‘ಸಲಿಂಗಕಾಮ ಅಪರಾಧ’ ಎನ್ನುವ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ‘ದೇಹದ ಘನತೆ’ಯ ಕುರಿತು ಚರ್ಚೆ ಚಾಲ್ತಿಯಲ್ಲಿರುವ ಸಂದರ್ಭದಲ್ಲೇ ಮರಾಠಿಯಲ್ಲಿ ಮಂಗಳಮುಖಿಯರ ಕುರಿತ ನಾಟಕವೊಂದು ಸುದ್ದಿ ಮಾಡುತ್ತಿದೆ.
ಮಹಾರಾಷ್ಟ್ರ ರಾಜ್ಯ ನಾಟಕ ಸ್ಪರ್ಧೆಯಲ್ಲಿ ಪ್ರಯೋಗಗೊಂಡು ಹಲವು ಪುರಸ್ಕಾರಗಳನ್ನು ಪಡೆದ ‘ಹಿಜಡಾ’ (Transgender) ನಾಟಕ, ಹಿಜಡಾಗಳ ದೈಹಿಕ, ಮಾನಸಿಕ ಯಾತನೆ–ಅವಮಾನಗಳನ್ನು ಕಟ್ಟಿಕೊಡುವ ಪ್ರಯತ್ನವಾಗಿದೆ. ಪುಣೆಯ ಆಕಾಂಕ್ಷಾ ರಂಗಭೂಮಿ ಪ್ರಸ್ತುತ ಪಡಿಸಿದ ಈ ನಾಟಕದಲ್ಲಿ ಪುಣೆ ವಿಶ್ವವಿದ್ಯಾಲಯ ಲಲಿತಕಲಾ ಕೇಂದ್ರದ ನಾಟಕ ವಿಭಾಗದ ಹಾಲಿ–ಮಾಜಿ ವಿದ್ಯಾರ್ಥಿಗಳು ಮತ್ತು ಹವ್ಯಾಸಿ ಕಲಾವಿದರು ಅಭಿನಯಿಸಿದ್ದರು. ಇದೇ ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗು ಲೇಖಕ ಸಾಗರ ಲೋಧಿ ಈ ನಾಟಕದ ನಿರ್ದೇಶಕರು.
ನಾಟಕಕ್ಕಾಗಿ ಸಾಗರ ಲೋಧಿ ಅವರು ನಡೆಸಿದ ಸಿದ್ಧತೆ ಕೂಡ ಒಂದು ಕಥೆಯಂತಿದೆ. ತಂಡ ಕಟ್ಟಿಕೊಂಡು ಹಿಜಡಾಗಳ ಚಾಳದಲ್ಲಿ ಬಿಡಾರ ಹೂಡಿ, ಅಲ್ಲಿನ ಅನುಭವಗಳಿಂದ ಅವರು ತಮ್ಮ ನಾಟಕವನ್ನು ಗಟ್ಟಿಗೊಳಿಸಿದ್ದಾರೆ.
ಎಲ್.ಜಿ.ಬಿ.ಟಿ (ಲೆಸ್ಬಿಯನ್, ಗೇ, ಬೈಸೆಕ್ಷುವಲ್ ಮತ್ತು ಟ್ರಾನ್ಸ್ ಜೆಂಡರ್) ಎಂದು ಗುರುತಿಸಿಕೊಂಡ ಈ ಸಮುದಾಯವನ್ನು ಸಮಾಜ ಮುಖ್ಯವಾಹಿನಿಯಿಂದ ದೂರವಿಟ್ಟಿದೆ. ನಗರಗಳ ಬೀದಿಗಳಲ್ಲಿ ಅಲೆಯುವ ಇವರು ದ್ವೀಪಗಳಂತೆ ಬದುಕುತ್ತಿದ್ದಾರೆ. ಇವರ ಭಾವನೆಗಳನ್ನು, ಸಂವೇದನೆಗಳನ್ನು, ದುಃಖ-ದುಮ್ಮಾನಗಳನ್ನು ಅಭಿವ್ಯಕ್ತಿಸಲು ಹೊರಟ ಸಾಗರ ಲೋಧಿಯವರಿಗೆ ಮಹಾರಾಷ್ಟ್ರ ನಾಟಕ ಸೆನ್ಸಾರ್ ಬೋರ್ಡ್‌ನಿಂದ ಸಮಸ್ಯೆಯಾಗಲಿಲ್ಲ. ಆದರೆ, ಹಿಜಡಾ ಸಮುದಾಯದಿಂದಲೇ ತಕರಾರು ಎದುರಾದವು.
ಒಂದು ಗುಂಪು ತಮ್ಮವರ ಬದುಕನ್ನು ರಂಗದ ಮೇಲೆ ತೋರಿಸುವುದನ್ನು ಪ್ರಬಲವಾಗಿ ವಿರೋಧಿಸಿತು. ಇನ್ನೊಂದು ಗುಂಪು ತಮ್ಮ ಜನ ಈ ನಾಟಕವನ್ನು ನೋಡಬಾರದೆಂದು ಫತ್ವಾ ಹೊರಡಿಸಿತು. ಆದರೆ ನಾಟಕವನ್ನು ಆಡಲೇಬೇಕೆಂದು ಲೋಧಿ ಮತ್ತು ತಂಡದವರು ನಿರ್ಧರಿಸಿದರು. ಹೀಗಾಗಿ, ಪ್ರತಿಷ್ಠಿತ ಮಹಾರಾಷ್ಟ್ರ ನಾಟಕ ಸ್ಪರ್ಧೆಯಲ್ಲಿ ‘ಹಿಜಡಾ’ ನಾಟಕ ಪ್ರಯೋಗಗೊಂಡಿತು. ಅತ್ಯುತ್ತಮ ನಿರ್ದೇಶಕ, ಅಭಿನಯ, ಸಂಗೀತ, ಬೆಳಕು, ಪ್ರಸಾಧನ, ನೇಪಥ್ಯ– ಹೀಗೆ ಅನೇಕ ಪ್ರಶಸ್ತಿಗಳನ್ನು ‘ಹಿಜಡಾ’ ತನ್ನ ಉಡಿಯಲ್ಲಿ ಹಾಕಿಕೊಂಡಿತು.
ಇತ್ತೀಚೆಗೆ ಹೆಗ್ಗೋಡಿನ ಎಂ. ಗಣೇಶ್ ಅವರು ತಮಿಳಿನ ಮಂಗಳಮುಖಿ ರೇವತಿ ಅವರ ಆತ್ಮಕಥೆ ಆಧರಿಸಿದ ‘ಬದುಕು ಬಯಲು’ ನಾಟಕದ ‘ತಿರುಗಾಟ’ ನಡೆಸಿದರು. ಅದರಲ್ಲಿ ರೇವತಿ ಒಬ್ಬಳೇ ಮುಖ್ಯ ಹಿಜಡಾ ಪಾತ್ರಧಾರಿ. ಮರಾಠಿಯ ಪ್ರಸಿದ್ಧ ನಿರ್ದೇಶಕ ಹಾಗೂ ಇಂದಿನ ಎನ್.ಎಸ್.ಡಿ. ದೆಹಲಿಯ ನಿರ್ದೇಶಕ ವಾಮನ ಕೇಂದ್ರೆ ಹಿಂದೆ ಇದೇ ವಸ್ತುವಿನ ‘ಜಾನೆಮನ್’ ನಾಟಕ ಆಡಿಸಿದ್ದರು. ‘ಅದು ಒಂದು ಬಗೆಯ ಚದುರಿದ ಪ್ರಸಂಗಗಳನ್ನು ಒಂದೆಡೆ ಪೇರಿಸಿದ ನಾಟಕ’ ಎಂದು ಮರಾಠಿ ರಂಗತಜ್ಞ ಡಾ. ಅಜಯ ಜೋಶಿ ಅಭಿಪ್ರಾಯ ಪಡುತ್ತಾರೆ. ಆದರೆ ಸಾಗರ ಲೋಧಿಯ ‘ಹಿಜಡಾ’ ನಾಟಕ ಇವುಗಳಿಗಿಂತ ಭಿನ್ನ. ಇಲ್ಲಿ ಇಡೀ ಹಿಜಡಾ ಸಮುದಾಯವಿದೆ. ಅವರ ಬದುಕನ್ನು ಲೋಧಿ ಸಹಾನುಭೂತಿಯಿಂದ ಗ್ರಹಿಸದೆ ಸ್ಥಿತಪ್ರಜ್ಞತೆಯಿಂದ ಕಂಡಿರುವುದು ವಿಶೇಷ. ಒಂದು ಚಾಳಿನ ಮನೆಗಳಲ್ಲಿ ನೆಲೆಸುವ ಅವರ ಮಧ್ಯದ ಪ್ರೀತಿ, ವಾತ್ಸಲ್ಯ, ಆಸರೆ, ಕಾಮ, ದ್ವೇಷಾಸೂಯೆ, ಅವಮಾನ, ಯಾತನೆಗಳು ಗಾಢವಾಗಿ ಮತ್ತು ಬದುಕಿನ ಕತೆಯಾಗಿ ಸಹಜವಾಗಿ ಹೊಮ್ಮಿವೆ.
ಇವರಲ್ಲಿ ಗುರು ಮತ್ತು ಚೇಲಾ (ಶಿಷ್ಯ) ಸಂಬಂಧದ ವ್ಯವಸ್ಥೆಯಿದೆ. ಅವರಲ್ಲೂ ಘರಾನಾಗಳಿವೆ. ಭಾರತದ ಹಿಜಡಾ ‘ಕಲ್ಟ್’ನಲ್ಲಿ ಸಾಮಾನ್ಯವಾಗಿ ಏಳು ಘರಾನಾಗಳ ಐತಿಹಾಸಿಕ ಚರಿತ್ರೆಯಿದೆ. ಭೇಂಡಿಬಾಜಾರವಾಲಾ, ಬುಲ್ಲಕವಾಲಾ, ಲಾಲನವಾಲಾ, ಲಖನೌವಾಲಾ, ಪೂನಾವಾಲಾ, ದೆಲ್ಲಿವಾಲಾ, ಹಾದಿರ ಇಬ್ರಾಹಿಮ್‌ವಾಲಾ– ಇವು ಆ ಏಳು ಘರಾನಾಗಳು. ಪ್ರತಿ ಶಹರಿನಲ್ಲಿ ಹಿಜಡಾಗಳಿಗೆ ನಾಯಕನಿರುತ್ತಾನೆ. ಆತನ ಯಜಮಾನಿಕೆಯಲ್ಲಿ ಗುರು–ಚೇಲಾಗಳ ಪುಟ್ಟ ಕುಟುಂಬಗಳು ನಿರ್ವಹಣೆಗೊಳ್ಳುತ್ತವೆ. ಒಬ್ಬ ಗುರುವಿಗೆ ಅನೇಕ ಚೇಲಾಗಳಿರುವರು. ತಾಯಿ-ಮಗಳ ಸಂಬಂಧ ಇವರದು. ಗುರುವಿನ ಸಂಬಂಧಗಳು ಚಿಕ್ಕಮ್ಮ, ಅಕ್ಕ-ತಂಗಿ; ಗುರುವಿನ ಗುರು ಅಜ್ಜಿಯೆನಿಸುತ್ತಾಳೆ. ಚೇಲಾಗಳಲ್ಲಿ ಗುರುಬಂಧು ಸಂಬಂಧವಿರುತ್ತದೆ. ಅನ್ಯ ಕುಟುಂಬ ಸಂಬಂಧಗಳೂ ಇವೆ. ಸಮುದಾಯದ ಶಿಷ್ಟಾಚಾರ, ಕಾನೂನು ಮುರಿದವರಿಗೆ ಸರಳ ಮತ್ತು ಕಠಿಣ ಶಿಕ್ಷೆ ಕಾದಿರುತ್ತದೆ.
ಕೆಲ ವಿಧಿವಿಧಾನಗಳ ಆಚರಣೆ ಮೂಲಕ ಗುರು-ಚೇಲಾ ಸಂಬಂಧ ಏರ್ಪಡುತ್ತದೆ. ಅದಕ್ಕೆ ‘ರೀತ’ ಎನ್ನುವರು. ಸಮುದಾಯಕ್ಕೆ ಸೇರ್ಪಡೆ ಆದ ಬಳಿಕ ಲಿಂಗಕಸಿಯ ಕ್ರಿಯೆ.ಇದನ್ನು ಅವರು ‘ನಿರ್ವಾಣ’ ವಿಧಿಯೆನ್ನುವರು. ಆಧುನಿಕ ಪದ್ಧತಿಯಂತೆ ಈಗ ಆಸ್ಪತ್ರೆಯಲ್ಲಿ ನಿರ್ವಾಣ ಪ್ರಕ್ರಿಯೆ ನಡೆದು ಹೋಗುತ್ತದೆ. ನಿರ್ವಾಣಗೊಂಡಾಗಲೇ ಪರಿಪೂರ್ಣ ಹಿಜಡಾ ಆಗುತ್ತಾರೆ.
‘ಹಿಜಡಾ’ ನಾಟಕದಲ್ಲಿ ಕಥಾನಾಯಕರಿಲ್ಲ, ಪ್ರತಿಯೊಬ್ಬರೂ ನಾಯಕರೆ. ಪ್ರತಿಯೊಬ್ಬರದೂ ದಯನೀಯ ಕತೆ, ಪ್ರಯಾಸದ ಬದುಕು. ಮೂದಲಿಕೆ, ಹೀಯಾಳಿಕೆ ಅವರಿಗೆ ಸಾಮಾನ್ಯ. ನಾಟಕದಲ್ಲಿ ಫರಿದಾ ಬೇಗಮ್ ಗುಂಪಿನ ಕತೆಯಿದೆ. ಫರಿದಾ ಗುರು, ಚೆನ್ನೈ ಮೂಲದವಳು. ಇಲ್ಲಿ ಡಿಂಪಲ್ ಎಂಬ ಟ್ರಾನ್ಸಿ ಸೇರಿಕೊಳ್ಳುತ್ತಾಳೆ. ಆಕೆ ನಿರ್ವಾಣಗೊಂಡಿದ್ದಾಳೆ. ಆ ಸಮುದಾಯ ಸಂಭ್ರಮಿಸುತ್ತದೆ. ಹಿಜಡಾ ಸಮುದಾಯಕ್ಕೆ ಸೇರಿದ ಡಿಂಪಲ್‌ಗೆ ಕಿರಣ ಎಂಬ ಯುವಕ ಮಿತ್ರನೂ ಇದ್ದಾನೆ. ಆದರೆ ಕಿರಣನಲ್ಲಿ ಹೆಣ್ತನ ಮೊಳಕೆಯೊಡೆದು ಆತ ನಿಧಾನಕ್ಕೆ ಹಿಜಡಾ ಆಗಲು ಹವಣಿಸುತ್ತಾನೆ. ಒಮ್ಮೆ ಹಾಗಾಗಿಯೇ ಬಿಡುವನು. ನಿರ್ವಾಣ ಮಾಡಿಕೊಳ್ಳುವನು. ಅವನ ತಾಯಿ ತೀವ್ರ ಆಘಾತಕ್ಕೆ ಒಳಗಾಗುವಳು. ಇಂಥ ಗಂಭೀರ ವಸ್ತುವನ್ನು ಸಾಗರ ಲೋಧಿ ಜಾಗ್ರತೆಯಿಂದ ಸಾದರಪಡಿಸಿದ್ದಾರೆ.
ಲಯಬದ್ದ ಚಪ್ಪಾಳೆ ತಟ್ಟುತ್ತ ಹಾಡಿ ಕುಣಿವ; ವಿಶಿಷ್ಟ ಲೈಂಗಿಕ ನಖರೆಯ ಹಾವಭಾವ ಸೂಸುವ ಮತ್ತು ಹರಿತ ಸಂವಾದದಿಂದ ಗಮನಸೆಳೆವ ಪಾತ್ರಗಳು ರಂಗದಮೇಲೆ ಸಂಚಲನ ಉಂಟುಮಾಡುತ್ತವೆ. ಪಾತ್ರಗಳೆಲ್ಲವೂ ಗಮನಸೆಳೆವಂಥವೇ ಆಗಿವೆ. ಅದರಲ್ಲೂ ಫರಿದಾ ಬೇಗಂ (ಜಮೀರ ಕಾಂಬಳೆ), ಕಿರಣ (ಸಂತೋಷ ಮಹಾದೇವ), ಡಿಂಪಲ್ (ಮಯೂರ ಶಿತೋಳೆ), ತಾಯಿ (ಪ್ರಾಚಿ ಸಹಸ್ರಬುದ್ಧೆ) ಪಾತ್ರಗಳು ನೋಡುಗರನ್ನು ಕಾಡುತ್ತವೆ. ಕೆಲ ಸಂಭಾಷಣೆ ಅಶ್ಲೀಲವೆನಿಸಿದರೂ ವಸ್ತುವಿಗೆ ತಕ್ಕುದಾಗಿ ನಿರ್ವಹಣೆಗೊಂಡಿದೆ.
ಮನೋಜ್ಞ ಅಭಿನಯಕ್ಕೆ ಪೂರಕವಾಗಿ ಜಿತೇಂದ್ರ ರೋಖಡೆ ಅವರ ಸಂಗೀತ, ಸತೀಶ ಸಾಂಡಭೋರ ಅವರ ನೇಪಥ್ಯ, ಅಕಬರ ಶೇಖ ಅವರ ಬೆಳಕು ಮತ್ತು ಉಡುಗೆತೊಡುಗೆ ನಾಟಕವನ್ನು ಸಶಕ್ತ ಅಭಿವ್ಯಕ್ತಿಯನ್ನಾಗಿಸಿವೆ. ಈ ನಾಟಕ ಮುಂದಿನ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆವ ಸಿಜಿಕೆ ರಾಷ್ಟ್ರೀಯ ರಂಗೋತ್ಸವ, ಮೈಸೂರಿನ ರಂಗಾಯಣದ ಬಹೂರೂಪಿ ನಾಟಕೋತ್ಸವ ಹಾಗೂ ಮುಂಬೈನ ನಾಟಕೋತ್ಸವಗಳಲ್ಲಿ ಪ್ರದರ್ಶನ ಕಾಣಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ