ಶುಕ್ರವಾರ, ಡಿಸೆಂಬರ್ 25, 2015

ಭಗವದ್ಗೀತೆಗೆ ಆಪರೇಷನ್ ಅಗತ್ಯವಿದೆಯೇ?

- ಸಿ.ಎಸ್.ದ್ವಾರಕಾನಾಥ್
ಈಚೆಗೆ ಮಂಗಳೂರಿನಲ್ಲಿ ನಡೆದ 'ಜನನುಡಿ' ಕಾರ್ಯಕ್ರಮದಲ್ಲಿ ದೇವನೂರು ಮಹದೇವರವರು ಮಾತನಾಡುತ್ತಾ "...ನಾನಿವತ್ತು ಭಗವತ್‍ಗೀತೆಯಲ್ಲಿನ ತಾರತಮ್ಯದ ರೋಗದ ಗಡ್ಡೆಗಳನ್ನು ಆಪರೇಷನ್ ಮಾಡಿ ಬಿಸಾಕಿ ಗೀತೆಯನ್ನು ಉಳಿಸಿಕೊಳ್ಳಬೇಕಿದೆ.." ಎಂದು ಮಾತನಾಡುತ್ತಾ ಕುವೆಂಪು ದರ್ಶನದ ಪ್ರತಿಮಾ ದೃಷ್ಟಿ ಪಡೆಯಬೇಕು ಎಂದು ಹೇಳುತ್ತಾ ಮುಂದುವರೆದು. "...ಪುರಾಣ ಕಾವ್ಯ ಹಿಡಿದುಕೊಂಡು ಗಾಂಧೀಜಿ ಬಳಿ ಹೋದರೆ ಪ್ರಾರ್ಥನೆ, ಭಜನೆ ಮಾಡುತ್ತಾರೆ, ಅಂಬೇಡ್ಕರ್ ವಾಸ್ತವ ಎಂಬಂತೆ ಮುರಿದು ವಿಶ್ಲೇಷಿಸುತ್ತಾರೆ, ಪೆರಿಯಾರ್ ಮುರಿದು ಎಸೆಯುತ್ತಾರೆ, ಕಾರ್ಲ್ ಮಾಕ್ರ್ಸ್ 'ಧರ್ಮದ ಜತೆ ಬೆರೆತ ಕಾವ್ಯ ಅಫೀಮು' ಎಂದು ಕಡೆಗಣಿಸುತ್ತಾರೆ. ಈ ಗುಂಪಲ್ಲಿ ಲೋಹಿಯಾರಿಗೆ ಮಾತ್ರ ಪುರಾಣ ಕಾವ್ಯ ಕಾಣುವ ಕಣ್ಣಿದೆ, ಕುವೆಂಪು ಅವರಂತೂ ಸಾಂಸ್ಕøತಿಕ ವಿವೇಕ ಅನ್ನಿಸಿಬಿಡುತ್ತಾರೆ..." ಎಂದು ವಿಶ್ಲೇಷಿಸುತ್ತಾರೆ!

ದೇವನೂರು ಮಹದೇವ ಅಂದರೆ ಈ ನಾಡಿನ 'ಸಾಕ್ಷಿಪ್ರಜ್ಞೆ' ಇವರು ಯಾವುದನ್ನೂ ಆಳವಾಗಿ ಯೋಚಿಸದೆ ಮಾತಾಡುವುದಿಲ್ಲ, ಬರೆಯುವುದಿಲ್ಲ, ಅಷ್ಟೇ ಏಕೆ ಅವರು ಭಾಷಣಕ್ಕೆ ಒಪ್ಪಿಕೊಳ್ಳುವುದೇ ಕಷ್ಟ ಆದರೆ ಒಮ್ಮೆ ಒಪ್ಪಿಕೊಂಡರೆ ಹೆಚ್ಚು ಮಾತಾಡದೆ ಕನಿಷ್ಟ ಐದು ನಿಮಿಷ ಮಾತನಾಡಲು ಒಂದು ವಾರ ತಾಲೀಮು ನಡೆಸುವಂತಿರುತ್ತಾರೆ, ಪ್ರತಿ ಅಕ್ಷರವನ್ನು, ಪ್ರತಿ ಶಬ್ದವನ್ನು ತೂಗಿ ಅಳೆದು ಮಾತನಾಡುತ್ತಾರೆ, ಅಂದರೆ ಅದರ ಅರ್ಥ ಮಾತು ಎಂದರೆ ಉಢಾಪೆಯಾಗಬಾರದು, ಲಘುವಾಗಬಾರದು ಎಂಬ ಕಾರಣಕ್ಕೆ ಅಷ್ಟೊಂದು ಎಚ್ಚರವಹಿಸುವರು. ಮಹದೇವ ಅವರು ಮಾತನಾಡಿದರೆ ಬಸವಣ್ಣನವರ ವಚನದ ಮುತ್ತಿನ ಹಾರದಂತಿರುತ್ತದೆ... ಮಹದೇವ ಮಾತನಾಡಿದರೆ ಸಾಕ್ಷಾತ್ ಮಲೆಮಹದೇಶ್ವರನೇ ಮಾತನಾಡಿದನೇನೋ ಎನ್ನುವಂತೆ ಈ ನಾಡು ಅವರತ್ತ ಕೇಳಿಸಿಕೊಳ್ಳುತ್ತದೆ.

ಭಗವತ್ಗೀತೆಯ ಬಗ್ಗೆ ಕೆಲವಾರು ತಿಂಗಳ ಹಿಂದೆ ಸಾಕಷ್ಟು ಚರ್ಚೆ, ಪ್ರತಿಭಟನೆ, ವಾದ, ವಿವಾದ ಎಲ್ಲವೂ ಆಗಿ, ತಣ್ಣಗಾಗಿದ್ದು ಆಯಿತು ಭಗವತ್ಗೀತೆ ಅಂದೂ Issue ಆಗಿರಲಿಲ್ಲ, ಇಂದು Issue ಅಲ್ಲ, ಅಂದರೆ ಜ್ವಲಂತ ಸಮಸ್ಯೆಯಲ್ಲ. ಈ ಸನ್ನಿವೇಶದಲ್ಲಿ ಮತ್ತೆ ಮಹದೇವರವರು ಭಗವತ್ಗೀತೆಯನ್ನು ತಂದು ಆಪರೇಷನ್ ಮಾಡಬೇಕೆನ್ನುತ್ತಾರೆ ಎಂಬುದು ನನ್ನಂತವರಿಗೆ ಗೊಂದಲಕ್ಕೀಡುಮಾಡಿದೆ! ಅದರಲ್ಲೂ ಗೊಳ್ವಾಲ್ಕರ್ ಕೈಯಲ್ಲೂ ಭಗವತ್ಗೀತೆಯಿದೆ, ಮಹಾತ್ಮ ಗಾಂಧೀಜಿಯವರ ಕೈಯಲ್ಲೂ ಭಗವತ್ಗೀತೆಯಿದೆ ದೇವನೂರರು ಇದರಲ್ಲಿ ಯಾವ ಭಗವತ್ಗೀತೆಗೆ ಶಸ್ತ್ರಕ್ರಿಯೆ ನಡಿಸಿ, ಯಾವ ಭಗವತ್ಗೀತೆಯ ರೋಗದ ಗಡ್ಡೆಗಳನ್ನು ಕತ್ತರಿಸಿ ಎಸೆದು, ಯಾವ ಭಗವತ್ಗೀತೆಯನ್ನು ಉಳಿಸಿಕೊಳ್ಳುತ್ತಾರೆ? ಎನ್ನುವುದು ಪ್ರಶ್ನೆ.

ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರಂತೂ ತಮ್ಮ Revolution and Counter Revolution in Ancient India ಎಂಬ ಕೃತಿಯಲ್ಲಿ ದೇವನೂರರು ಹೇಳುವಂತೆ ಭಗವತ್ಗೀತೆಯನ್ನು ಕೇವಲ ಮುರಿದು ವಿಶ್ಲೇಷಿಸುವುದು ಮಾತ್ರವಲ್ಲ, ಅದರ ಅಂತಿಮ ತೀರ್ಪನ್ನು ಕೂಡ ನೀಡುತ್ತಾ ಅದು Gospel Truth ಅಲ್ಲ ಎಂದು ತಣ್ಣಗೆ ನಿರಾಕರಿಸಿಬಿಡುತ್ತಾರೆ.

ಅಂಬೇಡ್ಕರ್‍ರವರ ವಿಸ್ತೃತ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ನೋಡಿದರೆ ಪೆರಿಯಾರ್ ಮುರಿದು ಎಸೆಯುವುದು ಕೂಡ ಅಕ್ಷರಶಃ ನಿಜ, ಕಾರ್ಲ್ ಮಾರ್ಕ್ಸ 'ಧರ್ಮದ ಜತೆ ಬೆರೆತ ಕಾವ್ಯ ಅಫೀಮು' ಎನ್ನುವುದೂ ಅಷ್ಟೇ ಸತ್ಯ. ಇನ್ನು ಗಾಂಧೀಜಿ ಅದನ್ನು ಭಜನೆ ಮಾಡಿದ್ದನ್ನು ಈ ದೇಶ ಈಗಾಗಲೇ ಕಂಡಿದೆ, ಇನ್ನು ಪುರಾಣ ಕಾವ್ಯ ಕಾಣುವ ಕಣ್ಣನ್ನು ದೇವನೂರರಲ್ಲಿರುವ ಲೋಹಿಯಾ ಮಾತ್ರ ಕಾಣಲು ಸಾಧ್ಯ, ಕುವೆಂಪು ಇದನ್ನು ಸಾಂಸ್ಕೃತಿಕ ವಿವೇಕ ಎಂದು ಸ್ವೀಕರಿಸುವ ಬಗ್ಗೆ ನಮ್ಮದೇ ಅನುಮಾನಗಳಿವೆ. ಇಷ್ಟಕ್ಕೂ ಇಷ್ಟೆಲ್ಲಾ ಗೊಂದಲಗೊಳಿಸಿದ ಭಗವತ್ಗೀ‍ತೆಯನ್ನು ಆರೋಗ್ಯಗೊಳಿಸಿ ಉಳಿಸಿಕೊಳ್ಳುವ ಜರೂರು ಯಾರಿಗಿದೆ? ಅರ್ಥವಾಗುತ್ತಿಲ್ಲ. ಹುಲುಮಾನವರಿಗಂತೂ ಇದ್ದಂತೆ ತೋರುತ್ತಿಲ್ಲ...

ಜನನುಡಿ ನಡೆದದ್ದು ಕೋಮುದಳ್ಳುರಿಯ ಮೇಲೆ ನಿಂತ ಮಂಗಳೂರಿನಲ್ಲಿ, ಅದನ್ನು ಸಂಘಟಿಸಿದ ಹುಡುಗರು ಪ್ರಗತಿಪರ, ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇಟ್ಟವರು, ಅವರ ಉದ್ದೇಶ ಇದ್ದದ್ದು ಕೋಮುವಾದದ ವಿರುದ್ಧ ಜನಾಭಿಪ್ರಾಯ ಮೂಡಿಸುವುದು, ಕೋಮು ಸೌಹಾರ್ಧತೆಯ ವಾತಾವರಣವನ್ನು ಸೃಷ್ಟಿಸುವುದಾಗಿತ್ತು, ಇಂತಹ ಕಾರ್ಯಕ್ರಮವನ್ನು ಉಧ್ಘಾಟಿಸಲು ಹೊರಟ ದೇವನೂರು ಅಲ್ಲಿರುವ ಜ್ವಲಂತ ಸಮಸ್ಯೆಯ ಬಗ್ಗೆ ಮಾತನಾಡುತ್ತಾರೆಂದು ಎಲ್ಲರೂ ನಿರೀಕ್ಷಿಸಿದ್ದರು. ಅಂದರೆ ಅವರು Issue ಬಗ್ಗೆ ಮಾತನಾಡುತ್ತಾರೆ ಎಂಬುದು, ಇಲ್ಲಿ ಭಗವತ್ಗೀತೆ Non-Issue.

ಒಂದು ಕಾಲದಲ್ಲಿ ಕಾಂಗ್ರೆಸ್‍ಮಯವಾಗಿದ್ದ ದಕ್ಷಿಣಕನ್ನಡ ಜಿಲ್ಲೆ ಕ್ರಮೇಣ ದಟ್ಟ ಕೋಮುವಾದಕ್ಕೇ ತಿರುಗಿದ್ದು ನಮ್ಮ ಕಣ್ಣಮುಂದಿದೆ. ಜಾತ್ಯಾತೀತ, ಮತಾತೀತ ಕಾಂಗ್ರೆಸ್ ನಾಯಕರ್ಯಾರೂ ಇದಕ್ಕೆ ಮುಖಾಮುಖಿಯಾಗಲಿಲ್ಲ, ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಿಲ್ಲ, ಬದಲಾಗಿ ದಕ್ಷಿಣಕನ್ನಡ ಜಿಲ್ಲೆಯನ್ನೇ ತೊರೆದು ಪಲಾಯನವಾಗಿಬಿಟ್ಟರು! ಹಾಗೆ ಪಲಾಯನವಾದವರು ಕಾಂಗ್ರೆಸ್‍ನಲ್ಲಿ 'ರಾಷ್ಟ್ರನಾಯಕ'ರಾಗಿಬಿಟ್ಟರು!! ಜನಾರ್ಧನ ಪೂಜಾರಿಯಂತವರನ್ನು ಹೊರತುಪಡಿಸಿದರೆ ಮಿಕ್ಕಂತೆ ವೀರಪ್ಪಮೊಯ್ಲಿ, ಮಾರ್ಗರೆಟ್ ಆಳ್ವ, ಆಸ್ಕರ್ ಪರ್ನಾಂಡಿಸ್ ರಿಂದ ಹಿಡಿದು ಬಿ.ಕೆ.ಹರಿಪ್ರಸಾದ್‍ವರೆಗೆ ಯಾರೂ ಸೀನಿಯರ್ ಕಾಂಗ್ರೆಸ್ ನಾಯಕರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಮುವಾದವನ್ನು ದಿಕ್ಕರಿಸಿ ನಿಲ್ಲಲೇಯಿಲ್ಲ.

ಈಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂದಷ್ಟು ಹೊಸ ತಲೆಮಾರಿನಿಂದಾಗಿ ಅಥವಾ ಸಂಘಪರಿವಾರದ ಅಕ್ರಮಗಳಿಂದಾಗಿ ಕಾಂಗ್ರೆಸ್ ಮತ್ತೆ ತಲೆಎತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಜನ ಮಂತ್ರಿಗಳಿದ್ದಾರೆ, ಕಾಂಗ್ರೆಸ್ ಸರ್ಕಾರವೇ ಆಳ್ವಿಕೆಯಲ್ಲಿದೆ ಆದರೆ ಇಲ್ಲಿ ಮತೀಯವಾದಿಗಳ ಮೇಲುಗೈ ಮಾತ್ರ ಹಾಗೆಯೇ ಮುಂದುವರೆದಿದೆ. ಕೊಬ್ರಾಪೋಸ್ಟ್ ನಂತಹ ಹಲವಾರು ಸಮೀಕ್ಷಕರು ಇಲ್ಲಿ ಸಮೀಕ್ಷೆ ಮಾಡಿ ಇಲ್ಲಿನ ಪೊಲೀಸ್ ವ್ಯವಸ್ಥೆಯಲ್ಲಿ ಶೇ.60 ಮತೀಯವಾದಿಗಳಿದ್ದಾರೆಂದು ಹೇಳಿದೆ ಆದರೆ ಇದನ್ನು ಸರಿಪಡಿಸಲು ಇನ್ನೂ ಈ 'ಜಾತ್ಯಾತೀತ' ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ?
ಕೋಮುಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು ಎಂದೇ ದೇವನೂರು ಮಹದೇವರಂತಹ ಅನೇಕ ಪ್ರಜ್ಞಾವಂತರು ಕಾಂಗ್ರೆಸ್ಸಿಗೆ ಬೆಂಬಲಿಸಿದರು. ಕಾಂಗ್ರೆಸ್ ಕೂಡ ಇದರ ಫಲಾಫಲವನ್ನು ಸಮರ್ಪಕವಾಗಿ ಪಡೆದುಕೊಂಡಿತು.

ಹಿಂದೆ ಲಂಕೇಶರು ತಮ್ಮ ಪತ್ರಿಕೆಯಲ್ಲಿ ಕೆಟ್ಟ ಸರ್ಕಾರದ ವಿರುದ್ಧ ಬರೆಯುತ್ತಾ ಉತ್ತಮ ಸರ್ಕಾರ ತರಲು ಪ್ರಯತ್ನಿಸುತ್ತಿದ್ದರು. ಮತ್ತೊಂದು ಹೊಸ ಸರ್ಕಾರ ಬಂದ ಮೇಲೆ ಆ ಸರ್ಕಾರಕ್ಕೆ Critical Support ನೀಡುತ್ತಾ ಟೀಕಿಸುತ್ತಲೇ ಆ ಸರ್ಕಾರವನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದರು. ಆದರೆ ಈಗಿನ ಪ್ರಜ್ಞಾವಂತರು ಹೊಸ ಸರ್ಕಾರ ಬರಲು ಕಾರಣರಾಗಿ ಸರ್ಕಾರ ಬಂದು ಮೂವತ್ತು ತಿಂಗಳಾದ ಮೇಲೂ ತೂಕಡಿಸುತಿದ್ದರೂ ಬೇಷರತ್ ಬೆಂಬಲ ನೀಡುತ್ತಲೇ ಇದ್ದಾರೆ! ದುರಂತವೆಂದರೆ ಪ್ರಗತಿಪರರು, ಪ್ರಜ್ಞಾವಂತರು ಎನಿಸಿಕೊಂಡ ಕಮ್ಯುನಿಸ್ಟರು, ಸಮಾಜವಾದಿಗಳು, ದಲಿತ ಹೋರಾಟಗಾರರು, ರೈತ ಹೋರಾಟಗಾರರು ಎಲ್ಲರೂ ಕೂಡಿಯೇ ಸರ್ಕಾರದೊಂದಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪಾಲ್ಗೊಳುತ್ತಲೇ ಈ ಸರ್ಕಾರದ ತಪ್ಪುಗಳಿಗೆ ಜಾಣಮೌನ ತೋರುತ್ತಾ ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸುವುದು ಯಾವ ನೈತಿಕತೆಯಿಂದ?

ದೇವನೂರರು ಮಾತನಾಡಿದರೆ ಒಂದು ಸೂಚನೆಕೊಟ್ಟರೆ ಇಡೀ ಸರ್ಕಾರವೇ ತಲೆಭಾಗಿ ಕೇಳಿಸಿಕೊಳ್ಳುತ್ತದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತೀಯವಾದದಂತಹ ಗಾಡ ಸಮಸ್ಯೆಯೊಂದಿಗೆ ಇಲ್ಲಿನ ಕೊರಗರ, ಮಲೆಕುಡಿಯರ, ಮುಖ್ರಿಯರ, ಮನ್ಸರ, ಬಿಲ್ಲವರ, ಬೆಸ್ತರ ಅನೇಕಾನೇಕ ಸಮಸ್ಯೆಗಳಿವೆ, ಇವನೆಲ್ಲಾ ಮತೀಯವಾದ ತನ್ನ ಕೇಸರಿ ಜಂಡಾದಲ್ಲಿ ಸುತ್ತಿ ಕಟ್ಟಿಟ್ಟಿದೆ. ಇದನ್ನು ಬಿಡುಗಡೆಗೊಳಿಸುವ, ಕೈಯಲ್ಲಿರುವ ಸರ್ಕಾರದ ಅಧಿಕಾರವನ್ನು ಚಲಾಯಿಸುವ ಮಾತುಗಳನ್ನು ಆಡಬೇಕಿತ್ತು ಎಂಬುದು ಎಲ್ಲರ ಆಶಯವಾಗಿತ್ತು.

ಇಂದು ನಮಗೆ ಸಂವಿಧಾನವಿದೆ, ಇದರಲ್ಲಿ ಸಮಾನತೆ, ಸಹೋದರತ್ವ, ಸಹಬಾಳ್ವೆ ಎಲ್ಲವೂ ಇದೆ. ಇದನ್ನು ಜಾರಿಗೊಳಿಸಲು ಸರ್ಕಾರ ಬದ್ದತೆ ತೋರಬೇಕು, ಇದನ್ನು ಗಟ್ಟಿಯಾಗಿ ಸರ್ಕಾರಕ್ಕೆ ಹೇಳುವ ಛಾತಿ ದೇವನೂರುರಂತವರಿಗೆ ಮಾತ್ರ ಸಾಧ್ಯ.

ಭಗವತ್ಗೀತೆಯನ್ನು ಉಳಿಸಿಕೊಳ್ಳುವ ಮಾತು ದೇವನೂರರ ಪ್ರಕಾರ ಸಾಂಸ್ಕೃತಿಕ ವಿವೇಕವಿರಬಹುದು. ಇದು ಎಂದಾದರು ಜನಸಾಮಾನ್ಯರ ಸ್ವತ್ತಾಗಿದ್ದರೆ, ಒಡವೆಯಾಗಿದ್ದರೆ ಅದನ್ನು ಉಳಿಸಿಕೊಳ್ಳುವಂತ ಮಾತನ್ನು ಜನಸಾಮಾನ್ಯರೇ ಆಡುತಿದ್ದರೇನೋ?

ಅಂದು ಅಂಬೇಡ್ಕರ್ ಇಲ್ಲದ 'ಗಾಂಧಿ' ಚಿತ್ರನೋಡಬಾರದೆಂದು ದಲಿತ ಸಂಘರ್ಷ ಸಮಿತಿ ತೀರ್ಮಾನಿಸಿದಾಗ, ಕದ್ದು ಗಾಂಧಿ ಚಿತ್ರನೋಡಿ 'ಲಂಕೇಶ್ ಪತ್ರಿಕೆ'ಯಲ್ಲಿ ಬರೆದ ದೇವನೂರು ನಮ್ಮ ಹೀರೋ ಆಗಿದ್ದರು! ಆ ವಯಸ್ಸಿನಲ್ಲಿ ಆ ಮನಸ್ಥಿತಿಯಲ್ಲಿ ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದ ನಮ್ಮ 'ಸ್ಪೃಶ್ಯ' ಮನಸ್ಸುಗಳಿಗೆ ಸಹಜವಾಗಿಯೇ ದೇವನೂರು ಹತ್ತಿರವಾಗುತ್ತಿದ್ದರು, ಆದರೆ ಇಂದು...?

ದೇವನೂರರನ್ನು ಸೇರಿಸಿದಂತೆ ನಾವೆಲ್ಲಾ ಯಾಕೆ ಆಗಾಗ ಇಂತಹ ಮಾತಾಡುತ್ತೇವೆ? ಜನಮತದಲ್ಲಿ ದೇವನೂರರು ಮಾತಾಡಲು ಆರಂಭಿಸಿದಾಗ ಆಡಿದ ಮಾತುಗಳನ್ನು ದೇವನೂರರಿಗೇ ನೆನಪಿಸುತ್ತಾ ಮುಗಿಸುವೆ....

"ನಾನು ಗಮನಿಸಿದಂತೆ ಈಗೀಗ ಎಲ್ಲರೂ ಚೆನ್ನಾಗಿ ಮಾತಾಡುತ್ತಿದ್ದಾರೆ. ನಾನೂ ಕೂಡ! ಆದರೆ ನಮ್ಮ ಮಾತಿನ ಆಶಯಗಳು ಏನಿದೆಯೋ ಅದಕ್ಕೆ ವಿರುದ್ಧವಾದ ವಿದ್ಯಮಾನಗಳು ಸಮಾಜದಲ್ಲಿ ಹೆಚ್ಚುತ್ತಲೇ ಇವೆ. ಹಾಗಾದರೆ ಎಲ್ಲಿ ತಾಳ ತಪ್ಪುತ್ತಿದೆ? ಸಮಾನತೆ ಆಶಯದ ನಮ್ಮ ಮಾತುಗಳು ಕೇವಲ ಕೌಶಲ (Skill) ಆಗಿಬಿಟ್ಟಿದೆಯಾ? ಅಥವಾ ನಮ್ಮ ಹುಡುಕಾಟ ಸ್ಥಗಿತಗೊಂಡು ನಾವು ಪೀಠಸ್ಥರಾಗಿ ಪ್ರವಚಕರಂತೆ ರಂಜನೆ ಕೊಡುತ್ತಿದ್ದೇವೆಯಾ? ಇಲ್ಲಿ ನಿಂತು ನಮ್ಮನ್ನೂ ನಮ್ಮ ಮಾತುಗಳನ್ನೂ ನಾವೀಗ ನೋಡಿಕೊಳ್ಳಬೇಕಾಗಿದೆ... " 

ಸಾಂಸ್ಕೃತಿಕ ಕಣ್ಣಿಗಾಗಿ ಒಂದು ತಪಸ್ಸು


ಸೌಜನ್ಯ: ಪ್ರಜಾವಾಣಿ

ನಾನು ಗಮನಿಸಿದಂತೆ ಈಗೀಗ ಎಲ್ಲರೂ ಚೆನ್ನಾಗಿ ಮಾತಾಡುತ್ತಿದ್ದಾರೆ. ನಾನೂ ಕೂಡ! ಆದರೆ ನಮ್ಮ ಮಾತಿನ ಆಶಯಗಳು ಏನಿದೆಯೋ ಅದಕ್ಕೆ ವಿರುದ್ಧವಾದ ವಿದ್ಯಮಾನಗಳು ಸಮಾಜದಲ್ಲಿ ಹೆಚ್ಚುತ್ತಲೇ ಇವೆ. ಹಾಗಾದರೆ ಎಲ್ಲಿ ತಾಳ ತಪ್ಪುತ್ತಿದೆ? ಸಮಾನತೆ ಆಶಯದ ನಮ್ಮ ಮಾತುಗಳು ಕೇವಲ ಕೌಶಲ (skill) ಆಗಿಬಿಟ್ಟಿದೆಯಾ? ಅಥವಾ ನಮ್ಮ ಹುಡುಕಾಟ ಸ್ಥಗಿತಗೊಂಡು ನಾವು ಪೀಠಸ್ಥರಾಗಿ ಪ್ರವಚಕರಂತೆ ರಂಜನೆ ಕೊಡುತ್ತಿದ್ದೇವೆಯಾ? ಇಲ್ಲಿ ನಿಂತು ನಮ್ಮನ್ನೂ ನಮ್ಮ ಮಾತುಗಳನ್ನೂ ನಾವೀಗ ನೋಡಿಕೊಳ್ಳಬೇಕಾಗಿದೆ.

ಇತ್ತೀಚೆಗೆ ಸಾಂಸ್ಕೃತಿಕ ವಲಯದಲ್ಲಿ ಎರಡು ಸಂಗತಿಗಳು ಹೆಚ್ಚು ಚರ್ಚಿತವಾಯ್ತು. ಒಂದು ರಾಮಾಯಣದ ಶಂಬೂಕ.  ಇನ್ನೊಂದು ಭಗವದ್ಗೀತೆ. ನಾವು ಯಾರೂ ಪ್ರಶ್ನೆ ಕೇಳಿಕೊಳ್ಳಲಿಲ್ಲ! ವಾಲ್ಮೀಕಿ ಸ್ವಯಂ ಶೂದ್ರ. ಆತ ತಾನು ಬರೆದ ಕಾವ್ಯದಲ್ಲಿ ತಾನೇ ತಪಸ್ಸು ಮಾಡಬಾರದು ಎಂದು ಬರೆದುಕೊಳ್ಳಲು ಸಾಧ್ಯವೆ? ನಾವು ಪ್ರಶ್ನಿಸಿಕೊಳ್ಳಲಿಲ್ಲ. ಇಂಥವುಗಳನ್ನು ಹೇಗೆ ಸ್ವೀಕರಿಸಬಹುದೆನ್ನುವುದಕ್ಕೆ ‘ಶೂದ್ರ ತಪಸ್ವಿ’ ನಮ್ಮೊಳಗೇ ಇದೆ. ಜೊತೆಗೆ, ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ಯಲ್ಲಿ ಕುವೆಂಪು ನೋಟ ಹೀಗಿದೆ:

‘ನಿಮ್ಮ ಮನೆಯಲ್ಲಿ ನಿಮ್ಮ ಅಜ್ಜಿ ಹಾಕುತ್ತಿದ್ದಂತಹ ಚಿನ್ನದ ಆಭರಣಗಳು, ಬುಗುಡಿಯೋ ಬೆಂಡೋಲೆಯೋ ಅವೆಲ್ಲ ಇರುತ್ತವಲ್ಲ, ಆ ಆಭರಣಗಳನ್ನೆಲ್ಲ ನಿಮ್ಮ ಹೆಂಡತಿ ತೆಗೆದು ಒಲೆಗೆ ಹಾಕಿದರೇನು? ಬಿಸಾಕಿದರೇನು?... ಅದನ್ನೆಲ್ಲ ಕರಗಿಸಿ ಆ ಚಿನ್ನಾನ ನಮ್ಮ ಇಷ್ಟಕ್ಕೆ ಅನುಸಾರವಾಗಿ ನಾವು ಬೇರೆ ರೀತಿಯಲ್ಲಿ ಆಭರಣ ಮಾಡಿಸಿಕೊಂಡು ಉಪಯೋಗಿಸುತ್ತಿದ್ದೇವೆ. ಅಂದರೆ, ಆಭರಣದ ರೂಪ ಯಾವುದಾದರೂ ಇರಲಿ ಆಭರಣದ ವಸ್ತು ಇದೆಯಲ್ಲಾ ಅದು ತುಂಬಾ ಬೆಲೆಯುಳ್ಳದ್ದು, ಅದನ್ನು ಎಸೆದರೆ ಮೂರ್ಖರಾಗುತ್ತೀರಿ. ಹಾಗೆಯೆ ರಾಮಾಯಣ ಮಹಾಭಾರತ ಇತರ ಯಾವುದೇ ಕತೆಗಳಾಗಿರಲಿ ಅವನ್ನು ಬಿಸಾಡುವುದಲ್ಲ, ಅವನ್ನು ಕರಗಿಸಿ ನಮ್ಮ ಹೊಸ ಧ್ಯೇಯ ಹೊಸ ಇಷ್ಟಗಳಿಗೆ ಅನುಸಾರವಾಗಿ ಅವುಗಳನ್ನು ನೀವು ನಿಮ್ಮ ಸಾಹಿತ್ಯದಲ್ಲಿ ಎರಕ ಹೊಯ್ಯಬೇಕು.

ಏಕೆಂದರೆ ಆ ಎರಕಗಳ ಮೂಲಕ, ಆ ಕಥಾವ್ಯಕ್ತಿಗಳ ಮೂಲಕ ನೀವು ನಿಮ್ಮ ಧ್ಯೇಯಗಳನ್ನು ಪ್ರಸಾರ ಮಾಡಲು ತುಂಬಾ ಸುಲಭವಾಗುತ್ತದೆ. ಬೇಗ ಬೇಗ ಹಿಡಿಸುತ್ತದೆ ಜನಗಳಿಗೆ’ ಈ ಮಾತುಗಳನ್ನು ನಾವು ಆಲಿಸಲಿಲ್ಲ. ಹಾಗೆ ಕುವೆಂಪು ಗೀತೆಯನ್ನೂ ಒಪ್ಪಿಕೊಳ್ಳುತ್ತಾರೆ. ಮನಃಶಾಸ್ತ್ರ ಪ್ರಾಕೃತಿಕ ಎಂಬಂತೆ ಇಡೀ ಜಗತ್ತಿಗೇ ಅನ್ವಯಿಸುತ್ತಾರೆ. ಹಿಂದೂಗಳ ವರ್ಣ ಜಾತಿವರ್ಗಗಳಿಗೆ ಹುಟ್ಟನ್ನು ಅನ್ವಯಿಸಿ ಭಗವದ್ಗೀತೆ ಹಾಡುವವರಿಗೆ ಕುವೆಂಪು ಹೀಗೆ ಕೇಳಬೇಕೆಂದು ಕರೆಕೊಡುತ್ತಾರೆ:

‘ಹಿಂದೂಗಳಿಗೆ ಮಾತ್ರ ಎಂದು ಅವರು ಹೇಳಿದರೆ ನೀವು ಹೇಳಬೇಕಾಗುತ್ತದೆ: ‘‘ಹಾಗಾದರೆ ನಿಮ್ಮ ಶ್ರೀಕೃಷ್ಣ ಭಗವಂತನಲ್ಲ, ಅವನೂ ಒಬ್ಬ ಬ್ರಾಹ್ಮಣಪರ ಆಚಾರ್ಯನಾಗುತ್ತಾನೆ. ಅಲ್ಲದೆ, ರಣರಂಗದ ಮಧ್ಯೆ ಶ್ಲೋಕ ರಚಿಸಿ ಹದಿನೆಂಟು ಅಧ್ಯಾಯ ಪದ್ಯದಲ್ಲಿ ಹೇಳುವುದಕ್ಕೆ ಅದೇನು ಯುದ್ಧರಂಗವೊ ಭೋಜನಕೂಟವೊ? ಯಾವನೊ ಪದ್ಯ ರಚನಾ ಸಾಮರ್ಥ್ಯವುಳ್ಳ ಹಾರುವನೆ ಬರೆದಿರಬೇಕು ಗೀತೆಯನ್ನು. ಇಂತಹ ಅವಿವೇಕವನ್ನು ನಾವು ಇನ್ನು ಮುಂದೆ ಸಹಿಸುವುದಿಲ್ಲ. ಒಂದು ವೇಳೆ, ನೀವು ಹೇಳುವಂತೆ ವರ್ಣ ಜಾತಿ ವರ್ಗಗಳನ್ನು ನಿಮ್ಮ ಆ ದೇವರೇ ಸೃಷ್ಟಿ ಮಾಡಿದ್ದರೂ ಅವನ್ನೆಲ್ಲ ಇಂದು ಸರ್ವೋದಯಕ್ಕಾಗಿ ನಾವು ಧ್ವಂಸ ಮಾಡಬೇಕಾಗುತ್ತದೆ. ಕಾಲರಾ, ಪ್ಲೇಗು, ಮಲೇರಿಯಾಗಳನ್ನು ದೇವರೇ ಸೃಷ್ಟಿ ಮಾಡಿದ್ದು ಅಂತಾ ಹೇಳಿ ನಾವು ಸುಮ್ಮನಿರುವುದಕ್ಕೆ ಆದೀತೆ?

ಅನಾರೋಗ್ಯಕರವೂ ಮೃತ್ಯುಕರವೂ ಆಗಿರುವ ಅವನ್ನೆಲ್ಲ ನಾಶಪಡಿಸಿ ನಮ್ಮ ಆರೋಗ್ಯವನ್ನು ನಾವು ರಕ್ಷಿಸಿಕೊಳ್ಳುವಂತೆ ವರ್ಣ ಜಾತಿ ವರ್ಗ ಮೊದಲಾದ ದುರ್ಭಾವನೆಗಳನ್ನೆಲ್ಲ  ಧ್ವಂಸಮಾಡಿ ಸಮಾಜ ಕ್ಷೇಮವನ್ನು ಸಾಧಿಸಿಯೆ ಸಾಧಿಸುತ್ತೇವೆ’’  ಎಂದು’. ಕುವೆಂಪು ಅವರ ಕುಮ್ಮಕಿನ ಮೇಲೆ ನಾನೂ ಗೀತೆ ಮೇಲೂ ಸ್ವಲ್ಪ ಕಣ್ಣಾಡಿಸಿದೆ. ಅದರೊಳಗೆ ಬುದ್ಧಿಸಂನ ಅಂಶಗಳೂ ಸಾಕಷ್ಟು ಇವೆಯಲ್ಲಾ ಅಂತ ಅನ್ನಿಸತೊಡಗಿತು. ಆಳಕ್ಕೆ ಹೋಗುವಷ್ಟು ಪಾಂಡಿತ್ಯ ನನಗಿಲ್ಲವಾಗಿ ಅರ್ಧಕ್ಕೆ ಕೈಬಿಟ್ಟೆ. ಆದರೆ ಇಲ್ಲಿ ಈ ಗೀತೆಯೊಳಗೆ ಏನೋ ಒಂದು ವಂಚನೆ ನಡೆದಿದೆ ಎಂಬ ಅನುಮಾನ ಹೆಚ್ಚತೊಡಗಿತು.

ಭಾರತಕ್ಕೆ ದೇವರು ಮುಖ್ಯವಲ್ಲ, ಜಾತಿವರ್ಣವೇ ಮುಖ್ಯವೆನ್ನುವುದಕ್ಕೆ ದಯಾಪವಾರ್‌ರ ಆತ್ಮಕಥೆಯಲ್ಲಿ ಒಂದು ಘಟನೆ ಒಳ್ಳೆಯ ಉದಾಹರಣೆಯಾಗುತ್ತದೆ-  ಆಗಿನ್ನೂ ದಯಾಪವಾರ್ ಚಿಕ್ಕ ಹುಡುಗ. ತನ್ನ ಅಜ್ಜಿಯ ಮನೆಗೆ ಬಂದಿರುತ್ತಾನೆ. ಅಂದು ಆ ಊರಲ್ಲಿ ದೇವಸ್ಥಾನದೊಳಗೆ ಏನೋ ಗದ್ದಲ ಗಲಾಟೆ ನಡೆಯುತ್ತಿರುತ್ತದೆ. ಕುತೂಹಲಗೊಂಡ ದಯಾಪವಾರ್ ತನ್ನನ್ನು ಮರೆತು ನಿಧಾನಕ್ಕೆ ದೇವಸ್ಥಾನದ ಒಳ ಹೋಗಿ ನೋಡಿದರೆ, ಅಲ್ಲಿ ತಲೆಕೆಟ್ಟ ಸವರ್ಣೀಯ ಹುಚ್ಚನೊಬ್ಬ ದೇವರ ವಿಗ್ರಹಕ್ಕೆ ಚಪ್ಪಲಿಯಲ್ಲಿ ಬಾರಿಸುತ್ತ ಚಪ್ಪಲಿ ಸೇವೆ ಮಾಡುತ್ತಿರುತ್ತಾನೆ. ಅಲ್ಲಿ ನೆರೆದ ಜನಸ್ತೋಮ ಬೆರಗಾಗಿ ಸುಮ್ಮನೆ ನೋಡುತ್ತ ನಿಂತಿರುತ್ತದೆ.

ಅಷ್ಟರಲ್ಲಿ ಅಲ್ಲಿದ್ದ ಯಾರೋ ಒಬ್ಬ  ಅಸ್ಪೃಶ್ಯ ಮಹರ್ ಬಾಲಕ ದೇವಸ್ಥಾನದ ಒಳಕ್ಕೆ ಬಂದಿರುವುದನ್ನು ಗಮನಿಸಿಬಿಟ್ಟಾಗ ಆ ದೇವರಿಗೆ ಚಪ್ಪಲಿಸೇವೆ ನೋಡುತ್ತ ನಿಂತಿದ್ದ ಆ ಜನಸ್ತೋಮ, ಅಸ್ಪೃಶ್ಯ ಬಾಲಕನ ದೇವಸ್ಥಾನದ ಪ್ರವೇಶದಿಂದಾಗಿ ದೇವಾಲಯ ಅಪವಿತ್ರವಾಯಿತೆಂದು ಕುಪಿತರಾಗಿ ಆ ಬಾಲಕನಿಗೆ ಹೊಡೆದುಬಡೆದು ಹೊರಹಾಕುತ್ತಾರೆ. ಯಾರಿಗೆ ಹುಚ್ಚು? ಇದು ಜಾತೀಯ ಹುಚ್ಚು ಭಾರತವಲ್ಲವೆ? ಭಾರತಕ್ಕೆ, ಹುಟ್ಟಿನಿಂದ ನಿರ್ಧರಿತವಾಗುವ ಜಾತಿ ಚಾತುರ್ವರ್ಣವೇ ಬಲಾಢ್ಯರ ಧರ್ಮ; ಇದನ್ನು  ಉಳಿಸಿಕೊಳ್ಳುವುದಕ್ಕಾಗಿ ಪಾಪ ದೇವರನ್ನೂ ಸೇವಕರನ್ನಾಗಿ ಮಾಡಿಟ್ಟುಕೊಂಡಿದ್ದಾರೆ. ಇದನ್ನೆಲ್ಲ  ಒಪ್ಪದ ಬುದ್ಧಿಸಂ ಪರದೇಶಿ ಆಗಬೇಕಾಯ್ತು. ಜೈನ, ಲಿಂಗಾಯತಗಳು ಜಾತಿಯಾಗಿ ಹಿಡ ಮಾಡಿಸಿಕೊಂಡು ಇಲ್ಲಿ ಉಳಿದವು.

ಈಗ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳ ಬಗ್ಗೆ ಅಸಹನೆ ಇರುವುದಕ್ಕೂ ಅವು ಭಾರತೀಕರಣವಾಗಿಲ್ಲ ಅರ್ಥಾತ್ ಜಾತಿಯಾಗಿ ರೂಪಾಂತರವಾಗಿಲ್ಲ ಎಂಬುದೂ ಕಾರಣವಾಗಿರಬಹುದು. ಹಾಗೇ ದಲಿತರು ನಾಳೆ ಬುದ್ಧಿಸಂ ಅನ್ನು ಅಪ್ಪಿಕೊಂಡು ಜಾತಿಯಿಂದ ಧರ್ಮಕ್ಕೆ ಬಡ್ತಿ ಪಡೆದು ಭಾರತದಲ್ಲಿ ಧರ್ಮ ಉಳಿದುಬಿಡುತ್ತದೆ ಎಂಬ ಭೀತಿಯೂ ದಲಿತರ ಬಗ್ಗೆ ಇರುವ ಅಸಹನೆಗೆ ಕಾರಣವಾಗಿರಬಹುದು. ಬಲಾಢ್ಯ ಭಾರತೀಯ ಮನಸ್ಸು ಹೀಗಿರುವಾಗ ಗೀತೆಯೊಳಗೆ ಜರುಗಿರಬಹುದಾದ ವಂಚನೆ ಏನಿರಬಹುದು? ಭಾರತದಿಂದ ಬುದ್ಧಿಸಂ ಅನ್ನು ಹೊಡೆದು ಓಡಿಸಿದ ಮೇಲೆ ಆಗ ಬುದ್ಧಿಸಂನಲ್ಲಿ ಪ್ರಚಲಿತವಿದ್ದ ಅದರ ಉನ್ನತ ಮೌಲ್ಯಗಳನ್ನೇ ಹುಟ್ಟಿನಿಂದ ನಿರ್ಧರಿತವಾಗುವ ಜಾತಿವರ್ಣ ರೋಗಗಳನ್ನು ಎತ್ತಿಹಿಡಿಯುವುದಕ್ಕೆ ಗೀತೆಯೊಳಗೆ ಬುದ್ಧಿಸಂನ್ನು ಬಲಿ ಕೊಟ್ಟಿರಬಹುದಾ?

ಭಾರತದ ತುಂಬ ಬಲಿಕತೆಗಳೇ ತುಂಬಿವೆ. ಹಾಗಾಗೆ ಇಲ್ಲಿ ಸೊಳ್ಳೆಯಷ್ಟು ಇರುವವರು ಆನೆಯಷ್ಟು ಇರುವವರ ಜುಟ್ಟು ಹಿಡಿದು ಆಳ್ವಿಕೆ ನಡೆಸುತ್ತಿದ್ದಾರೆ. ಆಯ್ತು, ಈಗ ನಾವೇನು ಮಾಡಬೇಕು? ಜಾತಿವರ್ಣದ ತಾರತಮ್ಯ ರೋಗದ ಗೆಡ್ಡೆಗಳಿಗೆ ಆಪರೇಷನ್ ಮಾಡಿ ಬಿಸಾಕಿ ಬುದ್ಧನಂಶದಿಂದ ಮನುಷ್ಯತ್ವಗೊಳಿಸಿ ಗೀತೆಯನ್ನು ಉಳಿಸಿಕೊಳ್ಳಬೇಕಾಗಿದೆ. ಕುವೆಂಪು ದರ್ಶನದ ಪ್ರತಿಮಾದೃಷ್ಟಿ ಪಡೆದರೆ ನಮಗೂ ಸಾಧ್ಯವಾಗುತ್ತದೆ. ಆದರೆ ನಾವು ಪ್ರತಿಕೃತಿ ದೃಷ್ಟಿಗೆ ಕಟ್ಟುಬಿದ್ದು ಒದ್ದಾಡುತ್ತಿದ್ದೇವೆ. ಇಲ್ಲಿ ಕುವೆಂಪು ಅವರನ್ನು ಸಾರಾಸಗಟು ಒಪ್ಪಬೇಕಾಗಿಲ್ಲ. ಅವರ ಪ್ರತಿಮಾದೃಷ್ಟಿಯನ್ನು ಪಡೆಯುವುದು ಮುಖ್ಯ ಎಂದಷ್ಟೇ ಹೇಳುತ್ತಿದ್ದೇನೆ.

ಪಟ್ಟಭದ್ರರಿಗೆ ಪ್ರತಿಕ್ರಿಯೆ ತೋರಿಸುತ್ತಾ ನಮ್ಮ ಆಯಸ್ಸನ್ನು ವ್ಯಯ ಮಾಡುವುದರ ಬದಲು ಸಮುದಾಯದ ಮನಸ್ಸಿನೊಡನೆ ಕೂಡಿಕೆಯಾಗಿ ನಮ್ಮ ಮಾತು ಸಮುದಾಯದ ಮಾತೂ ಆಗುವಂತಾಗಲು ಏನೇನು ಅಂಥ ಹುಡುಕಬೇಕಾಗಿದೆ. ಆಗ, ನಡೆಯೂ ಸಿಗಬಹುದು. ಆಗ, ಒಂದು ಸಣ್ಣ ಕ್ರಿಯೆಯೂ ದೊಡ್ಡ ಪರಿಣಾಮ ಉಂಟುಮಾಡಬಹುದು. ಈ ಪ್ರತಿಭಾ ಬಂಡವಾಳ ನಮ್ಮಲ್ಲಿ ಇದ್ದಿದ್ದರೆ? ಆ ಪ್ರತಿಮಾ ದೃಷ್ಟಿಯಲ್ಲಿ ಹುಟ್ಟಬಹುದಾದ ಮೂರಂಕದ ಒಂದು ನಾಟಕದ ದೃಶ್ಯಗಳು  ಸ್ಥೂಲವಾಗಿ ಹೀಗೂ ಇರಬಹುದಲ್ಲಾ?- (1) ಸ್ವಯಂ ಶ್ರೀರಾಮಚಂದ್ರನೇ ಸಾಕ್ಷಾತ್ ಬಂದು ‘ಅಯ್ಯ ಇದು ನಾನು ಹುಟ್ಟಿದ ಸ್ಥಳವಲ್ಲ’ ಎಂದು ಹೇಳುವ ದೃಶ್ಯ (2) ಆ ಭಕ್ತರು ಶ್ರೀರಾಮಚಂದ್ರನ ಪುರಾವೆ ಸಿಗದಂತೆ ಕತ್ತುಹಿಸುಕುತ್ತಿರುವ ದೃಶ್ಯ (3) ಬೀದಿಗಳಲ್ಲಿ ಅಧಿಕಾರಕ್ಕಾಗಿ ಸಮುದಾಯಗಳ ನಡುವೆ ದ್ವೇಷದ ಬೆಂಕಿ ಹಚ್ಚುತ್ತಿರುವ ಗದ್ದಲದ ದೃಶ್ಯ- ಕೇವಲ ಮೂರಂಕದ ಅವತಾರದ ನಾಟಕ. ಬೇಕಾದರೆ ಬೇಕಾದನ್ನು ಸೇರಿಸಿಕೊಳ್ಳಿರಿ.

ಸೂಫಿ ಸಂತನೊಬ್ಬ  ಶ್ರೀರಾಮಚಂದ್ರನನ್ನು ಬಚಾವು ಮಾಡುವ ದೃಶ್ಯ ಬಂದರೂ ಅದಕ್ಕೇನು ಅಭ್ಯಂತರ? ಒಟ್ಟಿನಲ್ಲಿ ಇಷ್ಟೇ-ನಾನು ನಿಮ್ಮ ಮನಸ್ಸಿನ ಕೊಳಕ್ಕೆ ನನ್ನ ಗೊಂದಲದ ಕಲ್ಲುಗಳನ್ನು ಎಸೆದು ಅಲೆಗಳನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವೆ. ಅಲೆಗಳು ಉಂಟಾದರೆ ನಾನು ಕಲ್ಲು ಎಸೆದದ್ದಕ್ಕೂ ಸಾರ್ಥಕ. ಇರಲಿ, ಸಂಸ್ಕೃತ ವಿದ್ವಾಂಸ ಪ್ರೊ. ಷೆಲ್ಡಾನ್ ಪೋಲಾಕ್ ಅವರು ಒಂದು ಸಲ ‘ಮಹಾಭಾರತ ರಾಮಾಯಣಗಳನ್ನು ನೀನು ಹೇಗೆ ಸ್ವೀಕರಿಸುತ್ತೀಯಾ?...’ ಎಂದು ಕೇಳಿದರು. ನಾನೆಂದೆ ‘ಭಾರತದ ಸಮುದಾಯದ ಮನಸ್ಸನ್ನು ಹೊರತೆಗೆದು ಚಾಪೆಯಂತೆ ಹಾಸಿಬಿಟ್ಟರೆ, ಅಲ್ಲಿ ಅರ್ಧಕ್ಕೂ ಹೆಚ್ಚಾಗಿ ರಾಮಾಯಣ ಮಹಾಭಾರತಗಳು ಒಂದಲ್ಲಾ ಒಂದು ರೀತಿಯಲ್ಲಿ ಮಿಳಿತಗೊಂಡಿವೆ’ ಎಂದೆ. ಈ ಪುರಾಣ ಕಾವ್ಯಗಳ ಗಣಿಯಿಂದ ಅದಿರು ಅಗೆದು ಅಲ್ಲಿರಬಹುದಾದ ಚಿನ್ನ ಸೋಸಿ ಒಡವೆ ಮಾಡಿಕೊಳ್ಳದ ನಾವು- ಇಲ್ಲದವರು (Have-nots) ಆಗಿಬಿಟ್ಟಿದ್ದೀವಾ?

ಅದಕ್ಕಾಗೆ ಎಷ್ಟೆಷ್ಟು ಚೆನ್ನಾಗಿ ಮಾತಾಡಿದರೂ ಅಷ್ಟಷ್ಟೆ ಅದಕ್ಕೆ ವಿರುದ್ಧವಾದ ವಿದ್ಯಮಾನಗಳು ಸಮಾಜದಲ್ಲಿ ಜರುಗುತ್ತಿರಬಹುದೇ? ಸಮುದಾಯದ ಮನಸ್ಸಿನೊಡನೆ ನಾವು ಕೂಡಿಕೆಯಾಗಿ ಮಥಿಸಿ ಮರುಹುಟ್ಟು ಪಡೆಯದಿದ್ದರೆ, ನಾವು ಸಮುದಾಯದಿಂದಲೇ ಹೊರಹಾಕಲ್ಪಟ್ಟವರು (Dropouts) ಆಗಿಬಿಡಬಹುದಾ? ಆತಂಕದಿಂದ ಈ ಸಮಸ್ಯೆಗೆ ಪುರಾಣ ಕಾವ್ಯ ಹಿಡಿದುಕೊಂಡು ನಮ್ಮ ಪೂರ್ವಿಕರುಗಳಾದ ಗಾಂಧೀಜಿ ಬಳಿಗೆ ಹೋದರೆ?- ಅವರು ಪ್ರಾರ್ಥನೆ ಭಜನೆ ಮಾಡಿಬಿಡುತ್ತಾರೆ. ಅಂಬೇಡ್ಕರ್?- ವಾಸ್ತವ ಎಂಬಂತೆ ವಿಶ್ಲೇಷಣೆ ಮಾಡುತ್ತಾರೆ. ಇನ್ನು ಪೆರಿಯಾರ್?- ಮುರಿದು ಎಸೆಯುತ್ತಾರೆ. ಕಾರ್ಲ್‌ಮಾರ್ಕ್ಸ್‌ಗೆ ಬಂದರೆ ಈ ವಿಚಾರದಲ್ಲಿ ಆತ ಮಹಾಮಡಿವಂತ, ಧರ್ಮದ ಜೊತೆ ಬೆರೆತ ಕಾವ್ಯ ಅಫೀಮು ಅಂತ ಆ ಕಡೆ ತಲೆಹಾಕಿಯೂ ಮಲಗುವುದಿಲ್ಲ. ಈ ಗುಂಪಲ್ಲಿ ಲೋಹಿಯಾರಿಗೆ ಮಾತ್ರ ಪುರಾಣಕಾವ್ಯ ಕಾಣುವ ಕಣ್ಣಿದೆ. ಕುವೆಂಪು ಅವರಂತೂ ನಮ್ಮ ಸಾಂಸ್ಕೃತಿಕ ವಿವೇಕ ಅನ್ನಿಸಿಬಿಡುತ್ತಾರೆ.

ಈ ವಿವೇಕ ಇದ್ದುದರಿಂದಲೇ ಕುವೆಂಪು ನಾವೆಲ್ಲರೂ ಹುಟ್ಟುವ ಮುಂಚೆಯೇ 1944ರಲ್ಲಿ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ನಾಡಿಗೆ ಕರೆ ಕೊಡುವ ಸಂದರ್ಭದಲ್ಲಿ ಅವರು ಹೇಳುತ್ತಾರೆ - ‘‘‘ದೇವಾಲಯ ಪ್ರವೇಶ’ದ ಪ್ರಶ್ನೆ ಮುಂತಾದವುಗಳನ್ನು ಕೆಚ್ಚಿನಿಂದ ಮತಿಯ (ಬುದ್ಧಿಯ) ಒರೆಗಲ್ಲಿಗೆ ಹಚ್ಚಿನೋಡಬೇಕು. ಮೊನ್ನೆ ಪತ್ರಿಕೆಗಳಲ್ಲಿ ನಾನು ಓದಿದೆ. ಒಬ್ಬರು ಕೃತವಿದ್ಯಾರಾದ ಗೌರವಸ್ಥರು ದೇವಾಲಯಕ್ಕೆ ಹೋಗಿ ಬಂದುದಕ್ಕೆ ಪ್ರತಿಯಾಗಿ ಸಂಪ್ರೋಕ್ಷಣೆಗೆ ಜುಲುಮಾನೆ ಕೊಡಬೇಕಾಗಿ ಬಂದಿತಂತೆ. ಕಾರಣ, ಅವರು ಅಸ್ಪೃಶ್ಯರ ಜಾತಿಗೆ ಸೇರಿದವರಂತೆ. ಅವರಿಗಿಂತಲೂ ಮೂಢರೂ ಕೊಳಕರೂ ದುಷ್ಟರೂ ರೋಗಿಗಳೂ ದುರಚಾರಿಗಳೂ ಆದ ‘ಸ್ಪೃಶ್ಯ’ರೆಂದೆನಿಸಿಕೊಂಡವರು ಗುಡಿಯೊಳಗೆ ಹೋದರೆ ಮೈಲಿಗೆಯಾಗುವುದಿಲ್ಲವಂತೆ!

‘ಸ್ಪೃಶ್ಯ’ ಯುವಕರು ತಮ್ಮ (ಅಸ್ಪೃಶ್ಯ) ಸೋದರನಿಗಾದ ಅವಮಾನ ತಮ್ಮದೆಂದು ಭಾವಿಸಿ ದೇವಾಲಯಗಳಿಗೆ ಹೋಗುವುದನ್ನೆ ಬಿಟ್ಟು, ಹೊರಗೆ, ಪ್ರಕೃತಿ ಸೌಂದರ್ಯದಲ್ಲಿ, ಉದಯಿಸುವ ಸೂರ್ಯನಲ್ಲಿ, ಸಾಹಿತ್ಯದಲ್ಲಿ, ಸಂಸ್ಕೃತಿಯಲ್ಲಿ, ದರಿದ್ರನಾರಾಯಣನ ಸೇವೆಯಲ್ಲಿ ತಮ್ಮ ದೇವಾಲಯಗಳನ್ನು ಕಟ್ಟಿಕೊಂಡು, ಮತದ ಅನೌದಾರ್ಯವನ್ನು ಮುರಿಯಬೇಕು... ಅಸ್ಪೃಶ್ಯರನ್ನು ದೇವಾಲಯಗಳಿಗೆ ಪ್ರವೇಶ ಮಾಡಲು ಬಿಡಬೇಕೆಂದು ಹೇಳುತ್ತಿರುವುದು ಉಚ್ಚವರ್ಗದ ಹಿಂದೂಗಳ ಪರಿಶುದ್ಧತೆಗಾಗಿ ಮತ್ತು ದೃಷ್ಟಿವೈಶಾಲ್ಯ ಸಾಧನೆಗಾಗಿಯೆ ಹೊರತು ಅಸ್ಪೃಶ್ಯರ ಮೋಕ್ಷಕ್ಕಾಗಿಯಲ್ಲ’’. ಈ ಮಾತಿಗೆ ಈಗ 71ನೇ ವರ್ಷ ನಡೆಯುತ್ತಿದೆ. ಕನಿಷ್ಠ ಈ ಗ್ರಹಿಕೆಯಾದರೂ ಪ್ರಗತಿಪರರು ಅಂದುಕೊಂಡಿರುವ ನಮಗೆ ಇನ್ನೂ ಸಾಧ್ಯವಾಗಿಲ್ಲ. ಆ ನುಡಿಗಳು  ಅಷ್ಟೋ ಇಷ್ಟೋ ಕ್ರಿಯೆಯಾಗಿದ್ದರೂ ನಮ್ಮ ಇಂದಿನ ಬದುಕು ಹೆಚ್ಚು ಸಹ್ಯವಾಗಿರುತ್ತಿತ್ತು. ಜಾತಿಯ ಟೌನ್‌ಷಿಪ್‌ಗಳು ಅಸಹ್ಯವಾಗಿ ಕಾಣಿಸುತಿದ್ದವು.

ಜಾತಿಧರ್ಮದ ಕೊಲೆ ರಕ್ತಪಾತಗಳು ಇಷ್ಟಾಗುತ್ತಿರಲಿಲ್ಲವೇನೋ. ಭೂತವಾದಿಗಳ ಅಂಗಡಿಗಳಲ್ಲಿ ದ್ವೇಷದ ವ್ಯಾಪಾರ ಅಷ್ಟೋ ಇಷ್ಟೋ ತಗ್ಗುತ್ತಿತ್ತು. ಆದರೆ ಏನು ಮಾಡುವುದು? ನಾವೀಗ ಸಾಂಸ್ಕೃತಿಕ ಗರೀಬರಾಗಿದ್ದೇವೆ!? ಇಂದು, ಉದ್ರೇಕ ಉನ್ಮಾದಗಳ ಮುಂದೆ ವಿಚಾರ ವಿವೇಕಗಳು ತತ್ತರಿಸುತ್ತವೆ ಎಂಬ ಅರಿವಿನೊಡನೆ ನಮ್ಮ ಆಶಯಗಳಿಗೆ ತಕ್ಕಂತೆ ನಮ್ಮದೇ ಕ್ರಿಯಾರೂಪಗಳಿಗಾಗಿ ಹುಡುಕಬೇಕಾಗಿದೆ. ಮೊನ್ನೆ ಇಂದೂಧರ್ ಫೋನ್ ಮಾಡಿ ‘ಬೆಂಗಳೂರಲ್ಲಿ ಅಸಹಿಷ್ಣುತೆ ಬಗ್ಗೆ ಸಭೆ ಇದೆ ಬನ್ನಿ’ ಅಂದ.  ‘ನಿನಗೆ ಏನಪ್ಪ ಬೇಕಾಗಿದೆ’ ಅಂದೆ. ‘ಸಹಿಷ್ಣುತೆ’ ಅಂದ. ‘ಹಾಗಾದರೆ ಸಹಿಷ್ಣುತೆಗಾಗಿ ಎಂದು ಚರ್ಚೆ ಮಾಡಿದರೆ ನಾವು ಇಡಬೇಕಾದ ಹೆಜ್ಜೆಗಳ ಸುಳಿವುಗಳಾದರೂ ಸಿಗಬಹುದಲ್ವಾ’ ಅಂದೆ.

ದಾಳಿ (Attack) ಮಾಡುವುದಕ್ಕೆ ಯಾರಾದರೂ ವಿರೋಧಿ ಎದುರಾಗಿ ಇದ್ದರೆ ಮಾತ್ರ ಹೋರಾಡುವ ನಮ್ಮ ಹೋರಾಟಗಾರರ ಜಾಯಮಾನವ ಇದು? ಅದೇ ನಮ್ಮ ಆಶಯಗಳಿಗೆ ತಕ್ಕಂತೆ ಕ್ರಿಯೆ ರೂಪಿಸಿ ನಡೆದ ಹೆಜ್ಜೆಗಳು ನಮ್ಮ ನಡುವೆ ಅಷ್ಟಾಗಿ ಇಲ್ಲವಲ್ಲ ಯಾಕೆ? ಇದು ನಮಗೆ ಬೇಕಾಗಿಲ್ಲವೆ? ಜನನುಡಿಯೂ ಕೂಡ ಆಳ್ವಾಸ್ ನುಡಿಸಿರಿಗೆ ಪ್ರತಿಕ್ರಿಯಾತ್ಮಕವಾಗಿ ಹುಟ್ಟಿದೆ. ಅದು ಈಗ ಪೊರೆ ಕಳಚಿ ಹೊಸಹುಟ್ಟು ಪಡೆಯಬೇಕಾಗಿದೆ. ಸಮುದಾಯದ ಮನಸ್ಸಿನ ತಾಯಿಬಳ್ಳಿಗೆ ಮತ್ತೆ ಕಸಿ ಮಾಡಿಕೊಂಡು ಸಾಂಸ್ಕೃತಿಕ ಕಣ್ಣು ಪಡೆಯಬೇಕಾಗಿದೆ. ಆಗ ನಮ್ಮ ಮಾತು ಸಮುದಾಯದ ಮಾತೂ ಆಗಬಹುದು. ಅದಕ್ಕಾಗಿ- ಹೌದು, ನಾವು ಸಾಂಸ್ಕೃತಿಕ ಕಣ್ಣಿಗಾಗಿ ತಪಸ್ಸು ಮಾಡಬೇಕಾಗಿದೆ.

ಅನ್ಬಿಲೀವೆಬಲ್ ವಿದ್ಯಾ


~ ಸಂವರ್ತ 'ಸಾಹಿಲ್'
ಆದಷ್ಟು ಬೇಗ ವರದಿ ಬರೆದು ಕಳುಹಿಸಿ ಆಫೀಸ್ ಬಿಟ್ಟ ನಾನು ನೇರವಾಗಿ ದೆಹಲಿಯ ಪರಿಸರವಾದಿ ಓರ್ವರು ತಂಗಿದ್ದ ಹೋಟೆಲಿಗೆ ಹೋದೆ. ಅಂದು ಅನಿರೀಕ್ಷಿತವಾಗಿ ಮಳೆ ಸುರಿದಿತ್ತು. ನನ್ನ ಬಟ್ಟೆ-ಮೈ ಒಂದಿಷ್ಟು ಒದ್ದೆ ಆಗಿತ್ತು. ಅವರ ರೂಂ ಪ್ರವೇಶ ಮಾಡುತ್ತಿದ್ದಂತೆ ಅಲ್ಲಿ ಆಗಲೇ ಉಪಸ್ಥಿತರಿದ್ದು ಪರಿಸರವಾದಿ ಹೋರಾಟಗಳ ಕುರಿತು ಚರ್ಚೆ ನಡೆಸುತ್ತಿದ್ದ ವಿದ್ಯಾ ದಿನಕರ್ ನನ್ನನ್ನು ನೋಡಿ, "ಮಳೆ ಬರ್ತಾ ಇದೆಯಾ?" ಎಂದು ಕೇಳಿದಳು. ನಾನು ಹ್ಞೂ ಎನ್ನಲು ತನ್ನ ಕುರ್ಸಿಯಿಂದ ಎದ್ದು ಕಿಡಕಿಯ ಪರದೆ ಸರಿಸುತ್ತ, "ಕುಡುಬಿ ಪದವುನಲ್ಲಿ ಮಳೆ ಬರ್ತಾ ಇದೆ. ಇಲ್ಲಿ ಸಹ ಬರ್ತಾ ಇರೋದು ಗೊತ್ತಾಗ್ಲಿಲ್ಲ," ಎಂದು ಹೊರ ನೋಡಿ, "ಹೌದು ಇಲ್ಲಿ ಸಹ ಮಳೆ ಬರ್ತಾ ಇದೆ," ಎಂದು ತನಗೆ ತಾನೆ ಹೇಳಿಕೊಂಡಳು.

ತಾನು ಇರುವ ಪ್ರದೇಶದಲ್ಲಿ ಸುಯ್ಯುತ್ತಿರುವ ಮಳೆ ತಿಳಿಯದಿದ್ದರೂ ತಾನು ಹೋರಾಡುತ್ತಿರುವ ಕುಡುಬಿಗಳ ನೆಲದ ಮೇಲೆ ಸುರಿಯುತ್ತಿರುವ ಮಳೆಯ ಸುದ್ದಿ ತಿಳಿದಿದ್ದ ಆಕೆಯನ್ನು ನಂಬಲಾರದಂತೆ ನಿಂತು ಅರೆಕ್ಷಣ ನೋಡಿದೆ. "ಯು ಆರ್ ಅನ್ಬಿಲೀವೆಬಲ್" ಎಂದು ಹೇಳಿ ಅಲ್ಲೇ ಇದ್ದ ಖಾಲಿ ಕುರ್ಚಿಯ ಮೇಲೆ ಕುಳಿತುಕೊಂಡೆ.

ದೆಹಲಿ ಮೂಲದ ಪರಿಸರವಾದಿ ಹೋರಾಟಗಾರರೊಂದಿಗೆ ವಿದ್ಯಾ ಮತ್ತು ನಾನು ಚರ್ಚೆ ಮಾಡುತ್ತಾ ಕೂತಿದ್ದಾಗ ನಡುವಿನಲ್ಲಿ ಒಮ್ಮೆ ಅವರು, "ಇತ್ತೀಚಿಗೆ ಯಾರೋ ಹೇಳುತ್ತಾ ಇದ್ದರು ನೋಡು ಮಂಗಳೂರಿನಲ್ಲಿ ಇರೋದು ಒಂದೇ ಒಂದು ಗಂಡಸು, ಅದು ವಿದ್ಯಾ," ಎಂದು ನೆನಪಿಸಿಕೊಂಡು ನಕ್ಕರು. ತಾನೂ ನಕ್ಕ ವಿದ್ಯಾ ತಕ್ಷಣಕ್ಕೆ, "ನಾನು ಗಂಡಲ್ಲ ನಾನು ಹೆಣ್ಣೇ ಗಂಡಾಗುವ ಅವಶ್ಯಕತೆ ಇಲ್ಲ," ಎಂದು ನಗು ಮುಂದುವರೆಸಿದ್ದಳು.

ಇದಾಗಿ ಕೆಲವು ಸಮಯದಲ್ಲಿ ಕುಡುಬಿ ಪದವುಗೆ ವಿದ್ಯಾ ಮತ್ತು ನಾನು ಹೋದಾಗ ಎಸ್.ಈ.ಝೆಡ್. ನೇಮಿಸಿದ ಜನರು ನಮ್ಮ ವಾಹನವನ್ನು ಸುತ್ತುವರೆದು ಗಲಾಟೆ ಆರಂಬವಾಯಿತು. ನಮ್ಮ ಗಾಡಿಯ ಚಕ್ರದ ಗಾಳಿಯನ್ನು ತೆಗೆದರು. ಸೂಕ್ತ ಸಮಯಕ್ಕೆ ದೌಡಾಯಿಸಿಕೊಂಡು ಬಂದ ಗೆಳೆಯ ನವೀನ ಸೂರಿಂಜೆ ನಮ್ಮನ್ನು ಮರಳಿ ಮಂಗಳೂರಿಗೆ ಕರೆದುಕೊಂಡು ಹೋದ. ಅಲ್ಲಿ ಅಂದು ನನ್ನ ಕೈಕಾಲು ನಡುಗಿದ್ದು ಸುಳ್ಳಲ್ಲ. ಆದರೆ ಆ ಗಲಾಟೆಯ ಸಂದರ್ಭದಲ್ಲೂ ಬೆಚ್ಚದೆ ನಿಂತಿದ್ದಳು ಈ ವಿದ್ಯಾ.

ಕುಡುಬಿಗಳ ನ್ಯಾಯಕ್ಕಾಗಿ ನಡೆಸುವ ಹೋರಾಟದಲ್ಲಿ ಪೇಜಾವರ ಮಠದ ವಿಶ್ವೇಶನನ್ನು ಒಳಗೊಂಡಾಗ ವಿದ್ಯಾ ಜೊತೆ ಗಲಾಟೆ ಮಾಡಿದ ಕೆಲವು ಮಂದಿಯಲ್ಲಿ ನಾನು ಒಬ್ಬ. ಆಗ ಆಕೆ, "ನಿನ್ನ ಅಪನಂಬಿಕೆ ನಿನ್ನ ನಿಲುವೆ ಇವೆಲ್ಲಕ್ಕಿಂತ ಮುಖ್ಯ ಜನರ ನೆಲ ಜನರ ಬದುಕು," ಎಂದು ಹೇಳಿ ಹೋರಾಟ ಮುಂದುವರೆಸಿದ್ದಳು. ವಿಶ್ವೇಶನನ್ನು ಆಕೆ ದಾಳವಾಗಿ ಉಪಯೊಗಿಸಿಕೊಂಡಳೇ ಎಂಬ ಪ್ರಶ್ನೆ ನನಗೆ ನಾನೇ ಹಾಕಿಕೊಂಡದ್ದಿದೆ. ಆದರೆ ಆ ಪ್ರಶ್ನೆಯೇ ಸರಿಯಲ್ಲ. ಆಕೆ ಕುಡುಬಿ ಜನರ ಭಾವನೆಗೆ ಬೆಲೆ ನೀಡಿದ್ದಳು ಎಂಬುದು ಮಾತ್ರ ಸತ್ಯ ಅವರ ಬದುಕಿಗೆ ಅವರ ನೆಲಕ್ಕೆ ಬೆಲೆ ನೀಡಿದ್ದಳು. ಹಾಗೆಂದು ವಿಶ್ವೇಶನಿಗೆ ಅಗೌರವ ತೋರಿದ್ದಿಲ್ಲ. ಅಂದ ಮಾತ್ರಕ್ಕೆ ಆರಾಧಿಸಿದ್ದೂ ಇಲ್ಲ.

ಗ್ರೆಗೊರಿ ಪತ್ರಾವ್ ಮನೆ ಉರುಳಿಸಲಾದ ಸಂದರ್ಭದಲ್ಲಿಯೂ ಪೋಲೀಸರ ಆರ್ಭಟಕ್ಕೆ ಎದುರಾಗಿ ದಿಟ್ಟವಾಗಿ ನಿಂತ ವಿದ್ಯಾ ಪಬ್ ದಾಳಿ ನಡೆದ ಬಳಿಕ ಅನೈತಿಕ ಪೋಲೀಸರನ್ನು ಸಹ ಅಷ್ಟೇ ದಿಟ್ಟವಾಗಿ ಎದುರಿಸಿದ್ದಳು. ಇಂಥಾ ಅಂಜದ ವಿದ್ಯಳಿಗಾಗಿ ಈಗ ನನ್ನ ಹೃದಯ ಅಂಜುತ್ತಿದೆ. ಅದಕ್ಕೆ ಕಾರಣ ಬಜರಂಗ ದಳದ ಗೂಂಡಾಗಳು ಅವಳ ಕುರಿತಾಗಿ ಅವಾಚ್ಯವಾಗಿ ಬಯ್ದು ಆಕೆಗೆ ಜೀವ ಬೆದರಿಕೆ ಒಡ್ಡಿರುವುದು. ಇಂತಾ ಬೆದರಿಕೆಗಳು ಹಿಂದೆಯೂ ಬಂದಿದ್ದವು ಆಗ "ವಿದ್ಯಾ ಎಲ್ಲವನ್ನೂ ಎದಿರಿಸುತ್ತಾಳೆ" ಎಂದು ಅನ್ನಿಸುತ್ತಿತ್ತು. ಆದರೆ ಈಗಿನ ಪರಿಸ್ಥಿತಿಯೇ ಭಿನ್ನ. ದಾಳಿಯ ಬೆದರಿಕೆ ಹಾಕಿದ ಭುವಿತ್ ಶೆಟ್ಟಿ ಕೊನೆಗೂ ಕೊಲೆ ಮಾಡಿಬಿಟ್ಟ. ಆಗಲೂ ಪೊಲೀಸರು ಕಾರ್ಯ ನಿರ್ವಹಿಸಲಿಲ್ಲ. ಈಗಲೂ ನಿರ್ವಹಿಸುತ್ತಿಲ್ಲ. ಇಲ್ಲಿ ಮತ್ತೊಬ್ಬ ಭುವಿತ್ ಶೆಟ್ಟಿ ಉದ್ಭವಿಸಲು ಸಾಧ್ಯ ಇಲ್ಲ ಎಂದು ಹೇಗೆ ನಂಬಲಿ? ಯಾವುದೇ ಅಂಜಿಕೆಯಿಲ್ಲದೆ ಬೆದರಿಕೆ ಒಡ್ಡುವ ಮಂದಿ ಇದ್ದಾರೆ, ಅವರಿಗೆ ಬೆಂಬಲ ಇದೆ, ಪೋಲೀಸರ ನಿಷ್ಕ್ರಿಯತೆಯೂ ಇದೆ.

ಐ ಆಮ್ ವಿಥ್ ವಿದ್ಯಾ ದಿನಕರ್


ಮನುಸ್ಮೃತಿ ಸುಟ್ಟದಿನ ಮತ್ತು ನಮ್ಮ ದಿಕ್ಕಾರ


-ವಿಕಾಸ ಆರ್ ಮೌರ್ಯ
ಇಂದು 25/12/2015. ಬಾಬಾಸಾಹೇಬ್ ಅಂಬೇಡ್ಕರರ ನೇತೃತ್ವದಲ್ಲಿ 1927 ರ ಇದೇ ದಿನ ಸಾರ್ವಜನಿಕವಾಗಿ ಮನುಸ್ಮೃತಿಯನ್ನು ಸುಡಲಾಗಿತ್ತು. ಮನುಸ್ಮೃತಿ ಈ ದೇಶದ ಶೂದ್ರರಿಗೆ, ಮಹಿಳೆಯರಿಗೆ ಮತ್ತು ದಲಿತರಿಗೆ ಮಾಡಿರುವ ಮಹಾಮೋಸವನ್ನು ಬಯಲಿಗೆಳೆದು ಸುಡಲಾಗಿತ್ತು. ಇಂತಹ ಮನುಸ್ಮೃತಿ ಇಂದಿಗೂ ಮನುವಾದಿಗಳಿಗೆ ಪೂಜ್ಯನೀಯವಾಗಿದೆ. ಗೋ ಹತ್ಯೆ ನಿಷೇಧವನ್ನು ಸಮರ್ಥಿಸಲು ಅವರು ಮನುಸ್ಮೃತಿಯ ಶ್ಲೋಕ ಉದಾಹರಣೆ ಹೇಳುತ್ತಾರೆ. ಹೈ ಕೋರ್ಟ್ ಮುಂದೆ ಮನುವಿನ ಪ್ರತಿಮೆ ಪ್ರತಿಷ್ಟಾಪನೆ ಮಾಡುತ್ತಾರೆ. ಇಂತಹ ಮನುವಾದಿಗಳು ನಂಬಿರುವ ಸಿದ್ದಾಂತ ತಿಳಿಯದೆ ಅಮಾಯಕ ಶೂದ್ರ, ದಲಿತ,, ಮಹಿಳೆಯರು ಅವರ ಬಲೆಗೆ ಬಿದ್ದಿದ್ದಾರೆ. ಅದನ್ನು ತಪ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. 
ಮನುಸ್ಮೃತಿ ಈ ನೆಲದ ಶೂದ್ರರಿಗೆ, ಮಹಿಳೆಯರಿಗೆ, ದಲಿತರಿಗೆ ಮಾಡಿರುವ ಮಹಾಮೋಸದ ಸ್ಯಾಂಪಲ್ ಈ ಕೆಳಗಿನಂತಿದೆ. ಸಹನೆಯಿಂದ ಓದಿ ಇತರರಿಗೂ ತಿಳಿಸಿ.

ಅಧ್ಯಾಯ 1

ಕಲಿಸುವುದು, ಕಲಿಯುವುದು, ಯಜ್ಞ ಮಾಡುವುದು, ದಾನ ನೀಡುವುದು, ದಾನ ಸ್ವೀಕರಿಸುವುದು ಇವು ಆರು ಬ್ರಾಹ್ಮಣನ ಕರ್ಮಗಳು (ಶ್ಲೋಕ 88)
ಮಾಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರು ವರ್ಣಗಳ ಜನರ (ಬ್ರಾಹ್ಮಣ ಕ್ಷತ್ರಿಯ ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು ಆದೇಶಿಸಿದ್ದಾನೆ. (91)
ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯನ್ನು ಆಳುವ ಅಧಿಕಾರ ಪಡೆದುಕೊಂಡಿರುತ್ತಾನೆ. ಮತ್ತು ಧರ್ಮ, ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ.ಜೀವಿಗಳ ಒಡೆಯನಾಗುತ್ತಾನೆ (೯೯)
ಈ ಭೂಮಿಯಲ್ಲಿ ಇರುವುದೆಲ್ಲವೂ ಬ್ರಾಹ್ಮಣನಿಗೆ ಸೇರಿದ್ದಾಗಿದೆ. ಬ್ರಾಹ್ಮಣನು.ಶ್ರೇಷ್ಟವಾದ ಜನ್ಮವನ್ನು ಪಡೆದಿದ್ದರಿಂದ ಇವೆಲ್ಲವನ್ನು ಹೊಂದಲು ಅವನೇ ಅರ್ಹನಾಗುತ್ತಾನೆ (೧೦೦)

ಅಧ್ಯಾಯ ೨
ಬ್ರಾಹ್ಮಣನಿಗೆ ಶುಭ ಸೂಚಕವಾದ, ಕ್ಷತ್ರಿಯನಿಗೆ ಶಕ್ತಿ ಸೂಚಕವಾದ, ವೈಶ್ಯನಿಗೆ ಧನ ಸೂಚಕವಾದ ಹಾಗು ಶೂದ್ರನಿಗೆ ಅಸಹ್ಯ ಸೂಚಕವಾದ ಹೆಸರುಗಳನ್ನು ಇಡಬೇಕು. (೩೧)

ಅಧ್ಯಾಯ ೩
ಎಂತಹ ಅನಿವಾರ್ಯ ಸಂದರ್ಭದಲ್ಲೂ ಬ್ರಾಹ್ಮಣ ಹಾಗೂ ಕ್ಷತ್ರಿಯ ಗಂಡುಗಳು ಶೂದ್ರ ಜಾತಿಯ ಸ್ತ್ರೀಯನ್ನು ಪ್ರಥಮ ಹೆಂಡತಿ ಎಂದು ಪರಿಗಣಿಸಬಾರದು (೧೪)
ಬ್ರಾಹ್ಮಣರು ಶ್ರಾದ್ಧ ಭೋಜನ ಮಾಡುತ್ತಿರುವಾಗ ಅವರನ್ನು ಚಾಂಡಾಲ, ಹಂದಿ, ಕೋಳಿ, ನಾಯಿ ಮತ್ತು ಮುಟ್ಟಾದವಳು ಹಾಗೂ ನಪುಂಸಕರು ನೋಡಬಾರದು (೨೩೯)
ಹಂದಿಯು ಮೂಸುವುದರಿಂದ, ಕೋಳಿಯ ರೆಕ್ಕೆಗಳ ಗಾಳಿ ತಟ್ಟುವುದರಿಂದ, ನಾಯಿಯು ನೋಡುವುದರಿಂದ ಹಾಗೂ ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನವು ನಾಶವಾಗಿ ಹೋಗುತ್ತದೆ (೨೪೧)

ಅಧ್ಯಾಯ ೪
ಶೂದ್ರರಾಜನ ರಾಜ್ಯದಲ್ಲಿ, ಅಧರ್ಮಿಗಳಿರುವ ಪ್ರದೇಶದಲ್ಲಿ, ವೇದ ವಿರೋಧಿಗಳಾದ ಪಾಷಂಡಿಗಳ ಪ್ರಾಂತದಲ್ಲಿ, ಅಂತ್ಯಜರ ಸನಿಹದಲ್ಲಿ ಬ್ರಾಹ್ಮಣರು ವಾಸ ಮಾಡಬಾರದು (೬೧)
ಶೂದ್ರನಿಗೆ ಬುದ್ಧಿ ಹೇಳಬಾರದು, ಯಜ್ಞದ ಹವಿಸ್ಸಿನ ಶೇಷವನ್ನು ಹಾಗೂ ಎಂಜಲನ್ನು ಕೊಡಬಾರದು. ಧರ್ಮೋಪದೇಶ ಮಾಡಬಾರದು. ವ್ರತಾಚರಣೆಯನ್ನು ಹೇಳಿ ಕೊಡಬಾರದು (೮೦)
ಶೂದ್ರನಿಗೆ ಧರ್ಮೋಪದೇಶ ಮಾಡುವವನು, ವ್ರತಾಚರಣೆಗಳನ್ನು ಹೇಳಿಕೊಡುವವನು, ಆ ಶೂದ್ರನ ಜೊತೆಗೆ ತಾನು ಕೂಡ ಅಸಂವೃತವೆಂಬ ನರಕಕ್ಕೆ ಹೋಗುವನು (೮೧)
ಊರಲ್ಲಿ ಶವ ಇರುವಾಗ, ಶೂದ್ರನು ಹತ್ತಿರದಲ್ಲಿರುವಾಗ, ಆಕ್ರಂದನದ ಧ್ವನಿ ಕೇಳುತ್ತಿರುವಾಗ ಮತ್ತು ಜನರ ಗುಂಪು ನೆರೆದಿರುವಾಗ ವೇದವನ್ನೋದಬಾರದು (೧೦೮)
ಬೇಕು ಬೇಕೆಂದೇ ಯಾರಾದರೂ ಕೋಪಗೊಂಡು ಒಬ್ಬ ಬ್ರಾಹ್ಮಣನಿಗೆ ಹೊಡೆದರು ಸಾಕು, ಅವರು ಇಪ್ಪತ್ತೊಂದು ಜಂಗಮಗಳು ಕಳೆಯುವ ತನಕ ಹೀನಯೋನಿಗಳಲ್ಲಿ ಹುಟ್ಟುತ್ತಾನೆ (೧೬೬)
ಕಮ್ಮಾರ, ಬೇಡ, ರಂಗವೇಧಿಕೆಯನ್ನು ಅಳಂಕರಿಸುವವನು, ಬಂಗಾರದ ಕೆಲಸ ಮಾಡುವ ಪತ್ತಾರ್, ಬಿದಿರಿನ ಕೆಲಸ ಮಾಡುವವನು, ಶಸ್ತ್ರಾಸ್ತ್ರ ಮಾರುವವನು ಈ ಎಲ್ಲರ ಮನೆಯ ಅನ್ನವನ್ನು ಬ್ರಾಹ್ಮಣನು ಉಣ್ಣಬಾರದು (೨೧೫)
ರಾಜಾನ್ನವು ತೇಜಸ್ಸನ್ನು, ಶೂದ್ರಾನ್ನವು ಬ್ರಹ್ಮವರ್ಚಸ್ಸನ್ನು, ಸ್ವರ್ಣಕಾರನ ಅನ್ನವು ಆಯಸ್ಸನ್ನು ಹಾಗೂ ಚರ್ಮಕಾರನ ಅನ್ನವು ಕೀರ್ತಿಯನ್ನು ನಾಶ ಮಾಡುತ್ತದೆ (೨೧೮)

ಅಧ್ಯಾಯ ೫
ಪತಿಯ ನಡತೆಯು ಚೆನ್ನಾಗಿಲ್ಲದಿದ್ದರೂ, ಅವನು ಕಾಮಾತುರನಾಗಿ ಅನ್ಯಹೆಂಗಸರಲ್ಲಿ ಮನಸ್ಸಿಟ್ಟರೂ, ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಹೆಂಡತಿಯು ಆ ತನ್ನ ಪತಿಯನ್ನು ದೇವರೆಂದು ಭಾವಿಸಿ ಅವನ ಸೇವೆ ಮಾಡಬೇಕು (೧೫೪)

ಅಧ್ಯಾಯ ೭
ತನಗೆ ಸಾಯುವಂತಹ ಆಪತ್ತು ಬಂದರೂ ರಾಜನು ವೇದವಿದ್ವಾಂಸನಾದ ಬ್ರಾಹ್ಮಣನಿಂದ ತೆರಿಗೆಯನ್ನು ಪಡೆಯಬಾರದು. ಶ್ರೋತ್ರಿಯನಾದ ಬ್ರಾಹ್ಮಣನು ಎಂದಿಗೂ ಈ ಅರಸನಾಳುವ ರಾಜ್ಯದಲ್ಲಿ ಹಸಿವಿನಿಂದ ಬಳಲಬಾರದು (೧೩೩)
ಯಾವ ಅರಸನ ರಾಜ್ಯದಲ್ಲಿ ಬ್ರಾಹ್ಮಣನು ಹಸಿವಿನಿಂದ ಬಳಲುತ್ತಾನೋ ಆ ರಾಜ್ಯವು ಕೂಡ ಬರಗಾಲದಿಂದ ಪೀಡಿತವಾಗಿ ಹಸಿವಿನಿಂದ ಹೇಳುತ್ತದೆ. ನಾಶವಾಗುತ್ತದೆ (೧೩೪)

ಅಧ್ಯಾಯ ೮
ಯಾವ ರಾಷ್ಟ್ರವು ಹೆಚ್ಚಾಗಿ ಶೂದ್ರರಿಂದಲೇ ತುಂಬಿರುತ್ತದೋ,ನಾಸ್ತಿಕರಿಂದ ಆಕ್ರಮಿಸಲ್ಪಡುತ್ತದೋ, ಬ್ರಾಹ್ಮಣ ರಹಿತವಾಗಿರುತ್ತದೋ, ಆ ರಾಜ್ಯವು ದುರ್ಭಿಕ್ಷ ರೋಗಗಳಿಂದ ಜರ್ಜರಿತವಾಗಿ ಬೇಗನೆ ನಾಶವಾಗಿ ಬಿಡುತ್ತದೆ (೨೨)
ಬ್ರಾಹ್ಮಣನನ್ನು ಬೈದರೆ ಕ್ಣತ್ರಿಯನಿಗೆ ನೂರು ಒಣಗಲು ದಂಡವನ್ನು ಬೋಧಿಸಬೇಕು. ವೈಶ್ಯನಿಗೆ ನೂರೈವತ್ತು ಅಥವಾ ಇನ್ನೂರು ಒಣಗಲು ದಂಡ ವಿಧಿಸಬೇಕು. ಹಾಗೂ ಬ್ರಾಹ್ಮಣನನ್ನು ಬೈದ ಶೂದ್ರನಿಗೆ ವಧೆ ಶಿಕ್ಷೆ ಬೋಧಿಸಬೇಕು (೨೬೭)
ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಇವರ ಜಾತಿಯ ಹೆಸರುಗಳನ್ನೆತ್ತಿ ಹೀನಾಮಾನವಾಗಿ ಬೈದಂಥ ಆ ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಹತ್ತಂಗುಲ ಉದ್ದದ ಸರಳನ್ನಿಡಬೇಕು (೨೭೧)

ಅಧ್ಯಾಯ ೯
ಶಯ್ಯೆ, ಆಸನ, ಅಲಂಕಾರ ಇವುಗಳ ಮೋಹ, ಕಾಮ, ಕ್ರಿಶ, ಅಪ್ರಾಮಾಣಿಕತೆ, ಪತಿ ದ್ರೋಹ ಮತ್ತು ದುರ್ನಡತೆ ಇವೆಲ್ಲಾ ಸಾಮಾನ್ಯವಾಗಿ ಸ್ತ್ರೀಯರಲ್ಲಿರುವ ಸ್ವಾಭಾವಿಕ ಗುಣಗಳು (೧೭)
ಮೃತ ಬ್ರಾಹ್ಮಣನ.ಆಸ್ತಿಯನ್ನು ರಾಜನು ವಶಪಡಿಸಬಾರದು. ಆದರೆ ಇತರ ವರ್ಣದವರು ಮೃತಪಟ್ಟರೆ ರಾಜನು ಅವರ ಆಸ್ತಿಯನ್ನು ಹೊಂದಲು ಅರ್ಹನಾಗುತ್ತಾನೆ (೧೮೯)
ಬಂಧುಗಳೇ ಇದಕ್ಕಿಂತ ಹೀನಾಯವಾದ ಕಾನೂನುಗಳನ್ನು ಮನುಶಾಸ್ತ್ರ ವಿಧಿಸುತ್ತದೆ. ಅದನ್ನು ತಿಳಿಯಲು ಒಮ್ಮೆ ಮನುಸ್ಮೃತಿ ಓದಿ. ಬ್ರಾಹ್ಮಣರನ್ನು ತಲೆಯ ಮೇಲೆ ಕುಳ್ಳಿರಿಸಿಕೊಳ್ಳುವ ಮನುಶಾಸ್ತ್ರ ಶೂದ್ರರನ್ನು ಒದೆಯುತ್ತದೆ. ಆ ಕಾರಣಕ್ಕಾಗಿಯೇ ಅಂಬೇಡ್ಕರರು ಈ ದಿನ.ಮನುಸ್ಮೃತಿಯನ್ನು ದಹಿಸಿ ಪ್ರತಿಭಟಿಸಿದರು. ಆದರೆ ಈ ನೆಲದ ಕೆಲವು ಶೂದ್ರರು, ದಲಿತರು, ಸ್ತ್ರೀಯರು ಮನುವಾದಿಗಳ ಜೊತೆ ಸೇರಿ ಗುಲಾಮರಾಗಿದ್ದಾರೆ. ಅವರಂತೆ ಮಿಕ್ಕವರಾಗುವುದು ಬೇಡ. ಮನುಸ್ಮೃತಿಯನ್ನು ಧಿಕ್ಕರಿಸೋಣ, ಮನುವಾದವನ್ನು ಧಿಕ್ಕರಿಸೋಣ. ಮನುವಾದಿಗಳನ್ನು ಧಿಕ್ಕರಿಸೋಣ.

ಜನವರಿ 1: ದಲಿತ ಲೋಕದ "ವೀರರ ಹಬ್ಬ"
-ವಿಕಾಸ್ ಮೌರ್ಯ.


  

 
 ಭಾರತದ ಇತಿಹಾಸವು ವರ್ಗ ಮತ್ತು ಜಾತಿ ಸಂಘರ್ಷಗಳಿಂದ ತುಂಬಿ ತುಳುಕಿದೆ. ಪುರೋಹಿತಶಾಹಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಭಾರತದ ಮಾನವ ಜನಾಂಗವನ್ನು ವರ್ಣಗಳಾಗಿ ವಿಭಜಿಸಿ ಆ ವರ್ಣಗಳಿಗೆ ಬೇರೆ ಬೇರೆ ತಳಪಾಯಗಳನ್ನು ನೀಡಿ ತಮಗೆ ಎಷ್ಟು ಸೌಕರ್ಯಗಳು ಬೇಕೋ ಅಷ್ಟು ಸೌಕರ್ಯಗಳನ್ನು ಧಾರ್ಮಿಕತೆಯಿಂದ ಮತ್ತು ಕ್ಷತ್ರೀಯ ರಾಜರುಗಳ ಸಹಾಯದಿಂದ ಮಾಡಿಕೊಂಡ ಕಪಟಿಗಳು. ಈ ಧಾರ್ಮಿಕತೆಯಿಂದ ಪುರೋಹಿತ ವರ್ಗ ಮತ್ತು ಕ್ಷತ್ರಿಯರನ್ನು ಹೊರತುಪಡಿಸಿ ಮಿಕ್ಕೆಲ್ಲರಿಗೂ ಅನ್ಯಾಯವಾಗಿತ್ತಾದರು ಅತ್ಯಂತ ಅನ್ಯಾಯವಾಗಿದ್ದು ಮಾತ್ರ ಈ ನೆಲದ ಶೂದ್ರರಿಗೆ ಮತ್ತು ಅಸ್ಪøಶ್ಯರಿಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂದು ಮೀಸಲಾತಿಯಿಂದ ಸ್ವಲ್ಪ ಮೇಲೆ ಬಂದಿರುವ ಶೂದ್ರಾತಿ ಶೂದ್ರರು ಮತ್ತೆ ಪುರೋಹಿತ ಶಾಹಿಗಳ ತೆಕ್ಕೆಗೆ ಜಾರುತ್ತಿರುವುದು ಮರ್ಯಾದ ಹೀನ ಹತ್ಯೆ, ಮಡೆ ಸ್ನಾನಗಳಿಂದ ತಿಳಿದು ಬರುತ್ತಿದೆ.

  ಅದೇನೆ ಇರಲಿ ಇಂದು ನಾನಿಲ್ಲಿ ಹೇಳಲು ಹೊರಟಿರುವ ಕೊರೆಗಾವ್ ಯುದ್ಧದ ಪೂರ್ತಿ ಸತ್ಯವನ್ನು ನಮ್ಮ ಇತಿಹಾಸದ ಪಠ್ಯಗಳು ಎಲ್ಲೂ ಹೇಳಲಾರವು, ಕಾರಣ ಇದು ಭಾರತದ ಮನುವಾದಿಗಳ ನಿಜ ಬಣ್ಣವನ್ನು ತಿಳಿಸುತ್ತದೆ. ತಲತಲಾಂತರದಿಂದ ಅಕ್ಷರವನ್ನು ಸಂಸ್ಕøತ ಭಾಷೆಯಲ್ಲಿ ತಮಗೆ ಮಾತ್ರ ತಿಳಿಯುವಂತೆ ರಚಿಸಿಕೊಂಡು ಇತರರಿಗೆ ವೇದವನ್ನು ಓದಬಾರದು, ಕೇಳಬಾರದು, ಮನನ ಮಾಡಬಾರದು ಎಂದು ಕಟ್ಟಪ್ಪಣೆ ವಿಧಿಸಿ ಅದನ್ನು ಮೀರಿದರೆ ಕೊಲ್ಲುತ್ತ ಸಾಗಿದ್ದ ಬ್ರಾಹ್ಮಣಶಾಹಿಗಳು ನಮ್ಮ ದೇಶದ ಇತಿಹಾಸವನ್ನು ಸಹ ಅವರಿಗೆ ಬೇಕಾದಂತೆ ಬರೆದುಕೊಂಡಿವೆ. ಇಂತಹವರಿಗೆ ರೇಖಾಗಣಿತ ಬೆಳೆದಿರುವುದೆ ಯಾಗ ಯಜ್ನಗಳಿಂದ! (8ನೇ ತರಗತಿಯ ಪುಸ್ತಕದಲ್ಲಿದೆ). ಹೀಗೆ ಇತಿಹಾಸದಲ್ಲಿ ಹೂತುಹೋಗಿದ್ದ ಸ್ವಾಭಿಮಾನÀವನ್ನು ಸಾರುವ, ದಲಿತರ ಶೌರ್ಯವನ್ನು ತಿಳಿಸುವ, ಜಾತಿ ವ್ಯವಸ್ಥೆ ಮತ್ತು ಅಸ್ಪøಶ್ಯತೆಯ ಕರಾಳ ಮುಖವನ್ನು ಪರಿಚಯಿಸುವ, ಮನುವಾದವನ್ನು ಇತರರ ಮೇಲೆ ಹೇರಿ, ಕ್ರೌರ್ಯ ಮೆರೆದಿದ್ದ ಬ್ರಾಹ್ಮಣಶಾಹಿಗಳ ಸೊಂಟ ಮುರಿದಿದ್ದ ಯುದ್ದವೇ ಕೊರೇಗಾವ್ ಯುದ್ದ.


ಮಹಾರ್ ರೆಜಿಮೆಂಟ್

 ಶಿವಾಜಿ ಸೈನ್ಯದಲ್ಲಿ ಮಹಾರ, ಮಾಂಗ ಮತ್ತು ರಾಮೋಶಿ ಅಸ್ಪøಶ್ಯ ಜನಾಂಗಗಳಿಗೆ ಸ್ಥಾನ ಕೊಡಲಾಗಿತ್ತು. ಕೇವಲ ಕಾಲ್ದಳದಲ್ಲಲ್ಲದೆ ಕುದುರೆ ದಳಗಳಲ್ಲೂ ಇವರ ಪಾಲಿತ್ತು. ಆದರೆ ಶಿವಾಜಿಯ ನಂತರ ಇವರನ್ನು ಪೇಶ್ವೆಗಳು ಹೀನಾಯವಾಗಿ ನೋಡಿಕೊಂಡು ಸೇನೆಯಿಂದ ಹೊರಗಟ್ಟಿದ್ದರು. ಮುಂದೆ ಇವರು ಸೈನ್ಯ ಸೇರಿದ್ದು ಬ್ರಿಟೀಷರ ಪರವಾಗಿ. ಈ ಮಹಾರ ರೆಜಿಮೆಂಟ್ ಈಗಲೂ ಸಹ ನಮ್ಮ ಸೈನ್ಯದಲ್ಲಿ ತನ್ನ ಕೊಡುಗೆಯನ್ನು ನೀಡುತ್ತಿದೆ. ಒಟ್ಟು 19 ಬೆಟಾಲಿಯನ್‍ಗಳಿವೆ, ಇವರ ಮೊಟೊ "ಯಶ ಸಿದ್ದಿ", ಯುದ್ದ ಘೋಷಣೆ "ಬೋಲೋ ಹಿಂದೂಸ್ಥಾನ್ ಕಿ ಜೈ". ಪರಮ್ ವೀರ ಚಕ್ರ, ಮಹಾ ವೀರ್ ಚಕ್ರ, ವೀರ ಚಕ್ರ ಮುಂತಾದ ಗೌರವಗಳನ್ನು ಈ ರೆಜಿಮೆಂಟ್ ತನ್ನ ಮಡಿಲಿಗೆ ಹಾಕಿಕೊಂಡಿದೆ. 111 ಮಹಾರ ರೆಜಿಮೆಂಟ್ 1914 ರ ಮೊದಲ ಪ್ರಪಂಚ ಯುದ್ಧದಲ್ಲು ಸಹ ಭಾಗಿಯಾಗಿದೆ. 1981 ರಲ್ಲಿ ನಮ್ಮ ಭಾರತ ಸರ್ಕಾರ ಮಹಾರ್ ರೆಜಿಮೆಂಟಿನ ಹೆಸರಿನಲ್ಲಿ 35 ಪೈಸೆಯ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಿದೆ. ಬ್ರಿಟಿಷ್ ಸರ್ಕಾರ ಮುಂದೊಂದು ದಿನ ಈ ನೆಲದ ಅನಿಷ್ಟವಾದ ಜಾತಿವಾದಕ್ಕೆ ಬಲಿಯಾಗಿ ಈ ರೆಜಿಮೆಂಟನ್ನು ತೆರವುಗೊಳಿಸಿತಾದÀರು ಬಾಬಾಸಾಹೇಬ್ ಅಂಬೇಡ್ಕರರ ಶ್ರಮದಿಂದ ಮತ್ತೆ ಸೈನ್ಯಕ್ಕೆ ಮರಳಿತು. ಒಟ್ಟಿನಲ್ಲಿ ಮಹಾರ್ ರೆಜಿಮೆಂಟ್ ದಿಟ್ಟ ದಲಿತರ ರೆಜಿಮೆಂಟ್.

ಪೇಶ್ವೆಗಳ ಕ್ರೌರ್ಯ

 ಪೇಶ್ವೆಗಳು 1680 ರ ನಂತರ ಅಂದರೆ ಶಿವಾಜಿಯ ನಂತರ ಬಂದ ಬ್ರಾಹ್ಮಣ ರಾಜರುಗಳು. ಇವರ ಕಾಲದಲ್ಲಿ ಅಲ್ಲಿನ ದಲಿತರು ಪಡಬಾರದ ಕಷ್ಟಗಳನ್ನೆಲ್ಲ ಪಟ್ಟಿದ್ದಾರೆ. ಮನುವಾದವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಮತ್ತು ಪಾಲಿಸುವಂತೆ ಜನತೆಯ ಮೇಲೆ ಹೇರುತ್ತಿದ್ದ ಇವರು ದಲಿತರು ಊರ ಒಳಗೆ ಮದ್ಯಾಹ್ನ 12 ಗಂಟೆಗೆ ಬರಬೇಕೆಂದು ಕಾನೂನು ಹೊರಡಿಸಿದ್ದರು. ಏಕೆಂದರೆ ದಲಿತರÀ ನೆರಳು ಇತರರನ್ನು ಮೈಲಿಗೆ ಮಾಡುತ್ತದೆ ಎಂಬ ನೀಚ ಪದ್ಧತಿ. ಇಷ್ಟೇ ಅಲ್ಲದೆ ಊರೊಳಗೆ ಬರುವಾಗ ಕುಂಡೆಗೆ ಪೊರಕೆಯನ್ನು, ಕತ್ತಿಗೆ ಮಡಿಕೆಯನ್ನು ಕಟ್ಟಿಕೊಂಡು ಬರಬೇಕಿತ್ತು. ಪೊರಕೆ ಅಸ್ಪøಶ್ಯರ ಹೆಜ್ಜೆಗಳನ್ನು ಅಳಿಸಿಕೊಂಡು ಬರಲು ಮತ್ತು ಎಂಜಲು ಉಗುಳಲು ಮಡಿಕೆ. ದಲಿತರ ಎಂಜಲು ಮತ್ತು ಹೆಜ್ಜೆ ಗುರುತುಗಳು ಸಹ ಮೈಲಿಗೆ ತರುತ್ತವೆ ಎಂಬ ನೀಚ ಶಾಸ್ತ್ರ, ಸಂಪ್ರದಾಯ. ದಲಿತರು ಕೇವಲ ನಾಯಿ, ಕತ್ತೆಗಳನ್ನು ಮಾತ್ರ ಸಾಕಬೇಕಿತ್ತು. ಆಸ್ತಿ ಹೊಂದುವ, ಸ್ವತಂತ್ರವಿರುವ, ಊರೊಳಗೆ ವಾಸಿಸುವ ಹಕ್ಕುಗಳೇ ಇರಲಿಲ್ಲ. ಮಡಕೆ ಚೂರುಗಳನ್ನೆ ಬಳಸಬೇಕಿತ್ತು. ದಲಿತರು ಮುಂಗೈ ಅಥವಾ ಕೊರಳಿಗೆ ಕಪ್ಪು ದಾರ ಕಟ್ಟಿಕೊಳ್ಳಬೇಕಿತ್ತು (ಇದು ಇಂದಿಗೂ ಜೀವಂತವಿದೆ). ದಲಿತರೆಂದರೆ ಪ್ರಾಣಿಗಳಿಗೆÉ ಸಮಾನ. ಅವರ ನೆನಪಾಗುತ್ತಿದ್ದುದೇ ಯಾವುದಾದರು ಪ್ರಾಣಿ ಸತ್ತಾಗ ಇಲ್ಲವೆ ಹೊಲಸು ತುಂಬಿ ನಾರುತ್ತಿರುವಾಗ. ಒಟ್ಟಿನಲ್ಲಿ ಪೇಶ್ವೆಗಳ ಕಾಲದಲ್ಲಿ ದಲಿತರು ಪ್ರತಿಫಲ ಬಯಸದ ಗುಲಾಮರಾಗಿದ್ದರು.

ಕೊರೆಗಾವ್ ಯುದ್ಧ
  ಈ ಯುದ್ಧವನ್ನು ಸಮಾಧಿಯಾಗಿಸಲಾಗಿದ್ದ ಇತಿಹಾಸದ ಪುಟಗಳಿಂದ ಹೆಕ್ಕಿ ಹೊರತೆಗೆದವರು ಬಾಬಾಸಾಹೇಬ್ ಅಂಬೇಡ್ಕರ್‍ರವರು. ಅವರು 1927 ರ ಜನವರಿ 1 ರಂದು ಕೊರೆಗಾವಲ್ಲೊಂದು ಸಮಾವೇಶ ಮಾಡಿಸಿ ದಲಿತರ ಸ್ವಾಭಿಮಾನ ಸೂಚಿಸುವ, ಅವರ ಕೆಚ್ಚೆದೆಯನ್ನು ತಿಳಿಸುವ ಯುದ್ಧವನ್ನು ನಮಗೆಲ್ಲ ಪರಿಚಯಿಸದೇ ಇದ್ದಿದ್ದರೆ ಇಂದು ನಮಗೆ ಇತಿಹಾಸದಲ್ಲಿನ ಒಂದು ದಿಗ್ವಿಜಯವನ್ನೇ ಮರೆತಂತಾಗುತ್ತಿತ್ತು.
ಮಹಾರಾಷ್ಟ್ರದ ವಡಗಾವ್‍ನಲ್ಲಿ ಬ್ರಿಟಿಶರು ಪೇಶ್ವೆಗಳಿಂದ ಸೋತಿದ್ದರು. ಪೇಶ್ವೆಗಳ 25,000 ಸೈನಿಕರ ವಿವಿಧ ದಳಗಳ ಮುಂದೆ ಬ್ರಿಟಿಶರ ಅಲ್ಪ ದಳ ಮಂಡಿಯೂರಲೇಬೇಕಾಗಿತ್ತು. ಆದ್ದರಿಂದ ಬ್ರಿಟಿಶರಿಗೆ ಅಲ್ಲೊಂದು ಗೆಲುವು ಬೇಕಿತ್ತು. ಆ ಗೆಲುವು ತಂದುಕೊಟ್ಟದ್ದೆ 1818, ಜನವರಿ 1 ರ ಕೊರೆಗಾವ್ ಯುದ್ಧ.

 ಪೇಶ್ವೆಗಳು ದಲಿತರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದದನ್ನು ನೀವಾಗಲೇ ತಿಳಿದಿರುವಿರಿ. ಈ ರೀತಿಯ ಅಮಾನವೀಯತೆಯ ವಿರುದ್ಧ ಸಿಡಿದು ನಿಂತ ಮಹಾರ್ ರೆಜಿಮೆಂಟಿನ ಸೈನಿಕರು ಪೇಶ್ವೆಗಳ ವಿರುದ್ಧವಾಗಿ ಬ್ರಿಟಿಶರ ಸೈನ್ಯದಲ್ಲಿ ಸೇರಿಕೊಂಡರು. ಇದಕ್ಕೆ ಪ್ರಬಲ ಕಾರಣ ಪೇಶ್ವೆಗಳ ಅಮಾನವೀಯತೆಯ ಜೊತೆಗೆ, ಅವರುಗಳು ದಲಿತರನ್ನು ಅಸ್ಪøಶ್ಯರಂತೆ ಕಂಡು ಅವರನ್ನು ಸೈನ್ಯಕ್ಕೆ ಸೇರಿಸಿಕೊಳ್ಳದಿದ್ದದ್ದು. ಹೀಗೆ ದಲಿತ ಸೈನಿಕರು ಬ್ರಿಟಿಶರ ಸೈನ್ಯದಲ್ಲಿ ಸೇರಿಕೊಂಡರೂ ಸಹ ಪೇಶ್ವೆಗಳಿಗೆ ಚಿಂತೆಯಿರಲಿಲ್ಲ. ಏಕೆಂದರೆ ದಲಿತರ ಶೌರ್ಯ ಅವರಿಗೆ ತಿಳಿದಿರಲಿಲ್ಲ. ಅದಾಗಲೇ ಬ್ರಿಟಿಶ್ ಸೈನ್ಯ ಹಲವು ಪ್ರಾಂತಗಳಲ್ಲಿ ಭಾರತೀಯರನ್ನು ಒಳಗೊಂಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

 ಕೊರೆಗಾವ್ ಯುದ್ಧವು ಪುಣೆಯ ಬಳಿಯ ಭೀಮಾ ತೀರದಲ್ಲಿ ನಡೆಯಿತು. ಇದನ್ನು ಎರಡನೇ ಆಂಗ್ಲೊ-ಮರಾಠ ಯುದ್ಧ ಎನ್ನುತ್ತಾರೆ. ಬ್ರಿಟಿಶರ ಪರ ನಾಯಕ ಕ್ಯಾಪ್ಟನ್ ಸ್ಟಂಡನ್. ಮರಾಠರ ಪರ ರಾಜ ಬಾಜಿರಾವ್. ಬ್ರಿಟಿಶರ ಪರ ಸಿಧನಾಕನ ಮುಂದಾಳತ್ವದಲ್ಲಿ ಮಹಾರ್ ರೆಜಿಮೆಂಟಿನ 500 ಸೈನಿಕರು ಮತ್ತು 250 ಕುದುರೆ ಧಳದ ಸೈನಿಕರು, 24 ಬಂದೂಕು ಉಳ್ಳ ಸೈನಿಕರಿರುತ್ತಾರೆ. ಆದರೆ ಇದರ ವಿರುದ್ಧ ಬಾಜಿರಾವನ ಸೈನ್ಯದಲ್ಲಿ ಬರೋಬ್ಬರಿ 20,000 ಕುದುರೆ ದಳದ ಸೈನಿಕರು, 8,000 ಕಾಲ್ದಳದ ಸೈನಿಕರು ಇರುತ್ತಾರೆ. ಮುಖಾಮುಖಿಯಾದ ಎರಡು ಬಣದ ಸೈನಿಕರು ಕಾದಾಡುತ್ತಾರೆ. ಮಹಾರ್ ರೆಜಿಮೆಂಟಿನ ಸೈನಿಕರು ಶಿರೂರಿನಿಂದ ಕೊರೆಗಾವ್‍ವರೆಗೆ 27 ಮೈಲುಗಳನ್ನು ನಡೆದು, ಅನ್ನ, ನೀರು, ವಿಶ್ರಾಂತಿಯಿಲ್ಲದೆ 12 ಗಂಟೆಗಳ ಕಾಲ ಯುದ್ಧ ಮಾಡುತ್ತಾರೆ. ಕೊನೆಗೆ ಮಹಾರ್ ರೆಜಿಮೆಂಟಿನ ಧಾಳಿ ತಾಳಲಾರದೆ ಬೃಹತ್ ಸೈನ್ಯ ಹೊಂದಿದ್ದ ಬಾಜಿರಾವ್ ಪೇಶ್ವೆ ಸೇನೆ ಶರಣಾಗುತ್ತದೆ. ಮಹಾರ್ ರೆಜಿಮೆಂಟಿನ ಸೈನಿಕರು ದಿಗ್ವಿಜಯವನ್ನು ಸಾಧಿಸುತ್ತಾರೆ. ಆದರೆ ಮಹಾರ್ ರೆಜಿಮೆಂಟಿನ 22 ಸೈನಿಕರು ವೀರ ಮರಣವನ್ನಪ್ಪಿರುತ್ತಾರೆ. ಇಡೀ ಪ್ರಪಂಚದಲ್ಲೆ ಇದಕ್ಕೆ ಸರಿ ಸಮನಾದ ಮತ್ತೊಂದು ಯುದ್ಧವಿಲ್ಲ ಎಂದು ಆಂಗ್ಲ ಇತಿಹಾಸಕಾರನೊಬ್ಬ ಹೇಳುತ್ತಾನೆ. (774 ಜನ ಸೈನಿಕರು 28 ಸಾವಿರ ಸೈನಿಕರನ್ನು ಮಣಿಸುವುದು ಸಾಮಾನ್ಯದ ಮಾತೆ?)

 ಈ ಯುದ್ಧದ ಗೆಲುವು ಇತಿಹಾಸದಲ್ಲಿ ಬ್ರಾಹ್ಮಣಶಾಹಿಗಳು ದಲಿತರನ್ನು ನಡೆಸಿಕೊಂಡ ಪರಿಗೆ ಸರಿಯಾದ ಉತ್ತರವಾಗಿರುತ್ತದೆ. ಅದಲ್ಲದೆ ಭಾರತೀಯರನ್ನು ಹಾಳು ಮಾಡಿರುವುದು ನಮ್ಮ ದೇಶದ ಜಾತಿವ್ಯವಸ್ಥೆ, ಅಸ್ಪøಶ್ಯತೆ, ಶೋಷಣೆಯನ್ನು ಪೋಷಿಸುತ್ತಿರುವ ಮೂಲಗಳಾಗಿವೆ ಎಂಬುದನ್ನು ಧೃಡಪಡಿಸುತ್ತದೆ. ಭಾರತೀಯ ಜನಾಂಗವನ್ನು ಒಡೆದು ಆಳಿದ ಮನುಸ್ಮøತಿಯನ್ನು ಅಪ್ಪಿಕೊಂಡಿರುವ ಮನಸುಗಳಿಗೆ ತಕ್ಕ ಪಾಠವನ್ನು ಕಲಿಸುತ್ತದೆ. ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾದಂತೆ ಅವರ ಸಹನೆಯ ಕಟ್ಟೆ ಹೊಡೆದು ನಿಂತರೆ ಅವರನ್ನು ತಡೆಯುವುದು ಬಲು ಕಷ್ಟವೆಂಬ ಸತ್ಯಸಂಗತಿಯನ್ನು ಈ ಕೊರೆಗಾವ್ ಯುದ್ಧದಲ್ಲಿ ಕೇವಲ 500 ದಲಿತರು 28000 ಬ್ರಾಹ್ಮಣ ರಾಜನ ಸೈನ್ಯವನ್ನು ನುಚ್ಚು ನೂರು ಮಾಡಿದ್ದು ಸ್ಪಷ್ಟಪಡಿಸುತ್ತದೆ. ಈಗ ಭಾರತೀಯರ ಕರ್ತವ್ಯ ದಲಿತರ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸಿ ಇತಿಹಾಸವನ್ನು ಮರುಕಳಿಸದಂತೆ ಮಾಡುವುದಾಗಿದೆ.


ಕೊರೆಗಾವ್ ಸ್ತಂಭ

ಕೊರೆಗಾವ್ ಯುದ್ಧದ ನೆನಪಿಗೆ ಬ್ರಿಟಿಶ್ ಸರ್ಕಾರ ಕೊರೆಗಾವ್ ಬಳಿ ಒಂದು ಬೃಹತ್ ಸ್ತಂಭವನ್ನು 1821 ರಲ್ಲಿ ನಿರ್ಮಿಸಿದ್ದಾರೆ. ಅದನ್ನು ಇಂದು ರಣ ಸ್ತಂಭ, ವಿಜಯ ಸ್ತಂಭ, ಭೀಮ ಕೊರೆಗಾವ್ ಸ್ತಂಭ ಎಂದೆಲ್ಲ ಕರೆಯಲಾಗುತ್ತದೆ. ಅದರ ಮೇಲೆ ಯುದ್ಧದಲ್ಲಿ ಮಡಿದ 22 ಮಹಾರ್ ರೆಜಿಮೆಂಟಿನ ದಲಿತ ವೀರರ ಹೆಸರನ್ನು ಕೆತ್ತಿಸಲಾಗಿದೆ. ಬ್ರಿಟಿಶರ ಸರ್ಕಾರಿ ಕಡತಗಳಲ್ಲಿ ಕೊರೆಗಾವ್ ಯುದ್ಧದಲ್ಲಿನ ಮಹಾರ್ ರೆಜಿಮೆಂಟಿನ ಸೈನಿಕರ ಶೌರ್ಯ, ಬದ್ಧತೆ ಬಗ್ಗೆ ಕೊಂಡಾಡಲಾಗಿದೆ. ಆದರೆ ನಮ್ಮ ದೇಶದಲ್ಲಿ ಅದರ ಛಾಯೆಗಳನ್ನೇ ಮರೆಮಾಚುವ ಕಾರ್ಯವಾಗಿದೆ. ಇತಿಹಾಸದಲ್ಲಿ ಅದನ್ನು ಸಮಾಧಿಯಾಗಿಸಲಾಗಿತ್ತು. ಅದರ ಕಾರಣವನ್ನು ತಿಳಿಯುವುದು ಬಹಳ ಕಷ್ಟವೇನಲ್ಲ. ಆದರೂ ಈ ಕೊರೆಗಾವ್ ಯುದ್ಧವನ್ನು ಕೇವಲ ಆಂಗ್ಲೊ-ಮರಾಠ ಯುದ್ಧವೆಂದು ಪರಿಗಣಿಸುವುದರಲ್ಲಿ ಸತ್ಯವಿಲ್ಲ. ಇದನ್ನು ಭಾರತದ ಅಸ್ಪøಶ್ಯರು ಮತ್ತು ಭಾರತದ ಬ್ರಾಹ್ಮಣಶಾಹಿಗಳ ನಡುವಿನ ಯುದ್ಧವೆಂದರೆ ಸತ್ಯಕ್ಕೆ ನ್ಯಾಯ ಸಿಕ್ಕಿದಂತೆ ಆಗುತ್ತದೆ. ಅದಲ್ಲದೆ ದಲಿತರ ಇಂದಿನ ಹೋರಾಟಕ್ಕೆ ಒಂದು ಒಳ್ಳೆ ಇತಿಹಾಸ ಸಿಕ್ಕದಂತಾಗುತ್ತದೆ.

ಹೊಸ ವರ್ಷವೋ? ದಲಿತರ ಶೌರ್ಯ ದಿನವೋ?

1927 ರಿಂದ ತಮ್ಮ ಕೊನೆಯ ವರ್ಷಗಳವರೆಗೆ ಸ್ಪೂರ್ತಿ ಪಡೆದುಕೊಳ್ಳಲು ಬಾಬಾಸಾಹೇಬ ಅಂಬೇಡ್ಕರ್‍ರವರು ಪ್ರತಿ ವರ್ಷ ಜನವರಿ 1 ನೇ ದಿನದಂದು ಕೊರೆಗಾವ್‍ಗೆ ಬೇಟಿ ನೀಡುತ್ತಿದ್ದರು. ಏಕೆಂದರೆ ಅದು ದಲಿತರ ವೀರಗಾತೆಯನ್ನು ತಿಳಿಸುವ, ಸ್ವಾಭಿಮಾನವನ್ನು ತಿಳಿಸುವ ಸ್ತಂಭವಾಗಿತ್ತು. ಇಂದಿಗೂ ಸಹ ಬೇರೆ ಬೇರೆ ಕಡೆಯಿಂದ ದಲಿತರು ಕೊರೆಗಾವ್ ಸ್ತಂಭವನ್ನು ನೋಡಲು ಬರುತ್ತಾರೆ. ಸ್ವಾಭಿಮಾನವನ್ನು ಇಮ್ಮಡಿಗೊಳಿಸಿಕೊಂಡು ಹೋಗುತ್ತಾರೆ. ಇಂದಿನ ದಲಿತರು ಹೊಸ ವರ್ಷದ ಗುಂಗಿನಲ್ಲಿ ಕುಡಿದು ತೂರಾಡುತ್ತ ಮಜಾ ಮಾಡುವ ಬದಲು ಹೊಸ ವರ್ಷದಂದು ಸಂಸಾರ ಸಮೇತ ಕೊರೆಗಾವಿಗೆ ಭೇಟಿ ನೀಡಿ ತಂತಮ್ಮ ಕರ್ತವ್ಯವನ್ನು ನೆನಪು ಮಾಡಿಕೊಳ್ಳಬಹುದಾಗಿದೆ. ಸ್ವಾಭಿಮಾನಕ್ಕೆ ಹೋರಾಡಿದ ಆ 500 ದಲಿತರ ಮತ್ತು ವೀರ ಮರಣವನ್ನಪ್ಪಿದ 22 ದಲಿತರ ಹೆಸರನ್ನು ಹೃದಯದಲ್ಲಿರಿಸಿಕೊಂಡು ಬರಬಹುದಾಗಿದೆ. ಭಾರತದ ದಲಿತ ಲೋಕ ಹೊಸ ವರ್ಷವನ್ನು ಕೊರೆಗಾವ್ ದಿಗ್ವಿಜಯದ ನೆನೆಪಿನಲ್ಲಿ ದಲಿತರ ಶೌರ್ಯದ ದಿನವಾಗಿ ಆಚರಿಸಬಹುದಾಗಿದೆ. ಪರ್ಯಾಯ ಸಂಸ್ಕøತಿಗೆ ತಡಕಾಡುತ್ತಿರುವವರೆಲ್ಲರೂ ಜನವರಿ 1 ರಂದು ತಮ್ಮ ತಮ್ಮ ಮನೆಗಳಲ್ಲಿ "ವೀರರ ಹಬ್ಬ" ವೆಂದು ಆಚರಿಸಬಹುದಲ್ಲವೆ? ಆಚರಿಸಿಬಿಡಿ. ನಮ್ಮ ಮಕ್ಕಳೂ ವೀರರಾಗಲಿ.

ಮಂಗಳವಾರ, ಡಿಸೆಂಬರ್ 22, 2015

ತಮಿಳು ಜಾನಪದ ನೃತ್ಯಗಳು ಮತ್ತು ತಳಸಮುದಾಯದ ಬದ್ಧತೆಗಳು

 ತಮಿಳು ಜಾನಪದ ನೃತ್ಯಗಳು ಮತ್ತು ತಳಸಮುದಾಯದ ಬದ್ಧತೆಗಳು


-ಜಗದೀಶ್ ಕೊಪ್ಪ
ಇದು ಸುಮಾರು ಐದು ವರ್ಷಗಳ ಹಿಂದಿನ ಘಟನೆ. ತಮಿಳು ಭಾಷೆಯ ಪ್ರಾಚೀನ ಕವಿತೆಗಳನ್ನು ಅನುವಾದಕ್ಕಾಗಿ ಕೈಗೆತ್ತಿಕೊಂಡಿದ್ದೆ. ಸುಮಾರು ಐವತ್ತು ಕವಿತೆಗಳನ್ನು ಅನುವಾದ ಮಾಡಿ, ಅವುಗಳಿಗೆ ಒಂದು ಸುಧೀರ್ಘವಾದ ಪ್ರಸ್ತಾವನೆ ಬರೆಯಬೇಕಿತ್ತು. ಏಕೆಂದರೆ, ಭಾರತದಲ್ಲಿ ಲಿಪಿ ಆರಂಭಗೊಂಡ ಕಾಲದಿಂದಲೂ ತಮಿಳರು ಸಂಸ್ಕೃತ ಮತ್ತು ಪಾಕೃತ ಭಾಷೆಗಳಿಗೆ ಪರ್ಯಾಯವಾಗಿ ದ್ರಾವಿಡ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯನ್ನು ಮುಂಚೂಣಿಗೆ ತರುವುದರ ಜೊತೆಗೆ ಭಾರತೀಯ ಕಾವ್ಯ ಮೀಮಾಂಸೆಯ ಪರಿಕಲ್ಪನೆಯನ್ನು ಧಿಕ್ಕರಿಸಿ, ತಮ್ಮದೇ ಆದ ಕಾವ್ಯ ಮೀಮಾಂಸೆಗಳನ್ನು ಕಟ್ಟಿಕೊಂಡವರಾಗಿದ್ದರು. ಅದೇ ರೀತಿ ಭರತನ ಅಭಿನಯ ಶಾಸ್ತ್ರದ ಪಠ್ಯಕ್ಕೆ ಪರ್ಯಾಯವಾಗಿ ದೇಶಿಯಾಟಂ,, ಕೊರವಂಜಿ, ಸಾದಿರ್ ಎಂಬ ನೃತ್ಯ ಪ್ರಕಾರಗಳನ್ನುಅಸ್ತಿತ್ವಕ್ಕೆ ತಂದು ಸಂಗೀತ, ನೃತ್ಯ ಮತ್ತು ಸಾಹಿತ್ಯ ಈ ಮೂರು ಪ್ರಕಾರಗಳಲ್ಲಿ ಉತ್ತರಕ್ಕೆ ಪರ್ಯಾಯವಾಗಿ ದಕ್ಷಿಣದ ಸಂಸ್ಕೃತಿಯನ್ನು ಕಟ್ಟಿಕೊಡುವುದರ ಮೂಲಕ ಅವುಗಳಿಗೆ ಅಸ್ಮಿತೆಯನ್ನು ದೊರಕಿಸಿಕೊಟ್ಟರು ಭರತನ ನಾಟ್ಯ ಶಾಸ್ತ್ರಕ್ಕೆ ಪರ್ಯಾಯವಾಗಿ ನಮಗೆ ಶಿಲಪ್ಪದಿಗಾರಂ .ಸಾಹಿತ್ಯದಲ್ಲಿ ಎಂಟು ರಸಗಳ ಭಾವಗಳು, (ಶೃಂಗಾರ- ಇಂಬಂ, ಹಾಸ್ಯ- ನಹೈ,(ನಗೈ) ಕರುಣಾರಸ-ಅಳುಕೈ, ರೌದ್ರ-ವೆಹಲಿ, ವೀರ – ಪೆರುಮಿಟಂ, ಭಯಂಕರ- ಅಕ್ಕಂ, ಬೀಭಿತ್ಸ- ಇಳಿಯರಲ್ ಅದ್ಭುತ- ವಿಯಪ್ಪು) ಹಾಗೂ ಇವುಗಳಲ್ಲದೆ ನಾಲ್ಕು ಅಭಿನಯ, ನಾಲ್ಕು ವೃತ್ತಿ, ಎರಡು ಧರ್ಮ, ಏಳು ಬಗೆಯ ಶೌರ್ಯ ಕುರಿತಾದ ಮಾಹಿತಿಗಳಿವೆ.
ತಮಿಳಿನ ಪ್ರಾಚೀನ ಕಾವ್ಯವನ್ನು ಅವಲೋಕಿಸುವಾಗ, ವಿಶೇಷವಾಗಿ ಸಂಗಂ ಯುಗದ ಸಾಹಿತ್ಯವನ್ನು ಗಮನಿಸಿದಾಗ  ಅಲ್ಲಿನ ಅಹಂ ಮತ್ತು ಪುರಂ ಎಂಬ ಎರಡು ಪ್ರಕಾರಗಳಲ್ಲಿ ಅಥವಾ ಪರಿಕಲ್ಪನೆಯನ್ನು ಇಟ್ಟುಕೊಂಡು ಅವರು ಕವಿತೆಗಳನ್ನು ರಚನೆ ಮಾಡಿದ್ದಾರೆ. ಅಹಂ ಎನ್ನುವ ಪ್ರಕಾರದಲ್ಲಿ ಬಹುತೇಕವಾಗಿ ಪ್ರೇಯಸಿ ಮತ್ತು ಪ್ರಿಯಕರನ  ಪ್ರಣಯಗೀತೆ, ವಿರಹಗೀತೆ,ಗಳನ್ನು ಬರೆದಿದ್ದರೆ, ಪುರಂ ಪ್ರಕಾರದಲ್ಲಿ ಯುದ್ಧ, ಮತ್ತು ವೀರಗಾಥೆಗಳ ಕವಿತೆಗಳು ದಾಖಲಾಗಿವೆ, ಆಶ್ಚರ್ಯಕರ ಸಂಗತಿಯೆಂದರೆ, ತಮಿಳಿನ ಬಹುತೇಕ ಪ್ರಣಯ ಹಾಗೂ ವಿರಹ ಗೀತೆಗಳಲ್ಲಿ ಪಚ್ಚೆಕ್ಕಿಳಿ (ಹಸಿರು ಗಿಣಿ) ಪ್ರಮುಖವಾದ ಸ್ಥಾನ ಪಡೆದುಕೊಂಡಿದೆ. ಪ್ರೇಮಿಗಳು ತಮ್ಮ ವಿರಹದ ಮತ್ತು ನೋವಿನ ಭಾವನೆಗಳನ್ನು ಹಸಿರು ಗಿಣಿಗೆ ಹೇಳಿಕೊಳ್ಳುವುದರ ಮೂಲಕ ಹೊರ ಹಾಕಿರುವುದು ವಿಶೇಷವಾಗಿದೆ. ಹಾಗಾಗಿ ಭಾರತದ ಯಾವ ಭಾಷೆಯ ಕಾವ್ಯಗಳಲ್ಲೂ ಇಷ್ಟೊಂದು ಪ್ರಮಾಣದಲ್ಲಿ ಗಿಣಿಯು ಸ್ಥಾನ ಪಡೆದಿಲ್ಲ. ಈ ಕುರಿತು ಆಸಕ್ತಿ ತಾಳಿ ನಾನು ಅಧ್ಯಯನ ಮುಂದುವರಿಸಿದಾಗ ತಮಿಳಿನ ಕವಿಗಳ  ಕಾವ್ಯ ಸೃಷ್ಟಿಯ  ಹಿಂದೆ ಅಲ್ಲಿನ ಜನಪದ ಕಾವ್ಯಗಳ  ಪ್ರಭಾವ ದಟ್ಟವಾಗಿತ್ತು. ಹಾಗಾಗಿ, ತಿರುಚ್ಚನಾಪಳ್ಳಿ, ತಂಜಾವೂರು ಮತ್ತು ಮಧುರೈ ಹಾಗೂ ಸೇಲಂ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸುಮಾರು ಎಂಟನೂರು ಜನಪದ ಗೀತೆಗಳನ್ನು ಸಂಗ್ರಹಿಸಿಕೊಂಡು  ಗಂಭೀರವಾಗಿ ಅಧ್ಯಯನ ನಡೆಸುತ್ತಿದ್ದೆ. ಇದರಲ್ಲಿ ತಮಿಳು ಜನಪದ ಸಂಸ್ಕೃತಿಯ ಒಂದು ಭಾಗವಾಗಿರುವ ಕರಗಟಂ ( ಕರಗದ ಆಟ) ಎಂಬ  ಜಾನಪದ ನೃತ್ಯ ಪ್ರಕಾರದ ಕೆಲವು ಗೀತೆಗಳು ಇದ್ದವು. ತಮಿಳು ಗ್ರಾಮೀಣ ಭಾಗದಲ್ಲಿ ನಡೆಯುವ ಹಬ್ಬ ಮತ್ತು ಜಾತ್ರೆಗಳಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿರುವ ಈ ಕಲೆಯು ತಮಿಳುನಾಡಿನಲ್ಲಿ ಆದಿ ದ್ರಾವಿಡರು ಎಂದು ಕರೆಸಿಕೊಳ್ಳುವ ದಲಿತರ ಪಾರಂಪರಿಕ ಕಲೆಯಾಗಿದೆ.
ಈ ನೃತ್ಯ ಕಲೆ ಮತ್ತು ಜನಪದಗಳ ಹಾಡುಗಳ ಕುರಿತು ಒಂದು ದಿನ ನಮ್ಮ ಉದಯ ಟಿ.ವಿ. ಅಧ್ಯಕ್ಷರೂ ಹಾಗೂ ಮಾಲಿಕರಲ್ಲಿ ಒಬ್ಬರಾಗಿರುವ ಎಂ ಸೆಲ್ವಂ ಅವರಲ್ಲಿ ಪ್ರಸ್ತಾಪಿಸಿದೆ. ಮೂಲತಃ ತಂಜಾವೂರು ಜಿಲ್ಲೆಯಿಂದ ಬಂದ ಮುರುಸೋಳಿ ಸೆಲ್ವಂ ರವರು ಕರುಣಾನಿಧಿಯವರ ಸಹೋದರಿಯ ಪುತ್ರ. ಅವರ ಹಿರಿಯ ಸಹೋದರ ದಿ. ಮುರುಸೋಳಿ ಮಾರನ್ ( ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು) ಹಾಗೂ  ಸೆಲ್ವಂ ಇಬ್ಬರೂ ತಮ್ಮ ಸೋದರಮಾವ ಕರುಣಾ ನಿಧಿಯವರ ಪುತ್ರಿಯರನ್ನು ವಿವಾಹವಾಗಿದ್ದಾರೆ. ನಾನು 1981 ರಿಂದ 1984 ರ ವರೆಗೆ ಅಂದಿನ ಮದ್ರಾಸ್ ನಗರದಲ್ಲಿ ವಾಸವಿದ್ದ ಸಂದರ್ಭದಲ್ಲಿ ಸೆಲ್ವಂ ರವರು ತಮ್ಮ ಹಿರಿಯ ಸಹೋದರ ಮಾರನ್  ಸ್ಥಾಪಿಸಿದ್ದ ಡಿ.ಎಂ.ಕೆ. ಪಕ್ಷದ ಮುಖವಾಣಿ ಮುರುಸೋಳಿ ಎಂಬ ಪತ್ರಿಕೆಯ ಪತ್ರಿಕೆಯ ಸಂಪಾದಕರಾಗಿದ್ದರು. ಜೊತೆಗೆ ತಮಿಳು ಸಾಹಿತ್ಯ ಮತ್ತು ಕಲೆಯಲ್ಲಿ ಅಪಾರ ಪಾಂಡಿತ್ಯ ಹೊಂದಿರುವ ಅವರು,   ತಮ್ಮ ಸೋದರ ಮಾವ ಕರುಣಾನಿಧಿಯವರಿಂದ ಪ್ರಭಾವಿತರಾಗಿ,  ತಮಿಳು ಸಾಹಿತ್ಯ, ಕಲೆ ಇವುಗಳ ಕುರಿತು ಅಧಿಕೃತವಾಗಿ ಮಾತನಾಡುವ ಪಾಂಡಿತ್ಯ ಹೊಂದಿದ್ದಾರೆ. ತಮಿಳು ಭಾಷೆಯಲ್ಲಿ ಹತ್ತು ಲಕ್ಷ ಪ್ರಸಾರವಿರುವ ಕುಂಕುಮಂ ಎಂಬ ವಾರಪತ್ರಿಕೆಯ ಸಂಪಾದಕರಾಗಿ  ಬೆಂಗಳೂರಿನ ಉದಯ ಟಿ.ವಿ. ಕಛೇರಿಯಲ್ಲಿ ಕುಳಿತು ಪತ್ರಿಕೆಯನ್ನು ನಿರ್ವಹಿಸುತ್ತಿದ್ದಾರೆ.

ಕರಗಟಂ ನೃತ್ಯ ಕಲೆಯ ಬಗ್ಗೆ  ನಮ್ಮ ಅಧ್ಯಕ್ಷರ ಬಳಿ ಪ್ರಸ್ತಾಪಿಸಿದಾಗ, “ ಕೊಪ್ಪ, ನೀನು ತಂಜಾವೂರು ಸುತ್ತ ಮುತ್ತಾ ಯಾವಾಗಲೂ ಓಡಾಡ್ತಾ ಇರ್ತೀಯಾ,, ತಂಜಾವೂರು- ಕುಂಬಕೋಣಂ ನಡುವಿನ ಈ ಹಳ್ಳಿಗಳಲ್ಲಿ ಕರಗಟಂ ಕಲಾವಿದರ ಕೆಲವು  ಕುಟುಂಬಗಳಿವೆ. ಒಮ್ಮೆ ಅವರ ಮನೆಗೆ ಹೋಗಿ ಅವರ ತಲೆಯ ಮೇಲ್ಭಾಗ ಅಂದರೆ  ಕಲಾವಿದರ ನೆತ್ತಿಯನ್ನು ಪರೀಕ್ಷಿಸಿ ನೋಡು” ಎಂದರು. ನಾನು ಏಕೆ ಸರ್? ಎಂದು ಪ್ರಶ್ನಿಸಿದೆ. ಆವಾಗ ಅವರು ಹೇಳಿದ ಮಾತು ಕೇಳಿ ನನಗೆ ವಿಸ್ಮಯವಾಯಿತು. “ಕರಗಟಂ ಕುಟುಂಬದಲ್ಲಿ ಜನಿಸಿದ ಗಂಡು ಮಕ್ಕಳಿಗೆ ತಲೆಯ ಮೇಲಿನ ಕರಗ ಜಾರದಿರಲಿ ಎಂಬ ಉದ್ದೇಶದಿಂದ ಹತ್ತು ತಿಂಗಳ ವಯಸ್ಸಿನಿಂದ  ಮಕ್ಕಳ ನೆತ್ತಿಯನ್ನು ತಾಯಂದಿರು ತಮ್ಮ ಹಸ್ತ ದಲ್ಲಿ ತಟ್ಟಿ  ಸಮತಟ್ಟು ಮಾಡಲು ಆರಂಭಿಸುತ್ತಾರೆ. ಈ ಕೆಲಸ ಮಕ್ಕಳಿಗೆ ಸುಮಾರು ಹನ್ನೆರಡು ವರ್ಷವಾಗುವವರೆಗೂ ಮುಂದುವರಿಯುತ್ತದೆ” ಎಂಬ ಮಾಹಿತಿಯನ್ನು ಬಿಟ್ಟಿಟ್ಟರು. ನಾನು ಹಳ್ಳಿಗಳಿಗೆ ಹೋಗಿ ಕಲಾವಿದರನ್ನು ಪರೀಕ್ಷಿಸಿದಾಗ ಅವರ  ಮಾತು ನಿಜವಾಗಿತ್ತು. ಒಂದು ಕಲೆಗಾಗಿ ತಮ್ಮ ದೇಹವನ್ನು ಮತ್ತು ಬದುಕನ್ನು ಮುಡಿಪಾಗಿಡುವ ತಳಸಮುದಾಯದ ಬದ್ಧತೆ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿತು. ( ಇದೀಗ ಬಹುತೇಕ ಕಲಾವಿದರ ಕುಟುಂಬಗಳು ತಂಜಾವೂರು ಹಳೆಯ ಬಸ್ ನಿಲ್ದಾಣದ ಬಳಿ ಅರಮನೆಗೆ( ಸರಸ್ವತಿ ಮಹಲ್) ಹೋಗುವ ದಾರಿಯಲ್ಲಿರುವ ಹರಿಜನ ಕೇರಿಯಲ್ಲಿ ವಾಸಿಸುತ್ತಿದ್ದಾವೆ)

ಇದು ಕಲಾವಿದರ ಬದುಕಾದರೆ, ಅವರ ಕರಗಟಂ ನೃತ್ಯಕ್ಕೆ ಪಕ್ಕವಾದ್ಯ ಅಂದರೆ, ವಾದ್ಯ, ಡೋಲು ನುಡಿಸುವ ಕಲಾವಿದರ ಮೂಲ ಹುಡುಕಿದರೆ, ಅವರೆಲ್ಲರೂ ರಾಜರ ಆಸ್ಥಾನದಲ್ಲಿದ್ದ ಚಿನ್ನ ಮೇಳಂ ( ಕಿರಿಯ ಮೇಳ) ಅಂದರೆ, ಅರಮನೆಯಲ್ಲಿ ನಡೆಯುತ್ತಿದ್ದ ರಾಜದಾಸಿಯರ ನೃತ್ಯಕ್ಕೆ ವಾದ್ಯ ಭಾರಿಸುತ್ತಿದ್ದ ಕಲಾವಿದರು ಹಾಗೂ ದೇವಸ್ಥಾನದ ಪೂಜೆ, ರಥೋತ್ಸವದಲ್ಲಿ ನೃತ್ಯ ಮಾಡುತ್ತಿದ್ದ ದೇವದಾಸಿಯರಿಗೆ ವಾದ್ಯ ನುಡಿಸುತ್ತಿದ್ದ ಪೆರಿಯ ಮೇಳಂ( ಹಿರಿಯವರ ಮೇಳ) ಕಲಾವಿದರ ಕುಟುಂಬದವರಿಂದ ಬಂದವರಾಗಿದ್ದರು. ಹೀಗೆ ಪ್ರಾಚೀನ ತಮಿಳು ಕವಿತೆಗಳ ಅಧ್ಯಯನ ಮಾಡಲು ಹೊರಟ ನನ್ನನ್ನು ಈ ಹುಡುಕಾಟ “ ದಕ್ಷಿಣ ಭಾರತದ ದೇವದಾಸಿಯರ ಇತಿಹಾಸ” ಕುರಿತ ಅಧ್ಯಯನದತ್ತ  ಕರೆದೊಯ್ದು ನಿಲ್ಲಿಸಿತು. ಹಾಗಾಗಿ ಕಳೆದ ಮೂರು ವರ್ಷಗಳಿಂದ ಗೆಳೆಯರು, ಸಮಾರಂಭಗಳು, ಹರಟೆ, ಮೋಜನ ಪ್ರವಾಸ ಎಲ್ಲವುಗಳಿಂದ ದೂರವಾಗಿ ರಾಶಿ, ರಾಶಿ ಮಾಹಿತಿಗಳನ್ನು ಮುಂದಿಟ್ಟುಕೊಂಡು ಕುಳಿತಿದ್ದೀನಿ.

ಕೊನೆಯ ಮಾತು- ಈಗ ಕರಗಟಂ ನೃತ್ಯದಲ್ಲಿ ಹಿಂದಿನ ಪರಿಶುದ್ಧತೆ ಉಳಿದಿಲ್ಲ. ಕಲಾವಿದರು ಹೊಟ್ಟೆ ಪಾಡಿಗಾಗಿ ಹಬ್ಬ ಮತ್ತು ಜಾತ್ರೆಗಳಲ್ಲಿ ಯುವಕರು ನೀಡುವ ಹಣದ ಆಮೀಷಕ್ಕೆ ಬಲಿ ಬಿದ್ದು, ತಮ್ಮ ಹೆಣ್ಣು ಮಕ್ಕಳಿಗೆ ತುಂಡು ಉಡುಗೆ ತೊಡಿಸಿ, ಅಶ್ಲೀಲವಾದ ತಮಿಳು ಸಿನಿಮಾ ಹಾಡುಗಳಿಗೆ ಕುಣಿಯುವಂತೆ ಮಾಡಿದ್ದಾರೆ.

ರೈತರ ಆತ್ಮಹತ್ಯೆ ಕುರಿತ ಸಾಕ್ಷ್ಯ ಚಿತ್ರ " ಧರೆ ಹೊತ್ತಿ ಉರಿದೊಡೆ" ಕುರಿತು ಒಂದಿಷ್ಟು ಅನಿಸಿಕೆಗಳು-ಜಗದೀಶ ಕೊಪ್ಪ.

ನಮ್ಮ ನಡುವಿನ ಹಿರಿಯ ಪತ್ರಕರ್ತರಾದ ಕೆ.ಜಿ. ವಾಸುಕಿ ( ಕೆಸ್ತೂರು ಗುಂಡಪ್ಪ ವಾಸುಕಿ) ಯವರು  ಹಾಗೂ ಇನ್ನೋರ್ವ ಹಿರಿಯ ಪತ್ರಕರ್ತೆ ಮಾಯಾ ಜಗದೀಪ್ ಇವರ ಜೊತೆಗೂಡಿ ನಿರ್ಮಿಸಿರುವ ರೈತರ , ವಿಶೇಷವಾಗಿ ರೈತರ ಆತ್ಮಹತ್ಯೆಯನ್ನು ಗುರಿಯಾಗಿರಿಸಿಕೊಂಡು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಯಾರಿಸಿರುವ ಸುಮಾರು 29 ನಿಮಿಷಗಳ ಸಾಕ್ಷ್ಯ ಚಿತ್ರ “ ಧರೆ ಹೊತ್ತಿ ಉರಿದೊಡೆ” ನಮ್ಮೆಲ್ಲರ ಕಣ್ಣು ತೆರೆಸುವಂತಿದೆ.
ಈ ತಲೆ ಮಾರಿನ ಪತ್ರಕರ್ತರಿಗೆ ವಾಸುಕಿಯವರು ಅಪರಿಚಿತರಾಗಿ ಉಳಿದಿದ್ದಾರೆ. ಆದರೆ ಅವರು ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿದ್ದುಕೊಂಡು, ಸುಮಾರು ಎರಡು ದಶಕಗಳ ಕಾಲ ಏಷ್ಯಾ ನ್ಯೂಸ್ ಇಂಟರ್ ನ್ಯಾಷನಲ್ ಎಂಬ ಜಗತ್ ಪ್ರಸಿದ್ಧ ರಾಯಿಟರ್ ಸುದ್ಧಿ ಸಂಸ್ಥೆಯ  ದಕ್ಷಿಣ ಏಷ್ಯಾ ವಿಭಾಗದ ಅಂಗ ಸಂಸ್ಥೆಯಾದ ದ ಏಷ್ಯಾ ನ್ಯೂಸ್ ಇಂಟರ್ ನ್ಯಾಷನಲ್ ಸುದ್ದಿ ಸಂಸ್ಥೆಯ ದಕ್ಷಿಣ ಭಾರತದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದವರು. (ಇದೀಗ ದೆಹಲಿಯ ಪಯೋನಿರ್ ಇಂಗ್ಲೀಷ್ ದಿನಪತ್ರಿಕೆಯ ಕರ್ನಾಟಕದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.) ಹೀಗೆ ಅಂತರಾಷ್ರೀಯ ಮಟ್ಟದ ದೃಶ್ಯ ಮಾಧ್ಯಮದಲ್ಲಿ ಸೇವೆ ಸಲ್ಲಿಸಿರುವ ವಾಸುಕಿ ಮತ್ತು ದೂರದರ್ಶನದಲ್ಲಿ ಸೇವೆ ಸಲ್ಲಿಸಿರುವ ಮಾಯಾ ಜಗದೀಪ್ ಇಬ್ಬರೂ ತಮ್ಮ ಅನುಭವ, ಮತ್ತು ನೆಲದ ಸಂಸ್ಕೃತಿಯ ಕುರಿತು ತಮಗಿರುವ  ಅಪಾರ ಕಾಳಜಿ ಪ್ರೀತಿ ಮತ್ತು ಬದ್ಧತೆಯನ್ನು ಈ ಸಾಕ್ಷ್ಯ ಚಿತ್ರದ ಮೂಲಕ ಸಾಭೀತು ಪಡಿಸಿದ್ದಾರೆ. ಸಾಕ್ಷ್ಯ ಚಿತ್ರಕ್ಕೆ ನೀಡಿರುವ “ ಧರೆ ಹೊತ್ತಿ ಉರಿದೊಡೆ” ಎಂಬ ವಚನದ ಸಾಲೊಂದರ ಶೀರ್ಷಿಕೆ ಹಾಗೂ ಸಂದರ್ಭಾನುಸಾರವಾಗಿ ಬಳಕೆಯಾಗಿರುವ ಇತರೆ ವಚನಗಳು, ಕುವೆಂಪು ಗೀತೆ, ಕುಮಾರವ್ಯಾಸ ಕಾವ್ಯ ಹೀಗೆ ತಮ್ಮ ಕನ್ನಡದ ಮೇಲಿನ ಪ್ರೀತಿಯನ್ನು ರೈತರ ಸಮಸ್ಯೆಯನ್ನು ಕಟ್ಟಿಕೊಡುವಾಗ ಪರಿಣಾಮಕಾರಿಯಾಗಿ ಬಳಸಿದ್ದಾರೆ.
ವಾಸುಕಿ ಅಂತರಾಷ್ಟ್ರೀಯ ಮಟ್ಟದ ಇಂಗ್ಲೀಷ್ ಮಾಧ್ಯಮದ ಪತ್ರಕರ್ತರಾಗಿ ಇವೊತ್ತಿಗೂ ನನ್ನ ತಲೆ ಮಾರಿಗೆ ಮಾದರಿಯಾದವರು. ಭಾರತದ ಪತ್ರಿಕೋದ್ಯಮದಲ್ಲಿ ಗ್ರಾಮೀಣ ಭಾರತದ ಬವಣೆಗಳಿಗೆ ಅವಕಾಶ ಕಲ್ಪಿಸಿಕೊಟ್ಟು ಅದನ್ನು ಜಾಗತಿಕ ಸಮಸ್ಯೆಯಾಗಿ ಪರಿಗಣಿಸುವಂತೆ, ತಮ್ಮ ನಿರಂತರ ಅಧ್ಯಯನ ಮತ್ತು ಲೇಖನಗಳ ಮೂಲಕ ಪರೋಕ್ಷ ಒತ್ತಡ ಹೇರಿದ ಪಿ. ಸಾಯಿನಾಥ್ ರವರ ಜೊತೆ ನಿರಂತರ ಒಡನಾಡಿರುವ ಕೆ.ಜಿ. ವಾಸುಕಿಯವರಯ ಕರ್ನಾಟಕ ರೈತರ ಸಮಸ್ಯೆಗಳ ಕುರಿತಂತೆ  ಅವರ ಜೊತೆಯಲ್ಲಿ ಕರ್ನಾಟಕವನ್ನು ಸುತ್ತಿದವರು. ಹಾಗಾಗಿ ಈ ಸಾಕ್ಷ್ಯ ಚಿತ್ರದಲ್ಲಿ ನಿಖರವಾದ ಅಧ್ಯಯನ, ಆಳವಾದ ಸಂಶೋಧನೆ ಮತ್ತು ಸಮಸ್ಯೆಯನ್ನು ನಿಖರವಾಗಿ ಗುರುತಿಸುವ ಬೌದ್ಧಿಕ ಶಕ್ತಿ ಎಲ್ಲವೂ ಎದ್ದು ಕಾಣುತ್ತವೆ.
ನನಗಿನ್ನೂ ನೆನಪಿದೆ.  2002 ರ ಶ್ರಾವಣ ಮಾಸದ ಸಮಯ. ಎಸ್. ಎಂ. ಕೃಷ್ಣ ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದರು. ಹುಬ್ಬಳ್ಳಿಯ  ಉದಯ ಟಿ.ವಿ.ಯ ಪ್ರಾದೇಶಿಕ ಕಛೇರಿಯ ಮುಖ್ಯಸ್ಥನಾಗಿ  ವರ್ಗವಾಗಿ ಬಂದಿದ್ದೆ. ನನ್ನ ಕುಟುಂಬ ಮಂಡ್ಯ ನಗರದಲ್ಲಿ ವಾಸವಾಗಿತ್ತು. ಪ್ರತಿ ಹದಿನೈದು ದಿನ  ಅಥವಾ ತಿಂಗಳಿಗೆ ಎರಡು ದಿನ ರಜೆ ಹಾಕಿ ಮಂಡ್ಯಕ್ಕೆ ಹೋಗುತ್ತಿದ್ದೆ. ಒಂದು ದಿನ ಬೆಳಿಗ್ಗೆ ಮಂಡ್ಯ ಜಿಲ್ಲೆಯ ಈ ಟಿ.ವಿ.ಯ ವರದಿಗಾರರಾಗಿದ್ದ ಇಳೆಕಾನ್ ಶ್ರೀಕಂಠ ಎಂಬ ಹಿರಿಯ ಪತ್ರಕರ್ತರ ಜೊತೆ ಕಾಫಿ ಕುಡಿಯುತ್ತಾ  ಹರಿಪ್ರಿಯ ಹೋಟೆಲ್ ನಲ್ಲಿ ಕುಳಿತಿದ್ದೆ. ಅದು ಸುಮಾರು ಬೆಳಗಿನ ಒಂಬತ್ತು ಗಂಟೆಯ ಸಮಯ. ಆ ದಿನ ಮದ್ದೂರು ಪಟ್ಟಣದ ಸುಮಾರು ಮೂರು ಮೈಲಿ ದೂರವಿರುವ ವರಗೇರಹಳ್ಳಿ ಎಂಬ ಗ್ರಾಮದಲ್ಲಿ ಶಂಕರೇಗೌಡ ಎಂಬ ರೈತ ಆತ್ಮ ಹತ್ಯೆ ಮಾಡಿಕೊಂಡಿದ್ದ. ವಾಸುಕಿಯವರಿಂದ ಶ್ರೀಕಂಠ ರವರಿಗೆ ಪೋನ್ ಬಂತು. ನಾನು ಮಂಡ್ಯಕ್ಕೆ ಬಂದಿರುವುದಾಗಿ ಶ್ರೀಕಂಠ ವಾಸುಕಿಗೆ ತಿಳಿಸಿದರು. ನನ್ನ ಜೊತೆ ಮಾತನಾಡಿದ ಅವರು ಸಾಯಿನಾಥ್ ಬೆಂಗಳೂರಿನಲ್ಲಿದ್ದಾರೆ. ನಾವಿಬ್ಬರೂ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ರೈತನ ಅಂತ್ಯ ಕ್ರಿಯೆಗೆ ಬರುವುದಾಗಿ ತಿಳಿಸಿದರು.
ನಾನು ಮತ್ತು ಕೂಡಲೇ ವರಗೇರಳ್ಳಿಯ ರೈತ ಮುಖಂಡನಾಗಿದ್ದ ವಿ.ಅಶೋಕ್ ಗೆ ವಿಷಯ ತಿಳಿಸಿ ಅವರು ಬರುವವರೆಗೂ ಅಂತ್ಯಕ್ರಿಯೆ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದೆವು. ಆ ದಿನ ಜಿಟಿ.ಜಿಟಿ ಮಳೆ. ವಾಸುಕಿ ಮತ್ತು ಸಾಯಿನಾಥ್ ಮದ್ದೂರು ತಲುಪುವುದು ಮೂರು ಗಂಟೆಯಾಯಿತು. ಆದರೆ. ಮಧ್ಯಾಹ್ನ ಎರಡು ಗಂಟೆಯವರೆಗೆ ಕಾದಿದ್ದ ಊರಿನ ಜನತೆ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ದೇಹವನ್ನು ಒಣಗಿದ ಕಟ್ಟಿಗೆಗಳ ನಡುವೆ ಇಟ್ಟು. ಮಳೆಯ ಕಾರಣ ಸೀಮೆ ಎಣ್ಣೆ, ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದರು. ವರಗೇರಹಳ್ಳಿ ಗ್ರಾಮಕ್ಕೆ ಬರುವದರೊಳಗೆ ಚಿತೆ ಹೊತ್ತಿ ಉರಿದು ಬೂದಿಯಾಗಿತ್ತು. ನಂತರ ವಾಸುಕಿ, ಸಾಯಿನಾಥ್ ಇಬ್ಬರೂ ಮೃತ ರೈತನ ಮನೆಗೆ ತೆರಳಿ, ವಿಧವೆ ಪತ್ನಿಯ ಚಿತ್ರ ತೆಗೆದುಕೊಂಡು, ರೈತನ ಜಮೀನಿನ ವಿವರ, ಮಾಡಿದ್ದ ಸಾಲದ ವಿವರ ಇವುಗಳನ್ನು ತಮ್ಮ ಡೈರಿಯಲ್ಲಿ ದಾಖಲಿಸಿಕೊಂಡು ವಾಪಸ್ ಬೆಂಗಳೂರಿಗೆ ತೆರಳಿದರು.
ಈ ಘಟನೆ ನಡೆದ ಎರಡು ವರ್ಷಗಳ ನಂತರ ಒಮ್ಮೆ ಸಾಯಿನಾಥ್ ರವರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿರುವಾಗ ಮದ್ದೂರಿನ ಎಳನೀರು ಮಾರುಕಟ್ಟೆಯ ಬಳಿ ಎಳನೀರು ಕುಡಿಯಲು ನಿಂತಾಗ ಅವರಿಗೆ ವರಗೇರಳ್ಳಿ ಗ್ರಾಮ ನೆನಪಾಗಿ ಮತ್ತೇ ಮೃತ ರೈತನ ಮನೆಗೆ ಬೇಟಿ ಕೊಟ್ಟರು. ಆದಿನ ಮೃತ ರೈತನ ಪತ್ನಿ ಮನೆಗೆ ಬೀಗ ಹಾಕಿ ಊರಾಚೆಗಿನ ಬಯಲಿನಲ್ಲಿ ಇದ್ದ ಹಸುವೊಂದನ್ನು ಮೇಯಿಸುತ್ತಾ ಕುಳಿತಿದ್ದಳು. ಕಾರಿನ ಚಾಲಕನ ನೆರವಿನಿಂದ ಆಕೆಯನ್ನು ಬೇಟಿಮಾಡಿ  ಸ್ಥಿತಿಗತಿ ವಿಚಾರಿಸಿಕೊಂಡಿದ್ದರು. ಸರ್ಕಾರದಿಂದ ಪರಿಹಾರದ ಹಣ ಬಂದಿರಲಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಸಿಗುತ್ತಿದ್ದ ತಿಂಗಳಿಗೆ ಒಂದು ಕೇಜಿ ಸಕ್ಕರೆ, ಮೂರು ಕೆ,ಜಿ, ಗೋಧಿ ಮತ್ತು ಐದು ಕೆ.ಜಿ. ಅಕ್ಕಿ ಆಕೆಗೆ ಆಸರೆಯಾಗಿದ್ದವು. ಈ ಕುರಿತು ಹಿಂದೂ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಸುಧೀರ್ಘ ಲೇಖನ ಬರೆದ ಪಿ.ಸಾಯಿನಾಥ್ ರವರು, ಮೃತ ರೈತನ ಪತ್ನಿಗೆ ಸರ್ಕಾರ ನಿಗದಿ ಪಡಿಸಿರುವ ದಿನ ನಿತ್ಯದ ಪಡಿತರ ಅಂದರೆ, ದಿನಕ್ಕೆ 33 ಗ್ರಾಂ ಸಕ್ಕರೆ, 67 ಗ್ರಾಂ ಗೋಧಿ, 167 ಗ್ರಾಂ ಅಕ್ಕಿಯ ಜೊತೆ ಜೈಲುಗಳಲ್ಲಿ ಕೊಲೆ ಸುಲಿಗೆ ಮಾಡಿರುವ ಖೈದಿಗಳಿಗೆ ನಿಗದಿ ಪಡಿಸಿರುವ ಪಡಿತರ ದಿನವೊಂದಕ್ಕೆ 60 ಗ್ರಾಂ ಬೇಳೆ, 80 ಗ್ರಾಂ ತರಕಾರಿ, 200 ಗ್ರಾಂ ಅನ್ನ, ವಾರಕ್ಕೆ 120 ಗ್ರಾಂ ಮಾಂಸ, ಮತ್ತು ಒಂದು ಮೊಟ್ಟೆ ಹಾಗೂ ತಲೆಗೆ 10 ಗ್ರಾಂ ಎಣ್ಣೆ ಈ ಸವಲತ್ತುಗಳ ಜೊತೆಗೆ ಹೋಲಿಕೆ ಮಾಡಿ ಅನ್ನದಾತನ ಪತ್ನಿ ಹೇಗೆ ನಿರ್ಗತಿಕಳಾಗಿ ಬದುಕುತ್ತಿದ್ದಾಳೆ ಎಂಬುದನ್ನು ನಾವು ಈವರೆಗೆ ಗ್ರಹಿಸಲಾಗದ ಸತ್ಯ ಸಂಗತಿಗಳೊಂದಿಗೆ ದಾಖಲಿಸಿದ್ದರು.

ರೈತರ ಜ್ವಲಂತ ಸಮಸ್ಯೆಗಳ ಕುರಿತು ಇಂತಹ  ಆಳವಾದ ಒಳನೋಟಗಳನ್ನು ಸಾಯಿನಾಥ್ ಮೂಲಕ ದಕ್ಕಿಸಿಕೊಂಡಿರುವ ಪತ್ರಕರ್ತ ವಾಸುಕಿಯವರು ಸಾಕ್ಷ್ಯ ಚಿತ್ರದಲ್ಲಿ ಸಮಸ್ಯೆಯ ಮೂಲಕ್ಕೆ ಕೈ ಹಾಕಿದ್ದಾರೆ. ರೈತ ಬೆಳೆದ ಫಸಲಿಗೆ ಸೂಕ್ತ ಬೆಲೆ ಸಿಗದೆ, ಅದರ ಪ್ರತಿಫಲವನ್ನು ಮಾರುಕಟ್ಟೆಯ ದಲ್ಲಾಳಿಗಳು ಮತ್ತು ವರ್ತಕರು ನುಂಗಿ ನೀರು ಕುಡಿಯುತ್ತಿರುವುದನ್ನು ಸಮರ್ಥವಾಗಿ ದಾಖಲಿಸಿದ್ದಾರೆ. ಇದಕ್ಕಾಗಿ ಬಾಗಲಕೋಟೆಯ ಮಹಾಲಿಂಗ ಪುರದ ಬೆಲ್ಲದ ಮಾರುಕಟ್ಟೆ, ಮದ್ದೂರಿನ ಎಳನೀರಿನ ಮಾರುಕಟ್ಟೆ, ರಾಮನಗರದ ರೇಷ್ಮೆ ಮಾರುಕಟ್ಟೆ ಇಲ್ಲಿಗೆ ಬೇಟಿ ನೀಡಿ ಎಲ್ಲಾ ಬಗೆಯ ರೈತರ ಬವಣೆಗಳನ್ನು ದಾಖಲಿಸಿದ್ದಾರೆ. ಜೊತೆಗೆ ರೈತರ ಆತ್ಮಹತ್ಯೆ ಕುರಿತಂತೆ ಮನರೋಗ ತಜ್ಞರು,  ಬೆಲೆ ಏರಿಳಿತ ಕುರಿತಂತೆ  ಮಾರುಕಟ್ಟೆಯ ತಜ್ಞರ ಸಂದರ್ಶನ ನಡೆಸಿದ್ದಾರೆ. ರೈತರ ಫಲವತ್ತಾದ ಭೂಮಿ ಅಭಿವೃದ್ಧಿಯ ನೆಪದಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಬಲಿಯಾಗುತ್ತಿರುವ ಸನ್ನಿವೇಶವನ್ನು ಇಲ್ಲಿ ಪ್ರಸ್ತಾಪಿಸಿರುವುದು ಈ ಸಾಕ್ಷ್ಯ ಚಿತ್ರದ ವಿಶೇಷ.
ರೈತರ ಸಮಸ್ಯೆಗೆ ಹೆಗಲಿಗೆ ಕೇವಲ  ಹಸಿರು ಟವಲ್ ಹಾಕಿಕೊಂಡು ಬೀದಿಗಿಳಿದು ಪ್ರತಿಭಟನೆ ಮಾಡಿದರೆ, ಸಾಲದು ಇಡೀ ವ್ಯವಸ್ಥೆ ಎಲ್ಲಿ ಎಡವಿದೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.  ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ತಯಾರಾಗಿರುವ ಈ ಸಾಕ್ಷ್ಯ ಚಿತ್ರವನ್ನು ನಾವೆಲ್ಲರೂ ನೋಡಲೇ ಬೇಕಿದೆ. ಇಂತಹ ಒಂದು ಅಪರೂಪದ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿರುವ ವಾಸುಕಿ ಮತ್ತು ಮಾಯಾ ಅವರಿಗೆ  ರೈತರ ಪರವಾಗಿ ಅಭಿನಂದನೆಗಳು ಮತ್ತು ಕೃತಜ್ಞತೆಗಳು.

 ಇದೇ ಅಕ್ಟೋಬರ್ 30 ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಸ್ಪೀಕರ್ ಶ್ರೀ ಕಾಗೂಡು ತಿಮ್ಮಪ್ಪನವರಿಂದ ಈ ಸಾಕ್ಷ್ಯ ಚಿತ್ರ ಬಿಡುಗಡೆಯಾಗುತ್ತಿದೆ. ಆಸಕ್ತರು ಸಾಕ್ಷ್ಯ ಚಿತ್ರದ ಮಾಹಿತಿಗಾಗಿ ಕೆ.ಜಿ.ವಾಸುಕಿ. ಮೊಬೈಲ್. ನಂ.9845032321 ಮತ್ತು ಮಾಯಾಜಗದಿಪ್ -94484900006 ಇವರನ್ನು ಸಂಪರ್ಕಿಸಬಹುದು.

ಕರ್ನಾಟಕ ಜಾನಪದ :ಒಂದು ವಿಸ್ತಾರ ನೋಟ

  ಕರ್ನಾಟಕ ಜಾನಪದ :ಒಂದು ವಿಸ್ತಾರ  ನೋಟ


ಸೌಜನ್ಯ:https://kn.wikisource.org
ಲಿಂಕ್
  ಕರ್ನಾಟಕ ಜಾನಪದ : ಕರ್ನಾಟಕ ಜಾನಪದ ಅಧ್ಯಯನವನ್ನು ಕೈಗೊಳ್ಳುವಾಗ ಸೌಲಭ್ಯ ದೃಷ್ಟಿಯಿಂದ ಹಲವು ಪ್ರಾದೇಶಿಕ ವಿಭಾಗಗಳನ್ನು ಮಾಡಿಕೊಳ್ಳಬೇಕಾದುದು ಅನಿವಾರ್ಯವೆನಿಸುತ್ತದೆ. ಕೆಲವು ಜಾನಪದ ಪ್ರಕಾರಗಳು ವಿಶ್ವ ವ್ಯಾಪಕ ಆಶಯಗಳನ್ನು ಪಡೆದಿದ್ದರೂ ಪ್ರಾದೇಶಿಕ ಎನ್ನಬಹುದಾದ ಕೆಲವು ಬಗೆಗಳನ್ನೂ ಗುರುತಿಸಬಹುದು. ಭಾಷಿಕ, ಸಾಂಸ್ಕೃತಿಕ, ಭೌಗೋಳಿಕ ಹಿನ್ನೆಲೆಗಳಲ್ಲಿ ಇಂಥ ವಿಭಜನೆ ಸಾಧ್ಯವಾಗುತ್ತದೆ. ಕರ್ನಾಟಕ ಜಾನಪದವನ್ನು ಅಭ್ಯಸಿಸುವಾಗ ಪ್ರಾದೇಶಿಕವಾಗಿ ಐದು ಪ್ರಮುಖ ವಿಭಾಗಗಳನ್ನು ಮಾಡಿಕೊಳ್ಳಬಹುದು. 1. ದಕ್ಷಿಣ ಕರ್ನಾಟಕ (ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು ಜಿಲ್ಲೆಗಳು). 2. ಉತ್ತರ ಕರ್ನಾಟಕ (ಧಾರವಾಡ, ಬೆಳಗಾಂ, ಬಿಜಾಪುರ, ಗುಲ್ಬರ್ಗ, ಬಿದರೆ, ರಾಯಚೂರು, ಹಾಗೂ ಬಳ್ಳಾರಿ ಜಿಲ್ಲೆಗಳು). 3. ಉತ್ತರ ಕನ್ನಡ ಜಿಲ್ಲೆ. 4. ದಕ್ಷಿಣ ಕನ್ನಡ ಜಿಲ್ಲೆ (ಕಾಸರಗೋಡಿನ ಭಾಗಗಳನ್ನೂ ಒಳಗೊಂಡಂತೆ). 5. ಕೊಡಗು. ಸಮಗ್ರ ಕರ್ನಾಟಕದ ಜನಪದ ಸಾಹಿತ್ಯ, ಕಲೆಗಳು, ಸಂಪ್ರದಾಯಗಳು, ಆಚರಣೆಗಳು, ವೈದ್ಯ, ಕ್ರೀಡೆಗಳು, ಮುಂತಾದವಕ್ಕೆ ಸಂಬಂಧಿಸಿದಂತೆ ಪರಿಶೀಲನೆಯನ್ನು ಕೈಗೊಂಡರೆ ಬಹುಮಟ್ಟಿಗೆ ಸಾಮ್ಯ ಕಂಡುಬಂದರೂ ಆಯಾ ಪ್ರದೇಶಕ್ಕೆ ವಿಶಿಷ್ಟವಾದ ಕೆಲವು ಬಗೆಗಳು ಲಭ್ಯವಾಗುತ್ತವೆ. ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕಾರಣಗಳಿಂದಾಗಿ ಇಂಥ ಪ್ರಮುಖ ಭೇದಗಳು ಉಳಿದು ಬರುತ್ತವೆ. ಪ್ರಾದೇಶಿಕ ಹಿನ್ನೆಲೆಯ ವಿಭಾಗ ಕ್ರಮ ಅವುಗಳ ವಿವರವಾದ ಅಧ್ಯಯನಕ್ಕೆ ಪುರಕವಾಗುತ್ತದೆ.
ಕರ್ನಾಟಕದಲ್ಲಿ ಜಾನಪದ ಸಂಗ್ರಹ ಕಳೆದ ಶತಮಾನದಿಂದ ನಡೆಯುತ್ತಿದ್ದರೂ ಗೀತೆ, ಲಾವಣಿ, ಗಾದೆ- ಹೀಗೆ ಕೆಲವು ಪ್ರಕಾರಗಳಿಗೆ ಸೀಮಿತವಾದಂತೆ ಮಾತ್ರ ಅದು ನಡೆಯುತ್ತಿದ್ದು ಕ್ರಮಬದ್ಧವಾದ, ವೈಜ್ಞಾನಿಕವಾದ ಸಂಗ್ರಹ ಈ ದಶಕದಲ್ಲಿ ಆರಂಭವಾಯಿತೆನ್ನಬಹುದು. ಜಾನಪದದ ಎಲ್ಲ ಪ್ರಕಾರಗಳಲ್ಲಿಯೂ ಇತ್ತೀಚೆಗೆ ಸಂಗ್ರಹ ಕಾರ್ಯ ನಡೆಯುತ್ತಿರುವುದು ಕಂಡುಬರುತ್ತಿದೆ. ಸಮಗ್ರ ಕರ್ನಾಟಕದ ಜಾನಪದ ಸಂಗ್ರಹ, ಸಂಶೋಧನೆಗಳು ಪ್ರಾದೇಶಿಕ ಹಿನ್ನೆಲೆಯಲ್ಲಿ, ಶಾಸ್ತ್ರೀಯ ಕ್ರಮಗಳಲ್ಲಿ ನಡೆಯಲು ಕೆಳಕಂಡ ಪರಿಶೀಲನ ಲೇಖನಗಳು ಸಹಾಯಕವಾಗುತ್ತವೆ. ದಕ್ಷಿಣ ಕರ್ನಾಟಕದ ಜಾನಪದ: ಅತ್ಯಂತ ವಿಸ್ತಾರವಾದ ಉತ್ತರ ಕರ್ನಾಟಕದ ಹಾಗೂ ದಕ್ಷಿಣ ಕರ್ನಾಟಕದ ಪ್ರದೇಶಗಳ ಜಾನಪದದ ವಿವಿಧ ಪ್ರಕಾರಗಳಲ್ಲಿ ಬಹುಮಟ್ಟಿನ ಸಾಮ್ಯ ಕಂಡುಬಂದರೂ ಜನಪದ ಕಲೆಗಳಲ್ಲಿ, ಸಾಹಿತ್ಯದಲ್ಲಿ ಸಾಕಷ್ಟು ವೈವಿಧ್ಯವನ್ನು ಗುರುತಿಸಬಹುದು. ಉಳಿದ ಭಾಗಗಳು ಬಹಳ ಚಿಕ್ಕವಾದರೂ ಭೌಗೋಳಿಕ ಕಾರಣಗಳಿಂದಾಗಿ ಆಯಾ ಪ್ರದೇಶಗಳಿಗೆ ವಿಶಿಷ್ಟವಾದ ಕೆಲವು ಜಾನಪದ ಬಗೆಗಳು ತೋರಿಬರುತ್ತವೆ. ಸಮಗ್ರ ಕರ್ನಾಟಕದ ಸಂಸ್ಕೃತಿಯನ್ನು ಅಖಂಡವಾಗಿ ಪರಿಶೀಲಿಸುವಾಗ ಪ್ರಾದೇಶಿಕ ವೈವಿಧ್ಯಗಳನ್ನು ಉಪೇಕ್ಷಿಸುವಂತಿಲ್ಲ. 
 ಕೊಡಗಿನ ಹುತ್ತರಿ ಕುಣಿತ, ಬೊಳ್ಕಾಟಗಳು, ಕೈಲ್ ಮಹೋತ್ಸವಗಳು ಅಲ್ಲಿಗೆ ಮಾತ್ರ ಮೀಸಲಾದವು. ದಕ್ಷಿಣ ಕನ್ನಡ ಜಿಲ್ಲೆಯ ಭೂತಾರಾಧನೆಯ ಹಿನ್ನೆಲೆಯಲ್ಲಿ ಬರುವ ಪಾಡ್ದನ ಸಂಪ್ರದಾಯ, ಕೋಲ, ನೇಮಗಳು ಆಟಿಕೊಡೆಂಜ ಬೈದ್ಯನೃತ್ಯ ಮುಂತಾದವು ಬೇರೆಡೆಗಳಲ್ಲಿಲ್ಲ. ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಗೌಡರ ಕುಣಿತ ಕರ್ನಾಟಕದ ಬೇರೆಡೆಗಳಲ್ಲಿ ಲಭ್ಯವಾಗುವುದಿಲ್ಲ. ಉತ್ತರ ಕರ್ನಾಟಕದ ಕರಡಿಮಜಲು, ಗೊಂದಲಿಗರ ಮೇಳ, ಶ್ರೀಕೃಷ್ಣಪಾರಿಜಾತ ಮುಂತಾದವು ಉಳಿದೆಡೆಗಳಲ್ಲಿ ತುಂಬ ವಿರಳವೆನ್ನಬೇಕು. ದಕ್ಷಿಣ ಕರ್ನಾಟಕದ ಕಂಸಾಳೆ ಮೇಳ, ನೀಲಗಾರರ ಸಂಪ್ರದಾಯ, ಅಂಟಿಕ ಪಂಟಿಕೆ, ಭಾಗವಂತಿಕೆ ಮೇಳಗಳು ಇತರ ಪ್ರದೇಶಗಳಲ್ಲಿ ಕಾಣಬರುವುದಿಲ್ಲ. ಹೀಗೆ ಭಾಷಿಕ, ಧಾರ್ಮಿಕ, ಜನಾಂಗಿಕ ಹಾಗೂ ಭೌಗೋಳಿಕ ಕಾರಣಗಳಿಂದಾಗಿ ವಿಭಿನ್ನ ಜಾನಪದ ಸಂಪ್ರದಾಯಗಳು ಕರ್ನಾಟಕ ಸಂಸ್ಕೃತಿಯ ವ್ಯಾಪ್ತಿಯನ್ನು, ವೈಶಿಷ್ಟ್ಯವನ್ನು ಒಂದು ವಿಸ್ತಾರವಾದ ಭೂಮಿಕೆಯ ಮೇಲೆ ಕಡೆದು ನಿಲ್ಲಿಸುತ್ತವೆ. ಹಾಗೆಯೇ ಸಮಗ್ರ ಕರ್ನಾಟಕ ವ್ಯಾಪ್ತಿಯನ್ನು ಪಡೆದ ಜಾನಪದ ಪ್ರಕಾರಗಳೂ ಗಮನಾರ್ಹವಾಗಿಯೇ ತೋರಿ ಬರುತ್ತವೆ. ಜನಪದ ಕಥೆ, ಗೀತೆ, ಲಾವಣಿ, ಗಾದೆ, ಒಗಟು, ನಂಬಿಕೆ, ಸಂಪ್ರದಾಯ, ಆಚರಣೆ, ಕಲೆ, ವೈದ್ಯ, ವಸ್ತುವಿಶೇಷಗಳ ಬಳಕೆ, ಉಡುಗೆತೊಡುಗೆ- ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸದೊಡನೆ ಎದ್ದುತೋರುವ ಸಾಮ್ಯಗಳನ್ನು ಪ್ರಮುಖವಾಗಿ ನೋಡಬಹುದು.
ಜನಪದ ತ್ರಿಪದಿಸಾಹಿತ್ಯದಲ್ಲಿ ಬಹುಮಟ್ಟಿಗೆ ಒಂದೇ ಬಗೆಯ ಹಾಡುಗಳು ಕಂಡುಬರುತ್ತವೆ. ಉತ್ತರದೇವಿಯ ಕಥೆ ನಾಡಿನ ಎಲ್ಲ ಕಡೆಗಳಲ್ಲೂ ಲಭ್ಯವಾಗಿದೆ. ಯಕ್ಷಗಾನ ಬಯಲಾಟಗಳ ಎಲ್ಲ ಕಡೆಯ ಸಂಪ್ರದಾಯಗಳಲ್ಲೂ ಸಾಕಷ್ಟು ಹೋಲಿಕೆಯಿದೆ. ಈ ಎಲ್ಲ ಜಾನಪದ ಪ್ರಕಾರಗಳನ್ನು ಪ್ರಾದೇಶಿಕ ಭಿನ್ನರೂಪಗಳೆನ್ನಬಹುದೇ ಹೊರತು ಮೂಲತಃ ಅವೆಲ್ಲ ಒಂದೇ ಸಂಸ್ಕೃತಿಯ ಕಾಣಿಕೆಗಳೆಂಬುದನ್ನು ಮರೆಯುವಂತಿಲ್ಲ.
ಜಾನಪದ ಅಧ್ಯಯನವನ್ನು ಕೈಗೊಳ್ಳುವ ಸಂಶೋಧಕ ಮೇಲಿನ ಈ ಎರಡು ಬಗೆಗಳನ್ನು ದೃಷ್ಟಿಯಲ್ಲಿಟ್ಟುಕೊಳ್ಳುವುದು ಆವಶ್ಯಕವಾಗಿದೆ. ಪ್ರಾದೇಶಿಕ ವಿಭಜನೆಯ ಔಚಿತ್ಯ ಈ ಅರ್ಥದಲ್ಲಿ ಮಾತ್ರ ತನ್ನ ಸಾರ್ಥಕತೆಯನ್ನು ಸಾಧಿಸಿಕೊಳ್ಳುತ್ತದೆ. ದಕ್ಷಿಣ ಕರ್ಣಾಟಕದ ಜಾನಪದ ಸಮೀಕ್ಷೆಯನ್ನು ಈ ಹಿನ್ನೆಲೆಯನ್ನು ಇಲ್ಲಿ ಸ್ಥೂಲವಾಗಿ ಪರಿಶೀಲಿಸಬೇಕಾಗಿದೆ. ದಕ್ಷಿಣ ಕರ್ನಾಟಕ ಜಾನಪದ ಸಾಹಿತ್ಯದ ಸಮೃದ್ಧ ನೆಲೆ. ಅಪಾರ ಸಂಖ್ಯೆಯ ಗಾಯಕರೂ ಕಥೆಗಾರರೂ ಅಲ್ಲಿಯ ವಿವಿಧ ಭಾಗಗಳಲ್ಲಿ ಕಾಣಸಿಗುತ್ತಾರೆ. ವಿಸ್ತಾರದ ದೃಷ್ಟಿಯಿಂದ, ವೈವಿಧ್ಯದ ದೃಷ್ಟಿಯಿಂದ ಇಲ್ಲಿಯ ಲಾವಣಿಗಳು ತಮ್ಮವೇ ಆದ ಹಲವು ಸಂಪದ್ರಾಯಗಳನ್ನು ರೂಪಿಸಿಕೊಂಡಿವೆ. ಧಾರ್ಮಿಕ ಹಾಗೂ ಲೌಕಿಕ ಎಂದು ಈ ಸಂಪ್ರದಾಯಗಳನ್ನು ವಿಭಜಿಸಿ ಪ್ರಮುಖವಾದದನ್ನು ಇಲ್ಲಿ ಹೆಸರಿಸಬಹುದು.
ಧಾರ್ಮಿಕ : ಕಂಸಾಳೆಯವರು ನೀಲಗಾರರು ಚೌಡಿಕೆಯವರು ಗೊರವರು ಜುಂಜಪ್ಪನವರು ಜೋಗತಿಯವರು
ಲೌಕಿಕ : ಹೆಳವರು ದೊಂಬಿದಾಸರು ತೆಲುಗು ಬಣಜಿಗರು ತಂಬೂರಿಯವರು ಕರಪಾಲದವರು ಜೋಗಿಗಳು
ಧಾರ್ಮಿಕ ಸಂಪ್ರದಾಯ ಯಾವುದಾದರೂ ಆರಾಧ್ಯದೈವದ ಹಿನ್ನೆಲೆಯಲ್ಲಿ ವಿಶಿಷ್ಟ ವರ್ಗದ ಗಾಯಕರನ್ನು ಸೃಷ್ಟಿಸಿಕೊಳ್ಳುತ್ತದೆ. ತಮ್ಮ ದೈವದ ಮಹಿಮೆಯನ್ನು ವಿಸ್ತಾರಮಾಡುತ್ತ ಅದ್ಭುತ ಕಥೆಗಳನ್ನು ಕಟ್ಟಿ ಹಾಡುತ್ತ ಈ ಕಲಾವಿದರು ತಮ್ಮ ಧರ್ಮಕ್ಕೆ ನಿಷ್ಠೆಯಿಂದ ನಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಕಲಾವಿದರೆಲ್ಲರೂ ವಂಶಪಾರಂಪರ್ಯವಾಗಿಯೋ ಗುರುಶಿಷ್ಯ ಸಂಬಂಧವಾಗಿಯೋ ಆಯಾ ದೈವದ ಹೆಸರಿನಲ್ಲಿ ದೀಕ್ಷೆಯನ್ನು ಸ್ವೀಕರಿಸಿ ತಮ್ಮ ಬದುಕಿನ ಉದ್ದಕ್ಕೂ ಹಾಡುಗಾರಿಕೆಯನ್ನು ವಿಶೇಷ ವೃತ್ತಿಯಾಗಿ ಸ್ವೀಕರಿಸುತ್ತಾರೆ; ಶ್ರದ್ಧೆಯಿಂದ ತಮ್ಮ ದೈವದ ಕಥೆಗಳನ್ನು ಅಭ್ಯಸಿಸಿ ವಿಶಿಷ್ಟ ಸಂದರ್ಭಗಳಲ್ಲಿ, ಹಬ್ಬಹರಿದಿನಗಳಲ್ಲಿ ಸಮಗ್ರ ರಾತ್ರಿಯೆಲ್ಲ ಕಥೆಯನ್ನು ಹಾಡಿ ಕಾಣಿಕೆ ಪಡೆಯುತ್ತಾರೆ. ಉಳಿದ ದಿನಗಳಲ್ಲಿ ತಮ್ಮ ದೈವದ ಹೆಸರಿನಲ್ಲಿ ಭಿಕ್ಷಾಟನೆ ನಡೆಸುತ್ತಾರೆ. ಈ ಭಿಕ್ಷಾಟನೆಗೂ ಗೊತ್ತಾದ ದಿನಗಳು ಇರಬಹುದು. ದಕ್ಷಿಣ ಕರ್ಣಾಟಕದ ದಕ್ಷಿಣಭಾಗದಲ್ಲಿ ಕಂಸಾಳೆಯವರೂ ನೀಲಗಾರರೂ ಪ್ರಮುಖವಾಗಿ ಕಂಡುಬರುವ ಧಾರ್ಮಿಕ ವೃತ್ತಿಗಾಯಕರು. ಕಂಸಾಳೆಯವರು ಮಲೆಯ ಮಾದೇಶ್ವರನಿಗೆ ನಡೆದುಕೊಳ್ಳುವ ಶರಣರು (ನೋಡಿ- ಕಂಸಾಳೆ). ಕಂಸಾಳೆ ಎಂಬ ವಿಶಿಷ್ಟ ಸ್ವರೂಪದ ಒಂದು ಕಂಚಿನ ವಾದ್ಯವನ್ನು ಇವರು ಬಳಸುವುದರಿಂದ ಕಂಸಾಳೆಯವರು ಎಂದು ಕರೆಯಲಾಗಿದೆ. ದೇವರ ಗುಡ್ಡರು ಎಂಬ ಹೆಸರಿನಲ್ಲೂ ಇವರನ್ನು ಗುರುತಿಸಲಾಗುವುದು.
ಕಂಸಾಳೆಯವರು ಮಲೆಯ ಮಾದೇಶ್ವರನ ಕಥೆಯನ್ನು ಅನೇಕ ರಾತ್ರಿಗಳವರೆಗೆ ಹಲವು ಕವಲುಗಳಲ್ಲಿ ಹಾಡಬಲ್ಲರು. ಗದ್ಯಪದ್ಯಮಿಶ್ರಿತ ಚಂಪು ರೀತಿಯ ಶೈಲಿಯಲ್ಲಿ, ಮಾದೇಶ್ವರ ಪವಾಡಗಳನ್ನು ಈ ಕಥೆಗಳು ರಮ್ಯವಾಗಿ ಚಿತ್ರಿಸುತ್ತವೆ. ತಾಳುಗಥೆ, ಶಂಕಮ್ಮನ ಕಥೆ, ಬೇವಿನಕಾಳಿಕಥೆ, ಜುಂಜೇಗೌಡನ ಕಥೆ-ಇವೆಲ್ಲವೂ ಈ ಸಂಪ್ರದಾಯದ ಕಥೆಗಳಲ್ಲಿ ಪ್ರಮುಖವಾದುವು. ಇವೆಲ್ಲವೂ ಕಂಸಾಳೆಯವರ ಧಾರ್ಮಿಕ ಕಥೆಗಳು.
ತಮ್ಮ ಧಾರ್ಮಿಕ ಕಥೆಗಳ ಜೊತೆಗೆ ಅನೇಕ ಲೌಕಿಕ ಕಥೆಗಳನ್ನೂ ಈ ಸಂಪ್ರದಾಯದ ಹಾಡುಗಾರರು ಜನಪ್ರಿಯತೆಯ ದೃಷ್ಟಿಯಿಂದ ಕಲಿಯುತ್ತಾರೆ. ಮುಖ್ಯವಾದ ಕೆಲವು ಕಥೆಗಳನ್ನು ಮಾತ್ರ ಇಲ್ಲಿ ಹೆಸರಿಸಬಹುದು. 1. ಪಿರಿಯಾಪಟ್ಟಣದ ಲಾವಣಿ, 2. ನಂಜಯ್ಯ-ಚಾಮುಂಡಿ, 3. ಚೆಲುವರಾಯ ವರನಂದಿ, 4. ಕೊಡಗಿನ ಲಿಂಗರಾಜಮ್ಮ, 5. ಸಾರಂಗಧರ, 6. ಚೆನ್ನಿಗರಾಯ, 7. ಘನಪತಿರಾಯ, 8. ಬಾಲನಾಗಮ್ಮ, 9. ಬಂಜೆಹೊನ್ನಮ್ಮ, 10. ಲವಕುಶರ ಕಥೆ, 11. ಕೊಂತಿಯ ಕಥೆ, 12. ಬಸವಣ್ಣನವರ ಕಥೆಗಳು. ಈ ಒಂದೊಂದು ಲಾವಣಿಯೂ ವಿಸ್ತಾರ ಹಾಗೂ ವೈವಿಧ್ಯದ ದೃಷ್ಟಿಯಿಂದ ಗಮನಾರ್ಹ ರಚನೆಯಾಗಿದೆ.
ನೀಲಗಾರರು ಕಂಸಾಳೆಯವರಂತೆಯೇ ಮೇಲಿನ ಲೌಕಿಕ ಕಥೆಗಳನ್ನೆಲ್ಲ ತಮ್ಮ ನಾಡು-ತಂಬೂರಿಯ ಹಿನ್ನೆಲೆಯಲ್ಲಿ ಹಾಡುತ್ತಾರೆ. ಆದರೆ ಅವರ ಧಾರ್ಮಿಕ ಲಾವಣಿ ಮಂಟೆಸ್ವಾಮಿಯ ಕಥೆ, ಮಂಟೇಸ್ವಾಮಿ ಮಾದೇಶ್ವರನಂತೆಯೇ ಒಬ್ಬ ಮಹಿಮಾ ಪುರುಷ: ಉತ್ತರದಿಂದ ದಕ್ಷಿಣಕ್ಕೆ ಬಂದು ಮಳವಳ್ಳಿ ತಾಲ್ಲೂಕಿನ ಬೊಪ್ಪಗೌಡನ ಪುರದಲ್ಲಿ ಮಠಮಾನ್ಯಗಳನ್ನು ಸ್ಥಾಪಿಸಿದವನು. ಅವನ ಶಿಷ್ಯ ರಾಚಪ್ಪಾಜಿ ಮತ್ತು ಸಿದ್ಧಪ್ಪಾಜಿ ತಮ್ಮ ತಪೋಭೂಮಿಯನ್ನಾಗಿ ಪ್ರತ್ಯೇಕ ನೆಲೆಗಳನ್ನು ಆರಿಸಿಕೊಂಡರು. ಕೊಳ್ಳೇಗಾಲದ ಆಚೆ ಚಿಕ್ಕಲ್ಲೂರು ಸಿದ್ಧಪ್ಪಾಜಿಗೂ ಸಮೀಪದ ಕಾವೇರಿ ತೀರದ ಕಪ್ಪಡಿ ರಾಚಪ್ಪಾಜಿಗೂ ತಪೋಭೂಮಿಗಳಾದುವು. ಈ ಗುರುಶಿಷ್ಯರ ಸುವಿಸ್ತಾರ ಕಥೆಯನ್ನು ನೀಲಗಾರರು ಹಾಡುತ್ತಾರೆ. ಮಂಟೇಸ್ವಾಮಿಯ ಕಥೆಯನ್ನು ಹಾಡುವ ಈ ಕಥೆಗಾರರನ್ನೂ ಮಂಟೇದಯ್ಯ, ಮಂಟೇದವರು, ಮಂಟೇಸ್ವಾಮಿ ಎಂದೂ ಕರೆಯುವುದುಂಟು.
ಕಂಸಾಳೆಯವರು ಮತ್ತು ನೀಲಗಾರರು ಮೈಸೂರು, ಮಂಡ್ಯ ಹಾಗೂ ಬೆಂಗಳೂರು ಜಿಲ್ಲೆಗಳ ಪೂರ್ವ, ದಕ್ಷಿಣ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ.
ಚೌಡಿಕೆಯವರು ತುಮಕೂರು, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ನೆಲೆಸಿರುವ ಧಾರ್ಮಿಕ ಗಾಯಕರು. ಸವದತ್ತಿ ಎಲ್ಲಮ್ಮನ ಈ ಭಕ್ತಪರಂಪರೆ ದೇವಿಯ ಕಥೆಯನ್ನು ಅನೇಕ ಅಧ್ಯಾಯಗಳಲ್ಲಿ ಹಾಡಿಕೊಂಡು ಬಂದಿದೆ. ಚೌಡಿಕೆ ಎನ್ನುವುದು ಈ ಪರಂಪರೆಯವರು ಬಳಸುವ ವಾದ್ಯ. ಇದೊಂದು ತಂತೀವಾದ್ಯ. ಕೊಳಗದಾಕಾರದ ಮರದ ಹೋಳಿಗೆ ಒಂದು ಕಡೆ ಚರ್ಮವನ್ನು ಬಿಗಿದು ಅದರಿಂದ ಎಳೆದು ಕಟ್ಟಿದ ತಂತಿಯನ್ನು ಕಡ್ಡಿಯೊಂದರ ಸಹಾಯದಿಂದ ಮೀಟುವುದರ ಮೂಲಕ ಉಂಟಾಗುವ ನಾದದ ಹಿನ್ನೆಲೆಯಲ್ಲಿ ಇವರು ಲಾವಣಿಗಳನ್ನು ಹಾಡುತ್ತಾರೆ. ಇಬ್ಬರು ಅಥವಾ ಮೂವರು ಕಲೆತು ಮೇಳವನ್ನು ನಡೆಸುವುದೂ ವಿಶಿಷ್ಟ ಗತ್ತಿಯಲ್ಲಿ ಕುಣಿಯುವುದೂ ಚೌಡಿಕೆ ಸಂಪ್ರದಾಯದ ಒಂದು ಗಮನಾರ್ಹ ಅಂಶ.
ಚೌಡಿಕೆಯವರು ಅನೇಕ ಲೌಕಿಕ ಕಥೆಗಳನ್ನು ಹಾಡುತ್ತಾರೆ. ಪ್ರಸಿದ್ಧವಾದ ಸರ್ಜಪ್ಪನಾಯಕನ ಲಾವಣಿ ಇವರಲ್ಲಿ ಮಾತ್ರ ಹೆಚ್ಚಾಗಿ ಪ್ರಚುರವಾಗಿದೆ. ಗೊರವರು ಮೈಲಾರ ಕ್ಷೇತ್ರಕ್ಕೆ ಮೀಸಲಾದ ಗುಡ್ಡರು. ಗೊರವ, ಗಡಬಡಯ್ಯ ಮುಂತಾದ ಹೆಸರುಗಳಿಂದ ಪರಿಚಿತರಾಗಿರುವ ಇವರು ದಕ್ಷಿಣ ಕರ್ಣಾಟಕದ ಅನೇಕ ಕಡೆಗಳಲ್ಲಿ ಮೈಲಾರದ ಉಪಕ್ಷೇತ್ರಗಳಿಗೆ ನಡೆದುಕೊಳ್ಳುತ್ತಾರೆ. ತಲೆಯ ಮೇಲೆ ಕರಡಿಯ ಕೂದಲು, ಮೈಮೇಲೆ ಕವಡೆಯ ಸರಗಳಿಂದ ಕೂಡಿದ ಅಡ್ಡಪಟ್ಟಿಗಳು, ಕೈಯಲ್ಲಿ ಪಿಳ್ಳಂಗೋವಿ, ಡಮರುಗ, ತ್ರಿಶೂಲ, ಕಂಕುಳಲ್ಲಿ ದೋಣಿ, ಕರಿಕಂಬಳಿಯ ಉದ್ದನೆಯ ನಿಲುವಂಗಿ- ಇವು ಇವರನ್ನು ಸುಲಭವಾಗಿ ಗುರುತಿಸಬಹುದಾದ ವೇಷಭೂಷಣ, ಗೊರವರ ನೃತ್ಯ ಆಕರ್ಷಕವಾದುದು. ಅಷ್ಟೇ ಸುಂದರವಾದುದು- ಇವರು ಹಾಡುವ ಮೈಲಾರಲಿಂಗನ ಕಥೆ. ಮೈಲಾರಲಿಂಗ ಮತ್ತು ಕೋಮಲೆ ಇವರ ಪ್ರಣಯಕಥೆಯನ್ನು ಡಮರುಗ ನುಡಿಸುತ್ತ ಇವರು ಹಾಡುತ್ತಾರೆ. ಕುರುಬರ ಜನಾಂಗದಲ್ಲಿ ಹೆಚ್ಚು ಮಂದಿ ಗೊರವರನ್ನು ಕಾಣಬಹುದು. ಜುಂಜಪ್ಪನ ಕಥೆ ಕಾಡುಗೊಲ್ಲರಿಗೆ ಸೀಮಿತವಾದುದು. ಈ ಜನಾಂಗದ ಅಧಿದೈವ ಜುಂಜಪ್ಪ. ಕನ್ನಡ ಜನಪದ ಕಾವ್ಯಗಳಲ್ಲಿ ಜುಂಜಪ್ಪನ ಕಥೆ ವಿಶೇಷವಾದ ಸ್ಥಾನಕ್ಕೆ ಅರ್ಹವಾದುದು. ಜುಂಜಪ್ಪನ ಗಣಿಯನ್ನು ಹೊತ್ತು ಊರೂರ ಮೇಲೆ ಬರುವ ಗಣಿಯವರು ಆ ಸುದೀರ್ಘ ಕಥೆಯನ್ನು ಎರಡು ಮೂರು ರಾತ್ರಿ ಹಾಡುತ್ತಾರೆ. ಗಣಿ ಎಂಬ ಕೊಳಲಿನಾಕಾರದ ದೊಡ್ಡ ವಾದ್ಯದ ಹಿನ್ನೆಲೆಯಲ್ಲಿ ಈ ಕಥೆಯನ್ನು ಹಾಡುವ ಸಂಪ್ರದಾಯವೂ ಉಂಟು.
ಮೇಲಿನ ವೃತ್ತಿಗಾಯಕರೆಲ್ಲ ಪುರುಷವರ್ಗಕ್ಕೆ ಸೇರಿದವರು. ಕಥೆಗಾರಿಕೆಯನ್ನು, ಹಾಡುಗಾರಿಕೆಯನ್ನು ವೃತ್ತಿಯನ್ನಾಗಿ ಪಡೆದ ಸ್ತ್ರೀಯರನ್ನು ಅಲ್ಲಲ್ಲಿ ಕಾಣಬಹುದು. ಇವರಲ್ಲಿ ಕೆಲವರು ಯಾವುದಾದರೂ ದೈವದ ಹೆಸರಿನಲ್ಲಿ ಜೋಗಿತಿಯರಾದವರು. ಸುದೀರ್ಘ ಲಾವಣಿಗಳನ್ನು ಹಾಡುವುದರಲ್ಲಿ ನಿಷ್ಣಾತರಾದ ಇವರು ಕೆಲವು ಪುಣ್ಯಕಥೆಗಳನ್ನು ಹಾಡುತ್ತಾರೆ. ಅಣಜಿ ಹೊನ್ನಮ್ಮ ಇಂಥದೊಂದು ಧಾರ್ಮಿಕ ಕಥೆ. ಉಚ್ಚಂಗಿ ಎಲ್ಲಮ್ಮನ ಆಶಯದಂತೆ ಕಟ್ಟಿದ ಅಣಜಿಯ ಕೆರೆಗೆ ಹೊನ್ನಮ್ಮ ಬಲಿಯಾಗಿ ಮುಂದೆ ತಾನು ಆರಾಧ್ಯದೈವವೇ ಆಗುತ್ತಾಳೆ. ಎಲ್ಲಮ್ಮನ ಮಹಿಮೆ, ಹೊನ್ನಮ್ಮನ ತ್ಯಾಗ ಇವುಗಳನ್ನು ಮನೋಜ್ಞವಾಗಿ ಬಣ್ಣಿಸುವ ಈ ಕಥೆಯನ್ನು ವಿಶೇಷ ಪೂಜೆಯೊಡನೆಯೇ ಹಾಡಿಸುವುದು ಇಲ್ಲಿಯ ವೈಶಿಷ್ಟ್ಯ. ಕಾಳಿಂಗರಾಯ, ಗುಣಸಾಗರಿ ಮುಂತಾದ ಕೆಲವು ದೀರ್ಘಲಾವಣಿಗಳನ್ನು ಇಂಥ ಸಂದರ್ಭಗಳಲ್ಲಿ ಹಾಡಲಾಗುವುದು.
ಲೌಕಿಕ ಕಥೆಗಳನ್ನು ಯಾವ ದೈವದ ಸಂಪ್ರದಾಯಕ್ಕೂ ಶರಣಾದವರಲ್ಲ. ಆದರೆ ಎಲ್ಲ ದೈವಗಳ ಕಥೆಗಳನ್ನೂ ಇವರು ಹಾಡಬಹುದು. ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ವಸ್ತುವಿನ ಸುತ್ತ ಹೆಣೆಯಲ್ಪಟ್ಟ ಇವರ ಕಥೆಗಳಲ್ಲಿ ಅತಿಮಾನುಷ, ರಮ್ಯ, ಅದ್ಭುತ, ವಾಸ್ತವಿಕ ಮುಂತಾದ ಎಲ್ಲ ಕಥಾವರ್ಗಗಳ ಮಾದರಿಗಳನ್ನೂ ಕಾಣಬಹುದು. ನೀತಿಪ್ರಧಾನವಾದ ಕಥೆಗಳೂ ಕೆಲವು ಗಾಯಕರಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಲೌಕಿಕ ಕಥೆಗಾರರಲ್ಲಿ ಕರಪಾಲದವರು (ನೋಡಿ- ಕರಪಾಲ ಮೇಳ) ಕಥೆಗಳನ್ನು ಹಾಡುವುದಕ್ಕಿಂತ ಅಭಿನಯಪೂರ್ವಕವಾಗಿ ಅದನ್ನು ನಿರೂಪಿಸುವುದೇ ಹೆಚ್ಚು. ನೃತ್ಯ, ಗೀತ, ಸಾಹಿತ್ಯಗಳ ಮೇಳದಿಂದ ಕರಪಾಲದ ಕಥೆಗಳು ರಂಜಿಸುತ್ತವೆ. ಕರಪಾಲದವರು ಲಾವಣಿ ಸ್ವರೂಪದ ಯಾವ ಕಥೆಗಳನ್ನೂ ಹಾಡುವುದಿಲ್ಲ. ಆಕರ್ಷಕ ಜನಪದ ಕಥೆಗಳನ್ನು ತಮ್ಮ ಮೇಳಕ್ಕೆ ಇವರು ಅಳವಡಿಸಿಕೊಳ್ಳುತ್ತಾರೆ. ಕೆಲವು ಗೊತ್ತಾದ ಹಾಡುಗಳನ್ನು ನಡುವೆ ಸೇರಿಸಿಕೊಂಡು ಸಂದರ್ಭಾನುಸಾರ ಅದನ್ನು ಎಲ್ಲ ಕಥೆಗಳಿಗೂ ಕೂಡಿಸಿಕೊಳ್ಳುತ್ತ ಮೂವರು ಸಾಲಾಗಿ ನೃತ್ಯ ಮಾಡುತ್ತಾರೆ. ಮುಖ್ಯ ನಿರೂಪಕನೊಬ್ಬ ಕಥಾಭಾಗವನ್ನು ವಿಶಿಷ್ಟವಾದ ಶೈಲಿಯಲ್ಲಿ ನಾಟಕೀಯವಾಗಿ ನಿರೂಪಿಸುತ್ತ ಹೋಗುತ್ತಾನೆ. ಅವನ ಕೌಶಲ ಪ್ರತಿಭೆಗಳಿಗನುಗುಣವಾಗಿ ಕಥೆ ಎಷ್ಟು ಗಂಟೆಗಳವರೆಗಾದರೂ ಸಾಗಬಹುದು.
ಕರಪಾಲಮೇಳದಲ್ಲಿ ಕಾಡಸಿದ್ದಮ್ಮ, ಬಸವಕುಮಾರ, ಲೋಹಿತಕುಮಾರ, ಶಿವಯೋಗಿ-ಪರಯೋಗಿ, ನೀಲಕಂಠ-ರೂಪವತಿ, ಮುಂತಾದ ಕೆಲವು ಕಥೆಗಳನ್ನೇ ಹೆಚ್ಚಾಗಿ ಕಾಣಬಹುದಾದರೂ ಕೆಲವೆಡೆಗಳಲ್ಲಿ ಹೊಸ ಕಥೆಗಳೂ ಉಪಕಥೆಗಳೂ ಸೇರಿಕೊಳ್ಳುತ್ತವೆ. ತುಮಕೂರು, ಹಾಸನ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕರಪಾಲ ಮೇಳ ಅಲ್ಲಲ್ಲಿ ಇಂದಿಗೂ ಉಳಿದಿದೆ. ಕರಪಾಲದವರು ಬಳಸುವ ಮುಖ್ಯ ವಾದ್ಯ ಗುಮ್ಮಟೆ ಮತ್ತು ತಾಳ. ಹಾರ್ಮೋನಿಯಂ ಮತ್ತು ಮೃದಂಗಗಳನ್ನು ಇವುಗಳ ಜೊತೆಗೆ ಇತ್ತೀಚೆಗೆ ಬಳಸಲಾಗುತ್ತಿದೆ.
ಜೋಗಿಗಳು ಜನಪದ ಗಾಯಕರಲ್ಲಿ ಅತ್ಯಂತ ಪ್ರಮುಖವಾದ ಒಂದು ವರ್ಗವಾಗಿ ಇಂದಿಗೂ ಕಾಣಸಿಗುತ್ತಾರೆ. ಅವರು ಬಳಸುವ ವಾದ್ಯ ಕಿನ್ನರಿ. ಇದೊಂದು ತಂತೀವಾದ್ಯ. ಭಾರತದ ನಾನಾ ಕಡೆಗಳಲ್ಲಿ ಈ ವಾದ್ಯವನ್ನು ಗುರುತಿಸಬಹುದಾದರೂ ಕರ್ನಾಟಕದ ಜನಪದ ವಾದ್ಯಗಳಲ್ಲಿ ಇದಕ್ಕೆ ವಿಶೇಷವಾದ ಸ್ಥಾನವಿದೆ. ಉದಾಹರಣೆಗೆ, ಶರಣ ಕಿನ್ನರಿ ಬೊಮ್ಮಯ್ಯನ ಹೆಸರನ್ನು ನೆನೆಯಬಹುದು. ಕನ್ನಡ ಜನಪದ ಸಾಹಿತ್ಯದಲ್ಲಂತೂ ಮೇಲಿಂದ ಮೇಲೆ ಇದರ ಉಲ್ಲೇಖ ಕಂಡುಬರುತ್ತದೆ. ಒಂದು ಕಾಲಕ್ಕೆ ಕನ್ನಡ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಈ ಕಿನ್ನರಿಗೆ ಲಭ್ಯವಾಗಿತ್ತು ಎಂಬುದು ಇದರಿಂದ ವೇದ್ಯವಾಗುತ್ತದೆ. ಕಿನ್ನರಿ ಜೋಗಿಗಳು ಅರ್ಜುನ ಜೋಗಿಯ ಕಥೆಯನ್ನೂ ಮಹಾಭಾರತದ ಇತರ ಪ್ರಸಂಗಗಳನ್ನೂ ಕಿನ್ನರಿಗೆ ಹೊಂದಿಸಿಕೊಂಡು ಹಾಡುತ್ತಾರೆ. ತಾವು ಅರ್ಜುನನ ಪರಂಪರೆಯವರೆಂದು ಹೇಳಿಕೊಳ್ಳುವ ಇವರು ಆಕರ್ಷಕ ರೀತಿಯ ವೇಷಭೂಷಣಗಳನ್ನು ಧರಿಸುತ್ತಾರೆ. ಕಿನ್ನರಿ ಹಿಡಿದು, ನಾನಾ ರೀತಿಯಲ್ಲಿ ಅಲಂಕೃತವಾದ ಕುಲಾವಿಯನ್ನೋ ರುಮಾಲನ್ನೋ ತಲೆಗೆ ಧರಿಸಿ ಕರಿಯ ನಿಲುವಂಗಿ, ಕಚ್ಚೆಗಳಿಂದ ಶೋಭಿಸುತ್ತ ಕಿನ್ನರಿಯನ್ನು ಹಿಡಿದರೆಂದರೆ ಅದರ ಮಧುರ ನಾದದಂತೆಯೇ ಮಧುರವಾದ ಕಂಠದಲ್ಲಿ ಚಿಮ್ಮಿಬರುವ ಜೋಗಿಯ ಹಾಡಿಗೆ ಎಲ್ಲರೂ ಮಾರುಹೋಗುತ್ತಾರೆ.
ತಂಬೂರಿಯವರು ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಣಬರುವ ವೃತ್ತಿ ಗಾಯಕರು. ನೀಲಗಾರರ ವಾದ್ಯವನ್ನೇ ಇವರು ಬಳಸಿದರೂ ಯಾವ ವಿಶಿಷ್ಟ ದೈವದ ಸಂಪ್ರದಾಯಕ್ಕೂ ಇವರು ಸೇರಿದವರಲ್ಲ, ರಮ್ಯ ಜನಪದ ಕಥೆಗಳನೇಕವನ್ನು ಲಾವಣಿ ಅಳವಡಿಸಿಕೊಂಡು ಹಾಡುವ ಇವರು ನೀಲಗಾರರಿಂದ ಯಾವ ರೀತಿಯಲ್ಲಿಯೂ ಪ್ರಭಾವಿತರಾದಂತೆ ತೋರುವುದಿಲ್ಲ.
ದಕ್ಷಿಣ ಕರ್ನಾಟಕದ ವೃತ್ತಿಗಾಯಕರಲ್ಲಿ ದೊಂಬಿದಾಸರು, ಹೆಳವರು, ತೆಲುಗು ಬಣಜಿಗರು ಮುಂತಾದವರ ಮನೆಮಾತು ತೆಲುಗು. ಇವರ ವೃತ್ತಿ ಕನ್ನಡ ಹಾಡುಗಳನ್ನೂ ಲಾವಣಿಗಳನ್ನೂ ಹಾಡುವುದು. ದೊಂಬಿದಾಸರು ಕನ್ನಡ ನಾಟಕಗಳನ್ನು ತೀರ ಇತ್ತೀಚಿನವರೆಗೂ ಅಭಿನಯಿಸುತ್ತಿದ್ದವರು. ಇವರು ಕರ್ನಾಟಕದಲ್ಲಿ ಎಂದೋ ಒಂದು ಕಾಲದಲ್ಲಿ ಬಂದು ನೆಲೆಸಿ ಇಲ್ಲಿ ಪ್ರಚಲಿತವಾಗಿದ್ದ ಸಾಹಿತ್ಯವನ್ನು ಅಭ್ಯಾಸ ಮಾಡಿಕೊಂಡಿರಬಹುದು ; ತೆಲುಗಿನ ಕಥೆಗಳನ್ನು ಕನ್ನಡಕ್ಕೆ ರೂಪಾಂತರಿಸಿಕೊಂಡಿರಬಹುದು. ಕರ್ನಾಟಕದ ಪೂರ್ವಪ್ರದೇಶದ ಈ ಗಾಯಕರ ಪ್ರಸಿದ್ಧ ಲಾವಣಿಗಳನ್ನು ಇಲ್ಲಿ ಪಟ್ಟಿ ಮಾಡಬಹುದು : 1. ಚಾಮುಂಡಿ ಪುರಾಣ, 2. ಮಾಗಡಿ ಕೆಂಪೇಗೌಡ, 3. ಬಾಲನಾಗಮ್ಮ, 4. ಕರಿಬಂಟ, 5. ಶಿವಕಥೆಗಳು, 6. ಕೃಷ್ಣಕಥೆಗಳು, 7. ಕಲಿಯುಗದ ಬಾಲೆ ಬಂಜೆ ಹೊನ್ನಮ್ಮ- ಇತ್ಯಾದಿ. ಈ ಹಾಡುಗಾರರಲ್ಲಿ ಹೆಳವರು ಗಂಟೆಯನ್ನು ತಮ್ಮ ಪ್ರಮುಖ ವಾದ್ಯವಾಗಿ ಬಳಸುತ್ತಾರೆ. ಇವರ ಹೊಗಳುವ ಪದಗಳು, ಭಕ್ತಿಗೀತೆಗಳು ಕಥೆಗಳಿಗಿಂತ ಹೆಚ್ಚು ಜನಪ್ರಿಯತೆಯನ್ನು ಸಾಧಿಸಿಕೊಂಡಿವೆ. ದೊಂಬಿದಾಸರು, ತೆಲುಗು ಬಣಜಿಗರು ಏಕತಾರಿಯನ್ನು ತಮ್ಮ ಪ್ರಮುಖ ವಾದ್ಯವಾಗಿ ಬಳಸುತ್ತಾರೆ. ಭಿಕ್ಷಾಟನೆಯನ್ನೇ ಪ್ರಧಾನವಾಗಿ ಅವಲಂಬಿಸಿರುವ ಈ ಕಲಾವಿದರು ಮೂವರು ಕಲೆತು ಕೆಲವೆಡೆಗಳಲ್ಲಿ ಮೇಳವನ್ನು ನಡೆಸುವುದೂ ಉಂಟು. ಬೆಂಗಳೂರು, ತುಮಕೂರು ಜಿಲ್ಲೆಗಳಲ್ಲಿ ಇವರ ಹಟ್ಟಿಗಳನ್ನು ಕಾಣಬಹುದಾದರೂ ಪುರುಷರು ಏಕತಾರಿಯನ್ನು ಹಿಡಿದು ಸದಾ ಸಂಚಾರಶೀಲರಾಗಿ ನಾಡಿನ ನಾನಾ ಕಡೆಗಳಿಗೆ ಹೋಗಿ ಬರುತ್ತಾರೆ.

ದಕ್ಷಿಣ ಕರ್ನಾಟಕದ ಅಪಾರ ಸಂಖ್ಯೆಯ ವೃತ್ತಿಗಾಯಕರಂತೆ ಹಾಡುವುದೊಂದು ವೃತ್ತಿಯಿಲ್ಲದಿದ್ದರೂ ಅಷ್ಟೇ ಉನ್ನತ ಮಟ್ಟದ ಅಪಾರ ಸಾಹಿತ್ಯವನ್ನು ಕರಗತ ಮಾಡಿಕೊಂಡ ಸಹಸ್ರಾರು ಗಾಯಕರನ್ನು ಎಲ್ಲ ಕಡೆಯಲ್ಲೂ ಕಾಣಬಹುದು. ಗಾಯಕರನ್ನು ಎಲ್ಲ ಕಡೆಯಲ್ಲೂ ಕಾಣಬಹುದು. ಹರಿಜನರು, ಕಾಡುಗೊಲ್ಲರು, ಒಕ್ಕಲಿಗರು, ವೀರಶೈವರು, ಪರಿವಾರದವರು- ಹೀಗೆ ಒಂದೊಂದು ಮತದಲ್ಲಿಯೂ ಸುದೀರ್ಘ ಲಾವಣಿಗಳನ್ನೂ ಗೀತೆಗಳನ್ನೂ ಹಾಡುವ ಸ್ತ್ರೀಪುರುಷರು ಲಭ್ಯವಾಗುತ್ತಾರೆ. ಉತ್ತರದೇವಿ, ಈರೋಬಿ, ನಾಗಮ್ಮ ಮುಂತಾದ ಕಥನಗೀತೆಗಳನ್ನು ಸ್ತ್ರೀಯರು ಹೊಲಗೆಲಸದಲ್ಲಿ, ಇತರ ಸಂದರ್ಭಗಳಲ್ಲಿ ಹಾಡಿಕೊಂಡರೆ, ದೇವರ ಉತ್ಸವ ಸಂದರ್ಭದಲ್ಲಿ ಮತ್ತು ಬೀಸುವಾಗ, ಸಹಸ್ರಾರು ಸ್ತುತಿಗೀತೆಗಳನ್ನು ಹಾಡುತ್ತಾರೆ. ಗರತಿಯ ಸಾಹಿತ್ಯ ಉನ್ನತಭಾವನೆಗಳಿಂದಲೂ ಶ್ರೇಷ್ಠ ಭಾವಗೀತೆಯ ಸತ್ತ್ವದಿಂದಲೂ ನೈಜಕಲ್ಪನೆಗಳಿಂದಲೂ ಕೂಡಿ ಅತ್ಯುತ್ಕೃಷ್ಟ ಕಾವ್ಯದ ಸೊಡಗನ್ನೂ ಸೊಗಸನ್ನೂ ಹೊಂದಿದೆ. ಬೀಸುವಾಗ ತನ್ನ ಕುಲದೈವವನ್ನು ಕುರಿತು, ಬಂಧುಬಳಗವನ್ನು ಕುರಿತು, ತ್ಯಾಗಜೀವಿಗಳನ್ನು ಕುರಿತು ಸುಂದರ ತ್ರಿಪದಿಗಳನ್ನು ಗರತಿ ಹಾಡಿಕೊಳ್ಳುತ್ತಾಳೆ. ಬೀಸುವ ಪದಗಳಿಂದ ಆರಂಭವಾಗುವ ಗರತಿಯ ಸಾಹಿತ್ಯ ಹತ್ತು ಹಲವು ರೂಪಗಳಲ್ಲಿ ಬದುಕಿನ ಬೇರೆ ಬೇರೆ ಸಂದರ್ಭಗಳಿಗನುಗುಣವಾಗಿ ಮೂಡಿ ಬರುತ್ತದೆ. ಮಕ್ಕಳನ್ನು ತೂಗುವಾಗ ಹಾಡುವ ಲಾಲಿಯ ಪದಗಳು, ತಿಂಗಳ ಮಾವನ ಪೂಜೆ, ಕೊಂತಿ ಪೂಜೆಗಳಲ್ಲಿ ವಿವಿಧ ಮಟ್ಟಗಳಲ್ಲಿ ಹಾಡುವ ಸಂಪ್ರದಾಯದ ಪದಗಳು, ಮದುವೆ, ಒಸಗೆ ಮುಂತಾದ ಸಂದರ್ಭಗಳಲ್ಲಿ ಕ್ರಮವತ್ತಾಗಿ ಹಾಡುವ ಶಾಸ್ತ್ರದ ಪದಗಳು, ನಾಟಿ ಹಾಕುವಾಗ, ಕಳೆ ಕೀಳುವಾಗ, ಹಾಡುವ ಬಿಡಿಪದಗಳು- ಹೀಗೆ ಒಂದೊಂದು ಬಗೆಯಲ್ಲಿಯೂ ಅಪಾರ ಸಂಖ್ಯೆಯ ತ್ರಿಪದಿಗಳು ಹಳ್ಳಿಹಳ್ಳಿಗಳಲ್ಲೂ ಲಭ್ಯವಾಗುತ್ತವೆ.
ಬ್ರಾಹ್ಮಣ ಸ್ತ್ರೀಯರು ಪರಂಪರಾನುಗತವಾಗಿ ಕಂಠಸ್ಥ ಸಂಪ್ರದಾಯದಲ್ಲಿ ಬಂದ ವಿಶಿಷ್ಟ ಸ್ವರೂಪದ ಜನಪದಗೀತೆಗಳನ್ನೂ ಕಥನಗೀತೆಗಳನ್ನೂ ಅನೇಕ ಮಟ್ಟುಗಳಲ್ಲಿ ಹಾಡುತ್ತಾರೆ. ಸಾಹಿತ್ಯ ಹಾಗೂ ಭಾಷಾದೃಷ್ಟಿಯಿಂದ ಇತರ ಜನಪದಸಾಹಿತ್ಯಕ್ಕಿಂತ ಇದು ಭಿನ್ನ.
ಸ್ತ್ರೀಯರ ಪದಗಳಲ್ಲಿ ಕೊರವಂಜಿಗಳು ಹಾಡುವ ಹಚ್ಚೆಯ ಪದಗಳನ್ನೇ ಪ್ರತ್ಯೇಕವಾಗಿ ಪ್ರಸ್ತಾಪಿಸಬೇಕು. ಹಚ್ಚೆ ಹೊಯ್ಯುವ ಸಂಪ್ರದಾಯ ದಕ್ಷಿಣ ಕರ್ನಾಟಕದ ಎಲ್ಲ ಕಡೆಗಳಲ್ಲೂ ಕಾಣಬರುತ್ತದೆ. ಕೊರಮಿತಿಯರು ಈ ಹಚ್ಚೆಯ ಕಲೆಯಲ್ಲಿ ನೈಪುಣ್ಯ ಸಾಧಿಸಿಕೊಂಡವರು. ಹಚ್ಚೆಯನ್ನು ಎಷ್ಟೋ ಹೊತ್ತಿನವರೆಗೆ ಹೊಯ್ಯುವಲ್ಲಿ ಚುಚ್ಚುವ ನೋವು ಕಾಣದಂತೆ ಸೊಗಸಾದ ಮಟ್ಟಿನಲ್ಲಿ ಹಚ್ಚೆಯನ್ನು ಕುರಿತ ಪದಗಳನ್ನೇ ಇವರು ಹಾಡುತ್ತಾರೆ. ಕೆಲವು ಕಥನ ಗೀತೆಗಳನ್ನೂ ಈ ಸಂದರ್ಭದಲ್ಲಿ ಹಾಡುವ ವಾಡಿಕೆಯುಂಟು.
ಶಿಶುಪ್ರಾಸಗಳು ದಕ್ಷಿಣ ಕರ್ನಾಟಕದ ಜನಪದ ಸಾಹಿತ್ಯದ ಒಂದು ಅಂಗ. ಕೇವಲ ರಚನೆಯ ದೃಷ್ಟಿಯಿಂದ ಪರಿಶೀಲಿಸಬೇಕಾದ ಈ ಚುಟಕ ರೂಪದ ಸಾಹಿತ್ಯವನ್ನು ಅರಿಯದ ಮಕ್ಕಳಿಲ್ಲ. ಕಾಗೆ ಕಾಗೆ ಕವ್ವ ಯಾರು ಬತ್ತಾರವ್ವ ಮಾವ ಬತ್ತಾನವ್ವ ಹೀಗೆ ಕಾಗೆಯ ಕೂಗಿಗೊಂದು ಅರ್ಥವನ್ನು ಆರೋಪಿಸುವಂಥ ಯಾವುದೋ ನಂಬಿಕೆಯ ಸುಳುಹನ್ನೂ ಕೊಡುವಂಥ ರಚನೆಗಳು ಕಾಣಬಂದರೂ ಅವುಗಳ ಅರ್ಥ ಸ್ವಾರಸ್ಯಕ್ಕಿಂತ ರಚನಾಕೌಶಲ ಮೆಚ್ಚುವಂತಿರುತ್ತದೆ. ಬಹುಪಾಲು ಶಿಶುಪ್ರಾಸಗಳು ಮಕ್ಕಳ ಆಟಗಳ ಜೊತೆಯಲ್ಲಿ ಬೆರೆತು ಬೆಳೆದಿವೆ.
ಪುರುಷರ ಗೀತೆಗಳಲ್ಲಿ ಕಗ್ಗದ ಪದಗಳು ತ್ರಿಪದೆ ರೂಪದಲ್ಲೇ ದೊರೆಯುತ್ತವೆ. ಶೃಂಗಾರ, ಹಾಸ್ಯ, ವಿಡಂಬನೆಗಳಿಗೆ ಸಂಬಂಧಿಸಿದಂತೆ ಅಪೂರ್ವ ಗೀತೆಗಳನ್ನು ಇಲ್ಲಿ ಕಾಣಬಹುದು. ಆಲೆ ಆಡಿಸುವಾಗ, ಕಪಿಲೆ ಹೊಡೆಯುವಾಗ, ಬಂಡಿ ಓಡಿಸುವಾಗ, ಮಂದೆಗಳನ್ನು ತಡೆಯುವಾಗ ಇಂಥ ಪದಗಳು ಹೇರಳವಾಗಿ ಕೇಳಿಬರುತ್ತವೆ. ಪುರುಷರೇ ವಿಶೇಷವಾಗಿರುವ ಇಂಥ ಸಂದರ್ಭಗಳಲ್ಲಿ ಕೆಲಸದ ಬೇಸರವನ್ನೂ ರಾತ್ರಿಯ ಏಕತಾನತೆಯನ್ನೂ ನಿವಾರಿಸಕೊಳ್ಳಲು ಅನೇಕ ಅಶ್ಲೀಲ ಗೀತೆಗಳೂ ಪ್ರೇಮಗೀತೆಗಳೂ ಅವತರಿಸುವುದು ಇಲ್ಲಿಯೇ.
ಕೋಲಾಟ, ವೀರಮಕ್ಕಳ ಕುಣಿತ, ಬೀಸುಕಂಸಾಳೆ, ರಂಗದ ಕುಣಿತ, ಮುಂತಾದ ಕೆಲವು ಜನಪದ ನೃತ್ಯಗಳಲ್ಲೂ ಗೀತೆಗಳು ಅನಿವಾರ್ಯವಾಗಿ ಬರುತ್ತವೆ.
ದಕ್ಷಿಣ ಕರ್ಣಾಟಕದ ಕೋಲಾಟದ ಪದಗಳು ಆ ನೃತ್ಯದಷ್ಟೇ ಜನಪ್ರಿಯವಾದವು. ಭಕ್ತಿ, ಪ್ರೇಮ, ಸಾಮಾಜಿಕ ವಿಡಂಬನೆಯ ಹಿನ್ನಲೆಯಲ್ಲಿ ಈ ಹಾಡುಗಳ ಸೃಷ್ಟಿಯಾಗಿದೆ. ವಿರಳವಾದ ಕೆಲವು ಕಥನಗೀತೆಗಳೂ ಕೋಲಾಟಕ್ಕೆ ಅಳವಟ್ಟಿರುತ್ತವೆ. ವಿವಿಧ ಮಟ್ಟುಗಳಲ್ಲಿ ತ್ರಿಪದಿಗಳನ್ನೇ ತಾಳಕ್ಕೆ ತಕ್ಕಂತೆ ಹಿಗ್ಗಿಸಿಕೊಂಡು ಆಡುವ ಕೌಶಲ ಇಲ್ಲಿ ಮೆಚ್ಚುವಂತಿರುತ್ತದೆ.
ರಂಗದ ಕುಣಿತದಲ್ಲಿ, ದೇವರ ಉತ್ಸವ ಹೊರಟಾಗ ತಮ್ಮಟೆಯ ಗತ್ತನ್ನೂ ನಿಲ್ಲಿಸಿ ಆ ದೈವವನ್ನು ಕೊಂಡಾಡುವಲ್ಲಿ, ಸೋಮನ ಕುಣಿತದಲ್ಲಿ ಸಾಮಾನ್ಯವಾಗಿ ದೈವಸ್ತುತಿಪ್ರಧಾನ ಗೀತೆಗಳೇ ಹೆಚ್ಚಾಗಿ ಹಾಡಲ್ಪಡುತ್ತವೆ.
ಅಂಟಿಕೆ - ಪಂಟಿಕೆ (ನೋಡಿ- ಅಂಟಿಕೆ ಪಂಟಿಕೆ) ಸಂಪ್ರದಾಯ ಮಲೆನಾಡಿನಲ್ಲಿ ದೀಪಾವಳಿಯ ಸಂದರ್ಭದಲ್ಲಿ ಕಾಣಬರುತ್ತದೆ. ಈ ಸಂದರ್ಭದಲ್ಲಿ ಮಲೆನಾಡಿನ ಯುವಕರು ಮನೆಯಿಂದ ಮನೆಗೆ, ಊರಿಂದ ಊರಿಗೆ ದೀವಳಿಗೆಯ ದೀಪವನ್ನು ಸಾಗಿಸುವಾಗ ಸುಂದರವಾದ ಗೀತೆಗಳನ್ನು ಹಾಡುತ್ತಾರೆ. ಒಳ್ಳೆಯ ಕಥನಗೀತೆಗಳೂ ಬಿಡಿಹಾಡುಗಳೂ ಅಂಟಿಕೆ-ಪಂಟಿಕೆಯ ದೀಪಧಾರಿಗಳಲ್ಲಿ ಉಳಿದು ಬಂದಿವೆ. ಭಾಗವಂತಿಕೆ ಮೇಳ ದೀಪಾವಳಿಯಲ್ಲಿ ಬಯಲು ಸೀಮೆಯಲ್ಲಿ ಕಾಣಬರುವ ಒಂದು ವಿಶಿಷ್ಟ ಸಂಪ್ರದಾಯ. ವೈಷ್ಣವ ಸಂಪ್ರದಾಯ ಹೆಚ್ಚಾಗಿರುವ ಭಾಗಗಳಲ್ಲಿ ಈ ಮೇಳ ನಡೆಯುತ್ತದೆ. ಊರಿನ ದೇವರೊಡನೆ ಭಾಗವಂತಿಕೆ ಪದಗಳನ್ನು ಹೇಳಿಕೊಂಡು ಊರೂರ ಮೇಲೆ ಹೊರಡುವ ತಂಡವನ್ನು ದೀವಳಿಗೆಯ ದಂಡು ಎಂದು ಕರೆಯಲಾಗುತ್ತದೆ. ಇವರೆಲ್ಲ ಭಾಗವಂತಿಕೆ ಪದವನ್ನು ಹಾಡಬಲ್ಲ ಕುಶಲಿಗಳು, ಇವರ ಜೊತೆಗೆ ಕೋಡಂಗಿಯ ವೇಷಧಾರಿಯೊಬ್ಬ ಸೇರಿಕೊಂಡು ಸೂತ್ರಧಾರನಾಗಿ ನಿಲ್ಲುತ್ತಾನೆ. ಭಾಗವಂತಿಕೆಯ ಪದಗಳಲ್ಲಿ ರಾಮಾಯಣ, ಭಾರತ, ಭಾಗವತಗಳ ಕಥೆಗಳನ್ನೇ ಹಾಡಲಾಗುತ್ತದೆ. ಇಲ್ಲಿನ ಕೋಡಂಗಿಯ ನೃತ್ಯ ಗಮನಾರ್ಹವಾದುದು. ಸಾಮೂಹಿಕವಾಗಿ ಹಾಡುವ ತಂಡಗಳು ಕರ್ನಾಟಕದಲ್ಲಿ ವಿರಳವಾದರೂ ಭಾಗವಂತಿಕೆ ಮೇಳದಲ್ಲಿ ಇದೊಂದು ವೈಶಿಷ್ಟ್ಯವಾಗಿ ಉಳಿದು ಬಂದಿದೆ.
ಮಾನೋಮಿಯ ಹರಕೆಯ ಪದಗಳು ಇತ್ತೀಚೆಗೆ ಮರೆಯಾಗುತ್ತಿವೆ. ನವರಾತ್ರಿಯ ಕಾಲದಲ್ಲಿ ಕೂಲಿಯ ಮಠದ ಮಕ್ಕಳು ಅಥವಾ ಯಕ್ಷಗಾನ ತಂಡದ ಉತ್ಸಾಹಿಗಳು ತಮ್ಮ ಅಯ್ಯಗಳ ಜೊತೆ ಊರಾಡಲು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಶುಭಕಾಮನೆಗಳಿಂದ ಕೂಡಿದ ಚೌಪದಿಗಳನ್ನು ಹಾಡಿಕೊಂಡು ತಮಗೆ ಕಡಲೆ ಬೆಲ್ಲವನ್ನೂ ತಮ್ಮಯ್ಯಗಳಿಗೆ ಉಡುಗೊರೆಗಳನ್ನೂ ಕಾಣಿಕೆಯಾಗಿ ಪಡೆಯುತ್ತಿದ್ದರು. ದಕ್ಷಿಣ ಕರ್ನಾಟಕದ ಜನಪದ ನೃತ್ಯಗಳಲ್ಲಿ ಕೋಲಾಟ, ವೀರಮಕ್ಕಳ ಕುಣಿತ, ರಂಗದ ಕುಣಿತ, ವೀರಗಾಸೆ ಕುಣಿತ ಮುಂತಾದುವು ಸಾಮೂಹಿಕ ನೃತ್ಯಗಳು. ಈ ಯಾವ ನೃತ್ಯಗಳಲ್ಲೂ ಪ್ರಧಾನವಾದ ವೇಷಭೂಷಣಗಳೇನೂ ಇಲ್ಲದಿದ್ದರೂ ಕಾಲಗೆಜ್ಜೆ, ತಲೆಯ ಪೇಟ, ನಡುವಿಗೆ ಸುತ್ತಿದ ವಸ್ತ್ರ, ನಿಲುವಂಗಿ, ವೀರಗಾಸೆಗಳು ಮುಖ್ಯವಾದುವು. ಕೋಲಾಟದಲ್ಲಿ ಕೋಲುಗಳನ್ನು ಹೊರತು ಇನ್ನಾವ ವಾದ್ಯಗಳನ್ನೂ ಬಳಸುವುದಿಲ್ಲ. ರಂಗದ ಕುಣಿತಕ್ಕೆ ತಮ್ಮಟೆ ಪ್ರಧಾನ. ವೀರಮಕ್ಕಳ ಕುಣಿತದಲ್ಲಿ ತಮ್ಮಟೆಯ ಸ್ಥಾನದಲ್ಲಿ ಚಕ್ರವಾದ್ಯ ಕಾಣಿಸಿಕೊಳ್ಳುತ್ತದೆ. ವೀರಗಾಸೆ ಕುಣಿತದಲ್ಲಿ ವೀರಭದ್ರನ ಖಡ್ಗ ಹೇಳುವುದರ ಜೊತೆಗೆ ಕರಡೆ, ಸಮೇಳ ಮುಂತಾದ ವಾದ್ಯಗಳನ್ನು ಬಳಸಲಾಗುತ್ತದೆ. ಪಟಾಕುಣಿತ ದಕ್ಷಿಣ ಕರ್ಣಾಟಕದ ಮತ್ತೊಂದು ಜನಪ್ರಿಯ ನೃತ್ಯ. ಈ ಕುಣಿತವೂ ರಂಗದ ಕುಣಿತದ ಗತ್ತನ್ನೇ ಪಡೆದಿದ್ದರೂ ಉದ್ದವಾದ ಅಲಂಕೃತ ಗಳುಗಳನ್ನು (ಇದನ್ನು ಬಿರಡೆಕುಣಿತ ಎನ್ನುವುದುಂಟು) ಹಿಡಿದು ಕುಣಿಯುವುದು ಇಲ್ಲಿನ ಒಂದು ವೈಶಿಷ್ಟ್ಯ.
ಇಬ್ಬರು ಅಥವಾ ಒಬ್ಬರು ಕುಣಿಯುವ ಜನಪದ ನೃತ್ಯಗಳಲ್ಲಿ ಸೋಮನ ಕುಣಿತ, ನಂದಿಕೋಲು ಕುಣಿತ, ಲಿಂಗದ ಬೀರರ ಕುಣಿತ, ಪೂಜಾ ಕುಣಿತ, ಕರಗ ಕುಣಿತಗಳು ಮುಖ್ಯವಾದುವು. ಸೋಮನ ಕುಣಿತದಲ್ಲಿ ದೊಡ್ಡ ಮುಖವಾಡಗಳನ್ನು ಧರಿಸಿ, ಬಣ್ಣದ ವಸ್ತ್ರದ ಕಾಸೆಯನ್ನು ಹಾಕಿ ತಮ್ಮಟೆ ಮತ್ತು ಇತರ ವಾದ್ಯಮೇಳಗಳ ಹಿನ್ನೆಲೆಯಲ್ಲಿ ಕುಣಿಯಲಾಗುವುದು. ನಂದಿಕೋಲು ಕುಣಿತ ಅತ್ಯಂತ ಕಷ್ಟಸಾಧ್ಯವಾದುದು, ಸಾಹಸಯುತವಾದುದು. ಭಾರವಾದ ಅನೇಕ ಗಗ್ಗರ; ನಂದಿಗಳಿಂದ ಕೂಡಿದ ಎತ್ತರವಾದ ಕೋಲುಗಳನ್ನು ನಾಲ್ಕಾರು ಜನರ ನೆರವಿನಿಂದ ಒಬ್ಬರು ಎತ್ತಿಹಿಡಿದು ತಮ್ಮಟೆಯ ಗತ್ತಿಗೆ ಕುಣಿಯುವ ವೈಖರಿ ರೋಮಾಂಚಕಾರಿಯಾದುದು.
ಲಿಂಗದ ಬೀರರು ಲೋಹದ ಅನೇಕ ಬಿರುದಾವಳಿಗಳನ್ನು ಧರಿಸಿ ಒಂದು ಕೈಯಲ್ಲಿ ಖಡ್ಗವನ್ನು ಹಿಡಿದು ವೀರಭದ್ರನ ಹಲಗೆಯನ್ನು ಧರಿಸಿ ಖಡ್ಗವನ್ನು ಹೇಳಿಕೊಂಡು ಕುಣಿಯುತ್ತಾರೆ. ವಿಶಿಷ್ಟವಾದ ಆಭರಣಗಳ ಸೊಗಸು ಇಲ್ಲಿ ಗಮನಾರ್ಹವಾದುದು.
ಪೂಜಾ ಕುಣಿತ ಏಳು ಅಥವಾ ಒಂಬತ್ತು ಕಳಸಗಳ ದೇವತೆಯ ಪೂಜೆಯನ್ನು, ಕಳಸದ ಮೇಲೆ ಧರಿಸಿ ಕುಣಿಯುವ ಮತ್ತೊಂದು ಕೌಶಲಪೂರ್ಣ ನೃತ್ಯ. ನೆತ್ತಿಯ ಮೇಲೆ ಚಚ್ಚೌಕವಾದ ವಿಸ್ತಾರವಾದ ಭಾರವಾದ ಪೂಜೆಯನ್ನು ಹೊತ್ತು, ಎರಡೂ ಕೈಗಳನ್ನು ಬಿಟ್ಟು ಕುಣಿಯುವ ಒಬ್ಬನ ಜೊತೆಗೆ, ಒನಕೆಯನ್ನು ನೆತ್ತಿಯ ಮೇಲಿಟ್ಟು ಕುಣಿಯುವ ಮತ್ತೊಬ್ಬ ಸೇರಿಕೊಳ್ಳುತ್ತಾನೆ. ತಮಟೆಯ ಗತ್ತಿನಲ್ಲಿ ಈ ನೃತ್ಯ ದೊಡ್ಡ ಅದ್ಭುತವಾಗಿ ತೋರಿಬರುತ್ತದೆ.
ಕರಗ (ನೋಡಿ) ಕುಣಿತ ಬೆಂಗಳೂರು, ಕೋಲಾರ ಜಿಲ್ಲೆಗಳಲ್ಲಿ ಪ್ರಸಿದ್ಧವಾಗಿದೆ. ನೆತ್ತಿಯಲ್ಲಿ ಅಲಂಕೃತ ಕರಗವನ್ನು ಧರಿಸಿ ಕೈಬಿಟ್ಟು ನಾನಾ ಭಂಗಿಗಳಲ್ಲಿ ಕುಣಿಯುವ ಚಾತುರ್ಯದಂತೆಯೇ ಕುಣಿತವೂ ಆಕರ್ಷಕವಾಗಿರುತ್ತದೆ.
ಕೋಲಾಟವೊಂದನ್ನು ಉಳಿದು ದಕ್ಷಿಣ ಕರ್ನಾಟಕದ ಎಲ್ಲ ಜನಪದ ನೃತ್ಯಗಳಿಗೂ ಧಾರ್ಮಿಕ ಹಿನ್ನೆಲೆಯನ್ನು ಆರೋಪಿಸಬೇಕಾಗುತ್ತದೆ. ಯಾವುದೊ ಧರ್ಮದ, ದೈವದ ಹೆಸರಿನಲ್ಲಿ ಈ ನೃತ್ಯಗಳು ನಡೆಯುತ್ತವೆ. ಅಲ್ಲದೆ ಇವು ಕೆಲವು ವಿಶಿಷ್ಟವಾದ ಸಂದರ್ಭಗಳಲ್ಲಿ ಮಾತ್ರ ಕಾಣಬರುತ್ತವೆ. ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ ಸಿನೆಮಾ ಹಾಗೂ ಕಂಪನಿ ನಾಟಕಗಳಿಂದಾಗಿ ಇತ್ತೀಚೆಗೆ ಸಂಪೂರ್ಣವಾಗಿ ಮರೆಯಾಗುತ್ತಿದ್ದರೂ ಅಲ್ಲಲ್ಲಿ ಇಂದಿಗೂ ಉಸಿರಾಡುತ್ತಿದೆ. ಯಕ್ಷಗಾನ ಬಯಲಾಟ, ಸೂತ್ರದ ಗೊಂಬೆಯಾಟ, ತೊಗಲುಗೊಂಬೆಯಾಟಗಳು ಸಮಗ್ರ ದಕ್ಷಿಣ ಕರ್ನಾಟಕದ ಪ್ರಸಿದ್ಧ ಮೇಳಗಳಾಗಿದ್ದವು. ಮೂಡಲಪಾಯ ಎಂದು ಪ್ರಸಿದ್ಧವಾದ ಯಕ್ಷಗಾನ ಸಂಪ್ರದಾಯ ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣ, ಕುಣಿತ ಎಲ್ಲದರಲ್ಲಿಯೂ ಬಹುಮಟ್ಟಿಗೆ ದಕ್ಷಿಣ ಕನ್ನಡದ ಎರಡು ಪ್ರಸಿದ್ಧ ಸಂಪ್ರದಾಯಗಳಾದ ತೆಂಕತಿಟ್ಟು ಬಡಗುತಿಟ್ಟುಗಳಿಂದ ಭಿನ್ನವಾಗಿ ಹಳ್ಳಿಹಳ್ಳಿಯಲ್ಲಿಯೂ ಜನಪ್ರಿಯವಾಗಿತ್ತು. ಸೂತ್ರದ ಗೊಂಬೆಯಾಟದಲ್ಲಿ ತಿಪಟೂರು ಸಮೀಪದ ಹೀಚನೂರು, ಬೆಳ್ಳೂರು ಮಾಗಡಿ ಹಾಗೂ ನಂಜನಗೂಡು ಸುತ್ತಿನ ಮೇಳಗಳೂ ಕರ್ನಾಟಕದ ಬಯಲು ಸೀಮೆಯಲ್ಲೆಲ್ಲ ಕಾಣಬರುತ್ತದೆ. ಮಲೆನಾಡಿನ ಭಾಗಗಳಲ್ಲಿ ಘಟ್ಟದ ಕೆಳಗಿನ ಯಕ್ಷಗಾನ ಸಂಪ್ರದಾಯಗಳ ಪ್ರಭಾವವಿರುವುದನ್ನು ಕಾಣಬಹುದು.
ದಕ್ಷಿಣ ಕರ್ನಾಟಕ ಜಾನಪದದ ಎಲ್ಲ ಬಗೆಗಳಲ್ಲೂ ತನ್ನ ಪ್ರಾಮುಖ್ಯವನ್ನು ಕಾಪಾಡಿಕೊಂಡು ಬಂದಿದೆ. ಜನಪದ ಕಥೆ, ಗಾದೆ, ಒಗಟುಗಳಲ್ಲಿ ಈ ಪ್ರದೇಶಕ್ಕೆ ಗಣ್ಯವಾದ ಸ್ಥಾನ ಲಭ್ಯವಾಗುವುದೆಂಬುದಕ್ಕೆ ಉತ್ತಮ ನಿದರ್ಶನವಾಗಿ ಒಳ್ಳೆಯ ಸಂಕಲನಗಳು ಪ್ರಕಟವಾಗಿವೆ. ನಂಬಿಕೆಗಳು, ಆಚಾರ, ವೈದ್ಯ, ಅಡುಗೆ, ಕ್ರೀಡೆಗಳು, ಸಂಪ್ರದಾಯಗಳು ಮುಂತಾದವುಗಳ ಬಗ್ಗೆಯೂ ಸಾಕಷ್ಟು ಅಭ್ಯಾಸ ನಡೆಯುತ್ತಿದ್ದು ಆ ಕ್ಷೇತ್ರದಲ್ಲಿಯೂ ಅದ್ವಿತೀಯವಾದ ಸಾಧನೆ ಕಂಡುಬರುತ್ತಿದೆ. ಸಮಗ್ರ ಕರ್ನಾಟಕದ ಸಂಸ್ಕೃತಿಗೆ ಈ ಪ್ರದೇಶದ ಕಾಣಿಕೆ ಅಲ್ಪವಾದುದೇನಲ್ಲ ಎಂಬುದು ಇದರಿಂದ ಶ್ರುತ ಪಡುತ್ತದೆ. (ಜೆ.ಎಸ್.ಪಿ.) ಉತ್ತರ ಕರ್ನಾಟಕದ ಜಾನಪದ: ಪಂಪ, ಪೊನ್ನ, ದುರ್ಗಸಿಂಹ, ನಯಸೇನ, ಹರಿಹರ, ರಾಘವಾಂಕ, ಕುಮಾರವ್ಯಾಸ ಮುಂತಾದವರ ಗ್ರಂಥಗಳಲ್ಲಿ ಗಾದೆಗಳ ಹಾಗೂ ಜನಪದ ಕಥೆಗಳ ಅನೇಕ ಉಲ್ಲೇಖಗಳಿವೆ. ಜೋಕುಮಾರನ ಉಲ್ಲೇಖ ಶ್ರೀಧರಾಚಾರ್ಯನ ಜಾತಕತಿಲಕದಲ್ಲಿದೆ (1049). ಗಲಗಲಿ ಅಮ್ಮನವರ ಮದುವೆಯ ಹಾಡುಗಳೂ ಹೆಳವನಕಟ್ಟೆ ಗಿರಿಯಮ್ಮನವರ (18ನೆಯ ಶತಕ) ದಶಾವತಾರದ ಹಾಡುಗಳೂ ಹರಪನಹಳ್ಳಿಯ ಭೀಮಯ್ಯನ ಹಾಗೂ ಸಾವಂತ್ರಾದೇವಿಯ ಹಾಡುಗಳೂ ಜಾನಪದ ಸರಣಿಯನ್ನು ಹೊಂದಿವೆ. ಅಬ್ಬೆ ದುಬಾಯ್ (1816) ಉತ್ತರ ಕರ್ನಾಟಕದ ನಾಲ್ಕು ಜನಪದ ಕಥೆಗಳನ್ನೂ ಗಾದೆಗಳನ್ನೂ ನಂಬಿಕೆಗಳನ್ನೂ ತನ್ನ ಗ್ರಂಥದಲ್ಲಿ ತಂದಿದ್ದಾನಲ್ಲದೆ 1871ರ ಮೊದಲೇ ಕೆಲವು ಕ್ರೈಸ್ತ ಪಾದ್ರಿಗಳು ಈ ತೆರನಾದ ಸಂಗ್ರಹ ಮಾಡಿದ್ದರು. ಕಿಟ್ಟೆಲ್, ಫ್ಲೀಟ್, ಬಿ.ಎಲ್.ರೈಸರೂ ಲಾವಣಿ ಕಥೆಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದರು.
ಹಲಸಂಗಿಯ ಮಧುರಚೆನ್ನ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣ- ಇವರು ಕೂಡಿ ಪ್ರಕಟಿಸಿದ ಗರತಿಯ ಹಾಡು (1931) ಹೆಣ್ಣಿನ ವಿವಿಧ ಜೀವನದ ಧ್ವನಿಪೂರ್ಣವಾದ ಸುಂದರ ತ್ರಿಪದಿಗಳ ಸಂಕಲನ. ಇಲ್ಲಿನ ಭಾವಲಾಲಿತ್ಯ ಹಾಗೂ ಆಡುಮಾತಿನ ಸೊಗಸುಗಳು ವಿಸ್ಮಯಕಾರಿಯಾಗಿವೆ.
ಕಾಪಸೆಯವರ ಮಲ್ಲಿಗೆದಂಡೆಯಲ್ಲಿ (1935) ಸಂಪ್ರದಾಯದ ಹಾಡುಗಳೂ ಬರದ ಹಾಡು ಎತ್ತಿನ ಹಾಡಿನಂಥ ಭಾವಪೂರ್ಣ ಹಾಡುಗಳೂ ಎಳ್ಳಮಾವಾಸ್ಯೆಯ ಹಾಡಿನಂಥ ಕಥೆಯ ಹಾಡೂ ಹಾಸ್ಯದ ಹಾಡುಗಳೂ ಇದ್ದು ಇದೊಂದು ಪ್ರಾತಿನಿಧಿಕ ಸಂಗ್ರಹವಾಗಿದೆ. ಸಿಂಪಿ ಲಿಂಗಣ್ಣ ಮತ್ತು ಧೂಲಾ ಸಾಹೇಬರ ಜೀವನ ಸಂಗೀತವೆಂಬ ಸಂಕಲನದಲ್ಲಿ ಅತ್ಯುತ್ತಮವಾದ ಶೃಂಗಾರ ಲಾವಣಿಗಳಿವೆ. ಶಿವೇಶ್ವರ ದೊಡ್ಡಮನಿಯವರ ನವಿಲೂರ ಮನೆಯಿಂದ (1952) ಗ್ರಂಥದಲ್ಲಿ ಬೇರೆಡೆ ಕಾಣದ ಕೂಲಿ, ಅಂಜಿಕೆ ಮುಂತಾದ ಪ್ರಗತಿಶೀಲ ಜನಪದ ಹಾಡುಗಳಿವೆ. ಗದ್ದಗೀಮಠದ ಸಂಗ್ರಹದಲ್ಲಿನ ಶಿವಶರಣರ ಚರಿತ್ರೆಗಳೂ ಮಹಾಭಾರತದ ಹಾಡುಗಳೂ ಹಿರಿಯ ಹಾಡುಗಬ್ಬಗಳೂ ಲೋಕಗೀತೆಗಳೂ ಸಂಪ್ರದಾಯದ ಹಾಗೂ ಕೋಲು ಪದಗಳೂ ಚೆನ್ನಾಗಿವೆ. ಎಂ. ಜೀವನ ಅವರ ಜನಪದ ಗೀತೆಗಳೂ, ಈಶ್ವರಚಂದ್ರ ಚಿಂತಾಮಣಿಯವರ ಗರತಿಯರ ಮನೆಯಿಂದ (1955), ಹಾರೇಶ ಮೇಟಿಯವರ ಹಂತಿಯ ಪದಗಳು (1960), ಕೀರ್ತಿನಾಥ ಕುರ್ತಕೋಟಿಯವರ ಸಂಗ್ಯಾ-ಬಾಳ್ಯಾ (1966), ಮತಿಘಟ್ಟ ಕೃಷ್ಣಮೂರ್ತಿಯವರ ಏಳುಕೊಳ್ಳದ ಎಲ್ಲಮ್ಮ ಎಂಬ ಸಂಗ್ರಹಗಳ ಅನಂತರ ಚಂದ್ರಶೇಖರ ಕಂಬಾರರ ಬಣ್ಣೀಸಿ ಹಾಡವ್ವ ನನ ಬಳಗ (1968), ವಿರೂಪಾಕ್ಷಗೌಡ ಮತ್ತು ಮುದೇನೂರು ಸಂಗಣ್ಣ ಅವರ ಹಳ್ಳಿಯ ಪದಗಳು (1968) ಮತ್ತು ಜ್ಯೋತಿ ಹೊಸೂರರ ಬೆರೆಸಿ ಇಟ್ಟೇನ ಬೆಲ್ಲ ನೆನಗಡಲಿ (1969) ಮೊದಲಾದ ಕೃತಿಗಳು ಪ್ರಕಟವಾಗಿ ಈ ಸಾಹಿತ್ಯದ ಹಿರಿಮೆಯನ್ನು ಎತ್ತಿಹಿಡಿದಿವೆ. ಲಾವಣಿಗಳು: ಹಾಡುವ ಧಾಟಿಗಳ ಗತ್ತಿನ ಕುಣಿತ-ಮಣಿತ ಪ್ರಾಸಗಳ ವೈಖರಿ, ನಾಟಕೀಯ ಸಂಭಾಷಣೆಗಳ ಹದಿರು, ಹಾಡುಗಾರರ ವಿಶಿಷ್ಟವಾದ ಆಡುಮಾತಿನ ಮೋಡಿ ಸೇರಿ ಇಲ್ಲಿಯ (ವಿಶೇಷವಾಗಿ ಹಿಂದಿನ) ಲಾವಣಿಗಳ ಸೊಗಸು ಅತಿಶಯವಾಗಿದೆ. ಇವು ಗಂಡುಗಾಡಿಯ ಪದಗಳು. ಇಲ್ಲಿನ ಶೃಂಗಾರಲಾವಣಿಗಳಲ್ಲಿ ಹರಿದೇಸಿ (ತುರಾಯಿ), ನಾಗೇಸಿ (ಕಲ್ಗಿ) ಎಂಬ ರೀತಿಗಳಿವೆ. ಪೌರಾಣಿಕ ಲಾವಣಿಗಳಲ್ಲಿ ಮಹಾಲಿಂಗಪುರದ ಕುಬಣ್ಣನವರ ವತ್ಸಲಾಹರಣ ಕಥೆಗಾರಿಕೆಯಲ್ಲಿ ಮಿಗಿಲಾದುದು. “ಜೀವನ ಸಂಗೀತ”ದಲ್ಲಿನ ಸಂಗಣ್ಣನ ಗೋಕುಲಾಷ್ಟಮಿ ಪೌರಾಣಿಕ ವಸ್ತುವಿನ ಶೃಂಗಾರಲಾಣಿ. ಬಾಗೇವಾಡಿಯ ಗೋಪಾಳಪ್ಪ, ಮುರಗೋಡದ ಕುಬಣ್ಣ, ತೇರದಾಳದ ಪ್ರಭುದೇವ ಮೊದಲಾದ ಕವಿಗಳ ಅಂಕಿತಗಳಿಂದ ಕೂಡಿದ ಪೌರಾಣಿಕ ಲಾವಣಿಗಳು ತುಂಬ ಇವೆಯೆಂದು ಬೆಟಗೇರಿ ಕೃಷ್ಣಶರ್ಮರು ಹೇಳುತ್ತಾರೆ. ಆದರೆ ಅವು ಅಚ್ಚಾದಂತಿಲ್ಲ.
ಚಾರಿತ್ರಿಕ ಲಾವಣಿಗಳು ಈಚೆಗೆ ಹೆಚ್ಚು ಬೆಳಕಿಗೆ ಬಂದಿವೆ. ಕಿತ್ತೂರ ಚೆನ್ನಮ್ಮ ಮತ್ತು ಹಲಗಲಿ ಹತಾರ ಕದನ- ಶ್ರೇಷ್ಠ ಲಾವಣಿಗಳು. ನರಗುಂದ ಬಾಬಾ ಸಾಹೇಬ, ಸಂಗೊಳ್ಳಿ ರಾಯಣ್ಣ ಮತ್ತು ಕುಮಾರರಾಮರನ್ನು ಕುರಿತ ಲಾವಣಿಗಳಲ್ಲದೆ ಇತ್ತೀಚಿನ ರಜಾಕಾರರ ಒಂದು ಲಾವಣಿಯೂ ಉಂಟು.
ವಾಸ್ತವಿಕ ಲಾವಣಿಗಳಲ್ಲಿ ಒಬ್ಬ ಒಡ್ಡರವನಿಂದ ಎಲ್.ಆರ್.ಹೆಗಡೆಯವರು ಸಂಗ್ರಹಿಸಿದ ಲಾವಣಿಯೊಂದು ನಡೆದ ಘಟನೆಯನ್ನು ವರ್ಣಿಸುತ್ತದೆ. ಹೆಣ್ಣನ್ನು ಮೋಹಿಸಿದವನೊಬ್ಬ ಅವಳು ಮಡಿದಮೇಲೆ, ಹುಗಿದ ಸ್ಥಳದಿಂದ ಅವಳ ಹೆಣವನ್ನೆಬ್ಬಿಸಿ ಅದರೊಡನೆ ಭೋಗಿಸಿದ ಕಥೆಯನ್ನು ಅದು ಹೇಳುತ್ತದೆ. ಸಂಗ್ಯಾ-ಬಾಳ್ಯಾ ಕಥೆಯ ಹೊಂಗಲ ಸಂಗ್ಯಾ ಲಾವಣಿ ಹಾಗೂ ಇತ್ತೀಚಿನ ಪಂಚವಾರ್ಷಿಕ ಯೋಜನೆಗಳ, ಕುಟುಂಬ ಯೋಜನೆಯ ಮತ್ತು ಭೂದಾನ ಚಳವಳಿಯ ಲಾವಣಿಗಳನ್ನು ನೋಡಿದರೆ ಲಾವಣಿ ರಚನೆ ಇನ್ನೂ ಬಳಕೆಯಲ್ಲಿರುವುದು ಕಂಡುಬರುತ್ತದೆ. ವಿಡಂಬನಾತ್ಮಕ ಲಾವಣಿಗಳಲ್ಲಿ ಜೀವನ ಸಂಗೀತದ “ಅಷ್ಟರ ಮಾತಿದು” ಎಂಬುದು ನವನಾಗರಿಕತೆಯ ವಿಡಂಬನೆ. ಬಸರಿದ್ದೀನ್ಹೆಸರನ್ನೇನಿಡೂನ, ನೂಲೊ ಲ್ಯಾಕ ಚೆನ್ನೀ (ಮಲ್ಲಿಗೆ ದಂಡೆ). ಖಾಜ್ಯಾಭಾಯಿಯ “ಅಪಸ್ವರದ ಲಾವಣಿಯ ಕಥೆ- ಇವು ಸಾಕಷ್ಟು ಪ್ರಸಿದ್ಧವಾಗಿವೆ.
ಮಾಂತ್ರಿಕ ಲಾವಣಿಗಳು, ಮದ್ದುಮಾಟಗಳ ಸಲುವಾಗಿ ಬಳಕೆಯಾದುವು. ಇಲ್ಲಿ ಇದ್ದಂತಿಲ್ಲ. ಈ ವಿಭಾಗದಲ್ಲಿ ವೇದಾಂತದ ಹಾಗೂ ಸ್ತುತಿಯ ಲಾವಣಿಗಳನ್ನು ಹೇಳಬಹುದು. “ನಿರಾಕಾರದಾಗ ನೀರಿನ ಹೊರತು ಇದ್ದಿದ್ದಿಲ್ಲ ವಿನಾ”, “ಅಚಿತ್ರ ಮಿಕಾ ಒಂದು ಕಂಡೆನಲಾ” ಎಂಬ ಲಾವಣಿಗಳಲ್ಲದೆ ಗುರುವಿನ ಮಹತ್ತ್ವದ ಲಾವಣಿಗಳೂ ಇಲ್ಲಿ ಕಾಣಸಿಗುತ್ತವೆ.
ದೇವುಡು ಅವರು ಸವಾಲ್ ಲಾವಣಿ ಎಂಬ ಪ್ರಶ್ನೋತ್ತರ ಲಾವಣಿಗಳನ್ನೂ ಝಡಿತಿ ಎಂಬ ಅದರ ಉಪಜಾತಿಯನ್ನೂ ಹೇಳಿದ್ದಾರೆ.
ರಂಗು ಎಂಬ ಶೃಂಗಾರಲಾವಣಿಗಳು ಬಹಳ ಸೊಗಸಾದುವು. ಉದಾ. ಸಂಪಗಿತೆನೆಯಂಥ ಹುಡುಗ, ಕರಿಹುಡುಗಿ ಇತ್ಯಾದಿ. ಗದ್ದಗೀಮಠದ ದುಂದುಮೆ ಪದಗಳಲ್ಲಿಯೂ ಇವುಗಳ ಲಕ್ಷಣಗಳನ್ನು ಗುರುತಿಸಬಹುದು. (ಲಾವಣಿ ಹಾಡುವಾಗ ಸೂರಿನವನು ಜೀಜೀ ಅಥವಾ ಗೀಗೀ ಎನ್ನುವ ಪದ್ಧತಿಯಿದೆ).
ಲಾವಣಿಕಾರರ ಹೆಸರುಗಳು ಅವುಗಳ ಕೊನೆಗಿರುವುದು ಇಲ್ಲಿನ ಪರಂಪರೆಯ ವೈಶಿಷ್ಟ್ಯ. ಮಹಾಲಿಂಗಪುರದ ರಾಣಿ-ಕುಬಣ್ಣ, ಹಲಸಂಗಿಯ ಖಾಜ್ಯಾಭಾಯಿ, ಸಿದ್ಧು-ಶಿವಲಿಂಗ ಮತ್ತು ಸಂಗೂರಾಯಪ್ಪ, ತೇರದಾಳದ ಗೋಪಾಳ ದುರ್ದುಂಡಿ ಮತ್ತು ನೇಮಣ್ಣ ಹಾಗೂ ಜನವಾಡದ ನಾನಾಸಾಹೇಬ- ಇವರು ಶ್ರೇಷ್ಠ ಲಾವಣಿಕಾರರು. ಚಾಂದಕೋಟೆಯ ಗುಡುಸಾಹೇಬ, ಕೋರಹಳ್ಳಿಯ ಸಿದುರಾಮ ತಳವಾದ ಮತ್ತು ಕೆರೂರಿನ ಸತ್ಯಪ್ಪ ಈ ಮೂವರ ಹೆಸರುಗಳನ್ನು ಸಿಂಪಿ ಲಿಂಗಣ್ಣನವರು ಸೂಚಿಸಿದ್ದಾರೆ. ಎಲ್.ಆರ್.ಹೆಗಡೆಯವರು ಸಂಗ್ರಹದಲ್ಲಿ ಹೊಸ್ತಾನ ಹುಸೇನ ಸಾಹೇಬ ಮತ್ತು ರಾವುಕುವಣ್ಣರ ಹೆಸರುಗಳಿರುವ ಲಾವಣಿಗಳಿವೆ.
ದುಂದುಭಿ ಪದಗಳು : ದುಂದುಭಿ ಮತ್ತು ದುಂದುಮೆ ಪದಗಳು ಹೋಳಿಯಲ್ಲಿ ಹಾಡುವ ಪದಗಳಾದರೂ ಇವುಗಳ ತಾಳ-ಲಯ, ಗತಿ, ರಾಗ ಬೇರೆ (ಗದ್ದಗೀಮಠ), ಕಲಿಕಾಲ ಹೋಳಿ, ಮಲ್ಲಸರ್ಜ ದುಂದುಭಿಗಳು ಮಲ್ಲಸರ್ಜನ ದುಂದುಮೆಯೂ ಉಂಟು. ಕುಮಾರರಾಮನ ದುಂದುಮೆ ಬಹಳ ಸೊಗಸಾಗಿದೆ.
ಕಂಬಿಯ ಪದಗಳು : ಇವನ್ನು ಕಂಬಿ ಕೋಲುಗಳನ್ನು ಹಿಡಿದು ಯಾತ್ರೆಗೆ ಹೊರಟ ಶ್ರೀಗಿರಿ ಮಲ್ಲಯ್ಯನ ಭಕ್ತರು ಶಿವರಾತ್ರಿ ಹಾಗೂ ಯುಗಾದಿಗಳಲ್ಲಿ ಹಾಡುವರು. (ನೋಡಿ- ಕಂಬಿಯ ಪದಗಳು)
ಹಂತಿಯ ಪದಗಳು : ಇವು ಬೈಲುಸೀಮೆಯ ಸುಗ್ಗಿಯ ಹಾಡುಗಳು, ಜಾತಿಗರ ಚೌಡಯ್ಯ, ಕಿನ್ನರಿ ಬೊಮ್ಮಯ್ಯ, ಮಾದರ ಚೆನ್ನಯ್ಯ, ಮೇದಾರ ಕೇತಯ್ಯ, ಬಿಜ್ಜ ಮಹಾದೇವಿ, ಬೇಡರ ಕನ್ನಯ್ಯ, ಕುಂಬಾರ ಗುಂಡಯ್ಯ ಮೊದಲಾದ ಶರಣರ ಚರಿತ್ರೆಗಳನ್ನೂ ಎತ್ತುಗಳ ಮೇಲೆಯೂ ಬಸವಣ್ಣನವರ ಮೇಲೆಯೂ ಕಟ್ಟಿದ ಹಾಡುಗಳನ್ನೂ ಹಂತಿ ಹೊಡೆಯುವಾಗಳೂ ಏತ (ಮೊಟ್ಟೆ) ಕಾಯಕದಲ್ಲಿಯೂ ಹೇಳುವರು. ನಡುವೆ ಹಾಸ್ಯದ ಹಾಡುಗಳನ್ನೂ ಪ್ರಣಯಗೀತೆಗಳನ್ನೂ ಅನುಭವದ ಸೂತ್ರಕಥೆಗಳನ್ನೂ ಹಾಡುವರು. ಹಂತಿಯ ಪದಗಳ ಶ್ರೇಷ್ಠಕವಿ ಸಾವಳಿಗೇಶ.
ಡೊಳ್ಳಿನ ಪದಗಳು : ಬೀರೇದೇವರ ಸ್ತುತಿಪದಗಳೂ ಗದ್ಯಪದ್ಯಾತ್ಮಕವಾದ ಸಾಂಖ್ಯತೊಂಡನ ಕಥೆ. ರಘುಪತಿಯ ಕಥೆಗಳೂ ಕುರುಬರಿಂದ ಹೇಳಲ್ಪಡುತ್ತವೆ.
ಹೋಳಿಯ ಪದಗಳು : ಹುಬ್ಬಳ್ಳಿ ಮಂಗ್ಯಾನ ದುಂದುಮೆಯಂಥ ಶೃಂಗಾರ ಪದಗಳು ಬಳಕೆಯಲ್ಲಿವೆ. ಹರಿಜನರೂ ಕಸಬಿಯರೂ ಒಟ್ಟಾಗಿ, ಗಂಡು ಹೆಣ್ಣುಗಳು ಕೈಗೆ ಕೈ ಕೊಟ್ಟು ಹಾಡುವ ಈ ಶೃಂಗಾರದ ಪದಗಳಲ್ಲಿ ಆಶ್ಲೀಲತೆ ಇಣಕಿ ಹಾಕಿದರೆ ಆಶ್ಚರ್ಯವೇನಿಲ್ಲ.
ಕರ್ಬಲಾ ಪದಗಳು : ಮೊಹರಂ ಹಬ್ಬದಲ್ಲಿ ಹೇಳುವ ಹಸನ್ ಮತ್ತು ಹುಸೇನರ ಬಲಿದಾನದ ಕಥಾನಕಗಳಿವು. ಅಲವಿ ಪದಗಳೆಂದೂ ಕರೆಯುವರು. ಇವುಗಳಲ್ಲಿ ಆಡುಮಾತಿನ ಸರಳಸೌಂದರ್ಯವೂ ಶೌರ್ಯ ಮತ್ತು ಶೋಕದ ಪರಿಣಾಮಕಾರಿಯಾದ ಭಾವನೆಗಳೂ ಇವೆಯೆಂದು ಬಿ. ಎ. ಸನದಿಯವರು ಅಭಿಪ್ರಾಯಪಡುತ್ತಾರೆ.
ಜೋಗಿಯರು, ಗೊಂದಲಿಗರು : ಮಹಾಭಾರತದ ಕಥಾನಕಗಳನ್ನು ಹಾಡುವ ಕಿಂದರಿಜೋಗಿಗಳು ಬೇರೆ. ಸವದತ್ತಿಯ ಅಥವಾ ಕೊಕಟನೂರಿನ ಎಲ್ಲಮ್ಮನ ಮಹಿಮೆಯನ್ನು ಬಿತ್ತರಿಸುವ ಜೋಗಿಯರು ಬೇರೆ. ಎಲ್ಲಮ್ಮ ಜೋಗಿಯರು ಎನ್ನೂ ಇತರ ಅದ್ಭುತರಮ್ಯ ಕಥೆಗಳನ್ನು ಹಾಡುತ್ತಾರೆ.
ಗೊಂದಲಿಗರು ಕೊಲ್ಲಾಪುರದ ತುಳಜಾಭವಾನಿಯ ಮಹಿಮೆಗಳನ್ನು ಹಾಡಿ ಕಥೆಗಳನ್ನು ವಿಸ್ತರಿಸಿ ರಾತ್ರಿ ಮೊದಲ್ಗೊಂಡು ಬೆಳಗಿನವರೆಗೆ ಕುಣಿಯುವರು. ಜೋಗಿಯರೂ ಗೊಂದಲಿಗರೂ ಕೆಲವು ಸಾರಿ ಒಂದೇ ಕಥೆ ಹೇಳಿದರೂ ಹಾಡುವ ದನಿಯಲ್ಲಿಯೂ ಚೌಡಿಕೆವಾದ್ಯದಲ್ಲಿಯೂ ಭೇದವಿದೆ. ಅಡವಿಗೆ ಗುರಿಯಾದ ರಾಜ ರಾಣಿಯರ ಕಥೆಗಳು ಹೆಚ್ಚಾಗಿ ಬರುವುದುಂಟು. ಗೊಂದಲಿಗರಲ್ಲಿ ಬಳಕೆಯಲ್ಲಿರುವ ಚಿತ್ರಶೇಖರ-ರಾಜಶೇಖರ ಕಥೆಯೂ ಜೋಗಿಗಳಲ್ಲಿ ಬಳಕೆಯಲ್ಲಿರುವ ಲೋಹಿತ ಕುಮಾರ-ಬಸಂತಕುಮಾರರ ಕಥೆಯೂ ಒಂದೇ. ಇತ್ತೀಚೆಗೆ ಸಂಗೊಳ್ಳಿ ರಾಯಣ್ಣ, ಕಿತ್ತೂರ ಚೆನ್ನಮ್ಮ ಇತ್ಯಾದಿ ಕನ್ನಡ ವೀರರ ಕಥೆಗಳೂ ಅದ್ಭುತರಮ್ಯ ಅಂಶಗಳನ್ನು ಸೇರಿಸಿ ಹಾಡತೊಡಗಿದ್ದಾರೆ.
ಹಾವೇರಿ ಕಡೆಯ ಗೊರವರು ಮೈಲಾರಲಿಂಗನ ಅವತಾರ ಕಥೆಯನ್ನು ಹೇಳುತ್ತಾರೆ.
ಹೆಂಗಸರ ಹಬ್ಬದ ಹಾಡುಗಳು : ಅರಳೆಲೆ ಬಸವನ ಹಬ್ಬದಲ್ಲಿನ ಕೋಲುಹಾಡು ಮತ್ತು ಇತರ ಹಾಡುಗಳು, ಗುಳ್ಳವ್ವನ ಪೂಜೆಯ ಹಾಡು, ನಾಗರಪಂಚಮಿಯ ಜೋಕಾಲಿಯ ಹಾಡು, ಭಾದ್ರಪದ ಶುದ್ಧ ಅಷ್ಟಮಿಯ ಜೋಕುಮಾರನ ಪೂಜೆಯ ಹಾಡು ಮತ್ತು ಗುರ್ಚಿಯ ಹಾಡು ಈ ಭಾಗದಲ್ಲಿ ವಿಶಿಷ್ಟವಾದುವು. ಬನ್ನಿಹಬ್ಬ, ಶೀಗಿ ಹುಣ್ಣಿಮೆ, ಗೌರೀಹಬ್ಬ, ದೀವಳಿಗೆ, ಶಿವರಾತ್ರಿ, ಹೋಳಿ, ಯುಗಾದಿ ಮುಂತಾದ ಹಬ್ಬಗಳ ಹಾಡುಗಳು ಉತ್ತರ ಕರ್ಣಾಟಕದ ಜಾನಪದದ ವೈವಿಧ್ಯ, ವೈಪುಲ್ಯಗಳನ್ನು ತೋರಿಸುತ್ತವೆ.
ವಾರದ ಹಾಡುಗಳು : ಎಲ್ಲ ವಾರಗಳಿಗೂ ಪ್ರತ್ಯೇಕ ಹಾಡುಗಳಿವೆ. ಮಂಗಳ ಗೌರಿಯ ಹಾಡು, ಶುಕ್ರವಾರದ ಹಾಡು ಇತ್ಯಾದಿ. ರವಿವಾರ ರಾಮನ ಹಾಡು, ಸೂರ್ಯನ ಹಾಡು. ವೈಷ್ಣವರು ಗುರುವಾರ ಶ್ರೀ ರಾಘವೇಂದ್ರ ಗುರುಗಳ ಹಾಡು ಹೇಳುತ್ತಾರೆ.
ಕೆಲಸದ ಹಾಡುಗಳು : ಜಾನಪದದಲ್ಲಿ ಗರತಿಯರು ಬೇಯಿಸುವಾಗಲೂ ಕುಟ್ಟುವಾಗಲೂ ತೊಟ್ಟಿಲು ತೂಗುವಾಗಲೂ ಹಾಡುವ ಹಾಡುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹವಾಗಿವೆ. ಜಾನಪದದ ತನಿಕೆನೆಯಾಗಿ ಇವುಗಳಲ್ಲಿ ಭಾವ, ಸಂಸ್ಕೃತಿ ಒಡ ಮೂಡಿವೆ. ಪಟ್ಟ ಪಾಡೆಲ್ಲವೂ ಹುಟ್ಟು ಹಾಡಾಗಿ ಇವುಗಳಲ್ಲಿ ಕಂಗೊಳಿಸುತ್ತವೆ.
ಕಥನಕವನಗಳು : ಹತ್ತಿ ಬಿಡಿಸುವಾಗಲೂ ಗೋಧಿ ಕೀಳುವಾಗಲೂ ಹಾಡುವ ಸಂಪ್ರದಾಯದಲ್ಲಿ ವಿನೋದಕ್ಕಾಗಿಯೂ ದೇವರ ಭಕ್ತಿ-ನೈವೇದ್ಯವೆಂತಲೂ ಅನೇಕ ಕಥನಕವನಗಳನ್ನು ಹಾಡುತ್ತಾರೆ. ಶಿವಶರಣರ ಚರಿತ್ರೆಯ ಹಾಡುಗಳನ್ನು ವೀರಶೈವ ಮಹಿಳೆಯರು ಈ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಕೆಲವು ಸಹ ಹಂತಿಯ ಹಾಡುಗಳನ್ನೂ ಬಳಸುವುದಲ್ಲದೆ ಕಲ್ಪನಾರಮ್ಯವಾದ ಸುಂದರ ವರ್ಣನೆಗಳಿಂದ ಕೂಡಿದ ಅರ್ಜುನಜೋಗಿಯ ಹಾಡುಗಬ್ಬವನ್ನೂ ಹಾಡುತ್ತಾರೆ.
ಗದ್ದಗೀಮಠರು ಕೊಟ್ಟಿರುವ ಕೋಲುಪದಗಳು ಹೆಣ್ಣುಮಕ್ಕಳು ಕೋಟೆ ಕಟ್ಟಿ ಕೋಲುಹಾಕಿ ಹಾಡುವಂಥದು. ಇವುಗಳಲ್ಲಿ ಶಿವ, ಗಂಗೆ, ಗೌರಿಯರ ಸ್ವಾರಸ್ಯವಾದ ಕಥೆಗಳೂ ಮಲವೈ ಸೆಟ್ಟಿ, ಸಿರಿಯಾಳ-ಚೆಂಗಳೆ, ಬಸವಣ್ಣ, ಶ್ರೀಕೃಷ್ಣ ಇವರ ಚರಿತ್ರೆಗಳಲ್ಲದೆ ಕಿತ್ತೂರಿನ ಇತಿಹಾಸದ ಕಥೆಯೂ ಸೇರಿವೆ. ಸಣ್ಣ ಸೊಸೆ ಭಾಗೀರಥಿಯ ಹಾಡು, ಕೊರವಂಜಿ ಹಾಡು, ಬರದ ಹಾಡು, ಹರಿಗೋಲ ಹಾಡು, ಗುಣಸಾಗರವ್ವನ ಹಾಡು, ಹೇಮರೆಡ್ಡಿ ಮಲ್ಲಮ್ಮನ ಹಾಡು, ಕುಮಾರರಾಮನ ಹಾಡು, ಮಲ್ಲ-ಮಲ್ಲಾಣಿಯರ ಹಾಡುಗಳಲ್ಲದೆ ಇನ್ನೂ ಅನೇಕ ಪೌರಾಣಿಕ ಜನಪದ ಕಥನಕವನಗಳು ಹೆಣ್ಣು ಮಕ್ಕಳಲ್ಲಿ ಪ್ರಚಲಿತವಾಗಿವೆ.
ಕಥೆಗಳು : ಈ ನಾಡಿನಲ್ಲಿ ಕಥಾಸಾಹಿತ್ಯ ಬಹು ಸಮೃದ್ಧವಾಗಿವೆ ; ಆದರೆ ಸಂಗ್ರಹ ಹೆಚ್ಚಾಗಿಲ್ಲ. ಊರು, ಕೇರಿ, ಕೆರೆ-ಕೊತ್ತಳ, ಹೊಳೆ ಹಳ್ಳ, ಮನೆ, ಹೊಲಗದ್ದೆಗಳಿಗೂ ಕಥೆಗಳುಂಟು. ಬಸವಣ್ಣ ಪಟ್ಟೆ, ನೆಟ್ಟಗಲ್ಲ-ಚಾಹುರ, ಕಲ್ಗಗುತ್ತಿ, ಹೊಲ ಇವೆಲ್ಲ ಐತಿಹ್ಯದ ಮಾದರಿಗಳು. ದೇವಾಲಯದ ಸುತ್ತಲೂ ಕಥೆಗಳಿವೆ. ಉದಾ. ಉಗಾರದ ಪದ್ಮಾಂಬೆಯ ಕಥೆ. ಅನೇಕ ಪಾಳೆಯಗಾರರ ಐತಿಹಾಸಿಕ ಕಥೆಗಳಿವೆ. ಚಿಂಚಲಿ ಮಾಯಮ್ಮ, ಸವದತ್ತಿ ಎಲ್ಲಮ್ಮ, ಬಾದಾಮಿ ಬನಶಂಕರಿ ಮುಂತಾದ ದೇವತೆಗಳ ಮಹಿಮೆಗಳಲ್ಲಿ ಇತಿಹಾಸದ ಅಂಶಗಳುಳ್ಳ ಜನಪದ ಕಥೆಗಳು ಹಲವಿದೆ. ಅನೇಕ ಹೆಳವರು (ಹಳೆಯರು) ಹೇಳುವ ಹೊಗಳಿಕೆಗಳಲ್ಲಿ ಮನೆತನಗಳ ಕಥೆಗಳಿವೆ.
ಗೊಂದಲಿಗರೂ ಕಿಂದರಿಜೋಗಿಗಳೂ ಒಂದು ಬಗೆಯ ಚಂಪು ರೂಪದಲ್ಲಿ ಕಥೆ ಹೇಳುತ್ತ ಪ್ರಾಚೀನ ಜನಪದ ಕಥೆಗಳನ್ನು ಕಾದಿಟ್ಟುಕೊಂಡು ಬಂದಿದ್ದಾರೆ. ಪಂಡಿತ ಕವಲಿ, ಸಿಸು ಸಂಗಮೇಶ, ಮೇವುಂಡಿ ಮಲ್ಲಾರಿ ಇತ್ಯಾದಿ ಅನೇಕರು ಶಿಶು ಸಾಹಿತ್ಯ ಕಥೆಗಳನ್ನು ಬರೆದು ಪ್ರಕಟಿಸಿದ್ದಾರೆ. ಉಷಾ ಮಿರ್ಜಿಯವರ ಹಾಗೂ ವಾಡೇದ ಅವರ ಜನಪದ ಕಥೆಗಳು ಪ್ರಕಟವಾಗಿವೆ.
ಬೆಟಗೇರಿ ಕೃಷ್ಣಶರ್ಮರು ಉಲ್ಲೇಖಿಸಿದ ಹೇನಿಯ ಕಥೆ. ಸಿಂಪಿ ಲಿಂಗಣ್ಣನವರ ಹಿಟ್ಟಿನ ಗೊಂಬೆಯ ಕಥೆ, ಚೋಟಪ್ಪನ ಕಥೆ, ಮಿರ್ಜಿ ಅಣ್ಣಾರಾಯರು ಹೇಳಿದ ಒಂಟೆ ಮೇಲಿನ ಶಹಣ್ಯಾನ ಕಥೆ, ನೆಲಗಡಲೆ ಕಾಲಿನ ಕಥೆ. ಗದ್ದಗೀಮಠರು ತಿಳಿಸಿದ ಕರಿಗಡುಬಿನ ಕಥೆ- ಇವು ಉತ್ತರ ಕರ್ನಾಟಕದ ಕಥಾಸಂಪತ್ತಿನ ಮುನ್ಸೂಚನೆ ಕೊಡುತ್ತವೆ. ಹೆಗಡೆಯವರ ಸಂಗ್ರಹದಲ್ಲಿನ ಬಣಜಿಗರ ಹೆಣ್ಣಿನ ಕಥೆ, ಬಾಂಬಿ ರಾಕ್ಷಸಿ, ಆನೆ ಹೊಡೆದ ಮಹಾರಾಜನ ಕಥೆ, ಬೆಳ್ಳಿಕಟ್ಟೆ ಚಿನ್ನದ ಗಿಡದ ಕಥೆ, ರುದ್ರಶೇಖರ ಮಹಾರಾಜನ ಕಥೆ ಮುಂತಾದುವು ಉತ್ತರ ಕರ್ನಾಟಕದ ಕಥೆಗಳಾಗಿವೆ.
ಒಗಟುಗಳು : ಶಂ. ಬಾ. ಜೋಶಿಯವರ ಒಡಪುಗಳು ಪ್ರಕಟವಾಗಿವೆ (1946). ಗದ್ದೀಮಠರು ಹೇಳಿರುವ ಕೆಲವು ಒಗಟುಗಳು ಕೃಷ್ಣರುಕ್ಮಿಣಿಯರ ಒಗಟುಗಳನ್ನು ಹೋಲುತ್ತವೆ. ಬೆಟಗೇರಿಯವರು ಅನೇಕ ಸ್ವಾರಸ್ಯ ಒಗಟುಗಳನ್ನು ಹೇಳಿದ್ದಾರೆ. [ನೆಲ್ಲನೊಳಿಗಿನ ಮರಿ (ಚುರುಮರಿ), ರಾಟೆಯ ಕುರಿತಾದ ಅಡ್ರಂಗಿ ಜುಡ್ರಂಗಿ ಒಗಟು ಇತ್ಯಾದಿ]. ಈಶ್ವರಚಂದ್ರ ಚಿಂತಾಮಣಿಯವರ “ಗರತಿಯರ ಮನೆಯಿಂದ” ಸಂಕಲನದಲ್ಲಿ ಒಳ್ಳೆಯ ಒಗಟುಗಳಿವೆ.
ಗಾದೆಗಳು : ಕಿಟ್ಟೆಲರ ಅರ್ಥಕೋಶದಲ್ಲಿ ಇಲ್ಲಿನ ಅನೇಕ ಗಾದೆಗಳಿವೆ. ಬೈಲುಸೀಮೆಯ ಗಾದೆಗಳನ್ನೇ ಪ್ರತ್ಯೇಕವಾಗಿ ಸಂಗ್ರಹಿಸಿ ಪ್ರಕಟಿಸುವ ಅಗತ್ಯ ಇನ್ನೂ ಇದೆ.
ಜಾನಪದ ರಂಗಭೂಮಿ : ದೊಡ್ಡಾಟ, ಸಣ್ಣಾಟ, ಕಿಳ್ಳಿಕ್ಯಾತರ ಆಟ, ಮೂಡಲ ಪಾಯ- ಇತ್ಯಾದಿ ಅನೇಕ ವೈವಿಧ್ಯದ ಆಟಗಳಿವೆ. ಸಂಗ್ಯಾ-ಬಾಳ್ಯ ಒಂದು ಜನಪ್ರಿಯ ನಾಟಕ. ಉತ್ತರ ಕರ್ನಾಟಕದ ಜಾನಪದ ಪ್ರಭಾವ ದಕ್ಷಿಣ ಕರ್ನಾಟಕದ ಕರಪಾಲದವರು, ಚೌಟಿಗೆ (ಚೌಡಿಕೆ)ಯವರು, ಗೊರವರು ಹಾಗೂ ಇತರರ ಮೇಲೆ ಗಾಢವಾಗಿದೆ. ದಕ್ಷಿಣದ ಲಾವಣಿಗಳು ಉತ್ತರ ಕನ್ನಡದಲ್ಲಿಯೂ ಪ್ರಚಾರದಲ್ಲಿವೆ.
ಉತ್ತರ ಕನ್ನಡ ಜಿಲ್ಲೆ: ಉತ್ತರ ಕನ್ನಡ ಜಿಲ್ಲೆಯ ಇಲ್ಲಿನ ಸಾಹಿತ್ಯಸಂಗ್ರಹ ವಿಠೋಬ ವೆಂಕನಾಯಕ ತೊರ್ಕೆಯವರಿಂದ 1933ರಲ್ಲಿಯೇ ಪ್ರಾರಂಭವಾದರೂ ಇನ್ನೂ ಬಹುಪಾಲು ಜಾನಪದದ ಸಂಗ್ರಹವಾಗಿಲ್ಲ. ತೊರ್ಕೆಯವರ “ಹಳ್ಳಿಯ ಹಾಡುಗಳು” ಹೆಣ್ಣುಮಕ್ಕಳು ಬತ್ತ ಕುಟ್ಟುವಾಗ ಹಾಗೂ ಬಾಲರನ್ನಾಡಿಸುವಾಗ ಹಾಡುವ ಸುಂದರ ತ್ರಿಪದಿಗಳ ಸಂಗ್ರಹ. ಮ. ಗ. ಶೆಟ್ಟಿಯವರ ಒಕ್ಕಲಿಗರ ಹಾಡು (1938) ಬೆಳಂಬಾರ ಭಾಗದ ಸುಗ್ಗಿ ಕುಣಿತದ ಪದಗಳನ್ನು ಒಳಗೊಂಡಿದೆ. ಅವರು ಉತ್ತರ ಕನ್ನಡದ ದೇಸಿ ಶಬ್ದಗಳನ್ನು ವಿವಿಧ ವರ್ಗಗಳಲ್ಲಿ ವಿಂಗಡಿಸಿ ಜೀವನ ಪತ್ರಿಕೆಯಲ್ಲಿ ಹಿಂದೆ ಪ್ರಕಟಿಸಿದ್ದರು. ಆತ್ಮಾರಾಮ, ವೆಂಕಟರಮಣ ಕೆರೇಕೈ, ಭಾಗೀರಥಿಬಾಯಿ ಬಳಗುಂಡಿ, ಬಾಳೆಗದ್ದೆ ಶಿವರಾಮ ಹೆಗಡೆ, ಸಾವಿತ್ರೀಬಾಯಿ, ಸುಬ್ರಾಯ ಜೋಶಿ ಮೂಲೆಮನೆ, ಜಾಗನಳ್ಲೀ ಗಣಪತಿ ಹೆಗಡೆ, ಸುಬ್ರಾಯ ಹೆಗಡೆ ಗಂಗಾಜಿ, ರಾಮಚಂದ್ರ ಭಟ್ಟ ಕಡತೋಕಾ ಇತ್ಯಾದಿ ಜನ ಹಾಡುಗಳನ್ನು ರಚಿಸಿಯೋ ಶೇಖರಿಸಿಯೋ ಜಾನಪದದ ಪೋಷಣೆ ಮಾಡಿದ್ದಾರೆ.
ಕುಮಟೆಯ ಜಿ.ಆರ್. ಹೆಗಡೆಯವರು ದೊಡ್ಡ ಪ್ರಮಾಣದಲ್ಲಿ ಜಾನಪದ ಸಂಕಲನ ಮಾಡಿದ್ದಾರೆ. ಗ್ರಾಮಜೀವನ ಮತ್ತು ಇತರ ಪತ್ರಿಕೆಗಳಲ್ಲಿ ಹಲವು ಹಾಡುಗಳನ್ನು ಮತ್ತು ವಿಮರ್ಶೆ ಲೇಖನಗಳನ್ನು ಪ್ರಕಟಿಸಿದ್ದಾರೆ. ಎಲ್.ಆರ್.ಹೆಗಡೆಯವರು ಸಂಗ್ರಹಿಸಿದ ಹಾಡುಗಳಲ್ಲಿ ತಿಮ್ಮಕ್ಕನ ಪದಗಳು ಎಂಬ ಸಂಕಲನ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಗಿದೆ. ನೂರಾರು ಕಥನಕವನಗಳೂ ಬಿಡಿಹಾಡುಗಳೂ ಜನಪದ ಕಥೆಗಳೂ ಇವರ ಸಂಗ್ರಹದಲ್ಲುಂಟು.
ಗೋಕರ್ಣದ ಕೆ.ಜಿ.ಶಾಸ್ತ್ರಿಯವರು, ಗೌರೀಶ ಕಾಯ್ಕಿಣಿಯವರು ಹಾಡು-ಕಥೆಗಳನ್ನು ಸಂಗ್ರಹಿಸಿದ್ದಾರೆ. ಹೊನ್ನಾವರದ ಎನ್.ಆರ್.ನಾಯ್ಕ ದಂಪತಿಗಳು ದೊಡ್ಡ ಪ್ರಮಾಣದಲ್ಲಿ ತ್ರಿಪದಿಗಳನ್ನು, ಇತರ ಜಾನಪದ ಸಾಹಿತ್ಯವನ್ನು ಸಂಗ್ರಹಿಸುತ್ತಿದ್ದಾರೆ. ಅಂಕೋಲ ತಾಲ್ಲೂಕಿನ ಕೆಲವು ಪ್ರಾಧ್ಯಾಪಕರೂ ವಿದ್ಯಾರ್ಥಿಗಳೂ ಸಾಮೂಹಿಕವಾಗಿ ಜಾನಪದ ಸಂಗ್ರಹದ ಪ್ರಯೋಗವನ್ನು ಮಾಡಿದ್ದಾರೆ. ಆರ್.ಎಸ್.ಪಂಚಮುಖಿಯವರ “ಕರ್ನಾಟಕ ಜಾನಪದ ಗೀತಗಳು” ಗ್ರಂಥದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ಹಾಡುಗಳೇ ಅಧಿಕವಾಗಿವೆ. ಗೋಕರ್ಣದ ಸಣ್ಣಭಡತಿ ಗಣಪಕ್ಕ, ಪನ್ನಿ ಲಕ್ಷೀಬಾಯಿ, ಭಟಕಳದ ಶಾಂತೀಬಾಯಿ ಮುಂತಾದ ಕಳೆದ ಶತಮಾನದ ಹೆಂಗಳೆಯರ ಸಾಹಿತ್ಯವನ್ನು ಸರೋಜಿನಿ ಮಹಿಷಿಯವರು ಕಲೆಹಾಕಿದ್ದಾರೆ. ಮತಿಘಟ್ಟ ಕೃಷ್ಣಮೂರ್ತಿಯವರ “ನಾಡಪದಗಳು” ಗ್ರಂಥದಲ್ಲಿಯೂ ಈ ಜಿಲ್ಲೆಯ ಕೆಲವು ಹಾಡುಗಳಿವೆ.
ಇಲ್ಲಿನ ಜಾನಪದದಲ್ಲಿನ ಹವ್ಯಕರ ಹಾಡುಗಳು ಹೆಚ್ಚಾಗಿ ಹೆಂಗಸರು ಹೇಳುವಂಥವು. ಇವು ಮದುವೆ, ಮುಂಜಿ, ಹಬ್ಬಹರಿದಿನಗಳು, ಹಾಗೂ ಶಿಶು ಸಂಗೋಪನೆ ಮುಂತಾದ ಮನೆವಾರ್ತೆಯ ಹಾಡುಗಳನ್ನೊಳಗೊಂಡಿದ್ದು ಜನಪದ ಸಂಸ್ಕೃತಿಯನ್ನೂ, ದೇವತಾಭಕ್ತಿಯನ್ನೂ ಪ್ರಭಾವಿ ರೀತಿಯಲ್ಲಿ ಚಿತ್ರಿಸುತ್ತವೆ. ಗದ್ದೆ, ಬೇಸಾಯ, ಕೂಲಿನಾಲಿ, ಮಾಡಿ ಜೀವಿಸುವ ಅಶಿಕ್ಷಿತ ಒಕ್ಕಲಿಗರಲ್ಲಿ ಅಪಾರವಾದ ಜಾನಪದ ಸಂಪತ್ತಿಯಿದೆ. ಅವರಲ್ಲಿ ಹಾಲಕ್ಕಿ ಒಕ್ಕಲಿಗರು, ನಾಮಧಾರಿಗಳು, ಗ್ರಾಮೊಕ್ಕಲು, ಅಂಬಿಗರು, ಜೋಗಿಯರು, ತೊಮಾರಪಂತರು, ಗೊಂಡರು ಘಟ್ಟದ ಮೇಲಿನ ಕೋಟೆ ಕ್ಷತ್ರಿಯರು, ಕರೆ ಒಕ್ಕಲಿಗರು ಮುಖ್ಯರು.
ಸಂಪ್ರದಾಯದ ಹಾಡುಗಳು : ವಿವಿಧ ದೇವಾಲಯಗಳ ಜಾತ್ರೆ, ನವರಾತ್ರಿ, ಗಂಗಾಷ್ಟಮಿ ಹಾಗೂ ಸ್ಥಾನಿಕ ದೇವತೆಗಳ ಸ್ತೋತ್ರಗಳು ಇತ್ಯಾದಿಗಳ ಹಾಡುಗಳ ವರ್ಗವರ್ಗಗಳಲ್ಲಿಯೂ ಊರಿಂದೂರಿಗೆ ಬೇರೆಯಾಗಿವೆ. ಪಂಚಮುಖಿಯವರ ಸಂಗ್ರಹದಲ್ಲಿ ಇಂಥ ಸಂಪ್ರದಾಯದ ಹಾಡುಗಳು ಬಹಳವಾಗಿವೆ. ಮದುವೆಯ ವಿವಿಧ ಹಾಡುಗಳಲ್ಲಿ ಮೀನಾಕ್ಷಿಕಲ್ಯಾಣ, ಉಷಾ-ವಿವಾಹದಂಥ ಕಥನಕವನಗಳು ವಾದವಿವಾದವೂ ಇತರ ಹಾಡುಗಳೂ ಉಂಟು.
ಭಾವ, ಭಾಷೆಗಳ ಸಹಜತೆ ಸರಳತೆ ಲಾಲಿತ್ಯ ಒಕ್ಕಲಿಗರ ಹಾಡುಗಳಲ್ಲಿ ವಿಶೇಷವಾಗಿವೆ. ದೀಪಾವಳಿಯ ಬಲಿಚಕ್ರವರ್ತಿಯ ಹಾಡು, ತುಲಸಿ ಮದುವೆಯ ಹಾಡು ಗಂಟೆಹಬ್ಬದ ಗೋಪೂಜೆ ಹಾಡು, ಗಂಗಾಷ್ಟಮಿಯ ಗಂಗೆಯ ಕಥೆಯ ಹಾಡು, ಕೃಷ್ಣಾಷ್ಟಮಿಯ ಕೃಷ್ಣನ ಹಾಡುಗಳು ವಿಶೇಷವಾಗಿವೆ. ಶಿರಸಿಯ ಭಾಗದ ಹರಿಜನ ಹೆಂಗಸರ ಶಿರಸಿ ಅಮ್ಮನವರನ್ನು ಕುರಿತಾದ ಪದಗಳು, ಗುತ್ತಿ ಜಾತ್ರೆಯ ಪದಗಳು, ಮಾಸ್ತಿಕಲ್ಲಿನ ಹಾಡು, ಕೆರೆ ತೆಗೆಯುವ ಹಾಡು-ಮುಂತಾದವು ಸಂಗ್ರಹವಾಗಬೇಕಾದವು.
ಹಾಲಕ್ಕಿ ಒಕ್ಕಲಿಗರ ಹಾಗೂ ಗೊಂಡರ ತಿರುಪತಿ ತಿಮ್ಮಪ್ಪನ ಯಾತ್ರೆಯ ಹಾಡುಗಳು ವಿಶಿಷ್ಟವಾಗಿವೆ.
ತ್ರಿಪದಿಗಳು : ಜೀವನದ ವಿವಿಧ ಅನುಭವಗಳು ತ್ರಿಪದಿಗಳಲ್ಲಿ ಬಣ್ಣನೆ ಪಡೆದಿವೆ. ಅನೇಕ ಶಕ್ತಿಯುತ ಭಾವನೆಗಳು ಈ ಹಾಡುಗಳಲ್ಲಿವೆ. ಇವುಗಳಲ್ಲಿ ಹವ್ಯಕರ ಮತ್ತು ಒಕ್ಕಲಗಿತ್ತಿಯರ ಶಿಶುಗಳ ಲಾಲಿಯ ಹಾಡುಗಳೂ ಬತ್ತ ಕುಟ್ಟುವ ಹಾಡುಗಳೂ ವಿಶೇಷವಾಗಿವೆ.
ಕೃಷಿ ಪದಗಳು : ಗದ್ದೆ ಬಿತ್ತನೆಯ ಕಾಲದಲ್ಲಿಯೂ ಕಳೆ ಕೀಳುವಾಗಲೂ ಬತ್ತದ ಕದಿರುಗಳನ್ನು ತರುವಾಗಲೂ ಬತ್ತ ಅಳೆಯುವಾಗಲೂ ಹರಿಜನ ಹೆಂಗಸರು ಬತ್ತವನ್ನು ಬೇಡುವಾಗಲೂ ಹೇಳುವ ಹಾಡುಗಳುಂಟು.
ಕಥನಕವನಗಳು : ಉತ್ತರ ಕನ್ನಡ ಕಥನಕವನಗಳ ಗಣಿ. ಜೋಗಿಯರ ಮಹಾಭಾರತದ ಹಾಗೂ ಇತರ ಕಥೆಗಳ ಹಾಡುಗಳು ಪ್ರಾಚೀನ ಪರಂಪರೆಯವು. ಮಹಾಭಾರತದ ಅನೇಕ ಜಾನಪದ ಕವನಗಳು ಹಾಲಕ್ಕಿ ಒಕ್ಕಲಿಗರಲ್ಲಿಯೂ ನಾಮಧಾರಿಗಳಲ್ಲಿಯೂ ಭಟಕಳದ ಗೊಂಡರಲ್ಲಿಯೂ ಇವೆ. ಜೋಗಿಯರ ಹಾಡುಗಳಲ್ಲಿ ದ್ರೌಪದಿ ಪಗಡೆಯಾಡಿ ಕೌರವನನ್ನು ಸೋಲಿಸಿದ್ದು, ಸುಭದ್ರಾಕಲ್ಯಾಣ, ಜೋಗಿಯರ ಹುಟ್ಟಿನ ಕಥೆ, ಗೊಂಡರ ಗುರದೇವನ ಕಥೆಯಲ್ಲಿ ಭೀಮ ಹೆಣ್ಣುವೇಷದಲ್ಲಿ ಗುರು ದೇವನನ್ನು (ಕೌರವ ?) ಕೊಲ್ಲುವುದು, ಹಾಲಕ್ಕಿ ಒಕ್ಕಲಿಗರ ಭೀಮ ಕೆಂದಾಳಿರಾಯನನ್ನು ಸೋಲಿಸಿದ ಮತ್ತು ಶಂಬರಾಸುರನನ್ನು ಕೊಂದ ಕಥೆಗಳಂಥ ಜಾನಪದ ಸರಣಿಯ ಭಾರತ ಕಥೆಗಳಿವೆ. ರಾಮಾಯಣದ ಮತ್ತು ಭಾಗವತದ ವಿಶಿಷ್ಟ ಕಥೆಗಳಲ್ಲದೆ ಅನೇಕ ಜಾನಪದ-ಪುರಾಣಕಥೆಗಳ ಹಾಡುಗಳಿವೆ. ಶಿವನು ಸಿಟ್ಟಿಗೆದ್ದು ಮಣ್ಣಿನುಂಡೆಗಳನ್ನು ಒಗೆದಾಗ ಅದರಿಂದ ಗಣಪತಿ ಹುಟ್ಟಿದ್ದು, ಕುಂತ್ಯಮ್ಮನ ಮಗ ಸೂರ್ಯನಾರಾಯಣ ಗಂಗೆಯನ್ನು ಮೋಹಿಸಿ ಬಿಸಿಲುರಿಯಲ್ಲಿ ತಿರುಗುವಂತೆ ಶಾಪ ಪಡೆದದ್ದು ಇಂಥ ಕಥೆಗಳಿವೆ. ಗದ್ದೆ ನೆಡುವ ಸಮಯದಲ್ಲಿ ಅನೇಕ ಕಥನಕವನಗಳನ್ನೂ ಕಥೆಗಳನ್ನೂ ಹೇಳುವುದುಂಟು. ಜಾಯು-ಮಾಯು ಗಾಣಿಗನ ಕಥೆ, ಗುಣಸಾಗರಿಯ ಕಥೆ, ಹೊನ್ನಮ್ಮನ ಕಥೆ, ಕಾಸರಗೋಡು ತಿಮ್ಮಣ್ಣನ ಕಥೆ, ಸಿರಿಕೌಲಿಯ ಕಥೆ, ಶಿವನೊಡನೆ ಮಕ್ಕಳನ್ನು ಬೇಡಿದ ಎಲೆಗೌರಿಯ ಕಥೆ, ಕಾಣ್ ಕಾಣ್ ಕನ್ನಡಿ, ರಾಮ ರಾಮಾ ತಂದನಾನಾ, ಏ ಗಿಣಿ ಏ ಗಿಣಿಯೇ, ನದ್ಯಾನ್ ಹೇಳೋ, ತುಂಬೆ ತುಂಬೆ, ಲೋಲೋ ಲುತ್ತುಂಬೆ, ಕತುನವೆ ತಾನ, ಸುವ್ವೆ ಸುವ್ವೆ, ಸುವ್ವಾಲಿ, ಜೀಜೀಜೀ- ಮುಂತಾದ ಪಲ್ಲವಿಯ ಅಸಂಖ್ಯ ಕಥನಕವನಗಳಿವೆ. ಸಂದಾಮನ ಹಾಡು, ಗುಣಸಾಗರಿಯ ಕಥೆ, ಸೀತಾಕಲ್ಯಾಣ, ಸೀತಾವನದಾಸ, ಇತ್ಯಾದಿ, ಹೆಳವನಕಟ್ಟೆ ಗಿರಿಯಮ್ಮ, ಸಾವಂತಾದೇವಿ ಅಥವಾ ಭೀಮವ್ವ ಮುಂತಾದವರಿಂದ ರಚಿತವಾದರೂ ಇಲ್ಲಿನ ಭಾಷೆಯಲ್ಲಿ ಹಾಡಲ್ಪಟುತ್ತವೆ.
ಗುಮಟೆ ಪದಗಳು : ಜೋಗಿಯರ ಮತ್ತು ಗೊಂಡರ ಪದಗಳನ್ನು ಬಿಟ್ಟರೆ ಗಂಡಸರ ಹಾಡುಗಳು ಬಹ್ವಂಶದಲ್ಲಿ ಇವೇ ಆಗಿವೆ. ಹಾಲಕ್ಕಿ ಒಕ್ಕಲಿಗರು, ಕೋಮಾರಪಂತರು, ಗಾಡಿಗರು, ಉಪ್ಪಾರರು, ಅಂಬಿಗರು, ಮುಕ್ತಿಗಳು ಹೆಚ್ಚಾಗಿ ಇವನ್ನು ಹೇಳುತ್ತಾರೆ.
ಸೊಗಸಾದ ಕಥನ ಕವನಗಳು, ದೇವರ ಸ್ತುತಿ ಪದಗಳು, ತತ್ತ್ವಪದಗಳು, ಹೋಳಿಪದಗಳು ಇವುಗಳಲ್ಲಿವೆ.
ಸುಗ್ಗಿ ಕೋಲಾಟದ ಪದಗಳೂ ಗಂಡಸರ ಪದಗಳೇ. ಇಲ್ಲಿ ಕಾವ್ಯಗುಣಕ್ಕಿಂತ ತಾಳದ ಗತ್ತಿಗೇ ಹೆಚ್ಚು ಪ್ರಾಧಾನ್ಯವಿದೆ. ಶೃಂಗಾರದ ಆಮೋದ, ದೇವರ ಸ್ತುತಿ, ಮತ್ತು ನಡೆದ ಘಟನೆಗಳು ಈ ಪದಗಳಲ್ಲಿ ಸೇರಿವೆ. ಸುಗ್ಗಿ ಪದಗಳಲ್ಲಿ ಕಥನ ಕವನಗಳನ್ನು ಹೇಳುವರಾದರೂ ತುಂಡುಪದಗಳೇ ಹೆಚ್ಚು. ಇತ್ತೀಚೆಗೆ ರಂಗುಲಾಲ ಪಲ್ಲವಿಯ ಸುಗ್ಗಿ ಪದಗಳೂ ರೂಢಿಯಲ್ಲಿವೆ. ಸುಗಾವಿಯ ಹೊಲೆಯ ಹರಿಜನರ ಸುಗ್ಗಿ ಪದಗಳಲ್ಲಿ ಚಿಗರಿ ಬಂದಾದ ಹೊಲಕೆ ಎಂಬಂಥ ಬಯಲುಸೀಮೆಯ ಭಾಷೆಯ ಪದಗಳಿವೆ.
ಅಂಬಿಗರ ದೋಣಿ ಹಾಡುಗಳು : ಅಂಬಿಗರ ದೋಣಿ ಹಾಡುಗಳು ಸಂಗ್ರಹವಾಗದೆ, ಹಳೆತಲೆಗಳು ಮರೆಯಾದಂತೆ ಕಣ್ಮರೆಯಾಗುತ್ತಲಿವೆ. ಎಲ್. ಆರ್. ಹೆಗಡೆ ಅವರು ಗುಮಟೆ ಪದಗಳನ್ನೂ ಕೆಲವು ಹೆಂಗಸರ ಹಾಡುಗಳನ್ನೂ ಸಂಗ್ರಹಿಸಿದುದುಂಟು.
ಜನಪದ ಕಥೆಗಳು : ಉತ್ತರ ಕನ್ನಡ ಜನಪದ ಕಥಾಪರಂಪರೆ ಸಮೃದ್ಧವಾಗಿವೆ. ಗುಮಟೆಪದಗಳೂ ಜೋಗಿಯರ ಪದಗಳೂ ಜನಪದ ಕಥೆಗಳ ಕಣಜಗಳು. ಮಳೆಗಾಲದಲ್ಲಿ ಅಡಕೆಗೆ ಕೊಳೆರೋಗ ಬಾರದಂತೆ ರಕ್ಷಣೆ ಒದಗಿಸಲು ಕೊಟ್ಟೆಕಟ್ಟುವ ಸಮಯದಲ್ಲಿಯೂ ಅಡಕೆ ಸಿಪ್ಪೆ ಸುಲಿಯುವಾಗಲೂ ಕೆರೆಕಟ್ಟುವಾಗಲೂ ಗಜನಿಯ (ಚೌಳು ಭೂಮಿ) ಕಟ್ಟುಕಟ್ಟುವಾಗಲೂ ರಾತ್ರಿಯಲ್ಲಿ ಸಾಮೂಹಿವಾಗಿ ಜನ ಕೂಡಿದ ಅನೇಕ ಸಂದರ್ಭಗಳಲ್ಲಿಯೂ ಕಥೆ ಹೇಳುವ ರೂಢಿಯಿದೆ.
ಪಟ್ಟಣದ ರಾಮಭಟ್ಟ, ಕೆಕ್ಕಾರ ಸುಬ್ರಾಯ ಗುನಗ, ವಂದೂರ ಈರು ಭಂಡಾರಿ, ಬಾಡದ ನಾರಾಯಣ ಭಂಡಾರಿ, ನವಿಲಗೋಣಕಥೆ, ಸುಬ್ಬಣ್ಣ, ಬೆತ್ತಗೇರಿ ಜೋಯಿಸರು, ಇಡಗುಂಜಿ ನರಸಿಂಹಭಟ್ಟರು, ಬಾಡದ ಮಹಾದೇವಭಟ್ಟ, ದೇವನೀಮಠ, ಕಾನಗೋಡ ನರಸಿಂಹಜ್ಜ- ಇತ್ಯಾದಿ ಹಳೆತಲೆಮಾರಿನ ಹಿರಿಯ ಕಥೆಗಾರರಿದ್ದರು. ಇತ್ತೀಚೆಗೆ ಎಲ್. ಆರ್. ಹೆಗಡೆಯವರು ಸುಮಾರು ನಲವತ್ತೈದು ಕಥೆಗಳನ್ನೂ ಲೇಖಕರ ಹೆಸರುಗಳನ್ನೂ ಪತ್ರಿಕೆಗಳ ಮೂಲಕ ಪ್ರಕಟ ಮಾಡಿದ್ದಾರೆ.
ಜಿ. ಆರ್. ಹೆಗಡೆಯವರ ಸಂಗ್ರಹದಿಂದ “ಲೋಕಪ್ರಿಯ ಕಥೆಗಳು” ಪ್ರಕಟವಾಗಿದೆ. ಗೌರೀಶ ಕಾಯ್ಕಿಣಿಯವರು ಗೋಕರ್ಣದ ಮಣಿಭದ್ರನ ಕಥೆಯ ಐತಿಹ್ಯವನ್ನೂ ಸೌತೆಪಲ್ಲೆ ಕುರಿತ ಒಂದು ಅಂತೆ-ಕಂತೆಯನ್ನೂ ಉಲ್ಲೇಖಿಸಿದ್ದಾರೆ.
ಚಿಕ್ಕಮಕ್ಕಳನ್ನು ರಂಜಿಸುವ ಗುಡುಗುಡು ಗುಮ್ಮಟದೇವರು ಹೋತಪ್ಪರಾಯನ ಕಥೆ, ಹುಲಿಗೆ ನಾಮಹಾಕುವ ಕಥೆ, ಐಬಾಯಿಹುಲಿಯ ಕಥೆ ಮುಂತಾದ ಪ್ರಾಣಿಕಥೆಗಳಲ್ಲದೆ, ಆಲಾಜಾಯಿ ಹೂವಿನ ಕಥೆ, ಸುಟ್ಟವು (ಎಂಬ ಕಜ್ಜಾಯ ಬೆಳೆಯುವ) ಮರದ ಕಥೆ, ನದಿ ನಿದ್ರಿಸುವ ಕಥೆ, ವಡೆಮರನ ಕಥೆ, ಕೆಸುವಿನ ಸೊಪ್ಪಿನ ಕಥೆ, ಮಡಹಾಗಲಕಾಯಿ ಕಥೆ- ಮುಂತಾದ ವಿಶಿಷ್ಟ ಕಥೆಗಳಿವೆ. ಮದ್ದೂರಾಯನಂಥ ಹೆಡ್ಡರ ಕಥೆಗಳಿವೆ.
ಪ್ರೌಢ ಜಾನಪದ ಕಥೆಗಳ ಭಾಗ ಶ್ರೇಷ್ಠವಾಗಿದೆ. ಭಾನುಮತಿಯ ಕಥೆ, ಯುಕ್ತಿರಾಜ-ಮೈನಾವತಿ, ರಾಜಕುಮಾರಿಯ ನ್ಯಾಯತೀರ್ಪು, ಹೆಣ್ಣು-ಗಜನಿಂಬೆ ಹಣ್ಣು, ಎಂದೂ ಅರಳದಿದ್ದ ಮಲ್ಲಿಗೆ ಮುಂತಾದವು ಪ್ರಪಂಚದ ಉತ್ತಮ ಜಾನಪದ ಕಥೆಗಳಿವೆ ಸರಿದೊರೆಯಾಗಿವೆ. ಮನೋವೈಜ್ಞಾನಿಕ ತತ್ತ್ವಗಳನ್ನು ಪ್ರತಿಬಿಂಬಿಸುವ ಕಥೆಗಳುಂಟು. “ಬಂಗಾರದ ಕಾಲುದೀಪ”ದಲ್ಲಿ ತಂದೆಯೇ ಮಗಳನ್ನು ಮೋಹಿಸುತ್ತಾನೆ. ವಿಧಿ ಬರೆದ ಬರೆಹದಲ್ಲಿ (ಅಪ್ರಕಟಿತ) ಮಗನೇ ತಿಳಿಯದೆ ತಾಯಿಯನ್ನು ಮದುವೆಯಾಗುವ ವೃತ್ತಾಂಶವಿದೆ. ಜಾನಪದ ಕಥಾಮೃತದ “ಅವಳ ಮಗನೇ ಅವಳ ಗಂಡ” ಕಥೆಯ ವಸ್ತುವೂ ಇದೇ. ಆದರೆ ತಾಯಿ ಮಗನಿಂದ ಮಗುವನ್ನು ಪಡೆಯುವುದು ನಮ್ಮಲ್ಲಿನ ಕಥೆಯ ವೈಶಿಷ್ಟ್ಯ. ಅಣ್ಣನೇ ತಂಗಿಯನ್ನು ಮೋಹಿಸಿ ಮದುವೆಯಾಗಲೆಳಸುವ ಬಿಂಬಾಲಿಯ ಕಥೆಯಿದೆ. ಸಮಸ್ಯಾತ್ಮಕ ಕಥೆ ಈ ಜಿಲ್ಲೆಯಲ್ಲಿ ಕಡಿಮೆ. “ಯುಕ್ತಿರಾಜ-ಮೈನಾವತಿ”ಯಲ್ಲಿ ಇಂಥ ಮೂರು ಕಥೆಗಳಿವೆ.
ಸ್ಥಳಕಥೆ-ದಂತಕಥೆ ಬಹಳ ಉಂಟು. ಅವುಗಳ ಸಂಗ್ರಹ ಕಾರ್ಯ ಇನ್ನೂ ಆಗಬೇಕಾಗಿದೆ.
ಬರೇ ರುಂಡವನ್ನು ಹಡೆದ ಕಥೆ, ಮುತ್ತಿನ ಗೊಂಚಲನ್ನು ಮೇಯುವ ಐರಾವತ, ಒರಳ ಕಲ್ಲುಗುಂಡನ್ನು ನುಂಗಿ ಅರವತ್ತು ಖಂಡುಗದನ್ನವನ್ನು ಜೀರ್ಣಿಸಿಕೊಳ್ಳುವ ಧಾಂಡಿಗ ಮುಂತಾದ ವಿಶಿಷ್ಟ ಸರಣಿಗಳಿವೆ. ಅನೇಕ ಕಥೆ-ಗಾದೆಗಳಿವೆ. “ಬಿಟ್ಟರೆ ಸಿಕ್ಕ-ಉಂಡರೆ ಮಲಗ” ಸ್ವಾರಸ್ಯವಾದ ಒಂದು ಗಾದೆ-ಕಥೆ. “ಅದೇ ಭಟ್ಟ ಸೋದೆಗೆ ಹೋದ” ಎಂಬುದು. ಯಂಕು ಪಣಂಬೂರಿಗೆ ಹೋದ ಕಥೆಯಂಥದು. ಅರಸನ ಮಗಳಿಗೆ ಬತ್ತದ ಸುಂಗು (ಸೂಜಿಯಂಥ ತುದಿ) ನಟ್ಟಿದ್ದು ಅಶ್ಲೀಲ ಗಾದೆ-ಕಥೆ.
ಒಗಟುಗಳು : ಮ. ಗ. ಶೆಟ್ಟಿಯವರು ತಮ್ಮ ಸಂಗ್ರಹದಲ್ಲಿ ಐವತ್ತು ಅರವತ್ತು ಒಗಟುಗಳನ್ನು ಸಂಗ್ರಹಿಸಿದುದುಂಟು. ಮದುವೆಯಲ್ಲಿ ಬೀಗ-ನೆಂಟರ ಕಡೆಯವರು ಇದಿರುಬದಿರಾಗಿ ಕೂತು ಸೋಬಾನೆ, ಒಗಟುಗಳ ಪ್ರಶ್ನೋತ್ತರಗಳನ್ನು ಹೇಳುವ ಸ್ವಾರಸ್ಯವಾದ ಪದ್ಧತಿಯ ಐವತ್ತು ಹಾಡುಗಳಲ್ಲಿ ಸದ್ಯಕ್ಕೆ ಅರ್ಧದಷ್ಟನ್ನು ಉಳಿಸಲು ಸಾಧ್ಯವಾಗಿದೆ. ಗಾದೆಗಳು : ಹಳ್ಳಿಹಳ್ಳಿಯ ಮೂಲೆಗಳಲ್ಲಿ ಅಸಂಖ್ಯ ಗಾದೆಗಳುಂಟು. ಎಲ್. ಆರ್. ಹೆಗಡೆಯವರು ಮುನ್ನೂರರಷ್ಟು ಹೊಸ ಗಾದೆಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ರಾಗೌ ಅವರ ನಮ್ಮ ಗಾದೆಗಳು ಒಂದು ವಿಶಿಷ್ಟ ಸಂಗ್ರಹ.
ಜನಪದ ನಾಟಕ : ಯಕ್ಷಗಾನ ಪದಗಳಲ್ಲಿ ಜನಪದ ಸಾಹಿತ್ಯದ ಲಕ್ಷಣಗಳಿವೆ. ಎಷ್ಟೋ ಹಳ್ಳಿ ಹಾಡುಗಳು ಯಕ್ಷಗಾನ ಮಟ್ಟಿನಲ್ಲಿವೆ. “ಧುಂಡೋಜಿಯಂಥಾ ಪುಂಡ ಶಿಪಾಯೀ ಮಂಡಲದೊಳಗಿಲ್ಲ” ಎಂಬುದು ಹಾಸ್ಯಗಾರನ ಒಂದು ಹಾಡಿನ ಪಲ್ಲವಿ.
ಭಟಕಳ ಭಾಗದ ಜೋಗಿಯರಲ್ಲಿ ಆನೆಶೇಖರ ಮಹಾರಾಜನ ಕಥೆಯನ್ನು ಜನಪದ ಗೀತೆಯ ಹಿನ್ನೆಲೆಯಲ್ಲಿ ವೇಷಭೂಷಣಗಳನ್ನು ಧರಿಸುವ ಪಾತ್ರಧಾರಿಗಳು ಅಭಿನಯಿಸುವ ವಿಶಿಷ್ಟ ಜನಪದ ಆಟವಿದೆ. ಹಗರಣ (ಪಗರಣ) ಎಂದು ಜಾತ್ರೆಗಳ ರಾತ್ರಿಗಳಲ್ಲಿಯೂ ಇತರ ವಿಶೇಷ ಪ್ರಸಂಗಗಳಲ್ಲಿಯೂ ವಿವಿಧ ಸೋಗುಗಳನ್ನಭಿನಯಿಸುವಾಗ ಬಳಸುವ ಪದಗಳಿವೆ. ಉದಾ : ಅಣ್ಣ ಬಂದ ಬಾಳs ದಿನದಿನಕss ಕಂಬಳಿ ಮೇಲೆ ಕುಳಿರಣ್ಣ ಉಣಲಾs ಕss ಉತ್ತರ ಕನ್ನಡ ಜಾನಪದಗಳಲ್ಲಿ ಕೊಂಕಣಿಯ ಹಾಗೂ ಕುಣಬಿ ಮರಾಠಿಗಳ ರಾಮಾಯಣ ಭಾರತಗಳ ಹಾಡುಗಳೂ ಇತರ ಹಾಡುಗಳೂ ಇರುತ್ತಿದ್ದು ಅವುಗಳ ಸಂಗ್ರಹವಿನ್ನೂ ಆಗಬೇಕಾಗಿದೆ. (ಎಲ್.ಆರ್.ಎಚ್.)
ದಕ್ಷಿಣ ಕನ್ನಡ ಜಿಲ್ಲೆ: ಕರ್ನಾಟಕದ ಜಾನಪದ ಸಂಪತ್ತಿಗೆ ದಕ್ಷಿಣ ಕನ್ನಡದ ಕೊಡುಗೆ ಗಮನೀಯವಾದುದು. ವಿವಿಧ ನಂಬಿಕೆಗಳ, ರೀತಿನೀತಿಗಳ ಅಗರವಾಗಿದೆ, ಕರ್ನಾಟಕದ ಈ ಸೆರಗು. ಭೂತಾರಾಧನೆ ಇಲ್ಲಿ ಜನಜೀವನದ ಅವಿಭಾಜ್ಯ ಅಂಗವಾಗಿ ಬೆಳೆದುಬಂದಿದೆ. ಇದು ಇಲ್ಲಿನ ಜನರ ಎಲ್ಲ ವಿಚಾರ, ವ್ಯವಹಾರ, ಸಾಹಿತ್ಯ, ಕಲೆಗಳ ಮೇಲೆ ತನ್ನದೇ ಆದ ಮುದ್ರೆಯನ್ನೊತ್ತಿದೆ. ಚಂದ್ರಯಾತ್ರೆಯ ಈ ದಿನಗಳಲ್ಲೂ ಅದು ಜೀವಂತವಾಗಿ, ಪ್ರಭಾವಶಾಲಿಯಾಗಿ ಉಳಿದಿದೆ. ಭೂತಾರಾಧನೆಯಲ್ಲಿ ನೇಮ, ಕೋಲ, ಅಯನ, ಮೆಚ್ಚಿ, ಬಂಡಿ, ತಂಬಿಲ, ಅಗೆಲು- ಇತ್ಯಾದಿ ಹಲವು ರೀತಿಗಳಿವೆ. ವರ್ಷದ ಬೇರೆ ಬೇರೆ ಕಾಲದ ಈ ಭಾಗದ ಬೇರೆ ಬೇರೆ ಕಡೆಗಳಲ್ಲಿ ಜನಪ್ರಿಯ ವಿನೋದ ವೇಷಗಳಾಗಿದ್ದೂ ಕೆಲವೊಂದು ನಂಬಿಕೆಗಳ ನೆರಳನ್ನು ಹೊದ್ದಿರುವ ಆಟಿಕಡೆಂಜ, ಸೋಣಜೋಗಿ, ಕೋರತನಿಯ ಸಿದ್ದವೇಷ, ಎರುಕೋಲ, ಕುದುರೆಕೋ, ಗೊಂದಲ ಕುಣಿತ- ಇವೆಲ್ಲವುಗಳಲ್ಲಿ ಭೂತಪೂಜೆಯ ಪ್ರಭಾವ ನಿಚ್ಚಳವಾಗಿದೆ. ಭೂತೋಪಾಸನೆಯಲ್ಲಿ ವೇಷಧರಿಸುವವರು ಪಂಬದ, ಪರವ, ಪಾಣಾರ ನಲ್ಕೆಯ, ಮಲೆಯ ಇತ್ಯಾದಿಯಾಗಿ ಸಮಾಜದ ಕೆಳವರ್ಗದಲ್ಲಿದ್ದವರು. ಭೂತಾರಾಧನೆಯಲ್ಲಿ ಬಣ್ಣಗಾರಿಕೆ, ಕುಣಿಕೆ, ಉಡುಗೆ ತೊಡುಗೆ, ವಾದ್ಯವಾದನ, ಆಭರಣ ವಿಶೇಷ, ಮುಗ ಮೂರ್ತಿಗಳು, ಖಡ್ತಲೆ, ಮಣಿ, ಕೂಚಿ, ಗಿಂಡೆ, ಗಗ್ಗರ, ಮಣಿ, ಮಂಚ ಇತ್ಯಾದಿ ಹಲವಾರು ತರದ ಕಲಾಪರಿಕರಗಳು ಸಮ್ಮಿಳನಗೊಂಡಿವೆ. ಭೂತದ ಶೃಂಗಾರಕ್ಕೆ ನಿರ್ಮಿಸುವ ಅಣಿಯ ವೈವಿಧ್ಯ, ವೈಚಿತ್ರ್ಯ ಅಭ್ಯಾಸಯೋಗ್ಯವಾಗಿವೆ. ಇಲ್ಲಿನ ಜನಪದ ಸಾಹಿತ್ಯದ ಪ್ರಧಾನ ಅಂಶವಾದ ಪಾಡ್ದನಗಳಲ್ಲಿ (ನೋಡಿ- ಪಾಡ್ಡನ) ಹೆಚ್ಚಿನವು ಭೂತಾರಾಧನೆಗೆ ಸಂಬಂಧಪಟ್ಟವುಗಳೇ. ಅಭಿಜಾತವಾಗಿದ್ದೂ ಇಲ್ಲಿನ ಜನಪದದ ಮೇಲೆ ಅಪಾರ ಪ್ರಭಾವಬೀರಿದ ಕಲೆ ಯಕ್ಷಗಾನ ಬಯಲಾಟ. ತೆಂಕು ಮತ್ತು ಬಡಗು ಈ ಎರಡೂ ತಿಟ್ಟುಗಳು ಜನರ ಸಂಸ್ಕೃತಿಯನ್ನು ರೂಪಿಸುವುದರಲ್ಲಿ ಪ್ರಧಾನ ಪಾತ್ರ ವಹಿಸಿವೆ.
ದೇವಸ್ಥಾನ ಭೂತಸ್ಥಾನ, ಗರೋಡಿ, ಆಲಡೆ, ನಾಗಬನ, ಬ್ರಹ್ಮಸ್ಥಾನ, ಕಟ್ಟೆ ಕಲ್ಲು, ಮಣಿ, ಮಂಚ- ಇವು ಕೆಲವುಗಳಲ್ಲಿ ಈ ಜನ ತಮ್ಮ ದೈವತ್ವವನ್ನು ಕೇಂದ್ರೀಕರಿಸಿ ಆರಾಧಿಸುತ್ತಾರೆ. ದೇಗುಲಗಳಲ್ಲಿ ಕಾಲಕಾಲಕ್ಕೆ ಜರಗುವ ಉತ್ಸವಗಳ ಅಂಗಳಾದ ಉತ್ಸವ ಮೂರ್ತಿಯ ಬಲಿ, ತೆಪ್ಪೋತ್ಸವ ಆರಾಟ, ಪೇಟೆ ಸವಾರಿ, ಕಟ್ಟೆಪೂಜೆ, ಕೆರೆದೀಪ, ಭೂತಭೇಟಿ, ವಿವಿಧ ವಾದನಗಳ ಬಲಿಗಳಲ್ಲಿ (ಪ್ರದಕ್ಷಿಣೆ) ಮಾತ್ರವಲ್ಲ ಇತರ ಕಟ್ಟಳೆಗಳಲ್ಲೂ ಪ್ರಾದೇಶಿಕತೆ ಇದೆ. ಪ್ರಾಣಿಬಲಿ ಸಹಿತವಾದ ಮಾರಿಪೂಜೆ ಮತ್ತು ಗ್ರಾಮದ ಗಡಿಯ ಹೊರಗೆ ಮಾರಿ ಓಡಿಸುವ ಸಂಪ್ರದಾಯವೂ ಇಲ್ಲಿ ಸಾಮಾನ್ಯ. ಸಿರಿಯ ಸಂಧಿ ಎಂಬ ದೀರ್ಘ ಪಾಡ್ದನದಲ್ಲಿ ಬರುವ ಸಿರಿ, ಕುಮಾರ ಸ್ವಾಮಿ ಆಳ್ವೆದಿ, ಅಬ್ಬಗೆ, ದಾರಗೆ, ಸೊನ್ನೆ, ಗಿಂಡಿ ಈ ಪರಿವಾರದ ವ್ಯಕ್ತಿಗಳು ಗ್ರಾಮೀಣ ಗಂಡು ಹೆಣ್ಣುಗಳ ಮೈತುಂಬಿ ದರ್ಶನ ಬರುವ ಸೂಕೆ ಎಂಬ ಸಂಪ್ರದಾಯದಲ್ಲಿ ಸಾಮಾನ್ಯವಾಗಿದೆ. ಇದರ ಸಾಮೂಹಿಕ ದೃಶ್ಯವನ್ನು ಮೂಲ್ಕಿಯ ಹತ್ತಿರದ ಕವತಾರು ಮತ್ತು ಉಡುಪಿಯ ಹತ್ತಿರದ ಹಿರಿಯಡ್ಕ ದೇವಸ್ಥಾನಗಳಲ್ಲಿ ಮೇಷಮಾಸದ ಹುಣ್ಣಿಮೆಯ ದಿನ ಈಗಲೂ ಕಾಣಬಹುದು. ಬೇರೆ ಕೆಲವು ದೇವಸ್ಥಾನಗಳಲ್ಲೂ ಈ ಸಂಪ್ರದಾಯ ಇದೆ.
ದೇಶದ ಯಾವ ಕಡೆಗಳಲ್ಲೂ ಕಾಣಸಿಗದ ಕೋಣಗಳ ಓಟದ ಸ್ಪರ್ಧೆಯಾಟವಾದ ಕಂಬಳ (ನೋಡಿ- ಕಂಬಳ) ಇಲ್ಲಿನ ಪ್ರಮುಖ ಜಾನಪದ ವಿನೋದಗಳಲ್ಲಿ ಒಂದು. ಈ ಓಟದಲ್ಲಿ ಕನಪಲಯಿ, ಗೋರಪಲಯಿ, ಪುಡಿಪು, ನೇಗಿಲು ಎಂಬಿತ್ಯಾದಿ ವಿವಿಧ ವಿಧಾನಗಳಿವೆ.
ಕೋಳಿ ಅಂಕ (ನೋಡಿ- ಕೋಳಿ ಅಂಕ) ಈ ಪ್ರದೇಶದ ಮತ್ತೊಂದು ಜಾನಪದ ಮನರಂಜನೆ, ಬಾಳು (ಸಪುರವಾದ ಕತ್ತಿ) ಕಟ್ಟಿದ ಕೋಳಿ ಕಾಳಗದಲ್ಲಿ ಜೂಜು ಸಾಮಾನ್ಯ. ತೆಂಗಿನಕಾಯಿ ಕಟ್ಟುವುದು, ತಪ್ಪಂಗಾಯಿ, ಚೆನ್ನೆಯಾಟ, ಕುಟ್ಟಿದೊಣ್ಣೆ, ಪಲ್ಲಿ ಹಿಡಿತ, ಸತ್ತಿಕಲ್ಲು, ಸೂಟೆದಾರೆ- ಇವು ಇನ್ನು ಕೆಲವು ಆಟ, ಪಂದ್ಯಾಟಗಳು. ಚೆಂಡಾಟ ಇಲ್ಲಿನ ಉತ್ಸಾಹಿಗಳ ಹುಮ್ಮಸಿನ ಆಟ. ಕೆಲವೊಮ್ಮೆ ಇದಕ್ಕೆ ಧಾರ್ಮಿಕ ಹಿನ್ನಲೆಯೂ ಕಾಣುತ್ತದೆ. ಈ ಜಿಲ್ಲೆಯ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪೊಳಲಿ ಚೆಂಡಿನ ಉತ್ಸವ ಬಹಳ ಪ್ರಸಿದ್ಧವಾದುದು. ಇತರ ಎಷ್ಟೊ ದೇವಸ್ಥಾನ, ಭೂತಸ್ಥಾನಗಳ ಉತ್ಸವಗಳ ಅಂಗವಾಗಿಯೂ ಚೆಂಡಾಟ ನಡೆಯುತ್ತದೆ. ಕುಣಿತಗಳಲ್ಲಿ, ಅದರಲ್ಲೂ ಭೂತದ ಕುಣಿತಗಳಲ್ಲೇ ನೂರಾರು ಬಗೆಗಳನ್ನು ಕಾಣಬಹುದು. ಇದಲ್ಲದೆ ಕೊರಗರ ಡೋಲಿನ ಕುಣಿತ, ಮಾರಿ ಹೊಲೆಯರ ದುಡಿಯ ಕುಣಿತ ಮತ್ತು ಡೋಲಿನ ಕುಣಿತ, ನಲ್ಕೆಯವರ ಮಾದಿರ ಮೊದಲಾದ ಕುಣಿತಗಳು, ಹೋಳಿ ಕುಣಿತ, ಕರಂಗೋಲು ಕುಣಿತ, ಮುಸಲ್ಮಾನರ ರತೀಬ್ ಮತ್ತು ಅಲಾಬಿ ಕುಣಿತಗಳು, ಕ್ರೈಸ್ತರ ಗುಮಟೆಯಾಟ- ಹೀಗೆ ಹಲವಾರು ಬಗೆಯ ಕುಣಿತದ ಭಂಗಿಗಳನ್ನು ಕಾಣಬಹುದು.
ಇಲ್ಲಿ ನಾಗಾರಾಧನೆ ಪ್ರಸಿದ್ಧವಾದುದು. ಕಲ್ಲನಾಗನಿಗೆ ಹಾಲೆರೆಯುವುದರಿಂದ ತೊಡಗಿ ಬ್ರಾಹ್ಮಣ ಪಾತ್ರಿಗಳು ಆವಿಷ್ಟರಾಗಿ ನರ್ತಿಸುವುದರ ತನಕ ಈ ಆರಾಧನೆಯ ಹರವು ಇದೆ. ನಾಗಪತ್ರಿಗಳು ದರ್ಶನ ಬಂದು ಕುಣಿಯುವ ಈ ಪೂಜಾವಿಶೇಷಕ್ಕೆ ಧಕ್ಕೆ ಬಲಿ ಎನ್ನುತ್ತಾರೆ. ಇದರ ವಿಸ್ತೃತ ರೂಪದ ವೈಶಿಷ್ಟ್ಯಪೂರ್ಣ ಆರಾಧನೆಗೆ ನಾಗಮಂಡಳ ಎನ್ನುತ್ತಾರೆ. ನಾಗಮಂಡಳದಲ್ಲಿನ ಹಾಡು, ಕುಣಿತ, ವಾದನ ಎಲ್ಲವುಗಳಲ್ಲಿ ಅನನ್ಯತೆಯಿದೆ.
ಈ ಪ್ರದೇಶದ ಜನಪದ ಸಾಹಿತ್ಯ, ಪಾಡ್ದನ, ಕಬಿತೆ, ತ್ರಿಪದಿ, ಸೋಬಾನೆ ಪದಗಳು, ಉರಲ್, ಕಥೆ, ಎದುರುಕಥೆ, ಗಾದೆ, ನುಡಿಗಟ್ಟುಗಳಲ್ಲಿ ಸಮೃದ್ಧವಾಗಿದ್ದು ಜನಜೀವನದ ಸಂಸ್ಕೃತಿಗೆ ಕನ್ನಡಿ ಹಿಡಿಯುತ್ತದೆ. ಶುಭಾಶುಭ ಕಟ್ಟುಕಟ್ಟಳೆಯಲ್ಲಿಯೂ ಇಲ್ಲಿ ಪ್ರತ್ಯೇಕತೆ ಎದ್ದು ಕಾಣುತ್ತದೆ.
ಉಡುಗೆ ತೊಡುಗೆ, ಆಭರಣ ಅಲಂಕಾರಾದಿಗಳಲ್ಲೂ ಕೆಲವು ತನ್ನತನಗಳನ್ನು ಗುರುತಿಸಬಹುದಾಗಿದೆ. ಹೊಂಬಾಳೆಯ ತಲೆದೊಡುಗೆ (ಮುಟ್ಟಾಳೆ) ಇಲ್ಲಿ ಸರ್ವಸಾಮಾನ್ಯ ಗ್ರಾಮೀಣ ಶಿರೋಭೂಷಣ. ತಲೆಗೂದಲ ಕ್ಷೌರದ ವಿಧಾನದಲ್ಲೂ ಬೇರೆ ಬೇರೆ ಮಾದರಿಗಳಿದ್ದು ವಿಶೇಷತೆ ಇತ್ತು ; ಈಚೆಗಿದು ಕಡಿಮೆಯಾಗುತ್ತಿದೆ.
ಮನೆಗಳನ್ನು ದೂರದೂರ ಕಟ್ಟಿ ವಾಸಿಸುವ ಹವ್ಯಾಸ, ಮನೆಯ ನಿರ್ಮಾಣಕ್ರಮ, ದಿನಬಳಕೆಯ ವಸ್ತುಗಳ ರಚನಾವಿಧಾನ ತಿಂಡಿತಿನಿಸುಗಳ ತಯಾರಿಕೆಯ ಬಗೆ, ಕೃಷಿಯ ಕ್ರಮ, ನಡವಳಿಕೆ, ನಂಬಿಕೆ- ಇವೆಲ್ಲವುಗಳಲ್ಲೂ ಇಲ್ಲಿಯ ಮಣ್ಣಿನ ವಾಸನೆ ಇದೆ.
ಪಶ್ಚಿಮದಲ್ಲಿ ವಿಶಾಲ ಸಾಗರ, ಪೂರ್ವದಲ್ಲಿ ಸೆಟೆದು ನಿಂತ ಪರ್ವತ ಮಾಲೆಗಳ ಮಧ್ಯೆ ಚಾಚಿರುವ ಈ ನೆಲದಲ್ಲಿ ಅರಳಿದ ಜಾನಪದ ಕಲಾಕುಸುಮದ ತನ್ನದೇ ಆದ ಸೌರಭ ಇಂದೂ ಆಘ್ರಾಣಿಸಲು ಯೋಗ್ಯವಾಗಿ ಇಲ್ಲಿ ಪರಿಮಳಿಸುತ್ತಿದೆ. (ಎ.ಎಲ್.ಎ.)
ಕೊಡಗಿನ ಜಾನಪದ: ಕೊಡಗು ಕನ್ನಡ ನಾಡಿನ ಬಹು ಚಿಕ್ಕ ಜಿಲ್ಲೆ. ಆದರೆ ಕನ್ನಡ ನಾಡಿನ ಸಂಪತ್ಸಮೃದ್ಧ ಜಿಲ್ಲೆಗಳಲ್ಲೊಂದು. ನಿಸರ್ಗದ ನೆಲೆವೀಡಾದ ಈ ಜಿಲ್ಲೆಯ ಜನರ ಜೀವನ ವರ್ಣರಂಜಿತ, ಕೊಡವರ ನಡೆನುಡಿ ಆಚಾರ ವಿಚಾರಗಳು ವಿಶಿಷ್ಟ ಹಾಗೂ ವಿಭಿನ್ನವಾದುವು. ಕರ್ಣಾಟಕ ಸಂಸ್ಕೃತಿಯಲ್ಲಿ ಕೊಡಗಿನ ಸಂಸ್ಕೃತಿಗೆ ಒಂದು ವಿಶೇಷವಾದ ಸ್ಥಾನವಿದೆ. ಅಲ್ಲಿನ ಜಾನಪದವೂ ಕೊಡಗಿನ ಬೆಡಗಿನಂತೆಯೇ, ಪ್ರಕೃತಿಯ ಐಸಿರಿಯಂತೆಯೇ ಉತ್ಕೃಷ್ಟವಾದುದು, ವಿಪುಲವಾದುದು.
ಕೊಡವರ ಭಾಷೆಗೆ ಪ್ರತ್ಯೇಕ ಲಿಪಿಯಿಲ್ಲ. ಆ ಜನಾಂಗದ ಮೂಲದ ಬಗ್ಗೆಯೂ ಯಾವ ವಿಷಯಗಳೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಕ್ರಿ.ಶ.994ರ ಶಾಸನವೊಂದರಲ್ಲಿ ಕೊಡವರ ಪ್ರಸ್ತಾಪ ಬರುತ್ತದೆ. ಆದುದರಿಂದ ಆಗಿನಿಂದಲೂ ಕೊಡವ ಭಾಷೆ ಬಳಕೆಯಲ್ಲಿತ್ತೆಂದು ಹೇಳಬಹುದು. ಈ ಭಾಷೆಯಲ್ಲಿ ಕನ್ನಡದ ಬಹುತೇಕ ಪದಗಳೂ ತಮಿಳು ಮತ್ತು ಮಲೆಯಾಳ ಭಾಷೆಗಳ ಕೆಲವು ಪದಗಳೂ ತುಳು ಭಾಷೆಯ ಪದಗಳೂ ಕಾಣಬರುತ್ತದೆ. ಜೊತೆಗೆ ಸೇಕಡ ಇಪ್ಪತ್ತೈದರಷ್ಟು ಕೊಡವ ಭಾಷೆಯ ಪದಗಳೂ ಇವೆ. ಮಿಶ್ರಭಾಷೆಯಾದ ಕೊಡವರ ಭಾಷೆಗೆ ಕನ್ನಡ ಲಿಪಿಯನ್ನು ಬಳಸಲಾಗುತ್ತದೆ. ಈ ಭಾಷೆಯಲ್ಲಿ ಸಾಹಿತ್ಯ ರಚನೆ ಅಷ್ಟಿಷ್ಟು ಆಗಿದ್ದರೂ ಜನಪದ ಸಾಹಿತ್ಯದ ನಿರ್ಮಾಣವೇ ಹೆಚ್ಚು. ಆದ್ದರಿಂದ ಕೊಡಗಿನ ಸಾಹಿತ್ಯವನ್ನು ಪರಿಗಣಿಸುವಾಗ ಕಂಠಸ್ಥ ಸಂಪ್ರದಾಯದಲ್ಲಿ ಬಂದ ಜನಪದ ಸಾಹಿತ್ಯವೇ ವಿಶೇಷ ಸ್ಥಾನವನ್ನು ಕೊಡಬೇಕಾಗುತ್ತದೆ.
ಕೊಡಗಿನ ಜನಪದ ಸಾಹಿತ್ಯದಲ್ಲಿ ಜನಜೀವನದ ವಿವಿಧ ಮುಖಗಳ ಸುಂದರ ಚಿತ್ರಣವಿದೆ. ಮಾನವ ಜೀವನದ ವಿವಿಧಘಟ್ಟಗಳಿಗೆ ಸಂಬಂಧಿಸಿದ ಹಾಡುಗಳು ಕೊಡವರ ಮೂಲವನ್ನು ಕುರಿತ ಪದಗಳು ಕಾವೇರಿಯ ಮಹಾತ್ಮೆ, ಇಕ್ಕೇರಿ ಅರಸು ಮನೆತನವನ್ನು ಕುರಿತ ಹಾಡುಗಳು, ಆಂಗ್ಲೇಯರ ಆಳ್ವಿಕೆಯನ್ನು ಕುರಿತ ಪದಗಳು, ಲಾಲಿಯ ಪದಗಳು, ಹುತ್ತರಿ ಹಾಡುಗಳು, ಕೊಡವ ಮನೆತನದ ಮೂಲಪುರುಷರ ಪದಗಳು, ಮದುವೆ ಹಾಡುಗಳು, ಬೇಸಾಯದ ಹಾಡುಗಳು, ಸ್ಥಳೀಯ ದೇವತೆಗಳನ್ನು ಕುರಿತ ಹಾಡುಗಳು - ಹೀಗೆ ವೈವಿಧ್ಯಮಯ ಹಾಡುಗಳನ್ನು ಇಲ್ಲಿನ ಜಾನಪದ ಪರಂಪರೆಯಲ್ಲಿ ಕಾಣಬಹುದು. ಕಚ್ಚಿದುಡಿ ಎಂಬ ಕಿರಿಯ ಡೋಲನ್ನು ಬಾರಿ ಸುತ್ತ ಸಾಮೂಹಿಕವಾಗಿ ಗೀತೆಗಳನ್ನು ಹಾಡುವುದು ವಾಡಿಕೆ. ನೃತ್ಯಗಳಲ್ಲೂ ವಿಶಿಷ್ಟ ಗೀತೆಗಳನ್ನು ಬಳಸಲಾಗುತ್ತದೆ. ಸಾಮೂಹಿಕ ನೃತ್ಯಗಳು ಹೆಚ್ಚು ಆಕರ್ಷಕವಾದವು. ಕೊಡವರ ಮೂಲವನ್ನು ಕುರಿತು ಯಾವ ಖಚಿತವಾದ ಅಭಿಪ್ರಾಯಗಳು ಕಾಣಬರದಿದ್ದರೂ ಕೊಡವರ ಹಾಡೊಂದರಲ್ಲಿ ಅವರು ಪಾಂಡವರ ವಂಶಕ್ಕೆ ಸೇರಿದ ಕ್ಷತ್ರಿಯರೆಂದು ಹೇಳಲಾಗಿದೆ. ಅವರ ದೇಶೀಯ ಉಡುಪು ನಡವಳಿಕೆಗಳು, ಪಾಂಡವರ ಉಡುಪು ಮತ್ತು ನಡವಳಿಕೆಗಳನ್ನು ಹೋಲುತ್ತವೆ ಎಂಬ ವಿಷಯವನ್ನು ಆ ಹಾಡಿನಲ್ಲಿ ಪ್ರಸ್ತಾಪಿಸಲಾಗಿದೆ. ಶಂತನು ಚಕ್ರವರ್ತಿ ಸುಗಂಧಿನಿಗೆ ತನ್ನ ಸಮಸ್ತ ಹಕ್ಕನ್ನೂ ಧಾರೆ ಎರೆದಂತೆ ಕೊಡವರಲ್ಲೂ ಒಕ್ಕಪರಜೆ ಎಂಬ ವಿವಾಹ ಪದ್ಧತಿಯಿದೆ. ಇಲ್ಲಿ ವಿವಾಹವಾದ ಪತ್ನಿಗೆ ಪುರುಷ ತನ್ನ ಎಲ್ಲ ಹಕ್ಕುಗಳನ್ನೂ ಧಾರೆ ಎರೆದುಕೊಡುತ್ತಾನೆ. ಪಾಂಡವರೈವರೂ ಒಬ್ಬಳೇ ಹೆಣ್ಣನ್ನು ಕೂಡಿದಂತೆ, ಕೊಡವರಲ್ಲಿ ಅಣ್ಣ ಮಡಿದರೆ ಅವನ ಪತ್ನಿಯನ್ನು ತಮ್ಮನೂ ತಮ್ಮ ಮಡಿದರೆ ಅವನ ಮಡದಿಯನ್ನು ಅಣ್ಣನೂ ಕೈ ಹಿಡಿಯುವ ಪದ್ಧತಿಯಿದೆ. ಪಾಂಡವರು ಅಜ್ಞಾತವಾಸದ ಸಂದರ್ಭದಲ್ಲಿ ಹೇಗೆ ತಮ್ಮ ಆಯುಧಗಳನ್ನೆಲ್ಲ ಬನ್ನಿಯ ಮರವೊಂದರ ಮೇಲಿಟ್ಟು ಅಜ್ಞಾತವಾಸದ ಅನಂತರ ಅವನ್ನು ಕೆಳಕ್ಕೆ ಇಳಿಸಿ, ಶುದ್ಧಗೊಳಿಸಿ ಧೂಪಾರತಿ ಎತ್ತಿ ಪುಜಿಸಿದಂತೆ ಕೊಡವರಲ್ಲೂ ಕೈಲ್ ಮುಹೂರ್ತ ಹಬ್ಬದ ದಿನ ಆ ವರೆಗೆ ಅಟ್ಟದ ಮೇಲಿಟ್ಟಿದ್ದ ತಮ್ಮ ಕತ್ತಿ ಕೋವಿ ಮುಂತಾದ ಆಯುಧಗಳನ್ನು ಹೊರತೆಗೆದು, ಶುಚಿಗೊಳಿಸಿ, ಧೂಪಾರತಿ ಎತ್ತಿ ಪುಜಿಸುತ್ತಾರೆ. ಇಂಥ ಅನೇಕ ಸಂದರ್ಭಗಳನ್ನು ಆ ಹಾಡಿನಲ್ಲಿ ಪ್ರಸ್ತಾಪಿಸಿ ಪಾಂಡವರ ಸಂಬಂಧವನ್ನು ಕಲ್ಪಿಸಲಾಗಿದೆ.
ಕಾವೇರಿ ಕೊಡವರ ಕುಲದೇವತೆ. ಅವಳ ಮೇಲೆ ಕೊಡವರಿಗೆ ಅಪಾರ ಭಕ್ತಿ, ಪ್ರತಿ ವರ್ಷ ತುಲಾ ಸಂಕ್ರಮಣ ಕಾಲದಲ್ಲಿ (ಅಕ್ಟೋಬರ್ 16-17 ರಂದು) ಕೊಡಗಿನಲ್ಲಿ ಕಾವೇರಿ ಜಾತ್ರೆ ವೈಭವದಿಂದ ಜರುಗುತ್ತದೆ. ಕಾವೇರಿ ಮಾತೆಯನ್ನು ಭಕ್ತಿಯಿಂದ ಪುಜಿಸಿ, ಅವಳ ಮಹಿಮೆಗಳನ್ನು ಕುರಿತು ಹಾಡುತ್ತಾರೆ. ಬ್ರಹ್ಮದೇವನ ಮಾನಸ ಪುತ್ರಿಯಾದ ಲೋಪಾಮುದ್ರೆ, ಕವೇರ ಮುನಿಯ ದತ್ತು ಪುತ್ರಿ ಕಾವೇರಿಯಾಗಿ ಬ್ರಹ್ಮಗಿರಿಯಲ್ಲಿ ಉದಿಸುತ್ತಾಳೆ. ಅಗಸ್ತ್ಯರ ಮಡದಿಯಾಗಿ, ಕೊನೆಗೆ ಬ್ರಹ್ಮಸಂಕಲ್ಪದಂತೆ ಜಲರೂಪವನ್ನು ಧರಿಸಿ ಕಾವೇರಿ ನದಿಯಾಗಿ ಹರಿಯುತ್ತಾಳೆ. ಆ ನೀರಿನಲ್ಲಿ ಮಿಂದ ಕೊಡವ ನಾರಿಯರ ಸೀರೆಯ ನೆರಿಗೆ ಮುಂಭಾಗದಿಂದ ಹಿಂಭಾಗಕ್ಕೆ ಜರುಗುತ್ತದೆ. ಕಾವೇರಿ ಮಾತೆಯ ಆದೇಶದಂತೆ ಅಲ್ಲಿಂದ ಮುಂದೆ ಅದೇ ರೀತಿಯಲ್ಲಿ ತಮ್ಮ ಸೀರೆಗಳನ್ನುಡುವ ಪದ್ಧತಿಯನ್ನು ಕೊಡವ ಸ್ತ್ರೀಯರು ಪಾಲಿಸುತ್ತ ಬಂದರೆಂಬ ಸ್ವಾರಸ್ಯ ವಿಷಯ ಬರುತ್ತದೆ. ಹಾಡಿನ ಕೊನೆಯಲ್ಲಿ ಕಾವೇರಿಯ ಸ್ನಾನ ಎಷ್ಟು ಪವಿತ್ರವಾದುದು ಎಂಬ ಅಂಶವೂ ಬರುತ್ತದೆ-
ಕಾಲೋರಾಂಡೆಕೋರಮ್ಮ | ಕನ್ನಿಯಾರ್ ಪೋಕ್ಲೊ ಬ್ರಹ್ಮ ಕುಂಡಿಕೆರೊಳ್ಳ್‌ಂಜೆ | ನೀಲಕೊಡಿ ತೀರ್ತ ನೊರೆ ಬಂದುಕ್ಕಿ ಮಲಿವಕ್ಕ | ಮೈಮುಕ್ಕಿ ಕುಳಿಚೆನೊ ಅಜ್ಜಂಡಜ್ಜ ಕಾಲತ್ | ಕೆಜ್ಜ ಪಾಪ ತ್ತೋರುಲಾ | ಪೊದ್ದಶನಿ ನೀಂಗುಲಾ ಕೊಡಗಿನ ಹುತ್ತರಿ ಕುಣಿತ ಪ್ರಸಿದ್ಧವಾದುದು ; ಹುತ್ತರಿಯ ಹಬ್ಬವೂ ಅಷ್ಟೇ ಪ್ರಮುಖವಾದುದು. ಕಾವೇರಿ ಮಾತೆಯ ಕೃಪೆಯಿಂದ ಹುಲುಸಾಗಿ ಬೆಳೆದ ಧಾನ್ಯದೇವತೆಯನ್ನು ಪುಜಿಸಿ ಕರೆತಂದು ಮನೆತುಂಬಿಸಿಕೊಳ್ಳುವ ಹಿನ್ನೆಲೆ ಇಲ್ಲಿ ಗಮನಿಸಬೇಕಾದುದು. ಇದು ಕೊಡಗಿನ ಸುಗ್ಗಿಯ ಹಬ್ಬ ; ನವೆಂಬರ್ ಅಥವಾ ಡಿಸಂಬರಿನಲ್ಲಿ ಬರುತ್ತದೆ. ಹಬ್ಬದ ದಿನ ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸುತ್ತಾರೆ. ಶುಭ ಮೂಹೂರ್ತದಲ್ಲಿ ಬತ್ತದ ಗದ್ದೆಗೆ ತೆರಳಿ ಅನ್ನಲಕ್ಷ್ಮಿಯನ್ನು ಆರಾಧಿಸಿ ಕೆಲವು ಬತ್ತದ ಪೈರನ್ನು ಕತ್ತರಿಸಿ “ಅನ್ನ ಲಕ್ಷ್ಮಿಯೇ ಅಕ್ಷಯವಾಗು” (ಪೊಲಿ ಪೊಲಿ ದೇವ) ಎಂದು ಸಾಮೂಹಿಕವಾಗಿ ಕೂಗುತ್ತ ವಾದ್ಯ ವಿಶೇಷಗಳೊಡನೆ ಮನೆಗೆ ಸಾಗಿಸುತ್ತಾರೆ. ಈ ಹಬ್ಬದ ಅಂಗವಾಗಿ ಸುಮಾರು ಒಂದು ವಾರದವರೆಗೆ “ಮಂದ್” ಎಂಬ ಗ್ರಾಮರಂಗದಲ್ಲಿ ಕುಣಿತ, ಕೋಲಾಟಗಳಲ್ಲಿ ನಿರತರಾಗುತ್ತಾರೆ. ಸುಂದರ ಜನಪದ ಗೀತೆಗಳನ್ನು ಈ ಸಂದರ್ಭದಲ್ಲಿ ಹಾಡುತ್ತಾರೆ. ಇವೇ ಹುತ್ತರಿ ಹಾಡುಗಳು.
ಹುತ್ತರಿಯ ಹಾಡುಗಳಲ್ಲಿ ಬತ್ತದ ಬೇಸಾಯದ ವಿವಿಧ ಹಂತಗಳು, ಹಬ್ಬದ ವರ್ಣನೆ, ವಿನೋದಯುಕ್ತ ವಿಷಯಗಳ ರಸವತ್ತಾದ ನಿರೂಪಣೆ ಬರುತ್ತದೆ. ಹಬ್ಬದ ದಿನ ಮನೆಮಂದಿ ಹಾಡುತ್ತ ಗದ್ದೆಗೆ ತೆರಳಿ, ದೇವತಾ ಪ್ರಾರ್ಥನೆ ಮಾಡಿ, ಆಕಾಶದತ್ತ ಗುಂಡೊಂದನ್ನು ಹಾರಿಸಿ ಬತ್ತದ ಕದಿರನ್ನು ಕೊಯ್ದು ಹಿಗ್ಗುತ್ತ ಮನೆಗೆ ಮರಳುವ ವರ್ಣನೆ ಆಕರ್ಷಕವಾದುದು-
ಆಡಿಪಾಡಿ ಪೋಯಿತ್ ಏಳ್ಮೂಲೆ ಆಕಡ ಕ್ಕೇರಿಲ್ ನಿಂದಿತ್ | ಕೇಕ್ಕ್ ಮೊಗವಾಯಿ ದೇವರ ನೆನೆತಿತ್ | ತಿತ್ತ್‌ ಬೊಡಿ ಬೆಚ್ಚಿತ್ ಕಳಿಕಳಿ ನಟ್ಟಾನ | ಪೊಲಿ ಪೊಲಿ ಕೊಜ್ಜತ್ ||
ಹುತ್ತರಿ ಕುಣಿತ ಕರ್ಣಾಟಕದ ಜನಪದ ನೃತ್ಯಗಳಲ್ಲಿ ವಿಶಿಷ್ಟವಾದುದು. ಕೊಡಗಿನ ಸಾಂಪ್ರದಾಯಿಕ ಉಡುಪನ್ನು ಧರಿಸಿ ಕೋಲುಹೊಯ್ಯುತ್ತ ಹಾಡುವ ಕೊಡವ ಪದಗಳೂ ಅಷ್ಟೇ ರಮ್ಯವಾದವು. ವಿವಿಧ ಗತ್ತುಗಳಲ್ಲಿ ಆ ಹಾಡುಗಳನ್ನು ಹಾಡಲಾಗುತ್ತದೆ.
ಪುಮಾಲೆ ಮಂದ್ಲ್ ಕೋಲ್ಕ್ಳಿಂಜ | ಪೊಯಿಲೇ ಪೊಯಿಲೇ ಓಂಕಾರ ಬೆಚ್ಚಿತ್ ಊದುವ ಕೊಂಬ್ | ಪೊಯಿಲೇ ಪೊಯಿಲೇ ರೀಂಕಾರ ಬೆಚ್ಚಿತ್ ಕೊಟ್ಟುವ ಪರೆ | ಪೊಯಿಲೇ ಪೊಯಿಲೇ
ಕೋಲಾಟ ಮುಗಿದ ಮೇಲೆ ಈ ಆಟಗಾರರ ತಂಡ ಊರಿನ ಮನೆ ಮನೆಗೂ ಹೋಗಿ ಮನೆಯವರನ್ನು ಮನಸಾರ ಹಾಡಿ ಹೊಗಳಿ ಕಾಣಿಕೆಗಳನ್ನು ಸಂಗ್ರಹಿಸುತ್ತಾರೆ.
ನಂದಾಡ್ ಈ ಮನೆ ನಂದಿ ಮಹದೇವ ಒಂದಾಂಗೊಂದ್ ಕೂಡಿ ಪೊಲಂಜಿ ಬರಡ್ ಪತ್ತಾಯ ಚಿತ್ತಾರಿ ತೊನೆಯತಿರಡೊ ತೊಟ್ಟ್‌ಲ್ ಪಾಕು ಙೆ ತಪ್ಪತಿರಡೊ ಕೊಟ್ಟಲ್ ಕರಪತ್ತ ತಪ್ಪತಿರಡೊ ಪೊಟ್ಟಲ್ ಚೀರಾಳಿ ನೀಂಗತಿರಡೊ ಚಿಪ್ಪ್‌ಲ್ ಪೊಂಬಣನಂಗತಿರಡೊ
ಮಹಾದೇವಾ ಈ ಮನೆಯವರಿಗೆ ಮಂಗಳವನ್ನು ಕರುಣಿಸು. ಈ ಮನೆ ಎಲ್ಲ ರೀತಿಯಲ್ಲಿಯೂ ಅಭಿವೃದ್ಧಿ ಹೊಂದಲಿ ; ಇದರ ಕಣಜದಲ್ಲಿ ಸಣ್ಣಕ್ಕಿ ತುಂಬಿ ತುಳುಕಲಿ, ತೊಟ್ಟಿಲಲ್ಲಿ ಹಾಲುಹಸುಳೆ ಸದಾ ಆಡಲಿ, ಕೊಟ್ಟಿಗೆಯಲ್ಲಿ ಕರೆಯುವ ಗೋವು ತಪ್ಪದೆ ಇರಲಿ, ಪೆಟ್ಟಿಗೆಯಲ್ಲಿ ಬಟ್ಟೆಬರೆ ಬೇಕಾದಷ್ಟಿರಲಿ, ಹಣದ ಪೆಟ್ಟಿಗೆಯಲ್ಲಿ ಹೊನ್ನು ಹಣ ಝಣ ಝಣಿಸುತ್ತಿರಲಿ. ಇದು ಮೇಲಿನ ಹಾಡಿನ ಭಾವ. ಕೊಡವರ ಮದುವೆಯೂ ವಿಶಿಷ್ಟವಾದುದು. ಗಂಡು-ಹೆಣ್ಣಿನ ವಿವಾಹ ಸಂಬಂಧ ಶಾಸ್ತ್ರಗಳು ಅವರವರ ಮನೆಗಳಲ್ಲಿಯೇ ಮೊದಲು ವಿಜೃಂಭಣೆಯಿಂದ ನಡೆದು, ಗಂಡು ಹೆಣ್ಣಿನ ಮನೆಗೆ ತೆರಳಿ, ಪಾಣಿಗ್ರಹಣಮಾಡಿ ಕರೆತರುವವರೆಗಿನ ಎಲ್ಲ ನಡವಳಿಕೆ, ಕಟ್ಟು, ಕಟ್ಟಳೆಗಳು ಗಮನಾರ್ಹವಾದವು. ಕೊಡವರಲ್ಲಿ ಪುರೋಹಿತರ ಅವಶ್ಯಕತೆಯಿಲ್ಲ ; ಮಾಂಗಲ್ಯಧಾರಣ ಪದ್ಧತಿಯೂ ಇಲ್ಲ. ಮದುವೆಯ ಆರಂಭದಿಂದ ಅಂತ್ಯದವರೆಗೆ ಹಾಡುಗಳು ಮಾತ್ರ ಪ್ರಧಾನವಾಗಿ ಕಂಡುಬರುತ್ತವೆ. ಈ ಹಾಡುಗಳಲ್ಲಿ ಮದುವೆಯ ಸರ್ವವಿವರಗಳ ವರ್ಣನೆಯೂ ಬರುತ್ತದೆ. ಜೊತೆಗೆ ಮದುವಣಿಗಿನ ಸಮಸ್ತ ಜೀವನ ವಿವರಗಳನ್ನೂ ಆಕರ್ಷಕವಾಗಿ ಬಣ್ಣಿಸಿ ಜನನ, ಬಾಲ್ಯ, ಯೌವನ, ವಿವಾಹಾಕಾಂಕ್ಷೆ, ಕನ್ಯಾನ್ವೇಷಣೆ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಲಾಗುತ್ತದೆ. ಯುವಕ ತನ್ನ ಅಂತರಂಗದ ವಿವಾಹಾಕಾಂಕ್ಷೆಯನ್ನು ತನ್ನ ತಾಯಿಯ ಮುಂದೆ ಧ್ವನಿ ಪೂರ್ಣವಾಗಿ ಮಂಡಿಸುತ್ತಾನೆ-
ಪೊಣ್ಣಿಲ್ಲತ ಮನೆತನ | ಕಣ್ಣಿಲ್ಲತ ಜೀವಮಾನ ಆಳಿಲ್ಲತ ದೊರೆತನ | ಕ್ಟ್ಟಿನೋ ಫಲವಿಲ್ಲೆ ಮಕ್ಕಳಿಲ್ಲತ ಒಕ್ಕಾಮೆ | ಕೆಜ್ಜಿನೋ ಫಲವಿಲ್ಲೆ ನೀರಿಲ್ಲತ ನೀಕೆರೆ | ತೋಡಿನೋ ಫಲವಿಲ್ಲೆ ಪುವಿಲ್ಲತ ಪುತೋಟ | ಮಾಡಿನೋ ಫಲವಿಲ್ಲೆ
“ಅಮ್ಮ ಹೆಣ್ಣಿಲ್ಲದ ಮನೆತನ ಕಣ್ಣಿಲ್ಲದ ಬದುಕಿನಂತೆ, ಆಳಿಲ್ಲದ ಅರಸನಂತೆ, ಮಕ್ಕಳಿಲ್ಲದ ಮನೆಯಂತೆ, ನೀರಿಲ್ಲದ ಕೆರೆಯಂತೆ, ಹೂವಿಲ್ಲದ ಹೂದೋಟದಂತೆ ನಿಷ್ಫಲ. ಆದ್ದರಿಂದ ತನಗೊಪ್ಪುವ ಮಡದಿಯನ್ನು “ ತರುವುದಾಗಿ ತನ್ನ ಹೃದಯದ ಭಾವವನ್ನು ಸ್ವಾರಸ್ಯವಾದ ರೀತಿಯಲ್ಲಿ ಮುಂದಿಡುತ್ತಾನೆ. ಹೀಗೆ ಕೊಡವರ ಮದುವೆಯ ಹಾಡುಗಳು ಅರ್ಥಪೂರ್ಣವಾದ ಧ್ವನಿಪೂರ್ಣವಾದ ಸುಂದರ ಭಾವಗೀತೆಗಳಂತೆ ರಂಜಿಸುತ್ತವೆ. ಪ್ರೇಮಮಯ ಸನ್ನಿವೇಶಗಳೂ ವಧುತೌರನ್ನು ತೊರೆಯುವಾಗಿನ ಹೃದಯ ಕಲಕುವ ಸಂದರ್ಭಗಳೂ ಮನಮುಟ್ಟುವಂತೆ ಈ ಗೀತೆಗಳಲ್ಲಿ ಚಿತ್ರಿತವಾಗಿವೆ. ಕೊಡವರ ಜನಪದ ಸಾಹಿತ್ಯದಲ್ಲಿ ಮರಣದ ಹಾಡುಗಳು ಒಂದು ಪ್ರಮುಖ ವರ್ಗವಾಗಿಯೇ ಬರುತ್ತವೆ. ಮಾನವ ಜೀವನದ ನಶ್ವರತೆಯನ್ನು ಎತ್ತಿ ತೋರಿಸಿ, ಮೃತರ ಬಂಧುಗಳನ್ನು ಸಂತೈಸುವ ಅಪೂರ್ವ ಸನ್ನಿವೇಶಗಳೂ ಈ ಗೀತೆಗಳಲ್ಲಿ ತಲಸ್ಪರ್ಶಿಯಾಗಿ ಚಿತ್ರಿತವಾಗಿವೆ. ಈ ಬದುಕು ಪವಿತ್ರವಾದುದು. ಮರಣಕಾರಿವೆಂಬುದು ನಾರಾಯಣ ದೇವರ ಕೈಯ ಕನ್ನಡಿ ಕೈತಪ್ಪಿ, ಕೆಳಗೆ ಬಿದ್ದು ಒಡೆದಂತೆ- ನಾರಾಯಣ ದೇವಂಡ | ನೋಟುವಳ ಕನ್ನಡಿ ಕೈತಪ್ಪಿ ನೆಲತಾಂದ್ | ಬಂದ್ದೊಡಂದ್ ಪೋನೋಲೆ ನಿಂಗೊಡಂದ್ ಪೋಯಿರೋ ಹೀಗೆ ಶ್ರೇಷ್ಠತಮ ಬದುಕು ಹುಡಿಗೂಡಿ ಹೋಗುವಾಗ ಯಾರೂ ತಡೆಯುವಂತಿಲ್ಲ. ಏಕೆಂದರೆ ಜನನ ಮರಣದ ನಿಯಮವನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ವೃಥಾ ಚಿಂತಿಸಿ ಫಲವಿಲ್ಲ- ಎಂಬ ತತ್ತ್ವವನ್ನು ಮನೋಜ್ಞವಾಗಿ ನಿರೂಪಿಸುವ ಹಾಡುಗಳೂ ಬರುತ್ತವೆ. ಕೇಳಿ ಕೇಳಿ ಕುಂ ಞ್ಯ ಳೇ | ಏರ ದುಃಖ ಮಾಡಂಡ ಅವಿಜ ಜಳಂದಕ್ಕ | ಅಂಗಯಿ ತಡ್ಪ್ಲೆ ಕ್ ಬ್ಭೂಮಿ ಕುಡ್ಂದಕ | ಅಂಗಾಲ್ ತಡ್ಪ್ಲೆ ಚಾವದೂ ಪರಪದೂ | ಈ ಭೂಮಿ ಲುಳ್ಳದ್ “ಮಕ್ಕಳೇ, ನೀವು ಹೆಚ್ಚು ಶೋಕಿಸಬೇಡಿ,- ಆಕಾಶ ಬಿದ್ದಾಗ ಅಂಗೈ ತಡೆಯಲು ಸಾಧ್ಯವೇ ! ಭೂಲೋಕ ಕುಸಿದಾಗ ಅಂಗಾಲು ತಡೆಯುವುದೇ. ಹುಟ್ಟು ಸಾವು ಈ ಜಗತ್ತಿನ ನಿಯಮ.” ಸಂಗೀತ : ಸಾಮಾನ್ಯವಾಗಿ ಕೊಡವ ಜನಪದ ಗೀತೆಗಳಲ್ಲಿ ನಿಯಮಬದ್ಧ ಹಾಗೂ ವೈವಿಧ್ಯಮಯ ಸಂಗೀತಕ್ಕೆ ವಿಶೇಷ ಪ್ರಾಧಾನ್ಯವಿಲ್ಲ. ಗೀತೆಗಳನ್ನು ಸಾಮೂಹಿಕವಾಗಿ ಹಾಡುವುದು ವಾಡಿಕೆ. ನಾಲ್ಕು ಜನ ಜೊತೆ ಸೇರಿ, ಒಬ್ಬೊಬ್ಬರಿಗೂ ಒಂದೊಂದು ದುಡಿಯನ್ನು ಹಿಡಿದು, ಅದನ್ನು ಚಿಕ್ಕ ಕೋಲೊಂದರಿಂದ ಬಾರಿಸುತ್ತ ಒಟ್ಟಾಗಿ ಹಾಡುವುದು ಸಂಪ್ರದಾಯ. ಹಾಡುಗಾರಿಕೆಯಲ್ಲಿ ಹೆಚ್ಚಿನ ಏರಿಳಿತಗಳಿರುವುದಿಲ್ಲ ; ಆದಿಯಿಂದ ಅಂತ್ಯದವರೆಗೂ ಒಂದೇ ತೆರನಾದ ರಾಗದಲ್ಲಿ ಹಾಡುತ್ತಾರೆ. ಹುತ್ತರಿ ಹಬ್ಬದ ಕೋಲಾಟ, ಬೊಳಕಾಟ್ಗಳಿಗೆ ಸಂಬಂಧಿಸಿದ ಹಾಡುಗಳನ್ನು ಹಾಡುವವರು ಬಹುತೇಕ ಪುರುಷರೇ. ಉಮ್ಮತ್ತಾಟ್ ಎಂಬ ಸ್ತ್ರೀಯರ ಜನಪದ ನೃತ್ಯದಂಥ ಅಪೂರ್ವ ಸಂದರ್ಭಗಳಲ್ಲಿ ಮಾತ್ರ ಮಹಿಳೆಯರು ಹಾಡುತ್ತಾರೆ. ಮೇಲೆ ಹೇಳಿದ ದುಡಿಯನ್ನುಳಿದರೆ ಕೊಡಗಿನ ಜನಪದ ವಾದ್ಯಗಳ ಪೈಕಿ ಡೋಲು, ಹರೆ, ನಾಗಸ್ವರವನ್ನು ಹೋಲುವ ಮೋರಿ ಎಂಬ ಓಲಗ, ಹಿಂದಿನ ಕಾಲದ ಕಹಳೆಗಳಂಥ ಅರ್ಧವೃತ್ತಾಕಾರದ ಕೊಂಬು ಎಂಬ ದೊಡ್ಡ ತುತ್ತೂರಿ ಮತ್ತು ಕಂಚಿನ ತಾಳ- ಇವು ಇರುತ್ತವೆ. ಇವನ್ನು ಬಾರಿಸುವವರು ಅಥವಾ ನುಡಿಸುವವರು ಹರಿಜನರು. ಸಾಮಾನ್ಯವಾಗಿ ಪ್ರತಿಯೊಂದು ಗ್ರಾಮದಲ್ಲಿಯೂ ಇಂಥ ವಾದ್ಯಗಾರರ ಒಂದು ತಂಡ ಇರುತ್ತದೆ. ಇದಲ್ಲದೆ ಸ್ಥಳೀಯ, ಎಂದರೆ ಗ್ರಾಮದ ದೇವದೇವತೆಯರ ಹಬ್ಬ ಉತ್ಸವ ಮುಂತಾದ ಸಂದರ್ಭಗಳಲ್ಲಿ ಮದ್ದಲೆಯ ಮಾದರಿ ಇನ್ನೊಂದು ಡೋಲನ್ನು (ಕೊಡವ ಮಾತಿನಲ್ಲಿ ಚಂಡೆ) ಬಾರಿಸುವುದುಂಟು. ಇದನ್ನು ಬಾರಿಸುವವರೇ ಬೇರೆ ಇರುತ್ತಾರೆ.
ನೃತ್ಯಗಳು : ಕೊಡಗಿನ ಜನಪದ ನೃತ್ಯಗಳನ್ನು ಸಾಮಾಜಿಕ, ಧಾರ್ಮಿಕ ಮತ್ತು ಶೌರ್ಯಪ್ರದರ್ಶನದ ನೃತ್ಯಗಳೆಂದು ಮೂರು ವಿಭಾಗಗಳನ್ನಾಗಿ ವಿಂಗಡಿಸಬಹುದು. ಈ ಪೈಕಿ ತುಂಬ ಸಾಮಾನ್ಯವು ಜನಪ್ರಿಯವೂ ಆದ ನೃತ್ಯವೆಂದರೆ ಅನೇಕ ಮಂದಿ ಗುಂಪಾಗಿ ನರ್ತಿಸುವ ಸಾಮಾಜಿಕ ನೃತ್ಯ. ಇದು ಇತರ ನೃತ್ಯಗಳಷ್ಟು ಸುವ್ಯವಸ್ಥಿತವಲ್ಲ. ಸ್ವಲ್ಪ ಬಿರುಸಿನದೆನ್ನಬಹುದಾದ ಈ ನೃತ್ಯದಲ್ಲಿ ಶಿಸ್ತಿಗೆ ವಿಶೇಷ ಮನ್ನಣೆಯಿಲ್ಲ. ಏಕತೆಯೂ ಅಷ್ಟಾಗಿ ಕಂಡುಬರುವುದಿಲ್ಲ. ಇದು ಸಾಮಾನ್ಯವಾಗಿ ಕೊಡವರ ವಿವಾಹ ಮತ್ತಿತರ ಸಾಮಾಜಿಕ ಸಮಾರಂಭಗಳಲ್ಲಿ ನಡೆಯುವಂಥದು. ಇನ್ನೊಂದು ಜನಪ್ರಿಯ ನೃತ್ಯ ಕೋಲಾಟ. ಮೇಲಿನದರಂತೆ ಇದರಲ್ಲೂ ಎಷ್ಟು ಮಂದಿ ಬೇಕಾದರೂ ಭಾಗವಹಿಸಬಹುದು. ನರ್ತಿಸುವವರು ತಮ್ಮ ಎರಡು ಕೈಗಳಲ್ಲೂ ಸುಮಾರು ಒಂದು ಒಂದೂವರೆ ಗಜ ಉದ್ದದ ಬೆತ್ತದ ಕೋಲುಗಳನ್ನು ಹಿಡಿದು, ತಮ್ಮ ಕಾಲುಗಳ ಕ್ರಮಬದ್ಧ ಚಲನೆಗೆ ತಕ್ಕಂತೆ ಅವನ್ನು ನಾನಾ ಭಂಗಿಗಳಲ್ಲಿ ಬೀಸುತ್ತ ವರ್ತುಲಾಕಾರದಲ್ಲಿ ನರ್ತಿಸುತ್ತಾರೆ. ಜೊತೆಗೆ ಇದಕ್ಕೆ ಸಂಬಂಧಿಸಿದ ಹಾಡುಗಳನ್ನೂ ಹಾಡುತ್ತಾರೆ. ಈ ನೃತ್ಯದಲ್ಲಿ ನಯವಿದೆ, ನಾಜೂಕಿದೆ, ಶಿಸ್ತೂ ಇದೆ. ಇದು ಕೊಡಗಿನ ಸುಗ್ಗಿಯ ಹಬ್ಬವಾದ ಹುತ್ತರಿಯ ಸಂದರ್ಭದಲ್ಲಿ ನಡೆಯುತ್ತದೆ. ಕೊಡವರ ಜನಪದ ನೃತ್ಯಗಳಲ್ಲೆಲ್ಲ ಪ್ರಸಿದ್ಧವಾದುದೆಂದರೆ ಬೊಳಕಾಟ್ ಎಂಬ ದೀಪ ನೃತ್ಯ. ಇದರಲ್ಲಿ ಸುಮಾರು 30 ಬಗೆಗಳಿವೆ. ಇವು ಸ್ವಲ್ಪಮಟ್ಟಿಗೆ ಶಾಸ್ತ್ರೀಯವಾಗಿದ್ದು ಉತ್ತಮದರ್ಜೆಗೆ ಸೇರಿದವುಗಳಾಗಿವೆ. ನೃತ್ಯವನ್ನು ಪ್ರಾರಂಭಿಸುವ ಮುನ್ನ ನೃತ್ಯ ರಂಗದ ನಡುಮಧ್ಯೆ ದೊಡ್ಡ ಕಂಚಿನ ದೀಪಗಳನ್ನಿಡುತ್ತಾರೆ. ಅವುಗಳ ಸುತ್ತ ನಾಲ್ವರು ಹಿರಿಯರು ದುಡಿಗಳನ್ನು ಬಾರಿಸುತ್ತ ನೃತ್ಯಕ್ಕೆ ಸಂಬಂಧಿಸಿದ ಹಾಡುಗಳನ್ನು ಹಾಡುತ್ತಾರೆ. ಆಗ ನರ್ತಕರು ಒಬ್ಬೊಬ್ಬರಾಗಿ ಮುಂದೆ ಬಂದು ವೃತ್ತಾಕಾರವನ್ನು ರಚಿಸಿಕೊಂಡು ನರ್ತಿಸತೊಡಗುತ್ತಾರೆ. ಪ್ರತಿಯೊಬ್ಬರ ಕೈಯಲ್ಲೂ ಒಂದೊಂದು ಒಡಿಕತ್ತಿ ಎಂಬ ಅಗಲವಾದ ಅಲಗುಳ್ಳ ದೊಡ್ಡ ಖಡ್ಗ ಮತ್ತು ಒಂದೊಂದು ಬಿಳಿಯ ಚಾಮರಗಳಿದ್ದು, ಅವನ್ನು ಅವರು ತಾಳಬದ್ಧವಾಗಿ ನಾನಾ ಭಂಗಿಗಳಲ್ಲಿ ಬೀಸುತ್ತ ನರ್ತಿಸುತ್ತಾರೆ. ಮಧ್ಯೆ ಮಧ್ಯೆ ತಮ್ಮ ಸ್ಥಾನಗಳನ್ನು ಅದಲು ಬದಲು ಮಾಡಿಕೊಳ್ಳುವುದಲ್ಲದೆ ನರ್ತನದ ರೀತಿಯನ್ನೂ ಬದಲಿಸಿಕೊಳ್ಳುತ್ತಾರೆ. ಈ ಸುವ್ಯವಸ್ಥಿತ ನೃತ್ಯ ಧಾರ್ಮಿಕ ಸಂಬಂಧವಾಗಿದ್ದು ಹೆಚ್ಚಾಗಿ ದೇವಸ್ಥಾನಗಳಲ್ಲಿ, ಇತರ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುತ್ತದೆ.
ಕೊಡವರ ಇನ್ನೊಂದು ನೃತ್ಯವೆಂದರೆ ಪಡೆಕಳಿ ಅಥವಾ ಪರಿಯಕಳಿ, ಇದು ಒಂದು ರೀತಿಯ ಸಮರ ನೃತ್ಯ, ಕೊಡವ ಜನಾಂಗದವರಲ್ಲಿ ಪರಂಪರಾನುಗತವಾಗಿ ಬಂದ ಸಮರೋತ್ಸಾಹವನ್ನೂ, ಕ್ರೀಡಾಭಿಮಾನವನ್ನೂ ಈ ನೃತ್ಯದಲ್ಲಿ ಕಾಣಬಹುದು. ಇದರಲ್ಲಿ ಸಮಾನಶಕ್ತಿ ಮತ್ತು ಶೌರ್ಯಗಳುಳ್ಳ ಈರ್ವರು, ತಮ್ಮ ಬಲಗೈಯಲ್ಲಿ ಬೆತ್ತದ ಕೋಲನ್ನು ಎಡಗೈಯಲ್ಲಿ ಬೆತ್ತದ ಗುರಾಣಿಯನ್ನೂ ಹಿಡಿದು ಪರಸ್ಪರ ಕಾದಾಡುವ ರೀತಿಯಲ್ಲಿ ನರ್ತಿಸುತ್ತಾರೆ. ಅವರ ನಡುವೆ ಒಂದು ರೀತಿಯ ಅಣಕು ಹೋರಾಟವೇ ನಡೆಯುತ್ತದೆ. ಕೊನೆಯಲ್ಲಿ ಕ್ರೀಡಾಭಿಮಾನಿಗಳಿಗೆ ಯೋಗ್ಯವಾದ ರೀತಿಯಲ್ಲಿ ಅವರು ಪರಸ್ಪರ ಆಲಂಗಿಸಿ ನಗುನಗುತ್ತ ಅಗಲುತ್ತಾರೆ. ಸಾಮಾನ್ಯವಾಗಿ ಹುತ್ತರಿಹಬ್ಬದ ಕೋಲಾಟದ ಕೊನೆಯಲ್ಲಿ ಈ ನೃತ್ಯ ನಡೆಯುತ್ತದೆ.
ಮೇಲೆ ಹೇಳಿದಂತೆ ಈ ಎಲ್ಲ ನೃತ್ಯಗಳಲ್ಲಿ ಭಾಗವಹಿಸುವವರು ಪುರುಷರೇ. ಅವರು ತಮ್ಮ ದೇಶೀಯ ಸಮವಸ್ತ್ರಗಳನ್ನು ತೊಟ್ಟು ಈ ನೃತ್ಯಗಳಲ್ಲಿ ತೊಡಗುವುದು ಸಂಪ್ರದಾಯ. ಈ ಸಮವಸ್ತ್ರ ಷರ್ವಾನಿಯಂಥ ಒಂದು ಉದ್ದದ ಕಪ್ಪುವರ್ಣದ ಮೇಲು ಕೋಟು, ಅದರ ಮೇಲೆ ಸೊಂಟದ ಸುತ್ತ ಸುತ್ತಿದ ಕೆಂಪು ರೇಷ್ಮೆಯ ನೀಳ ನಡುದಟ್ಟಿ, ಅದರ ನಡುವೆ ಸ್ವಲ್ಪ ಬಲಕ್ಕೆ ಸಿಕ್ಕಿಸಿದ ಪೀಚೆಕತ್ತಿ ಎಂಬ ಚಿಕ್ಕ ಕತ್ತಿ ಮತ್ತು ತಲೆಗೆ ಸುತ್ತಿದ ಉದ್ದದ ಬಿಳಿಯ ಜರಿ ರುಮಾಲು- ಇವುಗಳನ್ನೊಳಗೊಂಡಿರುತ್ತದೆ.
ಈ ನೃತ್ಯಗಳಲ್ಲದೆ ಕೊಡಗಿನ ಉತ್ತರ ಭಾಗದಲ್ಲಿ ಕಾಣಸಿಗುವ ಇನ್ನೊಂದು ನೃತ್ಯವೆಂದರೆ ಸುಗ್ಗಿಕುಣಿತ. ಹುತ್ತರಿಹಬ್ಬದ ಕೋಲಾಟಕ್ಕೆ ಸ್ವಲ್ಪ ಭಿನ್ನವಾದ ಈ ನೃತ್ಯದಲ್ಲಿ ಕೊಡವೇತರರು ಮಾತ್ರ ಭಾಗವಹಿಸುತ್ತಾರೆ. ಪ್ರತಿಯೊಬ್ಬ ನರ್ತಕನ ಕೈಯಲ್ಲೂ ಒಂದೊಂದು ಉದ್ದನೆಯ ಕಠಾರಿಯಿರುತ್ತದೆ. ಅದನ್ನು ವಿವಿಧ ಭಂಗಿಗಳಲ್ಲಿ ಬೀಸುತ್ತ ಅವರು ಬಿರುಸಾಗಿ ನರ್ತಿಸುತ್ತಾರೆ. ಕೆಲವು ನೃತ್ಯಗಳಿಗೆ ಕಠಾರಿಯ ಬದಲು ಮರದ ಕೋಲುಗಳನ್ನು ಉಪಯೋಗಿಸುತ್ತಾರೆ. ಇನ್ನು ಕೊಡವ ಸ್ತ್ರೀಯರು ನರ್ತಿಸುವ ಇನ್ನೊಂದು ಸರಳ ಹಾಗೂ ಸುಂದರ ನೃತ್ಯವಿದೆ. ಇದನ್ನು ಕೊಡವ ನುಡಿಯಲ್ಲಿ ಉಮ್ಮತ್ತಾಟ್ ಎಂದು ಕರೆಯುತ್ತಾರೆ. ಈ ನೃತ್ಯದಲ್ಲಿ ಭಾಗವಹಿಸುವ ಸ್ತ್ರೀಯರೂ ಸಮವಸ್ತ್ರ ಧರಿಸಿ (ಇವರು ಸೀರೆಯ ನೆರಿಗೆಯನ್ನು ಹಿಂದಕ್ಕೆ ಬಿಟ್ಟು, ಸೀರೆಯ ಒಂದು ಕೊನೆಯನ್ನು ಬೆನ್ನಿನ ಮೇಲಿಂದ ಎದೆಯ ಮೇಲೆ ಹಾಯಿಸಿ ಬಲಗಡೆ ಬಿಗಿಯಾಗಿ ಗಂಟು ಹಾಕುತ್ತಾರೆ. ಜೊತೆಗೆ ತಲೆಯ ಮೇಲಿಂದ ಬೆನ್ನಿನ ಮೇಲೆ ಹರಡುವಂತೆ ಒಂದು ವಿಶಾಲ ಶಿರವಸ್ತ್ರವನ್ನು ಧರಿಸುತ್ತಾರೆ.) ಕೈಯಲ್ಲಿ ತಾಳ ಹಿಡಿದು, ಅದನ್ನು ಕ್ರಮಬದ್ಧವಾಗಿ ತಟ್ಟುತ್ತ ಅದರ ನಾದಕ್ಕೆ ತಕ್ಕಂತೆ ಬಾಗುತ್ತ ಬಳುಕುತ್ತ ನರ್ತಿಸುತ್ತಾರೆ. ನೃತ್ಯದ ಜೊತೆಗೆ ಅದಕ್ಕೆ ಸಂಬಂಧಿಸಿದ ಜನಪದ ಹಾಡುಗಳನ್ನು ಹಾಡುತ್ತಾರೆ. ಕೊಡವ ಸ್ತ್ರೀಯರ ಈ ನಯನಮನೋಹರ ನೃತ್ಯ ಇತ್ತೀಚೆಗೆ ತೀರಾ ಅಪೂರ್ವವಾಗುತ್ತಿದೆ. ಕೊಡಗಿನ ಜನಪದ ಸಾಹಿತ್ಯ ಹೀಗೆ ಅಲ್ಲಿನ ಸಂಸ್ಕೃತಿಗೆ, ಜನ ಜೀವನಕ್ಕೆ ಹಿಡಿದ ಕನ್ನಡಿಯಾಗಿದೆ. ಕೊಡವರ ಆಚಾರ ವಿಚಾರಗಳೂ ಸಂಪ್ರದಾಯ ನಂಬಿಕೆಗಳೂ ದಟ್ಟವಾಗಿ ಅರ್ಥಪೂರ್ಣವಾಗಿ ಈ ಸಾಹಿತ್ಯದಲ್ಲಿ ಚಿತ್ರಿತವಾಗಿವೆ.
ಕೊಡವರ ಜನಪದ ಸಾಹಿತ್ಯದ ಸಮರ್ಪಕ ಸಂಗ್ರಹ, ಅಧ್ಯಯನ ಇನ್ನೂ ಆಗಬೇಕಾಗಿದೆ. ಅನೇಕ ಮಂದಿ ವಿದ್ವಾಂಸರು ಸಂಗ್ರಹಕಾರ್ಯವನ್ನು ನಡೆಸಿದ ನಿದರ್ಶನಗಳನ್ನು ಅಲ್ಲಲ್ಲಿ ಕಾಣಬಹುದು. ಈ ಪೈಕಿ ದಿವಂಗತ ನಡಿಕೇರಿಯಂಡ ಚಿಣ್ಣಪ್ಪನವರಿಗೆ ಅಗ್ರಸ್ಥಾನ ಸಲ್ಲಬೇಕು. ಅವರು ಕೊಡವ ಭಾಷೆಯ ಅಳಿದುಳಿದ ಜನಪದ ಗೀತೆಗಳನ್ನು ಸಂಗ್ರಹಿಸಿ ಸೂಕ್ತ ವಿವರಣೆ ಮತ್ತು ಟಿಪ್ಪಣಿಗಳೊಂದಿಗೆ ಪಟ್ಟೋಲೆ ಪಳಮೆ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಐ. ಮಾ. ಮುತ್ತಣ್ಣನವರು ಆಂಗ್ಲಭಾಷೆಯಲ್ಲಿ ಬರೆದಿರುವ ಕೊಡಗಿನ ಚರಿತ್ರೆಯಲ್ಲಿ ಅಲ್ಲಿನ ಜನಪದ ಸಾಹಿತ್ಯದ ಸ್ಥೂಲ ಪರಿಚಯ ಮಾಡಿಕೊಟ್ಟಿದ್ದಾರೆ. ಪೇರಿಯಂಡ ಚಂಗಪ್ಪ ಅವರು ಕೊಡವರ ಅಪೂರ್ವ ಜನಪದ ಗೀತೆಗಳನ್ನು ಕಲೆಹಾಕಿ “ಕೊಡವಡ ಅಂದೋಳತ್ ಪಾಟ್” ಎಂಬ ಕೃತಿಯನ್ನು ಹೊರತಂದಿದ್ದಾರೆ. ಬಿ. ಡಿ. ಗಣಪತಿಯವರೂ ತಮ್ಮ ಕೃತಿಗಳಲ್ಲಿ ಕೊಡವ ಜನಪದ ಸಾಹಿತ್ಯದ ಪರಿಚಯವನ್ನು ಅಲ್ಲಲ್ಲಿ ಮಾಡಿಕೊಟ್ಟಿದ್ದಾರೆ. ಕೆಲವು ಕೊಡವ ಹಾಡುಗಳನ್ನು ಆಂಗ್ಲ ಹಾಗೂ ಜರ್ಮನ್ ಬರೆಹಗಾರರು ವಿದೇಶೀ ಭಾಷೆಗಳಿಗೂ ಅನುವಾದ ಮಾಡಿದ್ದಾರೆ. ಆದರೆ ಸಮಗ್ರ ಕೊಡಗಿನ ಜಾನಪದ ಇನ್ನೂ ವ್ಯಾಪಕವಾಗಿ, ಶಾಸ್ತ್ರೀಯವಾಗಿ ಸಂಗ್ರಹಿತವಾಗಬೇಕಾದ ಅಗತ್ಯ ಇದ್ದೇ ಇದೆ. (ಕೆ.ಸಿ.ಬಿ.)