ಸೋಮವಾರ, ಮಾರ್ಚ್ 24, 2014

ಕನ್ನಡ ಜಾನಪದ ವಿಶ್ವಕೋಶ ಅಗತ್ಯ– ಅನಿವಾರ್ಯತೆ

ಡಾ. ಜಿ. ಆರ್. ತಿಪ್ಪೇಸ್ವಾಮಿ


ಸೌಜನ್ಯ: ಪ್ರಜಾವಾಣಿ
  ಸಮಾಜದಲ್ಲಿ ಬದಲಾವಣೆಯಾದಂತೆ ಸಾಹಿತ್ಯ, ಕಲೆ, ಸಂಸ್ಕೃತಿ, ಜಾನಪದ, ಭಾಷಾ ಕ್ಷೇತ್ರಗಳಲ್ಲೂ ಬದಲಾವಣೆ ಸಹಜ. ಹಾಗಾಗಿ, ಅವುಗಳ ವ್ಯಾಪ್ತಿಯೂ ಹಿರಿದಾಯಿತು. ಹೀಗಿದ್ದಾಗ ಒಂದೊಂದು ವಿಷಯಕ್ಕೂ ಒಂದೊಂದು ಕೋಶದ ಅಗತ್ಯತೆ ಕಾಣಿಸಿತು. ಎಷ್ಟೆಲ್ಲ ಕೋಶಗಳು ಬಂದಿದ್ದರೂ ಕನ್ನಡದಲ್ಲಿ ವಿಶ್ವಕೋಶಗಳ ಅವಶ್ಯಕತೆ ಕಾಣಿಸಿತು. ಇದನ್ನ ಮನಗಂಡೇ ಕನ್ನಡ ಸಾಹಿತ್ಯ ಪರಿಷತ್ತು ೭೯ರಲ್ಲಿ ‘ಕನ್ನಡ ಜಾನಪದ ವಿಶ್ವಕೋಶ’ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿತ್ತು. ಕರ್ನಾಟಕ ಏಕೀಕರಣವಾಗಿ ೨೫ ವರ್ಷಗಳು ಸಂದ ಸಂದರ್ಭ ಅದು.
ಕನ್ನಡ ಎಂ.ಎ. ಪದವೀಧರರು ಜಾನಪದವನ್ನು ವಿಶೇಷವಾಗಿ ಅಭ್ಯಾಸ ಮಾಡಿದವರು- ಅತ್ಯಂತ ಕಡಿಮೆ ಸಂಬಳದಲ್ಲಿ ಚಂದ್ರಶೇಖರ ಕಂಬಾರರ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದರು.
ನಾಡಿನ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಜಾನಪದವನ್ನು ಶೈಕ್ಷಣಿಕ ಶಿಸ್ತಾಗಿ ಬೋಧಿಸಲು ಆರಂಭಿಸಿದ್ದ ಕಾಲ ಅದು. ಅದರ ಪ್ರಭಾವದಿಂದಾಗಿ ಶಿಷ್ಟ ಸಾಹಿತ್ಯದಲ್ಲಿ ಜಾನಪದವನ್ನು ಶೋಧಿಸುವ ತವಕದಲ್ಲಿ ವಿಶ್ವವಿದ್ಯಾನಿಲಯಗಳ ವಿದ್ವಾಂಸರ ಗಮನ ಹರಿದಿತ್ತು. ಹಾಗಾಗಿ ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ, ವಡ್ಡಾರಾಧನೆ, ಪಂಚತಂತ್ರ, ಈಸೋಪನ ಕಥೆಗಳು, ಸ್ತ್ರೀನೀತಿ ಕಥೆಗಳು, ಪಂಚವಿಂಶತಿ ಕಥೆಗಳು, ನೋಂಪಿಯ ಕಥೆಗಳು, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ರಾಜಾವಳಿಕಥಾಸಾರ - ಇವೆಲ್ಲವೂ ಇಲ್ಲಿ ಅಧ್ಯಯನದ ವಸ್ತುವಾದವು, ಆಕರಗಳಾದವು. ಹಾಗಾಗಿ ಕರ್ನಾಟಕ ಜಾನಪದದ ಶ್ರೀಮಂತಿಕೆಯನ್ನು ಕನ್ನಡಿಗರ ಸಾಂಸ್ಕೃತಿಕ ಮಹತ್ವವನ್ನು ಈ ಜಾನಪದ ವಿಶ್ವಕೋಶ ಸಾರುವಂತಾಯಿತು. ಆದ್ದರಿಂದ ಇದಕ್ಕೆ ಸಾಹಿತ್ಯಕ ಮಹತ್ವಕ್ಕಿಂತಲೂ
ಸಾಂಸ್ಕೃತಿಕ ಮಹತ್ವವೇ ಹೆಚ್ಚಾಯಿತು.

ಜಾತ್ಯತೀತ ರಾಷ್ಟ್ರವೆನಿಸಿದ್ದರೂ ಭಾರತದಲ್ಲಿ ಜಾತಿಗಳು ಪ್ರಧಾನ ಪಾತ್ರ ವಹಿಸುತ್ತವೆ. ನಮ್ಮ ಸಂಸ್ಕೃತಿ ಯಾವುದು ಎಂಬುದರ ಹುಡುಕಾಟಕ್ಕೆ ಮೊದಲು ಹಚ್ಚಿದ್ದೆ ವಸಾಹತುಶಾಹಿ ಆಳ್ವಿಕೆ. ಅಂಥ ಸಂದರ್ಭವನ್ನು ಗಮನಿಸಲು ಎಡ್ಗರ್‌ಥರ್ಸ್ಟನ್ ಅವರ ‘ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ’ ಸಂಪುಟಗಳನ್ನು ಆಕರಗಳಾಗಿ ಬಳಸಿಕೊಳ್ಳಲಾಯಿತು. ದಮನಿತ, ನಿರ್ಲಕ್ಷಿತ ಜೀವನ ವಿವರಗಳನ್ನ ಶೋಧಿಸುವ ಸಲುವಾಗಿ ಜಾನಪದ ಆಕರಗಳತ್ತ ಸಂಶೋಧಕರ ಗಮನಹರಿಯಿತು. ಹಾಗಾಗಿ ಪುರಾಣ ವ್ಯಕ್ತಿಗಳು, ಅಂದಿನ ಸಂದರ್ಭಗಳು, ಆ ಸಂಬಂಧದ ಆಚರಣೆಗಳು ಹಾಗೂ ಪುರಾಣ ಕಲ್ಪನೆಗಳನ್ನು ಅರ್ಥೈಸುವಂಥ ಬರಹಗಳೂ ಈ ಕೋಶದಲ್ಲಿ ಸೇರ್ಪಡೆಗೊಂಡವು. 
ಇಂಥ ಬರಹಗಳಿಗೆ ವೆಟ್ಟಮ್‌ಮಣಿಯವರ ‘ಪುರಾಣಿಕ್ ಎನ್‌ಸೈಕ್ಲೋಪೀಡಿಯಾ ಮಾದರಿಯಾಯಿತು. ಜಾನಪದ ವಿಷಯಗಳು ನಾನಾ ನಿಟ್ಟಿನಿಂದ ಸಂಗ್ರಹಗೊಂಡು ಅದರ ಅಧಿಕೃತತೆಗಾಗಿ ಕ್ಷೇತ್ರಕಾರ್ಯವೂ ಅನಿವಾರ್ಯವಾಗಿ ಲೇಖನಗಳು ಗಟ್ಟಿಗೊಂಡಿರುವುದನ್ನು ಗಮನಿಸಬಹುದು. ಇದರ ಸ್ವರೂಪವನ್ನು ಗಮನಿಸಿದ ಎ.ಕೆ.ರಾಮಾನುಜನ್ ಅವರು ‘ಭಾರತೀಯ ಭಾಷೆಗಳಲ್ಲಿಯೇ ಇದು ಪ್ರಥಮ, ಪರಿಷತ್ತಿನ ಇತಿಹಾಸದಲ್ಲಿ ಇದೊಂದು ಚಾರಿತ್ರಿಕ ದಾಖಲೆ ಎಂದರು.
ಪರಿಷತ್ತು ಇನ್ನೊಂದು ಕೋಶದ ಅಗತ್ಯವನ್ನು ಆ ದಿನಗಳಲ್ಲಿ ಕಂಡುಕೊಂಡಿತು. ಸಾಂಸ್ಕೃತಿಕ ಅಧ್ಯಯನದ ದೃಷ್ಟಿಯಿಂದ ಮುಖ್ಯವೆನಿಸುವ ‘ಕರ್ನಾಟಕ ಜನಪದ ವೈದ್ಯಕೋಶ’ ಬೃಹತ್ ಯೋಜನೆಯ ಸಿದ್ಧತೆಯಲ್ಲೂ ಅದು ತೊಡಗಿತು. ರಾಜ್ಯದ ಯಾವ ವಿಶ್ವವಿದ್ಯಾನಿಲಯವಾಗಲಿ ರೂಪಿಸಿ ಕಾರ್ಯಗತಗೊಳಿಸಲು ಆಲೋಚಿಸಿರದ ವಿಶಿಷ್ಟ ಯೋಜನೆ ಇದು.
ಇದಕ್ಕೆ ಸಂಬಂಧಿಸಿದಂತೆ ಅಲ್ಲಲ್ಲಿ ಕೆಲವೇ ಕೆಲವು ಲೇಖನಗಳು, ಪುಸ್ತಕಗಳು ಪ್ರಕಟಗೊಂಡಿದ್ದವಾದರೂ ಈ ಕ್ಷೇತ್ರದಲ್ಲಿ ಆಗಿರುವ ಕೆಲಸ ತೀರಾ ಕಡಿಮೆ. ಈ ಕೊರತೆಯನ್ನು ತುಂಬುವುದಕ್ಕಾಗಿ ಜನಪದ ವೈದ್ಯಕೋಶದ ನಿರ್ಮಾಣ ಒಂದು ಆತ್ಮವಿಶ್ವಾಸದ ಪ್ರಯತ್ನವಾಯಿತು. ಇಂಥ ವಿಶಿಷ್ಟ ಯೋಜನೆಗೆ ಕ್ಷೇತ್ರಕಾರ್ಯ ಸಹಾಯಕರನ್ನು ತರಬೇತುಗೊಳಿಸುವ ಉದ್ದೇಶದಿಂದ ಜಾನಪದ ತಜ್ಞರಿಂದ ಮತ್ತು ವೈದ್ಯರಿಂದ ಜನಪದ ವೈದ್ಯದ ಬಗೆಗೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು.
ಈ ಉಪನ್ಯಾಸಗಳಿಂದ ಮಾರ್ಗದರ್ಶನ ಪಡೆದವರು ಪ್ರತಿ ಜಿಲ್ಲೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಜನಪದ ವೈದ್ಯದ ಬಗೆಗೆ ಸಾಧ್ಯವಾದಷ್ಟು ಮಾಹಿತಿಗಳನ್ನು ಸಂಗ್ರಹಿಸಿ ಪರಿಷತ್ತಿಗೆ ಕಳುಹಿಸುವುದರ ಮೂಲಕ ಸೇವೆ ಸಲ್ಲಿಸಿದ್ದಾರೆ. ಈ ರೀತಿ ಸಂಗ್ರಹಗೊಂಡ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಹೊರತರಲು ಪರಿಷತ್ತು ಸಿದ್ಧತೆಯನ್ನೂ ನಡೆಸಿತ್ತು.
ಈ ಪ್ರಯತ್ನದಲ್ಲಿರುವಾಗಲೇ ಜನಪದ ವೈದ್ಯಕೋಶದ ಕೆಲಸ ವೈದ್ಯರು ಮಾಡುವಂಥದ್ದು ಎಂಬ ಅಭಿಪ್ರಾಯ ಮೂಡಿತು. ಆಗ ಪರಿಷತ್ತು ‘ಆಯುರ್ವೇದಕ್ಕೂ ಜನಪದ ವೈದ್ಯಕ್ಕೂ ಯಾವುದೇ ಸಂಬಂಧವಿಲ್ಲವೆಂದೂ ಈ ಕೋಶದ ಉದ್ದೇಶವೇ ಸಾಂಸ್ಕೃತಿಕ ದಾಖಲೆ ಸ್ಥಾಪಿಸುವಂಥದ್ದು ಎಂದು ಸ್ಪಷ್ಟೀಕರಣ ನೀಡಿತಾದರೂ ಕ್ಷೇತ್ರಕಾರ್ಯ ಸ್ಥಗಿತಗೊಂಡಿತು. ಈವರೆಗೆ ಸಂಗ್ರಹ ಮಾಡಿರುವ ಮಾಹಿತಿಯನ್ನು ಪುಸ್ತಕ ರೂಪದಲ್ಲಾದರೂ ಹೊರತಂದು ಅದನ್ನು ಒಂದು ಸಾಂಸ್ಕೃತಿಕ ದಾಖಲೆಯಾಗಿಸಬೇಕೆಂಬ ಉದ್ದೇಶವನ್ನು ಈಡೇರಿಸುವ ಹಂಬಲ ಪರಿಷತ್ತಿಗಿತ್ತು.
ಸಂಪಾದಕರ ಆದೇಶದಂತೆ ಈ ಯೋಜನೆಗೆ ನಿಯೋಜನೆಗೊಂಡಿದ್ದ ಸಂಶೋಧಕರು ಹಲವಾರು ವಿಷಯಗಳನ್ನು ಅಸಂಖ್ಯಾತ ಕಾರ್ಡುಗಳಲ್ಲಿ ಬರೆದದ್ದೂ ಆಯಿತು. ಅದರ ಫಲವಾಗಿ ರೂಪುಗೊಂಡ ಈ ಸಮೃದ್ಧವಾದ ಮಾಹಿತಿ ಪರಿಷತ್ತಿನ ಕಪಾಟುಗಳನ್ನು ಸೇರಿದ್ದೂ ಆಯಿತು. ಆದರೆ ಈವರೆವಿಗೂ ಆ ಮಾಹಿತಿ ಹೊರಬರಲೇ ಇಲ್ಲ!
ಹಂಪನಾ ಅವರು ಹಮ್ಮಿಕೊಂಡಿದ್ದ ಈ ಬೃಹತ್ ಯೋಜನೆ ಈವರೆಗೂ ಕಾರ್ಯರೂಪಕ್ಕೆ ಬಾರದೆ ಇರುವುದು ಆಶ್ಚರ್ಯದ ಸಂಗತಿ.
ಇದರ ನಂತರ ಮದ್ರಾಸ್ ಏಷಿಯನ್ ಅಧ್ಯಯನ ಸಂಸ್ಥೆಯಲ್ಲಿ ಹಮ್ಮಿಕೊಂಡ ಜಾನಪದ ವಿಶ್ವಕೋಶದ ಸಾಧನೆ ಮತ್ತೊಂದು ಮೈಲಿಗಲ್ಲು. ಅಲ್ಲಿ ಇಂಗ್ಲಿಷ್ ಒಳಗೊಂಡಂತೆ ಮಲಯಾಳಂ, ತೆಲುಗು, ಕನ್ನಡ ಭಾಷೆಗಳಿಗೆ ಸಂಬಂಧಿಸಿದ ದ್ರಾವಿಡ ಭಾಷಾಕೋಶವನ್ನು ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಲಾಗುತ್ತಿತ್ತು. ದ್ರಾವಿಡ ಭಾಷೆಗಳ ಜಾನಪದ ಕೋಶವನ್ನು ಇದರೊಂದಿಗೆ ಕೈಗೆತ್ತಿಕೊಳ್ಳಬೇಕು ಎಂಬ ನಿರ್ಧಾರವನ್ನು ಪ್ರಕಟಿಸಿತು. ಈ ಎರಡೂ ಪ್ರಧಾನವಾದ ಯೋಜನೆಗಳೇ. ಆ ಸಂಸ್ಥೆಗೆ ಜಪಾನ್ ಸರ್ಕಾರದ ಸಹಯೋಗವಿತ್ತು.

ನಾಲ್ಕು ಭಾಷೆಗಳ ಅರ್ಥಕೋಶ, ಜಾನಪದ ಕೋಶವನ್ನು ಮಾಡಲು ನಾಲ್ಕು ಸರ್ಕಾರಗಳನ್ನು (ಆಂಧ್ರ, ಕರ್ನಾಟಕ, ಕೇರಳ, ತಮಿಳುನಾಡು) ಕೇಳಿದಾಗ ಅದರಲ್ಲಿ ಮೊದಲು ಸ್ಪಂದಿಸಿದ್ದು ಕರ್ನಾಟಕ ಸರ್ಕಾರ. ಈ ಎರಡೂ ಯೋಜನೆಗಳಿಗೂ ಅದು ವಾರ್ಷಿಕ ಅನುದಾನ ನೀಡಿತು. ಹಾಗಾಗಿ ಅಲ್ಲಿ ಕನ್ನಡ ಜಾನಪದ ಕೋಶದ ಇಂಗ್ಲಿಷ್ ಅವತರಣಿಕೆಯ ಕೆಲಸ ಶುರುವಾಯಿತು. ಇದನ್ನು ಶುರು ಮಾಡಿದವರು ಮರಿಯಪ್ಪ ಭಟ್ಟರ ನಂತರ ಬಂದ ಶಂಕರ ಕೆದಿಲಾಯ ಅವರು. ಆ ಎರಡೂ ಯೋಜನೆಗಳನ್ನು ಆ ಸಂಸ್ಥೆಯಲ್ಲಿ ನಿರ್ವಹಿಸುತ್ತಿದ್ದರು. ಆಗ ಇಂಗ್ಲಿಷ್ ಅವತರಣಿಕೆ ಜಾನಪದ ಕೋಶ ಪ್ರತ್ಯೇಕವಾಗಿ ಆಗಬೇಕೆಂದೂ ಎರಡನ್ನೂ ಅವರೊಬ್ಬರೇ ನಿಭಾಯಿಸುವುದು ಕಷ್ಟವೆಂಬ ಅಭಿಪ್ರಾಯ ಮೂಡಿತು.
೧೯೮೫ರಲ್ಲಿ ಏಷಿಯನ್ ಅಧ್ಯಯನ ಸಂಸ್ಥೆಗೆ  ಈ ಕಾರ್ಯಕ್ಕಾಗಿ ಕೃಷ್ಣಮೂರ್ತಿ ಹನೂರು ಬರುತ್ತಾರೆ. ಆದರೆ ಅಲ್ಲಿ ತಮಿಳು, ಮಲಯಾಳಂ, ತೆಲುಗು ಕೋಶಗಳ ಕೆಲಸ ಶುರುವಾಗಿರಲಿಲ್ಲ. ವಿದ್ವಾಂಸರೂ ಬರಲಿಲ್ಲ. ಸರ್ಕಾರವೂ ನೆರವು ನೀಡಲಿಲ್ಲವಂತೆ. ಹಾಗಾಗಿ ಕನ್ನಡ ಜಾನಪದ ಕೋಶದ ಇಂಗ್ಲಿಷ್ ಅವತರಣಿಕೆಯ ಕೆಲಸ ಆರಂಭವಾಯಿತು. ಕೃಷ್ಣಮೂರ್ತಿ ಹನೂರು ಈ ಕೋಶದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.
ಈ ಕೋಶದಲ್ಲಿ ಸಮಗ್ರ ಕನ್ನಡ ಜಾನಪದದ ಪರಿಚಯವಿರುವ ಹಲವಾರು ಲೇಖನಗಳು ಸೇರ್ಪಡೆಗೊಂಡವು. ಎಚ್.ಎಲ್.ನಾಗೇಗೌಡರೂ ಒಂದು ಕೋಶವನ್ನು ಹೊರತಂದರು. ನಂತರ ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ವಿಷಯ ವಿಶ್ವಕೋಶ ಜಾನಪದ ಸಂಪುಟವನ್ನು ಬಿಡುಗಡೆ ಮಾಡಿತು. ಕನ್ನಡ ವಿಶ್ವವಿದ್ಯಾಲಯದಿಂದಲೂ ವಿವಿಧ ರೀತಿಯ ಜಾನಪದ ಕೋಶಗಳು ಹೊರಬಂದವು.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಬಂದ ವಿಶ್ವಕೋಶಗಳಲ್ಲಿ ಇಲ್ಲಿದ್ದಂತಹ ಜಾನಪದ ವಿದ್ವಾಂಸರು ಒಂದಲ್ಲಾ ಒಂದು ವಿಧದಲ್ಲಿ ಇದರಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಜಾನಪದ ವಿಶ್ವವಿದ್ಯಾನಿಲಯದಿಂದ ಹತ್ತು ಸಂಪುಟಗಳಲ್ಲಿ ಹೊರಬರಲಿದೆ ಎಂದು ಹೇಳಲಾಗುತ್ತಿದೆ.

ಇದೇ ಮಾರ್ಚ್ ೧೭ರಂದು ಉದ್ಘಾಟನೆಗೊಂಡಿರುವ ‘ಕನ್ನಡ ಜಾನಪದ ವಿಶ್ವಕೋಶ ಯೋಜನೆ’ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಬಿಡುಗಡೆಗೊಂಡಿರುವ ‘ಜಾನಪದ ವಿಶ್ವಕೋಶ’ಗಳಿಗಿಂತ ಭಿನ್ನವಾಗಿರುತ್ತದೆಂದು ಜಾನಪದ ಆಸಕ್ತರು ನಿರೀಕ್ಷಿಸಬಹುದೆ? ಇಷ್ಟಾದರೂ ಈ ಪರಿಯ ಕೆಲಸಗಳು ಮೇಲಿಂದ ಮೇಲೆ ನಡೆಯಬೇಕು ಎನ್ನುವ ಒತ್ತಾಸೆಗಳೇನೊ ಕೇಳಿಬರುತ್ತಿವೆ. ಆದರೆ ಕೆಲಸ ಆದ ಮೇಲೆ ಅವನ್ನು ಸಂಬಂಧಿಸಿದವರೇ ಗಮನಿಸುವುದಿಲ್ಲ. ಪಠ್ಯ ವಿಷಯಗಳಲ್ಲೂ ಅವು ಸೇರ್ಪಡೆಯಾಗುವುದಿಲ್ಲ. ಇದು ನಮ್ಮ ಶೈಕ್ಷಣಿಕ ವಲಯದ ದುರಂತ! ಈ ಕೋಶಗಳು ನಿರೀಕ್ಷಿಸಿದ ಮಟ್ಟದಲ್ಲಿ ವಿದ್ಯಾರ್ಥಿಗಳ ಕೈಗೂ ಎಟಕುವುದಿಲ್ಲ. ಸಾಂಸ್ಥಿಕವಾಗಿ ಮಾಡಿದ ಕೆಲಸಗಳೇ ಹೀಗಾದರೆ ಗತಿಯೇನು?
ಇಂಥ ಜಾನಪದ ವಿಶ್ವಕೋಶಗಳು ಪುನರ್‌ಮುದ್ರಣಗೊಳ್ಳುವ ವ್ಯವಸ್ಥೆಯೂ ಆಗಿಲ್ಲ. ಇನ್ನೂ ಹತ್ತು ವರ್ಷ ಕಳೆದರೆ ಇವು ಬರೀ ಪಳೆಯುಳಿಕೆಗಳಾಗಿ ಉಳಿಯಬಹುದು ಅಷ್ಟೆ. ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರು  ನನೆಗುದಿಗೆ ಬಿದ್ದಿರುವ ಕನ್ನಡ ಜಾನಪದ ವೈದ್ಯಕೋಶ ಯೋಜನೆಯನ್ನು ಕೈಗೆತ್ತಿಕೊಂಡು ಪ್ರಕಟಿಸುವ ವ್ಯವಸ್ಥೆ ಮಾಡಬೇಕು. ಕನ್ನಡ ಜಾನಪದ ಕೋಶ ಯೋಜನೆಯ ಎರಡು ಸಂಪುಟಗಳೊಂದಿಗೆ ಇತರ ಕೋಶಗಳನ್ನು ಪುನರ್ ಮುದ್ರಿಸುವ ವ್ಯವಸ್ಥೆ ಜರೂರಾಗಿ ನಡೆಯಬೇಕು. ಅದರ ಮೂಲಕ ಜಾನಪದ ವಿಶ್ವವಿದ್ಯಾಲಯಕ್ಕೆ ಇದು ಮಾದರಿಯಾಗಬೇಕು.

ಕಾಮೆಂಟ್‌ಗಳಿಲ್ಲ: