ಫೆ.೭ ರಂದು ಶಿವಮೊಗ್ಗದ ಮುಖ್ಯ ರಸ್ತೆಗಳಲ್ಲಿ ಡೊಂಬರ ಸಮುದಾಯವು ಮೂಲಭೂತ ಸೌಲಭ್ಯಗಳಿಗಾಗಿ ಪ್ರತಿಭಟನಾ ಮೆರವಣಿಗೆ ಮಾಡಿದರು. ಮೆರವಣಿಗೆಯಲ್ಲಿ ಕನ್ನಡ ದ್ವಜಗಳೆ ತುಂಬಿದ್ದವು. ಈ ಮೂಲಕ ನಾಡಾಭಿಮಾನವನ್ನು ಬಿಂಬಿಸುತ್ತಲೇ, ಇದೇ ನಾಡಿನಲ್ಲಿ ನಮ್ಮಂತಹ ಮೂಲಭೂತ ಸೌಲಭ್ಯಗಳೂ ಸಿಗದ ಜನರಿದ್ದೇವೆ ಎಂದು ಹೇಳುವ ಸಾಂಕೇತಿಕ ರೂಪಕದಂತಿತ್ತು. ಮೆರವಣಿಗೆಯಲ್ಲಿ ಮಹಿಳೆಯರ ಪ್ರಮಾಣವೂ ಹೆಚ್ಚಿತ್ತು. ಅವರುಗಳು ತಮ್ಮ ತಮ್ಮ ಹಳ್ಳಿಗಳಿಂದ ಬಂದವರೆ ಗಂಟು ಮೂಟೆ ಸಮೇತ ಈ ಮೆರವಣಿಗೆಯಲ್ಲಿ ಸಾಗುತ್ತಿದ್ದರು.
ಅಂತೆಯೇ ಇಡೀ ಕುಟುಂಬದ ಸದಸ್ಯರೆಲ್ಲಾ ಈ ಮೆರವಣಿಗೆಯಲ್ಲಿ ಸೇರಿಕೊಂಡಂತಿತ್ತು. ಆರಂಭಕ್ಕೆ ಹಿಡಿದುಕೊಂಡ ಬ್ಯಾನರ್ ನಲ್ಲಿ ‘ಭ್ರಷ್ಠ ವ್ಯವಸ್ಥೆಯ ವಿರುದ್ಧ ಹೋರಾಡೋಣ, ನವಕರ್ನಾಟಕ ನಿರ್ಮಾಣ ಮಾಡೋಣ’ ಎನ್ನುವ ಸ್ಲೋಗನ್ನಿನ ಕೆಳಗೆ ಈ ಪ್ರತಿಭಟನೆಯನ್ನು ಆಯೋಜಿಸಿದ್ದು ‘ನವಕರ್ನಾಟಕ ನಿರ್ಮಾಣವೇದಿಕೆ’ ಎಂದು ಬರೆದಿತ್ತು. ಇದರ ಕೆಳಗೆ ‘ದೊಂಬರ ಸಮುದಾಯಕ್ಕೆ ಮೂಲಭೂತ ಸೌಲಭ್ಯಗಳನ್ನು ಆಗ್ರಹಿಸಿ ಪ್ರತಿಭಟನೆ’ ಎಂದಿತ್ತು. ಅಂತೆಯೇ ‘ನವಕರ್ನಾಟಕ ನಿರ್ಮಾಣವೇದಿಕೆ’ಯ ಅಧ್ಯಕ್ಷರ ಚಿತ್ರವೊಂದು ದೊಡ್ಡದಾಗಿ ಕಾಣುತ್ತಿತ್ತು.
ಇದು ಪ್ರತಿಭಟನೆಯ ಮೆರವಣಿಗೆ ಎಂದಿದ್ದರೂ, ಈ ಮೆರವಣಿಗೆಯಲ್ಲಿ ದೊಂಬ ಸಮುದಾಯ ವಿಶಿಷ್ಟಕಲೆಗಳ ಪ್ರದರ್ಶನದ ಮೆರವಣಿಗೆಯೂ ಆಗಿತ್ತು. ರಿಂಗಿನಲ್ಲಿ ತೂರುವ ಹುಡುಗಯರು, ಹಗ್ಗದ ಮೇಲೆ ನಡೆಯುವುದು, ಬಾಗುತ್ತಾ ನೆಲ ಮುಟ್ಟುವುದು ಪಲ್ಟಿ ಹೊಡೆಯುವುದು ಮಾಡುತ್ತಿದ್ದರು. ಒಬ್ಬರು ಎಂಟತ್ತು ವರ್ಷದ ಹುಡುಗಿಯ ಬೆನ್ನಿನ ಭಾಗಕ್ಕೆ ಒಂದು ಕೋಲಿನ ತುದಿಗೆ ಸಿಕ್ಕಿಸಿಕೊಂಡು ಮೇಲೆತ್ತುತ್ತಲೂ ರಸ್ತೆ ಬದಿಯ ಜನರೆಲ್ಲಾ ಉಸಿರುಗಟ್ಟಿ ನೋಡುತ್ತಿದ್ದರು. ಹೀಗೆ ಕೋಲಿನ ತುದಿಗೆ ಸಿಕ್ಕಿಸಿಕೊಂಡ ಹುಡುಗಿಯನ್ನು ಮೇಲೆತ್ತುತ್ತಲೂ ಎಲ್ಲರೂ ಅಬ್ಬಾ ಎಂದು ಅಚ್ಚರಿಯಾಗಿ ದೃಷ್ಟಿನೆಟ್ಟರು. ನೋಡು ನೋಡುತ್ತಿದ್ದಂತೆಯೇ ಕೋಲಿನಿಂದ ಚಂಗನೆ ಮೇಲಕ್ಕೆತ್ತಿ ಚೆಂಡಿನಂತೆ ಎಸೆದಾಗ ಆ ಹುಡುಗಿ ಮೇಲಕ್ಕೇರಿ ಕೆಳಕ್ಕೆ ಬೀಳುತ್ತಲೂ ತೂರಿದವನು ಕೆಳಕ್ಕೆ ಬೀಳದಂತೆ ಹಿಡಿದುಕೊಂಡನು. ಈ ಘಟನೆ ನೋಡುಗರ ಮೈನೆವರೇಳಿಸಿತು. ಇಂತಹದ್ದೆ ಸಮುದಾಯ ನಿಷ್ಠ ಕಲೆಗಳನ್ನು ತೋರುತ್ತಲೆ ದಾರಿಯಲ್ಲಿ ಮೆರವಣಿಗೆ ಸಾಗುತ್ತಿತ್ತು. ಆಗಾಗ ಬೇಕೇ ಬೇಕು ನ್ಯಾಯ ಬೇಕು ಎನ್ನುವ ಘೋಷಣೆಯೊಂದು ಕೇಳಿಬರುತ್ತಿತ್ತು.
ಚಿಕ್ಕ ಹಲಗೆ, ಸಮಾಳ, ಫೈಬರ್ ತರಹದ ಡೊಳ್ಳು ಮುಂತಾದವುಗಳನ್ನು ಬಾರಿಸುತ್ತಿದ್ದರು. ಅಂತೆಯೇ ಬ್ಯಾಂಡ್ ಸೆಟ್ ನ ಓಲಗಗಳ ನಾದವೂ ಇದರೊಂದಿಗೆ ಬೆರೆತಿತ್ತು. ಹಕ್ಕೊತ್ತಾಯದ ಕೂಗುಗಳು ಯಾರಿಗೂ ಕೇಳಿಸದೆ, ವಾದ್ಯಗಳ ಸದ್ದಿನೊಳಗೆ ಬೆರೆತು ಗದ್ದಲವಾಗಿ ಮಾರ್ಪಡುತ್ತಿದ್ದವು.
1 ಕಾಮೆಂಟ್:
ದೊಂಬರು ಅಂಬರ ಮಕ್ಕಳು
ಕಾಮೆಂಟ್ ಪೋಸ್ಟ್ ಮಾಡಿ