ಮಂಗಳವಾರ, ಸೆಪ್ಟೆಂಬರ್ 2, 2014

ಹೆಬ್ಬೆಟ್ಟೊತ್ತುವ ಹೊಸ ತಲೆಮಾರು!-ನಟರಾಜ ಹುಳಿಯಾರ್

ಸೌಜನ್ಯ:ಪ್ರಜಾವಾಣಿ


ಕಳೆದೊಂದು ವಾರದಿಂದ ‘ಹೊಸ ತಲೆ­ಮಾರು’ ಎನ್ನುವುದನ್ನು ವಿವರಿಸಿಕೊಳ್ಳು­ವುದು ಹೇಗೆ ಎಂದು ಮಿತ್ರರನ್ನು ಕೇಳುತ್ತಲೇ ಇದ್ದೆ. ‘ಈಗ ಹದಿನೆಂಟರಿಂದ ಇಪ್ಪತ್ತೈದು ವರ್ಷ­ದೊಳಗೆ ಇರುವವರನ್ನು ಹೊಸ ತಲೆಮಾರು ಎನ್ನಬಹುದು’ ಎಂದು ಒಬ್ಬರು ಹೇಳಿದರು. ಮೊನ್ನೆ ನಡೆದ ಚುನಾವಣೆಯಲ್ಲಿ ಹೊಸ ತಲೆ­ಮಾರು ಚುನಾವಣೆಯ ದಿಕ್ಕನ್ನೇ ಬದಲಿಸಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದರು.
‘ಕನ್ನಡ ಲೇಖಕ, ಲೇಖಕಿಯರ ಹೊಸ ತಲೆ­ಮಾರು ಹೇಗಿದೆ?’ ಎಂದು ಕೇಳಿದರೆ, ‘ಈ ತಲೆ­ಮಾರಿನ ಲೇಖಕ,ಲೇಖಕಿಯರಿಗೆ ಮಹತ್ವಾಕಾಂಕ್ಷೆ­ಯಿಲ್ಲ’ ಎಂದು ಒಬ್ಬರು ಹೇಳುತ್ತಿದ್ದರು. ‘ದೆಹ­ಲಿಯ ಹೊಸ ತಲೆಮಾರು ‘ಆಮ್ ಆದ್ಮಿ’ಯಂಥ ಹೊಸ ಪಕ್ಷವನ್ನು ರೂಪಿಸಿ ಗೆಲ್ಲಿಸಿತು. ಅಂಥ­ದೊಂದು ರಾಜಕೀಯ ಪ್ರಜ್ಞೆ ಕರ್ನಾಟಕದ ಹೊಸ ತಲೆಮಾರಿಗಿಲ್ಲ’ ಎಂದು ಇನ್ನೊಬ್ಬರು ಗೊಣಗುತ್ತಿದ್ದರು. ‘ಈ ಹೊಸಬರು ಫೇಸ್ ಬುಕ್ಕಿ­ನಲ್ಲಿ ಮುಳುಗಿ ನಾರ್ಸಿಸಿಸ್ ಕಾಂಪ್ಲೆಕ್ಸಿನಿಂದ ಬಳ­ಲುತ್ತಿದ್ದಾರೆ’ ಎಂದು ಮತ್ತೊಬ್ಬರು ರೇಗಿದರು. ‘ಈಚೆಗೆ ಮಾಧ್ಯಮ ಸೇರಿರುವ ಪತ್ರಕರ್ತ, ಪತ್ರಕರ್ತೆಯರು ಹೇಗಿದ್ದಾರೆ?’ ಎಂದು ಕೇಳಿದರೆ, ‘ಅವರಿಗೆ ಬದ್ಧತೆ ಕಡಿಮೆ’ ಎಂದು ಹಿರಿಯ ಪತ್ರ­ಕರ್ತರು ಆಕ್ಷೇಪಿಸುತ್ತಿದ್ದರು.  ‘ಯಾಕೆ ಹೀಗಂತೀರಿ? ಕಳೆದ ಕೆಲವು ವರ್ಷಗಳಿಂದ ಅನೇಕ ದುಷ್ಟ ರಾಜಕಾರಣಿಗಳನ್ನು ಮನೆಗೆ ಕಳಿಸಲು ಟೀವಿ ಚಾನಲ್ಲುಗಳ ಹುಡುಗ-- ಹುಡುಗಿಯರೂ ಕಾರಣರಲ್ಲವೆ?’ ಎಂದಾಗ ಅದನ್ನು ಒಪ್ಪುವ­ವರೂ ಇದ್ದರು.
ಮೊನ್ನೆ ಭಾನುವಾರ ಕೊಟ್ಟೂರಿನಲ್ಲಿ ‘ನಾವು ನಮ್ಮಲ್ಲಿ’ ಬಳಗ ಹೊಸ ತಲೆಮಾರನ್ನು ಕುರಿತು ನಡೆಸಿದ ವಿಚಾರ ಸಂಕಿರಣದಲ್ಲಿ ಮೇಲಿನ ಅಭಿ­ಪ್ರಾ­ಯಗಳ ಮರುದನಿಗಳು ಮತ್ತೆಮತ್ತೆ ಸುಳಿ­ಯು­ತ್ತಿದ್ದವು. ಇವೆಲ್ಲದರ ನಡುವೆ  ಗೊಂದಲ­ಗ­ಳಲ್ಲಿ, ಹೊಸ ನಿರೀಕ್ಷೆಯಲ್ಲಿ ಹೊಸ ತಲೆಮಾರಿನ ಲೇಖಕ, ಲೇಖಕಿಯರು ಕೂತಿದ್ದರು. ಇನ್ನೊಂದು ಪರ್ಯಾಯ ಕೊಡುವ ಬದ್ಧತೆ­ಯಿದ್ದರೆ ಎಂಥ ರಾಜಕೀಯ ಬದಲಾವಣೆಯ­ನ್ನಾದರೂ ಹೊಸ ತಲೆ­ಮಾರು ತರಬಹುದು ಎಂದು ಸಾಧಿಸಿ ತೋರಿ­ಸಿದ ಯುವ ರಾಜಕಾರಣಿಗಳಿದ್ದರು. ಅದರ ಜೊತೆಗೇ, ಹೊಸ ತಲೆಮಾರಿನಲ್ಲಿ ಗಟ್ಟಿಯಾದ ನಾಟಕ, ಪದ್ಯ ಬರುತ್ತಿಲ್ಲ ಎನ್ನುವ ಹಿಂದಿನ ಪೀಳಿಗೆಯವರಿದ್ದರು. ಈ ಹೊಸ ತಲೆ­ಮಾರಿಗೆ ಖಚಿತ ವೈಚಾರಿಕ ಚೌಕಟ್ಟುಗಳು ಬೇಕು ಎನ್ನುವ ಮಾರ್ಕ್ಸ್‌ವಾದಿ ನಾಯಕರಿದ್ದರು.

ಈ ಕಾಲದ ಕರ್ನಾಟಕದ ಹೊಸ ಸೂಕ್ಷ್ಮಜ್ಞರ  ಬಿಕ್ಕಟ್ಟು ಹಾಗೂ ಹುಡುಕಾಟಗಳು ಅಲ್ಲಿ ತೇಲಿ ಬರುತ್ತಿದ್ದವು. ಇವತ್ತಿಗೂ ಹೊಸ ತಲೆಮಾರಿನ ಲೇಖಕನಂತೆ ಅಡ್ಡಾಡುವ ನನಗೆ ಇವೆಲ್ಲ ನನ್ನ ಹಿರಿ­ಯರು ನನಗೇ ಹೇಳಿದ ಮಾತುಗಳ  ಮರುದನಿ­ಗಳಂತಿದ್ದವು! ಎಷ್ಟು ತಲೆಮಾರುಗಳು ಕಳೆದರೂ ಆಕ್ಷೇಪಣೆಯ ಭಾಷೆ ಮತ್ತು ಧ್ವನಿ ಬದಲಾಗು­ವುದೇ ಇಲ್ಲ ಅನ್ನಿಸಿತು!  ಆದರೂ ಇಲ್ಲಿನ ಅನೇಕ ಪ್ರತಿಕ್ರಿಯೆಗಳಲ್ಲಿ ನಿಷ್ಠುರ ಸತ್ಯಗಳೂ ಅಪೂರ್ಣ ಗ್ರಹಿಕೆಗಳೂ ಇದ್ದವು. ಹಳೆಯ ತಲೆಮಾರಿನ­ವ­ರಿಗೆ ಹೊಸ ತಲೆಮಾರು ತಮ್ಮಂತೆ ಆಗಬೇಕು ಎಂಬ ನಿರೀಕ್ಷೆಯ ಜೊತೆಗೆ ಅದು ತಮ್ಮಂತೆ ಇಲ್ಲವಲ್ಲ ಎಂಬ ಬೇಗುದಿಯೂ ಇತ್ತು. ‘ನಾವು ನಿಮ್ಮಂತೆ ಇಲ್ಲ; ನಮಗೆ ಬೇರೆಬೇರೆ ಒತ್ತಡಗಳಿವೆ. ನಮ್ಮನ್ನು ನೀವು ಅರ್ಥ ಮಾಡಿಕೊಂಡಿಲ್ಲ’ ಎಂದು ಹೊಸಬರು ದೂರುತ್ತಿದ್ದರು.
ಒಂದಂತೂ ಸ್ಪಷ್ಟವಾಗಿತ್ತು: ಪರಿಚಿತ ಭಾಷೆ­ಗಿಂತ ಭಿನ್ನವಾದ ಇನ್ನೊಂದು ಭಾಷೆಯನ್ನು ಬಳ­ಸುವ ತಲೆಮಾರು ನಮ್ಮ ಕಣ್ಣೆದುರೇ ಸೃಷ್ಟಿಯಾ­ಗುತ್ತಿತ್ತು. ‘1920ನೆಯ ಇಸವಿಯ ಹೊತ್ತಿಗೆ ಮನುಷ್ಯ ಸ್ವಭಾವ ಬದಲಾಯಿತು’  ಎಂದು ಹಿಂದೊಮ್ಮೆ ಪಶ್ಚಿಮದಲ್ಲಿ ನಿಂತು ವರ್ಜೀನಿಯಾ ವುಲ್ಫ್ ಹೇಳಿದ್ದಳು. ವುಲ್ಫ್  ಮಾತಿನ ಹಿನ್ನೆಲೆ­ಯಲ್ಲಿ ನಮ್ಮ ಕಾಲವನ್ನು ನೋಡುತ್ತಿದ್ದರೆ, 1990ರ ನಂತರ ಮನುಷ್ಯ ಸ್ವಭಾವದಲ್ಲಿ ದೊಡ್ಡ ಬದಲಾವಣೆಯುಂಟಾಗಿದೆ ಎನ್ನಿಸತೊಡ­ಗಿತು. ಆದ್ದರಿಂದ ಈ ಕಾಲದ ಬೆಳವಣಿಗೆಗಳನ್ನು ಕೊಂಚ ಬೇರೆಯದೇ ರೀತಿ ಅರಿಯಬೇಕೆನ್ನಿಸ­ತೊಡಗಿತು.
ಹೀಗೆಂದುಕೊಂಡು ನೋಡಲೆತ್ನಿಸಿದರೆ ಈ ಕಾಲದ ಅನೇಕ ವಿಕಾರಗಳ ಜೊತೆಗೇ ಇದೀಗ ಕನ್ನಡದಲ್ಲಿ ಬರವಣಿಗೆಯಲ್ಲಿ ತೊಡಗಿರುವ ಸೂಕ್ಷ್ಮಜ್ಞರಲ್ಲಿ ಕೆಲವು ವಿಶೇಷ ಗುಣಗಳು ಕಾಣತೊಡಗಿದವು: ಕನ್ನಡದಲ್ಲಿ ಸಹಜ ಜಾತ್ಯ­ತೀತ ತಲೆಮಾರೊಂದು ಸೃಷ್ಟಿಯಾದಂತಿತ್ತು. ಸಮಾನತೆಯ ತುಡಿತ; ಕೋಮುವಾದ, ಲಿಂಗ ತಾರತಮ್ಯ, ಅಸ್ಪೃಶ್ಯತೆಗಳ ವಿರುದ್ಧದ ದನಿಗಳು ಇಲ್ಲಿ ಖಚಿತವಾಗಿ ಕಾಣುತ್ತಿದ್ದವು. ಸ್ತ್ರೀವಾದದ ಸತ್ವವನ್ನು ಸಹಜವಾಗಿ ಹೀರಿಕೊಂಡಂತೆ ಆತ್ಮ­ವಿಶ್ವಾಸದಲ್ಲಿರುವ ಹುಡುಗಿಯರಿದ್ದರು. ರಂಗ­ಭೂಮಿಯಲ್ಲಿ ಗಂಭೀರವಾಗಿ ತೊಡಗಿ ಸೂಕ್ಷ್ಮ­ವಾಗಿ ಯೋಚಿಸುವ ನಟನಟಿಯರಿದ್ದರು. ಈ ತಲೆ­ಮಾರು ಕನ್ನಡದಲ್ಲಿ ಕಳೆದ ನೂರು ವರ್ಷ­ಗಳಿಂದ ನಡೆದ ಸಮಾನತೆಯ ಚರ್ಚೆಗಳ ಸಾರ­ವನ್ನು ಮೇಲ್ಪದರದಲ್ಲಾದರೂ ಗ್ರಹಿಸಿ ಒಪ್ಪಿ­ದಂತಿತ್ತು. ಅಂತರ್ಜಾತೀಯ ವಿವಾಹಗಳು ಹಿಂದಿ­ಗಿಂತ ಹೆಚ್ಚತೊಡಗಿರುವ ಸನ್ನಿವೇಶವೂ ನಮ್ಮೆ­ದು­ರಿಗಿತ್ತು.
ಆದರೆ  ಈ ಎಲ್ಲ ಸಮಾನತೆಯ ತತ್ವಗಳನ್ನೂ ತನ್ನ ಕಾಲದಲ್ಲಿ ಆಳವಾಗಿ ಗ್ರಹಿಸಿ ಮರು ವಿವ­ರಿ­ಸುವ ಸವಾಲೂ ಈ ತಲೆಮಾರಿಗಿದೆ. ಅದು ಮಾರ್ಕ್ಸ್, ಗಾಂಧಿ, ಲೋಹಿಯಾ, ಅಂಬೇಡ್ಕರ್ ಎಲ್ಲರನ್ನೂ ತನ್ನ ಕಾಲದಲ್ಲಿ ಮತ್ತೆ ವಿವರಿಸಿಕೊಳ್ಳ­ಬೇಕಾಗುತ್ತದೆ. ಈ ಬಗೆಯ ಚಿಂತನೆಗಳನ್ನು ನಾಶ ಮಾಡಲು ಫೆಲೋಶಿಪ್ಪುಗಳು, ಗ್ರ್ಯಾಂಟುಗಳು ಬರುತ್ತಿರುವ ಈ ಕಾಲದಲ್ಲಿ ಆ ಮುಲಾಜುಗಳಿಗೆ ಒಳಗಾಗದೆ ಸ್ವತಂತ್ರವಾಗಿ ಸಂಶೋಧನೆ ಮಾಡುವ ಪಡೆಯೇ ತಯಾರಾಗಬೇಕಾಗುತ್ತದೆ.
ಪ್ರತಿ ತಲೆಮಾರೂ ತನ್ನ ಸಾಹಿತ್ಯದ ಸಮರ್ಥ­ನೆ­ಯನ್ನೂ ವಿಮರ್ಶೆಯ ಸೂತ್ರಗಳನ್ನೂ ಪರಿಶ್ರಮ­ದಿಂದ ರೂಪಿಸಿಕೊಳ್ಳಬೇಕಾಗುತ್ತದೆ. ತಾನು ಹಿಂದಿ­ನವರಿಗಿಂತ ಭಿನ್ನವಾಗಿ ಬರೆಯಬೇಕು ಎಂಬ ಹೊಸ ತಲೆಮಾರಿನ ತಹತಹ ಕೇವಲ ಇವತ್ತಿ­ನದಲ್ಲ. ‘ಅನ್ಯರೊರೆದುದನೆ ಬರೆದುದನೆ ನಾ ಬರೆ­ಬರೆದು ಬಿನ್ನಗಾಗಿದೆ ಮನವು; ಬಗೆಯೊಳಗನೇ ತೆರೆದು  ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿ­ಸುವ ಪನ್ನತಿಕೆ ಬರುವನಕ ನನ್ನಬಾಳಿದು ನರಕ’ ಎಂಬ ತಳಮಳ ಹದಿಹರೆಯದ ಕವಿ ಅಡಿಗ­ರಲ್ಲೂ ಇರಬಹುದು; ಇಂಥ ದೊಡ್ಡವರೆದುರು ಬರೆ­ಯು­ತ್ತಿದ್ದ ಶ್ರೀಕೃಷ್ಣ ಆಲನಹಳ್ಳಿಯವರಲ್ಲೂ ಇರಬಹುದು; ಈ ಕಾಲದಲ್ಲಿ ಬರೆವವರಲ್ಲೂ ಇರಬಹುದು.
ಹೆರಾಲ್ಡ್ ಬ್ಲೂಮ್ ಹೇಳುವಂತೆ ಹಿರಿಯರ ಪ್ರಭಾವದ ಬಗೆಗಿನ ಆತಂಕ (ದಿ ಆಂಕ್ಸೈಟಿ ಆಫ್ ಇನ್‌ಫ್ಲುಯೆನ್ಸ್‌) ಎಲ್ಲ ಕಾಲದ ಬರಹಗಾರ­ರಲ್ಲೂಇರುತ್ತದೆ; ಪ್ರತಿ ತಲೆಮಾರಿನ ಬರಹ­ಗಾ­ರರು ಹಿಂದಿನ ತಲೆಮಾರಿನ ಬರಹಗಾರರ ಮೇಲೆ ದಾಳಿ ಮಾಡುವುದರ ಹಿಂದೆ ಈ ಅಪ್ರಜ್ಞಾ­ಪೂರ್ವಕ ಕಾರಣವೂ ಇರುತ್ತದೆ. ಸಾಮಾನ್ಯವಾಗಿ ನಮ್ಮ ಮಾನಸಿಕ ಲೋಕದಲ್ಲಿ  ಎದುರಾಗುವ ಆಳದ ಕಾತರ, ಆತಂಕಗಳನ್ನು ನಾವು ಮುಚ್ಚಿಡಲು ಪ್ರಯತ್ನಿಸುತ್ತೇವೆ. ಹಾಗೆ ಮುಚ್ಚಿ­ಟ್ಟರೆ ಅವು ಮಾಯವಾಗುವುದಿಲ್ಲ; ಬದ­ಲಿಗೆ ಅವು ನಮ್ಮೊಳಗೇ ಉಳಿದು ನಮ್ಮನ್ನು ಇನ್ನಷ್ಟು ಖಿನ್ನರನ್ನಾಗಿಸುತ್ತವೆ. ಆದ್ದರಿಂದಲೇ ಅವನ್ನು ಮುಚ್ಚಿಡುವುದರ ಬದಲಿಗೆ, ಅವನ್ನು ಖಚಿ­ತವಾಗಿ ಗುರುತಿಸಿ ಅವು ಇವೆಯೆಂದು ಒಪ್ಪಿ­ಕೊಳ್ಳುವ, ಸಾಧ್ಯವಾದರೆ ಅವನ್ನು ಮೀರುವ ಪ್ರಯತ್ನ ಮಾಡುವುದೇ ಮುನ್ನಡೆಯುವ ಮಾರ್ಗ.
ಆದ್ದರಿಂದ ಲೇಖಕ, ಲೇಖಕಿಯರು ಕೂಡ ಹಿರಿಯರ ಪ್ರಭಾವದ ಬಗೆಗೆ ತಮ್ಮೊಳಗಿರುವ  ಆತಂಕವನ್ನು ಬಚ್ಚಿಟ್ಟು ಪ್ರಯೋಜನವಿಲ್ಲ. ಅಥವಾ ಉತ್ತರ ಕರ್ನಾಟಕದ ಲೇಖಕನೊಬ್ಬ ಮುಗ್ಧವಾಗಿ ಹೇಳಿದಂತೆ ‘ನಾ ಯಾರ್ ಯಾರದೂ ಪುಸ್ತಕ್ ಓದಂಗಿಲ್ರೀ ಸರ! ಸುಮ್ಮನಾ ಪ್ರಭಾವ ಆಕ್ಕತಿ, ಹಾಂ!’ ಎಂದು ಯಾರನ್ನೂ ಓದದೆ ಬರೆಯುವ ಕಾಲ ನಮ್ಮದಲ್ಲ!
ಹಾಗೆಯೇ ಹಳೆಯ ಲೇಖಕರ ಜೊತೆಗಿನ ಗುದ್ದಾಟಗಳ ಹಿಂದೆ ಆಳವಾದ ಸೃಜನಶೀಲ ಕಾರಣಗಳಿರ­ಬೇಕಾ­ಗುತ್ತದೆ. ಈ ಗುದ್ದಾಟಗಳನ್ನು ಚರಿತ್ರೆ, ಪತ್ರಿಕೋದ್ಯಮ, ಕಲೆ, ಸಮಾಜಶಾಸ್ತ್ರ ಮೊದ­ಲಾದ ವಲಯಗಳ ಹೊಸ ತಲೆಮಾರಿನವರೂ ಮಾಡುತ್ತಿರುತ್ತಾರೆ. ಇಲ್ಲದಿದ್ದರೆ ಹೊಸ ಮಾರ್ಗ­ಗಳು ಹುಟ್ಟುವುದೇ ಇಲ್ಲ. ಆದರೆ ಈ ಮಾರ್ಗ­ಗಳು ಪ್ರಾಮಾಣಿಕವಾದ ಸಂಘರ್ಷ­ದಿಂದ ಹುಟ್ಟು­ತ್ತವೆಯೇ ಹೊರತು ಚಪಲದ ಪ್ರತಿ­ಕ್ರಿಯೆಗಳಿಂದಲ್ಲ.
ಆದ್ದರಿಂದಲೇ ಆಳವಾಗಿ ಯೋಚಿಸುವ ಮುನ್ನವೇ ಹೇಳುವ, ಬರೆದು ಮಾಗುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಹೊಸ ತಲೆಮಾರಿನ ಅವಸರ ಅನೇಕರಿಗೆ ಅನೈತಿಕ ಎನ್ನಿಸತೊಡಗುತ್ತದೆ. ಆದರೆ ಈ ಸಮಸ್ಯೆ ಹಳಬರು ಭಾಗವಹಿಸುವ ಟೆಲಿವಿ­ಷನ್ನಿನ ಲೈವ್ ಚರ್ಚೆಗಳಲ್ಲೂ ಇರುತ್ತದೆ!  ಅಲ್ಲಿ ತಕ್ಷಣದ ಪ್ರಶ್ನೆಗೆ ಏನೋ ಒಂದನ್ನು ಬಡಬಡಿಸುವ ತಪ್ಪನ್ನು ಎಲ್ಲರೂ ಮಾಡುತ್ತಿರುತ್ತೇವೆ.
ಮೊನ್ನೆ ತಾನೆ ಅನಂತಮೂರ್ತಿಯವರಿಗೆ ನಮನ ಸಲ್ಲಿ­ಸಲು ಬಂದಿದ್ದ ಸದಾನಂದಗೌಡರ ಬಾಯಿಗೆ  ಟೀವಿ­ಯವರು ಮೈಕು ಹಿಡಿದ ತಕ್ಷಣ ‘ಅನಂತ­ಮೂರ್ತಿಯವರ ನಿಧನ ನಮಗೆಲ್ಲ ನುಂಗಲಾರದ ತುತ್ತು’ ಎಂದುಬಿಟ್ಟರು! ಅವಸರದ ಪ್ರತಿಕ್ರಿಯೆ­ಗಳಲ್ಲಿ ಇಂಥ ತಪ್ಪುಗಳು ನಿರಂತರವಾಗಿ ಆಗು­ತ್ತಲೇ ಇರುತ್ತವೆ. ಆದರೆ ಜಾಲತಾಣಗಳಲ್ಲಿ ತಮ್ಮ ತಕ್ಷಣದ ನಿಲುವು  ಪ್ರಕಟಿಸುವವರಿಗೆ ಈ ಬಗೆಯ ಒತ್ತಡ ಹಾಗೂ ಅವಸರ ಇರಬೇಕಾ­ಗಿಲ್ಲ.
ಯಾಕೆಂದರೆ ನಮ್ಮ ಅಸ್ಪಷ್ಟ ಆಲೋಚನೆ ಮೂರ್ತ­ವಾದ ಐಡಿಯಾ ಆಗಬೇಕು. ಈ ಐಡಿ­ಯಾವನ್ನು ಕೊಂಚವಾದರೂ ನೈತಿಕ ಪರೀಕ್ಷೆಗೆ ಒಳಪಡಿಸಬೇಕು. ಅದು ಸಾರ್ವಜನಿಕ ಲೋಕಕ್ಕೆ ಬರಲು ಅರ್ಹವೇ ಎಂಬ ಬಗ್ಗೆ ಲೇಖಕ, ಲೇಖಕಿ­ಯ­ರಾದರೂ ಚಣ ಯೋಚಿಸಬೇಕು. ನಮ್ಮ ಮನಸ್ಸಿನಲ್ಲಿ ಸುಳಿಯುವುದನ್ನೆಲ್ಲ ಬೇರೆಯವ­ರೆದುರು ಆಡಿಬಿಟ್ಟರೆ ಅಸಂಬದ್ಧವಾಗಿರುತ್ತದೆ; ಹಾಗೆಯೇ, ಅನಿಸಿದ್ದನ್ನೆಲ್ಲ ಪ್ರಕಟಿಸಿದರೂ ಅಸಂಬದ್ಧ­ವಾಗುತ್ತದೆ.
ಮಹತ್ವದ ವಿಷಯಗಳ ಬಗ್ಗೆ ತಕ್ಷಣ ಸಾರ್ವಜನಿಕವಾಗಿ ಪ್ರತಿಕ್ರಿಯಿಸ­ಬೇಕಾದ ಜವಾಬ್ದಾರಿ ಎಲ್ಲರಿಗೂ ಇರಬೇಕಾಗು­ತ್ತದೆ. ಆದರೆ ಬೆರಳು ಒತ್ತಿದ್ದನ್ನು ತಕ್ಷಣ ರವಾನಿ­ಸಿದರೆ ಆಗುವ ಅಪಾಯದ ಬಗ್ಗೆ ಈ ಚುರುಕು ತಲೆಮಾರು ಆಳವಾಗಿ ಯೋಚಿಸಬೇಕಾಗುತ್ತದೆ. ಹಾಗೆಯೇ ಈ ತಲೆಮಾರಿನ ಚುರುಕನ್ನು ನೋಡಿ­ಯಾದರೂ  ‘ನನಗೆ ಎಸ್.ಎಂ.ಎಸ್. ಕಳಿಸಲು ಬರುವುದಿಲ್ಲ’ ಎಂದು ಎಮ್ಮೆಗಳಂತೆ ಆಡುವ ಹಿರಿಯರು ಕ್ಷಿಪ್ರ ಪ್ರತಿಕ್ರಿಯೆಯ ಅಗತ್ಯವನ್ನು ಕಲಿಯಬೇಕಾಗುತ್ತದೆ!
ಆದರೆ ಅದೇ ವೇಳೆಗೆ ಯೋಚಿಸುವ ಕೆಲಸವನ್ನು ಬೆರಳ ತುದಿಗೆ ಕೊಟ್ಟು ಅದು ಒತ್ತಿದ ಶಬ್ದಗಳನ್ನೇ ತಮ್ಮ ಆಲೋಚನೆ­ಯೆಂದು ಭ್ರಮಿಸುವ ಒತ್ತುಚಾಳಿಯಿಂದ ಎಲ್ಲರೂ ಬಿಡಿಸಿಕೊಳ್ಳಬೇಕಾಗುತ್ತದೆ. ನಲವತ್ತು ವರ್ಷಗಳ ಕೆಳಗೆ ಗ್ರಾಮೀಣ ಕರ್ನಾಟಕದಲ್ಲಿ ಕಾಣು­ತ್ತಿದ್ದ ‘ಹೆಬ್ಬೆಟ್ಟೊತ್ತುವ ಪಶುಸದೃಶ ಸಮುದಾಯ’­ವನ್ನು ಕುರಿತು ಪೂರ್ಣಚಂದ್ರ ತೇಜಸ್ವಿ ವ್ಯಗ್ರತೆಯಿಂದ ಬರೆದಿದ್ದರು. ಇದೀಗ ಛಕಛಕ ಹೆಬ್ಬೆರಳಿನ ತುದಿಯನ್ನೋ ತೋರು­ಬೆರಳಿನ ತುದಿಯನ್ನೋ ಒತ್ತುವ ಸುಶಿಕ್ಷಿತ ಪಶುಸದೃಶ ಸಮುದಾಯ ಸೃಷ್ಟಿಯಾಗುವ ಅಪಾಯ ಎದುರಾಗಬಾರದು!
ಈಗ ಇರುವ ಸವಾಲೆಂದರೆ ಈ ಬೇಜವಾ­ಬ್ದಾರಿ ವ್ಯಕ್ತಿಗಳಿಗೆಲ್ಲ ಈ ಜಾಲತಾಣಗಳ ಮೂಲ­ಕವೂ ಹೊಸ ಶಿಕ್ಷಣ ಕೊಡುವುದು. ಕನ್ನಡದ ಕೆಲವೇ ಶ್ರೇಷ್ಠ ಚಿಂತನೆಗಳನ್ನು ಓದಿದರೂ ಸಾಕು, ಈ ಅವಿವೇಕಿಗಳ ಪೂರ್ವಗ್ರಹ ಕಡಿಮೆ­ಯಾಗು­ತ್ತದೆ. ಯಾಕೆಂದರೆ ಇವರು ಎಷ್ಟೇ ಭಂಡ ವಾದ ಹೂಡಿದರೂ ಇವರಲ್ಲಿ ಅನೇಕರು ನಿಜಕ್ಕೂ ಬುದ್ಧಿವಂತರಾಗಿರುವುದರಿಂದ, ಸತ್ಯ ಕಂಡಾಗ ಅದನ್ನು ಗ್ರಹಿಸಬಲ್ಲ ಸೂಕ್ಷ್ಮತೆ ಅವರಲ್ಲಿ ಇನ್ನೂ ಇರುವಂತಿದೆ.
ಆಧುನಿಕೋತ್ತರ ಸಮಾಜದಲ್ಲಿ ಆರೋಗ್ಯವನ್ನು ಬಿತ್ತಲು ಹೊರಟಿರುವ ಕರ್ನಾಟ­ಕದ ಹೊಸ ತಲೆಮಾರು ನವಮಾಧ್ಯಮಗಳ ಮೂಲಕ ಶ್ರೇಷ್ಠ ಚಿಂತನೆಗಳನ್ನು ಹಬ್ಬಿಸುವ ಸವಾಲನ್ನೂ ಕೈಗೆತ್ತಿಕೊಳ್ಳಲೇಬೇಕಾಗುತ್ತದೆ. ಇಲ್ಲದಿದ್ದರೆ ಕಳೆದ ನೂರು ವರ್ಷಗಳಿಂದ ನಮ್ಮ ಹಿರಿಯರು ರೂಪಿಸಿದ ಆರೋಗ್ಯಕರ ಸಂಸ್ಕೃತಿಯ ಕೊಂಡಿಗಳು ಕಳಚಿ ಬೀಳುತ್ತವೆ.
ಕೊನೆ ಟಿಪ್ಪಣಿ: ಸೆಲ್ಫೀ ಮತ್ತು ನಾರ್ಸಿಸಿಸ್
ಹೊಸ ತಲೆಮಾರಿನ ಕವಯಿತ್ರಿ ಟೀನಾ ಶಶಿಕಾಂತ್ ‘ಸೆಲ್ಫೀ’ ಎಂಬ ಪದ್ಯ ಓದುತ್ತಿದ್ದರು. ಮೊಬೈಲುಗಳಲ್ಲಿ ತಮ್ಮ ಫೋಟೊಗಳನ್ನು ತಾವೇ ತೆಗೆದು ಎಲ್ಲೆಡೆ ಪ್ರಕಟಿಸುವ ಚಾಳಿಯನ್ನು ತೀವ್ರವಾಗಿ ವಿಮರ್ಶಿಸುವ ಪದ್ಯವಿದು. ಈ ಪದ್ಯ ಕೇಳುತ್ತಾ ನಾರ್ಸಿಸಿಸ್ ಕತೆ ನೆನಪಾಯಿತು:
ಗ್ರೀಕ­ರಲ್ಲಿ ನಾರ್ಸಿಸಿಸ್ ಎಂಬ ಅತಿಸುಂದರ ತರುಣ­ನಿದ್ದ. ಒಮ್ಮೆ ಆತ ತಿಳಿನೀರಿನ ಕೊಳದಲ್ಲಿ ತನ್ನ ಪ್ರತಿಬಿಂಬ ಕಂಡು ‘ಆಹ! ಈ ಚೆಲುವ­ನಾರು!’ ಎಂದು ಅಚ್ಚರಿಗೊಂಡ. ತನ್ನ ಸುಂದರ ಪ್ರತಿಬಿಂಬ­ವನ್ನು ಅಪ್ಪಿಕೊಳ್ಳಲು ಕೆಳಗೆ ಬಾಗಿದ. ಎಷ್ಟು ಸಲ ಪ್ರಯತ್ನಿಸಿದರೂ ತನ್ನ ಪ್ರತಿಬಿಂಬ­ವನ್ನು ಅಪ್ಪಿ­ಕೊಳ್ಳ­ಲಾಗಲಿಲ್ಲ. ಸ್ವಮೋಹ ಹೆಚ್ಚಾಗಿ, ಕೊರಗಿ ಕೊರಗಿ ಕೊನೆಗೆ ಪ್ರಾಣ ಬಿಟ್ಟ. ಈ ಕತೆಯನ್ನು ಆಳವಾಗಿ ಧ್ಯಾನಿಸಿದವರಿಗೆ ಸ್ವಮೋಹದ ಗೀಳಿ­ನಿಂದ ಮೋಕ್ಷ ಗ್ಯಾರಂಟಿ!

ಕಾಮೆಂಟ್‌ಗಳಿಲ್ಲ: