ಶುಕ್ರವಾರ, ಏಪ್ರಿಲ್ 22, 2011

ಅಖಿಲ ಭಾರತ ಜಾನಪದ ಸಮ್ಮೇಳನದ ಮೊದಲ ದಿನ

-ಅರುಣ್



ನಾನು ಬೀದರಕ್ಕೆ ಬಂದದ್ದು ಇದು ಎರಡನೇ ಬಾರಿ. ಮೊದಲನೆಯದು ಎಂ.ಎ ಮಾಡುವಾಗ ಕನ್ನಡ ವಿಶ್ವವಿದ್ಯಾಲಯ ಜಾನಪದ ವಿಭಾಗದ ದೇಸಿ ಸಮ್ಮೇಳನಕ್ಕೆ ಬಂದಿದ್ದೆ. ಈಗ ಅಖಿಲ ಭಾರತ ಜಾನಪದ ಸಮ್ಮೇಳನಕ್ಕೆ ಎರಡನೇ ಬಾರಿ ಬರಬೇಕಾಯಿತು. ಎರಡೂ ಬೇಟಿಯೂ ಸಾದ್ಯವಾದದ್ದು ಜಾನಪದದ ಕಾರಣಕ್ಕೆ. ಬೀದರ್ ಒಂದು ಸುಂದರ ನಗರಿ. ಬೀದರ ನೋಡಿದರೆ ನನಗೆ ಆಗ್ರ ನೋಡಿದಂತಹ ಅನುಭವವಾಗುತ್ತದೆ. ಪುರಾತನ ಕೋಟೆ ಕೊತ್ತಲುಗಳು ನಮ್ಮ ಅತ್ಯಾಧುನಿಕ ಮನಸ್ಸನ್ನೂ ಕೂಡ ಪುರಾತನ ಕಾಲಕ್ಕೆ ಕರೆದೊಯಯ್ಯತ್ತದೆ. ಕರ್ನಾಟಕದ ತಲೆಯ ಭಾಗದಂತಿರುವ ಇಂತಹ ಬೀದರ್‌ನಲ್ಲಿ ಮೊದಲ ಅಖಿಲ ಭಾರತ ಜಾನಪದ ಸಮ್ಮೇಳನ ನಡೆಯುತ್ತಿರುವುದು ಚಾರಿತ್ರಿಕವಾಗಿ ಮುಖ್ಯವಾದ ಘಟನೆ.




ನಾನು ಬೀದರ್ ಸಮ್ಮೇಳನಕ್ಕೆ ಆಹ್ವಾನಿತ ವಿದ್ವಾಂಸನಾಗಿ ಬರದೆ, ಜಾನಪದ ಕ್ಷೇತ್ರದಲ್ಲಿ ಆಸಕ್ತಿಯನ್ನಿಟ್ಟುಕೊಂಡ ಒಬ್ಬ ವಿದ್ಯಾರ್ಥಿಯಾಗಿ ಬಂದಿದ್ದೆ. ಹಾಗಾಗಿ ಎಲ್ಲಿ ಉಳಿಯುವುದೋ ಎಂಬ ಆತಂಕದಿಂದ ಬೀದರ ಬಸ್ ನಿಲ್ದಾಣಕ್ಕೆ ಇಳಿದಾಗ ಆಕಸ್ಮಿಕವಾಗಿ ಕನ್ನಡ ವಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ಟಿ.ಆರ್.ಚಂದ್ರಶೇಖರ್ ಸಾರ್ ಸಿಕ್ಕರು. ಸದ್ಯ ಅವರು ಉಳಿದ ರೂಮಿನಲ್ಲೇ ಬೆಳಗಿನ ಸ್ನಾನಾದಿಗಳನ್ನು ಮುಗಿಸಿಕೊಂಡು ಒಂದು ರೀತಿಯ ಆರಾಮದಾಯಕ ಅನುಭವವಾಯಿತು. ನಿನ್ನೆಯ ದಿನ ವಿಪರೀತ ಮಳೆಯಾಗಿದ್ದರಿಂದ ಬೀದರ್ ಸ್ನಾನಮಾಡಿ ಮೈ ಒಣಗಿಸಿಕೊಳ್ಳುವಂತಿತ್ತು. ಹಾಗಾಗಿ ಸಮ್ಮೇಳನದ ಅಬ್ಬರವಾಗಲಿ, ಪ್ರಚಾರವಾಗಲಿ ಒಂದಿಷ್ಟೂ ಕಾಣುವಂತಿರಲಿಲ್ಲ. ನಾನು ಆಹ್ವಾನಿತನಲ್ಲದ ಕಾರಣ ಸಮ್ಮೇಳನದ ಯಾವುದೇ ಸೌಲಭ್ಯಗಳನ್ನು ಅಧಿಕೃತವಾಗಿ ಪಡೆಯಲು ಸಾದ್ಯವಿರಲಿಲ್ಲ. ಪರಿಚಯದ ಮೇರೆಗೆ ಗೊ.ರು.ಚ ಅವರಲ್ಲಿ ನಾನು ಬಂದಿರುವುದಾಗಿ ಹೇಳಿಕೊಂಡು ರೂಮು ಮತ್ತು ಊಟದ ವ್ಯವಸ್ಥೆಯನ್ನು ಪಡೆದೆ. ನಾನು ಮೆಡಿಕಲ್ ಕಾಲೇಜಿನ ರೂಮಿಗೆ ಬರುವಷ್ಟರಲ್ಲಾಗಲೇ ಇಡೀ ಐದಾರು ಅಂತಸ್ತಿನ ರೂಮುಗಳಲ್ಲಿ ಜಾನಪದ ಕಲಾವಿದರು ಸೇರಿಕೊಂಡು ಕೆಲವರು ವಿಶ್ರಾಂತಿ ಪಡೆಯುತ್ತಿದ್ದರೆ, ಮತ್ತೆ ಕೆಲವರು ತಮ್ಮ ತಮ್ಮ ವಾದ್ಯ ಪರಿಕರಗಳನ್ನು ಸರಿ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದರು. ನನಗೆ ಯಾವುದೇ ಲಾಜಿನ ರೂಮು ಸಿಗದೆ ಒಳ್ಳೆಯದೇ ಆಯಿತು. ಕಾರಣ ಜಾನಪದ ಕಲಾವಿದರ ಜತೆ ಬೆರೆಯಲು ಅವರೊಂದಿಗೆ ಮಾತು ಕತೆ ಮಾಡಲು ಅನುಕೂಲವಾಯಿತು.

ಮದ್ಯಾಹ್ನ ಮೂರಕ್ಕಾಗಲೆ ಜಾನಪದ ಮೆರವಣಿಗೆಗೆ ಹೊರಡಲು ಸಿದ್ದವಾದೆ. ಜಾನಪದ ಕಲಾವಿದರು ತಮ್ಮ ತಮ್ಮ ವೇಷಭೂಷಣಗಳನ್ನು ಹಾಕಿಕೊಳ್ಳತೊಡಗಿದ್ದರು. ಹಳ್ಳಿಯ ತಮ್ಮ ಪುಟ್ಟ ಪುಟ್ಟ ಮನೆಗಳಿಂದ ಬಂದ ಜಾನಪದ ಕಲಾವಿದರಿಗೆ ಈ ಬೃಹತ್ತಾದ ಮೆಡಿಕಲ್ ಕಾಲೇಜಿನ ಕಟ್ಟಡ ಭಯ ಹುಟ್ಟಿಸುವಂತೆಯೂ, ಅಭ್ಬಾ ಎಂದು ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿತ್ತು. ಕೆಲವರು ಇಂತಹ ಕಟ್ಟಡದ ರೂಮುಗಳಲ್ಲಿ ವೇಷಭೂಷಣಗಳನ್ನು ಬದಲು ಮಾಡಿಕೊಳ್ಳದೆ, ಈ ಕಟ್ಟಡದ ಹೊರಗಡೆ ಬದಲು ಮಾಡಿಕೊಳ್ಳುತ್ತಿದ್ದರು. ಇದು ಈ ದೊಡ್ಡ ಕಟ್ಟಡಕ್ಕೆ ಮಾಡಿದ ಅವಮಾನದಂತೆ ಕಾಣುತ್ತಿತ್ತು. ವೇಷಭೂಷಣ ಹಾಕಿಕೊಂಡ ಜಾನಪದ ಕಲಾವಿದರು ರಸ್ತೆಯಲ್ಲಿ ನಡೆದು ಮೆರವಣಿಗೆ ಆರಂಭವಾಗುತ್ತಿದ್ದ ಬಸವೇಶ್ವರ ಸರ್ಕಲ್‌ಗೆ ಎಲ್ಲರೂ ಜಮಾಯಿಸತೊಡಗಿದರು. ಅಲ್ಲಾಗಲೇ ಕೊಡ ಹೊತ್ತು ಮೆರವಣಿಗೆಗೆ ರಂಗು ತರಲು ನೂರಾರು ಹೆಣ್ಣುಮಕ್ಕಳು ಕಾಯುತ್ತಿದ್ದರು. ಹತ್ತಾರು ಎತ್ತಿನ ಬಂಡಿಗಳು ಚಿತ್ತಾರ ಮೂಡಿಸಿಕೊಂಡ ರಂಗು ರಂಗಿನಿಂದ ನೋಡುಗರ ಮನಸ್ಸನ್ನು ಸೆಳೆಯುವಂತಿದ್ದವು. ಒಂದು ಕುದುರೆಯ ಸಾರೋಟು ಸಮ್ಮೇಳನದ ಸರ್ವಾಧ್ಯಕ್ಷರಾದ ದೇ.ಜ.ಗೌ ಅವರಿಗಾಗಿ ಕಾಯುತ್ತಿತ್ತು. ಬಸವೇಶ್ವರ ಸರ್ಕಲ್ ನಲ್ಲಿ ಬಸವೇಶ್ವರ ಮೂರ್ತಿಗೆ ಹಾರ ಹಾಕುವ ಮೂಲಕ ಮೆರವಣಿಗೆಗೆ ಚಾಲನೆ ದೊರೆಯಿತು.


ದೇ.ಜ.ಗೌ ಮತ್ತು ಗೋ.ರು.ಚ ಸಾರೋಟನ್ನು ಏರಿ ಕುಳಿತರು. ಮೆರವಣಿಗೆ ಆರಂಭವಾಯಿತು. ಮೊದಲು ಭುವನೇಶ್ಷರಿ ಪೋಟೋ ಇರುವ ವಾಹನ, ನಂತರ ಜಾನಪದ ಸಮ್ಮೇಳನದ ಪ್ರಚಾರದ ರಥದ ವಾಹನಗಳು ಚಲಿಸುತ್ತಿದ್ದವು. ನಿಧಾನಕ್ಕೆ ಒಂದೊಂದೆ ಜಾನಪದ ಕಲೆಗಳು ಮೆರವಣಿಗೆ ಸೇರುತ್ತಾ..ಮೆರವಣಿಗೆಯ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಯಿತು. ಕಾಶ್ಮೀರ, ರಾಜಸ್ತಾನ, ಜಮ್ಮು ಮುಂತಾದ ಹೊರರಾಜ್ಯಗಳಿಂದ ಬಂದ ಜಾನಪದ ಕಲೆಗಳು ನೋಡುಗರಿಗೆ ಒಂದು ರೀತಿಯ ಹೊಸ ಅನುಭವವನ್ನು ನೀಡತೊಡಗಿದವು. ಗೊಂಬೆ ಕಲಾವಿದರು ಜನರನ್ನು ನಕ್ಕು ನಗಿಸುತ್ತಿದ್ದರು. ಹಣ್ಣು ಹಣ್ಣು ಮುದುಕ ಮುದುಕಿಯರಿಂದ ಹರೆಯದ ಹುಡುಗ ಹುಡುಗಿಯರು ಮಕ್ಕಳು ಜಾನಪದ ಕಲೆಯಯಲ್ಲಿ ಭಾಗವಹಿಸಿದ್ದು ಕಾಣುತ್ತಿತ್ತು. ಮಹಿಳಾ ಸಂಘದವರು ಜಾನಪದ ತಂಡಗಳಾಗಿ ರೂಪುಗೊಂಡು ಪ್ರದರ್ಶನಕ್ಕೆ ಬಂದಿದ್ದು ಹೊಸ ಬೆಳವಣಿಗೆ. ಅಂತೆಯೇ ಪುರುಷರು ಮಹಿಳೆಯರ ವೇಷ ತೊಟ್ಟ ಕಲಾವಿದರು ಜನರಿಗೆ ಹೆಚ್ಚು ರಂಜನೆಯನ್ನು ನೀಡುತ್ತಿದ್ದರು. ಇಡೀ ಜಾನಪದ ಮೆರವಣಿಗೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪಾಲು ಹೆಚ್ಚಾಗಿತ್ತು.

ಮೆರವಣಿಗೆ ಸಾಗುತ್ತಿದ್ದರೆ ಬಜಾರಿನ ಜನ ಮೆರವಣಿಗೆಯನ್ನು ಮೈಮರೆತು ನೋಡುತ್ತಿದ್ದರು. ಬಜಾರಿನಲ್ಲಿ ನಡೆಯುವಾಗ ವ್ಯಾಪಾರ ಮಾಡುತ್ತಾ ಅಂಗಡಿ ಮುಗ್ಗಟ್ಟುಗಳ ಒಳಗೆ ಉಸಿರುಕಟ್ಟಿದ ವಾತಾವರಣದಲ್ಲಿ ತಲ್ಲೀನರಾಗಿದ್ದ ವ್ಯಾಪಾರಿಗಳು ದಿನದ ಜಂಜಾಟ ಮರೆತು ಕ್ಷಣಕಾಲ ಸಂತಸದ ಬುಗ್ಗೆಯಾದಂತೆ ಕಂಡರು. ಕೆಲವು ವಾಪಾರಿಗಳು ತಾವು ಕೂತಿದ್ದ ಹಣದ ಗಲ್ಲಾಪೆಟ್ಟಿಗೆಯ ಬದಿಯಲ್ಲೇ ಕೂತು ವ್ಯಾಪಾರಿಯ ಗತ್ತಲ್ಲೇ ಯಾರೋ ಬೀದಿಬಸವರು ಹೋಗುತ್ತಿದ್ದಾರೆ ಎಂಬಂತೆ ನೋಡುತ್ತಿದ್ದರು. ಹಳೆಯ ಕೋಟೆ ಕೊತ್ತಲುಗಳ ಸಂದಿಗೊಂದಿಯಲ್ಲೇ ಮೇಲೆದ್ದ ಸಿಮೆಂಟ್‌ಕಟ್ಟಡಗಳು, ಆ ಸಿಮೆಂಟ್ ಕಟ್ಟಡಗಳ ಬೆನ್ನಿಗೆ ಅಂಟಿದ ಬಹುರಾಷ್ಟ್ರೀಯ ಕಂಪನಿಯ ಜಾಹೀರಾತಿನ ಪಡ್ಡೆಯಂಥ ಹುಡುಗ ಹುಡುಗಿಯರು ಈ ಜಾನಪದ ಮೆರವಣಿಗೆಯನ್ನು ನೋಡಿ ಪುಳಕಿತರಾದಂತೆ ಕಾಣುತ್ತಿದ್ದರು. ಮೆರವಣಿಗೆ ಸಾಗುತ್ತಿದ್ದ ರಸ್ತೆಗೆ ಹೊಂದಿಕೊಂಡ ಆಸ್ಪತ್ರೆಯೊಂದರಲ್ಲಿನ ರೋಗಿಗಳು ತಾವು ಹೊದ್ದ ದುಪ್ಪಡಿ ಸಮೇತ ರಸ್ತೆಯ ಬದಿಗೆ ಬಂದು ಎಂದೂ ನಕ್ಕೇ ಇಲ್ಲವೇನೋ ಎನ್ನುವಷ್ಟರಮಟ್ಟಿಗೆ ನಕ್ಕು ತಮ್ಮ ರೋಗಗಳನ್ನೂ ಮರೆತು ಹಗುರಾದಂತೆ ಕಾಣುತ್ತಿದ್ದರು. ಬಜಾರಿನ ಅಂಗಡಿಗಳಿಗೆ ಬಿಕ್ಷಕ್ಕೆ ಬಂದಿದ್ದ ಯಲ್ಲಮ್ಮ ಮತ್ತು ಅಂಭಾಬಾಯಿಯನ್ನು ಹೊತ್ತ ಜೋಗತಿಯರ ಹೊಟ್ಟೆ ಪಾಡಿನ ಭಿಕ್ಷೆಯನ್ನು ಮರೆತು ಮೆರವಣಿಗೆಯನ್ನು ನೋಡುತ್ತಿದ್ದರು.

ನಾನು ನೋಡಿದಂತೆ ಇಡೀ ಮೆರವಣಿಗೆಯನ್ನು ತುಂಬಾ ಮುಕ್ತ ಮನಸ್ಸಿನಿಂದ ಸಂತೋಷದ ತುಟ್ಟತುದಿ ತಲುಪಿದವರೆಂದರೆ ಮಕ್ಕಳು. ತರಾವರಿ ವಯೋಮಾನದ ಮಕ್ಕಳು ಈ ಮೆರವಣಿಗೆಯಿಂದ ತುಂಬಾ ಸಂತೋಷ ಅನುಭವಿಸಿದರು. ಬಹುತೇಕ ಮಕ್ಕಳು ಈ ಕಲಾವಿದರನ್ನು ಮಾತನಾಡಿಸುತ್ತಾ ಕಿಚಾಯಿಸುತ್ತಾ.. ತಾವೂ ಈ ಮೆರವಣಿಗೆಯ ಭಾಗವೇ ಎನ್ನುವಂತೆ ಸಂಭ್ರಮಿಸಿದರು. ಪುಟ್ಟ ಪುಟ್ಟ ಮನೆಯವರು ರಸ್ತೆಯ ಬದಿಗೆ ನಿಂತು ನೋಡಿ ಸಂಭ್ರಮಿಸಿದರೆ, ಮಹಡಿ ಮನೆಯವರು ಅಲ್ಲಲ್ಲಿಯೇ ಬಾಗಿಲ ಬಳಿ ನಿಂತೇ ನೋಡುತ್ತಿದ್ದರಾದರೂ ಅವರಲ್ಲಿ ಬಹಳ ಮಂದಿ ಗಟ್ಟಿಯಾಗಿ ನಕ್ಕದ್ದು ಕಾಣಲಿಲ್ಲ. ಮೆರವಣಿಗೆಯಿಂದ ಇಡೀ ಬಜಾರುಗಳಿಗೆ ಜೀವಬಂದಂತಾಗಿತ್ತು. ಇಡೀ ಬೀದರ್ ಎಂಬ ಬೀದರೇ ಒಂದು ರೀತಿಯ ಪುಳಕದಲ್ಲಿ ಮುಳುಗಿದಂತಹ ಅನುಭವ ಆಗುತ್ತಿತ್ತು.

ಈ ಜಾನಪದ ಕಲೆಗಳ ಮೆರವಣಿಗೆ ರಸ್ತೆ ಬದಿಯ ವ್ಯಾಪಾರಿಗಳನ್ನು ಉಲ್ಲಸಿತಗೊಳಿಸಿ ಮತ್ತೆ ಅವರುಗಳು ವ್ಯಾಪಾರದಲ್ಲಿ ಉತ್ಸಾಹದಿಂದ ತೊಡಗುವಂತೆ ಮಾಡುವಂತಿತ್ತು. ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ಬಹುಪಾಲು ಜನರು ತಮ್ಮ ತಮ್ಮ ಮೊಬೈಲುಗಳಲ್ಲಿ ಪೋಟೋ ತೆಗೆದುಕೊಳ್ಳುತ್ತಾ ವೀಡಿಯೋ ಮಾಡಿಕೊಳ್ಳುತ್ತಾ ನೋಡುತ್ತಿದ್ದರು. ಹಾಗಾಗಿ ಈ ಜಾನಪದ ಮೆರವಣಿಗೆ ಸಾವಿರಾರು ಜನರ ಮೊಬೈಲುಗಳಲ್ಲಿ ಅಡಗಿ ಕುಳಿತಿತು. ಅವರುಗಳೆಲ್ಲಾ ಈ ವೀಡಿಯೋಗಳನ್ನು ಫೋಟೋಗಳನ್ನು ಕನಿಷ್ಟ ಇಬ್ಬರು ಮೂವರಿಗೆ ತೋರಿಸಿದರೂ ಜಾನಪದ ಸಂವಹನ ಜನ ನೋಡಿದ ಮೂರುಪಟ್ಟು ಅಧಿಕವಾದಂತಾಯಿತು. ಆದರೆ ಮೆರವಣಿಗೆಯ ನಿಜವಾದ ಅನುಭವವನ್ನು ಈ ಮೋಬೈಲಿನಲ್ಲಿ ಸೆರೆಹಿಡಿಯಲಾದ ಚಿತ್ರ, ದೃಷ್ಯದಿಂದ ಪಡೆಯಲಾಗುವುದಿಲ್ಲ. ಇಡೀ ಮೆರವಣಿಗೆಯಲ್ಲಿ ಬಹುತೇಕರು ಕನ್ನಡ ಬಾವುಟವನ್ನು ಹಿಡಿದಿದ್ದರು. ಇದು ಗಡಿ ಜಿಲ್ಲೆಯಲ್ಲಿ ಕನ್ನಡಾಭಿಮಾನವನ್ನು ಜಾಗ್ರತಗೊಳಿಸುತ್ತಿರುವಂತೆ ಕಂಡಿತು. ಮೆರವಣಿಗೆ ನೆಹರು ಕ್ರೀಡಾಂಗಣದತ್ತ ಸಾಗಿತು. ನನಗೆ ಒಂದು ವಿಷಯಕ್ಕೆ ನೋವಾಯಿತು. ಬ್ರಷ್ಟಾಚಾರದ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿರುವ ಈ ಹೊತ್ತಲ್ಲಿ ತಮ್ಮ ಮಗ ಶಶಿಧರ ಪ್ರಸಾದ್ ಅವರು ಎಸಗಿದ ಬ್ರಷ್ಟಾಚಾರವನ್ನು ಕೆಟ್ಟದಾದಿ ಸಮರ್ಥನೆ ಮಾಡಿಕೊಂಡು, ಗಾಂಧಿಯ ಪವಿತ್ರ ಉಪವಾಸ ಸತ್ಯಾಗ್ರಹವನ್ನು ಬ್ರಷ್ಟಾಚಾರಿ ಮಗನನ್ನು ಉಳಿಸಿಕೊಳ್ಳಲು ಬಳಸಿದ ದೇ. ಜವರೇಗೌಡರು ಸಮ್ಮೇಳನದ ಸರ್ವಾದ್ಯಕ್ಷರಾದದ್ದು ಮತ್ತು ಇಂತವರನ್ನು ಇಡೀ ಜಾನಪದ ಜಗತ್ತು ಮೆರವಣಿಗೆಯಲ್ಲಿ ಮೆರೆಸಿದ್ದು. ಇದು ಜಾನಪದ ಜಗತ್ತು ಎದುರಿಸುತ್ತಿರುವ ಬಿಕ್ಕಟ್ಟಿಗೆ ರೂಪಕದಂತಿದೆ.

ಮೆರವಣಿಗೆ ಮುಗಿಯುತ್ತಿದ್ದಂತೆ ಉದ್ಘಾಟನಾ ಸಮಾರಂಭದ ಬಿ.ಎಸ್.ಗದ್ದಗಿಮಠ ಮಂಟಪ ಸಿದ್ದಗೊಂಡಿತ್ತು. ಮೆರವಣಿಗೆಯಲ್ಲಿ ನಡೆದು ದಣಿದವರೆಲ್ಲಾ ಕೂತು ವಿಶ್ರಾಂತಿ ಪಡೆಯತೊಡಗಿದರು. ಪ್ರಸಿದ್ದ ವಾಯಲಿನ್ ಗಾಯಕ ವಡವಟ್ಟಿಯವರ ವಾಯಲಿನ್ ಕಚೇರಿಯ ಮೂಲಕ ವೇದಿಕೆಗೆ ಜೀವ ಬಂತು. ನಂತರ ಜಾನಪದ ಕಲಾಪ್ರದರ್ಶನ ಇಡೀ ವೇದಿಕೆಗೊಂದು ರಂಗು ತಂದಿತು. ಯಥಾಪ್ರಕಾರ ದೀಪ ಬೆಳಗಿಸುವ ಮೂಲಕ ಸಮ್ಮೇಳನ ಉದ್ಘಾಟನೆ ನೆರವೇರಿತು. ಗೊ.ರು.ಚ ಅವರು ಜಾನಪದ ಅಕಾಡೆಮಿ ಮಾಡಿದ ಬಹುಮುಖ್ಯ ಕೆಲಸಗಳ ಬಗ್ಗೆ ಹೇಳಿದರು, ಅಂತೆಯೇ ಇನ್ನು ಆಗಬೇಕಾದ ವಿಷಯಗಳ ಬಗ್ಗೆ ಗಮನಸೆಳೆದು , ಅದಕ್ಕೆ ಸರಕಾರದ ಬೆಂಬಲ ಬೇಕು ಎಂದು ಮುಖ್ಯಮಂತರಿ ಯಡಿಯೂರಪ್ಪನವರಲ್ಲಿ ಮನವಿ ಮಾಡಿದರು. ನಂತರ ಯಡಿಯೂರಪ್ಪ ಅವರು ಮಾತಾಡಿ ಜಾನಪದ ಕ್ಷೇತ್ರಕ್ಕೆ ನಾನು ಯಾವ ಸಹಕಾರವನ್ನು ಬೇಕಾದರೂ ನೀಡುವೆ ಎನ್ನುವಂತಹ ಭರವಸೆ ನೀಡಿದರು. ನಂತರ ದೇ.ಜ.ಗೌ ಅವರ ಮಾತುಗಳು ಜಾನಪದ ಅಧ್ಯಯನ ನಡೆದು ಬಂದ ದಾರಿ ಕುರಿತಂತೆ ಸುಧೀರ್ಘವಾಗಿ ಮಾತನಾಡಿದರು. ಹೀಗೆ ಮಾತುಗಳು ಮುಗಿದಾದ ನಂತರ ಜಾನಪದ ಕಲೆಗಳ ಪ್ರದರ್ಶನ ಜನರ ಮನಸ್ಸನ್ನು ಸೋರೆಗೊಳಿಸಿತು. ಇಲ್ಲಿಗೆ ಸಮ್ಮೇಳನದ ಮೊದಲ ದಿನ ಮುಕ್ತಾಯವಾಯಿತು.
































4 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

de.ja.gow bagge tuMba nisturavaagi barediddiiri. obba brastaachaarada samarthane maadidavarannu adege meravaNige madidru sir?
-prabhu mysor.

ashture umesh ಹೇಳಿದರು...

ಜಾನಪದ ಕುರಿತ ಬ್ಲಾಗ್ ಓದಿ ತುಂಬ ಖುಶಿ ಅಯಿತು. ಮೂಲತ ಬೀದರನವನಾದ ನನಗೆ ಪ್ರಪ್ರಥಮ ಜಾನಪದ ಬೀದರ ನಲ್ಲಿ ನಡೆಯುತ್ತಿರುವುದು ಇನ್ನು ಖುಶಿಯ ವಿಷಯ. ವ್ಯವಹಾರಿಕ ಆತುರದಲ್ಲಿದ್ದ ಕಾರಣ ಮೊದಲ ಎರಡು ದಿನದ ಕಾರ್ಯಕ್ರಮಗಳಿಂದ ವಂಚತನಾದ ನನಗೆ ತಮ್ಮ ಬ್ಲಾಗನಿಂದ ಆದಷ್ಟು ಸಂಗತಿ ತಿಳಿದವು ಹಾಗೂ ಗೆಳೆಯ ಶ್ರಿಕಾಂತ ಬಿರಾದಾರ ಅವರ ಕರೆಯ ಮೆರೆಗೆ ಕೊನೆಯ ಎರಡು ದಿನಗಳ ಉತ್ಸವ ನೋಡಲೆಬೇಕಾಯಿತು. ರವಿವಾರ ಸಾಯಂಕಾಲ ಕ್ಯಾಮೆರಾ ಹೊತ್ತು ಕಲಾವಿದರ ಗೂಂಪಿನಲ್ಲಿ ನನ್ನನ್ನೆ ಮರೆತುಹೊದ ಆ ಕ್ಷಣಗಳು ಹಾಗೂ ಸುಮಾರು 3-4 ತಾಸು ವಿವಿಧ ರಾಜ್ಯಗಳ ಕಲಾತಂಡಗಳ ಫೋಟೊ ಕ್ಲಿಕ್ಕಿಸದ ಅನುಭವ ತುಂಬಾ ಅದ್ಭುದವಾದವುಗಳು.

ಅಯ್ಯೋ ತುಂಬಾ ಮರೆತೆ..... ತಮ್ಮ ಬ್ಲಾಗ ನಲ್ಲಿರುವ ಎಲ್ಲಾ ಚತ್ರಗಳು ಚೆನ್ನಾಗಿವೆ ಆದರೆ ಬಿದರಿ ಕಲೆ ಎನ್ನುವ ಶಿರ್ಶಿಕೆಯಡಿಯಲ್ಲಿ ಇರುವ ಚಿತ್ರಗಳು ಬಿದ್ರಿ ಕಲೆಗಳಲ್ಲ ಅವು ಚಿದ್ರಿ ಕಲೆಗಳು. ದಯವಿಟ್ಟು ಕ್ಷಮಿಸಿ ಬಹುಷ ತಾವು ಬಿದ್ರಿ ಕಲೆಯನ್ನು ನೊಡಿಲ್ಲ ಅನ್ನಿಸುತ್ತೆ, ಯಾವುದಕ್ಕು ಇನ್ನು ತಾವು ಬೀದರನಲ್ಲಿ ಇದ್ದಿರಾ ಒಂದು ಸಾರಿ ಬಿದ್ರಿ ಕಲೆ ಅಂಗಡಿಗಳಿಗೆ ತೆರಳಿ ನೋಡಿ, ತುಂಬಾ ಅದ್ಭುತ ಹಾಗು ಮನಮೋಹಕ ಬಿದ್ರಿ ಕಲೆಗಳು ಕಾಣುವಿರಿ.

ಧನ್ಯವಾದಗಳೊಂದಿಗೆ
ಅಷ್ಟುರೆ ಉಮೇಶ, ಬೀದರ.
9448222785

ಅಮಿತಾ ರವಿಕಿರಣ್ ಹೇಳಿದರು...

thank you arun sir.....
for posting sucha a wonderful colourful report....
very nice...

ವೀರಣ್ಣ ಮಂಠಾಳಕರ್ ಹೇಳಿದರು...

ತುಂಬಾ ಸಂಗ್ರಹಯೋಗ್ಯವಾದ ಚಿತ್ರಗಳು, ಜಾನಪದ ಸಮ್ಮೇಳನದ ಕುರಿತು ಸಂಪೂಣ೯ ವಿವರಗಳನ್ನು ನೀಡಿರುವ ಅರುಣ ಸರ್, ನೀವು ಅಬಿನಂದನಾಹ೯ರು. ನಿಮ್ಮ ಆಸಕ್ತಿ, ಜಾನಪದದಲ್ಲಿ ಇಟ್ಟಿರುವ ಪ್ರೀತಿಗೆ ಅಭಿನಂದಿಸಲೆಬೇಕು. ಮುಖಾಮುಖಿ ನಿಮ್ಮನ್ನು ಭೇಟಿಯಾದ ನೆನಪುಗಳು ಇನ್ನೂ ಹಾಗೆ ಇವೆ.

-ವೀರಣ್ಣ ಮಂಠಾಳಕರ್