ಮಂಗಳವಾರ, ಫೆಬ್ರವರಿ 4, 2014

ಸ್ವಾತಂತ್ರ್ಯದ ಓಟ- “ ಮಾತೃಭೂಮಿಯಲ್ಲೇ ಮಣ್ಣಾಗುವ ಆಸೆ ”


“ ಮಾತೃಭೂಮಿಯಲ್ಲೇ ಮಣ್ಣಾಗುವ ಆಸೆ ”

ಮುತ್ತುಪ್ಪಾಡಿಗೆ ತಲುಪಿದ ಚಾಂದಚ್ಚ ಮೊದಲು ಹೋದದ್ದು ’ಜೋಳಿಗೆ ಬಾಬಾ’ ಇರುವ ಕಲ್ಲು ಮಂಟಪಕ್ಕೆ.
ಚಾಂದಚ್ಚ ಹೇಳಿದ ಎಲ್ಲ ಮಾತುಗಳನ್ನೂ ತಾಳ್ಮೆಯಿಂದ ಆಲಿಸಿದ ಜೋಳಿಗೆ ಬಾಬಾ, ಕೊನೆಗೆ ನಿಧಾನವಾಗಿ ಹೇಳತೊಡಗಿದ್ದರು. “ಇಷ್ಟು ವರ್ಷಗಳಿಂದ ಹುಡುಕುತ್ತಿದ್ದ ಲಾಲ್ ಕೃಷ್ಣ ನಿನಗೆ ಸಿಗದಿದ್ದದ್ದು ಒಳ್ಳೆಯದೇ ಆಯ್ತು ಅಲೀ. ಸಿಕ್ಕಿದ್ರೆ ಅವನನ್ನು ಏನು ಬೇಕು ಅಂತ ಕೇಳ್ತಿದ್ದಿಯಾ? ನಿನ್ನ ಪಾಕಿಸ್ತಾನಕ್ಕೆ ಮರಳಿ ಹೋಗಲು ಸಹಾಯ ಮಾಡು ಅಂತನಾ? ನೀನು ಕೇಳ್ಕೊಂಡೆ ಎಂಬ ಕಾರಣಕ್ಕೆ ಅವನು ಕಳಿಸಿಬಿಡ್ತಾನಾ? ಅದು ಅವನಿಂದ ಸಾಧ್ಯವಾಗುತ್ತದಾ? ಸಾಧ್ಯವಾಗ್ತದೆ ಅಂತ್ಲೇಇಟ್ಕೋ..., ಇಲ್ಲಿ ಎಲ್ರನ್ನೂ ಬಿಟ್ಟು ನೀನು ಹೋಗಿಯೇಬಿಡ್ತೀಯಾ?

“ ಈ ಹುಡುಕಾಟದವರ ಕತೆಗಳೆಲ್ಲ ಹೀಗೆಯೇ ಅಲೀ. ದೇವರನ್ನು ನೋಡ್ಬೇಕು ಅಂತ ನೂರಾರು ವರ್ಷ ತಪ್ಪಸ್ಸು ಮಾಡಿದವರ ಕತೆಗಳನ್ನು ನೀನು ಕೇಳಿದ್ದೀಯಾ. ದೇವರು ಪ್ರತ್ಯಕ್ಷವಾದ ಕೂಡಲೇ ಅದು ಕೊಡು, ಇದು ಕೊಡು ಅಂತ ಬೇಡಿ ವರಗಳನ್ನು ಪಡೆದ ಕತೆಗಳನ್ನೂ ಕೇಳಿದ್ದೀಯಾ. ಆದ್ರೆ ಅಲೀ, ಅವೆಲ್ಲವೂ ಸುಳ್ಳು ಪುರಾಣದ ಕತೆಗಳಲ್ಲವೇ ಅಲೀ.

'ನೀನೇ ಯೋಚನೆ ಮಾಡು ಅಲೀ; ಒಬ್ಬನ ಎದುರು ದೇವರೇ ಪ್ರತ್ಯಕ್ಷನಾಗಿ, “ ಏನು ಬೇಕು ” ಎಂದು ಕೇಳಿದಾಗ, ತಪಸ್ಸು ಮಾಡಿದವನು “ ಅದು ಬೇಕು ”, “ ಇದು ಬೇಕು ” ಅಂತ ಏನನ್ನಾದ್ರೂ ಬೇಡ್ತಾನೆ ಅಂದುಕೊಂಡಿದ್ಯಾ? ದೇವರೇ ಸ್ವತಃ ಸಿಕ್ಕಿದ ನಂತ್ರವೂ ಮನುಷ್ಯನಿಗೆ ಬೇರೆ ಏನಾದ್ರೂ ಬೇಕು ಅಂತ ಅನ್ನಿಸೀತಾ? ದೇವರನ್ನು ಹುಡುಕುವುದರಲ್ಲಿ ಇರುವ ಸುಖ ಅವನು ಪ್ರತ್ಯಕ್ಷನಾದ ಬಳಿಕ ಉಳಿಯುವುದಿಲ್ಲ ಅಲೀ.’

“ಇಲ್ಲಿ ಮುತ್ತುಪ್ಪಾಡಿಯಲ್ಲಿರುವ ನಿನ್ನ ಪುಟ್ಟ ಪಂಡಿತ, ನಿನ್ನ ಚಡ್ಡಿ ಅನಂತಣ್ಣ, ಆ ಸುಮತಿಯಕ್ಕ, ಜವುಳಿ ಹಾಜಾರ್ರು, ಆ ಪಾಪದ ನಾರಾಯಣ ರ್ಮಾಸ್ಟ್ರು, ಆ ನಿನ್ನ ಹಂಝಾ, ನಿನಗೆ ಹೆಣ್ಣು ಕೊಟ್ಟ ಲತೀಫ್ ಮಾಸ್ಟ್ರು...,ಇವರು ಯಾರೂ ನಿನಗೆ ಏನೇನೂ ಅಲ್ವಾ? ಹೋಗ್ಲಿ, ನಿನ್ನ ಹೆಂಡ್ತಿ ಮಕ್ಳೂ? ಅವ್ರನ್ನೂ ಲಾಹೋರಿಗೆ ಕರ್ಕೊಂಡು ಹೋಗ್ತೀಯಾ? ಅಲ್ಲಿ ನಿನ್ನನ್ನು ಯಾರು ಕಾಯ್ಕೊಂಡು ಕೂತಿದ್ದಾರೆ ಅಲೀ. ನಿನ್ನ ಚಿಕ್ಕಪ್ಪನ ಮಾಳಿಗೆ ಮನೆಯ ಎರಡು ಕೋಣೆಗಳು ಕಳೆದ ಮೂವತ್ತು ವರ್ಷಗಳಿಂದಲೂ ನಿನ್ನನ್ನೇ ಕಾಯ್ತಾ ಉಂಟು ಅಂತ ಎಣಿಸಿದ್ದಿಯಾ? ಅಲ್ಲಿ ಹೋಗಿ ಏನು ಮಾಡ್ತಿ? ಅಥವಾ ನಿನಗೆ ಹುಟ್ಟಿದ ಜಾಗದಲ್ಲೇ ಮಣ್ಣಾಗಬೇಕು ಅಂತ ಆಸೆನಾ?

’ಈ ಮುತ್ತುಪ್ಪಾಡಿಯ ಮಣ್ಣಿನಲ್ಲಿ ನಿನಗೆ ಯಾವುದರಲ್ಲಿ ಕಮ್ಮಿಯಾಗಿದೇ? ಈ ಮಣ್ಣಿನಲ್ಲಿ ಅಲ್ಲಾಹು ನಿನ್ನನ್ನು ಇಷ್ಟು ವರ್ಷಗಳ ಕಾಲ ಸುಖವಾಗಿಯೇ ಇಟ್ಟಿದ್ದಾನೆ. ಪ್ರೀತಿಸುವ ಹೆಂಡತಿಯನ್ನು ಕೊಟ್ಟಿದ್ದಾನೆ. ಒಳ್ಳೆಯ ಮೂರು ಮಕ್ಕಳನ್ನು ಕೊಟ್ಟಿದ್ದಾನೆ. ಮೂರು ಹೊತ್ತಿನ ಊಟಕ್ಕೆ ಕಮ್ಮಿಯಾಗದಂತೆ ನೋಡ್ಕೊಂಡಿದ್ದಾನೆ. ಒಳ್ಳೆಯ ದೋಸ್ತ್ ಕೊಟ್ಟಿದ್ದಾನೆ. ಮತ್ತೆಂಥದ್ದು ಬೇಕು? ಮಾತೃ ಭೂಮಿಯಲ್ಲೇ ಮಣ್ಣಾಗಬೇಕೆಂಬ ಆಸೆಯಾ? ಹಾಗಾದರೆ, ಬದುಕು ಕೊಡುತ್ತಿರುವ ಮಣ್ಣಿಗೆ ಬೆಲೆಯೇ ಇಲ್ಲವಾ?

ಚಾಂದಚ್ಚನಲ್ಲಿ ಉತ್ತರವಿರಲಿಲ್ಲ. ಯಾಕೆಂದರೆ, ಇತ್ತೀಚೆಗೆಲ್ಲ ಅವೆಲ್ಲವೂ ಚಾಂದಚ್ಚನ ಪ್ರಶ್ನೆಗಳೂ ಆಗಿದ್ದವು.

[ಸ್ವಾತಂತ್ರ್ಯದ ಓಟ- 501-502]

ಕಾಮೆಂಟ್‌ಗಳಿಲ್ಲ: