ಶುಕ್ರವಾರ, ಮೇ 24, 2013

ಅಸ್ತಂಗತದ ಹಾದಿಯಲ್ಲಿ ‘ಸೂತ್ರದ ಬೊಂಬೆಯಾಟ’....

ಅಸ್ತಂಗತದ ಹಾದಿಯಲ್ಲಿ ‘ಸೂತ್ರದ ಬೊಂಬೆಯಾಟ’....

- ಕುಶಲ

ಕರ್ನಾಟಕ ಜನಪದ ಕಲೆಗಳಲ್ಲಿ ಅತ್ಯಂತ ಪುರಾತನ ಕಲೆಗಳ ಸಾಲಿಗೆ ಸೇರಿರುವ ಕಲೆ ‘ಸೂತ್ರದ ಬೊಂಬೆ ಯಾಟ’. ಈಗ ಬೊಂಬೆಯಾಟ ನೋಡುವುದೆಂದರೆ ‘ದುರ್ಬಿನ್’ ಹಿಡಿದು ಹುಡುಕಾಡುವ ಪರಿಸ್ಥಿತಿ ಬಂದೊದಗಿದೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಗುಂಗಿನಲ್ಲಿರುವ ಜನರಿಗೆ ಹಿಂದಿನ ಜನಪದ ಕಲೆಗಳ ಚಿಂತನೆ ಮಾಡುವಷ್ಟು ತಾಳ್ಮೆ ಇಲ್ಲದಿರುವುದರಿಂದ ಕರ್ನಾಟಕದ ಅನೇಕ ಜನಪದ ಕಲೆಗಳು ಹುಟ್ಟಿಸಿದ ಜನತೆಯೊಂದಿಗೇ ಕಾಲ್ಕಿತ್ತರೆ, ಉಳಿದವುಗಳು ತಮ್ಮ ಕೊನೆಯ ಗಳಿಗೆಯನ್ನು ಎಣಿಸುತ್ತಾ ಕುಳಿತಿವೆ! ಈಗ ಇವುಗಳ ಪಾಲಿಗೆ ಸೂತ್ರದ ಬೊಂಬೆಯಾಟವು ಸೇರುತ್ತಿರುವುದು ಶೋಚನೀಯ.ಈ ಸೂತ್ರದ ಬೊಂಬೆಯಾಟದ ಸುತ್ತ ಒಂದು ಸುತ್ತು. ಜಾನಪದ ಲೋಕದಲ್ಲಿ ಅತ್ಯಂತ ಕೈಚಳಕಯುತ, ಪರಿಣಾಮ ಕಾರಿ, ಸೃಜನಾತ್ಮಕ, ಸುಗ್ಗಿಯ ಕಾಲದಲ್ಲಿ ಹಳ್ಳಿಯ ಜನರು ತಮ್ಮ ಸಂತೋಷವನ್ನು ವ್ಯಕ್ತ ಪಡಿಸುವ ಕಲೆಯೆಂದರೆ ‘ಸೂತ್ರದ ಬೊಂಬೆಯಾಟ’.ದಾರದ ಹಿಡಿತದಲ್ಲಿ ಅಡಿಸಿದಂತೆ ಕುಣಿಯುವ ಬೊಂಬೆಯೇ ಸೂತ್ರದ ಬೊಂಬೆ.
ತೆರೆಯ ಮರೆಯಲ್ಲಿ ನಿಂತು ಆಡಿಸುವಾತನ ಕೈಚಳಕದಂತೆ ಕುಣಿಯುವ ಬೊಂಬೆ ನೋಡುಗರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.ಬೊಂಬೆಯ ದಾರಗಳು ನೋಡುಗರಿಗೆ ಎಳ್ಳಷ್ಟು ಕಾಣದು.ಮನೋರಂಜನೆಗಾಗಿ ಹುಟ್ಟಿಕೊಂಡ ಸೂತ್ರದ ಬೊಂಬೆಯಾಟ ಜನಾಕರ್ಷಣೆಯ ಕೇಂದ್ರಬಿಂದುವಾಗಿತ್ತು. ಆದರೆ ಆಧುನಿಕತೆಯ ‘ಬಿರುಗಾಳಿ’ ಬೀಸುತ್ತಿದ್ದಂತೆ ಇದು ಧೂಳುಮಯವಾಗಲಾರಂಭಿಸಿತು.ಈ ಕಲೆಯನ್ನು ಅನೇಕ ಮಂದಿ ತಮ್ಮ ಜೀವನೋಪಾಯಕ್ಕಾಗಿಯೂ ಸ್ವೀಕರಿಸಿದ್ದರು. ಆದರೆ ಇಂತಹ ಜನಾಂಗಕ್ಕೆ ಎಂದು ಸೀಮಿತವಾಗಿರಲಿಲ್ಲ.ಬೊಂಬೆಯಾಟದಲ್ಲಿ ಅನೇಕ ಪ್ರಕಾರಗಳಿದ್ದು ತೊಗಲು ಬೊಂಬೆಯಾಟ,ಸೂತ್ರದ ಗೊಂಬೆಯಾಟ,ಕಟ್‌ಪುಲ್ಲೆ,ತೋಲ್ಪವ ಕೂತ್ತು ಮೊದಲಾದವುಗಳು ಭಾರತದಲ್ಲಿ ಪ್ರಚಲಿತದಲ್ಲಿರುವ ಬೊಂಬೆಯಾಟಗಳು.
ಸೂತ್ರದ ಬೊಂಬೆಯಾಟ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದ ಜನಪದ ಕಲೆಗಳಲ್ಲೊಂದು. ಇದರೊಂದಿಗೆ ತೊಗಲು ಗೊಂಬೆಯಾಟ ಕರ್ನಾಟಕಕ್ಕೆ ವಲಸೆ ಬಂದು ಇಲ್ಲಿಯ ಕಲೆಗಳ ಲ್ಲೊಂದಾಗಿ ಸೇರಿತು.ಬೊಂಬೆಗಳನ್ನು ಸಾಗುವಾನಿ, ಹತ್ತಿ ಮೊದಲಾದ ಹಗುರವಾದ ಮರಗಳಿಂದ ಗೊಂಬೆಗಳನ್ನು ತಯಾರಿಸಲಾಗುತ್ತದೆ. ಇವನ್ನು ಗಂಡು-ಹೆಣ್ಣು, ನಕಲಿ ಬೊಂಬೆ ಎಂದು ಮೂರು ಭಾಗಗಳಾಗಿ ವಿಭಜಿಸಲಾಗುತ್ತದೆ. ಕೀಲು ಅಥವಾ ಗಟ್ಟಿಯಾದ ದಾರಗಳಿಂದ ಕೈ, ಕಾಲು, ಕುತ್ತಿಗೆಯನ್ನು ಪ್ರತ್ಯೇಕವಾಗಿ ಜೋಡಿಸಲಾಗುತ್ತದೆ.ಈ ದಾರಗಳ ತುದಿಗಳನ್ನು ಒಂದು ಅಡ್ಡಪಟ್ಟಿಗೆ ಬಿಗಿಯಲಾಗುತ್ತದೆ.ಯಕ್ಷಗಾನದ ಪಾತ್ರಗಳಿರುವಂತೆಯೇ ವಸ್ತ್ರಾಲಂಕಾರ ಹಾಗೂ ರೌದ್ರ, ಸೌಮ್ಯ, ಕೋಮಲ ಸ್ವಭಾವಕ್ಕೆ ಸರಿಯಾದ ಬಣ್ಣಗಳನ್ನು ಬೊಂಬೆಗಳಿಗೆ ಲೇಪಿಸಲಾಗುತ್ತದೆ.

ಪಾತ್ರಗಳಿಗೆ ತಕ್ಕಂತೆ ಆಯುಧಗಳನ್ನು ಕೈಗಳಿಗೆ ಹೊಂದಿಸಲಾಗುತ್ತದೆ. ಗಂಡು ಬೊಂಬೆಗಳನ್ನು ಕುಣಿಸುವಾಗ ಅದಕ್ಕೊಪ್ಪುವ ವೀರ, ಗಂಭೀರ ನಿಲುವುಗಳು ಪ್ರದರ್ಶಿತವಾಗುವಂತೆ ಮತ್ತು ಹೆಣ್ಣು ಬೊಂಬೆಗಳನ್ನು ಕುಣಿಸುವಾಗ ನಾಚಿಕೆ, ವಯ್ಯುರಗಳನ್ನು ತೋರಿಸುವಂತೆ ಸೂತ್ರಧಾರನು ತನ್ನ ಕೈಯ ಚಮತ್ಕಾರವನ್ನು ಹೊರಸೂಸುತ್ತಾನೆ.ಬೊಂಬೆಯಾಟವಾಡಿಸುವುದರಿಂದ ದನಕರುಗಳಿಗೆ ಬರುವ ರೋಗದ ನಿವಾರಣೆ, ಮಳೆ, ಸಂತಾನ ಪ್ರಾಪ್ತಿ, ಎಂಬ ನಂಬಿಕೆ ಗ್ರಾಮಾಂತರ ಜನರಲ್ಲಿದೆ.ಜಾತ್ರೆ ಉತ್ಸವಗಳಲ್ಲಿ ಆಟ ಆಡಿಸಲಾಗುತ್ತದೆ.ಮದುವೆಯ ಸಂದರ್ಭದಲ್ಲಿ ಮನೋರಂಜನೆಗಾಗಿ ಬೊಂಬೆಯಾಟವನ್ನು ನಡೆಸಲಾಗುತ್ತದೆ.ಇದೊಂದು ಕೈಚಳಕದಿಂದ ಆಡಿಸುವಂತಹ ಕುತೂಹಲಕಾರಿ ಪ್ರದರ್ಶನ. ಪೌರಾಣಿಕ ಕಥೆ, ಜಾನಪದ ಕಥೆಗಳನ್ನು ಕೂಡಾ ಇಲ್ಲಿ ಪ್ರದರ್ಶಿಸಲಾಗುತ್ತದೆ. ಹಾಸ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುವುದರಿಂದ ಕಲಾ ಸಕ್ತರನ್ನು ರಂಜಿಸುತ್ತದೆ.
ರಂಗಸ್ಥಳದಲ್ಲಿ ರಂಗಕ್ಕೆ ಬಿಳಿಯ ಪಂಚೆಯೊಂದನ್ನು ರಂಗದ ಅಡ್ಡಕ್ಕೆ ಕಟ್ಟಿ ಪರದೆಯ ಹಿಂದೆ ಸುಮಾರು ಆರೇಳು ಮಂದಿ ಕಲಾವಿದರು ಕುಳಿತುಕೊಂಡು, ಒಬ್ಬ ಏಕಕಾಲದಲ್ಲಿ ಎರಡು ಬೊಂಬೆಗಳನ್ನೂ ಆಡಿಸಬಲ್ಲ. ಸೂತ್ರದ ಕಡ್ಡಿಗಳನ್ನು ಕೈಬೆರಳಿಗೆ ಸಿಕ್ಕಿಸಿ ಕೊಂಡು ಕೈಚಳಕದಿಂದ ಕುಣಿಸಲಾಗುತ್ತದೆ.ಪ್ರತಿಯೊಂದು ಸಂದರ್ಭದಲ್ಲಿಯೂ ಬಹಳ ಏಕಾಗ್ರತೆಯಿಂದ ಕಾರ್ಯ ನಿಭಾಯಿಸಬೇಕಾಗುತ್ತದೆ.ಕಥೆಗಳಿಗನುಸಾರವಾಗಿ ಬೊಂಬೆಗೆ ಜೀವ ತುಂಬುವ ಜವಾಬ್ದಾರಿ ಆತನದ್ದಾಗಿರುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ನಶಿಸುತ್ತಿರು ವಂತಹ ಜನಪದ ಕಲೆಗಳ ಬಗ್ಗೆ ಎಲ್ಲರೂ ಗಮನಹರಿಸಿ ಇದರ ಬಗ್ಗೆ ಆಳವಾದ ಅಧ್ಯಯನ ನಡೆಸಬೇಕಾಗಿದೆ.ಜನಪದ ಸಾಹಿತ್ಯವು ಅತ್ಯಂತ ಕುತೂಹಲಕಾರಿಯಾಗಿದ್ದು ಆ ಸಾಹಿತ್ಯದ ಸಂಗ್ರಹವೂ ಕೂಡಾ ಆಗಬೇಕಿದೆ. ನಾಶದಂಚಿನಲ್ಲಿರುವ ಜನಪದ ಕಲೆಗಳನ್ನು ಕೊಲೆ ಮಾಡದೆ ಅದಕ್ಕೆ ಮತ್ತಷ್ಟು ಜೀವ ತುಂಬುವ ಕಾರ್ಯವನ್ನು ಮಾಡಬೇಕಾದ ಜವಾ ಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ.

ಕಾಮೆಂಟ್‌ಗಳಿಲ್ಲ: