ಗುರುವಾರ, ಡಿಸೆಂಬರ್ 20, 2012

ಡಿಸೆಂಬರ್ ೨೧ರ ಕುರಿತ ಮಿಥ್‌ಗಳು


-ಹರ್ಷಕುಮಾರ್ ಕುಗ್ವೆ
 
 
೨೦೧೨ರ ಡಿಸೆಂಬರ್ ೨೧ ರಂದು ಜಗತ್ತಿನ ಅಂತ್ಯವಾಗಲಿದೆ. ಭೂಗ್ರಹವು ಯಾವುದೋ ಒಂದು ರೀತಿಯಲ್ಲಿ ಭಾರೀ ಮಾರ್ಪಾಡಿಗೆ ಒಳಗಾಗಲಿದೆ. ಭೂಮಿಯ ಮೇಲಿನ ಬಹುಪಾಲು ಮನುಷ್ಯರು ನಾಶವಾಗಲಿದ್ದಾರೆ. ಭೂಖಂಡಗಳು ಪ್ರತ್ಯೇಕಗೊಳ್ಳಲಿವೆ, ಇಡೀ ಜಗತ್ತೇ ಅಲ್ಲೋಲ ಕಲ್ಲೋಲವಾಗುತ್ತದೆ. ಆ ದಿನವೇ ಡೂಮ್ಸ್ ಡೇ ೨೦೧೨. ಅದು ಭೂಮಂಡಲದ ಅಂತ್ಯದ ದಿನ..... ಈ ಬಗೆಯ ಊಹಾಪೋಹಗಳು ಈಗಾಗಲೇ ನಮ್ಮ ಇಡೀ ಜಗತ್ತಿನಾದ್ಯಂತ ವ್ಯಾಪಕವಾದ ಪ್ರಚಾರವನ್ನು ಪಡೆದುಕೊಂಡು ಬಿಟ್ಟಿವೆ. ಅದರ ಈ ಕುರಿತ ಸಾವಿರಾರು ಸಂಖ್ಯೆಯ ಅಂತರ್ಜಾಲ ತಾಣಗಳಿಂದ, ಟೀವಿ ಚಾನಲ್‌ಗಳ ಕಾರ್ಯಕ್ರಮಗಳ ಟಿಆರ್‌ಪಿ ಕಾರ್ಯಕ್ರಮಗಳಿಂದ, ಕೆಲವು ಧಾರ್ಮಿಕ ವ್ಯಕ್ತಿಗಳು ಬರೆದಿರುವ ಪುಸ್ತಕಗಳಿಂದ, ಹೀಗೆ ನಾನಾ ಮೂಲಗಳಿಂದ ಈ ತಥಾಕಥಿತ ಪ್ರಳಯದ ಕುರಿತ ವಿಷಯಗಳನ್ನು ಓದಿ, ಕೇಳಿ ಜನರು ತೀವ್ರ ಆತಂಕ, ಕುತೂಹಲಗಳಿಗೊಳಗಾಗಿದ್ದಾರೆ. ಬೆಂಗಳೂರಿನ ಹತ್ತಿರ ಚಿಕ್ಕಗುಬ್ಬಿಯಲ್ಲಿರುವ ಮಾನಸ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾಗಿರುವ ಕೃಷ್ಣಾನಂದ ಎಂಬ ಸ್ವಾಮಿ ೨೦೧೨ ನೇ ಇಸವಿಯಲ್ಲಿ ನಡೆಯಬಹುದಾದ ಘಟನೆಗಳನ್ನು ತಮ್ಮ ದಿವ್ಯದರ್ಶನದ ಸಹಾಯದಿಂದ, ೨೦೧೨-ಎಂಡ್ ಆರ್ ಬಿಗಿನಿಂಗ್ ಎಂಬ ಕೃತಿಯನ್ನು ಬರೆದಿದ್ದರು. ಉತ್ತರ ಕನ್ನಡ ಜಿಲ್ಲೆಯ ಜೋಯಿಡ ತಾಲ್ಲೂಕು, ಶಿವಪುರದ ಶ್ರೀ ಚೆನ್ನಬಸವಾನಂದ ಸ್ವಾಮೀಜಿ ಕಾಲಜ್ಞಾನ ನಿರ್ಣಯ ಕರ್ಮಕಾಂಡ ಅಂತ್ಯಕಾಲ ಎಂಬ ಡಿವಿಡಿಯನ್ನೂ ತಂದಿದ್ದರು.
 
ಜಗತ್ತು ಮುಳುಗಿ ಹೋಗುವ ಪ್ರಳಯದ ಭೀತಿಯನ್ನು ಹಲವಾರು ಪ್ರಳಯಾಂತಕರು ಹಿಂದಿನಿಂದಲೂ ಸೃಷ್ಟಿಸುತ್ತಲೇ ಬಂದಿದ್ದಾರೆ. ಈ ಹಿಂದೆ ೧೯೯೯ ರಲ್ಲಿಯೂ ಜನರು ಪ್ರಳಯದ ಭೀತಿಗೆ ಒಳಗಾಗಿದ್ದರು. ಅದೇ ರೀತಿ ಇದೀಗ ಡಿಸೆಂಬರ್ ೨೧, ೨೦೧೨ರಲ್ಲಿ ಜಗತ್ತು ಅಂತ್ಯವಾಗುತ್ತದೆ ಎನ್ನಲು ಹಲವಾರು ವೈಜ್ಞಾನಿಕ ಸಮರ್ಥನೆಗಳನ್ನು ಬೇರೆ ನೀಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಕ್ರಿ.ಶ.೨೫೦ರಿಂದ ಕ್ರಿ.ಶ.೯೦೦ ರ ಅವಧಿಯಲ್ಲಿ ರಚಿಸಲಾದ ಮಾಯಾ ನಾಗರೀಕತೆಯ ಜನರ ಕ್ಯಾಲೆಂಡರ್ ೨೧.೧೨.೨೦೧೨ಕ್ಕೆ ಕೊನೆಗೊಳ್ಳುತ್ತದೆ ಎಂಬುದು ಒಂದು. ಇದೇ ಹೊತ್ತಿಗೆ ಭೂಮಿಯು ಕ್ಷೀರ ಪಥದ ಕೇಂದ್ರದೊಳಕ್ಕೆ ಪ್ರವೇಶ ಪಡೆಯುತ್ತದೆಂದೂ, ಅದನ್ನನುಸರಿಸಿ ಭೂಮಿಯ ಮೆಲೆ ಹಲವಾರು ಪರಿವರ್ತನೆಗಳಾಗುತ್ತವೆ ಎಂದೂ ಹೇಳಲಾಗುತ್ತಿದೆ. ಇದರ ಜೊತೆಗೆ ಭೂಮಿಯ ಮೆಲೆ ಕ್ಷುದ್ರಗ್ರಹಗಳು ಅಪ್ಪಳಿಸುತ್ತವೆಂದೂ, ಭೂಮಿಯ ಧೃವಗಳು ಅದಲು ಬದಲಾಗುತ್ತವೆಂದೂ ಹೇಳಲಾಗುತ್ತಿದೆ. ಭೂಮಿಯ ಮೆಲೆ ರಹಸ್ಯ ಗ್ರಹವೊಂದು ಎರಗಲಿದೆ ಎಂದೂ ನಂಬಲಾಗುತ್ತಿದೆ. ಎಲ್ಲಾ ನಾಶವಾದ ಮೇಲೆ ಬದುಕುವ ಕೆಲವೇ ಸಜ್ಜನರು ಮಾತ್ರ ನಂತರದಲ್ಲಿ ಕೇವಲ ಬೆಳಕನ್ನು ಮಾತ್ರ ಸೇವಿಸಿ ಬದುಕುತ್ತಾರೆನ್ನುವ ಕಥೆಗಳನ್ನೂ ಹರಿಬಿಡಲಾಗುತ್ತದೆ. ಮೇಲೆ ತಿಳಿಸಿದ ಕರ್ನಾಟಕದ ಸ್ವಾಮಿಗಳು ಜನರು ಆಧ್ಯಾತ್ಮಿಕ ಚಿಂತನೆಗೆ ತೊಡಗಿಕೊಂಡಲ್ಲಿ ಮಾತ್ರ ಜನರು ಉಳಿದುಕೊಳ್ಳಬಹುದೆಂದು ಉಚಿತ ಸಲಹೆಗಳನ್ನೂ ನೀಡತೊಡಗಿದ್ದಾರೆ. ನುಡಿದಿದ್ದಾರೆ. ಪ್ರಳಯದ ಕುರಿತೇ ಕೆಲವಾರು ಹಾಲಿವುಡ್ ಸಿನಿಮಾಗಳೂ ಬಿಡುಗಡೆಯಾಗುತ್ತಿವೆ. ಪ್ರಳಯ ಅಥವಾ ಭೂಮಿಯ ಅಂತ್ಯದ ಕುರಿತ ಇಂತಹ ವಿಚಾರಗಳನ್ನು ಹಿಂದೆಮುಂದೆ ನೋಡದೆ ಒಪ್ಪಿಕೊಳ್ಳುವ ಅಥವಾ ತಳ್ಳಿ ಹಾಕುವ ಮುನ್ನ ಈ ಕುರಿತು ಪ್ರಚಲಿತದಲ್ಲಿರುವ ಕೆಲ ಊಹಾಪೋಹಗಳನ್ನು ಅಥವಾ ಮಿಥ್‌ಗಳನ್ನು ಪರಿಶೀಲಿಸೋಣ.
 
 
ಮಿಥ್೧ : ಮಾಯನ್ ಕ್ಯಾಲೆಂಡರ್ ಪ್ರಕಾರ ಜಗತ್ತು ಅಂತ್ಯಗೊಳ್ಳುತ್ತದೆ.
 
    ಅಮೆರಿಕ ಖಂಡದಲ್ಲಿ ಕ್ರಿಸ್ತಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಮಾಯಾನಾಗರೀಕತೆಯ ಜನರು ಆಕಾಶಕಾಯಗಳ ದೀರ್ಘಕಾಲ ಅಧ್ಯಯನದಿಂದ ಹಾಗೂ ಗಣಿತ ಲೆಕ್ಕಾಚಾರದ ಸಹಾಯಗಳಿಂದ ಕೆಲವು ರೀತಿಯ ಕ್ಯಾಲೆಂಡರ್‌ಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದರು. ಈ ಮಾಯಾ ಜನರು ಖಗೋಳ ಶಾಸ್ತ್ರದಲ್ಲಿ ಬಹಳ ಚಾಣಾಕ್ಷರಾಗಿದ್ದರು. ಆಕಾಶಕಾಯಗಳ ವೀಕ್ಷಣೆಗಾಗಿ ವೀಕ್ಷಣಾಲಯಗಳನ್ನೂ ನಿರ್ಮಿಸಿದ್ದರು. ನಮ್ಮಲ್ಲಿನ ಪಂಚಾಂಗದಂತೆ ಅವರ ಕ್ಯಾಲೆಂಡರ್ ಕೂಡಾ ಸಾಮಾಜಿಕ, ಆಡಳಿತಾತ್ಮಕ ಹಗೂ ಧಾರ್ಮಿಕ ಕಾರ್ಯಗಳಿಗಾಗಿ ರಚಿಸಲ್ಪಟ್ಟಿತ್ತು. ಮಾಯಾ ಜನರ ಮೊದಲ ಕ್ಯಾಲೆಂಡರ್‌ಗಳು ಲಘು ಅವಧಿಯವಾಗಿದ್ದವು. ಅವುಗಳಲ್ಲಿ ೨೬೦ ದಿನಗಳ ಝೋಕ್ ಹಾಗೂ ೩೬೦ ದಿನಗಳಹಾಬ್ ಮುಖ್ಯವಾದವು. ಕ್ರಮೇಣ ಈ ಎರಡೂ ಕ್ಯಾಲೆಂಡರ್‌ಗಳನ್ನೂ ಒಂದುಗೂಡಿಸಿದ್ದರು. ಅದು ೫೨ ಹಾಬ್‌ಗಳನ್ನೊಳಗೊಂಡಿತ್ತು.(ಸು. ೫೨ ವರ್ಷಗಳು.) ಅವರ ಕ್ಯಾಲೆಂಡರ್ ೧೩ ದಿನಗಳ ಒಂದು ಕಾಲಚಕ್ರ, ೨೦ ದಿನಗಳ ಒಂದು ಕಾಲಚಕ್ರ ಹಾಗೂ ರಾತ್ರಿವೇಳೆಯ ಶುಕ್ರಗ್ರಹದ ಗತಿಯನ್ನಾದರಿಸಿದ ಶುಕ್ರಚಕ್ರಗಳನ್ನು ಒಳಗೊಂಡಿರುತ್ತಿತ್ತು. ಈ ಕ್ಯಾಲೆಂಡರ್‌ನಲ್ಲಿ ೫೨ ವರ್ಷಗಳಿಗಿಂತ ಹೆಚ್ಚು ಕಾಲಾವಧಿಯನ್ನು ನೋಡಲಾಗುತ್ತಿರಲಿಲ್ಲ. ಇದಕ್ಕೆ ಮಾಯಾ ಜನರು ಒಂದು ಪರಿಹಾರವನ್ನು ಕಂಡುಕೊಂಡರು. ೨೦ನ್ನು ಮೂಲಘಟಕವನ್ನಾಗಿಟ್ಟುಕೊಂಡು ಅವರು ದೀರ್ಘಕಾಲದ ಒಂದು ಕ್ಯಾಲೆಂಡರ್‌ನ್ನು ಅಭಿವೃದ್ಧಿಪಡಿಸಿಕೊಂಡರು. ಇದನ್ನು ದೀರ್ಘಲೆಕ್ಕಾಚಾರದ ಕ್ಯಾಲೆಂಡರ್ ಎನ್ನಲಾಗುತ್ತದೆ. ಇದರ ಪ್ರಕಾರ ೩೬೦ ದಿನಗಳಿಗೆ ಒಂದು ಟುನ್ ಆಗುತ್ತದೆ. ೨೦ ಟುನ್‌ಗಳಿಗೆ ಒಂದು ಕಟೂನ್. ೨೦ ಕಟೂನ್‌ಗಳಿಗೆ ಒಂದು ಬಕ್ಟೂನ್. (ಸು.೪೦೦ ವರ್ಷಗಳು.) ಈ ಮಾಯನ್ ಕ್ಯಾಲೆಂಡರ್ ೦.೦.೦.೦.೦. ರಿಂದ ಶುರುವಾಗುತ್ತದೆ. ಒಂದೊಂದು ಸೊನ್ನೆಯೂ ೦-೧೯ರವರೆಗೆ ಬಂದು ನಂತರದ ದಿನವು ಹಿಂದಿನ ಸಂಖ್ಯೆಗೆ ಹೋಗುತ್ತದೆ. ಉದಾಹರಣೆಗೆ ಮಯನ್ನರ ಪ್ರಕಾರ ಮೊದಲನೆಯ ದಿನವು ೦.೦.೦.೦.೧. ೧೯ ನೆಯ ದಿನವು ೦.೦.೦.೦.೧೯. ಅದೇ ೨೦ನೆಯ ದಿನವು ೦.೦.೦.೧.೦ ಎಂದಾಗುತ್ತದೆ. ಹೀಗೆ ಇದು ಒಂದು ವರ್ಷವನ್ನು ೦.೦.೧.೦.೦, ೨೦ ವರ್ಷವನ್ನು ೦.೧.೦.೦.೦, ೪೦೦ ವರ್ಷ ಅಥವಾ ಒಂದು ಬಕ್ಟುನ್‌ನನ್ನು ೧.೦.೦.೦.೦ಎಂದು ಬರೆಯಲಾಗುತ್ತದೆ. ಮಾಯನ್ ಕ್ಯಾಲೆಂಡರ್ ಪ್ರಕಾರ ೨.೧೦.೧೨೦೭.೧ ಎಂದು ಬರೆದರೆ ಅದರ ಅರ್ಥ ೧೦೧೨ ವರ್ಷ. ೭ ತಿಂಗಳು ಒಂದು ದಿನವಾಗುತ್ತದೆ.
ಮಾಯನ್ನರು ತಮ್ಮ ಸಂಖ್ಯಾಶಾಸ್ತ್ರಗಳಲ್ಲಿ ೧೩ ಹಾಗೂ ೨೦ನ್ನು ಮೂಲ ಘಟಕಗಳನ್ನಾಗಿಟ್ಟುಕೊಳ್ಳುತ್ತಿದ್ದರು ೨೦೧೨ರ ಡಿಸೆಂಬರ್ ೨೧ಕ್ಕೆ ಅವರ ಕ್ಯಾಲೆಂಡರ್ ಪ್ರಕಾರ ೧೩ ಬಕ್ಟುನ್‌ಗಳು ಮುಗಿಯುತ್ತವೆ . ಆದಿನವನ್ನು ೧೩.೦.೦.೦.೦.ಗೆ ಎಂದು ಓದಬೇಕಾಗುತ್ತದೆ. ಮಾಯಾ ಜನರ ದೀರ್ಘ ಲೆಕ್ಕಾಚಾರದ ಕ್ಯಾಲೆಂಡರ್ ಆರಂಭವಾದ ಆಗಸ್ಟ್೧೧, ೩೧೧೪ಕ್ರಿ.ಪೂ.ದಿಂದ ೫೧೨೬ವರ್ಷಗಳಾಗುತ್ತದೆ.. ಇಲ್ಲಿ ಗಮನಿಸಬೆಕಾದುದು ಏನೆಂದರೆ ಈ ದಿನಕ್ಕೆ ಮಾಯಾ ಜನರು ಮಾಡಿಕೊಂಡಿದ್ದ ಕ್ಯಾಲೆಂಡರ್ ಅವಧಿಯು ಒಂದು ಮಹಾಚಕ್ರ್ರವನ್ನು ಪೂರೈಸುತ್ತದೆ. ಅಂದರೆ ಅದರ ಅರ್ಥ ಅದರ ಮರು ದಿನವು ಮಾಯನ್ನರ ಪ್ರಕಾರ ಮತ್ತೆ .೦.೦.೦.೦.೦ಎಂದು ಆರಂಭವಾಗುತ್ತದೆ. ನಮ್ಮ ಪ್ರಕಾರ ಡಿಸೆಂಬರ್ ೩೧ರ ನಂತರ ಜನವರಿ ೧ ಆರಂಭವಾಗುವುದಿಲ್ಲವೇ ಹಾಗೆ. ಇದರಾಚೆಗೂ ಹಲವು ಪಂಡಿತರು ಮಾಯನ್ನರ ಕ್ಯಾಲೆಂಡರ್‌ನ ಒಂದು ಮಹಾಚಕ್ರವು ಮುಗಿಯುವುದು ೨೦ ಬಕ್ತುನ್‌ಗಳಿಗೆ ಎಂದೂ ವಾದಿಸುತ್ತಾರೆ. ಆದರೆ ಮಾಯನ್ನರು ಎಲ್ಲೂ ಆ ದಿನವೇ ಜಗತ್ತಿನ ಅಂತ್ಯವಾಗುತ್ತದೆ ಎಂದು ಹೇಳಿರಲಿಲ್ಲ. ಜಗತ್ತು ಮುಂದೊಮ್ಮೆ ಮುಗಿದುಬಿಡುತ್ತದೆ ಎಂದು ಮಾಯಾ ಜನರು ಎಲ್ಲಿಯೂ ಉಲ್ಲೇಖಿಸಿಯೂ ಇಲ್ಲ. ಇಂದಿಗೂ ಅಮೆರಿಕಾದಲ್ಲಿ ಬದುಕುತ್ತಿರುವ ಮಾಯಾ ಜನರೇ ಜಗತ್ತಿನ ಅಂತ್ಯದ ಬಗೆಗಿನ ಈ ಪ್ರಚಾರವನ್ನು ನಂಬುವುದಿಲ್ಲ. ಆದರೆ ಕೆಲವು ಸ್ವಾರ್ಥ ಹಿತಾಸಕ್ತಿಗಳು ಮಾಯಾ ಕ್ಯಾಲೆಂಡರ್‌ನ್ನು ಕಪೋಲ ಕಲ್ಪಿತ ಜಗತ್ತಿನ ಅಂತ್ಯ ದೊಂದಿಗೆ ಸಂಬಂಧ ಕಲ್ಪಿಸಿ ಭಾರೀ ಪ್ರಚಾರ ಪಡಿಸುತ್ತಿದ್ದಾರೆ.
 
ಮಿಥ್ ಎರಡು: ಪ್ರತ್ಯೇಕಗೊಳ್ಳುವ ಖಂಡಗಳು ನಾಗರೀಕತೆಯನ್ನು ನಾಶ ಮಾಡುತ್ತವೆ.

    ಪ್ರಳಯಾಂತಕರ ಪ್ರಕಾರ ಭೂಮಿಯ ಕೇಂದ್ರದಲ್ಲಿರುವ ದ್ರವ - ಲೋಹದ ಹೊರ ಕವಚದ ಮೇಲಿರುವ ಭೂಮಿಯ ಮೇಲ್ಪದರಗಳು ತಿರುಗಿಕೊಂಡು ಬಿಡುತ್ತವೆ. ಭಾರೀ ಪ್ರಮಾಣದ ಸೌರ ವಿಕಿರಣಗಳು ಹಾಗೂ ಗ್ಯಾಲೆಕ್ಟಿಕ್ ಅಲೈನ್‌ಮೆಂಟ್ನ ಪರಿಣಾಮವಾಗಿ ಭೂಮಿಯ ಗುರುತ್ವಾಕರ್ಷಣೆಯ ಮೇಲಾಗುವ ಪರಿಣಾಮದಿಂದಾಗಿ ಭೂಮಿಯ ಧೃವಗಳು ಅದಲು ಬದಲಾಗಿ ಬಿಡುತ್ತದೆ ಎಂದು ಅವರ ಅಂಬೋಣ. ಇತ್ತೀಚೆಗೆ ಮಿಡುಗಡೆಯಾಗಿರುವ ೨೦೧೨ ಎಂಬ ಹಾಲಿವುಡ್ ಸಿನೆಮಾದಲ್ಲೂ ಇದನ್ನು ಭಯನಕವಾಗಿ ತೋರಿಸಲಾಗಿದೆ. ಈ ಧೃವ ಸ್ಥಳಾಂತರದಿಂದ ಹಲವು ಖಂಡಗಳು ಸಾಗರಗಳಲ್ಲಿ ಮುಳುಗುತ್ತವೆ, ಭಾರೀ ಸುನಾಮಿಗಳು, ಭೂಕಂಪಗಳಾಗುತ್ತವೆ ಎಂದು ಹೇಳಲಾಗುತ್ತವೆ. ಆದರೆ ನಾಸಾದ ವಿಜ್ಙಾನಿಗಳು ಹಾಗೂ ಜಗತ್ತಿನ ಹಲವಾರು ಖಗೋಳ ಶಾಸ್ತ್ರೀಯ ಸಂಶೋಧನೆಗಳು ಈ ಬಗೆಯ ದಿಢೀರ್ ಬೆಳವಣಿಗೆಗಳನ್ನು ಸ್ಪಷ್ಠವಾಗಿ ತಳ್ಳಿ ಹಾಕಿವೆ. ಭೂಮಿಯ ಇತಿಹಾಸದಲ್ಲಿ ಖಂಡಗಳು ಕೋಟ್ಯಾಂತರ ವರ್ಷಗಳಿಂದಲೂ ಸರಿಯುತ್ತಿವೆ. ಹಾಗೆಯೇ ಭೂಮಿಯ ಧೃವಗಳೂ ಬದಲಾಗುತ್ತವೆ. ಆದರೆ ಈ ಬೆಳವಣಿಗೆಗಳು ಅರಿವಿಗೇ ಬರದಷ್ಟು ನಿಧಾನ ಗತಿಯಲಿ ಸಾವಿರಾರು ವರ್ಷಗಳವರೆಗೆ ನಡೆಯುತ್ತಿರುತ್ತವೆ. ಹಾಗೆಯೇ ಸೂರ್ಯನಿಂದ ಭೂಮಿಯ ರಚನೆಯನ್ನೇ ಪ್ರಭಾವಿಸುವಷ್ಟು ತೀವ್ರವಾದ ವಿಕಿರಣಗಳಾಗಲೀ, ಸೌರ ಬಿರುಗಳಾಗಲೀ ಇದುವರೆಗೂ ಯಾರ ಅರಿವಿಗೂ ಬಂದಿಲ್ಲ.

 
ಮಿಥ್ ಮೂರು: ಗಾಲೆಕ್ಟಿಕ್ ಅಲೈನ್‌ಮೆಂಟ್ ಜಗತ್ತನ್ನು ನಾಶಗೊಳಿಸುತ್ತದೆ.

    ಗ್ಯಾಲೆಕ್ಟಿಕ್ ಅಲೈನ್‌ಮೆಂಟ್(gಚಿಟಚಿಛಿಣiಛಿ ಚಿಟigಟಿmeಟಿಣ) ಎಂದರೆ ನಮ್ಮ ಗ್ರಹವಾದ ಭೂಮಿ, ನಕ್ಷತ್ರವಾದ ಸೂರ್ಯ ಹಾಗೂ ನಾವಿರುವ ಗ್ಯಾಲಾಕ್ಸಿಯಾದ ಕ್ಷೀರಪಥ ಗ್ಯಾಲಾಕ್ಷಿಯ ಕೇಂದ್ರಗಳು ತಮ್ಮ ತಂತಮ್ಮ ಪ್ರದಕ್ಷಿಣೆಯ ಪ್ರಕ್ರಿಯೆಯಲ್ಲಿ ಗ್ಯಾಲಾಕ್ಷಿಯ ಸಮಭಾಜಕ ವೃತ್ತದಲ್ಲಿ ಒಂದೇ ಸರಳರೇಖೆಯಲ್ಲಿ ಜೋಡಣೆಯಾಗುವುದು. ನಮ್ಮ ಭೂಮಿಯು ಸೂರ್ಯನ ಸುತ್ತಲೂ ಹೇಗೆ ಪ್ರದಕ್ಷಿಣೆ ಹಾಕುತ್ತದೆಯೋ ಹಾಗೆಯೇ ಸೂರ್ಯನೂ ತನ್ನ ಪರಿವಾರದ ಸದಸ್ಯರೊಂದಿಗೆ( ಸೌರವ್ಯೂಹ) ಕ್ಷೀರಪಥದ ಸುತ್ತಲೂ ತಿರುಗುತ್ತಿರುತ್ತದೆ ತಾನೆ?. ಸಾಮಾನ್ಯವಾಗಿ ಇಂತಹ ಒಂದು ಅಲೈನ್‌ಮೆಂಟ್ ಭೂಮಿಯಿಂದ ನಿಂತು ನೋಡಿದಾಗ ಆಗಾಗ ಸಂಭವಿಸುತ್ತಲೇ ಇರುತ್ತದೆ. ೧೯೯೮ ರಲ್ಲಿ ನಡೆದ ಈ ಬಗೆಯ ಅಲೈನ್‌ಮೆಂಟ್ ಸರಳರೇಖೆಗೆ ಬಹುತೇಕ ಹತ್ತಿರವಿತ್ತು. ಆದರೆ ಈಗ ಸಂಭವಿಸುತ್ತದೆ ಎಂದು ಹೇಳಲಾಗುತ್ತಿರುವುದು ಸೂರ್ಯ ಹಾಗೂ ಭೂಮಿಗಳು ಕ್ಷೀರಪಥದ ಕೇಂದ್ರವನ್ನೇ ಪ್ರವೇಶ ಮಾಡಿಬಿಡುತ್ತವೆ ಎಂದು ಹೆಳಲಾಗುವ ಗ್ಯಾಲೆಕ್ಟಿಕ್ ಅಲೈನ್‌ಮೆಂಟು. ಸೂರ್ಯನು ಇಡೀ ಕ್ಷೀರಪಥ ಗ್ಯಾಲಕ್ಸಿಯನ್ನು ಒಂದು ಬಾರಿ ಸುತ್ತುಹೊಡೆಯಲು ತೆಗೆದುಕೊಳ್ಳುವ ಸಮಯ ಸು.೨೨೦ ಮಿಲಿಯನ್ ವರ್ಷಗಳು. ಇಂತಾದ್ದರಲ್ಲಿ ಅದು ಗ್ಯಾಲಕ್ಸಿಯ ಕೇಂದ್ರವನ್ನು ತಲುಪಲು ಅದೆಷ್ಟೋ ಲಕ್ಷ ವರ್ಷಗಳೇ ಬೇಕಾಗುತ್ತದೆ. ಅದು ಯವಾಗ ಎನ್ನುವುದು ಇದುವರೆಗೆ ಖಗೋಳಶಾಸ್ತ್ರಜ್ಞರ ಅರಿವಿಗೂ ನಿಲುಕಿಲ್ಲ. ಬರುವ ಡಿಸೆಂಬರ್ ೨೧ ಕ್ಕೇ ಅಂತಹ ಗ್ಯಾಲೆಕ್ಟಿಕ್ ಅಲೈನ್‌ಮೆಂಟ್ ಸಂಭವಿಸಿಬಿಡುತ್ತದೆ ಎಂದು ನಮ್ಮ ಕವಡೆ ಶಾಸ್ತ್ರಿಗಳು ಹಾಗೂ ಟಿ.ಆರ್‌ಪಿ. ರೇಟ್ ಹೆಚ್ಚಿಸಿಕೊಳ್ಳಲು ಏನಾದರೂ ಮಾಡಲು ತಯಾರಿರುವ ಚಾನಲ್‌ಗಳು ಬೊಬ್ಬೆ ಹೊಡೆಯುತ್ತಿರುವುದರಲ್ಲಿ ಜನರನ್ನು ಆತಂಕದಲ್ಲಿ ಮುಳುಗಿಸಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಹಿತಾಸಕ್ತಿ ಮಾತ್ರವೇ ಕಾಣುತ್ತಿದೆ.
 
ಮಿಥ್ ನಾಲ್ಕು: ರಹಸ್ಯ ಗ್ರಹ ಎಕ್ಸ್ ಭೂಮಿಗೆ ಅಪ್ಪಳಿಸುತ್ತದೆ.
 
   ಪ್ಲಾನೆಟ್ ಎಕ್ಸ್ ಅಥವಾ ನಿಬಿರು ಎಂಬ ರಹಸ್ಯ ಗ್ರಹವೊಂದು ಭೂಮಿಗೆ ಅದೆಲ್ಲಿಂದಲೋ ಬಂದು ಭೂಮಿಗೆ ಅಪ್ಪಳಿಸಲಿದೆ ಎಂಬುದು ಮತ್ತೊಂದು ಮಿಥ್ಯೆ. ಇದರೊಂದಿಗೆ ಹಲವು ಕ್ಷುದ್ರ ಆಕಾಶಕಾಯಗಳು, ಉಲ್ಕೆಗಳು, ಅಥವಾ ಧೂಮಕೇತು ಭೂಮಿಗೆ ಬಡಿದು ಭೂಮಿಯನ್ನು ಛಿದ್ರ ಮಾಡಿಬಿಡುತವೆ ಎಂದೂ ಹೇಳಲಾಗುತ್ತದೆ. ಈ ಕುರಿತು ಅಮೆರಿಕದ ಬಹ್ಯಾಕಾಶ ಸಂಸ್ಥೆ ನಾಸಾದ ಖಗೋಳಜೀವಿಜ್ಞಾನಿ ಮೋರಿಸನ್ ಈ ವಿಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ಹೇಳಬಹುದಾದ ಒಂದೇ ಉತ್ತರವೆಂದರೆ ಇಲ್ಲ ಅಂತಾದ್ದೇನೂ ಆಗುವುದಿಲ್ಲ ಎನ್ನುತ್ತಾರೆ. ನಿಜವೆಂದರೆ ಈ ನಿಬಿರು ರಹಸ್ಯ ಗ್ರಹದ ಕುರಿತ ಪುಕಾರನ್ನು ೨೦೦೩ ರಲ್ಲೇ ಹರಿಬಿಡಲಾಗಿತ್ತು. ಆದರೆ ಆ ಪ್ರಚಾರವು ಕೊನೆಗೆ ಸುಳ್ಳು ಎಂದು ಸಾಬೀತಾಗಿತ್ತು. ಅಂತಹ ಯಾವುದಾದರೂ ಆಕಾಶಕಾಯವು ಇನ್ನು ಮೂರೇ ವರ್ಷಗಳಲ್ಲಿ ಭೂಮಿಯನ್ನು ಸಮೀಪಿಸುವುದಾದಲ್ಲಿ ಅದು ಇಷ್ಟು ಹೊತ್ತಿಗಾಗಲೇ ಸೌರವ್ಯೂಹವನ್ನು ಪ್ರವೇಶಿಸಿರಬೇಕಿತ್ತು ಹಾಗೂ ಅದು ಬರಿಗಣ್ಣಿಗೆ ಕಾಣಿಸಬೇಕಿತ್ತು ಎಂದು ಮೋರಿಸನ್ ಹೇಳುತ್ತಾರೆ. ಈಗ್ಗೆ ಹಲವಾರು ವರ್ಷಗಳಿಂದಲೂ ಸೌರವ್ಯೂಹದಾಚೆಗೂ ಆಕಾಶವನ್ನು ವೀಕ್ಷಿಸುತ್ತಿರುವ ಭಾರೀ ಗಾತ್ರದ ಟೆಲೆಸ್ಕೋಪುಗಳಿಗಾಗಲೀ, ಕೃತಕ ಉಪಗ್ರಹಗಳಿಗಾಗಲೀ ಕಾಣದ ಈ ಆಕಾಶಕಾಯಗಳು ನಮ್ಮ ನಡುವಿನ ಪ್ರಳಯಾಂತಕರಿಗೆ ಅದು ಹೇಗೆ ಕಂಡಿವೆ ಎಂದೇ ತಿಳಿಯುವುದಿಲ್ಲ.
 
ಮಿಥ್ ಐದು: ಸೌರ ಬಿರುಗಾಳಿಯು ಭೂಮಿಯನ್ನು ತೀವ್ರವಾಗಿ ದಾಳಿಮಾಡಲಿದೆ.

ಸಾಮಾನ್ಯವಾಗಿ ಸೂರ್ಯನಿಂದ ಭೂಮಿಗೆ ಹಲವು ಬಗೆಯ ವಿಕಿರಣಗಳು ಬರುತ್ತಲೇ ಇರುತ್ತವೆ. ಇವುಗಳಲ್ಲಿ ಹನಿಕಾರಕವಾದವುಗಳನ್ನು ಭೂಮಿಯ ವಾಯುಮಂಡಲದಲ್ಲಿರುವ ಓಝೋನ್ ಪದರವು ತಡೆಯುತ್ತದೆ. ಹಾಗೆಯೇ ಕೆಲವು ವಿಕಿರಣಗಳು ತೀವ್ರ ಸ್ವರೂಪದಲ್ಲಿದ್ದು ಭೂಮಂಡಲವನ್ನು ತಾಕುವುದೂ ಉಂಟು. ಆದರೆ ಇಂದು ಪ್ರಳಯಾಂತಕರು ಹೇಳುವ ರೀತಿಯಲ್ಲಿ ಇಡೀ ಭೂಮಿಯನ್ನೇ ಗುಡಿಸಿ ಹಾಕಬಲ್ಲಂತಹ ಸೌರ ಬಿರುಗಾಳಿಯೇನೂ ಭೂಮಿಯನ್ನು ತಾಕುವ ಯವುದೇ ಸಾಧ್ಯತೆಗಳಿಲ್ಲ. ಅಥವಾ ಇಂತಹ ವಾದಕ್ಕೆ ಪುಷ್ಠಿ ನೀಡುವ ಯಾವುದೇ ಸಾಕ್ಷ್ಯಗಳೂ ಇಲ್ಲ. ಇದೊಂದು ಊಹಾಪೋಹವಷ್ಟೇ. ಇಂದು ಭೂಮಿಯಲ್ಲಿ ಹಸಿರುಮನೆ ಅನಿಲಗಳ ಹೆಚೆಚ್ಚು ಹೊರಸೂಸುವಿಕೆಯಿಂದ ಓಝೋನ್ ಪದರದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಅಲ್ಲದೇ ಭೂಗ್ರಹದ ತಾಪಮನವು ಹೆಚ್ಚಾಗುತ್ತಿರುವುದೂ ಸತ್ಯ. ಆದರೆ ಈ ವಿದ್ಯಮಾನಗಳಿಗೂ ಇಂಟರ್‌ನೆಟ್, ಸಿನೆಮಾ ಟೀವಿ ಪ್ರಚಾರಗಳ ಪ್ರಳಯ, ಡೂಮ್ಸ್ ಡೇ ಅಥವಾ ಅಪೋಕ್ಯಾಲಿಪ್ಸ್ ಅರ್ಥಾತ್ ಜಗತ್ತಿನ ಅಂತ್ಯ ದಂತಹ ಕಟ್ಟುಕಥೆಗಳಿಗೂ ಯಾವುದೇ ಸಂಬಂಧವಿಲ್ಲ.

 
      ಈ ಮೇಲಿನ ಮಿಥ್‌ಗಳಲ್ಲದೇ ಜಗತ್ತಿನ ನಾಶದ ಕುರಿತು ಇನ್ನೂ ಹಲವಾರು ಬಗೆಯ ಊಹಾಪೋಹಗಳಿವೆ. ನ್ಯಾನೋತಂತ್ರಜ್ಞಾನವು ಮಿತಿಮೀರಿ ನಿಯಂತ್ರಣಕ್ಕೇ ಸಿಗದೇ ಹೋಗುವ ಗ್ರೇ ಗೂ(gಡಿeಥಿ goo) ಇಂತದೇ ಇನ್ನೊಂದು ಪ್ರಚಾರ. ಇದರ ಪ್ರಕಾರ ಸ್ವಯಂ ದ್ವಿಗುಣಗೊಳ್ಳುವ ರೋಬೋಟ್‌ಗಳು ಮನುಷ್ಯ ಕುಲವನ್ನೇ ನಾಶ ಮಡಿಬಿಡುತ್ತವಂತೆ. ಮಾನವ ನಿರ್ಮಿತ ಸೂಪರ್ ಕಂಪ್ಯೂಟರ್‌ಗಳು ಮನುಷ್ಯನ ಶೋಷಣೆಯನ್ನು ತಾಳದೆ ದಂಗೆ ಎದ್ದುಬಿಡುತ್ತವೆ ಎನ್ನುವುದು ಇನ್ನೊಂದು ಊಹೆ. ಹೀಗೆ ಇನ್ನೂ ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ತಲೆಕೆಟ್ಟ ಪ್ರಳಯದ ವಾದಗಳನ್ನು ಹುಟ್ಟಿಹಾಕಬಹುದು. ದುರಂತವೆಂದರೆ ಇಂದು ಚಾಲ್ತಿಯಲ್ಲಿರುವ ಈ ಪ್ರಳಯದ ಸಿದ್ಧಾಂತಗಳನ್ನು ಪ್ರಚಾರ ಮಾಡುವವರು ಯವಾಗಲೂ ಒಂದಷ್ಟು ವಿಜ್ಞಾನದ ವಿಷಯಗಳನ್ನೂ ತಮ್ಮ ಕುತರ್ಕಗಳಿಗೆ ಸೇರಿಸಿಬಿಟ್ಟಿರುತ್ತಾರೆ. ಆಗ ವಿದ್ಯಾವಂತ ಜನರೂ ಸಹ ನಿಜವೆನೋ? ಎಂದುಕೊಂಡು ಆತಂಕಗಳಿಗೀಡಾಗುತ್ತಾರೆ. ಈ ಬಗೆಯ ಪ್ರಳಯದ ಪ್ರಚಾರಕ್ಕೆ ಭಯಗೊಂಡು ಸಾಯಲು ಅಣಿಯಾದ ಕೆಲವರು ನಾಸಾದಂತಹ ವೈಜ್ಞಾನಿಕ ಸಂಸ್ಥೆಗಳ ಪ್ರಯತ್ನದಿಂದ ಬದುಕಿ ಉಳಿದಿದ್ದಾರೆ. ಆದರೆ ಬದುಕಿನಲ್ಲಿ ಸರಿಯಾದ ವೈಜ್ಞಾನಿಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವವರು ಈ ಬಗೆಯ ಪುಕಾರುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ.
 
ಪ್ರಳಯಭೀತಿಯ ಉದ್ದಿಮೆ.

ಭೂಕಂಪ, ಬಿರುಗಾಳಿ, ಅತಿವೃಷ್ಟಿ, ನೆರೆ, ಪ್ರವಾಹಗಳಂತಹ ನಮ್ಮ ಸುತ್ತ ಮುತ್ತಲೂ ನಡೆಯುವ ಪ್ರಕೃತಿ ವಿಕೋಪಗಳನ್ನೇ ಪ್ರಳಯದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ. ಆದರೆ ಇಂತಹ ನೈಸರ್ಗಿಕ ವಿಕೋಪಗಳು ಸಾವಿರಾರು ವರ್ಷಗಳಿಂದಲೂ ನಡೆಯುತ್ತಿವೆ. ಕೆಲವೊಮ್ಮೆ ಅವು ಸಣ್ಣ ಪ್ರಮಾಣದಲ್ಲಿಯೂ ಇನ್ನು ಕೆಲವೊಮ್ಮೆ ದೊಡ್ಡ ಪ್ರಮಾಣದಲ್ಲಿಯೂ ನಡೆಯಬಹುದು. ಭೂಮಿಯ ಮೇಲೆ ಕೆಲವು ಹಿಮಯುಗಗಳೇ ಕಳೆದಿವೆ ಎಂದು ಹೇಳಲಾಗುತ್ತದೆ. ಆದರೆ ಅಂತಹ ಯಾವ ಪ್ರಕ್ರಿಯೆಯೂ ಇಡೀ ಭೂಮಿಯನ್ನೇ ಮುಳುಗಿಸುವ ಮಟ್ಟಕ್ಕಾಗಲೀ, ಅದನ್ನು ನಾಶ ಮಾಡುವ ಮಟ್ಟಕ್ಕಾಗಲೀ ನಡೆದಿಲ್ಲ. ಹೀಗಿರುವಾಗ ಈಗ ಇದ್ದಕ್ಕಿದ್ದಂತೆ ಇಡೀ ಪ್ರಪಂಚವೇ ನಾಶವಾಗುತ್ತದೆ ಎನ್ನುವುದು ಶುದ್ಧ ಮೂರ್ಖತನವಾಗುತ್ತದೆ. ವಾಸ್ತವದಲ್ಲಿ ಇಂತಹ ಪ್ರಚಾರಗಳಿಂದ ಇಂದು ಭಾರೀ ಲಾಭ ಪಡೆದುಕೊಳ್ಳುತ್ತಿರುವ ಒಂದು ವರ್ಗವಿದೆ. ಈ ವರ್ಗದಲ್ಲಿ ಜನರಲ್ಲಿ ಆತಂಕ ಹುಟ್ಟಿಸಿ ಅವರು ಪ್ರಳಯದ ಕುರಿತು ಭಾರೀ ಭಯ ಕುತೂಹಲ ಬೆಳೆಸಿಕೊಳ್ಳುವಂತೆ ಮಾಡಿ ಜನರ ದಿನನಿತ್ಯದ ಕೆಲಸ ಕಾರ್ಯಗಳು, ಮತುಕತೆಗಳು ಇದರ ಸುತ್ತಲೇ ಸುತ್ತುವಂತೆ ಮಾಡುವ ಬಂಡವಾಳಿಗ ವರ್ಗವು ಒಂದು.

 ಇಂದು ಇಂಟರ್‌ನೆಟ್‌ನಲ್ಲಿ ಇರುವ ಸಾವಿರಾರು ಪ್ರಳಯದ ವೆಬ್‌ಸೈಟುಗಳ ಒಡೆಯರು ಪ್ರತಿದಿನ ಕೋಟ್ಯಾಂತರ ರೂಗಳನ್ನು ಬಾಚುತ್ತಿದ್ದಾರೆ. ಹಾಗೆಯೇ ಪ್ರಳಯದ ಕುರಿತ ಸಿನಿಮಾಗಳೂ ಅಷ್ಟೇ ಹಣವನ್ನು ಬಾಚಿಕೊಳ್ಳುತ್ತಿವೆ. ಹಿಸ್ಟರಿ ಚಾನೆಲ್‌ನ ರೂಪಕ್ ಮುರ್ಡೋಕ್‌ನಂತಹ ಟೀವಿ ಚಾನಲ್ ಒಡೆಯರು ಇಂತಹ ಮೌಡ್ಯಗಳ ಸುತ್ತ ಕಾರ್ಯಕ್ರಮ ನಡೆಸಿ ತಮ್ಮ ಚಾನೆಲ್‌ಗಳ ಟಿಆರ್‌ಪಿ. ದರವನ್ನು ಹೆಚ್ಚಿಸಿಕೊಂಡು ಜನರನ್ನು ಭಯಕ್ಕೂ, ಹತಾಶೆಗೂ ತಳ್ಳುತ್ತಿವೆ. ಪತ್ರಿಕೆಗಳು ತಮ್ಮ ಪ್ರಸಾರವನ್ನು ಹೆಚ್ಚಿಸಿಕೊಳ್ಳುತ್ತಿವೆ. ಇವರಿಗೆಲ್ಲಾ ಪ್ರಳಯವೂ ಸಹ ಲಾಭ ತರುವ ಒಂದು ವ್ಯಾಪಾರ ಮಾತ್ರ. ಇವರ ನಡುವೆ ಮೌಢ್ಯವನ್ನೇ ಜನರ ತಲೆಗೆ ತುಂಬಿ ತಾವು ಮಾತ್ರ ದೇವಮಾನವರಾಗಲು ಹವಣಿಸುವ ಜೋತಿಷಿಗಳೂ, ಧಾರ್ಮಿಕ ಮೂಲಭೂತವಾದಿಗಳೂ ಇದ್ದಾರೆ. ಇವರು ಜನರು ಪ್ರಳಯದಿಂದ ಪಾರಾಗಲು ಹೋಮ ಹವನಗಳನ್ನೂ, ಆಧ್ಯಾತ್ಮವನ್ನೂ, ಪೂಜೆ ಪುನಸ್ಕಾರಗಳನ್ನೂ, ಧ್ಯಾನವನ್ನೂ ಹೆಚೆಚ್ಚು ಆಚರಿಸಬೇಕೆಂದು ತಾಕೀತು ಮಾಡುತ್ತಾರೆ. ಸನ್ಮಾರ್ಗದಲ್ಲಿ ಜನರು ನಡೆಯಬೇಕೆಂದು ಹೇಳುವ ಇಂತಹ ಕವಡೆ ಶಾಸ್ತ್ರಿಗಳೇ ಜನರನ್ನು ಮೌಢ್ಯದ ಪರಮಾವಧಿಗೆ ತಳ್ಳುತ್ತಾ, ಅಧಿಕಾರಸ್ತರ ಸಂಗದಲ್ಲಿ ದುರ್ಮಾರ್ಗದಲ್ಲಿ ನಡೆಯುತ್ತಿರುತ್ತಾರೆ. ಈ ಹಿಂದೆ ೧೯೯೯ ರಲ್ಲಿಯೇ ಪ್ರಳಯ ಸಂಭವಿಸಿ ಬಿಡುತ್ತದೆ ಎಂದು ಪುಕಾರು ಹಬ್ಬಿಸಿದವರೂ ಇವರೇ. ಇಂತಹವರ ಮಾತುಗಳನ್ನು ಕೇಳಿದ ಜನರು ತಾವು ನಾಶವಾಗುವ ಭೀತಿಗೆ ಒಳಗಾಗಿ ಈ ಜ್ಯೋತಿಷಿಗಳು ಹೇಳಿದಂತೆ ಕೇಳುತ್ತಾ ಹೋದರೆ ಮನುಷ್ಯ ಸಮಾಜವು ಪ್ರಗತಿಯೆಡೆ ಚಲಿಸುವ ಬದಲಾಗಿ ಅಧೋಗತಿಗಿಳಿಯುತ್ತದೆ ಅಷ್ಟೆ.

 
ಅಷ್ಟಕ್ಕೂ ಡಿಸೆಂಬರ್ ೨೧ರಂದು ಆಗಲಿರುವುದು ಏನು??

ಡಿಸೆಂಬರ್ ೨೧ರಂದು ಭೂಗೋಳಿಕವಾಗಿ ನಡೆಯುವ ಒಂದು ಕ್ರಿಯೆ ಎಂದರೆ ಅದು ಪ್ರತಿ ವರ್ಷದಂತೆ ಸಂಭವಿಸುವ ಸೂರ್ಯನ ಪಥ ಬದಲಾವಣೆ. ಅಂದು ಸೂರ್ಯನ ಸುತ್ತಲೂ ಸುತ್ತುವ ಪ್ರದಕ್ಷಿಣೆಯಲ್ಲಿ ಭೂಮಿಯ ಕರ್ಕಾಟಕ ಸಂಕ್ರಾಂತಿ ವೃತ್ತವು ಸೂರ್ಯನಿಗೆ ನೇರಕ್ಕೆ ಎದುರು ಬದುರಾಗಿ ನಿಲ್ಲುತ್ತದೆ. ಇದರ ವಿರುದ್ಧ ಕ್ರಿಯೆ ಜೂನ್ ೨೧ರಂದು ನಡೆಯುತ್ತದೆ. ಜೂನ್ ೨೧ರಂದು ಮಕರ ಸಂಕ್ರಾಂತಿ ವೃತ್ತವು ಸೂರ್ಯನಿಗೆ ಎದುರಾಗಿರುತ್ತದೆ. ಭೂಮಿಯು ನೇರವಾಗಿರದೇ ಕೊಂಚ ಓರೆಯಾಗಿದ್ದುಕೊಂಡೇ ಸೂರ್ಯನ ಪ್ರದಕ್ಷಿಣೆ ಹಾಕುವುದೇ ಈ ಬದಲಾವಣೆಗೆ ಕಾರಣ ಮತ್ತು ಇದರಿಂದಾಗಿಯೇ ಭೂಮಿಯ ಮೇಲೆ ಕಾಲಮಾನಗಳ ವ್ಯತ್ಯಾಸ ಕಾಣಿಸಿಕೊಳ್ಳುವುದು. ಹೀಗಾಗಿ ಡಿಸೆಂಬರ್ ೨೧ರಂದು ಪ್ರತಿವರ್ಷವೂ ಭೂಮಿಯ ಉತ್ತರಾರ್ಧ ಗೋಳದಲ್ಲಿ ಚಳಿಗಾಲವೂ ದಕ್ಷಿಣಾರ್ಧ ಗೋಳದಲ್ಲಿ ಬೇಸಗೆ ಕಾಲವೂ ಆರಂಭವಾಗುವ ದಿನವಾಗಿರುತ್ತದೆ.

ಪ್ರತಿ ದಿನದಂತೆಯೇ ೨೦೧೨ರ ಡಿಸೆಂಬರ್ ೨೧ರ ಮುಂಜಾನೆಯೂ ಸೂರ್ಯೋದಯವಾಗುತ್ತದೆ. ಸಂಜೆಯ ಹೊತ್ತಿಗೆ ಮತ್ತೆ ಸೂರ್ಯಾಸ್ತವಾಗುತ್ತದೆ. ಎಲ್ಲಾ ದಿನಗಳಂತೆಯೇ ಅದೂ ಮತ್ತೊಂದು ದಿನವಾಗುತ್ತದೆ ಅಷ್ಟೆ. ಆದರೆ ಮಾಧ್ಯಮಗಳ ಅಥವಾ ಇನ್ನಿತರರ ದುರುದ್ದೇಶಪೂರಿತ ಕಪೋಲಕಲ್ಪಿತ ಪ್ರಚಾರಗಳಿಂದ ನಮ್ಮ ಜನರು ಭಯಗೊಳ್ಳುತ್ತಿದ್ದಾರಂದರೆ ಅದು ನಾವಿನ್ನೂ ವಿಜ್ಞಾನವನ್ನು ಮೈಗೂಡಿಸಿಕೊಳ್ಳಲು ಬಹಳ ದೂರದವರೆಗೆ ಕ್ರಮಿಸಬೇಕು ಎಂಬುದರ ದ್ಯೋತಕ ಮಾತ್ರ.

ಬುಧವಾರ, ನವೆಂಬರ್ 28, 2012

ವೀರಗಾಸೆ ವೀರರು

ಸುದೇಶ ದೊಡ್ಡಪಾಳ್ಯ   

-ಚಿತ್ರಗಳು-ಪವನ್ ಪಿ.ಶ್ರೀನಿವಾಸ್

ಕೃಪೆ: ಪ್ರಜಾವಾಣಿ,ಕಾಮನಬಿಲ್ಲು ಪುರವಣಿ, 29.11.2012
 


`ನಾವು ಕಲಾವಿದರು, ಆದರೂ ನಮ್ಮನ್ನು ಕೂಲಿ ಕಾರ್ಮಿಕರಂತೆ ನಡೆಸಿಕೊಳ್ಳಲಾಗುತ್ತದೆ. ನಾವು ಹಣಕ್ಕಾಗಿ ಕಲೆಯನ್ನು ಆರಿಸಿಕೊಂಡಿಲ್ಲ. ಕಲೆಗಾಗಿ, ಅದರ ಸೆಳೆತಕ್ಕಾಗಿ, ಸಂಪ್ರದಾಯವನ್ನು ಉಳಿಸುವ ಸಲುವಾಗಿ ಆಸೆಪಟ್ಟು ಆಯ್ಕೆ ಮಾಡಿಕೊಂಡಿದ್ದೇವೆ`- ಮೈಸೂರಿನ ಹೆಸರಾಂತ ವೀರಗಾಸೆ ಕಲಾವಿದ ಕಿರಾಳು ಮಹೇಶ್ ಬೇಸರದಿಂದಲೇ ಇಷ್ಟು ಹೇಳಿ ಸುಮ್ಮನಾದರು.

ಆದರೆ ಅವರ ಪಕ್ಕದಲ್ಲಿ ಕುಳಿತಿದ್ದ ಯುವ ಕಲಾವಿದ ರಮೇಶ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಮ್ಮ ಗುರುಗಳಾದ ಮಹೇಶ್ ಹೇಳದೇ ಉಳಿಸಿದ್ದ ಮಾತುಗಳನ್ನು ಹೇಳಿಬಿಡುವ ಧಾವಂತದಲ್ಲಿದ್ದರು. `ನಾವು ವೀರಗಾಸೆಯಿಂದ ನಾಲ್ಕು ಕಾಸು ಸಂಪಾದಿಸಿ, ಊರಲ್ಲಿ ಮನೆ, ಮೈಸೂರಲ್ಲಿ ಸೈಟು ತೆಗೆದುಕೊಳ್ಳಬೇಕು ಎನ್ನುವ ಆಸೆ ಇಲ್ಲ. ಇಂಥ ಆಸೆಯನ್ನು ನಮ್ಮಂಥ ಕಲಾವಿದರು ಇಟ್ಟುಕೊಳ್ಳುವುದು ಹಗಲುಗನಸಾಗುತ್ತದೆ.

ಎಷ್ಟೇ ನೋವುಗಳಿದ್ದರೂ ಅವುಗಳನ್ನು ನುಂಗಿಕೊಂಡು ವೀರಗಾಸೆ ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದ್ದೇವೆ` ಎಂದು ಅಭಿಮಾನಪಟ್ಟರು.

ಕಿರಾಳು ಮಹೇಶ್ ಬೇಸರಕ್ಕೂ, ರಮೇಶ್ ಅವರ ವೀರಾವೇಷದ ಅಭಿಮಾನದ ನುಡಿಗೂ ಸಂಬಂಧವಿದೆ. ಜಾನಪದದಲ್ಲಿ ಗಂಡು ಕಲೆ ಎಂದು ಕರೆಸಿಕೊಳ್ಳುವ `ವೀರಗಾಸೆ` ನೃತ್ಯ ಪ್ರಕಾರವನ್ನು ಇವರೆಲ್ಲರೂ ಉಸಿರಾಗಿಸಿಕೊಂಡಿದ್ದಾರೆ.

ವೀರಗಾಸೆ ಸಂಪ್ರದಾಯವನ್ನು ತಲೆಯಿಂದ ತಲೆಗೆ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ. ಒಂದು ವೇಳೆ ಮುತ್ತಾತ, ತಾತ, ತಂದೆಯವರಂತೆ ವೀರಗಾಸೆಗಾಗಿ ಇವರ ಮನಸ್ಸು ತುಡಿಯದೇ ಹೋಗಿದ್ದರೆ ವೀರಗಾಸೆ ಸಂಪ್ರದಾಯದ ಕಥೆ ಏನಾಗಬೇಕು? ವೀರಗಾಸೆ ಸೆಳೆತವೇ ಅಂಥದ್ದು, ಕರಡಿ ವಾದ್ಯದ ಸದ್ದು ಕಿವಿ ಮೇಲೆ ಬಿದ್ದರೆ ಸಾಕು, ಎ.ಆರ್.ರೆಹಮಾನ್ ಸಂಗೀತಕ್ಕೆ ಹೆಜ್ಜೆಹಾಕಲು ಹಿಂದೆ ಮುಂದೆ ನೋಡುವ ಮಂದಿಯೂ ನಿಂತಲ್ಲೇ ಹೆಜ್ಜೆ ಬದಲಿಸುವುದು ಗ್ಯಾರಂಟಿ.


ಅಂದಮೇಲೆ ನಿತ್ಯವೂ ಊರ ಗುಡಿಯ ಮುಂದೆ ಕರಡಿ ವಾದ್ಯದ ನಿನಾದ ಹೊಮ್ಮಿದರೆ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ನಾಲ್ಕು ಹೆಜ್ಜೆ ಹಾಕಿಯೇ ತೀರಬೇಕು. ಇಂತಹ ಒಳ ಸೆಳೆತವೇ ನೂರಾರು ಮಂದಿ ವೀರಗಾಸೆ ಕಲಾವಿದರನ್ನು ರೂಪಿಸಿದೆ.
ಕಿರಾಳು ಮಹೇಶ್ ವೀರಗಾಸೆ ನೃತ್ಯದಲ್ಲಿ ಅನುಭವಿ.

ಇವರು ಹೆಜ್ಜೆ ಹಾಕುವುದು, ವೀರಾವೇಷದಿಂದ ಕಣ್ಣುಗಳನ್ನು ಅರಳಿಸಿ ಗೋಲಿಯಂತೆ ಹೊರಳಿಸುವುದನ್ನು ನೋಡುವಾಗ ಭಯವಾಗುತ್ತದೆ. ಒಡಪುಗಳನ್ನು ಹೇಳುವುದನ್ನು ಕೇಳಬೇಕು ಎನಿಸುತ್ತದೆ. ಇಂತಹ ಮಹೇಶ್ `ಅಭಿನವಶ್ರೀ ವೀರಭದ್ರ ನೃತ್ಯ ತಂಡ` ಕಟ್ಟಿದ್ದಾರೆ. ಇವರ ತಂಡದಲ್ಲಿ 50ಕ್ಕೂ ಹೆಚ್ಚು ಯುವ ಕಲಾವಿದರು ಇದ್ದಾರೆ.

ರಮೇಶ್, ಬಿ.ಎಸ್.ಮಂಜುನಾಥ್, ಕೆ.ಎಂ.ಸೋಮಶೇಖರ್, ನಟರಾಜ, ರಾಜೇಶ್, ಮಹೇಶ್, ಕೆ.ಎಂ.ಭಾಸ್ಕರ್, ಎಂ.ಪ್ರಕಾಶ್, ಪ್ರಭು ಸೇರಿದಂತೆ ವೀರಗಾಸೆ ತಂಡದಲ್ಲಿರುವ ಎಲ್ಲ ಕಲಾವಿದರದೂ ಒಂದೇ ಕಥೆ. ಆದರೆ ಊರು, ಹೆಸರು, ವಯಸ್ಸು, ವಿದ್ಯಾಭ್ಯಾಸ ಮಾತ್ರ ಬೇರೆ ಬೇರೆ!

ರಮೇಶ್ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಮೂಡಹಳ್ಳಿಯವರು. ಓದಿದ್ದು 9ನೇ ತರಗತಿ. ಮುಂದೆ ಕೈ ಬೀಸಿ ಕರೆದಿದ್ದು ವೀರಗಾಸೆ. ಹದಿನೈದನೇ ವಯಸ್ಸಿಗೆ ವೀರಗಾಸೆಗಾಗಿ ಮುಖಕ್ಕೆ ಬಣ್ಣ ಬಳಿದುಕೊಂಡು, ತಲೆ ಮೇಲೆ ಕಿರೀಟ ಇಟ್ಟುಕೊಂಡು ಕೈಯಲ್ಲಿ ಕತ್ತಿ ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕರಡಿ ವಾದ್ಯದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ವೀರಾವೇಷದಿಂದ ಕುಣಿಯತೊಡಗಿದರು. ಬಳಿಕ ಏನೇ ಮಾಡಿದರೂ ವೀರಗಾಸೆ ಇವರನ್ನು ಬಿಟ್ಟುಕೊಡಲಿಲ್ಲ. ತಲೆಯೊಳಗೆ ವೀರಗಾಸೆ ಕಲೆ ತುಂಬಿಕೊಂಡ ಮೇಲೆ ವಿದ್ಯೆಗೆ ಜಾಗ ಇಲ್ಲದಂತಾಯಿತು. ಹೀಗಾಗಿ ಹೆಚ್ಚು ಮಂದಿ ವೀರಗಾಸೆ ಕಲಾವಿದರು ಕಾಲೇಜು ಮುಖವನ್ನೇ ನೋಡಿಲ್ಲ.

ಇದು ಎಲ್ಲರ ಕಥೆಯೂ ಹೌದುರಮೇಶ್‌ಗೆ ಏಳೆಂಟು ವರ್ಷಗಳಿರಬೇಕು. ಹೊಲದಲ್ಲಿ ದನಕರುಗಳನ್ನು ಮೇಯಿಸಲು ಹೋಗುತ್ತಿದ್ದರು. ಅಲ್ಲಿ ಗೆಳೆಯರೊಂದಿಗೆ ಸೇರಿ ವೀರಗಾಸೆ ಆಟವಾಡುತ್ತಿದ್ದರು. ಹೆಗಲ ಮೇಲಿದ್ದ ಟವೆಲನ್ನು ಸೊಂಟಕ್ಕೆ ಸುತ್ತಿಕೊಂಡು, ದನ ಕಾಯುವ ಕೋಲನ್ನು ಕತ್ತಿಯಂತೆ ಹಿಡಿದು, ಧೂಳನ್ನೇ ವಿಭೂತಿಯಂತೆ ಹಣೆಗೆ ಹಚ್ಚಿಕೊಳ್ಳುತ್ತಿದ್ದರು.

ಕೆಲವರು ಪ್ಲಾಸ್ಟಿಕ್ ಬಿಂದಿಗೆಯನ್ನೇ ಕರಡಿ ವಾದ್ಯವನ್ನಾಗಿ ಮಾಡಿಕೊಂಡು ನುಡಿಸುತ್ತಿದ್ದರು. ಗದ್ದೆ ಬಯಲಿನಲ್ಲಿ ಸಿಗುವ ತರಗಲೆಯನ್ನು ಗುಡ್ಡೆ ಮಾಡಿ ಅದಕ್ಕೆ ಬೆಂಕಿ ಹಾಕುತ್ತಿದ್ದರು. ಆಗ ರಮೇಶ್ ವೀರಾವೇಷದಿಂದ ಹೆಜ್ಜೆ ಹಾಕುತ್ತಾ ಮೈಮರೆತು ಕುಣಿಯುತ್ತಿದ್ದರು. ಇಂಥ ಸಮಯದಲ್ಲಿ ಬೆಂಕಿಯನ್ನು ಕೊಂಡವೆಂದು ಭಾವಿಸಿ ಹಾಯುತ್ತಿದ್ದರು.

ಚಾಮರಾಜನಗರ ಜಿಲ್ಲೆಯ ಬಿಸಲವಾಡಿಯ ಬಿ.ಎಸ್.ಮಂಜುನಾಥ್ ತನ್ನ ಗೆಳೆಯ ರಮೇಶ್ ಅವರ ಕಥೆಯನ್ನು ಮುಂದುವರಿಸಿದಂತೆ ಹೇಳುತ್ತಿದ್ದರು. ಶಾಲೆ ಬಿಟ್ಟ ಕೂಡಲೇ ಮಂಜುನಾಥ್ ಮತ್ತು ಗೆಳೆಯರು ಊರ ಗುಡಿ ಹತ್ತಿರಕ್ಕೆ ಓಡುತ್ತಿದ್ದರು. ಅಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತಿದ್ದರು. ರಟ್ಟಿನ ಬಾಕ್ಸ್‌ಗೆ ದಾರ ಕಟ್ಟಿ ಕುತ್ತಿಗೆಗೆ ನೇತು ಹಾಕುತ್ತಿದ್ದರು. ಅವರು ಅದನ್ನೆ ಕರಡಿ ವಾದ್ಯದಂತೆ ಬಾರಿಸುತ್ತಿದ್ದರು.

ಉಳಿದವರು ವೀರಗಾಸೆ ವೇಷ ಹಾಕುತ್ತಿದ್ದರು. ಮದುವೆ ಸಂದರ್ಭದಲ್ಲಿ ಗಂಗೆ ತರುವ ಪದ್ಧತಿ ಇದೆ. ಕೊಡದಲ್ಲಿ ನೀರು ತುಂಬಿಸಿಕೊಂಡು ಮಹಿಳೆಯರು ಅವುಗಳನ್ನು ಹೊತ್ತುಕೊಂಡು ಬರುವಾಗ ಮಡಿ ಬಟ್ಟೆ ಹಾಸಲಾಗುತ್ತದೆ. ಆಮೇಲೆ ತೆಂಗಿನಕಾಯಿ ಒಡೆದ ನಂತರ ಮನೆಯೊಳಕ್ಕೆ ಓಡಿ ಹೋಗುವುದು ಸಂಪ್ರದಾಯ. ಗಂಗೆ ತರುವುದನ್ನು ಮಂಜುನಾಥ್ ಮತ್ತು ತಂಡ `ಅನುಕರಣೆ` ಮಾಡುತ್ತಿತ್ತು.

ಬಾಲ್ಯದಲ್ಲೇ ವೀರಗಾಸೆ ಮನಸ್ಸು ಹೊಕ್ಕ ಮೇಲೆ ಹೊರಕ್ಕೆ ಹಾಕುವುದಾದರೂ ಹೇಗೆ? ನೀನು ಒಲಿದಂತೆ ಹಾಡುವೆ ಎನ್ನುತ್ತಾ ವೀರಗಾಸೆಯೊಂದಿಗೇ ಮಿಳಿತಗೊಂಡಿದ್ದಾರೆ. ಮಂಜುನಾಥ್ ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಆಗಮ ಕಲಿತು ಅರ್ಚಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಹೆಚ್ಚಿನ ಕಲಾವಿದರು ಕೃಷಿಯನ್ನೇ ನಂಬಿದ್ದಾರೆ. ಊರಿನಲ್ಲಿರುವ ಹೊಲ, ಗದ್ದೆಗಳಲ್ಲಿ ಫಸಲು ತೆಗೆಯುತ್ತಾರೆ. ವೀರಗಾಸೆ ಸಂಪ್ರದಾಯ ಮತ್ತು ಕಲೆಗೆ ಒಲಿದಿರುವುದರಿಂದ ಕೃಷಿಯ ನಡುವೆಯೇ ವೀರಗಾಸೆ ವ್ಯವಸಾಯವನ್ನೂ ಮಾಡುತ್ತಿದ್ದಾರೆ. ವೀರಗಾಸೆಯನ್ನು ನಂಬಿ ಬದುಕುವುದು ಉಂಟೆ? ಏಕೆಂದರೆ ವರ್ಷಕ್ಕೆ ತುಂಬಾ ಬ್ಯುಸಿ ಕಲಾವಿದ ಎನಿಸಿಕೊಂಡವರೂ 50 ರಿಂದ 60 ಸಾವಿರ ಸಂಪಾದಿಸುವಲ್ಲಿ ಸುಸ್ತಾಗುತ್ತಾರೆ. ಅಂದರೆ ತಿಂಗಳಿಗೆ 5 ರಿಂದ 6 ಸಾವಿರ ಆದಾಯ! ಇದಕ್ಕಾಗಿ ಊರು, ರಾಜ್ಯದ ಮೂಲೆ ಮೂಲೆಗಳನ್ನು ಹಗಲು ರಾತ್ರಿ ಎನ್ನದೆ ಸುತ್ತಬೇಕು.

ಉತ್ಸವಗಳಲ್ಲಿ ಮುಂದೆವೀರಗಾಸೆ ನೃತ್ಯ ಮದುವೆ, ಗೃಹ ಪ್ರವೇಶಗಳಂತಹ ಶುಭ ಸಂದರ್ಭಗಳಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿತ್ತು. ವೀರಗಾಸೆಯವರು ಹೊಸ ಮನೆಗೆ ನುಗ್ಗಿದರೆ ಅಲ್ಲಿರುವ ದುಷ್ಟಶಕ್ತಿಗಳು ಓಡಿ ಹೋಗುತ್ತವೆ ಎನ್ನುವ ನಂಬಿಕೆ ಇದೆ. ಇಂಥ ನಂಬಿಕೆಯೇ ವೀರಗಾಸೆ ನೃತ್ಯ ಪ್ರಕಾರವನ್ನು ಇನ್ನೂ ಉಳಿಸಿಕೊಂಡು ಬರುತ್ತಿದೆ!

ಕೆಲವು ವರ್ಷಗಳಿಂದ ವೀರಗಾಸೆ ಹೆಚ್ಚಾಗಿ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುತ್ತಿದೆ. ಮೆರವಣಿಗೆ, ರಾಜ್ಯೋತ್ಸವ ಮತ್ತು ಧಾರ್ಮಿಕ ಸಮಾರಂಭಗಳೇ ಇರಲಿ, ಅಲ್ಲಿ ವೀರಗಾಸೆ ನೃತ್ಯ ಕಡ್ಡಾಯ ಎನ್ನುವಂತಾಗಿದೆ. ಹೀಗಾಗಿ ವೀರಗಾಸೆ ಕಲಾವಿದರು ನಾಲ್ಕು ಕಾಸಿನ ಮುಖ ನೋಡುವಂತಾಗಿದೆ. ಇಲ್ಲದೇ ಹೋದರೆ ಇವರು ಮದುವೆ, ಗೃಹ ಪ್ರವೇಶ ಮಾಡುವವರ ಕರೆಗಾಗಿ ಕಾಯುತ್ತಾ ಕೂರಬೇಕು.

ಗೌರವ, ಮನ್ನಣೆ ನೀಡಿಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರನ್ನು ಸರಿಯಾಗಿ ನಡೆಸಿ ಕೊಳ್ಳುವುದಿಲ್ಲ ಎನ್ನುವವರ ಪಟ್ಟಿಗೆ ವೀರಗಾಸೆ ಕಲಾವಿದರೂ ಸೇರುತ್ತಾರೆ. ಇನ್ನು ಸಂಘ, ಸಂಸ್ಥೆಗಳು ಹಬ್ಬ, ಜಾತ್ರೆ, ಉತ್ಸವ, ಸಮಾರಂಭಗಳ ಸಮಯದಲ್ಲಿ ಕರೆಸುತ್ತಾರೆ. ಕೆಲವರು ಪ್ರೀತಿಯಿಂದಲೇ ನಡೆಸಿಕೊಂಡರೆ, ಹಲವರು ದುಡ್ಡು ಕೊಟ್ಟಿಲ್ಲ ಎನ್ನುತ್ತಾರೆ. ಆದರೆ ನಮ್ಮ ಸ್ಥಿತಿಯನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಕಲಾವಿದರು ಬೇಸರದಿಂದಲೇ ಹೇಳುತ್ತಾರೆ.

ಈ ತಂಡದಲ್ಲಿರುವ ಎಲ್ಲ ಕಲಾವಿದರೂ ಮೈಸೂರು ದಸರಾ ಉತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಆರಂಭದಲ್ಲಿ ಜಂಬೂ ಸವಾರಿ ಮೆರವಣಿಗೆಯಲ್ಲಿ ವೀರಾವೇಷದಿಂದ ಹೆಜ್ಜೆಹಾಕಿ ಜನರಿಂದ `ಸೈ` ಎನಿಸಿಕೊಳ್ಳಲು ತುದಿಗಾಲ ಮೇಲೆ ನಿಲ್ಲುತ್ತಿದ್ದ ಕಲಾವಿದರು ಐದಾರು ದಸರಾ ಉತ್ಸವದಲ್ಲಿ ಪಾಲ್ಗೊಂಡ ಮೇಲೆ ಉತ್ಸಾಹವನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ಇದಕ್ಕೆ ಕಾರಣ, ಸರ್ಕಾರ ಜಾನಪದ ಕಲಾವಿದರನ್ನು ನಿಕೃಷ್ಟವಾಗಿ ಕಾಣುವುದು.

`ಇಪ್ಪತೈದು ಕೆ.ಜಿ ತೂಕದ ವೇಷಭೂಷಣವನ್ನು ಹಾಕಿಕೊಂಡು ಬಿಸಿಲು, ಮಳೆಯನ್ನು ಲೆಕ್ಕಿಸದೆ ಆರೇಳು ಕಿಲೋಮೀಟರ್ ಪ್ರದರ್ಶನ ನೀಡುತ್ತೇವೆ. ಆದರೆ ಸವಲತ್ತು ಮತ್ತು ಸಂಭಾವನೆ ವಿಚಾರದಲ್ಲಿ ನಮ್ಮದು ಕೊನೆಯ ಸ್ಥಾನ` ಎಂದು ಕಿರಾಳು ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಕಷ್ಟ, ಸುಖ, ನೋವು, ನಲಿವು, ಅವಮಾನ, ಸನ್ಮಾನ ಯಾವ ಕ್ಷೇತ್ರವನ್ನು ಬಿಟ್ಟಿದೆ ಹೇಳಿ? ಅದೇ ರೀತಿ ವೀರಗಾಸೆಯನ್ನೂ ಬಿಟ್ಟಿಲ್ಲ. ಆದರೂ ಹಳ್ಳಿಗಾಡಿನ ಯುವ ಮನಸ್ಸುಗಳು ಮತ್ತೆ ಮತ್ತೆ ವೀರಗಾಸೆಯ ವೇಷವನ್ನು ತೊಟ್ಟು ವಚನಗಳನ್ನು ಹೇಳುತ್ತಾ, ವೀರಾವೇಷದಿಂದ ಕುಣಿದು, ಜನರಿಂದ ಸೈ ಎನಿಸಿಕೊಳ್ಳುವುದನ್ನು ಬಯಸುತ್ತಲೇ ಇವೆ. ಆದರೆ ಸಮಾಜ, ಸರ್ಕಾರ ಮಾತ್ರ ಜಾನಪದ ಕಲಾ ಪ್ರಕಾರ ಮತ್ತು ಕಲಾವಿದರನ್ನು `ಬಡವರು` `ಹಳ್ಳಿಗರ ಕಲೆ` ಎನ್ನುವಂತೆ ನೋಡುತ್ತಿವೆ.

ಪಂಡಿತರು, ವಿದ್ವಾಂಸರಿಗೆ ಲಕ್ಷ ಲಕ್ಷ ರೂಪಾಯಿ ಸಂಭಾವನೆ ಕೊಟ್ಟು ಐಷಾರಾಮಿ ಹೋಟೆಲ್‌ಗಳಲ್ಲಿ ಇಳಿಸಿ, ಹವಾನಿಯಂತ್ರಿತ ಕಾರುಗಳಲ್ಲಿ ಅವರನ್ನು ವೇದಿಕೆ ಬಳಿಗೆ ಕರೆ ತರುತ್ತಾರೆ. ಆದರೆ ಈ ನೆಲದ ಜನಪದರ ಬದುಕಿನಿಂದ ಹುಟ್ಟಿ ಬಂದಿರುವ ಜಾನಪದ ಕಲೆಯನ್ನು ಬದುಕಾಗಿಸಿಕೊಂಡಿರುವವರನ್ನು ನೋಡುವ ಮನೋಭಾವ ಬದಲಾಗಬೇಕು.

ಆಕರ್ಷಕ ವೇಷಭೂಷಣವೀರಗಾಸೆಗೆ ವೀರಭದ್ರ ಕುಣಿತ ಎನ್ನುವ ಹೆಸರೂ ಇದೆ. ಹೆಚ್ಚಾಗಿ ಶಿವಾರ್ಚಕರು ಈ ಕಲೆಯನ್ನು ವಂಶಪಾರಂಪರ್ಯವಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪುರವಂತರು ಹೆಸರಿನಿಂದ ಕರೆಯಲಾಗುತ್ತದೆ.

ಮೈಸೂರು ಭಾಗದ ವೀರಗಾಸೆ ಕಲಾವಿದರು ಆಕರ್ಷಕ ವೇಷಭೂಷಣದೊಂದಿಗೆ ಪ್ರದರ್ಶನ ನೀಡುವುದರಿಂದ ಜನಮನವನ್ನು ಗೆಲ್ಲುತ್ತಿದ್ದಾರೆ. ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಾರೆ.

ತಲೆ ಮೇಲೆ ಕಿರೀಟ, ಕೊರಳಿಗೆ ರುದ್ರಾಕ್ಷಿ ಮಾಲೆ, ಎದೆಗೆ ವೀರಭದ್ರನ ಕವಚ, ರುಂಡ ಮಾಲೆ, ತೋಳಲ್ಲಿ ನಾಗಸರ್ಪ, ತಲೆಯ ಚಂಡಮೃಗದ ಬಾಲ, ಕೀರ್ತಮುಖಗಳು, ಹಣೆಗೆ ವಿಭೂತಿ, ಕಿವಿಗೆ ನಾಗಕೊಂಡಲಿ, ಮುಂಗೈಯಲ್ಲಿ ಅರಿದಾಳು ಕೀರ್ತಮುಖ, ಕೈಯಲ್ಲಿ ಕತ್ತಿ, ಬಾಕು, ಗುರಾಣಿ ಹಿಡಿದು ವೀರಭದ್ರನ ಒಡಪುಗಳನ್ನು ಹೇಳುತ್ತಾ, ದಕ್ಷಬ್ರಹ್ಮ, ರೇವಣ್ಣ ಸಿದ್ದೇಶ್ವರ, ಮಾರುತಿ ಲಿಂಗಧಾರಣೆ, ಮಲೈ ಮಹದೇಶ್ವರ, ಶರಬವತಾರದ ಕಥೆಗಳನ್ನು ಹೇಳುತ್ತಾರೆ.


ವೀರಗಾಸೆ ಹುಟ್ಟುದಕ್ಷಬ್ರಹ್ಮನ ಮಗಳು ದಾಕ್ಷಾಯಿಣಿ ಈಶ್ವರನ ಹೆಂಡತಿ. ಈಕೆ ತಂದೆಯ ಇಷ್ಟಕ್ಕೆ ವಿರುದ್ಧವಾಗಿ ಈಶ್ವರನನ್ನು ಮದುವೆಯಾಗಿರುತ್ತಾಳೆ. ಹೀಗಾಗಿ ದಕ್ಷಬ್ರಹ್ಮ ತಾನು ಮಾಡುವ ಯಜ್ಞಕ್ಕೆ ಮಗಳನ್ನು ಆಹ್ವಾನಿಸುವುದಿಲ್ಲ. ವಿಷಯ ತಿಳಿದ ದಾಕ್ಷಾಯಿಣಿ ತಂದೆ ನಡೆಸುತ್ತಿರುವ ಯಜ್ಞದಲ್ಲಿ ಪಾಲ್ಗೊಳ್ಳಲು ತೆರಳುತ್ತಾಳೆ.

ಅಲ್ಲಿ ದಕ್ಷಬ್ರಹ್ಮ ಮಗಳು ದಾಕ್ಷಾಯಿಣಿ ಮತ್ತು ಅಳಿಯ ಈಶ್ವರನನ್ನು ನಿಂದಿಸುತ್ತಾನೆ. ಪತಿ ನಿಂದನೆಗೆ ನೊಂದ ದಾಕ್ಷಾಯಿಣಿ ಯಜ್ಞಕುಂಡಕ್ಕೆ ಹಾರಿ ಪ್ರಾಣ ಕಳೆದುಕೊಳ್ಳುತ್ತಾಳೆ. ಈ ವಿಷಯ ತಿಳಿದ ಈಶ್ವರ ರುದ್ರಾವತಾರ ತಾಳುತ್ತಾನೆ. ತನ್ನ ಹಣೆಯಲ್ಲಿ ಮೂಡುವ ಬೆವರನ್ನು ತೆಗೆದು ಒಗೆಯುತ್ತಾನೆ. ಆ ಬೆವರಿನಲ್ಲಿ ಹುಟ್ಟುವವನೇ ವೀರಭದ್ರ. ಈತ ವೀರಾವೇಷದಿಂದ ಗಣಗಳ ಜೊತೆ ನುಗ್ಗಿ ಯಜ್ಞವನ್ನು ಹಾಳು ಮಾಡಿ ದಕ್ಷಬ್ರಹ್ಮನ ತಲೆಯನ್ನು ಕತ್ತರಿಸಿ ಯಜ್ಞ ಕುಂಡಕ್ಕೆ ಹಾಕುತ್ತಾನೆ. ಹೀಗೆ ವೀರಗಾಸೆ ನೃತ್ಯ ಹುಟ್ಟಿಕೊಂಡಿತು.

ಗುರು ಕಿರಾಳು ಮಹೇಶ್ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವೀರಗಾಸೆ ಕಲಾವಿದರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಿರಾಳು ಮಹೇಶ್ ಕಾರಣ. ಇವರು ಬಿಡುವಿನ ವೇಳೆಯಲ್ಲಿ ಆಸಕ್ತ ಮತ್ತು ಉತ್ಸಾಹಿ ತರುಣರಿಗೆ ವೀರಗಾಸೆ ನೃತ್ಯವನ್ನು ಕಲಿಸುತ್ತಿದ್ದಾರೆ. ಸ್ವತಃ ತಂಡವನ್ನು ಕಟ್ಟಿಕೊಂಡು ಊರು-ಕೇರಿ, ರಾಜ್ಯ, ಹೊರ ರಾಜ್ಯಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.

ಇವರು ಹಲವು ಬೇಸಿಗೆ ಶಿಬಿರಗಳಲ್ಲಿ ಎಳೆಯರಿಗೆ ವೀರಗಾಸೆ ನೃತ್ಯವನ್ನು ಹೇಳಿಕೊಡುತ್ತಿದ್ದಾರೆ. ಕಿರಾಳು ಮಹೇಶ್ ಅವರ ಪುತ್ರ ಕೆ.ಎಂ.ಭಾಸ್ಕರ್ ಜೆಎಸ್‌ಎಸ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ಅಭ್ಯಾಸ ಮಾಡುತ್ತಿದ್ದಾರೆ. ಇವರೂ ಸಹ ವೀರಗಾಸೆ ನೃತ್ಯವನ್ನು ಕಲಿತಿದ್ದಾರೆ. ಮಹೇಶ್ ಗರಡಿಯಲ್ಲಿ 150 ಕ್ಕೂ ಹೆಚ್ಚು ಮಂದಿ ಪಳಗಿದ್ದಾರೆ.

ಸೋಮವಾರ, ನವೆಂಬರ್ 19, 2012

ನುಡಿಸಿರಿಯಲ್ಲಿ ಕರಾವಳಿಯ ಕೋಮುವಾದ ಸಹಜ ಜೀವನ ಶೈಲಿಯಾಗಿ ಬೆಳೀತಿರುವ ಅಪಾಯದ ಬಗ್ಗೆ ಡಾ.ವಿನಯಾ ಅವರ ಆತಂಕ ಮತ್ತು ಸ್ಪಂದನೆ:


ನುಡಿಸಿರಿಯಲ್ಲಿ ಕರಾವಳಿಯ ಕೋಮುವಾದ ಸಹಜ ಜೀವನ ಶೈಲಿಯಾಗಿ ಬೆಳೀತಿರುವ ಅಪಾಯದ ಬಗ್ಗೆ ಡಾ.ವಿನಯಾ ಅವರ ಆತಂಕ ಮತ್ತು ಸ್ಪಂದನೆ:
 

 
 
 ’ಗೌರಿ ಲಂಕೇಶ’ದಲ್ಲಿ ಜಿ. ರಾಜಶೇಖರ ಮತ್ತು ಕೆ. ಫಣಿರಾಜ್ ಅವರ ಲೇಖನಗಳನ್ನು ಓದಿದ ಮೇಲೆ ನುಡಿಸಿರಿಯ ಕವಿಗೋಷ್ಠಿಗೆ ಒಪ್ಪಿದ್ದ ನನಗೆ ದಿಗಿಲಾಯಿತು. ಎಲ್ಲ ಸಂದಿಗ್ಧಗಳಾಚೆ ಕೊನೆಗೂ ಭಾಗವಹಿಸಿದೆ. ಆ ವೇದಿಕೆ, ಆ ಶಿಸ್ತು, ಆ ಸಂಭ್ರಮ, ಎಲ್ಲ ಸುಖವೇ ಎಂಬ ಭಾವಮೂಡಿಸುವ ಪರಿಸರದಲ್ಲಿ ನನ್ನ ತಲೆಮಾರಿನ ಬರಹಗಾರರ ಎದುರಿಗಿರುವ ತಲ್ಲಣವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಹೇಗೆ ನಿರೂಪಿಸಲಿ? ನೆಲ ಒಡೆದು ಬೀಜ ಮೊಳೆದೋರುವ ಸಂಕಟವನ್ನು ಅನುಭವಿಸಿದೆ. ವೇದಿಕೆಯ ಮೇಲಿದ್ದ ಅನಂತಮೂರ್ತಿಯವರನ್ನು ನಿಸಾರ್ ಅವರನ್ನು ಬರಗೆಟ್ಟು ನೋಡುತ್ತಿದ್ದೆ. ದೊಡ್ಡವರು ಒಂದು ಸುಳುವು ಕೊಟ್ಟರೆ ಆ ಸೂರುಹಿಡಿದು ಚಣಹೊತ್ತು ಸಂಭಾಳಿಸಿಯೇನು. ಅಂತಹ ಯಾವ ಸುಳುವೂ ಸಿಗಲಿಲ್ಲ. ಮತ್ತೆ ದಿಕ್ಕೆಡುವಿಕೆ. ಮತ್ತೊಮ್ಮೆ ಅನ್ನಿಸಿತು. ಎಲ್ಲ ಅವರೇ ಮಾಡಬೇಕೆ? ಈ ಇಳಿವಯದಲ್ಲೂ? ನಮಗೆಲ್ಲ ಏನಾಗಿದೆ? ನನ್ನೊಳಗೆ ಕಡಲ ಅಲೆಯಂತೆ ಏಳುವ ಬೀಳುವ ಅರಗುವ ಮತ್ತೆ ಏಳುವ ಪ್ರಶ್ನೆಗಳು, ಮಾತುಗಳು.

 ಕರಾವಳಿಯಲ್ಲಿ ಕೋಮುವಾದ ಸಹಜ ಜೀವನ ಶೈಲಿಯಾಗಿ ಬೆಳೀತಿರುವ ಅಪಾಯ ಮತ್ತು ಸಾಹಿತ್ಯ ಕಲೆಗಳನ್ನು ಜನಬದುಕಿನಿಂದ ಹೊರತೆಗೆದು ದೇವರ ಮೂರ್ತಿಯಂತೆ ಪವಿತ್ರಗೊಳಿಸಿ ಪ್ರತಿಷ್ಠಾಪಿಸುವ ಸಂಕಟವನ್ನು ಸಮೀಕರಿಸಿಕೊಳ್ಳಬೇಕಿತ್ತು. ಬಾಲ್ಯದಲ್ಲಿ ಕಂಡ ಕೂಡುಕಟ್ಟಿನ ಕಡಲ ಸಂಸ್ಕೃತಿ ಸ್ಮೃತಿಕೋಶದಲ್ಲಿ ಜೀವಂತವಾಗಿತ್ತು. ಕಾವ್ಯವು ವರ್ತಮಾನದಲ್ಲಿ ಪ್ರೇರಕಗೊಳ್ಳುವ ಎಳೆ ಹಿಡಿದು ಕರಾವಳಿಯಲ್ಲಿ ಕೋಮುವಾದ ಬೆಳೆಯಲು ನಾಗರಿಕ ಪ್ರಜ್ಞೆಯ ಸಭ್ಯತೆಯ ಪಾಲುದಾರಿಕೆಯನ್ನು ನೆನಪಿಸಿದೆ.

 ಜನ ಸ್ಪಂದಿಸಿದ ರೀತಿ ಅಚ್ಚರಿಯದಾಗಿತ್ತು. ವೇದಿಕೆಯಲ್ಲಿದ್ದ ಡಾ. ಮೋಹನ ಆಳ್ವ ಅವರು ’ಏನನ್ನಬೇಕೋ ತಿಳೀತಿಲ್ಲ’ ಅಂತ ವಾತ್ಸಲ್ಯ ಮತ್ತು ಗೌರವದಿಂದ ಹೇಳಿದರು. ವಿದ್ಯಾರ್ಥಿಗಳು ತುಂಬ ಭಾವೋದ್ವೇಗಗೊಂಡಿದ್ದರು. ಒಂದಿಬ್ಬರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಎಲ್ಲಿಂದಲೋ ಬಂದವರು ಅಲ್ಲಿಯವರು ಎಷ್ಟೆಲ್ಲ ಜನ ತುಂಬ ಡಿಸ್ಟರ್ಬ ಆಗಿದ್ದರು. ಮಾರನೇ ದಿನದ ಸಂವಾದದಲ್ಲಿ ಡಾ. ಮೋಹನ ಅಳ್ವ ಅವರು ಕೋಮುವಾದವನ್ನು ತಡೆವ ಪ್ರಯತ್ನದಲ್ಲಿ ನಿಮ್ಮೊಂದಿಗೆ ಪಾಲುದಾರ ಅಂತ ಖಚಿತವಾಗಿ ಹೇಳಿದರಂತೆ.

 ’ಎಂತಹ ಬಂಡವಾಳಶಾಹಿಯೂ ಒಂದು ಕ್ಷಣದ ಉದ್ವೇಗದಲ್ಲಿ ಕ್ರಾಂತಿಗೆ ಜಯವಾಗಲಿ ಎಂದುಬಿಡಬಲ್ಲ’ ಎಂಬ ಸುಡುಸತ್ಯವನ್ನು ನೆನಪಿಟ್ಟುಕೊಂಡೂ ಈ ಘಟನೆ ನನ್ನೊಳಗೊಂದು ಅಭಿಪ್ರಾಯವನ್ನು ರೂಪಿಸಿದೆ. ಜನ ನಾವಂದುಕೊಂಡಷ್ಟು ನಿರ್ದಯಿಗಳಲ್ಲ. ಮನುಷ್ಯನ ಸಾಮರಸ್ಯದ ತುಡಿತ ಅನಾದಿಯದ್ದು, ಸಜೀವವಾದದ್ದು. ಅದನ್ನು ಕೋಮುವಾದದ ಎಂತಹ ಹತಾರವೂ ನಿರ್ಮೂಲನ ಮಾಡಲಾರದು. ಬರಹಗಾರರಾದ ನಾವು ನಮ್ಮ ನಿಜತುಡಿತವನ್ನು ಜನರೊಂದಿಗೆ ಹಂಚಿಕೊಳ್ಳುತ್ತಿಲ್ಲ. ಸಾಹಿತ್ಯ-ಕಲೆಯ ಕುರಿತು ಮಾತನಾಡುವಾಗೆಲ್ಲ ನಮಗೂ ತಿಳಿಯದ ಅಮೂರ್ತ ಮಾತುಗಳನ್ನೇ ಆಡುತ್ತೇವೆ. ಆಗೆಲ್ಲ ಜನರಿಂದ ನಮ್ಮನ್ನು ಬೇರೆಯಾಗಿಸಿಕೊಳ್ಳುವ ಅಹಂಕಾರವು ಬುಸುಗುಡುತ್ತಿರುತ್ತದೇನೋ. ಯಾವ ಮಗುವೂ ಜಾತಿ-ಧರ್ಮದ ಸಂಕೋಲೆಯನ್ನು ಹೊತ್ತು ಜನಿಸಲಾರದು. ನಾವು ಉಸಿರಾಡುವ ಗಾಳಿ ಪ್ರತಿಯೊಂದು ಜೀವಿಯ ಒಳಹೊಕ್ಕು ಹೊರಬರುತ್ತದೆಂಬ ವಿಜ್ಞಾನದ ಮೊದಲ ಪಾಠವನ್ನು ನೆನಪಿಸಲು ನಮ್ಮ ಘನತೆ ಅಡ್ಡಬರುತ್ತದಲ್ಲವೇ? ಕಾರ್ನಾಡರು ನೈಪಾಲ್‌ರನ್ನು ಆಕ್ಷೇಪಿಸಿರುವುದು ಬರಹಗಾರನಿಗಿರಬೇಕಾದ ಕನಿಷ್ಠ ಬದ್ಧತೆಯ ಕುರಿತು. ಆದರೆ ಚರ್ಚೆಯ ಕೇಂದ್ರವನ್ನು ತಪ್ಪಿಸುವ, ಸಾಹಿತ್ಯ ಕ್ಷೇತ್ರದಲ್ಲಿ ಆಗಾಗ ನಡೆಯುವ ಸರಳ ಜಗಳದ ಮಟ್ಟಕ್ಕೆ ಇಳಿಸುವ ಪ್ರಯತ್ನಗಳು ಪೊಗದಸ್ತಾಗಿಯೇ ನಡೆಯುತ್ತಿವೆ. ಇಂತಹ ಸ್ಥಿತಿಯಲ್ಲಿ ಮೌನ ಎಂಬ ಮಹಾಪಾಪದಿಂದ ನಮ್ಮನ್ನು ಮೇಲೆತ್ತಿಕೊಳ್ಳುವುದು ಅಗತ್ಯ ಅಲ್ಲವೇ? ಚಾಮಸ್ಕಿ - ಮನುಷ್ಯರ ಬದುಕಿಗೆ ಸಂಬಂಧಿಸಿದ ವಾಸ್ತವಿಕ ಸತ್ಯಗಳನ್ನು ತಿಳಿಸುವ ಮಧ್ಯವರ್ತಿಯಾಗಿ ಕೆಲಸ ಮಾಡುವುದು ಬರಹಗಾರರ ನೈತಿಕ ಜವಾಬ್ದಾರಿ ಎಂದಿದ್ದು ನೆನಪಾಗ್ತಿದೆ.

 ಆವತ್ತು ನಾನೇನೂ ಮಹಾ ಹೇಳಿರಲಿಲ್ಲ. ಸೇರಿದ್ದ ಸಂವೇದನಾಶೀಲರು ತಮ್ಮ ತಮ್ಮ ಅನುಭವಗಳಲ್ಲಿ, ವರಸೆಗಳಲ್ಲಿ ಮಾತನ್ನು ಮರುಸೃಷ್ಟಿಸಿಕೊಂಡರು. ಆಡದೇ ಉಳಿದ ಎಲ್ಲವನ್ನೂ ಅವರು ತಮ್ಮೊಂದಿಗೆ ತಾವು ಮಾತಾಡಿಕೊಂಡರು. ನನ್ನ ಕವಿತೆಯ ಅರ್ಥಲಯವನ್ನು ಮಿದ್ದು ನಾದದ ಉಸಿರು ತುಂಬಿ ಹಾಡಿದ ಕಲಾವತಿ ದಯಾನಂದ್ ಮತ್ತು ತಂಡದವರು ಮಾತನ್ನು ಮುಂದುವರಿಸಿದ್ದೇ ಅಲ್ಲವೇ? ದೇವನೂರು ಹೇಳುವ ’ನನ್ನ ಕಿರುಬೆರಳಗಾತ್ರದ ಬರಹ...’ ಎಂಬ ಮಾತು ಆಯಾಚಿತವಾಗಿ ನೆನಪಾಗ್ತಿದೆ. ಕಿರುಬೆರಳ ಉಗುರಿನಷ್ಟೂ ಅಲ್ಲದ ಅಲ್ಪ ಮಾತು ಮನಸ್ಸುಗಳಾಳಕ್ಕಿಳಿದು ಮೀಟಬಲ್ಲುದಾದರೆ, ನಾವೆಲ್ಲ ಮಾತಾಡುವುದು, ಬರೆಯುವುದು ಯಾವ ಕಂಪನವನ್ನೂ ಉಂಟು ಮಾಡದು ಎನ್ನಬಹುದೆ?

ಡಾ. ವಿನಯಾ
---------

ಕವಿಸಮಯ - ಕವಿ ನಮನ

ನನ್ನ ಕಾವ್ಯ ಪ್ರೇರಣೆಗಳು
 
 ಬರಹ ನನಗೆ ಜೀವದ್ರವ್ಯ. ಈ ಜೀವದ್ರವ್ಯಕ್ಕೆ ಧಾತುವನ್ನು ಎರೆದ ಸಂಗತಿಗಳು ಅಗಣಿತ. ಆ ಅಸಂಖ್ಯ ಜೀವಸೆಲೆಗಳನ್ನು ನೆನೆಯುವುದು ಹೇಗೆ? ನೆನೆಯದಿರುವುದು ಹೇಗೆ? ನಾನು ಕಡಲ ದಂಡೆಯಲಿ ಬೆಳೆದವಳು. ಉಪ್ಪುನೀರ ಹೊಳೆಯ ದಡದಲ್ಲೇ ಸಿಹಿನೀರ ಬಾವಿಯನ್ನು ಕಂಡಿದ್ದೆ. ಗಜನಿ ಭೂಮಿಯ ಉಪ್ಪು ಉಂಡೇ ನೂರಾರು ತೆಂಗುಗಳನ್ನು ಹೆತ್ತ ಮರದ ನೆರಳಲ್ಲಿ ಬೆಳೆದಿದ್ದೆ. ಕರಾವಳಿಯ ಕೂಡು ಬದುಕಿನ ಅಸಂಖ್ಯ ನೆನಹುಗಳು ನನ್ನೊಳಗಿವೆ.

 ನನಗೆ ಓದಿನ ರುಚಿ ಹಚ್ಚಿ ಕಾವ್ಯ ಪರಂಪರೆಯೊಂದಿಗೆ ಸಂಬಂಧ ಹಚ್ಚಿದವ ನನ್ನ ಅಜ್ಜ. ತಿಳಿಯಲಾರದ ವಯದಲ್ಲಿಯೇ ಕುಮಾರವ್ಯಾಸ ಭಾರತ ಓದಲು ಹಚ್ಚಿದ್ದ. ನನ್ನ ಅಜ್ಜಿ ದೊಡ್ಡ ಜಮೀನ್ದಾರೀ ಕುಟುಂಬದಲ್ಲಿ ಹನ್ನೆರಡು ಮಕ್ಕಳ ತಾಯಿ, ತನ್ನ ಮಕ್ಕಳು ದೊಡ್ಡ ದೊಡ್ಡ ಕುಳಗಳಾಗಿದ್ದ ಕಾಲದಲ್ಲಿ ತನ್ನ ಹರಿದ ಸೀರೆಗೆ ತೇಪೆ ಹಚ್ಚುತ್ತಿದ್ದಳು. ಅಂಗಳದಲ್ಲಿ ಬೆಳೆಸಿದ್ದ ಅಬ್ಬಲಿಗೆ ಹೂದಂಡೆ ಕಟ್ಟಿ ಬುಟ್ಟಿಯಲ್ಲಿಟ್ಟು ಹೊರಗೆ ಕಟ್ಟೆಯ ಮೇಲಿಡುತ್ತಿದ್ದಳು. ರಸ್ತೇಲಿ ಹೋಗಿ ಬರೋರು ಒಂದು ದಂಡೆಗೆ ಹತ್ತು ಪೈಸೆಯಂತೆ ಬುಟ್ಟೀಲಿ ಹಾಕೋರು. ಎಂದೂ ಲೆಕ್ಕ ತಪ್ಪಿದ್ದಿಲ್ಲ! ಎಂಥ ನಿಯತ್ತಿತ್ತು ಬದುಕಿಗೆ. ಒಮ್ಮೆ ನಮ್ಮ ಮಾವಂದಿರೆಲ್ಲ ಸೇರಿ ಅಜ್ಜಿಯನ್ನು ’ಇಂಥ ಅಪಮಾನದ ಕೆಲಸ’ಕ್ಕಾಗಿ ತರಾಟೆಗೆ ತಗೊಂಡಿದ್ರು. ಅಜ್ಜಿ ಮಾತ್ರ ತಣ್ಣಗೆ ಹೇಳಿದಳು. ’ನಂಗೂ ಸಾಕಾಗಿದೆ. ನನ್ನ ಹೆಣಕ್ಕಾಕೋ ವಸ್ತ್ರ ಆದ್ರೂ ನನ್ನದಾಗಿರ‍್ಲಿ. ಪ್ರಾಯಶಃ ನಾ ಕೇಳಿದ ಸ್ತ್ರೀವಾದದ ಮೊದಲ ಪಾಠ ಅದು. ಇವೆಲ್ಲ ನನ್ನ ಭಾವಕೋಶವನ್ನು ರೂಪಿಸಿದ ಸಂಗತಿಗಳು.

 ಇವತ್ತು ನನ್ನ ಅಜ್ಜನ ಮನೆಯ ಕೋಳುಗಂಭವಷ್ಟೇ ಮುರಿದಿಲ್ಲ. ಬದುಕಿನಲ್ಲಿ ನಿಯತ್ತು ವಿಶ್ವಾಸಗಳು ಛಿದ್ರಗೊಂಡಿವೆ. ನೆಲ ಸುಡುಭೂಮಿಯಾಗಿದೆ. ಜಾತಿ, ಉಪಜಾತಿ, ಧರ್ಮಗಳು ಮನುಷ್ಯ ಸಂಬಂಧದ ಆಧಾರಗಳಾಗಿವೆ. ಕಳೆದೆರಡು ದಶಕಗಳಿಂದ ಬರಹದೊಂದಿಗೆ ಅನುಸಂಧಾನಿಸ್ತಿರೋ ನಮ್ಮ ತಲೆಮಾರಿಗೆ ತುಂಬ ಬಿಕ್ಕಟ್ಟಿನ ಕಾಲವಿದು. ಹಿಂಸೆಯ ಸೂಕ್ಷ್ಮ ಸ್ಥೂಲ ಸ್ವರೂಪಗಳು ಮೋಸದ ವಿವಿಧ ಚಹರೆಗಳು ನಮ್ಮ ಪ್ರಜ್ಞೆಯನ್ನು ಅಧೀರತೆಗೂ ಮರೆವಿನ ಮಹಾರೋಗಕ್ಕೂ ತಳ್ತಾ ಇದೆ. ಇಂತಹ ಹಿಂಸೆಯ, ಕ್ರೌರ‍್ಯದ ವರದಿಗಳಿಲ್ಲದ ದಿನ ಓದುವ ನೋಡುವ ವಾರ್ತೆ ಚಪ್ಪೆ ಅನ್ನಿಸುವಷ್ಟು ಹಿಂಸಾರತಿಯ ಕಡೆ ಚಲಿಸ್ತಾ ಇದ್ದೇವೆಯೇ? ಸೃಜನಶೀಲತೆಗಿದು ಬಿಕ್ಕಟ್ಟಿನ ಕಾಲ.

 ಜಗತ್ತು ಕೊಳ್ಳುವವ-ಮಾರುವವ ಎಂಬ ವರ್ಗೀಕರಣದಲ್ಲಿ ಕಳೆದು ಹೋಗುವ ಕೆಡುಕಾಲದಲ್ಲಿ ಬರಹಗಾರನಿಗೆ ತನ್ನ ಸಮುದಾಯ, ಭಾಷೆಗಳೊಂದಿಗೆ ಇರುವ, ಇರಬೇಕಾದ ಸಂಬಂಧದ ಸ್ವರೂಪವೇನು? ಎಂಬ ಪ್ರಶ್ನೆ ನನ್ನನ್ನು ತೀವ್ರವಾಗಿ ಕಾಡುತ್ತದೆ. ಬರಹಗಾರ ಕೂಡ ಬಳಕೆದಾರಿಕೆಯ ಅಸೂಕ್ಷ್ಮವನ್ನು ತನ್ನದಾಗಿಸಿಕೊಳ್ಳುವನೇ? ಬಂಡವಾಳಶಾಹಿ ಮತ್ತು ಪ್ರಭುತ್ವ ಕಲೆ-ಸಾಹಿತ್ಯಗಳಿಗೆ ಪೋಷಣೆಯನ್ನು ನೀಡ್ತಾ ಅದರ ನಿರ್ದೇಶಕ ಯಾಜಮಾನ್ಯವನ್ನು ಪ್ರಕಟಿಸುತ್ತಿರೋದನ್ನ ಕನ್ನಡ ಕಾವ್ಯ ಅನುಭವಿಸಿದೆ.

 ವಿರಾಮ ಕೊಡಿ ಕವಿಗಳಿಗೆ ಕವಿತೆ ಬರೆಯಲು
 ಆದೇಶಿಸುತ್ತಿದ್ದಾನೆ ಹಿಟ್ಲರು

 ಇತ್ತೀಚೆಗೆ ಗಿರೀಶ ಕಾರ್ನಾಡರು ಮುಂಬೈಯ ’ಲಿಟರೇಚರ್ ಅಲೈವ್’ ಎಂಬ ಸಂಸ್ಥೆಯಲ್ಲಿ ನೈಪಾಲ್ ಬಗ್ಗೆ ಎತ್ತಿದ ಪ್ರಶ್ನೆಯನ್ನು ಒತ್ತರಿಸಿ, ಲೇಖಕನು ವಿಷಯದಾಚೆ ಮಾತಾಡಿದ್ಯಾಕೆ? ಎಂಬ ಪ್ರಶ್ನೆಯು ಮುಖ್ಯವಾಗುತ್ತಿರೋದು ಕೂಡ ಇಂತಹದೇ ಬೆಳವಣಿಗೆಯಾಗಿದೆ.

 ಸಾಹಿತ್ಯ-ಕಲೆಯ ಸಂಗತಿಗಳು ಸಂಭ್ರಮದ, ಶುದ್ಧತೆಯ ಕಲಾತ್ಮಕ ವಿನ್ಯಾಸವನ್ನು ಪಡೆದುಕೊಂಡಷ್ಟೂ ಒಟ್ಟೂ ಜನಸಮುದಾಯದಿಂದ ಬೆನ್ನು ತಿರುಗಿಸುವುದು ವಿಪರ‍್ಯಾಸವಲ್ಲವೇ? ಇವತ್ತು ನಾನು ನನ್ನ ತಲೆಮಾರಿನ ಸಂವೇದನಾಶೀಲರ ವಕ್ತಾರಳಾಗಿ ಅವರ ತಲ್ಲಣಗಳನ್ನು ಉಡಿಯಲ್ಲಿ ಕಟ್ಟಿಕೊಂಡು ಬಂದು ನಿಂತಿದ್ದೇನೆ. ನೂರಾರು ನದಿಗಳನ್ನು ಒಡಲೊಳಗಿಟ್ಟುಕೊಂಡು ಕಡಲೆಂಬ ಮತ್ತೊಂದೇ ಘನತೆಯನ್ನು ಬಿತ್ತರಿಸುವ ಸಂಸ್ಕೃತಿಯ ಕೂಡ್ಲ ಇಂದು ಹೊರಜಗತ್ತಿಗೆ ಕೋಮುವಾದದ ಮತೀಯವಾದದ ಉನ್ಮಾದಗಳ ತಾಣವಾಗುತ್ತಿರೋದು ಅತ್ಯಂತ ನೋವಿನ, ಹೇಸಿಕೆಯ ಸಂಗತಿಯಾಗಿದೆ. ಯಾರು ಯಾರೊಂದಿಗೆ ಮಾತನಾಡಬೇಕು, ಯಾರು ಏನನ್ನು ಉಣ್ಣಬೇಕು? ಯಾರು ಏನು ತೊಡಬೇಕು, ಯಾರೊಂದಿಗೆ ಒಡನಾಡಬೇಕು, ಯಾವ ಆಚರಣೆಗಳು ಮೇಲ್ಪಂಕ್ತಿಗೆ ಬರಬೇಕು, ಯಾವುದು ರದ್ದಾಗಬೇಕು... ಇಂತಹ ಜನಬದುಕಿನ ಲಯವನ್ನೇ ತುಂಡರಿಸಿ ನಿಯಂತ್ರಿಸುವ ದಮನಕಾರಿ ಪ್ರವೃತ್ತಿ ಬೆಳೀತಿದೆ. ವಿಚಾರವಂತರೂ, ಪ್ರಜ್ಞಾವಂತರೂ ಆಗಿರುವ ನನ್ನ ಕರಾವಳಿಯ ಜನ ಹಿಟ್ಲರನ ಕಾಲದ ಪ್ರಜೆಗಳಂತೆ ಸಭ್ಯತೆಯ ಮೌನದ ಮಹಾಪಾಪವನ್ನು ಹೊರಬೇಕೆ? ಕೂಡುಕಟ್ಟಿನ ಈ ಬದುಕು ಹೀಗೆ ಧ್ವಂಸಗೊಳ್ಳಬೇಕೆ? ನಮ್ಮ ವರ್ತಮಾನದ ಇಂತಹ ಸವಾಲುಗಳು ಸಂವೇದನಾಶೀಲತೆಯ ಎದುರಿರಿರುವ ಬಿಕ್ಕಟ್ಟುಗಳೇ. ನನ್ನ ಕವಿತೆಯ ಒಂದು ಸಾಲು ;

 ರಸ್ತೆಯಲಿ ಚೆಲ್ಲಿದ ರಕ್ತ ಯಾರದೋ
 ನನಗೆ ಮಾತ್ರ ಹೆರಿಗೆ ಕೋಣೆಯದೇ ನೆನಪು.

 ಅಲ್ಲಮ ಹೇಳುವ ’ಹಿಂದಣ ಅನಂತವನು ಮುಂದಣ ಅನಂತವನು ಒಳಗೊಳ್ಳೋ ಅನ್ವೇಷಕತೆಯನ್ನು ಒಡಲುಗೊಳ್ಳುವುದೆಂತು? ಬೇಟೆಗಾರ ಬಾಣ ಹೂಡಿದ್ದಾನೆ. ಬಾಣ ನಾಟುವವರೆಗೂ ಹಾರುವ ರೆಕ್ಕೆ ಮುರಿದ ಹಕ್ಕಿ ಹಾಡಬೇಕು. ಆ ಹಾಡಿಗೆ ಯಾವ ಛಂದ? ಯಾವ ಲಯ? ಯಾವ ವ್ಯಾಕರಣ?

 ಕಳೆದೊಂದು ವಾರದಿಂದ ಆಳ್ವಾಸ್ ನುಡಿಸಿರಿಯ ಬಗ್ಗೆ ಎದ್ದ ಚರ್ಚೆಗಳು ನನ್ನಂತಹ ಕಿರಿಯಳನ್ನ ತುಂಬ ಡಿಸ್ಟರ್ಬ ಮಾಡಿದೆ. ಕಿರಿಯಳಾದ ನಾನು ಹಿರಿಯರಾದ ತಮ್ಮಲ್ಲಿ ಒಂದು ವಿಜ್ಞಾಪನೆಯನ್ನು ಸಲ್ಲಿಸ್ತಿದ್ದೇನೆ. ಇದು ನಾನು ನನ್ನ ತವರಿಗೆ ಮಾಡೋ ಹಕ್ಕೊತ್ತಾಯ. ಮಂಜುನಾಥನಂತಹ ಮಹಾಜ್ಞಾನಿ ನೆಲೆಯೂರಿದ ಈ ನೆಲದಲ್ಲಿ, ಅಬ್ಬಕ್ಕನ ವೀರಾಳ್ತನದ ಈ ಗಾಳಿಯಲ್ಲಿ, ಸಿರಿಯೆಂಬ ಧೀಮಂತೆಯ ಈ ಮಣ್ಣಲ್ಲಿ ಕೋಮುವಾದ ಹೆಣ್ಣಿನ ಬದುಕಿನ ಹಕ್ಕನ್ನೆಲ್ಲ ಕಸಿಯುತ್ತಿದೆ. ನಮಗೆ ಕೂಡ್ಲ ಎಂದರೆ ಕಾರಂತರು, ವೈದೇಹಿ ಸಾರಾ... ಆಗಿರಬೇಕೆ ವಿನಃ ದಿನಕ್ಕೊಂದು ವಿಪ್ಲವಗಳಿಂದಲ್ಲ. ಡಾ. ಮೋಹನ ಆಳ್ವ ಅವರು ಸಜ್ಜನರು, ಸದ್ವಿವೇಕಿಗಳು, ಸಂಘಟಕರು, ಕರ್ತೃತ್ವಶಾಲಿಗಳು. ಅವರು ಈ ನೆಲದಲ್ಲಿ ಬೆಳೀತಿರೋ ಕೋಮುವಾದವನ್ನು ತಡೆವ ತಡೆಗೋಡೆಯಾಗಬೇಕು. ಇಲ್ಲದಿದ್ದರೆ ನನ್ನಂತಹ ಸಾಮಾನ್ಯ ಕಿರಿಯ ಬರಹಗಾರರು ಈ ವೇದಿಕೆಯಲ್ಲಿ ಭಾಗವಹಿಸಿದ್ದೆ ಎನ್ನುವುದಕ್ಕೆ ಬದುಕಿರುವಷ್ಟು ಕಾಲವೂ ಪಶ್ಚಾತ್ತಾಪ ಪಡುವಂತಾದೀತು. ನಾಮ್‌ಚಾಮಸ್ಕಿಯಂತಹ ಚಿಂತಕ ಹೇಳ್ತಾನೆ. ಭಯೋತ್ಪಾದನೆಯನ್ನು ತಡೆಯುವುದು ಎಂದರೆ ಭಯೋತ್ಪಾದನೆಯಲ್ಲಿ ಭಾಗವಹಿಸುವುದನ್ನು ತಡೆಯುವುದು. ಇವತ್ತು ಭಯೋತ್ಪಾದನೆ ಹೊರ ಸತ್ಯವಾದರೆ ಅದನ್ನ ಎದುರಿಸಬಹುದು. ನಾವೇ ಭಯೋತ್ಪಾದಕರಾಗುವ ವಿಚಾರವನ್ನು ಎದುರಿಸುವುದು ಹೇಗೆ? ಸಾಹಿತ್ಯ ಇದರಿಂದ ಆಚೆಗಿನದಲ್ಲ ಅಂತ ನನ್ನ ನಂಬಿಕೆ. ನಮಸ್ಕಾರ.

-ಡಾ. ವಿನಯಾ

ಮಂಗಳವಾರ, ನವೆಂಬರ್ 13, 2012

ದೀಪಾವಳಿಗೆ ಲಂಕೇಶ್ ಮಾತುಗಳು…

ದೀಪಾವಳಿಗೆ ಲಂಕೇಶ್ ಮಾತುಗಳು…


ನಮ್ಮ ಹಳ್ಳಿಗಳಲ್ಲಿ ಮತ್ತೊಮ್ಮೆ ದೀಪಗಳು ವಿಶ್ವಾಸದಿಂದ ಪ್ರೀತಿಯಿಂದ ಉರಿಯಬೇಕಾಗಿದೆ. ನಮ್ಮ ಊರುಗಳು ಮತ್ತೆ ಜನಕ್ಕೆ ಸೇರಬೇಕಾಗಿದೆ. ಗ್ರಾಮದ ಮನುಷ್ಯನ ಎದೆಯಲ್ಲಿ ಮೂಡಿರುವ ಛಿದ್ರ ಮಾಯವಾಗಿ ಆತನ ದುಡಿಮೆಗೆ ಸ್ಪೂರ್ತಿ ಬಂದು ಆತನು ಗ್ರಾಮವನ್ನು ಪ್ರೀತಿಸುವಂತೆ ಆಗಬೇಕಾಗಿದೆ. ಈತ ಪಡೆಯುತ್ತಿರುವ ವ್ಯಂಗ್ಯ, ವೈಚಾರಿಕತೆ,ಯಾಂತ್ರಿಕತೆಯ ಜೊತೆಗೇ ಆತನಿಗೆ ಮತ್ತೊಮ್ಮೆ ಜೀವನದ ಗೂಢ ಮಾಂತ್ರಿಕತೆ ದಕ್ಕಿ, ಹೊಲಗದ್ದೆ ಹಿತ್ತಲುಮನೆ ಮತ್ತೊಮ್ಮೆ ಒಂದಾಗಿ ಪ್ರಕೃತಿಯ ಸಹಕಾರ ದೊರೆತು ಅವನ ಪರಿಸರದ ಬಗ್ಗೆ ಆತನಲ್ಲಿ ಹೆಮ್ಮೆ ಮೂಡಬೇಕಾಗಿದೆ.

ಈ ಹಬ್ಬದಂದು ಇದು ಮೊದಲ ಹಂತದ ಚಿಂತನೆ

-ಪಿ.ಲಂಕೇಶ್, ದೀಪಾವಳಿ ವಿಶೇಷಾಂಕ ಅಕ್ಟೋಬರ್ 1984

ಶನಿವಾರ, ನವೆಂಬರ್ 3, 2012

ವಡ್ಡರಹಳ್ಳಿ ಡೊಳ್ಳು ಮಾಸ್ಟ್ರು: ಇಮ್ರಾನ್


 

-ಡಾ.ಟಿ.ಎಮ್.ಉಷಾರಾಣಿ
(ಈ ಹಿಂದೆ ವಡ್ಡರಹಳ್ಳಿಮಕ್ಕಳ ಡೊಳ್ಳು ಪ್ರತಿಭೆ ಕುರಿತಂತೆ ಬ್ಲಾಗ್ ನಲ್ಲಿ ಬರೆದಿದ್ದೆ. ಅದೇ ಬರಹ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿ ಹೆಚ್ಚು ಸುದ್ದಿಯೂ ಆಗಿತ್ತು. ಈ ಮಕ್ಕಳಿಗೆ ಡೊಳ್ಳು ತರಬೇತಿ ನೀಡಿದ  ಇಮ್ರಾನ್ ಕುರಿತಂತೆ ಅದೇ ಶಾಲೆಯ ಸಹ ಶಿಕ್ಷಕಿಯಾಗಿರುವ ಕವಯಿತ್ರಿ, ಸಂಶೋಧಕಿ ಕೊಟ್ಟೂರಿನ ನಾವು ನಮ್ಮಲ್ಲಿ ಬಳಗದ ದಲ್ಲಿ ಕ್ರಿಯಾಶೀಲರಾದ ಟಿ.ಎಂ. ಉಷಾ ಅವರು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.-ಅರುಣ್ ) 
 
 

    ಬಳ್ಳಾರಿಗೆ ಹೋಗುವ ರಸ್ತೆಗಂಟಿಕೊಂಡಂತೆ ಹೊಸಪೇಟೆಯಿಂದ ೧೦ ಕಿ.ಮೀ. ಅಂತರದಲ್ಲಿ ವಡ್ಡರಹಳ್ಳಿ ಎಂಬ ಪುಟ್ಟ ಹಳ್ಳಿಯಿದೆ. ಪ್ರಶಾಂತ ವಾತಾವರಣವಿರುವ ಈ ಊರಿನ ಸರಕಾರಿ ಶಾಲೆಯಲ್ಲಿ ನಮ್ಮ ಸಹೋದ್ಯೋಗಿ - ಪಾಠ ಮಾಡುವ ಇಮ್ರಾನ್ ಮೇಷ್ಟ್ರು, ಡೊಳ್ಳು ಕಲಿಸುವ ಮಾಸ್ತರರಾದದ್ದೊಂದು ಕತೆಯಿದು. ಶಾಸ್ತ್ರೀಯವಾದ ತರಬೇತಿಯಿಲ್ಲದಿದ್ದರೂ, ಅಲ್ಲಿ ಇಲ್ಲಿ ಡೊಳ್ಳು ಕುಣಿತವನ್ನು ನೋಡಿದ್ದರು ಅಷ್ಟೆ. ಸಾಯಿಮಣಿ ಪ್ರಕಾಶನದ ಪ್ರೇರಣೆಯಿಂದ  ಶಾಲೆಯ ಮಕ್ಕಳನ್ನು ಕಟ್ಟಿಕೊಂಡು ಒಂದು ವರ್ಷದ ಪರಿಶ್ರಮದಲ್ಲಿ ಮಕ್ಕಳ ಡೊಳ್ಳು ತಂಡವನ್ನು ಕಟ್ಟಿದ್ದಾರೆ. 

ಡೊಳ್ಳು ಕುಣಿತ ಕಲಿಸುವುದಕ್ಕಾಗಿ ಇಂದು ಅನೇಕ ಶಿಬಿರಗಳು, ತರಬೇತಿ ಕೇಂದ್ರಗಳು ಅಲ್ಲಲ್ಲಿ ತೆರೆದುಕೊಂಡಿವೆ. ತರಬೇತಿ ಇಲ್ಲದೆ ಡೊಳ್ಳು ಕುಣಿತದಂತಹ ದೇಸಿ ಕಲೆಯನ್ನು ಒಲಿಸಿಕೊಳ್ಳುವುದು ಬಹಳ ಕಷ್ಟ. ಡೊಳ್ಳು ಕುಣಿತ ಬಲ್ಲ ಹಿರಿಯರೊಬ್ಬರನ್ನು ಮಕ್ಕಳಿಗೆ ಕಲಿಸಲು ತಿಳಿಸಲಾಗಿತ್ತು. ಅವರು ಒಂದೆರೆಡು ಬಾರಿ ಬಂದು ಹೋದರು. ಆದರೆ, ಬೇರೆ ಕೆಲಸದ ಒತ್ತಡದಿಂದಾಗಿ ಪೂರ್ತಿಯಾಗಿ ತೊಡಗಿಸಿಕೊಳ್ಳಲಾಗಲಿಲ್ಲ. ಆಗ ಇಮ್ರಾನ್ ತಾವೇ ಸ್ವತ: ಮಕ್ಕಳೊಂದಿಗೆ ಸೇರಿ ಹೆಜ್ಜೆ ಹಾಕುವುದನ್ನು; ತಾಳಕ್ಕೆ ತಕ್ಕಂತೆ ಡೊಳ್ಳು ಬಡಿಯುವ ಬೇರೆ ಬೇರೆ ಮಜಲುಗಳನ್ನು ಕಲಿಯತೊಡಗಿದರು. ೧೦-೧೨ ವರ್ಷದ ಪುಟ್ಟ ಮಕ್ಕಳಿಗೆ ಹೆಚ್ಚು ಭಾರವೆನಿಸುವ ಡೊಳ್ಳುಗಳನ್ನು ಕೊರಳಿಗೆ ಹಾಕಿ ಕುಣಿತ ಕಲಿಸುವುದು ಸವಾಲಿನ ಕೆಲಸವಾಗಿತ್ತು. ಜತೆಗೆ ಶಾಲೆಗೆ ರಜೆ ಇದ್ದಾಗ, ಪೋಷಕರು ತಮ್ಮ ಮಕ್ಕಳನ್ನು ಕೂಲಿ ಕೆಲಸಕ್ಕೆ, ಮತ್ತಿತರ ಕೆಲಸಗಳಿಗೆ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಹಾಗಾಗಿ ಶಾಲಾ ಕೆಲಸಕ್ಕೆ ಧಕ್ಕೆಯಾಗದಂತೆ, ಮಕ್ಕಳ ಮನೆಯವರಿಗೂ ತೊಂದರೆಯಾಗದಂತೆ ಶಾಲಾ ಅವಧಿ ಪ್ರಾರಂಭವಾಗುವುದಕ್ಕೂ ಮುಂಚೆ, ಊಟದ ವಿರಾಮದಲ್ಲಿ, ಸಂಜೆ ಹೊತ್ತು ಡೊಳ್ಳು ಕುಣಿತದ ತಾಲೀಮು ನಡೆಸುತ್ತಾರೆ.

   ೨೦೧೧ರಲ್ಲಿ ಸಾಯಿಮಣಿ ಪ್ರಕಾಶನದ ಕಾರ್ಯಕ್ರಮವೊಂದರಲ್ಲಿ ನೀಡಿದ ಮೊದಲ ಪ್ರದರ್ಶನ ಜನರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಹಲವಾರು ಸಂಘ ಸಂಸ್ಥೆಗಳಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಡ್ಡರಹಳ್ಳಿ ಮಕ್ಕಳ ಡೊಳ್ಳು ಕುಣಿತದ ತಂಡಕ್ಕೆ ಆಹ್ವಾನಗಳು ಬಂದವು. ಬಂದ ಎಲ್ಲ ಆಹ್ವಾನಗಳನ್ನು ಸ್ವೀಕರಿಸದೆ, ಆಯ್ದ ಕಾರ್ಯಕ್ರಮಗಳಿಗೆ ಪ್ರದರ್ಶನ ನೀಡಲಾಯಿತು. ಕಾರಣ, ಮೆರವಣಿಗೆಯಂತಹ ಕಾರ್ಯಕ್ರಮಗಳಿಗೆ ಡೊಳ್ಳು ಕುಣಿತವನ್ನು ಬಳಸಿಕೊಳ್ಳುವುದು ಹೆಚ್ಚು. ಇದರಿಂದ ಸಣ್ಣ ವಯಸ್ಸಿನ ಮಕ್ಕಳು ದಣಿಯುತ್ತಾರಾದ್ದರಿಂದ, ಆಯ್ದ ಸ್ಥಿರವೇದಿಕೆ ಮೇಲಿನ ಕಾರ್ಯಕ್ರಮಗಳನ್ನು ಮಾತ್ರ ಆಯ್ದುಕೊಳ್ಳುತ್ತಾರೆ. ಇತ್ತೀಚೆಗೆ ನಡೆದ ಮಲಪನಗುಡಿ ಹತ್ತಿರವಿರುವ ವಿಜಯಶ್ರೀ ಹೆರಿಟೇಜ್ ವಿಲೇಜ್ ಪ್ರೈ.ಲಿಮಿಟೆಡ್‌ನ ಟ್ಯಾಲೆಂಟ್ ಷೋನಲ್ಲಿ ಪ್ರಥಮ ಆದ್ಯತೆಯನ್ನು ಪಡೆದುಕೊಂಡಿರುವ ವಡ್ಡರಹಳ್ಳಿ ಮಕ್ಕಳ ಡೊಳ್ಳು ತಂಡವು ಅಲ್ಲಿನ ಪ್ರದರ್ಶನಕ್ಕೆ ಒಪ್ಪಿಗೆ ನೀಡಿ, ಮನೋರಂಜನೆಗೆ ಆಗಮಿಸುವ ಪ್ರವಾಸಿಗರ ಕಣ್ಮನಗಳನ್ನು ಸೆಳೆಯುತ್ತಿದೆ. ಸುಪ್ತ ಮನಸ್ಸನ್ನು ಜಾಗೃತಗೊಳಿಸಿ, ಮುದಗೊಳಿಸುವ ಡೊಳ್ಳಿನ ಬಡಿತ; ಪುಟ್ಟ ಮಕ್ಕಳ ಗೆಜ್ಜೆಯ ಸದ್ದು; ಬಣ್ಣದ ದಿರಿಸು ಹಾಕಿಕೊಂಡು ಕುಣಿಯುವ ಪರಿ ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.
 

ಮಕ್ಕಳ ಡೊಳ್ಳು ತಂಡದ ಸೂತ್ರಧಾರರಾಗಿರುವ ಇಮ್ರಾನ್‌ರವರು ಮಕ್ಕಳೊಂದಿಗೆ ಸೇರಿ ನಾನೂ ವಿದ್ಯಾರ್ಥಿಯಾಗಿ ಡೊಳ್ಳು ಕುಣಿತವನ್ನು ಕಲಿಯತೊಡಗಿದ್ದೇನೆ. ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ ಕಟ್ಟಿದ ಮಕ್ಕಳ ಡೊಳ್ಳು ತಂಡ ಇಂದು ಇಷ್ಟೊಂದು ಜನಪ್ರಿಯವಾಗುತ್ತದೆ ಎಂದು ಭಾವಿಸಿರಲಿಲ್ಲ. ಶ್ರಮಪಟ್ಟಿದ್ದಕ್ಕೂ ಸಾರ್ಥಕವೆನಿಸಿದೆ. ಇಂತಹ ಪಠ್ಯೇತರ ಚಟುವಟಿಕೆಗಳು ಮಕ್ಕಳಿಗೆ ಹೊಸ ಉತ್ಸಾಹವನ್ನು ತುಂಬುತ್ತವೆಎನ್ನುತ್ತಾರೆ. ಬೇರೆ ಕಡೆಯಿಂದ ಡೊಳ್ಳುಗಳನ್ನು ಎರವಲು ತಂದು ಪ್ರದರ್ಶನಕ್ಕೆ ಸಿದ್ಧವಾಗುವುದು ಕಷ್ಟವಾಗುತ್ತಿತ್ತು. ಇದರಿಂದ ಊರಿನವರ ಸಹಕಾರ ಬಯಸಿದಾಗ, ಹಲವಾರು ಕೈಗಳು ಡೊಳ್ಳು ಕೊಡಿಸುವುದಕ್ಕೆ ಮುಂದಾದ್ದನ್ನು ಪ್ರೀತಿಯಿಂದ ಸ್ಮರಿಸುತ್ತಾರೆ. ಆಗಾಗ್ಗೆ ಡೊಳ್ಳಿಗೆ ಹದವಾದ ಚರ್ಮವನ್ನು ಬದಲಾಯಿಸಬೇಕಾದ್ದು ಅನಿವಾರ‍್ಯ. ಅದು ದುಬಾರಿ ಖರ್ಚಿನದಾದ್ದರಿಂದ ತಾವೇ ಕುರಿಚರ್ಮವನ್ನು ತಂದು ಹದಗೊಳಿಸಿ ಅಳವಡಿಸುವುದನ್ನೂ ಕಲಿತಿದ್ದಾರೆ.
ಪ್ರತಿದಿನ ಮಕ್ಕಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸುವ; ಪಠ್ಯಕ್ರಮವನ್ನು ಪೂರ್ತಿಗೊಳಿಸುವ; ಎಲ್ಲದ್ದಕ್ಕೂ ದಾಖಲೆಗಳನ್ನು ಇಡುವ ಧಾವಂತದಲ್ಲಿ ಶೈಕ್ಷಣಿಕ ವರ್ಷವೇ ಮುಗಿದು ಹೋಗಿರುತ್ತದೆ. ಮಕ್ಕಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸುವುದು ಕಷ್ಟಸಾಧ್ಯವೆನ್ನುವುದು ಹೆಚ್ಚು ಶಿಕ್ಷಕರ ಅಭಿಪ್ರಾಯ. ಇಂತಹ ವಾತಾವರಣದಲ್ಲಿ ಶಾಲಾ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಅಚ್ಚುಕಟ್ಟಾಗಿ ಮಾಡುವುದರೊಂದಿಗೆ ಡೊಳ್ಳು ಕುಣಿತದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಕ್ಕಳ ಡೊಳ್ಳು ತಂಡವನ್ನು ಕಟ್ಟಿಕೊಂಡು ಯಶಸ್ವೀ ಪ್ರದರ್ಶನದಲ್ಲಿ ತೊಡಗಿರುವ ಯುವ ಪ್ರತಿಭೆ ಇಮ್ರಾನ್ ಸರ್‌ಗೊಂದು ಹ್ಯಾಟ್ಸಾಫ್

ಸೋಮವಾರ, ಅಕ್ಟೋಬರ್ 29, 2012

ಹಲವು ಮಹಾಭಾರತಗಳ ಕತೆ


    • ಪುರುಷೋತ್ತಮ ಬಿಳಿಮಲೆ
                      ನಮ್ಮ ದೇಶದಲ್ಲಿ ವಿವಿಧ ಸಮುದಾಯಗಳು ಕಾವ್ಯವನ್ನು ತಮಗೆ ಬೇಕಾದಂತೆ ಮತ್ತೆ ಮತ್ತೆ ಬರೆದುಕೊಳ್ಳುತ್ತವೆ ಎಂಬುದನ್ನು ನಾವೀಗ ಮರೆತುಬಿಟ್ಟಿದ್ದೇವೆ. ತನ್ನ ಕಾಲದ, ಸಮುದಾಯದ, ಪ್ರದೇಶದ ಮತ್ತು ನಿರೂಪಕನ ಅಗತ್ಯಗಳಿಗೆ ಅನುಗುಣವಾಗಿ ಕಾವ್ಯಗಳನ್ನು ಮತ್ತೆ ಮತ್ತೆ ಬರೆಯಲಾಗುತ್ತದೆ. ವಾಲ್ಮೀಕಿ ಮತ್ತು ವ್ಯಾಸರಂಥ ಮಹಾ ಪ್ರತಿಭೆಯ ಕವಿಗಳು ಅಂಥ ಅನೇಕ ನಿರೂಪಣೆಗಳಿಗೆ ಕಿವಿಗೊಟ್ಟು ತಮ್ಮ ಕಾವ್ಯಗಳನ್ನು ಬರೆದರೋ ಅಥವಾ ವ್ಯಾಸ, ವಾಲ್ಮೀಕಿಯರ ರಚನೆಗಳೇ ಹಲವು ಕಾವ್ಯಗಳನ್ನು ಸೃಜಿಸಿದುವೋ ಈಗ ಹೇಳುವುದು ಕಷ್ಟ.
ಸುಮಾರು ಐದು ನೂರು ವರ್ಷಗಳ ಹಿಂದೆ ಬ್ರಿಟಿಷರು ಭಾರತಕ್ಕೆ ಕಾಲಿರಿಸಿದಾಗ ಅವರಿಗೆ ಇಲ್ಲಿ ಕಂಡದ್ದು ಇಲ್ಲಿನ ಅಪಾರ ವೈವಿಧ್ಯ ಅನೇಕ ಭಾಷೆಗಳು, ಸಮುದಾಯಗಳು, ಆಚರಣೆಗಳು, ಭೌಗೋಳಿಕ ವ್ಯತ್ಯಾಸ ಇತ್ಯಾದಿಗಳನ್ನೆಲ್ಲ ಒಂದು ಬಲವಾದ ಚೌಕಟ್ಟಿನೊಳಗೆ ತಾರದ ಹೊರತು ಸ್ಥಿರವಾದ ಆಳ್ವಿಕೆ ಕೊಡುವುದು ಅಸಾಧ್ಯ ಎಂಬುದನ್ನು ಅವರು ಮನಗಂಡಿ ದ್ದರಲ್ಲದೆ ಭಾರತವನ್ನು ಯಾವುದಾದ‌ರೂ ಒಂದು ನಿರ್ದಿಷ್ಟ ಪರಿಭಾಷೆಯಲ್ಲಿ ವಿವರಿಸಲು ಅವರು ಹೆಣಗುತ್ತಿದ್ದರು. ಭಾರತಕ್ಕೆ ಒಂದು ವ್ಯಾಕರಣ ಬೇಕಾಗಿತ್ತು ಅವರಿಗೆ.
ಇಂಥ ಪ್ರಯತ್ನದ ಪರಿಣಾಮವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅವರು ಗ್ರಂಥ ಸಂಪಾದನಾ ಶಾಸ್ತ್ರವನ್ನು ಬೆಳೆಸಿದರು.ಲಭ್ಯವಿರುವ ಹಲವು ಪಠ್ಯಗಳಿಂದ ಒಂದು ಪಠ್ಯವನ್ನು ಪ್ರತೀತಗೊಳಿಸಿ, ಅದನ್ನು ಅಧಿಕೃತಗೊಳಿ ಅಧಿಕೃತಗೊಳಿ ಸುವುದು ವಸಾಹತು ಕಾಲದ ಗ್ರಂಥ ಸಂಪಾದನಾ ಶಾಸ್ತ್ರದ ಮುಖ್ಯ ಕೆಲಸ. ಆ ಕ್ರಮವನ್ನು ನಾವು ಈಗಲೂ ಮುಂದುವರೆಸಿಕೊಂಡು ಬರುತ್ತಿದ್ದೇವೆ.


ಉದಾಹರಣೆಗೆ ಗಮನಿಸೋಣ : ವ್ಯಾಸರು ಬರೆದ ಮಹಾಭಾರತದ ನೂರಾರು ಪಠ್ಯಗಳನ್ನು ಸಂಗ್ರಹಿಸಿ, ಅವುಗಳಿಂದ "ಒಂದು ಅಧಿಕೃತ' ಮಹಾಭಾರತವನ್ನು ಸಿದ್ಧಪಡಿಸಿಕೊಡಲು ಬ್ರಿಟಿಷರು ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದ ಶ್ರೀ ವಿಷ್ಣು ಎಸ್‌. ಸೂಕ್ತಂಕರ್‌ ಅವರನ್ನು 1919ರಲ್ಲಿ ಕೇಳಿಕೊಂಡರು. ಸೂಕ್ತಂಕರ್‌ ಅವರು ಪಿ. ವಿ. ಕಾಣೆ, ಆರ್‌.ಡಿ. ಕರಮರ್ಕರ್‌, ವಿ.ಜಿ. ಪರಾಂಜಪೆ, ವಿಂಟರ್‌ನೀಟ್ಜ್ ಮೊದಲಾದ ಸಮರ್ಥ ವಿದ್ವಾಂಸರ ತಂಡದೊಂದಿಗೆ ಸುಮಾರು 15 ವರ್ಷಗಳ ಕಾಲ ದುಡಿದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿವಿಧ ಪ್ರದೇಶಗಳಲ್ಲಿ ಲಭ್ಯವಿದ್ದ ಸುಮಾರು 160 ಹಸ್ತಪ್ರತಿಗಳನ್ನು ಸಂಗ್ರಹಿಸಿದರು. ಕರ್ನಾಟಕ ಮತ್ತು ಒರಿಸ್ಸಾದಲ್ಲಿದ್ದ ಹಸ್ತಪ್ರತಿಗಳು ಯಾಕೋ ಅವರ ಕಣ್ಣಿಗೆ ಬೀಳಲಿಲ್ಲ.
ಅವೆಲ್ಲವುಗಳನ್ನು ಅಧ್ಯಯನ ಮಾಡಿ ಮೂಲಕ್ಕೆ ಹತ್ತಿರ ಅನ್ನ ಬಹುದಾದ ಪಠ್ಯವೊಂದನ್ನು ಸಿದ್ಧಪಡಿಸಿ, ಅದನ್ನು ಪುಣೆಯ ಭಂಡಾರ್‌ಕಾರ್‌ ಓರಿಯಂಟಲ್‌ ರಿಸರ್ಚ ಇನ್ಸ್ಟಿಟ್ಯೂಟ್‌ನಿಂದ ಪ್ರಕಟಿಸಿದರು (1933).
ಹಾಗೆ ಪ್ರಕಟಿಸುವಾಗ ಸೂಕ್ತಂಕರ್‌ ಅವರು ಬರೆದ ಬಹಳ ಮಹತ್ವದ ವಾಕ್ಯವೊಂದು ಇಂತಿದೆ- ""ವ್ಯಾಸರು ಬರೆದ ಮೂಲ ಪಠ್ಯ ಹೇಗಿದ್ದಿರಬಹುದೆಂದು ಸಾಧಿಸುವುದು ಸಾಧ್ಯವಿಲ್ಲದ ಕೆಲಸ, ಈಗ ನಾವು ಸಿದ್ಧಪಡಿಸಿದ್ದು ಮಹಾಭಾರತದ ಇನ್ನೊಂದು ಪಠ್ಯ ಅಷ್ಟೆ '. ಆದರೆ, ಅವರು ಏನೇ ಹೇಳಲಿ, ನಾವೀಗ ಲಿಖೀತ ಪಠ್ಯಗಳನ್ನೇ ಆಧರಿಸಿ ಮಾತಾಡಲು ಕಲಿತಿದ್ದೇವೆ.

ಕುತೂಹಲದ ವಿಷಯವೆಂದರೆ, ನಮ್ಮ ದೇಶದಲ್ಲಿ ವಿವಿಧ ಸಮುದಾಯಗಳು ಕಾವ್ಯವನ್ನು ತಮಗೆ ಬೇಕಾದಂತೆ ಮತ್ತೆ ಮತ್ತೆ ಬರೆದುಕೊಳ್ಳುತ್ತವೆ ಎಂಬುದನ್ನು ನಾವೀಗ ಮರೆತುಬಿಟ್ಟಿರುವುದು. ತನ್ನ ಕಾಲದ, ಸಮುದಾಯದ, ಪ್ರದೇಶದ ಮತ್ತು ನಿರೂಪಕನ ಅಗತ್ಯಗಳಿಗೆ ಅನುಗುಣವಾಗಿ ಇಲ್ಲಿ ಕಾವ್ಯಗಳನ್ನು ಮತ್ತೆ ಮತ್ತೆ ಬರೆಯಲಾಗುತ್ತದೆ. ವಾಲ್ಮೀಕಿ ಮತ್ತು ವ್ಯಾಸರಂಥ ಮಹಾ ಪ್ರತಿಭೆಯ ಕವಿಗಳು ಅಂಥ ಅನೇಕ ನಿರೂಪಣೆಗಳಿಗೆ ಕಿವಿಗೊಟ್ಟು ತಮ್ಮ ಕಾವ್ಯಗಳನ್ನು ಬರೆದರೋ ಅಥವಾ ವ್ಯಾಸ, ವಾಲ್ಮೀಕಿಯರ ರಚನೆಗಳೇ ಹಲವು ಕಾವ್ಯಗಳನ್ನು ಸೃಜಿಸಿದುವೋ ಈಗ ಹೇಳುವುದು ಕಷ್ಟ. ಭಾರತ ದೇಶದಾದ್ಯಂತ ಹರಡಿರುವ ದಲಿತರಲ್ಲಿ ಲಭ್ಯವಿರುವ ಕಾವ್ಯಗಳನ್ನು ಗಮನಿಸಿದರೆ, ಮೊದಲಿನದೇ ಸತ್ಯಕ್ಕೆ ಹೆಚ್ಚು ಹತ್ತಿರ ಎಂದು ಊಹಿಸಲು ಸಾಧ್ಯವಿದೆ.
 


ಏನೇ ಇರಲಿ, ಬ್ರಿಟಿಷರು ಹಾಕಿಕೊಟ್ಟ ವಿಧಾನಗಳಿಂದ ನಮ್ಮನ್ನು ನಾವೇ ಬಿಡಿಸಿಕೊಂಡು, ಜನ ನಿರೂಪಣೆಗಳಿಗೆ ಕಿವಿಗೊಟ್ಟರೆ, ನಮಗೆ ಬೇರೆಯದೇ ಆದ ಭಾರತವೊಂದು ದೊರೆಯುತ್ತದೆ. ಬೃಹತ್‌ ಭಾರತದ ಬೇರೆ ಬೇರೆ ಭಾಗಗಳು, ಸಮುದಾಯಗಳು ಮಹಾಭಾರತ ಕತೆಯನ್ನು ತಮಗೆ ಬೇಕಾದಂತೆ ಒಗ್ಗಿಸಿಕೊಂಡ ರೀತಿ ಅನುಪಮವಾದುದು. ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಮಹಾಭಾರತದ ಅನೇಕ ಘಟನೆಗಳನ್ನು ಮತ್ತೆ ಬರೆಯಲಾಗಿದೆ. ಇಲ್ಲಿ ಅವುಗಳನ್ನು ಗಮನಿಸದೆ, ಮೌಖೀಕ ರೂಪದಲ್ಲಿ ಮಾತ್ರ ಪ್ರಚಲಿತದಲ್ಲಿರುವ ಕೆಲವನ್ನು ಮುಂದೆ ಪರಿಚಯಿಸಲಾಗಿದೆ.

ನಮಗೆಲ್ಲಾ ತಿಳಿದಿರುವ ಹಾಗೆ, ನೆರೆಯ ತಮಿಳುನಾಡಿನಲ್ಲಿ ಕರಗವಿದೆ. ಅದು ದ್ರೌಪದಿಯನ್ನು ಆಧರಿಸಿದ ಆಚರಣೆ. ತಮಿಳರಿಗೆ ದ್ರೌಪದಿ ಮಹಾಭಾರತದ ಕೇವಲ ಒಂದು ಪಾತ್ರವಲ್ಲ, ಬದಲು ಆಕೆ ಅವರಿಗೆ ದೈವವೂ ಹೌದು. ಹಾಗಾಗಿ, ತಮಿಳುನಾಡಿನ ಮಹಾಭಾರತಗಳೆಲ್ಲ ದ್ರೌಪದಿ ಕೇಂದ್ರಿತವಾಗಿಯೇ ಬೆಳೆದವು. ಕೆಲವು ವರ್ಷಗಳ ಹಿಂದೆ ನಾನು ಮಧುರೈಯಲ್ಲಿ ತೆರುಕೂತ್ತು ನೋಡುತ್ತಿದ್ದೆ. ದ್ರೌಪದಿ ವಸ್ತ್ರಾಪಹಾರ ಅಂದಿನ ಪ್ರಸಂಗ. ದುಶ್ಯಾಸನ ಅಬ್ಬರದಿಂದಲೇ ರಂಗ ಪ್ರವೇಶ ಮಾಡಿದ. ದ್ರೌಪದಿ ಅಳುತ್ತಾ ರಂಗದ ನಡುವೆಯೇ ನಿಂತಿದ್ದಳು. ಇದ್ದಕ್ಕಿದ್ದಂತೆ ನನ್ನ ಊಹೆಗೂ ಮೀರಿ ದುಶ್ಯಾಸನನು ದ್ರೌಪದಿಯ ಕಾಲಿಗೆ ಧೊಪ್ಪನೆ ಬಿದ್ದು ಹೇಳಿದ- ""ಅಮ್ಮಾ ತಾಯಿ, ನೀನು ನಮ್ಮ ದೈವ, ನಿನ್ನನ್ನು ಮುಟ್ಟಬಾರದು, ನಿನ್ನ ಸೆರಗಿಗೆ ಕೈ ಹಾಕಬಾರದು, ಆದರೆ, ನಾನು ಒಬ್ಬ ನಟ, ಇದನ್ನು ಈಗ ಮಾಡಲೇ ಬೇಕಾಗಿದೆ, ನನ್ನ ತಪ್ಪನ್ನು ಮನ್ನಿಸು' ಅಂದವನೇ ಆಕೆಯ ಕಾಲು ಮುಟ್ಟಿ ನಮಸ್ಕರಿಸಿ, ಮತ್ತೆ ಎದ್ದು ನಿಂತು ಆರ್ಭಟಿಸತೊಡಗಿದ. ಕನ್ನಡದ ಕುಮಾರವ್ಯಾಸನಿಗಾಗಲಿ, ಸಂಸ್ಕೃತದ ವ್ಯಾಸನಿಗಾಗಲಿ ಇಂಥ ಒಂದು ಸ್ಥಿತಿಯನ್ನು ಊಹಿಸಿಕೊಳ್ಳುವುದೂ ಕಷ್ಟ . ಆದರೆ, ಜನ ಕಲ್ಪಿಸಿಕೊಂಡಿದ್ದಾರೆ. ಇಲ್ಲಿ ಕಾಪಿರೈಟಿನ ಪ್ರಶ್ನೆಯೇ ಇಲ್ಲ.

ತೆಲುಗು ಭಾಷೆಯಲ್ಲಿ ದೊರೆಯುವ ಅನೇಕ ಮಹಾಭಾರತಗಳಲ್ಲಿ ಪಾಂಡುವಿನ ಹೆಣವನ್ನು ಅವನ ಮಕ್ಕಳು ತಿನ್ನುವ ಪ್ರಸಂಗ ವಿಶೇಷವಾಗಿ ಬರುತ್ತದೆ. ಅಪ್ಪನ ಹೆಣವನ್ನು ಮಕ್ಕಳು ತಿಂದರೆ, ಮಕ್ಕಳು ಅಜರಾಮರವಾಗುತ್ತಾರೆ ಎಂಬ ನಂಬಿಕೆಯಲ್ಲಿ ಹಾಗೆ ಮಾಡಲಾಗುತ್ತದೆ. ಆದರೆ, ಕೃಷ್ಣ ಅದನ್ನು ತಪ್ಪಿಸಿ ಪಾಂಡವರಿಗೂ ಮರಣಬರುವಂತೆ ಮಾಡುತ್ತಾನೆ. ಅದು ಹೇಗೋ ಪಾಂಡುವಿನ ಕಿರುಬೆರಳನ್ನು ತಿಂದ ಸಹದೇವನು ಭವಿಷ್ಯವನ್ನು ತಿಳಿಯಬಲ್ಲ ಮಹಾಜಾnನಿಯಾಗುತ್ತಾನೆ. ಕೌರವನೊಡನೆ ಕಾಲ ಬೆರಳಲ್ಲಿ ಪಗಡೆಯಾಡುವ ದ್ರೌಪದಿಯ ಕಲ್ಪನೆ ಮೂಲತಃ ತೆಲುಗು ಭಾಷೆಯದ್ದು. ಮಲೆಯಾಳ ಭಾಷೆಯಲ್ಲಿ ಲಭ್ಯವಿರುವ ಮಹಾಭಾರತಗಳಲ್ಲಿ ಕೌರವ- ಪಾಂಡವರ ದ್ವೇಷವೇ ವಿಜೃಂಭಿಸಿದೆ. ನಿಶಾಲಕೂತ್ತುವಿನಲ್ಲಿ ಕೌರವರು ಪಾಂಡವರನ್ನು ಮಾಟದ ಮೂಲಕ ಕೊಲ್ಲಲು ಮಾಡುವ ಅಪೂರ್ವ ವಿವರಗಳಿವೆ.

ಸಂಸ್ಕೃತ ಓದಲಾಗದ ನನಗೆ ವೈಯಕ್ತಿಕವಾಗಿ ಗೊತ್ತಿರುವ ಮಹಾಭಾರತವು ಯಕ್ಷಗಾನ, ತಾಳಮದ್ದಳೆ‌ ಮತ್ತು ಹರಿಕತೆಗಳಿಂದ ತಿಳಿದದ್ದು. ಬಿಡಿ ಬಿಡಿಯಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಕೇಳಿದ ಅನೇಕ ಪ್ರಸಂಗಗಳಿಂದ ನಾನು ನನ್ನದೇ ಆದ ಮಹಾಭಾರತವೊಂದನ್ನು ಮನಸಿನಲ್ಲಿ ಕಂಡರಿಸಿಕೊಂಡಿದ್ದೇನೆ. ಆ ಮಹಾಭಾರತದಲ್ಲಿ, ಭದ್ರಗಿರಿ ಕೇಶವದಾಸರಿದ್ದಾರೆ, ಅಚ್ಯುತ ದಾಸರಿದ್ದಾರೆ, ಮಲ್ಪೆ$ಶಂಕರನಾರಾಯಣ ಸಾಮಗರೋ, ಶ್ರೇಣಿ ಗೋಪಾಲಕೃಷ್ಣ ಭಟ್ಟರೋ ಇದ್ದಾರೆ. ಎಲ್ಲೋ ಒಂದೆಡೆ ಕುಮಾರವ್ಯಾಸ ಕಾವ್ಯದ ಗಮಕವೂ ಇದೆ. ಕಲಾವಿದರು ಮಹಾಭಾರತದ ಕತೆಯನ್ನು ಎಲ್ಲಿಂದಲೇ ಸುರು ಮಾಡಲಿ, ಪೀಠಿಕಾ ರೂಪದ ಮಾತುಗಳಲ್ಲಿ ಹಿಂದಿನ ಕತೆಯನ್ನು ಹೇಳಿ, ಕತೆಯ ಎಳೆ ಕಡಿಯದಂತೆ ನೋಡಿಕೊಳ್ಳುತ್ತಾರೆ.
ಎಳವೆಯಲ್ಲಿ ತಲೆ ಕೂದಲು ಕತ್ತರಿಸುವಾಗ ಪಂಜದ ಕೃಷ್ಣಪ್ಪಹೇಳುತ್ತಿದ್ದ ಮಹಾಭಾರತವೇ ಬೇರೆ. ಆತ ಅದನ್ನು ಯಾರಿಂದ, ಯಾವಾಗ ಕಲಿತನೋ ದೇವರೇ ಬಲ್ಲ. ಒಮ್ಮೆ ಪಂಜ ಜಾತ್ರೆಯಲ್ಲಿ ಅದೇ ಕೃಷ್ಣಪ್ಪ ಕೀಚಕನ ಪಾತ್ರ ಮಾಡಿದ್ದರು. ಅವರ ವೇಷ ರಂಗಪ್ರವೇಶವಾಗುವಾಗ ಮಧ್ಯರಾತ್ರಿ ಎರಡು ಗಂಟೆಯಾದರೂ ಆಗಿರಬೇಕು, ಕೃಷ್ಣಪ್ಪನವರು ಆ ದಿನ ಅತ್ಯುತ್ಸಾಹದಲ್ಲಿದ್ದರು. ಆದರೇನು ಮಾಡೋಣ?
ಕೀಚಕ ರಂಗಪ್ರವೇಶಿಸಿ ಸೈರೇಂಧ್ರಿಯನ್ನು ಕಂಡು ಇನ್ನೂ ಹೆಚ್ಚು ಮತ್ತೇರಿಸಿಕೊಳ್ಳಬೇಕು, ಅಷ್ಟರಲ್ಲಿ ರಂಗದ ಎರಡೂ ಬದಿಯಲ್ಲಿದ್ದ ಗ್ಯಾಸ್‌ಲೈಟ್‌ ಭಗ್‌... ಭಗ್‌... ಅನ್ನತೊಡಗಿತು. ಅದರಲ್ಲಿ ಗ್ಯಾಸ್‌ ಕಡಿಮೆಯಾಗಿತ್ತು.
ಆಗ ಯಾರಾದರೂ ಬಂದು ಅದನ್ನು ಸರಿ ಮಾಡಬೇಕು. ಆದರೆ, ಯಾರೂ ಬರಲಿಲ್ಲ. ಸೈರೇಂಧ್ರಿಯನ್ನು ಕಂಡ ಕೀಚಕನ ಮತ್ತೇರುತ್ತಿತ್ತು. ಆದರೆ, ಗ್ಯಾಸ್‌ಲೈಟ್‌ನ ಬೆಳಕು ಕಡಿಮೆಯಾಗುತ್ತಿತ್ತು. ಕೀಚಕ ಥಟ್ಟನೆ, "ಎಲೈ ಸೈರೇಂಧ್ರಿಯೇ ಸ್ವಲ್ಪ ತಡೆ' ಎಂದು ಸೈರೇಂಧ್ರಿಯನ್ನು ನಿಲ್ಲಿಸಿದ, ಭಾಗವತರ ಬಳಿ ಸಿಂಹಾಸನವೆಂದು ಇರಿಸಲಾದ ಮರದ ಕುರ್ಚಿಯನ್ನು ಇದಿರು ತಂದು ಅದರ ಮೇಲೇರಿದ, ಗ್ಯಾಸ್‌ಲೈಟನ್ನು ಕೆಳಗಿಳಿಸಿ ಚೆನ್ನಾಗಿ ಪಂಪುಹೊಡೆದು ಮತ್ತೆ ಮೇಲೇರಿಸಿದ. ಕುರ್ಚಿಯನ್ನು ಮತ್ತೆ ಹಿಂದೆ ಇರಿಸಿ "ಎಲೈ ಸೈರೇಂಧ್ರಿಯೇ...' ಅಂತ ಪಾತ್ರ ಮುಂದುವರಿಸಿದ. ನನ್ನ ನೆನಪಿನ ಮಹಾಭಾರತದಲ್ಲಿ ಗ್ಯಾಸ್‌ಲೈಟಿಗೆ ಗಾಳಿ ಹಾಕಿದ ಕೀಚಕನೂ ಇದ್ದಾನೆ, ಬೀಡಿ ಸೇದುವ ಸುಯೋಧನನೂ ಇದ್ದಾನೆ.


ಕಳೆದ ಸುಮಾರು 12 ವರ್ಷಗಳಿಂದ ನಾನು ಉತ್ತರಭಾರತದಲ್ಲಿ ಓಡಾಡುತ್ತಿದ್ದೇನೆ. ಅಲ್ಲಿನ ಮೌಖೀಕ ನಿರೂಪಣೆಗಳನ್ನು ಅರ್ಥಮಾಡಿಕೊಳ್ಳಲು ಹಿಂದಿ ಭಾಷೆಯ ಪ್ರಾದೇಶಿಕ ಪ್ರಬೇಧಗಳು ಒಂದು ದೊಡ್ಡ ತೊಡಕಾದರೂ ಪಂಡ್ವಾನಿ, ಪಾಂಡವಲೀಲಾ ಮೊದಲಾದ ಪ್ರದರ್ಶನಗಳನ್ನು ಕಂಡು ಸಂತಸ ಪಟ್ಟಿದ್ದೇನೆ. ಹಿಮಾಲಯದ ತಪ್ಪಲಿನಲ್ಲಿರುವ ಜನರಿಗೆ ಮಹಾಭಾರತ ಎಂದರೆ ಅದು ಹಿಡಿಂಬೆಯ ಕತೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಹಿಡಿಂಬಾ ದೇವಸ್ಥಾನವೂ ಇದೆ. ನನ್ನ ಅಮೇರಿಕನ್‌ ವಿದ್ಯಾರ್ಥಿಯೊಬ್ಬನ ಸಂಶೋಧನಾ ವಿಷಯವೇ ಹಿಡಿಂಬೆ. ಆತ ಆಕೆಯ ಬಗ್ಗೆ ಸಂಗ್ರಹಿಸಿದ ವಿವರಗಳು ನನ್ನ ಊಹೆಗೂ ನಿಲುಕದು ಈಗಿನ ಉತ್ತರಾಖಂಡದಾದ್ಯಂತ ಇರುವ ಗಡ್ಡಿ ಬುಡಕಟ್ಟಿನ ಜನರಿಗೆ ಜರಾಸಂಧನೇ ದೈವ.ಅವರ ನಂಬಿಕೆಯ ಪ್ರಕಾರ ಜರಾಸಂಧನು ಕಲಿಯುಗವನ್ನು ಬಂಧಿಸಿಟ್ಟು , ಜನರನ್ನು ಅನಾಹುತಗಳಿಂದ ರಕ್ಷಿಸಿದ್ದ, ಆದರೆ ಭೀಮನೆಂಬ ದ್ರೋಹಿಯು ಮೋಸದಿಂದ ಜರಾಸಂಧನನ್ನು ಕೊಂದು ಕಲಿಯುಗವನ್ನು ಸೆರೆಯಿಂದ ಬಿಡಿಸಿದ್ದರಿಂದ ಈಗ ಕೆಟ್ಟ ಘಟನೆಗಳೆಲ್ಲ ನಡೆಯುತ್ತಿವೆ. ಗಡ್ಡಿಗಳ ಪ್ರದರ್ಶನವೊಂದರಲ್ಲಿ, ಜರಾಸಂಧನ ದೂತನೊಬ್ಬ ಊರು ಸುತ್ತುವಾಗ ಅಟಲ್‌ ಬಿಹಾರಿ ವಾಜಪೇಯಿಯವರನ್ನು ಭೇಟಿ ಮಾಡಿ, ಪ್ರಶ್ನೆಯೊಂದನ್ನು ಕೇಳಿದಾಗ, ಅವರು ಉತ್ತರ ಕೊಡಲು ತೆರೆದ ಬಾಯಿ ಮುಚ್ಚುವುದರೊಳಗಾಗಿ ಆತ ಪಾರ್ಲಿಮೆಂಟ್‌ ಭವನವನ್ನೂ ನೋಡಿ ಬಂದಿದ್ದ. ಕಾಂಗ್ರಾ ಪ್ರದೇಶದಲ್ಲಿ ದೊರೆಯುವ ನಿರೂಪಣೆಗಳ ಪ್ರಕಾರ ಪಾಂಡು ಸತ್ತ 12 ವರ್ಷಗಳ ಆನಂತರ ಕುಂತಿಗೆ ಮಾಂಸ ತಿನ್ನುವ ಬಯಕೆಯಾಗುತ್ತದೆ. ಆಗ ಭೀಮಾರ್ಜುನರು ಜೊತೆಯಾಗಿ ಬೇಟೆಯಾಡುತ್ತಾರೆ. ಕಥನದ ಮುಂದಿನ ವಿವರಗಳೆಲ್ಲ ಭೀಮಾರ್ಜುನರ ಬೇಟೆಗೇ ಸೀಮಿತವಾಗಿದೆ. ಈಗಿನ ಹಿಮಾಚಲ ಪ್ರದೇಶದ ಕಿನ್ನೂರ್‌ ಪ್ರದೇಶದಲ್ಲಿ ಜನಪ್ರಿಯವಾಗಿರುವ ನಿರೂಪಣೆಗಳ ಪ್ರಕಾರ ಮರಿಗಳೊಡನೆ ಆಡುವ ಮಂಗಗಳನ್ನು ನೋಡಿದ ಕುಂತಿಗೆ ಮಗುವಿನ ಬಯಕೆ ಮೂಡಿ, 12 ವರ್ಷಗಳವರೆಗೆ "ಋಷಿ ಮಾಮ'ನ ಸೇವೆ ಮಾಡಿ, ಮಕ್ಕಳನ್ನು ಪಡೆಯುತ್ತಾಳೆ. ಇಲ್ಲಿನ ದಲಿತರ ಪ್ರಕಾರ, ಪಾಂಡವರು ಬೆಟ್ಟದ ಮೇಲೆಯೂ, ಕೌರವರು ಅದೇ ಬೆಟ್ಟದ ಬುಡದಲ್ಲಿಯೂ ವಾಸಿಸುತ್ತಿದ್ದರು. ಪಾಂಡವರಿಗೆ ಒಬ್ಬಳು ತಂಗಿಯೂ ಇದ್ದಳು. ಅವಳೇ ಬೂರಾದೇವಿ. ನೀರಿನ ವಿಷಯದಲ್ಲಿ ಅವರ ನಡುವೆ ಜಗಳ ಬಂದಾಗ ಸೆಗಣಿಯ ಮನೆ ಮಾಡಿ ಪಾಂಡವರನ್ನು ಕೊಲ್ಲಲು ಕೌರವ ಪ್ರಯತ್ನಿಸುತ್ತಾನೆ. ಗಢವಾಲದ ಜನಪ್ರಿಯ ಪಾಂಡವಲೀಲಾದಲ್ಲಿ ಐವರು ಪಾತ್ರಧಾರಿಗಳ ಮೇಲೆ ಪಾಂಡವರು ಆವೇಶಿತರಾಗಿ ಜನರನ್ನು ಹರಸುತ್ತಾರೆ. ಜಮ್ಮು ಪ್ರದೇಶದ ಜನರು ತಮ್ಮನ್ನು ಶಲ್ಯ ಮಹಾರಾಜನ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ವನವಾಸದ ಸಂದರ್ಭದಲ್ಲಿ ಪಾಂಡವರು ಅಲ್ಲಯೇ ತಂಗಿದ್ದರಂತೆ. ಸ್ಥೂಲವಾಗಿ ಉತ್ತರ ಭಾರತೀಯ ಜನಪದರ ಪ್ರಕಾರ ಕೌರವರ ಒಟ್ಟು ಸಂಖ್ಯೆ 60, ಪಾಂಡವರ ಸಂಖ್ಯೆ ಐದು. ಪಾಂಡವರ ತಾಯಿ ಕಾತಮ, ಕೌರವರ ತಾಯಿ ನಿತಿನಿ.

ಭಾರತದ ಈಶಾನ್ಯ ಭಾಗಗಳಿಗೆ ಹೋದರೆ ಅಲ್ಲಿ ಕೌರವನ ಪಕ್ಷದವರೇ ಹೆಚ್ಚು ಪ್ರಸಿದ್ಧರು. ಭಗದತ್ತ, ಬಾಣಾಸುರ, ರುಕ್ಮ, ಬಭುÅವಾಹನರನ್ನು ಅಸ್ಸಾಮಿನ ಜನರು ತಮ್ಮ ಪೂರ್ವಜರೆಂದು ಭಾವಿಸುತ್ತಾರೆ. ಬೋಡೋಗಳ ಪ್ರಕಾರ ಕೃಷ್ಣನ ಹೆಂಡತಿ ರುಕ್ಮಿಣಿಯು ಬೋಡೋ ಕನ್ಯೆ.

ಮಧ್ಯ ಭಾರತದ ಮಹಾಭಾರತ ಕಥನಗಳಲ್ಲಿ ಭೀಮನೇ ನಾಯಕ. ಕೊಂಡ ಬುಡಕಟ್ಟಿನ ಜನರಲ್ಲಿ ಬಹಳ ಪ್ರಸಿದ್ಧವಾಗಿರುವ "ಭೀಮ ಸಿದಿ' ಎಂಬ ಕಥನ ಕಾವ್ಯದಲ್ಲಿ ಭೀಮನೇ ವಸ್ತ್ರಾಪಹಾರಕ. ಚೆಂದದ ಹುಡುಗಿಯರನ್ನು ನೋಡಿದಾಗ ಆತ ತನ್ನ ತಂದೆ ಪವನಾರ್‌ ದೇವನನ್ನು ಪ್ರಾರ್ಥಿಸುತ್ತಾನೆ. ಪವನಾರ್‌ನು ಜೋರಾಗಿ ಬೀಸಿ ಹುಡುಗಿಯರ ಬಟ್ಟೆ ಹಾರಿಸುತ್ತಾನೆ. ಭೀಮನು ಅಲ್ಲಿ ಮಳೆ ತರುವ ದೈವವೂ ಆಗಿರುವುದು ಇದಕ್ಕೆ ಪೂರಕವಾದ ವಿಚಾರ. ಕೊಂಡರಿಗೆ ಭೀಮನು ಫ‌ಲವಂತಿಕೆಯ ದೈವವೂ ಹೌದು.
ಬಿಂಜಾಲ್‌ ಬುಡಕಟ್ಟಿನವರಿಗೆ ಕೀಚಕನೆಂದರೆ ಇಷ್ಟ.

ದ್ರೌಪದಿ ಮತ್ತು ಕೃಷ್ಣರ ನಡವಣ ಸಂಬಂಧವೂ ಬೇರೆ ಬೇರೆ ಭಾರತೀಯ ಭಾಷೆಗಳಲ್ಲಿ ಕುತೂಹಲ ಹುಟ್ಟಿಸುವ ರೀತಿಯಲ್ಲಿ ಪ್ರತೀತಗೊಂಡಿದೆ. ಚತ್ತೀಸಗಢ ಪರಿಸರದಲ್ಲಿ ಪ್ರಚಲಿತದಲ್ಲಿರುವ ಪುಟ್ಟ ಕಥನ ಕಾವ್ಯವೊಂದರಲ್ಲಿ ಬಾಣದ ಮೊನೆಯನ್ನು ಕೃಷ್ಣನು ಹರಿತಗೊಳಿಸುತ್ತಿರುವಾಗ ಕೈಗೆ ಗಾಯ ಮಾಡಿಕೊಳ್ಳುತ್ತಾನೆ. ಆಗ ದ್ರೌಪದಿಯು ತನ್ನ ಸೆರ‌ಗಿಂದ ಹರಿದ ಬಟ್ಟೆಯ ತುಂಡೊಂದನ್ನು ಕೃಷ್ಣನ ಬೆರಳಿಗೆ ಕಟ್ಟಿ , ರಕ್ತ ಒಸರುವುದನ್ನು ನಿಲ್ಲಿಸುತ್ತಾಳೆ. ಅದೇ ಪ್ರದೇಶದ ಇನ್ನೊಂದು ನಿರೂಪಣೆಯ ಪ್ರಕಾರ, ಒಮ್ಮೆ ಕೃಷ್ಣನು ಪಾಂಡವರೊಡನೆ ಕೆರೆಯೊಂದರಲ್ಲಿ ಈಜುತ್ತಿರುವಾಗ ಆತನ ಲಂಗೋಟಿ ಕಳೆದು ಹೋಗುತ್ತದೆ.

ಪಾಂಡವರು ಸ್ನಾನದ ಆನಂತರ ಮೇಲೆ ಬಂದರೂ ಕೃಷ್ಣ ಬಾರದಾದ. ಆಗ ಪಕ್ಕದ ಕೆರೆಯಲ್ಲಿ ಗೆಳತಿಯರೊಂದಿಗೆ ಈಜಾಡುತ್ತಿದ್ದ ದ್ರೌಪದಿಗೆ ಅದು ಗೊತ್ತಾಗುತ್ತದೆ. ಅವಳು ಸೆರಗಿನಿಂದ ಹರಿದ ಸೀರೆಯ ತುಣುಕನ್ನು ಕೃಷ್ಣನೆಡೆಗೆ ಎಸೆಯುತ್ತಾಳೆ. ಅದನ್ನು ಲಂಗೋಟಿ ಮಾಡಿಕೊಂಡ ಕೃಷ್ಣನು ಮೇಲೆ ಬಂದು-ನನ್ನ ಕಷ್ಟಕ್ಕೆ ಆದೆ, ನಿನ್ನ ಕಷ್ಟಕ್ಕೆ ಸಹಾಯ ಮಾಡುತ್ತೇನೆ ಅನ್ನುತ್ತಾನೆ. ಹೀಗೆ ದ್ರೌಪದಿ ಕೊಟ್ಟ ಒಂದು ತುಂಡು ಬಟ್ಟೆಯನ್ನು ಮುಂದೆ ಕೃಷ್ಣನು ಅಕ್ಷಯಾಂಬರ ಮಾಡಿ ಕೃತಜ್ಞತೆ ಸಲ್ಲಿಸುತ್ತಾನೆ. ಏನಿದ್ದರೂ ಬೆರಳು, ರಕ್ತ, ಸೆರಗು ಮತ್ತು ಲಂಗೋಟಿಗಳ ಸುತ್ತ ಹೆಣೆಯಲಾದ ಈ ಕತೆಯು ಮತ್ತಷ್ಟು ವಿಶ್ಲೇಷಣೆಗೆ ಅರ್ಹವಾದುದು.
ಇವೆಲ್ಲವುಗಳನ್ನು ಗಮನಿಸಿದಾಗ ಈ ಕೆಳಗಿನ ಕೆಲವು ಅಂಶಗಳು ಸ್ಪಷ್ಟವಾಗುತ್ತವೆ-

.
ಮೌಖೀಕ ಮಹಾಭಾರತಗಳಲ್ಲಿ ಸ್ಥೂಲವಾಗಿ ಉತ್ತರ, ಪೂರ್ವ, ಮಧ್ಯ ಮತ್ತು ದಕ್ಷಿಣ ಭಾರತಗಳೆಂಬ ಪ್ರಬೇಧಗಳನ್ನು ಗುರುತಿಸಲು ಸಾಧ್ಯ. ಉತ್ತರ ಭಾರತದ ಕಥನಗಳು ಸಾಮಾನ್ಯವಾಗಿ ಪಾಂಡವರನ್ನೂ, ಪೂರ್ವ ಭಾರತದ ಕಥನಗಳು ಕೌರವರನ್ನೂ, ಮಧ್ಯ ಭಾರತದ ನಿರೂಪಣೆಗಳು ಭೀಮನನ್ನೂ , ದಕ್ಷಿಣ ಭಾರತದ ಕಥನಗಳು ದ್ರೌಪದಿಯನ್ನೂ ಕೇಂದ್ರವಾಗಿರಿಸಿಕೊಂಡು ಬೆಳೆದಿವೆ.

.
ಈ ಮೌಖೀಕ ಮಹಾಭಾರತಗಳನ್ನು ವ್ಯಾಸ ಭಾರತದೊಂದಿಗೆ ಹೋಲಿಸಿ ಬೆಲೆಕಟ್ಟುವುದು ತಪ್ಪು$. ಇವೆಲ್ಲವೂ ಸ್ವತಂತ್ರ ರಚನೆಗಳು.

.
ಮೌಖೀಕ ಮಹಾಭಾರತಗಳು ಪೂರ್ಣ ರೂಪದಲ್ಲಿ ದೊರೆಯುವುದು ಇಲ್ಲವೆಂಬಷ್ಟು ಕಡಿಮೆ. ಬದಲು ಹಲವು ಪ್ರಸಂಗಗಳಾಗಿ ಅವು ಒಡ ಮೂಡಿವೆ. ಅನೇಕ ಪ್ರಸಂಗಗಳನ್ನು ನೋಡಿದ ಅಥವಾ ಕೇಳಿದ ಪ್ರೇಕ್ಷಕರು ತಮ್ಮ ಮನಸ್ಸಿನಲ್ಲಿ ತಮಗೆ ತೋಚಿದ ಮಹಾಭಾರತವೊಂದನ್ನು ಪ್ರತೀತಗೊಳಿಸಿಕೊಂಡಿರುತ್ತಾರೆ. ಈ ಅರ್ಥದಲ್ಲಿ ಭಾರತದಲ್ಲಿ ಕೋಟ್ಯಂತರ ಮಹಾಭಾರತಗಳಿವೆ.

.
ಅನೇಕ ಮಹಾಭಾರತ ಪ್ರಸಂಗಗಳು ಪ್ರಾದೇಶಿಕ ವಿಶಿಷ್ಟವಾದ ಕೆಲವು ಆಚರಣೆಗಳನ್ನು ಸೃಷ್ಟಿ ಮಾಡಿವೆ. ಈ ಆಚರಣೆಗಳಲ್ಲಿ ಮಹಾಭಾರತದ ಅನೇಕ ಪಾತ್ರಗಳು ಪ್ರತಿವರ್ಷ ನವೀಕರಣಗೊಳ್ಳುತ್ತವೆ. ಕುಂತಿ, ಭೀಮ, ಅರ್ಜುನ, ದ್ರೌಪದಿ, ಅರವನ್‌ (ಅರ್ಜುನನ ಮಗ), ಹಿಡಿಂಬೆ, ಮತ್ತು ಕೃಷ್ಣ ಹೀಗೆ ಆಗಾಗ ಆಚರಣೆಗಳಲ್ಲಿ ಕಾಣಿಸಿಕೊಳ್ಳುವ ಪಾತ್ರಗಳಾಗಿವೆ.

ಒಟ್ಟಿಂದ, ಮಹಾಭಾರತವು ಕೇವಲ ಪಠ್ಯಗಳ ಸಮೂಹವಲ್ಲ, ಬದಲು ಒಂದು ದೊಡ್ಡ ಪರಂಪರೆ ಎಂಬ ಅಂಶ ತಾನೇ ತಾನಾಗಿ ಪ್ರತೀತಗೊಳ್ಳುತ್ತದೆ.ಮೌಖೀಕ ಮಹಾಭಾರತಗಳು ಆಕಾಶದಲ್ಲಿರುವ ನಕ್ಷತ್ರಗಳ ಹಾಗೆ.ಅವುಗಳನ್ನು ನಾವು ಎಣಿಸಲಾರೆವು, ಅವುಗಳಿಗೆ ವ್ಯಾಕರಣವನ್ನೂ ಬರೆಯಲಾರೆವು, ಆದರೆ ಅವು ಆಗಸದ ಒಟ್ಟಂದವನ್ನು ಹೆಚ್ಚಿಸಿವೆ, ಹಾಗೆಯೇ ಈ ಹಲವು ಮಹಾಭಾರತಗಳು ಭಾರತ ದೇಶದ ಸೌಂದರ್ಯವನ್ನು ಸಂವರ್ಧಿಸಿವೆ.