-ಅರುಣ್ ಜೋಳದಕೂಡ್ಲಿಗಿ
ಉತ್ತರ ಕರ್ನಾಟಕ ಬೌಗೋಳಿಕವಾಗಿಯೂ ಸಾಂಸ್ಕøತಿಕವಾಗಿಯೂ ಭಿನ್ನ ಚಹರೆಗಳನ್ನು ಹೊಂದಿವೆ. ಇಲ್ಲಿ ಧೀರ್ಘಕಾಲದ ಮುಸ್ಲಿಂ ಆಳ್ವಿಕೆಯ ಕಾರಣಕ್ಕೆ ಹಿಂದು ಮುಸ್ಲಿಂ ಸಾಮರಸ್ಯ ಬೆಸೆದಂತಿದೆ. ಧರ್ಮ ಬೇಧವಿಲ್ಲದೆ ಹಿಂದು ಮುಸ್ಲಿಂಮರು ಕೂಡಿ ಮಾಡುವ ಮೊಹರಂ ಆಚರಣೆ, ಉರುಸುಗಳನ್ನು ನೋಡಿದರೆ ತಿಳಿಯುತ್ತದೆ. ಅಂತೆಯೇ ಈ ಸಾಮರಸ್ಯದ ಪರಂಪರೆಗೆ ಈ ಭಾಗದಲ್ಲಿ ಹುಟ್ಟಿದ ವಚನ ಚಳವಳಿ, ತತ್ವಪದಕಾರರ ಹಾಡಿಕೆಗಳು ಪ್ರೇರಣೆಯಾಗಿದೆ. ಹೀಗೆ ಆದ್ಯಾತ್ಮ ಭಕ್ತಿಗಳನ್ನು ಬಳಸಿಕೊಂಡೆ ಸಮಸಮಾಜವನ್ನು ನಿರ್ಮಿಸಲು, ಅಂತೆಯೇ ಜಾತಿಧರ್ಮ ರಹಿತ ಸಮಾಜವನ್ನು ಕಟ್ಟಲು ಈ ಪರಂಪರೆಗಳು ಶ್ರಮಿಸಿವೆ. 18 ನೇ ಶತಮಾನದ ಅಂಚಿನಲ್ಲಿ ಶಿಶುನಾಳ ಶರೀಫರು ಕೂಡ ಅಂತಹ ಸಾಧ್ಯತೆಯನ್ನು ತೋರಿದ್ದರು.
ನಾವು ಬದುಕುತ್ತಿರುವ ಈ ಕಾಲದಲ್ಲಿ ಆಧ್ಯಾತ್ಮ ಭಕ್ತಿ ಎನ್ನುವ ಸಂಗತಿಗಳು ಮಾರುಕಟ್ಟೆಯ ಸರಕಾಗಿವೆ. ಇವುಗಳು ಜನರನ್ನು ಕಂದಾಚಾರಗಲ್ಲಿ ಮುಳುಗಿಸುತ್ತಿವೆ. ಇದು ಮುಂದುವರಿದು ಜಾತೀಯತೆ, ಧಾರ್ಮಿಕ ಮೂಲಭೂತವಾದವನ್ನು ಹೆಚ್ಚಿಸುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರವಚನ, ಆಧ್ಯಾತ್ಮ, ಭಕ್ತಿಯ ದಾರಿಯಲ್ಲಿ ಸಮಾಜಿಕ ಸುಧಾರಣೆಯ ಕನಸನ್ನು ಹೊತ್ತವರೂ ಇದ್ದಾರೆ. ಹೀಗೆ ಪ್ರವಚನದ ಮೂಲಕ ಸಮಾಜ ಸೇವೆ, ಸಮಸಮಾಜದ ಕನಸು, ಧಾರ್ಮಿಕ ಸಾಮರಸ್ಯವನ್ನು ಹೆಚ್ಚಿಸುವ, ಜಾತಿಯ ತರತಮಗಳನ್ನು ಕಡಿಮೆ ಮಾಡುವ ನೆಲೆಯಲ್ಲಿ ಸಾಮುದಾಯಿಕ ಬದಲಾವಣೆಗೆ ತಮ್ಮದೇ ಆದ ಪುಟ್ಟ ಕಾಣಿಕೆ ಸಲ್ಲಿಸುತ್ತಿರುವವರಲ್ಲಿ ಹಿಬ್ರಾಹಿಂ ಸುತಾರರು ಗಮನಸೆಳೆಯುತ್ತಾರೆ.
ಸುತಾರ ಅವರನ್ನು ನೇರವಾಗಿ ಸಾಮಾಜಿಕ ಚಳವಳಿಯ ಚೌಕಟ್ಟಿನಲ್ಲಿ ಇರಿಸಲಾಗದು. ಆದರೆ ಅವರ ಬದುಕಿನ ತಿರುವುಗಳನ್ನು ನೋಡುತ್ತಾ ಹೋದರೆ, ಸಾಮಾಜಿಕ ಜೀವನದಲ್ಲಿ ಅವರ ಮಹತ್ವ ಅರಿವಾಗುತ್ತದೆ. ಬಾಗಲಕೋಟೆ ಜಿಲ್ಲೆಯ ಮಧೋಳ ತಾಲೂಕಿನ ಮಹಾಲಿಂಗಪುರದಲ್ಲಿ ನೆಲೆಸಿದ ಇವರು ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಬಹುಪಾಲು ಹಳ್ಳಿಗಳು ವರ್ಷಕ್ಕೆ ಒಮ್ಮೆಯಾದರೂ ಸುತಾರ ಅವರ ಪ್ರವಚನ ಕೇಳಬೇಕು ಎನ್ನುವುದು ವಾರ್ಷಿಕ ಆಚರಣೆಯಾಗಿದೆ. ಅಂತೆಯೇ ಸುತಾರರ ದಿನಚರಿಯನ್ನು ಗಮನಿಸಿದರೆ ಬಿಡುವಿಲ್ಲದ ಓಡಾಟವೂ ಕಾಣುತ್ತದೆ. ಇಂತಹ ಹಿಬ್ರಾಹಿಂ ಸುತಾರರ ಒಟ್ಟು ತಿಳಿವನ್ನು ರೂಪಿಸಿದ ಬಾಲ್ಯದ ಅನುಭವಗಳು ಕುತೂಹಲಕಾರಿಯಾಗಿವೆ. ಅವರದೇ ಮಾತಿನಲ್ಲಿ ಉತ್ತರಕರ್ನಾಟಕದ ಶೈಲಿಯಲ್ಲಿ ಅವರದೇ ದಾಟಿಯಲ್ಲಿ ಹೇಳುವ ನಿರೂಪಣೆ ಹೀಗಿದೆ:
`ಸಾರ್ ನಮ್ಮ ಕುಟುಂಬದವರು ಸಾತ್ವಿಕರು ಧರ್ಮವಂತರು ಇದ್ದರು. ನಂತರದಲ್ಲಿ ನನ್ನ ಬಾಲ್ಯದೊಳಗರಿ..ನಾನು ನಮಾಜ ಮಾಡಾದು, ಖುರಾನ್ ಅಭ್ಯಾಸ ಮಾಡಾದು, ಆರಂಭದೊಳಗ ನಮ್ ಗುರುಗಳಿಂದ ನಾನು ಧೀಕ್ಷೆ ಪಡಕೊಂಡು ಇಸಲಾಮ್ ಧರಮದ ಪರಿಪಾಲನೆಯೊಳಗ ಖಡ್ಡಾಯವಾಗಿ ಇದ್ನಿ. ನಂತರದಲ್ಲಿ ನನಗೂ ಗೊತ್ತಾಗಲಾರದಂಗ ನನ್ನ ಮನಸ್ಸಿನೊಳಗ ಒಂದು ಸುಪ್ತವಾದ ಬಯಕೆ ಏನು ಇತ್ತು ಅಂದ್ರ, ಎಲ್ಲಾ ಧರ್ಮದ ತತ್ವ ತಿಳಕೋಬೇಕು ಅನ್ನೋದು. ಅದು ನನಗೂ ಗೊತ್ತಿದ್ದಿದ್ದಿಲ್ಲ. ಆದ್ರು ಅದು ಮನಸ್ಸಿನ್ಯಾಗ ಇರೋದು. ಹಿಂಗಾಗಿ ನಾನು ಇಸಲಾಮ ಧರ್ಮದ ಖುರಾನ ಅಧ್ಯಯನ ಮಾಡಿದ ಬಳಿಕ, ವಚನ ಸಾಹಿತ್ಯದೊಳಗ ಅಲ್ಲಾನ ಬಗ್ಗೆ ಏನ್ ಇರಬಹುದು? ಮತ್ತು ಧರ್ಮದ ವ್ಯಾಖ್ಯಾನ ಅವರು ಏನ್ ಮಾಡ್ತಿರಬೇಕು. ಉಪನಿಷತ್‍ಕಾರ ಏನ್ ಮಾಡ್ತಿರಬಹುದು? ಗೀತದೊಳಗೆ ಏನು ಹೇಳಿರಬಹುದು? ಇನ್ನುಳಿದ ಧರ್ಮ ಗ್ರಂಥಗಳಲ್ಲಿ ಇದರ ಬಗ್ಗೆ ಏನು ವ್ಯಾಖ್ಯಾನ ಇರಬೇಕು ಅನ್ನೋದನ್ನು ತಿಳುಕೋಬೇಕು ಅನ್ನೋ ಹಂಬಲ ಇತ್ತು. ಆದರ ಅದಕ್ಕ ಅವಕಾಶ ಇರ್ತಿದ್ದಿಲ್ಲ. ಅದು ಹಂಗೆ ಎಂಟತ್ತು ವರ್ಷ ನನ್ನ ಮನಸ್ಸಿನ್ಯಾಗ ಇರ್ತಿತ್ತು.
ಎಂ.ಎಂ.ಕಲ್ಬುರ್ಗಿ ಅವರನ್ನು ಸುತಾರ ಸ್ವಾಗತಿಸುತ್ತಿರುವುದು.
ನನ್ನ ಬಾಲ್ಯದ ಹೊತ್ತಲ್ಲಿ ಮಸೀದಿ ಒಳಗ ಮೈಕದ ವ್ಯವಸ್ಥೆ ಇರಲಿಲ್ಲ. ಹಂಗಾಗಿ ರಂಜಾನ್ ತಿಂಗಳು ಬಂತು ಅಂತಂದ್ರೆ ನಾವು ಏಳೆಂಟು ಹುಡುಗರು ಗುಂಪು ಮಾಡಿಕೊಂಡು ಬೆಳಗ್ಗೆ ನಾಲ್ಕು ಗಂಟೆ ಹೊತ್ತಿಗೆ ಎದ್ದು ಇಡೀ ಮಹಾಲಿಂಗಪುರದ ಎಲ್ಲಾ ಮುಸ್ಲೀಮರ ಮನಿ ಮನಿಗೋಗಿ ಎಚ್ಚರ ಮಾಡತಿದ್ವಿ. ನಾವು ನಮಾಜ್ ಕೆ ಲಿಯೇ ಉಟೋ..ರೋಜ ಕೆ ಲಿಯೇ ಉಟೋ ಎಂದು ಹಾಡಿಕೊಳ್ಳುತ್ತಾ ಅಡ್ಡಾಡ್ತಿದ್ವಿ. ಇದೇ ರೀತಿ ಎಂಟತ್ತು ವರ್ಷ ಮಾಡಿದ್ವಿ. ಅಷ್ಟರೊಳಗ ಮೈಕದು ಬಂದುಬಿಟ್ವು ಆಗ ನಾವು ಹೋಗೋದು ನಿಲ್ತು.
ಈ ಮಧ್ಯೆ ನನ್ನೊಳಗ ಸುಪ್ತವಾಗಿ ಇನ್ನೊಂದು ಧರ್ಮದ ಬಗ್ಗೆ ತಿಳಕೋಬೇಕು ಅನ್ನೋದು ಇತ್ತಲ್ಲ, ಅಕಸ್ಮಾತ್ ಒಂದು ಪ್ರಸಂಗ ಬಂತು. ಒಂದು ಭಜನಾ ಸಂಘದವರು ಸಾಧು ನಿರಂಜನ ಅವಧೂತರ ಗುಡಿಯೊಳಗ ದಿನಾಲು ಭಜನಾ ಮಾಡತಾ ಇರುವಂತಹ ಒಂದು ಸಂಘ ಅದು. ಈ ಗುಡಿಯನ್ನು ಹಾದು ಹೋಗುವಂತಹ ಟೈಮದಾಗ ಅವರು ಭಜನಾ ಪದ್ಯಗಳನ್ನು ಹಾಡ್ತಾ ಇದ್ರು. ನನಗ ಒಂದಷ್ಟು ಹಾಡೋ ರೂಢಿ ಇರೋದರಿಂದ, ನಾನು ಕೂತುಗೊಂಡು ಅವರು ಏನು ಆಡ್ತಾಡ ನೋಡೋಣ ಅಂತ ಗುಡಿಯ ಕಟ್ಟಿಯ ಮುಂದೆ ಕೂತಗೊಂಡೆ.
ಆಗ ಮಹಾಲಿಂಗ ರಂಗರ ಒಂದು ಪದ್ಯ ಹಾಡುತ್ತಿದ್ದರು. ಅದೇನಂದರ ,
`ಮಾತು ಮಾತಿಗೆ ಶಂಕರಾ..
ಸ್ನಾನವ ಮಾಡುವಾಗ,
ನೇಮದಿ ಆತ್ಮ ಧ್ಯಾನವ ಮಾಡುವಾಗ
ಜಾಣತನದಿ ಅನ್ನ ಉಂಡು
ಗಂಗಾಮೃತ ಪಾನವ ಮಾಡುವಾಗ
ಮಾತು ಮಾತಿಗೆ ಶಂಕರ ಅನಬೇಕು..
ಬೆಟ್ಟವನೇರುವಾಗ,
ಕಾಲು ಜಾರಿದಲ್ಲಿ ಥಟ್ಟನೆ ಬೀಳುವಾಗ
ಅಷ್ಟಭೋಗದಿ ನಿತ್ಯಲೋಲುಪ್ತತೆ ಪಡೆಯುವಾಗ
ದಟ್ಟದಾರಿದ್ರ್ಯ ಬಂದಾಗ ಮನವೇ
ಮಾತು ಮಾತಿಗೆ ಶಂಕರಾ ಅನಬೇಕು…
ಈ ಪದ್ಯದ ಉಪದೇಶ ಇತ್ತಲ್ಲ ಅದು ನನಗೆ ತುಂಬಾ ಪರಿಣಾಮ ಮಾಡಿತು. ಯಾಕಂತ ಕೇಳಿದ್ರ ನಾವು ಇದನ್ನೆ ಮಸೂದಿಯೊಳಗ ಅಭ್ಯಾಸ ಮಾಡ್ತಿದ್ವಿ. ನಮಗ ಗುರುಗಳು ಏನು ಹೇಳ್ತಾ ಇದ್ರು. `ಹರ ಕಾಮ್ ಬಿಸಿಮಿಲ್ಲಾಕೆ ಸಾತ್ ಶುರುಕರೋ.. ಪ್ರತಿಯೊಂದು ಕೆಲಸ ಮಾಡುವಾಗ ಬಿಸ್ಮಿಲ್ಲಾ ರಹೀಮ್ ಅಲ್ಲಾ ಅನಬೇಕು ಅನ್ನೋದಾಗಿತ್ತು. ಭಗವಂತನ ಸ್ಮರಣೆಯೊಂದಿಗೇ ನಿಮ್ಮ ಕೆಲಸವನ್ನು ಆರಂಬಿಸಬೇಕು ಅನ್ನೋದನ್ನು ನಮಗ ಹೇಳಿಕೊಡ್ತಾ ಇದ್ರು. ಅವರು ಇಡೀ ಜೀವನದೊಳಗ ಊಟ ಮಾಡುವಾಗ ಖಾತೆವತ್ತು, ಸೋತೆವತ್ತು, ಪೀತೆಹೊತ್ತು, ಹರ್ ಕಾಮ ಹೇ… ಅಂತ ಅವರು ಅಂದಿಲ್ಲ ಆದ್ರ ನನಗ ಇದು ಭಜನೆ ಪದದ ನೀತಿನೆ ಹೇಳಾಕ ಹತ್ತಿತು. ಅಂದಕೂಡಲೆ ಇದು ಎಷ್ಟು ಹೊಂದಾಣಿಕೆ ಐತೆಲ್ಲಾ? ನಾವು ಅಲ್ಲಾ ಅಂತೀವಿ ಇವರು ಶಂಕರ ಅಂತಾರ, ಅನವಲ್ಲರ್ಯಾಕ..ಪ್ರತಿಯೊಂದು ಧರ್ಮದೊಳಗ ಭಗವಂತನ ಸ್ಮರಣೆ ಮಾಡಬೇಕು ಅನ್ನೋದೊಂದೈತಲ್ಲ ಅನ್ನಿಸಿತು.
ಹಂಗಾಗಿ ಈ ಪದ್ಯ ಕೇಳಿದ ಬಳಿಕ ನಾನು ಅವರ ಬಳಿ ಹೋಗಿ ನೀವು ನಿಮ್ಮ ಪದ್ಯಗಳನ್ನ ಕಲಿಸ್ತಿರೇನು ಅಂತ ಕೇಳಿದೆ. ಅವ್ರು ಅದೇನ್ ಮಾರಾಯ ಅವಶ್ಯ ಕಲಿಸ್ತೀವಿ ಬಾ ಅಂದ್ರು. ಅವರಿಗೆ ಕಲಿಸುವಂತಹ ಗುರುಗಳು ಒಬ್ರಿದ್ರು ಅವ್ರ ಹೆಸ್ರು ಬಸಪ್ಪ ಮಾಸ್ತರ ಅಂತ. ಆಗ ಅವರ ಬಳಿ ನಾನು ಬಹಳಾ ಪ್ರೀತಿಯಿಂದ ಭಜನಾ ಪದ್ಯಗಳನ್ನು ಕಲಿತೆ. ಮಾಲಿಂಗ ರಂಗ, ಸರ್ಪಭೂಷಣ ಶಿವಯೋಗಿ, ನಿಜಗುಣ ಶಿವಯೋಗಿ, ಶಿಶುನಾಳ ಶರೀಫ ಮುಂತಾದವರ ಹಾಡುಗಳನ್ನೆಲ್ಲಾ ಕಲಿತುಕೊಂಡೆ. ಹೀಗೆ ಕಲಿತುಕೊಂಡ ಬಳಿಕ ಏನಾರ ಸಣ್ಣಪುಟ್ಟ ಕಾರ್ಯಕ್ರಮ ಇದ್ರ ಅವರು ನನ್ನ ಕರೀತಿದ್ರು.’ ಎನ್ನುತ್ತಾರೆ.
03ಹೀಗೆ ಸುತಾರರು ಪ್ರವಚನದ ದಾರಿಗೆ ತೆರೆದುಕೊಂಡನ್ನು ವಿಶಿಷ್ಠವಾಗಿದೆ. ನಾನು ಮೊದಲು ಅವರ ಬಗ್ಗೆ ತಿಳಿದಿದ್ದೆನಾದರೂ ಬೇಟಿಯಾಗಿರಲಿಲ್ಲ. ಸಂದರ್ಶನಕ್ಕಾಗಿ ಮಹಾಲಿಂಗಪುರದಲ್ಲಿ ಬೇಟಿ ವಿಫಲವಾಯಿತು. ನಂತರ ಅವರು ಪ್ರವಚನ ಮಾಡುವ ಹಳ್ಳಿಗೆ ಹೋದೆನು. ಗೋಕಾಕ ತಾಲೂಕಿನ ಕೃಷ್ಣನದಿ ದಂಡೆಯ ಊರು ಹಳ್ಯಾಳ. ಅಲ್ಲೊಂದು ಮಠದಲ್ಲಿ ಪ್ರವಚನ ಆಯೋಜನೆಗೊಂಡಿತ್ತು. ರಾತ್ರಿ 8 ಗಂಟೆ ಹೊತ್ತಿಗೆ ಇಡೀ ಊರಿನ ಜನರು ಸೇರಿದರು. ಕನಿಷ್ಠ ಐದುನೂರರಷ್ಟು ಜನರಿದ್ದರು. ಸಾಂಪ್ರದಾಯಿಕವಾಗಿ ಸ್ಥಳೀಯ ಸ್ವಾಮೀಜಿಯೊಬ್ಬರು ಉದ್ಘಾಟಿಸಿದರು. ಸುತಾರ ಮತ್ತವರ ತಂಡದ ಪ್ರವಚನ ಆರಂಭವಾಯಿತು. ಅಂದು ಗುರುಶಿಷ್ಯರಲ್ಲಿ ಜಾತಿಬೇಧ ಇರಬಾರದು ಎನ್ನುವ ಚರ್ಚೆ, ಕಾಯಕ ನಿಷ್ಠೆ, ಶ್ರೀಮಂತಿಕೆಯ ಅಪಮೌಲ್ಯೀಕರಣದ ವ್ಯಾಖ್ಯಾನ, ಮೇಲು ಕೀಳಿನ ಆಚರಣೆಯ ನಿರರ್ಥಕ ಸಂಗತಿಗಳನ್ನು ಒಳಗೊಂಡಂತೆ ನವಿರಾಗಿ, ಹಾಸ್ಯಮಿಶ್ರಿತ ನಿರೂಪಣೆಯನ್ನು ಸಂವಾದಿರೂಪಿಯಾಗಿ ಮಂಡಿಸುತ್ತಾ ಹೋದರು. ಮಧ್ಯರಾತ್ರಿಯವರೆಗೆ ಈ ಚರ್ಚೆ ನಡದೇ ಇತ್ತು. ಜನರು ಕದಲದೆ ಈ ಸಂವಾದವನ್ನು ಕೇಳಿಸಿಕೊಂಡರು. ನಂತರ ಮಧ್ಯರಾತ್ರಿಯಲ್ಲಿ ಪ್ರಸಾದ ಸ್ವೀಕರಿಸಿ ತಮ್ಮ ಮನೆಗಳಿಗೆ ನಡೆದರು.
ಈ ಚರ್ಚೆಯಲ್ಲಿ ಸುತಾರ ಅವರು ಜನಪದ ಗಾದೆ, ವೇದ ಉಪನಿಷತ್ ಭಗವದ್ಗೀತೆಯ ಶ್ಲೋಕಗಳು, ಕುರಾನಿನ ಉಲ್ಲೇಖಗಳು, ಬೈಬಲ್ಲಿನ ಸಂಗತಿಗಳು, ದೈನಂದಿನ ಚಟುವಟಿಕೆಗಳು, ಜನಸಾಮಾನ್ಯರ ನಂಬಿಕೆಗಳು ಹೀಗೆ ಈ ಎಲ್ಲವನ್ನೂ ಒಳಗೊಂಡ ಕೊಲಾಜ್ ಮಾದರಿಯ ತಮ್ಮದೇ ಆದ ಒಂದು ವಿಶಿಷ್ಠ ಪಠ್ಯವನ್ನು ಮಂಡಿಸುತ್ತಿದ್ದರು. ಈ ಎಲ್ಲದರ ಉಲ್ಲೇಖ ಜನರಲ್ಲಿ ಒಂದು ಬಗೆಯ ಅಚ್ಚರಿಯನ್ನೂ, ಬೆರಗನ್ನೂ ಮೂಡಿಸುತ್ತಿತ್ತು. ಇಲ್ಲಿ ನೆರೆದ ಮಕ್ಕಳ ಮೇಲಂತೂ ಈ ಮಾತುಗಳ ಪ್ರಭಾವ ಹೆಚ್ಚಾಗುತ್ತಿದ್ದಂತೆ ಕಾಣುತ್ತಿತ್ತು. ಆದರೆ ಹೊತ್ತು ಮೀರುತ್ತಿದ್ದಂತೆ ರಾತ್ರಿ ಮಕ್ಕಳೆಲ್ಲಾ ನಿದ್ದೆಗೆ ಶರಣಾದರು. ಒಮ್ಮೆಯೂ ವೈಚಾರಿಕ ಭಾಷಣ ಕೇಳಲು, ಲೇಖನ ಓದಲು ಸಾದ್ಯವಿಲ್ಲದ ಸಣ್ಣ ಹಳ್ಳಿಗಳಲ್ಲಿ ಸುತಾರರ ನಿರೂಪಣೆಗಳು ತನ್ನದೇ ಆದ ಪ್ರಭಾವ ಬೀರುತ್ತಿರುವುದು ಕಾಣಿಸಿತು.
**
ಸುತಾರರು ತಮ್ಮ ಪ್ರವಚನದ ಜತೆ ಸಾಮಾಜಿಕ ಕಾಳಜಿಯ ಕಡೆ ಮುಖ ಮಾಡಿರುವುದು ಮುಖ್ಯವಾಗಿದೆ. ಇಲ್ಲಿ ಅವರು ಸಾಮೂಹಿಕ ಹಿತದ ಕೆಲಸಗಳಿಗೆ ಹೆಚ್ಚು ಗಮನಹರಿಸಿದ್ದಾರೆ. ರಸ್ತೆ ಮಾಡಿಸಿದ್ದು, ಶಾಲೆ ಕಟ್ಟಿಸಿದ್ದು, ಕುಡಿಯುವ ನೀರಿನ ಟ್ಯಾಂಕ್ ಕಟ್ಟಿಸಿದ್ದು ಇತ್ಯಾದಿಗಳು. ಇಂತಹ ಕೆಲಸಗಳಿಗೆ ಬಂದೊದಗಿದ ಸಂದರ್ಭಳೂ, ಇಂತಹ ಸಂದರ್ಭವನ್ನು ಸುತಾರರು ನಿಭಾಯಿಸಿದ ಬಗೆ ಎರಡೂ ಭಿನ್ನವಾಗಿದೆ. ಸುತಾರರು ಇಂತಹ ಸಂದರ್ಭವನ್ನು ಅವರದೇ ಮಾತಿನಲ್ಲಿ ಆತ್ಮೀಯವಾಗಿ ರಸ್ತೆ ಮಾಡಿದ ಘಟನೆಯನ್ನು ಹೇಳುತ್ತಾರೆ:
`ನಾವು ಕೆಲವು ಊರುಗಳಿಗೆ ಶ್ರಾವಣಕ್ಕ ಪ್ರತಿ ವರ್ಷ ಹೋಗತಿದ್ದೆವು. ಹಂಗ ಬೆಳಗಾಂ ಜಿಲ್ಲೆ ಅಥಣಿ ತಾಲೂಕು ಶೇಗುಣಸಿ ಅಂತಾ ಊರಿದೆ. ಅಲ್ಲಿಗೆ 15 ವರ್ಷದಿಂದ ಶ್ರಾವಣಕ್ಕ ಹೋಗತಿದ್ವಿ. ಈ ಸಿದ್ದೇಶ್ವರ ಸ್ವಾಮೀಜಿ ಇದಾರಲ್ಲ ಅವರ ಗುರುಗಳು ಮಲ್ಲಿಕಾರ್ಜುನ ಸ್ವಾಮಿಗಳು. ಅವರೇನು ಮಾಡ್ತಾ ಇದ್ರು ಯಾವುದೇ ಊರಿಗೆ ಹೋದ್ರನೂ ಪ್ರವಚನ ಮಾಡಿದ ಬಳಿಕ, ಆ ಊರಿನವರು ಕೊಟ್ಟ ದುಡ್ಡನ್ನೆಲ್ಲಾ ಸಮಾಜ ಸೇವೆಗೆ ಬಿಟ್ಟು ಬರ್ತಾ ಇದ್ರು ಅಂತ ನಾವು ಕೇಳಿದ್ವಿ. ನಮಗ ಬಡತನದ ಜೀವನ ಇದ ಅವರೇನು ಕಾಣಿಕೆ ಅಂತ ಕೊಡತಾರ ಅದಕ್ಕೆ ವ್ಯತಿರಿಕ್ತವಾಗಿ ನಾವು ಸಮಾಜಕ್ಕೆ ಏನಾರ ಕೊಡಬೇಕಲ್ಲಾ ಅನ್ನಿಸಿತು.
ಹಿಂಗ ಇರಬೇಕಾದ್ರೆ, ಶ್ರಾವಣಕ್ಕೆ ಸೀಗುಣಸಿಗೆ ಹೋದಾಗ ಒಂದು ಘಟನ ಸಂಭವಿಸಿತು. ಅತ್ಯಂತ ಬಡಕುಟುಂಬದ ಒಂದೇ ತಾಯಿಯ ಎರಡು ಮಕ್ಕಳು ಎಂಟೇದಿನದ ಒಳಗ ತೀರಿಕೊಂಡವು. ನಾವು ದಿನಾಲು ಅವರ ಮನೆಮುಂದೆ ಹೋಗೋದು ಬರೋದು ಮಾಡ್ತಾ ಇದ್ದೆ. ಒಂದು ಮಗು ತೀರಿಕೊಂಡಾಗ ಅಳತಿದ್ದದ್ದನ್ನ ನಾನು ನೋಡಿದ್ದೆ. ಇದಾಗಿ ಎಂಟು ದಿನ ಆದ ಮ್ಯಾಲೆ ಇದೇ ರೀತಿಯ ದುಃಖ ಅದೇ ಮನಿಯಾಗ ಸಂಭವಿಸಿತು. ಅಂದ್ರ ಮತ್ತೊಂದು ಮಗು ತೀರಿಕೊಂಡಿತ್ತು. ಇದು ನನ್ನ ಮನಸ್ಸಿನ ಮೇಲೆ ಬಾಳ ಪರಿಣಾಮ ಬೀರಿತು. ಹಿಂಗ ಮಕ್ಕಳು ಯಾಕ ತೀರಿಕೊಳ್ಳಾಕ ಹತ್ಯಾವ ಅನ್ನೋ ಬಗ್ಗೆ ಚಿಂತನಾ ನಡೆಸಿದ್ವಿ. ಆಗ ತಿಳಿದದ್ದು ಏನಂದ್ರ, ಮಕ್ಕಳಿಗೆ ವಾಂತಿ ಬೇದಿ ಆರಂಭವಾಗಿತ್ತು. ಆಗ ದವಾಖಾನೆಗೆ ಕರಕೊಂಡು ಹೋಗಾಕ ಅಂದ್ರ ತೇರದಾಳಕ್ಕ ಹೋಗಬೇಕು. ರೋಡಿಲ್ಲ, ಮಳಿಯಿಂದಾಗಿ ಎರಿನೆಲ (ಕಪ್ಪು ಭೂಮಿ) ಕೆಸರಲ್ಲಿ ಕಾಲು ಸಿಕ್ಕಿಕೊಂತಾವ, ಮಕ್ಕಳನ್ನು ಎತ್ತಿಕೊಂಡು ಹೋಗಿ ಟ್ರೀಟ್ ಮೆಂಟ್ ಕೊಡಸಲಿಲ್ಲದ್ದಕ್ಕ ಈ ಮಕ್ಕಳು ತೀರಿದ್ವಿ ಅಂದ್ರು. ಯಾರಿಗಾರ ಕೇಳಿದ್ರ ಚಕ್ಕಡಿ ಊಡಿಕೊಂಡು ಹೋಗಬೇಕು, ಅವರು ನೂರ ಇನ್ನೂರ ಬಾಡಿಗಿ ಕೇಳೋವರು, ಹಿಂಗಾಗಿ ಹೋಗಲಾರದಕ್ಕ ಮಗು ತೀರಿಕೊಳ್ತು ಎಂದರು. ಇದನ್ನ ಕೇಳಿ ಬಾಳ ಬೇಸರ ಆಯ್ತು. ಅರೆ ಈ ಊರಿಗೆ ರೋಡು ಇಲ್ವಲ್ಲಾ ಅನ್ನಿಸ್ತು.
ಈ ಊರಾಗ ಶ್ರೀಮಂತರು ಸಾಕಷ್ಟು ಜನ ಇದಾರ ಇವರೆಲ್ಲಾ ಒಟ್ಟಾಗಿ ಸರಕಾರದಿಂದ ಒಂದು ರೋಡ್ ಯಾಕ ಮಾಡಿಸಬಾರದು? ಅನ್ನಿಸ್ತು. ಶ್ರಾವಣಕ್ಕೆ ಹೋದ ನಮ್ಮ ಗೆಳೆಯರ ಗುಂಪನ್ನು ಸೇರಿಸಿಕೊಂಡು ಈ ಊರಿನ ಪ್ರಮುಖರನ್ನು ಒಂದು ಕಡೆ ಕೂಡಿಸೋಣ. ಅವರ ಮುಂದೆ ಈ ಊರಿಗೆ ದಾರಿ ಇಲ್ಲದ್ದನ್ನು ಹೇಳೋಣ. ಬಡತಾಯಿಯ ಮಕ್ಕಳು ಎಂಟು ದಿನದಲ್ಲಿ ತೀರಿಕೊಂಡವು. ಶ್ರೀಮಂತರು ಚಕ್ಕಡಿ ಹೂಡಿಕೊಂಡೋ, ಟ್ರಾಕ್ಟರ್ ಗಾಡಿ ತೊಗೊಂಡೋ ಹೋಗ್ತೀರಿ. ಆದರ ಈ ಬಡವರ ಪಾಡೇನು? ಅಂತ ಕೇಳಿದ್ವಿ. ಅದಕ್ಕ ಈ ಊರಿಗೆ ಒಂದು ರೋಡು ಆಗಬೇಕು ಇದಕ್ಕ ಬೇಡಿಕೆ ಇಡೋಣು ಅಂತ ತೀರ್ಮಾನ ಮಾಡಿದ್ವಿ. ಈ ಸಂಕಲ್ಪ ಮಾಡಿ ಊರನ್ನೆಲ್ಲಾ ಅಡ್ಡಾಡಿ ಹಿರೇರನ್ನ ಕೂಡಿಸಿದ್ವಿ. ಹೀಗೆ ಕೂಡಿಸಿದ ಬಳಿಕ ನಾವು ಎದ್ದು ನಿಂತು ವಿನಂತಿ ಮಾಡಿಕೊಂಡ್ವಿ. ದಾರಿ ಇಲ್ಲದ ಕಾರಣಕ್ಕ ಎರಡು ಮಕ್ಕಳು ತೀರಿ ಹೋದ್ವು. ದಾರಿನಾದ್ರೂ ಇದ್ದದ್ರ, ನಡಕೊಂಡಾದ್ರೂ ಹೋಗಿ ಮಕ್ಕಳ ಪ್ರಾಣಾನ ಉಳಿಸಿಕೊಳ್ತಾ ಇದ್ರು. ಈ ಊರು ದಾರಿ ಇಲ್ಲದ ನಡುಗಡ್ಡೆ ಇದ್ದಂಗ ಐತಿ. ನಾವು ನೀವು ಇದೀವಿ. ಈ ಊರಿಗೆ ದಾರಿ ಮಾಡ್ಸಾಮು.
ಊರವರೆಲ್ಲಾ ಸೇರಿ ಸರಕಾರದ ಮುಂದೆ ಬೇಡಿಕೆ ಇಡ್ರಿ. ನೀವು ಯಾವ ಆಫೀಸಿನ ಮುಂದೆ ಹೇಳ್ತೀರೋ ಆ ಆಫೀಸಿನ ಮುಂದೆ ನಾವು ಹೋಗಿ ಕೂತಕೊಂತೀವಿ. ನಾವು ಕೆಲಸ ಆಗೋತನಕ ಉಪವಾಸ ಸತ್ಯಾಗ್ರಹ ಮಾಡ್ತೀವಿ. ಅಧಿಕಾರಿಗಳ ಜತೆ ನೀವು ಸಂಪರ್ಕ ಮಾಡರಿ. ನಾವು ಉಪವಾಸ ಮಾಡ್ತೀವಿ. ಒಂದು ವೇಳೇ ಇದಕ್ಕ ನೀವು ಒಪ್ಪಲಿಲ್ಲ ಅಂದ್ರ ನಾವು ನಿಮ್ಮ ಮನಿ ಮುಂದೆ ಇವತ್ತು ಉಪವಾಸ ಕೂಡತೀವಿ ಅಂದ್ವಿ. ನಾವು ಸಿದ್ಧಾರೂಢರ ಪ್ರತಿಮೆ ಮುಂದೆ ಹೀಗಂತ ನಾವು ಪ್ರತಿಜ್ಞೆ ಮಾಡಿನ ಬಂದೀವಿ. ನಿಮ್ಮ ಮಕ್ಕಳ ಹಿಂಗ ತೀರಿ ಹೋಗಿದ್ರ ಏನ್ ಮಾಡತಿದ್ರಿ ನೀವು ಯೋಚನೆ ಮಾಡರಿ’ ಅಂದ್ವಿ.
ಇದು ಊರವರ ಮೇಲೆ ಪರಿಣಾಮ ಬೀರಿತು. ಊರವರೆಲ್ಲಾ ಸೇರಿ ಒಂದು ತೀರ್ಮಾನಕ್ಕೆ ಬಂದರು. ಈಗ ಶ್ರಮಧಾನದಿಂದ ಕಾರ್ಯಕ್ರಮವನ್ನು ಆರಂಭಿಸೋಣ. ಮಣ್ಣು ಅಡ್ಡಿ ಹೊಗೆಯುವುದು. ಈ ಕೆಲಸ ಶುರುಮಾಡುವುದು. ಒಂದೊಂದು ದಿವಸ ಒಂದು ಓಣಿಯವರು ಶ್ರಮಧಾನ ಮಾಡೋದು ಅಂತ ಕೆಲಸ ಶುರು ಮಾಡಿಕೊಂಡ್ರು. ಹೀಗೆ ಶುರುಮಾಡಿ ಆಫೀಸಕ್ಕ ಹೋಗೋಣು ಅಂತ ಹೋದ್ವಿ. ಸ್ವಲ್ಪನಾರ ನಾವು ಮಾಡಿದ ಕೆಲಸ ತೋರ್ಸೋಣು ಅಂತ ಟೀಮ್ ತಯಾರಾಯ್ತು. ಮರು ದಿವಸ ಕೆಲಸ ಶುರುವಾಯ್ತು. ನಾವು ಭಜನಾ ಸಂಘದವರು ಇಡೀ ಊರೆಲ್ಲಾ ಓಂ ನಮಃ ಶಿವಾಯ ಅಂತಾ ಹೇಳಿಕೊಳ್ತಾ ಸುತ್ತುವರಿತಾ ಇದ್ವಿ. ಈ ಓಣಿಯಾಗ ಶ್ರಮಧಾನದ ಪಾಳ್ಯ ನಿಮ್ಮದು ಅದಾ ಅಂತಾ ಹೇಳ್ತಾ ಇಡೀ ಊರನ್ನು ಎಚ್ಚರಿಸಿದ್ವಿ. ಅದೊಂದು ರೀತಿಯಲ್ಲಿ ಎಲ್ಲರಿಗೂ ಉಮ್ಮಸ್ಸು ಬಂತು ಅನಸ್ತದ. ಹಿಂಗಾ ಮಾಡಿ ಐದಾರು ತಿಂಗಳು ಭಜನಾ ಮಾಡತನಕ, ಅಲ್ಲೇ ನಾವು ಉಳಿದ ಬಿಟ್ವಿ. ಅಲ್ಲಿ ಊರವರು ಒಂದು ಟನ್ ಕಬ್ಬಿಗೆ ಇಷ್ಟು ಅಂತ ಸಕ್ಕರಿ ಪ್ಯಾಕ್ಟರಿಯಾಗ ಹಣನೂ ಸಂಗ್ರಹ ಮಾಡಿಕೊಂಡು ಬಂದ್ರು. ಸರಕಾರವೂ ನೆರವು ನೀಡಿತು. ಈ ರಸ್ತೆ ತೇಗುಣಿಸೆಯಿಂದ ತೇರದಾಳದ ತನಕ ಒಟ್ಟು ಎಂಟೂವರೆ ಕಿಲೋಮೀಟರ್ ಇದೆ. ಈಗ ಅದು ಬದಲಾವಣೆ ಆಗಿ ಡಾಂಬರು ರೋಡಾಗಿದೆ. ಅದೊಂದು ಕೆಲಸ ಶ್ರಾವಣ ಮಾಸಕ್ಕೆ ಹೋದಾಗ ಈಡೇರಿದ್ದು. ನಮಗ ದೊಡ್ಡ ನೆಮ್ಮದಿ ತಂದಾದ’ ಎನ್ನುತ್ತಾರೆ.
ಇಂತಹ ಸಾಮಾಜಿಕ ಚಟುವಟಿಕೆಗಳು ಭಿನ್ನವಾಗಿದ್ದರೂ, ಈ ದಾರಿಯಲ್ಲಿ ಹೆಚ್ಚು ದೂರ ಸುತಾರರಿಗೆ ಸಾಗಲು ಸಾಧ್ಯವಾಗಲಿಲ್ಲ. ಕಾರಣ ಈ ಬಗೆಯ ಸಾಮಾಜಿಕ ಕಾರ್ಯಗಳಿಗೆ ರಾಜಕೀಯ ಆಯಾಮವೊಂದು ಬರುವ ಅಪಾಯವೂ ಇರಬಹುದು. ಅಂತೆಯೇ ಪ್ರವಚನ ಕಾರ್ಯವಷ್ಟೇ ತಮ್ಮದು ಎನ್ನುವ ಸಂದೇಶ ಸಾರ್ವಜನಿಕರಿಂದಲೋ, ರಾಜಕಾರಿಣಿಗಳಿಂದಲೋ ಪರೋಕ್ಷವಾಗಿ ರವಾನೆಯಾಗಿರುವ ಸಾಧ್ಯತೆಯೂ ಇದೆ.
ಸುತಾರರು `ಪಾರಮಾರ್ಥ ಲಹರಿ ತತ್ವಪದಗಳು’ `ತತ್ವಜ್ಞಾನಕ್ಕೆ ಎಲ್ಲರೂ ಅಧಿಕಾರಿಗಳು’ `ನಾವೆಲ್ಲಾ ಭಾರತೀಯರು’ ಎಂಬ ಕಾವ್ಯ ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ `ನಾವೆಲ್ಲಾ ಭಾರತೀಯರೆಂಬ ಭಾವ ಮೂಡಲಿ’ ಎನ್ನುವ ಪದ ಉತ್ತರ ಕರ್ನಾಟಕದ ಭಜನಾ ಮಂಡಳಿಗಳ ರಾಷ್ಟ್ರಗೀತೆಯಂತೆ ಜನಪ್ರಿಯವಾಗಿದೆ. ಸುತಾರರು ನವಮೌಖಿಕ ಮಾಧ್ಯಮಗಳಲ್ಲಿ ಹೆಚ್ಚು ಪ್ರಸಾರವಾಗಿದ್ದಾರೆ. ಹಾಗಾಗಿ ಈತನಕ 20 ಧ್ವನಿಸುರುಳಿಗಳು ಬಿಡುಗಡೆಯಾಗಿವೆ. ಇದರ ಪ್ರಭಾವದಿಂದ ಸುತಾರರ ಪ್ರವಚನ ಮತ್ತು ಪದಗಳು ಮೈಬೈಲ್‍ನಲ್ಲಿಯೂ, ಟಿವಿಗಳಲ್ಲಿಯೂ ವ್ಯಾಪಕವಾಗಿ ಹರಡಿವೆ. ಸುತಾರ ಅವರು ರಚಿಸುವ ಕಾವ್ಯ ಅಥವಾ ವಚನಗಳನ್ನು `ಬಸವ’ ಎಂಬ ಅಂಕಿತದಲ್ಲಿ ಬರೆಯುತ್ತಿದ್ದಾರೆ. ಪ್ರವಚನಗಳಲ್ಲಿ ಸಾಮಾಜಿಕ ಪ್ರಸಕ್ತ ವಿದ್ಯಮಾನದ ಸಂಗತಿಗಳನ್ನು ತರುವ ಕ್ರಮ ಕೂಡ ಇದೆ. ಈ ಅರ್ಥದಲ್ಲಿ ಅವರೊಬ್ಬ ಜನಪದ ಕವಿ. ಜನಪದ ಸಂವಹನದ ದಾರಿಯನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಈ ನೆಲೆಯಲ್ಲಿ ದೇವದಾಸಿ ಪದ್ದತಿಯ ವಿರುದ್ದ, ಜಾತಿ ಪದ್ದತಿಯ ವಿರುದ್ಧ ಜನಜಾಗೃತಿ ಮೂಡಿಸುವುದು, ಸಾಕ್ಷರತಾ ಕಾರ್ಯಕ್ರಮದಲ್ಲಿ ಶಿಕ್ಷಣದ ಮಹತ್ವ ಸಾರುವುದು ಇತ್ಯಾದಿ. ತೀರಾ ಸಾಂಪ್ರದಾಯಿಕ ಸಂಗತಿಗಳನ್ನು ಮಾತ್ರ ಸಂವಹನ ಮಾಡಲು ಸಾಧ್ಯವಿದ್ದ ದಾರಿಯಲ್ಲಿಯೇ ಈ ಬಗೆಯ ಪ್ರಯೋಗ ಮಾಡಿರುವುದು ಮುಖ್ಯವಾಗಿದೆ. ಅಂತೆಯೇ ಈ ಪ್ರಯೋಗ ಕೂಡ ಧರ್ಮಸೂಕ್ಷ್ಮದಿಂದ ಕೂಡಿದೆ. ಜಾತಿ ಪದ್ದತಿಯನ್ನು ವಿರೋಧಿಸುವಾಗ ಮೇಲುಜಾತಿಗಳನ್ನು ಗುರಿಯಾಗಿಟ್ಟುಕೊಳ್ಳುವಂತಿಲ್ಲ. ಬದಲಾಗಿ ಉದಾರವಾದಿ ನೆಲೆಯಲ್ಲಿ ಇದನ್ನು ನಿಭಾಯಿಸಿದ್ದಾರೆ. ಕಾರಣ ಸುತಾರರ ಪ್ರವಚನಗಳ ಪ್ರಾಯೋಜಕರು ಸಾಮಾನ್ಯವಾಗಿ ಮೇಲುಜಾತಿಯ ಮಠಗಳು ಎನ್ನುವುದನ್ನು ಗಮನಿಸಬೇಕು.
ಈ ಅರ್ಥದಲ್ಲಿ ಹಿಬ್ರಾಹಿಂ ಸುತಾರ ಅವರು ಮಾಡಿದ ಪ್ರವಚನದ ದಾರಿ ಒಂದು ಬಗೆಯ ಚಳವಳಿಯ ದಾರಿಯೂ ಆಗಿದೆ. ಇಲ್ಲಿ ಸಾಹಿತ್ಯ ಓದು ಬರಹದಿಂದ ದಕ್ಕುವ ವೈಚಾರಿಕತೆ ಮೂಡದಿರಬಹುದು, ಆದರೆ ಕೆಲವು ಬಿಗಿಯಾದ ಕಟ್ಟುಗಳು ಸಡಿಲವಾಗುವ ಅರ್ಥದಲ್ಲಿ ಈ ಬದಲಾವಣೆಯನ್ನು ಗ್ರಹಿಸಬೇಕಾಗಿದೆ. ಮುಖ್ಯವಾಗಿ ಸುತಾರ ತರಹದ ಪ್ರವಚನ ಮಾದರಿಯಲ್ಲಿ ಇತರರು ಎದುರಿಸದ ಕೆಲವು ಬಿಕ್ಕಟ್ಟುಗಳನ್ನು ಇವರೊಬ್ಬ ಮುಸ್ಲೀಂ ಆದ ಕಾರಣಕ್ಕೆ ಎದುರಿಸಬೇಕಿತ್ತು. ಆದರೆ ಅದನ್ನವರು ತುಂಬಾ ಜಾಗರೂಕತೆಯಿಂದ ದಾಟಿದ್ದಾರೆ. ಈ ಮಧ್ಯೆಯೂ ಅವರು `ನಿಮ್ಮನೊಡನಿದ್ದೂ ನಿಮ್ಮಂತಾಗದೆ’ ಎನ್ನುವಂತಹ ಕವಿ ನಿಸಾರ್ ಅಹಮದ್ ತರಹದ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಎದುರುಗೊಂಡಿದ್ದಾರೆ.
ಇಲ್ಲಿ ಮುಖ್ಯವಾಗಿ ಜನರ ನಂಬಿಕೆಯ ದಾರಿಗಳಲ್ಲಿ ನಡೆಯುತ್ತಲೇ ಅವರ ಲೋಕದೃಷ್ಠಿಯನ್ನು ತಿದ್ದುವ ರೀತಿ ಇದಾಗಿದೆ. ಅಂದರೆ ಜನರು ಸಾಂಪ್ರದಾಯಿಕವಾಗಿ ಭಕ್ತಿ, ಭಜನೆ, ಪ್ರವಚನಗಳ ಜತೆ ಬೆಸೆದುಕೊಂಡ ನಂಬಿಕೆಯ ಲೋಕಗಳನ್ನು ಬಳಸಿಕೊಂಡೇ ಧಾರ್ಮಿಕ ಕಟ್ಟಳೆಗಳನ್ನೂ, ಜಾತಿಯ ಕಟ್ಟಳೆಗಳನ್ನೂ, ಲಿಂಗದ ಕಟ್ಟಳೆಗಳನ್ನೂ, ವರ್ಗ ಶ್ರೇಣಿಯ ಕಟ್ಟಳೆಗಳನ್ನೂ, ಮೂಡನಂಬಿಕೆಗಳನ್ನು ಮೀರುವ ತಿಳಿವನ್ನು ಬಿತ್ತರಿಸುವುದಾಗಿದೆ.
**
ಸುತಾರ ಅವರಿಗೆ 75 ವರ್ಷ ಸಂದ ಕಾರಣ ಅವರ ಅಭಿಮಾನಿಗಳು, ಶಿಷ್ಯರು, ಬಂದು ಬಳಗ ಸೇರಿ ಒಂದು ಬೃಹತ್ತಾದ ಅಭಿನಂದನಾ ಕಾರ್ಯಕ್ರಮವನ್ನು ಮಹಾಲಿಂಗಪುರದಲ್ಲಿ ಆಯೋಜಿಸಿದ್ದರು. ನಾನೂ ಹಾಜರಿದ್ದೆ. ಇದರಲ್ಲಿ ಅವರಿಗೊಂದು ಅಭಿನಂದನಾ ಗ್ರಂಥವೂ ಸಮರ್ಪಣೆಯಾಯಿತು. ಸುಮಾರು ಮೂರು ಸಾವಿರದಷ್ಟು ಜನರು ಸೇರಿದ್ದರು. ಅದರಲ್ಲಿ ಹಿರಿಯ ತಲೆಮಾರಿನವರ ಸಂಖ್ಯೆ ದೊಡ್ಡದಿತ್ತು. ಈ ಎರಡೂ ದಿನಗಳು ಸುತಾರ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿಯಿತು. ಎಲ್ಲಾ ವರ್ಗದ ಜನರೂ ಬಂದಿದ್ದರು. ಅಂತೆಯೇ ಹಿಂದೂ ಮುಸ್ಲಿಂ ಬಾಂಧವರೂ ಸೇರಿದ್ದರು. ಮುಖ್ಯವಾದ ಸಂಗತಿಯೆಂದರೆ ನಾನು ಮಾತನಾಡಿಸಿದ ಕೆಲವರು ಪ್ರಾದೇಶಿಕವಾಗಿ ಅವರವರ ಭಾಗದಲ್ಲಿ ಸುತಾರ ಅವರ ಮಾದರಿಯಲ್ಲಿ ಭಜನೆ, ಪ್ರವಚನ ಮಾಡುವ ಕಲಾವಿದರಾಗಿದ್ದರು. ಅಂದರೆ ಸುತಾರ ಅವರ ಸುಧೀರ್ಘ ಪ್ರವಚನ, ಭಜನೆ, ಸಂವಾದದ ಮಾದರಿಗಳು ಅನೇಕರ ಮೇಲೆ ಪ್ರಭಾವ ಬೀರಿರುವುದು ಮತ್ತು ತನ್ನಂತಹದ್ದೇ ಸಂವಾದ ತಂಡಗಳನ್ನು ಸೃಷ್ಠಿಸಿರುವುದು ತಿಳಿಯಿತು. ಇದೆಲ್ಲಾ ಒಟ್ಟಾದ ಪರಿಣಾಮವು ಜನಸಮುದಾಯದಲ್ಲಿ ಒಂದು ಬಗೆಯ ಸೌಹಾರ್ಧ ನೆಲೆಸಲು, ಭಾವೈಕ್ಯ ಹರಡಲು ಕಾರಣವಾಗಿದೆ.
05ಸುತಾರ ಅವರ ಶ್ರೋತೃ ವರ್ಗದಲ್ಲಿ 40 ವರ್ಷದ ನಂತರದವರ ಸಂಖ್ಯೆ ದೊಡ್ಡದಿದೆ. ಇವರುಗಳೆಲ್ಲಾ ಒಂದು ಬಗೆಯ ಉದಾರವಾದ ಆಲೋಚನ ಕ್ರಮಕ್ಕೆ ಪಕ್ಕಾದವರು. ಆದರೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಕೋಮುವಾದದ ಅಫೀಮನ್ನು ತುಂಬುತ್ತಿರುವುದು ಸಾಮಾನ್ಯವಾಗಿ 18 ರಿಂದ 35 ವರ್ಷದ ಒಳಗಿನ ಯುವ ಜನತೆಗೆ ಎಂಬುದನ್ನು ಗಮನಿಸಬೇಕು. ಹಾಗಾಗಿ ಸುತಾರ ಅವರ ಪ್ರವಚನದ ವ್ಯಾಪ್ತಿಗೆ ಇಂತಹ ಯುವಜನತೆಯೂ ಒಳಗಾಗಬೇಕಿದೆ. ಅಂತೆಯೇ ಲಿಂಗದ ಸೂಕ್ಷ್ಮತೆಯನ್ನೂ ಸತಾರರಿಗೆ ಗಟ್ಟಿಧ್ವನಿಯಲ್ಲಿ ಹೇಳಲು ಸಾಧ್ಯವಾಗಿಲ್ಲ. ಕಾರಣ ಪ್ರವಚನದಲ್ಲಿ ಈತನಕ ಒಬ್ಬ ಮಹಿಳೆಯ ಹಾಡಿಕೆಗೂ ಅವಕಾಶ ಸಿಕ್ಕಿಲ್ಲ. ಈ ಮಿತಿಯನ್ನು ಸುತಾರರು ಸ್ವತಃ ಒಪ್ಪಿಕೊಳ್ಳುತ್ತಾರೆ. ಉತ್ತರ ಕರ್ನಾಟಕದ ಜಮೀನ್ದಾರಿ ವ್ಯವಸ್ಥೆಯ ಬಗ್ಗೆ ಸುತಾರರು ಅಪ್ಪಿತಪ್ಪಿಯೂ ಪ್ರಸ್ತಾಪಿಸುವುದಿಲ್ಲ. ದಲಿತರ ಅಸ್ಪøಶ್ಯತಾ ಆಚರಣೆಯನ್ನು ಉದಾರ ನೆಲೆಯಲ್ಲಿ `ಎಲ್ಲರೂ ಒಂದೇ’ ಎನ್ನುವಂತೆ ವಿವರಿಸುತ್ತಾರೆಯೇ ವಿನಃ ಸ್ಥಳೀಯ ಅಸ್ಪøಶ್ಯರನ್ನು ನೇರ ಪ್ರಸ್ತಾಪಿಸುವುದಿಲ್ಲ. ಇನ್ನು ಕೆಲವು ಸ್ಥಳೀಯ ಮಠದ ಸ್ವಾಮಿಗಳ ಕಂದಾಚಾರ ಮತ್ತು ಜೀವವಿರೋಧಿ ಸಂಗತಿಗಳ ಬಗ್ಗೆಯೂ ಮೌನತಾಳುತ್ತಾರೆ.
ಸುತಾರರು ಆಳದಲ್ಲಿ ಸಮಾಜದ ತರತಮಗಳನ್ನು ಪ್ರಶ್ನಿಸದೆ, ಅಮೂಲಾಗ್ರವಾಗಿ ಜಾತಿಧರ್ಮದ ವಿನಾಶದ ಚಿಂತನೆ ಮಂಡಿಸದೆ, ಕ್ರಾಂತಿಕಾರಕ ಹೇಳಿಕೆಗಳನ್ನು ಕೊಡದೆ, ಇರುವ ವ್ಯವಸ್ಥೆಯ ಒಳಗೆ ಕೇಡುಗಳು `ದೊಡ್ಡ’ ದಾಗದಂತೆ, ಹೆಚ್ಚಾಗದಂತೆ ಜನಸಮುದಾಯಗಳ ಕೊಡುಕೊಳೆಯ ಬಾಂಧವ್ಯ ಗಟ್ಟಿಗೊಳಿಸುವ ಉದಾರವಾದಿ ಮಾದರಿಯೊಂದನ್ನು ರೂಪಿಸಿದ್ದಾರೆ. ಈ ಮಾದರಿಗೆ ಹಲವು ಮಿತಿಗಳಿವೆಯಾದರೂ, ಜಾತಿಯ, ಧರ್ಮದ ಕೇಡುಗಳು ಎಂದಿಗಿಂತ ಇಂದು ಬಲಗೊಳ್ಳುತ್ತಿರುವ ಹೊತ್ತಿನಲ್ಲಿ, ಧರ್ಮ ಜಾತಿಯ ನೆಲೆಯಲ್ಲಿ `ಜನರನ್ನು ಒಡೆದು’ ಮನಸ್ಸುಗಳನ್ನು ಕದಡುತ್ತಿರುವ ಹೊತ್ತಿನಲ್ಲಿ ಹಿಬ್ರಾಹಿಂ ಸುತಾರ ಅವರಂತಹ ಮನಸ್ಸುಗಳನ್ನು ಕಟ್ಟುವ, ಬೆಸೆಯುವ ಕೆಲಸಕ್ಕೆ ಸಾಂಸ್ಕøತಿಕವಾಗಿ ಒಂದು ಬಗೆಯ ಮಹತ್ವವಿದೆ.
ಈ ಸೂಕ್ಷ್ಮಗಳ ಮಧ್ಯೆಯೂ ಅವರು ಮಂಡಿಸುವ ಜಾತಿಯ ಧರ್ಮದ ಕಟ್ಟುಗಳನ್ನು ಒಡೆಯುವ ಕಥನ ಮಾದರಿ ಜನರನ್ನು ಮತಾಂಧರಾಗದಂತೆಯೂ, ಜಾತಿವಾದಿಗಳಾಗದಂತೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅಂತೆಯೇ ವ್ಯಕ್ತಿಗತ ಪ್ರವಚನದ ನೆಲೆಯನ್ನು ಸಾಮೂಹಿಕ ನೆಲೆಗೆ ದಾಟಿಸುವ ಶಕ್ತಿಯನ್ನೂ ಸುತಾರರು ದಕ್ಕಿಸಿಕೊಂಡಿದ್ದಾರೆ. ಇವರಿಗೆ ವೈಚಾರಿಕ ಓದಿನ ನೆರವು ದಕ್ಕಿದ್ದರೆ ಈ ಮಾದರಿಯನ್ನು ಇನ್ನಷ್ಟು ಸೂಕ್ಷ್ಮವಾಗಿ ಬಳಸಬಹುದಾಗಿದೆ. ಈ ಮಧ್ಯೆಯೂ ಕೋಮುವಾದ, ಜಾತಿವಾದ, ಪುರುಷವಾದ, ಬಂಡವಾಳಶಾಹಿ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ಇವುಗಳ ಅಪಾಯವನ್ನು ಉದಾರವಾಗಿ ಹೇಳಲು ಜನರ ಬಳಿಗೆ ಹೋಗುವ ಹಿಬ್ರಾಹಿಂ ಸುತಾರ ಅವರ ಮಾದರಿಯೂ ಇಂದು ಅಗತ್ಯವಿದೆ. ಹಾಗಾಗಿ ಸುತಾರರು ತಮಗಿರುವ ಕೆಲವು ಮಿತಿಗಳನ್ನು ಮೀರುತ್ತಲೇ ಜೀವಪರ ಸಂಗತಿಗಳನ್ನು ಹಂಚುವ ಕೆಲಸವನ್ನು ಇನ್ನಷ್ಟು ವಿಸ್ತರಿಸಬೇಕಿದೆ.
ಸುತಾರರನ್ನು ಉತ್ತರ ಕರ್ನಾಟಕದಲ್ಲಿ `ಕನ್ನಡದ ಕಬೀರ’ನೆಂದು ಗುರುತಿಸುತ್ತಾರೆ. ಈ ಬಗ್ಗೆ ರಂಜಾನ್ ದರ್ಗಾ ಅವರು `ಸಂತ ಕಭೀರ ದುಷ್ಟಶಕ್ತಿಗಳನ್ನು ಎದುರುಹಾಕಿಕೊಂಡು ವೈಚಾರಿಕತೆಯ ಮಾನವ ಏಕತೆಯನ್ನು ಸಾಧಿಸಿದರೆ, ಇವರು ಯಾರನ್ನೂ ಎದುರು ಹಾಕಿಕೊಳ್ಳದೆ ಮಾನವ ಏಕತೆಯನ್ನು ಸಾಧಿಸುವ ಕ್ರಮ ಆಪ್ಯಾಯಮಾನವಾಗಿದೆ’ ಎನ್ನುತ್ತಾರೆ.
**
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ