ತಮಿಳು ಜಾನಪದ ನೃತ್ಯಗಳು ಮತ್ತು ತಳಸಮುದಾಯದ ಬದ್ಧತೆಗಳು
-ಜಗದೀಶ್ ಕೊಪ್ಪ
ಇದು ಸುಮಾರು ಐದು ವರ್ಷಗಳ ಹಿಂದಿನ ಘಟನೆ.
ತಮಿಳು ಭಾಷೆಯ ಪ್ರಾಚೀನ ಕವಿತೆಗಳನ್ನು ಅನುವಾದಕ್ಕಾಗಿ ಕೈಗೆತ್ತಿಕೊಂಡಿದ್ದೆ. ಸುಮಾರು ಐವತ್ತು
ಕವಿತೆಗಳನ್ನು ಅನುವಾದ ಮಾಡಿ, ಅವುಗಳಿಗೆ ಒಂದು ಸುಧೀರ್ಘವಾದ ಪ್ರಸ್ತಾವನೆ ಬರೆಯಬೇಕಿತ್ತು. ಏಕೆಂದರೆ,
ಭಾರತದಲ್ಲಿ ಲಿಪಿ ಆರಂಭಗೊಂಡ ಕಾಲದಿಂದಲೂ ತಮಿಳರು ಸಂಸ್ಕೃತ ಮತ್ತು ಪಾಕೃತ ಭಾಷೆಗಳಿಗೆ
ಪರ್ಯಾಯವಾಗಿ ದ್ರಾವಿಡ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯನ್ನು ಮುಂಚೂಣಿಗೆ ತರುವುದರ ಜೊತೆಗೆ
ಭಾರತೀಯ ಕಾವ್ಯ ಮೀಮಾಂಸೆಯ ಪರಿಕಲ್ಪನೆಯನ್ನು ಧಿಕ್ಕರಿಸಿ, ತಮ್ಮದೇ ಆದ ಕಾವ್ಯ ಮೀಮಾಂಸೆಗಳನ್ನು
ಕಟ್ಟಿಕೊಂಡವರಾಗಿದ್ದರು. ಅದೇ ರೀತಿ ಭರತನ ಅಭಿನಯ ಶಾಸ್ತ್ರದ ಪಠ್ಯಕ್ಕೆ ಪರ್ಯಾಯವಾಗಿ
ದೇಶಿಯಾಟಂ,, ಕೊರವಂಜಿ, ಸಾದಿರ್ ಎಂಬ ನೃತ್ಯ ಪ್ರಕಾರಗಳನ್ನುಅಸ್ತಿತ್ವಕ್ಕೆ ತಂದು ಸಂಗೀತ, ನೃತ್ಯ
ಮತ್ತು ಸಾಹಿತ್ಯ ಈ ಮೂರು ಪ್ರಕಾರಗಳಲ್ಲಿ ಉತ್ತರಕ್ಕೆ ಪರ್ಯಾಯವಾಗಿ ದಕ್ಷಿಣದ ಸಂಸ್ಕೃತಿಯನ್ನು
ಕಟ್ಟಿಕೊಡುವುದರ ಮೂಲಕ ಅವುಗಳಿಗೆ ಅಸ್ಮಿತೆಯನ್ನು ದೊರಕಿಸಿಕೊಟ್ಟರು ಭರತನ ನಾಟ್ಯ ಶಾಸ್ತ್ರಕ್ಕೆ
ಪರ್ಯಾಯವಾಗಿ ನಮಗೆ ಶಿಲಪ್ಪದಿಗಾರಂ .ಸಾಹಿತ್ಯದಲ್ಲಿ ಎಂಟು ರಸಗಳ ಭಾವಗಳು, (ಶೃಂಗಾರ- ಇಂಬಂ,
ಹಾಸ್ಯ- ನಹೈ,(ನಗೈ) ಕರುಣಾರಸ-ಅಳುಕೈ, ರೌದ್ರ-ವೆಹಲಿ, ವೀರ – ಪೆರುಮಿಟಂ, ಭಯಂಕರ- ಅಕ್ಕಂ,
ಬೀಭಿತ್ಸ- ಇಳಿಯರಲ್ ಅದ್ಭುತ- ವಿಯಪ್ಪು) ಹಾಗೂ ಇವುಗಳಲ್ಲದೆ ನಾಲ್ಕು ಅಭಿನಯ, ನಾಲ್ಕು ವೃತ್ತಿ,
ಎರಡು ಧರ್ಮ, ಏಳು ಬಗೆಯ ಶೌರ್ಯ ಕುರಿತಾದ ಮಾಹಿತಿಗಳಿವೆ.
ತಮಿಳಿನ ಪ್ರಾಚೀನ ಕಾವ್ಯವನ್ನು ಅವಲೋಕಿಸುವಾಗ,
ವಿಶೇಷವಾಗಿ ಸಂಗಂ ಯುಗದ ಸಾಹಿತ್ಯವನ್ನು ಗಮನಿಸಿದಾಗ
ಅಲ್ಲಿನ ಅಹಂ ಮತ್ತು ಪುರಂ ಎಂಬ ಎರಡು ಪ್ರಕಾರಗಳಲ್ಲಿ ಅಥವಾ ಪರಿಕಲ್ಪನೆಯನ್ನು
ಇಟ್ಟುಕೊಂಡು ಅವರು ಕವಿತೆಗಳನ್ನು ರಚನೆ ಮಾಡಿದ್ದಾರೆ. ಅಹಂ ಎನ್ನುವ ಪ್ರಕಾರದಲ್ಲಿ ಬಹುತೇಕವಾಗಿ
ಪ್ರೇಯಸಿ ಮತ್ತು ಪ್ರಿಯಕರನ ಪ್ರಣಯಗೀತೆ,
ವಿರಹಗೀತೆ,ಗಳನ್ನು ಬರೆದಿದ್ದರೆ, ಪುರಂ ಪ್ರಕಾರದಲ್ಲಿ ಯುದ್ಧ, ಮತ್ತು ವೀರಗಾಥೆಗಳ ಕವಿತೆಗಳು
ದಾಖಲಾಗಿವೆ, ಆಶ್ಚರ್ಯಕರ ಸಂಗತಿಯೆಂದರೆ, ತಮಿಳಿನ ಬಹುತೇಕ ಪ್ರಣಯ ಹಾಗೂ ವಿರಹ ಗೀತೆಗಳಲ್ಲಿ
ಪಚ್ಚೆಕ್ಕಿಳಿ (ಹಸಿರು ಗಿಣಿ) ಪ್ರಮುಖವಾದ ಸ್ಥಾನ ಪಡೆದುಕೊಂಡಿದೆ. ಪ್ರೇಮಿಗಳು ತಮ್ಮ ವಿರಹದ ಮತ್ತು
ನೋವಿನ ಭಾವನೆಗಳನ್ನು ಹಸಿರು ಗಿಣಿಗೆ ಹೇಳಿಕೊಳ್ಳುವುದರ ಮೂಲಕ ಹೊರ ಹಾಕಿರುವುದು ವಿಶೇಷವಾಗಿದೆ.
ಹಾಗಾಗಿ ಭಾರತದ ಯಾವ ಭಾಷೆಯ ಕಾವ್ಯಗಳಲ್ಲೂ ಇಷ್ಟೊಂದು ಪ್ರಮಾಣದಲ್ಲಿ ಗಿಣಿಯು ಸ್ಥಾನ ಪಡೆದಿಲ್ಲ.
ಈ ಕುರಿತು ಆಸಕ್ತಿ ತಾಳಿ ನಾನು ಅಧ್ಯಯನ ಮುಂದುವರಿಸಿದಾಗ ತಮಿಳಿನ ಕವಿಗಳ ಕಾವ್ಯ ಸೃಷ್ಟಿಯ
ಹಿಂದೆ ಅಲ್ಲಿನ ಜನಪದ ಕಾವ್ಯಗಳ ಪ್ರಭಾವ
ದಟ್ಟವಾಗಿತ್ತು. ಹಾಗಾಗಿ, ತಿರುಚ್ಚನಾಪಳ್ಳಿ, ತಂಜಾವೂರು ಮತ್ತು ಮಧುರೈ ಹಾಗೂ ಸೇಲಂ
ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸುಮಾರು ಎಂಟನೂರು ಜನಪದ ಗೀತೆಗಳನ್ನು ಸಂಗ್ರಹಿಸಿಕೊಂಡು ಗಂಭೀರವಾಗಿ ಅಧ್ಯಯನ ನಡೆಸುತ್ತಿದ್ದೆ. ಇದರಲ್ಲಿ ತಮಿಳು
ಜನಪದ ಸಂಸ್ಕೃತಿಯ ಒಂದು ಭಾಗವಾಗಿರುವ ಕರಗಟಂ ( ಕರಗದ ಆಟ) ಎಂಬ ಜಾನಪದ ನೃತ್ಯ ಪ್ರಕಾರದ ಕೆಲವು ಗೀತೆಗಳು ಇದ್ದವು.
ತಮಿಳು ಗ್ರಾಮೀಣ ಭಾಗದಲ್ಲಿ ನಡೆಯುವ ಹಬ್ಬ ಮತ್ತು ಜಾತ್ರೆಗಳಲ್ಲಿ ಅತ್ಯಂತ ಪ್ರಾಮುಖ್ಯತೆ
ಪಡೆದುಕೊಂಡಿರುವ ಈ ಕಲೆಯು ತಮಿಳುನಾಡಿನಲ್ಲಿ ಆದಿ ದ್ರಾವಿಡರು ಎಂದು ಕರೆಸಿಕೊಳ್ಳುವ ದಲಿತರ
ಪಾರಂಪರಿಕ ಕಲೆಯಾಗಿದೆ.
ಈ ನೃತ್ಯ ಕಲೆ ಮತ್ತು ಜನಪದಗಳ ಹಾಡುಗಳ ಕುರಿತು
ಒಂದು ದಿನ ನಮ್ಮ ಉದಯ ಟಿ.ವಿ. ಅಧ್ಯಕ್ಷರೂ ಹಾಗೂ ಮಾಲಿಕರಲ್ಲಿ ಒಬ್ಬರಾಗಿರುವ ಎಂ ಸೆಲ್ವಂ
ಅವರಲ್ಲಿ ಪ್ರಸ್ತಾಪಿಸಿದೆ. ಮೂಲತಃ ತಂಜಾವೂರು ಜಿಲ್ಲೆಯಿಂದ ಬಂದ ಮುರುಸೋಳಿ ಸೆಲ್ವಂ ರವರು
ಕರುಣಾನಿಧಿಯವರ ಸಹೋದರಿಯ ಪುತ್ರ. ಅವರ ಹಿರಿಯ ಸಹೋದರ ದಿ. ಮುರುಸೋಳಿ ಮಾರನ್ ( ವಾಜಪೇಯಿ
ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು) ಹಾಗೂ ಸೆಲ್ವಂ ಇಬ್ಬರೂ ತಮ್ಮ ಸೋದರಮಾವ ಕರುಣಾ ನಿಧಿಯವರ
ಪುತ್ರಿಯರನ್ನು ವಿವಾಹವಾಗಿದ್ದಾರೆ. ನಾನು 1981 ರಿಂದ 1984 ರ ವರೆಗೆ ಅಂದಿನ ಮದ್ರಾಸ್
ನಗರದಲ್ಲಿ ವಾಸವಿದ್ದ ಸಂದರ್ಭದಲ್ಲಿ ಸೆಲ್ವಂ ರವರು ತಮ್ಮ ಹಿರಿಯ ಸಹೋದರ ಮಾರನ್ ಸ್ಥಾಪಿಸಿದ್ದ ಡಿ.ಎಂ.ಕೆ. ಪಕ್ಷದ ಮುಖವಾಣಿ ಮುರುಸೋಳಿ
ಎಂಬ ಪತ್ರಿಕೆಯ ಪತ್ರಿಕೆಯ ಸಂಪಾದಕರಾಗಿದ್ದರು. ಜೊತೆಗೆ ತಮಿಳು ಸಾಹಿತ್ಯ ಮತ್ತು ಕಲೆಯಲ್ಲಿ ಅಪಾರ
ಪಾಂಡಿತ್ಯ ಹೊಂದಿರುವ ಅವರು, ತಮ್ಮ ಸೋದರ ಮಾವ
ಕರುಣಾನಿಧಿಯವರಿಂದ ಪ್ರಭಾವಿತರಾಗಿ, ತಮಿಳು
ಸಾಹಿತ್ಯ, ಕಲೆ ಇವುಗಳ ಕುರಿತು ಅಧಿಕೃತವಾಗಿ ಮಾತನಾಡುವ ಪಾಂಡಿತ್ಯ ಹೊಂದಿದ್ದಾರೆ. ತಮಿಳು
ಭಾಷೆಯಲ್ಲಿ ಹತ್ತು ಲಕ್ಷ ಪ್ರಸಾರವಿರುವ ಕುಂಕುಮಂ ಎಂಬ ವಾರಪತ್ರಿಕೆಯ ಸಂಪಾದಕರಾಗಿ ಬೆಂಗಳೂರಿನ ಉದಯ ಟಿ.ವಿ. ಕಛೇರಿಯಲ್ಲಿ ಕುಳಿತು
ಪತ್ರಿಕೆಯನ್ನು ನಿರ್ವಹಿಸುತ್ತಿದ್ದಾರೆ.
ಕರಗಟಂ ನೃತ್ಯ ಕಲೆಯ ಬಗ್ಗೆ ನಮ್ಮ ಅಧ್ಯಕ್ಷರ ಬಳಿ ಪ್ರಸ್ತಾಪಿಸಿದಾಗ, “ ಕೊಪ್ಪ,
ನೀನು ತಂಜಾವೂರು ಸುತ್ತ ಮುತ್ತಾ ಯಾವಾಗಲೂ ಓಡಾಡ್ತಾ ಇರ್ತೀಯಾ,, ತಂಜಾವೂರು- ಕುಂಬಕೋಣಂ ನಡುವಿನ
ಈ ಹಳ್ಳಿಗಳಲ್ಲಿ ಕರಗಟಂ ಕಲಾವಿದರ ಕೆಲವು ಕುಟುಂಬಗಳಿವೆ. ಒಮ್ಮೆ ಅವರ ಮನೆಗೆ ಹೋಗಿ ಅವರ ತಲೆಯ
ಮೇಲ್ಭಾಗ ಅಂದರೆ ಕಲಾವಿದರ ನೆತ್ತಿಯನ್ನು
ಪರೀಕ್ಷಿಸಿ ನೋಡು” ಎಂದರು. ನಾನು ಏಕೆ ಸರ್? ಎಂದು ಪ್ರಶ್ನಿಸಿದೆ. ಆವಾಗ ಅವರು ಹೇಳಿದ ಮಾತು
ಕೇಳಿ ನನಗೆ ವಿಸ್ಮಯವಾಯಿತು. “ಕರಗಟಂ ಕುಟುಂಬದಲ್ಲಿ ಜನಿಸಿದ ಗಂಡು ಮಕ್ಕಳಿಗೆ ತಲೆಯ ಮೇಲಿನ ಕರಗ
ಜಾರದಿರಲಿ ಎಂಬ ಉದ್ದೇಶದಿಂದ ಹತ್ತು ತಿಂಗಳ ವಯಸ್ಸಿನಿಂದ
ಮಕ್ಕಳ ನೆತ್ತಿಯನ್ನು ತಾಯಂದಿರು ತಮ್ಮ ಹಸ್ತ ದಲ್ಲಿ ತಟ್ಟಿ ಸಮತಟ್ಟು ಮಾಡಲು ಆರಂಭಿಸುತ್ತಾರೆ. ಈ ಕೆಲಸ ಮಕ್ಕಳಿಗೆ
ಸುಮಾರು ಹನ್ನೆರಡು ವರ್ಷವಾಗುವವರೆಗೂ ಮುಂದುವರಿಯುತ್ತದೆ” ಎಂಬ ಮಾಹಿತಿಯನ್ನು ಬಿಟ್ಟಿಟ್ಟರು. ನಾನು
ಹಳ್ಳಿಗಳಿಗೆ ಹೋಗಿ ಕಲಾವಿದರನ್ನು ಪರೀಕ್ಷಿಸಿದಾಗ ಅವರ
ಮಾತು ನಿಜವಾಗಿತ್ತು. ಒಂದು ಕಲೆಗಾಗಿ ತಮ್ಮ ದೇಹವನ್ನು ಮತ್ತು ಬದುಕನ್ನು ಮುಡಿಪಾಗಿಡುವ
ತಳಸಮುದಾಯದ ಬದ್ಧತೆ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿತು. ( ಇದೀಗ ಬಹುತೇಕ ಕಲಾವಿದರ
ಕುಟುಂಬಗಳು ತಂಜಾವೂರು ಹಳೆಯ ಬಸ್ ನಿಲ್ದಾಣದ ಬಳಿ ಅರಮನೆಗೆ( ಸರಸ್ವತಿ ಮಹಲ್) ಹೋಗುವ
ದಾರಿಯಲ್ಲಿರುವ ಹರಿಜನ ಕೇರಿಯಲ್ಲಿ ವಾಸಿಸುತ್ತಿದ್ದಾವೆ)
ಇದು ಕಲಾವಿದರ ಬದುಕಾದರೆ, ಅವರ ಕರಗಟಂ
ನೃತ್ಯಕ್ಕೆ ಪಕ್ಕವಾದ್ಯ ಅಂದರೆ, ವಾದ್ಯ, ಡೋಲು ನುಡಿಸುವ ಕಲಾವಿದರ ಮೂಲ ಹುಡುಕಿದರೆ, ಅವರೆಲ್ಲರೂ
ರಾಜರ ಆಸ್ಥಾನದಲ್ಲಿದ್ದ ಚಿನ್ನ ಮೇಳಂ ( ಕಿರಿಯ ಮೇಳ) ಅಂದರೆ, ಅರಮನೆಯಲ್ಲಿ ನಡೆಯುತ್ತಿದ್ದ
ರಾಜದಾಸಿಯರ ನೃತ್ಯಕ್ಕೆ ವಾದ್ಯ ಭಾರಿಸುತ್ತಿದ್ದ ಕಲಾವಿದರು ಹಾಗೂ ದೇವಸ್ಥಾನದ ಪೂಜೆ,
ರಥೋತ್ಸವದಲ್ಲಿ ನೃತ್ಯ ಮಾಡುತ್ತಿದ್ದ ದೇವದಾಸಿಯರಿಗೆ ವಾದ್ಯ ನುಡಿಸುತ್ತಿದ್ದ ಪೆರಿಯ ಮೇಳಂ(
ಹಿರಿಯವರ ಮೇಳ) ಕಲಾವಿದರ ಕುಟುಂಬದವರಿಂದ ಬಂದವರಾಗಿದ್ದರು. ಹೀಗೆ ಪ್ರಾಚೀನ ತಮಿಳು ಕವಿತೆಗಳ
ಅಧ್ಯಯನ ಮಾಡಲು ಹೊರಟ ನನ್ನನ್ನು ಈ ಹುಡುಕಾಟ “ ದಕ್ಷಿಣ ಭಾರತದ ದೇವದಾಸಿಯರ ಇತಿಹಾಸ” ಕುರಿತ ಅಧ್ಯಯನದತ್ತ ಕರೆದೊಯ್ದು ನಿಲ್ಲಿಸಿತು. ಹಾಗಾಗಿ ಕಳೆದ ಮೂರು
ವರ್ಷಗಳಿಂದ ಗೆಳೆಯರು, ಸಮಾರಂಭಗಳು, ಹರಟೆ, ಮೋಜನ ಪ್ರವಾಸ ಎಲ್ಲವುಗಳಿಂದ ದೂರವಾಗಿ ರಾಶಿ, ರಾಶಿ
ಮಾಹಿತಿಗಳನ್ನು ಮುಂದಿಟ್ಟುಕೊಂಡು ಕುಳಿತಿದ್ದೀನಿ.
ಕೊನೆಯ ಮಾತು- ಈಗ ಕರಗಟಂ ನೃತ್ಯದಲ್ಲಿ ಹಿಂದಿನ
ಪರಿಶುದ್ಧತೆ ಉಳಿದಿಲ್ಲ. ಕಲಾವಿದರು ಹೊಟ್ಟೆ ಪಾಡಿಗಾಗಿ ಹಬ್ಬ ಮತ್ತು ಜಾತ್ರೆಗಳಲ್ಲಿ ಯುವಕರು
ನೀಡುವ ಹಣದ ಆಮೀಷಕ್ಕೆ ಬಲಿ ಬಿದ್ದು, ತಮ್ಮ ಹೆಣ್ಣು ಮಕ್ಕಳಿಗೆ ತುಂಡು ಉಡುಗೆ ತೊಡಿಸಿ,
ಅಶ್ಲೀಲವಾದ ತಮಿಳು ಸಿನಿಮಾ ಹಾಡುಗಳಿಗೆ ಕುಣಿಯುವಂತೆ ಮಾಡಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ