ಗುರುವಾರ, ನವೆಂಬರ್ 23, 2017

ಸರ್ವೋಚ್ಚ ನ್ಯಾಯಾಲಯ ಸರ್ವೋಚ್ಚತನವನ್ನು ಉಳಿಸಿಕೊಂಡಿದೆಯೇ?


   ಅನುಶಿವಸುಂದರ್ 
Image result for suprim court delhi
ನ್ಯಾಯಾಂಗವು ದುರ್ಬಲಗೊಳ್ಳುವುದು ಸಾಂವಿಧಾನಿಕ ಪ್ರಜಾತಂತ್ರಕ್ಕೆ ಅಪಾಯಕಾರಿ.

ಒಂದು ನ್ಯಾಯಾಂಗವು ಯಾವುದೇ ಭೀತಿ ಅಥವಾ ಅಮಿಷಗಳ ಒತ್ತಾಸೆಯಿಲ್ಲದಿದ್ದರೂ ಜನಮಾನಸದಲ್ಲಿ ತಾನು ಸಿವಿಲ್, ಕ್ರಿಮಿನಲ್ ಅಥವಾ ಸಂವಿಧಾನಾತ್ಮಕ ತಗಾದೆಗಳನ್ನು ಬಗೆಹರಿಸುವ ಒಂದು ತಟಸ್ಥ, ಸ್ವತಂತ್ರ ಮತ್ತು ನಿಷ್ಪಕ್ಷಪಾತಿ ತೀರ್ಪುಗಾರನೆಂದು ರೂಪಿತವಾಗಿರುವ ಗ್ರಹಿಕೆಯನ್ನೇ ತನ್ನ ಕಾರ್ಯನಿರ್ವಹಣೆಗೆ ಆಧರಿಸಿರುತ್ತದೆ. ಅದು ತನ್ನ ದೈನಂದಿನ ವ್ಯವಹಾರವನ್ನು ನಿರ್ವಹಿಸುವ ನಡಾವಳಿಯ ಮೂಲಕವೇ ತನ್ನ ಬಗ್ಗೆ ಜನರ ವಿಶ್ವಾಸವು ಮತ್ತೆ ಮತ್ತೆ ಧೃಢೀಕರಣಗೊಳ್ಳುವಂತೆ ಮಾಡುತ್ತದೆ. ಮತ್ತು ಮೂಲಕ ಜನರ ವಿಶ್ವಾಸವನ್ನು ಗೆದ್ದುಕೊಳ್ಳುತ್ತದೆ. ನ್ಯಾಯಲಯದ ಘನತೆಯು ನಿಂತಿರುವುದು ಅದರ ಬಳಿ ಇರುವ  ನ್ಯಾಯಾಂಗ ನಿಂದನೆಯನ್ನು ನಿಗ್ರಹಿಸುವ ಅಧಿಕಾರವನ್ನು ಬಳಸುವುದರ ಮೇಲೋ ಅಥವಾ ಅದರ ಮೂಲಭೂತ ಸೌಕರ್ಯಗಳ ಮೇಲೋ ಅಲ್ಲ. ಬದಲಿಗೆ ಹೊರಗಿನ ಸವಾಲುಗಳ ಎದುರಿನಲ್ಲಿ ನ್ಯಾಯಾಂಗದ ಘನತೆಯನ್ನು ಉಳಿಸುವಲ್ಲಿ ನ್ಯಾಯಾಧೀಶರು ಮತ್ತು ವಕೀಲರು ಹೇಗೆ ವ್ಯವಹರಿಸುತ್ತಾರೆ ಎಂಬುದನ್ನು ಆಧರಿಸಿ ನ್ಯಾಯಾಂಗದ ಘನತೆಯು ಉಳಿಯುತ್ತದೆ. ಇತರ ನಾಗರಿಕ ಅಧಿಕಾರಿಗಳು ಅಥವಾ ಚುನಾಯಿತ ಪ್ರತಿನಿಧಿಗಳಿಗಿಂತ ನ್ಯಾಯಾಂಗಕ್ಕಿರುವ ಗುಣಲಕ್ಷಣಗಳಿಂದಾಗಿಯೇ ನ್ಯಾಯಾಧೀಶರು ತಮ್ಮ ವ್ಯವಹಾರದಲ್ಲಿ ಎತ್ತರದ ಗುಣಮಟ್ಟವನ್ನು ಕಾದುಕೊಳ್ಳುತ್ತಾರೆ. ಯಾವಾಗ ಅವರು ಹಾಗೆ ನಡೆದುಕೊಳ್ಳಲು ವಿಫಲರಾಗುತ್ತಾರೋ ಆಗ ನ್ಯಾಯಾಂಗವು ಒಂದು ಸಂಸ್ಥೆಯಾಗಿ ಸಂಕಷ್ಟಕ್ಕೆ ಗುರಿಯಾಗುತ್ತದೆ.

ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ, ಹಾಗೂ ಇನ್ನಿತರ ಕೆಲವು ನ್ಯಾಯಾಧೀಶರ ಮತ್ತು ಕೆಲವು ವಕೀಲರ ಇತ್ತೀಚಿನ ಕ್ರಮಗಳು ಹಿಂದೆಂದೂ ಇಲ್ಲದಂಥ ರೀತಿಯಲ್ಲಿ ಭಾರತದ ಸರ್ವೋಚ್ಚ ನ್ಯಾಯಲಯದ ಘನತೆಯನ್ನು ಮತ್ತು ಅದರ ವಿಶ್ವಾಸಾರ್ಹತೆಯನ್ನು ತಳಮಟ್ಟಕ್ಕಿಳಿಸಿದೆ. ಕೇವಲ ಒಂದು ವಾರದಷ್ಟು ಸಣ್ಣ ಅವಧಿಯಲ್ಲಿ ಏನೆಲ್ಲಾ ನಡೆಯಿತು- ನ್ಯಾಯಾಂಗದ ಉನ್ನತ ಮಟ್ಟದಲ್ಲಿ ಇರಬಹುದಾದ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆಗಳು ಹುಟ್ಟಿದವು, ನ್ಯಾಯಾಧೀಶರು ನ್ಯಾಯಿಕ ಶಿಸ್ತನ್ನು ಉಲ್ಲಂಘಿಸಿದರು, ಮುಖ್ಯ ನ್ಯಾಯಾಧೀಶರಂತೂ ತಾವುಗಳು ಒಳಗೊಂಡಿರುವ ಪ್ರಕರಣಗಳಲ್ಲಿ ತಾವೇ ನ್ಯಾಯಾಧೀಶರಾಗಬಾರದೆಂಬ ತತ್ವವನ್ನೇ ಅಣಕಮಾಡಿಬಿಟ್ಟರು, ನ್ಯಾಯಾಧೀಶರು ಉತ್ತರದಾಯಿಗಳಿರಬೇಕೆಂದು ಪ್ರತಿಪಾದಿಸುತ್ತಿದ್ದವರನ್ನು ಕೆಲವು ವಕೀಲರು ಹೆದರಿ-ಬೆದರಿಸಿದರು ಮತ್ತು ಅಂತಿಮವಾಗಿ ವಿಷಯಕ್ಕೆ ಕೊನೆಹಾಡುವ ಹೆಸರಿನಲ್ಲಿ ತನಿಖೆಯ ಕ್ರಮದಲ್ಲಿ ಮಧ್ಯಪ್ರವೇಶ ಮಾಡುವ ಅತ್ಯಂತ ಅಗೌರವಯುತವಾದ ಆದೇಶವನ್ನು ನೀಡಲಾಯಿತು. ಹೀಗಾಗಿ ಈಗ ದೇಶದ ಸರ್ವೋಚ್ಚ ನ್ಯಾಯಾಲಯವು ತನ್ನ ಘನತೆಯನ್ನು ಕಳೆದುಕೊಂಡಿತೆಂಬುದನ್ನು ಬಿಟ್ಟು ಬೇರೇನನ್ನೂ ಹೇಳಲು ಸಾಧ್ಯವಿಲ್ಲ.
Image result for suprim court delhi

ನವಂಬರ್ ೧೪ರಂದು ನ್ಯಾಯಲಯವು ನೀಡಿದ ಆದೇಶವು ಏನು ಇಂಗಿತ ವ್ಯಕ್ತಪಡಿಸುತ್ತದೆಯೋ ಅದಕ್ಕೆ  ವ್ಯತಿರಿಕ್ತವಾಗಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಭ್ರಷ್ಟಾಚಾರದ ಪ್ರಕರಣವನ್ನು ಆಲಿಸಿದ್ದ ಮುಖ್ಯ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಒಳಗೊಂಡಿದ್ದ ಪೀಠದ ಪ್ರಾಮಾಣಿಕತೆಯ ಬಗ್ಗೆ ಹೆಚ್ಚು ಸಂದೇಹಗಳನ್ನೇ ಹುಟ್ಟುಹಾಕುತ್ತದೆ. ಸಿಬಿಐ ಇದರ ಬಗ್ಗೆ ನಡೆಸುತ್ತಿರುವ ತನಿಖೆ ಇನ್ನೂ ಮುಂದುವರೆದಿದೆ. ಆದರೆ ಕಳಪೆ ಮಟ್ಟದ ತನಿಖೆಯನ್ನೂ ಹಾಗೂ ಪಕ್ಷಪಾತಿ ತನಿಖೆಯನ್ನೂ ನಡೆಸುವುದರಲ್ಲಿ ಕುಖ್ಯಾತಿ ಪಡೆದಿರುವ ಇಂಥ ಒಂದು ಸಂಸ್ಥೆಯು ಪ್ರಕರಣದಲ್ಲಿ ನಿಜಕ್ಕೂ ಮಾಡಬೇಕಿರುವ ತನಿಖೆಯನ್ನು ಮಾಡುತ್ತದೆಯೇ ಎಂಬ ಪ್ರಶ್ನೆಯನ್ನು ಕೇಳುವುದರಲ್ಲಿ ಖಂಡಿತವಾಗಿಯೂ ಸಾರ್ವಜನಿಕ ಹಿತಾಸಕ್ತಿಯೇ ಇದೆ. ಪ್ರಕರಣದ ಬಗ್ಗೆ ಪ್ರಾರಂಭದಲ್ಲಿ ಅಹವಾಲನ್ನು ಸಲ್ಲಿಸಿದ್ದ ಕ್ಯಾಂಪೇನ್ ಫಾರ್ ಜುಡಿಷಿಯಲ್ ಅಕೌಂಟಬಲಿಟಿ- ಸಿಜೆಎ (ನ್ಯಾಯಾಂಗದ ಉತ್ತರದಾಯಿತ್ವಕ್ಕಾಗಿ ಅಭಿಯಾನ)ಯು ತನಿಖೆಯನ್ನು ನ್ಯಾಯಾಧೀಶರ ಮೇಲೆ ಒತ್ತಡ ತರಲು ಅಥವಾ ಅವರ ಮೇಲೆ ಕೆಟ್ಟ ಹೆಸರು ತರಲು ಬಳಸಿಕೊಳ್ಳುವ ಸಾಧ್ಯತೆ ಇದೆಯಾದ್ದರಿಂದ ನ್ಯಾಯಾಂಗದ ಉಸ್ತುವಾರಿಯಲ್ಲಿ ತನಿಖೆಯು ನಡೆಯಬೇಕೆಂದು ಕೋರಿದ್ದರು.

ಆದರೆ ನಂತರದಲ್ಲಿ ಇಟ್ಟ ಹಲವು ದೊಡ್ಡ ಹಾಗೂ ಸಣ್ಣ ತಪ್ಪು ಹೆಜ್ಜೆಗಳಿಂದಾಗಿ ಪ್ರಕರಣದ ಬೆಳವಣಿಗೆಗಳು ಅತ್ಯಂತ ಕೀಳುಮಟ್ಟಕ್ಕಿಳಿಯಿತು. ಮತ್ತು ಸುಪ್ರೀಂ ಕೋರ್ಟೆಂಬ ನ್ಯಾಯಾಂಗದ ಅತ್ಯುಚ್ಚ ಸಂಸ್ಥೆಗೆ ದುರಸ್ಥಿ ಮಾಡಲಾಗದ ಮತ್ತು ಶಾಶ್ವತವಾದ ಹಾನಿಯನ್ನುಂಟುಮಾಡಿತು. ವಕೀಲೆ ಕಾಮಿನಿ ಜೈಸ್ವಾಲ್ ಅವರು ದಾಖಲಿಸಿದ ಎರಡನೇ ಅಹವಾಲು ಎಷ್ಟೇ ಪ್ರಶ್ನಾರ್ಹವಾಗಿರಬಹುದು. ನ್ಯಾಯಮೂರ್ತಿ ಚಲಮೇಶ್ವರ್ ಅದನ್ನು ಸಂವಿಧಾನ ಪೀಠಕ್ಕೆ ರವಾನಿಸಿದ ತೀರ್ಪು ಎಷ್ಟೇ ಚರ್ಚಾರ್ಹವಾಗಿರಬಹುದು. ಆದರೆ ಮುಖ್ಯ ನ್ಯಾಯಾಧೀಶರು ತೆಗೆದುಕೊಂಡ  ಅತ್ಯಂತ ಪ್ರಶ್ನಾರ್ಹ ಕ್ರಮವು ಅವೆರಡನ್ನೂ ಹಿನ್ನೆಲೆಗೆ ಸರಿಸಿಬಿಟ್ಟಿತು. ಪರಿಣಾಮವಾಗಿ ನ್ಯಾಯಮೂರ್ತಿ ಮಿಶ್ರಾ ಅವರು ಸಹಜ ನ್ಯಾಯದ ಎಲಾ ಪ್ರಾಥಮಿಕ ತತ್ವಗಳನ್ನೂ ಉಲ್ಲಂಘಿಸಿ ನ್ಯಾಯಪೀಠಕ್ಕೆ ತನಗೆ ಬೇಕಾದವರನ್ನು ಆಯ್ಕೆ ಮಾಡುವ ಅಧಿಕಾರವನ್ನು ಚಲಾಯಿಸಿದ್ದಾರೆ. ನಂತರ ಅವರೇ ಆಯ್ಕೆ ಮಾಡಿದ ಪೀಠವು ನವಂಬರ್ ೧೪ರಂದು ನೀಡಿದ ಆದೇಶವು ಯಾವುದೇ ಕಾನೂನು ಅಥವಾ ನೈತಿಕತೆಯ ವಾಸನೆಯೂ ಇಲ್ಲದ ರೀತಿಯಲ್ಲಿ ಮುಖ್ಯ ನ್ಯಾಯಾಧೀಶರ ಎಲ್ಲಾ ಕ್ರಮಗಳಿಗೂ ಸಮ್ಮತಿಯ ಮುದ್ರೆಯೊತ್ತಿಬಿಟ್ಟಿತು. ಆದರೆ ಆದೇಶವು ಮುಖ್ಯ ನ್ಯಾಯಾಧೀಶರ ನಡೆಗಳ ಬಗ್ಗೆ ಇದ್ದ ಸಂದೇಹಗಳನ್ನು ನಿವಾರಿಸುವ ಬದಲಿಗೆ ಇನ್ನಷ್ಟು ಅಹಿತವಾದ ಪ್ರಶ್ನೆಗಳನ್ನೇ ಹುಟ್ಟುಹಾಕಿದೆ.

ಎಲ್ಲಾ ಬೆಳವಣಿಗೆಗಳು ನ್ಯಾಯಾಧೀಶರು ಮತ್ತು ವಕೀಲರ ನಡುವೆ, ನ್ಯಾಯಾಧೀಶರೊಳಗೊಳಗೆ ಮತ್ತು ವಕೀಲರ ನಡುವೆ ಆಳವಾದ ವಿಭಜನೆಯನ್ನು ಬೆಳಕಿಗೆ ತಂದಿದೆ. ವಿಭಜನೆಗಳು ಇದ್ದಕ್ಕಿದ್ದಂತೆ ಉಧ್ಬವಿಸಿರುವ ವಿಭಜನೆಗಳಲ್ಲ. ಬದಲಿಗೆ ಕೆಲವು ಕಾಲದಿಂದಲೂ ಅಂತರಗಳು ಬೆಳೆಯುತ್ತಿದ್ದವು. ಒಂದೆಡೆ ಉನ್ನತ ನ್ಯಾಯಾಂಗ ಸಂಸ್ಥೆಯು ತನ್ನ ಅಧಿಕಾರ ಮತ್ತು ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದರೂ ತನ್ನನ್ನು ಮಾತ್ರ ಹೆಚ್ಚಿನ ಪರಿಶೀಲನೆ ಮತ್ತು ಉತ್ತರದಾಯಿತ್ವಗಳಿಗೆ ತೆರೆದುಕೊಳ್ಳದಿದ್ದರಿಂದ ಉಂಟಾಗುತ್ತಿದ್ದ ಅಸಮಾಧಾನಗಳು ಒಂದಲ್ಲ ಒಂದು ಬಾರಿ ಸ್ಪೋಟಗೊಳ್ಳಲೇ ಬೇಕಿತ್ತು. ಆದರೆ ಅದು ಈಗ ಹೀಗೆ ಅತ್ಯಂತ ಕೀಳಾದ ಸ್ವರೂಪದಲ್ಲಿ ಹೊರಬಿದ್ದಿದೆ. ಈಗ ಸಂಬಂಧಪಟ್ಟ ಎಲ್ಲರ ನಡುವೆಯೂ ಒಂದು ಆಳವಾದ ಅವಿಶ್ವಾಸವೂ ಮನೆಮಾಡಿದ್ದು ಅದರಿಂದಾಗಿ ಸಂಸ್ಥೆಯು ನಷ್ಟವನ್ನನುಭವಿಸುತ್ತಿದೆ.

ಪ್ರಕರಣಕ್ಕೆ ತೇಪೆ ಹಚ್ಚಿ ಮುಖ್ಯ ನ್ಯಾಯಮೂರ್ತಿಗೆ ಕ್ಲೀನ್ಚಿಟ್ ನೀಡಲು ನಡೆದ ಎಲ್ಲಾ ನಾಚಿಕೆಗೇಡಿನ ಪ್ರಯತ್ನಗಳನ್ನು ಗಮನಿಸಿದರೆ ಯಾವುದೇ ನೈಜ ಆತ್ಮಾವಲೋಕನ ನಡೆಯುವ ಸಾಧ್ಯತೆಯು ಕಂಡುಬರುತ್ತಿಲ್ಲ. ನ್ಯಾಯಾಂಗದಲ್ಲಿರುವ ಭ್ರಷ್ಟಾಚಾರದ ಬಗ್ಗೆ ನಡೆಯುತ್ತಿದ್ದ ಗುಸುಗುಸುಗಳು ನಿಧಾನಕ್ಕೆ ದೊಡ್ಡ ಧ್ವನಿಯನ್ನು  ಪಡೆದುಕೊಳ್ಳುತ್ತಿವೆ. ಮತ್ತು ಪ್ರಶ್ನೆಗಳ ಆಳಕ್ಕೆ ಹೋಗಿ ಬಗೆಹರಿಸದೆ ಮುಚ್ಚಿಹಾಲು ನಡೆಯುತ್ತಿರುವ ಪ್ರಯತ್ನಗಳು ಸಂದರ್ಭವನ್ನು ಇನ್ನಷ್ಟು ಕೆಟ್ಟದ್ದಾಗಿಸುತ್ತದೆ. ಕಳೆದ ದಶಕವೊಂದರಲ್ಲೇ ಇಬ್ಬರು ನ್ಯಾಯಾಧೀಶರು ಅನುಮಾನದ ನೆರಳಲ್ಲಿ ವಾಗ್ದಂಡನೆಗೆ ಗುರಿಯಾಗಿ ರಾಜೀನಾಮೆ ನೀಡಬೇಕಾಯಿತು. ಮತ್ತೊಬ್ಬ ನ್ಯಾಯಾಧೀಶರ ಮೇಲೆ ಭ್ರಷ್ಟಾಚಾರದ ತನಿಖೆ ಇನ್ನೂ ನಡೆಯುತ್ತಿದೆ. ಇತ್ತೀಚೆಗೆ ದೆಹಲಿ ಉಚ್ಚ ನ್ಯಾಯಾಲಯದಿಂದ ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ನ್ಯಾಯಾಧೀಶರೊಬ್ಬರ ಮೇಲೂ ಭ್ರಷ್ಟಾಚಾರದ ಅನುಮಾನಗಳಿವೆ. ಏಕೆಂದರೆ ಕೆಳಹಂತದ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ ಅವರ ಮಗನನ್ನು ಅಧಿಕೃತ ಮೂಲಗಳಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದ್ದ ಆರೋಪದ ಮೇಲೆ ದೆಹಲಿ ಉಚ್ಚನ್ಯಾಯಾಲಯ ಹುದ್ದೆಯಿಂದ ಅವರನ್ನು ತೆಗೆದುಹಾಕಿತ್ತು. ಹೀಗಾಗಿ ಇವೆಲ್ಲವೂ ಕೆಲವು ಅಪರೂಪದ ಪ್ರಕರಣವಾಗಿರದೆ  ಒಂದು ಸಾಂಸ್ಥಿಕ ವೈಫಲ್ಯವನ್ನು ಸೂಚಿಸುತ್ತದೆ. ಆದರೆ ನ್ಯಾಯಾಂಗವು ತನ್ನಲ್ಲಿ ಕೊಳಕಿದೆ ಎಂಬುದನ್ನು ನಿರಾಕರಿಸುತ್ತಿರುವುದು ಮಾತ್ರವಲ್ಲದೆ ಸಂಸ್ಥೆಗೆ ಉತ್ತರದಾಯಿತ್ವ ತಂದುಕೊಡಲು ಹೊರಗಿನಿಂದ ನಡೆಯುವ ಪ್ರಯತ್ನಗಳಿಗೂ ತಡೆಯೊಡ್ಡುತ್ತಿದೆ.

ಬೆಳವಣಿಗೆಗಳು ಭಾರತದ ಸಾಂವಿಧಾನಿಕ ಪ್ರಜಾತಂತ್ರದ ಭವಿಷ್ಯದ ಬಗ್ಗೆ ಆತಂಕವನ್ನು ಹುಟ್ಟಿಸುತ್ತದೆ. ಸರ್ಕಾರದ ಇತರ ಅಂಗಸಂಸ್ಥೆಗಳು ಗೌರವಿಸದ ಮತ್ತು ಜನರ ವಿಶ್ವಾಸವನ್ನು ಪಡೆದಿರದ ನ್ಯಾಯಾಂಗವೊಂದು ಸಾಂವಿಧಾನಿಕ ಮೌಲ್ಯಗಳನ್ನು ಮತ್ತು ತತ್ವಗಳನ್ನು ಎತ್ತಿಹಿಡಿಯುತ್ತದೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತದ  ಸಂವಿಧಾನವನ್ನು ಜಾರಿ ಮಾಡುವಲ್ಲಿ, ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಉದ್ಭವವಾಗುವ ವ್ಯಾಜ್ಯಗಳನ್ನು ಬಗೆಹರಿಸುವ ಪ್ರಾಮಾಣಿಕ ಮಧ್ಯವರ್ತಿಯಾಗಿ, ಚುನಾವಣಾ ತಗಾದೆಗಳ ನಿಷ್ಪಕ್ಷಪಾತಿ ತೀರ್ಪುಗಾರನಾಗಿ ಮತ್ತು ಸಂವಿಧಾನವು ಕೊಡಮಾಡಿರುವ ನಾಗರಿಕ ಹಕ್ಕುಗಳ ರಕ್ಷಕನಾಗಿ ನ್ಯಾಯಾಂಗದ ಪಾತ್ರ ಅತ್ಯಂತ ಮೂಲಭೂತವಾದದ್ದಾಗಿದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತಂತ್ರೋಪಾಯಗಳಲ್ಲಿ ಮುಳುಗಿರುವ ನ್ಯಾಯಾಂಗವೊಂದು ಯಾವುದೇ ಜವಾಬ್ದಾರಿಯನ್ನು ಕನಿಷ್ಟ ಪರಿಣಾಮಕಾರಿಯಾಗಿಯೂ ನಿರ್ವಹಿಸುತ್ತದೆಂದು ನಿರೀಕ್ಷಿಸಲಾಗುವುದಿಲ್ಲ. ಭಾರತದ ಜನತೆ ಖಂಡಿತ ಇದಕ್ಕಿಂತ ಉತ್ತಮವಾದದ್ದನ್ನು ಹೊಂದಲು ಅರ್ಹರಾಗಿದ್ದಾರೆ.

    ಕೃಪೆEconomic and Political WeeklyNov 18, 2017. Vol. 52. No. 46
           (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: www.epw.in/translation)

ಕಾಮೆಂಟ್‌ಗಳಿಲ್ಲ: