ಶುಕ್ರವಾರ, ಮಾರ್ಚ್ 7, 2014

ಒಡಲ ದಂಡಿಗೆಯ ಮಾಡಿ


-ಡಾ.ಸಬಿತಾ ಬನ್ನಾಡಿ  


ಹರದೇಶಿ - ನಾಗೇಶಿ ಕಲೆ ಮತ್ತು ಕಲಾವಿದರು
ಲಿಂಗ ಸಂಬಂಧಿ ಅಧ್ಯಯನ
ಡಾ.ಶೈಲಜಾ ಹಿರೇಮಠ
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.
೨೦೧೧, ಬೆಲೆ:೨೦೦ ರೂ.


 ದೇವದಾಸೇರ ಪೆನ್ಶನ್ ಕೊಡತೇವ ಅಂದ್ರು, ಅದನ್ನ ಬ್ಯಾಡಾ ಅಂದೆ. ದೇವದಾಸೇರು ಅಂದ್ರ ಸೂಳೆತನ ಮಾಡವ್ರು ಅಂತಾರಲ್ಲ; ಅಂಥಾ ದಗದ ನಾ ಮಾಡಿಲ್ಲ ತಂಗಿ. ನಾನ್ಯಾಕ ದೇವದಾಸಿ ಪೆನ್ಶನ್ ತಗೋಬೇಕ್ಹೇಳು? ಎಪ್ಪತ್ತು ವರ್ಷಗಂಟಲೆ ಕಲಾದಾಗ ದುಡದೇನು. ಸರಸತಿ ನನಗ ಕಲಿಸ್ಯಾಳ; ಸಾಕ್ಯಾಳ; ಸಲುವ್ಯಾಳ, ಸಾಯುವದರಾಗ ಆಕಿ ಹೆಸರಲ್ಲಿ ಪೆನ್ಶನ್ ತಗೋಬೇಕಂತ ಆಸಿ.” 
ಇದು ನಾಗೇಶಿ ಹಾಡುಗಾರ್ತಿ ದ್ರೌಪದಿಯ ಮಾತುಗಳು.

     ಕಲೆ ಮತ್ತು ಕಲಾವಿದರ ಅಧ್ಯಯನವೆಂದರೆ ಅವರ ಕಲಾ ಸಾಮರ್ಥ್ಯವನ್ನು ಒರೆಗೆ ಹಚ್ಚುವುದು, ವಿಶ್ಲೇಷಿಸುವುದು ಎಂದೇ ಭಾವಿಸಲಾಗುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎಂ.ಫಿಲ್, ಪಿಎಚ್.ಡಿ ಆಧ್ಯಯನಗಳಿಗೆ ಇವೆಲ್ಲಾ  ಯಾಂತ್ರಿಕವಾಗಿ ಅಧ್ಯಯನ ಮಾಡಬೇಕಾದಟಾಪಿಕ್ಗಳಾಗಿ ಮಾರ್ಪಟ್ಟಿವೆ. ಬಹುಶಃ ಕಾರಣಕ್ಕೇ ಇರಬಹುದು, ಡಾ. ಶೈಲಜಾ ಹಿರೇಮಠರ ಹರದೇಶಿ - ನಾಗೇಶಿ ಕಲೆ ಮತ್ತು ಕಲಾವಿದರು ಲಿಂಗ ಸಂಬಂಧಿ ಅಧ್ಯಯನ ಎಂಬ ಕೃತಿಯನ್ನು ಓದಿಗೆ ಎತ್ತಿಕೊಳ್ಳಲು ನಾನು ಕೆಲವು ಸಮಯವನ್ನೇ ತೆಗೆದುಕೊಂಡೆ. ಆದರೆ ಒಮ್ಮೆ ಓದಿಗೆ ತೆರೆದುಕೊಂಡಂತೆ ಇದು ಬೇರೆಯೇ ಆವರಣಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಅದಕ್ಕೆ ಕಾರಣ ಅದು ಕಾದಂಬರಿಯಂತೆ ಓದಿಸಿಕೊಂಡು ಹೋಗಬಲ್ಲ ಶೈಲಿಯನ್ನು ಹೊಂದಿರುವುದಷ್ಟೇ ಅಲ್ಲ. ಬದಲಿಗೆ, ನಾವು ಬದುಕುತ್ತಿರುವ ಜಗತ್ತಿನಲ್ಲಿ ನಮ್ಮ ಸುತ್ತಿನ ಜೀವಿಗಳು ಹೇಗೆಲ್ಲಾ ಬದುಕುತ್ತಿದ್ದಾರೆ ಎಂಬ ಪರಿವೆಯೇ ನಮಗಿಲ್ಲದಿರುವುದನ್ನು ಚುಚ್ಚಿತೋರುತ್ತಿದೆ ಎನ್ನುವುದೂ ಆಗಿದೆ. ಕಲೆ ಎಂಬುದು ಕೇವಲ ಆರಾಧಿಸಬೇಕಾದ ಸಂಗತಿಯಲ್ಲ, ಅನುಭವಿಸಬೇಕಾದ ಸಂಗತಿಯಲ್ಲ, ಕಲೆ ಪೋಷಿಸುತ್ತಿರುವ ಸಂಸ್ಕೃತಿಯ ನಿಜದ ನೆಲೆ ಯಾವುದು, ಅದರ ಸುಂದರ ಮುಖದ ಹಿಂದಿನ ಕ್ರೌರ್ಯದ ಆಳ ಎಷ್ಟು ಎಂಬುದೆಲ್ಲಾ ತಿಳಿಯ ಬೇಕಾದರೆ ಪುಸ್ತಕವನ್ನು ತಪ್ಪದೇ ಓದಬೇಕಾಗುತ್ತದೆ.
   ಉತ್ತರ ಕರ್ನಾಟಕದ ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿರುವ ಹರದೇಶಿ-ನಾಗೇಶಿ ಕಲೆಯ ಕುರಿತು ಕರ್ನಾಟಕದ ಇತರ ಭಾಗದ ಜನರಿಗೆ ಅಷ್ಟೇನೂ ಮಾಹಿತಿಯಿಲ್ಲ. ಇದೊಂದು ಸವಾಲ್ ಜವಾಬ್ ಮಾದರಿಯ ಹಾಡುಗಾರಿಕೆಯಾಗಿದ್ದು ಇದರಲ್ಲಿ ಭಾಗವಹಿಸುವ ಕಲಾವಿದರು ರಾತ್ರಿಯಿಡೀ ನಿಂತುಕೊಂಡೇ ಇದನ್ನು ಹಾಡುತ್ತಾರೆ. ಹರದೇಶಿ ಹಾಡುವವರು ಶಿವನನ್ನು ಪ್ರತಿನಿಧಿಸುತ್ತಾ ಗಂಡ್ಹೆಚ್ಚು ಎಂದು ವಾದಿಸಿದರೆ, ನಾಗೇಶಿ ಕಲಾವಿದರು ಪಾರ್ವತಿಯನ್ನು ಪ್ರತಿನಿಧಿಸುತ್ತಾ ಹೆಣ್ಹೆಚ್ಚು ಎಂದು ವಾದಿಸುತ್ತಾರೆ. ಇದು ಕೇವಲ ಶಿವ ಪಾರ್ವತಿಯರ ಕತೆಗಳಿಗಷ್ಟೇ ಸಂಬಂಧಿಸಿರುವುದಿಲ್ಲ. ಆಧುನಿಕ ಬದುಕಿನ ಜೀವನ ಶೈಲಿಯ ಲೇವಡಿಯಿಂದ ತೊಡಗಿ ಹಲವು ಮಾದರಿಯ ಕಟ್ಟುಕತೆಗಳನ್ನೂ  ಹಾಡುಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಆದರೆ ಅಂತಿಮವಾಗಿ ಇದು ಗಂಡ್ಹೆಚ್ಚೋ ಹೆಣ್ಹೆಚ್ಚೋ ಎಂಬ ವಾದಕ್ಕೇ ಮರಳಿ, ಇಬ್ಬರಲ್ಲಿ ಒಬ್ಬರು ಗೆಲ್ಲುತ್ತಾರೆ. ಹೀಗೆ ಗೆಲ್ಲುವುದಕ್ಕಾಗಿ ಎದುರು ಹಾಡುಗಾರರ ವೈಯಕ್ತಿಕ ನಿಂದೆಗೂ, ಅಶ್ಲೀಲ ಮಾತುಗಳಿಗೂ ಕಲಾವಿದರು ಇಳಿಯುವುದಿದೆ. ಇಲ್ಲಿ ಹೆಣ್ಹೆಚ್ಚು ಎಂದು ವಾದಿಸುವ ಹಾಡುಗಾರರು ಹೆಚ್ಚಾಗಿ ಹೆಂಗಸರೇ ಆಗಿರುತ್ತಾರೆ. ಮತ್ತು ಇವರೆಲ್ಲಾ ದೇವದಾಸಿಯರೇ ಆಗಿರುತ್ತಾರೆ. ಕಲೆಯ ಕುರಿತು ಈಗಾಗಲೇ ಹಲವರು ಅಧ್ಯಯನ ಮಾಡಿದ್ದರೂ ಅದು ಹಾಡುಗಳ ಸಂಗ್ರಹ ಮತ್ತು ಹಾಡುಗಳ ವಿಶ್ಲೇಷಣೆಗಳಿಗಷ್ಟೇ ಸೀಮಿತವಾಗಿದೆ. ಶೈಲಜಾ ಅವರು ಕಲಾವಿದರನ್ನು ಮುಖತಃ ಸಂದರ್ಶಿಸಿ ಕಲೆಯ ಸಾಮಾಜಿಕ ಮುಖವನ್ನು ಅನಾವರಣ ಮಾಡುವೆಡೆಗೆ ಆಸಕ್ತಿತೋರಿದ್ದಾರೆ. ಸಂದರ್ಭದಲ್ಲಿ ಅವರು ಕಂಡುಕೊಂಡ ಸತ್ಯಗಳ ಅನಾವರಣವನ್ನು ಅಕಾಡೆಮಿಕ್ ಭಾಷೆಯಲ್ಲಿ ನಿರೂಪಿಸದೇ ಕಲಾವಿದರ ಭಾಷೆಯಲ್ಲೇ ಮಾಡಿರುವುದು ಕೃತಿಯ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. ಜೊತೆಗೇ ಇಲ್ಲಿ ಅನಾವರಣವಾದ ಸತ್ಯಗಳು ನಮ್ಮನ್ನು ಬೆಚ್ಚಿಬೀಳಿಸುವಂತಿವೆ.

                                ಸೆಮಿನಾರೊಂದರಲ್ಲಿ ಡಾ.ಶೈಲಜಾ ಹಿರೇಮಠ ಮತ್ತು ಸಬಿತಾ ಬನ್ನಾಡಿ.

    ಇದನ್ನೊಂದು ಪಾತಿವ್ರತ್ಯದಲ್ಲಿ ನಂಬಿಕೆ ಇರುವ ದೇವದಾಸಿಯರ ಕಥಾನಕ ಎನ್ನಬಹುದು. ಅಥವಾ ಪತಿವ್ರತೆಯರನ್ನು ದೇವದಾಸಿಯರನ್ನಾಗಿಸುವ ಸಾಮಾಜಿಕ ಕ್ರೌರ್ಯ ಕಥಾನಕ ಎಂದೂ ಕರೆಯಬಹುದು. ಅಥವಾ ದೇವದಾಸಿಯರಾಗಿದ್ದರೂ ಸೂಳೆಯರಲ್ಲದವರು ತಮ್ಮ ಘನತೆಯನ್ನು ತಮಗೆ ದೊರಕಿಸಿಕೊಡಿ ಎಂದು ಸಮಾಜಕ್ಕೆ ಮಾಡುತ್ತಿರುವ ಆರ್ದ್ರ ಮೊರೆಯ ಕಥಾನಕ ಎಂದೂ ಕರೆಯ ಬಹುದು. ಹೆಣ್ಣನ್ನು ಹಣಿಯುವ ಅಸ್ತ್ರವಾಗಿ ಸ್ತ್ರೀ ನಿರಂತರವಾಗಿ ಬಳಕೆಯಾಗುವುದನ್ನೂ, ಇರಿತದಿಂದ ಹೆಣ್ಣು ಮಾನಸಿಕವಾಗಿ ಘಾಸಿಗೊಳಗಾಗಿ ನಲುಗುವುದನ್ನೂ ಇನ್ನೂ ಮುಂದುವರಿಸಿದ್ದಾಳೆ. ಅದಕ್ಕಾಗಿ ಹಲವು ರಾಜಿಗಳನ್ನು ಮಾಡಿಕೊಳ್ಳುತ್ತಲೇ ಇದ್ದಾಳೆ. ಅವಳು ಹಾಗೆ ನಲುಗುವುದಕ್ಕೆ ಪುರುಷ ಚಿಂತನೆಯ ಮೂಸೆಯಲ್ಲಿ ಹುಟ್ಟಿದ ಪಾತಿವ್ರತ್ಯದ ಬಾಣವನ್ನು ಅದೇ ಪುರುಷ ನೆಲೆಯಲ್ಲೇ ಗ್ರಹಿಸಿರುವುದೂ ಕಾರಣವಾಗಿದೆ. ಹೀಗಾಗಿ ಸುಳ್ಳು ಸುಳ್ಳೇ ತನ್ನ ಮೇಲೆ ಇಂತಹ ಆರೋಪಗಳು ಬಂದರೆ ಎಂದು ಹೆದರುವುದೂ, ಸುಳ್ಳೇ ಇಂತಹ ಆರೋಪ ಬಂದಾಗ ಅದನ್ನು ಸುಳ್ಳೆಂದು ಸಾಕ್ಷಿ ಸಮೇತ ನಿರೂಪಿಸಲಾಗದೇ ಒದ್ದಾಡುವುದೂ ನಡೆದು ಕೊಂಡೇ ಬಂದಿದೆ. ಬಹುಶಃ ಆರೋಪಕ್ಕೆ ಹೆಣ್ಣು ಸೊಪ್ಪು ಹಾಕದೇ ಹೋದ ದಿನ ಜಗತ್ತಿನ ಎಷ್ಟು ಪುರುಷರು ಮತ್ತು ಪುರುಷ ಚಿಂತನೆಯನ್ನೇ ಹಾಸಿಹೊದ್ದಿರುವ ಮಹಿಳೆಯರು ನಿದ್ದೆಗೆಡುತ್ತಾರೋ ಗೊತ್ತಿಲ್ಲ. ಆದರೆ ದೇವದಾಸಿ ಪಟ್ಟಹೊತ್ತ ಹೆಂಗಸರೂ ಆರೋಪದೆದುರು ಹೊಟ್ಟೆಯಲ್ಲಿ ಮುಳ್ಳು ಹೊಕ್ಕಂತೆ ರೋದಿಸುವುದು ಮತ್ತು ಇತ್ತೀಚೆಗೆ ಶಿಕ್ಷಣಕ್ಕೆ ತೆರೆದು ಕೊಳ್ಳುತ್ತಿರುವ ಇವರ ಮಕ್ಕಳು ತಾಯಿಯ ಮೇಲೆ ಬರುತ್ತಿರುವ ಇಂತಹ ಅರೋಪದಿಂದ ಕಂಗಾಲಾಗುವುದನ್ನು ನೋಡುವಾಗ ಹೆಣ್ಣು ಶಾಪದಿಂದ ಬಿಡುಗಡೆ ಹೊಂದಲು ಇನ್ನೂ ಎಷ್ಟು ಕಾಲ ಕಾಯಬೇಕೋ ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ.

     ಇದೊಂದು ಲಿಂಗಸಂಬಂಧಿ ಅಧ್ಯಯನವಾಗಿದೆ. ಹಾಡಿಕೆಯ ಕ್ಷೇತ್ರದಲ್ಲಿನ ಪುರುಷ ಮತ್ತು ಮಹಿಳೆಯ ಅನುಭವಗಳನ್ನು ಲಿಂಗಸಂಬಂಧಿ ನೆಲೆಯಲ್ಲಿ ನಿರ್ವಚಿಸುವ ಉದ್ದೇಶದಿಂದ ಹೊರಟ ಅಧ್ಯಯನ ಹೊರಹಾಕುವ ವಿಚಾರಗಳು ನಾಗರಿಕ ಸಮಾಜಕ್ಕೆ ಕೆಲವು ಪ್ರಶ್ನೆಗಳನ್ನು ಎಸೆಯುತ್ತದೆ. ಇದೇ ಹಾಡಿಕೆಯ ರಂಗದಲ್ಲಿರುವ ಪುರುಷರು ಬಡತನದ ನೋವನ್ನು ಅನುಭವಿಸಿದವರೇ ಆದರೂ ಅವರು ಎದುರಿಸುವ ಅವಮಾನದ ಸ್ವರೂಪ ಮಾತ್ರ ಮಹಿಳೆಯರ ಅನುಭವಕ್ಕಿಂತ ಭಿನ್ನವಾಗಿರುತ್ತವೆ. ಇಲ್ಲಿ ಹೆಂಗಸರು ಹೊಟ್ಟೆಯ ತಾಪಕ್ಕಾಗಿ, ಹಾಡಿಕೆ ಕಲಿಸಲು ಬರುವ ಗುರು ಎನಿಸಿಕೊಂಡವನ ಅತ್ಯಾಚಾರಕ್ಕೆ ಬಲಿಯಾಗ ಬೇಕಾಗುತ್ತದೆ. ಮೈನೆರೆದು ಎರಡು ಮೂರು ತಿಂಗಳಲ್ಲೇ ಇಂತಹ ದಾಳಿಗೆ ಬಲಿಯಾಗುವ ಇವರು ಕಾರಣಕ್ಕೆ ಅವರೊಂದಿಗೇ ಉಡಿಕೆ ಶಾಸ್ತ್ರವನ್ನೂ  ಮಾಡಿಕೊಳ್ಳಬೇಕಾಗುತ್ತದೆ.( ಹಾಡಿಕೆಯ ಹೆಂಗಸರು ಮದುವೆ ಮಾಡಿಕೊಳ್ಳುವಂತಿಲ್ಲ. ಉಡಿ ತುಂಬವವನನ್ನೇ ಗಂಡನೆಂದ ಭಾವಿಸಿ ಅವನೊಂದಿಗೇ ಬದುಕುತ್ತಾರೆ. ಮತ್ತು ಅವನಿಗೇ ನಿಯತ್ತು ತೋರುತ್ತಾರೆ.) ಕೃತಿಯೊಳಗಣ ವಿವರಗಳು ದೇವದಾಸಿಯರ ಕುರಿತಾಗಿ ಇರುವ ಕೆಲವು ಸಾಮಾನ್ಯ ನಂಬಿಕೆಗಳನ್ನು ಮುರಿದು ಹಾಕುತ್ತದೆ. ಸಾಧಾರಣವಾಗಿ ಕೆಳ ವರ್ಗದ ಮಹಿಳೆಯರಿಗೆ ಸ್ವಾತಂತ್ರ್ಯವಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅವರಿಗೆ ಆರ್ಥಿಕ ಸ್ವಾತಂತ್ರ್ಯದಂತೆ ಉಳಿದ ಸ್ವಾತಂತ್ರ್ಯ ಕೂಡ ಗಗನ ಕುಸುಮವೇ ಎಂಬುದನ್ನು ಕೃತಿ ಸಾಕ್ಷಿ ಸಮೇತ ಎತ್ತಿ ಹಿಡಿಯುತ್ತದೆ

   ದೇವದಾಸಿಯರು ಎಂದೆನಿಸಿಕೊಂಡೂ ಪುರುಷರನ್ನು ಎದುರಿಸಲಾಗದೆ ಮುದುಡಿ ಹೋಗುವ ಇಲ್ಲಿನ ಮಹಿಳೆಯರು ಗರತಿಯರಿಗಿಂತ ಭಿನ್ನರೇನಲ್ಲ. ತಾವು ಕಲಾವಿದೆಯರು, ತಮ್ಮ ಕಲೆಗೆ ಸಮಾಜದಲ್ಲಿ ಬಹಳ ಬೆಲೆಯಿದೆ ಎಂದು ತಮ್ಮನ್ನು ತಾವೇ ನಂಬಿಸಿಕೊಂಡು ಒಂದು ಹುಸಿ ನಂಬಿಕೆಯಲ್ಲಿ ಬಾಳುವ ಇವರಿಗೆ, ವೇದಿಕೆಯಲ್ಲಿ ನೇರವಾಗಿ ಸಾಹಿತ್ಯದ ಹೆಸರಿನಲ್ಲಿ ಆಗುವ ಅವಮಾನವನ್ನು ಪ್ರತಿಭಟಿಸಲೂ ಆಗುವುದಿಲ್ಲ, ಸಾಹಿತ್ಯವನ್ನೇ ಅಸ್ತ್ರವಾಗಿಸಿಕೊಂಡು ಇದಿರಿನವರನ್ನು ಹಳಿಯಲೂ ಆಗುವುದಿಲ್ಲ. ಇದಕ್ಕೆ ಅವರು ಕೊಡುವ ಕಾರಣ ಪುರುಷರನ್ನು ಹಳಿಯುವುದಕ್ಕೆ ತಮಗೆ ಅವಕಾಶವಿಲ್ಲ ಎಂಬುದು ಒಂದಾದರೆ ಇನ್ನೊಂದು, ಸಾಹಿತ್ಯವನ್ನು ರಚಿಸುತ್ತಿರುವುದು ಪುರುಷರು ಮಾತ್ರ. ಹೀಗಾಗಿ ಸಹಜವಾಗಿ ಅಲ್ಲಿ ಬೇಕಾಬಿಟ್ಟಿ ಬೈಗುಳಗಳು ಪುರುಷ ಸಂಬಂಧಿತವಾಗಿ ಇಲ್ಲ! ಆದರೆ ಹೆಂಗಸರು ತಮ್ಮನ್ನು ತಾವು ಬಚಾವು ಮಾಡಿಕೊಳ್ಳಲು ಬಳಸುವ ಅಸ್ತ್ರವೆಂದರೆ ತಾಯ್ತನ. ತಾಯ್ತನದ ಭಾವುಕ ನೆಲೆಯನ್ನು ಉಪಯೋಗಿಸಿಕೊಂಡು ಎದುರಿನವನು ತನ್ನ ಮೇಲೆ ಇನ್ನಷ್ಟು ಅಶ್ಲೀಲ ಹೋಲಿಕೆಯನ್ನು ಮಾಡದಂತೆ ತಡೆಯುವ ಪ್ರಯತ್ನ ಮಾಡುತ್ತಾರೆ.

   ಇಲ್ಲಿ ಸಾಹಿತ್ಯ ರಚಿಸುವವರು ಮಾತ್ರ ಪುರುಷರಲ್ಲ, ಹಾಡನ್ನು ಕೇಳಲು ಬರುವ ಪ್ರೇಕ್ಷಕರೂ ಪುರುಷರೇ ಆಗಿರುತ್ತಾರೆ ಮತ್ತು ಅವರು ಅಶ್ಲೀಲತೆಯ ಲೇಪ ಇರುವ ಕಥನ ನಿರೂಪಣೆಯನ್ನೇ ಹೆಚ್ಚು ಬಯಸುತ್ತಾರೆ. ಇದರಿಂದಾಗಿ ಯಾರು ಹೆಚ್ಚು ಅಶ್ಲೀಲ ಕತೆ ನಿರೂಪಿಸುತ್ತಾರೋ ಅವರಿಗೇ ಹೆಚ್ಚು ಬಕ್ಷೀಸು ಸಿಗುತ್ತದೆ. ಬಕ್ಷೀಸಿನ ಆಸೆಗೆ ಸ್ಪರ್ಧೆಗೆ ಬಿದ್ದವರಂತೆ ಇವರು ಹಾಡುತ್ತಾರೆ. ಹೆಂಗಸರಿಗೆ ಹೆಚ್ಚು ಬಕ್ಷೀಸು ಸಿಗುತ್ತಿದ್ದಂತೆ ಗಂಡಸರು ಹೆಂಗಸರ ಶೀಲವನ್ನೇ ಹರಾಜಿಗೆ ಹಾಕತೊಡಗುತ್ತಾರೆ. ಇಲ್ಲೇ ಇರುವುದು ದುರಂತ. ತಮ್ಮ ವೈಯಕ್ತಿಕ ಜೀವನದಲ್ಲಿ ಪಾತಿವ್ರತ್ಯವನ್ನು ಕಾಪಾಡಿಕೊಂಡು ಬಂದರೂ ದೇವದಾಸಿ ಎಂಬ ಪಟ್ಟ ಹೊತ್ತ ಏಕೈಕ ಕಾರಣಕ್ಕೆ ಸಮಾಜ ಇವರ ಮೇಲೆ ಬರುವ ಸಾರ್ವಜನಿಕ ಅಪವಾದವನ್ನು ನಂಬಿ ಬಿಡುತ್ತದೆ. ಇದೊಂದು ಪ್ರತಿಭಟಿಸ ಬೇಕಾದ ವಿಷಯವೇ ಅಲ್ಲ ಎಂಬ ಒಪ್ಪಿತ ಸ್ಥಿತಿ ನಿರ್ಮಾಣವಾಗಿರುವುದರಿಂದ ಅವರ ಗಂಡಂದಿರೂ ಅಪಮಾನವನ್ನು ನುಂಗಿಕೊಂಡು ಸುಮ್ಮನಿರುತ್ತಾರೆ. ಅವರ ಮಕ್ಕಳೂ ಅಸಹಾಯಕರಂತೆ ನಲುಗುತ್ತಾರೆ. ಅವರ ವಿದ್ಯಾವಂತ ಮಕ್ಕಳು ಅವಮಾನದಿಂದ ದುಮುಗುಡುತ್ತಾರೆ.

   ಕೃತಿ ಮುಖ್ಯವಾಗುವುದೇ ಇಂತಹ ವಿವರಗಳನ್ನು ಅನಾವರಣಮಾಡುವ ಕಾರಣಕ್ಕೆ. ಹೆಂಗಸರ ನೋವುಗಳ ಕುರಿತು ಲೇಖಕಿ ಅವರನ್ನು ಕೇಳಿದಾಗ ಹಲವರು ಇದನ್ನು ಹೇಳಲು ತಯಾರೇ ಇರಲಿಲ್ಲ. ಇನ್ನು ಕೆಲವರು ತಮ್ಮ ದುಃಖವನ್ನೂ ಕೇಳುವವರಿದ್ದಾರಲ್ಲ ಎಂದು ಭಾವುಕರಾಗುತ್ತಾರೆ. ಮತ್ತೆ ಕೆಲವರು ತಮ್ಮ ದುಃಖವನ್ನು ಹೇಳಿಕೊಂಡು ಹಗುರಾಗಲು ದೇವರೇ ಈಕೆಯನ್ನು ಕಳಿಸಿದ್ದಾರೆ ಎಂದು ಭಾವಿಸುತ್ತಾರೆನಿಜ, ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿ ಮಾಡುತ್ತವೆ.ಆದರೆ ಸಮಸ್ಯೆಯ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಮಾತ್ರ ಹೊರಡುವುದಿಲ್ಲ. ಯೋಜನೆಯೊಂದು ಜನರಿಗೆ ಅನುಕೂಲ ಮಾಡಿಕೊಡುವುದಕ್ಕಿಂತಲೂ ಯೋಜನೆಯು ಅನುಷ್ಟಾನವಾಗಿದೆ ಎಂಬ ದಾಖಲೆಯನನ್ನು ಸೃಷ್ಟಿಸುವುದು ಅವರಿಗೆ ಮುಖ್ಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಸಮಸ್ಯೆಗಳ ಸ್ವರೂಪವನ್ನು ಅರಿಯುವ ವ್ಯವಧಾನವೇ ಅವರಿಗಿರುವುದಿಲ್ಲ. ಉದಾ: ದೇವದಾಸಿ ಪದ್ಧತಿಯ ನಿರ್ಮೂಲನ ಮಾಡುವ ಯೋಜನೆ ಸರ್ಕಾರಕ್ಕಿದೆ. ಆದರೆ ಪರೋಕ್ಷವಾಗಿ ಸರ್ಕಾರದ ನೀತಿಗಳೇ ದೇವದಾಸಿ ಪದ್ಧತಿಯನ್ನು ಪೋಷಿಸುತ್ತಲೂ ಇದೆ

  ದೇವದಾಸಿಯರಿಗೆ ಮತ್ತು ಕಲಾವಿದರಿಗೆ ಸರ್ಕಾರ ಪೆನ್ಷನ್ ನೀಡುತ್ತದೆ. ನಾಗೇಶಿ ಕಲಾವಿದೆಯಾಗಬೇಕು ಎಂದರೆ ಆಕೆ ದಪ್ಪು ನುಡಿಸಬೇಕು. ದಪ್ಪು ನುಡಿಸಿದರೆ ಅವರಲ್ಲಿ ಮದುವೆಯಾಗುವುದು ನಿಷಿದ್ಧ. ಅಂದರೆ ನಾಗೇಶಿ ಕಲಾವಿದೆಯಾಗಬೇಕೆಂದರೆ ಅನಿವಾರ್ಯವಾಗಿ ದೇವದಾಸಿ ಆಗಬೇಕು! ಈಕೆ ಕಲಾವಿದೆಯಾದರೂ ಸರ್ಕಾರ ಈಕೆಗೆ ದೇವದಾಸಿ ಪೆನ್ಷನ್ ನೀಡುತ್ತದೆಯೇ ಹೊರತು ಕಲಾವಿದೆ ಪೆನ್ಷನ್ ಅಲ್ಲ. ಅದಕ್ಕಾಗಿ ಲಂಚ ಕೊಟ್ಟರೂ ತಮಗೆ ಪೆನ್ಷನ್ ಸಿಗುವುದಿಲ್ಲ ಎಂದು ಕಲಾವಿದೆಯರು ಅಲವತ್ತು ಕೊಳ್ಳುತ್ತಾರೆ. ಅತ್ತ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸುವಾಗ ಕಡ್ಡಾಯವಾಗಿ ತಂದೆಯ ಹೆಸರನ್ನು ಹಾಕಲು ಹೇಳಲಾಗುತ್ತದೆ. ಹಾಗೆ ತಂದೆಯ ಹೆಸರು ಹಾಕಿದರೆ ಆಕೆಯನ್ನು ದೇವದಾಸಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ದೇವದಾಸಿ ಪೆನ್ಷನ್ ಕೂಡ ನಿರಾಕರಿಸುತ್ತಾರೆ! ಹೋಗಲಿ ಕೂಲಿ ಮಾಡಿಕೊಂಡು ಬದುಕೋಣವೆಂದರೆ ಇವರ ಸಮಾಜದಲ್ಲಿ ಹಾಡಕಿಯವರು ಕೂಲಿಗೆ ಹೋಗುವುದನ್ನು ಕೀಳೆಂದು ಭಾವಿಸಿ ಅಲ್ಲಿಯೂ ಅವಮಾನಿಸಲಾಗುತ್ತದೆ.(ಕೂಲಿಗಿಂತ ಹಾಡಿಕೆಗೆ ಹೋದರೆ ಹಣ ಹೆಚ್ಚು ಸಿಗುತ್ತದೆ.) ಹಸಿವು, ಮಕ್ಕಳನ್ನೂ, ಮನೆಯ ಇತರರನ್ನೂ ಸಾಕಬೇಕಾದ ಜವಾಬ್ದಾರಿ, ಹಾಡಿಕೆಗೆ ಹೋದಾಗ ಆಗುವ ಸಾವಿರ ಅವಮಾನಗಳು, ಅನಾರೋಗ್ಯ, ದುಡಿದ ದುಡ್ಡನ್ನು ಮನೆಗೇ ಸುರಿದರೂ ಸಿಗದ ಮನೆಯ ಯಜಮಾನಿಕೆ ಹೀಗೆ ಕಲಾವಿದೆಯರದು ಕೊನೆಯಿಲ್ಲದ ಬವಣೆಗಳು. ತುಂಬು ಗರ್ಭಿಣಿಯರಾಗಿದ್ದಾಗಲೂ ರಾತ್ರಿಯಿಡೀ ನಿಂತು ಹಾಡುವ ಇವರು, ಹೆರಿಗೆ ಆದ ಹದಿನೈದು ದಿನಕ್ಕೇ ಮತ್ತೆ ಹಾಡಿಕೆಗೆ ತೊಡಗುತ್ತಾರೆ. ಊರೂರು ಅಲೆಯುತ್ತಾರೆ. ತಮ್ಮ ಮಾನ ಉಳಿಸಿಕೊಳ್ಳುವುದಕ್ಕಾಗಿ ಸದಾ ಆತಂಕಿತರಾಗಿರುತ್ತಾರೆ. ತಾವು ಮಾಡದೇ ಇರುವ ತಪ್ಪುಗಳನ್ನೆಲ್ಲಾ ತಮ್ಮ ಮೇಲೆ ಹೇರಿದಾಗಲೂ ತಾಳ್ಮೆ ಕಳೆದುಕೊಳ್ಳದೆ ಅವುಡುಗಚ್ಚಿ ಸಹಿಸಿಕೊಳ್ಳುತ್ತಾರೆ

 ಈ ಕೃತಿಯಲ್ಲಿ ಇಂತಹ ಹತ್ತು ಹಲವು ಪ್ರಸಂಗಗಳು ಮೈತೆರೆದುಕೊಂಡಿವೆ. ತನ್ನ ಸಂಶೋಧನೆಗಾಗಿ ಲೇಖಕಿ ಇವರ ಬವಣೆಗಳನ್ನು ಆಲಿಸ ಹೊರಟಾಗ ಹಲವರು ತಮ್ಮ ಭೂತಕಾಲವನ್ನು ನೆನಪಿಸಿಕೊಳ್ಳಲೂ ಬಯಸಲಿಲ್ಲ. ಇನ್ನು ಕೆಲವರು ತಮ್ಮ ಅನುಭವವನ್ನು ಹೇಳಿದರೂ ಹಾಗೆ ಹೇಳುತ್ತಲೇ ತೀವ್ರವಾದ ದೈಹಿಕ ನೋವಿಗೆ ಒಳಗಾದರು ಎಂದು ಲೇಖಕಿ ಹೇಳುತ್ತಾರೆ. ಆದರೆ ಯಾವ ಪುರುಷನಲ್ಲೂ ಇಂತಹ ಪ್ರತಿಕ್ರಿಯೆ ಕಾಣಲಿಲ್ಲವಂತೆ. ಬದಲಿಗೆ ಅವರು ಹೆಮ್ಮೆಯಿಂದ ತಮ್ಮ ಅನುಭವವನ್ನು ಹೇಳಿಕೊಂಡರಂತೆ. ನೋವಿನಲ್ಲೂ ಎಷ್ಟು ಸ್ವರೂಪಗಳು. ಕೆಲವು ನೋವುಗಳು ಕಾಲಾಂತರದಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವ ಸಂಗತಿಗಳಾಗುತ್ತವೆ. ಆದರೆ ದೇವದಾಸಿಯರಿಗೆ ಅದು ಎಂದೆಂದಿಗೂ ನೆನಪಿಸಿಕೊಳ್ಳಬೇಕಾದ ಸಂಗತಿಗಳಾಗಿರುವುದಿಲ್ಲ.

   ಹೆಣ್ಣಿನ ಮೇಲೆ ನಡೆಯಬಹುದಾದ ಮಾನಸಿಕ ಮತ್ತು ದೈಹಿಕ ದಾಳಿಗಳೆಲ್ಲದರ ಆತ್ಯಂತಿಕ ಸ್ಥಿತಿಯೊಂದರ ರೂಪಕದಂತೆ ನಾಗೇಶಿ ಹಾಡಿಕೆ ಹಾಡುವ ಹೆಣ್ಣುಮಕ್ಕಳಿದ್ದಾರೆ. ಅವರ ಕುರಿತ ಅಧ್ಯಯನ ಕೇವಲ ಅಧ್ಯಯನವಲ್ಲ. ಒಟ್ಟು ಸಮಸ್ಯೆಯ ಆಳ ಅಗಲಗಳನ್ನು ಖಚಿತ ನೆಲೆಗಳಲ್ಲಿ ಗುರುತಿಸಿರುವ ಅಧ್ಯಯನವಾಗಿದೆ. ಇದು ಅನವಶ್ಯಕ ಅಪಮಾನಕ್ಕೆ ಒಳಗಾಗುತ್ತಿರುವ ನಾಗೇಶಿ ಹಾಡುಗಾರ್ತಿಯರಿಗೆ ಮಾತ್ರವಲ್ಲ, ಅವರನ್ನು ಅಪಮಾನಿಸಿಯೇ ಬಕ್ಷೀಸು ಪಡೆಯಬೇಕಾಗಿರುವ ಹರದೇಶಿ ಹಾಡುಗಾರರ ಸ್ಥಿತಿಯನ್ನೂ ಬದಲಿಸಲು ಸಮಾಜ/ಸರ್ಕಾರ ಮನಸ್ಸು ಮಾಡಬೇಕಾಗಿರುವುದನ್ನು ಒತ್ತಾಯಿಸುವ ಕೃತಿಯೂ ಆಗಿದೆ.
***
ಡಾ.ಸಬಿತಾ ಬನ್ನಾಡಿ                         
ಸಹ ಪ್ರಾಧ್ಯಾಪಕಿ                                  
ಸ್ನಾತಕೋತ್ತರ ಕನ್ನಡ ಅಧ್ಯಯನಾಂಗ                

ಸರ್ ಎಂ.ವಿ.ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ನ್ಯೂಟೌನ್, ಭದ್ರಾವತಿ. ಫೊ:೯೪೪೯೨೦೪೯೦೬

ಕಾಮೆಂಟ್‌ಗಳಿಲ್ಲ: