ಸೋಮವಾರ, ಮಾರ್ಚ್ 31, 2014

ಏಕಾಂತದ ತಲ್ಲಣದಲ್ಲಿ ತೇಲುವ ಹಾಯಿದೋಣಿ - 'ಕೋಯಾದ್'


-ಚರಿತಾ   ಭೂಮಿ- ಆಕಾಶ- ಮನಸ್ಸು -ಎಲ್ಲವನ್ನೂ ಆವರಿಸಿಕೊಂಡಂತಿರುವ ನೀರು...ನಿರಂತರ ಹರಿವಿನ ನದಿಯ ಒಡಲಿನಿಂದಲೇ ಹುಟ್ಟುಪಡೆದಂತೆ ಅಲೆಗಳನ್ನು ತಬ್ಬಿ ತೊಡರುವ ಪುಟ್ಟ ಹಾಯಿದೋಣಿ... ಆ ದೋಣಿಯ ಮಗನಂತಿರುವ ಆತ..ತನ್ನಪ್ಪನಿಂದ ಬಳುವಳಿಯಾಗಿ ಬಂದ ಆಸ್ತಿಯೆಂದರೆ ಈ ದೋಣಿಯೊಂದೆ. ಬಾಲ್ಯದಲ್ಲೆ ಅಮ್ಮನನ್ನು ಕಳೆದುಕೊಂಡವನಿಗೆ ಈ ನದಿಯ ಅಗಾಧತೆ ಮತ್ತು ದೋಣಿಯ ಮೈಸೆಳವು ಅಮ್ಮನ ಅಪ್ಪುಗೆಯಷ್ಟೇ ಆಪ್ತ.. ಇದು ಅಸ್ಸಾಮಿನ 'ಮಿಶಿಂಗ್' ಎಂಬ ಬುಡಕಟ್ಟು ಭಾಷೆಯ ಸಿನಿಮಾ  'ಕೋಯಾದ್' (ನಿರ್ದೇಶಕಿ : ಮಂಜು ಬೋರಾಹ್). ಮೊದಲು ಕೆಲಹೊತ್ತು ತಡವರಿಸುವ ನಿರೂಪಣೆ ನಿಧಾನವಾಗಿ ನದಿಯ ಹರಿವಿನೊಂದಿಗೆ ನಿಮ್ಮನ್ನೂ ಸೆಳೆದುಕೊಳ್ಳುತ್ತದೆ. 

   ಮತ್ತೊಂದು ಮದುವೆಯ ಆತುರದಲ್ಲಿರುವ ಗಂಡನಿಂದ ದೂರಾಗಿ, ಮಗನೊಂದಿಗೆ ತನ್ನ ತವರಿಗೆ ಮರಳುವ ಅವಳು, ತನ್ನಷ್ಟಕ್ಕೆ ತಾನಿರಲು ಬಿಡದ ಜನರ ಕೊಳಕು ದಾಹಕ್ಕೆ ಬಲಿಯಾಗಿ ನದೀಪಾಲಾಗುತ್ತಾಳೆ. ಅವಳ ಒಬ್ಬನೇ ಮಗ ಪೌಕಾಮ್ ತನ್ನ ಮಲತಾಯಿಯ ನಿರ್ಲಕ್ಷ್ಯದ ನಡುವೆಯೇ ಮನಸುಕೊಟ್ಟು ಕಲಿತದ್ದೆಂದರೆ -  ನದಿಯಲ್ಲಿ ತೇಲಿಬರುವ ಕಟ್ಟಿಗೆಗಳನ್ನು ಸಂಗ್ರಹಿಸಿ ಮಾರಿ ಬದುಕುವುದು. ಅಪ್ಪನಿಂದ ಪಡೆದದ್ದೂ ಆ ದೋಣಿಯೊಂದನ್ನೆ. ಅಂತೆಯೆ ಅದೇ ಅವನ ಸರ್ವಸ್ವ.


   ಬಾಲ್ಯದಿಂದಲೇ ಮನುಷ್ಯ ಸಂಬಂಧಗಳ ಜಟಿಲತೆ, ಕುಟಿಲತೆಗಳ ಕಹಿಯನ್ನು ಕಂಡವನು ಅವನು. ಬಹುಷಃ ಅವನ ಪಾಲಿಗೆ ಒದಗಿಬಂದ ಒಂದೇ ನೆಮ್ಮದಿಯೆಂದರೆ, ಅವನ ಹೆಂಡತಿಯ ಪ್ರೀತಿ. ದುಡಿಮೆಯೊಂದನ್ನೆ ಗುರಿಯಾಗಿಸಿಕೊಂಡ ಪೌಕಾಮ್ ಗೆ ತನ್ನ ದೊಡ್ಡ ಮಗನನ್ನು ಡಾಕ್ಟರ್ ಮಾಡುವಾಸೆ. ಅದಕ್ಕಾಗಿ ಗಾಳಿ, ಮಳೆ, ಹಗಲು-ರಾತ್ರಿ ಎನ್ನದೆ ನದಿಯೊಡಲಲ್ಲಿ ತನ್ನ ದೋಣಿಯ ಜೊತೆ ತೇಲುತ್ತಾನೆ.. ಅವನೆಡೆಗೆ ತೇಲಿಬರುವ ಮರದ ದಿಮ್ಮಿಗಳೇ ಅವನ ಪಾಲಿನ ಖಜಾನೆ.

   ಅವನ ಮೈಮನಸ್ಸೆಲ್ಲವೂ ನದಿಯ ಅಗಾಧ ಹರಿವಿನಂತೆ ಮೌನ ಮತ್ತು ಗಂಭೀರ. ಇಡೀ ಚಿತ್ರದ ಮುಕ್ಕಾಲು ಪಾಲು ಇಂಥ ಗಂಭೀರ ಹರಿವಿನ ಜೊತೆಗೇ ಸಾಗುತ್ತದೆ. ಅವನಿಗೆ 'ಮಾತು' ಬರುವುದು ಅವನ ಆಳದ ಗಾಯಗಳು ಕಲಕಿ, ರಾಡಿಯಾದಾಗ ಮಾತ್ರ. ತಾನು ಅತಿಯಾಗಿ ನೆಚ್ಚಿದ ನಂಟಿನಿಂದಲೂ ನೆಮ್ಮದಿ ದೂರವೆನಿಸಿದಾಗ ಪೌಕಾಮ್ ಮಾತಾಡತೊಡಗುತ್ತಾನೆ. ಅದೂ ಚೀತ್ಕಾರ, ರೋದನೆಯ ದನಿಯಲ್ಲಿ ಹುಟ್ಟಿದ ಮಾತುಗಳು..


   ತಾನೇ ಒಂದು ನದಿಯಂತೆ ನಿರಂತರ ಹರಿಯುತ್ತ ಮುಕ್ಕಾಲು ಜೀವನ ಸವೆಸಿರುವ ಇವನು, ತನ್ನ ಕೊನೆಗಾಲದಲ್ಲಿ ನಿಮಿಷಮಾತ್ರ ಜೋರಾಗಿ ಉರಿದು ಆರಿಹೋಗುವ ಎಣ್ಣೆಬತ್ತಿದ ದೀಪದಂತೆ ಕಾಣುತ್ತಾನೆ. ಇಡೀ ಚಿತ್ರದ ತುಂಬ ಹರಡಿಕೊಂಡಿರುವ ಮಬ್ಬುಗತ್ತಲಿನಂಥ ಮೌನ ಕೊನೆಗೆ ಇವನ ಆರ್ತತೆಯ ಏಕಾಂತದಲ್ಲಿ ಕಪ್ಪಗೆ ಹೆಪ್ಪುಗಟ್ಟುತ್ತದೆ.. ನೋಡುಗನೊಳಗೆ ಆ ಆಕ್ರಂದದ ಅಲೆಗಳು ಹರಡಿಕೊಳ್ಳುತ್ತವೆ...

   ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ಮಾರಕ ಯಾತನೆಯಂಥ ಮೌನದ ಹೊದಿಕೆಯಲ್ಲೇ ಅರ್ಥಮಾಡಿಸುತ್ತದೆ ಈ ಚಿತ್ರ. ಇಡೀ ಚಿತ್ರದ 'ಮೂಡ್' ಕಟ್ಟಿಕೊಡುವಲ್ಲಿ ಶ್ರಮಿಸಿರುವುದು ಇಲ್ಲಿನ ಸಿನಿಮಾಟೋಗ್ರಫಿ ಮತ್ತು ಹಿನ್ನೆಲೆ ಸಂಗೀತ. ಪೌಕಾಮ್ ನ ಒಳಹೊರಗನ್ನು ಅತ್ಯಂತ ಸಮರ್ಥವಾಗಿ ಚಿತ್ರಸಲಾಗಿದೆ. ಆದರೆ, ಕೊನೆಗೂ ನನ್ನಲ್ಲಿ ಉಳಿದ ಪ್ರಶ್ನೆಗಳು ಇವು : ಸಂಬಂಧಗಳ ಸ್ವಾರ್ಥ, ಜಾಳುತನದಿಂದ ಬೇಸತ್ತು ಬದುಕಿನ ಬಗೆಗೆ ಗಾಢ ನಿರಾಸೆ ತಳೆಯುವ ಪೌಕಾಮ್ ಗೆ ತನ್ನ ಹೆಂಡತಿಯ ಅಗಾಧ ಪ್ರೀತಿ ಯಾಕೆ ಆಸರೆಯೆನಿಸಲಿಲ್ಲ? ತನ್ನ ಗಂಡನನ್ನು ತನಗಿಂತಲೂ ಹೆಚ್ಚು ನೆಚ್ಚಿಕೊಂಡವಳ ಪ್ರೀತಿ, ಕಾಳಜಿ ಯಾಕೆ ಅವನಿಗೆ ಬದುಕಿನ ಏಕೈಕ ಸೌಂದರ್ಯದಂತೆ ಭಾಸವಾಗಲಿಲ್ಲ? ಹೆಂಡತಿಯ ಅಸ್ತಿತ್ವ ಕೇವಲ ಭೌತಿಕ ನೆಲೆಯದ್ದಾಗಿ ಮಾತ್ರ ಉಳಿದುಬಿಟ್ಟಿದ್ದು ಯಾಕೆ? ...

   ಇದು 'ಭಾರತೀಯ ರಿವಾಜು'ಗಳನ್ನು ಹೊದ್ದುಕೊಂಡ ಗಂಡಸಿನ ಮನಸ್ಥಿತಿಯಂತೆ ಕಾಣುತ್ತದೆ. ತನ್ನ ತಾಯಿಯ ದುರದೃಷ್ಟಕರ ಹಣೆಬರಹ ಕಂಡಿದ್ದವನಿಗೆ ತನ್ನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಹೆಂಡತಿ ಯಾಕೆ ಆತ್ಮಸಖಿಯಾಗಲಿಲ್ಲ? ಇದು ನನ್ನ ಮಟ್ಟಿಗೆ ಆದರ್ಶದ ಕನವರಿಕೆಯೂ ಇರಬಹುದೇನೊ! 

   ಯಾಕೋ  ಅವನ ಏಕಾಂತದ ತಲ್ಲಣಗಳ ಸುಳಿಯಲ್ಲಿ ಅವಳ ಪ್ರೀತಿಯ ದೋಣಿ ಒಂಟಿಯಾದಂತೆ ನನಗನಿಸಿತು.

ಬುಧವಾರ, ಮಾರ್ಚ್ 26, 2014

ಲೈಂಗಿಕ ಅಲ್ಪಸಂಖ್ಯಾತೆ ರೇವತಿ ‘ರಂಗ ಪ್ರವೇಶ'

-ಮಂಜುಶ್ರೀ ಎಂ. ಕಡಕೋಳ
 ಸೌಜನ್ಯ: ಪ್ರಜಾವಾಣಿಲೈಂಗಿಕ ಅಲ್ಪ­ಸಂಖ್ಯಾತೆ ಎ. ರೇವತಿ ತಮ್ಮದೇ ಆತ್ಮಕಥೆ ‘ಬದುಕು ಬಯಲು’ ನಾಟಕದ ಮೂಲಕ ರಂಗ­ಪ್ರವೇಶ ಮಾಡಲಿದ್ದಾರೆ.
ರೇವತಿ ಅವರ ಆತ್ಮಕಥೆ ‘ದಿ ಟ್ರೂತ್ ಎಬೌಟ್‌ ಮಿ’ ಅನ್ನು ಇಂಗ್ಲಿಷಿ­ನಲ್ಲಿ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿತ್ತು. ಈ ಕೃತಿ­ಯನ್ನು ‘ಬದುಕು ಬಯಲು’ ಹೆಸರಿನಲ್ಲಿ ಕನ್ನಡಕ್ಕೆ ಲೇಖಕಿ ದು. ಸರಸ್ವತಿ ಅನುವಾದಿ­ಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೆಗ್ಗೋಡಿನ ‘ಜನಮನದಾಟ’ ತಂಡ­ದಲ್ಲಿ ಮಾರ್ಚ್‌ 5­­ರಿಂದ ರಿಹರ್ಸಲ್‌ ಆರಂಭಿಸಿ­ರುವ ರೇವತಿ, ತಮ್ಮದೇ ಆತ್ಮಕಥೆಯ ನಾಟಕ ರೂಪಕ್ಕೆ ಬಣ್ಣ ಹಚ್ಚುತ್ತಿರುವ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.
* ರಂಗ ಪ್ರವೇಶದ ಆಸೆ ಮೊಳೆತದ್ದು ಹೇಗೆ?
–ಬಾಲ್ಯದಲ್ಲೇ ನನಗೆ ಅಭಿನಯದ ಬಗ್ಗೆ ಒಲವಿತ್ತು. ಶಾಲೆಯಲ್ಲಿ ನಾಟಕ­ಗಳಲ್ಲಿ ಅಭಿನಯಿಸಿದ್ದೆ. ‘ಸಂಗಮ’­ದಲ್ಲಿ­ದ್ದಾಗ ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆ­ಗಳನ್ನು ಕಲೆ ಮೂಲಕ ಜನರಿಗೆ ಸುಲಭ­ವಾಗಿ ತಲುಪಿ­ಸಬಹುದು ಎಂಬುದನ್ನು ಅರಿತಿದ್ದೆ.
‘ಬದುಕುಬಯಲು’ ನಾಟಕ ನೋಡಿ­ದಾಗ, ನನ್ನ ಪಾತ್ರ­ವನ್ನು ಬೇರೆ ಯಾರೋ ಅಭಿನಯಿಸುವು­ದ­ಕ್ಕಿಂತ ನಾನೇ ಅಭಿನಯಿಸಿದರೆ ಹೇಗೆ ಅಂತ ಪ್ರಶ್ನಿಸಿ­ಕೊಂಡೆ. ಈ ವಿಚಾರವನ್ನು ನಿರ್ದೇಶಕ ನೀನಾಸಂ ಗಣೇಶ್ ಅವ ರೊಂದಿಗೆ ಹಂಚಿ­ಕೊಂಡೆ.  ಅವರು ತಮ್ಮ ತಂಡಕ್ಕೆ ನನಗೆ ಪ್ರವೇಶ ನೀಡಿದರು.
* ನಿಮ್ಮದೇ ಆತ್ಮಕಥೆಯಲ್ಲಿ ನೀವೇ ಅಭಿನಯಿಸು­ತ್ತಿರು­ವುದು ಹೇಗನ್ನಿಸುತ್ತೆ?
–ಖುಷಿ ಅನ್ನಿಸುತ್ತೆ. ‘ನೀನಾಸಂ’ಗೆ ಬರಬೇಕು ಅಂತ ತುಂಬಾ ಸಲ ಅಂದು­ಕೊಂಡಿದ್ದೆ. ಆದರೆ, ಅದು ಈ  ರೀತಿ ಈಡೇರಿದೆ. ನಾಟಕದಲ್ಲಿ ರೇವತಿ ಪಾತ್ರ­ವನ್ನು ನಾನೇ ಮಾಡುತ್ತಿರುವುದರಿಂದ ಭಾವನೆಗಳನ್ನು ಸರಾಗವಾಗಿ ಅಭಿವ್ಯಕ್ತಿಪಡಿಸಲು ಸಾಧ್ಯ­ವಾ­ಗು­ತ್ತಿದೆ.
* ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆ­ಗಳ ಬಿಂಬಕ್ಕೆ ರಂಗ­­ಮಾಧ್ಯಮವನ್ನೇ ಆಯ್ಕೆ ಮಾಡಿದ್ದು ಏಕೆ?
–ಮಾತು, ಬರಹಕ್ಕಿಂತ ರಂಗ­ಭೂಮಿ ಮೂಲಕ ಸುಲಭವಾಗಿ ಜನ­ರನ್ನು ತಲು­ಪ­­ಬಹುದು. ಲೈಂಗಿಕ ಅಲ್ಪ­ಸಂಖ್ಯಾತರ ಬಗ್ಗೆ ಸಮಾಜ­ದಲ್ಲಿ ಇನ್ನೂ ಆರೋಗ್ಯ­ಕರ ಮುಕ್ತಭಾವ ಬಂದಿಲ್ಲ. ಈ ಮೊದಲು ‘ಬದುಕು­ಬಯಲು’  ನಾಟಕ ನೋಡಿದ ಅನೇಕರು ಪೂರ್ವ­ಗ್ರಹ­ ಬಿಟ್ಟು ನಮ್ಮನ್ನು ಸಾಮಾನ್ಯ­­­ರಂತೆಯೇ ನೋಡುವಂತಾ­ಗಿದೆ. ಈ ಬದಲಾವಣೆ  ಸಾಧ್ಯ­ವಾಗಿದ್ದು ನಾಟಕ­ದಿಂ ದಲೇ. ಹಾಗಾಗಿ, ರಂಗಭೂಮಿಯನ್ನೇ ಆಯ್ದು­ಕೊಂಡೆ.
* ನಾಟಕದ ಸಂದೇಶವೇನು?
–ಲೈಂಗಿಕ ಅಲ್ಪಸಂಖ್ಯಾತರೂ  ಮನುಷ್ಯರೇ. ಅವರಲ್ಲೂ ಮನಸ್ಸಿದೆ ಎನ್ನುವ ಸಂದೇಶ ಸಮಾಜಕ್ಕೆ ತಲುಪ­ಬೇಕು.
* ‘ಜನಮನದಾಟ’ ತಂಡದ ಜತೆ ನಿಮ್ಮ ಒಡನಾಟ  ಹೇಗಿದೆ?
–ತಂಡದಲ್ಲಿ ನಾನೂ ಸೇರಿದಂತೆ ಒಟ್ಟು 13 ಮಂದಿ ಇದ್ದೇವೆ. ಇಲ್ಲಿ ನನ್ನನ್ನು ಎಲ್ಲರೂ ಹೆಣ್ಣೆಂದೇ ಗುರು­ತಿಸು­ತ್ತಾರೆ. ಇತರ ಮಹಿ­ಳೆ­­ಯ­ರೊಂದಿಗೆ ಹೇಗೆ ಇರು ತ್ತಾರೋ ನನ್ನ ಜತೆಯೂ ಹಾಗೇ ಇರು­ತ್ತಾರೆ. ಇದು ನನಗೆ ಸಂತಸ ನೀಡಿದೆ ಎಂದು ಮಾತು ಮುಗಿಸಿದರು ರೇವತಿ.
‘ಬದುಕು ಬಯಲು’ ನಾಟಕ  58 ಪ್ರದರ್ಶನ ಕಂಡಿದೆ. ರೇವತಿ ಅಭಿ­ನಯದ ನಾಟಕ ಏ. 18ರಿಂದ ಪ್ರದ­ರ್ಶನವಾಗಲಿದೆ. ಜುಲೈನಲ್ಲಿ ಬೆಂಗ­ಳೂ­ರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟ­ಕದ 100ನೇ ಪ್ರದರ್ಶನ ನಡೆಯಲಿದೆ.  ನಾಟಕ ಪ್ರದರ್ಶನ–ಮಾಹಿತಿಗೆ ಮೊಬೈಲ್: 99002 57750
ಏನಂತಾರೆ ನಿರ್ದೇಶಕರು?
‘ರೇವತಿ ನಮ್ಮ ತಂಡಕ್ಕೆ ಬರುತ್ತೇನೆ ಅಂದಾಗ ಆಶ್ಚರ್ಯ, ಸಂತಸ ಒಟ್ಟಿಗೇ ಆಯಿತು. ಅವರು ನಮ್ಮ ಜತೆ ಬಂದಿ­ದ್ದಾರೆ ಅನ್ನೋದಕ್ಕಿಂತ ಅವರ ಜತೆಯೇ ನಾವಿದ್ದೇವೆ ಅನ್ನೋದು ಸೂಕ್ತ.  ನಾಟ­ಕದ ರಿಹರ್ಸಲ್‌ನಲ್ಲಿ ಅವರು ಇತರ­ರಂತೆ ಅಭಿ­ನ­ಯಿಸಲು ಪ್ರಯ­ತ್ನಿ­ಸುತ್ತಿದ್ದರು.
ಆದರೆ, ನಿಮ್ಮದೇ ಪಾತ್ರ. ಹಾಗಾಗಿ, ಅಭಿನಯ ಬೇಡ. ನೀವು ಇರು­ವಂತೆಯೇ ಇದ್ದರೆ ಚೆನ್ನ ಎಂದೆ. ಅದನ್ನ­ವರು ತಿದ್ದಿ­ಕೊಂಡು ಸಹಜ­ವಾಗಿಯೇ ನಾಟಕ­ದಲ್ಲಿ ತಮ್ಮನ್ನು ತೊಡಗಿಸಿ­ಕೊಂಡಿದ್ದಾರೆ. ಕನ್ನಡ ರಂಗಭೂಮಿ­ಯಲ್ಲಿ ಲೈಂಗಿಕ ಅಲ್ಪ-­ಸಂಖ್ಯಾತೆ­ಯೊಬ್ಬರು ಪೂರ್ಣ ಪ್ರಮಾಣದ ನಾಯಕಿಯಾಗಿ ಬಹುಶಃ ಇದೇ ಮೊದಲ ಬಾರಿ ಅಭಿನ­ಯಿ­ಸು­ತ್ತಿ­ದ್ದಾರೆ ಎನ್ನುತ್ತಾರೆ  ನಿರ್ದೇಶಕ ಎಂ. ಗಣೇಶ.

ಮಂಗಳವಾರ, ಮಾರ್ಚ್ 25, 2014

ಕಲೆಯಲ್ಲಿ ಸಂಕೋಲೆ
* ಎಚ್ ಎ ಅನಿಲ್ ಕುಮಾರ್

ಸೌಜನ್ಯ: ವಿಜಯ ಕರ್ನಾಟಕ

ಒಂದು ಮ್ಯೂಸಿಯಮ್ಮನ್ನು ಒಳಹೊಕ್ಕು ಅಲ್ಲಿರುವ ಕಲಾಕೃತಿಗಳನ್ನು ನೋಡಿದಾಗ ಕೇವಲ ಕುಂಚದ ಮಹಿಮೆ, ಬಣ್ಣಗಳ ಸಂಯೋಜನೆ, ಭಾವಗಳ ಆಟವನ್ನಷ್ಟೇ ನೋಡುವುದಲ್ಲ. ಅದರಿಂದ ಕಂಗಳಿಗೆ ತೃಪ್ತಿಯಾಗಬಹುದು, ನಿಜ. ಆದರೆ, ಅದರ ಹಿಂದಿನ ಮನಃಸ್ಥಿತಿಯನ್ನೂ ನಾವು ಗ್ರಹಿಸಬೇಕು. ಏಕೆಂದರೆ ಈ ಪ್ರತಿಭೆಯ ಲೋಕದಲ್ಲೂ ಬಿಳಿ ತೊಗಲಿನವರ ಮೇಲಾಟವಿದೆ; ವರ್ಣೀಯರ ಪಾಲಿನ ಸಂಕೋಲೆಗಳಿವೆ; ಗುಲಾಮಗಿರಿಯ ಚಿಹ್ನೆಗಳಿವೆ. ಮೇಲ್ನೋಟಕ್ಕೆ ಮುದ ನೀಡುವ ಮ್ಯೂಸಿಯಂಗಳ ಆಳದಲ್ಲಿ ಅನೇಕ ಅಮಾನವೀಯ ಅಂಶಗಳಿವೆ ಎಂದರೆ ನೀವು ನಂಬಲೇಬೇಕು.

  ಇಪ್ಪತ್ತೈದು ವರ್ಷಗಳ ಹಿಂದೆ ಭೋಪಾಲದ 'ಮ್ಯೂಸಿಯಂ ಆಫ್ ಮ್ಯಾನ್' ಅನ್ನು ನಾನು ಕಲಾವಿದ್ಯಾರ್ಥಿಯಾಗಿ ನೋಡಿದಾಗ ಕಲಾವಿದರಿರಲಿ, ಶ್ರೀಸಾಮಾನ್ಯನೂ ಗಾಬರಿ ಪಡುವಂತಹ ದೃಶ್ಯಗಳನ್ನಲ್ಲಿ ಕಂಡೆ. ಭಾರತದ ಪ್ರಮು ಬುಡಕಟ್ಟು ಜನರ ಮನೆಗಳನ್ನು ಅಲ್ಲಿ ಪುನರ್ಸೃಷ್ಟಿಸಲಾಗಿತ್ತು. ಅಸಲಿ ಬುಡಕಟ್ಟಿನ ಸಂಸಾರಸ್ಥರು ತಮ್ಮ ಅಸು ಆವರಣದಲ್ಲಿ ತೊಡುತ್ತಿದ್ದರು ಎಂದು ಭಾವಿಸಲಾದ ವಸ್ತ್ರಗಳನ್ನು ತೊಟ್ಟು ಮಾನವ ಸಂಗ್ರಹಾಲಯದ ತಮ್ಮ ತಮ್ಮ ಬುಡಕಟ್ಟಿನ ಮನೆಗಳ ಮುಂದೆ ಪಹರೆ ಕಾಯುತ್ತಿದ್ದರು. ಪ್ರತಿ ಸಂಸಾರವೂ ಮೂರು ತಿಂಗಳ ಕಾಲ ಅಲ್ಲಿ 'ವೀಕ್ಷಿತ'ರಾಗಿ (ಪ್ರಾಣಿ ಸಂಗ್ರಹಾಲಯದ ಪಶು-ಪಕ್ಷಿಗಳಂತೆ) ಆ ಮನೆಗಳ ಒಡೆಯರಾಗಿ ವೀಕ್ಷಕರ ಕಣ್ಣಿಗೆ ಆಹಾರವಾಗಲು ವಂತಿಗೆ ಪಡೆಯುತ್ತಿದ್ದರು. ನಮ್ಮ ಗೆಳೆಯರಲ್ಲಿ ಕೆಲವರು ಅಂತಹುದೇ ಕುಟುಂಬದಿಂದ ಬಂದವರಾಗಿದ್ದರು. ಒಂದೆರೆಡು ತಲೆಮಾರುಗಳ ಹಿಂದೆಯಷ್ಟೇ ವಾಸ್ತವವಾಗಿದ್ದದ್ದು ಈಗ ಸಂಗ್ರಹಾಲಯವಾಗಿ ಬಿಟ್ಟಿತ್ತು! ಒರಿಸ್ಸಾದ ಮಾನವ ಸಂಗ್ರಹಾಲಯದಲ್ಲಿ ನಿರ್ಮಿಸಲಾಗಿರುವ ಸಂಗ್ರಹಿತ ಗೃಹವು ನನ್ನ ಬಾಲ್ಯದ ನಮ್ಮ ಮನೆಯನ್ನು ಹೋಲುತ್ತಿತ್ತು! ನಾವು ಬದುಕಿದ ವಾತಾವರಣವನ್ನೇ ನಮ್ಮ ಜೀವಮಾನದಲ್ಲಿ ಸಂಗ್ರಹಾಲಯವನ್ನಾಗಿ ಮಾಡಿದರೆ ಅದು ಗುಲಾಮಗಿರಿಯ ಮೊದಲ ಹೆಜ್ಜೆಯಾಗಿ ಬಿಡುತ್ತದೆ.

ಮಕ್ಕಳು ಪ್ರಾಣಿ ಸಂಗ್ರಹಾಲಯವನ್ನು ನೋಡಲು ಏಕೆ ನಿರಾಸಕ್ತರಾಗುತ್ತಾರೆ ಎಂದು ಜಾನ್ ಬರ್ಜರ್ ಭಾವಿಸುತ್ತಾನೋ ಅಂತಹ ಪರಿಕಲ್ಪನೆಯಲ್ಲೂ ಇಂಥದೇ ಕಾರಣವಿದೆ. ಎಡ್ಡಿ ಚೇಂಬರ್ಸ್‌ ಎಂಬ ಬ್ರಿಸ್ಟಲ್‌ನ ಕಲಾ ವಿದ್ವಾಂಸ, ಕ್ಯುರೇಟರ್ ಲಂಡನ್ನಿನ ಟೇಟ್ ಮಾಡರ್ನ್ ಸಂಗ್ರಹಾಲಯವನ್ನು ಕುರಿತು ಅದು 'ವೈಟ್ ವಾಷ್' ಆಗಿದೆ ಎನ್ನುತ್ತಾನೆ. ಅಲ್ಲಿನ ಅನರ್ಘ್ಯ ಕಲಾಕೃತಿಗಳನ್ನು ಕಾವಲು ಕಾಯುವವರೆಲ್ಲ ಬಿಳಿಯರು. ಅದೇ ಕಟ್ಟಡದ ಕೆಫೆಯಲ್ಲಿ ತಿಂಡಿತೀರ್ಥವನ್ನು ಬಡಿಸುವವರೆಲ್ಲ ಕರಿಯರು ಎಂದು ಆತ ತನ್ನ ಬರವಣಿಗೆಯಲಿ (ಕನೊಟೇಷನ್ಸ್) ನಿರೂಪಿಸುತ್ತಾನೆ. ಬಿಳಿಯರು ಸಂಗ್ರಹಾಲಯದ ಒಡೆತನ ಸ್ಥಾಪಿಸುವುದರ ಮೂಲಕ ಹೇಗೆ ನಮ್ಮನಿಮ್ಮನ್ನೆಲ್ಲ 'ವೈಟ್ ವಾಷ್' ಮಾಡಿಬಿಟ್ಟಿದ್ದಾರೆ ಅಥವಾ ಬಿಳಿಯ-ಸಾರ್ವಭೌಮತ್ವವನ್ನು ಹೇಗೆ ಸ್ಥಾಪಿಸಿದ್ದಾರೆ ಎಂದು ಭಾವಪೂರ್ಣವಾಗಿ ನಿರೂಪಿಸಿದ್ದಾನೆ. ನಮ್ಮ ಕಲ್ಲಿನ ಬಸವನನ್ನು ಬ್ರಿಟಿಷ್ ಕ್ರಿಸ್ಟಿಯಾನ ಕಾವಲು ಕಾಯುತ್ತಿದ್ದದ್ದು ನನ್ನ ಕೆಡುಕು ಮನಸಿಗಂತೂ ವಸಾಹತೀಕರಣೋತ್ತರದ ಸವ್ವಾಸೇರಿನ ವಿಷಯವಾಗಿ ಖುಷಿ ಕೊಟ್ಟಿದ್ದಂತೂ ನಿಜ.

ಸಂಗ್ರಹಾಲಯಗಳನ್ನು ಭೇಟಿ ಮಾಡುವಾಗ ಒಂದು ವಿಷಯ ಗಮನಿಸಿ: ಯಾವ ಸಂಗ್ರಹಾಲಯಗಳಲ್ಲಿ ಬೇರೆ ದೇಶಗಳ ಕಲಾಕೃತಿಗಳನ್ನೂ ಸಂಗ್ರಹಿಸಿರುತ್ತಾರೋ ಅಲ್ಲೆಲ್ಲ ಇತರ ದೇಶಗಳನ್ನು ಗುಲಾಮಗಿರಿಗೆ ಒಡ್ಡಿರುವ ನಿದರ್ಶನಗಳಿರುತ್ತವೆ. ಎಲ್ಲೆಲ್ಲಿ ತಮ್ಮದೇ ದೇಶಗಳ ಸಾಂಸ್ಕತಿಕ ವಸ್ತುಗಳನ್ನು ಶೇಖರಿಸಿರುತ್ತಾರೋ (ಈಜಿಪ್ಟಿನ ಸಂಗ್ರಹಾಲಯದ ಮಮ್ಮಿಗಳಂತೆ) ಅಲ್ಲೆಲ್ಲ ವಿದೇಶೀ ರಾಜ್ಯಾಡಳಿತಕ್ಕೆ ಪ್ರತಿರೋಧ ಒಡ್ಡಿರುವುದನ್ನು ಕಾಣಬಹುದು. ಉದಾಹರಣೆಗೆ ಲಂಡನ್ನಿನ 'ವಿಕ್ಟೋರಿಯಾ ಆಲ್ಬರ್ಟ್ ಸಂಗ್ರಹಾಲಯ'. ರಸ್ತೆರಸ್ತೆಗಳಲ್ಲೂ ಕಂಡುಬರುವ ನಮ್ಮ ಕಲ್ಲಿನ ಬೀದಿ ಬಸವ, ಚಿತ್ರಕಲಾ ಪರಿಷತ್ತಿನಲ್ಲಿ ಕಾಸಿಗೊಂದು ಕೊಸರಿಗೊಂದು ಮಾರಾಟವಾಗುವ ಸಾಂಪ್ರದಾಯಿಕ ಹಾಗೂ ಬುಡಕಟ್ಟು ಚಿತ್ರಕಲೆಗಳೆಲ್ಲ ಅಲ್ಲಿ ಘನಗಾಂಭೀರ್ಯದಲ್ಲಿ 'ಮ್ಯೂಸಿಯಂ ಪೀಸ್'ಗಳಾಗಿ ವಿರಾಜಿಸುತ್ತಿರುತ್ತವೆ. ಈ ನಿಟ್ಟಿನಿಂದ ಸಂಗ್ರಹಾಲಯಗಳು ಮೊದಲಿಗೆ ಶೋಷಣೆಯ ಸಂಕೇತ. ಬೆಂಗಳೂರಿನ ವೆಂಕಟಪ್ಪ ಕಲಾ ಗ್ಯಾಲರಿಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಅಲ್ಲಿ ಕೆ ವೆಂಕಟಪ್ಪ, ಕೆ ಕೆ ಹೆಬ್ಬಾರ್ ಅವರುಗಳ ಕಲಾಕೃತಿಗಳ ಜೊತೆ ರಾಜಾರಾಂ ಎಂಬ ಅನಾಮಿಕ ಶಿಲ್ಪಿಯ ಕೃತಿಗಳೂ ಇವೆ. ಮೊದಲ ಇಬ್ಬರು ಪರಿಚಿತರಾಗಿದ್ದರೆ ಕೊನೆಯವರು ಯಾರ ವಿಮರ್ಶೆಯಲ್ಲೂ ಪ್ರಸ್ತುತವಿರದ, ಕಲಾವಿದರಿಗೇ ಪರಿಚಯವಿರದ ಕಲಾವಿದ! ಇಂತಹ ಕಲಾವಿದ ಸಂಗ್ರಹಯೋಗ್ಯವಾದುದರ ಹಿಂದೆ ನಮ್ಮ ಕಂಗಳನ್ನು ಸಮಕಾಲೀನವಾಗಿ ವಸಾಹತೀಕರಿಸುವ ದಬ್ಬಾಳಿಕೆಯೂ ಇಲ್ಲದಿಲ್ಲ.

ವೆಂಕಟಪ್ಪ ಸಂಗ್ರಹಾಲಯದ ಕಾರ್ಯವಿಧಾನದ ಪ್ರಕಾರ ಏಳು ದಶಕಗಳ ಸ್ವತಂತ್ರ ಕರ್ನಾಟಕದಲ್ಲಿ ಮೂಡಿಬಂದವರು ಕೇವಲ ಹೆಬ್ಬಾರ್, ವೆಂಕಟಪ್ಪ ಹಾಗೂ ರಾಜಾರಾಂ ಎಂದಂತಾಯಿತು. ಇಂತಹ ಆಯ್ಕೆಯ, ನಿರಾಕರಣದ ಪ್ರಕ್ರಿಯೆಯಲ್ಲಿ ಆಡಳಿತದ ಅಜ್ಞಾನದಿಂದುಂಟಾದ ಜ್ಞಾನಕೇಂದ್ರೀಯ ಗುಲಾಮಗಿರಿ ಇದೆ. ಲಂಡನ್ನಿನ 'ಇಂಪೀರಿಯಲ್ ವಾರ್ ಮ್ಯೂಸಿಯಂ' ಹಾಗೂ ಬ್ರಿಸ್ಟಲ್‌ನ 'ಸ್ಲೇವ್ ಮ್ಯೂಸಿಯಂ'ಗಳನ್ನು 'ನೋಡಿ' ಹೊರಬರುವವರಲ್ಲಿ ಬಹುಜನ ತೇವಗೊಂಡ ಕಂಗಳೊಂದಿಗೆ ಕಂಡುಬರುತ್ತಾರೆ. ವ್ಯಕ್ತಿಯನ್ನು ವಸ್ತುವಿನಂತೆ ಭಾವಿಸುವುದು ಗುಲಾಮಗಿರಿಯ ಮೊದಲ ಹಂತವಾದರೆ, ಆತನ ಅಂತಹ ನರಳಿಕೆಯ ಇತಿಹಾಸಕ್ಕೊಂದು ಸಂಗ್ರಹಾಲಯವನ್ನು ರೂಪಿಸುವುದು ತಪ್ಪೊಪ್ಪಿಗೆಯ ಕ್ರಮ ಎಂಬ ನಂಬಿಕೆ ಇದೆ. ಭಾರತೀಯನಾಗಿ ನಾವು ನಮ್ಮ ಪೂರ್ವೇತಿಹಾಸವನ್ನು ಸ್ಮರಿಸಿಕೊಳ್ಳುವಾಗ ಗಾಂಧಿಯಂತಹವರ ಮೂಲಕ ಸ್ವಾದಿಷ್ಟಗೊಳಿಸಬಹುದು ಆದರೆ ಜರ್ಮನ್ ಪ್ರಜೆಯೊಬ್ಬ ಹಿಟ್ಲರನ ಹೆಸರಿನಲ್ಲಿ ಹಾಗೆ ಮಾಡಲಾರ. ಬದಲಿಗೆ 'ಆಸ್ವಿಝ್'ನಲ್ಲಿ ನಡೆದ ನರಮೇಧಕ್ಕೊಂದು ಸಂಗ್ರಹಾಲಯವನ್ನು ನಿರ್ಮಿಸಿ, ಅಲ್ಲಿ ಸತ್ತ ಯಹೂದಿಗಳ, ಸಲಿಂಗಕಾಮಿಗಳ, ಜಿಪ್ಸಿಗಳ ಪಾದರಕ್ಷೆಗಳನ್ನು ಯಥಾವತ್ ಚೌಕಟ್ಟಿನಲ್ಲಿರಿಸಬಹುದು, 'ತಪ್ಪೊಪ್ಪಿಗೆಯ' ರೂಪದಲ್ಲಿ. ಅಂದರೆ ಗುಲಾಮಗಿರಿಯ ಪ್ರಕ್ರಿಯೆಯನ್ನು ಸಂಗ್ರಹಾಲಯವು ತಪ್ಪಿಸಿಕೊಳ್ಳಲು ಸಾಧ್ಯವಿರುವುದು ಸಮಾಜದ ಸಾಧನೆಗಿಂತಲೂ ದುರಂತಗಳಿಗೆ ತಪ್ಪಿತಸ್ಥ ಭಾವವನ್ನು ಉದ್ದೀಪಿಸುವ ಸಂಗ್ರಹಾಲಯಗಳನ್ನು (ಜಲಿಯನ್ ವಾಲಾಬಾಗ್, ಬಾಬ್ರಿ ಮಸೀದಿ, ಗೋಧ್ರಾ ಇತ್ಯಾದಿಗಳ ಸಂಗ್ರಹಾಲಯಗಳು) ಸ್ಥಾಪಿಸುವುದರ ಮೂಲಕ ಮಾತ್ರವೇ?

ಇಂತಹ ತಪ್ಪೊಪ್ಪಿಗೆ ಇಲ್ಲೇ ಹತ್ತಿರದಲ್ಲಿ ನಮ್ಮ ವೆಂಕಟಪ್ಪ ಗ್ಯಾಲರಿಯಿಂದ ಹೊರಬರುವ ಕಲಾಭಿಮಾನಿಗಳಲ್ಲೂ ಉದ್ದೀಪಗೊಂಡಲ್ಲಿ ಅಚ್ಚರಿ ಪಡುವಂಥದ್ದೇನಿಲ್ಲ. 'ಆಯೆ'್ಕ, 'ನಿರಾಕರಣೆ' ಮುಂತಾದುವು ಏಕತ್ರ (ಕಲಾ) ಇತಿಹಾಸ ನಿರ್ಮಾಣದ ಹೀನಸುಳಿಗಳು. ಬದಲಿಗೆ ಐವತ್ತು- ನೂರು ಕರ್ನಾಟಕದ ಕಲಾವಿದರ ತಲಾ ಅರ್ಧ ಡಜನ್ ಕೃತಿಗಳು ವೆಂಕಟಪ್ಪ-ಹೆಬ್ಬಾರರ ಕಲಾಮನೆಗಳನ್ನು ಆವರಿಸಿಕೊಂಡರೆ ಅದು ಕೇವಲ ಸಾಮಾಜಿಕ ನ್ಯಾಯವಾಗುವುದಿಲ್ಲ, ಅದು ಅಂತಃಸ್ಥ ಗುಲಾಮಗಿರಿಯಿಂದ ಬಿಡುಗಡೆ ಹೊಂದುವ ಹೊಸ ಹೆಜ್ಜೆಗಳೂ ಆಗಬಹುದು. ವ್ಯಕ್ತಿಗಳನ್ನು ಗುಲಾಮರನ್ನಾಗಿಸಿ ಒಬ್ಬೊಬ್ಬ ವ್ಯಕ್ತಿಗಳನ್ನು ಒಂದೊಂದು ಬಂದೂಕಿನ ಬದಲಿಗೆ, ಮೂರು ಕಾಸಿನ ಬದಲಿಗೆ ಮಾರಾಟ ಮಾಡಿದ ದಾಖಲೆಗಳನ್ನು ಪ್ರದರ್ಶಿಸುವುದು ಏನನ್ನು ಸಾರುತ್ತದೆ (ಬ್ರಿಸ್ಟಲ್ ಸಂಗ್ರಹಾಲಯದಲ್ಲಿ ಇಂತಹ ಪಟ್ಟಿಯಿದೆ)? ಈ ಶೋಧನೆಯಲ್ಲೊಂದು ವಿಶೇಷವಿದೆ: ಅಲ್ಲಿ ಪ್ರದರ್ಶಿತವಾಗುವ ದಾಖಲೆಗಳೆಲ್ಲ (ಒಂದು ಬಂದೂಕಿನ ಬದಲಿಗೆ ಒಬ್ಬ ಗುಲಾಮ ಹೆಂಗಸು ಅಥವ ಕೆ ವೆಂಕಟಪ್ಪನವರು ಪೆನ್ಸಿಲ್ ಬಳಸಿ ಬರೆದಿರುವ ದಿನಚರಿಯ ಪುಟಗಳು) 'ಆಯ್ಕೆ'ಯ ಶೂಲದಿಂದ ತಪ್ಪಿಸಿಕೊಳ್ಳಲಾಗಿಲ್ಲ. ಡೆರಿಡನ ನಿರ್ವಚನ ವಾದದ ಪ್ರಕಾರ ವೆಂಕಟಪ್ಪನವರ ಒಂದು ದಿನಚರಿಯ ಪುಟದ ಆಯ್ಕೆ ಎಂಬುದು ಆರ್ ಎಂ ಹಡಪದ, ರುಮಾಲೆ ಚೆನ್ನಬಸಪ್ಪ, ಕೆ ಟಿ ಶಿವಪ್ರಸಾದ್ ಅಂತಹವರ ಒಟ್ಟಾರೆ ಜೀವನಸಾಧನೆಯ ಕೃತಿಗಳ ನಿರಾಕರಣೆಯೂ ಹೌದು!

ಸಂಗ್ರಹಾಲಯಗಳು ಸಮಕಾಲೀನ ಗುಲಾಮಗಿರಿಯ ಸಂಕೇತವಾಗಿರುವುದಕ್ಕೆ ಕಾರಣ ಸಂಗ್ರಹಾಲಯ ಇತಿಹಾಸದ ವಂಶವಾಹಿನಿ ಗುಣವೇ. ಸಂಗ್ರಹಾಲಯವೆಂಬುದು ವಸಾಹತೀಕರಣದ ಪ್ರಕ್ರಿಯೆ. ಮೊದಲಿಗೆ ಅವುಗಳು ಅರಮನೆ-ಗುರುಮನೆಗಳಾಗಿದ್ದು, ಕೆಲವರಿಂದ ಕೆಲವರಿಗೆ ಮಾತ್ರ ಪ್ರದರ್ಶಿತವಾಗುತ್ತಿದ್ದ ಕೆಲವೇ ಕೃತಿಗಳ ಪೂರ್ವೇತಿಹಾಸ ಸಂಗ್ರಹಾಲಯದ ಇತಿಹಾಸಕ್ಕಿದೆ. ಕರೋಲ್ ಡಂಕನ್ ಎಂಬ ಕಲಾ ವಿಮರ್ಶಕಿಯ ಪ್ರಕಾರ ಸಂಗ್ರಹಾಲಯವನ್ನು ನೋಡಿಬರುವ ಕ್ರಮವು ಒಂದು 'ಆಚರಣೆ' ಇದ್ದಂತೆ. ರಾಜರನ್ನು ಶ್ರೀಸಾಮಾನ್ಯನು ಭೇಟಿ ಮಾಡುವಾಗ ಅರಮನೆಯಲ್ಲಿ ಹೇಗೆ ನಿರ್ದಿಷ್ಟವಾಗಿ ವಸ್ತ್ರಸಜ್ಜಿತನಾಗಿ, ಸೂತ್ರಬದ್ಧವಾಗಿ ನಡೆದಾಡಬೇಕಿತ್ತೋ ಅಂತಹುದೇ 'ಆಚರಣೆ'ಯನ್ನು ಸಂಗ್ರಹಾಲಯಗಳಲ್ಲಿ ನಾವು ಮಾಡುತ್ತೇವೆ. ಕೃತಿಗಳನ್ನು ಮುಟ್ಟುವಂತಿಲ್ಲ, ಮುಟ್ಟಿದರೆ ಅಲಾರಂ ಗಂಟೆ ಬಡಿದುಕೊಳ್ಳುತ್ತದೆ, ಸಂಕೀರ್ಣವಾದ ಕಟ್ಟಡ ಸಂಕಿರಣದಲ್ಲಿ ಕೃತಿವೀಕ್ಷಣೆ ಮಾಡುವಾಗ 'ಮ್ಯೂಸಿಯಂ ಫಟೀಗ್' ಅನಿವಾರ್ಯ. ಒಂದಷ್ಟು ಕೃತಿಗಳನ್ನು ನೋಡಿದ ಮೇಲೆ, ಮಿಕ್ಕಿದ್ದೆಲ್ಲವೂ ಅಗೋಚರವಾಗುತ್ತದೆ ಎಂಬುದು ಇದರ ಫಟಿಂಗ ಅರ್ಥ. ಇವೆಲ್ಲವನ್ನೂ ಮತ್ತೂ ಇಂತಹವನ್ನು ಆಚರಣೆ (ರಿಚ್ಯುಯಲ್) ಎನ್ನುವುದು.

ಸಂಗ್ರಹಾಲಯಗಳನ್ನು ಏಕೆ ನಾವು ನಿರ್ದಿಷ್ಟ ರೀತಿಯ ಆಚರಣೆಯಲ್ಲಿ ವೀಕ್ಷಿಸುತ್ತೇವೆ ಎಂದು ಕರೋಲ್ ಡಂಕನ್ ವಿವರಿಸುವ ಜಾಣತನದ ಪ್ರಶ್ನೋತ್ತರದ ಹಿಂದೆ ಅದು ದಷ್ಟಿ ಹಾಗೂ ಕಣ್ಣನ್ನು ಗುಲಾಮಗಿರಿಗೆ ಒಳಪಡಿಸುವ ಪ್ರಶ್ನೆಯನ್ನು ತಡೆಹಿಡಿವ ಹುನ್ನಾರವಿದೆ. ಸಂಗ್ರಹಾಲಯವು ಕಲಾಕೃತಿಗಳನ್ನು, ಜ್ಞಾನಕೇಂದ್ರೀಯ ವಸ್ತುಗಳನ್ನು ನಮ್ಮ ಗ್ರಹಿಕೆಗೆ ಬಿಡಿಸಿಡುವುದಿಲ್ಲ. ಯಾವುದನ್ನು ನೋಡಬೇಕು ಎಂದು ಸಂಗ್ರಹಾಲಯವು ನಮ್ಮ ಪರವಾಗಿ ಆಯ್ಕೆ ಮಾಡುವುದೂ ಒಂದು ಜಾಹೀರಾತು ಇದ್ದಂತೆ. ಯಾವುದನ್ನು ನೋಡಬೇಕು ಎಂಬುದರ ಒಳಗೇ ಹೇಗೆ ನೋಡಬೇಕು ಎಂಬುದೂ ನಿರ್ದಿಷ್ಟವಾಗಿ ಬಿಟ್ಟಿರುತ್ತದೆ ಎಂಬ ಅಂಶವೇ ಸಮಕಾಲೀನ ದೃಶ್ಯ ಸಂಸ್ಕೃತಿಯ ಗುಲಾಮಗಿರಿಯ ಒಂದು ಅಧ್ಯಾಯವಾಗಿದೆ. 'ಟ್ವೆಲ್ವ್ ಇಯರ್ಸ್ ಎ ಸ್ಲೇವ್' ಸಿನಿಮಾ ಗುಲಾಮಗಿರಿಯ ಕಥೆಯೊಂದನ್ನು ತಪ್ಪಿತಸ್ಥ, ಅಪಾಲಜೆಟಿಕ್ ಧ್ವನಿಯಲ್ಲಿ ಪ್ರಸ್ತುತಪಡಿಸಿ, ಬಹುಮಾನಕ್ಕೆ ಭಾಜನವಾದುದರ ಹಿಂದೆಯೇ, ಅದಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸ್ವೀಕರಿಸುತ್ತಲೇ ಸ್ಟೀವ್ ಮ್ಯಾಕ್ವಿನ್ ಹೇಳಿದ್ದು- 'ಇನ್ನೂ ಜೀವಂತವಿರುವ ಎರಡು ಕೋಟಿ ಗುಲಾಮರಿಗಾಗಿ ಈ ಆಸ್ಕರ್' ಎಂದು. ಈ ಹೇಳಿಕೆಯ ಹಿಂದೆ ಸಂಗ್ರಹಾಲಯಗಳ ದೃಶ್ಯ-ಗುಲಾಮಗಿರಿಯ ಸೂಚನೆ ಇದೆ. 

ಗುಲಾಮಗಿರಿ ಎಂಬುದು ಭವಿಷ್ಯತ್ ಕಾಲದಿಂದ ಬರುವ ಒತ್ತಡಗಳಿಗೆ ಈಗಲೇ ತಲೆ ಬಾಗಿಬಿಡುವ ಕ್ರಿಯೆ. ಅದರಿಂದ ಬಿಡುಗಡೆ ಎಂದರೆ ಕ್ಷೀಣ ಪ್ರತಿರೋಧವನ್ನಾದರೂ ಅಭಿವ್ಯಕ್ತಿಸುವ ಕ್ರಮ. ಇಂತಹ ನಿರೀಕ್ಷೆಗಳಲ್ಲಿ ಫಲ ಅನಿವಾರ್ಯವೇನಲ್ಲ. ಆದ್ದರಿಂದಲೇ 'ಎಲ್ಗಿನ್ ಮಾರ್ಬಲ್ಸ್' ಎಂದೇ ಖ್ಯಾತವಾಗಿರುವ ಗ್ರೀಕ್ ಶಿಲ್ಪಗಳ ಕಥೆ ಗಮನಿಸಿ. ಬ್ರಿಟಿಷ್ ವಸಾಹತುಶಾಹಿಗಳು ಗ್ರೀಕ್ ಶಿಲ್ಪಗಳನ್ನು ಗ್ರೀಸಿನಿಂದ ಸಾಗಿಸಿ ವಿಕ್ಟೋರಿಯ ಆಲ್ಬರ್ಟ್ ಸಂಗ್ರಹಾಲಯದಲ್ಲಿರಿಸಿದ್ದರು. ಅದನ್ನು ಹಿಂಪಡೆಯಲು (ನಮ್ಮ ಕೊಹಿನೂರ್ ವಜ್ರದಂತೆ) ಶತಾಯುಗತಾಯ ಯತ್ನಿಸಿ ಹಿಂಪಡೆದದ್ದು ಈಗ ದಂತಕಥೆ. ಭಾರತೀಯ ಕೃತಿಗಳನ್ನು ಅಲ್ಲಿನ ಸಂಗ್ರಹಾಲಯಗಳಿಂದ ಹಿಂದಿರುಗಿಸುವಂತೆ ಬ್ರಿಟಿಷರನ್ನು ಒಪ್ಪಿಸಿಬಿಟ್ಟೆವು ಎಂದಿಟ್ಟುಕೊಳ್ಳಿ. ಅವುಗಳನ್ನು ಹಿಂಪಡೆದ ನಂತರ ಅವರಷ್ಟೇ ಮುತುವರ್ಜಿಯಿಂದ ಅವುಗಳನ್ನು ನಾವು ಸಂಗ್ರಹಿಸಿಡಬಲ್ಲೆವೇ ಎಂಬ ವಾಸ್ತವಿಕ ಪ್ರಶ್ನೆ ಬೃಹದಾಕಾರವಾಗಿ ಚರ್ಚೆಗೊಳಗಾಗುತ್ತದೆ. ಈ ಚರ್ಚೆಯ ಅಂತ್ಯ ಏನೇ ಇರಲಿ, ಇದು ಮತ್ತೊಂದು ಮುಖ್ಯ ಅಂಶವನ್ನು ನಿರಂತರವಾಗಿ ತಡೆದಿರಿಸುತ್ತಿರುತ್ತದೆ. ಅಲ್ಲಿಂದ ಹಿಂಪಡೆದ ನಮ್ಮ ವಸ್ತುಗಳನ್ನು ಸಂಗ್ರಹಿಸಿಡುವ ಬದಲಿಗೆ, ಅದೇ ಗುಲಾಮಗಿರಿಯ ಸ್ಮತಿಯಾಚೆಗೆ ರಕ್ಷಿಸಿಡುವ ಕ್ರಮ ಯಾವುದು? ಎಂಬ ಪ್ರಶ್ನೆಯನ್ನು ನಾವು ಕೇಳಲು ನಿರಾಕರಿಸುತ್ತೇವೆ. ಏಕೆಂದರೆ ನಮ್ಮ ಮನೋಸ್ಥಿತಿಯು ವಿಕ್ಟೋರಿಯಾಆಲ್ಬರ್ಟ್ ಸಂಗ್ರಹಾಲಯವನ್ನು ಕಟ್ಟಿದ ಕ್ಷಣದ ಮನೋಭಾವಕ್ಕಿಂತಲೂ ಭಿನ್ನವೇನಲ್ಲ. ಡಿ ಆರ್ ನಾಗರಾಜ್ ಹೇಳುವಂತೆ, 'ಮೆಕಾಲೆಯ ಮಕ್ಕಳಾಗುವ ಚಟ'ವು ನಮ್ಮ ಬೆನ್ನು ಹತ್ತಿದೆ.

ಕೊನೆಯದಾಗಿ, ಗುಲಾಮಗಿರಿ ಸಮಕಾಲೀನವಾಗಿ ಅತ್ಯಂತ ಸೂಕ್ಷ್ಮವೂ ಸೂಚ್ಯವೂ ಆಗಿದೆ, ಅದು ಇಲ್ಲವೇ ಇಲ್ಲವೆಂಬಷ್ಟು. ನಾರ್ಮನ್ ಬ್ರೈಸನ್ ಹೇಳುವ ಒಂದು ವಿಷಯವು ಇದನ್ನು ಸ್ಪಷ್ಟಗೊಳಿಸುತ್ತದೆ. ಕಲಾಪ್ರಕಾರಗಳಲ್ಲಿ ಸ್ಟಿಲ್ ಲೈಫ್ ಚಿತ್ರಗಳು (ವಸ್ತುಗಳ ಚಿತ್ರಣ), ಭಾವಚಿತ್ರಗಳಿಗಿಂತಲೂ, ನಿಸರ್ಗ ಚಿತ್ರಗಳಿಗಿಂತಲೂ ತಾವು ಕೀಳು ಎಂದು ಈಗಾಗಲೇ ಒಪ್ಪಿಕೊಂಡುಬಿಟ್ಟಿವೆ. ಈ ಮನೋಸ್ಥಿತಿಯನ್ನು ಆತ 'ಅನೊರೆಕ್ಸಿಕ್' ಎನ್ನುತ್ತಾನೆ. ಉಳಿದೆರೆಡರ ಸಮಕ್ಕೆ ಈ ಸ್ಟಿಲ್ ಲೈಫ್ ಪ್ರಕಾರವನ್ನು ಎಳೆದು ತಂದು ನಿಲ್ಲಿಸಲು ಮೊದಲಿಗೆ ನಾವು ಮಾಡಬೇಕಾದ ಕೆಲಸವೆಂದರೆ ತನ್ನ ಅಂಚಿನ ಪರಿಸ್ಥಿತಿಯನ್ನು ಮನಸಾರ ಸ್ವೀಕರಿಸುವ ಮನೋಭಾವವನ್ನು ಸ್ಥಿರ-ಚಿತ್ರಗಳಿಂದ ತೊಡೆಯುವುದು ಹೇಗೆ ಎಂಬುದು. ಸಂಗ್ರಹಾಲಯಗಳ ಹೊರಗೂ ಕಲಾಕೃತಿಗಳ ಅಸ್ತಿತ್ವ ಸಾಧ್ಯವಾಗಿಸಿದಲ್ಲಿ ಇದು ಸಾಧ್ಯ. ಆಗ ಕಲೆಯನ್ನು 'ವಸ್ತು'ಗಳ ರೂಪದಲ್ಲಿ ಸೃಷ್ಟಿಸುವುದನ್ನು ನಿಲ್ಲಿಸಿ 'ಕ್ರಿಯಾತ್ಮಕ ಕ್ರಿಯೆಗಳ' ರೂಪಗಳಲ್ಲಿ ಸೃಷ್ಟಿಸಬೇಕಾಗುತ್ತದೆ. ಸಮಕಾಲೀನ ಕಲಾಕೃತಿಗಳು ಹೀಗೆ ಸೃಷ್ಟಿಗೊಳ್ಳುತ್ತಿವೆ ಕೂಡ. ಆದರೆ ಆಧುನಿಕ ಮನೋಭಾವದ ಸಂಗ್ರಹಾಲಯಗಳಿಗೆ ಈ ಸುದ್ದಿ ಇನ್ನೂ ತಲುಪಿಲ್ಲವಷ್ಟೆ. ಸೃಜನಶೀಲ ಗುಲಾಮಗಿರಿಯು ಸ್ಟಾಕ್‌ಹೋಂ ಸಿಂಡ್ರೋಮ್‌ನಿಂದ (ಅಪಹರಣಕಾರನಿಗೇ ಸಹಾನುಭೂತಿ ವ್ಯಕ್ತಪಡಿಸಿ ಬಿಡುವುದು) ನರಳುತ್ತಿರುವ ಕಾಲಘಟ್ಟ ನಮ್ಮದು.

ವಿಶ್ವಕೋಶ: ಪರಿಷ್ಕರಣೆ ಅಗತ್ಯ

-ಅಭಿಮತ› ವಾಚಕರವಾಣಿ 
ಸೌಜನ್ಯ: ಪ್ರಜಾವಾಣಿ
‘ಕನ್ನಡ ಜಾನಪದ ವಿಶ್ವಕೋಶ: ಅಗತ್ಯ ಅನಿ­ವಾರ್ಯತೆ’ ಬಗ್ಗೆ ಡಾ. ಜಿ.ಆರ್. ತಿಪ್ಪೇಸ್ವಾಮಿ ಅವರು ಬರೆದ ಬರಹವನ್ನು (ಪ್ರ.ವಾ ಮಾ. 23, ಪುಟ 7) ಓದಿದೆ. ಅವರು ಮುಖ್ಯವಾಗಿ  ಕೆಲವು ಅಂಶಗಳನ್ನು ಗಮನಕ್ಕೆ ತಂದಿದ್ದಾರೆ. (1) ಮೂವತ್ತು ವರ್ಷಗಳ ಹಿಂದೆ ಡಾ. ಚಂದ್ರಶೇಖರ ಕಂಬಾರರ ಸಂಪಾ­ದಕತ್ವ­ದಲ್ಲಿ ತಯಾರಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟ­ವಾಗಿದ್ದ ‘ಕನ್ನಡ ಜಾನಪದ ವಿಶ್ವಕೋಶಗಳ ಸಂಪುಟ 1 ಮತ್ತು 2’ ಅನ್ನು ಜರೂರಾಗಿ ಮರು­ಮುದ್ರಿಸ­ಬೇಕು. (2) ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಂಪನಾ ಅಧ್ಯಕ್ಷ­ರಾಗಿದ್ದ ಸಮಯದಲ್ಲಿ ಶುರುವಾದ ‘ಕನ್ನಡ ಜಾನಪದ ವೈದ್ಯ ವಿಶ್ವಕೋಶ’ದ ರಚನೆಯನ್ನು ಈಗಲಾದರೂ ಮುಗಿಸಿ ಪ್ರಕಟಿಸುವುದು.
(3) ಕನ್ನಡ ವಿಶ್ವವಿದ್ಯಾಲ­ಯವು ವಿವಿಧ ಜಾನಪದ ವಿಶ್ವಕೋಶಗಳನ್ನು ಪ್ರಕಟಿಸಿದೆ ಎಂಬ ಮಾತು. (4) ಇವುಗಳನ್ನು ಗಮನ­ದಲ್ಲಿಟ್ಟು­ಕೊಂಡು ಜಾನಪದ ವಿಶ್ವವಿದ್ಯಾಲಯವು ತನ್ನ ‘ಜಾನ­ಪದ ವಿಶ್ವಕೋಶ’ಗಳ ಯೋಜನೆಯನ್ನು ನಿರ್ವಹಿಸ­ತಕ್ಕದ್ದು ಎಂಬರ್ಥದ ಮಾತು.
ಅವರ ಈ ಅಭಿಪ್ರಾಯ­ಗಳಿಗೆ ನನ್ನ ಪ್ರತಿಕ್ರಿಯೆ: (1) ಚಂದ್ರಶೇಖರ ಕಂಬಾರರ ಸಂಪಾದಕತ್ವದಲ್ಲಿ ಮೂವತ್ತು ವರ್ಷಗಳ ಹಿಂದೆ ಪ್ರಕಟವಾದ ‘ಕನ್ನಡ ಜಾನಪದ ವಿಶ್ವಕೋಶ’­ಗಳನ್ನು ಹಾಗೆಯೇ ಮರು ಮುದ್ರಿಸುವುದರಲ್ಲಿ ಅರ್ಥವಿಲ್ಲ. ಅವುಗಳ ಮರುಪರಿಶೀಲನೆ ನಡೆದು ನಂತರ ಅವುಗಳು ಮರು ಮುದ್ರಣವಾಗಬೇಕು. (2) ಹಂಪನಾ ಕಾಲದಲ್ಲಿ ಶುರುವಾದ ‘ಜಾನಪದ ವೈದ್ಯ ವಿಶ್ವಕೋಶ’ದ ಕೆಲಸ ಅರ್ಧಂಬರ್ಧ ಆಗಿದ್ದರೆ ಅದೂ ಸಹ ಮರುಪರಿಶೀಲನೆ­ಯಾಗಿ, ಮತ್ತೆ ಬರೆಯ­ಬೇಕಾದದ್ದು ಇದ್ದರೆ ಬರೆದು ನಂತರ ಪ್ರಕಟವಾಗಬೇಕು. (3) ಕನ್ನಡ ವಿ.ವಿಯಲ್ಲಿ ‘ಜಾನಪದ ಕಲೆಗಳ ವಿಶ್ವಕೋಶ’ವೊಂದನ್ನು ಬಿಟ್ಟರೆ ಜಾನಪದಕ್ಕೆ ಸಂಬಂಧಿಸಿದಂತೆ ಯಾವುದೇ ಕೋಶಗಳು ಪ್ರಕಟವಾಗಿಲ್ಲ. ಧರ್ಮ, ಕರಕುಶಲಕಲೆ, ಭಾಷೆ, ವೈದ್ಯ ಮುಂತಾದ ವಿಷಯಗಳಲ್ಲಿ ವಿಶ್ವಕೋಶಗಳು ಮಾತ್ರ ಪ್ರಕಟವಾಗಿವೆ.
ಆದರೆ ಕಂಬಾರರು ಕನ್ನಡ ವಿಶ್ವವಿದ್ಯಾಲಯದ ಕುಲಪತಿ (1996) ಆಗಿದ್ದಾಗ ಹಮ್ಮಿಕೊಂಡು ಸಿದ್ಧವಾಗಿದ್ದ ‘ಪುರಾಣ ವಿಶ್ವಕೋಶ’ ಮತ್ತು ‘ಗ್ರಾಮದೇವತೆಗಳ ವಿಶ್ವಕೋಶ’ಗಳು ಇಷ್ಟು ವರ್ಷವಾದರೂ ಪ್ರಕಟವಾಗಲಿಲ್ಲ. ‘ಗ್ರಾಮದೇವತೆಗಳು ವಿಶ್ವಕೋಶ’ ಸಿದ್ಧತೆಗಾಗಿ ಇಪ್ಪತ್ತು ವರ್ಷಗಳ ಹಿಂದೆ ಇಡೀ ರಾಜ್ಯದಾದ್ಯಂತ ಜಾನಪದ ತಜ್ಞರು ಶ್ರಮಿಸಿ ಮಾಹಿತಿಯನ್ನು ಸಂಗ್ರಹಿಸಿ ವಿಶ್ವವಿದ್ಯಾಲಯಕ್ಕೆ ಕೊಟ್ಟಿದ್ದರು. ಅದರ ಸಂಪಾದನ ಕಾರ್ಯವನ್ನು ಹಿರೇಮಠ, ಬಿಳಿಮಲೆ, ಬೇವಿನಕಟ್ಟೆ, ಬೋರಲಿಂಗಯ್ಯ ಹೀಗೆ ಹಲವಾರು ವಿದ್ವಾಂಸರು ಮಾಡಿದ್ದರು. ಆದರೆ ಅವರವರ ವೈಯಕ್ತಿಕ ಜಗಳದಿಂದಾಗಿ ಇದುವರೆಗೂ ಈ ಗ್ರಾಮದೇವತೆಗಳ ಕೋಶ ಹೊರಗೆ ಬರಲೇ ಇಲ್ಲ.
ಇದಕ್ಕೆ ವಿಶ್ವವಿದ್ಯಾಲಯ ಖರ್ಚು ಮಾಡಿದ ಹಣ ಲಕ್ಷಾಂತರ ರೂಪಾಯಿಗಳು. ಹಾಗೆಯೇ ಓ.ಎಲ್‌. ನಾಗಭೂಷಣ­ಸ್ವಾಮಿ, ಮೋಹನ ಕುಂಟಾರ, ಗಾಯಕವಾಡ ಇವರ ನೇತೃತ್ವದಲ್ಲಿ ಸಿದ್ಧಗೊಂಡ ‘ಪುರಾಣ ವಿಶ್ವಕೋಶ’ ಕೂಡ  ಹೊರಬರಲೇ ಇಲ್ಲ. ಇದಕ್ಕೂ ವಿಶ್ವವಿದ್ಯಾ­ಲಯ ಖರ್ಚು ಮಾಡಿದ ಹಣ ಲಕ್ಷಾಂತರ ರೂಪಾಯಿಗಳು.
ಹೀಗೆ ಪರಿಷತ್ತು ಮತ್ತು ಕನ್ನಡ ವಿಶ್ವವಿದ್ಯಾಲಯಗಳ ವಿಶ್ವಕೋಶಗಳಿಗೆ ಬಂದ ಗತಿಯೇ ಜಾನಪದ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಕೋಶಗಳಿಗೂ ಬರುವುದಿಲ್ಲ ಎಂಬುದು ಏನು ಗ್ಯಾರಂಟಿ? ಸರ್ಕಾರದ ಹಣ ಮಾತ್ರ ಹೀಗೆ ದಂಡದ ಸಂಬಳಕ್ಕೆ, ಕಾಲಹರಣಕ್ಕೆ ಎಲ್ಲಾ ಕಡೆ ದುರ್ವ್ಯಯವಾಗುತ್ತಿರುವುದು ವಿಷಾದನೀಯ.
–ಕನ್ನಡ ವಿಶ್ವವಿದ್ಯಾಲಯದ ಗ್ರಾಮದೇವತೆಗಳ ವಿಶ್ವಕೋಶದ ಸಿದ್ಧತೆಯಲ್ಲಿ ಮಾಹಿತಿ ನೀಡಿದ
ಒಬ್ಬ ಮಾಹಿತಿದಾರ

ಸೋಮವಾರ, ಮಾರ್ಚ್ 24, 2014

ಕನ್ನಡ ಜಾನಪದ ವಿಶ್ವಕೋಶ ಅಗತ್ಯ– ಅನಿವಾರ್ಯತೆ

ಡಾ. ಜಿ. ಆರ್. ತಿಪ್ಪೇಸ್ವಾಮಿ


ಸೌಜನ್ಯ: ಪ್ರಜಾವಾಣಿ
  ಸಮಾಜದಲ್ಲಿ ಬದಲಾವಣೆಯಾದಂತೆ ಸಾಹಿತ್ಯ, ಕಲೆ, ಸಂಸ್ಕೃತಿ, ಜಾನಪದ, ಭಾಷಾ ಕ್ಷೇತ್ರಗಳಲ್ಲೂ ಬದಲಾವಣೆ ಸಹಜ. ಹಾಗಾಗಿ, ಅವುಗಳ ವ್ಯಾಪ್ತಿಯೂ ಹಿರಿದಾಯಿತು. ಹೀಗಿದ್ದಾಗ ಒಂದೊಂದು ವಿಷಯಕ್ಕೂ ಒಂದೊಂದು ಕೋಶದ ಅಗತ್ಯತೆ ಕಾಣಿಸಿತು. ಎಷ್ಟೆಲ್ಲ ಕೋಶಗಳು ಬಂದಿದ್ದರೂ ಕನ್ನಡದಲ್ಲಿ ವಿಶ್ವಕೋಶಗಳ ಅವಶ್ಯಕತೆ ಕಾಣಿಸಿತು. ಇದನ್ನ ಮನಗಂಡೇ ಕನ್ನಡ ಸಾಹಿತ್ಯ ಪರಿಷತ್ತು ೭೯ರಲ್ಲಿ ‘ಕನ್ನಡ ಜಾನಪದ ವಿಶ್ವಕೋಶ’ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿತ್ತು. ಕರ್ನಾಟಕ ಏಕೀಕರಣವಾಗಿ ೨೫ ವರ್ಷಗಳು ಸಂದ ಸಂದರ್ಭ ಅದು.
ಕನ್ನಡ ಎಂ.ಎ. ಪದವೀಧರರು ಜಾನಪದವನ್ನು ವಿಶೇಷವಾಗಿ ಅಭ್ಯಾಸ ಮಾಡಿದವರು- ಅತ್ಯಂತ ಕಡಿಮೆ ಸಂಬಳದಲ್ಲಿ ಚಂದ್ರಶೇಖರ ಕಂಬಾರರ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದರು.
ನಾಡಿನ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಜಾನಪದವನ್ನು ಶೈಕ್ಷಣಿಕ ಶಿಸ್ತಾಗಿ ಬೋಧಿಸಲು ಆರಂಭಿಸಿದ್ದ ಕಾಲ ಅದು. ಅದರ ಪ್ರಭಾವದಿಂದಾಗಿ ಶಿಷ್ಟ ಸಾಹಿತ್ಯದಲ್ಲಿ ಜಾನಪದವನ್ನು ಶೋಧಿಸುವ ತವಕದಲ್ಲಿ ವಿಶ್ವವಿದ್ಯಾನಿಲಯಗಳ ವಿದ್ವಾಂಸರ ಗಮನ ಹರಿದಿತ್ತು. ಹಾಗಾಗಿ ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ, ವಡ್ಡಾರಾಧನೆ, ಪಂಚತಂತ್ರ, ಈಸೋಪನ ಕಥೆಗಳು, ಸ್ತ್ರೀನೀತಿ ಕಥೆಗಳು, ಪಂಚವಿಂಶತಿ ಕಥೆಗಳು, ನೋಂಪಿಯ ಕಥೆಗಳು, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ರಾಜಾವಳಿಕಥಾಸಾರ - ಇವೆಲ್ಲವೂ ಇಲ್ಲಿ ಅಧ್ಯಯನದ ವಸ್ತುವಾದವು, ಆಕರಗಳಾದವು. ಹಾಗಾಗಿ ಕರ್ನಾಟಕ ಜಾನಪದದ ಶ್ರೀಮಂತಿಕೆಯನ್ನು ಕನ್ನಡಿಗರ ಸಾಂಸ್ಕೃತಿಕ ಮಹತ್ವವನ್ನು ಈ ಜಾನಪದ ವಿಶ್ವಕೋಶ ಸಾರುವಂತಾಯಿತು. ಆದ್ದರಿಂದ ಇದಕ್ಕೆ ಸಾಹಿತ್ಯಕ ಮಹತ್ವಕ್ಕಿಂತಲೂ
ಸಾಂಸ್ಕೃತಿಕ ಮಹತ್ವವೇ ಹೆಚ್ಚಾಯಿತು.

ಜಾತ್ಯತೀತ ರಾಷ್ಟ್ರವೆನಿಸಿದ್ದರೂ ಭಾರತದಲ್ಲಿ ಜಾತಿಗಳು ಪ್ರಧಾನ ಪಾತ್ರ ವಹಿಸುತ್ತವೆ. ನಮ್ಮ ಸಂಸ್ಕೃತಿ ಯಾವುದು ಎಂಬುದರ ಹುಡುಕಾಟಕ್ಕೆ ಮೊದಲು ಹಚ್ಚಿದ್ದೆ ವಸಾಹತುಶಾಹಿ ಆಳ್ವಿಕೆ. ಅಂಥ ಸಂದರ್ಭವನ್ನು ಗಮನಿಸಲು ಎಡ್ಗರ್‌ಥರ್ಸ್ಟನ್ ಅವರ ‘ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ’ ಸಂಪುಟಗಳನ್ನು ಆಕರಗಳಾಗಿ ಬಳಸಿಕೊಳ್ಳಲಾಯಿತು. ದಮನಿತ, ನಿರ್ಲಕ್ಷಿತ ಜೀವನ ವಿವರಗಳನ್ನ ಶೋಧಿಸುವ ಸಲುವಾಗಿ ಜಾನಪದ ಆಕರಗಳತ್ತ ಸಂಶೋಧಕರ ಗಮನಹರಿಯಿತು. ಹಾಗಾಗಿ ಪುರಾಣ ವ್ಯಕ್ತಿಗಳು, ಅಂದಿನ ಸಂದರ್ಭಗಳು, ಆ ಸಂಬಂಧದ ಆಚರಣೆಗಳು ಹಾಗೂ ಪುರಾಣ ಕಲ್ಪನೆಗಳನ್ನು ಅರ್ಥೈಸುವಂಥ ಬರಹಗಳೂ ಈ ಕೋಶದಲ್ಲಿ ಸೇರ್ಪಡೆಗೊಂಡವು. 
ಇಂಥ ಬರಹಗಳಿಗೆ ವೆಟ್ಟಮ್‌ಮಣಿಯವರ ‘ಪುರಾಣಿಕ್ ಎನ್‌ಸೈಕ್ಲೋಪೀಡಿಯಾ ಮಾದರಿಯಾಯಿತು. ಜಾನಪದ ವಿಷಯಗಳು ನಾನಾ ನಿಟ್ಟಿನಿಂದ ಸಂಗ್ರಹಗೊಂಡು ಅದರ ಅಧಿಕೃತತೆಗಾಗಿ ಕ್ಷೇತ್ರಕಾರ್ಯವೂ ಅನಿವಾರ್ಯವಾಗಿ ಲೇಖನಗಳು ಗಟ್ಟಿಗೊಂಡಿರುವುದನ್ನು ಗಮನಿಸಬಹುದು. ಇದರ ಸ್ವರೂಪವನ್ನು ಗಮನಿಸಿದ ಎ.ಕೆ.ರಾಮಾನುಜನ್ ಅವರು ‘ಭಾರತೀಯ ಭಾಷೆಗಳಲ್ಲಿಯೇ ಇದು ಪ್ರಥಮ, ಪರಿಷತ್ತಿನ ಇತಿಹಾಸದಲ್ಲಿ ಇದೊಂದು ಚಾರಿತ್ರಿಕ ದಾಖಲೆ ಎಂದರು.
ಪರಿಷತ್ತು ಇನ್ನೊಂದು ಕೋಶದ ಅಗತ್ಯವನ್ನು ಆ ದಿನಗಳಲ್ಲಿ ಕಂಡುಕೊಂಡಿತು. ಸಾಂಸ್ಕೃತಿಕ ಅಧ್ಯಯನದ ದೃಷ್ಟಿಯಿಂದ ಮುಖ್ಯವೆನಿಸುವ ‘ಕರ್ನಾಟಕ ಜನಪದ ವೈದ್ಯಕೋಶ’ ಬೃಹತ್ ಯೋಜನೆಯ ಸಿದ್ಧತೆಯಲ್ಲೂ ಅದು ತೊಡಗಿತು. ರಾಜ್ಯದ ಯಾವ ವಿಶ್ವವಿದ್ಯಾನಿಲಯವಾಗಲಿ ರೂಪಿಸಿ ಕಾರ್ಯಗತಗೊಳಿಸಲು ಆಲೋಚಿಸಿರದ ವಿಶಿಷ್ಟ ಯೋಜನೆ ಇದು.
ಇದಕ್ಕೆ ಸಂಬಂಧಿಸಿದಂತೆ ಅಲ್ಲಲ್ಲಿ ಕೆಲವೇ ಕೆಲವು ಲೇಖನಗಳು, ಪುಸ್ತಕಗಳು ಪ್ರಕಟಗೊಂಡಿದ್ದವಾದರೂ ಈ ಕ್ಷೇತ್ರದಲ್ಲಿ ಆಗಿರುವ ಕೆಲಸ ತೀರಾ ಕಡಿಮೆ. ಈ ಕೊರತೆಯನ್ನು ತುಂಬುವುದಕ್ಕಾಗಿ ಜನಪದ ವೈದ್ಯಕೋಶದ ನಿರ್ಮಾಣ ಒಂದು ಆತ್ಮವಿಶ್ವಾಸದ ಪ್ರಯತ್ನವಾಯಿತು. ಇಂಥ ವಿಶಿಷ್ಟ ಯೋಜನೆಗೆ ಕ್ಷೇತ್ರಕಾರ್ಯ ಸಹಾಯಕರನ್ನು ತರಬೇತುಗೊಳಿಸುವ ಉದ್ದೇಶದಿಂದ ಜಾನಪದ ತಜ್ಞರಿಂದ ಮತ್ತು ವೈದ್ಯರಿಂದ ಜನಪದ ವೈದ್ಯದ ಬಗೆಗೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು.
ಈ ಉಪನ್ಯಾಸಗಳಿಂದ ಮಾರ್ಗದರ್ಶನ ಪಡೆದವರು ಪ್ರತಿ ಜಿಲ್ಲೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಜನಪದ ವೈದ್ಯದ ಬಗೆಗೆ ಸಾಧ್ಯವಾದಷ್ಟು ಮಾಹಿತಿಗಳನ್ನು ಸಂಗ್ರಹಿಸಿ ಪರಿಷತ್ತಿಗೆ ಕಳುಹಿಸುವುದರ ಮೂಲಕ ಸೇವೆ ಸಲ್ಲಿಸಿದ್ದಾರೆ. ಈ ರೀತಿ ಸಂಗ್ರಹಗೊಂಡ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಹೊರತರಲು ಪರಿಷತ್ತು ಸಿದ್ಧತೆಯನ್ನೂ ನಡೆಸಿತ್ತು.
ಈ ಪ್ರಯತ್ನದಲ್ಲಿರುವಾಗಲೇ ಜನಪದ ವೈದ್ಯಕೋಶದ ಕೆಲಸ ವೈದ್ಯರು ಮಾಡುವಂಥದ್ದು ಎಂಬ ಅಭಿಪ್ರಾಯ ಮೂಡಿತು. ಆಗ ಪರಿಷತ್ತು ‘ಆಯುರ್ವೇದಕ್ಕೂ ಜನಪದ ವೈದ್ಯಕ್ಕೂ ಯಾವುದೇ ಸಂಬಂಧವಿಲ್ಲವೆಂದೂ ಈ ಕೋಶದ ಉದ್ದೇಶವೇ ಸಾಂಸ್ಕೃತಿಕ ದಾಖಲೆ ಸ್ಥಾಪಿಸುವಂಥದ್ದು ಎಂದು ಸ್ಪಷ್ಟೀಕರಣ ನೀಡಿತಾದರೂ ಕ್ಷೇತ್ರಕಾರ್ಯ ಸ್ಥಗಿತಗೊಂಡಿತು. ಈವರೆಗೆ ಸಂಗ್ರಹ ಮಾಡಿರುವ ಮಾಹಿತಿಯನ್ನು ಪುಸ್ತಕ ರೂಪದಲ್ಲಾದರೂ ಹೊರತಂದು ಅದನ್ನು ಒಂದು ಸಾಂಸ್ಕೃತಿಕ ದಾಖಲೆಯಾಗಿಸಬೇಕೆಂಬ ಉದ್ದೇಶವನ್ನು ಈಡೇರಿಸುವ ಹಂಬಲ ಪರಿಷತ್ತಿಗಿತ್ತು.
ಸಂಪಾದಕರ ಆದೇಶದಂತೆ ಈ ಯೋಜನೆಗೆ ನಿಯೋಜನೆಗೊಂಡಿದ್ದ ಸಂಶೋಧಕರು ಹಲವಾರು ವಿಷಯಗಳನ್ನು ಅಸಂಖ್ಯಾತ ಕಾರ್ಡುಗಳಲ್ಲಿ ಬರೆದದ್ದೂ ಆಯಿತು. ಅದರ ಫಲವಾಗಿ ರೂಪುಗೊಂಡ ಈ ಸಮೃದ್ಧವಾದ ಮಾಹಿತಿ ಪರಿಷತ್ತಿನ ಕಪಾಟುಗಳನ್ನು ಸೇರಿದ್ದೂ ಆಯಿತು. ಆದರೆ ಈವರೆವಿಗೂ ಆ ಮಾಹಿತಿ ಹೊರಬರಲೇ ಇಲ್ಲ!
ಹಂಪನಾ ಅವರು ಹಮ್ಮಿಕೊಂಡಿದ್ದ ಈ ಬೃಹತ್ ಯೋಜನೆ ಈವರೆಗೂ ಕಾರ್ಯರೂಪಕ್ಕೆ ಬಾರದೆ ಇರುವುದು ಆಶ್ಚರ್ಯದ ಸಂಗತಿ.
ಇದರ ನಂತರ ಮದ್ರಾಸ್ ಏಷಿಯನ್ ಅಧ್ಯಯನ ಸಂಸ್ಥೆಯಲ್ಲಿ ಹಮ್ಮಿಕೊಂಡ ಜಾನಪದ ವಿಶ್ವಕೋಶದ ಸಾಧನೆ ಮತ್ತೊಂದು ಮೈಲಿಗಲ್ಲು. ಅಲ್ಲಿ ಇಂಗ್ಲಿಷ್ ಒಳಗೊಂಡಂತೆ ಮಲಯಾಳಂ, ತೆಲುಗು, ಕನ್ನಡ ಭಾಷೆಗಳಿಗೆ ಸಂಬಂಧಿಸಿದ ದ್ರಾವಿಡ ಭಾಷಾಕೋಶವನ್ನು ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಲಾಗುತ್ತಿತ್ತು. ದ್ರಾವಿಡ ಭಾಷೆಗಳ ಜಾನಪದ ಕೋಶವನ್ನು ಇದರೊಂದಿಗೆ ಕೈಗೆತ್ತಿಕೊಳ್ಳಬೇಕು ಎಂಬ ನಿರ್ಧಾರವನ್ನು ಪ್ರಕಟಿಸಿತು. ಈ ಎರಡೂ ಪ್ರಧಾನವಾದ ಯೋಜನೆಗಳೇ. ಆ ಸಂಸ್ಥೆಗೆ ಜಪಾನ್ ಸರ್ಕಾರದ ಸಹಯೋಗವಿತ್ತು.

ನಾಲ್ಕು ಭಾಷೆಗಳ ಅರ್ಥಕೋಶ, ಜಾನಪದ ಕೋಶವನ್ನು ಮಾಡಲು ನಾಲ್ಕು ಸರ್ಕಾರಗಳನ್ನು (ಆಂಧ್ರ, ಕರ್ನಾಟಕ, ಕೇರಳ, ತಮಿಳುನಾಡು) ಕೇಳಿದಾಗ ಅದರಲ್ಲಿ ಮೊದಲು ಸ್ಪಂದಿಸಿದ್ದು ಕರ್ನಾಟಕ ಸರ್ಕಾರ. ಈ ಎರಡೂ ಯೋಜನೆಗಳಿಗೂ ಅದು ವಾರ್ಷಿಕ ಅನುದಾನ ನೀಡಿತು. ಹಾಗಾಗಿ ಅಲ್ಲಿ ಕನ್ನಡ ಜಾನಪದ ಕೋಶದ ಇಂಗ್ಲಿಷ್ ಅವತರಣಿಕೆಯ ಕೆಲಸ ಶುರುವಾಯಿತು. ಇದನ್ನು ಶುರು ಮಾಡಿದವರು ಮರಿಯಪ್ಪ ಭಟ್ಟರ ನಂತರ ಬಂದ ಶಂಕರ ಕೆದಿಲಾಯ ಅವರು. ಆ ಎರಡೂ ಯೋಜನೆಗಳನ್ನು ಆ ಸಂಸ್ಥೆಯಲ್ಲಿ ನಿರ್ವಹಿಸುತ್ತಿದ್ದರು. ಆಗ ಇಂಗ್ಲಿಷ್ ಅವತರಣಿಕೆ ಜಾನಪದ ಕೋಶ ಪ್ರತ್ಯೇಕವಾಗಿ ಆಗಬೇಕೆಂದೂ ಎರಡನ್ನೂ ಅವರೊಬ್ಬರೇ ನಿಭಾಯಿಸುವುದು ಕಷ್ಟವೆಂಬ ಅಭಿಪ್ರಾಯ ಮೂಡಿತು.
೧೯೮೫ರಲ್ಲಿ ಏಷಿಯನ್ ಅಧ್ಯಯನ ಸಂಸ್ಥೆಗೆ  ಈ ಕಾರ್ಯಕ್ಕಾಗಿ ಕೃಷ್ಣಮೂರ್ತಿ ಹನೂರು ಬರುತ್ತಾರೆ. ಆದರೆ ಅಲ್ಲಿ ತಮಿಳು, ಮಲಯಾಳಂ, ತೆಲುಗು ಕೋಶಗಳ ಕೆಲಸ ಶುರುವಾಗಿರಲಿಲ್ಲ. ವಿದ್ವಾಂಸರೂ ಬರಲಿಲ್ಲ. ಸರ್ಕಾರವೂ ನೆರವು ನೀಡಲಿಲ್ಲವಂತೆ. ಹಾಗಾಗಿ ಕನ್ನಡ ಜಾನಪದ ಕೋಶದ ಇಂಗ್ಲಿಷ್ ಅವತರಣಿಕೆಯ ಕೆಲಸ ಆರಂಭವಾಯಿತು. ಕೃಷ್ಣಮೂರ್ತಿ ಹನೂರು ಈ ಕೋಶದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.
ಈ ಕೋಶದಲ್ಲಿ ಸಮಗ್ರ ಕನ್ನಡ ಜಾನಪದದ ಪರಿಚಯವಿರುವ ಹಲವಾರು ಲೇಖನಗಳು ಸೇರ್ಪಡೆಗೊಂಡವು. ಎಚ್.ಎಲ್.ನಾಗೇಗೌಡರೂ ಒಂದು ಕೋಶವನ್ನು ಹೊರತಂದರು. ನಂತರ ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ವಿಷಯ ವಿಶ್ವಕೋಶ ಜಾನಪದ ಸಂಪುಟವನ್ನು ಬಿಡುಗಡೆ ಮಾಡಿತು. ಕನ್ನಡ ವಿಶ್ವವಿದ್ಯಾಲಯದಿಂದಲೂ ವಿವಿಧ ರೀತಿಯ ಜಾನಪದ ಕೋಶಗಳು ಹೊರಬಂದವು.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಬಂದ ವಿಶ್ವಕೋಶಗಳಲ್ಲಿ ಇಲ್ಲಿದ್ದಂತಹ ಜಾನಪದ ವಿದ್ವಾಂಸರು ಒಂದಲ್ಲಾ ಒಂದು ವಿಧದಲ್ಲಿ ಇದರಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಜಾನಪದ ವಿಶ್ವವಿದ್ಯಾನಿಲಯದಿಂದ ಹತ್ತು ಸಂಪುಟಗಳಲ್ಲಿ ಹೊರಬರಲಿದೆ ಎಂದು ಹೇಳಲಾಗುತ್ತಿದೆ.

ಇದೇ ಮಾರ್ಚ್ ೧೭ರಂದು ಉದ್ಘಾಟನೆಗೊಂಡಿರುವ ‘ಕನ್ನಡ ಜಾನಪದ ವಿಶ್ವಕೋಶ ಯೋಜನೆ’ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಬಿಡುಗಡೆಗೊಂಡಿರುವ ‘ಜಾನಪದ ವಿಶ್ವಕೋಶ’ಗಳಿಗಿಂತ ಭಿನ್ನವಾಗಿರುತ್ತದೆಂದು ಜಾನಪದ ಆಸಕ್ತರು ನಿರೀಕ್ಷಿಸಬಹುದೆ? ಇಷ್ಟಾದರೂ ಈ ಪರಿಯ ಕೆಲಸಗಳು ಮೇಲಿಂದ ಮೇಲೆ ನಡೆಯಬೇಕು ಎನ್ನುವ ಒತ್ತಾಸೆಗಳೇನೊ ಕೇಳಿಬರುತ್ತಿವೆ. ಆದರೆ ಕೆಲಸ ಆದ ಮೇಲೆ ಅವನ್ನು ಸಂಬಂಧಿಸಿದವರೇ ಗಮನಿಸುವುದಿಲ್ಲ. ಪಠ್ಯ ವಿಷಯಗಳಲ್ಲೂ ಅವು ಸೇರ್ಪಡೆಯಾಗುವುದಿಲ್ಲ. ಇದು ನಮ್ಮ ಶೈಕ್ಷಣಿಕ ವಲಯದ ದುರಂತ! ಈ ಕೋಶಗಳು ನಿರೀಕ್ಷಿಸಿದ ಮಟ್ಟದಲ್ಲಿ ವಿದ್ಯಾರ್ಥಿಗಳ ಕೈಗೂ ಎಟಕುವುದಿಲ್ಲ. ಸಾಂಸ್ಥಿಕವಾಗಿ ಮಾಡಿದ ಕೆಲಸಗಳೇ ಹೀಗಾದರೆ ಗತಿಯೇನು?
ಇಂಥ ಜಾನಪದ ವಿಶ್ವಕೋಶಗಳು ಪುನರ್‌ಮುದ್ರಣಗೊಳ್ಳುವ ವ್ಯವಸ್ಥೆಯೂ ಆಗಿಲ್ಲ. ಇನ್ನೂ ಹತ್ತು ವರ್ಷ ಕಳೆದರೆ ಇವು ಬರೀ ಪಳೆಯುಳಿಕೆಗಳಾಗಿ ಉಳಿಯಬಹುದು ಅಷ್ಟೆ. ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರು  ನನೆಗುದಿಗೆ ಬಿದ್ದಿರುವ ಕನ್ನಡ ಜಾನಪದ ವೈದ್ಯಕೋಶ ಯೋಜನೆಯನ್ನು ಕೈಗೆತ್ತಿಕೊಂಡು ಪ್ರಕಟಿಸುವ ವ್ಯವಸ್ಥೆ ಮಾಡಬೇಕು. ಕನ್ನಡ ಜಾನಪದ ಕೋಶ ಯೋಜನೆಯ ಎರಡು ಸಂಪುಟಗಳೊಂದಿಗೆ ಇತರ ಕೋಶಗಳನ್ನು ಪುನರ್ ಮುದ್ರಿಸುವ ವ್ಯವಸ್ಥೆ ಜರೂರಾಗಿ ನಡೆಯಬೇಕು. ಅದರ ಮೂಲಕ ಜಾನಪದ ವಿಶ್ವವಿದ್ಯಾಲಯಕ್ಕೆ ಇದು ಮಾದರಿಯಾಗಬೇಕು.

ಬುಧವಾರ, ಮಾರ್ಚ್ 19, 2014

ಪದಗಳ ತಿರುಳು ಮತ್ತು ಚಹರೆ

ಕೆ.ವಿ.ನಾರಾಯಣ
ಸೌಜನ್ಯ:ವಿಜಯ ಕರ್ನಾಟಕ
ಪದವಿರಲಿ ಎದೆಯಲಿ
ಒಂದು ಪದ ಎಂದಮೇಲೆ ಅದಕ್ಕೊಂದು ಅರ್ಥವಿರಲೇಬೇಕು. ಹೀಗಾಗಿಯೇ ಅದು, 'ಪದಾರ್ಥ ಚಿಂತಾಮಣಿ'. ಹಾಗೆ ನೋಡಿದರೆ ಒಂದಲ್ಲ, ಪದವೊಂದಕ್ಕೆ ಹಲವು ಅರ್ಥಗಳಿರುತ್ತವೆ. ಅದು ಸಮಯ-ಸಂದರ್ಭದ ಮೇಲೆ ಅವಲಂಬಿತ. ಆದರೆ, ಎಷ್ಟೋ ಸಲ ನಾವು ಅರ್ಥವನ್ನೇ ತಿಳಿದುಕೊಳ್ಳದೆ, ಬಿಡುಬೀಸಾಗಿ ಕೆಲವು ಪದಗಳನ್ನು ಬಳಸುತ್ತಿರುತ್ತೇವೆ. ಈಗ ಇಂಥ ಪಾಡು ಪಡುತ್ತಿರುವ ಪದವೆಂದರೆ 'ಅರಾಜಕತೆ' ಮತ್ತು ಅದರ ಇನ್ನಿತರ ರೂಪಗಳು. ಆದರೆ, ಹೀಗಾದಾಗ ನಮ್ಮ ತಿಳಿವಿನ ದಾರಿಗಳು ಮುಚ್ಚಿಹೋಗಿರುತ್ತವೆ. 'ಅರಾಜಕತೆ'ಯ ನೆಪದಲ್ಲಿ ಪದಗಳ ಆಳ-ಅಗಲಗಳನ್ನು ತಿಳಿಯೋಣ ಬನ್ನಿ.
**

ಪದಗಳಿಗೆ ತಿರುಳು ಇರುವಂತೆ ಒಂದು ಚಹರೆಯೂ ಇರುತ್ತದೆ. ಕೆಲವೊಮ್ಮೆ ನಾವು ಪದಗಳನ್ನು ಅವುಗಳ ತಿರುಳನ್ನು ತಿಳಿಯದೆ ಬಳಸುತ್ತಿರುತ್ತೇವೆ. ಹಾಗೆಯೇ ಅವುಗಳ ಚಹರೆಯನ್ನೂ ತಿಳಿಯುವ ಗೋಜಿಗೆ ಹೋಗುವುದಿಲ್ಲ. ಅಂತಹ ಒಂದೆರಡು ನಿರೂಪಣೆಗಳನ್ನು ನಿಮ್ಮ ಮುಂದೆ ಇರಿಸುತ್ತೇನೆ.

ಒಂದು ಹಳೆಯ ಕತೆಯೊಂದಿಗೆ ಮೊದಲು ಮಾಡುತ್ತೇನೆ (ಕತೆಯಲ್ಲ; ದಿಟವಾಗಿ ನಡೆದದ್ದು. ಆದರೆ ಹೇಳುವ ರೀತಿಯಲ್ಲಿ ಇದು ಕತೆಯ ಹಾಗೆ ಇದೆ). ಸುಮಾರು ಎರಡೂವರೆ ದಶಕಗಳ ಹಿಂದೆ ಕನ್ನಡದ ಹಿರಿಯ ಬರಹಗಾರ ಮಾಸ್ತಿಯವರೊಡನೆ ಮಾತಾಡುತ್ತಿದ್ದಾಗ ಇದು ನಡೆದದ್ದು. ಮಾಸ್ತಿಯವರು 'ಜೀವನ' ಪತ್ರಿಕೆಯ ಸಂಪಾದಕರಾಗಿ ಬರೆಯುತ್ತಿದ್ದ ಟಿಪ್ಪಣಿಗಳ ಹಿಂದಿದ್ದ ರಾಜಕೀಯ ನಿಲುವುಗಳ ಬಗೆಗೆ ಮಾತು ಬಂತು. ನಾನು 'ನಿಮ್ಮದು ಲಿಬರಲ್ ನಿಲುವು ಆಗಿತ್ತಲ್ಲವೆ' ಎಂದು ಕೇಳಿದೆ. ಆಗವರು 'ಲಿಬರಲ್ ಎಂದರೇನು' ಎಂದು ಕೇಳಿದರು. ನಾನು 'ಉದಾರವಾದಿ ನಿಲುವು' ಎಂದು ಹೇಳಿದೆ. ಅದಕ್ಕವರು 'ಉದಾರವಾದಿ ಎಂದರೇನು' ಎಂದು ನನ್ನನ್ನೇ ಕೇಳಿದರು. ಗೊತ್ತಿದ್ದೂ ಗೊತ್ತಿದ್ದೂ ನನ್ನನ್ನು ಈ ಹಿರಿಯರು ಪೇಚಿಗೆ ಸಿಲುಕಿಸುತ್ತಿದ್ದಾರೆಂದು ತಿಳಿದು ನಾನು 'ಉದಾರವಾದಿ ಎಂದರೆ ಲಿಬರಲ್ ಎಂಬ ಪದಕ್ಕೆ ಸಾಟಿಯಾಗಿ ಬಳಕೆಯಲ್ಲಿದೆಯಲ್ಲವೇ' ಎಂದು ಕೇಳಿದೆ. 'ಅದು ಸರಿ. ನೀವು ಆ ಪದವನ್ನು ಬಳಸುತ್ತಿದ್ದೀರಿ ಎಂದರೆ ಅದರ ತಿರುಳು ನಿಮಗೆ ಗೊತ್ತಿರಬೇಕಲ್ಲವೇ? ಹಾಗಾಗಿ ಉದಾರವಾದಿ ಎಂದರೇನು ಎಂಬುದನ್ನು ನನಗೆ ತಿಳಿಯುವಂತೆ ಹೇಳಿ' ಎಂದರು. ನಾನು ಮಾತಾಡದೆ ಕುಳಿತದ್ದನ್ನು ಕಂಡು. 'ಇಂಗ್ಲ್ಲಿಶಿನವರು ಬಳಸಿದ ಅಂತ ತಿಳಿದು ನೀವು ಒಂದು ಪದ ಕಟ್ಟಿ ಬಳಸಲು ಮೊದಲು ಮಾಡುತ್ತೀರಿ. ಅದರ ತಿರುಳು ನಿಮ್ಮ ತಿಳಿವಿಗೆ ಬಾರದಿದ್ದರೂ ಪದದ ಹಿಂದೆ ಅವಿತು ಅದನ್ನು ಬಳಸುತ್ತೀರಿ ಅಲ್ಲವೇ?' ಎಂದು ಕೆಣಕಿದರು. ನಾನು ಮಾಸ್ತಿಯವರನ್ನು ಉದಾರವಾದಿ ಎಂದು ಬಣ್ಣಿಸಿದಾಗ ಅದು ಕೇವಲ ವಿವರಣೆಯ ಮಾತು ಮಾತ್ರ ಆಗಿರಲಿಲ್ಲ. ಆ ಹೊತ್ತಿಗೆ ಉದಾರವಾದಿಯಾಗಿರುವುದು ಎಂದರೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವವರ ನಿಲುವು ಎಂಬ ನನ್ನ (ಹಾಗೆಯೇ ನನ್ನಂತೆ ಹಲವರ) ತಿಳುವಳಿಕೆಯೂ ಅಲ್ಲಿ ನೆಲೆಯೂರಿತ್ತು. ಮಾಸ್ತಿಯವರು ನನ್ನ ಆ ತಿಳುವಳಿಕೆಯನ್ನು ಕೆದಕಲು ಈ ಹಾದಿಯನ್ನು ಹಿಡಿದಿದ್ದರು.


ಈ ಮಾತುಕತೆಯ ಬಳಿಕವೂ ನಾನು ಇಂಗ್ಲಿಶ್ ಪದವೊಂದಕ್ಕೆ ಕನ್ನಡದಲ್ಲಿ (ಸಂಸ್ಕತದ) ಪದವೊಂದನ್ನು ಸುಮ್ಮನೆ ಬಳಸುವುದರಲ್ಲಿ ತಪ್ಪಿದೆಯೆಂಬ ತಿಳುವಳಿಕೆಯನ್ನು ಪಡೆಯಲಿಲ್ಲ. ಆದರೆ ಪದಕ್ಕೆ ಪದವನ್ನು ಸಾಟಿ ಮಾಡಿಕೊಳ್ಳುವಾಗ ಕೇವಲ ಒಂದು ಪದವನ್ನು ಮಾತ್ರ ಕಟ್ಟಿಕೊಳ್ಳುತ್ತಿರುವುದಿಲ್ಲ; ಅದರೊಡನೆ ಆ ಪದದ ತಿರುಳಿನ ಬಗೆಗೆ ಒಂದು ನಿಲುವನ್ನೂ ಪಡೆದುಕೊಂಡಿರುತ್ತೇವೆ ಎನ್ನುವುದನ್ನು ಅರಿತುಕೊಳ್ಳಲು ಬಹಳ ವರುಶಗಳೇ ಹಿಡಿದವು. ಅಲ್ಲದೆ, ಇಂಗ್ಲಿಶಿನ ಪದಕ್ಕೆ (ಹಾಗೆ ನೋಡಿದರೆ ಯಾವುದೇ ನುಡಿಯ ಪದಕ್ಕೆ) ಒಂದು ಚರಿತ್ರೆ ಇರುತ್ತದೆ. ಆ ಚರಿತ್ರೆಯೆ ಅದರ ಚಹರೆ. ಆ ಚಹರೆಯನ್ನು ಬಿಟ್ಟುಕೊಟ್ಟು ಸುಮ್ಮನೆ ಒಂದು ಹೊಸ ಪದವನ್ನು ಕನ್ನಡದಲ್ಲಿ ಜಾರಿಗೆ ತಂದರೆ ಅದರಿಂದ ನಮ್ಮ ಚಿಂತನೆ ಮತ್ತು ಅದನ್ನು ಅನುಸರಿಸಿದ ಮಾತುಕತೆಗಳು ಹಳ್ಳ ಹಿಡಿಯುತ್ತವೆ ಎಂದು ಅರಿಯಬೇಕಾಗಿದೆ.

ಇಂತಹದೇ ಇನ್ನೊಂದು ಈಚಿನ ಪ್ರಸಂಗವನ್ನು ನೋಡೋಣ. ಕೆಲ ದಿನಗಳ ಹಿಂದೆ ಅನಾರ್ಕಿ, ಅನಾರ್ಕಿಸ್ಟ್, ಅನಾರ್ಕಿಸಿಮ್ ಎಂಬ ಪದಗಳು ಮತ್ತೆಮತ್ತೆ ಕೇಳಿಬಂದವು; ಹಾಗೆಯೇ ಬರಹಗಳಲ್ಲೂ ಕಂಡುಬಂದವು. ಅರವಿಂದ ಕೇಜ್ರಿವಾಲರು ತಮ್ಮ ಗೆಳೆಯರೊಡನೆ ಹಕ್ಕೊತ್ತಾಯ ಮಾಡಲು ದೆಹಲಿಯ ಬೀದಿಯಲ್ಲಿ ಕುಳಿತಾಗ ಅವರ ನಡೆಯನ್ನು ಒಪ್ಪದವರು ಅವರನ್ನು ಅನಾರ್ಕಿಸ್ಟ್ ಎಂದರು; ಕೇಜ್ರಿವಾಲರೇ ತಮ್ಮನ್ನು ತಾವು ಹಾಗೆಂದು ಬಣ್ಣಿಸಿಕೊಂಡದ್ದೂ ಉಂಟು. ಆಡಳಿತದ ಚುಕ್ಕಾಣಿ ಹಿಡಿದವರೇ ಹೀಗೆ ಹಕ್ಕೊತ್ತಾಯ ಮಾಡುತ್ತಾ ಕುಳಿತದ್ದು ಎಲ್ಲರಿಗೂ ಒಪ್ಪಿಗೆಯಾಗಲಿಲ್ಲ. ಸಂಸತ್ತಿನಲ್ಲಿ, ರಾಜ್ಯಗಳ ಮೇಲ್ಮನೆಗಳಲ್ಲಿ ಸದಸ್ಯರು ಕೂಗಾಡುವುದು, ಇತರರು ಮಾತಾಡುವಾಗ ಅಡ್ಡಿ ಮಾಡುವುದು, ಮೈಕು ಕಿತ್ತುಕೊಳ್ಳುವುದು, ಗುದ್ದುವುದು, ಬಟ್ಟೆ ಹರಿದುಕೊಳ್ಳುವುದು ಇವೆಲ್ಲವನ್ನೂ ಮಾಡಿದಾಗ ಅಂತಹ ನಡವಳಿಕೆಯನ್ನು ಬಣ್ಣಿಸುವ ವರದಿಗಾರರು 'ಅರಾಜಕತೆ' ಎಂಬ ಪದವನ್ನು ಬಿಡುಬೀಸಾಗಿ ಬಳಸಿದ್ದಾರೆ. ಕನ್ನಡದ ಸುದ್ದಿಹಾಳೆಗಳು, ಟಿವಿ ವರದಿಗಳು ಈ ಪದವನ್ನು ಬಳಸಿದ್ದನ್ನು ಓದಿದ್ದೇವೆ; ಕೇಳಿದ್ದೇವೆ. ಹೀಗೆ ನಡೆದುಕೊಳ್ಳುವ ಕಾಲ ಬಂತಲ್ಲ, ಇನ್ನು ಎಲ್ಲ ಮುಗಿದ ಹಾಗೆಯೇ ಎಂಬ ಸಿನಿಕತನವನ್ನೂ ನಮ್ಮಲ್ಲಿ ಹಲವರು ಬೆಳೆಸಿಕೊಳ್ಳುತ್ತಿದ್ದಾರೆ.

ಅನಾರ್ಕಿಸಂ ಎಂಬುದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಸಂಸ್ಕತದ ಅರಾಜಕತೆ ಎಂಬ ಪದವನ್ನು ಬಳಸುವುದನ್ನು ಒಪ್ಪಿಕೊಂಡು ಬಿಟ್ಟಿದ್ದೇವೆ. ಇದು ಕೇವಲ ಒಂದು ಸಾಟಿ ಪದವಾಗಿ ಮಾತ್ರ ಉಳಿದಿಲ್ಲ. ಈ ಪದವನ್ನು ಬಳಸುವಾಗ ಅದು ಕೇವಲ ಒಂದು ವರ‌್ತನೆಯ ಬಣ್ಣನೆ ಎಂದು ತಿಳಿಯುವ ಹಾಗಿಲ್ಲ. ಏಕೆಂದರೆ ಅಂತಹ ವರ‌್ತನೆಯನ್ನು ಅರಾಜಕ ಎಂದು ಬಣ್ಣಿಸುವವರು ಹಾಗೆ ವರ್ತಿಸುವುದನ್ನು ತಾವು ಒಪ್ಪುವುದಿಲ್ಲ ಎಂಬುದನ್ನೂ ಹೇಳುತ್ತಿರುತ್ತಾರೆ. ಅಂದರೆ ಅರಾಜಕತೆ ಎನ್ನುವುದು ನಾವು ಬಯಸುವ ನಡವಳಿಕೆಯಲ್ಲ ಎಂಬುದು ಬಹುಮಟ್ಟಿಗೆ ಹಲವರ ತಿಳುವಳಿಕೆಯಾಗಿರುತ್ತದೆ.

ರಾಜ, ರಾಜಕ, ಅರಾಜಕ, ಅರಾಜಕತೆ ಇವು ಬಳಕೆಯಲ್ಲಿರುವ ಪದಗಳು (ಅರಾಜ ಎಂಬ ಪದ ಇರಬಹುದಾದರೂ ಕನ್ನಡದಲ್ಲಿ ಅದರ ಬಳಕೆಯನ್ನು ನಾನು ಕಂಡಿಲ್ಲ). ಅರಾಜಕ ಎಂಬ ಪದದಲ್ಲಿ ರಾಜ ಎಂಬ ಪದ ಇದ್ದರೂ ನೇರವಾಗಿ ಆ ಪದಕ್ಕೂ ಅರಾಜಕತೆಗೂ ನಂಟು ಇಲ್ಲ. ಅನಾರ್ಕಿ ಎಂಬ ಪದಕ್ಕೆ ಸಾಟಿಯಾಗಿ ಅರಾಜಕ ಪದವನ್ನು ಆಯ್ದುಕೊಂಡು ಬಳಸುವಾಗ ನಾವು ಕೇವಲ ಒಂದು ಪದವನ್ನು ಮಾತ್ರ ಆಯ್ದುಕೊಳ್ಳದೇ ಅದರ ಜತೆಗೆ ಒಂದು ನಿಲುವನ್ನೂ ಆಯ್ದುಕೊಂಡು ಬಿಟ್ಟಿದ್ದೇವೆ. ಅರಾಜಕತೆ ಎನ್ನುವುದನ್ನು ನಾವು ಬಯಸುವುದೂ ಇಲ್ಲ; ಅದನ್ನು ಒಪ್ಪುವುದೂ ಇಲ್ಲ ಎನ್ನುವುದೇ ಆ ನಿಲುವು. ನಮ್ಮ ಸುತ್ತ ಮಾತುಗಳ ಲೋಕವನ್ನೇ ಕಟ್ಟುವ ಜನರೂ ಈ ನಿಲುವನ್ನೇ ಗಟ್ಟಿ ಮಾಡುವವರಾಗಿದ್ದಾರೆ.


ದಿಟಕ್ಕೂ ಅನಾರ್ಕಿ ಎಂದರೇನು? ಯಾರು ಅನಾರ್ಕಿಸ್ಟರು? ಯಜಮಾನಿಕೆ ನಡೆಸುವವರು, ಅಧಿಕಾರ ಹೊಂದಿರುವವರು ತಮ್ಮ ಯಜಮಾನಿಕೆಗೆ, ಅಧಿಕಾರಕ್ಕೆ ಇರುವ ತಳಹದಿಗಳೇನು ಎಂಬುದನ್ನು ಸಾಬೀತು ಮಾಡಬೇಕು. ಅದು ಅವರ ಹೊಣೆ. ಅದು ತಮಗೆ ತನ್ನಿಂದ ತಾನೇ ಒದಗಿ ಬಂದಿದೆ ಎಂದೋ ಯಾರೂ ತಮ್ಮನ್ನು ಪ್ರಶ್ನಿಸುವಂತಿಲ್ಲ ಎಂದು ವಾದಿಸಿದರೆ ಆಗ ಅದನ್ನು ನಿರಾಕರಿಸುವ ನಡೆ ಬೇಕಾಗುತ್ತದೆ. ಹೀಗೆ ಯಜಮಾನಿಕೆ ಮಾಡುವವರನ್ನು, ಅಧಿಕಾರ ನಡೆಸುವವರನ್ನು ನಿಮಗೆ ಈ ಹಕ್ಕನ್ನು ಯಾರು ಕೊಟ್ಟರು ಎಂದು ಕೇಳುವುದು; ನಿಮ್ಮ ಯಜಮಾನಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಹೇಳುವುದೇ ಅನಾರ್ಕಿಸಂ. ಯಜಮಾನಿಕೆ ನಡೆಸುವರು ಹಕ್ಕುಗಳನ್ನು ಕಿತ್ತುಕೊಂಡಾಗ, ಏರುಪೇರನ್ನು ಹುಟ್ಟಿದಾಗ ಹಾಗೆ ಮಾಡಲು ಅವರಿಗೆ ಯಾರು ಅನುಮತಿ ಕೊಟ್ಟವರು ಎಂದು ಕೇಳುವವರೇ ಅನಾರ್ಕಿಸ್ಟ್. ಅಂದರೆ ಎಲ್ಲೆಲ್ಲಿ ಹಿಡಿತವಿಲ್ಲದ ಯಜಮಾನಿಕೆ ಇರುವುದೋ, ಎಲ್ಲಿ ಯಜಮಾನಿಕೆ ನಡೆಸುವವರೇ ತಮ್ಮನ್ನು ಕೇಳುವವರು ಯಾರೂ ಇಲ್ಲ ಎಂದು ಮೆರೆಯುತ್ತಾರೋ ಅಲ್ಲ್ಲೆಲ್ಲಾ ಅನಾರ್ಕಿಸ್ಟರು ಇದ್ದೇ ಇರುತ್ತಾರೆ.

ಕೊಂಚ ಹಳೆಯ ಕತೆಯನ್ನು ನೋಡಿ. ವೈದಿಕತೆ, ಆಚರಣೆಗಳು ಎದುರಾಳಿಗಳಿಲ್ಲವೆಂದು ಮೆರೆದಾಗ, ರಾಜತ್ವಕ್ಕೆ ಲಗಾಮುಗಳಿಲ್ಲದೇ ಹೋದಾಗ ಈ ಎರಡೂ ಬಗೆಯ ಯಜಮಾನಿಕೆಗಳ ಎದುರು ನಿಂತವರು ಅನಾರ್ಕಿಸ್ಟರೇ ಅಲ್ಲವೇ? ಅವರು ನಿಯಮಗಳನ್ನು ಮೀರಿದರು; ಅಚ್ಚುಕಟ್ಟ್ಟಾಗಿರುವುದನ್ನು ತಲೆಕೆಳಗು ಮಾಡಿದರು. ಯಜಮಾನಿಕೆಗೆ ಸವಾಲು ಎಸೆದರು. ಹಾಗೆ ನೋಡಿದರೆ ಎಲ್ಲ ಕಾಲಗಳಲ್ಲೂ ಒಂದಲ್ಲ ಒಂದು ಬಗೆಯ ಅನಾರ್ಕಿಸಂ ಇದ್ದದ್ದೇ. ಎಲ್ಲ ಕಾಲಗಳಲ್ಲೂ ಅನಾರ್ಕಿಸಂ ಎಂಬುದು ಯಜಮಾನಿಕೆಯನ್ನು ಮುರಿಯುವುದರಲ್ಲಿ ಗೆಲುವು ಕಂಡಿತೋ ಇಲ್ಲವೋ ಎಂಬುದನ್ನು ನಿಕ್ಕಿಯಾಗಿ ಹೀಗೇ ಎಂದು ಹೇಳಲು ಬರುವುದಿಲ್ಲ. ಆದರೆ ಅದು ಎಲ್ಲ ಕಾಲಗಳಲ್ಲೂ ತಾನು ಇದ್ದೇನೆಂದು ತೋರಿಸಿಕೊಂಡಿರುವುದಂತೂ ದಿಟ.

ಅನಾರ್ಕಿಸಂ ದಾರಿಯೋ ಇಲ್ಲವೇ ಗುರಿಯೋ? ಅಂದರೆ ಯಜಮಾನಿಕೆಯನ್ನು ಮುರಿದು ಅದರ ಬದಲಾಗಿ ಅದರ ಜಾಗದಲ್ಲಿ ತಲೆ ಎತ್ತ ಬೇಕಾದ ನೆಲೆಗಳನ್ನು ಅನಾರ್ಕಿಸಂ ತನ್ನ ಗುರಿಯನ್ನಾಗಿ ಇರಿಸಿಕೊಂಡಿರುತ್ತದೋ ಇಲ್ಲವೇ ಯಜಮಾನಿಕೆಗೆ ಸವಾಲು ಹಾಕಲು ಬೇಕಾದ ಒಳ ಮತ್ತು ಹೊರದಾರಿಗಳನ್ನು ಮಾತ್ರ ಹುಡುಕುತ್ತಿರುತ್ತದೋ? ಚರಿತ್ರೆಯುದ್ದಕ್ಕೂ ಅನಾರ್ಕಿಸಂ ಈ ಎರಡೂ ನೆಲೆಗಳಲ್ಲಿ ಕಂಡುಬಂದಿದೆ. ಅನಾರ್ಕಿಸಂ ಎಂಬುದು ಬದಲಿ ನೆಲೆಯಾಗಿದ್ದರೆ, ಅಂದರೆ ಅದೊಂದು ಗುರಿ ಎಂದುಕೊಂಡರೆ ನಮ್ಮ ಚರಿತ್ರೆಯಲ್ಲಿ ಅದೊಂದು ಈಡೇರದ ಬಯಕೆಯಾಗಿಯೇ ಕಂಡುಬರುತ್ತದೆ. ಬಿಡುಗಡೆ ಮತ್ತು ಕಟ್ಟುಪಾಡುಗಳೆರಡೂ ಇದ್ದು ಹೊರಗಿನ ಯಾವ ಒತ್ತಾಯವಾಗಲೀ ಇರದ ಮತ್ತು ಒತ್ತಾಯವನ್ನು ಹೇರುವ ಯಜಮಾನಿಕೆಯಾಗಲೀ ಇಲ್ಲದಿರುವ ನೆಲೆಯನ್ನು ಅನಾರ್ಕಿಸಂ ಬಯಸುತ್ತದೆ. ಒಂದು ವೇಳೆ ಅನಾರ್ಕಿಸಂ ಒಂದು ದಾರಿ ಎನ್ನುವುದಾದರೆ ಅದು ಯಜಮಾನಿಕೆಯ ನೆಲೆಗಳಿಗೆ ಎಚ್ಚರಿಕೆಯನ್ನು ನೀಡುವ, ಅದು ಹದ್ದು ಮೀರದಂತೆ ನೋಡಿಕೊಳ್ಳುವ ಕೆಲಸವನ್ನು ಮಾಡುತ್ತಿರುತ್ತದೆ ಎಂದುಕೊಳ್ಳಬೇಕಾಗುತ್ತದೆ.

ಇದೆಲ್ಲವನ್ನೂ ನೋಡಿದಾಗ ಯಾರಾದರೂ ಅನಾರ್ಕಿಸ್ಟ್ ಆಗಿದ್ದರೆ ಇಲ್ಲವೇ ಹಾಗೆಂದು ತಮ್ಮನ್ನು ತಾವು ಕರೆದುಕೊಂಡರೆ ನಾವು ಅವರನ್ನು ಬುಡಮೇಲುಕಾರರೆಂದು, ಅಚ್ಚುಕಟ್ಟಾಗಿರುವ ಜೋಡಣೆಯನ್ನು ಹಾಳುಗೆಡಹುವವರೆಂದು, ನಿಯಮಗಳ ಪಾಲನೆಗೆ ಸೊಪ್ಪುಹಾಕದವರೆಂದು ತಿಳಿಯಬೇಕಾಗಿಲ್ಲ ಎನ್ನುವುದು ಗೊತ್ತಾಗುತ್ತದೆ. ಅನಾರ್ಕಿ ಇಲ್ಲವೇ ನಾವು ಬಣ್ಣಿಸುವಂತೆ ಅರಾಜಕತೆ ಎನ್ನುವುದು ಗೊಂದಲ, ಗೋಜಲುಗಳಿಗೆ ಸಾಟಿಯಾದ ಪದವಲ್ಲ. ಗೊಂದಲ ಹುಟ್ಟಿಸುವವರಿಗೆ, ದೊಂಬಿ ಮಾಡುವವರಿಗೆ ಗುರಿಗಳಿರುವುದಿಲ್ಲ. ಆದರೆ ಆನಾರ್ಕಿಸಂ ಎನ್ನುವುದು ಒಂದು ರಾಜಕೀಯ ಚೌಕಟ್ಟು. ಕೇವಲ ದೊಂಬಿ ಮಾತ್ರ ಅದರ ಗುರಿಯಾಗಲಾರದು.


ಮಂದಿಯಾಳ್ವಿಕೆಯ ಏರ್ಪಾಟಿನಲ್ಲಿ, ಅಂದರೆ ಪ್ರಜಾಪ್ರಭುತ್ವದಲ್ಲಿ ನಾವು ಒಪ್ಪದ ನಿಲುವನ್ನು ಮುಂದಿಡಲು ಚರ್ಚೆ, ಮಾತುಕತೆ ಇವೇ ಮುಂತಾದ ದಾರಿಗಳಿವೆ; ಅದಕ್ಕಾಗಿಯೇ ಏರ್ಪಾಟಾದ ಸದನಗಳಿವೆ ಎಂದು ಹೇಳುವುದುಂಟು. ಇವರು ಅನಾರ್ಕಿಯನ್ನು ಒಪ್ಪದವರು. ದಿಟ, ಮಾತಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಬೇರೆಯವರ ಮಾತು ಕೇಳಿಸಿಕೊಳ್ಳುವ ಹೊಣೆ ಎಲ್ಲರಿಗೂ ಇಲ್ಲವಲ್ಲ. ಮಾತುಕತೆ, ಚರ್ಚೆಗಳ ಗುರಿ, ಸದನಗಳ ನಡಾವಳಿಗಳು ಸಹಮತವನ್ನು ಬಲಪಡಿಸುವುಕ್ಕಾಗಿ ಇರಬೇಕು. ಆದರೆ ಅಲ್ಲೆಲ್ಲಾ ಅಂತಹ ಸಹಮತ ಉಂಟಾಗುವುದನ್ನು ತಪ್ಪಿಸುವುದೇ ಗುರಿಯಾದರೆ ಏನು ಮಾಡುವುದು. ಯುದ್ಧ ತಪ್ಪಿಸಲು ಸಂಧಿಗಾಗಿ ಬಂದ ಕೃಷ್ಣ ಬರುವ ಮೊದಲೇ 'ಕಾಳಗವನ್ನು ಬಲಿದು ಬಹೆನು' ಎಂದು ಮಾತು ಕೊಟ್ಟು ಬಂದಿದ್ದರೆ ಸಂಧಿ ನಡೆಯುವುದು ಎಲ್ಲಿಂದ? ಅಂದರೆ ಕಾಲಕಾಲಕ್ಕೆ ಮಂದಿಯಾಳ್ವಿಕೆಯ ಏರ್ಪಾಟು ಹುಟ್ಟುಹಾಕುವ ಅಧಿಕಾರ ಕೇಂದ್ರಗಳ ಹಿಂದಿನ ಅತಾರ್ಕಿಕತೆಗಳನ್ನು ಬಯಲು ಮಾಡಬೇಕಾಗುತ್ತದೆ. ಅವುಗಳಿಗೆ ಆ ಅಧಿಕಾರ ಬಂದುದೆಲ್ಲಿಂದ ಎಂದು ಕೇಳಬೇಕಾಗುತ್ತದೆ. ಅದಕ್ಕಾಗಿಯೇ ಅನಾರ್ಕಿಸಂನ ದಾರಿಗಳು ತೆರೆದುಕೊಳ್ಳುತ್ತವೆ.


ಹಾಗಿದ್ದರೆ ಈ ಬರಹದ ಗುರಿ ಏನು? ಇದೆಲ್ಲವನ್ನೂ ಹೇಳಿದ್ದು ಅನಾರ್ಕಿಸಂನ ಬಗೆಗೆ ವಕಾಲತ್ತು ಮಾಡುವುದಕ್ಕಾಗಿ ಅಲ್ಲ. ಒಂದು ಪದವನ್ನು ಬಳಸುವಾಗ ಅದು ನಮ್ಮ ಬದುಕಿನಲ್ಲಿ ಯಾಕೆ ನೆಲೆಗೊಂಡಿದೆ ಎಂಬುದನ್ನು ತಿಳಿಯದೇ ಬಳಸುವುದು ಸರಿಯಲ್ಲ ಎಂದು ಹೇಳುವುದು. ಅಲ್ಲದೆ ಪದಗಳ ಮೊರೆ ಹೊಕ್ಕು ಅವುಗಳ ಹಿಂದೆ ಅವಿತುಕೊಂಡು ನಮ್ಮ ತಿಳಿವನ್ನು, ತಿಳಿವಿನ ದಾರಿಗಳನ್ನು ಮುಚ್ಚಿಕೊಳ್ಳುವುದು ಸರಿಯಲ್ಲ ಎಂದು ಅರಿತುಕೊಳ್ಳುವುದು ಈ ಬರಹದ ಗುರಿ.
***

ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ನಮ್ಮೊಳಗೆ ಜಾಗೃತವಾಗುತ್ತಿದ್ದಂತೆ ವ್ಯವಸ್ಥೆ, ಆಡಳಿತ ಮತ್ತು ಅರಾಜಕತೆ ಕುರಿತ ಆಲೋಚನೆಗಳು ಏಳುತ್ತವೆ. ಸದ್ಯದ ರಾಜಕೀಯ ಚಿತ್ರಣದಲ್ಲಿ ಅರಾಜಕತೆಯ ಕುರಿತು ಹಲವು ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆ. ದಶಕಗಳ ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಭಿನ್ನ ವಿಚಾರಧಾರೆಗಳ ಇಬ್ಬರು ನಾಯಕರು ಆ ಕಾಲದಲ್ಲಿ ಅರಾಜಕತೆಯನ್ನು ಹೇಗೆ ಗ್ರಹಿಸಿಕೊಂಡಿದ್ದರು ಎಂಬುದನ್ನು ಇಲ್ಲಿ ನೋಡಬಹುದು.

ಗಾಂಧಿ ಪ್ರತಿಪಾದನೆ
ಗಾಂಧೀಜಿಯ ಸತ್ಯಾಗ್ರಹವನ್ನು ಅರಾಜಕತೆಯ ಅಸ್ತ್ರವನ್ನಾಗಿ ಅನೇಕ ಇತಿಹಾಸಕಾರರು ಗುರುತಿಸುತ್ತಾರೆ. ಕೆನಡಾದ ಲೇಖಕ ಜಾರ್ಜ್ ವುಡ್‌ಕಾಕ್, ಗಾಂಧಿ ತಮ್ಮನ್ನು ಅರಾಜಕತೆಯ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದರು ಎನ್ನುತ್ತಾರೆ. ಗಾಂಧೀಜಿ ಅವರ ಹೇಳಿಕೆಯನ್ನೇ ಇಲ್ಲಿ ಉಲ್ಲೇಖಿಸಬಹುದು: 'ದುಷ್ಟ ವ್ಯವಸ್ಥೆ ಯಾವುದೇ ಉದ್ದೇಶದಿಂದಾದುದಲ್ಲ. ಅದು ಸಾಮಾಜಿಕ ಪಿಡುಗಿನ ಫಲ. ಉದಾಹರಣೆಗೆ ಮಾರುತಕ್ಕೆ ಸಮುದ್ರದಲ್ಲಿ ಅಲೆಗಳನ್ನು ಉಕ್ಕಿಸುವ ಉದ್ದೇಶವೇನಿರುವುದಿಲ್ಲ. ಆದರೆ ಮಾರುತದ ಪರಿಣಾಮದಿಂದಾಗಿ ಅಲೆಗಳು ಉಕ್ಕುತ್ತವೆ. ಹಾಗೆಯೇ, ದುಷ್ಟವ್ಯವಸ್ಥೆಯನ್ನು ಕಿತ್ತೊಗೆಯಬೇಕೆಂದರೆ ಅದಕ್ಕೆ ಕಾರಣವಾಗುವ ಪೂರ್ವಸ್ಥಿತಿಯೇ ಇಲ್ಲದಂತೆ ಮಾಡುವುದು'.

'ವ್ಯಕ್ತಿಗೆ ಆತ್ಮ ಎಂಬುದಿರುತ್ತದೆ. ಆದರೆ ವ್ಯವಸ್ಥೆ ಆತ್ಮವಿಲ್ಲದ ಯಂತ್ರವಿದ್ದಂತೆ. ಹಿಂಸೆಯಿಂದಲೇ ಅದರ ಅಸ್ವಿತ್ವವನ್ನು ಉಳಿಸಿಕೊಳ್ಳುತ್ತದೆ. ಹಿಂಸೆಯಿಂದ ವ್ಯವಸ್ಥೆಯನ್ನು ದೂರ ಮಾಡುವುದು ಕಷ್ಟ' ಎಂದು ಹೇಳುತ್ತಿದ್ದ ಅವರು ಅಹಿಂಸೆಯ ಮಾರ್ಗ ಅನುಸರಿಸಲು ಅರಾಜಕತೆಯೂ ಬೇಕು ಎಂಬ ನಿಲುವನ್ನು ತಾಳಿದ್ದರು.


ಸಾಮೂಹಿಕ ವಿಮೋಚನೆಯತ್ತ ಗಾಂಧಿ ಆಸಕ್ತಿಯತ್ತ ವಾಲಿದ್ದು ಕೂಡ ವ್ಯಕ್ತಿವಾದಿ ಅರಾಜಕತೆ ಚಿಂತನೆಯಿಂದ. ವ್ಯಕ್ತಿಯೊಬ್ಬ ಆತ್ಮಸಾಕ್ಷಿಯೇ, ವ್ಯವಸ್ಥೆಯೊಂದರ ಸಮರ್ಥ ಸ್ವರೂಪ ಎಂಬುದು ಅವರ ನಿಲುವಾಗಿತ್ತು. ಸ್ವರಾಜ್ಯ ಕಲ್ಪನೆಯ ವ್ಯಕ್ತಿಗತವಾದದ ಒಲವಿನಿಂದಾಗಿಯೇ ಅವರು ಸಂಸದೀಯ ರಾಜಕಾರಣ, ರಾಜಕೀಯ ಪಕ್ಷಗಳ ಬಗ್ಗೆ ಒಲವು ತೋರಿಸಿರಲಿಲ್ಲ. ಅಂದಹಾಗೆ, ಗಾಂಧಿ ಅವರ ಈ ಆಲೋಚನೆಗಳನ್ನು ಪ್ರಭಾವಿಸಿದ್ದು ಪ್ರಸಿದ್ಧ ಲೇಖಕ ಲಿಯೋ ಟಾಲ್‌ಸ್ಟಾಲ್ ಅವರ 'ದಿ ಕಿಂಗ್‌ಡಮ್ ಆಫ್ ಗಾಡ್ ವಿತಿನ್ ಯೂ' ಕೃತಿ.
***

ಕ್ರಾಂತಿಕಾರಿಯ ಸ್ವಾತಂತ್ರ್ಯದ ಮಾರ್ಗ
ಗಾಂಧಿ ಅಹಿಂಸೆಯ ಹೋರಾಟ ತೀವ್ರತೆ ಪಡೆದುಕೊಳ್ಳುತ್ತಿದ್ದ ಕಾಲದಲ್ಲೇ ಕ್ರಾಂತಿಕಾರಿಗಳು ಸ್ವಾತಂತ್ರ್ಯ ಹೋರಾಟದ ಹುರುಪಿನಲ್ಲಿದ್ದರು. ಅವರಲ್ಲಿ ಒಬ್ಬರು ಭಗತ್ ಸಿಂಗ್. ಪಾಶ್ಚಾತ್ಯ ಕಲ್ಪನೆಯಾಗಿದ್ದ ಕಮ್ಯುನಿಸಂ ಮತ್ತು ಅರಾಜಕತೆಯಿಂದ ಅವರು ಆಕರ್ಷಿತರಾಗಿದ್ದರು. ಆ ಕಾಲದಲ್ಲಿ ಹೋರಾಟಗಾರರನ್ನು ಪ್ರಭಾವಿಸಿದ್ದ ಮಿಖೈಲ ಬಕುನಿನ್, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್, ಲಿಯೋನ್ ಟ್ರಾಟ್‌ಸ್ಕಿಯವರನ್ನು ಓದಿಕೊಂಡಿದ್ದರು. ಅರಾಜಕತೆಯನ್ನು ಕುರಿತು ಪಂಜಾಬಿ ಪತ್ರಿಕೆ 'ಕೀರ್ತಿ'ಯಲ್ಲಿ 1928ರಲ್ಲಿ ಸರಣಿ ಲೇಖನಗಳನ್ನು ಬರೆದರು. ಈ ಲೇಖನಗಳಲ್ಲಿ ಅವರು, 'ಜನ ಅರಾಜಕತೆ ಎಂಬ ಪದದ ಬಗ್ಗೆಯೇ ಆತಂಕವಿಟ್ಟುಕೊಂಡಿದ್ದಾರೆ. ಅರಾಜಕತೆ ಎಂಬ ಪದವನ್ನು ತಪ್ಪಾಗಿ ಬಳಸಲಾಗಿದೆ. ಭಾರತದ ಕ್ರಾಂತಿಕಾರಿಗಳನ್ನು ಅರಾಜಕತೆಯ ಪ್ರತಿನಿಧಿಗಳು ಎಂದು ಜರೆದಿದ್ದಾರೆ. ಈ ಮೂಲಕ ನಮ್ಮನ್ನು ಕುಖ್ಯಾತರೆಂದು ದೂಷಿಸಲಾಗುತ್ತಿದೆ. ಅರಾಜಕತೆ ಎಂದರೆ ಆಳುವವನ ಗೈರು, ಆಳುವ ವ್ಯವಸ್ಥೆಯೊಂದನ್ನು ರದ್ದು ಮಾಡುವುದು. ಹಾಗೆಂದು ನಿಯಮಗಳೇ ಇಲ್ಲದಿರುವುದು ಎಂದಲ್ಲ. ಅರಾಜಕತೆಯ ಅಂತಿಮ ಗುರಿ ಸಂಪೂರ್ಣ ಸ್ವಾತಂತ್ರ ್ಯ. ಅದರ ಪ್ರಕಾರ ಯಾರೂ ದೇವರು, ಧರ್ಮವನ್ನು ಒಪ್ಪಿಕೊಂಡವರಾಗಿರುವುದಿಲ್ಲ. ಹಣ, ಅಧಿಕಾರಗಳ ವ್ಯಾಮೋಹಿಗಳಾಗಿರುವುದಿಲ್ಲ. ಬಂಧಿಸುವ ಸರಪಳಿಗಳಾಗಲಿ, ಸಂಸ್ಥೆಯಾಗಲೀ ಇರುವುದಿಲ್ಲ' ಎಂದು ಬರೆದಿದ್ದರು.
***

ದಿ ಸೀಕ್ರೆಟ್ ಏಜೆಂಟ್
20ನೇ ಶತಮಾನದ ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ಜೋಸೆಫ್ ಕಾನ್ರಾಡ್ ಬರೆದ 'ದಿ ಸೀಕ್ರೆಟ್ ಏಜೆಂಟ್' ಭಯೋತ್ಪಾದನೆಯ ಜೊತೆಗೆ ಅರಾಜಕತೆಯನ್ನು ಕುರಿತು ವಿವಿಧ ಚಿಂತನೆಗಳನ್ನು ನಮ್ಮ ಮುಂದಿಡುತ್ತದೆ.

ಗ್ರೀನ್‌ವಿಚ್‌ನಲ್ಲಿರುವ ರಾಯಲ್ ಅಬ್ಸರ‌್ವೇಟರಿಯನ್ನು ಸ್ಫೋಟಿಸುವುದಕ್ಕೆ ಸೀಕ್ರೆಟ್ ಏಜೆಂಟನೊಬ್ಬ ಯೋಜಿಸುವ ಉದ್ದೇಶದ ಸುತ್ತ ಕಾದಂಬರಿಯನ್ನು ಹೆಣೆದಿದ್ದಾನೆ ಕಾನ್ರಾಡ್. ಈ ಮೂಲಕ ಆಳುವ ವರ್ಗಕ್ಕೆ ಘಾಸಿ ಉಂಟುಮಾಡುವುದು ಉದ್ದೇಶ. ತನ್ನ ಗೆಳೆಯರೊಂದಿಗೆ ಸೇರಿ ಈ ಉದ್ದೇಶಕ್ಕಾಗಿ ತಯಾರಿ ನಡೆಸುತ್ತಾರೆ.

ಕಾನ್ರಾಡ್ ಅರಾಜಕತೆಯ ರಾಜಕೀಯ ಕ್ರಾಂತಿಯನ್ನು ಹುಚ್ಚು ನಿಲುವಿನಂತೆ ನೋಡದೆ, ಯುವಕರು ಅತಿ ಎನ್ನಿಸುವ ಇಂಥ ರಾಜಕೀಯ ನಿಲುವಿನತ್ತ ಹೇಗೆ ವಾಲುತ್ತಾರೆ ಎಂಬುದನ್ನು ಅವಲೋಕಿಸುವ ಪ್ರಯತ್ನ ಮಾಡಿದ್ದಾನೆ. 100 ವರ್ಷಗಳ ಹಿಂದೆಯೇ ಬಂದ ಈ ಕಾದಂಬರಿ, ಆ ಹೊತ್ತಿಗೆ ರಾಜಕೀಯ ಸ್ಥಿತ್ಯಂತರಗಳ ಕುರಿತು ಸೂಕ್ಷ್ಮವಾದ, ಘನವಾದ ಆಲೋಚನೆಗಳ ಮೂಲಕ ಗಮನ ಸೆಳೆದಿತ್ತು.

ಭಾನುವಾರ, ಮಾರ್ಚ್ 16, 2014

ಭಾರತೀಯ ಡಯಾಸ್ಪೊರಾ – ಒಂದು ಪ್ರಾಥಮಿಕ ವಿಶ್ಲೇಷಣೆ


ಡಯಾಸ್ಪೊರಾ ಆಧುನಿಕ ಸಂಕಥನಗಳಲ್ಲಿ ಬಳಕೆಯಾಗುತ್ತಿರುವ ಪಾರಿಭಾಷಿಕ ಪದ. ವಾಸ್ತವವಾಗಿ ಡಯಾಸ್ಪೊರಾ ಪದ ಹಳೆಯದಾದರೂ ಅದೊಂದು ಪಾರಿಭಾಷಿಕ ಪದವಾಗಿ ವಿಶಾಲ ವ್ಯಾಪ್ತಿಯಲ್ಲಿ ಬಳಕೆಯಾಗುತ್ತಿರುವುದು ಆಧುನಿಕ ಸಂದರ್ಭದಲ್ಲಿಯೇ. ಡಯಾಸ್ಪೊರಾ ಎನ್ನುವ ಪದವನ್ನು ಇಂದು ಅಂತರ್ ಶಿಸ್ತೀಯ ಪದವಾಗಿ ಬಳಸಲಾಗುತ್ತಿದೆ. ಅದೊಂದು ಏಕಕಾಲದಲ್ಲಿ ಚರಿತ್ರೆ, ಆರ್ಥಿಕ, ಸಮಾಜಶಾಸ್ತ್ರೀಯ, ಮಾನವಶಾಸ್ತ್ರೀಯ, ರಾಜಕೀಯ, ಸಾಂಸ್ಕೃತಿಕ ವಲಯಗಳಲ್ಲಿ ಬಳಕೆಯಾಗುತ್ತಿರುವ ಪಾರಿಭಾಷಿಕ ಪದ. ಇದರ ವ್ಯಾಪ್ತಿಯ ಕಾರಣದಿಂದಲೋ ಏನೋ ಅದನ್ನು ವಿವರಿಸಲು ತ್ರಾಸು ಪಡಬೇಕಾದ ಸನ್ನಿವೇಶ ಉಂಟಾಗಿದೆ. ಡಯಾಸ್ಪೊರಾ ಪದವನ್ನು ಯಾರು ಯಾವ ಕಾರಣದಿಂದ, ಯಾವ ಯಾವ ಉದ್ದೇಶಗಳಿಗಾಗಿ ಬಳಸುತ್ತಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಂಡೇ ಪದವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳಬೇಕಾದ ಸಂದರ್ಭವೂ ನಿರ್ಮಾಣವಾಗಿದೆ. ಡಯಾಸ್ಪೊರಾ ಪದ ಎನ್ನುವುದು ಒಂದು ಜಾಲ; ಅದರಲ್ಲಿ ಅನೇಕ ಉಪಜಾಲಗಳಿವೆ. ಅನೇಕ ಸರಣಿ ಜಾಲಗಳೂ ಅದರೊಳಗೆ ಇರಬಹುದು. ಹೀಗಾಗಿ ಡಯಾಸ್ಪೊರಾ ಪದವನ್ನು ಒಂದು ಆಯಾಮದಲ್ಲಿ ನೋಡಲು ಅಸಾಧ್ಯ ಎನ್ನಿಸುವಂತಿದೆ. ೧೯೯೧ರ ನಂತರ ಡಯಾಸ್ಪೊರಾ ಎನ್ನುವುದು ಕ್ಷೇತ್ರಾಧ್ಯಯನಗಳು, ಜನಾಂಗೀಯ ಅಧ್ಯಯನಗಳು, ಸಾಂಸ್ಕೃತಿಕ ಅಧ್ಯಯನಗಳ ನೆಲೆಗಳಲ್ಲಿ ಬಿಚ್ಚಿಕೊಳ್ಳುತ್ತಿದೆ.

ಡಯಾಸ್ಪೊರಾ ಎಂಬ ಪದವು ಆಕ್ಸ್ಫರ್ಡ ನಿಘಂಟಿನ ೧೯೮೭ರ ಆವೃತ್ತಿಯವರೆಗೂ ಬಳಕೆಯಲ್ಲಿರಲಿಲ್ಲ. ೧೯೯೧ರ ಆವೃತ್ತಿಯಲ್ಲಿ ಡಯಾಸ್ಪೊರಾ ಪದ ಅದರಲ್ಲಿ ಸೇರಿಕೊಂಡಿತು. ಹೊಸ ಆವೃತ್ತಿಯಲ್ಲಿ ಹೊಸ ಅನುಬಂಧಗಳ ಜೊತೆ ಡಯಾಸ್ಪೊರ ಪರಿಕಲ್ಪನೆಯನ್ನು ದಾಖಲಿಸಲಾಯಿತು. ೧೯೯೩ರ ಆಕ್ಸಫರ್ಡ ನಿಘಂಟಿನ ಆವೃತ್ತಿಯಲ್ಲಿ ಡಯಾಸ್ಪೊರಾ ಎಂದರೆತಾಯ್ನಾಡಿನಿಂದ ದೂರಾಗಿ ಬದುಕುತ್ತಿರುವ ಯಾವುದೇ ಜನರುಎಂಬ ಅರ್ಥ ನೀಡಲಾಗಿದೆ.

ಮಿಶ್ರ ಸಂಸ್ಕೃತಿಯ ದ್ರವೀಕೃತ ಸಂತತಿ

ಡಯಾಸ್ಪೊರ ಮೂಲತಃ ಅಸ್ಮಿತೆಯ ತಾಕಲಾಟ, ಅದು ಧಾರ್ಮಿಕ, ಜನಾಂಗೀಯ, ರಾಷ್ಟ್ರೀಯ ಅಸ್ಮಿತೆಗಳಾಗಿರಬಹುದು. ಬರುಬರುತ್ತಾ ಡಯಾಸ್ಪೊರ ಸಮಾಜಶಾಸ್ತ್ರೀಯ ಅಧ್ಯಯನಗಳಿಗೇ ಹೆಚ್ಚು ಸೂಕ್ತವೆನಿಸುತ್ತದೆ. ಅಲೆಮಾರಿತನದ ವಾಂಛೆ, ವಲಸಿಗ ಪ್ರವೃತ್ತಿ, ಜನಾಂಗೀಯ ಕಲ್ಪನೆಗಳು, ಮಿಶ್ರತಳಿಯಲ್ಲಿ ಉಂಟಾದ ಪರಿಣಾಮಗಳು ಇತ್ಯಾದಿಗಳು ಸಮಾಜಶಾಸ್ತ್ರೀಯ ಆಂಥ್ರೋಪಾಲಜಿ ಶಿಸ್ತಿಗೆ ಹತ್ತಿರ ಇರುವಂತಹ ಅಂಶಗಳು. ಬಾಹುಳ್ಯವೇ ಪ್ರಧಾನ ಲಕ್ಷಣವಾಗಿರುವ ಡಯಾಸ್ಪೊರಾ ಗುಂಪು ತಮ್ಮದೇ ಆದ ಮಿಶ್ರ ಸಂಸ್ಕೃತಿಯನ್ನು ಹುಟ್ಟು ಹಾಕುತ್ತವೆ. ಅವು ಭಾಷಿಕ, ವರ್ಗೀಯ, ಸಾಂಸ್ಕೃತಿಕ ಅಂಶಗಳ ಬಹುಳತೆಯಿಂದ ಉಂಟಾದ ಮಿಶ್ರಣ ಸ್ಥಿತಿ.

ಡಯಾಸ್ಪೊರಾ ಪದ ಎನ್ನುವುದಕ್ಕೆ ಒಂದು ಸ್ಥಿರವಾದ ಅರ್ಥಸೂಚನೆ ಇಲ್ಲದ್ದರಿಂದ ಅದನ್ನು ಕನ್ನಡದಲ್ಲಿ ವಿವರಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ. ವಲಸೆ, ವಲಸಿಗ (immigrant) ಎಂಬರ್ಥವನ್ನು ಪಡೆದುಕೊಂಡರೂ ಡಯಾಸ್ಪೊರಾ  ಸಂಪೂರ್ಣವಾಗಿ ವಲಸೆಯನ್ನು ಕುರಿತಾದ ಪರಿಭಾಷೆ ಮಾತ್ರವಲ್ಲ. ವಲಸೆ ಮತ್ತು ಡಯಾಸ್ಪೊರಾ ಪರಿಕಲ್ಪನೆಗಳನ್ನು ಯಾವಾಗಲೂ ಒಂದರ ಮೇಲೊಂದು ಹಾದು ಹೋಗುವ ಕಿರಣಗಳಂತೆ ಕಾಣಲಾಗುತ್ತದೆ. ಡಯಾಸ್ಪೊರಾವನ್ನು ವಲಸೆ ಎಂದು ನೋಡುವ ಅಸಂದಿಗ್ಧತೆಯ ನೆರಳು ಅದರ ಮೇಲೆ ಬಿದ್ದಿರುವುದು ವಿಷಾದನೀಯ ಎಂದು ಗೇಬ್ರಿಯಲ್ ಷೆಫರ್ ಹೇಳುತ್ತಾರೆ (Diaspora Politics, 2003). ದೇಶದ ನಾಗರೀಕತೆಯನ್ನು ತೊರೆದುಹೋದ, ದೇಶಭ್ರಷ್ಟರಾಗಿ ವಿದೇಶಗಳಲ್ಲಿ ನೆಲೆಸಿರುವವರು (Expatriates) ಕೂಡಾ ಡಯಾಸ್ಪೊರಾಕ್ಕೆ ಹತ್ತಿರ ಬರುತ್ತಾರೆ. ಅನಿವಾಸಿಗಳು ಕೂಡ ಡಯಾಸ್ಪೊರಾಕ್ಕೆ ಸೇರಿದವರೇ ಅಲ್ಲವೇಡಯಾಸ್ಪೊರಾದ  ಅಧ್ಯಯನದಲ್ಲಿ ಪೂರ್ಣಪ್ರಮಾಣದಲ್ಲಿ ಎಲ್ಲವನ್ನೂ ಸೇರಿಸುವುದು ಸಾಧ್ಯವೇ ಎಂಬುದರ ಬಗ್ಗೆಯೇ ಇನ್ನೂ ಚಿಂತನೆಗಳು ನಡೆಯುತ್ತಿವೆ. ಆದ್ದರಿಂದ  ಡಯಾಸ್ಪೊರಾ ಎಂಬ ಪದವನ್ನು ಕನ್ನಡದಲ್ಲಿ ಅದು ಇರುವಂತೆಯೇ ಬಳಸಿಕೊಂಡಿದ್ದೇನೆ. ಡಯಾಸ್ಪೊರಾ ಸಮುದಾಯಕ್ಕೆ ಸೇರಿದವರನ್ನು ಡಯಾಸ್ಪೊರಿಗೆಂದೇ ಬಳಸಿಕೊಂಡಿದ್ದೇನೆ. ಡಯಾಸ್ಪೊರಾ ಎನ್ನುವದೇ ನಿರಂತರ ಒಡೆದುಕೊಳ್ಳುವ ಗುಣಕದಂತಿರುವಾಗ (ಅಥವಾ ಕವಲು ಕವಲಾಗಿ ಒಡೆದುಕೊಳ್ಳುವ ಮರದ ಟೊಂಗೆಗಳಂತಿರುವಾಗ) ದ್ರವೀಕೃತ ಪರಿಭಾಷೆಯನ್ನು ಎಲ್ಲಿ ಹೇಗೆ ಬಳಸಬೇಕೆಂಬುದು ಯಾವಾಗಲೂ ತೊಡಕಿನ ಸಂಗತಿ. ಡಯಾಸ್ಪೊರ ಹಲವು ಸಂಸ್ಕೃತಿಗಳನ್ನು ಒಮ್ಮೆಗೇ ಹಾದುಹೋಗುವ ವಿಚಿತ್ರ ಸಂದರ್ಭದಲ್ಲಿ ಹುಟ್ಟುವುದರಿಂದ ಅದರ ಸಂಕೀರ್ಣತೆ ಮನಗಾಣುವುದು ಕಷ್ಟಸಾಧ್ಯವೇ. ಆದರೆ ಅದನ್ನು ಸ್ಥಾನ ಪಲ್ಲಟಗಳ ಚಲನೆಯನ್ನು ಗುರುತಿಸುವ ಪದವಾಗಿ, ಪಲ್ಲಟಗೊಳ್ಳುತ್ತಲೇ ಇರುವ ಗುಂಪನ್ನು ಸೂಚಿಸುವ ಪದವಾಗಿ ಬಳಸಲಾಗುತ್ತಿದೆ ಎನ್ನುವುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗುತ್ತದೆ. ಡಯಾಸ್ಪೊರಾ ಎಷ್ಟು ಅಸಂಗತ ಸಂಗತಿಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ ಎಂದರೆ ಅದು ಒಂದೆಡೆ ಜಾಗ/ಪ್ರದೇಶಗಳ ವ್ಯಾಪ್ತಿ ಪ್ರದೇಶಗಳ ಬಗ್ಗೆ ಮಾತನಾಡುತ್ತದೆ; ಇನ್ನೊಂದೆಡೆ, ಜನಾಂಗೀಯ/ಭಾಷಿಕ ಸಂದರ್ಭಗಳಲ್ಲಿ ಅಖಿಲ ಜಾಗತಿಕ ವ್ಯಾಪ್ತಿಯನ್ನು ತೋರ್ಪಡಿಸುಂಥದು. ಆದ್ದರಿಂದಲೇ ಇವನ್ನು ಆಯಾ ತಲೆಬರಹದಡಿಗೆ ಚರ್ಚಿಸುವುದೇ ಸೂಕ್ತ ಎನ್ನಿಸುತ್ತದೆ.

ಹಿನ್ನೆಲೆಯಲ್ಲಿ ಭಾರತೀಯ ಡಯಾಸ್ಪೊರಾವನ್ನು ನೋಡಬೇಕಿದೆ. ಪ್ರಕಾಶಿಸುತ್ತಿರುವ ಭಾರತದ ಹೊಸ ಚಿತ್ರವೊಂದು ತೊಂಬತ್ತರ ನಂತರದ ದಶಕಗಳಲ್ಲಿ ಕಾಣಿಸತೊಡಗಿದೆ. ಇಂದು ಭಾರತೀಯರನ್ನು ಜಗತ್ತು ವಿಶೇಷವಾಗಿ ಗಮನಿಸುತ್ತಿದೆ. ಭಾರತೀಯ ಸಿನಿಮಾ, ಭಾರತೀಯ ಊಟೋಪಚಾರಗಳು, ಭಾರತೀಯ ಯೋಗ/ಅಧ್ಯಾತ್ಮಗಳೆಲ್ಲಾ ಹೆಸರು ಮಾಡುತ್ತಿವೆ. ಟೆಕ್ಕಿಗಳನ್ನು ಹೊಂದಿದ ದೇಶ ಎಂದೂ ಅದಕ್ಕೆ ಮಾನ್ಯತೆ ಸಿಗುತ್ತಲಿದೆ. ಇದನ್ನು ನೋಡಿದರೆ ಸಾಗರೋಲ್ಲಂಘನೆಯಿಂದ ಭಾರತೀಯತೆಗೇ ಒಂದು ಹೊಸ ವ್ಯಾಖ್ಯಾನ ಸಿಗುವಂತಾಗಿದೆ ಎನ್ನಿಸುತ್ತಿದೆ. ಆದ್ದರಿಂದಲೇ ಭಾರತೀಯ ಡಯಾಸ್ಪೊರಾ ಎನ್ನುವುದು ಇಂದು ಆಸಕ್ತಿಯ ವಿಷಯವಾಗಿದೆ. ಇತರೆ ಎಲ್ಲಾ ಡಯಾಸ್ಪೊರಾಗಳಿಗಿಂತ ಇನ್ನಷ್ಟು ಬಹುರೂಪತೆ, ಸಂಕರಗಳನ್ನು ಹೊಂದಿರುವ ಭಾರತೀಯ ಡಯಾಸ್ಪೊರಾ ವೈವಿಧ್ಯತೆಯ ಹೊಸ ಪರಿಭಾಷೆಯಾಗಿ ಬಳಕೆಯಾಗುತ್ತಾ ಆಧುನಿಕೋತ್ತರ ಕಾಲದ ಚರ್ಚೆಯಲ್ಲಿ ಮಹತ್ವ ಪಡೆದುಕೊಂಡಿದೆ.

ಎಂಬತ್ತೇಳು ದೇಶಗಳಲ್ಲಿ ಭಾರತೀಯ ಡಯಾಸ್ಪೊರಿಗರು

ಜಗತ್ತಿನಾದ್ಯಂತ ಇಂದು ಭಾರತೀಯ ಡಯಾಸ್ಪೊರಿಗರು ಇಪ್ಪತ್ತು ಮಿಲಿಯನ್ನಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಇಂದು ಜಗತ್ತಿನಾದ್ಯಂತ ೮೭ಕ್ಕೂ ಹೆಚ್ಚಿನ ದೇಶಗಳಲ್ಲಿ ಭಾರತೀಯ ಡಯಾಸ್ಪೊರಿಗರಿದ್ದಾರೆ. ಅವರೆಲ್ಲರನ್ನು ಒಂದು ಅಧ್ಯಯನದ ಅಡಿಯಲ್ಲಿ ತರುವುದು ಸಾಧ್ಯವೇ ಇಲ್ಲ ಎನ್ನುವಷ್ಟು ವೈವಿಧ್ಯತೆಗಳು ಅವರಲ್ಲಿವೆ. ಕೆಲವೊಮ್ಮೆ ಭಾರತೀಯತೆ ಎನ್ನುವುದೇ ಮಸಕಾಗಿ ಹೋಗಿರುವುದೂ ಉಂಟು. ಕೆಲವು ಭಾರತೀಯ ಡಯಾಸ್ಪೊರಿಗರು ತಮ್ಮನ್ನು ಭಾರತೀಯ ಎಂದು ಕರೆದುಕೊಳ್ಳುವುದೇ ಇಲ್ಲ. ಡಯಾಸ್ಪೊರಾ ಅಧ್ಯಯನ ಆರಂಭವಾದಾಗಿನಿಂದ ಭಾರತೀಯ ಡಯಾಸ್ಪೊರಾವನ್ನು ರಾಜಕೀಯ ಮತ್ತು ಸಾಂಸ್ಕೃತಿಕ ಕಾರಣಗಳ ದೃಷ್ಟಿಕೋನದಿಂದ ಅಭ್ಯಾಸ ಮಾಡಲಾಗುತ್ತಿದೆ. ಇಂದು ಭಾರತೀಯ ಡಯಾಸ್ಪೊರಿಗರ ಆದಾಯ ಹೆಚ್ಚಿದೆ. ಅವರು ನೆಲೆಸಿರುವ ದೇಶಗಳಲ್ಲಿ ಅವರು ಸಮೃದ್ಧಿಯ ಸ್ಥಿತಿಯಲ್ಲಿದ್ದಾರೆ. ಉನ್ನತ ಶಿಕ್ಷಣ, ಉನ್ನತ ತಾಂತ್ರಿಕ ಹುದ್ದೆಗಳನ್ನು ಭಾರತೀಯ ಡಯಾಸ್ಪೊರಿಗರು ಪಡೆದುಕೊಂಡಿದ್ದಾರೆ. ಭಾರತೀಯ ಡಯಾಸ್ಪೊರಾ ಇಂದು ಬಹುದೊಡ್ಡ ಡಯಾಸ್ಪೊರಾ ಆಗಿ ಹೊರಹೊಮ್ಮಿದ್ದರೂ ಅದರ ಸಂಸ್ಕೃತಿ ಮಧ್ಯಮವರ್ಗದ ಸಂಸ್ಕೃತಿ ಎಂಬಂತಾಗಿದೆ. ಭಾರತೀಯರು ಮೂಲತಃ ವಲಸೆಯ ಪ್ರವೃತ್ತಿ ಹೊಂದಿದವರಲ್ಲ. ಆದರೂ ಅವರೇ ಇಂದು ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗುತ್ತಿರುವುದಕ್ಕೆ ಆಧುನಿಕ ಆರ್ಥಿಕ ಬದಲಾವಣೆಗಳೇ ಕಾರಣವಿರಬಹುದೆಂದು ಊಹಿಸಲಾಗಿದೆ.

ಭಾರತೀಯ ಡಯಾಸ್ಪರವನ್ನು ಯಾವ ದೃಷ್ಟಿಕೋನಗಳಿಂದ ನೋಡಬಹುದು ? ಮೊದಲನೆಯದಾಗಿಭಾರತದ ರಾಜಕೀಯ ಡಯಾಸ್ಪೊರಾವನ್ನು ನೋಡುವ ರಾಜಕೀಯ ದೃಷ್ಟಿಕೋನ. ಎರಡನೆಯದಾಗಿ ಡಯಾಸ್ಪೊರಿಗರಾದ ಭಾರತೀಯರು ಭಾರತ ಮತ್ತು ಭಾರತೀಯತೆಯನ್ನು ನೋಡುವ ದೃಷ್ಟಿ. ಮೂರನೆಯದಾಗಿ, ಭಾರತೀಯ ಸಂಸ್ಕೃತಿ ಎನ್ನುವುದು ಆರ್ಥಿಕ ಉತ್ಪಾದನೆಯಾಗಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ಭಾರತೀಯ ಡಯಾಸ್ಪೊರಾ ಕಾಣುವ ಬಗೆ. ದೃಷ್ಟಿಕೋನಗಳಿಂದ  ನಮಗೆ ಭಾರತೀಯ ಡಯಾಸ್ಪೊರಾದ ನಾನಾ ಆಯಾಮಗಳು ದೊರೆಯಬಹುದು.

ಸ್ವಾತಂತ್ರ್ಯಾ ನಂತರ ಡಯಾಸ್ಪೊರಾ ಚಟುವಟಿಕೆ ಭಾರತದಲ್ಲಿ ಹೆಚ್ಚಾಗಿದೆ. ಭಾರತದ ಡಯಾಸ್ಪೊರಿಗರು ತಮ್ಮದೇ ಆದ ಅಸ್ಮಿತೆಯನ್ನು ಪಡೆದುಕೊಂಡಿದ್ದಾರೆ. ಪಾಶ್ಚಾತ್ಯ ಸಮಾಜಗಳಲ್ಲಿ ಭಾರತೀಯ ಡಯಾಸ್ಪೊರಾವನ್ನು ಪ್ರೋತ್ಸಾಹಕ ದೃಷ್ಟಿಯಿಂದ ನೋಡಲಾಗುತ್ತಿದೆ. ಭಾರತೀಯತೆಯ ಹೊಸ ವ್ಯಾಖ್ಯಾನಗಳನ್ನು ಅವು ಉತ್ಸಾಹದಿಂದಲೇ ಸ್ವಾಗತಿಸುತ್ತಿವೆ. ಲೇಖಕ ಅಮಿತವ್ ಘೋಷ್ ಪ್ರಕಾರ ಹತ್ತೊಂಬತ್ತನೆಯ ಶತಮಾನದ ಮೊದಲ ಭಾಗದಲ್ಲಿ ಆರಂಭವಾದ ಭಾರತೀಯರ ವಲಸೆ ಒಂದು ಆಧುನಿಕ ಕಾಲದ ಮುಖ್ಯವಾದ ಜನಸಂಖ್ಯಾ ಸ್ಥಾನಾಂತರವಾಗಿದೆ. ಇದೀಗ ಭಾರತೀಯ ಸಂಸ್ಕೃತಿವಿಶ್ವಸಂಸ್ಕೃತಿಯಾಗುತ್ತಿದೆ. ಭಾರತದ ಬಗ್ಗೆ ಹೊರಗಿನ ಆಸಕ್ತಿಗಳು ಅನಿವಾಸಿ ಭಾರತೀಯರನ್ನು ಮತ್ತು ಸ್ವದೇಶದಲ್ಲಿರುವ ಭಾರತೀಯರನ್ನು ಏಕ ಕಾಲಕ್ಕೆ ಆಸಕ್ತಿಯಿಂದ ಗಮನಿಸುವಂತೆ ಮಾಡುತ್ತಿವೆ. ಭಾರತ ಸರ್ಕಾರ ಇಂದು ತನ್ನ PIO (People of Indian Origin) ಮತ್ತು NRI, ಅನಿವಾಸಿಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಅವರನ್ನು ಆದರದಿಂದ ನೋಡಬಯಸುತ್ತಿದೆ. ಕ್ರಿಯೆಯು ಸ್ಪೇನ್ ಮತ್ತು ಪೋರ್ಚಗಲ್ ದೇಶಗಳಲ್ಲಿ ಭೂಪ್ರದಕ್ಷಿಣೆಗೆ ನಾವಿಕರಿಗೆ ಆಯಾ ದೇಶದ ರಾಜರುಗಳು ಕೊಡುತ್ತಿದ್ದ ಪ್ರೋತ್ಸಾಹವನ್ನು ಹೋಲುತ್ತದೆ.

ಭಾರತೀಯ ಡಯಾಸ್ಪೊರಿಗರಿಗೆ ಜಗತ್ತಿನಾದ್ಯಂತ ಮಾನ್ಯತೆ ದೊರೆಯುತ್ತಿರುವ ಕಾರಣಗಳಾದರೂ ಏನು? ಹಾವಾಡಿಗರ, ಮಾಟಗಾರರ ದೇಶವೆನಿಸಿದ್ದ ಭಾರತಕ್ಕೆ ಇದ್ದಕ್ಕಿದ್ದಂತೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿರುವುದೇಕೆ? ಅಲೆ ಆರ್ಥಿಕತೆಯ ಪರಿಣಾಮವೇ ಅಥವಾ ಸಾಂಸ್ಕೃತಿಕ ಅಭಿರುಚಿಗಳ ಬದಲಾವಣೆಯೇ? ವಿದ್ವಾಂಸರು ಹೇಳುವಂತೆ ಭಾಷಿಕವಾಗಿ ಇಂಗ್ಲಿಷ್ ಸಾಧಿಸಿದ ಯಶಸ್ಸು ಭಾರತೀಯ ಭಾಷೆಗಳಿಗೆ ಲಭಿಸಿಲ್ಲ. ಅಧಿಕಾರ, ಸ್ಥಾನಮಾನಗಳು ಧರ್ಮ ಯಾವುದರಿಂದಲೂ ಭಾರತೀಯರಿಗೆ ಉನ್ನತ ಸ್ಥಾನಮಾನ ಸಿಕ್ಕಿಲ್ಲ ಆದರೆ ಭಾರತೀಯರಿಗೆ ವಿಶಿಷ್ಟವಾದಸಂಸ್ಕೃತಿಅವರಿಗೆ ಜಗತ್ತಿನಲ್ಲಿಯೇ ವಿಶಿಷ್ಟ ಸ್ಥಾನವನ್ನು ಒದಗಿಸುತ್ತಿದೆ. ಭಾರತೀಯ ಸಂಸ್ಕೃತಿ ಎಂಬುದರ ಸುತ್ತ ಇಂದು ದಿವ್ಯ ಪ್ರಭಾವಳಿ ಇದೆ ಎನ್ನುವುದನ್ನಂತೂ ಮರೆಯಲಾಗದು.

ಭಾವೋದ್ದೀಪಕ “ಭಾರತೀಯ ಸಂಜಾತ’  

ಭಾರತೀಯ ಸಂಜಾತ‘ (Persons of Indian Origin) ಎಂಬ ಪದವು ಇತ್ತೀಚೆಗೆ ಚಲಾವಣೆಯಲ್ಲಿದೆ ಪದ ಹೆಚ್ಚು ಗೌರವಾನ್ವಿತವೂ, ನಮ್ಮದೆನ್ನುವ ಭಾವವನ್ನು ಉದ್ದೀಪಿಸುವಂಥದ್ದೂ ಆಗಿದೆ. ಭಾರತೀಯ ಹಿನ್ನೆಲೆಯುಳ್ಳ ಗುಂಪಿನವರಲ್ಲಿ ಇರಬಹುದಾದ ತಾಯ್ನಾಡಿನ ತುಡಿತ ಅದೇ ಪ್ರಮಾಣದಲ್ಲಿ ಸ್ವದೇಶೀ ಭಾರತೀಯರಲ್ಲಿ ಕಾಣುತ್ತಿದೆ. ಅಮರ್ತ್ಯ ಸೇನ್ರಿಗೆ ನೊಬೆಲ್ ಬಂದಾಗ, ತಾಂತ್ರಿಕವಾಗಿ ಪೌರತ್ವದ ದೃಷ್ಟಿಯಿಂದ ಅದು ಭಾರತಕ್ಕೆ ಸೇರಿದ್ದಾಗಿರಲಿಲ್ಲ. ಆದರೆಭಾರತೀಯ ಸಂಜಾತಪದದಿಂದ ಅವರ ನೊಬೆಲ್ ಬಹುಮಾನದ ಸಂಭ್ರಮ ಭಾರತೀಯರಿಗೆ ಆಯಿತು. ಸುನೀತಾ ವಿಲಿಯಮ್ಸ್, ಕಲ್ಪನಾ ಚಾವ್ಲಾ ಅವರ ಸಾಧನೆ ನಮ್ಮದೆನ್ನಿಸಿತು. ವಿದೇಶಗಳಲ್ಲಿ ಅಧಿಕಾರ ಹಿಡಿಯುವುದು ಅಮೆರಿಕಾ, ಇಂಗ್ಲೆಂಡ್ಗಳಲ್ಲಿ ಯಶಸ್ವೀ ಉದ್ಯಮಿಯಾಗುವುದು, ಬಾಲಿವುಡ್ ನಟ/ನಟಿಯರು ಹಾಲಿವುಡ್ನಲ್ಲಿ ಅವಕಾಶ ಗಿಟ್ಟಿಸುವುದು ಭಾರತೀಯರಿಗೆ ಇಂದು ಹೆಮ್ಮೆಯ ವಿಷಯವಾಗಿದೆ. ಅಷ್ಟೇ ಅಲ್ಲ ಸಂಗತಿಗಳುಭಾರತೀಯರನ್ನು ಎತ್ತಿಹಿಡಿಯುವ ಸಂಗತಿಗಳೂ ಆಗುತ್ತಲಿವೆ. ಭಾರತೀಯ ಸಂಜಾತ (PIO) ಮತ್ತು  ಅನಿವಾಸಿ ಭಾರತೀಯರು (NonResidents of India) ಇಂದು ಸಾಗರೋತ್ತರ ವ್ಯವಹಾರಗಳಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತಿದ್ದಾರೆ. ಪ್ರಾಮುಖ್ಯ ಸ್ವದೇಶದಲ್ಲಿಯೂ ಪ್ರತಿಫಲಿಸುತ್ತಿದೆ ಎನ್ನುವುದು ಮುಖ್ಯವಾದ ಸಂಗತಿ.

ಜಟಿಲ ಆಂತರಿಕ ಅಸ್ಮಿತೆಗಳು

ಭಾರತೀಯ ಡಯಾಸ್ಪೊರಾ ಇದೆ ಎನ್ನುವುದಾದರೆ ಅದು ಯಾವು ರೂಪದ್ದು? ಅದರ ಭಾರತೀಯತೆಯನ್ನು ಹೇಗೆ ಅರ್ಥೈಸುವುದು ಎಂಬ ಪ್ರಶ್ನೆಗಳು ಹುಟ್ಟುತ್ತವೆ. ಭಾರತೀಯ ಡಯಾಸ್ಪೊರಾ ಜಗತ್ತಿನಾದ್ಯಂತ ಹರಡಿರುವುದಾದರೂ, ಎಲ್ಲೆಡೆ ಭಾರತೀಯರಿದ್ದರೂ ಅವರ ಒಳಗಿನ ಅಸ್ಮಿತೆಗಳು (ಧಾರ್ಮಿಕ, ಭಾಷಿಕ, ಪ್ರಾದೇಶಿಕ ಅಸ್ಮಿತೆಗಳು) ಅವರನ್ನು ಕೆಲವು ಸ್ಥಳಗಳಿಗೆ ಸೇರಿಸುತ್ತವೆ. ತಮಿಳರ ಸಂಖ್ಯೆ ಗಡಾಪಿಯೋದಲ್ಲಿ ಅಧಿಕವಾಗಿದೆ. ಹಾಗೆಯೇ ಹಿಂದಿ ಭಾಷಿಕರು ಮಾರಿಷಸ್ನಲ್ಲಿದ್ದಾರೆ, ಹಾಂಗ್ಕಾಂಗ್, ಸುರಿನಾಮ್ಗಳಲ್ಲಿ ಮುಸ್ಲಿಮರಿದ್ದಾರೆ, ಕೆನಡಾ ಮತ್ತು ಮೆಕ್ಸಿಕೋಗಳಲ್ಲಿ ಸಿಖ್ಖರು ಇದ್ದಾರೆಇವರನ್ನು ಒಟ್ಟಾಗಿ ಭಾರತೀಯರೆಂದು ಗುರುತಿಸಿದರೂ, ಅವರ ಪ್ರಾದೇಶಿಕ ಪರಿಸರ, ಭಾಷಿಕ ಪರಿಸರ, ಕೊನೆಗೆ ಜಾತಿ/ಧರ್ಮ ಪರಿಸರಗಳು ಅವರನ್ನು ಪ್ರತ್ಯೇಕ ಮೀಟಿಂಗ್ ಲೈನ್ -ಕೂಡುಗೆರೆಯತ್ತ ಕೊಂಡೊಯ್ಯುತ್ತವೆ. ಇದರ ಜೊತೆಗೆ ವಲಸಿಗರಲ್ಲಿ ಒಂದೇ ಕಡೇ ವಲಸೆ ಬಂದು ನೆಲಸಿದವರ ಡಯಾಸ್ಪೊರಿಗರ ಅನುಭವಗಳಿಗೂ, ಹಲವು ಕಡೆ ಸಂಚರಿಸುವ ವಲಸಿಗರ ಅನುಭವಗಳಿಗೂ ಭಿನ್ನತೆ ಇದೆ ಎಂದು ಈಗಾಗಲೇ ಗುರುತಿಸಲಾಗಿದೆ. ಉದಾಹರಣೆಗೆಭಾರತೀಯ ಕೂಲಿಗಳಾಗಿ ಪ್ಲಾಂಟೇಷನ್ ದ್ವೀಪಗಳಿಗೆ ಬಂದವರು ವಲಸೆ ಬಂದ ಜನಾಂಗವಾಗಿದ್ದಾರೆ; ಆಫ್ರಿಕಾ ದಂಡೆಯಿಂದ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಅಮೆರಿಕಾಗಳತ್ತ ಚಲಿಸುತ್ತಿದ್ದಾರೆ. ಸಂಚಾರದಲ್ಲಿ ಇವರ ಭಾರತೀಯತೆಯ ಅಂಶ ಮಸುಕಾಗುತ್ತಾ ಬಂದಿದ್ದು, ಇವರ ಮೂಲವನ್ನು ಹುಡುಕುವುದು ಅಸಂಗತವೆನಿಸುವ ಪರಿಸ್ಥಿತಿಯಿದೆ. ಆದರೆಭಾರತೀಯಎನ್ನುವ ಪದ ವಿದೇಶಗಳಲ್ಲಿ ಸಡಿಲವಾದ ಪದ. ಅದನ್ನು ಬಳಸುವವರು ಭಾರತೀಯ ನಿರ್ದಿಷ್ಟತೆಗಳ ಕಡೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ವಲಸಿಗರಾಗಿ ಹೋಗಿ ನೆಲೆನಿಂತಿರುವ ಭಾರತೀಯರಲ್ಲಿ ಡಯಾಸ್ಪೊರಿಗರ ಸಂವೇದನೆಗಳು ಸಹ ಬದಲಾಗುತ್ತಿರುತ್ತವೆ. ಭಾರತೀಯ ಡಯಾಸ್ಪೊರಾದಲ್ಲಿ ಯಹೂದಿ ಡಯಾಸ್ಪೊರಾದಂತೆ ಏಕ ರೂಪತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತೀಯತೆ ಎನ್ನುವುದು ಯಾವಾಗಲೂ ಏಕ ರೂಪವಾದುದಾಗಿರುವುದಿಲ್ಲ. ಅದೊಂದು ಕುಲಾಂತರಿ ಮೆಕ್ಕೆ ಜೋಳವನ್ನು ಹೋಲುವ ಅಸ್ಮಿತೆ.

ವಸಾಹತುಶಾಹಿ ಸಂಕಥನವನ್ನು ಒಡೆದ ಬಗೆ

ಅಲ್ಪಸಂಖ್ಯಾತ, ಬಹುಸಂಖ್ಯಾತ, ಲಿಂಗ, ಭಾಷೆ-ಹೀಗೆ ಹಲವಾರು ಒಳ ಅಸ್ಮಿತೆಗಳು ಭಾರತೀಯ ಡಯಾಸ್ಪೊರಾದಲ್ಲಿ ಬಹು ದನಿಯನ್ನು ಸೃಷ್ಟಿಸುತ್ತವೆ. ಇವು ಅರಾಜಕವೆನ್ನುವಂತೆ, ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿರುವಂತೆ ಕಾಣಬಹುದು. ಆದರೆ, ಸಂಬಂಧಗಳ ತಂತುಗಳು ಹಿಡಿದುಕೊಂಡ ದಾರಗಳ ಎಳೆಗಳಲ್ಲಿ ಅವುಗಳಲ್ಲಿ ಬೆಸುಗೆ ಇದೆ. ಭಾರತೀಯತೆಯನ್ನು ರಾಷ್ಟ್ರೀಯತೆಯ ಸಂಬಂಧದಲ್ಲಿ ಹೇಗೆ ಒಮ್ಮುಖವಾಗಿ ಗ್ರಹಿಸಲಾಯಿತೋ ಹಾಗೆ, ಭಾರತೀಯ ಡಯಾಸ್ಪೊರಾದಲ್ಲಿಯೂ, ರಾಷ್ಟ್ರೀಯತೆಯ ಹುಮ್ಮಸ್ಸು ಏಕ ಮುಖವಾಗಿದೆ. ಒಂದು ದೃಷ್ಟಿಯಿಂದ ಭಾರತೀಯ ಡಯಾಸ್ಪೊರಾ ವಸಾಹತುಶಾಹಿ ಸಂಕಥನವನ್ನು ಒಡೆದಿದೆ. ದೇಶಿ ರೂಪಗಳನ್ನು ವಸಾಹತುಶಾಹಿ ತನ್ನ ಪ್ರತಿರೂಪಗಳನ್ನಾಗಿ ಮಾರ್ಪಡಿಸುವ ತಂತ್ರ ರೂಪಿಸಿದರೆ, ವಿದೇಶಿ ವಲಸೆಗಾರರು ವಸಾಹತುಶಾಹಿಯ ರೂಪಗಳನ್ನೇ ಜೀರ್ಣಿಸಿಕೊಂಡರು. ಸಾಮ್ರಾಜ್ಯಶಾಹಿ ಕಥನ ನಗರೀಕರಣದಿಂದ, ಆಧುನಿಕತೆಯಿಂದ ಕಟ್ಟಲ್ಪಟ್ಟಿದ್ದರೆ, ಅದನ್ನು ಭಾರತೀಯ ಡಯಾಸ್ಪೊರಾ ಮೆಟ್ಟಿನಿಲ್ಲುವಂತೆ, ಜೀರ್ಣಶಕ್ತಿಯನ್ನು ರೂಢಿಸಿಕೊಂಡಿದ್ದು ಸವಾಲೇ ಸರಿ. ಇಂದು ಪಾಶ್ಚಾತ್ಯ ಜ್ಞಾನಶಿಸ್ತುಗಳನ್ನು ರೂಢಿಸಿಕೊಂಡು, ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಿರುವುದು ಭಾರತೀಯರೇ.

ಭಾರತೀಯ ಡಯಾಸ್ಪೊರಾವನ್ನು ಮಧ್ಯಮವರ್ಗದ ವಲಸೆ ಮತ್ತು ಕೂಲಿಕಾರ್ಮಿಕರ ವಲಸೆ ಎಂಬುದಾಗಿ ಎರಡು ಬಗೆಯಲ್ಲಿ ವಿಂಗಡಿಸಬಹುದು. ವಸಾಹತುಪೂರ್ವ ಮತ್ತು ವಸಾಹತೋತ್ತರ ವಲಸೆ ಎಂದು ಸಹ ಭಾರತೀಯ ಡಯಾಸ್ಪೊರಾವನ್ನು ವಿಭಾಗಿಸಬಹುದು. ವಸಾಹತು ಪೂರ್ವ ವಲಸೆಗಳು ಕರಾರುಬದ್ಧ ಕೂಲಿಗಳದಾದರೆ, ವಸಾಹತೋತ್ತರ ಭಾರತದಿಂದ ಪಾಶ್ಚಾತ್ಯ ದೇಶಗಳಿಗೆ ವಲಸೆ ಹೋದವರು ಕೌಶಲವುಳ್ಳ ವೃತ್ತಿಪರರಾದ ಎಂಜಿನಿಯರುಗಳು ಮತ್ತು ವೈದ್ಯರುಗಳು ಇತ್ಯಾದಿ. ಅಷ್ಟೇನೂ ಕೌಶಲಪೂರ್ಣರಲ್ಲದ ಕೆಲಸಗಾರರು ಪಶ್ಚಿಮ ಏಷ್ಯಾದ ಕಡೆ ಚಲಿಸಿದರು. ಆಂಗ್ಲೋ-ಇಂಡಿಯನ್ನರು ಆಸ್ಟ್ರೇಲಿಯಾ ಕಡೆ ವಲಸೆ ಬಂದರು.

ಮಸುಕಾದ ತಾಯ್ನಾಡಿನ ಕಲ್ಪನೆ

ಭಾರತೀಯರು ಯಾವ ವಿದೇಶಿ ನೆಲದಲ್ಲಿ ಡಯಾಸ್ಪೊರಿಗರಾಗಿದ್ದಾರೆ ಎನ್ನುವುದರ ಮೇಲೆ ಅವರ ಭಾರತೀಯತೆಯನ್ನು ಆಯಾ ದೇಶಕಾಲಗಳಲ್ಲೇ ಅನ್ವೇಷಿಸಿಕೊಳ್ಳಬೇಕಾದ ಒತ್ತಡವಂತೂ ಭಾರತೀಯ ಡಯಾಸ್ಪೊರಿಗರಿಗೆ ಇರುತ್ತದೆ. ಉದಾಹರಣೆಗೆ, ಪ್ಲಾಂಟೇಶನ್ ಕೂಲಿಗಳಾಗಿ ವಿದೇಶಗಳಿಗೆ ವಲಸೆ ಬಂದವರಲ್ಲಿ ದ್ವಿರುಕ್ತಿ ವಲಸೆಗಳನ್ನು ಕಾಣಬಹುದು. ಕೂಲಿಗಳಾಗಿ ಬಂದ ಭಾರತೀಯರು ಸಂಬಂಧಪಟ್ಟ ವಿದೇಶಿ ನೆಲದಲ್ಲಿ  ಶಾಶ್ವತವಾಗಿ ನೆಲೆಸಲಿಲ್ಲ. ಅಲ್ಲಿಂದ ಅನೇಕ ಪಾಶ್ಚಿಮಾತ್ಯ ದೇಶಗಳಿಗೆ ವಲಸೆ ಹೋಗಲಾರಂಭಿಸಿದರು. ಕ್ರಿಯೆಯಲ್ಲಿ ಅವರು ತಮ್ಮ ಮೂಲಗಳನ್ನೇ ಮರೆತರು. ಅವರು ಭಾರತೀಯ ಅಸ್ಮಿತೆ ವಿಸ್ಮೃತಿಗೆ ಸರಿಯಿತು. ಭಾರತೀಯತೆಯ ಚಹರೆಯನ್ನು ಅಲ್ಪಸ್ವಲ್ಪ ಉಳಿಸಿಕೊಂಡಂತಿರುವ ಬಗೆಯ ಭಾರತೀಯ ಡಯಾಸ್ಪೊರಿಗರು ಭಾರತೀಯತೆ ಎನ್ನುವುದರ ವಿಶ್ಲೇಷಣೆಗೆ ಅಷ್ಟಾಗಿ ಆಸಕ್ತಿ ತೋರುವುದಿಲ್ಲ. ಜೊತೆಗೆ ಅವರಿಗೆಮನೆಗೆ ಮರಳುವಿಕೆ ಹಂಬಲ, ತಹತಹ ಉಳಿದಿಲ್ಲ. ಅವರ ಪೂರ್ವಜರ ನೆನಪುಗಳು ಕೂಡಾ ಸದಾ ಚಲನೆಯ ಸ್ಥಿತಿಯಲ್ಲಿರುವುದರಿಂದ, ತಲೆಮಾರಿನವರಿಗೂ ತಾಯ್ನಾಡಿನ ಕಲ್ಪನೆ ಮಸುಕಾಗಿರುತ್ತದೆ. ಆದರೆ ಇವರನ್ನು ವಿದೇಶಗಳಲ್ಲಿಭಾರತೀಯಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಇದೊಂದು ವಿಪರ್ಯಾಸ. ಪದದ ಅರ್ಥ, ಭಾವಗಳಿಗೆ ಹೊರತಾದ ಭಾರತೀಯ ವಲಸಿಗರನ್ನು ಹೆಸರಿನಿಂದ ಕೂಗುವುದೇ ಒಂದು ವ್ಯಂಗ್ಯ ಎನ್ನಿಸುತ್ತದೆ. ಆದ್ದರಿಂದ ಭಾರತೀಯ ಡಯಾಸ್ಪೊರಾಕ್ಕೆ ಎರಡು ಛಾಯೆಗಳಿವೆ- ಕೂಲಿಕಾರರ ಜನಾಂಗಗಳ ಸಂಸ್ಕೃತಿಯನ್ನು ಹೊತ್ತ ಡಯಾಸ್ಪೊರಾ, ಇನ್ನೊಂದು ಸಿರಿವಂತಿಕೆಯನ್ನು ಹೊತ್ತ ಡಯಾಸ್ಪ್ಪೊರ. ಇವೆರಡೂ ಸಂಸ್ಕೃತಿಯ ಅನುಸಂಧಾನ ಮಾಡುವ ಬಗೆ ವಿಭಿನ್ನವಾಗಿವೆ. ಭಾರತೀಯ ವಲಸಿಗ ಕೂಲಿಕಾರರ ಚರಿತ್ರೆ ಹೆಚ್ಚು ಕಡಿಮೆ ಆಫ್ರಿಕಾ ವಲಸಿಗರ ಚರಿತ್ರೆಗೆ ಹತ್ತಿರವಿದೆ. ವಸಾಹತು ಕಾಲದಲ್ಲಿ ವಿದೇಶಗಳಿಗೆ ಹೋದ ಭಾರತೀಯರಿಗೂ ವಸಾಹತೋತ್ತರ ಕಾಲದಲ್ಲಿ ವಲಸೆ ಹೋದವರಿಗೂ ಹೋಲಿಕೆ ಮಾಡುವಂತಿಲ್ಲ ನಿಜ, ಆದರೆ, ಹೊಟ್ಟೆ ಪಾಡಿಗಾಗಿ, ಉಳಿವಿಗಾಗಿ ದೇಶಾಂತರ ಬಂದ ಸಾಧಾರಣ ಮನುಷ್ಯರು ವಲಸಿಗ ದೇಶಗಳಲ್ಲಿ ನೆಲೆನಿಂತ ಸಾಹಸಗಾಥೆs ಹೂವಿನ ದಾರಿಯದಲ್ಲ ಎಂದು ಮಾತ್ರ ಹೇಳಬಹುದು.

ಅಲ್ಲಿರುವುದು ನಮ್ಮ ಮನೆಇಲ್ಲಿದ್ದೇವೆ ಸುಮ್ಮನೆ

ಭಾರತೀಯ ಡಯಾಸ್ಪೊರಾದಲ್ಲಿ ಹಳೆಯ ಮತ್ತು ಹೊಸ ಡಯಾಸ್ಪೊರಾಗಳೆಂದು ಎರಡು ಹಂತಗಳಿವೆ. ಹಳೆಯ ಡಯಸ್ಪೊರಾದಲ್ಲಿ ಭಾರತ ಅಂದರೆ ತಾಯ್ನಾಡಿನ ನೆನಪುಗಳು ಜೀವಂತವಿರುತ್ತವೆ, ಮನೆಯ ಚಿತ್ರಣ ಆಪ್ತವಾಗಿರುತ್ತದೆ. ಆದರೆ ಹೊಸ ಡಯಾಸ್ಪೊರಾವು, ವಿಜಯ್ಮಿಶ್ರಾ ಹೇಳುವಂತೆ, ತುಂಬಾ ಸಂಕೀರ್ಣವಾದ ಸಮುದಾಯವಾಗಿದ್ದು  ಒಳಗೊಳಗೇ ಹಲವಾರು ಬಿರುಕುಗಳುಳ್ಳ ಭಾರತೀಯರನ್ನು ಒಳಗೊಂಡಿರುವಂಥದ್ದು. ಡಯಾಸ್ಪೊರಿಗರಲ್ಲಿ  ಅಮೆರಿಕಾ, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ನೆಲೆನಿಂತವರು, ಸಾಮಾನ್ಯವಾಗಿ ಭಾರತದ ಜೊತೆ ಸಂಪರ್ಕ ಸಾಧಿಸಲು ವಿಮಾನ ಪ್ರಯಾಣ, ವಿಡಿಯೊ, ಫಿಲಂಗಳು ಮತ್ತು ಡಿಜಿಟಲ್ ತಾಂತ್ರಿಕತೆಗಳನ್ನು ಉಪಯೋಗಿಸುತ್ತಾ ಕೆಲ ವೇಳೆ ಕ್ಷೆಭೆಗೊಂಡಂತೆ, ಮತ್ತೆ ಕೆಲ ಸಮಯ ಸಂತೃಪ್ತಿಗೊಂಡಂತೆ ಕಾಣುತ್ತಿರುವವರುಇದೊಂದು ಹೊಸ ಬಗೆಯ ಜನಾಂಗೀಯತೆ ಎಂದು ಮಿಶ್ರಾ ಹೇಳುತ್ತಾರೆ.

ಸದಾ ಚಲಿಸುತ್ತ ಸಾಧಿಸಿದ ಸಮನ್ವಯ

ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಭಾರತೀಯ ಡಯಾಸ್ಪೊರಾ ಎನ್ನುವುದು ಒಮ್ಮೆಗೇ ಆದ ಸಾಮೂಹಿಕ ವಲಸೆಯಲ್ಲ ಅಥವಾ (ಇತರೆ ಕೆಲವು ದೇಶಗಳ ಡಯಾಸ್ಪೊರಿಗರ ವಿಷಯದಲ್ಲಿ ಆದಂತೆ) ದೇಶ ಬಿಟ್ಟು ಹೊರಗೆ ಹೋಗಲೇಬೇಕಾದಂತಹ ವಲಸೆಗೆ ಸಾಮೂಹಿಕ ಕೊಲೆ, ಬೆದರಿಕೆ, ಕ್ಷಾಮ ಮತ್ತಿತರ ಕಾರಣಗಳು  ಚಾಲನೆ ನೀಡಿದಂತೆ  ಭಾರತೀಯ ಡಯಾಸ್ಪೊರಾಕ್ಕೆ ಆಗಿಲ್ಲ. ಆದುದರಿಂದ ಭಾರತೀಯ ಡಯಾಸ್ಪೊರಾವು ನಿರ್ದಿಷ್ಟ ಕಾಲದಲ್ಲಿ ಘಟಿಸಿದ ಸಂಗತಿಯಲ್ಲ. ವಸಾಹತುಶಾಹಿ ಕಾಲದಲ್ಲಿ ಕರಾರುಬದ್ಧ ಕೂಲಿಗಳಾಗಿ ಶುರುವಾದ ಪಯಣ ಇಂದಿನ ಎಂಜಿನಿಯರುಗಳು, ವೈದ್ಯರು, ವೃತ್ತಿಪರ ಕುಶಲಿಗಳ ವಲಸೆಯ ತನಕ ಮುಂದುವರೆಯುತ್ತಲೇ ಇದೆ. ಸಫ್ರಾನ್ ಎಂಬ ವಿದ್ವಾಂಸ ಇಂಡಿಸ್ಪೊರಾ ಬಗ್ಗೆ ಹೇಳುವ ಮಾತನ್ನು ಗಮನಿಸಬೇಕು. ಅವನ ಪ್ರಕಾರ ಭಾರತೀಯ ಡಯಾಸ್ಪೊರಾಕ್ಕೆ ದೊಡ್ಡ ಚರಿತ್ರೆಯಿದ್ದು, ಅದಕ್ಕೆ ಮಧ್ಯಸ್ಥದಾರನ ಲಕ್ಷಣವಿದೆ. ಹಾಗೂ  ಸಮನ್ವಯವನ್ನು ರೂಢಿಸುವ ಲಕ್ಷಣ ಅಲ್ಲಿದೆ. ಇದರಿಂದ ಪ್ರತ್ಯೇಕತಾವಾದಿಯ ಚಹರೆಯೂ ಅದಕ್ಕಿದೆ. ಆದರೆ ಇವೆಲ್ಲವೂ ಅತೀ ಸರಳೀಕೃತಗೊಂಡಿದೆ.

ವಸಾಹತುಗಳನ್ನು ನಿರ್ಮಿಸುವುದರಲ್ಲಿ ಆಂಗ್ಲರು, ಡಚ್ಚರು ಮತ್ತು ಫ್ರ್ರೆಂಚರು ಆಧಿಪತ್ಯ ಸ್ಥಾಪಿಸಿದ್ದರು. ಅವರ ಕೈಕೆಳಗಿನ ವಸಾಹತು ಪ್ರಜೆಗಳು ಅವರಿಗೆ ಕಡಿಮೆ ಕೂಲಿ ದರದಲ್ಲಿ ಸಿಗುವಂತಾದರು. ಹೀಗಾಗಿ ಕರಾರುಬದ್ದ ಕೂಲಿಕಾರರ ವಲಸೆ ಭಾರತದಿಂದ ಆರಂಭವಾಯಿತು. ಪ್ಲಾಂಟೇಷನ್ ಕೂಲಿಗಾಗಿ ಫಿಜಿ, ದಕ್ಷಿಣ ಆಫ್ರಿಕಾ, ಮಾರಿಷಸ್, ಟ್ರಿನಿಡಾಡ್, ಗಯಾನ, ಸುರಿನಾಮ್, ಜಮೈಕಾ, ಮಾರ್ಟನಿಕ್, ಕ್ಯೂಬಾ, ಪ್ಯುರಿಟೊ ರಿಕೊ, ಬಾರ್ಬೊಡೊಸ್, ಸೇಂಟ್ ಕಿಟ್ಸ್ ಮತ್ತು ನೆವಿಸ್, ನೆದರ್ಲ್ಯಾಂಡ್, ಆಂಟಿಲಸ್, ಬಾರ್ಬುಡಾ, ಗ್ರೆನೇಡಿಯನ್ ಮುಂತಾದ ಪ್ರದೇಶಗಳಿಗೆ ಕೂಲಿಕಾರರ ವಲಸೆ ಹೆಚ್ಚಾಗಿ ಆಯಿತು. ಭಾಗಗಳಲ್ಲಿ ಭಾರತೀಯ ಡಯಾಸ್ಪೊರಿಗರು ಸಾಮಾನ್ಯವಾಗಿ ಉತ್ತರಭಾರತಕ್ಕೆ ಸೇರಿದವರು ಮತ್ತು ತಮಿಳು ದ್ರಾವಿಡ ಗುಂಪಿನ ದಕ್ಷಿಣಾತ್ಯರು. ಇವರನ್ನು ಭಾರತೀಯ ಡಯಾಸ್ಪೊರಿಗರೆಂದು ವಿಶೇಷವಾಗಿ ಗುರುತಿಸಲಾಗುತ್ತದೆ. ಏಕೆಂದರೆ ಇವರು ತಮ್ಮ ಉಪಭಾಷೆಗಳಾದ ಭೋಜ್ಪುರಿ, ಹಿಂದುಸ್ಥಾನಿ, ತಮಿಳುಗಳನ್ನು ಮಾತನಾಡುತ್ತಾ ತಮ್ಮ ತಾಯ್ನಾಡಿನ ಸಾಂಸ್ಕೃತಿಕ ಕುರುಹುಗಳನ್ನು ಉಳಿಸಿಕೊಂಡಿದ್ದರು. ಕಾಲಾಂತರದಲ್ಲಿ ಕುರುಹುಗಳು ಅಳಿಯುತ್ತಿವೆಯಾದರೂ, ಅವರ ಅಸ್ಮಿತೆಗಳು ಭಾರತೀಯ ಎಂದೇ ಗುರುತಿಸಲ್ಪಡುತ್ತಿವೆ. ಭಾರತೀಯ ಎಂಬ ಪದವನ್ನು ಬಳಸದೇ ಹೋದ ಪಕ್ಷದಲ್ಲಿ ಭಾರತೀಯ ಸಂಜಾತ ಎನ್ನುವ ಪದವನ್ನಂತೂ ಬಳಸಲಾಗುತ್ತದೆ. ಆದರೆ ಗಾಹಿಲೋಪ್ನಂತಹ ಕೆಲವು ವಸಾಹತುಗಳಲ್ಲಿ ಆಡಳಿತಕಾರರು ದಾಖಲೆಗಳಲ್ಲಿ ಅವರ ಮೂಲ ಹೆಸರುಗಳನ್ನೆಲ್ಲ ಬದಲಾಯಿಸಿದ್ದ ಪರಿಣಾಮ ಅಲ್ಲಿನ ಭಾರತೀಯ ಡಯಾಸ್ಪೊರಿಗರು ತಮ್ಮ ಸಂಸ್ಕೃತಿ ಸೂಚಕಗಳನ್ನು ಕಳೆದುಕೊಳ್ಳಬೇಕಾಯಿತು. ಅವರ ಅಸ್ಮಿತೆಗಳ ಮೂಲವು ವಿಸ್ಮೃತಿಗೊಳಗಾಯಿತು.

ಭಾರತೀಯ ಡಯಾಸ್ಪೊರಾವನ್ನು ಚಾರಿತ್ರಿಕವಾಗಿ ವಿಭಜಿಸುವ ಪ್ರಯತ್ನವನ್ನು ಕೆಲವು ವಿದ್ವಾಂಸರು ಮಾಡಿದ್ದಾರೆ. ಸುದೇಶ್ ಮಿಶ್ರಾ ಅವರು ತಮ್ಮಫ್ರಂ ಶುಗರ್ ಟು ಮಸಾಲಎಂಬ ಲೇಖನದಲ್ಲಿ ಭಾರತೀಯ ಡಯಾಸ್ಪೊರಾವನ್ನು ಪ್ರಾಚೀನ ಡಯಾಸ್ಪೊರಾ ಮತ್ತು ನವೀನ ಡಯಾಸ್ಪೊರಾ ಎಂದು ಎರಡು ಭಾಗವಾಗಿ ನೋಡಬಹುದೆನ್ನುತ್ತಾರೆ. ಅವರ ಪ್ರಕಾರ, ‘ಇಷ್ಟವಿದ್ದೋ ಇಲ್ಲದೆಯೋ ಜೀವನೋಪಾಯಕ್ಕಾಗಿ ಅರೆಮನಸ್ಕರಾಗಿ ಕೆಲಸದ ಕರಾರಿನೊಂದಿಗೆ ಬಂದ ರೈತಾಪಿ ವರ್ಗವು ಪ್ಲಾಂಟೇಷನ್ ವಸಾಹತುಗಳಾದ ಫಿಜಿ, ಟ್ರ್ರಿನಿಡಾಡ್, ಮಾರಿಷಸ್, ದಕ್ಷಿಣ ಆಫ್ರಿಕಾ, ಮಲೇಶ್ಯಾ, ಸುರಿನಾಮ್, ಗಯಾನಗಳಂತಹ ಚಿಕ್ಕ ನಗರ ಪ್ರದೇಶಗಳಿಗೆ ಸುಮಾರು ೧೮೩೦ರಿಂದ ೧೯೧೭ರೊಳಗೆ ವಲಸೆ ಬಂದದ್ದು ಮೊದಲ ಹಂತ, ಎರಡನೆಯ ಹಂತವು ಬಂಡವಾಳೋತ್ತರ ಅಥವಾ ಆಧುನೀಕೋತ್ತರ ವಲಸೆ. ವಲಸೆಗಾರರ ಕೇಂದ್ರ ನಗರಗಳಾಗಿದ್ದು ಇವರು ನಗರೀಕೃತ ನೆಲೆಗಳನ್ನು (Metropoliton) ಕೇಂದ್ರವಾಗಿಸಿಕೊಂಡು ವಲಸೆ ಬಂದವರು. ಇವರು ಸಾಮಾನ್ಯವಾಗಿ ಆಯ್ದುಕೊಳ್ಳುವ ಸ್ಥಳಗಳು ಆಸ್ಟ್ರೇಲಿಯಾ, ಕೆನಡಾ, ಅಮೇರಿಕಾ, ಬ್ರಿಟನ್ ಮುಂತಾದ ದೇಶಗಳು (From Sugar To Masala: Sudesh Mishra). ವಿಭಜನೆಯು ಭಾರತೀಯ ಡಯಾಸ್ಪೊರಾ ವಿಶ್ಲೇಷಣೆಗೆ ಸೂಕ್ತ ತಳಹದಿಯನ್ನು ಒದಗಿಸುತ್ತದೆ.

ಪಾಶ್ಚಿಮಾತ್ಯ ದೇಶಗಳಿಗೆ ವಲಸೆ ಹೋದ ಭಾರತೀಯರು ಮೊದಲು ತಮ್ಮನ್ನು ಆಳಿದ ಬ್ರಿಟಿಷರ ನಾಡಿಗೆ ವಲಸೆ ಬಂದರು. ಆದರೆ ಆನಂತರದಲ್ಲಿ ಉತ್ತರ ಅಮೆರಿಕಾ ಕಡೆ ಒಲವು ತೋರಿಸಿದರು. ಈಗ ಅಂದಾಜು .೭ಮಿಲಿಯನ್ ಭಾರತೀಯರು ಉತ್ತರ ಅಮೆರಿಕಾದಲ್ಲಿದ್ದಾರೆ ಎಂದು ಹೇಳಲಾಗಿದೆ. ಬ್ರಿಟಿಷ್ ಪ್ಲಾಂಟೇಷನ್ಗಳಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಸಂಜಾv ಪಯಣ ನಂತರ ನೆದರ್ಲ್ಯಾಂಡ್ ಕಡೆಗೆ ಸಾಗಿತು. ಹೀಗೆ ಕಾಲಾನುಕ್ರಮಣಿಕೆಯಲ್ಲಿ ಡಯಾಸ್ಪೊರಾದ ಗ್ರಾಫ್ ಬೇರೆ ಬೇರೆ ಏರಿಳಿತಗಳನ್ನು ತೋರಿಸುತ್ತಾ ಬಂದಿದೆ. ಸುದೇಶ್ ಅವರ ವಿಭಜನೆಗೆ ಇನ್ನೊಂದು ಹಂತವನ್ನು ಸೇರ್ಪಡೆ ಮಾಡಬಹುದು. ಆರ್ಥಿಕ ತಜ್ಞರು ಗುರುತಿಸುವಂತೆ ೧೯೭೦ರಿಂದೀಚೆಗೆ ಕೊಲ್ಲಿ ರಾಷ್ಟ್ರಗಳಲ್ಲಿ ಕಂಡುಬಂದ ಎಣ್ಣೆಯ ನಿಕ್ಷೇಪಗಳ ಶೋಧ ಮತ್ತು ಅದನ್ನು ಹೊರತೆಗೆದಿರುವ ವಿದ್ಯಮಾನದಿಂದ ಭಾರತೀಯರು ಸೇರಿದಂತೆ ಹಲವಾರು ಏಷ್ಯನ್ನರು ಕೊಲ್ಲಿರಾಷ್ಟ್ರಗಳಿಗೆ ವಲಸೆ ಬಂದರು.

ಒಂದು ರೀತಿಯಿಂದ ಮೇಲೆ ತೋರಿಸಿದ ವಿಭಜನೆಯು ಭಾರತೀಯ ಡಯಾಸ್ಪೊರಾದ ಲಕ್ಷಣಗಳು ಏಕ ರೂಪಿಯಾದುದಲ್ಲ ಮತ್ತು ಅವುಗಳ ಹಿತಾಸಕ್ತಿಗಳು ಸಹ ಒಂದೇ ಅಲ್ಲ ಎನ್ನುವುದನ್ನು ತೋರಿಸುತ್ತಿದೆ. ಕೂಲಿ ಕಾರ್ಮಿಕರಾಗಿ ಬಂದ ಭಾರತೀಯ ಕುಟುಂಬಗಳು ಹೊಂದಿದ ಸಾಮಾಜಿಕ ಅಂತಸ್ತು ಮತ್ತು ವರ್ಗೀಕರಣಗಳು ಒಂದು ಬಗೆಯ ಡಯಾಸ್ಪೊರಾ ಸಮುದಾಯವನ್ನು ಹುಟ್ಟುಹಾಕಿವೆ. ಸಮುದಾಯಗಳು ಸಹ ಒಂದೇ ಅಲ್ಲ ಎನ್ನುವುದನ್ನು ತಿಳಿಯಬಹುದು. ಕೂಲಿ ಕಾರ್ಮಿಕರಾಗಿ ಬಂದ ಭಾರತೀಯ ಕುಟುಂಬಗಳು ಹಲವಾರು ವಾಸಸ್ಥಳಗಳನ್ನು ಹೊಂದಿವೆ. ಕೆಲವೊಮ್ಮೆ ಒಂದೆಡೆ ನೆಲೆ ನಿಂತರೂ, ಸ್ವದೇಶಕ್ಕೆ ಮರಳುವ, ಅಲ್ಲಿ ಬದುಕನ್ನು ನೆಲೆಗೊಳಿಸುವ ಬಗ್ಗೆ ಅವರು ಆಸಕ್ತಿ ತೋರುವುದಿಲ್ಲ. ಅವರ ಸಾಂಸ್ಕೃತಿಕ ನೆಲೆಗಳು ಸಹ ಚಲಿಸುತ್ತಲೇ ಇರುವುದರಿಂದ  ಭೂತಕಾಲದ ನೆನಪುಗಳು ವಿಸ್ಮೃತಿಯತ್ತ ಸಾಗುತ್ತಿರುತ್ತವೆ ಎಂದರೆ ತಪ್ಪಾಗಲಾರದು. ಆದರೆ, ಎರಡನೇ ಹಂತದ ಬಂಡವಾಳ ವ್ಯವಸ್ಥೆಯಲ್ಲಿ ವಲಸೆ ಬಂದ ಭಾರತೀಯ ಮನೋಭಾವ ಮೊದಲ ಹಂತದವರಿಗಿಂತ ವಿಭಿನ್ನವಾಗಿರುತ್ತದೆ. ತಾಯ್ನಾಡಿನ ಬಗೆಗಿನ ಹಂಬಲ, ತಾಯಿ ನೆಲದ ಸಂಸ್ಕೃತಿಯನ್ನು ಪುನಃ ಸ್ಥಾಪಿಸಿಕೊಳ್ಳುವ ಪ್ರವೃತ್ತಿ ಮಧ್ಯಮ ವರ್ಗದ ಆಶೋತ್ತರಗಳಾಗಿವೆ. ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗಗಳು ತಮ್ಮ ಸಂಸ್ಕೃತಿಯನ್ನು ಪುನಃ ಪಡೆದುಕೊಳ್ಳುವ ಬಗ್ಗೆ ಆಸಕ್ತರಾಗಿರುವುದು ದೊಡ್ಡ ಮಟ್ಟದಲ್ಲಿ ಸಾಂಸ್ಕೃತಿಕ ಉತ್ಪಾದನೆಗಳಿಗೆ ಎಡೆ ಮಾಡಿಕೊಡುತ್ತಿದೆ. ಮಾನಸಿಕ ಕ್ಷೆಭೆ, ಒಂಟಿತನ ಅನುಭವಿಸುವ ಡಯಾಸ್ಪೊರಾದ ಸ್ಥಿತಿ ಹಂತದಲ್ಲಿ ಕಾಣುವುದು ಕಡಿಮೆ. ಭಾರತೀಯ ಡಯಾಸ್ಪೊರಿಗರು ಇಂದು ವಿದೇಶಗಳಲ್ಲಿ ತಮ್ಮದೇ ಆದ ಗುಂಪುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅವರ ಅನೇಕ ಸಂಘಗಳು ತಲೆಯೆತ್ತಿವೆ. ಭಾರತೀಯ ಸಂಸ್ಕೃತಿ ಎನ್ನುವ ಬಿಂಬವನ್ನು ಅವು ಎಲ್ಲೆಡೆ ಹೆಮ್ಮೆಯಿಂದ ತೋರಿಸಲು ಅತ್ಯುತ್ಸಾಹ ತೋರಿಸುತ್ತಿವೆ.

ಹತ್ತೊಂಬತ್ತನೇ ಶತಮಾನದ ಮತ್ತು ಆನಂತರದ ಭಾರತೀಯ ವಲಸೆಗಳು ಬಲವಂತದಿಂದ ಆದವು. ಒಂದು ರೀತಿಯಲ್ಲಿ ಭಾರತೀಯರನ್ನು ಕೂಲಿಗಳ ಹೆಸರಲ್ಲಿ ಸಾಗಾಣಿಕೆ ಮಾಡಲಾಯಿತು. ಗುಲಾಮಗಿರಿಯನ್ನು ಜಗತ್ತಿನೆಲ್ಲೆಡೆ ನಿಷೇಧಿಸುತ್ತಿರುವಾಗ, ಬ್ರಿಟಿಷ್ ವಸಾಹತುಶಾಹಿ ಅದಕ್ಕೆಕರಾರು ಬದ್ಧ ಕೂಲಿಗಳುಎಂದು ಹೊಸ ಹೆಸರನ್ನು ಕೊಟ್ಟಿತುಮಾರಿಷಸ್, ಬ್ರಿಟಿಷ್ ಗಯಾನ ವೆಸ್ಟ್ ಇಂಡೀಸ್ ದ್ವೀಪಗಳಾದ ಜಮೈಕಾ, ಟ್ರಿನಿಡಾಡ್, ಕ್ರಮವಾಗಿ ವಲಸೆ ನಡೆಯಿತು.

ಭಾರತೀಯ ಡಯಾಸ್ಪೊರಾದಲ್ಲಿ ಆಂತರಿಕ ವಲಸೆಗಳೂ ಸೇರಿಕೊಳ್ಳುತ್ತವೆ. ದೇಶ ವಿಭಜನೆಯ ನಂತರ ಸ್ವಾತಂತ್ರೋತ್ತರ ಸನ್ನಿವೇಶದಲ್ಲಿ ನೆರೆಹೊರೆ ದೇಶಗಳಿಂದ ಭಾರತಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಿನದ್ದಾಗಿತ್ತು. ಈಗಲೂ ಪೂರ್ವ ಬಂಗಾಳದಿಂದ ಮಾನವ ವಲಸೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಔದ್ಯೋಗಿಕ ಕಾರಣಗಳಿಂದ, ಆಹಾರ ಮತ್ತು ವಸತಿಗಳಿಗಾಗಿ ಭಾರತಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆಧುನಿಕ ಭಾರತೀಯ ಡಯಾಸ್ಪೊರಾ ಚರಿತ್ರೆ ಆರಂಭವಾಗುವುದೇ ಕೆರಿಬಿಯನ್ ದ್ವೀಪಗಳು ಮತ್ತು ಆಫ್ರಿಕಾದ ಪ್ಲಾಂಟೇಷನ್ ವಲಸೆಗಳಿಂದ. ಕೆರೆಬಿಯನ್ ಭಾರತೀಯ ಡಯಾಸ್ಪೊರರು ೧೮೭೩ ರಿಂದ ೧೯೧೬ ವರೆಗೆ ಇಂಗ್ಲಿಷ್ ವಸಾಹತುಶಾಹಿ ಆಡಳಿತಕ್ಕೊಳಪಟ್ಟಿದ್ದ ಭಾರತೀಯರನ್ನು ಕರಾರುಬದ್ಧ ಕೂಲಿಗಳಾಗಿ ಕೆರೆಬಿಯನ್ ದ್ವೀಪಗಳಿಗೆ ಕರೆತರುವ ಪ್ರಕ್ರಿಯೆ ನಡೆಯಿತು. ಅಷ್ಟರಲ್ಲಿ ಸರಿಸುಮಾರು ೩೦,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಅರ್ಧದಷ್ಟು ಜನ ಭಾರತೀಯರು ಸ್ವದೇಶಕ್ಕೆ ಮರಳಿದರು. ಉಳಿದವರು ಅಲ್ಲೇ ಉಳಿದರು. ಸದ್ಯ ಅಲ್ಲಿ ಉಳಿದ ಭಾರತೀಯ ಜನರ ಸಂಖ್ಯೆ ಅಲ್ಲಿನ ಅರ್ಧ ಜನಸಂಖ್ಯೆಯಷ್ಟಿದೆ.

ಆರ್ಥಿಕತೆಯೇ ಕೇಂದ್ರ ಬಿಂದು 

ಭಾರತೀಯ ಡಯಾಸ್ಪೊರವನ್ನು ಸಾಮಾನ್ಯವಾಗಿ ಎರಡು ಹಂತಗಳಲ್ಲಿ ಗುರುತಿಸಲಾಗುತ್ತದೆ. ಒಂದು ಸಾಗರೋತ್ತರ ವಲಸೆ, ಇನ್ನೊಂದು ಇಪ್ಪತ್ತನೇ ಶತಮಾನದಲ್ಲಿ ಕೈಗಾರಿಕವಾಗಿ ಮುಂದುವರೆದ ದೇಶಗಳಿಗೆ ಬಂದ ವಲ. ಅಧ್ಯಯನದ ಸಲುವಾಗಿ (ಇಪ್ಪತ್ತು ಮಿಲಿಯನ್ನಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಡಯಸ್ಪೊರಾ ಇದೆ) ಇವನ್ನು ವಸಾಹತುಶಾಹಿ ಕಾಲದ ಮತ್ತು ವಸಾಹತೋತ್ತರ ಕಾಲದ ವಲಸೆ ಎಂದು ಕೂಡ ಹೆಸರಿಸಲಾಗಿದೆ. ಆದರೆ ಇವೆರಡೂ ಬೇರೆ ಬೇರೆಯಲ್ಲ. ಪರಸ್ಪರ ಸಂಬಂಧವುಳ್ಳ, ಆರ್ಥಿಕತೆಯನ್ನೇ ಕೇಂದ್ರವಾಗಿಟ್ಟುಕೊಂಡ ಬೆಳವಣಿಗೆಗಳುಹತ್ತೊಂಬತ್ತನೇ ಶತಮಾನದಲ್ಲಿ ದಕ್ಷಿಣಾ ಆಫ್ರಿಕಾಕ್ಕೆ ಭಾರತೀಯರನ್ನು ಕರಾರು ಬದ್ಧ ಕೂಲಿಗಾಳಾಗಿ ಕರೆತಂದಿದ್ದು ಬ್ರಿಟಿಷರು. ದಕ್ಷಿಣ ಆಫ್ರಿಕಾಕ್ಕೆ ಆನಂತರದಲ್ಲಿ ವಲಸೆ ಬಂದಿದ್ದು ಗುಜರಾತಿನ ವಣಿಕ ವರ್ಗ. ಗಾಂಧಿಯವರ ದಕ್ಷಿಣ ಆಫ್ರಿಕಾ ವಾಸ ಮತ್ತು ಅಲ್ಲಿನ ಅವರ ಸತ್ಯಾಗ್ರಹಗಳ ಆರಂಭದ ದಿನಗಳು ಚಾರಿತ್ರಿಕವಾಗಿ ದಾಖಲಾಗಿರುವಂತಹವು. ದಕ್ಷಿಣ ಆಫ್ರಿಕಾದಲ್ಲಿ ಅನೇಕ ವರ್ಷಗಳಿಂದಲೂ ಭಾರತೀಯರು ನೆಲೆಸುತ್ತಾ ಬಂದಿದ್ದಾರೆ. ಇದು ಅಲ್ಲಿನ ಡಯಾಸ್ಪೊರಾ ಸನ್ನಿವೇಶಕ್ಕೆ ಕಾರಣವಾಗಿದೆ.

ಕೆನಡಾದ ಭಾರತೀಯ ಡಯಾಸ್ಪೊರ ಸಹ ಜಾಗತಿಕ ಗಮನ ಸೆಳೆದಿದೆ. ಅಲ್ಲಿ ಭಾರತೀಯ ಸಂಜಾತರ ಸಂಖ್ಯೆ ಗಣನೀಯವಾಗಿ ಏರಿದೆ. ಇವರನ್ನು ಈಸ್ಟ್ ಇಂಡಿಯನ್ ಅಥವಾ ಇಂಡೋ-ಕೆನಡಿಯನ್ ಎಂದು ಕರೆಯಲಾಗುತ್ತದೆ. ಕೆನಡಾದಲ್ಲಿ ಮೂಲನಿವಾಸಿಗಳಾದ ಇಂಡಿಯನ್ನರು ಇರುವುದರಿಂದ, ಅವರಿಂದ ಬೇರೆಯಾಗಿ ಭಾರತೀಯರನ್ನು ಗುರುತಿಸಲು ರೀತಿ ಕರೆಯಲಾಗುತ್ತದೆ. ಇಂಡಿಯನ್ ಪದವನ್ನು  ಕೆರಿಬಿಯಾದಿಂದ ವಲಸೆ ಬಂದವರಿಗೂ ಅನ್ವಯಿಸಿ ಕರೆಯಲಾಗುತ್ತದೆ. ಇಲ್ಲಿ ಹಿಂದೂಗಳು ಮತ್ತು ಸಿಖ್ಖರು, ಬೌದ್ಧರು ಸಹಾ ಇದ್ದಾರೆ. ಪ್ರಾದೇಶಿಕವಾಗಿ ಹೇಳುವುದಾದರೆ ಪಂಜಾಬಿಗಳು, ಗುಜರಾತಿಗಳು, ತಮಿಳರು, ಬಂಗಾಳಿಗಳು ಭಾರತೀಯ ಡಯಾಸ್ಪೊರಾಕ್ಕೆ ಸೇರುತ್ತಾರೆ. ಭಾರತೀಯ ಕೆನಡಾದ ಡಯಾಸ್ಪೊರಾದಲ್ಲಿ ಬಿಳಿಯರ ಶೋಷಣೆಗೆ ಭಾರತೀಯರು ಬಲಿಯಾಗಿದ್ದಾರೆ. ಬಹು ಜನಾಂಗೀಯ, ಬಹುಸಂಸ್ಕೃತಿಯ ಸಮಾಜದಲ್ಲಿ ಬದುಕಬೇಕಾದಾಗ ಅನೇಕ ಒತ್ತಡಗಳನ್ನು ಎದುರಿಸಿದ್ದಾರೆ ಮತ್ತು ತಮ್ಮ ಅಸ್ತಿತ್ವವನ್ನು ನಿರೂಪಿಸಬೇಕಾದ ಒತ್ತಡಕ್ಕೂ ಸಿಲುಕಿದ್ದಾರೆ. ಶೋಷಣೆ ತುಳಿತಕ್ಕೆ ಪ್ರತಿಯಾಗಿ ಪ್ರತಿತಂತ್ರವನ್ನು ನಿರೂಪಿಸಲು ಪ್ರಯತ್ನಗಳನ್ನೂ ನಡೆಸಿದ್ದಾರೆ. ಒಟ್ಟಾರೆ ಭಾರತೀಯ ಡಯಾಸ್ಪೊರ ಕೆನಡಾದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಹೋರಾಡುತ್ತಿದೆ. ಡಯಾಸ್ಪೊರಾದ ಕಹಿಯನ್ನು ಅಲ್ಲಿನ ಭಾರತೀಯ ಸಮುದಾಯ ಚೆನ್ನಾಗಿಯೇ ಅನುಭವಿಸಿದೆ. ಅಂಚಿಗೆ ಸರಿದ ಸಮುದಾಯವಾಗಿ, ಅಧಿಕಾರ ಬಲವಿಲ್ಲದೆ ಅಸ್ತಿತ್ವವೊಂದನ್ನು ರೂಪಿಸುವುದು ಎಷ್ಟು ಕಷ್ಟ ಎಂಬುದನ್ನು ಡಯಾಸ್ಪೊರಾ ನಿರೂಪಿಸುತ್ತದೆ. ಅದಕ್ಕಾಗಿ ಕೆಲವು ಹೋರಾಟಗಳೂ ಸಂಭವಿಸುತ್ತಿವೆ ಎನ್ನುವುದನ್ನು ಸಂದರ್ಭದಲ್ಲಿ ನೆನೆಯಬಹುದು. ಆದರೆ ಭಾರತೀಯ ಡಯಾಸ್ಪೊರಾ ಕೆನಡಾದಲ್ಲಿ ತನ್ನದೂ ಒಂದು ಅಸ್ತಿತ್ವ ಇದೆ ಎಂಬುದನ್ನು ನಿರೂಪಿಸುತ್ತಲಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಭಾರತದ ಸಿಖ್ಖರು ಅಲ್ಲಿ ಕ್ರಮೇಣ ಪ್ರಬಲರಾಗಿದ್ದಾರೆ.

ಭಾರತದಿಂದ ಸಿಖ್ಖರು ಕೆನಡಾಕ್ಕೆ ವಲಸೆ ಬಂದವರಲ್ಲಿ ಮೊದಲಿಗರು. ಅವರು ಕೆನಡಾದ ಬಿಳಿಯರಿಂದ ಸಾಕಷ್ಟು ಜನಾಂಗೀಯ ಕಿರುಕುಳಗಳನ್ನು ಅನುಭವಿಸಿದರು. ಕೆನಡಾ ವಲಸೆಯ ನಿಯಮಾವಳಿಗಳಲ್ಲಿ ಇಪ್ಪತ್ತನೇ ಶತಮಾನದ ತನಕ ಅಲ್ಲಿನ ಆಡಳಿತ ಭಾರತೀಯರಿಗೆ ಸೌಕರ್ಯ ಮಾಡಿಕೊಡಲಿಲ್ಲ. ಆನಂತರ ಅದು ತನ್ನ ನೀತಿಯನ್ನು ಬದಲಾಯಿಸಿತು. ಈಗೀಗ ಮಾಂಟ್ರಿಯಲ್ ಮತ್ತು ಎಡ್ಮಂಟನ್ನಲ್ಲಿ ನೆಲೆಸಿದ್ದಾರೆ. ‘ಸಿಂಗ್ಡೇಲ್ಎನ್ನುವ ಉಪನಗರವೇ ಬ್ರಾಮ್ಟಾನ್ ನಗರದಲ್ಲಿ ಹುಟ್ಟಿಕೊಂಡಿದೆ. ಇದು ಸಿಖ್ಖರ ಡಯಾಸ್ಪೊರಾದ ಪ್ರಾಬಲ್ಯವನ್ನು ತೋರುತ್ತದೆ.

ಭಾರತೀಯ ವಲಸಿಗರಿಗೆ ಅಮೆರಿಕಾದಲ್ಲಿ ಒಳ್ಳೆ ಸ್ಥಾನಮಾನ ಸಿಕ್ಕಿದೆ. ಮಾಹಿತಿ ತಂತ್ರಜ್ಞಾನ, ಗಣಕ ತಾಂತ್ರಿಕತೆ, ಔಷಧಿ, ವೈದ್ಯಕೀಯ, ಶಿಕ್ಷಣ ಇತ್ಯಾದಿ ಕ್ಷೇತ್ರದಲ್ಲಿ ಭಾರತೀಯರು ಪಾರಮ್ಯ ಸಾಧಿಸಿದ್ದಾರೆ. ಕೂಲಿಯಾಳುಗಳ ಸ್ಥಾನದಿಂದ ವರ್ತಕ ಸ್ಥಾನಕ್ಕೆ, ಕೌಶಲ್ಯಕ್ಕೆ, ಶೈಕ್ಷಣಿಕ ಪ್ರಗತಿಗೆ ಭಾರತೀಯರ ಸ್ಥಾನ ಬದಲಾಗಿದೆ. ಅಮೆರಿಕಾದಲ್ಲಿ ಇಂದು ಅನೇಕ ಭಾರತೀಯ ದೇವಾಲಯಗಳಿವೆ. ಅಲ್ಲಿಯೇ ನೆಲೆಸಿದವರು ಅನೇಕ ಸಂಘ ಸಂಘಟನೆಗಳನ್ನು ಕಟ್ಟಿಕೊಂಡು ಭಾರತೀಯತೆಯನ್ನು ಅಮೆರಿಕಾದಲ್ಲಿ ಸ್ಥಾಪಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಗಣಕಯಂತ್ರದ ತಂತ್ರಜ್ಞಾನ ಮತ್ತು ಮಾಹಿತಿ ಕ್ಷೇತ್ರದ ಹೆಚ್ಚಳದಿಂದ ಅಮೆರಿಕಾ ಭಾರತೀಯರತ್ತ ನೋಡುತ್ತಿದೆ. ಕೆಲವೊಮ್ಮೆ ಅಸೂಯೆಯಿಂದ, ಕೆಲವೊಮ್ಮೆ ಅಗತ್ಯಕ್ಕಾಗಿ.

ಲಂಡನ್, ಕೆನಡಾ ಮುಂತಾದ ಕಡೆ ಭಾರತೀಯರದೇ ಘೆಟ್ಟೊಗಳಿವೆ. ಅವರದೇ ಆದ ಉಪನಗರಗಳಿವೆ. ಭಾರತೀಯವಾಸನೆಯನ್ನು ಅಲ್ಲಿನ ಭಾರತೀಯರು ಹೇಗಾದರೂ ಮಾಡಿ ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಭಾರತೀಯರು ಇಂದು ಜಗತ್ತಿನ ಬಹುಪಾಲು ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಯುರೋಪು, ಅಮೆರಿಕಾ, ಆಸ್ಟ್ರೇಲಿಯಾಗಳಲ್ಲದೆ ಎಲ್ಲಾ ದಿಕ್ಕುಗಳಲ್ಲೂ ಅವರ ವಲಸೆಯ ಚಲನೆ ಕಾಣುತ್ತದೆಮಾರಿಷಸ್ನಲ್ಲಿ ಇಂದು ಅಲ್ಲಿನ ಜನಸಂಖ್ಯೆಯು ಶೇಕಡಾ ಎಪ್ಪತ್ತಕ್ಕೂ  ಅಧಿಕ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಇವರಲ್ಲಿ ಹಿಂದೂ ಮತ್ತು ಮುಸ್ಲಿಮ್ ಭಾರತೀಯರಿದ್ದಾರೆ. ತಮಿಳು, ಭೋಜ್ಪುರಿ ಹಿಂದಿ ಮುಂತಾದ ಭಾಷೆಗಳನ್ನು ಅಲ್ಲಿನ ಜನ ಆಡುತ್ತಾರಾದರೂ ಅಧಿಕೃತ ಭಾಷೆಯಾಗಿ ಫ್ರೆಂಚನ್ನು ಆಡುತ್ತಾರೆ. ಇಲ್ಲಿ ಭಾಷಿಕ ಡಯಾಸ್ಪೊರಾದ ಸಾಧ್ಯತೆ ಅಧಿಕವಾಗಿದೆ.

ಭಾರತೀಯ ಡಯಾಸ್ಪೊರವನ್ನು ಪ್ರತಿನಿಧಿಸಿದ ಸಮುದಾಯಗಳೆಂದರೆ ಸಿಖ್ಖರು ಮತ್ತು ತಮಿಳರು. ಇತ್ತೀಚಿನ ತಾಂತ್ರಿಕ ವಲಸೆಯ  ಬೆಳವಣಿಗೆಗಳನ್ನು ಬಿಟ್ಟರೆ, ಅತಿ ಹೆಚ್ಚಿನ ವಲಸೆ ಇವೆರಡೂ ಸಮುದಾಯಗಳದ್ದಾಗಿದೆ. ತಮಿಳರು ಮಲೇಶ್ಯಾ ಮತ್ತು ಕೆನೆಡಾಗಳಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿದ್ದಾರೆ. ಇವರು ಕುಶಲ ಕರ್ಮಿಗಳೂ ಆಗಿರುವ ಕಾರಣ ಕಾರ್ಖಾನೆ ನಿರ್ಮಾಣಗಳಲ್ಲಿ ಇವರನ್ನು ತೊಡಗಿಸಿಕೊಳ್ಳಲಾಗಿದೆ. ಸಿಖ್ಖರು ಆಸ್ಟ್ರೇಲಿಯಾ ಮತ್ತು ಕೆನಡಾಗಳಲ್ಲಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಬನಾನ ಪ್ಲಾಂಟೇಷನ್ಗಳಲ್ಲಿ ಕೆಲಸಕ್ಕೆಂದು ಬಂದ ಸಿಖ್ಖರು ಖಂಡದಲ್ಲಿ ತಮ್ಮದೇ ಆದ ಅಸ್ತಿತ್ವ ಸ್ಥಾಪಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ಮತ್ತು ಬ್ರಿಟನ್ಗಳಲ್ಲಿ ಭಾರತೀಯರ ಮೇಲೆ ಅಸಹನೆಯಿಂದ ಜನಾಂಗೀಯ ಹಲ್ಲೆ ನಡೆದಿತ್ತು ಮತ್ತು ನಡೆಯುತ್ತಲೇ ಇದೆ.

ಉದಾರೀಕರಣಖಾಸಗೀಕರಣಗಳ ಪ್ರಭಾವ

ಭಾರತೀಯ ಡಯಾಸ್ಪೊರಾದ ಅತ್ಯುನ್ನತ ಕಾಲ ಎಂದರೆ ೧೯೮೦ರಿಂದ ಈಚೆಗೆ. ಭಾರತ ಆರ್ಥಿಕತೆಯ ಉದಾರೀಕರಣ, ಖಾಸಗೀಕರಣಗಳಿಗೆ ಇಂಬುಕೊಟ್ಟಂತೆಲ್ಲ ಡಯಾಸ್ಪೊರಾದ ಬೆಳವಣಿಗೆಗಳು ಹೆಚ್ಚಾದವು. ೧೯೯೦ರ ಆನಂತರ ವಲಸೆಗಳಿಗೆ ರಾಜಕೀಯವಾದ ಹಿತಾಸಕ್ತಿಗಳು ಬೆರೆತು ಡಯಾಸ್ಪೊರಾವನ್ನು ಇನ್ನಷ್ಟು ಪ್ರೋತ್ಸಾಹದಾಯಕ ಕ್ರಿಯೆಯನ್ನಾಗಿ ಮಾಡಿದವು. ಡಯಾಸ್ಪೊರಾ ಸಂಘಟನೆಗಳು ಸಾಂಸ್ಕೃತಿಕವಾಗಿ ಮತ್ತು ಆರ್ಥಿಕ ದೃಷ್ಟಿಯಿಂದ ಕಟ್ಟಿಕೊಂಡಂಥವು. ಭಾರತೀಯ ಡಯಾಸ್ಪೊರಾಕ್ಕೆ ಸಹ ಒತ್ತಡಗಳಿವೆ. ಭಾರತೀಯ ಎಂದು ಗುರುತಿಸಿಕೊಳ್ಳುವ ಹಿನ್ನೆಲೆಯಲ್ಲಿ ಡಯಾಸ್ಪೊರ ಗುಂಪಿಗಾಗುವ ಲಾಭ ಏನು? ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಏನು ಲಾಭ ಸಿಗಬಹುದು? ಎಂಬ ಕಡೆ ಅವುಗಳ ದೃಷ್ಟಿಹರಿದಿರುತ್ತದೆ. ಒಂದೊಮ್ಮೆ ಡಯಾಸ್ಪೊರಿಗರಿಗೆ ತಮ್ಮ ಡಯಾಸ್ಪೊರಾ ಅಸ್ತಿತ್ವದ ಬಗ್ಗೆ ನಂಬಿಕೆಯಿಲ್ಲದಿದ್ದರೆ ತೆರನಾದ ಸಂಘಟನೆಗಳಿಂದಲೇ ದೂರವುಳಿಯುತ್ತಾರೆ. ಆದುದರಿಂದ ಭಾರತೀಯ ಡಯಾಸ್ಪೊರದ ಅತ್ಯತ್ಸಾಹದಸೇರಿಕೊಳ್ಳುವಿಕೆಮತ್ತು ಉದಾಸೀನದಿಂದುದೂರ ಸರಿಯುವಿಕೆಎರಡೂ ಮಹತ್ವದ ತೊಯ್ದಾಟಗಳೇ ಎಂದು ಗುರುತಿಸಲಾಗಿದೆ.

ಅನುಕೂಲಸಿಂಧು ಸಂಸ್ಕೃತಿ

ಆಧುನಿಕ ಸಂದರ್ಭದಲ್ಲಿ ಸಂಸ್ಕೃತಿ ಸರಕುಗಳ ಮೂಲಕ ಪ್ರಕಟಗೊಳ್ಳುತ್ತಿದೆ. ನಿಶ್ಚಲವಾದ ಸರಕುಗಳ ಮೂಲಕ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕ್ರಿಯೆಗೆ ಚಾಲನೆ ಸಿಕ್ಕಿದೆ. ಡಯಾಸ್ಪೊರ ಭಾರತೀಯರು ಆಧುನಿಕತೆಯ ಸಂಪರ್ಕ ಸಾಧನಗಳಾದ ವಿಮಾನ, ಮೊಬೈಲು, ವೀಡಿಯೋ ಫೋನು, ಕಂಪ್ಯೂಟರ್ಗಳನ್ನು ಬಳಸಿಕೊಂಡು ಸಂಸ್ಕೃತಿಯ ಪ್ರಸಾರಕಾರ್ಯವನ್ನು ಮಾಡುತ್ತಿದ್ದಾರೆ. ಇದರಲ್ಲೂ ಒಂದು ವೈರುಧ್ಯ ಇದೆ. ಸಮುದ್ರೋಲ್ಲ್ಲಂಘನವು ಧರ್ಮಲಂಡತನ ಎಂದು ಭಾವಿಸಿಕೊಂಡಿದ್ದ ಸನಾತನ ವೈದಿಕ ಧರ್ಮವನ್ನು, ಮಡಿವಂತಿಕೆಯನ್ನು ಆಧುನಿಕ ಭಾರತೀಯರು ಕಳಚಿಕೊಂಡಿದ್ದಾರೆ. ಆದರೆ ಸಂಪೂರ್ಣವಾಗಿ ಸಂಸ್ಕೃತಿಯನ್ನು ಬಲಿ ಕೊಟ್ಟಿಲ್ಲ. ಅದನ್ನು ಅವರು ಸಡಿಲಗೊಳಿಸಿಕೊಂಡಿದ್ದಾರೆ. ಮೇಲಾಗಿ ಅವರಿಗೆ ಅದರ ಧಾರ್ಮಿಕ ತಿರುಳು ಅನುಪಯುಕ್ತ ಎನ್ನಿಸಿದಾಗಲೆಲ್ಲಾ ಅದನ್ನು ಅವರು ಕಳಚಿಕೊಳ್ಳುತ್ತಾ ಬಂದಿದ್ದಾರೆ. ಡಯಾಸ್ಪೊರಾ ಸಮುದಾಯಕ್ಕೆ ಸಂಸ್ಕೃತಿಯ ಆಯ್ಕೆ ಕಡ್ಡಾಯವಲ್ಲ. ಅವರೊಳಗಿನ ಡಯಾಸ್ಪೊರಾ ಪ್ರಜ್ಞೆಯಿಂದ ಸಂಸ್ಕೃತಿಯ ಕೆಲವು ಭಾಗಗಳನ್ನು ಅವರು ಆಯ್ದುಕೊಳ್ಳುತ್ತಾರೆ. ಅವರಿಗೆ ಅದರ ಬೇರುರೂಪದ ಶೋಧನೆ, ಗ್ರಹಿಕೆಗಳು ಎಷ್ಟೋ ಸಾರಿ ನಿರುಪಯುಕ್ತವಾಗಿರುತ್ತವೆ. ಭಾರತೀಯ ಡಯಾಸ್ಪೊರಿಗರು (ಅದರಲ್ಲೂ ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಬದುಕುತ್ತಿರುವ ಭಾರತೀಯರು) ಯಾವ ಸಂಸ್ಕೃತಿಯನ್ನು ತಮ್ಮದೆಂದು ಪ್ರತಿನಿಧಿಸಲು ಹೋರಾಡುತ್ತಿದ್ದಾರೋ ಅದು ಸ್ವದೇಶದಲ್ಲಿರುವ ವರ್ತಮಾನದ ಸಂಸ್ಕೃತಿಯಂತೆಯೇ ಇರುವಂಥದ್ದಲ್ಲ ಎಂಬುದನ್ನು ಗಮನಿಸಬಹುದು.

ಭಾರತೀಯರಿಗೆ ಡಯಾಸ್ಪೊರಾ ಎಂದೊಡನೆ ಸನಾತನ ಧರ್ಮ ಮತ್ತು ವಸಾಹತೋತ್ತರ ಸಂಘರ್ಷಮಯ ತಾಯ್ನಾಡಿನ ಚಿತ್ರ ಎದುರಿಗೆ ಬರುತ್ತದೆ ಎನ್ನಲಾಗಿದೆ. ಅಮರ್ತ್ಯ ಸೇನ್ ತಮ್ಮಆರ್ಗ್ಯುಮೆಂಟೇಟಿವ್ ಇಂಡಿಯನ್ಕೃತಿಯಲ್ಲಿ ಗಮನಿಸುವಂತೆ ಭಾರತೀಯ ಡಯಾಸ್ಪೊರಾದಲ್ಲಿ ಪಂಥೀಯತೆಯ ಲಕ್ಷಣಗಳು ಕಾಣುತ್ತವೆ (ಪು.73).  ರಾಷ್ಟ್ರೀಯತೆಯ ಬಗ್ಗೆ, ಸಂಸ್ಕೃತಿಯ ಬಗ್ಗೆ ಭಾರತೀಯ ಡಯಾಸ್ಪೊರಿಗರಲ್ಲಿ ಹೆಮ್ಮೆಯ ಭಾವವಿದೆ. ಅದರ ಜೊತೆಗೆ ಅದರ ಬಗ್ಗೆ ಅನಿಶ್ಚಿತತೆಯೂ ಇದೆ. ಏಕೆಂದರೆ, ಯಾವುದರ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕೆನ್ನುವುದರ ಬಗ್ಗೆ ಅವರು ಗೊಂದಲದಲ್ಲಿದ್ದಾರೆ. ಸೇನ್ ಪ್ರಕಾರ ಡಯಾಸ್ಪೊರ ಬೆಳವಣಿಗೆಗಳು ಸ್ವದೇಶಗಳ ಮೂಲಭೂತವಾದಿ ಧೋರಣೆಗೆ ಸಹಕಾರಿಯಾಗುತ್ತಿವೆ; ೧೯೮೦ರಿಂದೀಚೆಗೆ ಉತ್ತರ ಅಮೇರಿಕಾ ಮತ್ತು ಯೂರೋಪುಗಳಲ್ಲಿ ಸಿಖ್ ಉಗ್ರವಾದಕ್ಕೆ ಅದು ಕಾರಣವಾಯಿತು. ಪ್ರಪಂಚದೆಲ್ಲೆಡೆ ಮುಸ್ಲಿಂ ಮೂಲ ಭೂತವಾದಕ್ಕೆ ಎಡೆ ಮಾಡಿಕೊಟ್ಟಿತು. ಹಿಂದುತ್ವವಾದವು ಸಹ ಇದೇ ಅವಧಿಯಲ್ಲಿ ಬೆಳೆಯಿತು.

ಎಲೆನಾಬಾಲ್ ಕೆರ್ಕಾಫ್ ಎಂಬ ಅಧ್ಯಯನಕಾರರ ಅಭಿಪ್ರಾಯದಂತೆ ಭಾರತೀಯ ಡಯಾಸ್ಪೊರಾ ವರ್ಗವು ಹಿಂದುತ್ವ ಪ್ರಧಾನವಾಗಿದೆ. ಇದರೊಳಗಿನಿಂದ ಮುಸ್ಲಿಮರನ್ನು ಹೊರಗಿಡುವ ಯತ್ನಗಳು ನಡೆಯುತ್ತಲೇ ಇವೆ. ಭಾರತೀಯ ಮುಸ್ಲೀಮರೂ ತಮ್ಮ ತಾಯ್ನಾಡನ್ನು ಧಾರ್ಮಿಕವಾಗಿ ಕಲ್ಪಿಸಿಕೊಳ್ಳುವ ಕಾರಣದಿಂದ ಅವರ ಡಯಾಸ್ಪೊರ ಅನುಭವಗಳು ಭಿನ್ನವಾಗಿವೆ. ಇತರೆ ಹಿಂದೂ ವಿದೇಶಿ ಡಯಾಸ್ಪೊರಾ ಎಂದರೆ ಒಗ್ಗೂಡುವಿಕೆಯನ್ನು ಪ್ರೋತ್ಸಾಹಿಸುತ್ತವೆ ಆದರೆ ಮುಸ್ಲಿಮರನ್ನು ಹೊರಗಿಡುತ್ತವೆ ಎಂಬ ಬಗ್ಗೆ ಅವರಿಗೆ ಆತಂಕವಿದೆ. ಹೀಗಾಗಿ ಡಯಾಸ್ಪೊರಾ ಎಂದರೆ ಅವರು ಶಂಕೆ ವ್ಯಕ್ತಪಡಿಸುತ್ತಾರೆ. ಒಟ್ಟಾರೆ ಭಾರತೀಯ ಡಯಾಸ್ಪೊರಾದಲ್ಲಿ ಸಂಸ್ಕೃತಿಯ ಪ್ರಜ್ಞೆ ಅದರಲ್ಲೂ ಹಿಂದೂ ಸಂಸ್ಕೃತಿಯ ಪ್ರಜ್ಞೆ ಜಾಗೃತವಾದುದಾಗಿದೆ. ಪ್ರಾಚೀನ ನಾಗರಿಕತೆ, ಭಾಷೆ, ಸಂಸ್ಕೃತಿಗಳ ಇಂದಿನ ವಾರಸುದಾರರು ನಾವು ಎಂಬ ಭಾವ ಅವರಲ್ಲಿ ಹೆಮ್ಮೆ ಮೂಡಿಸಿದೆ. ಇದನ್ನು ಅವರು ತಮ್ಮ ಸಾಂಸ್ಕೃತಿಕ ಅಸ್ಮಿತೆಯಾಗಿ ಗುರುತಿಸಿಕೊಳ್ಳಲು ಬಯಸುತ್ತಾರೆ. ಭಾರತೀಯ ವೈವಿಧ್ಯಮಯ ಅಸ್ಮಿತೆಗಳು ಅವುಗಳ ಭಿನ್ನತೆಗಳೊಂದಿಗೆಯೇ ವಲಸೆ ಹೋಗಿರುತ್ತವೆ ಎನ್ನುವುದನ್ನು ಮಾತ್ರ ಸಂದರ್ಭದಲ್ಲಿ ಮರೆಯುವಂತಿಲ್ಲ.

ಮೂಡುತ್ತಿರುವ ಕೋಮುವಾದಿ ಚಹರೆ

ಭಾರತೀಯತೆ ಎನ್ನುವುದು ಹಲವುತನಗಳ ಸಂಗಮದಂತೆ ಎನ್ನುವ ಚಿತ್ರ ಮೂಡುವುದಾದರೂ, ಅದರೊಳಗೆ ಅನೇಕ ಆತಂಕದ ಸಂಗತಿಗಳಿವೆ. ಕೋಮುವಾದದ ಚಹರೆ ಮತ್ತು ಪ್ರಾದೇಶಿಕ, ಭಾಷಿಕ ವೈವಿಧ್ಯತೆಗಳು ಏಕ ಪ್ರಕಾರವಾಗಿ ಸಾಮರಸ್ಯದ ಸಂಕೇತಗಳಾಗಿ ಉಳಿದಿಲ್ಲ. ಆದ್ದರಿಂದ ಭಾರತೀಯ ಡಯಾಸ್ಪರದಲ್ಲಿ ರಾಷ್ಟ್ರೀಯತೆಯನ್ನು ಎರಡು ತೆರನಾಗಿ ಗ್ರಹಿಸಬಹುದು. ಒಂದು, ಭಾರತವೆಂಬ ರಾಷ್ಟ್ರದಿಂದ ಅಕ್ಷರಶಃ ಬಂದ ಡಯಾಸ್ಪೊರಿಗರು ಗುರುತಿಸಿಕೊಳ್ಳುವ ಔಪಚಾರಿಕ ರಾಷ್ಟ್ರೀಯತೆ, ಇನ್ನೊಂದು ಭಾರತವೆಂಬ ಧರ್ಮ ಸಂಬಂಧವನ್ನು ಆತುಕೊಳ್ಳುವ  ಡಯಾಸ್ಪೊರಿಗರು. ಭಾರತವು ಘೋಷಿತ ಹಿಂದೂ ರಾಷ್ಟ್ರ ಅಲ್ಲ. ಆದರೆ ರಾಷ್ಟ್ರೀಯತೆಯ ಉತ್ಪನ್ನವಾಗಿ ಉದಯಿಸಿದ ಹಿಂದುತ್ವವಾದಿ ದೃಷ್ಟಿಕೋನವು ಹಿಂದೂ ಸಂಸ್ಕೃತಿ ಎಂದು ಓರಿಯೆಂಟಲಿಸ್ಟರು ಬೆಳೆಸಿದ ಭಾವವನ್ನು ಒಳಗೊಂಡು ಆನಂತರದಲ್ಲಿ ಉಗ್ರವಾದ ಸ್ವರೂಪವನ್ನು ಪಡೆದುಕೊಂಡಿತು. ಬೆಳವಣಿಗೆಗಳಿಂದ ಭಾರತೀಯತೆಯ ನಿರ್ವಚನವು ಕೆಲವು ಸಾಂಸ್ಕೃತಿಕ ಲಕ್ಷಣಗಳಿಗೆ ಕಟ್ಟುಹಾಕಿ ಹೇಳಲ್ಪಟ್ಟಿತು. ವೈದಿಕ ಆಚರಣೆಗಳು, ದೇವರುಗಳು ಸಂಸ್ಕೃತಿಯ ಭಾಗವಾಗಿ ವಿಜೃಂಭಿಸಿದ್ದುಕೇಸರೀಕರಣ ಪ್ರಕ್ರಿಯೆಯಾಗಿತ್ತು. ಭಾರತೀಯ ಡಯಾಸ್ಪೊರಿಗರಲ್ಲಿ ಹಿಂದೂ ಉನ್ಮತ್ತತೆಯು ಬೇರೊಂದು ರೂಪದಲ್ಲಿ ಶಕ್ತಿಯುತವಾಗಿ ಕಾಣಿಸಿಕೊಳ್ಳುತ್ತದೆ. ಕಳೆದುಕೊಂಡ ಭಾವವುಳ್ಳ, ತಾಯ್ನಾಡಿನಿಂದ ದೂರ ಇರುವ ಭಾವವುಳ್ಳ ಭಾರತೀಯ ಹಿಂದೂ ಡಯಾಸ್ಪೊರಿಗರು ತಮ್ಮ ಹಿಂದುತ್ವವನ್ನು ಮುನ್ನೆಲೆಗೆ ತರಲು ಬಯಸುತ್ತಿದ್ದಾರೆ. ಅದೇ ರೀತಿ ಭಾರತೀಯ ಮುಸ್ಲೀಮರು ಉಗ್ರವಾದಿ ಸಂಘಟನೆಗಳಲ್ಲಿ ತೊಡಗುತ್ತಿದ್ದಾರೆ. ಇದಕ್ಕೆ ಡಯಾಸ್ಪೊರಾದ ಮೂಲಭೂತ ಲಕ್ಷಣವಾದ ಅಸ್ಥಿರತೆ ಕಾರಣವಾದರೆ, ಇನ್ನೊಂದು ಕಾರಣ ತಾಯ್ನಾಡನ್ನು ಇವರು ಪರಿಭಾವಿಸುವ ರೀತಿ.

ಇತ್ತೀಚೆಗೆ ಭಾರತೀಯ ಡಯಾಸ್ಪೊರಾವನ್ನು ಭಾರತ ಸರ್ಕಾರವೇ ಉತ್ತೇಜಿಸುತ್ತಿದೆ. ಆಧುನಿಕ ಭಾರತೀಯ ಡಯಾಸ್ಪೊರಾದ  ಬೆನ್ನ ಹಿಂದೆ ಭಾರತ ಸರ್ಕಾರದ ಪ್ರೇರಣೆಯಿದೆ. ಬದಲಾದ ಜಾಗತಿಕ ರಾಜಕಾರಣದ ಪ್ರವೃತ್ತಿಗನುಗುಣವಾಗಿ ಭಾರತ ಸರ್ಕಾರವೂ ಡಯಾಸ್ಪೊರಾ ಪ್ರಕ್ರಿಯೆಯನ್ನು ತನ್ನ ರಾಜಕಾರಣದ ಭಾಗವಾಗಿ ಪರಿಗಣಿಸುತ್ತಿದೆಈಗ ಭಾರತ ಸರ್ಕಾರ ಭಾರತೀಯ ಉನ್ನತ ಸಮಿತಿಯೊಂದನ್ನು ಸ್ಥಾಪಿಸಿ ಅದರ ಮೂಲಕ ವ್ಯಾಪಕ ಡಯಾಸ್ಪೊರಾದ ಲಕ್ಷಣಗಳನ್ನು ಗುರುತಿಸುವ, ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದೆ. ಕೆಲವು ಉದಾರವಾದ ಧೋರಣೆಗಳನ್ನು ತಳೆಯುವ ಮೂಲಕ ಹೊರನಾಡ ಭಾರತೀಯರನ್ನು ಒಳಗೊಳ್ಳುವ ಯತ್ನವನ್ನು ಸರ್ಕಾರ ಕೈಗೊಂಡಿದೆ.
ಭಾರತೀಯ ಉನ್ನತ ಸಮಿತಿ ಭಾರತೀಯ ಡಯಾಸ್ಪೊರವನ್ನು ಕುರಿತು ಕಾಳಜಿ ವಹಿಸುತ್ತಿದೆ. ಡಯಾಸ್ಪೊರಾ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡಂತೆ ಹಲವಾರು ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪನೆ ಮಾಡಿ, ಅದಕ್ಕೆ ಹೈಕಮಿಷನರ್ ಅಥವಾ ತತ್ಸಮಾನ ಪದವಿಯನ್ನು ನೀಡುತ್ತಾ ಬಂದಿದೆ. ಇದರ ಉದ್ದೇಶ, ಭಾರತೀಯ ಸಂಸ್ಕೃತಿಯೊಂದಿಗೆ ತಮ್ಮ ಸಂಬಂಧವನ್ನು ಪುನಃ ಸ್ಥಾಪಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವುದು. ಇದರ ಅಂಗವಾಗಿ ಹಿಂದಿ ಕಲಿಸುವ ಶಾಲೆಗಳು ಭಾರತೀಯ ಸಂಗೀತ, ನೃತ್ಯಗಳನ್ನು ಕಲಿಸುವ ಉಪಾಧ್ಯಾಯರುಗಳನ್ನು ಕಳುಹಿಸಿಕೊಡಬೇಕೆಂಬ ಡಯಸ್ಪೊರಿಗಳ ಕೋರಿಕೆಯನ್ನು ಮನ್ನಿಸುವುದಾಗಿ ಉನ್ನತ ಸಮಿತಿ ಹೇಳಿಕೊಂಡಿದೆ. ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಸಮಿತಿ (Indian council forcultural Relations – ICCR) ಗಳಂತಹ ಸ್ವಾಯತ್ತ ಸಂಸ್ಥೆಗಳು, ಸಾಂಸ್ಕೃತಿಕ ಮುನ್ನಡೆಗಾಗಿ ಶ್ರಮಿಸುತ್ತಿರುವುದನ್ನು ಸಮಿತಿ ಸ್ಮರಿಸುತ್ತದೆ.

ಭಾರತೀಯ ಡಯಾಸ್ಪೊರದಲ್ಲಿ NRI (Non-Resident Indians) ಮತ್ತು PIO (Person of Indian Origin)ಗಳ ಪಾತ್ರ ಮಹತ್ವದ್ದಾಗಿದೆ. ಇವರಲ್ಲಿ NRI/Expatrlate ಎಂದು ಕರೆಸಿಕೊಳ್ಳುವ ಭಾರತೀಯರು ತಮ್ಮ ದೇಶದೊಡನೆ ಸಂಬಂಧ ಹೊಂದಿರುವಂತಹವರು. PIO ಆದರೆ ಭಾರತೀಯರು ನಾಗರೀಕತೆಯನ್ನು ಪಡೆದಿರುವವರಲ್ಲ. ಆದರೆ ಜನಾಂಗೀಯ ಮತ್ತು ಪ್ರಾದೇಶಿಕ ಜೀನುಗಳು ರೂಪಿಸಿದ ಚಹರೆಯಿಂದ ಅವರು ಭಾರತೀಯ ಸಂಜಾತರೆಂದು ಕರೆಯಲ್ಪಡುತ್ತಾರೆ. ಇತ್ತೀಚೆಗೆ ಭಾರತೀಯ ಸರ್ಕಾರ PIO ಗಳನ್ನುಭಾರತೀಯಪಟ್ಟಿಗೆ ಸೇರಿಸಿಕೊಳ್ಳುತ್ತಿದೆ. ಆದರೆ ಭಾರತೀಯ ಸಂಜಾತರುಗಳು ನಾಲ್ಕು ತಲೆಮಾರುಗಳನ್ನು ದಾಟಿರಬಾರದೆಂಬ ನಿಯಮವನ್ನು ಅದು ಹಾಕುತ್ತದೆ.

ಅನಿವಾಸಿವಲಸಿಗರ ಸಹಾಯಹಸ್ತ
೨೦೦೩ರ ಜನವರಿಯಲ್ಲಿ (೯ರಿಂದ೧೧) ಪ್ರವಾಸಿ ಭಾರತೀಯ ದಿವಸವನ್ನು ಆಚರಿಸಲಾಯಿತು. ಅದರ ಉದ್ದೇಶ ಭಾರತದಲ್ಲಿ (ಸ್ವದೇಶ) ಮತ್ತು ಹೊರಗಡೆ ಇರುವ ಭಾರತೀಯರನ್ನು ಬೆಸೆಯುವುದು. ಮುಖ್ಯವಾಗಿ ಆರ್ಥಿಕ ಸಾಫಲ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಯೋಜನೆ ರೂಪುಗೊಂಡಿತು. ಭಾರತ ಸರ್ಕಾರ  ಭಾರತವನ್ನು ಉದ್ಧಾರ ಮಾಡಲು ಅನಿವಾಸಿ, ವಲಸಿಗ ಭಾರತೀಯರ ಸಹಾಯಕ್ಕಾಗಿ ಕೈಚಾಚಿತು. ಇದು ಸ್ವದೇಶಿ ಭಾರತೀಯ ಮತ್ತು ಅನಿವಾಸಿ ಭಾರತೀಯ ಎಂಬ ಕಂದರವನ್ನು ಮುಚ್ಚುವ ಪ್ರಯತ್ನ. ಅನಿವಾಸಿ ಭಾರತೀಯರನ್ನು ಅವರ ದೇಶಕ್ಕಾಗಿ ತುಡಿಯುವ ಮನಸ್ಸುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಯೋಜನೆ ಇದಾಗಿತ್ತು. ಭಾರತೀಯ ಡಯಾಸ್ಪೊರಾ ಭಾರತದ ಆರ್ಥಿಕತೆಯನ್ನು ವಿಸ್ತರಿಸಬೇಕೆಂಬುದು ಹೊಸ ನೀತಿಯ ಆಕಾಂಕ್ಷೆಯಾಗಿತ್ತು. ಭಾರತ ಸರ್ಕಾರಕ್ಕೆ ಭಾರತೀಯ ಡಯಾಸ್ಪೊರವನ್ನು ಉಪಯೋಗಿಸಿಕೊಳ್ಳುವ ಆಲೋಚನೆ ಹೊಳೆದಿದ್ದು ಚೀನೀ ಮಾದರಿಯಿಂದ. ಸುಮಾರು ೫೫ ಮಿಲಿಯನ್ ಚೀನೀ ಡಯಾಸ್ಪೊರಿಗರು ತಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿದ ಮಾದರಿಯನ್ನೇ ತಾನು ಅನುಕರಿಸಲು ಭಾರತ ಸರ್ಕಾರ ಆಲೋಚಿಸಿತು. ಉದಾರೀಕರಣದ ನಿಯಮಗಳು ಸಹ ಭಾರತ ಸರ್ಕಾರದ ಕ್ರಮಕ್ಕೆ ಉತ್ತೇಜನ ನೀಡಿದವು.

ಹಣದ ಹೊಳೆ ಹರಿಸಿದ ಹಿಂದಿ ಸಿನಿಮಾಗಳು
ಸಾಂಸ್ಕೃತಿಕ ಉತ್ಪ್ಪಾದನೆಗಳ ದೃಷ್ಟಿಯಿಂದ ಹೇಳುವುದಾದರೆ ಭಾರತೀಯ ಡಯಾಸ್ಪೊರಾದ ಬೆಳವಣಿಗೆಯನ್ನು ಗಮನಿಸಲೇಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಭಾರತೀಯ ಸಿನಿಮಾU ಉತ್ಪಾದನೆಯಿಂದ ಲಾಭದ ಹೊಳೆಯೇ ಹರಿದು ಬರುತ್ತಲಿದೆ. ಅದು ಉಂಟು ಮಾಡುತ್ತಿರುವ ಅಲೆ ಸಂಗೀತ ಮತ್ತು ನೃತ್ಯಗಳ ಮಾರುಕಟ್ಟೆಯನ್ನು ವಿಸ್ತರಿಸುತ್ತಲಿದೆ. ಹೀಗಾಗಿ ಬಾಲಿವುಡ್ ಸಿನಿಮಾಗಳಿಗೆ ಎಲ್ಲಿಲ್ಲದ ಬೇಡಿಕೆ ವಿದೇಶಗಳಲ್ಲಿದೆ. ಇವನ್ನು ವೀಕ್ಷಿಸುವವರು ಬರಿಯ ಭಾರತೀಯ ವೀಕ್ಷಕರಲ್ಲ, ಜಗತ್ತಿನಾದ್ಯಂತ ಇವುಗಳಿಗೆ ಗ್ರಾಹಕರಿದ್ದಾರೆ. ಜಪಾನಿನಲ್ಲಿ ರಜನೀಕಾಂತರಿಗೆ ಅಭಿಮಾನಿಗಳಿದ್ದಾರೆ; ಶಾರೂಕ್ ಖಾನ್, ಐಶ್ವರ್ಯ ರೈ ಅವರಿಗೆ ಯುರೋಪಿನಾದ್ಯಂತ ವೀಕ್ಷಕರಿದ್ದಾರೆ.

ಸಿನಿಮಾಗಳ ಜನಪ್ರಿಯ ಗೀತೆ, ನೃತ್ಯಗಳು ಇಂದು ಭಾರತೀಯತೆಯ ಒಂದು ತೆರನಾದ ಆದರ್ಶ ಮಾದರಿಯನ್ನು ಬಿಂಬಿಸುತ್ತಲಿವೆ. ಹಾಗಾಗಿ ಅವು ವಿದೇಶಿ ಭಾರತೀಯರನ್ನು ಆಕರ್ಷಿಸುತ್ತವೆ. ಭಾರತೀಯರ ಸಿನಿಮಾ ತಯಾರಿಕೆ, ಯೋಗ, ವಿದ್ಯಾಭ್ಯಾಸಗಳ ಯೋಜನೆಗಳು ಸಾಂಸ್ಕೃತಿಕ ಉತ್ಪಾದನೆಗಳ ಮುಂಚೂಣಿಯಲ್ಲಿವೆ. ಇವು ಪರೋಕ್ಷವಾಗಿ ಹೊಸ ಆರ್ಥಿಕ ಯೋಜನೆಗಳನ್ನೂ ಒತ್ತಾಯಿಸುತ್ತಿವೆ. ಸಾಂಸ್ಕೃತಿಕ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಅಷ್ಟಾಗಿ ಗಮನಹರಿಸುತ್ತಿಲ್ಲ. ಬದಲಾಗಿ, ಅವುಗಳ ಮೇಲ್ಮೈ ಸ್ವರೂಪವನ್ನೇ ತೆಗೆದುಕೊಳ್ಳಲಾಗುತ್ತದೆ. ಬಾಲಿವುಡ್ ಸಿನಿಮಾಗಳು, ಸಿನಿಮಾ ನಾಯಕ ನಾಯಕಿಯರು ವಿದೇಶಗಳಲ್ಲಿಯೂ ಚಲಾವಣೆಯಲ್ಲಿರುವ ಸಾಮಗ್ರಿಗಳಾಗಿದ್ದಾರೆ. ನಾಯಕಿಯರ ಮೇಲೆ ಹೂಡುವ ಹಣ ಇಂದುಸಾಗರೋತ್ತರಮಾರುಕಟ್ಟೆಯ ಮೇಲೆ ಕಣ್ಣಿಟ್ಟೇ ಮಾಡುವಂಥದ್ದಾಗಿದೆ. ಉದಾರೀಕರಣದ ಲಾಭವನ್ನು ದೇಶದ ಆರ್ಥಿಕ ನೀತಿಯಲ್ಲಿ ಹೇಗೆ ಸೇರಿಸಬಹುದು ಎಂಬುದು ಸರ್ಕಾರದ ಮುಂದಿರುವ ಸಂಗತಿಯಾಗಿದೆ. ಭಾರತೀಯ ಉನ್ನತ ಸಮಿತಿ ಹೇಳಿದಂತೆ, ಕಳೆದೊಂದು ದಶಕದಲ್ಲಿ (೯೦ರ ದಶಕ) ಪ್ರವೃತ್ತಿ ಹೆಚ್ಚಾಗಿ ಕಾಣುತ್ತದೆ. ಭಾರತೀಯ ಆರ್ಥಿಕತೆ ಹೊಸ ಜನಾಂಗಕ್ಕೆ ಹೆಚ್ಚಿನ ಅವಕಾಶಗಳನ್ನು ತೆರೆದಿಟ್ಟ ಹಿನ್ನೆಲೆಯಲ್ಲಿ ಪ್ರವೃತ್ತಿ ಹೆಚ್ಚಾಗಿದೆ. ಎನ್ನಬಹುದು (ಭಾರತೀಯ ಉನ್ನತ ಸಮಿತಿಯ ವರದಿ ಹೇಳುವಂತೆ).  ಆದರೆ ಭಾರತ ಸರ್ಕಾರದ ಉದ್ದೇಶ, ಹೊರನಾಡ ಭಾರತೀಯರ ಆರ್ಥಿಕತೆಯ ಮೇಲಿನ ಅದರ ದೃಷ್ಟಿ ಇವೆಲ್ಲವೂ ತಾನಾಗಿಯೇ ಒಂದು ನೀತಿಯಾಗಿ ಬಂದಿದ್ದು ಎನ್ನವುದಕ್ಕಿಂತ ವಿದೇಶಗಳಲ್ಲಿ ಭಾರತೀಯರ ಜನಪ್ರೀಯತೆಯ ಲಾಭ ಪಡೆಯಲು ಸರ್ಕಾರ ಇದರತ್ತ ಕಣ್ಣು ಹಾಯಿಸುತ್ತಿರುವ ಸಾಧ್ಯತೆಯಿಂದಲೂ ಪ್ರೇರಿತವಾಗಿರಬಹುದು.
ಭಾರತದ ಶಾಸ್ತ್ರೀಯ ಸಂಗೀತವನ್ನು ಹಿಂದೊಮ್ಮೆ  ಪವಿತ್ರವಾದ ದೃಷ್ಟಿಯಿಂದ ಬರಮಾಡಿಕೊಳ್ಳುತ್ತಿದ್ದ ವಿದೇಶಗಳು ಇಂದು ಅದೇ ಉತ್ಸುಕತೆಯಿಂದ ಭಾರತೀಯ ಸಿನಿಮಾ, ಸುಗಮ ಸಂಗೀತ, ವೀಡಿಯೋ ಅಲ್ಬಂಗಳನ್ನು, ಸಿಡಿಗಳನ್ನು ಕರೆದುಕೊಳ್ಳುತ್ತಿವೆ. ಆರ್ಥಿಕವಾಗಿ ಯಶಸ್ಸು ಕಂಡ ಭಾರತೀಯರು ಸ್ವದೇಶದಲ್ಲಿ ಹಣ ಹೂಡಿಕೆ ಮಾಡಲು ಕೆಲವು ಯೋಜನೆಗಳು ಕೂಡ ತಯಾರಾಗುತ್ತಿವೆ. ಊಂಕ್ ತಮ್ಮದಿ ಇಂಡಿಯನ್ ಡಯಾಸ್ಪೊರಾಲೇಖನದಲ್ಲಿ ಹೇಳುವಂತೆ, ಭಾರತ ಸರ್ಕಾರದ ದೃಷ್ಟಿ ಸಂಪೂರ್ಣ ಹೊರನಾಡ ಭಾರತೀಯರ ಮೇಲೆ ಎಂದು ಹೇಳಲಾಗುವುದಿಲ್ಲ; “ಹೊರನಾಡ ಭಾರತೀಯರಶೀರ್ಷಿಕೆಯಡಿಯಲ್ಲಿ ಪಾಕಿಸ್ತಾನ, ಶ್ರೀಲಂಕಾದ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ಹಿಂದೂ/ಮುಸ್ಲಿಮರನ್ನು ಸೇರಿಸಲು ಅದು ಇಚ್ಚಿಸುವುದಿಲ್ಲ. ಅವರನ್ನು ಭಾರತದಲ್ಲಿ ಹೂಡಿಕೆ ಮಾಡಿ ಎಂದಾಗಲೀ, ದ್ವಿಪೌರತ್ವ ಪಡೆಯುವಂತೆಯೇ ಆಗಲಿ, ಆಹ್ವಾನಿಸುವುದಿಲ್ಲ. “ಹೊರನಾಡ ಭಾರತೀಯರುಎಂದಾಗ ಅಮೆರಿಕಾ, ಆಸ್ಟ್ರೇಲಿಯ ಮತ್ತು ಯೂರೋಪುಗಳಲ್ಲಿ ನೆಲಸಿ, ಡಾಲರ್/ಯೂರೋಗಳನ್ನು ಗಳಿಸಿದ ಸಿರಿವಂತರಾಗಿರುವ ಭಾರತೀಯ ಸಂಜಾತರನ್ನು ಅದು ಆದರದಿಂದ ನೋಡುತ್ತದೆ. ಅಂಶವು ಡಯಾಸ್ಪೊರಾದ ಕುರೂಪೀ ಮುಖವನ್ನು ತೋರುತ್ತದೆ.
ಭಾರತೀಯರೊಳಗೆ ಆಂತರಿಕವಾಗಿ ಡಯಾಸ್ಪೊರಾ ಸನ್ನಿವೇಶಗಳಿವೆ. ಬಹುಸಂಸ್ಕೃತಿಯ ತಳಹದಿಯುಳ್ಳ ಭಾರತೀಯ ಸಮಾಜದಲ್ಲಿ ಅಂತರ್ ಜಾತಿಯ/ಧರ್ಮೀಯ/ವರ್ಗೀಯ ಸಂದರ್ಭಗಳು ಸಹಜವಾಗಿಯೇ ಒದಗಿ ಬರುವಂತಹವು. ಒಡನಾಟಗಳ ಪರಿಣಾಮವಾಗಿ ರೂಪುಗೊಳ್ಳುವ ಸಮುದಾಯವನ್ನು ಆಂತರಿಕ ಡಯಾಸ್ಪೊರ ಎಂದು ಕರೆಯಬಹುದಾದರೆ, ವಿದೇಶಗಳಲ್ಲಿರುವ ಭಾರತೀಯರ ಡಯಾಸ್ಪೊರಿಗರನ್ನು ರೂಪಿಸುವಭಾರತೀಯತೆಯಲ್ಲಿ  ಮೇಲೆ ಹೇಳಿದ ಆಂತರಿಕ ಡಯಾಸ್ಪೊರಾದ ಅಸ್ಮಿತೆಗಳು, ಸಂಕೀರ್ಣತೆಯನ್ನು ಸೃಷ್ಟಿಸುತ್ತವೆ. ಇಷ್ಟಾಗಿಯೂ ಭಾರತೀಯರು ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಾರೆ. ಅದು ಅವರ ಗುಣ.
  •