ಆಗಸ್ಟ್ 30-31ರಂದು ಕೊಟ್ಟೂರಿನಲ್ಲಿ ‘ನಾವು-ನಮ್ಮಲ್ಲಿ-2014’ ಆಯೋಜಿತವಾಗಿತ್ತು. ‘ಹೊಸ ತಲೆಮಾರು-ಸೃಜನಶೀಲ ಸ್ಪಂದನ’ ಎಂಬ ಹೆಸರಿನಡಿಯಲ್ಲಿ ನಾಡಿನ ಹಲವು ಚಿಂತಕರು ಭಾಗವಹಿಸಿ ಮಾತನಾಡಿದರು. ಅರ್ಥಪೂರ್ಣ ಸಂವಾದವೂ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅನುರಣಿತವಾದ ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ಸ್ವರೂಪದ ಬರಹ ಇಲ್ಲಿದೆ.
ಸೌಜನ್ಯ: ವರ್ತಮಾನ
- ಭಾರತೀದೇವಿ ಪಿ.
ನಮ್ಮ ಬದುಕಿನ ಭಾಗವಾದ ಹಲವು ಆಚರಣೆಗಳು, ಕಲೆಗಳು ಜನವಿರೋಧಿ ಮೌಲ್ಯಗಳನ್ನು ಸಂಸ್ಕೃತಿಯ ಹೆಸರಿನಲ್ಲಿ, ಸಮುದಾಯದ ವೈಶಿಷ್ಟ್ಯವನ್ನು ಕಾಪಿಟ್ಟುಕೊಳ್ಳುವ ಹೆಸರಿನಲ್ಲಿ ಮುನ್ನಡೆಸುತ್ತಾ ಬಂದಿರುವುದನ್ನು ಎದುರಾಗುವುದು ಹೇಗೆ ಎಂಬುದು ನಮ್ಮ ಮುಂದಿರುವ ಬಹುದೊಡ್ಡ ಪ್ರಶ್ನೆ. ಏಕೆಂದರೆ ಪರೋಕ್ಷವಾಗಿ ಜನರ ಅಧೀನ ಸ್ಥಿತಿಯನ್ನು ಬಲಪಡಿಸುವ ಇವನ್ನು ನೇರವಾಗಿ ಎದುರಿಸುವ ಪ್ರಯತ್ನ ಕ್ಷುಲ್ಲಕವಾಗಿಯೋ, ಆವೇಶಭರಿತವಾಗಿಯೋ ತೋರಬಹುದು. ಸರಳ, ಸುಂದರವಾದ ಸಂಗತಿಯಲ್ಲಿ ಇವರು ತಪ್ಪು ಹುಡುಕಿ ತೋರುತ್ತಿದ್ದಾರಲ್ಲ ಎನಿಸಬಹುದು. ಆದರೆ ಇವನ್ನು ಅಡ್ರೆಸ್ ಮಾಡುವುದೇ ನಮ್ಮ ದೊಡ್ಡ ಸವಾಲು.
ಯಾರ ಮನೆಗೇ ಹೋಗಲಿ, ಹೆಣ್ಣುಮಕ್ಕಳಿಗೆ ಕುಂಕುಮ ಕೊಡುವುದು ಸಂಪ್ರದಾಯ. ಕಾಲೇಜು ದಿನಗಳಲ್ಲಿದ್ದಾಗ ತಂದೆಯನ್ನು ಕಳೆದುಕೊಂಡ ಗೆಳತಿ ಕುಂಕುಮ ಕೊಡುವ ಪದ್ಧತಿ ಬಗ್ಗೆ ನನಗೆ ವಿರೋಧವಿದೆ ಎಂದಾಗ ನನಗೆ ಅಚ್ಚರಿಯಾಗಿತ್ತು. ಯಾವುದೇ ತಪ್ಪಿಲ್ಲದೆ ವೈಧವ್ಯದ ಪಟ್ಟ ಪಡೆದ ತಾಯಿ ಮುತ್ತೈದೆಯರ ನಡುವೆ ಮೂಲೆಗುಂಪಾಗುವುದನ್ನು ಕಂಡಾಗ ಹೆಂಗಸರಲ್ಲೇ ಭೇದಭಾವ ತಂದಿಡುವ, ಗಂಡನ ಮೂಲಕವೇ ಹೆಣ್ಣಿನ ಇರುವಿಕೆಯನ್ನು ಮಾನ್ಯಮಾಡುವ ಈ ಬಾಗಿನ, ಅರಶಿನ-ಕುಂಕುಮ ನೀಡುವುದು ಇವೆಲ್ಲ ‘ಮುತ್ತೈದೆಯರ ಪೊಲಿಟಿಕ್ಸ್’ ಎಂದು ಅವಳು ರೋಷದಿಂದ ಹೇಳಿದ್ದಳು. ಆ ದಿನದಿಂದ ನನಗೆ ಯಾರು ಕುಂಕುಮ ಕೊಟ್ಟರೂ ಇರಿಸುಮುರುಸಾಗುತ್ತಿದೆ. ಇದೇ ರೀತಿಯಲ್ಲಿ ನಮ್ಮ ದೈನಿಕದಲ್ಲಿ ಸೇರಿಹೋಗಿರುವ ಅನೇಕ ಸಹಜಸಂಗತಿಗಳು ಒಳಗೊಳಗೇ ವ್ಯವಸ್ಥೆಯ ಹಿಡಿತವನ್ನು ಬಿಗಿಗೊಳಿಸುತ್ತಾ ನಮ್ಮ ಪ್ರಜ್ಞಾಪೂರ್ವಕ ಪ್ರಯತ್ನಗಳಿಗೆ ಮಂಕುಬೂದಿ ಎರಚುತ್ತಿರುತ್ತವೆ.
ಮದುವೆ ಇರಬಹುದು, ನಾಮಕರಣ ಇರಬಹುದು, ಊರಿನ ಜಾತ್ರೆ ಇರಬಹುದು ಹೀಗೆ ನಮ್ಮ ಸಂಸ್ಕೃತಿಯ ಸಂಕೇತಗಳಾಗಿರುವ ಆಚರಣೆಗಳ ಒಳಗೆ ಗುಪ್ತಗಾಮಿನಿಯಾಗಿರುವ ಪಾಳೆಗಾರಿಕೆ, ಜಾತೀಯತೆ ಮತ್ತು ಪಿತೃಪ್ರಧಾನ ಮೌಲ್ಯಗಳನ್ನು ಎದುರಿಸುವುದು ಹೇಗೆ? ನಮ್ಮ ಸಮುದಾಯದ ಆಚರಣೆಗಳು ಎಂಬ ನೆಲೆಯಲ್ಲಿ ನಮ್ಮ ಅಸ್ಮಿತೆಯ ಗುರುತುಗಳಾಗಿರುವ ಇವನ್ನು ನಿರಾಕರಿಸುವುದು ಹೇಗೆ? ರಾಜಕೀಯವಾಗಿ, ಸಾಮಾಜಿಕವಾಗಿ ಖಚಿತ ನಿಲುವು ತಳೆದು ಮಾತಾಡುವ ನಮಗೆ ಬದುಕಿನಲ್ಲಿ ಎದುರಾಗುವ ಇಂಥ ಸವಾಲುಗಳನ್ನೆಲ್ಲ ಎದುರಿಸುವ ಸಿದ್ಧತೆ ಇದೆಯೇ? ಮಡೆಸ್ನಾನ, ಸಹಪಂಕ್ತಿ ಭೋಜನ, ಗಂಡು ಪ್ರಧಾನವಾಗಿರುವ ನಮ್ಮ ಕುಟುಂಬ ಪದ್ಧತಿ ಇವೆಲ್ಲವನ್ನೂ ಸಂಸ್ಕೃತಿಯನ್ನು ಕಾಯ್ದುಕೊಳ್ಳುವ ಹೆಸರಿನಲ್ಲಿ ಪ್ರತಿಪಾದಿಸುತ್ತಾ ಬಂದಿದ್ದಾರಲ್ಲ ಇವನ್ನು ಎದುರಾಗುವುದು ಹೇಗೆ?
ನಮ್ಮ ನಡುವೆ ಇರುವ ಶಾಸ್ತ್ರೀಯ ಮತ್ತು ಜನಪ್ರಿಯ ಮಾಧ್ಯಮಗಳೂ ಇವೇ ಮೌಲ್ಯಗಳನ್ನು ಬಿತ್ತುವುದು ಮಾತ್ರವಲ್ಲ, ವಿಜೃಂಭಿಸುತ್ತಾ ಬರುತ್ತಿರುವುದನ್ನು ನೋಡಿದಾಗ ಇವುಗಳಿಗೆ ಪ್ರತಿಯಾಗಿ ಜನಪರವಾದ ವಿಚಾರಗಳನ್ನು ಸ್ಥಾಪಿಸುವುದಕ್ಕೆ ನಮ್ಮ ಬಳಿ ಸಾಕಷ್ಟು ಹತಾರಗಳಿಲ್ಲ ಎಂದು ಅನಿಸುತ್ತದೆ. ಇಂತಹ ವ್ಯವಸ್ಥೆಯನ್ನು ಕೇವಲ ರಾಜಕೀಯ ಚಳುವಳಿಗಳಿಂದ ಮಾತ್ರ ಎದುರಿಸಲು ಹೊರಡುವುದು ಸಾಧ್ಯವೇ? ಈ ಪ್ರಶ್ನೆಯನ್ನು ಆಗಸ್ಟ್ 30,31ರಂದು ಕೊಟ್ಟೂರಿನಲ್ಲಿ ನಡೆದ ನಾವು-ನಮ್ಮಲ್ಲಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಎತ್ತಿದರು. ಅದು ಪ್ರಗತಿಪರರೆನಿಸಿಕೊಂಡವರು ಎದುರುಮಾಡಿಕೊಳ್ಳಬೇಕಾದ ದೊಡ್ಡ ಪ್ರಶ್ನೆ ಎನಿಸುತ್ತದೆ.
ಇಂತಹುದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಅವಕಾಶವಂಚಿತರ ಮನೆಬಾಗಿಲಿಗೇ ಹೋಗಿ ಕಲಾಮಾಧ್ಯಮದ ಮೂಲಕ ಜಾತಿ, ವರ್ಗ, ಲಿಂಗ ತಾರತಮ್ಯಗಳ ವಿರುದ್ಧ ಎಚ್ಚರ ಮೂಡಿಸುವ ದಿಸೆಯಲ್ಲಿ ಹುಟ್ಟಿಕೊಂಡದ್ದು ಮಹಾರಾಷ್ಟ್ರದ ‘ಕಬೀರ್ ಕಲಾಮಂಚ್’. ನಮ್ಮ ಶಾಸ್ತ್ರೀಯ ಮತ್ತು ಜನಪ್ರಿಯ ಕಲೆಗಳು ಒಂದೆಡೆ ಉಳ್ಳವರ ಅಹಂಕಾರವನ್ನು ಪೋಷಿಸುವ ಸೊತ್ತಾಗಿವೆ, ಇನ್ನೊಂದೆಡೆ ಯಾವುದನ್ನೂ ಆಳಕ್ಕೆ ಹೋಗಿ ನೋಡದೆ ಥಳುಕುಬಳುಕಿನ ಆವರಣದಲ್ಲಿ ಮತ್ತದೇ ಮೌಲ್ಯಗಳನ್ನು ಚಾಲ್ತಿಗೆ ತರುತ್ತಾ ಸಾಮಾಜಿಕ ಜವಾಬ್ದಾರಿಯನ್ನು ಸಂಪೂರ್ಣ ಮರೆತಿವೆ. ಹೀಗಿರುವಾಗ ಕಲೆಗೆ ಇರುವ ಸಾಮಾಜಿಕ ಆಯಾಮವನ್ನು ಎತ್ತಿತೋರಿಸುವ ಕೆಲಸವನ್ನು ಕಬೀರ್ ಕಲಾಮಂಚ್ ನ ಕಲಾವಿದರು ಮಾಡುತ್ತಿದ್ದಾರೆ.
ಇಂತಹ ಪ್ರಯತ್ನವೊಂದು ಪ್ರಭುತ್ವವನ್ನು ಎಷ್ಟು ಅಲ್ಲಾಡಿಸಿದೆ ಎಂದರೆ ಈ ತಂಡದ ಹಲವು ಸದಸ್ಯರನ್ನು ಬಗೆಬಗೆಯ ಕೇಸು ಜಡಿದು ಜೈಲಿಗೆ ತಳ್ಳಲಾಗಿದೆ. ಇವರ ತಂಡ ಎಷ್ಟು ಪರಿಣಾಮಕಾರಿಯಾಗಿ ವ್ಯವಸ್ಥೆಯನ್ನು ಅಲ್ಲಾಡಿಸಿದೆ ಎಂಬುದಕ್ಕೆ ಇದು ನಿದರ್ಶನ. ಈ ಎಲ್ಲ ಆತಂಕಗಳ ನಡುವೆಯೂ ಅವರ ಪ್ರಯತ್ನ ಮುಂದುವರೆದಿದೆ. ಈ ಹೋರಾಟದ ಹೆಜ್ಜೆಯನ್ನೇ ಪುಣೆಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಕಬೀರ್ ಕಲಾಮಂಚ್ ನ ಜ್ಯೋತಿ ಜಗತಾಪ್ ಬಿಚ್ಚಿಟ್ಟು ಸಾಂಸ್ಕೃತಿಕ ಚಳುವಳಿಯನ್ನು ರೂಪಿಸುವ ಅಗತ್ಯದ ಕುರಿತು ಮಾತಾಡಿದರು. (ಜಗತಾಪ್ ಗಂಡ ಕೂಡ ಒಂದೂವರೆ ವರ್ಷದಿಂದ ಜೈಲಿನಲ್ಲಿದ್ದಾರೆ).
ಹೀಗಾಗಿ ನಮ್ಮನ್ನು ಆವರಿಸಿರುವ ಸಂಸ್ಕೃತಿಯ ಅದೃಶ್ಯಜಾಲದಿಂದ ಹೊರಬರುವುದಕ್ಕೆ ಬರಹಗಾರರ ಜೊತೆಗೆ, ಹೋರಾಟಗಾರರು, ಎಲ್ಲ ಬಗೆಯ ಕಲಾವಿದರು, ಸಮಾಜವಿಜ್ಞಾನಿಗಳು ಒಂದಾಗಿ ಜನರ ಬಳಿಗೆ ಹೋಗುವ ಅಗತ್ಯವಿದೆ. ನಮ್ಮ ಸಮಾಜದ ಕಟ್ಟೋಣವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡುವ ಅಗತ್ಯವಿದೆ. ಇಲ್ಲದಿದ್ದಲ್ಲಿ ನಮ್ಮೆಲ್ಲ ಪ್ರಯತ್ನಗಳು ಆಕ್ಷಣದ ನಮ್ಮ ಅಸಹಾಯಕತೆಯಿಂದ ಹೊರಬರುವ ದಾರಿಯಷ್ಟೆ ಆಗಿಬಿಡುವ ಆತಂಕವಿದೆ. ಇದನ್ನು ಮೀರುವ ದಾರಿಯಾಗಿ ಒಂದು ಸಾಂಸ್ಕೃತಿಕ ಎಚ್ಚರವನ್ನು ಮೂಡಿಸಿಕೊಳ್ಳುವ ಮೂಲಕ ಮುಂದಿನ ಹೆಜ್ಜೆಯಿಡಬೇಕಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ