ಮಂಗಳವಾರ, ನವೆಂಬರ್ 22, 2016

ನೆಲದ ನುಡಿಗಟ್ಟಿಗೆ ಶೋಭೆ ತಂದ ಡಿಲಾನ್‌


-ಅರುಣ್ ಜೋಳದಕೂಡ್ಲಿಗಿಅಮೆರಿಕದ ಸಾರ್ವಕಾಲಿಕ ಹಾಡುಗಾರನೆಂಬ ಖ್ಯಾತಿಗೆ ಒಳಗಾದ ಕವಿಯೊಬ್ಬನಿದ್ದರೆ ಆತನೇ ಬಾಬ್ ಡಿಲಾನ್. ಈತನ ಪ್ರಭಾವ ಎಷ್ಟೆಂದರೆ ‘ಬಾಬ್ ಡಿಲಾನ್ ಮ್ಯೂಜಿಕ್’ ಮಾದರಿಯೊಂದು ರೂಪುಗೊಂಡಿದೆ. ಇದನ್ನು ಕಲಿಯುವ ಮತ್ತು ಹಾಡುವ ಶಿಷ್ಯಕೋಟಿ ಜಗತ್ತಿನಾದ್ಯಂತ ಹರಡಿದೆ. ಈತ ಅಮೆರಿಕದ ಯುದ್ಧಪರ ನೀತಿ ಮತ್ತು ಮನುಷ್ಯ ವಿರೋಧಿ ಅಭಿವೃದ್ಧಿಯ ದಾಹದ ಎದುರು ಸೆಟೆದು ನಿಂತು, ಅವನ್ನು ಧಿಕ್ಕರಿಸಿ ಬರೆದವ ಮತ್ತು ಹಾಡಿದವ. ಈ ಕಾರಣಕ್ಕೆ ಡಿಲಾನ್‌ ಈ ಬಾರಿ, ನೊಬೆಲ್‌ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಗೀತರಚನೆಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಮೆರಿಕದ ಸಾರ್ವಕಾಲಿಕ ಹಾಡುಗಾರನೆಂಬ ಖ್ಯಾತಿಗೆ ಒಳಗಾದ ಕವಿಯೊಬ್ಬನಿದ್ದರೆ ಆತನೇ ಬಾಬ್ ಡಿಲಾನ್. ಈತನ ಪ್ರಭಾವ ಎಷ್ಟೆಂದರೆ ‘ಬಾಬ್ ಡಿಲಾನ್ ಮ್ಯೂಜಿಕ್’ ಮಾದರಿಯೊಂದು ರೂಪುಗೊಂಡಿದೆ. ಇದನ್ನು ಕಲಿಯುವ ಮತ್ತು ಹಾಡುವ ಶಿಷ್ಯಕೋಟಿ ಜಗತ್ತಿನಾದ್ಯಂತ ಹರಡಿದೆ. ಈತ ಅಮೆರಿಕದ ಯುದ್ಧಪರ ನೀತಿ ಮತ್ತು ಮನುಷ್ಯ ವಿರೋಧಿ ಅಭಿವೃದ್ಧಿಯ ದಾಹದ ಎದುರು ಸೆಟೆದು ನಿಂತು, ಅವನ್ನು ಧಿಕ್ಕರಿಸಿ ಬರೆದವ ಮತ್ತು ಹಾಡಿದವ. ಈ ಕಾರಣಕ್ಕೆ ಡಿಲಾನ್‌ ಈ ಬಾರಿ, ನೊಬೆಲ್‌ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಗೀತರಚನೆಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಾಮಾನ್ಯ ಕುಟುಂಬದ ಹಿನ್ನೆಲೆಯ ಡಿಲಾನ್, ಅಮೆರಿಕದ ಜನಪ್ರಿಯ ಸಂಗೀತ ಮತ್ತು ಸಂಸ್ಕೃತಿಯ ಮೇಲೆ ಸತತ ಆರು ದಶಕಗಳ ಕಾಲ ಇನ್ನಿಲ್ಲದ ಪ್ರಭಾವವನ್ನು ಬೀರಿದ ಏಕೈಕ ಸಂಗೀತಗಾರ. ಇವರ ‘ಬ್ಲೋವಿನ್ ಇನ್ ದ ವಿಂಡ್’ ಮತ್ತು ‘ದ ಟೈಮ್ಸ್ ದೆ ಆರ್ ಎ ಚೇಂಜಿನ್’ ಎನ್ನುವ ಹಾಡುಗಳು ಅಮೆರಿಕದ ನಾಗರಿಕ ಹಕ್ಕು ಮತ್ತು ಯುದ್ಧವಿರೋಧಿ ಚಳವಳಿಗಳ ರಾಷ್ಟ್ರಗೀತೆಗಳಂತಿವೆ. ಅವರ ನೂರಾರು ಹಾಡುಗಳು ಹೋರಾಟಕ್ಕೆ ಪ್ರೇರಣೆಯಾಗಿವೆ. ಅಮೆರಿಕದಂತಹ ಯುದ್ಧದಾಹದ ದೇಶದಲ್ಲಿದ್ದೂ ಇದೆಲ್ಲಾ ಹೇಗೆ ಸಾಧ್ಯವಾಯಿತು ಎನ್ನುವ ಅಚ್ಚರಿಯ ಕಾರಣಕ್ಕೂ ಇವರು ಜಾಗತಿಕ ಸಾಹಿತ್ಯ ವಲಯದಲ್ಲಿ ಚರ್ಚೆಯ ಕುತೂಹಲ ಹುಟ್ಟಿಸಿದ್ದಾರೆ. ನೊಬೆಲ್‌ ಪ್ರಶಸ್ತಿಯ ಮೂಲಕ ‘ಗೀತ ರಚನೆ’ ಮತ್ತು ‘ಜನತೆಯ ನುಡಿಗಟ್ಟಿನ ಹಾಡುಗಾರಿಕೆ’ಗೆ ಮೊತ್ತಮೊದಲು ಮನ್ನಣೆ ತಂದುಕೊಡುವ ಮೂಲಕ, ಜಗದ ಮೌಖಿಕ ಪರಂಪರೆಯ ಚರಿತ್ರೆಯಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ.

ಅಬ್ರಹಾಂ ಜಿಮ್ಮೆರ್‌ಮ್ಯಾನ್ ಮತ್ತು ಬೆಟ್ಟಿಸ್ಟೋನ್‌ರ ಮಗನಾಗಿ ಮಿನ್ನೆಸೋಟದ ದಲತ್‌ನಲ್ಲಿ 1941ರ ಮೇ 24ರಂದು ಡಿಲಾನ್‌ ಜನಿಸಿದರು. ಇವರ ಮೂಲ ಹೆಸರು ರಾಬರ್ಟ್ ಅಲೆನ್ ಜಿಮ್ಮೆರ್‌ಮ್ಯಾನ್. ಜೆವಿಷ್ ಎನ್ನುವ ಪುಟ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದ ಟರ್ಕಿ ಮೂಲದ ಪೂರ್ವಜರು ಯುದ್ಧಕಾಲದಲ್ಲಿ ವಲಸೆ ಬಂದವರು. ಡಿಲಾನ್ ಮುಂದೆ ಜನಪ್ರಿಯತೆಗೆ ಬಂದಾಗ ಕ್ರೈಸ್ತ ಧರ್ಮಕ್ಕೆ ಸೇರ್ಪಡೆಗೊಂಡರು. ಸಾರಲೋಂಡ್ಸ್‌ ಎಂಬಾಕೆಯೊಂದಿಗೆ 1965ರಲ್ಲಿ ಮದುವೆಯಾದ ಡಿಲಾನ್‌, 1977ರ ಹೊತ್ತಿಗೆ ವಿಚ್ಛೇದನ ಪಡೆದರು. ನಂತರ ಕೆರೋಲಿನ್ ಡೆನ್ನಿಸ್‌ ಎಂಬುವವರನ್ನು 1986ರಲ್ಲಿ ಮದುವೆಯಾಗಿ 1992ರಲ್ಲಿ ಬೇರ್ಪಟ್ಟರು. ಹೀಗೆ ಸಾಂಸಾರಿಕ ಜೀವನ ಏರುಪೇರಿನಿಂದ ಕೂಡಿರುವ ಡಿಲಾನ್‌ ಅವರಿಗೆ ಜೆಸ್ಸಿ ಬೈರನ್, ಅನ್ನಾ ಲಿ, ಸ್ಯಾಮ್ಯುಯಲ್, ಜಾಕೊಬ್, ಡೆಸ್ಸಿರಿ ಎಂಬ ಐವರು ಮಕ್ಕಳಲ್ಲದೆ, ವಿಚ್ಛೇದಿತ ಮಡದಿ ಸಾರಾ ಅವರಿಂದ ದತ್ತು ಪಡೆದ ಮಗಳು ಮಾರಿಯಾ ಸಹ ಜೊತೆಗಿದ್ದಾಳೆ. ಮಗ ಜಾಕೊಬ್ ತಂದೆಯಂತೆ ಸಂಗೀತದ ಹಾದಿಯಲ್ಲಿದ್ದಾನೆ. ‘ದ ವಾಲ್ ಫ್ಲವರ್ಸ್‌್’ ಎನ್ನುವ ಬ್ಯಾಂಡ್‌ನಲ್ಲಿ ಗಾಯಕನಾಗಿ ಅಮೆರಿಕದಲ್ಲಿ ಖ್ಯಾತನಾಗಿದ್ದಾನೆ. ಜೆಸ್ಸಿ ಬೈರನ್‌ ಸಿನಿಮಾ ನಿರ್ದೇಶಕನಾಗಿ, ಮಾರಿಯಾ ಹಿನ್ನೆಲೆ ಗಾಯಕಿಯಾಗಿ ಪ್ರಸಿದ್ಧಿ ಪಡೆದಿದ್ದಾರೆ.

ನೆಲದ ನುಡಿಗಟ್ಟಿನಲ್ಲಿ ತಮ್ಮದೇ ಆದ ವಿಶಿಷ್ಟ ಲಯವನ್ನು ರೂಪಿಸಿಕೊಂಡಿರುವ ಡಿಲಾನ್‌ ಅವರ ಬರಹ ಮತ್ತು ಸಂಗೀತದ ಎಳೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕನ್ನಡದ ವರಕವಿ ಬೇಂದ್ರೆಯವರ ಜತೆ ಇವರನ್ನು ಹೋಲಿಸಬಹುದು. ಕನ್ನಡದ ಸಂದರ್ಭದಲ್ಲಿ ‘ಕ್ಯಾಸೆಟ್ ಕವಿಗಳು’ ಎಂದು ಕೆಲವರನ್ನು ವ್ಯಂಗ್ಯ ಮಾಡುವಂತೆ, ಅಮೆರಿಕದ ಕೆಲವು ಕ್ಲಾಸಿಕಲ್ ಕವಿಗಳು ಕೂಡ ಡಿಲಾನ್‌ ಅವರನ್ನು ‘ಬೀದಿಯ ಹಾಡುಗಾರ’ ಎಂದು ವ್ಯಂಗ್ಯದಿಂದ ಜರಿದಿದ್ದರು. ಇಂತಹವರೇ ಡಿಲಾನ್‌ಗೆ ನೊಬೆಲ್ ನೀಡಿರುವುದರಿಂದ ಪ್ರಶಸ್ತಿ ಕಳೆಗುಂದಿತು ಎಂದು ರಗಳೆ ತೆಗೆದಿದ್ದಾರೆ.

ಡಿಲಾನ್‌ ಅವರ ಸಂಗೀತದ ವಿಸ್ತರಣೆಯು ಅವರ ಕಲಾಕೃತಿಗಳಲ್ಲೂ ಮುಂದುವರಿದಿದೆ. ಅವರ ರೇಖೆ ಮತ್ತು ಚಿತ್ರಕಲೆಯನ್ನು ಒಳಗೊಂಡ ಆರು ಪುಸ್ತಕಗಳು ಪ್ರಕಟವಾಗಿವೆ. ಜಗತ್ತಿನ ಪ್ರಮುಖ ಕಲಾ ಗ್ಯಾಲರಿಗಳಲ್ಲಿ ಅವರ  ಕಲಾಕೃತಿಗಳಿವೆ. ಅವರ ಸಂಗೀತದಲ್ಲಿ ಅಡಕವಾದ ಭಗ್ನಪ್ರೇಮ, ಯುದ್ಧದ ನಿರರ್ಥಕತೆ, ಸ್ವಾರ್ಥ, ವಿಶ್ವಾಸದ್ರೋಹ, ವೇದನೆ, ಸಾವು, ನೈತಿಕ ಅಧಃಪತನ, ಪರಿಶುದ್ಧ ಪ್ರೇಮ ಮುಂತಾದವುಗಳನ್ನು ಗುರುತಿಸಲು ಈ ಕಲಾಕೃತಿಗಳು ನೆರವಾಗುತ್ತವೆ. ಸಂಗೀತದ ಲಯದೊಳಗೆ ಬೆರೆತ ಸಂವೇದನೆ ಅವರ ಕಲಾಕೃತಿಗಳಲ್ಲಿ ಚಿತ್ರರೂಪ ಪಡೆದಿದೆ ಎಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.

ಡಿಲಾನ್ ಅವರು ಸಂಯೋಜಿಸಿದ ಲಕ್ಷಾಂತರ ಆಲ್ಬಮ್‌ಗಳು ಜಗತ್ತಿನಾದ್ಯಂತ ಮಾರಾಟವಾಗಿವೆ. ಹೀಗೆ ಜನಸಾಮಾನ್ಯರ ಮನದಲ್ಲಿ ನೆಲೆಸಿರುವ ಡಿಲಾನ್ ‘ಪ್ರಶಾಂತ ಪರ್ವತವೊಂದರಲ್ಲಿ ವಿರಮಿಸುವಿಕೆಯೇ ನನ್ನ ಸಂಗೀತದ ಎಳೆ. ಸಂಗೀತದ ಆಳದಲ್ಲಿ ನನಗೊಂದು ಬೆಳಕು ಕಾಣುತ್ತದೆ, ಅದೇ ನನ್ನ ಧರ್ಮ’ ಎಂದು ವಿವರಿಸುತ್ತಾರೆ. ಅಮೆರಿಕದ ಸಂಗೀತ ತಜ್ಞರು ‘ಹಳ್ಳಿಗಾಡಿನ ಜನಪದ ಸಂಗೀತ ಮತ್ತು ಬ್ಲೂಸ್ ಮ್ಯೂಜಿಕ್‌ ಅನ್ನು ರಾಕ್ ಹಿನ್ನೆಲೆಯಲ್ಲಿ ಸಂಯೋಜಿಸುವುದು ಬಹುದೊಡ್ಡ ಸವಾಲು. ಇಂತಹ ಸಂಯೋಜನೆಯೇ ಡಿಲಾನ್‌ ಅವರ ಮಹತ್ವದ ಕೊಡುಗೆ. ಅದುವೇ ಆತನನ್ನು ಸರ್ವಶ್ರೇಷ್ಠ ಸಂಗೀತಗಾರನನ್ನಾಗಿಸಿದೆ’ ಎಂದು ಹೇಳುತ್ತಾರೆ. ಹೀಗೆ ಜನಸಾಮಾನ್ಯರ ನುಡಿಗಟ್ಟನ್ನು ಬಹಳಷ್ಟು ಎತ್ತರಕ್ಕೆ ಕೊಂಡೊಯ್ದು ಅದರ ಬಗೆಗೆ  ಕ್ಲಾಸಿಕಲ್ ಕವಿಗಳು ಮತ್ತು ಸಂಗೀತಗಾರರಿಗಿದ್ದ ತಾತ್ಸಾರದ ಮನಸ್ಥಿತಿಗೆ ಸೆಡ್ಡು ಹೊಡೆದದ್ದು ಡಿಲಾನ್‌ ಅವರ ಶಕ್ತಿಯಾಗಿದೆ.

‘ಟೈಮ್ಸ್’ ಪತ್ರಿಕೆ ಸಿದ್ಧಪಡಿಸಿದ ‘ಶತಮಾನದ ನೂರು ಶ್ರೇಷ್ಠ ವ್ಯಕ್ತಿಗಳ’ ಪಟ್ಟಿಯಲ್ಲಿ ಡಿಲಾನ್‌ ಅವರನ್ನೂ ಸೇರಿಸಿ ಒಂದು ಟಿಪ್ಪಣಿ ಬರೆದು ‘ಡಿಲಾನ್‌ ಮಾಸ್ಟರ್ ಪೊಯಟ್, ಸಾಮಾಜಿಕ ವಿಮರ್ಶೆಯ ತೀಕ್ಷ್ಣಮತಿ, ಪ್ರತಿಸಂಸ್ಕೃತಿಯ ಪ್ರೇರಕ ಶಕ್ತಿ’ ಎಂದು ಬಣ್ಣಿಸಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ 2012ರಲ್ಲಿ ‘ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ’ ಅನ್ನು ಡಿಲಾನ್‌ ಅವರಿಗೆ ನೀಡುತ್ತಾ ‘ಈತನಿಗಿಂತ ದೊಡ್ಡ ಸಂಗೀತಗಾರ ಅಮೆರಿಕದ ಚರಿತ್ರೆಯಲ್ಲಿ ಇಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ರೋಲಿಂಗ್ ಸ್ಟೋನ್ ಎಂಬ ಸಂಸ್ಥೆ 2011ರಲ್ಲಿ ಮಾಡಿದ ‘ಸಾರ್ವಕಾಲಿಕ ನೂರು ಶ್ರೇಷ್ಠ ಕಲಾವಿದರ’ ಪಟ್ಟಿಯಲ್ಲಿ ಡಿಲಾನ್‌ ಎರಡನೆಯವರು. ‘ಲೈಕ್ ಎ ರೋಲಿಂಗ್ ಸ್ಟೋನ್’ ಎನ್ನುವ ಅವರ ಹಾಡು ‘ಎಲ್ಲಾ ಕಾಲದ ಸರ್ವಶ್ರೇಷ್ಠ ಗೀತೆ’ ಎನ್ನುವ ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟೆಲ್ಲಾ ಕಾರಣಗಳಿಂದಾಗಿ ಅಮೆರಿಕದ ಪ್ರಜ್ಞಾವಂತರು ಕಳೆದ 20 ವರ್ಷಗಳಿಂದ ಡಿಲಾನ್‌ ಅವರಿಗೆ ನೊಬೆಲ್ ಬರಬೇಕೆಂದು ‘ಸ್ವೀಡಿಷ್ ಅಕಾಡೆಮಿಗೆ’ ಸಾರ್ವಜನಿಕ ಒತ್ತಡ ತಂದಿದ್ದರು. ಅದರ ಪ್ರತಿಫಲ 2016ರಲ್ಲಿ ದಕ್ಕಿದೆ.

‘ಜೀವಂತವಿರುವಾಗ ನೀವು ಬಿಡುವಿಲ್ಲದ ಕೆಲಸಗಾರರಾಗದಿದ್ದರೆ ಸತ್ತಾಗ ಆಗುತ್ತೀರಾ’ ಎನ್ನುವ ಡಿಲಾನ್‌ ಅವರ ಹಾಡಿನ ಸಾಲೊಂದು ತಮ್ಮನ್ನು ಪ್ರಭಾವಿಸಿದ ಬಗ್ಗೆ ಆ್ಯಪಲ್ ಜನಕ ಸ್ಟೀವ್ ಜಾಬ್ಸ್ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ಡಿಲಾನ್‌ ಅವರ ಗೀತೆಯ ಸಾಲುಗಳು ಲಕ್ಷಾಂತರ ಜನರನ್ನು ಪ್ರಭಾವಿಸಿ ಅವರ ಬದುಕಿನ ದಿಕ್ಕನ್ನು ಬದಲಿಸಿವೆ.

‘ಡಿಲಾನ್ ನೊಬೆಲ್ ಪ್ರಶಸ್ತಿಯ ಸಾಹಿತ್ಯದ ವ್ಯಾಖ್ಯಾನವನ್ನು ಬದಲಿಸಿದ್ದಾರೆ. ಅಮೆರಿಕದ ಸಂಗೀತ ಕ್ಷೇತ್ರದ ದಂತಕತೆಯಂತಿರುವ ಅವರಿಗೆ ಪ್ರಶಸ್ತಿ ಬಂದಿರುವುದು ನನಗೆ ಅತೀವ ಸಂತಸ ಉಂಟುಮಾಡಿದೆ’ ಎಂದು ಲೇಖಕ ಸಲ್ಮಾನ್ ರಶ್ದಿ ಶ್ಲಾಘಿಸಿದ್ದಾರೆ. ಹೀಗೆ ಜನನುಡಿಯನ್ನು ನೊಬೆಲ್‌ ಪಟ್ಟಕ್ಕೇರಿಸಿದ ಡಿಲಾನ್ ತಮ್ಮ ಇನ್ನಷ್ಟು ಗೀತೆಗಳ ಮೂಲಕ ನೆಲದ ಸಂವೇದನೆಯ ಕಂಪನ್ನು ಜಗದಗಲ ಪಸರಿಸಬೇಕಿದೆ.

ಮನಸ್ಸುಗಳ ಬೆಸೆಯುವ ಜನಪದ ಕವಿ ಇಬ್ರಾಹಿಂ ಸುತಾರ-ಅರುಣ್ ಜೋಳದಕೂಡ್ಲಿಗಿ
06
ಉತ್ತರ ಕರ್ನಾಟಕ ಬೌಗೋಳಿಕವಾಗಿಯೂ ಸಾಂಸ್ಕøತಿಕವಾಗಿಯೂ ಭಿನ್ನ ಚಹರೆಗಳನ್ನು ಹೊಂದಿವೆ. ಇಲ್ಲಿ ಧೀರ್ಘಕಾಲದ ಮುಸ್ಲಿಂ ಆಳ್ವಿಕೆಯ ಕಾರಣಕ್ಕೆ ಹಿಂದು ಮುಸ್ಲಿಂ ಸಾಮರಸ್ಯ ಬೆಸೆದಂತಿದೆ. ಧರ್ಮ ಬೇಧವಿಲ್ಲದೆ ಹಿಂದು ಮುಸ್ಲಿಂಮರು ಕೂಡಿ ಮಾಡುವ ಮೊಹರಂ ಆಚರಣೆ, ಉರುಸುಗಳನ್ನು ನೋಡಿದರೆ ತಿಳಿಯುತ್ತದೆ. ಅಂತೆಯೇ ಈ ಸಾಮರಸ್ಯದ ಪರಂಪರೆಗೆ ಈ ಭಾಗದಲ್ಲಿ ಹುಟ್ಟಿದ ವಚನ ಚಳವಳಿ, ತತ್ವಪದಕಾರರ ಹಾಡಿಕೆಗಳು ಪ್ರೇರಣೆಯಾಗಿದೆ. ಹೀಗೆ ಆದ್ಯಾತ್ಮ ಭಕ್ತಿಗಳನ್ನು ಬಳಸಿಕೊಂಡೆ ಸಮಸಮಾಜವನ್ನು ನಿರ್ಮಿಸಲು, ಅಂತೆಯೇ ಜಾತಿಧರ್ಮ ರಹಿತ ಸಮಾಜವನ್ನು ಕಟ್ಟಲು ಈ ಪರಂಪರೆಗಳು ಶ್ರಮಿಸಿವೆ. 18 ನೇ ಶತಮಾನದ ಅಂಚಿನಲ್ಲಿ ಶಿಶುನಾಳ ಶರೀಫರು ಕೂಡ ಅಂತಹ ಸಾಧ್ಯತೆಯನ್ನು ತೋರಿದ್ದರು.

ನಾವು ಬದುಕುತ್ತಿರುವ ಈ ಕಾಲದಲ್ಲಿ ಆಧ್ಯಾತ್ಮ ಭಕ್ತಿ ಎನ್ನುವ ಸಂಗತಿಗಳು ಮಾರುಕಟ್ಟೆಯ ಸರಕಾಗಿವೆ. ಇವುಗಳು ಜನರನ್ನು ಕಂದಾಚಾರಗಲ್ಲಿ ಮುಳುಗಿಸುತ್ತಿವೆ. ಇದು ಮುಂದುವರಿದು ಜಾತೀಯತೆ, ಧಾರ್ಮಿಕ ಮೂಲಭೂತವಾದವನ್ನು ಹೆಚ್ಚಿಸುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರವಚನ, ಆಧ್ಯಾತ್ಮ, ಭಕ್ತಿಯ ದಾರಿಯಲ್ಲಿ ಸಮಾಜಿಕ ಸುಧಾರಣೆಯ ಕನಸನ್ನು ಹೊತ್ತವರೂ ಇದ್ದಾರೆ. ಹೀಗೆ ಪ್ರವಚನದ ಮೂಲಕ ಸಮಾಜ ಸೇವೆ, ಸಮಸಮಾಜದ ಕನಸು, ಧಾರ್ಮಿಕ ಸಾಮರಸ್ಯವನ್ನು ಹೆಚ್ಚಿಸುವ, ಜಾತಿಯ ತರತಮಗಳನ್ನು ಕಡಿಮೆ ಮಾಡುವ ನೆಲೆಯಲ್ಲಿ ಸಾಮುದಾಯಿಕ ಬದಲಾವಣೆಗೆ ತಮ್ಮದೇ ಆದ ಪುಟ್ಟ ಕಾಣಿಕೆ ಸಲ್ಲಿಸುತ್ತಿರುವವರಲ್ಲಿ ಹಿಬ್ರಾಹಿಂ ಸುತಾರರು ಗಮನಸೆಳೆಯುತ್ತಾರೆ.

ಸುತಾರ ಅವರನ್ನು ನೇರವಾಗಿ ಸಾಮಾಜಿಕ ಚಳವಳಿಯ ಚೌಕಟ್ಟಿನಲ್ಲಿ ಇರಿಸಲಾಗದು. ಆದರೆ ಅವರ ಬದುಕಿನ ತಿರುವುಗಳನ್ನು ನೋಡುತ್ತಾ ಹೋದರೆ, ಸಾಮಾಜಿಕ ಜೀವನದಲ್ಲಿ ಅವರ ಮಹತ್ವ ಅರಿವಾಗುತ್ತದೆ. ಬಾಗಲಕೋಟೆ ಜಿಲ್ಲೆಯ ಮಧೋಳ ತಾಲೂಕಿನ ಮಹಾಲಿಂಗಪುರದಲ್ಲಿ ನೆಲೆಸಿದ ಇವರು ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಬಹುಪಾಲು ಹಳ್ಳಿಗಳು ವರ್ಷಕ್ಕೆ ಒಮ್ಮೆಯಾದರೂ ಸುತಾರ ಅವರ ಪ್ರವಚನ ಕೇಳಬೇಕು ಎನ್ನುವುದು ವಾರ್ಷಿಕ ಆಚರಣೆಯಾಗಿದೆ. ಅಂತೆಯೇ ಸುತಾರರ ದಿನಚರಿಯನ್ನು ಗಮನಿಸಿದರೆ ಬಿಡುವಿಲ್ಲದ ಓಡಾಟವೂ ಕಾಣುತ್ತದೆ. ಇಂತಹ ಹಿಬ್ರಾಹಿಂ ಸುತಾರರ ಒಟ್ಟು ತಿಳಿವನ್ನು ರೂಪಿಸಿದ ಬಾಲ್ಯದ ಅನುಭವಗಳು ಕುತೂಹಲಕಾರಿಯಾಗಿವೆ. ಅವರದೇ ಮಾತಿನಲ್ಲಿ ಉತ್ತರಕರ್ನಾಟಕದ ಶೈಲಿಯಲ್ಲಿ ಅವರದೇ ದಾಟಿಯಲ್ಲಿ ಹೇಳುವ ನಿರೂಪಣೆ ಹೀಗಿದೆ:

`ಸಾರ್ ನಮ್ಮ ಕುಟುಂಬದವರು ಸಾತ್ವಿಕರು ಧರ್ಮವಂತರು ಇದ್ದರು. ನಂತರದಲ್ಲಿ ನನ್ನ ಬಾಲ್ಯದೊಳಗರಿ..ನಾನು ನಮಾಜ ಮಾಡಾದು, ಖುರಾನ್ ಅಭ್ಯಾಸ ಮಾಡಾದು, ಆರಂಭದೊಳಗ ನಮ್ ಗುರುಗಳಿಂದ ನಾನು ಧೀಕ್ಷೆ ಪಡಕೊಂಡು ಇಸಲಾಮ್ ಧರಮದ ಪರಿಪಾಲನೆಯೊಳಗ ಖಡ್ಡಾಯವಾಗಿ ಇದ್ನಿ. ನಂತರದಲ್ಲಿ ನನಗೂ ಗೊತ್ತಾಗಲಾರದಂಗ ನನ್ನ ಮನಸ್ಸಿನೊಳಗ ಒಂದು ಸುಪ್ತವಾದ ಬಯಕೆ ಏನು ಇತ್ತು ಅಂದ್ರ, ಎಲ್ಲಾ ಧರ್ಮದ ತತ್ವ ತಿಳಕೋಬೇಕು ಅನ್ನೋದು. ಅದು ನನಗೂ ಗೊತ್ತಿದ್ದಿದ್ದಿಲ್ಲ. ಆದ್ರು ಅದು ಮನಸ್ಸಿನ್ಯಾಗ ಇರೋದು. ಹಿಂಗಾಗಿ ನಾನು ಇಸಲಾಮ ಧರ್ಮದ ಖುರಾನ ಅಧ್ಯಯನ ಮಾಡಿದ ಬಳಿಕ, ವಚನ ಸಾಹಿತ್ಯದೊಳಗ ಅಲ್ಲಾನ ಬಗ್ಗೆ ಏನ್ ಇರಬಹುದು? ಮತ್ತು ಧರ್ಮದ ವ್ಯಾಖ್ಯಾನ ಅವರು ಏನ್ ಮಾಡ್ತಿರಬೇಕು. ಉಪನಿಷತ್‍ಕಾರ ಏನ್ ಮಾಡ್ತಿರಬಹುದು? ಗೀತದೊಳಗೆ ಏನು ಹೇಳಿರಬಹುದು? ಇನ್ನುಳಿದ ಧರ್ಮ ಗ್ರಂಥಗಳಲ್ಲಿ ಇದರ ಬಗ್ಗೆ ಏನು ವ್ಯಾಖ್ಯಾನ ಇರಬೇಕು ಅನ್ನೋದನ್ನು ತಿಳುಕೋಬೇಕು ಅನ್ನೋ ಹಂಬಲ ಇತ್ತು. ಆದರ ಅದಕ್ಕ ಅವಕಾಶ ಇರ್ತಿದ್ದಿಲ್ಲ. ಅದು ಹಂಗೆ ಎಂಟತ್ತು ವರ್ಷ ನನ್ನ ಮನಸ್ಸಿನ್ಯಾಗ ಇರ್ತಿತ್ತು.
ಎಂ.ಎಂ.ಕಲ್ಬುರ್ಗಿ ಅವರನ್ನು ಸುತಾರ ಸ್ವಾಗತಿಸುತ್ತಿರುವುದು.

ಎಂ.ಎಂ.ಕಲ್ಬುರ್ಗಿ ಅವರನ್ನು ಸುತಾರ ಸ್ವಾಗತಿಸುತ್ತಿರುವುದು.


ನನ್ನ ಬಾಲ್ಯದ ಹೊತ್ತಲ್ಲಿ ಮಸೀದಿ ಒಳಗ ಮೈಕದ ವ್ಯವಸ್ಥೆ ಇರಲಿಲ್ಲ. ಹಂಗಾಗಿ ರಂಜಾನ್ ತಿಂಗಳು ಬಂತು ಅಂತಂದ್ರೆ ನಾವು ಏಳೆಂಟು ಹುಡುಗರು ಗುಂಪು ಮಾಡಿಕೊಂಡು ಬೆಳಗ್ಗೆ ನಾಲ್ಕು ಗಂಟೆ ಹೊತ್ತಿಗೆ ಎದ್ದು ಇಡೀ ಮಹಾಲಿಂಗಪುರದ ಎಲ್ಲಾ ಮುಸ್ಲೀಮರ ಮನಿ ಮನಿಗೋಗಿ ಎಚ್ಚರ ಮಾಡತಿದ್ವಿ. ನಾವು ನಮಾಜ್ ಕೆ ಲಿಯೇ ಉಟೋ..ರೋಜ ಕೆ ಲಿಯೇ ಉಟೋ ಎಂದು ಹಾಡಿಕೊಳ್ಳುತ್ತಾ ಅಡ್ಡಾಡ್ತಿದ್ವಿ. ಇದೇ ರೀತಿ ಎಂಟತ್ತು ವರ್ಷ ಮಾಡಿದ್ವಿ. ಅಷ್ಟರೊಳಗ ಮೈಕದು ಬಂದುಬಿಟ್ವು ಆಗ ನಾವು ಹೋಗೋದು ನಿಲ್ತು.

ಈ ಮಧ್ಯೆ ನನ್ನೊಳಗ ಸುಪ್ತವಾಗಿ ಇನ್ನೊಂದು ಧರ್ಮದ ಬಗ್ಗೆ ತಿಳಕೋಬೇಕು ಅನ್ನೋದು ಇತ್ತಲ್ಲ, ಅಕಸ್ಮಾತ್ ಒಂದು ಪ್ರಸಂಗ ಬಂತು. ಒಂದು ಭಜನಾ ಸಂಘದವರು ಸಾಧು ನಿರಂಜನ ಅವಧೂತರ ಗುಡಿಯೊಳಗ ದಿನಾಲು ಭಜನಾ ಮಾಡತಾ ಇರುವಂತಹ ಒಂದು ಸಂಘ ಅದು. ಈ ಗುಡಿಯನ್ನು ಹಾದು ಹೋಗುವಂತಹ ಟೈಮದಾಗ ಅವರು ಭಜನಾ ಪದ್ಯಗಳನ್ನು ಹಾಡ್ತಾ ಇದ್ರು. ನನಗ ಒಂದಷ್ಟು ಹಾಡೋ ರೂಢಿ ಇರೋದರಿಂದ, ನಾನು ಕೂತುಗೊಂಡು ಅವರು ಏನು ಆಡ್ತಾಡ ನೋಡೋಣ ಅಂತ ಗುಡಿಯ ಕಟ್ಟಿಯ ಮುಂದೆ ಕೂತಗೊಂಡೆ.
ಆಗ ಮಹಾಲಿಂಗ ರಂಗರ ಒಂದು ಪದ್ಯ ಹಾಡುತ್ತಿದ್ದರು. ಅದೇನಂದರ ,
`ಮಾತು ಮಾತಿಗೆ ಶಂಕರಾ..
ಸ್ನಾನವ ಮಾಡುವಾಗ,
ನೇಮದಿ ಆತ್ಮ ಧ್ಯಾನವ ಮಾಡುವಾಗ
ಜಾಣತನದಿ ಅನ್ನ ಉಂಡು
ಗಂಗಾಮೃತ ಪಾನವ ಮಾಡುವಾಗ
ಮಾತು ಮಾತಿಗೆ ಶಂಕರ ಅನಬೇಕು..
ಬೆಟ್ಟವನೇರುವಾಗ,
ಕಾಲು ಜಾರಿದಲ್ಲಿ ಥಟ್ಟನೆ ಬೀಳುವಾಗ
ಅಷ್ಟಭೋಗದಿ ನಿತ್ಯಲೋಲುಪ್ತತೆ ಪಡೆಯುವಾಗ
ದಟ್ಟದಾರಿದ್ರ್ಯ ಬಂದಾಗ ಮನವೇ
ಮಾತು ಮಾತಿಗೆ ಶಂಕರಾ ಅನಬೇಕು…

ಈ ಪದ್ಯದ ಉಪದೇಶ ಇತ್ತಲ್ಲ ಅದು ನನಗೆ ತುಂಬಾ ಪರಿಣಾಮ ಮಾಡಿತು. ಯಾಕಂತ ಕೇಳಿದ್ರ ನಾವು ಇದನ್ನೆ ಮಸೂದಿಯೊಳಗ ಅಭ್ಯಾಸ ಮಾಡ್ತಿದ್ವಿ. ನಮಗ ಗುರುಗಳು ಏನು ಹೇಳ್ತಾ ಇದ್ರು. `ಹರ ಕಾಮ್ ಬಿಸಿಮಿಲ್ಲಾಕೆ ಸಾತ್ ಶುರುಕರೋ.. ಪ್ರತಿಯೊಂದು ಕೆಲಸ ಮಾಡುವಾಗ ಬಿಸ್ಮಿಲ್ಲಾ ರಹೀಮ್ ಅಲ್ಲಾ ಅನಬೇಕು ಅನ್ನೋದಾಗಿತ್ತು. ಭಗವಂತನ ಸ್ಮರಣೆಯೊಂದಿಗೇ ನಿಮ್ಮ ಕೆಲಸವನ್ನು ಆರಂಬಿಸಬೇಕು ಅನ್ನೋದನ್ನು ನಮಗ ಹೇಳಿಕೊಡ್ತಾ ಇದ್ರು. ಅವರು ಇಡೀ ಜೀವನದೊಳಗ ಊಟ ಮಾಡುವಾಗ ಖಾತೆವತ್ತು, ಸೋತೆವತ್ತು, ಪೀತೆಹೊತ್ತು, ಹರ್ ಕಾಮ ಹೇ… ಅಂತ ಅವರು ಅಂದಿಲ್ಲ ಆದ್ರ ನನಗ ಇದು ಭಜನೆ ಪದದ ನೀತಿನೆ ಹೇಳಾಕ ಹತ್ತಿತು. ಅಂದಕೂಡಲೆ ಇದು ಎಷ್ಟು ಹೊಂದಾಣಿಕೆ ಐತೆಲ್ಲಾ? ನಾವು ಅಲ್ಲಾ ಅಂತೀವಿ ಇವರು ಶಂಕರ ಅಂತಾರ, ಅನವಲ್ಲರ್ಯಾಕ..ಪ್ರತಿಯೊಂದು ಧರ್ಮದೊಳಗ ಭಗವಂತನ ಸ್ಮರಣೆ ಮಾಡಬೇಕು ಅನ್ನೋದೊಂದೈತಲ್ಲ ಅನ್ನಿಸಿತು.
03
ಹಂಗಾಗಿ ಈ ಪದ್ಯ ಕೇಳಿದ ಬಳಿಕ ನಾನು ಅವರ ಬಳಿ ಹೋಗಿ ನೀವು ನಿಮ್ಮ ಪದ್ಯಗಳನ್ನ ಕಲಿಸ್ತಿರೇನು ಅಂತ ಕೇಳಿದೆ. ಅವ್ರು ಅದೇನ್ ಮಾರಾಯ ಅವಶ್ಯ ಕಲಿಸ್ತೀವಿ ಬಾ ಅಂದ್ರು. ಅವರಿಗೆ ಕಲಿಸುವಂತಹ ಗುರುಗಳು ಒಬ್ರಿದ್ರು ಅವ್ರ ಹೆಸ್ರು ಬಸಪ್ಪ ಮಾಸ್ತರ ಅಂತ. ಆಗ ಅವರ ಬಳಿ ನಾನು ಬಹಳಾ ಪ್ರೀತಿಯಿಂದ ಭಜನಾ ಪದ್ಯಗಳನ್ನು ಕಲಿತೆ. ಮಾಲಿಂಗ ರಂಗ, ಸರ್ಪಭೂಷಣ ಶಿವಯೋಗಿ, ನಿಜಗುಣ ಶಿವಯೋಗಿ, ಶಿಶುನಾಳ ಶರೀಫ ಮುಂತಾದವರ ಹಾಡುಗಳನ್ನೆಲ್ಲಾ ಕಲಿತುಕೊಂಡೆ. ಹೀಗೆ ಕಲಿತುಕೊಂಡ ಬಳಿಕ ಏನಾರ ಸಣ್ಣಪುಟ್ಟ ಕಾರ್ಯಕ್ರಮ ಇದ್ರ ಅವರು ನನ್ನ ಕರೀತಿದ್ರು.’ ಎನ್ನುತ್ತಾರೆ.

03ಹೀಗೆ ಸುತಾರರು ಪ್ರವಚನದ ದಾರಿಗೆ ತೆರೆದುಕೊಂಡನ್ನು ವಿಶಿಷ್ಠವಾಗಿದೆ. ನಾನು ಮೊದಲು ಅವರ ಬಗ್ಗೆ ತಿಳಿದಿದ್ದೆನಾದರೂ ಬೇಟಿಯಾಗಿರಲಿಲ್ಲ. ಸಂದರ್ಶನಕ್ಕಾಗಿ ಮಹಾಲಿಂಗಪುರದಲ್ಲಿ ಬೇಟಿ ವಿಫಲವಾಯಿತು. ನಂತರ ಅವರು ಪ್ರವಚನ ಮಾಡುವ ಹಳ್ಳಿಗೆ ಹೋದೆನು. ಗೋಕಾಕ ತಾಲೂಕಿನ ಕೃಷ್ಣನದಿ ದಂಡೆಯ ಊರು ಹಳ್ಯಾಳ. ಅಲ್ಲೊಂದು ಮಠದಲ್ಲಿ ಪ್ರವಚನ ಆಯೋಜನೆಗೊಂಡಿತ್ತು. ರಾತ್ರಿ 8 ಗಂಟೆ ಹೊತ್ತಿಗೆ ಇಡೀ ಊರಿನ ಜನರು ಸೇರಿದರು. ಕನಿಷ್ಠ ಐದುನೂರರಷ್ಟು ಜನರಿದ್ದರು. ಸಾಂಪ್ರದಾಯಿಕವಾಗಿ ಸ್ಥಳೀಯ ಸ್ವಾಮೀಜಿಯೊಬ್ಬರು ಉದ್ಘಾಟಿಸಿದರು. ಸುತಾರ ಮತ್ತವರ ತಂಡದ ಪ್ರವಚನ ಆರಂಭವಾಯಿತು. ಅಂದು ಗುರುಶಿಷ್ಯರಲ್ಲಿ ಜಾತಿಬೇಧ ಇರಬಾರದು ಎನ್ನುವ ಚರ್ಚೆ, ಕಾಯಕ ನಿಷ್ಠೆ, ಶ್ರೀಮಂತಿಕೆಯ ಅಪಮೌಲ್ಯೀಕರಣದ ವ್ಯಾಖ್ಯಾನ, ಮೇಲು ಕೀಳಿನ ಆಚರಣೆಯ ನಿರರ್ಥಕ ಸಂಗತಿಗಳನ್ನು ಒಳಗೊಂಡಂತೆ ನವಿರಾಗಿ, ಹಾಸ್ಯಮಿಶ್ರಿತ ನಿರೂಪಣೆಯನ್ನು ಸಂವಾದಿರೂಪಿಯಾಗಿ ಮಂಡಿಸುತ್ತಾ ಹೋದರು. ಮಧ್ಯರಾತ್ರಿಯವರೆಗೆ ಈ ಚರ್ಚೆ ನಡದೇ ಇತ್ತು. ಜನರು ಕದಲದೆ ಈ ಸಂವಾದವನ್ನು ಕೇಳಿಸಿಕೊಂಡರು. ನಂತರ ಮಧ್ಯರಾತ್ರಿಯಲ್ಲಿ ಪ್ರಸಾದ ಸ್ವೀಕರಿಸಿ ತಮ್ಮ ಮನೆಗಳಿಗೆ ನಡೆದರು.

ಈ ಚರ್ಚೆಯಲ್ಲಿ ಸುತಾರ ಅವರು ಜನಪದ ಗಾದೆ, ವೇದ ಉಪನಿಷತ್ ಭಗವದ್ಗೀತೆಯ ಶ್ಲೋಕಗಳು, ಕುರಾನಿನ ಉಲ್ಲೇಖಗಳು, ಬೈಬಲ್ಲಿನ ಸಂಗತಿಗಳು, ದೈನಂದಿನ ಚಟುವಟಿಕೆಗಳು, ಜನಸಾಮಾನ್ಯರ ನಂಬಿಕೆಗಳು ಹೀಗೆ ಈ ಎಲ್ಲವನ್ನೂ ಒಳಗೊಂಡ ಕೊಲಾಜ್ ಮಾದರಿಯ ತಮ್ಮದೇ ಆದ ಒಂದು ವಿಶಿಷ್ಠ ಪಠ್ಯವನ್ನು ಮಂಡಿಸುತ್ತಿದ್ದರು. ಈ ಎಲ್ಲದರ ಉಲ್ಲೇಖ ಜನರಲ್ಲಿ ಒಂದು ಬಗೆಯ ಅಚ್ಚರಿಯನ್ನೂ, ಬೆರಗನ್ನೂ ಮೂಡಿಸುತ್ತಿತ್ತು. ಇಲ್ಲಿ ನೆರೆದ ಮಕ್ಕಳ ಮೇಲಂತೂ ಈ ಮಾತುಗಳ ಪ್ರಭಾವ ಹೆಚ್ಚಾಗುತ್ತಿದ್ದಂತೆ ಕಾಣುತ್ತಿತ್ತು. ಆದರೆ ಹೊತ್ತು ಮೀರುತ್ತಿದ್ದಂತೆ ರಾತ್ರಿ ಮಕ್ಕಳೆಲ್ಲಾ ನಿದ್ದೆಗೆ ಶರಣಾದರು. ಒಮ್ಮೆಯೂ ವೈಚಾರಿಕ ಭಾಷಣ ಕೇಳಲು, ಲೇಖನ ಓದಲು ಸಾದ್ಯವಿಲ್ಲದ ಸಣ್ಣ ಹಳ್ಳಿಗಳಲ್ಲಿ ಸುತಾರರ ನಿರೂಪಣೆಗಳು ತನ್ನದೇ ಆದ ಪ್ರಭಾವ ಬೀರುತ್ತಿರುವುದು ಕಾಣಿಸಿತು.
**
ಸುತಾರರು ತಮ್ಮ ಪ್ರವಚನದ ಜತೆ ಸಾಮಾಜಿಕ ಕಾಳಜಿಯ ಕಡೆ ಮುಖ ಮಾಡಿರುವುದು ಮುಖ್ಯವಾಗಿದೆ. ಇಲ್ಲಿ ಅವರು ಸಾಮೂಹಿಕ ಹಿತದ ಕೆಲಸಗಳಿಗೆ ಹೆಚ್ಚು ಗಮನಹರಿಸಿದ್ದಾರೆ. ರಸ್ತೆ ಮಾಡಿಸಿದ್ದು, ಶಾಲೆ ಕಟ್ಟಿಸಿದ್ದು, ಕುಡಿಯುವ ನೀರಿನ ಟ್ಯಾಂಕ್ ಕಟ್ಟಿಸಿದ್ದು ಇತ್ಯಾದಿಗಳು. ಇಂತಹ ಕೆಲಸಗಳಿಗೆ ಬಂದೊದಗಿದ ಸಂದರ್ಭಳೂ, ಇಂತಹ ಸಂದರ್ಭವನ್ನು ಸುತಾರರು ನಿಭಾಯಿಸಿದ ಬಗೆ ಎರಡೂ ಭಿನ್ನವಾಗಿದೆ. ಸುತಾರರು ಇಂತಹ ಸಂದರ್ಭವನ್ನು ಅವರದೇ ಮಾತಿನಲ್ಲಿ ಆತ್ಮೀಯವಾಗಿ ರಸ್ತೆ ಮಾಡಿದ ಘಟನೆಯನ್ನು ಹೇಳುತ್ತಾರೆ:
`ನಾವು ಕೆಲವು ಊರುಗಳಿಗೆ ಶ್ರಾವಣಕ್ಕ ಪ್ರತಿ ವರ್ಷ ಹೋಗತಿದ್ದೆವು. ಹಂಗ ಬೆಳಗಾಂ ಜಿಲ್ಲೆ ಅಥಣಿ ತಾಲೂಕು ಶೇಗುಣಸಿ ಅಂತಾ ಊರಿದೆ. ಅಲ್ಲಿಗೆ 15 ವರ್ಷದಿಂದ ಶ್ರಾವಣಕ್ಕ ಹೋಗತಿದ್ವಿ. ಈ ಸಿದ್ದೇಶ್ವರ ಸ್ವಾಮೀಜಿ ಇದಾರಲ್ಲ ಅವರ ಗುರುಗಳು ಮಲ್ಲಿಕಾರ್ಜುನ ಸ್ವಾಮಿಗಳು. ಅವರೇನು ಮಾಡ್ತಾ ಇದ್ರು ಯಾವುದೇ ಊರಿಗೆ ಹೋದ್ರನೂ ಪ್ರವಚನ ಮಾಡಿದ ಬಳಿಕ, ಆ ಊರಿನವರು ಕೊಟ್ಟ ದುಡ್ಡನ್ನೆಲ್ಲಾ ಸಮಾಜ ಸೇವೆಗೆ ಬಿಟ್ಟು ಬರ್ತಾ ಇದ್ರು ಅಂತ ನಾವು ಕೇಳಿದ್ವಿ. ನಮಗ ಬಡತನದ ಜೀವನ ಇದ ಅವರೇನು ಕಾಣಿಕೆ ಅಂತ ಕೊಡತಾರ ಅದಕ್ಕೆ ವ್ಯತಿರಿಕ್ತವಾಗಿ ನಾವು ಸಮಾಜಕ್ಕೆ ಏನಾರ ಕೊಡಬೇಕಲ್ಲಾ ಅನ್ನಿಸಿತು.

ಹಿಂಗ ಇರಬೇಕಾದ್ರೆ, ಶ್ರಾವಣಕ್ಕೆ ಸೀಗುಣಸಿಗೆ ಹೋದಾಗ ಒಂದು ಘಟನ ಸಂಭವಿಸಿತು. ಅತ್ಯಂತ ಬಡಕುಟುಂಬದ ಒಂದೇ ತಾಯಿಯ ಎರಡು ಮಕ್ಕಳು ಎಂಟೇದಿನದ ಒಳಗ ತೀರಿಕೊಂಡವು. ನಾವು ದಿನಾಲು ಅವರ ಮನೆಮುಂದೆ ಹೋಗೋದು ಬರೋದು ಮಾಡ್ತಾ ಇದ್ದೆ. ಒಂದು ಮಗು ತೀರಿಕೊಂಡಾಗ ಅಳತಿದ್ದದ್ದನ್ನ ನಾನು ನೋಡಿದ್ದೆ. ಇದಾಗಿ ಎಂಟು ದಿನ ಆದ ಮ್ಯಾಲೆ ಇದೇ ರೀತಿಯ ದುಃಖ ಅದೇ ಮನಿಯಾಗ ಸಂಭವಿಸಿತು. ಅಂದ್ರ ಮತ್ತೊಂದು ಮಗು ತೀರಿಕೊಂಡಿತ್ತು. ಇದು ನನ್ನ ಮನಸ್ಸಿನ ಮೇಲೆ ಬಾಳ ಪರಿಣಾಮ ಬೀರಿತು. ಹಿಂಗ ಮಕ್ಕಳು ಯಾಕ ತೀರಿಕೊಳ್ಳಾಕ ಹತ್ಯಾವ ಅನ್ನೋ ಬಗ್ಗೆ ಚಿಂತನಾ ನಡೆಸಿದ್ವಿ. ಆಗ ತಿಳಿದದ್ದು ಏನಂದ್ರ, ಮಕ್ಕಳಿಗೆ ವಾಂತಿ ಬೇದಿ ಆರಂಭವಾಗಿತ್ತು. ಆಗ ದವಾಖಾನೆಗೆ ಕರಕೊಂಡು ಹೋಗಾಕ ಅಂದ್ರ ತೇರದಾಳಕ್ಕ ಹೋಗಬೇಕು. ರೋಡಿಲ್ಲ, ಮಳಿಯಿಂದಾಗಿ ಎರಿನೆಲ (ಕಪ್ಪು ಭೂಮಿ) ಕೆಸರಲ್ಲಿ ಕಾಲು ಸಿಕ್ಕಿಕೊಂತಾವ, ಮಕ್ಕಳನ್ನು ಎತ್ತಿಕೊಂಡು ಹೋಗಿ ಟ್ರೀಟ್ ಮೆಂಟ್ ಕೊಡಸಲಿಲ್ಲದ್ದಕ್ಕ ಈ ಮಕ್ಕಳು ತೀರಿದ್ವಿ ಅಂದ್ರು. ಯಾರಿಗಾರ ಕೇಳಿದ್ರ ಚಕ್ಕಡಿ ಊಡಿಕೊಂಡು ಹೋಗಬೇಕು, ಅವರು ನೂರ ಇನ್ನೂರ ಬಾಡಿಗಿ ಕೇಳೋವರು, ಹಿಂಗಾಗಿ ಹೋಗಲಾರದಕ್ಕ ಮಗು ತೀರಿಕೊಳ್ತು ಎಂದರು. ಇದನ್ನ ಕೇಳಿ ಬಾಳ ಬೇಸರ ಆಯ್ತು. ಅರೆ ಈ ಊರಿಗೆ ರೋಡು ಇಲ್ವಲ್ಲಾ ಅನ್ನಿಸ್ತು.

ಈ ಊರಾಗ ಶ್ರೀಮಂತರು ಸಾಕಷ್ಟು ಜನ ಇದಾರ ಇವರೆಲ್ಲಾ ಒಟ್ಟಾಗಿ ಸರಕಾರದಿಂದ ಒಂದು ರೋಡ್ ಯಾಕ ಮಾಡಿಸಬಾರದು? ಅನ್ನಿಸ್ತು. ಶ್ರಾವಣಕ್ಕೆ ಹೋದ ನಮ್ಮ ಗೆಳೆಯರ ಗುಂಪನ್ನು ಸೇರಿಸಿಕೊಂಡು ಈ ಊರಿನ ಪ್ರಮುಖರನ್ನು ಒಂದು ಕಡೆ ಕೂಡಿಸೋಣ. ಅವರ ಮುಂದೆ ಈ ಊರಿಗೆ ದಾರಿ ಇಲ್ಲದ್ದನ್ನು ಹೇಳೋಣ. ಬಡತಾಯಿಯ ಮಕ್ಕಳು ಎಂಟು ದಿನದಲ್ಲಿ ತೀರಿಕೊಂಡವು. ಶ್ರೀಮಂತರು ಚಕ್ಕಡಿ ಹೂಡಿಕೊಂಡೋ, ಟ್ರಾಕ್ಟರ್ ಗಾಡಿ ತೊಗೊಂಡೋ ಹೋಗ್ತೀರಿ. ಆದರ ಈ ಬಡವರ ಪಾಡೇನು? ಅಂತ ಕೇಳಿದ್ವಿ. ಅದಕ್ಕ ಈ ಊರಿಗೆ ಒಂದು ರೋಡು ಆಗಬೇಕು ಇದಕ್ಕ ಬೇಡಿಕೆ ಇಡೋಣು ಅಂತ ತೀರ್ಮಾನ ಮಾಡಿದ್ವಿ. ಈ ಸಂಕಲ್ಪ ಮಾಡಿ ಊರನ್ನೆಲ್ಲಾ ಅಡ್ಡಾಡಿ ಹಿರೇರನ್ನ ಕೂಡಿಸಿದ್ವಿ. ಹೀಗೆ ಕೂಡಿಸಿದ ಬಳಿಕ ನಾವು ಎದ್ದು ನಿಂತು ವಿನಂತಿ ಮಾಡಿಕೊಂಡ್ವಿ. ದಾರಿ ಇಲ್ಲದ ಕಾರಣಕ್ಕ ಎರಡು ಮಕ್ಕಳು ತೀರಿ ಹೋದ್ವು. ದಾರಿನಾದ್ರೂ ಇದ್ದದ್ರ, ನಡಕೊಂಡಾದ್ರೂ ಹೋಗಿ ಮಕ್ಕಳ ಪ್ರಾಣಾನ ಉಳಿಸಿಕೊಳ್ತಾ ಇದ್ರು. ಈ ಊರು ದಾರಿ ಇಲ್ಲದ ನಡುಗಡ್ಡೆ ಇದ್ದಂಗ ಐತಿ. ನಾವು ನೀವು ಇದೀವಿ. ಈ ಊರಿಗೆ ದಾರಿ ಮಾಡ್ಸಾಮು.

ಊರವರೆಲ್ಲಾ ಸೇರಿ ಸರಕಾರದ ಮುಂದೆ ಬೇಡಿಕೆ ಇಡ್ರಿ. ನೀವು ಯಾವ ಆಫೀಸಿನ ಮುಂದೆ ಹೇಳ್ತೀರೋ ಆ ಆಫೀಸಿನ ಮುಂದೆ ನಾವು ಹೋಗಿ ಕೂತಕೊಂತೀವಿ. ನಾವು ಕೆಲಸ ಆಗೋತನಕ ಉಪವಾಸ ಸತ್ಯಾಗ್ರಹ ಮಾಡ್ತೀವಿ. ಅಧಿಕಾರಿಗಳ ಜತೆ ನೀವು ಸಂಪರ್ಕ ಮಾಡರಿ. ನಾವು ಉಪವಾಸ ಮಾಡ್ತೀವಿ. ಒಂದು ವೇಳೇ ಇದಕ್ಕ ನೀವು ಒಪ್ಪಲಿಲ್ಲ ಅಂದ್ರ ನಾವು ನಿಮ್ಮ ಮನಿ ಮುಂದೆ ಇವತ್ತು ಉಪವಾಸ ಕೂಡತೀವಿ ಅಂದ್ವಿ. ನಾವು ಸಿದ್ಧಾರೂಢರ ಪ್ರತಿಮೆ ಮುಂದೆ ಹೀಗಂತ ನಾವು ಪ್ರತಿಜ್ಞೆ ಮಾಡಿನ ಬಂದೀವಿ. ನಿಮ್ಮ ಮಕ್ಕಳ ಹಿಂಗ ತೀರಿ ಹೋಗಿದ್ರ ಏನ್ ಮಾಡತಿದ್ರಿ ನೀವು ಯೋಚನೆ ಮಾಡರಿ’ ಅಂದ್ವಿ.

ಇದು ಊರವರ ಮೇಲೆ ಪರಿಣಾಮ ಬೀರಿತು. ಊರವರೆಲ್ಲಾ ಸೇರಿ ಒಂದು ತೀರ್ಮಾನಕ್ಕೆ ಬಂದರು. ಈಗ ಶ್ರಮಧಾನದಿಂದ ಕಾರ್ಯಕ್ರಮವನ್ನು ಆರಂಭಿಸೋಣ. ಮಣ್ಣು ಅಡ್ಡಿ ಹೊಗೆಯುವುದು. ಈ ಕೆಲಸ ಶುರುಮಾಡುವುದು. ಒಂದೊಂದು ದಿವಸ ಒಂದು ಓಣಿಯವರು ಶ್ರಮಧಾನ ಮಾಡೋದು ಅಂತ ಕೆಲಸ ಶುರು ಮಾಡಿಕೊಂಡ್ರು. ಹೀಗೆ ಶುರುಮಾಡಿ ಆಫೀಸಕ್ಕ ಹೋಗೋಣು ಅಂತ ಹೋದ್ವಿ. ಸ್ವಲ್ಪನಾರ ನಾವು ಮಾಡಿದ ಕೆಲಸ ತೋರ್ಸೋಣು ಅಂತ ಟೀಮ್ ತಯಾರಾಯ್ತು. ಮರು ದಿವಸ ಕೆಲಸ ಶುರುವಾಯ್ತು. ನಾವು ಭಜನಾ ಸಂಘದವರು ಇಡೀ ಊರೆಲ್ಲಾ ಓಂ ನಮಃ ಶಿವಾಯ ಅಂತಾ ಹೇಳಿಕೊಳ್ತಾ ಸುತ್ತುವರಿತಾ ಇದ್ವಿ. ಈ ಓಣಿಯಾಗ ಶ್ರಮಧಾನದ ಪಾಳ್ಯ ನಿಮ್ಮದು ಅದಾ ಅಂತಾ ಹೇಳ್ತಾ ಇಡೀ ಊರನ್ನು ಎಚ್ಚರಿಸಿದ್ವಿ. ಅದೊಂದು ರೀತಿಯಲ್ಲಿ ಎಲ್ಲರಿಗೂ ಉಮ್ಮಸ್ಸು ಬಂತು ಅನಸ್ತದ. ಹಿಂಗಾ ಮಾಡಿ ಐದಾರು ತಿಂಗಳು ಭಜನಾ ಮಾಡತನಕ, ಅಲ್ಲೇ ನಾವು ಉಳಿದ ಬಿಟ್ವಿ. ಅಲ್ಲಿ ಊರವರು ಒಂದು ಟನ್ ಕಬ್ಬಿಗೆ ಇಷ್ಟು ಅಂತ ಸಕ್ಕರಿ ಪ್ಯಾಕ್ಟರಿಯಾಗ ಹಣನೂ ಸಂಗ್ರಹ ಮಾಡಿಕೊಂಡು ಬಂದ್ರು. ಸರಕಾರವೂ ನೆರವು ನೀಡಿತು. ಈ ರಸ್ತೆ ತೇಗುಣಿಸೆಯಿಂದ ತೇರದಾಳದ ತನಕ ಒಟ್ಟು ಎಂಟೂವರೆ ಕಿಲೋಮೀಟರ್ ಇದೆ. ಈಗ ಅದು ಬದಲಾವಣೆ ಆಗಿ ಡಾಂಬರು ರೋಡಾಗಿದೆ. ಅದೊಂದು ಕೆಲಸ ಶ್ರಾವಣ ಮಾಸಕ್ಕೆ ಹೋದಾಗ ಈಡೇರಿದ್ದು. ನಮಗ ದೊಡ್ಡ ನೆಮ್ಮದಿ ತಂದಾದ’ ಎನ್ನುತ್ತಾರೆ.

ಇಂತಹ ಸಾಮಾಜಿಕ ಚಟುವಟಿಕೆಗಳು ಭಿನ್ನವಾಗಿದ್ದರೂ, ಈ ದಾರಿಯಲ್ಲಿ ಹೆಚ್ಚು ದೂರ ಸುತಾರರಿಗೆ ಸಾಗಲು ಸಾಧ್ಯವಾಗಲಿಲ್ಲ. ಕಾರಣ ಈ ಬಗೆಯ ಸಾಮಾಜಿಕ ಕಾರ್ಯಗಳಿಗೆ ರಾಜಕೀಯ ಆಯಾಮವೊಂದು ಬರುವ ಅಪಾಯವೂ ಇರಬಹುದು. ಅಂತೆಯೇ ಪ್ರವಚನ ಕಾರ್ಯವಷ್ಟೇ ತಮ್ಮದು ಎನ್ನುವ ಸಂದೇಶ ಸಾರ್ವಜನಿಕರಿಂದಲೋ, ರಾಜಕಾರಿಣಿಗಳಿಂದಲೋ ಪರೋಕ್ಷವಾಗಿ ರವಾನೆಯಾಗಿರುವ ಸಾಧ್ಯತೆಯೂ ಇದೆ.

ಸುತಾರರು `ಪಾರಮಾರ್ಥ ಲಹರಿ ತತ್ವಪದಗಳು’ `ತತ್ವಜ್ಞಾನಕ್ಕೆ ಎಲ್ಲರೂ ಅಧಿಕಾರಿಗಳು’ `ನಾವೆಲ್ಲಾ ಭಾರತೀಯರು’ ಎಂಬ ಕಾವ್ಯ ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ `ನಾವೆಲ್ಲಾ ಭಾರತೀಯರೆಂಬ ಭಾವ ಮೂಡಲಿ’ ಎನ್ನುವ ಪದ ಉತ್ತರ ಕರ್ನಾಟಕದ ಭಜನಾ ಮಂಡಳಿಗಳ ರಾಷ್ಟ್ರಗೀತೆಯಂತೆ ಜನಪ್ರಿಯವಾಗಿದೆ. ಸುತಾರರು ನವಮೌಖಿಕ ಮಾಧ್ಯಮಗಳಲ್ಲಿ ಹೆಚ್ಚು ಪ್ರಸಾರವಾಗಿದ್ದಾರೆ. ಹಾಗಾಗಿ ಈತನಕ 20 ಧ್ವನಿಸುರುಳಿಗಳು ಬಿಡುಗಡೆಯಾಗಿವೆ. ಇದರ ಪ್ರಭಾವದಿಂದ ಸುತಾರರ ಪ್ರವಚನ ಮತ್ತು ಪದಗಳು ಮೈಬೈಲ್‍ನಲ್ಲಿಯೂ, ಟಿವಿಗಳಲ್ಲಿಯೂ ವ್ಯಾಪಕವಾಗಿ ಹರಡಿವೆ. ಸುತಾರ ಅವರು ರಚಿಸುವ ಕಾವ್ಯ ಅಥವಾ ವಚನಗಳನ್ನು `ಬಸವ’ ಎಂಬ ಅಂಕಿತದಲ್ಲಿ ಬರೆಯುತ್ತಿದ್ದಾರೆ. ಪ್ರವಚನಗಳಲ್ಲಿ ಸಾಮಾಜಿಕ ಪ್ರಸಕ್ತ ವಿದ್ಯಮಾನದ ಸಂಗತಿಗಳನ್ನು ತರುವ ಕ್ರಮ ಕೂಡ ಇದೆ. ಈ ಅರ್ಥದಲ್ಲಿ ಅವರೊಬ್ಬ ಜನಪದ ಕವಿ. ಜನಪದ ಸಂವಹನದ ದಾರಿಯನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಈ ನೆಲೆಯಲ್ಲಿ ದೇವದಾಸಿ ಪದ್ದತಿಯ ವಿರುದ್ದ, ಜಾತಿ ಪದ್ದತಿಯ ವಿರುದ್ಧ ಜನಜಾಗೃತಿ ಮೂಡಿಸುವುದು, ಸಾಕ್ಷರತಾ ಕಾರ್ಯಕ್ರಮದಲ್ಲಿ ಶಿಕ್ಷಣದ ಮಹತ್ವ ಸಾರುವುದು ಇತ್ಯಾದಿ. ತೀರಾ ಸಾಂಪ್ರದಾಯಿಕ ಸಂಗತಿಗಳನ್ನು ಮಾತ್ರ ಸಂವಹನ ಮಾಡಲು ಸಾಧ್ಯವಿದ್ದ ದಾರಿಯಲ್ಲಿಯೇ ಈ ಬಗೆಯ ಪ್ರಯೋಗ ಮಾಡಿರುವುದು ಮುಖ್ಯವಾಗಿದೆ. ಅಂತೆಯೇ ಈ ಪ್ರಯೋಗ ಕೂಡ ಧರ್ಮಸೂಕ್ಷ್ಮದಿಂದ ಕೂಡಿದೆ. ಜಾತಿ ಪದ್ದತಿಯನ್ನು ವಿರೋಧಿಸುವಾಗ ಮೇಲುಜಾತಿಗಳನ್ನು ಗುರಿಯಾಗಿಟ್ಟುಕೊಳ್ಳುವಂತಿಲ್ಲ. ಬದಲಾಗಿ ಉದಾರವಾದಿ ನೆಲೆಯಲ್ಲಿ ಇದನ್ನು ನಿಭಾಯಿಸಿದ್ದಾರೆ. ಕಾರಣ ಸುತಾರರ ಪ್ರವಚನಗಳ ಪ್ರಾಯೋಜಕರು ಸಾಮಾನ್ಯವಾಗಿ ಮೇಲುಜಾತಿಯ ಮಠಗಳು ಎನ್ನುವುದನ್ನು ಗಮನಿಸಬೇಕು.
ಈ ಅರ್ಥದಲ್ಲಿ ಹಿಬ್ರಾಹಿಂ ಸುತಾರ ಅವರು ಮಾಡಿದ ಪ್ರವಚನದ ದಾರಿ ಒಂದು ಬಗೆಯ ಚಳವಳಿಯ ದಾರಿಯೂ ಆಗಿದೆ. ಇಲ್ಲಿ ಸಾಹಿತ್ಯ ಓದು ಬರಹದಿಂದ ದಕ್ಕುವ ವೈಚಾರಿಕತೆ ಮೂಡದಿರಬಹುದು, ಆದರೆ ಕೆಲವು ಬಿಗಿಯಾದ ಕಟ್ಟುಗಳು ಸಡಿಲವಾಗುವ ಅರ್ಥದಲ್ಲಿ ಈ ಬದಲಾವಣೆಯನ್ನು ಗ್ರಹಿಸಬೇಕಾಗಿದೆ. ಮುಖ್ಯವಾಗಿ ಸುತಾರ ತರಹದ ಪ್ರವಚನ ಮಾದರಿಯಲ್ಲಿ ಇತರರು ಎದುರಿಸದ ಕೆಲವು ಬಿಕ್ಕಟ್ಟುಗಳನ್ನು ಇವರೊಬ್ಬ ಮುಸ್ಲೀಂ ಆದ ಕಾರಣಕ್ಕೆ ಎದುರಿಸಬೇಕಿತ್ತು. ಆದರೆ ಅದನ್ನವರು ತುಂಬಾ ಜಾಗರೂಕತೆಯಿಂದ ದಾಟಿದ್ದಾರೆ. ಈ ಮಧ್ಯೆಯೂ ಅವರು `ನಿಮ್ಮನೊಡನಿದ್ದೂ ನಿಮ್ಮಂತಾಗದೆ’ ಎನ್ನುವಂತಹ ಕವಿ ನಿಸಾರ್ ಅಹಮದ್ ತರಹದ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಎದುರುಗೊಂಡಿದ್ದಾರೆ.
ಇಲ್ಲಿ ಮುಖ್ಯವಾಗಿ ಜನರ ನಂಬಿಕೆಯ ದಾರಿಗಳಲ್ಲಿ ನಡೆಯುತ್ತಲೇ ಅವರ ಲೋಕದೃಷ್ಠಿಯನ್ನು ತಿದ್ದುವ ರೀತಿ ಇದಾಗಿದೆ. ಅಂದರೆ ಜನರು ಸಾಂಪ್ರದಾಯಿಕವಾಗಿ ಭಕ್ತಿ, ಭಜನೆ, ಪ್ರವಚನಗಳ ಜತೆ ಬೆಸೆದುಕೊಂಡ ನಂಬಿಕೆಯ ಲೋಕಗಳನ್ನು ಬಳಸಿಕೊಂಡೇ ಧಾರ್ಮಿಕ ಕಟ್ಟಳೆಗಳನ್ನೂ, ಜಾತಿಯ ಕಟ್ಟಳೆಗಳನ್ನೂ, ಲಿಂಗದ ಕಟ್ಟಳೆಗಳನ್ನೂ, ವರ್ಗ ಶ್ರೇಣಿಯ ಕಟ್ಟಳೆಗಳನ್ನೂ, ಮೂಡನಂಬಿಕೆಗಳನ್ನು ಮೀರುವ ತಿಳಿವನ್ನು ಬಿತ್ತರಿಸುವುದಾಗಿದೆ.
05
**
ಸುತಾರ ಅವರಿಗೆ 75 ವರ್ಷ ಸಂದ ಕಾರಣ ಅವರ ಅಭಿಮಾನಿಗಳು, ಶಿಷ್ಯರು, ಬಂದು ಬಳಗ ಸೇರಿ ಒಂದು ಬೃಹತ್ತಾದ ಅಭಿನಂದನಾ ಕಾರ್ಯಕ್ರಮವನ್ನು ಮಹಾಲಿಂಗಪುರದಲ್ಲಿ ಆಯೋಜಿಸಿದ್ದರು. ನಾನೂ ಹಾಜರಿದ್ದೆ. ಇದರಲ್ಲಿ ಅವರಿಗೊಂದು ಅಭಿನಂದನಾ ಗ್ರಂಥವೂ ಸಮರ್ಪಣೆಯಾಯಿತು. ಸುಮಾರು ಮೂರು ಸಾವಿರದಷ್ಟು ಜನರು ಸೇರಿದ್ದರು. ಅದರಲ್ಲಿ ಹಿರಿಯ ತಲೆಮಾರಿನವರ ಸಂಖ್ಯೆ ದೊಡ್ಡದಿತ್ತು. ಈ ಎರಡೂ ದಿನಗಳು ಸುತಾರ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿಯಿತು. ಎಲ್ಲಾ ವರ್ಗದ ಜನರೂ ಬಂದಿದ್ದರು. ಅಂತೆಯೇ ಹಿಂದೂ ಮುಸ್ಲಿಂ ಬಾಂಧವರೂ ಸೇರಿದ್ದರು. ಮುಖ್ಯವಾದ ಸಂಗತಿಯೆಂದರೆ ನಾನು ಮಾತನಾಡಿಸಿದ ಕೆಲವರು ಪ್ರಾದೇಶಿಕವಾಗಿ ಅವರವರ ಭಾಗದಲ್ಲಿ ಸುತಾರ ಅವರ ಮಾದರಿಯಲ್ಲಿ ಭಜನೆ, ಪ್ರವಚನ ಮಾಡುವ ಕಲಾವಿದರಾಗಿದ್ದರು. ಅಂದರೆ ಸುತಾರ ಅವರ ಸುಧೀರ್ಘ ಪ್ರವಚನ, ಭಜನೆ, ಸಂವಾದದ ಮಾದರಿಗಳು ಅನೇಕರ ಮೇಲೆ ಪ್ರಭಾವ ಬೀರಿರುವುದು ಮತ್ತು ತನ್ನಂತಹದ್ದೇ ಸಂವಾದ ತಂಡಗಳನ್ನು ಸೃಷ್ಠಿಸಿರುವುದು ತಿಳಿಯಿತು. ಇದೆಲ್ಲಾ ಒಟ್ಟಾದ ಪರಿಣಾಮವು ಜನಸಮುದಾಯದಲ್ಲಿ ಒಂದು ಬಗೆಯ ಸೌಹಾರ್ಧ ನೆಲೆಸಲು, ಭಾವೈಕ್ಯ ಹರಡಲು ಕಾರಣವಾಗಿದೆ.

05ಸುತಾರ ಅವರ ಶ್ರೋತೃ ವರ್ಗದಲ್ಲಿ 40 ವರ್ಷದ ನಂತರದವರ ಸಂಖ್ಯೆ ದೊಡ್ಡದಿದೆ. ಇವರುಗಳೆಲ್ಲಾ ಒಂದು ಬಗೆಯ ಉದಾರವಾದ ಆಲೋಚನ ಕ್ರಮಕ್ಕೆ ಪಕ್ಕಾದವರು. ಆದರೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಕೋಮುವಾದದ ಅಫೀಮನ್ನು ತುಂಬುತ್ತಿರುವುದು ಸಾಮಾನ್ಯವಾಗಿ 18 ರಿಂದ 35 ವರ್ಷದ ಒಳಗಿನ ಯುವ ಜನತೆಗೆ ಎಂಬುದನ್ನು ಗಮನಿಸಬೇಕು. ಹಾಗಾಗಿ ಸುತಾರ ಅವರ ಪ್ರವಚನದ ವ್ಯಾಪ್ತಿಗೆ ಇಂತಹ ಯುವಜನತೆಯೂ ಒಳಗಾಗಬೇಕಿದೆ. ಅಂತೆಯೇ ಲಿಂಗದ ಸೂಕ್ಷ್ಮತೆಯನ್ನೂ ಸತಾರರಿಗೆ ಗಟ್ಟಿಧ್ವನಿಯಲ್ಲಿ ಹೇಳಲು ಸಾಧ್ಯವಾಗಿಲ್ಲ. ಕಾರಣ ಪ್ರವಚನದಲ್ಲಿ ಈತನಕ ಒಬ್ಬ ಮಹಿಳೆಯ ಹಾಡಿಕೆಗೂ ಅವಕಾಶ ಸಿಕ್ಕಿಲ್ಲ. ಈ ಮಿತಿಯನ್ನು ಸುತಾರರು ಸ್ವತಃ ಒಪ್ಪಿಕೊಳ್ಳುತ್ತಾರೆ. ಉತ್ತರ ಕರ್ನಾಟಕದ ಜಮೀನ್ದಾರಿ ವ್ಯವಸ್ಥೆಯ ಬಗ್ಗೆ ಸುತಾರರು ಅಪ್ಪಿತಪ್ಪಿಯೂ ಪ್ರಸ್ತಾಪಿಸುವುದಿಲ್ಲ. ದಲಿತರ ಅಸ್ಪøಶ್ಯತಾ ಆಚರಣೆಯನ್ನು ಉದಾರ ನೆಲೆಯಲ್ಲಿ `ಎಲ್ಲರೂ ಒಂದೇ’ ಎನ್ನುವಂತೆ ವಿವರಿಸುತ್ತಾರೆಯೇ ವಿನಃ ಸ್ಥಳೀಯ ಅಸ್ಪøಶ್ಯರನ್ನು ನೇರ ಪ್ರಸ್ತಾಪಿಸುವುದಿಲ್ಲ. ಇನ್ನು ಕೆಲವು ಸ್ಥಳೀಯ ಮಠದ ಸ್ವಾಮಿಗಳ ಕಂದಾಚಾರ ಮತ್ತು ಜೀವವಿರೋಧಿ ಸಂಗತಿಗಳ ಬಗ್ಗೆಯೂ ಮೌನತಾಳುತ್ತಾರೆ.

ಸುತಾರರು ಆಳದಲ್ಲಿ ಸಮಾಜದ ತರತಮಗಳನ್ನು ಪ್ರಶ್ನಿಸದೆ, ಅಮೂಲಾಗ್ರವಾಗಿ ಜಾತಿಧರ್ಮದ ವಿನಾಶದ ಚಿಂತನೆ ಮಂಡಿಸದೆ, ಕ್ರಾಂತಿಕಾರಕ ಹೇಳಿಕೆಗಳನ್ನು ಕೊಡದೆ, ಇರುವ ವ್ಯವಸ್ಥೆಯ ಒಳಗೆ ಕೇಡುಗಳು `ದೊಡ್ಡ’ ದಾಗದಂತೆ, ಹೆಚ್ಚಾಗದಂತೆ ಜನಸಮುದಾಯಗಳ ಕೊಡುಕೊಳೆಯ ಬಾಂಧವ್ಯ ಗಟ್ಟಿಗೊಳಿಸುವ ಉದಾರವಾದಿ ಮಾದರಿಯೊಂದನ್ನು ರೂಪಿಸಿದ್ದಾರೆ. ಈ ಮಾದರಿಗೆ ಹಲವು ಮಿತಿಗಳಿವೆಯಾದರೂ, ಜಾತಿಯ, ಧರ್ಮದ ಕೇಡುಗಳು ಎಂದಿಗಿಂತ ಇಂದು ಬಲಗೊಳ್ಳುತ್ತಿರುವ ಹೊತ್ತಿನಲ್ಲಿ, ಧರ್ಮ ಜಾತಿಯ ನೆಲೆಯಲ್ಲಿ `ಜನರನ್ನು ಒಡೆದು’ ಮನಸ್ಸುಗಳನ್ನು ಕದಡುತ್ತಿರುವ ಹೊತ್ತಿನಲ್ಲಿ ಹಿಬ್ರಾಹಿಂ ಸುತಾರ ಅವರಂತಹ ಮನಸ್ಸುಗಳನ್ನು ಕಟ್ಟುವ, ಬೆಸೆಯುವ ಕೆಲಸಕ್ಕೆ ಸಾಂಸ್ಕøತಿಕವಾಗಿ ಒಂದು ಬಗೆಯ ಮಹತ್ವವಿದೆ.
ಈ ಸೂಕ್ಷ್ಮಗಳ ಮಧ್ಯೆಯೂ ಅವರು ಮಂಡಿಸುವ ಜಾತಿಯ ಧರ್ಮದ ಕಟ್ಟುಗಳನ್ನು ಒಡೆಯುವ ಕಥನ ಮಾದರಿ ಜನರನ್ನು ಮತಾಂಧರಾಗದಂತೆಯೂ, ಜಾತಿವಾದಿಗಳಾಗದಂತೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅಂತೆಯೇ ವ್ಯಕ್ತಿಗತ ಪ್ರವಚನದ ನೆಲೆಯನ್ನು ಸಾಮೂಹಿಕ ನೆಲೆಗೆ ದಾಟಿಸುವ ಶಕ್ತಿಯನ್ನೂ ಸುತಾರರು ದಕ್ಕಿಸಿಕೊಂಡಿದ್ದಾರೆ. ಇವರಿಗೆ ವೈಚಾರಿಕ ಓದಿನ ನೆರವು ದಕ್ಕಿದ್ದರೆ ಈ ಮಾದರಿಯನ್ನು ಇನ್ನಷ್ಟು ಸೂಕ್ಷ್ಮವಾಗಿ ಬಳಸಬಹುದಾಗಿದೆ. ಈ ಮಧ್ಯೆಯೂ ಕೋಮುವಾದ, ಜಾತಿವಾದ, ಪುರುಷವಾದ, ಬಂಡವಾಳಶಾಹಿ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ಇವುಗಳ ಅಪಾಯವನ್ನು ಉದಾರವಾಗಿ ಹೇಳಲು ಜನರ ಬಳಿಗೆ ಹೋಗುವ ಹಿಬ್ರಾಹಿಂ ಸುತಾರ ಅವರ ಮಾದರಿಯೂ ಇಂದು ಅಗತ್ಯವಿದೆ. ಹಾಗಾಗಿ ಸುತಾರರು ತಮಗಿರುವ ಕೆಲವು ಮಿತಿಗಳನ್ನು ಮೀರುತ್ತಲೇ ಜೀವಪರ ಸಂಗತಿಗಳನ್ನು ಹಂಚುವ ಕೆಲಸವನ್ನು ಇನ್ನಷ್ಟು ವಿಸ್ತರಿಸಬೇಕಿದೆ.

ಸುತಾರರನ್ನು ಉತ್ತರ ಕರ್ನಾಟಕದಲ್ಲಿ `ಕನ್ನಡದ ಕಬೀರ’ನೆಂದು ಗುರುತಿಸುತ್ತಾರೆ. ಈ ಬಗ್ಗೆ ರಂಜಾನ್ ದರ್ಗಾ ಅವರು `ಸಂತ ಕಭೀರ ದುಷ್ಟಶಕ್ತಿಗಳನ್ನು ಎದುರುಹಾಕಿಕೊಂಡು ವೈಚಾರಿಕತೆಯ ಮಾನವ ಏಕತೆಯನ್ನು ಸಾಧಿಸಿದರೆ, ಇವರು ಯಾರನ್ನೂ ಎದುರು ಹಾಕಿಕೊಳ್ಳದೆ ಮಾನವ ಏಕತೆಯನ್ನು ಸಾಧಿಸುವ ಕ್ರಮ ಆಪ್ಯಾಯಮಾನವಾಗಿದೆ’ ಎನ್ನುತ್ತಾರೆ.
**

ದಮನಿತ ಹೊಸ ತಲೆಮಾರಿನ ಎಚ್ಚೆತ್ತ ಪ್ರಜ್ಞೆ ಮತ್ತು ಚಲೋ ಉಡುಪಿ


-ಅರುಣ್ ಜೋಳದಕೂಡ್ಲಿಗಿ


CHALO-3 (1)

ದಲಿತರ ಶೋಷಣೆಯ ಚಿತ್ರಗಳು ಜಾತಿವಾದಿ ಭಾರತz ಅಮಾನವೀಯ ಮುಖಗಳನ್ನು ಬಯಲಿಗೆಳೆಯುತ್ತಿವೆ. ದಲಿತರ ಹಲ್ಲೆ, ಶೋಷಣೆ, ಬಹಿಷ್ಕಾರದ ಸುದ್ದಿಗಳಿಗೆ ಪ್ರತಿಯಾಗಿ ದಮನಿತ ಹೊಸ ತಲೆಮಾರು ಪ್ರತಿರೋಧವನ್ನೂ ಒಡ್ಡುತ್ತಿದೆ. ಈ ಪ್ರತಿರೋಧ ದೇಶದ ಆಳುವ ವರ್ಗವನ್ನು ಬೆಚ್ಚಿಬೀಳಿಸುತ್ತಿದೆ. ಮೇಲುಜಾತಿಗಳ ಅಹಮ್ಮಿನ ಕೋಟೆಗಳನ್ನು ಅಲುಗಾಡಿಸುತ್ತಿವೆ. ಇದು ನಮ್ಮ ಕಾಲದಲ್ಲಿ ಹುಟ್ಟಿಕೊಂಡ ಹೊಸ ಎಚ್ಚರದ ಪ್ರಜ್ಞೆಯಾಗಿದೆ. ಇದೊಂದು ದಮನಿತರ ಪಾಲಿನ ಆಶಾದಾಯಕ ಬೆಳವಣಿಗೆ. ಬಹುಶಃ ಭಾರತದ ಚರಿತ್ರೆಯಲ್ಲಿ ಹೀಗೆ ದೇಶವ್ಯಾಪಿ ದಲಿತ ಕೆಳಜಾತಿ ಕೆಳವರ್ಗ ಧಾರ್ಮಿಕ ಅಲ್ಪಸಂಖ್ಯಾತ, ಲೈಂಗಿಕ ಅಲ್ಪಸಂಖ್ಯಾತ, ಮಹಿಳಾ, ದಮನಿತ ಸಮುದಾಯಗಳು ತಮ್ಮ ಶೋಷಣೆಗಳ ವಿರುದ್ಧದ ಏಕರೂಪಿ ಕೂಗನ್ನು ಕೂಗಿದ್ದು ವಿರಳ.

ಹಾಗಾಗಿ ಭಾರತದಲ್ಲಿಂದು ದಲಿತ ಕೆಳಜಾತಿ ಕೆಳವರ್ಗ ಅಲ್ಪಸಂಖ್ಯಾತರ ಏಕೀಕಕರಣದ ಸಂದರ್ಭ ಒದಗಿದೆ. ಎಲ್ಲಾ ದಮನಿತ ಸಮುದಾಯಗಳಿಗೆ ತಾಯಿಯಂತಿರುವ ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಮೇಲುಜಾತಿ, ಮೇಲುವರ್ಗಗಳು ತಡೆಗೋಡೆಗಳನ್ನು ಹಬ್ಬಿಸುತ್ತಿವೆ. ಇಂತಹ ತಡೆಗೋಡೆಗಳನ್ನು ಹೊಡೆದು ಸಂವಿಧಾನದ ಸಮಸಮಾಜದ ಆಶಯಗಳ ಅನುಷ್ಠಾನದ ಹಕ್ಕೊತ್ತಾಯವನ್ನು ದೊಡ್ಡ ಧ್ವನಿಯಲ್ಲಿ ಎಚ್ಚರಿಸಬೇಕಿದೆ. ಅಂತಹ ಒಂದು ಪ್ರಯತ್ನದ ಭಾಗವಾಗಿ ಉಡುಪಿ ಚಲೋ ನಡೆಯುತ್ತಿದೆ. ಏಕೀಕರಣಗೊಂಡ ಪ್ರತಿಗಾಮಿ ಮೂಲಭೂತವಾದಿ ಶಕ್ತಿಯ ಎದುರು ಹಲವು ಕಾಲು ದಾರಿಗಳಲ್ಲಿ ಎದುರುಗೊಳ್ಳುತ್ತಿರುವ ಸಹ ಪಯಣಿಗರು ಹೆದ್ದಾರಿಯೊಂದಕ್ಕೆ ಬಂದು ಸೇರುತ್ತಿದ್ದಾರೆ, ಅದರ ಒಂದು ಪ್ರತಿಫಲ `ಉಡುಪಿ ಚಲೋ ಸ್ವಾಭಿಮಾನಿ ಜಾಥಾದಲ್ಲಿಯೂ ಕಾಣಲಿದೆ.

ಜಿಗ್ನೇಶ್ ಮೆವಾನಿ ಈಗ ದೇಶದ ದಲಿತರ ಪಾಲಿಗೆ ಭರವಸೆಯ ಹೊಸ ನಾಯಕ. ಕಳೆದ ಜುಲೈ ತಿಂಗಳಲ್ಲಿ ಗುಜರಾತಿನ ಊನಾದಲ್ಲಿ ಗೋರಕ್ಷಕರಿಂದ ದಲಿತರ ಮೇಲೆ ನಡೆದ ಅಮಾನವೀಯ ಹಲ್ಲೆಯನ್ನು ವಿರೋಧಿಸಿ ರಾಜ್ಯದಾದ್ಯಂತ ನಡೆದ ಚಳುವಳಿಗಳಲ್ಲಿ ಇವರದು ಸಕ್ರಿಯ ಪಾತ್ರ. ‘ಊನಾ ದಲಿತ ಅತ್ಯಾಚಾರ ಹೋರಾಟ ಸಮಿತಿ’ಯ ನಾಯಕರೂ ಆಗಿರುವ ಮೆವಾನಿ, ಇತ್ತೀಚೆಗೆ ಅಹಮದಾಬಾದ್‍ನಲ್ಲಿ ರಸ್ತೆ ತಡೆ ಚಳುವಳಿಯನ್ನು ಪ್ರಾರಂಭಿಸಿ ದಲಿತರಿಗೆ ಹಂಚಲಾದ ಭೂಮಿಯ ಖಾತೆ ಮಾಡಿಸಿ ಕೊಡುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಲು ಕಾರಣರಾದರು. ‘ದಿ ಹಿಂದು’ ಪತ್ರಿಕೆಯ ಜಿ.ಸಂಪತ್ ಅವರು 23 ಸೆಪ್ಟಂಬರ್ 2016 ರಂದು ಜಿಗ್ನೇಶ್ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ದಲಿತ ಹೊಸತಲೆಮಾರಿನ ದೃಷ್ಠಿಕೋನದ ಸಂಕೇತದಂತೆ ಮಾತನಾಡಿದ್ದಾರೆ.

 ಸಂಪತ್ ಅವರು ಕೇಳಿದ `ಕಮ್ಯುನಿಸ್ಟರ ಬಗ್ಗೆ ದಲಿತರಲ್ಲಿ ಭಿನ್ನಾಭಿಪ್ರಾಯ ಇರುವಂತಿದೆ. ಕಮ್ಯುನಿಸ್ಟರು ಜಾತಿ ಪ್ರಶ್ನೆಯನ್ನ ಹಿನ್ನೆಲೆಗೆ ದೂಡಿಬಿಟ್ಟಿದ್ದಾರೆ ಅನ್ನೋದು ಅಂಬೇಡ್ಕರ್‍ವಾದಿಗಳ ಆರೋಪ. ಕಮ್ಯುನಿಸ್ಟರ ಬಗ್ಗೆ ನಿಮ್ಮ ನಿಲುವೇನು? ಎನ್ನುವ ಪ್ರಶ್ನೆಗೆ ಜಿಗ್ನೇಶ್ ಉತ್ತರಿಸುತ್ತಾ `ಕಮ್ಯುನಿಸ್ಟರನ್ನು ನಮ್ಮ ಹೋರಾಟದ ಜೊತೆಗಾರರು ಎಂದು ನಾನಾದರೂ ಭಾವಿಸುತ್ತೇನೆ. ಇದು ಕಮ್ಯುನಿಸ್ಟರು ದಲಿತರ ಜೊತೆ ಸೇರುವ ಅಥವಾ ದಲಿತರು ಕಮ್ಯುನಿಸ್ಟರೊಂದಿಗೆ ಹೋಗುವ ಪ್ರಶ್ನೆ ಅಲ್ಲ. ಇದನ್ನು ದಲಿತರ ಎಡಪಂಥೀಯತೆಯ ವಿಸ್ತರಣೆ ಅಂತ ಬೇಕಾದರೆ ಕರೆಯಿರಿ. ಅಂದರೆ ವರ್ಗ ಹೋರಾಟವನ್ನು ಅರ್ಥೈಸಿಕೊಳ್ಳುವ ತೀಕ್ಷ್ಣ ವಿಧಾನ ಇದು. ವರ್ಗ ರಹಿತ ಸಮಾಜವನ್ನು ಸೃಷ್ಟಿಸುವುದರಲ್ಲಿ ನಾವು ಸೋತರೂ ಕೊನೇ ಪಕ್ಷ ಈಗ ಇರುವುದಕ್ಕಿಂತ ಕಡಿಮೆ ಅಸಮಾನತೆಯಿರುವ ಸಮಾಜವನ್ನು ಸೃಷ್ಟಿಸುವ ಗುರಿಯನ್ನಾದರೂ ಇಟ್ಟುಕೊಳ್ಳಬೇಕಾಗುತ್ತದೆ. ‘ದನದ ಬಾಲ ನೀವೇ ಇಟ್ಟುಕೊಳ್ಳಿ, ನಮಗೆ ಭೂಮಿಕೊಡಿ’ ಎನ್ನುವ ನಮ್ಮ ಘೋಷಣೆ ಮತೀಯವಾದಿ ರಾಜಕಾರಣಕ್ಕೆ ವಿರುದ್ಧವಾಗಿರುವಂತೆ ನಮ್ಮ ಬದುಕಿನ ಪ್ರಶ್ನೆಗಳನ್ನೂ ಮುಂದಕ್ಕೆ ಒಡ್ಡುತ್ತಿದೆಯಲ್ಲ…

ಹಾಗೆ ನೋಡುವುದಾದರೆ, ಭಾರತದ ಕಮ್ಯುನಿಸ್ಟರೂ ಕಡೆಗಣಿಸಲಾಗದ ತಪ್ಪುಗಳನ್ನು ಮಾಡಿದ್ದಾರೆ. ಅಂಬೇಡ್ಕರ್‍ವಾದಿ ರಾಜಕಾರಣವೂ ಕೆಲವು ತಪ್ಪುಗಳನ್ನು ಮಾಡಿದೆ. ನಾವು ಕಮ್ಯುನಿಸ್ಟರನ್ನು ಅವರ ತಪ್ಪುಗಳಿಗೆ ಟೀಕೆ ಮಾಡೋರೇ. ಆದರೆ ಅವರು ನಮ್ಮಜೊತೆ ಬರುವುದಾದರೆ ಅವರನ್ನು ತಿರಸ್ಕರಿಸುವ ಮಟ್ಟಕ್ಕೆ ನಾನಂತೂ ಹೋಗುವುದಿಲ್ಲ. ಯಾವುದೇ ಜನಪರ ಚಳುವಳಿಗೆ ಅಷ್ಟರ ಮಟ್ಟಿಗಿನ ಮುಕ್ತ ಮನಸ್ಸು ಇರಬೇಕು. ನಮಗಂತೂ ಇದೆ. ದಲಿತರ ಸಮಸ್ಯೆಗಳನ್ನು ಗಂಭೀರವಾಗಿ ಮತ್ತು ನಿರಂತರವಾಗಿ ಕೈಗೆತ್ತಿಕೊಂಡು ಹೋರಾಟ ಮಾಡಿದಾಗ ಮಾತ್ರ ದಲಿತರು ಕಮ್ಯುನಿಸ್ಟರನ್ನು ನಂಬಲು ಶುರುಮಾಡಬಹುದು. ಇದಕ್ಕೆ ಸ್ವಲ್ಪ ಕಾಲ ಹಿಡಿಯಬಹುದು.’ ಎನ್ನುತ್ತಾರೆ. ಬಹುಶಃ ಈ ಮಾತು ಇಂದು ದಮನಿತ ಹೊಸ ತಲೆಮಾರಿನಲ್ಲಿ ಚರ್ಚೆಗೆ ಒಳಗಾಗಬೇಕಿದೆ. ಈ ಬಗ್ಗೆ ಒಂದು ದಿಟ್ಟ ನಿಲುವು ಪ್ರಕಟವಾಗಬೇಕಿದೆ.

ಊನಾ ಮದರಿ ಹೋರಾಟ
ಭಾರತದ ಪ್ರಧಾನ ಮಂತ್ರಿಗಳ ರಾಜ್ಯವಾದ ಗುಜರಾತಿನ ಊನಾ ಎಂಬ ಊರಿನಲ್ಲಿ ‘ಗೋರಕ್ಷಕ ಗೂಂಡಾಗಳು’ ಸತ್ತ ದನವನ್ನೊಯ್ಯುತ್ತಿದ್ದ ಏಳು ಜನ ದಲಿತರನ್ನು ಹಿಡಿದು, ಕಟ್ಟಿಹಾಕಿ ಅವರ ಮೇಲೆ ಕಬ್ಬಿಣದ ರಾಡುಗಳಿಂದ ಅಮಾನುಷ ಹಲ್ಲೆ ನಡೆಸಿದರು. ತಾವು ಕೊಂಡೊಯ್ಯುತ್ತಿದ್ದುದು ಸತ್ತ ದನ ಎಂದು ಅವರೆಷ್ಟು ಅಂಗಲಾಚಿದರೂ ಕರುಣೆ ತೋರದೆ ಹೊಡೆಯುತ್ತಾ ಬಟ್ಟೆ ಬಿಚ್ಚಿ ಊರಿನಲ್ಲಿ ಸಾರ್ವಜನಿಕವಾಗಿ ಎಳೆತಂದು ಅವಮಾನಿಸಿದರು. ಇದರಿಂದ ಆಕ್ರೋಶಗೊಂಡ ಗುಜರಾತಿನ ದಲಿತರು ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯ ಪ್ರತಿಭಟನೆಗೆ ತೊಡಗಿದರು. ‘ಇನ್ನು ಸತ್ತ ದನಗಳ ಸಂಸ್ಕಾರ ಮಾಡುವುದಿಲ್ಲ’ ಎಂದು ಘೋಷಿಸಿದರು. ನಿಮ್ಮ ದನಗಳನ್ನು ನೀವೇ ಸಂಬಾಳಿಸಿಕೊಳ್ಳಿ ಎಂದು ಸತ್ತ ದನಗಳ ಕಳೇಬರಗಳನ್ನು ಸರ್ಕಾರಿ ಕಚೇರಿಗಳಿಗೆ ಎಳೆದು ತಂದು ಪ್ರತಿಭಟಿಸಿದರು. ನಂತರ ಆಗಸ್ಟ್ ಮೊದಲ ವಾರ ಜಿಗ್ನೇಶ್ ಮೇವಾನಿ ಮುಂದಾಳತ್ವದಲ್ಲಿ ಆರಂಭವಾದ ‘ದಲಿತ ಅಸ್ಮಿತ ಜಾಥಾ’ ಆಗಸ್ಟ 15ರ ಸ್ವಾತಂತ್ರ್ಯ ದಿನಾಚರಣೆಯಂದು ಊನಾದಲ್ಲಿ ಲಕ್ಷಾಂತರ ದಲಿತರ ಬೃಹತ್ ಸಮಾವೇಶದ ಮೂಲಕ ದೇಶದ ಗಮನ ಸೆಳೆಯಿತು.

ದೇಶದ ಎಲ್ಲ ಕಡೆಗಳಿಂದ ಪ್ರಜ್ಞಾವಂತ ನಾಗರಿಕರು ಊನಾಗೆ ತೆರಳಿ ಬೆಂಬಲ ವ್ಯಕ್ತಪಡಿಸಿದರು. ಗುಜರಾತಿನ ಮುಸ್ಲಿಂ ಬಾಂಧವರೂ ಅಪಾರ ಸಂಖ್ಯೆಯಲ್ಲಿ ಜಾಥಾ ಹಾಗೂ ಸಮಾವೇಶದಲ್ಲಿ ಪಾಲ್ಗೊಂಡರು. ಸಂಘ ಪರಿವಾರದ ಹುನ್ನಾರಗಳನ್ನು ವಿರೋಧಿಸಿದರು. ದಲಿತರು ಇನ್ನು ಮುಂದೆ “ಸತ್ತ ದನಗಳನ್ನು ಮುಟ್ಟುವುದಿಲ್ಲ” ಎಂದು ಶಪಥಗೈದರು. ದಲಿತರಿಗೆ ಭೂಮಿ ಬೇಕೆಂದು ಆಗ್ರಹಪಡಿಸಿದರು. ಈ ಮಾದರಿ ಇಂದು ದೇಶದ ದಮನಿತ ಸಮುದಾಯಗಳ ಹೋರಾಟದ ಪ್ರಜ್ಞೆಯನ್ನು ಜಾಗೃತಗೊಳಿದೆ. ಈ ಜಾಗೃತಿ ಕರ್ನಾಟಕದ ಸಂದರ್ಭದಲ್ಲಿ ದಮನಿತ ಸಮುದಾಯಗಳ ಹೊಸ ತಲೆಮಾರಿನಲ್ಲಿಯೂ ಮೂಡಿದೆ. ಅದರ ಪ್ರತಿರೂಪವಾಗಿ ಇದೀಗ ಉಡುಪಿ ಚಲೋ ಎನ್ನುವ ಚಾರಿತ್ರಿಕ ಮಹತ್ವದ ಜಾಥಾವನ್ನು ಹಮ್ಮಿಕೊಂಡಿದ್ದಾರೆ.

ಚಲೋ ಉಡುಪಿ
ದಲಿತ-ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಮೂಲಕ ಆಹಾರ ನಮ್ಮ ಆಯ್ಕೆ; ಭೂಮಿ ನಮ್ಮ ಹಕ್ಕು ಎಂಬ ಘೋಷ ವಾಕ್ಯದಡಿ ಇದೇ 2016 ರ ಅಕ್ಟೋಬರ್ 4 ರಿಂದ 9 ರವರೆಗೆ ಬೆಂಗಳೂರಿನಿಂದ ಉಡುಪಿಗೆ ಹಮ್ಮಿಕೊಂಡ ಸ್ವಾಭಿಮಾನಿ ಸಂಘರ್ಷ ಜಾಥಾ `ಚಲೋ ಉಡುಪಿ’ ಕರ್ನಾಟಕದ ಸಂದರ್ಭದಲ್ಲಿ ಚಾರಿತ್ರಿಕ ಮಹತ್ವ ಪಡೆಯುತ್ತಿದೆ. ಊನಾದ ದಲಿತ ಪ್ರತಿರೋಧ ಇಡೀ ದೇಶದಲ್ಲಿ ಸಂಚಲನ ಮೂಡಿಸಿರುವ ಹೊತ್ತಿನಲ್ಲಿ, ಕರ್ನಾಟಕದಲ್ಲೂ ದಲಿತರು ಮತ್ತು ಎಲ್ಲಾ ದಮನಿತ ಸಮುದಾಯಗಳ ಜನರು ಸಾಮಾಜಿಕ, ಆರ್ಥಿಕ, ದೈಹಿಕ ಹಾಗೂ ಮಾನಸಿಕ ಹಲ್ಲೆಗಳಿಗೆ ಬಲಿಯಾಗುತ್ತಲೇ ಇದ್ದಾರೆ. ರಾಜ್ಯದಲ್ಲೇ ಕಳೆದ ಕೆಲವೇ ವರ್ಷಗಳಲ್ಲಿ ನಡೆದಿರುವ ದಲಿತರ ಮೇಲಿನ ದೌರ್ಜನ್ಯಗಳು ಇದಕ್ಕೆ ಕನ್ನಡಿ ಹಿಡಿಯುತ್ತಿವೆ.

2016ರ ಜುಲೈ 17ರಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ಭಜರಂಗದಳದ ಮೂವತ್ತು ಜನರ ಗುಂಪು ದಲಿತರಾದ ಬಾಲರಾಜ್, ಧನು, ಸಂದೀಪ್ ಹಾಗೂ ಮುತ್ತಪ್ಪ ಇವರ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತು. ಈ ಗೂಂಡಾಗಳು ದನವನ್ನು ಕದ್ದು ಮಾಂಸ ತಿಂದಿದ್ದಾರೆ ಎಂದು ಆರೋಪಿಸಿ ಮಚ್ಚಿನಿಂದ ಹೊಡೆದು ಅಂಗವಿಕಲ ದಲಿತ ಬಾಲರಾಜ್ ಅವರ ಕೈ ಮುರಿದರು. ಹಾಸನ ಜಿಲ್ಲೆಯ ಸಿಗರನಹಳ್ಳಿಯಲ್ಲಿ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದ ಘಟನೆಯ ಬೆಳವಣಿಗೆ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿರುವುದು ಜಾತಿ ಸಂವಿಧಾನವೇ ಹೊರತು ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವಲ್ಲ ಎಂಬುದನ್ನು ನಿರೂಪಿಸಿತು.

2015ರ ಡಿಸೆಂಬರ್‍ನಲ್ಲಿ ರಾಯಚೂರಿನ ತುರುವೀಹಾಳದಲ್ಲಿ ಅಂಬೇಡ್ಕರ್ ನಾಮಫಲಕಕ್ಕೆ ವಾಹನ ಡಿಕ್ಕಿ ಹೊಡೆಸಿದ್ದನ್ನು ಪ್ರಶ್ನಿಸಿದ್ದೇ ಅಪರಾಧವಾಗಿ ಅಲ್ಲಿಯ ಸವರ್ಣೀಯರು ದಲಿತರ ಕೇರಿಗೆ ನುಗ್ಗಿ ಯುವಕರು, ಮಹಿಳೆಯರು, ಮುದುಕರು ಮಕ್ಕಳೆನ್ನದೆ ಎಲ್ಲರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ಮೂರು ತಿಂಗಳ ಗರ್ಭಿಣಿ ಹುಲಿಗೆಮ್ಮಳಿಗೆ ತೀವ್ರ ರಕ್ತಸ್ರಾವವಾಯಿತು. ಮೂವತ್ತು ಜನರಿಗೆ ಗಾಯಗಳಾದವು. ಪೊಲೀಸರು ಹಲ್ಲೆಕೋರರ ಮೇಲೆ ದೂರು ದಾಖಲಿಸಿಕೊಂಡರೂ ಮರುಗಳಿಗೆಯಲ್ಲಿಯೇ ಹಲ್ಲೆಗೊಳಗಾದ ದಲಿತರ ಮೇಲೆಯೇ ಪ್ರತಿದೂರು ದಾಖಲಿಸಿದ್ದರು. ಇದೇ ತುರುವೀಹಾಳ ವ್ಯಾಪ್ತಿಯ ಕರಕುಂದಿ ಗ್ರಾಮದಲ್ಲಿ ಜಾತ್ರೆಯಲ್ಲಿ ಕಾಲು ತುಳಿದರು ಎನ್ನುವ ಕಾರಣಕ್ಕೆ ದಲಿತರ ಕೇರಿಗೆ ನುಗ್ಗಿ ಹಲ್ಲೆ ನಡೆಸಲಾಯಿತು. ಇತರೆ ಐದು ಗ್ರಾಮಗಳಲ್ಲಿ ದಲಿತರ ಮೇಲೆ ಹಲ್ಲೆ ಪ್ರಕರಣಗಳು ನಡೆದಿವೆ.

2015ರ ಅಕ್ಟೋಬರ್‍ನಲ್ಲಿ ದಾವಣೆಗೆರೆಯ ಪತ್ರಿಕೋದ್ಯಮ ವಿದ್ಯಾರ್ಥಿ ಹಾಗೂ ದಲಿತ ಯುವ ಲೇಖಕ ಹುಚ್ಚಂಗಿ ಪ್ರಸಾದ್ ಮೇಲೆ ಸಂಘ ಪರಿವಾರದ ಗೂಂಡಾ ಗುಂಪೊಂದು ಹಲ್ಲೆ ನಡೆಸಿ, ಮೈಮೇಲೆಲ್ಲಾ ಕುಂಕುಮ ಎರಚಿ ಬರೆಯುವ ಬೆರಳುಗಳನ್ನೇ ಕತ್ತರಿಸುವ ಬೆದರಿಕೆ ಒಡ್ಡಿತ್ತು. 2015ರಲ್ಲಿ ಚಾಮರಾಜನಗರ ಜಿಲ್ಲೆ ಸಂತೆಮಾರಳ್ಳಿ ಗ್ರಾಮದ ಪೊಲೀಸ್ ಠಾಣೆಯ ಅರ್ಧ ಕಿಲೋ ಮೀಟರ್ ದೂರದ ಬಾಳೆತೋಟದಲ್ಲಿ ದಲಿತ ಕೂಲಿಗಳಿಬ್ಬರ ತಲೆ ಕಡಿದು ನರಬಲಿ ಕೊಟ್ಟ ಹೇಯ ಘಟನೆ ನಡೆಯಿತು. ಅಪರಾಧಿಗಳನ್ನು ರಕ್ಷಿಸುವ ಮತ್ತು ಈ ಘೋರ ಹತ್ಯೆಯ ಅಪರಾಧವನ್ನು ಮುಚ್ಚಿಹಾಕುವ ಕೆಲಸ ವ್ಯವಸ್ಥಿತವಾಗಿ ನಡೆಯಿತು. ಅದೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ದಲಿತ ಮಹಿಳೆಯ ಮೇಲೆ ಕ್ರೂರವಾಗಿ ಅತ್ಯಾಚಾರವೆಸಗಿ ದೇಹವನ್ನು ಚಾಕುವಿನಿಂದ ಕೊಯ್ದು ಕ್ರೂರವಾಗಿ ಕೊಲೆಮಾಡಲಾಗಿದೆ. ಕೊಲೆಗಾರರನ್ನು ಪತ್ತೆಮಾಡಲು ಪೊಲೀಸರು ಕರೆತಂದ ಶ್ವಾನದಳದ ನಾಯಿ ಮೇಲ್ಜಾತಿ ವ್ಯಕ್ತಿಯನ್ನು ಸರಿಯಾಗಿ ಗುರುತಿಸಿದರೂ ಆ ಮಹಿಳೆಯ ಗಂಡನನ್ನೇ ಅರೋಪಿ ಎಂದು ಬಂಧಿಸಲಾಯಿತು. ಹೀಗೆ ಬಂಧನಕ್ಕೊಳಗಾದ ಅಮಾಯಕ ದಲಿತ ವ್ಯಕ್ತಿ ಇನ್ನೂ ಜೈಲಿನಲ್ಲಿದ್ದಾರೆ.

ಕೊಪ್ಪಳ ಜಿಲ್ಲೆಯ ಕಲಾಲಬಂಡಿ ಗ್ರಾಮದಲ್ಲಿ ಕ್ಷೌರಕ್ಕೆ ಸಂಬಂಧಿಸಿದಂತೆ ದಲಿತರಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಿ ದಲಿತರ ಮನೆಗಳ ಸುತ್ತಲೂ ಮುಳ್ಳಿನ ಬೇಲಿ ಹಾಕಲಾಯಿತು. 2015ರ ಸೆಪ್ಟೆಂಬರ್‍ನಲ್ಲಿ ಮಂಡ್ಯ ಜಿಲ್ಲೆಯ ಹುಲಿವಾನ ಗ್ರಾಮದಲ್ಲಿ ದಲಿತ ಯುವಕ ಹಾಗೂ ಸವರ್ಣೀಯ ಯುವತಿ ಪ್ರೀತಿಸಿ ಮದುವೆಯಾದ ಕಾರಣಕ್ಕೆ ಆ ಗ್ರಾಮದ 50 ದಲಿತ ಮನೆಗಳ ಮೇಲೆ ದಾಳಿ ನಡೆಸಲಾಯಿತು. ಕಾನೂನು ಸುವ್ಯವಸ್ಥೆ ಕಾಪಾಡಲು ಬಂದ ಪೊಲೀಸರ ಮೇಲೂ ಕಲ್ಲು ಎಸೆಯಲಾಯಿತು. 2015ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸವರ್ಣೀಯರು ದಲಿತರಿಗೆ ಕೊಡಿಸಿದ್ದ ತಮಟೆಯನ್ನು ಪಕ್ಕದ ಗ್ರಾಮದ ದಲಿತರಿಗೆ ನೀಡಿದರೆಂಬ ಕಾರಣಕ್ಕೆ ದಂಡ ವಿಧಿಸಿ ಸಾಮಾಜಿಕ ಬಹಿಷ್ಕಾರ ವಿಧಿಸಲಾಯಿತು. ತಮಟೆ ಕೊಡಿಸುವ ಮೊದಲು ಈ ಗ್ರಾಮದ ದಲಿತರೂ ಬೇರೆ ಗ್ರಾಮದಿಂದಲೇ ತಮಟೆ ತಂದು ಉಪಯೋಗಿಸುತ್ತಿದ್ದರು. ಕೆ.ಆರ್.ಪೇಟೆಯಲ್ಲಿ ದಲಿತ ಕಾಲೋನಿಗೆ ನೀರು ಪೂರೈಕೆ ಮಾಡುವ ಪೈಪ್ ಲೈನ್ ಒಡೆದು ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ದಲಿತರ ಮೇಲೆ ಹಲ್ಲೆ ನಡೆಸಲಾಯಿತು.

2014ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದ ದಲಿತರ ಮೇಲೆ ಸವರ್ಣೀಯರು ದಾಳಿ ನಡೆಸಿ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದರು. ಅಪರಾಧಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳದ ಕಾರಣ ಎರಡು ತಿಂಗಳ ನಂತರ ಮತ್ತೊಮ್ಮೆ ದಲಿತರ ಮೇಲೆ ದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ 30 ಮಂದಿ ದಲಿತರಿಗೆ ಗಾಯಗಳಾಗಿದ್ದವು. ಕೊಪ್ಪಳ ಜಿಲ್ಲೆಯ ಕನಕಗಿರಿ ವಿದ್ಯಾರ್ಥಿನಿಲಯದಲ್ಲಿ ಯಲ್ಲಾಲಿಂಗ ಎಂಬ ದಲಿತ ವಿದ್ಯಾರ್ಥಿಯ ಕೊಲೆಯಾಗಿತ್ತು. ಅದರ ಬೆನ್ನಲ್ಲೇ ವೀರೇಶ್ ಎಂಬ ದಲಿತ ಯುವಕನ ಆತ್ಮಹತ್ಯೆ ಅನುಮಾನಾಸ್ಪದ ರೀತಿಯಲ್ಲಿ ನಡೆಯಿತು. ಮಂಡ್ಯ ಜಿಲ್ಲೆಯಲ್ಲಿ ದಲಿತ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಒಕ್ಕಲಿಗ ಯುವತಿಯೊಬ್ಬಳನ್ನು ಕುಟುಂಬದವರೇ ಹತ್ಯೆ ಮಾಡಿದ ‘ಮರ್ಯಾದೆಗೇಡು ಹತ್ಯೆ’ ಘಟನೆ ನಡೆಯಿತು. ಊರ ಮೇಲ್ಜಾತಿಗಳ ದುರಭಿಮಾನಿ ಜನರು ದಲಿತರ ಕೇರಿಗಳ ಮೇಲೆ ದಾಳಿ ನಡೆಸಲು, ದೌರ್ಜನ್ಯ ನಡೆಸಲು ಬಾಬಾಸಾಹೇಬರ ನಾಮಫಲಕಗಳೂ ಕಾರಣವಾಗುತ್ತಿವೆ ಎಂದರೆ ಮನುವಾದಿ, ಬ್ರಾಹ್ಮಣವಾದಿ ಚಿಂತನೆಗಳು ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿವೆ ಎಂದು ನೋಡಬಹುದು.

ಇವು ನಮ್ಮದೇ ಕರ್ನಾಟಕ ರಾಜ್ಯದಲ್ಲಿ ದಿನನಿತ್ಯ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಕೆಲವೇ ಉದಾಹರಣೆಗಳಷ್ಟೇ. ಇನ್ನೂ ನೂರಾರು ಪ್ರಕರಣಗಳಿವೆ. ಈ ಪ್ರಕರಣಗಳಲ್ಲಿ ಕಾನೂನು ಪಾಲಕರಿಂದಾಗಲೀ, ನ್ಯಾಯಾಲಯಗಳಿಂದಾಗಲೀ ದಲಿತರಿಗೆ ನ್ಯಾಯ ಸಿಕ್ಕಿರುವ ಉದಾಹರಣೆ ಇಲ್ಲವೇ ಇಲ್ಲ ಎನ್ನಬಹುದು. ಕೋಲಾರದ ಕಂಬಾಲಪಲ್ಲಿಯಲ್ಲಿ ಏಳು ಮಂದಿ ದಲಿತರನ್ನು ಜೀವಂತ ಸುಟ್ಟು ಸಾಯಿಸಿದ ಘಟನೆ ಹಸಿಯಾಗಿರುವಾಗಲೇ ನ್ಯಾಯಾಲಯದಲ್ಲಿ ಈ ಪ್ರಕರಣವೇ ಬಿದ್ದುಹೋಗುವಂತೆ ಮಾಡಿದ ಘಟನೆ ಗಾಯಕ್ಕೆ ಉಪ್ಪು ಸುರಿದಂತೆ ಮಾಡಿದೆ. ದಲಿತರನ್ನು ಸುಟ್ಟು ಹಾಕಿದ ಘಟನೆಗೆ ಸಾಕ್ಷಿಗಳಾಗಿದ್ದವರನ್ನು ಸತ್ಯ ಹೇಳದಂತೆ ಮಾಡಲಾಯಿತು. ಇದಕ್ಕೆ ಜಾಣಕುರುಡುತನ ತೋರಿದ ನ್ಯಾಯಾಧೀಶರು ದಲಿತ ವೀರೋದಿ ತೀರ್ಪು ನೀಡುವ ಮೂಲಕ ನ್ಯಾಯಾಲಯಗಳೂ ಹೇಗೆ ಮೇಲ್ಜಾತಿಪರ ಧೋರಣೆ ಹೊಂದಿರುತ್ತವೆ ಎಂದು ಸಾಬೀತುಪಡಿಸಿದರು. ಚಿಂತಾಮಣಿಯ ನಾಗಲಾಪಲ್ಲಿಯ ದಲಿತ ಮಹಿಳೆ ಯಶೋದಮ್ಮ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗದಲ್ಲಿಯೂ ನ್ಯಾಯ ಮರೀಚಿಕೆಯಾಗಿಯೇ ಉಳಿದಿದೆ. ಇಡೀ ದೇಶದ ನ್ಯಾಯ ವ್ಯವಸ್ಥೆಯೇ ದಲಿತರ ಪಾಲಿಗೆ ಕಣ್ಣು ಕಿವಿ ಕಳೆದುಕೊಂಡು ಕುಳಿತಿದೆ. ಕಿಲ್ವೇಣ್ಮಣಿ, ಖೈರ್ಲಾಂಜಿ, ಜಜ್ಜಾರ್, ಚುಂಡೂರು, ಹೀಗೆ ದೇಶದ ಇತರೆಡೆಗಳಲ್ಲಿಯೂ ದೌರ್ಜನ್ಯಕ್ಕೊಳಗಾದ ದಲಿತರಿಗೆ ನ್ಯಾಯ ದೊರೆತಿಲ್ಲ. ಮನುವಾದಿ ಮನಸ್ಥಿತಿಯನ್ನು ಹೆಜ್ಜೆ ಹೆಜ್ಜೆಗೂ ಪೋಷಿಸುವ ಬಲಪಂಥೀಯ ಶಕ್ತಿಗಳು ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಎಗ್ಗಿಲ್ಲದೆ ಬೆಳೆಯುತ್ತಿರುವುದು ಮತ್ತಷ್ಟು ಕಳವಳಕಾರಿಯಾಗಿದೆ.

ರಾಷ್ಟ್ರೀಯ ಅಪರಾಧ ವರದಿ ಮಂಡಳಿಯ ದಾಖಲೆಯ ಪ್ರಕಾರ 2014ರಲ್ಲಿ ಇಡೀ ಭಾರತದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.19ರಷ್ಟು ಹೆಚ್ಚಾಗಿದ್ದು, ಕರ್ನಾಟಕ ಒಂದರಿಂದಲೇ 2000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ದಾಖಲಾದ ದಲಿತರ ಮೇಲಿನ ದೌರ್ಜನ್ಯಗಳ ಒಟ್ಟು ಸಂಖ್ಯೆ 47,064. ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವುದು 487. ಇವು ದಾಖಲೆಗೆ ಸಿಕ್ಕಿರುವುದು ಮಾತ್ರ. ದಾಖಲಾಗದೆ ಹೋದ ಪ್ರಕರಣಗಳು ಇನ್ನೂ ಹೆಚ್ಚಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.
CHALO-5

ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳು
ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮುಸ್ಲಿಂ, ಕ್ರೈಸ್ತರು ಯಾವತ್ತೂ ಆತಂಕದಲ್ಲಿಯೇ ಕಾಲಕಳೆಯುವಂತಾಗಿದೆ. ಕಳೆದ ನೂರು ವರ್ಷಗಳಿಂದ ಸಮಾಜದಲ್ಲಿ ಈ ಸಮುದಾಯಗಳ ಕುರಿತಾಗಿ ಬಿತ್ತಿರುವ ಪೂರ್ವಾಗ್ರಹಗಳು ಇಂದ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿವೆ. ಅದರ ಪರಿಣಾಮವಾಗಿಯೇ ಈ ಸಮುದಾಯಗಳ ಜನರ ಮೇಲೆ ಹಲ್ಲೆಗಳು ಹೆಚ್ಚಾಗಲು ಮತ್ತು ಈ ಹಲ್ಲೆಗಳಿಗೆ ಸಾರ್ವಜನಿಕ ಸಮ್ಮತಿ ದೊರಕುವಂತಾಗಿದೆ. 2005ರಲ್ಲಿ ಆದಿ ಉಡುಪಿಯಲ್ಲಿ ದನಸಾಗಣೆ ವಿಷಯಕ್ಕೆ ಸಂಬಂಧಿಸಿದಂತೆ ವಯೋವೃದ್ಧ ಹಾಜಬ್ಬ ಮತ್ತು ಆತನ ಮಗ ಹಸನಬ್ಬರನ್ನು ಅಮಾನವೀಯ ರೀತಿಯಲ್ಲಿ ಬೆತ್ತಲೆಗೊಳಿಸಿ ಥಳಿಸಲಾಗಿತ್ತು. ಅಲ್ಲಿಂದೀಚೆಗೆ ಎಡೆಬಿಡದೆ ಅಲ್ಪಸಂಖ್ಯಾತರ ಮೇಲೆ ಈ ಬಗೆಯ ಹಲ್ಲೆಗಳು ನಡೆಯುತ್ತಲೇ ಇವೆ. ದನದ ಸಾಗಾಣಿಕೆ ನೆಪದಲ್ಲಿ, ಲವ್ ಜಿಹಾದ್ ನೆಪದಲ್ಲಿ, ಧರ್ಮ ರಕ್ಷಣೆಯ ಸೋಗಿನಲ್ಲಿ ನಡೆಯುತ್ತಿರುವ ದೌರ್ಜನ್ಯ, ಅನಾಚಾರಗಳಿಗೆ ಲೆಕ್ಕವಿಲ್ಲ. ಶೃಂಗೇರಿಯ ತನಿಕೋಡಿನಲ್ಲಿ ವಾಹನದಲ್ಲಿ ದನ ಸಾಗಿಸುತ್ತಿದ್ದ ಕಬೀರ್ ಎಂಬ ಯುವಕನನ್ನು ಎಎನ್‍ಎಫ್‍ನವರು ಎನ್‍ಕೌಂಟರ್‍ನಲ್ಲಿ ಕೊಂದು ಹಾಕಿದ ಘಟನೆ ಇದಕ್ಕೆ ನಿದರ್ಶನ. ಗೋಸಾಗಾಣಿಕೆಯ ಪ್ರಕರಣಗಳಲ್ಲಿ ರಕ್ಷಣಾ ಇಲಾಖೆಯೇ ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಿರುವ ಎಷ್ಟೋ ಪ್ರಕರಣಗಳಿವೆ.

ದನದ ರಾಜಕಾರಣ
ದೇಶದೆಲ್ಲೆಡೆ ಸಂಘಪರಿವಾರದ ಉಗ್ರಗಾಮಿ ಶಕ್ತಿಗಳು ದೇಶವಿರೋಧಿ ದನದ ರಾಜಕಾರಣದಲ್ಲಿ ತೊಡಗಿವೆ. ವಿನಾಕಾರಣ ಅಮಾಯಕರನ್ನು ಹಿಂಸಿಸುವ, ಕೊಲೆಗೈಯುವ, ಅತ್ಯಾಚಾರ ಎಸಗುವ ಕೆಲಸದಲ್ಲಿ ತೊಡಗಿವೆ. ನಾವು ಸೇವಿಸುವ ಆಹಾರದ ಮೇಲೂ ನಿರ್ಬಂಧ ಹೇರುವ ಕೆಲಸ ಅವ್ಯಾಹತವಾಗಿ ನಡೆದಿದೆ. ಜನರು ತಿನ್ನುವ ಆಹಾರಕ್ಕೂ, ಸಾಮಾನ್ಯ ನಂಬಿ ನಡೆಯುವ ದೇವರು – ಧರ್ಮಗಳಿಗೂ ಬೇಕೆಂದೇ ಸಂಬಂಧ ಕಲ್ಪಿಸಿ, ಜನಸಾಮಾನ್ಯರನ್ನು ಭಾವುಕವಾಗಿ ಕೆರಳಿಸಿ ರಾಜಕೀಯ ಸ್ವಾರ್ಥಕ್ಕಾಗಿ ಒಂದು ಸಮುದಾಯದ ಮೇಲೆ ಮತ್ತೊಂದು ಸಮುದಾಯವನ್ನು ಛೂಬಿಡುವ ಕೆಲಸ ನಡೆಯುತ್ತಿದೆ.
ಪ್ರತಿದಿನ ನಮ್ಮ ದೇಶದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ದನಗಳ ಹತ್ಯೆ ಮಾಡುವ ಗೋಮಾಂಸ ರಫ್ತಿನ ಉದ್ಯಮ ಹಾಗೂ ಮತ್ತು ದನದ ಚರ್ಮದ ಉದ್ಯಮದ ಮೇಲಿನ ಹಿಡಿತವಿರುವುದು ಬ್ರಾಹ್ಮಣ ಮತ್ತು ಬನಿಯಾಗಳಿಗೆ ಸೇರಿದ ಹಿಂದೂ ಮೇಲ್ವರ್ಗದ ಕುಟುಂಬಗಳ ಹಿಡಿತದಲ್ಲಿಯೇ. ಹಾಗಾದರೆ ಈ ಬಗ್ಗೆ ದೇಶದಲ್ಲಿ ಯಾವ ‘ಗೋರಕ್ಷಕ’ನಾದರೂ ಎಂದಾದರೂ ಧ್ವನಿ ಎತ್ತಿರುವ ಉದಾಹರಣೆ ಇದೆಯೇ? ದನದ ಮಾಂಸದ ಉದ್ಯಮಕ್ಕಾಗಿ ನಡೆಯುವ ಗೋ ಹತ್ಯೆಯ ಬಗ್ಗೆ ಒಂದೇ ಒಂದು ಸೊಲ್ಲೆತ್ತದ ಗೋರಕ್ಷಕರು ಅರ್ಧ ಕೆಜಿ ದನದ ಮಾಂಸ ತಿಂದಿದ್ದಕ್ಕಾಗಿ ಮನುಷ್ಯ ಜೀವನ್ನೇ ತೆಗೆಯುವುದನ್ನು ಅಸಹಾಯಕವಾಗಿ ನೋಡಬೆಕಾದ ಮಟ್ಟಕ್ಕೆ ಈ ದೇಶ ಬಂದು ನಿಂತಿದೆ.

ಮಹಿಳೆಯರ ಮೇಲಿನ ದೌರ್ಜನ್ಯಗಳು
ಒಂದು ಕಡೆ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಗುರುತರವಾದ ಹೆಜ್ಜೆ ಇಡುತ್ತಿದ್ದಾರೆ. ರಿಯೋ ಓಲಂಪಿಕ್ಸ್ ನಲ್ಲಿ ಮಹಿಳಾ ಕ್ರೀಡಾಳುಗಳು ಜಗದೆದುರು ಈ ದೇಶದ ಮಾನ ಕಾಪಾಡಿದ್ದಾರೆ. ಮತ್ತೊಂದೆಡೆ ಇದೇ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು ಆಘಾತಕಾರಿ ಮಟ್ಟದಲ್ಲಿ ನಡೆಯುತ್ತಿರುವುದು ನಾಚಿಕೆಗೇಡು. ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಸಹ ಜಾತಿ-ಧರ್ಮದ ಪೂರ್ವಾಗ್ರದಿಂದ ನಡೆಯುತ್ತಿರುವುದು ಇನ್ನಷ್ಟು ಕ್ರೂರ. ಇದಕ್ಕೆ ಸಮಾಜ ವ್ಯಕ್ತಪಡಿಸುವ ಪ್ರತಿಕ್ರಿಯೆ ಸಹ ಪೂವಾರ್ಗಗ್ರಹ ಪೀಡಿತವಾಗಿಯೇ ಇವೆ. ಹೀಗಾಗಿಯೇ ದಿನನಿತ್ಯ ದಲಿತ, ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ನಡೆಯುವ ಅದೆಷ್ಟೋ ಅತ್ಯಾಚಾರ, ದೌರ್ಜನ್ಯಗಳು ಯಾರ ಗಮನಕ್ಕೂ ಬಾರದಂತೆ ಹೋಗುತ್ತಿವೆ. ಇನ್ನು ಅತ್ಯಾಚಾರ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗಳಿಗೆ ದೂರು ಕೊಡಲು ಹೋದಾಗ ಬಹುತೇಕ ಪ್ರಕರಣಗಳಲ್ಲಿ ಪೊಲೀಸರು ಅಪರಾಧಿಗಳ ಮೇಲೆ ದಾಖಲಿಸುವ ಬದಲಾಗಿ ಅತ್ಯಾಚಾರಕ್ಕೊಳಗಾದ ಬಲಿಪಶುಗಳನ್ನೇ ಅನುಮಾನಿಸುತ್ತಾರೆ ಎಂಬ ಅಂಶವನ್ನು ಜಸ್ಟೀಸ್ ವರ್ಮಾ ಸಮಿತಿಯೇ ಗುರುತಿಸಿದೆ.

ಮಹಿಳೆಯರು ನಮ್ಮ ಗಂಡಾಳ್ವಿಕೆಯ ಸಮಾಜದಲ್ಲಿ ವರದಕ್ಷಿಣೆ ಕಿರುಕುಳ-ಕೊಲೆ, ಆಸಿಡ್ ದಾಳಿ, ಕೌಟುಂಬಿಕ ಹಿಂಸೆ, ಸ್ತ್ರೀ ಭ್ರೂಣಹತ್ಯೆ, ನಾನಾ ಬಗೆಯ ಲೈಂಗಿಕ ದೌರ್ಜನ್ಯಗಳಿಗೆ, ಲಿಂಗ ಪೂರ್ವಾಗ್ರಹಗಳಿಗೆ ಒಳಗಾಗಿ ದಿನೇದಿನೇ ಕುಗ್ಗುತ್ತಲೇ ಹೋಗುತ್ತಿದ್ದಾರೆ. ಸಾಲದ್ದಕ್ಕೆ ಶ್ರೀರಾಮಸೇನೆ, ಹಿಂದೂ ಜಾಗರಣ ವೇದಿಕೆಯಂತಹ ಭ್ರಷ್ಟ ಗೂಂಡಾ ಪಡೆಗಳು ಹೆಣ್ಣುಮಕ್ಕಳ ಮೇಲೆ ಧರ್ಮ- ಸಂಸ್ಕøತಿ ರಕ್ಷಣೆ ಹೆಸರಲ್ಲಿ ನಡೆಸುವ ಅಮಾನವೀಯ ದಾಳಿಗಳನ್ನು, ಹಲ್ಲೆಗಳನ್ನು ಕಂಡಿದ್ದೇವೆ. ಇಡೀ ಸಮಾಜವನ್ನು ಮಹಿಳೆಯರ ಎದುರು ಎತ್ತಿಕಟ್ಟಿರುವುದು ಮನುವಾದ ಮತ್ತು ಧಾರ್ಮಿಕ ಕರ್ಮಠತನಗಳು. ಆದ್ದರಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮನುಸ್ಮøತಿಯನ್ನು ಬಹಿರಂಗವಾಗಿ ದಹಿಸುವ ಮೂಲಕ ಮಹಿಳಾ ವಿಮೋಚನೆಯ ಸಭೆ ನಡೆಸಿದ್ದನ್ನು ಸ್ಮರಿಸಬಹುದು.
ಮೊದಲೇ ಸಮಾಜದಿಂದ ತಿರಸ್ಕøತವಾಗಿರುವ ಆದಿವಾಸಿ, ಅಲೆಮಾರಿ, ತಳಸಮುದಾಯಗಳ ಜನತೆಯ ಬದುಕು ಆತಂಕಮಯವಾಗಿದೆ. ಈ ಅಸಮುದಾಯಗಳು ಅತ್ತ ತಮ್ಮ ನೆಲೆಗಳಲ್ಲಿ ಉತ್ತಮ, ಸ್ವಾಭಿಮಾನದ ಬದುಕನ್ನೂ ಕಟ್ಟಿಕೊಳ್ಳಲಾರದೇ ಇತ್ತ ದುರಾಸೆ ಪೀಡಿತ ಬಂಡವಾಳಶಾಹಿ ಪ್ರಣೀತ ಅಧುನಿಕತೆಯನ್ನೂ ಅರಗಿಸಿಕೊಳ್ಳಲಾರದೆ ಇನ್ನಿಲ್ಲದ ಪಾಡು ಪಡುತ್ತಿದ್ದಾರೆ. ವರ್ಷದ ಹಿಂದೆ ಬೆಳ್ತಂಗಡಿ ತಾಲ್ಲೂಕಿನ ನೆರಿಯಾ ಗ್ರಾಮದ ಕಾಟಾಜೆಯ ಸುಂದರ ಮಲೆಕುಡಿಯ ಎಂಬ ಆದಿವಾಸಿಯ ಮೇಲೆ ಅಮಾನುಷ ಹಲ್ಲೆ ನಡೆಸಿದ ಮೇಲ್ಜಾತಿ ಭೂಮಾಲಿಕರು ಆತನ ಕೈ ಬೆರಳುಗಳನ್ನೇ ಕತ್ತರಿಸಿದರು. ಈ ಪ್ರಕರಣದಲ್ಲಿ ಸುಂದರ ಮಲೆಕುಡಿಯ ಇಂದಿಗೂ ನ್ಯಾಯವಂಚಿತರಾಗಿದ್ದಾರೆ. ಹೀಗೆ, ಅಪರಾಧವೇ ಅಧಿಕಾರವಾಗಿ, ಅನ್ಯಾಯವೇ ಆಡಳಿತವಾಗಿರುವ ಈ ಸಂದಿಗ್ಧ ಕಾಲದಲ್ಲಿ ಈ ನೆಲದ ಜನಸಮಾನ್ಯರು ಬದುಕುತ್ತಿದ್ದಾರೆ. ಅಂತೆಯೇ ಲೈಂಗಿಕ ಅಲ್ಪಸಂಖ್ಯಾತ ಲಿಂಗಾಂತರಿ ಸಮುದಾಯವೂ ಒಂದಿಲ್ಲೊಂದು ಹಲ್ಲೆಗೆ ಒಳಗಾಗುತ್ತಿದೆ. ಈ ಹಲ್ಲೆಯನ್ನೂ ಮನುವಾದಿ ಸ್ತ್ರೀದೃಷ್ಟಿಕೋನಗಳೇ ಪ್ರಭಾವಿಸುತ್ತಿವೆ.

ಭೂಮಿ ನಮ್ಮ ಹಕ್ಕು
ದಲಿತ, ಆದಿವಾಸಿ, ಅಲೆಮಾರಿ ಹಾಗೂ ಹಿಂದುಳಿದ ಸಮುದಾಯಗಳ ಕೋಟ್ಯಂತರ ಜನರು ಇಂದಿಗೂ ಸಹ ತುಂಡು ಭೂಮಿಯನ್ನೂ ಕಾಣದೇ ಬದುಕುತ್ತಿದ್ದಾರೆ. ದೇವರಾಜ ಅರಸು ಜಾರಿಗೆ ತಂದಿದ್ದ ಒಂದು ಭೂಸುಧಾರಣಾ ಕಾಯ್ದೆಯನ್ನೂ ಸರಿಯಾಗಿ ಜಾರಿಗೊಳಿಸಲು ಬಲಾಢ್ಯ ವರ್ಗಗಳು ಬಿಡುತ್ತಿಲ್ಲ. ಎಷ್ಟೋ ಜನರಿಗೆ ಜಮೀನಿದ್ದರೂ, ಉಳುಮೆ ಮಾಡುತ್ತಿದ್ದರೂ ಅದರ ಮೇಲೆ ಹಕ್ಕಿಲ್ಲದಂತಾಗಿದೆ. ಇತ್ತೀಚೆಗೆ ದಲಿತರ ಭೂಮಿಯ ಹಕ್ಕಿಗಾಗಿ ಹೋರಾಡಿದ್ದಕ್ಕಾಗಿ ಬಳ್ಳಾರಿಯಲ್ಲಿ ಕರಿಯಪ್ಪ ಗುಡಿಮನಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದನ್ನು ಗಮನಿಸಬಹುದು. ಈ ಹಿಂದೆ ಭೂಮಾಲೀಕರ ವಿರುದ್ಧ ಭೂ ಹೋರಾಟ ನಡೆದಿದ್ದರೆ ಈ ದಿನಗಳಲ್ಲಿ ಬಡವರ ಭೂಮಿಯನ್ನು ಕಾರ್ಪೊರೇಟ್ ಶಕ್ತಿಗಳು ನುಂಗಿ ಹಾಕುತ್ತಿವೆ. ದಲಿತ-ದಮನಿತರಿಗೆ ಭೂಮಿ ಮತ್ತು ವಸತಿ ಹಕ್ಕುಗಳು ಸಿಗಬೇಕು ಎನ್ನುವ ಕೂಗು ಮತ್ತೊಮ್ಮೆ ಮೊಳಗಿದೆ. ಈ ಧ್ವನಿಗೆ ಇಡೀ ನಾಡಿನ ದಲಿತ, ದಮನಿತ ಸಮುದಾಯಗಳು ಧ್ವನಿ ಸೇರಿಸಬೇಕಾಗಿದೆ.

ಬೆನ್ನು ಬಗ್ಗಿಸಿದಷ್ಟೂ ಗುದ್ದುತ್ತಲೇ ಇರುತ್ತಾರೆ; ಎದೆ ಎತ್ತಿ ನಡೆದಾಗ ಮಾತ್ರ ಘನತೆ ಗೌರವಗಳನ್ನು ಉಳಿಸಿಕೊಳ್ಳಲು ಸಾಧ್ಯ. ಉಳ್ಳವರ, ಬಲಾಢ್ಯರ, ಅಧಿಕಾರಸ್ಥರ ದಮನಕಾರಿ ಧೋರಣೆಗಳಿಗೆ, ಹಲ್ಲೆ- ಹತ್ಯೆಗಳಿಗೆ, ನಮ್ಮ ನಮ್ಮಲ್ಲೇ ಜಗಳ ಹಚ್ಚುವ ಒಳ ಹುನ್ನಾರಗಳಿಗೆ ದಲಿತ-ದಮನಿತರೆಲ್ಲರೂ ಒಗ್ಗಟ್ಟಾಗಿ ತಿರುಗೇಟು ನೀಡಬೇಕಿದೆ. ದಮನಿತರ ಒಗ್ಗಟ್ಟಿನಲ್ಲಿಯೇ ಬಹುಜನರ ಪ್ರಗತಿ ಅಡಗಿದೆ ಎಂಬ ಸತ್ಯವನ್ನು ಅರಿತು ನಮ್ಮ ನಡುವಿನ ಬೇಧ-ಭಾವಗಳನ್ನು ಮೀರಿ ನಿಲ್ಲಬೇಕಿದೆ. `ಬುದ್ಧ, ಬಸವಣ್ಣ, ಫುಲೆ ದಂಪತಿಗಳು, ಬಾಬಾಸಾಹೇಬ್ ಅಂಬೇಡ್ಕರ್, ನಾರಾಯಣ ಗುರು ಮುಂತಾದ ಮಹಾನ್ ಚೇತನಗಳು ನಡೆಸಿಕೊಂಡು ಬಂದ ವಿಮೋಚನಾ ರಥವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದಾಗಿ ನಾವು ಪ್ರತಿಜ್ಞೆ ಮಾಡೋಣ, ನೋವೇ ನಾಯಕನಾಗಿ, ಸಹನೆಯೇ ಚಿಂತಕನಾಗಿ ಮತ್ತು ರೋಷವೇ ಸಂಘಟಕನಾಗಿಸಿಕೊಂಡು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮನುಕುಲದ ಏಳಿಗೆಗಾಗಿ ಶ್ರಮಿಸಿದ ಮಹನೀಯರೆಲ್ಲರ ಶಕ್ತಿಯನ್ನು ಮೇಳೈವಿಸಿಕೊಂಡು ಈ ಹೋರಾಟವನ್ನು ಮುನ್ನಡೆಸೋಣ’ ಬನ್ನಿ ಎಂದು ಚಲೋ ಉಡುಪಿ ಸಂಗಾತಿಗಳು ಕರೆ ಕೊಟ್ಟಿದ್ದಾರೆ. ಇದೊಂದು ಜಾತಿವಾದಿ, ಪ್ರತಿಗಾಮಿ ಶಕ್ತಿಗಳ ದಮನ-ಹುನ್ನಾರಗಳಿಗೆದುರಾಗಿ ಈ ನೆಲದ ಜನಶಕ್ತಿ ನಡೆಸುತ್ತಿರುವ ಒಗ್ಗಟ್ಟಿನ ಸಾತ್ವಿಕ ಹೋರಾಟ.

`ಉಡುಪಿ ಚಲೋ’ ದ ಹಕ್ಕೊತ್ತಾಯಗಳು

CHALO-3 (1)1. ಆಹಾರದ ಆಯ್ಕೆ ಪ್ರತಿಯೊಬ್ಬ ನಾಗರಿಕನ ಸಂವಿಧಾನಾತ್ಮಕ ಹಕ್ಕು. ಗೋ ರಕ್ಷಣೆ ಹೆಸರಿನಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಮೇಲೆ ಹಲ್ಲೆ, ಹತ್ಯೆಗಳನ್ನು ವ್ಯವಸ್ಥಿತವಾಗಿ ಸಂಘಟಿಸಿ ನಡೆಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಶೇಷ ಕಾಯ್ದೆಯೊಂದನ್ನು ಕೂಡಲೇ ಜಾರಿಗೆ ತರಬೇಕು.

2. ರಾಜ್ಯದಲ್ಲಿ ವಿವಿಧ ಧರ್ಮಗಳ ಜನರ ನಡುವೆ ವೈಷಮ್ಯ ಬಿತ್ತುತ್ತಾ ಅನೈತಿಕ ಪೊಲೀಸ್‍ಗಿರಿ ನಡೆಸುತ್ತಿರುವವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಕೂಡಲೇ ಕ್ರಮಕೈಗೊಳ್ಳಬೇಕು. ಈ ಕುಕೃತ್ಯಕಗಳಿಗೆ ಬೆಂಬಲಾಗಿರುವ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.

3. ದಲಿತರು ಮತ್ತು ಇತರೆ ದಮನಿತರು ಉಳುಮೆ ಮಾಡುತ್ತಿರುವ ಸರ್ಕಾರಿ ಜಮೀನುಗಳನ್ನು ಆದ್ಯತೆಯ ಮೇರೆಗೆ ಸಕ್ರಮಗೊಳಿಸಿಕೊಡಬೇಕು. ಭೂಹೀನರಿಗೆ ಮತ್ತು ನಿವೇಶನರಹಿತರಿಗೆ ತಲಾ 5 ಎಕರೆ ಭೂಮಿ, ಘನತೆಯ ಬದುಕಿಗೆ ತಕ್ಕುದಾದಷ್ಟು ನಿವೇಶನಸಹಿತ ವಸತಿಯನ್ನು ಕೂಡಲೇ ಮಂಜೂರು ಮಾಡಬೇಕು. ಭೂಮಿಯ ಜೊತೆಗೆ ಕೃಷಿಕರಿಗೆ ಬೀಜ ಗೊಬ್ಬರ, ಇನ್ನಿತರೆ ಕೃಷಿ ಸಲಕರಣೆಗಳು ಹಾಗೂ ಮಾರುಕಟ್ಟೆಯ ರಕ್ಷಣೆ ಒದಗಿಸುವ ಜವಾಬ್ದಾರಿಯನ್ನೂ ಸರ್ಕಾರವೇ ತೆಗೆದುಕೊಳ್ಳಬೇಕು.

4. ದಲಿತರು ಮತ್ತು ಎಲ್ಲಾ ಜಾತಿಗಳ ದಮನಿತ ಜನವರ್ಗಗಳಿಗೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಜಾರಿಗೆ ತರಲು ಅಗತ್ಯವಿರುವ ಕಾನೂನು ಕ್ರಮವನ್ನು ಕೂಡಲೇ ಆರಂಭಿಸಬೇಕು.

5. ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಎಸ್.ಸಿ.ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ತಿದ್ದುಪಡಿ ಮಾಡಿ ಅದನ್ನು ಇನ್ನಷ್ಟು ಕಠಿಣಗೊಳಿಸಬೇಕು. ವಿಶ್ವವಿದ್ಯಾಲಯಗಳ ಕ್ಯಾಂಪಸ್‍ಗಳಲ್ಲಿ ದಲಿತ-ದಮನಿತ ವಿದ್ಯಾರ್ಥಿಗಳು ಮತ್ತು ಸ್ಕಾಲರ್‍ಗಳ ಜೀವ ಮತ್ತು ಘನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ರೋಹಿತ್ ಕಾಯ್ದೆ ರಚಿಸಿ ಜಾರಿಗೊಳಿಸಬೇಕು.

6. ಮಹಿಳೆಯರ ಮೇಲಿನ ಅತ್ಯಾಚಾರ-ದೌರ್ಜನ್ಯಗಳ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಖಾತ್ರಿಗೊಳಿಸುವ ಕ್ರಮಗಳಾಗಬೇಕು. ಅತ್ಯಾಚಾರ ಪ್ರಕರಣಗಳನ್ನು ದಾಖಲುಗೊಳಿಸದ ಪೊಲೀಸರ ಮೇಲೆ ಶಿಸ್ತುಕ್ರಮವಾಗುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡಬೇಕು. ಅಮಾನವೀಯ ದೇವದಾಸಿ ಪದ್ಧತಿ ನಿರ್ಮೂಲನೆಗೆ ಕಾಲಮಿತಿ ಹಾಕಿ ಈ ಹೀನ ಪದ್ದತಿಯನ್ನು ನಿರ್ಮೂಲಿಸಲು ತ್ವರಿತಗತಿಯಲ್ಲಿ ಸರ್ಕಾರ ಮುಂದಾಗಬೇಕು.

7. ಆದಿವಾಸಿ ಬುಡಕಟ್ಟು, ಅಲೆಮಾರಿಗಳ ಹಕ್ಕುಗಳನ್ನು ರಕ್ಷಿಸುವ ಕೆಲಸವಾಗಬೇಕು. ಈ ತಳಸಮುದಾಯಗಳ ಜನರ ಮೇಲಿನ ದಮನ- ದೌರ್ಜನ್ಯಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಬಲಿಪಶುಗಳಿಗೆ ನ್ಯಾಯ ಸಿಗುವಂತೆ ಮಾಡಬೇಕು.

8. ಮಲಹೊರುವ ಕೆಲಸದಲ್ಲಿ ದಲಿತ – ದಮನಿತರು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳಲ್ಲಿ ತಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು.  ಮಲಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಕ್ರಮ ತೆಗೆದುಕೊಳ್ಳಬೇಕು. ಮಲಹೊರುವ ವೃತ್ತಿಯಲ್ಲಿ ತೊಡಗಿರುವ ಜನರಿಗೆ ಗೌರವಯುತವಾದ ಉದ್ಯೋಗಗಳನ್ನು ಸರ್ಕಾರ ಕೂಡಲೇ ಘೋಷಿಸಿ, ನೀಡಬೇಕು.

ಜಮೀನ್ದಾರಿಕೆ ವಿರುದ್ಧ ದಲಿತರ ಭೂಹೋರಾಟ

-ಅರುಣ್ ಜೋಳದಕೂಡ್ಲಿಗಿ.

ಅಂದು ಚಳವಳಿಯ ಸಂಗಾತಿ ಕರಿಯಪ್ಪ ಗುಡಿಮನೆ ಅವರ ಕಮಲಾಪುರದ ಮನೆಗೆ ಹೋದಾಗ ಅವರು ಪ್ರಯಾಣದಿಂದ ಬಳಲಿದ್ದರು. ಕಾರಣ ಹಿಂದಿನ ದಿನ ಬೆಂಗಳೂರಿನ ಟೌನ್ ಹಾಲ್ ಮುಂದೆ ತನ್ನ ಮೇಲಿನ ಕೊಲೆಯ ಯತ್ನ ವಿರೋಧಿಸಿ ಪ್ರಗತಿಪರರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಂದಿದ್ದರು. ಇದರ ಹಿನ್ನೆಲೆ ನೋಡಿದರೆ, ಬಳ್ಳಾರಿ ಭಾಗದ ದಲಿತ ಕೆಳಜಾತಿಗಳೇ ಹೆಚ್ಚಿರುವ ಬಂಡೆಟ್ಟಿ ಮತ್ತು ದಾನಪ್ಪ ಬೀದಿಯ ಪೌರಕಾರ್ಮಿಕರಿರುವ ಫಲಾನುಭವಿಗಳಿಗೆ 1970-80 ರ ಸುಮಾರಿಗೆ ಭೂನ್ಯಾಯ ಮಂಡಳಿಯಿಂದ ಸುಮಾರು 140 ಎಕರೆ ಜಮೀನು ಮುಂಜೂರಾಗಿತ್ತು. ಈ ಎಲ್ಲಾ ಭೂಮಿ ಇಂದು ಎಲ್.ಪ್ರತಾಪ್ ರೆಡ್ಡಿ ಎಂಬ ಜಮೀನ್ದಾರನ ವಶದಲ್ಲಿದೆ. ಇದನ್ನು ಮೂಲ ಫಲಾನುಭವಿಗಳಿಗೆ ಕೊಡಿಸುವ ಹೋರಾಟ ರೂಪಿಸುತ್ತಿರುವ ಕರಿಯಪ್ಪನ ಮೇಲೆ ಜೂನ್ 27 ರಂದು ಬಳ್ಳಾರಿಯ ಎ.ಸಿ ಆಪೀಸು ಮುಂದೆ ಪ್ರತಾಪರೆಡ್ಡಿ ಕಡೆಯವರು ಮಾರಣಾಂತಿಕ ಹಲ್ಲೆ ಮಾಡಿದ್ದರು.

??????????

ಈ ಕುರಿತು ಪ್ರಗತಿಪರರಿಂದ ಸಾಕಷ್ಟು ಪ್ರತಿರೋಧವೂ ಬಂದಿತ್ತು. ಇಂದು ಭೂಮಿ ರಿಯಲ್ ಎಸ್ಟೇಟ್ ದಂದೆಗೆ ಒಳಗಾಗಿ ಒಂದು ಮಾಫಿಯಾವೇ ಸೃಷ್ಠಿಯಾಗಿರುವ ಸಂದರ್ಭದಲ್ಲಿ ಕರಿಯಪ್ಪನ ಮೇಲಿನ ಹಲ್ಲೆ ಭೂಚಳವಳಿಯ ಬಿಕ್ಕಟ್ಟಿನ ಒಂದು ಮುಖವನ್ನು ತೋರುತ್ತಿದೆ. ಹೀಗೆ ಕರಿಯಪ್ಪ ಗುಡಿಮನೆ ಅವರ ಜತೆ ಮಾತನಾಡುತ್ತಾ, ಕಳೆದ ವರ್ಷ ಎಸ್.ಆರ್.ಪುರದಲ್ಲಿ ನಡೆದ ರೈತ ಹೋರಾಟದ ಹಿನ್ನೆಲೆಯನ್ನು ಕೇಳತೊಡಗಿದೆ. ಅವರು ಹೋರಾಟದ ದಾಖಲೆಗಳನ್ನು ನನ್ನ ಮುಂದೆ ತಂದು ಹರಡಿದರು. ಒಂದೊಂದನ್ನು ನೋಡುತ್ತಾ ಹೋದಂತೆ ಹೋರಾಟದ ಚಿತ್ರಣವೊಂದು ಕಣ್ಣಮುಂದೆ ಬರತೊಡಗಿತು. ಇದನ್ನು ನೋಡುತ್ತಿದ್ದಂತೆ ನಾನು ಎಸ್.ಆರ್ ಪುರಕ್ಕೆ ಹೋಗಿ ಭೂಮಿ ಪಡೆದವರ ಜತೆ ಮಾತನಾಡಲು ಅವರ ಸಹಾಯ ಕೋರಿದೆ. ಆಗ ಎಸ್.ಆರ್.ಪುರದವರೇ ಆದ ಸ್ಥಳೀಯವಾಗಿ ಹೋರಾಟವನ್ನು ಸಂಘಟಿಸಿದ ರಾಮಚಂದ್ರಪ್ಪರ ಅವರ ಸಂಪರ್ಕ ಕಲ್ಪಿಸಿಕೊಟ್ಟರು.
**
ತನ್ನೂರಿನ ಹೆಸರನ್ನೇ ತನಗೆ ಅಂಟಿಸಿಕೊಂಡಂತಿದ್ದ ರಾಮಚಂದ್ರಪ್ಪನ ಜತೆ ಎಸ್.ಆರ್.ಪುರ ತಲುಪಿದಾದ ಸರಿಯಾಗಿ ಸಂಜೆ ನಾಲ್ಕುಗಂಟೆ. ನಮ್ಮ ಬರವು ಮೊದಲೆ ತಿಳಿದದ್ದರಿಂದ ಹತ್ತರಿಂದ ಹದಿನೈದು ಜನ ಕೇರಿಯ ರಾಮನಗುಡಿಯಲ್ಲಿ ಸೇರಿದ್ದರು. ಆರಂಭಕ್ಕೆ ಕೆಲವರು ಪ್ರಶ್ನಾರ್ಥಕವಾಗಿ ನನ್ನನ್ನು ನೋಡಿದಾಗ, ನಾನೆ ಪರಿಚಯಿಸಿಕೊಂಡು `ನಿಮ್ಮ ಹೊಲದ ಬಗ್ಗೆ ತಿಳಕೊಳ್ಳೋಕೆ ಬಂದಿರುವೆ’ ಎಂದೆ. ಬಿಗುವಿನ ವಾತಾವರಣ ಚೂರು ಬದಲಾಯಿತು. ಎಲ್ಲರ ಮುಖದಲ್ಲಿ ಒಂದು ಬಗೆಯ ಗೆಲುವಿನ ನಗು ಕಾಣುತ್ತಿತ್ತು. ಒಬ್ಬರಾದ ನಂತರ ಒಬ್ಬೊರಂತೆ ಇಡೀ ಹೋರಾಟದ ಕಥನವನ್ನು ಬಗೆಬಗೆಯಲ್ಲಿ ಬಣ್ಣಿಸತೊಡಗಿದರು. `ದೊಡ್ಡ ಕತಿ ಬಿಡ್ರಿ, ನಮ್ಮೂರಾಗ ಇಂಥದು ನಡೀತಾತಿ ಅಂತ ಕನ್ಸಲ್ಲೂ ಅನ್ಕಂಡಿರಲಿಲ್ಲ’ ಎಂದು ಮಾತಿಗೆ ಶುರುವಿಟ್ಟುಕೊಂಡರು. `ಆ ದಿನಾನ ನೆನಪಿಸಿಕೊಂಡ್ರ ಮೈ ಜುಂ ಅಂತಾತ ಸಾರ್, ಇದೆಲ್ಲಾ ಹೆಂಗಾತು.. ಕನಸೋ ನಿಜನೋ ಅಂತ ಒಂದೊಂದು ಸಲ ನಂಬಿಕಿ ಬರಲ್ಲ’ ಎಂದೊಬ್ಬರು ಅಚ್ಚರಿ ವ್ಯಕ್ತಪಡಿಸಿದರು.

`ನಮಿಗೆ ಹೊಲ ಕೊಡಸಾಕ ದೊಡ್ಡ ದೊಡ್ಡ ಸಾಹೇಬರು ಎಲ್ಲೆಲ್ಲಿಂದ ಬಂದುದ್ರೋ.. ನಮಿಗೂ ಅವ್ರಿಗೂ ಏನ್ ಋಣನೋ. ಅವರು ಯಾರು ಅಂತಾನ ನಮಿಗೊತ್ತಿಲ್ಲ, ಆದ್ರ ಅವರೆಲ್ಲ ಸೇರಿ ನಮ್ಮ ಹೊಲನ ನಮಿಗೆ ಕೊಡಿಸಿದ್ರು, ಈಗ ಬಿತ್ತಾಟ ಮಾಡಿದ್ರ ಇದು ಮೂರನೆ ಬೆಳಿ, ಅವರ ಹೊಟ್ಟೆ ತಣ್ಣಗಿರಲಿ’ ಎಂದು ಕೆಲವರು ಕೃತಜ್ಞತೆ ಸಲ್ಲಿಸಿದರು. ಇದನ್ನು ಕೇಳುತ್ತಿದ್ದರೆ, ದೇವನೂರರ `ಸಂಬಂಜ ಅನ್ನೊದು ದೊಡ್ದು ಕಣಾ’ಎನ್ನುವ ಮಾತು ನೆನಪಿಗೆ ಬಂತು. ಹೀಗೆ ನಾವು ರಾಮನಗುಡಿಯಲ್ಲಿ ಕೂತು ಮಾತಾಡ್ತಿದ್ರೆ, ಕೆಲವರು ದೂರದಲ್ಲೆ ಏನೋ ನಡೀತಿದೆ ಎನ್ನುವಂತೆ ಗುಮಾನಿಯಿಂದ ನಮ್ಮನ್ನು ನೋಡುತ್ತಿದ್ದರು. ಅವರ ಆ ನೋಟ `ಮತ್ತೇನ್ ಕತೆನೋ, ಮತ್ತೆ ಯಾರನ್ನೋ ಕರಕಂಡ್ ಬಂದಾರಲ್ಲ’ ಎನ್ನುವಂತಿತ್ತು. ಹೆಣ್ಣುಮಕ್ಕಳು ಸುಮ್ಮನೆ ಈ ಮಾತುಕತೆಯನ್ನು ಕೇಳಿಸಿಕೊಂಡು ಮೌನ ವ್ರತ ಹಿಡಿದವರಂತೆ ಕೂತಿದ್ದರು.

ಈಗ್ಗೆ ಮೂರು ವರ್ಷದಿಂದ ನಮ್ಮ ಕೇರಿಗೆ ಅಂಬೇಡ್ಕರ್ ಬಂದಾರ, ಹಂಗಾಗಿ ನಾವೀಗ ಅಂಬೇಡ್ಕರ್ ಜಯಂತಿ ಮಾಡ್ತೀವಿ ಎಂದು ಕೇರಿಯ ಹೊಸಬೆಳಕಿನ ಬಗ್ಗೆ ಮಾತನಾಡಿದರು. ಧಣಿ ವಶದಲ್ಲಿದ್ದ ಭೂಮಿಯನ್ನು ಜೀತಗಾರ ದಲಿತರು ಪಡೆದ ಬಗ್ಗೆ ಸುತ್ತಮುತ್ತಲ ಹಳ್ಳಿಗಳಲ್ಲಿ ಹತ್ತಾರು ಕಥೆಗಳು ಹುಟ್ಟಿವೆಯಂತೆ. ಧಣಿ ಪರವಾದ ಕೆಲವರು `ನಂಬಿದ ಧಣಿಗೆ ಇವರು ಮೋಸ ಮಾಡಿದ್ರು, ಧಣಿ ಎದುರು ಯಾರ್ ಯಾರನ್ನೋ ಕರಕಂಡು ಬಂದು ದೌರ್ಜನ್ಯ ಮಾಡಿ ಹೊಲ ಕಸಕಂಡಾರ, ದೇವ್ರು ಇವ್ರಿಗೆ ಒಳ್ಳೇದ್ ಮಾಡಲ್ಲ’ ಎನ್ನುತ್ತಾರಂತೆ. ಇದಕ್ಕೆ ರಾಮಚಂದ್ರಪ್ಪ `ಅಲ್ರಿ ಸಾರ ನಮ್ಮ ಹೊಲನ ನಾವು ತಗಳ್ಳಾಕ ಇಷ್ಟು ರಾಮಾಯಣ ಆಗ್ಯಾತಿ, ಇನ್ನ ಅವರ ಹೆಸರಲ್ಲೆ ಪಟ್ಟ ಇದ್ದದ್ರ ನಾವ್ ದೌರ್ಜನ್ಯ ಮಾಡಿ ಹೊಲ ತಗಳ್ಳಾದು ಅಕ್ಕಿತ್ತೇನ್ರಿ’ ಎಂದು ಸಮಜಾಯಿಶಿ ಕೊಡುತ್ತಾರೆ.

ಹೀಗೆ ಕೂತು ಮಾತನಾಡುವಾಗ ಎಲ್ಲರ ಮುಖದಲ್ಲಿ ಗೆಲುವಿನ ನಗೆ, ಆತ್ಮವಿಶ್ವಾಸದ ಮಿಂಚು ಕಾಣುತ್ತಿತ್ತು. ಇಡೀ ಊರಿನ ಚರಿತ್ರೆಯಲ್ಲಿ `ಅಲ್ಲೋಲ ಕಲ್ಲೋಲ’ ಎಬ್ಬಿಸಿದ ಈ ಘಟನೆ ಬೀರಿದ ಪರಿಣಾಮ ಹಲವು. `ಈಗೇನು ಧಣಿ ಕಡೇರು ಸುಮ್ನಿದಾರ, ಏನ್ ತೊಂದ್ರಿ ಮಾಡಿಲ್ಲ. ಆದ್ರ ಇದೆಲ್ಲಾ ಮರೀಲಿ ಮುಂದೆ ನೋಡಾಣ ಒಂದು ಕೈ ಅಂತ ಸುಮ್ನಿದ್ದಂಗಿದೆ ಸಾರ್’ ಎನ್ನುವ ಸೇಡಿನ ಕಿಡಿ ಬೂದಿ ಮುಚ್ಚಿಕೊಂಡಿದೆ ಎನ್ನುವಂತಿರುವ ವಾತಾವರಣವನ್ನು ಸೂಕ್ಷ್ಮವಾಗಿ ವಿವರಿಸಿದರು. ಈ ಬಗ್ಗೆ ಹೇಳುವಾಗ ದೂರದ ಆತಂಕದ ಸಣ್ಣ ಎಳೆಯೊಂದು ಕಾಣಿಸಿಕೊಂಡಿತು. ಆದರೂ `ಇರೋದ್ ಒಂದಿನ ಸಾಯೋದ್ ಒಂದಿನ ಬಿಡ್ರಿ ಸಾರ್, ಮುಂದೆ ನೋಡಾಣ’ ಎನ್ನುವ ದೈರ್ಯವನ್ನೂ ಕೆಲವರು ವ್ಯಕ್ತಪಡಿಸಿದರು.

ಈ ಭೂ ಹೋರಾಟ ಬೀರಿದ ಸಕಾರಾತ್ಮಕ ಪರಿಣಾಮವೆಂದರೆ, ಸುತ್ತಮುತ್ತಲ ಹಳ್ಳಿಗಳ ದಲಿತ ಕೆಳಜಾತಿಗಳ ರೈತರನೇಕರು `ನಮ್ ಹೊಲಾನು ಯಾವ್ ಯಾವ್ ಧಣೀ ಹೆಸ್ರಲ್ಲಿ ಐತೋ’ ಎಂದು ತಾಲೂಕು ಆಫೀಸಿನ ದಾಖಲಾತಿಗಳ ಪರಿಶೀಲಿಸುವ ಗುಪ್ತ ಕಾರ್ಯಾಚರಣೆಯಲ್ಲಿ ತೊಡಗಿದ್ದಾರಂತೆ. ಇವರೆಲ್ಲರಲ್ಲೂ ನಮ್ಮ ಹೊಲಾನೂ ಹಿಂಗೆ ಯಾರಾದ್ರೂ ವಶಪಡಿಸಿಕೊಂಡಿದ್ದು ಗೊತ್ತಾದ್ರೆ, ಕೊಡುಸೋ ಜನಾನೂ ಇದಾರೆ ಎನ್ನುವ ಕನಸಿನ ಬೀಜವೊಂದು ಮೊಳೆತಂತಿದೆ.
**
ಅಂದಹಾಗೆ ಪೀಠಿಕೆ ಇಲ್ಲದೆ ಶುರುಮಾಡಿದ ಭೂಮಿ ದಕ್ಕಿಸಿಕೊಂಡ ಈ ಕಥನ ಈಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗದ ದೊಡ್ಡದೊಂದು ಗೆಲುವಿನ ಹೋರಾಟದ್ದು. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ನುಗ್ಗೇನಹಳ್ಳಿ ಗ್ರಾಮಪಂಚಾಯ್ತಿಯಲ್ಲಿ ಬರುವ ಪುಟ್ಟ ಗ್ರಾಮ ನೆಲ್ಲೂಡು-ಕೊಟ್ಟಾಲ್. `ಕೊಟ್ಟಾಲ್’ ಎಂದರೆ ತೆಲುಗಿನಲ್ಲಿ `ಗುಡಿಸಲು’ ಎಂದರ್ಥ. ಗುಡಿಸಲೇ ಇರುವ ಜನವಸತಿಯನ್ನು ಗುರುತಿಸುವ ಈ ಪದ ಮರೆಯಾಗಿ ಕಾಲಾನಂತರದಲ್ಲಿ `ಶ್ರೀರಾಮರಂಗಾಪುರ’ ವಾಗಿದೆ. ಅದನ್ನೀಗ `ಎಸ್.ಆರ್.ಪುರ’ ವೆಂದು ಸಂಕ್ಷಿಪ್ತಗೊಳಿಸಿ ಕರೆಯುತ್ತಾರೆ. ಹೀಗಾಗಿ `ಎಸ್.ಆರ್.ಪುರದ ರೈತ ಹೋರಾಟ’ವು ಬಳ್ಳಾರಿ ಜಿಲ್ಲೆಯ ಜಮೀನ್ದಾರಿ ವ್ಯವಸ್ಥೆಗೆ ದೊಡ್ಡ ಪೆಟ್ಟುಕೊಟ್ಟ ಸಂಗತಿಯಾಗಿದೆ.

ಗುಡಿಸಲೆ ಇರುವ ಊರು ಎಂದ ಮೇಲೆ ದಲಿತರು, ಕೆಳಜಾತಿ, ಹಿಂದುಳಿದವರು ಹೆಚ್ಚಿದ್ದಾರೆಂದು ಬೇರೆ ಹೇಳಬೇಕಿಲ್ಲ. ಈ ಊರಿನಲ್ಲಿ ಆಂದ್ರದಲ್ಲಿ ಬಹುಸಂಖ್ಯಾತರಾದ `ಕಮ್ಮಾ’ ಕುಲವೊಂದು ಇಲ್ಲಿ ಜಮೀನ್ದಾರರಾಗಿ ಪಾಳೆಗಾರಿಕೆ ಮಾಡುತ್ತಿತ್ತು. ಭೀಮನೇನಿ ಸೋಮಪ್ಪ ಈ ಭಾಗದ ಆಗಿನ ದೊಡ್ಡ ಭೂಮಾಲೀಕ. ಇವರಿಗೆ 8 ಜನ ಮಕ್ಕಳಲ್ಲಿ ಒಬ್ಬ ಮಗ ಭೀಮನೇನಿ ಕೊಂಡಯ್ಯ ಒಮ್ಮೆ ಶಾಸಕನೂ ಆಗಿದ್ದ. ಈತನ ಗೂಂಡಾಗಿರಿ, ದೌರ್ಜನ್ಯ, ದರ್ಪ ಅಧಿಕಾರದ ಕಾರಣಗಳಿಂದಲೇ ಹತ್ಯೆಯಾದದ್ದು, ಇದಕ್ಕೆ ಪ್ರತಿಯಾಗಿಯೇ, ತಾ.ಪಂ. ಅದ್ಯಕ್ಷನಾಗಿದ್ದ ಸೂರ್ಯನಾರಾಯಣ ರೆಡ್ಡಿಯು ಹೊಸಪೇಟೆಯಲ್ಲಿ ಆಗಸ್ಟ್ 15ರಂದು ಧ್ವಜಾರೋಹಣದ ಸಂದರ್ಭದಲ್ಲಿ ಗುಂಡಿಕ್ಕಿ ಕೊಂದದ್ದು ಎನ್ನುವ ಮಾತಿದೆ. ಇವರ ದಬ್ಬಾಳಿಕೆ ದೌರ್ಜನ್ಯದ ಕತೆಗಳು ತೆಲುಗು ಸಿನೆಮಾದ ಜಮಿನ್ದಾರಿಕೆಯ ದೃಶ್ಯಗಳಂತೆ ಬಿಚ್ಚಿಕೊಳ್ಳುತ್ತವೆ. ಇಂತಹ ಬೀಮನೇನಿ ಕುಟುಂಬದ ಜಮೀನ್ದಾರಿಕೆ ವಿರುದ್ಧ ಮೊದಲಬಾರಿಗೆ ಅವರಲ್ಲಿಯೇ ಜೀತಕ್ಕಿದ್ದ ದಲಿತ ಕುಟುಂಬಗಳು ತಿರುಗಿ ಬಿದ್ದದ್ದು ಇದೀಗ ಹೊಸ ಇತಿಹಾಸ.
s.r.pura-4

ದೇವರಾಜ ಅರಸು ಕಾಲದಲ್ಲಿ ಜಾರಿಗೆ ಬಂದ ಭೂ ಸುಧಾರಣಾ ನೀತಿಯು ಜಮೀನ್ದಾರರ ಹೆಚ್ಚುವರಿ ಭೂಮಿಯನ್ನು ಕಸಿದುಕೊಂಡಿತ್ತು. ಆದರೆ ವಾಸ್ತವದಲ್ಲಿ ಕೆಲವು ಜಮೀನ್ದಾರರು ಈ ನೀತಿಯನ್ನು ತುರುಮುರುಗು ಮಾಡಿ ಮಣ್ಣುಮುಕ್ಕಿಸಿದ್ದರು. ಕಾರಣ ಸರಕಾರದ ಲೆಕ್ಕದಲ್ಲಿ ಭೂಮಿ ಹಂಚಿಕೆಯಾಗಿದ್ದರೆ, ಹಾಗೆ ಹಂಚಲ್ಪಟ್ಟ ಭೂಮಿ ಮತ್ತದೇ ಜಮೀನ್ದಾರರ ಹದ್ದುಬಸ್ತಿನಲ್ಲೆ ಉಳಿಯಿತು. ಯಾರ ಹೆಸರಿಗೆ ಭೂಮಿ ಹಂಚಿಕೆಯಾಗಿತ್ತೋ ಅವರು ತಮ್ಮದೇ ಭೂಮಿಯಲ್ಲಿ ಅರಿವಿಲ್ಲದೆ ಜೀತಕ್ಕೆ ಆಳಾಗಿ ದುಡಿಯುತ್ತಿದ್ದರು. ಶ್ರೀರಾಮರಂಗಾಪುರದ ಬೀಮನೇನಿ ಜಮಿನ್ದಾರಿ ಕುಟುಂಬವು ಮಾಡಿದ್ದು ಇದೇ ಕುತಂತ್ರವನ್ನು.

ಸೆಪ್ಟಂಬರ್ 27, 1978 ರಂದು ಹೊಸಪೇಟೆ ಭಾಗದ ಭೂನ್ಯಾಯ ಮಂಡಳಿ ಕಂಪ್ಲಿ ಪ್ರವಾಸಿ ಮಂದಿರದಲ್ಲಿ ಜನರ ಸಭೆ ಸೇರಿಸಿ, ಈ ಗ್ರಾಮದ 12 ಮಾದಿಗರ ಕುಟುಂಬಗಳೂ ಒಳಗೊಂಡಂತೆ ಇನ್ನಿತರೆ ಕುರುಬರು, ಮುಸ್ಲೀಮರು, ಕಮ್ಮ, ರೆಡ್ಡಿ ಸಮುದಾಯದ 26 ಕುಟುಂಬಗಳಿಗೆ 229 ಎಕರೆಯಷ್ಟು ಜಮೀನು ಮಂಜೂರು ಮಾಡಿತ್ತು. ಆದರೆ ಭೂಮಾಲೀಕ ಭೀಮನೇನಿ ಕುಟುಂಬ ವರ್ಗವು ಭೂನ್ಯಾಯ ಮಂಡಳಿಯು ಹಂಚಿಕೆ ಮಾಡಿದ್ದ ಭೂಮಿಯನ್ನು ದಲಿತರಿಗೆ ಬಿಟ್ಟುಕೊಡಲೆ ಇಲ್ಲ. ಕಾರಣ ಭೂಮಿ ಪಡೆದ ಫಲಾನುಭವಿಗಳಲ್ಲಿ ಮಾದಿಗರು ಮೂರು ತಲೆಮಾರುಗಳಿಂದಲೂ ಇವರಲ್ಲಿ ಜೀತಗಾರರಾಗಿ ದುಡಿಯುತ್ತಿದ್ದರು. ಇವರ ಅನಕ್ಷರತೆಯನ್ನೇ ಬಂಡವಾಳ ಮಾಡಿಕೊಂಡು ಅವರನ್ನು ಅಜ್ಞಾನದಲ್ಲಿರಿಸಲಾಗಿತ್ತು. ಅಂತೆಯೇ ನಕಲಿ ಸಹಿ ಮಾಡಿ ಕೆಲವರ ಭೂಮಿಯನ್ನು ವಶಪಡಿಸಿಕೊಂಡಿದ್ದರು. ಇವರ ಕಿರುಕುಳಕ್ಕೆ ಕೆಲವು ಕುಟುಂಬಗಳು ನಗರಕ್ಕೆ ವಲಸೆ ಹೋಗಿದ್ದರು.

ಕಳೆದ 36 ವರ್ಷಗಳಿಂದಲೂ ಪ್ರಭುತ್ವವು ಭೀಮನೇನಿ ಕುಟುಂಬಕ್ಕೆ ರಕ್ಷಣೆಗೆ ನಿಂತ ಕಾರಣ ಇವರಿಂದ ನಿರಂತರವಾಗಿ ದೌರ್ಜನ್ಯಕ್ಕೆ ನಲುಗಿದ ದಲಿತರು ಭೂಮಿ ಕೇಳುವ ಮಾತು ದೂರವೆ ಉಳಿದಿತ್ತು. ಮೂರು ವರ್ಷದ ಹಿಂದೆ ಅಸಲಿಗೆ ತಮ್ಮ ಹೆಸರಲ್ಲಿ ಭೂಮಿ ಇದೆ ಎಂದು ತಿಳಿದದ್ದು ಕೂಡ ಆಕಸ್ಮಿಕ. ಜೀತಕ್ಕಿದ್ದ ದಲಿತರ ಮೂರನೇ ತಲೆಮಾರಿನ ಅಕ್ಷರಸ್ಥ ರಾಮಚಂದ್ರಪ್ಪ ಇದರ ರುವಾರಿ.
**
ಒಮ್ಮೆ 2013 ರಲ್ಲಿ ಭೀಮನೇನಿ ಕುಟುಂಬದವರೊಬ್ಬರು ಎಸ್ಸಿಲೋನಲ್ಲಿ ಟ್ರಾಕ್ಟರ್ ತೊಗೋಬೇಕು, ನೀನು ಸಹಿ ಮಾಡಬೇಕೆಂದು ರಾಮಚಂದ್ರಪ್ಪನನ್ನು ಕೇಳಿಕೊಂಡಿದ್ದಾರೆ. ಒಂದಷ್ಟು ಓದಲು ಗೊತ್ತಿರುವ ರಾಮಚಂದ್ರಪ್ಪನಿಗೆ ನನ್ನ ಸಹಿ ಯಾಕೆ ಎನ್ನುವ ಅನುಮಾನವೊಂದು ಕಾಡಿದೆ. ಹೀಗೆ ಬ್ಯಾಂಕ್ ಸಾಲಕ್ಕೆ ಸಹಿ ಹಾಕಲು ಹೋದಾಗ ಹೊಸಪೇಟೆಗೆ ಪಹಣಿಯೊಂದನ್ನು ಝೆರಾಕ್ಸ್ ಮಾಡಿಸಲು ರಾಮಚಂದ್ರಪ್ಪನ ಬಳಿ ಕೊಟ್ಟಿದ್ದಾರೆ. ಈ ಪಹಣಿಯಲ್ಲಿದ್ದ ಪಟ್ಟದಾರರ ಹೆಸರು ನೋಡಿದ ರಾಮಚಂದ್ರಪ್ಪನಿಗೆ ಮೈ ಬೆವರಿದೆ. ಸುಮಾರು 8 ಎಕರೆಯಷ್ಟು ಭೂಮಿ ತನ್ನ ತಂದೆ ಹೆಸರಲ್ಲಿದೆ. ಇದನ್ನು ಗಮನಿಸಿದ ರಾಮಚಂದ್ರಪ್ಪ ಉಪಾಯವಾಗಿ ಈ ಪಹಣಿಯ ಒಂದು ಪ್ರತಿಯನ್ನು ಝೆರಾಕ್ಸ್ ಮಾಡಿಸಿ ತನ್ನಲ್ಲಿ ಉಳಿಸಿಕೊಂಡು, ಉಳಿದಂತೆ ಸಾಲಕ್ಕೆ ಸಹಿ ಮಾಡಿ ಏನು ತಿಳಿಯದಂತೆ ಮನೆಗೆ ಮರಳಿದ್ದಾನೆ.

ಈ ಕ್ಷಣದಿಂದ ರಾಮಚಂದ್ರಪ್ಪನಿಗೆ ಕಣ್ಣಿಗೆ ನಿದ್ದೆಯಿಲ್ಲದೆ ತಮ್ಮ ಹೊಲದ ಚಿಂತೆ ಶುರುವಾಗಿದೆ. ನಮ್ಮದೇ ಹೊಲ, ನಮಗೇ ಗೊತ್ತಿಲ್ಲವಲ್ಲ ಎಂದು ಅಚ್ಚರಿಗೊಂಡಿದ್ದಾನೆ. ತಲೆಯಲ್ಲಿ ನೂರಾರು ಪ್ರಶ್ನೆಗಳು ಕಿಕ್ಕಿರಿದು ಆತನನ್ನು ಇನ್ನಿಲ್ಲದಂತೆ ಕಾಡಿವೆ. ಹೀಗಿರುವಾದ ತಾನು ಝೆರಾಕ್ಸ್ ಪಡೆದ ಪಟ್ಟದ ಮಾಹಿತಿಯ ಎಳೆ ಹಿಡಿದು ಗುಟ್ಟಾಗಿ ತಾಲೂಕು ಕಛೇರಿಯಲ್ಲಿ ಪರಿಶೀಲಿಸಿದಾದ ರಾಮಚಂದ್ರಪ್ಪ ಮತ್ತಷ್ಟು ಬೆಚ್ಚಿಬಿದ್ದಿದ್ದಾನೆ. ತನ್ನ ಕೇರಿಯ ದಲಿತರ ಹೆಸರಲ್ಲಿ ಇಷ್ಟೊಂದು ಭೂಮಿ ಇದ್ದರೂ ಯಾರಿಗೂ ಗೊತ್ತಿಲ್ಲ. ಈ ಪ್ರತೀ ವಿವರಗಳು ರಾಮಚಂದ್ರಪ್ಪನಲ್ಲಿ ಒಳಗೊಳಗೇ ಖುಷಿಯನ್ನೂ ದಿಗಿಲನ್ನೂ ಹುಟ್ಟಿಸಿವೆ. ನಮ್ಮದೇ ಹೆಸರಲ್ಲಿದ್ದ ಭೂಮಿಯನ್ನು ಮರಳಿ ಪಡೆಯುವುದು ಹೇಗೆ? ಬೀಮನೇನಿ ಕುಟುಂಬದವರ ವಶದಲ್ಲಿದ್ದ ಈ ಭೂಮಿಯನ್ನು ಹೇಗೆ ಬಿಡಿಸಿಕೊಳ್ಳುವುದು ಮುಂತಾಗಿ ವೈದಾಟ ಶುರುವಾಗಿದೆ.
srpura1

ಈ ನಡುವೆ ತಾನೊಬ್ಬನೇ ಫಲಾನುಭವಿಯಲ್ಲದೆ ಯಾರ ಹೆಸರಲ್ಲಿ ಹೊಲವಿತ್ತೊ ಅವರೆಲ್ಲರನ್ನು ಒಟ್ಟಾಗಿಸಲು ಪ್ರಯತ್ನಿಸಿದ್ದಾನೆ. ಗುಟ್ಟಾಗಿಯೇ ಎಲ್ಲರಲ್ಲಿಯೂ ಒಗ್ಗಟ್ಟಾಗಿಸುವ ಮಾತುಕತೆ ಮಾಡಿದ್ದಾನೆ. ಕೆಲವರು ರಾಮಚಂದ್ರಪ್ಪನ ಮಾತಿಗೆ ಒಪ್ಪಿದರೆ ಇನ್ನು ಕೆಲವರು ಹೆದರಿ ಹಿಂದೆ ಸರಿದಿದ್ದಾರೆ. ಆದರೆ ಎಲ್ಲರ ಎದೆಯೊಳಗೆ ಸ್ವಂತ ಹೊಲದ ಕನಸು ಚಿಗುರೊಡೆಯತೊಡಗಿದೆ. ಇಡೀ ಕೇರಿಯೆಂಬ ಕೇರಿಯೇ ಹಗಲು ರಾತ್ರಿ ಹೊಲದ್ದೇ ಚಿಂತೆಯಲ್ಲಿ ಹೈರಾಣಾಗಿದೆ. ಇಂತಹ ಹೊತ್ತಲ್ಲಿ ರಾಮಚಂದ್ರಪ್ಪ ಈ ಸಂಗತಿಯನ್ನು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾಗಿದ್ದ ಕರಿಯಪ್ಪ ಗುಡಿಮನಿ ಅವರಲ್ಲಿ ಹೇಳಿಕೊಂಡಿದ್ದಾರೆ. ಕರಿಯಪ್ಪ ದಾಖಲೆಗಳನ್ನು ಪರಿಶೀಲಿಸಿ ಇದೆಲ್ಲಾ ನಿಮ್ಮದೇ ಹೊಲ, ನಿಮ್ಮ ಹೊಲವನ್ನು ನಿಮಗೆ ಬಿಡಿಸಿಕೊಡಲು ಹೋರಾಟ ಮಾಡೋಣ ಎಂದು ತಿಳಿ ಹೇಳಿದ್ದಾರೆ.

ಕರ್ನಾಟಕ ಜನಶಕ್ತಿ ಸಂಘಟನೆಯ ಜತೆಗೂಡಿ ನಿರಂತರವಾಗಿ ಚಳವಳಿಯಲ್ಲಿ ತೊಡಗಿಸಿಕೊಂಡ ಕರಿಯಪ್ಪ ಗುಡಿಮನೆ ಈ ಸಂಗತಿಯನ್ನು ಜನಶಕ್ತಿ ಸಂಘಟನೆಯ ಶಿವಸುಂದರ್, ವಾಸು, ಮಲ್ಲಿಗೆ, ಕುಮಾರ ಸಮತಳ ಮೊದಲಾದವರೊಂದಿಗೆ ಚರ್ಚೆ ಮಾಡಿದ್ದಾರೆ. ಎಲ್ಲರೂ ಒಟ್ಟಾಗಿ ಈ ಹೋರಾಟವನ್ನು ರೂಪಿಸಲು ಕಾರ್ಯಯೋಜನೆಗಳನ್ನು ರೂಪಿಸಿದ್ದಾರೆ. ಹೀಗಾಗಿ ಬಳ್ಳಾರಿ ಕೊಪ್ಪಳ ಭಾಗದಲ್ಲಿದ್ದ ದಲಿತ ಪ್ರಗತಿಪರ ಸಂಘಟನೆಗಳನ್ನು, ಚಳವಳಿಗಾರರನ್ನೂ ಪತ್ರಕರ್ತ ಲೇಖಕರನ್ನೂ ಒಟ್ಟಾಗಿಸಿದ ಹೋರಾಟದ ಸಮಿತಿಯೊಂದನ್ನು ರೂಪಿಸಿದ್ದಾರೆ. ಪೂರ್ವ ತಯಾರಿಯನ್ನು ಮಾಡಿದ್ದಾರೆ. ಶ್ರೀರಾಮರಂಗಾಪುರದ ರೈತರಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿ ಗಟ್ಟಿಯಾಗಿ ನಿಲ್ಲುವ ವಾತಾವರಣವನ್ನು ರೂಪಿಸಿದ್ದಾರೆ.

ಸತತ ಎರಡು ವರ್ಷಗಳ ಕಾಲ ಜನರನ್ನು ಹೋರಾಟಕ್ಕೆ ಅಣಿಗೊಳಿಸಲಾಗಿದೆ. ಪತ್ರಿಕಾ ಗೋಷ್ಠಿಗಳನ್ನು ಮಾಡುತ್ತಾ, ಈ ವಿಷಯಕ್ಕಾಗಿ ಎಸ್.ಪಿ.,ಡಿ.ಸಿ., ಕಂದಾಯ ಇಲಾಖೆಗಳಿಗೆ ಅಲೆದಾಡಿ ಮನವಿಪತ್ರಗಳನ್ನು ಕೊಟ್ಟು ಸರಕಾರದ ಕಣ್ಣು ತೆರೆಯುವಂತೆ ಮಾಡಲಾಗಿದೆ. ಇದರ ಪ್ರತಿಫಲವಾಗಿ ಭೀಮನೇನಿ ಕುಟುಂಬಗಳ ವಿರುದ್ಧ ಭೂಮಿಯ ಫೋರ್ಜರಿ ಕೇಸನ್ನು ಒಳಗೊಂಡಂತೆ ಕಂಪ್ಲಿ ಪೋಲಿಸ್ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾದವು. ಆದರೂ ಪೋಲಿಸರ ಕುಮ್ಮಕ್ಕಿನಿಂದ ಬಂಧನವಾಗದೆ ಬೇಲ್ ಪಡೆದು ರಾಜಾರೋಷವಾಗಿ ತಿರುಗಾಡತೊಡಗಿದರು. ಹೀಗಾಗಿ ಇದರ ತಾರ್ಕಿಕ ಅಂತ್ಯದಂತೆ `ನಾಡಿನ ಪ್ರಜ್ಞಾವಂತರು, ಬುದ್ದಿಜೀವಿಗಳು ಪ್ರಗತಿಪರ ಸಂಘಟನೆಗಳು ಎಲ್ಲರೂ ಇವರ ಬೆಂಬಲಕ್ಕೆ ನಿಲ್ಲಬೇಕಿದೆಯಲ್ಲದೆ, ಇವರ ಪರವಾಗಿ ದ್ವನಿ ಎತ್ತಬೇಕಾಗಿದೆ. ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ’ ಎಂದು ಭೂಹೋರಾಟಕ್ಕೆ ಕರೆ ಕೊಡಲಾಯಿತು. ಈ ಹೋರಾಟದ ಶಕ್ತಿ ಮಂತ್ರವನ್ನಾಗಿ `ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆಯನ್ನು ಮುನ್ನಲೆಗೆ ತರಲಾಯಿತು.
**
ಅಂದು 29 ಜೂನ್ 2014. ನುಗ್ಗೇನಹಳ್ಳಿ-ಕೊಟ್ಟಾಲದಲ್ಲಿ ಚಾರಿತ್ರಿಕ ದಿನವೊಂದು ದಾಖಲಾಯಿತು. ಹೋರಾಟದ ಮುನ್ನಾದಿನ, ಊರಿನಲ್ಲಿ ಒಂದು ಬಗೆಯ ಆತಂಕ ದುಗುಡ ತುಂಬಿತ್ತು. ಕೇರಿಯ ಜನರಲ್ಲಿ ನಾಳೆ ಹೋರಾಟಕ್ಕೆ ಹೋಗಬೇಕೋ ಬೇಡವೋ ಎನ್ನುವ ಗೊಂದಲ ಮನೆ ಮಾಡಿತ್ತು. ಜಮೀನ್ದಾರಿ ಕುಟುಂಬ ಪರೋಕ್ಷವಾಗಿ ಹೋರಾಟಕ್ಕೆ ತಡೆಯೊಡ್ಡಬಹುದಾದ ಚಟುವಟಿಕೆಗಳಲ್ಲಿ ತೊಡಗಿತ್ತು. ಕೆಲವರು ಧಣಿಯನ್ನು ಎದುರು ಹಾಕಿಕೊಂಡು ಬದುಕುವುದು ಹೇಗೆ ಎಂಬ ಭಯದಲ್ಲಿ ಮುದುಡಿ ಕೂತಿದ್ದರೆ, ಮತ್ತೆ ಕೆಲವರು `ಇರೋದ್ ಒಂದ್ ದಿನ, ಸಾಯೋದ್ ಒಂದ್ ದಿನ’ ಎನ್ನುವ ದಿಟ್ಟ ನಿರ್ಧಾರವೊಂದಕ್ಕೆ ಮನಸ್ಸನ್ನು ಅಣಿಗೊಳಿಸಿ ಹೋರಾಟಕ್ಕೆ ಸಜ್ಜಾಗಿದ್ದರು.

ಆ ದಿನ ಎಂದಿನಂತೆಯೇ ಸೂರ್ಯ ಪೂರ್ವಕ್ಕೇ ಹುಟ್ಟಿದ್ದ. ಆದರೆ ಎಸ್.ಆರ್.ಪುರದ ಪಾಲಿಗೆ ಅಂದಿನ ಸೂರ್ಯ ಕ್ರಾಂತಿಸೂರ್ಯನಾಗಿದ್ದ. ಹೋರಾಟಕ್ಕೆ ಸಾವಿರಾರು ನದಿಗಳೆಂಬಂತೆ, ಎಲ್ಲೆಲ್ಲಿಂದಲೋ ನೂರಾರು ಜನರು ಎಸ್.ಆರ್.ಪುರಕ್ಕೆ ಬಂದಿಳಿದರು. ಹೋರಾಟಗಾರರು, ಅಧ್ಯಾಪಕರು, ಚಳವಳಿಗಾರರು, ಲೇಖಕರು, ಕವಿಗಳು, ವಿದ್ಯಾರ್ಥಿಗಳು, ಪತ್ರಕರ್ತರು, ಬೇರೆ ಬೇರೆ ಭಾಗದ ದಲಿತ ಯುವಕರು ಹೀಗೆ ನಾನಾ ಧಾರೆಗಳಿಂದ ಹರಿದು ಬಂದ ಜನರು ಊರಿನಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದಂತಿತ್ತು. ಇಡೀ ಊರು ನೆಬ್ಬೆರಗಾಗಿ ನೋಡಿತು. ಊರಿನ ಮೈ ನಡುಗುವಂತೆ ಮಾಡಿದ ದಲಿತ ಕೇರಿಯು ಮೇಲುಜಾತಿಯವರ ಕಂಗೆಣ್ಣಿಗೆ ಗುರಿಯಾಗಿತ್ತು. ಆದರೆ ಯಾರೊಬ್ಬರು ಉಸಿರು ಬಿಡುವಂತಿರಲಿಲ್ಲ. ಹೆಜ್ಜೆ ಹೆಜ್ಜೆಗೂ ಪೋಲಿಸರ ಕಣ್ಗಾವಲು. ನೆರೆದ ಜನರಲ್ಲಿ ಅರ್ಧದಷ್ಟು ಖಾಕಿದಾರಿಗಳೇ ಕಾಣುತ್ತಿದ್ದರು. ಬಂದ ಜನರಿಗೆ ಊರವರು ನೀರು ಕೊಡದಾದರು. ಮುಖ ಕೊಟ್ಟು ಮಾತನಾಡಲು ಹಿಂಜರಿದರು. ಕ್ಷಣ ಕ್ಷಣವೂ ಏನಾದರೂ ಘಟಿಸೀತೆಂದು ಊರವರಲ್ಲಿ ಒಂದು ಬಗೆಯ ಕುತೂಹಲ.

ಊರಾಚೆಯಿಂದ ಊರನ್ನು ಪ್ರವೇಶಿಸದೆ ಮೆರವಣಿಗೆ ಆರಂಭವಾಯಿತು. `ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆ ಎಲ್ಲರ ಎದೆಯೊಳಗಿಂದ ಮೊಳಗಿತು. ಊಳಬೇಕಿದ್ದ ಜಮೀನಿನತ್ತ ಹೆಜ್ಜೆಗಳು ಸಾಗತೊಡಗಿದವು. ಪ್ರತಿಹೆಜ್ಜೆಗಳು ಅರ್ಧಶತಮಾನದಷ್ಟು ಭೂಮಿಯನ್ನು ಆಕ್ರಮಿಸಿಕೊಂಡಿದ್ದ ಜಮೀನ್ದಾರಿಕೆಯ ಅಹಮ್ಮನ್ನು ತುಳಿದೇ ನಡೆದಂತಿತ್ತು. ಹೋರಾಟಕ್ಕೆ ಸಿಕ್ಕ ಬೆಂಬಲ ಇಡೀ ಊರಿನಲ್ಲಿ ವಿದ್ಯುತ್ ಸಂಚಾರವನ್ನು ಮೂಡಿಸಿತ್ತು. ಈ ಬೆಂಬಲದ ಶಕ್ತಿ ಸಂಚಲನೆ ಊರಿನ ದಲಿತ ಕೆಳಜಾತಿ ಯುವಕರಲ್ಲಿ ಎದ್ದು ಕಾಣುವಂತಿತ್ತು. ಅಂತೆಯೇ ಸ್ವತಃ ಭೂಮ್ತಾಯಿಯೇ ತನ್ನ ಮೂಲ ವಾರಸುದಾರರ ಬಳಿ ಸೇರಲು ಸಂಭ್ರಮದಲ್ಲಿದ್ದಂತೆ ನೆಲದ ಕಂಪನವಿತ್ತು.

ಆ ದಿನವನ್ನು ಚಳವಳಿಯ ಸಂಗಾತಿ ಬಿ.ಪೀರಬಾಷ ಅವರು ನೆನಪಿಸಿಕೊಳ್ಳುವುದು ಹೀಗೆ `ಜಮೀನಿನ ಮೇಲೆ ಹಕ್ಕು ಸಾದಿಸಲಾಯಿತೆಂಬ ಅರ್ಥದಲ್ಲಿ ನೇಗಿಲು ಹೂಡಬೇಕಿತ್ತು. ಆವರೆಗೂ ಕೂಲಿಕಾರರಾಗೇ ಬಾಳಿದ್ದ ಆ ರೈತರ ಬಳಿ ಎತ್ತುಗಳಿರಲಿಲ್ಲ. ಅವರ್ಯಾರೂ ಉಳ್ಳವರಲ್ಲದ್ದರಿಂದ ಯಂತ್ರದ ಉಳುಮೆಗೆ ಟ್ರ್ಯಾಕ್ಟರ್‍ಗಳೂ ಇರಲಿಲ್ಲ. ಬಾಡಿಗೆಗೂ ಕೇಳಿದರಂತೆ ಊರಲ್ಲಿ, ಧಣಿಗಳ ಭಯವಿತ್ತೋ ಏನೋ ಯಾರೂ ಕೊಡಲಿಲ್ಲ. ಕೊನೆಗೆ ಯುವಕರೇ ಕಟ್ಟಿಗೆಯ ನೇಗಿಲಿಗೆ ನೊಗಕಟ್ಟಿ ಕೊರಳು ಹೂಡಿದರು. ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆಯ ಬಲದಿಂದಲೇ ನೇಗಿಲೆಳೆದರು. ಬೀಳುಭೂಮಿ ಬಾಯಿಬಿಟ್ಟು ಸೂರ್ಯಕಿರಣಗಳ ನುಂಡಿತು. ಮಾಧ್ಯಮಗಳ ಕ್ಯಾಮೆರಾಗಳು ದೃಶ್ಯ ಸೆರೆಹಿಡಿದವು. ಯಾವ ಹೊತ್ತಿನಲ್ಲಿ ಏನಾಗುವುದೋ ಎಂಬ ದುಗುಡವಿತ್ತೇ ಹೊರತು ಕಳೆಯಂತೆ ಬೆಳೆದಿದ್ದ ಯಜಮಾನಿಕೆ ಕಿತ್ತುಹೋಯಿತು. ಅತೃಪ್ತ ಪೊಲೀಸರು ಫೊಟೋ ಕ್ಲಿಕ್ಕಿಸುತ್ತಲೇ ತಿರುಗಿದರು. ಸಮಾಧಾನವಾಗದೇ ಎಲ್ಲರ ಮುಖಗಳನ್ನೂ ಸಾಮಾನ್ಯವಾಗಿ, ಕೆಲವರ ಮುಖಗಳನ್ನು ವಿಶೇಷವಾಗಿ ರೆಕಾರ್ಡು ಮಾಡಿಕೊಂಡರು. ಪಾಪ ಅವರಿಗೇನು ಬೇಕಿತ್ತೋ, ಬಹುಶಃ ಅದು ಅವರಿಗೆ ಸಿಗಲೇ ಇಲ್ಲ. ಆದರೆ ಆ ಹೊತ್ತಿಗೆ ರೈತರು ತಮಗೆ ಬೇಕಾದದ್ದನ್ನು ಪಡೆದುಕೊಂಡಿದ್ದರು. ಅವರು ಕಳೆದುಕೊಳ್ಳುವುದೇನೋ ಇರಲಿಲ್ಲ. ಆ ಹೊತ್ತು ಊರಿಂದ ಪಲಾಯನಗೈದ ಜಮೀಂದಾರಿ ಯಾಜಮಾನ್ಯದ ‘ನಿರ್ಜೀವ ದೇಹದೊಳ ಪ್ರವೇಶಕ್ಕೆ ಆತನಕ ಬಿಟ್ಟುಹೋಗಿದ್ದ ಆತ್ಮವೆಂಬುದು ಹೊಸ್ತಿಲಬಳಿ ನಿಂತಿತ್ತು’. ಎನ್ನುತ್ತಾರೆ.

s.r.pura-4ಈ ಹೋರಾಟದಲ್ಲಿ ಭಾಗವಹಿಸಿದ್ದ ಕಾರಟಿಗಿಯ ಎ.ನರೇಂದ್ರ ಶೆಟ್ಟಿ ಅವರು `ಹೋರಾಟದ ಸ್ಥಳದಲ್ಲಿ ಕೇಳಿದ ಸಾಮಾಜಿಕ ಕಳಕಳಿಯ ಹಾಡುಗಳು, ಮಾತುಗಳು ಇಂದಿಗೂ ನನ್ನನ್ನು ರೋಮಾಂಚನಗೊಳಿಸುತ್ತಿವೆ. ನನ್ನ 27ವರ್ಷಗಳ ಜೀವನದಲ್ಲಿ ನಾನು ಮೊದಲ ಬಾರಿಗೆ ಪಾಲ್ಗೊಂಡಿದ್ದ ಈ ಹೋರಾಟ ನಿಜಕ್ಕೂ ಅದ್ಭುತ, ಅವಿಸ್ಮರಣೀಯ. ನನ್ನ ಜೀವನಕ್ಕೂ ಮುನ್ನುಡಿಯಾಗುವಂತೆ ನಾನು ಹೋರಾಟವನ್ನು ಇಂದಿಗೂ ಅವಲೋಕಿಸುತ್ತಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ. ಅಂದು ಬೆಂಗಳೂರಿನ ಹಿರಿಯ ಲೇಖಕರಾದ ಪ್ರೊ.ಶಿವರಾಮಯ್ಯ, ನಗರಿಬಾಬಯ್ಯ, ಶಿವಸುಂದರ್, ಡಾ.ವಾಸು, ಕುಮಾರ್ ಸಮತಳ, ಗೌರಿ, ಮಲ್ಲಿಗೆ, ಕೆ.ಎಲ್.ಅಶೋಕ, ನಗರಗೆರೆ ರಮೇಶ್, ಡಾ.ಲಕ್ಷ್ಮಿನಾರಾಯಣ, ಡಾ. ರತಿರಾವ್ ಮತ್ತು ಅನಂತಪುರದ ಜಾತಿ ನಿರ್ಮೂಲನ ಸಮಿತಿಯ ರಾಮಕುಮಾರ್ ವಕೀಲರು ಮತ್ತವರ ತಂಡ, ಸ್ಥಳೀಯವಾಗಿ ಕೊಪ್ಪಳದ ವಿಠ್ಠಪ್ಪ ಗೋರಂಟ್ಲಿ, ಬಿ.ಪೀರಭಾಷಾ, ಭಾರಧ್ವಜ, ಪಂಪಾರೆಡ್ಡಿ, ಎಸ್.ಎನ್.ಬಡಿಗೇರ್, ಪ್ರತಾಪ ರೆಡ್ಡಿ ಹೀಗೆ ನೂರಾರು ಚಳವಳಿಯ ಸಂಗಾತಿಯಳು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಈ ಹೋರಾಟದಲ್ಲಿ ಕೆಲವು ಮೂಲಭೂತ ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಮುಖ್ಯವಾಗಿ ಭೂನ್ಯಾಯ ಮಂಡಳಿ ಆದೇಶ ಪಾಲನೆ ಮಾಡದ ಅಧಿಕಾರಿಗಳ ವಿರುದ್ದ ಸೂಕ್ತ ಕಾರ್ಯಕ್ರಮ ತೆಗೆದುಕೊಳ್ಳುವುದು, 35 ವರ್ಷಗಳಿಂದ ದಲಿತರಿಗೆ ಭೂ ವಂಚನೆ ಮಾಡಿದ ಭೂಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜಾರಿಗೊಳಿಸುವುದು, ಭೂ ವಂಚಿತ ಎಲ್ಲಾ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡುವುದು, ಭೂ ನ್ಯಾಯಮಂಡಳಿಯ ಆದೇಶವನ್ನು ರಾಜ್ಯಾದ್ಯಂತ ಜಾರಿ ಮಾಡದೇ ನಿರ್ಲಕ್ಷ್ಯಿಸಿರುವ ಪ್ರಕರಣಗಳನ್ನು ಸರ್ಕಾರ ಪತ್ತೆಹಚ್ಚಿ ಫಲಾನುಭವಿಗಳಿಗೆ, ಭೂರಹಿತರಿಗೆ ಭೂಮಿ ನೀಡುವುದು ಎಂಬುದಾಗಿತ್ತು. ಈ ಚಳವಳಿ ಬದಲಾದ ರೈತ ಹೋರಾಟದ ಒಂದು ಮಾದರಿಯನ್ನು ಬಿಂಬಿಸುವಂತಿದೆ.

**
ಈ ಹೊತ್ತಿನ ಭೂ ಹೋರಾಟವನ್ನು ನೋಡುತ್ತಿದ್ದರೆ ಪಿ.ಲಂಕೇಶ್ ಅವರ ಮಾತು ಈಗಲೂ ಪ್ರಸ್ತುತವೆನ್ನಿಸುತ್ತದೆ. ಲಂಕೇಶರು ‘ಭೂಸುಧಾರಣೆ ಪ್ರಮಾಣಿಕವಾಗಿ ಜಾರಿಗೆ ಬಂದಿದೆ ಎಂದು ಇಟ್ಟುಕೊಂಡರೂ, ಕರ್ನಾಟಕದಲ್ಲಿ ಅವಿಭಕ್ತ ಕುಟುಂಬಗಳು, ಬೇನಾಮಿ ಸ್ವಾಮ್ಯ ಇತ್ಯಾದಿಗಳಿಂದಾಗಿ ದೊಡ್ಡ ಹಿಡುವಳಿದಾರ ರೈತರಿದ್ದಾರೆ. ಬಹುಸಂಖ್ಯಾತ ರೈತರು ಅಷ್ಟಿಷ್ಟು ಜಮೀನಿನ ಒಡೆತನ ಹೊಂದಿದ್ದಾರೆ. ಹಳ್ಳಿಯ ಸಂದರ್ಭದಲ್ಲಿ ಭೂಸ್ವಾಮ್ಯ ಪಡೆದ ರೈತರು ಇತರಿಗಿಂತ ಸ್ವಲ್ಪ ನೆಮ್ಮದಿ ಮತ್ತು ಪ್ರಭಾವ ಹೊಂದಿದವರು. ಹಳ್ಳಿಯಲ್ಲಿ ಶಿಕ್ಷಣ ಪಡೆದು ನಗರದತ್ತ ಹೋದ ಬಹುಪಾಲು ಹುಡುಗರು ಕೂಡ ಇಂಥ ರೈತ ಕುಟುಂಬದವರು. ಈ ರೈತ ಕುಟುಂಬದವರೇ ರಾಜಕೀಯವಾಗಿ ಕೂಡ ಸ್ಥಾನಮಾನಗಳನ್ನು ಗಳಿಸಿರುವವರು. ಇವತ್ತು ರೈತರು ತಮ್ಮ ಸಂಘಗಳನ್ನು ರೂಪಿಸಿಕೊಂಡು ಸರ್ಕಾರದ ಎದುರು ನಿಂತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅದಕ್ಕೆ ಕಾರಣ ಕೂಡ ಭೂಸ್ವಾಮ್ಯ ಹೊಂದಿದ ರೈತರ ಸ್ಥಿತಿವಂತಿಕೆ’ ಎನ್ನುತ್ತಾರೆ. ಈ ಮಾತು ಕರ್ನಾಟಕದ ಭೂಹೋರಾಟಗಳನ್ನು ಅರ್ಥಮಾಡಿಕೊಳ್ಳಲು ಈಗಲೂ ನೆರವಾಗುತ್ತದೆ.

ಹಾಗೆ ನೋಡಿದರೆ ಭೂಮಿಗಾಗಿ ರೈತರು ಮಾಡಿದ ಹೋರಾಟಗಳಿಗೆ ಕರ್ನಾಟಕದಲ್ಲಿ ಒಂದು ಪರಂಪರೆಯೇ ಇದೆ. 1683ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ ಎದುರು ಭೂತೆ ರಿಗೆಯ ಹೇರಿಕೆ ವಿರೋದಿsಸಿ ನಡೆದ ಹೋರಾಟದಿಂದ, ಈ ಹೊತ್ತಿನ ಶ್ರೀರಾಮರಂಗಾಪುರದ ಭೂ ಹೋರಾಟದವರೆಗೆ ಅದರ ಹರವು ದೊಡ್ಡದು. ಮೊದಲ ಹಂತದ ಹೋರಾಟಗಳು ಭೂಮಿಯ ತೆರಿಗೆ, ಕಂದಾಯ, ಗೇಣಿಯನ್ನು ವಿರೋದಿsಸಿ ನಡೆದವು. 1947ರ ಈಚೆಗೆ ಭೂಮಿಯನ್ನು ಪಡೆಯುವ ಹಕ್ಕಿಗಾಗಿ, ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಉಳುವವನೆ ಭೂ ಒಡೆಯ ಎನ್ನುವ ನೆಲೆಯಲ್ಲಿ ಹೋರಾಟಗಳಾದವು. 1970 ರ ನಂತರ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಜಾರಿಗೆ ತಂದ `ಉಳುವವನೆ ಭೂ ಒಡೆಯ’ ಎಂಬ ಕ್ರಾಂತಿಕಾರಿ ಯೋಜನೆಯ ಅನುಷ್ಠಾನದ ಕುರಿತಂತೆ ಹೋರಾಟಗಳಾದವು.

srpura1ಕರ್ನಾಟಕದ ಭೂಹೋರಾಟಗಳ ಮೇಲೆ ಭಾರತದ ಇತರೆ ಕಡೆಗಳಲ್ಲಿ ಆದ ಮಾಪಿಳ್ಳೆ ದಂಗೆಗಳು, ಬಾರ್ಡೋಲಿ ಸತ್ಯಾಗ್ರಹ, ವಾರಲಿ ಆದಿವಾಸಿಗಳ ಹೋರಾಟ, ಆಂಧ್ರದ ತೆಲಂಗಾಣ ಹೋರಾಟಗಳ ಪರಿಣಾಮವಾಗಿತ್ತು. ಭೂಮಾಲಿಕಶಾಹಿಯನ್ನು ನಾಶಗೊಳಿಸಬೇಕೆಂಬ ಕಮ್ಯುನಿಸ್ಟರು, ಆರ್ಥಿಕ ಸ್ವಾತಂತ್ರ್ಯದ ಮೂಲಕ ಸಮಾಜವಾದಿ ಸಮಾಜ ನಿರ್ಮಿಸಬೇಕೆಂಬ ಸೋಷಲಿಸ್ಟರು, ರೈತರ ಬಗ್ಗೆ ಆಳುವ ಸರ್ಕಾರದ ನಿರ್ಲಕ್ಷ್ಯ ವಿರೋದಿsಸಿ ರೈತ ಸಂಘದವರು ಬೇರೆ ಬೇರೆ ಆಯಾಮಗಳಲ್ಲಿ ರೈತ ಹೋರಾಟಗಳನ್ನು ರೂಪಿಸಿದರು.
ಈ ಹೊತ್ತಿನಲ್ಲಿ ರೈತ ಹೋರಾಟವನ್ನು ಅಧ್ಯಯನ ಮಾಡುವುದೆಂದರೆ ಭೂತದ ಮೂಲಕ ವರ್ತಮಾನವನ್ನು ಕಟ್ಟಿಕೊಳ್ಳುವ ಕಾಣ್ಕೆಗಳನ್ನು ಪಡೆಯುವುದು ಎಂದೇ ಅರ್ಥ. ನಡೆದಿದೆ ಎನ್ನಲಾಗುವ ಭೂಹೋರಾಟದ ಕಥನ ವರ್ತಮಾನದ ಕಥನವು ಕೂಡ. ಕರ್ನಾಟಕದಲ್ಲಿ ನಡೆದ ಭೂ ಹೋರಾಟಗಳ ಸಂಖ್ಯೆಗೆ ಹೋಲಿಸಿದರೆ ಆ ಕುರಿತು ನಡೆದ ಅಧ್ಯಯನಗಳು ತುಂಬ ಕಡಿಮೆ. ಹೆಚ್ಚಿನವು ಮಾಹಿತಿ ಪ್ರಧಾನವಾಗಿವೆ. ಹೋರಾಟದಲ್ಲಿ ಭಾಗವಹಿಸಿದವರು ಆತ್ಮಕಥನ ಮಾದರಿಯಲ್ಲಿ ನಿರೂಪಿಸುವ ಇನ್ನೊಂದು ಕ್ರಮವಿದೆ. ಅದು ಕನ್ನಡದಲ್ಲಿ ಪ್ರಯೋಗವಾದದ್ದು ಕಡಿಮೆ.

ಮಹಾರಾಷ್ಟ್ರದಲ್ಲಿ ಆದಿವಾಸಿಗಳ ಬದುಕಿನ ಭಾಗವಾಗಿ ಭೂಹೋರಾಟ ಸಂಘಟಿಸಿದ್ದ ಗೋದಾವರಿ ಪರುಳೇಕಾರರ ಕಥನವನ್ನು (‘ಮಾನವ ಎಚ್ಚೆತ್ತಾಗ’) ಈ ನೆಲೆಯಲ್ಲಿ ನೋಡಬಹುದು.
ಹೋರಾಟ ನಡೆದ ಕಾಲಘಟ್ಟದ ಆಸುಪಾಸಿನವರು ಹೋರಾಟದಲ್ಲಿ ಭಾಗವಹಿಸಿದವರನ್ನು ಸಂದರ್ಶಿಸಿ, ಪತ್ರಿಕಾ ಬರಹ, ಕರಪತ್ರ ಮುಂತಾದ ಆಕರಗಳನ್ನು ಬಳಸಿಕೊಂಡು ಒಂದು ಹೋರಾಟದ ಚರಿತ್ರೆಯನ್ನು ಕಟ್ಟುವ ಕ್ರಮ ಜನಪ್ರಿಯವಾಗಿದೆ. ಈ ನೆಲೆ ಕನ್ನಡದಲ್ಲಿ ಹೆಚ್ಚು ಬಳಕೆಯಾಗಿದೆ. ಇಂತಹ ನೆಲೆಯಲ್ಲಿಯೆ ವರ್ತಮಾನದ ಎಚ್ಚರಗಳ ಮೂಲಕ ಗತವನ್ನು ಪರಿಶೀಲಿಸುವ ಒಂದು ಮಾದರಿಯಿದೆ. ಕನ್ನಡದಲ್ಲಿ ಜಿ.ರಾಜಶೇಖರ ಅವರು ‘ಕಾಗೋಡು ಸತ್ಯಾಗ್ರಹ’ ಎಂಬ ತಮ್ಮ ಕೃತಿಯಲ್ಲಿ ಇಂತಹ ಪ್ರಯೋಗವನ್ನು ಮಾಡಿದ್ದಾರೆ. ಇದು ಭೂಹೋರಾಟದ ಅಧ್ಯಯನಗಳಿಗೆ ಒಂದು ಮಾದರಿ ಕೃತಿಯಾಗಿದೆ.

ಒಂದು ಭೂ ಹೋರಾಟವನ್ನು ಅದರ ವರ್ತಮಾನದ ಪರಿಣಾಮಗಳ ಮೂಲಕ ನೋಡುವ, ಹೋರಾಟ ಸಂದರ್ಭದ ರಾಜಕೀಯ, ಸಾಂಸ್ಕøತಿಕ, ಸಾಮಾಜಿಕ ಪರಿದಿsಯಲ್ಲಿಟ್ಟು ಪರೀಕ್ಷಿಸುವ, ಶುದ್ಧ ರಾಜಕೀಯ ಚರಿತ್ರೆಯ ಕಥನವನ್ನಾಗಿಸುವ, ಮಾಹಿತಿಯೊಂದಿಗೆ ಸರಿದೂರವನ್ನು ನಿರ್ಮಿಸಿಕೊಂಡು ವಿಶ್ಲೇಷಿಸುವ, ಒಂದು ಕಾಲಘಟ್ಟದ ಸಾಂಸ್ಕøತಿಕ ಕಥನವನ್ನಾಗಿಸುವ ಮೂಲಕ ಗತ ವರ್ತಮಾನವನ್ನು ಬೆಸೆಯುವ ಸೂಕ್ಷ್ಮತೆಯಲ್ಲಿ ಒಂದು ಹೋರಾಟವನ್ನು ದಾಖಲಿಸುವ ತುರ್ತು ಈ ಕಾಲಕ್ಕಿದೆ. ಇಂದಿನ ಭೂ ಹೋರಾಟಗಳನ್ನು ಕೂಡ ಹೀಗೆ ಕಾಲಕಾಲಕ್ಕೆ ದಾಖಲಿಸುವ ಅಗತ್ಯವಿದೆ.

-ಬರಹಕ್ಕೆ ಮಾಹಿತಿ ಒದಗಿಸಿದ ಕರಿಯಪ್ಪ ಗುಡಿಮನಿ, ರಾಮಚಂದ್ರಪ್ಪ, ಪಂಪರೆಡ್ಡಿ, ಕುಮಾರ ಸಮತಳ, ಪೀರ್ ಭಾಷಾ ಅವರಿಗೆ ಕೃತಜ್ಞತೆಗಳು
ಚಿತ್ರಗಳು: ಪಂಪರೆಡ್ಡಿ.

ಅಪರಾಧಿ ಗುರುತಿನ ಪೊರೆ ಕಳಚುತ್ತಿರುವ ಗಂಟಿಚೋರರು.


--ಅರುಣ್ ಜೋಳದಕೂಡ್ಲಿಗಿ

ಸ್ವತಂತ್ರ್ಯ ಬಂದು 69 ವರ್ಷವಾದರೂ ಕೆಲವು ಚಿಕ್ಕಪುಟ್ಟ ಸಮುದಾಯಗಳ ಸಮಗ್ರ ಮಾಹಿತಿ ಅಲಭ್ಯವಾಗಿದೆ. ಹೀಗೆ ಸಮುದಾಯಗಳ ಸರಿಯಾದ ಮಾಹಿತಿಗಳೇ ಅಲಭ್ಯವಾದಾಗ ಸರಕಾರ ಅಥವಾ ಪ್ರಭುತ್ವಗಳು ಕೈಗೊಳ್ಳುವ ಜನಕಲ್ಯಾಣದ ಯೋಜನೆಗಳು ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ಇಂದು ಬದಲಾದ ಕಾಲಘಟ್ಟದ ಸೆಳೆತಕ್ಕೆ ಸಿಕ್ಕಿ ಅಲ್ಪಸಂಖ್ಯಾತ ಸಮುದಾಯಗಳು ತಬ್ಬಲಿತನವನ್ನು ಅನುಭವಿಸುತ್ತಾ ಅನಾಥ ಪ್ರಜ್ಞೆಯಲ್ಲಿ ಬದುಕುತ್ತಿವೆ. ಇಂತಹ ಸಂದರ್ಭದಲ್ಲಿ ಸಮುದಾಯಗಳು ಪ್ರಜಾಪ್ರಭುತ್ವದ ಬಗೆಗೆ ಭರವಸೆ ಇಲ್ಲದೆ ತಮ್ಮ ಪಾಡಿನ ಬದುಕೇ ನಿಜವೇನೋ ಎನ್ನುವ ಸ್ಥಿತಿಗೂ ಬಂದಿವೆ. ಹಾಗಾಗಿ ಸಮುದಾಯಗಳ ಅಧ್ಯಯನ ಪರೋಕ್ಷವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗೆ ಜನರಲ್ಲಿ ಹೊಸ ಭರವಸೆ ಮೂಡಿಸುವ ಭಾಗವೂ ಆಗಿದೆ.
ಸಿರಿವಂತರ ಉಡುಪಿನಲ್ಲಿ ಭಾಮ್ಟಾ(ಗಂಟಿಚೋರ್) ಸಮುದಾಯದ ಸದಸ್ಯರು. 1908 ರಲ್ಲಿ ಎಂ.ಕೆನಡಿಯವರು ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ ಚಿತ್ರ

ಸಿರಿವಂತರ ಉಡುಪಿನಲ್ಲಿ ಭಾಮ್ಟಾ(ಗಂಟಿಚೋರ್) ಸಮುದಾಯದ ಸದಸ್ಯರು. 1908 ರಲ್ಲಿ ಎಂ.ಕೆನಡಿಯವರು ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ ಚಿತ್ರ


ಈ ಹಿನ್ನೆಲೆಯಲ್ಲಿ ಇಂತಹ ತಬ್ಬಲಿ ಸಮುದಾಯಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ಅವರಲ್ಲಿ ಹೊಸ ಚೈತನ್ಯವನ್ನು ತುಂಬುವಂತೆ ಸಮುದಾಯ ಅಧ್ಯಯನಗಳು ನಡೆಯಬೇಕಾಗಿದೆ. ಅಂತೆಯೇ ನಾವು ಸಮುದಾಯಗಳನ್ನು ಎದುರಾಗುವಾಗ ಹುಟ್ಟುವ ಪ್ರಶ್ನೆಗಳೂ ಬದಲಾಗಿದೆ. ಆಧುನಿಕ ಶ್ರೇಣೀಕರಣದ ತರತಮದ ವ್ಯವಸ್ಥೆಗಳಿಗೆ ಪೂರಕವಾಗಿ ಸಮುದಾಯಗಳಲ್ಲೂ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸ್ಥಿತಿಗತಿಗಳಲ್ಲಿ ಹಲಬಗೆಯ ಏರಿಳಿತಗಳು ಸಂಭವಿಸಿದೆ. ಹಾಗಾಗಿ ಇಂದು ಸಮುದಾಯಗಳನ್ನು ಅಧ್ಯಯನ ಮಾಡುವವರು ಅವನ್ನು ಏಕರೂಪಿ ಆಕೃತಿಯನ್ನಾಗಿ ನೋಡುವಂತಿಲ್ಲ. ಯಾವೊಂದು ಸಂಗತಿಯನ್ನು ಇಡೀ ಸಮುದಾಯಕ್ಕೆ ಅನ್ವಯಿಸಿ ದುಂಡಾಗಿ ಗ್ರಹಿಸುವಂತಿಲ್ಲ.

ಕರ್ನಾಟಕದ ಸಂದರ್ಭದಲ್ಲಿನ ಸಮುದಾಯಗಳ ಅಧ್ಯಯನ ವಸಾಹತುಶಾಹಿ ರೂಪಿಸಿದ ಮಾದರಿಯ ಪ್ರಭಾವದಿಂದ ಸಂಪೂರ್ಣ ಬಿಡಿಸಿಕೊಂಡಿಲ್ಲ. ಹಾಗಾಗಿ ಸಮುದಾಯ ಅಧ್ಯಯನಗಳನ್ನು ಮಾಹಿತಿಗಳ ಆಕರವೆಂಬಂತೆ ಬಡಕಲಾಗಿಯೂ, ಕೃತಕವಾಗಿಯೂ ನಿರ್ಜೀವ ವಸ್ತುಸಂಗತಿಗಳಂತೆ ಮಂಡಿಸಲಾಗುತ್ತಿದೆ. ಈ ಬಗೆಯ ಅಧ್ಯಯನಗಳಲ್ಲಿ ಸಮುದಾಯದ ಜೀವಂತಿಕೆ ಗೈರುಹಾಜರಾಗಿರುತ್ತದೆ. ಇಂತಹ ಮಿತಿಯನ್ನು ಮೀರುವ ಸಣ್ಣ ಪ್ರಯತ್ನವನ್ನು ಈ ಸಂಶೋಧನೆಯಲ್ಲಿ ಮಾಡಲಾಗಿದೆ.
**
ಉತ್ತರ ಕರ್ನಾಟಕದ ಬೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿರುವ ಗಂಟಿಚೋರ್ಸ್ ಸಮುದಾಯ ದೇಶವ್ಯಾಪಿ ಹರಡಿಕೊಂಡಿದೆ. ಉಚಲ್ಯಾ, ಭಾಮ್ಟಾ, ಠಕಾರಿ ಭಾಮ್ಟಾ, ಠಕಾರಿ, ಗುನ್ಹೆಗಾರ, ವಡ್ಡರ್, ಗಿರಣಿ ವಡ್ಡರ್, ಕಿಸೆ ಕತ್ರಾಸ್, ಕಳ್ಳವಡ್ಡರ್, ತುಡುಗುವಡ್ಡರ್, ಪಾತ್ರೂಟ್ ಹೀಗೆ ಬಹುರೂಪದಲ್ಲಿ ಸಮಾನಾಂತರ ಹೆರರುಗಳೊಂದಿಗೆ ಈ ಸಮುದಾಯ ನೆಲೆಸಿದೆ. ಈ ಎಲ್ಲಾ ಹೆಸರುಗಳ ಒಳಗಿರುವ ಎಳೆ `ತುಡುಗು’ ಅಥವಾ `ಕಳ್ಳತನ’ `ಲೂಟಿ’ಯಾಗಿದೆ. ಇದು ಸಂಪತ್ತಿನ ಅಸಮಾನ ಹಂಚಿಕೆಯ ಕೊರತೆಯ ಬಿಂದುವಿನಲ್ಲಿ ಸಮುದಾಯಗಳ ಒಳಗಿಂದ ಹುಟ್ಟಿದ `ಪ್ರತಿರೋಧ’ದ ಒಂದು ಮಾದರಿ.

ಬ್ರಿಟಿಷ್ ಆಡಳಿತದಿಂದಾಗಿ ಸ್ಥಳೀಯ ಸಂಸ್ಥಾನಿಕ ರಾಜರುಗಳ ಸೈನ್ಯದಿಂದ ವಿಸರ್ಜಿತಗೊಂಡ ಸೈನಿಕ ಸಮುದಾಯಗಳು ಬದುಕಲು ಹಲವು ಮಾರ್ಗಗಳನ್ನು ಅನುಸರಿಸಿದವು. ಹಾಗಾಗಿ ಸೈನ್ಯದಲ್ಲಿ ಸಂಪತ್ತನ್ನು ಲೂಟಿ ಮಾಡುತ್ತಿದ್ದ ಸೈನಿಕರು ಈ ಲೂಟಿಯನ್ನು ಹೊಟ್ಟೆಪಾಡಿಗಾಗಿ ತಮ್ಮೆದುರಿಗಿದ್ದ ಶ್ರೀಮಂತ ಜಮೀನ್ದಾರರ ಮೇಲೆ ಪ್ರಯೋಗಿಸಿದರು. ಇದು ಕಾಲಾನಂತರ `ತುಡುಗು’ `ಕಳ್ಳತನ’ `ಲೂಟಿ’ಯಾಗಿ ಬದಲಾಯಿತು. ಇವರು ಉತ್ತರಭಾರತದಲ್ಲಿ ಹಲವು ಹೆಸರುಗಳುಳ್ಳ ಠಕ್ಕರಾದರೆ, ದಕ್ಷಿಣ ಭಾರತದಲ್ಲಿ ಭಾಮ್ಟಾ, ಠಕಾರಿ ಭಾಮ್ಟಾ, ಉಚಲ್ಯಾ, ಗಂಟಿಚೋರ್ ಆಗಿ ಗುರುತಿಸಿಕೊಂಡರು. ಈ ಎಲ್ಲರನ್ನೂ ದೇಶವ್ಯಾಪಿ ಬೆಸೆಯುವ ಎಳೆಯೆಂದರೆ ಇವರೆಲ್ಲಾ `ಶಾಕ್ತಪಂಥ’ದ ಆರಾಧಕರಾಗಿದ್ದು `ಶಾಕ್ತೇಯ’ ಸಮುದಾಯವಾಗಿರುವುದು.
ಭಾರತದ ಚರಿತ್ರೆಯಲ್ಲಿ 18 ನೇ ಶತಮಾನ ಠಕ್ಕರ ಲೂಟಿ ಕೊಲೆ ಸುಲಿಗೆ ಮುಂತಾದವುಗಳ ಭಯಭೀತ ಅಧ್ಯಾಯವಾಗಿದೆ. ಈ ಹಿನ್ನೆಲೆಯ ಒಂದೆಳೆ ಕರ್ನಾಟಕದಲ್ಲಿ ನೆಲೆಸಿದ ಗಂಟಿಚೋರರ ಜತೆ ತಳಕು ಹಾಕಿಕೊಂಡಿದೆ. ಆದರೆ ಗಂಟಿಚೋರರ ಹೆಸರಲ್ಲೇ `ಗಂಟುಕಳ್ಳರು’ ಎಂದಿರುವುದು ಇವರ ಕಳ್ಳತನದ ಸ್ವರೂಪವನ್ನು ಕಾಣಿಸುತ್ತದೆ. ಹೀಗಾಗಿಯೇ ಇವರನ್ನು ಸಂತೆಕಳ್ಳರೂ ಎಂದೂ ಕರೆಯುತ್ತಿದ್ದರು. ಇವರದು ಉತ್ತರಭಾರತದ ಠಕ್ಕರಂತೆ ಬೃಹತ್ ಜಾಲವಾಗಿರದೆ ಸಣ್ಣಪುಟ್ಟ ಕಳ್ಳತನದಲ್ಲಿ ತೊಡಗಿಕೊಂಡ ಹೊಟ್ಟೆಪಾಡಿನ ಕಳ್ಳರಾಗಿದ್ದರು. ಸಂತಕವಿ ಕನಕರು `ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎನ್ನುವಂತೆ ಗಂಟಿಚೋರರು ಕಳ್ಳತನ ಮಾಡಿ ಹೊಟ್ಟೆತುಂಬಿಸಿಕೊಂಡವರು. ಚಾರಿತ್ರಿಕವಾಗಿ ಗಂಟಿಚೋರರು ಸೈನಿಕ ಸಮುದಾಯವಾಗಿದ್ದರು ಎನ್ನುವ ಬಗ್ಗೆ ಪುರಾವೆಗಳೊಂದಿಗೆ ಸಂಶೋಧನೆಯಲ್ಲಿ ಚರ್ಚಿಸಲಾಗಿದೆ.

ಗಂಟಿಚೋರ್ ಇದು ಕರ್ನಾಟಕದಲ್ಲಿ ಮಾತ್ರ ವಿಶೇಷವಾಗಿ ಕಂಡುಬರುವ ಹೆಸರು. ಈ ಹೆಸರಿನಿಂದ ಗುರುತಿಸಲ್ಪಟ್ಟ ಸಮುದಾಯವೊಂದು (ಮುಂಬೈಕರ್ನಾಟಕ ಪ್ರದೇಶದಲಿ)್ಲ ಉತ್ತರ ಕರ್ನಾಟಕದ ಬೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿದೆ. ಅಂತೆಯೇ ಈ ಸಮುದಾಯದಲ್ಲಿನ `ಪಾಪನೋರು’ ಎನ್ನುವ ಕುಲದ ಹಿನ್ನೆಲೆಯ ಬೆನ್ನತ್ತಿದರೆ, ಈ ಭೌಗೋಳಿಕ ಪರಿಸರದಲ್ಲಿ ಕನಿಷ್ಠ 9-10 ನೇ ಶತಮಾನದಿಂದಲೂ ಈ ಸಮುದಾಯದ `ಪಾಪನೋರು’ ಕುಲದವರು ನೆಲೆಸಿರಬೇಕು ಅನ್ನಿಸುತ್ತದೆ. ಇದಕ್ಕೆ ವಡ್ಡಾರಾಧನೆ, ಧರ್ಮಾಮೃತ ಕೃತಿಗಳಲ್ಲಿ ಬರುವ ಕಳ್ಳರ ಕಥೆಗಳು ಸಾಕ್ಷಿಯಂತಿವೆ. ಈ ಸಂಶೋಧನೆಯಲ್ಲಿ ಸಮುದಾಯದ ಶೇ 90 ರಷ್ಟು ಮನೆಗಣತಿ ಮಾಡಿ ಖಚಿತ ಅಂಕೆಸಂಖ್ಯೆಗಳನ್ನು ದಾಖಲಿಸಲಾಗಿದೆ. ಸಧ್ಯಕ್ಕೆ ಕರ್ನಾಟಕದ 7 ಜಿಲ್ಲೆಯ 19 ತಾಲೂಕಿನ 36 ನೆಲೆಗಳಲ್ಲಿ ನೆಲೆಸಿದ ಗಂಟಿಚೋರ್ಸ್ ಸಮುದಾಯದ ಒಟ್ಟು ಜನಸಂಖ್ಯೆ 5826 (ಗಂ-2892, ಹೆ-2934) ರಷ್ಟಿದೆ. ಗಂಟಿಚೋರರ ಗಂಡಸರಿಗಿಂತ 42 ಮಹಿಳೆಯರು ಹೆಚ್ಚಿರುವುದು ವಿಶೇಷವಾಗಿದೆ.

**
ಮುಖ್ಯವಾಗಿ ಗಂಟಿಚೋರ್ಸ್ ಸಮುದಾಯ ಐಡೆಂಟಿಟಿ ಪ್ರಶ್ನೆಯನ್ನು ಎದುರಿಸುತ್ತಿದೆ. 1950ರ ಬಾಂಬೆ ಸರಕಾರದ ಸಮುದಾಯಗಳ ಪಟ್ಟಿಯಲ್ಲಿ ಗಂಟಿಚೋರ್ಸ್ ಮತ್ತು ಅದರ ಸಮನಾಂತರ ಪದಗಳಾದ ಭಾಮ್ಟಾ, ಟಕಾರಿ, ಉಚಲ್ಯಾ, ಗಿರಣಿವಡ್ಡರ್, ತುಡುಗು ವಡ್ಡರ್, ಪಾತ್ರೂಟ್‍ನ್ನು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರಿಸಿತು. 1975 ರಲ್ಲಿ ಕರ್ನಾಟಕ ಸರಕಾರವು ಹಿಂದುಳಿದ ಬುಡಕಟ್ಟುಗಳ ಪಟ್ಟಿಯಲ್ಲಿ ಗಂಟಿಚೋರ್, ಉಚಲ್ಯಾ, ಭಾಮ್ಟಾ, ಟಕಾರಿ, ಗಿರಣಿವಡ್ಡರ್, ತುಡುಗುವಡ್ಡರ್ ಪದಗಳನ್ನು ಒಂದೇ ಗುಂಪಿಗೆ ಸೇರಿಸಿ, ಆಗ ಪಾತ್ರೂಟ್ ಒಂದನ್ನು ಕೈಬಿಡಲಾಯಿತು.

ಹೀಗಿರುವಾಗ ಕರ್ನಾಟಕ ಸರಕಾರವು 1976 ರಲ್ಲಿ ಮಾಡಿದ ಪರಿಶಿಷ್ಠ ಜಾತಿ, ಪಂಗಡದ ಪಟ್ಟಿಯಲ್ಲಿ `ಗಂಟಿಚೋರ್ಸ್’ನ್ನು ಪರಿಶಿಷ್ಟಜಾತಿಗೆ ಸೇರಿಸಿ ಅದರ ಸಮಾನಂತರ ಪದಗಳನ್ನು ಕೈಬಿಡಲಾಯಿತು. ಕಾರಣ ಒಂದೇ ಸಮುದಾಯಕ್ಕೆ ಸೇರಿದ ಭಾಮ್ಟಾ, ಉಚಲ್ಯ, ವಡ್ಡರ್, ತುಡುಗ ವಡ್ಡರ್, ಗಿರಣಿ ವಡ್ಡರ್, ಟಕಾರಿ, ಪಾತ್ರೂಟ್ ಹೊರಗುಳಿದು ತಬ್ಬಲಿಗಳಾದವು. ಮುಂದೆ ಕರ್ನಾಟಕ ಸರಕಾರವು 1986 ರಲ್ಲಿ ಇಂದುಳಿದ ವರ್ಗಗಳನ್ನು ಎ.ಬಿ.ಸಿ.ಡಿ.ಇ ಎಂದು ವಿಭಾಗಿಸಿ, `ಎ’ ಗುಂಪಿನಲ್ಲಿ ಭಾಮ್ಟಾ, ಟಕಾರಿ, ಉಚಲ್ಯಾ ಒಂದು ಗುಂಪಾಗಿಯೂ, ವಡ್ಡರ್, ಬೋವಿ ಜಾತಿಯ ಸಮಾನಾಂತರ ಪದಗಳಾಗಿ ಗಿರಣಿ ವಡ್ಡರ್, ತುಡುಗು ವಡ್ಡರ್ ಪದಗಳನ್ನು ಸೇರಿಸಿತು. ಇಲ್ಲಿ ಸ್ಪಷ್ಟವಾಗಿ `ಗಂಟಿಚೋರ್ಸ್’ನ್ನು ಪ್ರತ್ಯೇಕವಾಗಿಸಿತು. ಆಗ ಪಾತ್ರೂಟ್ ದಾಖಲೆಯೂ ಆಗದೆ ಇಲ್ಲವಾಯಿತು.

1994 ರಲ್ಲಿ ಕರ್ನಾಟಕ ಸರಕಾರದ ಹಿಂದುಳಿದ ವರ್ಗದ ಸುಧಾರಿತ ಪಟ್ಟಿಯಲ್ಲಿ ಭಾಮ್ಟಾ, ಟಕಾರಿ, ಉಚಲ್ಯಗಳನ್ನು ಒಂದು ಗುಂಪಾಗಿಯೂ, ಬೋವಿ ಅಥವಾ ಬೋಯಿಯ ಸಮನಾಂತರ ಗುಂಪಾಗಿ ಗಿರಣಿವಡ್ಡರ್, ತುಡುಗು ವಡ್ಡರ್ ಪದವನ್ನಾಗಿಯೂ ಸೂಚಿಸಲಾಗಿದೆ. ಈ ಎಲ್ಲಾ ಕಾರಣದಿಂದ ಆರಂಭದಲ್ಲಿ ಗಂಟಿಚೋರ್ ಸಮುದಾಯದ ಸಮನಾಂತರ ಪದಗಳಾಗಿದ್ದ ಭಾಮ್ಟಾ, ಟಕಾರಿ, ಉಚಲ್ಯಾ, ಗಿರಣಿವಡ್ಡರ್, ತುಡುಗು ವಡ್ಡರ್, ಪಾತ್ರೂಟ್ ಇವುಗಳನ್ನು ಹಿಂದುಳಿದ ವರ್ಗಗಳಿಂದ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕಾದ ಬಿಕ್ಕಟ್ಟು ಗಂಭೀರವಾಗಿದೆ. ಈ ಬಿಕ್ಕಟ್ಟನ್ನು ಸಂಶೋಧನೆಯಲ್ಲಿ ವಿಸ್ತಾರವಾಗಿ ಚರ್ಚಿಸಲಾಗಿದೆ.

ಮುಖ್ಯವಾಗಿ `ಗಂಟಿಚೋರ್ಸ್’ ಎಂಬ `ಕಳ್ಳತನದ’ ಸಾಮಾಜಿಕ ಅಪಮಾನದಿಂದ ಬಿಡುಗಡೆ ಹೊಂದಲು ಈ ಸಮುದಾಯ ಹಿಂದೆ ನಾನಾ ಹೆಸರುಗಳಲ್ಲಿ ಗುರುತಿಸಿಕೊಂಡು ರೂಪಾಂತರ ಹೊಂದಿದೆ. ಇಂದು ಇವರೆಲ್ಲಾ ಪರಿಶಿಷ್ಠ ಜಾತಿಯ ಸೌಲಭ್ಯದ ಕಾರಣಕ್ಕೆ ಯಾವ ಹೆಸರನ್ನು ಕಳಚಿಕೊಂಡು ನಿರಾಳವಾಗಿದ್ದರೋ, ಅದೇ ಸಮುದಾಯ ಮತ್ತೆ ಮರಳಿ ಮನೆಗೆ ಎನ್ನುವಂತೆ `ಗಂಟಿಚೋರ್ಸ್’ ಎಂದು ಗುರುತಿಸಿಕೊಳ್ಳುತ್ತಿದ್ದಾರೆ.

ಗಂಟಿಚೋರ್ಸ್ ಸಮುದಾಯದಲ್ಲಿ ಯುವಜನತೆಯಲ್ಲಿ ನಿರುದ್ಯೋಗ ಸಮಸ್ಯೆಯಿದೆ. ಸಮೀಕ್ಷೆಯಲ್ಲಿ ಒಟ್ಟು 861 ಜನರು ನಿರುದ್ಯೋಗಿಗಳಿದ್ದಾರೆ. ಮಹಿಳಾ ನಿರುದ್ಯೋಗಿಗಳ ಸಂಖ್ಯೆ ಶೇ 17 ರಷ್ಟಿದೆ. ಉಳಿದಂತೆ ಶೇ 6.4 ರಷ್ಟು ಗಂಡಸರು ನಿರುದ್ಯೋಗಿಗಳಿದ್ದಾರೆ. ಪ್ರಾದೇಶಿಕವಾಗಿ ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಈ ಸಂಖ್ಯೆ ಹೆಚ್ಚಿದೆ. ಪರಿಶಿಷ್ಟಜಾತಿಯ ಅಭಿವೃದ್ಧಿ ಯೋಜನೆಗಳಲ್ಲಿ ನಿರುದ್ಯೋಗವನ್ನು ಕೊನೆಗಾಣಿಸುವ ಪ್ರಯತ್ನಗಳು ನಡೆಯಬೇಕಿದೆ.


ಬಾಗಲಕೋಟೆ  ಜಿಲ್ಲೆಯ ಮಹಾಲಿಂಗಪುರದ ಬಳಿ ಹೊಲದಲ್ಲಿ ವಾಸವಾಗಿರುವ ಗಂಟಿಚೋರ ಸಮುದಾಯದ ಕುಟುಂಬದ ಚಿತ್ರ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಳಿ ಹೊಲದಲ್ಲಿ ವಾಸವಾಗಿರುವ ಗಂಟಿಚೋರ ಸಮುದಾಯದ ಕುಟುಂಬದ ಚಿತ್ರ.

ಈ ಸಮುದಾಯದಲ್ಲಿ ವಸತಿ ಸಮಸ್ಯೆ ದೊಡ್ಡದಿದೆ, ಸಮೀಕ್ಷೆಯ ಒಟ್ಟು 1549 ಕುಟುಂಬಗಳಲ್ಲಿ ಶೇ 0.2 ನಷ್ಟು ಟೆಂಟುಗಳಲ್ಲಿಯೂ, ಶೇ 17.5 ರಷ್ಟು ಗುಡಿಸಲುಗಳಲ್ಲಿಯೂ, ಶೇ 23 ರಷ್ಟು ಬಾಡಿಗೆ ಮನೆಯಲ್ಲಿಯೂ ವಾಸಿಸುತ್ತಿದ್ದಾರೆ. ಶೇ 9.9 ರಷ್ಟು ಮಾತ್ರ ಸರಕಾರಿ ಆಶ್ರಯ ಮನೆಗಳಿವೆ. ಸರಕಾರವು ಗುಡಿಸಲು ಮುಕ್ತ ಕರ್ನಾಟಕವನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಹೀಗಾಗಿ ಈ ಯೋಜನೆಗಳಲ್ಲಿ ಗಂಟಿಚೋರರ ವಸತಿ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಸಮೀಕ್ಷೆಯಲ್ಲಿ ಸಮುದಾಯದ 1201 ರಷ್ಟು ಭೂರಹಿತ ಕುಟುಂಬಗಳು ದಾಖಲಾಗಿದೆ. ಸದ್ಯಕ್ಕೆ 1982 ಜನರು ಕೃಷಿ ಕೂಲಿಗಳಿದ್ದಾರೆ. ಈ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ 50 ರಷ್ಟಿದೆ. ಹಾಗಾಗಿ ಭೂರಹಿತರಿಗೆ ಭೂಮಿಯನ್ನು ಕೊಡುವ ಅಗತ್ಯವಿದೆ. ಶೇ 22 ರಷ್ಟು ಈ ಸಮುದಾಯದ ಕುಟುಂಬಗಳ ಬಡವರಿಗೆ ಪಡಿತರ ಚೀಟಿ ಸೌಲಭ್ಯವನ್ನು ಒದಗಿಸಬೇಕಾಗಿದೆ.

ಗಂಟಿಚೋರರು ಇದೀಗ ಸಂಘಟಿತರಾಗುತ್ತಿದ್ದಾರೆ. ಸರಕಾರ ಸಂಘಟನೆಗಳ ಸಹಭಾಗಿತ್ವದ ಮೂಲಕ ಸಮುದಾಯದ ಅಭಿವೃದ್ಧಿಗೆ ನೆರವಾಗಬೇಕಿದೆ. ಇವರಲ್ಲಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯ ಕ್ರೀಡಾಪಟುಗಳಿದ್ದರು, ಈ ಹಿನ್ನೆಲೆಯಲ್ಲಿ ಸಮುದಾಯದ ಮಕ್ಕಳಿಗೆ ಕ್ರೀಡೆಯಲ್ಲಿ ಹೆಚ್ಚು ಪ್ರೋತ್ಸಾಹ ಸಿಗಬೇಕಿದೆ. ಸಮುದಾಯವು ಗೋಕಾಕಪಾಲ್ಸ್, ಹುಬ್ಬಳ್ಳಿ, ಗದಗ-ಬೆಟಗೇರಿ, ಬಿಜಾಪುರ, ನರಗುಂದದಲ್ಲಿ ಸೆಟ್ಲಮೆಂಟ್ ವಸತಿಗಳ ತೆರವಿನಿಂದ ಆತಂಕದಲ್ಲಿದೆ. ಈ ವಸತಿಯನ್ನು ಸಮುದಾಯದ ಮೂಲ ನೆಲೆಸಿಗರಿಗೆ ಖಾಯಂ ನೊಂದಾಯಿಸಬೇಕಿದೆ. ಬೆಳಗಾಂ ಜಿಲ್ಲೆಯ ರಾಯಭಾಗ ತಾಲೂಕಿನ ಶಾಹುಪಾರ್ಕ ಎಂಬ ಹಳ್ಳಿಯಲ್ಲಿ 1955 ರಲ್ಲಿ ಸಮುದಾಯದ ಮಕ್ಕಳಿಗೆ ಆಶ್ರಮ ಶಾಲೆ ಆರಂಭವಾಗಿತ್ತು. ಅದೀಗ ಏಳೆಂಟು ವರ್ಷದಿಂದ ನಿಲುಗಡೆಯಾಗಿ ಈ ಭಾಗದ ಗಂಟಿಚೋರ ಮಕ್ಕಳ ಶಿಕ್ಷಣಕ್ಕೆ ತಡೆಯಾಗಿದೆ. ಇದನ್ನು ಸರಕಾರ ಕೂಡಲೆ ಆರಂಭಿಸಬೇಕಿದೆ. ಹೀಗೆ ಇಂತಹ ಹತ್ತಾರು ಫಲಿತಗಳನ್ನು ಸಮುದಾಯವನ್ನು ಸಬಲಗೊಳಿಸುವ ನೆಲೆಯಲ್ಲಿ ಗುರುತಿಸಲಾಗಿದೆ.

ವಯಕ್ತಿಕವಾಗಿ ಸಮುದಾಯ ಅಧ್ಯಯನದ ಮೊದಲ ಪ್ರಯತ್ನವಿದು. ಈ ಅಧ್ಯಯನವೇ ಸಮುದಾಯವನ್ನು ನೋಡುವ ಕಣ್ಣುಗಳನ್ನು ಒದಗಿಸಿದೆ. ಇಲ್ಲಿ ಒಂದು ಸಮುದಾಯದ ನಾಡಿಮಿಡಿತವನ್ನು ಕೇಳಿಸುವಂತಹ ಸಂರಚನೆಯ ವಿಧಾನವನ್ನು ಬಳಸಾಗಿದೆ. ಸಮುದಾಯವೊಂದರ ಚಾರಿತ್ರಿಕ ಪಲ್ಲಟಗಳು ಹೇಗೆ ನಿರಂತರ ರೂಪಾಂತರಕ್ಕೆ ಒಳಗಾಗುತ್ತವೆ, ಈ ಪಯಣದಲ್ಲಿ ಸಮುದಾಯವೊಂದು ಹೇಗೆ ಸಂಘರ್ಷಕ್ಕೆ ಒಡ್ಡಿಕೊಳ್ಳುತ್ತದೆ ಎನ್ನುವುದನ್ನು ಅರಿಯಲು ಪ್ರಯತ್ನಿಸಲಾಗಿದೆ. ಗಂಟಿಚೋರ ಸಮುದಾಯ ಒಂದು ಕಾಲಕ್ಕೆ ಅಪರಾಧಿ ಬುಡಕಟ್ಟೆಂದು ಗುರುತಿಸಿಕೊಂಡು ನಂತರದಲ್ಲಿ ಈ ಗುರುತಿನ ಪೊರೆಯನ್ನು ಕಾಲಕಾಲಕ್ಕೆ ಕಳಚುತ್ತಾ ಬಂದಿರುವ ಪಯಣವೇ ಕುತೂಹಲಕಾರಿಯಾಗಿದೆ.