ಗುರುವಾರ, ನವೆಂಬರ್ 23, 2017

ಸರ್ವೋಚ್ಚ ನ್ಯಾಯಾಲಯ ಸರ್ವೋಚ್ಚತನವನ್ನು ಉಳಿಸಿಕೊಂಡಿದೆಯೇ?


   ಅನುಶಿವಸುಂದರ್ 
Image result for suprim court delhi
ನ್ಯಾಯಾಂಗವು ದುರ್ಬಲಗೊಳ್ಳುವುದು ಸಾಂವಿಧಾನಿಕ ಪ್ರಜಾತಂತ್ರಕ್ಕೆ ಅಪಾಯಕಾರಿ.

ಒಂದು ನ್ಯಾಯಾಂಗವು ಯಾವುದೇ ಭೀತಿ ಅಥವಾ ಅಮಿಷಗಳ ಒತ್ತಾಸೆಯಿಲ್ಲದಿದ್ದರೂ ಜನಮಾನಸದಲ್ಲಿ ತಾನು ಸಿವಿಲ್, ಕ್ರಿಮಿನಲ್ ಅಥವಾ ಸಂವಿಧಾನಾತ್ಮಕ ತಗಾದೆಗಳನ್ನು ಬಗೆಹರಿಸುವ ಒಂದು ತಟಸ್ಥ, ಸ್ವತಂತ್ರ ಮತ್ತು ನಿಷ್ಪಕ್ಷಪಾತಿ ತೀರ್ಪುಗಾರನೆಂದು ರೂಪಿತವಾಗಿರುವ ಗ್ರಹಿಕೆಯನ್ನೇ ತನ್ನ ಕಾರ್ಯನಿರ್ವಹಣೆಗೆ ಆಧರಿಸಿರುತ್ತದೆ. ಅದು ತನ್ನ ದೈನಂದಿನ ವ್ಯವಹಾರವನ್ನು ನಿರ್ವಹಿಸುವ ನಡಾವಳಿಯ ಮೂಲಕವೇ ತನ್ನ ಬಗ್ಗೆ ಜನರ ವಿಶ್ವಾಸವು ಮತ್ತೆ ಮತ್ತೆ ಧೃಢೀಕರಣಗೊಳ್ಳುವಂತೆ ಮಾಡುತ್ತದೆ. ಮತ್ತು ಮೂಲಕ ಜನರ ವಿಶ್ವಾಸವನ್ನು ಗೆದ್ದುಕೊಳ್ಳುತ್ತದೆ. ನ್ಯಾಯಲಯದ ಘನತೆಯು ನಿಂತಿರುವುದು ಅದರ ಬಳಿ ಇರುವ  ನ್ಯಾಯಾಂಗ ನಿಂದನೆಯನ್ನು ನಿಗ್ರಹಿಸುವ ಅಧಿಕಾರವನ್ನು ಬಳಸುವುದರ ಮೇಲೋ ಅಥವಾ ಅದರ ಮೂಲಭೂತ ಸೌಕರ್ಯಗಳ ಮೇಲೋ ಅಲ್ಲ. ಬದಲಿಗೆ ಹೊರಗಿನ ಸವಾಲುಗಳ ಎದುರಿನಲ್ಲಿ ನ್ಯಾಯಾಂಗದ ಘನತೆಯನ್ನು ಉಳಿಸುವಲ್ಲಿ ನ್ಯಾಯಾಧೀಶರು ಮತ್ತು ವಕೀಲರು ಹೇಗೆ ವ್ಯವಹರಿಸುತ್ತಾರೆ ಎಂಬುದನ್ನು ಆಧರಿಸಿ ನ್ಯಾಯಾಂಗದ ಘನತೆಯು ಉಳಿಯುತ್ತದೆ. ಇತರ ನಾಗರಿಕ ಅಧಿಕಾರಿಗಳು ಅಥವಾ ಚುನಾಯಿತ ಪ್ರತಿನಿಧಿಗಳಿಗಿಂತ ನ್ಯಾಯಾಂಗಕ್ಕಿರುವ ಗುಣಲಕ್ಷಣಗಳಿಂದಾಗಿಯೇ ನ್ಯಾಯಾಧೀಶರು ತಮ್ಮ ವ್ಯವಹಾರದಲ್ಲಿ ಎತ್ತರದ ಗುಣಮಟ್ಟವನ್ನು ಕಾದುಕೊಳ್ಳುತ್ತಾರೆ. ಯಾವಾಗ ಅವರು ಹಾಗೆ ನಡೆದುಕೊಳ್ಳಲು ವಿಫಲರಾಗುತ್ತಾರೋ ಆಗ ನ್ಯಾಯಾಂಗವು ಒಂದು ಸಂಸ್ಥೆಯಾಗಿ ಸಂಕಷ್ಟಕ್ಕೆ ಗುರಿಯಾಗುತ್ತದೆ.

ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ, ಹಾಗೂ ಇನ್ನಿತರ ಕೆಲವು ನ್ಯಾಯಾಧೀಶರ ಮತ್ತು ಕೆಲವು ವಕೀಲರ ಇತ್ತೀಚಿನ ಕ್ರಮಗಳು ಹಿಂದೆಂದೂ ಇಲ್ಲದಂಥ ರೀತಿಯಲ್ಲಿ ಭಾರತದ ಸರ್ವೋಚ್ಚ ನ್ಯಾಯಲಯದ ಘನತೆಯನ್ನು ಮತ್ತು ಅದರ ವಿಶ್ವಾಸಾರ್ಹತೆಯನ್ನು ತಳಮಟ್ಟಕ್ಕಿಳಿಸಿದೆ. ಕೇವಲ ಒಂದು ವಾರದಷ್ಟು ಸಣ್ಣ ಅವಧಿಯಲ್ಲಿ ಏನೆಲ್ಲಾ ನಡೆಯಿತು- ನ್ಯಾಯಾಂಗದ ಉನ್ನತ ಮಟ್ಟದಲ್ಲಿ ಇರಬಹುದಾದ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆಗಳು ಹುಟ್ಟಿದವು, ನ್ಯಾಯಾಧೀಶರು ನ್ಯಾಯಿಕ ಶಿಸ್ತನ್ನು ಉಲ್ಲಂಘಿಸಿದರು, ಮುಖ್ಯ ನ್ಯಾಯಾಧೀಶರಂತೂ ತಾವುಗಳು ಒಳಗೊಂಡಿರುವ ಪ್ರಕರಣಗಳಲ್ಲಿ ತಾವೇ ನ್ಯಾಯಾಧೀಶರಾಗಬಾರದೆಂಬ ತತ್ವವನ್ನೇ ಅಣಕಮಾಡಿಬಿಟ್ಟರು, ನ್ಯಾಯಾಧೀಶರು ಉತ್ತರದಾಯಿಗಳಿರಬೇಕೆಂದು ಪ್ರತಿಪಾದಿಸುತ್ತಿದ್ದವರನ್ನು ಕೆಲವು ವಕೀಲರು ಹೆದರಿ-ಬೆದರಿಸಿದರು ಮತ್ತು ಅಂತಿಮವಾಗಿ ವಿಷಯಕ್ಕೆ ಕೊನೆಹಾಡುವ ಹೆಸರಿನಲ್ಲಿ ತನಿಖೆಯ ಕ್ರಮದಲ್ಲಿ ಮಧ್ಯಪ್ರವೇಶ ಮಾಡುವ ಅತ್ಯಂತ ಅಗೌರವಯುತವಾದ ಆದೇಶವನ್ನು ನೀಡಲಾಯಿತು. ಹೀಗಾಗಿ ಈಗ ದೇಶದ ಸರ್ವೋಚ್ಚ ನ್ಯಾಯಾಲಯವು ತನ್ನ ಘನತೆಯನ್ನು ಕಳೆದುಕೊಂಡಿತೆಂಬುದನ್ನು ಬಿಟ್ಟು ಬೇರೇನನ್ನೂ ಹೇಳಲು ಸಾಧ್ಯವಿಲ್ಲ.
Image result for suprim court delhi

ನವಂಬರ್ ೧೪ರಂದು ನ್ಯಾಯಲಯವು ನೀಡಿದ ಆದೇಶವು ಏನು ಇಂಗಿತ ವ್ಯಕ್ತಪಡಿಸುತ್ತದೆಯೋ ಅದಕ್ಕೆ  ವ್ಯತಿರಿಕ್ತವಾಗಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಭ್ರಷ್ಟಾಚಾರದ ಪ್ರಕರಣವನ್ನು ಆಲಿಸಿದ್ದ ಮುಖ್ಯ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಒಳಗೊಂಡಿದ್ದ ಪೀಠದ ಪ್ರಾಮಾಣಿಕತೆಯ ಬಗ್ಗೆ ಹೆಚ್ಚು ಸಂದೇಹಗಳನ್ನೇ ಹುಟ್ಟುಹಾಕುತ್ತದೆ. ಸಿಬಿಐ ಇದರ ಬಗ್ಗೆ ನಡೆಸುತ್ತಿರುವ ತನಿಖೆ ಇನ್ನೂ ಮುಂದುವರೆದಿದೆ. ಆದರೆ ಕಳಪೆ ಮಟ್ಟದ ತನಿಖೆಯನ್ನೂ ಹಾಗೂ ಪಕ್ಷಪಾತಿ ತನಿಖೆಯನ್ನೂ ನಡೆಸುವುದರಲ್ಲಿ ಕುಖ್ಯಾತಿ ಪಡೆದಿರುವ ಇಂಥ ಒಂದು ಸಂಸ್ಥೆಯು ಪ್ರಕರಣದಲ್ಲಿ ನಿಜಕ್ಕೂ ಮಾಡಬೇಕಿರುವ ತನಿಖೆಯನ್ನು ಮಾಡುತ್ತದೆಯೇ ಎಂಬ ಪ್ರಶ್ನೆಯನ್ನು ಕೇಳುವುದರಲ್ಲಿ ಖಂಡಿತವಾಗಿಯೂ ಸಾರ್ವಜನಿಕ ಹಿತಾಸಕ್ತಿಯೇ ಇದೆ. ಪ್ರಕರಣದ ಬಗ್ಗೆ ಪ್ರಾರಂಭದಲ್ಲಿ ಅಹವಾಲನ್ನು ಸಲ್ಲಿಸಿದ್ದ ಕ್ಯಾಂಪೇನ್ ಫಾರ್ ಜುಡಿಷಿಯಲ್ ಅಕೌಂಟಬಲಿಟಿ- ಸಿಜೆಎ (ನ್ಯಾಯಾಂಗದ ಉತ್ತರದಾಯಿತ್ವಕ್ಕಾಗಿ ಅಭಿಯಾನ)ಯು ತನಿಖೆಯನ್ನು ನ್ಯಾಯಾಧೀಶರ ಮೇಲೆ ಒತ್ತಡ ತರಲು ಅಥವಾ ಅವರ ಮೇಲೆ ಕೆಟ್ಟ ಹೆಸರು ತರಲು ಬಳಸಿಕೊಳ್ಳುವ ಸಾಧ್ಯತೆ ಇದೆಯಾದ್ದರಿಂದ ನ್ಯಾಯಾಂಗದ ಉಸ್ತುವಾರಿಯಲ್ಲಿ ತನಿಖೆಯು ನಡೆಯಬೇಕೆಂದು ಕೋರಿದ್ದರು.

ಆದರೆ ನಂತರದಲ್ಲಿ ಇಟ್ಟ ಹಲವು ದೊಡ್ಡ ಹಾಗೂ ಸಣ್ಣ ತಪ್ಪು ಹೆಜ್ಜೆಗಳಿಂದಾಗಿ ಪ್ರಕರಣದ ಬೆಳವಣಿಗೆಗಳು ಅತ್ಯಂತ ಕೀಳುಮಟ್ಟಕ್ಕಿಳಿಯಿತು. ಮತ್ತು ಸುಪ್ರೀಂ ಕೋರ್ಟೆಂಬ ನ್ಯಾಯಾಂಗದ ಅತ್ಯುಚ್ಚ ಸಂಸ್ಥೆಗೆ ದುರಸ್ಥಿ ಮಾಡಲಾಗದ ಮತ್ತು ಶಾಶ್ವತವಾದ ಹಾನಿಯನ್ನುಂಟುಮಾಡಿತು. ವಕೀಲೆ ಕಾಮಿನಿ ಜೈಸ್ವಾಲ್ ಅವರು ದಾಖಲಿಸಿದ ಎರಡನೇ ಅಹವಾಲು ಎಷ್ಟೇ ಪ್ರಶ್ನಾರ್ಹವಾಗಿರಬಹುದು. ನ್ಯಾಯಮೂರ್ತಿ ಚಲಮೇಶ್ವರ್ ಅದನ್ನು ಸಂವಿಧಾನ ಪೀಠಕ್ಕೆ ರವಾನಿಸಿದ ತೀರ್ಪು ಎಷ್ಟೇ ಚರ್ಚಾರ್ಹವಾಗಿರಬಹುದು. ಆದರೆ ಮುಖ್ಯ ನ್ಯಾಯಾಧೀಶರು ತೆಗೆದುಕೊಂಡ  ಅತ್ಯಂತ ಪ್ರಶ್ನಾರ್ಹ ಕ್ರಮವು ಅವೆರಡನ್ನೂ ಹಿನ್ನೆಲೆಗೆ ಸರಿಸಿಬಿಟ್ಟಿತು. ಪರಿಣಾಮವಾಗಿ ನ್ಯಾಯಮೂರ್ತಿ ಮಿಶ್ರಾ ಅವರು ಸಹಜ ನ್ಯಾಯದ ಎಲಾ ಪ್ರಾಥಮಿಕ ತತ್ವಗಳನ್ನೂ ಉಲ್ಲಂಘಿಸಿ ನ್ಯಾಯಪೀಠಕ್ಕೆ ತನಗೆ ಬೇಕಾದವರನ್ನು ಆಯ್ಕೆ ಮಾಡುವ ಅಧಿಕಾರವನ್ನು ಚಲಾಯಿಸಿದ್ದಾರೆ. ನಂತರ ಅವರೇ ಆಯ್ಕೆ ಮಾಡಿದ ಪೀಠವು ನವಂಬರ್ ೧೪ರಂದು ನೀಡಿದ ಆದೇಶವು ಯಾವುದೇ ಕಾನೂನು ಅಥವಾ ನೈತಿಕತೆಯ ವಾಸನೆಯೂ ಇಲ್ಲದ ರೀತಿಯಲ್ಲಿ ಮುಖ್ಯ ನ್ಯಾಯಾಧೀಶರ ಎಲ್ಲಾ ಕ್ರಮಗಳಿಗೂ ಸಮ್ಮತಿಯ ಮುದ್ರೆಯೊತ್ತಿಬಿಟ್ಟಿತು. ಆದರೆ ಆದೇಶವು ಮುಖ್ಯ ನ್ಯಾಯಾಧೀಶರ ನಡೆಗಳ ಬಗ್ಗೆ ಇದ್ದ ಸಂದೇಹಗಳನ್ನು ನಿವಾರಿಸುವ ಬದಲಿಗೆ ಇನ್ನಷ್ಟು ಅಹಿತವಾದ ಪ್ರಶ್ನೆಗಳನ್ನೇ ಹುಟ್ಟುಹಾಕಿದೆ.

ಎಲ್ಲಾ ಬೆಳವಣಿಗೆಗಳು ನ್ಯಾಯಾಧೀಶರು ಮತ್ತು ವಕೀಲರ ನಡುವೆ, ನ್ಯಾಯಾಧೀಶರೊಳಗೊಳಗೆ ಮತ್ತು ವಕೀಲರ ನಡುವೆ ಆಳವಾದ ವಿಭಜನೆಯನ್ನು ಬೆಳಕಿಗೆ ತಂದಿದೆ. ವಿಭಜನೆಗಳು ಇದ್ದಕ್ಕಿದ್ದಂತೆ ಉಧ್ಬವಿಸಿರುವ ವಿಭಜನೆಗಳಲ್ಲ. ಬದಲಿಗೆ ಕೆಲವು ಕಾಲದಿಂದಲೂ ಅಂತರಗಳು ಬೆಳೆಯುತ್ತಿದ್ದವು. ಒಂದೆಡೆ ಉನ್ನತ ನ್ಯಾಯಾಂಗ ಸಂಸ್ಥೆಯು ತನ್ನ ಅಧಿಕಾರ ಮತ್ತು ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದರೂ ತನ್ನನ್ನು ಮಾತ್ರ ಹೆಚ್ಚಿನ ಪರಿಶೀಲನೆ ಮತ್ತು ಉತ್ತರದಾಯಿತ್ವಗಳಿಗೆ ತೆರೆದುಕೊಳ್ಳದಿದ್ದರಿಂದ ಉಂಟಾಗುತ್ತಿದ್ದ ಅಸಮಾಧಾನಗಳು ಒಂದಲ್ಲ ಒಂದು ಬಾರಿ ಸ್ಪೋಟಗೊಳ್ಳಲೇ ಬೇಕಿತ್ತು. ಆದರೆ ಅದು ಈಗ ಹೀಗೆ ಅತ್ಯಂತ ಕೀಳಾದ ಸ್ವರೂಪದಲ್ಲಿ ಹೊರಬಿದ್ದಿದೆ. ಈಗ ಸಂಬಂಧಪಟ್ಟ ಎಲ್ಲರ ನಡುವೆಯೂ ಒಂದು ಆಳವಾದ ಅವಿಶ್ವಾಸವೂ ಮನೆಮಾಡಿದ್ದು ಅದರಿಂದಾಗಿ ಸಂಸ್ಥೆಯು ನಷ್ಟವನ್ನನುಭವಿಸುತ್ತಿದೆ.

ಪ್ರಕರಣಕ್ಕೆ ತೇಪೆ ಹಚ್ಚಿ ಮುಖ್ಯ ನ್ಯಾಯಮೂರ್ತಿಗೆ ಕ್ಲೀನ್‌ಚಿಟ್ ನೀಡಲು ನಡೆದ ಎಲ್ಲಾ ನಾಚಿಕೆಗೇಡಿನ ಪ್ರಯತ್ನಗಳನ್ನು ಗಮನಿಸಿದರೆ ಯಾವುದೇ ನೈಜ ಆತ್ಮಾವಲೋಕನ ನಡೆಯುವ ಸಾಧ್ಯತೆಯು ಕಂಡುಬರುತ್ತಿಲ್ಲ. ನ್ಯಾಯಾಂಗದಲ್ಲಿರುವ ಭ್ರಷ್ಟಾಚಾರದ ಬಗ್ಗೆ ನಡೆಯುತ್ತಿದ್ದ ಗುಸುಗುಸುಗಳು ನಿಧಾನಕ್ಕೆ ದೊಡ್ಡ ಧ್ವನಿಯನ್ನು  ಪಡೆದುಕೊಳ್ಳುತ್ತಿವೆ. ಮತ್ತು ಪ್ರಶ್ನೆಗಳ ಆಳಕ್ಕೆ ಹೋಗಿ ಬಗೆಹರಿಸದೆ ಮುಚ್ಚಿಹಾಲು ನಡೆಯುತ್ತಿರುವ ಪ್ರಯತ್ನಗಳು ಸಂದರ್ಭವನ್ನು ಇನ್ನಷ್ಟು ಕೆಟ್ಟದ್ದಾಗಿಸುತ್ತದೆ. ಕಳೆದ ದಶಕವೊಂದರಲ್ಲೇ ಇಬ್ಬರು ನ್ಯಾಯಾಧೀಶರು ಅನುಮಾನದ ನೆರಳಲ್ಲಿ ವಾಗ್ದಂಡನೆಗೆ ಗುರಿಯಾಗಿ ರಾಜೀನಾಮೆ ನೀಡಬೇಕಾಯಿತು. ಮತ್ತೊಬ್ಬ ನ್ಯಾಯಾಧೀಶರ ಮೇಲೆ ಭ್ರಷ್ಟಾಚಾರದ ತನಿಖೆ ಇನ್ನೂ ನಡೆಯುತ್ತಿದೆ. ಇತ್ತೀಚೆಗೆ ದೆಹಲಿ ಉಚ್ಚ ನ್ಯಾಯಾಲಯದಿಂದ ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ನ್ಯಾಯಾಧೀಶರೊಬ್ಬರ ಮೇಲೂ ಭ್ರಷ್ಟಾಚಾರದ ಅನುಮಾನಗಳಿವೆ. ಏಕೆಂದರೆ ಕೆಳಹಂತದ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ ಅವರ ಮಗನನ್ನು ಅಧಿಕೃತ ಮೂಲಗಳಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದ್ದ ಆರೋಪದ ಮೇಲೆ ದೆಹಲಿ ಉಚ್ಚನ್ಯಾಯಾಲಯ ಹುದ್ದೆಯಿಂದ ಅವರನ್ನು ತೆಗೆದುಹಾಕಿತ್ತು. ಹೀಗಾಗಿ ಇವೆಲ್ಲವೂ ಕೆಲವು ಅಪರೂಪದ ಪ್ರಕರಣವಾಗಿರದೆ  ಒಂದು ಸಾಂಸ್ಥಿಕ ವೈಫಲ್ಯವನ್ನು ಸೂಚಿಸುತ್ತದೆ. ಆದರೆ ನ್ಯಾಯಾಂಗವು ತನ್ನಲ್ಲಿ ಕೊಳಕಿದೆ ಎಂಬುದನ್ನು ನಿರಾಕರಿಸುತ್ತಿರುವುದು ಮಾತ್ರವಲ್ಲದೆ ಸಂಸ್ಥೆಗೆ ಉತ್ತರದಾಯಿತ್ವ ತಂದುಕೊಡಲು ಹೊರಗಿನಿಂದ ನಡೆಯುವ ಪ್ರಯತ್ನಗಳಿಗೂ ತಡೆಯೊಡ್ಡುತ್ತಿದೆ.

ಬೆಳವಣಿಗೆಗಳು ಭಾರತದ ಸಾಂವಿಧಾನಿಕ ಪ್ರಜಾತಂತ್ರದ ಭವಿಷ್ಯದ ಬಗ್ಗೆ ಆತಂಕವನ್ನು ಹುಟ್ಟಿಸುತ್ತದೆ. ಸರ್ಕಾರದ ಇತರ ಅಂಗಸಂಸ್ಥೆಗಳು ಗೌರವಿಸದ ಮತ್ತು ಜನರ ವಿಶ್ವಾಸವನ್ನು ಪಡೆದಿರದ ನ್ಯಾಯಾಂಗವೊಂದು ಸಾಂವಿಧಾನಿಕ ಮೌಲ್ಯಗಳನ್ನು ಮತ್ತು ತತ್ವಗಳನ್ನು ಎತ್ತಿಹಿಡಿಯುತ್ತದೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತದ  ಸಂವಿಧಾನವನ್ನು ಜಾರಿ ಮಾಡುವಲ್ಲಿ, ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಉದ್ಭವವಾಗುವ ವ್ಯಾಜ್ಯಗಳನ್ನು ಬಗೆಹರಿಸುವ ಪ್ರಾಮಾಣಿಕ ಮಧ್ಯವರ್ತಿಯಾಗಿ, ಚುನಾವಣಾ ತಗಾದೆಗಳ ನಿಷ್ಪಕ್ಷಪಾತಿ ತೀರ್ಪುಗಾರನಾಗಿ ಮತ್ತು ಸಂವಿಧಾನವು ಕೊಡಮಾಡಿರುವ ನಾಗರಿಕ ಹಕ್ಕುಗಳ ರಕ್ಷಕನಾಗಿ ನ್ಯಾಯಾಂಗದ ಪಾತ್ರ ಅತ್ಯಂತ ಮೂಲಭೂತವಾದದ್ದಾಗಿದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತಂತ್ರೋಪಾಯಗಳಲ್ಲಿ ಮುಳುಗಿರುವ ನ್ಯಾಯಾಂಗವೊಂದು ಯಾವುದೇ ಜವಾಬ್ದಾರಿಯನ್ನು ಕನಿಷ್ಟ ಪರಿಣಾಮಕಾರಿಯಾಗಿಯೂ ನಿರ್ವಹಿಸುತ್ತದೆಂದು ನಿರೀಕ್ಷಿಸಲಾಗುವುದಿಲ್ಲ. ಭಾರತದ ಜನತೆ ಖಂಡಿತ ಇದಕ್ಕಿಂತ ಉತ್ತಮವಾದದ್ದನ್ನು ಹೊಂದಲು ಅರ್ಹರಾಗಿದ್ದಾರೆ.

    ಕೃಪೆEconomic and Political WeeklyNov 18, 2017. Vol. 52. No. 46
           (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: www.epw.in/translation)

ಧೂಳು ತುಂಬಿರುವ ಮನಸ್ಸುಗಳು


 ಅನುಶಿವಸುಂದರ್ 
Image result for air pollution in delhi

ಸಮಸ್ಯೆ ಇರುವುದು ಪರಿಸರದಲ್ಲಿ ಮಾತ್ರವಲ್ಲ. ನೀತಿಗಳನ್ನು ಮಾಡುವವರ ತಲೆಗಳಲ್ಲೂ ಸಮಸ್ಯೆಯಿದೆ.

ನವದೆಹಲಿಯನ್ನು ಹೊಗೆಮಂಜು ಆವರಿಸಿಕೊಳ್ಳುವುದು ವಾರ್ಷಿಕ ವಿದ್ಯಮಾನವೇ ಆಗಿಬಿಟ್ಟಿದೆ; ಹಾಗೆಯೇ ತಾರಕಕ್ಕೇರುವ ಕಳವಳಗಳೂ ಸಹ. ಪ್ರತಿಬಾರಿಯೂ ಇದೊಂದು ಆಪತ್ಕಾಲೀನ ಪರಿಸ್ಥಿತಿಯೆಂದು ನಮಗೆ ಹೇಳಲಾಗುತ್ತದೆ. ಒಂದು ಕಡೆ ದೆಹಲಿಯು ತನ್ನ ಪಕ್ಕದ ರಾಜ್ಯಗಳಾದ ಹರ್ಯಾಣ ಮತ್ತು ಪಂಜಾಬುಗಳನ್ನು ದೂರಿದರೆ, ಅವೆರಡೂ ರಾಜ್ಯಗಳೂ ದೆಹಲಿಯನ್ನು ದೂರುತ್ತವೆ. ಮತ್ತು ಎಲ್ಲರೂ ಒಟ್ಟು ಸೇರಿ ಕೇಂದ್ರವನ್ನೂ ದೂರುತ್ತಾರೆ. ಮಧ್ಯೆ ದೇಶದ ಅತ್ಯಂತ ಸುರಕ್ಷಿತ ನಗರದ ಪ್ರತಿಯೊಬ್ಬ ನಾಗರೀಕರೂ ಉಸಿರಿಗಾಗಿ ತೇಕುತ್ತಾ ಜೀವ ಸವೆಸುತ್ತಿದ್ದಾರೆ. ನಗರದಲ್ಲಿ ಒಳ್ಳೆಯ ಗಾಳಿ ಎಂಬುದೂ ಸಹ ಒಂದು ದೂರದ ಕನಸಾಗಿಬಿಟ್ಟಿದೆ. ನಗರದಲ್ಲಿ ಬಡವರಿಗೆ, ಎಳೆ ಮಕ್ಕಳಿಗೆ ಮತ್ತು ವೃದ್ಧರಿಗೆ ಇರುವ ಆಯ್ಕೆ ಇಷ್ಟೆ: ಒಂದೋ ಜೀವ ಉಳಿಸಿಕೊಳ್ಳಲು ಉಸಿರಾಡುವುದು ಅಥವಾ ಉಸಿರಾಡಿ ಸಾಯುವುದು. ಮಾತುಗಳು ನಾಟಕೀಯವಾಗಿವೆ ಎಂದೆನಿಸಿದರೂ ಸತ್ಯ. ದಾರುಣ ಸತ್ಯವನ್ನು ಹಲವಾರು ಸಂಶೋಧನಾ ವರದಿಗಳು ಹೊರಗೆಡವಿವೆ. ಅದರಲ್ಲೀ ಇತ್ತೀಚನದ್ದು ಬ್ರಿಟಿಷ್ ಪತ್ರಿಕೆ ಲ್ಯಾನ್ಸೆಟ್ ಮಾಡಿದ ಅಧ್ಯಯನ. ಅದರ ಪ್ರಕಾರ ೨೦೧೫ರಲ್ಲಿ ಭಾರತದಲ್ಲಿ ವಾಯು ಮಾಲಿನ್ಯದಿಂದಾಗಿ ೨೫ ಲಕ್ಷ ಜನ ಅಕಾಲಿಕ ಸಾವನ್ನಪ್ಪಿದ್ದಾರೆ.
ಬಾರಿ ಹೊಗೆಮಂಜು ದೆಹಲಿಯನ್ನು ಆವರಿಸಿಕೊಂಡಿದ್ದು ನವಂಬರ್ ೭ಕ್ಕೆ ಆಗಿರಬಹುದು. ಆದರೆ ಇದು ವರ್ಷಗಳಿಂದಲ್ಲವಾದರೂ ಕೆಲವು ತಿಂಗಳುಗಳಿಂದಲಂತೂ ಅದಕ್ಕೆ ಬೇಕಾದ ಸನ್ನಿವೇಶ ರೂಪುಗೊಳ್ಳುತ್ತಿತ್ತು. ೨೦೦೨ರಲ್ಲೇ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‌ಮೆಂಟ್ (ಸಿ.ಎಸ್.) ಅನಿಲ್ ಅಗರ್‌ವಾಲ್ ಅವರು ದೆಹಲಿಯ ಗಾಳಿಯ ಗುಣಮಟ್ಟ ಹದಗೆಡುತ್ತಿರುವ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರು. ಮತ್ತು ಎಲ್ಲಾ ಸಾರ್ವಜನಿಕ ವಾಹನಗಳಲ್ಲಿ ಡೀಸೆಲ್ ಬದಲಿಗೆ ನೈಸರ್ಗಿಕ ಅನಿಲ (ಸಿಎನ್‌ಜಿ) ಬಳಕೆಯನ್ನು ಕಡ್ಡಾಯ ಮಾಡಲು ಹೋರಾಡಿದ್ದರು. ಆಗಲೇ ದೆಹಲಿ ಎದುರಿಸುತ್ತಿರುವ ಬಿಕ್ಕಟ್ಟಿನ ಸ್ವರೂಪ ಎಲ್ಲರ ಗಮನಕ್ಕೂ ಬಂದಿತ್ತು. ಆಗ ಯಾವ ಗಂಭೀರ ಕ್ರಮಗಳನ್ನೂ ತೆಗೆದುಕೊಳ್ಳದಿದ್ದರಿಂದಲೇ ಈಗ ನಗರವು ಅನಾಹುತದ ವಲಯವಾಗಿಬಿಡುತ್ತಿದೆ. ಮೆಟ್ರೋ ರೈಲನ್ನು ನಿರ್ಮಿಸಲಾಯಿತಾದರೂ ದೆಹಲಿಯ ವಿಸ್ತಾರವಾದ ರಸ್ತೆಗಳು ವಾಹನಗಳಿಂದ ಕಿಕ್ಕಿರಿಯತೊಡಗಿದವು. ಡೀಸೆಲ್ ಹೊಗೆಯನ್ನು ಹೊರಹಾಕುವ ಟ್ರಕ್ಕುಗಳು ನಗರದ ಮೂಲಕ ಸಂಚರಿಸಿವುದು ಮುಂದುವರೆಯಿತು; ಘನತ್ಯಾಜ್ಯ ವಸ್ತುಗಳನ್ನು ಬಯಲಿನಲ್ಲೇ ಸುಟ್ಟುಹಾಕುವುದು ಮುಂದುವರೆಯಿತು; ಕೈಗಾರಿಕಾ ವಸಾಹತುಗಳು ಉಂಟುಮಾಡುತ್ತಿದ್ದ ಮಾಲಿನ್ಯದ ಮೇಲೆ ನಿಗಾ ಇಡಲಿಲ್ಲ; ನಗರಕ್ಕೆ ಅನತಿದೂರದಲ್ಲಿದ್ದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಗಂಧಕದ ಡಯಾಕ್ಸೈಡ್ ಮತ್ತು ಹಾರುಧೂಳನ್ನು ಉಗಿಯುವುದನ್ನು ಮುಂದುವರೆಸಿದವು; ಮತ್ತು ನೂರಾರು ಡೀಸೆಲ್ ಜನರೇಟರ್‌ಗಳು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದವು. ಇವೆಲ್ಲವೂ ಒಟ್ಟು ಸೇರಿ ಚಳಿಗಾಲದಲ್ಲಿ ಮಾತ್ರವಲ್ಲದೆ ವರ್ಷ ಪೂರ್ತಿ ನಗರದ ಸುತ್ತಾ ವಿಷದ ಗಾಳಿ ಆವರಿಸಿಕೊಂಡೇ ಇರುವಂತಾಗಿಬಿಟ್ಟಿದೆ ಅದು ಚಳಿಗಾಲದಲ್ಲಿ ಕಣ್ಣಿಗೆಕಾಣುವಂತೆ ಹೊಗೆಮಂಜಾ(ಸ್ಮಾಗ್)ಗುತ್ತಿದೆ.

ಕಳೆದ ವರ್ಷ ಕಾನ್‌ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ನಾನಿಗಳು ದೆಹಲಿಯ ವಾಯುಮಾಲಿನ್ಯದ ಪ್ರಮಾಣವನ್ನು ವಿವರಿಸುವ ವರದಿಯೊಂದನ್ನು ಬಿಡುಗಡೆ ಮಾಡಿದ್ದರು. ಅದರ ಪ್ರಕಾರ ದೆಹಲಿಯ ಗಾಳಿಯ ಗುಣಮಟ್ಟವು ಚಳಿಗಾಲದಲ್ಲಿ ಮಾತ್ರವಲ್ಲದೆ, ಅಕ್ಕಪಕ್ಕಗಳ ರಾಜ್ಯದಲ್ಲಿ ಬೆಳೆಕೂಳೆಯನ್ನು ರೈತರು ಸುಡುವಂಥ ಕೆಲಸಗಳಲ್ಲಿ ತೊಡಗದ ಬೇಸಿಗೆ ಕಾಲದಲ್ಲೂ ಸಹ ಅತ್ಯಂತ ಕಳಪೆಯೇ ಆಗಿತ್ತು. ಚಳಿಗಾಲದಲ್ಲಿ ಬೆಳೆಕೂಳೆಯ ಸುಡುವಿಕೆಯಿಂದ ವಾತಾವರಣದಲ್ಲಿ ಘನಪದಾರ್ಥಗಳು ಸೇರಿಕೊಂಡು ವಾತಾವರಣವನ್ನು ಮತ್ತಷ್ಟು ಹದಗೆಡೆಸುವುದು ನಿಜವೇ ಆದರೂ ಗಾಳಿಯ ಕಳಪೆ ಗುಣಮಟ್ಟಕ್ಕೆ ಅದೊಂದೇ ಕಾರಣವಲ್ಲ. ಅಧ್ಯಯನದ ಪ್ರಕಾರ ದೆಹಲಿಯ ವಾತಾವರಣದಲ್ಲಿರುವ ಶೇ.೯೮ರಷ್ಟು ಗಂಧಕದ ಡಯಾಕ್ಸೈಡಿಗೆ ಮತ್ತು ಶೇ.೬೦ ರಷ್ಟು ನೈಟ್ರೋಜನ್ ಆಕ್ಸೈಡಿಗೆ ಸುತ್ತಮುತ್ತಲಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು, ಕೈಗಾರಿಕ ವಸಾಹತುಗಳು, ರೆಸ್ಟೋರೆಂಟುಗಳು ಮತ್ತು ಡೀಸೆಲ್ ಜನರೇಟರ್‌ಗಳು ಸೃಷ್ಟಿಸುತ್ತಿರುವ ಮಾಲಿನ್ಯವೇ ಕಾರಣ. ದೆಹಲಿಯಿಂದ ೩೦೦ ಕಿ.ಮೀ. ಫಾಸಲೆಯಲ್ಲಿ ೧೩ ಶಾಖೋತ್ಪನ್ನ ಸ್ಥಾವರಗಳು, ೨೦ ದೊಡ್ಡ ಕೈಗಾರಿಕಗಳು ಮತ್ತು ೨೫ ಕೈಗಾರಿಕಾ ವಸಾಹತುಗಳಿವೆ. ಬಹುಪಾಲು ಉದ್ಯಮಗಳು ಹೆಚ್ಚಿನ ಘನ ಸಾಂದ್ರತೆಯುಳ್ಳ ಫರ್ನೇಸ್ ಆಯಿಲ್ ಅನ್ನು ಇಂಧನವಾಗಿ ಬಳಸುತ್ತವೆ. ಅದರ ಬಳಕೆಯು ದಶಲಕ್ಷಕ್ಕೆ ೫೦೦ ಭಾಗ ಮಾತ್ರ ಗಂಧಕವಿರಬೇಕೆಂಬ ಮಿತಿಯನ್ನು ಉಲ್ಲಂಘಿಸುತ್ತದೆ. ಅದೇರೀ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಉಗುಳುವ ಅನಿಲ ಮತ್ತು ಧೂಳುಗಳು ಸರಿಯಾದ ನಿಯಂತ್ರಣಕ್ಕೆ ಒಳಗಾಗುತ್ತಿಲ್ಲ. ಇದರ ಜೊತೆಗೆ ದೆಹಲಿಯಲ್ಲಿ ೯೦೦೦ ಸಣ್ಣ ಹೋಟೆಲ್ ಮತ್ತು ರೆಸ್ಟೋರೆಂಟುಗಳಿದ್ದು ಅವು ಕಲ್ಲಿದ್ದನ್ನು ಉರುವಲಾಗಿ ಬಳಸುತ್ತವೆ. ಅಲ್ಲದೆ, ಶೇ.೯೦ ದೆಹಲಿ ನಿವಾಸಿಗಳು ಶುದ್ಧ ಇಂಧನವನ್ನೇ ಬಳಸುತ್ತಿದ್ದರೂ ಇನ್ನುಳಿದ ಶೇ. ೧೦ ಜನರು ಈಗಲೂ ಉರುವಲಿಗೆ ಸೌದೆ, ಒಣಹುಲ್ಲು, ಸಗಣಿ ಅಥವಾ ಕಲ್ಲಿದ್ದಲನ್ನು ಬಳಸುತ್ತಾರೆ. ಇದರ ಜೊತೆಗೆ ದೆಹಲಿಯ ರಸ್ತೆಗಳಲ್ಲಿ ಒಂದೇ ಸಮನೇ ಏರುತ್ತಿರುವ ವಾಹನಗಳ ಸಂಖ್ಯೆಯೇ ಅಲ್ಲಿನ ಗಾಳಿಯಲ್ಲಿನ ಶೇ.೨೦ರಷ್ಟು ಘನಪದಾರ್ಥಗಳಿಗೆ ಕಾರಣವಾಗಿವೆ.

ಇಂದು ನಮ್ಮೆಲ್ಲ ಚರ್ಚೆಗಳನ್ನು ದೆಹಲಿಯ ಮೇಲೆ ಮಾತ್ರ ಕೇಂದ್ರೀಕರಿಸಿದ್ದರೂ ಭಾರತದ ಬಹುಪಾಲು ನಗರಗಳ ವಾತಾವರಣ ಹೆಚ್ಚೂಕಡಿಮೆ ಇದೇ ರೀತಿಯಲ್ಲಿದೆ. ಅದರಲ್ಲೂ ಉತ್ತರ ಭಾರತ ಅಥವಾ ಉಪಖಂಡದ ಉತ್ತರ ಭಾಗ ಇದರಿಂದ ವಿಶೇಷವಾಗಿ ಬಾಧೆಗೊಳಗಾಗಿದೆ. ವಾಸ್ತವವಾಗಿ ಭಾರತದ ಮಾಧ್ಯಮಗಳು ದೆಹಲಿಯ ಪರಿಸ್ಥಿತಿಯ ಬಗ್ಗೆ ಪುಂಖಾನುಪುಂಖವಾಗಿ ಬರೆಯುತ್ತಿರುವ ಹೊತ್ತಿನಲ್ಲೇ ಪಾಕಿಸ್ತಾನದ ಲಾಹೋರಿನ ವಾಯುಮಾನದ ಪರಿಸ್ಥಿತಿ ಇನ್ನೂ ಭೀಕರವಾಗಿತ್ತು. ಹೀಗಾಗಿ ಸವಾಲನ್ನು ನಾವುಗಳು ಗಡಿಗಳನ್ನು ಮರೆತು ಒಟ್ಟಾಗಿ ಸಹಕಾರದ ಮೂಲಕ ಎದುರಿಸುವ ಅಗತ್ಯವಿದೆ. ಆಗ ಮಾತ್ರ ಗಡಿಯ ಇಕ್ಕೆಲಗಳಲ್ಲೂ ಜನರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸರಿಯಾದ ಪರಿಹಾರವನ್ನು ಹುಡುಕಲು ಸಾಧ್ಯ. ಭಾರತ ಮತ್ತು ಪಾಕಿಸ್ತಾನಗಳು ಇತಿಹಾಸವನ್ನು ಮಾತ್ರವಲ್ಲದೆ ಭೌಗೊಳಿಕತೆಯನ್ನು ಹಂಚಿಕೊಂಡಿವೆ. ಮತ್ತು ಭಾರತದ ಉತ್ತರ ಭಾಗದಲ್ಲಿ ನಾವು ಬಗೆಯ ಪರಿಸರ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಗಡಿಯಾಚೆಗಿರುವ ಪಾಕಿಸ್ತಾನದ ನಗರಗಳೂ ಸಹ ಇದೇ ಬಗೆಯ ಬಿಕ್ಕಟ್ಟನ್ನು ಎದುರಿಸುತ್ತಿರುತ್ತವೆ. ಹೀಗೆ ಸಮಸ್ಯೆ ದೀರ್ಘಕಾಲಿಕವೇ ಹೊರತು ನಿರ್ದಿಷ್ಟ ಋತುಮಾನಕ್ಕೆ ಸೀಮಿತವಾದುದಲ್ಲವೆಂಬುದೂ, ಒಂದು ನಗರಕ್ಕೆ ಮಾತ್ರ ಸೀಮಿತವಾಗಿರದೆ ಪಾಕಿಸ್ತಾನವನ್ನೂ ಒಳಗೊಂಡಂತೆ ಒಂದು ಇಡೀ ಭೂಭಾಗಕ್ಕೆ ಅನ್ವಯವಾಗುವಂಥದ್ದೆಂಬುದು ಸ್ಪಷ್ಟವಾದ ಮೇಲೆ ಇದಕ್ಕೆ ತತ್‌ತಕ್ಷಣದ ಪರಿಹಾರವಿಲ್ಲವೆಂಬುದು ನಮ್ಮ ನೀತಿನಿರೂಪಕರಿಗೆ ಅರ್ಥವಾಗಬೇಕು. ಹಾಗಿದ್ದರೂ ಎಷ್ಟೇ ಅರೆಬರೆಯಾಗಿದ್ದರೂ, ಹೆಚ್ಚು ಪರಿಣಾಮಕಾರಿಯಲ್ಲವಾಗಿದ್ದರೂ ಕೆಲವು ತುರ್ತು ಕ್ರಮಗಳನ್ನಂತೂ ತೆಗೆದುಕೊಳ್ಳುವ ಅಗತ್ಯವಿದ್ದೇ ಇದೆ. ಏನನ್ನೂ ಮಾಡದೇ ಇರುವುದಕ್ಕಿಂತ ಸ್ವಲ್ಪವನ್ನಾದರೂ ಮಾಡುವುದು ಮೇಲುಆದರೆ ವಾತಾವರಣವು ಸ್ವಲ್ಪ ಸುಧಾರಿಸಿದ ತಕ್ಷಣ ಈಗಿರುವ ಕಳವಳಗಳೆಲ್ಲವೂ ಕರಗಿ ಮಾಮೂಲಿನಂತಾಗಲು ಬಿಡಬಾರದು. ಏಕೆಂದರೆ ಹಾಗೆ ಮೈಮರೆವು ಮಾಡಿಕೊಂಡು ಬಂದ ಕಾರಣಕ್ಕಾಗಿಯೇ ಇಂದು ಪರಿಸ್ಥಿತಿ ಹೀಗಾಗಿದೆ. ಹೊಗೆಮಂಜಿಲ್ಲದ್ದಿದ್ದರೂ ನಾವು ಕುಡಿಯುವ ಗಾಳಿಯಲ್ಲಿ ಮಾತ್ರ ನಂಜು ತುಂಬಿಕೊಂಡೇ ಇದೆ.

ಜಗತ್ತಿನ ಹಲವಾರು ದೇಶಗಳು ತಮ್ಮ ನಗರಗಳನ್ನು ದೀರ್ಘಕಾಲೀನವಾಗಿ ಪರಿಸರ ತಾಳಿಕೆಯುಳ್ಳ ರೀತಿಯಲ್ಲಿ ಪುನರ್ರೂಪಿಸಿಕೊಳ್ಳುತ್ತಿರುವ ಹಲವಾರು ಉದಾಹರಣೆಗಳಿವೆ. ಇದು ಭೂ ಬಳಕೆಯನ್ನು ನಿಯಂತ್ರಿಸುವ ಕಾನೂನುಗಳನ್ನು ಒಳಗೊಂಡಂತೆ ಭೂ ನಿಯಂತ್ರಣ ಮಾಡುವ, ಖಾಸಗಿ ವಾಹನಗಳಿಗಿಂತ ಸಾರ್ವಜನಿಕ ಸಾಗಾಣಿಕೆಗಳಿಗೆ ಆದ್ಯತೆ ಕೊಡುವ, ಬಯಲು ಮತ್ತು ಹಸಿರು ಪ್ರದೇಶಗಳಿಗೆ ಅವಕಾಶ ಕಲ್ಪಿಸುವ ಮತ್ತು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳನ್ನು ನಿಯಂತ್ರಿಸುವ ಕ್ರಮಗಳನ್ನು ಒಳಗೊಂಡಿವೆ. ಎಲ್ಲಕ್ಕಿಂತ ಹೆಚ್ಚಾಗಿ ಭವಿಷ್ಯದಲ್ಲಿ ತಮ್ಮ ನಗರಗಳು ಮಾಲಿನ್ಯ ಮುಕ್ತ ನಗರವನ್ನಾಗಿ ಪರಿವರ್ತಿಸುವಲ್ಲಿ ನಮ್ಮೆಲ್ಲರ ಹಿತವೂ ಅಡಗಿದೆ ಎಂಬ ಶಿಕ್ಷಣವನ್ನು ಎಲ್ಲಾ ನಾಗರಿಕರಿಗೂ ಕೊಡುವ ಅಗತ್ಯವಿದೆ. ವಾತಾವರಣವನ್ನು ದಿಢೀರನೆ ಪರಿಶುದ್ಧ ಮಾಡಿಬಿಡುವ ಯಾವ ಮಂತ್ರದಂಡಗಳೂ ಇಲ್ಲ. ನಮ್ಮ ನಗರಗಳನ್ನು ಜೀವಿಸಲು ಯೋಗ್ಯವಾದ ನಗರಗಳನ್ನಾಗಿ ಮಾಡಲು ಬೇಕಾದ ವ್ಯವಸ್ಥಿತವಾದ, ದೀರ್ಘಕಾಲೀನ ಮತ್ತು ತಾಳಿಕೆಯೋಗ್ಯ ಕ್ರಿಯಾಯೋಜನೆಯನ್ನು ರೂಪಿಸುವುದೊಂದೇ ಇದಕ್ಕಿರುವ ಏಕೈಕ ದಾರಿ.

   
  ಕೃಪೆ:       Economic and Political Weekly,Nov 18, 2017. Vol. 52. No. 46
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: www.epw.in/translation)