ಮಂಗಳವಾರ, ಸೆಪ್ಟೆಂಬರ್ 9, 2014

ಜಗತ್ತಿನ ಕಲ್ಯಾಣಕ್ಕಾಗಿ ಪತ್ರಿಕೋದ್ಯಮ ಬಳಸಬೇಕು




-ಸುಗತ ಶ್ರೀನಿವಾಸರಾಜು



ಪತ್ರಕರ್ತರಾದವರಿಗೆ ಸಾಮಾಜಿಕ ಜವಾಬ್ದಾರಿ ಇದೆಯೇ? ಇರಬೇಕೇ?  ಎನ್ನುವ ಪ್ರಶ್ನೆ ಇಂದಿನ ದಿನಗಳಲ್ಲಿ ಪ್ರಸ್ತುತ ಎನಿಸುತ್ತದೆ. ಹೀಗಾದಾಗ ಪತ್ರಕರ್ತರು ಯಾವ ಸಮಾಜದ ಬಗ್ಗೆ ಜವಾಬ್ದಾರಿ ಹೊಂದಿರಬೇಕು ಎನ್ನುವ ಪ್ರಶ್ನೆ ಬರುತ್ತದೆ. ಜಾತಿ ಧರ್ಮ ತಿಳಿಹೇಳುವ ಸಮಾಜದ ಜವಾಬ್ದಾರಿ ಮುಖ್ಯವಾ? ಆದರ್ಶದ ಸಮಾಜ ಮುಖ್ಯವಾ? ವ್ಯಕ್ತಿಯೇ ಸಮಾಜವಾಗುವ ಒಂದು ಸಮಾಜದ ಕಲ್ಪನೆ ಮುಖ್ಯವೋ? ಮಾರುಕಟ್ಟೆ ಕಲಿಸುವ ವ್ಯಕ್ತಿ ಕೇಂದ್ರಿತ ಸಮಾಜದ ರಕ್ಷಣೆಗೆ ಬದ್ಧರಾಗಿರಬೇಕಾ? ಎನ್ನುವುದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ.

  ಜಗತ್ತಿನ ಕಲ್ಯಾಣಕ್ಕಾಗಿ ಪತ್ರಿಕೋದ್ಯಮ ಬಳಸಬೇಕು ಎಂದು ಎಚ್.ವೈ. ಶಾರದಾಪ್ರಸಾದ್ ಹೇಳುತ್ತಿದ್ದರು. ಜಗತ್ತಿನ ಕಲ್ಯಾಣದ ಎಚ್ಚರ ವಹಿಸದೇ ಹೋದಲ್ಲಿ ದೊಡ್ಡ ಅಪಾಯ ಉಂಟಾಗುತ್ತದೆ. ಪತ್ರಿಕೋದ್ಯೋಗದ ಸಂಸ್ಥೆಗೇ ಧಕ್ಕೆಯಾಗುತ್ತದೆ. ಹೀಗಾಗಿ, ವಿಶ್ವಾಸಾರ್ಹತೆಯ ಸುತ್ತ ಕ್ಷೇತ್ರವನ್ನು ಉಳಿಸಿಕೊಳ್ಳುವ ಯೋಚನೆಯನ್ನು ಪತ್ರಕರ್ತರು ಸದಾ ಮಾಡುತ್ತಿರಬೇಕು. ಈ ನಿಟ್ಟಿಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ದಿನವನ್ನಾಗಿ ಪತ್ರಿಕಾ ದಿನವನ್ನು ಅಚರಿಸಬೇಕು.

  ‘ಜರ್ನಲಿಸಂ ಎನ್ನುವುದನ್ನು ಹಿಂದಿನಿಂದಲೂ ಪತ್ರಿಕೋದ್ಯಮ ಎಂದು ಕರೆಯಲಾಗಿದೆ. ಇದು ಅಚ್ಚರಿಯ ಸಂಗತಿ. ಪತ್ರಿಕಾ ಉದ್ಯೋಗ ಎಂದು ನಾನು ಕರೆಯುತ್ತೇನೆ. ಉದ್ಯೋಗವಾಗಿ ಉಳಿಯಬೇಕಾದದ್ದು ತುಂಬಾ ಜನಕ್ಕೆ ಉದ್ಯಮವಾಗಿ ಹೋಗಿದೆ. ನಾವು ಮಾಡುತ್ತಿರುವುದು ಉದ್ಯೋಗವೋ, ಉದ್ಯಮವೋ ಎನ್ನುವ ಪ್ರಶ್ನೆಯನ್ನು ಪತ್ರಕರ್ತರು ಕೇಳಿಕೊಳ್ಳಬೇಕು. ಸಮಾಜವನ್ನು ವಿಶಾಲವಾದ ತಳಹದಿಯಲ್ಲಿ ವ್ಯಾಖ್ಯಾನ ಮಾಡಿಕೊಳ್ಳಬೇಕು. ಬಹುಜನರ ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಎಚ್ಚರದಲ್ಲಿರಬೇಕು. ಒಂದು ಜಾತಿ, ಧರ್ಮ, ಸಮಾಜಕ್ಕಾಗಿ ಕೆಲಸ ಮಾಡುವ ಚಟ ಬೆಳೆಸಿಕೊಂಡರೆ ಜನರ ವಿಶ್ವಾಸ ಉಳಿಸಿಕೊಳ್ಳಲಾಗದು. ಉದ್ಯೋಗದ ಪಾವಿತ್ರ್ಯತೆ ಉಳಿಸಿಕೊಳ್ಳದಿದ್ದಲ್ಲಿ ಜನರ ವಿಶ್ವಾಸ ಕಳೆದುಕೊಳ್ಳುತ್ತೇವೆ. ಜನರ ವಿಶ್ವಾಸ ಕಳೆದುಕೊಂಡರೆ ಆ ಉದ್ಯೋಗ ನಮಗೆ ನಾಳೆ ಅನ್ನ ಕೊಡುವುದಿಲ್ಲ ಎನ್ನುವ ಎಚ್ಚರಿಕೆ ಪತ್ರಕರ್ತರಿಗೆ ಸದಾ ಇರಬೇಕು.

  ಯಾವುದೇ ವಿಷಯ ಸಂಕುಚಿತ ಮನೋಭಾವದಲ್ಲಿ ನೋಡುವ ಬದಲಿಗೆ ವಿಶಾಲತೆ ಎತ್ತಿಹಿಡಿಯಲು ಪ್ರಯತ್ನಿಸಿದಾಗ ವೈವಿಧ್ಯತೆಯುಳ್ಳ ದೇಶದ ಬಹುಜನರ ಸಮಾಜಕ್ಕೆ ಅರ್ಥ ಬರುತ್ತದೆ. ಅದ್ಭುತ ಪಠ್ಯವಾದ ಸಂವಿಧಾನ ಪಾಲನೆಯಷ್ಟೇ ಮುಖ್ಯವಾಗಬೇಕು. ರಾಷ್ಟ್ರೀಯ ಹಿತಾಸಕ್ತಿ ಹೆಸರಿನಲ್ಲಿಯೂ ಬಂಧಿಸಿಡುವ ಕೆಲಸಗಳು ನಡೆಯುತ್ತಿರುತ್ತವೆ. ಇದರ ಬಗ್ಗೆಯೂ ಪತ್ರಕರ್ತರು ಎಚ್ಚರಿಕೆ ವಹಿಸಬೇಕು.


ಕಾಮೆಂಟ್‌ಗಳಿಲ್ಲ: