ಮಂಗಳವಾರ, ನವೆಂಬರ್ 22, 2016

ಜಮೀನ್ದಾರಿಕೆ ವಿರುದ್ಧ ದಲಿತರ ಭೂಹೋರಾಟ

-ಅರುಣ್ ಜೋಳದಕೂಡ್ಲಿಗಿ.

ಅಂದು ಚಳವಳಿಯ ಸಂಗಾತಿ ಕರಿಯಪ್ಪ ಗುಡಿಮನೆ ಅವರ ಕಮಲಾಪುರದ ಮನೆಗೆ ಹೋದಾಗ ಅವರು ಪ್ರಯಾಣದಿಂದ ಬಳಲಿದ್ದರು. ಕಾರಣ ಹಿಂದಿನ ದಿನ ಬೆಂಗಳೂರಿನ ಟೌನ್ ಹಾಲ್ ಮುಂದೆ ತನ್ನ ಮೇಲಿನ ಕೊಲೆಯ ಯತ್ನ ವಿರೋಧಿಸಿ ಪ್ರಗತಿಪರರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಂದಿದ್ದರು. ಇದರ ಹಿನ್ನೆಲೆ ನೋಡಿದರೆ, ಬಳ್ಳಾರಿ ಭಾಗದ ದಲಿತ ಕೆಳಜಾತಿಗಳೇ ಹೆಚ್ಚಿರುವ ಬಂಡೆಟ್ಟಿ ಮತ್ತು ದಾನಪ್ಪ ಬೀದಿಯ ಪೌರಕಾರ್ಮಿಕರಿರುವ ಫಲಾನುಭವಿಗಳಿಗೆ 1970-80 ರ ಸುಮಾರಿಗೆ ಭೂನ್ಯಾಯ ಮಂಡಳಿಯಿಂದ ಸುಮಾರು 140 ಎಕರೆ ಜಮೀನು ಮುಂಜೂರಾಗಿತ್ತು. ಈ ಎಲ್ಲಾ ಭೂಮಿ ಇಂದು ಎಲ್.ಪ್ರತಾಪ್ ರೆಡ್ಡಿ ಎಂಬ ಜಮೀನ್ದಾರನ ವಶದಲ್ಲಿದೆ. ಇದನ್ನು ಮೂಲ ಫಲಾನುಭವಿಗಳಿಗೆ ಕೊಡಿಸುವ ಹೋರಾಟ ರೂಪಿಸುತ್ತಿರುವ ಕರಿಯಪ್ಪನ ಮೇಲೆ ಜೂನ್ 27 ರಂದು ಬಳ್ಳಾರಿಯ ಎ.ಸಿ ಆಪೀಸು ಮುಂದೆ ಪ್ರತಾಪರೆಡ್ಡಿ ಕಡೆಯವರು ಮಾರಣಾಂತಿಕ ಹಲ್ಲೆ ಮಾಡಿದ್ದರು.

??????????

ಈ ಕುರಿತು ಪ್ರಗತಿಪರರಿಂದ ಸಾಕಷ್ಟು ಪ್ರತಿರೋಧವೂ ಬಂದಿತ್ತು. ಇಂದು ಭೂಮಿ ರಿಯಲ್ ಎಸ್ಟೇಟ್ ದಂದೆಗೆ ಒಳಗಾಗಿ ಒಂದು ಮಾಫಿಯಾವೇ ಸೃಷ್ಠಿಯಾಗಿರುವ ಸಂದರ್ಭದಲ್ಲಿ ಕರಿಯಪ್ಪನ ಮೇಲಿನ ಹಲ್ಲೆ ಭೂಚಳವಳಿಯ ಬಿಕ್ಕಟ್ಟಿನ ಒಂದು ಮುಖವನ್ನು ತೋರುತ್ತಿದೆ. ಹೀಗೆ ಕರಿಯಪ್ಪ ಗುಡಿಮನೆ ಅವರ ಜತೆ ಮಾತನಾಡುತ್ತಾ, ಕಳೆದ ವರ್ಷ ಎಸ್.ಆರ್.ಪುರದಲ್ಲಿ ನಡೆದ ರೈತ ಹೋರಾಟದ ಹಿನ್ನೆಲೆಯನ್ನು ಕೇಳತೊಡಗಿದೆ. ಅವರು ಹೋರಾಟದ ದಾಖಲೆಗಳನ್ನು ನನ್ನ ಮುಂದೆ ತಂದು ಹರಡಿದರು. ಒಂದೊಂದನ್ನು ನೋಡುತ್ತಾ ಹೋದಂತೆ ಹೋರಾಟದ ಚಿತ್ರಣವೊಂದು ಕಣ್ಣಮುಂದೆ ಬರತೊಡಗಿತು. ಇದನ್ನು ನೋಡುತ್ತಿದ್ದಂತೆ ನಾನು ಎಸ್.ಆರ್ ಪುರಕ್ಕೆ ಹೋಗಿ ಭೂಮಿ ಪಡೆದವರ ಜತೆ ಮಾತನಾಡಲು ಅವರ ಸಹಾಯ ಕೋರಿದೆ. ಆಗ ಎಸ್.ಆರ್.ಪುರದವರೇ ಆದ ಸ್ಥಳೀಯವಾಗಿ ಹೋರಾಟವನ್ನು ಸಂಘಟಿಸಿದ ರಾಮಚಂದ್ರಪ್ಪರ ಅವರ ಸಂಪರ್ಕ ಕಲ್ಪಿಸಿಕೊಟ್ಟರು.
**
ತನ್ನೂರಿನ ಹೆಸರನ್ನೇ ತನಗೆ ಅಂಟಿಸಿಕೊಂಡಂತಿದ್ದ ರಾಮಚಂದ್ರಪ್ಪನ ಜತೆ ಎಸ್.ಆರ್.ಪುರ ತಲುಪಿದಾದ ಸರಿಯಾಗಿ ಸಂಜೆ ನಾಲ್ಕುಗಂಟೆ. ನಮ್ಮ ಬರವು ಮೊದಲೆ ತಿಳಿದದ್ದರಿಂದ ಹತ್ತರಿಂದ ಹದಿನೈದು ಜನ ಕೇರಿಯ ರಾಮನಗುಡಿಯಲ್ಲಿ ಸೇರಿದ್ದರು. ಆರಂಭಕ್ಕೆ ಕೆಲವರು ಪ್ರಶ್ನಾರ್ಥಕವಾಗಿ ನನ್ನನ್ನು ನೋಡಿದಾಗ, ನಾನೆ ಪರಿಚಯಿಸಿಕೊಂಡು `ನಿಮ್ಮ ಹೊಲದ ಬಗ್ಗೆ ತಿಳಕೊಳ್ಳೋಕೆ ಬಂದಿರುವೆ’ ಎಂದೆ. ಬಿಗುವಿನ ವಾತಾವರಣ ಚೂರು ಬದಲಾಯಿತು. ಎಲ್ಲರ ಮುಖದಲ್ಲಿ ಒಂದು ಬಗೆಯ ಗೆಲುವಿನ ನಗು ಕಾಣುತ್ತಿತ್ತು. ಒಬ್ಬರಾದ ನಂತರ ಒಬ್ಬೊರಂತೆ ಇಡೀ ಹೋರಾಟದ ಕಥನವನ್ನು ಬಗೆಬಗೆಯಲ್ಲಿ ಬಣ್ಣಿಸತೊಡಗಿದರು. `ದೊಡ್ಡ ಕತಿ ಬಿಡ್ರಿ, ನಮ್ಮೂರಾಗ ಇಂಥದು ನಡೀತಾತಿ ಅಂತ ಕನ್ಸಲ್ಲೂ ಅನ್ಕಂಡಿರಲಿಲ್ಲ’ ಎಂದು ಮಾತಿಗೆ ಶುರುವಿಟ್ಟುಕೊಂಡರು. `ಆ ದಿನಾನ ನೆನಪಿಸಿಕೊಂಡ್ರ ಮೈ ಜುಂ ಅಂತಾತ ಸಾರ್, ಇದೆಲ್ಲಾ ಹೆಂಗಾತು.. ಕನಸೋ ನಿಜನೋ ಅಂತ ಒಂದೊಂದು ಸಲ ನಂಬಿಕಿ ಬರಲ್ಲ’ ಎಂದೊಬ್ಬರು ಅಚ್ಚರಿ ವ್ಯಕ್ತಪಡಿಸಿದರು.

`ನಮಿಗೆ ಹೊಲ ಕೊಡಸಾಕ ದೊಡ್ಡ ದೊಡ್ಡ ಸಾಹೇಬರು ಎಲ್ಲೆಲ್ಲಿಂದ ಬಂದುದ್ರೋ.. ನಮಿಗೂ ಅವ್ರಿಗೂ ಏನ್ ಋಣನೋ. ಅವರು ಯಾರು ಅಂತಾನ ನಮಿಗೊತ್ತಿಲ್ಲ, ಆದ್ರ ಅವರೆಲ್ಲ ಸೇರಿ ನಮ್ಮ ಹೊಲನ ನಮಿಗೆ ಕೊಡಿಸಿದ್ರು, ಈಗ ಬಿತ್ತಾಟ ಮಾಡಿದ್ರ ಇದು ಮೂರನೆ ಬೆಳಿ, ಅವರ ಹೊಟ್ಟೆ ತಣ್ಣಗಿರಲಿ’ ಎಂದು ಕೆಲವರು ಕೃತಜ್ಞತೆ ಸಲ್ಲಿಸಿದರು. ಇದನ್ನು ಕೇಳುತ್ತಿದ್ದರೆ, ದೇವನೂರರ `ಸಂಬಂಜ ಅನ್ನೊದು ದೊಡ್ದು ಕಣಾ’ಎನ್ನುವ ಮಾತು ನೆನಪಿಗೆ ಬಂತು. ಹೀಗೆ ನಾವು ರಾಮನಗುಡಿಯಲ್ಲಿ ಕೂತು ಮಾತಾಡ್ತಿದ್ರೆ, ಕೆಲವರು ದೂರದಲ್ಲೆ ಏನೋ ನಡೀತಿದೆ ಎನ್ನುವಂತೆ ಗುಮಾನಿಯಿಂದ ನಮ್ಮನ್ನು ನೋಡುತ್ತಿದ್ದರು. ಅವರ ಆ ನೋಟ `ಮತ್ತೇನ್ ಕತೆನೋ, ಮತ್ತೆ ಯಾರನ್ನೋ ಕರಕಂಡ್ ಬಂದಾರಲ್ಲ’ ಎನ್ನುವಂತಿತ್ತು. ಹೆಣ್ಣುಮಕ್ಕಳು ಸುಮ್ಮನೆ ಈ ಮಾತುಕತೆಯನ್ನು ಕೇಳಿಸಿಕೊಂಡು ಮೌನ ವ್ರತ ಹಿಡಿದವರಂತೆ ಕೂತಿದ್ದರು.

ಈಗ್ಗೆ ಮೂರು ವರ್ಷದಿಂದ ನಮ್ಮ ಕೇರಿಗೆ ಅಂಬೇಡ್ಕರ್ ಬಂದಾರ, ಹಂಗಾಗಿ ನಾವೀಗ ಅಂಬೇಡ್ಕರ್ ಜಯಂತಿ ಮಾಡ್ತೀವಿ ಎಂದು ಕೇರಿಯ ಹೊಸಬೆಳಕಿನ ಬಗ್ಗೆ ಮಾತನಾಡಿದರು. ಧಣಿ ವಶದಲ್ಲಿದ್ದ ಭೂಮಿಯನ್ನು ಜೀತಗಾರ ದಲಿತರು ಪಡೆದ ಬಗ್ಗೆ ಸುತ್ತಮುತ್ತಲ ಹಳ್ಳಿಗಳಲ್ಲಿ ಹತ್ತಾರು ಕಥೆಗಳು ಹುಟ್ಟಿವೆಯಂತೆ. ಧಣಿ ಪರವಾದ ಕೆಲವರು `ನಂಬಿದ ಧಣಿಗೆ ಇವರು ಮೋಸ ಮಾಡಿದ್ರು, ಧಣಿ ಎದುರು ಯಾರ್ ಯಾರನ್ನೋ ಕರಕಂಡು ಬಂದು ದೌರ್ಜನ್ಯ ಮಾಡಿ ಹೊಲ ಕಸಕಂಡಾರ, ದೇವ್ರು ಇವ್ರಿಗೆ ಒಳ್ಳೇದ್ ಮಾಡಲ್ಲ’ ಎನ್ನುತ್ತಾರಂತೆ. ಇದಕ್ಕೆ ರಾಮಚಂದ್ರಪ್ಪ `ಅಲ್ರಿ ಸಾರ ನಮ್ಮ ಹೊಲನ ನಾವು ತಗಳ್ಳಾಕ ಇಷ್ಟು ರಾಮಾಯಣ ಆಗ್ಯಾತಿ, ಇನ್ನ ಅವರ ಹೆಸರಲ್ಲೆ ಪಟ್ಟ ಇದ್ದದ್ರ ನಾವ್ ದೌರ್ಜನ್ಯ ಮಾಡಿ ಹೊಲ ತಗಳ್ಳಾದು ಅಕ್ಕಿತ್ತೇನ್ರಿ’ ಎಂದು ಸಮಜಾಯಿಶಿ ಕೊಡುತ್ತಾರೆ.

ಹೀಗೆ ಕೂತು ಮಾತನಾಡುವಾಗ ಎಲ್ಲರ ಮುಖದಲ್ಲಿ ಗೆಲುವಿನ ನಗೆ, ಆತ್ಮವಿಶ್ವಾಸದ ಮಿಂಚು ಕಾಣುತ್ತಿತ್ತು. ಇಡೀ ಊರಿನ ಚರಿತ್ರೆಯಲ್ಲಿ `ಅಲ್ಲೋಲ ಕಲ್ಲೋಲ’ ಎಬ್ಬಿಸಿದ ಈ ಘಟನೆ ಬೀರಿದ ಪರಿಣಾಮ ಹಲವು. `ಈಗೇನು ಧಣಿ ಕಡೇರು ಸುಮ್ನಿದಾರ, ಏನ್ ತೊಂದ್ರಿ ಮಾಡಿಲ್ಲ. ಆದ್ರ ಇದೆಲ್ಲಾ ಮರೀಲಿ ಮುಂದೆ ನೋಡಾಣ ಒಂದು ಕೈ ಅಂತ ಸುಮ್ನಿದ್ದಂಗಿದೆ ಸಾರ್’ ಎನ್ನುವ ಸೇಡಿನ ಕಿಡಿ ಬೂದಿ ಮುಚ್ಚಿಕೊಂಡಿದೆ ಎನ್ನುವಂತಿರುವ ವಾತಾವರಣವನ್ನು ಸೂಕ್ಷ್ಮವಾಗಿ ವಿವರಿಸಿದರು. ಈ ಬಗ್ಗೆ ಹೇಳುವಾಗ ದೂರದ ಆತಂಕದ ಸಣ್ಣ ಎಳೆಯೊಂದು ಕಾಣಿಸಿಕೊಂಡಿತು. ಆದರೂ `ಇರೋದ್ ಒಂದಿನ ಸಾಯೋದ್ ಒಂದಿನ ಬಿಡ್ರಿ ಸಾರ್, ಮುಂದೆ ನೋಡಾಣ’ ಎನ್ನುವ ದೈರ್ಯವನ್ನೂ ಕೆಲವರು ವ್ಯಕ್ತಪಡಿಸಿದರು.

ಈ ಭೂ ಹೋರಾಟ ಬೀರಿದ ಸಕಾರಾತ್ಮಕ ಪರಿಣಾಮವೆಂದರೆ, ಸುತ್ತಮುತ್ತಲ ಹಳ್ಳಿಗಳ ದಲಿತ ಕೆಳಜಾತಿಗಳ ರೈತರನೇಕರು `ನಮ್ ಹೊಲಾನು ಯಾವ್ ಯಾವ್ ಧಣೀ ಹೆಸ್ರಲ್ಲಿ ಐತೋ’ ಎಂದು ತಾಲೂಕು ಆಫೀಸಿನ ದಾಖಲಾತಿಗಳ ಪರಿಶೀಲಿಸುವ ಗುಪ್ತ ಕಾರ್ಯಾಚರಣೆಯಲ್ಲಿ ತೊಡಗಿದ್ದಾರಂತೆ. ಇವರೆಲ್ಲರಲ್ಲೂ ನಮ್ಮ ಹೊಲಾನೂ ಹಿಂಗೆ ಯಾರಾದ್ರೂ ವಶಪಡಿಸಿಕೊಂಡಿದ್ದು ಗೊತ್ತಾದ್ರೆ, ಕೊಡುಸೋ ಜನಾನೂ ಇದಾರೆ ಎನ್ನುವ ಕನಸಿನ ಬೀಜವೊಂದು ಮೊಳೆತಂತಿದೆ.
**
ಅಂದಹಾಗೆ ಪೀಠಿಕೆ ಇಲ್ಲದೆ ಶುರುಮಾಡಿದ ಭೂಮಿ ದಕ್ಕಿಸಿಕೊಂಡ ಈ ಕಥನ ಈಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗದ ದೊಡ್ಡದೊಂದು ಗೆಲುವಿನ ಹೋರಾಟದ್ದು. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ನುಗ್ಗೇನಹಳ್ಳಿ ಗ್ರಾಮಪಂಚಾಯ್ತಿಯಲ್ಲಿ ಬರುವ ಪುಟ್ಟ ಗ್ರಾಮ ನೆಲ್ಲೂಡು-ಕೊಟ್ಟಾಲ್. `ಕೊಟ್ಟಾಲ್’ ಎಂದರೆ ತೆಲುಗಿನಲ್ಲಿ `ಗುಡಿಸಲು’ ಎಂದರ್ಥ. ಗುಡಿಸಲೇ ಇರುವ ಜನವಸತಿಯನ್ನು ಗುರುತಿಸುವ ಈ ಪದ ಮರೆಯಾಗಿ ಕಾಲಾನಂತರದಲ್ಲಿ `ಶ್ರೀರಾಮರಂಗಾಪುರ’ ವಾಗಿದೆ. ಅದನ್ನೀಗ `ಎಸ್.ಆರ್.ಪುರ’ ವೆಂದು ಸಂಕ್ಷಿಪ್ತಗೊಳಿಸಿ ಕರೆಯುತ್ತಾರೆ. ಹೀಗಾಗಿ `ಎಸ್.ಆರ್.ಪುರದ ರೈತ ಹೋರಾಟ’ವು ಬಳ್ಳಾರಿ ಜಿಲ್ಲೆಯ ಜಮೀನ್ದಾರಿ ವ್ಯವಸ್ಥೆಗೆ ದೊಡ್ಡ ಪೆಟ್ಟುಕೊಟ್ಟ ಸಂಗತಿಯಾಗಿದೆ.

ಗುಡಿಸಲೆ ಇರುವ ಊರು ಎಂದ ಮೇಲೆ ದಲಿತರು, ಕೆಳಜಾತಿ, ಹಿಂದುಳಿದವರು ಹೆಚ್ಚಿದ್ದಾರೆಂದು ಬೇರೆ ಹೇಳಬೇಕಿಲ್ಲ. ಈ ಊರಿನಲ್ಲಿ ಆಂದ್ರದಲ್ಲಿ ಬಹುಸಂಖ್ಯಾತರಾದ `ಕಮ್ಮಾ’ ಕುಲವೊಂದು ಇಲ್ಲಿ ಜಮೀನ್ದಾರರಾಗಿ ಪಾಳೆಗಾರಿಕೆ ಮಾಡುತ್ತಿತ್ತು. ಭೀಮನೇನಿ ಸೋಮಪ್ಪ ಈ ಭಾಗದ ಆಗಿನ ದೊಡ್ಡ ಭೂಮಾಲೀಕ. ಇವರಿಗೆ 8 ಜನ ಮಕ್ಕಳಲ್ಲಿ ಒಬ್ಬ ಮಗ ಭೀಮನೇನಿ ಕೊಂಡಯ್ಯ ಒಮ್ಮೆ ಶಾಸಕನೂ ಆಗಿದ್ದ. ಈತನ ಗೂಂಡಾಗಿರಿ, ದೌರ್ಜನ್ಯ, ದರ್ಪ ಅಧಿಕಾರದ ಕಾರಣಗಳಿಂದಲೇ ಹತ್ಯೆಯಾದದ್ದು, ಇದಕ್ಕೆ ಪ್ರತಿಯಾಗಿಯೇ, ತಾ.ಪಂ. ಅದ್ಯಕ್ಷನಾಗಿದ್ದ ಸೂರ್ಯನಾರಾಯಣ ರೆಡ್ಡಿಯು ಹೊಸಪೇಟೆಯಲ್ಲಿ ಆಗಸ್ಟ್ 15ರಂದು ಧ್ವಜಾರೋಹಣದ ಸಂದರ್ಭದಲ್ಲಿ ಗುಂಡಿಕ್ಕಿ ಕೊಂದದ್ದು ಎನ್ನುವ ಮಾತಿದೆ. ಇವರ ದಬ್ಬಾಳಿಕೆ ದೌರ್ಜನ್ಯದ ಕತೆಗಳು ತೆಲುಗು ಸಿನೆಮಾದ ಜಮಿನ್ದಾರಿಕೆಯ ದೃಶ್ಯಗಳಂತೆ ಬಿಚ್ಚಿಕೊಳ್ಳುತ್ತವೆ. ಇಂತಹ ಬೀಮನೇನಿ ಕುಟುಂಬದ ಜಮೀನ್ದಾರಿಕೆ ವಿರುದ್ಧ ಮೊದಲಬಾರಿಗೆ ಅವರಲ್ಲಿಯೇ ಜೀತಕ್ಕಿದ್ದ ದಲಿತ ಕುಟುಂಬಗಳು ತಿರುಗಿ ಬಿದ್ದದ್ದು ಇದೀಗ ಹೊಸ ಇತಿಹಾಸ.
s.r.pura-4

ದೇವರಾಜ ಅರಸು ಕಾಲದಲ್ಲಿ ಜಾರಿಗೆ ಬಂದ ಭೂ ಸುಧಾರಣಾ ನೀತಿಯು ಜಮೀನ್ದಾರರ ಹೆಚ್ಚುವರಿ ಭೂಮಿಯನ್ನು ಕಸಿದುಕೊಂಡಿತ್ತು. ಆದರೆ ವಾಸ್ತವದಲ್ಲಿ ಕೆಲವು ಜಮೀನ್ದಾರರು ಈ ನೀತಿಯನ್ನು ತುರುಮುರುಗು ಮಾಡಿ ಮಣ್ಣುಮುಕ್ಕಿಸಿದ್ದರು. ಕಾರಣ ಸರಕಾರದ ಲೆಕ್ಕದಲ್ಲಿ ಭೂಮಿ ಹಂಚಿಕೆಯಾಗಿದ್ದರೆ, ಹಾಗೆ ಹಂಚಲ್ಪಟ್ಟ ಭೂಮಿ ಮತ್ತದೇ ಜಮೀನ್ದಾರರ ಹದ್ದುಬಸ್ತಿನಲ್ಲೆ ಉಳಿಯಿತು. ಯಾರ ಹೆಸರಿಗೆ ಭೂಮಿ ಹಂಚಿಕೆಯಾಗಿತ್ತೋ ಅವರು ತಮ್ಮದೇ ಭೂಮಿಯಲ್ಲಿ ಅರಿವಿಲ್ಲದೆ ಜೀತಕ್ಕೆ ಆಳಾಗಿ ದುಡಿಯುತ್ತಿದ್ದರು. ಶ್ರೀರಾಮರಂಗಾಪುರದ ಬೀಮನೇನಿ ಜಮಿನ್ದಾರಿ ಕುಟುಂಬವು ಮಾಡಿದ್ದು ಇದೇ ಕುತಂತ್ರವನ್ನು.

ಸೆಪ್ಟಂಬರ್ 27, 1978 ರಂದು ಹೊಸಪೇಟೆ ಭಾಗದ ಭೂನ್ಯಾಯ ಮಂಡಳಿ ಕಂಪ್ಲಿ ಪ್ರವಾಸಿ ಮಂದಿರದಲ್ಲಿ ಜನರ ಸಭೆ ಸೇರಿಸಿ, ಈ ಗ್ರಾಮದ 12 ಮಾದಿಗರ ಕುಟುಂಬಗಳೂ ಒಳಗೊಂಡಂತೆ ಇನ್ನಿತರೆ ಕುರುಬರು, ಮುಸ್ಲೀಮರು, ಕಮ್ಮ, ರೆಡ್ಡಿ ಸಮುದಾಯದ 26 ಕುಟುಂಬಗಳಿಗೆ 229 ಎಕರೆಯಷ್ಟು ಜಮೀನು ಮಂಜೂರು ಮಾಡಿತ್ತು. ಆದರೆ ಭೂಮಾಲೀಕ ಭೀಮನೇನಿ ಕುಟುಂಬ ವರ್ಗವು ಭೂನ್ಯಾಯ ಮಂಡಳಿಯು ಹಂಚಿಕೆ ಮಾಡಿದ್ದ ಭೂಮಿಯನ್ನು ದಲಿತರಿಗೆ ಬಿಟ್ಟುಕೊಡಲೆ ಇಲ್ಲ. ಕಾರಣ ಭೂಮಿ ಪಡೆದ ಫಲಾನುಭವಿಗಳಲ್ಲಿ ಮಾದಿಗರು ಮೂರು ತಲೆಮಾರುಗಳಿಂದಲೂ ಇವರಲ್ಲಿ ಜೀತಗಾರರಾಗಿ ದುಡಿಯುತ್ತಿದ್ದರು. ಇವರ ಅನಕ್ಷರತೆಯನ್ನೇ ಬಂಡವಾಳ ಮಾಡಿಕೊಂಡು ಅವರನ್ನು ಅಜ್ಞಾನದಲ್ಲಿರಿಸಲಾಗಿತ್ತು. ಅಂತೆಯೇ ನಕಲಿ ಸಹಿ ಮಾಡಿ ಕೆಲವರ ಭೂಮಿಯನ್ನು ವಶಪಡಿಸಿಕೊಂಡಿದ್ದರು. ಇವರ ಕಿರುಕುಳಕ್ಕೆ ಕೆಲವು ಕುಟುಂಬಗಳು ನಗರಕ್ಕೆ ವಲಸೆ ಹೋಗಿದ್ದರು.

ಕಳೆದ 36 ವರ್ಷಗಳಿಂದಲೂ ಪ್ರಭುತ್ವವು ಭೀಮನೇನಿ ಕುಟುಂಬಕ್ಕೆ ರಕ್ಷಣೆಗೆ ನಿಂತ ಕಾರಣ ಇವರಿಂದ ನಿರಂತರವಾಗಿ ದೌರ್ಜನ್ಯಕ್ಕೆ ನಲುಗಿದ ದಲಿತರು ಭೂಮಿ ಕೇಳುವ ಮಾತು ದೂರವೆ ಉಳಿದಿತ್ತು. ಮೂರು ವರ್ಷದ ಹಿಂದೆ ಅಸಲಿಗೆ ತಮ್ಮ ಹೆಸರಲ್ಲಿ ಭೂಮಿ ಇದೆ ಎಂದು ತಿಳಿದದ್ದು ಕೂಡ ಆಕಸ್ಮಿಕ. ಜೀತಕ್ಕಿದ್ದ ದಲಿತರ ಮೂರನೇ ತಲೆಮಾರಿನ ಅಕ್ಷರಸ್ಥ ರಾಮಚಂದ್ರಪ್ಪ ಇದರ ರುವಾರಿ.
**
ಒಮ್ಮೆ 2013 ರಲ್ಲಿ ಭೀಮನೇನಿ ಕುಟುಂಬದವರೊಬ್ಬರು ಎಸ್ಸಿಲೋನಲ್ಲಿ ಟ್ರಾಕ್ಟರ್ ತೊಗೋಬೇಕು, ನೀನು ಸಹಿ ಮಾಡಬೇಕೆಂದು ರಾಮಚಂದ್ರಪ್ಪನನ್ನು ಕೇಳಿಕೊಂಡಿದ್ದಾರೆ. ಒಂದಷ್ಟು ಓದಲು ಗೊತ್ತಿರುವ ರಾಮಚಂದ್ರಪ್ಪನಿಗೆ ನನ್ನ ಸಹಿ ಯಾಕೆ ಎನ್ನುವ ಅನುಮಾನವೊಂದು ಕಾಡಿದೆ. ಹೀಗೆ ಬ್ಯಾಂಕ್ ಸಾಲಕ್ಕೆ ಸಹಿ ಹಾಕಲು ಹೋದಾಗ ಹೊಸಪೇಟೆಗೆ ಪಹಣಿಯೊಂದನ್ನು ಝೆರಾಕ್ಸ್ ಮಾಡಿಸಲು ರಾಮಚಂದ್ರಪ್ಪನ ಬಳಿ ಕೊಟ್ಟಿದ್ದಾರೆ. ಈ ಪಹಣಿಯಲ್ಲಿದ್ದ ಪಟ್ಟದಾರರ ಹೆಸರು ನೋಡಿದ ರಾಮಚಂದ್ರಪ್ಪನಿಗೆ ಮೈ ಬೆವರಿದೆ. ಸುಮಾರು 8 ಎಕರೆಯಷ್ಟು ಭೂಮಿ ತನ್ನ ತಂದೆ ಹೆಸರಲ್ಲಿದೆ. ಇದನ್ನು ಗಮನಿಸಿದ ರಾಮಚಂದ್ರಪ್ಪ ಉಪಾಯವಾಗಿ ಈ ಪಹಣಿಯ ಒಂದು ಪ್ರತಿಯನ್ನು ಝೆರಾಕ್ಸ್ ಮಾಡಿಸಿ ತನ್ನಲ್ಲಿ ಉಳಿಸಿಕೊಂಡು, ಉಳಿದಂತೆ ಸಾಲಕ್ಕೆ ಸಹಿ ಮಾಡಿ ಏನು ತಿಳಿಯದಂತೆ ಮನೆಗೆ ಮರಳಿದ್ದಾನೆ.

ಈ ಕ್ಷಣದಿಂದ ರಾಮಚಂದ್ರಪ್ಪನಿಗೆ ಕಣ್ಣಿಗೆ ನಿದ್ದೆಯಿಲ್ಲದೆ ತಮ್ಮ ಹೊಲದ ಚಿಂತೆ ಶುರುವಾಗಿದೆ. ನಮ್ಮದೇ ಹೊಲ, ನಮಗೇ ಗೊತ್ತಿಲ್ಲವಲ್ಲ ಎಂದು ಅಚ್ಚರಿಗೊಂಡಿದ್ದಾನೆ. ತಲೆಯಲ್ಲಿ ನೂರಾರು ಪ್ರಶ್ನೆಗಳು ಕಿಕ್ಕಿರಿದು ಆತನನ್ನು ಇನ್ನಿಲ್ಲದಂತೆ ಕಾಡಿವೆ. ಹೀಗಿರುವಾದ ತಾನು ಝೆರಾಕ್ಸ್ ಪಡೆದ ಪಟ್ಟದ ಮಾಹಿತಿಯ ಎಳೆ ಹಿಡಿದು ಗುಟ್ಟಾಗಿ ತಾಲೂಕು ಕಛೇರಿಯಲ್ಲಿ ಪರಿಶೀಲಿಸಿದಾದ ರಾಮಚಂದ್ರಪ್ಪ ಮತ್ತಷ್ಟು ಬೆಚ್ಚಿಬಿದ್ದಿದ್ದಾನೆ. ತನ್ನ ಕೇರಿಯ ದಲಿತರ ಹೆಸರಲ್ಲಿ ಇಷ್ಟೊಂದು ಭೂಮಿ ಇದ್ದರೂ ಯಾರಿಗೂ ಗೊತ್ತಿಲ್ಲ. ಈ ಪ್ರತೀ ವಿವರಗಳು ರಾಮಚಂದ್ರಪ್ಪನಲ್ಲಿ ಒಳಗೊಳಗೇ ಖುಷಿಯನ್ನೂ ದಿಗಿಲನ್ನೂ ಹುಟ್ಟಿಸಿವೆ. ನಮ್ಮದೇ ಹೆಸರಲ್ಲಿದ್ದ ಭೂಮಿಯನ್ನು ಮರಳಿ ಪಡೆಯುವುದು ಹೇಗೆ? ಬೀಮನೇನಿ ಕುಟುಂಬದವರ ವಶದಲ್ಲಿದ್ದ ಈ ಭೂಮಿಯನ್ನು ಹೇಗೆ ಬಿಡಿಸಿಕೊಳ್ಳುವುದು ಮುಂತಾಗಿ ವೈದಾಟ ಶುರುವಾಗಿದೆ.
srpura1

ಈ ನಡುವೆ ತಾನೊಬ್ಬನೇ ಫಲಾನುಭವಿಯಲ್ಲದೆ ಯಾರ ಹೆಸರಲ್ಲಿ ಹೊಲವಿತ್ತೊ ಅವರೆಲ್ಲರನ್ನು ಒಟ್ಟಾಗಿಸಲು ಪ್ರಯತ್ನಿಸಿದ್ದಾನೆ. ಗುಟ್ಟಾಗಿಯೇ ಎಲ್ಲರಲ್ಲಿಯೂ ಒಗ್ಗಟ್ಟಾಗಿಸುವ ಮಾತುಕತೆ ಮಾಡಿದ್ದಾನೆ. ಕೆಲವರು ರಾಮಚಂದ್ರಪ್ಪನ ಮಾತಿಗೆ ಒಪ್ಪಿದರೆ ಇನ್ನು ಕೆಲವರು ಹೆದರಿ ಹಿಂದೆ ಸರಿದಿದ್ದಾರೆ. ಆದರೆ ಎಲ್ಲರ ಎದೆಯೊಳಗೆ ಸ್ವಂತ ಹೊಲದ ಕನಸು ಚಿಗುರೊಡೆಯತೊಡಗಿದೆ. ಇಡೀ ಕೇರಿಯೆಂಬ ಕೇರಿಯೇ ಹಗಲು ರಾತ್ರಿ ಹೊಲದ್ದೇ ಚಿಂತೆಯಲ್ಲಿ ಹೈರಾಣಾಗಿದೆ. ಇಂತಹ ಹೊತ್ತಲ್ಲಿ ರಾಮಚಂದ್ರಪ್ಪ ಈ ಸಂಗತಿಯನ್ನು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾಗಿದ್ದ ಕರಿಯಪ್ಪ ಗುಡಿಮನಿ ಅವರಲ್ಲಿ ಹೇಳಿಕೊಂಡಿದ್ದಾರೆ. ಕರಿಯಪ್ಪ ದಾಖಲೆಗಳನ್ನು ಪರಿಶೀಲಿಸಿ ಇದೆಲ್ಲಾ ನಿಮ್ಮದೇ ಹೊಲ, ನಿಮ್ಮ ಹೊಲವನ್ನು ನಿಮಗೆ ಬಿಡಿಸಿಕೊಡಲು ಹೋರಾಟ ಮಾಡೋಣ ಎಂದು ತಿಳಿ ಹೇಳಿದ್ದಾರೆ.

ಕರ್ನಾಟಕ ಜನಶಕ್ತಿ ಸಂಘಟನೆಯ ಜತೆಗೂಡಿ ನಿರಂತರವಾಗಿ ಚಳವಳಿಯಲ್ಲಿ ತೊಡಗಿಸಿಕೊಂಡ ಕರಿಯಪ್ಪ ಗುಡಿಮನೆ ಈ ಸಂಗತಿಯನ್ನು ಜನಶಕ್ತಿ ಸಂಘಟನೆಯ ಶಿವಸುಂದರ್, ವಾಸು, ಮಲ್ಲಿಗೆ, ಕುಮಾರ ಸಮತಳ ಮೊದಲಾದವರೊಂದಿಗೆ ಚರ್ಚೆ ಮಾಡಿದ್ದಾರೆ. ಎಲ್ಲರೂ ಒಟ್ಟಾಗಿ ಈ ಹೋರಾಟವನ್ನು ರೂಪಿಸಲು ಕಾರ್ಯಯೋಜನೆಗಳನ್ನು ರೂಪಿಸಿದ್ದಾರೆ. ಹೀಗಾಗಿ ಬಳ್ಳಾರಿ ಕೊಪ್ಪಳ ಭಾಗದಲ್ಲಿದ್ದ ದಲಿತ ಪ್ರಗತಿಪರ ಸಂಘಟನೆಗಳನ್ನು, ಚಳವಳಿಗಾರರನ್ನೂ ಪತ್ರಕರ್ತ ಲೇಖಕರನ್ನೂ ಒಟ್ಟಾಗಿಸಿದ ಹೋರಾಟದ ಸಮಿತಿಯೊಂದನ್ನು ರೂಪಿಸಿದ್ದಾರೆ. ಪೂರ್ವ ತಯಾರಿಯನ್ನು ಮಾಡಿದ್ದಾರೆ. ಶ್ರೀರಾಮರಂಗಾಪುರದ ರೈತರಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿ ಗಟ್ಟಿಯಾಗಿ ನಿಲ್ಲುವ ವಾತಾವರಣವನ್ನು ರೂಪಿಸಿದ್ದಾರೆ.

ಸತತ ಎರಡು ವರ್ಷಗಳ ಕಾಲ ಜನರನ್ನು ಹೋರಾಟಕ್ಕೆ ಅಣಿಗೊಳಿಸಲಾಗಿದೆ. ಪತ್ರಿಕಾ ಗೋಷ್ಠಿಗಳನ್ನು ಮಾಡುತ್ತಾ, ಈ ವಿಷಯಕ್ಕಾಗಿ ಎಸ್.ಪಿ.,ಡಿ.ಸಿ., ಕಂದಾಯ ಇಲಾಖೆಗಳಿಗೆ ಅಲೆದಾಡಿ ಮನವಿಪತ್ರಗಳನ್ನು ಕೊಟ್ಟು ಸರಕಾರದ ಕಣ್ಣು ತೆರೆಯುವಂತೆ ಮಾಡಲಾಗಿದೆ. ಇದರ ಪ್ರತಿಫಲವಾಗಿ ಭೀಮನೇನಿ ಕುಟುಂಬಗಳ ವಿರುದ್ಧ ಭೂಮಿಯ ಫೋರ್ಜರಿ ಕೇಸನ್ನು ಒಳಗೊಂಡಂತೆ ಕಂಪ್ಲಿ ಪೋಲಿಸ್ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾದವು. ಆದರೂ ಪೋಲಿಸರ ಕುಮ್ಮಕ್ಕಿನಿಂದ ಬಂಧನವಾಗದೆ ಬೇಲ್ ಪಡೆದು ರಾಜಾರೋಷವಾಗಿ ತಿರುಗಾಡತೊಡಗಿದರು. ಹೀಗಾಗಿ ಇದರ ತಾರ್ಕಿಕ ಅಂತ್ಯದಂತೆ `ನಾಡಿನ ಪ್ರಜ್ಞಾವಂತರು, ಬುದ್ದಿಜೀವಿಗಳು ಪ್ರಗತಿಪರ ಸಂಘಟನೆಗಳು ಎಲ್ಲರೂ ಇವರ ಬೆಂಬಲಕ್ಕೆ ನಿಲ್ಲಬೇಕಿದೆಯಲ್ಲದೆ, ಇವರ ಪರವಾಗಿ ದ್ವನಿ ಎತ್ತಬೇಕಾಗಿದೆ. ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ’ ಎಂದು ಭೂಹೋರಾಟಕ್ಕೆ ಕರೆ ಕೊಡಲಾಯಿತು. ಈ ಹೋರಾಟದ ಶಕ್ತಿ ಮಂತ್ರವನ್ನಾಗಿ `ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆಯನ್ನು ಮುನ್ನಲೆಗೆ ತರಲಾಯಿತು.
**
ಅಂದು 29 ಜೂನ್ 2014. ನುಗ್ಗೇನಹಳ್ಳಿ-ಕೊಟ್ಟಾಲದಲ್ಲಿ ಚಾರಿತ್ರಿಕ ದಿನವೊಂದು ದಾಖಲಾಯಿತು. ಹೋರಾಟದ ಮುನ್ನಾದಿನ, ಊರಿನಲ್ಲಿ ಒಂದು ಬಗೆಯ ಆತಂಕ ದುಗುಡ ತುಂಬಿತ್ತು. ಕೇರಿಯ ಜನರಲ್ಲಿ ನಾಳೆ ಹೋರಾಟಕ್ಕೆ ಹೋಗಬೇಕೋ ಬೇಡವೋ ಎನ್ನುವ ಗೊಂದಲ ಮನೆ ಮಾಡಿತ್ತು. ಜಮೀನ್ದಾರಿ ಕುಟುಂಬ ಪರೋಕ್ಷವಾಗಿ ಹೋರಾಟಕ್ಕೆ ತಡೆಯೊಡ್ಡಬಹುದಾದ ಚಟುವಟಿಕೆಗಳಲ್ಲಿ ತೊಡಗಿತ್ತು. ಕೆಲವರು ಧಣಿಯನ್ನು ಎದುರು ಹಾಕಿಕೊಂಡು ಬದುಕುವುದು ಹೇಗೆ ಎಂಬ ಭಯದಲ್ಲಿ ಮುದುಡಿ ಕೂತಿದ್ದರೆ, ಮತ್ತೆ ಕೆಲವರು `ಇರೋದ್ ಒಂದ್ ದಿನ, ಸಾಯೋದ್ ಒಂದ್ ದಿನ’ ಎನ್ನುವ ದಿಟ್ಟ ನಿರ್ಧಾರವೊಂದಕ್ಕೆ ಮನಸ್ಸನ್ನು ಅಣಿಗೊಳಿಸಿ ಹೋರಾಟಕ್ಕೆ ಸಜ್ಜಾಗಿದ್ದರು.

ಆ ದಿನ ಎಂದಿನಂತೆಯೇ ಸೂರ್ಯ ಪೂರ್ವಕ್ಕೇ ಹುಟ್ಟಿದ್ದ. ಆದರೆ ಎಸ್.ಆರ್.ಪುರದ ಪಾಲಿಗೆ ಅಂದಿನ ಸೂರ್ಯ ಕ್ರಾಂತಿಸೂರ್ಯನಾಗಿದ್ದ. ಹೋರಾಟಕ್ಕೆ ಸಾವಿರಾರು ನದಿಗಳೆಂಬಂತೆ, ಎಲ್ಲೆಲ್ಲಿಂದಲೋ ನೂರಾರು ಜನರು ಎಸ್.ಆರ್.ಪುರಕ್ಕೆ ಬಂದಿಳಿದರು. ಹೋರಾಟಗಾರರು, ಅಧ್ಯಾಪಕರು, ಚಳವಳಿಗಾರರು, ಲೇಖಕರು, ಕವಿಗಳು, ವಿದ್ಯಾರ್ಥಿಗಳು, ಪತ್ರಕರ್ತರು, ಬೇರೆ ಬೇರೆ ಭಾಗದ ದಲಿತ ಯುವಕರು ಹೀಗೆ ನಾನಾ ಧಾರೆಗಳಿಂದ ಹರಿದು ಬಂದ ಜನರು ಊರಿನಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದಂತಿತ್ತು. ಇಡೀ ಊರು ನೆಬ್ಬೆರಗಾಗಿ ನೋಡಿತು. ಊರಿನ ಮೈ ನಡುಗುವಂತೆ ಮಾಡಿದ ದಲಿತ ಕೇರಿಯು ಮೇಲುಜಾತಿಯವರ ಕಂಗೆಣ್ಣಿಗೆ ಗುರಿಯಾಗಿತ್ತು. ಆದರೆ ಯಾರೊಬ್ಬರು ಉಸಿರು ಬಿಡುವಂತಿರಲಿಲ್ಲ. ಹೆಜ್ಜೆ ಹೆಜ್ಜೆಗೂ ಪೋಲಿಸರ ಕಣ್ಗಾವಲು. ನೆರೆದ ಜನರಲ್ಲಿ ಅರ್ಧದಷ್ಟು ಖಾಕಿದಾರಿಗಳೇ ಕಾಣುತ್ತಿದ್ದರು. ಬಂದ ಜನರಿಗೆ ಊರವರು ನೀರು ಕೊಡದಾದರು. ಮುಖ ಕೊಟ್ಟು ಮಾತನಾಡಲು ಹಿಂಜರಿದರು. ಕ್ಷಣ ಕ್ಷಣವೂ ಏನಾದರೂ ಘಟಿಸೀತೆಂದು ಊರವರಲ್ಲಿ ಒಂದು ಬಗೆಯ ಕುತೂಹಲ.

ಊರಾಚೆಯಿಂದ ಊರನ್ನು ಪ್ರವೇಶಿಸದೆ ಮೆರವಣಿಗೆ ಆರಂಭವಾಯಿತು. `ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆ ಎಲ್ಲರ ಎದೆಯೊಳಗಿಂದ ಮೊಳಗಿತು. ಊಳಬೇಕಿದ್ದ ಜಮೀನಿನತ್ತ ಹೆಜ್ಜೆಗಳು ಸಾಗತೊಡಗಿದವು. ಪ್ರತಿಹೆಜ್ಜೆಗಳು ಅರ್ಧಶತಮಾನದಷ್ಟು ಭೂಮಿಯನ್ನು ಆಕ್ರಮಿಸಿಕೊಂಡಿದ್ದ ಜಮೀನ್ದಾರಿಕೆಯ ಅಹಮ್ಮನ್ನು ತುಳಿದೇ ನಡೆದಂತಿತ್ತು. ಹೋರಾಟಕ್ಕೆ ಸಿಕ್ಕ ಬೆಂಬಲ ಇಡೀ ಊರಿನಲ್ಲಿ ವಿದ್ಯುತ್ ಸಂಚಾರವನ್ನು ಮೂಡಿಸಿತ್ತು. ಈ ಬೆಂಬಲದ ಶಕ್ತಿ ಸಂಚಲನೆ ಊರಿನ ದಲಿತ ಕೆಳಜಾತಿ ಯುವಕರಲ್ಲಿ ಎದ್ದು ಕಾಣುವಂತಿತ್ತು. ಅಂತೆಯೇ ಸ್ವತಃ ಭೂಮ್ತಾಯಿಯೇ ತನ್ನ ಮೂಲ ವಾರಸುದಾರರ ಬಳಿ ಸೇರಲು ಸಂಭ್ರಮದಲ್ಲಿದ್ದಂತೆ ನೆಲದ ಕಂಪನವಿತ್ತು.

ಆ ದಿನವನ್ನು ಚಳವಳಿಯ ಸಂಗಾತಿ ಬಿ.ಪೀರಬಾಷ ಅವರು ನೆನಪಿಸಿಕೊಳ್ಳುವುದು ಹೀಗೆ `ಜಮೀನಿನ ಮೇಲೆ ಹಕ್ಕು ಸಾದಿಸಲಾಯಿತೆಂಬ ಅರ್ಥದಲ್ಲಿ ನೇಗಿಲು ಹೂಡಬೇಕಿತ್ತು. ಆವರೆಗೂ ಕೂಲಿಕಾರರಾಗೇ ಬಾಳಿದ್ದ ಆ ರೈತರ ಬಳಿ ಎತ್ತುಗಳಿರಲಿಲ್ಲ. ಅವರ್ಯಾರೂ ಉಳ್ಳವರಲ್ಲದ್ದರಿಂದ ಯಂತ್ರದ ಉಳುಮೆಗೆ ಟ್ರ್ಯಾಕ್ಟರ್‍ಗಳೂ ಇರಲಿಲ್ಲ. ಬಾಡಿಗೆಗೂ ಕೇಳಿದರಂತೆ ಊರಲ್ಲಿ, ಧಣಿಗಳ ಭಯವಿತ್ತೋ ಏನೋ ಯಾರೂ ಕೊಡಲಿಲ್ಲ. ಕೊನೆಗೆ ಯುವಕರೇ ಕಟ್ಟಿಗೆಯ ನೇಗಿಲಿಗೆ ನೊಗಕಟ್ಟಿ ಕೊರಳು ಹೂಡಿದರು. ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆಯ ಬಲದಿಂದಲೇ ನೇಗಿಲೆಳೆದರು. ಬೀಳುಭೂಮಿ ಬಾಯಿಬಿಟ್ಟು ಸೂರ್ಯಕಿರಣಗಳ ನುಂಡಿತು. ಮಾಧ್ಯಮಗಳ ಕ್ಯಾಮೆರಾಗಳು ದೃಶ್ಯ ಸೆರೆಹಿಡಿದವು. ಯಾವ ಹೊತ್ತಿನಲ್ಲಿ ಏನಾಗುವುದೋ ಎಂಬ ದುಗುಡವಿತ್ತೇ ಹೊರತು ಕಳೆಯಂತೆ ಬೆಳೆದಿದ್ದ ಯಜಮಾನಿಕೆ ಕಿತ್ತುಹೋಯಿತು. ಅತೃಪ್ತ ಪೊಲೀಸರು ಫೊಟೋ ಕ್ಲಿಕ್ಕಿಸುತ್ತಲೇ ತಿರುಗಿದರು. ಸಮಾಧಾನವಾಗದೇ ಎಲ್ಲರ ಮುಖಗಳನ್ನೂ ಸಾಮಾನ್ಯವಾಗಿ, ಕೆಲವರ ಮುಖಗಳನ್ನು ವಿಶೇಷವಾಗಿ ರೆಕಾರ್ಡು ಮಾಡಿಕೊಂಡರು. ಪಾಪ ಅವರಿಗೇನು ಬೇಕಿತ್ತೋ, ಬಹುಶಃ ಅದು ಅವರಿಗೆ ಸಿಗಲೇ ಇಲ್ಲ. ಆದರೆ ಆ ಹೊತ್ತಿಗೆ ರೈತರು ತಮಗೆ ಬೇಕಾದದ್ದನ್ನು ಪಡೆದುಕೊಂಡಿದ್ದರು. ಅವರು ಕಳೆದುಕೊಳ್ಳುವುದೇನೋ ಇರಲಿಲ್ಲ. ಆ ಹೊತ್ತು ಊರಿಂದ ಪಲಾಯನಗೈದ ಜಮೀಂದಾರಿ ಯಾಜಮಾನ್ಯದ ‘ನಿರ್ಜೀವ ದೇಹದೊಳ ಪ್ರವೇಶಕ್ಕೆ ಆತನಕ ಬಿಟ್ಟುಹೋಗಿದ್ದ ಆತ್ಮವೆಂಬುದು ಹೊಸ್ತಿಲಬಳಿ ನಿಂತಿತ್ತು’. ಎನ್ನುತ್ತಾರೆ.

s.r.pura-4ಈ ಹೋರಾಟದಲ್ಲಿ ಭಾಗವಹಿಸಿದ್ದ ಕಾರಟಿಗಿಯ ಎ.ನರೇಂದ್ರ ಶೆಟ್ಟಿ ಅವರು `ಹೋರಾಟದ ಸ್ಥಳದಲ್ಲಿ ಕೇಳಿದ ಸಾಮಾಜಿಕ ಕಳಕಳಿಯ ಹಾಡುಗಳು, ಮಾತುಗಳು ಇಂದಿಗೂ ನನ್ನನ್ನು ರೋಮಾಂಚನಗೊಳಿಸುತ್ತಿವೆ. ನನ್ನ 27ವರ್ಷಗಳ ಜೀವನದಲ್ಲಿ ನಾನು ಮೊದಲ ಬಾರಿಗೆ ಪಾಲ್ಗೊಂಡಿದ್ದ ಈ ಹೋರಾಟ ನಿಜಕ್ಕೂ ಅದ್ಭುತ, ಅವಿಸ್ಮರಣೀಯ. ನನ್ನ ಜೀವನಕ್ಕೂ ಮುನ್ನುಡಿಯಾಗುವಂತೆ ನಾನು ಹೋರಾಟವನ್ನು ಇಂದಿಗೂ ಅವಲೋಕಿಸುತ್ತಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ. ಅಂದು ಬೆಂಗಳೂರಿನ ಹಿರಿಯ ಲೇಖಕರಾದ ಪ್ರೊ.ಶಿವರಾಮಯ್ಯ, ನಗರಿಬಾಬಯ್ಯ, ಶಿವಸುಂದರ್, ಡಾ.ವಾಸು, ಕುಮಾರ್ ಸಮತಳ, ಗೌರಿ, ಮಲ್ಲಿಗೆ, ಕೆ.ಎಲ್.ಅಶೋಕ, ನಗರಗೆರೆ ರಮೇಶ್, ಡಾ.ಲಕ್ಷ್ಮಿನಾರಾಯಣ, ಡಾ. ರತಿರಾವ್ ಮತ್ತು ಅನಂತಪುರದ ಜಾತಿ ನಿರ್ಮೂಲನ ಸಮಿತಿಯ ರಾಮಕುಮಾರ್ ವಕೀಲರು ಮತ್ತವರ ತಂಡ, ಸ್ಥಳೀಯವಾಗಿ ಕೊಪ್ಪಳದ ವಿಠ್ಠಪ್ಪ ಗೋರಂಟ್ಲಿ, ಬಿ.ಪೀರಭಾಷಾ, ಭಾರಧ್ವಜ, ಪಂಪಾರೆಡ್ಡಿ, ಎಸ್.ಎನ್.ಬಡಿಗೇರ್, ಪ್ರತಾಪ ರೆಡ್ಡಿ ಹೀಗೆ ನೂರಾರು ಚಳವಳಿಯ ಸಂಗಾತಿಯಳು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಈ ಹೋರಾಟದಲ್ಲಿ ಕೆಲವು ಮೂಲಭೂತ ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಮುಖ್ಯವಾಗಿ ಭೂನ್ಯಾಯ ಮಂಡಳಿ ಆದೇಶ ಪಾಲನೆ ಮಾಡದ ಅಧಿಕಾರಿಗಳ ವಿರುದ್ದ ಸೂಕ್ತ ಕಾರ್ಯಕ್ರಮ ತೆಗೆದುಕೊಳ್ಳುವುದು, 35 ವರ್ಷಗಳಿಂದ ದಲಿತರಿಗೆ ಭೂ ವಂಚನೆ ಮಾಡಿದ ಭೂಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜಾರಿಗೊಳಿಸುವುದು, ಭೂ ವಂಚಿತ ಎಲ್ಲಾ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡುವುದು, ಭೂ ನ್ಯಾಯಮಂಡಳಿಯ ಆದೇಶವನ್ನು ರಾಜ್ಯಾದ್ಯಂತ ಜಾರಿ ಮಾಡದೇ ನಿರ್ಲಕ್ಷ್ಯಿಸಿರುವ ಪ್ರಕರಣಗಳನ್ನು ಸರ್ಕಾರ ಪತ್ತೆಹಚ್ಚಿ ಫಲಾನುಭವಿಗಳಿಗೆ, ಭೂರಹಿತರಿಗೆ ಭೂಮಿ ನೀಡುವುದು ಎಂಬುದಾಗಿತ್ತು. ಈ ಚಳವಳಿ ಬದಲಾದ ರೈತ ಹೋರಾಟದ ಒಂದು ಮಾದರಿಯನ್ನು ಬಿಂಬಿಸುವಂತಿದೆ.

**
ಈ ಹೊತ್ತಿನ ಭೂ ಹೋರಾಟವನ್ನು ನೋಡುತ್ತಿದ್ದರೆ ಪಿ.ಲಂಕೇಶ್ ಅವರ ಮಾತು ಈಗಲೂ ಪ್ರಸ್ತುತವೆನ್ನಿಸುತ್ತದೆ. ಲಂಕೇಶರು ‘ಭೂಸುಧಾರಣೆ ಪ್ರಮಾಣಿಕವಾಗಿ ಜಾರಿಗೆ ಬಂದಿದೆ ಎಂದು ಇಟ್ಟುಕೊಂಡರೂ, ಕರ್ನಾಟಕದಲ್ಲಿ ಅವಿಭಕ್ತ ಕುಟುಂಬಗಳು, ಬೇನಾಮಿ ಸ್ವಾಮ್ಯ ಇತ್ಯಾದಿಗಳಿಂದಾಗಿ ದೊಡ್ಡ ಹಿಡುವಳಿದಾರ ರೈತರಿದ್ದಾರೆ. ಬಹುಸಂಖ್ಯಾತ ರೈತರು ಅಷ್ಟಿಷ್ಟು ಜಮೀನಿನ ಒಡೆತನ ಹೊಂದಿದ್ದಾರೆ. ಹಳ್ಳಿಯ ಸಂದರ್ಭದಲ್ಲಿ ಭೂಸ್ವಾಮ್ಯ ಪಡೆದ ರೈತರು ಇತರಿಗಿಂತ ಸ್ವಲ್ಪ ನೆಮ್ಮದಿ ಮತ್ತು ಪ್ರಭಾವ ಹೊಂದಿದವರು. ಹಳ್ಳಿಯಲ್ಲಿ ಶಿಕ್ಷಣ ಪಡೆದು ನಗರದತ್ತ ಹೋದ ಬಹುಪಾಲು ಹುಡುಗರು ಕೂಡ ಇಂಥ ರೈತ ಕುಟುಂಬದವರು. ಈ ರೈತ ಕುಟುಂಬದವರೇ ರಾಜಕೀಯವಾಗಿ ಕೂಡ ಸ್ಥಾನಮಾನಗಳನ್ನು ಗಳಿಸಿರುವವರು. ಇವತ್ತು ರೈತರು ತಮ್ಮ ಸಂಘಗಳನ್ನು ರೂಪಿಸಿಕೊಂಡು ಸರ್ಕಾರದ ಎದುರು ನಿಂತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅದಕ್ಕೆ ಕಾರಣ ಕೂಡ ಭೂಸ್ವಾಮ್ಯ ಹೊಂದಿದ ರೈತರ ಸ್ಥಿತಿವಂತಿಕೆ’ ಎನ್ನುತ್ತಾರೆ. ಈ ಮಾತು ಕರ್ನಾಟಕದ ಭೂಹೋರಾಟಗಳನ್ನು ಅರ್ಥಮಾಡಿಕೊಳ್ಳಲು ಈಗಲೂ ನೆರವಾಗುತ್ತದೆ.

ಹಾಗೆ ನೋಡಿದರೆ ಭೂಮಿಗಾಗಿ ರೈತರು ಮಾಡಿದ ಹೋರಾಟಗಳಿಗೆ ಕರ್ನಾಟಕದಲ್ಲಿ ಒಂದು ಪರಂಪರೆಯೇ ಇದೆ. 1683ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ ಎದುರು ಭೂತೆ ರಿಗೆಯ ಹೇರಿಕೆ ವಿರೋದಿsಸಿ ನಡೆದ ಹೋರಾಟದಿಂದ, ಈ ಹೊತ್ತಿನ ಶ್ರೀರಾಮರಂಗಾಪುರದ ಭೂ ಹೋರಾಟದವರೆಗೆ ಅದರ ಹರವು ದೊಡ್ಡದು. ಮೊದಲ ಹಂತದ ಹೋರಾಟಗಳು ಭೂಮಿಯ ತೆರಿಗೆ, ಕಂದಾಯ, ಗೇಣಿಯನ್ನು ವಿರೋದಿsಸಿ ನಡೆದವು. 1947ರ ಈಚೆಗೆ ಭೂಮಿಯನ್ನು ಪಡೆಯುವ ಹಕ್ಕಿಗಾಗಿ, ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಉಳುವವನೆ ಭೂ ಒಡೆಯ ಎನ್ನುವ ನೆಲೆಯಲ್ಲಿ ಹೋರಾಟಗಳಾದವು. 1970 ರ ನಂತರ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಜಾರಿಗೆ ತಂದ `ಉಳುವವನೆ ಭೂ ಒಡೆಯ’ ಎಂಬ ಕ್ರಾಂತಿಕಾರಿ ಯೋಜನೆಯ ಅನುಷ್ಠಾನದ ಕುರಿತಂತೆ ಹೋರಾಟಗಳಾದವು.

srpura1ಕರ್ನಾಟಕದ ಭೂಹೋರಾಟಗಳ ಮೇಲೆ ಭಾರತದ ಇತರೆ ಕಡೆಗಳಲ್ಲಿ ಆದ ಮಾಪಿಳ್ಳೆ ದಂಗೆಗಳು, ಬಾರ್ಡೋಲಿ ಸತ್ಯಾಗ್ರಹ, ವಾರಲಿ ಆದಿವಾಸಿಗಳ ಹೋರಾಟ, ಆಂಧ್ರದ ತೆಲಂಗಾಣ ಹೋರಾಟಗಳ ಪರಿಣಾಮವಾಗಿತ್ತು. ಭೂಮಾಲಿಕಶಾಹಿಯನ್ನು ನಾಶಗೊಳಿಸಬೇಕೆಂಬ ಕಮ್ಯುನಿಸ್ಟರು, ಆರ್ಥಿಕ ಸ್ವಾತಂತ್ರ್ಯದ ಮೂಲಕ ಸಮಾಜವಾದಿ ಸಮಾಜ ನಿರ್ಮಿಸಬೇಕೆಂಬ ಸೋಷಲಿಸ್ಟರು, ರೈತರ ಬಗ್ಗೆ ಆಳುವ ಸರ್ಕಾರದ ನಿರ್ಲಕ್ಷ್ಯ ವಿರೋದಿsಸಿ ರೈತ ಸಂಘದವರು ಬೇರೆ ಬೇರೆ ಆಯಾಮಗಳಲ್ಲಿ ರೈತ ಹೋರಾಟಗಳನ್ನು ರೂಪಿಸಿದರು.
ಈ ಹೊತ್ತಿನಲ್ಲಿ ರೈತ ಹೋರಾಟವನ್ನು ಅಧ್ಯಯನ ಮಾಡುವುದೆಂದರೆ ಭೂತದ ಮೂಲಕ ವರ್ತಮಾನವನ್ನು ಕಟ್ಟಿಕೊಳ್ಳುವ ಕಾಣ್ಕೆಗಳನ್ನು ಪಡೆಯುವುದು ಎಂದೇ ಅರ್ಥ. ನಡೆದಿದೆ ಎನ್ನಲಾಗುವ ಭೂಹೋರಾಟದ ಕಥನ ವರ್ತಮಾನದ ಕಥನವು ಕೂಡ. ಕರ್ನಾಟಕದಲ್ಲಿ ನಡೆದ ಭೂ ಹೋರಾಟಗಳ ಸಂಖ್ಯೆಗೆ ಹೋಲಿಸಿದರೆ ಆ ಕುರಿತು ನಡೆದ ಅಧ್ಯಯನಗಳು ತುಂಬ ಕಡಿಮೆ. ಹೆಚ್ಚಿನವು ಮಾಹಿತಿ ಪ್ರಧಾನವಾಗಿವೆ. ಹೋರಾಟದಲ್ಲಿ ಭಾಗವಹಿಸಿದವರು ಆತ್ಮಕಥನ ಮಾದರಿಯಲ್ಲಿ ನಿರೂಪಿಸುವ ಇನ್ನೊಂದು ಕ್ರಮವಿದೆ. ಅದು ಕನ್ನಡದಲ್ಲಿ ಪ್ರಯೋಗವಾದದ್ದು ಕಡಿಮೆ.

ಮಹಾರಾಷ್ಟ್ರದಲ್ಲಿ ಆದಿವಾಸಿಗಳ ಬದುಕಿನ ಭಾಗವಾಗಿ ಭೂಹೋರಾಟ ಸಂಘಟಿಸಿದ್ದ ಗೋದಾವರಿ ಪರುಳೇಕಾರರ ಕಥನವನ್ನು (‘ಮಾನವ ಎಚ್ಚೆತ್ತಾಗ’) ಈ ನೆಲೆಯಲ್ಲಿ ನೋಡಬಹುದು.
ಹೋರಾಟ ನಡೆದ ಕಾಲಘಟ್ಟದ ಆಸುಪಾಸಿನವರು ಹೋರಾಟದಲ್ಲಿ ಭಾಗವಹಿಸಿದವರನ್ನು ಸಂದರ್ಶಿಸಿ, ಪತ್ರಿಕಾ ಬರಹ, ಕರಪತ್ರ ಮುಂತಾದ ಆಕರಗಳನ್ನು ಬಳಸಿಕೊಂಡು ಒಂದು ಹೋರಾಟದ ಚರಿತ್ರೆಯನ್ನು ಕಟ್ಟುವ ಕ್ರಮ ಜನಪ್ರಿಯವಾಗಿದೆ. ಈ ನೆಲೆ ಕನ್ನಡದಲ್ಲಿ ಹೆಚ್ಚು ಬಳಕೆಯಾಗಿದೆ. ಇಂತಹ ನೆಲೆಯಲ್ಲಿಯೆ ವರ್ತಮಾನದ ಎಚ್ಚರಗಳ ಮೂಲಕ ಗತವನ್ನು ಪರಿಶೀಲಿಸುವ ಒಂದು ಮಾದರಿಯಿದೆ. ಕನ್ನಡದಲ್ಲಿ ಜಿ.ರಾಜಶೇಖರ ಅವರು ‘ಕಾಗೋಡು ಸತ್ಯಾಗ್ರಹ’ ಎಂಬ ತಮ್ಮ ಕೃತಿಯಲ್ಲಿ ಇಂತಹ ಪ್ರಯೋಗವನ್ನು ಮಾಡಿದ್ದಾರೆ. ಇದು ಭೂಹೋರಾಟದ ಅಧ್ಯಯನಗಳಿಗೆ ಒಂದು ಮಾದರಿ ಕೃತಿಯಾಗಿದೆ.

ಒಂದು ಭೂ ಹೋರಾಟವನ್ನು ಅದರ ವರ್ತಮಾನದ ಪರಿಣಾಮಗಳ ಮೂಲಕ ನೋಡುವ, ಹೋರಾಟ ಸಂದರ್ಭದ ರಾಜಕೀಯ, ಸಾಂಸ್ಕøತಿಕ, ಸಾಮಾಜಿಕ ಪರಿದಿsಯಲ್ಲಿಟ್ಟು ಪರೀಕ್ಷಿಸುವ, ಶುದ್ಧ ರಾಜಕೀಯ ಚರಿತ್ರೆಯ ಕಥನವನ್ನಾಗಿಸುವ, ಮಾಹಿತಿಯೊಂದಿಗೆ ಸರಿದೂರವನ್ನು ನಿರ್ಮಿಸಿಕೊಂಡು ವಿಶ್ಲೇಷಿಸುವ, ಒಂದು ಕಾಲಘಟ್ಟದ ಸಾಂಸ್ಕøತಿಕ ಕಥನವನ್ನಾಗಿಸುವ ಮೂಲಕ ಗತ ವರ್ತಮಾನವನ್ನು ಬೆಸೆಯುವ ಸೂಕ್ಷ್ಮತೆಯಲ್ಲಿ ಒಂದು ಹೋರಾಟವನ್ನು ದಾಖಲಿಸುವ ತುರ್ತು ಈ ಕಾಲಕ್ಕಿದೆ. ಇಂದಿನ ಭೂ ಹೋರಾಟಗಳನ್ನು ಕೂಡ ಹೀಗೆ ಕಾಲಕಾಲಕ್ಕೆ ದಾಖಲಿಸುವ ಅಗತ್ಯವಿದೆ.

-ಬರಹಕ್ಕೆ ಮಾಹಿತಿ ಒದಗಿಸಿದ ಕರಿಯಪ್ಪ ಗುಡಿಮನಿ, ರಾಮಚಂದ್ರಪ್ಪ, ಪಂಪರೆಡ್ಡಿ, ಕುಮಾರ ಸಮತಳ, ಪೀರ್ ಭಾಷಾ ಅವರಿಗೆ ಕೃತಜ್ಞತೆಗಳು
ಚಿತ್ರಗಳು: ಪಂಪರೆಡ್ಡಿ.

ಕಾಮೆಂಟ್‌ಗಳಿಲ್ಲ: