ಶುಕ್ರವಾರ, ಡಿಸೆಂಬರ್ 25, 2015

ಅನ್ಬಿಲೀವೆಬಲ್ ವಿದ್ಯಾ


~ ಸಂವರ್ತ 'ಸಾಹಿಲ್'
ಆದಷ್ಟು ಬೇಗ ವರದಿ ಬರೆದು ಕಳುಹಿಸಿ ಆಫೀಸ್ ಬಿಟ್ಟ ನಾನು ನೇರವಾಗಿ ದೆಹಲಿಯ ಪರಿಸರವಾದಿ ಓರ್ವರು ತಂಗಿದ್ದ ಹೋಟೆಲಿಗೆ ಹೋದೆ. ಅಂದು ಅನಿರೀಕ್ಷಿತವಾಗಿ ಮಳೆ ಸುರಿದಿತ್ತು. ನನ್ನ ಬಟ್ಟೆ-ಮೈ ಒಂದಿಷ್ಟು ಒದ್ದೆ ಆಗಿತ್ತು. ಅವರ ರೂಂ ಪ್ರವೇಶ ಮಾಡುತ್ತಿದ್ದಂತೆ ಅಲ್ಲಿ ಆಗಲೇ ಉಪಸ್ಥಿತರಿದ್ದು ಪರಿಸರವಾದಿ ಹೋರಾಟಗಳ ಕುರಿತು ಚರ್ಚೆ ನಡೆಸುತ್ತಿದ್ದ ವಿದ್ಯಾ ದಿನಕರ್ ನನ್ನನ್ನು ನೋಡಿ, "ಮಳೆ ಬರ್ತಾ ಇದೆಯಾ?" ಎಂದು ಕೇಳಿದಳು. ನಾನು ಹ್ಞೂ ಎನ್ನಲು ತನ್ನ ಕುರ್ಸಿಯಿಂದ ಎದ್ದು ಕಿಡಕಿಯ ಪರದೆ ಸರಿಸುತ್ತ, "ಕುಡುಬಿ ಪದವುನಲ್ಲಿ ಮಳೆ ಬರ್ತಾ ಇದೆ. ಇಲ್ಲಿ ಸಹ ಬರ್ತಾ ಇರೋದು ಗೊತ್ತಾಗ್ಲಿಲ್ಲ," ಎಂದು ಹೊರ ನೋಡಿ, "ಹೌದು ಇಲ್ಲಿ ಸಹ ಮಳೆ ಬರ್ತಾ ಇದೆ," ಎಂದು ತನಗೆ ತಾನೆ ಹೇಳಿಕೊಂಡಳು.

ತಾನು ಇರುವ ಪ್ರದೇಶದಲ್ಲಿ ಸುಯ್ಯುತ್ತಿರುವ ಮಳೆ ತಿಳಿಯದಿದ್ದರೂ ತಾನು ಹೋರಾಡುತ್ತಿರುವ ಕುಡುಬಿಗಳ ನೆಲದ ಮೇಲೆ ಸುರಿಯುತ್ತಿರುವ ಮಳೆಯ ಸುದ್ದಿ ತಿಳಿದಿದ್ದ ಆಕೆಯನ್ನು ನಂಬಲಾರದಂತೆ ನಿಂತು ಅರೆಕ್ಷಣ ನೋಡಿದೆ. "ಯು ಆರ್ ಅನ್ಬಿಲೀವೆಬಲ್" ಎಂದು ಹೇಳಿ ಅಲ್ಲೇ ಇದ್ದ ಖಾಲಿ ಕುರ್ಚಿಯ ಮೇಲೆ ಕುಳಿತುಕೊಂಡೆ.

ದೆಹಲಿ ಮೂಲದ ಪರಿಸರವಾದಿ ಹೋರಾಟಗಾರರೊಂದಿಗೆ ವಿದ್ಯಾ ಮತ್ತು ನಾನು ಚರ್ಚೆ ಮಾಡುತ್ತಾ ಕೂತಿದ್ದಾಗ ನಡುವಿನಲ್ಲಿ ಒಮ್ಮೆ ಅವರು, "ಇತ್ತೀಚಿಗೆ ಯಾರೋ ಹೇಳುತ್ತಾ ಇದ್ದರು ನೋಡು ಮಂಗಳೂರಿನಲ್ಲಿ ಇರೋದು ಒಂದೇ ಒಂದು ಗಂಡಸು, ಅದು ವಿದ್ಯಾ," ಎಂದು ನೆನಪಿಸಿಕೊಂಡು ನಕ್ಕರು. ತಾನೂ ನಕ್ಕ ವಿದ್ಯಾ ತಕ್ಷಣಕ್ಕೆ, "ನಾನು ಗಂಡಲ್ಲ ನಾನು ಹೆಣ್ಣೇ ಗಂಡಾಗುವ ಅವಶ್ಯಕತೆ ಇಲ್ಲ," ಎಂದು ನಗು ಮುಂದುವರೆಸಿದ್ದಳು.

ಇದಾಗಿ ಕೆಲವು ಸಮಯದಲ್ಲಿ ಕುಡುಬಿ ಪದವುಗೆ ವಿದ್ಯಾ ಮತ್ತು ನಾನು ಹೋದಾಗ ಎಸ್.ಈ.ಝೆಡ್. ನೇಮಿಸಿದ ಜನರು ನಮ್ಮ ವಾಹನವನ್ನು ಸುತ್ತುವರೆದು ಗಲಾಟೆ ಆರಂಬವಾಯಿತು. ನಮ್ಮ ಗಾಡಿಯ ಚಕ್ರದ ಗಾಳಿಯನ್ನು ತೆಗೆದರು. ಸೂಕ್ತ ಸಮಯಕ್ಕೆ ದೌಡಾಯಿಸಿಕೊಂಡು ಬಂದ ಗೆಳೆಯ ನವೀನ ಸೂರಿಂಜೆ ನಮ್ಮನ್ನು ಮರಳಿ ಮಂಗಳೂರಿಗೆ ಕರೆದುಕೊಂಡು ಹೋದ. ಅಲ್ಲಿ ಅಂದು ನನ್ನ ಕೈಕಾಲು ನಡುಗಿದ್ದು ಸುಳ್ಳಲ್ಲ. ಆದರೆ ಆ ಗಲಾಟೆಯ ಸಂದರ್ಭದಲ್ಲೂ ಬೆಚ್ಚದೆ ನಿಂತಿದ್ದಳು ಈ ವಿದ್ಯಾ.

ಕುಡುಬಿಗಳ ನ್ಯಾಯಕ್ಕಾಗಿ ನಡೆಸುವ ಹೋರಾಟದಲ್ಲಿ ಪೇಜಾವರ ಮಠದ ವಿಶ್ವೇಶನನ್ನು ಒಳಗೊಂಡಾಗ ವಿದ್ಯಾ ಜೊತೆ ಗಲಾಟೆ ಮಾಡಿದ ಕೆಲವು ಮಂದಿಯಲ್ಲಿ ನಾನು ಒಬ್ಬ. ಆಗ ಆಕೆ, "ನಿನ್ನ ಅಪನಂಬಿಕೆ ನಿನ್ನ ನಿಲುವೆ ಇವೆಲ್ಲಕ್ಕಿಂತ ಮುಖ್ಯ ಜನರ ನೆಲ ಜನರ ಬದುಕು," ಎಂದು ಹೇಳಿ ಹೋರಾಟ ಮುಂದುವರೆಸಿದ್ದಳು. ವಿಶ್ವೇಶನನ್ನು ಆಕೆ ದಾಳವಾಗಿ ಉಪಯೊಗಿಸಿಕೊಂಡಳೇ ಎಂಬ ಪ್ರಶ್ನೆ ನನಗೆ ನಾನೇ ಹಾಕಿಕೊಂಡದ್ದಿದೆ. ಆದರೆ ಆ ಪ್ರಶ್ನೆಯೇ ಸರಿಯಲ್ಲ. ಆಕೆ ಕುಡುಬಿ ಜನರ ಭಾವನೆಗೆ ಬೆಲೆ ನೀಡಿದ್ದಳು ಎಂಬುದು ಮಾತ್ರ ಸತ್ಯ ಅವರ ಬದುಕಿಗೆ ಅವರ ನೆಲಕ್ಕೆ ಬೆಲೆ ನೀಡಿದ್ದಳು. ಹಾಗೆಂದು ವಿಶ್ವೇಶನಿಗೆ ಅಗೌರವ ತೋರಿದ್ದಿಲ್ಲ. ಅಂದ ಮಾತ್ರಕ್ಕೆ ಆರಾಧಿಸಿದ್ದೂ ಇಲ್ಲ.

ಗ್ರೆಗೊರಿ ಪತ್ರಾವ್ ಮನೆ ಉರುಳಿಸಲಾದ ಸಂದರ್ಭದಲ್ಲಿಯೂ ಪೋಲೀಸರ ಆರ್ಭಟಕ್ಕೆ ಎದುರಾಗಿ ದಿಟ್ಟವಾಗಿ ನಿಂತ ವಿದ್ಯಾ ಪಬ್ ದಾಳಿ ನಡೆದ ಬಳಿಕ ಅನೈತಿಕ ಪೋಲೀಸರನ್ನು ಸಹ ಅಷ್ಟೇ ದಿಟ್ಟವಾಗಿ ಎದುರಿಸಿದ್ದಳು. ಇಂಥಾ ಅಂಜದ ವಿದ್ಯಳಿಗಾಗಿ ಈಗ ನನ್ನ ಹೃದಯ ಅಂಜುತ್ತಿದೆ. ಅದಕ್ಕೆ ಕಾರಣ ಬಜರಂಗ ದಳದ ಗೂಂಡಾಗಳು ಅವಳ ಕುರಿತಾಗಿ ಅವಾಚ್ಯವಾಗಿ ಬಯ್ದು ಆಕೆಗೆ ಜೀವ ಬೆದರಿಕೆ ಒಡ್ಡಿರುವುದು. ಇಂತಾ ಬೆದರಿಕೆಗಳು ಹಿಂದೆಯೂ ಬಂದಿದ್ದವು ಆಗ "ವಿದ್ಯಾ ಎಲ್ಲವನ್ನೂ ಎದಿರಿಸುತ್ತಾಳೆ" ಎಂದು ಅನ್ನಿಸುತ್ತಿತ್ತು. ಆದರೆ ಈಗಿನ ಪರಿಸ್ಥಿತಿಯೇ ಭಿನ್ನ. ದಾಳಿಯ ಬೆದರಿಕೆ ಹಾಕಿದ ಭುವಿತ್ ಶೆಟ್ಟಿ ಕೊನೆಗೂ ಕೊಲೆ ಮಾಡಿಬಿಟ್ಟ. ಆಗಲೂ ಪೊಲೀಸರು ಕಾರ್ಯ ನಿರ್ವಹಿಸಲಿಲ್ಲ. ಈಗಲೂ ನಿರ್ವಹಿಸುತ್ತಿಲ್ಲ. ಇಲ್ಲಿ ಮತ್ತೊಬ್ಬ ಭುವಿತ್ ಶೆಟ್ಟಿ ಉದ್ಭವಿಸಲು ಸಾಧ್ಯ ಇಲ್ಲ ಎಂದು ಹೇಗೆ ನಂಬಲಿ? ಯಾವುದೇ ಅಂಜಿಕೆಯಿಲ್ಲದೆ ಬೆದರಿಕೆ ಒಡ್ಡುವ ಮಂದಿ ಇದ್ದಾರೆ, ಅವರಿಗೆ ಬೆಂಬಲ ಇದೆ, ಪೋಲೀಸರ ನಿಷ್ಕ್ರಿಯತೆಯೂ ಇದೆ.

ಐ ಆಮ್ ವಿಥ್ ವಿದ್ಯಾ ದಿನಕರ್


ಕಾಮೆಂಟ್‌ಗಳಿಲ್ಲ: