ಶುಕ್ರವಾರ, ಜೂನ್ 22, 2018

ಮೈತ್ರಿಕೂಟಗಳ ಹೊರಳುದಾರಿಗಳು


   ಅನುಶಿವಸುಂದರ್ 

೨೦೧೯ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ದೇಶದೊಳಗೆ ಯಾವುದೇ ಬಗೆಯ ರಾಜಕೀಯ ಸಮೀಕರಣಗಳೂ ಸಹ ಸಂಭವಿಸಬಹುದು.

ಕೇವಲ ಒಂದು ತಿಂಗಳ ಹಿಂದಿನ ಮಾತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿರುವ ಬಿಜೆಪಿಯ ಚುನಾವಣ ರಣತಂತ್ರ ಮತ್ತು ರಣಯಂತ್ರಗಳನ್ನು ಯಾರೂ ಸೋಲಿಸಲು ಸಾಧ್ಯವಿಲ್ಲವೆಂದು ನಂಬಲಾಗಿತ್ತು. ಸಿಪಿಎಂ ಪಕ್ಷವು ಆಳವಾಗಿ ಬೇರುಬಿಟ್ಟಿದ್ದ ತ್ರಿಪುರಾವನ್ನು ಕೇಸರಿಯು ಗೆದ್ದುಕೊಂಡಿತು ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡುಗಳಲ್ಲೂ ಇತರ ಪಕ್ಷಗಳ ಜೊತೆಗೆ ಚತುರ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಆದರೆ ಅದಾದ ಕೆಲವೇ ವಾರಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಲೋಕಸಭಾ ಉಪಚುನಾವಣೆಗಳಲ್ಲಿ ಬಿಜೆಪಿಯ ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರತಿನಿಧಿಸುತ್ತಿದ್ದ ಗೋರಖ್ಪುರ್ ಲೋಕಸಭಾ ಕ್ಷೇತ್ರದಲ್ಲೂ ಮತ್ತು ರಾಜ್ಯದ ಉಪಮುಖ್ಯಮಂತ್ರಿ ಪ್ರತಿನಿಧಿಸುತ್ತಿದ್ದ ಫುಲ್ಪುರ್ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಹೀನಾಯವಾದ ಸೋಲುಂಡಿತು. ಚುನಾವಣಾ ಪಂಡಿತರ ಪ್ರಕಾರ ಬಿಎಸ್ಪಿ ಮತ್ತು ಎಸ್ಪಿ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿಯನ್ನು ಸಾಧಿಸುವಲ್ಲಿ ಯಶಸ್ವಿಯಾದದ್ದೇ ಎರಡು ಕ್ಷೇತ್ರಗಳಲ್ಲಿ ಚುನಾವಣಾ ಗಣಿತ ಬದಲಾಗಲು ಕಾರಣ. ಬಿಜೆಪಿಯ ಸೋಲಿಗೆ ಇದೊಂದೇ ಪ್ರಧಾನವಾದ ಕಾರಣವಾಗಿರದಿದ್ದರೂ ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳು ಒಟ್ಟಾಗಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗಿರುವುದು ವಿರೋಧಪಕ್ಷಗಳಲ್ಲಿ ಹೊಸ ಹುರುಪನ್ನು ಹುಟ್ಟುಹಾಕಿರುವುದಂತೂ ನಿಜ. ಅಲ್ಲದೆ, ಇದೇ ಹುಮ್ಮಸ್ಸಿನಲ್ಲಿ ೨೦೧೯ರ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಲು ಬೇಕಾದ ರಾಜಕಿಯ ಮೈತ್ರಿಕೂಟಗಳನ್ನು ರಚಿಸಿಕೊಳ್ಳುವ ಮಾತುಕತೆಗಳು ಪ್ರಾರಂಭವಾಗಿವೆ. ಬೆಳವಣಿಗೆಗಳು ಎನ್ಡಿಎ ಮೈತ್ರಿಕೂಟದೊಳಗಿನ ಬಿಜೆಪಿಯ ಮೇಲಾಧಿಪತ್ಯದಲ್ಲಿ ಯಾವುದಾದರೂ ಬದಲಾವಣೆಯನ್ನು ತರಬಲ್ಲದೆ ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೆ ಹೊಸ ಮತ್ತು ಹಳೆಯ ಮೈತ್ರಿಕೂಟಗಳಲ್ಲಿ ಕಾಂಗ್ರೆಸ್ಸಿನ ಸ್ಥಾನವೇನಾಗಿರುತ್ತದೆಂಬ ಪ್ರಶ್ನೆಯೂ ಬಗೆಹರಿದಿಲ್ಲ

ವಿರೋಧಪಕ್ಷಗಳ ಮಟ್ಟಿಗೆ ಇದರಿಂದ ಹಲವು ಹೊಸ ಅವಕಾಶಗಳು ತೆರೆದುಕೊಂಡಿರುವುದಂತೂ ಸತ್ಯ. ಅದರಲ್ಲಿ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ರಂಗವೊಂದರ ಸಾಧ್ಯತೆಯೂ ಒಂದು. ಅಂತಹ ಬೆಳವಣಿಗೆಯ ಸಾಧ್ಯತೆಯ ಬಗ್ಗೆ ಬಿಜೆಪಿಯೇನೂ ತಲೆಕೆಡಿಸಿಕೊಂಡಿಲ್ಲ. ಏಕೆಂದರೆ ಅದು ಕಾಂಗ್ರೆಸ್ಸಿನ ಓಟುಗಳನ್ನು ಒಡೆಯುತ್ತದೆಂಬ ಲೆಕ್ಕಾಚಾರ ಅದಕ್ಕಿದೆ. ಆದರೆ ಬಿಜೆಪಿಯು ಸಮಸ್ಯೆ ಎದುರಿಸುತ್ತಿರುವುದು ಕಾಂಗ್ರೆಸ್ಸಿನಿಂದ ಮಾತ್ರವಲ್ಲ. ಉದಾಹರಣೆಗೆ ಇದೇ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಕರ್ನಾಟಕದ  ದಕ್ಷಿಣ ಭಾಗದಲ್ಲಿ ಬಿಜೆಪಿಗೆ ಅಂಥ ನೆಲೆಯೇ ಇಲ್ಲ. ಅದು ಸಾಂಪ್ರದಾಯಿಕವಾಗಿ ಜೆಡಿಎಸ್ ಬಲವಾಗಿರುವ ಪ್ರದೇಶ. ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಎಸ್ಎಂ ಕೃಷ್ಣಾ ಅವರನ್ನು ಬಿಜೆಪಿಗೆ ಸೇರಿಸಿಕೊಂಡರೂ ಪ್ರದೇಶದ ಒಕ್ಕಲಿಗರ ಮನಗೆಲ್ಲಲು ಬಿಜೆಪಿಗೆ ಸಾಧ್ಯವಾಗಿಲ್ಲ. ಅಲ್ಲಿಯ ಒಕ್ಕಲಿಗರ ಜಾತಿ ನಿಷ್ಟತೆಯು ಹಿಂದೂ ಧಾರ್ಮಿಕ ಗುರುತಿಗಿಂತ ಮಿಗಿಲಾದದ್ದಾಗಿದೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದು ಅಲ್ಲಿ ಕಾಂಗ್ರೆಸ್ಸ್ ಓಟುಗಳನ್ನು ಕೀಳುವ ಬಗ್ಗೆ ಬಿಜೆಪಿ ಚಿಂತಿಸಬೇಕಿಲ್ಲ. ಆದರೆ ಇತ್ತೀಚಿನ ಉಪ ಚುನಾವಣೆಯಲ್ಲಿ ಸ್ಪಷ್ಟವಾಗಿರುವಂತೆ ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿಗಳ ಮೈತ್ರಿಕೂಟದಿಂದ ಉದ್ಭವಿಸಬಹುದಾದ ಬಲವಾದ ಪ್ರತಿರೋಧವನ್ನು ಬೆಜೆಪಿ ಎದುರಿಸಬೇಕಾಗುತ್ತದೆ. ೨೦೧೪ ಮತ್ತು ೨೦೧೭ರ ಚುನಾವಣೆಗಳಲ್ಲಿ ಬಿಜೆಪಿಯು ಒಂದಷ್ಟು ದಲಿತ-ಜಾತವರ ಮತ್ತು ಯಾದವರ ಓಟುಗಳನ್ನು ವಿಶಾಲ ಹಿಂದೂ ಚಾಮರದಡಿ ಒಂದುಗೂಡಿಸುವಲ್ಲಿ ಯಶಸ್ವಿಯಾಗಿದ್ದರೂ ಇಲ್ಲಿಯೂ ಜಾತಿ ಒಲವುಗಳು ಕೋಮುವಾದಿ ವಿಭಜನೆಗಳನ್ನು ಮೆಟ್ಟಿನಿಲ್ಲಬಹುದು

ಹೀಗಾಗಿ ಕಾಂಗ್ರೆಸ್ ನೇತೃತ್ವದ ಜಾತ್ಯತೀತ ಮೈತ್ರಿಕೂಟವೊಂದು ರೂಪುಗೊಳ್ಳುವ ಸಾಧ್ಯತೆ ಕಡಿಮೆಯೆಂದೇ ಕಾಣುತ್ತಿದೆಬದಲಿಗೆ ಒಂದು ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ರಂಗವೊಂದು ರೂಪುಗೊಳ್ಳುವ ಸಾಧ್ಯತೆಯೇ ನಿಚ್ಚಳವಾಗಿದೆ. ಏಕೆಂದರೆ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್ಗಡ್, ಹಿಮಾಚಲಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ಕಾಂಗ್ರೆಸ್ಸಿಗೆ ಇನ್ನು ಉತ್ತಮ ನೆಲೆ ಇರುವುದು ನಿಜವಾದರೂ ಮಿಕ್ಕ ರಾಜ್ಯಗಳಲ್ಲಿ ಅದರ ನೆಲೆ ಕುಸಿದಿದೆ. ಹೀಗಾಗಿ ಚುನಾವಣೆಯ ದೃಷ್ಟಿಯಿಂದ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶ, ಬಿಹಾರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳವನ್ನು ಗಮನಿಸುವುದಾದರೆ ಕಾಂಗ್ರೆಸ್ ಮುಖ್ಯವಾಗುವುದು ಕೇವಲ ಮಹಾರಾಷ್ಟ್ರದಲ್ಲಿ. ಅದೂ ಎನ್ಸಿಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಲ್ಲಿ ಮಾತ್ರ.

ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ ಪಕ್ಷದ ಭವಿಷ್ಯವೇನು? ಒಂದು ಸಾಧ್ಯತೆಯೆಂದರೆ ತನ್ನ ರಾಜಕೀಯ ಪ್ರಭಾವವು ಇಳಿಮುಖವಾಗಿದೆಯೆಂಬ ವಾಸ್ತವನ್ನು ಅರ್ಥಮಾಡಿಕೊಂಡು ಕಾಂಗ್ರೆಸ್ಸೇತರ-ಬಿಜೆಪಿಯೇತರ ರಂಗವನ್ನು ಬೆಂಬಲಿಸುವುದು. ಆದರೆ ಕಾಂಗ್ರೆಸ್ ಇದನ್ನು ಒಪ್ಪಿಕೊಳ್ಳುವುದು ಸುಲಭದ ವಿಷಯವಲ್ಲ. ಮಾತ್ರವಲ್ಲ. ಇಂಥಾ ಒಂದು ಸಾಧ್ಯತೆಯು ಸಂಭವಿಸುವುದು ಅಷ್ಟು ಸರಳವಾಗಿಲ್ಲ. ಏಕೆಂದರೆ ಇತ್ತೀಚೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಜೊತೆ ಸೇರಿ ಒಂದು ಫೆಡರಲ್ ರಂಗದ ಪ್ರಸ್ತಾಪವನ್ನು ಮುಂದಿಟ್ಟಿರುವ ತೆಲಂಗಾಣದ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಜ್ಯ ಸಮಿತಿಯ (ಟಿಆರ್ಎಸ್) ನಾಯಕರೂ ಆಗಿರುವ ಕೆ. ಚಂದ್ರಶೇಖರ್ ರಾವ್ ಅವರಿಗೆ ಕಾಂಗ್ರೆಸ್ಸಿಗಿಂತಲೂ ಬಿಜೆಪಿಯ ಮೇಲೆ ಹೆಚ್ಚಿನ ಒಲವು. ಲೋಕಸಭೆಯಲ್ಲೂ ಅತ್ಯಂತ ಪ್ರಮುಖ ಶಾಸನಾತ್ಮಕ ವಿಚಾರಗಳಲ್ಲಿ ಟಿಆರ್ಎಸ್ ಪಕ್ಷವು ಬಿಜೆಪಿಯ ಪರವಾದ ನಿಲುವನ್ನೇ ತೆಗೆದುಕೊಂಡಿದೆ. ಟಿಆರ್ಎಸ್ ಮತ್ತು ಕಾಂಗ್ರೆಸ್ಸು ತೆಲಂಗಾಣದಲ್ಲಿ ಒಟು ಪಡೆಯಲು ನೆಚ್ಚಿಕೊಂಡಿರುವ ಮತದಾರರ ನೆಲೆಯೂ ಕೂಡಾ ಒಂದೇ ಆಗಿದೆ. ಹೀಗಾಗಿ ತೆಲಂಗಾಣದಲ್ಲಿ ಅತಿ ಹೆಚಿರುವ ಮುಸ್ಲಿಂ ಮತದಾರರನ್ನು ತನ್ನ ಕಡೆಗೆ ಗೆದ್ದುಕೊಳ್ಳಲು ಅದು ಕಾಂಗ್ರೆಸ್ಸಿಗೆ ಸರಿಸಮವಾದ ಪ್ರದರ್ಶನಗಳಲ್ಲಿ ತೊಡಗಿಕೊಳ್ಳುತ್ತದೆಯೇ ವಿನಃ ತನ್ನ ನೆಲೆಯನ್ನು ಮಾತ್ರ ಬಿಟ್ಟುಕೊಡಲಾರದು. ಅದೇರೀತಿ ಎಸ್ಪಿ ಮತ್ತು ಬಿಎಸ್ಪಿಗಳು ಸಹ ಕಾಂಗ್ರೆಸ್ಸನ್ನು ಜೊತೆಸೇರಿಸಿಕೊಳ್ಳುವ ಯಾವ ಉತ್ಸಾಹವನ್ನೂ ತೋರುತ್ತಿಲ್ಲ. ಕಾಂಗ್ರೆಸ್ಸನ್ನು ತಮ್ಮ ಜೊತೆಗೂಡಿಸಿಕೊಂಡರೆ ಅದು ಎಷ್ಟು ಪ್ರಮಾಣದ ರಾಜಕೀಯ ಬಂಡವಾಳವನ್ನು ತರಬಹುದು ಎಂಬ ಲೆಕ್ಕಾಚಾರವನ್ನು  ಪಕ್ಷಗಳು ಹಾಕುತ್ತಿವೆ. ೨೦೧೯ರ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ಸು ಬಿಜೆಪಿಯನ್ನು ಸೋಲಿಸಿ ಏಕಮಾತ್ರ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆಯೇ? ಹಾಗಿಲ್ಲದಿದ್ದಲ್ಲಿ ಯಾವ ನೆಲೆಯಲ್ಲಿ ನಿಂತು ಅದು ಬಿಜೆಪಿ ವಿರೋಧಿ ಪರ್ಯಾಯದ ನಾಯಕತ್ವದ ದಾವೇದಾರಿಕೆಯನ್ನು ಮಾಡುತ್ತದೆ? ಆದರೆ  ಒಂದೊಮ್ಮೆ ಕಾಂಗ್ರೆಸ್ ಕರ್ನಾಟಕದಲ್ಲಿ ತನ್ನ ಸರ್ಕಾರವನ್ನು ಉಳಿಸಿಕೊಂಡು ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಮಧ್ಯಪ್ರದೇಶ, ಚತ್ತೀಸ್ಗಡ್, ರಾಜಸ್ಥಾನ ಮತ್ತು ಮಿಜೋರಾಮ್ ರಾಜ್ಯಗಳಲ್ಲಿ ಕನಿಷ್ಟ ಎರಡು ರಾಜ್ಯಗಳಲ್ಲಿ ಚುನಾವಣೆಯಲ್ಲಿ ಗೆದ್ದರೆ ಸನ್ನಿವೇಶವೂ ಸಹ ಬದಲಾಗಬಹುದು.

ಒಂದೆಡೆ ವಿರೋಧ ಪಕ್ಷಗಳು ಇನ್ನೂ ಒಗ್ಗಟ್ಟಾಗಿ ಕಾರ್ಯಾಚರಣೆ ರೂಪಿಸಲು ಹೆಣಗಾಡುತ್ತಿರುವುದು ನಿಜವಾದರೂ ಉತ್ತರಪ್ರದೇಶ ಮತ್ತು ಬಿಹಾರಗಳಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಗಳಂತೂ ಬಿಜೆಪಿಯನ್ನು ಚುನಾವಣೆಗಳಲ್ಲಿ ಸೋಲಿಸಲು ಸಾಧ್ಯವೇ ಇಲ್ಲವೆಂಬ ಅದರ ಪ್ರತಿಷ್ಟೆಗೆ ಕುಂದುಂಟು ಮಾಡಿದೆಪ್ರತಿಷ್ಟಿತ ಗೋರಖ್ಪುರ್ ಮತ್ತು ಫುಲ್ಪುರ್ ಕ್ಷೇತ್ರಗಳಲ್ಲಿ  ಸೋಲುಂಡರೂ ನರೇಂದ್ರ ಮೋದಿಯವರೂ ಮಾತ್ರ ಎನ್ಡಿಎ ಮಿತ್ರಕೂಟದ ಸದಸ್ಯ ಪಕ್ಷಗಳ ನಡುವೆ ಸಮಾಲೋಚನೆಯನ್ನು ವ್ಯವಸ್ಥಿತಗೊಳಿಸಬಲ್ಲ ಒಂದು ಸ್ಟೀರಿಂಗ್ ಸಮಿತಿಯನ್ನು ರಚಿಸಲು ಸಹ ಒಪ್ಪುತ್ತಿಲ್ಲ. ವಾಸ್ತವವಾಗಿ ಅಟಲ್ ಬಿಹಾರಿ ವಾಜಪಾಯಿಯವರು ಅಧಿಕಾರದಲ್ಲಿದ್ದಾಗ ಮಿತ್ರಕೂಟದ ನಡುವಿನ ಸಮಾಲೋಚನೆಗೆ ಅಂಥ ಒಂದು ಸಮಿಯಿತನ್ನು ರಚಿಸಿದ್ದರು. ಎಲ್ಲ ವಿದ್ಯಮಾನಗಳ ಪರಿಣಾಮವಾಗಿ ತೆಲುಗು ದೇಶಂ ಪಕ್ಷ ಎನ್ಡಿಎ ಯಿಂದ ಹೊರನಡೆದಿದ್ದರೆ ಇತರ ಅಂಗಪಕ್ಷಗಳು ತಮ್ಮ ಅಸಮಾಧಾನಗಳನ್ನು ಬಹಿರಂಗವಾಗಿ ಹೊರಹಾಕಲು ಪ್ರಾರಂಭಿಸಿವೆ. ಪಕ್ಷಗಳು ಸದನದಲ್ಲಿ ಬಿಜೆಪಿಗಿರುವ ಬಹುಮತವನ್ನು ಅಲ್ಲಾಡಿಸಲು ಸಾಧ್ಯವಿಲ್ಲವಾದರೂ ಅವುಗಳಿಗೆ ತಮ್ಮದೇ ಆದ ಜಾತಿ ಸಮುದಾಯಗಳ ಬೆಂಬಲದ ನೆಲೆಯಿದ್ದು ಮುಂದೊಮ್ಮೆ ಸಂಖ್ಯೆಯ ಕೊರತೆಯುಂಟಾದಾಗ ಮಹತ್ವದ ಪಾತ್ರವನ್ನು ವಹಿಸುತ್ತವೆ.

ಹೀಗಾಗಿ ಒಂದು ಬಿಜೆಪಿ ವಿರೋಧಿ ಮೈತ್ರಿಕೂಟಕ್ಕೆ ಕಾಂಗ್ರೆಸ್ ನಾಯಕತ್ವ ವಹಿಸಬಹುದಾದ ಸಾಧ್ಯತೆ ಮತ್ತು ತನ್ನ ಎನ್ಡಿಎ ಒಕ್ಕೂಟದ ಸದಸ್ಯಗಣವನ್ನು ಒಟ್ಟಾಗಿರಿಸಿಕೊಳ್ಳಬಲ್ಲ ಬಿಜೆಪಿಯ ಸಾಮರ್ಥ್ಯಗಳೆರಡನ್ನೂ ಮುಂದೆ ಬರಲಿರುವ ಹಲವು ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ನಿರ್ಧರಿಸಲಿವೆ. ಚುನಾವಣೆಗಳು ಕೇಂದ್ರ ಸರ್ಕಾರದ ಕಾರ್ಯವೈಖರಿಯ ಮೇಲಿನ ಜನಮತಗಣನೆಯಾಗಿರುತ್ತದೆ. ಅಷ್ಟು ಮಾತ್ರವಲ್ಲ. ಚುನಾವಣೆಗಳನ್ನು ಯಾವುದೇ ಸ್ಥಳಿಯ ನಾಯಕರ ವರ್ಚಸ್ಸಿನಡಿಯಲ್ಲಿ ನಡೆಸದೆ ಮೋದಿಯವರ ಕೇಂದ್ರೀಯ ನಾಯಕತ್ವದಡಿಯಲ್ಲಿ ನಡೆಸುವುದಾಗಿ ಬಿಜೆಪಿಯು ಘೊಷಿಸಿರುವುದರಿಂದ ಚುನಾವಣೆಗಳು ಮೋದಿಯ ಜನಪ್ರಿಯತೆಯ ಮಾಪನವನ್ನೂ ಮಾಡಲಿವೆ. ಜೊತೆಗೆ ಅಮಿತ್ ಶಾರ ಚುನಾವಣ ತಂತ್ರೋಪಾಯಗಳ ಪರೀಕ್ಷೆಯೂ ಆಗಲಿದೆ. ಹೀಗಾಗಿ ರಾಜಕೀಯ ಭವಿಷ್ಯ ಇನ್ನೂ ಅನಿಶ್ಚಿತವಾಗಿಯೇ ಇದೆ.

ಕೃಪೆ: Economic and Political Weekly,Mar 24,  2018. Vol. 53. No.12
                                                                                             
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )