ಗುರುವಾರ, ಫೆಬ್ರವರಿ 27, 2014

ನರಬಲಿ: ಎಷ್ಟೊಂದು ರೂಪಗಳು!



-ರಹಮತ್ ತರೀಕೆರೆ


ಜಗತ್ತಿನ ಎಲ್ಲ ಪ್ರಧಾನ ಧರ್ಮಗಳು, ಧರ್ಮದ ಹೆಸರಲ್ಲಿ ರಾಜಕಾರಣ ಮಾಡುವವರು ಎಷ್ಟೊಂದು ಬೀದಿಯ ಮೇಲೆ ರಕ್ತವನ್ನು ಹರಿಸಿದ್ದಾರೆ? ಈಗ ಉದ್ಯಮಪತಿಗಳ ಹಿತಕ್ಕಾಗಿ ನಮ್ಮ ರೈತರು ಪ್ರಾಣ ಕಳೆದುಕೊಳ್ಳುತ್ತಿರುವುದು ಆತ್ಮಹತ್ಯೆಯೊ? ನಮ್ಮ ಪ್ರಭುತ್ವಗಳು ಅಪ್ಪಿಕೊಂಡಿರುವ ಆರ್ಥಿಕನೀತಿ ಮಾಡಿದ ಕೊಲೆಗಳೊ?


ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿ ಈಚೆಗೆ ಮನುಷ್ಯರ ತಲೆಬುರುಡೆಗಳ ರಾಶಿ ಪತ್ತೆಯಾಯಿತು. ಅದರ ಮೇಲೆ ವಿದ್ವಾಂಸರು ಅನೇಕ ಊಹೆ ಮಂಡಿಸುತ್ತಿದ್ದಾರೆ. ಅವುಗಳಲ್ಲಿ ಮುಖ್ಯವಾದವು ಮೂರು: 1. ಈ ರುಂಡಗಳು ಸ್ಥಳೀಯವಾದ ರಾಜಕೀಯ ಯುದ್ಧದಲ್ಲಿ ಹತ್ಯೆಯಾದವರವು ಇರಬೇಕು. 2. ಮತೀಯ ಬಣಗಳ ನಡುವೆ ನಡೆದಿರಬಹುದಾದ ಸಂಘರ್ಷದ ಪರಿಣಾಮ ಇರಬಹುದು. 3. ಉಗ್ರದೈವವೊಂದಕ್ಕೆ ವಾಮಾಚಾರದವರು ಕೊಟ್ಟಿರುವ ಬಲಿ ಕಾರಣವಿರಬಹುದು. ಈ ಮೂರರಲ್ಲಿ ಯಾವ ಕಾರಣ ನಿಜವೊ, ಈ ಮೂರಲ್ಲದ ಮತ್ತೊಂದು ಕಾರಣವೂ ಇದೆಯೊ ತಿಳಿಯದು. ಈ ಬಗ್ಗೆ ಪರಿಣತರಾದವರು ಶೋಧ ಮಾಡಿ ಚರಿತ್ರೆಯ ಮೇಲೆ ಬೆಳಕು ಚೆಲ್ಲಬಹುದು. ಅದಕ್ಕಾಗಿ ಕಾಯೋಣ.

ಈ ಅಂಕಣದ ಉದ್ದೇಶ ಮೇಲ್ಕಾಣಿಸಿದ ಸಮಸ್ಯೆಯನ್ನು ಬಿಡಿಸುವುದಲ್ಲ. ಬದಲಿಗೆ ನಾಥ ಮತ್ತು ಶಾಕ್ತ ಪಂಥದ ಅಧ್ಯಯನಕ್ಕಾಗಿ ತಿರುಗಾಟ ಮಾಡುವ ಹೊತ್ತಲ್ಲಿ, ನಾನು ಕಂಡ ರುಂಡಶಿಲ್ಪ ಹಾಗೂ ಬಲಿಶಿಲ್ಪಗಳ ಬಗ್ಗೆ ಹೇಳುವುದು; ಇವುಗಳ ನೆಪದಲ್ಲಿ ನಮ್ಮ ಸಮಾಜದಲ್ಲಿರುವ ನರಬಲಿಯ ನಾನಾ ನಮೂನೆಗಳನ್ನು ಕುರಿತು ಮಾಡಿದ ತಕ್ಷಣದ ಆಲೋಚನೆಗಳನ್ನು ಹಂಚಿಕೊಳ್ಳುವುದು. 

  ನಮ್ಮಲ್ಲಿ ನರಬಲಿ ವ್ಯಾಪಕವಾಗಿತ್ತು. ಇದಕ್ಕೆ ಸಾಕ್ಷಿ ಕರ್ನಾಟಕದ ತುಂಬ ಇರುವ ಬಲಿಶಿಲ್ಪ ಮತ್ತು ರುಂಡಶಿಲ್ಪ. ಬಲಿಶಿಲ್ಪವು ದೇಹವು ಬಲಿಯಾಗುತ್ತಿರುವ ಹೊತ್ತಿನ ಇಡೀ ಸನ್ನಿವೇಶವನ್ನು ಒಳಗೊಂಡಿರುತ್ತದೆ;  ರುಂಡಶಿಲ್ಪವೆಂದರೆ, ಬಲಿಯಾದ ವೀರನ ತಲೆಚೆಂಡನ್ನಷ್ಟೇ ಕೆತ್ತಿರುವುದು. ಶ್ರಿಶೈಲ, ಮೊಳಕಾಲ್ಮೂರು ಬಳಿಯ ಲುಂಕೆಮಲೆ, ಆದಿಚುಂಚನಗಿರಿ, ಕಡೂರು ಬಳಿಯ ತುರುವನಹಳ್ಳಿ, ಚಿಕ್ಕಮಗಳೂರು ಸಮೀಪದ ಹಲಸಬಾಳು, ಗೋಕಾಕದ ಜೋಗಿಕೊಳ್ಳ, ಬಳ್ಳಾರಿ ಜಿಲ್ಲೆಯ ಮೈಲಾರ ಮತ್ತು ಹಿರೇಮೈಲಾರ-ಮುಂತಾದ ಕಡೆ ಈ ಎರಡೂ ಬಗೆಯ ಶಿಲ್ಪಗಳಿವೆ. 
ಮೇಲೆ ಕಾಣಿಸಿದ ಜಾಗಗಳಲ್ಲಿ ಹೆಚ್ಚಿನವು ಭೈರವಾರಾಧನೆಗೆ ಸಂಬಂಧಪಟ್ಟವು. ಶ್ರಿಶೈಲದ ಮಲ್ಲಿಕಾರ್ಜುನ ಗುಡಿಯ ಪ್ರಾಕಾರವು ಶಿವಭಕ್ತರು ಅನೇಕ ವಿಧಾನಗಳಲ್ಲಿ ಬಲಿಹೋಗುವ ಉಬ್ಬುಶಿಲ್ಪಗಳಿಂದ ತುಂಬಿದೆ. ಹಳೇಬೀಡಿನ ಹೊಯ್ಸಳೇಶ್ವರ ಗುಡಿಯ ಗೋಡೆಯಲ್ಲೂ ಭೈರವನಿಗೆ ಮಗುವೊಂದನ್ನು ಬಲಿಗೊಡುತ್ತಿರುವ ಶಿಲ್ಪವಿದೆ. ನರಬಲಿಯ ಮುಖ್ಯ ದೈವಗಳೆಂದರೆ, ಭೈರವ ಮತ್ತು ಕಾಳಿ(ಭೈರವಿ).  ಈಗಲೂ ಈ ಎರಡು ದೈವಶಿಲ್ಪಗಳಲ್ಲಿ, ಕೈಯಲ್ಲಿ ಕತ್ತರಿಸಿದ ನರರುಂಡ, ಕೊರಳಲ್ಲಿ ರುಂಡಮಾಲೆ, ಕೆಲವೊಮ್ಮೆ ತ್ರಿಶೂಲದ ತುದಿಯಲ್ಲಿ ಸಿಲುಕಿರುವ ನರದೇಹ, ಪಾದದಡಿಯಲ್ಲಿ ಕತ್ತರಿಸಿದ ರುಂಡಗಳು ಇವೆ. ಮಹಾಯಾನ ಪಂಥಕ್ಕೆ ಸೇರಿದ ತಾಂತ್ರಿಕ ಬೌದ್ಧರ ಚಿತ್ರಪಟಗಳಲ್ಲೂ ನರಶಿರಗಳ ಮಾಲೆ ತೊಟ್ಟ ದೇವತೆಗಳಿದ್ದಾರೆ. 

ನರಬಲಿಯು ಕರ್ನಾಟಕಕ್ಕೆ, ಭಾರತಕ್ಕೆ ಅಥವಾ ಯಾವುದೊ ಒಂದು ಮತಕ್ಕೆ ಸಂಬಂಧಪಟ್ಟಿದ್ದಲ್ಲ. ಇದು ವಿಶ್ವವ್ಯಾಪಿಯಾಗಿ ಕಂಡುಬರುವ ಅತಿ ಪ್ರಾಚೀನವಾದ ಪಂಥೀಯ (ಕಲ್ಟಿಕ್) ಆಚರಣೆ. ಮುಸ್ಲಿಮರು ಆಚರಿಸುವ ಬಕ್ರೀದ್ ಹಬ್ಬವು ಈಗ ಪ್ರಾಣಿಬಲಿಯ ಮೂಲಕ ನಡೆಯುತ್ತಿದೆ. ಇದರ ಮೂಲವು, ಮೆಕ್ಕಾದಲ್ಲಿ ಪ್ರವಾದಿ ಇಬ್ರಾಹಿಂ, ತನ್ನ ಮಗ ಇಸ್ಮಾಯಿಲನನ್ನು ದೇವರ ಹೆಸರಲ್ಲಿ ಬಲಿಕೊಡಲು ಮುಂದಾದ ಘಟನೆಯಲ್ಲಿದೆ. ಭಾರತದಲ್ಲಿ ಮಾರುವೇಷದಲ್ಲಿ ಭಕ್ತರ ಪರೀಕ್ಷೆ ಮಾಡಲೆಂದು ಬಂದ ದೈವಕ್ಕೆ ತಮ್ಮ ಮಗುವನ್ನೆ ಕತ್ತರಿಸಿ ಅಟ್ಟು ಬಡಿಸಿದ ತಾಯಿತಂದೆಯರ ಅಪಾರ ಕಥೆಗಳಿವೆ. ಭಕ್ತ ಸಿರಿಯಾಳನ ಕತೆ ಇದರಲ್ಲಿ ಒಂದು. ಚಳ್ಳಕೆರೆ ತಾಲೂಕಿನ ಖುದಾಪುರದ ಭೈರವನಿಗೆ ಸಂಬಂಧಪಟ್ಟ ಕಥೆಯಲ್ಲಿ, ಭಕ್ತನೊಬ್ಬನು ತನ್ನ ಕೂಸನ್ನು ಬಲಿಗೊಟ್ಟ ಸನ್ನಿವೇಶವಿದೆ. ಮಕ್ಕಳನ್ನು ಪಡೆಯಲು  ಹರಸಿಕೊಳ್ಳುವ ತಾಯ್ತಂದೆಯರೆ, ದೈವಗಳನ್ನು ತೃಪ್ತಿಪಡಿಸಲು ಮಕ್ಕಳನ್ನು ಬಲಿಗೊಡುವುದು ಒಂದು ವಿಚಿತ್ರ. 

ಕರ್ನಾಟಕದಲ್ಲಿ ಸಿಗುವ ರುಂಡಶಿಲ್ಪಗಳು ಬಹುಶಃ ನರಬಲಿ ಹೋದವರ ಪ್ರತಿಕೃತಿಗಳು. ಮುಚ್ಚಿದಕಣ್ಣು, ಆರೋಗ್ಯವಂತಿಕೆಯಿಂದ ತುಂಬಿರುವ ಕೆನ್ನೆ, ಹುರಿಮಾಡಿದ ಮೀಸೆ, ಶಾಂತವಾದ ಮುಖ- ಇವುಗಳ ಲಕ್ಷಣ. ಕೆಲವರು ಇವನ್ನು ‘ಬಲಿದಾನ’ ಎಂದು ಕರೆದಿರುವುದುಂಟು. ಹರಸಿಕೊಂಡ ವ್ಯಕ್ತಿ ತನ್ನ ಜೀವವನ್ನು ದೈವಕ್ಕೆ ಕೊಡುವುದನ್ನು ‘ಬಲಿದಾನ’ವೆಂದರೆ ಕೊಂಚ ಒಪ್ಪಬಹುದು. ಆದರೆ ಕೆಲವರು ಜನರ ಬಲಿಗೆ ಒಪ್ಪಿಸಿಯೊ ಬಲವಂತದಿಂದ ಹಿಡಿದು ತಂದೊ ಬಲಿಕೊಡುವುದನ್ನು ‘ಬಲಿದಾನ’ ಎನ್ನಲಾಗದು.  

ಈಗ ನಾನಾ ಕಾರಣಗಳಿಂದ ನರಬಲಿ ಹೋಗುವ ಅಥವಾ ಕೊಡುವ ಪದ್ಧತಿ ಕಡಿಮೆಯಾಗಿದೆ. ಆದರದು ಸಂಪೂರ್ಣ ನಿಂತಂತಿಲ್ಲ. ನಿಧಿಗಾಗಿಯೊ ನಿರ್ದಿಷ್ಟ ಉದ್ದೇಶ ಸಾಧನೆಗಾಗಿಯೊ ಮಕ್ಕಳನ್ನು (ಅದರಲ್ಲೂ ನಿರ್ದಿಷ್ಟ ಚಹರೆಯುಳ್ಳ ಮಕ್ಕಳನ್ನು) ಹಿಡಿದು, ಗುಪ್ತವಾಗಿ ಬಲಿಕೊಟ್ಟ ಘಟನೆಗಳು ವರದಿ ಆಗುತ್ತಲೇ ಇವೆ; ದೈವವು ಕನಸಿನಲ್ಲಿ ಕಾಣಿಸಿಕೊಂಡು ತನ್ನ ತಲೆ ಕೊಡಲು ಸೂಚಿಸಿತು ಎಂದು ಕೆಲವರು ‘ಸ್ವಹತ್ಯೆ’ ಮಾಡಿಕೊಳ್ಳುವ ಸುದ್ದಿಗಳು ಪ್ರಕಟವಾಗುತ್ತಲೇ ಇವೆ. 

ಗದಗ ಸೀಮೆಯಲ್ಲಿ ಕಳೆದ ವರ್ಷ ಒಬ್ಬ ಭಾವುಕ ವ್ಯಕ್ತಿ ತನ್ನನ್ನು ಹೀಗೆ ಬಲಿಕೊಟ್ಟುಕೊಂಡರು. ಹಂಪಿಯ ಶ್ರಿ. ಶಿವಾನಂದ ಯೋಗಿ ಅವರು, ತಮ್ಮ ದೇಶಾಟನೆಯ ಕಾಲದಲ್ಲಿ ಕಂಡ ನರಬಲಿಯ ಘಟನೆಯನ್ನು ನನ್ನಲ್ಲಿ ಹೇಳಿದ್ದರು. ಮಹಾಕಾಳ ಉಜ್ಜೈನಿಯ ಕಾಳಿ ಮಂದಿರದಲ್ಲಿ, ಅದರ ಮುಂದೆ ವಾರಕಾಲದಿಂದ ಉಪವಾಸ ವ್ರತವಿದ್ದ ಒಬ್ಬ ದೇವೀ ಉಪಾಸಕನು, ಮಹಾಪೂಜೆಯ ದಿನ ತನ್ನ ಕುತ್ತಿಗೆ ಕತ್ತರಿಸಿಕೊಂಡು ಬಲಿಹೋದ ಘಟನೆಯದು. ಚರಿತ್ರೆಯುದ್ದಕ್ಕೂ ದೇವರು, ಧರ್ಮ, ಪಂಥ ಹಾಗೂ  ದೊರೆಗಳಿಗೆ, ಜನ ಆವೇಶದಲ್ಲಿ ತಮ್ಮ ಜೀವ ಅರ್ಪಿಸುವಂತಹ ವಿದ್ಯಮಾನಗಳು ಜರುಗುತ್ತಲೇ ಬಂದಿವೆ.   

ಬಹುಶಃ ಯಾವುದೊ ಘಟ್ಟದಲ್ಲಿ ನರಬಲಿಗೆ ಬದಲಾಗಿ ಪ್ರಾಣಿಬಲಿ ಆರಂಭವಾಗಿರಬಹುದು. ಆದರೂ ನರಬಲಿಯು ವಿಭಿನ್ನ ರೂಪಾಂತರಗಳಲ್ಲಿ ನಮ್ಮ ನಡುವೆ ಉಳಿದುಕೊಂಡಿದೆ. ದೇವರಿಗೆ ಮಂಡೆಬಿಡುವ ಆಚರಣೆಯು ನರಬಲಿಯ ಪಳೆಯುಳಿಕೆಯಂತೆ ಕಾಣುತ್ತದೆ. ‘ತಲೆಕೊಡ್ತೀನಿ’ ಇತ್ಯಾದಿ ಮಾತುಗಳಲ್ಲಿ  ನರಬಲಿಯ ನೆನಪುಗಳು ಈಗಲೂ ಉಳಿದಂತಿವೆ. ಕೋಲಾರ ಸೀಮೆಯಲ್ಲಿ ಭೈರವನ ಭಕ್ತರು ತಲೆಗೆ ಬದಲು ಬೆರಳನ್ನು ಕೊಡುವ ಪದ್ಧತಿ ಈಚಿನವರೆಗೂ ಇತ್ತು. ಈಚೆಗೆ  ಮೈಸೂರು ಜಿಲ್ಲೆಯ ವಡ್ಡಗಲ್ಲು ಬೆಟ್ಟದಲ್ಲಿ, ಬೆರಳನ್ನು ಬಲಿ ಅರ್ಪಿಸಿರುವ ಒಬ್ಬ ಮೋಟುಬೆರಳ ಸಾಧಕನನ್ನು ನಾನು ನೋಡಿದೆ. ಮಾರ್ಕಂಡೇಯನು ತನ್ನ ಕಣ್ಣನ್ನು ಕಿತ್ತು ಅರ್ಪಿಸಿದ ಕತೆಯೂ ನಮಗೆಲ್ಲ ಗೊತ್ತಿದೆ. ಜನ್ನ ತನ್ನ  ‘ಯಶೋಧರ ಚರಿತೆ’ಯಲ್ಲಿ ಚಂಡಮಾರಿಗೆ ಕಣ್ಣು ಕಿತ್ತು ಅರ್ಪಿಸುವ ಉಗ್ರಭಕ್ತರನ್ನು ಬಣ್ಣಿಸುತ್ತಾನೆ. 

ಇಷ್ಟಾದರೂ ಪ್ರಾಣವನ್ನೆ ಕಳೆಯುವ ಶಿರದ ಅರ್ಪಣೆ ಬಲಿಗಳಲ್ಲೆಲ್ಲ ಆತ್ಯಂತಿಕವಾಗಿದೆ. ದೈವಕ್ಕೆ ತಮ್ಮ ದೇಹದ ಅತ್ಯುತ್ತಮವಾದ ಅಂಗವನ್ನು (ತಲೆಗೆ ‘ಉತ್ತಮಾಂಗ’ ಎಂದು ಹೆಸರಿದೆಯಷ್ಟೆ) ಅರ್ಪಿಸಬೇಕು ಎಂಬುದು ಇದರ ಹಿಂದಿನ ತರ್ಕವಿರಬೇಕು.  

ನರಬಲಿಯು ಜಗತ್ತಿನ ಅನೇಕ ಬುಡಕಟ್ಟುಗಳಲ್ಲಿ, ವಿಶೇಷವಾಗಿ ಆಫ್ರಿಕನ್ ಬುಡಕಟ್ಟುಗಳಲ್ಲಿ ಇತ್ತು. ಆಫ್ರಿಕದ ಲೇಖಕ ಚಿನುವಾ ಅಚಿಬೆಯ ‘ಥಿಂಗ್ಸ್‌ಫಾಲ್ ಅಪಾರ್ಟ್’,  ಎರಡು ಬುಡಕಟ್ಟುಗಳ ಅಂತರ್ ಸಂಘರ್ಷದ ವಸ್ತುವನ್ನು ಒಳಗೊಂಡ ಕಾದಂಬರಿ. ಅದರಲ್ಲಿ, ಒಂದು ಬುಡಕಟ್ಟಿನವರು ದಾಳಿಯಲ್ಲಿ ಸೆರೆಸಿಕ್ಕ ಎದುರಾಳಿ ಬುಡಕಟ್ಟಿನ ಹುಡುಗನನ್ನು, ತಮ್ಮ ದೈವಕ್ಕೆ ಬಲಿಕೊಡುವ ದಾರುಣ ಪ್ರಸಂಗವಿದೆ. ಆಫ್ರಿಕಾ ಮತ್ತು ಏಶಿಯನ್ ಸಮಾಜಗಳಲ್ಲಿ ಇರುವ ನರಬಲಿ ಪದ್ಧತಿಯನ್ನು ‘ಅನಾಗರಿಕ’ ಎಂದು ಬಣ್ಣಿಸುವ ಪಾಶ್ಚಿಮಾತ್ಯರು, ಈ ಕುರಿತಂತೆ ಬೀಭತ್ಸವಾದ ಸಿನಿಮಾಗಳನ್ನು ತೆಗೆದಿರುವರು (ಈ ಸರಣಿಯಲ್ಲಿ ‘ಅಪೊಕ್ಯಾಲಿಪ್ಟೊ’ ಈಚಿನದು). ಇಂತಹ ಸಿನಿಮಾ ಮತ್ತು ಸಂಶೋಧನ ಕೃತಿಗಳಲ್ಲಿ ಇರುವ ದನಿ ಮಾತ್ರ, ‘ನಾವು ನಾಗರಿಕರು ಸುಸಂಸ್ಕೃತರು; ಅವರಲ್ಲ’ ಎಂಬುದೇ ಆಗಿದೆ.

ಪ್ರಾಚೀನ ಕರ್ನಾಟಕದಲ್ಲಿ ಹಲವು ಬಗೆಯ ನರಬಲಿ ಆಚರಣೆಗಳು ಚಾಲ್ತಿಯಲ್ಲಿದ್ದವು. ನೆಲಕ್ಕೆ ನೆಟ್ಟ ಶೂಲಗಳ ಮೇಲೆ ಮೇಲಿನಿಂದ ಬಿದ್ದು (‘ಊರ್ಧ್ವಪತನ’) ಬಲಿಯಾಗುವುದು; ತಮ್ಮ ಎದೆ, ಬಾಯಿ ಅಥವಾ ಭುಜದಲ್ಲಿ ಚೂಪಾದ ತುದಿ ಹೊರಬರುವಂತೆ, ಶೂಲಕ್ಕೆ ಏರುವುದು; ಹರಿತವಾದ ಕತ್ತಿಯಲ್ಲಿ ತಮ್ಮ ಶಿರವನ್ನು ಹರಿದುಕೊಳ್ಳುವುದು-ಇತ್ಯಾದಿ. ಇವುಗಳಲ್ಲೆಲ್ಲ ಸಿಡಿತಲೆ ಆಚರಣೆ ತುಸು ಭಿನ್ನ. ಇಲ್ಲಿ ಹಸಿ ಬಿದಿರಿನ ಗಳುವನ್ನು ನೆಟ್ಟು, ಅದನ್ನು ಬಾಗಿಸಿ ನೆಲದ ಮೇಲೆ ಕೂತಿರುವ ಬಲಿ ಪುರುಷನ ಉದ್ದನೆಯ ತಲೆಗೂದಲಿಗೆ ಅದನ್ನು ಕಟ್ಟಲಾಗುತ್ತದೆ. ಆತನ ನರಗಳು ಎಳೆಯಲ್ಪಟ್ಟು ಬಿಗಿಯಾಗಿರುವ ಈ ಅವಸ್ಥೆಯಲ್ಲಿ ಕೊರಳನ್ನು ಚಕ್ಕನೆ ಕಡಿಯಲಾಗುತ್ತದೆ. ಆಗ ಮುಂಡದಿಂದ ಬೇರ್ಪಟ್ಟ ತಲೆಯನ್ನು ಎತ್ತಿಕೊಂಡು ಚಿಮ್ಮುವ ಗಳವು ಆಗಸದತ್ತ ಚಿಮ್ಮುತ್ತದೆ. 

ದೊರೆಯ ಸಾವಿನ ಸುದ್ದಿ ಕೇಳಿ ಬಲಿಹೋಗುವ ನಿಷ್ಠರ ಬಲಿಹೋಗುವಿಕೆಯ ಇನ್ನೊಂದು ವಿಧಾನವೂ ನಮ್ಮಲ್ಲಿತ್ತು. ಅದನ್ನು ‘ಕೀಳ್ಗುಂಟೆ’ ‘ವೇಳೆವಾಳಿತನ’ ಎಂದು ಕರೆಯಲಾಗುತ್ತಿತ್ತು. ಆದರೆ ಈ ಬಲಿ ಆಚರಣೆಗಳು ಪ್ರಜಾಪ್ರಭುತ್ವದ ಈ ಕಾಲದಲ್ಲೂ ನಿಂತಿಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ರಾಜಕೀಯ ನಾಯಕನೊ ನಟನೊ ತೀರಿಕೊಂಡಾಗ (ಕೆಲವೊಮ್ಮೆ ಅವರು ಚುನಾವಣೆಯಲ್ಲಿ ಸೋತಾಗಲೂ), ಬಲಿ ಹೋಗುತ್ತಲಿರುವರು. ಸಮುದಾಯಗಳಲ್ಲೇ ಇಂತಹ ದಾಸ್ಯದ ಉಗ್ರನಿಷ್ಠೆ ಇರುತ್ತದೆಯೊ, ಆದರೆ ಆಳುವ ವರ್ಗಗಳು ಇಂತಹದೊಂದು ಮನಃಸ್ಥಿತಿಯನ್ನು ಜನರಲ್ಲಿ ಬೆಳೆಸುತ್ತ ಬಂದಿದೆಯೊ? 

ಪ್ರಾಚೀನ ಕಾಲದ ನರಬಲಿಯಲ್ಲಿ ಎರಡು ವಿಶಿಷ್ಟತೆ ಎದ್ದು ಕಾಣುತ್ತವೆ. 1. ದೈವಕ್ಕೆ ಬಲಿ ಹೋಗುತ್ತಿದ್ದ ಅಥವಾ ಬಲಿ ಕೊಡಲಾಗುತ್ತಿದ್ದ ವ್ಯಕ್ತಿ ಸಾಮಾನ್ಯವಾಗಿ ಗಂಡಸು (ಪ್ರಾಣಿಗಳಲ್ಲೂ ಕೋಣ, ಟಗರುಗಳು) ಆಗಿರುವುದು. ಇಸ್ಮಾಯಿಲ್, ಶುನಶ್ಯೇಫ, ಸಿರಿಯಾಳನ ಮಗ, ಎಲ್ಲರೂ ಗಂಡುಮಕ್ಕಳೇ. (ಕೆರೆಗೆ ಕೋಟೆಗೆ ಹಾರ ಕೊಡುವಾಗ ಮಾತ್ರ ಮಹಿಳೆಯರು.) 2. ನರಬಲಿ ಹೋದವರು ಅಥವಾ ಕೊಡಲ್ಪಟ್ಟವರು, ದೊರೆಗಾಗಿ ಪ್ರಾಣಬಿಟ್ಟ ಬಹುತೇಕ ವೇಳೆವಾಳಿಗಳು ಮತ್ತು ಕೀಳ್ಗುಂಟೆಯವರು, ಸಾಮಾಜಿಕವಾಗಿ ತಳಸ್ತರಕ್ಕೆ ಸೇರಿದವರಾಗಿರುವುದು.

ಇನ್ನೊಂದು ಬಗೆಯ ‘ಜೀವದಾನ’ ನಮ್ಮ ಸಮಾಜದಲ್ಲಿತ್ತು. ಅದು ಕಳ್ಳರಿಂದ ಊರನ್ನು, ಸಾಕುಪ್ರಾಣಿಗಳನ್ನು, ಆಕ್ರಮಣಕಾರರಿಂದ ಮಹಿಳೆಯರನ್ನು ಕಾಪಾಡಲು ಹೋರಾಡುತ್ತ ಜೀವಕೊಟ್ಟ ವೀರರದು. ಇಂತಹ ವೀರರ ಹೆಸರಲ್ಲಿ ನೆಟ್ಟ ಕಲ್ಲುಗಳು ಹಳ್ಳಿಹಳ್ಳಿಗಳಲ್ಲಿ ಸಿಗುತ್ತವೆ. ಬ್ರಿಟಿಶರ ವಿರುದ್ಧ ಹೋರಾಟದಲ್ಲಿ ತಮ್ಮ ಜೀವತೆತ್ತ ವೀರರ ಸ್ಮಾರಕಗಳು ಕೂಡ ಹೆಚ್ಚುಕಡಿಮೆ ಇಂತಹವೇ. ಇಲ್ಲಿ ಬೇಂದ್ರೆ ರಾಷ್ಟ್ರೀಯ ಹೋರಾಟದ ಹೊತ್ತಲ್ಲಿ ಬರೆದ  ‘ನರಬಲಿ’ ಪದ್ಯದ ನೆನಪಾಗುತ್ತಿದೆ. ಅದರ ನಾಯಕನು ‘ಚಂಡಿಚಾಮುಂಡಿ ಪೇಳ್ ನಿನಗೆ ಬೇಕಾದುದೇನು?’ ಎಂದು ಕೇಳುತ್ತಾನೆ; ಅದಕ್ಕೆ ದೇವಿ ‘ಗಂಡುಸಾದರೆ ಬಲಿಗೊಡುವೇಯೇನು?’ ಎಂದು ಸವಾಲು ಹಾಕುತ್ತಾಳೆ. ತಂತಮ್ಮ ದೇಶ ಮತ್ತು ಸಮುದಾಯಗಳನ್ನು ಆಕ್ರಮಣಕಾರರಿಂದಲೊ ದಮನದಿಂದಲೊ ವಿಮೋಚನೆ ಮಾಡಲು, ಜೀವಬಲಿ ಕೊಟ್ಟಿರುವ ಧೀಮಂತ ಹೋರಾಟಗಾರರ ದೊಡ್ಡ ಪರಂಪರೆ ಈ ನಾಡಿನಲ್ಲಿದೆ. ಇವರ ‘ಬಲಿ’ಯ ಘನತೆಯೇ ಬೇರೆ. 

 ನರಬಲಿಯ ಮಾದರಿಗಳಲ್ಲೇ ಅತ್ಯಂತ ಘೋರವಾದುದು, ತಮ್ಮ ಸ್ವಾರ್ಥಕ್ಕಾಗಿ ಮತ್ತೊಬ್ಬರನ್ನು ಬಲಿಕೊಡುವುದು. ಅಮೆರಿಕಾ ಮತ್ತು ಯೂರೋಪಿನ ದೇಶಗಳು ತಮ್ಮ ವಸಾಹತುಗಳ ಸ್ಥಾಪನೆಗಾಗಿ ಮಾಡಿರುವ ಯುದ್ಧಗಳಲ್ಲಿ ಸಂಭವಿಸಿರುವ ನರಬಲಿ ಇಂತಹದ್ದು. 20ನೇ ಶತಮಾನದ ಎರಡು ಮಹಾಯುದ್ಧಗಳು ನಡೆದದ್ದು ಯಾರಿಂದ ಮತ್ತು ಯಾತಕ್ಕಾಗಿ? ತಮ್ಮ ಆರ್ಥಿಕ ಹಿತಾಸಕ್ತಿಗೆ ದೇಶಗಳನ್ನು ವಶಪಡಿಸಿಕೊಳ್ಳುತ್ತಿರುವ, ಮನುಷ್ಯರನ್ನು ಕೊಲ್ಲುವ ವಿವಿಧ ಆಯುಧಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಯುದ್ಧಖೋರ ರಾಷ್ಟ್ರಗಳು, ಎಷ್ಟೊಂದು ನರಬಲಿ ಪಡೆಯುತ್ತಿವೆ? 

ಜಗತ್ತಿನ ಎಲ್ಲ ಪ್ರಧಾನ ಧರ್ಮಗಳು, ಧರ್ಮದ ಹೆಸರಲ್ಲಿ ರಾಜಕಾರಣ ಮಾಡುವವರು ಎಷ್ಟೊಂದು ಬೀದಿಯ ಮೇಲೆ ರಕ್ತವನ್ನು ಹರಿಸಿದ್ದಾರೆ? ಈಗ ಉದ್ಯಮಪತಿಗಳ ಹಿತಕ್ಕಾಗಿ ನಮ್ಮ ರೈತರು ಪ್ರಾಣ ಕಳೆದುಕೊಳ್ಳುತ್ತಿರುವುದು  ಆತ್ಮಹತ್ಯೆಯೊ ನಮ್ಮ ಪ್ರಭುತ್ವಗಳು ಅಪ್ಪಿಕೊಂಡಿರುವ ಆರ್ಥಿಕನೀತಿ ಮಾಡಿದ ಕೊಲೆಗಳೊ? 

ಹೀಗೆ ಕೇಳಿಕೊಳ್ಳುತ್ತ ಹೋದರೆ, ನರಬಲಿ ಬೇಡುವ ಎಷ್ಟೊಂದು ವ್ಯವಸ್ಥೆಗಳು ನಮ್ಮ ಸುತ್ತಮುತ್ತ ಇರುವುದು; ನಾನಾ ಬಗೆಯ ವಧಾಸ್ಥಾನಗಳು ಸಿದ್ಧವಾಗುತ್ತಿರುವುದು ಗೋಚರ ಆಗುತ್ತದೆ. ಈ ವಧೆಗಳ ಹಿಂದೆ ಯಾವುದೇ ಅಮೂರ್ತವಾದ ದೈವವೊಂದು ಇರಲಿಕ್ಕಿಲ್ಲ. ಆದರೆ ಲೌಕಿಕವಾದ ಸಂಪತ್ತು ಅಧಿಕಾರಗಳನ್ನು ಕೈವಶ ಮಾಡಿಕೊಳ್ಳಲೆಂದು ತೊಡಗಿರುವ ಮೂರ್ತರೂಪದ ನಿರ್ದಯೀ ಆರ್ಥಿಕ ರಾಜಕಾರಣವಿದೆ. ಇದಕ್ಕೆ ಹೋಲಿಸಿದರೆ, ದೈವದ ಮುಂದೆ ಭಾವುಕ ಭಕ್ತಿಯಲ್ಲಿ ಭಕ್ತರು ತಮ್ಮ ಶಿರ ಹರಿದುಕೊಂಡಿದ್ದು ಅಥವಾ ತಮ್ಮ  ಮಕ್ಕಳನ್ನು ಬಲಿಕೊಟ್ಟಿದ್ದು, ಸೀಮಿತ ಪರಿಣಾಮ ಬೀರಿದ ಘಟನೆಗಳು. 

ಹೀಗಾಗಿಯೇ ಆಕ್ರಮಣಕಾರಿ ಯುದ್ಧಗಳನ್ನು ಮಾಡಿ ಸಂಪತ್ತನ್ನು ಸೂರೆಹೊಡೆದು ದೇವರುಗಳಿಗೆ ಕಟ್ಟಲಾದ ಕಟ್ಟಡಗಳನ್ನು ನೋಡುವಾಗ, ರಾಜರಿಗಾಗಿ ಕಟ್ಟಲಾದ ಅರಮನೆಗಳನ್ನು ನೋಡುವಾಗ, ಎಷ್ಟು ಜನರ ಬಲಿಯ ಬುನಾದಿಯ ಮೇಲೆ ಇವು ನಿಂತಿವೆ ಎಂದು ಅನಿಸುತ್ತದೆ. ದೆಹಲಿಯ ‘ಇಂಡಿಯಾ ಗೇಟ್’ನಲ್ಲಿ ಕೆತ್ತಿರುವ ಆಂಗ್ಲರ ಯುದ್ಧಗಳಿಗಾಗಿ ಪ್ರಾಣತೆತ್ತ ನಮ್ಮ ಸೈನಿಕರ ಪಟ್ಟಿಯನ್ನು ನೋಡುವಾಗ, ಇದೆಂತಹ ಬಲಿಪಶುಗಳ ಸ್ಮಾರಕ ಎಂದು ವಿಷಾದವಾಗುತ್ತದೆ. ಈಗ ‘ಬಲಿಷ್ಠ’ ‘ಮುಂದುವರಿದ’  ಎನಿಸಿಕೊಂಡಿರುವ ಎಷ್ಟೊ ದೇಶಗಳಲ್ಲಿರುವ ಸಂಪತ್ತು, ಬೇರೆ ದೇಶಗಳನ್ನು ಆಕ್ರಮಿಸಿಕೊಂಡು, ಪ್ರತಿರೋಧ ಮಾಡಿದವರನ್ನು ಹಿಂಸಾತ್ಮಕವಾಗಿ ಕೊಂದು ತಂದದ್ದು. ಅಧಿಕಾರ ಮತ್ತು ಸಂಪತ್ತನ್ನು ಕೈವಶ ಮಾಡಿಕೊಳ್ಳಲು ಇಂತಹ ದೇಶಗಳು ನಡೆಸುತ್ತಿರುವ ಯುದ್ಧಗಳು ಇನ್ನೂ ನಿಂತಿಲ್ಲ. ಹೀಗಾಗಿ ನರಬಲಿಯೂ ನಿಂತಿಲ್ಲ. ಬಲಪ್ರಯೋಗ ಮತ್ತು ಹುನ್ನಾರಗಳಿಂದ ಹೀಗೆ ನರಬಲಿ ಕೊಳ್ಳುತ್ತಿರುವವರನ್ನು, ಧೀರರು ಶೂರರು ಎಂದು ಕೀರ್ತಿಸುವ ಪದ್ಧತಿಯೂ ನಮ್ಮಲ್ಲಿದೆ. ಚರಿತ್ರೆಯ ವ್ಯಂಗ್ಯವೆಂದರೆ ಇದೇ ಇರಬೇಕು.

ಕಾಮೆಂಟ್‌ಗಳಿಲ್ಲ: