ವಿಕವಾಗಿ ನಿರಾಕರಿಸುವ ಒಂದು ಶಾಖೆಯಿದೆ. ಅದು ಚರಿತ್ರೆ, ಸಮಾಜಶಾಸ್ತ್ರ, ಕಲೆಗಳ ಅಧ್ಯಯನ ಕುರಿತದ್ದು. ಅದನ್ನು ಸಾಂಸ್ಕೃತಿಕ ಸಂಕರವಾದಿ ಎಂದು ಕರೆಯಬಹುದು. ಈ ಶಾಖೆಯ ಪ್ರಕಾರ, ಭಾರತದ ಚಾರಿತ್ರಿಕ ಬೆಳವಣಿಗೆಗಳಲ್ಲಿ ಜನಾಂಗ ವಲಸೆಗಳು ಹೊರಗಿನಿಂದ ರಾಜ್ಯ ವಿಸ್ತರಣೆಗೆ ಬಂದ ವಿದೇಶಿ ಆಳು ವರ್ಗದವರು(ಹೂಣರು, ಶಕರು, ಮಂಗೋಲರು, ಗ್ರೀಕರು, ತುರ್ಕರು, ಬ್ರಿಟಿಷರು) ಬಂದು ನೆಲೆಸಿದರು. ಆ ಹೊತ್ತಲ್ಲಿ ಭಾರತದಲ್ಲಿಯೇ ಇರುವ ವಿವಿಧ ಜಾತಿ, ಧರ್ಮಗಳು ತಮ್ಮ ಬದುಕಿನಲ್ಲಿ ಅನೇಕ ಬದಲಾವಣೆ ತಂದುಕೊಂಡವು. ಧರ್ಮ ಬದಲಾಯಿಸಿದವು. ಹೊಸ ದೈವಗಳನ್ನು ಪಡೆದವು. ಈ ಕಾರಣಗಳಿಂದ ನಮ್ಮಲ್ಲಿ ಸಮುದಾಯಗಳಿಗೂ ಧರ್ಮಗಳಿಗೂ ಸಮಾಜಗಳಿಗೂ ಅವುಗಳದ್ದೇ ಆದ ಸಾಂಸ್ಕೃತಿಕ ವಿಶಿಷ್ಟತೆ ಇದೆ. ಆದರೆ ಅದು ಯಾರಿಂದಲೂ ಪ್ರಭಾವಗೊಳ್ಳದ ಮೂಲರೂಪದ ಅನನ್ಯತೆ ಅಲ್ಲ. ಅಂತಹದು ಇರಲು ಸಾಧ್ಯವೂ ಇಲ್ಲ ಎಂದು ಈ ಚಿಂತನೆ ಭಾವಿಸುತ್ತದೆ.
ಈ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡುವವರಲ್ಲಿ ಡಿ.ಡಿ.ಕೊಸಾಂಬಿ, ದೇವಿ ಪ್ರಸಾದ್ ಚಟ್ಟೋಪಾಧ್ಯಾಯ, ರೋಮಿಲಾ ಥಾಪರ್ ಮುಖ್ಯರು, ಕನ್ನಡದಲ್ಲಿ ಶಿವರಾಮ ಕಾರಂತರ ಸಂಸ್ಕೃತಿ ಚಿಂತನೆಗಳಲ್ಲಿ ಈ ಪ್ರತಿಪಾದನೆ ಮತ್ತೆ ಮತ್ತೆ ಬರುತ್ತದೆ. ಶಂಬಾ ಜೋಶಿಯವರ ಪ್ರಮುಖ ಸಾಂಸ್ಕೃತಿಕ ಅಧ್ಯಯನಗಳೂ ಈ ಹುಡುಕಾಟ ಮಾಡುತ್ತವೆ. ಡಿ.ಆರ್.ನಾಗರಾಜ ಅವರ ಅಧ್ಯಯನಗಳಲ್ಲಿ ಮುಖ್ಯ ಹುಡುಕಾಟವು ಭಾರತದ ಶಿಷ್ಟ, ಪರಿಶಿಷ್ಟ, ದ್ರಾವಿಡ-ಆರ್ಯ, ನಗರ-ಗ್ರಾಮೀಣ, ಜನಪದ-ನಾಗರಿಕ, ಹಿಂದೂ-ಮುಸ್ಲಿಂ, ದಲಿತ-ಬ್ರಾಹ್ಮಣ ಮುಂತಾದ ದ್ವಂದ್ವಾತ್ಮಕ ಲೋಕಗಳ ಆಚೆ ನಡೆದಿರುವ ಸಾಂಸ್ಕೃತಿಕ ಕೊಡುಕೊಳೆಗಳನ್ನು ಕುರಿತುದಾಗಿತ್ತು. ಅಲ್ಲಮ ಪ್ರಭು ಮತ್ತು ಶೈವಪ್ರತಿಭೆ ಇದಕ್ಕೆ ನಿದರ್ಶನ. ರಹಮತ್ ತರೀಕೆರೆ ಅವರ ಪ್ರತಿಸಂಸ್ಕೃತಿಯ ಚಿಂತನೆಯಲ್ಲಿಯೂ ಈ ಬಗೆಯ ಹುಡುಕಾಟವಿದೆ. ಇಲ್ಲಿ ಸಾಂಸ್ಕೃತಿಕ ಅನನ್ಯತೆಯನ್ನು ಕಲ್ಪಿತವೆಂದು ನಿರಾಕರಿಸಿದ ಧೋರಣೆಯ ಜತೆ ಅನುಮಾನಿಸಿ ನೋಡುವ ಸೂಕ್ಷ್ಮತೆಯೂ ಇದೆ. ಹೀಗೆ ಅನನ್ಯತೆಯನ್ನು ಕಲ್ಪಿತವೆಂದು ನಿರಾಕರಿಸುವ ಅಥವಾ ಅನನ್ಯತೆಯನ್ನೇ ಭಿನ್ನವಾಗಿ ಅರ್ಥೈಸುವ ಆಲೋಚನೆಗಳು ಕನ್ನಡ ಸಂದರ್ಭದಲ್ಲಿ ಜಾನಪದ ಅಧ್ಯಯನಗಳಿಗಿಂತ, ಸಾಹಿತ್ಯ ವಿಮರ್ಶೆ ಮತ್ತು ಸಾಂಸ್ಕೃತಿಕ ಅಧ್ಯಯನಗಳಲ್ಲಿ ಹೆಚ್ಚಾಗಿದೆ.
ಅನನ್ಯತೆ ಎನ್ನುವುದು ಸಮುದಾಯಗಳಿಗೆ ಸ್ವಾಭಿಮಾನವನ್ನೂ, ತನ್ನದೇ ಆದ ವಿಶಿಷ್ಟತೆಯ ಕಾರಣಕ್ಕೆ ಒಂದು ಬಗೆಯ ಶಕ್ತಿಯನ್ನು ಕೊಡುವಂತಿದ್ದರೂ, ಅದೇ ಅನನ್ಯತೆ ಆಯಾ ಸಮುದಾಯಗಳಿಗೆ ಬಂಧನವಾಗುವ ಅಪಾಯವೂ ಇಲ್ಲದಿಲ್ಲ. ಬದಲಾದ ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಲು ಸಮುದಾಯಗಳು ತಮ್ಮ ಅನನ್ಯತೆಗಳನ್ನು ಕಿತ್ತೊಗೆದು ಹೊಸ ಅನನ್ಯತೆಯನ್ನು ಕಟ್ಟಿಕೊಳ್ಳುವಿಕೆ ನಿರಂತರವಾಗಿ ನಡೆದೇ ಇದೆ. ಹಾಗಾಗಿಯೇ ಸಮುದಾಯಗಳು ತಮ್ಮ ಮೂಲ ವೃತ್ತಿ ಕಸುಬುಗಳನ್ನು ಬಿಟ್ಟು ಬೇರೆ ಬೇರೆ ವೃತ್ತಿಕಸಬುಗಳಿಗೆ ಪಲ್ಲಟವಾಗಿರುವುದನ್ನು ನಾವು ನೋಡುತ್ತಿದ್ದೇವೆ. ಈ ನೆಲೆಯಲ್ಲಿ ದಲಿತರ ಕೆಳಜಾತಿಗಳ ದೊಡ್ಡ ಚಲನೆಯನ್ನು ನಾವು ಗಮನಿಸಬಹುದು.
ದಲಿತರು ಬದುಕುವ ರೀತಿಯೇ ಒಂದು ಅನನ್ಯತೆ. ಅದನ್ನವರು ಮುಂದುವರಿಸಿಕೊಂಡು ಹೋಗಬೇಕು ಎಂಬ ಮೂಡನಂಬಿಕೆಗೆ ಅಂಬೇಡ್ಕರ್ ಬಲಿಯಾಗಿದ್ದರೆ ಇಂದು ದಲಿತ ಕೆಳಜಾತಿಗಳ ಸ್ಥಿತಿ ಹೇಗಿರುತ್ತಿತ್ತು ಎಂದು ನೆನಪಿಸಿಕೊಂಡರೂ ಮೈ ನಡುಗುತ್ತದೆ. ಹಾಗಾಗಿಯೇ ಅಂಬೇಡ್ಕರ್ ಅವರು ದಲಿತ ಕೆಳಜಾತಿಗಳಿಗೆ ಶಿಕ್ಷಣ ಸಂಘಟನೆ ಹೋರಾಟದಂತಹ ಹೊಸ ಅನನ್ಯತೆಗಳನ್ನು ತೋರಿದರು. ಹೀಗೆ ಪರಂಪರೆಯಿಂದ ಬಂದ ಅನನ್ಯತೆಗಳನ್ನು ಸಾದಾ ಎಚ್ಚರದಿಂದ ನೋಡಬೇಕಾಗಿದೆ. ಇವುಗಳು ಯಾರೋ ಕಲ್ಪಿಸಿದ ಅನನ್ಯತೆಯ ಕವಚಗಳಾಗಿಯೂ ನಮ್ಮನ್ನು ನಿಯಂತ್ರಿಸುತ್ತಿರುತ್ತವೆ. ಸಾಂಪ್ರದಾಯಿಕ ಅನನ್ಯತೆಗಳಿಗಿಂತ, ಸಮುದಾಯಗಳನ್ನು ಒಗ್ಗೂಡಿಸುವ ಹೊಸ ಅನನ್ಯತೆಗಳ ಹುಡುಕಾಟವನ್ನೂ ನಾವಿಂದು ಮಾಡಬೇಕಿದೆ. ಅಂಬೇಡ್ಕರ್ ಅವರ ಒಂದು ಚಿತ್ರ, ಒಂದು ಪ್ರತಿಮೆ, ಒಂದು ಮಾತು ಇಡೀ ದಲಿತ ಕೆಳ ಸಮುದಾಯಗಳನ್ನು ಒಂದುಗೂಡಿಸುವ ಚುಂಬಕ ಶಕ್ತಿಯಾಗಿರುವುದನ್ನು ನೋಡಿದರೆ ಸ್ವತಃ ಅಂಬೇಡ್ಕರ್ ದಲಿತ ಕೆಳಜಾತಿಗಳಿಗೆ ಹೊಸ ಅನನ್ಯತೆಯ ಸಂಕೇತವಾಗಿರುವುದನ್ನು ನೋಡಬಹುದಾಗಿದೆ. ಹೀಗೆ ಕಲ್ಪಿತ ಅನನ್ಯತೆಗಳನ್ನು ಒಡೆಯುತ್ತಾ ಹೊಸ ವೈಚಾರಿಕ ಅನನ್ಯತೆಗಳನ್ನು ಹುಡುಗುವ ಅಧ್ಯಯನಗಳು ಇಂದು ಹೆಚ್ಚಾಗಿ ನಡೆಯಬೇಕಿದೆ.

ಗುರುವಾರ, ಜನವರಿ 30, 2014

ಹಣಕ್ಕೆ ಹೀರಿಕೊಳ್ಳುವ ಗುಣವಿದೆ, ಹುಷಾರು!


ಸೌಜನ್ಯ: ವಿಜಯ ಕರ್ನಾಟಕ

   ಭೆಟ್ಟಿಯಾದ ಯುವ ಕವಿಯೊಬ್ಬರನ್ನು 'ಬನ್ನಿ ಧಾರವಾಡಕ್ಕೆ' ಎಂದು ಮಮತೆಯಿಂದ ಕರೆದೆ. 'ಅಯ್ಯೋ ಬರೋದಿತ್ತು ಕಣ್ರಿ. ಈ ಸಲ ತಪ್ಪಿಹೋಯ್ತು. ಮುಂದಿನ ಸಾಹಿತ್ಯ ಸಂಭ್ರಮಕ್ಕೆ ಖಂಡಿತಾ ಬರ‌್ಬೇಕು, ಕರ‌್ದ ಮೇಲೆ ಬರೋದು ಚೆನ್ನಾಗಿರುತ್ತೆ...' ಎದುರಿದ್ದ ನನ್ನನ್ನು ಮರೆತು ಆತ ತನ್ನೊಂದಿಗೇ ತಾ ಮಾತನಾಡಿದಂತಿತ್ತು. ನಾ ಅವಾಕ್ಕಾಗಿ ನಿಂತಿದ್ದೆ. ಅಧೋಲೋಕದಿಂದ ಬಂದ ಪ್ರತಿಭಾವಂತನ ಮಾತುಗಳಿಗೆ ತತ್ತರಿಸಿದ್ದೆ. ಸಾಹಿತ್ಯ ಲೋಕಕ್ಕೆ ಹರಿದುಬರುತ್ತಿರುವ ಖಾಸಗಿ ಬಂಡವಾಳದ ಸೆಳವು ನಿಂತ ನೆಲವನ್ನೇ ತಪ್ಪಿಸುತ್ತಿದೆ. ನನ್ನ ಕಿವಿ ತಮಟೆಗಳಲ್ಲಿ ಹಲಗೆಯ ಢಪ್ಪಿನೊಂದಿಗೆ ಆ ಧ್ವನಿ- ''ದೊಡ್ಡ ಗೌಡರ ಬಾಗಿಲಿಗೆ ನಮ್ಮ ಎಲುಬಿನ ತ್ವಾರಣಾ...'' ರಾಮಕಷ್ಣ ಪರಮಹಂಸರು ಹೇಳುತ್ತಿದ್ದರಂತೆ ? ''ಹಣಕ್ಕೆ ಹೀರಿಕೊಳ್ಳುವ ಗುಣವಿದೆ, ಹುಷಾರು!''

ಕಳೆದೆರಡು ದಶಕಗಳಲ್ಲಿ ಖಾಸಗಿ ಬಂಡವಾಳ ಕಲೆ-ಸಾಹಿತ್ಯದ ವಲಯಗಳಲ್ಲಿ ಅತಿಕ್ರಮವಾಗಿ ಪ್ರವೇಶಿಸಿದೆ. ಸರ್ಕಾರಿ ಉತ್ಸವಗಳಲ್ಲೂ ಪ್ರಾಯೋಜಕತ್ವಗಳು ನಡೆದಿವೆ. ಹಿಂದೆ ಸಾಕ್ಷರತಾ ಆಂದೋಲನದಲ್ಲಿ, ಭಾರತ ಜ್ಞಾನವಿಜ್ಞಾನ ಸಮಿತಿ ಜಾಥಾ, ಅಭಿಯಾನಗಳಲ್ಲಿ ಹಳ್ಳಿಯ ಯುವಕಲಾವಿದರಿದ್ದರು. ಅಲ್ಲಿ ಸಾಮಾಜಿಕ ನ್ಯಾಯವನ್ನು ಒತ್ತಾಯಿಸುವ ಕ್ರಾಂತಿಗೀತೆಗಳು ಅನುರಣಿತೊಡಗಿದ್ದವು. ಅವು ಗ್ರಾಮೀಣ ಜನರನ್ನು ತೀವ್ರವಾಗಿ ಪ್ರಭಾವಿಸಿದ್ದವು. ಪ್ರಭುತ್ವವನ್ನು ಪ್ರಶ್ನಿಸುವ ಕೆಚ್ಚನ್ನು ಕಲಿಸಿದ್ದವು. ಇತ್ತೀಚಿನ ದಿನಗಳಲ್ಲಿ ಇಂತಹ ಕಲಾತಂಡಗಳು ಸರ್ಕಾರಿ ಕಪಾಪೋಷಿತ ಸಾಂಸ್ಕೃತಿಕ ತಂಡಗಳಾಗಿ ಬದಲಾಗಿವೆ. ಅನುದಾನದ ಮತ್ತು ಅವಕಾಶದ ಹೆಚ್ಚಳ ಸಾಮಾಜಿಕ ಚಳುವಳಿಯ ಪ್ರೇರಕ ಶಕ್ತಿಯನ್ನು ಸರ್ಕಾರಿ ಸೌಲಭ್ಯದ ಪ್ರಚಾರದ ಹಾಡುಗಳಿಗೆ ಮತ್ತು ಹಾಸ್ಯ ಪ್ರಸಂಗಗಳಿಗೆ ಬದಲಿಸಿದೆ. ಕ್ರಾಂತಿಗೀತೆಗಳು ಗುಜರಿಯಾಗಿವೆ. ಊರ ಅತ್ಮಶಕ್ತಿಯಂತಿದ್ದ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕೂಡಿ ಬದುಕುವುದನ್ನು ಕಲಿಸಿದ್ದ ಪುಣ್ಯಕ್ಷೇತ್ರಗಳವು. ಯಾವಾಗ ಖಾಸಗಿ ಶಾಲೆಗಳ ಬಾಹ್ಯ ಶಿಸ್ತಿನ ಉರುವಣೆ ಆರಂಭವಾಯಿತೋ ಆಗಿನಿಂದ ಊರಿಗೊಂದು ಶಾಲೆಯಿದ್ದದ್ದು ಬದಲಾಯ್ತು. ಬಡವರಿಗೆ ಸರ್ಕಾರಿ ಶಾಲೆ, ಇದ್ದುಳ್ಳವರಿಗೆ ಖಾಸಗಿ ಶಾಲೆ ಎಂದಾಯಿತು.

ಇಂತಹದೇ ಬೆಳವಣಿಗೆ ಸಾಹಿತ್ಯ ಸಂಗೀತ ವಲಯಗಳಲ್ಲಿ ನಡೆಯಲಾರಂಭಿಸಿದೆಯೇ? ಇತ್ತೀಚೆಗೆ ಸಾಹಿತ್ಯದ ವಿಚಾರವನ್ನು ಚರ್ಚಿಸುವ ಗುತ್ತಿಗೆಯನ್ನು ಖಾಸಗಿ ಬಂಡವಾಳಗಾರರು ನಿರ್ವಹಿಸುತ್ತಿದ್ದಾರೆ. ಬರಹ ಯಾವತ್ತೂ ಧಾರಣೆ ಕುಸಿಯದ ಸರಕು ಎನ್ನುವುದು ಅವರಿಗೆ ತಿಳಿದಿದೆ. ಬರವಣಿಗೆ ಹೇಗಿರಬೇಕು? ಎಂಬ ಚರ್ಚೆಯನ್ನು ತಾದಾತ್ಮ್ಯದಿಂದ ಮಾಡುತ್ತ ಬರಹ ಯಾಕೆ ಬೇಕು? ಎಂಬ ಮತ್ತೊಂದು ಮಗ್ಗಲನ್ನು ಹೈಜಾಕ್ ಮಾಡಲಾಗುತ್ತಿದೆ. ಬಂಡವಾಳವು ಸಾಮಾಜಿಕ ಅಭಿಪ್ರಾಯ ಉತ್ಪಾದಿಸುವ ಘಟಕವೂ ಆಗಿರುವುದರಿಂದ ತನಗೆ ಪ್ರತಿಸ್ಪರ್ಧಿಯಾಗಬಲ್ಲ ಬರಹಲೋಕವನ್ನು ನಿರ್ಬೀಜೀಕರಣಗೊಳಿಸುವುದು ಅದರ ಉದ್ದೇಶ. ಕಲೆ ಸಾಹಿತ್ಯಗಳು ಯಾವತ್ತಿನಿಂದಲೂ ಸಾಮಾಜಿಕ ನ್ಯಾಯವನ್ನು ಒಡಲೊಳಗಿಟ್ಟುಕೊಂಡಿವೆ. ದಮನಿತರ ಪರವಾಗಿ ದನಿಯೆತ್ತಿವೆ. ಕತಿ ಏನು ಹೇಳುತ್ತಿದೆ ಮತ್ತು ಹೇಗೆ ಹೇಳುತ್ತಿದೆ- ಇದೊಂದು 'ಗಂಡಭೇರುಂಡ ನ್ಯಾಯ'. ಆದರೆ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಭೈರಪ್ಪನವರು- ಆವರಣ ಮತ್ತು ಕವಲು ಕಾದಂಬರಿಗಳಲ್ಲಿ ಪ್ರಯೋಗಿಸಿದ ಹೊಸ ನಿರೂಪಣಾ ತಂತ್ರದ ಬಗ್ಗೆ ಚರ್ಚೆಯಾಗಲಿಲ್ಲ ಎಂದು ಬೇಸರಿಸಿಕೊಂಡಿದ್ದು ವರದಿಯಾಗಿದೆ. ಕತಿ ಏನು ಹೇಳುತ್ತಿದೆ ಎನ್ನುವುದಕ್ಕಿಂತ ಹೇಗೆ ಹೇಳುತ್ತಿದೆ ಎನ್ನುವುದು ಮುಖ್ಯವಾಗಬೇಕು ಎಂಬ ವಾದವಿದು. ಇಂಥ ವಾದಗಳು ಬೆಳೆದಷ್ಟೂ 'ಭೈರಪ್ಪನವರ ಆ ಎರಡು ಕತಿಗಳು ಸಮಸ್ಯಾತ್ಮಕವಾಗಿದೆ.' ಎಂದ ನಾ. ಡಿಸೋಜಾರಂಥವರು ತಮ್ಮ ಮಾತು ಹಿಂತೆಗೆದುಕೊಳ್ಳುತ್ತಲೇ ಇರಬೇಕಾಗುತ್ತದೆ, ಹಲವು ವಿರುದ್ಧ ತಾತ್ವಿಕತೆಗಳನ್ನು ಒಂದೆಡೆ ಕೂಡಿಸಿ ರಸವತ್ತಾದ ಚರ್ಚೆಯ ವಿಧಿ ವಿಧಾನವನ್ನು ಏರ್ಪಡಿಸಿ ಸೈದ್ಧಾಂತಿಕತೆಯ ಮೈಲಿಗೆಯನ್ನು ತೊಳೆದು ಶುದ್ಧ ಸಾಹಿತ್ಯದ ಭಂಡಾರವನ್ನು ತಯಾರಿಸಿ ಮುಂದಿನ ತಲೆಮಾರಿಗೆ ಕೈದಾಟಿಸಲಾಗುತ್ತದೆ. ಬರಹ ಎಂದರೆ 'ಹಾಗೆ ಸುಮ್ಮನೆ' ಹೊತ್ತುಗಳೆಯುವ ಸತ್ಸಂಗ, ಕಲಾತ್ಮಕ ವಹಿವಾಟು. ಹಣಕೊಟ್ಟು ಒಳಬಂದು ಸುವ್ಯವಸ್ಥಿತವಾಗಿ ಕಾಲಯಾಪನೆ ಮಾಡುವ ಜಾಗ. ಹೀಗೆ ಸಂಕಟಗಳಿಲ್ಲದ ನೋವಿಲ್ಲದ ಸಾಮಾಜಿಕ ಜವಾಬ್ದಾರಿ ಇತ್ಯಾದಿ ಅನಗತ್ಯಗಳಿಲ್ಲದ ಸಂಭ್ರಮವೇ ಆಗುತ್ತದೆ. ಮುಂದಿನ ತಲೆಮಾರಿಗೆ ಈ ಕ್ಲಾಸ್‌ಗಳು ಯಾವ ಧೋರಣೆಯನ್ನು ಬೆಳೆಸುತ್ತವೆ?

ಇಂತಹ ಕಾರ್ಪೋರೇಟ್ ಸಮಾವೇಶಗಳನ್ನು ಅಟ್ಟಕ್ಕೇರಿಸುತ್ತ ಸಾಹಿತ್ಯ ಸಮ್ಮೇಳನಗಳನ್ನು ಹಗುರಗೊಳಿಸುವ ಚರ್ಚೆಗಳು ನಡೆಯುತ್ತವೆ. ಸಾಹಿತ್ಯ ಸಮ್ಮೇಳನಗಳು ನೂರಕ್ಕೆ ನೂರರಷ್ಟು ಸರಿಯಾಗಿವೆ ಎಂದಲ್ಲ. ಅದಕ್ಕೊಂದು ಪ್ರಜಾಸತ್ತಾತ್ಮಕ ಸ್ವರೂಪವಿದೆ. ಜನಸಾಮಾನ್ಯರ ಪಾಲ್ಗೊಳ್ಳುವಿಕೆಯಿದೆ. ಲಕ್ಷಾಂತರ ಜನ ಕನ್ನಡ ಸಾಹಿತ್ಯದ ಹೆಸರಿನಲ್ಲಿ ಒಂದೆಡೆ ಸೇರುತ್ತಾರೆ. ಪುಸ್ತಕಗಳನ್ನು ಕೊಳ್ಳುತ್ತಾರೆ. ಕವಿತೆಗಳನ್ನು ಆಲಿಸುತ್ತಾರೆ. ರಾಜಕಾರಣಿಗಳ ಅನಗತ್ಯ ಪಾಲುದಾರಿಕೆ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಸೌಲಭ್ಯ ಮತ್ತು ಶಿಸ್ತಿನ ಕೊರತೆ ಹೀಗೆ ಸರಿಪಡಿಸಬೇಕಾದ ಹಲವು ಅಂಶಗಳು ಅಲ್ಲಿವೆ ನಿಜ. ಆದರೆ ಸಾಹಿತ್ಯ ಪರಿಷತ್ತಿನೊಂದಿಗೂ ಸಮ್ಮೇಳನಗಳೊಂದಿಗೂ ನಿರಂತರ ಸಂಪರ್ಕವಿಟ್ಟುಕೊಂಡೇ ಬೆಳೆದ ಲೇಖಕರಿಗೆ ಈ ತಪ್ಪುಗಳನ್ನು ಸರಿಪಡಿಸುವುದು ತಮ್ಮ ಜವಾಬ್ದಾರಿ ಎನಿಸಲಿಲ್ಲವೆ? ಒಂದು ಕಾಲದಲ್ಲಿ ಸಾಹಿತ್ಯ ಸಮ್ಮೇಳನಗಳು ಹಿರಿಯ ಲೇಖಕರನ್ನು ಕಣ್ತುಂಬಿಸಿಕೊಳ್ಳುವ ತಾಣಗಳಾಗಿದ್ದವು. ಆದರೆ ಈಗದು ಕಾರ್ಪೋರೇಟ್ ಸಮಾವೇಶಗಳಲ್ಲಿ ಸಾಧ್ಯವಾಗುತ್ತಿರುವುದು ಏನನ್ನು ಸೂಚಿಸುತ್ತಿದೆ? ದಲಿತ-ಬಂಡಾಯ ಲೇಖಕರು ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರುವ ಆ ಕಾಲದಲ್ಲಿ ಪರಿಷತ್ತಿಗೆ ಪ್ರಜಾಸತ್ತೀಯವಾದ ನೆಲೆಯಿದೆ ಎಂದು ಹೇಳುತ್ತಿದ್ದವರಿಗೆ ಈಗ ಯಾಕದು ಅಪಥ್ಯ? ದಲಿತ-ಬಂಡಾಯ ಧೋರಣೆಯ ಪ್ರವೇಶದಿಂದ ಮೈಲಿಗೆಯಾಗಿ ಹೊಸ ಸಾಹಿತ್ಯದ ಮಠಗಳು ಅಗತ್ಯ ಎನ್ನಿಸಿದವೇ?

ನಮ್ಮ ಈ ಕಾಲದಲ್ಲಿ ಸಾಂಸ್ಕೃತಿಕ ಎಂಬ ಬ್ಯಾನರ್ ಅಡಿಯಲ್ಲಿ ಏನು ಬೇಕಾದರೂ ಮಾಡಬಹುದು. ಸಂಸ್ಕೃತಿಯನ್ನು 'ಒಂದು ಚಹರೆ'ಯಾಗಿ ನಿರೂಪಿಸುವಾಗ ಮೇಲ್ಜಾತಿ ಮತ್ತು ಮೇಲ್ವರ್ಗಗಳ ಚಿಂತನೆಗಳು ಬಿಂಬಿಸಲ್ಪಡುತ್ತವೆ. ಇದು ಎತ್ತರದಲ್ಲಿ ನಿಂತು ನೋಡಿದಂತೆ. ಎಲ್ಲೆಲ್ಲೂ ಸುಂದರ ಎಲ್ಲವೂ ಸುಂದರ, 'ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯ' ಎಂದು ಬದುಕಿದ ಬಸವಣ್ಣನಂತೆ ಕೆಲವರು ಇದ್ದರು, ಇದ್ದಾರೆ. ಜಿ.ಎಸ್.ಎಸ್. ಅಂಥವರಾಗಿದ್ದರು. ಅವರು 40 ವರ್ಷಗಳ ಕೆಳಗೆ ಸಂಯೋಜಿಸುತ್ತಿದ್ದ ಆ ವಿಚಾರ ಸಂಕಿರಣಗಳಿಗೂ ಸಂಭ್ರಮದಲ್ಲಿ ನಡೆದ ಚರ್ಚೆಗಳಿಗೂ ಅದೆಂಥ ಸಂಬಂಧ? ಅವರು ನಿರ್ವಹಿಸಿದ್ದ ವಿಷಯಗಳ ಆದ್ಯತೆ, ಅವು ನಡೆಯುತ್ತಿದ್ದ ಸರಳ ವಿಧಾನವೇ ಬೇರೆ. ಮಾತಿನ ಮಾತಿಗೆ ಹೀಗೆ ಹೋಲಿಸಿಬಿಡಬಹುದೇ? ಪರ‌್ಯಾಯದ ಅನ್ವೇಷಕ ಗೌತಮ ಬುದ್ಧನನ್ನೇ ದಶಾವತಾರಗಳ ಗದ್ದುಗೆಗೆ ನೆಲೆಗೊಳಿಸಿದ ಪರಂಪರೆಯಲ್ಲವೇ?

ಕ್ರಿಕೆಟಿಗರು ಮತ್ತು ಸಿನಿಮಾ ತಾರೆಯರಂತೆ ಬರಹಗಾರರನ್ನು ಸೆಲಿಬ್ರಿಟಿಗಳಾಗಿ ಬಂಡವಾಳವಾದ ಬಿಂಬಿಸುತ್ತಿದೆ. ಇದು ಬರಹಗಾರರ ಚಿಂತನೆಯನ್ನು ತನ್ನ ಮೂಲದಿಂದ ಶಿಫ್ಟ್ ಮಾಡುತ್ತದೆ. ಸಮಾಜದ ದುಃಖ ಅನುಕಂಪದ ವಿಷಯವಾಗುತ್ತದೆ. ನಟರಿಗೆ ದೇಹ ಮಾರ್ಕೇಟ್ ಆದಂತೆ ಲೇಖಕರಿಗೆ ಸಂವೇದನೆ ಮಾರ್ಕೇಟ್ ಆಗುತ್ತದೆ. ಬರಹ, ಮಾತು, ನಗು, ಸರಳತೆ ಸ್ನೇಹ ಎಲ್ಲವೂ ಎಕ್ಸಪೋಸಿವ್ ತಂತ್ರಗಳಾಗುವುದೆಂದರೆ, ಬಂಡವಾಳವಾದದ ಕಡೆಯ ಗೆಲುವಿನ ಪತಾಕೆ ನೆಡುವುದೆಂದೇ ಅರ್ಥ. ಬಹುತ್ವವನ್ನು ತನ್ನ ಗುಣವಾಗಿಸಿಕೊಂಡು ಬಾಳಿದ ಭಾಷೆಯಲ್ಲಿ 'ಕನ್ನಡದ ಮುಖ್ಯ ಬರಹಗಾರರು ಒಂದೆಡೆ ಸೇರಿದ' ಎಂದು ಎಗ್ಗಿಲ್ಲದೆ ಬರೆಯುವುದೆಂದರೆ ಸಾಂಸ್ಕೃತಿಕ ಭಯೋತ್ಪಾದನೆಯನ್ನು ಉಂಟುಮಾಡುವುದೇ ಆಗಿದೆ. ಈ ಭಯಕ್ಕೆ ಸಿಕ್ಕಿದ್ದ ಆ ಯುವಕವಿ ತತ್ತರಿಸಿದ್ದ. 'ಮುಂದಿನ ಸಲವಾದರೂ ಬರುವೆ' ಎಂದಿದ್ದ. ಆತ ಬರಬಹುದು, ಬರುತ್ತಾನೆ. ಆದರೆ ಅವನು ಬಂದ ಹಾದಿಯ ಬದಿಗೆ ''ಇಂದು ನಮ್ಮ ನೆಲ ಬೇಡುತ್ತಿರೋದು ಪ್ರಗತಿಶೀಲ ಸಾಹಿತ್ಯವನ್ನೇ. ಈ ಹಿಂದೆ ತಲೆಯಲ್ಲಿ ಹುಟ್ಟಿ ತಲೆಯಲ್ಲೇ ಸತ್ತ ಪ್ರಗತಿಶೀಲತೆ ಈಗ ಪಾದಗಳನ್ನು ಬೇಡುತ್ತಿದೆ. ದಲಿತರು ಬರೆದರೂ ಸ್ವಲ್ಪಕಾಲ ಪ್ರತಿಭಟನೆಗಾಗಿ ಬರೆದು ನಂತರ ನಮ್ಮಂತೆ ಬರೆದಾರು ಎಂಬ ತೀರ್ಮಾನಕ್ಕೆ ಬರುತ್ತಾರೆ''. ಎಂಬ ದೇವನೂರು ಮಹಾದೇವರ ಮಾತು ನರಳುತ್ತಿರುತ್ತದೆ.

ಮಂಗಳವಾರ, ಜನವರಿ 28, 2014

ಹಟ್ಟಿಯ ಅವತಾರ, ಹಕ್ಕಿಯ ಕೂಗು

ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ.. : ಭಾಗ – 2
- ಎಚ್.ಜಯಪ್ರಕಾಶ್ ಶೆಟ್ಟಿ
ಸೌಜನ್ಯ: ವರ್ತಮಾನ


ನಾವು ಹಸು ಎಂದು ಸಾಮಾನ್ಯಾರ್ಥದಲ್ಲಿ ಕರೆಯುವ ಜಾನುವಾರುಗಳಲ್ಲಿ ವರ್ಗವಾರು-ಹೋರೆಮ್ಮೆ, ಕಡಗಂಟಿ ಎಂಬ ಎರಡು ವಿಭಾಗಗಳಿವೆ. ಎರಡನ್ನೂ ಸೇರಿಸಿ ಗಂಟಿ ಎಂದೇ ಕರೆಯುವ ರೂಢಿ ನಮ್ಮದು. ಹಟ್ಟಿ, ಕೋಳಿಗೂಡು ಮತ್ತು ಬಸಳೆಚಪ್ಪರಗಳಿಲ್ಲದ ಮನೆಗಳೇ ನನ್ನೂರಿನಲ್ಲಿಲ್ಲ. ಮನೆ ಎಂದ ಮೇಲೆ ಗೋಮಯಕ್ಕಾದರೂ ಒಂದು ಹಸು ಇರಲೇಬೇಕೆಂಬ ಅಲಿಖಿತ ಸಂವಿಧಾನವನ್ನು ಅನುಸರಿಸಿಕೊಂಡು ಬಂದ ಊರು ನಮ್ಮದು. ನಮಗೆ ಮನೆಯಿರುವ ಹಾಗೆಯೇ ಗಂಟಿಗಳಿಗೆ ಹಟ್ಟಿ ಇರಲೇಬೇಕು. ಹಟ್ಟಿಯಲ್ಲಿಯೂ ಉತ್ತಮ ಮತ್ತು ಕನಿಷ್ಠ ಎನ್ನುವ ಒಳವಿಭಾಗಗಳುಂಟು. indian-buffaloಹಟ್ಟಿಯ ಒಳವಿನ್ಯಾಸದಲ್ಲಿ ಎದುರು ಭಾಗವನ್ನು ‘ಮುಂದಣೆ’ ಎಂತಲೂ ಹಿಂಭಾಗವನ್ನು ‘ಹಿಂದಣೆ’ ಎಂತಲೂ ಕರೆಯುವುದು ವಾಡಿಕೆ. ಮುಂದಣೆಯಲ್ಲಿ ಕಟ್ಟುವುದಕ್ಕೆ ಯೋಗ್ಯವಾದ ದಳಕಟ್ಟು, ಅಕ್ಕಚ್ಚ್ಟು-ಬಾಯರು ಕುಡಿಯಲು ಬಾಣಿ/ಮರ್ಗಿ ಇವುಗಳ ಸಹಿತ ಆ ಹಟ್ಟಿಯ ಮಟ್ಟಿಗೆ ಅದು ವಿಐಪಿ ಸ್ಟ್ಯಾಂಡ್ ತರಹ ಇರುತ್ತದೆ. ‘ಹಿಂದಣೆ’ ಹೆಸರೇ ಹೇಳುವಂತೆ ಮುಖ್ಯ ಜಾನುವಾರುಗಳ ಬೆನ್ನಿಗೆ ಸಿಕ್ಕಜಾಗದಲ್ಲಿ ಮಲಗುವುದಕ್ಕೆ ಇರುವ ಅವಕಾಶ. ಈ ಅವಕಾಶದಲ್ಲಿ ಕೆಲವೊಮ್ಮೆ ಮುಂದಿನ ಹಸು ಹಿಂದಕ್ಕೆ ಬಂದು ಹಾಕಿದ ಸಗಣಿಯೂ ಇರಬಹುದು. ಇಲ್ಲವೇ ಹುಲ್ಲು ತಿನ್ನುವಾಗಲೆ (ಹೆಣ್ಣು ಹಸುವಾದರೆ) ಹಿಂದಕ್ಕೆ ಚಿಮ್ಮಿಸಿ ಬಿಡುವ ಉಚ್ಚೆಯೂ ಇರಬಹುದು. ಒಟ್ಟಾರೆ ಹಿಂದಣೆ ಎಂದರೆ ನಮ್ಮ ಸಮಾಜದಲ್ಲಿ ದಲಿತರ ಜಾಗ ಇದ್ದಂತೆ. ನಗರದಲ್ಲಿ ಕೊಳೆಗೇರಿ ಇದ್ದಂತೆ. ಇಕ್ಕಟ್ಟಿನಲ್ಲಿಯೇ ಸಿಕ್ಕಿದ್ದನ್ನು ತಿಂದು ಬದುಕಬೇಕು. ಮುಂದಣೆಯಲ್ಲಿ ಕಟ್ಟಲು ಜಾಗವಿಲ್ಲದೆ ಹೋದಾಗ ಮಿಕ್ಕವುಗಳಿಗೆ ಇಲ್ಲಿಯೇ ಜಾಗ ಸಿಕ್ಕಬೇಕು. ಇವುಗಳ ಪರಿಸ್ಥಿತಿಯೆಂದರೆ ತಿನ್ನುವುದರಲ್ಲಿ ಹಿಡಿಯಷ್ಟು ಪಾಲು ಆದರೆ ಅಪಾಯದಲ್ಲಿ ಹಿರಿದಾದ ಪಾಲು. ಯಾರಾದಾದರೂ ಮನೆಯ ಹಗ್ಗಬಿಚ್ಚಿಕೊಂಡ ಬೀಡಾಡಿ ಹಸುಗಳು ಹಟ್ಟಿಗೆ ನುಗ್ಗಿದಲ್ಲಿ ಮೊದಲು ಆಕ್ರಮಣ ಮಾಡುವುದು ಈ ಹಿಂದಣೆಯಲ್ಲಿರುವವುಗಳನ್ನೇ. ಅದಲ್ಲದೆ ಹಟ್ಟಿಗೆ ನುಗ್ಗುವ ಅಪಾಯಕಾರಿ ಪ್ರಾಣಿಗಳು ಮೊದಲು ಎರಗುವುದು ಇವುಗಳ ಮೇಲೆಯೇ. ಇದೊಂದರ್ಥದಲ್ಲಿ ಗಂಟಿಗುರಾಣಿಗಳ ತಾಣ. ಇನ್ನೂ ಒಂದರ್ಥದಲ್ಲಿ ಇದು ಹಟ್ಟಿಯಿಂದ ಹೊರಹಾಕಲೇಬಾಕಾದ ಅನುಪಯುಕ್ತವೆನಿಸಿದವುಗಳ ತಾತ್ಕಾಲಿಕ ತಂಗುದಾಣವೂ ಹೌದು.
ಹಸು ಸಾಕುವುದು ಅಲಂಕಾರಕ್ಕಲ್ಲ ಎಂಬುದನ್ನು ನಾನು ಹೇಳಬೇಕಾಗಿಲ್ಲ. ಆದರೆ ಹಾಗೆ ಸಾಕುವವರೂ ಉಂಟು. ಕಂಬಳದ ಫಲಕ ಗೆದ್ದು ಮೀಸೆ ತಿರುವುದಕ್ಕಾಗಿ ಅಲಂಕಾರಕ್ಕೆಂಬಂತೆ ಸಾಕುವವರಿರುವರಾದರೂ ಅವರುಗಳು ನಮ್ಮ ಜಾಗತೀಕರಣದ ಜಗತ್ತಿನ ಉದ್ಯಮಪತಿಗಳಂತಿರುವವರು. ಕ್ರಿಕೆಟಿಗರನ್ನು ಕೊಂಡುಕೊಂಡು ಆಟವಾಡಿಸಿ ಮೋಜುಮಾಡಬಲ್ಲವರು, ಮೃಗಾಲಯದ ಆನೆಯನ್ನು ದತ್ತುಪಡೆಯಬಲ್ಲವರು ಮತ್ತು ದೇಗುಲ/ಮಠಗಳಿಗೆ ಆನೆದಾನ ಮಾಡಬಲ್ಲವರು. ಅಂತಹ ಅಲಂಕಾರ ಪ್ರಿಯರಾರೂ ನನ್ನೂರಿನಲ್ಲಿ ಇರಲು ಅಂದಿಗೆ ಅವಕಾಶವಿರಲಿಲ್ಲ. ಅವರೆಲ್ಲಾ ಇರುವ ಹೊಲಮನೆ ಉಳುವುದಕ್ಕಾಗಿ, ಚಾಕಣ್ಣು (ಡಿಕಾಕ್ಷನ್) ಬಿಡಿಸಿ ಅದಕ್ಕೊಂದಿಷ್ಟು ಹಾಲು ಬೆರೆಸುವುದಕ್ಕಾಗಿ, ಹೋಟೆಲು ಮನೆಗಳಿಗೆ ಹಾಲು ಹಾಕಿ ಚೂರು ಪಾರು ಕಾಸು ಗಿಟ್ಟಿಸಿ ತಾವು ಬೆಳೆಯದ ಉಪ್ಪು ಮೆಣಸು ಹೊಂದಿಸುವ ದೈನಿಕದ ಒತ್ತಡಕ್ಕಾಗಿ ಹಸು ಸಾಕುತ್ತಿದ್ದರು ಮತ್ತು ಸಾಕುತ್ತಿರುವವರು. ಈ ಒತ್ತಡಕ್ಕಾಗಿಯೂ ಅವರು ವೈಜ್ಞಾನಿಕ ಹೈನುಗಾರಿಕೆ ನಡೆಸಲಾರದ ಸ್ಥಿತಿಯಲ್ಲಿ ಕರಾವಿಗೆಂದು ಸಾಕುತ್ತಿದ್ದುದು ಬಹುವಾಗಿmalenadu-giddaಮಲೆನಾಡು ಗಿಡ್ಡ ಇಲ್ಲವೆ ದೇಸೀ ತಳಿಯ ಕಿರುಗಾತ್ರದ ಅವೇ ಹುಂಡಿ, ಕೆಂಪಿ, ಬುಡ್ಡಿಯಂತಹ ದನಗಳನ್ನು. ವರ್ಷಕ್ಕೊ, ಎರಡು ವರ್ಷಕ್ಕೊ ಕರುಹಾಕುವ ಈ ಹಸುಗಳು, ದಿನಕ್ಕೆ ನಾಲ್ಕೈದು ಸಿದ್ದೆ ಹಾಲು ಕೊಟ್ಟರೆ ಅದೇ ಹೆಚ್ಚು. ಇವು ಹಾಕುವ ಹೆಣ್ಣು ಕರುಗಳನ್ನು ಸಂತಾನವಾಗಿ ಬಳಸಿಕೊಳ್ಳಲು ಸಮಸ್ಯೆಯಿರಲಿಲ್ಲ. ಆದರೆ ಗಂಡುಕರುಗಳು ಮಾವಿನಕಾಯಿ ಗಾತ್ರದವುಗಳೇ ಹೆಚ್ಚಾಗಿರುತ್ತಿದ್ದ ಕಾರಣಕ್ಕಾಗಿ ಉಳುವ ಗುಡ್ಡಗಳನ್ನಾಗಿ ಬಳಸಿಕೊಳ್ಳಲು ಸಾಧ್ಯವಾಗದೆ ಬೆಳೆಯುವ ತನಕ ಕೆಲವೊಂದಿಷ್ಟು ಕಾಲ ಹಿಂದಣೆಯಲ್ಲಿ ಕಟ್ಟಿ, ಅಲ್ಲ್ಲಿಯೇ ಸಗಣಿಯ ಮೇಲೆಯೇ ಹುಲ್ಲುತಳಿದು, ಬಿಟ್ಟು-ಕಟ್ಟಿ ಹೇಗೋ ಅನುಭವಿಸುವಷ್ಟು ಉಪದ್ರವವನ್ನು ಅವುಗಳಿಂದ ಅನುಭವಿಸಿಯಾದ ಮೇಲೆ ಮತ್ತು ಹಿಂದಣೆಯಲ್ಲಿ ಮತ್ತೊಂದನ್ನು ಕಟ್ಟಲೇಬೇಕಾದಾಗ ಇವುಗಳನ್ನು ಸಿಕ್ಕಷ್ಟಕ್ಕೆ ಸಾಗಹಾಕಿ ಯಾವುದಾದರೂ ಒಂದು ಸಣ್ಣ ಖರ್ಚನ್ನು ಸರಿತೂಗಿಸಿಕೊಳ್ಳುತ್ತಿದ್ದುದು ರೂಢಿ. ಕಟ್ಟಿ ಸಾಕಲು ಸಾಧ್ಯವಿಲ್ಲವೆನಿಸಿದಾಗ, ಯಾರು? ಮತ್ತು ಯಾಕೆ? ಕೊಳ್ಳುತ್ತಾರೆ ಎಂಬ ಅರಿವಿದ್ದೂ, ಹಟ್ಟಿಯನ್ನು ವಿಸ್ತರಿಸಲಾರದ, ಮನುಷ್ಯರಂತೆ ಅನುಪಯುಕ್ತ ಮಗುವನ್ನು ಲಿಂಗಪತ್ತೆ ಮಾಡಿ ಭ್ರೂಣಹತ್ಯೆ ಮಾಡುವ ವೈದ್ಯಕೀಯ ರೂಢಿಯೂ ಇರದ ಅವರು ಅವುಗಳನ್ನು ಮಾರಲೇಬೇಕು. ಅವುಗಳು ಎಲ್ಲಿಗೆ ಹೋಗುತ್ತವೆ ಎಂಬ ಅರಿವಿದ್ದೂ ಒಂದೂ ಕಾಸಿಲ್ಲದೆ ಎಲ್ಲಿಗೋ ಹೊಡೆದು ಬರುವುದು ಅವರಿಗೆ ಸಾಧ್ಯವೂ ಇರಲಿಲ್ಲ. ಮಾತ್ರವಲ್ಲ ನನ್ನೂರಿನಲ್ಲಿ ಹಾಗೆ ಹೊಡೆದುಬಂದ ಒಂದೇ ಒಂದು ಉದಾಹರಣೆಯನ್ನು ನಾನು ಕಂಡಿಲ್ಲ. ಆದರೆ ಹಿಂದಣೆಗಳು ಮಾತ್ರ ಹೊಸ ಸದಸ್ಯನಿಗಾಗಿ ಖಾಲಿಯಾಗುತ್ತಿದ್ದುದು ನಿಜ.
ಹಾಗೆಯೇ ಉಳುವುದಕ್ಕಾಗಿ ತರುತ್ತಿದ್ದ ಸಾಕಷ್ಟು ಜಾನುವಾರುಗಳಲ್ಲಿ ಬಾಯ್ಗೂಡಿ ಹಲ್ಲಾದವುಗಳೇ ಹೆಚ್ಚು. 2-3 ಸಾಗುವಳಿ ಮಾಡಿದ ಮೇಲೆ ಬಹುಸಂದರ್ಭಗಳಲ್ಲಿ ಇವುಗಳ ವಿಕ್ರಯವೂ ಮೇಲಿನಂತೆಯೇ ಅನಿವಾರ್ಯ. ಸಣ್ಣ ಬಂಡವಾಳವನ್ನು ಹೂಡಿ ತರುತ್ತಿದ್ದ ಎತ್ತು/ಕೋಣಗಳು ತಮ್ಮಿಂದ ಖಾಲಿಯಾಗುವಾಗ ಒಂದಿಷ್ಟಾದರೂ ಇಡಗಂಟು ಉಳಿಸಿಹೋಗದೇ ಇದ್ದರೆ ಸಣ್ಣ ರೈತರ ಪಾಡು ನಿಲುಗಡೆಗೆ ಬಿದ್ದಂತೆಯೇ. ಅದೇ ತೆರನಾಗಿ ಹಾಲು ಕರೆಯುವ ಮುದಿಹಸುಗಳೂ ತಮ್ಮ ಕರು ಉತ್ಪಾದಿಸುವ ಸಾಮರ್ಥ್ಯ ತೀರಿದ ಮೇಲೆ, ಹಾಲು ಕೊಡಲಾರದ ಸ್ಥಿತಿಯಲ್ಲಿ ಮುಂದಣೆಯಿಂದ ಹಿಂದಣೆಗೆ ಬರಲೇಬೇಕು. ಯಾಕೆಂದರೆ ಕರಾವಿನಚಕ್ರದಲ್ಲಿ ಆ ಮುದಿ ಹಸುವಿನ ಮಗಳಿಗೆ ಹೊಸಜಾಗ ಬೇಕಲ್ಲವೇ? ಇವು ಹಿಂದಣೆಯಲ್ಲಿ ಸಗಣಿ ಮೇಲೆ ಅಷ್ಟಿಷ್ಟು ದಿನ ಕಳೆದು ಖಾಲಿಯಾಗುತ್ತಿದ್ದವು, ಇಲ್ಲವೇ ಮಾರಲ್ಪಡುತ್ತಿದ್ದವು. ಕರು ಹಾಕಲಾರದ ಕರಾವಿನ ದನ, ಎಮ್ಮೆಗಳನ್ನು ಬಂಡವಾಳಕ್ಕಿಂತ ಹೆಚ್ಚಾಗಿ ಮುದಿವಯಸ್ಸಿನಲ್ಲಿ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ವಯಸ್ಸಾದಂತೆ ಬಾಯಿಯ ಹಲ್ಲುಗಳು ಒಂದೊಂದಾಗಿ ಜಾರಿ ಆಹಾರವನ್ನು ಸ್ವಯಂ ಜಗಿದು ನುಂಗಲಾರದ ದುರ್ಬಲ ಸ್ಥಿತಿಯಲ್ಲಿ ಚಂಡೆ ಉಗಿಯುವಂತಾಗುವ ಅವುಗಳ ಪಾಡು ಯಾತನಾದಾಯಕ. ಮೆಂದು ಬರಲಾರದ, ಹಾಕಿದ್ದನ್ನೂ ಚೆನ್ನಾಗಿ ಜಗಿದು ತಿನ್ನಲಾರದ ಜೀರ್ಣಾವಸ್ಥೆಯಲ್ಲಿ, ವಯಸ್ಸಿನ ಪರಿಣಾಮವಾಗಿ ಮೈಮೇಲೆ ಆಗುವ ಗಾಯಗಳು ಬೇರೆ. Two old and weak cows looking hungry, weak and unhealthy standinಚರ್ಮದ ಮೇಲೆ ಈ ಹಂತದಲ್ಲಿ ಆಗುವ ಗಾಯಗಳು, ಅವುಗಳ ಮೇಲೆ ಕೂತು ಇಪ್ಪಿ ಹಾಕುವ ನೊಣಗಳನ್ನು ಓಡಿಸಿಕೊಳ್ಳುವಲ್ಲ್ಲಿಯೂ ಸೋಲುವ ಚೋಂಕಾಗಿ(ರೋಮಉದುರಿ) ನಿತ್ರಾಣಗೊಂಡ ಬಾಲ ಹಾಗೂ ಅಲ್ಲಾಡಿಸಲಾರದ ಕಿವಿಗಳಿಂದಾಗಿ ಈ ಗಾಯಗಳಲ್ಲಿ ಹುಳುವಾಗಿ ನೆತ್ತರು ಸೋರುವಂತಾಗುತ್ತದೆ. ಬಯಲು ಹಾಗೂ ತೆರದ ಹಟ್ಟಿಯಲ್ಲಿ ಈ ಗಾಯಗಳ ಮೇಲೆ ದಾಳಿಮಾಡುವ ಕಾಗೆಗಳ ಹಿಂಸೆ ನೋಡಿಕೊಂಡಿರುವುದೇ ಯಾತನಾದಾಯಕ. ಅದೂ ಸಹಿಸಿಕೊಂಡು ಅವುಗಳು ಹಟ್ಟಿಯಲ್ಲಿಯೇ ಉಳಿದವೆಂದರೆ ಹಾಲುಕೊಡುವಾಗ ಕಾಮಧೇನುವಾಗಿದ್ದ ಅದೇ ಹಸು ಅಕ್ಷರಶ: ‘ಕಾಡುವಧೇನು’ ಆಗಲೂಬಹುದು. ಮಲಗಿದಲ್ಲಿಂದ ಏಳಲಾರದ ಅವುಗಳನ್ನು ಎಬ್ಬಿಸುವ ಸಲುವಾಗಿ ಅನಿವಾರ್‍ಯವಾಗಿ ಬಾಲವನ್ನು ತಿರುವಲಾಗುತ್ತದೆ. ಕೊನೆ ಕೊನೆಗೆ ಹೀಗೆ ತಿರುವುವ ವೇಳೆ ಉಂಟಾಗುವ ಬಾಲದ ವೇದನೆಗೂ ಎದ್ದು ನಿಲ್ಲುವ ತಾಕತ್ತು ಕಳೆದುಕೊಂಡ ಮೇಲೆ ಅವುಗಳ ಶುಶ್ರೂಷೆಗೆ ಕನಿಷ್ಠ 3-4 ಜನ ನಿಲ್ಲಬೇಕಾದ ಸ್ಥಿತಿ ಉಂಟಾಗಬಹುದು. ಎಮ್ಮೆ, ಕೋಣ, ಎತ್ತುಗಳಾದರೆ ಈ ಸ್ಥಿತಿ ಮತ್ತಷ್ಟು ಸಂಕಟದಾಯಕ. ಆದಾಯವೂ ಇಲ್ಲದೆ ಬಂಡವಾಳವನ್ನೂ ಕಳೆದುಕೊಳ್ಳುತ್ತಾ ಅನಾಥಾಶ್ರಮದಂತೆ ಚಾರಿಟಿಯ ಕೆಲಸ ಮಾಡುವ ಸಾಮರ್ಥ್ಯ ಒಬ್ಬ ಸಾಮಾನ್ಯ ರೈತನಿಗೆ ಇರುವುದು ಸಾಧ್ಯವೇ? ಕೈ ಮೈ ನೆಕ್ಕಿದ ಅದೇ ಹಸು ಈಗ ಇಡಿಯ ಮನೆಯನ್ನೇ ನೆಕ್ಕಿನಾಶ ಮಾಡಿದ ಅನುಭವವಾಗುತ್ತದೆ. ದುರಂತವೆಂದರೆ ಈ ಸ್ಥಿತಿಗೆ ತಲುಪಿದ ಹಸುವನ್ನು ಕೊಂದು ಪಾಪಕಟ್ಟಿಕೊಳ್ಳಲಾರದ ಅವರು ಅದು ಸಾಯುವ ತನಕ ಪಡಬಾರದ ಪಾಡುಪಡುತ್ತಾರೆ. ಹಾಗಾಗಿ ಆ ಸ್ಥಿತಿ ಒದಗದಿರಲಿ ಎಂದು ಮುಂಚಿತವಾಗಿಯೇ ಅದನ್ನು ಹಿಂದಣೆಯಲ್ಲಿ ಕಟ್ಟಿ ಹಟ್ಟಿಯಿಂದ ಹೊರಹಾಕಿ ಹಗುರಾಗಲು ಕಾಯುತ್ತಾರೆ.
ಹಸುಗಳ ಸಾವು ನಮ್ಮ ನಡುವಿನ ನಂಬಿಕೆಯಂತೆ ‘ಹೊಟ್ಟೆಗೆಂಡೆಗೆ ಬೀಳುವ ಪೆಟ್ಟು’. ಹಾಗಾಗಿಯೇ ‘ಹಟ್ಟಿಗೆ ಬೆಂಕಿ ಬೀಳಲಿ’, ‘ಕರುಮರಿ ನಾಶವಾಗಲಿ’, ‘ನಿರ್ಗ್ವಾಮಯ್ ಆಗ್ಲಿ’ ಎಂಬವುಗಳು ನಮ್ಮ ನಡುವಿನ ತೀವ್ರವಾದ ಶಾಪಾಶಯಗಳು (ಸಾಪುಳಿಗಳು). ಹಾಕಿದ ಬಂಡವಾಳ ಹಿಂತಿರುಗಿ ಬಾರದೆ, ಉಳುವ ಜಾನುವಾರು ಹಟ್ಟಿಯಲ್ಲಿಯೇ ಸತ್ತವೆಂದರೆ ಬೇಸಾಯದ ಮೂಲಬಂಡವಾಳಕ್ಕೇ ಪೆಟ್ಟು ಬಿದ್ದಂತೆ. ನನಗೆ ಗೊತ್ತಿರುವ ಹಾಗೆ ನಮ್ಮೂರಿನ ಕಿರುಹಿಡುವಳಿದಾರ ರೈತರೊಬ್ಬರು ಒಂದೇ ಮಳೆಗಾಲದಲ್ಲಿ ಕಾಯಿಲೆಯಿಂದ ಮತ್ತು ಚೇಳುಕಚ್ಚಿ ಎರಡುಜೋಡಿ ಕೋಣಗಳನ್ನು ಬೆನ್ನಿಂದ ಬೆನ್ನಿಗೆ ಕಳೆದುಕೊಂಡ ಪರಿಣಾಮ ಅವರ ಹಟ್ಟಿಯಲ್ಲಿ ಮುಂದಿನ ಆರು ವರ್ಷಗಳ ತನಕ ಉಳುವ ಜಾನುವಾರುಗಳನ್ನು ಕಟ್ಟಲಾಗಿಲ್ಲ. ಕೊನೆಗೂ ಅವರು ಜೋಡುಮಾಡಿದುದು ಒಂದು ಸಾಹಸವೇ ಆಗಿತ್ತು. ಹೇಳಿಕೇಳಿ ಈ ಜನ ಇಂದಿಗೂ ತಾವು ತರುವ ಜಾನುವಾರುಗಳ ಮೇಲೆ ವಿಮೆ ಮಾಡುವ ರೂಢಿ ಹೊಂದಿಲ್ಲ. ಅನೇಕ ಸಂದರ್ಭದಲ್ಲಿ ಕಾಯಿಲೆ ಬಿದ್ದರೆ ದೇವರು-ದಿಂಡರ ಜೊತೆಗೆ ನಾಟಿ ವೈದ್ಯವನ್ನೇ ಅವಲಂಬಿಸಿ ಗಂಟು ಕಳೆದುಕೊಳ್ಳುವವರಿವರು. ಹೀಗಿದ್ದ ಮೇಲೆ ಬಂಡವಾಳದ ಭಾಗಶಃ ಹಿಂಪಡೆಯುವಿಕೆಯೂ ಇಲ್ಲದೆ, ಅಲ್ಲೇ ಕಂತಿಹೋದರೆ (ಮುಳುಗಿದರೆ) ಅವರ ಪಾಡು ಹಕ್ಕಿಯಾಗಿ ಹಾರಬೇಕಷ್ಟೇ.
ನಮ್ಮ ಪರಿಸರದಲ್ಲಿ ಮಳೆಗಾಲದ ಆರಂಭವನ್ನು ಸೂಚಿಸುವ ಅನೇಕ ನೈಸರ್ಗಿಕ ಸಂಗತಿಗಳನ್ನು ಜಾನಪದಲೋಕ ಗುರುತಿಸುತ್ತದೆ. ಅವುಗಳಲ್ಲಿ ಮಳೆಯ ಆರಂಭದವಾರ್ತೆ ತರುವಂತೆ ಕೂಗುವ ‘ಉರಿಯೋ ಅಕ್ಕ’ ಹಾಗೂ ‘ಹೋರ್ ಸತ್ತ್ಹೋಯ್ತೊ’ ಎಂಬ ಹಾಗೆ ಕೂಗುವ ಎರಡು ಹಕ್ಕಿಗಳ ಕೂಗನ್ನು ಮಳೆಗಾಲದ ಖಚಿತ ಮಾಹಿತಿಯೆಂಬಂತೆ ಗಮನಿಸಲಾಗುತ್ತದೆ. ಈ ಹಕ್ಕಿಗಳನ್ನು ಗಂಡ ಹೆಂಡತಿಯರಾಗಿ ಈ ಭಾಗದ ಜನ ಕಥೆಕಟ್ಟಿಕೊಂಡಿದ್ದಾರೆ. ರೈತ ದಂಪತಿ ಎಂಬಂತೆ ಪ್ರಚಲಿತವಿರುವ ಈ ಹಕ್ಕಿಗಳ ಕುರಿತಾದ ಕಥನದ ಮೇರೆಗೆ,-”ಹೋರಿ (ಕೋಣ) ತಂದೂ ತಂದೂ ಸಾಯುತ್ತಲೇ ಹೋದಾಗ, ನೇಲು-ನೊಗ ಅಟ್ಟಕ್ಕೆ ಹಾಕುವಂತಾಗಿ ಮಳೆಗಾಲದ ವ್ಯವಸಾಯ ಮಾಡಲಾರದ ಸ್ಥಿತಿಯಲ್ಲಿ ಬದುಕಲಾಗದ ಹಂತ ತಲುಪಿದ ಬೇಸಾಯಗಾರ ಹಕ್ಕಿಯಾಗಿ ಹಾರಿ ಹೋದನೆಂದೂ, ಅವನ ಬಸುರಿಹೆಂಡತಿ ಗಂಡನಿಲ್ಲದೇ ಹೆರಿಗೆಯಾಗಿ, ಗಂಡನ ಅಕ್ಕನ ಆರೈಕೆ ಪಡೆಯಬೇಕಾಗಿದ್ದವಳು ಅವಳ ಕುದಿನೀರಿನ ಬಿಸಿ ತಾಳಲಾರದೇ ಅವಳೂ ಹಕ್ಕಿಯಾಗಿ ಹಾರಿದಳೆಂ”ದೂ ಕಥೆ. ಈ ಬೇಸಾಯಗಾರ ಸಮಕಾಲೀನ ಸಂದರ್ಭದ ರೈತನ ಆತ್ಮಹತ್ಯೆಯನ್ನು ನೆನಪಿಸುವಂತೆ ಹಕ್ಕಿಯಾಗಿ ಹಾರಿಯೂ ಉಳುಮೆ ಮಾಡಲಾಗದ ಆತ್ಮ ಸಂಕಟವನ್ನು ತೋಡಿಕೊಳ್ಳುವವನಂತೆ ‘ಹೋರ್‌ಸತ್ತ್ಹೋಯ್ತೋ’ ಎಂದು ಕೂಗುತ್ತಾನೆ. ಗಂಡನನ್ನು ಕಳೆದುಕೊಂಡು ಅನಾಥಳಾಗಿ ಅತ್ತಿಗೆಯ ವಂಚನೆಯಿಂದ ಸತ್ತವಳು ಬೀದಿಪಾಲಾದ ಕುಟುಂಬ ಸ್ಥಿತಿಯನ್ನು ಗಂಡನೊಂದಿಗೆ ನೆನೆದುಕೊಳ್ಳುವಂತೆ ‘ಉರಿಯೋ ಅಕ್ಕ’ ಎಂದು ಕೂಗುವ ಮೂಲಕ ಜಾನುವಾರು ಕಳೆದುಕೊಂಡು ನಿರ್ಗತಿಕನಾಗುವ ರೈತನ ದುರ್ಗತಿಯನ್ನು ಪ್ರತಿಧ್ವನಿಸಿಕೊಂಡೇ ಬರುತ್ತಿದ್ದಾಳೆ. ಈ ಕೂಗು ಕೇಳಿದಾಗೆಲ್ಲಾ ನಾವದಕ್ಕೆ ‘ಹೋರ್ ಸತ್ಹೋಯ್ತೋ ನೇಲ್‌ನೊಗ ಅಟ್ಕ್‌ಹಾಕ್ಯೊ’ ಎಂದು ಉಳಿದಭಾಗವನ್ನು ಸೇರಿಸಿ ಹಾಡುತ್ತಿದ್ದೆವು. Tilling_Rice_Fieldsಆದರೆ ಆ ಸ್ಥಿತಿ ನಮ್ಮ ಹಟ್ಟಿಯದೇ ಆದಾಗ ನಮಗೆ ಹಾಗೆ ಉಳಿದ ಕೋರಸ್ ಸೇರಿಸುವ ಶಕ್ತಿಯೇ ಇರುತ್ತಿರಲಿಲ್ಲ. ಚಾಲ್ತಿಯಲ್ಲಿರುವ ಈ ಕಥೆಯ ಆಳದಲ್ಲಿರುವುದು ಚಿಕ್ಕಹಿಡುವಳಿದಾರನ ಬಂಡವಾಳದ ಮುಳುಗುವಿಕೆಯಿಂದಾಗುವ ಸಂಸಾರದ ಅನಾಥಸ್ಥಿತಿ. ದುಡಿಮೆಯ ಹತಾರು, ದುಡಿಯುವ ನೆಲ ಕಳೆದುಕೊಳ್ಳುವ ರೈತರಿಗೆ ಒಂದೇ ದಾರಿ ಸಾವು. ಇಂತಹ ಸರಳ ಸತ್ಯಗಳು ಅರ್ಥವಾಗದ ವಾಣಿಜ್ಯೀಕೃತ ಆಸಕ್ತಿಗಳು ಅಭಿವೃದ್ಧಿಯ ಹೆಸರಲ್ಲಿ ರೈತರನ್ನು ಎತ್ತಂಗಡಿ ಮಾಡಿ, ಅವರಿಗೆ ಅವರು ಮಾಡಲಾರದ ಕೆಲಸ/ಉದ್ಯೋಗ ಕೊಡುವ ಮಾತಾಡುತ್ತವೆ. ಹಾಗೆಯೇ ಬಂಡವಾಳ ಹೂತು ಹೋದರೂ ಪರವಾಗಿಲ, ಭಾವನೆಯನ್ನು ಗೌರವಿಸು ಎಂಬ ಶಾಸನ ರೂಪಿಸುವಲ್ಲಿ ಒತ್ತಡ ಹೇರುತ್ತವೆ. ಮೂಲವನ್ನೇ ಕಳೆದುಕೊಳ್ಳುವ ರೈತರು ಮುಂದಿನ ದಿನಗಳಲ್ಲಿ ಮಳೆ ಬರುವುದನ್ನೂ ಎಚ್ಚರಿಸುವ ಭಾಗ್ಯ ಪಡೆಯುವರೆಂಬ ವಿಶ್ವಾಸವಿಲ್ಲ. ಯಾಕೆಂದರೆ ಕನಿಷ್ಠ ಆ ಸಂವೇದನೆಯನ್ನಾದರೂ ದುಡ್ಡು-ಧರ್ಮಗಳ ಅಮಲು ಉಳಿಸಬೇಕಲ್ಲವೇ?

ಭಾನುವಾರ, ಜನವರಿ 26, 2014

ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ 371 (ಜೆ) ಮುಂದಿರುವ ಸವಾಲುಗಳು
ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ..

- ಎಚ್.ಜಯಪ್ರಕಾಶ್ ಶೆಟ್ಟಿ
ಸೌಜನ್ಯ: ವರ್ತಮಾನ ಡಾಟ್ ಕಮ್
ಭಾಗ – 1
     ಅಭಿಮಾನದಿಂದ ಹೇಳುತ್ತೇನೆ ನಾನು ಆಸ್ಪತ್ರೆಯಲ್ಲಿ ಹುಟ್ಟಿಲ್ಲ. ಆಸಾಡಿ ತಿಂಗಳ ಬಿರುಮಳೆಯ ನಡುವೆಯೂ ಮೂರು ದಿನಗಳ ತನಕ ನೋವು ತಿನ್ನುತ್ತಾ ನನ್ನವ್ವ ನನ್ನನ್ನು ನಮ್ಮ ದನಕಟ್ಟುವ ಕೊಟ್ಟಿಗೆಯಲ್ಲಿಯೇ ನೆಲಕ್ಕೆ ತಂದಳಂತೆ. ನನ್ನ ಹೊಕ್ಕಳಬಳ್ಳಿಯನ್ನು ಹೊಂದಿದ ಅಮೆಕಸವನ್ನು ಹಟ್ಟಿಯಣೆಗೆ ತಾಗಿಕೊಂಡಂತೆ ಇದ್ದ ಬಸಲೆ ಚಪ್ಪರದಡಿಯೇ ಹೂಳಲಾಯಿತಂತೆ. ಇದು ನನ್ನೊಬ್ಬನ ಕತೆಯಲ್ಲ. ನನ್ನನ್ನೂ ಒಳಗೊಂಡಂತೆ ನಮ್ಮೂರಿನಲ್ಲಿ ಬಹುತೇಕರ ಹುಟ್ಟು ಹಟ್ಟಿಯಣೆಯಲ್ಲಿ ನಡೆದುದು. ತುಂಬಿದ ಬಸುರಿಯರಿಗೆ ಹೆರಿಗೆ ನೋವು ಶುರುವಾದ ತಕ್ಷಣ ಅವರನ್ನು ವರ್ಗಾಯಿಸುತ್ತಿದ್ದುದು ಹಸು ಎಮ್ಮೆಗಳನ್ನು ಕಟ್ಟುವ ಜಾಗಕ್ಕೆ ತಾಗಿಕೊಂಡೇ ಇರುತ್ತಿದ್ದ ಕೊಟ್ಟಿಗೆಗಳಿಗೆ. ದನದ ಕಲಗಚ್ಚು ಕಾಯಿಸುವ ಬಾಯರು ಒಲೆ, ಭತ್ತಕುಟ್ಟಲು ಬಳಸುತ್ತಿದ್ದ ಕುಟ್ಟೊಒರಲು, Indian-Cow-calfಸ್ನಾನಕ್ಕಾಗಿ ಇಡುತ್ತಿದ್ದ ನೀರು ಕಾಯಿಸುವ ವ್ಯವಸ್ಥೆಯಲ್ಲವನ್ನೂ ಹೊಂದಿರುತ್ತಿದ್ದ ಹಟ್ಟಿಯಣೆಗಳೇ ನಮ್ಮ ತಾಯಂದಿರು ನಮ್ಮನ್ನು ಭೂಮಿಗೆ ಇಳಿಬಿಡುವ ತಾಣಗಳಾಗಿದ್ದವು. ಹಾಗಾಗಿ ಹುಟ್ಟಿದ ಮಕ್ಕಳನ್ನು ತಂದೆ ಮನೆಯ ಕಡೆಯವರು ನಮ್ಮ ಹಟ್ಟಿಯಣೆಗಳಲ್ಲಿ ಹುಟ್ಟಿದವನಲ್ವಾ? ಎಂದೇ ಸಂಭೋಧಿಸುತ್ತಿದ್ದುದುಂಟು. ಇಂತಹ ಹಟ್ಟಿಯಣೆಗಳಲ್ಲಿ ಹುಟ್ಟುವುದು ಮಾತ್ರವಲ್ಲದೆ ಅದೇ ಕರುಮರಿಗಳ ಜತೆಗೆ ಜನನೋತ್ತರವಾದ ಬಾಲ್ಯವನ್ನು ಕಳೆಯುವ ಬದುಕಿನ ಸುಖವನ್ನು ಕೈತುಂಬ ಚಾಚಿಕೊಂಡೇ ಬೆಳೆದ ಆನಂದ ನನ್ನೊಂದಿಗಿದೆ. ಇದಲ್ಲದೆ ಈ ನಾಲ್ಕು ಕಾಲಿನ ಹಸು-ಕೋಣ-ಎಮ್ಮೆ-ಎತ್ತುಗಳೆಂಬ ಪಶುಲೋಕ ಭಾಷಿಕವಾಗಿಯೂ ನುಡಿಗಟ್ಟು, ಗಾದೆ, ಕಥೆ ಇತ್ಯಾದಿಗಳ ಮೂಲಕವೂ ನನ್ನ ಮಾನಸಿಕ ವಲಯವನ್ನು ಹೊಕ್ಕು ಗಟ್ಟಿಯಾಗಿ ಕುಂತು ಬಿಟ್ಟಿವೆ.
ಅಕ್ಷರವೆಂಬ ಶಿಕ್ಷಣ ಕ್ರಮಕ್ಕೆ ಒಡ್ಡಿಕೊಳ್ಳುವ ಮೊದಲೇ ಹಾಡಿಹಕ್ಕಲುಗಳಲ್ಲಿರುವ ಛಿದ್ರವಾದ ದೇವರ ಲಿಂಗಗಳಿಗೊ, ಮೂರ್ತಿಗಳಿಗೋ ಸಂಬಂಧಿಸಿದಂತೆ ಕೇಳುತ್ತಿದ್ದ ಕಥೆಗಳಲಿ, ಹಾಗೆಯೇ ಜಾನಪದ ಲೋಕದ ಅನಾಥ ನಾಯಕ ನಾಯಕಿಯರಿಗೆ ಸಂಬಂಧಿಸಿದ ಕಥೆಗಳಲ್ಲಿ ಈ ಹಸುಗಳ ಲೋಕದ ಅಂಶಿಕ ಪರಿಚಯ ನಿರಂತರವಿತ್ತು. ಅದೇ ತೆರನಾಗಿ ಅಕ್ಷರ ಜಗತ್ತಿನ ಶಿಕ್ಷಣ ಕ್ರಮಕ್ಕೆ ತೆರೆದುಕೊಳ್ಳುತ್ತಿದ್ದಂತೆ, ಅನ್ನದಾತನ ಒಡನಾಡಿಯಾದ ಜಾನುವಾರುಗಳು ಮತ್ತೆ ಎದುರಾಗುತ್ತಿದ್ದವು. ಈ ಹಂತದಲ್ಲಿ ನನಗೆ ಸ್ಪಷ್ಟವಾಗಿ ನೆನಪಿರುವ ಹಾಗೆ ಮೂರನೇ ತರಗತಿಯಲ್ಲಿ ನನಗೆ ಪಾಠ ಮಾಡುತ್ತಿದ್ದ ಶಿಕ್ಷಕರೊಬ್ಬರು ಉಳಿದ ಯಾವ ಪಾಠವನ್ನೂ ನೆಟ್ಟಗೆ ಮಾಡದೆ ಇದ್ದಾಗಲೂ “ಧರಣಿ ಮಂಡಲ ಮಧ್ಯದೊಳಗೆ…” ಎಂಬ ಗೋವಿನ ಹಾಡನ್ನು ರಾಗಬದ್ಧವಾಗಿ ಹಾಡಿ ಹೇಳುವುದನ್ನು ಮರೆತವರಲ್ಲ. ಆಗಿನ್ನೂ ಒಂಭತ್ತರ ಹರೆಯದ ಆಸುಪಾಸಿನ ನಾನು ಈ ಪಠ್ಯದ ಜತೆಗೆ ಮೂಡುತ್ತಿರುವ ಲಿಂಗಗಳಿಗೋ, ಬೆಳೆಯುತ್ತಿರುವ ಹುತ್ತಗಳಿಗೋ, ತಾಯಿಯಿಲ್ಲದ ತಬ್ಬಲಿ ಮಕ್ಕಳಿಗೋ, indian_buffaloತಾಯ್ತನದ ಅನುಬಂಧದಲ್ಲಿ ಹಾಲು ಸೂಸುವ ಕಥೆಗಳನ್ನು ಕೇಳಿದವನಿದ್ದೆ. ಹುಟ್ಟಿದಾರಭ್ಯದಿಂದ ತೊಡಗಿ ಆಕ್ಷರಿಕವಲ್ಲದ ಮತ್ತು ಅಕ್ಷರ ಜಗತ್ತಿನ ಪಠ್ಯಗಳೆರಡರ ಮೂಲಕವೂ ನಾನು ಕೇಳಿದ ಬಹುಪಾಲು ಕಥೆಗಳು ಕೈಲೂತಿಯಂತಹ ವರ್ಣ ಶ್ರೇಷ್ಠವೋ, ಗಂಗೆ ಗೌರಿಯರಂತಹ ನಾಮ ಶ್ರೇಷ್ಠವೋ ಆಗಿದ್ದ ಹಸುಗಳಿದ್ದು, ಅಂತಹ ಕಥೆಗಳಲ್ಲಿ ನನ್ನ ಮುದ್ದಿನ ಎಮ್ಮೆಗಳಾಗಲೀ, ಕೋಣಗಳಾಗಲೀ, ಎತ್ತುಗಳಾಗಲೀ, ಕರುಹಡೆಯದ ಒಂದೇ ಕಾರಣಕ್ಕೆ “ಗೊಡ್ಡು”ಗಳೆನಿಸಿಕೊಳ್ಳುತ್ತಿದ್ದ ಬಂಜೆಹಸುಗಳಾಗಲೀ ಇರುತ್ತಿರಲಿಲ್ಲ! ಕಥೆಗಳಲ್ಲಿ ಇರುತ್ತಿದ್ದ ಬಹುಪಾಲು ಹಸುಗಳು ತುಂಬಿದ ಕೆಚ್ಚಲನ್ನು ಹೊತ್ತುಕೊಂಡು ಹಾಲು ಸುರಿಯಲು ತಯಾರಾಗಿಯೇ ನಿಂತವುಗಳು! ಯಾರೂ ಕಾಣದಂತೆಯೇ ಹುತ್ತದ ಮೇಲೆ ಹಾಲು ಸುರಿಯುವ, ಕಾಳಿಂಗನಂತಹ ಗೊಲ್ಲ ಕರೆದ ತಕ್ಷಣ ಬಂದು ಅವನ ತಂಬಿಗೆಯನ್ನು ತುಂಬುವಂತೆ ಚಲ್ಲಿ ಸೂಸಿ ಹಾಲು ಕರೆಯುತ್ತಿದ್ದ ಹಸುಗಳೇ. ಪ್ರಾಯಶಃ ಈ ಹಸುಗಳಿಗಿಂತ, ತಂಬಿಗೆ ತುಂಬುವ ಹಾಲೇ ಅತಿಮುಖ್ಯ ವಸ್ತುವೆನಿಸುತ್ತದೆ. ತುಂಬಿದ ಕೆಚ್ಚಲು, ಕರೆದಾಕ್ಷಣ ಬರುವ ಸಿಪಾಯಿ ಶಿಸ್ತು, ತಪ್ಪೇ ಮಾಡಲಾರದ ಸಾತ್ವಿಕ ಮುಖಗಳು, ಜತೆಗೆ ಬಹುಮಟ್ಟಿಗೆ ಎಲ್ಲವೂ ತಾಯಂದಿರುಗಳು. ತಮ್ಮ ಹೆಸರು (ಗಂಗೆ, ಗೌರಿ, ತುಂಗಭದ್ರೆ, ಪುಣ್ಯಕೋಟಿ), ಬಗೆ ಇತ್ಯಾದಿಗಳಲ್ಲಿ ಸ್ವಚ್ಛತೆಯನ್ನು ಮೈಗೂಡಿಸಿಕೊಂಡಿರುವ ಜತೆಗೆ ಪ್ರವೃತ್ತಿಯಲ್ಲೂ ಕನಿಷ್ಠತೆಯ ಸೋಂಕಿನಿಂದ ಮುಕ್ತವಾದಂತೆಯೇ ಇರುವ ಈ ಕೊಟ್ಟಿಗೆಯ ಕಪಿಲೆಯರನ್ನು ಅಕ್ಷರ ಮತ್ತು ಮೌಖಿಕ ಪಠ್ಯಗಳೆರಡೂ ಅಚ್ಚುಹಾಕಿ ಕೊಡುತ್ತಾ ಹೋಗುತ್ತವೆ.
ಗಂಟಿಗಳು ಮತ್ತು ಗಂಟಿ ಮೇಯಿಸುವುದು:
ನಾವು ಗಂಟಿಗಳು ಹುಟ್ಟುವ ಜಾಗದಲ್ಲಿ ಹುಟ್ಟಿದವರು. ಅವುಗಳನ್ನೇ ಬದುಕಿನ ಆಧಾರವಾಗಿ ಅವಲಂಬಿಸಿದವರು. ಹಸುವಿನ ಕುರಿತಾಗಿ ಲೋಕ ಕೊಡುವ ನಿರೂಪಣೆ ಹೇಗೇ ಇರಲಿ, ಹಸುಗಳ ಜೊತೆಗಿನ ನಮ್ಮ ಅನುಭವವೇ ಬೇರೆ. ನಮಗೊ ಹಟ್ಟಿಯಣೆಯಲ್ಲಿ ಹುಟ್ಟಿದಂದಿನಿಂದ ತಗುಲಿಕೊಂಡ ಹಸುಕರುಗಳ ಜೊತೆಗಿನ ನಂಟು, ಅವುಗಳನ್ನೇ ಬಯಲಿಗೆ ಬಿಟ್ಟು ಮೇಯಿಸುವ ಹೊಣೆಗಾರಿಕೆಯಾಗಿಯೇ ಮುಂದುವರೆಯುತ್ತದೆ. ಆದರೆ ನಾವಿದನ್ನು ಮನರಂಜನೆಯಾಗಿಯೇ ಬದಲಿಸಿಕೊಂಡವರು. ಇವುಗಳನ್ನು ಬಯಲಿಗೆ ಬಿಟ್ಟು ಅಲ್ಲಿಯೇ ಆಟದಂಗಣವನ್ನು ಅಣಿಗೊಳಿಸಿಕೊಳ್ಳುತ್ತಿದ್ದವರು. ಕಾಯಕದ ಜೊತೆಗೆ ಮನರಂಜನೆಯ ಅವಕಾಶವೂ ಆಗುತ್ತಿದ್ದ ಈ ಗಂಟಿಹಿಂಡಿನಲ್ಲಿ ಆಡುತ್ತಿದ್ದ ಲಗೋರಿ, ಚಿಣ್ಣಿದಾಂಡು, ಬೆನ್ಚೆಂಡುಗಳೆಂಬ ಬಗೆಬಗೆಯ ಆಟಗಳು ಬೇರೆಲ್ಲಿ ಸಾಧ್ಯ? ಬೆಳ್ಳಂಬೆಳಿಗ್ಗೆ ಹೊತ್ತು ಮೂಡುತ್ತಿದ್ದಂತೆ ಅವುಗಳ ಕೊರಳಹಗ್ಗವನ್ನು ತಪ್ಪಿಸಿ, ಬಾಲಹಿಡಿದು ಬಯಲಿಗೆ ಹೊಂಟೆವೆಂದರೆ ನಮಗೆ ಲೋಕ ಮರೆತು ಹೋಗುತ್ತಿತ್ತು. ಶಾಲೆ, ಮನೆ, ಊಟ ಇವೆಲ್ಲವನ್ನೂ ಮರೆತು ಹೊತ್ತೇರುವ ತನಕ ಅವುಗಳನ್ನು ಕಾಯುವ ಎಚ್ಚರದ ಜೊತೆಗೆ ಮೈಮರೆತು ಆಡುತ್ತಿದ್ದೆವು. ಹೀಗೆ ಆಡುತ್ತಾ ಹಸು-ಎತ್ತುಗಳೆಂಬ ಕಡಗಂಟಿಗಳನ್ನೂ, ಕೋಣ-ಎಮ್ಮೆಗಳೆಂಬ “ಹೋರೆಮ್ಮೆ”ಗಳನೂ ಕಾಡು-ಬಯಲುಗಳಲ್ಲಿ ಮೇಯಿಸಿಕೊಂಡು ಬೆಳೆದ ಅನುಭವವೇ ಬೇರೆ. ಅವುಗಳ ಒಡನಾಟದ ಫಲದಿಂದಾಗಿ ನಮ್ಮೊಳಗೆ ಅಚ್ಚಾದ ಜಾನುವಾರುಗಳ ಜಗತ್ತಿನಲ್ಲಿ ಲಿಂಗ-ವರ್ಗ-ಗುಣ ವೈವಿದ್ಯಗಳು ಸಹಜವಾಗಿಯೇ ಇವೆ. ಪಠ್ಯದ ಹಸು ಹಾಗೂ ಅವುಗಳು ಅಳವಡಿಸಿಕೊಂಡ ಮಿಲಿಟರಿ ಶಿಸ್ತುಗಳು, ನಾವೇ ಸ್ವಯಂ ಮೇಯಿಸಿ ಹಟ್ಟಿಗೆ ಕಟ್ಟುತ್ತಿದ್ದ ವೇಳೆ ನನಗಂತೂ ಬಹುಮಟ್ಟಿಗೆ ಕಂಡಿಲ್ಲ. ಅವು ನಮ್ಮ ಕಣ್ಣು ತಪ್ಪಿಸಿ ನಮ್ಮ ಆಟಗಳಿಗೆ ಬ್ರೇಕ್ ಕೊಡುವಂತೆ ಯಾರ್‍ಯಾರದೋ ಗದ್ದೆಗಳಿಗೆ ನುಗ್ಗುತ್ತಿದ್ದವು. ನಮ್ಮ ಅಪ್ಪಣೆ ಪಡೆಯದೇ ಅವುಗಳ ಕರುಗಳಿಗೆ ಕದ್ದುಮುಚ್ಚಿ (?) ಹಾಲೂಡುಸಿ ನಮ್ಮಿಂದ ಶಿಸ್ತಿನ ಪಾಠದ ಭಾಗವಾಗಿ ದೊಣ್ಣೆ/ಬಡ್ತಿಗೆಗಳ ಹೊಡೆತ ತಿನ್ನುತ್ತಿದ್ದವು. ಇನ್ನು ಕೆಲವೊಮ್ಮೆ ಹಾಗೆ ಬಿಟ್ಟುದಕ್ಕಾಗಿ ಅಮ್ಮಂದಿರ ಕೈಯಲ್ಲಿ ನಮಗೆ ಹೊಡೆತ ತಿನ್ನಿಸುತ್ತಿದ್ದವು. ಹೋರೆಮ್ಮೆಗಳ ಪಜೀತಿ ಇನ್ನೂ ಹೆಚ್ಚಿನದು. ಅವುಗಳಿಗೆ ನೀರಿನ ಭಯವಿಲ್ಲ. ಮಳೆಗಾಳಿಯ ನಡುವೆ ದಿಕ್ಕಾಪಾಲಾಗುವ ಅವಕಾಶವನ್ನೇ ಬಳಸಿಕೊಂಡು ತುಂಬಿದ ಹೊಳೆಯಲ್ಲಿ ಈಜಿ ಮರಾತೂರು, ಕೈಲ್ಕೆರೆ, ಕೊರಾಳವೆಂಬ ಹೊಳೆಯ ಆಚೆ ದಡದ ಊರುಗಳಲ್ಲಿ ಯಾರ್‍ಯಾರಿಗೋ ಸೇರಿದ ಬಯಲುಗಳಿಗೆ ನುಗ್ಗಿ ದಾಂದಲೆಮಾಡಿ ಕೇಂದ್ರೀಯ ಕಾರಾಗೃಹಕ್ಕೆ ರವಾನಿಸಲ್ಪಡುವಂತೆ ದೊಡ್ಡಿಗೆ ಕಟ್ಟಲ್ಪಡುತ್ತಿದ್ದವು. ಇನ್ನು ಕಡಗಂಟಿಗಳೆನಿಸಿದ ಎತ್ತು-ದನಗಳದ್ದು ಬೇರೆಯೇ ಕಥೆ. ಇವು ಬಾಲವನ್ನು ಸುರುಳಿಸುತ್ತಿ ಓಡಲು ಹಿಡಿದರೆ ಹಿಡಿಯುವುದು ಹಟ್ಟಿಯ ದಾರಿಯನ್ನಲ್ಲ. ಅವುಗಳ ಸ್ವ್ವಾತಂತ್ರ್ಯಘೋಷಣೆಗೆ ಯಾವುದು ಸರಿಯೋ ಆ ದಾರಿಯನ್ನು. ಇವುಗಳು ಹೀಗೆ ಕಂಡ ದಾರಿಹಿಡಿದು ಹಟ್ಟಿಗೆ ನೇರವಾಗಿ ಬಾರದೇ, ಯಾರದೋ ಗದ್ದೆಗಳಿಗೆ ನುಗ್ಗಿ ಮನೆಮಂದಿಗೆ ಬೈಗುಳದ ಉಡುಗೊರೆ ತರುತ್ತಿದ್ದವು. ನಮಗೋ ಮೂರ್ಖಾಸಿನ ಬೆಲೆಯಿರದ ದನಕಾಯಲೂ ಲಾಯಕ್ಕಲ್ಲದ ದುಸ್ಥಿತಿ ತರುವ ಜೊತೆಗೆ ಬಾಸುಂಡೆ ಬರುವಂತೆ ಹೊಡೆತ ಹಾಕಿಸುತ್ತಿದ್ದವು. ಮನೆಮಂದಿಯಿಂದಲೂ ಬೈಗುಳ, ಪಕ್ಕದ ಮನೆಯವರಿಂದಲೂ ಅದೇ ಆರತಿ. ಯಾತಕ್ಕೂ ಪ್ರಯೋಜನಕ್ಕಿರದವ ಎಂಬರ್ಥದ “ಎರ್‍ಡ್‌ಬಾಲ್ ಗಂಟೀನ್ನೂ ಮೇಯಿಸಲಾರ”ದವ ಎನ್ನುವ ಹೆತ್ತವರ ಹತಾಶೆಯ ಮಾತು ಬೇರೆ. ಪರೀಕ್ಷಾ ಫಲಿತಾಂಶದಲ್ಲಿ ಫೇಲಾಗುವುದಾದರೂ ಬೇಕು, ಆದರೆ ಈ ಗಂಟಿಮೇಯಿಸಲೂ ಆಗದ ನಾಪಾಸು ಸರ್ಟಿಫಿಕೇಟು ಖಂಡಿತಾ ಬೇಡ. ಅವುಗಳ ನಿಯಮೋಲ್ಲಂಘನೆ ಗದ್ದೆಗೆ ದಾಳಿಯಿಟ್ಟು ಬೈಯಿಸುವುದಕ್ಕಷ್ಟೇ ಸೀಮಿತವಾಗುವುದಿಲ್ಲ. ಕೆಲವಂತೂ ಉಗ್ರಪ್ರತಾಪಿಗಳು ಬೇರೆ. ಕಂಡವರನ್ನಷ್ಟೇ ಅಲ್ಲ ಮನೆಮಂದಿಗೂ ರಿಯಾಯಿತಿ ಕೊಡದೆ ಕೋಡುಮಂಡೆ ಬಳಸಿ ಎತ್ತ್ಹಾಕಿಕೊಂಡು ಪೌರುಷ ತೋರುತ್ತಿದ್ದವು.
ಇಂತಹ ಹಸು-ಕರು-ಎಮ್ಮೆಗಳನ್ನು ಬೇಸಿಗೆಯ ಕಾಲದಲ್ಲಿ ಬಯಲಿನಲ್ಲಿ ಬಿಟ್ಟುಕೊಂಡು “ಅಕ್ಕಿಹುರಿದು” indian-cowತಿಂದು ಆಟವಾಡುವಾಗ ಒಂದು ತರದ ಫಜೀತಿಯಾದರೆ ಮಳೆಗಾಲದ ಕಥೆ ಬೇರೆಯದೇ. ಮಳೆಗಾಲದಲ್ಲಿ ಇವುಗಳ ಮೇವಿಗಾಗಿ ಬಯಲಿಗೆ ಎಬ್ಬುವಂತಿರಲಿಲ್ಲ. ಎಲ್ಲಾ ಗದ್ದೆಗಳು ನೇಜಿಗೊಂಡು ಸಾಗುವಳಿಗೆ ಒಳಪಟ್ಟಿರುತ್ತಿದ್ದುದರಿಂದ ಹುಲ್ಲಿನೊಂದಿಗೆ ಹಸಿರೆಲೆಗಳನ್ನು ಹೊಂದಿರುವ ಹಾಡಿ-ಗುಡ್ಡೆಗಳೆ ಅವಗಳ ಆಡುಂಬೊಲವಾಗುತ್ತಿತ್ತು. ಹಾಡಿ-ಗುಡ್ಡೆಗಳಲ್ಲಿ ಮೇಯಿಸುವಾಗ ನಮಗೆ ಆಟದ ಬಯಲು ಸಿಕ್ಕುವುದಿಲ್ಲ. ಆದರೆ ಆಟ ನಿಲ್ಲಬೇಕಲ್ಲ. ಚಿಕ್ಕಚಿಕ್ಕ ಕಲ್ಲುಗಳನ್ನು ಬಳಸಿ ಹೆಮ್ಮಕ್ಕಳ ಜೊತೆಗೆ ಗುಡ್ನಾಡುತ್ತಿದ್ದೆವು. ನೆಲದ ಕಿರುಜಾಗಗಳನ್ನೇ ಬಳಸಿ ಜುಬಲಿ(ಬೆಟ್ಟಾ) ಆಡುತ್ತಿದ್ದೆವು.ನೆಲದಲ್ಲಿಯೇ ಚನ್ನೆಮನೆಗಳನ್ನು ಮಾಡಿಕೊಂಡು ಚನ್ನೆಯಾಟಗಳನ್ನಾಡುತಿದ್ದೆವು. ಇದರ ಜೊತೆಗೆ ಬಹುವಿಧದ ಕಾಡುಹಣ್ಣುಗಳನ್ನು ಒಟ್ಹಾಕಿಕೊಂಡು ತಿನ್ನುತಿದ್ದುದು ಮಾಮೂಲಿಯಾಗಿತ್ತು. ನಮ್ಮ ಈ ಸುಖಕ್ಕಾಗಿ ಆಟ ಮತ್ತು ಹಣ್ಣು ಹುಡುಕಾಟದಲ್ಲಿ ಬೀಳುವ ಹೊತ್ತಿನಲ್ಲಿಯೇ ನಮ್ಮ ಕಣ್‌ತಪ್ಪಿಸಿಕೊಳ್ಳುವ ಅವುಗಳ ಮರಾಣಿ೧ ಸದ್ದೂ ಕೇಳಿಸದಂತಾದಾಗ ನಾವು ಗಾಬರಿ ಬೀಳುತ್ತಿದ್ದೆವು. ಮನೆಗೆ ಹೋಗುವ ಮುನ್ನವಾದರೂ ಕಣ್ಣಿಗೆ ಬಿದ್ದರೆ ಸಾಕು ಎಂದು ಹೊಳೆಕಡು, ಯಾರ್‍ಯಾರದೋ ಗದ್ದೆಕಡುವುಗಳನ್ನು ಹುಡುಕಿ ಎಲ್ಲಿಯೂ ಕಾಣದಂತಾದಾಗ ಹರಕೆಯ ಮೊರೆಹೋಗುತ್ತಿದ್ದೆವು. ನಮಗೆ ಸುಲಭದಲ್ಲಿ ಸಾಧ್ಯವಾಗುತ್ತಿದ್ದುದು ಮತ್ತು ಗುಟ್ಟಾಗಿ ಮನೆಯವರ ನೆರವಿಲ್ಲದೆ ಗೇರುಬೀಜ ಮಾರಿದ ದುಡ್ಡಿನಲ್ಲಿಯೇ ಒಂದೆರಡು ಲಾಡು,ಜಿಲೇಬಿಗಳ ತ್ಯಾಗ ಮಾಡುವಷ್ಟಕ್ಕೇ ಪೂರೈಸಬಹುದಾಗಿದ್ದ ಹರಕೆಯೆಂದರೆ ಸ್ವಾಮಿಮನೆಯ ನಿಂಗಮ್ಮನಿಗೆ ಕಪ್ಪುಬಳೆ ಹಾಕುವುದು. ಇಲ್ಲಾ ಗಣಪತಿ ದೇವರ ಡಬ್ಬಿಗೆ ೨-೩ಪೈಸೆ ಕಾಣಿಕೆ ಹಾಕುವುದು. ಇನ್ನೂ ಸ್ವಲ್ಪ ಜಾಸ್ತಿ ಗಾಬರಿಯಾದರೆ ದುಬಾರಿ ಹರಕೆಯಾಗಿ ಗಣಪತಿಗೆ ಒಂದು ರೂಪಾಯಿ ಪಂಜಕಜ್ಜಾಯ ಮಾಡಿಸುವುದು. ಈ ಹರಕೆಗಳಿಗೂ ಕೆಲವೊಮ್ಮೆ ದನಗಳು ದಕ್ಕದೇ ಇದ್ದಾಗ ಇದ್ದೇ ಇದೆ ದೇವರಿಗೆ ಹಿಡಿಶಾಪಹಾಕುವುದು ಮತ್ತು ಕೊನೆಗೆ ಮನೆಯಲ್ಲಿ ಬೆನ್ನಿಗೆ ಎಣ್ಣೆ ಉಜ್ಜಿಸಿಕೊಳ್ಳುವುದು. ಇವೆಲ್ಲವೂ ಅಂದಿನ ಹಸಿರಾದ ನೆನಪುಗಳು. ಈ ಗಂಟಿಕರುಗಳನ್ನು ಮೇಯಿಸುತ್ತಾ, ಮಳೆ ಬಂದಾಗ ಕಂಬ್ಳಿಕುಪ್ಪೆ ಹಾಕಿಕೊಂಡು ಓಡಾಡುವ ಸಂಕಟ ಪರಿಹಾರವಾಗಲಿ ಎಂಬ ಆಶಯದಿಂದ,-”ಹಾರ್‍ಮಳೆ ಬೋರ್‍ಮಳೆ ಬೋಳ್‌ಗುಡ್ಡೆಗ್ ನಾ ಕೂತಿದಿ ಹಾರಿಯೇ……..ಹೋಗ್, ಕೂರಿಯೇ……….ಬಾ” ಎಂಬಂತೆ ಮಳೆದೂರಾಗಬಯಸಿ ಹಾಡುತ್ತಿದ್ದ ಅಹವಾಲಿನ ಸೊಲ್ಲಾಗಲೀ; ತನ್ನ ಬಾಯಿಪತ್ತಿ(ಆಹಾರ)ಯನ್ನು ಬಯಸಿ
ಹನಿಹನಿ ಮಳಿ ಬರುತಿರಬೇಕು
ವಾಂಟಿಕೊಳಾಲ್ ಉರಿಯಲೆಬೇಕು
ಗಂಟಿಕರಾಳ್ ಮೇಯ್ತಿರಬೇಕು
ನನಗೊಂದ್ ಬಡ್ಕಟಿ ಸಿಕ್ಕಲೆಬೇಕು
ಎಂಬಂತೆ ಹುಲಿರಾಯ ಹಾಡಿಕೊಳ್ಳುವ ಸೊಲ್ಲೆಂಬಂತೆ ಗುನುಗುಡುತ್ತಿದ್ದ ಸೊಲ್ಲುಗಳಾಗಲೀ ನನ್ನ ನೆನಪಿನ ಬುತ್ತಿಯಲ್ಲಿ ಖಾಲಿಯಾಗದೇ ಉಳಿದಿವೆ. ಈ ಹಾಡುಗಳು, ಅವುಗಳ ಕೊರಳಿಗೆ ಕಟ್ಟುವ ಮರಾಣಿಗಳ ಸದ್ದು ಹಾಗೂ ದನಕಾಯುತ್ತಾ ನಾವು ಕೇಳಿಸಿಕೊಳ್ಳುತ್ತಿದ್ದ ಕಥೆಗಳು, ಮೆಂದು ಹೊಟ್ಟೆ ತುಂಬಿಸಿಕೊಂಡ ಹಸು-ಎಮ್ಮೆಗಳ ಹೊಟ್ಟೆ ಮುಟ್ಟಿ ಅನುಭವಿಸುತ್ತಿದ್ದ ಖುಷಿಗಳು ಎಲ್ಲವೂ ನೆನಪಿನ ಬುತ್ತಿಯ ಸರಕುಗಳೇ. ಯಾವ್ಯಾವುದೋ ಗಿಡದ ಎಲೆ,ಬೇರುಗಳನ್ನು ಕಿತ್ತು ಅವುಗಳ ಬಾಯಿಗಿಕ್ಕಿ ಪ್ರೀತಿತೋರಿಸುತ್ತಲೇ ನಮ್ಮ ದನಿಕೇಳಿದ ತಕ್ಷಣ ಹತ್ತಿರಕ್ಕೆ ಬರುವಂತೆ ಮಾಡಿಕೊಳ್ಳುತ್ತಿದ್ದ ವಶೀಕರಣದ ತಂತ್ರಗಳು, ಮೈಮೇಲಿನ ಉಣ್ಣೆ ಎತ್ತಿ, ಮೈತೊಳೆದು ತೋರುತ್ತಿದ್ದ ಆತ್ಮೀಯತೆಗೆ ನಮ್ಮ ಕೈಮೈಗಳನ್ನು ನೆಕ್ಕಿ ಅವು ನೀಡುತ್ತಿದ್ದ ಕಚಗುಳಿಯ ವಿಶಿಷ್ಠ ಅನುಭವ ಕಳೆದು ಹೋದ ಮಾಯಾಲೋಕವೊಂದರಂತೆ ಭಾಸವಾಗುತ್ತದೆ. ಈ ಆತ್ಮೀಯತೆಯಿದ್ದೂ ಅವುಗಳನ್ನು ನಂಬಿ ನಿರುಮ್ಮಳವಾಗಿ ಕೂರುವಂತಿರಲಿಲ್ಲ. ನಂಬಿ ಕೂತಲ್ಲಿ ಪ್ರಮಾಣಪತ್ರಗಳು ಸಿದ್ಧಗೊಳ್ಳುತ್ತಿದ್ದುವು!
ಹಾಗಾಗಿ ಕಾಳಿಂಗನೆಂಬ ಗೊಲ್ಲನ ಹಸುಗಳಿಗಿದ್ದ ಸಿಪಾಯಿ ಶಿಸ್ತಿರದ ನಮ್ಮ ಹಸುಗಳ ಲೋಕವೇ ಒಂದಿದೆ ಎನಿಸುತ್ತದೆ. ಈ ಲೋಕದೊಳಗಡೆ ಹಸು ಎಂದಾಗಲೇ ನನಗೆ ಹಸಿವು-ಹಸುವುಗಳೆರಡನ್ನೂ ಕೇಳಿದೆಂತೆನಿಸುತ್ತದೆ. ನನಗನಿಸುವ ಹಾಗೆ ಈ ಎರಡರ ಅನುಬಂಧವಿಲ್ಲದಿದ್ದಲ್ಲಿ ನನ್ನವರ ಹಟ್ಟಿಗಳಿಗೆ ಅರ್ಥವೇ ಇರಲಿಲ್ಲ. ಹಟ್ಟಿ ಮತ್ತು ಹೊಟ್ಟೆಯ ನಡುವೆ ಬಹಳ ಅಂತರವೇನೂ ಇಲ್ಲ. ಹಾಗಾಗಿಯೇ ಏನೋ ಈ ಹಟ್ಟಿಗಳು ಇರುತ್ತಿದ್ದುದೇ ಮನೆಗೆ ತಾಗಿಕೊಂಡು. ನೆಲದ ಜತೆಗೆ ಗುದ್ದಾಡುತ್ತ ಬದುಕನ್ನು ಕಟ್ಟಿಕೊಳ್ಳುವ ನನ್ನವರ ಲೋಕದ (ಉದ್ಯೋಗದ ಹಸಿವು, ಹೊಟ್ಟೆಯ ಹಸಿವು, ಬೆಳೆಯ ಹಸಿವು, ಬಂಡವಾಳದ ಹಸಿವುಗಳೆಂಬ) ಹಸಿವಿನ ಹಲವು ಬಗೆಗಳಿಗೆ ಸುತ್ತಿಕೊಂಡಿರುವ ಹಸು ಕೇವಲ ಒಂದು ಸಂಗತಿಯಲ್ಲ, ಬದಲಾಗಿ ಬದುಕಿನ ಬಹುಮುಖ್ಯ ಭಾಗ. ಹುಲ್ಲು ಮಾಡುಗಳಿಗೋ, ಮರದಡಿಗೋ ಇರುತ್ತಿದ್ದ ದೈವದ ಹೆಸರಿನ ಕಲ್ಲುಚಕ್ಕೆ/ಮುಂಡಿಗೆ/ಉರಗಳ ಎದುರು ಹರಕೆಯ ಸರಕುಗಳಾಗಿ ಪ್ರತಿಬಾರಿಯ ತಿಂಗೋಡು ಪೂಜೆಗಳಲ್ಲಿ ಇರಿಸುತ್ತಿದ್ದುದು ಚಿನ್ನ ಬೆಳ್ಳಿಯ ಕಿರೀಟಗಳನ್ನಾಗಿರಲಿಲ್ಲ. ಬದಲಾಗಿ ಕಂಚು, ಹಿತ್ತಾಳೆಯಿಂದ ಮಾಡಿದ ಈ ಹಸು,ಕೋಣ,ಕರುಗಳ ರೂಹುಗಳನ್ನ! ನಾಕ್ಕಾಲ್‌ಮುಂಬು ಆಗಿ ಪರಿಭಾವಿತವಾಗಿದ್ದ ಈ ಜಾನುವಾರುಗಳನ್ನ ಹುಲಿಗಳಿಂದ, ಕಾಯಿಲೆಗಳಿಂದ ಕಾಪಾಡಿಕೊಟ್ಟ ದೈವಕ್ಕೆ ನೀಡಿದ ಕುರುಹುಗಳಿವು. ಹಾಗೆಯೇ ಕಟ್ಟೆವಸಂತ ಮಾಡಿ ಕಾಳಭೈರವನನ್ನು ಕೂಗಿ ಕರೆದು ಹರಕೆಯ ಹುಂಡಿಗಳಿಗೆ ಕಾಣಿಕೆ ಹಾಕಿ “ಪಾವುತೀರ್ಥ, ಪಾವುಕಡ್ಲೆಯನ್ನ ಮಂದಾಲಗಿರಿಗೆ ಸೇರಿಸಿಕೊಂಡು ಗಂಟಿಕರು, ಎತ್ತು-ಬೀಜ, ಮಕ್ಕಳು ಮರಿಗಳನ್ನು ತಲೆಕಾದು, ಹೋದಲ್ಲಿ ಬಂದಲ್ಲಿ ಒಳ್ಳೇದು ಕೊಡು” ಎಂದು ಮಾಡುತ್ತಿದ್ದ ಏಕಮುಖೀ ಕೇಳಿಕೆಯಲ್ಲೂ ಜಾಗಪಡೆಯುತ್ತಿದ್ದದ್ದು ಈ ಎತ್ತು ಕರುಗಳೇ. ಜೀವನ ಭದ್ರತೆಯ ಸಾಧನವಾಗಿ ನೇಲ್ (ನೇಗಿಲು), ನೊಗ, ಎತ್ತು, ಬೀಜಗಳನ್ನು ಸಮಾನವಾಗಿ ಗೌರವಿಸುವ ಕೃಷಿಲೋಕ ನೇಗಿಲು-ನೊಗಗಳಿಗೆ ಕದಿರುಕಟ್ಟಿ, ಬೀಜಕ್ಕೆ ಹತ್ರಾವದಿಯ ಪೂಜೆಮಾಡಿ, ಎತ್ತು ಕೋಣಗಳಿಗೆ ಆರ್‍ಹೂಡಿ ಬರುವ ದಿನ ಕಾಲು ತೊಳೆದು, ಕರು ದನ-ಎತ್ತುಗಳಿಗೆ ದೀಪಾವಳಿಯ ದೀಪತೋರಿಸಿ, ಕೊಡಿಹಬ್ಬದಂದು ಹುಂಡುಹಾಕಿ, ರೊಟ್ಟಿ ಕಟ್ಟಿ – ಹೀಗೆ ಎಲ್ಲವನ್ನೂ ಪೂಜೆಯ ವರ್ತುಲದೊಳಗೆ ತಂದು ಪೂಜಿಸಿ ಗೌರವಿಸುವ ಜತೆಗೆ ಬಳಕೆಯ ಸಾಧನ ಪಳೆಯುಳಿಕೆಯಾದಾಗ ಸಂಗ್ರಹಾಲಯದಲ್ಲಿರಿಸುವುದಿಲ್ಲ. “ಮ್ಯೂಸಿಯಂ ಸಂಸ್ಕೃತಿ”ಯ ಮಾದರಿಯದಲ್ಲದ ಈ “ಪ್ರೀತಿಯ” ಲೌಖಿಕ ಜಗತ್ತು ನಿರುಪಯುಕ್ತ ನೇಗಿಲನ್ನು ಬೂದುನೀರ ಒಲೆಗೆ ಹಾಕಿ ಎಣ್ಣೆನೀರ ಸ್ನಾನದ ಸರಕಾಗಿಸಬಲ್ಲದು. ಹಾಗೆಯೇ ಅನುಪಯುಕ್ತ ಸರಕಾದ ಹಸು-ಕರುಗಳನ್ನು ಅಷ್ಟೇ ಸಹಜವಾಗಿ ವಿಕ್ರಯಮಾಡಿ ಹೊಸ ಹಸು ಕರುಗಳ ವರ್ತುಲವನ್ನು ಮುಂದುವರೆಸಬಲ್ಲದು. ಕುಟುಂಬಯೋಜನೆಯನ್ನು ದಿಕ್ಕರಿಸಿಯೂ, ಹಟ್ಟಿಯ ಗಾತ್ರವನ್ನು ವಿಸ್ತರಿಸದೆ ಅದೇ ಅವಕಾಶದಲ್ಲಿ ಪ್ರೀತಿಯನ್ನು ಧಾರೆಯೆರೆದು, ಹಸುವನ್ನು ಸಾಕಿ ಹಸಿವಿಂಗಿಸಿಕೊಳ್ಳಬೇಕಲ್ಲವೇ?. ಇಂತಹ ಹಸು ಕೋಣಗಳ ಮೈತೊಳೆದು ಕೋಡ ಇಡುಕಿನಲ್ಲಿರುವ ಕೊಳೆ ತೆಗೆಯಲು ಬೀಳು/ಹುಲ್ಲಿನ ಕೋಡಶೆಳೆ೫ಹಾಕಿ ಸ್ವಚ್ಛಗೊಳಿಸಿ, ಮೈಮೇಲೆ, ಬಾಲದ ಗೊಂಚಿನಲ್ಲಿ ಮೆತ್ತಿಕೊಂಡಿರುತ್ತಿದ್ದ ಒಣಗು(ಉಣ್ಣೆ), ಚಟ್ಟ್‌ಒಣಗು, ಹೇನು-ಚೀರುಗಳನ್ನು ಎಳೆದು ತೆಗೆದು ಅವುಗಳ ಜತೆಗೇ ಹೊಳೆಯಲ್ಲಿ ಮಿಂದು ಬರುತ್ತಿದ್ದ ನಮ್ಮೊಳಗೆ ಆ ಹಸು-ಹಸಿವುಗಳೆರಡೂ ನೆನಪಾಗಿ ಕೂತುಬಿಟ್ಟಿವೆ.
ಹಟ್ಟಿಯಣೆಯಲ್ಲಿ ಹುಟ್ಟಿ ಬಹುಕಾಲದ ಬದುಕನ್ನು ಅದರ ಸುತ್ತಲೇ ಕಳೆದು ಅಲ್ಲಿಯೇ ಬದುಕಿರುವಲ್ಲಿಯವೆರೆಗೆ ನಮ್ಮದೇ ಎಮ್ಮೆ,ದನಗಳು ಕರೆದ ಹೊಚ್ಚ ಹೊಸ ಅಪ್ಪಟ ಹಾಲನ್ನು ಕುಡಿಯುವ ಅವಕಾಶವಿತ್ತು. ಆದರೆ ನಗರ ಸೇರಿಕೊಂಡ ಮೇಲೆ ದೇವಲೋಕದ ಹಸು ನಂದಿನಿಯ ಹೆಸರು ಹೊತ್ತ ಲಕೋಟೆಯಿಂದ ಸೋರುವುದನ್ನೇ ಹಾಲು ಅಂತ ಕುಡಿಯಬೇಕಾಗಿದೆ. ಬೆಳ್ಳಂಬೆಳಿಗ್ಗೆ ಓದೋ ಪೇಪರ್ ಜೊತೆಗೆ ಮನೆಯಂಗಣಕ್ಕೆ ಬಂದು ಬೀಳುವ ಹಾಲಿನ ಲಕೋಟೆಯಲ್ಲಿ ಹಾಲೇನೋ ಇರುತ್ತದೆ. ಆದರೆ ಅದರ ಜೊತೆಗೆ ನನ್ನ ಕೆಂಪಿ,ಚಿಕ್ಕು, ಬೆಳ್ಳಿಯರ ಕೆಚ್ಚಲ ವಾಸನೆಯಿಲ್ಲ. ಹೋಗಲಿ ಕನಿಷ್ಟ ಒಂದು ಎಮ್ಮೆಯ ಚಿತ್ರವಾದರೂ ಇತ್ತೇ ಅಂದರೆ ಅದೂ ಇಲ್ಲ. ಇರುವುದು ದೇವಲೋಕದ ನಂದಿನಿಯ ಹೆಸರಲ್ಲಿ ಹೈಬ್ರೀಡ್ ಹಸುವೊಂದರ ಚಿತ್ರ. ಹಾಲು ಕುಡಿಯುವುದು ಬೇರೆ, ಹಾಲು ಕೊಡುವ ಹಸುಗಳೊಂದಿಗೆ ಬದುಕುವುದು ಬೇರೆ. ನನ್ನ ಮನೆಯೊಳಗೆ ನಂದಿನಿಯ ಪ್ಯಾಕೇಟ್ ಬಂದು ಬಿದ್ದಾಗ ಆ ಹೈಬ್ರೀಡ್ ತಳಿಯ ಹಸುವಿನ ಚಿತ್ರಣ ಕಂಡಾಗಲೆಲ್ಲಾ ನನ್ನೊಳಗೆ ಅತೀವ ಸಂಕಟವಾಗುವುದುಂಟು. ಉದ್ಯೋಗದ ಬೇಟೆಯಲ್ಲಿ ಅಭಿವೃದ್ಧಿಯ ಮಂತ್ರ ಜಪಿಸುತ್ತಾ ಊರು ಬಿಟ್ಟವರು ನಾವುಗಳು. ಹೀಗಿದ್ದು ನಾನು ಬದುಕಿದ ಮನೆ ಇರುವಲ್ಲಿಯೇ ಇದೆ. ಹಸು ಕಟ್ಟುತ್ತಿದ್ದ ಹಟ್ಟಿಯೂ ಇದೆ. ಆದರೆ ಈಗ ಆ ಹಟ್ಟಿಯಲ್ಲಿ ನನ್ನ ಕೆಂಪಿ, ಬುಡ್ಡಿ, ಕರಿಯಮ್ಮನಾಗಲಿ, ಕರಿಯ, ನೀಲ ಕೆಂಪಣ್ಣ್ಣನಾಗಲೀ, ಚಿಕ್ಕು, ಬೆಳ್ಳಿ ಎಮ್ಮೆಯಾಗಲೀ, ಬೆಳ್ಳು, ಕಾಳುಗಳೆಂಬ ದೀರ್ಘಕಾಯದ ಕೋಣಗಳಾಗಲೀ ಇಲ್ಲದಂತಾಗಿ ಖಾಲಿಯಂತಿದೆ. ಈಗ ಅಲ್ಲಿರುವುದೂ ನಂದಿನಿ ಪ್ಯಾಕೇಟ್ ಮೇಲೆ ಮುದ್ರಿತವಾದ kamadenu(ಆದರೆ ಜೀವಂತವಾದ) ಬೂಸಾ ತಿಂದು ಹಾಲು ಕರೆಯುವ ಯಂತ್ರ! ಬೆದೆಗೆ ಬಂದಾಗ ಪಶುವೈದ್ಯನ ಸೂಜಿಯ ಮೂಲಕ ಗರ್ಭಕಟ್ಟುವ, ಗಂಡುಕರುಗಳಾದರೆ ಹಾಲು ಕೊಡದೇ ಕೊಲ್ಲಲ್ಪಡುವ, ಏನೇನೊ ರೋಗದ ರೂಢಿಯಲ್ಲಿ ಮತ್ತೆ ಮತ್ತೆ ವ್ಯಾಕ್ಷಿನ್ ಪಡೆಯುವ ಈ ಪರದೇಶಿ ಹಸುವಿನೆದುರು ದೀಪಾವಳಿಯ ರಾತ್ರಿ ಗದ್ದೆಗೆ ಹಿಟ್ಟು ಬಡಿಸಿ ಬಂದ ಮೇಲೆ “ಆಸಾಡಿ ಹಬ್ಬದ ಆಸಿ ಕಂಡೆ, ದೀಪೋಳಿ ಹಬ್ಬದ ದೀಪ ಕಂಡೆ, ಮುಂದ್ ಬತ್ತ್ ಕೊಡಿ ಕಾಣ್” ಎಂದು ಹಾಡು ಹಾಡುತ್ತಾ ಹಿಟ್ಟು ನೀಡುವ ಅಮ್ಮ ಬದಲಾಗಲಿಲ್ಲ. ಅಮ್ಮನ ಸಿಕ್ಕ (ಮಜ್ಜಿಗೆ ತೂಗಿಡುವ ಸಾಧನ), ಕಿರ್‍ಗಾಲು, ಕಡಾಲು (ಕಡೆಗೋಲು)ಗಳು ಅಟ್ಟ ಹತ್ತಿವೆ/ಕಣ್ಮರೆಯಾಗಿವೆ. ಅಮ್ಮನ ಹಾಗೆಯೇ ಅಚ್ಚೊತ್ತಿ ನಿಂತ ನನ್ನ ಒಟ್ಟು ಹಸು ಕರುಗಳೆಂಬ ಸಂಗತಿಗಳ ಜತೆಗಿನ ಬಾಲ್ಯ ನನ್ನವರ ಹಸುವಿನ ಲೋಕದ ಪರಿಚಿತ ಮುಖವಾಗಿಯೇ ಉಳಿದುಕೊಂಡಿದೆ. ಹಾಗೆಯೇ ಇವತ್ತು ನಮ್ಮ ಹಟ್ಟಿಗಳಲ್ಲಿ ಅವತರಿಸಿರುವ ದೇವಲೋಕದ ನಂದಿನಿಯೆಂಬ ಹಾಲುಯಂತ್ರಗಳು ಅವುಗಳ ಗಂಡುಕರುಗಳ ಉದ್ದೇಶಿತ ಕೊಲೆಗಳು ನಮ್ಮ ಹಸಿಯಾದ ಹಸಿವೆಯ ಭಾಗವೇ ಆಗಿವೆ. ಹಾಗಾಗಿ ನಮ್ಮ ಪಾಲಿಗೆ ಹಸುವೆಂದರೆ ಕ್ಯಾಲೆಂಡರ್‌ಗಳಲ್ಲಿಯೋ, ವರ್ಣಚಿತ್ರಗಳಲ್ಲಿಯೋ ಮಮತೆಯ ಪೋಸ್‌ನಲ್ಲಿ ಅಂಟಿಸಲ್ಪಟ್ಟ ನಾಲ್ಕು ಕಾಲಿನ ಹುಲ್ಲು ತಿನ್ನುವ ದೇವರಲ್ಲ್ಲ. ಅಥವಾ ಹಸುಸಾಕದೇ ಪ್ಯಾಕೇಟ್ ಹಾಲು ಕುಡಿಯುವವರು ಕಲ್ಪಿಸಿಕೊಟ್ಟಿರುವ ಕಾಮಧೇನುವೊ, ಪುಣ್ಯಕೋಟಿಯೊ ಅಲ್ಲ. ಅದೊಂದು ಆಪ್ತವಾದ ಜೀವ. ಪ್ರೀತಿಗೆ ಕಾರಣವಾಗುತ್ತಾ ಬದುಕಿಗೆ ಆಧಾರವಾಗಬೇಕೆಂದು ಸಹಜ ಮನುಷ್ಯರಾದ ರೈತರು, ದನಗಾಹಿಗಳು ಇಲ್ಲಿಯವರೆಗೆ ಮತ್ತು ಇನ್ನು ಮುಂದು ಕೂಡ ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರತ್ಯೇಕವಾದ ಲೋಕ. ಆ ಲೋಕದೊಳಗೆ ಪ್ರವೇಶ ಕಾಣದೆ ಮತ್ತು ಪ್ರವೇಶ ಬಯಸದ ಶುಭ್ರವಸನ ದಾರಿಗಳು ಭಾವಿಸುವಂತೆ ಒಂದೇ ಏಟಿಗೆ ಆರಾಧನೆ ಮಾಡಿಯೋ, ಪೂಜ್ಯತೆಯ ಸರಕಾಗಿ ಮ್ಯೂಸಿಯಂನಲ್ಲಿಟ್ಟೋ ಕೂರುವ ಜಗತ್ತಲ್ಲ ಅದು. ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳಲಾರದೆ ಬಾಳಿನ ಬವಣೆಯಿಂದ ಬೇಯುವ ನೈಜ ಅನುಭವದ ಆ ಲೋಕದಲ್ಲಿ ಭಾವನೆಯಿದೆ, ಬದುಕಿದೆ, ವ್ಯವಹಾರವಿದೆ, ಬಳಕೆಯಿದೆ. ಇಂತಹ ಸಂಕೀರ್ಣ ಆಯಾಮದಲ್ಲಿ ನಿಜಗೊಳ್ಳುವ ಹಸುವಿನ ಲೋಕವನ್ನು ಯಾವುದೋ ಒಂದು ಚಿತ್ರಕ್ಕ್ಕೆ/ಪ್ರತಿಮೆಗೆ ಜೋತುಹಾಕಲಾಗದು. ಕಾಳಿಂಗನೆಂಬ ಗೊಲ್ಲನ ಲೋಕದಲ್ಲಿಯ ಗಂಗೆ, ಗೌರಿ, ತುಂಗೆಯರೂ ಅಲ್ಲಿದ್ದಾರೆ. ಹಾಗೆಯೇ (ಗೊಡ್ಡು) ಅಹಲ್ಯಾನಂತವರೂ ಅಲ್ಲಿದ್ದಾರೆ. ಅಂತಹ ಲೋಕದಲ್ಲಿ ದನ ಕಟ್ಟುವ ಹಟ್ಟಿಗಳು ದೇವಾಲಯವೂ ಆಗುತ್ತವೆ.(ತಾತ್ಕಾಲಿಕವಾಗಿ) ಕೆಲಹೊತ್ತಿನ ನಿಲ್ದಾಣಗಳೂ ಆಗುತ್ತವೆ. ಹಾಗೆಯೇ ಜೀತದ ಮನೆಯೂ ಆಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಹಟ್ಟಿಯಲ್ಲಿರುವುದು “ಕೊರಳಿಗೆ ಕಟ್ಟುವ ಹಗ್ಗಗಳೇ ವಿನಃ ಮಲ್ಲಿಗೆಯ ದಂಡೆಯಲ್ಲ.”
ಹಸು, ಎಮ್ಮೆ, ಎತ್ತುಗಳ ಕೊರಳಿಗೆ ಹಗ್ಗ ಕಟ್ಟಿ, ಬೆನ್ನು ಸವರಿ, ಸರಿಯೆನಿಸಿದಾಗ ಬಾಸುಂಡೆ ಬರುವಂತೆ ಬಾರಿಸಿ, ಮಾನ ತೆಗೆಯದಂತೆ ನಿಯಂತ್ರಿಸಲು ಒದ್ದಾಡಿ, ಮಳೆಗಾಲದ ಉಳುಮೆಗೆ ಜೋಡಿಲ್ಲದವರ ಪಾಡನ್ನು ಕಂಡು ಅನುಭವಿಸಿದ ನನಗೆ ಇತ್ತೀಚಿಗಿನ ದಿನಗಳಲ್ಲಿ ಅವುಗಳನ್ನು ಸಾಕುವುದೇ ಒಂದು ಶಿಕ್ಷೆಯಾಗುತ್ತಿರುವುದು ಆತಂಕದಾಯಕವೆನಿಸುತ್ತಿದೆ. ಹಿಂದೆಂದೂ ಕಂಡುಕೇಳರಿಯದ ಹಾಗೆ ದಿಡೀರ್ ಆಗಿ ಗೋವಿನ ಮೇಲಿನ ಪ್ರೀತಿ ಉಕ್ಕಿ ಹರಿಯುತ್ತಿರುವ ಈ ಗಳಿಗೆಯಲ್ಲಿ ಅದೊಂದು ಜೀವವೆಂಬುದಕ್ಕಿಂತ ಹೆಚ್ಚಾಗಿ ಲಾಂಛನವಾಗುತ್ತಿರುವುದು ಕಳವಳಕಾರಿ ಸಂಗತಿ. ಹಸುವೆಂಬುದನ್ನು ಒಂದು ಏಕರೂಪಿ ಅಚ್ಚಿನಲ್ಲಿ ನಿರೂಪಿಸುತ್ತಿರುವ ಈ ಹೊತ್ತಿನಲ್ಲಿ ನಾನು ಕಂಡ “ಹಸುವಿನ ಲೋಕ”, ಅದರ ಪಾಡು, ಅನಿವಾರ್ಯತೆಗಳನ್ನು ಈ ಮೂಲಕ ಹಂಚಿಕೊಂಡು ಹಗುರಾಗ ಬಯಸುತ್ತೇನೆ.
(ಮುಂದುವರೆಯುತ್ತದೆ…)

ಶನಿವಾರ, ಜನವರಿ 25, 2014

ಹಲ್ಲು ಕಿತ್ತ ಹಾವಿನಂತಾಗಿರುವ ಜಾನಪದ ಪರಂಪರೆ

-ಅರುಣ್ ಜೋಳದಕೂಡ್ಲಿಗಿ


ಜನಪದ ಮೌಖಿಕ ಪರಂಪರೆಯಲ್ಲಿ ಹಾವಾಡಿಗರೆಂಬ ಮನರಂಜಕ ಸಮುದಾಯವಿದೆ. ಇಲ್ಲಿ ಹಾವಿನ ಬುಟ್ಟಿಗಳನ್ನು ಇಟ್ಟುಕೊಂಡಿರುತ್ತಾನೆ. ಕೆಲವು ಮಣ್ಣಾವುಗಳು ತೆವಳುತ್ತಾ ನಡೆಯುತ್ತಿರುತ್ತವೆ. ಹಾವಾಡಿಗ ನಾನು ಎಂತೆಂಥ ಹಾವುಗಳನ್ನು ಹಿಡಿದಿದ್ದೇನೆ ಎಂಬ ಬಗ್ಗೆ ಸಾಹಸದ ಕಥೆಗಳನ್ನು ಹೇಳಿ ಜನರಲ್ಲಿ ರೋಮಾಂಚನ ಹುಟ್ಟಿಸುತ್ತಿರುತ್ತಾನೆ. ಅಂತೆಯೇ ನನ್ನ ಆಟವನ್ನು ಮೆಚ್ಚಿದವರೆಂದು ಸಿನೆಮಾ ನಟರೊಂದಿಗೆ ಚಿತ್ರ ತೆಗಿಸಿಕೊಂಡ ಫೋಟೋಗಳನ್ನು ಜನರಿಗೆ ತೋರಿಸುತ್ತಾನೆ. ಆ ಹಾವಾಡಿಗನ ಹೆಂಡತಿ ಸಣ್ಣ ಡೋಲು ಬಾರಿಸುತ್ತ ಆತನ ಮಾತಿಗೆ ವ್ಯಂಗ್ಯದ ಟೀಕೆಗಳನ್ನು ಮಾಡುತ್ತಿರುತ್ತಾಳೆ. ತಾನು ಸಾಹಸದಿಂದ ತಂದ ವಸ್ತುವನ್ನು ತೋರಿಸುತ್ತಿದ್ದರೆ, ಅದನ್ನು ‘ತಾನೆ ತಂದಾನ’ ಎಂದು ಆತನ ಹೆಂಡತಿ ನಿಜವನ್ನು ಜನರೆದುರು ಹೇಳುತ್ತಿರುತ್ತಾಳೆ. ಹಾವಾಡಿಗ ತಾನು ಆಡಿಸಲು ಬಂದ ಹಾವುಗಳನ್ನೆಲ್ಲಾ ಹಲ್ಲು ಕಿತ್ತಿರುತ್ತಾನೆ. ಹಾಗಾಗಿ ಆ ಹಾವುಗಳು ಕಚ್ಚುವಂತೆ ವೀರಾವೇಶದಿಂದ ಅಭಿನಯಿಸಿ ಜನರಲ್ಲಿ ಭಯ ಹುಟ್ಟಿಸಿದರೂ, ಕಚ್ಚುವ ನಟನೆ ಮಾಡಿದರೂ ಕಚ್ಚಲಾರದು.
ಹಾವು ಎಂಬ ಭಯವನ್ನು ಮಾತ್ರ ಹಾವಾಡಿಗ ತನ್ನ ಆಟದ ಬಂಡವಾಳವನ್ನಾಗಿಸಿಕೊಂಡಿರುತ್ತಾನೆ. ಜನಪದ ಕಲೆ ಪರಂಪರೆಯೊಳಗಿನ ಪ್ರತಿರೋಧದ ಅಂಶಗಳನ್ನು ಸಾಮರಸ್ಯದ ಮುಸುಕು ಹಾಕಿ ಅಧ್ಯಯನ ಮಾಡುವಾಗಲೆ ಇಡೀ ಜಾನಪದ ಪರಂಪರೆಯ ಹಲ್ಲುಕೀಳುವ ಪ್ರಯತ್ನ ನಡೆಯಿತು. ಇದಕ್ಕೆ ರೂಪಕವಾಗಿ ಇದೇ ಹಾವಾಡಿಗನ ಪ್ರತಿಮೆಯನ್ನು ಕೊಕೊಕೋಲಾ ಜಾಹಿರಾತಿನಲ್ಲಿ ಬಳಸಿಕೊಳ್ಳಲಾಯಿತು. ಅಲ್ಲಿ ಶಾರುಕ್ ಖಾನ್ ಪುಂಗಿ ಊದುತ್ತಾ ಬರುತ್ತಾನೆ, ಈ ಪುಂಗಿ ನಾದವನ್ನು ಕೇಳಿಸಿಕೊಂಡ ಕೊಕೊಕೋಲಾ ಬಾಟಲೊಂದು ಹಾವಾಡಿಗನ ಬೆನ್ನತ್ತಿ ಬರುತ್ತದೆ. ಈ ಜಾಹೀರಾತು ಇಂದು ಹಲ್ಲು ಕಿತ್ತ ಹಾವಿನಂತಾಗಿರುವ ಜಾನಪದ ಪರಂಪರೆಗೆ ಒಂದು ರೂಪಕದಂತೆ ಕಾಣುತ್ತದೆ.
ಇಂದು ಜನಪದ ಕಲೆ ಪರಂಪರೆಗಳು ಯಾವ ರೀತಿ ಬಳಕೆಯಾಗುತ್ತವೆ ಎನ್ನುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಇಡೀ ಜಾನಪದ ಪರಂಪರೆಯೇ ಪ್ರತಿರೋಧವನ್ನು ಅಡಗಿಸಿಟ್ಟುಕೊಂಡು ಮೌನಗೊಂಡಂತೆ ಕಾಣುತ್ತದೆ. ಕಾರಣ ಆಯಾ ಸಮುದಾಯ ಕಡುಕಷ್ಟದಲ್ಲಿ ಜೀವಿಸುತ್ತಿರುತ್ತದೆ, ಜಾತಿಯ ಕಾರಣಕ್ಕೆ ಮೇಲು ಜಾತಿಗಳ ತುಳಿತಕ್ಕೆ ಒಳಗಾಗಿರುತ್ತದೆ. ಆದರೆ ತುಳಿತಕ್ಕೊಳಗಾದ ಸಮುದಾಯವೇ ತುಳಿಯುವವರ ಮೆರವಣಿಗೆಯಲ್ಲಿ ರಂಗು ರಂಗಾಗಿ ಅಭಿನಯಿಸಿ ಜನಮೆಚ್ಚುಗೆ ಪಡೆಯುತ್ತದೆ. ಅದೇ ಹೊತ್ತಿಗೆ ಆ ಕಲೆಯ ಮೂಲಕ ಅದೇ ಸಮುದಾಯ ತುಳಿಯುವವರ ಕ್ರೌರ್ಯವನ್ನು ಮುಚ್ಚಿ ಹಾಕುತ್ತಿರುತ್ತದೆ. ಇಂತಹ ಘಟನೆಗಳಿಗೆ ಹಲವು ಉದಾಹರಣೆಗಳನ್ನು ಕೊಡಬಹುದು.
ಹಂಪಿ ಉತ್ಸವದಲ್ಲಿ ಕಮಲಾಪುರದಿಂದ ಹೊರಟ ಜಾನಪದ ಮೆರವಣಿಗೆ ಆರು ಕಿಲೋಮೀಟರ್ ಸಾಗುತ್ತದೆ. ಹೀಗೆ ಸಾಗುವ ಮಾರ್ಗ ಮಧ್ಯದಲ್ಲಿ ರಾಜಕಾರಣಿಗಳ, ಪ್ರಭಾವಿಗಳ ವೀಕ್ಷಣೆಗೆಂದು ಒಂದು ಗ್ಯಾಲರಿ ಮಾಡಿರುತ್ತಾರೆ. ಈ ಗ್ಯಾಲರಿ ಹತ್ತಿರ ಬರುತ್ತಿದ್ದಂತೆ ಜನಪದ ಕಲಾವಿದರು ದೆವ್ವ ಹಿಡಿದವರಂತೆ ಮೈದುಂಬಿಕೊಂಡು ಪ್ರದರ್ಶನ ನೀಡುತ್ತಾರೆ. ಅದನ್ನು ದಾಟಿದ ನಂತರ ಮಾಮೂಲಾಗಿ ಪ್ರದರ್ಶನ ನೀಡುತ್ತಾ ನಿತ್ರಾಣರಾಗಿ ಉಸಿರಿಲ್ಲದವರಂತೆ ಮುಂದೆ ಸಾಗುತ್ತಾರೆ. ಇದಕ್ಕೆ ಕಾರಣ ರಾಜಕಾರಣಿಗಳು ಪ್ರಭಾವಿ ಜನರು ನಮ್ಮ ಕಲೆಯನ್ನು ನೋಡಿ ಮೆಚ್ಚಿದರೆ ಮುಂದಿನ ಕಾರ್ಯಕ್ರಮಕ್ಕೆ ನಮಗೆ ಅವಕಾಶ ಸಿಗುತ್ತದೆಂಬ ಒಂದು ಸಣ್ಣ ಆಸೆ ಈ ಕಲಾವಿದರನ್ನು ಹಾಗೆ ಮಾಡಿಸುತ್ತದೆ.
ಮೂಲತಃ ನಮ್ಮ ಸಾಂಸ್ಕೃತಿಕ ಅಧ್ಯಯನಗಳ ದೃಷ್ಟಿಕೋನಗಳಲ್ಲಿ ಈ ತೊಡಕಿದೆ. ಕರ್ನಾಟಕದ ಬಹುಪಾಲು ಜಾನಪದ ಅಧ್ಯಯನಗಳು ಸಾಮರಸ್ಯದ ಅಧ್ಯಯನಗಳು. ಅಲ್ಲಿ ಪ್ರತಿರೋಧವಿಲ್ಲ. ಅಥವಾ ಇರುವ ಪ್ರತಿರೋಧದ ಅಂಶಗಳನ್ನು ಮುಚ್ಚಿ ಹಾಕಿಯೋ, ತೇಲಿಸಿಯೋ ಅಥವಾ ಅವುಗಳನ್ನು ಸೌಮ್ಯವಾಗಿ ವಿವರಿಸಿಯೋ ಆಯಾ ಕಲೆ ಮೌಖಿಕ ಸಾಹಿತ್ಯದೊಳಗೆ ಇರಬಹುದಾದ ಪ್ರತಿರೋಧದ ಕಿಡಿಯನ್ನು ನಂದಿಸಲಾಗಿದೆ. ಸರಕಾರ ಜಾನಪದ ಜಾತ್ರೆಗಳನ್ನು ಮಾಡುತ್ತದೆ. ಈ ಜಾತ್ರೆಗಳಲ್ಲಿ ಯಾವ ಯಾವ ಕಲೆಯನ್ನು ಹೇಗೆ ಅಭಿನಯಿಸಬೇಕೆಂಬ ತರಬೇತಿ ನಡೆಯುತ್ತದೆ. ಆ ತರಬೇತಿಯಲ್ಲಿ ಇಡೀ ಕಲೆಯನ್ನು ಸಾಂಸ್ಕೃತಿಕ ಸೌಂದರ್ಯವರ್ಧಕದಂತೆ ತಯಾರಿಸುತ್ತವೆ. ಅಲ್ಲಿ ಆಯಾ ಕಲೆಯ ಕಲಾವಿದರ ಮೂಲ ಕಲೆಯನ್ನು ಕುಲಗೆಡಿಸಿ ಒಂದು ಯಾಂತ್ರಿಕ ಕಲೆಯನ್ನು ರೂಪಿಸುತ್ತಾರೆ. ಹಾಗೆ ನೋಡಿದರೆ ಇಂದು ಕರ್ನಾಟಕದಲ್ಲಿ ಪ್ರದರ್ಶನವಾಗುತ್ತಿರುವ ಜನಪದ ಕಲೆಗಳೆಲ್ಲವೂ ತಮ್ಮ ಮೂಲ ಆಶಯಗಳಿಂದ ಬಿಡಿಸಿಕೊಂಡು ಯಾಂತ್ರಿಕ ಕಲೆಗಳಾಗಿ ಪರಿವರ್ತಿತವಾಗಿವೆ. ಅದು ಎಷ್ಟರಮಟ್ಟಿಗೆ ಎಂದರೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ಆಕರ್ಷಕ ವಸ್ತುವಿನಂತೆ. ಹೀಗಾಗಿ ಯಾಂತ್ರಿಕವಾದ ಕಲೆಗಳನ್ನು ಯಾರು ಬೇಕಾದರೂ ಕೊಳ್ಳಬಹುದು ಎನ್ನುವಂತಾಗಿದೆ.
ಜನಪದವೆಂಬುದನ್ನು ಜನಪರವೆಂಬ ದೊಡ್ಡ ವ್ಯಾಖ್ಯಾನದಲ್ಲಿ ಅಡಗಿಸಿದ ಕಾರಣ, ಜನಪರತೆಯ ಮುಸುಕು ಹಾಕುವ ಬಂಡವಾಳಶಾಹಿಗಳೂ ಕೂಡ ಜಾನಪದವನ್ನು ಒಂದು ಆಯುಧದಂತೆ ಬಳಸುತ್ತಾರೆ. ಹಸೆ ಕಲೆಯನ್ನು ದೊಡ್ಡ ದೊಡ್ಡ ಹೋಟೆಲುಗಳಲ್ಲಿ ಬಳಸಲಾಗುತ್ತದೆ. ಈ ಕಲೆಗೆ ಯಾವುದೇ ಸಂಸ್ಕೃತಿಕ ಹಕ್ಕುದಾರಿಕೆಯನ್ನು ಆಯಾ ಬುಡಕಟ್ಟು ಸಮುದಾಯ ಕೇಳುವಂತಿಲ್ಲ. ಹಸೆ ಕಲೆಯನ್ನು ಕಲಿತ ಆಧುನಿಕ ಕಲಾವಿದರು, ಮೂಲ ಹಸೆ ಕಲಾವಿದರು ಬೆಚ್ಚಿಬೀಳುವಂತೆ ಚಿತ್ರಿಸುತ್ತಾರೆ. ಆದರೆ ಅದೇ ಹಸೆ ಕಲೆಯನ್ನು ಮಾಡುವ ಸಮುದಾಯಗಳು ಉಸಿರುಗಟ್ಟಿ ಬದುಕುತ್ತಿರುತ್ತವೆ. ರಾಜಧಾನಿ ಬೆಂಗಳೂರಿನಲ್ಲಿಯೇ ಕರ್ನಾಟಕದ ಎಲ್ಲಾ ಜನಪದ ಕಲಾಪ್ರಕಾರದ ತಂಡಗಳು ಸಿಗುತ್ತವೆ. ಆಯಾ ತಂಡಗಳು ಕರ್ನಾಟಕದ ಬೇರೆ ಬೇರೆ ಊರುಗಳ ಹೆಸರಿನ ಬ್ಯಾನರ್ ಹಿಡಿದು ಪ್ರದರ್ಶನ ಕೊಡುತ್ತವೆ. ಅಲ್ಲಿಗೆ ಕರ್ನಾಟಕದ ಪ್ರಾದೇಶಿಕತೆಯನ್ನು ಮುಚ್ಚಿಹಾಕುವ ಪ್ರಯತ್ನ ಯಶಸ್ವಿಯಾಗಿ ಮುಗಿಯುತ್ತದೆ. ಸ್ಟಾರ್ ಹೋಟಲುಗಳಲ್ಲಿ ರಾಗಿ ಮುದ್ದೆ ಮೆಣಸಿನಕಾಯಿ ಚಟ್ನಿ ತಿನ್ನುವ ಮೂಲಕ ತಾನು ಜನಪದ ಆಹಾರ ಕ್ರಮವನ್ನು ಬೆಂಬಲಿಸುತ್ತೇನೆ, ಎಂದು ಸೋಗು ಹಾಕುವಂತಹ ಕೃತಕತೆಯ ರೂಪದಲ್ಲಿ ಜಾನಪದ ಕಲೆಗಳು ಬಳಕೆಯಾಗುತ್ತಿವೆ.
ಜನಪದ ಕಲೆಗಳು ದೊಡ್ಡ ದೊಡ್ಡ ಉತ್ಸವದ ಮೆರವಣಿಗೆಯಲ್ಲಿ ರಂಗೇರುತ್ತವೆ. ಎರಡು ಮೂಡು ಕಿಲೋಮೀಟರ್ ಮೆರವಣಿಗೆಯಲ್ಲಿ ಜನಪದ ಕಲಾವಿದರೆಲ್ಲಾ ನೀರಡಿಸಿ ನೀರಿಗಾಗಿ ತಡಕಾಡುತ್ತಾರೆ. ಆದರೆ ಅವರಿಗೆ ನೀರು ಕೊಡುವವರು ಯಾರೂ ಇರುವುದಿಲ್ಲ. ಆದರೆ ಅವರ ಒಂದು ದಿನಪೂರ್ತಿ ಮೆರವಣಿಗೆಗೆ ಸಿಗುವ ಸಂಭಾವನೆ ಐದು ಸಾವಿರವೋ ಹತ್ತು ಸಾವಿರವೋ ಇರುತ್ತದೆ. ಇದು ಇಡೀ ಟೀಮಿಗೆ ಕೊಡುವ ಸಂಭಾವನೆ. ಅದೇ ಸಿನೆಮಾ ಗಾಯಕನೊಬ್ಬ ತನ್ನ ತಂಡದೊಂದಿಗೆ ಹತ್ತಾರು ಹಾಡುಗಳ ಒಂದುಗಂಟೆಯ ಕಾರ್ಯಕ್ರಮಕ್ಕೆ ಕನಿಷ್ಟ ಇಪ್ಪತ್ತು ಲಕ್ಷದ ಸಂಭಾವನೆ ಪಡೆಯುತ್ತಾನೆ. ಕ್ಲಾಸಿಕಲ್ ಮ್ಯೂಜಿಕ್ ಕಲಾವಿದರನ್ನು ಸ್ಟಾರ್ ಹೋಟೆಲುಗಳಲ್ಲಿ ಉಳಿಸಲಾಗುತ್ತದೆ. ಆದರೆ ಅದೇ ಜನಪದ ಕಲಾವಿದರು ಉಳಿಯಲು ಬಯಲೇ ಆಲಯವಾಗಿರುತ್ತದೆ. ಇದರ ವಿರುದ್ಧ ಸಿಡಿದೇಳುವ ಗುಣ ಸ್ವತಃ ಈ ಕಲಾವಿದರಿಗೆ ಇರುವುದಿಲ್ಲ. ಅಥವಾ ಹಾಗೆ ವಿರೋಧಿಸಿದರೆ ನಮ್ಮ ತಂಡವನ್ನು ಮುಂದಿನ ಕಾರ್ಯಕ್ರಮಕ್ಕೆ ಕರೆಯುವುದಿಲ್ಲ ಎಂಬ ಅಳುಕು ಆ ಕಲಾವಿದರನ್ನು ಭಾದಿಸುತ್ತದೆ.
ಜನಪದ ರೂಪಕ ಪ್ರತಿಮೆಗಳನ್ನು ಖಾಸಗಿ ಒಡೆತನದ ಜನರು ತನ್ನ ವ್ಯಾಪಾರದ ಭಾಗವಾಗಿ ಬಳಸುತ್ತಾರೆ. ಶಿಕ್ಷಣವನ್ನು ವ್ಯಾಪಾರವನ್ನಾಗಿಸಿದ ಕೆಲವರು ಹಮ್ಮಿಕೊಂಡ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಜನಪರತೆಯ ಮುಸುಕು ಹಾಕಲು ಜಾನಪದ ಪರಂಪರೆಯನ್ನು ಬಳಸುತ್ತಾರೆ. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ವಸ್ತುಗಳನ್ನು ಪ್ರಚಾರ ಮಾಡಲು ಜನಪದ ಕಲೆ, ಕಥನವನ್ನು ಬಳಸಿಕೊಂಡು ಜಾಹೀರಾತನ್ನು ಮಾಡುವುದಕ್ಕೂ ಇದಕ್ಕೂ ವ್ಯತ್ಯಾಸವಿಲ್ಲ. ಹೀಗೆ ಜೀವ ವಿರೋಧಿಗಳು ತಮ್ಮ ವ್ಯಾಪಾರವನ್ನೂ, ಸಿರಿವಂತಿಕೆಯನ್ನು ಹೆಚ್ಚಿಸಿಕೊಳ್ಳಲು ಸಾಂಸ್ಕೃತಿಕ ಮುಖವಾಡ ಹಾಕಲು ಜಾನಪದ ಕಲೆ ಮತ್ತು ಪರಂಪರೆಯನ್ನು ಬಳಸಿಕೊಳ್ಳುತ್ತಾರೆ. ಇದರ ಸೂಕ್ಷ್ಮತೆಯನ್ನು ಅರಿಯದವರು ಇದನ್ನೇ ಜಾನಪದದ ಬಗೆಗಿನ ಅಭಿಮಾನವನ್ನಾಗಿ ಹೊಗಳುತ್ತಾರೆ. ಇಂತವರ ಹೊಗಳಿಕೆಯಿಂದಾಗಿ ಸಾಂಸ್ಕೃತಿಕ ಮುಖವಾಡ ಹಾಕಿದವರು ಸಂತಸದಿಂದ ಬೀಗುತ್ತಾರೆ. ಇಂತಹದ್ದೊಂದು ಪ್ರಕ್ರಿಯೆ ಕರ್ನಾಟಕದಲ್ಲಷ್ಟೇ ಅಲ್ಲ ಭಾರತದಾದ್ಯಂತ ನಡೆಯುತ್ತಿದೆ. ಇಂತಹ ಸೂಕ್ಷ್ಮತೆಗಳನ್ನು ಅಧ್ಯಯನ ಮಾಡಬೇಕಾದ ಜಾನಪದ ಅಧ್ಯಯನಕಾರರು ಮತ್ತದೇ ಸಾಮರಸ್ಯದ ಬಡಕಲು ವ್ಯಾಖ್ಯಾನಗಳಿಗೆ ಜೋತು ಬಿದ್ದು ತೇಲಾಡುತ್ತಿದ್ದಾರೆ.
ಈಗಲೂ ಪ್ರತಿರೋಧವನ್ನು ಅಡಗಿಸಿಕೊಂಡ ಜಾನಪದ ಪರಂಪರೆಯನ್ನು, ಕಲೆಯನ್ನು ಹೀಗೆ ಯಾರು ಬೇಕಾದರೂ ಬಳಸಿಕೊಳ್ಳಲು ಸಾಧ್ಯವಾಗದು. ‘ಹಲಗೆ’ ಅಥವಾ ‘ತಮಟೆ’ ಎನ್ನುವ ವಾದ್ಯ ದಲಿತರ ಅಸ್ಮಿತೆಯಾಗಿದೆ. ಈಗಲೂ ಈ ಹಲಗೆಯ ಸದ್ದು ಪ್ರತಿರೋಧದ ಸದ್ದಿನಂತೆಯೇ ಕಾಣುತ್ತದೆ. ಹೈದರಾಬಾದ್ ಕರ್ನಾಟಕದಲ್ಲಿ ಹಲಗೆ ಬಾರಿಸದೆ ಇರುವುದೂ ಕೂಡ ಪ್ರತಿಭಟನೆಯ ಸಂಕೇತವಾಗಿದೆ. ಹಬ್ಬ ಜಾತ್ರೆಗಳಲ್ಲಿ ನಾವೇ ಯಾಕೆ ಹಲಗೆ ಬಾರಿಸಬೇಕು ? ಎನ್ನುವ ಪ್ರಶ್ನೆ ದಲಿತರಲ್ಲಿ ಹುಟ್ಟಿದ ಕಾರಣ ಇಂತಹ ಕಡೆ ಹಲಗೆ ಮೌನವಾಗಿ ಪ್ರತಿಭಟಿಸಿದೆ. ಆದರೆ ಅದೇ ಹಲಗೆ ದಲಿತ ಹೋರಾಟಗಳಲ್ಲಿಯೂ ಬಳಕೆಯಾಯಿತು. ಇಂತಹ ಕಡೆ ಹೋರಾಟದ ಕೂಗಿಗೆ ಧ್ವನಿಯಾಗಿಯೂ ಅದರ ಸದ್ದು ಮಿಳಿತವಾಗಿದೆ. ಹೀಗಾಗಿ ಈ ಹಲಗೆಯನ್ನು ಒಂದು ಜಾನಪದ ಕಲೆ ಎಂದು ಗುರುತಿಸಿದ್ದು ಕಡಿಮೆ. ಅಥವಾ ನಮ್ಮ ಯಾವ ಜಾನಪದ ಉತ್ಸವಗಳಲ್ಲೂ ಹಲಗೆಯನ್ನು ಬಳಸಿಕೊಳ್ಳುವುದು ಕಡಿಮೆ. ಕಾರಣ ಈ ವಾದ್ಯ ದಲಿತರದು ಎನ್ನುವುದು ಎಷ್ಟು ಸತ್ಯವೋ, ಅದು ಪ್ರತಿಭಟನೆಯ ಸಂಕೇತವಾಗಿದೆ ಎನ್ನುವುದೂ ಅಷ್ಟೇ ಸತ್ಯ.
ಹಾಗಾಗಿ ಇಂದು ಜಾನಪದ ಕಲೆ ಪರಂಪರೆಯನ್ನು ಶೋಷಕ ಸಮುದಾಯಗಳು ಬಳಸಿಕೊಂಡು ಹುಸಿ ಜನಪರತೆಯ ಮುಸುಕು ಹಾಕಲು ಸಾಧ್ಯವಾಗದಂತೆ ವಿವರಿಸುವ ಅಗತ್ಯವಿದೆ. ಅಂತೆಯೇ ಈಗಾಗಲೆ ಇರುವ ಜಾನಪದ ಸಾಮರಸ್ಯದ ವಿಶ್ಲೇಷಣೆಗಳನ್ನು ಒಡೆದುಕಟ್ಟುವ ಅಗತ್ಯವೂ ಇಂದು ಹೆಚ್ಚಾಗಿದೆ. ಜಾನಪದ ಸಾಹಿತ್ಯವನ್ನು ಮರುಓದಿಗೆ ಒಳಪಡಿಸಿ, ಹೊಸ ಬಗೆಯ ಸಾಮಾಜಿಕ ನ್ಯಾಯದ, ಅಂಬೇಡ್ಕರ್ ಹೇಳುವ ಸಾಂಸ್ಕೃತಿಕ ಸಂವಿಧಾನದ ನೆಲೆಯ ವಿಶ್ಲೇಷಣೆ ಮಾಡುವ ಜರೂರಿದೆ.

ನೆಲ ಕಣಜ

-ಬಿ.ಶ್ರೀಪಾದ ಭಟ್

ಸೌಜನ್ಯ: ವರ್ತಮಾನ ಡಾಟ್ ಕಮ್


ಹಿರಿಯ ಸ್ನೇಹಿತರಾದ ಎನ್. ಗೋವಿಂದಪ್ಪನವರ ಗ್ರಾಮ ಸಂಸ್ಕೃತಿಯ ಕುರಿತಾದ ಲೇಖನಗಳ ಪುಸ್ತಕ “ನೆಲಕಣಜ” ಮೊನ್ನೆ ಹುಣ್ಣಿಮೆಯಂದು nelakanaja-frontಬಿಡುಗಡೆಯಾಯ್ತು. ಇದನ್ನು ಆದಿಮ ಪ್ರಕಾಶನದವರು ಪ್ರಕಟಿಸಿದ್ದಾರೆ.
ಗೋವಿಂದಪ್ಪನವರು ಮಹಾನ್ ತಾಯ್ತನದ ವ್ಯಕ್ತಿ. ಅವರ ಮಾನವೀಯತೆ ಮತ್ತು ಸದಾ ತುಡಿಯುವ ಅಂತಃಕರಣ, ಹಾಗೂ ಗ್ರಾಮ ಸಂಸ್ಕೃತಿಯ ದಟ್ಟ ಅನುಭವಗಳು ಈ ಗ್ರಾಮೀಣ ಲಯಗಳ ಮತ್ತು ಈ ಮಣ್ಣಿನ ಬದುಕನ್ನು ಕುರಿತಾಗಿ ಅತ್ಯಂತ ಅಪ್ತವಾಗಿ ಮತ್ತು ಪ್ರಾಮಾಣಿಕವಾಗಿ ಬರೆಯುವಂತೆ ಮಾಡಿದೆ. ರಾಮಯ್ಯನವರು ಬೆನ್ನುಡಿಯಲ್ಲಿ ಬರೆದಂತೆ ಇಲ್ಲಿ ಮುರಿದು ಬಿದ್ದಿರುವ ಅರವಂಟಿಕೆಗಳು, ಕಾಣೆಯಾಗುತ್ತಿರುವ ಸಾಲು ಮರಗಳು, ಕಣಜಗಳು, ಮಳೆ ನಕ್ಷತ್ರಗಳು, ಕಂಬಳಿ ಕಾಯಕ ಮುಂತಾದ ಜೀವತೋರಣಗಳ ಸಂಭ್ರಮಗಳನ್ನು, ಪತನಗಳನ್ನು ಗೋವಿಂದಪ್ಪ ಸಶಕ್ತವಾಗಿ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಅವರು ಸಾಧಿಸಿದ್ದು ತಮ್ಮ ಜೀವಪರ ವ್ಯಕ್ತಿತ್ವದಿಂದ. ಕೊಂಚವೂ ಜಡವಾಗಲು ನಿರಾಕರಿಸುವ ಸೂಕ್ಷ್ಮತೆಯಿಂದ.
ಬೌದ್ಧಿಕ ಬಡಿವಾರಗಳನ್ನು ನಿರ್ಲಜ್ಯದಿಂದ ಪ್ರದರ್ಶಿಸುವ, ಸಾಮಾಜಿಕ, ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ ಪಠ್ಯಗಳ ಆಳವಾದ ಓದಿನಿಂದ, ಚರ್ಚೆಯಿಂದ ದೊರಕಿದ ಅಪಾರ ಜ್ಞಾನವನ್ನು ಅಕಡೆಮಿಕ್‌ನ ಅಹಂಕಾರವನ್ನು ವ್ಯಕ್ತಪಡಿಸಲು ಮಾತ್ರ ಬಳಸುವ ನಮ್ಮ ಅನೇಕ ಯೂನಿವರ್ಸಿಟಿ ಬುದ್ಧಿಜೀವಿಗಳಿಗೆ ಒಂದು ಮಾನವೀಯತೆಯ ಪಾಠದಂತಿದೆ ಇಲ್ಲಿನ ಸರಳರೇಖೆಯಂತಿರುವ ಲೇಖನಗಳು.
ಸರಳವಾಗಿರುವ ಇಲ್ಲಿನ ಲೇಖನಗಳಿಗೆ ಇನ್ನಷ್ಟು ವಿಸ್ತಾರ ಮತ್ತು ಆಳವಾದ ಒಳನೋಟಗಳ ಕೊರತೆಯಿದೆ. ಆದರೆ ಲೇಖಕರು ಮುಂದಿನ ದಿನಗಳಲ್ಲಿ ಈ ಶೈಲಿ ವಿಸ್ತಾರವನ್ನು ಬೇಡುವ ಈ ಬೆಳವಣಿಗೆಯನ್ನು ಸಾಧಿಸಲು ಅಮೂರ್ತವಾದ ಆದರೆ ವ್ಯಾಪಕವಾದ ಗ್ರಹಿಕೆಯನ್ನು ಕಂಡುಕೊಳ್ಳುತ್ತಾರೆ ಎನ್ನುವ ಭರವಸೆಯಂತೂ ಇಲ್ಲಿ ದೊರಕುತ್ತದೆ.
ಗೋವಿಂದಪ್ಪನವರು ಈ ಗ್ರಾಮ ಸಂಸ್ಕೃತಿಯನ್ನು ಸ್ವತಃ ಅನುಭವಿಸಿದವರು, ಕಣ್ಣಾರೆ ಕಂಡವರು ಮತ್ತು ಇಂದು ಅದರ ಕಣ್ಮರೆಗೆ ಸಾಕ್ಷಿಯಾಗುತ್ತಲೇ ಅಸಹಾಯಕತೆಯಿಂದ ವಿಷಾದಿಸುತ್ತಿರುವವರು. ಲೇಖಕರ ಈ ಪ್ರಾಮಾಣಿಕ ಗುಣಗಳೇ nelakanaja-backಇದು ಒಂದು ವರದಿಯಾಗುವ ಅಪಾಯದಿಂದ ಪಾರು ಮಾಡಿದ್ದು. “ಆದಿಮ ಲಿವಿಂಗ್ ಟೈಮ್ಸ್” ಪತ್ರಿಕೆಯಲ್ಲಿ ಪ್ರಕಟಗೊಂಡ ಇಲ್ಲಿನ ಬಹುಪಾಲು ಲೇಖನಗಳು ಆ ಪತ್ರಿಕೆಗೆ ಸದಾ ಅಂಟಿಕೊಳ್ಳುತ್ತಿದ್ದ ಅಕಡೆಮಿಕ್ ಚಿಂತನೆಗಳ ಕ್ಲೀಷೆಯಿಂದ ಪಾರುಮಾಡಿತು ಎಂದು ನಾನು ಭಾವಿಸುತ್ತೇನೆ.

“ನೆಲಕಣಜ – ಗ್ರಾಮ ಸಂಸ್ಕೃತಿಯ ಕೆಲವು ಟಿಪ್ಪಣಿಗಳು”
ಲೇಖಕರು : ಎನ್.ಗೋವಿಂದಪ್ಪ
ಪ್ರಕಾಶಕರು : ಆದಿಮ ಪ್ರಕಾಶನ, ಶಿವಗಂಗೆ, ವಡೇರಹಳ್ಳಿ ಅಂಚೆ, ಕೋಲಾರ – 563101

ಭಾನುವಾರ, ಜನವರಿ 19, 2014

ಗೃಹಾಲಂಕಾರಕ್ಕೆ ದೇಸೀ ಸೊಗಡು

 
krupe:prajavani
 
ಭಾರತೀಯ ಸಂಸ್ಕೃತಿಯಲ್ಲಿ ಗೃಹಾಲಂಕಾರಕ್ಕೆ ಹೆಚ್ಚು ಮಹತ್ವ. ಮನೆ ದೊಡ್ಡದಿರಲಿ, ಚಿಕ್ಕದೇ ಇರಲಿ... ಪ್ರತಿ ಕೋಣೆಯ ನೆಲ, ಬಾಗಿಲು, ಗೋಡೆ, ಕಿಟಕಿ, ಮಹಡಿಯ ಸೌಂದರ್ಯ ಸೃಜನಶೀಲತೆ ಹೆಸರಿನಲ್ಲಿ ವಿವಿಧ ಕರಕುಶಲ ಕಲೆಯಿಂದ ಸಿಂಗಾರಗೊಂಡಾಗ ಇಡೀ ಮನೆ ವಿಶಿಷ್ಟ ರೀತಿಯಲ್ಲಿ ಜೀವ ತುಂಬಿಕೊಳ್ಳುತ್ತದೆ, ನೋಡುಗರ ಗಮನ ಸೆಳೆಯುತ್ತದೆ.
ಇಂದಿನ ಆಧುನಿಕತೆಯ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ಗ್ರಾಮೀಣ ದೇಸೀ ಕರಕುಶಲ ಕಲೆಗಳು, ಸಾಂಪ್ರದಾಯಕ ಹಸೆ ಚಿತ್ತಾರಗಳನ್ನು ಗೃಹಾಲಂಕಾರಕ್ಕೆ ಅಳವಡಿಸಿಕೊಂಡು ಕಲಾ ಪರಂಪರೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ. 
ಮಲೆನಾಡಿನ ಕೃಷಿಕರ ಮನೆಗಳ ಗೋಡೆಗಳಲ್ಲಿ ದೇವರ ಪಟಗಳೊಂದಿಗೆ ಹಸೆ ಚಿತ್ತಾರಕ್ಕೂ ವಿಶೇಷ ಸ್ಥಾನವಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿರಿವಂತೆಯ ಚಂದ್ರಶೇಖರ ಇಂಥ ದೇಸೀ ಕರಕುಶಲ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮನೆಯ ಗೋಡೆ, ಹಾಳೆ, ಬಿದಿರಿನ ತಡಿಕೆ, ಮರದ ತುಂಡು, ಮಣ್ಣಿನ ಹೂಜಿ, ಬಟ್ಟೆಗಳ ಮೇಲೆ ನೈಸರ್ಗಿಕ ಬಣ್ಣ ಮತ್ತು ರಾಸಾಯನಿಕ ಬಣ್ಣ ಉಪಯೋಗಿಸಿ, ಬಿಳಿ, ಹಳದಿ, ಕೆಂಪು, ಕಪ್ಪು ಬಣ್ಣಗಳ ಸಂಯೋಜನೆಯೊಂದಿಗೆ `ಫ್ರೀ ಹ್ಯಾಂಡ್ ಡಿಸೈನ್ ವರ್ಕ್~ನಿಂದ  12-13 ರೀತಿಯ ಆಕರ್ಷಕ ವಿನ್ಯಾಸಗಳ ಹಸೆ ಚಿತ್ತಾರ ಬರೆದಿದ್ದಾರೆ.
ಅವುಗಳಲ್ಲಿ ನಾಲ್ಕು ವಿಧದ ಮದುವೆ ಹಸೆ, ಹದಿನಾರು ಮೂಲೆ ಆರತಿ, ತೇರಿನ ಚಿತ್ತಾರ, ಮೆತ್ತಿನ (ಮಹಡಿ) ಚಿತ್ತಾರ, ಒಂದು ಗೋಪುರದ ಚಿತ್ತಾರ, ಮೂರು ಗೋಪುರದ ಚಿತ್ತಾರ, ಭೂಮಿ ಹುಣ್ಣಿಮೆ ಬುಟ್ಟಿ, ಹಚ್ಚಂಬಲಿ ಬುಟ್ಟಿಗಳ ಮೇಲೆ ಕೆಂಪು- ಬಿಳಿ ಗೆರೆಯ ಬಳ್ಳಿಗಳು, ದೀಪಾವಳಿ ಬಲೀಂದ್ರ ಪೂಜೆ ಚಿತ್ತಾರ, ಚಕ್ಕಲ್ ಬಕ್ಕಲ್ ಚಿನ್ನಾಣಿ... ಹೀಗೆ ಹಲವು ಚಿತ್ತಾರಗಳು ನಯನ ಮನೋಹರವಾಗಿವೆ. ಚಿತ್ತಾರಗಳ ಸಿರಿಯೇ ಇವರ ಮನೆಯಲ್ಲಿ ತುಂಬಿರುವಂತೆ ಕಾಣುವ ಇವರ ಮನೆಯ ಹೆಸರೂ `ಚಿತ್ರಸಿರಿ~!
ಹಸೆ ಚಿತ್ತಾರದ ರಚನೆ ಜತೆಗೆ ಚಂದ್ರಶೇಖರ ಅವರು ಭತ್ತದ ತೆನೆಗಳಿಂದ ಮನೆ ಬಾಗಿಲಿಗೆ ತೋರಣ ನಿರ್ಮಿಸಿದ್ದಾರೆ. ಒಣಗಿದ ಭತ್ತದ ತೆನೆಗಳನ್ನು ಸಂಗ್ರಹಿಸಿ ಅವನ್ನು ಕಲಾತ್ಮಕವಾಗಿ ಹೆಣೆದು, ಪ್ರಭಾವಳಿ, ಕುಂಚ, ಹಕ್ಕಿ, ಪಂಜರಗಳಂತಹ ಆಕೃತಿಗಳನ್ನು ತಯಾರಿಸಿ ನೋಡುಗರ ಗಮನ ಸೆಳೆದಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು 250 ಅಡಿ ಉದ್ದದ ಭತ್ತದ ತೋರಣ ಪ್ರದರ್ಶಿಸಿದ್ದಲ್ಲದೆ, 1111ಅಡಿ ಉದ್ದದ (ನಾಲ್ಕೂವರೆ ಕ್ವಿಂಟಲ್) ತೋರಣವನ್ನೂ ನಿರ್ಮಿಸಿ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.
ಇವರ ಪತ್ನಿ ಗೌರಿ ಅವರೂ ಹಸೆ ಚಿತ್ತಾರ, ಬತ್ತದ ತೆನೆ ತೋರಣ ಹೆಣೆಯುವುದರಲ್ಲಿ ಪ್ರವೀಣರು. ಒಳಮನೆಯ ಗೋಡೆಯಲ್ಲಿ ಇವರು ಬರೆದಿರುವ `ಮದುವೆಯ ಹಸೆ~ ಮೆಚ್ಚುಗೆ ಗಳಿಸಿದೆ.
ಸಾಂಪ್ರದಾಯಕ ಕಲೆಯನ್ನು ಜನರಿಗೆ ಪರಿಚಯಿಸಲು ಚಂದ್ರಶೇಖರ್ ಜಪಾನ್, ದುಬೈ, ಕೋಲ್ಕತ್ತ, ಮಧುರೈ, ಬೆಂಗಳೂರು, ಮೈಸೂರು, ಧರ್ಮಸ್ಥಳ, ಸಿರಸಿ, ಬನವಾಸಿ, ಸಾಗರ, ಶಿವಮೊಗ್ಗ ಸುತ್ತಾಡಿದ್ದಾರೆ. 60 ವಿದ್ಯಾರ್ಥಿಗಳು ಇವರ ಮನೆಗೇ ಬಂದು ಈ ಹಸೆ ಚಿತ್ತಾರ ಮತ್ತು ಬತ್ತದ ತೋರಣ ರಚನೆ ಕಲಿತಿದ್ದಾರೆ. 
ಒಂದು ಕಾಲದಲ್ಲಿ ದೀವರ ಜನಾಂಗದ ಕಲೆ ಎಂದೇ ಕರೆಸಿಕೊಂಡ ಹಸೆ ಚಿತ್ತಾರ ರಾಜ್ಯದಲ್ಲಿಯೂ ಮನೆ ಮನೆಯ ಗೋಡೆ ಅಲಂಕರಿಸಿದರೆ ಸಂಸ್ಕೃತಿಯ ಜತೆಗೆ ಕ್ಷೀಣಿಸುತ್ತಿರುವ ಕಲೆಯನ್ನೂ ಪೋಷಿಸಿದಂತಾಗುತ್ತದೆ ಅಲ್ಲವೇ? ಚಂದ್ರಶೇಖರ ಅವರ ಸಂಪರ್ಕಕ್ಕೆ ಮೊ: 94496 98979. 
 

ಶುಕ್ರವಾರ, ಜನವರಿ 17, 2014

ದೇಸಿ ತಿಳಿವಿನ ಪ್ರಯೋಗ ಶಾಲೆ-ಆದಿಮ

ಆದಿಮ


ಕಳೆದ ಮೂರು ದಶಕಗಳಿಂದ ವಿವಿಧ ಸಾಮಾಜಿಕ ಆಂದೋಲನಗಳಲ್ಲಿ ತೊಡಗಿದ್ದ ಕೆಲವು ಗೆಳೆಯರು ನಮ್ಮ ಸಂಸ್ಕೃತಿಯ ಜೀವಪರ ಬೇರುಗಳನ್ನು ಅರಸಿ ನೀರೂಡಿಸುವ ಕನಸು ಕಂಡರು. ಅದರ ಫಲವಾಗಿ ಕೋಲಾರ ಜಿಲ್ಲೆ ಅಂತರಗಂಗೆ ಬೆಟ್ಟದ ಮೇಲೆ ಜಿಂಕೆ ರಾಮಯ್ಯ ಜೀವತಾಣದಲ್ಲಿ ಆ ಗೆಳೆಯರು ಕೂಡಿ ಆರಂಭಿಸಿದ ನಡಿಗೆಯೇ ಆದಿಮ.

ಇರುವೆಗಳು ಗೂಡು ಕಟ್ಟುವ ಹಾಗೆ ಹತ್ತಾರು ವರ್ಷಗಳ ಕಾಲ ಎಷ್ಟೋ ಮಂದಿ ಸಮಾನ ಮನಸ್ಕರು ದಿನಕ್ಕೊಂದು ರೂಪಾಯಿಯ ಹಾಗೆ ಸಂಗ್ರಹಿಸಿದ ಮೊತ್ತವೇ ಆದಿಮದ ಮೂಲ ನಿಧಿ. ಆ ಹಣದಲ್ಲಿ ಮೊದಲಿಗೆ ಮಣ್ಣಿನ ಕುಟೀರವೊಂದನ್ನು ಕಟ್ಟಿಕೊಂಡು ಆದಿಮ ತನ್ನ ನಡೆ ಆರಂಭಿಸಿತು. ಆಗಿನಿಂದ ಜಾತಿ ಮತ ಅಂತಸ್ತುಗಳಾಚೆ, ಹೆಚ್ಚಾಗಿ ಮಕ್ಕಳ ಚಟುವಟಿಕೆಗಳ ಸುತ್ತಲೇ ಆದಿಮ ಸಾಂಸ್ಕೃತಿಕ ಎಚ್ಚರದ ದಿಕ್ಕಿನಲ್ಲಿ ಹೆಜ್ಜೆಗಳನ್ನಿಡುತ್ತ ಬಂದಿದೆ. ನಿರ್ಲಕ್ಷಿತ ಸಾಂಸ್ಕೃತಿಕ ಸಮುದಾಯಗಳ ಅಂತರಂಗದ ಚಿಲುಮೆಯಾಗಲು ಯತ್ನಿಸುತ್ತ ಆ ಸಮೂಹದ ಘನತೆಯನ್ನು ಎತ್ತರಿಸುತ್ತ ಬಂದಿದೆ.ಸದ್ಯದ ಹಲ ಬಗೆಯ ಬಿಕ್ಕಟ್ಟುಗಳಿಗೆ ನಮ್ಮ ಸಾಂಸ್ಕೃತಿಕ ಬೇರುಗಳಲ್ಲೇ ಜೀವಪರ ಉತ್ತರಗಳನ್ನು ಹುಡುಕುವುದು ಆದಿಮದ ಆಶಯ.ಆ ನಿಟ್ಟಿನಲ್ಲಿ ಆದಿಮ ಮಕ್ಕಳ ಸುಪ್ತ ಪ್ರತಿಭೆಗೆ ನೀರೆರೆದು ಅಗತ್ಯ ತರಬೇತಿ ನೀಡುತ್ತ ನಮ್ಮ ದಿಕ್ಕೇಡಿ ಆಧುನಿಕ ಜಗತ್ತಿನ ಸವಾಲುಗಳಿಗೆ ಅವರನ್ನು ಸಜ್ಜುಗೊಳಿಸುತ್ತಿದೆ. ಈ ನಡಿಗೆ, ಹಾಡು, ನೃತ್ಯರೂಪಕ, ನಾಟಕ ಮುಂತಾದ ಸಮೂಹ ಕಲೆಗಳ ಸಂಭ್ರಮದ ಮೂಲಕ ಸಾಕಾರಗೊಳ್ಳುತ್ತಿದೆ.

ಎಳೆಯರಷ್ಟೇ ಅಲ್ಲದೆ, ನಿರಂತರ ಸಂವಾದ-ವಾಗ್ವಾದಗಳ ಮೂಲಕ ಎಲ್ಲದರಲ್ಲೂ ಸಾಂಸ್ಕೃತಿಕ ಎಚ್ಚರ ತರುವುದು ಆದಿಮದ ಕಾಳಜಿ.

ಬನ್ನಿ, ಜೀವರಕ್ಷಣೆಗೆ ಸಮನಾದ ಈ ಪಯಣದಲ್ಲಿ ಜೊತೆಯಾಗಿ ಹೆಜ್ಜೆಯಿಡೋಣ.

ಹುಣ್ಣಿಮೆ ಹಾಡು- ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ......
ಪ್ರತಿ ಹುಣ್ಣಿಮೆ ರಾತ್ರಿ ಬೆಟ್ಟದ ಮೇಲೆ ನಡೆಯುವ ಹುಣ್ಣಿಮೆ ಹಾಡು- ಆದಿಮದ ಬಹು ಮುಖ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲೊಂದು.
ನಾಟಕ, ಹಾಡು, ಹಸೆ, ನೃತ್ಯ ಹಾಗೂ ವಿವಿಧ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ- ಹೀಗೆ ಬಹು ವಿಧದ ಕಾರ್ಯಕ್ರಮಗಳು ತಿಂಗಳು ತಿಂಗಳೂ ತಪ್ಪದೆ ನಡೆಯುತ್ತ ಬಂದಿವೆ.
ಹುಣ್ಣಿಮೆ ಹಾಡು ಇಂದು ಜಿಲ್ಲೆಯ ಸಾಂಸ್ಕೃತಿಕ ಹೆಗ್ಗುರುತುಗಳಲ್ಲೊಂದಾಗಿ ಬೆಳೆದಿರುವುದರಿಂದಲೇ ಪ್ರತಿ ಕಾರ್ಯಕ್ರಮಕ್ಕೂ ಸಾವಿರಾರು ಜನ ಸೇರಿ ಉತ್ಸಾಹದಿಂದ ಪಾಲ್ಗೊಂಡು ಹಬ್ಬದ ವಾತಾವರಣ ಸೃಷ್ಟಿಸುತ್ತಾರೆ.


ಆದಿಮ ನಡೆ- ತರಬೇತಿ, ಪ್ರಯೋಗ, ಪ್ರದರ್ಶನ
ಕಳೆದ ಸಾಲಿನಲ್ಲಿ ನುರಿತ ರಂಗಪಟುಗಳಿಂದ ಯುವಕ-ಯುವತಿಯರಿಗೆ ತರಬೇತಿ ನೀಡಿ ಆದಿಮ ಸಿದ್ಧಪಡಿಸಿದ ನೃತ್ಯ ರೂಪಕಗಳು ಮೂರು- ಹಕ್ಕಿಹಾಡು, ಕಿನ್ನರಿ ನುಡಿದೋ ಮತ್ತು ಅಣ್ಣಾ ಹಜಾರೆ. ಆದಿಮದ ಈ ಅರೆ ರೆಪರ್ಟರಿ ಐದು ತಿಂಗಳ ಕಾಲ ಅನೇಕ ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದೆ.
ಹೀಗೆ ಪ್ರತಿ ವರ್ಷವೂ ಒಂದೊಂದು ಹೊಸ ತಂಡ ರೂಪುಗೊಳ್ಳುತ್ತದೆ.ಚುಕ್ಕಿಮೇಳ- ಮಕ್ಕಳ ಬೇಸಿಗೆ ಶಿಬಿರ
1999ರಿಂದ ಚೌಕಿ ಸಂಸ್ಕೃತಿ ಕೇಂದ್ರದ ಮೂಲಕ ಪ್ರತಿ ವರ್ಷವೂ ಚುಕ್ಕಿಮೇಳ- ಮಕ್ಕಳ ಬೇಸಿಗೆ ಶಿಬಿರಗಳನ್ನು ಅತ್ಯಂತ ಸಾರ್ಥಕವಾಗಿ ನಿರ್ವಹಿಸಲಾಗುತ್ತಿದೆ. ಇದರೊಂದಿಗೆ, ಕನ್ನಡ ರಂಗಭೂಮಿಗೆ ಹತ್ತಕ್ಕೂ ಹೆಚ್ಚು ಹೊಸ ನಾಟಕಗಳು ಕೊಡುಗೆಯಾಗಿ ಸಂದಿವೆ.
ಇದೀಗ ಚುಕ್ಕಿಮೇಳವನ್ನು ಆದಿಮ ಕೇಂದ್ರದಲ್ಲೇ ಆಯೋಜಿಸಲಾಗುತ್ತಿದೆ.

ಆದಿಮ ಪ್ರಕಾಶನ
ಅರ್ಥಪೂರ್ಣ ಸಾಂಸ್ಕೃತಿಕ ಸಂವಾದದ ಆಶಯಕ್ಕೆ ಪೂರಕವಾದ ಮತ್ತೊಂದು ಚಟುವಟಿಕೆ- ಪುಸ್ತಕಗಳ ಪ್ರಕಟಣೆ. ಈ ನಿಟ್ಟಿನಲ್ಲಿ ಆದಿಮ ಪ್ರಕಾಶನ ಈವರೆಗೆ ಮಹತ್ವದ ಐದು ಕೃತಿಗಳನ್ನು ಹೊರತಂದಿದೆ:
1. ಆವರಣ ಅನಾವರಣ- ಎನ್.ಎಸ್.ಶಂಕರ್.
ಎಸ್.ಎಲ್.ಭೈರಪ್ಪನವರ ಕೋಮುವಾದಿ ಪ್ರಣಾಳಿಕೆಯ ಕಾದಂಬರಿ ಆವರಣಕ್ಕೆ
ಸಮರ್ಥ ಪ್ರತಿಕ್ರಿಯೆ. ನಾಡಿನ ಸಾಂಸ್ಕೃತಿಕ ವಲಯದಲ್ಲಿ ಹೊಸ ವಾಗ್ವಾದವನ್ನು
ಹುಟ್ಟುಹಾಕಿದ ಹೊತ್ತಗೆ.
2. ಕನಕ ಮುಸುಕು- ಡಾ.ಕೆ.ಎನ್.ಗಣೇಶಯ್ಯ
ಕನ್ನಡಕ್ಕೇ ವಿಶಿಷ್ಟವಾದ ಇತಿಹಾಸ ಸಂಶೋಧನೆ ಆಧಾರಿತ ಕೌತುಕಮಯ ಕಾದಂಬರಿ.
3. ಸಾಮಾನ್ಯನ ಸಂಕ್ರಮಣ- ಎನ್.ಎಸ್.ಹಾಲಪ್ಪ
ಸಾಮಾನ್ಯನೊಬ್ಬನ ಸ್ವಾತಂತ್ರ್ಯ ಹೋರಾಟ ಅನುಭವದ ಅಪರೂಪದ ದಾಖಲೆ.
4. ಕಾರಿಡಾರ್ ಕಾಲಕೋಶ- ಜೆಸುನಾ
ಹಿರಿಯ ಪತ್ರಕರ್ತ ಜೆಸುನಾ ನೀಡಿದ- ನಮ್ಮ ರಾಜಕೀಯ ನಾಯಕರ ದೈನಂದಿನದ ಆಪ್ತ ಚಿತ್ರಣ.
5. ಬ್ರಾಹ್ಮಣ ಧರ್ಮದ ದಿಗ್ವಿಜಯ- ಡಾ.ಬಿ.ಆರ್.ಅಂಬೇಡ್ಕರ್
ಕನ್ನಡಕ್ಕೆ:ಎನ್.ಎಸ್.ಶಂಕರ್. ಹಿಂದೂ ಚರಿತ್ರೆಯಲ್ಲಿ ಆಸಕ್ತಿ ಉಳ್ಳವರೆಲ್ಲರೂ
ಕಡ್ಡಾಯವಾಗಿ ಓದಬೇಕಾದ- ಅಂಬೇಡ್ಕರರ ಸ್ಫೋಟಕ ಸಂಶೋಧನಾ ಕೃತಿಯ
ಕನ್ನಡಾನುವಾದ.
******

ನಮ್ಮೊಂದಿಗೆ ನೀವೂ ಹೆಜ್ಜೆಗೂಡಿಸುವಂತಿದ್ದರೆ, ನೀವು
* ದಿನಕ್ಕೊಂದು ರೂಪಾಯಿ ಕೂಡಿಸಿ ನೀಡುವ ಮೂಲಕ ಆದಿಮದ ಸದಸ್ಯರಾಗಬಹುದು
* ಆದಿಮ ಕಾರ್ಯ ಚಟುವಟಿಕೆಗಳಿಗೆ ನಿಮ್ಮಿಂದಾದಷ್ಟು ಹಣದ ನೆರವು ನೀಡುವ ಮೂಲಕ ನಮ್ಮ
ಬಳಗದಲ್ಲಿ ಒಬ್ಬರಾಗಬಹುದು
* ಆದಿಮ ರೆಪರ್ಟರಿಯ ಪ್ರಯೋಗಗಳನ್ನು ಆಹ್ವಾನಿಸಿ ನಿಮ್ಮ ಶಾಲೆ/ಸಮಾರಂಭಗಳಲ್ಲಿ ಅರ್ಥಪೂರ್ಣ
ಮನರಂಜನೆ ಒದಗಿಸುವ ಮೂಲಕವೂ ಆದಿಮಕ್ಕೆ ನೆರವಾಗಬಹುದು
* ಆದಿಮ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ನೀಡಬಹುದು.

ನಿಮ್ಮ ಸಲಹೆ ಸೂಚನೆಗಳಿಗೂ ಸ್ವಾಗತ.


ನಮ್ಮ ಬ್ಯಾಂಕ್ ಖಾತೆ: ಕೆನರಾ ಬ್ಯಾಂಕ್, ಕೋಲಾರ
ಖಾತೆಯ ಹೆಸರು: ಆದಿಮ ಸಾಂಸ್ಕೃತಿಕ ಸಂಘಟನೆ
ಖಾತೆ ಸಂಖ್ಯೆ: 0539101025242
ನಮ್ಮ ವಿಳಾಸ:

ಆದಿಮ
ಜಿಂಕೆ ರಾಮಯ್ಯ ಜೀವತಾಣ
ಶಿವಗಂಗೆ, ಮಡೇರಹಳ್ಳಿ ಅಂಚೆ
ಕೋಲಾರ-563 101

ಫೋನ್: 08892769414
ಇ-ಮೇಲ್: adimaramaiah@gmail.com

ನೇಕಾರಿಕೆ ತೊರೆದವರು ಮರಳಿ ಬರುವ ತನಕ ಸತ್ಯದ ಆಗ್ರಹ

ಸಂದರ್ಶನ : ಪಿ.ಓಂಕಾರ್

ಸೌಜನ್ಯ: ವಿಯಕ ಕರ್ನಾಟಕಗ್ರಾಮೀಣರ ಸುಸ್ಥಿರ ಬದುಕಿಗೆ ಆಧಾರವಾದ ಹಲವು ಕುಲ ಕಸುಬುಗಳೊಂದಿಗೆ 'ಒಳ ಕೊಂಡಿ' ಹೊಂದಿರುವ ಕೈಮಗ್ಗ ಕ್ಷೇತ್ರದ ಉಳಿವಿಗಾಗಿ ಅಖಿಲ ಭಾರತ ಕೈಮಗ್ಗ ಸಂಘಟ ನೆ ಗಳ ಒಕ್ಕೂಟ ಹೋರಾಟ ಆರಂಭಿಸಿದೆ. ಉತ್ತರ ಕರ್ನಾಟಕದ ಗಜೇಂದ್ರ ಗಡ ದಿಂದ ಮಂಗಳವಾರ ಹೊರಟು, ಜ.27ರಂದು ಬದಾಮಿಯಲ್ಲಿ ಸಂಪನ್ನಗೊಳ್ಳಲಿರುವ 'ಬನಶಂಕರಿ ಸತ್ಯಾಗ್ರಹ ಯಾತ್ರೆ' ಯಲ್ಲಿ ರಾಜ್ಯಾದ್ಯಂತದ ಪ್ರಜ್ಞಾವಂತರು ಕಾಲ್ಜೋಡಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಹೆಗ್ಗೋಡಿನ ಶ್ರಮಜೀವಿ ಆಶ್ರಮದಲ್ಲಿ ಜ.30ರಿಂದ ಅನಿರ್ಧಿ ಷ್ಟಾವಧಿ ನಿರಶನ ಹೂಡಲಿರುವ ಚರಕ ಮತ್ತು ದೇಸಿ ಸಂಸ್ಥೆಗಳ ರೂವಾರಿ, ರಂಗಕರ್ಮಿ ಪ್ರಸನ್ನ ಹೋರಾಟದ ಕುರಿತು ಇಲ್ಲಿ ಮಾತನಾಡಿದ್ದಾರೆ.

1 ಕೈಮಗ್ಗ ಕ್ಷೇತ್ರ ಎದುರಿಸುತ್ತಿರುವ ಸಂಕಟಕ್ಕೆ ಏನು?ಯಾರು ಕಾರಣ?


ದೇಶದಲ್ಲಿ 1905ರಿಂದ ಜಾರಿಯಲ್ಲಿರುವ, 1985ರಲ್ಲಿ ಪರಿಷ್ಕೃತಗೊಂಡ 'ಕೈಮಗ್ಗ ಮೀಸಲು ಅಧಿನಿಯಮ'ದ ಪ್ರಕಾರ ಹಲವು ಪಾರಂಪರಿಕ ಬಟ್ಟೆಗಳನ್ನು ಕೈಮಗ್ಗದಲ್ಲಷ್ಟೆ ತಯಾರಿಸ ಬೇಕು. ಯಂತ್ರ, ವಿದ್ಯುತ್ ಮಗ್ಗಗಳಿಂದ ತಯಾರಿಸುವುದು ಶಿಕ್ಷಾರ್ಹ ಅಪ ರಾಧ. ಆದರೆ ಸರಕಾರಗಳು ಆಮಿಷ ವೊಡ್ಡಿ ವಿದ್ಯುತ್ ಮಗ್ಗ ಹಾಕಿಸಿ ಕಲಬೆರಕೆ ಬಟ್ಟೆ ಉತ್ಪಾದನೆಗೆ ಪ್ರಚೋದನೆ ನೀಡುತ್ತಿವೆ. ಇದರಿಂದ ನೇಕಾರ ಆತ್ಮಹತ್ಯೆ ಅಂಚಿಗೆ ತಲುಪಿದ್ದಾನೆ. 'ನೇಕಾರಿಕೆಯ ಯಾಂತ್ರೀಕರಣ ಪ್ರಕ್ರಿಯೆಯನ್ನು ನಿಲ್ಲಿಸಿ' ಎಂಬುದು ಹಕ್ಕೊತ್ತಾಯ.

2 ಇದು ಬುದ್ಧಿ ಪೂರ್ವಕವಾಗಿ ನಡೆದ ತಪ್ಪೇ? ಗೊತ್ತಿಲ್ಲದೆ ಆದದ್ದೆ?

ಬುದ್ಧಿಪೂರ್ವಕವಾಗಿಯೇ ನಡೆದದ್ದು. ಇದರ ಹಿಂದೆ ವಿದ್ಯುತ್ ಮಗ್ಗಗಳ ಮಾಲೀಕರು, ಬ್ರ್ಯಾಂಡೆಡ್ ಸಿದ್ಧ ಉಡುಪು ತಯಾರಿಸುವ ಬಹುರಾಷ್ಟ್ರೀಯ ಕಂಪನಿ ಗಳ ಹುನ್ನಾರವಿದೆ. ಇವರು ಕಳೆದ ವರ್ಷ 'ಕೈಮಗ್ಗ' ಹೆಸರಿನ ಮರು ನಾಮ ಕರಣಕ್ಕೆ ಒತ್ತಡ ಹೇರಿದರು. ಒತ್ತಾ ಯಕ್ಕೆ ಬಲಿಬಿದ್ದ ಕೇಂದ್ರ ಸರಕಾರ, ವಿದ್ಯುತ್ ಮಗ್ಗದ ಬಟ್ಟೆಯನ್ನು ಕೈಮಗ್ಗ ಬಟ್ಟೆ ಎಂದು ಘೋಷಿಸಲು ವಿಫಲ ಯತ್ನ ನಡೆಸಿತು. ಇದು ಸತ್ಯಾಗ್ರಹದ ಮೊದಲ ಜಯ.

3ಅಂದರೆ, ಈ ಹೋರಾಟ ವಿದ್ಯುತ್ ಮಗ್ಗಗಳ ವಿರುದ್ಧವೇ?

ಖಂಡಿತಾ ಅಲ್ಲ. ಸರಕಾರ ವಿದ್ಯುತ್ ಮಗ್ಗಗಳನ್ನು ಮಹಾ ನಗರ ಗಳಲ್ಲಿ ಧಾರಾಳವಾಗಿ ಹಾಕಲಿ. ಅಲ್ಲಿ, ಕೈಮಗ್ಗ ಮೀಸಲು ಅಧಿನಿ ಯ ಮ ದಡಿ ಬರದೆ ಇರುವ ಬಟ್ಟೆ ಗಳ ನ್ನು ಧಾರಾಳ ನೇಯ್ದು ರಫ್ತು ಮಾಡಲಿ. ಸತ್ಯಾಗ್ರಹವು ವಿದ್ಯುತ್ ಮಗ್ಗಗಳ ಸಂತ್ರಸ್ತ ಕಾರ್ಮಿ ಕರ ಸತ್ಯಾ ಗ್ರಹವೂ ಹೌದು. ಕೊಪ್ಪಳದಲ್ಲಿ ದಲಿತರಿಗೆ ಸೇರಿದ ವಿದ್ಯುತ್ ಮಗ್ಗಗಳ ಕಾರ್ಮಿ ಕರು 'ನಾವು ನೇಯ್ದ ಬಟ್ಟೆ ಗ ಳನ್ನು ತಮಿಳು ನಾಡು ಮಾದರಿ ಯಲ್ಲಿ ಸರಕಾರವೇ ಖರೀದಿಸಲಿ' ಎಂಬ ಬೇಡಿಕೆ ಇಟ್ಟು ನಡೆಸುತ್ತಿ ರುವ ಹೋರಾಟ ವನ್ನೂ ಬೆಂಬ ಲಿ ಸು ತ್ತೇವೆ. ರಾಜ್ಯದ ವಿದ್ಯುತ್ ಮಗ್ಗ ಅಭಿ ವೃದ್ಧಿ ನಿಗಮ ಭ್ರಷ್ಟವಾಗಿದೆ. ಬಡ ವಿದ್ಯುತ್ ಮಗ್ಗ ಗಳ ನೇಕಾರ ರಿಂದ ಬಟ್ಟೆ ಖರೀದಿ ಸುವ ಬದಲು ಹೊರ ರಾಜ್ಯ ಗ ಳಿಂದ ಬಟ್ಟೆ ಖರೀದಿ ಸುವ ದಲ್ಲಾಳಿ ಯಾಗಿದೆ. ಇದು ಖಂಡನಾರ್ಹ. ವಿದ್ಯುತ್ ಮಗ್ಗ ಗಳ ಅಭಿವೃದ್ಧಿ ನಿಗಮ ವನ್ನು ಮುಖ್ಯ ಮಂತ್ರಿ ಪುನರ್ ರಚಿಸಬೇಕು.

4 ಕೈಮಗ್ಗ ಮಾತ್ರವಲ್ಲ, ಉಳಿದ ಕ್ಷೇತ್ರಗಳದ್ದೂ ಇಂಥದೇ ಸಮಸ್ಯೆಯಲ್ಲವೇ?

ನಿಜ, ಗ್ರಾಮೀಣ ಕ್ಷೇತ್ರವೆನ್ನುವುದು ಸೂಕ್ಷ್ಮ ಪರ‌್ಯಾವರಣವಿದ್ದಂತೆ; ಎಲ್ಲ ಪರಸ್ಪರಾವಲಂಬಿ. ಪಾರಂಪರಿಕ ಕೃಷಿ ಹಾಳಾದರೆ ಹಲವು ಕುಶಲ ಕರ್ಮ ಗಳು ಮಣ್ಣು ಪಾಲಾಗು ತ್ತವೆ. ಈ ಎಲ್ಲ ಕ್ಷೇತ್ರಗಳ, ಎಲ್ಲ ಹೋರಾಟ ಗಳು ಒಗ್ಗೂಡದಿದ್ದರೆ ದೇಶ ಉಳಿ ಯಲ್ಲ. ಆದರೆ, ನಾವು ವಿವಿಧ ಕಾರ‌್ಯಕ್ರಮ, ಹಾಸ್ಯಾಸ್ಪದ ಯೋಜನೆ ಗಳ ಮೂಲಕ ಗ್ರಾಮೀಣ ರೈತ, ನೇಕಾರ, ಕುಶಲ ಕರ್ಮಿಗಳು, ಕೃಷಿ ಕಾರ್ಮಿಕರು ಎಲ್ಲರನ್ನೂ ಜೂಜುಗಾರ, ಭಿಕ್ಷುಕರನ್ನಾಗಿ ಮಾಡುತ್ತಿದ್ದೇವೆ. ಅವರೆಲ್ಲರಲ್ಲೂ ಅನಗತ್ಯ ಹತಾಶೆ ತಾಂಡವವಾಡುತ್ತಿದೆ. ನೇಕಾರರಿಗೆ ಕನ್ನಡಕ, ಗ್ರಾಮೀಣ ಜನರಿಗೆ ಟಿವಿ ಸೆಟ್ ಕೊಡುವುದನ್ನೇ ಪ್ರಗತಿ ಎಂದರೆ ಏನನ್ನುತ್ತೀರಿ?

5 ಸತ್ಯಾಗ್ರಹಕ್ಕೆ ಬೇರೆ ಬೇರೆ ಕ್ಷೇತ್ರದ ಜನರ ಬೆಂಬಲ ಹೇಗಿದೆ?

ಸ್ವಾತಂತ್ರ್ಯ ಚಳವಳಿಯಲ್ಲೂ ಲೇಖಕರು, ಸಮಾಜ ಕಾರ‌್ಯಕರ್ತರು ಮುಂಚೂಣಿಯಲ್ಲಿದ್ದರು. ಈ ಸತ್ಯಾಗ್ರಹ ನೇಕಾರರದ್ದಷ್ಟೇ ಅಲ್ಲ ಗ್ರಾಹಕರ ಸತ್ಯಾಗ್ರಹವೂ ಹೌದು. ಕೈಮಗ್ಗ ಗ್ರಾಹಕರೇ ಆದ ಲೇಖಕರು, ಕಲಾವಿದರು, ಯುವಜನರು, ಕಾಲೇಜು ವಿದ್ಯಾರ್ಥಿಗಳು ದೊಡ್ಡ ಮಟ್ಟ ದಲ್ಲಿ ಬೆಂಬಲಿಸುತ್ತಿದ್ದಾರೆ. ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ.ಡಿಸೋಜ 'ನಮ್ಮ ನೇಕಾರ ಯಂತ್ರ ರಕ್ಕಸನ ದವಡೆಗೆ ಸಿಕ್ಕಿದ್ದಾನೆ' ಎಂದಿದ್ದಾರೆ. ಸಾಹಿತಿ ಯು.ಆರ್.ಅನಂತಮೂರ್ತಿ 'ಕೈಮಗ್ಗ ಸತ್ಯಾಗ್ರಹವು ಜಾತಿ ವಿನಾಶದ ಸತ್ಯಾಗ್ರಹವೂ ಆಗಬೇಕು' ಎಂದು ಹೇಳಿ ಸರಕಾರದ ಒಡೆದು ಆಳುವ ನೀತಿಯನ್ನು ಪ್ರಶ್ನೆ ಮಾಡಿದ್ದಾರೆ.

6 ಸರಕಾರಗಳ ಒಡೆದು ಆಳುವ ನೀತಿ ಎಂದರೆ?

ಎಲ್ಲ ಪಕ್ಷಗಳ ಎಲ್ಲ ಸರಕಾರಗಳೂ ಕುಲಕಸುಬು ಎಂಬ ಪದವನ್ನು ತಪ್ಪಾಗಿ ಅರ್ಥೈಸುತ್ತಿವೆ. ಕುಲವೇ ಕಸುಬು ಎಂದು ಹೇಳಿ, ಕಸುಬನ್ನು ನಾಶ ಮಾಡಿ 'ಕುಲ'ಗಳನ್ನು ಜಾತಿ ಸಂಘಟನೆ ಗಳನ್ನಾಗಿಸಿ ಮತ ಬ್ಯಾಂಕ್‌ಗಳನ್ನಾಗಿ ಪರಿವರ್ತಿಸತೊಡಗಿವೆ. ಕುಲ ಕಸುಬು ಎಂಬ ಪದದ ನಿಜ ಅರ್ಥ 'ಕಸುಬೇ ಕುಲವು' ಎಂಬುದು. ಒಬ್ಬ ಮುಸಲ್ಮಾನ, ದಲಿತ ನೇಕಾರ ಕೂಡ ನೇಕಾ ರನೇ. ಗ್ರಾಮೀಣ ಕಸುಬು ಗಳನ್ನು ಉಳಿಸಬೇಕು. ಕುಲಗಳನ್ನು ಜಾತಿ ಸಂಘಟನೆಗಳ ನ್ನಾಗಿಸುವ ಅಸಹ್ಯ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು.

7 ಕೈಮಗ್ಗಕ್ಕೆ ಸಂಬಂಧಿಸಿದ ಯಶಸ್ಸಿನ ಮಾದರಿಗಳು ಸರಕಾರಳಿಗೇಕೆ ಅಪಥ್ಯ?

ದಸ್ತಕಾರ್ ಆಂಧ್ರ, ಕರ್ನಾಟಕದ ಚರಕ, ದೇಸಿ, ದಿಲ್ಲಿಯ ದಸ್ತಕಾರ್, ಪಶ್ಚಿಮ ಬಂಗಾಳದ ಕ್ರಾಫ್ಟ್ ಕೌನ್ಸಿಲ್ ಮುಂತಾದವು ಆರ್ಥಿಕವಾಗಿ ಲಾಭದಾಯಕ ಮಾದರಿಗಳು. ಇಲ್ಲೆಲ್ಲ ನೇಕಾರರು ಶ್ರಮಕ್ಕೆ ತಕ್ಕ ಪ್ರತಿಫಲದ ಜತೆಗೆ ವರ್ಷಕ್ಕೆ ಕನಿಷ್ಠ 300 ದಿನಗಳ ಖಾತ್ರಿ ಕೆಲಸ ಪಡೆಯುತ್ತಾರೆ. ಇವು ದೇಶದ ಎಲ್ಲ ನೇಕಾರರ ಮಾದರಿಯಾಗುವುದು ಸಾಧ್ಯವಿದೆ. ಆದರೆ, ಸರಕಾರಗಳಿಗೆ ಗ್ರಾಮೀಣ ಕ್ಷೇತ್ರ ಆರ್ಥಿಕವಾಗಿ ತನ್ನ ಕಾಲಮೇಲೆ ತಾನು ನಿಲ್ಲಬಲ್ಲದು ಎಂಬ ನಂಬಿಕೆಯೇ ಇಲ್ಲ. ಎಲ್ಲಿಯವರೆಗೆ ಶ್ರಮ ಜೀವನದ ಉತ್ತಮ ಅಂಶಗಳ ಬಗ್ಗೆ ನಮಗೆ ನಂಬಿಕೆ ಬರುವುದಿಲ್ಲವೋ ಅಲ್ಲಿಯವರೆಗೆ ಇಚ್ಛಾಶಕ್ತಿ ಕೂಡ ಗಟ್ಟಿಗೊಳ್ಳಲಾರದು.

8ಸರಕಾರ ಸ್ಪಂದನೆ ಹೇಗಿದೆ? ಎಲ್ಲಿಯವರೆಗೆ ಸತ್ಯಾಗ್ರಹ?ನಿರೀಕ್ಷೆ ಏನು?

ಎಲ್ಲ ಸರಕಾರಗಳಿಗೆ ಇಬ್ಬಂದಿ ಸೆಳೆತಗಳಿರುತ್ತವೆ. ಒಂದು ಕಡೆ ವಿದ್ಯುತ್ ಮಗ್ಗ, ಬಹು ರಾಷ್ಟ್ರೀಯ ಕಂಪನಿಗಳು ಜಗ್ಗಿದರೆ ಇನ್ನೊಂದೆಡೆ ಜನ ಜಗ್ಗುತ್ತಿರುತ್ತಾರೆ. ಇದರಲ್ಲಿ ಜನರ ಕೈ ಬಲವಾಗಬೇಕೆಂದರೆ ಜನಪರ ಹೋರಾಟಗಳನ್ನು ಗಟ್ಟಿಗೊಳಿ ಸ ಬೇಕು. ಹಾಗೆಂದೇ ಈ ಜನ ಮುಖಿ ಸತ್ಯಾಗ್ರಹ. ರಾಜ್ಯ ಸರಕಾರ ಒಕ್ಕೂಟದ ಪ್ರತಿನಿಧಿಗಳ ಜತೆ ಮೊದಲ ಸುತ್ತಿನ ಮಾತು ಕತೆ ನಡೆಸಿದೆ. ನೇಕಾರಿಕೆ ತೊರೆದಿರುವವರು ಸಂತೋಷದಿಂದ ಕಸುಬಿಗೆ ಹಿಂತಿರುಗುವಂಥ ಸ್ಥಿತಿ ನಿರ್ಮಾಣವಾಗುವವರೆಗೆ ನಮ್ಮ ಸತ್ಯದ ಆಗ್ರಹ ಮುಂದುವರಿ ಯು ತ್ತದೆ. ಸರಕಾರಕ್ಕೆ ಮನಸ್ಸಿದ್ದರೆ ಈಗಲೂ ಕೈಮಗ್ಗವನ್ನು ಆರ್ಥಿಕ ಸಬಲೀಕರಣ ಕಾರ‌್ಯಕ್ರಮವನ್ನಾಗಿಸಬಹುದು.

ಗುರುವಾರ, ಜನವರಿ 16, 2014

ಪಲ್ಲವದಿಂದ ಇಂತಿ ನಮಸ್ಕಾರಗಳು


ಡಾ. ನಟರಾಜ್ ಹುಳಿಯಾರ್ ಅವರ ವಿಶಿಷ್ಟ ಪುಸ್ತಕ ' ಇಂತಿ ನಮಸ್ಕಾರಗಳು ' ಪಲ್ಲವದಿಂದ ನೇರವಾಗಿ ತರಿಸಿಕೊಳ್ಳುವ ಓದುಗರಿಗೆ ವಿಶೇಷ ರಿಯಾಯಿತಿ. ಕೊರಿಯರ್ ವೆಚ್ಚ ನಮ್ಮದು. 
ಸಂಪರ್ಕಕ್ಕಾಗಿ . 9480353507ಬುಧವಾರ, ಜನವರಿ 15, 2014

ಪದವಿ ಕಾಲೇಜುಗಳಿಗೆ ಸಲ್ಲದ ಜಾನಪದ ಕನ್ನಡವಲ್ಲವೆ?-ಡಾ.ಅರುಣ್ ಜೋಳದಕೂಡ್ಲಿಗಿ

(ಈ ಬರಹ 16.1.2014 ರ ಪ್ರಜಾವಾಣಿ ಸಂಗತ ಕಾಲಂ ನಲ್ಲಿ ಪ್ರಕಟವಾಗಿದೆ. ಅದಕ್ಕಾಗಿ ಪ್ರಜಾವಾಣಿಗೆ ಕೃತಜ್ಞತೆಗಳು)

  ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ/ಕಿಯರ ಹುದ್ದೆಗಳನ್ನು ನೇರ ನೇಮಕಾತಿಗಳ ಮೂಲಕ ತುಂಬಲು ಉದ್ದೇಶಿಸಲಾಗಿದೆ. ಈ ನೇಮಕಾತಿಗಾಗಿ ಸಿಇಟಿ ಪಠ್ಯಕ್ರಮ ರೂಪಿಸುವ ಸಮಿತಿಯ ಪಟ್ಟಿಯಲ್ಲಿ ಆಯಾ ವಿಷಯಗಳನ್ನು ಕೊಡಲಾಗಿದೆ. ಇದರಲ್ಲಿ ಜಾನಪದ ಮತ್ತು ಜಾನಪದ ಸಾಹಿತ್ಯ ಎಂ.ಎಯನ್ನು ಯಾವ ಹುದ್ದೆಗೂ ಪರಿಗಣಿಸಲಾಗಿಲ್ಲ. ಕರ್ನಾಟಕದಲ್ಲಿ ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ವಿಶ್ವವಿದ್ಯಾನಿಲಯ, ಕನ್ನಡ ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾನಿಲಯ, ಜಾನಪದ ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಎಂ.ಎ ಕಲಿತ ಮತ್ತು ಕಲಿಯುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಸರಿಸುಮಾರು ಮೂರು ಸಾವಿರದಷ್ಟು ಜಾನಪದ ಎಂ.ಎ ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆ ಮಾಡಿದ ಪದವೀಧರರಿದ್ದಾರೆ. 

  ಇವರುಗಳೆಲ್ಲಾ ಪದವಿ ಕಾಲೇಜುಗಳಿಗೆ ಸಲ್ಲದಿದ್ದರೆ ಬೇರೆ ದಾರಿ ಯಾವುದು? ಹೀಗೆ ಅವಕಾಶ ರಹಿತ ಸ್ನಾತಕೋತ್ತರ ಪದವಿಯನ್ನು ನೀಡುವ ಉದ್ದೇಶವಾದರೂ ಏನು? ಜಾನಪದವನ್ನು ಕಲಿಸುತ್ತಿರುವ ವಿವಿಗಳು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಇಂತಹ ವಿಶ್ವವಿದ್ಯಾಲಯಗಳ ಮುಂದಿರುವುದು ಎರಡೇ ಆಯ್ಕೆ. ಪದವಿ ಕಾಲೇಜುಗಳಲ್ಲಿ ಜಾನಪದವನ್ನು ಕಲಿಕೆಯ ವಿಷಯವನ್ನಾಗಿ ಸೇರ್ಪಡೆ ಮಾಡುವುದು ಅಥವಾ ಕನ್ನಡಕ್ಕೆ ಜಾನಪದವನ್ನು ಸಮನಾಂತರಗೊಳಿಸುವುದು. ಇಲ್ಲವೆ ಜಾನಪದ ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆಗಳನ್ನು ಸ್ಥಗಿತಗೊಳಿಸುವುದು. ಹೀಗಾದಾಗಲೂ ಪ್ರಸ್ತುತ ಜಾನಪದ ಸ್ನಾತಕೋತ್ತರ ಪದವೀಧರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಸಚಿವಾಲಯ ಯೋಚಿಸಬೇಕಿದೆ. ಇದರ ಭಾಗವಾಗಿಯೇ ಕನ್ನಡ ಪದವಿ ಪ್ರಾದ್ಯಾಪಕರ ಹುದ್ದೆಗೆ ಜಾನಪದವನ್ನು ಪೂರಕ ಅಥವಾ ಸಮಾನಾಂತರ ವಿಷಯವನ್ನಾಗಿ ಪರಿಗಣಿಸಿ ಸಿ.ಇ.ಟಿ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕಿದೆ.

ಪದವಿ ತರಗತಿಗಳಲ್ಲಿ ಜಾನಪದ ಎಂಬ ಪ್ರತ್ಯೇಕ ವಿಷಯವಿರುವುದಿಲ್ಲ. ಕನ್ನಡ ವಿಷಯದಲ್ಲಿಯೇ ಜಾನಪದ ವಿಷಯವನ್ನು ಒಂದು ಐಚ್ಚಿಕ ಪತ್ರಿಕೆಯಾಗಿ ಓದುತ್ತಿದ್ದಾರೆ. ಹೈಸ್ಕೂಲಿನಿಂದ ಕಾಲೇಜಿನವರೆಗೂ ಕನ್ನಡ ಭಾಷಾ ಪಠ್ಯಗಳಲ್ಲಿ ಜಾನಪದ ಪಠ್ಯಗಳನ್ನು ಸೇರಿಸಿಕೊಂಡು ಬರಲಾಗಿದೆ. ಅಕಾಡೆಮಿಕ್ ವಲಯದಲ್ಲಿಯೂ ಕನ್ನಡ ಭಾಷೆ ಸಾಹಿತ್ಯದ ಭಾಗವಾಗಿಯೇ ಜಾನಪದ ಮತ್ತು ಜಾನಪದ ಸಾಹಿತ್ಯವನ್ನು ಒಂದಾಗಿಯೇ ನೋಡಲಾಗಿದೆ. ಕನ್ನಡ ಸಾಹಿತ್ಯವೆಂದು ನಾವು ಪಂಪನಿಂದ ಇಂದಿನ ತನಕ ಓದಿಕೊಂಡು ಬಂದಿರುವ ಪಠ್ಯಗಳಲ್ಲಿ ಜಾನಪದ ಮತ್ತು ದೇಸಿ ಪ್ರೇರಣೆಗಳನ್ನು ಹೊರತೆಗೆದರೆ ಉಳಿಯುವ ಕನ್ನಡ ಪಠ್ಯವಾದರೂ ಯಾವುದು? ಕನ್ನಡ ಎಂ.ಎ ಮಾಡಿದ ಶೇಕಡ ೭೦ ರಷ್ಟು ಸಂಶೋಧನ ವಿದ್ಯಾರ್ಥಿಗಳು ಜಾನಪದ ವಿಷಯವನ್ನು ಆಯ್ದುಕೊಂಡು ಪಿಹೆಚ್.ಡಿ ಪಡೆದಿದ್ದಾರೆ. ಇಂತಹ ಸಂಶೋಧನೆಗಳು ಕನ್ನಡವೆಂದೇ ಪರಿಗಣನೆಯಾಗಿ ಪದವಿ ಕನ್ನಡ ಪ್ರಾದ್ಯಾಪಕರ ಹುದ್ದೆಗಳಿಗೆ ಅರ್ಹತೆ ಪಡೆದುಕೊಂಡಿವೆ. 

 ಜಾನಪದ ಪಠ್ಯಗಳು ಕನ್ನಡದ ಚಿಂತನೆಯನ್ನು ಅಗಾಧವಾಗಿ ವಿಸ್ತರಿಸಿವೆ. ವಿದ್ವತ್ ವಲಯ ಕೂಡ ಕನ್ನಡ ಮತ್ತು ಜಾನಪದವನ್ನು ಪರಸ್ಪರ ಪೂರಕ ವಿಷಯಗಳನ್ನಾಗಿಯೇ ಚಿಂತನೆ ಮಾಡಿದೆ. ಕರ್ನಾಟಕದ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳೇ ಜಾನಪದ ಕುರಿತಾದ ಸಂಶೋಧನೆ ಅಧ್ಯಯನಗಳನ್ನು ಮಾಡುತ್ತಾ ಬರಲಾಗಿದೆ. ಅಂತೆಯೇ ಜಾನಪದ ಎಂ.ಎ ಪದವಿಯಲ್ಲಿಯೂ ಶೇಕಡ ೫೦ ರಷ್ಟು ಕನ್ನಡಕ್ಕೆ ಪೂರಕವಾದ ಪಠ್ಯಕ್ರಮವಿದೆ. 

 ಹೀಗಿರುವಾಗ ಕರ್ನಾಟಕದ ಸಂದರ್ಭದಲ್ಲಿ ಜಾನಪದ ಮತ್ತು ಕನ್ನಡವನ್ನು ಒಂದಾಗಿಯೇ ಗ್ರಹಿಸಲಾಗಿದೆ. ಹೀಗಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯು ಪಿ.ಯು ಕಾಲೇಜುಗಳ ಕನ್ನಡ ಉಪನ್ಯಾಸಕರ ಹುದ್ದೆಗೆ ಕನ್ನಡ ವಿಷಯಕ್ಕೆ ಜಾನಪದ ಮತ್ತು ಜಾನಪದ ಸಾಹಿತ್ಯ ಎಂ.ಎ ಪದವೀಧರರನ್ನೂ ಅರ್ಹರನ್ನಾಗಿಸಿದೆ. ಈ ಸಂಗತಿಗಳನ್ನು ಅವಲೋಕಿಸಿದರೆ, ಪದವಿ ಕಾಲೇಜುಗಳ ಕನ್ನಡ ವಿಷಯಕ್ಕೆ ಕೇವಲ ಕನ್ನಡ ಎಂ.ಎ ಪದವೀಧರರನ್ನು ಮಾತ್ರ ಪರಿಗಣಿಸಿ, ಜಾನಪದ ಎಂ.ಎ ಪದವೀಧರರನ್ನು ಕಡೆಗಣಿಸಿರುವುದು ಅವೈಜ್ಞಾನಿಕವಾಗಿದೆ.

 ಕಾಲೇಜು ಶಿಕ್ಷಣ ಇಲಾಖೆಯು ಈ ಬಾರಿಯ ಆಯ್ಕೆ ಪ್ರಕ್ರಿಯೆಯಲ್ಲಿ ಪರಸ್ಪರ ಪೂರಕ ಮತ್ತು ಸಮಾನಾಂತರ ವಿಷಯಗಳನ್ನು ಒಂದೇ ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹ ವಿಷಯಗಳನ್ನಾಗಿ ಸೇರಿಸಲಾಗಿದೆ. ಸಮಾಜಶಾಸ್ತ್ರ ಉಪನ್ಯಾಸಕರ ಹುದ್ದೆಗೆ, ಸಮಾಜ ಕಾರ್ಯ/ಎಂ.ಎಸ್.ಡಬ್ಲು/ಮಹಿಳಾ ಅಧ್ಯಯನವನ್ನೂ, ಗಣಿತಶಾಸ್ತ್ರ ಹುದ್ದೆಗೆ ಸಂಖ್ಯಾಶಾಸ್ತ್ರವನ್ನೂ, ರಾಜ್ಯಶಾಸ್ತ್ರಕ್ಕೆ ಸಾರ್ವಜನಿಕ ಆಡಳಿತವನ್ನೂ, ವಾಣಿಜ್ಯಶಾಸ್ತ್ರಕ್ಕೆ ಎಂ.ಬಿ.ಎ/ಬಿ.ಬಿ.ಎಮ್/ ಎಮ್.ಎಫ್.ಎ/ ಎಂ.ಟಿ.ಎ ಪದವಿಗಳನ್ನೂ ಸಮಾನಾಂತರ ವಿಷಯಗಳನ್ನಾಗಿ ಪರಿಗಣಿಸಲಾಗಿದೆ. ಹೀಗೆ ಪರಿಗಣಿಸಿರುವುದು ವೈಜ್ಞಾನಿಕವಾಗಿಯೂ, ಸಾಮಾಜಿಕ ನ್ಯಾಯದ ನೆಲೆಯಲ್ಲಿಯೂ ಸರಿಯಾದುದು ಎಂತಾದರೆ, ಕನ್ನಡ ವಿಷಯಕ್ಕೆ ಜಾನಪದ ಎಂ.ಎ ಸಮಾನಂತರ ವಿಷಯವನ್ನಾಗಿ ಪರಿಗಣಿಸುವುದರಲ್ಲಿರುವ ತೊಡಕಾದರೂ ಯಾವುದು?

ಸಿ.ಇ.ಟಿ ಮುಖೇನ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಜಾನಪದ ಎಂ.ಎ ಮಾಡಿದವರೂ ಕೂಡ ಕನ್ನಡ ವಿಷಯ ಪಠ್ಯದ ಪರೀಕ್ಷೆಯನ್ನೆ ಪಾಸು ಮಾಡಬೇಕಿದೆ. ಹಾಗಾಗಿ ಕನ್ನಡದ ಬಗೆಗಿನ ತಿಳುವಳಿಕೆಯ ಪರೀಕ್ಷೆಯ ನಂತರವೇ ಅವರು ಕನ್ನಡ ವಿಷಯಕ್ಕೆ ಪಾಠ ಮಾಡಲು ಅರ್ಹರಾಗುತ್ತಾರೆ. ಈ ಕಾರಣಗಳಿಂದಾಗಿ ಜಾನಪದ ಮತ್ತು ಜಾನಪದ ಸಾಹಿತ್ಯ ಎಂ.ಎ ಪದವೀಧರರನ್ನು ಕನ್ನಡ ವಿಷಯಕ್ಕೆ ಪೂರಕ/ ಅಥವಾ ಸಮಾನಂತರ ವಿಷಯವನ್ನಾಗಿ ಪರಿಗಣಿಸುವುದು ವೈಜ್ಞಾನಿಕವಾಗಿಯೂ ಸರಿಯಾಗಿದೆ. 

ಕರ್ನಾಟಕದಲ್ಲಿ ಸಮಾಜ ಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಪದವಿ ಕಾಲೇಜುಗಳ ಕಲಿಕೆಯ ವಿಷಯಗಳಾಗಿವೆ. ಇವುಗಳಿಗೆ ವಿದೇಶಿ ಸಿದ್ಧಾಂತ ಮತ್ತು ಜಾಗತಿಕ ಮತ್ತು ಭಾರತೀಯ ನೆಲೆಯ ಅನುವಾದಿತ ಪಠ್ಯಗಳಿವೆ. ಕರ್ನಾಟಕದ ಸಮಾಜಶಾಸ್ತ್ರ, ಕರ್ನಾಟಕದ ರಾಜ್ಯಶಾಸ್ತ್ರ ಎಂದು ಹೇಳಲು ಅಧಿಕೃತ ಕನ್ನಡ ಪರಿಸರದ ಪಠ್ಯಗಳೇ ರೂಪುಗೊಂಡಿಲ್ಲ. ಇಂತಹ ಪಠ್ಯಗಳಿಂದ ಕರ್ನಾಟಕದ ಸಮಾಜವನ್ನು ರಾಜಕೀಯವನ್ನು ಅರ್ಥಮಾಡಿಕೊಳ್ಳುವುದಾದರೂ ಹೇಗೆ? ತಮ್ಮ ತಮ್ಮ ಕುಟುಂಬಗಳಿಂದ ಕಾಲೇಜಿಗೆ ಹೋದ ಸಮಾಜಶಾಸ್ತ್ರದ ವಿದ್ಯಾರ್ಥಿನಿಯೊಬ್ಬಳು ಕುಟುಂಬ ಎಂದರೇನು ಎನ್ನುವ ಕ್ರೋಬರ್, ಪೇಜರ್ ತರಹದ ವಿದ್ವಾಂಸರ ವ್ಯಾಖ್ಯಾನಗಳನ್ನು ಉರುಹೊಡೆವ ದುರಂತವನ್ನು ಈ ಶಾಸ್ತ್ರಗಳು ಎದುರಿಸುತ್ತಿವೆ.  ಹಾಗೆ ನೋಡಿದರೆ ಈತನಕ ಸುಮಾರು ಮೂರು ಸಾವಿರ ಕೃತಿಗಳು ಜಾನಪದ ಶಿಸ್ತಿಗೆ ಸಂಬಂಧಪಟ್ಟಂತೆ ಪ್ರಕಟವಾಗಿವೆ. ಜಾನಪದ ಅಧ್ಯಯನಕ್ಕೆಂದೇ ಪ್ರತ್ಯೇಕ ವಿಶ್ವವಿದ್ಯಾನಿಲಯವಿದೆ. ಪ್ರತಿ ಜಿಲ್ಲೆ ತಾಲೂಕು ಕೇಂದ್ರಿತ ಜಾನಪದ ಅಧ್ಯಯನಗಳು ನಮಗೆ ಲಭ್ಯವಿವೆ. 

 ಇದನ್ನು ನೋಡಿದರೆ ಪದವಿಗೆ ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರಕ್ಕಿಂತ ಜಾನಪದವನ್ನು ಒಂದು ವಿಷಯವನ್ನಾಗಿ ಸೇರಿಸುವುದು ಹೆಚ್ಚು ಪ್ರಸ್ತುತವಾಗಿದೆ. ಹೀಗೆ ಪ್ರತ್ಯೇಕ ಜಾನಪದ ವಿಷಯ ಪದವಿಗೆ ಸೇರಿಸಿದಲ್ಲಿ ಕನ್ನಡದಲ್ಲಿ ಪಾಲು ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವಾಲಯ ಪದವಿಗೆ ಜಾನಪದವನ್ನು ಒಂದು ವಿಷಯವನ್ನಾಗಿ ಸೇರಿಸುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಭಾರತದಲ್ಲಿಯೇ ಮೊಟ್ಟಮೊದಲ ಜಾನಪದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಸರಕಾರಕ್ಕೆ ಪದವಿ ತರಗತಿಗಳಲ್ಲಿ  ಜಾನಪದವನ್ನು ಒಂದು ಕಲಿಕೆಯ ವಿಷಯವನ್ನಾಗಿ ಸೇರಿಸುವುದು ಅಸಾಧ್ಯವಾದುದೇನಲ್ಲ. ಅಂತೆಯೇ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯವು ಈ ವಿಷಯವನ್ನು ತನ್ನ ಪ್ರಥಮ ಆಧ್ಯತೆಯ ಹಕ್ಕೊತ್ತಾಯವನ್ನಾಗಿ ಪರಿಗಣಿಸಬೇಕಿದೆ. ಹೀಗೆ ಪದವಿಗೆ ಜಾನಪದವನ್ನು ಒಂದು ವಿಷಯವನ್ನಾಗಿ ಪರಿಗಣಿಸಿದಲ್ಲಿ ಭಾಷಣದ ಆಕರ್ಷಕ ವಿಷಯವಾದ ದೇಸಿಯತೆಗೊಂದು ಪ್ರಾಯೋಗಿಕ ನೆಲೆ ಒದಗಿದಂತಾಗುತ್ತದೆ. ಅಂತೆಯೇ ಗಾಂಧಿ ಕನಸಿನ ಗುಡಿಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿ ದೇಸಿ ಕಸಬುಗಳ ಪುನರುಜ್ಜೀವನಗೊಳಿಸುವಂತೆ ಆನ್ವಯಿಕ ಜಾನಪದ ಪಠ್ಯಗಳನ್ನು ರೂಪಿಸುವ ಸಾಧ್ಯತೆಗಳೂ ಇವೆ. 

  ರಾಷ್ಟ್ರೀಯ ಮಾನವ ಸಂಪನ್ಮೂಲ ಇಲಾಖೆಯು ಸಮುದಾಯ ಕಾಲೇಜುಗಳನ್ನು ಸ್ಥಾಪಿಸುವ ಯೋಜನೆ ಹಮ್ಮಿಕೊಂಡಿದೆ. ಭಾರತದಾದ್ಯಾಂತ ಇಂತಹ ಕಾಲೇಜುಗಳನ್ನು ತೆರೆಯುತ್ತಲೂ ಇದೆ. ಆರಂಭಿಕವಾಗಿ ಬೆಂಗಳೂರಿನ ಕೆಲವು ಕಾಲೇಜುಗಳಲ್ಲಿ ಹೇರ್ ಕಟಿಂಗ್ ಕೋರ್ಸನ್ನು ಸೇರ್ಪಡೆ ಮಾಡಿದೆ. ಹೀಗೆ ದೇಸಿ ಕಸಬುಗಳನ್ನು ಆಧರಿಸಿದ ಸಮುದಾಯ ಕಾಲೇಜುಗಳಲ್ಲಿ ಬೋಧಿಸಲು ಶೇಕಡ ೫೦ ರಷ್ಟು ಆಯಾ ದೇಸಿ ಕಸಬಿನ ಪರಿಣಿತ ಹಿರಿಯರು ಮತ್ತು ಶೇಕಡ ೫೦ ರಷ್ಟು ಜಾನಪದ ಸ್ನಾತಕೋತ್ತರ ಪದವೀಧರರು ಮಾತ್ರ ಅರ್ಹರಾಗಿದ್ದಾರೆ. ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆಯು ಎಮ್.ಹೆಚ್.ಆರ್.ಡಿಯ ಕಮ್ಯುನಿಟಿ ಕಾಲೇಜುಗಳನ್ನು ಆರಂಬಿಸುವ ಮುನ್ನ ಇದರ ಭಾಗವಾಗಿಯೇ ಪದವಿ ಕಾಲೇಜುಗಳಲ್ಲಿ ದೇಸಿಕಸಬುಗಳ ಕೋರ್ಸುಗಳನ್ನು ತೆರೆಯಬಹುದಾಗಿದೆ.  ಅಥವಾ ಪ್ರತ್ಯೇಕ ಕಮ್ಯುನಿಟಿ ಕಾಲೇಜುಗಳನ್ನು ಆರಂಭಿಸಿದಲ್ಲಿ ಜಾನಪದ ಕಲಿತವರಿಗೆ ಪ್ರಥಮ ಆಧ್ಯತೆಯನ್ನು ಕೊಡಬೇಕಾಗಿದೆ. ಇಂತಹ ಪ್ರಕ್ರಿಯೆಗಳ ಆರಂಭಿಕ ಭಾಗವಾಗಿ ಪ್ರಸ್ತುತ ಪದವಿ ಕನ್ನಡ ಅಧ್ಯಾಪಕರ ಹುದ್ದೆಗಳಿಗೆ ಜಾನಪದವನ್ನು ಸಮನಾಂತರ ವಿಷಯವನ್ನಾಗಿ ಪರಿಗಣಿಸಿ ಸಿಇಟಿ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕಾಗಿದೆ.ಮಂಗಳವಾರ, ಜನವರಿ 14, 2014

ಈದ್ ಮಿಲಾದ್, ಕ್ರಿಕೆಟ್ ಮ್ಯಾಚ್, ಧರ್ಮ ರಕ್ಷಣೆ


-ಮುನೀರ್ ಕಾಟಿಪಳ್ಳ

ಸೌಜನ್ಯ: ವರ್ತಮಾನ 
ಕುಳಾಯಿ ಮಂಗಳೂರು ನಗರ ಹೊರವಲಯದ ಗ್ರಾಮ. ಮಂಗಳೂರಿನ ಎಲ್ಲಾ ಊರುಗಳಂತೆ ಇಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ವಾಸವಾಗಿದ್ದಾರೆ. 1990 ನೇ ಇಸವಿಯ ವರೆಗೆ ಇಲ್ಲಿ ಎಲ್ಲಾ ಧರ್ಮದವರು ಜೊತೆಯಾಗಿ ಅನೋನ್ಯತೆಯಿಂದ ಬದುಕುತ್ತಿದ್ದರು. ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್ನರು ಜೊತೆಯಾಗಿ ತಂಡ ಕಟ್ಟಿಕೊಂಡು ಅಂಡರ್ ಆರ್ಮ್ ಕ್ರಿಕೆಟ್ ಆಡುತ್ತಿದ್ದರು. ಕುಳಾಯಿ ಗ್ರಾಮ ಒಂದರಲ್ಲೇ ಎಂಟು-ಹತ್ತು ಇಂತಹ ಕ್ರಿಕೆಟ್ ತಂಡಗಳಿದ್ದವು.  
rural-cricket-indiaನ್ಯೂಸ್ಟಾರ್, ಅಜೇಯ, ಸೂಪರ್ ಸ್ಟಾರ್, ಫ್ರೆಂಡ್ 
ಸರ್ಕಲ್, ತರುಣ ವೃಂದ ಹೀಗೆ ಧರ್ಮದ ಸೋಂಕಿಲ್ಲದ ಹೆಸರುಗಳನ್ನು ಇಂತಹ ಕ್ರಿಕೆಟ್ ತಂಡಗಳು ಹೊಂದಿದ್ದವು. 90 ರ ದಶಕದ ಆರಂಭದ ನಂತರ ದ.ಕ. ಜಿಲ್ಲೆಯ ಎಲ್ಲೆಡೆ ಆದ ಬದಲಾವಣೆಗಳು ಕುಳಾಯಿಯಲ್ಲೂ ನಡೆಯಿತು. ಹಿಂದೂ, ಮುಸ್ಲಿಂ ಪ್ರಜ್ಞೆಗಳು ಜಾಗೃತವಾಯಿತು. ಒಂದೆರಡು ಸುತ್ತಿನ ಧರ್ಮ ಯುದ್ಧಗಳೂ ನಡೆದುಹೋದವು. ಒಂದಿಬ್ಬರು ಅಮಾಯಕರು ಧರ್ಮ ಯುದ್ಧದಲ್ಲಿ ಹುತಾತ್ಮರಾದರು. ಇದೆಲ್ಲದರ ಮಧ್ಯೆ ಕ್ರಿಕೆಟ್ ಆಟ, ಪ್ರತೀ ಭಾನುವಾರದ ಟೂರ್ನ್‌ಮೆಂಟ್ ತನ್ನದೇ ಹುಮ್ಮಸ್ಸಿನಲ್ಲಿ ಮುಂದುವರಿದಿತ್ತು. ಧರ್ಮ ಯುದ್ಧದ ನೆರಳು ಕ್ರಿಕೆಟ್ ತಂಡಕ್ಕೂ ಸೋಂಕತೊಡಗಿತು. ಧರ್ಮವನ್ನು ಪ್ರತಿನಿಧಿಸುವ ಹೆಸರಿನ ಕ್ರಿಕೆಟ್ ತಂಡಗಳೂ ರಚನೆಗೊಂಡವು. ಹಿಂದೂಗಳಷ್ಟೇ ಸದಸ್ಯರಾಗಿರುವ, ಮುಸ್ಲಿಮಷ್ಟೇ ಆಟ ಆಡುವ ಪರಿಶುದ್ಧ ತಂಡಗಳಾಗಿ ಕುಳಾಯಿಯ ತಂಡಗಳು ಪರಿವರ್ತನೆಗೊಂಡವು. ಭಾನುವಾರದ ಪಂದ್ಯಾಟಗಳಲ್ಲಿ ಹಿಂದೂ, ಮುಸ್ಲಿಂ ತಂಡಗಳು ಮುಖಾಮುಖಿಯಾದಾಗ, ಕ್ರಿಕೆಟ್ ಅಭಿಮಾನಿಗಳಲ್ಲಿ ಧರ್ಮ ಯುದ್ಧದ ಉದ್ವೇಗ. ಸಿಕ್ಸ್, ಫೋರ್ ಹೊಡೆದಾಗ, ವಿಕೆಟ್‌ಗಳು ಬಿದ್ದಾಗ ತಮ್ಮ ಧರ್ಮದ ತಂಡದ ಪರವಾಗಿ ಜಯ ಜಯಕಾರ.
ಇಂತಹ ಊರಿನಲ್ಲಿ ಎರಡು ತಂಡಗಳು ಬೆಟ್ ಕಟ್ಟಿ ಆಡಿದ ಕ್ರಿಕೆಟ್ ಆಟ ಈದ್ ಮಿಲಾದ್ ಹಬ್ಬ, ಅದರ ಮೆರವಣಿಗೆಯನ್ನು ಧರ್ಮಯುದ್ಧದ ಸಮೀಪಕ್ಕೆ ತಂದು ನಿಲ್ಲಿಸಿತು. ಒಂದು ತಂಡದ ಹೆಸರು ಓಂಶಕ್ತಿ. ಹೆಸರೇ ಸೂಚಿಸುವಂತೆ ಹಿಂದೂಗಳದ್ದು. ಮತ್ತೊಂದು ಗ್ರೀನ್ (ಹಸಿರು) ಸ್ಟಾರ್, ಹಸಿರು ಕೇಸರಿಗೆ ಎದುರಾಳಿಯಾಗಿ ಮುಸ್ಲಿಂ ಮೆರವಣಿಗೆಗಳಲ್ಲಿ ಬಳಕೆಯಾಗುವುದರಿಂದ ಗ್ರೀನ್ ಸ್ಟಾರ್ ಮುಸ್ಲಿಂ ಹದಿಹರೆಯದ ಕ್ರಿಕೆಟ್ ಆಟಗಾರರದ್ದು. ಈ ತಂಡಗಳ ಬೆಟ್ಟಿಂಗ್ ಕ್ರಿಕೆಟ್ ಆಟದಲ್ಲಿ ಗ್ರೀನ್ ಸ್ಟಾರ್rural_cricketನಿರಂತರವಾಗಿ ಸೋತು ಕೆಲವು ಸಾವಿರ ಹಣ ಕಳೆದುಕೊಂಡಿತ್ತು. ಅರ್ಧ ದುಡ್ಡು ಪಾವತಿಸಿ ಇನ್ನು ಎರಡು, ಮೂರು ಸಾವಿರಕ್ಕೆ ಕೈ ಎತ್ತಿತ್ತು. ಹಣ ಪಾವತಿಗೆ ಸಂಬಂಧಿಸಿ ಹುಡುಗರ ಮಧ್ಯೆ ಸರಣಿ ಮಾತುಕತೆಗಳು ನಡೆದವು. ಇದೇ ಸಂದರ್ಭದಲ್ಲಿ ಕುಳಾಯಿಯಲ್ಲಿ ಈದ್ ಮಿಲಾದ್ ಆಚರಣೆಯ ಸಂಭ್ರಮ. ಎಲ್ಲಾ ಊರುಗಳಂತೆ ಒಂದು ವಾರ ರಾತ್ರಿ ಹೊತ್ತು ವಿವಿಧ ಕಾರ್ಯಕ್ರಮ, ಮಕ್ಕಳ ಹಾಡು, ಭಾಷಣ, ಕೊನೆಯ ದಿನ ಮಕ್ಕಳಿಂದ ಈದ್ ಮಿಲಾದ್ ಮೆರವಣಿಗೆ. ಈ ಬಾರಿಯ ಈದ್ ಮಿಲಾದ್ ಆಚರಣೆಗೆ ಪ್ರಭಾಕರ ಭಟ್‌ರ ಅಮೋಘ ಭಾಷಣದ ಸ್ಫೂರ್ತಿಯು ಇದ್ದುದರಿಂದ ತಯಾರಿ ಭರ್ಜರಿಯಾಗಿ ನಡೆದಿತ್ತು. ಎಲ್ಲೆಡೆ ಹಸಿರು ಬಾವುಟ, ತೋರಣಗಳು. ಈದ್ ಮಿಲಾದ್ ಮೆರವಣಿಗೆಯ ಹಿಂದಿನ ದಿನ ರಾತ್ರಿ ಗ್ರೀನ್ ಸ್ಟಾರ್, ಓಂಶಕ್ತಿ ತಂಡಗಳ ಕ್ರಿಕೆಟ್ ಬೆಟ್ಟಿಂಗ್ ಬಾಕಿ ಹಣದ ಮಾತುಕತೆ ಮುಂದುವರಿದಿದೆ. ಪಂಚಾತಿಕೆ ವಿಫಲವಾಗಿ ಗ್ರೀನ್ ಸ್ಟಾರ್‌ನ ಮುಸ್ಲಿಂ ಹುಡುಗನಿಗೆ ಓಂ ಶಕ್ತಿಯ ಹಿಂದೂ ಹುಡುಗರು ವಿಕೆಟ್‌ನಿಂದ ಬಡಿದು ತಲೆ ಒಡೆದಿದ್ದಾರೆ. ಪೆಟ್ಟು ತಿಂದವ ಆಸ್ಪತ್ರೆ ಸೇರಿದರೆ, ಸುದ್ದಿ ಮಸೀದಿ ತಲುಪಿದೆ. ಅಲ್ಲಿ ಮಕ್ಕಳ ಹಾಡಿನ ಸ್ಪರ್ಧೆಯಲ್ಲಿ ಸೇರಿದ್ದ ಮಕ್ಕಳು, ಮಹಿಳೆಯರಲ್ಲಿ ಭಯ ಮೂಡಿದರೆ, ಯುವಕರಲ್ಲಿ ಆಕ್ರೋಶ. ತಮ್ಮವರಿಗೆ ಬಡಿದವರನ್ನು ಬಿಡಬಾರದು ಎಂಬ ಧರ್ಮರಕ್ಷಣೆಯ ಕಿಚ್ಚು. ಹಿರಿಯರ ಮಾತುಕೇಳದ ಗ್ರೀನ್ ಸ್ಟಾರ್‌ನ ಕೆಲ ಹುಡುಗರು ಹಸಿರು ತೋರಣ ಬಾವುಟಗಳ ಮಧ್ಯೆಯೇ ತಮ್ಮವನಿಗೆ ಹೊಡೆದವರನ್ನು ಹುಡುಕಾಡಲು ಹೊರಟಿದ್ದಾರೆ. ಅವರು ಅಡಗಿರಬಹುದಾದ ಮನೆಯ ಕದ ತಟ್ಟಿದ್ದಾರೆ. ಆವಾಜ್ ಹಾಕಿದ್ದಾರೆ. ಮಕ್ಕಳು, ಮಹಿಳೆಯರು ಭಯದಿಂದ ಮನೆ ಸೇರಿದ್ದಾರೆ.
ಬೆಳಿಗ್ಗೆಯಾದರೆ, ಮಿಲಾದ್ ಮೆರವಣಿಗೆ. ಅಷ್ಟರಲ್ಲಿ ಸುದ್ದಿ ವಾಟ್ಸಪ್, ಮೊಬೈಲ್ ಮೂಲಕ ಹತ್ತೂರು ತಲುಪಿದೆ. ಈದ್ ಮಿಲಾದ್ ಮೆರವಣಿಗೆಯಲ್ಲಿ ಹಸಿರು ಬಾವುಟಗಳು ಸ್ವಲ್ಪ ಹೆಚ್ಚೇ ಉತ್ಸಾಹದಲ್ಲಿ ಹಾರಾಡತೊಡಗಿದೆ. ಹತ್ತಿರದ ಊರುಗಳ ಅಪರಿಚಿತ ಯುವಕರೂ ಧರ್ಮ ರಕ್ಷಣೆಗಾಗಿ ತಮ್ಮ ಊರಿನ ಮಿಲಾದ್ ಬಿಟ್ಟು ಕುಳಾಯಿಗೆ ಬಂದಿದ್ದಾರೆ. ಮಸೀದಿಯಿಂದ ನೂರಿನ್ನೂರು ಮೀಟರ್ ದೂರದ ಭಜನಾ ಮಂದಿರದ ಬಳಿಯೂ ಊರಿನ ಹಿಂದೂ ಯುವಕರ ಜೊತೆಗೆ ಅಪರಿಚಿತ ಧರ್ಮ ರಕ್ಷಕರ ದೊಡ್ಡ ದಂಡು ಸೇರಿದೆ. ಇನ್ನೇನು ಧರ್ಮಯುದ್ಧ ನಡೆಯಬೇಕು. ಊರಿಡೀ ಆತಂಕ, ಪೊಲೀಸ್ ಲಾಠಿ ಬೂಟುಗಳ ಕವಾಯತು, ಜೀಪುಗಳ ತಿರುಗಾಟ, Eid-e-Milad-mangaloreಈದ್ ಮಿಲಾದ್ ಮೆರವಣಿಗೆಯ ಸಂಭ್ರಮಕ್ಕಾಗಿ ಕಾದಿದ್ದ ಮುಸ್ಲಿಂ ಪುಟಾಣಿಗಳ ಕಣ್ಣಲ್ಲಿ ಸಣ್ಣ ಭಯ. ಮಿಲಾದ್ ಮೆರವಣಿಗೆ ಸಾಗುವಾಗ ರಸ್ತೆ ಬದಿಯ ತಮ್ಮ ಮನೆಯ ಮುಂದೆ ನಿಂತು ಸಿಹಿತಿಂಡಿ ಪಡೆದು ಶುಭಾಶಯ ಹೇಳುವ ಹಿಂದೂ ಮಕ್ಕಳು, ಮಹಿಳೆಯರು ಈ ಬಾರಿ ಮನೆಯ ಒಳಭಾಗಕ್ಕೆ ಸರಿದಿದ್ದರು. ಅಂತೂ ಪೊಲೀಸರ ಬಿಗಿ ಬಂದೋಬಸ್ತ್, ಮುಸ್ಲಿಂ ಮಸೀದಿ ಕಮಿಟಿಯವರ ಜವಾಬ್ದಾರಿಯುತ ನಡವಳಿಕೆಯಿಂದಾಗಿ ಆಕ್ರೋಶಿತ ಯುವಕರ ಗೊಣಗಾಟಗಳ ಮಧ್ಯೆ ಮುಖಾಮುಖಿ ತಪ್ಪಿದೆ. ಧರ್ಮಯುದ್ದವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ವಾರದ ನಂತರ ಮತ್ತೆ ಕ್ರಿಕೆಟ್ ಆಟ ಶುರುವಾಗುತ್ತದೆ. ಮುಂದೆ ಚುನಾವಣೆ ಬೇರೆ ನಡೆಯಲಿದೆ. ಮೋದಿಯೋ ಮತ್ತೊಬ್ಬನೋ ಪ್ರಧಾನಿ ಆಗಬೇಕಿದೆ. ಮಗದೊಬ್ಬನು ಸಂಸದನಾಗಬೇಕಿದೆ. ಹಾಗಾಗಿ ಧರ್ಮವನ್ನು ರಕ್ಷಿಸಬೇಕಿದೆ.
ಹಬ್ಬಗಳು ಮರಳಿ ಬರುತ್ತವೆ, ಮೆರವಣಿಗೆಗಳೂ ಸಹ. ಆದರೆ ಮಿಲಾದ್ ಸಂಭ್ರಮದಲ್ಲಿ ಅರಳಬೇಕಾಗಿದ್ದ ಆ ಮುಗ್ಧ ಮಕ್ಕಳ ನಗುವನ್ನು, ಸಂತೋಷವನ್ನು ಮರಳಿ ತರುವುದು ಯಾರು? ಇದು ಮಂಗಳೂರಿನ ಪ್ರತಿಯೊಂದು ಗ್ರಾಮದ ಸ್ಥಿತಿ… ಧರ್ಮ ರಕ್ಷಕರಿಂದ ಮಂಗಳೂರನ್ನು ಮುಕ್ತಿಗೊಳಿಸುವುದು ಹೇಗೆ?