ಮಂಗಳವಾರ, ಫೆಬ್ರವರಿ 18, 2014

ಡಾ. ಮೂಡ್ನಾಕೂಡು ಚಿನ್ನಸ್ವಾಮಿ.









ಪರಿಚಯ ಟಿಪ್ಪಣಿ: ಹೆಚ್. ಎಸ್ ಅನುಪಮಾ
    
ಗಡಿನಾಡು ಚಾಮರಾಜನಗರ ಜಿಲ್ಲೆಯವರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ (೧೯೫೪) ಕನ್ನಡದ ಹಿರಿಯ ಕವಿಗಳಲ್ಲಿ ಒಬ್ಬರು.  ಎಂ.ಕಾಂ., ಮತ್ತು ಎಂ.ಎ. (ಕನ್ನಡ)., ಪದವೀಧರರಾದ ಇವರು ಬೆಂಗಳೂರು ಮಹಾನಗರ ಸಾರಿಗೆ ನಿಗಮದಲ್ಲಿ ನಿರ್ದೇಶಕರು (ಹಣಕಾಸು) ಹುದ್ದೆಯಲ್ಲಿದ್ದಾರೆ. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಸಮಾಜ ಸೇವೆ ಇವರ ಪ್ರವೃತ್ತಿಗಳು.  ಇದುವರೆಗೆ ೨೬ ಪುಸ್ತಕಗಳನ್ನು ಹೊರತಂದಿರುವ ಇವರ ಪ್ರಮುಖ ಆಸಕ್ತಿ ಕವಿತೆ. ಮತ್ತೆ ಮಳೆ ಬರುವ ಮುನ್ನ, ನಾನೊಂದು ಮರವಾಗಿದ್ದರೆ, ಚಪ್ಪಲಿ ಮತ್ತು ನಾನು, ಪ್ರಮುಖ ಕವಿತಾಸಂಕಲನಗಳು. ಮೋಹದ ದೀಪ, ಕಥೆ. ಕೆಂಡ ಮಂಡಲ, ಬಹುರೂಪಿ - ನಾಟಕಗಳು ಹಾಗೂ ವೈಚಾರಿಕ ಬರಹಗಳಾದ, ನೊಂದವರ ನೋವು, ಒಂದು ಕೊಡ ಹಾಲಿನ ಸಮರ, ಅಪರಿಮಿತದ ಕತ್ತಲೆ ಇವರ ಇತರ ಪ್ರಮುಖ ಕೃತಿಗಳು.

ಇವರ ಕವಿತೆಗಳು ಅನೇಕ ಭಾರತೀಯ ಭಾಷೆಗಳೂ ಸೇರಿದಂತೆ ಇಂಗ್ಲೀಷ್, ಸ್ಪ್ಯಾನಿಷ್ ಹಾಗೂ ಹೀಬ್ರೂ ಭಾಷೆಗಳಿಗೆ ಅನುವಾದಗೊಂಡಿವೆ. ಕನ್ನಡದ ಪ್ರತಿಷ್ಠಿತ ಕವಿಗೋಷ್ಠಿಗಳಲ್ಲದೆ ಅನೇಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇವರು ಕವಿತಾ ವಾಚನ ಮಾಡಿದ್ದಾರೆ.  ವೆನೆಜುಯೇಲಾ ದೇಶದ ಸರ್ಕಾರ ಸ್ಪ್ಯಾನಿಷ್ ಅನುವಾದಿತ ಕವಿತೆಗಳನ್ನು ಪ್ರಕಟಿಸಿದೆ. ಸ್ಪ್ಯಾನಿಷ್ ಭಾಷೆಗೆ ಗ್ರಂಥರೂಪದಲ್ಲಿ ಪ್ರಕಟಗೊಂಡ ಮೊದಲ ಕನ್ನಡ ಕವಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ.      

ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ತಮ್ಮದೇ ಆದ ರೀತಿಯಲ್ಲಿ ಸಕ್ರಿಯವಾಗಿರುವ ಇವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗದಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ. ನಾಡ ಚೇತನ ಪ್ರಶಸ್ತಿ, ವಾರಂಬಳ್ಳಿ ಕಾವ್ಯ ಪ್ರಶಸ್ತಿ, ಶಿರಸಂಗಿ ಲಿಂಗರಾಜ ಸಾಹಿತ್ಯ ಪ್ರಶಸ್ತಿ ಹಾಗೂ ಬೇಂದ್ರೆ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳೂ ಸಂದಿವೆ ಮತ್ತು ೨೦೦೯ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಫೆ, ೨೦೧೦ ರಲ್ಲಿ ೨ನೇ ಚಾಮರಾಜನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ, ಏಪ್ರಿಲ್ ೨೦೧೧ ರಲ್ಲಿ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ಮತ್ತು ಜೂನ್ ೨೦೧೧ ರಲ್ಲಿ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದಾರೆ.

ಕೆಲವು ಕವಿತೆಗಳು

ಅಳುವ ಬುದ್ಧ

ಮುಗಿಲಿನೊಂದಿಗೆ ಮುಗುಳುನಗುತ್ತಿದ್ದ
ಬಮಿಯಾನದ ಆ ಘನಶಿಲೆಗೆ
ಕಲೆಯ ಎರಕ ಹೊಯ್ದಾಗ
ನಾನು ಬುದ್ಧ ಎಂದಿತು

ಮೇಘಧೂಪ, ಸೂರ್ಯನಾರತಿ
ಬೆಳದಿಂಗಳಿನಭಿಷೇಕದೊಂದಿಗೆ
ಸದಾ ಕಂಗೊಳಿಸುವ ಮೂರ್ತಿ 
ನಾನು ಘನ ಮೌನಿ ಎಂದಿತು

ಒಂದು ದಿನ ಶಿಲಾಯುಗದ
ಪಳಿಯುಳಿಕೆ ಗುಂಪೊಂದು ದಾಂಧಲೆ ಎಬ್ಬಿಸಿದಾಗ

ನೀನು ಹೊಡಿ ಬಡಿ ಸಿಡಿಸು
ನಾನು ಶಿಲೆ ಅಲ್ಲದಿದ್ದರೆ 
ಅದರೊಳಗಿನ ಪಾವಕ

ನಿನ್ನ ಮುತ್ತಾತನನ್ನು ಕೇಳು
ನನ್ನನ್ನು ಯಾಕೆ ಬಿಚ್ಚಿಟ್ಟ ಎಂದಿತು

ಅವರೇನು ಬೆಚ್ಚಿ ಬೀಳಲಿಲ್ಲ
ಹೊಡೆದುರುಳಿಸಿಯೇ ಬಿಟ್ಟರು

ಜೆನ್ ಗುರು ತಂಕ ಒಂದು ದಿನ
ದೇವಾಲಯವೊಂದರಲ್ಲಿ ತಂಗಿದ್ದ
ಕೊರೆಯುವ ಚಳಿಗೆ ಮೈ ಕಾಯಿಸಿಕೊಳ್ಳಲು
ಅಲ್ಲಿದ್ದ ಕಟ್ಟಿಗೆಯ ಮೂರ್ತಿಯೊಂದನ್ನು ಸುಟ್ಟ
ಅರ್ಚಕನಿಗೆ ಭಯವುಂಟಾಯಿತು, ಆಕ್ಷೇಪಿಸಿದ.

ಆಗ ತಂಕ ಸುಟ್ಟ ಬೂದಿಯನ್ನು ಕೆದಕಿ
ಚಿತಾಭಸ್ಮಕ್ಕಾಗಿ ಹುಡುಕತೊಡಗಿದ
ಅರ್ಚಕ, ‘ಇದು ಮೂರ್ಖತನ
ಕಟ್ಟಿಗೆ ಮೂರ್ತಿಯಲ್ಲಿ ಆತ್ಮವಿರುತ್ತದೆಯೆ ಎಂದ.

ಅದಕ್ಕೆ ತಂಕ, ‘ಹಾಗಾದರೆ
ಉಳಿದೆರಡು ಮೂರ್ತಿಗಳನ್ನು ಕೊಡು
ಚಳಿ ಹೆಚ್ಚಾಗಿದೆ ಎಂದ.

ಸ್ವರ್ಗಕ್ಕೂ ಮಿಗಿಲಾದದ್ದು ನಿಸರ್ಗ
ಎಂದವನು ಬುದ್ಧ
ಶಿಲೆಯಲ್ಲಿ, ಪಾವಕದಲ್ಲಿ
ಹಿಮದಲ್ಲೂ, ನಾದದಲ್ಲೂ ಇರಬಲ್ಲಾತ

ಅರಿತವರ ನಗೆಯಲ್ಲೂ
ಅರಿಯದವರ ಅಳುವಿನಲ್ಲೂ.



ಈ ಪ್ರಮದೆಯರೇ ಹೀಗೆ
    
ಸಮಾನತೆಯ ಕೂಗು ಹಾಕುವ
ಹೆಣ್ಣಿಗೊಂದು ಸವಾಲು
ಪೂರ್ಣತ್ವಕ್ಕೆ ಬೇಡವೆ
ಗಂಡಿನ ಶಾಮೀಲು

ನಲ್ಲ ಬಳಿ ಸಾರಿದಾಗ
ತಲೆ ತಗ್ಗಿಸುವಿರೇಕೆ
ನೆಲ ಕೆದಕುವುದೇಕೆ ಕಾಲ್ಬೆರಳು
ನಾಚಿ ನೀರಾಗುವಿರೇಕೆ
ಆಯ ತಪ್ಪಿದ ನಾಡಿ ಮಿಡಿತಕ್ಕೆ
ಸ್ತಬ್ಧರಾಗುವಿರೇಕೆ

ಎದೆ ಸೆಟಿಸಿ
ಹುಬ್ಬೇರಿಸಿ
ಹಲೋ ಎಂದು ಒಮ್ಮೆ
ಕೈಕುಲುಕಿ ಬೆನ್ನು
ಚಪ್ಪರಿಸಿಬಿಡಿ

    ೨

ಹೆಣ್ಣ ಕಂಡಲ್ಲಿ
ಕುಡಿಗಣ್ಣಲ್ಲೆ ಮೀಟುವ
ಅಸಭ್ಯರು
ಗೇಲಿಮಾಡುವ ಪೋಲಿಗಳು
ಎನ್ನುವ ನೀವು
ಎದುರಿಗೆ ಬಂದ ಹುಡುಗರು
ತಿರುಗಿ ನೋಡದಿದ್ದರೆ
ಒಳಗೊಳಗೆ
ಕುದಿಯುವುದಿಲ್ಲವೇನು

ಸುಂದರ ಸಹಪಾಠಿಯೊಬ್ಬ
ನಿಮ್ಮ ಮಾತಾಡಿಸದಿದ್ದರೆ
ನಿಮ್ಮ ಸೇಡಿಗದೆಷ್ಟು ಕಿಡಿ
ನಿಮ್ಮ ನಾಲಿಗೆಗವನೆಷ್ಟು ಹಗುರ

ಬೆತ್ತಲೆ ಪೋಸ್ಟರುಗಳಿಗೆ ಬೆಂಕಿ
ಎಂದು ಕೂಗಿ
ಸ್ಟೆಲೋನನ ಮೈ ಕಟ್ಟನ್ನು
ಮನದಲ್ಲೆ ರಮಿಸುವುದಿಲ್ಲವೆ
ಟೈಸನ್ನನ ವಕ್ಷ
ದಿಂಬಾದರೆಂಥ ಚೆನ್ನ ಎಂದು
ಕನಸುವುದಿಲ್ಲವೇನು

    ೩

ನಾವೂ ದುಡಿಯುತ್ತೇವೆಂದು
ಕಛೇರಿಗೆ ಹೋದರೂ
ಗಂಡನಾದರಿಸುವ
ಗೃಹಿಣಿಯ ಕಂಡು
ಕರುಬುವುದಿಲ್ಲವೆ ಹೇಳಿ

ಅಕ್ಕ ಪಕ್ಕದವರ
ಚಿಕ್ಕ ಮಾತುಗಳಿಗೆ ಕುಗ್ಗಿ
ನನ್ನ ಗಂಡ ಸಾಹೇಬನಾಗಿದ್ದರೆ
ನನಗಿಂಥ ಪಾಡೇಕೆ
ಎಂದು ನೊಂದ ಗೆಳತಿಯರೊಂದಿಗೆ
ಕೊರಗುತ್ತೀರಿ

    ೪

‘ಗಡ್ಡ ಮೀಸೆ ಬಂದರೆ ಗಂಡು
ಮೊಲೆಮುಡಿ ಬಂದರೆ ಹೆಣ್ಣು’

ಹೆಣ್ಣು ಶೋಷಿತೆಯೆಂದು
ಹೊರಗೆ ಬಿಕ್ಕಳಿಸುತ್ತಾ
ಮನೆಗೆ ತಡವಾಗಿ ಬಂದ ಗಂಡನ
ಮುಖಕ್ಕೆ ಇಕ್ಕುವ
ನಿಮ್ಮ ಸೌಟಿಗೆ
ಶೋಷಣೆಯ ಹಲವು ಮುಖಗಳು ಗೊತ್ತು

ಪೌರುಷದ ಹೆಡೆಗಳಿಗೆ
ನೀವೆ ಪುಂಗಿನಾದ
ಗಂಡೆಂಬ ಬುಗುರಿಯನ್ನು
ಆಡಿಸುವ ದಾರ ನೀವೆ

    ೫
ಹೌದೆನ್ನಲು ಅಲ್ಲವೆನ್ನುವ
ಅತ್ತ ತಿರುಗಿ ಇತ್ತ ಮಾತಾಡುವ
ನಗುವಿಗೆ ಅಳುವಿನ
ಲೇಪ ಹಚ್ಚುವ
ಕೇಳಿದರೆ ‘ಸುಮ್ಮನೆ’ ಎಂದು ಬಿಡುವ
ಈ ಪ್ರಮದೆಯರೇ ಹೀಗೆ.



ಊರ ತೆಂಕಣ ತಜ್ಞರು

ನೆರಕೆಯಲ್ಲಿ ನಿರುಕಿಸಿದ
ಸಿಲವಾರದ ಬಟ್ಟಲು ಹಿಡಿದು ಹೊರಗೆ
ಕುಕ್ಕರಗಾಲು ಕೂತು ಒಸಿ
ಕಾಪಿ ಉಯ್ರಿ ಸೊಮ್ಯೊ ಎಂದು ಹಲುಬಿ
ಬೇಡುತ್ತಿದ್ದ ಅಪ್ಪನ ಕಂಡು ಬಿಸಿಯಾಗಿ ನಾನು
ತಳಮಳಗೊಂಡಿದ್ದು ಎಷ್ಟೋ ಸಲ.

ಹಟ್ಟಿಗೆಲ್ಲಾ ತೊಪ್ಪೆ ಸಾರಿಸಿ ಇದ್ದ
ಅರಿವಾಣ ತಪ್ಪಲೆಗಳ ತೊಳೆದು ಬಳಿದು
ತುಪ್ಪದ ದೀಪ ಉರಿಸಿ ತಪ್ಪು ಕಾಣಿಕೆ
ಕಟ್ಟಿ ನಿನ್ನ ಪಾದ ನಮ್ಮವ್ವ ಎಂದು
ಓಡೋಡಿ ಸಾಗಿ ಗುಡಿಯಾಚೆ
ಗಡಿಪಾರಾಗುತ್ತಿದ್ದ ನನ್ನವ್ವಳ ಪಾಡು ನೋಡಿ
ಹೊಟ್ಟೆ ತೊಳಸಿ ಕ್ಯಾಕರಿಸಿದ್ದು ಹಲವು ಸಲ.

ಬ್ರಾಹ್ಮಣರಿಗೆ ಮುಕ್ತಿ ಮಾರ್ಗವೇ ಸುಲಭ!
ಹೊಲೆಮಾದಿಗರಿಗೆ ಹೋಟೆಲಿನ ಮಾರ್ಗವೂ ದುರ್ಲಭ?
ಇಷ್ಟು ಪ್ರಜ್ಞಾಪೂರ್ವಕವಾಗಿ ವಿಚಾರ ಮಾಡುವ
ತಜ್ಞರಾಗಿ ತುಂಡು ಹುಡುಗರಾದ ನಾವು ಬೆಳೆದದ್ದು, ನಂತರ
ಮೇಲಿನ ಕೇರಿಯ ಮಹದೇಶ್ವರ ಕಾಫಿ ಕ್ಲಬ್‌ಗೆ ಲಗ್ಗೆ ಹಾಕಿ
ಇಡ್ಲಿ ದೋಸೆ ನುಂಗಿದ್ದು, ಊರಿನ ಮಾರಾಮಾರಿ
ಪೊಲೀಸರ ಪ್ರವೇಶ, ಇತ್ಯಾದಿಯೊಂದು ಘಟನೆ

ಇಷ್ಟಾದರೂ ಊರ ತೆಂಕಲೇ ಯಾಕೆ
ಹೊಲಗೇರಿ? ಇನ್ನೂ ಬಗೆಹರಿದಿಲ್ಲ.

ನಾನೊಂದು ಮರವಾಗಿದ್ದರೆ

ನಾನೊಂದು ಮರವಾಗಿದ್ದರೆ
ಹಕ್ಕಿ ಗೂಡು ಕಟ್ಟುವ ಮುನ್ನ
ಕೇಳುತ್ತಿರಲಿಲ್ಲ ನೀನು ಯಾವ ಕುಲ;
ಬಿಸಿಲನ್ನ ಅಪ್ಪಿಕೊಂಡಾಗ
ನೆರಳಿಗಾಗುತ್ತಿರಲಿಲ್ಲ ಮೈಲಿಗೆ;
ತಂಬೆಲರ ಕೂಡ ಎಲೆಗಳ ಸ್ನೇಹ
ಮಧುರವಾಗಿರುತ್ತಿತ್ತು. 

ಮಳೆಹನಿಗಳು ನಾನು ಶ್ವಪಚನೆಂದು
ಹಿಂದೆ ಸರಿಯುತ್ತಿರಲಿಲ್ಲ, ನಾನು
ಬೇರೂರಿ ಕುಡಿಯಿಡುತ್ತಿರುವಾಗ ಭೂದೇವಿ 
ಮಡಿಮಡಿಯೆಂದು ಓಡುತ್ತಿರಲಿಲ್ಲ.

ಪವಿತ್ರ ಗೋವು ನನ್ನ ತೊಗಟೆಗೆ ತನ್ನ ಮೈಯುಜ್ಜಿ 
ತುರಿಕೆ ತೀರಿಸಿಕೊಳ್ಳುವಾಗ ಅದರ ಅಂಗಾಂಗಗಳಲ್ಲಿ
ಅಡರಿಕೊಂಡ ಮುಕ್ಕೋಟಿ ದೇವತೆಗಳು
ನನ್ನ ಮುಟ್ಟಿಸಿಕೊಳ್ಳುತ್ತಿದ್ದರು.

ಯಾರಿಗೆ ಗೊತ್ತು?
ನನ್ನ ಅಂತ್ಯಕಾಲದಲ್ಲಿ
ಕಡಿದು ತುಂಡಾದ ಒಣ ಸೀಳೊಂದು
ಹೋಮಾಗ್ನಿಯಲ್ಲಿ ಬೆಂದು
ಪಾವನವಾಗುತ್ತಿತ್ತೇನೋ
ಅಥವಾ 
ಸತ್ಪುರುಷನೊಬ್ಬನ ಹೆಣಕ್ಕೆ ಚಟ್ಟವಾಗಿ 
ನಾಲ್ಕು ಜನ ಸಜ್ಜನರ ಹೆಗಲೇರಬಹುದಿತ್ತೆ?

ಕಾಮೆಂಟ್‌ಗಳಿಲ್ಲ: