-ಅರುಣ್ ಜೋಳದಕೂಡ್ಲಿಗಿ
ದಲಿತರ ಶೋಷಣೆಯ ಚಿತ್ರಗಳು ಜಾತಿವಾದಿ ಭಾರತz ಅಮಾನವೀಯ ಮುಖಗಳನ್ನು ಬಯಲಿಗೆಳೆಯುತ್ತಿವೆ. ದಲಿತರ ಹಲ್ಲೆ, ಶೋಷಣೆ, ಬಹಿಷ್ಕಾರದ ಸುದ್ದಿಗಳಿಗೆ ಪ್ರತಿಯಾಗಿ ದಮನಿತ ಹೊಸ ತಲೆಮಾರು ಪ್ರತಿರೋಧವನ್ನೂ ಒಡ್ಡುತ್ತಿದೆ. ಈ ಪ್ರತಿರೋಧ ದೇಶದ ಆಳುವ ವರ್ಗವನ್ನು ಬೆಚ್ಚಿಬೀಳಿಸುತ್ತಿದೆ. ಮೇಲುಜಾತಿಗಳ ಅಹಮ್ಮಿನ ಕೋಟೆಗಳನ್ನು ಅಲುಗಾಡಿಸುತ್ತಿವೆ. ಇದು ನಮ್ಮ ಕಾಲದಲ್ಲಿ ಹುಟ್ಟಿಕೊಂಡ ಹೊಸ ಎಚ್ಚರದ ಪ್ರಜ್ಞೆಯಾಗಿದೆ. ಇದೊಂದು ದಮನಿತರ ಪಾಲಿನ ಆಶಾದಾಯಕ ಬೆಳವಣಿಗೆ. ಬಹುಶಃ ಭಾರತದ ಚರಿತ್ರೆಯಲ್ಲಿ ಹೀಗೆ ದೇಶವ್ಯಾಪಿ ದಲಿತ ಕೆಳಜಾತಿ ಕೆಳವರ್ಗ ಧಾರ್ಮಿಕ ಅಲ್ಪಸಂಖ್ಯಾತ, ಲೈಂಗಿಕ ಅಲ್ಪಸಂಖ್ಯಾತ, ಮಹಿಳಾ, ದಮನಿತ ಸಮುದಾಯಗಳು ತಮ್ಮ ಶೋಷಣೆಗಳ ವಿರುದ್ಧದ ಏಕರೂಪಿ ಕೂಗನ್ನು ಕೂಗಿದ್ದು ವಿರಳ.
ಹಾಗಾಗಿ ಭಾರತದಲ್ಲಿಂದು ದಲಿತ ಕೆಳಜಾತಿ ಕೆಳವರ್ಗ ಅಲ್ಪಸಂಖ್ಯಾತರ ಏಕೀಕಕರಣದ ಸಂದರ್ಭ ಒದಗಿದೆ. ಎಲ್ಲಾ ದಮನಿತ ಸಮುದಾಯಗಳಿಗೆ ತಾಯಿಯಂತಿರುವ ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಮೇಲುಜಾತಿ, ಮೇಲುವರ್ಗಗಳು ತಡೆಗೋಡೆಗಳನ್ನು ಹಬ್ಬಿಸುತ್ತಿವೆ. ಇಂತಹ ತಡೆಗೋಡೆಗಳನ್ನು ಹೊಡೆದು ಸಂವಿಧಾನದ ಸಮಸಮಾಜದ ಆಶಯಗಳ ಅನುಷ್ಠಾನದ ಹಕ್ಕೊತ್ತಾಯವನ್ನು ದೊಡ್ಡ ಧ್ವನಿಯಲ್ಲಿ ಎಚ್ಚರಿಸಬೇಕಿದೆ. ಅಂತಹ ಒಂದು ಪ್ರಯತ್ನದ ಭಾಗವಾಗಿ ಉಡುಪಿ ಚಲೋ ನಡೆಯುತ್ತಿದೆ. ಏಕೀಕರಣಗೊಂಡ ಪ್ರತಿಗಾಮಿ ಮೂಲಭೂತವಾದಿ ಶಕ್ತಿಯ ಎದುರು ಹಲವು ಕಾಲು ದಾರಿಗಳಲ್ಲಿ ಎದುರುಗೊಳ್ಳುತ್ತಿರುವ ಸಹ ಪಯಣಿಗರು ಹೆದ್ದಾರಿಯೊಂದಕ್ಕೆ ಬಂದು ಸೇರುತ್ತಿದ್ದಾರೆ, ಅದರ ಒಂದು ಪ್ರತಿಫಲ `ಉಡುಪಿ ಚಲೋ ಸ್ವಾಭಿಮಾನಿ ಜಾಥಾದಲ್ಲಿಯೂ ಕಾಣಲಿದೆ.
ಜಿಗ್ನೇಶ್ ಮೆವಾನಿ ಈಗ ದೇಶದ ದಲಿತರ ಪಾಲಿಗೆ ಭರವಸೆಯ ಹೊಸ ನಾಯಕ. ಕಳೆದ ಜುಲೈ ತಿಂಗಳಲ್ಲಿ ಗುಜರಾತಿನ ಊನಾದಲ್ಲಿ ಗೋರಕ್ಷಕರಿಂದ ದಲಿತರ ಮೇಲೆ ನಡೆದ ಅಮಾನವೀಯ ಹಲ್ಲೆಯನ್ನು ವಿರೋಧಿಸಿ ರಾಜ್ಯದಾದ್ಯಂತ ನಡೆದ ಚಳುವಳಿಗಳಲ್ಲಿ ಇವರದು ಸಕ್ರಿಯ ಪಾತ್ರ. ‘ಊನಾ ದಲಿತ ಅತ್ಯಾಚಾರ ಹೋರಾಟ ಸಮಿತಿ’ಯ ನಾಯಕರೂ ಆಗಿರುವ ಮೆವಾನಿ, ಇತ್ತೀಚೆಗೆ ಅಹಮದಾಬಾದ್‍ನಲ್ಲಿ ರಸ್ತೆ ತಡೆ ಚಳುವಳಿಯನ್ನು ಪ್ರಾರಂಭಿಸಿ ದಲಿತರಿಗೆ ಹಂಚಲಾದ ಭೂಮಿಯ ಖಾತೆ ಮಾಡಿಸಿ ಕೊಡುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಲು ಕಾರಣರಾದರು. ‘ದಿ ಹಿಂದು’ ಪತ್ರಿಕೆಯ ಜಿ.ಸಂಪತ್ ಅವರು 23 ಸೆಪ್ಟಂಬರ್ 2016 ರಂದು ಜಿಗ್ನೇಶ್ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ದಲಿತ ಹೊಸತಲೆಮಾರಿನ ದೃಷ್ಠಿಕೋನದ ಸಂಕೇತದಂತೆ ಮಾತನಾಡಿದ್ದಾರೆ.
ಸಂಪತ್ ಅವರು ಕೇಳಿದ `ಕಮ್ಯುನಿಸ್ಟರ ಬಗ್ಗೆ ದಲಿತರಲ್ಲಿ ಭಿನ್ನಾಭಿಪ್ರಾಯ ಇರುವಂತಿದೆ. ಕಮ್ಯುನಿಸ್ಟರು ಜಾತಿ ಪ್ರಶ್ನೆಯನ್ನ ಹಿನ್ನೆಲೆಗೆ ದೂಡಿಬಿಟ್ಟಿದ್ದಾರೆ ಅನ್ನೋದು ಅಂಬೇಡ್ಕರ್‍ವಾದಿಗಳ ಆರೋಪ. ಕಮ್ಯುನಿಸ್ಟರ ಬಗ್ಗೆ ನಿಮ್ಮ ನಿಲುವೇನು? ಎನ್ನುವ ಪ್ರಶ್ನೆಗೆ ಜಿಗ್ನೇಶ್ ಉತ್ತರಿಸುತ್ತಾ `ಕಮ್ಯುನಿಸ್ಟರನ್ನು ನಮ್ಮ ಹೋರಾಟದ ಜೊತೆಗಾರರು ಎಂದು ನಾನಾದರೂ ಭಾವಿಸುತ್ತೇನೆ. ಇದು ಕಮ್ಯುನಿಸ್ಟರು ದಲಿತರ ಜೊತೆ ಸೇರುವ ಅಥವಾ ದಲಿತರು ಕಮ್ಯುನಿಸ್ಟರೊಂದಿಗೆ ಹೋಗುವ ಪ್ರಶ್ನೆ ಅಲ್ಲ. ಇದನ್ನು ದಲಿತರ ಎಡಪಂಥೀಯತೆಯ ವಿಸ್ತರಣೆ ಅಂತ ಬೇಕಾದರೆ ಕರೆಯಿರಿ. ಅಂದರೆ ವರ್ಗ ಹೋರಾಟವನ್ನು ಅರ್ಥೈಸಿಕೊಳ್ಳುವ ತೀಕ್ಷ್ಣ ವಿಧಾನ ಇದು. ವರ್ಗ ರಹಿತ ಸಮಾಜವನ್ನು ಸೃಷ್ಟಿಸುವುದರಲ್ಲಿ ನಾವು ಸೋತರೂ ಕೊನೇ ಪಕ್ಷ ಈಗ ಇರುವುದಕ್ಕಿಂತ ಕಡಿಮೆ ಅಸಮಾನತೆಯಿರುವ ಸಮಾಜವನ್ನು ಸೃಷ್ಟಿಸುವ ಗುರಿಯನ್ನಾದರೂ ಇಟ್ಟುಕೊಳ್ಳಬೇಕಾಗುತ್ತದೆ. ‘ದನದ ಬಾಲ ನೀವೇ ಇಟ್ಟುಕೊಳ್ಳಿ, ನಮಗೆ ಭೂಮಿಕೊಡಿ’ ಎನ್ನುವ ನಮ್ಮ ಘೋಷಣೆ ಮತೀಯವಾದಿ ರಾಜಕಾರಣಕ್ಕೆ ವಿರುದ್ಧವಾಗಿರುವಂತೆ ನಮ್ಮ ಬದುಕಿನ ಪ್ರಶ್ನೆಗಳನ್ನೂ ಮುಂದಕ್ಕೆ ಒಡ್ಡುತ್ತಿದೆಯಲ್ಲ…
ಹಾಗೆ ನೋಡುವುದಾದರೆ, ಭಾರತದ ಕಮ್ಯುನಿಸ್ಟರೂ ಕಡೆಗಣಿಸಲಾಗದ ತಪ್ಪುಗಳನ್ನು ಮಾಡಿದ್ದಾರೆ. ಅಂಬೇಡ್ಕರ್‍ವಾದಿ ರಾಜಕಾರಣವೂ ಕೆಲವು ತಪ್ಪುಗಳನ್ನು ಮಾಡಿದೆ. ನಾವು ಕಮ್ಯುನಿಸ್ಟರನ್ನು ಅವರ ತಪ್ಪುಗಳಿಗೆ ಟೀಕೆ ಮಾಡೋರೇ. ಆದರೆ ಅವರು ನಮ್ಮಜೊತೆ ಬರುವುದಾದರೆ ಅವರನ್ನು ತಿರಸ್ಕರಿಸುವ ಮಟ್ಟಕ್ಕೆ ನಾನಂತೂ ಹೋಗುವುದಿಲ್ಲ. ಯಾವುದೇ ಜನಪರ ಚಳುವಳಿಗೆ ಅಷ್ಟರ ಮಟ್ಟಿಗಿನ ಮುಕ್ತ ಮನಸ್ಸು ಇರಬೇಕು. ನಮಗಂತೂ ಇದೆ. ದಲಿತರ ಸಮಸ್ಯೆಗಳನ್ನು ಗಂಭೀರವಾಗಿ ಮತ್ತು ನಿರಂತರವಾಗಿ ಕೈಗೆತ್ತಿಕೊಂಡು ಹೋರಾಟ ಮಾಡಿದಾಗ ಮಾತ್ರ ದಲಿತರು ಕಮ್ಯುನಿಸ್ಟರನ್ನು ನಂಬಲು ಶುರುಮಾಡಬಹುದು. ಇದಕ್ಕೆ ಸ್ವಲ್ಪ ಕಾಲ ಹಿಡಿಯಬಹುದು.’ ಎನ್ನುತ್ತಾರೆ. ಬಹುಶಃ ಈ ಮಾತು ಇಂದು ದಮನಿತ ಹೊಸ ತಲೆಮಾರಿನಲ್ಲಿ ಚರ್ಚೆಗೆ ಒಳಗಾಗಬೇಕಿದೆ. ಈ ಬಗ್ಗೆ ಒಂದು ದಿಟ್ಟ ನಿಲುವು ಪ್ರಕಟವಾಗಬೇಕಿದೆ.
ಊನಾ ಮದರಿ ಹೋರಾಟ
ಭಾರತದ ಪ್ರಧಾನ ಮಂತ್ರಿಗಳ ರಾಜ್ಯವಾದ ಗುಜರಾತಿನ ಊನಾ ಎಂಬ ಊರಿನಲ್ಲಿ ‘ಗೋರಕ್ಷಕ ಗೂಂಡಾಗಳು’ ಸತ್ತ ದನವನ್ನೊಯ್ಯುತ್ತಿದ್ದ ಏಳು ಜನ ದಲಿತರನ್ನು ಹಿಡಿದು, ಕಟ್ಟಿಹಾಕಿ ಅವರ ಮೇಲೆ ಕಬ್ಬಿಣದ ರಾಡುಗಳಿಂದ ಅಮಾನುಷ ಹಲ್ಲೆ ನಡೆಸಿದರು. ತಾವು ಕೊಂಡೊಯ್ಯುತ್ತಿದ್ದುದು ಸತ್ತ ದನ ಎಂದು ಅವರೆಷ್ಟು ಅಂಗಲಾಚಿದರೂ ಕರುಣೆ ತೋರದೆ ಹೊಡೆಯುತ್ತಾ ಬಟ್ಟೆ ಬಿಚ್ಚಿ ಊರಿನಲ್ಲಿ ಸಾರ್ವಜನಿಕವಾಗಿ ಎಳೆತಂದು ಅವಮಾನಿಸಿದರು. ಇದರಿಂದ ಆಕ್ರೋಶಗೊಂಡ ಗುಜರಾತಿನ ದಲಿತರು ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯ ಪ್ರತಿಭಟನೆಗೆ ತೊಡಗಿದರು. ‘ಇನ್ನು ಸತ್ತ ದನಗಳ ಸಂಸ್ಕಾರ ಮಾಡುವುದಿಲ್ಲ’ ಎಂದು ಘೋಷಿಸಿದರು. ನಿಮ್ಮ ದನಗಳನ್ನು ನೀವೇ ಸಂಬಾಳಿಸಿಕೊಳ್ಳಿ ಎಂದು ಸತ್ತ ದನಗಳ ಕಳೇಬರಗಳನ್ನು ಸರ್ಕಾರಿ ಕಚೇರಿಗಳಿಗೆ ಎಳೆದು ತಂದು ಪ್ರತಿಭಟಿಸಿದರು. ನಂತರ ಆಗಸ್ಟ್ ಮೊದಲ ವಾರ ಜಿಗ್ನೇಶ್ ಮೇವಾನಿ ಮುಂದಾಳತ್ವದಲ್ಲಿ ಆರಂಭವಾದ ‘ದಲಿತ ಅಸ್ಮಿತ ಜಾಥಾ’ ಆಗಸ್ಟ 15ರ ಸ್ವಾತಂತ್ರ್ಯ ದಿನಾಚರಣೆಯಂದು ಊನಾದಲ್ಲಿ ಲಕ್ಷಾಂತರ ದಲಿತರ ಬೃಹತ್ ಸಮಾವೇಶದ ಮೂಲಕ ದೇಶದ ಗಮನ ಸೆಳೆಯಿತು.
ದೇಶದ ಎಲ್ಲ ಕಡೆಗಳಿಂದ ಪ್ರಜ್ಞಾವಂತ ನಾಗರಿಕರು ಊನಾಗೆ ತೆರಳಿ ಬೆಂಬಲ ವ್ಯಕ್ತಪಡಿಸಿದರು. ಗುಜರಾತಿನ ಮುಸ್ಲಿಂ ಬಾಂಧವರೂ ಅಪಾರ ಸಂಖ್ಯೆಯಲ್ಲಿ ಜಾಥಾ ಹಾಗೂ ಸಮಾವೇಶದಲ್ಲಿ ಪಾಲ್ಗೊಂಡರು. ಸಂಘ ಪರಿವಾರದ ಹುನ್ನಾರಗಳನ್ನು ವಿರೋಧಿಸಿದರು. ದಲಿತರು ಇನ್ನು ಮುಂದೆ “ಸತ್ತ ದನಗಳನ್ನು ಮುಟ್ಟುವುದಿಲ್ಲ” ಎಂದು ಶಪಥಗೈದರು. ದಲಿತರಿಗೆ ಭೂಮಿ ಬೇಕೆಂದು ಆಗ್ರಹಪಡಿಸಿದರು. ಈ ಮಾದರಿ ಇಂದು ದೇಶದ ದಮನಿತ ಸಮುದಾಯಗಳ ಹೋರಾಟದ ಪ್ರಜ್ಞೆಯನ್ನು ಜಾಗೃತಗೊಳಿದೆ. ಈ ಜಾಗೃತಿ ಕರ್ನಾಟಕದ ಸಂದರ್ಭದಲ್ಲಿ ದಮನಿತ ಸಮುದಾಯಗಳ ಹೊಸ ತಲೆಮಾರಿನಲ್ಲಿಯೂ ಮೂಡಿದೆ. ಅದರ ಪ್ರತಿರೂಪವಾಗಿ ಇದೀಗ ಉಡುಪಿ ಚಲೋ ಎನ್ನುವ ಚಾರಿತ್ರಿಕ ಮಹತ್ವದ ಜಾಥಾವನ್ನು ಹಮ್ಮಿಕೊಂಡಿದ್ದಾರೆ.
ಚಲೋ ಉಡುಪಿ
ದಲಿತ-ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಮೂಲಕ ಆಹಾರ ನಮ್ಮ ಆಯ್ಕೆ; ಭೂಮಿ ನಮ್ಮ ಹಕ್ಕು ಎಂಬ ಘೋಷ ವಾಕ್ಯದಡಿ ಇದೇ 2016 ರ ಅಕ್ಟೋಬರ್ 4 ರಿಂದ 9 ರವರೆಗೆ ಬೆಂಗಳೂರಿನಿಂದ ಉಡುಪಿಗೆ ಹಮ್ಮಿಕೊಂಡ ಸ್ವಾಭಿಮಾನಿ ಸಂಘರ್ಷ ಜಾಥಾ `ಚಲೋ ಉಡುಪಿ’ ಕರ್ನಾಟಕದ ಸಂದರ್ಭದಲ್ಲಿ ಚಾರಿತ್ರಿಕ ಮಹತ್ವ ಪಡೆಯುತ್ತಿದೆ. ಊನಾದ ದಲಿತ ಪ್ರತಿರೋಧ ಇಡೀ ದೇಶದಲ್ಲಿ ಸಂಚಲನ ಮೂಡಿಸಿರುವ ಹೊತ್ತಿನಲ್ಲಿ, ಕರ್ನಾಟಕದಲ್ಲೂ ದಲಿತರು ಮತ್ತು ಎಲ್ಲಾ ದಮನಿತ ಸಮುದಾಯಗಳ ಜನರು ಸಾಮಾಜಿಕ, ಆರ್ಥಿಕ, ದೈಹಿಕ ಹಾಗೂ ಮಾನಸಿಕ ಹಲ್ಲೆಗಳಿಗೆ ಬಲಿಯಾಗುತ್ತಲೇ ಇದ್ದಾರೆ. ರಾಜ್ಯದಲ್ಲೇ ಕಳೆದ ಕೆಲವೇ ವರ್ಷಗಳಲ್ಲಿ ನಡೆದಿರುವ ದಲಿತರ ಮೇಲಿನ ದೌರ್ಜನ್ಯಗಳು ಇದಕ್ಕೆ ಕನ್ನಡಿ ಹಿಡಿಯುತ್ತಿವೆ.
2016ರ ಜುಲೈ 17ರಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ಭಜರಂಗದಳದ ಮೂವತ್ತು ಜನರ ಗುಂಪು ದಲಿತರಾದ ಬಾಲರಾಜ್, ಧನು, ಸಂದೀಪ್ ಹಾಗೂ ಮುತ್ತಪ್ಪ ಇವರ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತು. ಈ ಗೂಂಡಾಗಳು ದನವನ್ನು ಕದ್ದು ಮಾಂಸ ತಿಂದಿದ್ದಾರೆ ಎಂದು ಆರೋಪಿಸಿ ಮಚ್ಚಿನಿಂದ ಹೊಡೆದು ಅಂಗವಿಕಲ ದಲಿತ ಬಾಲರಾಜ್ ಅವರ ಕೈ ಮುರಿದರು. ಹಾಸನ ಜಿಲ್ಲೆಯ ಸಿಗರನಹಳ್ಳಿಯಲ್ಲಿ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದ ಘಟನೆಯ ಬೆಳವಣಿಗೆ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿರುವುದು ಜಾತಿ ಸಂವಿಧಾನವೇ ಹೊರತು ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವಲ್ಲ ಎಂಬುದನ್ನು ನಿರೂಪಿಸಿತು.
2015ರ ಡಿಸೆಂಬರ್‍ನಲ್ಲಿ ರಾಯಚೂರಿನ ತುರುವೀಹಾಳದಲ್ಲಿ ಅಂಬೇಡ್ಕರ್ ನಾಮಫಲಕಕ್ಕೆ ವಾಹನ ಡಿಕ್ಕಿ ಹೊಡೆಸಿದ್ದನ್ನು ಪ್ರಶ್ನಿಸಿದ್ದೇ ಅಪರಾಧವಾಗಿ ಅಲ್ಲಿಯ ಸವರ್ಣೀಯರು ದಲಿತರ ಕೇರಿಗೆ ನುಗ್ಗಿ ಯುವಕರು, ಮಹಿಳೆಯರು, ಮುದುಕರು ಮಕ್ಕಳೆನ್ನದೆ ಎಲ್ಲರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ಮೂರು ತಿಂಗಳ ಗರ್ಭಿಣಿ ಹುಲಿಗೆಮ್ಮಳಿಗೆ ತೀವ್ರ ರಕ್ತಸ್ರಾವವಾಯಿತು. ಮೂವತ್ತು ಜನರಿಗೆ ಗಾಯಗಳಾದವು. ಪೊಲೀಸರು ಹಲ್ಲೆಕೋರರ ಮೇಲೆ ದೂರು ದಾಖಲಿಸಿಕೊಂಡರೂ ಮರುಗಳಿಗೆಯಲ್ಲಿಯೇ ಹಲ್ಲೆಗೊಳಗಾದ ದಲಿತರ ಮೇಲೆಯೇ ಪ್ರತಿದೂರು ದಾಖಲಿಸಿದ್ದರು. ಇದೇ ತುರುವೀಹಾಳ ವ್ಯಾಪ್ತಿಯ ಕರಕುಂದಿ ಗ್ರಾಮದಲ್ಲಿ ಜಾತ್ರೆಯಲ್ಲಿ ಕಾಲು ತುಳಿದರು ಎನ್ನುವ ಕಾರಣಕ್ಕೆ ದಲಿತರ ಕೇರಿಗೆ ನುಗ್ಗಿ ಹಲ್ಲೆ ನಡೆಸಲಾಯಿತು. ಇತರೆ ಐದು ಗ್ರಾಮಗಳಲ್ಲಿ ದಲಿತರ ಮೇಲೆ ಹಲ್ಲೆ ಪ್ರಕರಣಗಳು ನಡೆದಿವೆ.
2015ರ ಅಕ್ಟೋಬರ್‍ನಲ್ಲಿ ದಾವಣೆಗೆರೆಯ ಪತ್ರಿಕೋದ್ಯಮ ವಿದ್ಯಾರ್ಥಿ ಹಾಗೂ ದಲಿತ ಯುವ ಲೇಖಕ ಹುಚ್ಚಂಗಿ ಪ್ರಸಾದ್ ಮೇಲೆ ಸಂಘ ಪರಿವಾರದ ಗೂಂಡಾ ಗುಂಪೊಂದು ಹಲ್ಲೆ ನಡೆಸಿ, ಮೈಮೇಲೆಲ್ಲಾ ಕುಂಕುಮ ಎರಚಿ ಬರೆಯುವ ಬೆರಳುಗಳನ್ನೇ ಕತ್ತರಿಸುವ ಬೆದರಿಕೆ ಒಡ್ಡಿತ್ತು. 2015ರಲ್ಲಿ ಚಾಮರಾಜನಗರ ಜಿಲ್ಲೆ ಸಂತೆಮಾರಳ್ಳಿ ಗ್ರಾಮದ ಪೊಲೀಸ್ ಠಾಣೆಯ ಅರ್ಧ ಕಿಲೋ ಮೀಟರ್ ದೂರದ ಬಾಳೆತೋಟದಲ್ಲಿ ದಲಿತ ಕೂಲಿಗಳಿಬ್ಬರ ತಲೆ ಕಡಿದು ನರಬಲಿ ಕೊಟ್ಟ ಹೇಯ ಘಟನೆ ನಡೆಯಿತು. ಅಪರಾಧಿಗಳನ್ನು ರಕ್ಷಿಸುವ ಮತ್ತು ಈ ಘೋರ ಹತ್ಯೆಯ ಅಪರಾಧವನ್ನು ಮುಚ್ಚಿಹಾಕುವ ಕೆಲಸ ವ್ಯವಸ್ಥಿತವಾಗಿ ನಡೆಯಿತು. ಅದೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ದಲಿತ ಮಹಿಳೆಯ ಮೇಲೆ ಕ್ರೂರವಾಗಿ ಅತ್ಯಾಚಾರವೆಸಗಿ ದೇಹವನ್ನು ಚಾಕುವಿನಿಂದ ಕೊಯ್ದು ಕ್ರೂರವಾಗಿ ಕೊಲೆಮಾಡಲಾಗಿದೆ. ಕೊಲೆಗಾರರನ್ನು ಪತ್ತೆಮಾಡಲು ಪೊಲೀಸರು ಕರೆತಂದ ಶ್ವಾನದಳದ ನಾಯಿ ಮೇಲ್ಜಾತಿ ವ್ಯಕ್ತಿಯನ್ನು ಸರಿಯಾಗಿ ಗುರುತಿಸಿದರೂ ಆ ಮಹಿಳೆಯ ಗಂಡನನ್ನೇ ಅರೋಪಿ ಎಂದು ಬಂಧಿಸಲಾಯಿತು. ಹೀಗೆ ಬಂಧನಕ್ಕೊಳಗಾದ ಅಮಾಯಕ ದಲಿತ ವ್ಯಕ್ತಿ ಇನ್ನೂ ಜೈಲಿನಲ್ಲಿದ್ದಾರೆ.
ಕೊಪ್ಪಳ ಜಿಲ್ಲೆಯ ಕಲಾಲಬಂಡಿ ಗ್ರಾಮದಲ್ಲಿ ಕ್ಷೌರಕ್ಕೆ ಸಂಬಂಧಿಸಿದಂತೆ ದಲಿತರಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಿ ದಲಿತರ ಮನೆಗಳ ಸುತ್ತಲೂ ಮುಳ್ಳಿನ ಬೇಲಿ ಹಾಕಲಾಯಿತು. 2015ರ ಸೆಪ್ಟೆಂಬರ್‍ನಲ್ಲಿ ಮಂಡ್ಯ ಜಿಲ್ಲೆಯ ಹುಲಿವಾನ ಗ್ರಾಮದಲ್ಲಿ ದಲಿತ ಯುವಕ ಹಾಗೂ ಸವರ್ಣೀಯ ಯುವತಿ ಪ್ರೀತಿಸಿ ಮದುವೆಯಾದ ಕಾರಣಕ್ಕೆ ಆ ಗ್ರಾಮದ 50 ದಲಿತ ಮನೆಗಳ ಮೇಲೆ ದಾಳಿ ನಡೆಸಲಾಯಿತು. ಕಾನೂನು ಸುವ್ಯವಸ್ಥೆ ಕಾಪಾಡಲು ಬಂದ ಪೊಲೀಸರ ಮೇಲೂ ಕಲ್ಲು ಎಸೆಯಲಾಯಿತು. 2015ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸವರ್ಣೀಯರು ದಲಿತರಿಗೆ ಕೊಡಿಸಿದ್ದ ತಮಟೆಯನ್ನು ಪಕ್ಕದ ಗ್ರಾಮದ ದಲಿತರಿಗೆ ನೀಡಿದರೆಂಬ ಕಾರಣಕ್ಕೆ ದಂಡ ವಿಧಿಸಿ ಸಾಮಾಜಿಕ ಬಹಿಷ್ಕಾರ ವಿಧಿಸಲಾಯಿತು. ತಮಟೆ ಕೊಡಿಸುವ ಮೊದಲು ಈ ಗ್ರಾಮದ ದಲಿತರೂ ಬೇರೆ ಗ್ರಾಮದಿಂದಲೇ ತಮಟೆ ತಂದು ಉಪಯೋಗಿಸುತ್ತಿದ್ದರು. ಕೆ.ಆರ್.ಪೇಟೆಯಲ್ಲಿ ದಲಿತ ಕಾಲೋನಿಗೆ ನೀರು ಪೂರೈಕೆ ಮಾಡುವ ಪೈಪ್ ಲೈನ್ ಒಡೆದು ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ದಲಿತರ ಮೇಲೆ ಹಲ್ಲೆ ನಡೆಸಲಾಯಿತು.
2014ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದ ದಲಿತರ ಮೇಲೆ ಸವರ್ಣೀಯರು ದಾಳಿ ನಡೆಸಿ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದರು. ಅಪರಾಧಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳದ ಕಾರಣ ಎರಡು ತಿಂಗಳ ನಂತರ ಮತ್ತೊಮ್ಮೆ ದಲಿತರ ಮೇಲೆ ದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ 30 ಮಂದಿ ದಲಿತರಿಗೆ ಗಾಯಗಳಾಗಿದ್ದವು. ಕೊಪ್ಪಳ ಜಿಲ್ಲೆಯ ಕನಕಗಿರಿ ವಿದ್ಯಾರ್ಥಿನಿಲಯದಲ್ಲಿ ಯಲ್ಲಾಲಿಂಗ ಎಂಬ ದಲಿತ ವಿದ್ಯಾರ್ಥಿಯ ಕೊಲೆಯಾಗಿತ್ತು. ಅದರ ಬೆನ್ನಲ್ಲೇ ವೀರೇಶ್ ಎಂಬ ದಲಿತ ಯುವಕನ ಆತ್ಮಹತ್ಯೆ ಅನುಮಾನಾಸ್ಪದ ರೀತಿಯಲ್ಲಿ ನಡೆಯಿತು. ಮಂಡ್ಯ ಜಿಲ್ಲೆಯಲ್ಲಿ ದಲಿತ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಒಕ್ಕಲಿಗ ಯುವತಿಯೊಬ್ಬಳನ್ನು ಕುಟುಂಬದವರೇ ಹತ್ಯೆ ಮಾಡಿದ ‘ಮರ್ಯಾದೆಗೇಡು ಹತ್ಯೆ’ ಘಟನೆ ನಡೆಯಿತು. ಊರ ಮೇಲ್ಜಾತಿಗಳ ದುರಭಿಮಾನಿ ಜನರು ದಲಿತರ ಕೇರಿಗಳ ಮೇಲೆ ದಾಳಿ ನಡೆಸಲು, ದೌರ್ಜನ್ಯ ನಡೆಸಲು ಬಾಬಾಸಾಹೇಬರ ನಾಮಫಲಕಗಳೂ ಕಾರಣವಾಗುತ್ತಿವೆ ಎಂದರೆ ಮನುವಾದಿ, ಬ್ರಾಹ್ಮಣವಾದಿ ಚಿಂತನೆಗಳು ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿವೆ ಎಂದು ನೋಡಬಹುದು.
ಇವು ನಮ್ಮದೇ ಕರ್ನಾಟಕ ರಾಜ್ಯದಲ್ಲಿ ದಿನನಿತ್ಯ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಕೆಲವೇ ಉದಾಹರಣೆಗಳಷ್ಟೇ. ಇನ್ನೂ ನೂರಾರು ಪ್ರಕರಣಗಳಿವೆ. ಈ ಪ್ರಕರಣಗಳಲ್ಲಿ ಕಾನೂನು ಪಾಲಕರಿಂದಾಗಲೀ, ನ್ಯಾಯಾಲಯಗಳಿಂದಾಗಲೀ ದಲಿತರಿಗೆ ನ್ಯಾಯ ಸಿಕ್ಕಿರುವ ಉದಾಹರಣೆ ಇಲ್ಲವೇ ಇಲ್ಲ ಎನ್ನಬಹುದು. ಕೋಲಾರದ ಕಂಬಾಲಪಲ್ಲಿಯಲ್ಲಿ ಏಳು ಮಂದಿ ದಲಿತರನ್ನು ಜೀವಂತ ಸುಟ್ಟು ಸಾಯಿಸಿದ ಘಟನೆ ಹಸಿಯಾಗಿರುವಾಗಲೇ ನ್ಯಾಯಾಲಯದಲ್ಲಿ ಈ ಪ್ರಕರಣವೇ ಬಿದ್ದುಹೋಗುವಂತೆ ಮಾಡಿದ ಘಟನೆ ಗಾಯಕ್ಕೆ ಉಪ್ಪು ಸುರಿದಂತೆ ಮಾಡಿದೆ. ದಲಿತರನ್ನು ಸುಟ್ಟು ಹಾಕಿದ ಘಟನೆಗೆ ಸಾಕ್ಷಿಗಳಾಗಿದ್ದವರನ್ನು ಸತ್ಯ ಹೇಳದಂತೆ ಮಾಡಲಾಯಿತು. ಇದಕ್ಕೆ ಜಾಣಕುರುಡುತನ ತೋರಿದ ನ್ಯಾಯಾಧೀಶರು ದಲಿತ ವೀರೋದಿ ತೀರ್ಪು ನೀಡುವ ಮೂಲಕ ನ್ಯಾಯಾಲಯಗಳೂ ಹೇಗೆ ಮೇಲ್ಜಾತಿಪರ ಧೋರಣೆ ಹೊಂದಿರುತ್ತವೆ ಎಂದು ಸಾಬೀತುಪಡಿಸಿದರು. ಚಿಂತಾಮಣಿಯ ನಾಗಲಾಪಲ್ಲಿಯ ದಲಿತ ಮಹಿಳೆ ಯಶೋದಮ್ಮ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗದಲ್ಲಿಯೂ ನ್ಯಾಯ ಮರೀಚಿಕೆಯಾಗಿಯೇ ಉಳಿದಿದೆ. ಇಡೀ ದೇಶದ ನ್ಯಾಯ ವ್ಯವಸ್ಥೆಯೇ ದಲಿತರ ಪಾಲಿಗೆ ಕಣ್ಣು ಕಿವಿ ಕಳೆದುಕೊಂಡು ಕುಳಿತಿದೆ. ಕಿಲ್ವೇಣ್ಮಣಿ, ಖೈರ್ಲಾಂಜಿ, ಜಜ್ಜಾರ್, ಚುಂಡೂರು, ಹೀಗೆ ದೇಶದ ಇತರೆಡೆಗಳಲ್ಲಿಯೂ ದೌರ್ಜನ್ಯಕ್ಕೊಳಗಾದ ದಲಿತರಿಗೆ ನ್ಯಾಯ ದೊರೆತಿಲ್ಲ. ಮನುವಾದಿ ಮನಸ್ಥಿತಿಯನ್ನು ಹೆಜ್ಜೆ ಹೆಜ್ಜೆಗೂ ಪೋಷಿಸುವ ಬಲಪಂಥೀಯ ಶಕ್ತಿಗಳು ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಎಗ್ಗಿಲ್ಲದೆ ಬೆಳೆಯುತ್ತಿರುವುದು ಮತ್ತಷ್ಟು ಕಳವಳಕಾರಿಯಾಗಿದೆ.
ರಾಷ್ಟ್ರೀಯ ಅಪರಾಧ ವರದಿ ಮಂಡಳಿಯ ದಾಖಲೆಯ ಪ್ರಕಾರ 2014ರಲ್ಲಿ ಇಡೀ ಭಾರತದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ.19ರಷ್ಟು ಹೆಚ್ಚಾಗಿದ್ದು, ಕರ್ನಾಟಕ ಒಂದರಿಂದಲೇ 2000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ದಾಖಲಾದ ದಲಿತರ ಮೇಲಿನ ದೌರ್ಜನ್ಯಗಳ ಒಟ್ಟು ಸಂಖ್ಯೆ 47,064. ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವುದು 487. ಇವು ದಾಖಲೆಗೆ ಸಿಕ್ಕಿರುವುದು ಮಾತ್ರ. ದಾಖಲಾಗದೆ ಹೋದ ಪ್ರಕರಣಗಳು ಇನ್ನೂ ಹೆಚ್ಚಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.
ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳು
ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮುಸ್ಲಿಂ, ಕ್ರೈಸ್ತರು ಯಾವತ್ತೂ ಆತಂಕದಲ್ಲಿಯೇ ಕಾಲಕಳೆಯುವಂತಾಗಿದೆ. ಕಳೆದ ನೂರು ವರ್ಷಗಳಿಂದ ಸಮಾಜದಲ್ಲಿ ಈ ಸಮುದಾಯಗಳ ಕುರಿತಾಗಿ ಬಿತ್ತಿರುವ ಪೂರ್ವಾಗ್ರಹಗಳು ಇಂದ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿವೆ. ಅದರ ಪರಿಣಾಮವಾಗಿಯೇ ಈ ಸಮುದಾಯಗಳ ಜನರ ಮೇಲೆ ಹಲ್ಲೆಗಳು ಹೆಚ್ಚಾಗಲು ಮತ್ತು ಈ ಹಲ್ಲೆಗಳಿಗೆ ಸಾರ್ವಜನಿಕ ಸಮ್ಮತಿ ದೊರಕುವಂತಾಗಿದೆ. 2005ರಲ್ಲಿ ಆದಿ ಉಡುಪಿಯಲ್ಲಿ ದನಸಾಗಣೆ ವಿಷಯಕ್ಕೆ ಸಂಬಂಧಿಸಿದಂತೆ ವಯೋವೃದ್ಧ ಹಾಜಬ್ಬ ಮತ್ತು ಆತನ ಮಗ ಹಸನಬ್ಬರನ್ನು ಅಮಾನವೀಯ ರೀತಿಯಲ್ಲಿ ಬೆತ್ತಲೆಗೊಳಿಸಿ ಥಳಿಸಲಾಗಿತ್ತು. ಅಲ್ಲಿಂದೀಚೆಗೆ ಎಡೆಬಿಡದೆ ಅಲ್ಪಸಂಖ್ಯಾತರ ಮೇಲೆ ಈ ಬಗೆಯ ಹಲ್ಲೆಗಳು ನಡೆಯುತ್ತಲೇ ಇವೆ. ದನದ ಸಾಗಾಣಿಕೆ ನೆಪದಲ್ಲಿ, ಲವ್ ಜಿಹಾದ್ ನೆಪದಲ್ಲಿ, ಧರ್ಮ ರಕ್ಷಣೆಯ ಸೋಗಿನಲ್ಲಿ ನಡೆಯುತ್ತಿರುವ ದೌರ್ಜನ್ಯ, ಅನಾಚಾರಗಳಿಗೆ ಲೆಕ್ಕವಿಲ್ಲ. ಶೃಂಗೇರಿಯ ತನಿಕೋಡಿನಲ್ಲಿ ವಾಹನದಲ್ಲಿ ದನ ಸಾಗಿಸುತ್ತಿದ್ದ ಕಬೀರ್ ಎಂಬ ಯುವಕನನ್ನು ಎಎನ್‍ಎಫ್‍ನವರು ಎನ್‍ಕೌಂಟರ್‍ನಲ್ಲಿ ಕೊಂದು ಹಾಕಿದ ಘಟನೆ ಇದಕ್ಕೆ ನಿದರ್ಶನ. ಗೋಸಾಗಾಣಿಕೆಯ ಪ್ರಕರಣಗಳಲ್ಲಿ ರಕ್ಷಣಾ ಇಲಾಖೆಯೇ ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಿರುವ ಎಷ್ಟೋ ಪ್ರಕರಣಗಳಿವೆ.
ದನದ ರಾಜಕಾರಣ
ದೇಶದೆಲ್ಲೆಡೆ ಸಂಘಪರಿವಾರದ ಉಗ್ರಗಾಮಿ ಶಕ್ತಿಗಳು ದೇಶವಿರೋಧಿ ದನದ ರಾಜಕಾರಣದಲ್ಲಿ ತೊಡಗಿವೆ. ವಿನಾಕಾರಣ ಅಮಾಯಕರನ್ನು ಹಿಂಸಿಸುವ, ಕೊಲೆಗೈಯುವ, ಅತ್ಯಾಚಾರ ಎಸಗುವ ಕೆಲಸದಲ್ಲಿ ತೊಡಗಿವೆ. ನಾವು ಸೇವಿಸುವ ಆಹಾರದ ಮೇಲೂ ನಿರ್ಬಂಧ ಹೇರುವ ಕೆಲಸ ಅವ್ಯಾಹತವಾಗಿ ನಡೆದಿದೆ. ಜನರು ತಿನ್ನುವ ಆಹಾರಕ್ಕೂ, ಸಾಮಾನ್ಯ ನಂಬಿ ನಡೆಯುವ ದೇವರು – ಧರ್ಮಗಳಿಗೂ ಬೇಕೆಂದೇ ಸಂಬಂಧ ಕಲ್ಪಿಸಿ, ಜನಸಾಮಾನ್ಯರನ್ನು ಭಾವುಕವಾಗಿ ಕೆರಳಿಸಿ ರಾಜಕೀಯ ಸ್ವಾರ್ಥಕ್ಕಾಗಿ ಒಂದು ಸಮುದಾಯದ ಮೇಲೆ ಮತ್ತೊಂದು ಸಮುದಾಯವನ್ನು ಛೂಬಿಡುವ ಕೆಲಸ ನಡೆಯುತ್ತಿದೆ.
ಪ್ರತಿದಿನ ನಮ್ಮ ದೇಶದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ದನಗಳ ಹತ್ಯೆ ಮಾಡುವ ಗೋಮಾಂಸ ರಫ್ತಿನ ಉದ್ಯಮ ಹಾಗೂ ಮತ್ತು ದನದ ಚರ್ಮದ ಉದ್ಯಮದ ಮೇಲಿನ ಹಿಡಿತವಿರುವುದು ಬ್ರಾಹ್ಮಣ ಮತ್ತು ಬನಿಯಾಗಳಿಗೆ ಸೇರಿದ ಹಿಂದೂ ಮೇಲ್ವರ್ಗದ ಕುಟುಂಬಗಳ ಹಿಡಿತದಲ್ಲಿಯೇ. ಹಾಗಾದರೆ ಈ ಬಗ್ಗೆ ದೇಶದಲ್ಲಿ ಯಾವ ‘ಗೋರಕ್ಷಕ’ನಾದರೂ ಎಂದಾದರೂ ಧ್ವನಿ ಎತ್ತಿರುವ ಉದಾಹರಣೆ ಇದೆಯೇ? ದನದ ಮಾಂಸದ ಉದ್ಯಮಕ್ಕಾಗಿ ನಡೆಯುವ ಗೋ ಹತ್ಯೆಯ ಬಗ್ಗೆ ಒಂದೇ ಒಂದು ಸೊಲ್ಲೆತ್ತದ ಗೋರಕ್ಷಕರು ಅರ್ಧ ಕೆಜಿ ದನದ ಮಾಂಸ ತಿಂದಿದ್ದಕ್ಕಾಗಿ ಮನುಷ್ಯ ಜೀವನ್ನೇ ತೆಗೆಯುವುದನ್ನು ಅಸಹಾಯಕವಾಗಿ ನೋಡಬೆಕಾದ ಮಟ್ಟಕ್ಕೆ ಈ ದೇಶ ಬಂದು ನಿಂತಿದೆ.
ಮಹಿಳೆಯರ ಮೇಲಿನ ದೌರ್ಜನ್ಯಗಳು
ಒಂದು ಕಡೆ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಗುರುತರವಾದ ಹೆಜ್ಜೆ ಇಡುತ್ತಿದ್ದಾರೆ. ರಿಯೋ ಓಲಂಪಿಕ್ಸ್ ನಲ್ಲಿ ಮಹಿಳಾ ಕ್ರೀಡಾಳುಗಳು ಜಗದೆದುರು ಈ ದೇಶದ ಮಾನ ಕಾಪಾಡಿದ್ದಾರೆ. ಮತ್ತೊಂದೆಡೆ ಇದೇ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು ಆಘಾತಕಾರಿ ಮಟ್ಟದಲ್ಲಿ ನಡೆಯುತ್ತಿರುವುದು ನಾಚಿಕೆಗೇಡು. ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಸಹ ಜಾತಿ-ಧರ್ಮದ ಪೂರ್ವಾಗ್ರದಿಂದ ನಡೆಯುತ್ತಿರುವುದು ಇನ್ನಷ್ಟು ಕ್ರೂರ. ಇದಕ್ಕೆ ಸಮಾಜ ವ್ಯಕ್ತಪಡಿಸುವ ಪ್ರತಿಕ್ರಿಯೆ ಸಹ ಪೂವಾರ್ಗಗ್ರಹ ಪೀಡಿತವಾಗಿಯೇ ಇವೆ. ಹೀಗಾಗಿಯೇ ದಿನನಿತ್ಯ ದಲಿತ, ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ನಡೆಯುವ ಅದೆಷ್ಟೋ ಅತ್ಯಾಚಾರ, ದೌರ್ಜನ್ಯಗಳು ಯಾರ ಗಮನಕ್ಕೂ ಬಾರದಂತೆ ಹೋಗುತ್ತಿವೆ. ಇನ್ನು ಅತ್ಯಾಚಾರ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗಳಿಗೆ ದೂರು ಕೊಡಲು ಹೋದಾಗ ಬಹುತೇಕ ಪ್ರಕರಣಗಳಲ್ಲಿ ಪೊಲೀಸರು ಅಪರಾಧಿಗಳ ಮೇಲೆ ದಾಖಲಿಸುವ ಬದಲಾಗಿ ಅತ್ಯಾಚಾರಕ್ಕೊಳಗಾದ ಬಲಿಪಶುಗಳನ್ನೇ ಅನುಮಾನಿಸುತ್ತಾರೆ ಎಂಬ ಅಂಶವನ್ನು ಜಸ್ಟೀಸ್ ವರ್ಮಾ ಸಮಿತಿಯೇ ಗುರುತಿಸಿದೆ.
ಮಹಿಳೆಯರು ನಮ್ಮ ಗಂಡಾಳ್ವಿಕೆಯ ಸಮಾಜದಲ್ಲಿ ವರದಕ್ಷಿಣೆ ಕಿರುಕುಳ-ಕೊಲೆ, ಆಸಿಡ್ ದಾಳಿ, ಕೌಟುಂಬಿಕ ಹಿಂಸೆ, ಸ್ತ್ರೀ ಭ್ರೂಣಹತ್ಯೆ, ನಾನಾ ಬಗೆಯ ಲೈಂಗಿಕ ದೌರ್ಜನ್ಯಗಳಿಗೆ, ಲಿಂಗ ಪೂರ್ವಾಗ್ರಹಗಳಿಗೆ ಒಳಗಾಗಿ ದಿನೇದಿನೇ ಕುಗ್ಗುತ್ತಲೇ ಹೋಗುತ್ತಿದ್ದಾರೆ. ಸಾಲದ್ದಕ್ಕೆ ಶ್ರೀರಾಮಸೇನೆ, ಹಿಂದೂ ಜಾಗರಣ ವೇದಿಕೆಯಂತಹ ಭ್ರಷ್ಟ ಗೂಂಡಾ ಪಡೆಗಳು ಹೆಣ್ಣುಮಕ್ಕಳ ಮೇಲೆ ಧರ್ಮ- ಸಂಸ್ಕøತಿ ರಕ್ಷಣೆ ಹೆಸರಲ್ಲಿ ನಡೆಸುವ ಅಮಾನವೀಯ ದಾಳಿಗಳನ್ನು, ಹಲ್ಲೆಗಳನ್ನು ಕಂಡಿದ್ದೇವೆ. ಇಡೀ ಸಮಾಜವನ್ನು ಮಹಿಳೆಯರ ಎದುರು ಎತ್ತಿಕಟ್ಟಿರುವುದು ಮನುವಾದ ಮತ್ತು ಧಾರ್ಮಿಕ ಕರ್ಮಠತನಗಳು. ಆದ್ದರಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮನುಸ್ಮøತಿಯನ್ನು ಬಹಿರಂಗವಾಗಿ ದಹಿಸುವ ಮೂಲಕ ಮಹಿಳಾ ವಿಮೋಚನೆಯ ಸಭೆ ನಡೆಸಿದ್ದನ್ನು ಸ್ಮರಿಸಬಹುದು.
ಮೊದಲೇ ಸಮಾಜದಿಂದ ತಿರಸ್ಕøತವಾಗಿರುವ ಆದಿವಾಸಿ, ಅಲೆಮಾರಿ, ತಳಸಮುದಾಯಗಳ ಜನತೆಯ ಬದುಕು ಆತಂಕಮಯವಾಗಿದೆ. ಈ ಅಸಮುದಾಯಗಳು ಅತ್ತ ತಮ್ಮ ನೆಲೆಗಳಲ್ಲಿ ಉತ್ತಮ, ಸ್ವಾಭಿಮಾನದ ಬದುಕನ್ನೂ ಕಟ್ಟಿಕೊಳ್ಳಲಾರದೇ ಇತ್ತ ದುರಾಸೆ ಪೀಡಿತ ಬಂಡವಾಳಶಾಹಿ ಪ್ರಣೀತ ಅಧುನಿಕತೆಯನ್ನೂ ಅರಗಿಸಿಕೊಳ್ಳಲಾರದೆ ಇನ್ನಿಲ್ಲದ ಪಾಡು ಪಡುತ್ತಿದ್ದಾರೆ. ವರ್ಷದ ಹಿಂದೆ ಬೆಳ್ತಂಗಡಿ ತಾಲ್ಲೂಕಿನ ನೆರಿಯಾ ಗ್ರಾಮದ ಕಾಟಾಜೆಯ ಸುಂದರ ಮಲೆಕುಡಿಯ ಎಂಬ ಆದಿವಾಸಿಯ ಮೇಲೆ ಅಮಾನುಷ ಹಲ್ಲೆ ನಡೆಸಿದ ಮೇಲ್ಜಾತಿ ಭೂಮಾಲಿಕರು ಆತನ ಕೈ ಬೆರಳುಗಳನ್ನೇ ಕತ್ತರಿಸಿದರು. ಈ ಪ್ರಕರಣದಲ್ಲಿ ಸುಂದರ ಮಲೆಕುಡಿಯ ಇಂದಿಗೂ ನ್ಯಾಯವಂಚಿತರಾಗಿದ್ದಾರೆ. ಹೀಗೆ, ಅಪರಾಧವೇ ಅಧಿಕಾರವಾಗಿ, ಅನ್ಯಾಯವೇ ಆಡಳಿತವಾಗಿರುವ ಈ ಸಂದಿಗ್ಧ ಕಾಲದಲ್ಲಿ ಈ ನೆಲದ ಜನಸಮಾನ್ಯರು ಬದುಕುತ್ತಿದ್ದಾರೆ. ಅಂತೆಯೇ ಲೈಂಗಿಕ ಅಲ್ಪಸಂಖ್ಯಾತ ಲಿಂಗಾಂತರಿ ಸಮುದಾಯವೂ ಒಂದಿಲ್ಲೊಂದು ಹಲ್ಲೆಗೆ ಒಳಗಾಗುತ್ತಿದೆ. ಈ ಹಲ್ಲೆಯನ್ನೂ ಮನುವಾದಿ ಸ್ತ್ರೀದೃಷ್ಟಿಕೋನಗಳೇ ಪ್ರಭಾವಿಸುತ್ತಿವೆ.
ಭೂಮಿ ನಮ್ಮ ಹಕ್ಕು
ದಲಿತ, ಆದಿವಾಸಿ, ಅಲೆಮಾರಿ ಹಾಗೂ ಹಿಂದುಳಿದ ಸಮುದಾಯಗಳ ಕೋಟ್ಯಂತರ ಜನರು ಇಂದಿಗೂ ಸಹ ತುಂಡು ಭೂಮಿಯನ್ನೂ ಕಾಣದೇ ಬದುಕುತ್ತಿದ್ದಾರೆ. ದೇವರಾಜ ಅರಸು ಜಾರಿಗೆ ತಂದಿದ್ದ ಒಂದು ಭೂಸುಧಾರಣಾ ಕಾಯ್ದೆಯನ್ನೂ ಸರಿಯಾಗಿ ಜಾರಿಗೊಳಿಸಲು ಬಲಾಢ್ಯ ವರ್ಗಗಳು ಬಿಡುತ್ತಿಲ್ಲ. ಎಷ್ಟೋ ಜನರಿಗೆ ಜಮೀನಿದ್ದರೂ, ಉಳುಮೆ ಮಾಡುತ್ತಿದ್ದರೂ ಅದರ ಮೇಲೆ ಹಕ್ಕಿಲ್ಲದಂತಾಗಿದೆ. ಇತ್ತೀಚೆಗೆ ದಲಿತರ ಭೂಮಿಯ ಹಕ್ಕಿಗಾಗಿ ಹೋರಾಡಿದ್ದಕ್ಕಾಗಿ ಬಳ್ಳಾರಿಯಲ್ಲಿ ಕರಿಯಪ್ಪ ಗುಡಿಮನಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದನ್ನು ಗಮನಿಸಬಹುದು. ಈ ಹಿಂದೆ ಭೂಮಾಲೀಕರ ವಿರುದ್ಧ ಭೂ ಹೋರಾಟ ನಡೆದಿದ್ದರೆ ಈ ದಿನಗಳಲ್ಲಿ ಬಡವರ ಭೂಮಿಯನ್ನು ಕಾರ್ಪೊರೇಟ್ ಶಕ್ತಿಗಳು ನುಂಗಿ ಹಾಕುತ್ತಿವೆ. ದಲಿತ-ದಮನಿತರಿಗೆ ಭೂಮಿ ಮತ್ತು ವಸತಿ ಹಕ್ಕುಗಳು ಸಿಗಬೇಕು ಎನ್ನುವ ಕೂಗು ಮತ್ತೊಮ್ಮೆ ಮೊಳಗಿದೆ. ಈ ಧ್ವನಿಗೆ ಇಡೀ ನಾಡಿನ ದಲಿತ, ದಮನಿತ ಸಮುದಾಯಗಳು ಧ್ವನಿ ಸೇರಿಸಬೇಕಾಗಿದೆ.
ಬೆನ್ನು ಬಗ್ಗಿಸಿದಷ್ಟೂ ಗುದ್ದುತ್ತಲೇ ಇರುತ್ತಾರೆ; ಎದೆ ಎತ್ತಿ ನಡೆದಾಗ ಮಾತ್ರ ಘನತೆ ಗೌರವಗಳನ್ನು ಉಳಿಸಿಕೊಳ್ಳಲು ಸಾಧ್ಯ. ಉಳ್ಳವರ, ಬಲಾಢ್ಯರ, ಅಧಿಕಾರಸ್ಥರ ದಮನಕಾರಿ ಧೋರಣೆಗಳಿಗೆ, ಹಲ್ಲೆ- ಹತ್ಯೆಗಳಿಗೆ, ನಮ್ಮ ನಮ್ಮಲ್ಲೇ ಜಗಳ ಹಚ್ಚುವ ಒಳ ಹುನ್ನಾರಗಳಿಗೆ ದಲಿತ-ದಮನಿತರೆಲ್ಲರೂ ಒಗ್ಗಟ್ಟಾಗಿ ತಿರುಗೇಟು ನೀಡಬೇಕಿದೆ. ದಮನಿತರ ಒಗ್ಗಟ್ಟಿನಲ್ಲಿಯೇ ಬಹುಜನರ ಪ್ರಗತಿ ಅಡಗಿದೆ ಎಂಬ ಸತ್ಯವನ್ನು ಅರಿತು ನಮ್ಮ ನಡುವಿನ ಬೇಧ-ಭಾವಗಳನ್ನು ಮೀರಿ ನಿಲ್ಲಬೇಕಿದೆ. `ಬುದ್ಧ, ಬಸವಣ್ಣ, ಫುಲೆ ದಂಪತಿಗಳು, ಬಾಬಾಸಾಹೇಬ್ ಅಂಬೇಡ್ಕರ್, ನಾರಾಯಣ ಗುರು ಮುಂತಾದ ಮಹಾನ್ ಚೇತನಗಳು ನಡೆಸಿಕೊಂಡು ಬಂದ ವಿಮೋಚನಾ ರಥವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದಾಗಿ ನಾವು ಪ್ರತಿಜ್ಞೆ ಮಾಡೋಣ, ನೋವೇ ನಾಯಕನಾಗಿ, ಸಹನೆಯೇ ಚಿಂತಕನಾಗಿ ಮತ್ತು ರೋಷವೇ ಸಂಘಟಕನಾಗಿಸಿಕೊಂಡು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮನುಕುಲದ ಏಳಿಗೆಗಾಗಿ ಶ್ರಮಿಸಿದ ಮಹನೀಯರೆಲ್ಲರ ಶಕ್ತಿಯನ್ನು ಮೇಳೈವಿಸಿಕೊಂಡು ಈ ಹೋರಾಟವನ್ನು ಮುನ್ನಡೆಸೋಣ’ ಬನ್ನಿ ಎಂದು ಚಲೋ ಉಡುಪಿ ಸಂಗಾತಿಗಳು ಕರೆ ಕೊಟ್ಟಿದ್ದಾರೆ. ಇದೊಂದು ಜಾತಿವಾದಿ, ಪ್ರತಿಗಾಮಿ ಶಕ್ತಿಗಳ ದಮನ-ಹುನ್ನಾರಗಳಿಗೆದುರಾಗಿ ಈ ನೆಲದ ಜನಶಕ್ತಿ ನಡೆಸುತ್ತಿರುವ ಒಗ್ಗಟ್ಟಿನ ಸಾತ್ವಿಕ ಹೋರಾಟ.
`ಉಡುಪಿ ಚಲೋ’ ದ ಹಕ್ಕೊತ್ತಾಯಗಳು
CHALO-3 (1)1. ಆಹಾರದ ಆಯ್ಕೆ ಪ್ರತಿಯೊಬ್ಬ ನಾಗರಿಕನ ಸಂವಿಧಾನಾತ್ಮಕ ಹಕ್ಕು. ಗೋ ರಕ್ಷಣೆ ಹೆಸರಿನಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಮೇಲೆ ಹಲ್ಲೆ, ಹತ್ಯೆಗಳನ್ನು ವ್ಯವಸ್ಥಿತವಾಗಿ ಸಂಘಟಿಸಿ ನಡೆಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಶೇಷ ಕಾಯ್ದೆಯೊಂದನ್ನು ಕೂಡಲೇ ಜಾರಿಗೆ ತರಬೇಕು.
2. ರಾಜ್ಯದಲ್ಲಿ ವಿವಿಧ ಧರ್ಮಗಳ ಜನರ ನಡುವೆ ವೈಷಮ್ಯ ಬಿತ್ತುತ್ತಾ ಅನೈತಿಕ ಪೊಲೀಸ್‍ಗಿರಿ ನಡೆಸುತ್ತಿರುವವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಕೂಡಲೇ ಕ್ರಮಕೈಗೊಳ್ಳಬೇಕು. ಈ ಕುಕೃತ್ಯಕಗಳಿಗೆ ಬೆಂಬಲಾಗಿರುವ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.
3. ದಲಿತರು ಮತ್ತು ಇತರೆ ದಮನಿತರು ಉಳುಮೆ ಮಾಡುತ್ತಿರುವ ಸರ್ಕಾರಿ ಜಮೀನುಗಳನ್ನು ಆದ್ಯತೆಯ ಮೇರೆಗೆ ಸಕ್ರಮಗೊಳಿಸಿಕೊಡಬೇಕು. ಭೂಹೀನರಿಗೆ ಮತ್ತು ನಿವೇಶನರಹಿತರಿಗೆ ತಲಾ 5 ಎಕರೆ ಭೂಮಿ, ಘನತೆಯ ಬದುಕಿಗೆ ತಕ್ಕುದಾದಷ್ಟು ನಿವೇಶನಸಹಿತ ವಸತಿಯನ್ನು ಕೂಡಲೇ ಮಂಜೂರು ಮಾಡಬೇಕು. ಭೂಮಿಯ ಜೊತೆಗೆ ಕೃಷಿಕರಿಗೆ ಬೀಜ ಗೊಬ್ಬರ, ಇನ್ನಿತರೆ ಕೃಷಿ ಸಲಕರಣೆಗಳು ಹಾಗೂ ಮಾರುಕಟ್ಟೆಯ ರಕ್ಷಣೆ ಒದಗಿಸುವ ಜವಾಬ್ದಾರಿಯನ್ನೂ ಸರ್ಕಾರವೇ ತೆಗೆದುಕೊಳ್ಳಬೇಕು.
4. ದಲಿತರು ಮತ್ತು ಎಲ್ಲಾ ಜಾತಿಗಳ ದಮನಿತ ಜನವರ್ಗಗಳಿಗೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಜಾರಿಗೆ ತರಲು ಅಗತ್ಯವಿರುವ ಕಾನೂನು ಕ್ರಮವನ್ನು ಕೂಡಲೇ ಆರಂಭಿಸಬೇಕು.
5. ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಎಸ್.ಸಿ.ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ತಿದ್ದುಪಡಿ ಮಾಡಿ ಅದನ್ನು ಇನ್ನಷ್ಟು ಕಠಿಣಗೊಳಿಸಬೇಕು. ವಿಶ್ವವಿದ್ಯಾಲಯಗಳ ಕ್ಯಾಂಪಸ್‍ಗಳಲ್ಲಿ ದಲಿತ-ದಮನಿತ ವಿದ್ಯಾರ್ಥಿಗಳು ಮತ್ತು ಸ್ಕಾಲರ್‍ಗಳ ಜೀವ ಮತ್ತು ಘನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ರೋಹಿತ್ ಕಾಯ್ದೆ ರಚಿಸಿ ಜಾರಿಗೊಳಿಸಬೇಕು.
6. ಮಹಿಳೆಯರ ಮೇಲಿನ ಅತ್ಯಾಚಾರ-ದೌರ್ಜನ್ಯಗಳ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಖಾತ್ರಿಗೊಳಿಸುವ ಕ್ರಮಗಳಾಗಬೇಕು. ಅತ್ಯಾಚಾರ ಪ್ರಕರಣಗಳನ್ನು ದಾಖಲುಗೊಳಿಸದ ಪೊಲೀಸರ ಮೇಲೆ ಶಿಸ್ತುಕ್ರಮವಾಗುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡಬೇಕು. ಅಮಾನವೀಯ ದೇವದಾಸಿ ಪದ್ಧತಿ ನಿರ್ಮೂಲನೆಗೆ ಕಾಲಮಿತಿ ಹಾಕಿ ಈ ಹೀನ ಪದ್ದತಿಯನ್ನು ನಿರ್ಮೂಲಿಸಲು ತ್ವರಿತಗತಿಯಲ್ಲಿ ಸರ್ಕಾರ ಮುಂದಾಗಬೇಕು.
7. ಆದಿವಾಸಿ ಬುಡಕಟ್ಟು, ಅಲೆಮಾರಿಗಳ ಹಕ್ಕುಗಳನ್ನು ರಕ್ಷಿಸುವ ಕೆಲಸವಾಗಬೇಕು. ಈ ತಳಸಮುದಾಯಗಳ ಜನರ ಮೇಲಿನ ದಮನ- ದೌರ್ಜನ್ಯಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಬಲಿಪಶುಗಳಿಗೆ ನ್ಯಾಯ ಸಿಗುವಂತೆ ಮಾಡಬೇಕು.
8. ಮಲಹೊರುವ ಕೆಲಸದಲ್ಲಿ ದಲಿತ – ದಮನಿತರು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳಲ್ಲಿ ತಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮಲಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಕ್ರಮ ತೆಗೆದುಕೊಳ್ಳಬೇಕು. ಮಲಹೊರುವ ವೃತ್ತಿಯಲ್ಲಿ ತೊಡಗಿರುವ ಜನರಿಗೆ ಗೌರವಯುತವಾದ ಉದ್ಯೋಗಗಳನ್ನು ಸರ್ಕಾರ ಕೂಡಲೇ ಘೋಷಿಸಿ, ನೀಡಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ