ಶನಿವಾರ, ಮಾರ್ಚ್ 15, 2014

ಕಾಮನ ಹಬ್ಬ

-

  ಸೌಜನ್ಯ: ಕಣಜ


ಕಾಮದಹನದ ಕಥೆ ವಿಷ್ಣುಪುರಾಣ, ಸ್ಕಂದ ಪುರಾಣ, ಶಿವಪುರಾಣ, ಮಹಾಭಾರತ, ಭಾಗವತ ಲಿಂಗಪುರಾಣಗಳು ಅಲ್ಲದೆ ಕಾಳಿದಾಸನ ’ಕುಮಾರಸಂಭವ’ ಮಹಾಕಾವ್ಯದಲ್ಲಿ ಕನ್ನಡದ ಗಿರಿಜಾಕಲ್ಯಾಣ, ಚನ್ನಬಸವಪುರಾಣ, ಮೋಹನ ತರಂಗಿಣಿ, ಕಬ್ಬಿಗರ ಕಾಮ, ಯಶೋಧರಚರಿತೆ ಮುಂತಾದ ಕಾವ್ಯಗಳಲ್ಲಿ ಪ್ರಾಸಂಗಿಕವಾಗಿ ಕಾಣಿಸಿಕೊಳ್ಳುತ್ತದೆ. ಕಾಮ ವಿಷ್ಣುವಿನ ಮಗನೆಂದೂ ಚತುರ್ಮುಖ ಬ್ರಹ್ಮನ ಮಗನೆಂದೂ ಪುರಾಣಗಳು ಹೇಳುತ್ತ ಬಂದಿವೆ.
ಮಹಾಕವಿ ಕಾಳಿದಾಸನ ’ಕುಮಾರ ಸಂಭವ’ ಮಹಾಕಾವ್ಯದಲ್ಲಿ ರತಿವಿಲಾಪ ಸಂದರ್ಭವಿದೆ. ತಾರಕಾಸುರನ ಬಾಧೆ ಉಪಟಳ ಹೆಚ್ಚಲು ದೇವ – ದೇವತೆಯರ ಪ್ರಾರ್ಥನೆಯ ಮೇರೆಗೆ ಮನ್ಮಥನು ಧ್ಯಾನಸ್ಥ ಶಿವನ ತಪಸ್ಸನ್ನು ಭಂಗಗೊಳಿಸಿದ್ದು ಕಾರಣವಾಗಿ ಮನ್ಮಥನು ಶಿವನ ಹಣಿಗಣ್ಣೀನ ಉರಿಯಿಂದ ಸುಟ್ಟು ಬೂದಿಯಾದನು. ’ಯಾವಾಗಲೂ ನಿನ್ನ ಹೃದಯದಲ್ಲಿಯೇ ಇರುತ್ತೇನೆ ಎಂದು ಭರವಸೆ ಕೊಟ್ಟು ಹೋಗಿದ್ದ ಕಾಮ ಸುಟ್ಟು ಹೋಗಲು ರತಿ ಕಣ್ಣೀರ ಕೋಡಿ ಹರಿಸಿದಳು. ರತಿಯ ದುಃಖದೊಂದಿಗೆ ಇಡೀ ನಿಸರ್ಗವೇ ಭಾಗಿಯಾಯಿತು. ವಸಂತ, ಚಂದ್ರ, ಕೋಗಿಲೆ, ದುಂಬಿ ಅಲ್ಲದೆ ತರು-ಲತೆ-ಪುಷ್ಪಗಳೂ ತಮ್ಮ ದುಃಖವನ್ನು ತೋಡಿಕೊಂಡವು. ಇವೆಲ್ಲಾ ರತಿಯ ದುಃಖವನ್ನು ಇಮ್ಮಡಿಸುವ ಉದ್ದೀಪನಗಳಾಗುತ್ತವೆ. ಕಾಳಿದಾಸನ ಕಾವ್ಯದಲ್ಲಿ ಜಾನಪದ ಕಲ್ಪನೆಯ ಉಪಯೋಗವನ್ನು ಕಾಣಬಹುದು.
ಹರಿಹರನ ಗಿರಿಜಾಕಲ್ಯಾಣದಲ್ಲಿ ಬರುವ ’ರತಿಪ್ರಲಾಪ’ ವೂ ಅತ್ಯಂತ ಗಮನಾರ್ಹವಾಗಿದ್ದು ಇದರಲ್ಲಿ ಒಂದಿಷ್ಟು ಹೊಸ ಅಂಶಗಳಿವೆ.
ಬೆಂದ ನುಲಿಯಂತೆ
ಮದನಂ ನಿಂದಿರೆ
ಎನ್ನುವುದು ಕಾಮದಹನವಾದ ಮೇಲೆ ನಿಂತಿರುವ ಕಾಮನ ಚಿತ್ರ. ಇದನ್ನು ಕಂಡು ಕಂಗೆಟ್ಟು ಅನಾಥೆಯಾಗಿ ರತಿ ರೋಧಿಸುತ್ತ ಮೂರ್ಛೆ ಹೋದಳು. ಅನಂತರ ಗಿರಿಜೆಯ ಸೋಂಕಿನಿಂದ ರತಿ ಚೇತರಿಸಿಕೊಂಡಿದ್ದಳು.
ಇದರಂತೆ ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣ ಹಾಗೂ ಕನಕದಾಸನ ಮೋಹನತರಂಗಿಣಿಗಳಲ್ಲಿಯೂ ಕಾಮನಿಗೆ ಸಂಬಂಧಪಟ್ಟ ಕಥೆ ವರ್ಣಿತವಾಗಿದೆ.
ಕಾಮದಹನಕ್ಕೆ ಸಂಬಂಧಪಟ್ಟ ಸಂದರ್ಭ ಜನಪದ ಕವಿಗಳ ಕೈಯಲ್ಲಿ ಬೇರೊಂದು ಹದಕ್ಕೆ ತಿರುಗಿರುವುದನ್ನು ಗಮನಿಸಬಹುದು. ಪುರಾಣ  – ಕಾವ್ಯಗಳಲ್ಲಿ ಹಬ್ಬಿಕೊಂಡಿರುವ ವಿವರಗಳು ವರ್ಣನೆಗಳು ಇದರಲ್ಲಿಲ್ಲ. ತಾರಕಾಸುರನ ಭಾದೆ, ದೇವ – ದೇವತೆಗಳ ಪ್ರಾರ್ಥನೆ, ಶಿವನ ತಪಸ್ಸು ಹಾಗೂ ಶಿವನನ್ನು ಒಲಿಸಿಕೊಳ್ಳಲು ಪ್ರತಿಜ್ಞಾಬದ್ಧಳಾದ ಗಿರಿಜೆಯು ತಪಸ್ಸು ಮುಂತಾದ ವಿವರಗಳು ಪುರಾಣ ಕಾವ್ಯಗಳಲ್ಲಿ ಹೆಣೆದುಕೊಂಡಿದ್ದು, ಇವೆಲ್ಲಾ ಜನಪದ ಕವಿಗೆ ಅಮುಖ್ಯವೆನ್ನಿಸಿಬಿಟ್ಟಿವೆ. ಜನಪದ ಕವಿ ಅಖಂಡ ಜನಸಮುದಾಯದ ದನಿಯಾದ್ದರಿಂದ ಅವನ ಮನಸ್ಸಿನಲ್ಲಿ ಅಚ್ಚ ಕಾಮನ ಕಥಾಸಂದರ್ಭ ಮಾತ್ರ ಆವರಿಸಿದೆ. ಕಾಮದಹನದ ಸಂದರ್ಭ ಹಾಗೂ ಕಾಮನ ಕಥೆಯನ್ನು ಜನ ಸಮುದಾಯದ ಹೃದಯದಲ್ಲಿ ಮನಸ್ಸಿನಲ್ಲಿ ನಿಲ್ಲಿಸಿ, ಅದಕ್ಕೆ ಚಿರಂತನೆಯನ್ನು ನೀಡುವುದು ಅವನ ಉದ್ದೇಶವಾಗಿದೆ. ಆದ್ದರಿಂದ (ಜನಪದ ಕವಿ ಕಾಮದಹನದ ಸಂದರ್ಭವನ್ನು ಹೊಸ ರೀತಿಯಲ್ಲಿ ಅಂದರೆ ಸಾಮಾಜಿಕ ಸಂದರ್ಭವನ್ನಾಗಿ ಪರಿಭಾವಿಸಿರುವುದು ಗಮನಾರ್ಹವಾದದ್ದು. ಪುರಾಣ – ಕಾವ್ಯಗಳಲ್ಲಿ ಸುತ್ತಿದ್ದ ಕೃತಕ ವಾತಾವರಣ, ಉಸಿರುಗಟ್ಟಿಸುವ ಪರಿಸರವನ್ನು ಕಳಚಿಕೊಂಡು ಜಾನಪದದಲ್ಲಿ ಕಾಮದಹನ ಕಥಾಸಂದರ್ಭ ತೀರ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕಣ್ಮುಂದೆ ನಾಟಕದ ದೃಶ್ಯವೊಂದು ಸುಳಿದು ಹೋದಂತೆ ಭಾಸವಾಗುತ್ತದೆ.
ಪಾರೋತಿ- ಮಾದೇವರು ತುಂಬು ಸಭೆಯಲ್ಲಿದ್ದಾಗ ಪಾರೋತಿ ಹೇಳಚೆಲುವ್ಯಾರ? ಎಂದು ಮಾದೇವ ಕೇಳಿದ ಪ್ರಶ್ನೆಗೆ ಪಾರೋತಿ ’ತೀರ ಚೆಲುವಾನ ಕಾಮಣ್ಣ’ ಎಂದು ತಟ್ಟನೆ ಉತ್ತರಿಸುತ್ತಾಳೆ. ತನ್ನನ್ನು ಬಿಟ್ಟು ಕಾಮಣ್ಣ ಚೆಲುವನೆಂದು ಹೇಳಿದ್ದನ್ನು ಕೇಳಿ, ಶಿವನ ಸಿಟ್ಟು ನೆತ್ತಿಗೇರಿತು. ಶಿವ ಯಾವ ವಿಚಾರವನ್ನು ಮಾಡಲಿಲ್ಲ. ಶಿವ ಒಬ್ಬ ಸಾಮಾನ್ಯ ಮನುಷ್ಯನಂತೆ ವರ್ತಿಸುತ್ತಾನೆ. ’ಸಿಟ್ಟಿಗೇಳುತ ಶಿವನು ಬಿಟ್ಟಾನೊ ಉರಿಗಣ್ಣ’ ಸುಟ್ಟು ಬೂದ್ಯಾದೊ ಕಾಮಣ್ಣ ರತಿದೇವಿ’ ಹೊಟ್ಟೆ ಬಡಕೊಂಡು ಅಳತಾಳೊ’ ಈ ಪದ್ಯ ಶಿವಪಾರ್ವತಿಯರ ಮನೋಭಾವವೇನೆಂಬುದನ್ನು ಚೆನ್ನಾಗಿ ಬಣ್ಣಿಸುತ್ತದೆ. ಚೆಲುವು ಸೌಂದರ್ಯದ ಕುರಿತ ಪ್ರಶ್ನೋತ್ತರ, ಚರ್ಚೆ, ಜಿಜ್ಞಾಸೆ ಹಾಗೂ ಚೆಲುವನ್ನು, ಸುಂದರತೆಯನ್ನು, ಪ್ರೀತಿಸುವುದು ಪ್ರಶ್ನಿಸುವುದು ಎಂದಿನಿಂದಲೂ ನಡೆದು ಬಂದಿರುವುದು ಗಮನಾರ್ಹ. ಸುಂದರವಾದದ್ದು ಯಾವುದು ಅಸುಂದರವಾದದ್ದು ಯಾವುದು ಎಂಬುದನ್ನು ಗುರ್ತಿಸುವುದು ಇಂದಿಗೂ ಜಟಿಲಪ್ರಶ್ನೆಯೇ ಆಗಿದೆ. ಸುಂದರತೆ ಅಸುಂದರತೆಗಳು ಅಷ್ಟೊಂದು ಅನ್ಯೋನ್ಯವಾಗಿ ಮಿಶ್ರಣಗೊಂಡಿವೆ. ಹೀಗಾಗಿ ಒಮ್ಮೆ ರೂಪ ಯಾವುದು. ಕುರೂಪ ಯಾವುದು ಎಂಬುದನ್ನು ಗುರ್ತಿಸುವುದು ಕಠಿಣ.[1] ಹುಲಿಯ ಮರಿ ಅತ್ಯಂತ ಆಕರ್ಷಕವಾಗಿರುತ್ತವೆ. ಆದರೆ ಅವೇ ದೊಡ್ಡವುಗಳಾದ ಮೇಲೆ ಕ್ರೂರವಾಗುವುದು ನಮಗೆ ಗೊತ್ತು, ಅಂಥ ಒಂದು ಸಿಟ್ಟಿನ ಕ್ಷಣದಲ್ಲಿ ಕಾಮ ಸುಟ್ಟು ಭಸ್ಮವಾದದ್ದು. ಶಿವ – ಪಾರ್ವತಿಯರ ಆಟಕ್ಕೆ ಬಲಿಯಾದವನು. ಕಾಮ ಕರುಣಾಮಯಿಯಾದ ಪಾರೋತಿಗೆ ಇದು ಸರಿಬರಲಿಲ್ಲ. ಪತಿಯನ್ನು ಕಳೆದುಕೊಂಡ ರತಿಯಂತೂ ಹೊಟ್ಟೆ ಬಡಿದುಕೊಂಡು ಹೊರಳಾಡುತ್ತ ಅಳುತ್ತಿದ್ದಳು. ಅವಳ ರೋದನಕ್ಕೆ ಇಡೀ ಸಭೆಯೇ ಕಳವಳಗೊಂಡಿತು. ಮರುಗಿತು. ರತಿಯಿಂದ ಮತ್ತು ಸಭೀಕರಿಂದ ಪ್ರತಿಭಟನೆ ಬರುವುದಕ್ಕಿಂತ ಮೊದಲೇ ಪಾರೋತಿ ಈ ಕೆಲಸವನ್ನು ತನ್ನ ಕೈಗೆ ತೆಗೆದುಕೊಂಡಳು. ರತಿಯ ಪರವಾಗಿ ವಕೀಲಿಕಿ ಮಾಡಿದಳು. ರತಿಗೆ ಪರಿಹಾರ ಸಿಗಲೇಬೇಕೆಂದು ವಾದಿಸಿದಳು.
ಇದರ ಪರಿಣಾಮವಾಗಿ, ಹೊರಳ್ಯಾಡಿ ಅಳುತ್ತಿದ್ದ ರತಿಯ ದುರವಸ್ಥೆಯನ್ನು ನೋಡಲಾಗದ ಶಿವನ ಕಲ್ಲಿನಂಥ – ಮನಸ್ಸು ಕರಗಿ, ಕಾಮ ಕರೆದಾಗೆಲ್ಲ ಮೂಡಿಬರುತ್ತಾನೆಂದು ಅಭಯವನ್ನಿತ್ತ. ಕೊನೆಗೂ ಪಾರೋತಿಯ ಕೇಸು ಗೆದ್ದಿತು. ಕಾಮನಿಗೆ ಪುನರ್ಜನ್ಮ – ಎಂದರೆ ಚಿರಂತನತೆ ಪ್ರಾಪ್ತವಾಯಿತು. ನೆನೆದವರ ಮನದಲ್ಲಿ ಇರುವಂಥ ವರ ಅವನಿಗೆ ಸಿಕ್ಕಿತು. ಇದರಿಂದ ಪಾರ್ವತಿಗೆ ಮತ್ತು ಅಲ್ಲಿ ನೆರೆದಿದ್ದ ಎಲ್ಲಾ ಸಭಿಕರಿಗೆ ಅರ್ಥಾತ್ ದೇವ – ದೇವತೆಗಳಿಗೆ ಸಂತೋಷವೇ ಸಂತೋಷ. ಆ ಸಂತೋಷವೇ ಒಂದು ಹಬ್ಬ. ಈ ಹಬ್ಬದ ಆಚರಣೆಯಿಂದ ಕಾಮನ ಬದುಕಿನ ಕಥೆ ಇನ್ನಷ್ಟು ಹಿಗ್ಗಿತು. ಕಾಮ ಇಡೀ ಜನಸಮುದಾಯದ ಹೃದಯ – ಮನಸ್ಸುಗಳಲ್ಲಿ ನೆಲೆನಿಂತ.  ಕಾಮ ಗಂಡು-ಹೆಣ್ಣಿನಲ್ಲಿ ಪ್ರೇಮವನ್ನು ಸ್ಫುರಿಸುವ ಜೀವಂತ ನೆಲೆಯಾದ. ಮನುಷ್ಯ ಪ್ರಾಣಿ,  ಪಕ್ಷಿ ಮುಂತಾದ ಅಖಿಲ ಜೀವಗಳಲ್ಲಿ ತರು-ಲತೆ-ಪುಷ್ಪಗಳಲ್ಲಿ ಚೈತನ್ಯ. ಉತ್ಸಾಹಗಳನ್ನು ಸ್ಫುರಿಸುವ ಪ್ರಚಂಡ ಶಕ್ತಿಯಾದ, ಕನ್ನಡದಲ್ಲಿ ಕಾಮನ ಹಬ್ಬಕ್ಕೆ ಸಂಬಂಧಿಸಿದ ಸಾಹಿತ್ಯ  ಬೇಕಾದಷ್ಟು ಇದೆ. ಹಾಡು, ಲಾವಣಿ ದುಂದುಮೆಪದಗಳು ಜನಪದ ಕಾವ್ಯದಲ್ಲಿ ವಿಶಿಷ್ಟವಾಗಿದ್ದು, ಹಳ್ಳಿಗಳಲ್ಲಿ ಕಾಮನಹಬ್ಬದ ಸಂದರ್ಭದಲ್ಲಿ ಇಂದಿಗೂ ಈ ಹಾಡುಗಳು ಕೇಳಲು ಸಿಗುತ್ತವೆ. ಹಲವು ಹೋಳಿಯ ಪದಗಳು ಅವಾಚ್ಯ ಹಾಗೂ ಅಶ್ಲೀಲವಾಗಿರುವುದಕ್ಕೆ ಹೀಗೆ ಕಾರಣವನ್ನು ಹುಡುಕಬಹುದು. ಮೊದಲು ಮನುಷ್ಯನಾಕಾರದಲ್ಲಿದ್ದ ಕಾಮನ ದೇಹ ಭಸ್ಮವಾಗಿ ಆಮೇಲೆ ಅವನು ಅಂಗವಿಲ್ಲದ ಅನಂಗನಾದ. ಅಂದರೆ ನಗ್ನ ಇಲ್ಲವೆ ಬಟಬಯಲಾಗಿರುವುದೇ ಅವನ ಇನ್ನೊಂದು ರೂಪವಾಯಿತೆನ್ನಬಹುದು. ಈ ನಗ್ನತೆ, ಬಟ್ಟಬಯಲಾಗಿರುವುದನ್ನು ಸಂಕೇತಿಸುವುದಕ್ಕಾಗಿಯೇ ಜಾನಪದದಲ್ಲಿ ಅವಾಚ್ಯ ಹಾಗೂ ಅಶ್ಲೀಲ ಪದಗಳ ಸೃಷ್ಟಿಯಾಗಿರುವುದು ಗಮನಾರ್ಹವಾದದ್ದು. ಈ ತರಹದ ಆವಾಚ್ಯ ಹಾಗೂ ಅಶ್ಲೀಲ ಪದಗಳು ಮಾನವನ ಮೂಲ ಪ್ರಕೃತಿಯನ್ನು ಸಂಕೇತಿಸುವ ಪ್ರಾಚೀನತೆಯ ಕೊಂಡಿಯಾಗಿ ಉಳಿದುಕೊಂಡಿರುತ್ತವೆಂದು ಹೇಳಬಹುದು. ಶೀಲ – ಅಶ್ಲೀಲಗಳ ಅವಿನಾಭಾವ ಸಂಬಂಧವನ್ನು ಪ್ರಕಟಿಸುವ ಸಾಹಿತ್ಯ ಹಾಗೂ ಕಲೆ ಪ್ರಪಂಚದಲ್ಲಿ ಅಲ್ಲಲ್ಲಿ ಉಳಿದುಕೊಂಡು ಬಂದಿದೆ. ಇವು ಮಾನವ ಪ್ರಗತಿಯ ಹಾಗೂ ಸಂಸ್ಕೃತಿಯ ಮೆಟ್ಟಿಲುಗಳನ್ನು ಸೂಚಿಸುವ ಅತ್ಯಂತ ಮಹತ್ವದ ದಾಖಲೆಗಳಾಗಿವೆ. ಬಾದಾಮಿ, ಬೇಲೂರು, ಅಜಂತಾ, ಋಜರಾಹೊ (ಲಕ್ಷ್ಮೇಶ್ವರ) ಮುಂತಾದ ಸ್ಥಳಗಳಲ್ಲಿಯ ಶಿಲ್ಪ, ಮೂರ್ತಿಕಲೆ, ಚಿತ್ರಕಲೆಗಳಲ್ಲಿ ಮತ್ತು ವಾತ್ಸಾಯನನ ಕಾಮಸೂತ್ರಗಳಲ್ಲಿ ಅವಾಚ್ಯ, ಅಶ್ಲೀಲ ಭಾವಗಳಿಗೆ ಲೈಂಗಿಕ ಪ್ರವೃತ್ತಿಗಳಿಗೆ ಅಭಿವ್ಯಕ್ತಿ ದೊರಕಿರುವುದು ವಾಜ್ಮಯಲೋಕದ ವಿಸ್ಮಯವನ್ನು ನಿದರ್ಶಿಸುತ್ತದೆ. ಇಂಥವುಗಳಲ್ಲಿ animal instinct ಕಣ್ಣಿಗೆ ಹೊಡೆಯುವಂತೆ ಪ್ರಕಟವಾಗಿರುತ್ತದೆ. ಸಿಗ್ಮಂಡ್ ಫ್ರಾಯಿಡ್ ನಂಥ ಮನೋವಿಜ್ಞಾನಿ  ಇಂಥ ಸಾಹಿತ್ಯ, ಕಲೆ, ಶಾಸ್ತ್ರ ಮುಂತಾದವುಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ಒಂದು ಹೊಸ ಸಿದ್ಧಾಂತವನ್ನೇ ಸೃಷ್ಟಿಸಿದ್ದಾನೆ. ’ಕಾಮ’ ಎನ್ನುವುದೊಂದು ಪ್ರಚಂಡ ಶಕ್ತಿಯೆಂಬುದನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ ಹೇಳಿದ್ದಾನೆ.  ನಮ್ಮಲ್ಲಿಯ ಕಾಮನಹಬ್ಬದ ಆಚರಣೆ. ಆ ಸಂದರ್ಭದಲ್ಲಿಯ ಜನಸಮುದಾಯದ ಸ್ವಚ್ಛಂದ ಹಾಗೂ ಸ್ವೈರವರ್ತನೆ, ಹೊಯ್ಕೊಳ್ಳುವುದು, ಕುಳ್ಳು – ಕಟ್ಟಿಗೆ ಕರಿಯುವುದು, ಅವಾಚ್ಯ ಹಾಗೂ ಅಶ್ಲೀಲ ನುಡಿಗಳನ್ನಾಡುವುದು ಫ್ರಾಯ್ಡನ ಗಮನಕ್ಕೆ ಬಂದಿಲ್ಲವಾದ್ದರಿಂದ ಅವನು ’ಕನಸು’ಗಳ ವಿಶ್ಲೇಷಣೆಗೆ ತೊಡಗಿ ಮನುಷ್ಯನ ಮನಸ್ಸನ್ನು ಅಗಿದು ತೆಗೆದು ಅವನು ಕಾಮಕ್ಕೆ ಸಂಬಂಧಿಸಿದ ಹೊಚ್ಚ ಹೊಸ ಸಿದ್ಧಾಂತವನ್ನು ಜಗತ್ತಿಗೆ ನೀಡಿದ್ದಾನೆ. ಒಟ್ಟು ಜನಸಮೂಹದಲ್ಲಿ ಪ್ರಚಲಿತವಾಗಿರುವ ಕಾಮದ ಕುರಿತ ಹತ್ತಿಕ್ಕಲ್ಪಟ್ಟ ಭಾವಗಳು ಸ್ವಚ್ಛಂದ ಹಾಗೂ ಸ್ವೈರವರ್ತನೆಗೆ ಪುಟಗೊಡುವುದಕ್ಕೆ ನಿದರ್ಶನವಾಗಿವೆ. ಸುಪ್ತಪ್ರಜ್ಞೆಯಲ್ಲಿ ಹತ್ತಿಕ್ಕಲ್ಪಟ್ಟಿರುವ ಮಾನಸಿಕ ಚಟುವಟಿಕೆಗಳ ಪ್ರದರ್ಶನಕ್ಕೆ ’ಕಾಮನಹಬ್ಬ’ದ ಸಂದರ್ಭ ಒಂದು ವಿರಳ ಉದಾಹರಣೆ. ಕಾಲಾಂತರದಲ್ಲಿ ಉತ್ಕ್ರಾಂತಿ ಹೊಂದುತ್ತ, ಸಾಮಾಜಿಕನಾಗುತ್ತ, ನಾಗರಿಕನಾಗುತ್ತ ಬಂದ ಮನುಷ್ಯನಿಗೆ ಇಂಥ ಸ್ವೈರಾಚರಣೆ ಅತ್ಯಂತ ಅಗತ್ಯ ಹಾಗೂ ಅನಿವಾರ್ಯವೂ ಎನ್ನಿಸಿರಬೇಕು. ಮನಸ್ಸಿನ ಸೂಕ್ಷ್ಮ ಹಾಗೂ ತೆಳುವಾದ ಪರದೆಗಳಿಗೆ ಧಕ್ಕೆ ತಟ್ಟಿ ಅವು ಹರಿದುಹೋಗದಂತೆ ಕಾಪಾಡುವ ಶಕ್ತಿ ಇಂಥ ಜಾನಪದ ಹಬ್ಬಗಳ ಆಚರಣೆ, ವಿಧಿಗಳಲ್ಲಿ, ಸಾಹಿತ್ಯ ಕಲೆಗಳಲ್ಲಿ ಅವಿತುಕೊಂಡಂತಿದೆ.
ಕಾಮನ ಹಬ್ಬದ ಆಚರಣೆ ನಾಗರಿಕತೆ ಕಟ್ಟಿರುವ ಕೃತಕತೆಯ ಅಡ್ಡಗೋಡೆಗಳನ್ನೊಡೆದು ಮಾನವ ಸಹಜವಾದ ಮೂಲಪ್ರಕೃತಿಯನ್ನು, ಪ್ರವೃತ್ತಿಗಳನ್ನು ಬಿಚ್ಚಿ ತೋರುತ್ತದಲ್ಲದೆ ಸಂಸ್ಕೃತಿಯ ಅಸಲೀ ಮೌಲ್ಯಗಳನ್ನು ಪ್ರದರ್ಶಿಸುವ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ.
’ಕಾಮದಹನ’ದ ಹಬ್ಬ – ಶೈವರ ಹಬ್ಬವೆಂದು ಡಾ.ಎಂ.ಎಸ್. ಸುಂಕಾಪುರ ಅವರು ಧೈರ್ಯದಿಂದ ಹೇಳಿದ್ದಲ್ಲದೆ ಈ ಸಂಪ್ರದಾಯವು ಭಾರತದ ಎಲ್ಲಾ ಭಾಗಗಳಲ್ಲಿ ಕಂಡು ಬರುತ್ತದೆ ಎಂದು ಅಭಿಪ್ರಾಯ ಪಟ್ಟಿರುವುದು ಜಾನಪದ ಪಂಡಿತರ ಗಮನ ಸೆಳೆಯುವಂತಿವೆ. ಮನಸ್ಸಿನಲ್ಲಿ ಹೂತ ಕಾಮದ ಅಸಹ್ಯ ರೂಪವನ್ನು ಸುಟ್ಟು, ಪರಿಶುದ್ಧವಾಗಬೇಕೆನ್ನುವ ರೀತಿಯೊಂದು ಕಂಡು ಬರುತ್ತದೆಂಬ ಫಿಲಾಸಫಿಯನ್ನು ಮಾತ್ರ ಒಪ್ಪಲಾಗುವುದಿಲ್ಲ. ಕಾಮವನ್ನು ಸುಟ್ಟು ಹಾಕಿದ ಮೇಲೆ ಮನುಷ್ಯನ ಜೀವನ ತತ್ತರಿಸಿಹೋಗಬಹುದು. ಜಗತ್ತಿನಲ್ಲಿಯ ಜೀವ ಜೀವಗಳು, ತರು-ಮರ-ಪುಷ್ಪಗಳು ಸುರುಟಿ – ಮುರುಟಿ ಹೋಗಬಹುದು. ಆದ್ದರಿಂದ ಸುಟ್ಟಕಾಮನ ಬೂದಿಯನ್ನು ಸಂಗ್ರಹಿಸಿ, ಅದನ್ನು ಮನುಷ್ಯ ಆಕಾರದಲ್ಲಿ ನಿಲ್ಲಿಸಲು ಶಿವ ಮತ್ತೆ ಅದರಲ್ಲಿ ಜೀವ ಚೈತನ್ಯವನ್ನು, ತುಂಬಿದ ಕಥೆಯೂ ನಮ್ಮ ಪುರಾಣಗಳಲ್ಲಿದೆ.
ಸಣ್ಣ ದೊಡ್ಡ ಹಲಗೆಗಳನ್ನು ಬಡಿಯುತ್ತ ಹೊಯ್ಕೊಳ್ಳುತ್ತ ಗೋಳಿಡುವುದು ಕಾಮನನ್ನು ಕಳೆದುಕೊಂಡ ನಷ್ಟದ ಕಲ್ಪನೆಯನ್ನು ತಂದುಕೊಂಡುತ್ತದೆ. ಕಾಮನ ಬೂದಿಯಲ್ಲಿ ಮತ್ತೆ ಹೊಸ ಜೀವಚೈತನ್ಯ ತುಂಬಿದ್ದರ ಸಂಕೇತವಾಗಿ ಬೂದಿಯನ್ನು ಬಳಿಯುವುದು. ಬಣ್ಣ ಎರಚುವುದು, ಓಕಳಿಯಾಡುವುದು, ಹಾಡುವುದು, ಕುಣಿಯುವುದು ಇತ್ಯಾದಿ -  ಸಾಮೂಹಿಕ ಕ್ರಿಯೆಗಳು ಸಂತೋಷದ ಪ್ರತೀಕವಾಗಿ ಅದೇ ಹಬ್ಬವಾಗಿ ಮಾರ್ಪಟ್ಟಿತು.
ಸುಗ್ಗಿ ಮುಗಿದ ತರುವಾಯ ಈ ಹಬ್ಬ ಬರುವುದರಿಂದ ಹೊಲ – ತೋಟ ಪಟ್ಟಿಗಳಲ್ಲಿ ದುಡಿಯುವವರು. ರೈತರು, ಕೂಲಿಕಾರರು, ಕಾರ್ಮಿಕರು ಹಾಗೂ ಎಲ್ಲಾ ಸಾಮಾಜಿಕರು ಸೇರಿ ಈ ಹಬ್ಬವನ್ನು ಉತ್ಸುಕತೆಯಿಂದ ಆಚರಿಸಿ, ತಮ್ಮ ದಣಿವನ್ನು ನೀಗಿಸಿಕೊಳ್ಳುವುದು ವಾಡಿಕೆ. ಕಾಮನನ್ನು ಸುಟ್ಟ ಬೆಂಕಿಯನ್ನು, ಕೆಂಡ ಇಲ್ಲವೆ ಕೊಳ್ಳಿಯನ್ನು ತಂದು ಒಲೆ ಹೊತ್ತಿಸಿ ಕೊಳ್ಳುವ ಸಂಪ್ರದಾಯ ಹಳ್ಳಿಗಳಲ್ಲಿ ಈಗಲೂ ಇದೆ. ಕಾಮನ ಬೆಂಕಿಯಲ್ಲಿ ಕಡಲೆಯನ್ನೂ ಸುಟ್ಟು ತಿನ್ನುವುದರಿಂದ ಹಲ್ಲು ಗಟ್ಟಿಯಾಗುವವವೆಂಬ ಹಾಗೂ ಕಾಮನ ಬೂದಿಯನ್ನು ಬಿತ್ತುವ ಬೀಜಗಳಲ್ಲಿ ಬೆರಸುವುದರಿಂದ ಭೂಮಿಯಲ್ಲಿ ಪೀಕು ಬಿಗಿದು ನಿಲ್ಲುವುದೆಂಬ  ನಂಬಿಕೆ ರೈತ ಸಮುದಾಯದಲ್ಲಿದೆ.
ಫಾಲ್ಗುಣ ಮಾಸದಲ್ಲಿ ಬರುವ ಈ ಹೋಳಿಹಬ್ಬವನ್ನು ಕೆಲವರು ವಸಂತೋತ್ಸವವೆಂದೂ  ಕರೆದಿದ್ದಾರೆ. ಬಹುಶಃ ಪುರಾಣ ಕಾವ್ಯಗಳಲ್ಲಿ ಬರುವ ವರ್ಣನೆಗಳಿಗೆ ಆಕರ್ಷಿತರಾಗಿ ಅವರು ಹೋಳಿಹಬ್ಬವನ್ನು ವಸಂತೋತ್ಸವಕ್ಕೆ ಗಂಟು ಹಾಕಿರಬೇಕು.
’ಹೊಯ್ಕಂಡ ಬಾಯಿಗೆ ಹೋಳಿಗಿತುಪ್ಪ’ ಎನ್ನುವ ಮಾತು ಅರ್ಥವತ್ತಾಗಿದ್ದು ಕಾಮನ ಹಬ್ಬದ ಸಂದರ್ಭದಲ್ಲಿ ಹೊಯ್ಕೊಂಡರಷ್ಟೇ ಈ ಹೋಳಿಗೆ ತುಪ್ಪ ಖಚಿತ.
ಕಾಮನನ್ನು ಸುಟ್ಟ ಬೂದಿಯನ್ನು ಎರಚಾಡುವದು. ಬಣ್ಣ ಉಗ್ಗುವುದು, ಸಿಕ್ಕ ಸಿಕ್ಕವರನ್ನೆಲ್ಲ ಬಣ್ಣಗಳಿಂದ ವಿಕಾರಗೊಳಿಸುವುದು, ವಿರೂಪಗೊಳಿಸುವುದು ಇತ್ಯಾದಿ ಕಾಣುತ್ತೇವೆ. ಈ ವಿಕಾರ, ವಿರೂಪ ಎನ್ನುವುದು ರೂಪದ ಇನ್ನೊಂದು ತುದಿ ಎಂಬುದನ್ನು ಮರೆಯಬಾರದು. ಕಾಮ – ಚೆಲುವಿಗೆ, ರೂಪಕ್ಕೆ ಸಂಕೇತವಾಗಿರುವಂಥವನು, ಸುಟ್ಟು ಹೋದ ಮೇಲೆ ರೂಪ ವಿರೂಪಗೊಂಡದ್ದನ್ನು ಸಂಕೇತಿಸುವಂತೆ ಜನ ಸಮುದಾಯದ ಆಚರಣೆಯಲ್ಲಿ ಅದಿನ್ನೂ ಉಳಿದುಕೊಂಡು ಬಂದಿರುವುದು ವೈಜ್ಞಾನಿಕ ಸತ್ಯವನ್ನು ಪ್ರತಿಪಾದಿಸುತ್ತದೆ. ರೂಪ ವಿರೂಪಗಳಲ್ಲಿಯ ಸಾಪೇಕ್ಷ ಸಂಬಂಧಕ್ಕೆ ನಿದರ್ಶನವಾಗಿರುವ ಹೋಳಿಯ ಹಬ್ಬ. ಈ ಒಂದು ಹೊಸ ಅರ್ಥವನ್ನು ಸೂಚಿಸುತ್ತದೆ.
ಭಾರತೀಯ ಹಬ್ಬಗಳಲ್ಲಿ ಕಾಮನಹಬ್ಬ ದ್ರಾವಿಡರು ಆಚರಿಸುವ ಅತ್ಯಂತ ಮಹತ್ವದ ಹಬ್ಬ. ಇದರ ಆಚರಣೆ ವಿಧಿ  – ವಿಧಾನಗಳಲ್ಲಿ ಉಡಿಗೆ ತೊಡಿಗೆಗಳಲ್ಲಿ, ಊಟ ಉಪಾಹಾರಗಳಲ್ಲಿ ನಂಬಿಕೆ – ನಿಯತ್ತುಗಳಲ್ಲಿ ವಾದ್ಯವಿಶೇಷಗಳಲ್ಲಿ ದ್ರಾವಿಡ ಜನಾಂಗದ ಗ್ರಾಮೀಣ ಸಂಸ್ಕೃತಿಯ ಕುರುಹುಗಳು ಇಂದಿಗೂ ಉಳಿದುಕೊಂಡು ಬಂದಿರುವುದನ್ನು ಸಮಾಜಶಾಸ್ತ್ರಜ್ಞರೂ, ಇತಿಹಾಸಜ್ಞರೂ, ಗುರ್ತಿಸಿದ್ದಾರೆ. ಆದಿವಾಸಿ, ಗುಡ್ಡಗಾಡು ಜನಾಂಗಗಳಲ್ಲಿ ಆಫ್ರಿಕದ ನಿಗ್ರೋ, ಝುಲೂ ಜನಾಂಗಗಳ ಹಬ್ಬಗಳಲ್ಲಿ ಹಾಗೂ ಅವುಗಳ ಆಚರಣೆಗಳಲ್ಲಿ ಸ್ವಚ್ಛಂದ ಹಾಗೂ ಸ್ವೈರಾಚರಣೆ ಇರುವುದನ್ನು ಗಮನಿಸಬಹುದು. ಈ ದೃಷ್ಟಿಯಿಂದ, ’ಕಾಮನಹಬ್ಬ’ ಇಲ್ಲವೆ ’ಹೋಳಿಹಬ್ಬ’ ದ್ರಾವಿಡ ಜನಾಂಗದ ಸಾಂಸ್ಕೃತಿಕ ಮಹತ್ವವನ್ನು ಪ್ರಕಟಿಸುವ ಹಬ್ಬವಾಗಿದೆ.


[1] ಒಮ್ಮೆ ಸುಂದರತೆ ಮತ್ತು ಅಸುಂದರತೆ ಎಂದರೆ ರೂಪ ಮತ್ತು ಕುರೂಪ ಇವೆರಡೂ ಸ್ನಾನಕ್ಕೆ ಹೋಗಿದ್ದವಂತೆ. ಒಂದು ಸರೋವರದಲ್ಲಿ ಈಜುತ್ತಿರುವಾಗ ’ಏನೇನು ಮಾತಾಡಿಕೊಳ್ಳುತ್ತಿದ್ದವು, ಸ್ನಾನ ಮುಗಿಸಿ ಅವು ಮೇಲೆದ್ದು ಬಂದು, ರೂಪ ಕುರೂಪದ ಉಡುಪನ್ನು ಕುರೂಪ ರೂಪದ ಉಡುಪನ್ನು ತೊಟ್ಟುಕೊಂಡವು. ಹೀಗೆ ವಿಶ್ವವನ್ನು ವ್ಯಾಪಿಸಿಬಿಟ್ಟವು. ರೂಪ, ಕುರೂಪಗಳನ್ನು ಗುರ್ತಿಸುವುದು ಕಷ್ಟವಾಯಿತು.

ಕಾಮೆಂಟ್‌ಗಳಿಲ್ಲ: