ಸೌಜನ್ಯ: ಪ್ರಜಾವಾಣಿ
೧೯೬೪ಫೆಬ್ರುವರಿ ೨೨ರಂದು; ಸರಿಯಾಗಿ ಐವತ್ತು ವರ್ಷಗಳ ಹಿಂದೆ ನನ್ನ ಬದುಕನ್ನು ಬದಲಿಸಿದ ಇಂಗ್ಲಿಷ್ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟರು. ಅವರ ಹೆಸರು ವೆರಿಯರ್ ಎಲ್ವಿನ್. ೧೯೦೨ರಲ್ಲಿ ಡೊವರ್‌ನಲ್ಲಿ ಹುಟ್ಟಿದ ಅವರು ಸಿಯೆರಾ ಲಿಯೋನ್‌ನ ಮಾಜಿ ಬಿಷಪ್ ಒಬ್ಬರ ಮಗ. ತಮ್ಮನ್ನು ತಾವು ಪಾದ್ರಿ ಎಂದು ಘೋಷಿಸಿಕೊಳ್ಳುವ ಮುನ್ನ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಎರಡು ಪದವಿಗಳನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿದ್ದರು. ೧೯೨೭ರಲ್ಲಿ ಅವರು ಭಾರತಕ್ಕೆ ಬಂದದ್ದು ಕ್ರಿಸ್ತ ಸೇವಾ ಸಂಘ ಸೇರಲು. ಪುಣೆ ಮೂಲದ ಅದು ದೇಸಿ ಮಟ್ಟದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಒಗ್ಗಿಸುವ ಬದ್ಧತೆಯಿಂದ ಹುಟ್ಟಿದ ಸಣ್ಣ ಸಂಘ.
ಭಾರತಕ್ಕೆ ಬಂದ ಒಂದು ವರ್ಷದ ನಂತರ ಎಲ್ವಿನ್ ಸಬರಮತಿಯ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿದರು. ಆ ಆಶ್ರಮದಿಂದ ಅವರು ಎಷ್ಟು ಪ್ರಭಾವಿತರಾದರೆಂದರೆ, ರಾಷ್ಟ್ರೀಯ ಚಳವಳಿ ಕುರಿತು ಅವರಲ್ಲಿ ಅತೀವ ಸಹಾನುಭೂತಿ ಮೂಡಿತು. ತಮ್ಮ ಬದುಕಿನ ಉಳಿದ ಅವಧಿಯನ್ನು ಭಾರತದಲ್ಲಿ ಕಳೆಯಲು ನಿರ್ಧರಿಸಿದರು. ಮೊದಲಿಗೆ ಮುಂಬೈನ ಕೊಳೆಗೇರಿಯೊಂದರಲ್ಲಿ ವಾಸ ಮಾಡಲು ತೀರ್ಮಾನಿಸಿದ ಅವರು, ಆಮೇಲೆ ಗಾಂಧಿ ಅನುಯಾಯಿಯೂ ಆಗಿದ್ದ ಉದ್ಯಮಿ ಜಮ್ನಾಲಾಲ್ ಬಜಾಜ್ ಕೊಟ್ಟ ಸಲಹೆಯಂತೆ ಭಾರತದ ಮಧ್ಯ ಭಾಗದ ಬುಡಕಟ್ಟು ಜನರ ನಡುವೆ ಬದುಕುವ ಆಯ್ಕೆಯನ್ನು ಒಪ್ಪಿಕೊಂಡರು.
ವೆರಿಯರ್ ಎಲ್ವಿನ್ ಹೆಸರನ್ನು ಮೊದಲು ನನ್ನ ಕಿವಿಮೇಲೆ ಹಾಕಿದವರು ಒರಿಯಾದ ಒಬ್ಬ ಹಿರೀಕರು; ೧೯೭೮ರ ಬೇಸಿಗೆಯಲ್ಲಿ. ಆಗ ನಾನು ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಎಂ.ಎ. ಓದುತ್ತಿದ್ದೆ. ಶೈಕ್ಷಣಿಕ ಭಾಷೆಯಲ್ಲಿ ಹೇಳುವುದಾದರೆ, ಕೋರ್ಸ್‌ನ ನಡುಘಟ್ಟದಲ್ಲಿ ಆಗ ನಾನಿದ್ದೆ. ಸಂಶೋಧನೆಯಲ್ಲೇ ವೃತ್ತಿಬದುಕನ್ನು ಕಟ್ಟಿಕೊಳ್ಳಬೇಕೆಂದು ಅದಾಗಲೇ ನಾನು ನಿರ್ಧರಿಸಿ ಆಗಿತ್ತು. ಒಡಿಶಾದಿಂದ ದೆಹಲಿಗೆ ಮರಳಿದಾಗ ಕಾಲೇಜು ಗ್ರಂಥಾಲಯದಲ್ಲಿ ಎಲ್ವಿನ್ ಬರೆದ ಎರಡು ಪುಸ್ತಕಗಳನ್ನು ಕಂಡೆ. ಒಂದು– ಅವರ -ವುಡ್‌ಹೌಸಿಯನ್ ಡೈರಿ ‘ಲೀವ್ಸ್ ಫ್ರಮ್ ದಿ ಜಂಗಲ್’. ಇನ್ನೊಂದು–ಓದಲು ಪೊಗದಸ್ತಾದ ಅವರ ಆತ್ಮಕಥೆ ‘ದಿ ಟ್ರೈಬಲ್ ವರ್ಲ್ಡ್ ಆಫ್ ವೆರಿಯರ್ ಎಲ್ವಿನ್’. ಆ ಕೃತಿಗಳ ಓದು ಸಮಾಜಶಾಸ್ತ್ರದಲ್ಲಿ ಪಿಎಚ್.ಡಿ. ಮಾಡಲು ಕೋಲ್ಕತ್ತಗೆ ಹೋಗಲು ಪ್ರೇರಣೆಯಾಯಿತು. ನನ್ನ ಪ್ರೊಫೆಸರ್ ಒಬ್ಬರು ಹಿಂದೆ ಹೇಳಿದ್ದಂತೆ ಆ ನಿರ್ಧಾರದಿಂದ ನನಗೂ ಒಳ್ಳೆಯದಾಯಿತು, ಅರ್ಥಶಾಸ್ತ್ರಕ್ಕೂ ಒಳಿತಾಯಿತು!
ಕೋಲ್ಕತ್ತದಲ್ಲಿ ನಾನು ಅರಣ್ಯಗಳ ಇತಿಹಾಸದ ಕುರಿತು ಪ್ರೌಢಪ್ರಬಂಧ ಬರೆದೆ. ಆ ಪ್ರಕ್ರಿಯೆಯಲ್ಲಿ ಎಲ್ವಿನ್ ಮತ್ತೆ ನನಗೆ ಬೇಕಾದರು. ವಿವಿಧ ಜನಾಂಗಗಳ ವೈಜ್ಞಾನಿಕ ವಿವರಣೆಯನ್ನೇ ವಸ್ತುವಾಗಿಸಿ ಅವರು ಕೃತಿಗಳನ್ನು ಬರೆದಿದ್ದಾರೆ. ಅವುಗಳಲ್ಲಿ ವಸಾಹತು ಅರಣ್ಯ ಕಾನೂನುಗಳಿಂದ ಬುಡಕಟ್ಟು ಜನರ ಬದುಕಿನ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಗಳೇನು ಎಂಬುದನ್ನು ಅವರು ಸೂಕ್ಷ್ಮವಾಗಿ ತಿಳಿಸಿದ್ದಾರೆ. ‘ದಿ ಬೈಗಾ’, ‘ದಿ ಅಗೇರಿಯಾ’ ಪುಸ್ತಕಗಳನ್ನು ಓದಿದ ಮೇಲಂತೂ ಎಲ್ವಿನ್ ನನಗೆ ಬಹಳವಾಗಿ ಹಿಡಿಸಿದರು. ಅವರ ವೃತ್ತಿಬದುಕಿನ ಕುರಿತು ಕುತೂಹಲ ಗಟ್ಟಿಯಾದದ್ದೂ ಆಗಲೇ. ನೆಲದೊಟ್ಟಿಗೆ ಸಂಬಂಧ ಇಟ್ಟುಕೊಂಡಿದ್ದ ವಿದ್ವಾಂಸ ಅವರಾಗಿದ್ದರೆಂಬುದೇ ನನಗೆ ಅವರ ಬಗ್ಗೆ ಆಕರ್ಷಣೆ ಹೆಚ್ಚಾಗಲು ಕಾರಣ. ಅಸಾಮಾನ್ಯ ವಿಚಾರಗಳನ್ನು ಚೆನ್ನಾಗಿ ಬರೆಯುತ್ತಿದ್ದರೆಂಬುದು ಅವರ ಇನ್ನೊಂದು ಅಗ್ಗಳಿಕೆ.
೧೯೩೦ ಹಾಗೂ ೧೯೪೦ರ ದಶಕಗಳಲ್ಲಿ ಎಲ್ವಿನ್ ಕೇಂದ್ರ ಭಾರತದಲ್ಲಿ ವಾಸ ಮಾಡಿದರು; ಮೊದಲು ಈಗಿನ ಮಧ್ಯಪ್ರದೇಶ ಹಾಗೂ ಛತ್ತೀಸಗಡದ ಅರಣ್ಯ ಪ್ರದೇಶದಲ್ಲಿ, ಆಮೇಲೆ ಒಡಿಶಾದ ಬುಡಕಟ್ಟು ಜನಾಂಗದವರು ವಾಸವಿದ್ದ ಸ್ಥಳಗಳಲ್ಲಿ. ಆದಿವಾಸಿ ಸಂಸ್ಕೃತಿಯ ಕುರಿತು ಅವರು ವಿದ್ವತ್ಪೂರ್ಣವಾದ, ಮಹತ್ವದ ಮಾಹಿತಿಯನ್ನು ಅಡಗಿಸಿಟ್ಟ ಸರಣಿ ಕೃತಿಗಳನ್ನು ಬರೆದರು. ಅಷ್ಟೇ ಅಲ್ಲ, ಆ ಜನಾಂಗದವರ ಮೇಲೆ ನಡೆದ ಆರ್ಥಿಕ ಶೋಷಣೆ, ಇರುವ ರಾಜಕೀಯ ನಿರ್ಲಕ್ಷ್ಯದ ಬಗೆಗೆ ಅನೇಕ ಜನಪ್ರಿಯ ಪ್ರಬಂಧಗಳನ್ನೂ ಬರೆದರು. ತಮ್ಮ ಇಂಥ ಬರಹಗಳ ಮೂಲಕವೇ ಅವರು ಆದಿವಾಸಿ ಹಕ್ಕುಗಳ ತೀವ್ರ ಪರಿಣಾಮಕಾರಿ ವಕ್ತಾರ ಎನಿಸಿಕೊಂಡರು.
ಇನ್ನೊಂದು ಕಡೆ ಬುಡಕಟ್ಟು ಜನಾಂಗದವರು ಹಿಂದುಳಿದ ಹಿಂದೂಗಳು ಎಂದೇ ಭಾವಿಸಿದ್ದ, ಅವರನ್ನು ಪ್ರಮುಖ ವಲಯದ ಜೊತೆಗೇ ಮಿಳಿತಗೊಳಿಸಿ ಮಾತನಾಡುತ್ತಿದ್ದ ರಾಷ್ಟ್ರೀಯತಾವಾದಿಗಳ ಕೋಪಕ್ಕೂ ಎಲ್ವಿನ್ ಬರಹಗಳು ಕಾರಣವಾದವು. ಎಲ್ವಿನ್ ಮಾತ್ರ ಇವ್ಯಾವುದರಿಂದಲೂ ವಿಚಲಿತರಾಗದೆ ಆದಿವಾಸಿಗಳ ಅನನ್ಯ ಸಂಸ್ಕೃತಿ, ಅವರ ಕಾವ್ಯ ಪರಂಪರೆ, ಕಲೆ, ಸಂಗೀತ, ನೃತ್ಯ, ಪ್ರಕೃತಿ ಪ್ರೇಮ, ಪ್ರಾದೇಶಿಕ ಪ್ರೀತಿ ಎಲ್ಲವುಗಳ ಕುರಿತು ಬರೆಯುವುದನ್ನು ಮುಂದುವರಿಸಿದರು.
೧೯೪೭ರ ನಂತರವೂ ವೆರಿಯರ್ ಎಲ್ವಿನ್ ಭಾರತದಲ್ಲಿಯೇ ನೆಲೆಸಿದರು. ೧೯೫೪ರ ಹೊತ್ತಿಗೆ ಅವರು ನಮ್ಮ ದೇಶದ ಪ್ರಜೆಯೇ ಆದರು. ಆಗ ಅವರನ್ನು ಈಶಾನ್ಯ ಗಡಿಭಾಗದ (ಈಗಿನ ಅರುಣಾಚಲ ಪ್ರದೇಶ) ಸಂಸ್ಥೆಯೊಂದಕ್ಕೆ ಬುಡಕಟ್ಟು ಜನಾಂಗದವರ ವಿಷಯದಲ್ಲಿ ಮಾರ್ಗದರ್ಶನ ತೋರಲು ಸಲಹೆಗಾರರಾಗಿ ನೇಮಿಸಿಕೊಳ್ಳಲಾಯಿತು. ವಯಸ್ಸಾದರೂ, ಸ್ಥೂಲಕಾಯ ಇದ್ದರೂ ಅವರು ಸಂಶೋಧನೆಯನ್ನು ಮಾತ್ರ ಬಿಡಲೇ ಇಲ್ಲ. ಪ್ರವಾಸ ಮಾಡುತ್ತಲೇ ಇದ್ದರು. ನಡೆದೋ, ಕುದುರೆ ಏರಿಯೋ ಪ್ರಾಂತ್ಯದ ತೀರಾ ಹಿಂದುಳಿದ ಪ್ರದೇಶಗಳನ್ನು ತಲುಪುತ್ತಿದ್ದರು. ಅಲ್ಲಿನ ಬುಡಕಟ್ಟು ಜನರ ಜೀವನಶೈಲಿ, ಸಂಸ್ಕೃತಿಯನ್ನು ಅರಿಯುವುದು ಅವರ ಉದ್ದೇಶವಾಗಿತ್ತು.
ಕೇಂದ್ರ ಸರ್ಕಾರವು ಇಂಥ ಗಡಿ ಪ್ರದೇಶಗಳಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಯತ್ನಿಸುತ್ತಿದ್ದ ಕಾಲಘಟ್ಟ ಅದು. ತಮ್ಮ ರಾಜಕೀಯ ಮೇಲಧಿಕಾರಿಗಳಿಗೆ ಎಲ್ವಿನ್, ನಿಧಾನವೇ ಪ್ರಧಾನ ಎಂಬ ತತ್ವವನ್ನು ಮನದಟ್ಟು ಮಾಡಿಸಿದರು. ಆ ಅರಣ್ಯ ಪ್ರದೇಶದಲ್ಲಿದ್ದ ಬುಡಕಟ್ಟು ಜನರ ಹಕ್ಕುಗಳನ್ನು ರಕ್ಷಿಸಬೇಕೆಂದು ಪ್ರತಿಪಾದಿಸಿದರು. ಅಲ್ಲಿ ಕೆಲಸ ಮಾಡಲು ಸೂಕ್ಷ್ಮಮತಿಗಳಾದ, ಸಾಮಾಜಿಕ ಬದ್ಧತೆ ಇರುವ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಸಲಹೆ ಕೊಟ್ಟರು. ‘ಎ ಫಿಲಾಸಫಿ ಆಫ್ ನೇಫಾ’ ಎಂಬ ಪುಸ್ತಕದಲ್ಲಿ ಅವರು ತಮ್ಮ ಚಿಂತನೆಗಳನ್ನೆಲ್ಲಾ ಬರೆದಿದ್ದಾರೆ. ಅದು ಮೊದಲ ಪ್ರಕಟಣೆ ಕಂಡು ಐವತ್ತಾರು ವರ್ಷಗಳಾದವು. ಕೇಂದ್ರ ಹಾಗೂ ಈಶಾನ್ಯ ಭಾರತದಲ್ಲಿ ಬುಡಕಟ್ಟು ಜನರನ್ನು ಪ್ರತ್ಯೇಕತಾಭಾವದಿಂದ ಯಾಕೆ ನೋಡಲಾಗುತ್ತಿದೆ ಎಂಬುದನ್ನು ಸಮರ್ಪಕವಾಗಿ, ಗಮನ ಸೆಳೆಯುವಂತೆ ತಿಳಿಸಿಕೊಡುವ ಆ ಕೃತಿ ಈಗಲೂ ಪ್ರಸ್ತುತವಾಗಿದೆ.
ಎಲ್ವಿನ್ ಆತ್ಮಕಥೆ ಈಗಲೂ ಅಚ್ಚಾಗಿದೆ. ಅಂತೆಯೇ ಅವರ ಅನೇಕ ವಿಶೇಷ ಬರಹಗಳು ಮರುಮುದ್ರಿತವಾಗುತ್ತಿವೆ. ಅಂಥ ದೊಡ್ಡ ಮನುಷ್ಯನ ಕುರಿತು ನನಗೇನೋ ಭಾವನಾತ್ಮಕ ಆಸಕ್ತಿ ಇದೆ. ಅದರ ಹೊರತಾಗಿಯೂ ಇಂದಿನ ನನ್ನ ದೇಶದ ಯುವಕರು ಬ್ರಿಟನ್‌ನಲ್ಲಿ ಹುಟ್ಟಿದ ಈ ಭಾರತೀಯನ, ಆದಿವಾಸಿಗಳ ನಡುವೆ ಬದುಕಿದ ಈ ಆಕ್ಸ್‌ಫರ್ಡ್ ಸಂಶೋಧಕನ, ವ್ಯವಸ್ಥೆಯ ವಿರುದ್ಧ ಬಂಡೆದ್ದ ದಿಟ್ಟ ವ್ಯಕ್ತಿತ್ವದವನ ಕುರಿತು ತಿಳಿದುಕೊಳ್ಳಲೇಬೇಕು ಎಂಬುದಕ್ಕೆ ಕನಿಷ್ಠ ಐದು ಕಾರಣಗಳು ಸಿಕ್ಕಾವು.
ಮೊದಲನೆಯದು–ಅಂತರ್ನಂಬಿಕೆಗಳ ತಳಹದಿಯ ಮೇಲೆ ಸಂಬಂಧಗಳು ನಿಂತಿವೆ ಎಂಬುದು ಎಲ್ವಿನ್ ಆಳವಾದ ಚಿಂತನೆಯಾಗಿತ್ತು. ಆದರೆ ಭಾರತದ ಆಧುನಿಕ ಚರಿತ್ರೆಯಲ್ಲಿ ಎದ್ದುಕಾಣುವುದು ಹಿಂದೂ, ಮುಸ್ಲಿಮರ ವೈರ, ವೈಷಮ್ಯ. ಭಾರತದ ಆಚೆಗಿನ ಚರಿತ್ರೆ ಗಮನಿಸಿದರೆ, ಇತ್ತೀಚಿನ ವರ್ಷಗಳಲ್ಲಿ ಕ್ರಿಶ್ಚಿಯನ್, ಮುಸ್ಲಿಮರ ನಡುವಿನ ಹಗೆತನ ಕಣ್ಣಿಗೆ ಕಾಣುವಷ್ಟು ದಟ್ಟವಾಗಿದೆ. ಮಹಾತ್ಮ ಗಾಂಧಿಯವರ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಎಲ್ವಿನ್, ಬೇರೆಯವರ ನಂಬಿಕೆಗಳನ್ನು ಕೀಳಾಗಿ ಕಾಣದೆಯೇ ಒಬ್ಬ ತನ್ನದೇ ಆದ ನಂಬಿಕೆಗಳನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟವರು. ವಿಧಿವತ್ತಾಗಿ ಕ್ರಿಶ್ಚಿಯನ್ ಚರ್ಚ್‌ನ ಪಾದ್ರಿಯಾಗಿದ್ದ ಅವರು ತಾವಿದ್ದ ಪ್ರದೇಶದ ಬುಡಕಟ್ಟು ಜನರ ಮತಾಂತರ ಮಾಡುವುದನ್ನು ವಿರೋಧಿಸಿದವರು. ಕ್ರಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯಗಳಿಗೆ ಪರ್ಯಾಯವಾದ ಅಧ್ಯಾತ್ಮ ಜ್ಞಾನದ ಬಗ್ಗೆ ಕೂಡ ಅವರು ಸೊಗಸಾಗಿ ಬರೆದಿದ್ದಾರೆ. ಕಾಲಕ್ರಮೇಣ ಅವರು ಬೌದ್ಧಧರ್ಮದಲ್ಲಿ ಆಸಕ್ತಿ ಬೆಳೆಸಿಕೊಂಡರು.
ಎರಡನೆಯದು–ಎಲ್ವಿನ್ ಒಬ್ಬ ಸಂಶೋಧಕರಷ್ಟೇ ಅಲ್ಲ; ಉತ್ತಮ ಶೈಲಿಯ ಗದ್ಯ ಬರಹಗಾರ. ಭೌತ ವಿಜ್ಞಾನಿಗಳು, ಗಣಿತಜ್ಞರು (ಅಷ್ಟೇ ಏಕೆ, ತತ್ವಜ್ಞಾನಿಗಳು ಹಾಗೂ ಅರ್ಥಶಾಸ್ತ್ರಜ್ಞರು ಕೂಡ) ತಮ್ಮ ಸಂಶೋಧನೆಯ ವಿಚಾರಗಳನ್ನು ಮಂಡಿಸಲು ತಾಂತ್ರಿಕ ಭಾಷೆ ಬಳಸುತ್ತಾರೆ. ಆದರೆ ಇತಿಹಾಸಕಾರರು, ಮಾನವಶಾಸ್ತ್ರ ಅಧ್ಯಯನ ಮಾಡುವವರಿಗೆ ಅಂಥ ಭಾಷೆಯ ಹಂಗು ಇರಬೇಕಾಗಿಲ್ಲ. ಆದರೂ ಕೆಲವು ಸಂಶೋಧಕರು ತಮ್ಮ ವಾದ ಮಂಡಿಸಲು ಕಬ್ಬಿಣದ ಕಡಲೆಯಂಥ ಪದಪುಂಜಗಳನ್ನು ಪ್ರಜ್ಞಾಪೂರ್ವಕವಾಗಿ ಬಳಸುತ್ತಾರೆ. ಸಾಂದ್ರ ಎನ್ನಿಸುವ ಆ ಭಾಷೆಯಲ್ಲಿ ವಿಚಾರಸ್ಪಷ್ಟತೆ ಸಾಧ್ಯವಾಗುವುದಿಲ್ಲ. ನಮ್ಮ ನಡುವೆ ಬದುಕುತ್ತಿರುವ ಸಾಮಾನ್ಯ ಜನರಿಗಾಗಿ ಬರೆಯಬೇಕು ಎಂಬುದನ್ನೇ ಮರೆತು ಇಂಥ ಸಂಶೋಧಕರು ಬರೆಯುತ್ತಾರೆ.
ಕೆಟ್ಟ ಬರವಣಿಗೆ ಅಕಡೆಮಿಕ್ ವಲಯದಲ್ಲಿ ಸರ್ವತ್ರ ಎಂಬಂತಾಗಿದೆ. ಇದಕ್ಕೆ ತಪ್ಪು ಮನೋಧರ್ಮ ಕಾರಣವಿರಬಹುದು. ಕೆಲವೊಮ್ಮೆ ಅದಕ್ಷತೆಯನ್ನು ಮರೆಮಾಚಿಕೊಳ್ಳಲು ಹೀಗೆ ಬರೆಯುವುದುಂಟು. ಇಂಥ ಕ್ಲಿಷ್ಟ ಪದಪುಂಜಗಳ ಲೋಕದಲ್ಲಿ ವಿಹರಿಸುವ ಯುವ ಮಾನವಶಾಸ್ತ್ರ ಅಧ್ಯಯನಕಾರರು, ಇತಿಹಾಸಕಾರರು ಹಾಗೂ ಸಾಹಿತ್ಯ ಪ್ರಭೃತಿಗಳು ಎಲ್ವಿನ್ ಬರವಣಿಗೆಯನ್ನು ಓದಲೇಬೇಕು. ತಮ್ಮ ಸಂಶೋಧನೆಯಿಂದ ಹೊಳೆದ ವಿಚಾರಗಳನ್ನು ಅವರು ಸರಳವಾಗಿ, ಅರ್ಥವಾಗುವಂತೆ ಬರೆದಿದ್ದಾರೆ.
ಮೂರನೆಯದು–ಎಲ್ವಿನ್ ಪ್ರಜ್ಞಾಪೂರ್ವಕವಾಗಿ ಪರಿಸರವಾದಿಯಾಗಿದ್ದರು. ಆಕ್ಸ್‌ಫರ್ಡ್ ವಿದ್ಯಾರ್ಥಿಯಾಗಿದ್ದಾಗ ವಿಲಿಯಂ ವರ್ಡ್ಸ್ವರ್ತ್ ಪ್ರಭಾವಕ್ಕೆ ಒಳಗಾದವರು ಅವರು. ತಮ್ಮ ಆ ಹೀರೊ ತರಹವೇ ಅವರೂ ಪ್ರಕೃತಿ ಸೌಂದರ್ಯದ ಕುರಿತು ಬರೆದರು. ಆಮೇಲೆ ಆದಿವಾಸಿಗಳ ನಡುವೆ ಬದುಕತೊಡಗಿದಾಗ ಪರಿಸರದ ಜೊತೆಗೆ ಆ ಜನರಿಗೆ ಇರುವ ಸಂಬಂಧದ ಆಳವನ್ನು ಅರಿತರು. ಆ ಸಂಬಂಧವನ್ನು ಮುರಿದುಹಾಕುವ ಆತಂಕವನ್ನು ವಾಣಿಜ್ಯವನ್ನೇ ಮುಖ್ಯವಾಗಿಸಿಕೊಂಡ ಕೆಲವು ಅರಣ್ಯ ಯೋಜನೆಗಳು ಒಡ್ಡಿದ್ದವು ಎಂಬುದೂ ಅವರಿಗೆ ಅರ್ಥವಾಗಿತ್ತು. ಈಶಾನ್ಯ ಪ್ರದೇಶದ ಕಾಡುಗಳಲ್ಲಿ ತಾವು ವಾಸವಿದ್ದ ಅವಧಿಯಲ್ಲಿ ಅಲ್ಲಿನ ಆದಿವಾಸಿಗಳ ಸ್ವಾವಲಂಬಿ ಬದುಕಿನ ದಾರಿಗಳನ್ನು ಹತ್ತಿರದಿಂದ ಕಂಡವರು ಅವರು. ದೇಶದ ವಿವಿಧೆಡೆ ಮೂಲ ಕೇಂದ್ರಿತ, ಶಕ್ತಿ ಕೇಂದ್ರಿತ ಅಭಿವೃದ್ಧಿಯ ಮಾದರಿಗಳು ಮಹತ್ವ ಪಡೆದುಕೊಂಡಿರುವ ಈ ದಿನಮಾನದಲ್ಲಿ ಎಲ್ವಿನ್ ಅಧ್ಯಯನದ ಮಾಹಿತಿ ನಿಜಕ್ಕೂ ಔಚಿತ್ಯಪೂರ್ಣ.
ನಾಲ್ಕನೆಯದು– ಆದಿವಾಸಿಗಳ ಮೂಲ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಭಾರತೀಯ ರಾಷ್ಟ್ರೀಯತೆಯ ಸೋಲನ್ನೂ ಎಲ್ವಿನ್ ಸಂಶೋಧನೆ ಅನಾವರಣಗೊಳಿಸಿದೆ. ಗಾಂಧಿ ಹಾಗೂ ಇತರ ರಾಷ್ಟ್ರೀಯತಾವಾದಿಗಳು ಅಸ್ಪೃಶ್ಯತೆ ಹೋಗಲಾಡಿಸಬೇಕು, ಮಹಿಳೆಯರ ಸ್ಥಾನಮಾನ ಸುಧಾರಿಸಬೇಕು, ಹಿಂದೂ, ಮುಸ್ಲಿಮರ ನಡುವೆ ಸೌಹಾರ್ದ ಸಂಬಂಧ ಬೆಸೆಯಬೇಕು ಎಂದು ಪ್ರತಿಪಾದಿಸಿದರು. ದಲಿತರು ಹಾಗೂ ಧಾರ್ಮಿಕ ಅಲ್ಪ ಸಂಖ್ಯಾತರಲ್ಲಿ ನಾಯಕರಿದ್ದರೂ, ಅವರು ಕಾಂಗ್ರೆಸ್ ನೇತೃತ್ವದ ರಾಷ್ಟ್ರೀಯ ಚಳವಳಿಯಲ್ಲಿ ಭಾಗಿಯಾಗಲಿಲ್ಲ (ಉದಾಹರಣೆಗೆ ಬಿ.ಆರ್. ಅಂಬೇಡ್ಕರ್). ಆದಿವಾಸಿಗಳ ಬದುಕಿನ ವಿಶೇಷ ಸ್ವರೂಪ, ಬುಡಕಟ್ಟು ಜನರ ವಿಶೇಷ ಅಗತ್ಯಗಳನ್ನು ವಸಾಹತುಶಾಹಿ ನಂತರದ ಕಾಲದಲ್ಲಿ ರಾಜಕೀಯ ರೂಪಿಸಿದವರು ನಿರ್ಲಕ್ಷಿಸುತ್ತಾ ಬಂದರು. ಸ್ವತಂತ್ರ ಭಾರತದ ಜನಜೀವನದ ಮೇಲೆ ಈ ವೈಫಲ್ಯ ದೊಡ್ಡ ಪರಿಣಾಮವನ್ನೇ ಬೀರಿತು. ದಲಿತರು ಹಾಗೂ ಮುಸ್ಲಿಮರನ್ನು ರಾಜಕಾರಣಿಗಳು ‘ವೋಟಿಂಗ್ ಬ್ಲಾಕ್ಸ್’ ಮಾಡಿಕೊಂಡರು. ಪ್ರಮುಖ ರಾಜಕೀಯ ಪಕ್ಷಗಳು ಅವರ ಸಮಸ್ಯೆಗಳನ್ನು ಮುಂದಿಟ್ಟುಕೊಂಡೇ ರಾಜಕೀಯ ಮಾಡತೊಡಗಿದವು. ಆದಿವಾಸಿಗಳು ಹೆಚ್ಚೂಕಡಿಮೆ ಧ್ವನಿ ಇಲ್ಲದವರಾದರು. ಪ್ರಜಾಪ್ರಭುತ್ವದಲ್ಲಿ ಅವರ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯೇ ಇಲ್ಲವಾಯಿತು.
ಗಣಿಗಾರಿಕೆ, ನೀರಾವರಿ ಯೋಜನೆಗಳಿಂದ ಅವರು ನಿರಾಶ್ರಿತರಾಗಿ, ತಮ್ಮದೇ ಎಂದುಕೊಂಡಿದ್ದ ಭೂಮಿ ಕಳೆದುಕೊಂಡು ಕಂಗಾಲಾದ ಉದಾಹರಣೆಗಳಂತೂ ಸಾಕಷ್ಟಿವೆ. ರಾಜಕೀಯವಾಗಿ ಅವರನ್ನು ಒಂದು ಕಡೆ ಹೊರಗಿಡಲಾಗಿದೆ. ಇನ್ನೊಂದು ಕಡೆ ಮಾವೊ ಕ್ರಾಂತಿಕಾರಿಗಳು ಅವರ ಆರ್ಥಿಕ ಸಂಕಷ್ಟದ ಲಾಭ ಪಡೆಯುತ್ತಿದ್ದಾರೆ. ಎಲ್ವಿನ್ ಬರಹಗಳು ಇಂಥ ಸಂದರ್ಭದಲ್ಲಿ ಹೆಚ್ಚು ಔಚಿತ್ಯಪೂರ್ಣವೆನಿಸುತ್ತವೆ. ಭಾರತೀಯ ಸಂವಿಧಾನದಲ್ಲಿ ಆದಿವಾಸಿಗಳ ಹಿತಾಸಕ್ತಿಯನ್ನು ಹೇಗೆ ಅರ್ಥಪೂರ್ಣವಾಗಿ ಸೇರಿಸಬಹುದು ಎಂಬುದು ಎಲ್ವಿನ್ ಬರಹಗಳಿಂದ ಅರಿವಿಗೆ ಬಂದೀತು.
ಕೊನೆಯದಾಗಿ– ಎಲ್ವಿನ್ ಬದುಕು ಘನತೆವೆತ್ತಂಥದ್ದು. ಅವರು ಸುತ್ತಾಡಿದ, ನೆಲೆನಿಂತ ಸ್ಥಳಗಳ ವೈವಿಧ್ಯ ಅವರಲ್ಲಿ ಮೂಡಿಸಿದ ಅನುಭವ ದಟ್ಟವಾದದ್ದು. ಕ್ರಿಶ್ಚಿಯಾನಿಟಿ ಹಾಗೂ ಹಿಂದುತ್ವದ ನಡುವೆ, ನಗರ ಹಾಗೂ ಕಾಡುಗಳ ನಡುವೆ, ಭಾರತ ಹಾಗೂ ಇಂಗ್ಲೆಂಡ್‌ನ ನಡುವೆ, ಬಡವರು ಹಾಗೂ ಬಲ್ಲಿದರ ನಡುವೆ, ದೇಸೀಯತೆ ಹಾಗೂ ಜಾಗತೀಕರಣದ ನಡುವೆ ಸರಣಿ ಸೇತುವೆಗಳನ್ನು ಕಟ್ಟಿದ ವ್ಯಕ್ತಿ ಅವರು. ಅವರ ಅದ್ಭುತವಾದ, ಘಟನಾವಳಿಗಳಿಂದ ತುಂಬಿದ ಬದುಕು ಆಧುನಿಕ ಭಾರತದ; ಅಷ್ಟೇ ಏಕೆ, ಜಗತ್ತಿನ ಇತಿಹಾಸದ ಕಿಟಕಿಯಂತೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ