ಮಂಗಳವಾರ, ಸೆಪ್ಟೆಂಬರ್ 9, 2014

ಕೊರಗ ಸಮುದಾಯದ ಚಿತ್ರಗಳು -ಭಾಗ 8

ಆಮೆ ಸಿಕ್ಕಿತೆಂದರೆ ಆ ದಿನ ಹಬ್ಬದೂಟ!
ಕೊರಗರು ಆಮೆ ಬೇಟೆಯಲ್ಲಿಯೂ ಭಾರೀ ಪರಿಣತರು. ಆಮೆಯ ಹೆಜ್ಜೆ ಜಾಡು ಹಿಡಿದು, ಸಣ್ಣ ಸಣ್ಣ ಗುಹೆಯನ್ನು ತೆವಲಿಕೊಂಡು ಹೊಕ್ಕು ಬೇಟೆಯಾಡುವವರಿದ್ದಾರೆ. ಆಳ ನೀರಿನಲ್ಲಿ ಮುಳುಗಿ ಆಮೆ ಹಿಡಿಯುವವರು ಇದ್ದಾರೆ.
ಆಮೆ ಸಿಕ್ಕಿತೆಂದರೆ ಆ ದಿನ ಕೊರ್ರೆ ಕೊಟ್ಟ (ಕೊರಗರ ಮನೆ)ಯಲ್ಲಿ ಹಬ್ಬದ ಸಂಭ್ರಮ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ಅಜ್ಜನವರೆಗೂ ಪ್ರತಿಯೊಬ್ಬರೂ ಆಮೆಯನ್ನು ಮುಟ್ಟಿನೋಡಿ ಸಂಭ್ರಮಿಸುತ್ತಾರೆ. ಅದರ ತಲೆ ತುಂಡರಿಸಿ, ಹಸಿಬಿಸಿ ರಕ್ತ ಹೀರುತ್ತಾರೆ. ಚಿಪ್ಪುತೆಗೆದು ಮಾಂಸವನ್ನು ಹಸಿಹಸಿಯಾಗಿ ತಿನ್ನುವುದೂ ಇದೆ! ಅದರ ಪದಾರ್ಥ ಮಾಡಿ ಹಬ್ಬದೂಟ ಮಾಡುತ್ತಾರೆ. ಆ ದಿನದ ಖುಷಿಗೆ ಪಾರವೇ ಇಲ್ಲ.
ಆಮೆ ಪದಾರ್ಥ ಮಾಡಿದ ನಂತರ, ಅದರ ಗಟ್ಟಿಯಾದ ಬೆನ್ನಚಿಪ್ಪನ್ನು ತಮ್ಮ ಕೊಟ್ಟ(ಅಂದರೆ ಮನೆ ಎಂದು ಅರ್ಥ)ದ ಮಾಡಿಗೆ ಕಟ್ಟಿ ಜೋಪಾನವಾಗಿಡುತ್ತಾರೆ. ಜೋರು ಗುಡುಗು ಶುರುವಾಯಿತೆಂದರೆ ಆ ಚಿಪ್ಪನ್ನು ಬೆಂಕಿಯ ಒಲೆಗೆ ಹಾಕಿ ಕಾಯಿಸುತ್ತಾರೆ! ಅದರ ಕಟು ವಾಸನೆಗೆ ಗುಡುಗುರಾಯ ಬೆದರಿ ಓಡುತ್ತಾನೆಂಬ ಧೃಡ ನಂಬಿಕೆ ಕೊರಗರದ್ದು! ಆಗಲೂ ಈಗಲೂ!
- ಹೃದಯ
ಚಿತ್ರ ಕೃಪೆ : ಹರೀಶ. ಎಸ್. ಶಿರ್ವ
( ಕ್ಷಮೆ ಇರಲಿ...
ಈಗ ಕೊರಗರು ಆಮೆ ಬೇಟೆಯಾಡುವುದಿಲ್ಲ ಮತ್ತು ಆಮೆ ಬೇಟೆ ಕಾನೂನು ರೀತಿಯ ಅಪರಾಧವಾಗುತ್ತದೆ.)


ಚಿನ್ನವನ್ನೇ ಆಭರಣವನ್ನಾಗಿ ಧರಿಸುವವರು ಆದಿವಾಸಿಗಳಿವರು!

(ಆದಿವಾಸಿಗಳ ವೈವಿಧ್ಯ: ಭಾಗ 3)
ಈಶಾನ್ಯ ಭಾರತದ 'ಸಿಕ್ಕಿಂ' ಎಂಬ ಸಂಪೂರ್ಣ ಆದಿವಾಸಿಗಳಿಂದ ಆವೃತ್ತವಾಗಿರವ 'ಹಸನ್ಮುಖಿಗಳ ರಾಜ್ಯ'ದಲ್ಲಿ (ಸದಾ ನಗುಮುಖವನ್ನೇ ಹೊತ್ತಿರುವವರೇ ಇಲ್ಲಿರುವುದು ಹೆಚ್ಚು) ವಿಶಿಷ್ಠ ಪರಂಪರೆ, ನಂಬಿಕೆ, ಆಚಾರ ವಿಚಾರಗಳನ್ನು ಹೊಂದಿರುವ ಬುಡಕಟ್ಟು ಪಂಗಡವೇ - 'ಭುಟಿಯಾ ಬುಡಕಟ್ಟು ಪಂಗಡ'.
ಬೌಧ ಮತಾವಲಂಬಿಯಾಗಿರುವ ಇವರು, ತಮ್ಮದೇ ಆದ 'ಭುಟಿಯಾ ಭಾಷೆ'ಯ ಜೊತೆಗೆ ಸಿಕ್ಕಿಂನ ಮತ್ತೊಂದು ಬುಡಕಟ್ಟು ಪಂಗಡವಾದ 'ಲೆಪ್ಚ ಆದಿವಾಸಿ'ಗಳ 'ಲೆಪ್ಚ ಭಾಷೆ'ಯನ್ನು ಕೂಡ ಮನೆ ಭಾಷೆಯಾಗಿ ಮಾತನಾಡುತ್ತಾರೆ. ವ್ಯವಹಾರಿಕವಾಗಿ ಹಿಂದಿ ಮತ್ತು ನೇಪಾಳಿ ಭಾಷೆಗಳನ್ನು ಮಾತನಾಡುತ್ತಾರೆ.
ಟಿಬೇಟಿಯನ್ನರಂತೆ ಕಾಣುವ ಇವರು ವಿಶಿಷ್ಠ ವೇಷಭೂಷಣದಿಂದ ಗಮನ ಸೆಳೆಯುತ್ತಾರೆ. ಸದಾ ಚಿನ್ನದ ಆಭರಣ ತೊಡುವ ಭಾರತದ ಕೆಲವೇ ಕೆಲವು ಬಡಕಟ್ಟು ಪಂಗಡಗಳಲ್ಲಿ ಇವರು ಕೂಡ ಒಬ್ಬರು. ಇಡೀ ಭಾರತದಲ್ಲಿ ಮಿಕ್ಕೆಲ್ಲಾ ಬುಡಕಟ್ಟು ಪಂಗಡಗಳು ಬಣ್ಣ ಬಣ್ಣದ ಮಣಿಸರಗಳನ್ನೇ ಆಭರಣವಾಗಿ ಧರಿಸಿದರೆ, ಭುಟಿಯಾ ಬುಡಕಟ್ಟು ಪಂಗಡದವರು ಮಾತ್ರ ತಮ್ಮ ಪರಂಪರಾಗತವಾಗಿ ಬಂದ ಚಿನ್ನವನ್ನೇ ಧರಿಸುತ್ತಾರೆ. ಹಲವು ತಲೆಮಾರುಗಳನ್ನು ಕಂಡ ಆ ಚಿನ್ನದ ಸರಗಳಲ್ಲಿ ಪ್ರಾಣಿಗಳ ಚಿತ್ರಗಳನ್ನು, ಮುದ್ರೆಗಳನ್ನು ಕಾಣಬಹುದು. ಇವರು ಯಾವುದೇ ಕಾರಣಕ್ಕೂ ಪರಂಪರಾಗತೆಯ ಧ್ಯೋತಕವಾಗಿರುವ ಚಿನ್ನವನ್ನು ಮಾರಾಟ ಮಾಡುವುದಿಲ್ಲ! ಮಹಿಳೆಯರು ಸಂಪ್ರದಾಯಕ ಕೈರಹಿತ ಉದ್ದನೆಯ ಬಟ್ಟೆಯನ್ನು ಧರಿಸಿದರೆ, ಪುರುಷರು ಉದ್ದ ತೋಲಿನ ನಿಲುವಂಗಿಯ ಜೊತೆಗೆ ಉದ್ದನೆಯ ಟೊಪ್ಪಿ ಧರಿಸುತ್ತಾರೆ. ಆ ರೀತಿಯ ಬಟ್ಟೆಗಳಿಗೆ 'ಬಕು' ಎನ್ನುತ್ತಾರೆ. ಇವರು ವಾಸಿಸುವ ತಗ್ಗು ಆಕಾರದ ಮನೆಗಳಿಗೆ 'ಕಿನ್' ಎನ್ನುತ್ತಾರೆ. ಇವರು ಯಾಕ್ ಮತ್ತು ಗೋಮಾಂಸ ಪ್ರೀಯರು. ಹೆಚ್ಚಿನ ಎಲ್ಲಾ ರೀತಿಯ ಕಾಡು ಹಣ್ಣುಗಳನ್ನೂ ಉಪ್ಪಿನಕಾಯಿಯಂತೆ ಉಪಯೋಗಿಸುತ್ತಾರೆ. ಕಾಡಿನಲ್ಲಿಯೇ 'ಚಾಂಗ್' ಎನ್ನುವ ಮಾದಕ ಪೇಯ (millet beer) ಉತ್ಪಾದಿಸುತ್ತಾರೆ. ಮೂಲತಃ ಇವರು ಕೃಷಿಕರು.
ಟಿಬೆಟಿಯನ್ನರು ಪೆಬ್ರವರಿ ಪ್ರಥಮವಾರದಲ್ಲಿ ಹೊಸ ವರ್ಷ ಆಚರಿಸುತ್ತಾರೆ. ಅದಕ್ಕೆ 'ಲೋಸರ್' ಹಬ್ಬ ಎನ್ನುತ್ತಾರೆ. ಆ ಹಬ್ಬವನ್ನು ಭುಟಿಯಾ ಬುಡಕಟ್ಟು ಪಂಗಡವೂ ಅದೇ ಹೆಸರಿನೊಂದಿಗೆ ಆಚರಿಸುತ್ತದೆ. 'ಲೂಸುಂಗ್' ಎಂಬ ಹಬ್ಬದ ಆಚರಣೆಯೂ ಇವರಲ್ಲಿದೆ.
ಭಾರತದ ಖ್ಯಾತ ಪುಟ್ ಬಾಲ್ ಆಟಗಾರ 'ಬೈಚುಂಗ್ ಭುಟಿಯಾ', ಭುಟಿಯಾ ಬುಡಕಟ್ಟು ಪಂಗಡದ ಮೇರು ಕ್ರೀಡಾ ಪ್ರತಿಭೆಯಾಗಿದ್ದಾರೆ.
- ಹೃದಯ

ಕೊರಗರ ಮನೆಯ ಬಾಗಿಲು ದಕ್ಷಿಣ ದಿಕ್ಕಿಗೆ ಯಾಕೆ?
ಕೊರಗರು ತಮ್ಮ ಕೊಟ್ಟ/ ಮನೆಯ ಬಾಗಿಲನ್ನು ದಕ್ಷಿಣ ದಿಕ್ಕಿನ ಕಡೆಗೆ ಇಡುತ್ತಾರೆ. ಕಾರಣ, ಕೊರಗರ ಕುಲದೈವ 'ತನಿಯ' (ಕೊರಗಜ್ಜ) ಹುಟ್ಟಿದ್ದು ದಕ್ಷಿಣದ 'ಬಾರ್ಕೂರು' ಎಂಬ ಊರಿನಲ್ಲಿ. ಅದು ಗುಡಿಸಲೇ ಆಗಿರಲಿ 'ತಟ್ಟಿ ಬಡಕಾಯಿಗ್ ದೀವೊಡು..' (ಬಾಗಿಲು ದಕ್ಷಿಣಕ್ಕೆ ಇಡಬೇಕು) ಎನ್ನುತ್ತಾರೆ ಹಿರಿಯರು. ಮಾತು, ಕೃತಿ ಮತ್ತು ಗೌರವದಲ್ಲಿಯೂ 'ಬಡಕಯಿ ಬಾರ್ಕೂರು'ಗೆ ಮೊದಲ ಪ್ರಾಸಸ್ತ್ಯ.
ಕೊರಗರಿಗೆ 'ವಾಸ್ತವ'ದ ಅರಿವಿದೆ. 'ವಾಸ್ತು'ವಿನದ್ದಲ್ಲ!
- ಹೃದಯ


ಅಪ್ರತಿಮ ಕೊಳಲು ವಾದಕ- ಬಡ್ಡ ಹರೀಶ ಕೊರಗ.
ಕೊರಗ ಸಮುದಾಯದ ಸಾಂಸ್ಕೃತಿಕ ಮತ್ತು ಮನೊರಂಜನಾತ್ಮಕ ಬದುಕಿನ ಅವಿಭಾಜ್ಯ ಅಂಗವಾಗಿರುವ 'ಕೊರಲ್' (ಕೊಳಲು)ಗೆ ಧ್ವನಿ ನೀಡುತ್ತಿರುವ ಅಪ್ರತಿಮ ಕೊಳಲು ವಾದಕ - ಬಡ್ಡ ಹರೀಶ ಕೊರಗ. ಮೂಲತಃ ಕಾರ್ಕಳ ತಾಲೂಕಿನ ಅತ್ತೂರಿನವರು. ಕೊರಗರ ಪಾರಂಪರಿಕ ಶೈಲಿಯ ಕೊರಲ್ ವಾದನದಲ್ಲಿ ಪಳಗಿದವರು. ಪ್ರಸ್ತುತ 'ಕೊರಲ್ ಕಲಾತಂಡ ಮಂಗಳೂರು' ಇದರ ಕೊಳಲು ಕಲಾವಿದರಾಗಿದ್ದು, ರಾಜ್ಯಾದ್ಯಂತ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ .
- ಹೃದಯ

ಕೊರಗ ಭಾಷೆ
ಕೊರಗರನ್ನು ಭಾಷೆಯ ಬಗ್ಗೆ ವಿಚಾರಿಸಿದರೆ ಅವರಿಗೆ ಕೋಪ ಬರುವುದು!!
ಕೊರಗ ಜನಾಂಗದವರು ತಮ್ಮ ತಮ್ಮ ಮನೆಗಳಲ್ಲಿ ಮಾತನಾಡುವ ಭಾಷೆಯನ್ನು ಆ ಜನಾಂಗದ ಹೆಸರಿನಿಂದಲೇ 'ಕೊರಗ ಭಾಷೆ' ಎಂದು ಕರೆಯಲಾಗುತ್ತದೆ. ಕೊರಗ ಭಾಷೆಯು ಡ್ರಾವಿಡ ಭಾಷಾ ವರ್ಗಕ್ಕೆ ಸೇರಿದುದಾಗಿದೆ. ಸರ್ವೇ ಸಾಮಾನ್ಯವಾಗಿ ಕೊರಗರು ದ್ವಿಭಾಷಿಗಳು ಹಾಗೂ ಮೂಡಣದ ಕೊರಗರು ಮಾತ್ರ ಬಹು ಭಾಷಿಗಳಾಗಿದ್ದಾರೆ. ಅಂದರೆ ಕೊರಗರು ವ್ಯವಹಾರಿಕ ಜೀವನದಲ್ಲಿ ತುಳು, ಕನ್ನಡವನ್ನು ಬಳಸುವರು. ಮನೆಯಲ್ಲಿ ತಮ್ಮದೇ ಆದ ಕೊರಗ ಭಾಷೆಯನ್ನು ಮಾತನಾಡುವವರು.
ಕೊರಗರು ತಮ್ಮ ಭಾಷೆಯನ್ನು ಇತರರಿಗೆ ಕಲಿಸುವುದಿಲ್ಲ. ಇತರರು ಕೊರಗರೊಂದಿಗೆ ಬೆರೆಯುವುದಿಲ್ಲ. ಹೀಗಾಗಿ ಕೊರಗರು ಬೇರೆ ಜನಾಂಗದವರೆದುರಿಗೆ ತಮ್ಮ ಭಾಷೆಯನ್ನಾಡುವುದಿಲ್ಲ. ಈ ವಿಷಯದಲ್ಲಿ ಕೊರಗರು ಸಂಕೋಚ ಸ್ವಭಾವದವರು. ಕೊರಗರನ್ನು ಅವರ ಭಾಷೆಯ ಬಗೆಗೆ ವಿಚಾರಿಸಿದರೆ ಅವರಿಗೆ ಬಹಳ ಕೋಪ ಬರುವುದೆಂದು ವಾಲೆ ಹೌಸ್ ಒಂದು ಶತಮಾನದ ಹಿಂದೆಯೇ ಬರೆದಿದ್ದಾರೆ. ಅಂಥ ಸಂದರ್ಭದಲ್ಲಿ ಕೊರಗನೊಬ್ಬನು ಬಹಳ ವಿಚಿತ್ರವಾಗಿ ವರ್ತಿಸುವನು ಎನ್ನುವುದು ವಾಲೆಹೌಸ್ ರವರ ಅನುಭವ. ಹೀಗಾಗಿ ತೀರಾ ಇತ್ತೀಚಿನವರೆಗೆ ಕೊರಗ ಭಾಷೆಯ ವೈಜ್ಞಾನಿಕ ಅಧ್ಯಯನ ಸಾಧ್ಯವಾಗಿರಲಿಲ್ಲ.
ಕೊರಗ ಭಾಷೆಯು ಭಾಷಾ ಪಂಡಿತರಿಗೆ ಸಂಶೋಧನೆಗೆ ಒಳ್ಳೆಯ ವಸ್ತುವಾಗಬಲ್ಲದು
ಕೊರಗರ ಭಾಷೆಯನ್ನು ಅನೇಕ ಉಪಭಾಷೆಗಳಾಗಿ ವರ್ಗೀಕರಿಸುವ ಪ್ರಯತ್ನವನ್ನು ಭೌಗೋಳಿಕ ಮತ್ತು ಸಾಮಾಜಿಕ ಅಂಶಗಳ ಆಧಾರದಲ್ಲಿ ನಡೆಸಲಾಗಿದೆ. ಡಾ. ಡಿ ಎಸ್ ಎನ್ ಭಟ್ರವರು ಪ್ರಕಟಿಸಿರುವ ಕೃತಿಯಲ್ಲಿ 'The Koraga Language' (1971) ಕೊರಗ ಭಾಷೆ ಮೂರು ಬಗೆಯ ಪ್ರಕಾರಗಳನ್ನು ಗುರುತಿಸಿ ಭಾಷಾಶಾಸ್ತ್ರದ ವೈಜ್ಙಾನಿಕ ನೆಲೆಯಲ್ಲಿ ಅಭ್ಯಸಿಸುವ ಪ್ರಯತ್ನ ನಡೆಸಿದ್ದಾರೆ. ಇದೊಂದೇ ಇದುವರೆಗೆ ನಡೆದಿರುವ ಕೊರಗ ಭಾಷೆ ಕುರಿತ ವೈಜ್ಙಾನಿಕ ಅಧ್ಯಯನ ಪ್ರಯತ್ನವಾಗಿದೆ.
ಕುಂದಾಪುರ ತಾಲ್ಲೂಕಿನ ಉತ್ತರ ಭಾಗದ ಕಾಡುಗಳಲ್ಲಿ ಮತ್ತು ಕಣಿವೆಯಂಥ ಪ್ರದೇಶ ಬೆಟ್ಟಗುಡ್ಡಗಳ ಇಳಿಜಾರು ಪ್ರದೇಶಗಳಲ್ಲಿ ವಾಸಿಸುವ ಕೊರಗರನ್ನು ಸಂಪರ್ಕಿಸಿ ಕ್ಷೇತ್ರ ಕಾರ್ಯ ನಡೆಸಿದರೆ, ಕೊರಗ ಭಾಷೆಯ ಇನ್ನೂ ಬೇರೆ ಬೇರೆ ಬಗೆಗಳು ಕಂಡು ಬರಬಹುದಾಗಿದೆ.
ಕೊರಗರು ದ್ವಿಭಾಷಿಗಳಾಗಿ ಸಾವಿರಾರು ವರ್ಷಗಳಿಂದಲೇ ಉಳಿದು ಬೆಳೆದು ಬಂದಿದ್ದಾರೆ. ಆದ್ದರಿಂದ ಕೊರಗ ಭಾಷೆಯ ಉಪ ಬಗೆಗಳ ಮೇಲೆ ದ್ರಾವಿಡ ಭಾಷೆಗಳಾದ ಕನ್ನಡ ಮತ್ತು ತುಳುವಿನ ಪ್ರಭಾವ ಗಾಢವಾದುದಾಗಿದೆ. ಪರಿಣಾಮವಾಗಿ ಕೊರಗ ಭಾಷೆಯ ಪದಸಂಪತ್ತಿನಲ್ಲಿ ಕೊರಗ, ಯಾವುದು ಕನ್ನಡ, ಯಾವುದು ತುಳು ಎಂದು ಗುರುತಿಸುವ ಕಾರ್ಯ ಬಹಳ ಸಂಕೀರ್ಣವಾದುದಾಗುವುದು. ಈ ಹಿನ್ನಲೆಯಲ್ಲಿ ಕೊರಗ ಭಾಷೆಯು ಪಂಡಿತರಿಗೆ, ಸಂಶೋಧನೆಗೆ ಒಳ್ಳೆಯ ವಸ್ತುವಾಗಬಲ್ಲುದಾಗಿದೆ.
ಕೊರಗ ಭಾಷೆಯು ಪದಸಂಪತ್ತಿನ ದೃಷ್ಠಿಯಿಂದ ದಕ್ಷಿಣ ಭಾರತದ ದ್ರಾವಿಡ ಭಾಷೆಗಳೊಂದಿಗೆ ಹೆಣೆದುಕೊಂಡಿದ್ದರೂ, ವ್ಯಾಕರಣದ ದೃಷ್ಠಿಯಿಂದ ಉತ್ತರ ದ್ರಾವಿಡ ಭಾಷಾ ವರ್ಗದೊಂದಿಗೆ (ಕುಡು, ಮಾಲ್ಟೋ, ಬ್ರಾಹುಯಿ) ಹೆಣೆದುಕೊಂಡಿದೆ. ಈ ಅಂಶವು ವಿಲಕ್ಷಣವಾಗಿ ಎದ್ದು ತೋರುವುದು.

ಕೊರಗ ಭಾಷೆಯು ತುಳುವಿನೊಂದಿಗೆ ಹೊಂದಿರುವ ಸಂಬಂಧ ಅಲ್ಪ
ಕೊರಗ ಭಾಷೆಯನ್ನು ಮೊತ್ತ ಮೊದಲಿಗೆ ಗುರುತಿಸಿ ಅಧ್ಯಯನ ಮಾಡಲೆತ್ನಿಸಿದವರು ಬ್ರಿಟಿಷ್ ಅಧಿಕಾರಿಗಳು. 19ನೇ ಶತಮಾನದ ಕೊನೆಯ ಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ಸಾವಿರದಷ್ಟು ಕೊರಗರು ಕೊರಗ ಭಾಷೆಯನ್ನಾಡುತ್ತಿದ್ದರು. ಜನಗಣತಿ ಅಧಿಕಾರಿಗಳು ಕ್ರಿ ಶ 1881ರಿಂದಲೂ ಕೊರಗ ಭಾಷೆಯನ್ನು ತುಳು ಭಾಷೆಯ ಉಪಭಾಷೆಯ ರೂಪವೆಂದೇ ಪರಿಗಣಿಸುತ್ತಿದ್ದಾರೆ. ಆದರೆ, ತೀರಾ ಇತ್ತೀಚೆಗೆ ಡಾ ಡಿ.ಎಸ್.ಎನ್ ಭಟ್ (1971ರಲ್ಲಿ) ಎಂಬವರು ನಡೆಸಿದ ಕ್ಷೇತ್ರಕಾರ್ಯ ಆಧರಿಸಿದ ಅಧ್ಯಯನದಿಂದ ಮೇಲ್ಕಂಡ ಅಭಿಪ್ರಾಯವನ್ನು ಬದಲಾಯಿಸಬೇಕಾಗುವುದು. ಡಾ. ಭಟ್ ರವರ ಅಧ್ಯಯನವು ಕೊರಗ ಭಾಷೆಯು ಸ್ವತಂತ್ರವಾದ ದ್ರಾವಿಡ ವರ್ಗದ ವಿಶಿಷ್ಟ ಭಾಷೆಯಾಗಿದ್ದು ಅದು ಮೂರು ಉಪಭಾಷಾ ಸ್ವರೂಪಗಳನ್ನು ತನ್ನ ಗರ್ಭದಲ್ಲಡಗಿಸಿಕೊಂಡಿದೆ. ಹಾಗು ಕೊರಗ ಭಾಷೆಯು ತುಳುವಿನೊಂದಿಗೆ ಹೊಂದಿರುವ ಸಂಬಂಧವು ಅಲ್ಪವೂ ಮತ್ತು ದೂರ ಸ್ವರೂಪದ್ದೂ ಆಗಿದೆ ಎನ್ನುವುದನ್ನು ಪ್ರತಿಪಾದಿಸಿದೆ.
ಕೊರಗ ಭಾಷೆಗೆ ಸ್ವತಂತ್ರ ಅಸ್ಥಿತ್ವವಿದೆ. ಅದು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಪ್ರತ್ಯೇಕ ಲಿಪಿ ಇಲ್ಲದ ಭಾಷೆ. ಕೊರಗ ಭಾಷೆಯನ್ನು ಬರೆಯಲು ಬಳಸಲಾಗುತ್ತಿಲ್ಲ.

ಕೊರಗ ಭಾಷೆಯನ್ನು ಒಂದು ಸ್ವತಂತ್ರ ಡ್ರಾವಿಡ ಭಾಷೆಯಾಗಿಯೇ ಗುರುತಿಸುವುದು ಸೂಕ್ತ
" ಕೊರಗ ಭಾಷೆ ಮತ್ತು ತುಳು ಭಾಷೆ ನಡುವಣ ಸಂಬಂಧವು ಬಹಳ ಕ್ಷೀಣವಾದದು. ಕೊರಗ ಭಾಷೆ ಮತ್ತು ಇತರೆ ದ್ರಾವಿಡ ಭಾಷೆಗಳ ನಡುವಣ ಸಂಬಂಧವು ತುಳು ಕನ್ನಡದೊಂದಿಗೆ ಅಥವಾ ಮಲಯಾಳ ಮತ್ತು ತಮಿಳು ನಡುವಿಣ ಸಂಬಂಧಗಳಿಗಿಂತ ಮಿಗಿಲಾದುದೇನಲ್ಲ. ಆದ್ದರಿಂದ ಕೊರಗ ಭಾಷೆಯನ್ನು ಒಂದು ಸ್ವತಂತ್ರ ದ್ರಾವಿಡ ಭಾಷೆಯಾಗಿಯೇ ಗುರುತಿಸುವುದು ಸೂಕ್ತ. ಅದನ್ನು ತುಳುವಿನ ಅಥವಾ ಇತರೆ ಯಾವುದೇ ಭಾಷೆಯ ಉಪಭಾಷೆಯಾಗಿ ಪರಿಗಣಿಸಬಾರದು..." ಹೀಗೆ ಕ್ರಿ.ಶ 1881ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯೂ ಮತ್ತು ಜನಗಣತಿ ಮುಖ್ಯಸ್ಥನೂ ಆಗಿದ್ದ 'ಬ್ರೂಡಿ'ಯು ತನ್ನ ಮೇಲಾಧಿಕಾರಿ - ಮದ್ರಾಸಿನಲ್ಲಿದ್ದ ಸ್ಟೂವರ್ಟ್ ರವರಿಗೆ ಬರೆದು ತಿಳಿಸಿದ್ದಾನೆ.
ಕೊರಗ ಭಾಷೆಯ ಬಗೆಗೆ ಆಸಕ್ತಿ ತಳೆದ ಸ್ಟುವರ್ಟ್ ದಕ್ಷಿಣ ಕನ್ನಡದಿಂದ ಕೊರಗ ಭಾಷೆ ಕುರಿತು ಹೆಚ್ಚು ಹೆಚ್ಚು ವಿವರಗಳನ್ನು ತರಿಸಿಕೊಂಡು, ಮುಂದೆ ಅವುಗಳನ್ನು ತಾನೇ ಸಂಪಾದಿಸಿ - 'ಮ್ಯಾನ್ಯುಯಲ್ ಆಫ್ ದಿ ಸೌತ್ ಕೆನರಾ ಡಿಸ್ಟ್ರಿಕ್ಟ್'ನಲ್ಲಿ ದಾಖಲಿಸಿದ್ದಾನೆ. ಸ್ಟುವರ್ಟ್ ಗೆ ಕಳುಹಿಸಲಾದ ಕೊರಗ ಭಾಷಾ ಸಂಪತ್ತು ಅಪಾರವಾಗಿ ತುಳು ಪದ ಸಂಪತ್ತಿನಿಂದಲೇ ಕೂಡಿತ್ತು. ಹೀಗಾಗಿ ಸ್ಟುವರ್ಟ್ ಕೊರಗ ಭಾಷೆಯು ತುಳುವಿನ ಉಪಭಾಷಾ ರೂಪವಾಗಿದ್ದು, ಆಡು ಭಾಷೆಯ ಸ್ತರದಲ್ಲೇ ಉಳಿದುಬಿಟ್ಟಿದೆ ಎಂದು ತಿಳಿಸಿದನು. ತಾನು ಈ ನಿರ್ಣಯಕ್ಕೆ ಬಹಳ ಅನುಮಾನದಿಂದಲೇ ಬಂದಿದ್ದೇನೆ. ಆದರೆ, ದ್ರಾವಿಡ ಭಾಷಾ ವರ್ಗಕ್ಕೆ ಇನ್ನೊಂದು ಹೊಸ ಭಾಷೆಯನ್ನು (ಕೊರಗ) ಸೇರ್ಪಡೆಗೊಳಿಸಲು ಇನ್ನೂ ಹೆಚ್ಚಿನ ಅಧ್ಯಯನ ಮತ್ತು ಕ್ಷೇತ್ರ ಅಗತ್ಯವಾಗಿದೆ ಎಂದೂ ಅಂದು ಸ್ಟವರ್ಟೆ ಬರೆದನು.
- ಡಾ. ಅರವಿಂದ ಮಾಲಗತ್ತಿ


ಕಾಮೆಂಟ್‌ಗಳಿಲ್ಲ: