ಬುಧವಾರ, ಫೆಬ್ರವರಿ 11, 2015

ಬೆಳೆ ಸಂಬಂಧಿ ರೈತರ ಆಚರಣೆಗಳು

- ಮಲ್ಲಿಕಾರ್ಜುನ ಹೊಸಪಾಳ್ಯ


ಸೌಜನ್ಯ:ಕಣಜ


ರೈತರು ನೆಲಕ್ಕೆ ಬೀಜ ಬಿತ್ತುವುದರಿಂದ ಹಾಗೂ  ಸಸಿ ಮಡಿ ಹಾಕುವುದರಿಂದ ಮೊದಲುಗೊಂಡು ಬೆಳೆ ಕುಯಿಲಾಗುವ ತನಕ ಹೊಲದಲ್ಲಿ  ವಿವಿಧ ರೀತಿಯ ಬೆಳೆ ಸಂಬಂಧಿ  ಆಚರಣೆಗಳನ್ನು ನೆರವೇರಿಸುತ್ತಾರೆ. ಬೆಳೆಯ ವಿವಿಧ ಹಂತಗಳಲ್ಲಿ ಇವು ಜರುಗುತ್ತವೆ. ಇವುಗಳ ಉದ್ದೇಶ ಸ್ಪಷ್ಟ, ಮಾಡಿದ ಆರಂಬ ಕೈ ಹತ್ತಲಿ, ಬಿತ್ತಿದ ಬೀಜ ಮೊಳೆಯಲು ಯಾವುದೇ ಆತಂಕ ಅಡ್ಡಿಯಾಗದಿರಲಿ, ಬೆಳೆದ ಪೈರಿಗೆ   ಕೀಟ– ರೋಗಾದಿಗಳ ಬಾಧೆ ತಗುಲದಿರಲಿ, ಅದರ ಹಸುರಿಗೆ ನೋಡುಗರ ಕಣ್ಣೆಸರು ತಾಗದಿರಲಿ ಮುಂತಾದ ಕಾರಣಗಳಿಂದ ಇವುಗಳನ್ನು ಆಚರಿಸಲಾಗುತ್ತದೆ.
ಕಾರಬ್ಬ
ದಕ್ಷಿಣ ಕರ್ನಾಟಕದ ರೈತಾಪಿಗಳಲ್ಲಿ ಆಚರಿಸಲ್ಪಡುವ ಬಹುಮುಖ್ಯವಾದ ಆಚರಣೆ. ಇದು ತುಂಬಾ ಸರಳವಾಗಿ ಆಚರಿಸಲ್ಪಡುವ ಕ್ರಿಯೆ. ಆದರೆ  ಈ ಆಚರಣೆಯೇ ನಿರ್ದಿಷ್ಟ ವರ್ಷದ ಬೇಸಾಯದ ಕೆಲಸಗಳಿಗೆ ಮುನ್ನುಡಿ. ಗೊಲ್ಲ ಸಮುದಾಯಗಳಲ್ಲಿ ವಿಶೇಷವಾಗಿ ಕಾಣಬಹುದು. ಸಾಮಾನ್ಯವಾಗಿ ಮೃಗಶಿರ, ಆರಿದ್ರಾ ಮಳೆಗಳ ಸಂದರ್ಭದಲ್ಲಿ ಕಾರಬ್ಬವನ್ನು ಆಚರಿಸಲಾಗುತ್ತದೆ. ರಾಗಿ ಅಥವಾ ಭತ್ತದ ಸಸಿ ಮಡಿ (ಒಟ್ಲು ಬಿಡುವುದು) ಹಾಕುವ ಮುನ್ನ ಇದನ್ನು ಆಚರಿಸುವುದು ವಾಡಿಕೆ.
ಸಸಿ ಮಡಿ ಹಾಕುವ ದಿವಸದ ಬೆಳಿಗ್ಗೆ ಕರಿನ ಸೊಪ್ಪನ್ನು ತಂದು ತೋರಣ ಮಾಡಿ ಬಾಗಿಲಿಗೆ ಕಟ್ಟುತ್ತಾರೆ. ಕರಿನ ಸೊಪ್ಪೆಂದರೆ ಮಾವು, ಬೇವು ಮತ್ತು ಲಕ್ಕಿ -ಈ ಮೂರು ಸೊಪ್ಪುಗಳ ಸಂಗ್ರಹ. ಬೇಸಾಯದ ಸಲಕರಣೆಗಳಾದ ನೇಗಿಲು ನೊಗ ಮೇಣಿ ಇತ್ಯಾದಿ ಮುಟ್ಟುಗಳನ್ನೆಲ್ಲಾ ತೊಳೆದು ಅವುಗಳಿಗೆ ಸುಣ್ಣ-ಕೆಮ್ಮಣ್ಣು ಹಚ್ಚಿ, ಅಂಗುನೂಲು (ಹರಿಶಿನದ ದಾರ) ಕಟ್ಟಿ, ಎಡೆಹಾಕಿ ಪೂಜಿಸುತ್ತಾರೆ. ಎತ್ತು-ಕರಗಳಿಗೂ ಮೈತೊಳೆದುವುಗಳ ಹಣೆಗೆ, ಗೋಪುರಕ್ಕೆ, ಮುಂಗೊರಸಿಗೆ ಅಕ್ಷತೆ (ಅಕ್ಕಸ್ತೆ) ಇಟ್ಟು, ಕೊರಳಿಗೆ ಅಂಗುನೂಲು ಕಟ್ಟಿ ಎಡೆ ತಿನ್ನಿಸುತ್ತಾರೆ. ಅದೇ ದಿನ ಸಾಯಂಕಾಲ ಮನೆಯಲ್ಲಿ ಕುಕ್ಕೆಯೊಂದಕ್ಕೆ (ಬಿದಿರಿನಲ್ಲಿ ಮಾಡಿದ ಬುಟ್ಟಿ) ಬಿತ್ತನೆ ರಾಗಿ ತೋಡಿಕೊಂಡು, ನಡುಮನೆಯಲ್ಲಿ ನೆಲ ಸಾರಿಸಿ ರಂಗೋಲಿ ಬಿಡಿಸಿದ  ಜಾಗದಲ್ಲಿ ಆ ಬುಟ್ಟಿಯನ್ನು ಇಟ್ಟು ಅದಕ್ಕೂ ಸಹ ಅಂಗುನೂಲು, ಅಕ್ಸತ್ತೆ ಇಟ್ಟು, ವಿಭೂತಿ ಧರಿಸಿ ಕುಕ್ಕೆ ಸಮೇತ ಹೊಲಕ್ಕೆ ತೆಗೆದುಕೊಂಡು ಹೋಗಿ ರಾಗಿ ಒಟ್ಲು ತೊಳೆಯುತ್ತಾರೆ.
ಶೆಟ್ಟಿಕೆರೆಯ ವಿಶೇಷ ಕಾರಬ್ಬ: ತುಮಕೂರು ಜಿಲ್ಲೆ  ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ ನಡೆಯುವ ಕಾರಬ್ಬ ವಿಶೇಷವಾದುದು. ಆ ವರ್ಷ ಯಾವ ಬೆಳೆ ಹುಲುಸಾಗುತ್ತದೆ, ಯಾವ ಬೆಳೆ ಚೆನ್ನಾಗಿ ಹುಲುಸುವರಿಯುವುದಿಲ್ಲ ಎಂಬುದನ್ನು ಇಲ್ಲಿ ನಡೆಯುವ ಧಾನ್ಯದ ಗಡಿಗೆ ಒಡೆಯುವ  ಕ್ರಿಯೆಯ ಮೂಲಕ ರೈತಾಪಿಗಳು ತಿಳಿಯುತ್ತಾರೆ. ಹಳ್ಳಿಗರು ಕಾರಬ್ಬ ಮಾಡಿದ ಮರುದಿವಸ ಮೂಲಾ ನಕ್ಷತ್ರದಂದು ಇಲ್ಲಿ ಕಾರಬ್ಬ ನಡೆಯುತ್ತದೆ.
ಅಂದು ಊರಿನ ಸಕಲಾದಿ ಜನರೂ ಮತ್ತು ಸುತ್ತ-ಮುತ್ತಲ ಗ್ರಾಮಗಳ ಒಕ್ಕಲುಗಳೂ ಶೆಟ್ಟಿಕೆರೆಯ ಆಚಿಜನೇಯ ದೇವಾಲಯದ ಬಳಿ ಸೇರಿರುತ್ತಾರೆ. ಒಂದು ಮಣ್ಣಿನ ಗಡಿಗೆಯಲ್ಲಿ (ಕರಗ) ತಾವು ಬೆಳೆಯುವ ಸಕಲ ಧಾನ್ಯಗಳನ್ನೂ ಒಂದೊಂದು ಹಿಡಿಯಷ್ಟು ತುಂಬಿ ಆ ಗಡಿಗೆಗೆ ಕರಿನ ಸೊಪ್ಪು, ಅಂಗುನೂಲು, ಅಕ್ಷತೆಗಳನ್ನಿಟ್ಟು ಪೂಜಿಸುತ್ತಾರೆ.  ಹೀಗೆ ಪೂಜಿಸಿದ ನಂತರ ಎಲ್ಲರ ಅಪ್ಪಣೆ ಪಡೆದು ಪೂಜಾರಪ್ಪನು ಅಥವಾ ನಿಗದಿತ ವ್ಯಕ್ತಿಯು ಆ ಧಾನ್ಯ ತುಂಬಿದ ಕರಗವನ್ನು ಜೋಡೇತ್ತಿನ ನೇಗಿಲಿನಿಂದ ಹೊಡೆಯುತ್ತಾನೆ. ಹಾಗೆ ಹೊಡೆದ ರಭಸಕ್ಕೆ ಒಳಗಿನ ಧಾನ್ಯಗಳೆಲ್ಲಾ ದೂರಕ್ಕೆ ಚಲ್ಲಾಡುತ್ತವೆ. ಹೀಗೆ ಚೆಲ್ಲಿದ ಧಾನ್ಯಗಳಲ್ಲಿ ಯಾವುದು ಎಲ್ಲಕ್ಕಿಂತ ಮುಂದೆ ಬಿದ್ದಿರುತ್ತದೆಯೋ ಆ ಧಾನ್ಯ ಈ ವರ್ಷ ಉತ್ತಮ ಫಸಲು ಕೊಡುತ್ತದೆಂದು ಅಭಿಪ್ರಾಯ ಪಡುತ್ತಾರೆ. ಅಲ್ಲದೆ ಮುಂಗಾರು ಒಳ್ಳೆಯದೋ ಅಥವಾ ಹಿಂಗಾರು ಒಳ್ಳೆಯದೋ ಎಂಬುದನ್ನೂ  ಸಹ ಈ ಆಚರಣೆಯಲ್ಲಿಯೇ ತಿಳಿಯುತ್ತಾರೆ. ಅಂದರೆ ಕರಗ ಹೊಡೆದಾಗ ಕಾಳುಗಳು ಮುಂದೆ ಬಿದ್ದಿದ್ದರೆ ಹಿಂಗಾರು ಒಳ್ಳೆಯದು ಮತ್ತು ರಾಗಿ ಮುಂದೆ ಬಿದ್ದಿದ್ದರೆ ಮುಂಗಾರು ಒಳ್ಳೆಯದು ಎಂದರ್ಥ.
ಕೂರಿಗೆ ಪೂಜೆ
ಕೂರಿಗೆಯು ಬೀಜ ಬಿತ್ತನೆಗೆ ಬಳಸುವ ಒಂದು ಪ್ರಮುಖ ಉಪಕರಣ. ರಾಗಿ, ಜೋಳ, ಅಕ್ಕಡಿ ಕಾಳುಗಳು ಮುಂತಾದವನ್ನು ಸಾಲು ಬಿತ್ತನೆ ಮಾಡಲು ಕೂರಿಗೆಯನ್ನು ಬಳಸುತ್ತಾರೆ, ಇದು ಮುಖ್ಯವಾಗಿ ದಕ್ಷಿಣ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಚಾಲ್ತಿಯಲ್ಲಿದೆ. ಐದು ಮತ್ತು ಏಳು ತಾಳುಗಳುಳ್ಳ, ಅಂದರೆ ಐದು ಮತ್ತು ಏಳು ಸಾಲು ಬಿತ್ತುವ ಕೂರಿಗೆಗಳಿವೆ, ಕೂರಿಗೆಯ ದಿಂಡನ್ನು ಗಟ್ಟಿ ಮರದಲ್ಲಿ ಮಾಡಿದ್ದರೆ ಕೊಳವೆಗಳನ್ನು ಬಿದಿರಿನಲ್ಲಿ ಮಾಡಿರುತ್ತಾರೆ.
ಸಾಮಾನ್ಯವಾಗಿ ದಕ್ಷಿಣ ಕರ್ನಾಟಕದಲ್ಲಿ ರಾಗಿ ಬಿತ್ತುವ ದಿವಸ ಹಾಗೂ ಉತ್ತರ ಕರ್ನಾಟಕದಲ್ಲಿ ಜೋಳ ಬಿತ್ತುವ ದಿವಸ ಕೂರಿಗೆ ಪೂಜೆ ಮಾಡುವುದು ರೂಢಿ. ಎರಡೂ ಪ್ರದೇಶಗಳಲ್ಲಿನ ಆಚರಣೆಯ  ಉದ್ದೇಶ ಒಂದೇ ಆದರೂ ಸಹ ಮಾಡುವ ರೀತಿಯಲ್ಲಿ ತುಸು ವ್ಯತ್ಯಾಸವಿದೆ.
ದಕ್ಷಿಣದಲ್ಲಿ ಒಂದು ಕುಟುಂಬಕ್ಕೆ ಸೀಮಿತವಾದ ಆಚರಣೆಯಾಗಿದ್ದು ಕೆಳಗೆ ವಿವರಿಸಿದ  ರೀತಿ ಕೂರಿಗೆ ಪೂಜೆ ನಡೆಯುತ್ತದೆ.
ಬಿತ್ತನೆಗೆ ಸೂಕ್ತ ಹದವಿರುವ ದಿನ ಜನ-ಜಾನುವಾರು-ಬಿತ್ತನೆ ಸಮೇತ ಹೊಲಕ್ಕೆ ಹೋಗುತ್ತಾರೆ. ಅಲ್ಲಿ ಕೂರಿಗೆಗೆ ಎತ್ತುಗಳನ್ನು ಹೂಡಿ ನಿಲ್ಲಿಸಿ, ಮನೆ ಹೆಣ್ಣು ಮಗಳು  ಎತ್ತುಗಳಿಗೆ ಹಾಗೂ ಕೂರಿಗೆಗೆ ಅರಿಶಿನ ಕುಂಕುಮ ಇಟ್ಟು, ಕೈಗಳನ್ನು ಕಣ್ಣಿಗೆ ಮುಟ್ಟಿಸಿ ಸಣಮಾಡಿಕೊಂಡು ರಾಗಿ ಬಿತ್ತಲು ನಿಂತವರ ಮಡಿಲಿಗೆ ಮೂರು ಬೊಗಸೆ ಬಿತ್ತನೆಯನ್ನು ಹಾಕುತ್ತಾಳೆ. ರಾಗಿ ಬಿತ್ತುವ ವ್ಯಕ್ತಿ ಸೊಂಟಕ್ಕೆ ರಾಗಿ ತುಂಬುವ ಜೋಳಿಗೆಯನ್ನು ಕಟ್ಟಿಕೊಂಡಿರುತ್ತಾರೆ. ಆ ಜೋಳಿಗೆಯಲ್ಲಿ ವಿವಿಧ ಪದರಗಳಿದ್ದು ಅದರಲ್ಲಿ ಒಂದರಲ್ಲಿ ರಾಗಿ ಉಳಿದವುಗಳಲ್ಲಿ ಅವರೆ, ತೊಗರಿ, ಹುರುಳಿ ಇತ್ಯಾದಿ ಅಕ್ಕಡಿ ಕಾಳುಗಳನ್ನು ಹಾಕಿಕೊಂಡಿರುತ್ತಾರೆ. ಹೆಣ್ಣುಮಗಳು ಮೂರು ಬೊಗಸೆ ಬಿತ್ತನೆಯನ್ನು ಹಾಕಿದ ನಂತರ ಒಳ್ಳೇದಾಗ್ಲಿ ಎಂದು ಉದ್ಘರಿಸುವುದರೊಂದಿಗೆ ಬಿತ್ತನೆ ಪ್ರಾರಂಭವಾಗುತ್ತದೆ.
ಉತ್ತರದಲ್ಲಿ ಈ ಆಚರಣೆಯ ರೀತಿ ಸ್ವಲ್ಪ ಭಿನ್ನ. ಅಲ್ಲಿ ಇದುಂದು ಸಾಮುದಾಯಿಕ ಕ್ರಿಯೆ. ಅವರು ಕೂರಿಗೆಯನ್ನು ಮನೆಯಲ್ಲಿಯೇ ಇಟ್ಟು ಪೂಜಿಸಿ ನಂತರ ಹೊಲಕ್ಕೆ ತೆಗೆದುಕೊಂಡು ಹೋಗಿ ಬಿತ್ತಲು ಪ್ರಾರಂಭಿಸುತ್ತಾರೆ, ಅಲ್ಲದೆ ಈ ಪೂಜೆಗೆ ಊರಿನ ಹಿರಿ-ಕಿರಿಯರನ್ನು ಪ್ರಸಾದಕ್ಕೆ ಬರಹೇಳುವುದು ರೂಢಿ. ವಿಶೇಷ ಅಡುಗೆಗಳನ್ನು ಮಾಡಿ ಬಂದವರಿಗೆ ನೀಡುತ್ತಾರೆ. ಬೆಳೆ ಉತ್ತಮವಾಗಿ ಬರಬೇಕಾದರೆ ಬೀಜ ಬಿತ್ತನೆ ಸಾವಕಾಶವಾಗಿ, ಸಮರ್ಪಕವಾಗಿ, ಹೊಲದ ನಾಲ್ಕೂ ಮೂಲೆಗೆ ಒಂದೇ ಪ್ರಮಾಣದಲ್ಲಿ ಬೀಳಬೇಕು, ಹಾಗೆ ಬೀಜ ಬೀಳಬೇಕಾದರೆ ಬಿತ್ತುವ ಹತಾರ, ಅಂದರೆ ಕೂರಿಗೆ ಸರಿಯಾಗಿರಬೇಕು. ಹೀಗಾಗಿ ಆ ಕೂರಿಗೆ ಸರಿಯಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸುವ ಸಲುವಾಗಿ ಕೂರಿಗೆ ಪೂಜೆಯನ್ನು ಮಾಡುತ್ತಾರೆ. ಪೂಜೆಯ ನೆಪದಲ್ಲಿ ಕೂರಿಗೆಯನ್ನು ಬಿಚ್ಚಿ ಅದರ ಕೊಳವೆಗಳು, ಕೊಳವೆಯ ರಂದ್ರಗಳು ಸರಿಯಾಗಿವೆಯೋ,  ಸದೃಢವಾಗಿವೆಯೋ ಎಂದು ನೋಡಲಾಗುತ್ತದೆ. ಒಂದು ವೇಳೆ ದೋಷವೇನಾದರೂ ಕಂಡು ಬಂದರೆ ಬಡಗಿಯನ್ನು ಕರೆಸಿ ಸರಿಪದಿಸಲಾಗುತ್ತದೆ ಅಥವಾ ಮನೆಯವರೇ ಸರಿಪಡಿಸುತ್ತಾರೆ. ನಂತರ ಕೂರಿಗೆ ಪೂಜೆಗೆ ಅಣಿಯಾಗುತ್ತಾರೆ.
ಮನೆಯ ಪಡಸಾಲೆಯಲ್ಲಿ ಕಂಬಳಿ ಅಥವಾ ಬಟ್ಟೆಯನ್ನು ಹಾಸಿ ಕೂರಿಗೆಯನ್ನಿಡುತ್ತಾರೆ. ಅದರ ಈಚು ಅಥವಾ ದಂಡಿಗೆಗಳಿಗೆ ಹೂವಿನ ಮಾಲೆಗಳನ್ನು ಹಾಕಿ, ದಿಂಡು ಮತ್ತು ಮೇಣಿಗೆ ಸೇರಿಸಿ ಸೀರೆ ಉಡಿಸುತ್ತಾರೆ, ಕುಪ್ಪಸ ತೊಡಿಸುತ್ತಾರೆ. ಕೂರಿಗೆಯ ಕೊಳವೆಯ ಭಾಗಕ್ಕೆ ಉಡಿಚೀಲವನ್ನು ಕಟ್ಟಿ ಅದಕ್ಕೆ ಬಿತ್ತನೆ ಜೋಳವನ್ನು ಹಾಕುತ್ತಾರೆ. ಕೆಲವರು ಚಿನ್ನದ ಆಭರಣವನ್ನೂ ಸಹ ಕಟ್ಟುವುದುಂಟು. ಹೀಗೆ ಅಲಂಕರಿಸಿದ ಕೂರಿಗೆಗೆ ಹಿರಿಯರಿಂದ ಪೂಜೆ ಸಲ್ಲಿಸಲಾಗುತ್ತದೆ. ನಂತರ ದಿವಿನಾದ ಊಟ. ಊಟಕ್ಕೆ ಅವರವರ ಇಷ್ಟಾನುಸಾರ ಭಕ್ಷ್ಯಗಳಿರುತ್ತವೆ. ಸಾಮಾನ್ಯವಾಗಿ ಜೋಳ ಮತ್ತು ಸಜ್ಜೆಯ ಕಡುಬು, ಶೇಂಗಾ ಹೋಳಿಗೆ, ಎಣ್ಣೆಗಾಯಿ ಬದನೆಕಾಯಿ, ಅಗಸಿ ಚಟ್ನಿ, ಉಳ್ಳಾಗಡ್ಡಿ ಚಟ್ನಿ, ವಿವಿಧ ರೀತಿಯ ಪಲ್ಯಗಳು ಇರುವುದು ವಾಡಿಕೆ.
ಉತ್ತಮ ಫಸಲಿಗೆ ಉತ್ತಮ ಬಿತ್ತನೆಯೇ ಮೂಲ ಎಂಬುದನ್ನು ಅನುಭವದಿಂದ ತಿಳಿದಿರುವ ರೈತರು ಈ ಆಚರಣೆಯ ಮೂಲಕ ವಿಧಿವತ್ತಾಗಿ ಅದನ್ನು ನೆರವೇರಿಸುತ್ತಾರೆ.
ಕೊಡಗಿನ ಹುತ್ತರಿ
ರಾತ್ರಿ ಎಂಟೂವರೆಯ ಸಮಯ, ಹುಣ್ಣಿಮೆ ಬೆಳದಿಂಗಳು ಎಲ್ಲೆಲ್ಲೂ ಹರಡಿದ ತಣ್ಣನೆಯ ವಾತಾವರಣ. ಡಿಸೆಂಬರ್ ತಿಂಗಳ ಕೊರೆ ಬೀಳುವ ಕಾಲ. ಕೊಡಗಿನಲ್ಲಿ ಭತ್ತದ ಹೊಲಗಳು ಹಾಲುದುಂಬಿ ತೆನೆಗಟ್ಟುವ ಸಮಯ. ಇಂತಹ ಸಂದರ್ಭದಲ್ಲಿ ಕೊಡಗಿನಾದ್ಯಂತ ಹುತ್ತರಿ ಹಬ್ಬದ ಸಂಭ್ರಮ. ಕೊಡವರಿಗೆ ಹುತ್ತರಿ ದೀಪಾವಳಿಗಿಂತಲೂ ಮಿಗಿಲಾದ ಹಬ್ಬ. ಬಯಲು ಸೀಮೆಯವರಿಗೆ ಸಂಕ್ರಾಂತಿ ಸುಗ್ಗಿಯ ಆಚರಣೆಯಾದರೆ ಹುತ್ತರಿ ಕೊಡವರಿಗೆ ಸುಗ್ಗಿಯ ಕ್ಷಣ.
ಕೊಡವರಿಗೆ ಹುತ್ತರಿ ಹಬ್ಬ ಬಂತೆಂದರೆ ಹೊಸ ಸೊಸೆ ಮನೆ ತುಂಬಿದಷ್ಟೇ ಸಂಭ್ರಮ. ಹುಣ್ಣಿಮೆಯ ಪರಿಶುಭ್ರ ಬೆಳಕಿನಲ್ಲಿ, ಶುಭ ಸಂದರ್ಭವನ್ನು ನೋಡಿ ಈಡು ಹಾರಿಸುತ್ತಾ, ಪಟಾಕಿ ಸಿಡಿಸುತ್ತಾ ಭತ್ತದ ಕದಿರು ಕೊಯ್ಯುವುದರೊಂದಿಗೆ ಆಚರಿಸಲಾಗುವ ಹುತ್ತರಿ ಕೊಡವರ ಕೌಟುಂಬಿಕ ಪ್ರೀತಿ ಮತ್ತು ಸೌಹಾರ್ದತೆಯ ಸಂಕೇತ. ಹುತ್ತರಿ ಕೊಡವರ ನಾಡಹಬ್ಬವೆಂದೇ ಪ್ರಚಲಿತ. ಚಿಕ್ಕ ಮಕ್ಕಳಿಂದ ಮೊದಲ್ಗೊಂಡು ವಯೋವೃದ್ಧರವರೆಗೆ ಪ್ರತಿಯೊಬ್ಬರೂ ಪಾಲ್ಗೊಂಡು ಆಚರಿಸಲ್ಪಡುವ ಹುತ್ತರಿ ಕ್ಯಾಲೆಂಡರುಗಳಲ್ಲಿ ಸ್ಥಾನ ಪಡೆದಿರುವ ಬೆರಳೆಣಿಕೆಯ ಆಚರಣೆಗಳಲ್ಲೊಂದು. ಎಲ್ಲಾ ಪ್ರಮುಖ ಕ್ಯಾಲೆಂಡರುಗಳಲ್ಲಿ ಹುತ್ತರಿ ನಡೆಯುವ ದಿನಾಂಕವನ್ನು ಗಮನಿಸಬಹುದು. (ಡಿಸೆಂಬರ್ ತಿಂಗಳಿನಲ್ಲಿ)
ಕೊಡವ ಭಾಷೆಯಲ್ಲಿ ಪುತ್ತರಿ (ಪುದಿಯ -ಅಕ್ಕಿ- ಹೊಸ ಅಕ್ಕಿ) ಎಂದು ಕರೆಯಲ್ಪಡುವ ಈ ಹಬ್ಬಕ್ಕೆ ಕನ್ನಡದಲ್ಲಿ ಹುತ್ತರಿ ಎಂದು ಕರೆಯುತ್ತಾರೆ.  ಹಾಗೆಂದರೆ ಈಗಾಗಲೇ ಹೇಳಿದಂತೆ ಹೊಸ ಅಕ್ಕಿ ಎಂದರ್ಥ. ಹುತ್ತರಿ ಹಬ್ಬವು ಧಾನ್ಯ ಲಕ್ಷ್ಮಿಯನು ಮನೆಗೆ ಬರಮಾಡಿಕೊಳ್ಳುವ ಒಂದು ವಿಧಾನ. ಅಂದರೆ ಭತ್ತದ ಕದಿರುಗಳನ್ನು ಕಡಿದು ತಂದು ಶಾಸ್ತ್ರೋಕ್ತವಾಗಿ ಮನೆತುಂಬಿಸಿಕೊಳ್ಳಲಾಗುತ್ತದೆ.
ಹಬ್ಬದ ದಿನ ಬೆಳಿಗ್ಗೆ ಪ್ರತಿ ಮನೆ-ಮನೆಯ ಕಿಟಕಿ ಬಾಗಿಲುಗಳು ಮಾವಿನ ತೋರಣ, ಚೆಂಡು ಹೂವಿನ ಮಾಲೆಗಳಿಂದ ಅಲಂಕೃತಗೊಳ್ಳುತ್ತವೆ. ಸಂಜೆ ಪೂರ್ವ ದಿಕ್ಕಿನಲ್ಲಿ ಚಂದ್ರ ಉದಯವಾಗುತ್ತಿದ್ದಂತೆ ಹುತ್ತರಿಯ ಆಚರಣೆಗೆ  ರಂಗೇರುತ್ತದೆ. ನೆಲ್ಲಕ್ಕಿ ಬಾಡೆಯಿಂದ ಇದು ಪ್ರಾರಂಭವಾಗುತ್ತದೆ. ಕದಿರು ಕಡಿಯಲು ಹೋಗುವ ಈ ಸಂದರ್ಭದಲ್ಲಿ ಕುಲ ದೇವರಾದ ಇಗ್ಗುತಪ್ಪನಿಗೆ ನಮಿಸಿ ಈ ಶುಭ ಕಾರ್ಯದಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾಗದಂತೆ ಕಾಪಾಡು ಎಂದು ಬೇಡಿಕೊಳ್ಳಲಾಗುತ್ತದೆ.
ಈ ಹಬ್ಬದ ಆಚರಣೆಗೆ ಕೊಡವರು ತಮ್ಮ ಸಾಂಪ್ರದಾಯಿಕ ಉಡುಪು ಧರಿಸುತ್ತಾರೆ. ಅ ಉಡುಪಿನ ಜೊತೆಗೆ ಸೊಂಟಕ್ಕೆ ರೇಷ್ಮೆಯ ನಡುಪಟ್ಟಿ ಕಟ್ಟಿ ಅದರೊಳಕ್ಕೆ ಕತ್ತಿ ಸಿಗಿಸಿ ಮನೆಯ ಯಜಮಾನರಾದವರು ನೆಲ್ಲಕ್ಕಿ ಬಾಡೆಯಲ್ಲಿರುವ ಬೆಳಗುವ ದೀಪಕ್ಕೆ ಕೈಜೋಡಿಸಿ ನಮಿಸುತ್ತಾರೆ. ನಂತರ ಗುಂಪು-ಗುಂಪಾಗಿ ಭತ್ತದ ತಾಕಿನ ಕಡೆಗೆ ಸಾಗುತ್ತದೆ ಮೆರವಣಿಗೆ. ಡೋಲು ವಾದ್ಯಗಳು, ಕೋಲಾಟದ ತಂಡಗಳು ಜೊತೆಗೂಡುವುದರಿಂದ ಮೆರವಣಿಗೆ ಮತ್ತಷ್ಟು ಖದರು ಪಡೆಯುತ್ತದೆ.
ಗದ್ದೆಯ ಬಳಿ ತೆರಳಿ ಅಲ್ಲಿ ನಿಗದಿಪಡಿಸಿದ ಒಂದು  ತಾಕಿನಲ್ಲಿ ಎಲ್ಲರೂ ಒಟ್ಟುಗೂಡಿ, ಹಾಲು-ಜೇನು ಹಾಗೂ ಹಣ್ಣು-ಕಾಯಿಯನ್ನು ಇಟ್ಟು, ಎಡೆಯನ್ನು ಭತ್ತದ ಪೈರಿನಡಿಗೆ ಸುರಿದು, ಸಾಂಬ್ರಾಣಿಯ ಹೊಗೆ ಕೊಟ್ಟು ಒಂದು ಹಿಡಿಯಷ್ಟು ಭತ್ತದ ಪೈರಿನ ಬುಡವನ್ನು ಕಟ್ಟಿ ಬಂದೂಕಿನಿಂದ ಗುಂಡು ಹಾರಿಸುತ್ತಾರೆ. ಬಳಿಕ ಮನೆ ಹಿರಿಯರು ಸುಬ್ರಹ್ಮಣ್ಯನನ್ನು ನೆನೆದು ಕದಿರು ಕೊಯ್ಯುತ್ತಾರೆ. ಈ ಸಂದರ್ಭದಲ್ಲಿ ಪೊಲಿ ಪೊಲಿದೇವ ಪೊಲಿಯೇ ಬಾ ಎಂಬ ಕೂಗು ಮುಗಿಲು ಮುಟ್ಟುತ್ತದೆ, ಈ ಆಚರಣೆಯ ವಿಶೇಷ ತಿಂಡಿಗಳಾದ ತಂಬಿಟ್ಟು, ಏಳಕ್ಕಿಪುಟ್‌ಗಳನ್ನು ಎಲ್ಲರಿಗೂ ಹಂಚಲಾಗುತ್ತದೆ. ನಂತರ ಕೊಯ್ದ ಭತ್ತದ ಕದಿರುಗಳನ್ನು ತಂದು ಮನೆತುಂಬಿಸಿಕೊಳ್ಳಲಾಗುತ್ತದೆ.
ಬಪ್ಪಕ ಪುತ್ತರಿ ಬಣ್ಣತೆ ಬಾತ್
ಪೋಪಕ ಪುತ್ತರಿ ಎಣ್ಣತೆ ಪೋಚ್
ದಮ್ಮಯ್ಯ ಪುತ್ತರಿ ಒಮ್ಮೆಲು ಪೋತೆ
ಎಂಬ ಹಾಡನ್ನು ಹಬ್ಬದ ಕೊನೆಯಲ್ಲಿ ಹಾಡಲಾಗುತ್ತದೆ.
ಈ ಹಾಡಿನ ಅರ್ಥ; ಬರುವಾಗ ಹುತ್ತರಿ ಸಡಗರದಿಂದ ಬಂತು, ಹೋಗುವಾಗ ಹುತ್ತರಿ ಯಾರಿಗೂ ಹೇಳದೆ ಹೋಯಿತು, ಆದರೆ ಹುತ್ತರಿ ನೀನು ಒಮ್ಮೆಯೂ ಹೋಗದಿರು.
ಹುತ್ತರಿಯಂದು ವಿಶೇಷ ಅಡುಗೆಗಳನ್ನು ಮಾಡಲಾಗುತ್ತದೆ. ಆಗ ತಾನೇ ಗದ್ದೆಯಿಂದ ಕುಯ್ದು ತಂದ ಭತ್ತದ ಕಾಳನ್ನು ಸುಲಿದು ಅಕ್ಕಿಯನ್ನು ಪಾಯಸಕ್ಕೆ ಸೇರಿಸಲಾಗುತ್ತದೆ. ಇದು ಹೊಸ ಅಕ್ಕಿ ಪಾಯಸ. ಇದನ್ನು ಬೇಯಿಸುವಾಗ ಐದಾರು ಪುಟ್ಟ-ಪುಟ್ಟ ಕಲ್ಲಿನ ಚೂರುಗಳನ್ನು ಸೇರಿಸುತ್ತಾರೆ. ಊಟಕ್ಕೆ ಕುಳಿತಾಗ ಯಾರಿಗೆ ಈ ಕಲ್ಲಿನ ಚೂರುಗಳು ಸಿಗುತ್ತವೋ ಅವರಿಗೆ ಕಲ್ಲಾಯುಷ್ಯ (ಧೀರ್ಘಾಯುಷ್ಯ) ಲಭಿಸುತ್ತದೆನ್ನುವ ನಂಬಿಕೆ ಇದೆ. ಪಾಯಸದ ಜೊತೆಗೆ ಬಾಳೆ ಹಣ್ಣಿನಿಂದ ತಯಾರಿಸಿದ ತಂಬಿಟ್ಟು, ಘಮಘಮಿಸುವ ಏಲಕ್ಕಿ ಪೂಟ್, ವಿವಿಧ ರೀತಿಯ ಎಣ್ಣೆ ಖಾದ್ಯಗಳ ಸತ್ಕಾರ ನಡೆಯುತ್ತದೆ.
ಸಾಂಪ್ರದಾಯಿಕ ನೃತ್ಯಗಳು ಹಾಗೂ ಕ್ರೀಡೆಗಳ ಪ್ರದರ್ಶನ ಹುತ್ತರಿಯ ಮತ್ತೊಂದು ಆಕರ್ಷಣೆ. ಕೊಡವ ರೈತಾಪಿಗಳು ವಾರಗಟ್ಟಳೆ ಇದರಲ್ಲಿ ಪಾಲ್ಗೊಂಡು ತಮ್ಮ ಕೌಶಲ್ಯ ಮತ್ತು ಶೌರ್ಯ ಮೆರೆಯುತ್ತಾರೆ. ಮುಂಚೆ ಕ್ರೀಡಾ ಪ್ರದರ್ಶನಕ್ಕಾಗಿಯೇ  ಊರ ಹೊರಗೆ ಕ್ರೀಡಾಂಗಣವೊಂದನ್ನು ಮಾಡಲಾಗುತ್ತಿತ್ತು. ಅದಕ್ಕೆ ಮಂದ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿ ಊರ ಎಲ್ಲರೂ ಸೇರಿ ಜನಪದ ಗೀತೆಗಳನ್ನಾಡುತ್ತಾ ಗುಂಪಾಗಿ ಕೂಡಿ ಎರಡೂ ಕೈಗಳಲ್ಲಿ ಬೆತ್ತದ ಬಾರುಕೋಲುಗಳನ್ನು ಹಿಡಿದು ಅವುಗಳನ್ನು ವಿವಿಧ ಭಂಗಿಗಳಲ್ಲಿ ಲಯಬದ್ಧವಾಗಿ ತಿರುವುತ್ತಾ, ಬೀಸುತ್ತಾ ಕುಣಿಯುವ ಪರಿ ನೋಡಲು ಅದ್ಭುತ. ಇದಕ್ಕೆ ಹುತ್ತರಿ ಕೋಲಾಟ ಎಂದೇ ಕರೆಯಲಾಗುತ್ತದೆ. ಕೊಡವ ನೃತ್ಯಗಳಲ್ಲಿ ಇದು ಅತ್ಯಂತ ಜನಪ್ರಿಯ. ಹುತ್ತರಿಯ ಮತ್ತೊಂದು ಆಕರ್ಷಣೆ ಹೆಣ್ಣುಮಕ್ಕಳು ಭಾಗವಹಿಸುವ ಉಮ್ಮತ್ತಾಟ್ ನೃತ್ಯ.
ಕೃಷಿ ಆಚರಣೆಗಳಲ್ಲಿ ಕೊಡಗಿನ ಹುತ್ತರಿಗೆ ವಿಶಿಷ್ಟ ಸ್ಥಾನವಿದೆ. ಸುಗ್ಗಿಯನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಆಚರಿಸುವ ಹಾಗೂ ತಮ್ಮ ಜಾನಪದ ನೃತ್ಯ ಸಂಗೀತಗಳನ್ನು ತಲೆಮಾರಿನಿಂದ ತಲೆಮಾರಿಗೆ ಒಯ್ಯುವ ಸಾಧನವಾಗಿಯೂ ಸಹ ಈ ಆಚರಣೆ ಬಳಕೆಯಾಗುತ್ತಿರುವುದು ಮಹತ್ವದ ಸಂಗತಿ.
ಆದರೆ ಕೊಡಗಿನಲ್ಲಿ ಸಾಂಪ್ರದಾಯಿಕ ಬೆಳೆಯಾದ ಭತ್ತದ ಸ್ಥಾನವನ್ನು  ನಿಧಾನಕ್ಕೆ ವಾಣಿಜ್ಯ ಬೆಳೆಗಳಾದ ಶುಂಠಿ ಮುಂತಾದವು ಆಕ್ರಮಿಸುತ್ತಿವೆ.  ಇದು ಹುತ್ತರಿಗೆ ಶಾಶ್ವತ ಕುತ್ತು ತರುವ ಬದಲಾವಣೆಯಾಗಿದೆ. ಒಂದು ಬೆಳೆಯ ಬದಲಾವಣೆ ಸಮಗ್ರವಾಗಿ ನೋಡಿದರೆ ಚಿಕ್ಕ ಕ್ರಿಯೆಯಂತೆ ಕಂಡರೂ ಸಹ ಅದು ಒಂದು ಶ್ರೀಮಂತ ಕೃಷಿ ಸಂಸ್ಸೃತಿಯ ಕೊಂಡಿಯನ್ನೇ ಕಳಚಿ ಹಾಕುತ್ತಿರುವ ರೀತಿ ಭಯ ಹುಟ್ಟಿಸುವಂತಹುದು.
ಬೆಳೆ ರಕ್ಷಣೆಗೆ ಕಾಸರಕದ ಕೊಂಬೆ ನೆಡುವಿಕೆ
ತುಳುವರಿಗೆ ವರ್ಷದಲ್ಲಿ ಆಟಿ ತಿಂಗಳು (ಜುಲೈ-ಆಗಸ್ಟ್)  ಬಹು ಮಹತ್ವದ ತಿಂಗಳುಗಳು. ಈ ಕಾಲದಲ್ಲಿ ಬೆಳೆಗಳಿಗೆ ಮತ್ತು ಮನುಷ್ಯರಿಗೆ ರೋಗಗಳು ಬರುವುದು ಸರ್ವೇ ಸಾಮಾನ್ಯ. ಇದರ ನಿವಾರಣೆಗಾಗಿ ಕೆಲವು ವಿಶಿಷ್ಟ ಆಚರಣೆಗಳು ಬಳಕೆಯಲ್ಲಿವೆ.
ಈ ತಿಂಗಳಿನಲ್ಲಿ ಬರುವ ಅಮಾವಾಸ್ಯೆಯ ದಿನ ಬೆಳಗಿನ ಜಾವದಲ್ಲಿ ಭತ್ತದ ಗದ್ದೆಗೆ ಕಾಸರಕದ ಗಿಡದ ರೆಂಬೆಗಳನ್ನು ನೆಡುತ್ತಾರೆ, ಈ ಸಂದರ್ಭದಲ್ಲಿ ವರ್ಷದ ಮೊದಲನೇ ಬೇಳೆ- – ಅಂದರೆ ಎಣಿಲು ಬೆಳೆ ಚಾಲ್ತಿಯಲ್ಲಿರುತ್ತದೆ. ಹಾಗೂ ಈ ನಿರ್ದಿಷ್ಟ ತಿಂಗಳಿನಲ್ಲಿ ನಾಟಿ ಹಾಕಿದ ಭತ್ತದ ಸಸಿಗಳು ಇನ್ನೂ  ಎಳೆಯದಾಗಿರುತ್ತದೆ. ಹಾಗಾಗಿ ಹುಳುಗಳ ಕಾಟ ಹೆಚ್ಚು. ಇದರಿಂದ ರಕ್ಷಣೆ ಪಡೆಯಲು ಆಚರಿಸುವುದೇ ಈ ಆಚರಣೆ.
ಈ ಕಾಸರಕದ-ತುಳುವಿನಲ್ಲಿ ಕಾಯೆರ್- ರೆಂಬೆ ನೆಡುವ ಕ್ರಿಯೆಯನ್ನು ಕಾಪು (ರಕ್ಷಣೆ) ಎನ್ನಲಾಗುತ್ತದೆ. ಹೀಗೆ ಮಾಡುವುದರಿಂದ ಬೆಳೆಗೆ ಅಮರಿಕೊಳ್ಳುವ ಮಾರಿ ಅರ್ಥಾತ್ ಹುಳಗಳ ಕಾಟವನ್ನು ಕಾಯೆರ್ ತಡೆಗಟ್ಟುತ್ತದೆ, ಆ ಮೂಲಕ ಬೆಳೆಯನ್ನು ರಕ್ಷಿಸುತ್ತದೆ, ನಮಗೆ ಸಮೃದ್ಧಿ ತರುತ್ತದೆ ಎಂಬ ನಂಬಿಕೆ ರೈತಾಪಿಗಳಲ್ಲಿದೆ. ಈ ಪ್ರದೇಶದಲ್ಲಿಯೇ ಮನುಷ್ಯರಿಗೆ ಮತ್ತು ಗ್ರಾಮಗಳಿಗೆ ಬರುವ ಮಾರಿಯನ್ನು ಓಡಿಸಲು ಆಚರಿಸಲಾಗುವ  ಆಟಿಕಳೆಂಜ ಕ್ರಿಯೆಯೂ ಸಹ ಬಳಕೆಯಲ್ಲಿರುವುದನ್ನು ನಾವು ಕಾಣಬಹುದು.
ಹಾಲೆ ಮರದ ಹಾಲು ಕುಡಿಯುವುದು
ಕರಾವಳಿಯ ತುಳು  ಸಂಸ್ಕೃತಿಯಲ್ಲಿ ಸಾಮೂಹಿಕವಾಗಿ ಹಾಲೆಮರದ ಮದ್ದು (ಹಾಲು) ಕುಡಿಯುವ ಸಂಪ್ರದಾಯವೂ ಸಹ ಇದೇ ಆಟಿ ಮಾಸದ ಸಂದರ್ಭದಲ್ಲಿ ಇರುವುದು ವಿಶೇಷ. ತುಳುವಿನಲ್ಲಿ ಪಾಲೆ ಎಂದು ಕರೆಯಲ್ಪಡುವ ಹಾಲೆಯ ಸಸ್ಯ ಶಾಸ್ತ್ರೀಯ ಹೆಸರು Alstonia Scholaris.
ಆಟಿ ಮಾಸದಲ್ಲಿಯೇ ಹಾಲೆ ಮರದ ಹಾಲನ್ನು ಕುಡಿಯಲು ಒಂದು ಪ್ರಬಲವಾದ ಕಾರಣವಿದೆ, ಏನೆಂದರೆ; ತುಳುವರಿಗೆ ಮೇ-ಜೂನ್-ಜುಲೈ ತಿಂಗಳುಗಳು ಮಳೆಗಾಲದ ಆರಂಭದ ತಿಂಗಳುಗಳಾಗಿದ್ದು ಈ ಸಮಯದಲ್ಲಿ ಉಳುಮೆ ಕೆಲಸ, ಬೀಜ ಹಾಕುವ ಹಾಗೂ ಭತ್ತದ ಸಸಿಗಳನ್ನು ನಾಟಿ ಹಾಕುವ ಕೆಲಸವಿರುತ್ತದೆ. ಈ ಕೆಲಸಗಳನ್ನೆಲಾ ಅವರು ಹೆಚ್ಚು-ಕಡಿಮೆ ಬಿರು ಮಳೆಯಲ್ಲಿದ್ದುಕೊಂಡೇ ಮಾಡುತ್ತಾರೆ. ಸದಾ ನೆನೆಯುವ ದೇಹವು ಛಳಿಯನ್ನು  ತಾಳಿಕೊಳ್ಳಲು ಹುರಿದ ಹುಣಸೆ ಬೀಜಗಳನ್ನು ಹೆಚ್ಚು ತಿನ್ನುತ್ತಾರೆ. ಈ ಕಾರಣದಿಂದ ಹೊಟ್ಟೆಯಲ್ಲಿ ಹುಳದ ಬಾಧೆ ಕಾಣಿಸಿಕೊಳ್ಳುತ್ತದೆ. ಈ ತೊಂದರೆಯಿಂದ ಮುಕ್ತಿ ಪಡೆಯಲು ಅವರು ಅನುಭವದಿಂದ ಕಂಡುಕೊಂಡದ್ದು ಹಾಲೆ ಮರದ ಹಾಲು ಕುಡಿಯುವ ಪರಿಹಾರ.
ಹಾಲೆ ಮರದಿಂದ ಹಾಲು ಸಂಗ್ರಹಿಸುವ ವಿಧಾನವೂ ಸಹ ವಿಚಿತ್ರವಾಗಿದೆ. ಅಮಾವಾಸ್ಯೆಯ ರಾತ್ರಿ ಬೆಳಕು ಮೂಡುವ ಮುಂಚೆಯೇ ಬೆತ್ತಲೆಯಾಗಿ ಹಾಲೆ ಮರದ ಬಳಿ ಬಂದು ಮರಕ್ಕೆ ಮೂರು ಸುತ್ತು ಹಾಕಿ ತೊಗಟೆಯನ್ನು ಕಲ್ಲಿನಿಂದ ಕೆತ್ತಿ ತೆಗೆಯುತ್ತಾರೆ. ಮೈಮೇಲೆ ಬಟ್ಟೆ ಹಾಕಿಕೊಂಡು ಹೋದರೆ ಹಾಲಿನಲ್ಲಿರುವ  ಔಷದಿಯ ಅಂಶ ಹೋಗಿಬಿಡುತ್ತದಂತೆ.  ಮತ್ತೊಂದು ನಿಷಿದ್ಧವೆಂದರೆ, ಹಾಲೆ ಮರದ ತೊಗಟೆ  ತೆಗೆಯಲು ಕಬ್ಬಿಣ ಇಲ್ಲವೇ ಇನ್ನಾವುದೇ ಆಯುಧ ಬಳಸುವಂತಿಲ್ಲ. ಹಾಗಾಗಿಯೇ ಕಲ್ಲನ್ನು ಬಳಸುತ್ತಾರೆ. ತೊಗಟೆ ತೆಗೆದುಕೊಂಡ  ನಂತರ ಮನೆಗೆ ಬರಬೇಕು. ಅಲ್ಲದೆ ಹಿಂದಿನ ದಿನವೇ ಮರದ ಬಳಿ ಹೋಗಿ ನಾಳೆ ಬರುತ್ತೇವೆ ಮದ್ದು ಕೊಡು ಎಂದು ಪ್ರಾರ್ಥಿಸಿ ಹೋಗಿರುತ್ತಾರೆ.
ತೊಗಟೆ ತಂದ ನಂತರ ಮನೆಯಲ್ಲಿ ಹೆಣ್ಣುಮಕ್ಕಳು ಅದನ್ನು ಜಜ್ಜಿ ರಸ ತೆಗೆದು ಅದಕ್ಕೆ ಬೆಳ್ಳುಳ್ಳಿ, ಮೆಣಸು ರಸವನ್ನು ಬೆರೆಸುತ್ತಾರೆ. ಅಲ್ಲದೆ ಒಂದು ಬೆಣಚು ಕಲ್ಲನ್ನು ಒಲೆಗೆ ಹಾಕಿ ಚೆನ್ನಾಗಿ ಕಾಯಿಸಿ ಬಿಸಿ ಮಾಡಿ ಆ ರಸಕ್ಕೆ ಒಗ್ಗರಣೆ ಹಾಕುತ್ತಾರೆ. (ಹೀಗೆ ಬೆಣಚು ಕಲ್ಲಿನ ಒಗ್ಗರಣೆ ಕೊಡುವ ಪದ್ಧತಿ ಬಯಲು ಸೀಮೆಯಲ್ಲಿಯೂ ಸಹ ಪ್ರಚಲಿತದಲ್ಲಿದೆ, ಅಲ್ಲಿ ಬಿದಿರು ಕಳಲೆ  ಸಾರು ಮಡುವಾಗ ಹೀಗೆ ಮಾಡುತ್ತಾರೆ) ನಂತರ ಖಾಲಿ ಹೊಟ್ಟೆಗೆ  ಎಲ್ಲರೂ ಅದನ್ನು ಕುಡಿಯುತ್ತಾರೆ. ಹಾಲೆ ಮರದ ರಸ ಉಷ್ಣ ಎಂಬ ಭಾವನೆಯಿರುವುದರಿಂದ ಅದನ್ನು ಕುಡಿದ ನಂತರ ಮೆಂತ್ಯದ ಗಂಜಿಯನ್ನು ಎಲ್ಲರಿಗೂ ಕೊಡುವುದು ರೂಡಿ.
ಬಲಿಪಾಡ್ಯಮಿಯ ವಿವಿಧ ಆಚರಣೆಗಳು
ದೀಪಾವಳಿ ಸಮಯದಲ್ಲಿ; ಅಂದರೆ ಅಕ್ಟೋಬರ್-ನವಂಬರ್ ತಿಂಗಳಿನಲ್ಲಿ ಎಲ್ಲೆಡೆ ಕುಯಿಲಿಗೆ ಸಿದ್ಧವಾಗುವ  ಬೆಳೆಗಳನ್ನು ಕಾಣಬಹುದು. ರೈತಾಪಿಗಳಿಗೆ ವರ್ಷದ ದುಡಿಮೆ ಕೈಗೆ ಬರುವ ಸಮಯ.  ಈ ಸಂದರ್ಭದಲ್ಲಿ ವಿವಿಧ ರೀತಿಯ ಕೃಷಿ ಆಚರಣೆಗಳೂ ಗರಿಗೆದರುತ್ತವೆ. ಬಯಲು ಸೀಮೆಯಲ್ಲಿ ಇವು ಸ್ವಲ್ಪ ಕಡಿಮೆಯಾದರೂ ಮಲೆನಾಡು ಮತ್ತು ಕರಾವಳಿ/ತುಳುನಾಡುಗಳಲ್ಲಿ ವಿಶೇಷವಾದ ಕೃಷಿ ಆಚರಣೆಗಳಿವೆ.
ಇದು ಮುಖ್ಯವಾಗಿ ಭತ್ತದ ಬೆಳೆ ತೆನೆ ಹೊಡೆದು ಕಾಳು ಕಟ್ಟುವ ಸಮಯ, ಅಡಿಕೆ ತೋಟದ ಕೆಲಸಗಳು ಇನ್ನೂ ಪ್ರಾರಂಭವಾಗಿರುವುದಿಲ್ಲ. ಸ್ವಲ್ಪ ಬಿಡುವಿನ ಮತ್ತು  ನಿರಾಳತೆಯ ಕಾಲ. ಎಲ್ಲೆಲ್ಲೂ ಹಸಿರು, ಮಳೆಯ ಬಿರುಸು ಕಡಿಮೆಯಾಗಿದ್ದರೂ ಅದರ ಪರಿಣಾಮವಾಗಿ ಹೊಲ-ಗದ್ದೆಗಳಲ್ಲಿ, ಹಳ್ಳ-ಕಾಲುವೆಗಳಲ್ಲಿ ನೀರು ಹರಿಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಕಾಲಿಡುವ ಬೆಳಕಿನ ಹಬ್ಬ ದೀಪಾವಳಿ ಹತ್ತು-ಹಲವು ಕೃಷಿ ಆಚರಣೆಗಳಿಗೆ   ವೇದಿಕೆಯಾಗುತ್ತದೆ. ಮಲೆನಾಡಿನಲ್ಲಿ ನದೆಯುವ ಕೆಲವು ಆಚರಣೆಗಳನ್ನು ನೋಡುವುದಾರೆ;
ಬಲೀಂದ್ರ ಪೂಜೆ
ದೀಪಾವಳಿ ಸಮಯದಲ್ಲಿ ಬಲಿಪಾಡ್ಯಮಿಯ ದಿವಸ ತುಳುನಾಡು ಮತ್ತು ಮಲೆನಾಡಿನಲ್ಲಿ ಭೂಮಿ ಪುತ್ರನಾದ ಬಲೀಂದ್ರನನ್ನು ಭೂಮಿಗೆ ಬರಮಾಡಿಕೊಳ್ಳುವ ಆಚರಣೆಯೇ ಬಲೀಂದ್ರ ಪೂಜೆ. ಅಂದು ಮನೆಯಲ್ಲಿ ಹೆಣ್ಣು ಮಕ್ಕಳು ಮನೆಯ ಮುಂದಿನ ತುಳಸಿ ಕಟ್ಟೆಯ ಬಳಿ ಕಳಸ ಹೂಡಿ, ಅದಕ್ಕೆ ಅಡಿಕೆ ಹಿಂಗಾರದಿಂದ ಅಲಂಕರಿಸಿ ವಿವಿಧ ಅಡುಗೆಗಳ ಎಡೆ ಹಾಕುತ್ತಾರೆ. ಕೆಲವು ಕಡೆ ಬಾಳೆ ದಿಂಡಿನಲ್ಲಿ ಬಲೀಂದ್ರನ ಪ್ರತಿಮೆ ಮಾಡಿ ತುಳಸಿ ಕಟ್ಟೆಯ ಬಳಿ ಸ್ಥಾಪಿಸುವ ಸಂಪ್ರದಾಯವನ್ನೂ ಸಹ ಕಾಣಬಹುದು.
ಅದೇ ದಿನ ಸಂಜೆ ಇನ್ನೇನು ಹೊತ್ತು ಮುಳುಗುತ್ತದೆ ಎನ್ನುವಾಗ ಗದ್ದೆಗೆ ದೀಪದ ಕೋಲುಗಳನ್ನಿಡುವ ವಿಶಿಷ್ಟವಾದ ಹಾಗೂ ಅರ್ಥಪೂರ್ಣವಾದ ಆಚರಣೆ ನಡೆಯುತ್ತದೆ, ಗಂಡಸರು ಹೊಲಕ್ಕೆ ದೀಪ ಹಚ್ಚಲು ಹೊರಡುತ್ತಾರೆ, ಮನೆಯಲ್ಲಿ ಅದಕ್ಕಾಗಿಯೇ ಉದ್ದನೆಯ ಬಿದಿರು ಕೋಲುಗಳಿರುತ್ತವೆ, ಇವು ಅಂದಾಜು ನಾಲ್ಕರಿಂದ ಐದು ಅಡಿ ಉದ್ದವಿರುತ್ತವೆ, ಇವುಗಳ ತುದಿಗೆ ಎಣ್ಣೆ ಸವರಿದ ಬಟ್ಟೆಯನ್ನು ಸುತ್ತಿರುತ್ತಾರೆ. ಒಬ್ಬೊಬ್ಬರು ಏಳೆಂಟು ಕೋಲುಗಳನ್ನು ಕಂಕುಳಲ್ಲಿ ಇಟ್ಟುಕೊಂಡು ಅವರವರ ಗದ್ದೆಯಲ್ಲಿ ಓಡಾಡುತ್ತಾ ಅಲ್ಲಲ್ಲಿ ನೆಡುತ್ತಾರೆ, ಒಂದು ಕಡೆ ಎರಡರಿಂದ ಮೂರು ಕೋಲುಗಳಂತೆ ಗದ್ದೆಯ ವಿವಿಧ ಭಾಗಗಳಲ್ಲಿ ನೆಡುವುದು ವಾಡಿಕೆ, ಹೀಗೆ ನೆಡುವಾಗ ಬಲಿಯೇ ಬಾ.. ಬಲಿಯೇ ಕೂ.. ಎಂದು ತಾರಕ ಸ್ವರದಲ್ಲಿ ಕೂಗುತ್ತಾರೆ.
ಶಿವಮೊಗ್ಗದ ಭಾಗದಲ್ಲಿ ಈ ಆಚರಣೆಯನ್ನು ದೀವೋಳಿಗೆ ಎಂದು ಕರೆಯುತ್ತಾರೆ. ಆಚರಣೆಯ ಉದ್ದೇಶ ಹಾಗೂ ವಿಧಾನ ಬಹುಮಟ್ಟಿಗೆ ಒಂದೇ ಆದರೂ ಕೂಗುವುದರಲ್ಲಿ ಸ್ವಲ್ಪ ವ್ಯತ್ಯಾಸವಿದೆ, ಇವರು ಓಳಿಗೆ.. ದೀಪೋಳಿಗೆ… ಎಂದು ಗದ್ದೆಗಳಲ್ಲಿ ಲಯಬದ್ದವಾಗಿ ಕೂಗುತ್ತಾ ಸಾಗುತ್ತಾರೆ.
ಎಲ್ಲರ ಗದ್ದೆಗಳಲ್ಲಿ ಹತ್ತಿ ಉರಿಯುವ ದೀಪದ ಕೋಲುಗಳನ್ನು ನೋಡುವುದು ಅತ್ಯಂತ ಮನೋಹರ.
ಗದ್ದೆಗೆ ಹೂ ಹಾಕುವುದು
ಇದೇ ಸಂದರ್ಭದಲ್ಲಿ ಆಚರಿಸಲ್ಪಡುವ ಗದ್ದೆಗೆ ಹೂ ಹಾಕುವ ಆಚರಣೆಯೂ ಸಹ ಅರ್ಥಪೂರ್ಣವಾದುದು. ಬಲಿಪಾಡ್ಯಮಿಯ ಸಂಜೆ ಗದ್ದೆಗಳಿಗೆ ಮುಂಡುಗದ ಹೂ, ಕಕ್ಕೆ ಹೂ ಮತ್ತು ಹುಲಿಗಿಡದ ಹೂಗಳನ್ನು ಹಾಕುತ್ತಾರೆ, ಹೀಗೆ ಮಾಡುವುದರಿಂದ ಗದ್ದೆಗೆ ಕಾಟಕೊಡುವ ಹುಳುಗಳು ಮತ್ತು ಕೀಟಗಳು ಈ ಹೂಗಳಿಗೆ ಆಕರ್ಷಿತವಾಗುತ್ತವೆ ಎಂದು ರೈತಾಪಿಗಳ ಅನಿಸಿಕೆ.
ಅಂಟಿಗೆ-ಪಂಟಿಗೆ
ಬಲಿಪಾಡ್ಯಮಿಯ ಸಂದರ್ಭದಲ್ಲಿಯೇ ಮಲೆನಾಡಿನಲ್ಲಿ ಕಾಣಬರುವ ಮತ್ತೊಂದು ವಿಶೇಷ ಕ್ರಿಯೆ ಅಂಟಿಗೆ-ಪಂಟಿಗೆ. ಬಲಿಪಾಡ್ಯಮಿಯಿಂದ ಮುಂದಿನ ಮೂರು ದಿವಸ ಕಾಲ ಯುವಕರ ಹಿಂಡು ಹಳ್ಳಿಯ ಪ್ರತಿ ಮನೆಗೂ ಭೇಟಿ ನೀಡಿ ದೀವೋಳಿಗೆ ಪದಗಳನ್ನು ಹಾಡುತ್ತಾರೆ. ಇದು ಮಲೆನಾಡಿನ ಸಮೃದ್ಧ ಜನಪದ ಸಾಹಿತ್ಯವನ್ನು ಉಳಿಸುವ ಗಾಯನ ಪದ್ಧತಿಯಾಗಿದೆ.
ಬೂರಿಹಬ್ಬ
ಸತತ ಐದು ದಿನಗಳ ಕಾಲ ನಡೆಯುವ ವಿಶಿಷ್ಟ ಹಬ್ಬ. ದೀಪಾವಳಿಯ ಹಿಂದಿನ ದಿನ ಪ್ರಾರಂಭ. ಪ್ರತಿ ದಿನ ಒಂದೊಂದು ಆಚರಣೆ, ಚಿಕ್ಕವರು ದೊಡ್ಡವರಾದಿಯಾಗಿ ಎಲ್ಲರೂ ಪಾಲ್ಗೊಂಡು ಖುಷಿ ಪಡುವ ರೀತಿ ಅನನ್ಯವಾದುದು.
ಮೊದಲ ದಿನ ಭೂತಗಳಿಗೆ ಕೋಳಿಯ ಬಲಿ ನಡೆಯುತ್ತದೆ, ಅವುಗಳನ್ನು ಸಂತೃಪ್ತಗೊಳಿಸಿದರೆ ಉಳಿದಿದ್ದೆಲ್ಲವೂ ಸುಸೂತ್ರ ಎಂದು ಜನಪದರ ನಂಬಿಕೆ, ಹಾಗಾಗಿ ಅವಕ್ಕೆ ಮೊದಲ ಆದ್ಯತೆ. ಅಂದು ಬೆಳಿಗ್ಗೆಯೇ ಅಡಿಕೆ ಹಿಂಗಾರ, ಪಚ್ಚೆತೆನೆ ಹಗೂ ಹಣ್ಣಡಿಕೆಗಳನ್ನು ಸುಟ್ಟು ಬೂದಿ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಹುಡುಗರು ಖುಷಿಗಾಗಿ ಕಳ್ಳತನ ಮಾಡುವ ಪ್ರಸಂಗ ವಿಶೇಷವಾದದ್ದು. ತೆಂಗಿನ ಕಾಯಿಗಳನ್ನು  ಕದಿಯುತ್ತಾರೆ, ಹಸೆಕಲ್ಲನ್ನೇ ಎತ್ತಿ ಬಚ್ಚಿಟ್ಟುಬಿಡುತ್ತಾರೆ, ಅರೆಯಲು ಕಲ್ಲಿಲ್ಲದೆ ಹೆಂಗಸರ ಪರದಾಟ ಇವರಿಗೆ ನಗೆಪಾಟಲಿನ ಸಂಗತಿ. ಬೀದಿಯಲ್ಲಿ ನಿಲ್ಲಿಸಿದ್ದ ಗಾಡಿಯ ಚಕ್ರವನ್ನೇ ಬಿಚ್ಚಿ ಬೇರೆಡೆ ಸಾಗಿಸಿಬಿಡುತ್ತಾರೆ.
ಮರುದಿನ ಅಮಾವಾಸ್ಯೆ, ಅಂದು ಜಾನುವಾರುಗಳ ಹಬ್ಬ, ಅವುಗಳಿಗೆ ಮೈತೊಳೆದು, ಅಲಂಕಾರ ಮಾಡಿ ಬೆದರಿಸುತ್ತಾರೆ-ಅಂದರೆ ಓಡಿಸುತ್ತಾರೆ. ಅದರ ಮರುದಿನ ಪಾಡ್ಯ, ಅಂತಹ ವಿಶೇಷವೇನಿಲ್ಲ. ಆದರೆ ನಂತರದ ದಿನ-ಅಂದರೆ ನಾಲ್ಕನೆಯ ದಿನ ಅತ್ಯಂತ ಮುಖ್ಯವಾದುದು, ಅಂದು ಕರಿ ಹಬ್ಬ. ಬಲೀಂದ್ರನ ಪೂಜೆ, ಆಯುಧಗಳಿಗೆ ಪೂಜೆ ಮಾಡಲಾಗುತ್ತದೆ. ಎತ್ತಿನ ಗಾಡಿ, ನೇಗಿಲು, ನೊಗ, ಮಚ್ಚು, ಕುಡುಗೋಲು ಮುಂತಾದ ಸಕಲೆಂಟು ಹತಾರಗಳನ್ನು ಸ್ವಚ್ಚವಾಗಿ ತೊಳೆದು ಅಚ್ಚುಕಟ್ಟಾಗಿ ಜೋಡಿಸಿ ಅರಿಶಿನ-ಕುಂಕುಮ ಹೂ-ಪತ್ರೆಗಳನಿಟ್ಟು ಪೂಜೆ ಮಾಡುತ್ತಾರೆ.
ಐದನೇ ದಿನ ಹಾಗೂ ಕೊನೆಯ ದಿನ ವರ್ಷದ ತೊಡಕು. ಮನೆಯಲ್ಲಿ ಸಿಹಿ ಅಡುಗೆ. ಗದ್ದೆಯಿಂದ ಹೊಸ ಕದಿರು ತಂದು ಅಕ್ಕಿಯನ್ನು ಬಿಡಿಸಿ  ಅದರಿಂದ ವಿಶೇಷ ತಿನಿಸುಗಳನ್ನು ಮಾಡಿ ಊಟ ಮಾಡುತ್ತಾರೆ. ಜೊತೆಗೆ ಭತ್ತದ ಕದಿರುಗಳನ್ನು ತಂದು ಮನೆಯ ವಿವಿಧ ಜಾಗಗಳಲ್ಲಿಡುವುದು ಸಂಪ್ರದಾಯ.
ಹೀಗೆ ಭೂತಗಳಿಗೆ ಬಲಿ ಕೊಡುವುದರಿಂದ ಶುರುವಾಗುವ ಬೂರಿ ಹಬ್ಬ ಭತ್ತದ ಹೊಸ ಕದಿರನ್ನು ತರುವ ಕ್ರಿಯೆಯೊಂದಿಗೆ ಮುಕ್ತಾಯವಾಗುತ್ತದೆ. ಭರ್ತಿ ಐದು ದಿನ ಕಾಲ ಬೇಸಾಯದ ವಿವಿಧ ಅವಿಭಾಜ್ಯ ಅಂಗಗಳಿಗೆ ನಮಿಸಿ ಧನ್ಯತೆ ಹೊಂದುವ ರೀತಿಯೇ ವಿಶಿಷ್ಟವಾದದ್ದು. 
ಚರಗ ಚೆಲ್ಲುವುದು
ಬೆಳೆಗಳಿಗೆ ಅಂಟುವ ಪೀಡೆ ಪರಿಹಾರಾರ್ಥವಾಗಿ, ರೋಗ ನಿವಾರಣಾರ್ಥವಾಗಿ ಚರಗ ಚಲ್ಲುವ ಆಚರಣೆ ವ್ಯವಸಾಯಗಾರರಲ್ಲಿ ದಟ್ಟವಾಗಿ ನೆಲೆಯೂರಿದೆ.  ಚರಗ ಪದವನ್ನು ಕೇಳಿದಾಕ್ಷಣ ಸಾಮಾನ್ಯವಾಗಿ ಪ್ರಾಣಿಬಲಿಯ ನಂತರದ ರಕ್ತದ ಅನ್ನ ಹಾಗೂ ತಂಗಳು ಅಡುಗೆ ಪದಾರ್ಥಗಳಿಂದ ಮಾಡಿದ ಮಿಶ್ರಣ ನೆನಪಿಗೆ ಬರುತ್ತದೆ.  ಪ್ರಾಣಿಬಲಿಯನ್ನು ನೀಡಿ ಮಾಡಿದ  ಚರಗವು ಸಮಗ್ರವಾಗಿ ಊರಿನ ಕ್ಷೇಮವನ್ನು  ಕಾಪಾಡುತ್ತದೆ ಎಂದು ಭಾವಿಸುವುದಾದರೆ, ಪ್ರತಿ ರೈತ ತನ್ನ ಹೊಲಗದ್ದೆಗಳಿಗೆ ಚಲ್ಲುವ ಚರಗ ಅವನ ಆರಂಬವನ್ನು ರಕ್ಷಿಸುತ್ತದೆ. 
ಕೆಲವು ಪ್ರದೇಶಗಳಲ್ಲಿ ಚರಗದ ಕುಡಿಕೆಯೊಂದನ್ನು  ಮನೆಯಲ್ಲಿ ಸದಾ ಇಟ್ಟುಕೊಂಡಿರುತ್ತಾರೆ.  ಬೆಳೆಗಳಿಗೆ ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಮುದ್ದೆ, ಅನ್ನ ಇಂತಹ ಯಾವುದಾದರೂ ಅಡಿಗೆಯನ್ನು ನೀರಿಗೆ ತೆಳ್ಳಗೆ ಕಲಸಿಕೊಂಡು ಹೊಲದ ಸುತ್ತ ಚಲ್ಲುತ್ತಾರೆ.  ಹಾಗೆ ಮಾಡುವುದರಿಂದ ಬೆಳೆಗಳಿಗೆ ಅಪಾಯಕಾರಿಯಾಗುವ ಹುಳು-ಹುಪ್ಪಟೆಗಳ ನಿವಾರಣೆ ಮತ್ತು ಪೀಡೆ ಪರಿಹಾರ ಮಾಡಿದಂತಾಗುತ್ತದೆ ಎಂಬ ಭಾವನೆ ರೈತಾಪಿಗಳಲ್ಲಿದೆ. ಎಲೆ ತೋಟ, ಬಾಳೆ  ತೋಟಗಳಿಗಂತೂ ನಿಯಮಿತವಾಗಿ ಚರಗ ಚಲ್ಲುವುದನ್ನು ಕಾಣಬಹುದು, ಈ ಕ್ರಿಯೆ ಕ್ರಮಬದ್ಧವಾಗಿ ನಡೆಯುತ್ತದೆ. 
ಸಾಮಾನ್ಯವಾಗಿ ಹೀಗೆ ಚರಗ ಚೆಲುವುದು ಇಬ್ಬರ ಕೆಲಸ. ಮುಂದಿರುವ ನ ವ್ಯಕ್ತಿ ಒಂದು ಕೈಯಲ್ಲಿ ಬೆಂಡುಗೊಳ್ಳಿ ಮತ್ತೊಂದು ಕೈಯಲ್ಲಿ ಕುಡುಗೋಲು ಹಿಡಿದು ಹೊರಟರೆ, ಹಿಂದಿನವನು ಚರಗದ ಕುಡಿಕೆ ಹಿಡಿದು ಅದನ್ನು ಚಲ್ಲುತ್ತಾ ‘ಹೋಲಿಗ್ಯ ಹೋಲಿಗ್ಯ ಎಂದು ಉದ್ಘರಿಸುತ್ತಾನೆ.  ಹೋಲಿಗ್ಯ ಎಂಬ ಕೂಗು ಎಲ್ಲಿಯವರೆಗೆ ಕೇಳಿಸುತ್ತದೆಯೋ ಅಷ್ಟು ವ್ಯಾಪ್ತಿಯ ಬೆಳೆಗಳಿಗೆ ಒಳ್ಳೆಯದಾಗುತ್ತದೆ ಎಂದು ನಂಬಿಕೆ. ಒಂದು ಸುತ್ತು ಚರಗ ಚಲ್ಲಿದ ಮೇಲೆ ಮುಂದಿದ್ದವನು ಕುಡುಗೋಲಿನಿಂದ ಬಾಳೆಯ ಗಿಡವೊಂದನ್ನು ಕಡಿದು ಹಾಕು ಬೆಂಡುಗೊಳ್ಳಿಯನ್ನು ಬಿಸಾಕುತ್ತಾನೆ. 
ಒಕ್ಕಣೆ  ಮಾಡುವ ಸಂದರ್ಭದಲ್ಲಿ ಒಕ್ಕುವ ಕಣದಲ್ಲಂತೂ ಚರಗದ ಕುಡಿಕೆ ಸದಾ ತುಂಬಿರುತ್ತದೆ.  ಪ್ರತಿ ಹಂತದಲ್ಲೂ ಬೆಳಿಗ್ಗೆ, ಸಂಜೆ ಚರಗ ಚಲ್ಲಿಯೇ ಕೆಲಸ ಆರಂಭವಾಗುವುದು.  ಚರಗ ಚೆಲ್ಲುವ ಈ ಆಚರಣೆಯಿಂದ ಲೌಕಿಕ ಉಪಯೋಗವೂ ಇದೆ.  ಚರಗದಲ್ಲಿರುವ ರಕ್ತ, ಅನ್ನದಗುಳು, ಮುದ್ದೆ ಚೂರು ಮುಂತಾದ ಆಹಾರದ ಪದಾರ್ಥಗಳನ್ನು  ತಿನ್ನಲು ಬರುವ ಹಕ್ಕಿಗಳು ಅಲ್ಲಿರುವ ಆಹಾರವನು ತಿಮ್ದು ಮುಗಿಸಿದ ನಂತರ ಅಲಿಯೇ ಕಣ್ಣಿಗೆ ಬೀಳುವ ಹುಳುಗಳನ್ನು ತಿಂದು ಹಾಕುತ್ತವೆ.  ಹಾಗಾಗಿ ಚರಗ ಚೆಲ್ಲುವುದು ಕೀಟ ನಿವಾರಣೆ ಮಾಡುವ ಸರಳ ವಿಧಾನವೂ ಆಗಿದೆ.  ಔಡಲ ಗಿಡಗಳಿಗೆ, ಹೆಸರು ಗಿಡಗಳಿಗೆ ಹತ್ತಿದ ಹುಳಗಳನ್ನು ಚರಗ ಹಾಕಿ ಪಕ್ಷಿಗಳನ್ನು ಆಕರ್ಷಿಸಿ ನಿವಾರಣೆ ಮಾಡಿಕೊಂಡ ಉದಾಹರಣೆಗಳೂ ಸಾಕಷ್ಟು ಸಿಗುತ್ತವೆ. 
ಎಳ್ಳಮವಾಸ್ಯೆ
ವರ್ಷದ ಜನವರಿ ಅಥವಾ ಡಿಸೆಂಬರ್ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಆಚರಿಸಲ್ಪಡುವ ಸಂಭ್ರಮದ ಆಚರಣೆ ಎಳ್ಳಮಾವಾಸ್ಯೆ. ಈ ತಿಂಗಳುಗಳು ಮುಂಗಾರಿನ ಬೆಳೆಗಳ ಕಟಾವು ಮತ್ತು ಹಿಂಗಾರಿ ಬೆಳೆಗಳ ಬಿತ್ತನೆಗಳೆರಡೂ ಏಕಕಾಲಕ್ಕೆ ನಡೆಯುವ ಸಂಭ್ರಮದ ಮತ್ತು ಸಂಧಿಗ್ದದ ಸಮಯ. ಒಂದೆಡೆ ಮುಂಗಾರಿನ ಪ್ರಮುಖ ಬೆಳೆಯಾದ ಜೋಳದ ಕಟಾವು ನಡೆಯುತ್ತಿದ್ದರೆ, ಮತ್ತೊಂದೆಡೆ ಹಿಂಗಾರು ಬೆಳೆಗಳಾದ ಶೇಂಗಾ, ಕಡಲಿ, ಸೂರ್ಯಕಾಂತಿ, ಬೇಸಿಗೆ ಸಜ್ಜೆ ಮುಂತಾದ ಬೆಳೆಗಳ ಬಿತ್ತನೆ ನಡೆಯುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಹಾಜರಾಗುವುದು ಎಳ್ಳಮವಾಸ್ಯೆಯ ಸಡಗರ. ಅಂದು ಎಲ್ಲಿ ನೋಡಿದರೂ  ರಂಗುರಂಗಿನ ಬಟ್ಟೆ ತೊಟ್ಟ ಹೆಂಗಳೆಯರನ್ನು ಕರೆದೊಯ್ಯುವ ಸಾಲಂಕೃತ ಸಾಲು-ಸಾಲು ಎತ್ತಿನ ಗಾಡಿಗಳು ಎಲ್ಲರ ಗಮನ ಸೆಳೆಯುತ್ತವೆ. ಈ ಆಚರಣೆಯ ದಿವಸ ಎಳ್ಳಿನ ಅಡುಗೆಗಳ ವಿಶೇಷ.
ಅಂದು ಮೊದಲ ಕೋಳಿ ಕೂಗುವಾಗಲೇ ಊರಿಡೀ ಎಚ್ಚೆತ್ತಿರುತ್ತದೆ.  ಯುವಕರು ಬಂಡಿ ತೊಳೆದು ಅದರ ಚಕ್ರಕ್ಕೆ ಕೀಲೆಣ್ಣೆ ಹಾಕಿ, ಕೊಲ್ಲಾರಿ ಕಟ್ಟಿ, ಎತ್ತುಗಳ ಮೈ ತೊಳೆದು, ಕೋಡುಗಳಿಗೆ ಬಣ್ಣ ಹಚ್ಚಿ ಕೊಂಬು ಗುಣುಸು ಹಾಕಿ, ಹಣೆ ಗೆಜ್ಜೆ, ಕೊರಳು ಗಂಟೆ ಕಟ್ಟಿ, ಮೈ ತುಂಬ ಚಿತ್ತಾರದ ಜೂಲ ಹಚ್ಚುತ್ತಿದ್ದರೆ… ಅತ್ತ ಹೆಣ್ಣು ಮಕ್ಕಳಿಂದ ಅಡುಗೆಮನೆ ಘಮಘಮಗುಟ್ಟುತ್ತಿರುತ್ತದೆ.
ಎತ್ತು-ಗಾಡಿಗಳನ್ನು ಅಲಂಕರಿಸಿ ಮನೆಯ ಎಲ್ಲರೂ ಸೇರಿ ಹೊಲದತ್ತ ಸಾಗುತ್ತಾರೆ.  ಅವರು ತಂತಮ್ಮ ಹೊಲಗಳಿಗೆ `ಚರಗ’ ಆಚರಿಸಲು ಹೊರಟ ಪರಿ ಇದು. ಹಚ್ಚ ಹಸರಿನ ಬೆಳೆ ಹೊತ್ತ ಭೂಮಿ ತಾಯಿಗೆ ಇಂದು `ಸೀಮಂತ’ ಮಾಡಿ ಸಂತಸ ಹಂಚಿಕೊಳ್ಳುವ ಶುಭ ದಿನ ಈ ಎಳ್ಳು ಅಮಾವಾಸ್ಯೆ. ಅಂದು ಹೊಲಕ್ಕೆ ಯಾರೇ ಬಂದರೂ ಅವರು ಅತಿಥಿಗಳು.
ಎಳ್ಳಮವಾಸ್ಯೆಯ ಅಡುಗೆ ವೈವಿಧ್ಯ ಅಪಾರ.    ಹಿಂದಿನ ದಿನ ಇಡೀ ರಾತ್ರಿ ತಯಾರಿಸಿದ ಎಳ್ಳು ಹೋಳಿಗೆ, ಎಳ್ಳು ಬಜಿ, ಕಡಕ್ ಸೆಜ್ಜೆ ರೊಟ್ಟಿ, ಕರಿಗಡಬು, ತರಾವರಿ ಮಸಾಲೆ ಉಸುಳಿ, ಖಾರಸಾರು, ಎಣ್ಣೆಗಾಯಿ ಬದನೆಕಾಯಿ ಪಲ್ಯೆ, ಕೆನೆ ಮೊಸರು, `ಚರಗ’ದ ನೈವೇದ್ಯಕ್ಕೆ ತಯಾರಿಸಿದ ಜೋಳ, ಅವರೆ, ಅಕ್ಕಿ ಕಿಚಡಿ. ಈ ಎಲ್ಲಾ ಭಕ್ಷ್ಯಾನ್ನಗಳ ಬಿದಿರು ಬುಟ್ಟಿ ಭರ್ತಿಯಾಗಿ ಬಂಡಿ ಏರಿರುತ್ತವೆ. ಹೊಲಕ್ಕೆ ಸಾಗುವ ಬಂಡಿಗಳ ಸಂಭ್ರಮ ಮಾತಿಗೆ ನಿಲುಕದ್ದು. ನಾ ಮುಂದೆ- ತಾ ಮುಂದೆ ಎಂಬ ಸ್ಪರ್ಧೆಯೂ ನಡೆಯುತ್ತದೆ.  ಹೊಸದಾಗಿ ಮದುವೆಯಾದ ಜೋಡಿಗಳೂ ಅಂದು ಈ ಆಚರಣೆಯಲ್ಲಿ ಪಾಲ್ಗೊಳ್ಳಬೇಕು.
‘ಕಡಬು ಬಜಿ’ ಇಂದಿನ ಅತ್ಯಂತ ವಿಶೇಷ ತಿನಿಸು. ಪ್ರತಿಯೊಂದು ಕಾಳು, ಕಾಯಿ ಪಲ್ಲೆ ಮತ್ತು ತರಕಾರಿಗಳನ್ನು ಸೇರಿಸಿ ಬೇಯಿಸಿದ್ದೇ ಕಡಬು ಬಜಿ. ಎಲ್ಲ ಪದಾರ್ಥಗಳನ್ನೂ ಸಹ ಸೇರಿಸುವುದರಿಂದ ಇದು ಅತ್ಯಂತ ರುಚಿಯಾಗಿರುತ್ತದೆ. ಅಲ್ಲದೆ ಜೋಳದ ಕಬ್ಬು (ಕಾಂಡ) ತಿನ್ನುವುದು ಇಂದಿನ ದಿನದ ಪದ್ಧತಿ. ಬೇರೆ ದಿನಗಳಲ್ಲಿಯೂ ತಿನ್ನುತ್ತಾರೆ ಆದರೆ ಎಳ್ಳಮವಾಸ್ಯೆಯಂದು ತಿಂದರೆ ತುಂಬಾ ರುಚಿಯಾಗಿರುತ್ತದೆ ಎಂಬುದು ಹಿರಿಯರ ಅನಿಸಿಕೆ.
ಹೊಲಕ್ಕೆ ಸಾಗಿದ ನಂತರ  ಬನ್ನಿ ಗಿಡದ ಕೆಳಗಡೆ ಭರಮ ದೇವರೆಂದು ಕರೆಯುವ  ಐದು ಕಲ್ಲುಗಳನ್ನು ಇಟ್ಟು ಪೂಜಿಸುತ್ತಾರೆ.  ನೈವೇದ್ಯವನ್ನು ಹೊಲದ ನಾಲ್ಕು ದಿಕ್ಕಿಗೂ `ಉಲ್ಲುಲ್ಲಗೋ… ಚಳಂಬ್ರಿಗೋ’ ಎನ್ನುತ್ತಾ ಉಗ್ಗುತ್ತಾರೆ.  ಹೊಲದಲ್ಲಿ ಬೆಳೆದಿರುವ ಜೋಳದ ತೆನೆಗಳಿಗೆ ಅರಿಶಿನ -ಕುಂಕುಮ ಇಟ್ಟು, ಆರತಿ ಬೆಳಗಿ ಮನೆಯ ಹ್ಗಿರಿಯರು ಅಥವಾ ಹೆಣ್ಣು ಮಕ್ಕಳು ಪೂಜಿಸುತ್ತಾರೆ, ಅಲ್ಲದೆ ಹೊಲದಲ್ಲಿರುವ ಬಾವಿ, ಬೋರ್ ವೆಲ್ ಗಳಿಗೂ ಸಹ ಪೂಜಿಸಲಾಗುತ್ತದೆ. ಹೊಲದಲ್ಲಿರುವ ಇತರ ಬೆಳೆಗಳಿಗೂ ಸಹ ಪೂಜಿಸಲಾಗುತ್ತದೆ.  ಎಳ್ಳಮವಾಸ್ಯೆಯ ಮತ್ತೊಂದು ವಿಶೇಷವೆಂದರೆ ಅಂದು ಜೇನು ತಿಂದರೆ ಒಳ್ಳೆಯದೆಂಬ ಭಾವನೆಯಿದೆ. ಗಂಡಸರು ಹೊಲದಲ್ಲಿ ಜೇನು ಕಟ್ಟಿದ್ದರೆ ಕಿತ್ತು ತಂದು ತುಪ್ಪವನ್ನು ಎಲ್ಲರಿಗೂ ಹಂಚುತ್ತಾರೆ. ಹೊಲದಲಿ ಜೇನಿರುವ ಸ್ಥಳ ಮುಂಚಿತವಾಗಿ ತಿಳಿದಿದ್ದರೂ ಸಹ ಎಳ್ಳಮವಾಸ್ಯೆಯ ದಿವಸವೇ ಕೀಳುವುದು ಪದ್ಧತಿ. ಇದಾದ ನಂತರ `ಹುಲಸಾಗಿ ಬೆಳೆ ಬರಲಿ’ ಎಂದು ಭೂಮಿ ತಾಯಿಗೆ ಉಡಿ ತುಂಬಿ ಎಲ್ಲರೂ ಒಂದೆಡೆ ಕುಳಿತು  ಊಟ ಮಾಡುತ್ತಾರೆ.
ಸಂಜೆಯಾಗುತ್ತಿದ್ದಂತೆ ಚಕ್ಕಡಿಗಳು ಮತ್ತೆ ಒಂದೊಂದಾಗಿ ಊರ ದಾರಿ ಹಿಡಿಯುತ್ತವೆ.
ಮಗೆ ಮುಂಡುಗನನ್ನು ಹಾಕುವುದು
ನಾಟಿಯಾದ ಸಸಿಗಳು ಗಟ್ಟಿಯಾಗಿ ಚಿಗುರತೊಡಗಿದಾಗ ಮಲೆನಾಡಿನ ವ್ಯವಸಾಯಗಾರರು `ಎರಕಲು ಗೂಟ’ದ ಆಚರಣೆಗೆ ತೊಡಗುತ್ತಾರೆ.  ಮಗೆ ಮಳೆ ಶುರುವಾಗುತ್ತದೆ ಎನ್ನುವಾಗ ಹಿಂದಿನ ಸಂಜೆಯೇ ಹಳ್ಳಗಳ ದಂಡೆಯಲ್ಲಿ ಬೆಳೆಯುವ ಮುಂಡುಗದ ತುಂಡುಗಳನ್ನು ಕಡಿದು ತಂದು ಗದ್ದೆಯ ಪ್ರತಿ ಹಾಳೆಯಲ್ಲೂ ಇಟ್ಟು ಬರುತ್ತಾರೆ.  ರಾತ್ರಿಯ ಹೊತ್ತು ಒಬ್ಬ ಗಂಡಸು ಮೈಮೇಲೆ ನೂಲೆಳೆಯಿಲ್ಲದಂತೆ ಬೆತ್ತಲೆಯಾಗಿ ಹೋಗಿ ಆ ತುಂಡುಗಳನ್ನು ಪ್ರತಿ ಹಾಳೆಯಲ್ಲಿ ನೆಟ್ಟು ಬರುತ್ತಾನೆ.  ಇತ್ತೀಚೆಗೆ ಬೆತ್ತಲೆ ಹೋಗುವ ಮನುಷ್ಯ ಕರಿ ಕಂಬಳಿ ಹೊದೆಯಬಹುದೆಂಬ ರಿಯಾಯಿತಿ ನೀಡಿದ್ದಾರೆ.  ಹೀಗೆ ಎರಕಲು ಗೂಟ ನೆಡುವುದರಿಂದ ಭೂಮಿ ತನ್ನ ಫಲವಂತಿಕೆಯನ್ನು ಕಳೆದುಕೊಳ್ಳುವುದಿಲ್ಲವೆಂತಲೂ, ಪೈರಿಗೆ ಯಾವ ರೋಗ ರುಜಿನ, ಹುಳು, ಉಪ್ಪಟೆಯ ಕಾಟವಿರುವುದಿಲ್ಲವೆಂತಲೂ, ಪ್ರಾಣಿಗಳಿಂದ ತೊಂದರೆ ಬರುವುದಿಲ್ಲವೆಂತಲೂ ನಂಬಲಾಗುವುದು.  ಕೆಲವರು ಮುಂಡಗದ ತುಂಡಿನ ಬದಲು ಕವೆಕೋಲುಗಳನ್ನು ನೆಟ್ಟು ಅದರ ಮೇಲೆ ಬಿಳಿಕಲ್ಲಿಟ್ಟು `ಕಣ್ಣಾಸರು’ ಎಂದುಕೊಳ್ಳುತ್ತಾರೆ. 
ಕರಿಕೊಳ್ಳಿ ಹಾಕುವುದು
ಗದ್ದೆಯನ್ನು ಕೊಯ್ಲು ಮಾಡುವಾಗ ಪೈರನ್ನು ಸಂಪೂರ್ಣವಾಗಿ ಕಟಾವು ಮಾಡದಿರುವುದು ಒಂದು ವಿಶೇಷ.  ಮಲೆನಾಡಿನ ಭಾಗಗಳಲ್ಲಿ ಕೊನೆಯಲ್ಲಿ ಐದು ಸಸಿಗಳನ್ನು ಉಳಿಸುತ್ತಾರೆ.  ಕೊಯ್ಲು ಮಾಡಿದ ಹುಲ್ಲನ್ನು ಹೊರೆ ಮಾಡಿ ಬಣವೆಗೆ ಹೊತ್ತು ಸಾಗಿಸುತ್ತಾರೆ.  ಐದು ಸಸಿಗಳ ಜಾಗದ ಹತ್ತಿರದ ಕೊನೆಯ ಹೊರೆಯನ್ನು ನಿಶ್ಚಿತ ಮನುಷ್ಯನೊಬ್ಬ ಹೊತ್ತು ಹೊರಡುತ್ತಾನೆ.  ಆಗ ಅವನು ಯಾರು ಮಾಡನಾಡಿಸಿದರೂ ಮಾತನಾಡದೆ ಬಣವೆಗೆ ಹಾಕಿ, ಮನೆಯ ಒಲೆಯಲ್ಲಿ ಕೊಳ್ಳಿಯೊಂದನ್ನು ತಂದು ಪ್ರಸ್ತುತ ಗದ್ದೆಗೆ ಹಣಿದು ಬರುತ್ತಾನೆ.  ಇದಕ್ಕೆ `ಕರಿಕೊಳ್ಳಿ ಹಾಕುವುದು’ ಎನ್ನುತ್ತಾರೆ.  ಇಷ್ಟು ದಿವನ ಪೈರಿನಿಂದ ತುಂಬಿ ತುಳುಕಿದ ಗದ್ದೆ ಬೋಳಾಗಿರುವುದನ್ನು ಕಂಡು ಯಾರೂ ಕಣ್ಣು ಹಾಕಬಾರದೆಂದು ಈ ಆಚರಣೆ. 
ಬಯಲು ನಾಡಿನಲ್ಲಿ ಐದು ಸಸಿ ಉಳಿಸಿ ಪೂಜಿಸುವುದನ್ನೇ `ಬೆಳೆಮುಂಬು’ ಎಂದು ಕರೆಯುತ್ತಾರೆ.  ಕೊನೆಯಲ್ಲಿನ ಸಸಿಗಳನ್ನು ತುದಿಗಂಟು ಹಾಕಿ ಕಟ್ಟಿ ಕುಡುಗೋಲು ಮಸಗಲ್ಲುಗಳನ್ನಿಟ್ಟು ಪೂಜಿಸಿ ಎಡೆ ಹಿಡಿದು ಊಟ ಮಾಡುತ್ತಾರೆ.  ಬೆಳೆಮುಂಬು ಆಚರಣೆಗೆ ದಾಸಯ್ಯ ಪೂಜಾರಿಗಳನ್ನೂ ಆಹ್ವಾನಿಸುವುದುಂಟು.  ಆಗ ಜೊತೆ – ಜೊತೆಗೆ ಮಂತ್ರ ಹೇಳುವುದು, ಶಂಖ ಊದುವುದು, ಜಾಗಟೆ ಬಾರಿಸುವುದು ನಡೆಯುತ್ತದೆ.  ಬೆಳೆ ಮುಂಬನ್ನೇ ಹೋಲುವಂತಹ ಹತ್ತಿದೇವರ ಆಚರಣೆ ಒಂದಿದೆ.  ಮೊದಲ ಬಾರಿಗೆ ಹತ್ತಿ ಬಿಡಿಸುವಾಗ ಆಯ್ದ ಗಿಡವೊಂದಕ್ಕೆ ಪೂಜಿಸಿ ಬಿಡಿಸಿದ ಮೊದಲ ಹತ್ತಿಯನ್ನು ಏರಿಸುತ್ತಾರೆ.  ನಂತರ ಪ್ರತಿ ಸಾರಿ ಹಾಗೆಯೇ ಇರುತ್ತದೆ.  ಎಲ್ಲ ಗಿಡಗಳನ್ನು ಕತ್ತರಿಸಿ ಹಾಕಿದರೂ ಹತ್ತಿ ದೇವರ ಗಿಡ ಮಾತ್ರ ಮುಂದಿನ ಉಳುಮೆಯಾಗುವ ತನಕ ಹಾಗೆಯೇ ಇರುತ್ತದೆ.
ಪ್ರಸ್ತುತ ಬೆಳೆಮುಂಬು ಮತ್ತು ಹತ್ತಿ ದೇವರ ಪೂಜೆ ಆಚರಣೆಯು ಪ್ರಾಕ್ತನ ಮಾನವನ ನಂಬಿಕೆಯ ಪಳೆಯುಳಿಕೆಯಂತೆ ಕಾಣುತ್ತದೆ.  ಧಾನ್ಯಗಳಲ್ಲಿ, ಬೆಳೆಗಳಲ್ಲಿ ಆತ್ಮವಿದೆ.  ಅದನ್ನು ಪೂರ್ಣ ಕೊಯ್ದು ಹಾಕಿದರೆ ಪುನಃ ನಮಗೆ ಸಿಕ್ಕಲಾರದು ಎಂಬ ನಂಬಿಕೆಯ ಪರಿಣಾಮವೂ ಇದ್ದಂತೆ ತೋರುತ್ತದೆ.  ಪ್ರಪಂಚದಾದ್ಯಂತ ಹರಡಿರುವ ಇಂತಹ ಅನೇಕ ಆಚರಣೆಗಳನ್ನು ಫ್ರೇಜರ್‌ರವರು ಗಮನಿಸಿ ವಿಶ್ಲೇಷಿಸಿದ್ದಾರೆ.  ಆದಿವಾಸಿಗಳ ಪ್ರಕಾರ ಒಂದು ಹೊಲದಲ್ಲಿ ಬೆಳೆ ಬೆಳೆದಿದ್ದರೆ ಹಾಗಾಗಲು ಅದರಲ್ಲಿ ಧಾನ್ಯಮಾತೃವಿನ ಆತ್ಮ ಇರುವುದೇ ಕಾರಣ.  ಬೆಳೆಯನ್ನು ಕೊಯ್ಯುವವರೆಗೆ ಮಾತ್ರ ಧಾನ್ಯಮಾತೃ ಹೊಲವನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ.  ಆದರೆ ಬೆಳೆಯನ್ನು ಕೊಯ್ಯುತ್ತಾ ಬಂದಂತೆ ಸಾಯುವುದನ್ನು ತಪ್ಪಿಸಿಕೊಳ್ಳಲು ಒಂದರಿಂದ ಇನ್ನೊಂದು ಪೈರಿಗೆ ಓಡುತ್ತದೆ.  ಆದರೆ ಹೊಲದಲ್ಲಿ ಎಲ್ಲ ಪೈರನ್ನೂ ಕೊಯ್ದು ಇನ್ನೊಂದು ಮಾತ್ರ ಉಳಿದಿದ್ದರೆ ಅದರಲ್ಲಿಯೇ ಧಾನ್ಯಮಾತೃ ಇರುವುದೆಂದು ಅವರ ನಂಬಿಕೆ.  ಆದುದರಿಂದ ಧಾನ್ಯಮಾತೃ ಆ ಕೊನೆಯ ಪೈರಿನಲ್ಲಿ, ಕೊನೆಯ ಕಂತೆಯಲ್ಲಿ, ಕೊನೆಯ ಪೈರನ್ನು ಕೊಯ್ಯುವ ವ್ಯಕ್ತಿಯಲ್ಲಿ, ಕೊನೆಯ ಕಂತೆ ಕಟ್ಟುವ ವ್ಯಕ್ತಿಯಲ್ಲಿ ಇರಲು ಸಾಧ್ಯ.  ಈ ಧಾನ್ಯಮಾತೃವನ್ನು ಹೊರಗೆ ಹೋಗದಂತೆ ಸಾಯಿಸಿದರೆ ಅದರ ಶಕ್ತಿ ಹೊಲದಲ್ಲಿಯೇ ಉಳಿದು ಮುಂದಿನ ವರ್ಷ ಬೆಳೆ ಬೆಳೆಯಲು ಸುಗಮವಾಗುತ್ತದೆ.  ಈ ಮಾತುಗಳ ಆಧಾರದ ಮೇಲೆ ನಮ್ಮ ಬೆಳೆಮುಂಬು ಈ ಹೊಲದ ಧಾನ್ಯದ ಆತ್ಮವನ್ನು ತನ್ನಲ್ಲೇ ಉಳಿಸಿಕೊಂಡು ಮುಂದಿನ ಫಲಶಕ್ತಿಗೆ ಕಾರಣವಾಗುವ ಸಂಕೇತವಾಗಿದೆ.  ಹತ್ತಿ ದೇವರ ಪೂಜೆ ಆಚರಣೆಯೂ ಇದನ್ನೇ ನೆನಪಿಸುತ್ತದೆ.  ಪ್ರಾಯಶಃ ಬಲಿ ಕೊಡುವ ಪದ್ಧತಿ ಸುಧಾರಣೆ ಆಗಿ ಆಗಿ ಬೆಳೆ ಉಳಿಸುವ ಕ್ರಮಕ್ಕೆ ಬಂದು ನಿಂತಿದೆ.
ವೀಳ್ಯದೆಲೆಗೆ ಗೌರಿ ಪೂಜೆ
ವೀಳ್ಯದೆಲೆಗೆ ನಮ್ಮ ಗ್ರಾಮೀಣ ಸಮುದಾಯ ನೀಡುವ ಪ್ರಾಮುಖ್ಯತೆ ನಮಗೆಲ್ಲರಿಗೂ ತಿಳಿದದ್ದೇ. ಶುಭ ಕಾರ್ಯವಾಗಲೀ, ಅಶುಭ ಕಾರ್ಯವಾಗಲೀ, ಭೂತ ಬಿಡಿಸುವುದಿರಲಿ, ಬಾಗಿನ ಕೊಡುವುದಿರಲಿ `ಎರಡೆಲೆ ಎರಡಡಿಕೆ’ ಇರಲೇಬೇಕು.  ಏನೇ ಕೊಡು-ತೆಗೆದುಕೊಳ್ಳುವುದಿರಲಿ ಎಲೆಯಡಿಕೆ ಜೊತೆಯಲ್ಲಿಟ್ಟೇ ಕೊಡಬೇಕೆಂಬುದು ಒಂದು ಸಂಪ್ರದಾಯ, ತಾಂಬೂಲಕ್ಕಂತೂ ವೀಳ್ಯದೆಲೆಯೇ ಮೂಲ. ಹಾಗಾಗಿ ವೀಳ್ಯದೆಲೆ ಎಂದರೆ ರೈತರಿಗೆ ಸಾಕ್ಷಾತ್ ಗೌರಿ. ವೀಳ್ಯದೆಲೆ ತೋಟವನ್ನು ಅವರು ವಿಶೇಷ ಗೌರವದಿಂದಲೇ ಕಾಣುತ್ತಾರೆ. ಅಲ್ಲಿ ಚಪ್ಪಲು ಮೆಟ್ಟಬಾರದು,  ಔಷಧ ಸಿಂಪರಣೆ ಕೂಡದು ಎಂಬ ನಿಷೇಧಗಳಿವೆ.
ವೀಳ್ಯದೆಲೆಯನ್ನು ಗೌರಿಯ ಅವತಾರ ಎಂದು ನಂಬುವುದು ಎಲ್ಲ ಪ್ರದೇಶಗಳಲ್ಲಿ ಕಾಣಬಹುದು.  ಎಲೆ ತೋಟವಂತೂ ಸಾಕ್ಷಾತ್ ದೇವಾಲಯದಂತೆಯೇ ಪರಿಗಣಿಸುತ್ತಾರೆ. ದೇವಾಲಯದ ಸಕಲ ನಿರ್ಬಂಧಗಳೂ ಇಲ್ಲಿವೆ.  ಕೃಷಿ ಏನೆಲ್ಲ ಆಧುನೀಕರಣಗೊಂಡಿದ್ದರು ಸಹ ಎಲೆ ತೋಟಕ್ಕೆ ಮಾತ್ರ ರಾಸಾಯನಿಕಗಳು ಸೋಂಕುವಂತಿಲ್ಲ.  ವೀಳ್ಯದೆಲೆ ವಾಣಿಜ್ಯ ಬೆಳೆಯಾಗಿದ್ದರೂ ಈಗಲೂ ರೈತರಲ್ಲಿ ಎಲೆತೋಟದ ಬಗೆಗಿನ ಭಕ್ತಿ, ಗೌರವ, ನಂಬಿಕೆಗಳು ಬದಲಾಗಿಲ್ಲ.  ತೋಟವಿರುವ ಪ್ರತಿಯೊಬ್ಬರೂ ಗೌರಿ ಹಬ್ಬದ ಸಮಯದಲ್ಲಿ ಗೌರಿಪೂಜೆ ಮತ್ತು ಬೊಮ್ಮಪ್ಪನ ಪೂಜೆಯನ್ನು ತೋಟದಲ್ಲೇ ಮಾಡುತ್ತಾರೆ. ಅದಕ್ಕೆ ಹಿನ್ನೆಲೆಯಾಗಿ ಸ್ವಾರಸ್ಯವಾದ ಕಥೆಯೊಂದು ಹೀಗಿದೆ:
ಪಾಂಡವರ ತಾಯಿ ಕುಂತಿದೇವಿಯು ಗಜಗೌರಿ ವ್ರತವನ್ನು ಮಾಡಲು ದೇವಲೋಕದಿಂದ ತರಿಸಿದ ಐರಾವತ ಮುಂತಾದ ಅನೇಕ ವಸ್ತುಗಳಲ್ಲಿ ವೀಳ್ಯದೆಲೆ ಅಂಬು ಸಹ ಒಂದು. ಪೂಜೆ ಮುಗಿದ ನಂತರ ಮುಂಚೆಯೇ ಆದ ಕರಾರಿನಂತೆ ಅವು  ದೇವಲೋಕದ ಕಡೆ ಹೊರಟವು.  ಆದರೆ ಅವುಗಳನ್ನು ದೇವಲೋಕಕ್ಕೆ ಹೋಗಲು ಬಿಡದೆ ಒಬ್ಬೊಬ್ಬರು ಒಂದೊಂದನ್ನು ಕಟ್ಟಿ ಹಾಕಿದರು.  ಭೀಮ – ಐರಾವತವನ್ನು, ಧರ್ಮರಾಯ ಅವರೆಕಾಳನ್ನು, ನಕುಲ – ಸಹದೇವರು ಭತ್ತವನ್ನು ಹಿಡಿದು ಕಟ್ಟಿಹಾಕಿದರೆ  ವೀಳ್ಯದೆಲೆ ಅಂಬನ್ನು `ಬೊಮ್ಮಪ್ಪ’ನೆಂಬ ಗಂಗ ಮತಸ್ಥ  ಬೆಸ್ತರವನು ಕಟ್ಟಿ ಹಾಕಿದನಂತೆ. ಹಾಗಾಗಿ ಅವೆಲ್ಲಾ ಭೂ ಲೋಕದಲ್ಲಿಯೇ ಉಳಿದವಂತೆ. ಈಗಲೂ ಸಹ ವೀಳ್ಯದೆಲೆ ಅಂಬು ಆಕಾಶದತ್ತ ಹರಿಯುವುದು ದೇವಲೋಕದ ಆಸೆಗಾಗಿಯೇ! ಅದಕ್ಕಾಗಿಯೇ ಪ್ರತಿ ವರ್ಷ ಎಲೆ ಅಂಬನ್ನು ಇಳಿಸುವ ಪದ್ಧತಿ ಇದೆ ಎನ್ನುತ್ತಾರೆ.  ಮತ್ತು ವೀಳ್ಯದೆಲೆಯನ್ನು ಕಟ್ಟಿ ಹಾಕಿದ ಬೊಮ್ಮಪ್ಪನ ನೆನಪಿಗಾಗಿ ವರ್ಷಕ್ಕೊಮ್ಮೆ ಎಲೆ ಅಂಬನ್ನು ಇಳಿಸಿ ಎಡೆ ಹಾಕಿ ಪೂಜೆ ಮಾಡುತ್ತಾರೆ.  ಜೊತೆಗೆ ಸಾಕ್ಷಾತ್ ಗೌರಿಯೇ `ವೀಳ್ಯದೆಲೆ’ಯಾಗಿದ್ದಾಳೆ ಎಂದು ನಂಬಿದ ರೈತರು ಅದೇ ಸಮಯಕ್ಕೆ `ಗೌರಿ ಪೂಜೆ’ಯನ್ನೂ ಮಾಡುತ್ತಾರೆ.
ಗೌರಿ ಹಬ್ಬದ ದಿನ ಅಥವಾ ಹಬ್ಬ ಮುಗಿದ ಒಂಭತ್ತು ದಿವಸಕ್ಕೆ ತೋಟದ ದೇವ ಮೂಲೆಯಲ್ಲಿ ಮೂಡಣ ದಿಕ್ಕಿಗೆ ಚಿಕ್ಕ ಚಪ್ಪರ ಹಾಕಿ ಬಾಳೆಕಂದು ಕಟ್ಟಿ ಕಳಸವಿಟ್ಟು ಗೌರಿಯ ಮುಖವನ್ನು ಬರೆದ ತೆಂಗಿನ ಕಾಯಿಯನು ಕಳಸದ ಬಾಯಿಗಿಡುತ್ತಾರೆ. ಆ ತೆಂಗಿನಕಾಯಿಗೆ ವಾಲೆ, ಜುಮುಕಿ, ಬಳೆ, ಸರ… ಮುಂತಾದ ಒಡವೆಗಳನ್ನು ತೊಡಿಸಿ, ಹೊಸ ಸೀರೆ, ಕುಬುಸದ ಕಣ ಉಡಿಸಿ ಎಳ್ಳಿನ ಚಿಗಳಿ, ಅಕ್ಕಿಯ ತಂಬಿಟ್ಟು, ಅಕ್ಷತೆ, ಸಿಹಿ ಅಡುಗೆ ಎಡೆ ಇಡುತ್ತಾರೆ.  ತೋಟದಲ್ಲಿ ಬಳಸುವ ಕುಡುಗತೋಲು, ಏಣಿ, ಎಲೆ ಕುಯ್ಯುವ ಉಗುರು, ನೀರು ಹುಯ್ಯುವ ಗುಂಬ ಎಲ್ಲವನ್ನೂ ಇಟ್ಟು ಸಿಂಗರಿಸಿ ಸಮೃದ್ಧವಾಗಿ ಸೇವಂತಿಗೆ ಹೂ ಮುಡಿಸಿ ಮೊದಲು ಗೌರಮ್ಮನ ತಂಗಿಯಾದ ಗಂಗೆಯನ್ನು ಪೂಜಿಸುತ್ತಾರೆ.  ನಂತರ ಗೌರಿಗೆ ಪೂಜೆ ಮಾಡಿ ಮುತ್ತೈದೆಯರು ಅಕ್ಷತೆ ಹಚ್ಚಿ ಬಾಗಿನ ಕೊಡುತ್ತಾರೆ.
ಪೂಜೆಯೆಲ್ಲಾ ಹೆಂಗಸರ ಕೆಲಸ.  ಆದರೆ ಬೊಮ್ಮಪ್ಪನಿಗೆ ಎಡೆ ಹಾಕುವುದು ಗಂಡಸರ ಕೆಲಸ.  ಬೊಮ್ಮಪ್ಪನಿಗೆಂದೇ ಜೀರಿಗೆ ಮೆಣಸು ಹಾಕಿ ಮಾಡಿದ ಕಿಚಡಿ ಅನ್ನ, ನೀರು ಮತ್ತು ಗಂಧದ ಕಡ್ಡಿ.  ಇವು ಮೂರನ್ನೂ ಒಬ್ಬೊಬ್ಬರು ಹಿಡಿದುಕೊಂಡು
`ಬೊಮ್ಮಪ್ಪೊ, ಬೊಮ್ಮಪ್ಪೊ,
ವರಗುಡ್ಲು ಮಡಗಿವ್ನಿ, ಗುಂಬ ಮಡಗಿವ್ನಿ,
ನಿಂಗೆ ಬೇಕಾದ್ದೆಲ್ಲ ಮಡಗಿವ್ನಿ
ಊಟ ಮಾಡಿ ಬೊಮ್ಮಪ್ಪೋ, ಒಳ್ಳೇದು ಮಾಡು ಬೊಮ್ಮಪ್ಪೋ…’ ಎನ್ನುತ್ತಾ, ಅನ್ನ-ನೀರು ಎರಚುತ್ತಾ ತೋಟ ಮೂರು ಸುತ್ತು ಹಾಕುತ್ತಾರೆ.  ಸಂಜೆ ಹೊತ್ತು ಈ ಪೂಜೆ ನಡೆಯುತ್ತದೆ.
ಇಳಿಗತ್ತಲ ಹೊತ್ತಿನಲ್ಲಿ  ಹಳ್ಳಿಯ ಎಲ್ಲರೂ ವೀಳ್ಯದೆಲೆ ತೋಟದಲ್ಲಿ ಸೇರಿ ಗೌರಿಗೆ ಹಸೆ ಹಚ್ಚಿ, ಬೊಮ್ಮಪ್ಪನಿಗೆ ಎಡೆ ಹಾಕಿ, ಆ ಮೂಲಕ ತಮ್ಮ ಬೇಸಾಯವೆಂಬ ಕಾಯಕಕ್ಕೆ ದೈವತ್ವದ ಸ್ವರೂಪ ನೀಡಿ ಖುಷಿಪಡುತ್ತಾರೆ.
ನೇಗಿಲು ಪೂಜೆ : ಬಿತ್ತನೆ ಬೀಜ ಪರೀಕ್ಷಿಸುವ ಆಚರಣೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಕನಕಪುರ ಮತ್ತು ತಮಿಳುನಾಡು ಪ್ರದೇಶದ ಕೆಲವು ಹಳ್ಳಿಗಳಲ್ಲಿ ಯುಗಾದಿ ಹಿಂದೆ – ಮುಂದೆ ನೇಗಿಲು ಪೂಜೆ ಎಂಬ ವಿಶಿಷ್ಟ ಆಚರಣೆ ಮಾಡುತ್ತಾರೆ. ಹಸಿ ಸಗಣಿಯಲ್ಲಿ ಬಟ್ಟಲಾಕಾರ ಮಾಡಿ ಸ್ವಲ್ಪ ಒಣಗಿಸಿ ಅದಕೆ ಕೆಮ್ಮಣ್ಣು ಹಾಕಿ ತಾವು ಮುಂದಿನ ವರ್ಷ ಬಿತ್ತುವ ೫, ೭ ಅಥವಾ ೯ ಜಾತಿಯ ಬೀಜಗಳನ್ನು ಸ್ವಲ್ಪ-ಸ್ವಲ್ಪ ಬಿತ್ತುತ್ತಾರೆ.  ಸಾಮಾನ್ಯವಾಗಿ ಅವರೆ, ತೊಗರಿ, ರಾಗಿ, ಭತ್ತ, ಜೋಳ, ನವಣೆ, ಹರಳು, ಹುರುಳಿ ಮುಂತಾದವನ್ನು ಬಿತ್ತುವುದು ರೂಢಿ. 
ಬಿತ್ತಿದ ನಂತರ ಈ ಸಗಣಿ ಬಟ್ಟಲನ್ನು ಎರಡು ಮರದ ನೇಗಿಲುಗಳಿಗೆ ಕಟ್ಟುತ್ತಾರೆ.  ನೇಗಿಲುಗಳು ಹೊಸತಾಗಿರಬೇಕು, ಹಳೆಯವನ್ನು ಬಳಸುವುದಿಲ್ಲ. ಹೀಗೆ ಬಿತ್ತಿದ ನಂತರ ಒಂಭತ್ತನೇ ದಿನದವರೆಗೆ ನೀರು ಹಾಕಿ ಕೊನೆಯ ದಿನ ಮನೆ ಹಿರಿಯರು ಮತ್ತು ಗ್ರಾಮದ ಹಿರಿಯರು ಸೇರಿ ಮೊಳಕೆಯನ್ನು ಪರೀಕ್ಷಿಸುತ್ತಾರೆ.  ಯಾವ ಬೆಳೆ ಎಷ್ಟೆಷ್ಟು ಪ್ರಮಾಣದಲ್ಲಿ ಮೊಳಕೆ ಬಂದಿದೆಯೋ ಅಷ್ಟು ಬೆಳೆ ಮುಂದಿನ ವರ್ಷ ಆಗುತ್ತದೆ ಎಂಬುದು ನಿರೀಕ್ಷೆ. 
ಉದಾಹರಣೆಗೆ ರಾಗಿ ಐವತ್ತು ಪೈಸೆ (ಅರ್ಧ ಭಾಗ) ಮೊಳಕೆ ಬಂದಿದ್ದರೆ ಎಂಟಾಣೆ ಬೆಳೆ, ಮುಕ್ಕಾಲು ಭಾಗ ಬಂದಿದ್ದರೆ ಹನ್ನೆರಡಾಣೆ ಬೆಳೆ ಆಗುತ್ತದೆ.  ಈ ರೀತಿ ನಿರ್ಧರಿಸಿ ಯಾವುದು ಹೆಚ್ಚು ಹುಲುಸಾಗಿ ಮೊಳಕೆ ಬಂದಿರುತ್ತದೆಯೋ ಅದನ್ನು ಈ ವರ್ಷ ಜಾಸ್ತಿ ಪ್ರಮಾಣದಲ್ಲಿ (ಒಂದ್ ಕೈ ಮುಂದೆ ಮಾಡಿ ಬಿತ್ಬೇಕು) ಬಿತ್ತಬೇಕೆಂದು ತೀರ್ಮಾನಿಸಿಕೊಳ್ಳುತ್ತಾರೆ.  ಹೇಗೆಂದರೆ ಹೆಸರು ಕಾಳು ಉತ್ತಮವಾಗಿ ಮೊಳಕೆಯಾಗಿದ್ದರೆ ಅಕ್ಕಡಿ ಸಾಲಿಗೆ ಬೇರೆ ಕಾಳುಗಳನ್ನು ಕಡಿಮೆ ಮಾಡಿ ಹೆಸರುಕಾಳು ಜಾಸ್ತಿ ಮಾಡುತ್ತಾರೆ.  ತೊಗರಿ ಚೆನ್ನಾಗಿ ಮೊಳಕೆ ಬಂದಿದ್ದರೆ ಅದನ್ನು ಹೆಚ್ಚು ಮಾಡುತ್ತಾರೆ. ತೀರ್ಮಾನ ಮುಗಿದ ನಂತರ ಊರವರೆಲ್ಲರೂ ಸಾಮೂಹಿಕವಾಗಿ ತೆರಳಿ ಎಲ್ಲಾ ಮೊಳಕೆ ಬಂದ ಬಟ್ಟಲುಗಳನ್ನು  ಗಂಗಮ್ಮನಿಗೆ (ನೀರಿನ ಸೆಲೆ) ಬಿಡುತ್ತಾರೆ.
ಇದನ್ನು ಆಚರಣೆಯ ಮಟ್ಟಕ್ಕಿಂತ ಆಚೆ ನಿಂತು ನೋಡಿದರೆ ಹೀಗನ್ನಿಸುತ್ತದೆ.  ಯುಗಾದಿ ಮಾರ್ಚಿ-ಏಪ್ರಿಲ್‌ನಲ್ಲಿ ಬರುತ್ತದೆ.  ಡಿಸೆಂಬರ್, ಜನವರಿಯಲ್ಲಿ ಕುಯಿಲು, ಒಕ್ಕಣೆ ಮಾಡಿ ಸಂಗ್ರಹ ಮಾಡಿದ ಬೀಜಗಳನ್ನು ಜೂನ್-ಜುಲೈ ತಿಂಗಳಲ್ಲಿ ತೆಗೆದು ಬಿತ್ತನೆ ಮಾಡುತ್ತಾರೆ. ಈ ಎರಡು ಅವಧಿಯ ನಡುವೆ ನೇಗಿಲು ಪೂಜೆ ನೆಪದಲ್ಲಿ ಸಂಗ್ರಹವಾದ ಬೀಜಗಳನ್ನು ಒಮ್ಮೆ ಬಿಚ್ಚಿ ನೋಡಿದಂತಾಗುತ್ತದೆ.  ಹುಳ-ಗಿಳ ಬಿದ್ದಿದ್ದರೆ ಹುಷಾರಾಗಬಹುದು.  ಜೊತೆಗೆ ನೇಗಿಲು ಪೂಜೆಯಲ್ಲಿ ಚೆನ್ನಾಗಿ ಮೊಳಕೆ ಬರದಿದ್ದಾಗ ಬೀಜ ಹಾಳಾಗಿದೆ ಎಂಬ ಅಂಶ ತಿಳಿದುಬಂದು ಅದನ್ನು ಬದಲಾಯಿಸಬಹುದು ಮತ್ತು ಮೊಳಕೆ ಪ್ರಮಾಣ ಕಡಿಮೆಯಾಗಿದ್ದು ಗೊತ್ತಾಗಿ ಬಿತ್ತುವ ಬೀಜದ ಪ್ರಮಾಣವನ್ನು ಹೆಚ್ಚಿಸಬಹುದು.  ಅಂದರೆ ಎಕರೆಗೆ ೧೪ ಕೆ.ಜಿ. ಬಿತ್ತುವ ಕಡೆ ೧೬ ಕೆ.ಜಿ. ಬಿತ್ತುವುದು… ಹೀಗೆ.  ಆಗ ಅಲ್ಲಿಗಲ್ಲಿಗೆ ಸರಿಹೋಗುತ್ತದೆ.
ತಮಿಳುನಾಡಿನ ಹುಲಿಬಂಡೆ ಎಂಬ ಕಾಡುಹಳ್ಳಿಯಲ್ಲಿ ಇಡೀ ಗ್ರಾಮದ ಪ್ರತಿಯೊಂದು ಮನೆಯವರೂ ನೇಗಿಲು ಪೂಜೆಯನ್ನು ಅತ್ಯಂತ ಶ್ರದ್ಧೆಯಿಂದ ಕ್ರಮಬದ್ಧವಾಗಿ ಮಾಡುತ್ತಾರೆ.
ಬಿತ್ತನೆ ಬೀಜಗಳ ಮೊಳಕೆ ಶಕ್ತಿಯನ್ನು ಪರೀಕ್ಷಿಸುವ ಈ ಆಚರಣೆ ವಿಶಿಷ್ತವಾದುದು ಮತ್ತು ರೈತರ ಜಾಣತನಕ್ಕೆ ಉತ್ತಮ ನಿದರ್ಶನ. ಆದರೆ ಈ ಆಚರಣೆ ಇಂದು ತೀರಾ ಅಪರೂಪವಾಗುತ್ತಿದೆ.
ಬೆಳೆ ಹರಕೆಗಳು
ತನಗೆ ಖಾಯಿಲೆ-ಕಸಾಲೆ ಬಂದಾಗ ಅದು ವಾಸಿಯಾಗಲೆಂದು ಹೇಗೆ ಹರಕೆ ಕಟ್ಟಿಕೊಳ್ಳುತ್ತಾರೋ ಅದೇ ರೀತಿ ತನ್ನ ಬೆಲೆಗಳಿಗೂ ರೋಗ-ರುಜಿನಗಳು ಬಾರದಿರಲೆಂದು ಹರಕೆ ಕಟ್ಟಿಕೊಳ್ಳೂವುದನ್ನು ಕಾಣಬಹುದು. ದವಸ ಧಾನ್ಯಗಳಿಗೆ ದೆವ್ವ, ಪೀಡೆಯ ಕಾಟ ಬರದಿರಲೆಂದು, ಕಳ್ಳ-ಕಾಕರ ಕಾಟವಿರದಿರಲೆಂದು, ರೋಗ-ರುಜಿನಗಳು ಮುತ್ತದಿರಲೆಂದು ಹರಕೆ ಹಾಕಿಕೊಳ್ಳುತ್ತಾನೆ.  ಅದು ಈಡೇರಿದರೆ ತಪ್ಪದೆ ಹರಕೆ ತೀರಿಸುತ್ತಾನೆ. 
ಉದಾಹರಣೆಗೆ ಔಡಲಕ್ಕೆ ಕೊಂಡಲ ಹುಳ ಬಿದ್ದರೆ ಮನೆ ದೇವರಿಗೆ ಹರಳೆಣ್ಣೆ ತಂದು ಒಪ್ಪಿಸುವುದಾಗಿ ಹರಕೆ ಹಾಕಿಕೊಂಡು ದೇವರ ತೀರ್ಥ ತಂದು ಹಾಕುತ್ತಾನೆ.  ಜೋಳಕ್ಕೆ ಜೋನಿ ಬೀಳದಿರಲೆಂದು, ತೆಂಗಿನಕಾಯಿಯ ಹರಳುದುರದಿದ್ದರೆ ಸೂರೆ ಹಬ್ಬ ಮಾಡುತ್ತೇನೆಂದು, ಹೊಗೆಸೊಪ್ಪಿಗೆ ತೊಂಡ್ಲೆ ಹುಳ ಬೀಳದಿದ್ದರೆ ಬೆಳ್ಳಿಯ ಅಥವಾ ಬಂಗಾರದ ತೊಂಡ್ಲೆ ಮಾಡಿಸಿಕೊಡುತ್ತೇವೆಂದು ಹರಕೆ ಹಾಕಿಕೊಳ್ಳುತ್ತಾರೆ. ಪೈರು ಚೆನ್ನಾಗಿ ಬೆಳೆದರೆ ಕಣ್ಣಾಸರು ಆಗದಿರಲಿ ಎಂದು ಬೆರ್ಚು ನಿಲ್ಲಿಸುತ್ತಾರೆ.  ಬೆರ್ಚು, ಬೆಳ್ತಲೆ, ಚಂದಪ್ಪ, ಬೆಕ್ಕಿನ ಸೋರೆ ಗಡಿಗೆ, ಮಡಕೆ ಎಂದೆಲ್ಲ ಕರೆಸಿಕೊಳ್ಳುವ ಈ ಸುಣ್ಣ ಹಚ್ಚಿದ ಬೋರಲು ಮಡಕೆ ಪ್ರತಿ ಹೊಲಗದ್ದೆಗಳಲ್ಲೂ ಕಾಣಸಿಗುತ್ತದೆ.  ಅಡಿಕೆ, ಬಾಳೆ, ತೆಂಗಿನ ತೋಟಗಳಲ್ಲಂತೂ ಆಳೆತ್ತರದ ಮನುಷ್ಯನ ಆಕಾರವೇ ಬೆರ್ಚು ಆಗಿ ಕಾರ್ಯನಿರ್ವಹಿಸುತ್ತದೆ.  ಬೆರ್ಚು ನಿಲ್ಲಿಸುವ ಪದ್ಧತಿ ಬಹಳ ಹಿಂದಿನಿಂದಲೇ ಇರುವಂತೆ ಕಾಣುತ್ತದೆ.  ಜನ್ನ ಕವಿ ತನ್ನ ಯಶೋಧರ ಚರಿತೆಯಲ್ಲಿ `ಪಾಪದ ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆರದಿಂ’ ಎಂದು ಪ್ರಯೋಗಿಸಿದ್ದಾನೆ.  ಋಗ್ವೇದದ ಕಾಲದಲ್ಲೂ ಸಹ ಜೋಳದ ಜಮೀನಿನಿಂದ ಹಕ್ಕಿಗಳನ್ನು ದೂರವಿರಿಸಲು ಬೆದರುಗೊಂಬೆಗಳನ್ನು ನಿಲ್ಲಿಸಲಾಗುತ್ತಿತ್ತು ಎಂದು ತಿಳಿದು ಬರುತ್ತದೆ.
ಹೊಸ ಪೈರಿನ ಹಬ್ಬ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರೈಸ್ತ ಬಂಧುಗಳು ಮಾತೆ ಮೇರಿಯ ಹುಟ್ಟಿದ ಹಬ್ಬವನ್ನು ಹೊಸ ಪೈರಿನ ಹಬ್ಬವನ್ನಾಗಿ ಆಚರಿಸುತ್ತಾರೆ. ಸಾಮಾನ್ಯವಾಗಿ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಈ ಹಬ್ಬವನ್ನು ಆಚರಿಸುವುದು ವಾಡಿಕೆ. ಅಂದು ಮನೆಯನ್ನು ವಿಶೇಷವಾಗಿ ಅಲಂಕರಿಸಿ ವಿವಿಧ ರೀತಿಯ ತರಕಾರಿ ಮತ್ತು ವೈವಿಧ್ಯಮಯ ಬೆಳೆಗಳ ತೆನೆಗಳನ್ನು ಮನೆಗೆ ತಂದು ಮಾತೆ ಮೇರಿಯ ಮೂರ್ತಿಯ ಮುಂದಿರಿಸಿ ಶಾಖಾಹಾರಿ ಅಡುಗೆ ತಯಾರಿಸಿ ಎಲ್ಲ ಒಟ್ಟಿಗೆ ಕಲೆತು ಊಟ ಮಾಡಿ ಸಂಭ್ರಮಿಸುತ್ತಾರೆ. 
ಕೊನೆ ಮಹೂರ್ತ
ಮಲೆನಾಡಿನ ಸಾಂಪ್ರದಾಯಿಕ ಅಡಕೆ ಬೆಳೆಯುವ ಕುಟುಂಬಗಳಲ್ಲಿ ಪ್ರಚಲಿತವಿರುವ ಆಚರಣೆ. ವಿಜಯದಶಮಿಯ ದಿವಸ ಸಾಂಕೇತಿಕವಾಗಿ ಅಡಿಕೆ ಗೊನೆ ಇಳಿಸುತ್ತಾರೆ, ಹಾಗೆ ಮೊದಲ ಗೊನೆ ಇಳಿಸುವಾಗ ಮಡುವ ಆಚರಣೆಯೇ ಕೊನೆ ಮಹೂರ್ತ. ಒಂದು ನಿರ್ದಿಷ್ಟ ಅಡಿಕೆ ಮರವನ್ನು ಗುರುತಿಸಿ ಅದಕ್ಕೆ ಪೂಜೆ ನೆರವೇರಿಸಿ ಆ ಮರದಿಂದ ಐದು ಗೊನೆಗಳನ್ನು ಇಳಿಸಿ ಆ ಗೊನೆಗಳನು ತುಳಸಿಕಟ್ಟೆಯ ಮುಂದೆ ಇಟ್ಟು ಜಾಗಟೆ ಬಾರಿಸುವ ಮೂಲಕ ಪೂಜಿಸುತ್ತಾರೆ.
ಗೌರಿ ಹಬ್ಬ
ಗೌರಿ ಮತ್ತು ಗಣೇಶನ ಹಬ್ಬ ಮುಖ್ಯವಾಗಿ ಭೂಮಿ ಮತ್ತು ಜಲ ಸಂಬಂಧದ ಆಚರಣೆಗಳನ್ನು ಹೊಂದಿವೆ.  ಹೊಲಗದ್ದೆಗಳಲ್ಲಿ ಪೈರು ಮೊಳೆತು ಬೆಳೆ ಏಳುವುದರ ಆರಂಭಕಾಲದಲ್ಲಿ ಗೌರಿ-ಗಣೇಶ ಹಬ್ಬ ಕಾಲೂರುತ್ತದೆ. ಇದು ಹುಬ್ಬೆ-ಉತ್ತರೆ ಮಳೆಗಳ ತುಂಬು ಮಳೆಗಾಲ.  ಬಯಲು ಸೀಮೆಯಲ್ಲಿ ರಾಗಿ, ಶೇಂಗಾ ಕಳೆ ತೆಗೆಯುವ ಹಂತದಲ್ಲಿರುತ್ತವೆ. ಈಗ ನಡೆಯುತ್ತಿರುವ ಆಬ್ಬರದ, ಆರ್ಭಟದ ಹಬ್ಬಕ್ಕೂ ಸಾಂಪ್ರದಾಯಿಕವಾದ ಹಬ್ಬಕ್ಕೂ ಅಜಗಜಂತರ ವ್ಯತ್ಯಾಸವಿದೆ. ಕೃಷಿಕರ ಗೌರಿ-ಗಣೇಶ ಆಚರಣೆಯ ಆಶಯವೇ ಬೇರೆ.
ಗಣೇಶನ ಇನ್ನೊಂದು ಹೆಸರು ವಿಘ್ನೇಶ್ವರ ಎಂಬುದು ನಮಗೆಲ್ಲ ತಿಳಿದಿದೆ. ಬಹಳ ಹಿಂದೆ ರೈತರು ಹೊಲಗದ್ದೆಗಳ ಕಡೆಯಿಂದಲೇ ಮರಳು ಮಿಶ್ರಿತ ಕೆಂಪು ಮಣ್ಣನ್ನು ತಂದು, ಅದರಿಂದಲೇ ಗಣೇಶನನ್ನು ನಿರ್ಮಿಸಿ ಪೂಜಿಸುತ್ತಿದ್ದರು. ಪೂಜಾ ಸಾಮಗ್ರಿಯಲ್ಲಿ ಮುಖ್ಯವಾದುದು ಗರಿಕೆ.  ತೋಟಗಳಲ್ಲಿ ಬೆಳೆಗೆ ತೊಂದರೆ ಕೊಡುವ ಮುಖ್ಯ ಕಳೆ ಗರಿಕೆ.  ಈ ಗರಿಕೆಯ ಜತೆಗೆ ಧಾನ್ಯ ಶತ್ರು ಇಲಿಯೂ ಇರುತ್ತದೆ.  ಗಣೇಶನ ಕಾಲ ಅಡಿಯಲ್ಲಿ ಇಲಿ, ಗಣೇಶನ ಒಂದು ಕೈಯಲ್ಲಿ ಧಾನ್ಯದ ತೆನೆ, ಇನ್ನೊಂದು ಕೈಯಲ್ಲಿ ಅದೇ ಧಾನ್ಯದಿಂದ ತಯಾರಿಸಿದ ಕಡುಬು ಇರುತ್ತದೆ.  ಜನಪದ ಗೀತೆಗಳಲ್ಲಿ ಭೂಮಿಯನ್ನು ಸ್ತುತಿಸುವಾಗ ಎಳ್ಳು ಬೆಳೆಯುವ ಭೂಮಿ ಎಂದು ಹೇಳಲಾಗುತ್ತದೆ.  ಈ ಎಳ್ಳಿನಿಂದ ತಯಾರಿಸಿದ ಉಂಡೆ ಗಣೇಶನಿಗೆ ಪ್ರಿಯ.  ಇದರ ಜತೆಗೆ ಗಣೇಶನು ಚೆನ್ನಾಗಿ ಊಟ ಮಾಡಿದ್ದರಿಂದ ಆತನ ಹೊಟ್ಟೆ ದಪ್ಪವಾಗಿ, ಆ ಹೊಟ್ಟೆ ಒಡೆಯಬಾರದೆಂದು ಹಾವು ಸುತ್ತಿಕೊಂಡಿರುತ್ತಾನೆ ಎಂದು ಕಥೆ ಪ್ರಚಲಿತದಲ್ಲಿರುವುದು ಎಲ್ಲರೂ ತಿಳಿದ ವಿಷಯ. ಒಟ್ಟಾರೆ ಇಡೀ ಗಣೇಶನಲ್ಲಿ ಪ್ರಕ್ರಿತಿಯ ವಿವಿಧ ಅಂಗಗಳಿರುವುದನ್ನು ಗುರುತಿಸಬಹುದು.
ಗಣೇಶನ ಸಮೃದ್ಧಿಯ ಊಟ, ಒಂದು ಕೈಯ ತೆನೆ, ಇನ್ನೊಂದು ಕೈಯ ಕಡುಬು, ಕಾಲ ಕೆಳಗಿನ ಗರಿಕೆ ಮತ್ತು ಇಲಿ ಹಾಗೂ  ಈ ಹಬ್ಬ ಬೆಳೆಗಳೆಲ್ಲಾ ಬೆಳವಣಿಗೆ ಹಂತದಲ್ಲಿರುವಾಗ  ಬರುವುದು,  ಇದೆಲ್ಲಾ ಭೂಮಿಯ ಮತ್ತು ಮಣ್ಣಿನ ವ್ಯವಸಾಯ ಸಂಬಂಧದ ಆಚರಣೆಯಾಗಿ ಕಾಣಿಸುತ್ತದೆ.
ಆದರೆ ಕಾಲಕ್ರಮೇಣ ಗಣೇಶನ ರೂಪ ಮತ್ತು ಇನ್ನಿತರ ವಿವರಗಳ ಮೇಲೆ ಬೇರೆ ಬೇರೆ ಕಥೆಗಳು ಹುಟ್ಟಿಕೊಂಡು ಪ್ರಚಾರಕ್ಕೆ ಬಂದವು.
ಗಣೇಶನ ಹಬ್ಬ ಭೂಮಿ ಮತ್ತು ಪ್ರಕೃತಿ ಪ್ರಜ್ಞೆಯನ್ನು ಸಂಕೇತಿಸಿದರೆ, ಇದರೊಡನೆ ಹೊಂದಿಕೊಂಡು ಬರುವ ಗೌರಿಹಬ್ಬ ನೀರಿನ ಪೂಜೆಯನ್ನು ಕುರಿತು ಹೇಳುತ್ತದೆ. ಗಣೆಶನ ಹಬ್ಬಕ್ಕಿಂತ ಒಂದು ದಿನ ಮುಂಚೆ ಗೌರಿ ಹಬ್ಬ ಬರುತ್ತದೆ. ಇದಕ್ಕೆ ಹಳ್ಳಿಗರು ನೀಡುವ ಕಾರಣ. ತವರು ಮನೆಗೆ ಬರುವ ಗೌರಮ್ಮನನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಮಗನಾದ ಗಣೇಶ ಒಂದು ದಿನ ತಡೆದು ಬರುತ್ತಾನೆ. 
ಹಬ್ಬದ ದಿನ ಬೆಳಿಗ್ಗೆ ಪ್ರತಿ ಮನೆಯ ಹೆಂಗಸರು ನೀರು ತುಂಬಿರುವ ಕೆರೆ, ಬಾವಿ ಅಥವಾ ಹರಿಯುವ ತೊರೆ ಕಡೆಗೆ ಹೋಗಿ ಆ ನೀರನ್ನು ಪೂಜಿಸಿ, ನೀರಿನೊಳಗೆ ಕೈಯಿಟ್ಟು ಒಂದು ಹಿಡಿ ಮರಳು ತರುತ್ತಾರೆ, ಅದನ್ನು ಮರಳು ಗೌರಮ್ಮ ಎಂದು ಕರೆಯುತ್ತಾರೆ. ಮತ್ತೆ ಕೆಲವೆಡೆ ಅರಿಷಿಣದ ಹುಂಡಿಯಿಂದ ತಯಾರಿಸಿದ ಮೂರ್ತಿಯನ್ನು ಗೌರಿಯೆಂದು ಮನೆಗೆ ತರುತ್ತಾರೆ.  ವಾಸ್ತವವಾಗಿ ಇದು ಜಲಪೂಜೆಯೇ.  ಈ ಗೌರಿ ಗಣೇಶನ ತಾಯಿಯೆಂದು ಹೆಸರಿಸಲಾಗಿದೆ. ಎಂದರೆ ಧಾನ್ಯ ದೇವತೆ ಗಣೇಶನಿಗೆ ಜಲದೇವತೆಯನ್ನು ತಾಯಿಯಾಗಿ ಕಲ್ಪಿಸಲಾಗಿದೆ. 
ಮನೆಯಲ್ಲಿ ಗೌರಮ್ಮನನ್ನು ಕೂರಿಸಿ (ಪ್ರತಿಷ್ಠಾಪಿಸಿ) ಬಾಗಿನ ಕೊಡುತ್ತಾರೆ. ಈ ಬಾಗಿನದಲ್ಲಿ ಕಾರೆ ಹಣ್ಣು, ಯಲಚಿ ಹಣ್ಣು (ಬೋರೆ ಹಣ್ಣು) ಬಿಕ್ಕೆ ಹಣ್ಣು, ಹಸಿ ಅಕ್ಕಿ ತಂಬಿಟ್ಟು, ಎಳ್ಳಿನ ಚಿಗುಳಿ ಪ್ರಮುಖವಾಗಿರುತ್ತವೆ. ಹೊಸದಾಗಿ ಮದುವೆಯಾದವರು ಗೌರಮ್ಮನಿಗೆ ಪೂಜಿಸಿ ಬಾಗಿನ ಅರ್ಪಿಸುತ್ತಾರೆ. ಈ ಹಬ್ಬಕ್ಕೆ ಮದುವೆಯಾಗಿ ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳು ಕಡ್ಡಾಯವಾಗಿ ತವರಿಗೆ ಬರುತ್ತಾರೆ. ಮರು ದಿವಸ ಗೌರಮ್ಮನ ಪಕ್ದಲ್ಲಿಯೇ ಗಣೆಶನ ವಿಗ್ರಹವನ್ನು ಕೂಡಿಸಿ ಕಡುಬಿನ ವಿಶೇಷ ಅಡುಗೆ ಮಾಡಿ ಅದರ ಮರುದಿನ ಇಬ್ಬರನ್ನೂ ನೀರಿಗೆ ಬಿಟ್ಟು ಬರುತ್ತಾರೆ. 
ಭೂಮಿ ಮತ್ತು ಜಲ ಪೂಜೆಯ ಆಚರಣೆ ಹೊಂದಿರುವ ಗೌರಿ- ಗಣೇಶನ ಈ ಹಬ್ಬ ಇಂದು ತನ್ನ ಸ್ವರೂಪವನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದೆ.
ಕರಿಭಂಟನ ಪೂಜೆ
ಹುಬ್ಬೆ-ಉತ್ತರೆ ಮಳೆಯಲ್ಲಿ ಹುಲುಸಾಗಿ ಬೆಳೆದ ಬೆಳೆಗಳಿಗೆ ರೋಗ-ರುಜಿನ, ನೋಡುಗರ ಕೆಟ್ಟ ದೃಷ್ಟಿ ತಾಕದಿರಲಿ ಎಂಬ ಉದ್ದೇಶದಿಂದ ಬಯಲು ಸೀಮೆ ಹಳ್ಳಿಗರು ಆಚರಿಸುವ ಕರಿಭಂಟನ ಆಚರಣೆ ಅತ್ಯಂತ ವಿಶಿಷ್ಟವಾದದ್ದು. ಇಡೀ ಗ್ರಾಮ ಸಮುದಾಯ ಒಂದುಗೂಡಿ, ಮೂರು ದಾರಿ ಕೂಡುವಲ್ಲಿ ಬೂದಿಯಿಂದ ರಾಕ್ಷಸಿಯ ಚಿತ್ರ ಬರೆದು ಅದರ ಹೊಟ್ಟೆಯ ಮೇಲೆ ಹಾರೆಯಿಂದ ರಂಧ್ರ ಮಾಡಿ, ಹೊಲದಲ್ಲಿ ಪಚ್ಚಾಡಿ ಮರದ ಕೊಂಬೆಗಳನ್ನು ನೆಟ್ಟು ಹರಿಶಿಣದ ಬಟ್ಟೆಯಲ್ಲಿ ಸೇರಿಸಿದ ನವಧಾನ್ಯಗಳನ್ನು ಗಂಟು ಕಟ್ಟಿ ಪೂಜೆ ಸಲ್ಲಿಸಲಾಗುತ್ತದೆ.  ಕೋಳಿ ಇಲ್ಲವೇ ಕುರಿ ಬಲಿ ಕೊಟ್ಟು ಅದರ ರಕ್ತದ ಜೊತೆ ರಾಗಿ ಪೈರಿನ ಎಳೆ ಗರಿಗಳನ್ನು ಸೇರಿಸಿ ಹೊಲಕ್ಕೆ ಬಲಿಯೋ ಬಲಿ ಎಂದು ಕೂಗುತ್ತಾ ಎರಚಲಾಗುತ್ತದೆ. ಬೆಳೆಗಳು ಬೆಳವಣಿಗೆ  ಹಂತದಲ್ಲಿರುವಾಗ ಇದನ್ನು ಆಚರಿಸುವುದರಿಂದ ಬೆಳೆಗಳಿಗೆ, ಅದರಲ್ಲಿಯೂ ಮುಖ್ಯವಾಗಿ ರಾಗಿ ಪ್ಶೆರಿಗೆ ಬರುವ ಇಲುಕು ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ರೈತರಲ್ಲಿದೆ.
ಈ ಆಚರಣೆಯು ವೈಯಕ್ತಿಕ ಮಟ್ಟದಲ್ಲಿ ಮತ್ತು ಸಾಮೂಹಿಕವಾಗಿ ಇಡೀ ಗ್ರಾಮವು ಒಗ್ಗಟ್ಟಾಗಿ ಮಾಡುವುದನ್ನು ಕಾಣಬಹುದು. ರಾಗಿ ಮುಖ್ಯ ಬೆಳೆಯಾಗಿ ಬೆಳೆಯುವ ಪ್ರದೇಶಗಳಲ್ಲಿ ಇದು ಅತ್ಯಂತ ವೈಭವಯುತವಾಗಿ, ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ, ಉಳಿದ ಭಾಗಗಳಲ್ಲಿ ಸಾಧಾರಣ ರೀತಿಯಲ್ಲಿ ಹೊಲಕ್ಕೆ ಚರಗ ಚೆಲ್ಲಿ ಪಚ್ಚಾಡಿ ಕೊಂಬೆಗಳನ್ನು ನೆಡುವ ಮೂಲಕ ಆಚರಿಸುತ್ತಾರೆ.
ಸಾಮೂಹಿಕ ಕರಿಭಂಟನ ಆಚರಣೆ: ಇಡೀ ಗ್ರಾಮ ಸಮುದಾಯ ಸೇರಿ ಮಾಡುವ ಕರಿಬಂಟನ ಪೂಜೆಯ ವಿಧಿ-ವಿಧಾನಗಳು ಈ ರೀತಿ ಇರುತ್ತವೆ:
ಹುಬ್ಬೆ ಮಳೆ ಹುಟ್ಟಿದಾಗ ಗ್ರಾಮಸ್ಥರು ಒಂದೆಡೆ ಕಲೆತು ಹಬ್ಬ ಮಾಡುವ ದಿನಾಂಕವನ್ನು ಗೊತ್ತುಪಡಿಸುತ್ತಾರೆ. ಹಬ್ಬಕ್ಕಾಗಿ ಮನೆಗೆ ಇಂತಿಷ್ಟು ಹಣ ವಸೂಲು ಮಾಡಲಾಗುತ್ತದೆ. ಹಬ್ಬದ ಹಿಂದಿನ ದಿನವೇ ಗ್ರಾಮದ ಹಿರಿಯರು ಜವಾಬ್ದಾರಿಗಳನ್ನು ಎಲ್ಲರಿಗೂ ಹಂಚಿಬಿಡುತ್ತಾರೆ. ಆ ಪ್ರಕಾರ ಕೆಲವರು ಮೂರು ತೆರನಾದ ಬೂದಿ ತರಬೇಕು, ಮತ್ತೆ ಕೆಲವರು ಪಚ್ಚಾಡಿ ಮರದ ಕೊಂಬೆಗಳನ್ನು ಕಡಿದು ತರಬೇಕು, ಉಳಿದವರು ಬಲಿ ಕೊಡಲು ಮರಿ ವ್ಯವಸ್ಥೆ ಮಾಡಬೇಕು ಮತ್ತು ರಾಗಿ ಗರಿಗಳನ್ನು ಕತ್ತರಿಸಿ ತರಬೇಕು. ಹಾಗೆಯೇ ಹಿಂದಿನ ದಿನವೇ ಊರಿನಲ್ಲಿ ಡಂಗೂರ ಸಾರುವ ಮೂಲಕ ಹಬ್ಬದ ಬಗ್ಗೆ ತಿಳಿಸಲಾಗುತ್ತದೆ. ಎಲ್ಲ ಮನೆಯವರೂ ರಾತ್ರಿ ಅಡುಗೆ ಉಳಿಕೆಯನ್ನು- ಅಂದರೆ ಮುದ್ದೆ, ಅನ್ನ ಇತ್ಯಾದಿ- ಬೆಳಿಗ್ಗೆ ತಂದು ಒಂದೆಡೆ ಗುಡ್ಡೆ ಹಾಕಬೇಕು.
ಕರಿಬಂಟನ ಅಚರಣೆಗೆ ಮೂರು ರೀತಿಯ ಬೂದಿ ತರುವುದು ಕಡ್ಡಾಯ. ಒಂದು-ಕುಂಬಾರರ ಮನೆಯ ಬೂದಿ, ಎರಡು- ಕಮ್ಮಾರರ ಮನೆಯ ಬೂದಿ ಮತ್ತು ಮೂರು- ಮಡಿವಾಳರ ಮನೆ ಬೂದಿ. ಇವುಗಳಿಗೆ ಕ್ರಮವಾಗಿ ಆವಿಗೆ ಬೂದಿ, ಕುಲುಮೆ ಬೂದಿ, ಮತ್ತು ಉಬ್ಬೆ ಬೂದಿ ಎಂದು ಕರೆಯುತ್ತಾರೆ.  ಈ ಮೂರು ಬಗೆಯ ಬೂದಿಗಳನ್ನು ತಂದು ಮಿಶ್ರ ಮಾಡಿ ಇಟ್ಟುಕೊಳ್ಳುತ್ತಾರೆ.
ಪಚ್ಚಾಡಿ ಕೊಂಬೆ ನೆಡುವುದು ಈ ಆಚರಣೆಯ ಅತ್ಯಂತ ಮುಖ್ಯ ಕ್ರಿಯೆ. ಆಚಿಟbಚಿಡಿರಿiಚಿ ಠಿಚಿಟಿiಛಿuಟಚಿಣಚಿ ಎಂಬ ವ್ಶೆಜ್ಞಾನಿಕ ಹೆಸರಿನ ಪಚ್ಚಾಡಿ ಮರ ಕುರುಚಲು ಕಾಡುಗಳಲ್ಲಿ ಸಾಧಾರಣ ಎತ್ತರ ಬೆಳೆಯುವ ಮರ. ಕಾಂಡವು ಬಿಳುಪಾಗಿದ್ದು ಕಾಸಗಲದ ಎಲೆಗಳಿರುತ್ತವೆ. ಈ ಮರದ ವಿಶೇಷವೆಂದರೆ ಕೊಂಬೆಯನ್ನು ಕತ್ತರಿಸಿ ಹೊಲದಲ್ಲಿ ನೆಟ್ಟರೆ ೨೪ ಗಂಟೆಗಳೊಳಗಾಗಿ ಎಲೆಗಳು ಕಪ್ಪನೆ ಬಣ್ಣಕ್ಕೆ ತಿರುಗುತ್ತವೆಯೇ ಹೊರತು  ಒಣಗಿ ಉದುರುವುದಿಲ್ಲ. ಬಹಳ ದಿವಸಗಳ ನಂತರ ಒಣಗಿದ ಎಲೆಗಳು ಉದುರುತ್ತವೆ.
ಹಬ್ಬದ ದಿನ ಬೆಳಿಗ್ಗೆಯೇ ಒಂದು ನಿಗದಿತ ಸ್ಥಳದಲ್ಲಿ ಎಲ್ಲರೂ ಸೇರಿ ಚಪ್ಪರ ಹಾಕುತ್ತಾರೆ, ಸಾಮಾನ್ಯವಾಗಿ ಮೂರು ದಾರಿ ಕೂಡುವ ಸ್ಥಳವನ್ನು ಚಪ್ಪರ ಹಾಕಲು ಅಯ್ಕೆ ಮಾಡುತ್ತಾರೆ. ಚಪ್ಪರಕ್ಕೂ ಸಹ ಪಚ್ಚಾಡಿ ಕೊಂಬೆಗಳನ್ನು ಬಳಸುತ್ತಾರೆ. ಅಷ್ಟೊತ್ತಿಗೆ ಎಲ್ಲ ಮನೆಯವರೂ ಉಳಿಕೆ ಅಡುಗೆಯನ್ನು ತಂದು ಅಲ್ಲಿ ಹಾಕುವುದು ನಡೆದಿರುತ್ತದೆ. ರಾಗಿ ಗರಿಗಳನ್ನು ತುಂಡು-ತುಂಡಾಗಿ ಕತ್ತರಿಸಿ ಅದಕ್ಕೆ ಮೂರು ರೀತಿಯ ಬೂದಿಯ ಮಿಶ್ರಣದಲ್ಲಿ ಸ್ವಲ್ಪವನ್ನು ಬೆರೆಸಲಾಗುತ್ತದೆ.  ಮೂರು ದಾರಿ ಕೂಡುವ ಸ್ಥಳದಲ್ಲಿ ಬೂದಿಯಿಂದ ಒಂದು ರಾಕ್ಷಸಾಕೃತಿಯನ್ನು ಬರೆಯುತ್ತಾರೆ. ಹಳ್ಳಿಗರ ಪ್ರಕಾರ ಅದು ಪುಂಡರೀಕಾಕ್ಷಿ ಎಂಬ ರಾಕ್ಷಸಿ. ಕೇವಲ ಊರಿನ ಮೂರು ದಾರಿ ಕೂಡುವಲ್ಲಲ್ಲದೆ ಆಯಾ ಹೊಲದವರು ತಮ್ಮ ಹೊಲಗಳಲ್ಲಿಯೂ ಸಹ ಈ ರಾಕ್ಷಸಿ ಚಿತ್ರವನ್ನು ಬರೆಯುತ್ತಾರೆ. ಹಾಗೂ ಊರಿನ ಬೇರೆ-ಬೇರೆ ಭಾಗಗಳಲ್ಲಿಯೂ ಸಹ ಚಿತ್ರ ಬರೆಯುವುದು ರೂಢಿ. ಇದೆಲ್ಲ ಮುಗಿಯುವ ಹೊತ್ತಿಗೆ ಬಲಿ ಕೊಡುವ ಮರಿಯನ್ನು ತಂದು ಅದಕ್ಕೆ ಪೂಜೆ ಮಾಡಿ ಚಪ್ಪರದ ಮುಂದೆ ನಿಲ್ಲಿಸಿ ಊರವರ ಅಪ್ಪಣೆ ಕೇಳಿ ಬಲಿ ಕೊಡಲಾಗುತ್ತದೆ.
ಬಲಿ ಕೊಟ್ಟ ಪ್ರಾಣಿಯ ರಕ್ತವನ್ನು ಬೂದಿ ಮತ್ತು ರಾಗಿ ಗರಿ ಮಿಶ್ರಣದೊಂದಿಗೆ ಮತ್ತು ಉಳಿಕೆ ಅಡುಗೆಯೊಂದಿಗೆ ಬೆರೆಸುತ್ತಾರೆ. ಪ್ರತಿಯೊಂದು ಹೊಲದವರೂ ಒಂದೊಂದು ಬೋಕಿ ಬಿಂಚೆ (ಮಣ್ಣಿನ ಮಡಕೆಯ ಚೂರು) ಯನ್ನು ತಂದು ಹಿರಿಯರ ಕೈಲಿ ಆ ಚರಗವನ್ನು ಹಾಕಿಸಿಕೊಂಡು ತಮಗೆ ಎಷ್ಟು ಬೇಕೋ ಅಷ್ಟು ಪಚ್ಚಾಡಿ ಕೊಂಬೆಗಳನ್ನು ತೆಗೆದುಕೊಂಡು ಹೊರಡುತ್ತಾರೆ. ಕೈಯಲ್ಲೊಂದು ಹಾರೆಯೂ ಇರುತ್ತದೆ. ಇಬ್ಬರು ಮೂವರು ಗುಂಪಾಗಿ ಹೊರಟು ತಂತಮ್ಮ ಹೊಲಗಳಿಗೆ ಚರಗವನ್ನು ಚೆಲ್ಲುತ್ತಾ ಬಲಿಯೋ ಬಲಿ ಎಂದು ಕೂಗುತ್ತಾರೆ. ಹಾರೆಯಿಂದ ಒಂದು ದಸಿ ಹಾಕಿ ಪಚ್ಚಾಡಿ ಕೊಂಬೆಯನ್ನು ನೆಡುತ್ತಾರೆ, ಅಲ್ಲದೆ ರಾಕ್ಷಸಿ ಚಿತ್ರದ ಹೊಟ್ಟೆಯ ಭಾಗಕ್ಕೆ ಹಾರೆಯಿಂದ ತಿವಿಯುತ್ತಾರೆ.
ಎಲ್ಲರೂ ತಂತಮ್ಮ ಹೊಲಗಳಿಗೆ ಈ ರೀತಿ ಮಾಡಿ ಊರಿಗೆ ಹಿಂತಿರುಗುತ್ತಾರೆ, ನಂತರ ಬಲಿ ಕೊಟ್ಟ ಮರಿಯನ್ನು ಕೊಯ್ದು ಪಾಲು ಮಾಡಿ ಗುಡ್ಡೆ ಹಾಕಿ ಎಲ್ಲರೂ ಹಂಚಿಕೊಳ್ಳುತ್ತಾರೆ. ಅಂದು ಎಲ್ಲರ ಮನೆಯಲ್ಲಿ ವಿಶೇಷ ಅಡುಗೆ.
ಈ ಆಚರಣೆಗೆ ಹಸಿರುಬಲಿ, ಅತ್ತೆ ಮಳೆ ವಂಗಲು ಎಂಬ ಹೆಸರುಗಳೂ ಇವೆ. ಕೆಲವರು ಹಸಿರು ಬಲಿ ಮತ್ತು ಕರಿಬಂಟನ ಆಚರಣೆ ಬೆರೆ-ಬೇರೆ ಎನ್ನುತ್ತಾರಾದರೂ ಆಚರಿಸುವ ರೀತಿಯನ್ನು ನೋಡಿದರೆ ಹೆಚ್ಚು-ಕಡಿಮೆ ಒಂದೇ ರೀತಿ ಇರುತ್ತವೆ.
ಒಟ್ಟಾರೆ ಈ ಆಚರಣೆಯಿಂದ ರಾಗಿ ಬೆಳೆಗೆ ಬರುವ ಇಲುಕೆ ರೋಗ (ಈiಟಿgeಡಿ ಃಟಚಿsಣ) ನಿವಾರಣೆಯಾಗುತ್ತದೆ ಎಂದು ರೈತಾಪಿಗಳ ದೃಢವಾದ ನಂಬಿಕೆ. ಅಲ್ಲದೆ ಹುಲುಸಾಗಿ ಬೆಳೆದ ಪ್ಶೆರಿಗೆ ನೋಡುಗರ ದೃಷ್ಟಿ ತಾಗದಿರಲಿ ಎಂಬ ಆಶಯವೂ ಇದರ ಹಿಂದಿದೆ.
ಆಚರಣೆಯ ಹಿಂದಿನ ಜನಪದ ನಂಬಿಕೆ
ಈ ಆಚರಣೆಯ ಕಾಲ, ಇಲ್ಲಿನ ವಿಧಿ ವಿಧಾನಗಳು, ಪಚ್ಚಾಡಿ ಕೊಂಬೆ ನೆಡುವಿಕೆ, ರಾಕ್ಷಸಿ ಚಿತ್ರ ಮುಂತಾದ ಕ್ರಿಯೆಗಳು ಕುತೂಹಲ ಮೂಡಿಸುತ್ತವೆ. ಈ ಎಲ್ಲವುಗಳಿಗೆ ಹಿನ್ನೆಲೆಯಾಗಿ ಒಂದು ಅದ್ಭುತವಾದ ಜಾನಪದ ಕಥೆಯಿದೆ. ಮೈಸೂರು ಸೀಮೆಯಲ್ಲಿ ಕರಿಭಂಟನ ಕುರಿತಾಗಿ ಅನೇಕ ಸಾಹಿತ್ಯ, ಕಥನ ಕಾವ್ಯಗಳು ಲಭ್ಯವಿವೆ, ಕರಿಬಂಟನ ಕಾಳಗ ಎಂಬ ಹೆಸರಿನ ಬಯಲು ನಾಟಕ, ಯಕ್ಷಗಾನಗಳೂ ಸಹ ಅಭಿನಯಿಸಲ್ಪಡುತ್ತವೆ. ಸಂಕ್ಷಿಪ್ತ ವಿವರಣೆಗಳನ್ನು ನೀಡುವುದಾರೆ…
ಕರಿಬಂಟ ಒಬ್ಬ ರಾಜ. ಮಾರಭೂಪ ಮತ್ತು ಬಲವಂತದೇವಿಯವರ ಮಗ. ವೀರ, ಶೂರ. ಆತ ಒಮ್ಮೆ ಬಲ್ಲಾಳರಾಯನೆಂಬ ರಾಜನ ಮಗಳಾದ ಧರಣಿಮೋಹಿನಿ ಎಂಬಾಕೆಯನ್ನು ಮದುವೆಯಾಗುವ ಸಲುವಾಗಿ ತನ್ನ ರಾಜ್ಯದಿಂದ ಬಲ್ಲಾಳರಾಜನ ರಾಜ್ಯಕ್ಕೆ ಪ್ರಯಾಣ ಹೊರಡುತ್ತಾನೆ, ಹೊರಡುವಾಗ ಕೆಲವು ಅಪಶಕುನಗಳಾಗುತ್ತವೆ. ಆತನ ತಾಯಿ ಪ್ರಯಾಣ ಬೇಡವೆನ್ನುತ್ತಾಳೆ, ಅದಕ್ಕೊಪ್ಪದ ಕರಿಬಂಟ ಏಕಾಂಗಿಯಾಗಿ ದಾರಿಗೆ ಬುತ್ತಿ ಕಟ್ಟಿಸಿಕೊಂಡು ಹೊರಡುತ್ತಾನೆ. ಬಲ್ಲಾಳರಾಯನ ರಾಜ್ಯ ತಲುಪಲು ಒಂದು ಗೊಂಡಾರಣ್ಯವನ್ನು ದಾಟಬೇಕಾಗಿರುತ್ತದೆ. ಆ ಗೊಂಡಾರಣ್ಯದಲ್ಲಿ ಉದ್ದಂಡಿ ಎಂಬ ರಾಕ್ಷಸಿಯು ವಾಸವಾಗಿರುತ್ತಾಳೆ, ಆಕೆಗೆ ಬೊಮ್ಮ ಎಂಬ ತಮ್ಮನಿರುತ್ತಾನೆ. ಕಾಡೆಲ್ಲಾ ಇವರಿಬ್ಬರದೇ, ಭಯಂಕರ ರೂಪದ ಇವರು ಅಲ್ಲಿಗೆ ಬರುವ ಮನುಷ್ಯರನ್ನು ಹಿಡಿದು ತಿನ್ನುತ್ತಾ ಕಾಲ ಕಳೆಯುತ್ತಿರುತ್ತಾರೆ. ರಾಕ್ಷಸಿಗೆ ಒಬ್ಬ ಮಗಳಿರುತ್ತಾಳೆ. ಹೆಸರು ಪುಂಡರೀಕಾಕ್ಷಿ. ಅವಳೋ ಈ ಅಮ್ಮ ಮತ್ತು ತಮ್ಮನ ಸ್ವಭಾವ, ರೂಪಗಳಿಗೆ ತದ್ವಿರುದ್ದವಾದ ಗುಣದವಳು. ರೂಪ ಲಾವಣ್ಯವತಿ, ಸಾಧು ಸ್ವಭಾವ.
ಕರಿಬಂಟನು ಈ ರಾಕ್ಷಸರ ಹಾವಳಿಯಿರುವ ಕಾಡನ್ನು ದಾಟಬೇಕಾದರೆ ರಾಕ್ಷಸಿಯ ಮಗಳಾದ ಪುಂಡರೀಕಾಕ್ಷಿ  ಕಣ್ಣಿಗೆ ಬೀಳುತ್ತಾನೆ. ಕರಿಬಂಟನ ರೂಪಿಗೆ ಮನಸೋತು ಅವನನ್ನೇ ವರಿಸುವ ಆಸೆಯಿಂದ ಉಪಾಯ ಮಾಡಿ ತನ್ನ ಮನೆಗೆ ಕರೆತರುತ್ತಾಳೆ. ರಾತ್ರಿ ಮನೆಗೆ ಬಂದ ಉದ್ದಂಡಿ ರಾಕ್ಷಸಿ ತನ್ನ ಮನೆಯಲ್ಲಿ ನರಮಾನವರ ವಾಸನೆ ಅರಿತು ಮಗಳನ್ನು ಕೇಳುತ್ತಾಳೆ. ಮಗಳು ತನ್ನಾಸೆಯನ್ನು ಹೇಳಿಕೊಂಡಾಗ ತನ್ನ ತಮ್ಮನಿಗೇ ಮಗಳನ್ನು ಕೊಟ್ಟು ಮದುವೆ ಮಾಡಬೇಕೆಂದಿದ್ದ ರಾಕ್ಷಸಿ ಮನಸ್ಸಿನಲ್ಲೇ ಕ್ರೋಧಗೊಳ್ಳುತ್ತಾಳೆ, ಆದರೂ ಹೊರಗೆ ತೋರ್ಪಡಿಸದೆ ಮಗಳ ಆಸೆಗೆ ಸಮ್ಮತಿಸಿದಂತೆ ಮಾಡಿ, ಬೆಳಿಗ್ಗೆ ನಿಮ್ಮಿಬ್ಬರಿಗೂ ಮದುವೆ ಮಾಡಿಸುತ್ತೇನೆ, ಇಂದು ರಾತ್ರಿ ಅವನು ಬೊಮ್ಮನ ಜೊತೆ ಮಲಗಿರಲಿ ಈ ದಾರವನ್ನು ನಿನ್ನ ಗಂಡನಾಗುವವನ ಕಾಲಿಗೆ ಕಟ್ಟು ಎನ್ನುತ್ತಾಳೆ.
ಆದರೆ ಅಮ್ಮನ ಈ ವರ್ತನೆಯನ್ನು ಅನುಮಾನಿಸುವ ಮಗಳು ದಾರವನ್ನು ಕರಿಬಂಟನಿಗೆ ಬದಲಾಗಿ ಬೊಮ್ಮನ ಕಾಲಿಗೆ ಕಟ್ಟುತ್ತಾಳೆ.
ಅರ್ಧ ರಾತ್ರಿಯಲ್ಲಿ ಎದ್ದ ಉದ್ದಂಡಿ ರಾಕ್ಷಸಿ ದಾರ ಕಟ್ಟಿರುವ ಕಾಲಿನವನೇ ಕರಿಬಂಟನೆಂದು ತಿಳಿದು  ತಮ್ಮನಾದ ಬೊಮ್ಮನನ್ನು ಸಿಗಿದು ಕೊಂದು ಹಾಕುತ್ತಾಳೆ. ಇದನ್ನು ಕಂಡ ಮಗಳು ಕರಿಬಂಟನನ್ನು ಎಬ್ಬಿಸಿ ನೀನು ಬದುಕಿರುವುದನ್ನು ನೋಡಿದರೆ ನಮ್ಮಮ್ಮ ನಿನ್ನನ್ನು ಬಿಡುವುದಿಲ್ಲ ಹೊರಟು ಹೋಗು ಎಂದು ಕಳಿಸಿಬಿಡುತ್ತಾಳೆ.
ಬೆಳಿಗ್ಗೆ ಎದ್ದು ಮಹದಾನಂದದಿಂದ ತಮ್ಮನನ್ನು ಕಾಣಲು ಬಂದ ಉದ್ದಂಡಿ ರಾಕ್ಷಸಿ ಸತ್ತು ಬಿದ್ದಿರುವ ತಮ್ಮನನ್ನು ಕಾಣುತ್ತಾಳೆ, ಕ್ಷಣಾರ್ಧದಲ್ಲಿ ಆಕೆಗೆ ನಿಜಾಂಶ ತಿಳಿಯುತ್ತದೆ. ಕರಿಬಂಟನ ಮೇಲೆ ರಣಕೋಪಗೊಂಡು ಆತನನ್ನು ಸಾಯಿಸೇ ತೀರುತ್ತೇನೆಂದು ಯೋಜನಾ ವೇಗದಲ್ಲಿ ಧಾವಿಸುತ್ತಾಳೆ. ಆಕೆ ಕರಿಬಂಟನನ್ನು ಸಮೀಪಿಸುವಾಗ ಆತ ಒಂದು ಹಳ್ಳಿಯ ಬಳಿ ಹೋಗುತ್ತಿರುತ್ತಾನೆ. ಆಗ ರಾಕ್ಷಸಿ ಬಾಣಂತಿಯಂತೆ ವೇಷ ಧರಿಸಿ ಆ ಹಳ್ಳಿಯ ೭ ಜನ ಗೌಡರನ್ನು ಭೇಟಿ ಮಾಡಿ ಈತ ನನ್ನ ಗಂಡ ನನ್ನನ್ನು ಬಿಟ್ಟು ಹೋಗುತ್ತಿದ್ದಾನೆ, ಈತನನ್ನು ನನ್ನ ಜೊತೆ ಕಳಿಸಿಕೊಡಿ ಎಂದು ರೋಧಿಸುತ್ತಾಳೆ. ಆದರೆ ಕರಿಬಂಟ ಈಕೆ ಯಾರೆಂಬುದೇ ನನಗೆ ಗೊತ್ತಿಲ್ಲ ನನಗಿನ್ನು ಮದುವೆಯೇ ಆಗಿಲ್ಲ ಎಂದು ವಾದ ಮಾಡುತ್ತಾನೆ. ಇದರಿಂದ ಗೊಂದಲಗೊಂಡ ಹಳ್ಳಿಯ ಗೌಡರು ಒಂದು ಸಲಹೆ ನೀಡುತ್ತಾರೆ. ಏನೆಂದರೆ, ಇಂದು ರಾತ್ರಿ ಇಬ್ಬರೂ ಈ ದೇವಾಲಯದಲ್ಲಿ ತಂಗಿರಿ ಬೆಳಿಗ್ಗೆ ತೀರ್ಪು ನೀಡುತ್ತೇವೆ ಎಂದು ಹೇಳುತ್ತಾರೆ.
ಅರ್ಧ ರಾತ್ರಿಯಲ್ಲಿ ತನ್ನ ನಿಜ ಸ್ವರೂಪ ತಾಳಿದ ರಾಕ್ಷಸಿ ಕರಿಬಂಟನನ್ನು ಕೊಂದು ದೇವಾಲಯದ ಸೂರನ್ನು ಮುರಿದುಕೊಂಡು ಪರಾರಿಯಾಗುತ್ತಾಳೆ.
ಬೆಳಿಗ್ಗೆ ಬಂದ ಗೌಡರು ಸತ್ತು ಬಿದ್ದಿರುವ ಕರಿಬಂಟನನ್ನು ಕಂಡು ಹೌಹಾರುತ್ತಾರೆ, ತಾವೇ ಕೈಯಾರ ಕರಿಬಂಟನನ್ನು ಕೊಂದಂತಾಯಿತಲ್ಲಾ ಎಂದು ಮರುಗಿದ ಅವರು ಅದಕ್ಕೆ ಪಶ್ಚಾತ್ತಾಪ ಕ್ರಮವಾಗಿ ಸಾಮೂಹಿಕ ಅಗ್ನಿಪ್ರವೇಶಕ್ಕೆ ಊರ ಹೊರಗೆ ಕುಂಡ ಸಿದ್ದಪಡಿಸಿ ಒಬ್ಬೊಬ್ಬರಾಗಿ ಎಲ್ಲರೂ ಅಗ್ನಿಪ್ರವೇಶಿಸುತ್ತಾರೆ. ತನ್ನಿಂದಾಗಿ ಕರಿಬಂಟ ಸತ್ತನೆಂಬ ಕಾರಣದಿಂದ ರಾಕ್ಷಸಿಯ ಮಗಳು ಪುಂಡರೀಕಾಕ್ಷಿಯೂ  ಸಹ ಬೆಂಕಿಗೆ ಹಾರುತ್ತಾಳೆ, ಬಲ್ಲಾಳರಾಯನ ಮಗಳಾದ ಧರಣಿಮೋಹಿನಿಯು ತನ್ನನ್ನು ಮದುವೆಯಾಗಲು ಬಂದಿದ್ದರಿಂದಲೇ ಕರಿಬಂಟ ಸಾವಿನ ದವಡೆಗೆ ಹೋಗಬೇಕಾಯಿತೆಂದು ಭಾವಿಸಿ ಅವಳೂ ಸಹ ಬಂದು ಬೆಂಕಿಗೆ ಹಾರುತ್ತಾಳೆ.
ಆಗ ಶಿವ-ಪಾರ್ವತಿಯರು ಪ್ರತ್ಯಕ್ಷವಾಗಿ ಕರಿಬಂಟನ ಸಮೇತ ಎಲ್ಲರನ್ನೂ ಬದುಕಿಸುತ್ತಾರೆ. ಊರ ೭ ಜನ ಗೌಡರ ಪ್ರಾಮಾಣಿಕತೆ ಎಲ್ಲರ ಜೀವ ಉಳಿಯಲು ಕಾರಣವಾಗುತ್ತದೆ. ಆದರೆ ಇದರಿಂದ ಕೆರಳಿದ ರಾಕ್ಷಸಿ  ಗೌಡರ ಮೇಲೆ ಕೋಪಗೊಂಡು  ತಾನು ಪ್ರತಿ ವರ್ಷ ರೋಗವಾಗಿ ಬಂದು ಹಳ್ಳಿಗರ ಬೆಳೆ ಹಾಳು ಮಾಡುವುದಾಗಿ ಶಪಥ ಮಾಡುತ್ತಾಳೆ, ಆಗ ಕರಿಬಂಟ ತನ್ನಿಂದಾಗಿ ಹಳ್ಳಿಗರಿಗೆ ಈ ಸ್ಥಿತಿ ಬಂದೊದಗಿತಲ್ಲಾ ಎಂದುಕೊಂಡು ತಾನು ಪಚಾಡಿ ಮರವಾಗಿ ಹುಟ್ಟಿ ರೈತರ ಹೊಲದಲ್ಲಿ ನಿಂತು ರೋಗ-ರುಜಿನಗಳಿಂದ ಬೆಳೆ ರಕ್ಷಿಸುವುದಾಗಿ ಪಣ ತೊಡುತ್ತಾನೆ.
ಇದು ಕರಿಬಂಟನ ಆಚರಣೆಯ ಹಿಂದಿನ ಕತೆ.
ಭತ್ತದ ಗದ್ದೆಗೆ ಗೊಡ್ಡೀಚಲು ಗರಿ ಇಡುವುದು
ಕರ್ನಾಟಕದ ಕನಕಪುರ, ಆನೇಕಲ್ ಪ್ರದೇಶಗಳಲ್ಲಿ ಪ್ರಚಲಿತವಿರುವ ವಿಶಿಷ್ಟ ಆಚರಣೆ ಗೊಡ್ಡೀಚಲು ಗಿಡದ ಕೊಂಬೆ ನೆಡುವುದು. ಭತ್ತದ ಗದ್ದೆ ನಾಟಿ ಮಾಡಿದ ೨೦ ದಿವಸ ಅಥವಾ ಒಂದು ತಿಂಗಳಿಗೆ ಇದನ್ನು ಮಾಡಲಾಗುತ್ತದೆ. ರೈತರು ಹೆಚ್ಚಾಗಿ ಮುಂಗಾರು ಹಂಗಾಮಿನ ಭತ್ತದ ತಾಕಿಗೆ ಈ ಆಚರಣೆ ಮಾಡುವುದು ರೂಢಿ. ಸಾಮಾನ್ಯವಾಗಿ ಮಗೆ (ಮಖಾ) ಮಳೆಯ ಅವಧಿಯಲ್ಲಿ ಇದರ ಆಚರಣೆಯನ್ನು ಕಾಣಬಹುದು.
ಒಂದು ಗೊತ್ತಾದ ದಿನ ಹಳ್ಳಿಯ ಎಲ್ಲರೂ ಹೊತ್ತಿಗೆ ಮುಂಚೆ ಹತ್ತಿರದ ಗುಡ್ಡಗಳಿಗೆ ಹೋಗಿ ಈಚಲು ಗರಿಗಳನ್ನು ತಂದು ತಮ್ಮ-ತಮ್ಮ ಗದ್ದೆಗಳಿಗೆ ನೆಡುತ್ತಾರೆ. ಸಾಮಾನ್ಯವಾಗಿ ಎಕರೆಗೆ ನಾಲ್ಕೈದು ಗರಿ ನೆಡುವುದು ವಾಡಿಕೆ.  ಹೀಗೆ ನೆಟ್ಟ ಗರಿಗಳು ಬಹಳ ದಿವಸದವೆರೆಗೂ ಹಸಿರಾಗೇ ಇರುತ್ತವೆ. ಈ ಗರಿಗಳಲ್ಲಿ ಔಷಧೀಯ ಗುಣವಿದ್ದು ಅದು ಗಾಳಿಯ ಮೂಲಕ ಹಾದು ಭತ್ತದ ಪೈರುಗಳಿಗೆ ಸೋಕಿ ರೋಗ ನಿವಾರಣೆಯಾಗುತ್ತದೆ ಎನ್ನುತ್ತಾರೆ ರೈತರು. ಗರಿಗಳು ೧೫ ರಿಂದ ೨೦ ದಿವಸದ ನಂತರ ತುದಿಯ ಭಾಗದಿಂದ ಸ್ವಲ್ಪ-ಸ್ವಲ್ಪವೇ ಒಣಗುತ್ತಾ ಬರುತ್ತವೆ. ಗರಿಗಳು ಹೀಗೆ ಒಣಗಿದಂತೆ ಭತ್ತದ ಗದ್ದೆಯ ರೋಗವೂ ನಿಧಾನವಾಗಿ ಕಡಿಮೆಯಾಗುತ್ತದೆ ಎಂಬ ನಂಬಿಕೆ ರೈತರಲ್ಲಿದೆ.
ಗದ್ದೆಗೆ ಗರಿಗಳನ್ನು ನೆಟ್ಟ ನಂತರ ಕೆಲವರು ಕೋಳಿಯನ್ನು ಸುಟ್ಟು ಗದ್ದೆಯ ಸುತ್ತಲೂ ಬರುತ್ತಾರೆ. ಅದರ ಹೊಗೆ ಭತ್ತದ ಪೈರುಗಳಿಗೆ ಸೋಕಿದರೆ ರೋಗ-ಕೀಟಗಳು ಬೇಗ ವಾಸಿಯಾಗುತ್ತವೆಯಂತೆ. ಕೆರೆ ಹಿಂಭಾಗದಲ್ಲಿ ಗದ್ದೆಯಿರುವವರು ಒಟ್ಟಾಗಿ ಕಪ್ಪು ಬಣ್ಣದ ಹಂದಿಯನ್ನು ಸುಟ್ಟು ಈ ರೀತಿ ಸುತ್ತು ಹಾಕುತ್ತಾರೆ.
ಗೊಡ್ಡೀಚಲು ಗಿಡ ಈಚಲು ಜಾತಿಗೆ ಸೇರಿದ ಸಸ್ಯ. ಕಾಡು, ಬಯಲುಗಳಲ್ಲಿ ಬೆಳೆಯುತ್ತದೆ. ಇದರ ಗರಿಗಳು ಈಚಲು ಗರಿಗಳನ್ನೇ ಹೋಲುತ್ತವೆ. ಆದರೆ ಈಚಲು ಗರಿಗಳಿಗಿರುವಂತೆ ತುದಿಯಲ್ಲಿ ಚೂಪಾದ ಮುಳ್ಳುಗಳಿರುವುದಿಲ್ಲ, ಮತ್ತು ಈಚಲು ಗರಿಗಳಿಗಿಂತ ಗಾಢ ಹಸಿರು ಹಾಗೂ ಮೃದುವಾಗಿರುತ್ತವೆ.  ನಗರಗಳಲ್ಲಿ ಮನೆಯ ಮುಂದೆ ಫ಼್ಯಾಷನ್‌ಗಾಗಿ ಗೊಡ್ಡೀಚಲು ಗಿಡಗಳನ್ನು ಹಾಕಿಕೊಂಡಿರುತ್ತಾರೆ.
ಕಡ್ಲೆ ಕಾಯಿ ಹೊಲದಲ್ಲಿ ಕರಡಿ ಬೂತಪ್ಪ
ಕಡ್ಲೆಕಾಯಿ (ಶೇಂಗಾ) ಬೆಳೆಯುವ ಪ್ರದೇಶದಲ್ಲಿ ಕಂಡುಬರುವ ಆಚರಣೆ. ಹೊಲಕ್ಕೆ ಬಿತ್ತಿದ ಕಡ್ಲೆಕಾಯಿ ಹೊಲಕ್ಕೆ ಕರಡಿಗಳು  ಧಾಳಿ ಮಾಡಿ ಬೆಳೆ ಹಾಳು ಮಾಡದಿರಲಿ ಎಂಬ ಆಶಯದಿಂದ ಆಚರಿಸಲಾಗುತ್ತದೆ.
ಕಡ್ಲೆ ಕಾಯಿ ಮುಖ್ಯ ಬೆಳೆಯಾದ ತುಮಕೂರು, ಹಿರಿಯೂರು ಭಾಗದಲ್ಲಿ ಕರಡಿಗಳು ವಿಪರೀತ.  ಇವು ಕಡ್ಲೆ ಬೀಜವನ್ನು ಹೊಲಕ್ಕೆ ಬಿತ್ತಿದ ಎರಡು-ಮೂರು ದಿವಸಕ್ಕೇ ಹೊಲಕ್ಕೆ ಧಾಳಿ ಇಡುತ್ತವೆ, ಇನ್ನೂ ಮೊಳಕೆಯಾಗದೆ ಇರುವ ಬೀಜಗಳನ್ನು ಮೂತಿಯಲ್ಲಿ ಮಣ್ಣು ಬಗೆದು ಆರಿಸಿ ತಿನ್ನುತ್ತವೆ.  ಸಾಲು ಹಿಡಿದು ತಿನ್ನುತ್ತಾ ಹೋಗುವುದರಿಂದ ಅಷ್ಟು ಜಾಗ ಖಾಲಿ ಬೀಳುತ್ತದೆ.
ಇದಲ್ಲದೆ ಕಡ್ಲೆ ಗಿಡದಲ್ಲಿ ಕಾಯಿ ಬಲಿತ ಹೊತ್ತಿಗೆ ಮತ್ತೆ ಧಾಳಿ ಶುರು. ಗಿಡವನ್ನು ಅನಾಮತ್ ಹೊರಳಿಸಿ ಕಾಯಿಗಳನ್ನು ಅಲ್ಲೇ ಕಡಿದು ಬೀಜ ತಿನ್ನುತ್ತವೆ. ಗಿಡ ಹಸಿರಾಗೇ ಇದ್ದರೂ ಸಹ ಬುಡದಲ್ಲಿ ಕಾಯಿ ಇರುವುದಿಲ್ಲ.
ಈ ಕರಡಿಗಳ ನಿಯಂತ್ರಣಕ್ಕಾಗೇ ಕರಡಿ ಭೂತಪ್ಪನ ಆಚರಣೆ ಮಾಡುತ್ತಾರೆ. ಹೊಲಕ್ಕೆ ಬೀಜ ಬಿತ್ತಿದ ಹತ್ತು ಹದಿನೈದು ದಿವಸದಲ್ಲಿ ಇದನ್ನು ನೆರವೇರಿಸಲಾಗುತ್ತದೆ. ಅದರ ವಿಧಾನ ಹೀಗಿದೆ.
ಕಡ್ಲೆ ಬೀಜಗಳನ್ನು ಹುರಿದು ತಂಬಿಟ್ಟು ಆರತಿ ಮಾಡಿಕೊಂಡು ಹೊಲಕ್ಕೆ ಹೋಗುತ್ತಾರೆ. ಅಲ್ಲಿ ಪೂಜೆ ಮಾಡಿ ತಂಬಿಟ್ಟಿನ ಆರತಿಯನ್ನು ಕರಡಿಗಳು ಹೆಚ್ಚಾಗಿ ಯಾವ ದಿಕ್ಕಿನಿಂದ ಬರುತ್ತವೆಯೋ ಆ ದಿಕ್ಕಿಗೆ ಬೆಳಗುತ್ತಾರೆ. ನಮ್ಮ ಹೊಲ ಹಾಳು ಮಾಡಬೇಡ ಸ್ವಾಮಿ ಎಂದು ಹೇಳುತ್ತಾ ಸಣ ಮಾಡುತ್ತಾರೆ. ತಂಬಿಟ್ಟನ್ನು ಬಂದವರಿಗೆಲ್ಲ ಹಂಚಿ ಮನೆಗೆ ತೆರಳುತ್ತಾರೆ.
ಯಾರು ಕರಡಿ ಭೂತಪ್ಪನನ್ನು ಮಾಡಿರುತ್ತಾರೋ ಅವರ ಹೊಲಕ್ಕೆ ಕರಡಿಗಳು ಹಾನಿ ಮಾಡುವುದಿಲ್ಲ ಎಂಬ ನಂಬಿಕೆ ಇದೆ.

ಕಾಮೆಂಟ್‌ಗಳಿಲ್ಲ: