ಶನಿವಾರ, ಏಪ್ರಿಲ್ 23, 2011

ಅಖಿಲ ಭಾರತ ಜಾನಪದ ಸಮ್ಮೇಳನದ ಎರಡನೇ ದಿನ


ಜಾನಪದ ಸಮ್ಮೇಳನದ ಎರಡನೇ ದಿನ ಸಹಜವಾಗಿ ಆರಂಭವಾಯಿತು. ನಿನ್ನೆಯ ಜಾನಪದ ಕಲೆಗಳ ಮೆರವಣಿಗೆಯ ಗುಂಗಿನಿಂದ ಹೊರಬಂದ ಜಾನಪದ ವಿದ್ವಾಂಸರು ಈಗ ವಿದ್ವತ್ ಚಿಂತನೆಗೆ ಅಣಿಯಾದಂತಿತ್ತು. ಜಾನಪದ ಕಲಾವಿದರನ್ನು ಕೇಳುಗರನ್ನಾಗಿ ಕರೆತರಲಾಗಿತ್ತು. ಕಾರಣ ದೊಡ್ಡ ಸಭಾಂಗಣ ಖಾಲಿ ಖಾಲಿ ಹೊಡೆಯುವ ಭಯ ಆಯೋಜಕರನ್ನು ಕಾಡಿದ್ದಿರಬೇಕು. ಅಂತು ಇಂತು ಸೆಮಿನಾರುಗಳು ಪ್ರಾರಂಭವಾದವು. ರಂಗಮಂದಿರದ ವೇದಿಕೆ ಜಾನಪದ ಶೈಲಿಯಲ್ಲಿ ಸಿದ್ದಪಡಿಸಿದ್ದು ಆಕರ್ಷಕವಾಗಿತ್ತು.


ಕರ್ನಾಟಕದ ಬಹುಪಾಲು ಜಾನಪದ ವಿದ್ವಾಂಸರು ಈ ಸಮ್ಮೇಳನಕ್ಕೆ ಬಂದಿದ್ದರು. ಎಲ್ಲರೂ ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಕುಶಲೋಪರಿ ಮಾತನಾಡುತ್ತಾ ಒಂದು ಬಗೆಯ ಸಂಭ್ರಮವನ್ನು ಅನುಭವಿಸುತ್ತಿದ್ದರು. ಸಮ್ಮೇಳನದ ಈ ದಿನ ಒಟ್ಟು ನಾಲ್ಕು ಚಿಂತನಾ ಗೋಷ್ಠಿಗಳು ನಡೆದವು. ಒಂದು: ಪ್ರಾದೇಶಿಕ ಜಾನಪದ ಅಧ್ಯಯನ ಕುರಿತ ಮೊದಲ ಗೋಷ್ಠಿಯಲ್ಲಿ ಶ್ರೀರಾಮ ಇಟ್ಟಣ್ಣನವರ್, ಸೋಮನಾಥ ನುಚ್ಚಾ, ಪ್ರೇಮಾ ಸಿರ್ಸೆ, ರಾಜೇಂದ್ರ ಯರನಾಳೆ, ಸೋಮನಾಥ ಯಾಳವಾರ ಮಾತನಾಡಿದರು. ಎರಡು: ಪ್ರಾದೇಶಿಕ ಜಾನಪದ ಅಧ್ಯಯನದ ಎರಡನೇ ಗೋಷ್ಠಿಯಲ್ಲಿ ಪಿ.ಕೆ.ಖಂಡೋಬಾ, ಶಂಭು ಬಳಿಗಾರ, ಮಹೇಶ ತಿಪ್ಪಶೆಟ್ಟಿ, ಹೆಚ್. ಕಾಶೀನಾಥ ರೆಡ್ಡಿ ಮಾತನಾಡಿದರು. ಮೂರು: ಭಾರತದ ಜಾನಪದ ಅಧ್ಯಯನದ ಗೋಷ್ಠಿ ಒಂದರಲ್ಲಿ ಆರ‍್ವಿಯಸ್ ಸುಂದರಂ, ಎಸ್.ಎ ಕೃಷ್ಣ, ಸರಸ್ವತಿ ವೇಣುಗೋಪಾಲ್, ಕೃಷ್ಣಭಟ್ ಅರ್ತಿಕಜೆ, ಕೆ.ಎಮ್. ಭರತನ್ ಮಾತನಾಡಿದರು. ನಾಲ್ಕು: ಬದಲಾಗುತ್ತಿರುವ ಜಗತ್ತು ಮತ್ತು ಜಾನಪದ ಕುರಿತ ಗೋಷ್ಠಿಯಲ್ಲಿ ಹೆಚ್.ಜೆ.ಲಕ್ಕಪ್ಪಗೌಡ, ಟಿ.ಎನ್.ಶಂಕರನಾರಾಯಣ, ಟಿ.ಗೋವಿಂದರಾಜ, ಚಕ್ಕರೆ ಶಿವಶಂಕರ್, ರಂಗಾರೆಡ್ಡಿ ಕೋಡಿರಾಂಪುರ, ಪಿ.ಸುಬ್ಬಾಚಾರಿ ಮಾತನಾಡಿದರು.

(ಬಿದರಿ ಕಲೆಯ ಪ್ರತಿಮೆಗಳು)

ತಮಿಳು ಜಾನಪದವನ್ನು ಕುರಿತಂತೆ ತುಳಸಿ ವೇಣುಗೋಪಾಲ ಅವರು ಮಹಿಳಾ ನೆಲೆಯಲ್ಲಿ ಕೆಲವು ಹೊಸ ಸಂಗತಿಗಳನ್ನು ಹೇಳಿದರು. ಶಂಭು ಬಳಿಗಾರ ಅವರು ಜಾನಪದವನ್ನು ತಮ್ಮ ಅನುಭವದ ನೆಲೆಯಲ್ಲಿ ಮಾತನಾಡಿ ಸರಕಾರದ ಅಮಾನವೀಯ ಅಭಿವೃದ್ಧಿಯ ಮಾದರಿಗಳನ್ನು ವಿರೋಧಿಸುವ ಎದೆಗಾರಿಗೆ ಜಾನಪದ ವಿದ್ವಾಂಸರಿಗೆ ಬರದ ಹೊರತು ಜಾನಪದವನ್ನು ಉಳಿಸುವ ಮಾತು ಕೇವಲ ಬೂಟಾಟಿಕೆ ಎನ್ನುವ ಅರ್ಥದಲ್ಲಿ ಮಾತನಾಡಿದರು. ಚಕ್ಕರೆ ಶಿವಶಂಕರ್ ಸಾಮಾಜಿಕ ನ್ಯಾಯದ ನೆಲೆಯಲ್ಲಿ ತಳಸಮುದಾಯಗಳು ಪ್ರತಿರೋಧಕ ಶಕ್ತಿಯನ್ನು ಪಡೆಯಬೇಕಾಗಿದೆ, ಅಂತಹ ಶಕ್ತಿಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಜಾನಪದ ಅಧ್ಯಯನಗಳು ಚಲಿಸಬೇಕು ಎಂದರು. ರಂಗಾರೆಡ್ಡಿ ಕೋಡಿರಾಂಪುರ ಅವರು ಹೊಸ ವಿದ್ಯಮಾನಗಳ ಜತೆ ಜಾನಪದ ಹೇಗೆ ಹೊಸದಾಗಿ ಹುಟ್ಟುತ್ತದೆ ಎನ್ನುವ ಬಗ್ಗೆ ಕೆಲವು ಉದಾಹರಣೆಗಳನ್ನು ನೀಡಿ ನಗರಗಳಲ್ಲಿ ಜಾನಪದ ವರ್ಗದ ನೆಲೆಯಲ್ಲಿ ಹುಟ್ಟುತ್ತಿದೆ ಎಂದರು. ಎಸ್.ಎ.ಕೃಷ್ಣಯ್ಯ ಕರ್ನಾಟಕ ಜಾನಪದ ಅಧ್ಯಯನದಲ್ಲಿ ಹೆಚ್ಚು ಚರ್ಚೆಯಾಗದ ಕೆಲವು ಸಂಗತಿಗಳ ಬಗ್ಗೆ ಗಮನಸೆಳೆದರು.


ಉಳಿದಂತೆ ಇಲ್ಲಿ ಮಾತನಾಡಿದ ಬಹುಪಾಲು ಜಾನಪದ ವಿದ್ವಾಂಸರ ಮಾತುಗಳಲ್ಲಿ ಜಾನಪದ ನಶಿಸುತ್ತಿರುವ ಬಗ್ಗೆ ಆತಂಕ ಬೇರೆ ಬೇರೆ ನೆಲೆಯಲ್ಲಿ ಮಂಡನೆಯಾಯಿತು. ಇಲ್ಲಿನ ಮಾತುಗಳಲ್ಲಿ ಜಾನಪದ ವಿಶ್ವವಿದ್ಯಾಲಯಕ್ಕೆ ಸಲಹೆ ಕೊಡುವ ಆಯಾಮವೂ ಕಾಣುತ್ತಿತ್ತು. ಈಗಾಗಲೇ ಜಾನಪದ ಪುಸ್ತಕಗಳಲ್ಲಿ ದಾಖಲಾದ ಮಾಹಿತಿಗಳನ್ನು ಆಧರಿಸಿ ಕೆಲವು ವಿದ್ವಾಂಸರು ತಮ್ಮ ಚಿಂತನೆಯನ್ನು ಮಂಡಿಸುತ್ತಿದ್ದರು. ಉಳಿದಂತೆ ಜಾನಪದವನ್ನು ಹೇಗೆ ಉಳಿಸಬೇಕು ಎನ್ನುವ ತರಾವರಿ ಅಭಿಪ್ರಾಯಗಳು ವ್ಯಕ್ತವಾದವು. ಅವುಗಳಲ್ಲಿ ಹೊಸತನವೇನೂ ಇರಲಿಲ್ಲ. ಈ ಮಾತುಗಳಿಂದ ಈಗಾಗಲೇ ಕೇಳಿದಂತಹವುಗಳು ಎನ್ನುವ ಅನುಭವ ಬಿಟ್ಟರೆ ಜಾನಪದ ಕುರಿತಂತೆ ಹೊಸ ಮಾತುಗಳು ಎನ್ನುವಂತಿರಲಿಲ್ಲ.


ಈ ಸೆಮಿನಾರಿನಲ್ಲಿ ಸಮಯದ ಅಭಾವವಿತ್ತು. ಮಾತನಾಡುವವರಿಗೆ ಕೇವಲ ಹತ್ತು ನಿಮಿಷಗಳನ್ನು ಮಾತ್ರ ನೀಡಲಾಗಿತ್ತು. ಹಾಗಾಗಿ ಕೆಲವರು ತಾವು ಏನು ಹೇಳಬೇಕು ಎನ್ನುವುದರಲ್ಲಿ ಗೊಂದಲಗೊಂಡಂತ್ತಿತ್ತು. ಉಳಿದಂತೆ ಚರ್ಚೆಗೆ ಹೆಚ್ಚು ಅವಕಾಶವಿರಲಿಲ್ಲ. ಇನ್ನು ಜಾನಪದ ಕಲಾವಿದರು ಕಷ್ಟಪಟ್ಟು ಆಯೋಜಕರ ಒತ್ತಾಯಕ್ಕೆ ಕುಳಿತ್ತಿದ್ದರು. ಕಾರಣ ಅವರನ್ನು ನೀವು ಕೂತು ಮಾತುಗಳನ್ನು ಕೇಳಿ ಎನ್ನುವುದು ಅಷ್ಟು ಸರಿಯಾಗಲಾರದು. ಅಷ್ಟಕ್ಕೂ ಅವರು ತಮಗೆ ನಿಲುಕದ ಸಂಗತಿಗಳ ಬಗ್ಗೆ ಕೂತು ಕೇಳುವುದಾದರೂ ಹೇಗೆ? ಅಥವಾ ಅವರಿಗೆ ಹೀಗೆ ಸಭೆಯೊಂದರಲ್ಲಿ ಕೂತು ಮಾತು ಕೇಳುವುದು ಕೂಡ ಅವರ ಬದುಕಿನ ಕ್ರಮದಲ್ಲಿ ಬಂದದ್ದಲ್ಲ.

ಸಂಜೆಯಾಗುತ್ತಿದ್ದಂತೆ ಮುಖ್ಯ ವೇದಿಕೆಯಲ್ಲಿ ಜನಪದ ಕಲೆಗಳಿಗೆ ಜೀವ ಬರತೊಡಗಿತು. ಅನೇಕರು ಜಾನಪದ ಕಲೆಯ ಸವಿಯನ್ನು ಸವಿಯಲೆಂದು ಬಂದಿದ್ದರು. ಕರ್ನಾಟಕದ ಪ್ರದರ್ಶನಾತ್ಮಕ ಕಲೆಗಳಲ್ಲಿ ಮಹಿಳೆಯರ ಅದರಲ್ಲೂ ಹರೆಯದ ಹುಡುಗಿಯರ ಭಾಗವಹಿಸುವಿಕೆ ಕಡಿಮೆ. ಈ ಕಲೆಗಳು ಕಲೆಯ ಕಾರಣಕ್ಕೇ ಗಮನಸೆಳೆಯಬೇಕು. ಆದರೆ ಜಮ್ಮು ಕಾಶ್ಮೀರಿ, ಒರಿಸ್ಸಾ, ಕೇರಳದ ಜನಪದ ಕಲೆಗಳಲ್ಲಿ ಹರೆಯದ ಹುಡುಗಿಯರು ಭಾಗವಹಿಸಿದ್ದರಿಂದ ಈ ಕಲಾ ಪ್ರದರ್ಶನಗಳು ಹೆಚ್ಚು ರೋಮಾಂಚನಗೊಳಿಸಿದವು. ಕಾಶ್ಮೀರಿ ಕನ್ಯೆಯರು ಯುವ ಸಮುದಾಯ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಸಹಜವಾಗಿ ಜಾನಪದದ ಚಿಂತನೆಯನ್ನು ಕೇಳಿದ ಜನರ ಪ್ರಮಾಣಕ್ಕಿಂತ, ಜನಪದ ಕಲೆಗಳನ್ನು ನೋಡಿ ಸಂಭ್ರಮಿಸಿದ ಜನರ ಸಂಖ್ಯೆ ಹೆಚ್ಚಿನದಾಗಿತ್ತು.

ಸಾಮಾನ್ಯ ಜನರಿಗೆ ಚಿಂತನೆ ಒಂದು ಗೊಡ್ಡು ಪುರಾಣದಂತೆ ಕಾಣುತ್ತದೆ. ಅಥವಾ ಸಾಮಾನ್ಯ ಜನರು ಕೂತು ಕೇಳುವಂತಹ, ಅವರ ತಿಳುವಳಿಕೆಗೆ ದಕ್ಕುವಂತಹ ವಾತಾವರಣವನ್ನು ಅಕಾಡೆಮಿಕ್ ಚಿಂತನಾ ಮಾದರಿ ಸೃಷ್ಠಿಸುವಲ್ಲಿ ವಿದ್ವತ್ ವಲಯ ಎಡವಿದೆ ಎಂದು ನನಗನ್ನಿಸಿತು. ಆ ಕಾರಣಕ್ಕೇ ಪ್ರಗತಿಪರ ಆಲೋಚನೆಗಳು ಜನರ ತಿಳುವಳಿಕೆಯ ಭಾಗವಾಗುವುದಿಲ್ಲ. ಹೀಗಾಗದ ಹೊರತು ಜನಸಾಮಾನ್ಯರಲ್ಲಿ ಎಚ್ಚರ ಮೂಡುವುದಾದರೂ ಹೇಗೆ ಎನ್ನುವ ಪ್ರಶ್ನೆಯೊಂದು ನನ್ನನ್ನು ಕೊರೆಯತೊಡಗಿತು.
(ಬಿದರಿ ಕಲೆಯ ಪ್ರತಿಮೆಗಳ ಅಂಗಡಿ)

(ಹೊನ್ನಾವರದ ಸುಗ್ಗಿ ಕುಣಿತದ ಯುವ ಜಾನಪದ ಕಲಾವಿದರು)

(ಪ್ರದರ್ಶನ ನೀಡಿ ದಣಿವಾರಿಸಿಕೊಳ್ಳುತ್ತಿರುವ ಕಾಶ್ಮೀರಿ ಕನ್ಯೆಯರು)

(ಕಾಶ್ಮೀರಿ ಕನ್ಯೆಯರ ಸೆಳೆಯುವ ಹರೆಯದ ಹುಡುಗ)

(ಪ್ರದರ್ಶನ ನೀಡುತ್ತಿರುವ ಕಾಶ್ಮೀರಿ ಕನ್ಯೆಯರು)

(ಪೇಪರ್ ಓದುತ್ತಾ, ಮೊಬೈಲಿನಲ್ಲಿ ಮಾತನಾಡುತ್ತಾ ತಮ್ಮ ಸರತಿ ಕಾಯುತ್ತಿರುವ ಜನಪದ ಕಲಾವಿದರು)

(ದೂರದೃಷ್ಟಿ)

(ರಾಮನಗರದ ಜಾನಪದ ಲೋಕ ಬೀದರಿಗೂ ಬಂತು)

(ರಾಮನಗರದ ಜಾನಪದ ಲೋಕದ ಸಂಗ್ರಹ)
(ರಾಮನಗರದ ಜಾನಪದ ಲೋಕದ ಸಂಗ್ರಹ)
(ರಾಮನಗರದ ಜಾನಪದ ಲೋಕದ ನಿರ್ಮಾತೃ ಹೆಚ್.ಎಲ್. ನಾಗೇಗೌಡ ಅವರು)

(ರಾಮನಗರದ ಜಾನಪದ ಲೋಕದ ಸಂಗ್ರಹ)

(ರಾಮನಗರದ ಜಾನಪದ ಲೋಕದ ಸಂಗ್ರಹ)

(ರಾಮನಗರದ ಜಾನಪದ ಲೋಕದ ಸಂಗ್ರಹ)
(ರಾಮನಗರದ ಜಾನಪದ ಲೋಕದ ಸಂಗ್ರಹ)
(ರಾಮನಗರದ ಜಾನಪದ ಲೋಕದ ಸಂಗ್ರಹ)
(ರಾಮನಗರದ ಜಾನಪದ ಲೋಕದ ಸಂಗ್ರಹ)
(ರಾಮನಗರದ ಜಾನಪದ ಲೋಕದ ಸಂಗ್ರಹ)

ಶುಕ್ರವಾರ, ಏಪ್ರಿಲ್ 22, 2011

ಅಖಿಲ ಭಾರತ ಜಾನಪದ ಸಮ್ಮೇಳನದ ಮೊದಲ ದಿನ

-ಅರುಣ್ನಾನು ಬೀದರಕ್ಕೆ ಬಂದದ್ದು ಇದು ಎರಡನೇ ಬಾರಿ. ಮೊದಲನೆಯದು ಎಂ.ಎ ಮಾಡುವಾಗ ಕನ್ನಡ ವಿಶ್ವವಿದ್ಯಾಲಯ ಜಾನಪದ ವಿಭಾಗದ ದೇಸಿ ಸಮ್ಮೇಳನಕ್ಕೆ ಬಂದಿದ್ದೆ. ಈಗ ಅಖಿಲ ಭಾರತ ಜಾನಪದ ಸಮ್ಮೇಳನಕ್ಕೆ ಎರಡನೇ ಬಾರಿ ಬರಬೇಕಾಯಿತು. ಎರಡೂ ಬೇಟಿಯೂ ಸಾದ್ಯವಾದದ್ದು ಜಾನಪದದ ಕಾರಣಕ್ಕೆ. ಬೀದರ್ ಒಂದು ಸುಂದರ ನಗರಿ. ಬೀದರ ನೋಡಿದರೆ ನನಗೆ ಆಗ್ರ ನೋಡಿದಂತಹ ಅನುಭವವಾಗುತ್ತದೆ. ಪುರಾತನ ಕೋಟೆ ಕೊತ್ತಲುಗಳು ನಮ್ಮ ಅತ್ಯಾಧುನಿಕ ಮನಸ್ಸನ್ನೂ ಕೂಡ ಪುರಾತನ ಕಾಲಕ್ಕೆ ಕರೆದೊಯಯ್ಯತ್ತದೆ. ಕರ್ನಾಟಕದ ತಲೆಯ ಭಾಗದಂತಿರುವ ಇಂತಹ ಬೀದರ್‌ನಲ್ಲಿ ಮೊದಲ ಅಖಿಲ ಭಾರತ ಜಾನಪದ ಸಮ್ಮೇಳನ ನಡೆಯುತ್ತಿರುವುದು ಚಾರಿತ್ರಿಕವಾಗಿ ಮುಖ್ಯವಾದ ಘಟನೆ.
ನಾನು ಬೀದರ್ ಸಮ್ಮೇಳನಕ್ಕೆ ಆಹ್ವಾನಿತ ವಿದ್ವಾಂಸನಾಗಿ ಬರದೆ, ಜಾನಪದ ಕ್ಷೇತ್ರದಲ್ಲಿ ಆಸಕ್ತಿಯನ್ನಿಟ್ಟುಕೊಂಡ ಒಬ್ಬ ವಿದ್ಯಾರ್ಥಿಯಾಗಿ ಬಂದಿದ್ದೆ. ಹಾಗಾಗಿ ಎಲ್ಲಿ ಉಳಿಯುವುದೋ ಎಂಬ ಆತಂಕದಿಂದ ಬೀದರ ಬಸ್ ನಿಲ್ದಾಣಕ್ಕೆ ಇಳಿದಾಗ ಆಕಸ್ಮಿಕವಾಗಿ ಕನ್ನಡ ವಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ಟಿ.ಆರ್.ಚಂದ್ರಶೇಖರ್ ಸಾರ್ ಸಿಕ್ಕರು. ಸದ್ಯ ಅವರು ಉಳಿದ ರೂಮಿನಲ್ಲೇ ಬೆಳಗಿನ ಸ್ನಾನಾದಿಗಳನ್ನು ಮುಗಿಸಿಕೊಂಡು ಒಂದು ರೀತಿಯ ಆರಾಮದಾಯಕ ಅನುಭವವಾಯಿತು. ನಿನ್ನೆಯ ದಿನ ವಿಪರೀತ ಮಳೆಯಾಗಿದ್ದರಿಂದ ಬೀದರ್ ಸ್ನಾನಮಾಡಿ ಮೈ ಒಣಗಿಸಿಕೊಳ್ಳುವಂತಿತ್ತು. ಹಾಗಾಗಿ ಸಮ್ಮೇಳನದ ಅಬ್ಬರವಾಗಲಿ, ಪ್ರಚಾರವಾಗಲಿ ಒಂದಿಷ್ಟೂ ಕಾಣುವಂತಿರಲಿಲ್ಲ. ನಾನು ಆಹ್ವಾನಿತನಲ್ಲದ ಕಾರಣ ಸಮ್ಮೇಳನದ ಯಾವುದೇ ಸೌಲಭ್ಯಗಳನ್ನು ಅಧಿಕೃತವಾಗಿ ಪಡೆಯಲು ಸಾದ್ಯವಿರಲಿಲ್ಲ. ಪರಿಚಯದ ಮೇರೆಗೆ ಗೊ.ರು.ಚ ಅವರಲ್ಲಿ ನಾನು ಬಂದಿರುವುದಾಗಿ ಹೇಳಿಕೊಂಡು ರೂಮು ಮತ್ತು ಊಟದ ವ್ಯವಸ್ಥೆಯನ್ನು ಪಡೆದೆ. ನಾನು ಮೆಡಿಕಲ್ ಕಾಲೇಜಿನ ರೂಮಿಗೆ ಬರುವಷ್ಟರಲ್ಲಾಗಲೇ ಇಡೀ ಐದಾರು ಅಂತಸ್ತಿನ ರೂಮುಗಳಲ್ಲಿ ಜಾನಪದ ಕಲಾವಿದರು ಸೇರಿಕೊಂಡು ಕೆಲವರು ವಿಶ್ರಾಂತಿ ಪಡೆಯುತ್ತಿದ್ದರೆ, ಮತ್ತೆ ಕೆಲವರು ತಮ್ಮ ತಮ್ಮ ವಾದ್ಯ ಪರಿಕರಗಳನ್ನು ಸರಿ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದರು. ನನಗೆ ಯಾವುದೇ ಲಾಜಿನ ರೂಮು ಸಿಗದೆ ಒಳ್ಳೆಯದೇ ಆಯಿತು. ಕಾರಣ ಜಾನಪದ ಕಲಾವಿದರ ಜತೆ ಬೆರೆಯಲು ಅವರೊಂದಿಗೆ ಮಾತು ಕತೆ ಮಾಡಲು ಅನುಕೂಲವಾಯಿತು.

ಮದ್ಯಾಹ್ನ ಮೂರಕ್ಕಾಗಲೆ ಜಾನಪದ ಮೆರವಣಿಗೆಗೆ ಹೊರಡಲು ಸಿದ್ದವಾದೆ. ಜಾನಪದ ಕಲಾವಿದರು ತಮ್ಮ ತಮ್ಮ ವೇಷಭೂಷಣಗಳನ್ನು ಹಾಕಿಕೊಳ್ಳತೊಡಗಿದ್ದರು. ಹಳ್ಳಿಯ ತಮ್ಮ ಪುಟ್ಟ ಪುಟ್ಟ ಮನೆಗಳಿಂದ ಬಂದ ಜಾನಪದ ಕಲಾವಿದರಿಗೆ ಈ ಬೃಹತ್ತಾದ ಮೆಡಿಕಲ್ ಕಾಲೇಜಿನ ಕಟ್ಟಡ ಭಯ ಹುಟ್ಟಿಸುವಂತೆಯೂ, ಅಭ್ಬಾ ಎಂದು ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿತ್ತು. ಕೆಲವರು ಇಂತಹ ಕಟ್ಟಡದ ರೂಮುಗಳಲ್ಲಿ ವೇಷಭೂಷಣಗಳನ್ನು ಬದಲು ಮಾಡಿಕೊಳ್ಳದೆ, ಈ ಕಟ್ಟಡದ ಹೊರಗಡೆ ಬದಲು ಮಾಡಿಕೊಳ್ಳುತ್ತಿದ್ದರು. ಇದು ಈ ದೊಡ್ಡ ಕಟ್ಟಡಕ್ಕೆ ಮಾಡಿದ ಅವಮಾನದಂತೆ ಕಾಣುತ್ತಿತ್ತು. ವೇಷಭೂಷಣ ಹಾಕಿಕೊಂಡ ಜಾನಪದ ಕಲಾವಿದರು ರಸ್ತೆಯಲ್ಲಿ ನಡೆದು ಮೆರವಣಿಗೆ ಆರಂಭವಾಗುತ್ತಿದ್ದ ಬಸವೇಶ್ವರ ಸರ್ಕಲ್‌ಗೆ ಎಲ್ಲರೂ ಜಮಾಯಿಸತೊಡಗಿದರು. ಅಲ್ಲಾಗಲೇ ಕೊಡ ಹೊತ್ತು ಮೆರವಣಿಗೆಗೆ ರಂಗು ತರಲು ನೂರಾರು ಹೆಣ್ಣುಮಕ್ಕಳು ಕಾಯುತ್ತಿದ್ದರು. ಹತ್ತಾರು ಎತ್ತಿನ ಬಂಡಿಗಳು ಚಿತ್ತಾರ ಮೂಡಿಸಿಕೊಂಡ ರಂಗು ರಂಗಿನಿಂದ ನೋಡುಗರ ಮನಸ್ಸನ್ನು ಸೆಳೆಯುವಂತಿದ್ದವು. ಒಂದು ಕುದುರೆಯ ಸಾರೋಟು ಸಮ್ಮೇಳನದ ಸರ್ವಾಧ್ಯಕ್ಷರಾದ ದೇ.ಜ.ಗೌ ಅವರಿಗಾಗಿ ಕಾಯುತ್ತಿತ್ತು. ಬಸವೇಶ್ವರ ಸರ್ಕಲ್ ನಲ್ಲಿ ಬಸವೇಶ್ವರ ಮೂರ್ತಿಗೆ ಹಾರ ಹಾಕುವ ಮೂಲಕ ಮೆರವಣಿಗೆಗೆ ಚಾಲನೆ ದೊರೆಯಿತು.


ದೇ.ಜ.ಗೌ ಮತ್ತು ಗೋ.ರು.ಚ ಸಾರೋಟನ್ನು ಏರಿ ಕುಳಿತರು. ಮೆರವಣಿಗೆ ಆರಂಭವಾಯಿತು. ಮೊದಲು ಭುವನೇಶ್ಷರಿ ಪೋಟೋ ಇರುವ ವಾಹನ, ನಂತರ ಜಾನಪದ ಸಮ್ಮೇಳನದ ಪ್ರಚಾರದ ರಥದ ವಾಹನಗಳು ಚಲಿಸುತ್ತಿದ್ದವು. ನಿಧಾನಕ್ಕೆ ಒಂದೊಂದೆ ಜಾನಪದ ಕಲೆಗಳು ಮೆರವಣಿಗೆ ಸೇರುತ್ತಾ..ಮೆರವಣಿಗೆಯ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಯಿತು. ಕಾಶ್ಮೀರ, ರಾಜಸ್ತಾನ, ಜಮ್ಮು ಮುಂತಾದ ಹೊರರಾಜ್ಯಗಳಿಂದ ಬಂದ ಜಾನಪದ ಕಲೆಗಳು ನೋಡುಗರಿಗೆ ಒಂದು ರೀತಿಯ ಹೊಸ ಅನುಭವವನ್ನು ನೀಡತೊಡಗಿದವು. ಗೊಂಬೆ ಕಲಾವಿದರು ಜನರನ್ನು ನಕ್ಕು ನಗಿಸುತ್ತಿದ್ದರು. ಹಣ್ಣು ಹಣ್ಣು ಮುದುಕ ಮುದುಕಿಯರಿಂದ ಹರೆಯದ ಹುಡುಗ ಹುಡುಗಿಯರು ಮಕ್ಕಳು ಜಾನಪದ ಕಲೆಯಯಲ್ಲಿ ಭಾಗವಹಿಸಿದ್ದು ಕಾಣುತ್ತಿತ್ತು. ಮಹಿಳಾ ಸಂಘದವರು ಜಾನಪದ ತಂಡಗಳಾಗಿ ರೂಪುಗೊಂಡು ಪ್ರದರ್ಶನಕ್ಕೆ ಬಂದಿದ್ದು ಹೊಸ ಬೆಳವಣಿಗೆ. ಅಂತೆಯೇ ಪುರುಷರು ಮಹಿಳೆಯರ ವೇಷ ತೊಟ್ಟ ಕಲಾವಿದರು ಜನರಿಗೆ ಹೆಚ್ಚು ರಂಜನೆಯನ್ನು ನೀಡುತ್ತಿದ್ದರು. ಇಡೀ ಜಾನಪದ ಮೆರವಣಿಗೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪಾಲು ಹೆಚ್ಚಾಗಿತ್ತು.

ಮೆರವಣಿಗೆ ಸಾಗುತ್ತಿದ್ದರೆ ಬಜಾರಿನ ಜನ ಮೆರವಣಿಗೆಯನ್ನು ಮೈಮರೆತು ನೋಡುತ್ತಿದ್ದರು. ಬಜಾರಿನಲ್ಲಿ ನಡೆಯುವಾಗ ವ್ಯಾಪಾರ ಮಾಡುತ್ತಾ ಅಂಗಡಿ ಮುಗ್ಗಟ್ಟುಗಳ ಒಳಗೆ ಉಸಿರುಕಟ್ಟಿದ ವಾತಾವರಣದಲ್ಲಿ ತಲ್ಲೀನರಾಗಿದ್ದ ವ್ಯಾಪಾರಿಗಳು ದಿನದ ಜಂಜಾಟ ಮರೆತು ಕ್ಷಣಕಾಲ ಸಂತಸದ ಬುಗ್ಗೆಯಾದಂತೆ ಕಂಡರು. ಕೆಲವು ವಾಪಾರಿಗಳು ತಾವು ಕೂತಿದ್ದ ಹಣದ ಗಲ್ಲಾಪೆಟ್ಟಿಗೆಯ ಬದಿಯಲ್ಲೇ ಕೂತು ವ್ಯಾಪಾರಿಯ ಗತ್ತಲ್ಲೇ ಯಾರೋ ಬೀದಿಬಸವರು ಹೋಗುತ್ತಿದ್ದಾರೆ ಎಂಬಂತೆ ನೋಡುತ್ತಿದ್ದರು. ಹಳೆಯ ಕೋಟೆ ಕೊತ್ತಲುಗಳ ಸಂದಿಗೊಂದಿಯಲ್ಲೇ ಮೇಲೆದ್ದ ಸಿಮೆಂಟ್‌ಕಟ್ಟಡಗಳು, ಆ ಸಿಮೆಂಟ್ ಕಟ್ಟಡಗಳ ಬೆನ್ನಿಗೆ ಅಂಟಿದ ಬಹುರಾಷ್ಟ್ರೀಯ ಕಂಪನಿಯ ಜಾಹೀರಾತಿನ ಪಡ್ಡೆಯಂಥ ಹುಡುಗ ಹುಡುಗಿಯರು ಈ ಜಾನಪದ ಮೆರವಣಿಗೆಯನ್ನು ನೋಡಿ ಪುಳಕಿತರಾದಂತೆ ಕಾಣುತ್ತಿದ್ದರು. ಮೆರವಣಿಗೆ ಸಾಗುತ್ತಿದ್ದ ರಸ್ತೆಗೆ ಹೊಂದಿಕೊಂಡ ಆಸ್ಪತ್ರೆಯೊಂದರಲ್ಲಿನ ರೋಗಿಗಳು ತಾವು ಹೊದ್ದ ದುಪ್ಪಡಿ ಸಮೇತ ರಸ್ತೆಯ ಬದಿಗೆ ಬಂದು ಎಂದೂ ನಕ್ಕೇ ಇಲ್ಲವೇನೋ ಎನ್ನುವಷ್ಟರಮಟ್ಟಿಗೆ ನಕ್ಕು ತಮ್ಮ ರೋಗಗಳನ್ನೂ ಮರೆತು ಹಗುರಾದಂತೆ ಕಾಣುತ್ತಿದ್ದರು. ಬಜಾರಿನ ಅಂಗಡಿಗಳಿಗೆ ಬಿಕ್ಷಕ್ಕೆ ಬಂದಿದ್ದ ಯಲ್ಲಮ್ಮ ಮತ್ತು ಅಂಭಾಬಾಯಿಯನ್ನು ಹೊತ್ತ ಜೋಗತಿಯರ ಹೊಟ್ಟೆ ಪಾಡಿನ ಭಿಕ್ಷೆಯನ್ನು ಮರೆತು ಮೆರವಣಿಗೆಯನ್ನು ನೋಡುತ್ತಿದ್ದರು.

ನಾನು ನೋಡಿದಂತೆ ಇಡೀ ಮೆರವಣಿಗೆಯನ್ನು ತುಂಬಾ ಮುಕ್ತ ಮನಸ್ಸಿನಿಂದ ಸಂತೋಷದ ತುಟ್ಟತುದಿ ತಲುಪಿದವರೆಂದರೆ ಮಕ್ಕಳು. ತರಾವರಿ ವಯೋಮಾನದ ಮಕ್ಕಳು ಈ ಮೆರವಣಿಗೆಯಿಂದ ತುಂಬಾ ಸಂತೋಷ ಅನುಭವಿಸಿದರು. ಬಹುತೇಕ ಮಕ್ಕಳು ಈ ಕಲಾವಿದರನ್ನು ಮಾತನಾಡಿಸುತ್ತಾ ಕಿಚಾಯಿಸುತ್ತಾ.. ತಾವೂ ಈ ಮೆರವಣಿಗೆಯ ಭಾಗವೇ ಎನ್ನುವಂತೆ ಸಂಭ್ರಮಿಸಿದರು. ಪುಟ್ಟ ಪುಟ್ಟ ಮನೆಯವರು ರಸ್ತೆಯ ಬದಿಗೆ ನಿಂತು ನೋಡಿ ಸಂಭ್ರಮಿಸಿದರೆ, ಮಹಡಿ ಮನೆಯವರು ಅಲ್ಲಲ್ಲಿಯೇ ಬಾಗಿಲ ಬಳಿ ನಿಂತೇ ನೋಡುತ್ತಿದ್ದರಾದರೂ ಅವರಲ್ಲಿ ಬಹಳ ಮಂದಿ ಗಟ್ಟಿಯಾಗಿ ನಕ್ಕದ್ದು ಕಾಣಲಿಲ್ಲ. ಮೆರವಣಿಗೆಯಿಂದ ಇಡೀ ಬಜಾರುಗಳಿಗೆ ಜೀವಬಂದಂತಾಗಿತ್ತು. ಇಡೀ ಬೀದರ್ ಎಂಬ ಬೀದರೇ ಒಂದು ರೀತಿಯ ಪುಳಕದಲ್ಲಿ ಮುಳುಗಿದಂತಹ ಅನುಭವ ಆಗುತ್ತಿತ್ತು.

ಈ ಜಾನಪದ ಕಲೆಗಳ ಮೆರವಣಿಗೆ ರಸ್ತೆ ಬದಿಯ ವ್ಯಾಪಾರಿಗಳನ್ನು ಉಲ್ಲಸಿತಗೊಳಿಸಿ ಮತ್ತೆ ಅವರುಗಳು ವ್ಯಾಪಾರದಲ್ಲಿ ಉತ್ಸಾಹದಿಂದ ತೊಡಗುವಂತೆ ಮಾಡುವಂತಿತ್ತು. ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ಬಹುಪಾಲು ಜನರು ತಮ್ಮ ತಮ್ಮ ಮೊಬೈಲುಗಳಲ್ಲಿ ಪೋಟೋ ತೆಗೆದುಕೊಳ್ಳುತ್ತಾ ವೀಡಿಯೋ ಮಾಡಿಕೊಳ್ಳುತ್ತಾ ನೋಡುತ್ತಿದ್ದರು. ಹಾಗಾಗಿ ಈ ಜಾನಪದ ಮೆರವಣಿಗೆ ಸಾವಿರಾರು ಜನರ ಮೊಬೈಲುಗಳಲ್ಲಿ ಅಡಗಿ ಕುಳಿತಿತು. ಅವರುಗಳೆಲ್ಲಾ ಈ ವೀಡಿಯೋಗಳನ್ನು ಫೋಟೋಗಳನ್ನು ಕನಿಷ್ಟ ಇಬ್ಬರು ಮೂವರಿಗೆ ತೋರಿಸಿದರೂ ಜಾನಪದ ಸಂವಹನ ಜನ ನೋಡಿದ ಮೂರುಪಟ್ಟು ಅಧಿಕವಾದಂತಾಯಿತು. ಆದರೆ ಮೆರವಣಿಗೆಯ ನಿಜವಾದ ಅನುಭವವನ್ನು ಈ ಮೋಬೈಲಿನಲ್ಲಿ ಸೆರೆಹಿಡಿಯಲಾದ ಚಿತ್ರ, ದೃಷ್ಯದಿಂದ ಪಡೆಯಲಾಗುವುದಿಲ್ಲ. ಇಡೀ ಮೆರವಣಿಗೆಯಲ್ಲಿ ಬಹುತೇಕರು ಕನ್ನಡ ಬಾವುಟವನ್ನು ಹಿಡಿದಿದ್ದರು. ಇದು ಗಡಿ ಜಿಲ್ಲೆಯಲ್ಲಿ ಕನ್ನಡಾಭಿಮಾನವನ್ನು ಜಾಗ್ರತಗೊಳಿಸುತ್ತಿರುವಂತೆ ಕಂಡಿತು. ಮೆರವಣಿಗೆ ನೆಹರು ಕ್ರೀಡಾಂಗಣದತ್ತ ಸಾಗಿತು. ನನಗೆ ಒಂದು ವಿಷಯಕ್ಕೆ ನೋವಾಯಿತು. ಬ್ರಷ್ಟಾಚಾರದ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿರುವ ಈ ಹೊತ್ತಲ್ಲಿ ತಮ್ಮ ಮಗ ಶಶಿಧರ ಪ್ರಸಾದ್ ಅವರು ಎಸಗಿದ ಬ್ರಷ್ಟಾಚಾರವನ್ನು ಕೆಟ್ಟದಾದಿ ಸಮರ್ಥನೆ ಮಾಡಿಕೊಂಡು, ಗಾಂಧಿಯ ಪವಿತ್ರ ಉಪವಾಸ ಸತ್ಯಾಗ್ರಹವನ್ನು ಬ್ರಷ್ಟಾಚಾರಿ ಮಗನನ್ನು ಉಳಿಸಿಕೊಳ್ಳಲು ಬಳಸಿದ ದೇ. ಜವರೇಗೌಡರು ಸಮ್ಮೇಳನದ ಸರ್ವಾದ್ಯಕ್ಷರಾದದ್ದು ಮತ್ತು ಇಂತವರನ್ನು ಇಡೀ ಜಾನಪದ ಜಗತ್ತು ಮೆರವಣಿಗೆಯಲ್ಲಿ ಮೆರೆಸಿದ್ದು. ಇದು ಜಾನಪದ ಜಗತ್ತು ಎದುರಿಸುತ್ತಿರುವ ಬಿಕ್ಕಟ್ಟಿಗೆ ರೂಪಕದಂತಿದೆ.

ಮೆರವಣಿಗೆ ಮುಗಿಯುತ್ತಿದ್ದಂತೆ ಉದ್ಘಾಟನಾ ಸಮಾರಂಭದ ಬಿ.ಎಸ್.ಗದ್ದಗಿಮಠ ಮಂಟಪ ಸಿದ್ದಗೊಂಡಿತ್ತು. ಮೆರವಣಿಗೆಯಲ್ಲಿ ನಡೆದು ದಣಿದವರೆಲ್ಲಾ ಕೂತು ವಿಶ್ರಾಂತಿ ಪಡೆಯತೊಡಗಿದರು. ಪ್ರಸಿದ್ದ ವಾಯಲಿನ್ ಗಾಯಕ ವಡವಟ್ಟಿಯವರ ವಾಯಲಿನ್ ಕಚೇರಿಯ ಮೂಲಕ ವೇದಿಕೆಗೆ ಜೀವ ಬಂತು. ನಂತರ ಜಾನಪದ ಕಲಾಪ್ರದರ್ಶನ ಇಡೀ ವೇದಿಕೆಗೊಂದು ರಂಗು ತಂದಿತು. ಯಥಾಪ್ರಕಾರ ದೀಪ ಬೆಳಗಿಸುವ ಮೂಲಕ ಸಮ್ಮೇಳನ ಉದ್ಘಾಟನೆ ನೆರವೇರಿತು. ಗೊ.ರು.ಚ ಅವರು ಜಾನಪದ ಅಕಾಡೆಮಿ ಮಾಡಿದ ಬಹುಮುಖ್ಯ ಕೆಲಸಗಳ ಬಗ್ಗೆ ಹೇಳಿದರು, ಅಂತೆಯೇ ಇನ್ನು ಆಗಬೇಕಾದ ವಿಷಯಗಳ ಬಗ್ಗೆ ಗಮನಸೆಳೆದು , ಅದಕ್ಕೆ ಸರಕಾರದ ಬೆಂಬಲ ಬೇಕು ಎಂದು ಮುಖ್ಯಮಂತರಿ ಯಡಿಯೂರಪ್ಪನವರಲ್ಲಿ ಮನವಿ ಮಾಡಿದರು. ನಂತರ ಯಡಿಯೂರಪ್ಪ ಅವರು ಮಾತಾಡಿ ಜಾನಪದ ಕ್ಷೇತ್ರಕ್ಕೆ ನಾನು ಯಾವ ಸಹಕಾರವನ್ನು ಬೇಕಾದರೂ ನೀಡುವೆ ಎನ್ನುವಂತಹ ಭರವಸೆ ನೀಡಿದರು. ನಂತರ ದೇ.ಜ.ಗೌ ಅವರ ಮಾತುಗಳು ಜಾನಪದ ಅಧ್ಯಯನ ನಡೆದು ಬಂದ ದಾರಿ ಕುರಿತಂತೆ ಸುಧೀರ್ಘವಾಗಿ ಮಾತನಾಡಿದರು. ಹೀಗೆ ಮಾತುಗಳು ಮುಗಿದಾದ ನಂತರ ಜಾನಪದ ಕಲೆಗಳ ಪ್ರದರ್ಶನ ಜನರ ಮನಸ್ಸನ್ನು ಸೋರೆಗೊಳಿಸಿತು. ಇಲ್ಲಿಗೆ ಸಮ್ಮೇಳನದ ಮೊದಲ ದಿನ ಮುಕ್ತಾಯವಾಯಿತು.