ಭಾನುವಾರ, ಜನವರಿ 27, 2013

ಜಾತಿಬದ್ಧ ಜಾನಪದ ಕಲಾಲೋಕ


-
-ಅರುಣ್ ಜೋಳದಕೂಡ್ಲಿಗಿ
prajavani-jathi samvaada-28.01.2013

ನಾನೊಮ್ಮೆ ಮೊಹರಂ ಹಬ್ಬದ ಅಧ್ಯಯನಕ್ಕಾಗಿ ಸುರಪುರ ಸಮೀಪದ ಕೆಲವು ಹಳ್ಳಿಗಳಲ್ಲಿ ಕ್ಷೇತ್ರಕಾರ್ಯ ಮಾಡುತ್ತಿದ್ದೆ. ಆಗ ಕೆಲವು ಕಡೆ ಮೊಹರಂ ಆಚರಣೆ ನಿಂತಿರುವುದು ಗಮನಕ್ಕೆ ಬಂತು. ಇದರ ಕಾರಣ ಹುಡುಕಿದೆ. ಮೊಹರಂ ಹಬ್ಬಕ್ಕೆ ಹಲಗೆ ಬಡಿಯುವುದನ್ನು ದಲಿತರು ವಿರೋಧಿಸಿದ್ದರು. ನಾವೇ ಯಾಕೆ ಬಡಿಯಬೇಕು? ಮೇಲುಜಾತಿಯವರೂ ಬಡಿಯಲಿ ಎಂದು ಎಚ್ಚೆತ್ತ ದಲಿತ ಯುವಕರು ನುಡಿದಿದ್ದರು. ಕಾರಣ ಊರಲ್ಲಿ ಜಗಳವಾಗಿ ಮೊಹರಂ ಹಬ್ಬ ನಿಂತಿತ್ತು. ಹೀಗೆಯೇ ಹಲಗೆ ಬಾರಿಸಲು ನಿರಾಕರಿಸಿದ ಕಾರಣ ಹಲವು ಹಳ್ಳಿಗಳಲ್ಲಿ ಮೊಹರಂ ಹಬ್ಬ ನಿಲುಗಡೆಯಾಗಿತ್ತು. ಜಾತಿಪ್ರಜ್ಞೆಯನ್ನು ಗಟ್ಟಿಯಾಗಿ ಅಂಟಿಸಿಕೊಂಡ ಹಲಗೆ ನಮ್ಮ ಮನೆಗಳಲ್ಲಿ ಇರುವುದೇ ಬೇಡ ಎಂದು ಕೆಲ ವಿದ್ಯಾವಂತ ದಲಿತ ಯುವಕರು ಹಲಗೆಯನ್ನೇ ಮನೆಯಿಂದ ಹೊರಹಾಕಿದ್ದರು.

     ಯಕ್ಷಗಾನವನ್ನು ಜಾನಪದ ಕಲೆ ಅಲ್ಲ ಎಂದು ನಿರೂಪಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯೂ ಒಡೆದು ಪ್ರತ್ಯೇಕ ಯಕ್ಷಗಾನ ಅಕಾಡೆಮಿಯಾದದ್ದರ ಹಿಂದೆಯೂ ಈ ಕಾರಣವೂ ಇದೆ. ಇದರ ಹಿಂದೆ ಜಾನಪದ ಕೆಳಜಾತಿಗಳ ಸಂಕೇತ, ಯಕ್ಷಗಾನ ಮೇಲು ಜಾತಿಯ ಕಲೆ ಎನ್ನುವ ಜಾತಿಕಾರಣವಿದೆ. ಯಕ್ಷಗಾನವನ್ನೂ ಜಾನಪದ ಕಲೆ ಎಂದರೆ ಅದು ಕೆಳಜಾತಿಗಳ ಸಂಕೇತದಲ್ಲಿ ಬೆರೆತು ಕಳಂಕವನ್ನು ಮೈಗೆ ಹಚ್ಚಿಕೊಳ್ಳುವ ಆತಂಕ ನಿರಂತರವಾಗಿ ಕಾಡುತ್ತಲೆ ಬಂದಿದೆ.

     ಬಹುಪಾಲು ಕೆಳಜಾತಿಗಳು ಅಭಿವ್ಯಕ್ತಿಸುವ ಕಲಾಪ್ರಕಾರಗಳಿಗೂ ಅವರ ಜೀವನ ವಿಧಾನಕ್ಕೂ ನಂಟಿದೆ. ಮಾಂಸಾಹಾರ ಸೇವನೆಯ ಕಾರಣ, ದನ ಮತ್ತು ಮೇಕೆಯಂತಹ ಪ್ರಾಣಿ ಚರ್ಮಗಳಲ್ಲಿ ಮಾಡಿದ ದೊಡ್ಡ ವಾದ್ಯಗಳು ಕೆಳಜಾತಿಗಳಿಗೆ ಸಿಕ್ಕಿಕೊಂಡು ಅವು ಕಾಲಾನಂತರ ಕಲಾಪ್ರಕಾರವೂ ಆಗಿವೆ. ಕೆಳಜಾತಿಗಳ ಬಹುಪಾಲು ಕಲೆಗಳ ಕಲಾಪ್ರದರ್ಶನ ಏಕಕಾಲದಲ್ಲಿ ಭಿಕ್ಷಾಟನೆಯೂ ಆಗಿರುತ್ತದೆ. ಹಾಗಾಗಿ ಇವುಗಳು ಸಂಚಾರಿ ಕಲೆಗಳಾಗಿವೆಯೇ ವಿನಃ ಒಂದೆಡೆ ನಿಂತು ಅಭಿನಯಿಸುವ ಪ್ರೊಸೀನಿಯಂ ಕಲೆಗಳಾಗಿಲ್ಲದಿರುವುದನ್ನು ನೋಡಬಹುದು. ಈಗ ಜನಪದ ಕಲೆಗಳು ನಾಶವಾಗುವುದಕ್ಕೂ, ಜಾತಿಪ್ರಜ್ಞೆಯ ಸಂಕೇತಗಳನ್ನು ಬಿಟ್ಟುಕೊಡುವುದಕ್ಕೂ ಭಿಕ್ಷೆ ಬೇಡುವ ಸ್ಥಿತಿಯಿಂದ ಸುಧಾರಿಸಿರುವುದಕ್ಕೂ ಸಂಬಂಧವಿದೆ. ಇಂದು ಜನಪದ ಕಲೆಗಳ ದೇಹಕ್ಕೆ ಚರ್ಮದಂತೆ ಅಂಟಿದ ಜಾತಿಯ ಕವಚವನ್ನು ತೆಗೆಯಲು ಸಾಧ್ಯವಾಗಬೇಕಿದೆ.

   ಸದ್ಯದ ಕರ್ನಾಟಕದ ಜಾನಪದ ಕಲಾಪ್ರಕಾರಗಳ ಹೊಸ ಚಲನೆಯನ್ನು ಗಮನಿಸಿದರೆ ಹೀಗೆ ನಿಧಾನಕ್ಕೆ ಜಾತಿಯ ಸಿಕ್ಕಿನಿಂದ ಬಿಡಿಸಿಕೊಳ್ಳುತ್ತಿರುವ ಚಿತ್ರವೊಂದು ಕಾಣುತ್ತಿದೆ. ಹೀಗೆ ಜಾತಿಯ ಚರ್ಮಕಿತ್ತ ಕಲೆಗಳು ಬದುಕುಳಿಯುತ್ತವೆಯೇ? ಎನ್ನುವ ಪ್ರಶ್ನೆ ಎದುರು ನಿಲ್ಲದಿದ್ದರೂ ತಾಳ್ಮೆಯಿಂದ ಕೂತು ಉತ್ತರಕ್ಕೆ ಕಾಯುತ್ತದೆ.
ಸಾಂಸ್ಕೃತಿಕ ಅನನ್ಯತೆ ಎನ್ನುವ ಪರಿಭಾಷೆಯಡಿ `ಹಲಗೆ ದಲಿತರ ಅನನ್ಯತೆ, ಅದನ್ನವರು ಬಿಡಬಾರದು ಎನ್ನುವ ವಿದ್ವಾಂಸರ ವ್ಯಾಖ್ಯಾನಗಳಿವೆ.  ಇವು ಮೇಲು ಜಾತಿಗಳು ಕಲ್ಪಿಸಿದ, ಯಾರೋ ಆರೋಪಿಸಿದ ಅನನ್ಯತೆ ಎನ್ನುವ ಸೂಕ್ಷ್ಮಗಳಿಗೆ ಕಿವುಡಾಗಿವೆ.

    ಸಂವಿಧಾನದ ಜಾತ್ಯತೀತತೆಯ ನೆರಳಲ್ಲಿ ಬದುಕುತ್ತಿರುವ ಕೆಳಜಾತಿಗಳು ತಮ್ಮ ಜಾತಿ ನೆನಪನ್ನು ಅಡಗಿಸಿಕೊಂಡ ಕಲೆಗಳಿಂದ ದೂರಾಗುವುದನ್ನು ಸಕಾರಾತ್ಮಕವಾಗಿಯೇ ನೋಡಬೇಕಿದೆ.
ಹಾಗೆಯೇ ಮೇಲು ಜಾತಿಗಳೂ ಕೂಡ ತಮ್ಮ ಜಾತಿಯ ಮೇಲರಿಮೆಯನ್ನು ಬಿಂಬಿಸುವ ಕಲೆಗಳಿಂದಲೂ ದೂರ ಉಳಿಯಬೇಕಾದುದು ಆತ್ಮಸಾಕ್ಷಿಯ ಸಂಕೇತವಾಗಿದೆ. ಅಂತೆಯೇ ಶಿಕ್ಷಣ ಪಡೆದು ಸ್ವಾವಲಂಬನೆಯನ್ನು, ಆತ್ಮವಿಶ್ವಾಸವನ್ನು ಪಡೆದ ಅಂಚಿನ ಸಮುದಾಯಗಳು ಭಿಕ್ಷಾಟನೆಯಂತಹ ಕಲಾಪ್ರಕಾರಗಳನ್ನು ಮುಂದುವರಿಸುವುದಾದರೂ ಯಾಕೆ? ಹೇಗೆ?

ಶನಿವಾರ, ಜನವರಿ 26, 2013

ಎ.ವಿ ನಾವಡ:ವಿಸ್ತಾರವಾದ ವಿದ್ವತ್ತಿನ ಲೇಖಕ

ಎ.ವಿ ನಾವಡ:ವಿಸ್ತಾರವಾದ ವಿದ್ವತ್ತಿನ ಲೇಖಕ
 
-ಪುರುಷೋತ್ತಮ ಬಿಳಿಮಲೆ
 
     ಕರ್ನಾಟಕದ ವಿದ್ವತ್ ಲೋಕದಲ್ಲಿ ಎರಡು ಬಗೆಯ ಪ್ರಧಾನ ಧಾರೆಗಳಿವೆ. ಒಂದು ಪಾಂಡಿತ್ಯ ಪರಂಪರೆಯಾದರೆ ಇನ್ನೊಂದು ಕ್ಷೇತ್ರಕಾರ‍್ಯಾಧರಿತವಾದ ಜಾನಪದ ಅಧ್ಯಯನ ಪರಂಪರೆ. ಮೊದಲನೆಯದು ಬಹುಮಟ್ಟಿಗೆ ಪಠ್ಯ ಕೇಂದ್ರಿತವಾಗಿದ್ದರೆ, ಎರಡನೆಯದು ಸ್ಥೂಲವಾಗಿ ಸಮಾಜ ಕೇಂದ್ರಿತವಾಗಿ ಬೆಳೆದಿದೆ. ಈ ಎರಡೂ ಅಧ್ಯಯನ ಶಿಸ್ತುಗಳು ಸಂಸ್ಕೃತಿಯೊಂದರ ಭಿನ್ನ ಮುಖಗಳೇ ಹೌದಾದರೂ ಅವೆರಡರ ನಡುವೆ ಹೇಳಿಕೊಳ್ಳುವಂತಹ ಸಂಬಂಧವೇನೂ ಬೆಳೆದಿಲ್ಲ. ಹಾಗೆ ಆಗದ್ದರಿಂದ ನಷ್ಟವಾದದ್ದು ನಮಗೆಲ್ಲ. ಈ ನಷ್ಟವನ್ನು ತುಂಬಿಕೊಡುವಲ್ಲಿ ಗಮನಾರ್ಹವಾಗಿ ದುಡಿದ ಕೆಲವೇ ಕೆಲವು ವಿದ್ವಾಂಸರಲ್ಲಿ  ಎ. ವಿ. ನಾವಡರೆಂದೇ ಜನಪ್ರಿಯವಾಗಿರುವ ಶ್ರೀ ಅಮ್ಮೆಂಬಳ ವಾಸುದೇವ ನಾವಡರೂ ಒಬ್ಬರು. ಅವರು ಏಕಕಾಲಕ್ಕೆ ಗೋವಿಂದ ಪೈಗಳ ಪದಪ್ರಯೋಗ, ತುಳು ನಿಘಂಟು, ಪಾಡ್ದನಗಳು, ಕುಡುಬಿಯರು, ಮದುವೆ, ದಾಸ ಸಾಹಿತ್ಯ, ಕಾಡ್ಯನಾಟ, ಪಾಣರಾಟಗಳ ಮತ್ತಿತರ ಅನೇಕ ವಿಷಯಗಳ ಬಗೆಗೆ ಮಾತಾಡಬಲ್ಲರು. ಈ ಬಗೆಯ ವಿಸ್ತಾರವಾದ ವಿದ್ವತ್ತುಳ್ಳವರು ನಮ್ಮ ನಡುವೆ ತುಂಬಾ ಕಡಿಮೆ.
 

     ಶ್ರೀ ಎ ವಿ ನಾವಡರ ( ಜನನ: ಎಪ್ರಿಲ್, ೨೮, ೧೯೪೬) ತಂದೆ ಅಮ್ಮೆಂಬಳ ಶಂಕರನಾರಾಯಣ ನಾವಡರು ಕನ್ನಡ ನವೋದಯ ಕಾಲದ ಮುಖ್ಯ ಕವಿಗಳಲ್ಲಿ ಒಬ್ಬರು. ಅವರ ಮನೆಗೆ ಅನೇಕ ಸಾಹಿತಿಗಳು ಸಹಜವಾಗಿ ಭೇಟಿಕೊಡುತ್ತಿದ್ದರು. ಕಾರಣ ಎ ವಿ ನಾವಡರಿಗೆ ಕರಾವಳಿಯ ಅನೇಕ ಸಾಹಿತಿಗಳ ಪರಿಚಯ ಎಳವೆಯಲ್ಲಿಯೇ ಆಯಿತು. ತಾವು ಹುಟ್ಟಿ ಬೆಳೆದ ಮಂಗಳೂರು ಸಮೀಪದ ಕೋಟೆಕಾರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದ ಅವರು ಸಂತ ಎಲೋಸಿಯಸ್ ಕಾಲೇಜಿನಲ್ಲಿ ಪದವಿ ಮುಗಿಸಿ, ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿ ಮಂಗಳೂರಿನಲ್ಲಿದ್ದ ಕನ್ನಡ ಅಧ್ಯಯನ ವಿಭಾಗದಿಂದ ೫ನೇ ರ‍್ಯಾಂಕಿನೊಂದಿಗೆ ಎಂ. ಎ ಪದವಿ ಪಡೆದರು. ಮುಂದೆ ಕುಂದಾಪುರದ ಭಂಡಾರ್ಕಾರ‍್ಸ್ ಕಾಲೇಜಲ್ಲಿ ಸುಮಾರು ೨೪ ವರ್ಷಗಳ ವರೆಗೆ ಕನ್ನಡ ವಿಭಾಗದ ಮುಖ್ಯಸ್ತರಾಗಿ ದುಡಿದು, ೧೯೯೩ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರಾಗಿ ದುಡಿದು, ಈಗ ನಿವೃತ್ತರಾಗಿದ್ದಾರೆ ಪ್ರಸ್ತುತ ಅವರು ಇತಿಹಾಸ ಪ್ರಸಿದ್ಧ ಕರ್ನಾಟಕ ಥಿಯೋಲೋಜಿಕಲ್ ಸಂಶೋಧನಾ ಕೇಂದ್ರ ( ಮಂಗಳೂರು) ದಲ್ಲಿ ಸಂದರ್ಶಕ ಪ್ರಾಧ್ಯಾಪರಾಗಿಯೂ, ಉಡುಪಿಯ ಕನಕದಾಸ ಅಧ್ಯಯನ ಕೇಂದ್ರ ಸಿದ್ಧಪಡಿಸುತ್ತಿರುವ ದಾಸ ಸಾಹಿತ್ಯ ಸಂಸ್ಕೃತಿ ವಿಶ್ವಕೋಶದ ಪ್ರಧಾನ ಸಂಪಾದಕರಾಗಿಯೂ ಕೆಲಸಮಾಡುತ್ತಿದ್ದಾರೆ. ಕಳೆದ ಸುಮಾರು ೪೦ ವರ್ಷಘಲ್ಲಿ ಶ್ರೀ ನಾವಡರು ನುರಿತ ಅಧ್ಯಾಪಕನಾಗಿ, ಪ್ರಸಾರಾಂಗದ ನಿರ್ದೇಶಕನಾಗಿ, ಡೀನ್, ಕುಲಸಚಿವರಾಗಿ, ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯನಾಗಿ, ವಿವಿಧ ಯೋಜನೆಗಳ ನಿರ್ದೇಶಕರಾಗಿ ನಾಡು ನುಡಿಗೆ ಸಲ್ಲಿಸದ ಸೇವೆ ಅನುಪಮವಾದುದು.

     ಶ್ರೀ ಎ.ವಿ ನಾವಡರ ಮುಖ್ಯ ಒಲವು ಶಾಸ್ತ್ರ ಸಾಹಿತ್ಯದ ಕಡೆಗೆ. ಶ್ರೀ ಮಂಜೇಶ್ವರ ಗೋವಿಂದ ಪೈ, ಸೇಡಿಯಾಪು ಕೃಷ್ಣ ಭಟ್ಟ, ಮುಳಿಯ ತಿಮ್ಮಪ್ಪಯ್ಯ ಮೊದಲಾದವರು ಓಡಾಡಿದ ನೆಲದಲ್ಲಿ ಕೆಲಸಮಾಡುವ ಯಾರೇ ಆದರೂ ಅಲ್ಲಿನ ಪಂಡಿತ ಪರಂಪರೆಯ ಪ್ರಭಾವಕ್ಕೆ ಒಳಗಾಗದೇ ಇರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅಪಾರವಾಗಿ ದುಡಿದಿರುವ ನಾವಡರು ನಿಘಂಟು ಶಾಸ್ತ್ರದಲ್ಲಿ ಪರಿಣತಿ ಸಾಧಿಸಿ, ಮುಂದೆ ಸುಪ್ರಸಿದ್ಧ ತುಳು ನಿಘಂಟು ಯೋಜನೆಯಲ್ಲಿ ಮುಖ್ಯ ಉಪಸಂಪಾದಕರಾಗಿ ( ೧೯೭೯-೮೨) ನಿಘಂಟುವಿನ ಯಶಸ್ವಿಗೆ ಕಾರಣರಾದರಲ್ಲದೆ, ಗೋವಿಂದ ಪೈ ಪದಪ್ರಯೋಗ ಕೋಶ ( ೧೯೮೬), ಗೋವಿಂದ ಪೈ ನಿಘಂಟು ( ೨೦೧೦) ಕೃತಿಗಳನ್ನೂ ಪ್ರಕಟಿಸಿದರು. ಭಾಷಾವಿಜ್ಞಾನಕ್ಕೆ ಸಂಬಂಧಿಸಿದಂತೆ ನಡೆದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಕರಾವಳಿಯ ಉಪಭಾಷೆಗಳ ವೈವಿಧ್ಯ, ಕೋಟಗನ್ನಡ ಮತ್ತಿತರ ವಿಷಯಗಳ ಬಗೆಗೆ ಅಮೂಲ್ಯವಾದ ಸಂಶೋಧನಾ ಲೇಖನಗಳನ್ನು ಮಂಡಿಸಿದರು.

    ಗ್ರಂಥ ಸಂಪಾದನಾ ಶಾಸ್ತ್ರದಲ್ಲಿಯೂ ನಾವಡರು ನಾಲ್ಕುಕಾಲ ನಿಲ್ಲಬಲ್ಲ ಕೆಲಸಮಾಡಿದ್ದಾರೆ. ವಿವಿಧ ಪಠ್ಯಗಳನ್ನು ಸಂಗ್ರಹಿಸಿ ಓದುವುದು, ಅವುಗಳಿಂದ ಅರ್ಹ ಪಠ್ಯದ ಆಯ್ಕೆ, ಮತ್ತು ಅಧಿಕೃತ ಪಠ್ಯವನ್ನು ಪ್ರಕಟಿಸುವಾಗ ಅದಕ್ಕೊಂದು ವಿಸ್ತಾರವಾದ ಪ್ರಸ್ತಾವನೆ ಬರೆಯುವುದರಲ್ಲಿ ಅವರದು ಎತ್ತಿದ ಕೈ. ದಾಸ ವಾಙ್ಮಯ ( ೧೯೮೯), ಸಾವಿರ ಕೀರ್ತನೆಗಳು ( ೨೦೦), ಸಾವಿರಾರು ಕೀರ್ತನೆಗಳು ( ೨೦೦೩), ಈಸಬೇಕು, ಇದ್ದು ಜೈಸಬೇಕು ( ೨೦೦೩), ವಾದಿರಾಜರ ಶ್ರೀಕೃಷ್ಣ ಬಾಲಲೀಲೆ ( ೨೦೦೫), ಕನಕ ಕಾವ್ಯ ಸಂಪುಟ ( ೨೦೧೧), ವಾದಿರಾಜರ ಸಮಗ್ರ ಕಾವ್ಯ ಸಂಪುಟ ( ೨೦೧೧) ಮೊದಲಾದ ಸಂಪುಟಗಳು ಅತ್ಯತ್ತಮ  ಗ್ರಂಥ ಸಂಪಾದನಾ ಶಾಸ್ರದ ಆಧುನಿಕ ಮಾದರಿಗಳು. ಈ ಬಗೆಯ ಕೆಲಸಗಳಿಗಿಂತ ಸ್ವಲ್ಪ ಭಿನ್ನವಾಗಿ ಅವರು ಸಂಪಾದಿಸಿದ ಕೃತಿಗಳೆಂದರೆ- ಕುಂದ ದರ್ಶನ ( ೧೯೭೮), ವಾಙ್ಮಯ ತಪಸ್ವಿ ( ೧೯೭೭), ನೇತ್ರಾವತಿ ( ೧೯೮೫),  ಹಸ್ತಪ್ರತಿ ವ್ಯಾಸಂಗ ( ೨೦೦೩), ಮತ್ತು ತುಳು ಸಾಹಿತ್ಯ ಚರಿತ್ರೆ ( ೨೦೦೭). ಈ ಸಂಪುಟಗಳು ಇವತ್ತು ಆಕರ ಗ್ರಂಥಗಳಾಗಿ ಸಂಶೋಧಕರಿಗೆ ಸಹಕರಿಸುತ್ತಲಿವೆ.
    ಹೀಗೆ ಶಾಸ್ತ್ರ ಸಂಬಂಧೀ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀ ನಾವಡರು ನಿಧಾನವಾಗಿ ಜಾನಪದದತ್ತ ತಿರುಗಿಕೊಂಡದ್ದು ಅಚ್ಚರಿಯ ವಿಷಯವೇ ಹೌದು. ೧೯೮೦-೮೧ರ ಅವಧಿಯಲ್ಲಿ ಶ್ರೀ ಕು ಶಿ ಹರಿದಾಸ ಭಟ್ಟರ ನೇತೃತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಜಾನಪದ ಕಮ್ಮಟದಲ್ಲಿ ಭಾಗವಹಿಸಿ, ಡಾ. ಪೀಟರ್ ಕ್ಲಾಸ್, ಅಲೆನ್ ಡಂಡೆಸ್, ಎ ಕೆ ರಾಮಾನುಜನ್, ವಿ ನಾರಾಯಣ ರಾವ್ ಅವರಂಥವರ ಮಾರ್ಗದರ್ಶನ ಪಡೆದ ನಾವಡರು ಮತ್ತೆಂದೂ ತಿರುಗಿ ನೋಡಲಿಲ್ಲ. ಕನ್ನಡ ಜಾನಪದ ಸಂಗ್ರಹ ಮತ್ತು ಅಧ್ಯಯನಕ್ಕೆ ಆಧುನಿಕತೆಯ ಆಯಾಮ ನೀಡಿದವರಲ್ಲಿ ನಾವಡರ ಒಬ್ಬರು. ವಿಶೇಷವಾಗಿ ಜನಪದ ಪಠ್ಯಗಳ ವೈವಿಧ್ಯಗಳ ಬಗೆಗೆ ಅವರು ನಾಡಿನ ಎಲ್ಲ ವಿದ್ಯಾರ್ಥಿಗಳ ಗಮನ ಸೆಳೆದರು. ’ಜಾನಪದದಲ್ಲಿ ಭಿನ್ನ ಪಠ್ಯಗಳಿಲ್ಲ, ಎಲ್ಲ ಪಠ್ಯಗಳೂ ಸ್ವತಂತ್ರ ಪಠ್ಯಗಳೇ’ ಎಂದು ಬಲವಾಗಿ ವಾದಿಸುವ ಅವರು ತಮ್ಮ ಜಾನಪದ ಸಂಬಂಧೀ ಕೃತಿಗಳಲ್ಲಿ ಈ ನಿಲುವನ್ನು ಎಂದೂ ಬಿಟ್ಟುಕೊಟ್ಟಿಲ್ಲ. ಜೊತೆಗೆ ಜನಪದ ಪಠ್ಯಗಳನ್ನು ಆಧುನಿಕ ಕ್ರಮಗಳ ಹಿನ್ನೆಲೆಯಲ್ಲಿ ದಾಖಲಿಸುವ, ಸಂಪಾದಿಸುವ ಮತ್ತು ಪ್ರಕಟಿಸುವ ವಿಚಾರದಲ್ಲಿ ಅವರು ನಮಗೆಲ್ಲ ಮಾದರಿಯಾದರು. ೧೯೯೨ರಲ್ಲಿ ಅವರು ’ಕಾಡ್ಯನಾಟ, ಪಠ್ಯ ಮತ್ತು ಪ್ರದರ್ಶನ’ ಪ್ರಕಟಿಸಿದಾಗ ನಾವೆಲ್ಲ ಅದರ ವೈಧಾನಿಕತೆಗೆ ಮಾರುಹೋಗಿದ್ದೆವು. ಅವರು ಬೇರೆ ಬೇರೆಕಾಲಘಟ್ಟದಲ್ಲಿ ಸಂಪಾದಿಸಿದ ವೈದ್ಯರ ಹಾಡುಗಳು (೧೯೮೫), ರಾಮಕ್ಕ ಮುಗ್ಗೇರ‍್ತಿ ಕಟ್ಟಿದ ಸಿರಿ ಪಾಡ್ದನ ( ೧೯೯೮) ಕೃತಿಗಳು ಇಂದು ನಮಗೆಲ್ಲ ಉಪಯುಕ್ತ ಸಂಪುಟಗಳಾಗಿ ಸಹಕರಿಸುತ್ತಲಿವೆ.

    ಕನ್ನಡ ಸಾಹಿತ್ಯ ಮತ್ತು ಜಾನಪದದ ಬಗೆಗೆ ಶ್ರೀ ನಾವಡರು ಬರೆದ ವಿವಿಧ ಲೇಖನಗಳು ಮತ್ತು ಪ್ರಕಟಿಸಿದ ಪುಸ್ತಕಗಳು ಅವರ ವಿಚಿಕಿತ್ಸಿಕ ದೃಷ್ಟಿಗೆ ಹಿಡಿದ ಕನ್ನಡಿಗಳಾಗಿವೆ. ವಿವಕ್ಷೆ ( ೧೯೯೪),  ಕನ್ನಡ ವಿಮರ್ಶೆಯ ಮೊದಲ ಹೆಜ್ಜೆಗಳು ( ೧೯೯೨), ಜನಪದ ಸಮಾಲೋಚನ ( ೧೯೯೩), ಒಂದು ಸೊಲ್ಲು ನೂರು ಸೊರ ( ೧೯೯೯), ಮೌಖಿಕ ಕಾವ್ಯ ಸಂಯೋಜನ ಪ್ರಕ್ರಿಯೆ (೨೦೦೨), ತುಳು ಪಾಡ್ದನ ಬಂಧ ಮತ್ತು ರಚನೆ ( ೨೦೦೩), ಈಗಾಗಲೇ ಕನ್ನಡ ಓದುಗರ ಪ್ರೀತಿಗೆ ಪಾತ್ರವಾದ ಕೃತಿಗಳಾಗಿವೆ.
   ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗಳು ಶ್ರೀ ನಾವಡರನ್ನು ಸನ್ಮಾನಿಸಿವೆ. ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮತ್ತು ಫಿನ್ಲೆಂಡಿನ ಫೊಕ್ಲೋರ್ ಸಂಸ್ಥೆಗಳು ಅವರಿಗೆ ಗೌರವ ಶಿಷ್ಯವೇತನ ನೀಡಿವೆ. ಅನೇಕ ಸ್ಥಳೀಯ ಸಂಘ ಸಂಸ್ಥೆಗಳು ಅವರ ಸಾಧನೆಗೆ ಮನ್ನಣೆ ನೀಡಿವೆ.
  ಇದೀಗ ಇದೇ ಜನವರಿ ೨೬ರಂದು ನಾವಡರ ಕರ್ಮಭೂಮಿ ಕುಂದಾಪುರದಲ್ಲಿ ಗೆಳೆಯರೆಲ್ಲ ಸೇರಿ, ನಾವಡರ ಕೊಡುಗೆಯನ್ನು ಸ್ಮರಿಸಿಕೊಂಡು ಅಭಿನಂದಿಸಲು ತಯಾರಾಗಿದ್ದಾರೆ. ಅಗತ್ಯ ಆಗಬೇಕಾದ ಕೆಲಸವಿದು. ನಾಡಿನ ಎಲ್ಲ ಸಹೃದಯರ ಪರವಾಗಿ ಅವರಿಗೆ ನಮ್ಮ ಅಭಿನಂದನೆಗಳು.
 

ಶನಿವಾರ, ಜನವರಿ 19, 2013

ಜಾನಪದ ಉಳಿಸಿ ಎನ್ನುವ ಕ್ಲೀಷೆಯ ಮಾತು ಸಾಕು...


ಸಂದರ್ಶನ: ಗುಡಿಹಳ್ಳಿ ನಾಗರಾಜ

20.01.2013, ಕೃಪೆ: ಪ್ರಜಾವಾಣಿ, ಸಾಪ್ತಾಹಿಕ ಪುರವಣಿ
 


ಗೊರುಚ' ಎಂದೇ ಜನಪ್ರಿಯವಾಗಿರುವ ಹಿರಿಯ ಲೇಖಕ, ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಅವರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ರೂವಾರಿ. ಬರವಣಿಗೆ, ಗ್ರಂಥ ಸಂಪಾದನೆ, ನಿರ್ದೇಶನ, ಸಂಘಟನೆ, ಪರಿಚಾರಿಕೆ- ಹೀಗೆ ಬಹುಮುಖಿ ಕ್ರಿಯಾಶೀಲತೆ ಹೊಂದಿರುವ ಗೊರುಚ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ- ಪರಿಷತ್ತನ್ನು ಸರ್ಕಾರದ ಅನುದಾನದ ವ್ಯಾಪ್ತಿಗೆ ತಂದು, ಜಿಲ್ಲಾ ಘಟಕಗಳಿಗೆ ಸಂಪನ್ಮೂಲ ವ್ಯವಸ್ಥೆ ಮಾಡಿದರು.

ಕನ್ನಡ-ಕನ್ನಡ ನಿಘಂಟಿನ ಕಾರ್ಯ ಪೂರ್ಣ, ಅತಿಹೆಚ್ಚು ದತ್ತಿನಿಧಿ ಸೇರಿದಂತೆ ಸಾಹಿತ್ಯ ಪರಿಷತ್ತಿನಲ್ಲಿ ಹಲವು ಹೊಸಬಗೆಯ ಕಾರ್ಯಕ್ರಮಗಳನ್ನು ರೂಪಿಸಿದರು. `ಕರ್ನಾಟಕ ಜನಪದ ಕಲೆಗಳು' ಗೊರುಚ ಸಂಪಾದಿಸಿದ ಕನ್ನಡದ ಮೊದಲ ಆಕರ ಗ್ರಂಥ.
`ಹೊನ್ನ ಬಿತ್ತೇವು ಹೊಲಕೆಲ್ಲ', `ಗ್ರಾಮಜ್ಯೋತಿ', `ನಿಜಬಿಂಬ' ಸೇರಿದಂತೆ 25 ಸಂಪಾದಿತ ಕೃತಿಗಳು, ಜಾನಪದ ನಾಟಕಗಳು, ಜೀವನ ಚರಿತ್ರೆ, ಜಾನಪದ ಸಂಗ್ರಹ ಸೇರಿದಂತೆ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 83ರ ಹರಯದಲ್ಲೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಾಲಿಗೆ ಚಕ್ರ ಸಿಕ್ಕಿಸಿಕೊಂಡವರಂತೆ ನಾಡನ್ನು ಸುತ್ತುತ್ತಲೇ ಇರುತ್ತಾರೆ. ಜಾನಪದ ರಂಗಭೂಮಿಗೆ ಅವರ ಕೊಡುಗೆಯನ್ನು ಮನ್ನಿಸಿ ಇದೀಗ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅವರಿಗೆ ಗೌರವ ಪ್ರಶಸ್ತಿಯನ್ನು ಪ್ರಕಟಿಸಿದೆ.
ನಿಮ್ಮ `ಸಾಕ್ಷಿಕಲ್ಲು', `ಅಯ್ಯನಕೆರೆ', `ಬೆಳ್ಳಕ್ಕಿ ಹಿಂಡು ಬೆದರ್ಯಾಸವು' ಜಾನಪದ ನಾಟಕಗಳನ್ನು ರಾಜ್ಯದ ಹಲವು ಹವ್ಯಾಸಿ ತಂಡಗಳು ಸತತವಾಗಿ ಪ್ರಯೋಗಿಸುತ್ತಲೇ ಇವೆ. ಜಾನಪದ ಮೂಲದ ಕಥಾವಸ್ತುವನ್ನು ನೀವು ನಾಟಕಕ್ಕೆ ಪುನರ್ ರಚಿಸಿಕೊಂಡ ಕ್ರಮ ಹೇಗೆ?

ರಂಗದ ಮೇಲೆ ನಾಟಕವಾಗಿ ಕಳೆಗಟ್ಟಲು ಬೇಕಾದ ಸಂಭಾಷಣೆಯನ್ನು ಮೂಲಕ್ಕೆ ದಕ್ಕೆ ತಾರದ ಹಾಗೆ ರಚಿಸಿದೆ. ಕಥೆಗೆ ಪೂರಕವಾಗುವಂತೆ ಹೊಸದಾಗಿ ಕೆಲವು ಪೋಷಕ ಪಾತ್ರಗಳನ್ನು ಸೃಷ್ಟಿಸಿಕೊಂಡೆ. ಜಾನಪದ ಶೈಲಿಯಲ್ಲಿ ಹಾಡುಗಳನ್ನು ಬರೆದೆ. ಇಂತಹದೊಂದು ಸೃಜನಾತ್ಮಕ ಪರಿಷ್ಕರಣದಿಂದ ನಾಟಕಗಳು ಯಶಸ್ವಿಯಾದವು.
ಜಾನಪದ ಕಥೆಯನ್ನ ಸಮಕಾಲೀನ ಸಂವೇದನೆಯ ಕಣ್ಣಿನಲ್ಲಿ ನೋಡಬೇಕೆ? ಯಥಾವತ್ ಇಡಬೇಕೆ?
ಪೌರಾಣಿಕ ಆಗಲಿ, ಜಾನಪದವಾಗಲಿ ಹೊಸ ದೃಷ್ಟಿಯಿಂದ ನೋಡೋದು ಇದ್ದೇ ಇದೆ. ತನ್ನ ಕಾಲಕ್ಕೆ ಅನ್ವಯವಾಗುವಂತೆ ಒಂದಷ್ಟು ಹೊಸರೂಪ ತಾಳುತ್ತೆ.
ಅಂದರೆ ಬದಲಾವಣೆ ಮಾಡಿಕೊಳ್ಳಬಹುದೆ?

ಮೂಲ ಕಥಾವಸ್ತುವಿನಲ್ಲಿ ನಾನು ಬದಲಾವಣೆ ಮಾಡಲಿಲ್ಲ. ಕೊಟ್ಟ ಮಾತಿಗೆ ತಪ್ಪದಿರುವುದು ಗ್ರಾಮೀಣ ಜನಪದರ ಬಹುದೊಡ್ಡ ಮೌಲ್ಯ. ನನ್ನನ್ನು ಬಹುವಾಗಿ ಕಾಡಿದ ವಸ್ತು ಅದು. ಜನಪದರ ಒಟ್ಟು ಕಲಾಪ್ರಕಾರಗಳಲ್ಲಿ ಇದು ಸ್ಥಾಯಿಯಾಗಿದೆ. ಒಂದು ರೀತಿಯ ಸಾರ್ವಕಾಲಿಕ ಮೌಲ್ಯ. ಜನಪದರನ್ನು ಅನಕ್ಷರಸ್ಥರು ಅಂತ ನೋಡಕೂಡದು. ಅವರ ಅನುಭವ ಪ್ರಪಂಚ ಬಹು ವಿಸ್ತಾರವಾದುದು, ಸಂಕೀರ್ಣವಾದುದು. ಅದನ್ನೇ ನಾನು ಪುನರ್ ರಚಿಸಿದೆ.
ಪ್ರಚಲಿತ ಸಾಮಾಜಿಕ ಕಥಾವಸ್ತುವಿನ ನಾಟಕಗಳಿಗೆ ಜಾನಪದವನ್ನು ಒಂದು ತಂತ್ರವಾಗಿ ಮಾತ್ರ ಬಳಸಿಕೊಳ್ಳುವ ಕ್ರಮ ಸರಿಯೆ?
ಬಳಸಿಕೊಳ್ಳಲಿ ಬಿಡಿ. ಅದರಿಂದ ಜಾನಪದಕ್ಕೇನೂ ಹಾನಿ ಇಲ್ಲ. ನಾಟಕ ಮತ್ತಷ್ಟು ಬೆಳಗುತ್ತದೆ.
ನಿಮ್ಮ ಸೃಜನಶೀಲ ಅಭಿವ್ಯಕ್ತಿ, ಸಂಘಟನೆಗಳಿಗೆ ಜಾನಪದವನ್ನೇ ಆಯ್ಕೆ ಮಾಡಿಕೊಂಡದ್ದು ಹೇಗೆ?
ಬಾಲ್ಯದಲ್ಲೇ ನಾನು ಕೆ.ಆರ್.ಲಿಂಗಪ್ಪನವರ ಹಾಡು ಕೇಳುತ್ತ ಬೆಳೆದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿ ನನ್ನೂರು. ಅಲ್ಲಿ ವೀರಗಾಸೆ ಕಲೆ ಇತ್ತು. ಚಿಕ್ಕಂದಿನಲ್ಲೇ ಅದಕ್ಕೆ ನಾನು ಆಕರ್ಷಿತನಾಗಿ ಖಡ್ಗ ಹೇಳೋದು, ಸಮಾಳ ಬಾರಿಸೋದರಲ್ಲಿ ತೊಡಗಿಕೊಂಡೆ. 15ನೇ ವರ್ಷದ ಅವಧಿಯಲ್ಲಿ ಜಾನಪದ ಗೀತೆಗಳ ಸಂಗ್ರಹ ಕಾರ್ಯ ಆರಂಭಿಸಿದೆ.

ಶಿಕ್ಷಕನಾಗಿ ಕೆಲಸಕ್ಕೆ ಸೇರಿದ ಅವಧಿಯಲ್ಲಿ ಹಾಗೇ ಮುಂದುವರಿಯಿತು. ಆಗೆಲ್ಲಾ ಆಧುನಿಕ ಸಾಧನಗಳು ಇರಲಿಲ್ಲ. ಕಲಾವಿದರು ಹೇಳಿದ್ದನ್ನ ನಾವು ದಿನಗಟ್ಟಲೆ ಕುಳಿತು ಬರೆದುಕೊಳ್ಳುತ್ತಿದ್ದೆವು. `ಬಾಗೂರು ನಾಗಮ್ಮ' ತಾಯಿ ಹೇಳಿದ ಕಥನಗೀತೆ. `ಮೈದುನ ರಾಮಣ್ಣ', `ಗ್ರಾಮ ಗೀತೆಗಳು', `ಜೋಗದ ಜೋಕ್' ಸಂಗ್ರಹಿಸಿದೆ.
1950-60ರ ಆ ದಶಕಗಳಲ್ಲಿ ಸಂಗ್ರಹ ಕಾರ್ಯ ವೈಜ್ಞಾನಿಕವಾಗಿ ನಡೆಯಿತೆ?
ಮೊದ ಮೊದಲು ಹಾಗಾಗಲಿಲ್ಲ. ಜನಪದ ಕಲಾವಿದರು ಹೇಳಿದ್ದಕ್ಕೆ ನಮಗೆ ಸರಿ ಎನ್ನಿಸಿದ ಹಾಗೆ ತಿದ್ದುಪಡಿ ಮಾಡ್ತಾ ಇದ್ದೆವು! ಜಾನಪದ ಅಧ್ಯಯನಗಳು ವೈಜ್ಞಾನಿಕವಾಗಿ ಶುರುವಾದ ಮೇಲೆ ಜಾನಪದವನ್ನು ಮೂಲ ಸ್ವರೂಪದಲ್ಲೇ ಉಳಿಸಿಕೊಳ್ಳಬೇಕು, ಏನನ್ನೂ ತಿದ್ದಬಾರದು ಅಂತ ಗೊತ್ತಾಯಿತು.

ನಿಮ್ಮ ಮಹಾತ್ವಾಕಾಂಕ್ಷೆಯ `ಗ್ರಾಮ ಚರಿತ್ರೆ ಕೋಶ' ಎಲ್ಲಿಗೆ ಬಂದಿದೆ?

ಜಾನಪದ ವಿಶ್ವವಿದ್ಯಾಲಯ ಅದನ್ನ ಆದ್ಯತೆ ಮೇಲೆ ಕೈಗೊಂಡಿದೆ. ಒಂದು ಹಳ್ಳಿಯ ಮಳೆ, ಬೆಳೆ, ಐತಿಹ್ಯ, ಪುರಾಣ, ಕಲೆ, ಶಿಕ್ಷಣ ಒಳಗೊಂಡಂತೆ ಸಮಗ್ರ ಮಾಹಿತಿಯನ್ನು ಈ ಕೋಶದಲ್ಲಿ ಸಂಗ್ರಹಿಸಲಾಗುತ್ತದೆ. ಒಟ್ಟು 29,600 ಹಳ್ಳಿಗಳಲ್ಲಿ ಈ ಕಾರ್ಯ ನಡೆಯಲಿದೆ. ಹಾವೇರಿ ಜಿಲ್ಲೆಯ 600 ಗ್ರಾಮಗಳ ಚರಿತ್ರೆ ಕೋಶ ಈಗಾಗಲೇ ಪೂರ್ಣಗೊಂಡಿದೆ. ಬ್ರಿಟಿಷರು ಜಿಲ್ಲಾ ಗ್ಯಾಜೆಟಿಯರ್ ಹೊರತರುವ ಪ್ರಕ್ರಿಯೆ ಆರಂಭಿಸಿದರು. ಗ್ರಾಮ ಚರಿತ್ರೆ ಕೋಶಗಳು ಅದಕ್ಕಿಂತ ವ್ಯಾಪಕ ಹಾಗೂ ಸಂಕೀರ್ಣ.
ಜಾನಪದ ವಿಶ್ವವಿದ್ಯಾಲಯ ನಿಮ್ಮ ಕನಸಿನ ಕೂಸೆ?

ನಾನೊಬ್ಬನೇ ಅಲ್ಲ. ಕೆ.ಆರ್.ಲಿಂಗಪ್ಪ, ಎಚ್.ಎಲ್.ನಾಗೇಗೌಡ, ಜೀಶಂಪ, ದೇಜಗೌ, ಹಾಮಾನಾ, ಕು.ಶಿ.ಹರಿದಾಸಭಟ್ಟ, ಮುದೇನೂರು ಸಂಗಣ್ಣ ಮುಂತಾದವರೆಲ್ಲ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯ ಅಗತ್ಯವನ್ನು ಮನಗಂಡಿದ್ದೆವು. ನಾನು ಜಾನಪದ ಅಕಾಡೆಮಿ ಅಧ್ಯಕ್ಷನಾಗಿ ನೇಮಕವಾದ (2009) ಮೊದಲ ಸರ್ವಸದಸ್ಯರ ಸಭೆಯಲ್ಲಿಯೇ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಆಗ್ರಹಪಡಿಸಿ ನಿರ್ಣಯ ಕೈಗೊಂಡೆವು. ಬೆಂಬಿಡದ ಪ್ರಯತ್ನದ ಫಲವಾಗಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿಗ್ಗಾವಿ ಬಳಿ ದೇಶದ ಮೊದಲ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣರಾದರು.
ಜಾನಪದ ವಿಶ್ವವಿದ್ಯಾಲಯ ಮಾಡಬೇಕಾದ ಕಾರ್ಯ ಯಾವುದು?

ದಾಖಲೀಕರಣಕ್ಕೆ ಮಹತ್ವ ನೀಡಬೇಕು. ಗ್ರಾಮ ಚರಿತ್ರೆ ಕೋಶವನ್ನು ಆದ್ಯತೆಯಿಂದ ಕೈಗೊಂಡಿದೆ. ನೂರು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಶಾಶ್ವತವಾದ ವಸ್ತುಪ್ರದರ್ಶನ, ಜಾನಪದ ಕಲಾವಿದರಿಂದಲೇ ತರಬೇತಿ ಕೊಡಿಸುವುದು, ಶಾಲೆ, ಕಾಲೇಜು ಪಠ್ಯದಲ್ಲಿ ಜಾನಪದ ಕಡ್ಡಾಯವಾಗಿ ಜಾರಿಯಾಗುವಂತೆ ವಿಶ್ವವಿದ್ಯಾಲಯ ಸರ್ಕಾರಕ್ಕೆ ಒತ್ತಾಸೆಯಾಗಿ ನಿಲ್ಲುವುದು.
ಜಾನಪದ ಅಧ್ಯಕ್ಷ ಆದಾಗ ತುಂಬಾ ವಿಭಿನ್ನವಾದ ಕಾರ್ಯಕ್ರಮ ಆರಂಭಿಸಿದಿರಿ?

ಹೌದು. ದೈನಂದಿನ ಪ್ರದರ್ಶನ, ಮೇಳ ಅವೆಲ್ಲ ಇದ್ದೇ ಇರ್ತೆವೆ. ಹಾಗಾಗಿ ಜಾನಪದ ನಿಘಂಟು ರಚನೆಗೆ ಆದ್ಯತೆ ನೀಡಿ ಮೂರು ಸಂಪುಟ ಹೊರತಂದೆವು. ಜನಪದರ ಸಮಗ್ರ ನುಡಿಗಟ್ಟಿನ ಅರ್ಥ ವಿವರಣೆಯ ಇದೊಂದು ಅಪರೂಪದ ಕೆಲಸ.
ಆದರೂ ಇದು ಸಮಗ್ರ ಅಲ್ಲ, ಮುಂದಿನ ಹಂತದಲ್ಲಿ ಪ್ರಯೋಗ ಪ್ರಧಾನವಾದ ಏಳೆಂಟು ಸಂಪುಟಗಳು ಹೊರಬೇಕು. ಜಾನಪದ ವಿವಿ ಆ ಕೆಲಸ ಮುಂದುವರಿಸಬೇಕು. ಬೀದರದಲ್ಲಿ ಅಖಿಲ ಭಾರತ ಜಾನಪದ ಮೇಳ ಸಂಘಟಿಸಿದ್ದೆವು. ದೇಶದ 24 ರಾಜ್ಯಗಳನ್ನು ಪ್ರತಿನಿಧಿಸಿ 600ಕ್ಕೂ ಹೆಚ್ಚು ಕಲಾವಿದರು ಅಲ್ಲಿ ನೆರೆದಿದ್ದರು. ಬೇರೆ ಭಾಗದಿಂದ ಬಂದ ವಿದ್ವಾಂಸರು ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ ಎಂಬ ವಿಷಯ ಕೇಳಿಯೇ ಆಶ್ಚರ್ಯಚಕಿತರಾದರು.
ಜಾನಪದ ಕಲಾವಿದರಿಗಾಗಿ ಒಂದು ಕ್ಷೇಮನಿಧಿ ಆರಂಭಿಸಿದೆವು. ನನಗೆ ಬಂದ ಎಲ್ಲ ಗೌರವ, ಸಂಭಾವನೆ ಹಣವನ್ನು ಕ್ಷೇಮನಿಧಿಗೆ ಕೊಟ್ಟೆ. ಸರ್ಕಾರ 20 ಲಕ್ಷ ರೂ. ನೀಡಿತು. ಈಗ ನಿಧಿ 25 ಲಕ್ಷ ಸಂಗ್ರಹ ಆಗಿರಬೇಕು. ಕ್ಷೇಮನಿಧಿ ಒಂದು ಒಂದೂವರೆ ಕೋಟಿ ಆಗುವವರೆಗೆ ಸರ್ಕಾರ ಪ್ರತಿವರ್ಷ 20 ಲಕ್ಷ ನೀಡಬೇಕು.
ಜಾನಪದ ಅದರ ಶುದ್ಧರೂಪದಲ್ಲಿ ಉಳಿಯುತ್ತಿಲ್ಲ. ಕಲಬೆರಕೆ ಆಗ್ತಾ ಇದೆ ಎಂಬ ಆತಂಕ ಕೆಲವರದು...
ಯಾವುದೂ ಮೂಲ ಸ್ವರೂಪದಲ್ಲಿ ಉಳಿಯೋಕೆ ಸಾಧ್ಯ ಇಲ್ಲ. ಮೂಲ ಸತ್ವವನ್ನು ಆಧುನಿಕ ಅಗತ್ಯಗಳಿಗೆ ಎಷ್ಟರ ಮಟ್ಟಿಗೆ ಬಳಸಲಿಕ್ಕೆ ಸಾಧ್ಯ ಎನ್ನುವುದು ಮುಖ್ಯ. ನಿರಂತರ ಬದಲಾವಣೆಯ, ಚಲನಶೀಲ ಸನ್ನಿವೇಶಕ್ಕೆ ಜಾನಪದವನ್ನು ಹೊಂದಿಸಿಕೊಳ್ಳುವುದು ಮುಖ್ಯವಾದುದು.

ಮೌಢ್ಯ ಪ್ರತಿಪಾದಿಸುವ ಜಾನಪದ ಉಳಿಸಿಕೊಳ್ಳುವ ಅಗತ್ಯ ಇದೆಯಾ?

ಜಾನಪದದಲ್ಲಿ ಮೌಲ್ಯ ಇದೆ, ಮೌಢ್ಯವೂ ಇದೆ. ಮೌಢ್ಯವನ್ನು ಹಾಗೇ ಇಟ್ಟುಕೊಳ್ಳಬೇಕೆಂದಿಲ್ಲ, ಅದನ್ನು ನಿರಾಕರಿಸಬೇಕು. ಪಶುವೈದ್ಯ, ಉಳಿತಾಯ, ಶ್ರಮಜೀವನ, ಸಾಮಾಜಿಕ ಸಂಬಂಧಗಳು, ಸಭ್ಯಜೀವನ, ಸಜ್ಜನಿಕೆಯಂತಹ ಮೌಲ್ಯಗಳನ್ನು ಜಾನಪದ ನಮಗೆ ಕಲಿಸಿಕೊಟ್ಟಿದೆ. ಶಿಕ್ಷಣ ಕ್ರಮದಲ್ಲಿ ಜಾನಪದದ ಈ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸಬೇಕು.
ಜಾನಪದ ನಾಶವಾಗುತ್ತೆ ಅನ್ನುವ ಆತಂಕ ಎಷ್ಟರಮಟ್ಟಿಗೆ ನಿಜ?

ಹಳೆಯದು ನಾಶವಾದರೆ ಹೊಸದು ಹುಟ್ಟುತ್ತೆ. ಅದೊಂದು ನಿರಂತರ ವಾಹಿನಿ. ನಿನ್ನೆಯದು ಇಂದು ಜಾನಪದ, ಇಂದಿನದು ನಾಳೆಗೆ ಜಾನಪದ.
ಜಾನಪದ ಸಂರಕ್ಷಣೆ ಅಂದರೆ ಏನು?

ಬಳಸಿದರೆ ಸಾಕು, ಅದೇ ಸಂರಕ್ಷಣೆ. ಉಳಿಸಬೇಕು ಎನ್ನುವ ಕ್ಲೀಷೆಯ ಮಾತುಗಳು ಸಾಕು, ಬಳಸಿ ಮೊದಲು.

ಸಂಘಟನೆ, ಪರಿಚಾರಿಕೆ ಕೆಲಸಗಳಲ್ಲಿ ನಿಮ್ಮ ಬರವಣಿಗೆ ಹಿಂದೆ ಬಿತ್ತು ಅಂತ ಅನಿಸಲ್ವಾ?

ಇಲ್ಲ, ಇದೂ ಸೃಜನಶೀಲ ಕ್ರಿಯೆಯೇ. ಎಲ್ಲರೂ ಬರಹಗಾರರಾದರೆ ವೇದಿಕೆ ಒದಗಿಸುವವರಾರು?

ಸೋಮವಾರ, ಜನವರಿ 14, 2013

ಸುಗ್ಗಿ ಹಬ್ಬ ಸಂಕ್ರಾಂತಿ-ಜನಪದ ಗೀತೆಗಳು


ಸುಗ್ಗಿ ಹಬ್ಬ ಸಂಕ್ರಾಂತಿ
ಕೃಪೆ: ಕಣಜ

ಕೋಲು ಮಾತಾಡುತಾವೆ-ಹೂವಿನ
ಗೆಜ್ಜೆ ಮಾತಾಡುತಾವೆ || ಸೊಲ್ಲು ||

ಹೊಳೆಯಲ್ಲಿ ನೀರು ತುಂಬಿ ಹೊಲದಲ್ಲಿ ಬೆಳೆ ತುಂಬಿ
ಊರೂರಿನ ಗುಡಿ ಮನೆತುಂಬಿ | ಹೂವಿನ |

ಊರೂರಿನ ಗುಡಿ ಮನೆತುಂಬಿ ಜನತುಂಬಿ
ಸಂಕ್ರಾಂತಿ ಬಂತು ಸಿರಿತುಂಬಿ | ಹೂವಿನ |

ಸಂಕ್ರಾಂತಿ ಹಬ್ಬದಲ್ಲಿ ಸಂಭ್ರಮವೇನಮ್ಮ
ದೇವೇಂದ್ರನೈಭೋಗ ಧರೆಯಲ್ಲಿ | ಹೂವಿನ |

ದೇವೇಂದ್ರನೈಭೋಗ ಧರೆಯಲ್ಲಿ ನೋಡುಬಾರೆ
ಬೆಳೆದು ಬೀಗ್ಯಾಳೆ ಭೂಮಿತಾಯಿ | ಹೂವಿನ |

ಭೂಮಿಯು ನಮ್ಮ ತಾಯಿ ತಂದೇಯು ಬಸವಣ್ಣ
ಅವರಿತ್ತ ಸಿರಿಯ ನೋಡ ಬನ್ನಿ | ಹೂವಿನ |

ಸುಗ್ಗಿ ಬಂದಿದೆ ಬನ್ನಿ ಹಿಗ್ಗ ತಂದಿದೆ ಬನ್ನಿ
ಸಗ್ಗವಾಗಿದೆ ಭೂಮಿ ನೋಡ ಬನ್ನಿ | ಹೂವಿನ |

ಎಳ್ಳು ಬೆಲ್ಲವ ಕೊಟ್ಟ ಒಳ್ಳೆ ಬಾಳನು ಕೊಟ್ಟ
ಎಲ್ಲರಿಗು ಸಂಪತ್ತ ಶಿವಕೊಟ್ಟ | ಹೂವಿನ |

ಗೊನೆಯಿಳ್ಸಿ ತಂದ ಬತ್ತ ಕುಟ್ಟೀದ ಹೊಸಅಕ್ಕಿ
ಉಕ್ಕೀಸಿ ಹೆಚ್ಚಾದ ಬೆಲ್ಲದನ್ನ | ಹೂವಿನ |

ಉಕ್ಕೀಸಿ ಹೆಚ್ಚೀದ ಬೆಲ್ಲದನ್ನ ಬಸವಯ್ಗೆ
ಪಡುಸೋಗ ಸಂಕ್ರಾಂತಿ ಸುಕುವಾಯ್ತು |

ಬಾರೋ ಬಾರೋ ಅಣ್ಣ ಕೋಲು ಕೋಲೆ
ಬಂಗಾರ‍್ದ ದಿನ ಬಂತು ಕೋಲುಕೋಲೆ || ಸೊಲ್ಲು ||

ಸಿಂಗಾರ‍್ದ ಸಿರಿ ಬಂತು
ಸಂಕ್ರಾಂತಿ ಹಬ್ಬ ಬಂತು
ಎಳ್ಳು ಬೆಲ್ಲಕ್ಕೆ ಬಂತು
ಒಳ್ಳೆ ಸಂಕ್ರಾಂತಿ ಹಬ್ಬ ಬಂತು |

ಊರ ಸೀಮೆಯ ನೋಡು
ಊರೂರ ಚೆಲ್ವ ನೋಡು
ನಾಡ ಅಂದವ ನೋಡು
ನಾಡ ಚಂದವ ನೋಡು |

ಬೆಳೆದ ಬೆಳೆಯ ನೋಡು
ಸುಗ್ಗೀಯ ಸಿರಿನೋಡು
ಹಸಿರ ಹಬ್ಬವ ನೋಡು
ಉಸಿರು ಬಂದಾದೆ ಜನಕೆ |

ನಾಡ ಸಂಪತ್ತ ನೋಡು
ನೋಡಲು ಶಿವ ಬಂದ್ರು
ಕಾಡ ಸಂಪತ್ತ ನೋಡು
ಕೋಟಿ ದೇವರು ಬಂದ್ರು |

ಹರುಷದ ಹೆಜ್ಜೆ ಮಡಗಿ
ಗೆಜ್ಜೆ ಗಿಲಿಗಿಲಿ ಅಂದೊ
ಎಳ್ಳುಬೆಲ್ಲಕೆ ಬಂತು
ಒಳ್ಳೆ ಸಂಕ್ರಾಂತಿ ಹಬ್ಬ ಬಂತು |

ಓಲಿಗ್ಯೊ ಓಲಿಗ್ಯೊ ಓಲಿಗ್ಯೊ |
ಹಿಗ್ಗಾಳಿ ಮುಗ್ಗಾಳಿ ಬರದಿರು ಕಣಕೆ
ಕುಗ್ಗೀದ ಗುಣವ ಕೊಡದೀರು ಮನಕೆ | ಸೊಲ್ಲು |

ಮೂಡಾಲಗಾಳಿಗೆ ಏನು ಬಂತೊ ಮಾಯ
ನೋಡಿ ನೀ ದಯ ಮಾಡೊ ದೇವ ಶಿವರಾಯ
ಕೂಡೀದ ರಾಸಿಗೆ ಬಡಿಸೇನು ಕಾಯ
ಕಾಡಿಸಿಕೊಳ್ಳದೆ ಕೊಡುವೇನು ಆಯ | ಓಲಿಗ್ಯೊ |

ಎತ್ತೀನ ಪಾದದ ಮುತ್ತೀನ ಜೋಳ
ಸುತ್ತ ಗುಡಿಸೇನು ಹವಳದ ಕಾಳ
ಅತ್ತಿಗಕ್ಕಯ್ಯಾರ ಬಳೆಗಳ ತಾಳ
ಹೊತ್ತಾತು ತರಬೇಕು ನೂರಾರು ಆಳ | ಓಲಿಗ್ಯೊ |

ಮಾಯಾದ ಗಾಳಿಬಂತು ಬರ್ರಾನೆ ಬೀಸಿ
ಶ್ರೀಶೈಲ ಶಿಖರಕ್ಕೆ ಸಮನಾದ ರಾಶಿ
ಮನ್ದೇವ್ರಿಗೋಗಾಕೆ ಬಲುದೂರ ಕಾಸಿ
ಮಲ್ಲೀಗಿ ದಂಡೇಲಿ ಪೂಜೀವು ರಾಸಿ | ಓಲಿಗ್ಯೊ |

ಹಸೆಗೆದ್ದು ಬಾ
ನೀಲಮೇಘ ಶ್ಯಾಮ |

ದಶರಥ ಕಂದ
ರಾವಣಾನ ಕೊಂದ
ಸೀತೆಯನು ತಂದ
ಲೋಕಕೆ ಆನಂದ |

ವನವಾಸವಾಂತ
ಭೂಜಾತೆ ಕಾಂತ
ಲಕ್ಷ್ಮಣ ಸಮೇತ
ಲಕ್ಷ್ಮಿದೇವಿ ಪ್ರೀತ |

ಈ ಬಿಲ್ಲು ಬಾಣ
ಹುಸಿಯದಂತ ಜಾಣ
ಜಾನಕೀರಮಣ
ನೀನೆ ಜಗದ ಪ್ರಾಣ |

ರಂಗಯ್ಯಸ್ವಾಮಿ ರಂಗಯ್ಯಸ್ವಾಮಿ
ಕಾವೇಟಿ ರಂಗಯ್ಯ ಗೋವಿಂದೋ |

ಬಿಲ್ಲ ತಕ್ಕೊಂಡು ಬಾಣ ಹೂಡುಕೊಂಡು
ಕತ್ತಿ ಹಿಡುಕೊಂಡು ಗೋವಿಂದೊ
ಕತ್ತಿ ಹಿಡುಕೊಂಡು ಕಾವೇಟಿ ರಂಗಯ್ಯ
ಬ್ಯಾಟೆಗೊರಟಾನೋ ಗೋವಿಂದೋ |

ಕಾವೇಟಿ ರಂಗಯ್ಯ ಕೆಂದ್ಗುದ್ರೆ ಏರ‍್ಕೊಂಡು
ಬ್ಯಾಟೆಗೊರಟಾರೊ ಗೋವಿಂದೋ
ಬೆಳಗಾನ ಬ್ಯಾಟೆಗೊರಟಾರೊ ರಂಗಯ್ಯ
ಹುಲಿ ಬ್ಯಾಟೆ ಗೆದ್ದ ಗೋವಿಂದೋ |

ಕಾವೆಟಿ ರಂಗಯ್ಯ ಕಾವಳ್ದಲೊರುಟವ್ರೆ
ಕಾವೇರಿ ದಂಡೆ ಗೋವಿಂದೋ
ಕಾವೇರಿ ದಂಡೆಯ ಕಾಡಲ್ಲಿ ಮಿಕಗಳ
ಕಾದು ನಿಂತವುರೆ ಗೋವಿಂದೋ |

* * *

ಹುಯ್ಯಿರೋ ಹುಯ್ಯಿರೋ
ಹುಯ್ಯಾರೆ ಹುಯ್ಯಿರೋ |

ನಗಾರಿ ಹುಯ್ಯಿರೋ
ನರಿಯನ್ನು ಹುಯ್ಯಿರೋ |

ತಮಟೆಯ ಹುಯ್ಯಿರೊ
ತಂಟೆಹುಲಿ ಹುಯ್ಯಿರೊ |

ಕಡಕತ್ತಿ ಹುಯ್ಯಿರೊ
ಕರಡೀಯ ಹುಯ್ಯಿರೊ |

ಕಠಾರಿ ಹುಯ್ಯಿರೊ
ಕಾಡುಕೊತ್ತಿ ಹುಯ್ಯಿರೊ |

ಕೊಡಲೀಯ ಹುಯ್ಯಿರೊ
ಕಡವೆಯ ಹುಯ್ಯಿರೊ |

ಈಟೀಯ ಹುಯ್ಯಿರೊ
ಕಾಟೀಯ ಹುಯ್ಯಿರೊ |

ಮಚ್ಚುಗಳ ಹುಯ್ಯಿರೊ
ಪಚ್ಚೋತಿ ಹುಯ್ಯಿರೊ |

ಬಾಣಗಳ ಹುಯ್ಯಿರೊ
ಬಳ್ಳುಗಳ ಹುಯ್ಯಿರೊ |

ಕಂದಲನ್ನು ಹುಯ್ಯಿರೊ
ಹಂದಿಯನ್ನು ಹುಯ್ಯಿರೊ |

ಬಾಕುವನ್ನು ಹುಯ್ಯಿರೊ
ಬರ್ಕಗಳ ಹುಯ್ಯಿರೊ |

ಬಲ್ಲೇಯ ಹುಯ್ಯಿರೊ
ಹುಲ್ಲೆಗಳ ಹುಯ್ಯಿರೊ |

ಹೆಬ್ಬಾರೆ ಹುಯ್ಯಿರೊ
ಹೆಬ್ಬಾವ ಹುಯ್ಯಿರೊ |

* * *

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನೆಂತು ಪೇಳ್ವೆನು

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲಗೌಡನು
ಬಳಸಿ ಬರುವ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೇ ಗೌರಿ ಬಾರೇ
ತುಂಗಭದ್ರ ತಾಯಿ ಬಾರೇ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದಾ ಧ್ವನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚಲ್ಲಿ ಸೂಸಿ ಹಾಲ ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಪದ್ಮನಾಭನೆ ಪರಂಧಾಮನೆ
ಮದ್ದುರ ಶ್ರೀ ನಾರಸಿಂಹನೆ
ಮುದ್ದುವರಗಳ ಕೊಡುವ ನಿಮಗೆಯು
ನಮೋ ನಮೋ ಮಂಗಳಂ

* * *

ಎತ್ತು ಎನಬವುದೆ ಎಡಚೋರಿ ಬಸವನ
ಸುತ್ತೇಳು ಲೋಕ ಸಲವೋನ ಬಸವನ
ಸತ್ವ ಮೊರೆಯೋದು ಧರಿಯಲ್ಲಿ |

ಮೂಡಲ ಹೋರಿಗೆ ಮುರಗಿಯ ಕೋಡಣಸು
ಕಣಗೆಜ್ಜೆ ಕೊರಳ ಸರಪಳಿ ಕಟಿಕೊಂಡು
ಸವನಾಗಿ ಹಮತ ತುಳಿದಾನೊ |

ಹೊತ್ತುನಂತೆ ಎದ್ದು ಯಾರ‍್ಯಾರ ನೆನಯಾಲಿ
ಕರುಣಿ ಕಲ್ಯಾಣದ ಬಸವನ
ಕರುಣಿ ಕಲ್ಯಾಣದ ಬಸವಣ್ಣ ದೇವರ
ಹೊತ್ತುನಂತೆ ಎದ್ದು ನೆನೆದೇವು |

ತುಂಬಿದ ಹೊಳೆಯಾಗೆ ಕೊಂಬು ಕಾಣಿಸುತಾವೆ
ಇಂಬುಳ್ಳ ಇಣಿಲ ಬಸವಣ್ಣ ಬರುವಾಗ
ಗಂಗೆದ್ದು ಕೈಯ ಮುಗಿದಾಳು |

ಕಸವ ಹೊಡೆದ ಕೈಯಿ ಕಸ್ತೂರಿ ನಾತವು
ಬಸವಣ್ಣ ನಿನ್ನ ಸೆಗಣೀಯ ಬಳಿದ ಕೈ
ಎಸಳ ಯಾಲಕ್ಕಿ ಗೊನೆನಾತ |