ಮಂಗಳವಾರ, ಮೇ 28, 2013

ಕಳಶಗಳು ಕೆದಕುವ ಕಥೆಯ ಜಾಡಿನಲ್ಲಿ... -ಪುರುಷೋತ್ತಮ ಬಿಳಿಮಲೆ

 ಸೌಜನ್ಯ:ವಿಜಯ ಕರ್ನಾಟಕ

ಬಹುರೂಪ: ಕಳಶಗಳು ಕೆದಕುವ ಕಥೆಯ ಜಾಡಿನಲ್ಲಿ...
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
     ಎ ವಿ ನಾವಡ ಮತ್ತು ಗಾಯತ್ರಿ ನಾವಡರು ಸಂಪಾದಿಸಿದ 'ಕಾಡ್ಯನಾಟ' (1992) ಪುಸ್ತಕದಲ್ಲಿರುವ ಒಂದು ಕತೆ ಮತ್ತೆ ಮತ್ತೆ ಕಾಡುತ್ತಲೇ ಇದೆ. ಈ ಜನಪದ ಕತೆಗಳು ಕೇವಲ ಮನರಂಜನೆಗಾಗಿ ಇರುವಂತಹವೇ? ಅಥವಾ ಮಕ್ಕಳನ್ನು ನಿದ್ರೆ ಮಾಡಿಸಲು ಮಾತ್ರ ಅಜ್ಜಿಯಂದಿರು ಇಂಥ ಕತೆಗಳನ್ನು ಸೃಷ್ಟಿಸಿಕೊಂಡಿದ್ದಾರೆಯೇ? ಕನ್ನಡದ ಸಂದರ್ಭದಲ್ಲಿ ಇಂಥ ಕತೆಗಳ ಗಂಭೀರ ಅಧ್ಯಯನ ಎಷ್ಟು ನಡೆದಿದೆ? ಎಂಬುದರ ಬಗೆಗೆಲ್ಲಾ ಯೋಚಿಸುವಾಗ ಮಾಡಬೇಕಾಗಿರುವ ಕೆಲಸ ಬಹಳ ಬಾಕಿಯಾಗಿದೆ ಅಂತನ್ನಿಸುತ್ತಿದೆ.    '
ಕಾಡ್ಯನಾಟ' ಕೃತಿಯಲ್ಲಿರುವ, ಕಥನಕ ವನದಂತಿರುವ ಒಂದು ಕತೆಯನ್ನು ನಿರೂಪಿಸಿದವರು ಕರಾವಳಿ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುವ ಮೇರ ಎಂಬ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು. ಅವರು ಹೇಳಿದ ಸುದೀರ್ಘ ಕತೆಯ ನಾಯಕಿ ಹೊನ್ನಿ. ಆಕೆಯೂ ಮೇರ ಸಮುದಾಯಕ್ಕೆ ಸೇರಿದವಳು. ಒಂದು ಸೋಮವಾರ ಹೆಣ್ಣಾದ ಆಕೆ ಹೆಂಗುಸಾಗುತ್ತಾಳೆ. ಬೆಳೆದ ಹೆಂಗಸಿಗೆ ಗಾಳಿಯ ಸಂಗವಾಗುತ್ತದೆ.ಆಕೆ ಬಸುರಾಗುತ್ತಾಳೆ. ಒಂದೇ ಬಾರಿಗೆ ಏಳು ಮಂದಿ ಮಕ್ಕಳನ್ನು ಹೆರುತ್ತಾಳೆ. ಆದರೆ ಬಡತನದಿಂದಾಗಿ ಆಕೆಗೆ ಹೊಟ್ಟೆಯ ಮಕ್ಕಳನ್ನು ಸಾಕಲಾಗುವುದಿಲ್ಲ. ಅಂಗಳದ ಹೊಂಡಗಳನ್ನು ನೆಕ್ಕಿದರೂ ಬಾಯಾರಿಕೆ ನೀಗುವುದಿಲ್ಲ. ಊರಿನ ಜನ ಕೊಟ್ಟ ಬತ್ತದಿಂದ ಏಳು ಮಕ್ಕಳ ಹಸಿವು ನೀಗುವುದಿಲ್ಲ. ಬೇರೆ ಉಪಾಯವಿಲ್ಲದೆ ಹೊನ್ನಿಯು ಕಮ್ಮಾರನ ಮನೆಗೆ ಹೋಗುತ್ತಾಳೆ. ನೆಲ ಅಗೆಯುವ ಮತ್ತು ಮಣ್ಣು ಕಡಿಯುವ ಸಲಕರಣೆಗಳನ್ನು ಮಾಡಿಕೊಡಪ್ಪಾ ಅಂತ ಬೇಡುತ್ತಾಳೆ. ಕಮ್ಮಾರ ಆಕೆಗೆ ಬೇಕಾದ ಸಲಕರಣೆಗಳನ್ನು ಮಾಡಿಕೊಡುತ್ತಾನೆ. ಹೊನ್ನಿ ಈಗ ಕಾಡುಗೆಣಸು ಹುಡುಕುತ್ತಾ ಮೂಡಣದ ಕಾಡಿನತ್ತ ನಡೆಯುತ್ತಾಳೆ. ಕಾಡುಗೆಣಸಿನ ಬೀಳಲು ಕಣ್ಣಿಗೆ ಬೀಳುತ್ತದೆ, ಕುದುರೆಯಂತಹ ಬೇರು, ಆನೆಯಂತಹ ಕಲ್ಲುಗಳನ್ನು ಬದಿಗೆ ಸರಿಸುತ್ತಾಳೆ. ಮಣ್ಣು ಕಡಿಯುತ್ತಾಳೆ.

  
ಒಂದು ಹಾರೆ ಕಡಿದಾಗ ಚಿನ್ನದ ಕಳಶ ಕಣ್ಣಿಗೆ ಬೀಳುತ್ತದೆ, ಎರಡು ಹಾರೆ ಕಡಿದಾಗ ತಾಮ್ರದ ಕಳಶ ಕಣ್ಣಿಗೆ ಬೀಳುತ್ತದೆ, ಮೂರನೇ ಹಾರೆ ಕಡಿದಾಗ ಮಣ್ಣಿನ ಕಳಶ ಕಣ್ಣಿಗೆ ಬೀಳುತ್ತದೆ. ಚಕಿತಳಾದ ಹೊನ್ನಿಯು ಅವುಗಳನ್ನು ಅಲ್ಲಿಯೇ ಬಿಟ್ಟು, ಊರಿನತ್ತ ಓಡುತ್ತಾಳೆ. ಒಡೆಯರ ಅಂಗಳದಲ್ಲಿ ನಿಂತು ಕಂಡದ್ದನ್ನು ಹೇಳುತ್ತಾಳೆ. ಒಡೆಯರು ಹೇಳುತ್ತಾರೆ- 'ಅಡಿಗರ ಮನೆಗೀಗ ನೀನು ಹೋಗುಲೆ ಬೇಕು, ಅಡಿಗರ ಕೈಲೀಗ ಹೇಳುಬೇಕು'. ಹೊನ್ನಿ ಅಡಿಗರ ಮನೆ ಕಡೆ ನಡೆಯುತ್ತಾಳೆ, ಒಡೆಯರೂ ಹಿಂಬಾಲಿಸುತ್ತಾರೆ. ಆಡಿಗರು ಮತ್ತು ಒಡೆಯರೀರ್ವರೂ ಚೋದ್ಯ ನೋಡಲು ಹೊನ್ನಿಯನ್ನು ಹಿಂಬಾಲಿಸಿಕೊಂಡು ಕಾಡಿಗೆ ಹೋಗುತ್ತಾರೆ. ಕಾಡಿನ ಸಂಪತ್ತನ್ನು ಹೊನ್ನಿ ತೋರಿಸುತ್ತಾಳೆ. 'ಚಿನ್ನದ ಕಳಶ ತನಗಿರಲಿ' ಎನ್ನುತ್ತಾರೆ ಅಡಿಗರು, 'ತಾಮ್ರದ ಕಳಶ ತನಗಿರಲಿ' ಎನ್ನುತ್ತಾರೆ ಒಡೆಯರು. ಹೊನ್ನಿಗೆ ಮಣ್ಣಿನ ಕಳಶ ಉಳಿಯುತ್ತದೆ. ಕಾಡಿನಲ್ಲಿ ಅನಾಯಾಸವಾಗಿ ದೊರೆತ ಚಿನ್ನದ ಕಳಶವನ್ನು ಊರಿನ ನಡುವಿರುವ ಅಶ್ವತ್ಥಮರದ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ಅಡಿಗರು, ಅಲ್ಲಿ ನಾಗ ಮಂಡಲ ಮಾಡಿಸುತ್ತಾರೆ, ತಾಮ್ರದ ಕಳಶವನ್ನು ಮನೆಯೆದುರು ಸ್ಥಾಪಿಸಿದ ಒಡೆಯರು ಅಲ್ಲಿ ಪಾಣರಾಟವನ್ನು ನಡೆಸುತ್ತಾರೆ. ತನಗೆ ದೊರಕಿದ ಮಣ್ಣಿನ ಕಳಶವನ್ನು ಕಾಡಿನಲ್ಲಿಯೇ ಇರಿಸಿದ ಹೊನ್ನಿಯು ಅಲ್ಲಿ ಕಾಡ್ಯನಾಟವನ್ನು ನಡೆಸುತ್ತಾಳೆ. ನಾಗಮಂಡಲ, ಪಾಣರಾಟ ಮತ್ತು ಕಾಡ್ಯನಾಟಗಳು ನಾಗಾರಾಧನೆಯ ವಿವಿಧ ರೂಪಗಳು. ಕತೆಯ ಪ್ರಕಾರ ಅದು ಮೂರು ವಿಭಿನ್ನ ಸಮುದಾಯಗಳ ಆಚರಣಾ ಪ್ರಕ್ರಿಯೆಗಳಾಗಿವೆ. ಬ್ರಾಹ್ಮಣರಿಗೆ ಚಿನ್ನ, ದಲಿತರಿಗೆ ಮಣ್ಣು ಮತ್ತು ಮಧ್ಯಮ ಸಮುದಾಯಗಳಿಗೆ ತಾಮ್ರ ಎಂಬ ಗ್ರಹೀತದಲ್ಲಿ ಕತೆ ಸಷ್ಟಿಯಾಗಿದೆ. ಜತೆಗೆ ಮೊದಲಿನ ಎರಡು ಸಮಾಜದ ಪ್ರತಿನಿಧಿಗಳು ಗಂಡುಸರಾದರೆ, ದಲಿತ ಸಮುದಾಯದ ಪ್ರತಿನಿಧಿ ಮಹಿಳೆ ಎಂಬುದು ಕೂಡ ಕುತೂಹಲಕರವಾದ ಸಂಗತಿಯಾಗಿದೆ. ಕತೆಯಲ್ಲಿ ಕಾಡಿನ ಸಂಪತ್ತು ಕಣ್ಣಿಗೆ ಬೀಳುವುದು ದಲಿತ ಮಹಿಳೆಗೆ. ಆದರೆ ಸಂಪತ್ತು ಹಂಚಿಕೆಯಾಗುವುದು ಶ್ರೇಣೀಕರಣಕ್ಕೊಳಪಟ್ಟ ಮೂರು ವರ್ಗಗಳ ನಡುವೆ. ಕತೆಯ ನಾಯಕಿ ಹೊನ್ನಿಯಾದರೂ ಆಕೆಗೆ ದೊರೆತ ಹೊನ್ನು ಅಡಿಗರ ಪಾಲಾಗುತ್ತದೆ.

ಹಾಗೆ ನೋಡಿದರೆ ಕತೆಯಲ್ಲಿ ಕಾಣಿಸುವ ಮೂರು ವರ್ಗಗಳ ಹಾಗೆ ಕಳಶದಲ್ಲೂ ಮೂರು ಭಾಗಗಳಿವೆ. ಕಳಶದ ಕೆಳಭಾಗದಲ್ಲಿ ಬಾಯಿ ತೆರೆದಿರುವ ಒಂದು ಮಣ್ಣಿನ ಚೆಂಬು ಇರುತ್ತದೆ. ಇದನ್ನು ಗಿಂಡಿ ಎಂದು ಕರೆಯಬೇಕಾದರೆ ಅದಕ್ಕೊಂದು ಕೊಂಬು ಇರಬೇಕು.ಇದು ಕೂಡ ಅದರ ಬಾಯಿ ತೆರೆದಿರುವುದನ್ನು ಸಂಕೇತಿಸುತ್ತದೆ. ಇದರೊಳಗೆ ನೀರು ಇರುತ್ತದೆ. ಚೆಂಬಿನ ಬಾಯಿಗೆ ಮಾವಿನ ಎಲೆಗಳನ್ನು ಇರಿಸಿ, ಅದರ ಮೇಲ್ಗಡೆಗೆ ಜುಟ್ಟು ತೆಗೆಯದ ಮತ್ತು ಒಳಗಡೆಗೆ ನೀರು ತುಂಬಿರುವ ಒಂದು ತೆಂಗಿನ ಕಾಯಿ ಇರಿಸಿದರೆ ಕಳಶ ಸಿದ್ಧವಾಗುತ್ತದೆ. ಸೂಕ್ಷ್ಮವಾಗಿ ನೋಡಿದರೆ ಕೆಳಗಡೆಯ ಚೆಂಬಿನ ಒಳಗೂ ನೀರು, ಮೇಲ್ಗಡೆಯ ತೆಂಗಿನಕಾಯಿಯ ಒಳಗೂ ನೀರು. ಆದರೆ ಚೆಂಬಿನದು ತೆರೆದ ಬಾಯಾದರೆ, ತೆಂಗಿನಕಾಯಿಯದು ಮುಚ್ಚಿದ ಬಾಯಿ. ಎರಡೂ ವೈರುದ್ಧ್ಯಗಳ ನಡುವೆ, ಅವೆರಡನ್ನೂ ಬೆಸೆಯುವ ಮಾವಿನ ಎಲೆಗಳು. ಮಾವಿನ ಎಲೆಗಳನ್ನು ಮನೆಯ ಬಾಗಿಲಿಗೂ ತೋರಣವಾಗಿ ಕಟ್ಟುತ್ತಾರೆ. ಅಲ್ಲಿ ಕೂಡಾ ಅದರ ಕಾರ್ಯ, ಸಂಬಂಧ ಸಾಧಿಸುವುದೇ ಆಗಿದೆ. ಮನೆಯ ಒಳಗಿನ ಮತ್ತು ಹೊರಗಿನ ಸಂಗತಿಗಳನ್ನು ಬೆಸೆಯುವ ಕೆಲಸವನ್ನು ಅದು ಮಾಡುತ್ತದೆ. ಮದುವೆಯಲ್ಲಿ ಹೆಣ್ಣಿನ ಕಡೆ ಮತ್ತು ಗಂಡಿನ ಕಡೆ ಎಂದು ಎರಡು ಗುಂಪುಗಳಿರುತ್ತವೆ. ಎರಡೂ ಗುಂಪುಗಳನ್ನು ಬೆಸೆಯಲು ಮಾವಿನ ತೋರಣವೂ ಬೇಕು, ಕಳಶವೂ ಬೇಕು. ಇದು ಹೌದಾದರೆ, ಕಳಶದ ಮಧ್ಯಭಾಗದಲ್ಲಿರುವ ಮಾವಿನ ಎಲೆಗಳು ತೆಂಗಿನ ಕಾಯಿ ಮತ್ತು ಚೆಂಬುಗಳನ್ನು ಬೆಸೆಯುವ ಕಾರ್ಯವನ್ನು ಮಾಡುತ್ತದೆ. ದೇವಸ್ಥಾನಗಳ ತುತ್ತತುದಿಯಲ್ಲಿರುವುದೂ ಕಳಶವೇ. ಶಾಸ್ತ್ರೀಯ ಭಾಷೆಯಲ್ಲಿ ಅದನ್ನು ಸ್ಥೂಪಿ ಎಂದು ಕರೆಯತ್ತಾರೆ. ಸ್ಥೂಪಿಕಾ, ಸ್ಥೂಪಿ ಕುಡಂ, ಥೂಪಿಕಾ, ಚೂಲಿಕಾ, ಕುಂಡಲ ಮೊದಲಾದುವು ಅದಕ್ಕಿರುವ ಇತರ ಹೆಸರುಗಳು. ಸ್ಥೂಪಿಯ ತುತ್ತ ತುದಿಯಲ್ಲಿರುವ ಮುಕುಲವು ( ಕುಡ್ಮಲ) ಕಳಶದ ತೆಂಗಿನ ಕಾಯಿಗೆ ಸಮನಾಗಿದ್ದರೆ, ಅತ್ಯಂತ ಕೆಳಗಿನ ಘಟವು ವಾಸ್ತವವಾಗಿ ಮಣ್ಣಿನ ಚೆಂಬೇ ಆಗಿದೆ.

ಹೀಗೆ ಯೋಚಿಸಿದಾಗ ಕತೆಯಲ್ಲಿ ಬರುವ ಕಲಶವು ಹೊನ್ನಿ, ಒಡೆಯರು ಮತ್ತು ಅಡಿಗರನ್ನು ಸಂಕೇತಿಸಿದ ಹಾಗೆ ದೇವಳದ ಸ್ಥೂಪಿಯನ್ನೂ ಸಂಕೇತಿಸುತ್ತದೆ ಎನ್ನಬಹುದು. ಶ್ರೇಣೀಕರಣದ ತುದಿಯಲ್ಲಿರುವ ಅಡಿಗರು ಕಳಶದ ಮೇಲ್ತುದಿಯಾದರೆ, ಕೆಳಗಿನ ಮಣ್ಣಿನ ಚೆಂಬು ಹೊನ್ನಿಯನ್ನು ಪ್ರತಿನಿಧಿಸುತ್ತದೆ. ಇವೆರಡರ ನಡುವಣ ಮಾವಿನ ಎಲೆಗಳು ಕಷಿ ಸಂಸ್ಕೃತಿಗೆ ಸೇರಿದ ಒಡೆಯರನ್ನು ಸಂಕೇತಿಸುವಂತಿದೆ. ಎಲ್ಲರಿಗಿಂತ ಮೇಲಿರುವ ಅಡಿಗರದು ತೆಂಗಿನಕಾಯಿಯ ಹಾಗೆ ಮುಚ್ಚಿದ ಲೋಕವಾದರೆ, ಕೆಳಗಡೆಯ ಮಣ್ಣಿನ ಚೆಂಬಿನದು ತೆರೆದ ಲೋಕ. ನಡುವೆ ಕೃಷಿ ಸಂಸ್ಕೃತಿಯ ಒಡೆಯರು.

ಹೇಗೆ ಚೆಂಬು ಮಾವಿನ ಎಲೆ ಮತ್ತು ತೆಂಗಿನಕಾಯಿಯನ್ನು ಗಟ್ಟಿಯಾಗಿ ಆಧರಿಸಿ ಹಿಡಿಯುವುದೋ ಹಾಗೆ ಕೆಳ ಸಮುದಾಯದ ಜನರು ಮೇಲಿನವರಿಗೆ ಆಧಾರವಾಗುತ್ತಾರೆ. ಜತೆಗೆ ಭೂಮಿಯಲ್ಲಿರುವ ಅಮೂಲ್ಯ ವಸ್ತುಗಳು ಕಾಣಿಸುವುದು ದಲಿತರಿಗೆ, ಅದರಲ್ಲೂ ಮಹಿಳೆಯರಿಗೆ ಎಂಬ ಅಂಶವೂ ಇಲ್ಲಿ ಎದ್ದು ಕಾಣುತ್ತದೆ. ಇಂಥ ಹಲವು ಸಂಕೇತಗಳನ್ನು ಹೊಂದಿರುವ ಕತೆಗಳನ್ನು ಸಮಾಜಶಾಸ್ತ್ರೀಯ ಅಧ್ಯಯನಗಳಿಗೆ ಒಳಪಡಿಸಬೇಕಾದ್ದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ಜತೆಗೆ ಹಿಂದೆ ಜಾತಿಗಳು ಇರಲಿಲ್ಲ ಎನ್ನುವವರು ಮಣ್ಣು, ತಾಮ್ರ ಮತ್ತು ಚಿನ್ನದ ಕಳಶದ ವ್ಯತ್ಯಾಸಗಳು ದಲಿತರ ನಿರೂಪಣೆಗಳಲ್ಲಿ ಯಾಕೆ ಹೀಗೆ ಕಾಣಿಸಿಕೊಳ್ಳುತ್ತವೆ ಎಂಬುದಕ್ಕೆ ಬೇರೆ ಕಾರಣಗಳನ್ನು ಹುಡುಕಿಕೊಳ್ಳಬೇಕು.