ಗುರುವಾರ, ಮಾರ್ಚ್ 1, 2012

ಒಂದು ಜನಪದ ಕಥೆ: ಕುರಿ ಕಾಯುವ ಯುವಕನ ಜಾಣ್ಮೆ

ಕುರಿ ಕಾಯುವ ಯುವಕನ ಜಾಣ್ಮೆ

ಒಮ್ಮೆ ಮಗಧ ರಾಜ್ಯಕ್ಕೆ ಒಬ್ಬ ಘನ ಪಂಡಿತ ಬರುತ್ತಾನೆ. ಆತನು ತನ್ನ ವಿದ್ವತ್ತಿನಿಂದ ಹಲವು ಪಂಡಿತರನ್ನು ಸೋಲಿಸಿ ಕೀರ್ತಿ ಪಡೆದವನು. ಆತ ರಾಜ ಪಂಡಿತರಿಗೆ ಮೂರು ಪ್ರಶ್ನೆಗಳನ್ನು ಕೇಳುತ್ತಾನೆ. ೧. ಈ ಭೂಮಿಯ ಮಧ್ಯ ಬಿಂದು ಎಲ್ಲಿದೆ? ೨. ಈ ಭೂಮಿಯ ಮೇಲೆ ಈ ತನಕ ಹುಟ್ಟಿದವರೆಷ್ಟು? ಸತ್ತವರೆಷ್ಟು? ೩. ಈ ಭೂಮಿಯ ಮೇಲೆ ಈಗ ನಲೆಸಿರುವ ಜನರೆಷ್ಟು?
ಈ ಮೂರು ಪ್ರಶ್ನೆಗಳಿಗೆ ಮಗಧ ರಾಜ್ಯದ ಮಂತ್ರಿಗಳು ಉತ್ತರಿಸಲು ಸೋಲುತ್ತಾರೆ. ಆಗ ಪಂಡಿತ ಒಂದು ತಿಂಗಳ ಅವಧಿ ಕೊಡುವುದಾಗಿಯೂ ಆ ಅವಧಿಯಲ್ಲಿ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿದರೆ ನನ್ನ ಬಿರುದು ಬಾವಲಿಗಳನ್ನೆಲ್ಲಾ ಅರ್ಪಿಸಿ ಶರಣಾಗುತ್ತೇನೆ. ಹೇಳದಿದ್ದರೆ ಅರ್ಧ ರಾಜ್ಯ ಕೊಡಬೇಕೆಂದು ಸವಾಲು ಹಾಕಿ ಹೋಗುತ್ತಾನೆ.

ಇದರಿಂದ ಮಗಧ ರಾಜನಿಗೆ ಚಿಂತೆಯಾಗುತ್ತದೆ. ಒಬ್ಬ ಪಂಡಿತ ನನ್ನ ರಾಜ್ಯಕ್ಕೆ ಸವಾಲು ಹಾಕಿದ್ದು ಅವಮಾನವಾಗುತ್ತದೆ. ಅಲ್ಲದೆ ಒಂದು ತಿಂಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಹೇಳದಿದ್ದರೆ ಅರ್ಧ ರಾಜ್ಯವನ್ನು ಪಂಡಿತನಿಗೆ ಕೊಡಬೇಕಾದುದು ಮತ್ತಷ್ಟು ರಾಜನಲ್ಲಿ ಭಯ ಹುಟ್ಟಿಸುತ್ತದೆ. ಹೀಗಾಗಿ ರಾಜನು ಈ ಪ್ರಶ್ನೆಗಳನ್ನು ಇಡೀ ರಾಜ್ಯದ ಜನತೆಗೆ ತಿಳಿಸಿ ಯಾರಾದರೂ ಉತ್ತರ ನೀಡಿದವರಿಗೆ ಅರ್ಧ ರಾಜ್ಯ ಕೊಡುವುದಾಗಿ ಡಂಗೂರ ಸಾರಿಸುತ್ತಾನೆ.

ಈ ಪ್ರಶ್ನೆಗಳನ್ನು ಕೇಳಿದ ಕುರಿ ಕಾಯುವ ಯುವಕನೊಬ್ಬ ಬಿದ್ದು ಬಿದ್ದು ನಗುತ್ತಾನೆ. ಇಷ್ಟು ಸರಳವಾದ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಾಗಲಿಲ್ಲವೇ, ನಾನು ಹೇಳಬಲ್ಲೆ ಎಂದು ಉತ್ಸುಕನಾಗುತ್ತಾನೆ. ಆದರೂ ಅದನ್ನು ಯಾರಲ್ಲಿಯೂ ಹೇಳುವುದಿಲ್ಲ. ಬದಲಾಗಿ ಯಾರೂ ಹೇಳದಿದ್ದರೆ ಕೊನೆಯ ದಿನ ಪಂಡಿತನ ಎದುರೇ ಹೇಳಿದರಾಯಿತು ಎಂದು ನಿರ್ಧರಿಸುತ್ತಾನೆ.

ತಿಂಗಳ ಗಡುವಿನ ಕೊನೆಯ ದಿನ. ಯಾರೂ ಉತ್ತರ ಹೇಳಲು ಸಿದ್ದರಿಲ್ಲ. ರಾಜನ ಮುಖ ಕಳೆಗುಂದಿದೆ. ಅರಮನೆ ಮೈದಾನದಲ್ಲಿ ರಾಜ್ಯದ ಜನತೆ ಸುತ್ತುವರಿದಿದ್ದಾರೆ. ಪಂಡಿತ ಠೀವಿಯಿಂದ ಸಿಂಹಾಸನದ ಮೇಲೆ ಕೂತು ನೆರೆದ ಜನರನ್ನೆಲ್ಲಾ ನೋಡುತ್ತಿದ್ದಾನೆ. ಆತನ ಮುಖದಲ್ಲಿ ತುಂಟ ನಗೆ ಇಣುಕುತ್ತಿದೆ. ಇಂತಹ ಪ್ರಶ್ನೆಗಳಿಗೆ ಉತ್ತರ ಹೇಳುವ ಜಾಣ್ಮೆ ಇಲ್ಲಿ ಯಾರಿಗೂ ಇಲ್ಲ. ಅರ್ಧ ರಾಜ್ಯ ನನ್ನದೇ ಎಂದು ಬೀಗುತ್ತಾನೆ. ರಾಜನು ಜನರನ್ನು ಉದ್ದೇಶಿಸಿ ಮಾತನಾಡಿ ಯಾರಾದರೂ ಸರಿ ಈ ಪ್ರಶ್ನೆಗಳಿಗೆ ಉತ್ತರ ಹೇಳಲು ತಯಾರಿದ್ದರೆ, ಹೇಳಿ ರಾಜ್ಯದ ಘನತೆಯನ್ನು ಕಾಪಾಡಿ ಉತ್ತರ ಹೇಳಿದವರಿಗೆ ರಾಜ್ಯದ ಅರ್ಧ ಭಾಗವನ್ನು ಕೊಡುವುದಾಗಿ ಹೇಳುತ್ತಾನೆ. ಹೀಗೆ ಹೇಳಿದ ಅರ್ಧ ಗಂಟೆ ಸಭೆ ಮೌನವಾಗುತ್ತದೆ.

ಇದನ್ನು ನೋಡಿದ ಕುರಿ ಕಾಯುವ ಯುವಕ ಹೆಗಲ ಮೇಲೆ ಕುರಿಯೊಂದನ್ನು ಹೊತ್ತು ಜನ ಸುತ್ತುವರಿದ ಮೈದಾನದ ಮಧ್ಯೆ ಬಂದು ನಿಲ್ಲುತ್ತಾನೆ. ಜನರೆಲ್ಲಾ ಗೊಳ್ ಎಂದು ನಗುತ್ತಾರೆ. ಪಂಡಿತ ಬಿದ್ದು ಬಿದ್ದು ನಕ್ಕು ಈ ಕುರುಬ ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತಾನೆಯೇ? ಎಂದು ಠೇಂಕಾರ ತೋರುತ್ತಾನೆ. ಇದನ್ನು ನೋಡಿದ ರಾಜನ ಕಣ್ಣಲ್ಲಿ ಹೊಸ ಭರವಸೆ ಮೂಡುತ್ತದೆ. ಆಗ ರಾಜನು ಈತನು ಏನು ಹೇಳುತ್ತಾನೆ ಕೇಳೋಣ, ಎಂದು ಯುವಕನನ್ನು ಮಾತನಾಡಲು ಹೇಳುತ್ತಾರೆ.

ಯುವಕ ಪಂಡಿತರನ್ನು ತಾನು ನಿಂತಲ್ಲಿಗೆ ಕರೆಯುತ್ತಾನೆ. ಪಂಡಿತರೆ ನಿಮ್ಮ ಮೊದಲ ಪ್ರಶ್ನೆ ಯಾವುದು ಎನ್ನುತ್ತಾನೆ. ಪಂಡಿತ ತಿರಸ್ಕಾರದಿಂದಲೇ, ಈತನೇನು ಉತ್ತರಿಸಬಲ್ಲ ಎನ್ನುವಂತೆ, ಈ ಭೂಮಿಯ ಮಧ್ಯ ಬಿಂದು ಯಾವುದು? ಹೇಳಬಲ್ಲೆಯಾ ಎನ್ನುತ್ತಾನೆ. ಆಗ ಕುರಿಯನ್ನು ಹೆಗಲ ಮೇಲಿಂದ ಕೆಳಗೆ ಇಳಿಸಿ, ಪಂಡಿತರೇ ಈ ಕುರಿ ನಿಂತ ಸ್ಥಳವೇ ಈ ಭೂಮಿಯ ಮಧ್ಯ ಬಿಂದು ಎಂದು ಹೇಳುತ್ತಾನೆ. ಪಂಡಿತ ‘ಏನು ಉದ್ಧಟದ ಉತ್ತರವನ್ನು ಹೇಳುತ್ತಿರುವೆ’ ಎನ್ನುತ್ತಾನೆ. ಯುವಕ ‘ಪಂಡಿತರೆ ನಿಮಗೆ ಅನುಮಾನ ಬಂದರೆ ಭೂಮಿಯನ್ನೊಮ್ಮೆ ಅಳತೆ ಮಾಡಿಕೊಂಡು ಬನ್ನಿ. ಅಲ್ಲಿಯವರೆಗೂ ನಾನು ಇಲ್ಲಿಯೇ ನಿಂತಿರುವೆ. ಸುಳ್ಳಾದರೆ ಅಳೆದು ತೋರಿಸಿ’ ಎನ್ನುತ್ತಾನೆ. ಈ ಮಾತಿನಿಂದ ಪೆಚ್ಚಾದ ಪಂಡಿತರ ಮುಖ ಬಿಳಿಚಿಕೊಳ್ಳುತ್ತದೆ. ಭೂಮಿಯನ್ನು ಅಳತೆ ಮಾಡಲು ಸಾದ್ಯವೇ ಎಂದು ಮನದಲ್ಲಿಯೇ ಅಂದುಕೊಂಡು. ವಿಧಿಯಿಲ್ಲದೆ, ಸರಿ ನಿನ್ನ ಮೊದಲ ಉತ್ತರ ಸರಿಯಾಗಿದೆ ಎನ್ನುತ್ತಾನೆ. ಇದನ್ನು ಕೇಳಿ ಜನರೆಲ್ಲಾ ಜೈಕಾರ ಹಾಕುತ್ತಾರೆ.

ಯುವಕ ‘ಹೇಳಿ ಪಂಡಿತರೆ ನಿಮ್ಮ ಎರಡನೆ ಪ್ರಶ್ನೆ ಯಾವುದು’ ಎನ್ನುತ್ತಾನೆ. ಪಂಡಿತ ‘ಈ ಭೂಮಿಯ ಮೇಲೆ ಈ ತನಕ ಹುಟ್ಟಿದವರೆಷ್ಟು? ಸತ್ತವರೆಷ್ಟು? ಹೇಳುವೆಯಾ’ ಎನ್ನುತ್ತಾನೆ. ಯುವಕ ಕುರಿಗೆ ಹೊಟ್ಟೆಯ ಮಧ್ಯ ಭಾಗಕ್ಕೆ ಹಗ್ಗವೊಂದನ್ನು ಕಟ್ಟಿ ‘ಈ ಕುರಿಯ ಅರ್ಧ ಭಾಗದ ಕೂದಲು ಎಷ್ಟಿವೆಯೋ ಅಷ್ಟು ಜನ ಭೂಮಿಯ ಮೇಲೆ ಹುಟ್ಟಿದ್ದಾರೆ. ಇನ್ನರ್ಧ ಭಾಗ ಭೂಮಿಯ ಮೇಲೆ ಸತ್ತವರ ಸಂಖ್ಯೆ, ಅನುಮಾನ ಬಂದರೆ ಈ ಕುರಿ ಕೂದಲನ್ನು ಎಣಿಸಿ ಪರಿಹರಿಸಿಕೊಳ್ಳಿ’ ಎನ್ನುತ್ತಾನೆ. ಆಗ ಪಂಡಿತ ಕಕ್ಕಾಬಿಕ್ಕಿಯಾಗಿ, ‘ಇಲ್ಲ ಇದು ಸರಿಯಾದ ಉತ್ತರವಲ್ಲ’ ಎನ್ನುತ್ತಾನೆ. ಯುವಕ ‘ಪಂಡಿತರೇ ಅನುಮಾನವಿದ್ದರೆ ಒಂದು ಸಲ ಸತ್ತವರನ್ನೂ ಹುಟ್ಟಿದವರನ್ನೂ ಲೆಕ್ಕ ಹಾಕಿಕೊಂಡು ಬನ್ನಿ, ಆಮೇಲೆ ಬೇಕಾದರೆ ಈ ಕುರಿ ಕೂದಲನ್ನು ಎಣಿಸಿ ಲೆಕ್ಕ ತಪ್ಪಾದರೆ ಆಗ ನೋಡೋಣ’ ಎಂದು ನಿಧಾನವಾಗಿಯೇ ಹೇಳುತ್ತಾನೆ. ಪಂಡಿತ ಇದು ಸಹ ಅಸಾದ್ಯ ಎಂದರಿತು ಈ ಉತ್ತರವೂ ಸರಿ ಎಂದು ಒಪ್ಪಿಕೊಳ್ಳುತ್ತಾನೆ.

ಇನ್ನು ಮೂರನೆ ಪ್ರಶ್ನೆಗೆ ಉತ್ತರ ಸುಲಭ ಎಂದು ಕುರಿಗೆ ಕಟ್ಟಿದ ಹಗ್ಗ ಕಿತ್ತು ಕುರಿಯಲ್ಲಿ ಎಷ್ಟು ಕೂದಲಿವೆಯೋ ಅಷ್ಟು ಜನ ಈಗ ಈ ಭೂಮಿಯ ಮೇಲೆ ನೆಲೆಸಿದ್ದಾರೆ. ಈ ಉತ್ತರವೂ ಸರಿಯಲ್ಲವೆಂದರೆ ಜಗದ ಜನರನ್ನು ಎಣಿಸಿಕೊಂಡು ಬನ್ನಿ ಎನ್ನುತ್ತಾನೆ. ಇದನ್ನು ಪಂಡಿತ ಒಪ್ಪಿಕೊಂಡು ಯುವಕನೆದುರು ಸೋಲನ್ನು ಒಪ್ಪಿಕೊಳ್ಳುತ್ತಾನೆ. ಈತನಕ ತಾನು ಪಡೆದ ಬಿರುದು ಬಾವಲಿಗಳನ್ನು ಯುವಕನಿಗೆ ನೀಡಿ ತಾನು ಸೋತೆ ಎಂದು ಹೇಳುತ್ತಾನೆ. ಇದನ್ನು ನೋಡಿದ ರಾಜನು ಆನಂದ ತುಂದಿಲನಾಗುತ್ತಾನೆ. ಆಗ ಯುವಕನನ್ನು ಇಡೀ ರಾಜ್ಯದ ಜನತೆ ಹಾಡಿ ಕೊಂಡಾಡುತ್ತದೆ.

ಯುವಕ ರಾಜ್ಯದ ಅರ್ಧ ಭಾಗವನ್ನು ನಿರಾಕರಿಸುತ್ತಾನೆ. ಯುವಕನ ಸಮಯಪ್ರಜ್ಞೆ, ಬುದ್ಧಿವಂತಿಕೆ, ಪ್ರಾಮಾಣಿಕತೆಯನ್ನು ನೋಡಿದ ಯುವರಾಣಿಗೆ ಯುವಕನಲ್ಲಿ ಪ್ರೇಮಾಂಕುವವಾಗುತ್ತದೆ. ಇದನ್ನು ತಿಳಿದು ರಾಜ ಯುವಕನಿಗೆ ತನ್ನ ಮಗಳ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡುತ್ತಾನೆ. ತನ್ನ ಬುದ್ಧಿವಂತಿಕೆಯಿಂದ ಕುರಿ ಕಾಯುವ ಯುವಕ ಮಗಧ ರಾಜ್ಯದ ಯುವ ರಾಜನಾಗುತ್ತಾನೆ.

2 ಕಾಮೆಂಟ್‌ಗಳು:

Unknown ಹೇಳಿದರು...

tumba chennagidhe kathe, samaya pragne ondu iddare enu bekadru sadhisabahudu

Unknown ಹೇಳಿದರು...

ಕತೆ ಚೆನ್ನಾಗಿದೆ,,,,