ಸೌಜನ್ಯ: ವರ್ತಮಾನ ಡಾಟ್ ಕಮ್
- ಡಾ. ಅಮರೇಶ ನುಗಡೋಣಿ
ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಯ ಜನರಿಗೆ, ಅದರಲ್ಲೂ ಮಂಗಳೂರು, ಕೊಡಗು, ಬೆಂಗಳೂರು ಮತ್ತು ಮೈಸೂರು ಜಿಲ್ಲಾ ವಾಸಿಗಳು ಕರ್ನಾಟಕ ಉತ್ತರ ಭಾಗದ ಬೀದರ್, ಗುಲಬರ್ಗಾ, ವಿಜಾಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಹೆಸರುಗಳನ್ನು ಕೇಳಿರಬಹುದೇ? ಕೇಳಿದರೂ ಯಾವ ಯಾವ ಕಾರಣಗಳಿಗಾಗಿ ಕೇಳಿರಬಹುದು? ಸರ್ಕಾರಿ ನೌಕರರಾದರೆ ಬಳ್ಳಾರಿ, ವಿಜಾಪುರಗಳನ್ನು ಭಯದಿಂದ ನೆನಪಿಟ್ಟುಕೊಂಡಿರುತ್ತಾರೆ. ಒಂದು ವೇಳೆ ತಮ್ಮ ಉದ್ಯೋಗದಲ್ಲಿ ತಪ್ಪುಗಳು ಘಟಿಸಿದರೆ ವರ್ಗಾವಣೆ ಎಂಬ ಶಿಕ್ಷೆ ಅನುಭವಿಸಲು ಈ ಜಿಲ್ಲೆಗೆ ಎಸೆದರೇನು ಮಾಡಬೇಕೆಂಬ ಭಯ. ಇಪ್ಪತ್ತು ವರ್ಷಗಳ ಹಿಂದೆ ಬಳ್ಳಾರಿ ಜೈಲಿಗೆ, ಗುಲಬರ್ಗಾ ಬಿಸಿಲಿಗೆ ಹೆಸರಾಗಿದ್ದವು. ಈಗ ಬಳ್ಳಾರಿ ಎಂದರೆ ಗಣಿಗಾರಿಕೆ. ಬಳ್ಳಾರಿ ಬಿಸಿಲಿಗೆ, ಜೈಲಿಗೆ ನೆನಪಾಗುತ್ತಿದ್ದುದು ಈಗ ಸರ್ಕಾರವನ್ನೇ ನಡುಗಿಸುವ ಜಿಲ್ಲೆಯಾಗಿ ನಿಂತಿದೆ. ಉದ್ದಿಮೆದಾರರಿಗೆ ಬರೀ ಕಬ್ಬಿಣದ ಅದಿರು ತುಂಬಿರುವ ಬಳ್ಳಾರಿಯ ನೆಲ ಗುಡ್ಡ ಬೆಟ್ಟಗಳು ಹಣದ ರಾಶಿಯಂತೆ ಕನಸಿನಲ್ಲಿ ಕಾಣುತ್ತಿರಬಹುದು. ಶಾಲಾ-ಕಾಲೇಜು ಮಕ್ಕಳು ಈ ಭಾಗದ ಕೆಲವು ಜಿಲ್ಲೆಗಳ ಹೆಸರನ್ನು ಪ್ರತಿವರ್ಷ ಕೇಳುತ್ತಿರುತ್ತವೆ. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪದವಿ ಪರೀಕ್ಷೆಗಳ ಫಲಿತಾಂಶ ಪತ್ರಿಕೆಯಲ್ಲಿ ಪ್ರಕಟವಾದಾಗ ಪ್ರತಿವರ್ಷವೂ ಬೀದರ್, ವಿಜಾಪುರ, ರಾಯಚೂರು ಜಿಲ್ಲೆಗಳು ಫಲಿತಾಂಶದಲ್ಲಿ ಕೊನಯ ಜಿಲ್ಲೆಗಳಾಗಿ ಕಾಣಿಸಿಕೊಂಡಿರುತ್ತವೆ. ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ ಪ್ರತಿನಿಧಿಸುತ್ತಿದ್ದ ಚಿಂಚೋಳಿ ತಾಲೂಕಿನ ಶಾಲಾ-ಕಾಲೇಜಿನ ಮಕ್ಕಳು, ಸ್ವಾತಂತ್ರ್ಯಾ ನಂತರ ಸತತವಾಗಿ ಚುನಾವಣೆಯಲ್ಲಿ ನಿಂತು ಗೆಲ್ಲುತ್ತಿರುವ ಮಲ್ಲಿ ಕಾರ್ಜುನ ಖರ್ಗೆ ಪ್ರತಿನಿಧಿಸುತ್ತಿರುವ ಯಾದಗಿರಿ ತಾಲೂಕು (ಈಗ ಜಿಲ್ಲೆ) ಅದರಲ್ಲೂ ಗುರುಮಿಠಕಲ್‍ನ ಶಾಲಾ-ಕಾಲೇಜಿನ ಮಕ್ಕಳು ರಾಜ್ಯದಲ್ಲೇ ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಕಾಣುತ್ತಾರೆ.
ಕರ್ನಾಟಕದ ದಕ್ಷಿಣ ಭಾಗದ ಜನರು ಅಲ್ಪಸ್ವಲ್ಪ ರಾಜಕೀಯ ಪ್ರಜ್ಞೆ ಇರುವವರೂ ಕೂಡ, ಉತ್ತರ ಕರ್ನಾಟಕದಿಂದ ಅದರಲ್ಲೂ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಂದ ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಕೇಳಿ ಬೆರಗಾಗುತ್ತಿರಬಹುದು. ಕೊಪ್ಪಳ, ರಾಯಚೂರು, , ಗುಲಬರ್ಗಾ, ಯಾದಗಿರಿ, ಬೀದರ್ ಜಿಲ್ಲೆಯ ಪ್ರಜೆಗಳು ಆಗಸ್ಟ್-15ರ ಬದಲು, ಸೆಪ್ಟಂಬರ್-17ರಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂಗತಿ; ಸ್ವಾತಂತ್ರ್ಯ ಬಂದು 60 ವರ್ಷಗಳಾದರೂ ಈ ಭಾಗದ ಜಿಲ್ಲೆಗಳಲ್ಲಿ ದಲಿತರಿಗೆ ಬಹಿಷ್ಕಾರ ಹಾಕುವಂತಹ ಸುದ್ದಿ; ಬೀದರಿನಲ್ಲಿ ಭಾನಾಮತಿಯಿಂದ ಘಟಿಸುವ ವಿಚಿತ್ರ ಘಟನೆಗಳ ಸುದ್ದಿ; ವೀರೇಂದ್ರ ಪಾಟೀಲರ ತಾಲೂಕು ಚಿಂಚೋಳಿಯಲ್ಲಿ ಬಡ, ದಲಿತ ಹೆಂಗಸರು ತಮ್ಮ ಮಕ್ಕಳನ್ನು ಮಾರಿಕೊಳ್ಳುತ್ತಿರುವ ಸುದ್ದಿ; ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್‍ರ ಜೇವರ್ಗಿ ತಾಲೂಕು ಕರ್ನಾಟಕದ ಅಭಿವೃದ್ಧಿಶೀಲ ತಾಲೂಕುಗಳಲ್ಲಿ 174ನೇ (Last but one) ಸ್ಥಾನದಲ್ಲಿರುವ ಸುದ್ದಿ; ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಕಟ್ಟಕಡೆಯ 175ನೇ ಸ್ಥಾನದಲ್ಲಿರುವುದೇ ಅಲ್ಲದೇ ಈ ತಾಲೂಕು ಏಷಿಯಾದಲ್ಲಿ ಅತಿ ಹಿಂದುಳಿದ ತಾಲೂಕು ಎಂಬ ಸುದ್ದಿ; ಹಿಂದುಳಿದ ಜಿಲ್ಲೆಗಳಲ್ಲಿ ಗುಲಬರ್ಗಾ ಜಿಲ್ಲೆ ಒಂದಾಗಿದ್ದರೂ ಎಸ್.ಎಂ.ಕೃಷ್ಣ ಅವರ ಮಂತ್ರಿಮಂಡಲದಲ್ಲಿ ಈ ಜಿಲ್ಲೆಯ 13 ಶಾಸಕರಲ್ಲಿ 6 ಶಾಸಕರು ಸಚಿವರಾಗಿದ್ದ ಸುದ್ದಿ; ಈಗೀಗ ಹೈದರಾಬಾದ್ ಕರ್ನಾಟಕ ‘ಪ್ರತ್ಯೇಕ ರಾಜ್ಯ’ ವಾಗಬೇಕೆಂಬ ಕೂಗಿನ ಸುದ್ದಿ; ಬಳ್ಳಾರಿಯ ಗಣಿಧಣಿಗಳು ತಿರುಪತಿ ತಿಮ್ಮಪ್ಪನಿಗೆ 50 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಕಿರೀಟ ಮಾಡಿಸಿ, ತೊಡಿಸಿದ ಸುದ್ದಿ; ಪ್ರಜೆಗಳಿಗೆ ಕಿಂಚತ್ತೂ ಬೇಕಿಲ್ಲಿದ ಶ್ರೀ ಕೃಷ್ಣದೇವರಾಯನ 500ನೇ ಪಟ್ಟಾಭಿಷೇಕದ ಉತ್ಸವವನ್ನು ರೆಡ್ಡಿಗಳು ಅದೇ ಪ್ರಜೆಗಳ ದುಡ್ಡಿನಿಂದ ಆಚರಿಸಿದ ಸುದ್ದಿ; ರಾಜ್ಯದಲ್ಲೇ ಈ ಭಾಗದ ಜಿಲ್ಲೆಗಳಿಂದ ಗುಳೆ (ವಲಸೆ) ಹೋಗುವವರ ಪ್ರಮಾಣ ಅಪಾರವಾಗಿದ್ದು, ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದು, ಅಲ್ಲಿ ದುಡಿವ ಜನರು ಸತ್ತರೆ ಅವರು ರಾಯಚೂರು, ಬಾಗಲಕೋಟೆ, ಕೊಪ್ಪಳ ಜಿಲ್ಲೆಯಿಂದ ಗುಳೆ ಹೋಗಿರುವ ಜನರಾಗಿರುತ್ತಾರೆ ಎಂಬ ಸುದ್ದಿ – ಇಂತಹ ನೂರಾರು ಸುದ್ದಿಗಳಿಂದ ಉತ್ತರ ಕರ್ನಾಟಕವು ದಕ್ಷಿಣ ಕರ್ನಾಟಕದವರಿಗೆ ಪರಿಚಯವಾಗುತ್ತದೇನೋ.
ಕರ್ನಾಟಕದ ಉತ್ತರ ಭಾಗದ ಬೆಳಗಾವಿ, ಧಾರವಾಡ, ಉ.ಕ.ಜಿಲ್ಲೆಗಳು ಸ್ವಾತಂತ್ರ್ಯ ಪೂರ್ವದಲ್ಲಿ ಮುಂಬೈ ಪ್ರೆಸಿಡೆನ್ಸಿಗೆ ಸೇರಿ, ನೇರ ಬ್ರಿಟಿಷರ ಆಡಳಿತಕ್ಕೆ ಒಳಗಾಗಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಬೆಳೆದವು. ಮರಾಠಿ ಸಂಸ್ಕೃತಿಯ ಪ್ರಭಾವವಿದ್ದರೂ ಸ್ವಾತಂತ್ರ್ಯ ನಂತರ ಕನ್ನಡ ಭಾಷೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳಿಂದ ಶ್ರೀಮಂತವಾಯ್ತು. ಲಿಂಗಾಯತರ ಪ್ರಭಾವ ಹೆಚ್ಚಾಗಿತ್ತು. ಲಿಂಗಾಯತ ಮಠಗಳು, ಅವುಗಳ ಶಿಕ್ಷಣ ಸಂಸ್ಥೆಗಳು ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಿದವು. ಹಿಂದೂಸ್ತಾನಿ ಸಂಗೀತಗಾರರಾದ ಮಲ್ಲಿ ಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಮುಂತಾದವರು ಪ್ರಸಿದ್ಧರಾದರೆ, ಮಧುರ ಚೆನ್ನ, ಬೇಂದ್ರೆ, ಡಿ.ಎಸ್. ಕರ್ಕಿ, ವಿನಾಯಕ, ಬಸವರಾಜ ಕಟ್ಟಿಮನಿ, ಆನಂದಕಂದ ಮುಂತಾದ ಸಾಹಿತಿಗಳು ಪ್ರಸಿದ್ಧರಾಗಿದ್ದಾರೆ.
ಉತ್ತರ ಕರ್ನಾಟಕದ ಒಳಗೇ ಇರುವ ಹೈದರಾಬಾದ್ ಕರ್ನಾಟಕದ ಬೀದರ್, ಗುಲಬರ್ಗಾ, ರಾಯಚೂರು, ಕೊಪ್ಪಳ ಮತ್ತು ಈಗಿನ ಯಾದಗಿರಿ ಜಿಲ್ಲೆಗಳು ಹಾಗೂ ವಿಜಾಪುರ, ಬಾಗಲಕೋಟೆ, ಗದಗ ಮುಂತಾದ 7 ಜಿಲ್ಲೆಗಳ ಈ ಪ್ರದೇಶಗಳ ಸಾಂಸ್ಕೃತಿಕ ಚರಿತ್ರೆ ಭಿನ್ನವಾಗಿದೆ. ಭಾಷಿಕವಾಗಿ ಈಗಲೂ ಉತ್ತರ ಭಾಗದ ಎಲ್ಲ ಜಿಲ್ಲೆಗಳು ಭಿನ್ನತೆಯಿಂದ ಕೂಡಿವೆ. ನಿಜವಾದ ಭಾಷಾ ವೈವಿಧ್ಯ ಈ ಜಿಲ್ಲೆಗಳಲ್ಲಿದೆ. ಆಡು ನುಡಿಯ ಸೊಗಡು ಭಿನ್ನ ಭಿನ್ನವಾಗಿದ್ದು ತನ್ನ ಚಹರೆಗಳನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡಿವೆ. ಪಂಪನ ಕಾಲದ, ರನ್ನನ ಕಾಲದ `ತಿರುಳ್ಗನ್ನಡ ನಾಡು’ ಈ ಭಾಗದಲ್ಲಿದೆ. ಈ ಪ್ರದೇಶಕ್ಕೆ ತನ್ನದೇ ಆದ ಪರಂಪರೆ, ಸಂಸ್ಕೃತಿಯಿದೆ. ಈ ಪರಂಪರೆ, ಸಂಸ್ಕೃತಿ ಎಂದು ಹೇಳುವುದೆಲ್ಲ ಶ್ರೇಷ್ಠವಾದದ್ದು ಅಂತಲ್ಲ. ಕಾಲದ ಸ್ಥಿತ್ಯಂತರಗಳನ್ನು ಅನುಭವಿಸುತ್ತ, ಹೊಸದನ್ನು ದಕ್ಕಿಸಿಕೊಳ್ಳುತ್ತ, ಹಳೆಯದನ್ನೂ ಉಳಿಸಿಕೊಳ್ಳುತ್ತ, ಸಂಕರವಾಗಿ ನಿಂತ ಪರಂಪರೆ, ಸಂಸ್ಕೃತಿ ಈ ಪ್ರದೇಶದಲ್ಲಿದೆ. ಹಾಗೆ ನೋಡಿದರೆ ಸಾಹಿತ್ಯ, ಸಂಗೀತ, ಕಲೆ, ಜಾನಪದ ಎಲ್ಲವೂ ಈ ಪ್ರದೇಶದಲ್ಲಿ ಹುಟ್ಟಿ ಬೆಳೆದದ್ದೇ ಹೆಚ್ಚು. ಜೈನ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ವಚನ ಸಂಕಲನ-ಸಂಗೋಪನ ಸಾಹಿತ್ಯ, ಪುರಾಣ ಸಾಹಿತ್ಯ, ತತ್ವಪದ ಸಾಹಿತ್ಯ, ಮೊಹರಂ ಸಾಹಿತ್ಯ, ಜನಪದದ ದೊಡ್ಡಾಟ, ಸಣ್ಣಾಟ, ಗೊಂದಲಿಗರ ಕಥೆಗಳು, ಲಾವಣಿ ಸಾಹಿತ್ಯ ಮುಂತಾದವು ಈ ಪ್ರದೇಶದ್ದೇ ಆಗಿವೆ. ಆಧುನಿಕ ಪೂರ್ವದಲ್ಲಿ ಇದೆಲ್ಲವನ್ನೂ ಕಾಣಬಹುದು.
ರಾಜಕೀಯ ಸ್ಥಿತ್ಯಂತರಗಳಿಂದ ಈ ಪ್ರದೇಶದಲ್ಲಿ ‘ಅನ್ಯ ಭಾಷೆ, ಅನ್ಯ ಸಂಸ್ಕೃತಿ’ ಪ್ರಭುತ್ವಗಳು ನೆಲೆಗೊಂಡ ಪರಿಣಾಮದಿಂದ ಭಾಷೆ, ಧರ್ಮ ಸಂಕರಗೊಂಡವು. ಸಂಕರ ಸಂಸ್ಕೃತಿಯೇ ಜನಸಮುದಾಯಗಳಲ್ಲಿ ನೆಲೆ ನಿಂತಿತು. ಜನಸಮುದಾಯಗಳ ಮೇಲೆ ರಾಜಕೀಯ ಪ್ರಭುತ್ವಕ್ಕಿಂತ, ಧಾರ್ಮಿಕ ಪ್ರಭುತ್ವದ ಪ್ರಭಾವವೇ ಹೆಚ್ಚು. ರಾಜನನ್ನು ಪ್ರಶ್ನಾತೀತನನ್ನಾಗಿ ಕಾಣುವ ಗುಣವನ್ನು ವಚನಕಾರರು ಕಳೆದು ಹಾಕಿದ್ದರು. ಬದಲಿಗೆ ಸಾಧಕರನ್ನು ಗೌರವಿಸುವ ಗುಣವು ಜನಸಮುದಾಯಗಳಲ್ಲಿ ಬೆಳೆದಿತ್ತು. ರಾಜ ಸತ್ತರೆ ಆತನ ಸ್ಮಾರಕವನ್ನು ನಿರ್ಮಿಸಲು ಯಾರೂ ಮುಂದಾಗುತ್ತಿರಲಿಲ್ಲ. ಅದೇ ಶರಣರು, ದಾಸರು, ಅನುಭಾವಿಗಳು, ಸಿದ್ಧರು, ಆರೂಢರು, ಸೂಫಿಗಳು, ಫಕೀರರು, ದರ್ವೇಶಿಗಳು ಸತ್ತರೆ ಅವರ ಸ್ಮಾರಕಗಳನ್ನು ಜನರೇ ನಿರ್ಮಿಸುವಂತಾಯಿತು. ಈ ಸಂಸ್ಕೃತಿ ಈ ಪ್ರದೇಶದ ಜನಸಮುದಾಯಗಳಲ್ಲಿ ಎದ್ದು ಕಾಣುತ್ತದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಮುಖ್ಯವಾಗಿ ಪ್ರಧಾನ ಧರ್ಮಗಳು ಸಮಾಜದ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಆಗಿದೆ. ವೈದಿಕ, ಜೈನ, ಶೈವ ಧರ್ಮಗಳು ಸಂಕುಚಿತವಾಗಿದ್ದವು. 12ನೇ ಶತಮಾನದ ಶರಣರ ಸಾಂಸ್ಕೃತಿಕ ಚಳವಳಿ ಅನೇಕ ಬದಲಾವಣೆಗಳನ್ನು ತಂದರೂ, ಅದು ನಂತರದಲ್ಲಿ ಸಾಂಸ್ಥಿಕವಾಗಿ ಬಲಗೊಂಡು ‘ಲಿಂಗಾಯತ , ವೀರಶೈವ’ ಧರ್ಮವಾಗಿ ಸಂಕುಚಿತಗೊಂಡಿತು. ಅಸಂಖ್ಯಾತ ಕೆಳ ಸಮುದಾಯಗಳು ‘ದೇವರು-ಧರ್ಮದ’ ಪರಿಕಲ್ಪನೆಯನ್ನು ಭಿನ್ನವಾಗಿ ಗ್ರಹಿಸಿದವು. ಈ ಜನಸಮುದಾಯಗಳಿಗೆ ಅವರುಗಳದ್ದೇ ಆದ ದೇವರು, ಧರ್ಮವನ್ನು ನಿದಿರ್ಷ್ಟವಾಗಿ ರೂಪಿಸಿಕೊಳ್ಳದೆ ತಬ್ಬಲಿಗಳಾದವು. ಆದರೂ ಈ ಜನಸಮುದಾಯಗಳು ತಬ್ಬಲಿಗಳಾಗದೇ ತಮ್ಮ ತಮ್ಮ ನೆಲೆಯಲ್ಲಿ ಆಧ್ಯಾತ್ಮಿಕವಾದ ಗುಂಪು, ಪಂಥಗಳಲ್ಲಿ ಒಗ್ಗೂಡಿಕೊಂಡವು. ಸ್ಥಳೀಯ ಸಾಧಕರೇ ಪೂಜ್ಯರಾದರು. ಅನುಭಾವಿಗಳು, ಆರೂಢರು, ಸೂಫಿಗಳು, ಫಕೀರರು ತಮ್ಮ ತಮ್ಮ ಅನುಭಾವ ಶಕ್ತಿಯಿಂದ ಜನಸಮುದಾಯಗಳ ಮೇಲೆ ಅಪಾರ ಪ್ರಮಾಣದಲ್ಲಿ ಪ್ರಭಾವ ಬೀರಿದರು. ಈ ಅನುಭಾವಿಗಳು ತೀರಿಕೊಂಡರೆ ಅವರ ಗದ್ದಿಗೆಗಳೇ ಆರಾಧನ ಕೇಂದ್ರವಾದವು. ದರ್ಗಗಾಗಳೂ ಇದನ್ನೇ ಸೂಚಿಸುತ್ತವೆ. ಧಾರ್ಮಿಕವಾಗಿ ಒಗ್ಗೂಡುವಿಕೆಯಿಂದ ಈ ಪ್ರದೇಶದಲ್ಲಿ ಸಮಾಧಿ ಸ್ಥಾನಗಳು ಆರಾಧನಾ ಕೇಂದ್ರಗಳಾಗಿ ಬೆಳೆದವು. ತತ್ವಪದಗಳು ಭಜನಾ ಮೇಳಗಳ ಮೂಲಕ ಸಾಮೂಹಿಕವಾಗಿ ಹೊರಹೊಮ್ಮಿದವು. ಈ ಸಮುದಾಯಗಳೇ ಮೊಹರಂ ಹಬ್ಬದಲ್ಲಿ ಹಾಡುತ್ತ ಕುಣಿದು ಸಂತೋಷ ಪಡುತ್ತಿವೆ. ಹಿಂದು-ಮುಸ್ಲಿಂ ಸೌಹಾರ್ದತೆ ಈ ಪ್ರದೇಶದಲ್ಲಿ ತಾನೇ ತಾನಾಗಿ ಜೀವಂತವಾಗಿದೆ. ತಿಂತಿಣ ಮೌನೇಶ್ವರನ ದೇವಸ್ಥಾನದಲ್ಲಿ ‘ಏಕ್ ಲಾಕ್ ಐಂಸಿ ಹಜಾರ್ ಪಾಂಚೋ ಪೀರ್ ಪೈಗಂಬರ್ ಮೌನೋದ್ದೀನ್ ಕಾಸಿಪತಿ ಗಂಗಾಧರ ಹರಹರ ಮಾಹಾದೇವ’ ಎಂಬ ಮಂತ್ರ ಪಠಿಸಲಾಗುತ್ತದೆ.
ಪ್ರಧಾನ ಧರ್ಮಗಳು ಈ ಪ್ರದೇಶದಲ್ಲಿ ಅವುಗಳ ಪಾಡಿಗೆ ಅವು ಸಂಕುಚಿತವಾಗಿ ದೇವಸ್ಥಾನ, ಮಠಮಾನ್ಯಗಳ ಜೊತೆಗೆ ಇದ್ದವು. ಅಪಾರ ಸಂಖ್ಯೆಯ ಕೆಳವರ್ಗಗಳು, ಬಡವರು, ರಾಜಪ್ರಭುತ್ವವನ್ನು, ಧರ್ಮಪ್ರಭುತ್ವವನ್ನು ಹೆಚ್ಚು ನಂಬಿಕೊಳ್ಳಲಿಲ್ಲ. ಕಷ್ಟ-ಸುಖಗಳನ್ನು ಆಧ್ಯಾತ್ಮ ಸಾಧಕರ ಸಮಾಧಿ, ದರಗಾಗಳಿಗೆ ಹೋಗಿ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ತಮ್ಮ ಹಕ್ಕುಗಳು ಯಾವುವು? ಅವುಗಳನ್ನು ಯಾರಿಂದ ದಕ್ಕಿಸಿಕೊಳ್ಳಬೇಕು ಎಂಬ ರಾಜಕೀಯ ಪ್ರಜ್ಞೆ ಈ ಪ್ರದೇಶದ ಜನಸಮುದಾಯಗಳಲ್ಲಿ ಬೆಳೆಯಲಿಲ್ಲ. ಈ ಹೊತ್ತಿಗೂ ಈ ಭಾಗದ ಜಿಲ್ಲೆಗಳು-ತಾಲೂಕುಗಳು ಹಿಂದುಳಿದಿವೆ. ತಾರತಮ್ಯ ನೀತಿಗೆ ಒಳಗಾಗುತ್ತಿವೆ ಎಂಬುದನ್ನು ಅಂಕಿ ಅಂಶಗಳು ಕಣ್ಣಿಗೆ ಹೊಡೆದು ಹೇಳುತ್ತಿವೆ. ಆದರೂ ಸರ್ಕಾರದ ಮೇಲೆ ಒತ್ತಡ ತರುವ ಹೋರಾಟಗಳು ನಡೆಯುತ್ತಿಲ್ಲ. ಈ ಭಾಗದ ರಾಜಕಾರಣಿಗಳಿಗೆ ಅಸ್ತಿತ್ವವೇ ಇಲ್ಲ ಅನಿಸುತ್ತಿದೆ. ಹೋರಾಟದ ಬದಲು ‘ಪ್ರತ್ಯೇಕ ರಾಜ್ಯ’ ದ ಬೇಡಿಕೆ ಇಟ್ಟು ಹೋರಾಡಲು ತೊಡಗಿಕೊಂಡು ಹಾಸ್ಯಾಸ್ಪದವಾಗುತ್ತಿದ್ದಾರೆ. ಅಪಾರ ಪ್ರಮಾಣದ ಭೂಮಿ ಮೇಲ್ವರ್ಗಗಳ ಕೈಯಲ್ಲಿಯೇ ಇತ್ತು. ಭೂ ಸೂಧಾರಣಾ ಕಾಯ್ದೆ ಪರಿಣಾಮಕಾರಿಯಾಗಿ ಈ ಭಾಗದಲ್ಲಿ ಆಗಲಿಲ್ಲ. 100 ರಿಂದ 500 ಎಕರೆ ಭೂಮಿ ಇರುವವರೇ ಸಣ್ಣ ರೈತರಾಗಿದ್ದರು. 1000-2000 ಎಕರೆ ಭೂಮಿಯನ್ನು ಹೊಂದಿದ ಭೂಮಾಲೀಕರಲ್ಲಿ ಬ್ರಾಹ್ಮಣ, ಲಿಂಗಾಯತರೂ ಇದ್ದರೂ. ಕೆಳವರ್ಗಗಳಿಗೆ ಭೂಮಿ ಇರಲಿಲ್ಲ. ಹೀಗಾಗಿ ಅತಿ ಶ್ರೀಮಂತಿಕೆ ಮತ್ತು ಅತಿ ಬಡತನ ಈ ಪ್ರದೇಶದಲ್ಲಿ ಕಾಣುವ ಮುಖ್ಯ ಲಕ್ಷಣವಾಗಿದೆ. ಬಡತನ ಇರುವಲ್ಲಿ ಬರೀ ಗೋಳಾಟ, ನರಳಾಟ ಮಾತ್ರ ಇರುತ್ತದೆಂದು ತಿಳಿಯಬೇಕಾಗಿಲ್ಲ. ನಿತ್ಯದ ಹೊಟ್ಟೆ ಪಾಡನ್ನು ದುಡಿದು ನಿಭಾಯಿಸಿಕೊಳ್ಳುತ್ತಾರೆ. 1980 ರ ವರೆಗೆ ಈ ದುಡಿವ ವರ್ಗ ವಲಸೆ ಹೋಗುತ್ತಿರಲಿಲ್ಲ. ಈ ಪ್ರಾಂತ್ಯದಲ್ಲಿ ಭೂಮಾಲೀಕರ ಕೆಳಗೆ ಬಡವರು ದುಡಿದು ಜೀವನ ಮಾಡುತ್ತಿದ್ದರು. 1980 ರ ನಂತರ ಜೀವನ ನಿರ್ವಹಣೆ ಕಷ್ಟವಾಯಿತು. ಆಗ ಗದಗ, ಕೊಪ್ಪಳ, ಬಳ್ಳಾರಿ, ವಿಜಾಪುರ, ಬಾಗಲಕೋಟೆ, ಗುಲಬರ್ಗಾ, ರಾಯಚೂರು, ಬೀದರ್ ಜಿಲ್ಲೆಗಳ ಜನರು ಮುಂಬಯಿ, ಪುಣೆ, ಕೊಲ್ಹಾಪುರ, ಸೊಲ್ಲಾಪುರ, ಹೈದರಾಬಾದ್, ಬೆಂಗಳೂರು, ಮಂಗಳೂರು, ಮಡಿಕೇರಿ ನಗರಗಳಿಗೆ ವಲಸೆ ಹೋಗುವುದಕ್ಕೆ ಆರಂಭಿಸಿದರು. ಈಗ ಅತಿಯಾಗಿ ಕೆಲವು ತಾಲೂಕುಗಳ ಹಳ್ಳಿಗಳಲ್ಲಿ ಜನರೇ ಇಲ್ಲದ ಸ್ಥಿತಿ ಒದಗಿದೆ. ವಲಸೆ ಹೋಗುವ ಕುಟುಂಬಗಳ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತವೆ. ಈ ಪ್ರದೇಶದಲ್ಲಿ 67.21% ಮಕ್ಕಳು ಶಾಲೆಗೆ ಹೋಗುತ್ತಿಲ್ಲ.
ಬಡತನ ಇರುವಲ್ಲಿ ಸಂಸ್ಕೃತಿ ಶ್ರೀಮಂತವಾಗಿರುತ್ತದೆ ಎಂಬುದಕ್ಕೆ ಉತ್ತರ ಕರ್ನಾಟಕ ಸಾಕ್ಷಿಯಾಗಿದೆ. ಎಷ್ಟು ಬಗೆಯ ಕಲೆಗಳು ಈ ಪ್ರದೇಶದಲ್ಲಿದ್ದವು ಎಂಬುದನ್ನು ಶೋಧನೆಯಿಂದ ಅರಿಯಬೇಕು. ಗೊಂದಲಿಗರ ಆಟ, ಹಗಲುವೇಷಗಾರರ ಆಟ, ಜಾತಿಗೇರರ ಆಟ, ಬುಡುಬುಡಿಕೆಯವರ ಆಟ, ತತ್ವಪದ ಹಾಡುವವರು, ದಾಸರ ಹಾಡುಗಳು ನೂರಾರು ಬಗೆಯ ಇಂಥ ಕಲಾವಿದರೆಲ್ಲರೂ ಹಳ್ಳಿಹಳ್ಳಿಗಳಲ್ಲಿ ನಿತ್ಯವೂ ಪ್ರದರ್ಶನಗಳನ್ನು ನೀಡುತ್ತಲೇ ಇರುತ್ತಿದ್ದರು. ನಿತ್ಯ ಬೆಳಗಾದರೆ ಸಾಕು ಹೊತ್ತು ಮುಳುಗುವವರೆಗೆ ಈ ಎಲ್ಲ ಕಲಾವಿದರು ಮನೆಮನೆ ಬಾಗಿಲಿಗೆ ಬಂದು ತಮ್ಮ ಕಲೆ ಪ್ರದರ್ಶಿಸಿ ಹೋಗುವುದನ್ನು ಕಾಣಬಹುದಾಗಿತ್ತು. ತಂಬೂರಿ ನಾದವು ಮೂಡಲು ಮೂಡುವಾಗ ಕೇಳುತ್ತಿದ್ದುದು, ಸೂರ್ಯ ಮುಳುಗಿದಾಗ ನಿಲ್ಲುತ್ತಿತ್ತು. ಬ್ರಿಟಿಷರು ಬಂದು ಇವರನ್ನು ಭಿಕ್ಷುಕರು ಎಂದು ಪೀಡಿಸಿದ್ದು ನಮಗೆ ಗೊತ್ತಿದೆ. ಸ್ವಾತಂತ್ರ್ಯದ ನಂತರ ಕಾಲು ಶತಮಾನದವರೆಗೆ ಈ ಕಲಾವಿದರು ಚಟುವಟಿಕೆಯಿಂದ ಕಾರ್ಯಶೀಲರಾಗಿದ್ದರು. ನಗರಗಳು, ಆಧುನಿಕತೆ ಬೆಳೆಯಲಾರಂಭಿಸಿ ಇವರು ಮೂಲೆಗುಂಪಾಗುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ ಈ ಕಲಾವಿದರು ಪ್ಲಾಸ್ಟಿಕ್ ವಸ್ತುಗಳನ್ನು ಮಾರುತ್ತಿದ್ದಾರೆ. ಕಲೆ ಮರೆತು ತಮಗೆ ಅನುಕೂಲವಾದ ಪುಡಿ ವ್ಯಾಪಾರಗಳಲ್ಲಿ ತೊಡಗಿದ್ದಾರೆ.
ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಾದ್ಯಂತ ಈಗಲೂ ಜೀವಂತವಾಗಿರುವ ಜಾತ್ರೆಗಳು ಸಂಭ್ರಮದಿಂದ ನಡೆಯುತ್ತವೆ. 20 ವರ್ಷಗಳ ಹಿಂದೆ ಒಂದೊಂದು ಜಾತ್ರೆಗಳು ತಿಂಗಳ ಕಾಲ ನಡೆಯುತ್ತಿದ್ದವು. ಈಚಿನ ವರ್ಷಗಳಲ್ಲಿ ದೊಡ್ಡ ಜಾತ್ರೆಗಳು ಕೂಡ ವಾರ ಹತ್ತು ದಿನಗಳ ಒಳಗೆ ಮುಗಿದು ಜನ ಖಾಲಿಯಾಗುತ್ತಾರೆ. ಮೈಲಾರ, ಹಂಪೆ, ಹುಲಗಿ, ಕೊಪ್ಪಳ, ಕುಕನೂರು, ಕನಕಗಿರಿ, ನೀರಮಾನ್ವಿ, ಕಲಮಾಲಿ, ಕವಿತಾಳ, ಅಮರೇಶ್ವರ, ಕೊಡೇಕಲ್ಲು, ತಿಂತಿಣಿ, ಹುಮನಾಬಾದ ಮುಂತಾದ ನೂರಾರು ಸ್ಥಳಗಳಲ್ಲಿ ನಡೆಯುವ ಜಾತ್ರೆಗಳಿಗೆ ಲಕ್ಷಾಂತರ ಜನ ಸೇರುತ್ತಾರೆ. ಸರ್ಕಾರಕ್ಕೆ ಜಾತ್ರೆಯ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಾಧ್ಯವಾಗುವುದಿಲ್ಲ. ಜನರು ನಿಯಂತ್ರಣ ಮೀರುತ್ತಾರೆ. ಪ್ರಸ್ತುತ ಕಾಲದಲ್ಲಿ ತಾಲೂಕು, ಹೋಬಳಿಗಳೂ ಕೂಡ ವ್ಯಾಪಾರ ಕೇಂದ್ರಗಳಾಗಿವೆ. ಆದರೂ ಈ ಜಾತ್ರೆಗಳು ವ್ಯಾಪಾರ ಕೇಂದ್ರಗಳಾಗಿ ಜನರನ್ನು ಸೆಳೆಯುತ್ತವೆ. ಎಲ್ಲ ಬಗೆಯ ವಸ್ತುಗಳು ಮಾರಾಟಕ್ಕೆ ಸಿಗುತ್ತವೆ. ಎತ್ತುಗಳಿಂದ ಹಿಡಿದು ಹೇರ್‌ಪಿನ್ನುಗಳವರೆಗೆ ವ್ಯಾಪಾರವಾಗುತ್ತದೆ. ಈ ಪ್ರದೇಶದ ಹಳ್ಳಿಗರು ತಮ್ಮ ಮೆಚ್ಚಿನ ಜಾತ್ರೆಗಳಿಗೆ ಪರಿವಾರ ಸಹಿತ ಹೋಗಿ ತಮಗೆ ಬೇಕಾದ ಸಾಮಾನುಗಳನ್ನು ಕಂಡು ಖುಷಿ ಪಡುತ್ತಾರೆ. ಕೆಲವು ಜಾತ್ರೆಗಳು ಕೆಲವು ವಸ್ತುಗಳ ಮಾರಾಟಕ್ಕೇ ಪ್ರಸಿದ್ಧವಾಗಿರುತ್ತವೆ.
ಜಾತ್ರೆಗಳ ಇನ್ನೊಂದು ವಿಶೇಷವೆಂದರೆ, ಹೇಳಿಕೆ ಅಥವಾ ಕಾರಣಿಕಗಳು. ಅನೇಕ ಜಿಲ್ಲಾ ಪ್ರದೇಶಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಹೇಳಿಕೆ-ಕಾರಣಿಕಗಳನ್ನು ಜನರು ಶ್ರದ್ಧೆಯಿಂದ ಕೇಳುತ್ತಾರೆ, ನಂಬುತ್ತಾರೆ. ಮೈಲಾರ ಜಾತ್ರೆ ಈ ಕಾರಣದಿಂದ ಪ್ರಸಿದ್ಧಿ ಪಡೆದಿದೆ. ಜಾತ್ರೆಯಲ್ಲಿ ದೇವರ ಪ್ರತಿನಿಧಿ ಎಂಬಂತಿರುವ ಪೂಜಾರಿ ನಿಗದಿತ ಕಾರ್ಯಗಳ ನಂತರ, ನಿಗದಿತ ಸಮಯಕ್ಕೆ ಹೇಳುವ ‘ಕಾರಣಿಕ’ವನ್ನು ನೆರೆದ ಜನಸಮುದಾಯ ಕೇಳಿ, ಅದನ್ನು ವರ್ಷದ ಉದ್ದಕ್ಕೂ ಅರ್ಥೈಸುತ್ತಲೇ ಇರುತ್ತಾರೆ. ಈ ‘ಕಾರಣಿಕ’ದ ನುಡಿಯ ಅರ್ಥವನ್ನು ವ್ಯಾಪಾರಿಗಳು, ವ್ಯವಸಾಯಗಾರರು, ಕಸುಬುದಾರರು, ಹೆಂಗಸರು, ಗಂಡಸರು ಆ ವರ್ಷದಲ್ಲಿ ತಮ್ಮ ಬದುಕಿನ ಉದ್ದಕ್ಕೂ ಸಮಯ-ಸಂದರ್ಭಕ್ಕೆ ಅನುಸಾರವಾಗಿ, ನಡೆದ, ಘಟಸಿದ ಘಟನೆಗಳೊಂದಿಗೆ ಅರ್ಥಮಾಡಿಕೊಳ್ಳುತ್ತಾರೆ. ಮಳೆ-ಬೆಳೆ, ವ್ಯಾಪಾರ, ಮದುವೆ ಮುಂತಾದ ಸಂಗತಿಗಳ ಭವಿಷ್ಯವನ್ನು ನಿರ್ಧರಿಸಿಕೊಳ್ಳುತ್ತಾರೆ. ಆಧುನಿಕತೆ ಬೆಳೆದರೂ ಈ ಸಂಪ್ರದಾಯಗಳು ಇನ್ನೂ ಜೀವಂತಿಕೆಯಿಂದ ಕೂಡಿವೆ. ಜಾತ್ರೆಗಳು ಈ ಜನಸಮುದಾಯಗಳ ಸೃಜನಶೀಲತೆಗೆ ಸಂಕೇತವಾಗಿವೆ. ಉರುಸುಗಳನ್ನೂ ಇಲ್ಲಿ ನೆನೆಯಬಹುದು.
ಮೊಹರಂ ಹಬ್ಬವೂ ಅಷ್ಟೆ. ಈ ಪ್ರದೇಶದಲ್ಲಿ ನಡೆಯುವ ಮೊಹರಂಗಳು ಅನನ್ಯವಾಗಿವೆ. ಮುಸ್ಲಿಮ್ ಹಬ್ಬವಾದರೂ ಪಾಲ್ಗೊಳ್ಳುವವರಲ್ಲಿ ಮುಕ್ಕಾಲು ಭಾಗ ಮುಸ್ಲಿಮೇತರರಿದ್ದಾರೆ. ಅನೇಕ ಹಳ್ಳಿಗಳಲ್ಲಿ ಮುಸ್ಲಿಮ್ ಕುಟುಂಬಗಳು ಇರುವುದಿಲ್ಲ. ಆದರೂ ಮೊಹರಂ ಹಬ್ಬವು ಸಂಭ್ರಮದಿಂದ ನಡೆಯುತ್ತವೆ. ಕೊಪ್ಪಳದ ಕುದುರೆಮೋತಿ, ರಾಯಚೂರಿನ ಮುದಗಲ್ಲು, ಬೀದರ್, ಗುಲಬರ್ಗಾ, ಬಾಗಲಕೋಟೆ, ಗದಗ ಈ ಎಲ್ಲ ಜಿಲ್ಲೆಗಳಲ್ಲಿ ಈ ಹಬ್ಬಗಳು ಮುಸ್ಲಿಮೇತರರ ಪಾಲ್ಗೊಳ್ಳುವಿಕೆಯಿಂದಲೇ ಬೃಹತ್ ಪ್ರಮಾಣದಲ್ಲಿ ನಡೆಯುತ್ತವೆ. ಕುದುರೆಮೋತಿ ಊರಿನಲ್ಲಿ ಮೊಹರಂ ನಡೆಯುವ ಸಂದರ್ಭದಲ್ಲಿ ಊರಿನ ಯಾರ ಮನೆಯಲ್ಲಿ ಯಾವ ಊರಿನ ಅತಿಥಿಗಳೂ ಹೋಗಿ ಆಶ್ರಯ ಪಡೆದು ಮೊಹರಂನಲ್ಲಿ ಪಾಲ್ಗೊಳ್ಳಬಹುದೆಂಬ ಸಂಪ್ರದಾಯವಿದೆ. ಅನೇಕ ಬುಡಕಟ್ಟಿನ ಜನ ಈ ಊರಿನ ಮೊಹರಂಗೆ ತಪ್ಪದೇ ಬರುತ್ತಾರೆ. ಮೊಹರಂ ಮುಗಿಸಿಕೊಂಡು ಈ ಬುಡಕಟ್ಟಿನವರೆಲ್ಲ ಒಂದೆಡೆ ಸೇರಿ ತಮ್ಮ ನಡುವಿನ ಜಗಳಗಳನ್ನು ‘ನ್ಯಾಯಕಟ್ಟೆ’ಯಲ್ಲಿ ಬಗೆ ಹರಿಸಿಕೊಂಡು ಹೋಗುತ್ತಾರೆ. ಈ ಸಂಸ್ಕೃತಿ ಇನ್ನೂ ಜೀವಂತವಾಗಿದೆ.
ಈ ಭಾಗದ ಜನರಲ್ಲಿ ರಾಜಕೀಯ ಪ್ರಜ್ಞೆ ಕಮ್ಮಿ. ಇಲ್ಲೇ ವಚನಕಾರರ ಚಳವಳಿ ನಡೆದಿದೆ. ರಾಜ ಪ್ರಭುತ್ವವನ್ನೂ, ಧರ್ಮದ ಪ್ರಭುತ್ವವನ್ನು ಪ್ರಶ್ನಿಸಿದ ವಚನಕಾರರು ಪರ್ಯಾಯ ಬದುಕನ್ನು ರಚಿಸಿಕೊಳ್ಳಲು ಚಳವಳಿಯನ್ನೇ ನಡೆಸಿದರು. ‘ಪ್ರತಿಭಾವಂತ’ ರಿಗೆ ಮಾತ್ರ ಸಾಹಿತ್ಯ ರಚನೆ ಸಾಧ್ಯವೆಂದು ನಂಬಿಕೆಯಿದ್ದ ಕಾಲದಲ್ಲಿ, ಸಮಾಜದ ಕಟ್ಟಕಡೆಯ ಕುಟುಂಬಗಳೂ ವಚನ ರಚಿಸಿ ಬೆರಗನ್ನುಂಟುಮಾಡಿದರು. ಈ ಕಾಲದಲ್ಲಿ ಯಜಮಾನಿಕೆಯನ್ನು ಪ್ರಶ್ನಿಸುವುದು, ಅದನ್ನು ಬದಿಗೊತ್ತಿ ಪರ್ಯಾಯ ದಾರಿಗಳನ್ನು ಸಮರ್ಥವಾಗಿ ಹುಟ್ಟು ಹಾಕುವುದು ನಡೆಯಿತು. ಇಂಥ ಪರಂಪರೆ ಮುಂದುವರಿದು ಬಲಗೊಳ್ಳಲಿಲ್ಲ. ರಾಜಕೀಯ ಸ್ಥಿತ್ಯಂತರಗಳು ನಡೆದವು. ಈ ಪ್ರಾಂತದಲ್ಲಿ ಮರಾಠಿ ಪೇಶ್ವೆ, ಇಸ್ಲಾಮ್ ಪ್ರಭುತ್ವಗಳು ನೆಲೆಗೊಂಡವು. ಶರಣರ ವಿಚಾರಗಳನ್ನು ಕೇವಲ ಧರ್ಮದ ನೆಲೆಗೆ ಸೀಮಿತಗೊಳಿಸಲಾಯಿತು. ವಚನ ಚಳವಳಿಯ ಫಲವಾದ ಸಾಹಿತ್ಯವನ್ನೇ ಸಾಂಸ್ಥಿಕಗೊಳಿಸಿ `ವೀರಶೈವೀಕರ’ಣಗೊಳಿಸಲಾಯಿತು. ಜಾತ್ಯತೀತ ಸಮಾಜದ ಕನಸು ಮುರಿದು ಬಿತ್ತು. ಶರಣ-ವಚನಕಾರರ ಸಮಾಜ ಸೇರಬಯಸಿದ ಅನೇಕ ಕೆಳಜಾತಿ ಸಮುದಾಯಗಳು ತಬ್ಬಲಿಗಳಾದವು. ರಾಜ ಪ್ರಭುತ್ವವನ್ನು, ಅದರ ಕಾರ್ಯವನ್ನು, ಅದರಲ್ಲಿ ಪ್ರಜೆಗಳಾದ ತಮ್ಮ ಪಾಲ್ಗೊಳ್ಳುವಿಕೆಯನ್ನು ಕುರಿತು ಯೋಚಿಸಲಿಲ್ಲ. ಈ ಪ್ರಜ್ಞೆಯೇ ಬೆಳೆಯಲಿಲ್ಲ. ಮೇಲಿಂದ ಮೇಲೆ ಪ್ರಭುತ್ವಗಳು ಬಂದು ಹೋದವು. ವಿಜಯನಗರ ಮತ್ತು ಆದಿಲ್ ಶಾಹಿ ಎರಡೂ ಪತನಗೊಂಡ ಮೇಲೆ ಈ ಪ್ರಾಂತ್ಯದಲ್ಲಿ ಅರಾಜಕತೆಯೇ ಹೆಚ್ಚಾಯಿತು. ವಿಜಯನಗರ, ಬಹಮನಿ-ಆದಿಲ್ ಶಾಹಿಗಳ ನಡುವೆ ನಡೆದ ಯುದ್ಧಗಳಿಗೆ ಲೆಕ್ಕವಿಲ್ಲ. ಈ ಎರಡು ರಾಜ್ಯಗಳ ನಡುವಿನ ಯುದ್ಧದ ಭೂಮಿಯೇ ಈ ಪ್ರಾಂತ್ಯವಾಗಿತ್ತು. 17 ರಿಂದ 20ನೇ ಶತಮಾನದ ಅರ್ಧಭಾಗದವರೆಗೆ ಕರ್ನಾಟಕದ ಉತ್ತರ ಭಾಗವು ಯಾವ ಸ್ಥಿತಿ ತಲುಪಿತ್ತು ಎಂಬುದನ್ನು ಇತಿಹಾಸಕಾರ ಬಿ. ಶೇಕ್ಅಲಿ ಹೀಗೆ ಬರೆಯುತ್ತಾರೆ: “ನಿರಂತರವಾಗಿ ರಾಜಕೀಯ ತಂತ್ರಗಳು ಮತ್ತು ದೈವಿಕ ಬಲ ಇವುಗಳನ್ನು ಎಲ್ಲ ಪಕ್ಷಗಳೂ ತಮ್ಮ ವಿರೋಧಿಗಳನ್ನು ಅಡಗಿಸಲು ಬಳಸುತ್ತಿದ್ದವು. ಪರಿಣಾಮವಾಗಿ ಇಡೀ ದೇಶವೇ ಕುದಿಯುವ ಕುಲುಮೆಯಾಗಿತ್ತು. ದೇಶವಿಡೀ ರಣಭೂಮಿಯಾಗಿ ಪರಿವರ್ತನೆಗೊಂಡು ಒಂದಿಷ್ಟು ಸ್ಥಳವೂ ಶಾಂತಿ ನೆಮ್ಮದಿಗಾಗಿ ಉಳಿಯದಂತಾಗಿತ್ತು. ಈ ಜನರಿಗೆ ಆಳುವವರು ಮರಾಠರಾಗಲೀ, ನಿಜಾಮರಾಗಲೀ, ಫ್ರೆಂಚರಾಗಲೀ, ಇಂಗ್ಲಿಷರಾಗಲೀ, ಅಥವಾ ಹೈದರಾಲಿ ಆಗಲೀ ಮುಖ್ಯ ವರಮಾನ ಮೂಲವೆಂದರೆ ಯುದ್ಧ ವಿಜಯಗಳಿಂದ ದೊರಕುವ ಫಲ. ಯಾರಾದರೊಬ್ಬರು ಶಾಂತಿಯಿಂದ ಇರಬಯಸಿದರೂ, ಮಿಕ್ಕವರು ಆ ಸುಖವನ್ನು ಸವಿಯಲು ಬಿಡುತ್ತಿರಲಿಲ್ಲ. ಎಲ್ಲರಲ್ಲೂ ಒಂದು ಹುಚ್ಚು, ಆವೇಶ, ಸಾಧ್ಯವಾದಷ್ಟು ಭೂಮಿಯನ್ನು ಕಸಿದುಕೊಳ್ಳಬೇಕು, ಕೊಳ್ಳೆಹೊಡೆಯಬೇಕು, ಸಾಧ್ಯವಾದಷ್ಟು ಸಂಪಾದಿಸಬೇಕು. ಅಧಿಕಾರ ಕಿತ್ತಾಟದ ಈ ಹಂತದಲ್ಲಿ ಯಾವುದೇ ಬಗೆಯ ರಚನಶೀಲ ಅಥವಾ ಸಾಂಸ್ಕೃತಿಕ ಬೆಳವಣಿಗೆ ಎನ್ನುವುದು ಸಾಧ್ಯವೇ ಇಲ್ಲದ ವಿಚಾರ. ಇಡೀ ಶತಮಾನವೇ ಒಂದು ಬೇಗುದಿಯ ಸುದೀರ್ಘ ಅವಧಿ. ದಂಗೆ-ಕ್ರಾಂತಿ ಇವು ದಿನದ ಮಾತಾಗಿದ್ದವು. ಯುದ್ಧವೆನ್ನುವುದು ಈ ಕಾಲದ ಸಾಮಾನ್ಯ ಚಟುವಟಿಕೆಯೇ ಆಗಿಹೋಯಿತು.” ಈ ಇತಿಹಾಸಕಾರರ ದೀರ್ಘ ಮಾತನ್ನು ಬಳಸಲು ಕಾರಣವಿದೆ. ಸ್ಥಿರವಾದ ರಾಜ-ಪ್ರಭುತ್ವವೇ ಇಲ್ಲ. ಪ್ರಜೆಗಳು ತಮ್ಮ ಕಷ್ಟಗಳನ್ನು ಯಾರ ಮುಂದೆ ಹೇಳಿಕೊಳ್ಳಬೇಕು? ಬಡತನ, ಯುದ್ಧ, ದೋಚುವಿಕೆ, ಶಾಂತಿ, ನೆಮ್ಮದಿ ಇಲ್ಲದ ದೀರ್ಘ ಬೇಗುದಿಯ ಪರಿಸ್ಥಿತಿಯಲ್ಲಿ ಸಾಮಾನ್ಯರು ವೈರಾಗ್ಯದಿಂದ ಆಧ್ಯಾತ್ಮದ ಕಡೆಗೆ, ಧಾರ್ಮಿಕ ಗುಂಪುಗಳ ಕಡೆ ಒಲಿದು ಸೋಮಾರಿಗಳಾದರು ಎಂದರೆ ತಪ್ಪಾಗುವುದಿಲ್ಲ. ವಚನಕಾರರ ಚಳವಳಿಯಲ್ಲಿ ಮಹಿಳೆಗೆ ಒಳ್ಳೆಯ ಸ್ಥಾನ-ಮಾನಗಳು ದಕ್ಕಿದವು. ಮುನ್ನೆಲೆಗೆ ಬರಲು ಅವಕಾಶಗಳು ಸಿಕ್ಕವು. ತಮ್ಮ ಶಕ್ತಿಯನ್ನು, ಬಲವನ್ನು ತೋರಿಸಿದರು. ವಚನೋತ್ತರ ಕಾಲದಿಂದ ಮಹಿಳೆ ಸಾಂಸ್ಕೃತಿಕವಾಗಿ ನಾಪತ್ತೆಯಾದಳು. ದಾಸರಲ್ಲಿ ಮಹಿಳೆಯಿಲ್ಲ. ತತ್ವಪದಕಾರರಲ್ಲಿ ಮಹಿಳೆಯಿಲ್ಲ. 12ನೇ ಶತಮಾನದಲ್ಲಿ ಸಾಂಸ್ಕೃತಿಕವಾಗಿ ಮುಂಚೂಣಿಗೆ ಬಂದ ಮಹಿಳೆ ನಂತರ 20ನೇ ಶತಮಾನ ಬಂದರೂ ನಾಪತ್ತೆಯೇ. ಆದರೆ ಈ ಪ್ರದೇಶದಲ್ಲಿ ಅದರಲ್ಲೂ ದುಡಿದ ವರ್ಗದಲ್ಲಿ ಮಹಿಳೆಯೇ ಬದುಕನ್ನು ನಿರ್ವಹಿಸುತ್ತಿರುವುದು ಎಂಬುದನ್ನು ಮರೆಯುವಂತಿಲ್ಲ. ಪುರುಷ ಸೋಮಾರಿ, ಮೈಗಳ್ಳ ಎಂಬುದನ್ನು ಅನೇಕ ಸಮೀಕ್ಷೆಗಳು ಹೇಳುತ್ತವೆ. ದುಡಿವ ಮಹಿಳೆಯೇ ಪುರುಷನಿಗಿಂತ ಹೆಚ್ಚು ಸೃಜನಶೀಲಳಾಗಿ ನಿಂತಿದ್ದಾಳೆ. ಜಮೀನ್ದಾರ-ಪ್ಯೂಡಲ್ ವ್ಯವಸ್ಥೆಯಲ್ಲಿ ಬಡತನದ ದುಡಿವ ಮಹಿಳೆ ಮಾನಸಿಕವಾಗಿ, ದೈಹಿಕವಾಗಿ ಶೋಷಿತಳೇ ಆಗಿದ್ದಾಳೆ. ಆದರೂ ಬದುಕುವ ಕುಟುಂಬವನ್ನು ಸಲಹುವ ಛಲ ಮಹಿಳೆಯಲ್ಲಿದೆ. ಈ ಪ್ರಾಂತ್ಯದ ಸಾಹಿತ್ಯದಲ್ಲಿ ಈ ಅಂಶ ಪ್ರಧಾನವಾಗಿ ಕಾಣುತ್ತದೆ.
ಆಳುವ ಸರ್ಕಾರಗಳನ್ನು ತಮ್ಮ ಬೇಕು-ಬೇಡಗಳನ್ನು ನಿಲ್ಲಿಸಿ ಕೇಳುವ ರಾಜಕೀಯ ಪ್ರಜ್ಞೆ ಈ ಭಾಗದ ಜನರಲ್ಲಿ ಬೆಳೆಯಲಿಲ್ಲ. ರೈತರು ಸಾಲು ಸಾಲಾಗಿ ಸತ್ತರು. ದುಡಿವ ಸಮುದಾಯಗಳು ಲಕ್ಷಾಂತರ ಜನ ಗುಳೆ ಹೋಗುತ್ತಿದ್ದಾರೆ. ಅಕಾಲಿಕ ನೆರೆ ಬಂದು ಇದ್ದವರು ಸಂತ್ರಸ್ತರಾದರೂ ಅವರಿಗೆ ಸೂರು ಒದಗಿಸುವ ಸರ್ಕಾರ ಇಲ್ಲ. ಇದ್ದರೂ ನಿರ್ಲಕ್ಷ್ಯವೇ ತುಂಬಿದೆ. ಜನರಲ್ಲಿ ಕೇಳುವ ಗುಣ ಇಲ್ಲದ ಕಾರಣ ಅಭಿವೃದ್ಧಿ ಕನಸಾಗಿದೆ. ತಾರತಮ್ಯ ಹೆಚ್ಚಾಗಿದೆ. ಈ ಭಾಗದ ಜನರು ತಮ್ಮ ಭಾಗದ ಅಭಿವೃದ್ಧಿಯ ಬಗ್ಗೆ, ತಾರತಮ್ಯದ ಬಗ್ಗೆ ಒಟ್ಟುಗೂಡಿ ಚರ್ಚಿಸಿದ್ದಾಗಲೀ, ವಿಚಾರ ಸಂಕಿರಣವಾಗಲೀ, ವರ್ಕಶಾಪ್ ಮಾಡಿದ್ದಾಗಲೀ ಕಂಡು ಬರುವುದಿಲ್ಲ. ಬುದ್ದಿಜೀವಿಗಳು ತಮ್ಮ ಪಾಡಿಗೆ ತಾವಿದ್ದಾರೆ. ಕುತೂಹಲದ ಸಂಗತಿಯೆಂದರೆ, ಹೈದರಾಬಾದ್ ಕರ್ನಾಟಕ ಪ್ರಾಂತ್ಯದಿಂದ ರಾಜಕೀಯದಲ್ಲಿ ವೀರೇಂದ್ರ ಪಾಟೀಲ್, ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಬಿಟ್ಟರೆ ನಾಲ್ಕನೇ ಹೆಸರಿಲ್ಲ. ಸ್ವಾತಂತ್ರ್ಯ ಬಂದು 60 ವರ್ಷಗಳಾದರೂ ರಾಜಕೀಯ ನಾಯಕರು ಹೆಚ್ಚಾಗಿ ಯಾಕೆ ಕಾಣಿಸಿಕೊಂಡಿಲ್ಲ? ಕಾಣಿಸಿಕೊಂಡರೂ ಹೆಸರಿಗೆ ರಾಜಕಾರಣಿಗಳಾಗಿ, ಒಂದೋ, ಎರಡೋ ಅವಧಿಗೆ ಶಾಸಕರಾಗಿ, ಸಚಿವರಾಗಿ ಮಾಯವಾದವರೇ ಹೆಚ್ಚು. ಜನರ ಆಶೋತ್ತರಗಳಿಗೆ ಸ್ಪಂದಿಸುವ ನಾಯಕರೇ ಹುಟ್ಟಿಕೊಳ್ಳುತ್ತಿಲ್ಲ. ಈಗ ಅತಿಯಾಗಿ ಸುದ್ದಿಯಲ್ಲಿರುವ ಬಳ್ಳಾರಿಯ ಗಣಿಧಣಿಗಳು ರಾಜಕಾರಣಿಗಳಾಗಿ, ಮಂತ್ರಿಗಳಾಗಿದ್ದಾರೆ. ನಿಜವಾದ ಅರ್ಥದಲ್ಲಿ ಅವರನ್ನು ರಾಜಕಾರಣಿಗಳು ಅನ್ನಲು ಸಾಧ್ಯವೇ? ಪ್ರಜಾಶಕ್ತಿಯನ್ನು ಮಾರಾಟದ ಸರಕನ್ನಾಗಿ ಮಾಡಿ ಅದನ್ನು ಕೊಂಡುಕೊಂಡಿದ್ದಾರೆ. ಅವರಲ್ಲಿರುವ ದುಡ್ಡಿನಿಂದ ಬಳ್ಳಾರಿ ಜಿಲ್ಲೆಯನ್ನು ಇಂಡಿಯಾದ ಮಾದರಿ ಜಿಲ್ಲೆಯನ್ನಾಗಿ ಮಾಡಬಹುದು. ಆದರೆ ಬಳ್ಳಾರಿಯ ರಸ್ತೆಗಳಲ್ಲಿ ಅರ್ಧಗಂಟೆ ತಿರುಗಾಡಲು ಸಾಧ್ಯವಿಲ್ಲ. ಅಷ್ಟು ಗಣಿ ಧೂಳು ತುಂಬಿದೆ.
ಗುಲಬರ್ಗಾ ಜಿಲ್ಲೆಯ ನೆಲದಲ್ಲಿ ಸಿಗುವ ‘ಪರಸೆ’ ಕಲ್ಲು (ಸಿಮೆಂಟ್), ಇಳಕಲ್ಲನಲ್ಲಿ ಸಿಗುವ ಗ್ರ್ಯಾನೆಟ್ ಕಲ್ಲು, ಬಳ್ಳಾರಿಯ ಕಬ್ಬಿಣದ ಅದಿರು ಹೀಗೆ ಈ ಭಾಗದಲ್ಲಿ ಪ್ರಾಕೃತಿಕ ಸಂಪತ್ತು ಬೇಕಾದಷ್ಟಿದೆ. ಉದ್ದಿಮೆ ಸ್ಥಾಪಿಸುವವರು ಯಾರು? ಹೊರಗಿನವರು. ಗುಲಬರ್ಗಾದ ತೊಗರಿ, ರಾಯಚೂರಿನ ಭತ್ತ, ಬಾಗಲಕೋಟೆಯ ಹತ್ತಿ, ಗದಗಿನ ಮೆಣಸಿನಕಾಯಿ, ಸಂಡೂರಿನ, ಹುಬ್ಬಳ್ಳಿಯ ಉಳ್ಳಾಗಡ್ಡೆ, ಬೆಳಗಾವಿಯ ಕಬ್ಬು ಹೀಗೆ ಭೂಮಿಯ ವ್ಯವಸಾಯದಿಂದ ಬೇಕಾದಷ್ಟು ಉತ್ಪನ್ನವಿದೆ. ಆದರೆ ಅದನ್ನು ನಿರ್ವಹಿಸುವ ದಲ್ಲಾಳಿಗಳು ಶ್ರೀಮಂತರಾಗುತ್ತಾರೆ. ಭೂಮಿ ಇರುವ ರೈತರು ಸಾಯುತ್ತಾರೆ. ದುಡಿದವರು ನಗರಗಳಿಗೆ ವಲಸೆ ಹೋಗುತ್ತಾರೆ. ಆಯಾ ಜಿಲ್ಲೆಗಳಲ್ಲಿರುವ ನೈರ್ಸಗಿಕ ಸಂಪತ್ತನ್ನು ಉದ್ಯಮಿಗಳು ಅಕ್ಷರಶಃ ಕೊಳ್ಳೆ ಹೊಡೆಯುತ್ತಿದ್ದಾರೆ. ಗಣಿಗಾರಿಕೆ ರಾಷ್ಟ್ರೀಕರಣವಾಗಬೇಕು ಎಂಬ ಹೋರಾಟ ಯಾರಿಂದಲೂ ಹುಟ್ಟಿ ನಡೆಯಲಾರದಂಥ ಸ್ಥಿತಿಯಿದೆ. ಸ್ಥಳೀಯವಾಗಿದ್ದ ಗುಡಿ ಕೈಗಾರಿಕೆಗಳು ನಾಶವಾಗಿ ಹೋಗಿವೆ. ಕಸುಬುದಾರರು ತಮ್ಮ ಮೂಲ ಕಸುಬನ್ನು ಮರೆಯುವಂತೆ ಜಾಗತೀಕರಣ ಬೆಳೆದಿದೆ.
ಉತ್ತರ ಕರ್ನಾಟಕದ ಅನೇಕ ಜಿಲ್ಲೆ, ತಾಲೂಕುಗಳು ಸಾಂಸ್ಕೃತಿವಾಗಿ ಮಹತ್ವ ಪಡೆದಿವೆ. ತುಂಬ ಜನಪ್ರಿಯವಾಗಿರುವ ಹಂಪೆ, ಬದಾಮಿ, ಪಟ್ಟದಕಲ್ಲು, ಐಹೊಳೆ, ವಿಜಾಪುರ, ಬೀದರ್ ಸ್ಥಳಗಳು ಪ್ರವಾಸೋದ್ಯಮ ನಕ್ಷೆಗಳಲ್ಲಿ ಕಾಣುತ್ತವೆ. ರಾಜರ ಆಳ್ವಿಕೆಯಿಂದ ದೇವಾಲಯಗಳು, ಗುಹೆಗಳು ವಾಸ್ತುಶಿಲ್ಪ, ಕಲ್ಲಿನ ಕಟ್ಟಡಗಳು ನಿರ್ಮಾಣವಾಗಿವೆ. ಆದರೆ ನಿಸರ್ಗ ನಿರ್ಮಿತ ಸ್ಥಳಗಳ ಪರಿಚಯ ಹೊರಗಿನವರಿಗಿಲ್ಲ. ಬಹಳ ಮುಖ್ಯ ಎಂದು ಕರೆಯುವ ಸ್ಥಳಗಳಲ್ಲಿ ಪ್ರವಾಸಿಗರಿಗೆ ಅನುಕೂಲಗಳನ್ನು ಪ್ರವಾಸೋದ್ಯಮ ಇಲಾಖೆ ಮಾಡಿಲ್ಲ. ವಸತಿ ಸೌಕರ್ಯ ಇದ್ದರೂ ಬಿಳಿ ಆನೆಯಾಗಿವೆ. ಮೇಲ್ಮಧ್ಯಮ ವರ್ಗದವರಿಗೂ ಕೈಗೆ ನಿಲುಕದ ಹಾಗೆ ಬೆಲೆಗಳನ್ನಿಟ್ಟಿರುತ್ತಾರೆ. `ಮಯೂರ’ಎಂದು ಕರೆಯುವ ಪ್ರವಾಸೋದ್ಯಮ ಹೋಟೆಲುಗಳಲ್ಲಿ ಎಲ್ಲವೂ ದುಬಾರಿ. ಆದರೆ ವ್ಯವಸ್ಥೆ ಮಾತ್ರ ಅತಿ ಸಾಧಾರಣ. ಬಳ್ಳಾರಿ ಬಿಸಿಲಿಗೆ, ಜೈಲಿಗೆ, ಸರ್ಕಾರಿ ನೌಕರರ ಶಿಕ್ಷೆಗೆ ಗುರಿಮಾಡಲು ವರ್ಗಾವಣೆಗೆ ಇಂಥದಕ್ಕೆ ಹೆಸರುವಾಸಿಯಾಗಿದೆಯಷ್ಟೆ. ಆದರೆ ಹೊಸಪೇಟೆ, ಸಂಡೂರು, ಹಡಗಲಿ, ಹರಪನಹಳ್ಳಿ, ಮುಂಡರಗಿ, ಮೊಳಕಾಲ್ಮೂರು, ಆನೆಗುಂದಿ ಮುಂತಾದ ಊರುಗಳ ಸರಹದ್ದುಗಳಲ್ಲಿ ಮನತಣಿಯುವ ನಿಸರ್ಗ ತಾಣಗಳಿವೆ. ಸಂಡೂರು ತಾಲೂಕಿನಲ್ಲಿರುವ ನರಸಿಂಗಾಪುರ, ತಾರಾನಗರ, ನವಲಟ್ಟಿ, ಉಬ್ಬಲಗುಂಡಿ, ನಾರಾಯಣಪುರ, ರಾಜಾಪುರ, ದೇವಗಿರಿ, ನಂದಿಹಳ್ಳಿ, ಯಶವಂತನಗರ, ಬಂಡ್ರಿ ಮುಂತಾದ ಗ್ರಾಮಗಳು ಕಣಿವೆ, ಬೆಟ್ಟಗಳಿಂದ, ನೀರಿನ ಝರಿಗಳಿಂದ ಮನಸೆಳೆಯುತ್ತವೆ. ನಾರಿಹಳ್ಳಿ, ನಂದಿಹಳ್ಳಿ (ಕುಮಾರಸ್ವಾಮಿ ದೇವಸ್ಥಾನ) ಸುಂದರ ತಾಣಗಳಾಗಿದ್ದವು. ಆದರೆ ಗಣಿಗಾರಿಕೆಯಿಂದ ಈ ಸುಂದರ ನಿಸರ್ಗ, ಊರು, ಹೊಲಗಳಲ್ಲಿನ ವ್ಯವಸಾಯ ಹದಗೆಟ್ಟು ಹೋಗಿದೆ. ಯಾವ ಬೆಳೆಯೇ ಆಗಲಿ, ಬೆಳೆಯುತ್ತಿದ್ದಂತೆ ಧೂಳು ಅಡರಿ ಮುಚ್ಚಿ ಹೋಗುತ್ತವೆ. ಊರಿನ ರಸ್ತೆಗಳಲ್ಲಿ ಧೂಳು ಅಡರಬಾರದೆಂದು ಹಗಲು ನೀರು ಹಾಕುತ್ತಾರೆ. ಯಾವಾಗಲೂ ರೊಚ್ಚೆಯಲ್ಲಿ ತಿರುಗಾಡಬೇಕು. ಹಳ್ಳಿಗಳಲ್ಲಿ ಗಿಡಮರಗಳ ಮರ್ಮರ, ನೀರಿನ ಜುಳುಜುಳು ಶಬ್ದ ಕೇಳಿದ್ದ ಜನ ಈಗ ಸ್ಫೋಟಕಗಳ ಸಿಡಿಯುವ ಶಬ್ದ, ಲಾರಿಗಳ ನಿರಂತರ ಶಬ್ದ ಕೇಳಬೇಕು. ಪಶು, ಪಕ್ಷಿ, ಪ್ರಾಣಿ, ವನ್ಯಜೀವಿಗಳು ಅಲೆದಾಡುವಂತೆ ಈಗ ಗುಡ್ಡಗಳಲ್ಲಿ ಲಾರಿ, ಜೀಪುಗಳು ತಿರುಗಾಡುತ್ತವೆ. ಬಳ್ಳಾರಿ, ಹೊಸಪೇಟೆಗಳೂ ಧೂಳಿನಿಂದ ವಿಕಾರಗೊಂಡಿವೆ. ಜನರ ಬದುಕನ್ನು ಕೆಡಿಸಿರುವ ಈ ಗಣಿಗಾರಿಕೆಯು, ಪುನಃ ಸ್ಥಾಪಿಸಲಾರದ ಸ್ಥಿತಿಗೆ ಊರು, ನಿಸರ್ಗ, ಜನರನ್ನು ಪ್ರಾಣಿಸಂಕುಲ, ಪಕ್ಷಿ ಸಂಕುಲವನ್ನು ನಾಶಮಾಡುತ್ತಿದೆ. ಗಣಿಮಾಲೀಕರು ಚುನಾವಣೆಗೆ ನಿಂತು, ಪ್ರಜಾಶಕ್ತಿಯನ್ನು ನೋಟಿನಿಂದ ಕೊಂಡು, ರಾಜ್ಯದ ರಾಜಕೀಯ ಪಾವಿತ್ರ್ಯವನ್ನೇ ನಾಶಮಾಡಿದ್ದಾರೆ. ಗುಲಬರ್ಗಾ ಜಿಲ್ಲೆಯ ಒಣ ಬೇಸಾಯದಿಂದ ಜನ ಹೇಗೋ ಬದುಕುತ್ತಿದ್ದರು. ನೆಲದಲ್ಲಿ ಸಿಗುವ ಸಿಮೆಂಟಿನ ಕಚ್ಚಾವಸ್ತು ಶಾಬಾದಿ ಪರಸೆ ಕಲ್ಲುಗಳ ಗಣಿಯಿಂದ ಶಹಾಬಾದ್, ಸೇಡಂ, ತಾಂಡೂರು ತಾಲೂಕುಗಳೂ ಸಿಮೆಂಟಿನ ಧೂಳಿನಿಂದ ಮುಳುಗಿವೆ. ಇಲ್ಲಿನ ಉದ್ದಿಮೆದಾರರು ತಮ್ಮ ಬಂಡವಾಳ ಹೆಚ್ಚಿಸಿಕೊಂಡಿದ್ದಾರೆ. ಆದರೆ ಜನರ ಜೀವನಮಟ್ಟ ಕುಸಿದು ಹೋಗುವಂತೆ ಮಾಡಿದ್ದಾರೆ. ಇಲ್ಲಿನ ಉದ್ದಿಮೆದಾರರು ಬಳ್ಳಾರಿ ಗಣಿಧಣಿಗಳ ಹಾಗೆ ರಾಜಕೀಯವನ್ನು ಪ್ರವೇಶಿಸಿ ರಾಜ್ಯವನ್ನು ಹದಗೆಡಿಸಿಲ್ಲ ಅಷ್ಟೇ. ಬೀದರಿನ ಕೋಟೆ, ಕೋಟೆಯ ಕೆಳಗಿರುವ ಅಷ್ಟೂರಿನ ಗೋರಿಗಳನ್ನು ನೋಡಿದರೆ ಖುಷಿಯಾಗುತ್ತದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಜಲದುರ್ಗವು ಕೃಷ್ಣಾನದಿ ಎರಡಾಗುವ ಸ್ಥಳ. ನಡುಗಡ್ಡೆಯಾಗಿ ಭೀಕರವಾಗಿ, ರಮ್ಯವಾಗಿ ಮನಸೆಳೆಯುತ್ತದೆ. ಕೃಷ್ಣಾನದಿ ಹಾಗೇ ಮುಂದೆ ಹರಿಯುತ್ತ ಬರೀ ಗುಡ್ಡಬೆಟ್ಟಗಳಲ್ಲಿ, ಕಣಿವೆಯಾಗಿ ಹರಿದು ತಿಂತಿಣಿ, ದೇವದುರ್ಗ, ದೇವಸೂಗೂರು, ಅಲ್ಲಿಂದ ಕೆಳಗೆ ನಾರದದಗಡ್ಡೆ ಮುಂತಾದ ಮೂರು ನಾಲ್ಕು ನಡುಗಡ್ಡೆಗಳನ್ನು ನಿರ್ಮಿಸಿದೆ. ಜಲದುರ್ಗಾದ ಸಮೀಪ ಛಾಯಾಭಗವತಿಯಿದೆ. ಬಸವಸಾಗರ ಅಣೆಕಟ್ಟು ಇದೆ. ಮುದಗಲ್ಲಿನ ಕೋಟೆಯಿದೆ. ಕೊಡೇಕಲ್ಲು ಇದೆ. ಮೊಗಲರ ಸಮಾಧಿಗಳಿರುವ ದಿಗ್ಗಿ ಗ್ರಾಮ ಇದೆ. ಇವು ಐತಿಹಾಸಿಕ ಕುರುಹುಗಳಾಗಿ ನಿಂತಿವೆ. ಆದರೆ ಸರ್ಕಾರ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗಾಗಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಹುಬ್ಬಳ್ಳಿಯಿಂದ ಬೆಳಗಾವಿಗೆ ರೈಲಿನಲ್ಲಿ ಪ್ರಯಾಣಿಸಿದರೆ ಸುಖಕರ ಅನುಭವ ಆಗುತ್ತದೆ. ಎಡ-ಬಲ ಕಾಡು, ನಡುವೆ ಅಲ್ಲಲ್ಲಿ ಊರು, ವ್ಯವಸಾಯದ ಹೊಲಗಳು ಕಣ್ಣಿಗೆ ಹಬ್ಬ ನೀಡುತ್ತದೆ.
ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಲ್ಲಿ ಉ.ಕ. ಬೆಳಗಾವಿ, ಧಾರವಾಡ, ಬಿಟ್ಟರೆ, ಬಾಗಲಕೋಟೆ, ವಿಜಾಪುರ, ಗದಗ, ಕೊಪ್ಪಳ, ರಾಯಚೂರು, ಗುಲಬರ್ಗಾ ಮತ್ತು ಬೀದರ್ , ಈ ಏಳು ಜಿಲ್ಲೆಗಳು ಸಾಂಸ್ಕೃತಿಕವಾಗಿ ಶ್ರೀಮಂತವಾಗಿವೆ. ಆರ್ಥಿಕವಾಗಿ ಹಿಂದುಳಿದಿವೆ. ನೈರ್ಸಗಿಕ ಸಂಪತ್ತಿದೆ. ಅದು ಬಂಡವಾಳ ಹೂಡುವವರಿಂದ ಲೂಟಿಯಾಗುತ್ತಿದೆ. ಜನರಿಗೆ ವಿದ್ಯಾವಂತರಾಗಿ, ರಾಜಕೀಯ ಪ್ರಜ್ಞೆ ಪಡೆಯಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಯಾಗದೇ ಇರುವುದು. ತಾಂತ್ರಿಕ ಶಿಕ್ಷಣ ಕಲಿಯಲು ದಾರಿಯಾಗುವ ಪಿ.ಯು.ಸಿ. ಪದವಿಯನ್ನು ವಿಜ್ಞಾನದಲ್ಲಿ ಕಲಿಯಲು ಕಾಲೇಜುಗಳ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಸರ್ಕಾರಿ ಪದವಿಪೂರ್ವ ವಿಜ್ಞಾನ ಕಾಲೇಜುಗಳ ಸಂಖ್ಯೆ ತೀರಾ ಕಮ್ಮಿಯಿದೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಾಗುವ ಸೂಚನೆಗಳೂ ಕೂಡ ಕಾಣಿಸುತ್ತಿಲ್ಲ.
“ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.
(ಚಿತ್ರಕೃಪೆ: ವಿಕಿಪೀಡಿಯ ಮತ್ತು ಇತರೆ ಅಂತರ್ಜಾಲ ಮೂಲಗಳು.)
1 ಕಾಮೆಂಟ್:
ಲೇಖನ ಅರ್ಥಪೂರ್ಣವಾಗಿದೆ. ಆದರೆ ಕರ್ನಾಟಕ ನಕಾಶೆಯಲ್ಲಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಜಿಲ್ಲೆ ತೋರಿಸಿದ್ದು ತಪ್ಪು.
ಕಾಮೆಂಟ್ ಪೋಸ್ಟ್ ಮಾಡಿ