ಶನಿವಾರ, ಜನವರಿ 26, 2013

ಎ.ವಿ ನಾವಡ:ವಿಸ್ತಾರವಾದ ವಿದ್ವತ್ತಿನ ಲೇಖಕ

ಎ.ವಿ ನಾವಡ:ವಿಸ್ತಾರವಾದ ವಿದ್ವತ್ತಿನ ಲೇಖಕ
 
-ಪುರುಷೋತ್ತಮ ಬಿಳಿಮಲೆ
 
     ಕರ್ನಾಟಕದ ವಿದ್ವತ್ ಲೋಕದಲ್ಲಿ ಎರಡು ಬಗೆಯ ಪ್ರಧಾನ ಧಾರೆಗಳಿವೆ. ಒಂದು ಪಾಂಡಿತ್ಯ ಪರಂಪರೆಯಾದರೆ ಇನ್ನೊಂದು ಕ್ಷೇತ್ರಕಾರ‍್ಯಾಧರಿತವಾದ ಜಾನಪದ ಅಧ್ಯಯನ ಪರಂಪರೆ. ಮೊದಲನೆಯದು ಬಹುಮಟ್ಟಿಗೆ ಪಠ್ಯ ಕೇಂದ್ರಿತವಾಗಿದ್ದರೆ, ಎರಡನೆಯದು ಸ್ಥೂಲವಾಗಿ ಸಮಾಜ ಕೇಂದ್ರಿತವಾಗಿ ಬೆಳೆದಿದೆ. ಈ ಎರಡೂ ಅಧ್ಯಯನ ಶಿಸ್ತುಗಳು ಸಂಸ್ಕೃತಿಯೊಂದರ ಭಿನ್ನ ಮುಖಗಳೇ ಹೌದಾದರೂ ಅವೆರಡರ ನಡುವೆ ಹೇಳಿಕೊಳ್ಳುವಂತಹ ಸಂಬಂಧವೇನೂ ಬೆಳೆದಿಲ್ಲ. ಹಾಗೆ ಆಗದ್ದರಿಂದ ನಷ್ಟವಾದದ್ದು ನಮಗೆಲ್ಲ. ಈ ನಷ್ಟವನ್ನು ತುಂಬಿಕೊಡುವಲ್ಲಿ ಗಮನಾರ್ಹವಾಗಿ ದುಡಿದ ಕೆಲವೇ ಕೆಲವು ವಿದ್ವಾಂಸರಲ್ಲಿ  ಎ. ವಿ. ನಾವಡರೆಂದೇ ಜನಪ್ರಿಯವಾಗಿರುವ ಶ್ರೀ ಅಮ್ಮೆಂಬಳ ವಾಸುದೇವ ನಾವಡರೂ ಒಬ್ಬರು. ಅವರು ಏಕಕಾಲಕ್ಕೆ ಗೋವಿಂದ ಪೈಗಳ ಪದಪ್ರಯೋಗ, ತುಳು ನಿಘಂಟು, ಪಾಡ್ದನಗಳು, ಕುಡುಬಿಯರು, ಮದುವೆ, ದಾಸ ಸಾಹಿತ್ಯ, ಕಾಡ್ಯನಾಟ, ಪಾಣರಾಟಗಳ ಮತ್ತಿತರ ಅನೇಕ ವಿಷಯಗಳ ಬಗೆಗೆ ಮಾತಾಡಬಲ್ಲರು. ಈ ಬಗೆಯ ವಿಸ್ತಾರವಾದ ವಿದ್ವತ್ತುಳ್ಳವರು ನಮ್ಮ ನಡುವೆ ತುಂಬಾ ಕಡಿಮೆ.
 

     ಶ್ರೀ ಎ ವಿ ನಾವಡರ ( ಜನನ: ಎಪ್ರಿಲ್, ೨೮, ೧೯೪೬) ತಂದೆ ಅಮ್ಮೆಂಬಳ ಶಂಕರನಾರಾಯಣ ನಾವಡರು ಕನ್ನಡ ನವೋದಯ ಕಾಲದ ಮುಖ್ಯ ಕವಿಗಳಲ್ಲಿ ಒಬ್ಬರು. ಅವರ ಮನೆಗೆ ಅನೇಕ ಸಾಹಿತಿಗಳು ಸಹಜವಾಗಿ ಭೇಟಿಕೊಡುತ್ತಿದ್ದರು. ಕಾರಣ ಎ ವಿ ನಾವಡರಿಗೆ ಕರಾವಳಿಯ ಅನೇಕ ಸಾಹಿತಿಗಳ ಪರಿಚಯ ಎಳವೆಯಲ್ಲಿಯೇ ಆಯಿತು. ತಾವು ಹುಟ್ಟಿ ಬೆಳೆದ ಮಂಗಳೂರು ಸಮೀಪದ ಕೋಟೆಕಾರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದ ಅವರು ಸಂತ ಎಲೋಸಿಯಸ್ ಕಾಲೇಜಿನಲ್ಲಿ ಪದವಿ ಮುಗಿಸಿ, ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿ ಮಂಗಳೂರಿನಲ್ಲಿದ್ದ ಕನ್ನಡ ಅಧ್ಯಯನ ವಿಭಾಗದಿಂದ ೫ನೇ ರ‍್ಯಾಂಕಿನೊಂದಿಗೆ ಎಂ. ಎ ಪದವಿ ಪಡೆದರು. ಮುಂದೆ ಕುಂದಾಪುರದ ಭಂಡಾರ್ಕಾರ‍್ಸ್ ಕಾಲೇಜಲ್ಲಿ ಸುಮಾರು ೨೪ ವರ್ಷಗಳ ವರೆಗೆ ಕನ್ನಡ ವಿಭಾಗದ ಮುಖ್ಯಸ್ತರಾಗಿ ದುಡಿದು, ೧೯೯೩ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರಾಗಿ ದುಡಿದು, ಈಗ ನಿವೃತ್ತರಾಗಿದ್ದಾರೆ ಪ್ರಸ್ತುತ ಅವರು ಇತಿಹಾಸ ಪ್ರಸಿದ್ಧ ಕರ್ನಾಟಕ ಥಿಯೋಲೋಜಿಕಲ್ ಸಂಶೋಧನಾ ಕೇಂದ್ರ ( ಮಂಗಳೂರು) ದಲ್ಲಿ ಸಂದರ್ಶಕ ಪ್ರಾಧ್ಯಾಪರಾಗಿಯೂ, ಉಡುಪಿಯ ಕನಕದಾಸ ಅಧ್ಯಯನ ಕೇಂದ್ರ ಸಿದ್ಧಪಡಿಸುತ್ತಿರುವ ದಾಸ ಸಾಹಿತ್ಯ ಸಂಸ್ಕೃತಿ ವಿಶ್ವಕೋಶದ ಪ್ರಧಾನ ಸಂಪಾದಕರಾಗಿಯೂ ಕೆಲಸಮಾಡುತ್ತಿದ್ದಾರೆ. ಕಳೆದ ಸುಮಾರು ೪೦ ವರ್ಷಘಲ್ಲಿ ಶ್ರೀ ನಾವಡರು ನುರಿತ ಅಧ್ಯಾಪಕನಾಗಿ, ಪ್ರಸಾರಾಂಗದ ನಿರ್ದೇಶಕನಾಗಿ, ಡೀನ್, ಕುಲಸಚಿವರಾಗಿ, ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯನಾಗಿ, ವಿವಿಧ ಯೋಜನೆಗಳ ನಿರ್ದೇಶಕರಾಗಿ ನಾಡು ನುಡಿಗೆ ಸಲ್ಲಿಸದ ಸೇವೆ ಅನುಪಮವಾದುದು.

     ಶ್ರೀ ಎ.ವಿ ನಾವಡರ ಮುಖ್ಯ ಒಲವು ಶಾಸ್ತ್ರ ಸಾಹಿತ್ಯದ ಕಡೆಗೆ. ಶ್ರೀ ಮಂಜೇಶ್ವರ ಗೋವಿಂದ ಪೈ, ಸೇಡಿಯಾಪು ಕೃಷ್ಣ ಭಟ್ಟ, ಮುಳಿಯ ತಿಮ್ಮಪ್ಪಯ್ಯ ಮೊದಲಾದವರು ಓಡಾಡಿದ ನೆಲದಲ್ಲಿ ಕೆಲಸಮಾಡುವ ಯಾರೇ ಆದರೂ ಅಲ್ಲಿನ ಪಂಡಿತ ಪರಂಪರೆಯ ಪ್ರಭಾವಕ್ಕೆ ಒಳಗಾಗದೇ ಇರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅಪಾರವಾಗಿ ದುಡಿದಿರುವ ನಾವಡರು ನಿಘಂಟು ಶಾಸ್ತ್ರದಲ್ಲಿ ಪರಿಣತಿ ಸಾಧಿಸಿ, ಮುಂದೆ ಸುಪ್ರಸಿದ್ಧ ತುಳು ನಿಘಂಟು ಯೋಜನೆಯಲ್ಲಿ ಮುಖ್ಯ ಉಪಸಂಪಾದಕರಾಗಿ ( ೧೯೭೯-೮೨) ನಿಘಂಟುವಿನ ಯಶಸ್ವಿಗೆ ಕಾರಣರಾದರಲ್ಲದೆ, ಗೋವಿಂದ ಪೈ ಪದಪ್ರಯೋಗ ಕೋಶ ( ೧೯೮೬), ಗೋವಿಂದ ಪೈ ನಿಘಂಟು ( ೨೦೧೦) ಕೃತಿಗಳನ್ನೂ ಪ್ರಕಟಿಸಿದರು. ಭಾಷಾವಿಜ್ಞಾನಕ್ಕೆ ಸಂಬಂಧಿಸಿದಂತೆ ನಡೆದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಕರಾವಳಿಯ ಉಪಭಾಷೆಗಳ ವೈವಿಧ್ಯ, ಕೋಟಗನ್ನಡ ಮತ್ತಿತರ ವಿಷಯಗಳ ಬಗೆಗೆ ಅಮೂಲ್ಯವಾದ ಸಂಶೋಧನಾ ಲೇಖನಗಳನ್ನು ಮಂಡಿಸಿದರು.

    ಗ್ರಂಥ ಸಂಪಾದನಾ ಶಾಸ್ತ್ರದಲ್ಲಿಯೂ ನಾವಡರು ನಾಲ್ಕುಕಾಲ ನಿಲ್ಲಬಲ್ಲ ಕೆಲಸಮಾಡಿದ್ದಾರೆ. ವಿವಿಧ ಪಠ್ಯಗಳನ್ನು ಸಂಗ್ರಹಿಸಿ ಓದುವುದು, ಅವುಗಳಿಂದ ಅರ್ಹ ಪಠ್ಯದ ಆಯ್ಕೆ, ಮತ್ತು ಅಧಿಕೃತ ಪಠ್ಯವನ್ನು ಪ್ರಕಟಿಸುವಾಗ ಅದಕ್ಕೊಂದು ವಿಸ್ತಾರವಾದ ಪ್ರಸ್ತಾವನೆ ಬರೆಯುವುದರಲ್ಲಿ ಅವರದು ಎತ್ತಿದ ಕೈ. ದಾಸ ವಾಙ್ಮಯ ( ೧೯೮೯), ಸಾವಿರ ಕೀರ್ತನೆಗಳು ( ೨೦೦), ಸಾವಿರಾರು ಕೀರ್ತನೆಗಳು ( ೨೦೦೩), ಈಸಬೇಕು, ಇದ್ದು ಜೈಸಬೇಕು ( ೨೦೦೩), ವಾದಿರಾಜರ ಶ್ರೀಕೃಷ್ಣ ಬಾಲಲೀಲೆ ( ೨೦೦೫), ಕನಕ ಕಾವ್ಯ ಸಂಪುಟ ( ೨೦೧೧), ವಾದಿರಾಜರ ಸಮಗ್ರ ಕಾವ್ಯ ಸಂಪುಟ ( ೨೦೧೧) ಮೊದಲಾದ ಸಂಪುಟಗಳು ಅತ್ಯತ್ತಮ  ಗ್ರಂಥ ಸಂಪಾದನಾ ಶಾಸ್ರದ ಆಧುನಿಕ ಮಾದರಿಗಳು. ಈ ಬಗೆಯ ಕೆಲಸಗಳಿಗಿಂತ ಸ್ವಲ್ಪ ಭಿನ್ನವಾಗಿ ಅವರು ಸಂಪಾದಿಸಿದ ಕೃತಿಗಳೆಂದರೆ- ಕುಂದ ದರ್ಶನ ( ೧೯೭೮), ವಾಙ್ಮಯ ತಪಸ್ವಿ ( ೧೯೭೭), ನೇತ್ರಾವತಿ ( ೧೯೮೫),  ಹಸ್ತಪ್ರತಿ ವ್ಯಾಸಂಗ ( ೨೦೦೩), ಮತ್ತು ತುಳು ಸಾಹಿತ್ಯ ಚರಿತ್ರೆ ( ೨೦೦೭). ಈ ಸಂಪುಟಗಳು ಇವತ್ತು ಆಕರ ಗ್ರಂಥಗಳಾಗಿ ಸಂಶೋಧಕರಿಗೆ ಸಹಕರಿಸುತ್ತಲಿವೆ.
    ಹೀಗೆ ಶಾಸ್ತ್ರ ಸಂಬಂಧೀ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀ ನಾವಡರು ನಿಧಾನವಾಗಿ ಜಾನಪದದತ್ತ ತಿರುಗಿಕೊಂಡದ್ದು ಅಚ್ಚರಿಯ ವಿಷಯವೇ ಹೌದು. ೧೯೮೦-೮೧ರ ಅವಧಿಯಲ್ಲಿ ಶ್ರೀ ಕು ಶಿ ಹರಿದಾಸ ಭಟ್ಟರ ನೇತೃತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಜಾನಪದ ಕಮ್ಮಟದಲ್ಲಿ ಭಾಗವಹಿಸಿ, ಡಾ. ಪೀಟರ್ ಕ್ಲಾಸ್, ಅಲೆನ್ ಡಂಡೆಸ್, ಎ ಕೆ ರಾಮಾನುಜನ್, ವಿ ನಾರಾಯಣ ರಾವ್ ಅವರಂಥವರ ಮಾರ್ಗದರ್ಶನ ಪಡೆದ ನಾವಡರು ಮತ್ತೆಂದೂ ತಿರುಗಿ ನೋಡಲಿಲ್ಲ. ಕನ್ನಡ ಜಾನಪದ ಸಂಗ್ರಹ ಮತ್ತು ಅಧ್ಯಯನಕ್ಕೆ ಆಧುನಿಕತೆಯ ಆಯಾಮ ನೀಡಿದವರಲ್ಲಿ ನಾವಡರ ಒಬ್ಬರು. ವಿಶೇಷವಾಗಿ ಜನಪದ ಪಠ್ಯಗಳ ವೈವಿಧ್ಯಗಳ ಬಗೆಗೆ ಅವರು ನಾಡಿನ ಎಲ್ಲ ವಿದ್ಯಾರ್ಥಿಗಳ ಗಮನ ಸೆಳೆದರು. ’ಜಾನಪದದಲ್ಲಿ ಭಿನ್ನ ಪಠ್ಯಗಳಿಲ್ಲ, ಎಲ್ಲ ಪಠ್ಯಗಳೂ ಸ್ವತಂತ್ರ ಪಠ್ಯಗಳೇ’ ಎಂದು ಬಲವಾಗಿ ವಾದಿಸುವ ಅವರು ತಮ್ಮ ಜಾನಪದ ಸಂಬಂಧೀ ಕೃತಿಗಳಲ್ಲಿ ಈ ನಿಲುವನ್ನು ಎಂದೂ ಬಿಟ್ಟುಕೊಟ್ಟಿಲ್ಲ. ಜೊತೆಗೆ ಜನಪದ ಪಠ್ಯಗಳನ್ನು ಆಧುನಿಕ ಕ್ರಮಗಳ ಹಿನ್ನೆಲೆಯಲ್ಲಿ ದಾಖಲಿಸುವ, ಸಂಪಾದಿಸುವ ಮತ್ತು ಪ್ರಕಟಿಸುವ ವಿಚಾರದಲ್ಲಿ ಅವರು ನಮಗೆಲ್ಲ ಮಾದರಿಯಾದರು. ೧೯೯೨ರಲ್ಲಿ ಅವರು ’ಕಾಡ್ಯನಾಟ, ಪಠ್ಯ ಮತ್ತು ಪ್ರದರ್ಶನ’ ಪ್ರಕಟಿಸಿದಾಗ ನಾವೆಲ್ಲ ಅದರ ವೈಧಾನಿಕತೆಗೆ ಮಾರುಹೋಗಿದ್ದೆವು. ಅವರು ಬೇರೆ ಬೇರೆಕಾಲಘಟ್ಟದಲ್ಲಿ ಸಂಪಾದಿಸಿದ ವೈದ್ಯರ ಹಾಡುಗಳು (೧೯೮೫), ರಾಮಕ್ಕ ಮುಗ್ಗೇರ‍್ತಿ ಕಟ್ಟಿದ ಸಿರಿ ಪಾಡ್ದನ ( ೧೯೯೮) ಕೃತಿಗಳು ಇಂದು ನಮಗೆಲ್ಲ ಉಪಯುಕ್ತ ಸಂಪುಟಗಳಾಗಿ ಸಹಕರಿಸುತ್ತಲಿವೆ.

    ಕನ್ನಡ ಸಾಹಿತ್ಯ ಮತ್ತು ಜಾನಪದದ ಬಗೆಗೆ ಶ್ರೀ ನಾವಡರು ಬರೆದ ವಿವಿಧ ಲೇಖನಗಳು ಮತ್ತು ಪ್ರಕಟಿಸಿದ ಪುಸ್ತಕಗಳು ಅವರ ವಿಚಿಕಿತ್ಸಿಕ ದೃಷ್ಟಿಗೆ ಹಿಡಿದ ಕನ್ನಡಿಗಳಾಗಿವೆ. ವಿವಕ್ಷೆ ( ೧೯೯೪),  ಕನ್ನಡ ವಿಮರ್ಶೆಯ ಮೊದಲ ಹೆಜ್ಜೆಗಳು ( ೧೯೯೨), ಜನಪದ ಸಮಾಲೋಚನ ( ೧೯೯೩), ಒಂದು ಸೊಲ್ಲು ನೂರು ಸೊರ ( ೧೯೯೯), ಮೌಖಿಕ ಕಾವ್ಯ ಸಂಯೋಜನ ಪ್ರಕ್ರಿಯೆ (೨೦೦೨), ತುಳು ಪಾಡ್ದನ ಬಂಧ ಮತ್ತು ರಚನೆ ( ೨೦೦೩), ಈಗಾಗಲೇ ಕನ್ನಡ ಓದುಗರ ಪ್ರೀತಿಗೆ ಪಾತ್ರವಾದ ಕೃತಿಗಳಾಗಿವೆ.
   ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗಳು ಶ್ರೀ ನಾವಡರನ್ನು ಸನ್ಮಾನಿಸಿವೆ. ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮತ್ತು ಫಿನ್ಲೆಂಡಿನ ಫೊಕ್ಲೋರ್ ಸಂಸ್ಥೆಗಳು ಅವರಿಗೆ ಗೌರವ ಶಿಷ್ಯವೇತನ ನೀಡಿವೆ. ಅನೇಕ ಸ್ಥಳೀಯ ಸಂಘ ಸಂಸ್ಥೆಗಳು ಅವರ ಸಾಧನೆಗೆ ಮನ್ನಣೆ ನೀಡಿವೆ.
  ಇದೀಗ ಇದೇ ಜನವರಿ ೨೬ರಂದು ನಾವಡರ ಕರ್ಮಭೂಮಿ ಕುಂದಾಪುರದಲ್ಲಿ ಗೆಳೆಯರೆಲ್ಲ ಸೇರಿ, ನಾವಡರ ಕೊಡುಗೆಯನ್ನು ಸ್ಮರಿಸಿಕೊಂಡು ಅಭಿನಂದಿಸಲು ತಯಾರಾಗಿದ್ದಾರೆ. ಅಗತ್ಯ ಆಗಬೇಕಾದ ಕೆಲಸವಿದು. ನಾಡಿನ ಎಲ್ಲ ಸಹೃದಯರ ಪರವಾಗಿ ಅವರಿಗೆ ನಮ್ಮ ಅಭಿನಂದನೆಗಳು.
 

ಕಾಮೆಂಟ್‌ಗಳಿಲ್ಲ: