ಮಂಗಳವಾರ, ಡಿಸೆಂಬರ್ 31, 2013

ಲೈಫ್ ಆಫ್ ಗಾದರಿ ಪಾಲನಾಯಕ


-ಅರುಣ್ ಜೋಳದಕೂಡ್ಲಿಗಿ

‘ಲೈಫ್ ಆಫ್ ಗಾದರಿ ಪಾಲನಾಯಕ’ ಪರಿಚಯಕ್ಕೂ ಮುನ್ನ ನಿಮ್ಮ ಗಮನವನ್ನು ಒಂದಷ್ಟು ಹಿಂದಕ್ಕೆ ಒಯ್ದು, ‘ಲೈಫ್ ಆಫ್ ಪೈ’ ಗೆ ಜೋಡಿಸುತ್ತೇನೆ. ಆಂಗ್ ಲೀ ನಿರ್ದೇಶನದ, ಮಾನ್ ಮಾರ್ಟೆಲ್ನ ಕೃತಿ ಆಧಾರಿತ ‘ಲೈಫ್ ಆಫ್ ಪೈ’ ಚಿತ್ರ ೨೦೧೩ ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಿರ್ದೇಶನ ಸೇರಿದಂತೆ ನಾಲ್ಕು ಪ್ರಶಸ್ತಿಗಳನ್ನು ಗಳಿಸಿತು. ಪಾಂಡಿಚೆರಿಯಲ್ಲಿದ್ದ ಪ್ರಾಣಿ ಸಂಗ್ರಹಾಲಯವನ್ನು ತಂದೆ, ತಾಯಿ ಮತ್ತು ಇಬ್ಬರು ಮಕ್ಕಳು ಕೆನಡಾಕ್ಕೆ ಸಾಗಿಸಲು ಹಡಗಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಈ ಹಡಗು ಪೆಸಿಫಿಕ್ ಸಮುದ್ರದಲ್ಲಿ ಅಪಘಾತಕ್ಕೆ ಒಳಗಾಗಿ ಮುಳುಗುತ್ತದೆ. ಇದರಲ್ಲಿ ರಿಚರ್ಡ ಪಾರ್ಕರ್ ಎಂಬ ಹೆಸರಿನ ಬಂಗಾಳಿ ಹುಲಿ ಮತ್ತು ಪೈ ಪಟೇಲ್ ಉಳಿಯುತ್ತಾರೆ.
ಹುಡುಗ ಪೈ ದೋಣಿಯಲ್ಲಿ ಹುಲಿಯ ಜತೆ ಪ್ರಯಾಣಿಸುತ್ತಾನೆ. ಈ ಪಯಣದ ಹಲವು ಮಜಲುಗಳನ್ನು ಈ ಚಿತ್ರ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ಪೈ ಪಾಲಿಗೆ ಈ ಪಯಣ ಕತ್ತಿಯಂಚಿನ ದಾರಿ. ಈ ಕತ್ತಿಯಂಚಿನಲ್ಲಿ ನಡೆವ ನಡಿಗೆಯಲ್ಲಿ ಆತನ ಹೋರಾಟ ನಿಜಕ್ಕೂ ಮೈನಡುಗಿಸುವಂತದ್ದು. ಇಲ್ಲಿ ಹುಲಿ ಮನುಷ್ಯ ಸಂಬಂಧವನ್ನು ವಾಸ್ತವದ ನೆಲೆಗಟ್ಟಿನಲ್ಲಿ ಕಟ್ಟಿಕೊಡಲಾಗಿದೆ. ಅಡವಿಯಲ್ಲಿ ರಾಜನಂತೆ ಮೆರೆವ ಹುಲಿ ನೀರಿನಲ್ಲಿ ಹೇಗೆ ಅಸಹಾಯಕವಾಗುತ್ತದೆ ಎನ್ನುವುದನ್ನು ತುಂಬಾ ವಿಶಿಷ್ಟವಾಗಿ ಈ ಚಿತ್ರ ಕಟ್ಟಿಕೊಟ್ಟಿದೆ. ‘ಹಸಿವು’ ಹೇಗೆ ಜೈವಿಕ ಸಂಬಂಧಗಳನ್ನು ಬೆಸೆಯುತ್ತದೆಂಬ ಎಳೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.
ಆಸ್ಕರ್ ಅವಾರ್ಡ ಪಡೆದ ಸಂದರ್ಭದಲ್ಲಿ ಕುತೂಹಲಭರಿತನಾಗಿ ‘ಲೈಫ್ ಆಫ್ ಪೈ’ ಸಿನೆಮಾವನ್ನು ನೋಡುತ್ತಿದ್ದಂತೆ, ನನ್ನೊಳಗೆ ಮಧ್ಯಕರ್ನಾಟಕದ ದೊಡ್ಡ ಸಮುದಾಯ ಬೇಡರ ಸಾಂಸ್ಕೃತಿಕ ನಾಯಕ ಗಾದ್ರಿಪಾಲನಾಯಕನ ಕಾವ್ಯದ ಘಟನಾವಳಿಗಳು ಮನದ ಪರದೆಯ ಮೇಲೆ ಮೂಡತೊಡಗಿದವು. ಗಾದ್ರಿಪಾಲನಾಯಕನ ಜಾಗದಲ್ಲಿ ಪೈ ನಿಂತಂತೆ ಅನುಭವವಾಯ್ತು. ಈ ಹಿಂದೆಯೇ ಹುಲಿ ಮತ್ತು ಮನುಷ್ಯ ಸಂಬಂಧದ ವಾಸ್ತವದ ನೆಲೆಗಟ್ಟಿನ ಕಥನವನ್ನು ಓದಿದ್ದು ಗಾದರಿ ಪಾಲನಾಯಕನ ಕಾವ್ಯದಲ್ಲಿ. ಕಾರಣ ಅನೇಕ ಜನಪದ ಕಥನಗಳಲ್ಲಿ ಹುಲಿ ಮತ್ತು ಮನುಷ್ಯ ಸಂಬಂಧವನ್ನು ವಾಸ್ತವ ನೆಲೆಗಟ್ಟಿಗಿಂತ ರಮ್ಯವಾಗಿ ಕಟ್ಟಿಕೊಟ್ಟಿರುವುದೇ ಹೆಚ್ಚು. ಹಾಗಾಗಿ ಗಾದರಿ ಪಾಲನಾಯಕನಂಥಹ ಜನಪದ ಕಥನವೊಂದು ‘ಲೈಫ್ ಆಫ್ ಪೈ’ ನ ಮೂಲ ಕಥೆಗಾರ ಮಾನ್ ಮಾರ್ಟೆಲ್ನ ಕೃತಿಗೆ ಪ್ರೇರಣೆ ಆಗಿರಬಹುದೆ ಅನ್ನಿಸಿತು.
ಮ್ಯಾಸಬೇಡರು ತಮ್ಮ ಕುಲದ ಸಾಂಸ್ಕೃತಿಕ ವೀರನೆಂದು ಗಾದರಿ ಪಾಲನಾಯಕನನ್ನು ಆರಾಧಿಸುತ್ತಾರೆ. ಆತನ ಬಗ್ಗೆ ಕಥೆಗಳನ್ನೂ, ಕಾವ್ಯವನ್ನೂ ಕಟ್ಟಿದ್ದಾರೆ. ಹಬ್ಬ ಜಾತ್ರೆಗಳನ್ನು ಮಾಡುತ್ತಾರೆ. ಗಾದ್ರಿ ಪಾಲನಾಯಕ ಮೂಲತಃ ಒಬ್ಬ ಪಶುಪಾಲಕ ಸಮುದಾಯವನ್ನು ಪ್ರತಿನಿಧಿಸುವ ಸ್ವತಃ ಪಶುಪಾಲಕ. ಈತನು ಹುಲಿಗಳ ಜತೆ ಆಪ್ತ ಸಂಬಂಧವನ್ನು ಇಟ್ಟುಕೊಳ್ಳುವುದು, ದನಕರುಗಳ ಜತೆ ಹುಲಿಯ ಮರಿಗಳನ್ನು ಸಾಕುವುದು, ಅವುಗಳ ಮರಣ, ನಂತರ ಹುಲಿಯ ಜತೆ ಸಂಘರ್ಷದಲ್ಲಿ ದಾರುಣ ಅಂತ್ಯ ಇದು ಗಾದರಿ ಪಾಲನಾಯಕನದ ಬಗ್ಗೆ ಇರುವ ಕಥನದ ಒಂದು ಎಳೆ. ಈ ಕಥನವನ್ನು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುವೆ.
ಗಾದರಿ ಪಾಲನಾಯಕ ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳ ಗಡಿಯಲ್ಲಿ ಬರುವ ಸಿರಿಗೇರಿಯ ಮಿಂಚೇರಿ ಅಡವಿಯಲ್ಲಿ ದನಕರುಗಳನ್ನು ಸಾಕಿಕೊಂಡು ಹೆಂಡತಿಯರಾದ ಕಂಚವ್ವ ಕಾಮವ್ವರೊಡನೆ ವಾಸಿಸುತ್ತಿದ್ದನು. ಈ ಅಡವಿಯಲ್ಲಿ ಗಂಡ ಹೆಂಡತಿ ಹುಲಿಗಳೆರಡು ವಾಸಿಸುತ್ತಿದ್ದವು. ಅವು ಗಾದರಿಪಾಲಯ್ಯನಿಗೆ ನೀನು ಈ ಅಡವಿಯಲ್ಲಿ ದನಕರುಗಳೊಂದಿಗೆ ವಾಸಿಸುವುದು ಸರಿಯಲ್ಲ ಎಂದು ಹೇಳಿದವು. ಆಗ ಪಾಲಯ್ಯನು ಈ ಅಡವಿಯಲ್ಲಿ ನಿಮಗೆ ಹೇಗೆ ವಾಸಿಸುವ ಹಕ್ಕಿದೆಯೋ ನಮಗೂ ದನಕರುಗಳನ್ನು ಮೇಯಿಸಿಕೊಂಡು ಇಲ್ಲಿ ನೆಲೆಸುವ ಹಕ್ಕಿದೆ, ಅಷ್ಟಕ್ಕೂ ನಾವು ಮಾಡಿದ ಅಪರಾಧವಾದರೂ ಏನು? ಎಂದು ಹುಲಿ ದಂಪತಿಗಳಿಗೆ ಸವಾಲು ಹಾಕುತ್ತಾನೆ. ಆಗ ಹುಲಿ ದಂಪತಿಗಳು ನಮಗೆ ದಿನಾಲು ಆಹಾರಕ್ಕೆ ಎರಡು ಹೋರಿಕರುಗಳನ್ನು ಕೊಡಬೇಕೆನ್ನುತ್ತವೆ. ಹೀಗೆ ವಾದ ವಿವಾದಗಳು ನಡೆದು ಗಾದರಿ ಪಾಲನಾಯಕ ಮತ್ತು ಹುಲಿಗಳ ಜತೆ ಒಂದು ಹೊಂದಾಣಿಕೆ ಆಗುತ್ತದೆ. ಹುಲಿಗಳು ದನಕರುಗಳನ್ನು ತಿನ್ನುವಂತಿಲ್ಲ. ಆದರೆ ಹುಲಿಮರಿಗಳನ್ನು ಗಾದರಿ ಪಾಲನಾಯಕನು ರಕ್ಷಣೆನೀಡಿ ತನ್ನ ಮಂದೆಯಲ್ಲಿ ಸಾಕಬೇಕು ಎಂದು ಒಪ್ಪಂದವಾಯಿತು.
ಇದಾದ ನಂತರ ಹುಲಿಯ ಮರಿಗಳು ಗಾದರಿ ಪಾಲನಾಯಕನ ರೊಪ್ಪದಲ್ಲಿ ದನದ ಕರುಗಳೊಂದಿಗೆ ಆಟವಾಡಿಕೊಂಡು ಬೆಳೆಯುತ್ತವೆ. ಹೀಗಿರುವಾಗ ಒಮ್ಮೆ ಗಾದರಿ ಪಾಲನಾಯಕನ ಭಾವ ಮೈದುನರಾದ ಚಿತ್ತಯ್ಯ ಮತ್ತು ಕಾಟಯ್ಯರು ಪಾಲಯ್ಯನ ರೊಪ್ಪಕ್ಕೆ ಬರುತ್ತಾರೆ. ಆಗ ಪಾಲಯ್ಯ ದನ ಮೇಯಿಸಲು ಕಾಡಿಗೆ ಹೋಗಿರುತ್ತಾನೆ. ಅಂತೆಯೇ ಕಂಚವ್ವ ಕಾಮವ್ವರು ಹಾಲು ಬೆಣ್ಣೆ ಮಾರಾಟಕ್ಕೆ ಹೋಗಿದ್ದವರು ರೊಪ್ಪಕ್ಕೆ ಮರಳಿರಲಿಲ್ಲ. ಹೀಗಿರುವಾಗ ರೊಪ್ಪದಲ್ಲಿ ದನಕರುಗಳೊಂದಿಗೆ ಆಟವಾಡುತ್ತಿದ್ದ ಹುಲಿ ಮರಿಗಳನ್ನು ನೋಡಿ ಬೆರಗಾಗುತ್ತಾರೆ. ಹೀಗೆ ಈ ಹುಲಿಮರಿಗಳು ಬೆಳೆದು ದೊಡ್ಡವಾದರೆ ದನಕರುಗಳನ್ನು ತಿನ್ನದೆ ಬಿಟ್ಟಾವೆ ಎಂದು ಆ ಹುಲಿಮರಿಗಳನ್ನು ಬಂದೂಕಿನಿಂದ ಸಾಯಿಸುತ್ತಾರೆ.
ರೊಪ್ಪಕ್ಕೆ ಬಂದ ಪಾಲಯ್ಯ ಸತ್ತುಬಿದ್ದ ಹುಲಿಮರಿಗಳನ್ನು ನೋಡಿ ವಿಚಲಿತನಾಗುತ್ತಾನೆ. ನಾನು ಹುಲಿಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗಲಿಲ್ಲವಲ್ಲ ಎಂದು ಪರಿತಪಿಸುತ್ತಾನೆ. ನಾನು ಈವರೆಗೂ ಕೊಟ್ಟಮಾತಿಗೆ ತಪ್ಪಿರಲಿಲ್ಲ, ಆದರೆ ಹುಲಿಗಳಿಗೆ ಕೊಟ್ಟ ಮಾತಿಗೆ ತಪ್ಪಿಬಿಟ್ಟೆ ವಚನಬ್ರಷ್ಟನಾದೆ ಎಂದು ತನ್ನನ್ನು ತಾನೇ ಹಳಿದುಕೊಳ್ಳುತ್ತಾನೆ. ಈ ಕೃತ್ಯ ಎಸಗಿದವರಾರು ಎಂದು ಹುಡುಕಿದಾಗ ತಮ್ಮ ಭಾವ ಮೈದುನರಾದ ಕಾಟಯ್ಯ ಚಿತ್ತಯ್ಯರೆ ಅರಿಯದೆ ಕೊಂದಿದ್ದಾರೆಂದು ತಿಳಿಯುತ್ತದೆ. ಇದು ಉದ್ದೇಶಪೂರ್ವಕ ಕೃತ್ಯವಾಗಿರದೆ ಹುಲಿಯ ಬಗೆಗಿನ ಮನುಷ್ಯಸಹಜ ಭಯದಿಂದ ಆದ ಘಟನೆಯಾಗಿದೆ ಎಂದು ಪಾಲಯ್ಯನಿಗೆ ಅರಿವಾಗುತ್ತದೆ.
ಇತ್ತ ಬೇಟೆಯೊಂದನ್ನು ಹಿಡಿದುಕೊಂಡು ಕಾಣದ ಹೆಣ್ಣುಲಿಯನ್ನು ಹುಡುಕಿಕೊಂಡು ಗಂಡುಲಿ ಅಡವಿಯಲ್ಲಿ ಅಲೆಯುತ್ತದೆ. ಆಗ ಹೆಣ್ಣುಲಿ ಕರು ಹಾಕಿದ ಆಕಳವನ್ನು ಕಾಯ್ದು ಕೂತಿರುತ್ತದೆ. ಗಾದರಿ ಪಾಲನಾಯಕ ಬರುವ ವರೆಗೆ ಕರು ಮತ್ತು ಆಕಳವನ್ನು ಕಾಯುತ್ತಾ ಕುಳಿತ ಹೆಣ್ಣುಲಿ ಗಂಡುಲಿಯನ್ನು ನೋಡಿದ ತಕ್ಷಣ, ನೀನು ರೊಪ್ಪಕ್ಕೆ ಹೋಗಿ ಆಕಳು ಕರು ಹಾಕಿರುವುದಾಗಿ ಪಾಲಯ್ಯನಿಗೆ ತಿಳಿಸಿ, ನಮ್ಮ ಮರಿಗಳಿಗೆ ಮಾಂಸ ತಿನ್ನಿಸಿ ಬಾ ಎಂದು ಕಳಿಸುತ್ತದೆ. ಗಂಡುಲಿ ರೊಪ್ಪಕ್ಕೆ ಬರುತ್ತದೆ, ಆಗ ತನ್ನ ಮರಿಗಳು ರಕ್ತಕಾರಿಕೊಂಡು ಸತ್ತು ಬಿದ್ದಿರುವುದನ್ನು ನೋಡಿ ತಕ್ಷಣಕ್ಕೆ ಹುಲಿ ದುಃಖದ ಮಡುವಲ್ಲಿ ಮುಳುಗುತ್ತದೆ. ಈ ದುಃಖದ ವಾರ್ತೆಯನ್ನು ಹೆಣ್ಣುಲಿಗೆ ತಲುಪಿಸುತ್ತದೆ. ಈ ಘಟನೆಯು ದಂಪತಿ ಹುಲಿಗಳನ್ನು ಅತೀವ ದುಃಖಕ್ಕೆ ಈಡುಮಾಡಿ ಕೆರಳಿಸುತ್ತದೆ. ಮರಿ ಹುಲಿಗಳ ದಾರುಣ ಹತ್ಯೆಯಿಂದಾಗಿ ಈ ನರ ಮನುಷ್ಯರು ನಂಬಿಕೆಗೆ ಅರ್ಹರಲ್ಲ, ಅವರನ್ನು ನಂಬಿ ನಾವು ಕೆಟ್ಟೆವು ಎಂದು ಕೆಂಡಕಾರುತ್ತವೆ. ಯಾವುದೇ ಕಾರಣಕ್ಕೂ ಗಾದರಿ ಪಾಲನಾಯಕನನ್ನು ಜೀವಂತ ಉಳಿಸಬಾರದು ಎಂದು ಹುಡುಕುತ್ತಾ ಬರುತ್ತವೆ.
ದುಃಖಿತನಾದ ಪಾಲಯ್ಯ ನಾನು ಯಾವ ತಪ್ಪು ಮಾಡದಿದ್ದರೂ ಹುಲಿಗಳು ನನ್ನನ್ನು ಉಳಿಸುವುದಿಲ್ಲವೆಂದು ಜರಿಮಲೆ ಪ್ರದೇಶಕ್ಕೆ ಹೋಗಿ ಭಗವಂತನನ್ನು ಬೇಡಿಕೊಂಡು ಹುಲಿಮಕ್ಕಳನ್ನು ಬದುಕಿಸುತ್ತೇನೆಂದು ಹೊರಡುತ್ತಾನೆ. ಇವನನ್ನು ಹಿಂಬಾಲಿಸಿಕೊಂಡು ಬಂದ ಹುಲಿಗಳು ಪಾಲಯ್ಯನನ್ನು ತಡೆದು ನೀನು ಕೊಟ್ಟ ಮಾತನ್ನು ತಪ್ಪಿದೆ ಎಂದು ಘರ್ಜಿಸುತ್ತವೆ. ಆಗ ಪಾಲಯ್ಯನು ‘ನಾನು ನಿಮ್ಮ ಮರಿಗಳನ್ನು ಕೊಂದಿಲ್ಲ ನನ್ನದೇನೂ ತಪ್ಪಿಲ್ಲ, ಹಾಗಿದ್ದೂ ಜರಿಮಲೆಗೆ ಹೋಗಿ ದೇವರಲ್ಲಿ ಪ್ರಾರ್ಥಿಸಿ ನಿಮ್ಮ ಮರಿಗಳಿಗೆ ಮರುಜೀವ ನೀಡುತ್ತೇನೆ ಸಹಕರಿ’ ಎಂದು ಹುಲಿ ದಂಪತಿಗಳಿಗೆ ಮೊರೆ ಇಡುತ್ತಾನೆ. ಆಗ ಹುಲಿಗಳು ಮತ್ತು ಪಾಲಯ್ಯನ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಹುಲಿಗಳು ನೀನು ನಮ್ಮಿಂದ ತಪ್ಪಿಸಿಕೊಂಡು ಓಡಿ ಹೋಗಲು ಇಂತಹ ಕತೆ ಕಟ್ಟುತ್ತೀಯ ಎಂದು ಪಾಲಯ್ಯನನ್ನು ಜರಿಯುತ್ತವೆ. ಈ ಮಾತು ಕೇಳಿದ ಪಾಲಯ್ಯ ‘ಇಲ್ಲ ನಾನು ಓಡಿ ಹೋಗಲು ಹೇಡಿಯಲ್ಲ, ನೀವು ನನ್ನನ್ನು ಸಾಯಿಸಲೇಬೇಕೆಂದಿದ್ದರೆ ನಾನು ನಿಮ್ಮೊಂದಿಗೆ ಕಾದಾಡುವೆ’ ಎನ್ನುತ್ತಾನೆ. ಪರಿಣಾಮವಾಗಿ ಹುಲಿ ಮತ್ತು ಗಾದರಿ ಪಾಲನಾಯಕನಿಗೆ ಕಾದಾಟ ನಡೆಯುತ್ತದೆ. ಈ ಕಾದಾಟದಲ್ಲಿ ಹುಲಿಗಳು ಮತ್ತು ಗಾದರಿ ಪಾಲನಾಯಕ ಮಡಿಯುತ್ತಾರೆ. ಈ ಸಾವಿನ ಸುದ್ದಿ ತಿಳಿದ ಕಂಚವ್ವ ಕಾಮವ್ವರು ಪಾಲಯ್ಯನಿಗೆ ಸಹಗಮನ ಹೊಂದುತ್ತಾರೆ.
ಹೀಗೆ ಗಾದರಿ ಪಾಲನಾಯಕನ ಕಾವ್ಯ ದುಃಖಾಂತ್ಯವನ್ನು ಹೊಂದುತ್ತದೆ. ಇದು ಕಾಡು ನಾಡಿನ ಸಂಘರ್ಷವಿರದ ಮತ್ತು ಸಂಘರ್ಷ ಆರಂಭವಾದ ಎರಡೂ ಘಟ್ಟಗಳಿಗೆ ಸಾಂಕೇತಿಕತೆ ಇದ್ದಂತಿದೆ. ಇಲ್ಲಿ ಮನುಷ್ಯ ಮತ್ತು ಪ್ರಾಣಿ ಸಂಬಂಧದ ಭಿನ್ನ ಮುಖಗಳನ್ನು ಈ ಕಥನ ಕಾಣಿಸುತ್ತಿದೆ. ಅಂತೆಯೇ ಹುಲಿಗಳ ಜತೆ ಮನುಷ್ಯ ಸಂಬಂಧ ಬೆಸೆದ ಒಂದು ಅಪೂರ್ವ ರೂಪಕವನ್ನೂ ಈ ಕಥೆ ಕಟ್ಟಿಕೊಡುತ್ತದೆ.
ಈ ಕಥೆಯ ಕಾರಣಕ್ಕೆ ಗಾದರಿ ಪಾಲನಾಯಕ ಒಬ್ಬ ಬೇಡ ಸಮುದಾಯದ ಸಾಂಸ್ಕೃತಿಕ ನಾಯಕನಾಗಿ ಆರಾಧನೆ ಗೊಳ್ಳುತ್ತಾನೆ. ಈ ಘಟನೆಗೆ ಕಾರಣವಾದ ಪ್ರದೇಶಗಳಲ್ಲಿ ಈಗಲೂ ಪುರಾವೆಗಳು ದೊರೆಯುತ್ತವೆ. ಹಾಗಾಗಿ ಗಾದರಿ ಪಾಲನಾಯಕ ಒಬ್ಬ ಚಾರಿತ್ರಿಕ ವ್ಯಕ್ತಿಯೇ? ಪೌರಾಣಿಕ ವ್ಯಕ್ತಿಯೇ ಎಂಬ ಬಗ್ಗೆ ಇನ್ನೂ ಖಚಿತವಾದ ಸಂಶೋಧನೆಗಳು ನಡೆದಿಲ್ಲ. ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರೊ.ವಿರೂಪಾಕ್ಷಿ ಪೂಜಾರಹಳ್ಳಿ ಅವರು ಬರೆದ ‘ಗಾದರಿ ಪಾಲನಾಯಕ’ ಕೃತಿಯಲ್ಲಿ ಗಮನಾರ್ಹ ದಾಖಲೆಗಳನ್ನು ಒದಗಿಸಿದ್ದಾರೆ.
ವಾಲ್ಮೀಕಿ, ಶಬರಿ, ಗುಹ, ಏಕಲವ್ಯ, ಧರ್ಮ ವ್ಯಾಧ, ಬೇಡರ ಕಣ್ಣಪ್ಪ, ಕುಮಾರ ರಾಮ ಮೊದಲಾದವರು ಮ್ಯಾಸಬೇಡರ ಪೌರಾಣಿಕ ಮೂಲಪುರುಷರು. ಅಂತೆಯೇ ಮಧ್ಯಕಾಲೀನ ಕರ್ನಾಟಕದಲ್ಲಿ ಕಂಡು ಬರುವ ಬೇಡರ ವೀರ/ವೀರೆಯರಾದ ಶುಕ್ಲಮಲ್ಲಿನಾಯಕ, ಗಾದರಿ ಪಾಲನಾಯಕ, ಕೊಡಗಲು ಬೊಮ್ಮಯ್ಯ, ಯರಗಾಟ ನಾಯಕ, ಗಾಜ ನಾಯಕ, ದಡ್ಡಿ ಸೂರನಾಯಕ, ಮಂದ ಭೂಪಾಲ, ಅಂಬೋಜ ರಾಜ, ದಾನ ಸಾಲಮ್ಮ, ಚಂಚುಲಕ್ಷ್ಮಿ, ಪೆದ್ದಕ್ಕ ರಾಯಲದೇವಿ, ವೀರ ಮದಕರಿ ನಾಯಕ ಮೊದಲಾದವರನ್ನು ಹೆಸರಿಸಬಹುದು.
ಮಧ್ಯಕರ್ನಾಟಕದ ಅದರಲ್ಲೂ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಿರಿಯೂರು ಭಾಗದ ಮ್ಯಾಸಬೇಡರಲ್ಲಿ ಅತಿ ಹೆಚ್ಚು ಜೀವಂತವಾಗಿರುವ ನಾಯಕ ಗಾದರಿ ಪಾಲನಾಯಕ. ಗಾದರಿ ಎನ್ನುವುದು ಅರೆ ಮಲೆನಾಡಿನ ಒಂದು ಘಟ್ಟ ಪ್ರದೇಶ. ಇದಕ್ಕೆ ಗಾದರಿ ಘಟ್ಟ, ಗಾದರಿ ಗುಡ್ಡ, ಗಾದ್ರಿ ಮಲೈ ಎಂದು ಜನರೂಢಿಯಲ್ಲಿ ಬಳಸುತ್ತಾರೆ. ಈ ಮಲೆಯಲ್ಲಿ ಪಶುಗಳನ್ನು ಕಾಯ್ದುಕೊಂಡಿರುವ ಪಾಲಯ್ಯನನ್ನು ಮುಂದೆ ಗಾದರಿ ಪಾಲಯ್ಯ ಎಂದು ಕರೆದಿರುವುದಿದೆ. ಹೊಯ್ಸಳರ ಪೊಯ್ಸಳನೇ ಗಾದರಿ ಪಾಲನಾಯಕ ಎಂಬ ಮಾತೂ ಇದೆ. ಆದರೆ ಪೊಯ್ಸಳ ಮತ್ತು ಗಾದರಿ ಪಾಲನಾಯಕ ಹುಲಿಯ ಜತೆ ಸೆಣಸಾಡಿದ್ದು ಬಿಟ್ಟರೆ ಮತ್ತಾವ ಸಾಮ್ಯವೂ ಕಂಡುಬರುವುದಿಲ್ಲ. ಚಾರಿತ್ರಿಕವಾದ ದಾಖಲೆಗಳೂ ಇಲ್ಲ.
ಆದರೆ ಗಾದರಿ ಪಾಲನಾಯಕ ಎಂಬ ಹೆಸರಿನ ವ್ಯಕ್ತಿ ನಾಯಕನಹಟ್ಟಿಯ ಪಾಳೆಯಗಾರನಾಗಿ ಆಳ್ವಿಕೆ ನಡೆಸಿದ ಪುರಾವೆ ಇವೆ. ಅವನ ಅಣ್ಣ ಜಗಲೂರು ಪಾಪಿನಾಯಕನೂ ಆಳ್ವಿಕೆ ನಡೆಸಿದ್ದಾನೆ. ಇದು ಚಂದ್ರವಳ್ಳಿ ಕೃತಿಯ ಅನುಬಂಧದಲ್ಲಿ ನಾಯಕನಹಟ್ಟಿ ಪಾಳೆಯಗಾರರ ವಂಶ ವೃಕ್ಷದಲ್ಲಿ ಇವರ ಹೆಸರಿನ ಉಲ್ಲೇಖಗಳಿವೆ. ಗಾದರಿ ಪಾಲನಾಯಕ ಪಾಳೆಯಗಾರನಾಗಿ ಆಡಳಿತ ನಡೆಸಿದ್ದರ ಕುರುಹುಗಳು ಈಗಿನ ಗಾದರಿ ಪಾಲನಾಯಕನ ಕುರಿತ ಆಚರಣಾಲೋಕದಲ್ಲೂ ದೊರೆಯುತ್ತವೆ. ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ಪಕ್ಕವೇ ಇರುವ ಚನ್ನಬಸಯ್ಯನ ಹಟ್ಟಿ, ಮಲ್ಲೂರಳ್ಳಿಯ ಹತ್ತಿರ ರಾಮಸಾಗರ, ಬೊಮ್ಮಗೊಂಡನ ಕೆರೆ, ಕುರುಡಿಹಳ್ಳಿ, ಕಾತ್ರಿಕೆನ ಹಟ್ಟಿ, ಕನ್ನಬೋರಯ್ಯನ ಹಟ್ಟಿ, ಕೋಲಮ್ಮನಹಳ್ಳಿ, ನನ್ನಿವಾಳ ಮುಂತಾದ ಕಡೆ ಗಾದರಿ ಪಾಲನಾಯಕದ ಗುಡಿಗಳಿವೆ. ಇಲ್ಲಿ ಪಾಲಯ್ಯನು ಬಳಸಿದ್ದ ಎಂದು ನಂಬಿದ ಆಯುಧಗಳನ್ನೂ ಪೂಜಿಸುತ್ತಾರೆ. ಕಾಗಳಗೆರೆ ಎಂಬ ಪ್ರದೇಶದಲ್ಲಿ ಗಾದರಿ ಪಾಲನಾಯಕನ ವೀರಗಲ್ಲು ಮತ್ತು ಸಮಾಧಿ ಇವೆ. ಗಂಜಿಗಟ್ಟೆಯೆಂಬ ಪ್ರದೇಶದಲ್ಲಿ ಕಂಚವ್ವ ಕಾಮವ್ವ ಸಹಗಮನ ಕೈಗೊಂಡ ಹೊಂಡ ಇದೆ.
ಹೀಗೆ ಮಧ್ಯಕಾಲಿನ ಕರ್ನಾಟಕದ ಪಶುಪಾಲನೆಯ ಸಂದರ್ಭದಲ್ಲಿ ಹುಲಿಗಳ ಜತೆ ಸ್ನೇಹ ಮಾಡಿದ್ದು, ಹುಲಿ ಮರಿಗಳನ್ನು ಸಾಕುವ ದೈರ್ಯ ತೋರಿದ ಒಬ್ಬ ನಾಯಕನ ಕಥೆ ‘ಲೈಫ್ ಆಫ್ ಪೈ’ ತರದ ಸಿನೆಮಾದ ಸೃಜನಶೀಲ ಸೃಷ್ಟಿಯಂತೆಯೇ, ವಾಸ್ತವದ ನೆಲೆಗಟ್ಟಿನಲ್ಲಿ, ಜನಸಮುದಾಯದ ಸ್ಮೃತಿಲೋಕದ ಮಿನುಗು ತಾರೆ ‘ಲೈಫ್ ಆಫ್ ಗಾದರಿ ಪಾಲನಾಯಕ’ ಗಮನಸೆಳೆಯುತ್ತಾನೆ. ಜನಸಮುದಾಯಗಳು ಆರಾಧಿಸುವ ಇಂತಹ ಸಾಂಸ್ಕೃತಿಕ ವೀರ/ವೀರೆಯರ ಕಥನಗಳು ನಿಜಕ್ಕೂ ರೋಮಾಂಚನ ಹುಟ್ಟಿಸುತ್ತವೆ.
ನಾನು ಗಾದರಿ ಪಾಲನಾಯಕನ ಹುಲಿ ಜತೆಗಿನ ಸೆಣಸಾಟದ ಇತರೆ ಕಥನಗಳನ್ನು ಹುಡುಕುವಾಗ ಕನ್ನಡ ಜಾನಪದ ಲೋಕದಲ್ಲಿ ‘ಹುಲಿ’ ಅತಿಹೆಚ್ಚು ಬಳಕೆಯಾಗಿದ್ದು ಕಂಡುಬಂತು. ಕಥೆ ಗೀತೆ ಮಹಾಕಾವ್ಯ ಆಚರಣಾ ಲೋಕಗಳಲ್ಲಿ ಕಾಡಿನ ಹುಲಿ ನಾಡೊಳಗೆ ಸಂಚರಿಸಿದ ಅನುಭವವಾಗುತ್ತದೆ. ಇಂತಹದ್ದೇ ಕತೆ ಕಥನ ಆಚರಣೆಗಳನ್ನು ಗಮನದಲ್ಲಿಟ್ಟುಕೊಂಡಿ ಹುಲಿ ಜಾನಪದವೆ ಸೃಷ್ಟಿಯಾದಂತೆನಿಸಿತು. ಅಂದಹಾಗೆ ಮುಂದಿನ ವಾರದ ಅಂಕಣದಲ್ಲಿ ಹುಲಿ ಜಾನಪದ ಕುರಿತೆ ಬರೆಯುವೆ, ಕಾಯುತ್ತಿರಿ.

1 ಕಾಮೆಂಟ್‌:

GKS ಹೇಳಿದರು...

ಲೇಖನ ತುಂಬಾ ಚನ್ನಾಗಿದ ಸರ್.. ಇತಿಹಾಸ ಕೆದಕಿದಾಗ ಇಂತಹ ನೂರಾರು ನಾಯಕರು, ಸಾವಿರಾರು ಕಥೆಗಳೊಂದಿಗೆ ನಮ್ಮನ್ನು ರೋಮಾಂಚನಗೊಳಿಸುತ್ತಾರೆ.