ಶನಿವಾರ, ಜನವರಿ 19, 2013

ಜಾನಪದ ಉಳಿಸಿ ಎನ್ನುವ ಕ್ಲೀಷೆಯ ಮಾತು ಸಾಕು...


ಸಂದರ್ಶನ: ಗುಡಿಹಳ್ಳಿ ನಾಗರಾಜ

20.01.2013, ಕೃಪೆ: ಪ್ರಜಾವಾಣಿ, ಸಾಪ್ತಾಹಿಕ ಪುರವಣಿ
 


ಗೊರುಚ' ಎಂದೇ ಜನಪ್ರಿಯವಾಗಿರುವ ಹಿರಿಯ ಲೇಖಕ, ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಅವರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ರೂವಾರಿ. ಬರವಣಿಗೆ, ಗ್ರಂಥ ಸಂಪಾದನೆ, ನಿರ್ದೇಶನ, ಸಂಘಟನೆ, ಪರಿಚಾರಿಕೆ- ಹೀಗೆ ಬಹುಮುಖಿ ಕ್ರಿಯಾಶೀಲತೆ ಹೊಂದಿರುವ ಗೊರುಚ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ- ಪರಿಷತ್ತನ್ನು ಸರ್ಕಾರದ ಅನುದಾನದ ವ್ಯಾಪ್ತಿಗೆ ತಂದು, ಜಿಲ್ಲಾ ಘಟಕಗಳಿಗೆ ಸಂಪನ್ಮೂಲ ವ್ಯವಸ್ಥೆ ಮಾಡಿದರು.

ಕನ್ನಡ-ಕನ್ನಡ ನಿಘಂಟಿನ ಕಾರ್ಯ ಪೂರ್ಣ, ಅತಿಹೆಚ್ಚು ದತ್ತಿನಿಧಿ ಸೇರಿದಂತೆ ಸಾಹಿತ್ಯ ಪರಿಷತ್ತಿನಲ್ಲಿ ಹಲವು ಹೊಸಬಗೆಯ ಕಾರ್ಯಕ್ರಮಗಳನ್ನು ರೂಪಿಸಿದರು. `ಕರ್ನಾಟಕ ಜನಪದ ಕಲೆಗಳು' ಗೊರುಚ ಸಂಪಾದಿಸಿದ ಕನ್ನಡದ ಮೊದಲ ಆಕರ ಗ್ರಂಥ.
`ಹೊನ್ನ ಬಿತ್ತೇವು ಹೊಲಕೆಲ್ಲ', `ಗ್ರಾಮಜ್ಯೋತಿ', `ನಿಜಬಿಂಬ' ಸೇರಿದಂತೆ 25 ಸಂಪಾದಿತ ಕೃತಿಗಳು, ಜಾನಪದ ನಾಟಕಗಳು, ಜೀವನ ಚರಿತ್ರೆ, ಜಾನಪದ ಸಂಗ್ರಹ ಸೇರಿದಂತೆ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 83ರ ಹರಯದಲ್ಲೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಾಲಿಗೆ ಚಕ್ರ ಸಿಕ್ಕಿಸಿಕೊಂಡವರಂತೆ ನಾಡನ್ನು ಸುತ್ತುತ್ತಲೇ ಇರುತ್ತಾರೆ. ಜಾನಪದ ರಂಗಭೂಮಿಗೆ ಅವರ ಕೊಡುಗೆಯನ್ನು ಮನ್ನಿಸಿ ಇದೀಗ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅವರಿಗೆ ಗೌರವ ಪ್ರಶಸ್ತಿಯನ್ನು ಪ್ರಕಟಿಸಿದೆ.
ನಿಮ್ಮ `ಸಾಕ್ಷಿಕಲ್ಲು', `ಅಯ್ಯನಕೆರೆ', `ಬೆಳ್ಳಕ್ಕಿ ಹಿಂಡು ಬೆದರ್ಯಾಸವು' ಜಾನಪದ ನಾಟಕಗಳನ್ನು ರಾಜ್ಯದ ಹಲವು ಹವ್ಯಾಸಿ ತಂಡಗಳು ಸತತವಾಗಿ ಪ್ರಯೋಗಿಸುತ್ತಲೇ ಇವೆ. ಜಾನಪದ ಮೂಲದ ಕಥಾವಸ್ತುವನ್ನು ನೀವು ನಾಟಕಕ್ಕೆ ಪುನರ್ ರಚಿಸಿಕೊಂಡ ಕ್ರಮ ಹೇಗೆ?

ರಂಗದ ಮೇಲೆ ನಾಟಕವಾಗಿ ಕಳೆಗಟ್ಟಲು ಬೇಕಾದ ಸಂಭಾಷಣೆಯನ್ನು ಮೂಲಕ್ಕೆ ದಕ್ಕೆ ತಾರದ ಹಾಗೆ ರಚಿಸಿದೆ. ಕಥೆಗೆ ಪೂರಕವಾಗುವಂತೆ ಹೊಸದಾಗಿ ಕೆಲವು ಪೋಷಕ ಪಾತ್ರಗಳನ್ನು ಸೃಷ್ಟಿಸಿಕೊಂಡೆ. ಜಾನಪದ ಶೈಲಿಯಲ್ಲಿ ಹಾಡುಗಳನ್ನು ಬರೆದೆ. ಇಂತಹದೊಂದು ಸೃಜನಾತ್ಮಕ ಪರಿಷ್ಕರಣದಿಂದ ನಾಟಕಗಳು ಯಶಸ್ವಿಯಾದವು.
ಜಾನಪದ ಕಥೆಯನ್ನ ಸಮಕಾಲೀನ ಸಂವೇದನೆಯ ಕಣ್ಣಿನಲ್ಲಿ ನೋಡಬೇಕೆ? ಯಥಾವತ್ ಇಡಬೇಕೆ?
ಪೌರಾಣಿಕ ಆಗಲಿ, ಜಾನಪದವಾಗಲಿ ಹೊಸ ದೃಷ್ಟಿಯಿಂದ ನೋಡೋದು ಇದ್ದೇ ಇದೆ. ತನ್ನ ಕಾಲಕ್ಕೆ ಅನ್ವಯವಾಗುವಂತೆ ಒಂದಷ್ಟು ಹೊಸರೂಪ ತಾಳುತ್ತೆ.
ಅಂದರೆ ಬದಲಾವಣೆ ಮಾಡಿಕೊಳ್ಳಬಹುದೆ?

ಮೂಲ ಕಥಾವಸ್ತುವಿನಲ್ಲಿ ನಾನು ಬದಲಾವಣೆ ಮಾಡಲಿಲ್ಲ. ಕೊಟ್ಟ ಮಾತಿಗೆ ತಪ್ಪದಿರುವುದು ಗ್ರಾಮೀಣ ಜನಪದರ ಬಹುದೊಡ್ಡ ಮೌಲ್ಯ. ನನ್ನನ್ನು ಬಹುವಾಗಿ ಕಾಡಿದ ವಸ್ತು ಅದು. ಜನಪದರ ಒಟ್ಟು ಕಲಾಪ್ರಕಾರಗಳಲ್ಲಿ ಇದು ಸ್ಥಾಯಿಯಾಗಿದೆ. ಒಂದು ರೀತಿಯ ಸಾರ್ವಕಾಲಿಕ ಮೌಲ್ಯ. ಜನಪದರನ್ನು ಅನಕ್ಷರಸ್ಥರು ಅಂತ ನೋಡಕೂಡದು. ಅವರ ಅನುಭವ ಪ್ರಪಂಚ ಬಹು ವಿಸ್ತಾರವಾದುದು, ಸಂಕೀರ್ಣವಾದುದು. ಅದನ್ನೇ ನಾನು ಪುನರ್ ರಚಿಸಿದೆ.
ಪ್ರಚಲಿತ ಸಾಮಾಜಿಕ ಕಥಾವಸ್ತುವಿನ ನಾಟಕಗಳಿಗೆ ಜಾನಪದವನ್ನು ಒಂದು ತಂತ್ರವಾಗಿ ಮಾತ್ರ ಬಳಸಿಕೊಳ್ಳುವ ಕ್ರಮ ಸರಿಯೆ?
ಬಳಸಿಕೊಳ್ಳಲಿ ಬಿಡಿ. ಅದರಿಂದ ಜಾನಪದಕ್ಕೇನೂ ಹಾನಿ ಇಲ್ಲ. ನಾಟಕ ಮತ್ತಷ್ಟು ಬೆಳಗುತ್ತದೆ.
ನಿಮ್ಮ ಸೃಜನಶೀಲ ಅಭಿವ್ಯಕ್ತಿ, ಸಂಘಟನೆಗಳಿಗೆ ಜಾನಪದವನ್ನೇ ಆಯ್ಕೆ ಮಾಡಿಕೊಂಡದ್ದು ಹೇಗೆ?
ಬಾಲ್ಯದಲ್ಲೇ ನಾನು ಕೆ.ಆರ್.ಲಿಂಗಪ್ಪನವರ ಹಾಡು ಕೇಳುತ್ತ ಬೆಳೆದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿ ನನ್ನೂರು. ಅಲ್ಲಿ ವೀರಗಾಸೆ ಕಲೆ ಇತ್ತು. ಚಿಕ್ಕಂದಿನಲ್ಲೇ ಅದಕ್ಕೆ ನಾನು ಆಕರ್ಷಿತನಾಗಿ ಖಡ್ಗ ಹೇಳೋದು, ಸಮಾಳ ಬಾರಿಸೋದರಲ್ಲಿ ತೊಡಗಿಕೊಂಡೆ. 15ನೇ ವರ್ಷದ ಅವಧಿಯಲ್ಲಿ ಜಾನಪದ ಗೀತೆಗಳ ಸಂಗ್ರಹ ಕಾರ್ಯ ಆರಂಭಿಸಿದೆ.

ಶಿಕ್ಷಕನಾಗಿ ಕೆಲಸಕ್ಕೆ ಸೇರಿದ ಅವಧಿಯಲ್ಲಿ ಹಾಗೇ ಮುಂದುವರಿಯಿತು. ಆಗೆಲ್ಲಾ ಆಧುನಿಕ ಸಾಧನಗಳು ಇರಲಿಲ್ಲ. ಕಲಾವಿದರು ಹೇಳಿದ್ದನ್ನ ನಾವು ದಿನಗಟ್ಟಲೆ ಕುಳಿತು ಬರೆದುಕೊಳ್ಳುತ್ತಿದ್ದೆವು. `ಬಾಗೂರು ನಾಗಮ್ಮ' ತಾಯಿ ಹೇಳಿದ ಕಥನಗೀತೆ. `ಮೈದುನ ರಾಮಣ್ಣ', `ಗ್ರಾಮ ಗೀತೆಗಳು', `ಜೋಗದ ಜೋಕ್' ಸಂಗ್ರಹಿಸಿದೆ.
1950-60ರ ಆ ದಶಕಗಳಲ್ಲಿ ಸಂಗ್ರಹ ಕಾರ್ಯ ವೈಜ್ಞಾನಿಕವಾಗಿ ನಡೆಯಿತೆ?
ಮೊದ ಮೊದಲು ಹಾಗಾಗಲಿಲ್ಲ. ಜನಪದ ಕಲಾವಿದರು ಹೇಳಿದ್ದಕ್ಕೆ ನಮಗೆ ಸರಿ ಎನ್ನಿಸಿದ ಹಾಗೆ ತಿದ್ದುಪಡಿ ಮಾಡ್ತಾ ಇದ್ದೆವು! ಜಾನಪದ ಅಧ್ಯಯನಗಳು ವೈಜ್ಞಾನಿಕವಾಗಿ ಶುರುವಾದ ಮೇಲೆ ಜಾನಪದವನ್ನು ಮೂಲ ಸ್ವರೂಪದಲ್ಲೇ ಉಳಿಸಿಕೊಳ್ಳಬೇಕು, ಏನನ್ನೂ ತಿದ್ದಬಾರದು ಅಂತ ಗೊತ್ತಾಯಿತು.

ನಿಮ್ಮ ಮಹಾತ್ವಾಕಾಂಕ್ಷೆಯ `ಗ್ರಾಮ ಚರಿತ್ರೆ ಕೋಶ' ಎಲ್ಲಿಗೆ ಬಂದಿದೆ?

ಜಾನಪದ ವಿಶ್ವವಿದ್ಯಾಲಯ ಅದನ್ನ ಆದ್ಯತೆ ಮೇಲೆ ಕೈಗೊಂಡಿದೆ. ಒಂದು ಹಳ್ಳಿಯ ಮಳೆ, ಬೆಳೆ, ಐತಿಹ್ಯ, ಪುರಾಣ, ಕಲೆ, ಶಿಕ್ಷಣ ಒಳಗೊಂಡಂತೆ ಸಮಗ್ರ ಮಾಹಿತಿಯನ್ನು ಈ ಕೋಶದಲ್ಲಿ ಸಂಗ್ರಹಿಸಲಾಗುತ್ತದೆ. ಒಟ್ಟು 29,600 ಹಳ್ಳಿಗಳಲ್ಲಿ ಈ ಕಾರ್ಯ ನಡೆಯಲಿದೆ. ಹಾವೇರಿ ಜಿಲ್ಲೆಯ 600 ಗ್ರಾಮಗಳ ಚರಿತ್ರೆ ಕೋಶ ಈಗಾಗಲೇ ಪೂರ್ಣಗೊಂಡಿದೆ. ಬ್ರಿಟಿಷರು ಜಿಲ್ಲಾ ಗ್ಯಾಜೆಟಿಯರ್ ಹೊರತರುವ ಪ್ರಕ್ರಿಯೆ ಆರಂಭಿಸಿದರು. ಗ್ರಾಮ ಚರಿತ್ರೆ ಕೋಶಗಳು ಅದಕ್ಕಿಂತ ವ್ಯಾಪಕ ಹಾಗೂ ಸಂಕೀರ್ಣ.
ಜಾನಪದ ವಿಶ್ವವಿದ್ಯಾಲಯ ನಿಮ್ಮ ಕನಸಿನ ಕೂಸೆ?

ನಾನೊಬ್ಬನೇ ಅಲ್ಲ. ಕೆ.ಆರ್.ಲಿಂಗಪ್ಪ, ಎಚ್.ಎಲ್.ನಾಗೇಗೌಡ, ಜೀಶಂಪ, ದೇಜಗೌ, ಹಾಮಾನಾ, ಕು.ಶಿ.ಹರಿದಾಸಭಟ್ಟ, ಮುದೇನೂರು ಸಂಗಣ್ಣ ಮುಂತಾದವರೆಲ್ಲ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯ ಅಗತ್ಯವನ್ನು ಮನಗಂಡಿದ್ದೆವು. ನಾನು ಜಾನಪದ ಅಕಾಡೆಮಿ ಅಧ್ಯಕ್ಷನಾಗಿ ನೇಮಕವಾದ (2009) ಮೊದಲ ಸರ್ವಸದಸ್ಯರ ಸಭೆಯಲ್ಲಿಯೇ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಆಗ್ರಹಪಡಿಸಿ ನಿರ್ಣಯ ಕೈಗೊಂಡೆವು. ಬೆಂಬಿಡದ ಪ್ರಯತ್ನದ ಫಲವಾಗಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿಗ್ಗಾವಿ ಬಳಿ ದೇಶದ ಮೊದಲ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣರಾದರು.
ಜಾನಪದ ವಿಶ್ವವಿದ್ಯಾಲಯ ಮಾಡಬೇಕಾದ ಕಾರ್ಯ ಯಾವುದು?

ದಾಖಲೀಕರಣಕ್ಕೆ ಮಹತ್ವ ನೀಡಬೇಕು. ಗ್ರಾಮ ಚರಿತ್ರೆ ಕೋಶವನ್ನು ಆದ್ಯತೆಯಿಂದ ಕೈಗೊಂಡಿದೆ. ನೂರು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಶಾಶ್ವತವಾದ ವಸ್ತುಪ್ರದರ್ಶನ, ಜಾನಪದ ಕಲಾವಿದರಿಂದಲೇ ತರಬೇತಿ ಕೊಡಿಸುವುದು, ಶಾಲೆ, ಕಾಲೇಜು ಪಠ್ಯದಲ್ಲಿ ಜಾನಪದ ಕಡ್ಡಾಯವಾಗಿ ಜಾರಿಯಾಗುವಂತೆ ವಿಶ್ವವಿದ್ಯಾಲಯ ಸರ್ಕಾರಕ್ಕೆ ಒತ್ತಾಸೆಯಾಗಿ ನಿಲ್ಲುವುದು.
ಜಾನಪದ ಅಧ್ಯಕ್ಷ ಆದಾಗ ತುಂಬಾ ವಿಭಿನ್ನವಾದ ಕಾರ್ಯಕ್ರಮ ಆರಂಭಿಸಿದಿರಿ?

ಹೌದು. ದೈನಂದಿನ ಪ್ರದರ್ಶನ, ಮೇಳ ಅವೆಲ್ಲ ಇದ್ದೇ ಇರ್ತೆವೆ. ಹಾಗಾಗಿ ಜಾನಪದ ನಿಘಂಟು ರಚನೆಗೆ ಆದ್ಯತೆ ನೀಡಿ ಮೂರು ಸಂಪುಟ ಹೊರತಂದೆವು. ಜನಪದರ ಸಮಗ್ರ ನುಡಿಗಟ್ಟಿನ ಅರ್ಥ ವಿವರಣೆಯ ಇದೊಂದು ಅಪರೂಪದ ಕೆಲಸ.
ಆದರೂ ಇದು ಸಮಗ್ರ ಅಲ್ಲ, ಮುಂದಿನ ಹಂತದಲ್ಲಿ ಪ್ರಯೋಗ ಪ್ರಧಾನವಾದ ಏಳೆಂಟು ಸಂಪುಟಗಳು ಹೊರಬೇಕು. ಜಾನಪದ ವಿವಿ ಆ ಕೆಲಸ ಮುಂದುವರಿಸಬೇಕು. ಬೀದರದಲ್ಲಿ ಅಖಿಲ ಭಾರತ ಜಾನಪದ ಮೇಳ ಸಂಘಟಿಸಿದ್ದೆವು. ದೇಶದ 24 ರಾಜ್ಯಗಳನ್ನು ಪ್ರತಿನಿಧಿಸಿ 600ಕ್ಕೂ ಹೆಚ್ಚು ಕಲಾವಿದರು ಅಲ್ಲಿ ನೆರೆದಿದ್ದರು. ಬೇರೆ ಭಾಗದಿಂದ ಬಂದ ವಿದ್ವಾಂಸರು ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ ಎಂಬ ವಿಷಯ ಕೇಳಿಯೇ ಆಶ್ಚರ್ಯಚಕಿತರಾದರು.
ಜಾನಪದ ಕಲಾವಿದರಿಗಾಗಿ ಒಂದು ಕ್ಷೇಮನಿಧಿ ಆರಂಭಿಸಿದೆವು. ನನಗೆ ಬಂದ ಎಲ್ಲ ಗೌರವ, ಸಂಭಾವನೆ ಹಣವನ್ನು ಕ್ಷೇಮನಿಧಿಗೆ ಕೊಟ್ಟೆ. ಸರ್ಕಾರ 20 ಲಕ್ಷ ರೂ. ನೀಡಿತು. ಈಗ ನಿಧಿ 25 ಲಕ್ಷ ಸಂಗ್ರಹ ಆಗಿರಬೇಕು. ಕ್ಷೇಮನಿಧಿ ಒಂದು ಒಂದೂವರೆ ಕೋಟಿ ಆಗುವವರೆಗೆ ಸರ್ಕಾರ ಪ್ರತಿವರ್ಷ 20 ಲಕ್ಷ ನೀಡಬೇಕು.
ಜಾನಪದ ಅದರ ಶುದ್ಧರೂಪದಲ್ಲಿ ಉಳಿಯುತ್ತಿಲ್ಲ. ಕಲಬೆರಕೆ ಆಗ್ತಾ ಇದೆ ಎಂಬ ಆತಂಕ ಕೆಲವರದು...
ಯಾವುದೂ ಮೂಲ ಸ್ವರೂಪದಲ್ಲಿ ಉಳಿಯೋಕೆ ಸಾಧ್ಯ ಇಲ್ಲ. ಮೂಲ ಸತ್ವವನ್ನು ಆಧುನಿಕ ಅಗತ್ಯಗಳಿಗೆ ಎಷ್ಟರ ಮಟ್ಟಿಗೆ ಬಳಸಲಿಕ್ಕೆ ಸಾಧ್ಯ ಎನ್ನುವುದು ಮುಖ್ಯ. ನಿರಂತರ ಬದಲಾವಣೆಯ, ಚಲನಶೀಲ ಸನ್ನಿವೇಶಕ್ಕೆ ಜಾನಪದವನ್ನು ಹೊಂದಿಸಿಕೊಳ್ಳುವುದು ಮುಖ್ಯವಾದುದು.

ಮೌಢ್ಯ ಪ್ರತಿಪಾದಿಸುವ ಜಾನಪದ ಉಳಿಸಿಕೊಳ್ಳುವ ಅಗತ್ಯ ಇದೆಯಾ?

ಜಾನಪದದಲ್ಲಿ ಮೌಲ್ಯ ಇದೆ, ಮೌಢ್ಯವೂ ಇದೆ. ಮೌಢ್ಯವನ್ನು ಹಾಗೇ ಇಟ್ಟುಕೊಳ್ಳಬೇಕೆಂದಿಲ್ಲ, ಅದನ್ನು ನಿರಾಕರಿಸಬೇಕು. ಪಶುವೈದ್ಯ, ಉಳಿತಾಯ, ಶ್ರಮಜೀವನ, ಸಾಮಾಜಿಕ ಸಂಬಂಧಗಳು, ಸಭ್ಯಜೀವನ, ಸಜ್ಜನಿಕೆಯಂತಹ ಮೌಲ್ಯಗಳನ್ನು ಜಾನಪದ ನಮಗೆ ಕಲಿಸಿಕೊಟ್ಟಿದೆ. ಶಿಕ್ಷಣ ಕ್ರಮದಲ್ಲಿ ಜಾನಪದದ ಈ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸಬೇಕು.
ಜಾನಪದ ನಾಶವಾಗುತ್ತೆ ಅನ್ನುವ ಆತಂಕ ಎಷ್ಟರಮಟ್ಟಿಗೆ ನಿಜ?

ಹಳೆಯದು ನಾಶವಾದರೆ ಹೊಸದು ಹುಟ್ಟುತ್ತೆ. ಅದೊಂದು ನಿರಂತರ ವಾಹಿನಿ. ನಿನ್ನೆಯದು ಇಂದು ಜಾನಪದ, ಇಂದಿನದು ನಾಳೆಗೆ ಜಾನಪದ.
ಜಾನಪದ ಸಂರಕ್ಷಣೆ ಅಂದರೆ ಏನು?

ಬಳಸಿದರೆ ಸಾಕು, ಅದೇ ಸಂರಕ್ಷಣೆ. ಉಳಿಸಬೇಕು ಎನ್ನುವ ಕ್ಲೀಷೆಯ ಮಾತುಗಳು ಸಾಕು, ಬಳಸಿ ಮೊದಲು.

ಸಂಘಟನೆ, ಪರಿಚಾರಿಕೆ ಕೆಲಸಗಳಲ್ಲಿ ನಿಮ್ಮ ಬರವಣಿಗೆ ಹಿಂದೆ ಬಿತ್ತು ಅಂತ ಅನಿಸಲ್ವಾ?

ಇಲ್ಲ, ಇದೂ ಸೃಜನಶೀಲ ಕ್ರಿಯೆಯೇ. ಎಲ್ಲರೂ ಬರಹಗಾರರಾದರೆ ವೇದಿಕೆ ಒದಗಿಸುವವರಾರು?

ಕಾಮೆಂಟ್‌ಗಳಿಲ್ಲ: