‘ಎಡಬಲಪಾಕ’ ಸಾಕ್ಷಾತ್ಕರಿಸಿಕೊಳ್ಳುವ ಹಂಬಲದ ಅಭಿವ್ಯಕ್ತಿಯಾಗಿ
‘ಜೈ ಭೀಮ್ ಕಾಮ್ರೇಡ್’ ರೂಪುಗೊಂಡಿದೆ
ವಿ ಎನ್ ಲಕ್ಷ್ಮಿನಾರಾಯಣ
ಆನಂದ್ ಪಟವರ್ಧನ್ರವರ ‘ಜೈ ಭೀಮ್ ಕಾಮ್ರೇಡ್’ ಮೂರು ಚೌಕಟ್ಟು ಅಥವಾ ಪದರಗಳಲ್ಲಿ ಸಂಯೋಜಿಸಿರುವ ಮಹತ್ವಾಕಾಂಕ್ಷೆಯ ಎಪಿಕ್ ಶೈಲಿಯ ಒಂದು ಸಾಕ್ಷ್ಯಚಿತ್ರ. ಸ್ವಾತಂತ್ರ್ಯ-ಸಮಾನತೆ ಮತ್ತು ಮಾನವೀಯ ಪ್ರಜಾಪ್ರಭುತ್ವದ ಆಶಯಗಳನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಾಕ್ಷಾತ್ಕರಿಸಿಕೊಳ್ಳುವುದು ಹೇಗೆ ಎಂಬ ಅನ್ವೇಷಣೆ ಈ ಸಾಕ್ಷ್ಯಚಿತ್ರರೂಪದ ಚಿಂತನೆಯಲ್ಲಿ ಮೈದಾಳುವ ವಸ್ತು. ಇದಕ್ಕಾಗಿ ಆನಂದ್ ದಲಿತ ವಿಚಾರಧಾರೆ-ಸೈದ್ಧಾಂತಿಕ ನಿಲುವು ಹಾಗೂ ಕಮ್ಯುನಿಸ್ಟ್ ವಿಚಾರಧಾರೆ-ಸೈಧ್ಧಾಂತಿಕ ನಿಲುವುಗಳನ್ನು, ಅಹಿಂಸಾತ್ಮಕ ಬದಲಾವಣೆಯ ಆಶಯ ಮತ್ತು ಸೆಕ್ಯುಲರ್ ದೃಷ್ಟಿಯ ವೈಚಾರಿಕತೆಗಳನ್ನು ಕೂಡಿಸಿದ ಮಾನವತಾವಾದ ಎನ್ನಬಹುದಾದ ನೆಲೆಯಿಂದ ವಿಮರ್ಶೆಗೆ ಒಳಪಡಿಸುತ್ತಾರೆ. ಸಂಘಪರಿವಾರ-ಭಾಜಪ, ಶಿವಸೇನೆಗಳ ಕೋಮುವಾದಿ- ಮತ್ತು ಕಾಂಗ್ರೆಸ್ ಹಾಗೂ ಅವುಗಳ ಸಹಯೋಗೀ ಪಕ್ಷಗಳ ಬಂಡವಾಳವಾದೀ ವಿಚಾರಧಾರೆ-ಸೈದ್ಧಾಂತಿಕ ನಿಲುವುಗಳನ್ನು ಸ್ಪಷ್ಟವಾಗಿ ನಿರಾಕರಿಸುತ್ತಾರೆ.ಮುಂಬಯಿಯ ಕೊಳೆಗೇರಿಯಲ್ಲೇ ವಾಸಿಸುತ್ತಾ ದಲಿತರನ್ನು ಸಂಘಟಿಸುತ್ತಿದ್ದ ವಿಲಾಸ್ ಘೋಗ್ರೆ, ಕಮ್ಯುನಿಸ್ಟ್ ಹಿನ್ನೆಲೆಯ ದಲಿತ ಕವಿ ಮತ್ತು ಹಾಡುಗಾರ. ರಮಾಬಾಯಿ ಕಾಲೊನಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಯಾರೋ ಚಪ್ಪಲಿಯ ಹಾರಹಾಕಿ ಅವಮಾನಿಸಿದಾಗ ಪ್ರತಿಭಟನೆಗಿಳಿದ ದಲಿತರ ಮೇಲೆ ಪೋಲೀಸರು ಏಕಾಏಕಿ ಗೋಲಿಬಾರ್ ಮಾಡಿ 10 ಜನ ಮುಗ್ಧರನ್ನು ಒಮ್ಮೆಗೇ ಕೊಂದಾಗ ವಿಲಾಸ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ತಾತ್ವಿಕ ತಾಕಲಾಟ, ವೈಯಕ್ತಿಕ ಕಷ್ಟ-ನಿರಾಶೆ, ದಲಿತರಮೇಲಾದ ದೌರ್ಜನ್ಯದ ನೋವು ಎಲ್ಲವೂ ಕೂಡಿ ವಿಲಾಸ್ರ ಬಲಿತೆಗೆದುಕೊಳ್ಳುತ್ತವೆ.
ಭಾರತದಲ್ಲಿ ಎಲ್ಲೇ ಆಗಲಿ ಯಾವುದೇ ಪೊಲೀಸ್ ದೌರ್ಜನ್ಯ ನಡೆದಾಗ ಮಾಮೂಲಿನಂತೆ ಆಯೋಗಗಳು ರಚಿತವಾಗಿ, ವರದಿ ಪ್ರಕಟವಾಗುವ ಹೊತ್ತಿಗೆ ಸರ್ಕಾರಗಳು ಬದಲಾಗಿರುತ್ತವೆ. ಸಾರ್ವಜನಿಕ ಪ್ರತಿಭಟನೆಗಳು, ಬುದ್ಧಿಜೀವಿಗಳ ಒತ್ತಡ ಎಲ್ಲವನ್ನೂ ಪಕ್ಷರಾಜಕೀಯ ನಿರರ್ಥಕಗೊಳಿಸುತ್ತದೆ. ಗೋಲಿಬಾರ್ಗೆ ಆಜ್ಞೆಮಾಡಿದ ಅಧಿಕಾರಿ ಮನೋಹರ್ ಕದಂ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗುತ್ತದೆ. ಹಾಗೆಯೇ ಗುಂಡೇಟು ತಿಂದು ಗಾಯಗೊಂಡ ನಿವಾಸಿಗಳ ಮೇಲೆ, ಗೋಲಿಬಾರಿಗೆ ಸಾಕ್ಷಿಗಳಾಗಿ ನ್ಯಾಯಾಲಯಕ್ಕೆ ಹಾಜರಾಗುವವರ ಮೇಲೆ, ಕೊಲೆಯತ್ನದ ಸುಳ್ಳು ಮೊಕದ್ದಮೆಗಳನ್ನು ಹೂಡಲಾಗುತ್ತದೆ. ಮನೋಹರ್ ಕದಂ ತಪ್ಪಿತಸ್ಥನೆಂದು, ಅವರು ವಿವೇಚನಾರಹಿತವಾಗಿ ಗೋಲಿಬಾರ್ಗೆ ಆಜ್ಞೆಮಾಡಿ ಮುಗ್ಧಜನರನ್ನು ಕೊಂದ ಅಪರಾಧಕ್ಕಾಗಿ ಆಜೀವ ಸೆರೆಮನೆವಾಸದ ಶಿಕ್ಷೆಯನ್ನು ಪ್ರಕಟಿಸುವ ನ್ಯಾಯಾಲಯದ ತೀರ್ಪು ಬರುವಹೊತ್ತಿಗೆ 14 ವರ್ಷಗಳೇ ಕಳೆದಿರುತ್ತವೆ. ಮಾಮೂಲಿನಂತೆ, ಅಪರಾಧಿ ಜೈಲಿಗೆ ಹೋಗುವ ಬದಲು ಆಸ್ಪತ್ರೆ ಸೇರಿ, ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಜಾಮೀನು ಪಡೆದು ಬಿಡುಗಡೆಯಾಗುತ್ತಾನೆ.
ಗಂಡ ಅಥವಾ ಮಕ್ಕಳನ್ನು ಕಳೆದುಕೊಂಡ ಅಸಹಾಯಕ ಹೆಂಡತಿ, ವೃದ್ಧತಾಯಿ, ಈ ದುರ್ಘಟನೆಗಳ ಚಿತ್ರೀಕರಣವೂ ಸೇರಿದಂತೆ, ನ್ಯಾಯಕ್ಕಾಗಿ ಮಾಡಿದ ಎಲ್ಲ ಪ್ರಯತ್ನಗಳೂ ನಿರರ್ಥಕವಾಯಿತಲ್ಲವೆ ಎಂದು ದುಃಖದಿಂದ ಪ್ರಶ್ನಿಸುತ್ತಾರೆ.’ಶ್ರೀಕೃಷ್ಣ ಆಯೋಗದಿಂದ ದೂಷಿತರೆಂದು ಗುರುತಿಸಲ್ಪಟ್ಟ ಬಾಳ ಠಾಕರೆಯನ್ನು ಬಂಧಿಸಬೇಕಾದ ಸಂದರ್ಭ ಬಂದರೆ ರಾಜೀನಾಮೆ ಕೊಡುತ್ತೇನೆಯೇ ಹೊರತು ಬಂಧಿಸುವುದಿಲ್ಲ’ ಎಂದು ಬಹಿರಂಗ ಸಭೆಯಲ್ಲಿ ಘೋಷಿಸುವ ಶಿವಸೇನೆಯ ಮುಖ್ಯಮಂತ್ರಿ; ತನ್ನನು ದೂಷಿತನೆಂದು ತೀರ್ಮಾನಿಸಿದವರನ್ನು ಗಲಭೆಯ ದಳ್ಳುರಿಯಲ್ಲಿ ಸುಡಬೇಕೆಂದು ನಿರೀಕ್ಷಿಸುವ, ‘ನಕಲಿ ಎನ್ಕೌಂಟರ್ ಎಂದು ಹೇಳಲು ಇವರ್ಯಾರು?’ ಎಂದು ಬುದ್ಧಿಜೀವಿಗಳನ್ನು ಪ್ರಶ್ನಿಸುವ, ‘ಚರ್ಮಕುಯ್ಯಿಸಿಕೊಂಡ ವರನ್ನು’ ಸ್ಟೆನ್ ಗನ್ನುಗಳಿಂದ ಸುಡಬೇಕು’ ಎಂದು ಬಹಿರಂಗವಾಗಿ ಕರೆಕೊಡುವ, ‘ಅದು ಅಪರಾಧವೋ ಅಲ್ಲವೋ ಎಂದು ಬೇಕಿದ್ದರೆ ನ್ಯಾಯಾಲಯಗಳು ವಿಚಾರಿಸಿಕೊಳ್ಳಲಿ, ಅವಕ್ಕೆ ಬೇಕಾದಷ್ಟು ಸಮಯವಿದೆ’ ಎಂದು ಹೂಂಕರಿಸುವ ಶಿವಸೇನೆಯ ಠಾಕರೆ; ಶಂಖವನ್ನೂದಿ ಚಕ್ರ ತಿರುಗಿಸುತ್ತಾ ವಿಷ್ಣುವಿನೋಪಾದಿಯಲ್ಲಿ ‘ಶತ್ರುವಿಗೆ ಶತ್ರುವಿನ ಭಾಷೆಯಲ್ಲೇ ಉತ್ತರಿಸಬೇಕಾ ಗುತ್ತದೆ’ ಎಂದು ಎಡಗೈ ಮೇಲೆತ್ತಿ ಘೋಷಿಸುವ, ಮಾಂಸ ಭಕ್ಷಣೆಯ ‘ಗುಜರಾತಿನ ಸಿಂಹ’, ಭಾಜಪದ ಸ್ಟಾರ್ ಮುಖಂಡ ನರೇಂದ್ರ ಮೋದಿ; ಚುನಾವಣೆ ಬಂದಾಗ, ಗೋಲಿಬಾರ್ ನಡೆದ ನೆನಪೇ ಇಲ್ಲದಂತೆ, ‘ಕೆಸರಿನಲ್ಲಿ ಹುಟ್ಟಿದ ಕಮಲಕ್ಕೆ ಓಟುಕೊಡಿ ಎಂದು ರಮಾಬಾಯಿ ಕಾಲೊನಿಯ ದಲಿತ ಸಂತಸ್ತ್ರರನ್ನು ಸ್ವಲ್ಪವೂ ಅಳುಕಿಲ್ಲದೆ ಕೇಳುವ ಭಾಜಪದ ಚುನಾವಣಾ ಅಭ್ಯರ್ಥಿ; ಭಾಜಪದ ಪ್ರಚಾರದ ಟೋಪಿ ಧರಿಸಿದ ದಲಿತ ಹುಡುಗರು; ‘ಸೋಷಿಯಲ್ ಇಂಜಿನಿಯರಿಂಗ್’ ಗಾಗಿ ಭಾಜಪದೊಂದಿಗೆ ಕೈ ಜೋಡಿಸುವ ತಾಕತ್ತನ್ನು ಪ್ರದರ್ಶಿಸುತ್ತಿದ್ದೇವೆ ಎಂದು ಸಾರುವ ದಲಿತ ಮುಖಂಡ; ಪರಶುರಾಮನ ಸಂತತಿಯವರಾಗಿ, ‘ಕೋಬ್ರಾ’ ಅಂದರೆ ಕೊಂಕಣ ಬ್ರಾಹ್ಮಣರಾಗಿ, ‘ಬ್ರಹ್ಮಜ್ಞಾನ ಮತ್ತು ಕ್ಷಾತ್ರಬಲವನ್ನು ಒಂದಾಗಿ ಪಡೆದಿರುವುದರಿಂದ, ತಮ್ಮ ವಂಶವಾಹಿನಿಯಲ್ಲೇ ಏನೋ ಒಂದು ವಿಶೇಷವಿರುವುದರಿಂದ ತಾವೇ ಆಧುನಿಕ ಭಾರತದ ಸಮಸ್ಯೆಗಳನ್ನು ಪರಿಹರಿಸಲು ಶಕ್ತರು’ ಎಂದು ಘೋಷಿಸುವ ಚಿತ್ಪಾವನ್ ಬ್ರಾಹ್ಮಣ ಸಮುದಾಯದ ಮುಖಂಡರು; ಚರಿತ್ರೆಯನ್ನು ತಿರುಚಲಾಗಿದೆ, ಶಿವಮಂದಿರವನ್ನು ಕೆಡವಿ ತಾಜ್ಮಹಲನ್ನು ಕಟ್ಟಲಾಗಿದೆ ಎಂದು ಚರಿತ್ರೆಯನ್ನು ತಿದ್ದುವ ವಯೋವೃದ್ಧ, ಗಾಂಧಿಯನ್ನು ಕೊಂದ ನಥುರಾಮ್ ಗೋಡ್ಸೆಯ ತಮ್ಮ, ಗೋಪಾಲ ಗೋಡ್ಸೆ; ‘ನಿರಾಶ್ರಿತರ ಶಿಬಿರಕ್ಕೆ ಹೋಗಿ ಬಟ್ಟೆ ಇಲ್ಲದವರಿಗೆ ಬಟ್ಟೆ ಹಂಚಿದೆ, ಅರಳೆ ಹಿಡಿದು ನೂಲಲಿಲ್ಲ, ಕಕ್ಕಸ್ಸು ಗುಡಿಸಲಿಲ್ಲ’ ಎಂದು ವ್ಯಂಗ್ಯವಾಡುವ ‘ನಾನು ನಥುರಾಮ್ ಗೋಡ್ಸೆ’ ನಾಟಕದ ಗೋಡ್ಸೆ; ನಾಟಕನೋಡಿ ‘ಚರಿತ್ರೆಯನ್ನು ಸರಿಯಾಗಿ ತೋರಿಸಿದ್ದಾರೆ’ ಎಂದು ಮೆಚ್ಚಿ ‘ವಂದೇ ಮಾತರಂ’ ಕೂಗುವ ಪ್ರೇಕ್ಷಕ; ಸಾವರ್ಕರ್ ಪ್ರತಿಮೆಗೆ ಹಾರ ಹಾಕಿ ಜನ್ಮ ಸಾರ್ಥಕವಾಯಿತೆಂದು ಸಮಾಧಾನಪಡುವ ಬ್ರಾಹ್ಮಣ ಮಹಿಳೆ; ’ನಾವು ಮರಾಠರು, ಮರಾಠರಾಗಿ ಹುಟ್ಟಿದ್ದು ನಮ್ಮ ತಪ್ಪಲ್ಲ, ನಮ್ಮ ಕತ್ತಿಗಳಿಗೆ ತುಕ್ಕು ಹಿಡಿಯುತ್ತಿದೆ, ನಮಗೂ ಮೀಸಲಾತಿಯನ್ನು ಕೊಡದಿದ್ದರೆ ರಕ್ತಪಾತಕ್ಕೆ ಹಿಂದೆಗೆಯುವುದಿಲ್ಲ’ ಎಂದು ಕತ್ತಿಯನ್ನು ಝಳುಪಿಸುವ ಮರಾಠರು; ‘ದಲಿತವಿರೋಧೀ ಸಂಘಟನೆಯಾದ ನಮ್ಮ ಸಂಘ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ದಲಿತರ ಮೇಲೆ ದೌರ್ಜನ್ಯಗಳು ನಡೆದೇ ನಡೆಯುತ್ತವೆ’ ಎಂದು ಒಪ್ಪಿಕೊಳ್ಳುವ, ‘ನಾವು ಸಿಂಹದ ಬಾಯಿಗೆ ಕೈ ಹಾಕಿ ಅದರ ಹಲ್ಲುಗಳನ್ನು ಎಣಿಸಬಲ್ಲ ಧೀರರು’ ಎಂದು ಕೊಚ್ಚಿಕೊಳ್ಳುವ ಛಾವ (ಸಿಂಹ) ಯುವ ಸಂಘಟನೆಯ ಮುಖಂಡ, ;’ನಾವು ಯಾರನ್ನೂ ದ್ವೇಷಿಸುವುದಿಲ್ಲ, ಅಜ್ಞಾನ ಮತ್ತು ಕಾಡುತನವನ್ನು ಮಾತ್ರ. ಆದ್ದರಿಂದ ದೌರ್ಜನ್ಯತಡೆ ಕಾಯಿದೆಯನ್ನು ಸರ್ಕಾರ ಹಿಂಪಡೆಯಬೇಕು’ ಎಂದು ಆಗ್ರಹಿಸುವ ದಿಲ್ಲಿಯಲ್ಲಿ ಸಮ್ಮೇಳನ ಮಾಡುವ ಬ್ರಾಹ್ಮಣ ಧುರೀಣರು, ಮಹಾರಾಷ್ಟ್ರದ ಪ್ರಚಲಿತ ರಾಜಕೀಯದ ‘ಬಲ’ವಂತರಾಗಿ ‘ಜೈ ಭೀಮ್ ಕಾಮ್ರೇಡ್’ ಚಿತ್ರದಲ್ಲಿ ಜಾಗ ಪಡೆದಿದ್ದಾರೆ.
ಹಳ್ಳಿಯಲ್ಲಿನ ಮೇಲ್ಜಾತಿಯ ಜನರ ದಲಿತ ದ್ವೇಷಕ್ಕೆ ಬಲಿಯಾಗಿ ಕೊಲೆಗೀಡಾದ ಶಾಲಾ ಮಾಸ್ತರರ ಹೆಂಡತಿಯಾಗಿ ತನ್ನ ಅಸಹಾಯಕ ಸ್ಥಿತಿಯಲ್ಲೂ ಧೃತಿಗೆಡದೆ, ಒಂಟಿಯಾದರೂ ಸೋಲೊಪ್ಪಿಕೊಳ್ಳದೆ, ಹಣದ ಆಮಿಷಕ್ಕೆ ಬಲಿಯಾಗದೆ, ನ್ಯಾಯ ಪಡೆಯುವ ಕೆಚ್ಚನ್ನು ಪ್ರದರ್ಶಿಸುವ ದಲಿತ ಮಹಿಳೆ ಒಂದುಕಡೆ ಇದ್ದರೆ, ಮಧ್ಯಮ ಜಾತಿಯ ಬಲಿಷ್ಠರಿಂದ ಅತ್ಯಾಚಾರಕ್ಕೊಳಗಾಗಿ ನ್ಯಾಯ ಕೇಳಲಾಗದ ಅಸಹಾಯಕ ಸ್ಥಿತಿಯಲ್ಲಿರುವ ‘ಕೆಳ’ ಜಾತಿಯ ಹೆಣ್ಣುಮಗಳು ಮತ್ತು ಆಕೆಯ ತಾಯಿ-ತಂದೆ ಮತ್ತೊಂದು ಕಡೆ ಇದ್ದಾರೆ. ಗಂಡ ಕುಡುಕನಾದರೂ ಅವನನ್ನು ಪ್ರಶ್ನಿಸದೆ ಒಪ್ಪಿಕೊಳ್ಳಬೇಕೆ? ಅದು ಅನಿವಾರ್ಯವೆ? ಪರಿಹರಿಸಿಕೊಳ್ಳಲಾಗದ ಅಸಹಾಯಕತೆಯೆ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಲೂ ಅರಿಯದ ಕೊಳೆಗೇರಿಗಳಲ್ಲಿ ಅಸಹನೀಯ ಬದುಕನ್ನು ಬದುಕುವ ದಲಿತ ಮಹಿಳೆಯರು, ‘ಈ ನೆಲದ ಮೂಲನಿವಾಸಿಗಳು ನಾವು, ಗೂಡುಗಳಲ್ಲಿ ವಾಸಿಸುವ ಅಡವಿಯರಸರು ನಾವು’ ಎಂದು ಹಾಡುವ ಬುಡಕಟ್ಟಿನ ಗಂಡು-ಹೆಣ್ಣುಗಳು ದಲಿತ ದೌರ್ಜನ್ಯದ ಸಾಮಾಜಿಕತೆಗೆ ಆರ್ಥಿಕ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ಆಯಾಮಗಳನ್ನು ಸೇರಿಸುತ್ತಾರೆ.
ಖೈರ್ಲಾಂಜಿಯಲ್ಲಿನ ಅಮಾನುಷ ಘಟನೆಯ ಕೊಲೆ ಅತ್ಯಾಚಾರಗಳ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಸಮರ್ಪಕವಾಗಿ ಮಂಡಿಸದೆ ಶಿಕ್ಷೆಯಿಂದ ಅಪರಾಧಿಗಳು ತಪ್ಪಿಸಿಕೊಳ್ಳಲು ಕಾರಣವಾಗಿಯೂ, ‘ಶಿಕ್ಷೆಕೊಡುವ ಹೊಣೆ ನ್ಯಾಯಾಲಯಗಳದ್ದು’ ಎಂದು ಜಾರಿಕೊಳ್ಳುವ ಭ್ರಷ್ಟ ಪೋಲೀಸರು ನಮ್ಮ ಕಾಲದಲ್ಲೇ ಬದುಕುತ್ತಿರುವ ದಲಿತರಿಗಿರುವ ರಕ್ಷಣೆ-ನ್ಯಾಯ ವ್ಯವಸ್ಥೆಯ ಮಾದರಿಗಳಿಗೆ ದೃಷ್ಟಾಂತವೆನಿಸುತ್ತಾರೆ. ‘ನ್ಯಾಯಕ್ಕಾಗಿ ಹೋರಾಡುವವರು ನಕ್ಸಲೀಯರು’ ಎಂದು ಆರೋಪಿಸುವ ಸರ್ಕಾರ. ಅದರ ವಿಧೇಯ ‘ರಕ್ಷಕ’ರಾಗಿ ನ್ಯಾಯ ಬೇಡುವವರಿಗೇ ಶಿಕ್ಷೆಯ ಬೆದರಿಕೆಯೊಡ್ಡುವ ಪೋಲೀಸರು ಒಂದು ಕಡೆ. ಅಂಥವರು ನ್ಯಾಯಕ್ಕಾಗಿ ಮಾಡುವ ಸಾಂಸ್ಕೃತಿಕ ಹೋರಾಟ ಅಪರಾಧವಲ್ಲದಿದ್ದರೂ ಮುಂದೆ ಎಸಗುವ ಕಾರ್ಯ ಅಪರಾಧವಾಗಬಹುದೆಂದು ಪೋಲೀಸರು ಶಂಕಿಸುತ್ತಾರೆ. ಅಂಥ ಶಂಕೆಯನ್ನಾಧರಿಸಿ ಪೋಲೀಸರು ಒಡ್ಡಿದ ಬೆದರಿಕೆಗೆ ಹೆದರಿ ‘ಕಬೀರ್ ಕಲಾ ಮಂಚ್’ ದ ಸದಸ್ಯರಾದ ತನ್ನ ಮಕ್ಕಳು ಅವಿತಿಟ್ಟುಕೊಳ್ಳುತ್ತಾರೆ. ಅವರು ಹೆದರಿಕೆಯಿಂದ ಹಾಗೆ ಮಾಡಿದ್ದಾರೆಯೇ ಹೊರತು ಯಾವ ಅಪರಾಧವನ್ನೂ ಅವರು ಮಾಡಿಲ್ಲ ಎಂದು ತನ್ನ ಮಕ್ಕಳ ಬರುವಿಕೆಗಾಗಿ ದಲಿತ ತಾಯಿ ತೆರೆದ ಬಾಗಿಲಿನ ಜೋಪಡಿಯಲ್ಲಿ ಕಾದು ಕುಳಿತಿರುತ್ತಾಳೆ ‘ ನನ್ನ ಮಕ್ಕಳು ತಾವೆಂದೂ ಶಸ್ತ್ರಗಳನ್ನು ಹಿಡಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಾಡು ತಮಟೆಗಳ ಮೂಲಕವೇ ಸಮಾಜವನ್ನು ಬದಲಿಸುತ್ತೇವೆ ಎಂದು ಮಾತುಕೊಟ್ಟಿದ್ದಾರೆ. ಆದರೂ ಅವರನ್ನು ಬೆದರಿಸಿ ಅವಿತಿಟ್ಟುಕೊಳ್ಳುವಂತೆ ಮಾಡಿರುವ, ಜ್ಯೋತಿಬಾ ಫುಲೆ, ಸಾವಿತ್ರಿ ಫುಲೆ ಅವರ ವಿಚಾರ, ಅಂಬೇಡ್ಕರ್ ದರ್ಶನಗಳನ್ನು ನಕ್ಸಲೀಯವೆಂದು ಕರೆದು ಅವಮಾನ ಮಾಡಿರುವ ಸರ್ಕಾರದ ಕ್ರಮವನ್ನು ಈ ದಲಿತ ತಾಯಿ ಪ್ರಶ್ನಿಸುತ್ತಾಳೆ. ಇದು ಚಿತ್ರದ ಮೊದಲ ಚೌಕಟ್ಟು. ದಲಿತ ಹೋರಾಟಗಾರನಾಗಿ, ಕವಿ-ಹಾಡುಗಾರನಾಗಿ ವಿಲಾಸ್ ಘೋಗ್ರೆಯವರ ಪ್ರತಿಭೆಯನ್ನು ಮಾವೋವಾದಿ ಕ್ರಾಂತಿಕಾರಿ-ಕವಿ-ಹಾಡುಗಾರ ಗದ್ದರ್ ಮೆಚ್ಚಿ ಬಣ್ಣಿಸುತ್ತಾರೆ.
ಸರಳ ಮಾತುಗಳ ಹಾಡು ಸರಳವಾದ್ಯಗಳೊಂದಿಗೆ ಹೇಗೆ ಜನಮಾನಸವನ್ನು ಪ್ರಭಾವಯುತವಾಗಿ ಮುಟ್ಟಬಲ್ಲದು ಎಂಬುದಕ್ಕೆ, ಸಂತ ತುಕಾರಾಮ, ಮೀರಾಬಾಯಿ, ಮುಂತಾದ ಸಂತರ ಉದಾಹರಣೆಯನ್ನು ಗದ್ದರ್ ಕೊಡುತ್ತಾರೆ. ಕ್ರಾಂತಿಕಾರಿ ಹೋರಾಟದಲ್ಲಿ ಜನಸಾಮಾನ್ಯರ ದನಿಯಾಗಿ ಶಬ್ದ (ಸಂಗೀತ) ವಹಿಸುವ ಮಹತ್ವದ ಪಾತ್ರವನ್ನು ಗದ್ದರ್ ನಮ್ಮ ಗಮನಕ್ಕೆ ತರುತ್ತಾರೆ. ಹಾಡುಗಳನ್ನು ಪ್ರಧಾನವಾಗಿ ಬಳಸಿಕೊಳ್ಳುವ ಈ ಸಾಕ್ಷ್ಯಚಿತ್ರ, ಶಬ್ದ (ಸಂಗೀತವನ್ನು) ತನ್ನ ಒಳ ಚೌಕಟ್ಟನ್ನಾಗಿಸಿಕೊಂಡಿದೆ. ಸಾಮಾಜಿಕ ಬದಲಾವಣೆಯಲ್ಲಿ ಸಾಹಿತ್ಯ, ಹಾಡು, ನೃತ್ಯ-ಕುಣಿತ, ನಾಟಕ ಮುಂತಾದ ಲಲಿತಕಲಾಪ್ರಕಾರಗಳು ಜನರಿಗೆ ತಿಳುವಳಿಕೆ ಕೊಡುವ, ಉತ್ಸಾಹ ತುಂಬುವ, ಬದಲಾವಣೆಗೆ ಮನಸ್ಸುಗಳನ್ನು ಸಜ್ಜುಗೊಳಿಸುವ ಕೆಲಸವನ್ನು ನಿರ್ವಹಿಸುತ್ತವೆ. ನೆರಳು-ಬೆಳಕಿನ ಮಾಧ್ಯಮದಲ್ಲಿ ಸಿನಿಮಾ ಇವೆಲ್ಲವನ್ನೂ ಒಳಗೊಳ್ಳುವುದರಿಂದ ಸಾಕ್ಷ್ಯಚಿತ್ರ ಒಮ್ಮೆಗೇ ಲಲಿತಕಲೆಗಳ ಎಲ್ಲ ಗುಣಗಳನ್ನೂ ಒಟ್ಟಿಗೆ ಬೆಸೆದು , ಜನರಲ್ಲಿ ಎಚ್ಚರ-ತಿಳುವಳಿಕೆ-ಉದ್ದೀಪನಗಳನ್ನು ಉಂಟುಮಾಡುವ ಶಕ್ತಿಯನ್ನು ಪಡೆದುಕೊಂಡಿದೆ. ಇಂಥ ಸಂಗೀತ-ನೃತ್ಯಗಳು ಮಾಧ್ಯಮವನ್ನೇ ಜಾತಿ-ಧರ್ಮಗಳನ್ನು ಮೀರುವ ವಿಚಾರಪರತೆಯನ್ನು ಸಾಕ್ಷ್ಯಚಿತ್ರವೂ ಬಳಸುತ್ತಾ ಜನಜಾಗೃತಿಯನ್ನು ಉಂಟುಮಾಡುವ ಆಶಯವುಳ್ಳ ಪ್ರತಿಭಟನೆಯಾಗುತ್ತದೆ. ಇದು ಚಿತ್ರದ ಎರಡನೆಯ ಚೌಕಟ್ಟು.ಮೇಲ್ಜಾತಿಯ ಜನರ ಸಾಮಾಜಿಕ ಕ್ರೌರ್ಯ, ದಲಿತರ ಮೇಲಾಗುವ ಕ್ರೌರ್ಯ, ಹಿಂಸೆ, ಅವಮಾನಗಳನ್ನು ಮತ್ತು ಇವುಗಳ ರಾಜಕೀಯ ಲಾಭ ಪಡೆಯಲು ಹವಣಿಸುವ ರಾಜಕೀಯ ಪಕ್ಷಗಳ ಅಮಾನವೀಯತೆಯನ್ನು ವಿವಿಧ ಘಟನೆಗಳ ರೂಪದಲ್ಲಿ ಆನಂದ್ ಚಿತ್ರೀಕರಿಸಿದ್ದಾರೆ.
ಇವೆಲ್ಲವನ್ನೂ ಕೂಡಿಸಿಕೊಂಡು ಮಹಾರಾಷ್ಟ್ರದ ಪಕ್ಷ ರಾಜಕೀಯ ಹಿನ್ನೆಲೆಯಲ್ಲಿ ಸಂಘಟಿತವಾಗುವ ದಲಿತ ಹೋರಾಟ ಮತ್ತು ಕಮ್ಯೂನಿಸ್ಟ್ ಹೋರಾಟಗಳ ಚಿತ್ರಣವನ್ನು ಆನಂದ್ ಕೊಡುತ್ತಾರೆ. ಅವುಗಳಲ್ಲಿ ಭಾಗವಹಿಸುವ ಜನರ ಶಕ್ತಿ-ಮಿತಿ-ಆಶಯಗಳನ್ನು ಬಿಂಬಾತ್ಮಕ ವಿಧಾನದಲ್ಲಿ ಟೀಕೆ-ವಿಮರ್ಶೆಗಳಿಗೆ ಆನಂದ್ ಒಳಪಡಿಸುತ್ತಾರೆ. ದಲಿತರಾಗಿ, ಕಮ್ಯೂನಿಸ್ಟರಾಗಿ ಶೋಷಣೆ, ಅವಮಾನ, ಅಸಮಾನತೆಗಳಿಲ್ಲದ ಮಾನವೀಯ ಸಮಾಜಕ್ಕಾಗಿ ಸಂಘಟಿತವಾಗಿರುವ ಜನರ ವೇದಿಕೆ ಕಬೀರ್ ಕಲಾಮಂಚ್ ದ ಶೀತಲ್ ಸಾಠೆ ಹಾಡುವ ಹಾಡಿನೊಂದಿಗೆ ಚಿತ್ರ ಮುಗಿಯುತ್ತದೆ. ದಲಿತ ಹೋರಾಟ, ಕಮ್ಯುನಿಸ್ಟ್ ಹೋರಾಟಗಳು ಪರಸ್ಪರ ಕೈಗೂಡಿಸಿದರೆ ನೈಜವಾದ ಮಾನವೀಯ ಸಮಾಜವನ್ನು ಕಟ್ಟಲು ಸಾಧ್ಯ ಎಂಬ ಆಶಯ ಚಿತ್ರದಲ್ಲಿರುವಂತೆ ಕಾಣಿಸುತ್ತದೆ. ಇದರ ಸಾಧ್ಯಾಸಾಧ್ಯತೆಗಳ ಪ್ರಶ್ನೆಗಳು ಸಾಕ್ಷ್ಯಚಿತ್ರ ಮಂಡಿಸುವ ಚಿಂತನೆಯನ್ನು ನೋಡುಗರಲ್ಲಿ ಮುಂದುವರೆಸುತ್ತವೆ.ಸಾಮಾಜಿಕ-ರಾಜಕೀಯ ಬದಲಾವಣೆಗೆ ತಾತ್ವಿಕ ದೃಷ್ಟಿಯನ್ನು ಕೊಡುವ ಚಿಂತನೆಗಳು ಒಟ್ಟಾರೆಯಾಗಿ ಪ್ರಗತಿಪರ- ಪ್ರತಿಗಾಮೀ, ಎಡಪಂಥೀಯ-ಬಲಪಂಥೀಯ, ಸಮಾಜವಾದಿ-ಬಂಡವಾಳವಾದಿ ಎಂದು ವಿಭಾಗಗೊಳ್ಳುತ್ತವೆ. ಇವುಗಳಲ್ಲಿ ಸ್ಪಷ್ಟವಾಗಿ ಕೋಮುವಾದಿ, ಮೂಲಭೂತವಾದಿ, ಫ್ಯಾಸಿಸ್ಟ್ ಧೋರಣೆಯ ಸಂಘಪರಿವಾರದ ಸಾಮಾಜಿಕ-ರಾಜಕೀಯ ದೃಷ್ಟಿಕೋನ ಬಲಪಂಥೀಯವೆಂದೂ, ಮಾರ್ಕ್ಸ್ ವಾದಿ ತಾತ್ವಿಕತೆಯನ್ನು ಆಧರಿಸಿದ ವಿವಿಧ ಕಮ್ಯುನಿಸ್ಟ್ ಪಕ್ಷಗಳ ಸಾಮಾಜಿಕ-ರಾಜಕೀಯ ದೃಷ್ಟಿಕೋನ ಎಡಪಂಥೀಯವೆಂದೂ ಗುರುತಿಸುವ ಕ್ರಮ ಸುಪರಿಚಿತ. ಪ್ರಜಾಪ್ರಭುತ್ವ-ಸೆಕ್ಯುಲರ್ ಸಮಾಜದ ಹೆಸರಿನಲ್ಲಿ ಬಲ-ಎಡ ಎರಡೂ ಅಲ್ಲದಂತೆ ತೋರುವ ಅಥವಾ ಹೌದಾದ ಆದರೆ ಸ್ಪಷ್ಟವಾಗಿ ಬಂಡವಾಳವಾದೀ ತಾತ್ವಿಕತೆಯನ್ನು ಬೆಂಬಲಿಸುವ ಉಳಿದೆಲ್ಲ ಪಕ್ಷಗಳನ್ನು ‘ತಟಸ್ಥ’ ಅಥವಾ ಮಧ್ಯಮಪಂಥೀಯ ಎಂದು ಗುರುತಿಸುವುದೂ ಪರಿಚಿತವಾದ ತಾತ್ವಿಕವಿಭಾಗಕ್ರಮ.
ಇದನ್ನೇ ತೋರುಗಾಣಿಕೆಯ ‘ಪ್ರಜಾಪ್ರಭುತ್ವವಾದೀ’, ‘ಉದಾರವಾದೀ’, ‘ಮಾನವೀಯ’ ಎಂಬಂಥ ಪದಗಳನ್ನು ಬಳಸಿ ದಾರಿತಪ್ಪಿಸುತ್ತಾರೆ. ಭಾರತದ ರಾಜಕೀಯದಲ್ಲಿ ಬಂಡವಾಳವಾದೀ ಮತ್ತು ಮಾರ್ಕ್ಸ್ ವಾದೀ ತಾತ್ವಿಕತೆಗಳಲ್ಲಿರುವ ಬೇಕಾದ ಅಂಶಗಳನ್ನು ಮಾತ್ರ ಹೆಕ್ಕಿ ತೆಗೆದು ತಮ್ಮದೇ ಆದ ರಾಜಕೀಯ ಪರ್ಯಾಯಗಳನ್ನು ಪ್ರತಿಪಾದಿಸಿದವರಲ್ಲಿ ಅಂಬೇಡ್ಕರ್, ಗಾಂಧಿ ಮತ್ತು ಲೋಹಿಯಾ ಪ್ರಮುಖರು. ಬಂಡವಾಳವಾದೀ ವ್ಯವಸ್ಥೆಯನ್ನು ರಾಜಕೀಯವಾಗಿ ಬದಲಿಸದೆ ಅದರೊಳಗೇ ಸಾಧಿಸಬಯಸುವ ಸಮಾನತೆ, ಸಹೋದರತೆ ಮತ್ತು ಸ್ವಾತಂತ್ರ್ಯಗಳ ಪರಿಷ್ಕೃತ-ಸುಧಾರಿತ ಬಂಡವಾಳವಾದದ ಆದರ್ಶ ಸಮಾಜವನ್ನು ಈ ಮೂರೂ ಜನ ಚಿಂತಕರು ಎತ್ತಿಹಿಡಿಯುತ್ತಾರೆ. ಬಂಡವಾಳವಾದ ಎಲ್ಲ ಸಂಪತ್ತಿನ ಸೃಷ್ಟಿಗೆ ಕಾರಣರಾದ ಕಾರ್ಮಿಕರ ಶ್ರಮ-ಉಪಕರಣ ಮತ್ತು ಉತ್ಪಾದನೆಗಳ ಕಾನೂನುಬದ್ಧ ನಿಯಂತ್ರಣದೊಂದಿಗೆ ಎಲ್ಲಾ ಸಂಪತ್ತನ್ನೂ ಖಾಸಗೀಕರಣಗೊಳಿಸುತ್ತದೆ. ಇದರಿಂದ ಉಂಟಾಗುವ ವರ್ಗ ತಾರತಮ್ಯ ಮತ್ತು ವರ್ಗ ವೈಷಮ್ಯವನ್ನು ಪ್ರಕೃತಿಸಹಜ-ಮಾನವಸಹಜ ಎಂದು ಪ್ರತಿಪಾದಿಸುತ್ತದೆ.ಈ ಗ್ರಹಿಕೆಯಲ್ಲಿ ಸಮಾನತೆ ಸಾಮಾಜಿಕ ಮತ್ತು ರಾಜಕೀಯ ಸಂಬಂಧಗಳಲ್ಲಿ ಸಾಧ್ಯವಿಲ್ಲ. ಸ್ವಾತಂತ್ರ್ಯ ರಾಜಕೀಯವಾದ ತಾತ್ವಿಕತೆ. ಸಹೋದರತೆ ಭಾವನಾತ್ಮಕವಾದ ಪರಿಕಲ್ಪನೆಯಾದ್ದರಿಂದ ಅವನ್ನು ವ್ಯಕ್ತಿಮಟ್ಟದಲ್ಲಿ ಸದಾಕಾಲವೂ ಅನುಭವಿಸುವುದು ಸಾಧ್ಯವಿಲ್ಲ. ಆದ್ದರಿಂದ ವರ್ಗತಾರತಮ್ಯವೂ ಅನಿವಾರ್ಯ.ಆದರೆ ವರ್ಗತಾರತಮ್ಯದಲ್ಲಿ ಚಲನಶೀಲತೆ ಇದೆ. ಅಂದರೆ ವ್ಯಕ್ತಿಗಳು ತಮ್ಮ ಶೋಷಣಾ ಸಾಮಥ್ರ್ಯಕ್ಕನುಗುಣವಾಗಿ ವರ್ಗದಿಂದ ವರ್ಗಕ್ಕೆ ಚಲಿಸಬಹುದು. ಇದೇ ಬಂಡವಾಳವಾದೀ ಪ್ರಜಾಪ್ರಭುತ್ವ. ಆದ್ದರಿಂದ ಇದು ತೋರಿಕೆಯ ಪ್ರಜಾಪ್ರಭುತ್ವ ಅಥವಾ ಹುಸಿಪ್ರಜಾಪ್ರಭುತ್ವ. ಇದನ್ನು ಕಿತ್ತೊಗೆದು ಕಾರ್ಮಿಕರ ಸರ್ವಾಧಿಕಾರದ ಮೂಲಕ ವರ್ಗತಾರತಮ್ಯವಿಲ್ಲದ, ಖಾಸಗಿ ಆಸ್ತಿಹಕ್ಕಿಲ್ಲದ, ಎಲ್ಲರಿಗೂ ಸಮಪಾಲು-ಸಮಬಾಳು ಸಾಧ್ಯವಾಗುವ ನಿಜವಾದ ಪ್ರಜಾಪ್ರಭುತ್ವವೇ ಕಮ್ಯುನಿಸಮ್ ಅಥವಾ ಸಮತಾವಾದ.
ಕಬೀರ್ ಪಂಥ, ಬೌದ್ಧಧರ್ಮ ಮತ್ತು ಉದಾರವಾದೀ ಪ್ರಜಾಪ್ರಭುತ್ವದ ಹಿನ್ನೆಲೆಯಿಂದ ಮಾರ್ಕ್ಸ್ ವಾದವನ್ನು ಅರ್ಥೈಸುವ ಅಂಬೇಡ್ಕರ್ ಅವರ ಪ್ರಕಾರ ಭಾರತದಲ್ಲಿ ಹುಟ್ಟಿನಿಂದಲೇ ನಿರ್ಧಾರವಾಗಿಬಿಡುವ ಸಾಮಾಜಿಕ ಅಸಮಾನತೆ, ಅವಮಾನಗಳನ್ನು ಅಂದರೆ ಜಾತಿ ಮೂಲದ ತಾರತಮ್ಯಗಳನ್ನು ಕೇವಲ ವರ್ಗತಾರತಮ್ಯವನ್ನು ತೊಡೆದುಹಾಕುವುದರ ಮೂಲಕ ನಿವಾರಿಸುವುದು ಸಾಧ್ಯವಿಲ್ಲ. ಸಮಾಜದ ಒಂದು ತುದಿಯಲ್ಲಿನ ಹುಟ್ಟಿನ ಸರ್ವಶ್ರೇಷ್ಠತೆ ಮತ್ತೊಂದು ಕೊನೆಯಲ್ಲಿನ ಹುಟ್ಟಿನ ಅಧಮತೆಯನ್ನುಳ್ಳ ಶ್ರೇಣೀಕೃತ ಸಂಬಂಧಗಳಲ್ಲಿನ ಸಾಮಾಜಿಕ ವಿಷಮತೆಗಳನ್ನು ಜಾತಿವೈಷಮ್ಯವನ್ನು ಕೊನೆಗಾಣಿಸದ ಹೊರತು ಸಹೋದರತೆ ಮತ್ತು ರಾಜಕೀಯ ಸ್ವಾತಂತ್ರ್ಯ ಅಸಾಧ್ಯವೆಂದು ಅಂಬೇಡ್ಕರ್ ಸ್ಪಷ್ಟವಾಗಿ ಹೇಳುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಇದ್ದ ತಾತ್ವಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳು ಕೇವಲ ಭಿನ್ನಾಭಿಪ್ರಾಯಗಳಾಗಿ ಉಳಿಯದೆ ಹಿಂದೂ ಸಮಾಜದ ಜಟಿಲತೆಯನ್ನು, ವರ್ಗ ವೈಷಮ್ಯ ಮತ್ತು ಜಾತಿವೈಷಮ್ಯಗಳು ಒಂದೇ ಪೆಟ್ಟಿಗೆ ಬಗೆಹರಿಯುವಂಥ ರಾಜಕೀಯ ಸಮಸ್ಯೆಗಳು ಅಲ್ಲವೆಂಬುದನ್ನು ಸಾರಿ ಹೇಳುತ್ತವೆ. ಹೀಗಾಗಿ, ಕಮ್ಯುನಿಸ್ಟ್ ಪ್ರಣಾಳಿಕೆಯಲ್ಲಿ ಮಾರ್ಕ್ಸ್ ಪಟ್ಟಿಮಾಡಿ ತಿರಸ್ಕರಿಸುವ ವಿವಿಧ ಬಗೆಯ ಸಮಾಜವಾದೀ ನಿಲುವುಗಳನ್ನು ಗಾಂಧಿ ಮತ್ತು ಅಂಬೇಡ್ಕರ್ ಎರಡು ವಿರುದ್ಧ ನೆಲೆಗಳಿಂದ ಪ್ರತಿನಿಧಿಸುತ್ತಾರೆ ಎಂಬ ತೀರ್ಮಾನ ಹುಟ್ಟುತ್ತದೆ.
ತಾವು ಗ್ರಹಿಸಿದಂತೆ ಒಟ್ಟಾರೆಯಾಗಿ ಬುದ್ಧ ಮತ್ತು ಮಾರ್ಕ್ಸ್ ನ ದರ್ಶನಗಳನ್ನು ಅಕ್ಕಪಕ್ಕದಲ್ಲಿಟ್ಟು ನೋಡುವ ಅಂಬೇಡ್ಕರ್ ಖಾಸಗಿ ಆಸ್ತಿ ಹಕ್ಕಿನ ತಿರಸ್ಕಾರದ ವಿಷಯದಲ್ಲಿ ಸಾಮ್ಯತೆಯನ್ನೂ ಅಹಿಂಸೆ ಮತ್ತು ಧಾರ್ಮಿಕ ನಂಬಿಕೆಯ ಅಗತ್ಯತೆಯಲ್ಲಿ ವಿಷಮತೆಯನ್ನೂ ಕಾಣುತ್ತಾರೆ. ಕೊನೆಗೆ ಬೌದ್ಧ ಧರ್ಮೀಯ ಸಾಮಾಜಿಕತೆಯನ್ನು ತಮ್ಮ ಜೀವನ ದರ್ಶನವನ್ನಾಗಿ ಆರಿಸಿಕೊಳ್ಳುತ್ತಾರೆ. ಬುದ್ಧನ ಧಾರ್ಮಿಕತೆಯನ್ನು ಪುರಸ್ಕರಿಸದ, ಮಾರ್ಕ್ಸ್ ವಾದಿಯಾದ ಅನೇಕ ದಲಿತ ಹೋರಾಟಗಾರರಿಗೆ ಗಾಂಧಿ ಪ್ರತಿಪಾದಿಸುವ ಅಹಿಂಸೆ, ಅಂಬೇಡ್ಕರ್ ಒತ್ತುಕೊಡುವ ಸಾಮಾಜಿಕ ಸಮಾನತೆ ಮತ್ತು ಮಾರ್ಕ್ಸ್ ವಾದದಲ್ಲಿ ಎದ್ದುಕಾಣುವ ಆರ್ಥಿಕ ಸ್ವಾತಂತ್ರ್ಯಗಳನ್ನು ಒಂದುಗೂಡಿಸುವಂಥ ರಾಜಕೀಯ ವ್ಯವಸ್ಥೆಯನ್ನು ಅಹಿಂಸಾತ್ಮಕವಾಗೇ ಸಾಧಿಸಬಾರದೇಕೆ? ಎಂಬ ಯೋಚನೆ ಕಾಡುತ್ತದೆ. ಇಂಥ ಒಂದು ‘ಎಡಬಲಪಾಕ’ ಸಾಧ್ಯವೆಂದು ನಂಬುವ, ಅಂಥ ಕನಸನ್ನು ಸಾಕ್ಷಾತ್ಕರಿಸಿಕೊಳ್ಳುವ ಹಂಬಲದ ಅಭಿವ್ಯಕ್ತಿಯಾಗಿ ಸಹ ‘ಜೈ ಭೀಮ್ ಕಾಮ್ರೇಡ್’ ರೂಪುಗೊಂಡಿದೆ. ಇದು 3 ಗಂಟೆ ಅವಧಿಯ ಜೈ ಭೀಮ್ ಕಾಮ್ರೇಡ್ ಸಾಕ್ಷ್ಯಚಿತ್ರದ ಆಳದ ಮೂರನೆಯ ಪದರ ಅಥವಾ ಚೌಕಟ್ಟು.ಅಂಬೇಡ್ಕರ್ ಆಲೋಚನೆ-ಚಿಂತನೆ-ಅಭಿಪ್ರಾಯಗಳನ್ನು ತಾತ್ವಿಕ ಸಿದ್ಧಾಂತವೆಂದು ಪರಿಗಣಿಸುವ ಅಂಬೇಡ್ಕರ್ ಅನುಯಾಯಿಗಳು, ಅಂಬೇಡ್ಕರ್ರನ್ನು ದೇವರೆಂಬಂತೆ ಪೂಜಿಸುತ್ತಾ ಅವರನ್ನು ಕುರುಡಾಗಿ ಅನುಸರಿಸುವ ಅಂಬೇಡ್ಕರ್ ಭಕ್ತರು, ಮತಾಂತರಗೊಂಡು ಧಾರ್ಮಿಕವಾಗಿ ಹಿಂದೂಗಳಿಂದ ಪ್ರತ್ಯೇಕಗೊಂಡು ಜಾತಿ ಅವಮಾನಗಳಿಂದ ಪಾರಾಗ ಬಯಸುವ ಬೌದ್ಧ, ಅಥವಾ ಕ್ರೈಸ್ತ ಅಂಬೇಡ್ಕರ್ ವಾದಿಗಳು, ಬಲಪಂಥೀಯ ರಾಜಕೀಯದ ಮೂಲಕ ಮೇಲ್ಜಾತಿಗಳನ್ನು ಧಿಕ್ಕರಿಸಿ ಅಥವಾ ಅವರೊಂದಿಗೆ ಸ್ಫರ್ದಿಸಿ-ಅವರ ಸರಿಸಮನಾಗಿ ಬಾಳಲು ರಾಜಕೀಯ ಲಾಂಛನವನ್ನಾಗಿ ಅಂಬೇಡ್ಕರ್ರನ್ನು ಬಳಸುವವರು, ಮತ್ತು ಸಾಮಾಜಿಕ ಅವಮಾನ ಮೊದಲುಗೊಂಡು ಎಲ್ಲ ಶೋಷಣೆಗಳಿಂದ ಬಿಡುಗಡೆ ಪಡೆಯಲು ಎಡಪಂಥೀಯ ದರ್ಶನವನ್ನು ಅಂಬೇಡ್ಕರ್ ರ ರಾಜಕೀಯ ಹೋರಾಟದೊಂದಿಗೆ ಕಸಿಮಾಡಿದ ಹೊಸ ಅವತಾರವಾಗಿ ಅಂಬೇಡ್ಕರ್ರನ್ನು ಸ್ವೀಕರಿಸಬಯಸುವ ದಲಿತಪರ ಎಡಪಂಥೀಯರು ಹೀಗೆ ವಿವಿಧ ಬಗೆಯ ಚಿಂತನಾ ವಿನ್ಯಾಸದ ಅಂಬೇಡ್ಕರ್ರನ್ನು ‘ಜೈ ಭೀಮ್ ಕಾಮ್ರೇಡ್’ ಚಿತ್ರಿಸುತ್ತದೆ.
ಇದು ಮೇಲೆ ಹೇಳಿದ ಮೂರೂ ಚೌಕಟ್ಟು ಅಥವ ಪದರುಗಳನ್ನು ಒಂದಾಗಿಸುವ ಚಿತ್ರಹೂರಣ. ಭಾರತದಲ್ಲಿ ಕೃಷಿಕಾರ್ಮಿಕರು, ಮಹಿಳೆಯರು ಮತ್ತು ಎಲ್ಲಾ ಬಗೆಯ ದಲಿತ-ದಮನಿತರ ಹೋರಾಟಗಳನ್ನು ಒಳಗೊಳ್ಳದ ಕಮ್ಯುನಿಸ್ಟ್ ಹೋರಾಟ ಸಮಗ್ರವಾಗಿರುವುದಿಲ್ಲ. ಹಾಗೆಯೇ ಸೈದ್ಧಾಂತಿಕವಾಗಿ ಮಾರ್ಕ್ಸ್ ವಾದೀ ನೆಲೆಯಿಂದ ಹೊರಡದ ದಲಿತಹೋರಾಟ, ಮಹಿಳಾ ಹೋರಾಟ ಮತ್ತು ಕಾರ್ಮಿಕ ಹೋರಾಟಗಳು ಸಮಗ್ರ ರೂಪದ ಶೋಷಣಾಮುಕ್ತ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ.
ಭಾರತದ ಬಂಡವಾಳವಾದೀ ರಾಜಕೀಯದಲ್ಲಿ ವರ್ಗ ಮತ್ತು ಜಾತಿಗಳು ಪರಸ್ಪರ ಬೇರ್ಪಡಿಸಲಾಗದಂತೆ ಒಂದರೊಳಗೊಂದು ಸೇರಿಕೊಂಡಿವೆ. ದಲಿತರು ಮತ್ತು ದಮನಿತರು ಏಕಕಾಲದಲ್ಲಿ ದಮನಿತ ವರ್ಗವಾಗಿ, ದಮನಿತ ಜಾತಿಯಾಗಿ ಶೋಷಣೆಯ ಕ್ರೌರ್ಯಕ್ಕೆ ಸಿಕ್ಕಿದ್ದಾರೆ. ವೃತ್ತಿಯಿಂದ ಕುಂಬಾರರು ಜಾತಿಯಿಂದಲೂ ಕುಂಬಾರರೆ. ವೃತ್ತಿಯಿಂದ ಚಮ್ಮಾರರು ಜಾತಿಯಿಂದಲೂ ಚಮ್ಮಾರರೆ. ಜಾತಿ-ವರ್ಗಗಳಿಂದ ಬಿಡುಗಡೆಗೆ ಮಾರ್ಕ್ಸ್ ವಾದೀ ರಾಜಕೀಯ ಕ್ರಾಂತಿಯೂ ವರ್ಗಹೋರಾಟದ ಭಾಗವಾಗಿ ಸಾಂಸ್ಕೃತಿಕ ಕ್ರಾಂತಿಯೂ ನಡೆಯಬೇಕಾಗುತ್ತದೆ ಎಂದು ಗದ್ದರ್ ಈ ಚಿತ್ರದಲ್ಲಿ ಹೇಳುತ್ತಾರೆ. ದಲಿತ ಹೋರಾಟಗಾರರು ದಲಿತ-ದಮನಿತರ ಬಿಡುಗಡೆಗೆ ಜಾತಿಹೋರಾಟ ಸೂಕ್ತವೋ ವರ್ಗಹೋರಾಟ ಸೂಕ್ತವೋ ಎಂದು ಬಿಡಿ ಬಿಡಿಯಾಗಿ ಎತ್ತುವ ಪ್ರಶ್ನೆಗಳು ಎಡಪಂಥೀಯ ರಾಜಕೀಯ ಮತ್ತು ಎಡಪಂಥೀಯವಲ್ಲದ ಆದರೆ ಪ್ರಗತಿಪರ ಧೋರಣೆಯ ರಾಜಕೀಯಗಳು ಪರಸ್ಪರವಾಗಿ ದೂರ ಉಳಿಯುವಂತೆ ಮಾಡಿವೆ. ಜಾತಿ ಅವಮಾನ ಮತ್ತು ವರ್ಗವಿಷಮತೆಗಳಿಂದ ಒಟ್ಟಿಗೆ ನರಳುವ ದಲಿತರು, ಜಾತಿಯನ್ನು ನಿರಾಕರಿಸಿ ಕೇವಲ ಒಳಸರಿಯುವಿಕೆಯ ಮೂಲಕ ಶಾಂತಿಯನ್ನು ಪಡೆಯಬಯಸುವ ನಾಸ್ತಿಕರಾದ ಬೌದ್ಧರು, ವ್ಯಕ್ತಿಗತ ಪರಿವರ್ತನೆ, ಸರಳಜೀವನ, ಸತ್ಯ-ಅಹಿಂಸೆಗಳ ಮಾರ್ಗದ ನೈತಿಕ ದೃಷ್ಟಿಯ ಗಾಂಧಿವಾದಿಗಳು, ವರ್ಗರಹಿತ ಸಮಾಜವನ್ನು ವರ್ಗಹೋರಾಟವಿಲ್ಲದೆಯೇ ಸಾಧಿಸಬಯಸುವ ಸಮಾಜವಾದಿಗಳು ಮತ್ತು ಶೋಷಣಾಮುಕ್ತ ಸಮಾನತೆಯ ಮಾನವೀಯ ಸಮಾಜಕ್ಕಾಗಿ ವರ್ಗಹೋರಾಟದ ಮೂಲಕ ಅಧಿಕಾರ ಪಡೆಯಬೇಕೆನ್ನುವ ಕಮ್ಯುನಿಸ್ಟರು ಒಟ್ಟಾಗಿ ಬಂಡವಾಳವಾದದ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಡಬಹುದಲ್ಲವೇ ಎಂಬ ಸಾಮಾಜಿಕ-ರಾಜಕೀಯ ಸಮನ್ವಯದ ಮುಗ್ಧ ಆಶಯವನ್ನು ಪ್ರಗತಿಪರರೆನಿಸಿಕೊಂಡ ವಿವಿಧ ನೆಲೆಯ ಹೋರಾಟಗಾರರು ವ್ಯಕ್ತಪಡಿಸುತ್ತಾರೆ. ಹಾಗೆ ನೋಡಿದರೆ ಇಂಥ ಆಶಯಗಳನ್ನು ಪ್ರಾಮಾಣಿಕ ಸದಾಶಯದ ಜನರು ನೂರಾರು ವರ್ಷಗಳಿಂದಲೂ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇಂಥ ಸಮನ್ವಯದ ಆಶಯ ಮೇಲುನೋಟಕ್ಕೆ ಅತ್ಯಾಕರ್ಷಕವಾಗಿ ಕಾಣುವುದು ನಿಜ.
ಧಾರ್ಮಿಕಸಮಾಜವಾದ, ಸರಳಜೀವನದ ಸಂತಸಮಾಜವಾದ, ಸಹಬಾಳ್ವೆಯ ಸಮನ್ವಯದ ಸಮಾಜವಾದ ಅಥವಾ ಕನಸುಗಾರಿಕೆಯ ಸಮಾಜವಾದ ಇವೆಲ್ಲವೂ ಆಶಯದ ಮಟ್ಟದಲ್ಲಿ ಅಪೇಕ್ಷಣೀಯವೆನಿಸುತ್ತವೆ. ಪರಿಣಾಮದಲ್ಲಿ ಬಂಡವಾಳವಾದದ ಕ್ರೂರ ಮುಖಗಳನ್ನು ಮರೆಮಾಚಿ ಅದನ್ನು ಬಲಪಡಿಸುವ ಸೈದ್ಧಾಂತಿಕ ನಿಲುವುಗಳಾಗಿ ವೈಜ್ಞಾನಿಕ ಸಮಾಜವಾದದ ಕಾಲ್ತೊಡಕುಗಳಾಗಿ ಮಾರ್ಪಡುತ್ತವೆ. ಇಂಥ ಸದಾಶಯಗಳನ್ನು ಹೊತ್ತು ಕಮ್ಯುನಿಸ್ಟ್ ರಾಜಕೀಯದ ಹೊರಗೆ ಗುರುತಿಸಿಕೊಳ್ಳುವ ಎಲ್ಲಾ ದಲಿತ ಹೋರಾಟಗಳೂ ಮತ್ತೆ ಬಂಡವಾಳವಾದೀ ಉತ್ಪಾದನಾ ಸಂಬಂಧದೊಳಗೇ ಉಳಿದು ದಲಿತ ಬಂಡವಾಳವಾವನ್ನೋ ಅಥವಾ ಮಾನವೀಯ ಮುಖದ ಬಂಡವಾಳವಾದವನ್ನೋ ಒಪ್ಪಿಕೊಳ್ಳುವುದು ಸಾಧ್ಯವಾಗಬಹುದು. ಅಂದರೆ, ಮಾರ್ಕ್ಸ್ ವಾದೀ ರಾಜಕೀಯ ತಾತ್ವಿಕತೆಯನ್ನು ಒಳಗೊಳ್ಳದ ಯಾವುದೇ ಹೋರಾಟ, ನಿರ್ಧಿಷ್ಟವಾಗಿ ದಲಿತ ಹೋರಾಟ, ಎಷ್ಟೇ ಪ್ರಗತಿಪರವಾಗಿದ್ದರೂ ಹೆಚ್ಚೆಂದರೆ ಬಂಡವಾಳವಾದೀ ಪ್ರಜಾತಾಂತ್ರಿಕತೆಯ ತೋರಿಕೆಯ ಸಮಾನತೆಯನ್ನು ಸಾಧಿಸಬಹುದು. ಆದರೆ ಜಾತಿ-ವರ್ಗಗಳ ವಿಷಮತೆಗಳಿಂದ ಬಿಡುಗಡೆ ಪಡೆದು ನೈಜ ಸಮಾನತೆಯ ಶೋಷಣಾಮುಕ್ತ ಸಮಾಜವನ್ನು ಕಟ್ಟುವುದು ಸಾಧ್ಯವಿಲ್ಲ. ಜೈ ಭೀಮ್ ಕಾಮ್ರೇಡ್ ಚಿತ್ರದ ಸಂಗತತೆ ಇರುವುದು ಅದು ಪ್ರತಿಪಾದಿಸುವ ಸಮಾಜವಾದೀ ಆಶಯದಲ್ಲಲ್ಲ.
ಗುರಿಮುಟ್ಟುವಲ್ಲಿ ವಿಫಲವಾಗುವ ಅಸಮಗ್ರ ಅನುಷ್ಠಾನದ ಸೈದ್ಧಾಂತಿಕತೆಗಳಿಗೂ, ಗುರಿಮುಟ್ಟಲು ಅಗತ್ಯವಾದ ಆಶಯಗಳನ್ನು ವೈಜ್ಞಾನಿಕವಾದ ನೆಲೆಗಟ್ಟಿನಮೇಲೆ ಸಾಕ್ಷಾತ್ಕರಿಸಿಕೊಳ್ಳಬಹುದಾದ ಮಾರ್ಕ್ಸ್ ವಾದೀ ಸಿದ್ಧಾಂತಕ್ಕೂ ಮಧ್ಯೆ ಇರುವ ಕಂದಕವನ್ನು ಬೆಸೆಯಲು ಅಗತ್ಯವಾದ ವಾಗ್ವಾದ-ಸಂವಾದಗಳನ್ನು ಹುಟ್ಟುಕುತ್ತದೆ ಎಂಬುದರಲ್ಲಿ.ಆನಂದ್ ಪಟವರ್ಧನ್ರು ಎಲ್ಲೂ ಶಾಬ್ದಿಕ ಭಾಷೆಯನ್ನು ಬಳಸದೆ, ಕೇವಲ ದೃಶ್ಯಗಳ ಜೋಡಣೆಯಾಗಿ ಅನುಮೋದನೆ, ಅಸಮ್ಮತಿ, ಹೋಲಿಕೆ,ವ್ಯತ್ಯಾಸ, ಸಾದೃಶ್ಯ, ವೈದೃಶ್ಯಗಳ ಚಿತ್ರಿಕೆಗಳ ಮೂಲಕ ಚಿತ್ರದಲ್ಲಿನ ವಿವಿಧ ರಾಜಕೀಯ ಬಣಗಳ ಅಭಿಪ್ರಾಯ, ದೃಷ್ಟಿಕೋನ, ಆಶಯಗಳನ್ನು ಬಿಂಬಭಾಷೆಯಲ್ಲಿ ಮಂಡಿಸುತ್ತಾರೆ. ಅಂಬೇಡ್ಕರ್ ವಿಚಾರಧಾರೆಗಳನ್ನು ವಿವಿಧ ಕೋನಗಳಿಂದ ಅಂದರೆ, ಧಾರ್ಮಿಕ, ವೈಚಾರಿಕ, ಶಿಷ್ಟ, ಅಶಿಷ್ಟ, ಸಾಂವಿಧಾನಿಕ, ಪ್ರತಿಭಟನೆಯ, ವ್ಯಕ್ತಿಗತ, ಸಾಮುದಾಯಿಕ, ಮೇಲ್ಪದರದ ಹಾಗೂ ಮೂಲಭೂತ ಬದಲಾವಣೆಯ ಸಾಧನಗಳನ್ನಾಗಿ ಅರ್ಥೈಸಿಕೊಂಡು ನೋಡುವ ವಿವಿಧ ಹಿನ್ನೆಲೆಯ ಹೋರಾಟಗಾರರ ನೆಲೆಯಿಂದ ಮಂಡಿಸುತ್ತಾರೆ. ಕೊಚ್ಚೆ-ಕಸ-ಕಕ್ಕಸಗಳ ದುರ್ನಾತದಲ್ಲಿ ಸಿಕ್ಕಿ ನರಳುವ, ಜಾತಿಯಾಗಿ ‘ಅಂಬೇಡ್ಕರ್ ದಲಿತ’ ರೆಂದು ಗುರುತಿಸಿಕೊಳ್ಳುವ ಅಸಹಾಯಕ ಸಫಾಯಿ ಕಾರ್ಮಿಕರಿಂದ ಹಿಡಿದು, ಸಿಹಿತಿಂಡಿ ಮಾರುವವರಾಗಿ ‘ಸಿಹಿತಿಂಡಿ ಜಾತಿ’ಯವರೆಂದು ಉತ್ತರಿಸುವ ಜಾಗೃತ ಪ್ರಜ್ಞೆಯ ದಲಿತರವರೆಗೂ ನಾನಾ ಬಗೆಯ ಜನರಿಗೆ ತಮ್ಮ ಚಿತ್ರವನ್ನು ಮುಖವಾಣಿಯನ್ನಾಗಿಸುತ್ತಾರೆ. ಅಂಬೇಡ್ಕರ್ರನ್ನು ದಲಿತರ ಬಿಡುಗಡೆಗಾಗಿ ಜನ್ಮತಳೆದ ಕೂಸಾಗಿ, ಸ್ವಾಭಿಮಾನದ ಸಂಕೇತವಾಗಿ, ನಿಸ್ವಾರ್ಥಸ್ನೇಹದ ಸತಿಯ ಪತಿಯಾಗಿ, ಮುಳ್ಳುಗಳ ತೋಟದಲ್ಲಿ ಗುಲಾಬಿಯನ್ನು ಬೆಳೆದ ಮಾಲಿಯಾಗಿ, ಸಾಮಾಜಿಕ ಸಮಾನತೆಯ ಘನತೆಯನ್ನಾಗಿ, ಹಿಂದೂ ಹಿನ್ನೆಲೆಯ ಗಾಂಧಿಯನ್ನು ಸರಿಗಟ್ಟುವ ದಲಿತ ಮಹಾತ್ಮನಾಗಿ, ಜಾತಿ ಅಸಮಾನತೆಯ ಬಂಡಾಯವಾಗಿ, ಧಾರ್ಮಿಕವಲ್ಲದ ಬೌದ್ಧಮತೀಯ ಅನುಯಾಯಿಯಾಗಿ, ಭಕ್ತರನ್ನೊಲ್ಲದ, ಅನುಯಾಯಿಗಳನ್ನು ಮಾತ್ರ ಮಾನ್ಯಮಾಡುವ ಮಹಾನಾಯಕನಾಗಿ, ತಮ್ಮ ಸ್ಥಿತಿಯ ಬಗ್ಗೆ ಜಾಗೃತರಾಗದೆ ದಯನೀಯ ಸ್ಥಿತಿಯಲ್ಲೇ ಇರುವ ಜನಸಮುದಾಯದ ಪರವಾಗಿ ಸದಾ ಚಿಂತಿಸುತ್ತಾ ಜಾಗರಣೆ ಮಾಡುತ್ತಿರುವ ನೊಂದ ನಾಯಕನಾಗಿ, ವಿವಿಧ ದೃಷ್ಟಿಯ, ವಿವಿಧ ಹಿನ್ನೆಲೆಯ ಜನರಿಗೆ ಪ್ರಿಯರಾಗಿ ಇಂದಿಗೂ ಜನರ ಮನ್ನಣೆ ಪಡೆಯುತ್ತಿರುವ, ಅಭಿಮಾನಿಗಳ-ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಅಪರೂಪದ ಅಸಾಧಾರಣ ವ್ಯಕ್ತಿತ್ವವಾಗಿ, ಸಂವಿಧಾನ ಶಿಲ್ಪಿ ಎನಿಸಿದ್ದರೂ ಮೇಲ್ಜಾತಿಯ ಎಷ್ಟೋ ಜನರ ಪ್ರಜ್ಞೆಯನ್ನು ಮುಟ್ಟದ ಅಜ್ಞಾತನಾಗಿ, ಜಾತಿಶ್ರೇಷ್ಠರ ಹೊಲಸನ್ನು ತೆಗೆಯುವ ‘ಹೊಲಸು ಭಕ್ತರ’ ದೇವರಾಗಿ, ಪಕ್ಷರಾಜಕೀಯದ ಬಂಡವಾಳವಾಗಿ, ಸಂಕುಚಿತ ಲಾಭಗಳ ಸಾಧನವಾಗಿ, ತನ್ನ ವಿರೋಧಿಗಳಿಗೂ ಶಕ್ತಿಮೂಲವಾದ ರಾಜಕೀಯ ಶಕ್ತಿಯಾಗಿ, ಕೊನೆಗೆ, ಶೋಷಿತ ಜನತೆಯಲ್ಲಿ ಎಡಪಂಥೀಯವಾಗಿ ವಿಲೀನಗೊಳಿಸಿ ಹೊಸಬಗೆಯಲ್ಲಿ ಗುರ್ತಿಸಿಕೊಳ್ಳಬೇಕಾದ ಕಾಮ್ರೇಡರಾಗಿ, ಚಿತ್ರಿತಗೊಂಡಿದ್ದಾರೆ.ವಿಲಾಸ್ ಘೋಗ್ರೆ ಅನ್ಯಾಯದ ವಿರುದ್ಧ ದಲಿತರನ್ನು ಜಾಗೃತಗೊಳಿಸುವಂಥ ಹಾಡುಗಳನ್ನು ಬರೆದು ಸ್ವತಹ ಹಾಡುತ್ತಿದ್ದರು. ಹೋರಾಟದ ಹಾಡುಗಳ ಹಾಡಿನ ಮೂಲಕ ಸಿಗುತ್ತಿದ್ದ ಅಲ್ಪಸ್ವಲ್ಪ ಹಣದಲ್ಲಿ ಜೀವನ ನಡೆಸುತ್ತಿದ್ದರು.
ಸೈದ್ಧಾಂತಿಕವಾಗಿ ಎಡಪಂಥೀಯ ಸಂಘಟನೆಯಾದ ಆಹ್ವಾನ್ ಕಲಾಮಂಚದ ಸಕ್ರಿಯ ಕಾರ್ಯಕರ್ತರಾಗಿ ದಲಿತ ಜನರನ್ನು ಹಾಡುಗಳ ಮೂಲಕವೇ ಸಂಘಟಿಸಲು ಹಾಡುತ್ತಿದ್ದರು. ಬಡತನ ಒಡ್ಡುತ್ತಿದ್ದ ವೈಯಕ್ತಿಕ ಮಿತಿಗಳು, ಸಾಂಸಾರಿಕ ಜವಾಬ್ದಾರಿ- ಸಮಸ್ಯೆಗಳು, ಸಾಮಾಜಿಕ ದೌರ್ಜನ್ಯ ಮತ್ತು ಸಂಘಟನೆಯ ಸೈದ್ಧಾಂತಿಕ ನಿರ್ಬಂಧಗಳ ಭಾರದಲ್ಲಿ ನಲುಗಿ ಆತ್ಮಹತ್ಯೆ ಮಾಡಿಕೊಂಡರು. ಸತ್ತಾಗ ತಲೆಗೆ ಕಟ್ಟಿಕೊಂಡಿದ್ದ ಚೌಕ ನೀಲಿ, ಕೆಂಪು ಅಥವಾ ಕೆಂಪು ಮಿಶ್ರಿತ ನೇರಳೆ ಎಂಬ ಅವರ ಒಡನಾಡಿಗಳ ಅರ್ಥೈಸುವಿಕೆಯಲ್ಲಿ ಆರ್ಥಿಕ ನ್ಯಾಯ ಮತ್ತು ಸಾಮಾಜಿಕ ಅಸಮಾನತೆಗಳಲ್ಲಿ ಯಾವುದು ಮೊದಲ ಆದ್ಯತೆ ಎಂಬ ಬಗ್ಗೆ ಅಂಬೇಡ್ಕರ್ ಮತ್ತು ಎಡಪಂಥೀಯ ನಿಲುವುಗಳ ತಾಕಲಾಟವಿದೆ.ಎಡಪಂಥೀಯ ಸಾಂಸ್ಕೃತಿಕ ಸಂಘಟನೆಯಾದ ಕಬೀರ್ ಕಲಾಮಂಚದ ದಲಿತ ಸದಸ್ಯರಾಗಿ ಶೀತಲ್ ಸಾಠೆ ಮತ್ತು ಅವರ ಸಂಗಡಿಗರು ಹಾಡುವಾಗ ಅವರು ಧರಿಸುವ ಕೆಂಪು, ನೀಲಿ ಉಡುಪುಗಳು, ತಲೆಗೆ ಕಟ್ಟಿಕೊಳ್ಳುವ ನೀಲಿಬಟೆ, ಕಾಮ್ರೇಡರಾಗಿ ಎಲ್ಲಾ ದಲಿತ-ದಮನಿತರ ಆಶಾಕಿರಣವಾಗಿ ಅಂಬೇಡ್ಕರ್ ಶಾಬ್ದಿಕವಾಗಿ ಮೂಡುತ್ತಿರುವಾಗಲೇ ಹಿನ್ನೆಲೆಯಲ್ಲಿ ಅಶೋಕಚಕ್ರದ ನೀಲಿ ಬಾವುಟ ಹಾರಾಡುತ್ತಿರುವ ಚಿತ್ರ ಕಾಣಿಸುತ್ತದೆ. ಇದು ಬಿಂಬಾತ್ಮಕವಾಗಿ ‘ಜೈ ಭೀಮ್ ಕಾಮ್ರೇಡ್’ ಮೂಲಕ ಸೈದ್ಧಾಂತಿಕವಾಗಿ ಆನಂದ್ ಪಟವರ್ಧನ್ ಸೂಚಿಸುವ ರಾಜಕೀಯ ಮತ್ತು ಸಾಮಾಜಿಕ ನಿಲುವು ಆಗುತ್ತದೆ.
1 ಕಾಮೆಂಟ್:
ಜೈ ಭೀಮ್ ಕಾಮ್ರೇಡ್ ಈಗ ಕರ್ನಾಟಕದಲ್ಲಿ ಕನ್ನಡ ಉಪಶೀರ್ಷಿಕೆಗಳೊಂದಿಗೆ ಸಿಗುತ್ತಿದೆ. ಸಂಪರ್ಕಿಸಿ:
ವಿ.ಎನ್. ಲಕ್ಷ್ಮೀನಾರಾಯಣ,
ಫೋನ್.0821 2462859
ಕಾಮೆಂಟ್ ಪೋಸ್ಟ್ ಮಾಡಿ