ಸೋಮವಾರ, ಮಾರ್ಚ್ 3, 2014

ಬಳ್ಳಾರಿ ಮಂಗಳಮುಖಿಯರ ರಂಗಮಾದರಿ


-ಅರುಣ್ ಜೋಳದಕೂಡ್ಲಿಗಿ


  ಭಾರತದಲ್ಲಿ ಯುವ ಸಮುದಾಯವೆಂದರೆ ಕಲಿತು ವಿದೇಶಗಳಿಗೆ ಹಾರಿದ ಯುವತಿ ಯುವಕರನ್ನು, ಎಂಜಿನಿಯರಿಂಗ್‌ನಂತಹ ತಾಂತ್ರಿಕ ಶಿಕ್ಷಣ ಕಲಿತ, ಕಾರ್ಪೋರೇಟ್ ಕಂಪನಿಗಳಲ್ಲಿ ದುಡಿಯುವ ಯುವ ಸಮುದಾವನ್ನು ದೊಡ್ಡಮಟ್ಟದಲ್ಲಿ ಬಿಂಬಿಸಲಾಗುತ್ತದೆ. ಯಂಗ್ ಇಂಡಿಯಾ ಎಂದಾಗ ಇಂತಹದ್ದೇ ಚಿತ್ರಗಳು ಮಿನುಗುತ್ತವೆ. ಇದಕ್ಕೆ ಯಂಗ್ ಕರ್ನಾಟಕವೂ ಹೊರತಲ್ಲ. ಕೃಷಿಯಲ್ಲಿ, ಲೆಟ್ರಿನ್ ಪಿಟ್ ಸ್ವಚ್ಚಗೊಳಿಸುವಲ್ಲಿ, ದಿನಗೂಲಿಯಲ್ಲಿ, ಗಾರ್ಮೆಂಟ್‌ಗಳಲ್ಲಿ, ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ಕಷ್ಟದ ದುಡಿಮೆ ಮಾಡುವ ನಗರಗಳ ಕೆಳವರ್ಗ ಮತ್ತು ಗ್ರಾಮೀಣ ಯುವ ಸಮುದಾಯ ಯಂಗ್ ಇಂಡಿಯಾದ ಕಣ್ಣಲ್ಲಿ ನಿರಂತರವಾಗಿ ಮಸುಕಾಗಿಯೆ ಉಳಿದಿದೆ.

  ಲಿಂಗದ ನೆಲೆಯಲ್ಲಿಯೂ ಯಂಗ್ ಎಂದಾಕ್ಷಣ ಗಂಡು ಅದರ ಮರೆಯಲ್ಲಿ ಕಾಣುವ ಹೆಣ್ಣಷ್ಟೆ. ಮಂಗಳಮುಖಿ, ಹಿಜಿಡಾಗಳಂತಹ ಲೈಂಗಿಕ ಅಲ್ಪಸಂಖ್ಯಾತರ ಯುವ ಸಮುದಾಯವೊಂದು ಈ ಯಂಗ್ ಇಂಡಿಯಾದ ಹತ್ತಿರವೂ ಸುಳಿಯುವುದಿಲ್ಲ. ಹಾಗಾಗಿ ಇಂತಹ ಸಮುದಾಯಗಳು ತೋರುವ ಪ್ರಯೋಗಶೀಲತೆಯೂ ಹಾಸ್ಯದ ಸಂಗತಿಗಿಂತ ಮೇಲೇರುವುದಿಲ್ಲ. ಈ ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಸುಮಾರು ಏಳುನೂರರಷ್ಟಿರುವ ಯುವ ಮಂಗಳಮುಖಿಯರು ರಂಗಭೂಮಿಯಲ್ಲಿ ಭಿನ್ನ ಪ್ರಯೋಗಕ್ಕೆ ಪ್ರವೇಶ ಪಡೆದ ಕಥಾನಕವೊಂದು ಇಲ್ಲಿದೆ.

 ಈಚೆಗೆ ರಂಗಭೂಮಿಗೆ ಮಂಗಳಮುಖಿಯರ ಬದುಕಿನ ಕಥನಗಳು ಬರುತ್ತಿವೆ. ಹಿಂದೆ ಎನ್.ಎಸ್,ಡಿ ಯ ವಾಮನ ಕೇಂದ್ರೆ ಅವರ ‘ಜಾನೆಮನ್’ ನಾಟಕ ರೂಪಿಸಿದ್ದರು. ಅದು ಹಿಜಿಡಾಗಳ ಬದುಕಿನ ಚದುರಿದ ಚಿತ್ರದಂತಿತ್ತು. ಈಚೆಗೆ ಹೆಚ್ಚು ಚರ್ಚೆಗೆ ಒಳಗಾದ ಮಹರಾಷ್ಟ್ರದ ಸಾಗರ್ ಲೋಧಿ ಅವರು ನಿರ್ಧೇಶಿಸಿದ ‘ಹಿಜಿಡಾ’ ನಾಟಕ ಇವರ ಬದುಕನ್ನು ಸಶಕ್ತವಾಗಿ ತೆರೆದಿಟ್ಟಿದೆ. ಅಂತೆಯೇ ತಮಿಳುನಾಡಿನ ರೇವತಿಯ ಬದುಕನ್ನು ಆಧರಿಸಿ ಹೆಗ್ಗೋಡಿನ ಎಂ.ಗಣೇಶ್ ಅವರು ‘ಬದುಕು ಬಯಲು’ ನಾಟಕ ರೂಪಿಸಿದ್ದರು. 

 ಹಾಗೆ ನೋಡಿದರೆ ಯಲ್ಲಮ್ಮನ ಪರಂಪರೆಯ ಜೋಗತಿಯರು ತಮ್ಮದೇ ಆದ ರಂಗಭೂಮಿಯನ್ನೂ ಹೊಂದಿದ್ದಾರೆ. ಜೋಗತಿ ನೃತ್ಯ ಮತ್ತು ಯಲ್ಲಮ್ಮನ ನಾಟಕಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಂಜಮ್ಮಜೋಗತಿ ತಂಡ ಯಲ್ಲಮ್ಮನ ನಾಟಕದ ನೂರಾರು ಪ್ರದರ್ಶನಗಳನ್ನು ನೀಡಿದೆ. ಹೀಗೆ ಯಲ್ಲಮ್ಮನ ನಾಟಕಕ್ಕಷ್ಟೆ ಸೀಮಿತವಾದ ಮಂಜಮ್ಮನ ತಂಡ ಈಚೆಗೆ ಮೋಹಿನಿ ಭಸ್ಮಾಸುರ ಎಂಬ ಪೌರಾಣಿಕ ನಾಟಕವನ್ನು, ಅಕ್ಕಮಹಾದೇವಿ ಕುರಿತ ರಂಗ ರೂಪಕವನ್ನೂ ಪ್ರದರ್ಶಿಸಿ ರಂಗಭೂಮಿಯಲ್ಲಿ ಒಂದ್ಹೆಜ್ಜೆ ಮುಂದಿಟ್ಟಿದ್ದಾರೆ. ಅಂತೆಯೇ ಮುಂಬೈನ ಹಿಜಿಡಾ ಸಂಸ್ಕೃತಿಯ ವಕ್ತಾರರಾದ ಬಳ್ಳಾರಿ ನಗರದ ಮಂಗಳಮುಖಿಯರು ಭಿಕ್ಷೆ, ಲೈಂಗಿಕ ಚಟುವಟಿಕೆಯ ಆಚೆಗೂ ರಂಗಭೂಮಿಯಲ್ಲಿ ಭರತನಾಟ್ಯ, ನೃತ್ಯ, ಪ್ಯಾಶನ್ ಶೋ ನಂತರಹ ಪ್ರಯೋಗಕ್ಕೆ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ

 ಬಳ್ಳಾರಿ ಜಿಲ್ಲೆಯ ಮಂಗಳ ಮುಖಿಯರು ಏಳು ನೂರರಷ್ಟು ದಾಖಲೆಗೆ ಸಿಕ್ಕಿದ್ದಾರೆ. ಇದರಲ್ಲಿ ಐದು ನೂರರಷ್ಟು ಮಂಗಳಮುಖಿಯರು ೧೮ ರಿಂದ ೩೫ ವರ್ಷದ ಒಳಗಿನವರೇ ಆಗಿದ್ದಾರೆ. ಇವರೆಲ್ಲಾ ಗಂಡಾಗಿದ್ದರೆ ಯುವ ಸಮುದಾಯದ ಲೆಕ್ಕದಲ್ಲಿ ಸಿಗುವವರು, ಮಂಗಳಮುಖಿಯರಾದ ಕಾರಣ ಲೆಕ್ಕಕ್ಕಿಲ್ಲದಂತಾಗಿದೆ. ಇಂತಹ ಮಂಗಳಮುಖಿಯರಲ್ಲಿ ಯಲ್ಲಮ್ಮ, ಹುಲಿಗೆಮ್ಮನ ಭಕ್ತೆಯರಿದ್ದಾರೆ. ಮುಂಬೈನ ಹಿಜಿಡಾ ಸಂಸ್ಕೃತಿ ಪಾಲಿಸುವವರಿದ್ದಾರೆ.  ಈ ಎರಡನ್ನೂ ಒಳಗೊಂಡಂತೆ ಬಳ್ಳಾರಿಗೇ ವಿಶಿಷ್ಟವಾದ ಸ್ಥಳೀಯ  ಸಂಸ್ಕೃತಿಯೊಂದನ್ನು ರೂಢಿಸಿಕೊಂಡಿದ್ದಾರೆ.

 ಮಂಜಮ್ಮನ ತಂಡದವರು ಯಲ್ಲಮ್ಮನ ಸಂಪ್ರದಾಯದ ಜೋಗತಿ ನೃತ್ಯ ಹಾಡುಪರಂಪರೆ ಮತ್ತು ನಾಟಕವನ್ನು ಜೀವಂತವಿಟ್ಟಿದ್ದಾರೆ. ಯಲ್ಲಮ್ಮನ ನಾಟಕವನ್ನು ಬೆಂಗಳೂರಿನ ರಂಗಶಂಕರ ಒಳಗೊಂಡಂತೆ ಕರ್ನಾಟಕದಾದ್ಯಾಂತ ಅಭಿನಯಿಸುವ ಮೂಲಕ ಜಾನಪದ ರಂಗಭೂಮಿಯಲ್ಲಿ ಈ ನಾಟಕಕ್ಕೆ ಹೊಸ ಆಯಾಮವನ್ನು ಒದಗಿಸಿದ್ದಾರೆ. ಇದನ್ನು ಗುರುತಿಸಿ ಮಂಜಮ್ಮ ಜೋಗತಿಗೆ ಮಹರಾಷ್ಟ್ರದ ನಾಗಪುರ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ ೨೦೧೦-೧೧ ರಲ್ಲಿ ‘ಗುರುಶಿಷ್ಯ’ ಪರಂಪರೆಯ ಯೋಜನೆ ನೀಡಿತ್ತು. ಈ ಯೋಜನೆಯ ಭಾಗವಾಗಿ ೧೫ ಜನ ಯುವ ಜೋಗತಿಯರಿಗೆ ಜೋಗತಿ ನೃತ್ಯ ಮತ್ತು ನಾಟಕದ ತರಬೇತಿ ನೀಡಿದ್ದಾರೆ. ‘ಜನರು ಕೀಳಾಗಿ ಕಾಣುವ ನಮ್ಮ ಗಂಡುಜೋಗತಿ/ಮಂಗಳಮುಖಿ ಸಮುದಾಯ ಕಲೆಯಿಂದಲೂ ಗೌರವ ಪಡೆಯಲು ಸಾಧ್ಯವಿದೆ’ ಎನ್ನುವುದು ಮಂಜಮ್ಮ ಜೋಗತಿಯವರ ನಿಲುವು.  

   ಬಹುಪಾಲು ಮಂಗಳಮುಖಿಯರನ್ನೊಳಗೊಂಡ ಮೋಹಿನಿ ಭಸ್ಮಾಸುರ ಎಂಬ ಪೌರಾಣಿಕ ನಾಟಕ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಜನರನ್ನು ಅಚ್ಚರಿಗೊಳಿಸಿತ್ತು. ಧಾರ್ಮಿಕ ಆವರಣದ ಸಾಂಪ್ರದಾಯಿಕ ವೃತ್ತಿಯಲ್ಲಿರುವ ಕಾರಣ ಮಂಜಮ್ಮನ ತಂಡದವರು ಮಂಗಳಮುಖಿ ಎನ್ನುವುದಕ್ಕಿಂತ, ಜೋಗತಿ ಎಂತಲೇ ಗುರುತಿಸಿಕೊಳ್ಳುತ್ತಾರೆ. ಮಂಜಮ್ಮ ಜೋಗತಿ ಭಸ್ಮಾಸುರನ ಪಾತ್ರ ಮಾಡಿದರೆ, ಭ್ರಹ್ಮದೇವನಾಗಿ ರಾಮವ್ವ ಜೋಗತಿ, ದೇವೇಂದ್ರನಾಗಿ ಗೌರಿ ಜೋಗತಿ, ಗಣಪನಾಗಿ ಕವಿತಾ, ಷಣ್ಮುಖನಾಗಿ ಗಂಗಮ್ಮ, ಲಕ್ಷ್ಮಿಯಾಗಿ ಯಲ್ಲಮ್ಮ, ಋಷಿಮುನಿಯಾಗಿ ದುರುಗಮ್ಮ ಮತ್ತು ಸಂಗಡಿಗರು. ಏಳು ಜನ ಮಂಗಳಮುಖಿಯರು ಈ ಪೌರಾಣಿಕ ನಾಟಕದಲ್ಲಿ ಸಮರ್ಥವಾಗಿ ಅಭಿನಯಿಸಿದ್ದರು. ಸುರಪುರ ತಾಲೂಕಿನ ಕೊಡೇಕಲ್ಲು ಗ್ರಾಮದ ಬಸವರಾಜ ಪಂಚಗಲ್ ಅವರ ರಚನೆಯ ಈ ನಾಟಕವನ್ನು ಮರಿಯಮ್ಮನ ಹಳ್ಳಿಯ ರಂಗ ಸಾಧಕಿ ಡಾ.ಕೆ.ನಾಗರತ್ನಮ್ಮ ಮತ್ತು ಇಳಕಲ್ ಉಮಾರಾಣಿ ನಿರ್ದೇಶಿಸಿದ್ದರು. ಈ ಇಬ್ಬರು ಹಿರಿಯ ರಂಗಕಲಾವಿದೆಯರ ಒತ್ತಾಸೆಯೆ ಇಂತಹದ್ದೊಂದು ಪ್ರಯೋಗ ನಡೆಯಲಿಕ್ಕೆ ಕಾರಣವಾಗಿತ್ತು.


 ಭಸ್ಮಾಸುರನಂತಹ ರೌದ್ರರಸದ ಪಾತ್ರವನ್ನು ಮಂಜಮ್ಮ ಜೋಗತಿ ಹೇಗೆ ನಿರ್ವಹಿಸುತ್ತಾಳೆ ಎನ್ನುವ ಕೊಂಕು ನುಡಿಗಳೆಲ್ಲಾ ಹೊಮ್ಮಿದ್ದವು. ಅಂತೆಯೇ ಮಂಗಳಮುಖಿಯರು ಯಲ್ಲಮ್ಮನ ನಾಟಕ ಮಾಡಬಲ್ಲರು ಆದರೆ, ಅವರಿಂದ ಭಸ್ಮಾಸುರನಂಥಹ ನಾಟಕ ಮಾಡಿಸಬಹುದೆ? ಎಂದು ಸಾಂಪ್ರದಾಯವಾದಿ ಪುರುಷರು ಈ ನಾಟಕವನ್ನು ವಿರೋಧಿಸಿದ್ದರು. ನಾಟಕದ ಗಂಡುಪಾತ್ರಗಳನ್ನು ಮಂಗಳಮುಖಿಯರನ್ನು ನಿರ್ವಹಿಸುವಾಗ ನಡಿಗೆ ಮತ್ತು ಭಾಷಾ ಬಳಕೆಯಲ್ಲಿ ಹೆಣ್ಣಿನ ಛಾಯೆ ಬಂದರೆ ಗಂಡು ಪಾತ್ರಕ್ಕೆ ಅವಮಾನ ಮಾಡಿದಂತೆ ಎನ್ನುವುದು ಈ ವಿರೋಧದ ಹಿಂದಿದ್ದ ಸೂಕ್ಷ್ಮತೆಯಾಗಿತ್ತು. ಈ ಬಗೆಯ ವಿರೋಧ, ಕೊಂಕು ನುಡಿಗಳಿಗೆ ಉತ್ತರವೆಂಬಂತೆ ಈ ನಾಟಕ ಯಶಸ್ವಿಯಾಯಿತು. ನಾಟಕ ಮುಗಿದಾದ ಮೇಲೆ ಈ ಬಗೆಯ ಎಲ್ಲಾ ಆರೋಪ ಅನುಮಾನಗಳು ಹುರುಳಿಲ್ಲದಂತಾಗಿದ್ದವು. ಮಾ.ಬ.ಸೋಮಣ್ಣ  ಅವರ ರಚನೆಯ ಶರಣರ ಆಯ್ದ ವಚನಗಳನ್ನು ಆಧರಿಸಿದ ‘ಶರಣ ಸಂಪದ’ ಎನ್ನುವ ರೂಪಕದಲ್ಲಿ ಮಂಗಳಮುಖಿ ಗೌರಿ ಅಕ್ಕಮಹಾದೇವಿಯ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರ ಎಷ್ಟು ಯಶಸ್ವಿಯಾಗಿತ್ತೆಂದರೆ ಗೌರಿಯನ್ನು ಕೆಲವರು ಅಕ್ಕಮಹಾದೇವಿ ಅಂತಲೇ ಕರೆಯುತ್ತಾರೆ. 

 ಬಳ್ಳಾರಿ ನಗರದಲ್ಲಿರುವ ಮಂಗಳಮುಖಿಯರು ಮಂಜಮ್ಮನ ತಂಡಕ್ಕಿಂತ ಭಿನ್ನರಾದವರು. ಇವರು ಮುಂಬೈನ ಹಿಜಿಡಾ ಪರಂಪರೆಯಲ್ಲಿ ತರಬೇತಿ ಪಡೆದವರು. ಇವರನ್ನೆಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರೇಣುಕಾ ರೂರಲ್ ಡೆವಲಪ್‌ಮೆಂಟ್ ಎನ್.ಜಿ.ಓದ  ಪ್ರೇಮಾ. ಎಸ್ ಅವರು ಒಟ್ಟಾಗಿಸಿದ್ದಾರೆ. ಅವರುಗಳಿಗೆ ಐಡೆಂಟಿಟಿ ಕಾರ್ಡ ಮಾಡಿಸಿ ಬೇರೆ ಬೇರೆ ಕೆಲಸಗಳಿಗೆ ತೊಡಗಿಸಬಹುದಾದ ಸಾಧ್ಯತೆಗಳತ್ತ ಪ್ರಯತ್ನಿಸುತ್ತಿದ್ದಾರೆ. ಕೆಲವರು ಡ್ರೈವಿಂಗ್ ಕಲಿಯುತ್ತಿದ್ದರೆ, ಮತ್ತೆ ಕೆಲವರು ಮೇಣದಬತ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಉಳಿದಂತೆ ಬಹುಪಾಲು ಮಂಗಳಮುಖಿಯರ ಇಚ್ಚೆಯಂತೆ ಸ್ಥಳೀಯ ಡಾನ್ಸ್ ಮಂಜು ಅವರಿಂದ ಕ್ಲಾಸಿಕಲ್ ಮತ್ತು ಮಾಡ್ರನ್ ನೃತ್ಯ ತರಬೇತಿಯನ್ನು ಕೊಡಿಸಿದ್ದಾರೆ.


  ನೃತ್ಯ ತರಬೇತಿ ಪಡೆದ ಮಂಗಳಮುಖಿಯರ ಮೊದಲ ರಂಗ ಪ್ರವೇಶ ೨೦೧೩ ರ ಗಣೇಶೋತ್ಸವದಲ್ಲಿ ಬಳ್ಳಾರಿಯಲ್ಲಿ ನಡೆಯಿತು. ಈ ನೃತ್ಯಕ್ಕೆ ಸಿಕ್ಕ ಜನರ ಪ್ರೋತ್ಸಾಹವನ್ನು ಗಮನಿಸಿ ಇನ್ನಷ್ಟು ಸಿದ್ಧತೆಯೊಂದಿಗೆ ೨೦೧೪ರ ಜನವರಿ ೨ ರಂದು ‘ಚಿಯರ್‌ಅಪ್’ ಎನ್ನುವ ನೃತ್ಯ ಕಾರ್ಯಕ್ರಮವನ್ನು ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಆಯೋಜಿಸಲಾಗಿತ್ತು. ಇಡೀ ರಂಗಮಂದಿರವೇ ಜನರಿಂದ ಕಿಕ್ಕಿರಿದಿತ್ತು. ನೂರು ರೂ ಟಿಕೇಟ್ ಮಾಡಿದ್ದರಿಂದ ಇವರಿಗೆ ಒಂದಷ್ಟು ಹಣಕಾಸಿನ ನೆರವೂ ಆಯಿತು. ಇಲ್ಲಿ ಸಾಂಪ್ರದಾಯಿಕ ಭರತ ನಾಟ್ಯ ಒಳಗೊಂಡಂತೆ ಕನ್ನಡ ತೆಲುಗು ಹಿಂದಿ ಸಿನೆಮಾ ಹಾಡುಗಳಿಗೆ ಮಾಡಿದ ನೃತ್ಯ ಜನರನ್ನು ಮಂತ್ರ ಮುಗ್ಧರನ್ನಾಗಿಸಿತ್ತು. ಪ್ಯಾಶನ್ ಶೋನ ತಳಕು ಬಳಕು ಪ್ರದರ್ಶನ ನಡೆಯುತ್ತಿದ್ದಂತೆ ಕಿಕ್ಕಿರಿದ ಜನ ಸಂದಣಿಯು ಕೇಕೆ ಸಿಳ್ಳೆ ಚಪ್ಪಾಳೆಯೊಂದಿಗೆ ತಮ್ಮ ಪ್ರೋತ್ಸಾಹವನ್ನು ಅತ್ಯುತ್ಸಾಹದಿಂದ ತೋರ್ಪಡಿಸುತ್ತಿದ್ದರು. ‘ಇವರ ತಂಡವನ್ನು ಸಾಂಸ್ಕೃತಿಕ ತಂಡವೆಂದು ಗುರುತಿಸಿ ಸರಕಾರಿ ಉತ್ಸವದಂತಹ ಕಾರ್ಯಕ್ರಮಗಳಿಗೆ ಅವಕಾಶ ಒದಗಿಸಿದರೆ, ಪೂರ್ಣಪ್ರಮಾಣದ ಸಾಂಸ್ಕೃತಿಕ ತಂಡವಾಗಿ ಈ ಮಂಗಳಮುಖಿಯರು ರೂಪು ಪಡೆಯುತ್ತಾರೆ. ಇತರರಿಗೂ ಮಾದರಿಯಾಗುತ್ತಾರೆ’ ಎಂದು ಪ್ರೇಮ ಅವರು ಹೇಳುತ್ತಾರೆ.

 ಬಳ್ಳಾರಿಯಲ್ಲಿ ಮುಖ್ಯವಾಗಿ ಮಂಗಳಮುಖಿಯರನ್ನು ಚಾಂದಿನಿ ಮತ್ತು ಅಂಬಿಕಾ, ಈರೇಶಮ್ಮ ಅವರ ಎರಡು ಮನೆಗಳ ಮೂಲಕ ಗುರುತಿಸಬಹುದು. ಈ ಎರಡು ಮನೆಗಳಿಗೂ ಸೂಕ್ಷ್ಮವಾದ ಫರಕುಗಳಿವೆ. ಚಾಂದಿನಿ ತಂಡದಲ್ಲಿ ಗುರುತಿಸಿಕೊಳ್ಳುವವರು ಆಧುನಿಕ ಸೌಂದರ್ಯವರ್ಧಕಗಳಿಗೆ ತೆರೆದುಕೊಂಡವರು. ನಗರದ ಕಲಿತ ಮಧ್ಯಮವರ್ಗದ ಮಹಿಳೆಯರ ಹಾಗೆ ತೋರ್ಪಡಿಸಿಕೊಳ್ಳುತ್ತಾರೆ. ಅಂತೆಯೇ ಅಂಬಿಕಾ ಈರೇಶಮ್ಮ ಜತೆ ಗುರುತಿಸಿಕೊಳ್ಳುವವರು ಸಾಮಾನ್ಯವಾಗಿ ಗ್ರಾಮೀಣ ಭಾಗದ ಹಳ್ಳಿ ಹೆಣ್ಣುಮಕ್ಕಳನ್ನು ಅನುಕರಿಸುವ ಮಾದರಿಯವರು. ಹಾಗಾಗಿ ಡಾನ್ಸ್ ಪ್ರೋಗ್ರಾಮಿನಲ್ಲಿ ಹೆಚ್ಚಾಗಿ ಚಾಂದಿನಿ ಮತ್ತು ಜಿಂದಾಲ್ ರಾಣಿ ತಂಡದ ಸದಸ್ಯೆಯರು ತೊಡಗಿಸಿಕೊಂಡಿದ್ದರು. ಉಳಿದಂತೆ ಈ ಕಾರ್ಯಕ್ರಮದ ಉಸ್ತವಾರಿ ಮತ್ತು ಮೇಲ್ವಿಚಾರಣೆಯನ್ನು ಅಂಬಿಕಾ, ಈರೇಶಮ್ಮನ ಮನೆಯವರು ವಹಿಸಿದ್ದರು. ಒಟ್ಟಾರೆ ಮೊದಲ ಬಾರಿಗೆ ರಂಗ ಪ್ರವೇಶ ಮಾಡಿದ ಮಂಗಳಮುಖಿಯರಿಗೆ ಇದೊಂದು ಭಿನ್ನ ಅನುಭವ. ಅಂತೆಯೇ ಬಜಾರುಗಳಲ್ಲಿ ನೋಡಿದ ಜನರಿಗೂ ಇವರನ್ನು ರಂಗದ ಮೇಲೆ ನೋಡುವ ಅನುಭವ  ಕೂಡ ವಿಶಿಷ್ಟವಾಗಿತ್ತು. ಈ ಕಾರ್ಯಕ್ರಮಕ್ಕೆ ಬಂದ ಜನರೂ ಕೂಡ ಶೇ ತೊಂಬತ್ತರಷ್ಟು ಯುವಕರು. ಅವರು ಸಹಜವಾಗಿ ಹೆಣ್ಣಿಗೆ ಸ್ಪಂದಿಸುವ ರೀತಿಯಲ್ಲಿಯೇ ಮಂಗಳ ಮುಖಿಯರಿಗೂ ಸ್ಪಂದಿಸಿದ್ದರು. 

  ಹೀಗೆ ಬಳ್ಳಾರಿ ಭಾಗದ ಯುವ ಮಂಗಳಮುಖಿಯರ ಎರಡು ಭಿನ್ನ ಬಗೆಯ ರಂಗ ಪ್ರವೇಶಗಳು ಸಾಂಪ್ರದಾಯಿಕ ನಡೆಗಿಂತ ಬೇರೆತೆರನಾದವುಗಳು. ಮುಂಬೈ ಬೆಂಗಳೂರಿನಂತಹ ನಗರಗಳಲ್ಲಿ ಮಂಗಳಮುಖಿ/ಹಿಜಿಡಾಗಳಿಗೆ ಇರುವ ಅವಕಾಶಕ್ಕೂ, ಮರಿಯಮ್ಮನಹಳ್ಳಿ, ಬಳ್ಳಾರಿಯಂತಹ ನಗರಗಳಲ್ಲಿರುವ ಅವಕಾಶಗಳಿಗೂ ಭಿನ್ನತೆಗಳಿವೆ. ಅಂತೆಯೇ ಬಜಾರು ಭಿಕ್ಷೆ ಮತ್ತು ಸೆಕ್ಸ್ ವರ್ಕನ ಆಚೆಗೂ ರಂಗಭೂಮಿಯತ್ತ ತನ್ನದೇ ಆದ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಿರುವುದು ಈ ಪ್ರಯೋಗದ ವಿಶೇಷವಾಗಿದೆ. ರೇಣುಕಾ ರೂರಲ್ ಡೆವಲಪ್‌ಮೆಂಟ್‌ನ ಪ್ರೇಮ ಅವರು ಬಹುಪಾಲು ಎನ್.ಜಿ.ಓಗಳ ಹಣಗಳಿಕೆಯನ್ನಾಧರಿಸಿದ ಸಾಮಾಜಿಕ ಕಳಕಳಿಗಿಂತ ಭಿನ್ನವಾದುದು. ಮಂಗಳಮುಖಿಯರಲ್ಲಿ ಬದಲಾವಣೆ ತರಬೇಕೆಂಬ ಪ್ರಾಮಾಣಿಕ ಕಾಳಜಿಯಿಂದ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಿರಂತರವಾಗಿ ಈ ಭಾಗದ ಮಂಗಳಮುಖಿಯರು ಸ್ಪಂದಿಸಬೇಕಷ್ಟೆ. ಮಂಗಳಮುಖಿರ ಪ್ರತಿನಿಧಿಯಾಗಿ ಪರ್ವಿನಾ ಭಾನು ಪುರಸೆಭೆಯ ಕಾರ್ಪೋರೇಟ್ ಆಗಿಯೂ ಆಯ್ಕೆಯಾಗಿದ್ದಾರೆ. ಕ್ರಿಯಾಶೀಲವಾಗಿ ಕೆಲಸವನ್ನೂ ಮಾಡುತ್ತಿದ್ದಾರೆ. ಗಂಡು ಹೆಣ್ಣಿನ ಲೋಕದಲ್ಲಿ ಭಿಕ್ಷೆ ಮತ್ತು ಲೈಂಗಿಕ ಚಟುವಟಿಕೆಯನ್ನು ಹೊರತುಪಡಿಸಿದ ಮಂಗಳಮುಖಿಯರಿಗೆ ಅವಕಾಶವೆ ಇಲ್ಲ ಎನ್ನುವ ನಂಬಿಕೆಯ ಆಚೆಗೆ ಬದುಕಿನ ಹೊಸ ಸಾಧ್ಯತೆಗಳನ್ನು ಬಳ್ಳಾರಿ ಭಾಗದ ಯುವ ಮಂಗಳಮುಖಿಯರು ತೋರಿಸಿದ್ದಾರೆ.

  ಜಾಗತಿಕವಾಗಿ ಎಲ್.ಜಿ.ಬಿ.ಟಿ (ಲೆಸ್ಬಿಯನ್, ಗೇ, ಬೈಸೆಕ್ಷುವಲ್ ಮತ್ತು ಟ್ರಾನ್ಸ್ ಜೆಂಡರ್) ಎಂದು ಗುರುತಿಸಿಕೊಂಡವರಲ್ಲಿನ ಯುವ ಸಮುದಾಯ ವಿಭಿನ್ನ ಪ್ರಯೋಗಗಳಿಗೆ ತಮ್ಮನ್ನು ತೊಡಗಿಸಿಕೊಂಡಿದೆ. ಲೈಂಗಿಕ ಅಲ್ಪಸಂಖ್ಯಾತರಾದ ಹಿಜಿಡಾ/ಮಂಗಳಮುಖಿಯರ ಯುವ ಸಮುದಾಯದ ಸಾಧನೆ ಕ್ರಿಯಾಶೀಲತೆಗೆ ಹತ್ತಾರು ಉದಾಹರಣೆಗಳಿವೆ. ಕಳೆದ ಡಿಸೆಂಬರ್‌ನಲ್ಲಿ ಬಿಸಿಎ ಪದವಿಧರೆ ೨೩ ವರ್ಷದ ಸ್ವಪ್ನಾ ಎಂಬ ಮಂಗಳಮುಖಿ ಮೊದಲ ಬಾರಿಗೆ ತಮಿಳುನಾಡು ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಿದ್ದರು. ಕರ್ನಾಟಕದಲ್ಲಿಯೂ ಯುವ ಮಂಗಳಮುಖಿಯರು ಬದುಕಿನ ಹೊಸ ಸಾಧ್ಯತೆಗಳತ್ತ ಚಲಿಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ, ಚಿತ್ರದುರ್ಗದ ಬಳಿ ಮಂಗಳಮುಖಿಯರೆ ಡಾಬಾ ನಡೆಸುತ್ತಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯವು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಸಿ. ಅನು ರವರನ್ನು ಉದ್ಯೋಗಿಯಾಗಿ ನೇಮಿಸಿಕೊಂಡಿದೆ. ಇಂತಹ ಸಂಗತಿಗಳನ್ನು ನೋಡಿದರೆ ಹಿಜಿಡಾ/ಮಂಗಳಮುಖಿಯರಲ್ಲೂ ಯುವ ಸಮುದಾಯವೊಂದು ಹೊಸ ಅವಕಾಶಗಳಿಗಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದೆ. ತಮ್ಮ ಸಾಂಪ್ರದಾಯಿಕ ವೃತ್ತಿಗಳಿಂದ ಹೊಸ ಚಲನೆಯನ್ನು ಪಡೆಯುತ್ತಿದ್ದಾರೆ.



1 ಕಾಮೆಂಟ್‌:

ಅನಾಮಧೇಯ ಹೇಳಿದರು...

Bahala Santosha Ayitu EA lekhana Odi