ಮಂಗಳವಾರ, ಮೇ 21, 2013

ಸಂಭ್ರಮದ ಹೊಟ್ಟೆಯಲ್ಲಿ ಸಂಕಟ

  
ರಹಮತ್ ತರೀಕೆರೆ  



ಸೌಜನ್ಯ: ಕೆಂಡಸಂಪಿಗೆ



(ಫೋಟೋಗಳು:ಲೇಖಕರವು)
 ಮೊಹರಂ ಆಚರಣೆಗಳನ್ನು ಪತ್ರಿಕೆಗಳು ಇಡೀ ಊರು ಒಂದಾಗಿ ಮಾಡುವ ಹಬ್ಬವೆಂದೂ ಹಿಂದು-ಮುಸ್ಲಿಮರ ಸಾಮರಸ್ಯದ ಸಂಕೇತವೆಂದೂ ಕರೆದಿವೆ. ಈ ಕುರಿತು ಬಂದಿರುವ ಬಹುತೇಕ ಅಧ್ಯಯನಗಳಲ್ಲೂ ವಿದ್ವಾಂಸರು ಈ ಧೋರಣೆಯನ್ನೇ ಅನುರಣಿಸಿದ್ದಾರೆ. ಇದೇನು ಸುಳ್ಳಲ್ಲ. ಈ ದೃಷ್ಟಿಯಿಂದ ಮೊಹರಂ, ನಿಸ್ಸಂಶಯವಾಗಿ ಕರ್ನಾಟಕ ಸಂಸ್ಕೃತಿ ಸೃಷ್ಟಿಸಿದ ಅದ್ಭುತ ಆಚರಣೆಗಳಲ್ಲಿ ಒಂದು. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, ಸಂಭ್ರಮ ಒಗ್ಗಟ್ಟು, ಸಾಮರಸ್ಯ, ಶ್ರದ್ಧೆ ಭಕ್ತಿ ಎಂಬ ನುಡಿಗಟ್ಟಿನಲ್ಲಿ ಕರೆಯಲಾಗಿರುವ ವಿದ್ಯಮಾನದ ಹೊಟ್ಟೆಯೊಳಗೆ ಇರುವ ವೈರುಧ್ಯಗಳು ಮತ್ತು ಸಂಕಟಗಳು ಗೋಚರಿಸತೆಡಗುತ್ತವೆ. ಈ ಎರಡನೇ ಆಯಾಮವನ್ನು ಬಿಟ್ಟುಕೊಟ್ಟು ನಾವು ನಮ್ಮ ಹಬ್ಬಗಳನ್ನು ನೋಡುತ್ತ, ಕೆಲವು ಸಾಮಾಜಿಕ ಸತ್ಯಗಳಿಗೆ ಬೆನ್ನುಕೊಡುತ್ತಿದ್ದೇವೆ ಅನಿಸುತ್ತಿದೆ.
ಮೊದಲಿಗೆ ಮೊಹರಮ್ಮಿನ ಸಂಭ್ರಮದ ಮುಖಗಳನ್ನು ಗಮನಿಸೋಣ. ಊರುಗಳಲ್ಲಿ ಮೊಹರಂ ದೇವರನ್ನು ಕೂರಿಸುವ ‘ಮಸೂತಿ (ಇದನ್ನು ಜನ ಗುಡಿಯೆಂದೇ ಕರೆಯುತ್ತಾರೆ) ಸಾಮಾನ್ಯವಾಗಿ ಬಸವಣ್ಣ ಹನುಮಂತ ದ್ಯಾಮವ್ವ ದುರುಗಮ್ಮ ಮುಂತಾದ ದೇವರ ಗುಡಿಗಳ ಆಜುಬಾಜಲ್ಲೇ ಇರುತ್ತದೆ. ಕೆಲವೊಮ್ಮೆ ಬಗಲಿಗೇ ಇರುತ್ತದೆ. ವರ್ಷವಿಡೀ ಬಿಕೋ ಎನ್ನುವ ಈ ಮೊಹರಂ ಗುಡಿ ಹತ್ತು ದಿನಗಳ ಕಾಲ ಜೀವತಳೆಯುತ್ತದೆ. ಗುದ್ದಲಿ ಹಾಕುವ ದಿನದಿಂದ ಹಿಡಿದು, ದೇವರು ಸರಗಸ್ತಿ ಹೊರಟು, ಹೊಳೆಗೆ ಹೋಗಿಬರುವ ತನಕ, ಊರಿನ ಎಲ್ಲ ಸಮುದಾಯಗಳು ತಮ್ಮದೇ ಆದ ಚಾಜದೊಂದಿಗೆ ಭಾಗವಹಿಸುತ್ತವೆ. ಕೆಲವು ಊರುಗಳಲ್ಲಿ ಜನರು ಸ್ವಯಂ ನಿರ್ಬಂಧಗಳನ್ನು ವಿಧಿಸಿಕೊಂಡು ಪಾಲಿಸುವರು. ಕೆಲವು ಊರುಗಳಲ್ಲಿ ಹಬ್ಬಮುಗಿವ ತನಕ ಚಪ್ಪಲಿ ಮೆಡುವಂತಿಲ್ಲ. ಕಾಟಿನ ಮೇಲೆ ಮಲಗುವಂತಿಲ್ಲ. ಹೂವು ಮುಡಿಯುವಂತಿಲ್ಲ. ಗಂಡಹೆಂಡತಿ ಕೂಡುವಂತಿಲ್ಲ. ನಶೆಯ ವಸ್ತುವನ್ನು ಕುಡಿಯುವಂತಿಲ್ಲ. ಇವು ಕರ್ಬಲಾ ರಣಭೂಮಿಯಲ್ಲಿ ಮಡಿದವರಿಗೆ ತೋರುವ ಶ್ರದ್ಧೆ ಮತ್ತು ಗೌರವದ ವಿಧಾನಗಳು. ಮೊಹರಮ್ಮಿನ ದಿನಗಳು ಇಡೀ ಊರು ತನ್ನ ಸೃಜನಶೀಲತೆ ಪ್ರಕಟಿಸುತ್ತದೆ. ಅದಕ್ಕೆ ಸಾಕ್ಷಿ ಅಲ್ಲಿ ನಡೆಯುವ ಕುಣಿತ, ಹಾಡು, ಸೋಗುಗಳ ಪ್ರದರ್ಶನು. ಹೀಗೆ ಮೊಹರಂ ಸಾಮುದಾಯಿಕ ಒಗ್ಗಟ್ಟಿನ, ಜನರ ಶ್ರದ್ಧೆ ಮತ್ತು ಸಂಭ್ರಮಗಳ ಮತಾತೀತವಾದ ಆಚರಣೆಯಾಗಿರುವುದು ನಿಜ.
ಆದರೆ ಈ ಆಚರಣೆಯ ಒಳಗೆ ಅನೇಕ ತಾರತಮ್ಯಗಳು ಮಾರುವೇಷದಲ್ಲಿ ಅಡಗಿವೆ. ದೇವರ ಸೇವೆಗಳಲ್ಲಿ ಯಾರ‍್ಯಾರು ಯಾವ್ಯಾವುದನ್ನು ಮಾಡಬೇಕೆಂದು ಅವರವರ ಸಾಮಾಜಿಕ ಹಿನ್ನೆಲೆಯ ಪ್ರಕಾರ ನಿರ್ಧರಿಸಲಾಗಿರುತ್ತದೆ. ಹಬ್ಬದ ಇಡೀ ಯಜಮಾನಿಕೆ, ಫಾತೆಹಾ ಓದುವುದು, ದೇವರನ್ನು ಹಿಡಿಯುವುದು, ತಮ್ಮಟೆ ಬಾರಿಸುವುದು, ಕಸಗುಡಿಸುವುದು, ಕುಳಿ ಅಗೆಯುವುದು-ಇವನ್ನೆಲ್ಲ ಬೇರೆಬೇರೆ ವೃತ್ತಿ ಮತ್ತು ಜಾತಿ ಸಮುದಾಯಕ್ಕೆ ಹಂಚಲಾಗಿದೆ. ಈ ಸೇವೆಗಳನ್ನು ಆಯಾ ಜಾತಿ ಮತ್ತು ಮನೆತನಗಳು ವಂಶ ಪರಂಪರೆಯಿಂದ ಮಾಡಿಕೊಂಡು ಬರಲಾಗಿಎ. ಅದನ್ನು ಆಯಾ ಜಾತಿಯವರು ತಮಗೆ ಸಲ್ಲುವ ಗೌರವವೆಂದೂ ಭಾವಿಸಿರುವರು. ಈ ಸೇವೆ(ಚಾಜ)ಗಳು ಅದಲು ಬದಲಾಗುವುದಿಲ್ಲ. ಊರಿನ ಇತರೆ ಜಾತ್ರೆ ಪರಿಸೆಗಳಲ್ಲಿಯೂ ಇದೇ ಪರಿಯ ಹಂಚಿಕೆ ಇರುತ್ತದೆ. ಈ ಹಂಚಿಕೆ ಸಂಪ್ರದಾಯದಿಂದ ಬಂದ ಆಚರಣೆಗಳನ್ನು ಮಾತ್ರವಲ್ಲ, ಜಾತಿ ಮತ್ತು ಆರ್ಥಿಕ ತಾರತಮ್ಯವನ್ನೂ ಮುಂದುವರೆಸುತ್ತಿರುತ್ತದೆ.
ಮೊಹರಂ ಆಚರಣೆಗಳಲ್ಲೇ ಜೀವಂತವಾದ ಹೆಜ್ಜೆಕುಣಿತವನ್ನು ನೋಡಲು ಕಳೆದ ವರ್ಷ ಸಿರಗುಪ್ಪ ತಾಲೂಕಿನ ಅಗಸನೂರಿಗೆ ಹೋಗಿದ್ದೆ. ಅಲ್ಲಿ ಎಂದಿನಂತೆ ತಮ್ಮಟೆ ಬಾರಿಸುವ ಕೆಲಸವನ್ನು ದಲಿತರೇ ಮಾಡುತ್ತಿದ್ದರು. ಅಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ತಮ್ಮಟೆ ಕಲಾವಿದರಿದ್ದರು. ದುಡಿದು ರಟ್ಟೆಯ ಬಲವುಳ್ಳ ಅವರು ಏಕಕಾಲಕ್ಕೆ ತಮ್ಮಟೆ ಬಾರಿಸುತ್ತಿದ್ದರೆ ಅದರ ಭೀಷಣ ರವಕ್ಕೆ ಮೈಜುಂ ಎಂದಿತು. ಮೂರು ದಿನಗಳ ಕಾಲದ ಕಲಾವಿದರು ತಮ್ಮಟೆ ಬಾರಿಸಿದರು. ಅವರ ತಮ್ಮಟೆಯ ಲಯಕ್ಕೆ ಸರಿಯಾಗಿ ತರುಣರು ಹೆಜ್ಜೆ ಹಾಕಿದರು. ಮನುಷ್ಯ ದೇಹಗಳೇ ಸರಪಳಿಯಂತೆ ಬೆಸೆದುಕೊಂಡು ಒಮ್ಮೆಲೇ ಅಲುಗಿದಂತೆ ನೃತ್ಯವಿತ್ತು. ಕಿರಿದಾದ ಜಾಗದಲ್ಲಿ ದೇಹವನ್ನು ಅಡ್ಡವಾಗಿ ಹಾಯಿಸುತ್ತ ಲಯಬದ್ಧವಾಗಿ ಕುಣಿಯುತ್ತಿದ್ದರು. ಈ ತರುಣಜೀವಗಳು ಕುಣಿತಕ್ಕಾಗಿ ವರ್ಷದಿಂದ ಕಾಯುತ್ತಿದ್ದಂತೆ ಭಾಸವಾಯಿತು. ಮೂರು ದಿನಗಳ ಕಾಲ ಕುಣಿಯಲು ಮತ್ತು ತಮ್ಮಟೆ ಬಡಿಯಲು ಅವರಿಗೆಲ್ಲಿಂದ ಶಕ್ತ್ತಿಯೊ ಬಂತೊ ಎಂದು ಸೋಜಿಗವಾಗಿತು.
ಆದರೆ ಆ ಕುಣಿತದಲ್ಲಿ ದಲಿತ ತರುಣರು ಭಾಗವಹಿಸಿರಲಿಲ್ಲ. ಕುಣಿಯುವಾಗ ಮೈಕೈ ತಾಗುತ್ತದೆಯೆಂದೇ? ಇಡೀ ಊರು ಒಟ್ಟಾಗಿ ಸಂಭ್ರಮದಿಂದ ಹಬ್ಬ ಆಚರಿಸುತ್ತದೆ ಎಂಬುದು ಅರೆಸತ್ಯವಲ್ಲವೆ? ಊರ ಹೋಟೆಲು, ಗುಡಿಗಳಲ್ಲಿ ಇರುವಂತೆ ಮೊಹರಂ ಮಸೂತಿಯಲ್ಲೂ ಅವರಿಗೆ ಒಳಗಿನತನಕ ಪ್ರವೇಶವಿರಲಿಲ್ಲ. ಒಂದು ಅಂತರದಲ್ಲಿ ನಿಂತು ಎಡೆ ಮಾಡಿಸಿಕೊಂಡು ಹೋಗುತಿದ್ದರು. ಹಿಂದೆ ದಲಿತರು ಹೋಟೆಲುಗಳಲ್ಲಿ ತಮಗೂ ಸರಿಸಮವಾಗಿ ಚಹ ತಿಂಡಿ ಕೊಡಬೇಕೆಂದು ಒತ್ತಾಯಿಸಿದ್ದರು. ಅದು ಸಾಧ್ಯವಾಗಿರಲಿಲ್ಲ. ನಮಗೆ ಸಮಾನತೆ ಇಲ್ಲದಿದ್ದರೆ, ನಾವು ತಮಟೆ ಬಾರಿಸುವುದಿಲ್ಲ ಎಂದು ಅವರು ನಿರಾಕರಿಸಿದ್ದರಿಂದ, ಬಳ್ಳಾರಿ ಜಿಲ್ಲೆಯ ಮೂವತ್ತಕ್ಕೂ ಹೆಚ್ಚಿನ ಊರುಗಳಲ್ಲಿ ಮೊಹರಂ ಸಂಭ್ರಮ ಕಡಿಮೆಯಾಗಿದೆ.
ಕೆಲವು ಊರುಗಳಲ್ಲಿ ಮೊಹರಂ ಕೊನೆಯ ದಿನ ಕಂದರಿ ಮಾಡಲಾಗುವುದು. ಆಗ ಅಡುಗೆ ಮಾಡುವವರು ಯಾರು ಉಣ್ಣುವವರು ಯಾರು ಎಂಬುದು ಕೂಡ ನಿರ್ಧಾರವಾಗಿರುತ್ತದೆ. ಅಂಗನವಾಡಿಗಳಲ್ಲಿ ದಲಿತ ಮಹಿಳೆಯರು ಅಡುಗೆ ಮಾಡಿದರೆ ನಮ್ಮ ಮಕ್ಕಳನ್ನು ಕಳಿಸುವುದಿಲ್ಲ ಎಂದು ಕೆಲವು ಕಡೆ ನಿಷೇಧ ಮಾಡಿರುವ ಪದ್ಧತಿಯಂತೆಯೇ ಇದು. ಮೊಹರಂ ಮತ್ತು ಇನ್ನಿತರ ಜಾತ್ರೆಗಳಲ್ಲಿ ಗಾಳಿ ಬಿಡಿಸುವ ಆಚರಣೆಗಳಿವೆ. ಗಾಳಿ ಹಿಡಿದವರು ಸಾಮಾನ್ಯವಾಗಿ ಮಹಿಳೆಯರೇ ಆಗಿರುತ್ತಾರೆ. ಗಾಳಿಬಿಡಿಸುವವರು ಒಳಗಿನ ಗಾಳಿಯನ್ನು ಶಿಕ್ಷಿಸುವ ಭರದಲ್ಲಿ ಮಹಿಳೆಯರಿಗೆ ಕೊಡುವ ದೈಹಿಕ ಹಿಂಸೆ ಭೀಕರವಾಗಿರುತ್ತದೆ. ಅದು ನಮ್ಮ ಕೌಟುಂಬಿಕ ಹಿಂಸೆಯ ವಿಸ್ತರಣೆಯಂತೆ ತೋರುತ್ತದೆ.
ಮೊಹರಮ್ಮಿನ ಹಾಡು ಕುಣಿತ ವಾದನ ಊಟ ಎಲ್ಲದರಲ್ಲೂ ಸಂಭ್ರಮವಿದೆ. ಸೃಜನಶೀಲತೆಯಿದೆ. ಆದರೆ ಇವುಗಳ ಹೊಟ್ಟೆಯಲ್ಲಿ ಜಾತಿ ಮತ್ತು ಲಿಂಗ ತಾರತಮ್ಯಗಳೂ ಫ್ಯೂಡಲ್ ಯಜಮಾನಿಕೆಗಳೂ ಅಲಾಯಿದ ಮಾಡದಂತೆ ಸೇರಿಕೊಂಡಿವೆ. ನಿತ್ಯ ಬದುಕಿನಲ್ಲಿರುವ ತಾರತಮ್ಯ ಹಬ್ಬದದಿನವೂ ಮುಂದುವರೆಯುತ್ತದೆ; ಒಂದೊಮ್ಮೆ ಹಬ್ಬದಲ್ಲಿ ಅದು ಮುರಿದರೆ ನಿತ್ಯಬದುಕಿನಲ್ಲಿ ವರ್ಷವಿಡೀ ಮುಂದುವರೆಯುತ್ತದೆ. ಇದನ್ನು ಮರೆತು ನಾವು ಜಾತ್ರೆ ಉರುಸು ಹಬ್ಬಗಳನ್ನು ಏಕಪಕ್ಷೀಯವಾಗಿ ವರ್ಣಿಸುತ್ತಿದ್ದೇವೆಯೇ? ಅಥವಾ ಗೊತ್ತಿದ್ದೂ ಆತ್ಮವಂಚನೆ ಮಾಡಿಕೊಂಡು ಬರೆಯುತ್ತಿದ್ದೇವೆಯೇ? ಕೆಲವು ಮದುವೆಗಳಿಗೆ ಹೋದಾಗಲೂ ಹೀಗೇ. ಚಪ್ಪರದ ವೈಭವ, ಹೊಸಬಟ್ಟೆಯ ಸರಸರ, ಮಿರುಗುವ ಒಡವೆ, ಊಟದ ರುಚಿಗಳು ಮೈಮರೆಸುತ್ತವೆ. ಒಮ್ಮೆ ಗಂಡಿನ ಕಡೆಯವರು ಎಷ್ಟು ರೊಕ್ಕ ಕಿತ್ತಿರಬಹುದು ಎಂಬ ವಿಚಾರ ಹೊಳೆದೊಡನೆ, ಅಲ್ಲಿನ ಸಿಂಗಾರ ವಿಕಾರವಾಗಿ ಕಾಣತೊಡಗುತ್ತದೆ; ಊಟ ರುಚಿ ಕಳೆದುಕೊಳ್ಳತೊಡಗುತ್ತದೆ. ಉತ್ತರ ಕರ್ನಾಟಕದ ಒಂದು ಊರಿಗೆ ಹೋದಾಗ, ಜೋಳದರೊಟ್ಟಿಯ ಊಟಕ್ಕೆ ಖ್ಯಾತವಾಗಿರುವ ಒಂದು ಖಾನಾವಳಿಗೆ ಗೆಳೆಯರು ಕರೆದೊಯ್ದರು. ನಿಜಕ್ಕೂ ಊಟ ಚೆನ್ನಾಗಿತ್ತು. ಇಷ್ಟು ತೆಳ್ಳನೆಯ ಬಿಸಿರೊಟ್ಟಿ, ಬದನೆ ಪಲ್ಯ ಇಷ್ಟು ಜನಕ್ಕೆ ಹೇಗೆ ಸರಬರಾಯಿ ಮಾಡುತ್ತಿದ್ದಾರೆ ಎಂದು ಅಡುಗೆ ಮನೆಯಲ್ಲಿ ಇಣುಕಿದೆ. ದಪದಪ ರೊಟ್ಟಿ ಬಡಿಯುವ ಸದ್ದು ಬರುತ್ತಿದ್ದ ತಾಣದಿಂದ, ಅಗಾಧವಾಗಿ ಕವಿದಿದ್ದ ಕಟ್ಟಿಗೆ ಒಲೆಯ ಹೊಗೆಯಲ್ಲಿ ಮುಳುಗಿಹೋಗಿದ್ದ ನಾಲ್ವರು ಮಹಿಳೆಯರು ಅಸ್ಪಷ್ಟವಾಗಿ ಕಂಡರು. ಸಿರಿವಂತ ದೇಶಗಳನ್ನು ಏಕಮುಖಿ ವೈಭವೀಕರಿಸುತ್ತ ಹುಟ್ಟಿರುವ ಅನೇಕ ಪ್ರವಾಸಕಥನಗಳನ್ನು ಓದುವಾಗಲೂ ನನಗೆ ಕಸಿವಿಸಿಯಾಗುತ್ತ ಇರುತ್ತದೆ.
ತನ್ಮಯಗೊಳಿಸಬಲ್ಲ ಸಂಭ್ರಮದೊಳಗೆ ಅಡಗಿದ ತಾರತಮ್ಯಗಳು ಕಾಡದೆಹೋದರೆ, ವ್ಯವಸ್ಥೆ ನಿರಾತಂಕ ಮುಂದುವರೆಯುತ್ತದೆ. ಸಂಭಮ್ರದೊಳಗಿನ ವೈರುಧ್ಯ ಮತ್ತು ತಾರತಮ್ಯಗಳನ್ನು ಕೆದಕುತ್ತ ಹೋದರೆ, ಸವಿಯುವ ಮನೋಭಾವ ಭಗ್ನವಾಗುತ್ತದೆ. ಹಾಗೆ ಗಮನಿಸದೆ ಹೋದರೆ ನಿರಾಳವಾಗಿದ್ದರೆ ನಮ್ಮ ಸಂವೇದನೆ ಮುಕ್ಕಾಗಿಬಿಡುತ್ತದೆ.

ಕಾಮೆಂಟ್‌ಗಳಿಲ್ಲ: