ಮಂಗಳವಾರ, ಅಕ್ಟೋಬರ್ 18, 2016

ದಲಿತ ಸಾಹಿತ್ಯದ ತಾತ್ವಿತ ನೆಲೆಗಳು

ದಲಿತ ಸಾಹಿತ್ಯದ ತಾತ್ವಿತ ನೆಲೆಗಳು


-ಪ್ರೊ. ರಹಮತ್ ತರೀಕೆರೆ.

ಪ್ರವೇಶ
ಸೂಕ್ಷ್ಮಸಂವೇದನೆಯ ಕವಿತೆಗಳನ್ನು ಬರೆಯುತ್ತಿರುವ ಯುವಕವಿಗಳಲ್ಲಿ ಒಬ್ಬರಾದ, ಎನ್. ಕೆ. ಹನುಮಂತಯ್ಯ ಅವರು ಈಚೆಗೆ ಕನ್ನಡ ವಿಶ್ವವಿದ್ಯಾಲಯದ ದಲಿತಪೀಠದ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಅದರಲ್ಲಿ ಅವರು ದಲಿತ ಚಳುವಳಿಯ ಸದ್ಯಸ್ಥಿತಿಯನ್ನು ವಿವರಿಸಲು ಬಳಸಿದ ಒಂದು ರೂಪಕ ಬಹಳ ಡಿಸ್ಟರ್ಬಿಂಗ್ ಆಗಿತ್ತು. ಅದೊಂದು ನವಿಲಿನ ರೂಪಕ. ಅವರ ಪ್ರಕಾರ, ಒಂದು ಕಾಲಕ್ಕೆ ದಲಿತ ಲೇಖಕರು ಚಿಂತಕರು ನವಿಲುಗಳಂತೆ ಇದ್ದರು. ನಾಡಿನ ಯಾವ ಮೂಲೆಯಲ್ಲಾದರೂ ದಲಿತರ ಮೇಲೆ ಹಲ್ಲೆಯಾದರೆ, ಕೂಡಲೆ ಅಲ್ಲಿಗೆ ಓಡಿ ಹೋಗುತ್ತಿದ್ದರು. ಜನರ ಜತೆ ಬೆರೆಯುತ್ತಿದ್ದರು. ಅಲ್ಲಿ ಎಚ್ಚರದ ಸಂಘಟನೆಯ ಹೋರಾಟದ ಮೊಟ್ಟೆಗಳನ್ನು ಇಟ್ಟುಬರುತ್ತಿದ್ದರು. ಈಗ ಹಾಗಾಗುತ್ತಿಲ್ಲ. ಎಲ್ಲಿಯಾದರೂ ದಲಿತರ ಮೇಲೆ ದಮನದ ಸುದ್ದಿ ಬಂದರೆ, ಹಿಂದಿನಂತೆ ನವಿಲುಗಳು ಅಲ್ಲಿಗೆ ಹೋಗುವುದಿಲ್ಲ. ಮೊಟ್ಟೆಯಿಡುವುದಿಲ್ಲ. ಯಾಕೆಂದರೆ, ಅವನ್ನು ಕೊಯ್ದು ಮಾಂಸದಂಗಡಿಯಲ್ಲಿ ನೇತುಹಾಕಲಾಗಿದೆ. ಅವನ್ನು ಯಾರಾದರೂ ಈಗ ಖರೀದಿಸಬಹುದು. ಅವಕ್ಕೆ ಹಿಂದಿನಂತೆ ಜೀವವಿಲ್ಲ. ಸುಂದರವಾದ ಗರಿಗಳಿಲ್ಲ. ಮೊಟ್ಟೆಯಿಡುವ ಶಕ್ತಿಯಿಲ್ಲ. ಸಾವಿರಾರು ನದಿಗಲು ಸಂಕಲನದಲ್ಲಿ ಉಳ್ಳವರು ಬೀಸುವ ಬಲೆಗೆ ಸಿಕ್ಕಿಕೊಳ್ಳದೆ ಎತ್ತಿಕೊಂಡು ಹಾರುವ ದಲಿತಶಕ್ತಿಯ ರೂಪಕ ಚಿತ್ರಗಳಿವೆ. ಆದರೆ ಈಗ ಈ ಗರಿಕಳೆದ ನವಿಲುಗಳ ರೂಪಕ.
ಈ ಕತೆಯನ್ನು ಹೇಳುವಾಗ ಹನುಮಂತಯ್ಯನವರಲ್ಲಿ ತಿರಸ್ಕಾರವಿರಲಿಲ್ಲ. ವಿಷಾದ ವೇದನೆಗಳಿದ್ದವು. ಒಂದು ಸಲವಂತೂ ಅವರ ಗಂಟಲು ಕಟ್ಟಿಬಂದಿತು. ಇದಕ್ಕೆ ಒಂದು ಕಾರಣ, ಕವಿ ಸಹಜವಾದ ಭಾವುಕತೆ ಇರಬಹುದು. ಆದರೆ ಅನೇಕ ದಲಿತ ಲೇಖಕರಲ್ಲೂ ಚಿಂತಕರಲ್ಲೂ ಇಂತಹದೊಂದು ವಿಷಾದಯೋಗ ಆವರಿಸಿಬಿಟ್ಟಿದೆ. ಇದಕ್ಕೆ ಈಚೆಗೆ ಕಂಬಾಲಪಲ್ಲಿಯಲ್ಲಿ ಸೇರಿದ್ದ ದಲಿತ ಲೇಖಕರು ದಲೇಕ ಎಂಬ ಹೆಸರಿನಲ್ಲಿ ಪ್ರಕಟಿಸಿದ ಆತ್ಮ ವಿಮರ್ಶೆ ಹಾಗೂ ಹೊಸಹಾದಿಯ ಹುಡುಕಾಟದ ಪ್ರಣಾಳಿಕೆಯೂ ಉದಾಹರಣೆ ಆಗುತ್ತದೆ. ಪ್ರಶ್ನೆಯೆಂದರೆ ಸೂಕ್ಷ್ಮ ಸಂವೇದನೆಯ ಲೇಖಕರಲ್ಲಿ ಇಂಥ ಹತಾಶೆ ನೋವು ಹುಟ್ಟಿಸುವಷ್ಟು ಪರಿಸ್ಥಿತಿ ಬಿಗಡಾಯಿಸಿದೆಯೋ? ದಲಿತ ಸಂಘಟನೆಗಳು ಶಕ್ತಿ ರಾಜಕಾರಣದಲ್ಲಿ ಮಾಡುತ್ತಿರುವ ಪ್ರಯೋಗಗಳ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಲು ಇವರಿಗೆ ಸಾಧ್ಯವಾಗುತ್ತಿಲ್ಲವೋ? ಅಥವಾ ಅತಿ ಸೂಕ್ಷ್ಮತೆ ಅತಿ ಆದರ್ಶವಾದವುಳ್ಳ ಲೇಖಕರು ದೇಶದ ಮತ್ತು ಜಗತ್ತಿನ ಸಾಮಾಜಿಕ ರಾಜಕೀಯ ಆರ್ಥಿಕ ಬದಲಾವಣೆಗಳನ್ನು ಅರಿಯಲಾಗದೆ ಓವರ್ ರಿಯಕ್ಷನ್ ಮಾಡುತ್ತಿದ್ದಾರೆಯೋ?

ಈ ಅನುಮಾನ ಯಾಕೆಂದರೆ, ಹೆಚ್ಚಿನ ದಲಿತ ರಾಜಕಾರಣಿಗಳಿಗೆ ಈ ಬಗೆಯ ವಿಷಾದ ಆವರಿಸಿಲ್ಲ. ಲೇಖಕರಿಗೇ ಯಾಕೆ ಇದು ಕಾಡುತ್ತಿದೆ. ಪರ್ಯಾಯಗಳ ಹುಡುಕಾಟದ ಮಾತಾಡುತ್ತಿದ್ದಾರೆ. ದಲಿತ ಚಳುವಳಿಗೆ ಮಾತ್ರ ದುರವಸ್ಥೆ ಬಂದಿಲ್ಲ. ಇನ್ನೂ ಅನೇಕ ಚಳುವಳಿಗಳಿಗೆ ಕೂಡ ಬಂದಿದೆ. ದಲಿತ ಸಂಘರ್ಷ ಸಮಿತಿ, ಅಥವಾ ದಲಿತ ಚಳುವಳಿ, ದಲಿತ ಸಾಹಿತ್ಯದ ಕಳೆದ ಮೂರು ದಶಕಗಳ ಬಗ್ಗೆ ದುರಂತ ರೂಪಗಳಲ್ಲಿ ಮಾತ್ರ ಹೇಳುವಂತಹದ್ದಿಲ್ಲ. ಅಲ್ಲಿ ವಿಜಯದ ಚಿತ್ರಗಳೂ ಇವೆ. ಕಳೆದ ಮೂರು ದಶಕಗಳಲ್ಲಿ ದಲಿತ ಚಿಂತನೆ, ಸಂಘಟನೆ, ಸಾಹಿತ್ಯಗಳು ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಅತ್ಯಂತ ಮಹತ್ವದ ಅಧ್ಯಾಯಗಳು. ಅವು ಕನ್ನಡಕ್ಕೆ ಹೊಸ ಬಗೆ ಕೃತಿಗಳನ್ನು ಕೊಟ್ಟಿವೆ ಎನ್ನುವುದು ಸಾಹಿತ್ಯಕವಾದ ಸೀಮಿತ ಪ್ರಶ್ನೆ. ಅವು ಕನ್ನಡದ ಚಿಂತನ ಕ್ರಮದಲ್ಲಿ, ಕರ್ನಾಟಕದ ರಾಜಕೀಯ ಚಿಂತನೆಯಲ್ಲಿ ಯಾವ ಬಗೆಯ ಪಲ್ಲಟಗಳನ್ನು ತಂದಿವೆ, ಯಾವ ಅನುಭವ ಲೋಕಗಳನ್ನು ತಂದಿವೆ ಎನ್ನುವುದನ್ನು ಮರೆತರೆ ಸಿನಿಕತೆಯಾಗುತ್ತದೆ. ದಲಿತ ಚಳುವಳಿ, ದಲಿತ ಸಾಹಿತ್ಯ, ದಲಿತ ಚಿಂತನೆಗಳು ಇರದಿದ್ದರೆ ಕರ್ನಾಟಕದ ರಾಜಕಾರಣ ಸಮಾಜದ ಸಾಹಿತ್ಯ ಚಿಂತನೆಗಳು ಈಗಿರುವ ಸ್ವರೂಪದಲ್ಲಿ ಖಂಡಿತ ಇರುತ್ತಿರಲಿಲ್ಲ. ಸಾಹಿತ್ಯಕವಾಗಿಯೇ ಮಾತಾಡುವುದಾದರೆ, ಬಹುಶಃ ಲಂಕೇಶರ ‘ಮುಸ್ಸಂಜೆಯ ಕಥಾ ಪ್ರಸಂಗ’ ಈಗಿರುವಂತೆ ಇರುತ್ತಿರಲಿಲ್ಲ. ದಲಿತ ಸಾಹಿತ್ಯ ಸಂಘಟನೆಗಳು ಕಳೆದ ಮೂರು ದಶಕಗಳ ಕನ್ನಡ ಸಾಹಿತ್ಯದ ಸಾಮಾಜಿಕ ನೈತಿಕತೆ, ಪ್ರತಿರೋಧದ ಗುಣ, ನಿರ್ಲಕ್ಷಿತ ನೆಲೆಗಳ ಮೂಲಕ ಚಿಂತಿಸುತ್ತ ಲೋಕ ದೃಷ್ಟಿಯನ್ನೂ ರೂಪಿಸುವ ಗುಣಗಳಿಗೆ ದೊಡ್ಡ ಚೈತನ್ಯವನ್ನು ತುಂಬಿವೆ. ಅನುಮಾನವೇ ಇಲ್ಲ.

ಆದರೂ ಈ ಹೊತ್ತಿನಲ್ಲಿ ಯಾಕೆ ಸೂಕ್ಷ್ಮ ಸಂವೇದನೆಯ ಲೇಖಕರಿಗೆ ಗತಕಲದ ಸಾಧನೆಗಳ ನೆನಪುಗಳಿಗಿಂತ, ವರ್ತಮಾನದ ಅವಸ್ಥೆ ತಲ್ಲಣಗಳು ಕಂಗಾಲು ಮಾಡಿವೆ. ಯಾಕೆ ಅವರು ಆತ್ಮಾವಲೋಕನದ ಪರಿಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಅದರಲ್ಲೂ ಚಳುವಳಿಗೆ ರಾಜಕೀಯ ಪ್ರಜ್ಞೆಯ ಬರೆಹಕ್ಕೆ ಚಿಂತನೆಗೆ ಹೊಸದಗಿ ಆಗಮಿಸುವ ದಲಿತ ತರುಣ ಲೇಖಕರಿಗೆ ವರ್ತಮಾನವನ್ನು ಇಂಥಹದೊಂದು ವಿಷಾದ ರೂಪಕಗಳಲ್ಲೆ ಗ್ರಹಿಸುವಂತಹ ಪರಿಸ್ಥಿತಿ ಯಾಕಾಗಿ ಬಂದಿದೆ. ಈ ಪ್ರಶ್ನೆ ಉಳಿಯುತ್ತದೆ. ಇದಕ್ಕೆ ಉತ್ತರ ಸರಳವಾಗಿಲ್ಲ. ಆದರೆ ಇದಕ್ಕೆ ಉತ್ತರದ ಒಂದು ಭಾಗವು ಸಮಕಾಲೀನ ರಾಜಕೀಯ ಆರ್ಥಿಕ ಸಾಮಾಜಿಕ ವಿದ್ಯಮಾನಗಳಲ್ಲಿದೆ. ಇನ್ನೊಂದು ಭಾಗವು ಕಳೆದ ಕಾಲು ಶತಮಾನದ ದಲಿತ ರಾಜಕಾರಣ, ಸಾಹಿತ್ಯ, ಚಿಂತನೆಗಳ ಚರಿತ್ರೆಯಲ್ಲಿ ಇದೆ. ಕನ್ನಡದ ದಲಿತ ಸಾಹಿತ್ಯದ ತಾತ್ವಿಕತೆಯ ಚಿತ್ರವನ್ನು ಈ ಚರಿತ್ರೆ ಹಾಗೂ ವರ್ತಮಾನದ ಭಿತ್ತಿಯಿಲ್ಲದೆ ವಿವರಿಸಲು ಸಾಧ್ಯವಿಲ್ಲ. ಒಂದರ್ಥದಲ್ಲಿ ದಲಿತ ಸಾಹಿತ್ಯ ಹಾಗೂ ಸಂಘಟನೆಗಳ ಕೂಡು ಚರಿತ್ರೆ ಶುರುವಾಗುವುದು ೧೯೭೬ರಲ್ಲಿ ಭದ್ರಾವತಿಯಲ್ಲಿ ನಡೆದ ಒಂದು ಸಭೆಯಿಂದ ಅದರ ಹೆಸರು. ‘ದಲಿತ ಬರಹಗರರ ಕಲಾವಿದರ ಸಭೆ’ ದಲಿತ ಸಂಘರ್ಷ ಸಮಿತಿಯ ಸ್ಥಾಪನೆಗೆ ಕಾರಣವಾದ ಈ ಸಭೆಯಲ್ಲಿ ದಲಿತ ಲೇಖಕರೂ, ಚಿಂತಕರೂ ಆದ ದೇವನೂರು ಮಹಾದೇವ, ಬಿ. ಕೃಷ್ಣಪ್ಪ, ಸಿದ್ಧಲಿಂಗಯ್ಯ, ಇಂದೂಧರ ಹೊನ್ನಾಪುರ, ಕೆ. ರಾಮಯ್ಯ ಮುಂತಾದವರು ಇದ್ದರು. ಇದಾದ ಸುಮಾರು ೨೮ ವರುಷಗಳ ಬಳಿಕ. ಈಚೆಗೆ ಕೋಲಾರ ಜಿಲ್ಲೆಯಲ್ಲಿ ಮತ್ತೊಂದು ದಲಿತ ಲೇಖಕರ ಕಲಾವಿದರ ಒಂದು ಪುಟ್ಟ ಸಭೆ ಸೇರಿತ್ತು. ಈ ಸಭೆಗೆ ನಾಗಲಾಪಲ್ಲಿ ಕಂಬಾಲಪಲ್ಲಿಗಳಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯಗಳು ಕಾರಣವಾಗಿದ್ದವು. ಇದರಲ್ಲಿ ಕೆ. ರಾಮಯ್ಯ, ಗೋವಿಂದಯ್ಯ, ಇಂಧೂದರ ಹೊನ್ನಾಪುರ, ಕೆ. ಬಿ. ಸಿದ್ಧಯ್ಯ, ದು. ಸರಸ್ವತಿ ಮುಂತದ ದಲಿತ ಲೇಖಕರಿದ್ದರು. ಈ ಸಭೆಯ ಸಂಘಟಕರು, ‘ದಲೇಕ’ ಎಂದು ಕರೆದುಕೊಂಡರು. ಮೊದಲನೆಯದು ಹುಟ್ಟಿನ ಸಭೆಯಾದರೆ, ಈ ಸಭೆಯನ್ನು ಲೇಖಕರು ‘ದಲಿತ ಚಳುವಳಿಯ ಮರುಹುಟ್ಟು’ ಎಂದು ಕರೆದುಕೊಂಡರು. ಕರ್ನಾಟಕದ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಸಾಹಿತ್ಯಗಳ ತಾತ್ವಿಕ ಸ್ವರೂಪವನ್ನು ಗುರುತಿಸಲು, ಎರಡು ಸಭೆಗಳನ್ನು ಸಾಂಕೇತಿಕವಾಗಿ ಗ್ರಹಿಸಬಹುದು. ಎರಡರಲ್ಲೂ ಲೇಖಕರೇ ಮುಖ್ಯ ಪಾತ್ರಧಾರಿಗಳು. ಅವರು ಚರ್ಚಿಸಿದ್ದು ಸಾಹಿತ್ಯಕ್ಕಿಂತ ಮಿಗಿಲಗಿ ದೇಶದ ಆರ್ಥಿಕ, ರಾಜಕೀಯ, ಸಾಮಾಜಿಕ ವಿದ್ಯಮಾನಗಳನ್ನು; ಇದು ಸರಿ ಕೂಡ. ೧೯೭೬ರ ‘ದಬಕಸ’ ದಿಂದ ಡಿ. ಎಸ್. ಎಸ್. ಹುಟ್ಟಿದರೆ, ೨೦೦೨ರ ‘ದಲೇಕ’ ವು ಡಿ. ಎಸ್. ಎಸ್. ಛಿದ್ರವಾಗಿರುವ ನೋವಿನ ಹಿನ್ನೆಲೆ ಇಟ್ಟುಕೊಂಡು ಸಭೆ ಸೇರಿತ್ತು. ಮೊದಲನೆಯದು ಹುಟ್ಟುವ ಆಶಯದ್ದು. ಎರಡನೆಯದು ಮರುಹುಟ್ಟುವ ಆಶಯದ್ದು. ಈ ಎರಡು ಸಭೆಗಳ ನಡುವಿನ ಕಾಲಾವಧಿಯಲ್ಲಿ ಕರ್ನಾಟಕ, ಭಾರತಗಳನ್ನು ಒಳಗೊಂಡಂತೆ, ಜಗತ್ತಿನಲ್ಲಿ ಅನೇಕ ಬದಲಾವಣೆಗಳು ಸಂಭವಿಸಿವೆ. ಈ ಲೇಖನದಲ್ಲಿ ಚಾರಿತ್ರಿಕವಗಿ ಈ ಕಾಲಾವಧಿಯನ್ನು ದಲಿತ ಸಾಹಿತ್ಯದ ತಾತ್ವಿಕ ಚಿಂತನೆ ಮಾಡಲು ಇಟ್ಟುಕೊಳ್ಳಲಾಗಿದೆ. ಈ ಕಾರಣಕ್ಕೆ ಈ ವಿಶ್ಲೇಷಣೆಯನ್ನು ‘ದಬಕಸದಿಂದ ದಲೇಕದವರೆಗೆ’ ಎಂದು ಕರೆಯಬಹುದು.

ದಲಿತ ಸಾಹಿತ್ಯ ಕಥನ
ದಲಿತ ಸಾಹಿತ್ಯದ ಸ್ವರೂಪಕ್ಕೂ ದಲಿತ ಸಮುದಾಯಗಳಲ್ಲಿ ಉಂಟಾಗಿರುವ ಪರಿವರ್ತನೆಗಳಿಗೂ ಇರುವ ಸಂಬಂಧ ಕಾರ್ಯಕಾರಣ ರೀತಿಯದ್ದಲ್ಲ. ಆದರೂ ಅವುಗಳ ನಡುವೆ ಒಂದು ಬಗೆಯ ಸಾವಯವ ಸಂಬಂಧವಿದೆ. ಸದ್ಯಕ್ಕಂತೂ ದಲಿತ ಲೇಖಕರ ವಿಷಾದಗಳಿಗೂ ದಲಿತ ಚಳುವಳಿಗೂ ಇರುವ ಸಂಬಂಧ ಅಂತಹದ್ದು. ಇದಕ್ಕೆ ದಲಿತ ಸಂಘಟನೆ ಛಿದ್ರವಾಗಿ, ಪರಸ್ಪರ ಬಣಗಳು ಕಿತ್ತಾಡುವುದು, ಅವು ವಿಶಾಲ ದಲಿತ ಸಮುದಾಯದ ಹಿತಾಸಕ್ತಿ ಪ್ರತಿನಿಧಿಸುವ ರಾಜಕೀಯ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿರುವುದು, ದಲಿತ ನಾಯಕರು ನೈತಿಕತೆಯನ್ನು ಕಳೆದುಕೊಂಡಿರುವುದು, ಅವರನ್ನು ಬೇರೆ ಬೇರೆ ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿರುವುದು, ದಲಿತ ಚಳುವಳಿ ಎಡಗೈ ಬಲಗೈ ಎಂದು ಒಡೆದು ಹೋಗಿರುವುದು, ಕೋಮುವಾದವು ತಲೆಯೆತ್ತಿರುವುದು, ಜಾಗತೀಕರಣದ ಯುಗವು ಬಂದು ದಲಿತರಿಗೆ ಇದ್ದ ಮೀಸಲಾತಿಯ ಪರಿಕಲ್ಪನೆಯನ್ನೇ ಅಸಂಬದ್ಧ ಮಾಡಿರುವುದು ಇತ್ಯಾದಿ ಕಾರಣಗಳೆಂದು ಪಟ್ಟಿಮಾಡಬಹುದು. ಈ ಎಲ್ಲ ಬಿಕ್ಕಟ್ಟುಗಳ ಒಳಗೆ ಹೊಸ ದಲಿತ ಲೇಖಕರ ಚಿಂತಕರ ಕಾರ್ಯಕರ್ತರ ತಲೆಮಾರು ವಿಚಿತ್ರವಾದ ಗೊಂದಲ ಹಾಗೂ ದಿಕ್ಕೆಟ್ಟ ಸ್ಥಿತಿಯಲ್ಲಿದೆ. ಹನುಮಂತಯ್ಯನಂತಹ ತರುಣ ಕವಿಯದು ಅಂತಹ ಒಂದು ಪ್ರಾತಿನಿಧಿಕ ಪ್ರತಿಕ್ರಿಯೆ ಅಷ್ಟೆ.
ಪ್ರಶ್ನೆಯೆಂದರೆ, ಯಾಕೆ ಹೊಸತಲೆಮಾರಿನಲ್ಲಿ ಈ ಸಾಹಿತ್ಯ ಚಳುವಳಿ ಸಂಘಟನೆಗಳು ಯಾವುದೇ ಭರವಸೆಯನ್ನು ಕೊಡದಷ್ಟು ನಿರಾಶೆ ಹುಟ್ಟಿಸಿವೆ ಎನ್ನುವುದು ಅಥವಾ ದಲಿತ ಸಂಘಟನೆ ಚಳುವಳಿ ಸಾಹಿತ್ಯಗಳಿಗೆ ಗರಬಡಿದಂತಾಗಿದೆ ಎಂದು ವಿಷಾದ ಮಾಡುತ್ತಿರುವವರು ಮುಖ್ಯವಗಿ ಲೇಖಕರು ಯಾಕಾಗಿದ್ದಾರೆ ಎನ್ನುವುದು. ಯಾಕೆಂದರೆ ಕೆಲವು ದಲಿತ ರಾಜಕಾರಣಿಗಳು ಈ ಹೊತ್ತು ದಲಿತರು ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳನ್ನು ಕಟ್ಟುವಂಥ ಅಥವಾ ಅಧಿಕಾರಸ್ಥ ಪಕ್ಷಗಳ ಜತೆ ಚೌಕಾಸಿ ಕುದುರಿಸುವಂಥ ಶಕ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ವಾದಿಸುತ್ತಾರೆ. ಇದೊಂದು ವೈರುಧ್ಯ ಹಾಗಾದರೆ, ಸಾಮಾಜಿಕ ರಾಜಕೀಯ ಬೆಳವಣಿಗೆಯನ್ನು ರಾಜಕೀಯ ವಿಶ್ಲೇಷಕರು ಗ್ರಹಿಸುವುದಕ್ಕೂ ಕವಿ ಕಲಾವಿದರು ಗ್ರಹಿಸುವುದಕ್ಕೂ ವ್ಯತ್ಯಾಸಗಳು ಇವೆಯೇ? ವಾಸ್ತವದಲ್ಲಿ ದಲಿತ ಸಾಹಿತ್ಯ ಹಾಗೂ ಚಳುವಳಿಗೆ ಸಂಬಂಧಿಸಿದಂತೆ ಮೊದಲ ಘಟ್ಟದ ಲೇಖಕರ, ಚಿಂತಕರ, ಚಳುವಳಿಗಾರರ ನಡುವೆ ಅಂತಹ ವ್ಯತ್ಯಾಸಗಳಿರಲಿಲ್ಲ. ಯಾಕೆಂದರೆ ಎಲ್ಲ ದಲಿತ ಲೇಖಕರೂ ರಾಜಕೀಯ ಚಿಂತಕರೇ ಆಗಿದ್ದರು. ಚಳುವಳಿ ಪ್ರಧಾನವದ ಸಾಹಿತ್ಯದಲ್ಲಿ ಅಥವಾ ಸಾಹಿತ್ಯ ಪ್ರಧಾನವಾಗಿರುವ ಚಳುವಳಿಗಳಲ್ಲಿ ಅದರ ಚಿಂತಕರು (ಐಡಲಾಜಿಗಳು) ಹಾಗೂ ಲೇಖಕರು (ಕಲ್ಪನೆ ಅನುಭವ ಪ್ರಧಾನವಾದ ಸಾಹಿತ್ಯ ರಚಿಸುವವರು) ಬೆರೆಯಾಗಿರುವುದಿಲ್ಲ. ರಾಜಕೀಯ ಕ್ರಿಯೆಯನ್ನುಳ್ಳ ಎಲ್ಲ ಚಳುವಳಿ ಸಂಬಂಧಿ ಸಾಹಿತ್ಯಗಳಲ್ಲೂ ಈ ಸಂಬಂಧ ಹತ್ತಿರವಾಗಿರುತ್ತದೆ ಅಥವಾ ವ್ಯತ್ಯಾಸವೇ ಇರುವುದಿಲ್ಲ. ವಚನ ಚಳುವಳಿ ಇದಕ್ಕೆ ಹಳೆಯ ಉದಾಹರಣೆ. ಈ ಕಾರಣಕ್ಕೆ ದಲಿತ ರಾಜಕಾರಣ, ದಲಿತ ಸಾಹಿತ್ಯ, ದಲಿತ ಚಿಂತನೆ ಇವೆಲ್ಲವನ್ನು ಒಂದೆ ಪಾತಳಿಯಲ್ಲಿ ಇಟ್ಟು ಚರ್ಚಿಸುವುದು ಸರಿ ಮಾತ್ರವಲ್ಲ, ಅನಿವಾರ್ಯ ಕೂಡ. ಕನ್ನಡ ದಲಿತ ಸಾಹಿತ್ಯದ ಮಟ್ಟಿಗಂತೂ ಈ ರಾಜಕೀಯ, ಆರ್ಥಿಕ, ಸಾಮಾಜಿಕ ವಿದ್ಯಮಾನಗಳು ಬೇರೆ ಅಲ್ಲ. ದಲಿತ ರಾಜಕಾರಣದ ಭಾಗವಾಗಿಯೆ ದಲಿತ ಸಾಹಿತ್ಯ ಹುಟ್ಟಿ ಬಂದಿತು ಅಥವಾ ದಲಿತ ಸಾಹಿತಿಗಳ ಕ್ರಿಯಾಶೀಲ ಭಾಗವಹಿಸುವಿಕೆಯಿಂದಲೇ ದಲಿತ ರಾಜಕಾರಣ, ದಲಿತ ಚಿಂತನೆಗಳು ಹುಟ್ಟಿಬಂದವು. ಇದೊಂದು ಏಕೀಭವಿಸುವಿಕೆ. ೧೯೭೭ರ ದಬಕಸ ಹಾಗೂ ೨೦೦೨ರ ದಲೇಕ ಎರಡೂ ಸಮಾವೇಶಗಳಲ್ಲಿ, ದಲಿತ ಲೇಖಕರು ರಾಜಕೀಯ ಚರ್ಚೆಗಳನ್ನು ಮಾಡಿದರು. ಇದನ್ನು ಮೇಲೆ ಚರ್ಚಿಸಿದ ಏಕೀಭವಿಸುವಿಕೆಯ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು.

ಹಾಗೆಂದು ದಲಿತ ಚಳುವಳಿ ಹಾಗೂ ಸಾಹಿತ್ಯ ಒಂದರ ಪಡಿನೆಳಲು ಇನ್ನೊಂದಲ್ಲ. ಇವುಗಳ ನಡುವೆ ಸಾಮ್ಯಗಳಿರುವುದಕ್ಕಿಂತ ವ್ಯತ್ಯಾಸಗಳೂ ಕಾಂತಿಹೀನವಾಗಿದೆ. ಹೆಚ್ಚಿನ ಸಲ ಈ ಶಿಥಿಲತೆಯ ಉದ್ಘಾಟನೆಯನ್ನು ದಲಿತ ಲೇಖಕರೇ ಉದ್ಫಾಟಿಸಿರುವುದುಂಟು. ಆದರೂ ಚಳುವಳಿಯ ಭಾಗವಾಗಿ ಜೀವಂತ ಸಾಹಿತ್ಯ ಸೃಷ್ಟಿಸಲು ಹವಣಿಸುವ ಸಾಹಿತ್ಯ ತನ್ನ ಕಾಂತಿಹೀನತೆ ನೀಗಿಕೊಂಡು ಜೀವಂತಿಕೆ ತುಂಬಿಕೊಳ್ಳಲು ಚಳುವಳಿಗಳನ್ನು ಚೈತನ್ಯಗೊಳಿಸುತ್ತದೆ. ಅದಕ್ಕಾಗಿ ಪರಿತಾಪ ಪಟ್ಟು ಆತ್ಮ ವಿಮರ್ಶೆಯ ಕರಕಿನಿಂದ ಹೊರಬಂದು ಹೆಚ್ಚು ನೈತಿಕ ಉರಿಯಿಂದ ಧಗಧಗಿಸಲು ಯತ್ನಿಸುತ್ತದೆ. ಇದು ದಲಿತ ಸಾಹಿತ್ಯ ಹಾಗೂ ಅದರ ರಾಜಕೀಯ ಸಾಮಾಜಿಕ ಚಳುವಳಿ ಸಂಘಟನೆಗಳ ನಡುವಣ ಸಂಕೀರ್ಣ ಸಂಬಂಧ. ಅದರಲ್ಲೂ ದಲಿತರು ಶಕ್ತಿ ರಾಜಕಾರಣದಲ್ಲಿ ಧುಮುಕಿದ ಬಳಿಕ, ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು ಒಳಗೆ ಗುರುತಿಸಿಕೊಳ್ಳಲಾರಂಭಿಸಿದಾಗ, ಚಳವಳಿ, ರಾಜಕಾರಣ, ಸಾಹಿತ್ಯ, ಚಿಂತನೆಗಳ ನಡುವೆ ಬಿಕ್ಕಟ್ಟು ಹುಟ್ಟಿಕೊಂಡು, ಕಂದರವಾಗಿ ಬಾಯ್ದೆರೆದು ನಿಂತಿತು. ನವಿಲುಗಳು ಮಾಂಸದಂಗಡಿಯಲ್ಲಿ ತೂಗುತ್ತಿರುವ ರೂಪಕದಲ್ಲಿರುವ ವಿಷಾದವು ಈ ಬಿಕ್ಕಟ್ಟನ್ನು ಉತ್ಪ್ರೇಕ್ಷೆಯಿಂದ ಸೂಚಿಸಿರುವ ಒಂದು ಕವಿ ಗ್ರಹಿಕೆಯಾಗಿದೆ. ಪ್ರಶ್ನೆಯೆಂದರೆ ಈ ಬಿಕ್ಕಟ್ಟಿನ ಸ್ವರೂಪವೇನು? ಈ ಬಿಕ್ಕಟ್ಟಿಗೆ ಕಾರಣವೇನು? ಇದು ದಲಿತ ಸಾಹಿತ್ಯದ ತಾತ್ವಿಕತೆಯನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ತಿಳಿವಳಿಕೆ.
ಯಾವುದೆ ಚಳವಳಿ ಸಾಹಿತ್ಯ ಅಥವಾ ಚಿಂತನೆಯ ಶಕ್ತಿ ಇರುವುದು ಅದರ ನೈತಿಕ ಬಲದಲ್ಲಿ ಮಾತ್ರವಲ್ಲ. ಅದು ತನ್ನ ಮುಂದೆ ಬರುವ ಹೊಸ ಹೊಸ ಸವಾಲಿನಂತಹ ವಿದ್ಯಮಾನಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತದೆ, ಹೇಗೆ ಪ್ರತಿಕ್ರಿಯಿಸುತ್ತದೆ ಮತ್ತು ಅದರ ಜತೆಗೆ ತನ್ನ ಸಂಬಂಧವನ್ನು ಸ್ಥಾಪಿಸಿಕೊಳ್ಳುತ್ತದೆ ಎಂಬ ರಾಜಕೀಯ ಪ್ರಬುದ್ಧತೆ ಹಾಗೂ ವಿವೇಚನೆಯ ಮೇಲೆ ದಲಿತ ಸಂಘಟನೆ, ಚಳವಳಿ, ಸಾಹಿತ್ಯ ಹಾಗೂ ಚಿಂತನೆಗಳು ಈಗ ಕವಲುದಾರಿಯಲ್ಲಿ ಅಥವಾ ಗೊಂದಲದಲ್ಲಿ ನಿಂತಿರಲು ಬಹುಶಃ ಕೆಲವು ಕಾರಣಗಳಿದ್ದಂತಿವೆ. ಮೊದಲನೆಯದಾಗಿ, ಕಳೆದ ಕಾಲುಶತಮಾನದಿಂದ ನಡೆದಿರುವ ಕೋಮುವಾದ, ಜಾಗತೀಕರಣ, ಖಾಸಗೀಕರಣ, ದಲಿತರ ಆಧುನೀಕರಣ, ದಲಿತ ಸಂಘಟನೆಗಳು ಶಕ್ತಿರಾಜಕಾರಣದ ಭಾಗವಾಗಿದ್ದು ಇವೆಲ್ಲವೂ ಒಂದರೊಳಗೊಂದು ಕಲಿಸಿಕೊಂಡು ಸಂಕೀರ್ಣ ರೂಪದಲ್ಲಿ ನಿಂತಿರುವುದು. ಎರಡನೆಯದಾಗಿ ಇದನ್ನು ಅರ್ಥಮಾಡಿಕೊಳ್ಳಲು ಹಾಗೂ ಸೂಕ್ತ ನಿಲುವನ್ನು ತಾಳಲು ಬೇಕಾದ ಬೌದ್ಧಿಕ ತಾತ್ವಿಕ ಸಿದ್ಧತೆ ಹೆಚ್ಚಿನ ದಲಿತರಲ್ಲಿ ಇಲ್ಲದಿರುವುದು. ಮೂರನೆಯದಾಗಿ ಕಳೆದ ೫೦ ವರುಷಗಳಿಂದ ಬದಲಾಗುತ್ತಿದ್ದರೂ ಆಧುನೀಕರಣಗೊಳ್ಳುತ್ತಿದ್ದರೂ, ದಲಿತ ಸಮಾಜದಲ್ಲಿ ನಡೆದ ಬಿಡುಗಡೆ ಪ್ರಕ್ರಿಯೆಯೂ ಇನ್ನೂ ಪೂರ್ಣಗೊಂಡಿಲ್ಲದಿರುವುದು. ಅಲ್ಲಿ ಇನ್ನೂ ವಿವಿಧ ಬದಲಾವಣೆಯ ವಿವಿಧ ಹಂತಗಳಲ್ಲೇ ಉಳಿದುಬಿಟ್ಟಿರುವ ಗುಂಪುಗಳಿದ್ದು, ದಲಿತ ಚಳುವಳಿಯನ್ನು ಮಧ್ಯಮವರ್ಗದ ದಲಿತರ ಬಿಕ್ಕಟ್ಟುಗಳು ನಿರ್ದೇಶಿಸುತ್ತಿರುವುದು. ಹೀಗಾಗಿ ವರ್ತಮಾನದ ವಿದ್ಯಮಾನಗಳನ್ನು ಯಾವ ಹಂತದ ದಲಿತರ ನೆಲೆಯಿಂದ ಗ್ರಹಿಸಬೇಕು, ಮೌಲ್ಯಮಾಪನ ಮಾಡಬೇಕು ಎಂಬ ಸಮಸ್ಯೆಯಿದೆ. ಇದನ್ನು ದಲಿತರು ಕೋಮುವಾದ ಜಾತೀಕರಣ ಮುಂತಾದ ವಿದ್ಯಮಾನಗಳಿಗೆ ಮಾಡುತ್ತಿರುವ ಪ್ರತಿಕ್ರಿಯೆಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.

ದಲಿತ ಲೇಖಕರು ಮತ್ತು ಕೋಮುವಾದದ ಕಲ್ಪನೆ

ಕೋಮುವಾದಕ್ಕೆ ಪ್ರತಿಕ್ರಿಯಿಸುವಲ್ಲಿ ದಲಿತ ಚಿಂತಕರು ಹಾಗೂ ಲೇಕಕರು ಒಂದು ಬಗೆಯ ಸ್ಪಷ್ಟತೆಯನ್ನು ಪ್ರಕಟಿಸಿದ್ದಾರೆ. ಆದರೂ ಹೆಚ್ಚಿನ ದಲಿತರಿಗೆ ಕೋಮುವಾದ ಒಂದು ಗಂಭೀರ ಸಮಸ್ಯೆಯಾಗಿ ಕಂಡಿಲ್ಲ. ಅವರಿಗೆ ಅದು ಹೆಚ್ಚೆಂದರೆ ದಲಿತ ವಿರೋಧಿಯಾದ ಬ್ರಾಹ್ಮಣ ಸನಾತನವಾದದ ಪುನರುತ್ಥಾನವಾದವಾಗಿ ಕಂಡಿದೆ. ಇದಕ್ಕೆ ಒಂದು ಕಾರಣ. ಕರ್ನಾಟಕದ ದಲಿತರಿಗೆ ದೈನಿಕ ಬದುಕಿನಲ್ಲು ಮೂರ್ತ ಮತ್ತು ನೇರ ಎದುರಾಳಿಯಾಗಿರುವುದು ಗ್ರಾಮೀಣ ಮಧ್ಯಮ ಜಾತಿಗಳ ಭೂಮಾಲಿಕ ವ್ಯವಸ್ಥೆ. ಅದ್ದರಿಂದ ತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ದಲಿತರು ಒಗ್ಗೂಡಬೇಕು ಎಂಬ ಸಮುದಾಯವಾದಿ ರೂಪದಲ್ಲಿ ದಲಿತ ಚಳುವಳಿಯನ್ನು ಸಂಘಟಿಸಬಯಸುವವರಿಗೆ, ಕೋಮುವಾದವು ಮುಸ್ಲಿಮರ ಸಮಸ್ಯೆಯಾಗಿ ಕಂಡಿದ್ದರೆ ಆಶ್ಚರ್ಯವಲ್ಲ. ಅನೇಕ ದಲಿತರು ಕೋಮುವಾದಿ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುತ್ತಿರುವುದು, ದಲಿತ ಚಳವಳಿಗಳ ಗೈರುಹಾಜರಾತಿಯನ್ನೇ ಸೂಚಿಸುತ್ತದೆಯೋ ಅಥವಾ ದಲಿತ ಚಳುವಳಿ ಸಮುದಾಯವಾದಿ ರಾಜಕಾರಣದಾಚೆ ಹೋಗಿ ವಿಶಾಲ ಎಡಪಂಥೀಯ ರಾಜಕಾರಣದ ಗುರುತಿಸಿಕೊಳ್ಲುವುದಕ್ಕೆ ಹಿಂಜರಿಕೆ ತೋರಿದ್ದರ ಪರಿಣಾಮವೋ. ಇದರ ಜತೆಗೆ ಶಕ್ತಿರಾಜಕಾರಣದ ಅವಕಾಶವಾದಿ ಒಪ್ಪಂದಗಳ ಪರವಾಗಿ ಚಿಂತಿಸುವ ದಲಿತರು ಕೋಮುವಾದದ ಬಗ್ಗೆ ತಟಸ್ಥರಂತೆ ಕಾಣುತ್ತಾರೆ. ಇದಕ್ಕೆ ಕಾರಣ ಉತ್ತರ ಭಾರತದಲ್ಲಿ ದಲಿತ ನೇತೃತ್ವದ ರಾಜಕೀಯ ಪಕ್ಷವಾದ ಬಹುಜನ ಸಮಾಜ ಪಕ್ಷವು ಕೋಮುವಾದಿ ರಾಜಕಾರಣದ ಜತೆ ಕೈಗೂಡಿಸಿರುವುದು. ಇದರಿಂದ ಕರ್ನಾಟಕದಲ್ಲಿ ಬಹುಜನ ಸಮಾಜ ಪಕ್ಷ ಬೆಳೆಸಲು ಉಂಟಾಗಿರುವ ತಾತ್ವಿಕ ಮುಜುಗರಗಳಿವೆ. ಇದರಿಂದ ಎಷ್ಟೋ ದಲಿತರು ಕೋಮುವಾದಿ ಸಂಘಟನೆಗಳಿಗೆ ಹೋಗುವುದನ್ನು ತಡೆಯಲು ಪರ್ಯಾವಾದ ದಲಿತ ಸಂಘಟನೆ ತಾತ್ವಿಕತೆಗಳು ಅಸಹಾಯಕವಾಗಿವೆ.

ಜಾಗತೀಕರಣ ಕುರಿತು ಒಟ್ಟು ಕನ್ನಡ ಚಿಂತನೆಯಲ್ಲಿ ಇರುವಂತೆ ದಲಿತ ಚಿಂತಕರಲ್ಲೂ ಸಾಮಾನ್ಯ ಗೊಂದಲಗಳಿವೆ. ಈಗ ಜಾಗತೀಕರಣ ಈ ದೇಶದ ಆರ್ಥಿಕತೆಯನ್ನು ಯಾವ ಬಗೆಯಲ್ಲಿ ಬದಲಿಸಬಲ್ಲದು ಎಂಬ ಮೊದಲ ಪ್ರಶ್ನೆಯನ್ನು ಬಿಟ್ಟುಕೊಟ್ಟು, ಜಾಗತೀಕರಣದ ಅಂಗಾಂಗಗಳಂತಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ದಲಿತರಿಗೆ ಮೀಸಲಾತಿ ಇರುತ್ತದೆಯೇ ಇಲ್ಲವೇ ಎಂಬ ಪ್ರಶ್ನೆಯನ್ನು ಕೂಡ ಚರ್ಚಿಸಲಾಗುತ್ತಿದೆ. ಜಾಗತೀಕರಣವನ್ನು ತಾತ್ವಿಕವಾಗಿ ಒಪ್ಪಕೊಂಡ ಬಳಿಕ ಹುಟ್ಟುವ ಪ್ರಶ್ನೆಯಿದು. ಇದು ದಲಿತ ಸಮುದಾಯಗಳು ಬದಲಾಗುತ್ತಿರುವ ಸಾಮಾಜಿಕ, ರಾಜಕೀಯ, ಆರ್ಥಿಕ ಸನ್ನಿವೇಶಗಳಲ್ಲಿ ನಮಗಾಗುವ ಲಾಭವೇನು ಎಂಬ ನೆಲೆಯಲ್ಲಿ ರೋಚಿಸುತ್ತಿರುವುದರ ಪರಿ ಕೂಡ. ಇದು ಬೌದ್ಧಿಕ ಗೊಂದಲವಲ್ಲ. ಬದಲಾಗಿ ರಾಜಕೀಯವಾಗಿ ಸಾಮಾಜಿಕವಾಗಿ ದಲಿತರು ಚಿಂತಿಸಿರುವ ಅವಕಾಶವಾದಿ ವಿಧಾನ ಕೂಡ ರಾಜಕೀಯವಾಗಿ ಸಾಮಾಜಿಕವಾಗಿ ದಲಿತರು ಚಿಂತಿಸಿರುವ ಅವಕಾಶವಾದಿ ವಿಧಾನ ಕೂಡ ಆಗಿದೆ. ಜಾತಿಪದ್ದತಿಯ ದಬ್ಬಾಳಿಕೆಯನ್ನು ಅರ್ಥಮಾಡಿಕೊಳ್ಳುವುದಕ್ಕೂ ಜಾತೀಕರಣವನ್ನು ಅರ್ಥಮಾಡಿಕೊಳ್ಳುವುದಕ್ಕೂ ವ್ಯತ್ಯಾಸವಿದೆ; ಅಷ್ಟೇ. ಬಸವಣ್ಣ, ಬುದ್ಧ, ಅಂಬೇಡ್ಕರ್, ಫುಲೆಯವರ ಚಿಂತೆನಗಳು ಹಾಗೂ ದಲಿತರ ಸ್ವತಃ ಅನುಭವಗಳು ಜಾತಿ ಹಾಗೂ ಭೂಮಾಲಿಕ ಪದ್ಧತಿಯ ಕ್ರೌರ್ಯಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಆದರೆ ಅಂತಾರಾಷ್ಟ್ರೀಯ ಆರ್ಥಿಕ ರಾಜಕಾರಣದ ಭಾಗವಾಗಿರುವ ಜಾಗತೀಕರಣವನ್ನು ಆರ್ಥ ಮಾಡಿಕೊಳ್ಳುವುದಕ್ಕೂ ಅವಕ್ಕೆ ಪ್ರತಿಕ್ರಿಯಿಸುವುದಕ್ಕೂ ಅವು ಸಾಲುವುದಿಲ್ಲ. ಕೆಲವೇ ದಲಿತ ಚಿಂತಕರು ಮಾತ್ರ ಭಾರತದ ಬಂಡವಾಳಶಾಹಿ ವ್ಯವಸ್ಥೆಗೂ ಕೋಮುವಾದಕ್ಕೂ (ಆಂದರೆ ಮೇಲುಜಾತಿಗಳಿಗೂ) ಅಂತರರಾಷ್ಟ್ರೀಯ ಸಾಮ್ರಾಜ್ಯಶಾಹಿಗೂ ಇರುವ ಆಂತರಿಕ ಸಂಬಂಧಗಳನ್ನು ಅರಿಯಬಲ್ಲವರಾಗಿದ್ದಾರೆ. ಆದರೆ ಕೆಲವು ದಲಿತ ಚಿಂತಕರಿಗೆ ಜಾಗತೀಕರಣವು ಬ್ರಿಟಿಷರ ಜತೆ ಬಂದ ವಸಾಹತುಶಾಹಿಯ ರೂಪದಲ್ಲಿ ಕಾಣುತ್ತಿದೆ. ಇದರ ಲಾಭವನ್ನು ನಾವ್ಯಾಕೆ ಪಡೆಯಬಾರದು ಎಂಬ ತರ್ಕವನ್ನು ಅದು ಹುಟ್ಟಿಸಿದೆ. ಮೀಸಲಾತಿಯನ್ನು ಜಾರಿ ಮಾಡಿ ಅಷ್ಟಿಷ್ಟು ನೆರವಾಗುತ್ತಿದ್ದ ಸರಕಾರಗಳೇ ಜಾಗತೀಕರಣ ಪರವಾಗಿ ಕೆಲಸ ಮಾಡುತ್ತಿರುವುದರಿಂದ ದಲಿತರ ಒಲವು ಅತ್ತ ಸರಿದಿದೆ. ಓದಿಯೂ ಕೆಲಸವಿಲ್ಲದ ಎಷ್ಟೋ ತರುಣ ದಲಿತರು ಜಾಗತೀಕರಣದ ಭಾಗವಾಗಿ ಬಂದಿರುವ ಎನ್‌ಜಿಓಗಳಲ್ಲಿ ಮುಜುಗರವಿಲ್ಲದೆ ಕೆಲಸ ಮಾಡುತ್ತಿರುವುದು ಇದಕ್ಕೆ ಸಾಕ್ಷಿ. ಸಾಮಾಜಿಕ ಸಾಂಸ್ಕೃತಿಕ ಸಂವೇದನೆ ಅಧ್ಯಯನ ಹೆಸರಲ್ಲಿ ದಲಿತಲೋಕದ ಅಧ್ಯಯನಗಳು ಕೂಡ ಇದಕ್ಕೆ ಪೂರಕವಾಗಿವೆ. ದೇಶೀವಾದಿ ಪರಿಭಾಷೆಯಲ್ಲಿ ನಡೆಯುತ್ತಿರುವ ಈ ಅಧ್ಯಯನಗಳ ಹಿಂದೆ ಒಂದಿಲ್ಲ ಒಂದು ಬಗೆಯಲ್ಲಿ ವಿದೇಶಿ ಹಣಕಾಸು ಪ್ರತಿಷ್ಠಾನಗಳಿವೆ. ಅವುಗಳ ಹಿಂದೆ ಮುಂದುವರೆದ ದೇಶಗಳ ಕಾಣದ ಕೈಗಳಿವೆ. ಇವನ್ನು ಅರಿಯುವುದು ಮತ್ತು ರಾಜಕೀಯವಾಗಿ ವಿಶ್ಲೇಷಿಸುವುದಕ್ಕಿಂತ ಹೆಚ್ಚಾಗಿ ನಮಗೆ ಇದರಿಂದ ಏನು ಲಾಭ ಎಂಬ ನೀತಿ ಈ ಕೆಲವು ದಲಿತರಲ್ಲಿ ಇದ್ದಂತಿಗೆ.

ಜಾಗತಿಕ ವಿದ್ಯಮಾನಗಳನ್ನು ಹೀಗೆ ದಲಿತ ಸಮುದಾಯದ ಸ್ವಹಿತಾಸಕ್ತಿಯಿಂದ ಮಾತ್ರ ಗ್ರಹಿಸಲು ಹಾಗೂ ಪ್ರತಿಕ್ರಿಯಿಸಲು ಇನ್ನೊಂದು ಕಾರಣವಿರಬಹುದು. ಅದೆಂದರೆ, ದಲಿತ ಸಾಹಿತ್ಯ ಚಿಂತನೆಗಳು ಒಳಗೆ ಮೊದಲಿನಿಂದಲೂ ಇರುವ ಮಾರ್ಕ್ಸ್‌ವಾದದ ಬಗೆಗಿನ ಅಪನಂಬಿಕೆ ಇದಕ್ಕೆ ಕಾರಣ. ಮಾರ್ಕ್ಸ್‌ವಾದದ ಮೇಲೆ ಅಂಬೇಡ್ಕರ್ ಮಾಡಿ ಸೈದ್ಧಾಂತಿಕ ವಿಮರ್ಶೆಯಿರಬಹುದು. ಸಮಕಾಲೀನ ಮಾರ್ಕ್ಸ್‌ವಾದಿ ಪಕ್ಷಗಳ ಸಿದ್ಧಾಂತಗಳೂ ಕಾರಣವಿರಬಹುದು ಅಥವಾ ಕೇವಲ ವರ್ಗ ಹೋರಾಟಗಳಿಂದ ಬಿಡುಗಡೆಯಾದ ದಲಿತರ ಸಾಮಾಜಿಕ ಪರಿಸ್ಥಿತಿ ಇರಬಹುದು. ಅರ್ಥಿಕ ನೆಲೆಯಲ್ಲಿ ದಮನಿತರನ್ನು ಗುರುತಿಸುವ ಮಾರ್ಕ್ಸ್‌ವಾದಕ್ಕೆ ಹಳ್ಳಿಗಳಲ್ಲಿ ಜಾತಿಯ ಕಾರಣಕ್ಕೆ ಅಪಮಾನಿತರಾಗಿರುವ ದಲಿತರ ನೋವುಗಳು ಅರ್ಥವಾಗುವುದಿಲ್ಲ ಎಂಬ ಸಾಮಾನ್ಯ ದೂರು ಈಗಲೂ ಇದೆ. ಆದರೆ ಈ ಅನುಮಾನ ಅಂಬೇಡ್ಕರ್ ಮಾಡಿದಂತೆ ಗಂಭೀರ ತಾತ್ವಿಕ ವಾಗ್ವಾದದ ರೂಪದಲ್ಲಿ ಪ್ರಕಟವಾಗುವುದಕ್ಕಿಂತ ಹೆಚ್ಚಾಗಿ, ಸಾಮಾನ್ಯ ಆರೋಪ ರೂಪದಲ್ಲಿರುವುದೇ ಹೆಚ್ಚು. ಅಂಬೇಡ್ಕರ್ ವಾದ ಮಾರ್ಕ್ಸ್‌ವಾದಗಳು ಹೇಗೆ ಸಮಕಾಲೀನ ಪರಿಸ್ಥಿತಿಯಲ್ಲಿ ಕೂಡಿಕೊಂಡು ಹೊಸ ಪರ್ಯಾಯ ನಿರ್ಮಿಸಬಲ್ಲವು ಎಂಬ ಬಗ್ಗೆ ಕನ್ನಡದಲ್ಲಿ ಒಂದು ಬಲವಾದ ಸೈದ್ಧಾಂತಿಕ ವಾಗ್ವಾದ ನಡೆದಿದ್ದರೆ ಈ ಬಿರುಕುಗಳು ಕಡಿಮೆಯಾಗುತ್ತಿದ್ದವೋ ಏನೋ?

ಈ ಅಪನಂಬಿಕೆಯು ದಲಿತ ಲೇಖಕರು ವಿಶಾಲ ಎಡಪಂಥೀಯ ಸಾಹಿತ್ಯ ಸಂಘಟನೆಗಳ ಒಳಗೆ ಕೆಲಸ ಮಾಡುವುದಕ್ಕೆ ತೊಡಕಾದವು. ದಲಿತ ಸಂಸ್ಕೃತಿ ಸಾಹಿತ್ಯದ ಪ್ರತ್ಯೇಕತೆಯ ದನಿಗಳು ಮೂಡಿದವು. ವಿಶಾಲ ಎಡಪಂಥೀಯ ನೆಲೆಯ ಬಂಡಾಯ ಸಾಹಿತ್ಯ ಸಂಘಟನೆ ನಡುವೆ ಬಿರುಕು ಮೂಡುವುದಕ್ಕೆ ಇದು ಕೂಡ ಒಂದು ಕಾರಣ. ಇದಕ್ಕೆ ತಕ್ಕಂತೆ ಕೆಲವು ದಲಿತ ಲೇಖಕರು ಮಾರ್ಕ್ಸ್‌ವಾದಿಗಳೂ ಲೋಹಿಯಾವಾದಿಗಳೂ ಆದ ಲೇಖಕರ ಜತೆ ಬಹಳ ಕಾಲ ಹೋಗುವುದು ಸಾಧ್ಯವಿಲ್ಲ ಎಂದು ಹೇಳುತ್ತಲೇ ಇದ್ದರು. ಅನೇಕ ದಲಿತರಲ್ಲಿ ಅನೇಕ ಜನ ಮಾರ್ಕ್ಸ್‌ವಾದಿಗಳಿದ್ದರೂ ಈ ಬಿರುಕು ಕಡಿಮೆಯಾಗಲಿಲ್ಲ. ದೇವನೂರರಂತಹ ಲೋಹಿಯಾವಾದಿಗಳು ಕೂಡ ತಾತ್ವಿಕವಾಗಿ ವರ್ಗಕಲ್ಪನೆಯ ಮಾರ್ಕ್ಸ್‌ವಾದದ ಬಗ್ಗೆ ಎನ್ನುವುದಕ್ಕಿಂತ ಭಾರತೀಯ ಕಮ್ಯುನಿಸ್ಟ್ ಮಾದರಿಗಳ ಬಗ್ಗೆ ಸಮ್ಮತಿಯುಳ್ಳವರಾಗಿದ್ದರು. (ಕುಸುಮಬಾಲೆಯಲ್ಲಿ ಕಮ್ಯುನಿಸ್ಟ್ ದಲಿತರ ವ್ಯಂಗ್ಯಚಿತ್ರ ಗಮನಿಸಬೇಕು) ಕರ್ನಾಟಕದಲ್ಲಿ ಮಾರ್ಕ್ಸ್‌ವಾದಿಗಳಾದ ಕೆಲವು ದಲಿತರು ದಲಿತ ಸಂಘರ್ಷ ಸಮಿತಿಯ ಸಮುದಾಯವಾದಿ ರಾಜಕಾರಣವನ್ನು ವಿಮರ್ಶೆ ಮಾಡುತ್ತ ೯೦ರ ದಶಕದ ನಂತರ ಬೇರೆ ಬೇರೆ ತೀವ್ರವಾದಿ ಎಡಪಂಥೀಯ ಸಂಘಟನೆಗಳಲ್ಲಿ ಗುರುತಿಸಿಕೊಂಡರು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು. ದಲಿತ ಚಿಂತನೆ ರಾಜಕಾರಣ ಕೇವಲ ದಲಿತರಿಗಾಗಿ ಅದರಲ್ಲೂ ಅದರ ಒಳಗುಂಪುಗಳಿಗಾಗಿ ಘಟಿತವಾಗುತ್ತ ಈ ಬಿರುಕು ಮತ್ತಷ್ಟು ಹೆಚ್ಚಾಯಿತೆ ವಿನಾ ಕಡಿಮೆಯಾಗಲಿಲ್ಲ. ಎಡಪಂಥೀಯ ಲೇಖಕರು ಚಿಂತಕರಾಗಿದ್ದ ದಲಿತ ಲೇಖಕರಿಗೂ ಈ ಬಿರುಕನ್ನು ಬೆಸೆಯಲು ಸಾಧ್ಯವಾಗಲಿಲ್ಲ.

ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ಮತಾಂತರವಾಗುವ ಮೂಲಕ ಪ್ರತಿಭಟನೆಯ ಒಂದು ಹಾದಿಯನ್ನು ಹಾಕಿದರು. ಅದು ಚಾರಿತ್ರಿಕವಾಗಿ ಅನಿವಾಂiiವೂ ಮಹತ್ವದ್ದೂ ಆಗಿದ್ದ ಪ್ರತಿಭಟನೆಯ ಮಾದರಿ. ನಂತರ ದಲಿತರು ಸವರ್ಣೀಯರಿಂದ ಹಲ್ಲೆಗಳಾದ ಹೊತ್ತಿನಲ್ಲೆಲ್ಲ ತಾವು ಬೌದ್ಧಧರ್ಮಕ್ಕೆ ಅಥವಾ ಇಸ್ಲಾಮಿಗೆ ಹೋಗುವ ಧಮಕಿ ಹಾಕತೊಡಗಿದರು. ದಲಿತರಲ್ಲಿ ಕೆಲವು ಜನರು ಜಾತಿಪದ್ಧತಿಯ ಹಿಂದೂ ಧರ್ಮದಿಂದ ಪಾರಾಗಲು ಬೌದ್ಧಧರ್ಮಕ್ಕೆ ಹೋಗಲೂ ಶುರುಮಾಡಿದರು. ಆದರೆ ಅಲ್ಲಿಗೆ ಹೋದಮೇಲೆ ತಮ್ಮ ದಲಿತ ಸಂಸ್ಕೃತಿಯನ್ನು ಮಾರಿಹಬ್ಬ, ಮಾಂಸದೂಟ, ಜಾತ್ರೆ, ಆಚರಣೆಗಳು ಇತ್ಯಾದಿಗಳನ್ನು ಉಳಿಸಿಕೊಳ್ಳಲು ಸಾಧ್ಯವೆ? ಬೌದ್ಧರಾದ ಬಳಿಕ ಮತಾಂತರವಾಗದ ದಲಿತರ ಜತೆ ತಮ್ಮ ಸಂಬಂಧ ಹೇಗಿರುತ್ತದೆ? ಈ ಪ್ರಶ್ನೆಗಳಿಗೆ ಖಚಿತ ಉತ್ತರವಿನ್ನೂ ಸಿಕ್ಕಿಲ್ಲ. ಬೌದ್ಧ ಧರ್ಮವು ಸಾಂಸ್ಕೃತಿಕವಾಗಿ ದಲಿತೇರವಾಗಿತ್ತು ಮಾತ್ರವಲ್ಲ, ಅದು ರಾಜಕೀಯವಾಗಿ ದಲಿತರ ಸಮಸ್ಯೆಗಳ ಹೋರಾಟವನ್ನು ಮುಂದುವರೆಸಲು ಉತ್ತೇಜಿಸಲಿಲ್ಲ. ಈ ನಡುವೆ ದಲಿತ ಸಂಸ್ಕೃತಿಯ ದೈವಗಳು, ಆಚರಣೆಗಳು, ಊಟ, ಉಡುಗೆ ಇವುಗಳ ಬಗ್ಗೆ ಕೀಳರಿಮೆಯಿಲ್ಲದ ಒಂದು ಸ್ವಾಭಿಮಾನ ನಿಲುವನ್ನು ತಳೆಯುವ ಸಾಂಸ್ಕೃತಿಕ ಪ್ರಜ್ಞೆಯು ದಲಿತರಲ್ಲಿ ಬೆಳೆಯಿತು. ಇದು ಎಲ್ಲ ಬಗೆಯ ಮತಾಂತರಗಳ ಮೂಲಕ ಬಿಡುಗಡೆಯಾಗುವ ಹಾದಿಯನ್ನು ನಿರಾಕರಿಸುವ ಚಿಂತನೆಯಾಗಿತ್ತು. ಹೀಗಾಗಿ ಬೌದ್ಧಧರ್ಮದ ಜತೆ ಕಲಿತ ಮಧ್ಯಮವರ್ಗದ ಬುದ್ಧಿಜೀವಿ ದಲಿತರು ತೋರಿದ ಭಾವನಾತ್ಮಕ ತಾತ್ವಿಕ ಒಲವನ್ನು ಇಡಿಯಾಗಿ ದಲಿತ ಸಮುದಾಯ ತೋರಲಿಲ್ಲ. ಈ ಬೆಳವಣಿಗೆಗಳು ಕೂಡ ದಲಿತರ ಮುಂಚಲನೆಯ ಹಾದಿಗಳನ್ನು ರೂಪಿಸಲಿಲ್ಲ. ದಲಿತರು ಎಂದರೆ ಯಾರು ಎಂಬ ಪ್ರಶ್ನೆಗೆ ೭೦ರ ದಶಕದಲ್ಲಿ ಬಹುಚರ್ಚಿತವಾಗಿತ್ತು. ಏನೆಲ್ಲ ಚರ್ಚೆ ನಡೆದು, ಕೊನೆಗೆ ಅಸ್ಪೃಶ್ಯತೆಯನ್ನು ಅನುಭವಿಸಿದ ಜಾತಿಗಳಿಂದ ಬಂದವರು ದಲಿತರು ಎಂಬ ಸಾಮಾಜಿಕ ನೆಲೆಯ ವ್ಯಾಖ್ಯೆ ಮಾನ್ಯವಾಯಿತು. ಸಾಹಿತ್ಯಿಕ ಕ್ಷೇತ್ರದಲ್ಲಿ ‘ದಲಿತರು’ ಎಂಬ ಶಬ್ದದಲ್ಲಿ ವಾಸ್ತವದಲ್ಲಿ ಸಾಮಾಜಿಕವಾಗಿ ಯಾವ ಯಾವ ಜಾತಿಗಳವರು ಬರುತ್ತಾರೆ ಎಂಬ ಬಗ್ಗೆ ಯಾರೂ ಪ್ರಶ್ನೆ ಮಾಡದಷ್ಟು ಈ ಪದ ಒಂದು ಸಾಂಸ್ಕೃತಿಕ ರಾಜಕೀಯ ಪರಿಭಾಷೆಯಾಯಿತು. ಆದರೆ ೯೦ರ ದಶಕದಲ್ಲಿ ಎಡಗೈ ಬಲಗೈ ಒಡಕು ಕಾಣಿಸಿಕೊಂಡಿತು. ದಲಿತರು ಎಂಬ ಸಂಯುಕ್ತ ಪರಿಕಲ್ಪನೆಯ ಮೀಸಲಾತಿ ಲಾಭವನ್ನು ಬಲಗೈ ಹೊಲೆಯರು ಹೆಚ್ಚು ಪಡೆದಿದ್ದಾರೆ. ತಮಗೆ ಅನ್ಯಾಯವಾಗಿದೆ. ತಮಗೆ ಬೇರೆ ಒಳಮೀಸಲಾತಿಬೇಕೆಂದು ಎಡಗೈಯವರು (ಮಾದಿಗರು) ಕೇಳಿದಾಗಲೇ ದಲಿತರಲ್ಲಿ ಈ ಎರಡು ಸಾಮಾಜಿಕ ಭೇದಗಳಿವೆ ಎಂಬು ಬಹಳ ಜನರಿಗೆ ಗೊತ್ತಾಗಿದ್ದು. ಎಡಗೈನವರ ವಾದದಲ್ಲಿ ಸತ್ಯವಿತ್ತು; ಅರ್ಥವಿತ್ತು. ಆದರೆ ಪರಿಣಾಮದಲ್ಲಿ ಈ ವಾದವು ದಲಿತ ಎಂಬ ಸಂಯುಕ್ತ ಪರಿಭಾಷೆಯನ್ನು ಒಡೆದುಬಿಟ್ಟಿತು. ಇದಕ್ಕೆ ಕಳೆದ ೧೦ ವರುಷಗಳಿಂದ ಎಡಗೈ ಬಲಗೈ ಗುಂಪುಗಳ ನಡುವೆ ನಡೆದ ಜಗಳಗಳು ಅಂಬೇಡ್ಕರ್ ಬಲಗೈಯವರು ಎಂಬ ಭೇದಗಳು ಹೆಚ್ಚು ಹೆಚ್ಚು ಹೊರಬಂದವು. ಇದು ದಲಿತರು ಒಟ್ಟಾಗಿ ಸಮಾಜದ ವಿದ್ಯಮಾನಗಳನ್ನು ತಮ್ಮ ಎದುರಾಳಿಗಳನ್ನು ಎದುರಿಸಲು ಬೇಕಾದ ಏಕತೆಯನ್ನು ತಾತ್ವಿಕ ಶೋಧವನ್ನು ರಾಜಕೀಯ ಕಾರ್ಯಕ್ರಮ ಹಾಕಿಕೊಳ್ಳುವ ಸಾಧ್ಯತೆಗಳನ್ನು ಕಡಿಮೆಮಾಡಿತು.

ದಲಿತರು ಮದ್ಯಮವರ್ಗಕ್ಕೆ, ಸರಕಾರಿ ನೌಕರಿಗೆ ಸೇರಿದ ಬಳಿಕ ಇನ್ನೂ ಹಿಂದುಳಿತ ಅವಸ್ಥೆಯಲ್ಲಿರುವ ಸಮುದಾಯದ ಆಶಯಗಳನ್ನು ಪ್ರತಿನಿಧಿಸದೆ, ತಮ್ಮ ವರ್ಗಹಿತಾಸಕ್ತಿಗಳನ್ನು ಮಾತ್ರ ರಕ್ಷಿಸಿಕೊಳ್ಳುವತ್ತ ಚಲಿಸಿದರು. ಇದು ತಾರ್ಕಿಕವಾಗಿ ದಲಿತ ಸಂಘರ್ಷ ಸಮಿತಿಯು ಶಕ್ತಿ ರಾಜಕಾರಣಕ್ಕೆ ಧುಮುಕಿ ಸೋತು ಛಿದ್ರತೆಯಲ್ಲಿ ಕೊನೆಗೊಂಡಿತು. ಅನೇಕ ಚಿಂತಕರು ಲೇಖಕರು ಅನೈತಿಕರಾದರು. ದಲಿತರ ಮೇಲೆ ಹಲ್ಲೆಗಳಾದಾಗ (ಬೆಲ್ಚಿ, ಪಿಪ್ರಾ ಬೆಂಡಿಗೇರಿ) ಹಿಂದೆ ನಡೆಯುತ್ತಿದ್ ಪ್ರತಿರೋಧಗಳು ಕಡಿಮೆಯಾದವು. ಈಚೆಗೆ ಹರಿಯಾಣದಲ್ಲಿ ಜಜ್ಝರ್ ಪ್ರಕರಣಕ್ಕೆ ಬಂದ ಕ್ಷೀಣ ಪ್ರತಿಕ್ರಿಯೆಯನ್ನು ಗಮನಿಸಬೇಕು. ಇದೇ ಹೊತ್ತಿನಲ್ಲಿ ದಲಿತರ ಮೇಲೆ ಮೊದಲಿನಿಂದಲೂ ಬಿಡುಗಡೆಯಾದ ಜೀತದಾಳಿನ ಮೇಲೆ ಧಣಿ ಬುಸುಗುಡುವಂತೆ ಬುಸುಗುಡುತ್ತಿದ್ದ ಸವರ್ಣೀಯ ಸಮಾಜ ದಲಿತರ ಮೇಲೆ ಮತ್ತೆ ಎರಗತೊಡಗಿತು. ದಲಿತರು ಅಸ್ಪೃಶ್ಯತೆಯ ಕೇಸನ್ನು ದುರುಪಯೋಗ ಮಾಡಿಕೊಂಡರು ಎಂದು ಪ್ರತಿಭಟನೆ ಮಾಡುವ ರ‍್ಯಾಲಿಗಳೂ ನಡೆಯತೊಡಗಿದವು. ಮೀಸಲಾತಿ ವಿರೋಧವಾದ ರ‍್ಯಾಲಿಗಳು ನಡೆಯಲು ಶುರುವಾದವು. ಇವು ಕಾನೂನು ಪ್ರಕಾರ ಹಾಗೂ ಸಾಮಾಜಿಕ ಬದಲಾವಣೆಗಳ ಕಾರಣದಿಂದ ಜಾತಿ ಆಸ್ತಿಗಳ ಯಜಮಾನಿಕೆಯನ್ನು ಈ ಸವರ್ಣೀಯರು ಮರಳಿ ಪಡೆಯುವ ಪುನರುತ್ಥಾನದ ಘಟ್ಟವನ್ನೂ ಸೂಚಿಸುತ್ತವೆ. ದಲಿತರ ಸಾಮಾಜಿಕ ನ್ಯಾಯದ ಬೇಡಿಕೆಯ ಬಗ್ಗೆ ಒಂದು ಬಗೆಯ ಸಾರ್ವಜನಿಕ ಸಹಾನುಭೂತಿ ಇದ್ದವರೂ ನೈತಿಕ ಬೆಂಬಲವನ್ನು ಒದಗಿಸಿದ್ದವರು ಕೂಡ ಈ ಹೊತ್ತಲ್ಲಿ ದಲಿತರ ಬಗ್ಗೆ ಕ್ರಿಟಿಕಲ್ ಆದರು. ಈ ಎಲ್ಲಚಾರಿತ್ರಿಕ ವಿದ್ಯಮಾನಗಳು ದಲಿತ ಸಾಹಿತ್ಯದ ಸ್ವರೂಪವನ್ನು ನಿರ್ಧರಿಸುತ್ತ ಬಂದವು. ಈ ವಿದ್ಯಮಾನಗಳು ದಲಿತ ಸಾಹಿತ್ಯದಲ್ಲಿ ನೈತಿಕ ಬಲವನ್ನು ಕಳೆಯಿತು ಎಂದು ಮಾತ್ರವಲ್ಲ. ಅದು ನೈತಿಕ ಬಲವನ್ನು ಮತ್ತೆ ಪಡೆಯಲು ಹೊಸಯತ್ನವನ್ನು ಮಾಡಲು ಪ್ರೇರೇಪಿಸಿತು. ದಲಿತ ಸಾಹಿತ್ಯ ತಾತ್ವಿಕತೆಯನ್ನು ಈ ಮೂರು ದಶಕಗಳ ಏರುಪೇರುಗಳ ನಡುವೆ ಹುಡುಕಬೇಕಿದೆ.

ದಲಿತ ಸಾಹಿತ್ಯದ ತಾತ್ವಿಕತೆ
ಮೇಲಿನ ಭಿತ್ತಿಯ ಹಿನ್ನೆಲೆಯಲ್ಲಿ ಚಿತ್ರಣಗೊಳ್ಳುವ ದಲಿತ ಸಾಹಿತ್ಯದ ತಾತ್ವಿಕತೆ ಎಂಬುದು ಸರಳವಾಗಿಲ್ಲ. ಅದು ಏಕರೂಪಿ ಕೂಡ ಅಲ್ಲ. ದಲಿತ ಚಳುವಳಿ ಸಂಘಟನೆ ರಾಜಕಾರಣ ಹಾಗೂ ದಲಿತ ಸಾಹಿತ್ಯಗಳ ನಡುವಣ ಈ ಸಾಮ್ಯ ಹಾಗೂ ವೈರುಧ್ಯಗಳ ಸಂಬಂಧವು ಬಹಳ ಮುಖ್ಯ. ಇದರಿಂದಲೇ ದಲಿತ ಸಾಹಿತ್ಯದ ಬಗ್ಗೆ ಏಕರೂಪದ ಪರಿಕಲ್ಪನೆಯನ್ನು ಕೊಡಲು ಆಗುವುದಿಲ್ಲ. ಇದರಿಂದಲೇ ದಲಿತ ಸಾಹಿತ್ಯದ ಬಗ್ಗೆ ಏಕರೂಪದ ಪರಿಕಲ್ಪನೆಯನ್ನು ಕೊಡಲು ಆಗುವುದಿಲ್ಲ. ವಿಭಿನ್ನ ಲೇಖಕರು ವಿಭಿನ್ನ ದೃಷ್ಟಿಕೋನಗಳಲ್ಲಿ ಬರೆಯುತ್ತಾರೆ. ಒಬ್ಬರೇ ಲೇಖಕರು ತಮ್ಮ ಒಂದೊಂದು ಕೃತಿಯಲ್ಲಿಯೂ ಭಿನ್ನವಾಗಿ ಪರಿವರ್ತನೆಯನ್ನು ವಿಕಾಸವನ್ನು ತೋರಿದ್ದಾರೆ. ಗ್ರಾಮದೇವತೆಗಳನ್ನು ಒಂದು ಬಗೆಯ ತಮಾಷೆಯಿಂದ ವೈಚಾರಿಕವಾಗಿ ನೋಡುತ್ತ ನಿರಾಕರಿಸುವ ಪುರಾಮಭಂಜಕ ದಲಿತ ಲೇಖಕರೂ ಇದ್ದಾರೆ; ಜನಸಮುದಾಯಗಳ ಜಾನಪದ ಸಂಸ್ಕೃತಿಯನ್ನು ಹೊಸಚೈತನ್ಯ ನೀಡುವ ಲೋಕವೆಂದು ಕಳಕಳಿಯಿಂದ ನೋಡುವ ಲೇಖಕರೂ ಇದ್ದಾರೆ. ಪುರಾಣ ಐತಿಹ್ಯಗಲನ್ನು ಸಮುದಾಯದ ಸೃಜನಶೀಲತೆ ಕಟ್ಟಿದ ರೂಪಕಗಳೆಂದು ಭಾವಿಸಿ, ಅವುಗಳನ್ನು ಅತ್ಯಂತ ಜವಾಬ್ದಾರಿ ಸೂಕ್ಷ್ಮತೆಯಿಂದ ಅನುಸಂಧಾನ ಮಾಡುವ ದಲಿತ ಲೇಖಕರುದಾರೆ. ಮಾರ್ಕ್ಸ್‌ವಾದವನ್ನು ಕಟುವಾದ ತಿರಸ್ಕಾರದಿಂದ ನೋಡುವ ದಲಿತರೂ, ಅದು ಇನ್ನೂ ನಮಗೆ ಸಹಾಯಕ್ಕೆ ಬಂದಿಲ್ಲ ಎಂಬ ವಿಷಾದವುಳ್ಳ ದಲಿತರು ಅದೊಂದೇ ಮಾರ್ಗ, ಅಂಬೇಡ್ಕರ್ ಅಲ್ಲ ಎನ್ನುವ ದಲಿತರೂ ಇದ್ದಾರೆ.

ದಲಿತ ಲೇಖಕರನ್ನು ಸಿದ್ಧಲಿಂಗಯ್ಯ ಮಾರ್ಕ್ಸ್‌ವಾದಿ, ದೇವನೂರು ಲೋಹಿಯಾವಾದಿ, ಮನಜ ಮಾಲಗತ್ತಿಯವರು ಅಂಬೇಡ್ಕರ್ ವಾದ ಎಂದು ವಿಂಗಡಿಸಬಹುದು. ಆದರೆ ಈ ವಿಂಗಡಣೆ ಅವರ ಸಾಹಿತ್ಯದ ವಿಶ್ಲೇಷಣೆಯಲ್ಲಿ ಉಪಯುಕ್ತವಲ್ಲ. ಈ ಹಿನ್ನೆಲೆಯಲ್ಲಿ ದಲಿತ ಚಳುವಳಿ ಸಾಹಿತ್ಯ, ಸಂಘಟನೆಗಳ ಪ್ರಮುಖ ತಾತ್ವಿಕ ಆಯಾಮಗಳನ್ನ ಅದು ಹಾದುಬಂದ ಚಾರಿತ್ರಿಕ ಘಟ್ಟಗಳ ಅವಲೋಕನದಿಂದ ಅರಿಯಬಹುದು. ಆ ಘಟ್ಟಗಳನ್ನು ಅರಿವಿನ ಆಸ್ಪೋಟನೆಯ ಘಟ್ಟ ಅಥವಾ ಮೊಳಕೆ ಘಟ್ಟ; ಕಟ್ಟುವಿಕೆ ಘಟ್ಟ; ಶೈಥಿಲ್ಯದ ಘಟ್ಟ; ಆತ್ಮ ವಿಮರ್ಶೆ, ಹೊಸ ಹುಡುಕಾಟ ಹಾಗೂ ಮರುಹುಟ್ಟಿನ ಘಟ್ಟ ಎಂದು ವಿಂಗಡಿಸಿ ನೋಡಬಹುದು. ಇವನ್ನು ಕ್ರಮವಾಗಿ ಚರಿತ್ರೆಯ ವಿಮರ್ಶಿಸುವ, ವರ್ತಮಾನದ ವಾಸ್ತವ ಅರ್ಥಮಾಡಿಕೊಳ್ಳುವ ಈ ಸ್ವವಿಮರ್ಶೆ ಹಾಗೂ ಅರಿವಿನ ಮೂಲಕ ಭವಿಷ್ಯದ ಸಮಾಜದ ಕಟ್ಟಿಕೊಳ್ಳುವಿಕೆಯ ಕ್ರಿಯೆಗಳ ಸಂಕೇತವಾಗಿಯೂ ಭಾವಿಸಬಹುದು. ಈ ಘಟ್ಟಗಳು ಒಂದರ ನಂತರ ಒಂದು ಕ್ರಮಬದ್ಧವಾಗಿ ಬಂದವೇನಲ್ಲ. ಒಂದು ಘಟ್ಟ ಇರುವಾಗಲೆ ಇನ್ನೊಂದು ಘಟ್ಟದ ಲಕ್ಷಣಗಳು ಅದರ ಹೊಟ್ಟೆ ಒಳಗಿಂದ ಮೂಡುತ್ತಿರುವ ರಹೀತಿಯಲ್ಲಿ ಇವು ಬಂದವು; ಮಾತ್ರವಲ್ಲ. ಈಗ ಈ ಮೂರು ಘಟ್ಟಗಳು ಏಕಕಾಲದಲ್ಲಿ ಇರುವ ಚಿತ್ರವೂ ಇದೆ. ಶೈಥಿಲ್ಯದ ಘಟ್ಟದಲ್ಲಿ ಕಟ್ಟಿಕೊಳ್ಳುವ ಘಟ್ಟ ಇದೆ. ಯಾಕೆಂದರೆ ಹೊಸಹೊಸ ತಲೆಮಾರಿನ ಲೇಖಕರು ಬರವಣಿಗೆಗೆ ಆಗಮಿಸುತ್ತಿದ್ದಾರೆ. ಅವರು ಮೊದಲ ಘಟ್ಟದಿಂದಲೇ ಅಂದರೆ ಅರಿವಿನ ಆಸ್ಫೋಟದ ಘಟ್ಟದಿಂದಲೇ ಶುರುಮಾಡುವುದುಂಟು.

ಮೊಳಕೆಯ ಘಟ್ಟ
ಈ ಮೊಳಕೆಯ ಘಟ್ಟ ‘ಅರಿವಿನ ಆಸ್ಫೋಟ’ದ ಘಟ್ಟ ಕೂಡ. ಅರಿವು ತರುವ ಅಪಮಾನದ ಭಾವವು ತಮ್ಮನ್ನು ಅಮಾನವೀಯವಾಗಿ ಗಮನಿಸಿರುವ ವ್ಯವಸ್ಥೆಯನ್ನು ಕಡೆಹುವ ಉಗ್ರಕೋಪಕ್ಕೆ ಕಾರಣವಾಗುತ್ತದೆ. ಸಿದ್ಧಲಿಂಗಯ್ಯನವರ ಹೊಲೆಮಾದಿಗರ ಹಾಡು ಈ ಘಟ್ಟದ ಸಂಕೇತ. ಇಲ್ಲಿ ಮುಖ್ಯವಾದುದು ಆಸ್ಫೋಟ. ಎದುರಾಳಿಯನ್ನು ಧ್ವಂಸಮಾಡುವ ಸ್ವಭಾವವೇ ಮುಖ್ಯವಾಗಿ ಕೆಲಸ ಮಾಡುವ ಇಲ್ಲಿ ಕಟ್ಟುವ ಚಿಂತನೆ ಕಡಿಮೆ. ಭವಿಷ್ಯದಲ್ಲಿ ಪರ್ಯಾಯ ಸಮಾಜ ಕಟ್ಟಿಕೊಳ್ಳುವ ಹುಡುಕಾಟ ಕಡಿಮೆ. ಚರಿತ್ರೆಯ ಮೇಲೆ ವರ್ತಮಾನದ ಮೇಲೆ ರೇಗುವುದು ಪ್ರತಿಭಟಿಸುವುದು ಮುಖ್ಯ. ನೋವಿನ ಅಭಿವ್ಯಕ್ತಿಗಾಗಿ ಪ್ರಕಾರ ಭಾಷೆ ಮಾರ್ಗಗಳನ್ನು ದುಡುಕಿ ಹುಡುಕುವ ರೀತಿ ಇಲ್ಲಿನದು. ಮಾಲಗತ್ತಿಯವರ ‘ಗೌರ್ಮೆಂಟ್ ಬ್ರಾಹ್ಮಣ’ ಇಂತಹ ಅಭಿವ್ಯಕ್ತಿ. ಪುರಾಣಭಂಜಕ ವೈಚಾರಿಕತೆ ತೀವ್ರವಾಗಿ ಕೆಲಸ ಮಾಡುವ ಮನಸ್ಥಿತಿಯ ಪ್ರತಿಕ್ರಿಯೆಗಳನ್ನು ಇಲ್ಲಿ ಕಾಣಬಹುದು. ವೈಚಾರಿಕತೆಯು ಲೋಕವನ್ನು ಅರಿಯಲು ಅಂತಿಮವಾಗಿ ಅಸ್ತ್ರವಾಗಿ ಬಳಕೆಯಾಗ್‌ತದೆ ಇಲ್ಲಿ. ಸಿದ್ಧಲಿಂಗಯ್ಯನವರ ‘ಅವತಾರಗಳು’ ಕೃತಿಯ ವಿಡಂಬನೆ ತಮಾಷೆಗಲು ಇಂತಹವು. ರಾಜಮಾರ್ಗಧ ಚರಿತ್ರೆಯು ಶ್ರೇಷ್ಠ ಎಂದು ನಂಬಿರುವ ಸಂಕೇತಗಳನ್ನು ಒಳಪಡಿಸುವ ದಿಟ್ಟತನ ಇಲ್ಲಿ ಮುಖ್ಯ. ಬಿ. ಕೃಷ್ಣಪ್ಪ ಹಾಗೂ ದೇವಯ್ಯ ಹರವೆಯವರು ಕುವೆಂಪು ಬಗ್ಗೆ ಬರೆದ ಲೇಖನಗಳನ್ನು ಗಾಂಧಿಯವರ ಬಗ್ಗೆ ವಚನಕಾರರ ಬಗ್ಗೆ ಮನಜ ಬರೆದ ಲೇಖನಗಳನ್ನು ಇಲ್ಲಿ ನೆನೆಯಬೇಕು. ಅರಿವಿನ ಆಸ್ಫೋಟದ ಈ ಹಂತದಲ್ಲಿ ಕೆಲವೊಮ್ಮೆ ಅಕ್ಷರ ತೋರಿಸಿದ ಹೊಸ ಹೊಸ ದರ್ಶನಗಳ ವಿಸ್ಮಯವೂ ಇರುತ್ತದೆ. ಗೋವಿಂದಯ್ಯನವರ ಆ ಆ ಮತ್ತು ಪದ್ಯ ಇಂತಹದು. ಇಡೀ ಪದ್ಯವು ಕಪ್ಪು ಹಲಗೆಯ ಮೇಲೆ ಬಿಳಿಯ ಅಕ್ಷರಗಳು ಬೆಳಕಿನಂತೆ ಮೂಡಿದಾಗ ಉಂಟಾದ ವಿಸ್ಮಯ ನೋವು ಸಂತಸಗಳು ಮೊದಲ ಅನುಭವಗಳನ್ನು ಅಲ್ಲಿ ಕಾಣಬಹುದು.

ಬೆಳೆ ಕಟ್ಟುವ ಘಟ್ಟ
ಪ್ರತಿರೋಧದ ಘಟ್ಟವು ಮುಗಿಯಲಿಲ್ಲ. ಆದರೆ ಪ್ರತಿರೋಧದ ಜನತೆಯಲ್ಲಿಯೇ ಕಟ್ಟಿಕೊಳ್ಳುವಿಕೆಯ ಕೆಲಸ ಕೂಡ ಆಗಬೇಕಿತ್ತು. ಕಟ್ಟಿಕೊಳ್ಳುವಿಕೆ ಎಂದರೆ ಸಂಘಟನೆಗೆ ಸಂಗಾತಿಗಳನ್ನು ಸಮಾನ ಮನಸ್ಕರನ್ನು ಕಟ್ಟಿಕೊಳ್ಳುವುದು. ಸಮುದಾಯದ ರಂಗಚಟುವಟಿಕೆಗಳಲ್ಲಿ ಬಂಡಾಯ ಸಂಘಟನೆಗಳಲ್ಲಿ ದಲಿತರು ಸೇರಿದರು. ಅಥವಾ ದಲಿತರ ಜತೆ ಎಡಪಂಥೀಯರು ಸೇರಿದರು. ಕನಸಿನ ಸಮಾಜದ ಕಲ್ಪನೆಯನ್ನು ಕಟ್ಟಿಕೊಳ್ಳುವ, ದಲಿತ ಸಂಸ್ಕೃತಿಯಲ್ಲಿರುವ ಚೈತನ್ಯಶೀಲ ಸಂಗತಿಗಳನ್ನು ಕಟ್ಟಿಕೊಳ್ಳುವ ಈ ಘಟ್ಟವನ್ನು ಸಮರ್ಥವಾಗಿ ಸಂಕೇತಿಸುವ ಸಂಗತಿ ಎಂದರೆ ‘ಒಡಲಾಳ’ ದಲ್ಲಿ ಪುಟಗೌರಿಯು ನವಿಲಿನ ಚಿತ್ರ ಬರೆಯುವುದು. ಸಾಕವ್ವನು ತನ್ನ ಮೊಮ್ಮಗ ಶಿವು ರಾಜನಾಗುವ ಕನಸು ಕಾಣುವುದು. ಇಲ್ಲಿ ಇಕ್ರಲಾ ವದೀರ‍್ಲಾ ಎಂಬ ಕೋಪವುಳ್ಳ ‘ಒಂದು ಪದ’ದ ಕವನದ ಬಿರುಸು, ‘ನನ್ನ ಜನರು’ ಕವನದ ವೇದನೆಗಳು ಹಿಂಜರಿದು, ಅದರ ಜಾಗದಲ್ಲಿ ಅಥವಾ ಅದರ ಜನತೆಯಲ್ಲಿ ದಲಿತರ ರಾಜ್ಯದ ದಲಿತರು ಸುಖವಾಗಿರುವ ಅಪಮಾನಿತರಾಗುವ ಆದರ್ಶ ಸಮಾಜದ ಕನಸುಗಳನ್ನು ಕಾಣುವುದು ಶುರುವಾಗುತ್ತದೆ ‘ಸಾವಿರಾರು ನದಿಗಳು’ ಸಂಕಲನದ ಕವನಗಳು ಇಂತಹವು. ಮೊಗಳ್ಳಿ ಗಣೇಶ ಅವರ ‘ನನ್ನಜ್ಜನಿಗೊಂದು ಆಸೆಯಿತ್ತು’ ಕತೆಯನ್ನು ಇಲ್ಲಿ ನೆನೆಯಬಹುದು. ಕುಸುಮಾಬಾಲೆಯ ಚೆನ್ನನ ಅಪ್ಪ ಅಮ್ಮ ಕಾಣುವ ಕನಸುಗಳ ಚಿತ್ರಗಳನ್ನು ನೆನೆಯಬಹುದು.
ಶೈಥಿಲ್ಯ ಮತ್ತು ಅರಾಜಕತೆಯ ಘಟ್ಟ
ಆದರೆ ಬಹಳ ಬಿರುಸಿನಿಂದ, ಕಟ್ಟುವ ಉಮೇದಿನಿಂದ ಶುರುವಾದ ದಲಿತ ಚಳುವಳಿ ಮತ್ತು ಸಾಹಿತ್ಯ ಸೃಷ್ಟಿಯ ಒಂದು ಹಂತಕ್ಕೆ ಬಂದ ಮೇಲೆ ಅದರಲ್ಲಿ ಛಿದ್ರತೆಯ ಬಿರುಕುಗಳು ಕಾಣಿಸಿಕೊಂಡವು. ಇದಕ್ಕೆ ಕಾರಣ ದಲಿತರು ಮೊದಲ ಹಂತದಲ್ಲಿ ಆಗ ತಾನೆ ದುಡಿಯುವ ವರ್ಗದಿಂದ ಗ್ರಾಮಗಳಿಂದ ಬಂದವರಾಗಿದ್ದು. ಅವರ ಹಾಗೂ ಅವರು ಸಾಕಿಬೆಳೆಸಿದ ಗ್ರಾಮೀಣ ದಲಿತರ ನಡುವಣ ಸಂಬಂಧಗಳು ಕಡಿಯದ ರೀತಿಯಲ್ಲಿದ್ದವು. ಇವುಗಳ ನಡುವಣ ಸಂಬಂಧಗಳನ್ನು ಚಳುವಳಿಗಳು ಕೂಡ ಬೆಸೆದಿಟ್ಟಿದ್ದವು. ಆದರೆ ಯಾವಾಗ ದಲಿತರು ಮಧ್ಯಮವರ್ಗಕ್ಕೆ ಸೇರಿದ ಅನುಕೂಲಸ್ಥರಾದ ನಗರವಾಸಿಗಳಾದ ಆಧುನಿಕ ಶಿಕ್ಷಣ ಪಡೆದವರಾದರೋ, ಅವರಲ್ಲಿ ವೈಯಕ್ತಿಕವಾಗಿ ಸ್ವಾಭಿಮಾನ ಮುಂದುವರೆದ ಪ್ರಜ್ಞೆಗಳು ಜೀವಂತವಿದ್ದವು. ಆದರೆ ಹಳ್ಳಿಗಾಡಿನಲ್ಲಿ ಹಾಗೆಯೇ ಉಳಿದ ದಲಿತ ಸಮುದಾಯದ ಜತೆಗಿನ ಸಂಬಂಧ ಶಿಥಿಲವಾಯಿತು. ಇದಕ್ಕೆ ಚಳುವಳಿಗಳು ಕಡಿಮೆಯಾಗಿದ್ದು ಅಥವಾ ಅವು ಹೋರಾಟದ ಬದಲಾಗಿ ಈಗಿರುವ ಡೆಮಾಕ್ರಟಿಕ್ ವ್ಯವಸ್ಥೆಯಲ್ಲೂ ದಲಿತರಿಗೆ ಅನುಕೂಲಮಾಡುವ ಮಾದರಿಯನ್ನು ಒಪ್ಪಿದ್ದು ಕೂಡ ಕಾರಣವಿರಬಹುದು. ದಲಿತರಲ್ಲಿ ಹಳ್ಳಿಗಾಡಿನ ಸಮುದಾಯದ ಅನುಭವವಿಲ್ಲದ ತಲೆಮಾರು ಹುಟ್ಟಿತು. ಈಗಾಗಲೇ ಮುಂದುವರೆದ ಮಧ್ಯಮವರ್ಗದ ದಲಿತರಲ್ಲಿ ಸಮುದಾಯ ಪ್ರಜ್ಞೆಗೆ ಬದಲಾಗಿ ವೈಯಕ್ತಿಕ ಮಹತ್ವಾಕಾಂಕ್ಷೆಗಳು ಮೊಳೆತವು. ಸಮುದಾಯ ಪ್ರಾತಿನಿಧ್ಯದಲ್ಲಿ ತನಗೆ ಪಾಲುಬೇಕೆಂಬ ಸಿದ್ಧಾಂತಗಳು ಹುಟ್ಟಿದವು. ದಲಿತರ ಈ ಪರಿವರ್ತನೆಯು ತನ್ನ ಸ್ವರೂಪದಲ್ಲಿ ಅವಕಾಶವಾದಿಯೂ ವ್ಯಕ್ತಿವಾದಿಯೂ ಆಗಿತ್ತು. ಇದೇ ಹೊತ್ತಲ್ಲಿ ಆಳುವ ವ್ಯವಸ್ಥೆಗಳು ದಲಿತರನ್ನು ತಮ್ಮೊಳಗೆ ಅಳವಡಿಸಿಕೊಳ್ಳುವ ಕೆಲಸ ಶುರುಮಾಡಿದವು. ೮೦-೯೦ರ ದಶಕದ ಕರ್ನಾಟಕದ ಜನತಾಪಕ್ಷದ ಬುದ್ಧಿಜೀವಿಗಳಿಗೆ ಪ್ರಿಯವಾದ ರಾಜಕಾರಣವಾಯಿತು. ಲೇಖಕರು ಸರಕಾರಕ್ಕೆ ಹತ್ತಿರವಾದರು. ಆಗ ಜನತಾಪಕ್ಷಕ್ಕೆ ದಲಿತರ ಸೇರಾಟ ಶುರುವಾಯಿತು. ಕನ್ನಡ ಇಬ್ಬರು ದಲಿತ ಲೇಖಕರು ವಿಧಾನ ಪರಿಷತ್ತಿಗೆ ನಾಮಕರಣವಾದ ಬಳಿಕ, ತಮ್ಮನ್ನು ನೇಮಿಸಿದ ಮುಖ್ಯಮಂತ್ರಿಗಳಿಗೆ ತಮ್ಮ ಕೃತಿಗಳನ್ನು ಅರ್ಪಣೆ ಮಾಡಿದ್ದು ಸಾಂಕೇತಿಕವಾಗಿದೆ. ದಲಿತ ಸಂಘಟನೆಯು ಚುನಾವಣೆಯ ರಾಜಕಾರಣದಲ್ಲಿ ಭಾಗಿಯಾಗಲು ನಿರ್ಧರಿಸಿತು. ಬಿ. ಕೃಷ್ಣಪ್ಪನವರು ಕೋಲಾರದಲ್ಲಿ ಜನತಾಪಕ್ಷದ ಸಹಯೋಗದೊಂದಿಗೆ ಚುನಾವಣೆಗೆ ನಿಂತರು. ಇದನ್ನು ‘ತನ್ನ ಕಣ್ಣು ತಾನೇ ಚುಚ್ಚಿಕೊಂಡ ಘಟನೆ’ ದಲೇಕ ಬಣ್ಣಿಸುತ್ತದೆ. ಈ ಹಂತದಲ್ಲಿ ಹುಟ್ಟಿದ ಸಾಹಿತ್ಯದಲ್ಲಿ ಒಂದು ಬಗೆಯ ಕಲಾತ್ಮಕತೆಯ ಕಾಳಜಿಯ ತಣ್ಣನೆ ಅಭಿವ್ಯಕ್ತಿಗಳು ಕಂಡವು. ಲೇಖಕರು ಸೌಂದರ್ಯ ಪ್ರಜ್ಞೆಗಳ ಹುಡುಕಾಟದಲ್ಲಿ ಪ್ರತಿರೋಧದ ಸೊಲ್ಲು ಅಡಗಿತು. ಈ ತಣ್ಣನೆಯ ದನಿಯನ್ನು ಊರುಕೇರಿ ಎಂಬ ಸಿದ್ಧಲಿಂಗಯ್ಯನವರು ತಳಮಳ ರಹಿತವಾದ ಬರವಣಿಗೆಯಲ್ಲಿ ನೋಡಬಹುದು.

ಆತ್ಮವಿಮರ್ಶೆಹೊಸ ಹುಡುಕಾಟ ಹಾಗೂ ಮರುಹುಟ್ಟಿನ ಘಟ್ಟ
ಆದರೆ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಿದ್ದ ಒಂದು ನೆಪವಾಗಿ ಬಿರುಕು ಬಿಡುತ್ತಿದ್ದ ದಲಿತ ಸಂಘರ್ಷ ಸಮಿತಿಯೂ ದಲಿತರೂ ಛಿದ್ರವಾದರು. ತಮಗೆ ವೈಯಕ್ತಿಕವಾಗಿ ಪಾಲು ಹುಡುಕುತ್ತ ಅವರು ಗುಂಪುಗಳಾಗಿ ಒಡೆದರು. ಅವರಲ್ಲಿ ಒಂದು ಬಗೆಯ ಅನೈಕ್ಯತೆ ಏರ್ಪಟ್ಟಿತು. ಇದಕ್ಕೆ ಕೆಲವು ಲೇಖಕರೂ ಒಲಿಯಾದರು. ಇದು ದಲಿತ ಚಿಂತಕರ ಮೇಲೂ ಲೇಖಕರ ಮೇಲೂ ಗಾಢವಾದ ಪರಿಣಾಮ ಬೀರಿತು. ಅದು ವಿಷಾದಕರ ಪರಿಣಾಮವೇ ಆಗಿತ್ತು’. ಇದು ವಿಷಾದಗಳನ್ನು ಹುಟ್ಟಿಸಿತು. ನವಿಲುಗಳು ಮಾಂಸದಂಗಡಿಯಲ್ಲಿ ತೂಗುಬಿದ್ದಿರುವ ರೂಪಕವು ಇಂಥ ವಿಷಾದದ ಸಂಕೇತ. ಇದು ಒಂದು ಬಗೆಯ ಆತ್ಮ ವಿಮರ್ಶೆಯನ್ನು ಹುಟ್ಟಿಸಿತು. ದಲೇಕದವರು ಉಲ್ಲೇಖಿಸಿದ ತನ್ನ ಕಣ್ಣನ್ನು ತಾನೆ ಚುಚ್ಚಿಕೊಂಡ ರೂಪಕವು ಆತ್ಮ ವಿಮರ್ಶೆಯ ಸಂಕೇತವಾಗಿದೆ. ಲಕ್ಷಣ್ ಅವರು ಈಚೆಗೆ ಬರೆದಿರುವ ತಮ್ಮ ಆತ್ಮಚರಿತ್ರೆಯಲ್ಲಿ (ಸಂಬೋಳಿ) ದಲಿತ. ಸಂಘಟನೆಗಳ ಡಿಮಾರಲೈಜೇಶನ ಕುರಿತು ಕಟುವಾಗಿ ವಿಮರ್ಶಿಸುತ್ತಾರೆ. ಈ ವಿಷಾದ ಆತ್ಮ ವಿಮರ್ಶೆಗಳು ಹೊಸ ಹುಟ್ಟಿನ ಹುಡುಕಾಟವನ್ನು ಕೂಡ ಪ್ರೇರಿಸಿವೆ. ಈ ಹುಡುಕಾಟವೂ ಇನ್ನೂ ನಿಂತಿಲ್ಲ. ಪರ್ಯಾಯವು ಸ್ಪಷ್ಟವಾಗಿ ಒಡಮೂಡಿಲ್ಲ.
ಪರ್ಯಾಯ ಹುಡುಕಾಟಗಳ ಪರಿಯಿದು. ಹೊಸ ಹುಡುಕಾಟದ ಪರಿಯನ್ನು ಹಾಗೂ ಮರು ಹುಟ್ಟಿನ ತವಕಗಳನ್ನು ಹೀಗೆ ಗುರುತಿಸಬಹುದು. ದಲಿತ ತತ್ವದಲ್ಲಿ ಹೊಸ ಪರ್ಯಾಯ ಹುಡುಕಾಡುತ್ತ, ಅಲ್ಲಿನ ಅನುಭಾವಿಕ ಪರಂಪರೆಗಳಲ್ಲಿ ನೆಲೆಯನ್ನು ಹುಡುಕುವ ಸಾಂಸ್ಕೃತಿಕ ಪರ್ಯಾಯದ ತುಡಿತ; ಎರಡು ದಲಿತತನದಿಂದ ಬಿಡುಗಡೆ ಹಾಗೂ ಕೂಡ ಹೋರಾಟಗಳಲ್ಲಿ ನಂಬಿಕೆಯಿಡುವ ವಿಶಾಲ ಹಾದಿ.

(ಅ) ದಲೇಕದವರು ಪ್ರಕಟಿಸಿರುವ ಪ್ರಣಾಳಿಕೆ ರೂಪದ ಕರಡು ಲೇಖನದ ಪ್ರಕಾರ ದಲಿತ ಸಂಘಟನೆ ಚಳುವಳಿ ಸಾಹಿತ್ಯಗಳಲ್ಲಿ ರಾಜಕೀಯ ಇದೆ. ಅದಕ್ಕೆ ಆ ನೆಲದ ಆನುಭಾವಿಕ ಆಧ್ಯಾತ್ಮಿಕ ನೈತಿಕ ತುಡಿತಗಳು ಇರಲಿಲ್ಲ. ಹೀಗಾಗಿ ಅದು ಬಹಳ ಬೇಗ ಕುಸಿಯಿತು. ಆದ್ದರಿಂದ ನೈತಿಕತೆಯುಳ್ಳ ಹಾಗೂ ಈ ಪ್ರತಿಭಟನಾ ಪರಂಪರೆಗಳ ಸತ್ವವನ್ನುಳ್ಳ ರಾಜಕಾರಣವನ್ನು ಮಾಡಬೇಕು. ಇದಕ್ಕಾಗಿ ಈ ನೆಲದ ಅನುಭಾವಿ ಪರಂಪರೆಗಳನ್ನು ಅನುಸಂಧಾನ ಮಾಡಬೇಕು. ಇದಕ್ಕೆ ತಕ್ಕಂತೆ ಅನೇಕ ದಲಿತ ಲೇಖಕರು ಕೋಟಗಾನಹಳ್ಳಿ ರಾಮಯ್ಯ, ಕೆ. ಬಿ. ಸಿದ್ದಯ್ಯ, ದೇವನೂರು ಮಹಾದೇವ, ಗೋವಿಂದಯ್ಯ, ಮಹಾದೇವ ಸಂಕನಪುರ, ಕುಕ್ಕರಹಳ್ಳಿ ಬಸವರಾಜ ಮುಂತಾದವರು ಮಂಟೇಸ್ವಾಮಿ ಪರಂಪರೆಯ ತಿರುಗಾಟ ಅಧ್ಯಯನಗಳಲ್ಲಿ ತೊಡಗಿರುವುದನ್ನೂ ಕಾಣಬಹುದು. ಇದರ ಭಾಗವಾಗಿಯೇ ಸ್ಥಳೀಯ ಜನಪದ ಪರಂಪರೆಗಳನ್ನು ಲೇಖಕರು ತಮ್ಮ ಹೊಸ ಹುಟ್ಟಿನ ಹೊಸಚೈತನ್ಯ ಅವಾಹಿಸುವುದಕ್ಕಾಗಿ ಅನುಸಂಧಾನ ಮಾಡುತ್ತಿದ್ದಾರೆ. ಹೀಗಾಗಿ ಅವರ ಬರವಣಿಗೆಯಲ್ಲಿ ಜನಪದ ಸಾಂಸ್ಕೃತಿಕ ನಾಯಕರು ಜನಪದ ಪರಂಪರೆಗಳು ಆಚರಣೆಗಳನ್ನು ಬಳಸಿಕೊಂಡು ಸಾಹಿತ್ಯ ನಿರ್ಮಾಣವಾಗುತ್ತಿದೆ. ‘ಕುಸುಮ ಬಾಲೆ’ ಕಾದಂಬರಿಯು ಪೂರ್ವಿಕ ಮಲೆಮಾದೇಶ್ವರನಿಗೆ ಅರ್ಪಿತವಾಗಿರುವುದನ್ನು ಉಲ್ಲೇಖಿಸಬೇಕು. ಒಡಲಾಳದಲ್ಲಿ ಇರದ, ಇರಲು ಸಾಧ್ಯವಿಲ್ಲದ ಕುರಿಯಯ್ಯನ ಪಾತ್ರ, ಅವನು ಮೈಮೇಲೆ ಬಂದು ನನ್ನಿ ಹೇಳುವ ಪ್ರಕರಣ, ಜೋತಮ್ಮಂದಿರ ಪಾತ್ರಗಳು, ಸೆಟಿಗವ್ವನಿಂದ ತನ್ನ ಕೂಸನ್ನು ಉಳಿಸಿಕೊಳ್ಳು ಕೆಂಪಿಯ ತಾಯಿ ರಾತ್ರಿಯಿಡಿ ನಾಗರಬೆತ್ತ ಮರುಜವಳಿ ಕಡ್ಡಿಯನ್ನು ಹಿಡಿದು ಮನೆಕಾವಲು ಮಾಡುವ ಚಿತ್ರ ಇವೆಲ್ಲ ವಾಸ್ತವವಾದಿ ಕಥನಕ್ರಮ ಹೇಳಲಾಗದ ಸತ್ಯಗಳನ್ನು ಹೇಳುವ ಹೊಸ ಕಥನಕ್ರಮದ ಪ್ರಯೋಗಗಳು. ಆದರೆ ಈ ಪ್ರಯೋಗದ ಹಿಂದೆ ಜನಸಮುದಾಯದ ಚಿಂತನೆಯನ್ನು ತನ್ನ ಆಧುನಿಕ ರಾಜಕೀಯ, ಸಾಮಾಜಿಕ ಕಾರ್ಯಕ್ರಮಗಳಿಗೆ ಬೆರೆಸಿಕೊಳ್ಳುವ ಚಿಂತನಾಕ್ರಮ ಕೆಲಸ ಮಾಡಿದೆ. ಕೆ. ಬಿ. ಸಿದ್ದಯ್ಯ ಅವರು ಬಕಾಲ ಎಂಬ ಆದಿಜಾಂಬವರ ಪುರಾಣದ ಮುನಿಯನ್ನು ಕುರಿತ ಪುರಾಣವನ್ನು ಬಳಸಿಕೊಂಡು, ದಕ್ಕಲ ಮಾದಿಗರ ಪುರಾಣದಲ್ಲಿ ಬರುವ ‘ದಕ್ಲದೇವಿ’ ಯ ಕಥೆಯನ್ನು ಬಳಸಿಕೊಂಡು ಕಾವ್ಯಗಳನ್ನು ಬರೆದರು. ಕೋಟಗಾನಹಳ್ಳಿ ರಾಮiಯ ಅವರು ರಚಿಸಿದ ‘ಸಿಂಧ್ ಮಾದಿಗರ ಸಂಸ್ಕೃತಿ’ ಕೃತಿಯ ದಲಿತರ ಸಂಸ್ಕೃತಿ ಪುರಾಣ ಐತಿಹ್ಯ ಸಾಹಿತ್ಯಗಳ ಲೋಕವನ್ನು ಹೊಸರಾಜಕೀಯ ಸಾಮಾಜಿಕ ಆಶಯಗಳಿಗಾಗಿ ಅನುಸಂಧಾನ ಮಾಡುವ ಕೆಲಸವನ್ನು ಮಾಡುತ್ತದೆ. ಸಿದ್ಧಲಿಂಗಯ್ಯನವರು ಗ್ರಾಮ ದೇವತೆಗಳನ್ನು ಕುರಿತು ಮಾಡಿರುವ ಅಧ್ಯಯನಗಳಲ್ಲಿ ಈ ಬಗೆಯ ಆಧುನಿಕ ರಾಜಕಾರಣಕ್ಕೆ ಆಧುನಿಕ ಚಿಂತನೆಗೆ ಸೃಷ್ಟಿಗೆ ಜನಸಮುದಾಯದ ಸಂಸ್ಕೃತಿಗೆ ಲೋಕದ ಜತೆ ಸಂಪರ್ಕ ಬೆಳೆಸಬೇಕು ಎಂಬ ಸಣ್ಣ ಉದ್ದೇಶವೂ ಇದ್ದಂತಿದೆ.

(ಆ) ಕೆಲವು ದಲಿತ ಲೇಖಕರು ಇನ್ನೂ ಸಮುದಾಯವಾದಿ ನೆಲೆಯಲ್ಲೇ ಇದ್ದಾರೆ. ದಲಿತರಿಂದ ಬರೆದುದೇ ದಲಿತ ಸಾಹಿತ್ಯ ಎಂಬ ವ್ಯಾಖ್ಯೆಯ ವಿಚಿತ್ರ ಚಟುವಟಿಕೆಗಳು ದಲಿತ ಸಾಹಿತ್ಯವನ್ನು ಮತ್ತಷ್ಟು ಜಾತಿನಿಷ್ಠ ಮಾಡುವ ಸಾಧ್ಯತೆಯಿದೆ. ಇದರಲ್ಲಿ ಹಿರಿಯ ದಲಿತ ಲೇಖಕರು ಚಿಂತಕರು ಭಾಗವಹಿಸುವಿಕೆ ಕಡಿಮೆ. ಇದರಲ್ಲಿರುವ ಲೇಖಕರು ಬಹಳ ದೊಡ್ಡ ಬರೆಹವನ್ನು ಸೃಷ್ಟಿ ಮಾಡಿದವರಲ್ಲ. ತಮ್ಮ ಬರೆಹಕ್ಕೆ ದಲಿತರು ಎಂಬ ಕಾರಣಕ್ಕೆ ಮಾನ್ಯತೆ ಒದಗಬೇಕು ಎಂಬ ಮನೋಭಾವ ಕೆಲಸ ಮಾಡುತ್ತಿರುವುದು ಕಾಣುತ್ತದೆ. ದಲಿತ ನೆಲೆಯಿಂದ ಕನ್ನಡ ಸಾಹಿತ್ಯವನ್ನು ಪುನರವಲೋಕ ಪುನರ್ ಮೌಲ್ಯೀಕರಣ ಮಾಡುವುದನ್ನು ಇಲ್ಲಿ ನೋಡಬಹುದು.

(ಇ) ಇನ್ನೊಂದು ದಲಿತ ಲೇಖಕರ ನೆಲೆಯಿದೆ. ಇದು ಮೇಲಿನಂತೆ ಸೆಕ್ಟೇರಿಯನ್ ಅಗದೆ ವಿಶಾಲನೆಲೆಯಲ್ಲಿ ಕನ್ನಡ ಲೇಖಕರ ಪರಂಪರೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಬಯಸುತ್ತದೆ. ದಲಿತರಾಗಿ ಹುಟ್ಟಿದ್ದರಿಂದ ದಲಿತಾನುಭವವನ್ನು ತಮ್ಮ ಬರಹದಲ್ಲಿ ಸಹಜವಾಗಿ ಅನಿವಾರ್ಯವಾಗಿ ಬಳಸಿಕೊಂಡರೂ, ತಮ್ಮ ಸಾಹಿತ್ಯ ಸೃಷ್ಟಿ ಹಾಗೂ ಸಂವೇದನೆಯ ಪ್ರಕ್ರಿಯೆಯಲ್ಲಿ ಇದನ್ನು ಮೀರಿದಂತೆ ತಾವು ಒಟ್ಟು ಕನ್ನಡದ ಲೇಖಕರಾಗುವ ಹಂಬಲದವರು ಇವರು. ತಮ್ಮ ಸಾಹಿತ್ಯ ವಿಶಾಲ ಮಾನವತೆಯ ಭಾಗ ಎಂದು ಭಾವಿಸುವವರು. ದಲಿತ ಲೇಖಕ ಅನಿಸಿಕೊಳ್ಳಲು ಹಿಂಜರಿಕೆಯಿಲ್ಲ. ಆದರೆ ಕೇವಲ ದಲಿತ ಲೇಖಕ ಅನಿಸಿಕೊಳ್ಳುವುದು ತಮ್ಮನ್ನು ಸೀಮಿತ ನೆಲೆಗೆ ಇರಿಸುತ್ತದೆ ಎಂಬ ಪ್ರಜ್ಞೆಯುಳ್ಳವರು. ಅದರಲ್ಲೂ ಸಿದ್ಧಲಿಂಗಯ್ಯ ಅವರು ಈ ಬಗೆಯ ಹೇಳಿಕೆಗಳನ್ನು ನೀಡಿರುವುದು ಕಾಣುತ್ತದೆ. ಈ ಚಿಂತನೆಯಲ್ಲಿ ದಲಿತ ಸಂವೇದನೆ ಎಂಬುದು ಇದೆ. ಇದರಲ್ಲಿ ಕೇವಲ ದಲಿತ ಲೇಖಕರು ಮಾತ್ರವಲ್ಲ, ದಲಿತೇತರ ಲೇಖಕರೂ ಕೂಡ ಬರುತ್ತಾರೆ ಎಂದು ಭಾವಿಸಲಾಗುತ್ತದೆ. ಚೋಮನದುಡಿ ಬರೆದ ಶಿವರಾಮ ಕಾರಂತ, ಮಲೆಗಳಲ್ಲಿ ಮದುಮಗಳು ಬರೆದ ಕುವೆಂಪು, ಕತೆಗಾರರಾದ ಕುಂ. ವಿ. ಬೆಸಗರಹಳ್ಳಿ ರಾಮಣ್ಣ ಮುಂತಾದವರು ದಲಿತ ಸಂವೇದನೆಯುಳ್ಳವರು ಎಂದು ನಂಬುತ್ತದೆ. ಸಾಹಿತ್ಯ ವ್ಯಾಖ್ಯೆಯಲ್ಲಿನ ಈ ವಿಸ್ತಾರವು ಕ್ರಿಯಾಲೋಕಕ್ಕೂ ವಿಸ್ತರಿಸುತ್ತದೆ. ದಲಿತರ ಸಮಸ್ಯೆಗಳಿಗೆ ದಲಿತರು ಮಾತ್ರ ಹೋರಾಡಲಾಗದು. ಕೋಮುವಾದದಿಂದ ಪೀಡಿತರಾದ ಮುಸ್ಲಿಮರ ಬಿಡುಗಡೆಗಾಗಿ ಕೇವಲ ಮುಸ್ಲಿಮರು ಹೋರಾಟ ಮಾಡಲಾಗದು. ಮಹಿಳೆಯ ಬಿಡುಗಡೆಗೆ ಮಹಿಳೆಯರು ಮಾತ್ರ ಹೋರಾಡಲಾಗದು. ಇದು ಬಲಾಬಲದ ಪ್ರಶ್ನೆಗಿಂತ ಕೂಡು ಹೋರಾಟದ ತಾತ್ವಿಕತೆಯ ಪ್ರಶ್ನೆ. ದಲಿತ ಚಳುವಳಿಯಲ್ಲಿ ದಲಿತ ಸಂವೇದನೆ ಇರುವ ಇತರ ಸಮಾನಮನಸ್ಕರೂ ಸೇರಿಕೊಳ್ಳಬೇಕು ಎಂದು ಇದು ಭಾವಿಸಿದೆ. ಸಮಾನ ಶತ್ರುಗಳನ್ನು ಗುರುತಿಸಿಕೊಳ್ಳುವಿಕೆಯ ನೆಲೆಯಲ್ಲಿ ಸಮಾನ ಸಂಗಾತಿಗಳು ಇರಬೇಕು ಎಂದು ಇದು ಭಾವಿಸಿದೆ. ಎಂತಲೆ ಈಚೆಗೆ ಸೇರಿರುವ ದಲೆಕದಲ್ಲಿ ಕೂಡು ಹೋರಾಟದ ಕಲ್ಪನೆಯಿದೆ. ಸಮಾನ ಮನಸ್ಕರಾದ ಚಂಪಾ, ಕೆ. ಮರುಳಸಿದ್ದಪ್ಪ ಇದ್ದಾರೆ.

ಅಂತಿಮವಾಗಿ
ಹೀಗೆ ಅರಿವಿನ ಆಸ್ಫೋಟಗಳೂ ವರ್ತಮಾನದ ವಿದ್ಯಮಾನಗಳನ್ನು ಸರಿಯಾದ ತಕ್ಕ ರಾಜಕೀಯ ಪ್ರಜ್ಞೆಯಿಂದ ಅರಿಯಲಾಗದ ಗೊಂದಲಗಳು, ಅರಿಯುವ ತನ್ನದೇ ಕ್ರಮದಲ್ಲಿ ಪ್ರತಿಕ್ರಿಯಿಸುತ್ತಿರುವ ಸೃಜನಶೀಲ ಸಾಹಿತಿಗಳೂ ಇರುವ ಈ ಪರಿಸ್ಥಿತಿಯಲ್ಲಿ ಕೆಲವು ಪ್ರಶ್ನೆಗಳು ಎದುರಾಗುತ್ತವೆ. ದಲಿತ ಸಮುದಾಯಕ್ಕೆ ಬೌದ್ಧಧರ್ಮದ ಸೆಳೆತ ಪರ್ಯಾಯವೇ, ಈ ಬಗ್ಗೆ ಸ್ಪಷ್ಟತೆಯಿಲ್ಲ. ಮೀಸಲಾತಿಯ ಪ್ರಶ್ನೆಯ ಕಾರಣದಿಂದ ಒಂದು ಗೂಡಿದ್ದ ಪ್ರಜ್ಞಾವಂತ ದಲಿತರನ್ನು ಇದೇ ಮೀಸಲಾತಿಯ ಅಸಮಾನ ಹಂಚಿಕೆಯ ಪ್ರಶ್ನೆ ಈಗ ವಿಭಜನೆ ಮಾಡಿದೆ. ಈ ನಡುವೆ ಮೀಸಲಾತಿಯ ಪರಿಕಲ್ಪನೆ ಈ ಜಾಗತೀಕರಣದ ವ್ಯವಸ್ಥೆಯಲ್ಲಿ ಅಸಂಬದ್ಧವೂ ಆಗುತ್ತಿದೆ. ಇಂತಹ ಸ್ಥಿತಿಯಲ್ಲಿ ದಲಿತರನ್ನು ಅವರ ಸಾಂಸ್ಕೃತಿಕ ನೆಲೆಗಳು ಹಿಡಿದಿಡುತ್ತವೆ ಎನ್ನುವುದು ಸುಳ್ಳಾಗಿದೆ. ಜನರನ್ನು ಉಪಪಂಗಡಗಳಾಚೆಯೂ ಹಿಡಿದಿಡಬಹುದಾದ ಒಂದು ಸಂಗತಿಯಾದ ಮಾರ್ಕ್ಸ್‌ವಾದದ ಬಗೆಗಿನ ಅಪನಂಬಿಕೆ ದಲಿತರಲ್ಲಿ ಇನ್ನೂ ಇದೆ. ಅಂಬೇಡ್ಕರ್ ಚಿಂತನೆಯೊಂದೇ ಈ ಹೊತ್ತು ಅವರನ್ನು ಬಹಳ ದೂರ ನಡೆಸಲಾರದು. ಹಳ್ಳಿಗಾಡಿನ ರೈತಕೂಲಿಗಳ ನೆಲೆಯ ದಲಿತರ ಜತೆ ಬೆಸೆಯುವ ಭೂಹೋರಾಟಗಳು ಈಗ ಇಲ್ಲವಾಗಿರುವ ಕಾರಣ, ಆ ಸಮುದಾಯವನ್ನು ಈ ಪ್ರಜ್ಞಾವಂತ ದಲಿತರ ಸಂಘಟನೆಗಳು ಪ್ರತಿನಿಧಿಸಲು ಆಗುತ್ತಿಲ್ಲ. ಸರಕಾರಿ ನೌಕರರ ಪಟ್ಟಣದ ಮಧ್ಯಮವರ್ಗದ ದಲಿತರ ನೆಲೆಯಲ್ಲಿ ವೈಯಕ್ತಿಕ ಮಹತ್ವಾಕಾಂಕ್ಷೆಗಳು ಇವೆ. ಹೀಗಾಗಿ ದಲಿತ ಚಿಂತನೆಯಲ್ಲಿ ತೀವ್ರವಾದ ರಾಜಕೀಯ ತಾತ್ವಿಕತೆ ರೂಪುಗೊಳ್ಳುತ್ತಿಲ್ಲ. ಕರ್ನಾಟಕದಲ್ಲಿ ದಲಿತರನ್ನು ನಕ್ಸಲ್‌ವಾದವು ಕೆಲಮಟ್ಟಿಗೆ ಸೆಳೆದಿದೆಯಾದರೂ, ಅದು ವ್ಯಾಪಕವಾಗಿಲ್ಲ. ಕುದಿತವಿಲ್ಲದ ಸಿದ್ಧಲಿಂಗಯ್ಯ, ಕುದಿಯುತ್ತಿರುವ ಹನುಮಂತಯ್ಯ ಈ ಕಂದರವಂತೂ ಇದೆ. ಇದಕ್ಕೆ ತಲೆಮಾರುಗಳ ಅಂತರ ಕಾರಣವೆ? ನಿಷ್ಕಳಂಕವಾದ, ನೈತಿಕವಾಗಿ ಕೆಟ್ಟರಿರದ, ಆದರೆ ಗೊತ್ತುಗುರಿಯಿಲ್ಲದ ಹೊಸ ತಲೆಮಾರು ಹಾಗೂ ಭ್ರಷ್ಟವಾಗಿರುವ ಹಳೆತಲೆಮಾರುಗಳ ಅಂತರ ಹೀಗೆ ಮಾಡಿದೆಯೆ? ಎನ್. ಜಿ. ಓ. ಗಳು ದಲಿತರ ಜೀವನದಲ್ಲಿ ಪ್ರವೇಶಿಸಿ ಅವರ ರಾಜಕೀಯ ದೃಷ್ಟಿಕೋನದಲ್ಲಿ ಉಂಟುಮಾಡಿರುವ ಅರಾಜಕತೆಗಳೂ ಇವೆ; ಅವು ದಲಿತತ್ವವನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿಕೊಂಡಿವೆ ತುಮಕೂರಿನ ಒಂದು ಎನ್. ಜಿ. ಓ. ದಲಿತತ್ವವನ್ನು ಕುರಿತು ಒಂದು ದೊಡ್ಡ ಪುಸ್ತಕ ಪ್ರಕಟಿಸಿತು. ಕ್ರೈಸ್ತ ಮಿಷನರಿಗಳು ಸ್ಥಾಪಿಸಿರುವ ಎನ್. ಜಿ. ಓ. ಗಳಲ್ಲಿ ದಲಿತರು ಬ್ರಾಹ್ಮಣವಿರೋಧಿ ಅಜೆಂಡಾಗಳನ್ನು ಒಪ್ಪಿಕೊಂಡು ಕೆಲಸ ಮಾಡುತ್ತಿರುವುದು ಕಾಣುತ್ತದೆ. ದಲಿತ ಸಾಹಿತ್ಯ ಮತ್ತು ಚಿಂತನೆಯಲ್ಲಿ ಮಹಿಳೆಯರು ಕಾಲು ಶತಮಾನವಾದರೂ ಅತ್ಯಂತ ಕಡಿಮೆಯಿದ್ದಾರೆ. ಇಂತಹ ರಾಜಕೀಯ ಹತಾಶೆಯ ಪರಿಸ್ಥಿತಿಗಳು ಕರ್ನಾಟಕದಲ್ಲಿ ಇವೆ. ಇವು ಸಾಹಿತ್ಯ ರಚನೆಯ ಮೇಲೆ ಒಂದು ಮಂಕುತನವನ್ನು ಕವಿಸಿವೆ. ಆದರೆ ಇಂತಹ ಹತಾಶೆಯ ಪರಿಸ್ಥಿತಿಗಳೆ ಚೈತನ್ಯದ ಹೊಸ ಹಾದಿಗಳ ಹೊಳೆಯುವಿಕೆ ಕಾರಣವಾಗಬಲ್ಲವು. ಸಾಹಿತ್ಯದ ಒಂದು ಶಕ್ತಿಯಿರುವುದೇ ಹತಾಶೆಯ ಕತ್ತಲಲ್ಲಿ ಕಿಡಿಯಾಗಿ ಹೊಮ್ಮುವುದರಲ್ಲಿ ತಾನೆ.
ಪರಾಮರ್ಶನ ಗ್ರಂಥಗಳು
೧. ಸಾಹಿತ್ಯ ಮೀಮಾಂಸೆ (ಸಂ), ಡಾ. ರಹಮತ್ ತರೀಕೆರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೪.
೨. ಮರದೊಳಗಿನಕಿಚ್ಚು, ಡಾ. ರಹಮತ್ ತರೀಕೆರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೪.
—-ಕನ್ನಡ ದಲಿತ ಸಾಹಿತ್ಯಸಮಾಲೋಕನ. (ಸಂ) ಡಾ. ಅರ್ಜುನ ಗೊಳಸಂಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂ, ೨೦೦೩ ಕೃತಿಯಿಂದ ಆಯ್ದುಕೊಂಡ ಲೇಖನ ಭಾಗ. ಇದಕ್ಕೆ ಪ್ಪಿಗೆ ನೀಡಿದ ಲೇಖಕರಿಗೆ ಹಾಗೂ ಸಂಪಾದಕರಿಗೆ ವಂದನೆಗಳು (ಸಂ. )
ಪುಸ್ತಕ: 
ಲೇಖಕರು: 
ಪ್ರಕಾಶಕರು: 
ಸಂಪುಟ ಸಂಪಾದಕರು: 

ಕಾಮೆಂಟ್‌ಗಳಿಲ್ಲ: