ಮಂಗಳವಾರ, ಡಿಸೆಂಬರ್ 31, 2013

ಲೈಫ್ ಆಫ್ ಗಾದರಿ ಪಾಲನಾಯಕ


-ಅರುಣ್ ಜೋಳದಕೂಡ್ಲಿಗಿ

‘ಲೈಫ್ ಆಫ್ ಗಾದರಿ ಪಾಲನಾಯಕ’ ಪರಿಚಯಕ್ಕೂ ಮುನ್ನ ನಿಮ್ಮ ಗಮನವನ್ನು ಒಂದಷ್ಟು ಹಿಂದಕ್ಕೆ ಒಯ್ದು, ‘ಲೈಫ್ ಆಫ್ ಪೈ’ ಗೆ ಜೋಡಿಸುತ್ತೇನೆ. ಆಂಗ್ ಲೀ ನಿರ್ದೇಶನದ, ಮಾನ್ ಮಾರ್ಟೆಲ್ನ ಕೃತಿ ಆಧಾರಿತ ‘ಲೈಫ್ ಆಫ್ ಪೈ’ ಚಿತ್ರ ೨೦೧೩ ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಿರ್ದೇಶನ ಸೇರಿದಂತೆ ನಾಲ್ಕು ಪ್ರಶಸ್ತಿಗಳನ್ನು ಗಳಿಸಿತು. ಪಾಂಡಿಚೆರಿಯಲ್ಲಿದ್ದ ಪ್ರಾಣಿ ಸಂಗ್ರಹಾಲಯವನ್ನು ತಂದೆ, ತಾಯಿ ಮತ್ತು ಇಬ್ಬರು ಮಕ್ಕಳು ಕೆನಡಾಕ್ಕೆ ಸಾಗಿಸಲು ಹಡಗಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಈ ಹಡಗು ಪೆಸಿಫಿಕ್ ಸಮುದ್ರದಲ್ಲಿ ಅಪಘಾತಕ್ಕೆ ಒಳಗಾಗಿ ಮುಳುಗುತ್ತದೆ. ಇದರಲ್ಲಿ ರಿಚರ್ಡ ಪಾರ್ಕರ್ ಎಂಬ ಹೆಸರಿನ ಬಂಗಾಳಿ ಹುಲಿ ಮತ್ತು ಪೈ ಪಟೇಲ್ ಉಳಿಯುತ್ತಾರೆ.
ಹುಡುಗ ಪೈ ದೋಣಿಯಲ್ಲಿ ಹುಲಿಯ ಜತೆ ಪ್ರಯಾಣಿಸುತ್ತಾನೆ. ಈ ಪಯಣದ ಹಲವು ಮಜಲುಗಳನ್ನು ಈ ಚಿತ್ರ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ಪೈ ಪಾಲಿಗೆ ಈ ಪಯಣ ಕತ್ತಿಯಂಚಿನ ದಾರಿ. ಈ ಕತ್ತಿಯಂಚಿನಲ್ಲಿ ನಡೆವ ನಡಿಗೆಯಲ್ಲಿ ಆತನ ಹೋರಾಟ ನಿಜಕ್ಕೂ ಮೈನಡುಗಿಸುವಂತದ್ದು. ಇಲ್ಲಿ ಹುಲಿ ಮನುಷ್ಯ ಸಂಬಂಧವನ್ನು ವಾಸ್ತವದ ನೆಲೆಗಟ್ಟಿನಲ್ಲಿ ಕಟ್ಟಿಕೊಡಲಾಗಿದೆ. ಅಡವಿಯಲ್ಲಿ ರಾಜನಂತೆ ಮೆರೆವ ಹುಲಿ ನೀರಿನಲ್ಲಿ ಹೇಗೆ ಅಸಹಾಯಕವಾಗುತ್ತದೆ ಎನ್ನುವುದನ್ನು ತುಂಬಾ ವಿಶಿಷ್ಟವಾಗಿ ಈ ಚಿತ್ರ ಕಟ್ಟಿಕೊಟ್ಟಿದೆ. ‘ಹಸಿವು’ ಹೇಗೆ ಜೈವಿಕ ಸಂಬಂಧಗಳನ್ನು ಬೆಸೆಯುತ್ತದೆಂಬ ಎಳೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.
ಆಸ್ಕರ್ ಅವಾರ್ಡ ಪಡೆದ ಸಂದರ್ಭದಲ್ಲಿ ಕುತೂಹಲಭರಿತನಾಗಿ ‘ಲೈಫ್ ಆಫ್ ಪೈ’ ಸಿನೆಮಾವನ್ನು ನೋಡುತ್ತಿದ್ದಂತೆ, ನನ್ನೊಳಗೆ ಮಧ್ಯಕರ್ನಾಟಕದ ದೊಡ್ಡ ಸಮುದಾಯ ಬೇಡರ ಸಾಂಸ್ಕೃತಿಕ ನಾಯಕ ಗಾದ್ರಿಪಾಲನಾಯಕನ ಕಾವ್ಯದ ಘಟನಾವಳಿಗಳು ಮನದ ಪರದೆಯ ಮೇಲೆ ಮೂಡತೊಡಗಿದವು. ಗಾದ್ರಿಪಾಲನಾಯಕನ ಜಾಗದಲ್ಲಿ ಪೈ ನಿಂತಂತೆ ಅನುಭವವಾಯ್ತು. ಈ ಹಿಂದೆಯೇ ಹುಲಿ ಮತ್ತು ಮನುಷ್ಯ ಸಂಬಂಧದ ವಾಸ್ತವದ ನೆಲೆಗಟ್ಟಿನ ಕಥನವನ್ನು ಓದಿದ್ದು ಗಾದರಿ ಪಾಲನಾಯಕನ ಕಾವ್ಯದಲ್ಲಿ. ಕಾರಣ ಅನೇಕ ಜನಪದ ಕಥನಗಳಲ್ಲಿ ಹುಲಿ ಮತ್ತು ಮನುಷ್ಯ ಸಂಬಂಧವನ್ನು ವಾಸ್ತವ ನೆಲೆಗಟ್ಟಿಗಿಂತ ರಮ್ಯವಾಗಿ ಕಟ್ಟಿಕೊಟ್ಟಿರುವುದೇ ಹೆಚ್ಚು. ಹಾಗಾಗಿ ಗಾದರಿ ಪಾಲನಾಯಕನಂಥಹ ಜನಪದ ಕಥನವೊಂದು ‘ಲೈಫ್ ಆಫ್ ಪೈ’ ನ ಮೂಲ ಕಥೆಗಾರ ಮಾನ್ ಮಾರ್ಟೆಲ್ನ ಕೃತಿಗೆ ಪ್ರೇರಣೆ ಆಗಿರಬಹುದೆ ಅನ್ನಿಸಿತು.
ಮ್ಯಾಸಬೇಡರು ತಮ್ಮ ಕುಲದ ಸಾಂಸ್ಕೃತಿಕ ವೀರನೆಂದು ಗಾದರಿ ಪಾಲನಾಯಕನನ್ನು ಆರಾಧಿಸುತ್ತಾರೆ. ಆತನ ಬಗ್ಗೆ ಕಥೆಗಳನ್ನೂ, ಕಾವ್ಯವನ್ನೂ ಕಟ್ಟಿದ್ದಾರೆ. ಹಬ್ಬ ಜಾತ್ರೆಗಳನ್ನು ಮಾಡುತ್ತಾರೆ. ಗಾದ್ರಿ ಪಾಲನಾಯಕ ಮೂಲತಃ ಒಬ್ಬ ಪಶುಪಾಲಕ ಸಮುದಾಯವನ್ನು ಪ್ರತಿನಿಧಿಸುವ ಸ್ವತಃ ಪಶುಪಾಲಕ. ಈತನು ಹುಲಿಗಳ ಜತೆ ಆಪ್ತ ಸಂಬಂಧವನ್ನು ಇಟ್ಟುಕೊಳ್ಳುವುದು, ದನಕರುಗಳ ಜತೆ ಹುಲಿಯ ಮರಿಗಳನ್ನು ಸಾಕುವುದು, ಅವುಗಳ ಮರಣ, ನಂತರ ಹುಲಿಯ ಜತೆ ಸಂಘರ್ಷದಲ್ಲಿ ದಾರುಣ ಅಂತ್ಯ ಇದು ಗಾದರಿ ಪಾಲನಾಯಕನದ ಬಗ್ಗೆ ಇರುವ ಕಥನದ ಒಂದು ಎಳೆ. ಈ ಕಥನವನ್ನು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುವೆ.
ಗಾದರಿ ಪಾಲನಾಯಕ ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳ ಗಡಿಯಲ್ಲಿ ಬರುವ ಸಿರಿಗೇರಿಯ ಮಿಂಚೇರಿ ಅಡವಿಯಲ್ಲಿ ದನಕರುಗಳನ್ನು ಸಾಕಿಕೊಂಡು ಹೆಂಡತಿಯರಾದ ಕಂಚವ್ವ ಕಾಮವ್ವರೊಡನೆ ವಾಸಿಸುತ್ತಿದ್ದನು. ಈ ಅಡವಿಯಲ್ಲಿ ಗಂಡ ಹೆಂಡತಿ ಹುಲಿಗಳೆರಡು ವಾಸಿಸುತ್ತಿದ್ದವು. ಅವು ಗಾದರಿಪಾಲಯ್ಯನಿಗೆ ನೀನು ಈ ಅಡವಿಯಲ್ಲಿ ದನಕರುಗಳೊಂದಿಗೆ ವಾಸಿಸುವುದು ಸರಿಯಲ್ಲ ಎಂದು ಹೇಳಿದವು. ಆಗ ಪಾಲಯ್ಯನು ಈ ಅಡವಿಯಲ್ಲಿ ನಿಮಗೆ ಹೇಗೆ ವಾಸಿಸುವ ಹಕ್ಕಿದೆಯೋ ನಮಗೂ ದನಕರುಗಳನ್ನು ಮೇಯಿಸಿಕೊಂಡು ಇಲ್ಲಿ ನೆಲೆಸುವ ಹಕ್ಕಿದೆ, ಅಷ್ಟಕ್ಕೂ ನಾವು ಮಾಡಿದ ಅಪರಾಧವಾದರೂ ಏನು? ಎಂದು ಹುಲಿ ದಂಪತಿಗಳಿಗೆ ಸವಾಲು ಹಾಕುತ್ತಾನೆ. ಆಗ ಹುಲಿ ದಂಪತಿಗಳು ನಮಗೆ ದಿನಾಲು ಆಹಾರಕ್ಕೆ ಎರಡು ಹೋರಿಕರುಗಳನ್ನು ಕೊಡಬೇಕೆನ್ನುತ್ತವೆ. ಹೀಗೆ ವಾದ ವಿವಾದಗಳು ನಡೆದು ಗಾದರಿ ಪಾಲನಾಯಕ ಮತ್ತು ಹುಲಿಗಳ ಜತೆ ಒಂದು ಹೊಂದಾಣಿಕೆ ಆಗುತ್ತದೆ. ಹುಲಿಗಳು ದನಕರುಗಳನ್ನು ತಿನ್ನುವಂತಿಲ್ಲ. ಆದರೆ ಹುಲಿಮರಿಗಳನ್ನು ಗಾದರಿ ಪಾಲನಾಯಕನು ರಕ್ಷಣೆನೀಡಿ ತನ್ನ ಮಂದೆಯಲ್ಲಿ ಸಾಕಬೇಕು ಎಂದು ಒಪ್ಪಂದವಾಯಿತು.
ಇದಾದ ನಂತರ ಹುಲಿಯ ಮರಿಗಳು ಗಾದರಿ ಪಾಲನಾಯಕನ ರೊಪ್ಪದಲ್ಲಿ ದನದ ಕರುಗಳೊಂದಿಗೆ ಆಟವಾಡಿಕೊಂಡು ಬೆಳೆಯುತ್ತವೆ. ಹೀಗಿರುವಾಗ ಒಮ್ಮೆ ಗಾದರಿ ಪಾಲನಾಯಕನ ಭಾವ ಮೈದುನರಾದ ಚಿತ್ತಯ್ಯ ಮತ್ತು ಕಾಟಯ್ಯರು ಪಾಲಯ್ಯನ ರೊಪ್ಪಕ್ಕೆ ಬರುತ್ತಾರೆ. ಆಗ ಪಾಲಯ್ಯ ದನ ಮೇಯಿಸಲು ಕಾಡಿಗೆ ಹೋಗಿರುತ್ತಾನೆ. ಅಂತೆಯೇ ಕಂಚವ್ವ ಕಾಮವ್ವರು ಹಾಲು ಬೆಣ್ಣೆ ಮಾರಾಟಕ್ಕೆ ಹೋಗಿದ್ದವರು ರೊಪ್ಪಕ್ಕೆ ಮರಳಿರಲಿಲ್ಲ. ಹೀಗಿರುವಾಗ ರೊಪ್ಪದಲ್ಲಿ ದನಕರುಗಳೊಂದಿಗೆ ಆಟವಾಡುತ್ತಿದ್ದ ಹುಲಿ ಮರಿಗಳನ್ನು ನೋಡಿ ಬೆರಗಾಗುತ್ತಾರೆ. ಹೀಗೆ ಈ ಹುಲಿಮರಿಗಳು ಬೆಳೆದು ದೊಡ್ಡವಾದರೆ ದನಕರುಗಳನ್ನು ತಿನ್ನದೆ ಬಿಟ್ಟಾವೆ ಎಂದು ಆ ಹುಲಿಮರಿಗಳನ್ನು ಬಂದೂಕಿನಿಂದ ಸಾಯಿಸುತ್ತಾರೆ.
ರೊಪ್ಪಕ್ಕೆ ಬಂದ ಪಾಲಯ್ಯ ಸತ್ತುಬಿದ್ದ ಹುಲಿಮರಿಗಳನ್ನು ನೋಡಿ ವಿಚಲಿತನಾಗುತ್ತಾನೆ. ನಾನು ಹುಲಿಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗಲಿಲ್ಲವಲ್ಲ ಎಂದು ಪರಿತಪಿಸುತ್ತಾನೆ. ನಾನು ಈವರೆಗೂ ಕೊಟ್ಟಮಾತಿಗೆ ತಪ್ಪಿರಲಿಲ್ಲ, ಆದರೆ ಹುಲಿಗಳಿಗೆ ಕೊಟ್ಟ ಮಾತಿಗೆ ತಪ್ಪಿಬಿಟ್ಟೆ ವಚನಬ್ರಷ್ಟನಾದೆ ಎಂದು ತನ್ನನ್ನು ತಾನೇ ಹಳಿದುಕೊಳ್ಳುತ್ತಾನೆ. ಈ ಕೃತ್ಯ ಎಸಗಿದವರಾರು ಎಂದು ಹುಡುಕಿದಾಗ ತಮ್ಮ ಭಾವ ಮೈದುನರಾದ ಕಾಟಯ್ಯ ಚಿತ್ತಯ್ಯರೆ ಅರಿಯದೆ ಕೊಂದಿದ್ದಾರೆಂದು ತಿಳಿಯುತ್ತದೆ. ಇದು ಉದ್ದೇಶಪೂರ್ವಕ ಕೃತ್ಯವಾಗಿರದೆ ಹುಲಿಯ ಬಗೆಗಿನ ಮನುಷ್ಯಸಹಜ ಭಯದಿಂದ ಆದ ಘಟನೆಯಾಗಿದೆ ಎಂದು ಪಾಲಯ್ಯನಿಗೆ ಅರಿವಾಗುತ್ತದೆ.
ಇತ್ತ ಬೇಟೆಯೊಂದನ್ನು ಹಿಡಿದುಕೊಂಡು ಕಾಣದ ಹೆಣ್ಣುಲಿಯನ್ನು ಹುಡುಕಿಕೊಂಡು ಗಂಡುಲಿ ಅಡವಿಯಲ್ಲಿ ಅಲೆಯುತ್ತದೆ. ಆಗ ಹೆಣ್ಣುಲಿ ಕರು ಹಾಕಿದ ಆಕಳವನ್ನು ಕಾಯ್ದು ಕೂತಿರುತ್ತದೆ. ಗಾದರಿ ಪಾಲನಾಯಕ ಬರುವ ವರೆಗೆ ಕರು ಮತ್ತು ಆಕಳವನ್ನು ಕಾಯುತ್ತಾ ಕುಳಿತ ಹೆಣ್ಣುಲಿ ಗಂಡುಲಿಯನ್ನು ನೋಡಿದ ತಕ್ಷಣ, ನೀನು ರೊಪ್ಪಕ್ಕೆ ಹೋಗಿ ಆಕಳು ಕರು ಹಾಕಿರುವುದಾಗಿ ಪಾಲಯ್ಯನಿಗೆ ತಿಳಿಸಿ, ನಮ್ಮ ಮರಿಗಳಿಗೆ ಮಾಂಸ ತಿನ್ನಿಸಿ ಬಾ ಎಂದು ಕಳಿಸುತ್ತದೆ. ಗಂಡುಲಿ ರೊಪ್ಪಕ್ಕೆ ಬರುತ್ತದೆ, ಆಗ ತನ್ನ ಮರಿಗಳು ರಕ್ತಕಾರಿಕೊಂಡು ಸತ್ತು ಬಿದ್ದಿರುವುದನ್ನು ನೋಡಿ ತಕ್ಷಣಕ್ಕೆ ಹುಲಿ ದುಃಖದ ಮಡುವಲ್ಲಿ ಮುಳುಗುತ್ತದೆ. ಈ ದುಃಖದ ವಾರ್ತೆಯನ್ನು ಹೆಣ್ಣುಲಿಗೆ ತಲುಪಿಸುತ್ತದೆ. ಈ ಘಟನೆಯು ದಂಪತಿ ಹುಲಿಗಳನ್ನು ಅತೀವ ದುಃಖಕ್ಕೆ ಈಡುಮಾಡಿ ಕೆರಳಿಸುತ್ತದೆ. ಮರಿ ಹುಲಿಗಳ ದಾರುಣ ಹತ್ಯೆಯಿಂದಾಗಿ ಈ ನರ ಮನುಷ್ಯರು ನಂಬಿಕೆಗೆ ಅರ್ಹರಲ್ಲ, ಅವರನ್ನು ನಂಬಿ ನಾವು ಕೆಟ್ಟೆವು ಎಂದು ಕೆಂಡಕಾರುತ್ತವೆ. ಯಾವುದೇ ಕಾರಣಕ್ಕೂ ಗಾದರಿ ಪಾಲನಾಯಕನನ್ನು ಜೀವಂತ ಉಳಿಸಬಾರದು ಎಂದು ಹುಡುಕುತ್ತಾ ಬರುತ್ತವೆ.
ದುಃಖಿತನಾದ ಪಾಲಯ್ಯ ನಾನು ಯಾವ ತಪ್ಪು ಮಾಡದಿದ್ದರೂ ಹುಲಿಗಳು ನನ್ನನ್ನು ಉಳಿಸುವುದಿಲ್ಲವೆಂದು ಜರಿಮಲೆ ಪ್ರದೇಶಕ್ಕೆ ಹೋಗಿ ಭಗವಂತನನ್ನು ಬೇಡಿಕೊಂಡು ಹುಲಿಮಕ್ಕಳನ್ನು ಬದುಕಿಸುತ್ತೇನೆಂದು ಹೊರಡುತ್ತಾನೆ. ಇವನನ್ನು ಹಿಂಬಾಲಿಸಿಕೊಂಡು ಬಂದ ಹುಲಿಗಳು ಪಾಲಯ್ಯನನ್ನು ತಡೆದು ನೀನು ಕೊಟ್ಟ ಮಾತನ್ನು ತಪ್ಪಿದೆ ಎಂದು ಘರ್ಜಿಸುತ್ತವೆ. ಆಗ ಪಾಲಯ್ಯನು ‘ನಾನು ನಿಮ್ಮ ಮರಿಗಳನ್ನು ಕೊಂದಿಲ್ಲ ನನ್ನದೇನೂ ತಪ್ಪಿಲ್ಲ, ಹಾಗಿದ್ದೂ ಜರಿಮಲೆಗೆ ಹೋಗಿ ದೇವರಲ್ಲಿ ಪ್ರಾರ್ಥಿಸಿ ನಿಮ್ಮ ಮರಿಗಳಿಗೆ ಮರುಜೀವ ನೀಡುತ್ತೇನೆ ಸಹಕರಿ’ ಎಂದು ಹುಲಿ ದಂಪತಿಗಳಿಗೆ ಮೊರೆ ಇಡುತ್ತಾನೆ. ಆಗ ಹುಲಿಗಳು ಮತ್ತು ಪಾಲಯ್ಯನ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಹುಲಿಗಳು ನೀನು ನಮ್ಮಿಂದ ತಪ್ಪಿಸಿಕೊಂಡು ಓಡಿ ಹೋಗಲು ಇಂತಹ ಕತೆ ಕಟ್ಟುತ್ತೀಯ ಎಂದು ಪಾಲಯ್ಯನನ್ನು ಜರಿಯುತ್ತವೆ. ಈ ಮಾತು ಕೇಳಿದ ಪಾಲಯ್ಯ ‘ಇಲ್ಲ ನಾನು ಓಡಿ ಹೋಗಲು ಹೇಡಿಯಲ್ಲ, ನೀವು ನನ್ನನ್ನು ಸಾಯಿಸಲೇಬೇಕೆಂದಿದ್ದರೆ ನಾನು ನಿಮ್ಮೊಂದಿಗೆ ಕಾದಾಡುವೆ’ ಎನ್ನುತ್ತಾನೆ. ಪರಿಣಾಮವಾಗಿ ಹುಲಿ ಮತ್ತು ಗಾದರಿ ಪಾಲನಾಯಕನಿಗೆ ಕಾದಾಟ ನಡೆಯುತ್ತದೆ. ಈ ಕಾದಾಟದಲ್ಲಿ ಹುಲಿಗಳು ಮತ್ತು ಗಾದರಿ ಪಾಲನಾಯಕ ಮಡಿಯುತ್ತಾರೆ. ಈ ಸಾವಿನ ಸುದ್ದಿ ತಿಳಿದ ಕಂಚವ್ವ ಕಾಮವ್ವರು ಪಾಲಯ್ಯನಿಗೆ ಸಹಗಮನ ಹೊಂದುತ್ತಾರೆ.
ಹೀಗೆ ಗಾದರಿ ಪಾಲನಾಯಕನ ಕಾವ್ಯ ದುಃಖಾಂತ್ಯವನ್ನು ಹೊಂದುತ್ತದೆ. ಇದು ಕಾಡು ನಾಡಿನ ಸಂಘರ್ಷವಿರದ ಮತ್ತು ಸಂಘರ್ಷ ಆರಂಭವಾದ ಎರಡೂ ಘಟ್ಟಗಳಿಗೆ ಸಾಂಕೇತಿಕತೆ ಇದ್ದಂತಿದೆ. ಇಲ್ಲಿ ಮನುಷ್ಯ ಮತ್ತು ಪ್ರಾಣಿ ಸಂಬಂಧದ ಭಿನ್ನ ಮುಖಗಳನ್ನು ಈ ಕಥನ ಕಾಣಿಸುತ್ತಿದೆ. ಅಂತೆಯೇ ಹುಲಿಗಳ ಜತೆ ಮನುಷ್ಯ ಸಂಬಂಧ ಬೆಸೆದ ಒಂದು ಅಪೂರ್ವ ರೂಪಕವನ್ನೂ ಈ ಕಥೆ ಕಟ್ಟಿಕೊಡುತ್ತದೆ.
ಈ ಕಥೆಯ ಕಾರಣಕ್ಕೆ ಗಾದರಿ ಪಾಲನಾಯಕ ಒಬ್ಬ ಬೇಡ ಸಮುದಾಯದ ಸಾಂಸ್ಕೃತಿಕ ನಾಯಕನಾಗಿ ಆರಾಧನೆ ಗೊಳ್ಳುತ್ತಾನೆ. ಈ ಘಟನೆಗೆ ಕಾರಣವಾದ ಪ್ರದೇಶಗಳಲ್ಲಿ ಈಗಲೂ ಪುರಾವೆಗಳು ದೊರೆಯುತ್ತವೆ. ಹಾಗಾಗಿ ಗಾದರಿ ಪಾಲನಾಯಕ ಒಬ್ಬ ಚಾರಿತ್ರಿಕ ವ್ಯಕ್ತಿಯೇ? ಪೌರಾಣಿಕ ವ್ಯಕ್ತಿಯೇ ಎಂಬ ಬಗ್ಗೆ ಇನ್ನೂ ಖಚಿತವಾದ ಸಂಶೋಧನೆಗಳು ನಡೆದಿಲ್ಲ. ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರೊ.ವಿರೂಪಾಕ್ಷಿ ಪೂಜಾರಹಳ್ಳಿ ಅವರು ಬರೆದ ‘ಗಾದರಿ ಪಾಲನಾಯಕ’ ಕೃತಿಯಲ್ಲಿ ಗಮನಾರ್ಹ ದಾಖಲೆಗಳನ್ನು ಒದಗಿಸಿದ್ದಾರೆ.
ವಾಲ್ಮೀಕಿ, ಶಬರಿ, ಗುಹ, ಏಕಲವ್ಯ, ಧರ್ಮ ವ್ಯಾಧ, ಬೇಡರ ಕಣ್ಣಪ್ಪ, ಕುಮಾರ ರಾಮ ಮೊದಲಾದವರು ಮ್ಯಾಸಬೇಡರ ಪೌರಾಣಿಕ ಮೂಲಪುರುಷರು. ಅಂತೆಯೇ ಮಧ್ಯಕಾಲೀನ ಕರ್ನಾಟಕದಲ್ಲಿ ಕಂಡು ಬರುವ ಬೇಡರ ವೀರ/ವೀರೆಯರಾದ ಶುಕ್ಲಮಲ್ಲಿನಾಯಕ, ಗಾದರಿ ಪಾಲನಾಯಕ, ಕೊಡಗಲು ಬೊಮ್ಮಯ್ಯ, ಯರಗಾಟ ನಾಯಕ, ಗಾಜ ನಾಯಕ, ದಡ್ಡಿ ಸೂರನಾಯಕ, ಮಂದ ಭೂಪಾಲ, ಅಂಬೋಜ ರಾಜ, ದಾನ ಸಾಲಮ್ಮ, ಚಂಚುಲಕ್ಷ್ಮಿ, ಪೆದ್ದಕ್ಕ ರಾಯಲದೇವಿ, ವೀರ ಮದಕರಿ ನಾಯಕ ಮೊದಲಾದವರನ್ನು ಹೆಸರಿಸಬಹುದು.
ಮಧ್ಯಕರ್ನಾಟಕದ ಅದರಲ್ಲೂ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಿರಿಯೂರು ಭಾಗದ ಮ್ಯಾಸಬೇಡರಲ್ಲಿ ಅತಿ ಹೆಚ್ಚು ಜೀವಂತವಾಗಿರುವ ನಾಯಕ ಗಾದರಿ ಪಾಲನಾಯಕ. ಗಾದರಿ ಎನ್ನುವುದು ಅರೆ ಮಲೆನಾಡಿನ ಒಂದು ಘಟ್ಟ ಪ್ರದೇಶ. ಇದಕ್ಕೆ ಗಾದರಿ ಘಟ್ಟ, ಗಾದರಿ ಗುಡ್ಡ, ಗಾದ್ರಿ ಮಲೈ ಎಂದು ಜನರೂಢಿಯಲ್ಲಿ ಬಳಸುತ್ತಾರೆ. ಈ ಮಲೆಯಲ್ಲಿ ಪಶುಗಳನ್ನು ಕಾಯ್ದುಕೊಂಡಿರುವ ಪಾಲಯ್ಯನನ್ನು ಮುಂದೆ ಗಾದರಿ ಪಾಲಯ್ಯ ಎಂದು ಕರೆದಿರುವುದಿದೆ. ಹೊಯ್ಸಳರ ಪೊಯ್ಸಳನೇ ಗಾದರಿ ಪಾಲನಾಯಕ ಎಂಬ ಮಾತೂ ಇದೆ. ಆದರೆ ಪೊಯ್ಸಳ ಮತ್ತು ಗಾದರಿ ಪಾಲನಾಯಕ ಹುಲಿಯ ಜತೆ ಸೆಣಸಾಡಿದ್ದು ಬಿಟ್ಟರೆ ಮತ್ತಾವ ಸಾಮ್ಯವೂ ಕಂಡುಬರುವುದಿಲ್ಲ. ಚಾರಿತ್ರಿಕವಾದ ದಾಖಲೆಗಳೂ ಇಲ್ಲ.
ಆದರೆ ಗಾದರಿ ಪಾಲನಾಯಕ ಎಂಬ ಹೆಸರಿನ ವ್ಯಕ್ತಿ ನಾಯಕನಹಟ್ಟಿಯ ಪಾಳೆಯಗಾರನಾಗಿ ಆಳ್ವಿಕೆ ನಡೆಸಿದ ಪುರಾವೆ ಇವೆ. ಅವನ ಅಣ್ಣ ಜಗಲೂರು ಪಾಪಿನಾಯಕನೂ ಆಳ್ವಿಕೆ ನಡೆಸಿದ್ದಾನೆ. ಇದು ಚಂದ್ರವಳ್ಳಿ ಕೃತಿಯ ಅನುಬಂಧದಲ್ಲಿ ನಾಯಕನಹಟ್ಟಿ ಪಾಳೆಯಗಾರರ ವಂಶ ವೃಕ್ಷದಲ್ಲಿ ಇವರ ಹೆಸರಿನ ಉಲ್ಲೇಖಗಳಿವೆ. ಗಾದರಿ ಪಾಲನಾಯಕ ಪಾಳೆಯಗಾರನಾಗಿ ಆಡಳಿತ ನಡೆಸಿದ್ದರ ಕುರುಹುಗಳು ಈಗಿನ ಗಾದರಿ ಪಾಲನಾಯಕನ ಕುರಿತ ಆಚರಣಾಲೋಕದಲ್ಲೂ ದೊರೆಯುತ್ತವೆ. ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ಪಕ್ಕವೇ ಇರುವ ಚನ್ನಬಸಯ್ಯನ ಹಟ್ಟಿ, ಮಲ್ಲೂರಳ್ಳಿಯ ಹತ್ತಿರ ರಾಮಸಾಗರ, ಬೊಮ್ಮಗೊಂಡನ ಕೆರೆ, ಕುರುಡಿಹಳ್ಳಿ, ಕಾತ್ರಿಕೆನ ಹಟ್ಟಿ, ಕನ್ನಬೋರಯ್ಯನ ಹಟ್ಟಿ, ಕೋಲಮ್ಮನಹಳ್ಳಿ, ನನ್ನಿವಾಳ ಮುಂತಾದ ಕಡೆ ಗಾದರಿ ಪಾಲನಾಯಕದ ಗುಡಿಗಳಿವೆ. ಇಲ್ಲಿ ಪಾಲಯ್ಯನು ಬಳಸಿದ್ದ ಎಂದು ನಂಬಿದ ಆಯುಧಗಳನ್ನೂ ಪೂಜಿಸುತ್ತಾರೆ. ಕಾಗಳಗೆರೆ ಎಂಬ ಪ್ರದೇಶದಲ್ಲಿ ಗಾದರಿ ಪಾಲನಾಯಕನ ವೀರಗಲ್ಲು ಮತ್ತು ಸಮಾಧಿ ಇವೆ. ಗಂಜಿಗಟ್ಟೆಯೆಂಬ ಪ್ರದೇಶದಲ್ಲಿ ಕಂಚವ್ವ ಕಾಮವ್ವ ಸಹಗಮನ ಕೈಗೊಂಡ ಹೊಂಡ ಇದೆ.
ಹೀಗೆ ಮಧ್ಯಕಾಲಿನ ಕರ್ನಾಟಕದ ಪಶುಪಾಲನೆಯ ಸಂದರ್ಭದಲ್ಲಿ ಹುಲಿಗಳ ಜತೆ ಸ್ನೇಹ ಮಾಡಿದ್ದು, ಹುಲಿ ಮರಿಗಳನ್ನು ಸಾಕುವ ದೈರ್ಯ ತೋರಿದ ಒಬ್ಬ ನಾಯಕನ ಕಥೆ ‘ಲೈಫ್ ಆಫ್ ಪೈ’ ತರದ ಸಿನೆಮಾದ ಸೃಜನಶೀಲ ಸೃಷ್ಟಿಯಂತೆಯೇ, ವಾಸ್ತವದ ನೆಲೆಗಟ್ಟಿನಲ್ಲಿ, ಜನಸಮುದಾಯದ ಸ್ಮೃತಿಲೋಕದ ಮಿನುಗು ತಾರೆ ‘ಲೈಫ್ ಆಫ್ ಗಾದರಿ ಪಾಲನಾಯಕ’ ಗಮನಸೆಳೆಯುತ್ತಾನೆ. ಜನಸಮುದಾಯಗಳು ಆರಾಧಿಸುವ ಇಂತಹ ಸಾಂಸ್ಕೃತಿಕ ವೀರ/ವೀರೆಯರ ಕಥನಗಳು ನಿಜಕ್ಕೂ ರೋಮಾಂಚನ ಹುಟ್ಟಿಸುತ್ತವೆ.
ನಾನು ಗಾದರಿ ಪಾಲನಾಯಕನ ಹುಲಿ ಜತೆಗಿನ ಸೆಣಸಾಟದ ಇತರೆ ಕಥನಗಳನ್ನು ಹುಡುಕುವಾಗ ಕನ್ನಡ ಜಾನಪದ ಲೋಕದಲ್ಲಿ ‘ಹುಲಿ’ ಅತಿಹೆಚ್ಚು ಬಳಕೆಯಾಗಿದ್ದು ಕಂಡುಬಂತು. ಕಥೆ ಗೀತೆ ಮಹಾಕಾವ್ಯ ಆಚರಣಾ ಲೋಕಗಳಲ್ಲಿ ಕಾಡಿನ ಹುಲಿ ನಾಡೊಳಗೆ ಸಂಚರಿಸಿದ ಅನುಭವವಾಗುತ್ತದೆ. ಇಂತಹದ್ದೇ ಕತೆ ಕಥನ ಆಚರಣೆಗಳನ್ನು ಗಮನದಲ್ಲಿಟ್ಟುಕೊಂಡಿ ಹುಲಿ ಜಾನಪದವೆ ಸೃಷ್ಟಿಯಾದಂತೆನಿಸಿತು. ಅಂದಹಾಗೆ ಮುಂದಿನ ವಾರದ ಅಂಕಣದಲ್ಲಿ ಹುಲಿ ಜಾನಪದ ಕುರಿತೆ ಬರೆಯುವೆ, ಕಾಯುತ್ತಿರಿ.

ಭಾನುವಾರ, ಡಿಸೆಂಬರ್ 29, 2013

ಹುಲಿ ಜಾನಪದ

‘ಲೈಫ್ ಆಫ್ ಗಾದರಿ ಪಾಲನಾಯಕ’ ಬರಹ ಬರೆವ ಹೊತ್ತಿಗೆ, ಕನ್ನಡ ಜಾನಪದ ಪರಂಪರೆಯಲ್ಲಿ ‘ಹುಲಿ’ಯ ಜತೆ ನಡೆಸಿದ ಮುಖಾಮುಖಿ ಹೇಗಿದೆ ಎಂದು ಒಂದಷ್ಟು ಹುಡುಕಾಡಿದೆ. ಆಗ ‘ಹುಲಿ ಜಾನಪದ’ಇರುವುದು ತಿಳಿಯಿತು. ಈ ಸಂಗತಿ ಕುತೂಹಲವನ್ನೂ ಮೂಡಿಸಿತು. ಈ ಬಗ್ಗೆ ಒಂದು ಸಂಶೋಧನೆಯನ್ನೇ ಮಾಡಬಹುದು ಅನ್ನಿಸಿತು. ಕಾಡಿನ ಪ್ರಾಣಿ ಹುಲಿಯನ್ನು ಜನಪದರು ಕಂಡಿರುವ ಬಗೆ ವಿಶಿಷ್ಟವಾಗಿದೆ. ಹುಲಿಯೊಂದು ಮನುಷ್ಯರನ್ನು ತಿನ್ನಬಲ್ಲ ಕ್ರೂರ ಪ್ರಾಣಿ. ಈ ಹುಲಿ ಜಾನಪದ ಪರಂಪರೆಯಲ್ಲಿ ಯಾಕಿಷ್ಟು ಸ್ಥಾನ ಪಡೆದಿದೆ ಎಂಬ ಪ್ರಶ್ನೆ ಹುಟ್ಟಿಸಿಕೊಂಡು ಹುಡುಕಿದರೆ ಭಿನ್ನ ಆಯಾಮಗಳು ಹೊಳೆಯುತ್ತವೆ. ಅದರ ಒಂದಷ್ಟು ಎಳೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.
ಹಳ್ಳಿಗಳಲ್ಲಿ ಹುಲಿಮನಿ ಎಂಬುದೊಂದು ಆಟವಿದೆ. ಆಟದ ಚಿತ್ರ ಒಂದು ತ್ರಿಭುಜಾಕೃತಿಯಲ್ಲಿ ಅಡ್ಡ ಮೂರು ಗೆರೆ ಎಳೆದ ಸ್ವರೂಪದಲ್ಲಿರುತ್ತದೆ. ಇದಕ್ಕೆ ಹುಲಿಕುರಿ ಆಟ ಎಂತಲೂ ಕರೆಯುತ್ತಾರೆ. ಎದುರುಬದುರಾಗಿ ಇಬ್ಬರು ಈ ಆಟವನ್ನು ಆಡಬಹುದು. ಹುಲಿಯನ್ನು ಗುರುತಿಸಲು ದೊಡ್ಡ ಕಲ್ಲುಗಳಿದ್ದರೆ, ಕುರಿಯನ್ನು ಸಣ್ಣ ಕಲ್ಲುಗಳಲ್ಲಿ ಗುರುತಿಸಲಾಗುತ್ತದೆ. ಒಬ್ಬ ಹುಲಿಯನ್ನೂ, ಮತ್ತೊಬ್ಬ ಕುರಿಗಳನ್ನು ನಡೆಸಬೇಕು. ಹುಲಿಗೆ ಕುರಿ ಅಡ್ಡ ಬಂದರೆ ನುಂಗುತ್ತದೆ. ಕುರಿಗಳು ಚಾಕಚಕ್ಯತೆಯಿಂದ ತಿನ್ನಲು ಅವಕಾಶವಾಗದ ಹಾಗೆ ಹುಲಿಯನ್ನು ಕಟ್ಟಿ ಹಾಕಬೇಕು. ಹುಲಿ ಎಲ್ಲಾ ಕುರಿಗಳನ್ನು ನುಂಗಿದರೆ ಗೆದ್ದಂತೆ. ಅದನ್ನು ಕಟ್ಟಿ ಹಾಕಿದರೆ ಕುರಿಗಳು ಗೆದ್ದಂತೆ. ಇದೊಂದು ರೀತಿ ಹಾವು ಏಣಿಯ ಆಟವನ್ನು ಹೋಲುತ್ತದೆ. ಈ ಆಟದಲ್ಲಿ ಹುಲಿಯೂ ಕುರಿಗಳ ಮುಂದೆ ಸೋಲನ್ನಪ್ಪಬೇಕಾಗುತ್ತದೆ. ಈ ಆಟವು ಜನರಲ್ಲಿ ಹುಲಿಯನ್ನೂ ಸೋಲಿಸಬಹುದು ಎನ್ನುವ ಭರವಸೆಯನ್ನು ಗಟ್ಟಿಗೊಳಿಸಲು ಅಥವಾ ಹುಲಿಯ ಬಗೆಗಿನ ಭಯ ಹೋಗಲಾಡಿಸಲು ಹುಟ್ಟಿಕೊಂಡಂತಿದೆ. ಇಂತಹದ್ದೆ ಜನಪದ ಆಟಗಳಲ್ಲಿಯೂ ಹುಲಿಯ ಸಂಕೇತಗಳು ಬಳಕೆಯಾಗಿರುವುದನ್ನು ನೋಡಬಹುದು.
ಉತ್ತರ ಕರ್ನಾಟಕ ಹೈದರಬಾದ್ ಕರ್ನಾಟಕದಲ್ಲಿ ಮೊಹರಂ ಹಬ್ಬದ ಸಂದರ್ಭಕ್ಕೆ ವಾರಗಟ್ಟಲೆ ಹುಲಿವೇಷಗಳು ಗೆಜ್ಜೆಗಳನ್ನು ಝಲ್ ಝಲ್ ಎನ್ನಿಸಿಕೊಂಡು ಸುತ್ತುತ್ತವೆ. ಆಗ ಅಕ್ಷರಶಃ ಕಾಡಿನ ಹುಲಿಗಳು ನಾಡಿಗೆ ಮರಳಿದ ಅನುಭವವಾಗುತ್ತದೆ. ಮೈಯಲ್ಲಿ ಆರಾಮಿಲ್ಲದಿದ್ದರೆ, ಏನಾದರೂ ಕೇಡಾದರೆ ಹುಲಿ ವೇಷ ಹಾಕುವುದಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ಹೀಗಾಗಿ ಆರು ವರ್ಷದ ಮಗುವಿನಿಂದ, ಎಪ್ಪತ್ತು ವರ್ಷದ ಅಜ್ಜನವರೆಗೆ ನಾನಾ ವಯೋಮಾನದ ಹುಲಿಗಳು ಕಾಣಸಿಗುತ್ತವೆ. ಆರೇಳು ದಿನವಿರುತ್ತಿದ್ದ ವೇಷ ಈಗ ಎರಡು ದಿನಕ್ಕೆ ಇಳಿದಿದೆ. ಅಂತೆಯೇ ಕೇವಲ ಕೈಗೆ, ಮುಖಕ್ಕಷ್ಟೆ ಬಣ್ಣ ಹಚ್ಚಿಕೊಳ್ಳುತ್ತಲೂ ಆಚರಣೆ ಸಾಂಕೇತಿಕವಾಗುತ್ತಿದೆ. ಈ ಹಬ್ಬವನ್ನು ಹೊರತು ಪಡಿಸಿದರೆ ಕರಾವಳಿ ಪ್ರದೇಶದಲ್ಲಿ ನವರಾತ್ರಿಗೆ, ಉಡುಪಿ ಭಾಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಹುಲಿ ವೇಷ ಹಾಕುವುದಿದೆ. ಉಡುಪಿಯ ಯತಿಯೊಬ್ಬರು ಹುಲಿಯನ್ನು ಎದುರಿಸಿದ್ದರ ಸಾಂಕೇತಿಕವಾಗಿ ಹುಲಿ ವೇಷ ಹಾಕುವುದಾಗಿ ಈ ಭಾಗದ ಜನ ಹೇಳುತ್ತಾರೆ.
ಮನುಷ್ಯರಿಗೆ ಹುಲಿಯ ಶಕ್ತಿಯನ್ನು ಸಮೀಕರಿಸಿ ಹುಲಿ ಎಂಬ ಗುಣವಾಚಕ ಸೇರಿಸಿ ಕರೆವ ವಾಡಿಕೆ ಇದೆ. ಇದು ರಾಜ ಮಹಾರಾಜರುಗಳನ್ನು ಒಳಗೊಂಡಂತೆ ಸಾಮಾನ್ಯ ಜನ ಸಮುದಾಯದಲ್ಲೂ ಮಂದುವರಿದಿದೆ. ಕರ್ನಾಟಕದ ಚರಿತ್ರೆ ನೋಡುವಾಗ ನಮಗೆ ಹೊಯ್ಸಳ ನೆನಪಾಗುತ್ತಾನೆ. ದ್ವಾರಸಮುದ್ರದ ಹೊಯ್ಸಳರ ಸಳನ ಬಗ್ಗೆ ಹುಲಿಯನ್ನು ಆಯುಧಗಳಿಲ್ಲಗೆ ಹೋರಾಡಿ ಕೊಂದ ಎನ್ನುವ ಕಥೆ ಇದೆ. ಹಾಗಾಗಿ ನಾವು ಸಳ ಹುಲಿಯೊಂದಿಗೆ ಹೋರಾಡಿದ ಶಿಲ್ಪವನ್ನೂ ನೋಡುತ್ತೇವೆ. ಅಂತೆಯೇ ಟಿಪ್ಪು ಸುಲ್ತಾನನ್ನು ಮೈಸೂರು ಹುಲಿ ಎಂದೇ ಕರೆಯಲಾಗುತ್ತದೆ. ಇದರ ಹಿಂದೆ ಟಿಪ್ಪು ಹುಲಿಯ ಜತೆ ಹೋರಾಡಿದ ಕಥನವೊಂದಿದೆ. ನಾವೀಗ ಟಿಪ್ಪುವಿನ ಚಿತ್ರವನ್ನು ಕಲ್ಪಿಸಿಕೊಂಡಾಗಲೂ ಹುಲಿಯ ಜತೆ ಹೋರಾಡುವ ಚಿತ್ರವೇ ಕಣ್ಣಮುಂದೆ ಬರುತ್ತದೆ. ಚಿತ್ರದುರ್ಗದ ಮದಕರಿ ನಾಯಕನನ್ನು ಈ ಭಾಗದ ಬೇಡರು ‘ದುರ್ಗದ ಹುಲಿ’ ಎಂದು ಗುರುತಿಸುತ್ತಾರೆ. ಈಚೆಗೆ ತೀರಿದ ಭಾಳಾಟಾಕ್ರೆಯನ್ನು ಮಹರಾಷ್ಟ್ರಿಗರು ಹುಲಿ ಎಂದೇ ಸಂಭೋದಿಸುತ್ತಿದ್ದರು. ಕನ್ನಡದ ಪ್ರಸಿದ್ಧ ನಟ ಪ್ರಭಾಕರ್ ಅವರಿಗೆ ಟೈಗರ್ ಪದ ಸೇರದಿದ್ದರೆ ಅವರ ಚಿತ್ರ ಕಣ್ಣಮುಂದೆ ಬರುವುದೇ ಇಲ್ಲ.
ಫೋಟೋ ಕೃಪೆ : ಜಯಶಂಕರ್ ಮಾದಪ್ಪಾಡಿ
ಇನ್ನು ಉತ್ತರ ಕರ್ನಾಟಕ ಹೈದರಬಾದ್ ಕರ್ನಾಟಕದಲ್ಲಿ ಹುಲಿ ದುರುಗಪ್ಪ, ಹುಲಿ ಕರಿಯಪ್ಪ, ಹುಲಿ ಹನುಮ ಮುಂತಾಡ ಅಡ್ಡ ಹೆಸರುಗಳಿರುವುದಿದೆ. ಅದು ಅವರು ರಿವಾಯ್ತ ಹಬ್ಬಕ್ಕೆ ಹುಲಿ ವೇಷ ಹಾಕಿ ತುಂಬಾ ಪ್ರಸಿದ್ಧಿಯನ್ನು ಪಡೆದ ಕಾರಣಕ್ಕೆ ಬಂದ ಹೆಸರುಗಳಾಗಿವೆ. ಉಡುಪಿ ಮಂಗಳೂರು ಕಡೆ ಶ್ರಿಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹುಲಿ ವೇಷ ಹಾಕಲು ಪ್ರಸಿದ್ದಿ ಪಡೆದವರನ್ನು ಪಿಲಿ (ಹುಲಿಯ ತುಳುಪದ) ಎಂಬ ಗುಣವಾಚಕವನ್ನು ಹಾಕಿ ‘ಪಿಲಿ ಲಕ್ಷ್ಮಣ’, ‘ಪಿಲಿ ಸುಂದರ’ ಮುಂತಾಗಿ ಕರೆಯುತ್ತಾರೆ. ಇನ್ನು ಕಾಪಾಲಿಕರಲ್ಲಿ ಹುಲಿಗೊಂದೆಪ್ಪ, ಹುಲಿಯಾ ಮುಂತಾದ ಹೆಸರನ್ನು ಇಟ್ಟುಕೊಳ್ಳುತ್ತಾರೆ.
ದೇವರುಗಳ ಹುಲಿ ಸವಾರಿ ಆಚರಣೆಗಳಲ್ಲಿ ದೊಡ್ಡ ಮಟ್ಟದಲ್ಲಿ ಕಂಡು ಬರುತ್ತದೆ. ಮಂಡ್ಯ ಭಾಗದ ಮುತ್ತತ್ತಿರಾಯನ ಮೂರ್ತಿಯನ್ನು ಹುಲಿಯ ಗೊಂಬೆಯ ಮೇಲೆ ಇರಿಸಿ, ಮೆರವಣಿಗೆ ಮಾಡುವುದೇ ಹುಲಿವಾಹನ ಸೇವೆಯಾಗಿದೆ. ಹುಲಿಯ ಗೊಂಬೆಯ ಮೇಲೆ ಕೂರಿಸಿದ ಮುತ್ತತ್ತಿರಾಯನನ್ನು ದೇವಾಲಯ ಸುತ್ತಿಸುವುದು, ಹೊಳೆದಂಡೆಗೆ ತೆರಳಿ ಗುಡಿಗೆ ಮರಳುವುದಿದೆ. ಇಂತಹ ಸಂದರ್ಭಗಳಲ್ಲಿ ಹುಲಿ ತುಳಿಸುತ್ತೇವೆಂಬ ಹರಕೆ ಹೊತ್ತವರು ಹುಲಿವಾಹನ ಹೊತ್ತವರ ಕಾಲು ತುಳಿತಕ್ಕೆ ಒಳಗಾಗುತ್ತಾರೆ. ಇದು ಸಿದ್ಧಪ್ಪಾಜಿ ಹಾಗೂ ಮಲೆಮಾದೇಶ್ವರನ ದೇವಾಲಯಗಳಲ್ಲೂ ಕಾಣುತ್ತದೆ. ಮಲೆ ಮಾದಪ್ಪ, ಶಬರಿಯ ಅಯ್ಯಪ್ಪ ಸ್ವತಃ ಹುಲಿವಾಹನ ಹೊಂದಿದವರು. ಹುಲಿವಾಹನದ ಹತ್ತಾರು ದೈವಗಳ ಆಚರಣೆಯನ್ನು ಇದರ ಜತೆ ಲಗತ್ತಿಸಬಹುದು.
ಕರ್ನಾಟಕದ ಸೂಫಿಸಂತರ ಕಥೆಗಳಲ್ಲಿ ಮತ್ತೆಮತ್ತೆ ಕಾಣಿಸುವ ಮಿತ್ ಎಂದರೆ, ಒಬ್ಬ ಸಂತ ಹುಲಿಯ ಮೇಲೆ ಕುಳಿತುಕೊಂಡು ಮತ್ತೊಬ್ಬ ಸಂತನನ್ನು ಭೇಟಿಮಾಡಲು ಬರುವುದು. ಹುಲಿಸವಾರ ಸಂತನು ಸಾಮಾನ್ಯವಾಗಿ ಹೊರಗಿನಿಂದ ಬರುವವನು, ಪ್ರತಿಷ್ಠಿತನಾದವನು, ಜ್ಞಾನಸಾಧನೆಗಳಲ್ಲಿ ಹೆಸರು ಪಡೆದ ಅಭಿಮಾನ ಉಳ್ಳವನು. ಭೇಟಿಮಾಡಿಸಿ ಕೊಳ್ಳುವ ಸಂತ ಸ್ಥಳೀಕನು, ಊರಮಟ್ಟಿಗೆ ಪ್ರಭಾವವುಳ್ಳವನು. ಅವನ ಶಕ್ತಿಯೆಂದರೆ ಊರ ಬೆಂಬಲವೇ. ಈ ನಾಟಕೀಯ ಮುಖಾಮುಖಿಯಲ್ಲಿ ಊರಸಂತನು, ಮದೋನ್ಮತ್ತನಾಗಿ ಬಂದವನನ್ನು ಭೇಟಿ ಮಾಡಲು, ತಾನು ಕುಳಿತ ಕಟ್ಟೆಯನ್ನೇ ನಡೆಸಿಕೊಂಡು ಹೋಗುತ್ತಾನೆ. ಆಡಂಬರದಿಂದ ಬಂದ ಹುಲಿಸವಾರ ಸಂತನು, ಜೀವವಿಲ್ಲದ ಕಟ್ಟೆಯನ್ನು ನಡೆಸಿದ ಊರಸಂತನ ಪವಾಡಶಕ್ತಿಗೆ ಬೆಚ್ಚಿ ಬೆರಗಾಗುತ್ತಾನೆ. ಮಣಿಯುತ್ತಾನೆ. ಗರ್ವಬಿಟ್ಟು ಊರ ಸಂತನನ್ನು ಗೆಳೆಯನಾಗಿ ಸ್ವೀಕರಿಸುತ್ತಾನೆ. ಸೂಫಿ ದೀಕ್ಷೆಯ ಕುರುಹುಗಳಾದ ’ಶೈಲಿ ಶಮಲ ಶಿಲೇಮಣಿ’ಗಳನ್ನು ಕೊಟ್ಟು ಗೌರವಿಸುತ್ತಾನೆ.
ಈ ಮುಖಾಮುಖಿಯ ಮಿತ್, ಇಬ್ಬರು ಸಂತರ ವೈಯಕ್ತಿಕ ಬಲಾಬಲಗಳ ಪರೀಕ್ಷೆಗಳನ್ನು ಸೂಚಿಸುತ್ತಿರಬಹುದು. ಎರಡು ವಿಭಿನ್ನ ಚಿಂತನೆ ಅಥವಾ ಸಂಸ್ಕೃತಿಗಳು ಪರಸ್ಪರ ಎದುರಾಗಿರುವುದನ್ನು ಸೂಚಿಸುತ್ತಿರಬಹುದು. ಪರಿಣಾಮದಲ್ಲಿ ಮಾತ್ರ ಇವು ದ್ವೇಷ ಅಪಮಾನ ನೋವುಗಳಲ್ಲಿ ಕೊನೆಗೊಳ್ಳುವುದಿಲ್ಲ. ಗುರುಶಿಷ್ಯತ್ವದ ಇಲ್ಲವೆ ಗೆಳೆತನದ ಸಂಬಂಧಗಳಲ್ಲಿ ಮುಕ್ತಾಯವಾಗುತ್ತವೆ. ಇದು ಮಾರ್ಮಿಕ ಸಂಗತಿ. ಕರ್ನಾಟಕದ ಪ್ರಸಿದ್ಧ ಸೂಫಿಸಂತ ಗುಲಬರ್ಗೆಯ ಬಂದೇನವಾಜ ಹಾಗೂ ಸಾವಳಗಿ ಶಿವಲಿಂಗನ ಮುಖಾಮುಖಿಯ ಪರಿಣಾಮ ಗುರುಶಿಷ್ಯತ್ವದಲ್ಲಿ ಮುಗಿಯುತ್ತದೆ. ಬಂದೇನವಾಜನು ಶಿವಲಿಂಗನ ಕಾಲದಲ್ಲಿ ಇದ್ದನೆ, ನಿಜವಾಗಿಯೂ ಹುಲಿಯಮೇಲೆ ಬಂದನೆ, ಕಟ್ಟೆ ಜೀವಪಡೆದು ಚಲಿಸಿತೆ – ಇವು ಯಾವುವೂ ಸಮುದಾಯಗಳಿಗೆ ಬಾಧಿಸುವ ಪ್ರಶ್ನೆಗಳಲ್ಲ. (ನೋಡಿ: ರಹಮತ್ ತರೀಕೆರೆ, ಕರ್ನಾಟಕದ ಸೂಫಿಗಳು)
ಕರ್ನಾಟಕದ ರಾವುಳ ಜೋಗಿಗಳಲ್ಲಿ ದೀಕ್ಷೆಯನ್ನು ಯೋಗಮುಂಜಿ ಎನ್ನುತ್ತಾರೆ. ಸಜ್ಜಿಗದ ಹಿಟ್ಟಿನಿಂದ ಮಾಡಿದ ಸಿಂಹ ಹುಲಿ ಕುರಿಗಳ ಪ್ರತಿಮೆಗಳಿಗೆ ಮಂತ್ರದಿಂದ ಪ್ರಾಣಪ್ರತಿಷ್ಠೆ ಮಾಡಿ, ಅವನ್ನು ಖಡ್ಗದಿಂದ ಬಲಿಕೊಡಬೇಕು. ಕರ್ನಾಟಕದ ಮೊಹರಂ ಆಚರಣೆಯಲ್ಲಿ ಹುಲಿಯ ಪ್ರತಿಮೆಯನ್ನು ದೇವರಿಗೆ ಅರ್ಪಿಸುವ ಹರಕೆಯಿದೆ. ಹೀಗೆ ಹುಲಿಯನ್ನು ಅರ್ಪಿಸುವುದರಿಂದ ಮನೆಗೆ ಯಾವುದೇ ಕೇಡಿನ ಸಂಗತಿಗಳು ಬರುವುದಿಲ್ಲ ಎಂದು ನಂಬುವುದಿದೆ. ಹುಲಿ ಹೆಸರನ್ನು ಒಳಗೊಂಡ ಸ್ಥಳನಾಮಗಳೂ ಇವೆ. ನಾಥಪಂಥದ ಹುಲಿಗೊಂದಿ (ಚಿತ್ರದುರ್ಗ) ಹುಲಿ ಹೈದರ (ಗಂಗಾವತಿ) ಇಂತಹ ನೂರಾರು ಊರುಗಳ ಸ್ಥಳನಾಮಗಳನ್ನು ಉಲ್ಲೇಖಿಸಬಹುದು. ಇಂತಹದ್ದೇ ಸ್ಥಳನಾಮಗಳ ಹಿಂದೆ ಹುಲಿಗೆ ಸಂಬಂಧಿಸಿದ ಕಥನಗಳಿರುವುದನ್ನು ನೋಡಬಹುದು.
ಕನ್ನಡದಲ್ಲಿ ಜಾನಪದ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ‘ಪುಣ್ಯಕೋಟಿ’ ಕಥನಗೀತೆ ಹೆಚ್ಚು ಚರ್ಚೆಗೆ ವಿವಾದಕ್ಕೆ ಒಳಗಾಗಿದೆ. ಇದರಲ್ಲಿ ಒಂದು ವಾದ ಭಾರತೀಯ ಸಂಸ್ಕೃತಿಯ ಹಿರಿಮೆಯ ಸಂಕೇತವಾಗಿದೆ. ಪುಣ್ಯಕೋಟಿ ಕತೆಗೂ ಕರ್ಮಣ್ಯೇವಾಧಿಕಾರಸ್ತೇ ಎಂಬ ವಿಧಿಗೂ, ದುಡಿವವರ್ಗಕ್ಕೆ ಸೇವೆದಾಸ್ಯಗಳನ್ನು ಕಡ್ಡಾಯಗೊಳಿಸುವ ಧರ್ಮಶಾಸ್ತ್ರಗಳಿಗೂ ಒಳಸಂಬಂಧ ಇದೆ. ಇಷ್ಟಂತೂ ನಿಜ, ವ್ಯವಸ್ಥೆ ಹೂಡುವ ಬೋನುಗಳಿಗೆಲ್ಲ ಜನ ಹೋಗಿಬೀಳುವುದಿಲ್ಲ. ತಮ್ಮನ್ನು ಕೊಲ್ಲಲುಬರುವ ಹುಲಿಯನ್ನು ಏನೇನೋ ಉಪಾಯದಿಂದ ಬೀಳಿಸಿ ಅಥವಾ ಸಾಯಿಸಿ ತಪ್ಪಿಸಿಕೊಂಡುಬರುವ ಕಿಲಾಡಿಗಳ ಜನಪದ ಕತೆಗಳಿವೆ. (ರಹಮತ್ ತರೀಕೆರೆ: ಮರದೊಳಗಣ ಕಿಚ್ಚು) ನೊಣವೊಂದು ಹುಲಿಯನ್ನು ಸೋಲಿಸುವ ಕಥನವೊಂದು ಕುತೂಹಲಕಾರಿಯಾಗಿದೆ.
ಅರಣ್ಯವಾಸಿ ಬುಡಕಟ್ಟು ಸಮುದಾಯಗಳಲ್ಲಿ ಹುಲಿ ಒಂದು ಆರಾಧಿಸುವ ದೈವವಾಗಿ, ತಮ್ಮ ಸಾಂಸ್ಕೃತಿಕ ನಾಯಕರ ಸಾಕು ಪ್ರಾಣಿಯಾಗಿಯೂ ಬರುತ್ತದೆ. ಅದು ಅವರ ಮೌಖಿಕ ಕಥನಗಳಲ್ಲಿ ಉಲ್ಲೇಖವಾಗುತ್ತದೆ. ಸಿದ್ಧಿ ಸಮುದಾಯದ ಒಂದು ಕಥೆಯಲ್ಲಿ ಒಬ್ಬ ಧಣಿ ತನ್ನ ಸಿದ್ಧಿ ಆಳನ್ನು ಕರೆದು ಹುಲಿ ಹೊಡೆದುಕೊಂಡು ಬಾ. ಇಲ್ಲದಿದ್ದರೆ ನಿನ್ನನ್ನು ಕೊಂದೇನು ಎನ್ನುತ್ತಾನೆ. ಹುಲಿ ಹೊಡೆದುಕೊಂಡು ಬಂದರೆ ಆಳಿಗೆ ಸಿಗುವುದು ಒಂದಿಷ್ಟು ಅಕ್ಕಿ ಹಾಗೂ ಚಿಲ್ಲರೆಕಾಸು. ನೂರಾರು ರೂಪಾಯಿ ಹುಲಿಗೆ ಇಷ್ಟು ಕಡಿಮೆ ಬಹುಮಾನದ ಕೊಟ್ಟನಲ್ಲಾ ಎಂದು ಹುಲಿಹೊಡೆದ ಧೀರ, ಧಣಿಯ ಮುಂದೆ ಇಲಿಯಂತೆ ಗೊಣಗಿಕೊಂಡು ಹೋಗುತ್ತಾನೆ. ಇಂತಹ ಭಿನ್ನ ಪಾಠಾಂತರದ ಕಥೆಗಳು ಸಿಗುತ್ತವೆ.

ಗುಲಬರ್ಗಾ ಜಿಲ್ಲೆ ಆಳಂದ ತಾಲ್ಲೂಕಿನ ದೇಗಾಂವ ಗ್ರಾಮದಲ್ಲಿ ಹುಲಿ ಓಡಿಸುವ ಒಂದು ವಿಶಿಷ್ಟ ಜಾತ್ರೆ ನಡೆಯುತ್ತದೆ. ಇದು ಈ ಊರಲ್ಲಿನ ಶೇಕ್ ಸಾಹೇಬರ ಹೆಸರಲ್ಲಿ ನಡೆವ ಉರುಸಿನ ಜಾತ್ರೆ. ಕಾಲಿಗೆ ಚಕ್ರವಿರುವ ಮರದ ಆಕರ್ಷಕ ಹುಲಿಯೊಂದನ್ನು ಈ ಆಚರಣೆಗಾಗಿ ಸಿದ್ದಪಡಿಸಿರುತ್ತಾರೆ. ಈ ಹುಲಿಯ ನಾಲ್ಕು ಕಾಲಿಗೆ ಮದ್ದು ತುಂಬಿರುತ್ತಾರೆ. ಆಚರಣೆಯ ಭಾಗವಾಗಿ ಈ ಮದ್ದಿಗೆ ಬೆಂಕಿ ಇಡುತ್ತಲೂ ಜೀವಂತ ಹುಲಿಯಂತೆ ಹುಲಿ ಓಡುತ್ತಾ ಮುಂದಿನ ಕಂಬವೊಂದಕ್ಕೆ ಡಿಕ್ಕಿ ಹೊಡೆದು ನಿಲ್ಲುತ್ತದೆ. ಹೀಗೆ ಕಾಡಿನ ಪ್ರಾಣಿಯನ್ನು ಓಡಿಸುವ ಆಚರಣೆ ಹಲವೆಡೆ ಇದೆ. ಸಂಕ್ರಾಂತಿ ಹಬ್ಬದಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕದಬಳ್ಳಿಯಲ್ಲಿ ಊರಿನವರು ಬೇಟೆಗೆ ಹೋಗಿ ಜೀವಂತ ನರಿಗಳನ್ನು ಹಿಡಿದು ತಂದು, ಅವುಗಳಿಗೆ ಪಟಾಕಿ ಹಚ್ಚಿ ಕಾಡಿಗೆ ಓಡಿಸುತ್ತಿದ್ದರು. ಈ ಆಚರಣೆ ಈಚೆಗೆ ನಿಷೇಧಿಸಲಾಗಿದೆ. ಹೀಗೆ ಕಾಡು ಪ್ರಾಣಿಗಳನ್ನು ನಾಡಿನಿಂದ ಓಡಿಸುವ ಆಚರಣೆಗಳು ಸಾಂಕೇತಿಕವಾಗಿ ಕಾಡು-ನಾಡಿನ ಸಂಘರ್ಷ ಮತ್ತು ಹೊಂದಾಣಿಕೆಯನ್ನು ಸೂಚಿಸುವಂತಿವೆ.
ಜನಪದ ಪರಂಪರೆ ಮತ್ತು ಕಥನಗಳಲ್ಲಿ ಹುಲಿ ವಹಿಸುವ ಪಾತ್ರಕ್ಕೂ ಸಿಂಹ ವಹಿಸುವ ಪಾತ್ರಕ್ಕೂ ವ್ಯತ್ಯಾಸವಿದೆ. ಕುತೂಹಲವೆಂದರೆ ಯಾವ ಶಿಷ್ಟದೇವತೆಯೂ ಹುಲಿಯನ್ನು ವಾಹನ ಮಾಡಿಕೊಂಡಿಲ್ಲ. ಆದರೆ ಜನಪದ ಹುಲಿಗೆಮ್ಮನಂಥ ಸ್ಥಳೀಯ ದೇವತೆಗಳಿವೆ. ಹುಲಿ ಕ್ರೂರ ಪ್ರಾಣಿ ಎಂಬ ಭಾವನೆ ಇದೆ. ಆದರೆ ಸಿಂಹ ರಾಜಗಾಂಭೀರ್ಯಕ್ಕೆ ಹೆಸರಾದದ್ದು. ದಕ್ಷಿಣ ಭಾರತದ ಕಾಡುಗಳಲ್ಲಿ ಸಿಂಹಗಳಿಲ್ಲದಿರುವುದಕ್ಕೂ ಕಥನ ಮತ್ತು ಆಚರಣೆಗಳಲ್ಲಿ ಸಿಂಹದ ಗೈರು ಹಾಜರಿಗೂ ಸಂಬಂಧವಿದ್ದಂತಿದೆ. ಮೌಖಿಕ ಕತೆಗಳಲ್ಲಿ ಹುಲಿಸವಾರಿ ಮಾಡುವ ನಾಯಕ ಸವಾಲನ್ನು ಎದುರಿಸುವವನಾಗಿರುತ್ತಾನೆ. ’ಹುಲಿ ಸವಾರಿ’ ಎಂಬ ನುಡಿಗಟ್ಟೇ ಇಂಥ ಸವಾರಿಯ ಅಪಾಯವನ್ನೂ ಹೇಳುತ್ತದೆ. ಇದನ್ನು ಮಲೆ ಮಾದಪ್ಪನ ಕಥನದಲ್ಲಿ ಪರಿಣಾಮಕಾರಿಯಾಗಿ ನೋಡಬಹುದು. ಮಾದಪ್ಪನಂಥ ದಲಿತ ವ್ಯಕ್ತಿ ತನ್ನ ಸುತ್ತಲ ಸಮಾಜದ ಜಾತಿ ಪ್ರೇರಿತ ಸವಾಲುಗಳನ್ನು ಎದುರಿಸಿ ಗೆದ್ದದ್ದು ಕೂಡ ಹುಲಿಸವಾರಿಯೇ. ಪ್ರತಿಭಟನೆಯ, ಛಲದ ಹಾದಿ ಹಿಡಿಯುವುದನ್ನು ಹುಲಿಸವಾರಿ ರೂಪಾಕಾತ್ಮಕವಾಗಿ ವಿವರಿಸುವಂತಿದೆ. ಅಥವ, ನರಭಕ್ಷಕ ಹುಲಿಯಾದರೂ ನೆರವಿತ್ತೀತು. ಮನುಷ್ಯ ಸಮಾಜವಲ್ಲ ಎಂಬ ವ್ಯಾಖ್ಯಾನವಾಗುವಂತಿದೆ. ಮಾದಪ್ಪನಿಗೆ ಒಕ್ಕಲುಗಳನ್ನು ಪಡೆಯಲು, ಮಠಗಳ ಯಜಮಾನಿಕೆಯನ್ನು ವಿರೋಧಿಸಲು ಹುಲಿ ಹಾವುಗಳು ಸಹಾಯ ಮಾಡುತ್ತವೆಯೆ ಹೊರತು ಇತರ ಮನುಷ್ಯರಲ್ಲ. ಹಾಗೆಯೇ ಹಸುವಿನ ಸಂಗತಿ ಕೂಡ. ವ್ಯವಸಾಯ ಕಸುಬು ಪ್ರಮುಖವಾಗಿದ್ದ ಸಮಾಜದಲ್ಲಿ ಸೃಷ್ಟಿಯಾದ ಕತೆಗಳಲ್ಲಿ ಮಾತ್ರ ಹಸು ಒಂದು ಮೌಲ್ಯದ ಸಂಕೇತವಾಗಬಲ್ಲದು. (ನೋಡಿ:ಮಾದಪ್ಪನ ಕತೆಯ ಸುತ್ತಮುತ್ತ, ಓ ಎಲ್ ನಾಗಭೂಷಣಸ್ವಾಮಿ)
ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ‘ಹುಲಿ’ ಪದ ಒಂದು ನುಡಿಗಟ್ಟಾಗಿ ಬಳಕೆಯಾಗಿದೆ ಆ ಬಗ್ಗೆಯೇ ಒಂದು ಕುತೂಹಲಕಾರಿಯಾದ ಅಧ್ಯಯನ ಮಾಡಬಹುದಾಗಿದೆ. ಕನ್ನಡದ ಮಹತ್ವದ ಕವಿ ಕುಮಾರವ್ಯಾಸನು ತನ್ನ ಭಾರತದಲ್ಲಿ `ಅರಸು ರಾಕ್ಷಸ, ಮಂತ್ರಿ ಮೊರೆವ ಹುಲಿ, ಪರಿವಾರಹದ್ದಿನ ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು’ ಎಂದಿದ್ದಾನೆ. ಈ ವಾಕ್ಯ ಪ್ರಭುತ್ವದ ಜತೆಗಿನ ಸಾಹಿತಿ ಕವಿಯೊಬ್ಬರ ಸಂಬಂಧದ ಸ್ವರೂಪವನ್ನು ವಿವರಿಸುವಾಗ ಮತ್ತೆ ಮತ್ತೆ ಬಳಕೆಯಾಗಿದೆ. ಅಕ್ಕಮಹಾದೇವಿ ತನ್ನ ವಚನದಲ್ಲಿ ‘ಅತ್ತೆ ಮಾಯೆ, ಮಾವ ಸಂಸಾರಿ/ ಮೂವರು ಮೈದುನರು ಹುಲಿಯಂಥವರು/ನಾಲ್ವರು ನಗೆವೆಣ್ಣು ಕೇಳು ಕೆಳದಿ’ ಎಂಬ ರೂಪಕದಲ್ಲಿ ಹುಲಿ ಸಮೀಕರಣವಿದೆ. ಚನ್ನಮಲ್ಲಿಕಾರ್ಜುನನ್ನು ಗುಣಗಾನ ಮಾಡುವಾಗ ‘ಹುಲಿಚರ್ಮ ಹೊದ್ದರೂ ಹಾಲು ಮನಸಿನ ಹುಡುಗ’ ಎಂದು ಕರೆಯುತ್ತಾಳೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ನಾಯಿಯನ್ನೆ ಹುಲಿಯೆಂದು ಕರೆಯುವುದಿದೆ. ಗುತ್ತಿ ನಾಯಿಯನ್ನು ಹುಲಿಯಾ ಎಂದೇ ಕರೆಯುತ್ತಾನೆ. ಒಂದು ಶಕ್ತ ರೂಪಕವಾಗಿ ‘ಹುಲಿಕಲ್ಲು ಬೆಟ್ಟದ’ ಚಿತ್ರಣ ಬರುತ್ತದೆ. ತೇಜಸ್ವಿಯವರ ‘ಹುಲಿಯೂರಿನ ಸರಹದ್ದು’ ತರಹದ ರೂಪಕದ ಕಥೆಗಳನ್ನು ನೋಡಬಹುದು. ಚಂದ್ರಶೇಖರ ಕಂಬಾರರ ‘ಹೇಳತೇನ ಕೇಳ’ ಕಾವ್ಯವನ್ನು ಒಳಗೊಂಡಂತೆ ಹುಲಿಬೇಟೆಯ ಚಿತ್ರಣ ಮತ್ತೆ ಮತ್ತೆ ಬರುತ್ತದೆ. ವಿವೇಕ ಶಾನುಭಾಗ ಅವರ ‘ಹುಲಿ ಸವಾರಿ’ ಕಥೆಯತನಕ ಇಂತಹ ನೂರಾರು ಉಲ್ಲೇಖಗಳನ್ನು ಕನ್ನಡ ಸಾಹಿತ್ಯದ ಪಠ್ಯಗಳಿಂದ ಹೆಕ್ಕಿ ಕೊಡಬಹುದು. ಇದು ಕೂಡ ಜನಪದ ಕಥನ ಮತ್ತು ಕಾವ್ಯ ಪರಂಪರೆಯಲ್ಲಿ ಹುಲಿಯನ್ನು ಮುಖಾಮುಖಿ ಮಾಡಿದ ಆಧುನಿಕ ಮನಸ್ಸಿನ ಆಯಾಮವಾಗಿಯೂ ನೋಡಬಹುದು.
ಗೋವಿನ ಹಾಡಿನ ತರಹದ ‘ಹುಲಿ ದೇವರ ಹಾಡು’ ಮುಂತಾದ ಜನಪದ ಗೀತೆ ಕಥನಗೀತೆ ಲಾವಣಿಗಳಿವೆ. ಈ ಗೀತೆಗಳು ಸಾಮಾನ್ಯವಾಗಿ ಹುಲಿಬೇಟೆಯ ಸುತ್ತದ ಘಟನಾವಳಿಗಳಿಂದ ಕೂಡಿರುತ್ತವೆ. ಇಲ್ಲಿಯೂ ರಾಜನಾಗಲಿ, ಊರಿನ ಗೌಡನಾಗಲಿ ಹುಲಿ ಬೇಟೆ ಮಾಡಿದ್ದಕ್ಕಿಂತ ಸಾಮಾನ್ಯ ಅಸಹಾಯಕ ಜನರು ಬೇಟೆಯಾಡುವುದೇ ಹೆಚ್ಚು. ಬಹುಶಃ ಈ ಕಥನಗಳು ಜನಸಾಮಾನ್ಯರೊಳಗಿನ ಅದುಮಿಟ್ಟ ಪ್ರತಿರೋಧದ ಸಂಕೇತವಾಗಿಯೂ ಹುಟ್ಟಿರಬಹುದು. ಅಂತೆಯೇ ಹುಲಿಯನ್ನು ಸಣ್ಣ ಪ್ರಾಣಿಗಳು ಸೋಲಿಸುವ ತೆರನಾದ ಜನಪದ ಕಥೆಗಳು ಸಾಕಷ್ಟಿವೆ. ಈ ತರಹದ ಗೀತೆ ಕಥನಗಳ ಸೃಷ್ಟಿಯಲ್ಲಿ ಜನ ಸಾಮಾನ್ಯರ ಪ್ರತಿರೋಧ, ಸೆಡವಿನ ಗುಣ ಪ್ರತಿ ಸಂಸ್ಕೃತಿ ಕಟ್ಟಿಕೊಳ್ಳುವ ಪೆಡುಸುತನ ಸಹಜವಾಗಿ ಮೂಡಿಬಂದಿದೆ. ಇಲ್ಲೆಲ್ಲಾ ಹುಲಿ ಜನ ಸಾಮಾನ್ಯರ ಶಕ್ತಿಯ ರೂಪಕವಾಗಿ ಒದಗಿದೆ.

ಗುರುವಾರ, ಡಿಸೆಂಬರ್ 5, 2013

ಕಥೆಗಳ ಅಜ್ಜಿ ಎಲ್ಲಿರುವಿ ?

ನಾ.ಡಿಸೋಜ

   ನಾ.ಡಿಸೋಜ ಅವರು 80 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಿಸೋಜ ಅವರ ಆಯ್ಕೆ ಪ್ರಗತಿಪರ ಚಿಂತಕರಿಗೆ ಖುಷಿ ಕೊಟ್ಟಿದೆ. ಕಾರಣ ನಾ.ಡಿ ಅವರು ರಾಜಕಾರಣ, ಲಾಭಿ ಮಾಡದೆ ತಮ್ಮಷ್ಟಕ್ಕೆ ತಾವು ಬರೆದುಕೊಂಡಿರುವ ಸಾಹಿತಿ. ಮಕ್ಕಳ ಸಾಹಿತ್ಯ, ಕಥೆ, ಕಾದಂಬರಿ, ವೈಚಾರಿಕ ಬರಹ ಹೀಗೆ ಬರಹದ ಹಲವು ಮಗ್ಗಲುಗಳಲ್ಲಿ ಲೀಲಾಜಾಲ ನಡೆದವರು. ಇಂತಹ ಡಿಸೋಜ ಅವರಿಗೆ ಕನ್ನಡ ಜಾನಪದ ಬ್ಲಾಗ್ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಕಥೆ ಹೇಳುವ ಅಜ್ಜಿಯ  ಈ ಬರಹ ಡಿಸೋಜರ ಜಾನಪದ ಗ್ರಹಿಕೆಯ ಸೂಕ್ಷ್ಮತೆಯನ್ನು ತೋರುತ್ತಿದೆ.


(ರೈಲು ಪಯಣಕ್ಕೆ ಬಂದಿದ್ದ ಅಜ್ಜಿ)

ಮೊನ್ನೆ ಸಾಗರದ ರೈಲು ನಿಲ್ದಾಣದಲ್ಲಿ ಒಂದು ಘಟನೆ ನಡೆಯಿತು. ಸುಮಾರು ೧೯೩೮ರಿಂದ ಸತತವಾಗಿ ೧೯೮೪ರ ವರೆಗೆ ತಿರುಗಾಡುತ್ತಿದ್ದ ತಾಳಗುಪ್ಪ ಬೆಂಗಳೂರು ರೈಲು ನಡುವೆ ಇಪ್ಪತ್ತು ವರ್ಷ ತನ್ನ ಓಡಾಟವನ್ನ ನಿಲ್ಲಿಸಿದ್ದು ಸೆಪ್ಟೆಂಬರ್ ೮ ರಂದು ಮತ್ತೆ ಓಡಾಟವನ್ನ ಆರಂಭಿಸಿತು. ಸಾಗರದ ಒಂದು ಸಂಸ್ಥೆ ಈ ಹೋರಾಟದ ನೇತ್ರತ್ವವನ್ನ ವಹಿಸಿ ರೈಲನ್ನ ಮತ್ತೆ ಊರ ಜನರಿಗೆ ದೊರಕಿಸಿ ಕೊಟ್ಟಿತು. ಈ ಸಂಭ್ರಮವನ್ನ ಆಚರಿಸಲು ಸಹಸ್ರ ಸಹಸ್ರ ಸಂಖ್ಯೆಯ ಜನ ನಿಲ್ದಾಣದಲ್ಲಿ ಸೇರಿದ್ದರು. ಈ ಜನರ ನಡುವೆ ಓರ್ವ ಅಜ್ಜಿ ತನ್ನ ಮೊಮ್ಮಗನನ್ನ ಕರೆದು ಕೊಂಡು ಬಂದವಳು ಅಲ್ಲಿ ಎಲ್ಲರ ಗಮನ ಸೆಳೆದಳು. ಟಿಕೇಟು ಕೊಳ್ಳಲು ಪರದಾಡುತ್ತಿದ್ದ ಅವಳನ್ನ ಗಮನಿಸಿದ ಪತ್ರಕರ್ತರು ಮಾತನಾಡಿಸಿದಾಗ ಕೆಲ ಕುತೂಹಲದ ವಿಚಾರಗಳು ಹೊರಬಿದ್ದವು.

ಆಕೆ ಹತ್ತಿರದ ಕುಗ್ವೆ ಗ್ರಾಮದ ಓರ್ವ ಸ್ವಾತಂತ್ರ್ಯ ಹೋರಾಟಗಾರನ ಹೆಂಡತಿ ಗುತ್ಯಮ್ಮ. ಅವಳ ಮೊಮ್ಮಗ ಇಂದೂಧರ ಅವಳ ಜೊತೆಯಲ್ಲಿ ಇದ್ದ. ಮೊಮ್ಮಗನನ್ನ ಸಾಗರದಿಂದ ತಾಳಗುಪ್ಪದವರೆಗೆ ರೈಲಿನಲ್ಲಿ ಕರೆದೊಯ್ಯಬೇಕೆಂದು ಆಕೆ ಬಂದಿದ್ದಳು. ಈ ವಿಚಾರ ನಿನಗೇಕೆ ಬಂತು ಎಂದು ಕೇಳಿದಾಗ ಆಕೆ "ನಾನು ನನ್ನ ಮೊಮ್ಮಗನಿಗೆ ಬಂಗಾರ, ವಜ್ರ ವೈಢೂರ್ಯ ಕೊಡಿಸಲಾರೆ. ಆದರೆ ಸಾಗರಕ್ಕೆ ರೈಲು ಬಂದ ಮೊದಲ ದಿನ ಅವನನ್ನ ಇಲ್ಲಿಂದ ತಾಳಗುಪ್ಪಕ್ಕೆ ಕರೆದೊಯ್ಯುವುದರ ಮೂಲಕ ಅವನ ಮನಸ್ಸಿನಲ್ಲಿ ತಾನು ಇಂತಹಾ ಒಂದು ದಿನ ರೈಲಿನಲ್ಲಿ ಪ್ರಯಾಣ ಮಾಡಿದೆ ಅನ್ನುವ ನೆನಪನ್ನ ಹಸಿರಾಗಿ ಇರಿಸ ಬಲ್ಲೆ, ಅವನಿಗೆ ಈ ಪ್ರಯಾಣದ ಅನುಭವವನ್ನ ನೀಡ ಬಲ್ಲೆ" ಎಂದಳು ಅಜ್ಜಿ. ರೈಲು ಬಂದು ನಿಂತಾಗ ನೆರೆದ ಜನ ಪಟಾಕಿ ಹಚ್ಚುವುದರಲ್ಲಿ, ರೈಲಿಗೆ ಪೂಜೆ ಮಾಡುವುದರಲ್ಲಿ, ಸಿಹಿ ಹಂಚುವಲ್ಲಿ, ಜಯಘೋಷ ಮಾಡುವುದರಲ್ಲಿ ನಿರತರಾಗದ್ದರೆ ಈ ಅಜ್ಜಿ ಕೆನ್ನೆಟೋಪಿ ಹಾಕಿ ಕೊಂಡ ಮೊಮ್ಮಗನ ಜೊತೆಯಲ್ಲಿ ರೈಲನ್ನ ಏರಿ ಕುಳಿತಿದ್ದಳು. ಸುಮಾರು ಆರುವರ್ಷದ ಅವಳ ಮೊಮ್ಮಗ ಮುಖದ ಮೇಲೆ ಮುಗುಳು ನಗೆ ಧರಿಸಿ, ಅಚ್ಚರಿಯಿಂದ ರೈಲು ಮುಂದೆ ಸಾಗುವುದನ್ನ ನೋಡುತ್ತಲಿದ್ದ.

ಈ ಅಜ್ಜಿಯ ಮನೋಭಾವ ಹಲವರಲ್ಲಿ ಹಲವು ಭಾವನೆಗಳಿಗೆ ಅನುವು ಮಾಡಿ ಕೊಟ್ಟಿತು. ನಿಂತೇ ಹೋದ ರೈಲು ಸಾಗರಕ್ಕೆ ಬಂದಿದೆ. ಅದನ್ನ ನೋಡಲು ಸಾವಿರ ಜನ ನೆರೆದಿದ್ದಾರೆ. ಇದೊಂದು ಐತಿಹಾಸಿಕ ವಿಷಯ ಕೂಡ. ಇಂದು ಬಂದ ರೈಲು ನಾಳೆಗೆ ಹಳತಾಗುತ್ತದೆ. ಇದು ಸಾಗರದ ಚರಿತ್ರೆಯಲ್ಲಿ ಒಂದು ಸಾಮಾನ್ಯ ವಿಷಯವಾಗಿ ಬಿಡುತ್ತದೆ. ಆದರೆ ಇಂದಿನ ಮಹತ್ವವನ್ನ ಸವಿಯ ಬೇಕಲ್ಲ. ಈ ಅವಕಾಶ ತನ್ನ ಮೊಮ್ಮಗನಿಗೆ ಸಿಗಬೇಕು, ಆತ ನಾಳೆ ಬೆಳೆದು ದೊಡ್ಡವನಾದ ಮೇಲೆ ಈ ಅನುಭವವನ್ನ ಆತ ಮೆಲಕು ಹಾಕಬೇಕು, ಇದರ ರೋಮಾಂಚನವನ್ನ ಆತ ಇತರರ ಜೊತೆಯಲ್ಲಿ ಹಂಚಿ ಕೊಳ್ಳಬೇಕು. ಹೀಗೆಂದೇ ಆ ಹಿರಿಯ ಜೀವ ಸುಮಾರು ಮೂರು ಮೈಲಿ ದೂರದಿಂದ ಬಸ್ಸು ಹತ್ತಿ ಸಾಗರಕ್ಕೆ ಬಂದಿತ್ತು. ಮೊಮ್ಮಗನನ್ನ ಕರೆತಂದಿತ್ತು. ಇದು ಅಜ್ಜಿಗೆ ಮಾತ್ರ ಹೊಳೆಯುವ ವಿಷಯ. ಅಜ್ಜಿ ಮಾತ್ರ ಈ ಕೆಲಸ ಮಾಡಬಲ್ಲಳು.

ಒಂದು ಕಾಲದಲ್ಲಿ ನಮ್ಮೆಲ್ಲರ ಮನೆಗಳಲ್ಲಿ ಇಂತಹಾ ಓರ್ವ ಅಜ್ಜಿ ಇರುತ್ತಿದ್ದಳು. ಮನೆಯಲ್ಲಿಯ ಮೊಮ್ಮಕ್ಕಳ ಬೇಕು ಬೇಡಗಳನ್ನ ಗಮನಿಸಿ ಅವುಗಳನ್ನ ನೆರವೇರಿಸುವಲ್ಲಿ ಈ ಅಜ್ಜಿ ಸದಾ ನಿರತಳಾಗಿರುತ್ತಿದ್ದಳು. ಇಂದು ಮಾತ್ರ ಇಂತಹಾ ಅಜ್ಜಿಯನ್ನ ನಾವು ಹುಡುಕ ಬೇಕಿದೆ. ನಾವೆಲ್ಲ ಬೆಳೆದದ್ದು ಇಂತಹಾ ಅಜ್ಜಿಯ ಕೈಯಲ್ಲಿಯೇ. ಆದರೆ ಇಂದು ನಮ್ಮ ಮೊಮ್ಮಕ್ಕಳ ಪಾಲಿಗೆ ಇಂತಹಾ ಅಜ್ಜಿ ಇದ್ದಾಳೆಯೇ ? ಎಲ್ಲಿ ಹೋದಳು ಈ ಅಜ್ಜಿ ?

"ಹೊಲಕ್ಕೊಬ್ಬ ಅಜ್ಜ ಮನೆಗೊಂದು ಅಜ್ಜಿ" ಇರಬೇಕು ಅನ್ನುವುದು ಒಂದು ಹಳೆಯ ಗಾದೆ ಮಾತು. ಹೊಲದ ದೇಖಬಾಲಿಗೆ ಅಜ್ಜ ಬೇಕು. ಬೇಲಿ ಮುರಿದಿದ್ದರೆ ಬೇಲಿ ಹಾಕಲು, ದನ, ಹಕ್ಕಿಪಕ್ಕಿ ಹೊಲಕ್ಕೆ ದಾಳಿಮಾಡದ ಹಾಗೆ ನೊಡಿಕೊಳ್ಳಲು ಅಜ್ಜ ಬೇಕು. ಹಾಗೆಯೇ ಮನೆಯಲ್ಲಿ ಏನೇ ಹೆಚ್ಚು ಕಡಿಮೆ ಆದಾಗ, ಮಗುವಿಗೆ ನೆಗಡಿ ಆದಾಗ, ಹಬ್ಬ ಮದುವೆಯ ಸಂದರ್ಭದಲ್ಲಿ ಹೀಗಲ್ಲ ಹಾಗೆ ಎಂದು ಹೇಳಲು, ಮನೆಯ ಜನರ ನಡುವೆ ಒಂದು ಮನಸ್ತಾಪ ಬಂದಾಗ ಅದನ್ನ ಪರಿಹರಿಸಲು ಅಜ್ಜಿ ಬೇಕು. ಮುಖ್ಯವಾಗಿ ಮನೆಯ ಮಕ್ಕಳನ್ನ ನೋಡಿ ಕೊಳ್ಳಲು ಅಜ್ಜಿ ಬೇಕು. ಈ ಅಜ್ಜಿ ಮಗುವಾಗಿದ್ದವಳೇ, ನಂತರ ಹುಡುಗಿಯಾಗಿ ತರುಣಿಯಾಗಿ, ಹೆಂಗಸಾಗಿ,  ಹೆಂಡತಿಯಾಗಿ ತಾಯಿಯಾಗಿ, ಅತ್ತೆಯಾಗಿ ಇದೀಗ ತನ್ನ ವಯಸ್ಸಿನ ಕಾರಣದಿಂದಾಗಿ, ಮನೆಯಲ್ಲಿ ದೊರೆತ ಸ್ಥಾನ ಮಾನಗಳಿಂದಾಗಿ ಅಜ್ಜಿಯಾಗಿದ್ದಾಳೆ. ಅವಳಿಗೆ ಈ ವಯಸ್ಸು, ಸ್ಥಾನ ಮಾನ, ಅನುಭವ. ಹಲವು ವಿಷಯಗಳನ್ನ ಕಲಿಸಿದೆ. ಹಲವು ಜವಾಬ್ದಾರಿಗಳನ್ನ ನೀಡಿದೆ. ಹೀಗೆ ನೀಡಿದ ಹಲವು ಜವಾಬ್ದಾರಿಗಳಲ್ಲಿ ಒಂದು ಈ "ಅಜ್ಜಿತನ".

ಈ ಅಜ್ಜಿಯದು ವಿಚಿತ್ರವಾದ ವ್ಯಕ್ತಿತ್ವ. ಅವಳು ತನ್ನ ಮಕ್ಕಳಿಗಾಗಿ ಮಿಡುಕಾಡುವುದು ಕಡಿಮೆ ಆದರೆ ಅದೇ ಮೊಮ್ಮಕ್ಕಳೆಂದರೆ ಇವಳಿಗೆ ಹೃದಯ ಬಾಯಿಗೆ ಬರುತ್ತದೆ. ಮಕ್ಕಳನ್ನ ಇವಳು ಅಪ್ಪಿ ಕೊಳ್ಳಲಾರಳು. ಎತ್ತಿ ಮುದ್ದು ಮಾಡಲಾರಳು, ತಿದ್ದಿ ಬುಧ್ದಿ ಹೇಳಲಾರಳು ಆದರೆ ಅದೇ ಮೊಮ್ಮಕ್ಕಳೆಂದರೆ ಆಕೆ ಎತ್ತಿ ಆಡಿಸಿ, ಊಟ ಮಾಡಿಸಿ, ಬೈಯ್ದು ಹೊಡೆದು ಬುಧ್ದಿ ಕಲಿಸುತ್ತಾಳೆ. ಇದೇ ಕಾರಣದಿಂದಾಗಿ ಅಜ್ಜಿಗೆ ಮಕ್ಕಳಿಗಿಂತ ಮೊಮ್ಮಕ್ಕಳ ಮೇಲೆ ಹೆಚ್ಚು ಪ್ರಾಣ. ಅಜ್ಜಿಗೆ ಮಕ್ಕಳು ಮತ್ತು ಮೊಮ್ಮಕ್ಕಳ ನಡುವಿನ ವಯಸ್ಸಿನ ಅಂತರ ಇಂತಹಾ ಕ್ರಿಯೆಗೆ ಕಾರಣವಾಗುತ್ತದೆ.

ಮನೆಯಲ್ಲಿ ತಾಯಿಗೆ ಬಿಡುವಿಲ್ಲದಷ್ಟು ಕೆಲಸ. ತಂದೆಗಂತೂ ಮನೆಯ ಕಡೆ ಗಮನಹರಿಸಲು ಬಿಡುವಿಲ್ಲ. ಇನ್ನು ಮೊಮ್ಮಕ್ಕಳ ಎಲ್ಲ ಬೇಡಿಕೆಗಳನ್ನ ನೆರವೇರಿಸುವವಳು ಅಜ್ಜಿಯೇ. ಮೊಮ್ಮಕ್ಕಳನ್ನ ಮಲಗಿಸಲು ಅಜ್ಜಿಯ ಬೆಚ್ಚನೆಯ ಮಡಿಲು ಬೇಕು, ಊಟ ಮಾಡಿಸಲು ಅಜ್ಜಿಯ ಮುದ್ದು ಮಾತು ಬೇಕು, ಅಪ್ಪ ಅಮ್ಮ ಹೊಡೆದಾಗ ಸಾಂತ್ವನ ಹೇಳಲು ಅಜ್ಜಿ ಬೇಕು, ಸ್ನಾನ ಮಾಡಿಸಲು, ಕುಂಡೆ ತೊಳೆಸಲು, ಕೊನೆಗೆ ನಿದ್ದೆ ಬರುವ ತನಕ ಕತೆ ಹೇಳಲು ಅಜ್ಜಿ ಬೇಕು. ಅಜ್ಜಿ ಅಜ್ಜಿ ಅಜ್ಜಿ . ಮಗುವಿನ ಈ ಕರೆಗೆ ಸದಾ ಕಿವಿಗೊಟ್ಟು ಓಡಿ ಬರುವವಳು ಅಜ್ಜಿ.ಈ ಅಜ್ಜಿ ಮೊಮ್ಮಗನನ್ನ ಅರ್ಥ ಮಾಡಿ ಕೊಂಡಂತೆ ಅದರ ತಾಯಿ ತಂದೆ ಅರ್ಥ ಮಾಡಿ ಕೊಂಡಿರುವುದಿಲ್ಲ. ಸ್ಪಷ್ಟವಾಗಿ ಮಾತನಾಡಲು ಬಾರದ ಮೊಮ್ಮಗುವಿಗೆ ಹೊಟ್ಟೆ ನೋವೇ, ಕಿವಿ ನೋವೇ, ಎಲ್ಲಿಯಾದರೂ ಇರುವೆ ಕಡಿದಿದೆಯೇ ಇದೆಲ್ಲವನ್ನ ಅರ್ಥ ಮಾಡಿ ಕೊಳ್ಳುವವಳು ಅಜ್ಜಿ. ಅರ್ಥ ಮಾಡಿ ಕೊಂಡು ತಕ್ಷಣ ಔಷಧಿ ಮಾಡುವವಳು ಅಜ್ಜಿ. ಮೊಮ್ಮಗನ ಬಾಯಿ ರುಚಿಯನ್ನ ಇವಳು ಬಲ್ಲಳು. ಯಾವುದಾದರೂ ಮದುವೆಗೆ ಇನ್ನೊಂದು ಸಮಾರಂಭಕ್ಕೆ ಒಂಟಿಯಾಗಿ ಹೋದ ಅಜ್ಜಿ ಮೈಸೂರು ಪಾಕು, ಜಿಲೇಬಿ ಬಡಿಸಿದಾಗ ಮೊದಲು ನೆನಸಿ 
ಕೊಳ್ಳುವುದು ತನ್ನ ಮೊಮ್ಮಗನನ್ನ. ಅಕ್ಕಪಕ್ಕದವರು ನೋಡುತ್ತಿದ್ದರೂ ಎಲೆಯ ಮೇಲಿನ ಸಿಹಿ ತಿಂಡಿಯನ್ನ ಮುಚ್ಚಿ ಇರಿಸಿ ಕೊಂಡು ಇವಳು ಮನೆಗೆ ತರುತ್ತಾಳೆ. ಇದರಲ್ಲಿ ಅವಳಿಗೆ ನಾಚಿಕೆ ಇಲ್ಲ.

ಜಾತ್ರೆಗೆ ಹೋದಾಗ ಮೊದಲ ಗಮನ ಈ ಮೊಮ್ಮಗನ ಮೇಲೆ. ಆತ ಆ ಜನ ಜಂಗುಳಿಯ ನಡುವೆ  ಎಲ್ಲಿಯಾದರೂ ತಪ್ಪಿಸಿ ಕೊಂಡರೆ ? ಇದಕ್ಕೆಂದೇ ಆಕೆ ಕೈಲಿ ಆಗದಿದ್ದರೂ ಮೊಮ್ಮಗನನ್ನ ಎತ್ತಿ ಕೊಂಡೇ ಜಾತ್ರೆಯಲ್ಲಿ ತಿರುಗಾಡುತ್ತಾಳೆ. ಅಜ್ಜಿ ಕತೆಗಳು ಅನ್ನುವ ಸಾಹಿತ್ಯ ಪ್ರಕಾರ ವೈವಿಧ್ಯಮಯವಾಗಿ ಬೆಳೆದಿದ್ದರೆ ಅದಕ್ಕೆ ಕಾರಣ ಅಜ್ಜಿ. ಹೇಳಿದ ಕತೆಗಳನ್ನ ಮತ್ತೆ ಮತ್ತೆ ಕೇಳಲು ಮೊಮ್ಮಕ್ಕಳು ಬಯಸುವುದಿಲ್ಲ ಅನ್ನುವ ಕಾರಣಕ್ಕೇನೆ ಅಜ್ಜಿ ಹೊಸ ಹೊಸ ಕತೆಗಳನ್ನ ಸೃಷ್ಟಿ ಮಾಡುತ್ತ ಹೋಗುತ್ತಾಳೆ. ಅವಳ ಅನುಭವ, ಕಲ್ಪನೆ, ಅವಳಿಂದ ಈ ಕೆಲಸವನ್ನ ಮಾಡಿಸುತ್ತದೆ. ಮೊಮ್ಮಕ್ಕಳು ಕಿವಿತೆರೆದು ಮನಸ್ಸು ತೆರೆದು ಕತೆಗಳನ್ನ ಕೇಳಿದಾಗ ಅವಳ ಬದುಕಿಗೊಂದು ಸಾರ್ಥಕತೆ ಬರುತ್ತದೆ.

ಅಲ್ಲದೆ ತನ್ನ ಬದುಕಿನ ನೂರು ಘಟನೆಗಳನ್ನ ಕತೆಗಳಂತೆ ನಿರೂಪಿಸಿ ಮೊಮ್ಮಕ್ಕಳ ಎದಿರು ಹೇಳುವುದು ಅವಳ ಪಾಲಿನ ಒಂದು ಅಮೂಲ್ಯ ಕಾರ್ಯ ಕೂಡ ಹೌದು. ಈ ಕೆಲಸ ಮಾಡುತ್ತ ಮಾಡುತ್ತ ಅವಳು ತನ್ನ ಹೃದಯದ ನೋವನ್ನ ಕಡಿಮೆ ಮಾಡಿ ಕೊಳ್ಳುವುದು ಮಾತ್ರವಲ್ಲ ಮೊಮ್ಮಗುವಿಗೆ ಅದರಲ್ಲಿ ಆಸಕ್ತಿ ಹುಟ್ಟುವಂತೆ ಮಾಡುತ್ತಾಳೆ. ತಾನು ಅನುಭವಿಸಿದ ಎಲ್ಲವನ್ನ ನೆನಪಿಗೆ ತಂದು ಕೊಂಡು ಮೊಮ್ಮಗುವಿನ ಎದಿರು ಅದನ್ನ ಹೇಳುವಾಗ ಆಕೆಗೆ ಏನೋ ಒಂದು ಸಂತಸ ಆಗುತ್ತದೆ. ಯಾವತ್ತೋ ನಡೆದ ಅದು ಸಂತಸದ ಕ್ಷಣ ಇರಲಿ, ನೋವಿನ ಸಂದರ್ಭವಿರಲಿ ಈಗ ದೂರನಿಂತು ಮೊಮ್ಮಗುವಿನ ಸಮ್ಮುಖದಲ್ಲಿ ಹೇಳುವಾಗ ಅವಳ ನೋವು ಕಡಿಮೆಯಾಗುತ್ತದೆ. ಎದೆ ಹಗುರವಾಗುತ್ತದೆ.
ದಿನಗಳು ಉರುಳಿದ ಹಾಗೆ ಅಜ್ಜಿಗೆ ತನ್ನ ಸ್ಥಾನ ಮಾನದ ಅರಿವಾಗುತ್ತದೆ. ರಾಣಿಯಾಗಿ ಯಾವ ಮನೆಯಲ್ಲಿ ಅವಳು ಮೆರೆದಿದ್ದಳೋ ಅದೇ ಮನೆಯಲ್ಲಿ ಅವಳೀಗ ಎರಡೋ ಮೂರನೆಯದೋ ಸ್ಥಾನಕ್ಕೆ ಬಂದಿದ್ದಾಳೆ. ಅವಳನ್ನ ಕೇಳಿ ಯಾರೂ ಏನನ್ನೂ ಮಾಡುವುದಿಲ್ಲ. ಅವಳ ಮಾತಿಗೆ ಬೆಲೆ ಕೊಡುವುದಿಲ್ಲ. ಹಿರಿಯರು ಅವಳನ್ನ ಗೌರವಿಸುತ್ತಾರೆ ನಿಜ. ಆದರೆ ಅವಳನ್ನ ಇರಿಸಿರುವ ಜಾಗ ಬೇರೆಯೇ. ಇಂತಹಾ ಸಂದರ್ಭದಲ್ಲಿ ಅದೇ ಮನೆಯಲ್ಲಿ ಅವಳಿಗೊಂದು ಸ್ಥಾನ ದೊರೆಯುತ್ತದೆ.   ಅದು ಅಜ್ಜಿಯಸ್ಥಾನ. ಬೇರೆ ಯಾರೂ ಕಸಿದು ಕೊಳ್ಳದ ಸ್ಥಾನ.


ಇದೀಗ ಅವಳದ್ದೇ ಒಂದು ಪ್ರಪಂಚ ಇಲ್ಲಿ ತೆರೆದು ಕೊಂಡಿದೆ. ಅಲ್ಲಿ ಅವಳೇ ಯಜಮಾನಿ. ಅವಳ ಈ ಸುಂದರ ಪ್ರಪಂಚದ ಮಹಾನ್ ಪ್ರಜೆಗಳೆಂದರೆ ಅವಳ ಮೊಮ್ಮಕ್ಕಳು. ಮೊಮ್ಮಕ್ಕಳಿಗೆ ಕಾಲ ಕಾಲಕ್ಕೆ ಊಟ ಮಾಡಿಸುವ, ಮೊಮ್ಮಕ್ಕಳ ಬಟ್ಟೆ, ಆಟದ ಸಾಮಾನು, ಓದುವ ಪುಸ್ತಕ ತೆಗೆದಿರಿಸುವ ಕೆಲಸ ಇವಳ ಪಾಲಿಗೆ ಬರುತ್ತದೆ. ಮಗುವಿನ ಕಾಲು ಚೀಲ ಹುಡುಕಿ ಒಗೆದು ಇರಿಸುತ್ತಾಳೆ. ಅದರ ಟಾನಿಕ, ಔಷಧಿ ಕುಡಿಸುವ ಸಮಯ ಜ್ಞಾಪಿಸುತ್ತಾಳೆ ಅಜ್ಜಿ. ಮಗು ಶಾಲೆಗೆ ಹೋಗಲು ನೆನಪು ಮಾಡುತ್ತಾಳೆ. ಶಾಲೆಯಲ್ಲಿ ಮಕ್ಕಳ ಕಾರ್ಯಕ್ರಮ ಇದ್ದ ದಿನ ತಪ್ಪದೆ ಶಾಲೆಗೆ ಹೋಗಿ ಮೊದಲ ಸಾಲನಲ್ಲಿ ಕುಳಿತು ಮೊಮ್ಮಗನ ನೃತ್ಯ ನೋಡಿ ಸಂತಸ ಪಟ್ಟು ಬರುತ್ತಾಳೆ. ಮನೆಗೆ ಬಂದವಳೇ ಮೊದಲು ಮೊಮ್ಮಗನನ್ನ ಬಾಗಿಲಲ್ಲಿ ನಿಲ್ಲಿಸಿಕೊಂಡು ದೃಷ್ಟಿ ತೆಗೆಯುತ್ತಾಳೆ. ಮೊಮ್ಮಗ ಶಾಲೆಯಿಂದ ಬರಲು ತುಸು ತಡವಾದರೂ ಹತ್ತು ಬಾರಿ ಮನೆಯಿಂದ ಹೊರಬಂದು ಮೊಮ್ಮಗನ ದಾರಿ ಕಾಯುವವಳು ಕೂಡ ಈ ಅಜ್ಜಿಯೇ.

ಇಂತಹಾ ಅಜ್ಜಿಯಂದಿರ ಸಂಖ್ಯೆ ಇಂದು ಕಡಿಮೆ ಆಗುತ್ತಿದೆಯೇ ? ಎಲ್ಲಿ ಹೋದರು ಈ ಅಜ್ಜಿಯರು ? ಮಕ್ಕಳಿಗೆ ಮನರಂಜನೆ ನೀಡುವ ಕತೆ ಹೇಳುವ ಅಜ್ಜಿಗಳು ಇಲ್ಲ. ಸಣ್ಣ ಪುಟ್ಟ ಕಾಯಿಲೆಗಳಿಗೆ ಮದ್ದುಮಾಡುವ ಅಜ್ಜಿಗಳಿಲ್ಲ. ಅಮ್ಮ ಹೊಡೆದಾಗ ಅಪ್ಪ ಜೋರು ಮಾಡಿದಾಗ ಮಗುವನ್ನ ತಬ್ಬಿ ಕೊಂಡು ಸಾಂತ್ವನ ಹೇಳುವ ಅಜ್ಜಿಗಳಿಲ್ಲ. ಹೂದೋಟದ ಹೂವನ್ನ, ಮೊದಲ ಮಳೆಯನ್ನ, ಬೆಳದಿಂಗಳ ಸೊಬಗನ್ನ, ಹೊಸ ತಿಂಡಿಯ ರುಚಿಯನ್ನ, ಊರಿಗೆ ಬಂದ ಹೊಸ ರೈಲನ್ನ ಮೊಮ್ಮಕ್ಕಳಿಗೆ ತೋರಿಸುವ ಅಜ್ಜಿಯರು ಇಲ್ಲ.

ಹೀಗೆಂದು ಇವತ್ತು ಅಜ್ಜಿಯರೇ ಇಲ್ಲ ಎಂದು ಇದರ ಅರ್ಥವಲ್ಲ. ಅಜ್ಜಿ ವಯಸ್ಸಿನ ಬಹಳ ಹೆಂಗಸರು ನಮ್ಮ ನಡುವೆ ಇದ್ದಾರೆ. ಆದರೆ ಇವರಿಗೆ ಅಜ್ಜಿ ಎದು ಕರೆಸಿ ಕೊಳ್ಳುವ ಮನಸ್ಸಿಲ್ಲ. ಅಜ್ಜಿಯ ಆ ಮನೋಭಾವ ಇಲ್ಲ. ಮಗುವಾಗಿ ಮೊಮ್ಮಕ್ಕಳ ಜೊತೆ ಬೆರೆಯುವ ವ್ಯಕ್ತಿತ್ವ ಇಲ್ಲ. ಇವಳ ಸಮಯವನ್ನ ಟಿ. ವಿ. ಕಿತ್ತು ಕೊಂಡಿದೆ. ಸಮಾಜ ಸೇವೆ ಅನ್ನುವ "ಸೋಗು" ಹಾರಿಸಿ ಕೊಂಡು ಹೋಗಿದೆ. ತನ್ನ "ಅಜ್ಜಿ"ತನವನ್ನ ವಿವಿಧ ಬಗೆಯ ಮುಖ ವರ್ಣಿಕೆಗಳ ಅಡಿಯಲ್ಲಿ 

ಮುಚ್ಚಿ ಇರಿಸಿ ಕೊಂಡ ಇವಳು ಮೊಮ್ಮಕ್ಕಳಿಂದ ದೂರವಾಗಿದ್ದಾಳೆ. ಇವಳಿಗೆ ಕತೆ ಕಟ್ಟಲು ಬರುವುದಿಲ್ಲ, ಕತೆ ಹೇಳುವ ಕಲೆ ಗೊತ್ತಿಲ್ಲ. ಅಂತು ಅಜ್ಜಿ ಇಲ್ಲದೆ ನಮ್ಮ ಮಕ್ಕಳ ಬದುಕು  ಬರಿದಾಗುತ್ತಿದೆ. ಹಿಂದಿನ ನಮ್ಮ ಅಜ್ಜಿ ಅನುಭವಿಸಿದ ಬದುಕಿನ ನೂರಾರು ಸಂದರ್ಭಗಳನ್ನ ಇಂದಿನ ಅಜ್ಜಿಯರು ಅನುಭವಿಸದೇನೆ ಮರೆಯಾಗುತ್ತಿದ್ದಾರೆ.


ಎಷ್ಟೋ ಜನ ಅಜ್ಜಿಯರು ತಮ್ಮ ಕೊನೆಯ ದಿನಗಳನ್ನ ವೃದ್ಧಾಶ್ರಮಗಳಲ್ಲಿ ಕಳೆಯುವ ಸ್ಥಿತಿ ಬಂದಿದೆ. ಆಧುನಿಕತೆ ಅನ್ನುವುದು ನಮ್ಮ ಬದುಕನ್ನ ಮಾತ್ರವಲ್ಲ ನಮ್ಮ ಮಕ್ಕಳ ಬದುಕನ್ನ ಕೂಡ ನಾಶ ಮಾಡುತ್ತಿದೆ. ಆದರೆ ಇದೊಂದು ಸಮಸ್ಯೆ ಎಂದು ಕೂಡ ನಾವು ತಿಳಿಯುತ್ತಿಲ್ಲ. ಇದೇ ಒಂದು ದುರಂತ.