ಮಂಗಳವಾರ, ಡಿಸೆಂಬರ್ 31, 2013

ಲೈಫ್ ಆಫ್ ಗಾದರಿ ಪಾಲನಾಯಕ


-ಅರುಣ್ ಜೋಳದಕೂಡ್ಲಿಗಿ

‘ಲೈಫ್ ಆಫ್ ಗಾದರಿ ಪಾಲನಾಯಕ’ ಪರಿಚಯಕ್ಕೂ ಮುನ್ನ ನಿಮ್ಮ ಗಮನವನ್ನು ಒಂದಷ್ಟು ಹಿಂದಕ್ಕೆ ಒಯ್ದು, ‘ಲೈಫ್ ಆಫ್ ಪೈ’ ಗೆ ಜೋಡಿಸುತ್ತೇನೆ. ಆಂಗ್ ಲೀ ನಿರ್ದೇಶನದ, ಮಾನ್ ಮಾರ್ಟೆಲ್ನ ಕೃತಿ ಆಧಾರಿತ ‘ಲೈಫ್ ಆಫ್ ಪೈ’ ಚಿತ್ರ ೨೦೧೩ ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಿರ್ದೇಶನ ಸೇರಿದಂತೆ ನಾಲ್ಕು ಪ್ರಶಸ್ತಿಗಳನ್ನು ಗಳಿಸಿತು. ಪಾಂಡಿಚೆರಿಯಲ್ಲಿದ್ದ ಪ್ರಾಣಿ ಸಂಗ್ರಹಾಲಯವನ್ನು ತಂದೆ, ತಾಯಿ ಮತ್ತು ಇಬ್ಬರು ಮಕ್ಕಳು ಕೆನಡಾಕ್ಕೆ ಸಾಗಿಸಲು ಹಡಗಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಈ ಹಡಗು ಪೆಸಿಫಿಕ್ ಸಮುದ್ರದಲ್ಲಿ ಅಪಘಾತಕ್ಕೆ ಒಳಗಾಗಿ ಮುಳುಗುತ್ತದೆ. ಇದರಲ್ಲಿ ರಿಚರ್ಡ ಪಾರ್ಕರ್ ಎಂಬ ಹೆಸರಿನ ಬಂಗಾಳಿ ಹುಲಿ ಮತ್ತು ಪೈ ಪಟೇಲ್ ಉಳಿಯುತ್ತಾರೆ.
ಹುಡುಗ ಪೈ ದೋಣಿಯಲ್ಲಿ ಹುಲಿಯ ಜತೆ ಪ್ರಯಾಣಿಸುತ್ತಾನೆ. ಈ ಪಯಣದ ಹಲವು ಮಜಲುಗಳನ್ನು ಈ ಚಿತ್ರ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ಪೈ ಪಾಲಿಗೆ ಈ ಪಯಣ ಕತ್ತಿಯಂಚಿನ ದಾರಿ. ಈ ಕತ್ತಿಯಂಚಿನಲ್ಲಿ ನಡೆವ ನಡಿಗೆಯಲ್ಲಿ ಆತನ ಹೋರಾಟ ನಿಜಕ್ಕೂ ಮೈನಡುಗಿಸುವಂತದ್ದು. ಇಲ್ಲಿ ಹುಲಿ ಮನುಷ್ಯ ಸಂಬಂಧವನ್ನು ವಾಸ್ತವದ ನೆಲೆಗಟ್ಟಿನಲ್ಲಿ ಕಟ್ಟಿಕೊಡಲಾಗಿದೆ. ಅಡವಿಯಲ್ಲಿ ರಾಜನಂತೆ ಮೆರೆವ ಹುಲಿ ನೀರಿನಲ್ಲಿ ಹೇಗೆ ಅಸಹಾಯಕವಾಗುತ್ತದೆ ಎನ್ನುವುದನ್ನು ತುಂಬಾ ವಿಶಿಷ್ಟವಾಗಿ ಈ ಚಿತ್ರ ಕಟ್ಟಿಕೊಟ್ಟಿದೆ. ‘ಹಸಿವು’ ಹೇಗೆ ಜೈವಿಕ ಸಂಬಂಧಗಳನ್ನು ಬೆಸೆಯುತ್ತದೆಂಬ ಎಳೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.
ಆಸ್ಕರ್ ಅವಾರ್ಡ ಪಡೆದ ಸಂದರ್ಭದಲ್ಲಿ ಕುತೂಹಲಭರಿತನಾಗಿ ‘ಲೈಫ್ ಆಫ್ ಪೈ’ ಸಿನೆಮಾವನ್ನು ನೋಡುತ್ತಿದ್ದಂತೆ, ನನ್ನೊಳಗೆ ಮಧ್ಯಕರ್ನಾಟಕದ ದೊಡ್ಡ ಸಮುದಾಯ ಬೇಡರ ಸಾಂಸ್ಕೃತಿಕ ನಾಯಕ ಗಾದ್ರಿಪಾಲನಾಯಕನ ಕಾವ್ಯದ ಘಟನಾವಳಿಗಳು ಮನದ ಪರದೆಯ ಮೇಲೆ ಮೂಡತೊಡಗಿದವು. ಗಾದ್ರಿಪಾಲನಾಯಕನ ಜಾಗದಲ್ಲಿ ಪೈ ನಿಂತಂತೆ ಅನುಭವವಾಯ್ತು. ಈ ಹಿಂದೆಯೇ ಹುಲಿ ಮತ್ತು ಮನುಷ್ಯ ಸಂಬಂಧದ ವಾಸ್ತವದ ನೆಲೆಗಟ್ಟಿನ ಕಥನವನ್ನು ಓದಿದ್ದು ಗಾದರಿ ಪಾಲನಾಯಕನ ಕಾವ್ಯದಲ್ಲಿ. ಕಾರಣ ಅನೇಕ ಜನಪದ ಕಥನಗಳಲ್ಲಿ ಹುಲಿ ಮತ್ತು ಮನುಷ್ಯ ಸಂಬಂಧವನ್ನು ವಾಸ್ತವ ನೆಲೆಗಟ್ಟಿಗಿಂತ ರಮ್ಯವಾಗಿ ಕಟ್ಟಿಕೊಟ್ಟಿರುವುದೇ ಹೆಚ್ಚು. ಹಾಗಾಗಿ ಗಾದರಿ ಪಾಲನಾಯಕನಂಥಹ ಜನಪದ ಕಥನವೊಂದು ‘ಲೈಫ್ ಆಫ್ ಪೈ’ ನ ಮೂಲ ಕಥೆಗಾರ ಮಾನ್ ಮಾರ್ಟೆಲ್ನ ಕೃತಿಗೆ ಪ್ರೇರಣೆ ಆಗಿರಬಹುದೆ ಅನ್ನಿಸಿತು.
ಮ್ಯಾಸಬೇಡರು ತಮ್ಮ ಕುಲದ ಸಾಂಸ್ಕೃತಿಕ ವೀರನೆಂದು ಗಾದರಿ ಪಾಲನಾಯಕನನ್ನು ಆರಾಧಿಸುತ್ತಾರೆ. ಆತನ ಬಗ್ಗೆ ಕಥೆಗಳನ್ನೂ, ಕಾವ್ಯವನ್ನೂ ಕಟ್ಟಿದ್ದಾರೆ. ಹಬ್ಬ ಜಾತ್ರೆಗಳನ್ನು ಮಾಡುತ್ತಾರೆ. ಗಾದ್ರಿ ಪಾಲನಾಯಕ ಮೂಲತಃ ಒಬ್ಬ ಪಶುಪಾಲಕ ಸಮುದಾಯವನ್ನು ಪ್ರತಿನಿಧಿಸುವ ಸ್ವತಃ ಪಶುಪಾಲಕ. ಈತನು ಹುಲಿಗಳ ಜತೆ ಆಪ್ತ ಸಂಬಂಧವನ್ನು ಇಟ್ಟುಕೊಳ್ಳುವುದು, ದನಕರುಗಳ ಜತೆ ಹುಲಿಯ ಮರಿಗಳನ್ನು ಸಾಕುವುದು, ಅವುಗಳ ಮರಣ, ನಂತರ ಹುಲಿಯ ಜತೆ ಸಂಘರ್ಷದಲ್ಲಿ ದಾರುಣ ಅಂತ್ಯ ಇದು ಗಾದರಿ ಪಾಲನಾಯಕನದ ಬಗ್ಗೆ ಇರುವ ಕಥನದ ಒಂದು ಎಳೆ. ಈ ಕಥನವನ್ನು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುವೆ.
ಗಾದರಿ ಪಾಲನಾಯಕ ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳ ಗಡಿಯಲ್ಲಿ ಬರುವ ಸಿರಿಗೇರಿಯ ಮಿಂಚೇರಿ ಅಡವಿಯಲ್ಲಿ ದನಕರುಗಳನ್ನು ಸಾಕಿಕೊಂಡು ಹೆಂಡತಿಯರಾದ ಕಂಚವ್ವ ಕಾಮವ್ವರೊಡನೆ ವಾಸಿಸುತ್ತಿದ್ದನು. ಈ ಅಡವಿಯಲ್ಲಿ ಗಂಡ ಹೆಂಡತಿ ಹುಲಿಗಳೆರಡು ವಾಸಿಸುತ್ತಿದ್ದವು. ಅವು ಗಾದರಿಪಾಲಯ್ಯನಿಗೆ ನೀನು ಈ ಅಡವಿಯಲ್ಲಿ ದನಕರುಗಳೊಂದಿಗೆ ವಾಸಿಸುವುದು ಸರಿಯಲ್ಲ ಎಂದು ಹೇಳಿದವು. ಆಗ ಪಾಲಯ್ಯನು ಈ ಅಡವಿಯಲ್ಲಿ ನಿಮಗೆ ಹೇಗೆ ವಾಸಿಸುವ ಹಕ್ಕಿದೆಯೋ ನಮಗೂ ದನಕರುಗಳನ್ನು ಮೇಯಿಸಿಕೊಂಡು ಇಲ್ಲಿ ನೆಲೆಸುವ ಹಕ್ಕಿದೆ, ಅಷ್ಟಕ್ಕೂ ನಾವು ಮಾಡಿದ ಅಪರಾಧವಾದರೂ ಏನು? ಎಂದು ಹುಲಿ ದಂಪತಿಗಳಿಗೆ ಸವಾಲು ಹಾಕುತ್ತಾನೆ. ಆಗ ಹುಲಿ ದಂಪತಿಗಳು ನಮಗೆ ದಿನಾಲು ಆಹಾರಕ್ಕೆ ಎರಡು ಹೋರಿಕರುಗಳನ್ನು ಕೊಡಬೇಕೆನ್ನುತ್ತವೆ. ಹೀಗೆ ವಾದ ವಿವಾದಗಳು ನಡೆದು ಗಾದರಿ ಪಾಲನಾಯಕ ಮತ್ತು ಹುಲಿಗಳ ಜತೆ ಒಂದು ಹೊಂದಾಣಿಕೆ ಆಗುತ್ತದೆ. ಹುಲಿಗಳು ದನಕರುಗಳನ್ನು ತಿನ್ನುವಂತಿಲ್ಲ. ಆದರೆ ಹುಲಿಮರಿಗಳನ್ನು ಗಾದರಿ ಪಾಲನಾಯಕನು ರಕ್ಷಣೆನೀಡಿ ತನ್ನ ಮಂದೆಯಲ್ಲಿ ಸಾಕಬೇಕು ಎಂದು ಒಪ್ಪಂದವಾಯಿತು.
ಇದಾದ ನಂತರ ಹುಲಿಯ ಮರಿಗಳು ಗಾದರಿ ಪಾಲನಾಯಕನ ರೊಪ್ಪದಲ್ಲಿ ದನದ ಕರುಗಳೊಂದಿಗೆ ಆಟವಾಡಿಕೊಂಡು ಬೆಳೆಯುತ್ತವೆ. ಹೀಗಿರುವಾಗ ಒಮ್ಮೆ ಗಾದರಿ ಪಾಲನಾಯಕನ ಭಾವ ಮೈದುನರಾದ ಚಿತ್ತಯ್ಯ ಮತ್ತು ಕಾಟಯ್ಯರು ಪಾಲಯ್ಯನ ರೊಪ್ಪಕ್ಕೆ ಬರುತ್ತಾರೆ. ಆಗ ಪಾಲಯ್ಯ ದನ ಮೇಯಿಸಲು ಕಾಡಿಗೆ ಹೋಗಿರುತ್ತಾನೆ. ಅಂತೆಯೇ ಕಂಚವ್ವ ಕಾಮವ್ವರು ಹಾಲು ಬೆಣ್ಣೆ ಮಾರಾಟಕ್ಕೆ ಹೋಗಿದ್ದವರು ರೊಪ್ಪಕ್ಕೆ ಮರಳಿರಲಿಲ್ಲ. ಹೀಗಿರುವಾಗ ರೊಪ್ಪದಲ್ಲಿ ದನಕರುಗಳೊಂದಿಗೆ ಆಟವಾಡುತ್ತಿದ್ದ ಹುಲಿ ಮರಿಗಳನ್ನು ನೋಡಿ ಬೆರಗಾಗುತ್ತಾರೆ. ಹೀಗೆ ಈ ಹುಲಿಮರಿಗಳು ಬೆಳೆದು ದೊಡ್ಡವಾದರೆ ದನಕರುಗಳನ್ನು ತಿನ್ನದೆ ಬಿಟ್ಟಾವೆ ಎಂದು ಆ ಹುಲಿಮರಿಗಳನ್ನು ಬಂದೂಕಿನಿಂದ ಸಾಯಿಸುತ್ತಾರೆ.
ರೊಪ್ಪಕ್ಕೆ ಬಂದ ಪಾಲಯ್ಯ ಸತ್ತುಬಿದ್ದ ಹುಲಿಮರಿಗಳನ್ನು ನೋಡಿ ವಿಚಲಿತನಾಗುತ್ತಾನೆ. ನಾನು ಹುಲಿಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗಲಿಲ್ಲವಲ್ಲ ಎಂದು ಪರಿತಪಿಸುತ್ತಾನೆ. ನಾನು ಈವರೆಗೂ ಕೊಟ್ಟಮಾತಿಗೆ ತಪ್ಪಿರಲಿಲ್ಲ, ಆದರೆ ಹುಲಿಗಳಿಗೆ ಕೊಟ್ಟ ಮಾತಿಗೆ ತಪ್ಪಿಬಿಟ್ಟೆ ವಚನಬ್ರಷ್ಟನಾದೆ ಎಂದು ತನ್ನನ್ನು ತಾನೇ ಹಳಿದುಕೊಳ್ಳುತ್ತಾನೆ. ಈ ಕೃತ್ಯ ಎಸಗಿದವರಾರು ಎಂದು ಹುಡುಕಿದಾಗ ತಮ್ಮ ಭಾವ ಮೈದುನರಾದ ಕಾಟಯ್ಯ ಚಿತ್ತಯ್ಯರೆ ಅರಿಯದೆ ಕೊಂದಿದ್ದಾರೆಂದು ತಿಳಿಯುತ್ತದೆ. ಇದು ಉದ್ದೇಶಪೂರ್ವಕ ಕೃತ್ಯವಾಗಿರದೆ ಹುಲಿಯ ಬಗೆಗಿನ ಮನುಷ್ಯಸಹಜ ಭಯದಿಂದ ಆದ ಘಟನೆಯಾಗಿದೆ ಎಂದು ಪಾಲಯ್ಯನಿಗೆ ಅರಿವಾಗುತ್ತದೆ.
ಇತ್ತ ಬೇಟೆಯೊಂದನ್ನು ಹಿಡಿದುಕೊಂಡು ಕಾಣದ ಹೆಣ್ಣುಲಿಯನ್ನು ಹುಡುಕಿಕೊಂಡು ಗಂಡುಲಿ ಅಡವಿಯಲ್ಲಿ ಅಲೆಯುತ್ತದೆ. ಆಗ ಹೆಣ್ಣುಲಿ ಕರು ಹಾಕಿದ ಆಕಳವನ್ನು ಕಾಯ್ದು ಕೂತಿರುತ್ತದೆ. ಗಾದರಿ ಪಾಲನಾಯಕ ಬರುವ ವರೆಗೆ ಕರು ಮತ್ತು ಆಕಳವನ್ನು ಕಾಯುತ್ತಾ ಕುಳಿತ ಹೆಣ್ಣುಲಿ ಗಂಡುಲಿಯನ್ನು ನೋಡಿದ ತಕ್ಷಣ, ನೀನು ರೊಪ್ಪಕ್ಕೆ ಹೋಗಿ ಆಕಳು ಕರು ಹಾಕಿರುವುದಾಗಿ ಪಾಲಯ್ಯನಿಗೆ ತಿಳಿಸಿ, ನಮ್ಮ ಮರಿಗಳಿಗೆ ಮಾಂಸ ತಿನ್ನಿಸಿ ಬಾ ಎಂದು ಕಳಿಸುತ್ತದೆ. ಗಂಡುಲಿ ರೊಪ್ಪಕ್ಕೆ ಬರುತ್ತದೆ, ಆಗ ತನ್ನ ಮರಿಗಳು ರಕ್ತಕಾರಿಕೊಂಡು ಸತ್ತು ಬಿದ್ದಿರುವುದನ್ನು ನೋಡಿ ತಕ್ಷಣಕ್ಕೆ ಹುಲಿ ದುಃಖದ ಮಡುವಲ್ಲಿ ಮುಳುಗುತ್ತದೆ. ಈ ದುಃಖದ ವಾರ್ತೆಯನ್ನು ಹೆಣ್ಣುಲಿಗೆ ತಲುಪಿಸುತ್ತದೆ. ಈ ಘಟನೆಯು ದಂಪತಿ ಹುಲಿಗಳನ್ನು ಅತೀವ ದುಃಖಕ್ಕೆ ಈಡುಮಾಡಿ ಕೆರಳಿಸುತ್ತದೆ. ಮರಿ ಹುಲಿಗಳ ದಾರುಣ ಹತ್ಯೆಯಿಂದಾಗಿ ಈ ನರ ಮನುಷ್ಯರು ನಂಬಿಕೆಗೆ ಅರ್ಹರಲ್ಲ, ಅವರನ್ನು ನಂಬಿ ನಾವು ಕೆಟ್ಟೆವು ಎಂದು ಕೆಂಡಕಾರುತ್ತವೆ. ಯಾವುದೇ ಕಾರಣಕ್ಕೂ ಗಾದರಿ ಪಾಲನಾಯಕನನ್ನು ಜೀವಂತ ಉಳಿಸಬಾರದು ಎಂದು ಹುಡುಕುತ್ತಾ ಬರುತ್ತವೆ.
ದುಃಖಿತನಾದ ಪಾಲಯ್ಯ ನಾನು ಯಾವ ತಪ್ಪು ಮಾಡದಿದ್ದರೂ ಹುಲಿಗಳು ನನ್ನನ್ನು ಉಳಿಸುವುದಿಲ್ಲವೆಂದು ಜರಿಮಲೆ ಪ್ರದೇಶಕ್ಕೆ ಹೋಗಿ ಭಗವಂತನನ್ನು ಬೇಡಿಕೊಂಡು ಹುಲಿಮಕ್ಕಳನ್ನು ಬದುಕಿಸುತ್ತೇನೆಂದು ಹೊರಡುತ್ತಾನೆ. ಇವನನ್ನು ಹಿಂಬಾಲಿಸಿಕೊಂಡು ಬಂದ ಹುಲಿಗಳು ಪಾಲಯ್ಯನನ್ನು ತಡೆದು ನೀನು ಕೊಟ್ಟ ಮಾತನ್ನು ತಪ್ಪಿದೆ ಎಂದು ಘರ್ಜಿಸುತ್ತವೆ. ಆಗ ಪಾಲಯ್ಯನು ‘ನಾನು ನಿಮ್ಮ ಮರಿಗಳನ್ನು ಕೊಂದಿಲ್ಲ ನನ್ನದೇನೂ ತಪ್ಪಿಲ್ಲ, ಹಾಗಿದ್ದೂ ಜರಿಮಲೆಗೆ ಹೋಗಿ ದೇವರಲ್ಲಿ ಪ್ರಾರ್ಥಿಸಿ ನಿಮ್ಮ ಮರಿಗಳಿಗೆ ಮರುಜೀವ ನೀಡುತ್ತೇನೆ ಸಹಕರಿ’ ಎಂದು ಹುಲಿ ದಂಪತಿಗಳಿಗೆ ಮೊರೆ ಇಡುತ್ತಾನೆ. ಆಗ ಹುಲಿಗಳು ಮತ್ತು ಪಾಲಯ್ಯನ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಹುಲಿಗಳು ನೀನು ನಮ್ಮಿಂದ ತಪ್ಪಿಸಿಕೊಂಡು ಓಡಿ ಹೋಗಲು ಇಂತಹ ಕತೆ ಕಟ್ಟುತ್ತೀಯ ಎಂದು ಪಾಲಯ್ಯನನ್ನು ಜರಿಯುತ್ತವೆ. ಈ ಮಾತು ಕೇಳಿದ ಪಾಲಯ್ಯ ‘ಇಲ್ಲ ನಾನು ಓಡಿ ಹೋಗಲು ಹೇಡಿಯಲ್ಲ, ನೀವು ನನ್ನನ್ನು ಸಾಯಿಸಲೇಬೇಕೆಂದಿದ್ದರೆ ನಾನು ನಿಮ್ಮೊಂದಿಗೆ ಕಾದಾಡುವೆ’ ಎನ್ನುತ್ತಾನೆ. ಪರಿಣಾಮವಾಗಿ ಹುಲಿ ಮತ್ತು ಗಾದರಿ ಪಾಲನಾಯಕನಿಗೆ ಕಾದಾಟ ನಡೆಯುತ್ತದೆ. ಈ ಕಾದಾಟದಲ್ಲಿ ಹುಲಿಗಳು ಮತ್ತು ಗಾದರಿ ಪಾಲನಾಯಕ ಮಡಿಯುತ್ತಾರೆ. ಈ ಸಾವಿನ ಸುದ್ದಿ ತಿಳಿದ ಕಂಚವ್ವ ಕಾಮವ್ವರು ಪಾಲಯ್ಯನಿಗೆ ಸಹಗಮನ ಹೊಂದುತ್ತಾರೆ.
ಹೀಗೆ ಗಾದರಿ ಪಾಲನಾಯಕನ ಕಾವ್ಯ ದುಃಖಾಂತ್ಯವನ್ನು ಹೊಂದುತ್ತದೆ. ಇದು ಕಾಡು ನಾಡಿನ ಸಂಘರ್ಷವಿರದ ಮತ್ತು ಸಂಘರ್ಷ ಆರಂಭವಾದ ಎರಡೂ ಘಟ್ಟಗಳಿಗೆ ಸಾಂಕೇತಿಕತೆ ಇದ್ದಂತಿದೆ. ಇಲ್ಲಿ ಮನುಷ್ಯ ಮತ್ತು ಪ್ರಾಣಿ ಸಂಬಂಧದ ಭಿನ್ನ ಮುಖಗಳನ್ನು ಈ ಕಥನ ಕಾಣಿಸುತ್ತಿದೆ. ಅಂತೆಯೇ ಹುಲಿಗಳ ಜತೆ ಮನುಷ್ಯ ಸಂಬಂಧ ಬೆಸೆದ ಒಂದು ಅಪೂರ್ವ ರೂಪಕವನ್ನೂ ಈ ಕಥೆ ಕಟ್ಟಿಕೊಡುತ್ತದೆ.
ಈ ಕಥೆಯ ಕಾರಣಕ್ಕೆ ಗಾದರಿ ಪಾಲನಾಯಕ ಒಬ್ಬ ಬೇಡ ಸಮುದಾಯದ ಸಾಂಸ್ಕೃತಿಕ ನಾಯಕನಾಗಿ ಆರಾಧನೆ ಗೊಳ್ಳುತ್ತಾನೆ. ಈ ಘಟನೆಗೆ ಕಾರಣವಾದ ಪ್ರದೇಶಗಳಲ್ಲಿ ಈಗಲೂ ಪುರಾವೆಗಳು ದೊರೆಯುತ್ತವೆ. ಹಾಗಾಗಿ ಗಾದರಿ ಪಾಲನಾಯಕ ಒಬ್ಬ ಚಾರಿತ್ರಿಕ ವ್ಯಕ್ತಿಯೇ? ಪೌರಾಣಿಕ ವ್ಯಕ್ತಿಯೇ ಎಂಬ ಬಗ್ಗೆ ಇನ್ನೂ ಖಚಿತವಾದ ಸಂಶೋಧನೆಗಳು ನಡೆದಿಲ್ಲ. ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರೊ.ವಿರೂಪಾಕ್ಷಿ ಪೂಜಾರಹಳ್ಳಿ ಅವರು ಬರೆದ ‘ಗಾದರಿ ಪಾಲನಾಯಕ’ ಕೃತಿಯಲ್ಲಿ ಗಮನಾರ್ಹ ದಾಖಲೆಗಳನ್ನು ಒದಗಿಸಿದ್ದಾರೆ.
ವಾಲ್ಮೀಕಿ, ಶಬರಿ, ಗುಹ, ಏಕಲವ್ಯ, ಧರ್ಮ ವ್ಯಾಧ, ಬೇಡರ ಕಣ್ಣಪ್ಪ, ಕುಮಾರ ರಾಮ ಮೊದಲಾದವರು ಮ್ಯಾಸಬೇಡರ ಪೌರಾಣಿಕ ಮೂಲಪುರುಷರು. ಅಂತೆಯೇ ಮಧ್ಯಕಾಲೀನ ಕರ್ನಾಟಕದಲ್ಲಿ ಕಂಡು ಬರುವ ಬೇಡರ ವೀರ/ವೀರೆಯರಾದ ಶುಕ್ಲಮಲ್ಲಿನಾಯಕ, ಗಾದರಿ ಪಾಲನಾಯಕ, ಕೊಡಗಲು ಬೊಮ್ಮಯ್ಯ, ಯರಗಾಟ ನಾಯಕ, ಗಾಜ ನಾಯಕ, ದಡ್ಡಿ ಸೂರನಾಯಕ, ಮಂದ ಭೂಪಾಲ, ಅಂಬೋಜ ರಾಜ, ದಾನ ಸಾಲಮ್ಮ, ಚಂಚುಲಕ್ಷ್ಮಿ, ಪೆದ್ದಕ್ಕ ರಾಯಲದೇವಿ, ವೀರ ಮದಕರಿ ನಾಯಕ ಮೊದಲಾದವರನ್ನು ಹೆಸರಿಸಬಹುದು.
ಮಧ್ಯಕರ್ನಾಟಕದ ಅದರಲ್ಲೂ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಿರಿಯೂರು ಭಾಗದ ಮ್ಯಾಸಬೇಡರಲ್ಲಿ ಅತಿ ಹೆಚ್ಚು ಜೀವಂತವಾಗಿರುವ ನಾಯಕ ಗಾದರಿ ಪಾಲನಾಯಕ. ಗಾದರಿ ಎನ್ನುವುದು ಅರೆ ಮಲೆನಾಡಿನ ಒಂದು ಘಟ್ಟ ಪ್ರದೇಶ. ಇದಕ್ಕೆ ಗಾದರಿ ಘಟ್ಟ, ಗಾದರಿ ಗುಡ್ಡ, ಗಾದ್ರಿ ಮಲೈ ಎಂದು ಜನರೂಢಿಯಲ್ಲಿ ಬಳಸುತ್ತಾರೆ. ಈ ಮಲೆಯಲ್ಲಿ ಪಶುಗಳನ್ನು ಕಾಯ್ದುಕೊಂಡಿರುವ ಪಾಲಯ್ಯನನ್ನು ಮುಂದೆ ಗಾದರಿ ಪಾಲಯ್ಯ ಎಂದು ಕರೆದಿರುವುದಿದೆ. ಹೊಯ್ಸಳರ ಪೊಯ್ಸಳನೇ ಗಾದರಿ ಪಾಲನಾಯಕ ಎಂಬ ಮಾತೂ ಇದೆ. ಆದರೆ ಪೊಯ್ಸಳ ಮತ್ತು ಗಾದರಿ ಪಾಲನಾಯಕ ಹುಲಿಯ ಜತೆ ಸೆಣಸಾಡಿದ್ದು ಬಿಟ್ಟರೆ ಮತ್ತಾವ ಸಾಮ್ಯವೂ ಕಂಡುಬರುವುದಿಲ್ಲ. ಚಾರಿತ್ರಿಕವಾದ ದಾಖಲೆಗಳೂ ಇಲ್ಲ.
ಆದರೆ ಗಾದರಿ ಪಾಲನಾಯಕ ಎಂಬ ಹೆಸರಿನ ವ್ಯಕ್ತಿ ನಾಯಕನಹಟ್ಟಿಯ ಪಾಳೆಯಗಾರನಾಗಿ ಆಳ್ವಿಕೆ ನಡೆಸಿದ ಪುರಾವೆ ಇವೆ. ಅವನ ಅಣ್ಣ ಜಗಲೂರು ಪಾಪಿನಾಯಕನೂ ಆಳ್ವಿಕೆ ನಡೆಸಿದ್ದಾನೆ. ಇದು ಚಂದ್ರವಳ್ಳಿ ಕೃತಿಯ ಅನುಬಂಧದಲ್ಲಿ ನಾಯಕನಹಟ್ಟಿ ಪಾಳೆಯಗಾರರ ವಂಶ ವೃಕ್ಷದಲ್ಲಿ ಇವರ ಹೆಸರಿನ ಉಲ್ಲೇಖಗಳಿವೆ. ಗಾದರಿ ಪಾಲನಾಯಕ ಪಾಳೆಯಗಾರನಾಗಿ ಆಡಳಿತ ನಡೆಸಿದ್ದರ ಕುರುಹುಗಳು ಈಗಿನ ಗಾದರಿ ಪಾಲನಾಯಕನ ಕುರಿತ ಆಚರಣಾಲೋಕದಲ್ಲೂ ದೊರೆಯುತ್ತವೆ. ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ಪಕ್ಕವೇ ಇರುವ ಚನ್ನಬಸಯ್ಯನ ಹಟ್ಟಿ, ಮಲ್ಲೂರಳ್ಳಿಯ ಹತ್ತಿರ ರಾಮಸಾಗರ, ಬೊಮ್ಮಗೊಂಡನ ಕೆರೆ, ಕುರುಡಿಹಳ್ಳಿ, ಕಾತ್ರಿಕೆನ ಹಟ್ಟಿ, ಕನ್ನಬೋರಯ್ಯನ ಹಟ್ಟಿ, ಕೋಲಮ್ಮನಹಳ್ಳಿ, ನನ್ನಿವಾಳ ಮುಂತಾದ ಕಡೆ ಗಾದರಿ ಪಾಲನಾಯಕದ ಗುಡಿಗಳಿವೆ. ಇಲ್ಲಿ ಪಾಲಯ್ಯನು ಬಳಸಿದ್ದ ಎಂದು ನಂಬಿದ ಆಯುಧಗಳನ್ನೂ ಪೂಜಿಸುತ್ತಾರೆ. ಕಾಗಳಗೆರೆ ಎಂಬ ಪ್ರದೇಶದಲ್ಲಿ ಗಾದರಿ ಪಾಲನಾಯಕನ ವೀರಗಲ್ಲು ಮತ್ತು ಸಮಾಧಿ ಇವೆ. ಗಂಜಿಗಟ್ಟೆಯೆಂಬ ಪ್ರದೇಶದಲ್ಲಿ ಕಂಚವ್ವ ಕಾಮವ್ವ ಸಹಗಮನ ಕೈಗೊಂಡ ಹೊಂಡ ಇದೆ.
ಹೀಗೆ ಮಧ್ಯಕಾಲಿನ ಕರ್ನಾಟಕದ ಪಶುಪಾಲನೆಯ ಸಂದರ್ಭದಲ್ಲಿ ಹುಲಿಗಳ ಜತೆ ಸ್ನೇಹ ಮಾಡಿದ್ದು, ಹುಲಿ ಮರಿಗಳನ್ನು ಸಾಕುವ ದೈರ್ಯ ತೋರಿದ ಒಬ್ಬ ನಾಯಕನ ಕಥೆ ‘ಲೈಫ್ ಆಫ್ ಪೈ’ ತರದ ಸಿನೆಮಾದ ಸೃಜನಶೀಲ ಸೃಷ್ಟಿಯಂತೆಯೇ, ವಾಸ್ತವದ ನೆಲೆಗಟ್ಟಿನಲ್ಲಿ, ಜನಸಮುದಾಯದ ಸ್ಮೃತಿಲೋಕದ ಮಿನುಗು ತಾರೆ ‘ಲೈಫ್ ಆಫ್ ಗಾದರಿ ಪಾಲನಾಯಕ’ ಗಮನಸೆಳೆಯುತ್ತಾನೆ. ಜನಸಮುದಾಯಗಳು ಆರಾಧಿಸುವ ಇಂತಹ ಸಾಂಸ್ಕೃತಿಕ ವೀರ/ವೀರೆಯರ ಕಥನಗಳು ನಿಜಕ್ಕೂ ರೋಮಾಂಚನ ಹುಟ್ಟಿಸುತ್ತವೆ.
ನಾನು ಗಾದರಿ ಪಾಲನಾಯಕನ ಹುಲಿ ಜತೆಗಿನ ಸೆಣಸಾಟದ ಇತರೆ ಕಥನಗಳನ್ನು ಹುಡುಕುವಾಗ ಕನ್ನಡ ಜಾನಪದ ಲೋಕದಲ್ಲಿ ‘ಹುಲಿ’ ಅತಿಹೆಚ್ಚು ಬಳಕೆಯಾಗಿದ್ದು ಕಂಡುಬಂತು. ಕಥೆ ಗೀತೆ ಮಹಾಕಾವ್ಯ ಆಚರಣಾ ಲೋಕಗಳಲ್ಲಿ ಕಾಡಿನ ಹುಲಿ ನಾಡೊಳಗೆ ಸಂಚರಿಸಿದ ಅನುಭವವಾಗುತ್ತದೆ. ಇಂತಹದ್ದೇ ಕತೆ ಕಥನ ಆಚರಣೆಗಳನ್ನು ಗಮನದಲ್ಲಿಟ್ಟುಕೊಂಡಿ ಹುಲಿ ಜಾನಪದವೆ ಸೃಷ್ಟಿಯಾದಂತೆನಿಸಿತು. ಅಂದಹಾಗೆ ಮುಂದಿನ ವಾರದ ಅಂಕಣದಲ್ಲಿ ಹುಲಿ ಜಾನಪದ ಕುರಿತೆ ಬರೆಯುವೆ, ಕಾಯುತ್ತಿರಿ.

ಭಾನುವಾರ, ಡಿಸೆಂಬರ್ 29, 2013

ಹುಲಿ ಜಾನಪದ

‘ಲೈಫ್ ಆಫ್ ಗಾದರಿ ಪಾಲನಾಯಕ’ ಬರಹ ಬರೆವ ಹೊತ್ತಿಗೆ, ಕನ್ನಡ ಜಾನಪದ ಪರಂಪರೆಯಲ್ಲಿ ‘ಹುಲಿ’ಯ ಜತೆ ನಡೆಸಿದ ಮುಖಾಮುಖಿ ಹೇಗಿದೆ ಎಂದು ಒಂದಷ್ಟು ಹುಡುಕಾಡಿದೆ. ಆಗ ‘ಹುಲಿ ಜಾನಪದ’ಇರುವುದು ತಿಳಿಯಿತು. ಈ ಸಂಗತಿ ಕುತೂಹಲವನ್ನೂ ಮೂಡಿಸಿತು. ಈ ಬಗ್ಗೆ ಒಂದು ಸಂಶೋಧನೆಯನ್ನೇ ಮಾಡಬಹುದು ಅನ್ನಿಸಿತು. ಕಾಡಿನ ಪ್ರಾಣಿ ಹುಲಿಯನ್ನು ಜನಪದರು ಕಂಡಿರುವ ಬಗೆ ವಿಶಿಷ್ಟವಾಗಿದೆ. ಹುಲಿಯೊಂದು ಮನುಷ್ಯರನ್ನು ತಿನ್ನಬಲ್ಲ ಕ್ರೂರ ಪ್ರಾಣಿ. ಈ ಹುಲಿ ಜಾನಪದ ಪರಂಪರೆಯಲ್ಲಿ ಯಾಕಿಷ್ಟು ಸ್ಥಾನ ಪಡೆದಿದೆ ಎಂಬ ಪ್ರಶ್ನೆ ಹುಟ್ಟಿಸಿಕೊಂಡು ಹುಡುಕಿದರೆ ಭಿನ್ನ ಆಯಾಮಗಳು ಹೊಳೆಯುತ್ತವೆ. ಅದರ ಒಂದಷ್ಟು ಎಳೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.
ಹಳ್ಳಿಗಳಲ್ಲಿ ಹುಲಿಮನಿ ಎಂಬುದೊಂದು ಆಟವಿದೆ. ಆಟದ ಚಿತ್ರ ಒಂದು ತ್ರಿಭುಜಾಕೃತಿಯಲ್ಲಿ ಅಡ್ಡ ಮೂರು ಗೆರೆ ಎಳೆದ ಸ್ವರೂಪದಲ್ಲಿರುತ್ತದೆ. ಇದಕ್ಕೆ ಹುಲಿಕುರಿ ಆಟ ಎಂತಲೂ ಕರೆಯುತ್ತಾರೆ. ಎದುರುಬದುರಾಗಿ ಇಬ್ಬರು ಈ ಆಟವನ್ನು ಆಡಬಹುದು. ಹುಲಿಯನ್ನು ಗುರುತಿಸಲು ದೊಡ್ಡ ಕಲ್ಲುಗಳಿದ್ದರೆ, ಕುರಿಯನ್ನು ಸಣ್ಣ ಕಲ್ಲುಗಳಲ್ಲಿ ಗುರುತಿಸಲಾಗುತ್ತದೆ. ಒಬ್ಬ ಹುಲಿಯನ್ನೂ, ಮತ್ತೊಬ್ಬ ಕುರಿಗಳನ್ನು ನಡೆಸಬೇಕು. ಹುಲಿಗೆ ಕುರಿ ಅಡ್ಡ ಬಂದರೆ ನುಂಗುತ್ತದೆ. ಕುರಿಗಳು ಚಾಕಚಕ್ಯತೆಯಿಂದ ತಿನ್ನಲು ಅವಕಾಶವಾಗದ ಹಾಗೆ ಹುಲಿಯನ್ನು ಕಟ್ಟಿ ಹಾಕಬೇಕು. ಹುಲಿ ಎಲ್ಲಾ ಕುರಿಗಳನ್ನು ನುಂಗಿದರೆ ಗೆದ್ದಂತೆ. ಅದನ್ನು ಕಟ್ಟಿ ಹಾಕಿದರೆ ಕುರಿಗಳು ಗೆದ್ದಂತೆ. ಇದೊಂದು ರೀತಿ ಹಾವು ಏಣಿಯ ಆಟವನ್ನು ಹೋಲುತ್ತದೆ. ಈ ಆಟದಲ್ಲಿ ಹುಲಿಯೂ ಕುರಿಗಳ ಮುಂದೆ ಸೋಲನ್ನಪ್ಪಬೇಕಾಗುತ್ತದೆ. ಈ ಆಟವು ಜನರಲ್ಲಿ ಹುಲಿಯನ್ನೂ ಸೋಲಿಸಬಹುದು ಎನ್ನುವ ಭರವಸೆಯನ್ನು ಗಟ್ಟಿಗೊಳಿಸಲು ಅಥವಾ ಹುಲಿಯ ಬಗೆಗಿನ ಭಯ ಹೋಗಲಾಡಿಸಲು ಹುಟ್ಟಿಕೊಂಡಂತಿದೆ. ಇಂತಹದ್ದೆ ಜನಪದ ಆಟಗಳಲ್ಲಿಯೂ ಹುಲಿಯ ಸಂಕೇತಗಳು ಬಳಕೆಯಾಗಿರುವುದನ್ನು ನೋಡಬಹುದು.
ಉತ್ತರ ಕರ್ನಾಟಕ ಹೈದರಬಾದ್ ಕರ್ನಾಟಕದಲ್ಲಿ ಮೊಹರಂ ಹಬ್ಬದ ಸಂದರ್ಭಕ್ಕೆ ವಾರಗಟ್ಟಲೆ ಹುಲಿವೇಷಗಳು ಗೆಜ್ಜೆಗಳನ್ನು ಝಲ್ ಝಲ್ ಎನ್ನಿಸಿಕೊಂಡು ಸುತ್ತುತ್ತವೆ. ಆಗ ಅಕ್ಷರಶಃ ಕಾಡಿನ ಹುಲಿಗಳು ನಾಡಿಗೆ ಮರಳಿದ ಅನುಭವವಾಗುತ್ತದೆ. ಮೈಯಲ್ಲಿ ಆರಾಮಿಲ್ಲದಿದ್ದರೆ, ಏನಾದರೂ ಕೇಡಾದರೆ ಹುಲಿ ವೇಷ ಹಾಕುವುದಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ಹೀಗಾಗಿ ಆರು ವರ್ಷದ ಮಗುವಿನಿಂದ, ಎಪ್ಪತ್ತು ವರ್ಷದ ಅಜ್ಜನವರೆಗೆ ನಾನಾ ವಯೋಮಾನದ ಹುಲಿಗಳು ಕಾಣಸಿಗುತ್ತವೆ. ಆರೇಳು ದಿನವಿರುತ್ತಿದ್ದ ವೇಷ ಈಗ ಎರಡು ದಿನಕ್ಕೆ ಇಳಿದಿದೆ. ಅಂತೆಯೇ ಕೇವಲ ಕೈಗೆ, ಮುಖಕ್ಕಷ್ಟೆ ಬಣ್ಣ ಹಚ್ಚಿಕೊಳ್ಳುತ್ತಲೂ ಆಚರಣೆ ಸಾಂಕೇತಿಕವಾಗುತ್ತಿದೆ. ಈ ಹಬ್ಬವನ್ನು ಹೊರತು ಪಡಿಸಿದರೆ ಕರಾವಳಿ ಪ್ರದೇಶದಲ್ಲಿ ನವರಾತ್ರಿಗೆ, ಉಡುಪಿ ಭಾಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಹುಲಿ ವೇಷ ಹಾಕುವುದಿದೆ. ಉಡುಪಿಯ ಯತಿಯೊಬ್ಬರು ಹುಲಿಯನ್ನು ಎದುರಿಸಿದ್ದರ ಸಾಂಕೇತಿಕವಾಗಿ ಹುಲಿ ವೇಷ ಹಾಕುವುದಾಗಿ ಈ ಭಾಗದ ಜನ ಹೇಳುತ್ತಾರೆ.
ಮನುಷ್ಯರಿಗೆ ಹುಲಿಯ ಶಕ್ತಿಯನ್ನು ಸಮೀಕರಿಸಿ ಹುಲಿ ಎಂಬ ಗುಣವಾಚಕ ಸೇರಿಸಿ ಕರೆವ ವಾಡಿಕೆ ಇದೆ. ಇದು ರಾಜ ಮಹಾರಾಜರುಗಳನ್ನು ಒಳಗೊಂಡಂತೆ ಸಾಮಾನ್ಯ ಜನ ಸಮುದಾಯದಲ್ಲೂ ಮಂದುವರಿದಿದೆ. ಕರ್ನಾಟಕದ ಚರಿತ್ರೆ ನೋಡುವಾಗ ನಮಗೆ ಹೊಯ್ಸಳ ನೆನಪಾಗುತ್ತಾನೆ. ದ್ವಾರಸಮುದ್ರದ ಹೊಯ್ಸಳರ ಸಳನ ಬಗ್ಗೆ ಹುಲಿಯನ್ನು ಆಯುಧಗಳಿಲ್ಲಗೆ ಹೋರಾಡಿ ಕೊಂದ ಎನ್ನುವ ಕಥೆ ಇದೆ. ಹಾಗಾಗಿ ನಾವು ಸಳ ಹುಲಿಯೊಂದಿಗೆ ಹೋರಾಡಿದ ಶಿಲ್ಪವನ್ನೂ ನೋಡುತ್ತೇವೆ. ಅಂತೆಯೇ ಟಿಪ್ಪು ಸುಲ್ತಾನನ್ನು ಮೈಸೂರು ಹುಲಿ ಎಂದೇ ಕರೆಯಲಾಗುತ್ತದೆ. ಇದರ ಹಿಂದೆ ಟಿಪ್ಪು ಹುಲಿಯ ಜತೆ ಹೋರಾಡಿದ ಕಥನವೊಂದಿದೆ. ನಾವೀಗ ಟಿಪ್ಪುವಿನ ಚಿತ್ರವನ್ನು ಕಲ್ಪಿಸಿಕೊಂಡಾಗಲೂ ಹುಲಿಯ ಜತೆ ಹೋರಾಡುವ ಚಿತ್ರವೇ ಕಣ್ಣಮುಂದೆ ಬರುತ್ತದೆ. ಚಿತ್ರದುರ್ಗದ ಮದಕರಿ ನಾಯಕನನ್ನು ಈ ಭಾಗದ ಬೇಡರು ‘ದುರ್ಗದ ಹುಲಿ’ ಎಂದು ಗುರುತಿಸುತ್ತಾರೆ. ಈಚೆಗೆ ತೀರಿದ ಭಾಳಾಟಾಕ್ರೆಯನ್ನು ಮಹರಾಷ್ಟ್ರಿಗರು ಹುಲಿ ಎಂದೇ ಸಂಭೋದಿಸುತ್ತಿದ್ದರು. ಕನ್ನಡದ ಪ್ರಸಿದ್ಧ ನಟ ಪ್ರಭಾಕರ್ ಅವರಿಗೆ ಟೈಗರ್ ಪದ ಸೇರದಿದ್ದರೆ ಅವರ ಚಿತ್ರ ಕಣ್ಣಮುಂದೆ ಬರುವುದೇ ಇಲ್ಲ.
ಫೋಟೋ ಕೃಪೆ : ಜಯಶಂಕರ್ ಮಾದಪ್ಪಾಡಿ
ಇನ್ನು ಉತ್ತರ ಕರ್ನಾಟಕ ಹೈದರಬಾದ್ ಕರ್ನಾಟಕದಲ್ಲಿ ಹುಲಿ ದುರುಗಪ್ಪ, ಹುಲಿ ಕರಿಯಪ್ಪ, ಹುಲಿ ಹನುಮ ಮುಂತಾಡ ಅಡ್ಡ ಹೆಸರುಗಳಿರುವುದಿದೆ. ಅದು ಅವರು ರಿವಾಯ್ತ ಹಬ್ಬಕ್ಕೆ ಹುಲಿ ವೇಷ ಹಾಕಿ ತುಂಬಾ ಪ್ರಸಿದ್ಧಿಯನ್ನು ಪಡೆದ ಕಾರಣಕ್ಕೆ ಬಂದ ಹೆಸರುಗಳಾಗಿವೆ. ಉಡುಪಿ ಮಂಗಳೂರು ಕಡೆ ಶ್ರಿಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹುಲಿ ವೇಷ ಹಾಕಲು ಪ್ರಸಿದ್ದಿ ಪಡೆದವರನ್ನು ಪಿಲಿ (ಹುಲಿಯ ತುಳುಪದ) ಎಂಬ ಗುಣವಾಚಕವನ್ನು ಹಾಕಿ ‘ಪಿಲಿ ಲಕ್ಷ್ಮಣ’, ‘ಪಿಲಿ ಸುಂದರ’ ಮುಂತಾಗಿ ಕರೆಯುತ್ತಾರೆ. ಇನ್ನು ಕಾಪಾಲಿಕರಲ್ಲಿ ಹುಲಿಗೊಂದೆಪ್ಪ, ಹುಲಿಯಾ ಮುಂತಾದ ಹೆಸರನ್ನು ಇಟ್ಟುಕೊಳ್ಳುತ್ತಾರೆ.
ದೇವರುಗಳ ಹುಲಿ ಸವಾರಿ ಆಚರಣೆಗಳಲ್ಲಿ ದೊಡ್ಡ ಮಟ್ಟದಲ್ಲಿ ಕಂಡು ಬರುತ್ತದೆ. ಮಂಡ್ಯ ಭಾಗದ ಮುತ್ತತ್ತಿರಾಯನ ಮೂರ್ತಿಯನ್ನು ಹುಲಿಯ ಗೊಂಬೆಯ ಮೇಲೆ ಇರಿಸಿ, ಮೆರವಣಿಗೆ ಮಾಡುವುದೇ ಹುಲಿವಾಹನ ಸೇವೆಯಾಗಿದೆ. ಹುಲಿಯ ಗೊಂಬೆಯ ಮೇಲೆ ಕೂರಿಸಿದ ಮುತ್ತತ್ತಿರಾಯನನ್ನು ದೇವಾಲಯ ಸುತ್ತಿಸುವುದು, ಹೊಳೆದಂಡೆಗೆ ತೆರಳಿ ಗುಡಿಗೆ ಮರಳುವುದಿದೆ. ಇಂತಹ ಸಂದರ್ಭಗಳಲ್ಲಿ ಹುಲಿ ತುಳಿಸುತ್ತೇವೆಂಬ ಹರಕೆ ಹೊತ್ತವರು ಹುಲಿವಾಹನ ಹೊತ್ತವರ ಕಾಲು ತುಳಿತಕ್ಕೆ ಒಳಗಾಗುತ್ತಾರೆ. ಇದು ಸಿದ್ಧಪ್ಪಾಜಿ ಹಾಗೂ ಮಲೆಮಾದೇಶ್ವರನ ದೇವಾಲಯಗಳಲ್ಲೂ ಕಾಣುತ್ತದೆ. ಮಲೆ ಮಾದಪ್ಪ, ಶಬರಿಯ ಅಯ್ಯಪ್ಪ ಸ್ವತಃ ಹುಲಿವಾಹನ ಹೊಂದಿದವರು. ಹುಲಿವಾಹನದ ಹತ್ತಾರು ದೈವಗಳ ಆಚರಣೆಯನ್ನು ಇದರ ಜತೆ ಲಗತ್ತಿಸಬಹುದು.
ಕರ್ನಾಟಕದ ಸೂಫಿಸಂತರ ಕಥೆಗಳಲ್ಲಿ ಮತ್ತೆಮತ್ತೆ ಕಾಣಿಸುವ ಮಿತ್ ಎಂದರೆ, ಒಬ್ಬ ಸಂತ ಹುಲಿಯ ಮೇಲೆ ಕುಳಿತುಕೊಂಡು ಮತ್ತೊಬ್ಬ ಸಂತನನ್ನು ಭೇಟಿಮಾಡಲು ಬರುವುದು. ಹುಲಿಸವಾರ ಸಂತನು ಸಾಮಾನ್ಯವಾಗಿ ಹೊರಗಿನಿಂದ ಬರುವವನು, ಪ್ರತಿಷ್ಠಿತನಾದವನು, ಜ್ಞಾನಸಾಧನೆಗಳಲ್ಲಿ ಹೆಸರು ಪಡೆದ ಅಭಿಮಾನ ಉಳ್ಳವನು. ಭೇಟಿಮಾಡಿಸಿ ಕೊಳ್ಳುವ ಸಂತ ಸ್ಥಳೀಕನು, ಊರಮಟ್ಟಿಗೆ ಪ್ರಭಾವವುಳ್ಳವನು. ಅವನ ಶಕ್ತಿಯೆಂದರೆ ಊರ ಬೆಂಬಲವೇ. ಈ ನಾಟಕೀಯ ಮುಖಾಮುಖಿಯಲ್ಲಿ ಊರಸಂತನು, ಮದೋನ್ಮತ್ತನಾಗಿ ಬಂದವನನ್ನು ಭೇಟಿ ಮಾಡಲು, ತಾನು ಕುಳಿತ ಕಟ್ಟೆಯನ್ನೇ ನಡೆಸಿಕೊಂಡು ಹೋಗುತ್ತಾನೆ. ಆಡಂಬರದಿಂದ ಬಂದ ಹುಲಿಸವಾರ ಸಂತನು, ಜೀವವಿಲ್ಲದ ಕಟ್ಟೆಯನ್ನು ನಡೆಸಿದ ಊರಸಂತನ ಪವಾಡಶಕ್ತಿಗೆ ಬೆಚ್ಚಿ ಬೆರಗಾಗುತ್ತಾನೆ. ಮಣಿಯುತ್ತಾನೆ. ಗರ್ವಬಿಟ್ಟು ಊರ ಸಂತನನ್ನು ಗೆಳೆಯನಾಗಿ ಸ್ವೀಕರಿಸುತ್ತಾನೆ. ಸೂಫಿ ದೀಕ್ಷೆಯ ಕುರುಹುಗಳಾದ ’ಶೈಲಿ ಶಮಲ ಶಿಲೇಮಣಿ’ಗಳನ್ನು ಕೊಟ್ಟು ಗೌರವಿಸುತ್ತಾನೆ.
ಈ ಮುಖಾಮುಖಿಯ ಮಿತ್, ಇಬ್ಬರು ಸಂತರ ವೈಯಕ್ತಿಕ ಬಲಾಬಲಗಳ ಪರೀಕ್ಷೆಗಳನ್ನು ಸೂಚಿಸುತ್ತಿರಬಹುದು. ಎರಡು ವಿಭಿನ್ನ ಚಿಂತನೆ ಅಥವಾ ಸಂಸ್ಕೃತಿಗಳು ಪರಸ್ಪರ ಎದುರಾಗಿರುವುದನ್ನು ಸೂಚಿಸುತ್ತಿರಬಹುದು. ಪರಿಣಾಮದಲ್ಲಿ ಮಾತ್ರ ಇವು ದ್ವೇಷ ಅಪಮಾನ ನೋವುಗಳಲ್ಲಿ ಕೊನೆಗೊಳ್ಳುವುದಿಲ್ಲ. ಗುರುಶಿಷ್ಯತ್ವದ ಇಲ್ಲವೆ ಗೆಳೆತನದ ಸಂಬಂಧಗಳಲ್ಲಿ ಮುಕ್ತಾಯವಾಗುತ್ತವೆ. ಇದು ಮಾರ್ಮಿಕ ಸಂಗತಿ. ಕರ್ನಾಟಕದ ಪ್ರಸಿದ್ಧ ಸೂಫಿಸಂತ ಗುಲಬರ್ಗೆಯ ಬಂದೇನವಾಜ ಹಾಗೂ ಸಾವಳಗಿ ಶಿವಲಿಂಗನ ಮುಖಾಮುಖಿಯ ಪರಿಣಾಮ ಗುರುಶಿಷ್ಯತ್ವದಲ್ಲಿ ಮುಗಿಯುತ್ತದೆ. ಬಂದೇನವಾಜನು ಶಿವಲಿಂಗನ ಕಾಲದಲ್ಲಿ ಇದ್ದನೆ, ನಿಜವಾಗಿಯೂ ಹುಲಿಯಮೇಲೆ ಬಂದನೆ, ಕಟ್ಟೆ ಜೀವಪಡೆದು ಚಲಿಸಿತೆ – ಇವು ಯಾವುವೂ ಸಮುದಾಯಗಳಿಗೆ ಬಾಧಿಸುವ ಪ್ರಶ್ನೆಗಳಲ್ಲ. (ನೋಡಿ: ರಹಮತ್ ತರೀಕೆರೆ, ಕರ್ನಾಟಕದ ಸೂಫಿಗಳು)
ಕರ್ನಾಟಕದ ರಾವುಳ ಜೋಗಿಗಳಲ್ಲಿ ದೀಕ್ಷೆಯನ್ನು ಯೋಗಮುಂಜಿ ಎನ್ನುತ್ತಾರೆ. ಸಜ್ಜಿಗದ ಹಿಟ್ಟಿನಿಂದ ಮಾಡಿದ ಸಿಂಹ ಹುಲಿ ಕುರಿಗಳ ಪ್ರತಿಮೆಗಳಿಗೆ ಮಂತ್ರದಿಂದ ಪ್ರಾಣಪ್ರತಿಷ್ಠೆ ಮಾಡಿ, ಅವನ್ನು ಖಡ್ಗದಿಂದ ಬಲಿಕೊಡಬೇಕು. ಕರ್ನಾಟಕದ ಮೊಹರಂ ಆಚರಣೆಯಲ್ಲಿ ಹುಲಿಯ ಪ್ರತಿಮೆಯನ್ನು ದೇವರಿಗೆ ಅರ್ಪಿಸುವ ಹರಕೆಯಿದೆ. ಹೀಗೆ ಹುಲಿಯನ್ನು ಅರ್ಪಿಸುವುದರಿಂದ ಮನೆಗೆ ಯಾವುದೇ ಕೇಡಿನ ಸಂಗತಿಗಳು ಬರುವುದಿಲ್ಲ ಎಂದು ನಂಬುವುದಿದೆ. ಹುಲಿ ಹೆಸರನ್ನು ಒಳಗೊಂಡ ಸ್ಥಳನಾಮಗಳೂ ಇವೆ. ನಾಥಪಂಥದ ಹುಲಿಗೊಂದಿ (ಚಿತ್ರದುರ್ಗ) ಹುಲಿ ಹೈದರ (ಗಂಗಾವತಿ) ಇಂತಹ ನೂರಾರು ಊರುಗಳ ಸ್ಥಳನಾಮಗಳನ್ನು ಉಲ್ಲೇಖಿಸಬಹುದು. ಇಂತಹದ್ದೇ ಸ್ಥಳನಾಮಗಳ ಹಿಂದೆ ಹುಲಿಗೆ ಸಂಬಂಧಿಸಿದ ಕಥನಗಳಿರುವುದನ್ನು ನೋಡಬಹುದು.
ಕನ್ನಡದಲ್ಲಿ ಜಾನಪದ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ‘ಪುಣ್ಯಕೋಟಿ’ ಕಥನಗೀತೆ ಹೆಚ್ಚು ಚರ್ಚೆಗೆ ವಿವಾದಕ್ಕೆ ಒಳಗಾಗಿದೆ. ಇದರಲ್ಲಿ ಒಂದು ವಾದ ಭಾರತೀಯ ಸಂಸ್ಕೃತಿಯ ಹಿರಿಮೆಯ ಸಂಕೇತವಾಗಿದೆ. ಪುಣ್ಯಕೋಟಿ ಕತೆಗೂ ಕರ್ಮಣ್ಯೇವಾಧಿಕಾರಸ್ತೇ ಎಂಬ ವಿಧಿಗೂ, ದುಡಿವವರ್ಗಕ್ಕೆ ಸೇವೆದಾಸ್ಯಗಳನ್ನು ಕಡ್ಡಾಯಗೊಳಿಸುವ ಧರ್ಮಶಾಸ್ತ್ರಗಳಿಗೂ ಒಳಸಂಬಂಧ ಇದೆ. ಇಷ್ಟಂತೂ ನಿಜ, ವ್ಯವಸ್ಥೆ ಹೂಡುವ ಬೋನುಗಳಿಗೆಲ್ಲ ಜನ ಹೋಗಿಬೀಳುವುದಿಲ್ಲ. ತಮ್ಮನ್ನು ಕೊಲ್ಲಲುಬರುವ ಹುಲಿಯನ್ನು ಏನೇನೋ ಉಪಾಯದಿಂದ ಬೀಳಿಸಿ ಅಥವಾ ಸಾಯಿಸಿ ತಪ್ಪಿಸಿಕೊಂಡುಬರುವ ಕಿಲಾಡಿಗಳ ಜನಪದ ಕತೆಗಳಿವೆ. (ರಹಮತ್ ತರೀಕೆರೆ: ಮರದೊಳಗಣ ಕಿಚ್ಚು) ನೊಣವೊಂದು ಹುಲಿಯನ್ನು ಸೋಲಿಸುವ ಕಥನವೊಂದು ಕುತೂಹಲಕಾರಿಯಾಗಿದೆ.
ಅರಣ್ಯವಾಸಿ ಬುಡಕಟ್ಟು ಸಮುದಾಯಗಳಲ್ಲಿ ಹುಲಿ ಒಂದು ಆರಾಧಿಸುವ ದೈವವಾಗಿ, ತಮ್ಮ ಸಾಂಸ್ಕೃತಿಕ ನಾಯಕರ ಸಾಕು ಪ್ರಾಣಿಯಾಗಿಯೂ ಬರುತ್ತದೆ. ಅದು ಅವರ ಮೌಖಿಕ ಕಥನಗಳಲ್ಲಿ ಉಲ್ಲೇಖವಾಗುತ್ತದೆ. ಸಿದ್ಧಿ ಸಮುದಾಯದ ಒಂದು ಕಥೆಯಲ್ಲಿ ಒಬ್ಬ ಧಣಿ ತನ್ನ ಸಿದ್ಧಿ ಆಳನ್ನು ಕರೆದು ಹುಲಿ ಹೊಡೆದುಕೊಂಡು ಬಾ. ಇಲ್ಲದಿದ್ದರೆ ನಿನ್ನನ್ನು ಕೊಂದೇನು ಎನ್ನುತ್ತಾನೆ. ಹುಲಿ ಹೊಡೆದುಕೊಂಡು ಬಂದರೆ ಆಳಿಗೆ ಸಿಗುವುದು ಒಂದಿಷ್ಟು ಅಕ್ಕಿ ಹಾಗೂ ಚಿಲ್ಲರೆಕಾಸು. ನೂರಾರು ರೂಪಾಯಿ ಹುಲಿಗೆ ಇಷ್ಟು ಕಡಿಮೆ ಬಹುಮಾನದ ಕೊಟ್ಟನಲ್ಲಾ ಎಂದು ಹುಲಿಹೊಡೆದ ಧೀರ, ಧಣಿಯ ಮುಂದೆ ಇಲಿಯಂತೆ ಗೊಣಗಿಕೊಂಡು ಹೋಗುತ್ತಾನೆ. ಇಂತಹ ಭಿನ್ನ ಪಾಠಾಂತರದ ಕಥೆಗಳು ಸಿಗುತ್ತವೆ.

ಗುಲಬರ್ಗಾ ಜಿಲ್ಲೆ ಆಳಂದ ತಾಲ್ಲೂಕಿನ ದೇಗಾಂವ ಗ್ರಾಮದಲ್ಲಿ ಹುಲಿ ಓಡಿಸುವ ಒಂದು ವಿಶಿಷ್ಟ ಜಾತ್ರೆ ನಡೆಯುತ್ತದೆ. ಇದು ಈ ಊರಲ್ಲಿನ ಶೇಕ್ ಸಾಹೇಬರ ಹೆಸರಲ್ಲಿ ನಡೆವ ಉರುಸಿನ ಜಾತ್ರೆ. ಕಾಲಿಗೆ ಚಕ್ರವಿರುವ ಮರದ ಆಕರ್ಷಕ ಹುಲಿಯೊಂದನ್ನು ಈ ಆಚರಣೆಗಾಗಿ ಸಿದ್ದಪಡಿಸಿರುತ್ತಾರೆ. ಈ ಹುಲಿಯ ನಾಲ್ಕು ಕಾಲಿಗೆ ಮದ್ದು ತುಂಬಿರುತ್ತಾರೆ. ಆಚರಣೆಯ ಭಾಗವಾಗಿ ಈ ಮದ್ದಿಗೆ ಬೆಂಕಿ ಇಡುತ್ತಲೂ ಜೀವಂತ ಹುಲಿಯಂತೆ ಹುಲಿ ಓಡುತ್ತಾ ಮುಂದಿನ ಕಂಬವೊಂದಕ್ಕೆ ಡಿಕ್ಕಿ ಹೊಡೆದು ನಿಲ್ಲುತ್ತದೆ. ಹೀಗೆ ಕಾಡಿನ ಪ್ರಾಣಿಯನ್ನು ಓಡಿಸುವ ಆಚರಣೆ ಹಲವೆಡೆ ಇದೆ. ಸಂಕ್ರಾಂತಿ ಹಬ್ಬದಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕದಬಳ್ಳಿಯಲ್ಲಿ ಊರಿನವರು ಬೇಟೆಗೆ ಹೋಗಿ ಜೀವಂತ ನರಿಗಳನ್ನು ಹಿಡಿದು ತಂದು, ಅವುಗಳಿಗೆ ಪಟಾಕಿ ಹಚ್ಚಿ ಕಾಡಿಗೆ ಓಡಿಸುತ್ತಿದ್ದರು. ಈ ಆಚರಣೆ ಈಚೆಗೆ ನಿಷೇಧಿಸಲಾಗಿದೆ. ಹೀಗೆ ಕಾಡು ಪ್ರಾಣಿಗಳನ್ನು ನಾಡಿನಿಂದ ಓಡಿಸುವ ಆಚರಣೆಗಳು ಸಾಂಕೇತಿಕವಾಗಿ ಕಾಡು-ನಾಡಿನ ಸಂಘರ್ಷ ಮತ್ತು ಹೊಂದಾಣಿಕೆಯನ್ನು ಸೂಚಿಸುವಂತಿವೆ.
ಜನಪದ ಪರಂಪರೆ ಮತ್ತು ಕಥನಗಳಲ್ಲಿ ಹುಲಿ ವಹಿಸುವ ಪಾತ್ರಕ್ಕೂ ಸಿಂಹ ವಹಿಸುವ ಪಾತ್ರಕ್ಕೂ ವ್ಯತ್ಯಾಸವಿದೆ. ಕುತೂಹಲವೆಂದರೆ ಯಾವ ಶಿಷ್ಟದೇವತೆಯೂ ಹುಲಿಯನ್ನು ವಾಹನ ಮಾಡಿಕೊಂಡಿಲ್ಲ. ಆದರೆ ಜನಪದ ಹುಲಿಗೆಮ್ಮನಂಥ ಸ್ಥಳೀಯ ದೇವತೆಗಳಿವೆ. ಹುಲಿ ಕ್ರೂರ ಪ್ರಾಣಿ ಎಂಬ ಭಾವನೆ ಇದೆ. ಆದರೆ ಸಿಂಹ ರಾಜಗಾಂಭೀರ್ಯಕ್ಕೆ ಹೆಸರಾದದ್ದು. ದಕ್ಷಿಣ ಭಾರತದ ಕಾಡುಗಳಲ್ಲಿ ಸಿಂಹಗಳಿಲ್ಲದಿರುವುದಕ್ಕೂ ಕಥನ ಮತ್ತು ಆಚರಣೆಗಳಲ್ಲಿ ಸಿಂಹದ ಗೈರು ಹಾಜರಿಗೂ ಸಂಬಂಧವಿದ್ದಂತಿದೆ. ಮೌಖಿಕ ಕತೆಗಳಲ್ಲಿ ಹುಲಿಸವಾರಿ ಮಾಡುವ ನಾಯಕ ಸವಾಲನ್ನು ಎದುರಿಸುವವನಾಗಿರುತ್ತಾನೆ. ’ಹುಲಿ ಸವಾರಿ’ ಎಂಬ ನುಡಿಗಟ್ಟೇ ಇಂಥ ಸವಾರಿಯ ಅಪಾಯವನ್ನೂ ಹೇಳುತ್ತದೆ. ಇದನ್ನು ಮಲೆ ಮಾದಪ್ಪನ ಕಥನದಲ್ಲಿ ಪರಿಣಾಮಕಾರಿಯಾಗಿ ನೋಡಬಹುದು. ಮಾದಪ್ಪನಂಥ ದಲಿತ ವ್ಯಕ್ತಿ ತನ್ನ ಸುತ್ತಲ ಸಮಾಜದ ಜಾತಿ ಪ್ರೇರಿತ ಸವಾಲುಗಳನ್ನು ಎದುರಿಸಿ ಗೆದ್ದದ್ದು ಕೂಡ ಹುಲಿಸವಾರಿಯೇ. ಪ್ರತಿಭಟನೆಯ, ಛಲದ ಹಾದಿ ಹಿಡಿಯುವುದನ್ನು ಹುಲಿಸವಾರಿ ರೂಪಾಕಾತ್ಮಕವಾಗಿ ವಿವರಿಸುವಂತಿದೆ. ಅಥವ, ನರಭಕ್ಷಕ ಹುಲಿಯಾದರೂ ನೆರವಿತ್ತೀತು. ಮನುಷ್ಯ ಸಮಾಜವಲ್ಲ ಎಂಬ ವ್ಯಾಖ್ಯಾನವಾಗುವಂತಿದೆ. ಮಾದಪ್ಪನಿಗೆ ಒಕ್ಕಲುಗಳನ್ನು ಪಡೆಯಲು, ಮಠಗಳ ಯಜಮಾನಿಕೆಯನ್ನು ವಿರೋಧಿಸಲು ಹುಲಿ ಹಾವುಗಳು ಸಹಾಯ ಮಾಡುತ್ತವೆಯೆ ಹೊರತು ಇತರ ಮನುಷ್ಯರಲ್ಲ. ಹಾಗೆಯೇ ಹಸುವಿನ ಸಂಗತಿ ಕೂಡ. ವ್ಯವಸಾಯ ಕಸುಬು ಪ್ರಮುಖವಾಗಿದ್ದ ಸಮಾಜದಲ್ಲಿ ಸೃಷ್ಟಿಯಾದ ಕತೆಗಳಲ್ಲಿ ಮಾತ್ರ ಹಸು ಒಂದು ಮೌಲ್ಯದ ಸಂಕೇತವಾಗಬಲ್ಲದು. (ನೋಡಿ:ಮಾದಪ್ಪನ ಕತೆಯ ಸುತ್ತಮುತ್ತ, ಓ ಎಲ್ ನಾಗಭೂಷಣಸ್ವಾಮಿ)
ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ‘ಹುಲಿ’ ಪದ ಒಂದು ನುಡಿಗಟ್ಟಾಗಿ ಬಳಕೆಯಾಗಿದೆ ಆ ಬಗ್ಗೆಯೇ ಒಂದು ಕುತೂಹಲಕಾರಿಯಾದ ಅಧ್ಯಯನ ಮಾಡಬಹುದಾಗಿದೆ. ಕನ್ನಡದ ಮಹತ್ವದ ಕವಿ ಕುಮಾರವ್ಯಾಸನು ತನ್ನ ಭಾರತದಲ್ಲಿ `ಅರಸು ರಾಕ್ಷಸ, ಮಂತ್ರಿ ಮೊರೆವ ಹುಲಿ, ಪರಿವಾರಹದ್ದಿನ ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು’ ಎಂದಿದ್ದಾನೆ. ಈ ವಾಕ್ಯ ಪ್ರಭುತ್ವದ ಜತೆಗಿನ ಸಾಹಿತಿ ಕವಿಯೊಬ್ಬರ ಸಂಬಂಧದ ಸ್ವರೂಪವನ್ನು ವಿವರಿಸುವಾಗ ಮತ್ತೆ ಮತ್ತೆ ಬಳಕೆಯಾಗಿದೆ. ಅಕ್ಕಮಹಾದೇವಿ ತನ್ನ ವಚನದಲ್ಲಿ ‘ಅತ್ತೆ ಮಾಯೆ, ಮಾವ ಸಂಸಾರಿ/ ಮೂವರು ಮೈದುನರು ಹುಲಿಯಂಥವರು/ನಾಲ್ವರು ನಗೆವೆಣ್ಣು ಕೇಳು ಕೆಳದಿ’ ಎಂಬ ರೂಪಕದಲ್ಲಿ ಹುಲಿ ಸಮೀಕರಣವಿದೆ. ಚನ್ನಮಲ್ಲಿಕಾರ್ಜುನನ್ನು ಗುಣಗಾನ ಮಾಡುವಾಗ ‘ಹುಲಿಚರ್ಮ ಹೊದ್ದರೂ ಹಾಲು ಮನಸಿನ ಹುಡುಗ’ ಎಂದು ಕರೆಯುತ್ತಾಳೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ನಾಯಿಯನ್ನೆ ಹುಲಿಯೆಂದು ಕರೆಯುವುದಿದೆ. ಗುತ್ತಿ ನಾಯಿಯನ್ನು ಹುಲಿಯಾ ಎಂದೇ ಕರೆಯುತ್ತಾನೆ. ಒಂದು ಶಕ್ತ ರೂಪಕವಾಗಿ ‘ಹುಲಿಕಲ್ಲು ಬೆಟ್ಟದ’ ಚಿತ್ರಣ ಬರುತ್ತದೆ. ತೇಜಸ್ವಿಯವರ ‘ಹುಲಿಯೂರಿನ ಸರಹದ್ದು’ ತರಹದ ರೂಪಕದ ಕಥೆಗಳನ್ನು ನೋಡಬಹುದು. ಚಂದ್ರಶೇಖರ ಕಂಬಾರರ ‘ಹೇಳತೇನ ಕೇಳ’ ಕಾವ್ಯವನ್ನು ಒಳಗೊಂಡಂತೆ ಹುಲಿಬೇಟೆಯ ಚಿತ್ರಣ ಮತ್ತೆ ಮತ್ತೆ ಬರುತ್ತದೆ. ವಿವೇಕ ಶಾನುಭಾಗ ಅವರ ‘ಹುಲಿ ಸವಾರಿ’ ಕಥೆಯತನಕ ಇಂತಹ ನೂರಾರು ಉಲ್ಲೇಖಗಳನ್ನು ಕನ್ನಡ ಸಾಹಿತ್ಯದ ಪಠ್ಯಗಳಿಂದ ಹೆಕ್ಕಿ ಕೊಡಬಹುದು. ಇದು ಕೂಡ ಜನಪದ ಕಥನ ಮತ್ತು ಕಾವ್ಯ ಪರಂಪರೆಯಲ್ಲಿ ಹುಲಿಯನ್ನು ಮುಖಾಮುಖಿ ಮಾಡಿದ ಆಧುನಿಕ ಮನಸ್ಸಿನ ಆಯಾಮವಾಗಿಯೂ ನೋಡಬಹುದು.
ಗೋವಿನ ಹಾಡಿನ ತರಹದ ‘ಹುಲಿ ದೇವರ ಹಾಡು’ ಮುಂತಾದ ಜನಪದ ಗೀತೆ ಕಥನಗೀತೆ ಲಾವಣಿಗಳಿವೆ. ಈ ಗೀತೆಗಳು ಸಾಮಾನ್ಯವಾಗಿ ಹುಲಿಬೇಟೆಯ ಸುತ್ತದ ಘಟನಾವಳಿಗಳಿಂದ ಕೂಡಿರುತ್ತವೆ. ಇಲ್ಲಿಯೂ ರಾಜನಾಗಲಿ, ಊರಿನ ಗೌಡನಾಗಲಿ ಹುಲಿ ಬೇಟೆ ಮಾಡಿದ್ದಕ್ಕಿಂತ ಸಾಮಾನ್ಯ ಅಸಹಾಯಕ ಜನರು ಬೇಟೆಯಾಡುವುದೇ ಹೆಚ್ಚು. ಬಹುಶಃ ಈ ಕಥನಗಳು ಜನಸಾಮಾನ್ಯರೊಳಗಿನ ಅದುಮಿಟ್ಟ ಪ್ರತಿರೋಧದ ಸಂಕೇತವಾಗಿಯೂ ಹುಟ್ಟಿರಬಹುದು. ಅಂತೆಯೇ ಹುಲಿಯನ್ನು ಸಣ್ಣ ಪ್ರಾಣಿಗಳು ಸೋಲಿಸುವ ತೆರನಾದ ಜನಪದ ಕಥೆಗಳು ಸಾಕಷ್ಟಿವೆ. ಈ ತರಹದ ಗೀತೆ ಕಥನಗಳ ಸೃಷ್ಟಿಯಲ್ಲಿ ಜನ ಸಾಮಾನ್ಯರ ಪ್ರತಿರೋಧ, ಸೆಡವಿನ ಗುಣ ಪ್ರತಿ ಸಂಸ್ಕೃತಿ ಕಟ್ಟಿಕೊಳ್ಳುವ ಪೆಡುಸುತನ ಸಹಜವಾಗಿ ಮೂಡಿಬಂದಿದೆ. ಇಲ್ಲೆಲ್ಲಾ ಹುಲಿ ಜನ ಸಾಮಾನ್ಯರ ಶಕ್ತಿಯ ರೂಪಕವಾಗಿ ಒದಗಿದೆ.

ಗುರುವಾರ, ಡಿಸೆಂಬರ್ 5, 2013

ಕಥೆಗಳ ಅಜ್ಜಿ ಎಲ್ಲಿರುವಿ ?

ನಾ.ಡಿಸೋಜ

   ನಾ.ಡಿಸೋಜ ಅವರು 80 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಿಸೋಜ ಅವರ ಆಯ್ಕೆ ಪ್ರಗತಿಪರ ಚಿಂತಕರಿಗೆ ಖುಷಿ ಕೊಟ್ಟಿದೆ. ಕಾರಣ ನಾ.ಡಿ ಅವರು ರಾಜಕಾರಣ, ಲಾಭಿ ಮಾಡದೆ ತಮ್ಮಷ್ಟಕ್ಕೆ ತಾವು ಬರೆದುಕೊಂಡಿರುವ ಸಾಹಿತಿ. ಮಕ್ಕಳ ಸಾಹಿತ್ಯ, ಕಥೆ, ಕಾದಂಬರಿ, ವೈಚಾರಿಕ ಬರಹ ಹೀಗೆ ಬರಹದ ಹಲವು ಮಗ್ಗಲುಗಳಲ್ಲಿ ಲೀಲಾಜಾಲ ನಡೆದವರು. ಇಂತಹ ಡಿಸೋಜ ಅವರಿಗೆ ಕನ್ನಡ ಜಾನಪದ ಬ್ಲಾಗ್ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಕಥೆ ಹೇಳುವ ಅಜ್ಜಿಯ  ಈ ಬರಹ ಡಿಸೋಜರ ಜಾನಪದ ಗ್ರಹಿಕೆಯ ಸೂಕ್ಷ್ಮತೆಯನ್ನು ತೋರುತ್ತಿದೆ.


(ರೈಲು ಪಯಣಕ್ಕೆ ಬಂದಿದ್ದ ಅಜ್ಜಿ)

ಮೊನ್ನೆ ಸಾಗರದ ರೈಲು ನಿಲ್ದಾಣದಲ್ಲಿ ಒಂದು ಘಟನೆ ನಡೆಯಿತು. ಸುಮಾರು ೧೯೩೮ರಿಂದ ಸತತವಾಗಿ ೧೯೮೪ರ ವರೆಗೆ ತಿರುಗಾಡುತ್ತಿದ್ದ ತಾಳಗುಪ್ಪ ಬೆಂಗಳೂರು ರೈಲು ನಡುವೆ ಇಪ್ಪತ್ತು ವರ್ಷ ತನ್ನ ಓಡಾಟವನ್ನ ನಿಲ್ಲಿಸಿದ್ದು ಸೆಪ್ಟೆಂಬರ್ ೮ ರಂದು ಮತ್ತೆ ಓಡಾಟವನ್ನ ಆರಂಭಿಸಿತು. ಸಾಗರದ ಒಂದು ಸಂಸ್ಥೆ ಈ ಹೋರಾಟದ ನೇತ್ರತ್ವವನ್ನ ವಹಿಸಿ ರೈಲನ್ನ ಮತ್ತೆ ಊರ ಜನರಿಗೆ ದೊರಕಿಸಿ ಕೊಟ್ಟಿತು. ಈ ಸಂಭ್ರಮವನ್ನ ಆಚರಿಸಲು ಸಹಸ್ರ ಸಹಸ್ರ ಸಂಖ್ಯೆಯ ಜನ ನಿಲ್ದಾಣದಲ್ಲಿ ಸೇರಿದ್ದರು. ಈ ಜನರ ನಡುವೆ ಓರ್ವ ಅಜ್ಜಿ ತನ್ನ ಮೊಮ್ಮಗನನ್ನ ಕರೆದು ಕೊಂಡು ಬಂದವಳು ಅಲ್ಲಿ ಎಲ್ಲರ ಗಮನ ಸೆಳೆದಳು. ಟಿಕೇಟು ಕೊಳ್ಳಲು ಪರದಾಡುತ್ತಿದ್ದ ಅವಳನ್ನ ಗಮನಿಸಿದ ಪತ್ರಕರ್ತರು ಮಾತನಾಡಿಸಿದಾಗ ಕೆಲ ಕುತೂಹಲದ ವಿಚಾರಗಳು ಹೊರಬಿದ್ದವು.

ಆಕೆ ಹತ್ತಿರದ ಕುಗ್ವೆ ಗ್ರಾಮದ ಓರ್ವ ಸ್ವಾತಂತ್ರ್ಯ ಹೋರಾಟಗಾರನ ಹೆಂಡತಿ ಗುತ್ಯಮ್ಮ. ಅವಳ ಮೊಮ್ಮಗ ಇಂದೂಧರ ಅವಳ ಜೊತೆಯಲ್ಲಿ ಇದ್ದ. ಮೊಮ್ಮಗನನ್ನ ಸಾಗರದಿಂದ ತಾಳಗುಪ್ಪದವರೆಗೆ ರೈಲಿನಲ್ಲಿ ಕರೆದೊಯ್ಯಬೇಕೆಂದು ಆಕೆ ಬಂದಿದ್ದಳು. ಈ ವಿಚಾರ ನಿನಗೇಕೆ ಬಂತು ಎಂದು ಕೇಳಿದಾಗ ಆಕೆ "ನಾನು ನನ್ನ ಮೊಮ್ಮಗನಿಗೆ ಬಂಗಾರ, ವಜ್ರ ವೈಢೂರ್ಯ ಕೊಡಿಸಲಾರೆ. ಆದರೆ ಸಾಗರಕ್ಕೆ ರೈಲು ಬಂದ ಮೊದಲ ದಿನ ಅವನನ್ನ ಇಲ್ಲಿಂದ ತಾಳಗುಪ್ಪಕ್ಕೆ ಕರೆದೊಯ್ಯುವುದರ ಮೂಲಕ ಅವನ ಮನಸ್ಸಿನಲ್ಲಿ ತಾನು ಇಂತಹಾ ಒಂದು ದಿನ ರೈಲಿನಲ್ಲಿ ಪ್ರಯಾಣ ಮಾಡಿದೆ ಅನ್ನುವ ನೆನಪನ್ನ ಹಸಿರಾಗಿ ಇರಿಸ ಬಲ್ಲೆ, ಅವನಿಗೆ ಈ ಪ್ರಯಾಣದ ಅನುಭವವನ್ನ ನೀಡ ಬಲ್ಲೆ" ಎಂದಳು ಅಜ್ಜಿ. ರೈಲು ಬಂದು ನಿಂತಾಗ ನೆರೆದ ಜನ ಪಟಾಕಿ ಹಚ್ಚುವುದರಲ್ಲಿ, ರೈಲಿಗೆ ಪೂಜೆ ಮಾಡುವುದರಲ್ಲಿ, ಸಿಹಿ ಹಂಚುವಲ್ಲಿ, ಜಯಘೋಷ ಮಾಡುವುದರಲ್ಲಿ ನಿರತರಾಗದ್ದರೆ ಈ ಅಜ್ಜಿ ಕೆನ್ನೆಟೋಪಿ ಹಾಕಿ ಕೊಂಡ ಮೊಮ್ಮಗನ ಜೊತೆಯಲ್ಲಿ ರೈಲನ್ನ ಏರಿ ಕುಳಿತಿದ್ದಳು. ಸುಮಾರು ಆರುವರ್ಷದ ಅವಳ ಮೊಮ್ಮಗ ಮುಖದ ಮೇಲೆ ಮುಗುಳು ನಗೆ ಧರಿಸಿ, ಅಚ್ಚರಿಯಿಂದ ರೈಲು ಮುಂದೆ ಸಾಗುವುದನ್ನ ನೋಡುತ್ತಲಿದ್ದ.

ಈ ಅಜ್ಜಿಯ ಮನೋಭಾವ ಹಲವರಲ್ಲಿ ಹಲವು ಭಾವನೆಗಳಿಗೆ ಅನುವು ಮಾಡಿ ಕೊಟ್ಟಿತು. ನಿಂತೇ ಹೋದ ರೈಲು ಸಾಗರಕ್ಕೆ ಬಂದಿದೆ. ಅದನ್ನ ನೋಡಲು ಸಾವಿರ ಜನ ನೆರೆದಿದ್ದಾರೆ. ಇದೊಂದು ಐತಿಹಾಸಿಕ ವಿಷಯ ಕೂಡ. ಇಂದು ಬಂದ ರೈಲು ನಾಳೆಗೆ ಹಳತಾಗುತ್ತದೆ. ಇದು ಸಾಗರದ ಚರಿತ್ರೆಯಲ್ಲಿ ಒಂದು ಸಾಮಾನ್ಯ ವಿಷಯವಾಗಿ ಬಿಡುತ್ತದೆ. ಆದರೆ ಇಂದಿನ ಮಹತ್ವವನ್ನ ಸವಿಯ ಬೇಕಲ್ಲ. ಈ ಅವಕಾಶ ತನ್ನ ಮೊಮ್ಮಗನಿಗೆ ಸಿಗಬೇಕು, ಆತ ನಾಳೆ ಬೆಳೆದು ದೊಡ್ಡವನಾದ ಮೇಲೆ ಈ ಅನುಭವವನ್ನ ಆತ ಮೆಲಕು ಹಾಕಬೇಕು, ಇದರ ರೋಮಾಂಚನವನ್ನ ಆತ ಇತರರ ಜೊತೆಯಲ್ಲಿ ಹಂಚಿ ಕೊಳ್ಳಬೇಕು. ಹೀಗೆಂದೇ ಆ ಹಿರಿಯ ಜೀವ ಸುಮಾರು ಮೂರು ಮೈಲಿ ದೂರದಿಂದ ಬಸ್ಸು ಹತ್ತಿ ಸಾಗರಕ್ಕೆ ಬಂದಿತ್ತು. ಮೊಮ್ಮಗನನ್ನ ಕರೆತಂದಿತ್ತು. ಇದು ಅಜ್ಜಿಗೆ ಮಾತ್ರ ಹೊಳೆಯುವ ವಿಷಯ. ಅಜ್ಜಿ ಮಾತ್ರ ಈ ಕೆಲಸ ಮಾಡಬಲ್ಲಳು.

ಒಂದು ಕಾಲದಲ್ಲಿ ನಮ್ಮೆಲ್ಲರ ಮನೆಗಳಲ್ಲಿ ಇಂತಹಾ ಓರ್ವ ಅಜ್ಜಿ ಇರುತ್ತಿದ್ದಳು. ಮನೆಯಲ್ಲಿಯ ಮೊಮ್ಮಕ್ಕಳ ಬೇಕು ಬೇಡಗಳನ್ನ ಗಮನಿಸಿ ಅವುಗಳನ್ನ ನೆರವೇರಿಸುವಲ್ಲಿ ಈ ಅಜ್ಜಿ ಸದಾ ನಿರತಳಾಗಿರುತ್ತಿದ್ದಳು. ಇಂದು ಮಾತ್ರ ಇಂತಹಾ ಅಜ್ಜಿಯನ್ನ ನಾವು ಹುಡುಕ ಬೇಕಿದೆ. ನಾವೆಲ್ಲ ಬೆಳೆದದ್ದು ಇಂತಹಾ ಅಜ್ಜಿಯ ಕೈಯಲ್ಲಿಯೇ. ಆದರೆ ಇಂದು ನಮ್ಮ ಮೊಮ್ಮಕ್ಕಳ ಪಾಲಿಗೆ ಇಂತಹಾ ಅಜ್ಜಿ ಇದ್ದಾಳೆಯೇ ? ಎಲ್ಲಿ ಹೋದಳು ಈ ಅಜ್ಜಿ ?

"ಹೊಲಕ್ಕೊಬ್ಬ ಅಜ್ಜ ಮನೆಗೊಂದು ಅಜ್ಜಿ" ಇರಬೇಕು ಅನ್ನುವುದು ಒಂದು ಹಳೆಯ ಗಾದೆ ಮಾತು. ಹೊಲದ ದೇಖಬಾಲಿಗೆ ಅಜ್ಜ ಬೇಕು. ಬೇಲಿ ಮುರಿದಿದ್ದರೆ ಬೇಲಿ ಹಾಕಲು, ದನ, ಹಕ್ಕಿಪಕ್ಕಿ ಹೊಲಕ್ಕೆ ದಾಳಿಮಾಡದ ಹಾಗೆ ನೊಡಿಕೊಳ್ಳಲು ಅಜ್ಜ ಬೇಕು. ಹಾಗೆಯೇ ಮನೆಯಲ್ಲಿ ಏನೇ ಹೆಚ್ಚು ಕಡಿಮೆ ಆದಾಗ, ಮಗುವಿಗೆ ನೆಗಡಿ ಆದಾಗ, ಹಬ್ಬ ಮದುವೆಯ ಸಂದರ್ಭದಲ್ಲಿ ಹೀಗಲ್ಲ ಹಾಗೆ ಎಂದು ಹೇಳಲು, ಮನೆಯ ಜನರ ನಡುವೆ ಒಂದು ಮನಸ್ತಾಪ ಬಂದಾಗ ಅದನ್ನ ಪರಿಹರಿಸಲು ಅಜ್ಜಿ ಬೇಕು. ಮುಖ್ಯವಾಗಿ ಮನೆಯ ಮಕ್ಕಳನ್ನ ನೋಡಿ ಕೊಳ್ಳಲು ಅಜ್ಜಿ ಬೇಕು. ಈ ಅಜ್ಜಿ ಮಗುವಾಗಿದ್ದವಳೇ, ನಂತರ ಹುಡುಗಿಯಾಗಿ ತರುಣಿಯಾಗಿ, ಹೆಂಗಸಾಗಿ,  ಹೆಂಡತಿಯಾಗಿ ತಾಯಿಯಾಗಿ, ಅತ್ತೆಯಾಗಿ ಇದೀಗ ತನ್ನ ವಯಸ್ಸಿನ ಕಾರಣದಿಂದಾಗಿ, ಮನೆಯಲ್ಲಿ ದೊರೆತ ಸ್ಥಾನ ಮಾನಗಳಿಂದಾಗಿ ಅಜ್ಜಿಯಾಗಿದ್ದಾಳೆ. ಅವಳಿಗೆ ಈ ವಯಸ್ಸು, ಸ್ಥಾನ ಮಾನ, ಅನುಭವ. ಹಲವು ವಿಷಯಗಳನ್ನ ಕಲಿಸಿದೆ. ಹಲವು ಜವಾಬ್ದಾರಿಗಳನ್ನ ನೀಡಿದೆ. ಹೀಗೆ ನೀಡಿದ ಹಲವು ಜವಾಬ್ದಾರಿಗಳಲ್ಲಿ ಒಂದು ಈ "ಅಜ್ಜಿತನ".

ಈ ಅಜ್ಜಿಯದು ವಿಚಿತ್ರವಾದ ವ್ಯಕ್ತಿತ್ವ. ಅವಳು ತನ್ನ ಮಕ್ಕಳಿಗಾಗಿ ಮಿಡುಕಾಡುವುದು ಕಡಿಮೆ ಆದರೆ ಅದೇ ಮೊಮ್ಮಕ್ಕಳೆಂದರೆ ಇವಳಿಗೆ ಹೃದಯ ಬಾಯಿಗೆ ಬರುತ್ತದೆ. ಮಕ್ಕಳನ್ನ ಇವಳು ಅಪ್ಪಿ ಕೊಳ್ಳಲಾರಳು. ಎತ್ತಿ ಮುದ್ದು ಮಾಡಲಾರಳು, ತಿದ್ದಿ ಬುಧ್ದಿ ಹೇಳಲಾರಳು ಆದರೆ ಅದೇ ಮೊಮ್ಮಕ್ಕಳೆಂದರೆ ಆಕೆ ಎತ್ತಿ ಆಡಿಸಿ, ಊಟ ಮಾಡಿಸಿ, ಬೈಯ್ದು ಹೊಡೆದು ಬುಧ್ದಿ ಕಲಿಸುತ್ತಾಳೆ. ಇದೇ ಕಾರಣದಿಂದಾಗಿ ಅಜ್ಜಿಗೆ ಮಕ್ಕಳಿಗಿಂತ ಮೊಮ್ಮಕ್ಕಳ ಮೇಲೆ ಹೆಚ್ಚು ಪ್ರಾಣ. ಅಜ್ಜಿಗೆ ಮಕ್ಕಳು ಮತ್ತು ಮೊಮ್ಮಕ್ಕಳ ನಡುವಿನ ವಯಸ್ಸಿನ ಅಂತರ ಇಂತಹಾ ಕ್ರಿಯೆಗೆ ಕಾರಣವಾಗುತ್ತದೆ.

ಮನೆಯಲ್ಲಿ ತಾಯಿಗೆ ಬಿಡುವಿಲ್ಲದಷ್ಟು ಕೆಲಸ. ತಂದೆಗಂತೂ ಮನೆಯ ಕಡೆ ಗಮನಹರಿಸಲು ಬಿಡುವಿಲ್ಲ. ಇನ್ನು ಮೊಮ್ಮಕ್ಕಳ ಎಲ್ಲ ಬೇಡಿಕೆಗಳನ್ನ ನೆರವೇರಿಸುವವಳು ಅಜ್ಜಿಯೇ. ಮೊಮ್ಮಕ್ಕಳನ್ನ ಮಲಗಿಸಲು ಅಜ್ಜಿಯ ಬೆಚ್ಚನೆಯ ಮಡಿಲು ಬೇಕು, ಊಟ ಮಾಡಿಸಲು ಅಜ್ಜಿಯ ಮುದ್ದು ಮಾತು ಬೇಕು, ಅಪ್ಪ ಅಮ್ಮ ಹೊಡೆದಾಗ ಸಾಂತ್ವನ ಹೇಳಲು ಅಜ್ಜಿ ಬೇಕು, ಸ್ನಾನ ಮಾಡಿಸಲು, ಕುಂಡೆ ತೊಳೆಸಲು, ಕೊನೆಗೆ ನಿದ್ದೆ ಬರುವ ತನಕ ಕತೆ ಹೇಳಲು ಅಜ್ಜಿ ಬೇಕು. ಅಜ್ಜಿ ಅಜ್ಜಿ ಅಜ್ಜಿ . ಮಗುವಿನ ಈ ಕರೆಗೆ ಸದಾ ಕಿವಿಗೊಟ್ಟು ಓಡಿ ಬರುವವಳು ಅಜ್ಜಿ.ಈ ಅಜ್ಜಿ ಮೊಮ್ಮಗನನ್ನ ಅರ್ಥ ಮಾಡಿ ಕೊಂಡಂತೆ ಅದರ ತಾಯಿ ತಂದೆ ಅರ್ಥ ಮಾಡಿ ಕೊಂಡಿರುವುದಿಲ್ಲ. ಸ್ಪಷ್ಟವಾಗಿ ಮಾತನಾಡಲು ಬಾರದ ಮೊಮ್ಮಗುವಿಗೆ ಹೊಟ್ಟೆ ನೋವೇ, ಕಿವಿ ನೋವೇ, ಎಲ್ಲಿಯಾದರೂ ಇರುವೆ ಕಡಿದಿದೆಯೇ ಇದೆಲ್ಲವನ್ನ ಅರ್ಥ ಮಾಡಿ ಕೊಳ್ಳುವವಳು ಅಜ್ಜಿ. ಅರ್ಥ ಮಾಡಿ ಕೊಂಡು ತಕ್ಷಣ ಔಷಧಿ ಮಾಡುವವಳು ಅಜ್ಜಿ. ಮೊಮ್ಮಗನ ಬಾಯಿ ರುಚಿಯನ್ನ ಇವಳು ಬಲ್ಲಳು. ಯಾವುದಾದರೂ ಮದುವೆಗೆ ಇನ್ನೊಂದು ಸಮಾರಂಭಕ್ಕೆ ಒಂಟಿಯಾಗಿ ಹೋದ ಅಜ್ಜಿ ಮೈಸೂರು ಪಾಕು, ಜಿಲೇಬಿ ಬಡಿಸಿದಾಗ ಮೊದಲು ನೆನಸಿ 
ಕೊಳ್ಳುವುದು ತನ್ನ ಮೊಮ್ಮಗನನ್ನ. ಅಕ್ಕಪಕ್ಕದವರು ನೋಡುತ್ತಿದ್ದರೂ ಎಲೆಯ ಮೇಲಿನ ಸಿಹಿ ತಿಂಡಿಯನ್ನ ಮುಚ್ಚಿ ಇರಿಸಿ ಕೊಂಡು ಇವಳು ಮನೆಗೆ ತರುತ್ತಾಳೆ. ಇದರಲ್ಲಿ ಅವಳಿಗೆ ನಾಚಿಕೆ ಇಲ್ಲ.

ಜಾತ್ರೆಗೆ ಹೋದಾಗ ಮೊದಲ ಗಮನ ಈ ಮೊಮ್ಮಗನ ಮೇಲೆ. ಆತ ಆ ಜನ ಜಂಗುಳಿಯ ನಡುವೆ  ಎಲ್ಲಿಯಾದರೂ ತಪ್ಪಿಸಿ ಕೊಂಡರೆ ? ಇದಕ್ಕೆಂದೇ ಆಕೆ ಕೈಲಿ ಆಗದಿದ್ದರೂ ಮೊಮ್ಮಗನನ್ನ ಎತ್ತಿ ಕೊಂಡೇ ಜಾತ್ರೆಯಲ್ಲಿ ತಿರುಗಾಡುತ್ತಾಳೆ. ಅಜ್ಜಿ ಕತೆಗಳು ಅನ್ನುವ ಸಾಹಿತ್ಯ ಪ್ರಕಾರ ವೈವಿಧ್ಯಮಯವಾಗಿ ಬೆಳೆದಿದ್ದರೆ ಅದಕ್ಕೆ ಕಾರಣ ಅಜ್ಜಿ. ಹೇಳಿದ ಕತೆಗಳನ್ನ ಮತ್ತೆ ಮತ್ತೆ ಕೇಳಲು ಮೊಮ್ಮಕ್ಕಳು ಬಯಸುವುದಿಲ್ಲ ಅನ್ನುವ ಕಾರಣಕ್ಕೇನೆ ಅಜ್ಜಿ ಹೊಸ ಹೊಸ ಕತೆಗಳನ್ನ ಸೃಷ್ಟಿ ಮಾಡುತ್ತ ಹೋಗುತ್ತಾಳೆ. ಅವಳ ಅನುಭವ, ಕಲ್ಪನೆ, ಅವಳಿಂದ ಈ ಕೆಲಸವನ್ನ ಮಾಡಿಸುತ್ತದೆ. ಮೊಮ್ಮಕ್ಕಳು ಕಿವಿತೆರೆದು ಮನಸ್ಸು ತೆರೆದು ಕತೆಗಳನ್ನ ಕೇಳಿದಾಗ ಅವಳ ಬದುಕಿಗೊಂದು ಸಾರ್ಥಕತೆ ಬರುತ್ತದೆ.

ಅಲ್ಲದೆ ತನ್ನ ಬದುಕಿನ ನೂರು ಘಟನೆಗಳನ್ನ ಕತೆಗಳಂತೆ ನಿರೂಪಿಸಿ ಮೊಮ್ಮಕ್ಕಳ ಎದಿರು ಹೇಳುವುದು ಅವಳ ಪಾಲಿನ ಒಂದು ಅಮೂಲ್ಯ ಕಾರ್ಯ ಕೂಡ ಹೌದು. ಈ ಕೆಲಸ ಮಾಡುತ್ತ ಮಾಡುತ್ತ ಅವಳು ತನ್ನ ಹೃದಯದ ನೋವನ್ನ ಕಡಿಮೆ ಮಾಡಿ ಕೊಳ್ಳುವುದು ಮಾತ್ರವಲ್ಲ ಮೊಮ್ಮಗುವಿಗೆ ಅದರಲ್ಲಿ ಆಸಕ್ತಿ ಹುಟ್ಟುವಂತೆ ಮಾಡುತ್ತಾಳೆ. ತಾನು ಅನುಭವಿಸಿದ ಎಲ್ಲವನ್ನ ನೆನಪಿಗೆ ತಂದು ಕೊಂಡು ಮೊಮ್ಮಗುವಿನ ಎದಿರು ಅದನ್ನ ಹೇಳುವಾಗ ಆಕೆಗೆ ಏನೋ ಒಂದು ಸಂತಸ ಆಗುತ್ತದೆ. ಯಾವತ್ತೋ ನಡೆದ ಅದು ಸಂತಸದ ಕ್ಷಣ ಇರಲಿ, ನೋವಿನ ಸಂದರ್ಭವಿರಲಿ ಈಗ ದೂರನಿಂತು ಮೊಮ್ಮಗುವಿನ ಸಮ್ಮುಖದಲ್ಲಿ ಹೇಳುವಾಗ ಅವಳ ನೋವು ಕಡಿಮೆಯಾಗುತ್ತದೆ. ಎದೆ ಹಗುರವಾಗುತ್ತದೆ.
ದಿನಗಳು ಉರುಳಿದ ಹಾಗೆ ಅಜ್ಜಿಗೆ ತನ್ನ ಸ್ಥಾನ ಮಾನದ ಅರಿವಾಗುತ್ತದೆ. ರಾಣಿಯಾಗಿ ಯಾವ ಮನೆಯಲ್ಲಿ ಅವಳು ಮೆರೆದಿದ್ದಳೋ ಅದೇ ಮನೆಯಲ್ಲಿ ಅವಳೀಗ ಎರಡೋ ಮೂರನೆಯದೋ ಸ್ಥಾನಕ್ಕೆ ಬಂದಿದ್ದಾಳೆ. ಅವಳನ್ನ ಕೇಳಿ ಯಾರೂ ಏನನ್ನೂ ಮಾಡುವುದಿಲ್ಲ. ಅವಳ ಮಾತಿಗೆ ಬೆಲೆ ಕೊಡುವುದಿಲ್ಲ. ಹಿರಿಯರು ಅವಳನ್ನ ಗೌರವಿಸುತ್ತಾರೆ ನಿಜ. ಆದರೆ ಅವಳನ್ನ ಇರಿಸಿರುವ ಜಾಗ ಬೇರೆಯೇ. ಇಂತಹಾ ಸಂದರ್ಭದಲ್ಲಿ ಅದೇ ಮನೆಯಲ್ಲಿ ಅವಳಿಗೊಂದು ಸ್ಥಾನ ದೊರೆಯುತ್ತದೆ.   ಅದು ಅಜ್ಜಿಯಸ್ಥಾನ. ಬೇರೆ ಯಾರೂ ಕಸಿದು ಕೊಳ್ಳದ ಸ್ಥಾನ.


ಇದೀಗ ಅವಳದ್ದೇ ಒಂದು ಪ್ರಪಂಚ ಇಲ್ಲಿ ತೆರೆದು ಕೊಂಡಿದೆ. ಅಲ್ಲಿ ಅವಳೇ ಯಜಮಾನಿ. ಅವಳ ಈ ಸುಂದರ ಪ್ರಪಂಚದ ಮಹಾನ್ ಪ್ರಜೆಗಳೆಂದರೆ ಅವಳ ಮೊಮ್ಮಕ್ಕಳು. ಮೊಮ್ಮಕ್ಕಳಿಗೆ ಕಾಲ ಕಾಲಕ್ಕೆ ಊಟ ಮಾಡಿಸುವ, ಮೊಮ್ಮಕ್ಕಳ ಬಟ್ಟೆ, ಆಟದ ಸಾಮಾನು, ಓದುವ ಪುಸ್ತಕ ತೆಗೆದಿರಿಸುವ ಕೆಲಸ ಇವಳ ಪಾಲಿಗೆ ಬರುತ್ತದೆ. ಮಗುವಿನ ಕಾಲು ಚೀಲ ಹುಡುಕಿ ಒಗೆದು ಇರಿಸುತ್ತಾಳೆ. ಅದರ ಟಾನಿಕ, ಔಷಧಿ ಕುಡಿಸುವ ಸಮಯ ಜ್ಞಾಪಿಸುತ್ತಾಳೆ ಅಜ್ಜಿ. ಮಗು ಶಾಲೆಗೆ ಹೋಗಲು ನೆನಪು ಮಾಡುತ್ತಾಳೆ. ಶಾಲೆಯಲ್ಲಿ ಮಕ್ಕಳ ಕಾರ್ಯಕ್ರಮ ಇದ್ದ ದಿನ ತಪ್ಪದೆ ಶಾಲೆಗೆ ಹೋಗಿ ಮೊದಲ ಸಾಲನಲ್ಲಿ ಕುಳಿತು ಮೊಮ್ಮಗನ ನೃತ್ಯ ನೋಡಿ ಸಂತಸ ಪಟ್ಟು ಬರುತ್ತಾಳೆ. ಮನೆಗೆ ಬಂದವಳೇ ಮೊದಲು ಮೊಮ್ಮಗನನ್ನ ಬಾಗಿಲಲ್ಲಿ ನಿಲ್ಲಿಸಿಕೊಂಡು ದೃಷ್ಟಿ ತೆಗೆಯುತ್ತಾಳೆ. ಮೊಮ್ಮಗ ಶಾಲೆಯಿಂದ ಬರಲು ತುಸು ತಡವಾದರೂ ಹತ್ತು ಬಾರಿ ಮನೆಯಿಂದ ಹೊರಬಂದು ಮೊಮ್ಮಗನ ದಾರಿ ಕಾಯುವವಳು ಕೂಡ ಈ ಅಜ್ಜಿಯೇ.

ಇಂತಹಾ ಅಜ್ಜಿಯಂದಿರ ಸಂಖ್ಯೆ ಇಂದು ಕಡಿಮೆ ಆಗುತ್ತಿದೆಯೇ ? ಎಲ್ಲಿ ಹೋದರು ಈ ಅಜ್ಜಿಯರು ? ಮಕ್ಕಳಿಗೆ ಮನರಂಜನೆ ನೀಡುವ ಕತೆ ಹೇಳುವ ಅಜ್ಜಿಗಳು ಇಲ್ಲ. ಸಣ್ಣ ಪುಟ್ಟ ಕಾಯಿಲೆಗಳಿಗೆ ಮದ್ದುಮಾಡುವ ಅಜ್ಜಿಗಳಿಲ್ಲ. ಅಮ್ಮ ಹೊಡೆದಾಗ ಅಪ್ಪ ಜೋರು ಮಾಡಿದಾಗ ಮಗುವನ್ನ ತಬ್ಬಿ ಕೊಂಡು ಸಾಂತ್ವನ ಹೇಳುವ ಅಜ್ಜಿಗಳಿಲ್ಲ. ಹೂದೋಟದ ಹೂವನ್ನ, ಮೊದಲ ಮಳೆಯನ್ನ, ಬೆಳದಿಂಗಳ ಸೊಬಗನ್ನ, ಹೊಸ ತಿಂಡಿಯ ರುಚಿಯನ್ನ, ಊರಿಗೆ ಬಂದ ಹೊಸ ರೈಲನ್ನ ಮೊಮ್ಮಕ್ಕಳಿಗೆ ತೋರಿಸುವ ಅಜ್ಜಿಯರು ಇಲ್ಲ.

ಹೀಗೆಂದು ಇವತ್ತು ಅಜ್ಜಿಯರೇ ಇಲ್ಲ ಎಂದು ಇದರ ಅರ್ಥವಲ್ಲ. ಅಜ್ಜಿ ವಯಸ್ಸಿನ ಬಹಳ ಹೆಂಗಸರು ನಮ್ಮ ನಡುವೆ ಇದ್ದಾರೆ. ಆದರೆ ಇವರಿಗೆ ಅಜ್ಜಿ ಎದು ಕರೆಸಿ ಕೊಳ್ಳುವ ಮನಸ್ಸಿಲ್ಲ. ಅಜ್ಜಿಯ ಆ ಮನೋಭಾವ ಇಲ್ಲ. ಮಗುವಾಗಿ ಮೊಮ್ಮಕ್ಕಳ ಜೊತೆ ಬೆರೆಯುವ ವ್ಯಕ್ತಿತ್ವ ಇಲ್ಲ. ಇವಳ ಸಮಯವನ್ನ ಟಿ. ವಿ. ಕಿತ್ತು ಕೊಂಡಿದೆ. ಸಮಾಜ ಸೇವೆ ಅನ್ನುವ "ಸೋಗು" ಹಾರಿಸಿ ಕೊಂಡು ಹೋಗಿದೆ. ತನ್ನ "ಅಜ್ಜಿ"ತನವನ್ನ ವಿವಿಧ ಬಗೆಯ ಮುಖ ವರ್ಣಿಕೆಗಳ ಅಡಿಯಲ್ಲಿ 

ಮುಚ್ಚಿ ಇರಿಸಿ ಕೊಂಡ ಇವಳು ಮೊಮ್ಮಕ್ಕಳಿಂದ ದೂರವಾಗಿದ್ದಾಳೆ. ಇವಳಿಗೆ ಕತೆ ಕಟ್ಟಲು ಬರುವುದಿಲ್ಲ, ಕತೆ ಹೇಳುವ ಕಲೆ ಗೊತ್ತಿಲ್ಲ. ಅಂತು ಅಜ್ಜಿ ಇಲ್ಲದೆ ನಮ್ಮ ಮಕ್ಕಳ ಬದುಕು  ಬರಿದಾಗುತ್ತಿದೆ. ಹಿಂದಿನ ನಮ್ಮ ಅಜ್ಜಿ ಅನುಭವಿಸಿದ ಬದುಕಿನ ನೂರಾರು ಸಂದರ್ಭಗಳನ್ನ ಇಂದಿನ ಅಜ್ಜಿಯರು ಅನುಭವಿಸದೇನೆ ಮರೆಯಾಗುತ್ತಿದ್ದಾರೆ.


ಎಷ್ಟೋ ಜನ ಅಜ್ಜಿಯರು ತಮ್ಮ ಕೊನೆಯ ದಿನಗಳನ್ನ ವೃದ್ಧಾಶ್ರಮಗಳಲ್ಲಿ ಕಳೆಯುವ ಸ್ಥಿತಿ ಬಂದಿದೆ. ಆಧುನಿಕತೆ ಅನ್ನುವುದು ನಮ್ಮ ಬದುಕನ್ನ ಮಾತ್ರವಲ್ಲ ನಮ್ಮ ಮಕ್ಕಳ ಬದುಕನ್ನ ಕೂಡ ನಾಶ ಮಾಡುತ್ತಿದೆ. ಆದರೆ ಇದೊಂದು ಸಮಸ್ಯೆ ಎಂದು ಕೂಡ ನಾವು ತಿಳಿಯುತ್ತಿಲ್ಲ. ಇದೇ ಒಂದು ದುರಂತ.

ಭಾನುವಾರ, ನವೆಂಬರ್ 10, 2013

ತಮಟೆಯ ಪೆಟ್ಟಿನ ಸುತ್ತ!

ವರ್ಷಾ ರಮೇಶ

ಸೌಜನ್ಯ: ಪ್ರಜಾವಾಣಿ
ಮಧ್ಯದಸ್ತರದಲ್ಲಿರುವ ಜಾತಿಗಳೂ ತಮ್ಮ ಶ್ರೇಷ್ಠತೆ ಮೆರೆಯಲು ದಲಿತರನ್ನು ತುಳಿಯುವುದನ್ನು ಬಿಟ್ಟಿಲ್ಲ. ಜನ್ಮತಃ ಮನುವಾದಿಗಳಿಗಿಂತ ಮಧ್ಯಸ್ತರದವರು ಒಂದು ಹೆಜ್ಜೆ ಮುಂದೆಯೇ ಇದ್ದು; ಅವರದು ಹಿಂಸಾಚಾರವೇ ಮೂಲಮಂತ್ರವಾಗಿದೆ!
ತಮಟೆ ಒಂದು ವಾದ್ಯ. ತಬಲಾ, ಮೃದಂಗದಂತೆ ಇದು ಕೂಡ ಚರ್ಮವಾದ್ಯ. ವ್ಯತ್ಯಾಸವೆಂದರೆ ತಮಟೆ ಮಂಗಳ ವಾದ್ಯಗಳ ಗುಂಪಿನಲ್ಲಿ ಪರಿಗಣಿತವಾಗಿಲ್ಲ. ಈ ದೇಶದ ಉದ್ದಗಲಕ್ಕೂ ತಮಟೆ ಬಾರಿಸುವ ಕಲೆ ತಲೆತಲಾಂತರದಿಂದ ಒಂದೇ ಜಾತಿಗೆ ಬಳುವಳಿಯಾಗಿ ಬಂದುದು ವಿಶೇಷವೂ ಹೌದು ಮತ್ತು ಅವರಿಗಷ್ಟೇ ಸೀಮಿತವಾಗಿ ಉಳಿದುದು ದುರದೃಷ್ಟವೂ ಹೌದು!
ಶತಶತಮಾನಗಳಿಂದ ಸಕ್ರಿಯ ಸಾಮುದಾಯಿಕ ಜೀವನ ಅರ್ಥಾತ್ ಸಾಮಾಜಿಕ, ಧಾರ್ಮಿಕ, ಆರ್ಥಿಕ ಕೊಡು-ಕೊಳ್ಳುವಿಕೆಯಿಂದ ದೂರವಿರಿಸಲ್ಪಟ್ಟ ದಲಿತರ ಜೀವನದಲ್ಲಿ ತಮಟೆ ಹದವಾಗಿ ಬೆರೆತಿದೆ.
ಓದು-ಬರಹ, ಮನಸ್ಸಿನ  ಸಂತೋಷಕ್ಕಾಗಿ ಸಂಗೀತ-, ನಾಟ್ಯ, ಆರ್ಥಿಕವಾಗಿ ಲಾಭದಾಯಕವಾದ ಕಸುಬುಗಳಿಂದ ದಲಿತರು ವಂಚಿಸಲ್ಪಟ್ಟವರು. ಅನರ್ಹತೆಗಳ ಹಣೆ ಪಟ್ಟಿಯನ್ನು ಹೊತ್ತುಕೊಂಡೇ ಹುಟ್ಟಿದವರು. ಜೀವನದ ಪ್ರತಿ ಹೆಜ್ಜೆ-ಹೆಜ್ಜೆಗೂ ಸಾಲು-ಸಾಲು ಕಟ್ಟುಪಾಡುಗಳಿಂದ ಬಿಗಿಯಲ್ಪಟ್ಟವರು. ಇಂತಹ ಉಸಿರುಗಟ್ಟಿಸುವ ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಬ್ರಾಹ್ಮಣ ಸಂಸ್ಕೃತಿಗೆ ಹೊರತಾಗಿ ದಲಿತರದು ವಿಶೇಷವಾದ ಸಂಸ್ಕೃತಿ, ಜೀವನಶೈಲಿ ಮೈದಳೆದಿದೆ.
ತಮಟೆ ವಾದನ ಗಂಧರ್ವ ವಿದ್ಯೆಯಲ್ಲ ! ವಿದ್ಯೆಯ ಗೌಪ್ಯತೆಯ ಹೆಸರಿನಲ್ಲಿ, ಗುರು-ಶಿಷ್ಯ ಪರಂಪರೆಯ ಹೆಸರಿನಲ್ಲಿ ಪುರೋಹಿತ ವರ್ಗದವರು ಮಾಡಿರುವ ಅನಾಚಾರಕ್ಕೆ ಲೆಕ್ಕವಿಲ್ಲ! ಈ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದಾದರೆ ತಮಟೆ ಹಿಂದೂಧರ್ಮದ ಮಂಗಳಕರ ವಾದ್ಯಗಳಲ್ಲಿ ಪರಿಗಣಿತವಾಗದೇ ಇರುವುದಕ್ಕೆ ದಲಿತರು ವ್ಯಥೆ ಪಡಬೇಕಾದ ಅಗತ್ಯವೂ ಇಲ್ಲ! ಕಲೆಯೊಂದು ಮನಸ್ಸಿಗೆ ಮುದ ನೀಡುವ ಕಲೆಯಾಗಿ ಬೆಳೆದುಬರಲು ಈ ದೇಶದ ಸಾಮಾಜಿಕ ವ್ಯವಸ್ಥೆ ಅವಕಾಶ ಕೊಡಲಿಲ್ಲವೆನ್ನುವ ಖೇದವಿದೆ.
ದಲಿತ ಮಕ್ಕಳು ತಮಟೆ ಸದ್ದು ಕೇಳುತ್ತಾ  ಹಿರಿಯರ ಜೊತೆ ಹಾಡುತ್ತಾ-ಕುಣಿಯುತ್ತಾ ಸರಳವಾಗಿ ಮೈಗೂಡಿಸಿಕೊಳ್ಳುತ್ತಾರೆ. ತಮಟೆಯನ್ನು ತಾಳಬದ್ಧವಾಗಿ ಬಾರಿಸುತ್ತಾ ಅದರ ಧ್ವನಿಗೆ ಸ್ಪಂದಿಸುತ್ತಾ ಹಾಡಿ ನಲಿಯುತ್ತಾರೆ. ತಮಟೆ ದಲಿತರ ಪಾಲಿಗೆ ಕೇವಲ ಒಂದು ಕಲೆಯಲ್ಲ; ಅವರ ಜೀವನದ ಅವಿಭಾಜ್ಯ ಅಂಗವೇ ಆಗಿದೆ.
ತಮ್ಮ ಖುಷಿಗಾಗಿ ಹಾಡಿಕೊಳ್ಳುವುದು ಅವರ ಹವ್ಯಾಸ. ತಮ್ಮ ನೋವು-ನಗುವನ್ನು ವ್ಯಕ್ತಪಡಿಸುವ ಮಾಧ್ಯಮ ಮಾತ್ರ ತಮ್ಮಟೆ! ಅಂದು ದಲಿತರು ಜೀತಕ್ಕಿದ್ದು, ಬಾಡಿ ಬಸವಳಿದು ಬಂದಾಗ ಅವರನ್ನು ಆಸರಿಸುವ, ದಣಿವಾರಿಸುವ ಸಾಧನವಾದದ್ದು ಈ ತಮಟೆ! ತಮಟೆ ಬಾರಿಸುವುದು ದಲಿತರ ಮುಖ್ಯ ವೃತ್ತಿಯೇನಲ್ಲ; ಇದರಿಂದ ಅಂತಹ ಆದಾಯವೂ ಇಲ್ಲ.
ಮುಂಚೆ ತಮಟೆಗೆ ಮೇಕೆಯ ಚರ್ಮವನ್ನು ಬಳಸಲಾಗುತ್ತಿತ್ತು. ಇದನ್ನು ತಯಾರಿಸುವವರೂ ತಾವೇ; ಅದರ ಖರ್ಚು-ವೆಚ್ಚ ಭರಿಸಬೇಕಾದವರೂ ತಾವೇ ಆದುದರಿಂದ ಚರ್ಮಕ್ಕೆ ಬದಲಾಗಿ ಈಗ ಪ್ಲಾಸ್ಟಿಕ್‌ನ ಮೊರೆ ಹೋಗಿದ್ದಾರೆ. ಇದರ ಎರಡು ಅನುಕೂಲಗಳೆಂದರೆ ತಮಟೆ ತಯಾರಿಕೆ ಮತ್ತು ನಿರ್ವಹಣೆಗೆ ತಗಲುವ ಖರ್ಚು ಕಡಿಮೆ. ಅಲ್ಲದೇ ಚರ್ಮದ ತಮಟೆಯನ್ನು ಮೇಲಿಂದ ಮೇಲೆ ಬಿಸಿ ಮಾಡಿ ಚರ್ಮದ ಬಿಗಿ ಕಾಯ್ದು ಕೊಳ್ಳದೆ ಹೋದರೆ ಜೋರಾಗಿ ಸದ್ದು ಹೊರಡುವುದಿಲ್ಲ. ಚರ್ಮದ ತಮಟೆಯಿಂದ ಹೊರಡುವ ಧ್ವನಿ ಪ್ಲಾಸ್ಟಿಕ್ ತಮಟೆಯಲ್ಲಿ ಹೊರಡುವುದಿಲ್ಲವೆನ್ನುತ್ತಾರೆ ಪರಿಣಿತರು.
ಹಳ್ಳಿಗಳಲ್ಲಿ ಮಾತ್ರವಲ್ಲ; ಪಟ್ಟಣಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾ, ಖಾಸಗಿ ಯಾ ಸರ್ಕಾರಿ ಕಚೇರಿಗಳಲ್ಲಿ ದುಡಿಯುತ್ತ ಸಮಯ ಸಿಕ್ಕಾಗಲೆಲ್ಲ ಬೇಸರ ಕಳೆಯಲು ಇಂದಿಗೂ ತಮಟೆ ಬಾರಿಸುವುದಿದೆ. ದಲಿತರ ಸಂತೋಷ, -ಶೋಕದ ಎರಡೂ ಸಂದರ್ಭಗಳಲ್ಲಿ ತಮಟೆ ಬಳಕೆಯಾಗುತ್ತದೆ. ವ್ಯತ್ಯಾಸವಿಷ್ಟೇ, ಶೋಕದ ತೀವ್ರತೆ ಹೆಚ್ಚಿಸಲು ಪೀಪಿಯ ಬಳಕೆಯಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ ಪೀಪಿ ವಾದ್ಯ ಅಥವಾ ನಾದಸ್ವರ ಹಿಂದೂ ಸಮಾಜದ ಮಂಗಳಕರ ವಾದ್ಯಗಳಲ್ಲೊಂದು!
ಊರ ಜಾತ್ರೆ, ಪಲ್ಲಕ್ಕಿ, ಮೆರವಣಿಗೆಗೆ ಇಂದಿಗೂ ತಮಟೆ ಕಡ್ಡಾಯವಾಗಿ ಬೇಕು! ಒಂದು ಪೆಟ್ಟು ದೇವಿಯ ಪ್ರಸನ್ನತೆಗೆ ಮತ್ತು ಆಕೆಯನ್ನು ಉಡಿಕೆ ಅಥವಾ ವಾಗ್ದಾನ ಕೊಡಲು ಆಹ್ವಾನಿಸುವ ರೀತಿಯಾದರೆ, ಎರಡು ಪೆಟ್ಟನ್ನು ಪಲ್ಲಕ್ಕಿ ಉತ್ಸವಕ್ಕೆ ಹಾಗೂ ಮೂರು ಪೆಟ್ಟನ್ನು ಮೆರವಣಿಗೆಯಲ್ಲಿ ಕುಣಿಯಲು ಹಾಕುತ್ತಾರೆ.
ಐತಿಹಾಸಿಕ ಪುರಾವೆಗಳ ಪ್ರಕಾರ ಚಾಲುಕ್ಯರು, ಚೋಳ ರಾಜಮನೆತನದ ಆಳ್ವಿಕೆಯಲ್ಲಿ ತಮಟೆ ಜನನದಿಂದ ಮರಣದವರೆಗೂ ಬಹುಮುಖ್ಯ ಪಾತ್ರ ವಹಿಸಿತ್ತು. ಮಹಾರಾಜನಿಗೆ ಮಗುವಿನ ಜನನ, ಅತಿಥಿಯ ಆಗಮನ, ವೈರಿಯ ಆಕ್ರಮಣ, ನಿರ್ದಿಷ್ಟ ಅಪರಾಧ ಹೇಳುವ, ಪ್ರತಿಯೊಂದು ಸಂದೇಶವನ್ನು ಊರಿಗೆ ಸೂಚ್ಯವಾಗಿ ಸಾರಲು ನಿರ್ದಿಷ್ಟವಾದ ತಮಟೆ ಸದ್ದನ್ನು ಹೊರಡಿಸಲಾಗುತ್ತಿತ್ತು. ರಣರಂಗದಲ್ಲಿ ವೀರರಿಗೆ ತಮಟೆ ಬಾರಿಸುವುದರ ಮೂಲಕ ಹುರಿದುಂಬಿಸುವ ಜವಾಬ್ದಾರಿ ಇವರಿಗಿದ್ದಿತು. ಈ ತೆರನಾದ ವೈವಿಧ್ಯಮಯ ಧ್ವನಿ ಹೊರಡಿಸಲು ಕಲಾತ್ಮಕತೆ ಜೊತೆಗೆ ಎಂಟೆದೆ ಬೇಕು! ಆದರೆ ಇಂದು ಇದು ಮನುವಾದಿಗಳ ಕುತಂತ್ರದ ಪರಿಣಾಮ ‘ಅಂತ್ಯಸಂಸ್ಕಾರಕ್ಕೆ ಸೀಮಿತವಾದ ಕಲೆ’ ಎಂಬ ಮಟ್ಟಕ್ಕೆ ಕುಗ್ಗಿದೆ.
‘ಮೇಲ್ಜಾತಿ’ ಜನರ ಶವಯಾತ್ರೆ ದಲಿತರ ತಮಟೆ ಬಾರಿಸುವಿಕೆ ಇಲ್ಲದೆ ಮುಂದೆ ಸಾಗುವುದಿಲ್ಲ! ಇದರಲ್ಲಿ ಅಚ್ಚರಿ ಏನೂ ಇಲ್ಲ. ಊರಿನ ಚಾಕರಿ ಮಾಡಲು ದಲಿತರು ಬೇಕು, ಹೊಲದಲ್ಲಿ ಕೂಲಿ ಮಾಡಲು ಬೇಕು, ಸಗಣಿ ಎತ್ತಲು ಬೇಕು! ಆದರೆ ದಲಿತರು ಬೇಡ, ದಲಿತರ ಕಲೆ ಬೇಡ, ದಲಿತರು ಸರಿಸಾಟಿಯಾಗುವುದು ಬೇಕಿಲ್ಲ!
ಊರಿನ ದಲಿತರು ತಮಟೆ ಬಾರಿಸಲು ನಿರಾಕರಿಸಿದರೆ, ಅವರಿಗೆ  ದುಪ್ಪಟ್ಟು ಹಣ ನಿಗದಿ ಮಾಡಿ ಕರೆತರುತ್ತಾರೆ. ಅವರ ಬಡತನ, ಅಸಹಾಯಕತೆ ದುರುಪಯೋಗಪಡಿಸಿಕೊಂಡು. ವಿಷಾದನೀಯವೆಂದರೆ ‘ಅಸಮ್ಮತಿಯ ಆಲಿಂಗನ ಮತ್ತು ಪೂರ್ವ ಯೋಜಿತ ರಚನಾತ್ಮಕ ಬಹಿಷ್ಕಾರ’ ಮುಂದುವರಿದೇ ಇದೆ.
ತಮಟೆ ಬಾರಿಸುವಿಕೆಯನ್ನು ತುಚ್ಛವಾಗಿ ಕಾಣುವುದನ್ನಾಗಲಿ, ಸಮಯ ಕಾದು ದಲಿತರನ್ನು ಜರೆಯುವುದನ್ನಾಗಲಿ ನಿಲ್ಲಿಸಿಲ್ಲ. ಉದಾಹರಣೆಗೆ ಹಾಸನ ತಾಲ್ಲೂಕಿನ ಕುದುರು ಗುಂಡಿಯಲ್ಲಿ ರಂಗನಾಥಸ್ವಾಮಿ ಜಾತ್ರೆಯಲ್ಲಿ ಐವತ್ತೆರಡು ವರ್ಷದ ದಲಿತ ಕೋಡುಗಯ್ಯನನ್ನು ಅದೇ ಊರಿನ ಕೆಲ ‘ಮೇಲ್ಜಾತಿ’ ಜನ ತಮಟೆ ಜೋರಾಗಿ ಬಾರಿಸುವಂತೆ ಹೇಳಿದ ತಮ್ಮ ಆಜ್ಞೆ ಪಾಲಿಸಲಿಲ್ಲವೆಂಬ ಕಾರಣ ಮುಂದೆ ಮಾಡಿ ಮನಬಂದಂತೆ ಥಳಿಸಿ ಆತ ಆಸ್ಪತ್ರೆ ಸೇರುವಂತೆ ಮಾಡಿರುವ ಕೃತ್ಯ ಪಶುಸದೃಶ್ಯವೂ ಹಾಗೂ ಅಸ್ತಿತ್ವದಲ್ಲಿರುವ ಕಾನೂನು ಮತ್ತು ಸಂವಿಧಾನ ವನ್ನು ಅಣಕಿಸುವಂತಿದೆ!
ತಮಟೆ, ಡೊಳ್ಳು ‘ನೆಲದ ಒಡಲ ಮಕ್ಕಳ’ ಸ್ವತ್ತು. ಇದು ಒಂದು ಜನಪದ ಕಲೆ. ಕಲೆ ಬೆಳೆಯಬೇಕಾದರೆ ಸಹೃದಯತೆ ಬೇಕು. ಎಲ್ಲಿಯವರೆಗೂ ವರ್ಣಾಶ್ರಮಧರ್ಮ ಹಿಂದೂ ಸಮಾಜದ ಮೂಲ ಸೆಲೆಯಾಗಿರುತ್ತದೆಯೋ ಅಲ್ಲಿಯವರೆಗೂ ಮಾನವೀಯತೆ, ಸಹೃದಯತೆ, ಸಮಾನತೆ ಕೈಗೆಟುಕದು! ಎಲ್ಲಿಯವರೆಗೂ ಭಾರತೀಯ ಸಮಾಜ ಬ್ರಾಹ್ಮಣತ್ವದ ಅಧೀನದಲ್ಲಿದೆಯೋ ಅಲ್ಲಿಯವರೆಗೂ ದೀನ-ದಲಿತರ ದಾಸ್ಯತ್ವಕ್ಕೆ ಕೊನೆಯಿಲ್ಲ. ದಿನಂಪ್ರತಿ ರಾಷ್ಟ್ರೀಯ ಮುಖ್ಯವಾಹಿನಿಗಳಲ್ಲಿ ದೇಶದಾದ್ಯಂತ ದಲಿತರ ಮೇಲೆ ದೈಹಿಕ ಹಲ್ಲೆ, ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ದಲಿತರ ಗುಡಿಸಲುಗಳಿಗೆ ಬೆಂಕಿ ಇತ್ಯಾದಿಯಾಗಿ ಒಂದಿಲ್ಲೊಂದು ರೀತಿಯಲ್ಲಿ ನಿರಂತರ ನಡೆಯುತ್ತಿರುವ ದೌರ್ಜನ್ಯ ವರದಿಯಾಗುತ್ತಲೇ ಇದೆ. ದಲಿತ ಹೆಣ್ಣುಮಕ್ಕಳ ರಕ್ಷಣೆಗೆ ಯಾವುದೇ ಆಯೋಗ ರಚನೆಯಾಗದಿರುವುದು ಆಘಾತಕಾರಿ!
ಅಂತರರಾಷ್ಟ್ರೀಯಮಟ್ಟದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರತವನ್ನೊಳಗೊಂಡು ಇತರ ಪ್ರಗತಿಶೀಲ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಪ್ರತಿಯೊಂದು ಆಗು-ಹೋಗುಗಳನ್ನು ತದೇಕ ಚಿತ್ತದಿಂದ ಗಮನಿಸುತ್ತಿವೆ. ರಾಷ್ಟ್ರದ ನೀತಿ ನಿರೂಪಣಾ ಅಂಗ ಸಂಸ್ಥೆ ಎಡೆಬಿಡದೆ ಹೆಚ್ಚುತ್ತಿರುವ ಹಿಂಸಾಚಾರವನ್ನು ಹದ್ದುಬಸ್ತಿನಲ್ಲಿಡಬೇಕಾದ ಅಗತ್ಯವನ್ನು ಅರಿತು ಎಚ್ಚೆತ್ತುಕ್ಕೊಳ್ಳದಿರುವುದು ಅಪಾಯಕಾರಿಯೂ ಹೌದು!     
ವರ್ಣಾಶ್ರಮದ ಹರಿಕಾರ ಮನು ಹಾಕಿಕೊಟ್ಟ ಹಾದಿಯಲ್ಲಿ ನಡೆದು ಶತಕಗಳ ಕಾಲ ದೇಶದ ಸಂಪತ್ತನ್ನು ಕೊಳ್ಳೆಹೊಡೆದು, ನಿಮ್ನ ವರ್ಗದ ರಕ್ತ ಹೀರಿ ದೇಶದ ಚುಕ್ಕಾಣಿ ಹಿಡಿದವರು ಆರ್ಯರು! ಆರ್ಯರ ದೃಷ್ಟಿಯಲ್ಲಿ ತಮ್ಮನ್ನು ಹೊರತುಪಡಿಸಿ ಕೆಳಸ್ತರದವರೆಲ್ಲ ಶೂದ್ರರೇ. ಜಾತಿ ಏಣಿಶ್ರೇಣಿಯ ಮಧ್ಯಂತರದ ವರ್ಗಗಳು ಶೂದ್ರರೆಂದು ಪರಿಗಣಿತರಾದರೂ ‘ಅಸ್ಪೃಶ್ಯ’ರಲ್ಲ. ಕಾಲಕ್ರಮೇಣ ಮೀಸಲಾತಿಯ ಲಾಭ ಪಡೆದು, ಆರ್ಥಿಕವಾಗಿ, ರಾಜಕೀಯವಾಗಿ ಬಲಾಢ್ಯರಾಗುವುದರ ಜೊತೆಗೆ ‘ಮಲಿನತೆಯ ಮೇರೆ ಮೀರಿದ’ ಜಾತಿಯಲ್ಲಿ ಗುರುತಿಸಿಕೊಂಡು ತಮ್ಮ ‘ಶೂದ್ರತ್ವ’ವನ್ನು ಅಲ್ಲಗಳೆಯುವಲ್ಲಿ ಯಶಸ್ವಿಯಾದವರು.
ಇನ್ನು ‘ಮಲಿನತೆಯ ಪರಿಮಿತಿ’ಯಲ್ಲಿಯೇ ಉಳಿದವರು ಅಸ್ಪೃಶ್ಯರು ಅಥವಾ ದಲಿತರು. ಮಧ್ಯದ ಸ್ತರದಲ್ಲಿರುವ ಜಾತಿಗಳೂ ತಮ್ಮ ಶ್ರೇಷ್ಠತೆ ಮೆರೆಯಲು ದಲಿತರನ್ನು ತುಳಿಯುವುದನ್ನು ಬಿಟ್ಟಿಲ್ಲ. ಜನ್ಮತಃ ಮನುವಾದಿಗಳಿಗಿಂತ ಮಧ್ಯಸ್ತರದಲ್ಲಿರುವವರು ಒಂದು ಹೆಜ್ಜೆ ಮುಂದೆಯೇ ಇದ್ದು; ಅವರದು ಹಿಂಸಾಚಾರವೇ ಮೂಲಮಂತ್ರವಾಗಿದೆ! ಇದೇ ಆರ್ಯರ ಗುರು ಮನು ಹಾಕಿಕೊಟ್ಟ ಧರ್ಮಪಾಠ ಅಥವಾ ನೀತಿಪಾಠ! ಬಾಬಾಸಾಹೇಬರ ಬರವಣಿಗೆಯ ಹಿನ್ನೆಲೆಯಲ್ಲಿ ಪರಾಮರ್ಶಿಸುವುದಾದರೆ ಇದು,‘ಅನುಕರಣೆಯಿಂದ ಹರಡಿದ ಅಂಟುಜಾಡ್ಯ’.
ದಲಿತರಿಗೆ ತಮ್ಮ ಮಲಿನತೆಯನ್ನು ತೊಳೆದುಕೊಳ್ಳಲು ಮನು ಹಾಕಿಕೊಟ್ಟ ನೀತಿಪಾಠವಾಗಲಿ, ಮಧ್ಯಂತರ ಜಾತಿಗಳ ಹಿಂಸೆಯಾಗಲಿ ಮಾದರಿಯಾಗಬೇಕಿಲ್ಲ! ದಲಿತರು ಅಗಣಿತ ವರ್ಷಗಳ ಕಾಲ ದೌರ್ಜನ್ಯವನ್ನು ಮೂಕರಾಗಿ ಅನುಭವಿಸಿದವರು. ದೈಹಿಕವಾಗಿ, ಮಾನಸಿಕವಾಗಿ ನೋವು ಎಂದರೇನು? ಎನ್ನುವುದನ್ನು ಅವರಷ್ಟು ಚೆನ್ನಾಗಿ ಬಲ್ಲವರು ಈ ನೆಲದ ಮೇಲೆ ಮತ್ತೊಂದು ಜನ-ಜಾತಿ ಇದ್ದೀತೇ? ಮಾನವೀಯತೆಯೇ ದಲಿತರ ಧರ್ಮ; ಸಹೋದರತೆಯೇ ಜೀವಾಳ. ಜಗತ್ತಿಗೇ ಆದರ್ಶವೆನಿಸಿದ ಬುದ್ಧ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವವರಾದ ಇವರಿಗಿಂತ ಅರ್ಹರು ಬೇಕೇ ಈ ದೇಶವನ್ನಾಳಲು? ಅಸಮಾನತೆಯೇ ತಳಹದಿಯಾದ ರಾಮರಾಜ್ಯದ ಬದಲು ಸಮಾನತೆಯನ್ನೇ ಸಾರುವ ಬಲಿ ರಾಜ್ಯದ ಸ್ಥಾಪನೆ -ಫುಲೆಯವರ ಕನಸು ನನಸಾಗುವ ದಿನ ದೂರವಿಲ್ಲ!

ಸೋಮವಾರ, ನವೆಂಬರ್ 4, 2013

ಹಳ್ಳಿ ಹೈದ ರಾಜೇಶನನ್ನು ಅವನ ಪಾಡಿಗೆ ಕಾಡಿನಲ್ಲಿ ಬದುಕಲು ಬಿಟ್ಟಿದ್ದರೆ...


-ಹರ್ಷಕುಮಾರ್ ಕುಗ್ವೆ

Photo: ಈ ರಾಜೇಶ ತನ್ನ ಹಾಡಿಯಲ್ಲಿ ತನ್ನದೇ ಆದ ಜಗತ್ತಲ್ಲಿ ಖುಷಿಯಾಗಿದ್ದ. ಈ ರಿಯಾಲಿಟಿ ಶೋ ಎಂಬ ಹೆಮ್ಮಾರಿ ಅವನನ್ನು ಬಲಿ ತೆಗೆದುಕೊಂಡಿತು. ಕಾಡಿನ ಮುಗ್ದತೆಯನ್ನೂ ಹಣ ಮಾಡುವ ಟಿಆರ್ ಪಿ ಎಂಬ ಹಪಾಹಪಿಗೆ ಬಳಸಿಕೊಳ್ಳುವ ಈ ನಡೆ  ಕ್ರೌರ್ಯವಲ್ಲದೆ ಮತ್ತೇನು? ಇದು ರಿಯಾಲಿಟಿ ಶೋಗಳ ರಿಯಾಲಿಟಿಯ ತುಟ್ಟತುದಿಯ ಪರಿಣಾಮ. 

ಕಾಡಿನ ಕುಡಿಯನ್ನು ಚಿವುಟಿ ಹಾಕಿ ಕುಹಕ ನಗೆ ನಗುತ್ತಿರುವವರಿಗೆ ನನ್ನ ದಿಕ್ಕಾರ.
ಹಳ್ಳಿ ಹೈದ ರಾಜೇಶನನ್ನು ಅವನ ಪಾಡಿಗೆ ಕಾಡಿನಲ್ಲಿ ಬದುಕಲು ಬಿಟ್ಟಿದ್ದರೆ ಇಂದು ಖಂಡಿತಾ ಸಾಯುತ್ತಿರಲಿಲ್ಲ. ಟೀವಿ ಚಾನಲ್ ಗಳ 'ಟಿಆರ್ ಪಿ' ದಾಹಕ್ಕೆ, ಸೊಕಾಲ್ಡ್ ನಾಗರಿಕರಾದ ನಮ್ಮೆಲ್ಲರ ವಿಕೃತ ಕುತೂಹಲಕ್ಕೆ, ರಿಯಾಲಿಟಿ ಶೋ ಪ್ರೊಡ್ಯೂಸರ್ ರಾಘವೇಂದ್ರ, ನರೇಟರ್ ಅಕುಲ್ ಬಾಲಾಜಿಯಂತವರ ತೆವಲುಗಳಿಗೆ, ಸಿನಿಮಾ ನಿರ್ದೇಶಕ ರವಿ ಕಡೂರು ಎಂಬುವರ ಹುಚ್ಚಾಟಕ್ಕೆ ಅವನು ಹುಚ್ಚನಾಗಿದ್ದಲ್ಲದೆ ಇದೆಲ್ಲದರ ತಾರ್ಕಿಕ ಅಂತ್ಯವಾಗಿ ಇದೀಗ ಪ್ರಾಣವನ್ನೂ ಬಿಟ್ಟ. 

ಟೈಂ ಇದ್ದರೆ ಈ ವರದಿ ಓದಿ. 
ಹಳ್ಳಿ ಹೈದನ ತಲೆಕೆಡಿಸಿದವರಾರು?
(ದ ಸಂಡೆ ಇಂಡಿಯನ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಮುಖಪುಟ ಲೇಖನ - ಹರ್ಷಕುಮಾರ್ ಕುಗ್ವೆ )

ಮೈಸೂರು- ಮಾನಂತವಾಡಿ ಮಾರ್ಗದಲ್ಲಿ ನಾಗರಹೊಳೆ ಅಭಯಾರಣ್ಯದ ಕಾಕನಕೋಟೆ ಕಾಡಿನ ನಡುವೆ ಇರುವ ಆ ಜೇನುಕುರುಬರ ಹಾಡಿಯ ಹೆಸರು ಬಳ್ಳೇ ಹಾಡಿ. ಈ ಹಾಡಿಯ ಕೃಷ್ಣಪ್ಪ ಮತ್ತು ಲಕ್ಷ್ಮಿ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು. ಒಬ್ಬ ಗಂಡುಮಗ. ಆತ ರಾಜೇಶ. ಇಂದು ಸುವರ್ಣ ವಾಹಿನಿಯ ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋನಲ್ಲಿ ಗ್ರಾಂಡ್ ಫಿನಾಲೆವರೆಗೂ ಹೋಗಿ ವಿಜಯಿಯಾಗಿ ಬಂದು ನಂತರದಲ್ಲಿ ಇನ್ನೂ ಬಿಡುಗಡೆಯಾಗದ 'ಜಂಗಲ್ ಜಾಕಿ’ ಸಿನಿಮಾದಲ್ಲಿ ಐಶ್ವರ್ಯಳೊಂದಿಗೆ ನಟಿಸಿ, ಇದೀಗ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮಾನಸಿಕ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ’ಹಳ್ಳಿ ಹೈದ’ನೇ ಈ ರಾಜೇಶ. ಕೆ.ಆರ್. ಆಸ್ಪತ್ರೆಯ ವೈದ್ಯರಾದ ಸುಧೀರ್ ಅವರು ಟಿಎಸ್‌ಐಗೆ ನೀಡಿದ ಮಾಹಿತಿಯ ಪ್ರಕಾರ ರಾಜೇಶ್‌ಗೆ ’ಅಕ್ಯೂಟ್ ಮೇನಿಯಾ’ ಅಟ್ಯಾಕ್ ಅಗಿದೆ. ಇದೊಂದು ರೋಗವೇನಲ್ಲ. ಆದರೆ ಮನಸ್ಸಿನಲ್ಲಿ ಉಂಟಾದ ತೀವ್ರ ಮಾನಸಿಕ ತಳಮಳ, ಹೊಯ್ದಾಟಗಳು ಒಬ್ಬ ವ್ಯಕ್ತಿಗೆ ಈ ಮಾನಸಿಕ ಅಸ್ವಸ್ಥತೆಯ್ನನು ಉಂಟು ಮಾಡುತ್ತದೆ ಎನ್ನುತ್ತಾರವರು. ಕಾಡಿನ ಹಾಡಿಯಲ್ಲಿ ತನ್ನ ಗೆಣೆಕಾರರೊಂದಿಗೆ ಸ್ವಚ್ಛಂದವಾಗಿ ಆಡಿಕೊಂಡಿದ್ದ ಜೇನುಕುರುಬರ ಹುಡುಗನೊಬ್ಬನಿಗೆ ಇಂತಹ ಪರಿಸ್ಥಿತಿ ಬರಲು ಕಾರಣಗಳೇನು? ಯಾರು ರಾಜೇಶನ ಇಂದಿನ ಈ ಸ್ಥಿತಿಗೆ ಕಾರಣರಾರು?

ಅದು ೨೦೧೦ನೇ ಇಸವಿಯ ಮೇ ತಿಂಗಳಿನಲ್ಲಿ ಸುವರ್ಣ ವಾಹಿನಿಯು ’ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಎಂಬ ರಿಯಾಲಿಟಿ ಶೋ ಸಾಕಷ್ಟು ಟಿಆರ್‌ಪಿ ಗಳಿಸಿಕೊಟ್ಟಿತ್ತು. ಅದರ ಹುರುಪಿನಲ್ಲೇ ’ಹಳ್ಳಿ ಹೈದ ಪ್ಯಾಟೆಗ್ ಬಂದ’ ಕಾರ್ಯಕ್ರಮವನ್ನು ಅಯೋಜಿಸಿದ ವಾಹಿನಿಯವರು ಅದಕ್ಕಾಗಿ ರಾಜ್ಯದ ನಾನಾ ಕಡೆಗಳ ಬುಡಕಟ್ಟು ಯುವಕ ಶಿಕಾರಿಗೆ ತೊಡಗಿಕೊಂಡರು. ಇದಕ್ಕಾಗಿ ಸೋಲಿಗ, ಸಿದ್ಧಿ, ಜೇನುಕುರುಬ ಆದಿವಾಸಿಗಳ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿದರು. ಈ ಕಾರ್ಯಕ್ರಮದ ಮೂಲಕ ಆ ಬುಡಕಟ್ಟುಗಳ ಯುವಕರು ವಿಶ್ವಪ್ರಸಿದ್ಧರಾಗುತ್ತಾರೆಂದೂ, ಅವರ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆಯುತ್ತೇವೆಂದೂ ಹುರಿದುಂಬಿಸಲಾಯಿತು. ಇದನ್ನು ನಂಬಿದ ಬುಡಕಟ್ಟು ನಾಯಕರೂ ಸಹ ಸುವರ್ಣ ವಾಹಿನಿಗೆ ಬೇಕಾದ ಹುಡುಗರನ್ನು ಹುಡುಕಲು ನೆರವು ನೀಡಿದ್ದರು. ಈ ಪ್ರಕ್ರಿಯೆಯಲ್ಲೇ ಬುಡಕಟ್ಟು ಸಂಘದ ಸೋಮಣ್ಣ ಮತ್ತಿತರರೊಂದಿಗೆ ರಾಜೇಶ್ ಇರುವ ಹಾಡಿಗೂ ಈ ಪ್ಯಾಟೆ ಮಂದಿ ದಾಳಿ ನಡೆಸಿದ್ದರು.

ರಾಜೇಶ ಬಹಳ ನಾಚಿಕೆ ಸ್ವಭಾವದವನಾಗಿದ್ದನಲ್ಲದೆ ಹಾಡಿಯ ಇತರ ಹುಡಗರಂತೆಯೇ ಅತ್ಯಂತ ಮುಗ್ಧನೂ, ಗಟ್ಟಿಗನೂ ಆಗಿದ್ದ. ನಮಗೆ ಮೊಬೈಲ್ ಆಪರೇಟ್ ಮಾಡಲೂ ಗೊತ್ತಿರದ, ದಷ್ಟಪುಷ್ಟನಾಗಿರುವ ಅತ್ಯಂತ ಮುಗ್ಧ ಹುಡುಗ ಬೇಕು ಎಂದು ಹೇಳಿದ್ದರು ರಿಯಾಲಿಟಿ ಶೋ ಮುಖ್ಯಸ್ಥರು.. ಹೀಗಿರುವಾಗ ಇವರಿಗೆ ರಾಜೇಶನೇ ಒಳ್ಳೆಯ ಆಯ್ಕೆ ಎನ್ನಿಸಿದೆ. ಆದರೆ ಸಿಟಿ ಎಂದೊಡನೆ ಬೆಚ್ಚಿ ಬೀಳುತ್ತಿದ್ದ ರಾಜೇಶನನ್ನು ಅದು ಹೆಗೋ ಮುಖಂಡರೆಲ್ಲಾ ಸೇರಿ ’ಇಡೀ ಸಮುದಾಯಕ್ಕೇ ಒಳಿತಾಗುವ’ ಬಣ್ಣದ ಮಾತನಾಡಿ ಪುಸಲಾಯಿಸಿ ಒಪ್ಪಿಸಿದ್ದಾರು. ಕರೆದೊಯ್ಯುವ ದಿನ ಹರಕೆಯ ಕುರಿಗೆ ಸಿಂಗರಿಸುವಂತೆ ಹೂವಿನ ಹಾರ ಹಾಕಿ, ಹಾಡಿಯ ದೇವತೆ ಮಾಸ್ತ್ಯಮ್ಮನಿಗೆ ಪೂಜೆ ಮಾಡಿಸಿ ಜೀಪು ಹತ್ತಿಸಿದ್ದಾರೆ. ಇನ್ನೇನು ಜೀಪು ರಾಜೇಶನನ್ನು ಕೂರಿಸಿಕೊಂಡು ಹೊರಡಬೇಕು. ಅಷ್ಟರಲ್ಲಿ ಜೀಪಿನಿಂದ ಹಾರಿಬಿದ್ದ ರಾಜೇಶ್ ಸೀದಾ ಕಾಡಿನೊಳಕ್ಕೆ ಓಟಕಿತ್ತಿದ್ದಾನೆ! ಮತ್ತೆ ಅವನನ್ನು ಕರೆದುಕೊಂಡು ಬಂದು ಒಪ್ಪಿಸುವಲ್ಲಿ ಎಲ್ಲರಿಗೂ ಸುಸ್ತೋ ಸುಸ್ತು.

ಮುಂದಿನ ಎಪಿಸೋಡು ಎಲ್ಲರಿಗೂ ಗೊತ್ತಿರುವಂತದ್ದೇ. ರಾಜೇಶ ತಾನು ಹಿಂದೆಂದೂ ನೋಡಿರದ ಬೆಂಗಳೂರು ಪ್ಯಾಟೆಗೆ ತಂದು ರಿಯಾಲಿಟಿ ಶೋನಡೆಸುವವರ ಮನಸ್ಸಿನ ವಿಕೃತ ಟಾಸ್ಕ್‌ಗಳಿಗೆ ಆತನೊಂದಿಗೆ ಇತರ ಬುಡಕಟ್ಟು ಹುಡಗರನ್ನೂ ಗುರಿಪಡಿಸಲಾಗಿತ್ತು. ಪ್ರತಿ ಆದಿವಾಸಿ ಹುಡುಗನಿಗೆ ಒಬ್ಬೊಬ್ಬ ಪ್ಯಾಟೆ ಹುಡುಗಿಯರನ್ನು ಜೊತೆಯಾಗಿ (ಎಜೆ) ಬಿಡಲಾಗಿತ್ತು.. ’ಆಧುನಿಕತೆ’ಯನ್ನೇ ಉಸಿರಾಡುವ ಈ ಹುಡುಗಿಯರು ಹಾಕುವ ತುಂಡು ಚಡ್ಡಿಗಳು, ವೇಷಭೂಷಣ ಎಲ್ಲವೂ ರಾಜೇಶನಂತ ಈ ಹಾಡಿಯ ಬಾಲಕರಲ್ಲಿ ಇನ್ನೆಂತಹ ಇರುಸುಮುರುಸು ಹುಟ್ಟುಹಾಕಿರಬಹುದು? ನಾಲಗೆಯ ಮೇಲೆ ಹಿಡತವೆ ಇರದ ಆ ಹುಡುಗಿಯರಿಗೆ ಈ ನಗರ ಜೀವನದ ’ನಾಗರೀಕತೆ’ ಗೊತ್ತಿಲ್ಲದವರಿಗೆ ಮಾರ್ಗದರ್ಶನ ನೀಡಲು ಹೇಳಲಾಗಿತ್ತು. ಕಾಡನ್ನು ಬಿಟ್ಟು ಬಂದಿರುವ ಈ ಹುಡುಗರನ್ನು ಬ್ಯೂಟಿ ಪಾರ್ಲರುಗಳಿಗೆ ಕರೆದೊಯ್ದು ಅವರ ಮೈಮೇಲಿನ ಕೂದಲುಗಳನ್ನು (ವ್ಯಾಕ್ಸ್ ಮೂಲಕ) ಕೀಳಿಸಿ, ಫೇಷಿಯಲ್ ಮಾಡಿಸಿ, ತಲೆಗೂದಲಿಗೆ ಬಣ್ಣ ಬಳಿಸಿ ಅವರನ್ನು ವಿಚಿತ್ರವಾಗಿ ಕಾಣುವಂತೆ ಮಾಡಲಾಗಿದೆ.


ಯಾರೋ ಅಪರಿಚಿತ ಹುಡುಕಿಯರ ಬಳಿ ಮೊಬೈಲ್ ನಂಬರ್ ಕೇಳುವ, (ಹೀಗೆ ನಗರವಾಸಿ ಹುಡುಗರು ಯಾರಾದರೂ ಮಾಡುತ್ತಾರಾ?!) ಬಾಡಿಗೆ ಮನೆ ಹುಡುಕಲು ಬಿಡುವ, ಭೇಧಿ ಮಾತ್ರೆಯೊಂದಿಗೆ ಹೊಟ್ಟೆ ತುಂಬ ತಿನ್ನಿಸಿ ಟಾಯ್ಲೆಟಿಗೆ ನುಗ್ಗದಂತೆ ತಡೆದು ಹಿಡಿದುಕೊಳ್ಳುವ, ಲೀಟರ್‌ಗಟ್ಟಲೆ ಬಾಳೆಹಣ್ಣಿನ ಜ್ಯೂಸ್ ಕುಡಿಸಿ ವಾಂತಿಯಾಗದಂತೆ ತಡೆಗಟ್ಟುವ, ಎಷ್ಟೋ ವಿದ್ಯಾವಂತ ನಗರವಾಸಿಗಳೇ ಹೋಗಲು ಮುಜುಗರವಾಗುವ ದೊಡ್ಡ ಮಾಲ್‌ಗಳಿಗೆ ಹೋಗುವ ಚಿತ್ರವಿಚಿತ್ರ ಟಾಸ್ಕ್ ನೀಡಲಾಗಿತ್ತು. ಈ ಮುಗ್ಧ ರಾಜೇಶ್‌ನಿಗೂ ಆಕೆಯ ಜೊತೆಗಿದ್ದ ಎಜೆ ಐಶ್ವರ್ಯಳಿಗೂ ಒಂದು ಹಂತದಲ್ಲಿ ಹೊಡೆದಾಟವಾಗುವಂತೆ ಮಾಡಿ ಅದನ್ನು ತೋರಿಸಿ ಟಿಆರ್‌ಪಿ ಹೆಚ್ಚಿಸಿಕೊಂಡಿದ್ದರು. ರೂಮಿನೊಳಗೆ ಹುಡುಗಿಯೊಂದಿಗೆ ಬಿಟ್ಟು ಶೌಚಾಲಯದೊಳಗೂ ರಹಸ್ಯ ಕ್ಯಾಮೆರಾಗಳನ್ನಿಟ್ಟು ಇವರ ವರ್ತನೆಗಳನ್ನು ಚಿತ್ರೀಕರಿಸಿಕೊಂಡು ನಂತರ ಎಡಿಟ್ ಮಾಡಿ ಪ್ರದರ್ಶಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಜ್ಞಾವಂತರಾದ ಎಷ್ಟೋ ಜನರಿಗೆ ಪಿಚ್ಚೆನಿಸಿತ್ತಲ್ಲದೆ ಆದಿವಾಸಿ ಹುಡುಗರನ್ನು ಈ ರೀತಿ ಅವಮಾನಿಸುತ್ತಿರುವ ಕುರಿತು ಅಲ್ಲಲ್ಲಿ ಅಸಮಾಧಾನವೂ ಕೇಳಿಬಂದಿತ್ತು.

ಕೊನೆಹಂತದಲ್ಲಿ ವೀಕ್ಷಕರ ಮತದ ಸಹಾಯದಿಂದ ಅಂತಿಮವಾಗಿ ವಿಜೇತರಾದದ್ದು ರಾಜೇಶ್ ಮತ್ತು ಐಶ್ವರ್ಯ. ಹಾಂ, ವಾಹಿನಿಯವರು ಬುಡಕಟ್ಟಿನ ಜನರ ಸಮಸ್ಯೆಗಳ ಕುರಿತು ಗಮನ ಸೆಳೆಯುತ್ತೇವೆ ಎಂದೂ ಮಾತುಕೊಟ್ಟಿದ್ದರಲ್ಲ. ಹಾಗಾಗಿ ಜೇನುಕುರುಬರ ಸಮಸ್ಯೆಗಳ ಬಗ್ಗೆಯೂ ಅಲ್ಲಲ್ಲಿ ಮಾತನಾಡುವಂತೆ ನೋಡಿಕೊಂಡಿದ್ದರು. ರಾಜೇಶನಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದ ಪುನೀತ್ ರಾಜ್‌ಕುಮಾರ್ ತುಂಬಾ ಕಾಳಜಿಯಿಂದಲೇ ಮಾತನಾಡಿದ್ದರಾದರೂ ಇಡೀ ಕಾರ್ಯಕ್ರಮದ ಮುಗ್ಧ ಆದಿವಾಸಿಗಳ ಬದುಕಿನಲ್ಲಿ ಬೀರಬಹುದಾದ ಪರಿಣಾಮವನ್ನು ಗ್ರಹಿಸುವಲ್ಲಿ ಅವರೂ ಸೋತಿದ್ದರು.

ಇತ್ತ ರಿಯಾಲಿಟಿ ಶೋನಲ್ಲಿ ರಾಜೇಶ ಪ್ರಖ್ಯಾತನಾಗುತ್ತಿದ್ದಂತೆ ಗಾಂಧಿನಗರದಲ್ಲಿ ರಾಜೇಶ್-ಐಶ್ವರ್ಯ ಜೋಡಿಯನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಿದರೆ ಹೇಗೆ ಎಂಬ ಆಲೋಚನೆ ಬಂದಿತ್ತು. ಅದರಂತೆ ರಾಜೇಶ ಮನೆ ಸೇರಿದ 20 ದಿನಗಳಲ್ಲಿ ನಿರ್ದೇಶಕ ರವಿ ಕಡೂರು ಬಳ್ಳೇಹಾಡಿಗೆ ಹೋಗಿ ರಾಜೇಶನನ್ನು ಸಿನಿಮಾ ’ಹೀರೋ’ಮಾಡುವೆನೆಂದು ಹೇಳಿ ತಮ್ಮ ಮನೆಗೆ ಕರೆದುಕೊಂಡು ಹೋಗಿ’ಕಾಡುಗಲ್ಲನ್ನು’ ಶಿಲೆಯಾಗಿಸಲು ಅವರು ಪ್ರಯತ್ನಿಸಿದ್ದರು!. ಈ ನಡುವೆ ಒಮ್ಮೆ ಸುವರ್ಣ ವಾಹಿನಿಯ ಕಛೇರಿಗೆ ರಾಜೇಶನನ್ನು ತಮ್ಮ ಮನೆಯಿಂದ ರವಿ ಕರೆದುಕೊಂಡು ಹೋದ ಸಂದರ್ಭದಲ್ಲಿ ಸಿನಿಮಾ ವಿಷಯ ವಾಹಿನಿಯವರ ಕಿವಿಗೆ ಬಿದ್ದು ಅಲ್ಲಿ ತಮ್ಮ ಅರಿವಿಗೇ ಬರದ ಕಾರಣ ವಾಹಿನಿಯವರು ನಿರ್ದೇಶಕರ ಮೇಲೆ ಮುನಿಸಿಕೊಂಡು ತಾವು ಬೆಳಕಿಗೆ ತಂದ ’ಹುಡುಗನ್ನು ಇವರು ಬಳಸಿಕೊಳ್ಳುತ್ತಿರುವ ಕುರಿತು ಅಸಮಧಾನ ವ್ಯಕ್ತಪಡಿಸಿದ್ದರು. ಆದರೆ ರಾಜೇಶ ’ಡೈರೆಕ್ಟರ್’ ರವಿಯವರ ಬಳಿಯೇ ಇರುತ್ತೇನೆ ಎಂದುಬಿಟ್ಟಿದ್ದರಿಂದ ವಾಹಿನಿಯವರು ಸುಮ್ಮನಾಗಿದ್ದರು. ರಾಜೇಶನಿಗೆ ಹತ್ತು ಲಕ್ಷ ರೂಪಾಯಿ ಕೊಡುವ ಭರವಸೆಯನ್ನು ಚಿತ್ರ ನಿರ್ಮಾಪಕ-ನಿರ್ದೇಶಕರು ಮಾತನಾಡಿ ಕೊನೆಗೆ 2011ರ ಜನವರಿ 24 ರಂದು ’ಜಂಗಲ್ ಜಾಕಿ’ ಸಿನಿಮಾದ ಚಿತ್ರೀಕರಣವೂ ಆರಂಭವಾಗಿತ್ತು. ನಂತರದಲ್ಲಿ. ಹೆಚ್ಚೂ ಕಡಿಮೆ 6 ತಿಂಗಳವರೆಗೆ ಆಗಾಗ ನಡೆದ ಚಿತ್ರೀಕರಣ ನಡೆದಿತ್ತು. ಅದಾದ ನಂತರ ಹಾಡಿ ಸೇರಿಕೊಂಡ ರಾಜೇಶನ ತಲೆಯಲ್ಲಿ ನಿಂತರೂ, ಕುಂತರೂ, ಮಲಗಿದರೂ ಎದ್ದರೂ 'ಜಂಗಲ್ ಜಾಕಿ' ಸಿನಿಮಾದಲ್ಲಿ ತಾನು ಹೀರೋ ಆಗಿ ತೆರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಳ್ಳುವ ರಂಗುರಂಗಿನ ದೃಶ್ಯಗಳೇ. ಈ ಸಿನಿಮಾಕ್ಕಾಗಿ ’ಅಭಿಮಾನಿಗಳು’ ತನ್ನ ಸಿನಿಮಾಕ್ಕಾಗಿ ತುಗಿಗಾಲಲ್ಲಿ ಕಾದುಕೊಂಡು ನಿಂತಿರುವ ದೃಶ್ಯವನ್ನು ಮನಸ್ಸಿಗೆ ತಂದುಕೊಂಡು ಅವನಿಗೆ ಮನಸ್ಸಿಗೆ ಸಮಾಧಾನವೇ ಇಲ್ಲದಂತಾಗಿಬಿಟ್ಟಿತ್ತು.

ಈ ನಡುವೆ ಬಳ್ಳೇಹಾಡಿಗೆ ಸಮೀಪದ ಅಂತರಸಂತೆಯ ಜಾತ್ರೆಯಲ್ಲಿ ತನ್ನದೇ ಜೇನುಕುರುಬ ಸಮುದಾಯದ ಹುಡುಗಿಯೊಬ್ಬಳು ರಾಜೇಶನ ಕಣ್ಣಿಗೆ ಬಿದ್ದಳು. ಅವಳು ಬೆಳ್ಳಗಿದ್ದ ಹುಡುಗಿ. ಹೇಗೂ ರಾಜೇಶನ ’ಪ್ಯಾಟೆ ಲೈಫು ಇಷ್ಟರಲ್ಲಾಗಲೇ ’ಸೌಂದರ್ಯ’ ಎಂದರೆ ನಾಡಿನ ಬಹುಸಂಖ್ಯಾತರ ಬಣ್ಣವಾದ ಕಪ್ಪು ಅಲ್ಲ, ಬೆಳ್ಳಗಿರುವುದು ಮಾತ್ರ ಎಂಬುದನ್ನು ತಿಳಿಸಿಕೊಟ್ಟಿತ್ತು. ಉಳಿದ ಜೇನುಕುರುಬ ಹುಡುಗಿಯರೆಲ್ಲ ಕಪ್ಪು ಇರುವಾಗ ಈ ಹುಡುಗಿ ಬೆಳ್ಳಗಿದ್ದದ್ದು ರಾಜೇಶನಿಗೆ ಆ ಹುಡುಗಿಯ ಮೇಲೆ ಮನಸ್ಸಾಗಿತ್ತು. ಮದುವೆಯಾಗಲೂ ನಿರ್ಧರಿಸಿಕೊಂಡುಬಿಟ್ಟ.

ಮದುವೆಯೂ ಆಯಿತು. ಆದರೆ ಹುಡುಗಿ ಬೆಳ್ಳಗಿದ್ದ ಮಾತ್ರಕ್ಕೆ ಪ್ಯಾಟೆ ಹುಡುಗಿಯರಂತೆ ಇರಲು ಸಾಧ್ಯವೇ? ರಿಯಾಲಿಟಿ ಶೋ ಮತ್ತು ಸಿನಿಮಾಗಳ ಹುಡುಗಿಯರು ’ಹುಡುಗಿಯರೆಂದರೆ ಹಿಂಗಿಂಗೆ ಇರಬೇಕು’ ಎಂದು ಹೇಳಿಕೊಟ್ಟಾಗಿತ್ತು. ಅದನ್ನೆಲ್ಲಾ ಈ ಹುಡುಗಿಯಿಂದ ನಿರೀಕ್ಷಿಸಲು ಹೇಗೆ ಸಾಧ್ಯ? ಪಾಪ ಆ ಹುಡುಗಿ ಕಾವ್ಯ ತೀರಾ ಮುಗ್ಧೆ. ರಾಜೇಶನ ಈ ಹೊತ್ತಿನ ಬದಲಾಗಿದ್ದ ಲೈಫ್‌ಸ್ಟೈಲ್‌ಗೆ ಹೊಂದಿಕೊಳ್ಳಲು ಆಕೆಗಾಗಲೇ ಇಲ್ಲ. ಆಗ ಆಕೆಯೊಂದಿಗೆ ತೀರಾ ಒರಟಾಗಿ ನಡೆದುಕೊಳ್ಳಲಾರಂಭಿಸಿದ್ದ. ಹೀರೋ ರಾಜೇಶ. ಆಕೆಯೊಂದಿಗೆ ಹೊಂದಿಕೊಳ್ಳದೇ ಹುಡುಗಿಯನ್ನು ಒಂದೂವರೆ ತಿಂಗಳಲ್ಲೇ ಮನೆಗೆ ಕಳಿಸಿಬಿಟ್ಟ. ಆತಂಕಗೊಂಡ ಹುಡುಗಿಯ ಅಪ್ಪ ಅಮ್ಮ ರಾಜೇಶನಿಗೆ ಬುದ್ಧಿ ಹೇಳಿದರು. ಪೋಲೀಸರಿಗೆ ದೂರು ನೀಡುತ್ತೇವೆಂದೂ ಹೇಳಿದರು. .

ಅಮ್ಮನೊಂದಿಗೆ ಆಸ್ಪತ್ರೆಯಲ್ಲಿ

ಒಂದೆಡೆ ಹದಗೆಟ್ಟ ಸಂಸಾರ, ಕಾಡಿನ ರಿಯಾಲಿಟಿಗೆ ಮತ್ತೆ ಒಗ್ಗಿಕೊಳ್ಳಲಾಗದ ’ರಿಯಾಲಿಟಿ ಶೋ ಕಲಿಸಿದ್ದ’ ಪ್ಯಾಟೆ ಲೈಫು, ಮತ್ತೊಂದೆಡೆ ತನ್ನ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ’ಅಭಿಮಾನಿಗಳು’. ದಿನಕಳೆದಂತೆಯೂ ರಾಜೇಶ ಸುತ್ತಲಿನ ಜನರಿಗೆ ಮುಖತೋರಿಸಲಾಗದ ಮಾನಸಿಕ ವಿಹ್ವಲತೆಗೊಳಗಾಗಿದ್ದಾನೆ. ದೂರದಿಂದ ಯಾರಾದರೂ ಕಂಡ ಕೂಡಲೇ ಕಾಡಿನ ಕಡೆ ಓಟ ಕೀಳತೊಡಗಿದ್ದಾನೆ. ಏಕೆಂದು ಅಮ್ಮ ಕೇಳಿದರೆ ’ಅಭಿಮಾನಿಗಳು’ ಸಿನಿಮಾದ ಬಗ್ಗೆ ಕೇಳುತ್ತಾರೆ. ಅದಕ್ಕೆ ಏನು ಹೇಳಲಿ? ಎಂಬ ಮರುಪ್ರಶ್ನೆ. ನಾಚಿಕೆ ಸ್ವಭಾವದ ಜೊತೆಗೇ ತೀವ್ರ ಮುಂಗೋಪಿತನವೂ ಆತನ ಸ್ವಭಾವದಲ್ಲಿದ್ದುರಿಂದ ರಾಜೇಶನ ಮಾನಸಿಕ ನಿಯಂತ್ರಣ ತಪ್ಪಿದ್ದಾನೆ. ಹುಚ್ಚನಂತೆ ವರ್ತಿಸುವುದು, ನಿಂತಲ್ಲಿ ನಿಲ್ಲದಂತಿರುವುದು, ಜೋರಾಗಿ ಕಿರುಚುವುದು ಇತ್ಯಾದಿ ಹೆಚ್ಚಾಗಿದೆ. ಮನೆಯವರೆಲ್ಲ ದೇವರ ಮೊರೆಹೋದರೂ ಉಪಯೋಗವಾಗಿಲ್ಲ. ಒಂದು ದಿನ ಕಾಡಿನಲ್ಲಿ ಹತ್ತಾರು ಮೈಲು ಓಡಿ ಕೈಕಾಲು ಮುಖವೆಲ್ಲಾ ಮುಳ್ಳು ತರಿದು ರಕ್ತ ಹರಿದಿದೆ. ಅಂದು ನಾಲ್ಕಾರು ಜನರು ಸೇರಿ ಹಿಡಿದುಕೊಂಡರೂ ಎಲ್ಲರನ್ನೂ ಎತ್ತಿ ಬಿಸಾಕುವಷ್ಟು ಉಗ್ರಗೊಂಡಿದ್ದಾನೆ. ಅಂತಿಮವಾಗಿ ಹಾಡಿಯ ಜನರು, ಅಲ್ಲಿದ್ದ ಅರಣ್ಯ ಪಾಲಕರು ಕೈಕಾಲುಗಳಿಗೆ ಅಕ್ಷರಶಃ ಹೆಡೆಮುರಿ ಕಟ್ಟಿ ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಅವನ ಆರ್ಭಟ ನೋಡಿ ವಿಶೇಷ ಕೊಠಡಿಯಲ್ಲಿ ಎರಡು ದಿನ ಇಡಲಾಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ.

ರಾಜೇಶನ ಈಗಿನ ಮಾನಸಿಕ ಸ್ಥಿತಿ ಇರುವ ಶುಷ್ರೂಶೆ ನೀಡಲು ತೀರಾ ಅಗತ್ಯವಾಗಿರುವುದು ಪ್ರಶಾಂತ ವಾತಾವರಣ ಮತ್ತು ಅಲ್ಲಿ ನಡೆಸುವ ತೀವ್ರವಾದ ಕೌನ್ಸೆಲಿಂಗ್‌ಗಳು. ಆದರೆ ರಾಜೇಶ ಆಸ್ಪತ್ರೆ ಸೇರಿದ ಬಗ್ಗೆಯೂ ಇನ್ನಿಲ್ಲದ ವಿವಾದಗಳನ್ನು ಹುಟ್ಟುಹಾಕಿ, ಅತಿರಂಜಕಗೊಳಿಸಿ ಟಿಆರ್‌ಪಿ ಹೆಚ್ಚಸಿಕೊಳ್ಳಲು ಬಯಸುವ ಟೀವಿ ಮಾಧ್ಯಮಗಳು ಅವನನ್ನು ಬಿಡುತ್ತಿಲ್ಲ. ತನ್ನ ಕಾಡಿನಲ್ಲಂತೂ ನೆಮ್ಮದಿಯಿಂದರಲು ಜೇನುಕುರುಬ ರಾಜೇಶನಿಗೆ ಬಿಡದ ನಮ್ಮ ಪ್ಯಾಟೆಯ ನಾಗರಿಕ ಸಮಾಜ ಮತ್ತು ಮಾಧ್ಯಮಗಳು ಕನಿಷ್ಠ ಈ ಮಾನಸಿಕ ಆಸ್ಪತ್ರೆಯಲ್ಲಾದರೂ ನೆಮ್ಮದಿ ನೀಡಬಾರದೇ?

ಹಣವೊಂದು ಕೆಡಿಸಿತ್ತು ಹಾಡಿಯನ್ನು!

೧೯೮೦ರಲ್ಲಿ ದಕ್ಷಿಣ ಆಫ್ರಿಕದ ಸಿನಿಮಾ ನಿರ್ದೇಶಕ ಜೇಮಿ ಉಯಿಸ್ ಎಂಬುವವರು ನಿರ್ದೇಶಿಸಿದ್ದ ’ದ ಗಾಡ್ಸ್ ಮಸ್ಟ್ ಬಿ ಕ್ರೇಝಿ’ ಸಿನಿಮಾದಲ್ಲಿ ಕಲಹರಿ ಮರುಭೂಮಿಯ ಬುಷ್‌ಮನ್ ಎಂಬ ಬುಡಕಟ್ಟು ಸಮುದಾಯವು ನಾಗರಿಕತೆಯೊಂದಿಗೆ ಎದುರುಗೊಳ್ಳುವ ಕತೆಯನ್ನು ಅದ್ಭುತವಾಗಿ ಚಿತ್ರ್ರಿಸಿದ್ದರು. ವಿಮಾನದಿಂದ ಕುಡಿದು ಎಸೆದ ಕೋಕೊಕೋಲಾ ಬಾಟಲಿಯೊಂದು ಬುಡಕಟ್ಟು ಜನರ ಹಾಡಿಗೆ ಬಂದು ಬಿದ್ದದ್ದೇ ಅವರ ನಡುವೆ ಇನ್ನಿಲ್ಲದ ಸ್ವಾರ್ಥ-ಹೊಡದಾಟ ಶುರುವಾಗಿಬಿಡುತ್ತದೆ. ತಮ್ಮ ನಡುವೆ ಕಲಹ ಸೃಷ್ಟಿಸಿದ ಅದು ಭೂತವೆಂದುಕೊಂಡು ಭೂಮಿಯ ಮತ್ತೊಂದು ತುದಿಯಲ್ಲಿ ಎಸೆದು ಬರಲು ಹೋಗುವ ಬುಡಕಟ್ಟು ಮನುಷ್ಯನೊಬ್ಬ ’ಆಧುನಿಕ’ಜಗತ್ತಿನೊಳಗೆ ಪಜೀತಿಗೆ ಸಿಕ್ಕಿಹಾಕಿಕೊಳ್ಳುವ ಕತೆ ಅದು. ಇದೇ ವೇಳೆಗೆ ಈ ಸಿನಿಮಾ ಬುಡಕಟ್ಟು ಜನರ ನಿಜವಾದ ’ನಾಗರಿಕ’ಬದುಕನ್ನು ಹಾಗೂ ಮಾನವೀಯತೆಯನ್ನೂ ಮನಮುಟ್ಟುವಂತೆ ಹೇಳಿತ್ತು. ನಮ್ಮ ನಾಗರಿಕ ಜಗತ್ತಿನ ಈ ಕಾಲದ ಐಲುಗಳಾದ ರಿಯಾಲಿಟಿ ಶೋಗಳು ಮತ್ತು ಹುಚ್ಚು ಭ್ರಮೆಗಳಲ್ಲಿ ಮುಳುಗಿಸುವ ಸಿನಿಮಾಗಳೂ, ಅವುಗಳನ್ನು ತಯಾರಿಸುವವರೂ, ನೋಡುವವರೂ ಎಲ್ಲಾ ಸೇರಿ ರಾಜೇಶನ ’ಜೇನು ಕುರುಬರ’ ಹಾಡಿಯಲ್ಲಿ ಸೃಷ್ಟಿಸಿರುವ ತಳಮಳ ಕೂಡ ಇದೇ ತೆರನಾದದ್ದು. ಅಲ್ಲಿ ಏನಾಗಿದೆ ನೋಡಿ.

ರಾಜೇಶನ ಮನೆ


’ಹಳ್ಳಿ ಹೈದ ಪ್ಯಾಟೆಗ್ ಬಂದ’ ರಿಯಾಲಿಟಿ ಶೋದಲ್ಲಿ ತಮ್ಮ ಮಗನನ್ನು ನೋಡಲು ರಾಜೇಶನ ತಂದೆ ಟೀವಿಯೊಂದನ್ನು ತಂದರು. ಆದರೆ ಅಲ್ಲಿ ಕರೆಂಟಿಲ್ಲ. ಹೀಗಾಗಿ ನಾಲ್ಕಾರು ಸೋಲಾರ್ ಬ್ಯಾಟರಿಗಳನ್ನು ಹಾಕಿ ಕಾರ್ಯಕ್ರಮ ವೀಕ್ಷಿಸುವ ಪ್ರಯತ್ನ ಹಾಡಿಯಲ್ಲಿ ನಡೆಯುತ್ತದೆ. ಆದರೆ ಆ ಬ್ಯಾಟರಿ ಸುಟ್ಟು ಹೋಗುತ್ತದೆ. ಕೊನೆಗೆ ದೂರದ ಮನೆಗಳಿಗೆ ಹೋಗಿ ಟೀವಿ ನೋಡಿ ಅಲ್ಲಿ ಬಲವಂತವಾಗಿ ಖುಷಿಪಡುತ್ತಾರೆ. ನಂತರ ಮನೆಗೆ ಬಂದ ರಾಜೇಶ ಮನೆಯಲ್ಲೇ ಟೀವಿ ನೋಡುವಂತಾಗಲು ಒಂದು ಜನರೇಟರ್ ಖರೀದಿಸುತ್ತಾನೆ. ಅದಕ್ಕೆ ಇದುವರೆಗೆ ಏನಿಲ್ಲೆಂದರೂ ಲೀಟರ್‌ಗೆ ೪೦ ರೂಪಾಯಿಯಂತೆ ೩೦೦-೪೦೦ ಲೀಟರ್ ಸೀಮೆ ಎಣ್ಣೇ ಖರೀದಿಸಲಾಗಿದೆ. ರಿಯಾಲಿಟಿ ಶೋದಲ್ಲಿ ಗೆದ್ದರೆ ಊರಿನ ದೇವರಿಗೆ ದೇವಸ್ಥಾನ ಕಟ್ಟಿಸುತ್ತೇನೆಂದಿದ್ದ ರಾಜೇಶ. ವಾಹಿನಿಯವರು ಶೋ ಮುಗಿದ ಮೇಲೆ ಕೊಡಬೇಕಿದ್ದ ಹಣಕ್ಕಾಗಿ ಪಾನ್ ಕಾರ್ಡ್ ತರಲು ಮತ್ತು ಅಕೌಂಟ್ ತೆರೆಯಲು ಹೇಳೀದ್ದಾರೆ. ಆದರೆ ಪಾನ್‌ಕಾರ್ಡ್ ಬರಲು ತಿಂಗಳಾನುಗಟ್ಟಲೆಯಗಿದೆ. ಕೊನೆಗೂ ಹೆಚ್.ಡಿ.ಕೋಟೆಯ ಬ್ಯಾಂಕೊಂದರಲ್ಲಿ ೪,೯೦,೦೦೦ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಇಡಲಾಗಿದೆ. ಇಷ್ಟರ ಹೊತ್ತಿಗೆ ರಾಜೇಶನನ್ನು ಆರಂಭದಲ್ಲಿ ಶೋಗೆ ಹೋಗಲು ಒಪ್ಪಿಸಿದ್ದ ಬುಡಕಟ್ಟು ಮುಖಂಡರನ್ನು ಕಂಡರೂ ಮಾತಾಡಿಸದಂತಾಗಿದ್ದ ರಾಜೇಶ. ರಾಜೇಶನನ್ನು ಸನ್ಮಾನ ಮಾಡಲು ಕೆಲವು ಸ್ಥಳೀಯ ಹಾಡಿಯ ಜನರು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಆತನನ್ನು ಕರೆತರಲು ನಿರ್ದೇಶಕ ರವಿ ಕಡೂರು ಮನೆಗೆ ಹೋದವರಿಗೆ ’ಅವರು ಹಾಕುವ ಹಾರ ತೊಗೊಂಡು ನಾನೇನು ಮಾಡಲಿ? ಎಷ್ಟು ದುಡ್ಡು ಕೊಡ್ತಾರೆ ಹೇಳಿ ಬರ‍್ತೇನೆ’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ವಾಪಸ್ಸು ಕಳಿಸಿಬಿಟ್ಟ. ಸಿನೆಮಾದವರು ಕೊಟ್ಟ ಹಣದಿಂದ ಪಲ್ಸಾರ್ ಬೈಕ್ ರಾಜೇಶನ ಗುಡಿಸಲು ನುಗ್ಗಿದೆ. ಟ್ಯಾಂಕ್ ಪೂರ್ತಿ ಭರ್ತಿ ಮಾಡಿಕೊಂಡು ಸಾಲದಾದರೆ ಎಂದು ಬೈಕಿನ ಹಿಂದುಗಡೆ ಒಂದು ಕ್ಯಾನ್ ಭರ್ತಿ ಪೆಟ್ರೋಲಿಟ್ಟುಕೊಂಡು ಬಳ್ಳೇ ಹಾಡಿ ಟು ಕಡೂರು ವಯಾ ಬೆಂಗಳೂರು ಹಲವಾರು ಸಲ ಸವಾರಿ ಮಾಡಿದ್ದಾನೆ.

ಹಾಡಿಯಲ್ಲಿ ಮೊದಮೊದಲು ರಾಜೇಶನ ಕುರಿತು ಸಂತಸಗೊಂಡಿದ್ದ ಜೊತೆಗಾರ ಹುಡುಗರನ್ನು ಈಗ ಮಾತಾಡಿಸದಂತಾಗಿಬಿಟ್ಟಿದ್ದ. ಹಾಡಿಗೆ ಬಂದರೂ ರಾಜೇಶನ ಲೋಕವೇ ಬೇರೆ ಆಗಿತ್ತು. ಈಗ ಅವನ ’ಅಭಿಮಾನಿಗಳೇ’ ಬೇರೆಯಾಗಿದ್ದರು. ಹೊಸ ಸೂಟು, ಬೂಟಿನ ರಾಜೇಶನಿಗೆ ಆ ಹಾಡಿಯ ತಲೆಗೆ ಎಣ್ಣೆ ಕಾಣದ, ದುಡಿಮೆ ಮಾಡುವ, ಕೂಲಿಕಾರ ಬಡವರು ’ಯಕಶ್ಚಿತ್’ ಎನಿಸಿದ್ದಾರೆ. ಇಷ್ಟೊತ್ತಿಗೆ ರಾಜೇಶ ಹಾಡಿಯ ಇತರರಂತೆ ಲೋಕಲ್ ಸಾರಾಯಿ ಕುಡಿಯುತ್ತಿರಲಿಲ್ಲ. ಬ್ರಾಂಡೆಡ್ ಕುಡುಕನಾಗಿದ್ದ! ರಾಜೇಶನ ಮದುವೆಗೆ ಹ್ಯಾಂಡ್ ಪೋಸ್ಟ್‌ನ ಕಲ್ಯಾಣಮಂಟಪವೊಂದರಲ್ಲಿ ಅರೇಂಜಾಗಿದೆ. ಅಲ್ಲಿನ ’ಇವೆಂಟ್ ಮ್ಯಾನೇಜ್‌ಮೆಂಟ್’ನವರು ಮದುವೆಯನ್ನು ವಹಿಸಿಕೊಂಡಿದ್ದಾರೆ. ರಾಜೇಶನ ಅಭಿಮಾನಿಗಳು ನೂರಾರು ಜನ ಮದುವೆಗೆ ಸಾಕ್ಷಿಯಾಗಿದ್ದಾರೆ. ರಾಜೇಶನ ಹಾಡಿಯ ಜನರನ್ನು ಹೊರತುಪಡಿಸಿ! ನಿಜ. ರಾಜೇಶನ ಕುಟುಂಬದ ಸಂಬಂಧಿಕರೂ ಒಳಗೊಂಡಂತೆ ಊರಿನ ಯಾರಿಗೂ ಮದುವೆಗೆ ಆಹ್ವಾನಿಸಿಯೇ ಇರಲಿಲ್ಲ!. ಇದರಿಂದಾಗಿ ಇಡೀ ಹಾಡಿಯ ಜನರು ಬೇಸರಗೊಂಡಿದ್ದಾರೆ. ಇನ್ನು ಸಿನಿಮಾದವರು ನೀಡಿದ ಐದು ಲಕ್ಷ ರೂಪಾಯಿಗಳಲ್ಲಿ ಒಂದು ಲಕ್ಷ ರೂಪಾಯಿಯನ್ನು ಅಮ್ಮನ ಹೆಸರಿಗೆ ಫಿಕ್ಸೆಡ್ ಮಾಡಿಸಿಡಲಾಗಿದೆ. ಉಳಿದ ಹಣವು ನೀರಿನಂತೆ ಖರ್ಚಾಗಿದೆ. ಅದು ಖಾಲಿಯಾದಾಗ ಕೊನೆಗೆ ತನ್ನ ಫಿಕ್ಸೆಡ್ ಹಣವನ್ನಾದರಿಸಿ ೭೫ ಸಾವಿರ ರೂಪಾಯಿ ಸಾಲವನ್ನೂ ತೆಗೆದುಕೊಂಡಿದ್ದಾನೆ. ಇದನ್ನು ತಿಳಿದ ರಾಜೇಶನ ತಂದೆಗೆ ಗಾಬರಿಯಾಗಿದೆ. ಟಿಎಸ್‌ಐನೊಂದಿಗೆ ಮಾತನಾಡಿದ ರಾಜೇಶ್ ತಂದೆ ಈ ಕುರಿತು ಕೆಲವೆ ತಿಂಗಳಲ್ಲಿ ಈ ಸಾಲದ ಬಡ್ಡಿ ಒಂದು ಲಕ್ಷ ಮುಟ್ಟಿ ಮತ್ತೊಂದು ಅಕೌಂಟ್‌ನಲ್ಲಿಟ್ಟಿರುವ ನಾಲ್ಕು ಲಕ್ಷ ರೂಪಾಯಿ ಫಿಕ್ಸೆಡ್‌ನ್ನೂ ತಿನ್ನಲು ಶುರುಮಾಡುತ್ತೆ ಅಂತ ಗೊತ್ಯಾಯ್ತು ಸರ್. ಹಿಂಗಾಗಿ ನಾನು ನನ್ನ ಉಳಿತಾಯದ ಹಣದಲ್ಲಿ ೫೦ ಸಾವಿರ ರೂಪಾಯಿ ತೆಗೆದು ಬ್ಯಾಂಕಿಗೆ ಕೊಟ್ಟು ಬಂದು ೩ ತಿಂಗಳಾಯ್ತು. ಆದರೆ ಅವರು ಅದನ್ನು ಇನ್ನೂ ಪಾಸ್‌ಬುಕ್‌ನಲ್ಲಿ ಬರೆದೇ ಇಲ್ಲ. ಆಸ್ಪತ್ರೆಯಿಂದ ಹೋದ ಕೂಡಲೇ ಆ ಕೆಲಸ ಮಾಡಬೇಕು ಎಂದು ತಮ್ಮ ಆತಂಕ ತೋಡಿಕೊಂಡರು.

ಪಲ್ಸಾರ್ ಬೈಕು, ಜನರೇಟರ್ , ಕರ್ಲಾನ್ ಬೆಡ್ಡು 


ರಾಜೇಶ ಲಕ್ಷಗಳನ್ನು ಗೆದ್ದು ಬರುವುದು ಖಾತ್ರಿಯಾದೊಡನೆ ಹಾಡಿಯ ಜನರಲ್ಲಿ ಒಂದು ಆಸೆ ಬಂದಿತ್ತು. ಒಂದು ಸಣ್ಣ ಪಾಲನ್ನಾದರೂ ರಾಜೇಶ ಹಾಡಿಯ ಎಲ್ಲಾ ಬಡವರಿಗೆ ನೀಡಬಹುದೇ ಎಂಬ ಆಸೆ ಅದು. ಆದರೆ ಹಣ ನೀಡುವುದಿರಲಿ ಹಾಡಿಯ ದೇವರಿಗೆ ದೇವಸ್ಥಾನ ಕಟ್ಟಿಸುವ ತನ್ನ ಹರಕೆಯನ್ನೂ ಮರೆತು ಐಶಾರಾಮಿ ದುಂದುವೆಚ್ಚದಲ್ಲಿ ತೊಡಗಿದ್ದ ರಾಜೇಶನನ್ನು ನೋಡಿ ಹಾಡಿಯವರು ಬೇಸರಿಸಿಕೊಂಡುಬಿಟ್ಟರು. 'ನಾವು ಹಿಂದೆ ಒಂದು ಸೇರು ರಾಗಿ ಸಿಕ್ಕರೆ ಗಂಜಿ ಮಾಡಿಕೊಂಡು ಇಡೀ ಹಾಡಿಯವರು ಸಮನಾಗಿ ಹಂಚಿಕೊಂಡು ಕುಡೀತಿದ್ದೋರು, ಕಾಡಿನಲ್ಲಿ ಸಿಕ್ಕಿದ ಗೆಡ್ಡೆಗೆಣಸು ಸಿಕ್ಕದ್ದನ್ನೆಲ್ಲಾ ಒಟ್ಟು ಬೇಯಿಸಿ ಹಂಚಿಕೊಂಡು ತಿಂದೋರು ಸ್ವಾಮಿ. ಇಂತಾದ್ದರಲ್ಲಿ ರಾಜೇಶ ಹೀಗೆ ಮಾಡಿದಾಗ ಎಲ್ಲರಿಗೂ ಬೇಜಾರಾಗಿದ್ದು ನಿಜಾ ಸ್ವಾಮಿ' ಎನ್ನುತ್ತಾರೆ ಹಾಡಿಯ ಯಜಮಾನ ಚಿಕ್ಕಮರಿ. ಹಲವು ಹಾಡಿಗಳ ಜೇನುಕುರುಬ ಜನರೇ ಸೇರಿ ಪಕ್ಕದ ಬಾವಲಿ ಹಾಡಿಯಲ್ಲಿ ಆಯೋಜಿಸಿದ್ದ ಸನ್ಮಾನವೊಂದನ್ನು ತಿರಸ್ಕರಿಸಿದ್ದ ರಾಜೇಶ ನಾನು ಹಾಡಿಗೆ ಬರಬೇಕಾ? ಆಗೋದಿಲ್ಲ ಎಂದು ಅವಮಾನಿಸಿ ಕಳಿಸಿದ್ದ. ಇಷ್ಟಾದ ಮೇಲೂ ಈಗ ರಾಜೇಶ ಆಸ್ಪತ್ರೆಗೆ ಸೇರಿರುವ ಸುದ್ದಿ ತಿಳಿದು ಹಾಡಿಯ ಜನರೆಲ್ಲಾ ತಮ್ಮ ದೇವರಿಗೆ ಪೂಜೆ ಮಾಡಿದ್ದಾರೆ. ನಮ್ಮ ಹುಡುಗ ಬೇಗನೇ ಹುಷಾರಾಗಲಿ ಎಂದು ಬೇಡಿಕೊಂಡಿದ್ದಾರೆ.

ನಾವು ಜೇನು ಕುರುಬ ಮಕ್ಕಳು...

ನಂಗ ಜೇನು ಕುರುಬ ಮಕ್ಕಳು ದೂರಿ ದೂರಿ
ನಂಗ ಕಾಡಿಗೆ ಅರಸರು ದೂರಿ ದೂರಿ
ನಂಗ ಹುಲಿಯ ಜೊತೆ ಹುಡುಗಾಟ ದೂರಿ ದೂರಿ
ನಂಗ ಆನೆ ಜೊತೆ ಐಲಾಟ ದೂರಿದೂರಿ
ನಂಗ ನವಿಲು ಜೊತೆ ನಲಿದಾಟ ದೂರಿ ದೂರಿ
ನಂಗ ಕಾಡಲಿ ಬದುಕವರು ದೂರಿ ದೂರಿ
ನಂಗ ಕತ್ತಲ ಲೋಕದಿ ಮಿಡಿತವರು ದೂರಿದೂರಿ...


ಎಂದು ಸಾಗುತ್ತದೆ ಜೇನುಕುರುಬರ ಹಾಡಿಯ ಹಾಡು. ದೇಶದ ಅತ್ಯಂತ ಪ್ರಾಚೀನ ಬುಡಕಟ್ಟುಗಳಲ್ಲಿ ಜೇನು ಕುರುಬ ಬುಡಕಟ್ಟು ಸಹ ಒಂದಾಗಿದೆ. ಈ ಹಿಂದೆ ಕಾಡಿನ ಅರಸರಾಗಿದ್ದ ಜೇನು ಕುರುಬರು ಎಂದೂ ಒಂದು ಕಡೆ ನೆಲೆ ನಿಲ್ಲುತ್ತಿರಲಿಲ್ಲ. ಒಂದೆಡೆಯಿಂದ ಮತ್ತೊಂದೆಡೆ ಅಲೆಯುತ್ತ ಜೇನು ಸಂಗ್ರಹಿಸುತ್ತ, ಗೆಡ್ಡೆ ಗೆಣಸು ಸಂಗ್ರಹಿಸುತ್ತ, ಕುಮರಿ ಬೇಸಾಯ ಮಾಡುತ್ತ, ಕರ್ನಾಟಕ-ಕೇರಳ-ತಮಿಳು ನಾಡುಗಳ ಗಡಿಭಾಗಗಳ ದಟ್ಟಾರಣ್ಯದಲ್ಲಿ ಅಲೆಮಾರಿಗಳಾಗಿ ಬದುಕಿದ್ದ ಸಮುದಾಯ ಇದು. ಆಗ ಅವರದ್ದು ಅತ್ಯಂತ ಕಷ್ಟದ ಬದುಕು. ಆದರೆ ಎಂದೂ ಸ್ವಾರ್ಥದ ಬದುಕಾಗಿರಲಿಲ್ಲ. ತೀರಾ ಇತ್ತೀಚೆಗೆ ಅವರು ಆಧುನಿಕತೆಗೆ ಒಡ್ಡಿಕೊಳ್ಳುವವರೆಗೂ ಸಾಮೂಹಿಕತೆ ಎನ್ನುವುದು ಅವರ ರಕ್ತದಲ್ಲಿತ್ತು. ಈಗಲೂ ಒಂದು ಮಟ್ಟಿಗಿದೆ. ನಾಳೆಯ ಚಿಂತೆ ಅವರಿಗಿಲಿಲ್ಲ. ಇಂದಿಗೆ ಇಂದೇ ಹುಡುಕಿಕೊಂಡು ಸಿಕ್ಕಷ್ಟು ಹಂಚಿಕೊಂಡು ತಿಂದು ತಮ್ಮ
ಲಿಂಗಮ್ಮ, ರಾಜೇಶನ ಅಜ್ಜಿ
ಕಾಡಿನ ದೇವರುಗಳಾದ ತಾಳಬಳ್ಳಿ, ಕುಳಿತಳ ದೊರೆ, ಬಳ್ಳೆಗದ್ದೆ ತಾಯಿ, ಮಾಸ್ತ್ಯಮ್ಮರನ್ನು ಪೂಜಿಸಿಕೊಂಡು ಬದುಕಿದ್ದರು. ರಾಜೇಶನ ಅಜ್ಜಿ ಲಿಂಗಮ್ಮ ಟಿಎಸ್‌ಐನೊಂದಿಗೆ ಆಡಿದ ಈ ಮಾತು ಕೇಳಿ. "ನಮ್ಮ ಅರಮನೆ ಇದೇ ಸಾ. ನಿಮ್ಮರಮನೆ ನಮಗೆ ಆಗಲ್ಲ ಸಾ. ನಾವೆಂದೂ ಕಳ್ತನ ಮಾಡ್ದೋರಲ್ಲ ಸಾ. ಸರ್ಕಾರದೋರು ಬಂದು ಹಣ ಕೊಡ್ತೀವಿ ನೀವು ಕಾಡು ಬಿಟ್ಟು ಹೊರಗೆ ಹೋಗಿ ಅಂದರೆ ನಾವು ಹೋಗಕಾಗತ್ತಾ ಸಾ... ನಮಗೆ ಕರೆಂಟು ಕೊಡಿ, ನೀರು ಕೊಡಿ, ಮಕ್ಕಳಿಗೆ ಶಾಲೆ ಕೊಡಿ ಆದರೆ ಇಲ್ಲಿಂದ ಹೊರಗೆ ಕರೆದರೆ ಬೇಕಾದರೆ ವಿಷವನ್ನೇ ಕುಡೀತೀವಿ ಸಾ..". ಮತ್ತೂ ಮುಂದುವರೆದು ಮಾತನಾಡಿದ ಅವರು "ನಂಗೆ ಹತ್ತು ಜನ ಮಕ್ಕಳು. ಆ ಕಾಲದಲ್ಲಿ ಆಪೇಸನ್ನು ಇಲ್ಲ ಸಾ. ಇದ್ದಿದ್ರೆ ನಾನು ಮೂರೇ ಮಕ್ಕಳನ್ನ ಮಾಡ್ಸಿಕೊಳ್ವೇನು. ನಮ್ ತಾತನ ಕಾಲದಲ್ಲಿ ಅವೆಲ್ಲ ಇಲ್ಲ. ಈಗ ಹೊಟ್ಟೆ ಕತ್ತರಸಿ ಬನ್ನಿ, ಅಂತ ಸುರುವಗಿರದು. ನಾನು ಗುಂಡು ಕಲ್ಲಿನಂಗೆ ಇವ್ನಲ್ಲ? ಹತ್ತು ಮಕ್ಕಳು ಹೆತ್ರೂ ನಂಗೆ ಯಾವ ರೋಗ ಬಂದಿಲ್ವಲ್ಲ? ಈಗಿನವರು ಅಲ್ವಾ ರೋಗ ನೋಡ್ತಾ ಇರಾದು? ಲಕ್ಷ ಲಕ್ಷ ಡಾಕುಟ್ರಿಗೆ ಸುರಿಯಾದು? ಇಲ್ಲಿ ನಮಗೆ ಸೊಪ್ಪು ತಿಂದ ಮೇಲೆ ನಮಗೆ ಯಾವ ರೋಗ ಬರಲ್ಲ. ಪ್ಯಾಟೇಲೇ ರೋಗ. ನಿಮ್ ರೋಗ ನಂಗ ಹತ್ತಕಳದು ನನ್ನ ರೋಗ ನಿಮಗ ಹತ್ತಕಳದು. ನಾವು ಗಲೀಜು ನೀರು ಕುಡಿಯೋಕಾಗಲ್ಲ. ನಾವು ಗುಂಡಿ ಮಾಡಿಕಂಡು ಹೊಸ ನೀರನ್ನೇ ತೆಗೆಯೋದು. ಅರ್ಥ ಮಾಡ್ಕಳಿ. ಹಿಂಗೆ ಬದುಕದವರು ನಾವ್ ಅಲ್ಲೆಲ್ಲ ಹೋಗಿ ಬದುಕಕಾಯ್ತದ ಸಾ? ನಮ್ಮನ್ನು ಹಾಳು ಮಾಡಕಿರದು ಗೌರ‍್ಮೆಂಟು. ನಮ್‌ಗೆ ಅದೆಲ್ಲಾ ಬ್ಯಾಡ. ನನ್ನ ರಾಜೇಶನನ್ನ ಒಳ್ಳೇದ ಮಾಡಿ ಕಳಿಸಿ. ಅಷ್ಟೇ ಸಾಕು ಸಾ ನಮಗೆ.." ವಾಸ್ತವದಲ್ಲಿ ಜೇನುಕುರುಬರು ಕಾಡಿನ ಕುರಿತ ಅಪಾರ ಜ್ಞಾನ ಹೊಂದಿರುವಂತವರು. ಕಾಡಿನಲ್ಲಿ ಜೇನು ಕೀಳಲು ಹೋಗುವಾಗ ಬಾಯಾರಿತೆಂದರೆ ಇಂತದ್ಧೇ ಮರದ ಕಾಂಡದಲ್ಲಿ ನೀರಿದೆ ಹುಡುಕಿ ಆ ಮರವನ್ನು ಏರಿ ನೀರಿನ ಬುಗ್ಗೆ ಚಿಮ್ಮಿಸುವಷ್ಟು ಪಕ್ಕಾ ಪ್ರತಿಭೆ ಅವರದ್ದು. ಆದರೆ ಬುದ್ಧಿ ಮಾತ್ರ ಬಲಿತು ಹೃದಯವನ್ನೇ ಕಳೆದುಕೊಂಡ ಪೇಟೆಯ ಕೆಲ ವಿಕೃತ ಮನಸ್ಸಿನವರು ಇಂತಹ ಆದಿವಾಸಿಗಳನ್ನು ಇಲ್ಲಿ ತಂದು ಅವರನ್ನು ರಿಯಾಲಿಟಿ ಶೋಗಳಲ್ಲಿ ಅವಮಾನಿಸಿದ್ದ ರೀತಿ ಮಾತ್ರ ಅಕ್ಷಮ್ಯವಾದದ್ದು. ಇದೇ ವಹಿನಿಯಲ್ಲಿ ನಂತರ ಪ್ಯಾಟೆ ಮಂದಿ ಕಾಡಿಗೆ ಬಂದ್ರು ಎಂಬ ರಿಯಾಲಿಟಿ ಶೋ ಸಹ ಆದಿವಾಸಿಗಳನ್ನು ಹಳೆ ಶಿಲಾಯುಗದ ಜನರಂತೆ ತೋರಿಸಿ ಆದಿವಾಸಿ ಬದುಕನ್ನು ವಿಕೃತವಾಗಿ ತೋರಿಸಿದ್ದನ್ನು ನೆನಪಿಸಿಕೊಳ್ಳಬಹುದು. 


ಬಳ್ಳೇಹಾಡಿ


ವಾಸ್ತವದಲ್ಲಿ ಜೇನುಕುರುಬರಂತಹ ಬುಡಕಟ್ಟುಗಳು ಇಂದು ಅತ್ಯಂತ ಸಂಕಷ್ಟದಲ್ಲಿ ಸಿಲುಕಿವೆ. ಬಂಡೀಪುರ, ನಗರಹೊಳೆ ಅಭಯಾರಣ್ಯಗಳಲ್ಲಿನ ಐವತ್ತಕ್ಕೂ ಹೆಚ್ಚು ಜೇನುಕುರುಬ ಹಾಡಿಗಳನ್ನು ಈಗಾಗಲೇ ಎತ್ತಂಗಡಿ ಮಾಡಿರುವ ಕಾರಣ ಅವರಲ್ಲಿ ಅನೇಕರು ತಮ್ಮ ಸಾಂಪ್ರದಾಯಿಕ ಬದುಕಿನ ಮೂಲಗಳಿಂದ ದೂರವಾಗಿ ಹೊರಜಗತ್ತಿನ ಬದುಕಿಗೂ ಹೊಂದಿಕೊಳ್ಳಲಾಗದೆ ಸೋತುಸುಣ್ಣವಾಗುತ್ತಿದ್ದಾರೆ. ಬಳ್ಳೇ ಹಾಡಿ ಮತ್ತು ಸುತ್ತಲಿನ ಹಾಡಿಗಳ ಜನರು ಹೊರಹೋಗಲು ಒಪ್ಪಿಲ್ಲ. ಆದರೆ ಅರಣ್ಯ ಇಲಾಖೆಯ ನಿರ್ಬಂಧಗಳು ಅವರನ್ನು ಇದ್ದಲ್ಲಿಯೇ ಅಸಹಾಯಕರನ್ನಾಗಿ ಮಾಡಿವೆ. ವರ್ಷದಲ್ಲಿ ಮೂರುತಿಂಗಳು ಕಾಲ ಕೊಡಗಿನ ಕಾಫಿ ಎಸ್ಟೇಟುಗಳಿಗೆ ಹೋಗಿ ಒಂದಷ್ಟು ಕಾಸು ಮಾಡಿಕೊಂಡು ಬರುತ್ತಾರಾದರೂ ಅದು ಅವರ ಬದುಕಿನ ನಿರ್ವಹಣೆಗೆ ಸಾಲುತ್ತಿಲ್ಲ. ೨೦೦೬ರ ಅರಣ್ಯ ಹಕ್ಕು ಕಾಯ್ದೆ ಅವರಿಗೆ ತಮ್ಮ ಕಾಡಿನ ನೆಲೆಗಳನ್ನು ಖಾಯಂಗೊಳಿಸಿದೆಯಾದರೂ ಅದೂ ಸಹ ಈ ಜೇನುಕುರುಬರ ಸಾಮೂಹಿಕ ಬದುಕನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಈ ಹಿಂದೆ ಮೈಸೂರಿನ ಕಮಿಷನರ್ ಆಗಿದ್ದ ಹರ್ಷಗುಪ್ತ ಈ ಜನರನ್ನು ಅರಿಯಲು ಒಂದಷ್ಟು ಪ್ರಯತ್ನಿಸಿದ್ದರು ಮಾತ್ರವಲ್ಲ ಅವರ ಸಮಸ್ಯೆಗಳಿಗೆ ಸ್ಪಂದಿಸಲೂ ಯತ್ನಿಸಿದ್ದರು. ಅವರು ವರ್ಗಾವಣೆಯಾದಮೇಲೆ ಅದೂ ಈಗ ಅಂತಹ ಯಾವ ಪ್ರಯತ್ನಗಳೂ ನಡೆದಿಲ್. ತಮ್ಮ ಬದುಕುವ ಹಕ್ಕನ್ನು ರಕ್ಷಿಸಿಕೊಳ್ಳುವ ಹಿನ್ನೆಲೆಯಲ್ಲಿ ಜೇನುಕುರುಬರು ಸಂಘಟಿತರಾಗಿ ಹೋರಾಟವನ್ನೂ ನಡೆಸಿಕೊಂಡು ಬಂದಿದ್ದಾರೆ. ಪರಿಣಾಮವಾಗಿ ಸರ್ಕಾರವು ಡಾ. ಮುಜಾಫರ್ ಅಸ್ಸಾದಿಯವರ ನೇತೃತ್ವದಲ್ಲಿ ನೇಮಿಸಿದ್ದ ಅಧ್ಯಯನ ಸಮಿತಿಯು ಮಧ್ಯಂತರ ವರದಿಯು ಒಂದಷ್ಟು ಆಶಾಭಾವನೆಯನ್ನು ಮೂಡಿಸಿದೆ. ಅದರ ಪೂರ್ಣ ವರದಿ ಇನ್ನೂ ಬರಬೇಕಿದೆ ಎಂಬ ಅಭಿಪ್ರಾಯ ಸಮುದಾಯದ ಹೋರಾಟಗಾರ ಸೋಮಣ್ಣ ಅವರದ್ದು. ಟಿಎಸ್‌ಐನೊಂದಿಗೆ ಮಾತನಾಡಿದ ಸೋಮಣ್ಣ "೨೦೦೬ರ ಅರಣ್ಯ ಹಕ್ಕು ಕಾಯ್ದೆ ವಯುಕ್ತಿಕ ಆಸ್ತಿಯನ್ನು ಮಾತ್ರ ಗುರುತಿಸುವುದರಿಂದ ಜೇನು ಕುರುಬರಿಗೆ ಅನ್ಯಾಯವಾಗಿದೆ. ಅದರ ಪ್ರಕಾರ ನಾವು ಜೇನು ಸಂಗ್ರಹಿಸಬಹುದಾದರೂ ಅದನ್ನು ಮಾರುವಂತಿಲ್ಲ. ಈ ಕಾರಣಗಳಿಂದ ನಾವು ನಮ್ಮ ಸಮುದಾಯಕ್ಕೆ ಸಾಮೂಹಿಕ ಆಸ್ತಿಯನ್ನು ನೀಡಿ ಹಕ್ಕುಪತ್ರಗಳನು ನೀಡಲು ಒತ್ತಾಯಿಸುತ್ತಿದ್ದೇವೆ "ಎಂದರು.

ಬಿ.ಟಿ.ಪೋಷಿಣಿ ಹೀಗೆನ್ನುತ್ತಾರೆ....

ಬಿ.ಟಿ. ಪೋಷಿಣಿ, ಸ್ವಾಮಿ ವೇಕಾನಂದ ಯೂತ್ ಮೂವ್ಮೆಂಟ್ ಸಂಘಟಕಿ
"ಜೇನುಕುರುಬರಿಗೆ ಯಾವತ್ತೂ ವಯುಕ್ತಿಕ ಆಸ್ತಿ ಎಂಬುದಿಲ್ಲ. ಈ ಅರಣ್ಯ ಹಕ್ಕು ಕಾಯ್ದೆ ಇತರೆ ಆದಿವಾಸಿಗಳಿಗೆ ಅನುಕೂಲ ಮಾಡಿದ್ದರೂ ಜೇನುಕುರುಬರು ಮಾತ್ರ ಅನ್ಯಾಯಕ್ಕೊಳಗಾಗಿದ್ದಾರೆ. ಅವರ ಗುಡಿಸಲು ಬಿಟ್ಟರೆ ಅವರ ಜಮೀನು ಇಲ್ಲ. ಕಾನೂನು ಏನಾದರೂ ಬದಲಾಗದ ಹೊರತು ಅವರಿಗೆ ಬದುಕು ಕಷ್ಟ. ಅವರ ಬದುಕು ಕಾಡಿನಲ್ಲೂ ಕಷ್ಟ ಹೊರಗೂ ಕಷ್ಟ ಎಂಬಂತಾಗಿದೆ. ನೇರವಾಗಿ ಅವರಿಗೆ ಬಿಟ್ಟು ಹೋಗಿ ಅನ್ನದಿದ್ದರೂ ಬೇರೆ ಬೇರೆ ತಂತ್ರಗಳ ಮೂಲಕ ಹೊಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ"- ಪೋಷಿಣಿ. ಬಿ.ಟಿ. ವಿವೇಕಾನಂದ ಯೂಥ್ ಮೂವ್‌ಮೆಂಟ್, ಸರಗೂರು.


ಗುರುವಾರ, ಅಕ್ಟೋಬರ್ 31, 2013

ಜಾನಪದದ ಕನ್ನಡ ಮತ್ತು ಕರ್ನಾಟಕ

-ಅರುಣ್ ಜೋಳದಕೂಡ್ಲಿಗಿ
 ಮತ್ತೊಂದು ಕನ್ನಡ ರಾಜ್ಯೋತ್ಸವ ಬಂದಿದೆ. ಈ ನವೆಂಬರ್ ನಲ್ಲಿ ಕನ್ನಡದ ಬಗ್ಗೆ ಉಬ್ಬುಮಾತುಗಳು ಬಲೂನಿನಂತೆ ಆಕಾರ ಪಡೆಯುತ್ತವೆ. ಮತ್ತಾರದೋ ಸೂಜಿ ಚುಚ್ಚುವ ತನಕ ದುಂಡಗೆ ಬದುಕುತ್ತವೆ. ಕನ್ನಡ ಉಳಿಸುವ ಸಂಘಟನೆಗಳು ಬಾವುಟವನ್ನು ಎತ್ತಿ ಆಡಿಸುತ್ತಾರೆ. ಶಾಲೆಗಳಲ್ಲಿ ಉರುಹೊಡೆದ ಏಕೀಕರಣದ ಮಾತುಗಳನ್ನು ಪುನರುಚ್ಚರಿಸುತ್ತಾರೆ. ಎಲ್ಲಿಯೋ ಕಳೆದುಹೋಗಿದ್ದ ಕನ್ನಡಾಭಿಮಾನ ದಿಗ್ಗನೆದ್ದು ತಿಂಗಳು ಪೂರ್ತಿ ಎಚ್ಚರವನ್ನು ಕಾಯ್ದುಕೊಳ್ಳುತ್ತದೆ.
ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆದ ಜಾನಪದ ಅಧ್ಯಯನಗಳನ್ನು ಹಿನ್ನೆಲೆಯಾಗಿಟ್ಟುಕೊಂಡು, ಜಾನಪದದ ಕನ್ನಡ ಕರ್ನಾಟಕದ ಒಂದು ತಿಳಿವನ್ನು ಮಂಡಿಸುವುದು ಸೂಕ್ತ ಅನ್ನಿಸುತ್ತದೆ. ಇದು ಕರ್ನಾಟಕ, ಕನ್ನಡ ಎಂಬ ತಿಳಿವು ರೂಪುಗೊಂಡದ್ದರ ಒಂದಷ್ಟು ಎಳೆಗಳನ್ನು ಕಾಣಿಸಬಹುದು. ಅಥವಾ ನಮ್ಮ ಕನ್ನಡ ಕರ್ನಾಟಕ ಎಂಬ ತಿಳುವಳಿಕೆಗೆ ಹೆಚ್ಚುವರಿಯ ಒಂದೆರಡು ಸಂಗತಿಗಳನ್ನಾದರೂ ಜೋಡಿಸಬಹುದು. ಇಲ್ಲಿ ಅಂಕಣದ ಲಘುದಾಟಿ ಚೂರು ಗಂಭೀರವಾದಂತೆ ಅನ್ನಿಸಬಹುದು. ಇದನ್ನು ಹೀಗೆಯೇ ಹೇಳಬೆಕೆನ್ನಿಸಿದ್ದರ ಪರಿಣಾಮವಿದು.
ಕರ್ನಾಟಕದಲ್ಲಿ ನಡೆದ ಜಾನಪದ ಅಧ್ಯಯನಗಳನ್ನು ಕನ್ನಡ ಜಾನಪದ ಎಂತಲೂ, ಕರ್ನಾಟಕ ಜಾನಪದ ಎಂತಲೂ ಕರೆಯುತ್ತಾ ಬರಲಾಗಿದೆ. ಅಂದರೆ ಕನ್ನಡ ಭಾಷೆಯಲ್ಲಿ ದೊರೆಯುವ ಜನಪದ ಸಾಹಿತ್ಯಿಕ, ಆಚರಣಾತ್ಮಕ ಆಕರಗಳನ್ನು ಕುರಿತ ಅಧ್ಯಯನವೆಂತಲೂ, ಕರ್ನಾಟಕ ಗಡಿ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜನ ಸಮುದಾಯದ ಲೋಕeನದ ತಿಳುವಳಿಕೆ ಕುರಿತ ಅಧ್ಯಯನ ಎಂತಲೂ ಅಂದುಕೊಳ್ಳಬಹುದು. ಅಂತೆಯೇ ಈ ಬಗೆಯ ಕಲ್ಪನೆಯೇ ಅಮೂರ್ತವಾದದ್ದು ಅಥವಾ ಭಾವನಾತ್ಮಕವಾಗಿ ಕಟ್ಟಲ್ಪಟ್ಟದ್ದು.
ಇದು ಭಾವನಾತ್ಮಕವಾಗಿ ಒಂದುಗೂಡಿಸುವ ಕೃತಕ ನಿರ್ಮಾಣ ಪ್ರಕ್ರಿಯೆಯ ಒಂದು ಭಾಗ. ಕನ್ನಡ ಮತ್ತು ಕರ್ನಾಟಕತ್ವವನ್ನು ಭಾಷಿಕ ನೆಲೆಯಲ್ಲಿ, ಭೌಗೋಳಿಕ ನೆಲೆಯಲ್ಲಿ ನಿರ್ವಚಿಸಿಕೊಳ್ಳುವ ಸಾಹಿತ್ಯದ ಹಲವು ಆಯಾಮಗಳಲ್ಲಿ ಜಾನಪದವೂ ಒಂದು. ಜಾನಪದ ಅಧ್ಯಯನಗಳನ್ನು ಕನ್ನಡದೊಂದಿಗೆ ಜೋಡಿಸುವುದು, ಕರ್ನಾಟಕದ ಭೌಗೋಳಿಕ ಎಲ್ಲೆಯ ಜೊತೆ ಸಮೀಕರಿಸುವುದು ಈಗಲೂ ನಡೆಯುತ್ತಿದೆ. ಈ ಬಗೆಯ ತಿಳುವಳಿಕೆಯು ಕನ್ನಡದಲ್ಲಿ ನಡೆದ ಜಾನಪದ ಅಧ್ಯಯನಗಳಲ್ಲಿ ಪ್ರಬಲವಾಗಿದೆ. ಈ ಕುರಿತ ಟಿಪ್ಪಣಿ ರೂಪದ ಬರಹವಿದು.
`ಕನ್ನಡ’ ಎನ್ನುವ ಭಾಷೆಯ ಅಂತಃಸತ್ವವನ್ನು ಅರಿಯಲು, ಕರ್ನಾಟಕ ಎನ್ನುವ ರಾಜ್ಯದ ಸಾಂಸ್ಕೃತಿಕ ವೈವಿಧ್ಯಗಳನ್ನು ಗುರುತಿಸಲು ಜಾನಪದ ಆಕರಗಳು ಮತ್ತೆ ಮತ್ತೆ ಬಳಕೆಯಾಗುತ್ತಿವೆ. ಇಲ್ಲಿ ಜಾನಪದ ಆಕರಗಳ ಮೂಲಕ ಹುಟ್ಟುವ ತಿಳುವಳಿಕೆ ಯನ್ನು ಆಧರಿಸಿ ’ಕನ್ನಡ’, ’ಕರ್ನಾಟಕ’ ಕಲ್ಪನೆ ರೂಪುಗೊಳ್ಳುವುದಕ್ಕಿಂತ, ಕನ್ನಡ ಮತ್ತು ಕರ್ನಾಟಕದ ಚೌಕಟ್ಟುಗಳಿಗೆ ಜಾನಪದ ಆಕರಗಳನ್ನು ಜೋಡಿಸುವ ಮಾದರಿ ಹೆಚ್ಚು ಬಳಕೆಯಾಗಿದೆ. ಕನ್ನಡ, ಕರ್ನಾಟಕತ್ವದ ಅನನ್ಯತೆಗಳು ಜಾನಪದ ಅಧ್ಯಯನಗಳಲ್ಲಿ ಹೇಗೆ ಬಿಂಬಿತವಾಗಿದೆ ಅಥವಾ ಈ ಬಗೆಯ ಅನನ್ಯತೆಯ ಹುಡುಕಾಟವೇ ಹೇಗೆ ಜಾನಪದ ಅಧ್ಯಯನಗಳ ತಿಳುವಳಿಕೆಯ ಮೇಲೆ ಸವಾರಿ ಮಾಡಿದೆ ಎನ್ನುವ ಕುರಿತು ಚರ್ಚಿಸುವ ಅಗತ್ಯವಿದೆ.
ಭಾಷಿಕ ನೆಲೆ
ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ’ಕನ್ನಡ’ ಭಾಷೆ ಮಾತನಾಡುವವರನ್ನು ’ಕರ್ನಾಟಕ’ ಎಂಬ ಭೌಗೋಳಿಕ ನೆಲೆಯಲ್ಲಿ ಒಂದುಗೂಡಿಸಲು ಮತ್ತು ಈ ಭೌಗೋಳಿಕ ಎಲ್ಲೆಯಲ್ಲಿದ್ದ ಭಿನ್ನತೆಗಳ ತೊಡೆದು ಹಾಕುವ ಸಮಾನ ಅಂಶಗಳಾಗಿ ಹುಡುಕಾಟ ನಡೆಯುತ್ತಿತ್ತು. ಆಗಿನ ಕಾಲಕ್ಕೆ ಇಡೀ ಕರ್ನಾಟಕವನ್ನು ತಲುಪುವ ಮಾಧ್ಯಮಗಳೆಂದರೆ ನಾಟಕ ಮತ್ತು ಸಿನಿಮಾ. ಇವನ್ನು ಹೊರತುಪಡಿಸಿದರೆ ಇಡಿಯಾಗಿ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಇದ್ದ ಸಮಾನ ಅಂಶವೆಂದರೆ ಜಾನಪದ. ಜನಪದ ಕತೆ, ಗೀತೆ, ಗಾದೆ, ಒಗಟು, ಕಲೆ, ಆಚರಣೆ ಮುಂತಾದ ವಿಷಯಗಳಲ್ಲಿ ಪ್ರಾದೇಶಿಕ ಭಿನ್ನತೆಗಳಿದ್ದರೂ, ಸಾಮಾನ್ಯ ಜನರ ಅಭಿವ್ಯಕ್ತಿಯ ಪ್ರಧಾನಧಾರೆಯಂತೆ ’ಜಾನಪದ ಲೋಕ’ ಅಧ್ಯಯನಕಾರರಿಗೆ ಕಂಡಿತು. ಇದರಿಂದಾಗಿ ಕನ್ನಡವನ್ನು ಭಾಷಿಕವಾಗಿ ಕಟ್ಟಲು, ಕರ್ನಾಟಕವೆಂಬ ಭೌಗೋಳಿಕ ಏಕತೆಯನ್ನು ತರಲು ಜನಪದವನ್ನು ಒಂದು ಸಾಂಸ್ಕೃತಿಕ ಶಕ್ತಿಯನ್ನಾಗಿ ಬಳಸಿಕೊಳ್ಳಲಾಯಿತು. ಇದು ಜನಪದ ಕುರಿತ ಆಲೋಚನ ಮಾದರಿಗಳನ್ನು ಪ್ರಭಾವಿಸಿತು. ಹಾಗಾಗಿ ’ಕನ್ನಡ’ ’ಕರ್ನಾಟಕ’ವನ್ನು ಭಾವನಾತ್ಮಕವಾಗಿ ವೈಭವೀಕರಿಸುವ ನಿರ್ವಚನಗಳೇ ಜಾನಪದ ಅಧ್ಯಯನದ ವಿಶ್ಲೇಷಣೆಗಳಲ್ಲಿ ಬಳಕೆಯಾದವು.
ಎಚ್.ಎಂ.ಮಹೇಶ್ವರಯ್ಯ ಅವರು ಸಂಪಾದಿಸಿದ ’ಸಂಕ್ಷಿಪ್ತ ವಿವರಣಾತ್ಮಕ ಕನ್ನಡ ಜಾನಪದ ಗ್ರಂಥಸೂಚಿ’ಯನ್ನು ಅವಲೋಕಿಸಿದರೆ ೬೧ ಕೃತಿಗಳು ’ಕನ್ನಡ ಜಾನಪದ’ ಎನ್ನುವ ಶೀರ್ಷಿಕೆಯಲ್ಲಿ, ೫೧ ಕೃತಿಗಳು ’ಕರ್ನಾಟಕ ಜಾನಪದ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿವೆ. ಈ ಕೃತಿಗಳಲ್ಲಿ ’ಕನ್ನಡ’, ’ಕರ್ನಾಟಕ’ ಎನ್ನುವುದಕ್ಕೆ ಸ್ಪಷ್ಟವಾದ ವ್ಯಾಖ್ಯಾನಗಳೇನಿಲ್ಲ, ಬದಲಾಗಿ ’ಕನ್ನಡ’ ಭಾಷೆಯನ್ನು ಪ್ರತಿನಿಧಿಸುವ, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಕೃತಿಗಳಿವು ಉದಾ: ನಂ. ತಪಸ್ವೀಕುಮಾರ್ ಅವರ ’ಕನ್ನಡ ಜನಪದ ಒಗಟುಗಳ ಸಾಂಸ್ಕೃತಿಕ ಅಧ್ಯಯನ’ (೧೯೭೯), ವೀರಣ್ಣ ದಂಡೆಯವರ ’ಕನ್ನಡ ಜಾನಪದ ಪ್ರಜ್ಞೆ’(೧೯೯೩), ಶ್ರೀಕಂಠ ಕೂಡಿಗೆ ಅವರ ’ಕನ್ನಡ ಲಾವಣಿಗಳು’(೧೯೯೯), ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ’ಕರ್ನಾಟಕದ ಜನತೆಯ ಸಂಸ್ಕೃತಿ’(೧೯೭೩), ಹಂಪ ನಾಗರಾಜಯ್ಯ ಅವರ ’ಕರ್ನಾಟಕದ ಜಾತ್ರೆಗಳು’(೧೯೮೧) ಇತ್ಯಾದಿ. ಇವುಗಳೆಲ್ಲವೂ ಕರ್ನಾಟಕದ, ಕನ್ನಡದ ಭಿನ್ನ ಚಹರೆಗಳನ್ನು ಹಲವು ನೆಲೆಗಳಲ್ಲಿ ಪರಿಚಯಿಸುತ್ತವೆ. ಬೇಂದ್ರೆಯವರು ’ಗರತಿ ಹಾಡು’(೧೯೩೧) ಸಂಕಲನಕ್ಕೆ ಮುನ್ನುಡಿ ಬರೆಯುತ್ತ ಭಾಷಿಕವಾಗಿ ಕನ್ನಡವನ್ನು ನಿರ್ವಚಿಸುವ ಬಗೆ ಹೀಗಿದೆ: “ಬೀದರ್ ಹೈದರಾಬಾದುಗಳ ಉತ್ತರದ ತುದಿಯಿಂದ ನೀಲಗಿರಿ, ಕೊಯಮತ್ತೂರಿನ ದಕ್ಷಿಣದ ತುದಿವರೆಗೆ ಹಬ್ಬಿರುವ ಕರ್ನಾಟಕವು ಒಂದೆಂಬುದಕ್ಕೆ ಒಂದು ನಿದರ್ಶವು ಈ ಹಾಡುಗಳಲ್ಲಿದೆ. ಅಲ್ಪಸ್ವಲ್ಪ ಪಾಠ ಭೇದದಿಂದ ಇವುಗಳಲ್ಲಿ ಅರ್ಧಕರ್ಧ ಹಾಡುಗಳು ಎಲ್ಲ ಕನ್ನಡ ಮನೆಗಳಲ್ಲಿ ಹರಡಿಕೊಂಡಿರಲು ಸಾಕು. ಈ ಜನಪದ ವೇದವೇ. ಎಲ್ಲ ಕನ್ನಡಿಗರಿಗೂ ತಾಯ ಮೊಲೆ ಹಾಲು ಎಂಬುದು ಇದನ್ನೋದಿದವರ ಅನುಭವಕ್ಕೆ ಬಾರದೆ ಇರದು, ಈ ಅನುಭವದಿಂದ ಉಂಟಾಗುವ ಐಕ್ಯಭಾವವು ಅಂತಿಂತಹದಲ್ಲ. ಪ್ರಜಾಪ್ರಭುತ್ವದ ಈ ಕಾಲದಲ್ಲಿ ಜನಸಾಮಾನ್ಯರ ಹೃದಯದೊಳಗಿನ ಸುಖದ ಕನಸೆಂತಹದೆಂಬುದನ್ನು ಕಂಡುಕೊಳ್ಳಲು ಇದರಂತಹ ಬೇರೆ ಕೈಗನ್ನಡಿಯಿಲ್ಲ (ಸುವರ್ಣ ಜಾನಪದ ಸಂ:೧, ಪು: ೧೦)ಎನ್ನುತ್ತಾರೆ.
ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಭದ್ರವಾಗಿಸಲು ಕನ್ನಡ ಭಾಷಿಕ ವಲಯವನ್ನು ಒಂದುಗೂಡಿಸುವ ಆಶಯವಾಗಿ ಜನಪದ ಸಾಹಿತ್ಯವನ್ನು ಬೇಂದ್ರೆಯವರು ನಿರ್ವಚಿಸುತ್ತಾರೆ. ದೇವುಡು, ಬೆಟಗೇರಿ ಕೃಷ್ಣಶರ್ಮ, ಅರ್ಚಕ ಬಿ.ರಂಗಸ್ವಾಮಿ, ಬಿ.ಎಸ್. ಗದ್ದಿಗಿಮಠ ಮುಂತಾದವರ ನಿಲುವೂ ಕೂಡ ಹೆಚ್ಚು ಕಡಿಮೆ ಇದೇ ಆಗಿತ್ತು. ಇಲ್ಲಿ ಬ್ರಿಟಿಷ್ ಆಡಳಿತದ ನಂತರ ನಮ್ಮದೇ ಆದ ಆಡಳಿತಾತ್ಮಕ ಸಂರಚನೆಗೆ ಹೀಗೆ ಭಾಷಿಕ ವಲಯವೊಂದು ಒಗ್ಗೂಡುವುದು ಆ ಕಾಲದ ಒತ್ತಡವೂ ಆದಂತಿದೆ.
ಕರ್ನಾಟಕದ ಹಲವು ಸಾಂಸ್ಕೃತಿಕ, ಭಾಷಿಕ ವೈವಿಧ್ಯಗಳನ್ನು ’ಕನ್ನಡ’ ಭಾಷೆಯಲ್ಲಿ ತಿಳಿಯಲು ಅನುಕೂಲವಾದಂತೆ, ಕರ್ನಾಟಕದ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವ ಹಲವು ಭಿನ್ನ ಭಾಷೆಗಳನ್ನು ಕನ್ನಡೀಕರಿಸಿ ಅವುಗಳ ಅನನ್ಯತೆಗೆ ಧಕ್ಕೆ ಒದಗಿ ಅನಾನುಕೂಲವಾಗಿಯೂ ಪರಿಣಮಿಸಿದೆ. ’ಕನ್ನಡ ಜಾನಪದ’ ಎನ್ನುವಾಗ ಕಲ್ಪಿಸುವ ’ಕರ್ನಾಟಕ’ ಕನ್ನಡದ್ದು. ಆದರೆ ವಾಸ್ತವವಾಗಿ ಹಾಗಿಲ್ಲ, ಕರ್ನಾಟಕ ಬಹುಸಂಖ್ಯಾತ ಕನ್ನಡಿಗರಿಂದಲೂ ಅಲ್ಪಸಂಖ್ಯಾತ ತುಳು, ಕೊಂಕಣಿ, ಲಂಬಾಣಿ, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಬುಡಕಟ್ಟುಗಳ ಭಾಷೆಗಳು ಹೀಗೆ ಇತರೇ ಹಲವು ಭಾಷೆಗಳನ್ನು ಮಾತನಾಡುವವರೂ ಕರ್ನಾಟಕದಲ್ಲಿದ್ದಾರೆ. ಆದರೆ ಈ ಬಗೆಯ ಎಲ್ಲಾ ಅಲ್ಪಸಂಖ್ಯಾತ ಉಪಭಾಷಿಕರನ್ನು ಕನ್ನಡದ ಪ್ರಮಾಣಿತ ಭಾಷೆಯಲ್ಲಿ ಪರಿಚಯಿಸುವ ಮತ್ತು ಅವರ ಜಾನಪದವನ್ನು ಕನ್ನಡದಲ್ಲೇ ನಿರ್ವಚಿಸುವ ಕ್ರಮ ಕರ್ನಾಟಕದಲ್ಲಿ ಹೆಚ್ಚು ಬಳಕೆಯಾಗಿದೆ. ಇದಕ್ಕೆ ಅಪವಾದವೆಂದರೆ ತುಳು ಭಾಷೆ. ಈ ಭಾಷೆಯ ಮೂಲಕವೇ ತುಳುವ ಸಂಸ್ಕೃತಿಯನ್ನು ಅಧ್ಯಯನ ಮಾಡುವ ಗಂಭೀರ ಸಂಶೋಧನೆಗಳು ನಡೆದಿವೆ. ಕಾರಣ ’ತುಳು’ ಭಾಷಿಕ ವಿದ್ವಾಂಸರೇ ಅಧ್ಯಯನ ಕೈಗೊಂಡಿರುವುದು ಮತ್ತು ಪಾಶ್ಚಿಮಾತ್ಯ ವಿದ್ವಾಂಸರು ’ತುಳು’ ಭಾಷೆಯ ಬಗೆಗೆ ಅಧ್ಯಯನ ಮಾಡಿರುವುದು.
ಹೀಗೆ ಬಹುಭಾಷಿಕತೆ, ಬಹು ಸಾಂಸ್ಕೃತಿಕ ವೈವಿಧ್ಯತೆಗಳನ್ನು ’ಕನ್ನಡ ಜಾನಪದ’ ಎನ್ನುವ ನೆಲೆಯಲ್ಲಿ ತಿಳಿಯಲಾಗಿದೆ. ಇಲ್ಲಿ ’ಭಾಷೆ’ಯೇ ಪ್ರಧಾನ ಅಂಶ ಎಂದು ಮೇಲುನೋಟಕ್ಕೆ ಕಂಡರೂ, ಈ ಭಾಷೆಯನ್ನು ಅರ್ಥೈಸಿಕೊಂಡಿರುವ ಬಗೆ ಮಾತ್ರ ಬಹು ಆಯಾಮದ ನೆಲೆಯಲ್ಲಿ. ಹಲವು ಭಾಷೆ ಮತ್ತು ಸಂಸ್ಕೃತಿಗಳು ಇರುವ ಕರ್ನಾಟಕದಲ್ಲೂ ಯಾವ ಒತ್ತಾಯವಿಲ್ಲದೆಯೂ ಕನ್ನಡ ಭಾಷೆ ಬಹುಪಾಲು ಎಲ್ಲರೂ ಮಾತನಾಡುವ ಭಾಷೆಯಾಗಿದೆ. ಕನ್ನಡ ಬಲ್ಲವ ಕೊಡವ, ತುಳು, ಕೊಂಕಣಿ, ಉರ್ದುಗಳನ್ನು ಮಾತನಾಡದಿದ್ದರೂ, ಈ ಭಾಷೆಗಳನ್ನು ಮಾತನಾಡುವ ಎಲ್ಲರೂ ಸಾಮಾನ್ಯವಾಗಿ ಕನ್ನಡವನ್ನು ಮಾತನಾಡುತ್ತಾರೆ. ಇದಕ್ಕೆ ಕಾರಣ ಈ ನಾಡಿನಲ್ಲಿ ಈ ಎಲ್ಲಾ ಜನರ ಬದುಕಿನ ಅಗತ್ಯಗಳ ಪೂರೈಕೆಗೆ ಕನ್ನಡ ಅಗತ್ಯವೆಂಬುದೇ ಆಗಿದೆ. ಹೀಗೆ ಭಾಷಿಕವಾಗಿ ’ಕನ್ನಡ’ದ ಅನನ್ಯತೆಯನ್ನು ಭಿನ್ನ ನೆಲೆಗಳಲ್ಲಿ ಗುರುತಿಸಬಹುದು.
ಜಾನಪದ ವಿದ್ವಾಂಸರಾದ ವಿಲಿಯಂ ಮಾಡ್ತ, ಎಸ್.ಎಸ್.ಅಂಗಡಿ, ಎಚ್.ಎಂ. ಮಹೇಶ್ವರಯ್ಯ, ಎ.ಮುರಿಗೆಪ್ಪ ಮುಂತಾದವರು ಜಾನಪದವನ್ನು ಭಾಷಿಕವಾಗಿ ಅಧ್ಯಯನ ಮಾಡಿದ್ದಾರೆ. ಆದರೆ ಇವು ಶಿಷ್ಟಭಾಷೆಯ ಅಧ್ಯಯನದ ಚೌಕಟ್ಟುಗಳಲ್ಲೇ ಇರುವುದು ತೊಡಕಾಗಿದೆ. ಚಂದ್ರಶೇಖರ ಕಂಬಾರ, ದ.ರಾ. ಬೇಂದ್ರೆ, ಗಿರೀಶ್ ಕಾರ್ನಾಡ್ ಅಂತಹವರು ಜಾನಪದವನ್ನು ತಮ್ಮ ಅಭಿವ್ಯಕ್ತಿಯ ’ಭಾಷೆ’ ಎಂದು ಕೊಂಡರು. ಆ ಮೂಲಕ ಜಾನಪದವನ್ನೇ ಒಂದು ’ಭಾಷೆ’ಯನ್ನಾಗಿ ವ್ಯಾಪಕಾರ್ಥದಲ್ಲಿ ಬಳಸಿದರು. ಇಂತಹ ಚಿಂತನೆಗಳು ಭಾಷಿಕವಾಗಿ ಕನ್ನಡದ ಅನನ್ಯತೆಯನ್ನು ಬಹುನೆಲೆಯಲ್ಲಿ ಕಟ್ಟಿಕೊಟ್ಟಿವೆ.
ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ’ಕನ್ನಡ’ ಭಾಷೆ ಮತ್ತು ಕರ್ನಾಟಕದ ಗಡಿಗಳ ಉಲ್ಲೇಖಗಳನ್ನು ಸಾಹಿತ್ಯ ಕೃತಿಗಳಲ್ಲಿ ಹುಡುಕತೊಡಗಿದರು. ಅಂತೆಯೇ ಕನ್ನಡದ ಬಹುಪಾಲು ಸಾಹಿತಿಗಳು ಕನ್ನಡಿಗರ ಶೌರ್ಯ, ಹಿರಿಮೆ, ನಾಡಿನ ವಿಸ್ತಾರಗಳ ಉಲ್ಲೇಖ ಒಳಗೊಂಡ ನಾಡಾಬಿsಮಾನವನ್ನು ಹುಟ್ಟಿಸುವ ಗೀತೆಗಳನ್ನು ರಚಿಸ ತೊಡಗಿದರು. ಅದೇ ಹೊತ್ತಿಗೆ ಕನ್ನಡ ಭಾಷೆಯ ಅನನ್ಯತೆಯ ಬಿsನ್ನ ಮುಖವಾಗಿ ಜಾನಪದ ಸಾಹಿತ್ಯವನ್ನು ವಿಶ್ಲೇಷಿಸತೊಡಗಿದರು. ವಿಪರ್ಯಾಸವೆಂದರೆ ಜಾನಪದ ಸಂಗ್ರಹಗಳಲ್ಲಿ ಒಂದು ’ಕನ್ನಡ’ವಿರದೆ ಹಲವು ಕನ್ನಡಗಳಿದ್ದವು. ಇನ್ನು ಜನಪದ ಸಾಹಿತ್ಯದಲ್ಲಿ ’ಕನ್ನಡ’ವೆಂತಾಗಲಿ, ಕರ್ನಾಟಕವೆಂತಾಗಲಿ ಉಲ್ಲೇಖಗಳೇ ಇರಲಿಲ್ಲ. ಕಾರಣ ಜಾನಪದ ಸಾಹಿತ್ಯ ಪ್ರಾದೇಶಿಕ ಸತ್ವದ ನೆಲೆಯಲ್ಲಿ ಹುಟ್ಟಿದ್ದೇ ಹೊರತು, ಬೃಹತ್ ಕರ್ನಾಟಕದ ವ್ಯಾಪ್ತಿಯಲ್ಲಿ ಅಲ್ಲ. ಹೀಗೆ ಅನೇಕತೆಯನ್ನು ಒಳಗೊಂಡ ಜನಪದ ಭಾಷೆಯನ್ನು ’ಕನ್ನಡ’ ಎನ್ನುವ ಏಕಭಾಷೆಯನ್ನು ವಿವರಿಸಲು ಬಳಸಿಕೊಳ್ಳಲಾಯಿತು. ಈಚೆಗೆ ಪ್ರಕಟವಾದ ಕೆ.ವಿ ನಾರಾಯಣ ಅವರ ‘ತೊಂಡು ಮೇವು’ ಸಂಪುಟಗಳಲ್ಲಿ ಭಾಷೆ ಮತ್ತು ಜಾನಪದದ ಬಗೆಗಿನ ತಿಳುವಳಿಕೆಯನ್ನು ಭಿನ್ನವಾಗಿ ವಿಸ್ತರಿಸುವ ಒಳನೋಟಗಳ ವಿಶ್ಲೇಷಣೆಗಳಿವೆ. ಈ ವಿಶ್ಲೇಷಣೆಗಳು ಕನ್ನಡ ಜಾನಪದ ಅಧ್ಯಯನದ ಒಳ ಪ್ರವೇಶಿಸಬೇಕಿದೆ. ರಹಮತ್ ತರೀಕೆರೆ ಅವರು ನುಡಿಸಂಕರ ಸಾಹಿತ್ಯ ಕೃತಿಯಲ್ಲಿ ಜಾನಪದ ಗೀತೆ, ಹಾಡು, ನಾಟಕ ಮುಂತಾವುಗಳಲ್ಲಿ ನಡೆಯಬಹುದಾದ ನುಡಿಸಂಕರದ ಬಗ್ಗೆ ಹೊಸ ಆಲೋಚನೆಯನ್ನು ಮಂಡಿಸಿದ್ದಾರೆ. ಈ ತಿಳುವಳಿಕೆಯ ಮೂಲಕ ಜಾನಪದ ಸಾಹಿತ್ಯದಲ್ಲಿನ ನುಡಿಸಂಕರಗಳನ್ನು ಗುರುತಿಸುವ ಮೂಲಕ ಜಾನಪದ ಸಾಹಿತ್ಯದ ವಿಶ್ಲೇಷಣೆಗೆ ಬೇರೊಂದು ಮಗ್ಗಲನ್ನು ತೆರೆಯುವ ಸಾಧ್ಯತೆಗಳಿವೆ.
ಭೌಗೋಳಿಕ ನೆಲೆ
ರಾಜಕೀಯವಾಗಿ ನಿಗದಿಪಡಿಸಿದ ಕರ್ನಾಟಕದ ಗಡಿಯೊಳಗಿನ ಸಾಂಸ್ಕೃತಿಕ ವೈವಿಧ್ಯಗಳನ್ನು ಗುರುತಿಸುವ ನೆಲೆಯನ್ನು ಭೌಗೋಳಿಕ ಆಯಾಮ ಎಂದು ತಿಳಿಯಲಾಗಿದೆ. ಸಾಂಸ್ಕೃತಿಕವಾಗಿ ಇಂತಹ ಗಡಿಗಳ ಚೌಕಟ್ಟು ಇರುವುದಿಲ್ಲ. ಹಾಗಿದ್ದೂ ರಾಜಕೀಯ ಗಡಿಗಳ ಚೌಕಟ್ಟಿಗೆ ಸಾಂಸ್ಕೃತಿಕ ವಿವರಗಳನ್ನು ಜೋಡಿಸುವುದು ಬಹುದೊಡ್ಡ ತೊಡಕು. ಈ ತೊಡಕು ಕರ್ನಾಟಕ ಜಾನಪದ ಎಂದು ವಿವರಿಸ ಹೊರಟ ವಿಶ್ಲೇಷಣೆಗಳಲ್ಲಿಯೂ ಮುಂದುವರಿದಿದೆ. ಕರ್ನಾಟಕದ ಜನಪದ ಕಥೆಗಳು, ಕರ್ನಾಟಕದ ಗಾದೆಗಳು, ಕರ್ನಾಟಕದ ಜನಪದ ಮಹಾಕಾವ್ಯಗಳು, ಈ ಬಗೆಯ ಅಧ್ಯಯನಗಳು ಕರ್ನಾಟಕದ ಹಲವು ಭಿನ್ನತೆಗಳನ್ನು ಒಂದೆಡೆ ಕ್ರೋಡೀಕರಿಸಿಯೇ ’ಕರ್ನಾಟಕ’ದ ಅನನ್ಯತೆಯನ್ನು ಗಟ್ಟಿಗೊಳಿಸಲು ಪ್ರಯತ್ನ ನಡೆಯುತ್ತಿರುತ್ತದೆ. ಭೌಗೋಳಿಕ ಭಿನ್ನತೆಗಳನ್ನು ವಿವರಿಸುತ್ತಲೇ ’ಕರ್ನಾಟಕ’ದ ಕಲ್ಪನೆಯನ್ನು ಕಟ್ಟಿಕೊಳ್ಳುವ ಕ್ರಮ ಜಾನಪದ ಅಧ್ಯಯನಗಳಲ್ಲಿದೆ. ಆದರೆ ಜಾಗತೀಕರಣದ ಈ ಹೊತ್ತಲ್ಲಿ ಇಂತಹ ಭಿನ್ನತೆಗಳನ್ನು ಮರೆಮಾಚಿಸಿ ಏಕೀಕೃತ ಕರ್ನಾಟಕವನ್ನು ಕಟ್ಟಿಕೊಳ್ಳುವ ರಾಜಕಾರಣವೂ ನಡೆಯುತ್ತಿದೆ. ಯು.ಆರ್. ಅನಂತಮೂರ್ತಿಯವರು ಹೇಳುವಂತೆ: “ಭಾರತವು ಹಲವು ರಾಜ್ಯಗಳಂತೆ ಕರ್ನಾಟಕವೂ ಒಂದು ಪುಟ್ಟ ವಿಶ್ವವೇ. ಹಲವು ಭಾಷೆ ಹಲವು ಸಂಸ್ಕೃತಿಗಳ ಸಹಬಾಳ್ವೆಗೆ ಈ ನಾಡಿನಲ್ಲಿ ಅವಕಾಶವಿದೆ ಎಂಬ ದೃಷ್ಟಿಯಿದೆ. ಇದೊಂದು ವಿಶಿಷ್ಟ ತೊಡಕು ಎಂದು ಕಾಣುವ ಧೋರಣೆ ಸಾಮ್ರಾಜ್ಯವಾದಿಯದು. ಆದರೆ ಈ ಹಲವು ಭಾಷೆ, ಸಂಸ್ಕೃತಿಗಳ ಸಹಜೀವನವನ್ನು ಸಮೃದ್ಧಿಯ ವರವೆಂದು ಕಾಣುವ ದೃಷ್ಟಿ ಪ್ರಜಾಸತ್ತಾತ್ಮಕವಾದಿಯದು. ವೈವಿಧ್ಯವೆಂದರೆ ಸಾಮ್ರಾಜ್ಯ ಶಾಹಿಗಳು ಅಸಹನೆ ಪಡುತ್ತಾರೆ. ಒಂದರ ಅಧೀನದಲ್ಲಿ ಎಲ್ಲವೂ ಇರಬೇಕೆಂದು ಆಸೆ ಪಡುತ್ತಾರೆ. ಆದರೆ ಪ್ರಜಾಸತ್ತೆಯನ್ನು ನಂಬುವವರು ವಿಕೇಂದ್ರೀಕರಣವಾದಿಯಾಗಿರುತ್ತಾರೆ. ಜನಸಮುದಾಯದಲ್ಲಿ ವಿಶಿಷ್ಟ ವಾದದ್ದೆಲ್ಲವೂ ವಿಕಸನಗೊಳ್ಳುತ್ತಾ ಹೋಗುವುದನ್ನು ಸ್ವಾಗತಿಸುತ್ತಾರೆ” (ಪ್ರಜ್ಞೆ ಮತ್ತು ಪರಿಸರ, ಪು: ೩೪೧.ಅ).
ಬಹುಶಃ ಜನಪದ ಅಧ್ಯಯನಗಳಲ್ಲಿ ಕಟ್ಟಿಕೊಳ್ಳುವ ಕರ್ನಾಟಕದ ಭೌಗೋಳಿಕ ಎಲ್ಲೆಯ ವಿವರ ಕೂಡ ಪ್ರಜಾಸತ್ತಾತ್ಮಕ ನೆಲೆಯಲ್ಲಿಯೇ ಇದೆ. ಆದರೆ ಇಲ್ಲಿನ ವಿಶ್ಲೇಷಣೆಗಳು ಮಾತ್ರ ಹೆಚ್ಚು ಸೂಕ್ಷ್ಮವಾಗಿರದೆ ಒರಟಾಗಿವೆ. ಜನಪದ ವಿದ್ವಾಂಸರಾದ ಡಿ.ಕೆ. ರಾಜೇಂದ್ರ ಅವರು ಕರ್ನಾಟಕ ಜಾನಪದವನ್ನು ನಿರ್ವಚಿಸುವುದು ಹೀಗೆ: ಕರ್ನಾಟಕ ಜಾನಪದವನ್ನು ಈ ದೃಷ್ಟಿಯಿಂದ ಪರಿಶೀಲಿಸುವುದಾದರೆ, ಅದರ ಬಾಹುಳ್ಯ ಬಹು ವಿಸ್ತೃತವಾದದ್ದು, ವಿಭಿನ್ನ ಪ್ರಾದೇಶಿಕ ವೈಶಿಷ್ಟ್ಯಗಳಿಂದ ಕೂಡಿದ ಕರ್ನಾಟಕ ವಿವಿಧ ಬಗೆಯ ವೃತ್ತಿಯ, ಜಾತಿ ಮತಗಳ, ಸಂಪ್ರದಾಯ ಆಚರಣೆಗಳ, ಉಡುಗೆ ತೊಡುಗೆ, ಊಟೋಪಚಾರ ಗಳ ಹಾಗೂ ಸಾಹಿತ್ಯ ಮತ್ತು ಕಲಾ ಸಂಪ್ರದಾಯಗಳನ್ನು ಒಳಗೊಂಡು ಶ್ರೀಮಂತ ಗೊಂಡದ್ದು, ಪ್ರಾದೇಶಿಕವಾಗಿ ವಿಂಗಡಿಸಿಕೊಂಡು ಅದನ್ನು ಪರಿಶೀಲಿಸಬಹು ದಾದರೂ ಆಯಾ ಭಾಗದ ವೈಶಿಷ್ಟ್ಯ ಎದ್ದು ಕಾಣುತ್ತದೆ. ಸುಮಾರು ಒಂದು ಲಕ್ಷ ತೊಂಬತ್ತೆರಡು ಸಾವಿರ ಚದರ ಕಿ.ಮೀಟರ್ಗಳಷ್ಟು ಹರಹುಳ್ಳ ಈ ಪ್ರದೇಶದಲ್ಲಿ ವಾಸಿಸುವ ಜನರ ಸಂಖ್ಯೆ ಸುಮಾರು ನಾಲ್ಕು ಕೋಟಿಗೂ ಮಿಗಿಲು ಎಂದು ಗುರುತಿಸ ಲಾಗಿದೆ. ಇಷ್ಟೊಂದು ವ್ಯಾಪಕವಾದ ಹಾಗೂ ಬಹುಸಂಖ್ಯೆಯ ಪ್ರದೇಶದ ಜಾನಪದ ನಿಸ್ಸಂಶಯವಾಗಿ ಅಭೂತಪೂರ್ವವಾದುದು ಎಂಬುದರಲ್ಲಿ ಎರಡು ಮಾತಿಲ್ಲ(ಜಾನಪದ ಭಾರತಿ,(ಸಂ) ನಲ್ಲೂರು ಪ್ರಸಾದ್, ಪು: ೨.)ಎನ್ನುತ್ತಾರೆ. ಹೀಗೆ ಕರ್ನಾಟಕ ಜಾನಪದವನ್ನು ಅಖಂಡವಾಗಿ ನಿರ್ವಚಿಸುವ ಮಾದರಿ ಏಕೀಕರಣದ ೬೦ರ ದಶಕದ ನಂತರ ಹೆಚ್ಚಾಗಿತ್ತು. ಇದು ಕರ್ನಾಟಕದ ಜಾನಪದವನ್ನು ಬೇರೆ ಬೇರೆ ನೆಲೆಗಳಲ್ಲಿ ಅರ್ಥ ಮಾಡಿಕೊಳ್ಳಲು ಸಹಕಾರಿಯೂ ಆಯಿತು. ಹಾಗೆಯೇ ಈ ಮಾದರಿ ಆ ಹೊತ್ತಿನ ಅಗತ್ಯದಂತೆಯೂ ಕಾಣುತ್ತದೆ. ಇಂತಹ ಅಧ್ಯಯನಗಳು ಹೆಚ್ಚಾಗಿ ಬೀಸುಹೇಳಿಕೆಗಳಿಂದ ಕೂಡಿರುತ್ತಿದ್ದವು.
ಜೀಶಂಪ, ವಿಲಿಯಂ ಮಾಡ್ತ ಅವರು ಸಂಪಾದಿಸಿದ ’ಕರ್ನಾಟಕ ಜಾನಪದ’ (೧೯೮೯) ಕೃತಿಯೂ ಈ ಬಗೆಯ ಕರ್ನಾಟಕ ಭೂ ಪ್ರದೇಶದ ಜನಸಂಸ್ಕೃತಿಯ ಹಲವು ಆಯಾಮಗಳನ್ನು ಪರಿಚಯಿಸುತ್ತದೆ. ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗವು ಹೊರತರುತ್ತಿರುವ ’ಜಾನಪದ ಕರ್ನಾಟಕ,’ ಜಾನಪದ ಅಧ್ಯಯನಕ್ಕೆಂದು ತೆರೆದ ’ಕರ್ನಾಟಕ ಜಾನಪದ ಅಕಾಡೆಮಿ’, ‘ಕರ್ನಾಟಕ ಜಾನಪದ ಪರಿಷತ್ತು’ ಹೀಗೆ ಕರ್ನಾಟಕದ ಭೂ ಪ್ರದೇಶವನ್ನು, ಅದರೊಳಗಿನ ಬಹು ಸಂಸ್ಕೃತಿಯನ್ನು ಪ್ರತಿನಿಧಿಸುವ ಮತ್ತು ಕರ್ನಾಟಕದ ಅನನ್ಯತೆಯನ್ನು ಗಟ್ಟಿಗೊಳಿಸುವ ನೆಲೆಯಲ್ಲಿ ಜಾನಪದ ಅಧ್ಯಯನಗಳು ನಡೆದವು. ಇನ್ನು ಕರ್ನಾಟಕವನ್ನು ಹೊರತುಪಡಿಸಿ ಬೇರೆ ಬೇರೆ ರಾಜ್ಯಗಳಿಗೆ, ವಿದೇಶಿ ಜಾನಪದ ವಿದ್ವಾಂಸರಿಗೆ ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯವನ್ನು ಪರಿಚಯಿಸುವ ನೆಲೆಯೂ ’ಕರ್ನಾಟಕ ಜಾನಪದ’ ಎಂಬ ಚೌಕಟ್ಟಿನ ಅಧ್ಯಯನಗಳ ಹಿಂದಿನ ಪ್ರೇರಣೆಯಾಗಿತ್ತು. ಜೀಶಂಪ ಅವರು ಕರ್ನಾಟಕ ಜಾನಪದ ಕೃತಿಗೆ ಮುನ್ನುಡಿ ಬರೆಯುತ್ತ …ಇಷ್ಟೆಲ್ಲಾ ಜಾನಪದ ಚಟುವಟಿಕೆಗಳು ಕರ್ನಾಟಕದಲ್ಲಿ ನಡೆದಿದ್ದರೂ ಸರಿಯಾದ ರೀತಿಯಲ್ಲಿ ಇದರ ಪ್ರಚಾರ ಹೊರಜಗತ್ತಿನ ದೃಷ್ಟಿಯಿಂದ ನಡೆದಿಲ್ಲವೆಂದೇ ಹೇಳಬೇಕು. ಕರ್ನಾಟಕದಲ್ಲಿ ಏನು ನಡೆದಿದೆ ಎಂಬುದು ವಿಶ್ವ ಜಾನಪದ ವೇದಿಕೆಗೆ ತಿಳಿದರೆ ಜಗತ್ತಿನ ವಿದ್ವಾಂಸರ ದೃಷ್ಟಿ ಇತ್ತ ಹರಿಯುತ್ತದೆ(ಕರ್ನಾಟಕ ಜಾನಪದ, ಪು: xiii.)ಎನ್ನುತ್ತಾರೆ. ಇದರ ಭಾಗವಾಗಿಯೇ ಕರ್ನಾಟಕ ಜಾನಪದದ ಬಗ್ಗೆ ಕೃಷ್ಣಮೂರ್ತಿ ಹನೂರು ಇಂಗ್ಲಿಷಿನಲ್ಲಿ ಕೃತಿಯೊಂದನ್ನು ಸಂಪಾದಿಸಿದರು. ಹೀಗೆ ಬೇರೆ ರಾಜ್ಯಗಳಿಗೆ, ದೇಶಗಳಿಗೆ ಕರ್ನಾಟಕವನ್ನು ಪರಿಚಯಿಸಲು ಅಖಂಡ ಕರ್ನಾಟಕದ ಅನನ್ಯತೆಗಳನ್ನು ಜನಪ್ರಿಯಗೊಳಿಸುವ ಧೋರಣೆ ಇಂತಹ ಅಧ್ಯಯನಗಳ ಹಿಂದಿದೆ. ಇದರಲ್ಲೂ ಮೇಲ್ವರ್ಗದ ಜನಪದ ಕಲೆಗಳೇ ಕರ್ನಾಟಕದ ಅನನ್ಯತೆಯನ್ನು ಬಿಂಬಿಸಲು ಬಳಕೆಯಾದದ್ದೊಂದು ವಿಪರ್ಯಾಸ. ಯಕ್ಷಗಾನವನ್ನೂ ಕರ್ನಾಟಕದ ಅನನ್ಯ ಕಲೆ ಎಂದು ಬಿಂಬಿಸಲಾಯಿತು. ಶಿವರಾಮ ಕಾರಂತರು ಯಕ್ಷಗಾನವನ್ನು ಕುರಿತ ಪ್ರದರ್ಶನ ಮತ್ತು ಅಧ್ಯಯನದಲ್ಲಿ ಪಾಲ್ಗೊಂಡದ್ದೂ ಒಂದು ಕಾರಣವಾಯಿತು. ವೀರಗಾಸೆ, ಪೂಜಾಕುಣಿತ ಮುಂತಾದ ಮೇಲ್ವರ್ಗದ, ಉತ್ತಮ ಜಾತಿಯವರ ಜನಪದ ಕಲೆ ಸಂಪ್ರದಾಯಗಳು ಕರ್ನಾಟಕದ ಅನನ್ಯತೆಯನ್ನು ಬಿಂಬಿಸಲು ಬಳಕೆಯಾದವು. ದಲಿತರು ಬಳಸುವ ’ಹಲಗೆ’, ಮಾರಿಹಬ್ಬ ಮುಂತಾದವು ಕರ್ನಾಟಕದ ಅನನ್ಯತೆಯನ್ನು ಗುರುತಿಸುವಾಗ ಮೇಲ್ಮಟ್ಟದ ಚರ್ಚೆಗೆ ಬರಲಿಲ್ಲ.
ಕನ್ನಡತ್ವದ ಆಯಾಮ
ಕನ್ನಡ ಭಾಷೆ ಮತ್ತು ಕರ್ನಾಟಕದ ಭೌಗೋಳಿಕತೆ ಇವೆರಡನ್ನೂ ಒಳಗೊಂಡ ಕನ್ನಡತ್ವದ ನಿರ್ವಚನದ ಭಾಗವಾಗಿ ಜಾನಪದ ಅಧ್ಯಯನಗಳ ವಿಶ್ಲೇಷಣೆಗಳನ್ನು ಪರಿಶೀಲಿಸಬಹುದು. ಇದೊಂದು ಹೊಸ ವ್ಯಕ್ತಿತ್ವದ ಕೃತಕ ಚಹರೆ. ಇಲ್ಲಿ ಕನ್ನಡ, ಕರ್ನಾಟಕ ಮತ್ತು ಕನ್ನಡಿಗ ಎಂಬ ಮೂರು ಪರಿಕಲ್ಪನೆಗಳು ಬೆರೆತ ಒಂದು ವ್ಯಕ್ತಿತ್ವವನ್ನೇ ’ಕನ್ನಡತ್ವ’ ಜೊತೆ ಸಮೀಕರಿಸಲಾಯಿತು. ಹಾಗೆ ನೋಡಿದರೆ ಈ ಮೂರು ಬೆರೆಯುವುದು ಕಷ್ಟ. ಇದನ್ನು ಕೆ.ವಿ. ನಾರಾಯಣ ಅವರು ಸೂಕ್ಷ್ಮವಾಗಿ ಹೀಗೆ ವಿವರಿಸುತ್ತಾರೆ: ಕನ್ನಡ, ಕರ್ನಾಟಕ ಮತ್ತು ಕನ್ನಡಿಗ ಎಂಬ ಈ ಮೂರು ಪರಿಕಲ್ಪನೆಗಳು ಪರಸ್ಪರ ಬೆರೆತುಕೊಳ್ಳುವುದು ಕಷ್ಟವೇ. ಕನ್ನಡಿಗರು ಕನ್ನಡವಲ್ಲದೆ ಇತರ ಭಾಷೆಯನ್ನು ಕಲಿತು ಮಾತನಾಡಬಹುದು. ಅಲ್ಲದೆ ಬೇರೆ ದೇಶದಲ್ಲಿ ಪ್ರದೇಶದಲ್ಲಿ ವಾಸ ಮಾಡಬಹುದು. ಕನ್ನಡ ಮಾತ್ರ ಕರ್ನಾಟಕದ ಭಾಷೆಯಾಗಿ ಪರಿಗಣಿತವಾಗಲಾರದು. ಈಗಾಗಲೇ ಗಮನಿಸಿದಂತೆ ಆ ಭೂಪ್ರದೇಶದಲ್ಲಿ ಹಲವು ಭಾಷೆಗಳನ್ನು ಮಾತನಾಡುವ ಜನರು ಇರುತ್ತಾರೆ. ಸದ್ಯ ಮೇಲೆ ಹೇಳಿದ ರಾಜಕೀಯ ನಿರ್ಧಾರದಂತೆ ಹೆಚ್ಚು ಸ್ಥಿರವಾಗಿರುವುದು ಭೌಗೋಳಿಕವಾದ ಪರಿಕಲ್ಪನೆ. ಅದು ಕರ್ನಾಟಕದ ಉಳಿದೆರಡು ಪರಿಕಲ್ಪನೆಗಳು ಸದಾ ಚಲನಶೀಲ, ಅವು ದೇಶಬದ್ಧ ವಲ್ಲ(ಕನ್ನಡ ಜಗತ್ತು:ಅರ್ಧಶತಮಾನ,ಪು: ೭)ಹೀಗೆ ಕನ್ನಡತ್ವ ಎನ್ನುವ ಹೊಸ ಬಗೆಯ ವ್ಯಕ್ತಿತ್ವವೂ ಗಟ್ಟಿಯಾಗಿ ನಿಲ್ಲು ವಂತದ್ದಲ್ಲ. ಈ ವ್ಯಕ್ತಿತ್ವಕ್ಕೆ ಆರೋಪಿಸುವ ಜಾನಪದ ಲಕ್ಷಣಗಳಿಗೂ ಇಂತಹದ್ದೇ ಮಿತಿಯಿದೆ.
ಕನ್ನಡ ರಾಷ್ಟ್ರೀಯತೆಯ ಬಗ್ಗೆ ಸಂಶೋಧನೆ ಮಾಡಿದ ಬಂಜಗೆರೆ ಜಯಪ್ರಕಾಶ್ ಅವರು ಕನ್ನಡತ್ವವನ್ನು ನಿರೂಪಿಸುವ ಕ್ರಮದಲ್ಲಿಯೇ ಜಾನಪದದ ಅಂತರ್ಗತ ಸ್ಥಿತಿಯನ್ನು ಗುರುತಿಸಲು ಸಾಧ್ಯ. ಕನ್ನಡತ್ವವೆಂಬುದು ಕೇವಲ ಒಂದು ಸಾಮಾಜಿಕ ಅಂಶವಲ್ಲ, ಅಥವಾ ಸಾಂಸ್ಕೃತಿಕ ಚಿನ್ನೆ ಮಾತ್ರವಲ್ಲ. ಅದೊಂದು ಅಖಂಡವಾದ ಜನಜೀವನದ ಪ್ರತೀಕ, ಅದರೊಳಗೆ ರಾಜಕೀಯವಿದೆ, ಆರ್ಥಿಕತೆ ಇದೆ, ಇತಿಹಾಸವಿದೆ, ಸಾಹಿತ್ಯ, ಸಾಂಸ್ಕೃತಿಕತೆ ಇತ್ಯಾದಿ ಎಲ್ಲವೂ ಇದೆ. ಒಂದು ಸಮಾಜದ ಉತ್ಪಾದನಾ ವಿನ್ಯಾಸದೊಳಗೆ ಒಂದು ಪಂಗಡವಾಗಿ ಏರ್ಪಟ್ಟು ಕಡೆಗೆ ಒಂದು ಸಾಂಸ್ಕೃತಿಕ ಗುರುತಿಸಿಕೊಳ್ಳುವಿಕೆಯನ್ನು ರೂಢಿಸಿಕೊಂಡ ’ಜಾತಿ’ ಎಂಬುದು ಹೇಗೆ ಒಂದು ನಿರ್ದಿಷ್ಟ ಜನಸಮುದಾಯದ ಸಾಮಾಜಿಕ ಸಂಘಟೀಕರಣವೋ, ಕನ್ನಡತನವೆಂಬುದೂ ಹಾಗೆಯೇ ಒಂದು ಜನಸಮುದಾಯದ ಪಂಗಡೀಕರಣ. (ಕನ್ನಡ ರಾಷ್ಟ್ರೀಯತೆ, ಪು: ೩)ಹೀಗೆ ಜಾತಿಯ ’ಸಂಘಟೀಕರಣ’ ಕನ್ನಡತನದ ಜನಸಮುದಾಯದ ಪಂಗಡೀಕರಣ ಆಗುವಲ್ಲಿಯೂ ಜನಪದ ಸಾಂಸ್ಕೃತಿಕ ಲೋಕದ ಒಳಗೊಳ್ಳುವಿಕೆ ಬಹಳ ಮುಖ್ಯವಾದ ಸಂಗತಿ.
ಬೆಟಗೇರಿ ಕೃಷ್ಣಶರ್ಮರು ಹೇಳುವಂತೆ: ನಮ್ಮ ನಾಡಿನ ಜನತೆ ಸಂಪ್ರದಾಯ ನಿಷ್ಠೆ, ಮತಧರ್ಮ ನಿಷ್ಠೆ, ಜಾತಿ ಕುಲ ನಿಷ್ಠೆ, ಪ್ರಾದೇಶಿಕ ಅಭಿಮಾನ ಇವುಗಳ ಮೂಲಕ ಸಣ್ಣ ಸಣ್ಣ ವರ್ತುಲಗಳನ್ನು ಮಾಡಿಕೊಂಡಿದ್ದು ಆ ವರ್ತುಲಗಳನ್ನೇ ತಮ್ಮ ತಮ್ಮ ಲೋಕವೆಂದು ಭಾವಿಸಿ ಹೃದಯ, ಬುದ್ಧಿಯನ್ನು ಸಂಕುಚಿತಗೊಳಿಸಿ ಕೊಂಡಿತ್ತು. ಇಂದಿನ ರಾಜಕೀಯ ಪ್ರಜ್ಞೆ ಮತ್ತು ವಿಜ್ಞಾನ ಅಧ್ಯಯನದ ಮೂಲಕ ವಿಶಾಲ ದೃಷ್ಟಿ, ಮತ್ತು ಮನೋವೈಕಲ್ಯ ಬೆಳೆಸಿಕೊಳ್ಳಬೇಕಾಗಿದೆ(ಸುವರ್ಣ ಜಾನಪದ, ಸಂ-೧, ಪು: ೫೪)ಎನ್ನುತ್ತಾರೆ. ಬಹುಶಃ ಕೃಷ್ಣಶರ್ಮರ ಮಾತುಗಳು ’ಕನ್ನಡತ್ವದ’ದಂತಹ ಹೊಸ ಅನನ್ಯತೆ ಕಟ್ಟಿಕೊಳ್ಳುವ ಕಡೆಗೆ ಮುಖ ಮಾಡಿವೆ. ೬೦-೭೦ರ ದಶಕದ ಬಹುಪಾಲು ಜಾನಪದ ವಿಶ್ಲೇಷಣೆಗಳು ಹೀಗೆ ಕನ್ನಡತ್ವದ ಅನನ್ಯತೆಯನ್ನು ಕಟ್ಟಿಕೊಳ್ಳಲು ಪೂರಕವಾದ ಆಲೋಚನೆಗೆ ಕಾರಣವಾದವು. ಇವುಗಳಿಗೆ ಶಿಷ್ಟ ಸಾಹಿತ್ಯದ ’ಕನ್ನಡತ್ವ’ದ ಅನನ್ಯತೆಗಿಂತ ತೀರಾ ಭಿನ್ನವಾಗಿರುವುದನ್ನು ಗುರುತಿಸಲು ಸಾಧ್ಯವಾಗಿದೆ. ಒಟ್ಟಾರೆ ’ಕನ್ನಡತ್ವ’ವೆಂಬ ಹೊಸ ಅನನ್ಯತೆಯನ್ನು ಕಟ್ಟಿಕೊಳ್ಳುವ ಎಳೆಗಳು ೫೦ರ ದಶಕದ ನಂತರದ ಜಾನಪದ ಅಧ್ಯಯನಗಳಲ್ಲಿ ಸಿಗುತ್ತವೆ. ಈ ಬಗೆಯ ವಿಶ್ಲೇಷಣೆಗಳು ಒಂದು ಜನಪ್ರಿಯ ಆಲೋಚನ ಮಾದರಿ ಹುಟ್ಟಲು ಕಾರಣವಾದವು. ಅಂತೆಯೇ ಜನಪದ ಸಂಗತಿಗಳನ್ನು ಸೂಕ್ಷ್ಮವಾಗಿ ಮುಖಾಮುಖಿಯಾಗುವ ಮೊನಚನ್ನು ಮೊಂಡಾಗಿಸಿದವು.
ಕನ್ನಡ ರಾಷ್ಟ್ರೀಯತೆ
ಈ ಮೇಲಿನ ಅಷ್ಟೂ ಚರ್ಚೆ ಕನ್ನಡ ರಾಷ್ಟ್ರೀಯತೆಗೆ ಪೂರಕವಾದದ್ದೆ. ’ರಾಷ್ಟ್ರೀಯತೆ’ಯ ಕಲ್ಪನೆಯೇ ಹೇಗೆ ಆಲೋಚನ ವಿನ್ಯಾಸಗಳನ್ನು ರೂಪಿಸಿತು ಎನ್ನುವುದನ್ನು ಮತ್ತೊಂದು ನೆಲೆಯಲ್ಲಿ ವಿಶ್ಲೇಷಣೆಗೆ ಒಡ್ಡಬಹುದು. ಬಿ.ಎ. ವಿವೇಕರೈ ಅವರು ಎರಡು ಬಗೆಯ ಅನನ್ಯತೆಯನ್ನು ಗುರುತಿಸುತ್ತಾರೆ: ಸಮುದಾಯವೊಂದು ಗುರುತಿಸಿಕೊಂಡಿರದ ಆದರೆ ಹೊರಗಿನವರು ಕಂಡುಕೊಳ್ಳುವ ಅನನ್ಯತೆಯನ್ನು ಆ ಸಮುದಾಯದ ’ಸಹಜ ಅನನ್ಯತೆ’ ಎಂದು ತಿಳಿಯಬಹುದು ಮತ್ತು ’ಸಹಜ ಅನನ್ಯತೆ’ ಎಂದು ಹೇಳುವಾಗಲೂ ಅದು ಸಮುದಾಯವೊಂದು ಅಪ್ರಯತ್ನಪೂರ್ವಕವಾಗಿ ಅಭಿವ್ಯಕ್ತಿಸುವ ಬಳಸುವ ಅನನ್ಯತೆ ಎಂದು ಭಾವಿಸಬೇಕು. ನಿರ್ಮಿಸಿದ ಅಥವಾ ಸೃಷ್ಟಿಸಿದ ಅನನ್ಯತೆಗಳು (Constructed identity) ಆಧುನಿಕ ಸಮಾಜದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತವೆ. ಒಂದು ಕಾಲದ ನಿರ್ಮಿಸಿದ ಅನನ್ಯತೆ ಇನ್ನೊಂದು ಕಾಲದ ಸಹಜ ಅನನ್ಯತೆ ಆಗಬಹುದು. ಆಡಳಿತಕ್ಕಾಗಿ ಮಾಡಿಕೊಂಡ ನಿರ್ದಿಷ್ಟ ವ್ಯಾಪ್ತಿಯ ಭೌಗೋಳಿಕ ಪ್ರದೇಶದಲ್ಲಿ ಪ್ರಾದೇಶಿಕ ಅನನ್ಯತೆಯ ಕಲ್ಪನೆ ನಿಜವಾಗಿಯೂ ಇರುವುದಿಲ್ಲ. ರಾಜಕೀಯ ಉದ್ದೇಶಗಳಿಗಾಗಿ ತೋರಿಕೆಯ ಅನನ್ಯತೆಯನ್ನು ಸಾಮಾನ್ಯವಾಗಿ ಇಲ್ಲಿ ಹೇರಲಾಗುತ್ತದೆ. (ಗಿಳಿಸೂವೆ, ಪು: ೩೮) ಎನ್ನುವಲ್ಲಿಯೂ ರಾಷ್ಟ್ರೀಯತೆಯ ಕೃತಕ ನಿರ್ಮಿತಿಯ ಮಿತಿ ಇರುವ ಸೂಚನೆ ಇದೆ.
ಕನ್ನಡ ರಾಷ್ಟ್ರೀಯತೆಯ ಪರಿಕಲ್ಪನೆಯು ಅಂತಹ ಒಂದು ನಿರ್ಮಿಸಿದ ಅನನ್ಯತೆ. ಒಂದು ರಾಷ್ಟ್ರದ ಪರಿಕಲ್ಪನೆ ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ೧೯೫೬ರ ಬಳಿಕ ಕರ್ನಾಟಕ ಎಂಬ ರಾಜ್ಯದ ಪರಿಕಲ್ಪನೆ ರೂಪುಗೊಳ್ಳುತ್ತಾ ಹೋಯಿತು. ಈ ರಾಜ್ಯದ ಗಡಿರೇಖೆಗಳ ಒಳಗಿನ ಲಕ್ಷಾಂತರ ಮಂದಿಗೆ ರಾಜ್ಯ ಎನ್ನುವುದು ಒಂದು ಅನನ್ಯತೆ ಆಗಿರಲಿಲ್ಲ. ಅವರ ಗ್ರಾಮ, ಸೀಮೆ, ಪಟ್ಟಣ, ಊರು, ಇವಿಷ್ಟೇ ಅವರ ಪ್ರಾದೇಶಿಕ ಅನನ್ಯತೆಯನ್ನು ರೂಪಿಸಿದ್ದು. ಇಂತಹ ಸ್ಥಳೀಯ ಅನನ್ಯತೆ ಮಾತ್ರ ಇದ್ದ ಜನರಲ್ಲಿ ಕರ್ನಾಟಕ ಎನ್ನುವ ಬೃಹತ್ ರಾಜ್ಯದ ಕಲ್ಪನೆಯನ್ನು ಉಂಟುಮಾಡುವುದು ಸುಲಭದ ಕೆಲಸವಲ್ಲ. ಜಾನಪದ ಅಧ್ಯಯನವೆನ್ನುವುದೇ ಪ್ರಾದೇಶಿಕ ಅನನ್ಯತೆಗಳನ್ನು ಗಟ್ಟಿಗೊಳಿಸುವಂತದ್ದು. ಆದರೆ ಅದೇ ಜನಪದವನ್ನು ಪ್ರಾದೇಶಿಕ ಅನನ್ಯತೆಗಳ ಜೊತೆಯಲ್ಲಿಯೇ ಕನ್ನಡ ರಾಷ್ಟ್ರೀಯತೆಯ ಹೊಸ ಅನನ್ಯತೆಯನ್ನು ಕಟ್ಟಿಕೊಳ್ಳುವಂತೆ ಬಳಸಿಕೊಳ್ಳಲಾಯಿತು. ಹಾಗಾಗಿಯೇ ’ಕನ್ನಡ ಜನಪದ,’ ’ಕರ್ನಾಟಕ ಜಾನಪದ’ದಂತಹ ಶೀರ್ಷಿಕೆಯಲ್ಲಿ ಜನಪದ ಕೃತಿಗಳು ಪ್ರಕಟವಾದದ್ದು. ಯಾವುದೇ ರಾಷ್ಟ್ರೀಯ ಅನನ್ಯತೆ ಎನ್ನುವುದು ವಿಸ್ತೃತವಾದ ಪ್ರಾದೇಶಿಕ ಅನನ್ಯತೆಯೇ ಆಗಿರುತ್ತದೆ. ಈ ನೆಲೆಯಲ್ಲಿ ಕನ್ನಡ ರಾಷ್ಟ್ರೀಯತೆಯು ಕೂಡ ಜಾನಪದ ಅಧ್ಯಯನಗಳು ರೂಪಿಸಿದ ಪ್ರಾದೇಶಿಕ ಅನನ್ಯತೆಗಳಿಂದಲೇ ರೂಪುಗೊಂಡಿದೆ.
ಹೀಗೆ ಕನ್ನಡ ಮತ್ತು ಕರ್ನಾಟಕತ್ವದ ಅನನ್ಯತೆಯ ಅಧ್ಯಯನಗಳು ಅಂತಿಮವಾಗಿ ಬೃಹತ್ ವ್ಯಾಖ್ಯಾನಗಳೇ ಆಗಿವೆ. ಮೂರು ನಾಲ್ಕು ದಶಕದ ಕಾಲ ಜಾನಪದ ಅಧ್ಯಯನದ ದೃಷ್ಟಿಕೋನವೆಲ್ಲ ಕನ್ನಡ, ಕರ್ನಾಟಕದ ಅನನ್ಯತೆಯ ಜತೆ ಸಮೀಕರಿಸಿದ ಪರಿಣಾಮ, ಕರ್ನಾಟಕದಲ್ಲಿ ಜಾನಪದ ಅಧ್ಯಯನಗಳು ಬಹುಪಾಲು ಸೂಕ್ಷ್ಮತೆಯನ್ನು ಕಳೆದುಕೊಂಡವು. ಪ್ರಾದೇಶಿಕ ಅನನ್ಯತೆಯನ್ನು ಗುರುತಿಸುವ ತಿಳುವಳಿಕೆಯನ್ನು ಕೂಡ ಕನ್ನಡದ ಅನನ್ಯತೆಯನ್ನು ಗುರುತಿಸಿದ ಆಲೋಚನೆಗಳೇ ಪ್ರಭಾವಿಸಿದವು. ಕನ್ನಡ, ಕರ್ನಾಟಕತ್ವದ ಸಂಕೇತಗಳು ಹೆಚ್ಚಾಗಿ ಮೇಲ್ವರ್ಗದ ಕಲೆ ಮತ್ತು ಆಚರಣೆಯನ್ನೇ ಅವಲಂಬಿಸಿದವು. ’ಕನ್ನಡ’ ಭಾಷಿಕ ಅನನ್ಯತೆಯು ಕರ್ನಾಟಕದ ಇತರೆ ಹಲವಾರು ಭಾಷಿಕ ಅನನ್ಯತೆಯ ಮೇಲೆ ಸವಾರಿ ಮಾಡಿತು. ಅಂತೆಯೇ ಅನೇಕ ಕನ್ನಡದ ಉಪಭಾಷೆಗಳನ್ನು ಬಹುಜನ ಒಪ್ಪಿತ ಪ್ರಮಾಣಿತ ಕನ್ನಡದಲ್ಲಿ ಪರಿಚಯಿಸಿ, ಉಪಭಾಷೆಗಳ ಜೀವಂತಿಕೆಯನ್ನು ಮಂಕಾಗಿಸಿತು. ಕನ್ನಡ, ಕರ್ನಾಟಕದ ರಾಷ್ಟ್ರೀಯತೆಯ ಚಿಂತನೆಯೂ ಇವುಗಳ ಅನನ್ಯತೆಯನ್ನು ಗುರುತಿಸಲು ಪರೋಕ್ಷವಾಗಿ ಪ್ರಭಾವ ಬೀರಿತು.