ಭಾನುವಾರ, ಜನವರಿ 27, 2013

ಜಾತಿಬದ್ಧ ಜಾನಪದ ಕಲಾಲೋಕ


-
-ಅರುಣ್ ಜೋಳದಕೂಡ್ಲಿಗಿ
prajavani-jathi samvaada-28.01.2013

ನಾನೊಮ್ಮೆ ಮೊಹರಂ ಹಬ್ಬದ ಅಧ್ಯಯನಕ್ಕಾಗಿ ಸುರಪುರ ಸಮೀಪದ ಕೆಲವು ಹಳ್ಳಿಗಳಲ್ಲಿ ಕ್ಷೇತ್ರಕಾರ್ಯ ಮಾಡುತ್ತಿದ್ದೆ. ಆಗ ಕೆಲವು ಕಡೆ ಮೊಹರಂ ಆಚರಣೆ ನಿಂತಿರುವುದು ಗಮನಕ್ಕೆ ಬಂತು. ಇದರ ಕಾರಣ ಹುಡುಕಿದೆ. ಮೊಹರಂ ಹಬ್ಬಕ್ಕೆ ಹಲಗೆ ಬಡಿಯುವುದನ್ನು ದಲಿತರು ವಿರೋಧಿಸಿದ್ದರು. ನಾವೇ ಯಾಕೆ ಬಡಿಯಬೇಕು? ಮೇಲುಜಾತಿಯವರೂ ಬಡಿಯಲಿ ಎಂದು ಎಚ್ಚೆತ್ತ ದಲಿತ ಯುವಕರು ನುಡಿದಿದ್ದರು. ಕಾರಣ ಊರಲ್ಲಿ ಜಗಳವಾಗಿ ಮೊಹರಂ ಹಬ್ಬ ನಿಂತಿತ್ತು. ಹೀಗೆಯೇ ಹಲಗೆ ಬಾರಿಸಲು ನಿರಾಕರಿಸಿದ ಕಾರಣ ಹಲವು ಹಳ್ಳಿಗಳಲ್ಲಿ ಮೊಹರಂ ಹಬ್ಬ ನಿಲುಗಡೆಯಾಗಿತ್ತು. ಜಾತಿಪ್ರಜ್ಞೆಯನ್ನು ಗಟ್ಟಿಯಾಗಿ ಅಂಟಿಸಿಕೊಂಡ ಹಲಗೆ ನಮ್ಮ ಮನೆಗಳಲ್ಲಿ ಇರುವುದೇ ಬೇಡ ಎಂದು ಕೆಲ ವಿದ್ಯಾವಂತ ದಲಿತ ಯುವಕರು ಹಲಗೆಯನ್ನೇ ಮನೆಯಿಂದ ಹೊರಹಾಕಿದ್ದರು.

     ಯಕ್ಷಗಾನವನ್ನು ಜಾನಪದ ಕಲೆ ಅಲ್ಲ ಎಂದು ನಿರೂಪಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯೂ ಒಡೆದು ಪ್ರತ್ಯೇಕ ಯಕ್ಷಗಾನ ಅಕಾಡೆಮಿಯಾದದ್ದರ ಹಿಂದೆಯೂ ಈ ಕಾರಣವೂ ಇದೆ. ಇದರ ಹಿಂದೆ ಜಾನಪದ ಕೆಳಜಾತಿಗಳ ಸಂಕೇತ, ಯಕ್ಷಗಾನ ಮೇಲು ಜಾತಿಯ ಕಲೆ ಎನ್ನುವ ಜಾತಿಕಾರಣವಿದೆ. ಯಕ್ಷಗಾನವನ್ನೂ ಜಾನಪದ ಕಲೆ ಎಂದರೆ ಅದು ಕೆಳಜಾತಿಗಳ ಸಂಕೇತದಲ್ಲಿ ಬೆರೆತು ಕಳಂಕವನ್ನು ಮೈಗೆ ಹಚ್ಚಿಕೊಳ್ಳುವ ಆತಂಕ ನಿರಂತರವಾಗಿ ಕಾಡುತ್ತಲೆ ಬಂದಿದೆ.

     ಬಹುಪಾಲು ಕೆಳಜಾತಿಗಳು ಅಭಿವ್ಯಕ್ತಿಸುವ ಕಲಾಪ್ರಕಾರಗಳಿಗೂ ಅವರ ಜೀವನ ವಿಧಾನಕ್ಕೂ ನಂಟಿದೆ. ಮಾಂಸಾಹಾರ ಸೇವನೆಯ ಕಾರಣ, ದನ ಮತ್ತು ಮೇಕೆಯಂತಹ ಪ್ರಾಣಿ ಚರ್ಮಗಳಲ್ಲಿ ಮಾಡಿದ ದೊಡ್ಡ ವಾದ್ಯಗಳು ಕೆಳಜಾತಿಗಳಿಗೆ ಸಿಕ್ಕಿಕೊಂಡು ಅವು ಕಾಲಾನಂತರ ಕಲಾಪ್ರಕಾರವೂ ಆಗಿವೆ. ಕೆಳಜಾತಿಗಳ ಬಹುಪಾಲು ಕಲೆಗಳ ಕಲಾಪ್ರದರ್ಶನ ಏಕಕಾಲದಲ್ಲಿ ಭಿಕ್ಷಾಟನೆಯೂ ಆಗಿರುತ್ತದೆ. ಹಾಗಾಗಿ ಇವುಗಳು ಸಂಚಾರಿ ಕಲೆಗಳಾಗಿವೆಯೇ ವಿನಃ ಒಂದೆಡೆ ನಿಂತು ಅಭಿನಯಿಸುವ ಪ್ರೊಸೀನಿಯಂ ಕಲೆಗಳಾಗಿಲ್ಲದಿರುವುದನ್ನು ನೋಡಬಹುದು. ಈಗ ಜನಪದ ಕಲೆಗಳು ನಾಶವಾಗುವುದಕ್ಕೂ, ಜಾತಿಪ್ರಜ್ಞೆಯ ಸಂಕೇತಗಳನ್ನು ಬಿಟ್ಟುಕೊಡುವುದಕ್ಕೂ ಭಿಕ್ಷೆ ಬೇಡುವ ಸ್ಥಿತಿಯಿಂದ ಸುಧಾರಿಸಿರುವುದಕ್ಕೂ ಸಂಬಂಧವಿದೆ. ಇಂದು ಜನಪದ ಕಲೆಗಳ ದೇಹಕ್ಕೆ ಚರ್ಮದಂತೆ ಅಂಟಿದ ಜಾತಿಯ ಕವಚವನ್ನು ತೆಗೆಯಲು ಸಾಧ್ಯವಾಗಬೇಕಿದೆ.

   ಸದ್ಯದ ಕರ್ನಾಟಕದ ಜಾನಪದ ಕಲಾಪ್ರಕಾರಗಳ ಹೊಸ ಚಲನೆಯನ್ನು ಗಮನಿಸಿದರೆ ಹೀಗೆ ನಿಧಾನಕ್ಕೆ ಜಾತಿಯ ಸಿಕ್ಕಿನಿಂದ ಬಿಡಿಸಿಕೊಳ್ಳುತ್ತಿರುವ ಚಿತ್ರವೊಂದು ಕಾಣುತ್ತಿದೆ. ಹೀಗೆ ಜಾತಿಯ ಚರ್ಮಕಿತ್ತ ಕಲೆಗಳು ಬದುಕುಳಿಯುತ್ತವೆಯೇ? ಎನ್ನುವ ಪ್ರಶ್ನೆ ಎದುರು ನಿಲ್ಲದಿದ್ದರೂ ತಾಳ್ಮೆಯಿಂದ ಕೂತು ಉತ್ತರಕ್ಕೆ ಕಾಯುತ್ತದೆ.
ಸಾಂಸ್ಕೃತಿಕ ಅನನ್ಯತೆ ಎನ್ನುವ ಪರಿಭಾಷೆಯಡಿ `ಹಲಗೆ ದಲಿತರ ಅನನ್ಯತೆ, ಅದನ್ನವರು ಬಿಡಬಾರದು ಎನ್ನುವ ವಿದ್ವಾಂಸರ ವ್ಯಾಖ್ಯಾನಗಳಿವೆ.  ಇವು ಮೇಲು ಜಾತಿಗಳು ಕಲ್ಪಿಸಿದ, ಯಾರೋ ಆರೋಪಿಸಿದ ಅನನ್ಯತೆ ಎನ್ನುವ ಸೂಕ್ಷ್ಮಗಳಿಗೆ ಕಿವುಡಾಗಿವೆ.

    ಸಂವಿಧಾನದ ಜಾತ್ಯತೀತತೆಯ ನೆರಳಲ್ಲಿ ಬದುಕುತ್ತಿರುವ ಕೆಳಜಾತಿಗಳು ತಮ್ಮ ಜಾತಿ ನೆನಪನ್ನು ಅಡಗಿಸಿಕೊಂಡ ಕಲೆಗಳಿಂದ ದೂರಾಗುವುದನ್ನು ಸಕಾರಾತ್ಮಕವಾಗಿಯೇ ನೋಡಬೇಕಿದೆ.
ಹಾಗೆಯೇ ಮೇಲು ಜಾತಿಗಳೂ ಕೂಡ ತಮ್ಮ ಜಾತಿಯ ಮೇಲರಿಮೆಯನ್ನು ಬಿಂಬಿಸುವ ಕಲೆಗಳಿಂದಲೂ ದೂರ ಉಳಿಯಬೇಕಾದುದು ಆತ್ಮಸಾಕ್ಷಿಯ ಸಂಕೇತವಾಗಿದೆ. ಅಂತೆಯೇ ಶಿಕ್ಷಣ ಪಡೆದು ಸ್ವಾವಲಂಬನೆಯನ್ನು, ಆತ್ಮವಿಶ್ವಾಸವನ್ನು ಪಡೆದ ಅಂಚಿನ ಸಮುದಾಯಗಳು ಭಿಕ್ಷಾಟನೆಯಂತಹ ಕಲಾಪ್ರಕಾರಗಳನ್ನು ಮುಂದುವರಿಸುವುದಾದರೂ ಯಾಕೆ? ಹೇಗೆ?

ಕಾಮೆಂಟ್‌ಗಳಿಲ್ಲ: