ಗುರುವಾರ, ನವೆಂಬರ್ 2, 2017

ನ್ಯಾಯವನ್ನು ಪಡೆದುಕೊಳ್ಳುವ ಹಕ್ಕು


                ಅನುಶಿವಸುಂದರ್

Image result for goa
ನ್ಯಾಯಾಲಯಗಳು ಫಿರ್ಯಾದುದಾರರ ಅನುಕೂಲತೆಗಳನ್ನು ಗಮನಿಸಬೇಕೇ ವಿನಃ ಸರ್ಕಾರಗಳದ್ದಲ್ಲ

 ಗೋವಾದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಸುಸ್ಥಿರ ಪರಿಸರದ ಬಗೆಗೆ ಯಾವ ಪರಿಕಲ್ಪನೆಯೂ ಇಲ್ಲದೆ ಜಾರಿಗೆ ತರಲೆತ್ನಿಸಿದ ಎಲ್ಲಾ ತಥಾಕಥಿತ ಅಭಿವೃದ್ಧಿ ಯೋಜನೆಗಳಿಗೂ ಅಲ್ಲಿನ ಕ್ರಿಯಾಶೀಲ ಪರಿಸರವಾದಿ ಸಂಘಟನೆಗಳು ನಿರಂತರ ತಡೆಯೊಡ್ಡುತ್ತಿವೆ. ಮತ್ತು  ಸರ್ಕಾರಗಳ ಬಗಲಮುಳ್ಳುಗಳಾಗಿ ಬಿಟ್ಟಿವೆ. ಹೀಗಾಗಿಯೇ ಗೋವಾದ ಹಾಲಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ತಮ್ಮ ಸರ್ಕಾರದ ವಿರುದ್ಧ ಇದ್ದ ಎಲ್ಲಾ ಪರಿಸರ ಸಂಬಂಧೀ ದಾವೆಗಳನ್ನು ಪುಣೆಯಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪಶ್ಚಿಮ ಪೀಠದಿಂದ ದೆಹಲಿ ಪೀಠಕ್ಕೆ ವರ್ಗಾಯಿಸಲು ವಿಫಲ ಪ್ರಯತ್ನಗಳನ್ನು ನಡೆಸಿದ್ದು  ಆಶ್ಚರ್ಯಕರವಾಗಿಯೇನೂ ಕಾಣುವುದಿಲ್ಲ. ಆದರೆ ವರ್ಗಾವಣೆಗೆ ಅದು ನೀಡಿದ ಅತ್ಯಂತ ಪ್ರಮುಖ ಕಾರಣ ಮಾತ್ರ ಅತ್ಯಂತ ಹಾಸ್ಯಾಸ್ಪದವಾಗಿತ್ತು. ಅದೇನೆಂದರೆ  ಗೋವಾದಿಂದ ಸಾರಿಗೆ ಸೌಕರ್ಯಗಳು ಹತ್ತಿರದ ಪುಣೆಗಿಂತ ದೂರದ ದೆಹಲಿಗೆ ಅನುಕೂಲಕಾರಿಯಾಗಿಲ್ಲವೆಂಬುದು. ಇದಕ್ಕಿಂತ ಆಶ್ಚರ್ಯಕರ ಸಂಗತಿಯೆಂದರೆ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಇಲಾಖೆಯು ಗೋವಾ ಸರ್ಕಾರದ ಮನವಿಗೆ ಅತ್ಯಂತ ಉತ್ಸಾಹದಿಂದ ಸ್ಪಂದಿಸಿದ್ದು ಮಾತ್ರವಲ್ಲದೆ, ಪ್ರಕರಣಗಳಲ್ಲಿ ಪ್ರಮುಖ ಸಂತ್ರಸ್ತರಾಗಿರುವ ಗೋವಾದ ಜನತೆಯೊಂದಿಗೆ ಯಾವುದೇ ಸಮಾಲೋಚನೆಯನ್ನೂ ಸಹಾ ಮಾಡದೆ ಕೇವಲ ಎರಡು ತಿಂಗಳ ಅವಧಿಯೊಳಗೆ ಗೋವಾ ಸರ್ಕಾರದ ಮನವಿಯನ್ನು ಪುರಸ್ಕರಿಸಿ ಪ್ರಕರಣಗಳನ್ನು ದೆಹಲಿ ಪೀಠಕ್ಕೆ ವರ್ಗಾಯಿಸಲು ಸಮ್ಮತಿ ನೀಡಿಬಿಟ್ಟಿತು.

 ಆದರೆ ಬಾಂಬೆ ಉಚ್ಚ ನ್ಯಾಯಾಲಯದ ಪಣಜಿ ಪೀಠವು ಕೇಂದ್ರದ ಸೂಚನೆಯನ್ನು ವಿವೇಚನಾ ರಹಿತ ವೆಂದು ಬಣ್ಣಿಸಿ ರದ್ದುಮಾಡಿದೆಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೂತನ್ ಸರ್ದೇಸಾಯಿಯವರು ನೀಡಿರುವ ೪೭ ಪುಟದ ಆದೇಶವು ಒಂದು ಸರಳ ವಿಷಯದ ಬಗ್ಗೆಯೇ ಆಗಿದ್ದರೂ ದೇಶದ ನ್ಯಾಯದಾನದ ವ್ಯವಸ್ಥೆಯ ಸ್ಥಿತಿಗತಿಗಳ ಮೇಲೆ ವಿಸ್ತೃತ ಪರಿಣಾಮ ಬೀರುವಂಥ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನ್ಯಾಯವನ್ನು ದಕ್ಕಿಸಿಕೊಳ್ಳುವ ಅವಕಾಶದ ಹಕ್ಕು ದೇಶದ ಸಂವಿಧಾನದ ೨೧ನೇ ಕಲಮಿನ ಪ್ರಕಾರ ನೀಡಲಾಗಿರುವ ಜೀವಿಸುವ ಮತ್ತು ವ್ಯಕ್ತಿಗತ ಸ್ವಾತಂತ್ರ್ಯದ ಹಕ್ಕಿನ ಭಾಗವೇ ಆಗಿದೆಯೆಂದು ತಮ್ಮ  ತೀರ್ಮಾನದಲ್ಲಿ ನ್ಯಾಯಮೂರ್ತಿಗಳು ಅತ್ಯಂತ ಮುಖ್ಯವಾಗಿ ಅಭಿಪ್ರಾಯಪಟ್ಟಿದ್ದಾರೆ

 ಹೀಗಾಗಿ ನ್ಯಾಯವನ್ನು ಪಡೆದುಕೊಳ್ಳುವ ಪ್ರಕ್ರಿಯೆಗೆ ಅಡ್ಡಿಯಾಗುವ ಎಲ್ಲಾ ಕ್ರಮಗಳು ಮೂಲಭೂತ ಹಕ್ಕಿನ ನಿರಾಕರಣೆಯೇ ಆಗುತ್ತದೆ. ಅಲ್ಲದೆ :  ನ್ಯಾಯಾಂಗವು ದೇಶದ ವಿವಿಧೆಡೆ ನ್ಯಾಯಪೀಠಗಳ ಶಾಖೆಗಳನ್ನು ಪ್ರಾರಂಭಿಸಿ ನ್ಯಾಯದಾನವನ್ನು ಇನ್ನಷ್ಟು ಸಾರ್ವಜನಿಕರಿಗೆ ಹತ್ತಿರ ತೆಗೆದುಕೊಂಡುಹೋಗುವ ಕ್ರಮಗಳನ್ನು ಅನುಸರಿಸುತ್ತಿರುವ ಹೊತ್ತಿನಲ್ಲಿ ಸರ್ಕಾರ್ವೊಂದು ತನ್ನ ಅನಾನುಕೂಲತೆ ಅಥವಾ ಅನುಕೂಲತೆಗಳನ್ನು ಮುಂದುಮಾಡಿ ದಾವೆಯನ್ನು ಸಾವಿರಾರು ಕಿಲೋಮೀಟರ್ ದೂರ ಇರುವ ಪೀಠಕ್ಕೆ ಒಯ್ಯುವ ನಿರ್ಧಾರ ತೆಗೆದುಕೊಂಡಿರುವುದು ಮತ್ತು ಅದನ್ನು ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಮಾಡುತ್ತಿರುವುದು ನಿಜಕ್ಕೂ ಒಂದು ಅಸಾಧಾರಣವಾದ ನಡೆಯಾಗಿದೆ. ಖಂಡಿತಾ ಇದರ ಹಿಂದೆ ಯಾವುದೇ ಸಾರ್ವಜನಿಕ ಹಿತಾಸಕ್ತಿಯಡಗಿಲ್ಲ ಎಂದೂ ಸಹ ನ್ಯಾಯಾಲಯವು ಸ್ಪಷ್ಟವಾದ ಅಭಿಪ್ರಾಯ ನೀಡಿದೆ.

  ಇಷ್ಟಾಗಿಯೂ, ರಾಜ್ಯದಲ್ಲಿ ದಾಖಲಾದ ಎಲ್ಲಾ ಪರಿಸರ ಸಂಬಂಧೀ ಪ್ರಕರಣಗಳನ್ನು ದೆಹಲಿ ಪೀಠಕ್ಕೆ ವರ್ಗಾಯಿಸಲು ನಡೆದ ಪ್ರಯತ್ನಗಳು  ರಾಷ್ಟ್ರೀಯ ಹಸಿರು ಪೀಠ (ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್- ಎನ್ಜಿಟಿ) ಸ್ವರೂಪಕ್ಕೆ ವ್ಯತಿರಿಕ್ತವಾಗಿದೆ೨೦೧೧ರಲ್ಲಿ ಪರಿಸರ ನ್ಯಾಯಪೀಠವನ್ನು ಸ್ಥಾಪಿಸಿದಾಗ ಫಿರ್ಯಾದುದಾರರು ನ್ಯಾಯವನ್ನು ಅರಸುತ್ತಾ ದೂರದ ದೆಹಲಿಯತನಕ ಬರುವುದನ್ನು ತಡೆಯಲೆಂದೇ ಪೀಠದ ಐದು ಪ್ರಾದೇಶಿಕ ಶಾಖೆಗಳನ್ನು ಸ್ಥಾಪಿಸಲಾಯಿತು. ದೇಶದ ವಿವಿಧ ನ್ಯಾಯಾಲಯಗಳಲ್ಲಿ ಹೆಚ್ಚೆಚ್ಚಾಗಿ ದಾಖಲಾಗುತ್ತಿದ್ದ ಸಿವಿಲ್ ದಾವೆಗಳು ಮತ್ತು ಫಿರ್ಯಾದುಗಳೆಲ್ಲಾ ಸಾರಾಂಶದಲ್ಲಿ ಪರಿಸರ ಸಂಬಂಧೀ ಪ್ರಶ್ನೆಗಳೇ ಆಗಿರುವುದನ್ನು ಗಮನಿಸಿ ಎನ್ಜಿಟಿ- ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು ಸ್ಥಾಪಿಸಲಾಯಿತು. ವಾಸ್ತವವಾಗಿ ಪ್ರಾದೇಶಿಕ ಪೀಠಗಳನ್ನು ಮಾತ್ರವಲ್ಲದೆಅಧಿಕ ಸಂಖ್ಯೆಯಲ್ಲಿ ಪರಿಸರ ಸಂಬಂಧೀ ಪ್ರಕರಣಗಳನ್ನು ಹುಟ್ಟುಹಾಕುತ್ತಿರುವ ಗೋವಾದಂಥ ರಾಜ್ಯಗಳಲ್ಲಿವರ್ತುಲ ಪೀಠಗಳನ್ನು ಸ್ಥಾಪಿಸಬೇಕೆಂಬ ವಾದಗಳು ಗಟ್ಟಿಯಾಗಿ ಕೇಳಿಬರುತ್ತಿದೆ. ಉದಾಹರಣೆಗೆ ಹೇಳುವುದಾದರೆ ಹಸಿರುಪೀಠದ ಪಶ್ಚಿಮ ಪ್ರದೇಶಿಕ ಶಾಖೆಯಲ್ಲಿ ಗೋವಾ ರಾಜ್ಯವೊಂದರಿಂದಲೇ ೧೪೬ ಪ್ರಕರಣಗಳು ದಾಖಲಾಗಿದ್ದರೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಂದ ಒಟ್ಟು ಸೇರಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ೩೪೦.

 ಆದರೆ ಸರ್ಕಾರವು ಫಿರ್ಯಾದುದಾರರಿಗೆ ಅನುಕೂಲವಾಗುವಂಥ ಕ್ರಮಗಳನ್ನು ತೆಗೆದುಕೊಳ್ಳುವ ಬದಲಿಗೆ, ಪ್ರಾಯಶಃ ಉದ್ದೇಶಪೂರ್ವಕವಾಗಿ, ಹೆಚ್ಚು ಅನಾನುಕೂಲತೆಗಳನ್ನು ಸೃಷ್ಟಿಸುವಂಥ ಕ್ರಮಗಳನ್ನು ಆಯ್ಕೆಮಾಡಿಕೊಂಡಿದೆ. ಗೋವಾದ ಅನನ್ಯ ಮತ್ತು ಶಿಥಿಲಗೊಂಡಿರುವ ಪರಿಸರಕ್ಕೆ ಧಕ್ಕೆ ತರಬಹುದಾದ ಸರ್ಕಾರಿ ನೀತಿ ಅಥವಾ ಕ್ರಮಗಳ ಬಗ್ಗೆ ಸದಾ ಜಾಗೃತರಾಗಿರುವ ಹಲವಾರು ಕ್ರಿಯಾಶೀಲ ಪರಿಸರವಾದಿ ಗುಂಪುಗಳಿವೆ. ಹಾಗಿದ್ದರೂ ಪರಿಕ್ಕರ್ ಸರ್ಕಾರ ಪರಿಸರ ಸಂಬಂಧೀ ದಾವೆಗಳಿಗೆ ಅಡ್ಡಿಗಳನ್ನು ಸೃಷ್ಟಿ ಮಾಡುವಂಥ ಕ್ರಮಗಳಿಗೆ ಮುಂದಾಗಿದ್ದು ಆಶ್ಚರ್ಯಕರವಾಗಿದೆ.

 ನ್ಯಾಯಮೂರ್ತಿಗಳಾದ ಪಟೇಲ್ ಮತ್ತು ಸರ್ದೇಸಾಯಿ ಅವರುಗಳು ಗುರುತಿಸಿರುವಂತೆ ಗೋವಾದ ಅತಿ ದೊಡ್ಡ ಆಸ್ತಿಯೆಂದರೆ ಅದರ ಪರಿಸರ ಮತ್ತು ಪ್ರಕೃತಿ. ಗೋವಾ ರಾಜ್ಯದ ಒಟ್ಟು ಜನಸಂಖ್ಯೆ ಕೇವಲ ೧೪ ಲಕ್ಷ ಮಾತ್ರವೇ ಇದ್ದರೂ ಅದು ಪ್ರಾಯಶಃ ದೇಶದಲ್ಲೇ ಅತಿಹೆಚ್ಚು ಪರಿಸರ ಕಾಳಜಿ ಹೊಂದಿರುವ ರಾಜ್ಯವಾಗಿದೆ. ಅಲ್ಲಿರುವ ಹೆಚ್ಚಿನ ಸಾಕ್ಷರತೆ ಮತ್ತು ಕ್ರಿಯಾಶೀಲ ಸ್ಥಳೀಯ ಮತ್ತು ತಳಮಟ್ಟದ  ಆಡಳಿತ ವ್ಯವಸ್ಥೆಗಳ ಕಾರಣದಿಂದಾಗಿ ಪರಿಸರವನ್ನು ಉಳಿಸಿಕೊಳ್ಳುವ ಹೋರಾಟಗಳು ಗ್ರಾಮಮಟ್ಟದಿಂದಲೇ ದಿನನಿತ್ಯ ನಡೆಯುತ್ತಿರುತ್ತದೆಗ್ರಾಮಪಂಚಾಯತಿಗಳು ಸರ್ಕಾರವು ಜಾರಿಗೆ ತರುವ ಹಲವಾರು ಯೋಜನೆಗಳನ್ನು ಪರಿಸರದ ದೃಷ್ಟಿಯಿಂದ ಕ್ರಿಯಾಶಿಲವಾಗಿ ಪ್ರಶ್ನಿಸುತ್ತವೆ. ಮತ್ತು ಸರ್ಕಾರಗಳು ಅಲಕ್ಷ್ಯ ಮಾಡಿರುವ ಹಲವು ಆಂಶಗಳನ್ನು ಮುಂದಕ್ಕೆ ತರುತ್ತವೆ. ಸರ್ಕಾರದೊಂದಿಗೆ ಎಲ್ಲಾ ಬಗೆಯ ವಕೀಲಿಕೆ ಮತ್ತು ಸಂವಾದಗಳು ವಿಫಲವಾದಾಗ ಮಾತ್ರ ನಾಗರಿಕರು ನ್ಯಾಯಾಲಯದ ಮೊರೆ ಹೋಗುತ್ತಾರೆ. ಹೀಗಾಗಿ ಪರಿಸರ ಸಂಬಂಧೀ ಪ್ರಶ್ನೆಗಳ ಇತ್ಯರ್ಥಕ್ಕಾಗಿಯೇ ಹಸಿರುಪೀಠದ ರಚನೆ ಮತ್ತು ಅದರಿಂದ ನ್ಯಾಯದಾನ ಪಡೆದುಕೊಳ್ಳಲು ಸುಲಭವಾಗುವಂತೆ ಪ್ರಾದೇಶಿಕ  ಶಾಖೆಗಳ ಸ್ಥಾಪನೆಯಾಗಿರುವುದು ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ.

ನ್ಯಾಯವನ್ನು ಪಡೆದುಕೊಳ್ಳುವ ಅವಕಾಶದ ಹಕ್ಕು ಕೇವಲ ನ್ಯಾಯಾಲಯಗಳು ಎಲ್ಲಿ ಭೌತಿಕವಾಗಿ ಸ್ಥಾಪನೆಗೊಂಡಿರುತ್ತದೆ ಎಂಬ ವಿಷಯಕ್ಕೆ ಮಾತ್ರ ಸೀಮಿತವಾಗಿರುವ ವಿಷಯವಲ್ಲ. ಅದು ನ್ಯಾಯನೀಡಿಕೆಯ ವ್ಯವಸ್ಥೆಗೆ ಸಂಬಂಧಪಟ್ಟಿರುವ ವಿಷಯವಾಗಿದೆ. ನ್ಯಾಯಾಲಯಗಳು ಸನಿಹದಲ್ಲೇ ಇದ್ದರೂ ಸುದೀರ್ಘ ವಿಚಾರಣೆಯ ಪ್ರಕ್ರಿಯೆಗಳು, ಹಣಕಾಸು ವೆಚ್ಚ, ವಿಳಂಬ ಇತ್ಯಾದಿಗಳಿಂದಾಗಿ ನ್ಯಾಯವು ಮಾತ್ರ  ಸಾಮಾನ್ಯ ಜನರಿಗೆ ಎಟುಕುವುದೇ ಕಷ್ಟವಾಗಿರುತ್ತದೆ. ನ್ಯಾಯವನ್ನು ಪಡೆದುಕೊಳ್ಳುವ ಅವಕಾಶದ ಹಕ್ಕನ್ನು ಮತ್ತೊಮ್ಮೆ ಪ್ರತಿಪಾದಿಸುವ ಮೂಲಕ ನ್ಯಾಯಾದೇಶವು ದೇಶದಲ್ಲಿ ನ್ಯಾಯನೀಡಿಕೆಯ ವ್ಯವಸ್ಥೆಯಲ್ಲಿರುವ ದೋಷಗಳನ್ನು ತುರ್ತಾಗಿ ಸರಿಪಡಿಸುವ ಅಗತ್ಯದ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ. ತಮ್ಮ ಆದೇಶದಲ್ಲಿ ನ್ಯಾಯಾಧೀಶರು ಜೇಮ್ಸ್ ಬಾಲ್ಡ್ವಿನ್ ಅವರ ದಿ ಪ್ರೈಸ್ ಆಪ್ ದಿ ಟಿಕೆಟ್ ಪುಸ್ತಕದಲ್ಲಿರುವ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಅದು ಹೀಗಿದೆ:

 ಒಂದು ದೇಶದಲ್ಲಿ ನ್ಯಾಯನೀಡಿಕೆಯ ವ್ಯವಸ್ಥೆಯು ಹೇಗಿದೆ ಎಂದು ಅರ್ಥಮಾಡಿಕೊಳ್ಳಲು ದೇಶದ ಪೊಲೀಸರನ್ನಾಗಲೀ, ನ್ಯಾಯಾಧೀಶರನ್ನಾಗಲೀ, ಸುರಕ್ಷಿತ ವಲಯದಲ್ಲಿರುವ ಮಧ್ಯಮವರ್ಗದವರನ್ನಾಗಲೀ ಕೇಳಬಾರದು. ಬದಲಿಗೆ ಯಾರಿಗೆ ಕಾನೂನಿನ ಮತ್ತು ನ್ಯಾಯನೀಡಿಕೆಯ ಅತಿ ಹೆಚ್ಚು ಅಗತ್ಯವಿದೆಯೋ ಅಂಥ ಅರಕ್ಷಿತ ಜನರ ಬಳಿ ಹೋಗಿ ದೇಶದ ನ್ಯಾಯನೀಡಿಕೆಯ ವ್ಯವಸ್ಥೆಯ ಬಗ್ಗೆ ಅವರ ಅನುಭವದ ಕಥನವನ್ನು ಕೇಳಿಸಿಕೊಳ್ಳಬೇಕು.

ಸಂದೇಶವು ರಕ್ಷಣೆಯಿಲ್ಲದ ಜನರನ್ನು ರಕ್ಷಿಸುವಲ್ಲಿ ಪದೇಪದೇ ವಿಫಲವಾಗುವಂಥ ಕಾನೂನುಗಳಿರುವ ಭಾರತಕ್ಕೆ ಹೇಳಿಮಾಡಿಸಿದಂತಿದೆ
ಕೃಪೆ: Economic and Political Weekly, Oct 28, 2017. Vol. 52. No. 42-43

                                                                













ಕಾಮೆಂಟ್‌ಗಳಿಲ್ಲ: